Anushasana Parva: Chapter 69

ಅನುಶಾಸನ ಪರ್ವ: ದಾನಧರ್ಮ ಪರ್ವ

೬೯

ನೃಗೋಪಾಖ್ಯಾನ

ಬ್ರಾಹ್ಮಣನ ಧನವನ್ನು ಅಪಹರಿಸುವುದರಿಂದ ಉಂಟಾಗುವ ಹಾನಿಯ ವಿಷಯದ ದೃಷ್ಟಾಂತ ರೂಪಕ ರಾಜಾ ನೃಗನ ಉಪಾಖ್ಯಾನ (೧-೩೩).

13069001 ಭೀಷ್ಮ ಉವಾಚ|

13069001a ಅತ್ರೈವ ಕೀರ್ತ್ಯತೇ ಸದ್ಭಿರ್ಬ್ರಾಹ್ಮಣಸ್ವಾಭಿಮರ್ಶನೇ|

13069001c ನೃಗೇಣ ಸುಮಹತ್ಕೃಚ್ಚ್ರಂ ಯದವಾಪ್ತಂ ಕುರೂದ್ವಹ||

ಭೀಷ್ಮನು ಹೇಳಿದನು: “ಕುರೂದ್ವಹ! ಈ ವಿಷಯದಲ್ಲಿ ಶ್ರೇಷ್ಠ ಪುರುಷರು ಓರ್ವ ಬ್ರಾಹ್ಮಣನ ಧನವನ್ನು ತೆಗೆದುಕೊಂಡ ಕಾರಣದಿಂದಾಗಿ ರಾಜಾ ನೃಗನು ಮಹಾ ಕಷ್ಟವನ್ನು ಅನುಭವಿಸಬೇಕಾಗಿ ಬಂದ ಆ ಪ್ರಸಂಗವನ್ನು ಹೇಳುತ್ತಿರುತ್ತಾರೆ.

13069002a ನಿವಿಶಂತ್ಯಾಂ ಪುರಾ ಪಾರ್ಥ ದ್ವಾರವತ್ಯಾಮಿತಿ ಶ್ರುತಿಃ|

13069002c ಅದೃಶ್ಯತ ಮಹಾಕೂಪಸ್ತೃಣವೀರುತ್ಸಮಾವೃತಃ||

ಪಾರ್ಥ! ಹಿಂದೆ ದ್ವಾರಾವತಿಯ ನಿರ್ಮಾಣಕಾರ್ಯವು ನಡೆಯುತ್ತಿದ್ದಾಗ ಹುಲ್ಲು-ಬಳ್ಳಿಗಳಿಂದ ಮುಚ್ಚಿದ್ದ ಒಂದು ಮಹಾ ಬಾವಿಯು ಕಾಣಿಸಿತೆಂದು ಕೇಳಿದ್ದೇವೆ.

13069003a ಪ್ರಯತ್ನಂ ತತ್ರ ಕುರ್ವಾಣಾಸ್ತಸ್ಮಾತ್ಕೂಪಾಜ್ಜಲಾರ್ಥಿನಃ|

13069003c ಶ್ರಮೇಣ ಮಹತಾ ಯುಕ್ತಾಸ್ತಸ್ಮಿಂಸ್ತೋಯೇ ಸುಸಂವೃತೇ||

13069004a ದದೃಶುಸ್ತೇ ಮಹಾಕಾಯಂ ಕೃಕಲಾಸಮವಸ್ಥಿತಮ್|

ಜಲಾರ್ಥಿಗಳು ಮಹಾ ಶ್ರಮದಿಂದ ಆ ಬಾವಿಯನ್ನು ಮುಚ್ಚಿದ್ದ ಕಸವನ್ನು ತೆಗೆಯತೊಡಗಿದರು. ಆಗ ಅವರು ಅದರೊಳಗಿದ್ದ ಒಂದು ಮಹಾಕಾಯದ ಮೊಸಳೆಯನ್ನು ಕಂಡರು.

13069004c ತಸ್ಯ ಚೋದ್ಧರಣೇ ಯತ್ನಮಕುರ್ವಂಸ್ತೇ ಸಹಸ್ರಶಃ||

13069005a ಪ್ರಗ್ರಹೈಶ್ಚರ್ಮಪಟ್ಟೈಶ್ಚ ತಂ ಬದ್ಧ್ವಾ ಪರ್ವತೋಪಮಮ್|

13069005c ನಾಶಕ್ನುವನ್ಸಮುದ್ಧರ್ತುಂ ತತೋ ಜಗ್ಮುರ್ಜನಾರ್ದನಮ್||

ಅದನ್ನು ಮೇಲಕ್ಕೆತ್ತಲು ಸಹಸ್ರಾರು ಜನರು ಪ್ರಯತ್ಮಮಾಡಿದರು. ಪರ್ವತದಂತಿದ್ದ ಅದನ್ನು ಹಗ್ಗ ಮತ್ತು ಚರ್ಮದ ಪಟ್ಟಿಗಳಿಂದ ಕಟ್ಟಿ ಮೇಲೆ ಎಳೆಯಲು ಪ್ರಯತ್ನಿಸಿದರು. ಆದರೂ ಅದನ್ನು ಮೇಲೆ ಎತ್ತಲು ಸಾಧ್ಯವಾಗದಾಗ ಅವರು ಜನಾರ್ದನನಲ್ಲಿಗೆ ಹೋದರು.

13069006a ಖಮಾವೃತ್ಯೋದಪಾನಸ್ಯ ಕೃಕಲಾಸಃ ಸ್ಥಿತೋ ಮಹಾನ್|

13069006c ತಸ್ಯ ನಾಸ್ತಿ ಸಮುದ್ಧರ್ತೇತ್ಯಥ ಕೃಷ್ಣೇ ನ್ಯವೇದಯನ್||

“ಬಾವಿಯ ತುಂಬಾ ಅವರಿಸಿಕೊಂಡಿರುವ ಒಂದು ಮಹಾ ಮೊಸಳೆಯನ್ನು ಮೇಲೆತ್ತಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ” ಎಂದು ಕೃಷ್ಣನಿಗೆ ನಿವೇದಿಸಿದರು.

13069007a ಸ ವಾಸುದೇವೇನ ಸಮುದ್ಧೃತಶ್ಚ

ಪೃಷ್ಟಶ್ಚ ಕಾಮಾನ್ನಿಜಗಾದ ರಾಜಾ|

13069007c ನೃಗಸ್ತದಾತ್ಮಾನಮಥೋ ನ್ಯವೇದಯತ್

ಪುರಾತನಂ ಯಜ್ಞಸಹಸ್ರಯಾಜಿನಮ್||

ಇದನ್ನು ಕೇಳಿ ವಾಸುದೇವನು ಆ ಬಾವಿಯ ಬಳಿ ಹೋದನು. ಅವನು ಆ ಮೊಸಳೆಯನ್ನು ಮೇಲಕ್ಕೆತ್ತಿದನು ಮತ್ತು ತನ್ನ ಪಾವನ ಕರಗಳ ಸ್ಪರ್ಷದಿಂದ ರಾಜಾ ನೃಗನನ್ನು ಉದ್ಧರಿಸಿದನು. ಆಗ ನೃಗನು ಕೃಷ್ಣನಿಗೆ ಹಿಂದಿನ ಕಾಲದಲ್ಲಿ ಸಹಸ್ರ ಯಜ್ಞಗಳನ್ನು ಮಾಡಿದವನು ತಾನು ಎಂದು ತನ್ನ ಪರಿಚಯವನ್ನು ಮಾಡಿಕೊಂಡನು.

13069008a ತಥಾ ಬ್ರುವಾಣಂ ತು ತಮಾಹ ಮಾಧವಃ

ಶುಭಂ ತ್ವಯಾ ಕರ್ಮ ಕೃತಂ ನ ಪಾಪಕಮ್|

13069008c ಕಥಂ ಭವಾನ್ದುರ್ಗತಿಮೀದೃಶೀಂ ಗತೋ

ನರೇಂದ್ರ ತದ್ಬ್ರೂಹಿ ಕಿಮೇತದೀದೃಶಮ್||

ಅವನ ಆ ಮಾತನ್ನು ಕೇಳಿ ಮಾಧವನು ಅವನಿಗೆ ಹೇಳಿದನು: “ನೀನು ಶುಭಕರ್ಮಗಳನ್ನೇ ಮಾಡಿದ್ದೀಯೆ. ಪಾಪಕರ್ಮಗಳನ್ನು ಮಾಡಿಲ್ಲ. ಅದರೂ ನೀನು ಹೇಗೆ ಈ ತರಹದ ದುರ್ಗತಿಯನ್ನು ಪಡೆದುಕೊಂಡೆ? ನರೇಂದ್ರ! ಇಂತಹ ಕಷ್ಟವು ನಿನಗೆ ಏಕೆ ದೊರೆಯಿತು ಎನ್ನುವುದನ್ನು ಹೇಳು.

13069009a ಶತಂ ಸಹಸ್ರಾಣಿ ಶತಂ ಗವಾಂ ಪುನಃ

ಪುನಃ ಶತಾನ್ಯಷ್ಟ ಶತಾಯುತಾನಿ|

13069009c ತ್ವಯಾ ಪುರಾ ದತ್ತಮಿತೀಹ ಶುಶ್ರುಮ

ನೃಪ ದ್ವಿಜೇಭ್ಯಃ ಕ್ವ ನು ತದ್ಗತಂ ತವ||

ನೃಪ! ಹಿಂದೆ ನೀನು ಮೊದಲು ಒಂದು ಲಕ್ಷ ಗೋವುಗಳನ್ನೂ ಪುನಃ ನೂರು ಗೋವುಗಳನ್ನೂ, ಪುನಃ ನೂರು ಗೋವುಗಳನ್ನು ಮತ್ತು ಪುನಃ ಎಂಭತ್ತು ಲಕ್ಷ ಗೋವುಗಳನ್ನೂ[1] ದ್ವಿಜರಿಗೆ ದಾನವಾಗಿತ್ತೆ ಎಂದು ನಾವು ಕೇಳಿದ್ದೇವೆ. ನಿನ್ನ ಆ ಎಲ್ಲ ದಾನಗಳ ಪುಣ್ಯಫಲವು ಎಲ್ಲಿಗೆ ಹೋಯಿತು?”

13069010a ನೃಗಸ್ತತೋಽಬ್ರವೀತ್ಕೃಷ್ಣಂ ಬ್ರಾಹ್ಮಣಸ್ಯಾಗ್ನಿಹೋತ್ರಿಣಃ|

13069010c ಪ್ರೋಷಿತಸ್ಯ ಪರಿಭ್ರಷ್ಟಾ ಗೌರೇಕಾ ಮಮ ಗೋಧನೇ||

ಆಗ ನೃಗನು ಕೃಷ್ಣನಿಗೆ ಹೇಳಿದನು: “ಪರದೇಶಕ್ಕೆ ಹೋಗಿದ್ದ ಓರ್ವ ಅಗ್ನಿಹೋತ್ರಿ ಬ್ರಾಹ್ಮಣನ ಒಂದು ಗೋವು ಯಾವಾಗಲೋ ಓಡಿಬಂದು ನನ್ನ ಗೋವುಗಳ ಗುಂಪಿನಲ್ಲಿ ಸೇರಿಕೊಂಡು ಬಿಟ್ಟಿತ್ತು.

13069011a ಗವಾಂ ಸಹಸ್ರೇ ಸಂಖ್ಯಾತಾ ತದಾ ಸಾ ಪಶುಪೈರ್ಮಮ|

13069011c ಸಾ ಬ್ರಾಹ್ಮಣಾಯ ಮೇ ದತ್ತಾ ಪ್ರೇತ್ಯಾರ್ಥಮಭಿಕಾಂಕ್ಷತಾ||

ನನ್ನ ಪಶುಪಾಲಕರು ಒಂದು ಸಾವಿರ ಗೋವುಗಳನ್ನು ಎಣಿಸುವಾಗ ಅದನ್ನೂ ಸೇರಿಸಿಬಿಟ್ಟಿದ್ದರು. ಮರಣಾನಂತರ ಸ್ವರ್ಗಪ್ರಾಪ್ತಿಯ ಆಕಾಂಕ್ಷೆಯಿಂದ ನಾನು ಅವುಗಳನ್ನು ಓರ್ವ ಬ್ರಾಹ್ಮಣನಿಗೆ ದಾನವಾಗಿ ಕೊಟ್ಟುಬಿಟ್ಟೆನು.

13069012a ಅಪಶ್ಯತ್ಪರಿಮಾರ್ಗಂಶ್ಚ ತಾಂ ಯಾಂ ಪರಗೃಹೇ ದ್ವಿಜಃ|

13069012c ಮಮೇಯಮಿತಿ ಚೋವಾಚ ಬ್ರಾಹ್ಮಣೋ ಯಸ್ಯ ಸಾಭವತ್||

ಕೆಲವು ದಿನಗಳ ನಂತರ ಪರದೇಶದಿಂದ ಹಿಂದಿರುಗಿದ ಆ ಬ್ರಾಹ್ಮಣನು ತನ್ನ ಗೋವನ್ನು ಹುಡುಕತೊಡಗಿದನು. ಹುಡುಕುತ್ತಾ ಅವನು ತನ್ನ ಗೋವನ್ನು ಇನ್ನೊಬ್ಬನ ಮನೆಯಲ್ಲಿರುವುದನ್ನು ಕಂಡು “ಈ ಹಸುವು ನನ್ನದು” ಎಂದನು.

13069013a ತಾವುಭೌ ಸಮನುಪ್ರಾಪ್ತೌ ವಿವದಂತೌ ಭೃಶಜ್ವರೌ|

13069013c ಭವಾನ್ದಾತಾ ಭವಾನ್ ಹರ್ತೇತ್ಯಥ ತೌ ಮಾಂ ತದೋಚತುಃ||

ಆಗ ಅವರಿಬ್ಬರೂ ಜಗಳವಾಡತೊಡಗಿದರು. ಮತ್ತು ಅತ್ಯಂತ ಕ್ರೋಧಿತರಾಗಿ ನನ್ನ ಬಳಿ ಬಂದರು. ಅವರಲ್ಲಿ ಒಬ್ಬನು ಹೇಳಿದನು: “ಈ ಗೋವನ್ನು ನೀನೇ ನನಗೆ ದಾನದಲ್ಲಿ ಕೊಟ್ಟಿದ್ದೆ” ಇನ್ನೊಬ್ಬನು: “ವಾಸ್ತವದಲ್ಲಿ ಈ ಗೋವು ನನ್ನದು. ನೀನು ಇದನ್ನು ಕದ್ದಿದ್ದೆ!” ಎಂದನು.

13069014a ಶತೇನ ಶತಸಂಖ್ಯೇನ ಗವಾಂ ವಿನಿಮಯೇನ ವೈ|

13069014c ಯಾಚೇ ಪ್ರತಿಗ್ರಹೀತಾರಂ ಸ ತು ಮಾಮಬ್ರವೀದಿದಮ್||

13069015a ದೇಶಕಾಲೋಪಸಂಪನ್ನಾ ದೋಗ್ಧ್ರೀ ಕ್ಷಾಂತಾತಿವತ್ಸಲಾ|

13069015c ಸ್ವಾದುಕ್ಷೀರಪ್ರದಾ ಧನ್ಯಾ ಮಮ ನಿತ್ಯಂ ನಿವೇಶನೇ||

ಆಗ ನಾನು “ಈ ಗೋವಿನ ಬದಲಿಗೆ ನಿನಗೆ ಹತ್ತು ಸಾವಿರ ಗೋವುಗಳನ್ನು ಕೊಡುತ್ತೇನೆ” ಎಂದು ದಾನವನ್ನು ಪಡೆದುಕೊಂಡಿದ್ದ ಬ್ರಾಹ್ಮಣನಿಗೆ ಹೇಳಿದೆನು. ಆದರೆ ಅವನು “ದೇಶಕಾಲಕ್ಕೆ ಅನುರೂಪವಾಗಿರುವ, ಹೆಚ್ಚಿನ ಹಾಲನ್ನು ಕೊಡುವ, ಸರಳವೂ ಅತಿ ವತ್ಸಲೆಯೂ ಆಗಿರುವ, ಸಿಹಿ ಹಾಲನ್ನು ಕೊಡುವ ಈ ಹಸುವು ನನ್ನ ಮನೆಯಲ್ಲಿ ಸದಾ ಇರುವಂತಾದರೆ ನಾನು ಧನ್ಯನಾಗುತ್ತೇನೆ” ಎಂದನು.

13069016a ಕೃಶಂ ಚ ಭರತೇ ಯಾ ಗೌರ್ಮಮ ಪುತ್ರಮಪಸ್ತನಮ್|

13069016c ನ ಸಾ ಶಕ್ಯಾ ಮಯಾ ಹಾತುಮಿತ್ಯುಕ್ತ್ವಾ ಸ ಜಗಾಮ ಹ||

“ಕೃಶನಾಗಿರುವ ನನ್ನ ಮಗನನ್ನು ಈ ಗೋವು ಪೋಷಿಸುತ್ತಿದೆ. ಆದ್ದರಿಂದ ಇದನ್ನು ತೊರೆಯಲು ನಾನು ಶಕ್ಯನಿಲ್ಲ” ಎಂದು ಹೇಳಿ ಅವನು ಹೊರಟೇ ಹೋದನು.

13069017a ತತಸ್ತಮಪರಂ ವಿಪ್ರಂ ಯಾಚೇ ವಿನಿಮಯೇನ ವೈ|

13069017c ಗವಾಂ ಶತಸಹಸ್ರಂ ವೈ ತತ್ಕೃತೇ ಗೃಹ್ಯತಾಮಿತಿ||

ಆಗ ನಾನು ಇನ್ನೊಬ್ಬ ವಿಪ್ರನಲ್ಲಿ “ಆ ಗೋವಿನ ಬದಲಾಗಿ ನಾನು ನಿನಗೆ ಒಂದು ಲಕ್ಷ ಗೋವುಗಳನ್ನು ನೀಡುತ್ತೇನೆ. ಸ್ವೀಕರಿಸಬೇಕು” ಎಂದೆನು.

13069018 ಬ್ರಾಹ್ಮಣ ಉವಾಚ|

13069018a ನ ರಾಜ್ಞಾಂ ಪ್ರತಿಗೃಹ್ಣಾಮಿ ಶಕ್ತೋಽಹಂ ಸ್ವಸ್ಯ ಮಾರ್ಗಣೇ|

13069018c ಸೈವ ಗೌರ್ದೀಯತಾಂ ಶೀಘ್ರಂ ಮಮೇತಿ ಮಧುಸೂದನ||

ಮಧುಸೂದನ! ಆಗ ಬ್ರಾಹ್ಮಣನು ಹೇಳಿದನು: “ನಾನು ರಾಜರ ದಾನವನ್ನು ಸ್ವೀಕರಿಸುವುದಿಲ್ಲ. ನಾನು ಧನಸಂಪಾದಿಸಲು ಶಕ್ಯನಾಗಿದ್ದೇನೆ. ನನಗೆ ನನ್ನ ಅದೇ ಗೋವನ್ನು ಶೀಘ್ರವಾಗಿ ತಂದುಕೊಡಬೇಕು.”

13069019a ರುಕ್ಮಮಶ್ವಾಂಶ್ಚ ದದತೋ ರಜತಂ ಸ್ಯಂದನಾಂಸ್ತಥಾ|

13069019c ನ ಜಗ್ರಾಹ ಯಯೌ ಚಾಪಿ ತದಾ ಸ ಬ್ರಾಹ್ಮಣರ್ಷಭಃ||

ನಾನು ಅವನಿಗೆ ಚಿನ್ನ, ಬೆಳ್ಳಿ, ರಥ ಮತ್ತು ಕುದುರೆ – ಎಲ್ಲವನ್ನೂ ಕೊಡಲು ಬಯಸಿದೆ. ಆದರೆ ಆ ಬ್ರಾಹ್ಮಣರ್ಷಭನು ನನ್ನಿಂದ ಏನನ್ನೂ ಸ್ವೀಕರಿಸದೇ ಸುಮ್ಮನೇ ಹೊರಟು ಹೋದನು.

13069020a ಏತಸ್ಮಿನ್ನೇವ ಕಾಲೇ ತು ಚೋದಿತಃ ಕಾಲಧರ್ಮಣಾ|

13069020c ಪಿತೃಲೋಕಮಹಂ ಪ್ರಾಪ್ಯ ಧರ್ಮರಾಜಮುಪಾಗಮಮ್||

ಈ ಕಾಲದ ನಂತರ ಕಾಲಧರ್ಮಕ್ಕೆ ಸಿಲುಕಿದ ನಾನು ಪಿತೃಲೋಕವನ್ನು ಸೇರಿ ಧರ್ಮರಾಜನ ಬಳಿ ಹೋದೆನು.

13069021a ಯಮಸ್ತು ಪೂಜಯಿತ್ವಾ ಮಾಂ ತತೋ ವಚನಮಬ್ರವೀತ್|

13069021c ನಾಂತಃ ಸಂಖ್ಯಾಯತೇ ರಾಜಂಸ್ತವ ಪುಣ್ಯಸ್ಯ ಕರ್ಮಣಃ||

ಯಮನಾದರೋ ನನ್ನನ್ನು ಪೂಜಿಸಿ ಈ ಮಾತನ್ನಾಡಿದನು: “ರಾಜನ್! ನಿನ್ನ ಪುಣ್ಯ ಕರ್ಮಗಳನ್ನು ಎಣಿಸಲೂ ಸಾಧ್ಯವಿಲ್ಲ.

13069022a ಅಸ್ತಿ ಚೈವ ಕೃತಂ ಪಾಪಮಜ್ಞಾನಾತ್ತದಪಿ ತ್ವಯಾ|

13069022c ಚರಸ್ವ ಪಾಪಂ ಪಶ್ಚಾದ್ವಾ ಪೂರ್ವಂ ವಾ ತ್ವಂ ಯಥೇಚ್ಚಸಿ||

ಆದರೆ ನಿನಗೆ ತಿಳಿಯದೆಯೇ ಒಂದು ಪಾಪವೂ ನಿನ್ನಿಂದ ನಡೆದುಹೋಗಿದೆ. ನೀನು ಬಯಸಿದಂತೆ ಇದನ್ನು ಮೊದಲು ಭೋಗಿಸಬಹುದು ಅಥವಾ ನಂತರ ಭೋಗಿಸಬಹುದು.

13069023a ರಕ್ಷಿತಾಸ್ಮೀತಿ ಚೋಕ್ತಂ ತೇ ಪ್ರತಿಜ್ಞಾ ಚಾನೃತಾ ತವ|

13069023c ಬ್ರಾಹ್ಮಣಸ್ವಸ್ಯ ಚಾದಾನಂ ತ್ರಿವಿಧಸ್ತೇ ವ್ಯತಿಕ್ರಮಃ||

ರಕ್ಷಣೆಮಾಡುತ್ತೇನೆ ಎಂದು ಹೇಳಿದ್ದ ಆ ನಿನ್ನ ಪ್ರತಿಜ್ಞೆಯು, ಬ್ರಾಹ್ಮಣನು ತನ್ನ ಗೋವನ್ನು ಕಳೆದುಕೊಂಡಿದುದರಿಂದ ಸುಳ್ಳಾಗಿ ಹೋಯಿತು. ಮತ್ತು ಆ ಬ್ರಾಹ್ಮಣನ ಗೋವನ್ನು ತಿಳಿಯದೇ ನೀನು ಅಪಹರಿಸಿಬಿಟ್ಟಿದ್ದೆ. ಈ ರೀತಿ ಮೂರು ವಿಧದಲ್ಲಿ ನೀನು ಪಾಪವನ್ನೆಸಗಿದ್ದೀಯೆ.”

13069024a ಪೂರ್ವಂ ಕೃಚ್ಚ್ರಂ ಚರಿಷ್ಯೇಽಹಂ ಪಶ್ಚಾಚ್ಚುಭಮಿತಿ ಪ್ರಭೋ|

13069024c ಧರ್ಮರಾಜಂ ಬ್ರುವನ್ನೇವಂ ಪತಿತೋಽಸ್ಮಿ ಮಹೀತಲೇ||

“ಪ್ರಭೋ! ಮೊದಲು ನಾನು ಪಾಪವನ್ನು ಭೋಗಿಸಿ ನಂತರ ಪುಣ್ಯವನ್ನು ಬೋಗಿಸುತ್ತೇನೆ” ಎಂದು ಧರ್ಮರಾಜನಿಗೆ ಹೇಳುತ್ತಿರುವಾಗಲೇ ನಾನು ಭೂಮಿಯ ಮೇಲೆ ಬಿದ್ದೆನು.

13069025a ಅಶ್ರೌಷಂ ಪ್ರಚ್ಯುತಶ್ಚಾಹಂ ಯಮಸ್ಯೋಚ್ಚೈಃ ಪ್ರಭಾಷತಃ|

13069025c ವಾಸುದೇವಃ ಸಮುದ್ಧರ್ತಾ ಭವಿತಾ ತೇ ಜನಾರ್ದನಃ||

13069026a ಪೂರ್ಣೇ ವರ್ಷಸಹಸ್ರಾಂತೇ ಕ್ಷೀಣೇ ಕರ್ಮಣಿ ದುಷ್ಕೃತೇ|

13069026c ಪ್ರಾಪ್ಸ್ಯಸೇ ಶಾಶ್ವತಾಽಲ್ಲೋಕಾನ್ಜಿತಾನ್ಸ್ವೇನೈವ ಕರ್ಮಣಾ||

ಬೀಳುತ್ತಿರುವಾಗ ಯಮನು ಉಚ್ಛಸ್ವರದಲ್ಲಿ ನನಗೆ ಹೇಳಿದ ಈ ಮಾತು ನನ್ನ ಕಿವಿಗಳ ಮೇಲೆ ಬಿದ್ದಿತು: “ಒಂದು ಸಹಸ್ರ ದಿವ್ಯ ವರ್ಷಗಳು ಪೂರ್ಣವಾದ ನಂತರ ನಿನ್ನ ಪಾಪಕರ್ಮದ ಭೋಗವು ಸಮಾಪ್ತವಾಗುತ್ತದೆ. ಆಗ ವಾಸುದೇವ ಜನಾರ್ದನನು ನಿನ್ನನ್ನು ಉದ್ಧರಿಸುತ್ತಾನೆ ಮತ್ತು ನಿನ್ನ ಪುಣ್ಯಕರ್ಮಗಳ ಪ್ರಭಾವದಿಂದ ಪ್ರಾಪ್ತವಾದ ಸನಾತನ ಲೋಕಗಳಿಗೆ ಹೋಗುತ್ತೀಯೆ.”

13069027a ಕೂಪೇಽತ್ಮಾನಮಧಃಶೀರ್ಷಮಪಶ್ಯಂ ಪತಿತಂ ಚ ಹ|

13069027c ತಿರ್ಯಗ್ಯೋನಿಮನುಪ್ರಾಪ್ತಂ ನ ತು ಮಾಮಜಹಾತ್ ಸ್ಮೃತಿಃ||

ಬಾವಿಯಲ್ಲಿ ಬಿದ್ದಾಗ ನನಗೆ ತಿರ್ಯಗ್ಯೋನಿಯು ದೊರಕಿದೆ ಮತ್ತು ನನ್ನ ಶಿರವು ಕೆಳಗಾಗಿದೆ ಎಂದು ಕಂಡುಕೊಂಡೆನು. ಈ ಯೋನಿಯಲ್ಲಿಯೂ ಕೂಡ ನನ್ನ ಪೂರ್ವಜನ್ಮದ ಸ್ಮರಣಶಕ್ತಿಯು ನನ್ನೊಡನಿತ್ತು.

13069028a ತ್ವಯಾ ತು ತಾರಿತೋಽಸ್ಮ್ಯದ್ಯ ಕಿಮನ್ಯತ್ರ ತಪೋಬಲಾತ್|

13069028c ಅನುಜಾನೀಹಿ ಮಾಂ ಕೃಷ್ಣ ಗಚ್ಚೇಯಂ ದಿವಮದ್ಯ ವೈ||

ಕೃಷ್ಣ! ಇಂದು ನೀನು ನನ್ನನ್ನು ಉದ್ಧರಿಸಿದೆ. ತಪೋಬಲವಲ್ಲದೇ ಇದಕ್ಕೆ ಬೇರೆ ಯಾವ ಕಾರಣವಿದೆ? ಅನುಮತಿ ನೀಡು. ನಾನು ಸ್ವರ್ಗಕ್ಕೆ ತೆರಳುತ್ತೇನೆ.”

13069029a ಅನುಜ್ಞಾತಃ ಸ ಕೃಷ್ಣೇನ ನಮಸ್ಕೃತ್ಯ ಜನಾರ್ದನಮ್|

13069029c ವಿಮಾನಂ ದಿವ್ಯಮಾಸ್ಥಾಯ ಯಯೌ ದಿವಮರಿಂದಮ||

ಅರಿಂದಮ! ಕೃಷ್ನನಿಂದ ಅನುಜ್ಞಾತನಾಗಿ ಜನಾರ್ದನನಿಗೆ ನಮಸ್ಕರಿಸಿ ಅವನು ದಿವ್ಯ ವಿಮಾನದಲ್ಲಿ ಕುಳಿತು ದಿವಕ್ಕೆ ಹೋದನು.

13069030a ತತಸ್ತಸ್ಮಿನ್ದಿವಂ ಪ್ರಾಪ್ತೇ ನೃಗೇ ಭರತಸತ್ತಮ|

13069030c ವಾಸುದೇವ ಇಮಂ ಶ್ಲೋಕಂ ಜಗಾದ ಕುರುನಂದನ||

ಭರತಸತ್ತಮ! ಕುರುನಂದನ! ನೃಗನು ದಿವಕ್ಕೆ ಹೊರಟುಹೋದ ನಂತರ ವಾಸುದೇವನು ಈ ಶ್ಲೋಕವನ್ನು ಹಾಡಿದನು:

13069031a ಬ್ರಾಹ್ಮಣಸ್ವಂ ನ ಹರ್ತವ್ಯಂ ಪುರುಷೇಣ ವಿಜಾನತಾ|

13069031c ಬ್ರಾಹ್ಮಣಸ್ವಂ ಹೃತಂ ಹಂತಿ ನೃಗಂ ಬ್ರಾಹ್ಮಣಗೌರಿವ||

“ತಿಳಿದ ಪುರುಷನು ಬ್ರಾಹ್ಮಣನ ಸ್ವತ್ತನ್ನು ಅಪಹರಿಸಬಾರದು. ಬ್ರಾಹ್ಮಣನ ಗೋವು ನೃಗನನ್ನು ಹೇಗೋ ಹಾಗೆ ಬ್ರಾಹ್ಮಣನಿಂದ ಅಪಹರಿಸಿದುದು ಅಪಹರಿಸಿದವನನ್ನು ನಾಶಗೊಳಿಸುತ್ತದೆ.”

13069032a ಸತಾಂ ಸಮಾಗಮಃ ಸದ್ಭಿರ್ನಾಫಲಃ ಪಾರ್ಥ ವಿದ್ಯತೇ|

13069032c ವಿಮುಕ್ತಂ ನರಕಾತ್ಪಶ್ಯ ನೃಗಂ ಸಾಧುಸಮಾಗಮಾತ್||

ಪಾರ್ಥ! ಸಜ್ಜನರ ಸಂಗವು ಸತ್ಪುರುಷನಿಗೆ ವ್ಯರ್ಥವಾಗುವುದಿಲ್ಲ. ನೋಡು! ಸಾಧುಪುರುಷನ ಸಮಾಗಮದಿಂದ ನೃಗನು ನರಕದಿಂದ ವಿಮುಕ್ತನಾದನು.

13069033a ಪ್ರದಾನಂ ಫಲವತ್ತತ್ರ ದ್ರೋಹಸ್ತತ್ರ ತಥಾಫಲಃ|

13069033c ಅಪಚಾರಂ ಗವಾಂ ತಸ್ಮಾದ್ವರ್ಜಯೇತ ಯುಧಿಷ್ಠಿರ||

ಯುಧಿಷ್ಠಿರ! ಗೋದಾನಮಾಡುವುದರಿಂದ ಯಾವ ಫಲವು ದೊರೆಯುತ್ತದೆಯೋ ಹಾಗೆಯೇ ಗೋವಿಗೆ ದ್ರೋಹಮಾಡುವುದರಿಂದ ಅಷ್ಟೇ ದೊಡ್ಡ ಕುಫಲವನ್ನು ಭೋಗಿಸಬೇಕಾಗುತ್ತದೆ. ಆದುದರಿಂದ ಗೋವಿಗೆ ಎಂದೂ ಕಷ್ಟಕೊಡಬಾರದು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ನೃಗೋಪಾಖ್ಯಾನೇ ಏಕೋನಸಪ್ತತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ನೃಗೋಪಾಖ್ಯಾನ ಎನ್ನುವ ಅರವತ್ತೊಂಭತ್ತನೇ ಅಧ್ಯಾಯವು.

Small Pink Flowers On A White Background Stock Photo, Picture And ...

[1] ಒಟ್ಟು ಎಂಭತ್ತೊಂದು ಲಕ್ಷದ ಎರಡು ನೂರು ಗೋವುಗಳು.

Comments are closed.