Anushasana Parva: Chapter 67

ಅನುಶಾಸನ ಪರ್ವ: ದಾನಧರ್ಮ ಪರ್ವ

೬೭

ತಿಲಾದಿದಾನ ಪ್ರಶಂಸಾ

ತಿಲ, ಜಲ, ದೀಪ ಮತ್ತು ರತ್ನ ಮೊದಲಾದವುಗಳ ದಾನಗಳ ಮಹಾತ್ಮ್ಯೆ: ಯಮ-ಬ್ರಾಹ್ಮಣರ ಸಂವಾದ (೧-೩೩).

13067001 ಯುಧಿಷ್ಠಿರ ಉವಾಚ|

13067001a ತಿಲಾನಾಂ ಕೀದೃಶಂ ದಾನಮಥ ದೀಪಸ್ಯ ಚೈವ ಹ|

13067001c ಅನ್ನಾನಾಂ ವಾಸಸಾಂ ಚೈವ ಭೂಯ ಏವ ಬ್ರವೀಹಿ ಮೇ||

ಯುಧಿಷ್ಠಿರನು ಹೇಳಿದನು: “ತಿಲದಾನದ ಫಲವು ಎಂಥಹುದು? ದೀಪ, ಅನ್ನ ಮತ್ತು ವಸ್ತ್ರದಾನಗಳ ಫಲವನ್ನು ಪುನಃ ನನಗೆ ಹೇಳು.”

13067002 ಭೀಷ್ಮ ಉವಾಚ|

13067002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13067002c ಬ್ರಾಹ್ಮಣಸ್ಯ ಚ ಸಂವಾದಂ ಯಮಸ್ಯ ಚ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ಬ್ರಾಹ್ಮಣ ಮತ್ತು ಯಮರ ಸಂವಾದವನ್ನು ಉದಾಹರಿಸುತ್ತಾರೆ.

13067003a ಮಧ್ಯದೇಶೇ ಮಹಾನ್ಗ್ರಾಮೋ ಬ್ರಾಹ್ಮಣಾನಾಂ ಬಭೂವ ಹ|

13067003c ಗಂಗಾಯಮುನಯೋರ್ಮಧ್ಯೇ ಯಾಮುನಸ್ಯ ಗಿರೇರಧಃ||

13067004a ಪರ್ಣಶಾಲೇತಿ ವಿಖ್ಯಾತೋ ರಮಣೀಯೋ ನರಾಧಿಪ|

13067004c ವಿದ್ವಾಂಸಸ್ತತ್ರ ಭೂಯಿಷ್ಠಾ ಬ್ರಾಹ್ಮಣಾಶ್ಚಾವಸಂಸ್ತದಾ||

ನರಾಧಿಪ! ಮಧ್ಯದೇಶದಲ್ಲಿ, ಗಂಗಾ-ಯಮುನೆಯರ ಮಧ್ಯದಲ್ಲಿ ಯಾಮುನ ಪರ್ವತದ ಕೆಳಗೆ ಬ್ರಾಹ್ಮಣರ ಒಂದು ವಿಶಾಲ ರಮಣೀಯ, ಪರ್ಣಶಾಲ ಎಂದು ಜನರಲ್ಲಿ ವಿಖ್ಯಾತ ಗ್ರಾಮವಿತ್ತು. ಅಲ್ಲಿ ಅನೇಕ ವಿದ್ವಾಂಸ ಬ್ರಾಹ್ಮಣರು ವಾಸಿಸುತ್ತಿದ್ದರು.

13067005a ಅಥ ಪ್ರಾಹ ಯಮಃ ಕಂ ಚಿತ್ಪುರುಷಂ ಕೃಷ್ಣವಾಸಸಮ್|

13067005c ರಕ್ತಾಕ್ಷಮೂರ್ಧ್ವರೋಮಾಣಂ ಕಾಕಜಂಘಾಕ್ಷಿನಾಸಿಕಮ್||

ಒಮ್ಮೆ ಯಮನು ಕಪ್ಪು ಬಟ್ಟೆಯನ್ನು ಧರಿಸಿದ್ದ, ರಕ್ತಾಕ್ಷ, ರೋಮಗಳು ನಿಮಿರಿನಿಂತಿದ್ದ, ಕಾಗೆಯಂಥಹ ಕಣ್ಣು-ಮೂಗುಗಳಿದ್ದ ಓರ್ವ ದೂತನಿಗೆ ಹೇಳಿದನು:

13067006a ಗಚ್ಚ ತ್ವಂ ಬ್ರಾಹ್ಮಣಗ್ರಾಮಂ ತತೋ ಗತ್ವಾ ತಮಾನಯ|

13067006c ಅಗಸ್ತ್ಯಂ ಗೋತ್ರತಶ್ಚಾಪಿ ನಾಮತಶ್ಚಾಪಿ ಶರ್ಮಿಣಮ್||

13067007a ಶಮೇ ನಿವಿಷ್ಟಂ ವಿದ್ವಾಂಸಮಧ್ಯಾಪಕಮನಾದೃತಮ್|

“ನೀನು ಬ್ರಾಹ್ಮಣಕ್ರಾಮಕ್ಕೆ ಹೋಗು. ಹೋಗಿ ಅಗಸ್ತ್ಯಗೋತ್ರದ ಶರ್ಮ ಎಂಬ ಹೆಸರಿನ ಶಾಂತಸ್ವಭಾವದ ವಿದ್ವಾಂಸ ಅಧ್ಯಾಪಕ ಬಡವನನ್ನು ಕರೆದುಕೊಂಡು ಬಾ.

13067007c ಮಾ ಚಾನ್ಯಮಾನಯೇಥಾಸ್ತ್ವಂ ಸಗೋತ್ರಂ ತಸ್ಯ ಪಾರ್ಶ್ವತಃ||

13067008a ಸ ಹಿ ತಾದೃಗ್ಗುಣಸ್ತೇನ ತುಲ್ಯೋಽಧ್ಯಯನಜನ್ಮನಾ|

13067008c ಅಪತ್ಯೇಷು ತಥಾ ವೃತ್ತೇ ಸಮಸ್ತೇನೈವ ಧೀಮತಾ|

13067008e ತಮಾನಯ ಯಥೋದ್ದಿಷ್ಟಂ ಪೂಜಾ ಕಾರ್ಯಾ ಹಿ ತಸ್ಯ ಮೇ||

ಆದರೆ ಅವನ ಪಕ್ಕದಲ್ಲಿಯೇ ವಾಸಿಸುವ ಅದೇ ಗೋತ್ರ ಅದೇ ಗುಣಗಳಿರುವ, ಅಧ್ಯಯನ-ಕುಲಗಳಲ್ಲಿ, ಸಂತಾನದಲ್ಲಿ ಮತ್ತು ನಡತೆ ಎಲ್ಲದರಲ್ಲಿರೂ ಆ ಧೀಮಂತನ ಸಮನಾಗಿರುವವನನ್ನು ಇಲ್ಲಿಗೆ ಕರೆದುಕೊಂಡು ಬರಬೇಡ. ನಾನು ಹೇಳಿದವನನ್ನೇ ಇಲ್ಲಿಗೆ ಕರೆದುಕೊಂಡು ಬಾ. ನಾನು ಅವನನ್ನು ಪೂಜಿಸಬೇಕು.”

13067009a ಸ ಗತ್ವಾ ಪ್ರತಿಕೂಲಂ ತಚ್ಚಕಾರ ಯಮಶಾಸನಮ್|

13067009c ತಮಾಕ್ರಮ್ಯಾನಯಾಮಾಸ ಪ್ರತಿಷಿದ್ಧೋ ಯಮೇನ ಯಃ||

ಆ ಯಮದೂತನು ಅಲ್ಲಿಗೆ ಹೋಗಿ ಯಮಶಾಸನಕ್ಕೆ ವಿರುದ್ಧವಾದುದನ್ನು ಮಾಡಿದನು. ಯಮನು ಯಾರನ್ನು ಕರೆದುಕೊಂಡು ಬರಬೇಡ ಎಂದಿದ್ದನೋ ಅವನನ್ನೇ ಬಲಾತ್ಕಾರವಾಗಿ ಕರೆದುಕೊಂಡು ಬಂದನು.

13067010a ತಸ್ಮೈ ಯಮಃ ಸಮುತ್ಥಾಯ ಪೂಜಾಂ ಕೃತ್ವಾ ಚ ವೀರ್ಯವಾನ್|

13067010c ಪ್ರೋವಾಚ ನೀಯತಾಮೇಷ ಸೋಽನ್ಯ ಆನೀಯತಾಮಿತಿ||

ವೀರ್ಯವಾನ್ ಯಮನು ಮೇಲೆದ್ದು ದೂತನು ಕರೆದುಕೊಂಡು ಬಂದವನನ್ನು ಪೂಜಿಸಿ ದೂತನಿಗೆ ಹೇಳಿದನು: “ಇವನನ್ನು ನೀನು ಕರೆದುಕೊಂಡು ಹೋಗು ಮತ್ತು ಇನ್ನೊಬ್ಬನನ್ನು ಇಲ್ಲಿಗೆ ಕರೆದುಕೊಂಡು ಬಾ!”

13067011a ಏವಮುಕ್ತೇ ತು ವಚನೇ ಧರ್ಮರಾಜೇನ ಸ ದ್ವಿಜಃ|

13067011c ಉವಾಚ ಧರ್ಮರಾಜಾನಂ ನಿರ್ವಿಣ್ಣೋಽಧ್ಯಯನೇನ ವೈ|

13067011e ಯೋ ಮೇ ಕಾಲೋ ಭವೇಚ್ಚೇಷಸ್ತಂ ವಸೇಯಮಿಹಾಚ್ಯುತ|

ಧರ್ಮರಾಜನು ಹೀಗೆ ಹೇಳಲು ಅಧ್ಯಯನದಲ್ಲಿ ನಿರ್ವಿಣ್ಣನಾಗಿದ್ದ ದ್ವಿಜನು ಧರ್ಮರಾಜನಿಗೆ ಹೇಳಿದನು: “ಅಚ್ಯುತ! ನನ್ನ ಜೀವನದಲ್ಲಿ ಎಷ್ಟು ಸಮಯವು ಇನ್ನೂ ಉಳಿದಿದೆಯೋ ಅಷ್ಟು ಸಮಯ ನಾನು ಇಲ್ಲಿಯೇ ವಾಸಿಸುತ್ತೇನೆ.”

13067012 ಯಮ ಉವಾಚ|

13067012a ನಾಹಂ ಕಾಲಸ್ಯ ವಿಹಿತಂ ಪ್ರಾಪ್ನೋಮೀಹ ಕಥಂ ಚನ|

13067012c ಯೋ ಹಿ ಧರ್ಮಂ ಚರತಿ ವೈ ತಂ ತು ಜಾನಾಮಿ ಕೇವಲಮ್||

ಯಮನು ಹೇಳಿದನು: “ನಾನು ಕಾಲನ ವಿಧಾನವನ್ನು ಸ್ವಲ್ಪವೂ ತಿಳಿದಿಲ್ಲ. ಜಗತ್ತಿನಲ್ಲಿ ಧರ್ಮಾಚರಣೆ ಮಾಡುವ ಪುರುಷರನ್ನು ಮಾತ್ರ ನಾನು ತಿಳಿದಿದ್ದೇನೆ.

13067013a ಗಚ್ಚ ವಿಪ್ರ ತ್ವಮದ್ಯೈವ ಆಲಯಂ ಸ್ವಂ ಮಹಾದ್ಯುತೇ|

13067013c ಬ್ರೂಹಿ ವಾ ತ್ವಂ ಯಥಾ ಸ್ವೈರಂ ಕರವಾಣಿ ಕಿಮಿತ್ಯುತ||

ಮಹಾದ್ಯುತೇ! ವಿಪ್ರ! ಇಂದೇ ನೀನು ನಿನ್ನ ಮನೆಗೆ ತೆರಳು. ಅಥವಾ ನಿನಗೋಸ್ಕರ ನಾನು ಏನು ಮಾಡಬೇಕು ಎನ್ನುವುದನ್ನು ಹೇಳು.”

13067014 ಬ್ರಾಹ್ಮಣ ಉವಾಚ|

13067014a ಯತ್ತತ್ರ ಕೃತ್ವಾ ಸುಮಹತ್ಪುಣ್ಯಂ ಸ್ಯಾತ್ತದ್ಬ್ರವೀಹಿ ಮೇ|

13067014c ಸರ್ವಸ್ಯ ಹಿ ಪ್ರಮಾಣಂ ತ್ವಂ ತ್ರೈಲೋಕ್ಯಸ್ಯಾಪಿ ಸತ್ತಮ||

ಬ್ರಾಹ್ಮಣನು ಹೇಳಿದನು: “ಸತ್ತಮ! ಸಂಸಾರದಲ್ಲಿ ಯಾವ ಕರ್ಮಗಳನ್ನು ಮಾಡುವುದರಿಂದ ಮಹಾ ಪುಣ್ಯವು ದೊರೆಯುತ್ತದೆ ಅದನ್ನು ನನಗೆ ಹೇಳು. ಏಕೆಂದರೆ ಸಮಸ್ತ ತ್ರೈಲೋಕ್ಯಗಳಲ್ಲಿ ಧರ್ಮದ ವಿಷಯದಲ್ಲಿ ನೀನೇ ಪ್ರಮಾಣವು.”

13067015 ಯಮ ಉವಾಚ|

13067015a ಶೃಣು ತತ್ತ್ವೇನ ವಿಪ್ರರ್ಷೇ ಪ್ರದಾನವಿಧಿಮುತ್ತಮಮ್|

13067015c ತಿಲಾಃ ಪರಮಕಂ ದಾನಂ ಪುಣ್ಯಂ ಚೈವೇಹ ಶಾಶ್ವತಮ್||

ಯಮನು ಹೇಳಿದನು: “ವಿಪ್ರರ್ಷೇ! ಯಥಾರ್ಥರೂಪದಲ್ಲಿ ದಾನದ ಉತ್ತಮ ವಿಧಿಯನ್ನು ಕೇಳು. ತಿಲಾದಾನವು ಸರ್ವ ದಾನಗಳಿಗಿಂತಲೂ ಉತ್ತಮವಾದುದು. ಅದು ಇಲ್ಲಿ ಶಾಶ್ವತ ಪುಣ್ಯವನ್ನು ತರುತ್ತದೆ ಎಂದು ಹೇಳುತ್ತಾರೆ.

13067016a ತಿಲಾಶ್ಚ ಸಂಪ್ರದಾತವ್ಯಾ ಯಥಾಶಕ್ತಿ ದ್ವಿಜರ್ಷಭ|

13067016c ನಿತ್ಯದಾನಾತ್ಸರ್ವಕಾಮಾಂಸ್ತಿಲಾ ನಿರ್ವರ್ತಯಂತ್ಯುತ||

ದ್ವಿಜರ್ಷಭ! ಯಥಾಶಕ್ತಿ ತಿಲದಾನವನ್ನು ಮಾಡಬೇಕು. ನಿತ್ಯವೂ ತಿಲದಾನ ಮಾಡುವುದರಿಂದ ದಾತನ ಸಂಪೂರ್ಣ ಕಾಮನೆಗಳು ಪೂರ್ಣವಾಗುತ್ತವೆ.

13067017a ತಿಲಾನ್ ಶ್ರಾದ್ಧೇ ಪ್ರಶಂಸಂತಿ ದಾನಮೇತದ್ಧ್ಯನುತ್ತಮಮ್|

13067017c ತಾನ್ಪ್ರಯಚ್ಚಸ್ವ ವಿಪ್ರೇಭ್ಯೋ ವಿಧಿದೃಷ್ಟೇನ ಕರ್ಮಣಾ||

ಶ್ರಾದ್ಧಗಳಲ್ಲಿ ತಿಲಾದಾನವು ಅನುತ್ತಮವಾದುದೆಂದು ಪ್ರಶಂಸಿಸುತ್ತಾರೆ. ವಿಧಿದೃಷ್ಟ ಕರ್ಮಗಳಿಂದ ವಿಪ್ರರಿಗೆ ತಿಲದಾನವನ್ನು ಮಾಡು.

13067018a ತಿಲಾ ಭಕ್ಷಯಿತವ್ಯಾಶ್ಚ ಸದಾ ತ್ವಾಲಭನಂ ಚ ತೈಃ|

13067018c ಕಾರ್ಯಂ ಸತತಮಿಚ್ಚದ್ಭಿಃ ಶ್ರೇಯಃ ಸರ್ವಾತ್ಮನಾ ಗೃಹೇ||

13067019a ತಥಾಪಃ ಸರ್ವದಾ ದೇಯಾಃ ಪೇಯಾಶ್ಚೈವ ನ ಸಂಶಯಃ|

ಸದಾ ತಿಲವನ್ನು ತಿನ್ನಬೇಕು ಮತ್ತು ತಿಲವನ್ನು ಹಚ್ಚಿಕೊಳ್ಳಬೇಕು. ಶ್ರೇಯಸ್ಸನ್ನು ಬಯಸುವವನು ಮನೆಯಲ್ಲಿ ಸತತವೂ ತಿಲವನ್ನು ಬಳಸಬೇಕು ಮತ್ತು ದಾನಮಾಡಬೇಕು. ಇದೇ ರೀತಿ ಸರ್ವದಾ ಜಲವನ್ನು ಕುಡಿಯಬೇಕು ಮತ್ತು ದಾನಮಾಡಬೇಕು. ಅದರಲ್ಲಿ ಸಂಶಯವಿಲ್ಲ.

13067019c ಪುಷ್ಕರಿಣ್ಯಸ್ತಡಾಗಾನಿ ಕೂಪಾಂಶ್ಚೈವಾತ್ರ ಖಾನಯೇತ್||

13067020a ಏತತ್ಸುದುರ್ಲಭತರಮಿಹ ಲೋಕೇ ದ್ವಿಜೋತ್ತಮ|

ದ್ವಿಜೋತ್ತಮ! ಇಲ್ಲಿ ಸರೋವರ, ಕೆರೆಗಳು ಮತ್ತು ಬಾವಿಗಳನ್ನು ತೋಡಬೇಕು. ಈ ಲೋಕದಲ್ಲಿ ಅವು ದುರ್ಲಭ ಪುಣ್ಯಕಾರ್ಯಗಳು.

13067020c ಆಪೋ ನಿತ್ಯಂ ಪ್ರದೇಯಾಸ್ತೇ ಪುಣ್ಯಂ ಹ್ಯೇತದನುತ್ತಮಮ್||

13067021a ಪ್ರಪಾಶ್ಚ ಕಾರ್ಯಾಃ ಪಾನಾರ್ಥಂ ನಿತ್ಯಂ ತೇ ದ್ವಿಜಸತ್ತಮ|

13067021c ಭುಕ್ತೇಽಪ್ಯಥ ಪ್ರದೇಯಂ ತೇ ಪಾನೀಯಂ ವೈ ವಿಶೇಷತಃ||

ದ್ವಿಜಸತ್ತಮ! ನಿತ್ಯವೂ ನೀರನ್ನು ನೀಡುವ ಪುಣ್ಯಕಾರ್ಯವನ್ನು ಮಾಡಬೇಕು. ಇದು ಅನುತ್ತಮವಾದುದು. ನಿತ್ಯವೂ ನೀರು ಕುಡಿಯಲು ಕಾರಂಜಿಯನ್ನು ಹಾಕಬೇಕು. ಊಟಮಾಡಿದವನಿಗೆ ವಿಶೇಷವಾಗಿ ನೀರನ್ನು ಕೊಡಬೇಕು.”

13067022a ಇತ್ಯುಕ್ತೇ ಸ ತದಾ ತೇನ ಯಮದೂತೇನ ವೈ ಗೃಹಾನ್|

13067022c ನೀತಶ್ಚಕಾರ ಚ ತಥಾ ಸರ್ವಂ ತದ್ಯಮಶಾಸನಮ್||

ಹೀಗೆ ಹೇಳಲು ಯಮದೂತನು ಅವನನ್ನು ಅವನ ಮನೆಗೆ ಕರೆದುಕೊಂಡು ಹೋದನು. ಅಲ್ಲಿ ಅವನು ಯಮನ ಶಾಸನದಂತೆ ಎಲ್ಲವನ್ನೂ ಮಾಡಿದನು.

13067023a ನೀತ್ವಾ ತಂ ಯಮದೂತೋಽಪಿ ಗೃಹೀತ್ವಾ ಶರ್ಮಿಣಂ ತದಾ|

13067023c ಯಯೌ ಸ ಧರ್ಮರಾಜಾಯ ನ್ಯವೇದಯತ ಚಾಪಿ ತಮ್||

ಅನಂತರ ಯಮದೂದನು ಶರ್ಮಿಯನ್ನು ಕರೆದುಕೊಂಡು ಹೋಗಿ ಅವನು ಬಂದಿರುವುದನ್ನು ಧರ್ಮರಾಜನಿಗೆ ನಿವೇದಿಸಿದನು.

13067024a ತಂ ಧರ್ಮರಾಜೋ ಧರ್ಮಜ್ಞಂ ಪೂಜಯಿತ್ವಾ ಪ್ರತಾಪವಾನ್|

13067024c ಕೃತ್ವಾ ಚ ಸಂವಿದಂ ತೇನ ವಿಸಸರ್ಜ ಯಥಾಗತಮ್||

ಪ್ರತಾಪವಾನ್ ಧರ್ಮರಾಜನು ಆ ಧರ್ಮಜ್ಞನನ್ನು ಪೂಜಿಸಿ, ಸಂವಾದಗೈದು, ಅವನು ಹೇಗೆ ಬಂದಿದ್ದನೋ ಹಾಗೆ ಕಳುಹಿಸಿಕೊಟ್ಟನು.

13067025a ತಸ್ಯಾಪಿ ಚ ಯಮಃ ಸರ್ವಮುಪದೇಶಂ ಚಕಾರ ಹ|

13067025c ಪ್ರತ್ಯೇತ್ಯ ಚ ಸ ತತ್ಸರ್ವಂ ಚಕಾರೋಕ್ತಂ ಯಮೇನ ತತ್||

ಅವನಿಗೂ ಕೂಡ ಯಮನು ಉಪದೇಶವೆಲ್ಲವನ್ನೂ ಮಾಡಿದನು. ಪರಲೋಕದಿಂದ ಹಿಂದಿರುಗಿದ ಅವನು ಯಮನು ಹೇಳಿದಂತೆ ಎಲ್ಲವನ್ನೂ ಮಾಡಿದನು.

13067026a ತಥಾ ಪ್ರಶಂಸತೇ ದೀಪಾನ್ಯಮಃ ಪಿತೃಹಿತೇಪ್ಸಯಾ|

13067026c ತಸ್ಮಾದ್ದೀಪಪ್ರದೋ ನಿತ್ಯಂ ಸಂತಾರಯತಿ ವೈ ಪಿತೄನ್||

ಹಾಗೆಯೇ ಯಮನು ಪಿತೃಗಳ ಹಿತಕ್ಕಾಗಿ ದೀಪದಾನವನ್ನು ಪ್ರಶಂಸಿಸುತ್ತಾನೆ. ಆದುದರಿಂದ ನಿತ್ಯ ದೀಪದಾನವು ಪಿತೃಗಳನ್ನು ಉದ್ಧರಿಸುತ್ತದೆ.

13067027a ದಾತವ್ಯಾಃ ಸತತಂ ದೀಪಾಸ್ತಸ್ಮಾದ್ಭರತಸತ್ತಮ|

13067027c ದೇವಾನಾಂ ಚ ಪಿತೄಣಾಂ ಚ ಚಕ್ಷುಷ್ಯಾಸ್ತೇ ಮತಾಃ ಪ್ರಭೋ||

ಭರತಸತ್ತಮ! ಪ್ರಭೋ! ದೇವತೆಗಳ ಮತ್ತು ಪಿತೃಗಳನ್ನು ಉದ್ದೇಶಿಸಿ ಸತತವೂ ದೀಪದಾನಮಾಡಬೇಕು. ಇದರಿಂದ ಅವನ ಕಣ್ಣುಗಳ ತೇಜಸ್ಸು ಹೆಚ್ಚಾಗುತ್ತದೆ.

13067028a ರತ್ನದಾನಂ ಚ ಸುಮಹತ್ಪುಣ್ಯಮುಕ್ತಂ ಜನಾಧಿಪ|

13067028c ತಾನಿ ವಿಕ್ರೀಯ ಯಜತೇ ಬ್ರಾಹ್ಮಣೋ ಹ್ಯಭಯಂಕರಃ||

ಜನಾಧಿಪ! ರತ್ನದಾನದ ಪುಣ್ಯವು ಮಹತ್ತರವಾದುದೆಂದು ಹೇಳುತ್ತಾರೆ. ದಾನವಾಗಿ ಪಡೆದುಕೊಂಡ ರತ್ನವನ್ನು ಮಾರಿ ಯಜ್ಞಮಾಡುವ ಬ್ರಾಹ್ಮಣನಿಗೆ ಅದು ಭಯವನ್ನುಂಟುಮಾಡುವುದಿಲ್ಲ.

13067029a ಯದ್ವೈ ದದಾತಿ ವಿಪ್ರೇಭ್ಯೋ ಬ್ರಾಹ್ಮಣಃ ಪ್ರತಿಗೃಹ್ಯ ವೈ|

13067029c ಉಭಯೋಃ ಸ್ಯಾತ್ತದಕ್ಷಯ್ಯಂ ದಾತುರಾದಾತುರೇವ ಚ||

ದಾನವಾಗಿ ಪಡೆದುಕೊಂಡ ರತ್ನವನ್ನು ಬ್ರಾಹ್ಮಣನು ಇತರ ಬ್ರಾಹ್ಮಣರಿಗೆ ನೀಡಿದರೆ ದಾನಮಾಡಿದವನು ಮತ್ತು ತೆಗೆದುಕೊಂಡವನು ಇಬ್ಬರಿಗೂ ಅಕ್ಷಯ ಲೋಕಗಳು ಪ್ರಾಪ್ತವಾಗುತ್ತವೆ.

13067030a ಯೋ ದದಾತಿ ಸ್ಥಿತಃ ಸ್ಥಿತ್ಯಾಂ ತಾದೃಶಾಯ ಪ್ರತಿಗ್ರಹಮ್|

13067030c ಉಭಯೋರಕ್ಷಯಂ ಧರ್ಮಂ ತಂ ಮನುಃ ಪ್ರಾಹ ಧರ್ಮವಿತ್||

ತನ್ನ ಧರ್ಮಮರ್ಯಾದೆಯಲ್ಲಿ ನಿಂತು ತನ್ನ ಸಮಾನ ಸ್ಥಿತಿಯವನಿಗೆ ದಾನದಲ್ಲಿ ದೊರೆತ ವಸ್ತುವನ್ನು ದಾನಮಾಡಿದರೆ ಅವರಿಬ್ಬರಿಗೂ ಅಕ್ಷಯ ಧರ್ಮದ ಪ್ರಾಪ್ತಿಯಾಗುತ್ತದೆ. ಹೀಗೆ ಧರ್ಮವಿದು ಮನು ಹೇಳಿದ್ದಾನೆ.

13067031a ವಾಸಸಾಂ ತು ಪ್ರದಾನೇನ ಸ್ವದಾರನಿರತೋ ನರಃ|

13067031c ಸುವಸ್ತ್ರಶ್ಚ ಸುವೇಷಶ್ಚ ಭವತೀತ್ಯನುಶುಶ್ರುಮ||

ತನ್ನ ಪತ್ನಿಯಲ್ಲಿ ನಿರತನಾಗಿರುವ ನರನು ವಸ್ತ್ರಗಳನ್ನು ದಾನಮಾಡಿದರೆ ಅವನು ಸುಂದರ ವಸ್ತ್ರಗಳು ಮತ್ತು ಭೂಷಣಗಳನ್ನು ಪಡೆಯುತ್ತಾನೆ ಎಂದು ಕೇಳಿದ್ದೇವೆ.

13067032a ಗಾವಃ ಸುವರ್ಣಂ ಚ ತಥಾ ತಿಲಾಶ್ಚೈವಾನುವರ್ಣಿತಾಃ|

13067032c ಬಹುಶಃ ಪುರುಷವ್ಯಾಘ್ರ ವೇದಪ್ರಾಮಾಣ್ಯದರ್ಶನಾತ್||

ಪುರುಷವ್ಯಾಘ್ರ! ಗೋವು, ಸುವರ್ಣ, ಮತ್ತು ತಿಲದಾನಗಳ ಮಹಾತ್ಮ್ಯಗಳನ್ನು ಅನೇಕ ಬಾರಿ ವೇದಪ್ರಮಾಣ ದರ್ಶನಗಳನ್ನಿತ್ತು ವರ್ಣಿಸಿದ್ದೇನೆ.

13067033a ವಿವಾಹಾಂಶ್ಚೈವ ಕುರ್ವೀತ ಪುತ್ರಾನುತ್ಪಾದಯೇತ ಚ|

13067033c ಪುತ್ರಲಾಭೋ ಹಿ ಕೌರವ್ಯ ಸರ್ವಲಾಭಾದ್ವಿಶಿಷ್ಯತೇ||

ಕೌರವ್ಯ! ಮನುಷ್ಯನು ವಿವಾಹಮಾಡಿಕೊಳ್ಳಲಿ ಮತ್ತು ಪುತ್ರನನ್ನು ಹುಟ್ಟಿಸಲಿ. ಏಕೆಂದರೆ ಪುತ್ರಲಾಭವೇ ಸರ್ವಲಾಭಗಳಿಗಿಂತಲೂ ವಿಶೇಷವಾದುದು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಯಮಬ್ರಾಹ್ಮಣಸಂವಾದೇ ಸಪ್ತಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಯಮಬ್ರಾಹ್ಮಣಸಂವಾದ ಎನ್ನುವ ಅರವತ್ತೇಳನೇ ಅಧ್ಯಾಯವು.

Image result for flowers against white background

Comments are closed.