Anushasana Parva: Chapter 63

ಅನುಶಾಸನ ಪರ್ವ: ದಾನಧರ್ಮ ಪರ್ವ

೬೩

ನಕ್ಷತ್ರಯೋಗದಾನ

ವಿಭಿನ್ನ ನಕ್ಷತ್ರ ಯೋಗಗಳಲ್ಲಿ ಭಿನ್ನ-ಭಿನ್ನ ವಸ್ತುಗಳ ದಾನದ ಮಹಾತ್ಮ್ಯೆ; ನಾರದ-ದೇವಕಿಯರ ಸಂವಾದ (೧-೩೬).

13063001 ಯುಧಿಷ್ಠಿರ ಉವಾಚ|

13063001a ಶ್ರುತಂ ಮೇ ಭವತೋ ವಾಕ್ಯಮನ್ನದಾನಸ್ಯ ಯೋ ವಿಧಿಃ|

13063001c ನಕ್ಷತ್ರಯೋಗಸ್ಯೇದಾನೀಂ ದಾನಕಲ್ಪಂ ಬ್ರವೀಹಿ ಮೇ||

ಯುಧಿಷ್ಠಿರನು ಹೇಳಿದನು: “ಅನ್ನದಾನದ ವಿಧಿಯ ಕುರಿತು ನಿನ್ನ ಮಾತುಗಳನ್ನು ಕೇಳಿದೆನು. ಯಾವ ನಕ್ಷತ್ರ[1]ದ ಯೋಗ ಪ್ರಾಪ್ತವಾದಾಗ ಯಾವ ಯಾವ ವಸ್ತುಗಳ ದಾನಮಾಡುವುದು ಉತ್ತಮವೆಂದು ಹೇಳು.”

13063002 ಭೀಷ್ಮ ಉವಾಚ|

13063002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13063002c ದೇವಕ್ಯಾಶ್ಚೈವ ಸಂವಾದಂ ದೇವರ್ಷೇರ್ನಾರದಸ್ಯ ಚ||

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ದೇವಕಿ ಮತ್ತು ದೇವರ್ಷಿ ನಾರದರ ಸಂವಾದವನ್ನು ಉದಾಹರಿಸುತ್ತಾರೆ.

13063003a ದ್ವಾರಕಾಮನುಸಂಪ್ರಾಪ್ತಂ ನಾರದಂ ದೇವದರ್ಶನಮ್|

13063003c ಪಪ್ರಚ್ಚೈನಂ ತತಃ ಪ್ರಶ್ನಂ ದೇವಕೀ ಧರ್ಮದರ್ಶಿನೀ||

ದ್ವಾರಕೆಗೆ ಆಗಮಿಸಿದ್ದ ದೇವದರ್ಶನ ನಾರದನನ್ನು ಧರ್ಮದರ್ಶಿನೀ ದೇವಕಿಯು ಇದೇ ಪ್ರಶ್ನೆಯನ್ನು ಕೇಳಿದ್ದಳು.

13063004a ತಸ್ಯಾಃ ಸಂಪೃಚ್ಚಮಾನಾಯಾ ದೇವರ್ಷಿರ್ನಾರದಸ್ತದಾ|

13063004c ಆಚಷ್ಟ ವಿಧಿವತ್ಸರ್ವಂ ಯತ್ತಚ್ಚೃಣು ವಿಶಾಂ ಪತೇ||

ವಿಶಾಂಪತೇ! ಅವಳು ಕೇಳಲು ದೇವರ್ಷಿ ನಾರದನು ಅವಳಿಗೆ ವಿಧಿವತ್ತಾಗಿ ಎಲ್ಲವನ್ನೂ ಹೇಳಿದನು. ಅದನ್ನು ಕೇಳು.

13063005 ನಾರದ ಉವಾಚ|

13063005a ಕೃತ್ತಿಕಾಸು ಮಹಾಭಾಗೇ ಪಾಯಸೇನ ಸಸರ್ಪಿಷಾ|

13063005c ಸಂತರ್ಪ್ಯ ಬ್ರಾಹ್ಮಣಾನ್ಸಾಧೂಽಲ್ಲೋಕಾನಾಪ್ನೋತ್ಯನುತ್ತಮಾನ್||

ನಾರದನು ಹೇಳಿದನು: “ಮಹಾಭಾಗೇ! ಕೃತ್ತಿಕಾ ನಕ್ಷತ್ರದಲ್ಲಿ ತುಪ್ಪದೊಂದಿಗೆ ಪಾಯಸವನ್ನು ಸಾಧು ಬ್ರಾಹ್ಮಣರನ್ನು ತೃಪ್ತಿಪಡಿಸಿ ಅನುತ್ತಮ ಲೋಕವನ್ನು ಪಡೆಯುತ್ತಾರೆ.

13063006a ರೋಹಿಣ್ಯಾಂ ಪ್ರಥಿತೈರ್ಮಾಂಸೈರ್ಮಾಷೈರನ್ನೇನ[2] ಸರ್ಪಿಷಾ|

13063006c ಪಯೋಽನುಪಾನಂ ದಾತವ್ಯಮಾನೃಣ್ಯಾರ್ಥಂ ದ್ವಿಜಾತಯೇ||

ರೋಹಿಣೀ ನಕ್ಷತ್ರದಲ್ಲಿ ಚೆನ್ನಾಗಿ ಬೇಯಿಸಿದ ಅನ್ನದೊಂದಿಗೆ ತುಪ್ಪ, ಹಾಲು ಮತ್ತು ಪಾನೀಯ ಪದಾರ್ಥಗಳನ್ನು ಬ್ರಾಹ್ಮಣರಿಗೆ ದಾನಮಾದುವುದರಿಂದ ಅವರ ಋಣದಿಂದ ಮುಕ್ತನಾಗಬಹುದು.

13063007a ದೋಗ್ಧ್ರೀಂ ದತ್ತ್ವಾ ಸವತ್ಸಾಂ ತು ನಕ್ಷತ್ರೇ ಸೋಮದೈವತೇ|

13063007c ಗಚ್ಚಂತಿ ಮಾನುಷಾಲ್ಲೋಕಾತ್ಸ್ವರ್ಗಲೋಕಮನುತ್ತಮಮ್||

ಸೋಮದೈವತ (ಮೃಗಶಿರಾ) ನಕ್ಷತ್ರದಲ್ಲಿ ಹಾಲುಕೊಡುವ ಹಸುವನ್ನು, ಕರುವಿನೊಂದಿಗೆ ದಾನಮಾಡುವವನು ಮರಣಾನಂತರ ಮನುಷ್ಯಲೋಕದಿಂದ ಸರ್ವೋತ್ತಮ ಸ್ವರ್ಗಲೋಕಕ್ಕೆ ಹೋಗುತ್ತಾನೆ.

13063008a ಆರ್ದ್ರಾಯಾಂ ಕೃಸರಂ ದತ್ತ್ವಾ ತೈಲಮಿಶ್ರಮುಪೋಷಿತಃ|

13063008c ನರಸ್ತರತಿ ದುರ್ಗಾಣಿ ಕ್ಷುರಧಾರಾಂಶ್ಚ ಪರ್ವತಾನ್||

ಆರ್ದ್ರಾನಕ್ಷತ್ರದಲ್ಲಿ ಉಪವಾಸದಲ್ಲಿದ್ದುಕೊಂಡು ತಿಲಮಿಶ್ರಿತ ಅನ್ನವನ್ನು ದಾನಮಾಡುವ ಮನುಷ್ಯನು ಖಡ್ಗದ ಮೊನೆಯಂತಿರುವ ಪರ್ವತ-ದುರ್ಗಗಳ ಕಷ್ಟಗಳನ್ನೂ ದಾಟಬಲ್ಲನು.

13063009a ಅಪೂಪಾನ್ಪುನರ್ವಸೌ ದತ್ತ್ವಾ ತಥೈವಾನ್ನಾನಿ ಶೋಭನೇ|

13063009c ಯಶಸ್ವೀ ರೂಪಸಂಪನ್ನೋ ಬಹ್ವನ್ನೇ ಜಾಯತೇ ಕುಲೇ||

ಶೋಭನೇ! ಪುನರ್ವಸುವಿನಲ್ಲಿ ಅಪೂಪ ಮತ್ತು ಅನ್ನಗಳನ್ನು ನೀಡಿದವನು ಉತ್ತಮ ಕುಲದಲ್ಲಿ ಹುಟ್ಟಿ ಯಶಸ್ವಿಯೂ, ರೂಪಸಂಪನ್ನನೂ ಮತ್ತು ಬಹುಧನಿಕನೂ ಆಗುತ್ತಾನೆ.

13063010a ಪುಷ್ಯೇ ತು ಕನಕಂ ದತ್ತ್ವಾ ಕೃತಂ ಚಾಕೃತಮೇವ ಚ|

13063010c ಅನಾಲೋಕೇಷು ಲೋಕೇಷು ಸೋಮವತ್ಸ ವಿರಾಜತೇ||

ಪುಷ್ಯಾನಕ್ಷತ್ರದಲ್ಲಿ ಕನಕದಾನವನ್ನು ಮಾಡಿದವನು ಅಂಧಕಾರ ಲೋಕಗಳಲ್ಲಿಯೂ ಕೂಡ ಸೋಮನಂತೆ ವಿರಾಜಿಸುತ್ತಾನೆ.

13063011a ಆಶ್ಲೇಷಾಯಾಂ ತು ಯೋ ರೂಪ್ಯಮೃಷಭಂ ವಾ ಪ್ರಯಚ್ಚತಿ|

13063011c ಸ ಸರ್ವಭಯನಿರ್ಮುಕ್ತಃ ಶಾತ್ರವಾನಧಿತಿಷ್ಠತಿ||

ಆಶ್ಲೇಷದಲ್ಲಿ ಬೆಳ್ಳಿ ಅಥವಾ ಹೋರಿಯನ್ನು ದಾನಮಾಡಿದನು ಈ ಜನ್ಮದಲ್ಲಿ ಸರ್ವಭಯಗಳಿಂದ ನಿರ್ಮುಕ್ತನಾಗಿ ಮುಂದಿನ ಜನ್ಮದಲ್ಲಿ ಜ್ಞಾನಿಯಾಗಿ ಹುಟ್ಟುತ್ತಾನೆ.

13063012a ಮಘಾಸು ತಿಲಪೂರ್ಣಾನಿ ವರ್ಧಮಾನಾನಿ ಮಾನವಃ|

13063012c ಪ್ರದಾಯ ಪುತ್ರಪಶುಮಾನಿಹ ಪ್ರೇತ್ಯ ಚ ಮೋದತೇ||

ಮಘಾನಕ್ಷತ್ರದಲ್ಲಿ ಎಳ್ಳನ್ನು ತುಂಬಿಸಿ ವರ್ಧಮಾನ ಪಾತ್ರೆಗಳನ್ನು ದಾನಮಾಡಿದ ಮಾನವನು ಇಹ-ಪರ ಲೋಕಗಳಲ್ಲಿ ಪುತ್ರರನ್ನೂ ಪಶುಗಳನ್ನೂ ಪಡೆದುಕೊಳ್ಳುತ್ತಾನೆ.

13063013a ಫಲ್ಗುನೀಪೂರ್ವಸಮಯೇ ಬ್ರಾಹ್ಮಣಾನಾಮುಪೋಷಿತಃ|

13063013c ಭಕ್ಷಾನ್ಫಾಣಿತಸಂಯುಕ್ತಾನ್ದತ್ತ್ವಾ ಸೌಭಾಗ್ಯಮೃಚ್ಚತಿ||

ಪೂರ್ವಫಾಲ್ಗುನೀ ನಕ್ಷತ್ರದ ಸಮಯದಲ್ಲಿ ಉಪವಾಸದಿಂದಿದ್ದುಕೊಂಡು ಬ್ರಾಹ್ಮಣನಿಗೆ ಬೆಣ್ಣೆಯೊಡನೆ ಭಕ್ಷಗಳನ್ನು ಕೊಟ್ಟವನು ಸಾಭಾಗ್ಯವನ್ನು ಪಡೆದುಕೊಳ್ಳುತ್ತಾನೆ.

13063014a ಘೃತಕ್ಷೀರಸಮಾಯುಕ್ತಂ ವಿಧಿವತ್ಷಷ್ಟಿಕೌದನಮ್|

13063014c ಉತ್ತರಾವಿಷಯೇ ದತ್ತ್ವಾ ಸ್ವರ್ಗಲೋಕೇ ಮಹೀಯತೇ||

ಉತ್ತರಫಾಲ್ಗುನೀ ನಕ್ಷತ್ರದಲ್ಲಿ ತುಪ್ಪ-ಹಾಲಿನಿಂದ ವಿಧಿವತ್ತಾಗಿ ತಯಾರಿಸಿದ ಅಕ್ಕಿಯ ಭಕ್ಷ್ಯವನ್ನು ದಾನಮಾಡಿದವನು ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.

13063015a ಯದ್ಯತ್ಪ್ರದೀಯತೇ ದಾನಮುತ್ತರಾವಿಷಯೇ ನರೈಃ|

13063015c ಮಹಾಫಲಮನಂತಂ ಚ ಭವತೀತಿ ವಿನಿಶ್ಚಯಃ||

ಉತ್ತರಾ ನಕ್ಷತ್ರದಲ್ಲಿ ಮನುಷ್ಯರು ಏನೇ ದಾನಮಾಡಿದರೂ ಅದು ಅಂತ್ಯವಿಲ್ಲದ ಮಹಾಫಲವನ್ನು ನೀಡುತ್ತದೆ ಎಂದು ನಿಶ್ಚಯವಿದೆ.

13063016a ಹಸ್ತೇ ಹಸ್ತಿರಥಂ ದತ್ತ್ವಾ ಚತುರ್ಯುಕ್ತಮುಪೋಷಿತಃ|

13063016c ಪ್ರಾಪ್ನೋತಿ ಪರಮಾಽಲ್ಲೋಕಾನ್ಪುಣ್ಯಕಾಮಸಮನ್ವಿತಾನ್||

ಹಸ್ತಾನಕ್ಷತ್ರದಲ್ಲಿ ಉಪವಾಸದಿಂದಿದ್ದು ಧ್ವಜ-ಪತಾಕೆ-ತೋರಣ-ಗಂಟೆಗಳಿಂದ ಸಜ್ಜಿತವಾದ ಆನೆಯ ರಥವನ್ನು ದಾನಮಾಡಿದವನು ಪುಣ್ಯಕಾಮನೆಗಳಿಂದ ಕೂಡಿದ ಪರಮ ಲೋಕವನ್ನು ಪಡೆಯುತ್ತಾನೆ.

13063017a ಚಿತ್ರಾಯಾಮೃಷಭಂ ದತ್ತ್ವಾ ಪುಣ್ಯಾನ್ಗಂಧಾಂಶ್ಚ ಭಾರತ|

13063017c ಚರತ್ಯಪ್ಸರಸಾಂ ಲೋಕೇ ರಮತೇ ನಂದನೇ ತಥಾ||

ಭಾರತ! ಚಿತ್ರಾ ನಕ್ಷತ್ರದಲ್ಲಿ ಹೋರಿಯನ್ನು ಮತ್ತು ಪುಣ್ಯಗಂಧಗಳನ್ನು ದಾನಮಾಡಿದವನು ಅಪ್ಸರೆಯರ ಲೋಕಕ್ಕೆ ಹೋಗಿ ಅವರೊಡನೆ ರಮಿಸಿ ಆನಂದಿಸುತ್ತಾನೆ.

13063018a ಸ್ವಾತಾವಥ ಧನಂ ದತ್ತ್ವಾ ಯದಿಷ್ಟತಮಮಾತ್ಮನಃ|

13063018c ಪ್ರಾಪ್ನೋತಿ ಲೋಕಾನ್ಸ ಶುಭಾನಿಹ ಚೈವ ಮಹದ್ಯಶಃ||

ಸ್ವಾತಿ ನಕ್ಷತ್ರದಲ್ಲಿ ತನಗೆ ಇಷ್ಟವಾದ ವಸ್ತು-ಧನವನ್ನು ಕೊಟ್ಟು ಮನುಷ್ಯನು ಇಲ್ಲಿ ಮಹಾ ಯಶಸ್ಸನ್ನು ಪಡೆದು ನಂತರ ಶುಭಲೋಕಗಳನ್ನು ಪಡೆಯುತ್ತಾನೆ.

13063019a ವಿಶಾಖಾಯಾಮನಡ್ವಾಹಂ ಧೇನುಂ ದತ್ತ್ವಾ ಚ ದುಗ್ಧದಾಮ್|

13063019c ಸಪ್ರಾಸಂಗಂ ಚ ಶಕಟಂ ಸಧಾನ್ಯಂ ವಸ್ತ್ರಸಂಯುತಮ್||

13063020a ಪಿತೄನ್ದೇವಾಂಶ್ಚ ಪ್ರೀಣಾತಿ ಪ್ರೇತ್ಯ ಚಾನಂತ್ಯಮಶ್ನುತೇ|

13063020c ನ ಚ ದುರ್ಗಾಣ್ಯವಾಪ್ನೋತಿ ಸ್ವರ್ಗಲೋಕಂ ಚ ಗಚ್ಚತಿ||

ವಿಶಾಖಾ ನಕ್ಷತ್ರದಲ್ಲಿ ಬಂಡಿಯನ್ನು ಎಳೆದುಕೊಂಡು ಹೋಗುವ ಎತ್ತು, ಹಾಲು ನೀಡುವ ಹಸು, ವಸ್ತ್ರ ಮತ್ತು ಧಾನ್ಯವನ್ನು ತುಂಬಿಸಿದ ಬಂಡಿಯೊಂದಿಗೆ ದಾನಮಾಡಿದವನು ದೇವತೆ ಮತ್ತು ಪಿತೃಗಳನ್ನು ಸಂತುಷ್ಟಗೊಳಿಸುತ್ತಾನೆ ಮತ್ತು ಮರಣಾನಂತರ ಅಕ್ಷಯ ಲೋಕಗಳ ಭಾಗಿಯಾಗುತ್ತಾನೆ. ಅವನು ಯಾವ ಕಷ್ಟಗಳನ್ನೂ ಪಡೆಯದೇ ಸ್ವರ್ಗಲೋಕಕ್ಕೆ ಹೋಗುತ್ತಾನೆ.

13063021a ದತ್ತ್ವಾ ಯಥೋಕ್ತಂ ವಿಪ್ರೇಭ್ಯೋ ವೃತ್ತಿಮಿಷ್ಟಾಂ ಸ ವಿಂದತಿ|

13063021c ನರಕಾದೀಂಶ್ಚ ಸಂಕ್ಲೇಶಾನ್ನಾಪ್ನೋತೀತಿ ವಿನಿಶ್ಚಯಃ||

ಹೀಗೆ ಹೇಳಿದ ವಸ್ತುಗಳನ್ನು ವಿಪ್ರರಿಗೆ ದಾನಾಮಾಡಿ ಇಷ್ಟವೃತ್ತಿಯನ್ನು ಪಡೆದುಕೊಳ್ಳುತ್ತಾನೆ. ನರಕಾದಿ ಕ್ಲೇಶಗಳನ್ನು ಹೊಂದುವುದಿಲ್ಲ ಎಂದು ನಿಶ್ಚಿತವಾಗಿದೆ.

13063022a ಅನುರಾಧಾಸು ಪ್ರಾವಾರಂ ವಸ್ತ್ರಾಂತರಮುಪೋಷಿತಃ|

13063022c ದತ್ತ್ವಾ ಯುಗಶತಂ ಚಾಪಿ ನರಃ ಸ್ವರ್ಗೇ ಮಹೀಯತೇ||

ಅನುರಾಧಾ ನಕ್ಷತ್ರದಲ್ಲಿ ಉಪವಾಸವಿದ್ದು ಉಡಲು ವಸ್ತ್ರ ಮತ್ತು ಅನ್ನವನ್ನು ದಾನಮಾಡುವ ನರನು ನೂರು ಯುಗಗಳ ಪರ್ಯಂತ ಸ್ವರ್ಗದಲ್ಲಿ ಮೆರೆಯುತ್ತಾನೆ.

13063023a ಕಾಲಶಾಕಂ ತು ವಿಪ್ರೇಭ್ಯೋ ದತ್ತ್ವಾ ಮರ್ತ್ಯಃ ಸಮೂಲಕಮ್|

13063023c ಜ್ಯೇಷ್ಠಾಯಾಮೃದ್ಧಿಮಿಷ್ಟಾಂ ವೈ ಗತಿಮಿಷ್ಟಾಂ ಚ ವಿಂದತಿ||

ಜ್ಯೇಷ್ಠಾ ನಕ್ಷತ್ರದಲ್ಲಿ ಮೂಲಂಗಿಯೊಡನೆ ಇತರ ಕಾಲಕ್ಕೆ ತಕ್ಕಂತಹ ತರಕಾರಿಯನ್ನು ವಿಪ್ರರ್ಗೆ ದಾನಮಾಡಿದ ಮನುಷ್ಯನಿಗೆ ಅಭೀಷ್ಠ ಸಂವೃದ್ಧಿ ಮತ್ತು ಸದ್ಗತಿಯು ಪ್ರಾಪ್ತವಾಗುತ್ತದೆ.

13063024a ಮೂಲೇ ಮೂಲಫಲಂ ದತ್ತ್ವಾ ಬ್ರಾಹ್ಮಣೇಭ್ಯಃ ಸಮಾಹಿತಃ|

13063024c ಪಿತೄನ್ಪ್ರೀಣಯತೇ ಚಾಪಿ ಗತಿಮಿಷ್ಟಾಂ ಚ ಗಚ್ಚತಿ||

ಮೂಲಾನಕ್ಷತ್ರದಲ್ಲಿ ಸಮಾಹಿತನಾಗಿ ಕಂದಮೂಲಫಲಗಳನ್ನು ಬ್ರಾಹ್ಮಣರಿಗೆ ದಾನಮಾಡಿ ಪಿತೃಗಳನ್ನು ತೃಪ್ತಿಗೊಳಿಸುತ್ತಾನೆ ಮತ್ತು ಇಷ್ಟಗತಿಯಲ್ಲಿ ಹೋಗುತ್ತಾನೆ.

13063025a ಅಥ ಪೂರ್ವಾಸ್ವಷಾಢಾಸು ದಧಿಪಾತ್ರಾಣ್ಯುಪೋಷಿತಃ|

13063025c ಕುಲವೃತ್ತೋಪಸಂಪನ್ನೇ ಬ್ರಾಹ್ಮಣೇ ವೇದಪಾರಗೇ|

13063025e ಪ್ರದಾಯ ಜಾಯತೇ ಪ್ರೇತ್ಯ ಕುಲೇ ಸುಬಹುಗೋಕುಲೇ||

ಪೂರ್ವಾಷಾಢ ನಕ್ಷತ್ರದಲ್ಲಿ ಉಪವಾಸ ಮಾಡಿ ಕುಲ-ವೃತ್ತಿಸಂಪನ್ನ ವೇದಪಾರಂಗತ ಬ್ರಾಹ್ಮಣನಿಗೆ ಮೊಸರು ತುಂಬಿದ ಪಾತ್ರೆಯನ್ನು ದಾನಮಾಡಿದವನು ಮರಣಾನಂತರ ಅಧಿಕ ಗೋಸಂಪತ್ತಿರುವ ಉತ್ತಮ ಕುಲದಲ್ಲಿ ಜನ್ಮತಾಳುತ್ತಾನೆ.

13063026a ಉದಮಂಥಂ ಸಸರ್ಪಿಷ್ಕಂ ಪ್ರಭೂತಮಧುಫಾಣಿತಮ್|

13063026c ದತ್ತ್ವೋತ್ತರಾಸ್ವಷಾಢಾಸು ಸರ್ವಕಾಮಾನವಾಪ್ನುಯಾತ್||

ಉತ್ತರಾಷಾಢ ನಕ್ಷತ್ರದಲ್ಲಿ ಗೋಧಿರವೆಯಿಂದ ತಯಾರಿಸಿದ ಸಿಹಿಭಕ್ಷ್ಯವನ್ನು ತುಪ್ಪದೊಂದಿಗೆ ದಾನಮಾಡುವವನ ಸರ್ವಕಾಮನೆಗಳೂ ಈಡೇರುತ್ತವೆ.

13063027a ದುಗ್ಧಂ ತ್ವಭಿಜಿತೇ ಯೋಗೇ ದತ್ತ್ವಾ ಮಧುಘೃತಾಪ್ಲುತಮ್|

13063027c ಧರ್ಮನಿತ್ಯೋ ಮನೀಷಿಭ್ಯಃ ಸ್ವರ್ಗಲೋಕೇ ಮಹೀಯತೇ||

ಅಭಿಜಿತ್ ನಕ್ಷತ್ರದಲ್ಲಿ ಜೇನು ಮತ್ತು ತುಪ್ಪ ಬೆರೆಸಿದ ಹಾಲನ್ನು ಧರ್ಮನಿತ್ಯ ಮನೀಶಿಗಳಿಗೆ ದಾನಮಾಡಿದವನು ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.

13063028a ಶ್ರವಣೇ ಕಂಬಲಂ ದತ್ತ್ವಾ ವಸ್ತ್ರಾಂತರಿತಮೇವ ಚ|

13063028c ಶ್ವೇತೇನ ಯಾತಿ ಯಾನೇನ ಸರ್ವಲೋಕಾನಸಂವೃತಾನ್||

ಶ್ರವಣ ನಕ್ಷತ್ರದಲ್ಲಿ ವಸ್ತ್ರಗಳೊಂದಿಗೆ ಕಂಬಲಿಯನ್ನು ದಾನಮಾಡಿದವನು ಶ್ವೇತಯಾನದಲ್ಲಿ ಸರ್ವಲೋಕಗಳಿಗೆ ಹೋಗುತ್ತಾನೆ.

13063029a ಗೋಪ್ರಯುಕ್ತಂ ಧನಿಷ್ಠಾಸು ಯಾನಂ ದತ್ತ್ವಾ ಸಮಾಹಿತಃ|

13063029c ವಸ್ತ್ರರಶ್ಮಿಧರಂ ಸದ್ಯಃ ಪ್ರೇತ್ಯ ರಾಜ್ಯಂ ಪ್ರಪದ್ಯತೇ||

ಧನಿಷ್ಠಾ ನಕ್ಷತ್ರದಲ್ಲಿ ಸಮಾಹಿತನಾಗಿ ಎತ್ತನ್ನು ಕಟ್ಟಿದ ಯಾನವನ್ನು ದನಮಾಡಿದವನು ಇಲ್ಲಿ ವಸ್ತ್ರವಂತನೂ ಮರಣಾನಂತರ ರಾಜ್ಯವನ್ನೂ ಪಡೆಯುತ್ತಾನೆ.

13063030a ಗಂಧಾನ್ ಶತಭಿಷಗ್ಯೋಗೇ ದತ್ತ್ವಾ ಸಾಗುರುಚಂದನಾನ್|

13063030c ಪ್ರಾಪ್ನೋತ್ಯಪ್ಸರಸಾಂ ಲೋಕಾನ್ಪ್ರೇತ್ಯ ಗಂಧಾಂಶ್ಚ ಶಾಶ್ವತಾನ್||

ಶತಭಿಷ ನಕ್ಷತ್ರದಲ್ಲಿ ಯೋಗನಿರತನಾಗಿ ಅಗರು-ಚಂದನಾದಿ ಸುಗಂಧಗಳನ್ನು ದಾನಮಾಡಿದವನು ಅಪ್ಸರೆಯರ ಲೋಕವನ್ನು ಪಡೆದು ಶಾಶ್ವತವಾಗಿ ಈ ಗಂಧಗಳನ್ನು ಪಡೆದುಕೊಳ್ಳುತ್ತಾನೆ.

13063031a ಪೂರ್ವಭಾದ್ರಪದಾಯೋಗೇ ರಾಜಮಾಷಾನ್ಪ್ರದಾಯ ತು|

13063031c ಸರ್ವಭಕ್ಷಫಲೋಪೇತಃ ಸ ವೈ ಪ್ರೇತ್ಯ ಸುಖೀ ಭವೇತ್||

ಪೂರ್ವಭಾದ್ರಪದ ನಕ್ಷತ್ರಯೋಗದಲ್ಲಿ ಉದ್ದಿನ ಕಾಳು ಅಥವಾ ಬಿಳೀ ಬೇಳೇಕಾಳನ್ನು ದಾನಮಾಡುವ ಮನುಷ್ಯನು ಪರಲೋಕದಲ್ಲಿ ಎಲ್ಲ ಪ್ರಕಾರದ ಖಾದ್ಯವಸ್ತುಗಳಿಂದ ಸಂಪನ್ನನಾಗಿ ಸುಖಿಯಾಗುತ್ತಾನೆ.

13063032a ಔರಭ್ರಮುತ್ತರಾಯೋಗೇ ಯಸ್ತು ಮಾಂಸಂ ಪ್ರಯಚ್ಚತಿ|

13063032c ಸ ಪಿತೄನ್ಪ್ರೀಣಯತಿ ವೈ ಪ್ರೇತ್ಯ ಚಾನಂತ್ಯಮಶ್ನುತೇ||

ಉತ್ತರಭಾದ್ರಪದ ನಕ್ಷತ್ರಯೋಗದಲ್ಲಿ ಔರಭ್ರ ಫಲದ ವೃಕ್ಷವನ್ನು ದಾನಮಾಡುವವನು ಪಿತೃಗಳನ್ನು ತೃಪ್ತಿಗೊಳಿಸಿ ಮರಣಾನಂತರ ಅನಂತ ಫಲವನ್ನು ಪಡೆಯುತ್ತಾನೆ.

13063033a ಕಾಂಸ್ಯೋಪದೋಹನಾಂ ಧೇನುಂ ರೇವತ್ಯಾಂ ಯಃ ಪ್ರಯಚ್ಚತಿ|

13063033c ಸಾ ಪ್ರೇತ್ಯ ಕಾಮಾನಾದಾಯ ದಾತಾರಮುಪತಿಷ್ಠತಿ||

ರೇವತೀ ನಕ್ಷತ್ರದಲ್ಲಿ ಕಂಚಿನ ಹಾಲುಕಾರೆಯುವ ಪಾತ್ರೆಯೊಂದಿಗೆ ಹಸುವನ್ನು ದಾನಮಾಡುವವನಿಗೆ ಆ ಹಸುವು ಎಲ್ಲ ಕಾಮನೆಗಳನ್ನೂ ತಂದು ಅವನ ಸೇವೆಯಲ್ಲಿ ಉಪಸ್ಥಿತವಾಗುತ್ತದೆ.

13063034a ರಥಮಶ್ವಸಮಾಯುಕ್ತಂ ದತ್ತ್ವಾಶ್ವಿನ್ಯಾಂ ನರೋತ್ತಮಃ|

13063034c ಹಸ್ತ್ಯಶ್ವರಥಸಂಪನ್ನೇ ವರ್ಚಸ್ವೀ ಜಾಯತೇ ಕುಲೇ||

ನರೋತ್ತಮ! ಅಶ್ವಿನೀ ನಕ್ಷತ್ರದಲ್ಲಿ ಕುದುರೆಗಳನ್ನು ಕಟ್ಟಿದ ರಥವನ್ನು ದಾನಮಾಡಿದವನು ವರ್ಚಸ್ವಿಯಾಗಿ ಆನೆ-ಕುದುರೆ-ರಥಗಳಿಂದ ಸಂಪನ್ನವಾಗಿರುವ ಕುಲದಲ್ಲಿ ಜನ್ಮತಳೆಯುತ್ತಾನೆ.

13063035a ಭರಣೀಷು ದ್ವಿಜಾತಿಭ್ಯಸ್ತಿಲಧೇನುಂ ಪ್ರದಾಯ ವೈ|

13063035c ಗಾಃ ಸುಪ್ರಭೂತಾಃ ಪ್ರಾಪ್ನೋತಿ ನರಃ ಪ್ರೇತ್ಯ ಯಶಸ್ತಥಾ||

ಭರಣೀ ನಕ್ಷತ್ರದಲ್ಲಿ ಬ್ರಾಹ್ಮಣರಿಗೆ ತಿಲಮಯೀ ದೇನುವಿನ ದಾನಮಾಡುವವನು ಇಹಲೋಕದಲ್ಲಿ ಅನೇಕ ಗೋವುಗಳನ್ನೂ ಮರಣಾನಂತರ ಯಶಸ್ಸನ್ನೂ ಪಡೆಯುತ್ತಾನೆ.””

13063036 ಭೀಷ್ಮ ಉವಾಚ|

13063036a ಇತ್ಯೇಷ ಲಕ್ಷಣೋದ್ದೇಶಃ ಪ್ರೋಕ್ತೋ ನಕ್ಷತ್ರಯೋಗತಃ|

13063036c ದೇವಕ್ಯಾ ನಾರದೇನೇಹ ಸಾ ಸ್ನುಷಾಭ್ಯೋಽಬ್ರವೀದಿದಮ್||

ಭೀಷ್ಮನು ಹೇಳಿದನು: “ಹೀಗೆ ಯಾವ ನಕ್ಷತ್ರಯೋಗದಲ್ಲಿ ಯಾವುದನ್ನು ದಾನಮಾಡಿದರೆ ಏನು ದೊರೆಯುತ್ತದೆ ಎನ್ನುವುದನ್ನು ಹೇಳಲಾಗಿದೆ. ನಾರದನು ಇದನ್ನು ದೇವಕಿಯೂ, ದೇವಕಿಯು ತನ್ನ ಸೊಸೆಯಂದಿರಿಗೂ ಇದನ್ನು ಹೇಳಿದ್ದಳು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ನಕ್ಷತ್ರಯೋಗದಾನಂ ನಾಮ ತ್ರಿಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ನಕ್ಷತ್ರಯೋಗದಾನ ಎನ್ನುವ ಅರವತ್ಮೂರನೇ ಅಧ್ಯಾಯವು.

Image result for flowers against white background

[1] ಈ ಅಧ್ಯಾಯದಲ್ಲಿ ಈಗ ಪ್ರಚಲತಿಯಲ್ಲಿರುವ ೨೭ ನಕ್ಷತ್ರಗಳಿಗೆ ಬದಲಾಗಿ ೨೯ ನಕ್ಷತ್ರಗಳ ಪಟ್ಟಿಯಿದೆ: ಕೃತ್ತಿಕಾ, ರೋಹಿಣೀ, ಮೃಗಶಿರಾ, ಆರ್ದ್ರಾ, ಪುನರ್ವಸು, ಪುಷ್ಯಾ, ಆಶ್ಲೇಷಾ, ಮಘಾ, ಪೂರ್ವಫಾಲ್ಗುನೀ, ಉತ್ತರಫಾಲ್ಗುನೀ, ಉತ್ತರಾ, ಹಸ್ತಾ, ಚಿತ್ರಾ, ಸ್ವಾತೀ, ವಿಶಾಖಾ, ಅನುರಾಧಾ, ಜ್ಯೇಷ್ಠಾ, ಮೂಲಾ, ಪೂರ್ವಾಷಾಢ, ಉತ್ತರಾಷಾಢ, ಅಭಿಜಿತ್, ಶ್ರವಣ, ಧನಿಷ್ಠಾ, ಶತಭಿಷಾ, ಪೂರ್ವಭಾದ್ರಪದ, ಉತ್ತರ ಭಾದ್ರಪದ, ರೇವತೀ, ಅಶ್ವಿನೀ, ಮತ್ತು ಭರಣೀ. ಇಲ್ಲಿ ೨ ನಕ್ಷತ್ರಗಳು – ಉತ್ತರ ಮತ್ತು ಅಭಿಜಿತ್ – ಅಧಿಕವಾಗಿವೆ. ಅಥರ್ವವೇದದಲ್ಲಿ ೨೮ ನಕ್ಷತ್ರಗಳ ಪಟ್ಟಿಯಿದೆ (ಈ ಅಧ್ಯಾಯದಲ್ಲಿ ಬಂದಿರುವ ಉತ್ತರಾ ನಕ್ಷತ್ರವನ್ನು ಬಿಟ್ಟು). ಈ ಕಾಲದಲ್ಲಿ ಒಂದು ತಿಂಗಳಿನಲ್ಲಿ ಚಂದ್ರನು ೨೭ ಮನೆಗಳನ್ನು ದಾಟುತ್ತಾನೆ. ಒಂದೊಂದು ಮನೆಯಲ್ಲಿಯೂ ಒಂದೊಂದು ನಕ್ಷತ್ರವಿದೆ. ವೇದಾಂಗ ಜ್ಯೋತಿಷದ ಪ್ರಕಾರ ೨೭ ನಕ್ಷತ್ರಗಳಿವೆ.

[2] ಪ್ರಸೃತೈರ್ಮಾರ್ಗೈರ್ಮಾಂಸೈರನ್ನೇನ ಎಂಬ ಪಾಠಾಂತರವಿದೆ.

Comments are closed.