Anushasana Parva: Chapter 6

ಅನುಶಾಸನ ಪರ್ವ: ದಾನಧರ್ಮ ಪರ್ವ

ದೈವಪುರುಷಕಾರಬಲಾಬಲ

ದೈವ ಮತ್ತು ಮನುಷ್ಯ ಪ್ರಯತ್ನಗಳಲ್ಲಿ ಯಾವುದು ಶ್ರೇಷ್ಠ ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ವಸಿಷ್ಠ-ಬ್ರಹ್ಮರ ಸಂವಾದವನ್ನು ಉದಾಹರಿಸಿ ಎರಡೂ ಪರಸ್ಪರ ಅವಲಂಬಿಸಿವೆ ಎನ್ನುವುದು (೧-೪೯).

13006001 ಯುಧಿಷ್ಠಿರ ಉವಾಚ|

13006001a ಪಿತಾಮಹ ಮಹಾಪ್ರಾಜ್ಞ ಸರ್ವಶಾಸ್ತ್ರವಿಶಾರದ|

13006001c ದೈವೇ ಪುರುಷಕಾರೇ ಚ ಕಿಂ ಸ್ವಿಚ್ಛ್ರೇಷ್ಠತರಂ ಭವೇತ್||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಸರ್ವಶಾಸ್ತ್ರವಿಶಾರದ! ದೈವಾನುಕೂಲ ಮತ್ತು ಪುರುಷಪ್ರಯತ್ನ ಇವೆರಡರಲ್ಲಿ ಯಾವುದು ಶ್ರೇಷ್ಠತರವಾದುದು?”

13006002 ಭೀಷ್ಮ ಉವಾಚ|

13006002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13006002c ವಸಿಷ್ಠಸ್ಯ ಚ ಸಂವಾದಂ ಬ್ರಹ್ಮಣಶ್ಚ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದರ ಕುರಿತು ಪುರಾತನ ಇತಿಹಾಸವಾಗಿರುವ ವಸಿಷ್ಠ ಮತ್ತು ಬ್ರಹ್ಮರ ಸಂವಾದವನ್ನು ಉದಾಹರಿಸುತ್ತಾರೆ.

13006003a ದೈವಮಾನುಷಯೋಃ ಕಿಂ ಸ್ವಿತ್ಕರ್ಮಣೋಃ ಶ್ರೇಷ್ಠಮಿತ್ಯುತ|

13006003c ಪುರಾ ವಸಿಷ್ಠೋ ಭಗವಾನ್ಪಿತಾಮಹಮಪೃಚ್ಚತ||

ಹಿಂದೆ ವಸಿಷ್ಠನು “ದೈವ ಮತ್ತು ಮಾನುಷ ಪ್ರಯತ್ನಗಳಲ್ಲಿ ಯಾವುದು ಶ್ರೇಷ್ಠ?” ಎಂದು ಭಗವಾನ್ ಪಿತಾಮಹನನ್ನು ಪ್ರಶ್ನಿಸಿದನು.

13006004a ತತಃ ಪದ್ಮೋದ್ಭವೋ ರಾಜನ್ದೇವದೇವಃ ಪಿತಾಮಹಃ|

13006004c ಉವಾಚ ಮಧುರಂ ವಾಕ್ಯಮರ್ಥವದ್ಧೇತುಭೂಷಿತಮ್||

ರಾಜನ್! ಆಗ ದೇವದೇವ ಪಿತಾಮಹ ಪದ್ಮೋದ್ಭವನು ಕಾರಣಭೂಷಿತವಾದ ಈ ಮಧುರ ವಾಕ್ಯವನ್ನು ಹೇಳಿದನು:

13006005a ನಾಬೀಜಂ ಜಾಯತೇ ಕಿಂ ಚಿನ್ನ ಬೀಜೇನ ವಿನಾ ಫಲಮ್|

13006005c ಬೀಜಾದ್ಬೀಜಂ ಪ್ರಭವತಿ ಬೀಜಾದೇವ ಫಲಂ ಸ್ಮೃತಮ್||

“ಬೀಜವಿಲ್ಲದೇ ಯಾವುದೂ ಹುಟ್ಟುವುದಿಲ್ಲ. ಬೀಜವಿಲ್ಲದೇ ಫಲವಾಗುವುದಿಲ್ಲ. ಬೀಜದಿಂದ ಬೀಜವು ಉತ್ಪತ್ತಿಯಾಗುತ್ತದೆ. ಆದುದರಿಂದ ಬೀಜದಿಂದಲೇ ಫಲವು ಉಂಟಾಗುತ್ತದೆ ಎಂದು ತಿಳಿದಿದೆ.

13006006a ಯಾದೃಶಂ ವಪತೇ ಬೀಜಂ ಕ್ಷೇತ್ರಮಾಸಾದ್ಯ ಕರ್ಷಕಃ|

13006006c ಸುಕೃತೇ ದುಷ್ಕೃತೇ ವಾಪಿ ತಾದೃಶಂ ಲಭತೇ ಫಲಮ್||

ಕೃಷಿಕನು ಹೊಲದಲ್ಲಿ ಯಾವ ರೀತಿಯ ಬೀಜವನ್ನು ಬಿತ್ತುತ್ತಾನೋ ಅಂತಹುದೇ ಫಸಲನ್ನು ಪಡೆಯುತ್ತಾನೆ. ಹಾಗೆಯೇ ಸುಕೃತ-ದುಷ್ಕೃತಗಳಿಂದ ಅದೇ ರೀತಿಯ ಫಲವು ದೊರೆಯುತ್ತದೆ.

13006007a ಯಥಾ ಬೀಜಂ ವಿನಾ ಕ್ಷೇತ್ರಮುಪ್ತಂ ಭವತಿ ನಿಷ್ಫಲಮ್|

13006007c ತಥಾ ಪುರುಷಕಾರೇಣ ವಿನಾ ದೈವಂ ನ ಸಿಧ್ಯತಿ||

ಬೀಜವಿಲ್ಲದೇ ಹೊಲವು ಹೇಗೆ ನಿಷ್ಫಲವಾಗುವುದೋ ಹಾಗೆ ಪುರುಷಕಾರ್ಯದ ವಿನಾ ದೈವವು ಸಿದ್ಧಿಯಾಗುವುದಿಲ್ಲ.

13006008a ಕ್ಷೇತ್ರಂ ಪುರುಷಕಾರಸ್ತು ದೈವಂ ಬೀಜಮುದಾಹೃತಮ್|

13006008c ಕ್ಷೇತ್ರಬೀಜಸಮಾಯೋಗಾತ್ತತಃ ಸಸ್ಯಂ ಸಮೃಧ್ಯತೇ||

ಹೊಲವನ್ನು ಪುರುಷಪ್ರಯತ್ನಕ್ಕೂ ದೈವವನ್ನು ಬೀಜಕ್ಕೂ ಹೋಲಿಸುತ್ತಾರೆ. ಹೊಲ ಮತ್ತು ಬೀಜಗಳ ಸಮಾಯೋಗದಿಂದ ಸಸ್ಯವು ಹುಟ್ಟುತ್ತದೆ.

13006009a ಕರ್ಮಣಃ ಫಲನಿರ್ವೃತ್ತಿಂ ಸ್ವಯಮಶ್ನಾತಿ ಕಾರಕಃ|

13006009c ಪ್ರತ್ಯಕ್ಷಂ ದೃಶ್ಯತೇ ಲೋಕೇ ಕೃತಸ್ಯಾಪ್ಯಕೃತಸ್ಯ ಚ||

ಕರ್ಮಗಳ ಫಲವನ್ನು – ಸುಕೃತವಾಗಿರಲಿ ಅಥವಾ ದುಷ್ಕೃತವಾಗಿರಲಿ – ಸ್ವಯಂ ಕಾರಕನೇ ಪಡೆದುಕೊಳ್ಳುತ್ತಾನೆ ಎನ್ನುವುದು ಲೋಕದಲ್ಲಿ ಪ್ರತ್ಯಕ್ಷವಾಗಿ ಕಾಣುತ್ತದೆ.

13006010a ಶುಭೇನ ಕರ್ಮಣಾ ಸೌಖ್ಯಂ ದುಃಖಂ ಪಾಪೇನ ಕರ್ಮಣಾ|

13006010c ಕೃತಂ ಸರ್ವತ್ರ ಲಭತೇ ನಾಕೃತಂ ಭುಜ್ಯತೇ ಕ್ವ ಚಿತ್||

ಶುಭ ಕರ್ಮಗಳಿಂದ ಸುಖ ಮತ್ತು ಪಾಪ ಕರ್ಮಗಳಿಂದ ದುಃಖ. ಮಾಡಿದುದೆಲ್ಲವುಗಳ ಫಲವು ದೊರೆಯುತ್ತದೆ. ಏನನ್ನೂ ಮಾಡದೇ ಇರುವವನಿಗೆ ಯಾವ ಫಲವೂ ದೊರಕುವುದಿಲ್ಲ.

13006011a ಕೃತೀ ಸರ್ವತ್ರ ಲಭತೇ ಪ್ರತಿಷ್ಠಾಂ ಭಾಗ್ಯವಿಕ್ಷತಃ|

13006011c ಅಕೃತೀ ಲಭತೇ ಭ್ರಷ್ಟಃ ಕ್ಷತೇ ಕ್ಷಾರಾವಸೇಚನಮ್||

ಕರ್ಮಗಳನ್ನು ಮಾಡುವವನು ಸದಾ ಭಾಗ್ಯಯುಕ್ತವಾದ ಪ್ರತಿಷ್ಠೆಯನ್ನು ಪಡೆಯುತ್ತಾನೆ. ಕರ್ಮಗಳನ್ನು ಮಾಡದವನು ಭ್ರಷ್ಟನಾಗಿ ಗಾಯದ ಮೇಲೆ ಉಪ್ಪು ಸುರಿದುಕೊಂಡವನ ಪರಿಸ್ಥಿತಿಯನ್ನು ಪಡೆದುಕೊಳ್ಳುತ್ತಾನೆ.

13006012a ತಪಸಾ ರೂಪಸೌಭಾಗ್ಯಂ ರತ್ನಾನಿ ವಿವಿಧಾನಿ ಚ|

13006012c ಪ್ರಾಪ್ಯತೇ ಕರ್ಮಣಾ ಸರ್ವಂ ನ ದೈವಾದಕೃತಾತ್ಮನಾ||

ತಪಸ್ಸಿನಿಂದ ರೂಪಸೌಭಾಗ್ಯ ಮತ್ತು ವಿವಿಧ ರತ್ನಗಳನ್ನು ಪಡೆದುಕೊಳ್ಳಬಹುದು. ಕರ್ಮದಿಂದ ಸರ್ವವೂ ದೊರೆಯುತ್ತದೆ. ಆದರೆ ಏನನ್ನೂ ಮಾಡದೇ ಇರುವವನಿಗೆ ದೈವಾನುಕೂಲವೂ ಆಗುವುದಿಲ್ಲ.

13006013a ತಥಾ ಸ್ವರ್ಗಶ್ಚ ಭೋಗಶ್ಚ ನಿಷ್ಠಾ ಯಾ ಚ ಮನೀಷಿತಾ|

13006013c ಸರ್ವಂ ಪುರುಷಕಾರೇಣ ಕೃತೇನೇಹೋಪಪದ್ಯತೇ||

ಹಾಗೆಯೇ ಸ್ವರ್ಗ, ಭೋಗ, ನಿಷ್ಠೆ ಹಾಗೂ ಬುದ್ಧಿವಂತಿಕೆ ಎಲ್ಲವೂ ಪುರುಷನು ಇಷ್ಟಪಟ್ಟು ಮಾಡುವ ಕಾರ್ಯಗಳಿಂದ ಪಡೆದುಕೊಳ್ಳಬಹುದು.

13006014a ಜ್ಯೋತೀಂಷಿ ತ್ರಿದಶಾ ನಾಗಾ ಯಕ್ಷಾಶ್ಚಂದ್ರಾರ್ಕಮಾರುತಾಃ|

13006014c ಸರ್ವೇ ಪುರುಷಕಾರೇಣ ಮಾನುಷ್ಯಾದ್ದೇವತಾಂ ಗತಾಃ||

ನಕ್ಷತ್ರಗಳು, ದೇವತೆಗಳು, ನಾಗರು, ಯಕ್ಷರು, ಚಂದ್ರ-ಸೂರ್ಯ-ವಾಯುಗಳು ಎಲ್ಲರೂ ಪುರುಷಪ್ರಯತ್ನದಿಂದಲೇ ಮನುಷ್ಯತ್ವದಿಂದ ದೇವತ್ವವನ್ನು ಪಡೆದುಕೊಂಡರು.

13006015a ಅರ್ಥೋ ವಾ ಮಿತ್ರವರ್ಗೋ ವಾ ಐಶ್ವರ್ಯಂ ವಾ ಕುಲಾನ್ವಿತಮ್|

13006015c ಶ್ರೀಶ್ಚಾಪಿ ದುರ್ಲಭಾ ಭೋಕ್ತುಂ ತಥೈವಾಕೃತಕರ್ಮಭಿಃ||

ಕರ್ಮಗಳನ್ನು ಮಾಡದೇ ಇರುವವರಿಗೆ ಅರ್ಥವಾಗಲೀ, ಮಿತ್ರವರ್ಗವಾಗಲೀ, ಅಥವಾ ಐಶ್ವರ್ಯವಾಗಲೀ, ಉತ್ತಮ ಕುಲದಲ್ಲಿ ಜನ್ಮವಾಗಲೀ, ಮತ್ತು ಶ್ರೀಯಾಗಲೀ ಭೋಗಿಸಲು ದುರ್ಲಭವಾಗುತ್ತದೆ.

13006016a ಶೌಚೇನ ಲಭತೇ ವಿಪ್ರಃ ಕ್ಷತ್ರಿಯೋ ವಿಕ್ರಮೇಣ ಚ|

13006016c ವೈಶ್ಯಃ ಪುರುಷಕಾರೇಣ ಶೂದ್ರಃ ಶುಶ್ರೂಷಯಾ ಶ್ರಿಯಮ್||

ಶೌಚದಿಂದ ವಿಪ್ರನೂ, ವಿಕ್ರಮದಿಂದ ಕ್ಷತ್ರಿಯನೂ, ಪುರುಷಪ್ರಯತ್ನದಿಂದ ವೈಶ್ವನೂ ಮತ್ತು ಶುಶ್ರೂಷೆಯಿಂದ ಶೂದ್ರನೂ ಸಂಪತ್ತನ್ನು ಪಡೆದುಕೊಳ್ಳುತ್ತಾರೆ.

13006017a ನಾದಾತಾರಂ ಭಜಂತ್ಯರ್ಥಾ ನ ಕ್ಲೀಬಂ ನಾಪಿ ನಿಷ್ಕ್ರಿಯಮ್|

13006017c ನಾಕರ್ಮಶೀಲಂ ನಾಶೂರಂ ತಥಾ ನೈವಾತಪಸ್ವಿನಮ್||

ದಾನಮಾಡದವನನ್ನು, ನಪುಂಸಕನನ್ನು, ಕೆಲಸಮಾಡದೇ ಇರುವವನನ್ನು, ಕರ್ಮಶೀಲನಲ್ಲದವನನ್ನು, ಶೂರನಲ್ಲದವನನ್ನು ಮತ್ತು ತಪಸ್ವಿಯಲ್ಲದವನನ್ನು ಐಶ್ವರ್ಯವು ಸೇವಿಸುವುದಿಲ್ಲ.

13006018a ಯೇನ ಲೋಕಾಸ್ತ್ರಯಃ ಸೃಷ್ಟಾ ದೈತ್ಯಾಃ ಸರ್ವಾಶ್ಚ ದೇವತಾಃ|

13006018c ಸ ಏಷ ಭಗವಾನ್ವಿಷ್ಣುಃ ಸಮುದ್ರೇ ತಪ್ಯತೇ ತಪಃ||

ಮೂರು ಲೋಕಗಳ, ದೈತ್ಯರು ಮತ್ತು ಸರ್ವ ದೇವತೆಗಳ ಸೃಷ್ಟನಾದ ಭಗವಾನ್ ವಿಷ್ಣುವೇ ಸಮುದ್ರದಲ್ಲಿ ತಪಸ್ಸನ್ನು ತಪಿಸುತ್ತಿದ್ದಾನೆ.

13006019a ಸ್ವಂ ಚೇತ್ಕರ್ಮಫಲಂ ನ ಸ್ಯಾತ್ಸರ್ವಮೇವಾಫಲಂ ಭವೇತ್|

13006019c ಲೋಕೋ ದೈವಂ ಸಮಾಲಂಬ್ಯ ಉದಾಸೀನೋ ಭವೇನ್ನ ತು||

ಒಂದು ವೇಳೆ ಕರ್ಮಗಳಿಗೆ ಫಲವೆಂಬುದೇ ಇಲ್ಲದಾಗಿದ್ದರೆ ಮತ್ತು ಸರ್ವ ಕರ್ಮಗಳು ನಿಷ್ಫಲಗೊಳ್ಳುತ್ತಿದ್ದರೆ ಲೋಕವು ದೈವವನ್ನೇ ಅವಲಂಬಿಸಿ ಉದಾಸೀನವಾಗುತ್ತಿತ್ತು ತಾನೇ?

13006020a ಅಕೃತ್ವಾ ಮಾನುಷಂ ಕರ್ಮ ಯೋ ದೈವಮನುವರ್ತತೇ|

13006020c ವೃಥಾ ಶ್ರಾಮ್ಯತಿ ಸಂಪ್ರಾಪ್ಯ ಪತಿಂ ಕ್ಲೀಬಮಿವಾಂಗನಾ||

ಮನುಷ್ಯ ಕರ್ಮಗಳನ್ನು ಮಾಡದೇ ದೈವವನ್ನೇ ಅವಲಂಬಿಸಿರುವವನು ಪತ್ನಿಯನ್ನು ಸಮೀಪಿಸಿ ನಪುಂಸಕನಾಗುವ ಪತಿಯಂತೆ ವೃಥಾ ಶ್ರಮಪಡುವವನಾಗುತ್ತಾನೆ.

13006021a ನ ತಥಾ ಮಾನುಷೇ ಲೋಕೇ ಭಯಮಸ್ತಿ ಶುಭಾಶುಭೇ|

13006021c ಯಥಾ ತ್ರಿದಶಲೋಕೇ ಹಿ ಭಯಮಲ್ಪೇನ ಜಾಯತೇ||

ದೇವಲೋಕದಲ್ಲಿ ಸ್ವಲ್ಪದರಿಂದಲೇ ಭಯವುಂಟಾಗುವಂತೆ ಮನುಷ್ಯಲೋಕದಲ್ಲಿ ಶುಭಾಶುಭ ಕರ್ಮಗಳ ಭಯವು ಅಷ್ಟೊಂದು ಇರುವುದಿಲ್ಲ.

13006022a ಕೃತಃ ಪುರುಷಕಾರಸ್ತು ದೈವಮೇವಾನುವರ್ತತೇ|

13006022c ನ ದೈವಮಕೃತೇ ಕಿಂ ಚಿತ್ಕಸ್ಯ ಚಿದ್ದಾತುಮರ್ಹತಿ||

ಪುರುಷನ ಕರ್ಮಫಲಗಳು ದೈವಾನುಕೂಲವನ್ನೇ ಅನುಸರಿಸಿ ದೊರೆಯುತ್ತವೆ. ಏನನ್ನೂ ಮಾಡದೇ ಇರುವವನಿಗೆ ದೈವವು ಏನನ್ನೂ ಕೊಡಲು ಶಕ್ಯವಾಗುವುದಿಲ್ಲ.

13006023a ಯದಾ ಸ್ಥಾನಾನ್ಯನಿತ್ಯಾನಿ ದೃಶ್ಯಂತೇ ದೈವತೇಷ್ವಪಿ|

13006023c ಕಥಂ ಕರ್ಮ ವಿನಾ ದೈವಂ ಸ್ಥಾಸ್ಯತೇ ಸ್ಥಾಪಯಿಷ್ಯತಿ||

ದೇವತೆಗಳ ಸ್ಥಾನಗಳೂ ಅನಿತ್ಯವೆಂದು ಕಾಣುತ್ತಿರುವಾಗ ಕರ್ಮಗಳಿಲ್ಲದೇ ದೈವವು ಸದಾ ತನ್ನ ಸ್ಥಾನದಲ್ಲಿಯೇ ಸ್ಥಾಪಿಸಿರಲು ಹೇಗೆ ಸಾಧ್ಯ?

13006024a ನ ದೈವತಾನಿ ಲೋಕೇಽಸ್ಮಿನ್ವ್ಯಾಪಾರಂ ಯಾಂತಿ ಕಸ್ಯ ಚಿತ್|

13006024c ವ್ಯಾಸಂಗಂ ಜನಯಂತ್ಯುಗ್ರಮಾತ್ಮಾಭಿಭವಶಂಕಯಾ||

ಮನುಷ್ಯ ಪ್ರಯತ್ನವನ್ನು ದೇವತೆಗಳೂ ಪ್ರೋತ್ಸಾಹಿಸುವುದಿಲ್ಲ. ಮನುಷ್ಯರು ತಮ್ಮಂತೆ ಆಗಿ ಬಿಡುತ್ತಾರೆ ಎನ್ನುವ ಸಂಶಯದಿಂದ ಅವರು ಅವನ ಪ್ರಯತ್ನಗಳಿಗೆ ವಿಘ್ನಗಳನ್ನುಂಟುಮಾಡುತ್ತಲೇ ಇರುತ್ತಾರೆ.

13006025a ಋಷೀಣಾಂ ದೇವತಾನಾಂ ಚ ಸದಾ ಭವತಿ ವಿಗ್ರಹಃ|

13006025c ಕಸ್ಯ ವಾಚಾ ಹ್ಯದೈವಂ ಸ್ಯಾದ್ಯತೋ ದೈವಂ ಪ್ರವರ್ತತೇ||

13006026a ಕಥಂ ಚಾಸ್ಯ ಸಮುತ್ಪತ್ತಿರ್ಯಥಾ ದೈವಂ ಪ್ರವರ್ತತೇ|

13006026c ಏವಂ ತ್ರಿದಶಲೋಕೇಽಪಿ ಪ್ರಾಪ್ಯಂತೇ ಬಹವಶ್ಚಲಾಃ||

ಋಷಿಗಳಿಗೂ ದೇವತೆಗಳಿಗೂ ಸದಾ ಕಲಹವಾಗುತ್ತಿರುತ್ತದೆ. “ಯಾರ ಮಾತಿನಿಂದ ದೈವವು ನಿಷ್ಪಲವಾಗುತ್ತದೆ? ಯಾವಾಗ ದೈವವು ತನ್ನ ಕಾರ್ಯವನ್ನು ಪ್ರಾರಂಭಿಸುತ್ತದೆ? ದೈವದ ಉತ್ಪತ್ತಿಯು ಹೇಗೆ ಮತ್ತು ದೈವವು ಹೇಗೆ ಕೆಲಸಮಾಡುತ್ತದೆ?” ಹೀಗೆ ದೇವತೆಗಳಲ್ಲಿಯೂ ಕೂಡ ಅನೇಕ ಜಿಜ್ಞಾಸೆಗಳು ನಡೆಯುತ್ತಿರುತ್ತವೆ.

13006027a ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ|

13006027c ಆತ್ಮೈವ ಚಾತ್ಮನಃ ಸಾಕ್ಷೀ ಕೃತಸ್ಯಾಪ್ಯಕೃತಸ್ಯ ಚ||

ಮನುಷ್ಯನು ತನಗೆ ತಾನೇ ಬಂಧುವು. ತನಗೆ ತಾನೇ ಶತ್ರುವು. ತನ್ನ ಸತ್ಕರ್ಮ-ದುಷ್ಕರ್ಮಗಳಿಗೆ ತಾನೇ ಸಾಕ್ಷಿಯಾಗಿರುತ್ತಾನೆ.

13006028a ಕೃತಂ ಚ ವಿಕೃತಂ ಕಿಂ ಚಿತ್ಕೃತೇ ಕರ್ಮಣಿ ಸಿಧ್ಯತಿ|

13006028c ಸುಕೃತೇ ದುಷ್ಕೃತಂ ಕರ್ಮ ನ ಯಥಾರ್ಥಂ ಪ್ರಪದ್ಯತೇ||

ಮಾಡುವ ಕರ್ಮವು ಸ್ವಲ್ಪ ನ್ಯೂನತೆಯಿಂದ ಕೂಡಿದ್ದರೂ ಕಾರ್ಯವನ್ನು ಮುಂದುವರಿಸಿಕೊಂಡು ಹೋದರೆ ಅದು ಸಿದ್ಧಿಯಾಗುತ್ತದೆ. ಸುಕೃತವನ್ನು ಮಾಡುವುದರಿಂದ ದುಷ್ಕೃತಗಳು ಯಥಾರ್ಥ ಫಲವನ್ನು ನೀಡುವುದಿಲ್ಲ.

13006029a ದೇವಾನಾಂ ಶರಣಂ ಪುಣ್ಯಂ ಸರ್ವಂ ಪುಣ್ಯೈರವಾಪ್ಯತೇ|

13006029c ಪುಣ್ಯಶೀಲಂ ನರಂ ಪ್ರಾಪ್ಯ ಕಿಂ ದೈವಂ ಪ್ರಕರಿಷ್ಯತಿ||

ದೇವತೆಗಳೂ ಪುಣ್ಯಕ್ಕೆ ಶರಣು ಹೋಗುತ್ತಾರೆ. ಎಲ್ಲವೂ ಪುಣ್ಯದಿಂದಲೇ ದೊರೆಯುತ್ತದೆ. ಪುಣ್ಯಶೀಲ ನರರಿಗೆ ದೈವವು ಏನು ಮಾಡಬಲ್ಲದು?

13006030a ಪುರಾ ಯಯಾತಿರ್ವಿಭ್ರಷ್ಟಶ್ಚ್ಯಾವಿತಃ ಪತಿತಃ ಕ್ಷಿತೌ|

13006030c ಪುನರಾರೋಪಿತಃ ಸ್ವರ್ಗಂ ದೌಹಿತ್ರೈಃ ಪುಣ್ಯಕರ್ಮಭಿಃ||

ಹಿಂದೆ ಯಯಾತಿಯು ಪುಣ್ಯದಿಂದ ಭ್ರಷ್ಟನಾಗಿ ತಳ್ಳಲ್ಪಟ್ಟು ಭೂಮಿಯ ಮೇಲೆ ಬೀಳಲು ಪುಣ್ಯಕರ್ಮಗಳನ್ನು ಮಾಡಿದ ಮಗಳ ಮಕ್ಕಳಿಂದಾಗಿ ಪುನಃ ಸ್ವರ್ಗವನ್ನೇರಿದನು.

13006031a ಪುರೂರವಾಶ್ಚ ರಾಜರ್ಷಿರ್ದ್ವಿಜೈರಭಿಹಿತಃ ಪುರಾ|

13006031c ಐಲ ಇತ್ಯಭಿವಿಖ್ಯಾತಃ ಸ್ವರ್ಗಂ ಪ್ರಾಪ್ತೋ ಮಹೀಪತಿಃ||

ಹಿಂದೆ ಐಲ ಎಂದು ವಿಖ್ಯಾತನಾದ ಪುರೂರವ ರಾಜರ್ಷಿ ಮಹೀಪತಿಯು ದ್ವಿಜರು ಹೇಳಿದುದನ್ನು ಅನುಸರಿಸಿ ಸ್ವರ್ಗವನ್ನು ಪಡೆದುಕೊಂಡನು.

13006032a ಅಶ್ವಮೇಧಾದಿಭಿರ್ಯಜ್ಞೈಃ ಸತ್ಕೃತಃ ಕೋಸಲಾಧಿಪಃ|

13006032c ಮಹರ್ಷಿಶಾಪಾತ್ಸೌದಾಸಃ ಪುರುಷಾದತ್ವಮಾಗತಃ||

ಅಶ್ವಮೇಧವೇ ಮೊದಲಾದ ಯಜ್ಞಗಳಿಂದ ಸತ್ಕೃತನಾಗಿದ್ದ ಕೋಸಲಾಧಿಪ ಸೌದಾಸನು ಮಹರ್ಷಿ ವಸಿಷ್ಠನ ಶಾಪದಿಂದ ನರಭಕ್ಷಕನಾದನು.

13006033a ಅಶ್ವತ್ಥಾಮಾ ಚ ರಾಮಶ್ಚ ಮುನಿಪುತ್ರೌ ಧನುರ್ಧರೌ|

13006033c ನ ಗಚ್ಚತಃ ಸ್ವರ್ಗಲೋಕಂ ಸುಕೃತೇನೇಹ ಕರ್ಮಣಾ||

ಮುನಿಪುತ್ರರೂ ಧನುರ್ಧರರೂ ಆದ ಅಶ್ವತ್ಥಾಮ ಮತ್ತು ರಾಮರು ತಾವು ಮಾಡಿದ ಸುಕೃತ ಕರ್ಮಗಳಿಂದ ಚಿರಂಜೀವಿಗಳಾಗಿ ಸ್ವರ್ಗಲೋಕಕ್ಕೇ ಹೋಗುವುದಿಲ್ಲ.

13006034a ವಸುರ್ಯಜ್ಞಶತೈರಿಷ್ಟ್ವಾ ದ್ವಿತೀಯ ಇವ ವಾಸವಃ|

13006034c ಮಿಥ್ಯಾಭಿಧಾನೇನೈಕೇನ ರಸಾತಲತಲಂ ಗತಃ||

ನೂರು ಯಜ್ಞ-ಇಷ್ಟಿಗಳನ್ನು ಮಾಡಿ ಎರಡನೇ ವಾಸವನೋ ಎಂಬಂತಿದ್ದ ಉಪಚರ ವಸುವು ಒಂದೇ ಒಂದು ಸುಳ್ಳಿನಿಂದಾಗಿ ರಸಾತಲ ತಲಕ್ಕೆ ಹೋದನು.

13006035a ಬಲಿರ್ವೈರೋಚನಿರ್ಬದ್ಧೋ ಧರ್ಮಪಾಶೇನ ದೈವತೈಃ|

13006035c ವಿಷ್ಣೋಃ ಪುರುಷಕಾರೇಣ ಪಾತಾಲಶಯನಃ ಕೃತಃ||

ವಿರೋಚನನ ಮಗ ಬಲಿಯನ್ನು ದೇವತೆಗಳು ಧರ್ಮಪಾಶದಿಂದ ಬಂಧಿಸಿದರು ಮತ್ತು ವಿಷ್ಣುವಿನ ಪುರುಷಪ್ರಯತ್ನದಿಂದ ಅವನು ಪಾತಾಲಶಯನನಾದನು.

13006036a ಶಕ್ರಸ್ಯೋದಸ್ಯ ಚರಣಂ ಪ್ರಸ್ಥಿತೋ ಜನಮೇಜಯಃ|

13006036c ದ್ವಿಜಸ್ತ್ರೀಣಾಂ ವಧಂ ಕೃತ್ವಾ ಕಿಂ ದೈವೇನ ನ ವಾರಿತಃ||

ದ್ವಿಜಸ್ತ್ರೀಯರನ್ನು ವಧಿಸಿದ್ದರೂ ಜನಮೇಜಯನು ಶಕ್ರನ ಚರಣಗಳ ಆಶ್ರಯವನ್ನು ಪಡೆದು ಸ್ವರ್ಗಕ್ಕೆ ಹೊರಟುಹೋದನು. ದೈವವು ಅವನನ್ನು ತಡೆಯಿತೇನು?

13006037a ಅಜ್ಞಾನಾದ್ಬ್ರಾಹ್ಮಣಂ ಹತ್ವಾ ಸ್ಪೃಷ್ಟೋ ಬಾಲವಧೇನ ಚ|

13006037c ವೈಶಂಪಾಯನವಿಪ್ರರ್ಷಿಃ ಕಿಂ ದೈವೇನ ನಿವಾರಿತಃ||

ವಿಪ್ರರ್ಷಿ ವೈಶಂಪಾಯನನು ಅಜ್ಞಾನದಿಂದ ಬ್ರಾಹ್ಮಣನನ್ನು ಸಂಹರಿಸಿ ಬಾಲವಧೆಯ ಪಾಪದಿಂದಲೂ ಲಿಪ್ತರಾಗಿದ್ದನು. ದೈವವು ಅವನನ್ನು ತಡೆಯಿತೇನು?

13006038a ಗೋಪ್ರದಾನೇನ ಮಿಥ್ಯಾ ಚ ಬ್ರಾಹ್ಮಣೇಭ್ಯೋ ಮಹಾಮಖೇ|

13006038c ಪುರಾ ನೃಗಶ್ಚ ರಾಜರ್ಷಿಃ ಕೃಕಲಾಸತ್ವಮಾಗತಃ||

ಹಿಂದೆ ರಾಜರ್ಷಿ ನೃಗನು ಮಹಾಮಖದಲ್ಲಿ ಬ್ರಾಹ್ಮಣರಿಗೆ ಗೋದಾನವನ್ನು ನೀಡುತ್ತಿದ್ದಾಗ ಮಿಥ್ಯಾಚಾರವನ್ನಾಚರಿಸಿದನು[1]. ಅವನಿಗೆ ಹೆಂಟೇಗೊದ್ದದ ಯೋನಿಯಲ್ಲಿ ಹುಟ್ಟಬೇಕಾಯಿತು.

13006039a ಧುಂಧುಮಾರಶ್ಚ ರಾಜರ್ಷಿಃ ಸತ್ರೇಷ್ವೇವ ಜರಾಂ ಗತಃ|

13006039c ಪ್ರೀತಿದಾಯಂ ಪರಿತ್ಯಜ್ಯ ಸುಷ್ವಾಪ ಸ ಗಿರಿವ್ರಜೇ||

ರಾಜರ್ಷಿ ಧುಂಧುಮಾರನು ಯಜ್ಞಗಳನ್ನು ಮಾಡುತ್ತಲೇ ವೃದ್ಧನಾದನು. ಆಗ ದೇವತೆಗಳು ಪ್ರೀತರಾಗಿ ಕೊಟ್ಟ ವರವನ್ನೂ ತ್ಯಜಿಸಿ ಅವನು ಗಿರಿವ್ರಜದಲ್ಲಿ ಸುಖವಾಗಿ ಮಲಗಿಬಿಟ್ಟನು!

13006040a ಪಾಂಡವಾನಾಂ ಹೃತಂ ರಾಜ್ಯಂ ಧಾರ್ತರಾಷ್ಟ್ರೈರ್ಮಹಾಬಲೈಃ|

13006040c ಪುನಃ ಪ್ರತ್ಯಾಹೃತಂ ಚೈವ ನ ದೈವಾದ್ಭುಜಸಂಶ್ರಯಾತ್||

ಮಹಾಬಲ ಧಾರ್ತರಾಷ್ಟ್ರರು ಪಾಂಡವರ ರಾಜ್ಯವನ್ನು ಅಪಹರಿಸಿದರು. ಪುನಃ ಅವರು ಅದನ್ನು ಹಿಂದೆ ಪಡೆದುಕೊಂಡರು. ಇದು ದೈವದ ಭುಜಾಶ್ರಯದಿಂದಲ್ಲದೇ ಆಗಲಿಲ್ಲ.

13006041a ತಪೋನಿಯಮಸಂಯುಕ್ತಾ ಮುನಯಃ ಸಂಶಿತವ್ರತಾಃ|

13006041c ಕಿಂ ತೇ ದೈವಬಲಾಚ್ಚಾಪಮುತ್ಸೃಜಂತೇ ನ ಕರ್ಮಣಾ||

ತಪೋನಿಯಮ ಸಂಯುಕ್ತರಾದ ಸಂಶಿತವ್ರತ ಮುನಿಗಳು ದೈವಬಲದಿಂದ ಶಪಿಸುವರೇನು? ತಮ್ಮದೇ ಕರ್ಮಗಳ ಬಲದಿಂದ ತಾನೇ?

13006042a ಪಾಪಮುತ್ಸೃಜತೇ ಲೋಕೇ ಸರ್ವಂ ಪ್ರಾಪ್ಯ ಸುದುರ್ಲಭಮ್|

13006042c ಲೋಭಮೋಹಸಮಾಪನ್ನಂ ನ ದೈವಂ ತ್ರಾಯತೇ ನರಮ್||

ಅತಿಶಯ ಪುಣ್ಯಕಾರ್ಯವನ್ನು ಮಾಡುವವನು ಲೋಕದಲ್ಲಿ ದುರ್ಲಭವಾದ ಸರ್ವವನ್ನೂ ಪಡೆದು ಪಾಪಗಳನ್ನು ಕಳೆದುಕೊಳ್ಳುತ್ತಾನೆ. ಲೋಭ-ಮೋಹಗಳಿಂದ ಸಂಪನ್ನನಾದ ನರನನ್ನು ದೈವವೂ ಕೂಡ ರಕ್ಷಿಸುವುದಿಲ್ಲ.

13006043a ಯಥಾಗ್ನಿಃ ಪವನೋದ್ಧೂತಃ ಸೂಕ್ಷ್ಮೋಽಪಿ ಭವತೇ ಮಹಾನ್|

13006043c ತಥಾ ಕರ್ಮಸಮಾಯುಕ್ತಂ ದೈವಂ ಸಾಧು ವಿವರ್ಧತೇ||

ಅಗ್ನಿಯು ಸೂಕ್ಷ್ಮವೇ ಆಗಿದ್ದರೂ ಗಾಳಿಯಿಂದ ಮೇಲೆದ್ದರೆ ಮಹಾ ಅಗ್ನಿಯಾಗುವಂತೆ ಕರ್ಮದಿಂದ ಮೇಲೆಬ್ಬಿಸಲ್ಪಟ್ಟ ದೈವವು ಚೆನ್ನಾಗಿ ವೃದ್ಧಿಯಾಗುತ್ತದೆ.

13006044a ಯಥಾ ತೈಲಕ್ಷಯಾದ್ದೀಪಃ ಪ್ರಮ್ಲಾನಿಮುಪಗಚ್ಚತಿ|

13006044c ತಥಾ ಕರ್ಮಕ್ಷಯಾದ್ದೈವಂ ಪ್ರಮ್ಲಾನಿಮುಪಗಚ್ಚತಿ||

ಎಣ್ಣೆಯು ಮುಗಿದುಹೋಗಲು ದ್ವೀಪವೂ ಆರಿಹೋಗುವಂತೆ ಕರ್ಮಗಳ ಕ್ಷಯವಾಗುತ್ತಿದ್ದಂತೆ ದೈವಸಹಾಯವೂ ಇಲ್ಲವಾಗುತ್ತದೆ.

13006045a ವಿಪುಲಮಪಿ ಧನೌಘಂ ಪ್ರಾಪ್ಯ ಭೋಗಾನ್ಸ್ತ್ರಿಯೋ ವಾ

ಪುರುಷ ಇಹ ನ ಶಕ್ತಃ ಕರ್ಮಹೀನೋಽಪಿ ಭೋಕ್ತುಮ್|

13006045c ಸುನಿಹಿತಮಪಿ ಚಾರ್ಥಂ ದೈವತೈ ರಕ್ಷ್ಯಮಾಣಂ

ವ್ಯಯಗುಣಮಪಿ ಸಾಧುಂ ಕರ್ಮಣಾ ಸಂಶ್ರಯಂತೇ||

ವಿಪುಲ ಧನವನ್ನೂ, ಭೋಗವಸ್ತುಗಳನ್ನೂ, ಸ್ತ್ರೀಯರನ್ನು ಹೊಂದಿದ್ದರೂ ಕರ್ಮಹೀನ ಪುರುಷನು ಅವುಗಳನ್ನು ಭೋಗಿಸಲು ಶಕ್ತನಾಗುವುದಿಲ್ಲ. ಆದರೆ ಕರ್ಮಗಳಲ್ಲಿ ನಿರತನಾದ ಸಾಧುವು ದೇವತೆಗಳಿಂದ ರಕ್ಷಿಸಲ್ಪಟ್ಟ ಐಶ್ವರ್ಯವನ್ನೂ ಪಡೆದುಕೊಂಡು ಭೋಗಿಸುತ್ತಾನೆ.

13006046a [2]ಭವತಿ ಮನುಜಲೋಕಾದ್ದೇವಲೋಕೋ ವಿಶಿಷ್ಟೋ

ಬಹುತರಸುಸಮೃದ್ಧ್ಯಾ ಮಾನುಷಾಣಾಂ ಗೃಹಾಣಿ|

13006046c ಪಿತೃವನಭವನಾಭಂ ದೃಶ್ಯತೇ ಚಾಮರಾಣಾಂ

ನ ಚ ಫಲತಿ ವಿಕರ್ಮಾ ಜೀವಲೋಕೇನ ದೈವಮ್||

ಅವನು ಮನುಜಲೋಕದಲ್ಲಿ ದೇವಲೋಕದಲ್ಲಿರುವವರಿಗಿಂತಲೂ ವಿಶಿಷ್ಟನಾಗುತ್ತಾನೆ. ಆ ಮನುಷ್ಯನ ಮನೆಗಳು ಬಹುತರನಾಗಿ ಸುಸಮೃದ್ಧವಾಗಿರುತ್ತದೆ. ಆದರೆ ಕರ್ಮಗಳನ್ನು ತ್ಯಜಿಸಿರುವವನ ಮನೆಯು ಬಹುವಿಧವಾದ ಸಂಪತ್ತಿನಿಂದ ಕೂಡಿದ್ದರೂ ದೇವತೆಗಳಿಗೆ ಶ್ಮಶಾನ ಸದೃಶವಾಗಿ ಕಾಣುತ್ತದೆ.

13006047a ವ್ಯಪನಯತಿ ವಿಮಾರ್ಗಂ ನಾಸ್ತಿ ದೈವೇ ಪ್ರಭುತ್ವಂ

ಗುರುಮಿವ ಕೃತಮಗ್ರ್ಯಂ ಕರ್ಮ ಸಂಯಾತಿ ದೈವಮ್|

13006047c ಅನುಪಹತಮದೀನಂ ಕಾಮಕಾರೇಣ ದೈವಂ

ನಯತಿ ಪುರುಷಕಾರಃ ಸಂಚಿತಸ್ತತ್ರ ತತ್ರ||

ದುರ್ಮಾರ್ಗದಲ್ಲಿ ಹೋಗುತ್ತಿರುವವನನ್ನು ಸನ್ಮಾರ್ಗದಲ್ಲಿ ತರುವ ಪ್ರಭುತ್ವವು ದೈವಕ್ಕಿರುವುದಿಲ್ಲ. ಗುರುವನ್ನು ಮುಂದೆಮಾಡಿಕೊಂಡು ಶಿಷ್ಯನು ಹೋಗುವಂತೆ ದೈವವು ಕರ್ಮದ ಹಿಂದೆಯೇ ಹೋಗುತ್ತಿರುತ್ತದೆ. ಪುರುಷನ ಸಂಚಿತ ಕರ್ಮಗಳೇ ದೈವವಾಗಿ ಅಲ್ಲಿಂದಿಲ್ಲಿಗೆ ಕೊಂಡೊಯ್ಯುತ್ತಿರುತ್ತದೆ.

13006048a ಏತತ್ತೇ ಸರ್ವಮಾಖ್ಯಾತಂ ಮಯಾ ವೈ ಮುನಿಸತ್ತಮ|

13006048c ಫಲಂ ಪುರುಷಕಾರಸ್ಯ ಸದಾ ಸಂದೃಶ್ಯ ತತ್ತ್ವತಃ||

ಮುನಿಸತ್ತಮ! ಪುರುಷಕರ್ಮಗಳ ಫಲವನ್ನು ಸದಾ ಕಾಣುತ್ತಿರುವ ನಾನು ತತ್ತ್ವತಃ ಎಲ್ಲವನ್ನೂ ಹೇಳಿದ್ದೇನೆ.

13006049a ಅಭ್ಯುತ್ಥಾನೇನ ದೈವಸ್ಯ ಸಮಾರಬ್ಧೇನ ಕರ್ಮಣಾ|

13006049c ವಿಧಿನಾ ಕರ್ಮಣಾ ಚೈವ ಸ್ವರ್ಗಮಾರ್ಗಮವಾಪ್ನುಯಾತ್||

ದೈವಬಲದ ಉದಯದಿಂದ ಪ್ರಾರಂಭಿಸಿದ ಕರ್ಮದಿಂದ ಮತ್ತು ವಿಧಿವತ್ತಾಗಿ ಮಾಡಿದ ಕರ್ಮದಿಂದ ಸ್ವರ್ಗಮಾರ್ಗವನ್ನು ಪಡೆದುಕೊಳ್ಳಬಹುದು.””

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ದೈವಪುರುಷಕಾರನಿರ್ದೇಶೇ ಷಷ್ಟೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ದೈವಪುರುಷಕಾರನಿರ್ದೇಶ ಎನ್ನುವ ಆರನೇ ಅಧ್ಯಾಯವು.

Related image

[1] ನೃಗನು ಗೋದಾನ ಮಾಡುವಾಗ ಒಂದೇ ಹಸುವನ್ನು ಎರಡು ಬಾರಿ ದಾರೆಯೆರೆದು ಕೊಟ್ಟ ಪಾಪವನ್ನು ಮಾಡಿದನೆಂದಿದೆ.

[2] ಭಾರತದರ್ಶನದಲ್ಲಿ ಇದರ ಮೊದಲು ಈ ಶ್ಲೋಕಾರ್ಧವಿದೆ: ವ್ಯಯಗುಣಮಪಿ ಸಾಧುಂ ಕರ್ಮಣಾ ಸಂಶ್ರಯಂತೇ|

Comments are closed.