Anushasana Parva: Chapter 5

ಅನುಶಾಸನ ಪರ್ವ: ದಾನಧರ್ಮ ಪರ್ವ

ಶುಕ-ವಾಸವ ಸಂವಾದ

ದಯಾಲು ಭಕ್ತಜನರ ಗುಣಗಳೇನೆಂದು ಕೇಳಲು ಯುಧಿಷ್ಠಿರನಿಗೆ ಭೀಷ್ಮನು ದಯಾಲು ಮತ್ತು ಭಕ್ತಿಯುತ ಗಿಳಿ-ಮರಗಳ ಕಥೆಯನ್ನು ಹೇಳಿದುದು (೧-೩೧).

13005001 ಯುಧಿಷ್ಠಿರ ಉವಾಚ|

13005001a ಆನೃಶಂಸಸ್ಯ ಧರ್ಮಸ್ಯ ಗುಣಾನ್ಭಕ್ತಜನಸ್ಯ ಚ|

13005001c ಶ್ರೋತುಮಿಚ್ಚಾಮಿ ಕಾರ್ತ್ಸ್ನ್ಯೇನ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ದಯಾಲು ಭಕ್ತಜನರ ಗುಣಗಳನ್ನು ಕೇಳಬಯಸುತ್ತೇನೆ. ಅದನ್ನು ಸಂಪೂರ್ಣವಾಗಿ ಹೇಳು.”

13005002 ಭೀಷ್ಮ ಉವಾಚ|

[1]13005002a ವಿಷಯೇ ಕಾಶಿರಾಜಸ್ಯ ಗ್ರಾಮಾನ್ನಿಷ್ಕ್ರಮ್ಯ ಲುಬ್ಧಕಃ|

13005002c ಸವಿಷಂ ಕಾಂಡಮಾದಾಯ ಮೃಗಯಾಮಾಸ ವೈ ಮೃಗಮ್||

ಭೀಷ್ಮನು ಹೇಳಿದನು: “ಕಾಶಿರಾಜನ ರಾಜ್ಯದ ಬೇಟೆಗಾರನೋರ್ವನು ವಿಷದಲ್ಲಿ ಅದ್ದಿದ ಬಾಣವನ್ನು ತೆಗೆದುಕೊಂಡು ಜಿಂಕೆಯನ್ನು ಬೇಟೆಯಾಡಲು ಗ್ರಾಮದಿಂದ ಹೊರಟನು.

13005003a ತತ್ರ ಚಾಮಿಷಲುಬ್ಧೇನ ಲುಬ್ಧಕೇನ ಮಹಾವನೇ|

13005003c ಅವಿದೂರೇ ಮೃಗಂ ದೃಷ್ಟ್ವಾ ಬಾಣಃ ಪ್ರತಿಸಮಾಹಿತಃ||

ಅನತಿದೂರದಲ್ಲಿಯೇ ಆ ಮಹಾವನದಲ್ಲಿ ಮಾಂಸವನ್ನು ಬಯಸುತ್ತಿದ್ದ ವ್ಯಾಧನು ಜಿಂಕೆಯನ್ನು ನೋಡಿ ಬಾಣವನ್ನು ಪ್ರಯೋಗಿಸಿದನು.

13005004a ತೇನ ದುರ್ವಾರಿತಾಸ್ತ್ರೇಣ ನಿಮಿತ್ತಚಪಲೇಷುಣಾ|

13005004c ಮಹಾನ್ವನತರುರ್ವಿದ್ಧೋ ಮೃಗಂ ತತ್ರ ಜಿಘಾಂಸತಾ||

ಜಿಂಕೆಯನ್ನು ಹೊಡೆಯಲೆಂದು ಬಿಟ್ಟ ಆ ಅಮೋಘ ಬಾಣವು ಗುರಿತಪ್ಪಿ ಅಲ್ಲಿದ್ದ ಒಂದು ಮಹಾ ವೃಕ್ಷಕ್ಕೆ ತಾಗಿತು.

13005005a ಸ ತೀಕ್ಷ್ಣವಿಷದಿಗ್ಧೇನ ಶರೇಣಾತಿಬಲಾತ್ಕೃತಃ|

13005005c ಉತ್ಸೃಜ್ಯ ಫಲಪತ್ರಾಣಿ ಪಾದಪಃ ಶೋಷಮಾಗತಃ||

ಬಲವಾಗಿ ಪ್ರಯೋಗಿಸಲ್ಪಟ್ಟ ಆ ತೀಕ್ಷ್ಣ ವಿಷಪೂರಿತ ಬಾಣದ ಹೊಡೆತದಿಂದಾಗಿ ಎಲೆ-ಹಣ್ಣುಗಳು ಉದುರಿ ಆ ಮರವು ಒಣಗಿ ಹೋಯಿತು.

13005006a ತಸ್ಮಿನ್ವೃಕ್ಷೇ ತಥಾಭೂತೇ ಕೋಟರೇಷು ಚಿರೋಷಿತಃ|

13005006c ನ ಜಹಾತಿ ಶುಕೋ ವಾಸಂ ತಸ್ಯ ಭಕ್ತ್ಯಾ ವನಸ್ಪತೇಃ||

ಆದರೆ ಅ ವೃಕ್ಷದ ಮೇಲಿನ ಭಕ್ತಿಯಿಂದಾಗಿ ಮರದ ಕೊಟರೆಯಲ್ಲಿ ಬಹುಕಾಲದಿಂದ ವಾಸಿಸುತ್ತಿದ್ದ ಗಿಳಿಯೊಂದು ಮಾತ್ರ ಅದನ್ನು ಬಿಟ್ಟು ಹೋಗಲಿಲ್ಲ.

13005007a ನಿಷ್ಪ್ರಚಾರೋ ನಿರಾಹಾರೋ ಗ್ಲಾನಃ ಶಿಥಿಲವಾಗಪಿ|

13005007c ಕೃತಜ್ಞಃ ಸಹ ವೃಕ್ಷೇಣ ಧರ್ಮಾತ್ಮಾ ಸ ವ್ಯಶುಷ್ಯತ||

ಮಾಡಿದ ಉಪಕಾರವನ್ನು ಸ್ಮರಿಸುವ ಆ ಕೃತಜ್ಞ ಮತ್ತು ಧರ್ಮಾತ್ಮಾ ಗಿಳಿಯು ಎಲ್ಲಿಯೂ ಸಂಚರಿಸಲೂ ಹೋಗುತ್ತಿರಲಿಲ್ಲ. ಆಹಾರವನ್ನೂ ತಿನ್ನುತ್ತಿರಲಿಲ್ಲ. ಅದರಿಂದ ಅದು ಬಹಳವಾಗಿ ಆಯಾಸಗೊಂಡು, ಅದರ ಧ್ವನಿಯೂ ಕುಸಿದು ಹೋಗಿತ್ತು. ವಾಸಿಸುತ್ತಿದ್ದ ಆ ಮರದಂತೆ ತಾನೂ ಒಣಗಿಹೋಯಿತು.

13005008a ತಮುದಾರಂ ಮಹಾಸತ್ತ್ವಮತಿಮಾನುಷಚೇಷ್ಟಿತಮ್|

13005008c ಸಮದುಃಖಸುಖಂ ಜ್ಞಾತ್ವಾ ವಿಸ್ಮಿತಃ ಪಾಕಶಾಸನಃ||

ಉದಾರಬುದ್ಧಿಯ, ಮಹಾ ಸತ್ತ್ವಯುತವಾದ, ಅತಿಮಾನುಷವಾಗಿ ವರ್ತಿಸುತ್ತಿದ್ದ, ದುಃಖಸುಖಗಳನ್ನು ಸಮನಾಗಿ ಕಾಣುತ್ತಿದ್ದ ಆ ಗಿಳಿಯ ಕುರಿತು ತಿಳಿದು ಪಾಕಶಾಸನನು ವಿಸ್ಮಿತನಾದನು.

13005009a ತತಶ್ಚಿಂತಾಮುಪಗತಃ ಶಕ್ರಃ ಕಥಮಯಂ ದ್ವಿಜಃ|

13005009c ತಿರ್ಯಗ್ಯೋನಾವಸಂಭಾವ್ಯಮಾನೃಶಂಸ್ಯಂ ಸಮಾಸ್ಥಿತಃ||

“ತಿರ್ಯಗ್ಯೋನಿಯಲ್ಲಿ ಹುಟ್ಟಿದ ಈ ಪಕ್ಷಿಯು ಹೇಗೆ ತಾನೆ ದಯಾಭಾವವನ್ನು ತಾಳಿಕೊಂಡಿದೆ?” ಎಂದು ಶಕ್ರನು ಯೋಚಿಸತೊಡಗಿದನು.

13005010a ಅಥ ವಾ ನಾತ್ರ ಚಿತ್ರಂ ಹೀತ್ಯಭವದ್ವಾಸವಸ್ಯ ತು|

13005010c ಪ್ರಾಣಿನಾಮಿಹ ಸರ್ವೇಷಾಂ ಸರ್ವಂ ಸರ್ವತ್ರ ದೃಶ್ಯತೇ||

“ಅಥವಾ ಎಲ್ಲ ಪ್ರಾಣಿಗಳಲ್ಲಿಯೂ ಎಲ್ಲ ಭಾವಗಳೂ ಕಾಣಿಸಿಕೊಳ್ಳುತ್ತವೆ. ಇದು ಅಸಂಭವವೇನಲ್ಲ!” ಎಂದು ಯೋಚಿಸಿಯೂ ಅವನು ಸಮಾಧಾನಪಟ್ಟುಕೊಂಡನು.

13005011a ತತೋ ಬ್ರಾಹ್ಮಣವೇಷೇಣ ಮಾನುಷಂ ರೂಪಮಾಸ್ಥಿತಃ|

13005011c ಅವತೀರ್ಯ ಮಹೀಂ ಶಕ್ರಸ್ತಂ ಪಕ್ಷಿಣಮುವಾಚ ಹ||

ಆಗ ಮನುಷ್ಯನ ರೂಪವನ್ನು ತಳೆದು ಬ್ರಾಹ್ಮಣವೇಷದಲ್ಲಿ ಭೂಮಿಗೆ ಇಳಿದು ಶಕ್ರನು ಆ ಪಕ್ಷಿಗೆ ಹೇಳಿದನು:

13005012a ಶುಕ ಭೋಃ ಪಕ್ಷಿಣಾಂ ಶ್ರೇಷ್ಠ ದಾಕ್ಷೇಯೀ ಸುಪ್ರಜಾಸ್ತ್ವಯಾ|

13005012c ಪೃಚ್ಚೇ ತ್ವಾ ಶುಷ್ಕಮೇತಂ ವೈ ಕಸ್ಮಾನ್ನ ತ್ಯಜಸಿ ದ್ರುಮಮ್||

“ಪಕ್ಷಿಗಳಲ್ಲಿಯೇ ಶ್ರೇಷ್ಠ ಗಿಳಿಯೇ! ನಿನ್ನಂತಹ ಸಂತಾನವನ್ನು ಪಡೆದು ದಾಕ್ಷಾಯಣೀ ಶುಕಿಯು ಶ್ರೇಷ್ಠಳಾದಳು! ನಿನ್ನಲ್ಲಿ ಒಂದು ಕೇಳಬೇಕೆಂದಿದ್ದೇನೆ – ಒಣಗಿ ಹೋಗಿದ್ದರೂ ಈ ಮರವನ್ನು ನೀನು ಏಕೆ ತ್ಯಜಿಸುತ್ತಿಲ್ಲ?”

13005013a ಅಥ ಪೃಷ್ಟಃ ಶುಕಃ ಪ್ರಾಹ ಮೂರ್ಧ್ನಾ ಸಮಭಿವಾದ್ಯ ತಮ್|

13005013c ಸ್ವಾಗತಂ ದೇವರಾಜಾಯ ವಿಜ್ಞಾತಸ್ತಪಸಾ ಮಯಾ||

ಹಾಗೆ ಕೇಳಲ್ಪಟ್ಟ ಗಿಳಿಯು ತಲೆಬಾಗಿ ಅವನಿಗೆ ನಮಸ್ಕರಿಸಿ ಹೇಳಿತು: “ದೇವರಾಜನಿಗೆ ಸ್ವಾಗತ! ತಪಸ್ಸಿನ ಪ್ರಭಾವದಿಂದ ನೀನು ಯಾರೆಂದು ನನಗೆ ತಿಳಿಯಿತು.”

13005014a ತತೋ ದಶಶತಾಕ್ಷೇಣ ಸಾಧು ಸಾಧ್ವಿತಿ ಭಾಷಿತಮ್|

13005014c ಅಹೋ ವಿಜ್ಞಾನಮಿತ್ಯೇವಂ ತಪಸಾ ಪೂಜಿತಸ್ತತಃ||

ಆಗ ಸಹಸ್ರಾಕ್ಷನು “ಸಾಧು! ಸಾಧು! ತಪಸ್ಸಿನ ವಿಜ್ಞಾನವು ಎಂಥಹುದು! ” ಎಂದು ಪ್ರಶಂಸಿಸಿದನು.

13005015a ತಮೇವಂ ಶುಭಕರ್ಮಾಣಂ ಶುಕಂ ಪರಮಧಾರ್ಮಿಕಮ್|

13005015c ವಿಜಾನನ್ನಪಿ ತಾಂ ಪ್ರಾಪ್ತಿಂ ಪಪ್ರಚ್ಚ ಬಲಸೂದನಃ||

ಆ ಗಿಳಿಯು ಪರಮ ಧಾರ್ಮಿಕ ಮತ್ತು ಶುಭಕರ್ಮಿ ಎಂದು ತಿಳಿದೂ ಬಲಸೂದನನು ಪುನಃ ಪ್ರಶ್ನಿಸಿದನು:

13005016a ನಿಷ್ಪತ್ರಮಫಲಂ ಶುಷ್ಕಮಶರಣ್ಯಂ ಪತತ್ರಿಣಾಮ್|

13005016c ಕಿಮರ್ಥಂ ಸೇವಸೇ ವೃಕ್ಷಂ ಯದಾ ಮಹದಿದಂ ವನಮ್||

“ಈ ವನವು ಇಷ್ಟೊಂದು ದೊಡ್ಡದಾಗಿರುವಾಗ ಎಲೆಗಳಿಲ್ಲದ, ಫಲಗಳಿಲ್ಲದ ಮತ್ತು ಪಕ್ಷಿಗಳಿಗೆ ಆಶ್ರಯವನ್ನು ನೀಡಲಾರದ ಈ ವೃಕ್ಷವನ್ನು ನೀನು ಇನ್ನೂ ಏಕೆ ಸೇವಿಸುತ್ತಿದ್ದೀಯೆ?

13005017a ಅನ್ಯೇಽಪಿ ಬಹವೋ ವೃಕ್ಷಾಃ ಪತ್ರಸಂಚನ್ನಕೋಟರಾಃ|

13005017c ಶುಭಾಃ ಪರ್ಯಾಪ್ತಸಂಚಾರಾ ವಿದ್ಯಂತೇಽಸ್ಮಿನ್ಮಹಾವನೇ||

ಎಲೆ ಮತ್ತು ಕೊಟರೆಗಳಿಂದ ತುಂಬಿರುವ ಮತ್ತು ಸಂಚಾರಕ್ಕೂ ಪರ್ಯಾಪ್ತವಾಗಿರುವ ಇನ್ನೂ ಅನೇಕ ಶುಭ ಮರಗಳು ಈ ಮಹಾವನದಲ್ಲಿ ಇವೆ.

13005018a ಗತಾಯುಷಮಸಾಮರ್ಥ್ಯಂ ಕ್ಷೀಣಸಾರಂ ಹತಶ್ರಿಯಮ್|

13005018c ವಿಮೃಶ್ಯ ಪ್ರಜ್ಞಯಾ ಧೀರ ಜಹೀಮಂ ಹ್ಯಸ್ಥಿರಂ ದ್ರುಮಮ್||

ಧೀರ! ಆಯಸ್ಸನ್ನು ಕಳೆದುಕೊಂಡಿರುವ, ಸಾಮರ್ಥ್ಯವನ್ನೂ ಕಳೆದುಕೊಂಡಿರುವ, ಸಾರವು ಕ್ಷೀಣಿಸಿರುವ, ಶ್ರೀಯನ್ನೂ ಕಳೆದುಕೊಂಡಿರುವ ಇದರ ಕುರಿತು ಪ್ರಜ್ಞೆಯನ್ನು ಬಳಸಿ ವಿಮರ್ಶಿಸಿ ಅಸ್ಥಿರವಾಗಿರುವ ಈ ಮರವನ್ನು ತೊರೆ!”

13005019a ತದುಪಶ್ರುತ್ಯ ಧರ್ಮಾತ್ಮಾ ಶುಕಃ ಶಕ್ರೇಣ ಭಾಷಿತಮ್|

13005019c ಸುದೀರ್ಘಮಭಿನಿಃಶ್ವಸ್ಯ ದೀನೋ ವಾಕ್ಯಮುವಾಚ ಹ||

ಶಕ್ರನಾಡಿದ ಆ ಮಾತನ್ನು ಕೇಳಿ ಧರ್ಮಾತ್ಮ ಗಿಳಿಯು ದೀರ್ಘ ನಿಟ್ಟುಸಿರನ್ನು ಬಿಡುತ್ತಾ ದೀನನಾಗಿ ಈ ಮಾತನ್ನಾಡಿತು:

13005020a ಅನತಿಕ್ರಮಣೀಯಾನಿ ದೈವತಾನಿ ಶಚೀಪತೇ|

13005020c ಯತ್ರಾಭವಸ್ತತ್ರ ಭವಸ್ತನ್ನಿಬೋಧ ಸುರಾಧಿಪ||

“ಶಚೀಪತೇ! ಸುರಾಧಿಪ! ದೇವತೆಗಳನ್ನು ಮೀರಿ ನಡೆಯಬಾರದು. ಈ ವಿಷಯದಲ್ಲಿ ನಾನು ಹೇಳುವುದನ್ನು ನೀನು ಕೇಳು.

13005021a ಅಸ್ಮಿನ್ನಹಂ ದ್ರುಮೇ ಜಾತಃ ಸಾಧುಭಿಶ್ಚ ಗುಣೈರ್ಯುತಃ|

13005021c ಬಾಲಭಾವೇ ಚ ಸಂಗುಪ್ತಃ ಶತ್ರುಭಿಶ್ಚ ನ ಧರ್ಷಿತಃ||

ನಾನು ಈ ಮರದಲ್ಲಿಯೇ ಹುಟ್ಟಿದೆ. ಸಾಧು ಗುಣಗಳಿಂದ ಯುಕ್ತನಾಗಿ ಬೆಳೆದೆ. ಈ ಮರವು ನನ್ನನ್ನು ತಂದೆಯು ಬಾಲಕನನ್ನು ಹೇಗೋ ಹಾಗೆ ರಕ್ಷಿಸಿಕೊಂಡು ಬಂದಿದೆ. ಇಲ್ಲಿ ನನಗೆ ಶತ್ರುಗಳ ಪೀಡೆಯೂ ಆಗಲಿಲ್ಲ.

13005022a ಕಿಮನುಕ್ರೋಶವೈಫಲ್ಯಮುತ್ಪಾದಯಸಿ ಮೇಽನಘ|

13005022c ಆನೃಶಂಸ್ಯೇಽನುರಕ್ತಸ್ಯ ಭಕ್ತಸ್ಯಾನುಗತಸ್ಯ ಚ||

ಅನಘ! ದೀನಭಾವದಿಂದ ಮತ್ತು ಈ ವೃಕ್ಷದ ಕುರಿತಾದ ಭಕ್ತಿ ಭಾವದಿಂದಾಗಿ ಇದನ್ನು ತೊರೆಯದೇ ಇರುವ ನನ್ನ ಈ ಅನುಕ್ರೋಶವನ್ನು ವಿಫಲಗೊಳಿಸಲು ಏಕೆ ಪ್ರಯತ್ನಿಸುತ್ತಿರುವೆ?

13005023a ಅನುಕ್ರೋಶೋ ಹಿ ಸಾಧೂನಾಂ ಸುಮಹದ್ಧರ್ಮಲಕ್ಷಣಮ್|

13005023c ಅನುಕ್ರೋಶಶ್ಚ ಸಾಧೂನಾಂ ಸದಾ ಪ್ರೀತಿಂ ಪ್ರಯಚ್ಚತಿ||

ಅನುಕ್ರೋಶವೇ ಸಾಧುಗಳ ಮಹಾ ಧರ್ಮಲಕ್ಷಣವಾಗಿದೆ. ಅನುಕ್ರೋಶವೇ ಸದಾ ಸಾಧುಗಳಿಗೆ ಸಂತಸವನ್ನುಂಟುಮಾಡುತ್ತದೆ.

13005024a ತ್ವಮೇವ ದೈವತೈಃ ಸರ್ವೈಃ ಪೃಚ್ಚ್ಯಸೇ ಧರ್ಮಸಂಶಯಾನ್|

13005024c ಅತಸ್ತ್ವಂ ದೇವ ದೇವಾನಾಮಾಧಿಪತ್ಯೇ ಪ್ರತಿಷ್ಠಿತಃ||

ಧರ್ಮಸಂಶಯಗಳುಂಟಾದಾಗ ದೇವತೆಗಳೆಲ್ಲರೂ ನಿನ್ನನ್ನೇ ಕೇಳುತ್ತಾರೆ. ಆದುದರಿಂದ ದೇವ! ನೀನು ದೇವತೆಗಳ ಅಧಿಪತಿಯಾಗಿ ಪ್ರತಿಷ್ಠಿತನಾಗಿರುವೆ.

13005025a ನಾರ್ಹಸಿ ತ್ವಂ ಸಹಸ್ರಾಕ್ಷ ತ್ಯಾಜಯಿತ್ವೇಹ ಭಕ್ತಿತಃ|

13005025c ಸಮರ್ಥಮುಪಜೀವ್ಯೇಮಂ ತ್ಯಜೇಯಂ ಕಥಮದ್ಯ ವೈ||

ಸಹಸ್ರಾಕ್ಷ! ನನ್ನ ಉಪಜೀವನವನ್ನು ಕೊಟ್ಟಿರುವ ಈ ಸಮರ್ಥ ವೃಕ್ಷದ ಮೇಲೆ ನನಗೆ ಭಕ್ತಿಯಿರುವಾಗ ಇದನ್ನು ತ್ಯಜಿಸು ಎಂದು ನೀನು ಹೇಗೆ ಹೇಳಬಲ್ಲೆ? ಇದು ಸರಿಯಲ್ಲ!”

13005026a ತಸ್ಯ ವಾಕ್ಯೇನ ಸೌಮ್ಯೇನ ಹರ್ಷಿತಃ ಪಾಕಶಾಸನಃ|

13005026c ಶುಕಂ ಪ್ರೋವಾಚ ಧರ್ಮಜ್ಞಮಾನೃಶಂಸ್ಯೇನ ತೋಷಿತಃ||

ಅವನ ಸೌಮ್ಯ ಮಾತಿನಿಂದ ಹರ್ಷಿತನಾದ ಪಾಕಶಾಸನನು ಅವನ ದಯಾಲುತನದಿಂದ ಸಂತುಷ್ಟನಾಗಿ ಗಿಳಿಗೆ ಹೇಳಿದನು.

13005027a ವರಂ ವೃಣೀಷ್ವೇತಿ ತದಾ ಸ ಚ ವವ್ರೇ ವರಂ ಶುಕಃ|

13005027c ಆನೃಶಂಸ್ಯಪರೋ ನಿತ್ಯಂ ತಸ್ಯ ವೃಕ್ಷಸ್ಯ ಸಂಭವಮ್||

“ವರವನ್ನು ಕೇಳಿಕೋ” ಎಂದು ಅವನು ಹೇಳಲು ಶುಕನು ನಿತ್ಯ ದಯಾಲುತನ ಮತ್ತು ಆ ವೃಕ್ಷದ ಪುನರ್ಜೀವನವನ್ನು ವರಗಳಾಗಿ ಕೇಳಿದನು.

13005028a ವಿದಿತ್ವಾ ಚ ದೃಢಾಂ ಶಕ್ರಸ್ತಾಂ ಶುಕೇ ಶೀಲಸಂಪದಮ್|

13005028c ಪ್ರೀತಃ ಕ್ಷಿಪ್ರಮಥೋ ವೃಕ್ಷಮಮೃತೇನಾವಸಿಕ್ತವಾನ್||

ಅವನ ದೃಢತೆಯನ್ನೂ ಶೀಲಸಂಪತ್ತನ್ನೂ ತಿಳಿದು ಗಿಳಿಯ ಮೇಲೆ ಪ್ರೀತನಾದ ಇಂದ್ರನು ಕೂಡಲೇ ಆ ವೃಕ್ಷವನ್ನು ಅಮೃತದಿಂದ ಸಿಂಪಡಿಸಿದನು.

13005029a ತತಃ ಫಲಾನಿ ಪತ್ರಾಣಿ ಶಾಖಾಶ್ಚಾಪಿ ಮನೋರಮಾಃ|

13005029c ಶುಕಸ್ಯ ದೃಢಭಕ್ತಿತ್ವಾಚ್ಚ್ರೀಮತ್ತ್ವಂ ಚಾಪ ಸ ದ್ರುಮಃ||

ಗಿಳಿಯ ದೃಢಭಕ್ತಿಯಿಂದಾಗಿ ಆ ಮರವು ಕೂಡಲೇ ಹಣ್ಣು, ಎಲೆ ಮತ್ತು ರೆಂಬೆಗಳಿಂದ ಕೂಡಿ ಮನೋರಮವಾಯಿತು.

13005030a ಶುಕಶ್ಚ ಕರ್ಮಣಾ ತೇನ ಆನೃಶಂಸ್ಯಕೃತೇನ ಹ|

13005030c ಆಯುಷೋಽಂತೇ ಮಹಾರಾಜ ಪ್ರಾಪ ಶಕ್ರಸಲೋಕತಾಮ್||

ಮಹಾರಾಜ! ಕರ್ಮ ಮತ್ತು ದಯೆಯನ್ನು ತೋರಿದುದರಿಂದ ಆ ಗಿಳಿಯು ಆಯುಷ್ಯದ ಅಂತ್ಯದಲ್ಲಿ ಶಕ್ರನ ಲೋಕವನ್ನು ಪಡೆದುಕೊಂಡನು.

13005031a ಏವಮೇವ ಮನುಷ್ಯೇಂದ್ರ ಭಕ್ತಿಮಂತಂ ಸಮಾಶ್ರಿತಃ|

13005031c ಸರ್ವಾರ್ಥಸಿದ್ಧಿಂ ಲಭತೇ ಶುಕಂ ಪ್ರಾಪ್ಯ ಯಥಾ ದ್ರುಮಃ||

ಮನುಷ್ಯೇಂದ್ರ! ಶುಕನಿಂದ ಆ ಮರವು ಹೇಗೋ ಹಾಗೆ ಭಕ್ತಿಮಂತರಿಗೆ ಆಶ್ರಯನೀಡುವುದರಿಂದ ಸರ್ವಾರ್ಥವೂ ಸಿದ್ಧಿಯಾಗುತ್ತದೆ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶುಕವಾಸವಸಂವಾದೇ ಪಂಚಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶುಕ್ರವಾಸವಸಂವಾದ ಎನ್ನುವ ಐದನೇ ಅಧ್ಯಾಯವು.

Related image

[1] ಗೋರಖಪುರ ಸಂಪುಟದಲ್ಲಿ ಈ ಶ್ಲೋಕಕ್ಕೆ ಮೊದಲು ಒಂದು ಶ್ಲೋಕವಿದೆ: ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್| ವಾಸವಸ್ಯ ಚ ಸಂವಾದಂ ಶುಕ್ರಸ್ಯ ಚ ಮಹಾತ್ಮನಃ||

Comments are closed.