Anushasana Parva: Chapter 7

ಅನುಶಾಸನ ಪರ್ವ: ದಾನಧರ್ಮ ಪರ್ವ

ಕರ್ಮಫಲವರ್ಣನ

ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಶುಭಕರ್ಮಗಳ ಫಲಗಳ ಕುರಿತು ಹೇಳಿದುದು (೧-೨೯).

13007001 ಯುಧಿಷ್ಠಿರ ಉವಾಚ|

13007001a ಕರ್ಮಣಾಂ ಮೇ ಸಮಸ್ತಾನಾಂ ಶುಭಾನಾಂ ಭರತರ್ಷಭ|

13007001c ಫಲಾನಿ ಮಹತಾಂ ಶ್ರೇಷ್ಠ ಪ್ರಬ್ರೂಹಿ ಪರಿಪೃಚ್ಚತಃ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಮಹಾತ್ಮರಲ್ಲಿ ಶ್ರೇಷ್ಠ! ಕೇಳುತ್ತಿರುವ ನನಗೆ ಶುಭ ಕರ್ಮಗಳ ಸಮಸ್ತ ಫಲಗಳ ಕುರಿತೂ ಹೇಳು.”

13007002 ಭೀಷ್ಮ ಉವಾಚ|

13007002a ರಹಸ್ಯಂ ಯದೃಷೀಣಾಂ ತು ತಚ್ಚೃಣುಷ್ವ ಯುಧಿಷ್ಠಿರ|

13007002c ಯಾ ಗತಿಃ ಪ್ರಾಪ್ಯತೇ ಯೇನ ಪ್ರೇತ್ಯಭಾವೇ ಚಿರೇಪ್ಸಿತಾ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಮರಣಾನಂತರ ಬಹಳ ಕಾಲದಿಂದಲೂ ಅಪೇಕ್ಷಿಸುವ ಯಾವ ಗತಿಯು ದೊರೆಯುತ್ತದೆ ಎನ್ನುವುದು ಋಷಿಗಳಿಗೂ ರಹಸ್ಯವಾದುದು. ಅದನ್ನು ಕೇಳು.

13007003a ಯೇನ ಯೇನ ಶರೀರೇಣ ಯದ್ಯತ್ಕರ್ಮ ಕರೋತಿ ಯಃ|

13007003c ತೇನ ತೇನ ಶರೀರೇಣ ತತ್ತತ್ಫಲಮುಪಾಶ್ನುತೇ||

ಯಾವ ಯಾವ ಶರೀರದಿಂದ ಯಾವ ಯಾವ ಕರ್ಮವನ್ನು ಮಾಡುತ್ತಾನೋ ಆಯಾ ಶರೀರಗಳಿಂದಲೇ ಅವುಗಳ ಫಲವನ್ನು ಅನುಭವಿಸಬೇಕಾಗುತ್ತದೆ.

13007004a ಯಸ್ಯಾಂ ಯಸ್ಯಾಮವಸ್ಥಾಯಾಂ ಯತ್ಕರೋತಿ ಶುಭಾಶುಭಮ್|

13007004c ತಸ್ಯಾಂ ತಸ್ಯಾಮವಸ್ಥಾಯಾಂ ಭುಂಕ್ತೇ ಜನ್ಮನಿ ಜನ್ಮನಿ||

ಯಾವ ಯಾವ ಅವಸ್ಥೆಯಲ್ಲಿ[1] ಯಾವ ಯಾವ ಶುಭಾಶುಭ ಕರ್ಮಗಳನ್ನು ಮಾಡುತ್ತೇವೆಯೋ ಆಯಾ ಅವಸ್ಥೆಯಲ್ಲಿಯೇ ಜನ್ಮ ಜನ್ಮಾಂತರಗಳಲ್ಲಿ ಅವುಗಳ ಫಲವನ್ನು ಅನುಭವಿಸುತ್ತೇವೆ.

13007005a ನ ನಶ್ಯತಿ ಕೃತಂ ಕರ್ಮ ಸದಾ ಪಂಚೇಂದ್ರಿಯೈರಿಹ|

13007005c ತೇ ಹ್ಯಸ್ಯ ಸಾಕ್ಷಿಣೋ ನಿತ್ಯಂ ಷಷ್ಠ ಆತ್ಮಾ ತಥೈವ ಚ||

ಪಂಚೇಂದ್ರಿಯಗಳಿಂದ ಮಾಡಿದ ಕರ್ಮವು ಎಂದೂ ನಾಶವಾಗುವುದಿಲ್ಲ. ಐದು ಇಂದ್ರಿಯಗಳು ಮತ್ತು ಆರನೆಯದಾಗಿ ಆತ್ಮ – ಇವು ಕರ್ಮಗಳ ನಿತ್ಯ ಸಾಕ್ಷಿಗಳಾಗಿರುತ್ತವೆ.

13007006a ಚಕ್ಷುರ್ದದ್ಯಾನ್ಮನೋ ದದ್ಯಾದ್ವಾಚಂ ದದ್ಯಾಚ್ಚ ಸೂನೃತಾಮ್|

13007006c ಅನುವ್ರಜೇದುಪಾಸೀತ ಸ ಯಜ್ಞಃ ಪಂಚದಕ್ಷಿಣಃ||

ಮನೆಗೆ ಬಂದ ಅತಿಥಿಯನ್ನು ಪ್ರಸನ್ನ ದೃಷ್ಟಿಯಿಂದ ನೋಡುವುದು, ಮನಃಪೂರ್ವಕವಾಗಿ ಸೇವೆ ಸಲ್ಲಿಸುವುದು, ಸುಮಧುರ ಮಾತನ್ನಾಡುವುದು, ಮನೆಯಲ್ಲಿ ಇರುವವರೆಗೆ ಸೇವಾನಿರತನಾಗಿರುವುದು, ಮತ್ತು ಹಿಂದಿರುಗುವಾಗ ಅವನನ್ನೇ ಅನುಸರಿಸಿ ಸ್ವಲ್ಪದೂರದವರೆಗೆ ಹೋಗುವುದು – ಈ ಐದು ಕರ್ಮಗಳೂ ಗೃಹಸ್ಥನಾದವನಿಗೆ ಪಂಚದಕ್ಷಿಣ ಯುಕ್ತವಾದ ಯಜ್ಞದಂತೆ.

13007007a ಯೋ ದದ್ಯಾದಪರಿಕ್ಲಿಷ್ಟಮನ್ನಮಧ್ವನಿ ವರ್ತತೇ|

13007007c ಶ್ರಾಂತಾಯಾದೃಷ್ಟಪೂರ್ವಾಯ ತಸ್ಯ ಪುಣ್ಯಫಲಂ ಮಹತ್||

ಹಿಂದೆಂದೂ ನೋಡಿರದ ಅಪರಿಚಿತ ಬಳಲಿದವನಿಗೆ ಮನಸ್ಸಿಗೆ ನೋವಾಗದ ರೀತಿಯಲ್ಲಿ ಸುಲಭವಾಗಿ ತಿನ್ನಬಹುದಾದ ಆಹಾರವನ್ನು ನೀಡುವವನಿಗೆ ಮಹಾ ಪುಣ್ಯಫಲವು ದೊರೆಯುತ್ತದೆ.

13007008a ಸ್ಥಂಡಿಲೇ ಶಯಮಾನಾನಾಂ ಗೃಹಾಣಿ ಶಯನಾನಿ ಚ|

13007008c ಚೀರವಲ್ಕಲಸಂವೀತೇ ವಾಸಾಂಸ್ಯಾಭರಣಾನಿ ಚ||

ನೆಲದ ಮೇಲೆ ಮಲಗುವವನಿಗೆ ಮನೆ-ಶಯನಗಳೂ, ಚೀರವಲ್ಕಲವನ್ನು ಧರಿಸುವವನಿಗೆ ವಸ್ತ್ರ-ಆಭರಣಗಳೂ ದೊರೆಯುತ್ತವೆ.

13007009a ವಾಹನಾಸನಯಾನಾನಿ ಯೋಗಾತ್ಮನಿ ತಪೋಧನೇ|

13007009c ಅಗ್ನೀನುಪಶಯಾನಸ್ಯ ರಾಜಪೌರುಷಮುಚ್ಯತೇ||

ಯೋಗಾತ್ಮನಾದ ತಪೋಧನನಿಗೆ ವಾಹನ-ಆಸನ-ಯಾನಗಳೂ, ಅಗ್ನಿಯನ್ನು ಉಪಾಸನೆ ಮಾಡುವ ರಾಜನಿಗೆ ಪೌರುಷವೂ ದೊರೆಯುತ್ತದೆಯೆಂದು ಹೇಳುತ್ತಾರೆ.

13007010a ರಸಾನಾಂ ಪ್ರತಿಸಂಹಾರೇ ಸೌಭಾಗ್ಯಮನುಗಚ್ಚತಿ|

13007010c ಆಮಿಷಪ್ರತಿಸಂಹಾರೇ ಪಶೂನ್ಪುತ್ರಾಂಶ್ಚ ವಿಂದತಿ||

ಮದ್ಯ ಮೊದಲಾದ ರಸಗಳನ್ನು ತೊರೆಯುವುದರಿಂದ ಸೌಭಾಗ್ಯವು ದೊರೆಯುತ್ತದೆ. ಮಾಂಸವನ್ನು ತೊರೆಯುವುದರಿಂದ ಪಶು-ಪುತ್ರರು ದೊರೆಯುತ್ತಾರೆ.

13007011a ಅವಾಕ್ಶಿರಾಸ್ತು ಯೋ ಲಂಬೇದುದವಾಸಂ ಚ ಯೋ ವಸೇತ್|

13007011c ಸತತಂ ಚೈಕಶಾಯೀ ಯಃ ಸ ಲಭೇತೇಪ್ಸಿತಾಂ ಗತಿಮ್||

ತಲೆಕೆಳಮಾಡಿ ತಪಸ್ಸನ್ನಾಚರಿಸುವ, ನೀರಿನಲ್ಲಿ ನಿಂತು ತಪಸ್ಸನ್ನಾಚರಿಸುವ ಮತ್ತು ಸತತವೂ ಏಕಾಂಗಿಯಾಗಿ ಮಲಗಿ ತಪಸ್ಸನ್ನಾಚರಿಸುವವನಿಗೆ ಬಯಸಿದ ಗತಿಯು ದೊರೆಯುತ್ತದೆ.

13007012a ಪಾದ್ಯಮಾಸನಮೇವಾಥ ದೀಪಮನ್ನಂ ಪ್ರತಿಶ್ರಯಮ್|

13007012c ದದ್ಯಾದತಿಥಿಪೂಜಾರ್ಥಂ ಸ ಯಜ್ಞಃ ಪಂಚದಕ್ಷಿಣಃ||

ಪಾದ್ಯ, ಆಸನ, ದೀಪ, ಅನ್ನ ಮತ್ತು ಉಳಿಯಲು ಸ್ಥಳ - ಇವುಗಳನ್ನು ಅತಿಥಿಪೂಜೆಯಲ್ಲಿ ನೀಡುವುದು ಪಂಚದಕ್ಷಿಣೆಗಳ ಯಜ್ಞಕ್ಕೆ ಸಮಾನ.

13007013a ವೀರಾಸನಂ ವೀರಶಯ್ಯಾಂ ವೀರಸ್ಥಾನಮುಪಾಸತಃ|

13007013c ಅಕ್ಷಯಾಸ್ತಸ್ಯ ವೈ ಲೋಕಾಃ ಸರ್ವಕಾಮಗಮಾಸ್ತಥಾ||

ವೀರಾಸನ, ವೀರಶಯನ ಮತ್ತು ವೀರಸ್ಥಾನಗಳಿಗೆ ಹೋಗುವವರಿಗೆ ಸರ್ವಕಾಮಗಳನ್ನೂ ಪಡೆಯುವ ಅಕ್ಷಯ ಲೋಕಗಳು ದೊರೆಯುತ್ತವೆ.

13007014a ಧನಂ ಲಭೇತ ದಾನೇನ ಮೌನೇನಾಜ್ಞಾಂ ವಿಶಾಂ ಪತೇ|

13007014c ಉಪಭೋಗಾಂಶ್ಚ ತಪಸಾ ಬ್ರಹ್ಮಚರ್ಯೇಣ ಜೀವಿತಮ್||

ವಿಶಾಂಪತೇ! ದಾನಮಾಡುವುದರಿಂದ ಧನವನ್ನೂ, ಮೌನಿಯಾಗಿರುವುದರಿಂದ ಇತರರಿಗೆ ಆಜ್ಞೆಯನ್ನು ನೀಡುವ ಅವಕಾಶವನ್ನೂ, ತಪಸ್ಸಿನಿಂದ ಉಪಭೋಗಗಳನ್ನೂ ಮತ್ತು ಬ್ರಹ್ಮಚರ್ಯದಿಂದ ಜೀವಿತವನ್ನೂ ಪಡೆದುಕೊಳ್ಳಬಹುದು.

13007015a ರೂಪಮೈಶ್ವರ್ಯಮಾರೋಗ್ಯಮಹಿಂಸಾಫಲಮಶ್ನುತೇ|

13007015c ಫಲಮೂಲಾಶಿನಾಂ ರಾಜ್ಯಂ ಸ್ವರ್ಗಃ ಪರ್ಣಾಶಿನಾಂ ತಥಾ||

ಅಹಿಂಸಾಧರ್ಮದಿಂದ ರೂಪ, ಐಶ್ವರ್ಯ, ಮತ್ತು ಆರೋಗ್ಯಗಳು ಫಲವಾಗಿ ದೊರೆಯುತ್ತವೆ. ಫಲ-ಮೂಲಗಳನ್ನು ತಿನ್ನುವವರಿಗೆ ರಾಜ್ಯವೂ ಎಲೆಗಳನ್ನು ಮಾತ್ರ ತಿನ್ನುವವರಿಗೆ ಸ್ವರ್ಗವೂ ದೊರೆಯುತ್ತವೆ.

13007016a ಪ್ರಾಯೋಪವೇಶನಾದ್ರಾಜನ್ ಸರ್ವತ್ರ ಸುಖಮುಚ್ಯತೇ|

13007016c ಸ್ವರ್ಗಂ ಸತ್ಯೇನ ಲಭತೇ ದೀಕ್ಷಯಾ ಕುಲಮುತ್ತಮಮ್||

ರಾಜನ್! ಪ್ರಾಯೋಪವೇಶವನ್ನು ಮಾಡುವುದರಿಂದ ಸರ್ವತ್ರ ಸುಖವು ದೊರೆಯುತ್ತದೆ. ಸತ್ಯದಿಂದ ಸ್ವರ್ಗವೂ ಮತ್ತು ವ್ರತಧಾರಣೆಯಿಂದ ಉತ್ತಮ ಕುಲವೂ ದೊರೆಯುತ್ತವೆ.

13007017a ಗವಾಢ್ಯಃ ಶಾಕದೀಕ್ಷಾಯಾಂ ಸ್ವರ್ಗಗಾಮೀ ತೃಣಾಶನಃ|

13007017c ಸ್ತ್ರಿಯಸ್ತ್ರಿಷವಣಂ ಸ್ನಾತ್ವಾ ವಾಯುಂ ಪೀತ್ವಾ ಕ್ರತುಂ ಲಭೇತ್||

ಶಾಕಾಹಾರಿಯಾದನು ಗೋಸಮೃದ್ಧಿಯನ್ನು ಹೊಂದುತ್ತಾನೆ. ಹುಲ್ಲನ್ನೇ ತಿನ್ನುವವನು ಸ್ವರ್ಗಕ್ಕೆ ಹೋಗುತ್ತಾನೆ. ದಿನದ ಮೂರು ಕಾಲಗಳಲ್ಲಿ ಸ್ನಾನಮಾಡುವವನು ಸ್ತ್ರೀಸೌಖ್ಯವನ್ನು ಪಡೆಯುತ್ತಾನೆ. ವಾಯುಭಕ್ಷಕನಾಗಿರುವವನಿಗೆ ಯಜ್ಞದ ಫಲವು ದೊರೆಯುತ್ತದೆ.

13007018a ಸಲಿಲಾಶೀ ಭವೇದ್ಯಶ್ಚ ಸದಾಗ್ನಿಃ ಸಂಸ್ಕೃತೋ ದ್ವಿಜಃ|

13007018c ಮರುಂ ಸಾಧಯತೋ ರಾಜ್ಯಂ ನಾಕಪೃಷ್ಠಮನಾಶಕೇ||

ನೀರನ್ನೇ ಸೇವಿಸುವವನು ಸದಾ ಅಗ್ನಿಯನ್ನು ಪೂಜಿಸುವ ಉತ್ತಮ ದ್ವಿಜನಾಗುತ್ತಾನೆ. ಮಂತ್ರಸಾಧಕನು ರಾಜ್ಯವನ್ನು ಪಡೆದುಕೊಳ್ಳುತ್ತಾನೆ. ನಿರಾಹಾರಿಯಾದವನು ಸ್ವರ್ಗವನ್ನು ಹೊಂದುತ್ತಾನೆ.

13007019a ಉಪವಾಸಂ ಚ ದೀಕ್ಷಾಂ ಚ ಅಭಿಷೇಕಂ ಚ ಪಾರ್ಥಿವ|

13007019c ಕೃತ್ವಾ ದ್ವಾದಶವರ್ಷಾಣಿ ವೀರಸ್ಥಾನಾದ್ವಿಶಿಷ್ಯತೇ||

ಪಾರ್ಥಿವ! ಹನ್ನೆರಡು ವರ್ಷಗಳ ಉಪವಾಸ ದೀಕ್ಷೆಯನ್ನು ಕೈಗೊಂಡು ತೀರ್ಥಗಳಲ್ಲಿ ಮೀಯುವವನಿಗೆ ವೀರರ ಸ್ಥಾನವು ದೊರೆಯುತ್ತದೆ.

13007020a ಅಧೀತ್ಯ ಸರ್ವವೇದಾನ್ವೈ ಸದ್ಯೋ ದುಃಖಾತ್ಪ್ರಮುಚ್ಯತೇ|

13007020c ಮಾನಸಂ ಹಿ ಚರನ್ಧರ್ಮಂ ಸ್ವರ್ಗಲೋಕಮವಾಪ್ನುಯಾತ್||

ಸರ್ವವೇದಗಳನ್ನು ಅಧ್ಯಯನಮಾಡಿದವನು ಸದ್ಯದ ದುಃಖಗಳಿಂದ ಮುಕ್ತನಾಗುತ್ತಾನೆ. ಮಾನಸಧರ್ಮವನ್ನು ಪಾಲಿಸಿದವನು ಸ್ವರ್ಗಲೋಕವನ್ನು ಪಡೆದುಕೊಳ್ಳುತ್ತಾನೆ.

13007021a ಯಾ ದುಸ್ತ್ಯಜಾ ದುರ್ಮತಿಭಿರ್ಯಾ ನ ಜೀರ್ಯತಿ ಜೀರ್ಯತಃ|

13007021c ಯೋಽಸೌ ಪ್ರಾಣಾಂತಿಕೋ ರೋಗಸ್ತಾಂ ತೃಷ್ಣಾಂ ತ್ಯಜತಃ ಸುಖಮ್||

ದುಷ್ಟಬುದ್ಧಿಯವರಿಂದ ತ್ಯಜಿಸಲು ಸಾಧ್ಯವಾಗಿರದ, ಮುದುಕನಾದರೂ ಜೀರ್ಣವಾಗದೇ ಇರುವ, ಪ್ರಾಣಾಂತಿಕ ರೋಗರೂಪವಾಗಿರುವ ತೃಷ್ಣೆಯನ್ನು ತ್ಯಜಿಸಿದವನು ಸುಖಿಯಾಗುತ್ತಾನೆ.

13007022a ಯಥಾ ಧೇನುಸಹಸ್ರೇಷು ವತ್ಸೋ ವಿಂದತಿ ಮಾತರಮ್|

13007022c ಏವಂ ಪೂರ್ವಕೃತಂ ಕರ್ಮ ಕರ್ತಾರಮನುಗಚ್ಚತಿ||

ಸಾವಿರ ಹಸುಗಳ ಮಧ್ಯದಲ್ಲಿಯೂ ಕರುವು ಹೇಗೆ ತನ್ನ ತಾಯಿಯನ್ನೇ ಹೋಗಿ ಸೇರುವುದೋ ಹಾಗೆ ಹಿಂದೆ ಮಾಡಿದ ಕರ್ಮಫಲವು ತನ್ನ ಕರ್ತೃವನ್ನೇ ಅನುಸರಿಸಿ ಬರುತ್ತದೆ.

13007023a ಅಚೋದ್ಯಮಾನಾನಿ ಯಥಾ ಪುಷ್ಪಾಣಿ ಚ ಫಲಾನಿ ಚ|

13007023c ಸ್ವಕಾಲಂ ನಾತಿವರ್ತಂತೇ ತಥಾ ಕರ್ಮ ಪುರಾಕೃತಮ್||

ಪುಷ್ಪ-ಫಲಗಳಂತೆ ಹಿಂದೆ ಮಾಡಿದ ಕರ್ಮಗಳು ಯಾರ ಪ್ರೇರಣೆಯೂ ಇಲ್ಲದೇ, ತನ್ನ ಕಾಲವನ್ನು ಅತಿಕ್ರಮಿಸದೇ, ಸರಿಯಾದ ಸಮಯದಲ್ಲಿ ಕಾಣಿಸಿಕೊಳ್ಳುತ್ತವೆ.

13007024a ಜೀರ್ಯಂತಿ ಜೀರ್ಯತಃ ಕೇಶಾ ದಂತಾ ಜೀರ್ಯಂತಿ ಜೀರ್ಯತಃ|

13007024c ಚಕ್ಷುಃಶ್ರೋತ್ರೇ ಚ ಜೀರ್ಯೇತೇ ತೃಷ್ಣೈಕಾ ತು ನ ಜೀರ್ಯತೇ||

ಮನುಷ್ಯನು ವೃದ್ಧನಾದಂತೆ ಕೂದಲು ನೆರೆಯುತ್ತದೆ. ಹಲ್ಲುಗಳು ಜೀರ್ಣವಾಗುತ್ತವೆ. ಕಣ್ಣು-ಕಿವಿಗಳು ಜೀರ್ಣವಾಗುತ್ತವೆ. ಆದರೆ ತೃಷ್ಣೆಯು ಮಾತ್ರ ಜೀರ್ಣವಾಗುವುದಿಲ್ಲ.

13007025a ಯೇನ ಪ್ರೀಣಾತಿ ಪಿತರಂ ತೇನ ಪ್ರೀತಃ ಪ್ರಜಾಪತಿಃ|

13007025c ಪ್ರೀಣಾತಿ ಮಾತರಂ ಯೇನ ಪೃಥಿವೀ ತೇನ ಪೂಜಿತಾ|

13007025e ಯೇನ ಪ್ರೀಣಾತ್ಯುಪಾಧ್ಯಾಯಂ ತೇನ ಸ್ಯಾದ್ಬ್ರಹ್ಮ ಪೂಜಿತಮ್||

ತಂದೆಯನ್ನು ಪ್ರೀತಿಸುವವನು ಪ್ರಜಾಪತಿಗೆ ಪ್ರೀತನಾಗುತ್ತಾನೆ. ತಾಯಿಯನ್ನು ಪ್ರೀತಿಸುವವನು ಭೂಮಿಗೆ ಪ್ರೀತನಾಗುತ್ತಾನೆ. ಉಪಾಧ್ಯಾಯನನ್ನು ಪ್ರೀತಿಸುವವನು ಬ್ರಹ್ಮನಿಂದ ಪೂಜಿತನಾಗುತ್ತಾನೆ.

13007026a ಸರ್ವೇ ತಸ್ಯಾದೃತಾ ಧರ್ಮಾ ಯಸ್ಯೈತೇ ತ್ರಯ ಆದೃತಾಃ|

13007026c ಅನಾದೃತಾಸ್ತು ಯಸ್ಯೈತೇ ಸರ್ವಾಸ್ತಸ್ಯಾಫಲಾಃ ಕ್ರಿಯಾಃ||

ಈ ಮೂವರನ್ನೂ ಸದಾ ಆದರಿಸುವ ಮತ್ತು ಶುಶ್ರೂಷಾದಿಗಳಿಂದ ಪ್ರಸನ್ನ ಗೊಳಿಸುವವನು ಎಲ್ಲ ಧರ್ಮಗಳನ್ನೂ ಅನುಸರಿಸಿದಂತೆ. ಈ ಮೂವರನ್ನೂ ಅನಾದರಿಸುವವನ ಸಮಸ್ತ ಕ್ರಿಯೆಗಳೂ ಅಸಫಲವಾಗುತ್ತವೆ.””

13007027 ವೈಶಂಪಾಯನ ಉವಾಚ|

13007027a ಭೀಷ್ಮಸ್ಯ ತದ್ವಚಃ ಶ್ರುತ್ವಾ ವಿಸ್ಮಿತಾಃ ಕುರುಪುಂಗವಾಃ|

13007027c ಆಸನ್ಪ್ರಹೃಷ್ಟಮನಸಃ ಪ್ರೀತಿಮಂತೋಽಭವಂಸ್ತದಾ||

ವೈಶಂಪಾಯನನು ಹೇಳಿದನು: “ಭೀಷ್ಮನ ಆ ಮಾತನ್ನು ಕೇಳಿ ಕುರುಪುಂಗವರು ವಿಸ್ಮಿತರಾದರು. ಅವರು ಹೃಷ್ಟಮನಸ್ಕರೂ ಪ್ರೀತಿಮಂತರೂ ಆದರು.

13007028a ಯನ್ಮಂತ್ರೇ ಭವತಿ ವೃಥಾ ಪ್ರಯುಜ್ಯಮಾನೇ

ಯತ್ಸೋಮೇ ಭವತಿ ವೃಥಾಭಿಷೂಯಮಾಣೇ|

13007028c ಯಚ್ಚಾಗ್ನೌ ಭವತಿ ವೃಥಾಭಿಹೂಯಮಾನೇ

ತತ್ಸರ್ವಂ ಭವತಿ ವೃಥಾಭಿಧೀಯಮಾನೇ||

[2]“ವೃಥಾ ಮಂತ್ರಗಳನ್ನು ಪಠಿಸುವುದರಿಂದ ದೊರೆಯುವ ಪಾಪ, ವೃಥಾ ಸೋಮವನ್ನು ಹಿಂಡುವುದರಿಂದ ದೊರೆಯುವ ಪಾಪ ಮತ್ತು ಅಗ್ನಿಯಲ್ಲಿ ವೃಥಾ ಹೋಮಮಾಡುವುದರಿಂದ ಬರುವ ಪಾಪ ಇವೆಲ್ಲ ಪಾಪಗಳೂ ವೃಥಾ ಆಲಾಪಮಾಡುವವನಿಗೆ ದೊರೆಯುತ್ತವೆ.

13007029a ಇತ್ಯೇತದೃಷಿಣಾ ಪ್ರೋಕ್ತಮುಕ್ತವಾನಸ್ಮಿ ಯದ್ವಿಭೋ|

13007029c ಶುಭಾಶುಭಫಲಪ್ರಾಪ್ತೌ ಕಿಮತಃ ಶ್ರೋತುಮಿಚ್ಚಸಿ||

ವಿಭೋ! ಋಷಿಗಳು ಹೇಳಿರುವ ಶುಭಾಶುಭಫಲಗಳ ಪ್ರಾಪ್ತಿಯನ್ನು ಹೇಳಿದ್ದಾಯಿತು. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಕರ್ಮಫಲಿಕೋಪಾಖ್ಯಾನೇ ಸಪ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಕರ್ಮಫಲಿಕೋಪಾಖ್ಯಾನ ಎನ್ನುವ ಏಳನೇ ಅಧ್ಯಾಯವು.

Related image

[1] ಬಾಲ್ಯ, ಯೌವನ, ವಾರ್ಧಕ್ಯಾದಿ ಅವಸ್ಥೆಗಳು.

[2] ಇದು ಭೀಷ್ಮನು ಹೇಳಿದ ಮಾತು.

Comments are closed.