Anushasana Parva: Chapter 57

ಅನುಶಾಸನ ಪರ್ವ: ದಾನಧರ್ಮ ಪರ್ವ

೫೭

ವಿವಿಧ ತಪ-ನಿಯಮಗಳ ಫಲಗಳು (೧-೪೪).

13057001 ಯುಧಿಷ್ಠಿರ ಉವಾಚ|

13057001a ಮುಹ್ಯಾಮೀವ ನಿಶಮ್ಯಾದ್ಯ ಚಿಂತಯಾನಃ ಪುನಃ ಪುನಃ|

13057001c ಹೀನಾಂ ಪಾರ್ಥಿವಸಂಘಾತೈಃ ಶ್ರೀಮದ್ಭಿಃ ಪೃಥಿವೀಮಿಮಾಮ್||

ಯುಧಿಷ್ಠಿರನು ಹೇಳಿದನು: “ಈ ಪೃಥ್ವಿಯು ಆ ಸಂಪತ್ತಿಶಾಲೀ ಪಾರ್ಥಿವ ಸಂಘಗಳಿಂದ ಹೀನವಾಗಿರುವುದನ್ನು ನೋಡಿ ಪುನಃ ಪುನಃ ಚಿಂತಿಸುತ್ತಾ ಮೂರ್ಛಿತನಾಗುತ್ತಿದ್ದೇನೆ.

13057002a ಪ್ರಾಪ್ಯ ರಾಜ್ಯಾನಿ ಶತಶೋ ಮಹೀಂ ಜಿತ್ವಾಪಿ ಭಾರತ|

13057002c ಕೋಟಿಶಃ ಪುರುಷಾನ್ ಹತ್ವಾ ಪರಿತಪ್ಯೇ ಪಿತಾಮಹ||

ಭಾರತ! ಪಿತಾಮಹ! ಮಹಿಯನ್ನು ಗೆದ್ದು ನೂರಾರು ರಾಜ್ಯಗಳನ್ನು ಪಡೆದುಕೊಂಡರೂ ಅದಕ್ಕಾಗಿ ಕೋಟಿಗಟ್ಟಲೆ ಪುರುಷರನನ್ನು ಸಂಹರಿಸಬೇಕಾಯಿತಲ್ಲಾ ಎಂದು ಪರಿತಪಿಸುತ್ತೇನೆ.

13057003a ಕಾ ನು ತಾಸಾಂ ವರಸ್ತ್ರೀಣಾಮವಸ್ಥಾದ್ಯ ಭವಿಷ್ಯತಿ|

13057003c ಯಾ ಹೀನಾಃ ಪತಿಭಿಃ ಪುತ್ರೈರ್ಮಾತುಲೈರ್ಭ್ರಾತೃಭಿಸ್ತಥಾ||

ಪತಿ, ಪುತ್ರರು, ಮಾವಂದಿರು ಮತ್ತು ಸಹೋದರರಿಂದ ಹೀನರಾದ ಆ ಶ್ರೇಷ್ಠ ಸ್ತ್ರೀಯರ ಅವಸ್ಥೆಯು ಇಂದು ಏನಾಗಿರಬಹುದು?

13057004a ವಯಂ ಹಿ ತಾನ್ಗುರೂನ್ ಹತ್ವಾ ಜ್ಞಾತೀಂಶ್ಚ ಸುಹೃದೋಽಪಿ ಚ|

13057004c ಅವಾಕ್ಶೀರ್ಷಾಃ ಪತಿಷ್ಯಾಮೋ ನರಕೇ ನಾತ್ರ ಸಂಶಯಃ||

ನಮ್ಮ ಕುಟುಂಬದವರನ್ನು, ಗುರುಗಳನ್ನು ಮತ್ತು ಸುಹೃದಯರನ್ನು ಕೊಂದು ನಾವು ತಲೆಕೆಳಗಾಗಿ ಇರಬೇಕಾದ ನರಕದಲ್ಲಿ ಬೀಳುತ್ತೇವೆ ಎನ್ನುವುದರಲ್ಲಿ ಸಂಶಯವಿಲ್ಲ.

13057005a ಶರೀರಂ ಯೋಕ್ತುಮಿಚ್ಚಾಮಿ ತಪಸೋಗ್ರೇಣ ಭಾರತ|

13057005c ಉಪದಿಷ್ಟಮಿಹೇಚ್ಚಾಮಿ ತತ್ತ್ವತೋಽಹಂ ವಿಶಾಂ ಪತೇ||

ಭಾರತ! ವಿಶಾಂಪತೇ! ನಾನು ಈ ಶರೀರವನ್ನು ಉಗ್ರತಪಸ್ಸಿನಲ್ಲಿ ತೊಡಗಿಸಬಯಸುತ್ತೇನೆ. ಈ ವಿಷಯದಲ್ಲಿ ನಿನ್ನ ತತ್ತ್ವತಃ ಉಪದೇಶವನ್ನು ಪಡೆಯಬಯಸುತ್ತೇನೆ.””

13057006 ವೈಶಂಪಾಯನ ಉವಾಚ|

13057006a ಯುಧಿಷ್ಠಿರಸ್ಯ ತದ್ವಾಕ್ಯಂ ಶ್ರುತ್ವಾ ಭೀಷ್ಮೋ ಮಹಾಮನಾಃ|

13057006c ಪರೀಕ್ಷ್ಯ ನಿಪುಣಂ ಬುದ್ಧ್ಯಾ ಯುಧಿಷ್ಠಿರಮಭಾಷತ||

ವೈಶಂಪಾಯನನು ಹೇಳಿದನು: “ಯುಧಿಷ್ಠಿರನ ಆ ಮಾತನ್ನು ಕೇಳಿ ಮಹಾಮನಸ್ವೀ ಭೀಷ್ಮನು ತನ್ನ ಬುದ್ಧಿಯಿಂದ ಅದರ ಕುರಿತು ಚೆನ್ನಾಗಿ ವಿಚಾರಿಸಿ ಯುಧಿಷ್ಠಿರನಿಗೆ ಹೇಳಿದನು:

13057007a ರಹಸ್ಯಮದ್ಭುತಂ ಚೈವ ಶೃಣು ವಕ್ಷ್ಯಾಮಿ ಯತ್ತ್ವಯಿ|

13057007c ಯಾ ಗತಿಃ ಪ್ರಾಪ್ಯತೇ ಯೇನ ಪ್ರೇತ್ಯಭಾವೇಷು ಭಾರತ||

“ಭಾರತ! ಮರಣಾನಂತರ ಯಾವ ಕರ್ಮಗಳಿಂದ ಯಾವ ಗತಿಗಳು ಪ್ರಾಪ್ತವಾಗುತ್ತವೆ ಎನ್ನುವು ಅದ್ಭುತ ರಹಸ್ಯವನ್ನು ಹೇಳುತ್ತೇನೆ. ಕೇಳು.

13057008a ತಪಸಾ ಪ್ರಾಪ್ಯತೇ ಸ್ವರ್ಗಸ್ತಪಸಾ ಪ್ರಾಪ್ಯತೇ ಯಶಃ|

13057008c ಆಯುಃಪ್ರಕರ್ಷೋ ಭೋಗಾಶ್ಚ ಲಭ್ಯಂತೇ ತಪಸಾ ವಿಭೋ||

ವಿಭೋ! ತಪಸ್ಸಿನಿಂದ ಸ್ವರ್ಗವು ಪ್ರಾಪ್ತವಾಗುತ್ತದೆ. ತಪಸ್ಸಿನಿಂದ ಯಶಸ್ಸು ಪ್ರಾಪ್ತವಾಗುತ್ತದೆ. ತಪಸ್ಸಿನಿಂದಲೇ ದೀರ್ಘಾಯಸ್ಸು, ಉತ್ತಮ ಸ್ಥಾನ ಮತ್ತು ಭೋಗಗಳು ಪ್ರಾಪ್ತವಾಗುತ್ತವೆ.

13057009a ಜ್ಞಾನಂ ವಿಜ್ಞಾನಮಾರೋಗ್ಯಂ ರೂಪಂ ಸಂಪತ್ತಥೈವ ಚ|

13057009c ಸೌಭಾಗ್ಯಂ ಚೈವ ತಪಸಾ ಪ್ರಾಪ್ಯತೇ ಭರತರ್ಷಭ||

ಭರತರ್ಷಭ! ತಪಸ್ಸಿನಿಂದ ಜ್ಞಾನ, ವಿಜ್ಞಾನ, ಆರೋಗ್ಯ, ರೂಪ, ಸಂಪತ್ತು, ಮತ್ತು ಸೌಭಾಗ್ಯಗಳು ಪ್ರಾಪ್ತವಾಗುತ್ತವೆ.

13057010a ಧನಂ ಪ್ರಾಪ್ನೋತಿ ತಪಸಾ ಮೌನಂ ಜ್ಞಾನಂ[1] ಪ್ರಯಚ್ಚತಿ|

13057010c ಉಪಭೋಗಾಂಸ್ತು ದಾನೇನ ಬ್ರಹ್ಮಚರ್ಯೇಣ ಜೀವಿತಮ್||

ತಪಸ್ಸಿನಿಂದ ಧನವನ್ನು ಪಡೆದುಕೊಳ್ಳುತ್ತಾನೆ. ಮೌನದಿಂದ ಜ್ಞಾನವನ್ನು ಪಡೆದುಕೊಳ್ಳುತ್ತಾನೆ. ದಾನದಿಂದ ಉಪಭೋಗಗಳು ಮತ್ತು ಬ್ರಹ್ಮಚರ್ಯದಿಂದ ದೀರ್ಘಾಯುವನ್ನು ಪಡೆದುಕೊಳ್ಳುತ್ತಾನೆ.

13057011a ಅಹಿಂಸಾಯಾಃ ಫಲಂ ರೂಪಂ ದೀಕ್ಷಾಯಾ ಜನ್ಮ ವೈ ಕುಲೇ|

13057011c ಫಲಮೂಲಾಶಿನಾಂ ರಾಜ್ಯಂ ಸ್ವರ್ಗಃ ಪರ್ಣಾಶಿನಾಂ ಭವೇತ್||

ಅಹಿಂಸೆಯ ಫಲ ರೂಪ ಮತ್ತು ದೀಕ್ಷೆಯ ಫಲವು ಉತ್ತಮ ಕುಲದಲ್ಲಿ ಜನ್ಮ. ಫಲ-ಮೂಲಗಳನ್ನು ಸೇವಿಸಿಕೊಂಡು ಜೀವಿಸಿರುವವರಿಗೆ ರಾಜ್ಯ ಮತ್ತು ಎಲೆಗಳನ್ನು ತಿಂದುಕೊಂಡು ಜೀವಿಸಿರುವವರಿಗೆ ಸ್ವರ್ಗವು ಫಲಗಳು.

13057012a ಪಯೋಭಕ್ಷೋ ದಿವಂ ಯಾತಿ ಸ್ನಾನೇನ[2] ದ್ರವಿಣಾಧಿಕಃ|

13057012c ಗುರುಶುಶ್ರೂಷಯಾ ವಿದ್ಯಾ ನಿತ್ಯಶ್ರಾದ್ಧೇನ ಸಂತತಿಃ||

ಹಾಲು ಕುಡಿದು ಜೀವಿಸಿರುವವರು ಸ್ವರ್ಗಕ್ಕೆ ಹೋಗುತ್ತಾರೆ, ಸ್ನಾನದಿಂದ ಅಧಿಕ ಧನವು ದೊರೆಯುತ್ತದೆ. ಗುರುಶುಶ್ರೂಷೆಯಿಂದ ವಿದ್ಯೆ ಮತ್ತು ನಿತ್ಯ ಶ್ರಾದ್ಧದಿಂದ ಸಂತತಿಯು ದೊರೆಯುತ್ತದೆ.

13057013a ಗವಾಢ್ಯಃ ಶಾಕದೀಕ್ಷಾಭಿಃ ಸ್ವರ್ಗಮಾಹುಸ್ತೃಣಾಶನಾತ್|

13057013c ಸ್ತ್ರಿಯಸ್ತ್ರಿಷವಣಸ್ನಾನಾದ್ವಾಯುಂ ಪೀತ್ವಾ ಕ್ರತುಂ ಲಭೇತ್||

ಕೇವಲ ತರಕಾರಿಯನ್ನು ತಿನ್ನುವ ದೀಕ್ಷೆಯುಳ್ಳವರು ಗೋಸಂಪತ್ತನ್ನು ಪಡೆಯುತ್ತಾರೆ. ಹುಲ್ಲನ್ನು ತಿಂದುಕೊಂಡಿರುವವರು ಸ್ವರ್ಗಕ್ಕೆ ಹೋಗುತ್ತಾರೆಂದು ಹೇಳುತ್ತಾರೆ. ಮೂರೂ ಹೊತ್ತುಗಳಲ್ಲಿ ಸ್ನಾನಮಾಡುವವರಿಗೆ ಅಧಿಕ ಸ್ತ್ರೀಯರು ದೊರೆಯುತ್ತಾರೆ. ಕೇವಲ ವಾಯುವನ್ನು ಸೇವಿಸಿ ಇರುವವರಿಗೆ ಕ್ರತುವಿನ ಫಲವು ಲಭಿಸುತ್ತದೆ.

13057014a ನಿತ್ಯಸ್ನಾಯೀ ಭವೇದ್ದಕ್ಷಃ ಸಂಧ್ಯೇ ತು ದ್ವೇ ಜಪನ್ದ್ವಿಜಃ|

13057014c ಮರುಂ ಸಾಧಯತೋ ರಾಜ್ಯಂ ನಾಕಪೃಷ್ಠಮನಾಶಕೇ||

ನಿತ್ಯವೂ ಸ್ನಾನಮಾಡಿ ಎರಡೂ ಸಮಯ ಸಂಧ್ಯೋಪಾಸನೆ-ಗಾಯತ್ರೀ ಜಪಗಳನ್ನು ಮಾಡುವವನು ದಕ್ಷನಾಗುತ್ತಾನೆ. ಮರುಭೂಮಿಯ ಸಾಧನೆ ಅಥವಾ ನೀರನ್ನು ಪರಿತ್ಯಜಿಸಿ ನಿರಾಹಾರನಾಗಿರುವವರಿಗೆ ಸ್ವರ್ಗಲೋಕವು ಪ್ರಾಪ್ತವಾಗುತ್ತದೆ.

13057015a ಸ್ಥಂಡಿಲೇ ಶಯಮಾನಾನಾಂ ಗೃಹಾಣಿ ಶಯನಾನಿ ಚ|

13057015c ಚೀರವಲ್ಕಲವಾಸೋಭಿರ್ವಾಸಾಂಸ್ಯಾಭರಣಾನಿ ಚ||

ಮಣ್ಣಿನ ವೇದಿಯ ಮೇಲೆ ಮಲಗುವವರಿಗೆ ಮನೆಗಳು-ಶಯನಾದಿಗಳು ದೊರೆಯುತ್ತವೆ. ಚೀರ-ವಲ್ಕಲಗಳನ್ನು ಧರಿಸಿದವರಿಗೆ ಉತ್ತಮ ವಸ್ತ್ರಾಭರಣಗಳು ದೊರೆಯುತ್ತವೆ.

13057016a ಶಯ್ಯಾಸನಾನಿ ಯಾನಾನಿ ಯೋಗಯುಕ್ತೇ ತಪೋಧನೇ|

13057016c ಅಗ್ನಿಪ್ರವೇಶೇ ನಿಯತಂ ಬ್ರಹ್ಮಲೋಕೋ ವಿಧೀಯತೇ||

ಯೋಗಯುಕ್ತ ತಪೋಧನನಿಗೆ ಶಯ್ಯೆ, ಆಸನ ಮತ್ತು ವಾಹನಗಳು ಪ್ರಾಪ್ತವಾಗುತ್ತವೆ. ನಿಯತನಾಗಿ ಅಗ್ನಿಪ್ರವೇಶಮಾಡಿದವನಿಗೆ ಬ್ರಹ್ಮಲೋಕದ ಸಮ್ಮಾನವು ಪ್ರಾಪ್ತವಾಗುತ್ತದೆ.

13057017a ರಸಾನಾಂ ಪ್ರತಿಸಂಹಾರಾತ್ಸೌಭಾಗ್ಯಮಿಹ ವಿಂದತಿ|

13057017c ಆಮಿಷಪ್ರತಿಸಂಹಾರಾತ್ಪ್ರಜಾಸ್ಯಾಯುಷ್ಮತೀ ಭವೇತ್||

ರಸಗಳನ್ನು ಪರಿತ್ಯಜಿಸಿದರೆ ಇಲ್ಲಿ ಸೌಭಾಗ್ಯವು ದೊರೆಯುತ್ತದೆ. ಮಾಂಸಭಕ್ಷಣವನ್ನು ಪರಿತ್ಯಜಿಸಿದರೆ ಆಯುಸ್ಸು ಮತ್ತು ಸಂತತಿಯು ದೊರೆಯುತ್ತದೆ.

13057018a ಉದವಾಸಂ ವಸೇದ್ಯಸ್ತು ಸ ನರಾಧಿಪತಿರ್ಭವೇತ್|

13057018c ಸತ್ಯವಾದೀ ನರಶ್ರೇಷ್ಠ ದೈವತೈಃ ಸಹ ಮೋದತೇ||

ನರಶ್ರೇಷ್ಠ! ನೀರಿನಲ್ಲಿ ವಾಸಿಸುವವನು ನರಾಧಿಪನಾಗುತ್ತಾನೆ. ಸತ್ಯವಾದಿಯು ದೇವತೆಗಳೊಂದಿಗೆ ಮೋದಿಸುತ್ತಾನೆ.

13057019a ಕೀರ್ತಿರ್ಭವತಿ ದಾನೇನ ತಥಾರೋಗ್ಯಮಹಿಂಸಯಾ|

13057019c ದ್ವಿಜಶುಶ್ರೂಷಯಾ ರಾಜ್ಯಂ ದ್ವಿಜತ್ವಂ ವಾಪಿ ಪುಷ್ಕಲಮ್||

ದಾನದಿಂದ ಕೀರ್ತಿಯುಂಟಾಗುತ್ತದೆ. ಅಹಿಂಸೆಯಿಂದ ಆರೋಗ್ಯವುಂಟಾಗುತ್ತದೆ. ದ್ವಿಜರ ಶುಶ್ರೂಷೆಯಿಂದ ರಾಜ್ಯ ಮತ್ತು ಹೇರಳ ದ್ವಿಜತ್ವವು ಪ್ರಾಪ್ತವಾಗುತ್ತವೆ.

13057020a ಪಾನೀಯಸ್ಯ ಪ್ರದಾನೇನ ಕೀರ್ತಿರ್ಭವತಿ ಶಾಶ್ವತೀ|

13057020c ಅನ್ನಪಾನಪ್ರದಾನೇನ ತೃಪ್ಯತೇ[3] ಕಾಮಭೋಗತಃ||

ಪಾನೀಯವನ್ನು ನೀಡುವುದರಿಂದ ಶಾಶ್ವತ ಕೀರ್ತಿಯುಂಟಾಗುತ್ತದೆ. ಅನ್ನ-ಪಾನಗಳನ್ನು ನೀಡುವುದರಿಂದ ಕಾಮಭೋಗಗಳ ತೃಪ್ತಿಯುಂಟಾಗುತ್ತದೆ.

13057021a ಸಾಂತ್ವದಃ ಸರ್ವಭೂತಾನಾಂ ಸರ್ವಶೋಕೈರ್ವಿಮುಚ್ಯತೇ|

13057021c ದೇವಶುಶ್ರೂಷಯಾ ರಾಜ್ಯಂ ದಿವ್ಯಂ ರೂಪಂ ನಿಯಚ್ಚತಿ||

ಸರ್ವಭೂತಗಳಿಗೆ ಸಾಂತ್ವನವನ್ನು ನೀಡುವವನು ಸರ್ವಶೋಕಗಳಿಂದ ಮುಕ್ತನಾಗುತ್ತಾನೆ. ದೇವತೆಗಳ ಸೇವೆಮಾಡುವುದರಿಂದ ರಾಜ್ಯ ಮತ್ತು ದಿವ್ಯರೂಪಗಳನ್ನು ಪಡೆದುಕೊಳ್ಳುತ್ತಾನೆ.

13057022a ದೀಪಾಲೋಕಪ್ರದಾನೇನ ಚಕ್ಷುಷ್ಮಾನ್ಭವತೇ ನರಃ|

13057022c ಪ್ರೇಕ್ಷಣೀಯಪ್ರದಾನೇನ ಸ್ಮೃತಿಂ ಮೇಧಾಂ ಚ ವಿಂದತಿ||

ದೀಪಗಳನ್ನು ದಾನಮಾಡುವುದರಿಂದ ನರನು ಉತ್ತಮ ದೃಷ್ಟಿಯುಳ್ಳವನಾಗುತ್ತಾನೆ. ಸುಂದರ ವಸ್ತುಗಳನ್ನು ದಾನಮಾಡುವುದರಿಂದ ಅವನ ಸ್ಮರಣಶಕ್ತಿ ಮತ್ತು ಬುದ್ಧಿಶಕ್ತಿಯು ಹೆಚ್ಚಾಗುತ್ತದೆ.

13057023a ಗಂಧಮಾಲ್ಯನಿವೃತ್ತ್ಯಾ ತು ಕೀರ್ತಿರ್ಭವತಿ ಪುಷ್ಕಲಾ|

13057023c ಕೇಶಶ್ಮಶ್ರೂನ್ಧಾರಯತಾಮಗ್ರ್ಯಾ ಭವತಿ ಸಂತತಿಃ||

ಗಂಧ-ಮಾಲೆಗಳನ್ನು ನೀಡುವುದರಿಂದ ಪುಷ್ಕಲ ಕೀರ್ತಿಯುಂಟಾಗುತ್ತದೆ. ತಲೆಗೂದಲು ಮತ್ತು ಗಡ್ಡ-ಮೀಸೆಗಳನ್ನು ಧರಿಸಿರುವವನಿಗೆ ಶ್ರೇಷ್ಠ ಸಂತತಿಯು ಪ್ರಾಪ್ತವಾಗುತ್ತದೆ.

13057024a ಉಪವಾಸಂ ಚ ದೀಕ್ಷಾಂ ಚ ಅಭಿಷೇಕಂ ಚ ಪಾರ್ಥಿವ|

13057024c ಕೃತ್ವಾ ದ್ವಾದಶ ವರ್ಷಾಣಿ ವೀರಸ್ಥಾನಾದ್ವಿಶಿಷ್ಯತೇ||

ಪಾರ್ಥಿವ! ಹನ್ನೆರಡು ವರ್ಷಗಳು ಉಪವಾಸ, ದೀಕ್ಷೆ ಮತ್ತು ಸ್ನಾನಗಳನ್ನು ಮಾಡಿದವನಿಗೆ ವೀರರಿಗೆ ದೊರಕುವ ಉತ್ತಮ ಸ್ಥಾನವು ದೊರೆಯುತ್ತದೆ.

13057025a ದಾಸೀದಾಸಮಲಂಕಾರಾನ್ ಕ್ಷೇತ್ರಾಣಿ ಚ ಗೃಹಾಣಿ ಚ|

13057025c ಬ್ರಹ್ಮದೇಯಾಂ ಸುತಾಂ ದತ್ತ್ವಾ ಪ್ರಾಪ್ನೋತಿ ಮನುಜರ್ಷಭ||

ಮನುಜರ್ಷಭ! ಬ್ರಹ್ಮವಿವಾಹದ ವಿಧಿಯಲ್ಲಿ ಮಗಳನ್ನು ಕೊಡುವವನಿಗೆ ದಾಸ-ದಾಸಿಯರು, ಅಲಂಕಾರಗಳು, ಹೊಲ-ಗದ್ದೆಗಳು ಮತ್ತು ಮನೆಗಳು ಪ್ರಾಪ್ತವಾಗುತ್ತವೆ.

13057026a ಕ್ರತುಭಿಶ್ಚೋಪವಾಸೈಶ್ಚ ತ್ರಿದಿವಂ ಯಾತಿ ಭಾರತ|

13057026c ಲಭತೇ ಚ ಚಿರಂ ಸ್ಥಾನಂ ಬಲಿಪುಷ್ಪಪ್ರದೋ ನರಃ[4]||

ಭಾರತ! ಯಜ್ಞ ಮತ್ತು ಉಪವಾಸಗಳಿಂದ ಮನುಷ್ಯನು ತ್ರಿದಿವಕ್ಕೆ ಹೋಗುತ್ತಾನೆ. ಬಲಿ-ಪುಷ್ಪಗಳನ್ನು ದಾನಮಾಡುವ ನರನಿಗೆ ಚಿರಸ್ಥಾನವು ದೊರಕುತ್ತದೆ.

13057027a ಸುವರ್ಣಶೃಂಗೈಸ್ತು ವಿಭೂಷಿತಾನಾಂ

ಗವಾಂ ಸಹಸ್ರಸ್ಯ ನರಃ ಪ್ರದಾತಾ|

13057027c ಪ್ರಾಪ್ನೋತಿ ಪುಣ್ಯಂ ದಿವಿ ದೇವಲೋಕಮ್

ಇತ್ಯೇವಮಾಹುರ್ಮುನಿದೇವಸಂಘಾಃ[5]||

ಬಂಗಾದ ಪಟ್ಟಿಯಿಂದ ಅಲಂಕರಿಸಲ್ಪಟ್ಟ ಕೋಡುಗಳಿರುವ ಸಾವಿರ ಗೋವುಗಳನ್ನು ದಾನಮಾಡುವ ನರನು ದಿವಿಯಲ್ಲಿ ಪುಣ್ಯಮಯ ದೇವಲೋಕವನ್ನು ಪಡೆಯುತ್ತಾನೆ ಎಂದು ಮುನಿ-ದೇವಸಂಘಗಳು ಹೇಳುತ್ತವೆ.

13057028a ಪ್ರಯಚ್ಚತೇ ಯಃ ಕಪಿಲಾಂ ಸಚೈಲಾಂ[6]

ಕಾಂಸ್ಯೋಪದೋಹಾಂ ಕನಕಾಗ್ರಶೃಂಗೀಮ್|

13057028c ತೈಸ್ತೈರ್ಗುಣೈಃ ಕಾಮದುಘಾಸ್ಯ ಭೂತ್ವಾ

ನರಂ ಪ್ರದಾತಾರಮುಪೈತಿ ಸಾ ಗೌಃ||

ಕೋಡಿನ ತುದಿಯನ್ನು ಬಂಗಾರದಿಂದ ಅಲಂಕರಿಸಿದ ಕೆಂಪು ಬಣ್ಣದ ಗೋವನ್ನು ಕಂಚಿನ ಹಾಲಿನ ಪಾತ್ರೆ ಮತ್ತು ಕರುವಿನೊಂದಿಗೆ ದಾನಮಾಡುವವನ ಬಳಿ ಅದೇ ಗೋವು ಅದೇ ಗುಣಗಳಿಂದ ಕಾಮಧೇನುವಾಗಿ ಬರುತ್ತದೆ.

13057029a ಯಾವಂತಿ ಲೋಮಾನಿ ಭವಂತಿ ಧೇನ್ವಾಸ್

ತಾವತ್ಫಲಂ ಪ್ರಾಪ್ನುತೇ ಗೋಪ್ರದಾತಾ[7]|

13057029c ಪುತ್ರಾಂಶ್ಚ ಪೌತ್ರಾಂಶ್ಚ ಕುಲಂ ಚ ಸರ್ವಮ್

ಆಸಪ್ತಮಂ ತಾರಯತೇ ಪರತ್ರ||

ಗೋವನ್ನು ದಾನಮಾಡುವವನು ಆ ಗೋವಿನಲ್ಲಿ ಎಷ್ಟು ರೋಮಗಳಿವೆಯೋ ಅಷ್ಟು ಫಲಗಳನ್ನು ಹೊಂದುತ್ತಾನೆ. ಅಲ್ಲದೇ ಏಳು ಪೀಳಿಗೆಯವರೆಗೆ ಅವನ ಪುತ್ರ-ಪೌತ್ರರು ಮತ್ತು ಕುಲವನ್ನು ಪರಲೋಕದಲ್ಲಿ ಉದ್ಧರಿಸುತ್ತದೆ.

13057030a ಸದಕ್ಷಿಣಾಂ ಕಾಂಚನಚಾರುಶೃಂಗೀಂ

ಕಾಂಸ್ಯೋಪದೋಹಾಂ ದ್ರವಿಣೋತ್ತರೀಯಾಮ್|

13057030c ಧೇನುಂ ತಿಲಾನಾಂ ದದತೋ ದ್ವಿಜಾಯ

ಲೋಕಾ ವಸೂನಾಂ ಸುಲಭಾ ಭವಂತಿ||

ಕಾಂಚನದ ಸುಂದರ ಕೋಡುಗಳು, ಕಂಚಿನ ಹಾಲುಕರೆಯುವ ಪಾತ್ರೆ, ದ್ರವ್ಯಮಯ ಉತ್ತರೀಯ ಮತ್ತು ತಿಲದಿಂದ ಮಾಡಿದ ಹಸುವನ್ನು ದಕ್ಷಿಣೆಯೊಂದಿಗೆ ದ್ವಿಜನಿಗೆ ದಾನಮಾಡುವವನಿಗೆ ವಸುಗಳ ಲೋಕವು ಸುಲಭವಾಗಿ ದೊರೆಯುತ್ತದೆ.

13057031a ಸ್ವಕರ್ಮಭಿರ್ಮಾನವಂ ಸಂನಿಬದ್ಧಂ

ತೀವ್ರಾಂಧಕಾರೇ ನರಕೇ ಪತಂತಮ್|

13057031c ಮಹಾರ್ಣವೇ ನೌರಿವ ವಾಯುಯುಕ್ತಾ

ದಾನಂ ಗವಾಂ ತಾರಯತೇ ಪರತ್ರ||

ಮಹಾಸಾಗರದಲ್ಲಿ ಗಾಳಿಯ ಸಹಾಯದಿಂದ ಪಾರಾಗುವ ಹಾಗೆ ತಮ್ಮ ಕರ್ಮಗಳಿಗೆ ಬದ್ಧರಾಗಿ ತೀವ್ರ ಅಂಧಕಾರದ ನರಕದಲ್ಲಿ ಬೀಳುವ ಮಾನವನನ್ನು ಗೋದಾನವೇ ಪರಲೋಕದಲ್ಲಿ ಪಾರುಮಾಡುತ್ತದೆ.

13057032a ಯೋ ಬ್ರಹ್ಮದೇಯಾಂ ತು ದದಾತಿ ಕನ್ಯಾಂ

ಭೂಮಿಪ್ರದಾನಂ ಚ ಕರೋತಿ ವಿಪ್ರೇ|

13057032c ದದಾತಿ ಚಾನ್ನಂ ವಿಧಿವಚ್ಚ ಯಶ್ಚ

ಸ ಲೋಕಮಾಪ್ನೋತಿ ಪುರಂದರಸ್ಯ||

ಬ್ರಹ್ಮವಿಧಿಯಲ್ಲಿ ತನ್ನ ಕನ್ಯೆಯನ್ನು ವಿವಾಹಮಾಡಿ ಕೊಡುವವನು, ವಿಪ್ರರಿಗೆ ಭೂಮಿಯನ್ನು ದಾನಮಾಡುವವನು ಮತ್ತು ವಿಧಿವತ್ತಾಗಿ ಅನ್ನದಾನ ಮಾಡುವವನಿಗೆ ಪುರಂದರನ ಲೋಕವು ದೊರೆಯುತ್ತದೆ.

13057033a ನೈವೇಶಿಕಂ ಸರ್ವಗುಣೋಪಪನ್ನಂ

ದದಾತಿ ವೈ ಯಸ್ತು ನರೋ ದ್ವಿಜಾಯ|

13057033c ಸ್ವಾಧ್ಯಾಯಚಾರಿತ್ರಗುಣಾನ್ವಿತಾಯ

ತಸ್ಯಾಪಿ ಲೋಕಾಃ ಕುರುಷೂತ್ತರೇಷು||

ಸ್ವಾಧ್ಯಾಯಶೀಲ ಮತ್ತು ಸದಾಚಾರೀ ಬ್ರಾಹ್ಮಣನಿಗೆ ಮನೆ, ಶಯನಾದಿ ಗೃಹಸ್ಥನಿಗೆ ಬೇಕಾಗುವ ವಸ್ತುಗಳನ್ನು ದಾನಮಾಡಿದವನಿಗೆ ಉತ್ತರ ಕುರುದೇಶದಲ್ಲಿ ನಿವಾಸವು ಲಭ್ಯವಾಗುತ್ತದೆ.

13057034a ಧುರ್ಯಪ್ರದಾನೇನ ಗವಾಂ ತಥಾಶ್ವೈರ್

ಲೋಕಾನವಾಪ್ನೋತಿ ನರೋ ವಸೂನಾಮ್|

13057034c ಸ್ವರ್ಗಾಯ ಚಾಹುರ್ಹಿ ಹಿರಣ್ಯದಾನಂ

ತತೋ ವಿಶಿಷ್ಟಂ ಕನಕಪ್ರದಾನಮ್||

ವಾಹನಕ್ಕೆ ಎತ್ತು ಮತ್ತು ಕುದುರೆಗಳನ್ನು ದಾನಮಾಡುವ ನರನಿಗೆ ವಸುಗಳ ಲೋಕಗಳು ದೊರೆಯುತ್ತವೆ. ಹಿರಣ್ಯದಾನವು ಸ್ವರ್ಗವನ್ನು ದೊರಕಿಸುತ್ತದೆ ಎಂದು ಹೇಳಲಾಗಿದೆ. ಕನಕದಾನವು ಅದಕ್ಕಿಂತಲೂ ವಿಶಿಷ್ಟವಾದುದು.

13057035a ಚತ್ರಪ್ರದಾನೇನ ಗೃಹಂ ವರಿಷ್ಠಂ

ಯಾನಂ ತಥೋಪಾನಹಸಂಪ್ರದಾನೇ|

13057035c ವಸ್ತ್ರಪ್ರದಾನೇನ ಫಲಂ ಸುರೂಪಂ

ಗಂಧಪ್ರದಾನೇ ಸುರಭಿರ್ನರಃ ಸ್ಯಾತ್||

ಚತ್ರದ ದಾನದಿಂದ ಉತ್ತಮ ಮನೆ, ಪಾದರಕ್ಷೆಯ ದಾನದಿಂದ ವಾಹನ, ವಸ್ತ್ರದಾನದಿಂದ ಸುಂದರ ರೂಪ ಮತ್ತು ಗಂಧದಾನದಿಂದ ಸುಗಂಧಿತ ಶರೀರವು ಪ್ರಾಪ್ತವಾಗುತ್ತದೆ.

13057036a ಪುಷ್ಪೋಪಗಂ ವಾಥ ಫಲೋಪಗಂ ವಾ

ಯಃ ಪಾದಪಂ ಸ್ಪರ್ಶಯತೇ ದ್ವಿಜಾಯ|

13057036c ಸ ಸ್ತ್ರೀಸಮೃದ್ಧಂ ಬಹುರತ್ನಪೂರ್ಣಂ

ಲಭತ್ಯಯತ್ನೋಪಗತಂ ಗೃಹಂ ವೈ||

ಪುಷ್ಪ-ಫಲಗಳಿಂದ ಭರಿತ ವೃಕ್ಷವನ್ನು ದ್ವಿಜನಿಗೆ ದಾನಮಾಡಿದವನಿಗೆ ಸ್ತ್ರೀಸಮೃದ್ಧ, ಬಹುರತ್ನಪೂರ್ಣ ಗೃಹವು ಪ್ರಯತ್ನಪಡೆಯದೇ ದೊರೆಯುತ್ತದೆ.

13057037a ಭಕ್ಷಾನ್ನಪಾನೀಯರಸಪ್ರದಾತಾ

ಸರ್ವಾನವಾಪ್ನೋತಿ ರಸಾನ್ಪ್ರಕಾಮಮ್|

13057037c ಪ್ರತಿಶ್ರಯಾಚ್ಚಾದನಸಂಪ್ರದಾತಾ

ಪ್ರಾಪ್ನೋತಿ ತಾನೇವ ನ ಸಂಶಯೋಽತ್ರ||

ರಸಭರಿತ ಭಕ್ಷ-ಅನ್ನ-ಪಾನೀಯಗಳನ್ನು ದಾನಮಾಡುವವನು ಇಚ್ಛಾನುಸಾರ ಎಲ್ಲ ರಸಗಳನ್ನೂ ಭೋಗಿಸುತ್ತಾನೆ. ಆಶ್ರಯಕ್ಕೆ ಮನೆ ಮತ್ತು ವಸ್ತ್ರಗಳನ್ನು ದಾನಮಾಡುವವನಿಗೆ ಅವೇ ವಸ್ತುಗಳು ದೊರೆಯುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.

13057038a ಸ್ರಗ್ಧೂಪಗಂಧಾನ್ಯನುಲೇಪನಾನಿ

ಸ್ನಾನಾನಿ ಮಾಲ್ಯಾನಿ ಚ ಮಾನವೋ ಯಃ|

13057038c ದದ್ಯಾದ್ದ್ವಿಜೇಭ್ಯಃ ಸ ಭವೇದರೋಗಸ್

ತಥಾಭಿರೂಪಶ್ಚ ನರೇಂದ್ರಲೋಕೇ||

ನರೇಂದ್ರ! ಹೂವಿನ ಮಾಲೆ, ಗಂಧಾನುಲೇಪನಗಳು, ಸ್ನಾನಕ್ಕೆ ನೀರು, ಮಾಲೆಗಳನ್ನು ದ್ವಿಜನಿಗೆ ದಾನಮಾಡುವವನು ಲೋಕದಲ್ಲಿ ಅರೋಗಿಯೂ ಸುಂದರ ರೂಪಿಯೂ ಆಗುತ್ತಾನೆ.

13057039a ಬೀಜೈರಶೂನ್ಯಂ ಶಯನೈರುಪೇತಂ

ದದ್ಯಾದ್ಗೃಹಂ ಯಃ ಪುರುಷೋ ದ್ವಿಜಾಯ|

13057039c ಪುಣ್ಯಾಭಿರಾಮಂ ಬಹುರತ್ನಪೂರ್ಣಂ

ಲಭತ್ಯಧಿಷ್ಠಾನವರಂ ಸ ರಾಜನ್||

ರಾಜನ್! ಧಾನ್ಯಗಳಿಂದ ತುಂಬಿರುವ ಮತ್ತು ಶಯನಗಳಿರುವ ಗೃಹವನ್ನು ಬ್ರಾಹ್ಮಣನಿಗೆ ದಾನಮಾಡುವ ಪುರುಷನಿಗೆ ಅತ್ಯಂತ ಪವಿತ್ರ ಮನೋಹರ ಮತ್ತು ನಾನಾ ಪ್ರಕಾರದ ರತ್ನಗಳಿಂದ ತುಂಬಿರುವ ಉತ್ತಮ ಗೃಹವು ಪ್ರಾಪ್ತವಾಗುತ್ತದೆ.

13057040a ಸುಗಂಧಚಿತ್ರಾಸ್ತರಣೋಪಪನ್ನಂ

ದದ್ಯಾನ್ನರೋ ಯಃ ಶಯನಂ ದ್ವಿಜಾಯ|

13057040c ರೂಪಾನ್ವಿತಾಂ ಪಕ್ಷವತೀಂ ಮನೋಜ್ಞಾಂ

ಭಾರ್ಯಾಮಯತ್ನೋಪಗತಾಂ ಲಭೇತ್ ಸಃ||

ಸುಗಂಧಯುಕ್ತ ವಿಚಿತ್ರ ಮೇಲುಹಾಸಿಗೆ ಮತ್ತು ತಲೆದಿಂಬುಗಳಿರುವ ಶಯನವನ್ನು ದ್ವಿಜನಿಗೆ ದಾನಮಾಡುವ ನರನಿಗೆ ಪ್ರಯತ್ನಿಸದೇ ಉತ್ತಮ ಕುಲದಲ್ಲಿ ಹುಟ್ಟಿದ, ಸುಂದರ ಕೇಶವುಳ್ಳ, ರೂಪಾನ್ವಿತೆ ಮನೋಹರೆಯು ಭಾರ್ಯೆಯಾಗಿ ದೊರೆಯುತ್ತಾಳೆ.

13057041a ಪಿತಾಮಹಸ್ಯಾನುಚರೋ ವೀರಶಾಯೀ ಭವೇನ್ನರಃ|

13057041c ನಾಧಿಕಂ ವಿದ್ಯತೇ ತಸ್ಮಾದಿತ್ಯಾಹುಃ ಪರಮರ್ಷಯಃ||

ರಣಭೂಮಿಯಲ್ಲಿ ವೀರಶಯ್ಯೆಯಲ್ಲಿ ಮಲಗುವ ನರನು ಪಿತಾಮಹ ಬ್ರಹ್ಮನ ಅನುಚರನೇ ಆಗುತ್ತಾನೆ. ಬ್ರಹ್ಮನಿಂದ ಅಧಿಕವಾದುದು ಯಾವುದೂ ಇಲ್ಲ ಎಂದು ಪರಮ ಋಷಿಗಳು ಹೇಳುತ್ತಾರೆ.””

13057042 ವೈಶಂಪಾಯನ ಉವಾಚ|

13057042a ತಸ್ಯ ತದ್ವಚನಂ ಶ್ರುತ್ವಾ ಪ್ರೀತಾತ್ಮಾ ಕುರುನಂದನಃ|

13057042c ನಾಶ್ರಮೇಽರೋಚಯದ್ವಾಸಂ ವೀರಮಾರ್ಗಾಭಿಕಾಂಕ್ಷಯಾ||

ವೈಶಂಪಾಯನನು ಹೇಳಿದನು: “ಅವನ ಆ ಮಾತನ್ನು ಕೇಳಿ ಕುರುನಂದನನು ಪ್ರೀತಾತ್ಮನಾಗಿ ವೀರಮಾರ್ಗದ ಆಕಾಂಕ್ಷೆಯಲ್ಲಿ ಆಶ್ರಮವಾಸದಲ್ಲಿ ರುಚಿಯನ್ನಿಟ್ಟುಕೊಳ್ಳಲಿಲ್ಲ.

13057043a ತತೋ ಯುಧಿಷ್ಠಿರಃ ಪ್ರಾಹ ಪಾಂಡವಾನ್ಭರತರ್ಷಭ|

13057043c ಪಿತಾಮಹಸ್ಯ ಯದ್ವಾಕ್ಯಂ ತದ್ವೋ ರೋಚತ್ವಿತಿ ಪ್ರಭುಃ||

ಭರತರ್ಷಭ! ಆಗ ಪ್ರಭು ಯುಧಿಷ್ಠಿರನು ಪಾಂಡವರಿಗೆ ಹೇಳಿದನು: “ಪಿತಾಮಹನು ಹೇಳಿದ ವೀರಮಾರ್ಗದಲ್ಲಿ ನಿಮ್ಮ ರುಚಿಯಿರಬೇಕು.”

13057044a ತತಸ್ತು ಪಾಂಡವಾಃ ಸರ್ವೇ ದ್ರೌಪದೀ ಚ ಯಶಸ್ವಿನೀ|

13057044c ಯುಧಿಷ್ಠಿರಸ್ಯ ತದ್ವಾಕ್ಯಂ ಬಾಢಮಿತ್ಯಭ್ಯಪೂಜಯನ್||

ಆಗ ಪಾಂಡವರೆಲ್ಲರೂ ಮತ್ತು ಯಶಸ್ವಿನೀ ದ್ರೌಪದಿಯು ಯುಧಿಷ್ಠಿರನ ಆ ಮಾತಿಗೆ “ಉತ್ತಮವಾದುದು!” ಎಂದು ಆದರಿಸಿದರು.

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಸಪ್ತಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಐವತ್ತೇಳನೇ ಅಧ್ಯಾಯವು.

Image result for flowers against white background

[1] ಮೌನೇನಾಜ್ಞಾಂ ಎಂಬ ಪಾಠಾಂತರವಿದೆ.

[2] ದಾನೇನ ಎಂಬ ಪಾಠಾಂತರವಿದೆ.

[3] ಅನ್ನಸ್ಯ ತು ಪ್ರದಾನೇನ ತೃಪ್ಯಂತೇ ಎಂಬ ಪಾಠಾಂತರವಿದೆ.

[4] ಲಭತೇ ಚ ಶಿವಂ ಜ್ಞಾನಂ ಫಲಪುಷ್ಪಪ್ರದೋ ನರಃ| ಎಂಬ ಪಾಠಾಂತರವಿದೆ.

[5] ಇತ್ಯೇಹಮಾಹುರ್ದಿವಿ ದೇವಸಂಘಾಃ|| ಎಂಬ ಪಾಠಾಂತರವಿದೆ.

[6] ಸವತ್ಸಾಂ ಎಂಬ ಪಾಠಾಂತರವಿದೆ.

[7] ತಾವತ್ ಕಾಲಂ ಪ್ರಾಪ್ಯ ಸ ಗೋಪ್ರದಾನಾತ್| ಎಂಬ ಪಾಠಾಂತರವಿದೆ.

Comments are closed.