Anushasana Parva: Chapter 4

ಅನುಶಾಸನ ಪರ್ವ: ದಾನಧರ್ಮ ಪರ್ವ

ಋಚೀಕನು ಬ್ರಹ್ಮತೇಜಸ್ಸನ್ನು ಇರಿಸಿ ಸಿದ್ಧಪಡಿಸಿದ್ದ ಚರುವನ್ನು ಗಾಧಿಯ ಪತ್ನಿಯು ಸೇವಿಸಿದುದರಿಂದ ಕ್ಷತ್ರಿಯನಾಗಿದ್ದರೂ ವಿಶ್ವಾಮಿತ್ರನು ಬ್ರಾಹ್ಮಣತ್ವವನ್ನು ಪಡೆದನೆಂಬ ಕಥೆಯನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳಿದುದು (೧-೪೭). ವಿಶ್ವಾಮಿತ್ರನ ಪುತ್ರರ ಹೆಸರುಗಳು (೪೮-೬೧).

13004001 ಭೀಷ್ಮ ಉವಾಚ|

13004001a ಶ್ರೂಯತಾಂ ಪಾರ್ಥ ತತ್ತ್ವೇನ ವಿಶ್ವಾಮಿತ್ರೋ ಯಥಾ ಪುರಾ|

13004001c ಬ್ರಾಹ್ಮಣತ್ವಂ ಗತಸ್ತಾತ ಬ್ರಹ್ಮರ್ಷಿತ್ವಂ ತಥೈವ ಚ||

ಭೀಷ್ಮನು ಹೇಳಿದನು: “ಮಗೂ! ಪಾರ್ಥ! ಹಿಂದೆ ವಿಶ್ವಾಮಿತ್ರನು ಹೇಗೆ ಬ್ರಾಹ್ಮಣತ್ವವನ್ನೂ ಬ್ರಹ್ಮರ್ಷಿತ್ವವನ್ನೂ ಪಡೆದನು ಎನ್ನುವುದನ್ನು ಕೇಳು.

13004002a ಭರತಸ್ಯಾನ್ವಯೇ ಚೈವಾಜಮೀಢೋ ನಾಮ ಪಾರ್ಥಿವಃ|

13004002c ಬಭೂವ ಭರತಶ್ರೇಷ್ಠ ಯಜ್ವಾ ಧರ್ಮಭೃತಾಂ ವರಃ||

ಭರತನ ಕುಲದಲ್ಲಿ ಅಜಮೀಢ ಎಂಬ ಹೆಸರಿನ ಪಾರ್ಥಿವನಿದ್ದನು. ಯಜ್ಞಗಳನ್ನು ಮಾಡಿ ಆ ಧರ್ಮಭೃತರಲ್ಲಿ ಶ್ರೇಷ್ಠನು ಭರತಶ್ರೇಷ್ಠನಾದನು.

13004003a ತಸ್ಯ ಪುತ್ರೋ ಮಹಾನಾಸೀಜ್ಜಹ್ನುರ್ನಾಮ ನರೇಶ್ವರಃ|

13004003c ದುಹಿತೃತ್ವಮನುಪ್ರಾಪ್ತಾ ಗಂಗಾ ಯಸ್ಯ ಮಹಾತ್ಮನಃ||

ಅವನ ಪುತ್ರನು ಜಹ್ನು ಎಂಬ ಹೆಸರಿನ ಮಹಾ ನರೇಶ್ವರನಾಗಿದ್ದನು. ಆ ಮಹಾತ್ಮನು ಗಂಗೆಯನ್ನು ಮಗಳನ್ನಾಗಿ ಮಾಡಿಕೊಂಡನು.

13004004a ತಸ್ಯಾತ್ಮಜಸ್ತುಲ್ಯಗುಣಃ ಸಿಂಧುದ್ವೀಪೋ ಮಹಾಯಶಾಃ|

13004004c ಸಿಂಧುದ್ವೀಪಾಚ್ಚ ರಾಜರ್ಷಿರ್ಬಲಾಕಾಶ್ವೋ ಮಹಾಬಲಃ||

ಗುಣಗಳಿಗೆ ಸಮನಾಗಿದ್ದ ಅವನ ಮಗನು ಮಹಾಯಶಸ್ವೀ ಸಿಂಧುದ್ವೀಪ. ಸಿಂಧುದ್ವೀಪನ ಮಗನು ರಾಜರ್ಷಿ ಮಹಾಬಲ ಬಲಾಕಾಶ್ವ.

13004005a ವಲ್ಲಭಸ್ತಸ್ಯ ತನಯಃ ಸಾಕ್ಷಾದ್ಧರ್ಮ ಇವಾಪರಃ|

13004005c ಕುಶಿಕಸ್ತಸ್ಯ ತನಯಃ ಸಹಸ್ರಾಕ್ಷಸಮದ್ಯುತಿಃ||

ಅವನ ಮಗನು ಇನ್ನೊಬ್ಬ ಸಾಕ್ಷಾತ್ ಧರ್ಮನೋ ಎಂತಿದ್ದ ವಲ್ಲಭ. ಅವನ ತನಯನು ಸಹಸ್ರಾಕ್ಷಸಮದ್ಯುತಿ ಕುಶಿಕ.

13004006a ಕುಶಿಕಸ್ಯಾತ್ಮಜಃ ಶ್ರೀಮಾನ್ಗಾಧಿರ್ನಾಮ ಜನೇಶ್ವರಃ|

13004006c ಅಪುತ್ರಃ ಸ ಮಹಾಬಾಹುರ್ವನವಾಸಮುದಾವಸತ್||

ಕುಶಿಕನ ಮಗನು ಶ್ರೀಮಾನ್ ಗಾಧಿ ಎಂಬ ಹೆಸರಿನ ಜನೇಶ್ವರನು. ಪುತ್ರನಿಲ್ಲದ ಆ ಮಹಾಬಾಹುವು ವನವಾಸವನ್ನು ಕೈಗೊಂಡನು.

13004007a ಕನ್ಯಾ ಜಜ್ಞೇ ಸುತಾ ತಸ್ಯ ವನೇ ನಿವಸತಃ ಸತಃ|

13004007c ನಾಮ್ನಾ ಸತ್ಯವತೀ ನಾಮ ರೂಪೇಣಾಪ್ರತಿಮಾ ಭುವಿ||

ಅವನು ವನದಲ್ಲಿ ವಾಸಿಸುತ್ತಿರುವಾಗ ಅವನಿಗೆ ಸತ್ಯವತೀ ಎಂಬ ಹೆಸರಿನ ಭುವಿಯಲ್ಲಿಯೇ ಅಪ್ರತಿಮ ರೂಪವತಿಯಾಗಿದ್ದ ಕನ್ಯೆಯು ಜನಿಸಿದಳು.

13004008a ತಾಂ ವವ್ರೇ ಭಾರ್ಗವಃ ಶ್ರೀಮಾಂಶ್ಚ್ಯವನಸ್ಯಾತ್ಮಜಃ ಪ್ರಭುಃ|

13004008c ಋಚೀಕ ಇತಿ ವಿಖ್ಯಾತೋ ವಿಪುಲೇ ತಪಸಿ ಸ್ಥಿತಃ||

ಅವಳನ್ನು ಭಾರ್ಗವ ಶ್ರೀಮಾನ್ ಚ್ಯವನನ ಪುತ್ರ ಪ್ರಭು ಋಚೀಕ ಎಂದು ವಿಖ್ಯಾತನಾಗಿದ್ದ ವಿಪುರ ತಪೋನಿರತನು ವರಿಸಿದನು.

13004009a ಸ ತಾಂ ನ ಪ್ರದದೌ ತಸ್ಮೈ ಋಚೀಕಾಯ ಮಹಾತ್ಮನೇ|

13004009c ದರಿದ್ರ ಇತಿ ಮತ್ವಾ ವೈ ಗಾಧಿಃ ಶತ್ರುನಿಬರ್ಹಣಃ||

ಅವನು ದರಿದ್ರ ಎಂದು ತಿಳಿದು ಶತ್ರುನಿಬರ್ಹಣ ಗಾಧಿಯು ಅವಳನ್ನು ಮಹಾತ್ಮ ಋಚೀಕನಿಗೆ ಕೊಡಲಿಲ್ಲ.

13004010a ಪ್ರತ್ಯಾಖ್ಯಾಯ ಪುನರ್ಯಾಂತಮಬ್ರವೀದ್ರಾಜಸತ್ತಮಃ|

13004010c ಶುಲ್ಕಂ ಪ್ರದೀಯತಾಂ ಮಹ್ಯಂ ತತೋ ವೇತ್ಸ್ಯಸಿ ಮೇ ಸುತಾಮ್||

ಅದನ್ನು ಕೇಳಿ ಹಿಂದಿರುಗುತ್ತಿದ್ದ ಅವನಿಗೆ ರಾಜಸತ್ತಮ ರಾಜನು ಹೇಳಿದನು: “ನನಗೆ ಶುಲ್ಕವನ್ನು ಕೊಟ್ಟ ನಂತರ ನನ್ನ ಸುತೆಯನ್ನು ಪಡೆದುಕೊಳ್ಳಬಹುದು” ಎಂದನು.

13004011 ಋಚೀಕ ಉವಾಚ|

13004011a ಕಿಂ ಪ್ರಯಚ್ಚಾಮಿ ರಾಜೇಂದ್ರ ತುಭ್ಯಂ ಶುಲ್ಕಮಹಂ ನೃಪ|

13004011c ದುಹಿತುರ್ಬ್ರೂಹ್ಯಸಂಸಕ್ತೋ ಮಾತ್ರಾಭೂತ್ತೇ ವಿಚಾರಣಾ||

ಋಚೀಕನು ಹೇಳಿದನು: “ರಾಜೇಂದ್ರ! ನೃಪ! ನಿನ್ನ ಮಗಳ ಸಲುವಾಗಿ ನಿನಗೆ ನಾನು ಏನನ್ನು ಶುಲ್ಕವಾಗಿ ಕೊಡಲಿ? ನಿಸ್ಸಂಕೋಚವಾಗಿ ಹೇಳು. ವಿಚಾರಮಾಡಬೇಡ!”

13004012 ಗಾಧಿರುವಾಚ|

13004012a ಚಂದ್ರರಶ್ಮಿಪ್ರಕಾಶಾನಾಂ ಹಯಾನಾಂ ವಾತರಂಹಸಾಮ್|

13004012c ಏಕತಃ ಶ್ಯಾಮಕರ್ಣಾನಾಂ ಸಹಸ್ರಂ ದೇಹಿ ಭಾರ್ಗವ||

ಗಾಧಿಯು ಹೇಳಿದನು: “ಭಾರ್ಗವ! ಚಂದ್ರರಶ್ಮಿಯ ಪ್ರಕಾಶವುಳ್ಳ ಗಾಳಿಯ ವೇಗವುಳ್ಳ, ಒಂದೇ ಕಿವಿಯು ಕಪ್ಪಾಗಿರುವ ಸಾವಿರ ಕುದುರೆಗಳನ್ನು ಕೊಡು!””

13004013 ಭೀಷ್ಮ ಉವಾಚ|

13004013a ತತಃ ಸ ಭೃಗುಶಾರ್ದೂಲಶ್ಚ್ಯವನಸ್ಯಾತ್ಮಜಃ ಪ್ರಭುಃ|

13004013c ಅಬ್ರವೀದ್ವರುಣಂ ದೇವಮಾದಿತ್ಯಂ ಪತಿಮಂಭಸಾಮ್||

ಭೀಷ್ಮನು ಹೇಳಿದನು: “ಆಗ ಆ ಚ್ಯವನನ ಮಗ ಪ್ರಭು ಭೃಗುಶಾರ್ದೂಲನು ನದಿಗಳ ಪತಿ ಆದಿತ್ಯ ವರುಣದೇವನಿಗೆ ಹೇಳಿದನು:

13004014a ಏಕತಃ ಶ್ಯಾಮಕರ್ಣಾನಾಂ ಹಯಾನಾಂ ಚಂದ್ರವರ್ಚಸಾಮ್|

13004014c ಸಹಸ್ರಂ ವಾತವೇಗಾನಾಂ ಭಿಕ್ಷೇ ತ್ವಾಂ ದೇವಸತ್ತಮ||

“ದೇವಸತ್ತಮ! ಒಂದೇ ಕಿವಿಯು ಕಪ್ಪಾಗಿರುವ, ಚಂದ್ರನ ವರ್ಚಾಸ್ಸಿರುವ ಮತ್ತು ವಾಯುವೇಗವಿರುವ ಸಾವಿರ ಕುದುರೆಗಳನ್ನು ನೀನು ಭಿಕ್ಷೆಯಾಗಿ ನೀಡು.”

13004015a ತಥೇತಿ ವರುಣೋ ದೇವ ಆದಿತ್ಯೋ ಭೃಗುಸತ್ತಮಮ್|

13004015c ಉವಾಚ ಯತ್ರ ತೇ ಚಂದಸ್ತತ್ರೋತ್ಥಾಸ್ಯಂತಿ ವಾಜಿನಃ||

“ಹಾಗೆಯೇ ಆಗಲಿ! ನೀನು ಬಯಸಿದಲ್ಲಿ ಹಾಗಿನ ಕುದುರೆಗಳು ಪ್ರಕಟವಾಗುತ್ತವೆ” ಎಂದು ಆದಿತ್ಯ ವರುಣದೇವನು ಭೃಗುಸತ್ತಮನಿಗೆ ಹೇಳಿದನು.

13004016a ಧ್ಯಾತಮಾತ್ರೇ ಋಚೀಕೇನ ಹಯಾನಾಂ ಚಂದ್ರವರ್ಚಸಾಮ್|

13004016c ಗಂಗಾಜಲಾತ್ಸಮುತ್ತಸ್ಥೌ ಸಹಸ್ರಂ ವಿಪುಲೌಜಸಾಮ್||

ಋಚೀಕನು ಧ್ಯಾನಿಸಿದ ಮಾತ್ರದಲ್ಲಿಯೇ ಗಂಗೆಯ ಜಲದಿಂದ ಚಂದ್ರವರ್ಚಸ ವಿಪುಲೌಜಸ ಸಹಸ್ರ ಕುದುರೆಗಳು ಮೇಲೆದ್ದವು.

13004017a ಅದೂರೇ ಕನ್ಯಕುಬ್ಜಸ್ಯ ಗಂಗಾಯಾಸ್ತೀರಮುತ್ತಮಮ್|

13004017c ಅಶ್ವತೀರ್ಥಂ ತದದ್ಯಾಪಿ ಮಾನವಾಃ ಪರಿಚಕ್ಷತೇ||

ಕನ್ಯಕುಬ್ಜ[1]ದ ಹತ್ತಿರದಲ್ಲಿರುವ ಆ ಉತ್ತಮ ಗಂಗಾತೀರವು ಈಗಲೂ ಮಾನವರಿಗೆ ಅಶ್ವತೀರ್ಥವೆಂದಾಗಿದೆ.

13004018a ತತ್ತದಾ ಗಾಧಯೇ ತಾತ ಸಹಸ್ರಂ ವಾಜಿನಾಂ ಶುಭಮ್|

13004018c ಋಚೀಕಃ ಪ್ರದದೌ ಪ್ರೀತಃ ಶುಲ್ಕಾರ್ಥಂ ಜಪತಾಂ ವರಃ||

ಮಗೂ ಆ ಸಹಸ್ರ ಶುಭ ಅಶ್ವಗಳನ್ನು ಶುಲ್ಕವೆಂದು ಪ್ರೀತನಾಗಿ ಜಪಿಗಳಲ್ಲಿ ಶ್ರೇಷ್ಠ ಋಚೀಕನು ಗಾಧಿಗೆ ನೀಡಿದನು.

13004019a ತತಃ ಸ ವಿಸ್ಮಿತೋ ರಾಜಾ ಗಾಧಿಃ ಶಾಪಭಯೇನ ಚ|

13004019c ದದೌ ತಾಂ ಸಮಲಂಕೃತ್ಯ ಕನ್ಯಾಂ ಭೃಗುಸುತಾಯ ವೈ||

ಆಗ ವಿಸ್ಮಿತನಾದ ರಾಜಾ ಗಾಧಿಯು ಶಾಪಭಯದಿಂದ ಸಮಲಂಕೃತಳಾದ ಆ ಕನ್ಯೆಯನ್ನು ಭೃಗುಸುತನಿಗೆ ನೀಡಿದನು.

13004020a ಜಗ್ರಾಹ ಪಾಣಿಂ ವಿಧಿನಾ ತಸ್ಯ ಬ್ರಹ್ಮರ್ಷಿಸತ್ತಮಃ|

13004020c ಸಾ ಚ ತಂ ಪತಿಮಾಸಾದ್ಯ ಪರಂ ಹರ್ಷಮವಾಪ ಹ||

ಬ್ರಹ್ಮರ್ಷಿಸತ್ತಮನು ವಿಧಿಪೂರ್ವಕವಾಗಿ ಅವಳ ಪಾಣಿಗ್ರಹಣ ಮಾಡಿಕೊಂಡನು. ಅವಳೂ ಕೂಡ ಅವನನ್ನು ಪತಿಯನ್ನಾಗಿ ಪಡೆದು ಪರಮ ಹರ್ಷಿತಳಾದಳು.

13004021a ಸ ತುತೋಷ ಚ ವಿಪ್ರರ್ಷಿಸ್ತಸ್ಯಾ ವೃತ್ತೇನ ಭಾರತ|

13004021c ಚಂದಯಾಮಾಸ ಚೈವೈನಾಂ ವರೇಣ ವರವರ್ಣಿನೀಮ್||

ಭಾರತ! ಅವಳ ನಡತೆಯಿಂದ ಆ ವಿಪ್ರರ್ಷಿಯು ಸಂತುಷ್ಟನಾದನು. ಆ ವರವರ್ಣಿನಿಗೆ ವರವನ್ನು ನೀಡಲು ಇಚ್ಛಿಸಿದನು.

13004022a ಮಾತ್ರೇ ತತ್ಸರ್ವಮಾಚಖ್ಯೌ ಸಾ ಕನ್ಯಾ ರಾಜಸತ್ತಮ|

13004022c ಅಥ ತಾಮಬ್ರವೀನ್ಮಾತಾ ಸುತಾಂ ಕಿಂ ಚಿದವಾಙ್ಮುಖೀಮ್||

ರಾಜಸತ್ತಮ! ಆ ಕನ್ಯೆಯು ತಾಯಿಗೆ ಅವೆಲ್ಲವನ್ನೂ ಹೇಳಿದಳು. ಆಗ ಅವಳು ತಲೆಯನ್ನು ಸ್ವಲ್ಪ ತಗ್ಗಿಸಿ ನಾಚಿಕೆಯಿಂದ ಮಗಳಿಗೆ ಹೇಳಿದಳು:

13004023a ಮಮಾಪಿ ಪುತ್ರಿ ಭರ್ತಾ ತೇ ಪ್ರಸಾದಂ ಕರ್ತುಮರ್ಹತಿ|

13004023c ಅಪತ್ಯಸ್ಯ ಪ್ರದಾನೇನ ಸಮರ್ಥಃ ಸ ಮಹಾತಪಾಃ||

“ಪುತ್ರಿ! ನಿನ್ನ ಪತಿಯು ನನಗೂ ಕೂಡ ವರವನ್ನು ನೀಡಬೇಕು. ಆ ಮಹಾತಪಸ್ವಿಯು ಮಗನನ್ನು ನೀಡಲು ಸಮರ್ಥನಾಗಿದ್ದಾನೆ.”

13004024a ತತಃ ಸಾ ತ್ವರಿತಂ ಗತ್ವಾ ತತ್ಸರ್ವಂ ಪ್ರತ್ಯವೇದಯತ್|

13004024c ಮಾತುಶ್ಚಿಕೀರ್ಷಿತಂ ರಾಜನ್ನೃಚೀಕಸ್ತಾಮಥಾಬ್ರವೀತ್||

ರಾಜನ್! ಅನಂತರ ಅವಳು ತ್ವರೆಮಾಡಿ ಹೋಗಿ ತಾಯಿಯ ಇಚ್ಛೆಯೆಲ್ಲವನ್ನೂ ಋಚೀಕನಿಗೆ ಹೇಳಿದಳು. ಆಗ ಅವನು ಅವಳಿಗೆ ಹೇಳಿದನು:

13004025a ಗುಣವಂತಮಪತ್ಯಂ ವೈ ತ್ವಂ ಚ ಸಾ ಜನಯಿಷ್ಯಥಃ|

13004025c ಜನನ್ಯಾಸ್ತವ ಕಲ್ಯಾಣಿ ಮಾ ಭೂದ್ವೈ ಪ್ರಣಯೋಽನ್ಯಥಾ||

“ಕಲ್ಯಾಣೀ! ಅವಳಿಗೆ ಗುಣವಂತ ಮಗನು ಕೂಡಲೇ ಜನಿಸುತ್ತಾನೆ. ನಿನ್ನ ಜನನಿಯ ಪ್ರಣಯವು ಅನ್ಯಥಾ ಆಗುವುದಿಲ್ಲ.

13004026a ತವ ಚೈವ ಗುಣಶ್ಲಾಘೀ ಪುತ್ರ ಉತ್ಪತ್ಸ್ಯತೇ ಶುಭೇ|

13004026c ಅಸ್ಮದ್ವಂಶಕರಃ ಶ್ರೀಮಾಂಸ್ತವ ಭ್ರಾತಾ ಚ ವಂಶಕೃತ್||

ಶುಭೇ! ನಿನಗೂ ಕೂಡ ಗುಣಶ್ಲಾಘೀ ಪುತ್ರನು ಜನಿಸುತ್ತಾನೆ. ನಿನ್ನ ವಂಶಕರ ಶ್ರೀಮಾನ್ ಭ್ರಾತನು ನಿನ್ನ ವಂಶವನ್ನು ಮುಂದುವರಿಸುತ್ತಾನೆ.

13004027a ಋತುಸ್ನಾತಾ ಚ ಸಾಶ್ವತ್ಥಂ ತ್ವಂ ಚ ವೃಕ್ಷಮುದುಂಬರಮ್|

13004027c ಪರಿಷ್ವಜೇಥಾಃ ಕಲ್ಯಾಣಿ ತತ ಇಷ್ಟಮವಾಪ್ಸ್ಯಥಃ||

ಕಲ್ಯಾಣೀ! ಋತುಸ್ನಾತಳಾಗಿ ಅವಳು ಅಶ್ವತ್ಥ ವೃಕ್ಷವನ್ನೂ ನೀನು ಔದುಂಬರ ವೃಕ್ಷವನ್ನೂ ಸುತ್ತುವರೆದರೆ ನಿಮಗೆ ಇಷ್ಟವಾದುದನ್ನು ಪಡೆದುಕೊಳ್ಳುತ್ತೀರಿ.

13004028a ಚರುದ್ವಯಮಿದಂ ಚೈವ ಮಂತ್ರಪೂತಂ ಶುಚಿಸ್ಮಿತೇ|

13004028c ತ್ವಂ ಚ ಸಾ ಚೋಪಯುಂಜೀಥಾಂ ತತಃ ಪುತ್ರಾವವಾಪ್ಸ್ಯಥಃ||

ಶುಚಿಸ್ಮಿತೇ! ಈ ಎರಡು ಮಂತ್ರಪೂತ ಚರುಗಳನ್ನೂ ನೀನು ಮತ್ತು ಅವಳು ಭುಂಜಿಸಿರಿ. ಆಗ ನಿಮಗೆ ಮಕ್ಕಳಾಗುತ್ತಾರೆ.”

13004029a ತತಃ ಸತ್ಯವತೀ ಹೃಷ್ಟಾ ಮಾತರಂ ಪ್ರತ್ಯಭಾಷತ|

13004029c ಯದೃಚೀಕೇನ ಕಥಿತಂ ತಚ್ಚಾಚಖ್ಯೌ ಚರುದ್ವಯಮ್||

ಆಗ ಸತ್ಯವತಿಯು ಹೃಷ್ಟಳಾಗಿ ಋಚೀಕನು ಹೇಳಿದ್ದುದನ್ನು ತಾಯಿಗೆ ತಿಳಿಸಿದಳು. ಆ ಎರಡು ಚರುಗಳ ಕುರಿತೂ ಅವಳಿಗೆ ಹೇಳಿದಳು.

13004030a ತಾಮುವಾಚ ತತೋ ಮಾತಾ ಸುತಾಂ ಸತ್ಯವತೀಂ ತದಾ|

13004030c ಪುತ್ರಿ ಮೂರ್ಧ್ನಾ ಪ್ರಪನ್ನಾಯಾಃ ಕುರುಷ್ವ ವಚನಂ ಮಮ||

ಆಗ ತಾಯಿಯು ಸುತೆ ಸತ್ಯವತಿಗೆ ನುಡಿದಳು: “ಪುತ್ರಿ! ನಾನು ನಿನಗಿಂಥ ಹೆಚ್ಚಿನವಳಾದುದರಿಂದ ನನ್ನ ಮಾತಿನಂತೆ ಮಾಡು!

13004031a ಭರ್ತ್ರಾ ಯ ಏಷ ದತ್ತಸ್ತೇ ಚರುರ್ಮಂತ್ರಪುರಸ್ಕೃತಃ|

13004031c ಏತಂ ಪ್ರಯಚ್ಚ ಮಹ್ಯಂ ತ್ವಂ ಮದೀಯಂ ತ್ವಂ ಗೃಹಾಣ ಚ||

ನಿನ್ನ ಪತಿಯು ಕೊಟ್ಟಿರುವ ಈ ಮಂತ್ರಪುರಸ್ಕೃತ ಚರುವಿನಲ್ಲಿ ನಿನ್ನದನ್ನು ನನಗೆ ಕೊಡು ಮತ್ತು ನನ್ನದನ್ನು ನೀನು ತೆಗೆದುಕೋ.

13004032a ವ್ಯತ್ಯಾಸಂ ವೃಕ್ಷಯೋಶ್ಚಾಪಿ ಕರವಾವ ಶುಚಿಸ್ಮಿತೇ|

13004032c ಯದಿ ಪ್ರಮಾಣಂ ವಚನಂ ಮಮ ಮಾತುರನಿಂದಿತೇ||

ಶುಚಿಸ್ಮಿತೇ! ಅನಿಂದಿತೇ! ತಾಯಿಯಾದ ನನ್ನ ಈ ಮಾತುಗಳಲ್ಲಿ ವಿಶ್ವಾಸವಿದ್ದರೆ ವೃಕ್ಷಗಳಲ್ಲಿಯೂ ನಾವು ವ್ಯತ್ಯಾಸ ಮಾಡಿಕೊಳ್ಳೋಣ.

[2]13004033a ವ್ಯಕ್ತಂ ಭಗವತಾ ಚಾತ್ರ ಕೃತಮೇವಂ ಭವಿಷ್ಯತಿ|

13004033c ತತೋ ಮೇ ತ್ವಚ್ಚರೌ ಭಾವಃ ಪಾದಪೇ ಚ ಸುಮಧ್ಯಮೇ|

13004033e ಕಥಂ ವಿಶಿಷ್ಟೋ ಭ್ರಾತಾ ತೇ ಭವೇದಿತ್ಯೇವ ಚಿಂತಯ||

ಭಗವಾನ್ ಋಚೀಕನು ಇದನ್ನೇ ಯೋಚಿಸಿ ಚರುವನ್ನು ಸಿದ್ಧಗೊಳಿಸಿರಬಹುದು. ಸುಮಧ್ಯಮೇ! ಆದುದರಿಂದ ನಿನ್ನ ಚರು ಮತ್ತು ವೃಕ್ಷಗಳಮೇಲೆ ನನಗೆ ಆಸೆಯುಂಟಾಗಿದೆ. ನಿನ್ನ ಭ್ರಾತನು ಹೇಗೆ ವಿಶಿಷ್ಟನಾಗಬಹುದು ಎಂದು ಯೋಚಿಸು!”

13004034a ತಥಾ ಚ ಕೃತವತ್ಯೌ ತೇ ಮಾತಾ ಸತ್ಯವತೀ ಚ ಸಾ|

13004034c ಅಥ ಗರ್ಭಾವನುಪ್ರಾಪ್ತೇ ಉಭೇ ತೇ ವೈ ಯುಧಿಷ್ಠಿರ||

ಆ ಮಾತೆ ಮತ್ತು ಸತ್ಯವತಿಯರು ಹಾಗೆಯೇ ಮಾಡಿದರು. ಯುಧಿಷ್ಠಿರ! ಅನಂತರ ಅವರಿಬ್ಬರೂ ಗರ್ಭವತಿಯರಾದರು.

13004035a ದೃಷ್ಟ್ವಾ ಗರ್ಭಮನುಪ್ರಾಪ್ತಾಂ ಭಾರ್ಯಾಂ ಸ ಚ ಮಹಾನೃಷಿಃ|

13004035c ಉವಾಚ ತಾಂ ಸತ್ಯವತೀಂ ದುರ್ಮನಾ ಭೃಗುಸತ್ತಮಃ||

ಭಾರ್ಯೆಯು ಗರ್ಭವತಿಯಾದುದನ್ನು ನೋಡಿ ಮಹಾನೃಷಿ ಭೃಗುಸತ್ತಮನು ಖಿನ್ನನಾಗಿ ಸತ್ಯವತಿಗೆ ಹೇಳಿದನು:

13004036a ವ್ಯತ್ಯಾಸೇನೋಪಯುಕ್ತಸ್ತೇ ಚರುರ್ವ್ಯಕ್ತಂ ಭವಿಷ್ಯತಿ|

13004036c ವ್ಯತ್ಯಾಸಃ ಪಾದಪೇ ಚಾಪಿ ಸುವ್ಯಕ್ತಂ ತೇ ಕೃತಃ ಶುಭೇ||

“ಚರುವಿನ ಉಪಯೋಗದಲ್ಲಿ ವ್ಯತ್ಯಾಸವಾದುದು ವ್ಯಕ್ತವಾಗುತ್ತಿದೆ. ಶುಭೇ! ನೀನು ಸುತ್ತುವರೆದ ವೃಕ್ಷದಲ್ಲಿಯೂ ವ್ಯತ್ಯಾಸವಾಗಿರುವುದು ಚೆನ್ನಾಗಿ ವ್ಯಕ್ತವಾಗುತ್ತಿದೆ.

13004037a ಮಯಾ ಹಿ ವಿಶ್ವಂ ಯದ್ಬ್ರಹ್ಮ ತ್ವಚ್ಚರೌ ಸಂನಿವೇಶಿತಮ್|

13004037c ಕ್ಷತ್ರವೀರ್ಯಂ ಚ ಸಕಲಂ ಚರೌ ತಸ್ಯಾ ನಿವೇಶಿತಮ್||

ನಾನು ನಿನ್ನ ಚರುವಿನಲ್ಲಿ ಸಮಸ್ತ ಬ್ರಹ್ಮ ತೇಜಸ್ಸನ್ನು ಇರಿಸಿದ್ದೆನು ಮತ್ತು ನಿನ್ನ ತಾಯಿಯ ಚರುವಿನಲ್ಲಿ ಸಕಲ ಕ್ಷತ್ರಿಯ ವೀರ್ಯವನ್ನು ಇರಿಸಿದ್ದೆನು.

13004038a ತ್ರಿಲೋಕವಿಖ್ಯಾತಗುಣಂ ತ್ವಂ ವಿಪ್ರಂ ಜನಯಿಷ್ಯಸಿ|

13004038c ಸಾ ಚ ಕ್ಷತ್ರಂ ವಿಶಿಷ್ಟಂ ವೈ ತತ ಏತತ್ಕೃತಂ ಮಯಾ||

ನೀನು ತ್ರಿಲೋಕವಿಖ್ಯಾತ ಗುಣಯುತ ವಿಪ್ರನನ್ನು ಹುಟ್ಟಿಸುತ್ತೀಯೆ ಮತ್ತು ಅವಳು ವಿಶಿಷ್ಠ ಕ್ಷತ್ರಿಯನನ್ನು ಹುಟ್ಟಿಸುತ್ತಾಳೆ ಎಂದು ನಾನು ಹಾಗೆ ಮಾಡಿದ್ದೆ.

13004039a ವ್ಯತ್ಯಾಸಸ್ತು ಕೃತೋ ಯಸ್ಮಾತ್ತ್ವಯಾ ಮಾತ್ರಾ ತಥೈವ ಚ|

13004039c ತಸ್ಮಾತ್ಸಾ ಬ್ರಾಹ್ಮಣಶ್ರೇಷ್ಠಂ ಮಾತಾ ತೇ ಜನಯಿಷ್ಯತಿ||

ನೀನು ಮತ್ತು ನಿನ್ನ ತಾಯಿಯು ಇವುಗಳಲ್ಲಿ ವ್ಯತ್ಯಾಸಮಾಡಿಕೊಂಡಿರುವುದರಿಂದ ನಿನ್ನ ತಾಯಿಯು ಆ ಬ್ರಾಹ್ಮಣಶ್ರೇಷ್ಠನನ್ನು ಹುಟ್ಟಿಸುತ್ತಾಳೆ.

13004040a ಕ್ಷತ್ರಿಯಂ ತೂಗ್ರಕರ್ಮಾಣಂ ತ್ವಂ ಭದ್ರೇ ಜನಯಿಷ್ಯಸಿ|

13004040c ನ ಹಿ ತೇ ತತ್ಕೃತಂ ಸಾಧು ಮಾತೃಸ್ನೇಹೇನ ಭಾಮಿನಿ||

ಭದ್ರೇ! ಉಗ್ರಕರ್ಮಿ ಕ್ಷತ್ರಿಯನನ್ನು ನೀನು ಹುಟ್ಟಿಸುತ್ತೀಯೆ. ಭಾಮಿನಿ! ಮಾತೃಸ್ನೇಹದಿಂದ ಮಾಡಿದ ಈ ನಿನ್ನ ಕೃತ್ಯವು ಸಾಧುವಲ್ಲ.”

13004041a ಸಾ ಶ್ರುತ್ವಾ ಶೋಕಸಂತಪ್ತಾ ಪಪಾತ ವರವರ್ಣಿನೀ|

13004041c ಭೂಮೌ ಸತ್ಯವತೀ ರಾಜಂಶ್ಚಿನ್ನೇವ ರುಚಿರಾ ಲತಾ||

ರಾಜನ್! ಅದನ್ನು ಕೇಳಿ ಶೋಕಸಂತಪ್ತಳಾದ ಆ ವರವರ್ಣಿನಿ ಸತ್ಯವತಿಯು ಕತ್ತರಿಸಿದ ಸುಂದರ ಲತೆಯಂತೆ ಭೂಮಿಯ ಮೇಲೆ ಬಿದ್ದಳು.

13004042a ಪ್ರತಿಲಭ್ಯ ಚ ಸಾ ಸಂಜ್ಞಾಂ ಶಿರಸಾ ಪ್ರಣಿಪತ್ಯ ಚ|

13004042c ಉವಾಚ ಭಾರ್ಯಾ ಭರ್ತಾರಂ ಗಾಧೇಯೀ ಬ್ರಾಹ್ಮಣರ್ಷಭಮ್||

ಸಂಜ್ಞೆಗಳನ್ನು ಪಡೆದ ಗಾಧೇಯೀ ಭಾರ್ಯೆಯು ಶಿರಸಾ ವಂದಿಸಿ ಪತಿ ಬ್ರಾಹ್ಮಣರ್ಷಭನಿಗೆ ಹೇಳಿದಳು:

13004043a ಪ್ರಸಾದಯಂತ್ಯಾಂ ಭಾರ್ಯಾಯಾಂ ಮಯಿ ಬ್ರಹ್ಮವಿದಾಂ ವರ|

13004043c ಪ್ರಸಾದಂ ಕುರು ವಿಪ್ರರ್ಷೇ ನ ಮೇ ಸ್ಯಾತ್ಕ್ಷತ್ರಿಯಃ ಸುತಃ||

“ಬ್ರಹ್ಮವಿದರಲ್ಲಿ ಶ್ರೇಷ್ಠ! ಪತ್ನಿಯಾದ ನನಗೆ ನೀನು ಕರುಣಿಸಬೇಕು. ವಿಪ್ರರ್ಷೇ! ನನಗೆ ಕ್ಷತ್ರಿಯ ಸುತನಾಗದಂತೆ ಪ್ರಸಾದ ಮಾಡು.

13004044a ಕಾಮಂ ಮಮೋಗ್ರಕರ್ಮಾ ವೈ ಪೌತ್ರೋ ಭವಿತುಮರ್ಹತಿ|

13004044c ನ ತು ಮೇ ಸ್ಯಾತ್ಸುತೋ ಬ್ರಹ್ಮನ್ನೇಷ ಮೇ ದೀಯತಾಂ ವರಃ||

ಉಗ್ರಕರ್ಮಗಳನ್ನು ಮಾಡುವವನು ನನ್ನ ಮೊಮ್ಮಗನಾಗಲಿ; ನನ್ನ ಮಗನು ಹಾಗಾಗಬಾರದು ಎಂದು ಬಯಸುತ್ತೇನೆ. ಬ್ರಹ್ಮನ್! ಈ ವರವನ್ನು ನನಗೆ ನೀಡು.”

13004045a ಏವಮಸ್ತ್ವಿತಿ ಹೋವಾಚ ಸ್ವಾಂ ಭಾರ್ಯಾಂ ಸುಮಹಾತಪಾಃ|

13004045c ತತಃ ಸಾ ಜನಯಾಮಾಸ ಜಮದಗ್ನಿಂ ಸುತಂ ಶುಭಮ್||

“ಹಾಗೆಯೇ ಆಗಲಿ!” ಎಂದು ಆ ಮಹಾತಪಸ್ವಿಯು ಪತ್ನಿಗೆ ಹೇಳಿದನು. ಆಗ ಅವಳು ಶುಭ ಸುತ ಜಮದಗ್ನಿಯೆ ಜನ್ಮವಿತ್ತಳು.

13004046a ವಿಶ್ವಾಮಿತ್ರಂ ಚಾಜನಯದ್ಗಾಧೇರ್ಭಾರ್ಯಾ ಯಶಸ್ವಿನೀ|

13004046c ಋಷೇಃ ಪ್ರಭಾವಾದ್ರಾಜೇಂದ್ರ ಬ್ರಹ್ಮರ್ಷಿಂ ಬ್ರಹ್ಮವಾದಿನಮ್||

ಗಾಧಿಯ ಪತ್ನಿ ಯಶಸ್ವಿನಿಯು ವಿಶ್ವಾಮಿತ್ರನಿಗೆ ಜನ್ಮವಿತ್ತಳು. ರಾಜೇಂದ್ರ! ಋಷಿಯ ಪ್ರಭಾವದಿಂದ ಅವನು ಬ್ರಹ್ಮರ್ಷಿಯೂ ಬ್ರಹ್ಮವಾದಿನಿಯೂ ಆದನು.

|13004047a ತತೋ ಬ್ರಾಹ್ಮಣತಾಂ ಯಾತೋ ವಿಶ್ವಾಮಿತ್ರೋ ಮಹಾತಪಾಃ|

13004047c ಕ್ಷತ್ರಿಯಃ ಸೋಽಪ್ಯಥ ತಥಾ ಬ್ರಹ್ಮವಂಶಸ್ಯ ಕಾರಕಃ||

ಅನಂತರ ಮಹಾತಪಸ್ವೀ ವಿಶ್ವಾಮಿತ್ರನು ಬ್ರಾಹ್ಮಣತ್ವವನ್ನು ಪಡೆದುಕೊಂಡು ಕ್ಷತ್ರಿಯನಾಗಿದ್ದರೂ ಬ್ರಹ್ಮವಂಶದ ಕಾರಕನಾದನು.

13004048a ತಸ್ಯ ಪುತ್ರಾ ಮಹಾತ್ಮಾನೋ ಬ್ರಹ್ಮವಂಶವಿವರ್ಧನಾಃ|

13004048c ತಪಸ್ವಿನೋ ಬ್ರಹ್ಮವಿದೋ ಗೋತ್ರಕರ್ತಾರ ಏವ ಚ||

ಅವನ ಪುತ್ರರು ಮಹಾತ್ಮರೂ, ಬ್ರಹ್ಮವಂಶವಿವರ್ಧನರೂ, ತಪಸ್ವಿಗಳೂ, ಬ್ರಹ್ಮವಿದರೂ, ಗೋತ್ರಕರ್ತಾರರೂ ಆದರು.

13004049a ಮಧುಚ್ಚಂದಶ್ಚ ಭಗವಾನ್ದೇವರಾತಶ್ಚ ವೀರ್ಯವಾನ್|

13004049c ಅಕ್ಷೀಣಶ್ಚ ಶಕುಂತಶ್ಚ ಬಭ್ರುಃ ಕಾಲಪಥಸ್ತಥಾ||

13004050a ಯಾಜ್ಞವಲ್ಕ್ಯಶ್ಚ ವಿಖ್ಯಾತಸ್ತಥಾ ಸ್ಥೂಣೋ ಮಹಾವ್ರತಃ|

13004050c ಉಲೂಕೋ ಯಮದೂತಶ್ಚ ತಥರ್ಷಿಃ ಸೈಂಧವಾಯನಃ||

13004051a ಕರ್ಣಜಂಘಶ್ಚ ಭಗವಾನ್ಗಾಲವಶ್ಚ ಮಹಾನೃಷಿಃ|

13004051c ಋಷಿರ್ವಜ್ರಸ್ತಥಾಖ್ಯಾತಃ ಶಾಲಂಕಾಯನ ಏವ ಚ||

13004052a ಲಾಲಾಟ್ಯೋ ನಾರದಶ್ಚೈವ ತಥಾ ಕೂರ್ಚಮುಖಃ ಸ್ಮೃತಃ|

13004052c ವಾದುಲಿರ್ಮುಸಲಶ್ಚೈವ ರಕ್ಷೋಗ್ರೀವಸ್ತಥೈವ ಚ||

13004053a ಅಂಘ್ರಿಕೋ ನೈಕಭೃಚ್ಚೈವ ಶಿಲಾಯೂಪಃ ಸಿತಃ ಶುಚಿಃ|

13004053c ಚಕ್ರಕೋ ಮಾರುತಂತವ್ಯೋ ವಾತಘ್ನೋಽಥಾಶ್ವಲಾಯನಃ||

13004054a ಶ್ಯಾಮಾಯನೋಽಥ ಗಾರ್ಗ್ಯಶ್ಚ ಜಾಬಾಲಿಃ ಸುಶ್ರುತಸ್ತಥಾ|

13004054c ಕಾರೀಷಿರಥ ಸಂಶ್ರುತ್ಯಃ ಪರಪೌರವತಂತವಃ||

13004055a ಮಹಾನೃಷಿಶ್ಚ ಕಪಿಲಸ್ತಥರ್ಷಿಸ್ತಾರಕಾಯನಃ|

13004055c ತಥೈವ ಚೋಪಗಹನಸ್ತಥರ್ಷಿಶ್ಚಾರ್ಜುನಾಯನಃ||

13004056a ಮಾರ್ಗಮಿತ್ರಿರ್ಹಿರಣ್ಯಾಕ್ಷೋ ಜಂಘಾರಿರ್ಬಭ್ರುವಾಹನಃ|

13004056c ಸೂತಿರ್ವಿಭೂತಿಃ ಸೂತಶ್ಚ ಸುರಂಗಶ್ಚ ತಥೈವ ಹಿ||

13004057a ಆರಾದ್ಧಿರ್ನಾಮಯಶ್ಚೈವ ಚಾಂಪೇಯೋಜ್ಜಯನೌ ತಥಾ|

13004057c ನವತಂತುರ್ಬಕನಖಃ ಶಯೋನರತಿರೇವ ಚ||

13004058a ಶಯೋರುಹಶ್ಚಾರುಮತ್ಸ್ಯಃ ಶಿರೀಷೀ ಚಾಥ ಗಾರ್ದಭಿಃ|

13004058c ಉಜ್ಜಯೋನಿರದಾಪೇಕ್ಷೀ ನಾರದೀ ಚ ಮಹಾನೃಷಿಃ|

13004058e ವಿಶ್ವಾಮಿತ್ರಾತ್ಮಜಾಃ ಸರ್ವೇ ಮುನಯೋ ಬ್ರಹ್ಮವಾದಿನಃ||

ಮಧುಚ್ಛಂದ, ಭಗವಾನ್ ದೇವರಾತ, ವೀರ್ಯವಾನ್ ಅಕ್ಷೀಣ, ಶಕುಂತ, ಬಭ್ರು, ಕಾಲಪಥ, ವಿಖ್ಯಾತನಾದ ಯಾಜ್ಞವಲ್ಕ್ಯ, ಮಹಾವ್ರತ ಸ್ಥೂಣ, ಉಲೂಕ, ಯಮದೂತ, ಋಷಿ ಸೈಂಧವಾಯನ, ಕರ್ಣಜಂಘ, ಭಗವಾನ್ ಮಹಾನೃಷಿ ಗಾಲವ, ಋಷಿ ವಜ್ರ, ಖ್ಯಾತನಾದ ಶಾಲಂಕಾಯನ, ಲಾಲಾಟ, ನಾರದ, ಕೂರ್ಚಮುಖ, ವಾದುಲಿ, ಮುಸಲ, ರಕ್ಷೋಗ್ರೀವ, ಅಂಘ್ರಿಕ, ನೈಕಭೃ, ಶಿಲಾಯೂಪ, ಸಿತ, ಶುಚಿ, ಚಕ್ರಕ, ಮಾರುತಂತವ್ಯ, ವಾತಘ್ನ, ಅಶ್ವಲಾಯನ, ಶ್ಯಾಮಾಯನ, ಗಾರ್ಗ್ಯ, ಜಾಬಾಲಿ, ಸುಶ್ರುತ, ಕಾರೀಷಿ, ಸಂಶ್ರುತ್ಯ, ಪರಪೌರವತಂತವ, ಮಹಾನೃಷಿ ಕಪಿಲ, ಋಷಿ ತಾರಕಾಯನ, ಉಪಗಹನ, ಋಷಿ ಅರ್ಜುನಾಯನ, ಮಾರ್ಗಮಿತ್ರಿ, ಹಿರಣ್ಯಾಕ್ಷ, ಜಂಘಾರಿ, ಬಭ್ರುವಾಹನ, ಸೂತಿ, ವಿಭೂತಿ, ಸೂತ, ಸುರಂಗ, ಆರಾದ್ಧಿ, ನಾಮಯ, ಚಾಂಪೇಯ, ಜಯನ, ನವತಂತು, ಬಕನಖ, ಶಯೋನರತಿ, ಶಯೋರುಹ, ಚಾರುಮತ್ಸ್ಯ, ಶಿರೀಷೀ, ಗಾರ್ದಭಿ, ಉಜ್ಜಯೋನಿ, ಅದಾಪೇಕ್ಷೀ, ಮಹಾನೃಷಿ ನಾರದೀ – ಈ ಎಲ್ಲ ಬ್ರಹ್ಮವಾದಿ ಮುನಿಗಳು ವಿಶ್ವಾಮಿತ್ರನ ಮಕ್ಕಳು.  

13004059a ತನ್ನೈಷ ಕ್ಷತ್ರಿಯೋ ರಾಜನ್ವಿಶ್ವಾಮಿತ್ರೋ ಮಹಾತಪಾಃ|

13004059c ಋಚೀಕೇನಾಹಿತಂ ಬ್ರಹ್ಮ ಪರಮೇತದ್ಯುಧಿಷ್ಠಿರ||

ರಾಜನ್! ಯುಧಿಷ್ಠಿರ! ಮಹಾತಪಸ್ವಿ ವಿಶ್ವಾಮಿತ್ರನು ಕ್ಷತ್ರಿಯನಾಗಿದ್ದರೂ ಋಚೀಕನು ಅವನಲ್ಲಿ ಪರಮ ಬ್ರಹ್ಮವನ್ನು ಇರಿಸಿದ್ದನು.

13004060a ಏತತ್ತೇ ಸರ್ವಮಾಖ್ಯಾತಂ ತತ್ತ್ವೇನ ಭರತರ್ಷಭ|

13004060c ವಿಶ್ವಾಮಿತ್ರಸ್ಯ ವೈ ಜನ್ಮ ಸೋಮಸೂರ್ಯಾಗ್ನಿತೇಜಸಃ||

ಭರತರ್ಷಭ! ಇದೋ ಸೋಮಸೂರ್ಯಾಗ್ನಿತೇಜಸ್ವೀ ವಿಶ್ವಾಮಿತ್ರನ ಜನ್ಮದ ಕುರಿತು ಎಲ್ಲವನ್ನೂ ಹೇಳಿದ್ದೇನೆ.

13004061a ಯತ್ರ ಯತ್ರ ಚ ಸಂದೇಹೋ ಭೂಯಸ್ತೇ ರಾಜಸತ್ತಮ|

13004061c ತತ್ರ ತತ್ರ ಚ ಮಾಂ ಬ್ರೂಹಿ ಚ್ಚೇತ್ತಾಸ್ಮಿ ತವ ಸಂಶಯಾನ್||

ರಾಜಸತ್ತಮ! ಎಲ್ಲೆಲ್ಲಿ ನಿನಗೆ ಸಂದೇಹವುಂಟಾಗುವುದೋ ಅಲ್ಲಲ್ಲಿ  ನನಗೆ ಹೇಳು. ನಿನ್ನ ಸಂಶಯಗಳನ್ನು  ನಿವಾರಿಸುತ್ತೇನೆ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಿಶ್ವಾಮಿತ್ರೋಪಾಖ್ಯಾನೇ ಚತುರ್ಥೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿಶ್ವಾಮಿತ್ರೋಪಾಖ್ಯಾನ ಎನ್ನುವ ನಾಲ್ಕನೇ ಅಧ್ಯಾಯವು.

Related image

[1] ಈಗಿನ ಕನ್ನೌಜ್ – ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಮುಖ್ಯ ಪಟ್ಟಣ.

[2] ಇದಕ್ಕೆ ಮೊದಲು ಗೋರಖಪುರ ಸಂಪುಟದಲ್ಲಿ ಈ ಶ್ಲೋಕಾರ್ಧವಿದೆ: ಸ್ವಮಪತ್ಯಂ ವಿಶಿಷ್ಠಂ ಹಿ ಸರ್ವ ಇಚ್ಛತ್ಯನಾವಿಲಮ್| ಅರ್ಥಾತ್ ಎಲ್ಲರೂ ತಮ್ಮ ಮಕ್ಕಳು ಗುಣವಂತರಾಗಿರಬೇಕೆಂದು ಬಯಸುತ್ತಾರೆ.

Comments are closed.