Anushasana Parva: Chapter 38

ಅನುಶಾಸನ ಪರ್ವ: ದಾನಧರ್ಮ ಪರ್ವ

೩೮

ಸ್ತ್ರೀಸ್ವಭಾವಕ ಕಥನ

ಯುಧಿಷ್ಠಿರನು ಸ್ತ್ರೀಯರ ಸ್ವಭಾವದ ಕುರಿತು ಕೇಳಲು ಭೀಷ್ಮನು ಪಂಚಚೂಡಾ ಎಂಬ ಅಪ್ಸರೆ ಮತ್ತು ನಾರದರ ಸಂವಾದವನ್ನು ಉದಾಹರಿಸಿದುದು (೧-೩೦).

13038001 ಯುಧಿಷ್ಠಿರ ಉವಾಚ|

13038001a ಸ್ತ್ರೀಣಾಂ ಸ್ವಭಾವಮಿಚ್ಚಾಮಿ ಶ್ರೋತುಂ ಭರತಸತ್ತಮ|

13038001c ಸ್ತ್ರಿಯೋ ಹಿ ಮೂಲಂ ದೋಷಾಣಾಂ ಲಘುಚಿತ್ತಾಃ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಭರತಸತ್ತಮ! ಪಿತಾಮಹ! ಸ್ತ್ರೀಯರ ಸ್ವಭಾವವನ್ನು ಕೇಳಲು ಬಯಸುತ್ತೇನೆ. ಏಕೆಂದರೆ ಲಘುಚಿತ್ತ ಸ್ತ್ರೀಯರು ದೋಷಗಳಿಗೆ ಮೂಲ.”

13038002 ಭೀಷ್ಮ ಉವಾಚ|

13038002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13038002c ನಾರದಸ್ಯ ಚ ಸಂವಾದಂ ಪುಂಶ್ಚಲ್ಯಾ ಪಂಚಚೂಡಯಾ||

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದ ಪುರಾತನ ಇತಿಹಾಸವಾದ ನಾರದ ಮತ್ತು ಕಾಮಚಾರಿಣೀ ಪಂಚಚೂಡಳ ನಡುವಿನ ಸಂವಾದವನ್ನು ಉದಾಹರಿಸುತ್ತಾರೆ.

13038003a ಲೋಕಾನನುಚರನ್ಧೀಮಾನ್ದೇವರ್ಷಿರ್ನಾರದಃ ಪುರಾ|

13038003c ದದರ್ಶಾಪ್ಸರಸಂ ಬ್ರಾಹ್ಮೀಂ ಪಂಚಚೂಡಾಮನಿಂದಿತಾಮ್||

ಹಿಂದೆ ಲೋಕಗಳನ್ನು ಸುತ್ತಾಡುತ್ತಾ ದೇವರ್ಷಿ ಧೀಮಾನ್ ನಾರದನು ಬ್ರಾಹ್ಮೀ ಅಪ್ಸರೆ ಅನಿಂದಿತೆ ಪಂಚಚೂಡಳನ್ನು ಕಂಡನು.

13038004a ತಾಂ ದೃಷ್ಟ್ವಾ ಚಾರುಸರ್ವಾಂಗೀಂ ಪಪ್ರಚ್ಚಾಪ್ಸರಸಂ ಮುನಿಃ|

13038004c ಸಂಶಯೋ ಹೃದಿ ಮೇ ಕಶ್ಚಿತ್ತನ್ಮೇ ಬ್ರೂಹಿ ಸುಮಧ್ಯಮೇ||

ಆ ಚಾರುಸರ್ವಾಂಗಿ ಅಪ್ಸರೆಯನ್ನು ಕಂಡು ಮುನಿಯು ಕೇಳಿದನು: “ಸುಮಧ್ಯಮೇ! ನನ್ನ ಹೃದಯದಲ್ಲಿ ಒಂದು ಸಂಶಯವಿದೆ. ಅದನ್ನು ಹೇಳು.”

13038005a ಏವಮುಕ್ತಾ ತು ಸಾ ವಿಪ್ರಂ ಪ್ರತ್ಯುವಾಚಾಥ ನಾರದಮ್|

13038005c ವಿಷಯೇ ಸತಿ ವಕ್ಷ್ಯಾಮಿ ಸಮರ್ಥಾಂ ಮನ್ಯಸೇ ಚ ಮಾಮ್||

ಇದನ್ನು ಕೇಳಿ ಅವಳು ವಿಪ್ರ ನಾರದನಿಗೆ ಉತ್ತರಿಸಿದಳು: “ಆ ವಿಷಯದ ಕುರಿತು ಹೇಳಲು ನಾನು ಸಮರ್ಥನಾಗಿದ್ದೇನೆಂದು ನೀನು ಅಭಿಪ್ರಾಯಪಡುವುದಾದರೆ ಕೇಳಬಹುದು.”

13038006 ನಾರದ ಉವಾಚ|

13038006a ನ ತ್ವಾಮವಿಷಯೇ ಭದ್ರೇ ನಿಯೋಕ್ಷ್ಯಾಮಿ ಕಥಂ ಚನ|

13038006c ಸ್ತ್ರೀಣಾಂ ಸ್ವಭಾವಮಿಚ್ಚಾಮಿ ತ್ವತ್ತಃ ಶ್ರೋತುಂ ವರಾನನೇ||

ನಾರದನು ಹೇಳಿದನು: “ಭದ್ರೇ! ವರಾನನೇ! ಕೇಳಬಾರದ ವಿಷಯವನ್ನು ಕೇಳಿ ಎಂದೂ ನಿನ್ನನ್ನು ಒತ್ತಾಯಿಸುವುದಿಲ್ಲ. ಸ್ತ್ರೀಯರ ಸ್ವಭಾವವನ್ನು, ಇರುವಹಾಗೆ ಕೇಳಲು ಬಯಸುತ್ತೇನೆ.””

13038007 ಭೀಷ್ಮ ಉವಾಚ|

13038007a ಏತಚ್ಚ್ರುತ್ವಾ ವಚಸ್ತಸ್ಯ ದೇವರ್ಷೇರಪ್ಸರೋತ್ತಮಾ|

13038007c ಪ್ರತ್ಯುವಾಚ ನ ಶಕ್ಷ್ಯಾಮಿ ಸ್ತ್ರೀ ಸತೀ ನಿಂದಿತುಂ ಸ್ತ್ರಿಯಃ||

ಭೀಷ್ಮನು ಹೇಳಿದನು: “ದೇವರ್ಷಿಯ ಈ ಮಾತನ್ನು ಕೇಳಿ ಆ ಅಪ್ಸರೋತ್ತಮೆಯು ಉತ್ತರಿಸಿದಳು: “ಸ್ತ್ರೀಯಾಗಿದ್ದುಕೊಂಡು ಸ್ತ್ರೀಯರನ್ನು ನಿಂದಿಸಲು ಇಷ್ಟಪಡುವುದಿಲ್ಲ.

13038008a ವಿದಿತಾಸ್ತೇ ಸ್ತ್ರಿಯೋ ಯಾಶ್ಚ ಯಾದೃಶಾಶ್ಚ ಸ್ವಭಾವತಃ|

13038008c ನ ಮಾಮರ್ಹಸಿ ದೇವರ್ಷೇ ನಿಯೋಕ್ತುಂ ಪ್ರಶ್ನ ಈದೃಶೇ||

ದೇವರ್ಷೇ! ಸ್ತ್ರೀಯರು ಹೇಗಿರುತ್ತಾರೆ ಮತ್ತು ಯಾವ ಯಾವ ಸ್ವಭಾವದವರಾಗಿರುತ್ತಾರೆ ಎಂದು ನಿನಗೆ ತಿಳಿದಿದೆ. ಈ ರೀತಿಯ ಪ್ರಶ್ನೆಯನ್ನು ನನ್ನಲ್ಲಿ ಕೇಳುವುದು ಸರಿಯಲ್ಲ.”

13038009a ತಾಮುವಾಚ ಸ ದೇವರ್ಷಿಃ ಸತ್ಯಂ ವದ ಸುಮಧ್ಯಮೇ|

13038009c ಮೃಷಾವಾದೇ ಭವೇದ್ದೋಷಃ ಸತ್ಯೇ ದೋಷೋ ನ ವಿದ್ಯತೇ||

ಆಗ ದೇವರ್ಷಿಯು ಅವಳಿಗೆ ಹೇಳಿದನು: “ಸುಮಧ್ಯಮೇ! ಸತ್ಯವನ್ನು ಹೇಳು. ಸುಳ್ಳನ್ನು ಹೇಳುವುದು ದೋಷ. ಸತ್ಯದಲ್ಲಿ ಯಾವ ದೋಷವೂ ಇಲ್ಲ.”

13038010a ಇತ್ಯುಕ್ತಾ ಸಾ ಕೃತಮತಿರಭವಚ್ಚಾರುಹಾಸಿನೀ|

13038010c ಸ್ತ್ರೀದೋಷಾನ್ ಶಾಶ್ವತಾನ್ಸತ್ಯಾನ್ಭಾಷಿತುಂ ಸಂಪ್ರಚಕ್ರಮೇ||

ಇದನ್ನು ಕೇಳಿದ ಆ ಚಾರುಹಾಸಿನಿಯು ನಿಶ್ಚಯಿಸಿ ಶಾಶ್ವತವೂ ಸತ್ಯವೂ ಆದ ಸ್ತ್ರೀದೋಷಗಳ ಕುರಿತು ಹೇಳ ತೊಡಗಿದಳು.

13038011 ಪಂಚಚೂಡೋವಾಚ|

13038011a ಕುಲೀನಾ ರೂಪವತ್ಯಶ್ಚ ನಾಥವತ್ಯಶ್ಚ ಯೋಷಿತಃ|

13038011c ಮರ್ಯಾದಾಸು ನ ತಿಷ್ಠಂತಿ ಸ ದೋಷಃ ಸ್ತ್ರೀಷು ನಾರದ||

ಪಂಚಚೂಡಳು ಹೇಳಿದಳು: “ನಾರದ! ಸತ್ಕುಲಪ್ರಸೂತೆಯರೂ, ರೂಪವತಿಯರೂ, ಪತಿಯನ್ನು ಪಡೆದಿರುವವರೂ ಆದ ಸ್ತ್ರೀಯರೂ ಕೂಡ ಮರ್ಯಾದೆಯೊಳಗೆ ನಿಲ್ಲುವುದಿಲ್ಲ. ಇದೇ ಸ್ತ್ರೀಯರಲ್ಲಿರುವ ದೋಷ.

13038012a ನ ಸ್ತ್ರೀಭ್ಯಃ ಕಿಂ ಚಿದನ್ಯದ್ವೈ ಪಾಪೀಯಸ್ತರಮಸ್ತಿ ವೈ|

13038012c ಸ್ತ್ರಿಯೋ ಹಿ ಮೂಲಂ ದೋಷಾಣಾಂ ತಥಾ ತ್ವಮಪಿ ವೇತ್ಥ ಹ||

ಸ್ವೈರಿಣಿಯರಾದ ಸ್ತ್ರೀಯರಿಗಿಂತ ಪಾಪಿಷ್ಠರಾದವರು ಬೇರೆ ಯಾರೂ ಇಲ್ಲ , ಮತ್ತು ಸ್ತ್ರೀಯರೇ ದೋಷಗಳ ಮೂಲ ಎಂದು ನೀನೂ ಕೂಡ ತಿಳಿದಿದ್ದೀಯಲ್ಲವೇ?

13038013a ಸಮಾಜ್ಞಾತಾನೃದ್ಧಿಮತಃ ಪ್ರತಿರೂಪಾನ್ವಶೇ ಸ್ಥಿತಾನ್|

13038013c ಪತೀನಂತರಮಾಸಾದ್ಯ ನಾಲಂ ನಾರ್ಯಃ ಪ್ರತೀಕ್ಷಿತುಮ್||

ಅನ್ಯಪುರುಷರ ಸಮಾಗಮದ ಸಂದರ್ಭವು ಬಂದಾಗ ಕಾಮುಕ ಸ್ತ್ರೀಯರು ಸದ್ಗುಣಗಳಿಂದ ವಿಖ್ಯಾತ, ಧನವಂತ, ಅನುಪಮ ರೂಪವುಳ್ಳ ತನ್ನ ವಶವರ್ತಿ ಪತಿಯನ್ನೂ ಲಕ್ಷಿಸುವುದಿಲ್ಲ.

13038014a ಅಸದ್ಧರ್ಮಸ್ತ್ವಯಂ ಸ್ತ್ರೀಣಾಮಸ್ಮಾಕಂ ಭವತಿ ಪ್ರಭೋ|

13038014c ಪಾಪೀಯಸೋ ನರಾನ್ಯದ್ವೈ ಲಜ್ಜಾಂ ತ್ಯಕ್ತ್ವಾ ಭಜಾಮಹೇ||

ಪ್ರಭೋ! ಸ್ತ್ರೀಯರಾದ ನಮ್ಮಲ್ಲಿ ಈ ಒಂದು ಅಧರ್ಮವಿದೆ. ನಾವು ಲಜ್ಜೆಯನ್ನು ತೊರೆದು ಪಾಪಿ ಮನುಷ್ಯರನ್ನೂ ಸೇವಿಸುತ್ತೇವೆ.

13038015a ಸ್ತ್ರಿಯಂ ಹಿ ಯಃ ಪ್ರಾರ್ಥಯತೇ ಸಂನಿಕರ್ಷಂ ಚ ಗಚ್ಚತಿ|

13038015c ಈಷಚ್ಚ ಕುರುತೇ ಸೇವಾಂ ತಮೇವೇಚ್ಚಂತಿ ಯೋಷಿತಃ||

ಸ್ತ್ರೀಯ ಬಳಿಹೋಗಿ ಬೇಡಿಕೊಳ್ಳುವ ಮತ್ತು ಅವಳ ಸೇವೆಯನ್ನು ಮಾಡುವ ಪುರುಷನನ್ನೇ ಸ್ತ್ರೀಯರು ಬಯಸುತ್ತಾರೆ.

13038016a ಅನರ್ಥಿತ್ವಾನ್ಮನುಷ್ಯಾಣಾಂ ಭಯಾತ್ಪರಿಜನಸ್ಯ ಚ|

13038016c ಮರ್ಯಾದಾಯಾಮಮರ್ಯಾದಾಃ ಸ್ತ್ರಿಯಸ್ತಿಷ್ಠಂತಿ ಭರ್ತೃಷು||

ಮರ್ಯಾದೆಯೊಳಗಿರದ ಸ್ತ್ರೀಯರು ತಮ್ಮನ್ನು ಬಯಸುವ ಅನ್ಯ ಪುರುಷರು ಇಲ್ಲದಿರುವಾಗ ಮತ್ತು ಪರಿಜನರ ಭಯದಿಂದ ಮಾತ್ರ ಪತಿಯ ಕಟ್ಟುನಿಟ್ಟುಗಳಲ್ಲಿ ಇರುತ್ತಾರೆ.

13038017a ನಾಸಾಂ ಕಶ್ಚಿದಗಮ್ಯೋಽಸ್ತಿ ನಾಸಾಂ ವಯಸಿ ಸಂಸ್ಥಿತಿಃ|

13038017c ವಿರೂಪಂ ರೂಪವಂತಂ ವಾ ಪುಮಾನಿತ್ಯೇವ ಭುಂಜತೇ||

ಇಂಥವರೊಂದಿಗೆ ಹೋಗಬಾರದು ಅಥವಾ ಹೋಗಬಹುದು ಎಂಬ ವಿವೇಚನೆಯೇ ಸ್ತ್ರೀಯರಿಗಿರುವುದಿಲ್ಲ. ವಯಸ್ಸಿನಲ್ಲಿ ತಮಗೆ ಅನುರೂಪವಾಗಿರುವವರೊಡನೆ ಸಮಾಗಮ ಮಾಡಬೇಕು ಎಂಬ ನಿಶ್ಚಯವೂ ಅವರಿಗಿರುವುದಿಲ್ಲ. ರೂಪವಂತನೋ ಕುರೂಪಿಯೋ ಪುರುಷನಾಗಿದ್ದರೆ ಸಾಕು. ಅವನೊಡನೆ ರತಿಸುಖವನ್ನು ಹೊಂದುತ್ತಾರೆ.

13038018a ನ ಭಯಾನ್ನಾಪ್ಯನುಕ್ರೋಶಾನ್ನಾರ್ಥಹೇತೋಃ ಕಥಂ ಚನ|

13038018c ನ ಜ್ಞಾತಿಕುಲಸಂಬಂಧಾತ್ಸ್ತ್ರಿಯಸ್ತಿಷ್ಠಂತಿ ಭರ್ತೃಷು||

ಭಯದಿಂದಾಗಲೀ, ದಯೆಯಿಂದಾಗಲೀ, ಧನಲೋಭದಿಂದಾಗಲೀ ಅಥವಾ ಜ್ಞಾತಿಕುಲಸಂಬಂಧಗಳಿಂದಾಗಲೀ ಸ್ತ್ರೀಯರು ಪತಿಗಳ ವಶದಲ್ಲಿರುವುದಿಲ್ಲ.

13038019a ಯೌವನೇ ವರ್ತಮಾನಾನಾಂ ಮೃಷ್ಟಾಭರಣವಾಸಸಾಮ್|

13038019c ನಾರೀಣಾಂ ಸ್ವೈರವೃತ್ತಾನಾಂ ಸ್ಪೃಹಯಂತಿ ಕುಲಸ್ತ್ರಿಯಃ||

ಸುಂದರ ವಸ್ತ್ರಾಭರಣಗಳನ್ನು ತೊಟ್ಟು ಸ್ವೇಚ್ಛೆಯಿಂದ ವ್ಯವಹರಿಸುವ ಯುವ ಸ್ತ್ರೀಯರನ್ನು ನೋಡಿ ಕುಲಸ್ತ್ರೀಯರೂ ಅವರಂತಾಗಬೇಕೆಂದು ಬಯಸುತ್ತಾರೆ.

13038020a ಯಾಶ್ಚ ಶಶ್ವದ್ಬಹುಮತಾ ರಕ್ಷ್ಯಂತೇ ದಯಿತಾಃ ಸ್ತ್ರಿಯಃ|

13038020c ಅಪಿ ತಾಃ ಸಂಪ್ರಸಜ್ಜಂತೇ ಕುಬ್ಜಾಂಧಜಡವಾಮನೈಃ||

ಪುರುಷನು ಪ್ರೀತಿಯಿಂದ ಮತ್ತು ಬಹುಮಾನ್ಯತೆಯಿಂದ ರಕ್ಷಿಸುತ್ತಿರುವ ಸ್ತ್ರೀಯರೂ ಕೂಡ ಅವಕಾಶವು ದೊರೆತರೆ ಕುಳ್ಳರ-ಕುರುಡರ, ಮೂರ್ಖರ ಅಥವಾ ಮೋಟರ ಸಮಾಗಮ ಮಾಡುತ್ತಾರೆ.

13038021a ಪಂಗುಷ್ವಪಿ ಚ ದೇವರ್ಷೇ ಯೇ ಚಾನ್ಯೇ ಕುತ್ಸಿತಾ ನರಾಃ|

13038021c ಸ್ತ್ರೀಣಾಮಗಮ್ಯೋ ಲೋಕೇಽಸ್ಮಿನ್ನಾಸ್ತಿ ಕಶ್ಚಿನ್ಮಹಾಮುನೇ||

ದೇವರ್ಷೇ! ಮಹಾಮುನೇ! ಹೆಳವನೊಡನೆ ಮತ್ತು ಅನ್ಯ ಕುತ್ಸಿತ ಪುರುಷರೊಂದಿಗೂ ಸಮಾಗಮ ಮಾಡುತ್ತಾರೆ. ಈ ಲೋಕದಲ್ಲಿ ಸ್ತ್ರೀಯರಿಗೆ ಅಗಮ್ಯನಾದ ಪುರುಷನು ಯಾರೂ ಇಲ್ಲ.

13038022a ಯದಿ ಪುಂಸಾಂ ಗತಿರ್ಬ್ರಹ್ಮ ಕಥಂ ಚಿನ್ನೋಪಪದ್ಯತೇ|

13038022c ಅಪ್ಯನ್ಯೋನ್ಯಂ ಪ್ರವರ್ತಂತೇ ನ ಹಿ ತಿಷ್ಠಂತಿ ಭರ್ತೃಷು||

ಬ್ರಹ್ಮನ್! ಗಂಡನು ಹತ್ತಿರದಲ್ಲಿರದಿದ್ದರೆ ಮತ್ತು ಬೇರೆ ಯಾವ ಪುರುಷನೂ ದೊರಕದೇ ಇದ್ದರೆ ಸ್ವೇಚ್ಛಾಚಾರೀ ಸ್ತ್ರೀಯರು ಅನ್ಯೋನ್ಯರೊಂದಿಗೇ ಮುಂದುವರೆಯುತ್ತಾರೆ.

13038023a ಅಲಾಭಾತ್ಪುರುಷಾಣಾಂ ಹಿ ಭಯಾತ್ಪರಿಜನಸ್ಯ ಚ|

13038023c ವಧಬಂಧಭಯಾಚ್ಚಾಪಿ ಸ್ವಯಂ ಗುಪ್ತಾ ಭವಂತಿ ತಾಃ||

ಪುರುಷರ ಅಭಾವದಿಂದಲೂ, ಬಂಧು-ಜನರ ಭಯದಿಂದಲೂ, ಹಿಂಸೆ-ಬಂಧನಗಳ ಭಯದಿಂದಲೂ ಸ್ತ್ರೀಯರು ಸುರಕ್ಷಿತರಾಗಿರುತ್ತಾರೆ.

13038024a ಚಲಸ್ವಭಾವಾ ದುಃಸೇವ್ಯಾ ದುರ್ಗ್ರಾಹ್ಯಾ ಭಾವತಸ್ತಥಾ|

13038024c ಪ್ರಾಜ್ಞಸ್ಯ ಪುರುಷಸ್ಯೇಹ ಯಥಾ ವಾಚಸ್ತಥಾ ಸ್ತ್ರಿಯಃ||

ಸ್ತ್ರೀಯರು ಚಂಚಲಸ್ವಭಾವದವರು. ಅವರ ಸೇವೆಮಾಡುವುದು ಅತಿ ಕಷ್ಟ. ಅವರ ಭಾವಗಳನ್ನು ತಿಳಿದುಕೊಳ್ಳುವುದು ಅತಿ ಕಷ್ಟ. ಸ್ತ್ರೀಯರ ಮಾತುಗಳು ಪ್ರಾಜ್ಞ ಪುರುಷನ ಮಾತಿನಂತೆ ಅರ್ಥಮಾಡಿಕೊಳ್ಳುವುದು ಕಷ್ಟ.

13038025a ನಾಗ್ನಿಸ್ತೃಪ್ಯತಿ ಕಾಷ್ಠಾನಾಂ ನಾಪಗಾನಾಂ ಮಹೋದಧಿಃ|

13038025c ನಾಂತಕಃ ಸರ್ವಭೂತಾನಾಂ ನ ಪುಂಸಾಂ ವಾಮಲೋಚನಾಃ||

ಕಟ್ಟಿಗೆಗಳಿಂದ ಅಗ್ನಿಯು ತೃಪ್ತಿಹೊಂದದಂತೆ, ನದಿಗಳಿಂದ ಸಾಗರವು ತೃಪ್ತಿಹೊಂದದಂತೆ, ಸರ್ವಭೂತಗಳಿಂದಲೂ ಅಂತಕನು ತೃಪ್ತಿಹೊಂದದಂತೆ ವಾಮಲೋಚನೆಯರು ಪುರುಷರಿಂದ ತೃಪ್ತರಾಗುವುದಿಲ್ಲ.

13038026a ಇದಮನ್ಯಚ್ಚ ದೇವರ್ಷೇ ರಹಸ್ಯಂ ಸರ್ವಯೋಷಿತಾಮ್|

13038026c ದೃಷ್ಟ್ವೈವ ಪುರುಷಂ ಹೃದ್ಯಂ ಯೋನಿಃ ಪ್ರಕ್ಲಿದ್ಯತೇ ಸ್ತ್ರಿಯಃ||

ದೇವರ್ಷೇ! ಸರ್ವ ಸ್ತ್ರೀಯರಲ್ಲಿಯೂ ಇರುವ ಇನ್ನೊಂದು ರಹಸ್ಯವನ್ನು ಹೇಳುತ್ತೇನೆ. ಆಕರ್ಷಿತ ಪುರುಷನನ್ನು ನೋಡಿದೊಡನೆಯೇ ಸ್ತ್ರೀಯರ ಯೋನಿಯು ಒದ್ದೆಯಾಗುತ್ತದೆ.

13038027a ಕಾಮಾನಾಮಪಿ ದಾತಾರಂ ಕರ್ತಾರಂ ಮಾನಸಾಂತ್ವಯೋಃ|

13038027c ರಕ್ಷಿತಾರಂ ನ ಮೃಷ್ಯಂತಿ ಭರ್ತಾರಂ ಪರಮಂ ಸ್ತ್ರಿಯಃ||

ಬೇಕಾದವುಗಳನ್ನೆಲ್ಲಾ ಕೊಡುವ, ಮನಸ್ಸಿಗೆ ಪ್ರಿಯವಾದುದನ್ನೇ ಮಾಡುವ, ಮತ್ತು ರಕ್ಷಿಸುವ ಪರಮ ಪತಿಯನ್ನೂ ಸ್ತ್ರೀಯರು ಸಹಿಸಿಕೊಳ್ಳುವುದಿಲ್ಲ.

13038028a ನ ಕಾಮಭೋಗಾನ್ಬಹುಲಾನ್ನಾಲಂಕಾರಾರ್ಥಸಂಚಯಾನ್|

13038028c ತಥೈವ ಬಹು ಮನ್ಯಂತೇ ಯಥಾ ರತ್ಯಾಮನುಗ್ರಹಮ್||

ರತಿಸುಖದ ಹೊರತಾಗಿ ಸ್ತ್ರೀಯರು ಕಾಮಭೋಗಗಳಾಗಲೀ, ಬಹಳ ಅಲಂಕಾರಗಳನ್ನಾಗಲೀ, ಮತ್ತು ಐಶ್ವರ್ಯವನ್ನಾಗಲೀ ಹೆಚ್ಚೆಂದು ಅಭಿಪ್ರಾಯಪಡುವುದಿಲ್ಲ.

13038029a ಅಂತಕಃ ಶಮನೋ ಮೃತ್ಯುಃ ಪಾತಾಲಂ ವಡವಾಮುಖಮ್|

13038029c ಕ್ಷುರಧಾರಾ ವಿಷಂ ಸರ್ಪೋ ವಹ್ನಿರಿತ್ಯೇಕತಃ ಸ್ತ್ರಿಯಃ||

ಅಂತಕ, ಶಮನ, ಮೃತ್ಯು, ಪಾತಾಲ, ವಡವಾಮುಖ, ಕತ್ತಿಯ ಅಲಗು, ವಿಷಸರ್ಪ ಮತ್ತು ಅಗ್ನಿ ಇವು ಒಟ್ಟಾಗಿ ಸ್ತ್ರೀಯ ಸಮ.

13038030a ಯತಶ್ಚ ಭೂತಾನಿ ಮಹಾಂತಿ ಪಂಚ

ಯತಶ್ಚ ಲೋಕಾ ವಿಹಿತಾ ವಿಧಾತ್ರಾ|

13038030c ಯತಃ ಪುಮಾಂಸಃ ಪ್ರಮದಾಶ್ಚ ನಿರ್ಮಿತಾಸ್

ತದೈವ ದೋಷಾಃ ಪ್ರಮದಾಸು ನಾರದ||

ನಾರದ! ಎಂದು ಪಂಚಮಹಾಭೂತಗಳು ಹುಟ್ಟಿದವೋ, ಎಂದು ಬ್ರಹ್ಮನು ಲೋಕಗಳನ್ನು ಸೃಷ್ಟಿಸಿದನೋ, ಎಂದು ಸ್ತ್ರೀ-ಪುರುಷರ ನಿರ್ಮಾಣವಾಯಿತೋ ಅಂದಿನಿಂದಲೇ ಸ್ತ್ರೀಯರಲ್ಲಿ ಈ ದೋಷಗಳು ಸೇರಿಬಂದಿವೆ.””

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪಂಚಚೂಡಾನಾರದಸಂವಾದೇ ಅಷ್ಟತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಪಂಚಚೂಡಾನಾರದಸಂವಾದ ಎನ್ನುವ ಮೂವತ್ತೆಂಟನೇ ಅಧ್ಯಾಯವು.

Image result for flowers against white background

Comments are closed.