Anushasana Parva: Chapter 29

ಅನುಶಾಸನ ಪರ್ವ: ದಾನಧರ್ಮ ಪರ್ವ

೨೯

ತನ್ನ ತಪಸ್ಸನ್ನು ಮುಂದುವರಿಸಿದ ಮತಂಗನಿಗೆ ಇಂದ್ರನು ಚಂಡಾಲತ್ವದಿಂದ ಬ್ರಾಹ್ಮಣತ್ವವನ್ನು ಪಡೆಯಲು ಯಾವ ಯಾವ ಯೋನಿಗಳಲ್ಲಿ ಎಷ್ಟು ಬಾರಿ ಪುನಃ ಪುನಃ ಹುಟ್ಟಿಬರಬೇಕಾಗುತ್ತದೆ ಎನ್ನುವುದನ್ನು ಹೇಳಿದುದು (೧-೧೬).

13029001 ಭೀಷ್ಮ ಉವಾಚ|

13029001a ಏವಮುಕ್ತೋ ಮತಂಗಸ್ತು ಸಂಶಿತಾತ್ಮಾ ಯತವ್ರತಃ|

13029001c ಅತಿಷ್ಠದೇಕಪಾದೇನ ವರ್ಷಾಣಾಂ ಶತಮಚ್ಯುತ||

ಅಚ್ಯುತ! ಇದನ್ನು ಕೇಳಿದ ಸಂಶಿತಾತ್ಮ ಯತವ್ರತ ಮತಂಗನಾದರೋ ನೂರು ವರ್ಷಗಳು ಒಂದೇ ಕಾಲಿನಮೇಲೆ ನಿಂತುಕೊಂಡನು.

13029002a ತಮುವಾಚ ತತಃ ಶಕ್ರಃ ಪುನರೇವ ಮಹಾಯಶಾಃ|

13029002c ಮತಂಗ ಪರಮಂ ಸ್ಥಾನಂ ಪ್ರಾರ್ಥಯನ್ನತಿದುರ್ಲಭಮ್||

ಆಗ ಪುನಃ ಮಹಾಯಶಶ್ವೀ ಶಕ್ರನು ಹೇಳಿದನು: “ಮತಂಗ ಅತಿದುರ್ಲಭವಾದ ಪರಮ ಸ್ಥಾನವನ್ನು ಪ್ರಾರ್ಥಿಸುತ್ತಿರುವೆ!

13029003a ಮಾ ಕೃಥಾಃ ಸಾಹಸಂ ಪುತ್ರ ನೈಷ ಧರ್ಮಪಥಸ್ತವ|

13029003c ಅಪ್ರಾಪ್ಯಂ ಪ್ರಾರ್ಥಯಾನೋ ಹಿ ನಚಿರಾದ್ವಿನಶಿಷ್ಯಸಿ||

ಪುತ್ರ! ಸಾಹಸ ಮಾಡಬಾರದು. ಇದು ನಿನ್ನ ಧರ್ಮಪಥವಲ್ಲ. ಪ್ರಾರ್ಥಿಸುವುದನ್ನು ಪಡೆಯದೇ ಬೇಗನೇ ವಿನಾಶಹೊಂದುತ್ತೀಯೆ!

13029004a ಮತಂಗ ಪರಮಂ ಸ್ಥಾನಂ ವಾರ್ಯಮಾಣೋ ಮಯಾ ಸಕೃತ್|

13029004c ಚಿಕೀರ್ಷಸ್ಯೇವ ತಪಸಾ ಸರ್ವಥಾ ನ ಭವಿಷ್ಯಸಿ||

ಮತಂಗ! ನಾನು ನಿನಗೆ ಈ ಪರಮ ಸ್ಥಾನವನ್ನು ಕೇಳಬೇಡವೆಂದು ಹೇಳಿದರೂ ಅದನ್ನೇ ಬಯಸುತ್ತಿರುವೆ. ತಪಸ್ಸಿನಿಂದ ಅದು ಸರ್ವಥಾ ನಡೆಯುವುದಿಲ್ಲ.

13029005a ತಿರ್ಯಗ್ಯೋನಿಗತಃ ಸರ್ವೋ ಮಾನುಷ್ಯಂ ಯದಿ ಗಚ್ಚತಿ|

13029005c ಸ ಜಾಯತೇ ಪುಲ್ಕಸೋ ವಾ ಚಂಡಾಲೋ ವಾ ಕದಾ ಚನ||

ತಿರ್ಯಗ್ಯೋನಿಗಳಾದ ಪಶು-ಪಕ್ಷಿಗಳು ಒಂದು ವೇಳೆ ಮನುಷ್ಯಯೋನಿಯಲ್ಲಿ ಹುಟ್ಟುವಂತಾದರೆ ಮೊದಲು ಅವು ಪುಲ್ಕಸ ಅಥವಾ ಚಂಡಾಲ ಯೋನಿಯಲ್ಲಿ ಹುಟ್ಟುತ್ತವೆ. ಇದರಲ್ಲಿ ಸಂಶಯವೇ ಇಲ್ಲ.

13029006a ಪುಂಶ್ಚಲಃ ಪಾಪಯೋನಿರ್ವಾ ಯಃ ಕಶ್ಚಿದಿಹ ಲಕ್ಷ್ಯತೇ|

13029006c ಸ ತಸ್ಯಾಮೇವ ಸುಚಿರಂ ಮತಂಗ ಪರಿವರ್ತತೇ||

ಮತಂಗ! ಈ ಪಾಪಯೋನಿಗಳಲ್ಲಿ ಒಂದು ವೇಳೆ ಹುಟ್ಟಿಕೊಂಡರೆ ಬಹುಕಾಲದ ವರೆಗೆ ಅವನು ಅದೇ ಯೋನಿಯಲ್ಲಿಯೇ ಸುತ್ತುತ್ತಿರುತ್ತಾನೆ.

13029007a ತತೋ ದಶಗುಣೇ ಕಾಲೇ ಲಭತೇ ಶೂದ್ರತಾಮಪಿ|

13029007c ಶೂದ್ರಯೋನಾವಪಿ ತತೋ ಬಹುಶಃ ಪರಿವರ್ತತೇ||

ಒಂದು ಸಾವಿರ ವರ್ಷಗಳಲ್ಲಿ ಶೂದ್ರತ್ವವನ್ನು ಪಡೆಯಬಹುದು. ಅನಂತರ ಶೂದ್ರಯೋನಿಯಲ್ಲಿ ಬಹುಕಾಲ ಸುತ್ತುತ್ತಿರುತ್ತಾನೆ.

13029008a ತತಸ್ತ್ರಿಂಶದ್ಗುಣೇ ಕಾಲೇ ಲಭತೇ ವೈಶ್ಯತಾಮಪಿ|

13029008c ವೈಶ್ಯತಾಯಾಂ ಚಿರಂ ಕಾಲಂ ತತ್ರೈವ ಪರಿವರ್ತತೇ||

ಅರವತ್ತು ಬಾರಿ ಶೂದ್ರನಾಗಿ ಹುಟ್ಟಿದ ಬಳಿಕ ಅವನಿಗೆ ವೈಶ್ಯತ್ವವು ಪ್ರಾಪ್ತವಾಗಬಹುದು. ದೀರ್ಘ ಕಾಲ ಅವನು ವೈಶ್ಯಯೋನಿಯಲ್ಲಿಯೇ ಸುತ್ತುತ್ತಿರುತ್ತಾನೆ.

13029009a ತತಃ ಷಷ್ಟಿಗುಣೇ ಕಾಲೇ ರಾಜನ್ಯೋ ನಾಮ ಜಾಯತೇ|

13029009c ರಾಜನ್ಯತ್ವೇ ಚಿರಂ ಕಾಲಂ ತತ್ರೈವ ಪರಿವರ್ತತೇ||

ಅರವತ್ತು ಬಾರಿ ವೈಶ್ಯಯೋನಿಯಲ್ಲಿ ಹುಟ್ಟಿದ ನಂತರ ಅವನು ರಾಜನ್ಯನಾಗಿ ಹುಟ್ಟುತ್ತಾನೆ. ದೀರ್ಘ ಕಾಲ ಅವನು ರಾಜನ್ಯ ಯೋನಿಯಲ್ಲಿಯೇ ಸುತ್ತುತ್ತಿರುತ್ತಾನೆ.

13029010a ತತಃ ಷಷ್ಟಿಗುಣೇ ಕಾಲೇ ಲಭತೇ ಬ್ರಹ್ಮಬಂಧುತಾಮ್|

13029010c ಬ್ರಹ್ಮಬಂಧುಶ್ಚಿರಂ ಕಾಲಂ ತತ್ರೈವ ಪರಿವರ್ತತೇ||

ಅರವತ್ತು ಬಾರಿ ರಾಜನ್ಯ ಯೋನಿಯಲ್ಲಿ ಹುಟ್ಟಿದ ನಂತರ ಅವನಿಗೆ ಬ್ರಹ್ಮಬಂಧುತ್ವವು ದೊರೆಯುತ್ತದೆ. ಬ್ರಹ್ಮಬಂಧುವಾಗಿ ಅವನು ದೀರ್ಘಕಾಲದಲ್ಲಿ ಸುತ್ತುತ್ತಿರುತ್ತಾನೆ.

13029011a ತತಸ್ತು ದ್ವಿಶತೇ ಕಾಲೇ ಲಭತೇ ಕಾಂಡಪೃಷ್ಠತಾಮ್|

13029011c ಕಾಂಡಪೃಷ್ಠಶ್ಚಿರಂ ಕಾಲಂ ತತ್ರೈವ ಪರಿವರ್ತತೇ||

ಎರಡು ನೂರು ಆವರ್ತಗಳು ಕಳೆದನಂತರ ಶಸ್ತ್ರಗಳ ಮಾರಾಟದಿಂದ ಬದುಕುವ ಯೋನಿಯು ಲಭ್ಯವಾಗುತ್ತದೆ. ಬಹಳ ಕಾಲ ಅದೇ ಯೋನಿಯಲ್ಲಿ ಸುತ್ತುತ್ತಿರುತ್ತಾನೆ.

13029012a ತತಸ್ತು ತ್ರಿಶತೇ ಕಾಲೇ ಲಭತೇ ದ್ವಿಜತಾಮಪಿ|

13029012c ತಾಂ ಚ ಪ್ರಾಪ್ಯ ಚಿರಂ ಕಾಲಂ ತತ್ರೈವ ಪರಿವರ್ತತೇ||

ಮುನ್ನೂರು ಆವರ್ತಗಳು ಕಳೆದನಂತರ ದ್ವಿಜತ್ವವು ಲಭಿಸುತ್ತದೆ. ಅದನ್ನು ಪಡೆದು ದೀರ್ಘಕಾಲ ಅದರಲ್ಲಿಯೇ ಸುತ್ತುತ್ತಿರುತ್ತಾನೆ.

13029013a ತತಶ್ಚತುಃಶತೇ ಕಾಲೇ ಶ್ರೋತ್ರಿಯೋ ನಾಮ ಜಾಯತೇ|

13029013c ಶ್ರೋತ್ರಿಯತ್ವೇ ಚಿರಂ ಕಾಲಂ ತತ್ರೈವ ಪರಿವರ್ತತೇ||

ನಾಲ್ನೂರು ಆವರ್ತಗಳು ಕಳೆದನಂತರ ಶ್ರೋತ್ರಿಯನಾಗಿ ಹುಟ್ಟುತ್ತಾನೆ. ದೀರ್ಘಕಾಲ ಶ್ರೋತ್ರಿಯತ್ವದಲ್ಲಿಯೇ ಸುತ್ತುತ್ತಿರುತ್ತಾನೆ.

13029014a ತದೈವ ಕ್ರೋಧಹರ್ಷೌ ಚ ಕಾಮದ್ವೇಷೌ ಚ ಪುತ್ರಕ|

13029014c ಅತಿಮಾನಾತಿವಾದೌ ತಮಾವಿಶಂತಿ ದ್ವಿಜಾಧಮಮ್||

ಪುತ್ರಕ! ಆಗಲೂ ಕೂಡ ಕ್ರೋಧ-ಹರ್ಷಗಳು, ಕಾಮ-ದ್ವೇಷಗಳು ಮತ್ತು ಅತಿಮಾನ-ಅತಿವಾದಗಳು ಆ ದ್ವಿಜಾಧಮನನ್ನು ಪ್ರವೇಶಿಸುತ್ತವೆ.

13029015a ತಾಂಶ್ಚೇಜ್ಜಯತಿ ಶತ್ರೂನ್ಸ ತದಾ ಪ್ರಾಪ್ನೋತಿ ಸದ್ಗತಿಮ್|

13029015c ಅಥ ತೇ ವೈ ಜಯಂತ್ಯೇನಂ ತಾಲಾಗ್ರಾದಿವ ಪಾತ್ಯತೇ||

ಆ ಶತ್ರುಗಳನ್ನು ಜಯಸಿದವನು ಸದ್ಗತಿಯನ್ನು ಹೊಂದುತ್ತಾನೆ. ಅಲ್ಲಿ ಅವುಗಳನ್ನು ಜಯಿಸದವನು ತಾಳೆಯ ಹಣ್ಣಿನಂತೆ ಮೇಲಿನಿಂದ ಬೀಳುತ್ತಾನೆ.

13029016a ಮತಂಗ ಸಂಪ್ರಧಾರ್ಯೈತದ್ಯದಹಂ ತ್ವಾಮಚೂಚುದಮ್|

13029016c ವೃಣೀಷ್ವ ಕಾಮಮನ್ಯಂ ತ್ವಂ ಬ್ರಾಹ್ಮಣ್ಯಂ ಹಿ ಸುದುರ್ಲಭಮ್||

ಮತಂಗ! ನಿನಗೆ ಹೇಳಿದ ಇದನ್ನು ಚೆನ್ನಾಗಿ ಮನದಟ್ಟುಮಾಡಿಕೊಂಡು ನನ್ನಿಂದ ಬೇರೆಯಾವುದಾದರೂ ವರವನ್ನು ಕೇಳು. ಬ್ರಾಹ್ಮಣ್ಯವು ದುರ್ಲಭವು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಇಂದ್ರಮತಂಗಸಂವಾದೇ ಏಕೋನತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಇಂದ್ರಮತಂಗಸಂವಾದ ಎನ್ನುವ ಇಪ್ಪತ್ತೊಂಭತ್ತನೇ ಅಧ್ಯಾಯವು.

Related image

Comments are closed.