Anushasana Parva: Chapter 25

ಅನುಶಾಸನ ಪರ್ವ: ದಾನಧರ್ಮ ಪರ್ವ

೨೫

ಬ್ರಹ್ಮಘಾತಿಸ್ವರೂಪ

ಬ್ರಾಹ್ಮಣನನ್ನು ಹಿಂಸಿಸದಿದ್ದರೂ ಬ್ರಹ್ಮಹತ್ಯಾದೋಷವು ಹೇಗೆ ಬರಬಹುದೆಂದು ಯುಧಿಷ್ಠಿರನು ಕೇಳಲು ಭೀಷ್ಮನು ತನ್ನ ಅದೇ ಪ್ರಶ್ನೆಗೆ ವ್ಯಾಸನು ಉತ್ತರಿಸಿದುದನ್ನು ಹೇಳಿದುದು (೧-೧೨).

13025001 ಯುಧಿಷ್ಠಿರ ಉವಾಚ|

13025001a ಇದಂ ಮೇ ತತ್ತ್ವತೋ ರಾಜನ್ವಕ್ತುಮರ್ಹಸಿ ಭಾರತ|

13025001c ಅಹಿಂಸಯಿತ್ವಾ ಕೇನೇಹ ಬ್ರಹ್ಮಹತ್ಯಾ ವಿಧೀಯತೇ||

ಯುಧಿಷ್ಠಿರನು ಹೇಳಿದನು: “ರಾಜನ್! ಭಾರತ! ಬ್ರಾಹ್ಮಣನನ್ನು ಹಿಂಸಿಸದಿದ್ದರೂ ಯಾವುದರಿಂದ ಬ್ರಹ್ಮಹತ್ಯಾ ದೋಷವು ಉಂಟಾಗುತ್ತದೆ? ಇದರ ಕುರಿತು ತತ್ತ್ವತಃ ಹೇಳಬೇಕು.”

13025002 ಭೀಷ್ಮ ಉವಾಚ|

13025002a ವ್ಯಾಸಮಾಮಂತ್ರ್ಯ ರಾಜೇಂದ್ರ ಪುರಾ ಯತ್ಪೃಷ್ಟವಾನಹಮ್|

13025002c ತತ್ತೇಽಹಂ ಸಂಪ್ರವಕ್ಷ್ಯಾಮಿ ತದಿಹೈಕಮನಾಃ ಶೃಣು||

ಭೀಷ್ಮನು ಹೇಳಿದನು: “ರಾಜೇಂದ್ರ! ಹಿಂದೆ ನಾನು ವ್ಯಾಸನನ್ನು ಆಮಂತ್ರಿಸಿ ಇದೇ ಪ್ರಶ್ನೆಯನ್ನು ಅವನಲ್ಲಿ ಕೇಳಿದ್ದೆನು. ಅದನ್ನೇ ನಾನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು.

13025003a ಚತುರ್ಥಸ್ತ್ವಂ ವಸಿಷ್ಠಸ್ಯ ತತ್ತ್ವಮಾಖ್ಯಾಹಿ ಮೇ ಮುನೇ|

13025003c ಅಹಿಂಸಯಿತ್ವಾ ಕೇನೇಹ ಬ್ರಹ್ಮಹತ್ಯಾ ವಿಧೀಯತೇ||

“ಮುನೇ! ನೀನು ವಸಿಷ್ಠನ ವಂಶದಲ್ಲಿ ನಾಲ್ಕನೆಯವನಾಗಿರುವೆ. ಬ್ರಾಹ್ಮಣನನ್ನು ಹಿಂಸಿಸದಿದ್ದರೂ ಯಾವುದರಿಂದ ಬ್ರಹ್ಮಹತ್ಯಾ ದೋಷವುಂಟಾಗುತ್ತದೆ ಎನ್ನುವುದನ್ನು ತತ್ತ್ವತಃ ನನಗೆ ಹೇಳು.”

13025004a ಇತಿ ಪೃಷ್ಟೋ ಮಹಾರಾಜ ಪರಾಶರಶರೀರಜಃ|

13025004c ಅಬ್ರವೀನ್ನಿಪುಣೋ ಧರ್ಮೇ ನಿಃಸಂಶಯಮನುತ್ತಮಮ್||

ಮಹಾರಾಜ! ಹೀಗೆ ಕೇಳಲು ಪರಾಶರಶರೀರಜ ನಿಪುಣನು ನಿಃಸಂಶಯವೂ ಅನುತ್ತಮವೂ ಆದ ಧರ್ಮವನ್ನು ಹೇಳಿದನು.

13025005a ಬ್ರಾಹ್ಮಣಂ ಸ್ವಯಮಾಹೂಯ ಭಿಕ್ಷಾರ್ಥೇ ಕೃಶವೃತ್ತಿನಮ್|

13025005c ಬ್ರೂಯಾನ್ನಾಸ್ತೀತಿ ಯಃ ಪಶ್ಚಾತ್ತಂ ವಿದ್ಯಾದ್ಬ್ರಹ್ಮಘಾತಿನಮ್||

“ಕೃಶವೃತ್ತಿಯಲ್ಲಿರುವ ಬ್ರಾಹ್ಮಣನನ್ನು ಸ್ವಯಂ ತಾನೇ ಭಿಕ್ಷೆಗೆಂದು ಆಹ್ವಾನಿಸಿ ಅವನು ಬಂದ ನಂತರ “ಇಲ್ಲ” ಎಂದು ಹೇಳುವವನು ಬ್ರಹ್ಮಘಾತಿಯೆಂದು ತಿಳಿಯಬೇಕು.

13025006a ಮಧ್ಯಸ್ಥಸ್ಯೇಹ ವಿಪ್ರಸ್ಯ ಯೋಽನೂಚಾನಸ್ಯ ಭಾರತ|

13025006c ವೃತ್ತಿಂ ಹರತಿ ದುರ್ಬುದ್ಧಿಸ್ತಂ ವಿದ್ಯಾದ್ಬ್ರಹ್ಮಘಾತಿನಮ್||

ಭಾರತ! ಯಾರ ತಂಟೆಗೂ ಹೋಗದೇ ಮಧ್ಯಸ್ಥನಾಗಿ ತನ್ನ ವೃತ್ತಿಯಲ್ಲಿರುವ ವಿದ್ವಾಂಸ ಬ್ರಾಹ್ಮಣನ ವೃತ್ತಿಯನ್ನು ಅಪಹರಿಸುವ ದುರ್ಬುದ್ಧಿಯು ಬ್ರಹ್ಮಘಾತಿಯೆಂದು ತಿಳಿಯಬೇಕು.

13025007a ಗೋಕುಲಸ್ಯ ತೃಷಾರ್ತಸ್ಯ ಜಲಾರ್ಥೇ ವಸುಧಾಧಿಪ|

13025007c ಉತ್ಪಾದಯತಿ ಯೋ ವಿಘ್ನಂ ತಂ ವಿದ್ಯಾದ್ಬ್ರಹ್ಮಘಾತಿನಮ್||

ವಸುಧಾಧಿಪ! ಬಾಯಾರಿದ ಹಸುಗಳಿಗೆ ನೀರನ್ನು ಕುಡಿಸುವುದರಲ್ಲಿ ವಿಘ್ನವನ್ನುಂಟುಮಾಡುವವನನ್ನು ಬ್ರಹ್ಮಘಾತಿಯೆಂದು ತಿಳಿಯಬೇಕು.

13025008a ಯಃ ಪ್ರವೃತ್ತಾಂ ಶ್ರುತಿಂ ಸಮ್ಯಕ್ಶಾಸ್ತ್ರಂ ವಾ ಮುನಿಭಿಃ ಕೃತಮ್|

13025008c ದೂಷಯತ್ಯನಭಿಜ್ಞಾಯ ತಂ ವಿದ್ಯಾದ್ಬ್ರಹ್ಮಘಾತಿನಮ್||

ಪ್ರವೃತ್ತವಾಗಿರುವ ಶ್ರುತಿ, ಅಥವಾ ಮುನಿಗಳು ಮಾಡಿಟ್ಟಿರುವ ಸಂಪೂರ್ಣ ಶಾಸ್ತ್ರವನ್ನು ಅಧ್ಯಯನ ಮಾಡದೇ ಯಾರು ದೂಷಿಸುತ್ತಾರೋ ಅವರು ಬ್ರಹ್ಮಘಾತಿಗಳೆಂದು ತಿಳಿಯಬೇಕು.

13025009a ಆತ್ಮಜಾಂ ರೂಪಸಂಪನ್ನಾಂ ಮಹತೀಂ ಸದೃಶೇ ವರೇ|

13025009c ನ ಪ್ರಯಚ್ಚತಿ ಯಃ ಕನ್ಯಾಂ ತಂ ವಿದ್ಯಾದ್ಬ್ರಹ್ಮಘಾತಿನಮ್||

ಬೆಳೆದಿರುವ ರೂಪಸಂಪನ್ನ ಮಗಳು ಕನ್ಯೆಯನ್ನು ಸದೃಶ ವರನಿಗೆ ಯಾರು ಕೊಡುವುದಿಲ್ಲವೋ ಅವನನ್ನು ಬ್ರಹ್ಮಘಾತಿಯೆಂದು ತಿಳಿಯಬೇಕು.

13025010a ಅಧರ್ಮನಿರತೋ ಮೂಢೋ ಮಿಥ್ಯಾ ಯೋ ವೈ ದ್ವಿಜಾತಿಷು|

13025010c ದದ್ಯಾನ್ಮರ್ಮಾತಿಗಂ ಶೋಕಂ ತಂ ವಿದ್ಯಾದ್ಬ್ರಹ್ಮಘಾತಿನಮ್||

ದ್ವಿಜಾತಿಯವರಿಗೆ ಮರ್ಮಗಳನ್ನು ಬೇಧಿಸುವ ಶೋಕವನ್ನು ತರುವ ಅಧರ್ಮನಿರತ ಮೂಡ ಸುಳ್ಳುಗಾರನು ಬ್ರಹ್ಮಘಾತಿಯೆಂದು ತಿಳಿಯಬೇಕು.

13025011a ಚಕ್ಷುಷಾ ವಿಪ್ರಹೀನಸ್ಯ ಪಂಗುಲಸ್ಯ ಜಡಸ್ಯ ವಾ|

13025011c ಹರೇತ ಯೋ ವೈ ಸರ್ವಸ್ವಂ ತಂ ವಿದ್ಯಾದ್ಬ್ರಹ್ಮಘಾತಿನಮ್||

ಕುರುಡ, ಕುಂಟ ಅಥವಾ ಮೂರ್ಖನ ಸರ್ವಸ್ವವನ್ನೂ ಅಪಹರಿಸುವವನು ಬ್ರಹ್ಮಘಾತಿಯೆಂದು ತಿಳಿಯಬೇಕು.

13025012a ಆಶ್ರಮೇ ವಾ ವನೇ ವಾ ಯೋ ಗ್ರಾಮೇ ವಾ ಯದಿ ವಾ ಪುರೇ|

13025012c ಅಗ್ನಿಂ ಸಮುತ್ಸೃಜೇನ್ಮೋಹಾತ್ತಂ ವಿದ್ಯಾದ್ಬ್ರಹ್ಮಘಾತಿನಮ್||

ಮೋಹದಿಂದ ಯಾರು ಆಶ್ರಮ, ವನ, ಗ್ರಾಮ ಅಥವಾ ನಗರಕ್ಕೆ ಬೆಂಕಿಯನ್ನಿಡುವನೋ ಅವನು ಬ್ರಹ್ಮಘಾತಿಯೆಂದು ತಿಳಿಯಬೇಕು.””

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಬ್ರಹ್ಮಘ್ನಕಥನೇ ಪಂಚವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಬ್ರಹ್ಮಘ್ನಕಥನ ಎನ್ನುವ ಇಪ್ಪತ್ತೈದನೇ ಅಧ್ಯಾಯವು.

Related image

Comments are closed.