Anushasana Parva: Chapter 26

ಅನುಶಾಸನ ಪರ್ವ: ದಾನಧರ್ಮ ಪರ್ವ

೨೬

ತೀರ್ಥಪ್ರಶಂಸಾ

ಯುಧಿಷ್ಠಿರನು ತೀರ್ಥಗಳ ಕುರಿತು ಕೇಳಲು ಭೀಷ್ಮನು ಅಂಗಿರಸನು ತೀರ್ಥಗಳಲ್ಲಿ ಸ್ನಾನಮಾಡುವುದರಿಂದ ಮರಣಾನಂತರದಲ್ಲಿ ಯಾವ ಫಲಗಳು ದೊರೆಯುತ್ತವೆ? ಎಂಬ ಗೌತಮನ ಪ್ರಶ್ನೆಗೆ ಉತ್ತರವಾಗಿ ಹೇಳಿದ ತೀರ್ಥವಂಶವನ್ನು ಹೇಳಿದುದು (೧-೬೬).

13026001 ಯುಧಿಷ್ಠಿರ ಉವಾಚ

13026001a ತೀರ್ಥಾನಾಂ ದರ್ಶನಂ ಶ್ರೇಯಃ ಸ್ನಾನಂ ಚ ಭರತರ್ಷಭ|

13026001c ಶ್ರವಣಂ ಚ ಮಹಾಪ್ರಾಜ್ಞ ಶ್ರೋತುಮಿಚ್ಚಾಮಿ ತತ್ತ್ವತಃ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಮಹಾಪ್ರಾಜ್ಞ! ತೀರ್ಥಗಳ ದರ್ಶನ, ಅವುಗಳಲ್ಲಿ ಸ್ನಾನ ಮತ್ತು ಅವುಗಳ ಮಹಾತ್ಮ್ಯಶ್ರವಣಗಳು ಶ್ರೇಯಸ್ಕರವು. ಅದರ ಕುರಿತು ತತ್ತ್ವತಃ ಕೇಳಬಯಸುತ್ತೇನೆ.

13026002a ಪೃಥಿವ್ಯಾಂ ಯಾನಿ ತೀರ್ಥಾನಿ ಪುಣ್ಯಾನಿ ಭರತರ್ಷಭ|

13026002c ವಕ್ತುಮರ್ಹಸಿ ಮೇ ತಾನಿ ಶ್ರೋತಾಸ್ಮಿ ನಿಯತಃ ಪ್ರಭೋ||

ಭರತರ್ಷಭ! ಪ್ರಭೋ! ಪೃಥ್ವಿಯಲ್ಲಿ ಯಾವ ಪುಣ್ಯ ತೀರ್ಥಗಳಿವೆಯೋ ಅವುಗಳ ಕುರಿತು ಹೇಳಬೇಕು. ನಿಯತನಾಗಿ ಕೇಳುತ್ತೇನೆ.”

13026003 ಭೀಷ್ಮ ಉವಾಚ

13026003a ಇಮಮಂಗಿರಸಾ ಪ್ರೋಕ್ತಂ ತೀರ್ಥವಂಶಂ ಮಹಾದ್ಯುತೇ|

13026003c ಶ್ರೋತುಮರ್ಹಸಿ ಭದ್ರಂ ತೇ ಪ್ರಾಪ್ಸ್ಯಸೇ ಧರ್ಮಮುತ್ತಮಮ್||

ಭೀಷ್ಮನು ಹೇಳಿದನು: “ಮಹಾದ್ಯುತೇ! ನಿನಗೆ ಮಂಗಳವಾಗಲಿ! ಅಂಗಿರಸನು ಹೇಳಿರುವ ಈ ತೀರ್ಥವಂಶವನ್ನು ನೀನು ಕೇಳಲು ಅರ್ಹನಾಗಿರುವೆ. ಇದರಿಂದ ಉತ್ತಮ ಧರ್ಮವನ್ನು ಹೊಂದುತ್ತೀಯೆ.

13026004a ತಪೋವನಗತಂ ವಿಪ್ರಮಭಿಗಮ್ಯ ಮಹಾಮುನಿಮ್|

13026004c ಪಪ್ರಚ್ಚಾಂಗಿರಸಂ ವೀರ ಗೌತಮಃ ಸಂಶಿತವ್ರತಃ||

ವೀರ! ಸಂಶಿತವ್ರತ ಗೌತಮನು ತಪೋವನಕ್ಕೆ ಹೋಗಿ ಮಹಾಮುನಿ ವಿಪ್ರ ಅಂಗಿರಸನ ಬಳಿಸಾರಿ ಅವನಲ್ಲಿ ಕೇಳಿದನು:

13026005a ಅಸ್ತಿ ಮೇ ಭಗವನ್ಕಶ್ಚಿತ್ತೀರ್ಥೇಭ್ಯೋ ಧರ್ಮಸಂಶಯಃ|

13026005c ತತ್ಸರ್ವಂ ಶ್ರೋತುಮಿಚ್ಚಾಮಿ ತನ್ಮೇ ಶಂಸ ಮಹಾಮುನೇ||

“ಮಹಾಮುನೇ! ಭಗವನ್! ತೀರ್ಥಗಳ ಕುರಿತು ನನ್ನಲ್ಲಿ ಕೆಲವು ಧರ್ಮಸಂಶಯಗಳಿವೆ. ಅವೆಲ್ಲವನ್ನೂ ಕೇಳಬಯಸುತ್ತೇನೆ. ಅದನ್ನು ನನಗೆ ಹೇಳು.

13026006a ಉಪಸ್ಪೃಶ್ಯ ಫಲಂ ಕಿಂ ಸ್ಯಾತ್ತೇಷು ತೀರ್ಥೇಷು ವೈ ಮುನೇ|

13026006c ಪ್ರೇತ್ಯಭಾವೇ ಮಹಾಪ್ರಾಜ್ಞ ತದ್ಯಥಾಸ್ತಿ ತಥಾ ವದ||

ಮುನೇ! ಮಹಾಪ್ರಾಜ್ಞ! ಆ ತೀರ್ಥಗಳಲ್ಲಿ ಸ್ನಾನಮಾಡುವುದರಿಂದ ಮರಣಾನಂತರದಲ್ಲಿ ಯಾವ ಫಲಗಳು ದೊರೆಯುತ್ತವೆ? ಈ ವಿಷಯದ ಕುರಿತು ಇದ್ದಹಾಗೆ ಹೇಳು.”

13026007 ಅಂಗಿರಾ ಉವಾಚ

13026007a ಸಪ್ತಾಹಂ ಚಂದ್ರಭಾಗಾಂ ವೈ ವಿತಸ್ತಾಮೂರ್ಮಿಮಾಲಿನೀಮ್|

13026007c ವಿಗಾಹ್ಯ ವೈ ನಿರಾಹಾರೋ ನಿರ್ಮಮೋ ಮುನಿವದ್ಭವೇತ್||

ಅಂಗಿರಸನು ಹೇಳಿದನು: “ಚಂದ್ರಭಾಗಾ[1] ಮತ್ತು ಅಲೆಗಳನ್ನೇ ಮಾಲೆಗಳನ್ನಾಗಿ ಧರಿಸಿರುವ ವಿತಸ್ತಾ[2] ನದಿಗಳಲ್ಲಿ ಏಳು ದಿನಗಳು ನಿರಾಹಾರನಾಗಿ ಸ್ನಾನಮಾಡಿದರೆ ನಿರ್ಮಲ ಮುನಿಯಂತೆಯೇ ಆಗುತ್ತಾನೆ.

13026008a ಕಾಶ್ಮೀರಮಂಡಲೇ ನದ್ಯೋ ಯಾಃ ಪತಂತಿ ಮಹಾನದಮ್|

13026008c ತಾ ನದೀಃ ಸಿಂಧುಮಾಸಾದ್ಯ ಶೀಲವಾನ್ಸ್ವರ್ಗಮಾಪ್ನುಯಾತ್||

ಕಾಶ್ಮೀರಮಂಡಲದಲ್ಲಿರುವ ಯಾವ ನದಿಗಳು ಮಹಾನದಿ ಸಿಂಧುವನ್ನು ಸೇರುವವೋ ಆ ನದಿಗಳಲ್ಲಿ ಮತ್ತು ಸಿಂಧುವಿನಲ್ಲಿ ಸ್ನಾನಮಾಡಿದ ಶೀಲವಂತನು ಸ್ವರ್ಗವನ್ನು ಪಡೆಯುತ್ತಾನೆ.

13026009a ಪುಷ್ಕರಂ ಚ ಪ್ರಭಾಸಂ ಚ ನೈಮಿಷಂ ಸಾಗರೋದಕಮ್|

13026009c ದೇವಿಕಾಮಿಂದ್ರಮಾರ್ಗಂ ಚ ಸ್ವರ್ಣಬಿಂದುಂ ವಿಗಾಹ್ಯ ಚ|

13026009E ವಿಬೋಧ್ಯತೇ ವಿಮಾನಸ್ಥಃ ಸೋಽಪ್ಸರೋಭಿರಭಿಷ್ಟುತಃ||

ಪುಷ್ಕರ, ಪ್ರಭಾಸ, ನೈಮಿಷ, ಸಮುದ್ರ, ದೇವಿಕಾ, ಇಂದ್ರಮಾರ್ಗ ಮತ್ತು ಸ್ವರ್ಣಬಿಂದುಗಳಲ್ಲಿ ಸ್ನಾನಮಾಡಿದವನು ವಿಮಾನಸ್ಥನಾಗಿ ಅಪ್ಸರೆಯರಿಂದ ಸ್ತುತಿಸಲ್ಪಟ್ಟು ಸ್ವರ್ಗಕ್ಕೆ ಹೋಗುತ್ತಾನೆ.

13026010a ಹಿರಣ್ಯಬಿಂದುಂ ವಿಕ್ಷೋಭ್ಯ ಪ್ರಯತಶ್ಚಾಭಿವಾದ್ಯ ತಮ್|

13026010c ಕುಶೇಶಯಂ ಚ ದೇವತ್ವಂ ಪೂಯತೇ ತಸ್ಯ ಕಿಲ್ಬಿಷಮ್||

ಪ್ರಯತಾತ್ಮನಾಗಿದ್ದುಕೊಂಡು ಹಿರಣ್ಯಬಿಂದುವಿನಲ್ಲಿ ಸ್ನಾನಮಾಡಿ ಅಲ್ಲಿದ್ದ ದೇವತೆ ಕುಶೇಶಯನನ್ನು ಪೂಜಿಸಿದವನ ಪಾಪಗಳು ದೂರವಾಗುತ್ತವೆ.

13026011a ಇಂದ್ರತೋಯಾಂ ಸಮಾಸಾದ್ಯ ಗಂಧಮಾದನಸಂನಿಧೌ|

13026011c ಕರತೋಯಾಂ ಕುರಂಗೇಷು ತ್ರಿರಾತ್ರೋಪೋಷಿತೋ ನರಃ|

13026011e ಅಶ್ವಮೇಧಮವಾಪ್ನೋತಿ ವಿಗಾಹ್ಯ ನಿಯತಃ ಶುಚಿಃ||

ಗಂಧಮಾದನದ ಬಳಿಯಲ್ಲಿರುವ ಇಂದ್ರತೋಯಕ್ಕೆ ಹೋಗಿ ಮತ್ತು ಕುರಂಗದಲ್ಲಿರುವ ಕರತೋಯಾ ನದಿಗೆ ಹೋಗಿ ಅಲ್ಲಿ ನಿಯತನಾಗಿ ಶುಚಿಯಾಗಿ ಸ್ನಾನಮಾಡಿ  ಮೂರುರಾತ್ರಿಗಳು ಉಪವಾಸದಲ್ಲಿರುವವನು ಅಶ್ವಮೇಧಯಾಗದ ಫಲವನ್ನು ಪಡೆಯುತ್ತಾನೆ.

13026012a ಗಂಗಾದ್ವಾರೇ ಕುಶಾವರ್ತೇ ಬಿಲ್ವಕೇ ನೇಮಿಪರ್ವತೇ|

13026012c ತಥಾ ಕನಖಲೇ ಸ್ನಾತ್ವಾ ಧೂತಪಾಪ್ಮಾ ದಿವಂ ವ್ರಜೇತ್||

ಗಂಗಾದ್ವಾರ, ಕುಶಾವರ್ತ, ನೇಮಿಪರ್ವತದಲ್ಲಿರುವ ಬಿಲ್ವಕ ಮತ್ತು ಕನಖಲಗಳಲ್ಲಿ ಸ್ನಾನಮಾಡಿದವನು ಪಾಪಗಳನ್ನು ಕಳೆದುಕೊಂಡು ದಿವಕ್ಕೆ ಹೋಗುತ್ತಾನೆ.

13026013a ಅಪಾಂ ಹ್ರದ ಉಪಸ್ಪೃಶ್ಯ ವಾಜಪೇಯಫಲಂ ಲಭೇತ್|

13026013c ಬ್ರಹ್ಮಚಾರೀ ಜಿತಕ್ರೋಧಃ ಸತ್ಯಸಂಧಸ್ತ್ವಹಿಂಸಕಃ||

ಅಪಾಂಹ್ರದದಲ್ಲಿ ಸ್ನಾನಮಾಡಿದ ಬ್ರಹ್ಮಚಾರಿ ಜಿತಕ್ರೋಧ ಸತ್ಯಸಂಧ ಅಹಿಂಸಕನಿಗೆ ವಾಜಪೇಯದ ಫಲವು ದೊರೆಯುತ್ತದೆ.

13026014a ಯತ್ರ ಭಾಗೀರಥೀ ಗಂಗಾ ಭಜತೇ ದಿಶಮುತ್ತರಾಮ್|

13026014c ಮಹೇಶ್ವರಸ್ಯ ನಿಷ್ಠಾನೇ[3] ಯೋ ನರಸ್ತ್ವಭಿಷಿಚ್ಯತೇ|

13026014e ಏಕಮಾಸಂ ನಿರಾಹಾರಃ ಸ್ವಯಂ ಪಶ್ಯತಿ ದೇವತಾಃ||

ಭಾಗೀರಥಿಯು ಬೀಳುವ ಉತ್ತರದಿಕ್ಕಿನಲ್ಲಿರುವ ಮಹೇಶ್ವರನ ಸನ್ನಿಧಾನದಲ್ಲಿ ಯಾವ ನರನು ಸ್ನಾನಮಾಡಿ ಒಂದು ಮಾಸ ನಿರಾಹಾರನಾಗಿರುತ್ತಾನೋ ಅವನು ಸ್ವಯಂ ಮಹಾದೇವನನ್ನು ಕಾಣುತ್ತಾನೆ.

13026015a ಸಪ್ತಗಂಗೇ ತ್ರಿಗಂಗೇ ಚ ಇಂದ್ರಮಾರ್ಗೇ ಚ ತರ್ಪಯನ್|

13026015c ಸುಧಾಂ ವೈ ಲಭತೇ ಭೋಕ್ತುಂ ಯೋ ನರೋ ಜಾಯತೇ ಪುನಃ||

ಸಪ್ತಗಂಗೆ, ತ್ರಿಗಂಗೆ ಮತ್ತು ಇಂದ್ರಮಾರ್ಗಗಳಲ್ಲಿ ತರ್ಪಣಗಳನ್ನಿತ್ತ ನರನು ಪುನಃ ಹುಟ್ಟಿದರೆ ಭುಂಜಿಸಲು ಅಮೃತವನ್ನೇ ಪಡೆಯುತ್ತಾನೆ.

13026016a ಮಹಾಶ್ರಮ ಉಪಸ್ಪೃಶ್ಯ ಯೋಽಗ್ನಿಹೋತ್ರಪರಃ ಶುಚಿಃ|

13026016c ಏಕಮಾಸಂ ನಿರಾಹಾರಃ ಸಿದ್ಧಿಂ ಮಾಸೇನ ಸ ವ್ರಜೇತ್||

ಮಹಾಶ್ರಮದಲ್ಲಿ ಸ್ನಾನಮಾಡಿ ಅಗ್ನಿಹೋತ್ರಪರನಾಗಿಯೂ ಶುಚಿಯಾಗಿಯೂ ಇದ್ದು ಒಂದು ಮಾಸ ನಿರಾಹಾರನಾಗಿರುವವನಿಗೆ ಒಂದೇ ಮಾಸದಲ್ಲಿ ಸಿದ್ಧಿಯಾಗುತ್ತದೆ.

13026017a ಮಹಾಹ್ರದ ಉಪಸ್ಪೃಶ್ಯ ಭೃಗುತುಂಗೇ ತ್ವಲೋಲುಪಃ|

13026017c ತ್ರಿರಾತ್ರೋಪೋಷಿತೋ ಭೂತ್ವಾ ಮುಚ್ಯತೇ ಬ್ರಹ್ಮಹತ್ಯಯಾ||

ಭೃಗುತುಂಗದಲ್ಲಿರುವ ಮಹಾಹ್ರದದಲ್ಲಿ ಸ್ನಾನಮಾಡಿ ಅಲೋಲುಪನಾಗಿ ಮೂರು ರಾತ್ರಿ ಉಪವಾಸದಲ್ಲಿರುವವನು ಬ್ರಹ್ಮಹತ್ಯಾದೋಷದಿಂದ ಮುಕ್ತನಾಗುತ್ತಾನೆ.

13026018a ಕನ್ಯಾಕೂಪ ಉಪಸ್ಪೃಶ್ಯ ಬಲಾಕಾಯಾಂ ಕೃತೋದಕಃ|

13026018c ದೇವೇಷು ಕೀರ್ತಿಂ ಲಭತೇ ಯಶಸಾ ಚ ವಿರಾಜತೇ||

ಕನ್ಯಾಕೂಪದಲ್ಲಿ ಸ್ನಾನಮಾಡಿ ಬಲಾಕೆಯಲ್ಲಿ ಉದಕ ಕ್ರಿಯೆಗಳನ್ನು ಮಾಡುವವನು ದೇವತೆಗಳಲ್ಲಿಯೂ ಕೀರ್ತಿಯನ್ನು ಪಡೆದು ಯಶಸ್ಸಿನಿಂದ ವಿರಾಜಿಸುತ್ತಾನೆ.

13026019a ದೇಶಕಾಲ ಉಪಸ್ಪೃಶ್ಯ[4] ತಥಾ ಸುಂದರಿಕಾಹ್ರದೇ|

13026019c ಅಶ್ವಿಭ್ಯಾಂ ರೂಪವರ್ಚಸ್ಯಂ ಪ್ರೇತ್ಯ ವೈ ಲಭತೇ ನರಃ||

ದೇಶಕಾಲ ಮತ್ತು ಸುಂದರಿಕಾಹ್ರದಗಳಲ್ಲಿ ಸ್ನಾನಮಾಡಿದ ನರನು ಮರಣಾನಂತರ ಅಶ್ವಿನಿಯರ ರೂಪವರ್ಚಸ್ಸುಗಳನ್ನು ಪಡೆಯುತ್ತಾನೆ.

13026020a ಮಹಾಗಂಗಾಮುಪಸ್ಪೃಶ್ಯ ಕೃತ್ತಿಕಾಂಗಾರಕೇ ತಥಾ|

13026020c ಪಕ್ಷಮೇಕಂ ನಿರಾಹಾರಃ ಸ್ವರ್ಗಮಾಪ್ನೋತಿ ನಿರ್ಮಲಃ||

ಮಹಾಗಂಗೆ, ಮತ್ತು ಕೃತ್ತಿಕ-ಅಂಗಾರಕಗಳಲ್ಲಿ ಸ್ನಾನಮಾಡಿ ಒಂದು ಪಕ್ಷ ನಿರಾಹಾರನಾಗಿದ್ದ ನಿರ್ಮಲನು ಸ್ವರ್ಗವನ್ನು ಪಡೆಯುತ್ತಾನೆ.

13026021a ವೈಮಾನಿಕ ಉಪಸ್ಪೃಶ್ಯ ಕಿಂಕಿಣೀಕಾಶ್ರಮೇ ತಥಾ|

13026021c ನಿವಾಸೇಽಪ್ಸರಸಾಂ ದಿವ್ಯೇ ಕಾಮಚಾರೀ ಮಹೀಯತೇ||

ವೈಮಾನಿಕ ಮತ್ತು ಕಿಂಕಿಣೀಕಾಶ್ರಮಗಳಲ್ಲಿ ಸ್ನಾನಮಾಡಿದವನು ದಿವ್ಯ ಅಪ್ಸರೆಯರ ನಿವಾಸಗಳಲ್ಲಿ ಕಾಮಚಾರಿಯಾಗಿ ಮೆರೆಯುತ್ತಾನೆ.

13026022a ಕಾಲಿಕಾಶ್ರಮಮಾಸಾದ್ಯ ವಿಪಾಶಾಯಾಂ ಕೃತೋದಕಃ|

13026022c ಬ್ರಹ್ಮಚಾರೀ ಜಿತಕ್ರೋಧಸ್ತ್ರಿರಾತ್ರಾನ್ಮುಚ್ಯತೇ ಭವಾತ್||

ಕಾಲಿಕಾಶ್ರಮಕ್ಕೆ ಹೋಗಿ ವಿಪಾಶಾದಲ್ಲಿ ಮೂರು ರಾತ್ರಿಗಳು ಉದಕಕ್ರಿಯೆಗಳನ್ನು ಮಾಡುವ ಬ್ರಹ್ಮಚಾರೀ ಜಿತಕ್ರೋಧನು ಭವಬಂಧನದಿಂದ ಮುಕ್ತನಾಗುತ್ತಾನೆ.

13026023a ಆಶ್ರಮೇ ಕೃತ್ತಿಕಾನಾಂ ತು ಸ್ನಾತ್ವಾ ಯಸ್ತರ್ಪಯೇತ್ಪಿತೄನ್|

13026023c ತೋಷಯಿತ್ವಾ ಮಹಾದೇವಂ ನಿರ್ಮಲಃ ಸ್ವರ್ಗಮಾಪ್ನುಯಾತ್||

ಕೃತ್ತಿಕರ ಆಶ್ರಮದಲ್ಲಿ ಸ್ನಾನಮಾಡಿ ಪಿತೃಗಳಿಗೆ ತರ್ಪಣಗಳನ್ನು ನೀಡುವ ನಿರ್ಮಲನು ಮಹಾದೇವನನ್ನು ಸಂತುಷ್ಟಗೊಳಿಸಿ ಸ್ವರ್ಗವನ್ನು ಪಡೆಯುತ್ತಾನೆ.

13026024a ಮಹಾಪುರ ಉಪಸ್ಪೃಶ್ಯ ತ್ರಿರಾತ್ರೋಪೋಷಿತೋ ನರಃ|

13026024c ತ್ರಸಾನಾಂ ಸ್ಥಾವರಾಣಾಂ ಚ ದ್ವಿಪದಾನಾಂ ಭಯಂ ತ್ಯಜೇತ್||

ಮಹಾಪುರದಲ್ಲಿ ಸ್ನಾನಮಾಡಿ ಮೂರು ರಾತ್ರಿ ಉಪವಾಸದಿಂದಿರುವ ನರನು ಚರಾಚರಗಳಿಂದಲೂ ಮತ್ತು ಮನುಷ್ಯರಿಂದಲೂ ಉಂಟಾಗುವ ಭಯವನ್ನು ತೊರೆಯುತ್ತಾನೆ.

13026025a ದೇವದಾರುವನೇ ಸ್ನಾತ್ವಾ ಧೂತಪಾಪ್ಮಾ ಕೃತೋದಕಃ|

13026025c ದೇವಲೋಕಮವಾಪ್ನೋತಿ ಸಪ್ತರಾತ್ರೋಷಿತಃ ಶುಚಿಃ||

ದೇವದಾರುವನದಲ್ಲಿ ಸ್ನಾನಮಾಡಿ ಪಾಪಗಳನ್ನು ತೊಳೆದುಕೊಂಡು ಉದಕಕ್ರಿಯೆಗಳನ್ನು ಮಾಡಿ ಏಳು ರಾತ್ರಿಗಳು ಉಪವಾಸದಿಂದಿರುವ ಶುಚಿಯು ದೇವಲೋಕವನ್ನು ಪಡೆಯುತ್ತಾನೆ.

13026026a ಕೌಶಂತೇ[5] ಚ ಕುಶಸ್ತಂಬೇ ದ್ರೋಣಶರ್ಮಪದೇ ತಥಾ|

13026026c ಆಪಃಪ್ರಪತನೇ ಸ್ನಾತಃ ಸೇವ್ಯತೇ ಸೋಽಪ್ಸರೋಗಣೈಃ||

ಕೌಶಾಂತ, ಕುಶಸ್ತಂಬ ಮತ್ತು ದ್ರೋಣಶರ್ಮಪದಗಳಲ್ಲಿ ಧುಮುಕುವ ಜಲಪಾತಗಳಲ್ಲಿ ಸ್ನಾನಮಾಡಿದವನನ್ನು ಅಪ್ಸರಗಣಗಳು ಸೇವಿಸುತ್ತವೆ.

13026027a ಚಿತ್ರಕೂಟೇ ಜನಸ್ಥಾನೇ ತಥಾ ಮಂದಾಕಿನೀಜಲೇ|

13026027c ವಿಗಾಹ್ಯ ವೈ ನಿರಾಹಾರೋ ರಾಜಲಕ್ಷ್ಮೀಂ ನಿಗಚ್ಚತಿ||

ಚಿತ್ರಕೂಟ, ಜನಸ್ಥಾನ ಮತ್ತು ಮಂದಾಕಿನೀ ಜಲಗಳಲ್ಲಿ ನಿರಾಹಾರನಾಗಿದ್ದುಕೊಂಡು ಸ್ನಾನಮಾಡಿದವನು ರಾಜಲಕ್ಷ್ಮಿಯನ್ನು ಪಡೆಯುತ್ತಾನೆ.

13026028a ಶ್ಯಾಮಾಯಾಸ್ತ್ವಾಶ್ರಮಂ ಗತ್ವಾ ಉಷ್ಯ ಚೈವಾಭಿಷಿಚ್ಯ ಚ|

13026028c ತ್ರೀಂಸ್ತ್ರಿರಾತ್ರಾನ್ಸ ಸಂಧಾಯ ಗಂಧರ್ವನಗರೇ ವಸೇತ್[6]||

ಶ್ಯಾಮಾಶ್ರಮಕ್ಕೆ ಹೋಗಿ ಅಲ್ಲಿ ಉಳಿದು ಸ್ನಾನಮಾಡಿ ಮೂರು ರಾತ್ರಿಗಳು ಕಳೆದವನು ಗಂಧರ್ವನಗರದಲ್ಲಿ ವಾಸಿಸುತ್ತಾನೆ.

13026029a ರಮಣ್ಯಾಂ ಚ ಉಪಸ್ಪೃಶ್ಯ ತಥಾ ವೈ ಗಂಧತಾರಿಕೇ|

13026029c ಏಕಮಾಸಂ ನಿರಾಹಾರಸ್ತ್ವಂತರ್ಧಾನಫಲಂ ಲಭೇತ್||

ರಮಣಿ ಮತ್ತು ಗಂಧತಾರಿಕೆಗಳಲ್ಲಿ ಸ್ನಾನಮಾಡಿ ಒಂದು ತಿಂಗಳು ನಿರಾಹಾರನಾಗಿರುವವನಿಗೆ ಅಂತರ್ಧಾನಫಲವು ದೊರೆಯುತ್ತದೆ.

13026030a ಕೌಶಿಕೀದ್ವಾರಮಾಸಾದ್ಯ ವಾಯುಭಕ್ಷಸ್ತ್ವಲೋಲುಪಃ|

13026030c ಏಕವಿಂಶತಿರಾತ್ರೇಣ ಸ್ವರ್ಗಮಾರೋಹತೇ ನರಃ||

ಕೌಶಿಕೀದ್ವಾರಕ್ಕೆ ಹೋಗಿ ವಾಯುಭಕ್ಷಕನಾಗಿ ಅಲೋಲುಪನಾಗಿರುವ ನರನು ಇಪ್ಪತ್ತೊಂದು ರಾತ್ರಿಗಳಲ್ಲಿ ಸ್ವರ್ಗವನ್ನೇರುತ್ತಾನೆ.

13026031a ಮತಂಗವಾಪ್ಯಾಂ ಯಃ ಸ್ನಾಯಾದೇಕರಾತ್ರೇಣ ಸಿಧ್ಯತಿ|

13026031c ವಿಗಾಹತಿ ಹ್ಯನಾಲಂಬಮಂಧಕಂ ವೈ ಸನಾತನಮ್||

13026032a ನೈಮಿಷೇ ಸ್ವರ್ಗತೀರ್ಥೇ ಚ ಉಪಸ್ಪೃಶ್ಯ ಜಿತೇಂದ್ರಿಯಃ|

13026032c ಫಲಂ ಪುರುಷಮೇಧಸ್ಯ ಲಭೇನ್ಮಾಸಂ ಕೃತೋದಕಃ||

ಮತಂಗವಾಪಿಯಲ್ಲಿ ಸ್ನಾನಮಾಡುವುದರಿಂದ ಒಂದೇ ರಾತ್ರಿಯಲ್ಲಿ ಸಿದ್ಧಿಯಾಗುತ್ತದೆ. ಅನಾಲಂಬ, ಅಂಧಕ, ಸನಾತನ ಮತ್ತು ನೈಮಿಷಾರಣ್ಯದ ಸ್ವರ್ಗತೀರ್ಥಗಳಲ್ಲಿ ಒಂದು ತಿಂಗಳು ಸ್ನಾನಮಾಡಿ ಉದಕಕ್ರಿಯೆಗಳನ್ನು ಮಾಡಿದ ಜಿತೇಂದ್ರಿಯನಿಗೆ ಪುರುಷಮೇಧದ ಫಲವು ದೊರಕುತ್ತದೆ.

13026033a ಗಂಗಾಹ್ರದ ಉಪಸ್ಪೃಶ್ಯ ತಥಾ ಚೈವೋತ್ಪಲಾವನೇ|

13026033c ಅಶ್ವಮೇಧಮವಾಪ್ನೋತಿ ತತ್ರ ಮಾಸಂ ಕೃತೋದಕಃ||

ಗಂಗಾಹ್ರದ ಮತ್ತು ಉತ್ಪಲಾವನಗಳಲ್ಲಿ ಒಂದು ತಿಂಗಳು ಸ್ನಾನಮಾಡಿ ಉದಕಕ್ರಿಯೆಗಳನ್ನು ಮಾಡಿದವನಿಗೆ ಅಶ್ವಮೇಧದ ಫಲವು ದೊರಕುತ್ತದೆ.

13026034a ಗಂಗಾಯಮುನಯೋಸ್ತೀರ್ಥೇ ತಥಾ ಕಾಲಂಜರೇ ಗಿರೌ|[7]

13026034c ಷಷ್ಟಿಹ್ರದ ಉಪಸ್ಪೃಶ್ಯ ದಾನಂ ನಾನ್ಯದ್ವಿಶಿಷ್ಯತೇ||

ಗಂಗಾ-ಯಮುನೆಯರ ತೀರ್ಥಗಳಲ್ಲಿ ಮತ್ತು ಕಾಲಂಜರ ಗಿರಿಯಲ್ಲಿನ ಷಷ್ಟಿಹ್ರದದಲ್ಲಿ ಸ್ನಾನಮಾಡಿದರೆ ಯಾವ ದಾನಕ್ಕಿಂತಲೂ ಹೆಚ್ಚಿನ ಪುಣ್ಯವು ದೊರೆಯುತ್ತದೆ.

13026035a ದಶ ತೀರ್ಥಸಹಸ್ರಾಣಿ ತಿಸ್ರಃ ಕೋಟ್ಯಸ್ತಥಾಪರಾಃ|

13026035c ಸಮಾಗಚ್ಚಂತಿ ಮಾಘ್ಯಾಂ ತು ಪ್ರಯಾಗೇ ಭರತರ್ಷಭ||

ಭರತರ್ಷಭ! ಮಾಘಮಾಸದಲ್ಲಿ ಪ್ರಯಾಗದಲ್ಲಿ ಮೂರು ಕೋಟಿ ಹತ್ತು ಸಾವಿರಕ್ಕಿಂತಲೂ ಹೆಚ್ಚು ತೀರ್ಥಗಳು ಬಂದು ಸೇರುತ್ತವೆ.

13026036a ಮಾಘಮಾಸಂ ಪ್ರಯಾಗೇ ತು ನಿಯತಃ ಸಂಶಿತವ್ರತಃ|

13026036c ಸ್ನಾತ್ವಾ ತು ಭರತಶ್ರೇಷ್ಠ ನಿರ್ಮಲಃ ಸ್ವರ್ಗಮಾಪ್ನುಯಾತ್||

ಭರತಶ್ರೇಷ್ಠ! ಮಾಘಮಾಸದಲ್ಲಿ ಪ್ರಯಾಗದಲ್ಲಿ ಸ್ನಾನಮಾಡಿದ ನಿಯತ, ಸಂಶಿತವ್ರತ ನಿರ್ಮಲನು ಸ್ವರ್ಗಕ್ಕೆ ಹೋಗುತ್ತಾನೆ.

13026037a ಮರುದ್ಗಣ ಉಪಸ್ಪೃಶ್ಯ ಪಿತೄಣಾಮಾಶ್ರಮೇ ಶುಚಿಃ|

13026037c ವೈವಸ್ವತಸ್ಯ ತೀರ್ಥೇ ಚ ತೀರ್ಥಭೂತೋ ಭವೇನ್ನರಃ||

ಮರುದ್ಗಣದಲ್ಲಿ, ಪಿತೃಗಳ ಆಶ್ರಮದಲ್ಲಿ ಮತ್ತು ವೈವಸ್ವತ ತೀರ್ಥಗಳಲ್ಲಿ ಸ್ನಾನಮಾಡಿದ ಶುಚಿ ನರನು ತೀರ್ಥಭೂತನಾಗುತ್ತಾನೆ.

13026038a ತಥಾ ಬ್ರಹ್ಮಶಿರೋ ಗತ್ವಾ ಭಾಗೀರಥ್ಯಾಂ ಕೃತೋದಕಃ|

13026038c ಏಕಮಾಸಂ ನಿರಾಹಾರಃ ಸೋಮಲೋಕಮವಾಪ್ನುಯಾತ್||

ಹಾಗೆಯೇ ಬ್ರಹ್ಮಶಿರಕ್ಕೆ ಹೋಗಿ ಭಾಗೀರಥಿಯಲ್ಲಿ ಉದಕ ಕ್ರಿಯೆಗಳನ್ನು ಮಾಡಿ ಒಂದು ತಿಂಗಳು ನಿರಾಹಾರಿಯಾಗಿರುವವನು ಸೋಮಲೋಕವನ್ನು ಪಡೆಯುತ್ತಾನೆ.

13026039a ಕಪೋತಕೇ ನರಃ ಸ್ನಾತ್ವಾ ಅಷ್ಟಾವಕ್ರೇ ಕೃತೋದಕಃ|

13026039c ದ್ವಾದಶಾಹಂ ನಿರಾಹಾರೋ ನರಮೇಧಫಲಂ ಲಭೇತ್||

ಕಪೋತಕದಲ್ಲಿ ಸ್ನಾನಮಾಡಿ ಅಷ್ಟಾವಕ್ರದಲ್ಲಿ ಉದಕಕ್ರಿಯೆಗಳನ್ನು ಮಾಡಿ ಹನ್ನೆರಡು ದಿನ ನಿರಾಹಾರನಾಗಿರುವವನಿಗೆ ನರಮೇಧದ ಫಲವು ದೊರೆಯುತ್ತದೆ.

13026040a ಮುಂಜಪೃಷ್ಠಂ ಗಯಾಂ ಚೈವ ನಿರೃತಿಂ ದೇವಪರ್ವತಮ್|

13026040c ತೃತೀಯಾಂ ಕ್ರೌಂಚಪಾದೀಂ ಚ ಬ್ರಹ್ಮಹತ್ಯಾ ವಿಶುಧ್ಯತಿ||

ಗಯೆಯಲ್ಲಿರುವ ಮುಂಜಪೃಷ್ಠ, ನಿರೃತಿಯಲ್ಲಿರುವ ದೇವಪರ್ವತ ಮತ್ತು ಮೂರನೆಯದಾದ ಕ್ರೌಂಚಪಾದೀ ತೀರ್ಥಗಳಲ್ಲಿ ಸ್ನಾನಮಾಡುವುದರಿಂದ ಬ್ರಹ್ಮಹತ್ಯಾದೋಶವನ್ನೂ ಕಳೆದುಕೊಂಡು ಶುದ್ಧನಾಗುತ್ತಾನೆ.

13026041a ಕಲಶ್ಯಾಂ ವಾಪ್ಯುಪಸ್ಪೃಶ್ಯ ವೇದ್ಯಾಂ ಚ ಬಹುಶೋಜಲಾಮ್|

13026041c ಅಗ್ನೇಃ ಪುರೇ ನರಃ ಸ್ನಾತ್ವಾ ವಿಶಾಲಾಯಾಂ ಕೃತೋದಕಃ|

13026041e ದೇವಹ್ರದ ಉಪಸ್ಪೃಶ್ಯ ಬ್ರಹ್ಮಭೂತೋ ವಿರಾಜತೇ||

ಕಲಶದ ನೀರಿನಲ್ಲಿ ಸ್ನಾನಮಾಡಿದರೆ ಅನೇಕ ತೀರ್ಥಗಳಲ್ಲಿ ಸ್ನಾನಮಾಡಿದ ಫಲವು ದೊರೆಯುತ್ತದೆ. ಅಗ್ನಿಪುರದಲ್ಲಿನ ವಿಶಾಲಾತೀರ್ಥದಲ್ಲಿ ಸ್ನಾನಮಾಡಿ ಉದಕಕ್ರಿಯೆಗಳನ್ನು ಮಾಡಿದವನು ಮತ್ತು ದೇವಹ್ರದದಲ್ಲಿ ಸ್ನಾನಮಾಡಿದವನು ಬ್ರಹ್ಮಭೂತನಾಗಿ ವಿರಾಜಿಸುತ್ತಾನೆ.

13026042a ಪುರಾಪವರ್ತನಂ ನಂದಾಂ ಮಹಾನಂದಾಂ ಚ ಸೇವ್ಯ ವೈ|

13026042c ನಂದನೇ ಸೇವ್ಯತೇ ದಾಂತಸ್ತ್ವಪ್ಸರೋಭಿರಹಿಂಸಕಃ||

ಅವರ್ತನ, ನಂದಾ ಮತ್ತು ಮಹಾನಂದಗಳಲ್ಲಿ ಸ್ನಾನಮಾಡಿ ದಾಂತನಾಗಿರುವ ಅಹಿಂಸಕನು ನಂದನದಲ್ಲಿ ಅಪ್ಸರೆಯರಿಂದ ಸೇವಿಸಲ್ಪಡುತ್ತಾನೆ.

13026043a ಉರ್ವಶೀಕೃತ್ತಿಕಾಯೋಗೇ ಗತ್ವಾ ಯಃ ಸುಸಮಾಹಿತಃ|

13026043c ಲೌಹಿತ್ಯೇ ವಿಧಿವತ್ಸ್ನಾತ್ವಾ ಪುಂಡರೀಕಫಲಂ ಲಭೇತ್||

ಕಾರ್ತೀಕ ಹುಣ್ಣಿಮೆಯಂದು ಕೃತ್ತಿಕಾ ಯೋಗದಲ್ಲಿ ಸುಸಮಾಹಿತನಾಗಿ ಉರ್ವಶೀ ತೀರ್ಥದಲ್ಲಿ ಸ್ನಾನಮಾಡಿದರೆ ಪುಂಡರೀಕಯಾಗದ ಫಲವು ದೊರೆಯುತ್ತದೆ.

13026044a ರಾಮಹ್ರದ ಉಪಸ್ಪೃಶ್ಯ ವಿಶಾಲಾಯಾಂ ಕೃತೋದಕಃ|

13026044c ದ್ವಾದಶಾಹಂ ನಿರಾಹಾರಃ ಕಲ್ಮಷಾದ್ವಿಪ್ರಮುಚ್ಯತೇ||

ರಾಮಹ್ರದದಲ್ಲಿ ಸ್ನಾನಮಾಡಿ ವಿಶಾಲಾದಲ್ಲಿ ಉದಕ ಕ್ರಿಯೆಗಳನ್ನು ಮಾಡುತ್ತಾ ಹನ್ನೆರಡು ದಿನ ನಿರಾಹಾರಿಯಾಗಿರುವವನು ಪಾಪಗಳಿಂದ ಮುಕ್ತನಾಗುತ್ತಾನೆ.

13026045a ಮಹಾಹ್ರದ ಉಪಸ್ಪೃಶ್ಯ ಶುದ್ಧೇನ ಮನಸಾ ನರಃ|

13026045c ಏಕಮಾಸಂ ನಿರಾಹಾರೋ ಜಮದಗ್ನಿಗತಿಂ ಲಭೇತ್||

ಶುದ್ಧಮನಸ್ಸಿನಿಂದ ಮಹಾಹ್ರದದಲ್ಲಿ ಸ್ನಾನಮಾಡಿ ಒಂದು ತಿಂಗಳು ನಿರಾಹಾರಿಯಾಗಿರುವವನು ಜಮದಗ್ನಿಗತಿಯನ್ನು ಪಡೆಯುತ್ತಾನೆ.

13026046a ವಿಂಧ್ಯೇ ಸಂತಾಪ್ಯ ಚಾತ್ಮಾನಂ ಸತ್ಯಸಂಧಸ್ತ್ವಹಿಂಸಕಃ|

13026046c ಷಣ್ಮಾಸಂ ಪದಮಾಸ್ಥಾಯ ಮಾಸೇನೈಕೇನ ಶುಧ್ಯತಿ||

ವಿಂಧ್ಯದಲ್ಲಿ ವ್ರತಾದಿಗಳಿಂದ ಶರೀರವನ್ನು ಸಂತಾಪಗೊಳಿಸಿ ತಪಸ್ಸನ್ನು ಮಾಡುವವನು ಒಂದೇ ತಿಂಗಳಿನಲ್ಲಿ ಸಿದ್ಧಿಯನ್ನು ಪಡೆಯುತ್ತಾನೆ.

13026047a ನರ್ಮದಾಯಾಮುಪಸ್ಪೃಶ್ಯ ತಥಾ ಸೂರ್ಪಾರಕೋದಕೇ|

13026047c ಏಕಪಕ್ಷಂ ನಿರಾಹಾರೋ ರಾಜಪುತ್ರೋ ವಿಧೀಯತೇ||

ನರ್ಮದೆಯಲ್ಲಿ ಮತ್ತು ಸೂರ್ಪಾರಕೋದಕದಲ್ಲಿ ಸ್ನಾನಮಾಡಿ ಒಂದು ಪಕ್ಷ ನಿರಾಹಾರಿಯಾಗಿರುವನು ರಾಜಪುತ್ರನಾಗುತ್ತಾನೆ.

13026048a ಜಂಬೂಮಾರ್ಗೇ ತ್ರಿಭಿರ್ಮಾಸೈಃ ಸಂಯತಃ ಸುಸಮಾಹಿತಃ|

13026048c ಅಹೋರಾತ್ರೇಣ ಚೈಕೇನ ಸಿದ್ಧಿಂ ಸಮಧಿಗಚ್ಚತಿ||

ಜಂಬೂಮಾರ್ಗದಲ್ಲಿ ಸಂಯತನಾಗಿ ಸುಸಮಾಹಿತನಾಗಿ ಅನುದಿನವೂ ಸ್ನಾನಮಾಡುತ್ತಿದ್ದರೆ ಮೂರು ತಿಂಗಳುಗಳಲ್ಲಿಯೇ ಸಿದ್ಧಿಯನ್ನು ಪಡೆಯುತ್ತಾನೆ.

13026049a ಕೋಕಾಮುಖೇ ವಿಗಾಹ್ಯಾಪೋ ಗತ್ವಾ ಚಂಡಾಲಿಕಾಶ್ರಮಮ್|

13026049c ಶಾಕಭಕ್ಷಶ್ಚೀರವಾಸಾಃ ಕುಮಾರೀರ್ವಿಂದತೇ ದಶ||

ಕೋಕಾಮುಖದಲ್ಲಿ ಸ್ನಾನಮಾಡಿ ಚಂಡಾಲಿಕಾಶ್ರಮಕ್ಕೆ ಹೋಗಿ ನಾರುಮಡಿಯನ್ನುಟ್ಟು ಶಾಕಾಹಾರಿಯಾಗಿರುವವನು ಕುಮಾರೀತೀರ್ಥದಲ್ಲಿ ಹತ್ತು ಬಾರಿ ಸ್ನಾನಮಾಡಿದ ಫಲವನ್ನು ಪಡೆಯುತ್ತಾನೆ.

13026050a ವೈವಸ್ವತಸ್ಯ ಸದನಂ ನ ಸ ಗಚ್ಚೇತ್ಕದಾ ಚನ|

13026050c ಯಸ್ಯ ಕನ್ಯಾಹ್ರದೇ ವಾಸೋ ದೇವಲೋಕಂ ಸ ಗಚ್ಚತಿ||

ಅನಂತರ ಅವನು ಎಂದೂ ವೈವಸ್ವತ ಸದನಕ್ಕೆ ಹೋಗಬೇಕಾಗುವುದಿಲ್ಲ. ಕನ್ಯಾಹ್ರದದಲ್ಲಿ ವಾಸಿಸುವವನು ದೇವಲೋಕಕ್ಕೆ ಹೋಗುತ್ತಾನೆ.

13026051a ಪ್ರಭಾಸೇ ತ್ವೇಕರಾತ್ರೇಣ ಅಮಾವಾಸ್ಯಾಂ ಸಮಾಹಿತಃ|

13026051c ಸಿಧ್ಯತೇಽತ್ರ ಮಹಾಬಾಹೋ ಯೋ ನರೋ ಜಾಯತೇ ಪುನಃ||

ಮಹಾಬಾಹೋ! ಪ್ರಭಾಸದಲ್ಲಿ ಅಮವಾಸ್ಯೆಯಂದು ಸುಸಮಾಹಿತನಾಗಿರುವವನಿಗೆ ಒಂದು ರಾತ್ರಿಯಲ್ಲಿಯೇ ಸಿದ್ಧಿಯಾಗುತ್ತದೆ. ಅ ನರನು ಪುನಃ ಹುಟ್ಟಬೇಕಾಗಿಲ್ಲ.

13026052a ಉಜ್ಜಾನಕ ಉಪಸ್ಪೃಶ್ಯ ಆರ್ಷ್ಟಿಷೇಣಸ್ಯ ಚಾಶ್ರಮೇ|

13026052c ಪಿಂಗಾಯಾಶ್ಚಾಶ್ರಮೇ ಸ್ನಾತ್ವಾ ಸರ್ವಪಾಪೈಃ ಪ್ರಮುಚ್ಯತೇ||

ಆರ್ಷ್ಟಿಷೇಣನ ಆಶ್ರಮದಲ್ಲಿ ಉಜ್ಜಾನಕದಲ್ಲಿ ಸ್ನಾನಮಾಡಿ ಪಿಂಗಾಶ್ರಮದಲ್ಲಿ ಸ್ನಾನಮಾಡಿದವನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ.

13026053a ಕುಲ್ಯಾಯಾಂ ಸಮುಪಸ್ಪೃಶ್ಯ ಜಪ್ತ್ವಾ ಚೈವಾಘಮರ್ಷಣಮ್|

13026053c ಅಶ್ವಮೇಧಮವಾಪ್ನೋತಿ ತ್ರಿರಾತ್ರೋಪೋಷಿತಃ ಶುಚಿಃ||

ಅಘಮರ್ಷಣವನ್ನು ಜಪಿಸುತ್ತಾ ಕುಲ್ಯದಲ್ಲಿ ಸ್ನಾನಮಾಡಿ ಅಲ್ಲಿ ಮೂರುರಾತ್ರಿ ಉಪವಾಸದಿಂದಿರುವ ಶುಚಿಗೆ ಅಶ್ವಮೇಧದ ಫಲವು ದೊರೆಯುತ್ತದೆ.

13026054a ಪಿಂಡಾರಕ ಉಪಸ್ಪೃಶ್ಯ ಏಕರಾತ್ರೋಷಿತೋ ನರಃ|

13026054c ಅಗ್ನಿಷ್ಟೋಮಮವಾಪ್ನೋತಿ ಪ್ರಭಾತಾಂ ಶರ್ವರೀಂ ಶುಚಿಃ||

ಪಿಂಡಾರಕದಲ್ಲಿ ಸ್ನಾನಮಾಡಿ ಒಂದು ರಾತ್ರಿ ಉಪವಾಸದಿಂದಿರುವ ಶುಚಿ ನರನು ರಾತ್ರಿಕಳೆದು ಪ್ರಭಾತವಾಗುತ್ತಲೇ ಅಗ್ನಿಷ್ಟೋಮಯಾಗದ ಫಲವನ್ನು ಪಡೆಯುತ್ತಾನೆ.

13026055a ತಥಾ ಬ್ರಹ್ಮಸರೋ ಗತ್ವಾ ಧರ್ಮಾರಣ್ಯೋಪಶೋಭಿತಮ್|

13026055c ಪುಂಡರೀಕಮವಾಪ್ನೋತಿ ಪ್ರಭಾತಾಂ ಶರ್ವರೀಂ ಶುಚಿಃ||

ಹಾಗೆಯೇ ಧರ್ಮಾರಣ್ಯದಲ್ಲಿ ಶೋಭಿಸುವ ಬ್ರಹ್ಮಸರಕ್ಕೆ ಹೋದವನು ರಾತ್ರಿಕಳೆದು ಪ್ರಭಾತವಾಗುತ್ತಲೇ ಪುಂಡರೀಕ ಯಾಗದ ಫಲವನ್ನು ಪಡೆಯುತ್ತಾನೆ.

13026056a ಮೈನಾಕೇ ಪರ್ವತೇ ಸ್ನಾತ್ವಾ ತಥಾ ಸಂಧ್ಯಾಮುಪಾಸ್ಯ ಚ|

13026056c ಕಾಮಂ ಜಿತ್ವಾ ಚ ವೈ ಮಾಸಂ ಸರ್ವಮೇಧಫಲಂ ಲಭೇತ್||

ಮೈನಾಕ ಪರ್ವತದಲ್ಲಿ ಸ್ನಾನಮಾಡಿ ಸಂಧ್ಯೋಪಾಸನೆಯನ್ನು ಮಾಡಿ ಕಾಮವನ್ನು ಗೆದ್ದ ಒಂದು ಮಾಸದಲ್ಲಿಯೇ ಸರ್ವಮೇಧಯಾಗದ ಫಲವು ದೊರೆಯುತ್ತದೆ.

13026057a ವಿಖ್ಯಾತೋ ಹಿಮವಾನ್ಪುಣ್ಯಃ ಶಂಕರಶ್ವಶುರೋ ಗಿರಿಃ|

13026057c ಆಕರಃ ಸರ್ವರತ್ನಾನಾಂ ಸಿದ್ಧಚಾರಣಸೇವಿತಃ||

ಸರ್ವರತ್ನಗಳ ಆಕರವಾದ, ಸಿದ್ಧಚಾರಣ ಸೇವಿತವಾದ ಮತ್ತು ಶಂಕರನ ಮಾವನಾದ ಪುಣ್ಯ ಹಿಮವಾನ್ ಗಿರಿಯು ವಿಖ್ಯಾತವಾದುದು.

13026058a ಶರೀರಮುತ್ಸೃಜೇತ್ತತ್ರ ವಿಧಿಪೂರ್ವಮನಾಶಕೇ|

13026058c ಅಧ್ರುವಂ ಜೀವಿತಂ ಜ್ಞಾತ್ವಾ ಯೋ ವೈ ವೇದಾಂತಗೋ ದ್ವಿಜಃ||

13026059a ಅಭ್ಯರ್ಚ್ಯ ದೇವತಾಸ್ತತ್ರ ನಮಸ್ಕೃತ್ಯ ಮುನೀಂಸ್ತಥಾ|

13026059c ತತಃ ಸಿದ್ಧೋ ದಿವಂ ಗಚ್ಚೇದ್ಬ್ರಹ್ಮಲೋಕಂ ಸನಾತನಮ್||

ಜೀವಿತವು ಅನಿಶ್ಚಿತವೆಂದು ತಿಳಿದ ವೇದಾಂತಗ ದ್ವಿಜನು ಅಲ್ಲಿ ದೇವತೆಗಳನ್ನು ಅರ್ಚಿಸಿ, ಮುನಿಗಳನ್ನು ನಮಸ್ಕರಿಸಿ ವಿಧಿಪೂರ್ವಕವಾಗಿ ನಿರಾಹಾರಿಯಾಗಿದ್ದು ಶರೀರವನ್ನು ತೊರೆದರೆ ಸಿದ್ಧನಾಗಿ ಸನಾತನ ಬ್ರಹ್ಮಲೋಕಕ್ಕೆ ಹೋಗುತ್ತಾನೆ.

13026060a ಕಾಮಂ ಕ್ರೋಧಂ ಚ ಲೋಭಂ ಚ ಯೋ ಜಿತ್ವಾ ತೀರ್ಥಮಾವಸೇತ್|

13026060c ನ ತೇನ ಕಿಂ ಚಿನ್ನ ಪ್ರಾಪ್ತಂ ತೀರ್ಥಾಭಿಗಮನಾದ್ಭವೇತ್||

ಕಾಮ, ಕ್ರೋಧ, ಲೋಭಗಳನ್ನು ಜಯಿಸಿ ಅಲ್ಲಿರುವ ತೀರ್ಥಗಳಲ್ಲಿ ವಾಸಿಸುವವನಿಗೆ ತೀರ್ಥಯಾತ್ರೆಗಳಿಂದ ಪಡೆಯಬೇಕಾಗುವ ಯಾವ ಪುಣ್ಯವೂ ಬೇಕಾಗುವುದಿಲ್ಲ.

13026061a ಯಾನ್ಯಗಮ್ಯಾನಿ ತೀರ್ಥಾನಿ ದುರ್ಗಾಣಿ ವಿಷಮಾಣಿ ಚ|

13026061c ಮನಸಾ ತಾನಿ ಗಮ್ಯಾನಿ ಸರ್ವತೀರ್ಥಸಮಾಸತಃ||

ಯಾವ ತೀರ್ಥಗಳಿಗೆ ಹೋಗಲಿಕ್ಕಾಗುವುದಿಲ್ಲವೋ, ದುರ್ಗಮವಾಗಿವೆಯೋ ಮತ್ತು ದಾರಿಯು ಕಷ್ಟಕರವಾಗಿರುವುದೋ ಅವುಗಳಿಗೆ ಮನಸ್ಸಿನಲ್ಲಿಯೇ ಹೋದರೂ ಸರ್ವತೀರ್ಥಗಳಿಗೆ ಹೋದಂತಾಗುತ್ತದೆ.

13026062a ಇದಂ ಮೇಧ್ಯಮಿದಂ ಧನ್ಯಮಿದಂ ಸ್ವರ್ಗ್ಯಮಿದಂ ಸುಖಮ್|

13026062c ಇದಂ ರಹಸ್ಯಂ ದೇವಾನಾಮಾಪ್ಲಾವ್ಯಾನಾಂ ಚ ಪಾವನಮ್||

ಈ ತೀರ್ಥಗಳ ಮಹಾತ್ಮೆಯು ಧನ್ಯತೆಯನ್ನು ನೀಡುತ್ತದೆ. ಸ್ವರ್ಗಸುಖವನ್ನು ನೀಡುತ್ತದೆ. ದೇವತೆಗಳ ಈ ತೀರ್ಥಗಳ ರಹಸ್ಯವು ಪಾವನವಾದುದು.

13026063a ಇದಂ ದದ್ಯಾದ್ದ್ವಿಜಾತೀನಾಂ ಸಾಧೂನಾಮಾತ್ಮಜಸ್ಯ ವಾ|

13026063c ಸುಹೃದಾಂ ಚ ಜಪೇತ್ಕರ್ಣೇ ಶಿಷ್ಯಸ್ಯಾನುಗತಸ್ಯ ವಾ||

ಇದನ್ನು ದ್ವಿಜಾತಿಯವರಿಗೂ, ಸಾಧುಗಳಿಗೂ, ಮಕ್ಕಳಿಗೂ, ಸುಹೃದಯರಿಗೂ, ಅನುಯಾಯಿ ಶಿಷ್ಯರಿಗೂ ಕಿವಿಯಲ್ಲಿ ಹೇಳಬೇಕು.”

13026064a ದತ್ತವಾನ್ಗೌತಮಸ್ಯೇದಮಂಗಿರಾ ವೈ ಮಹಾತಪಾಃ|

13026064c ಗುರುಭಿಃ ಸಮನುಜ್ಞಾತಃ ಕಾಶ್ಯಪೇನ ಚ ಧೀಮತಾ||

ಮಹಾತಪಸ್ವಿ ಅಂಗಿರಸನು ಇದನ್ನು ಗೌತಮನಿಗೆ ಉಪದೇಶವನ್ನಾಗಿತ್ತನು. ಇದಕ್ಕೆ ಮೊದಲು ಗುರು ಧೀಮತ ಕಾಶ್ಯಪನಿಂದ ಇದನ್ನು ಪಡೆದುಕೊಂಡಿದ್ದನು.

13026065a ಮಹರ್ಷೀಣಾಮಿದಂ ಜಪ್ಯಂ ಪಾವನಾನಾಂ ತಥೋತ್ತಮಮ್|

13026065c ಜಪಂಶ್ಚಾಭ್ಯುತ್ಥಿತಃ ಶಶ್ವನ್ನಿರ್ಮಲಃ ಸ್ವರ್ಗಮಾಪ್ನುಯಾತ್||

ಈ ಪಾವನತೀರ್ಥಗಳ ಆಖ್ಯಾನವು ಮಹರ್ಷಿಗಳಿಗೂ ಜಪಿಸಲು ಉತ್ತಮವಾಗಿದೆ. ಪ್ರಾತಃಕಾಲದಲ್ಲಿ ಇದನ್ನು ಜಪಿಸುವವನು ನಿರ್ಮಲ ಸ್ವರ್ಗವನ್ನು ಪಡೆಯುತ್ತಾನೆ.

13026066a ಇದಂ ಯಶ್ಚಾಪಿ ಶೃಣುಯಾದ್ರಹಸ್ಯಂ ತ್ವಂಗಿರೋಮತಮ್|

13026066c ಉತ್ತಮೇ ಚ ಕುಲೇ ಜನ್ಮ ಲಭೇಜ್ಜಾತಿಂ ಚ ಸಂಸ್ಮರೇತ್||

ಅಂಗಿರಸನ ಈ ಮತದ ರಹಸ್ಯವನ್ನು ಕೇಳುವುದರಿಂದ ಉತ್ತಮ ಕುಲದಲ್ಲಿ ಜನ್ಮವೂ ಪೂರ್ವಜನ್ಮಗಳ ಸಂಸ್ಮರಣೆಯೂ ದೊರೆಯುತ್ತವೆ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಆಂಗಿರಸತೀರ್ಥಯಾತ್ರಾಯಾಂ ಷಡ್ವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಆಂಗಿರಸತೀರ್ಥಯಾತ್ರಾ ಎನ್ನುವ ಇಪ್ಪತ್ತಾರನೇ ಅಧ್ಯಾಯವು.

Image result for indian motifs lilies

[1] ಚೀನಾಬ್

[2] ಜೀಲಂ

[3] ತ್ರಿಸ್ಥಾನೇ ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ದೇವಿಕಾಯಾಮುಪಸ್ಪೃಶ್ಯ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಶರಸ್ತಂಭೇ ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಏಕಪಕ್ಷಂ ನ್ರಾಹಾರಸ್ತಂರ್ಧಾನಫಲಂ ಲಭೇತ್ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ಭಾರತದರ್ಶನದಲ್ಲಿ ಇದರ ನಂತರ ದಶಾಶ್ವಮೇಧಾನಾಪ್ನೋತಿ ತತ್ರ ಮಾಸಂ ಕೃತೋದಕಃ|| ಎಂಬ ಶ್ಲೋಕಾರ್ಧವಿದೆ.

Comments are closed.