Anushasana Parva: Chapter 154

ಅನುಶಾಸನ ಪರ್ವ: ಭೀಷ್ಮಸ್ವರ್ಗಾರೋಹಣ ಪರ್ವ

೧೫೪

ಭೀಷ್ಮಸ್ವರ್ಗಗಮನ

13154001 ವೈಶಂಪಾಯನ ಉವಾಚ|

13154001a ಏವಮುಕ್ತ್ವಾ ಕುರೂನ್ಸರ್ವಾನ್ಭೀಷ್ಮಃ ಶಾಂತನವಸ್ತದಾ|

13154001c ತೂಷ್ಣೀಂ ಬಭೂವ ಕೌರವ್ಯಃ ಸ ಮುಹೂರ್ತಮರಿಂದಮ||

ವೈಶಂಪಾಯನನು ಹೇಳಿದನು: “ಅರಿಂದಮ! ಕುರುಗಳಿಗೆಲ್ಲರಿಗೂ ಹೀಗೆ ಹೇಳಿ ಕೌರವ್ಯ ಭೀಷ್ಮ ಶಾಂತನವನು ಮುಹೂರ್ತಕಾಲ ಸುಮ್ಮನಾದನು.

13154002a ಧಾರಯಾಮಾಸ ಚಾತ್ಮಾನಂ ಧಾರಣಾಸು ಯಥಾಕ್ರಮಮ್|

13154002c ತಸ್ಯೋರ್ಧ್ವಮಗಮನ್ಪ್ರಾಣಾಃ ಸಂನಿರುದ್ಧಾ ಮಹಾತ್ಮನಃ||

ಆ ಮಹಾತ್ಮನು ಆತ್ಮನನ್ನು ಯಥಾಕ್ರಮವಾಗಿ ಧಾರಣೆ[1]ಗಳಲ್ಲಿ ಸ್ಥಾಪಿಸತೊಡಗಿದನು. ಆಗ ಅವನ ಸಂನಿರುದ್ಧ ಪ್ರಾಣಗಳು ಊರ್ಧ್ವಮುಖವಾಗಿ ಹೋಗತೊಡಗಿದವು.

13154003a ಇದಮಾಶ್ಚರ್ಯಮಾಸೀಚ್ಚ ಮಧ್ಯೇ ತೇಷಾಂ ಮಹಾತ್ಮನಾಮ್|

13154003c ಯದ್ಯನ್ಮುಂಚತಿ ಗಾತ್ರಾಣಾಂ ಸ ಶಂತನುಸುತಸ್ತದಾ|

13154003e ತತ್ತದ್ವಿಶಲ್ಯಂ ಭವತಿ ಯೋಗಯುಕ್ತಸ್ಯ ತಸ್ಯ ವೈ||

ಆ ಮಹಾತ್ಮರ ಮಧ್ಯೆ ಈ ಆಶ್ಚರ್ಯವು ನಡೆಯಿತು. ಶಂತನು ಸುತನು ಶರೀರದ ಯಾವ ಯಾವ ಅಂಗಾಂಗಗಳಲ್ಲಿ ಯೋಗಯುಕ್ತನಾಗುತ್ತಿದ್ದನೋ ಆ ಅಂಗಾಂಗಗಳಿಂದ ಚುಚ್ಚಿದ್ದ ಶರಗಳು ಕೆಳಗೆ ಬೀಳುತ್ತಿದ್ದವು.

13154004a ಕ್ಷಣೇನ ಪ್ರೇಕ್ಷತಾಂ ತೇಷಾಂ ವಿಶಲ್ಯಃ ಸೋಽಭವತ್ತದಾ||

13154004c ತಂ ದೃಷ್ಟ್ವಾ ವಿಸ್ಮಿತಾಃ ಸರ್ವೇ ವಾಸುದೇವಪುರೋಗಮಾಃ|

13154004e ಸಹ ತೈರ್ಮುನಿಭಿಃ ಸರ್ವೈಸ್ತದಾ ವ್ಯಾಸಾದಿಭಿರ್ನೃಪ||

ಅವರೆಲ್ಲರೂ ನೋಡುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಅವನು ವಿಶಲ್ಯ (ಬಾಣಗಳು ಚುಚ್ಚದೇ ಇರುವವನು) ನಾದನು. ನೃಪ! ಅದನ್ನು ನೋಡಿದ, ವಾಸುದೇವನೇ ಮೊದಲಾಗಿ ವ್ಯಾಸಾದಿ ಸರ್ವ ಮುನಿಗಳೂ ಕೂಡಿ ಎಲ್ಲರೂ ವಿಸ್ಮಿತರಾದರು.

13154005a ಸಂನಿರುದ್ಧಸ್ತು ತೇನಾತ್ಮಾ ಸರ್ವೇಷ್ವಾಯತನೇಷು ವೈ|

13154005c ಜಗಾಮ ಭಿತ್ತ್ವಾ ಮೂರ್ಧಾನಂ ದಿವಮಭ್ಯುತ್ಪಪಾತ ಚ||

ಎಲ್ಲ ದ್ವಾರಗಳಲ್ಲಿಯೂ ತಡೆಯಲ್ಪಟ್ಟ ಅವನ ಆತ್ಮವು ನೆತ್ತಿಯ ಬ್ರಹ್ಮರಂಧ್ರವನ್ನು ಭೇದಿಸಿಕೊಂಡು ದಿವಕ್ಕೆ ಹಾರಿಹೋಯಿತು.

13154006a ಮಹೋಲ್ಕೇವ ಚ ಭೀಷ್ಮಸ್ಯ ಮೂರ್ಧದೇಶಾಜ್ಜನಾಧಿಪ|

13154006c ನಿಃಸೃತ್ಯಾಕಾಶಮಾವಿಶ್ಯ ಕ್ಷಣೇನಾಂತರಧೀಯತ||

ಜನಾಧಿಪ! ಪ್ರಾಣವು ಭೀಷ್ಮನ ನೆತ್ತಿಯಿಂದ ಮಹಾಉಲ್ಕೆಯಂತೆ ಹೊರಟು ಆಕಾಶವನ್ನು ಸೇರಿ ಕ್ಷಣಾಂತರದಲ್ಲಿ ಅಂತರ್ಧಾನವಾಯಿತು.

13154007a ಏವಂ ಸ ನೃಪಶಾರ್ದೂಲ ನೃಪಃ ಶಾಂತನವಸ್ತದಾ|

13154007c ಸಮಯುಜ್ಯತ ಲೋಕೈಃ ಸ್ವೈರ್ಭರತಾನಾಂ ಕುಲೋದ್ವಹಃ||

ನೃಪಶಾರ್ದೂಲ! ಹೀಗೆ ನೃಪ ಶಾಂತನವ, ಭರತರ ಕುಲೋದ್ವಹನು ತನ್ನದೇ ಲೋಕಗಳಲ್ಲಿ ಸೇರಿಕೊಂಡನು.

13154008a ತತಸ್ತ್ವಾದಾಯ ದಾರೂಣಿ ಗಂಧಾಂಶ್ಚ ವಿವಿಧಾನ್ಬಹೂನ್|

13154008c ಚಿತಾಂ ಚಕ್ರುರ್ಮಹಾತ್ಮಾನಃ ಪಾಂಡವಾ ವಿದುರಸ್ತಥಾ|

13154008e ಯುಯುತ್ಸುಶ್ಚಾಪಿ ಕೌರವ್ಯಃ ಪ್ರೇಕ್ಷಕಾಸ್ತ್ವಿತರೇಽಭವನ್||

ಅನಂತರ ಮಹಾತ್ಮ ಪಾಂಡವರು, ವಿದುರ ಮತ್ತು ಕೌರವ್ಯ ಯುಯುತ್ಸುವು ಕಟ್ಟಿಗೆಗಳನ್ನು ಮತ್ತು ಅನೇಕ ವಿಧದ ಗಂಧಗಳನ್ನು ತಂದು ಚಿತೆಯನ್ನು ಸಿದ್ಧಪಡಿಸಿದರು. ಇತರರು ಪ್ರೇಕ್ಷಕರಾಗಿದ್ದರು.

13154009a ಯುಧಿಷ್ಠಿರಸ್ತು ಗಾಂಗೇಯಂ ವಿದುರಶ್ಚ ಮಹಾಮತಿಃ||

13154009c ಚಾದಯಾಮಾಸತುರುಭೌ ಕ್ಷೌಮೈರ್ಮಾಲ್ಯೈಶ್ಚ ಕೌರವಮ್||

ಯುಧಿಷ್ಠಿರ ಮತ್ತು ಮಹಾಮತಿ ವಿದುರರು ರೇಷ್ಮೆಯ ವಸ್ತ್ರಗಳಿಂದಲೂ ಪುಷ್ಪಮಾಲೆಗಳಿಂದಲೂ ಕೌರವ ಗಾಂಗೇಯನನ್ನು ಆಚ್ಚಾದಿಸಿ ಚಿತೆಯ ಮೇಲೇರಿಸಿದರು.

13154010a ಧಾರಯಾಮಾಸ ತಸ್ಯಾಥ ಯುಯುತ್ಸುಶ್ಚತ್ರಮುತ್ತಮಮ್|

13154010c ಚಾಮರವ್ಯಜನೇ ಶುಭ್ರೇ ಭೀಮಸೇನಾರ್ಜುನಾವುಭೌ|

13154010e ಉಷ್ಣೀಷೇ ಪರ್ಯಗೃಹ್ಣೀತಾಂ ಮಾದ್ರೀಪುತ್ರಾವುಭೌ ತದಾ||

ಯುಯುತ್ಸುವು ಅವನ ಮೇಲೆ ಉತ್ತಮ ಚತ್ರವನ್ನು ಹಿಡಿದನು. ಭೀಮಸೇನ-ಅರ್ಜುನರು ಶುಭ್ರ ಚಾಮರಗಳನ್ನು ಬೀಸಿದರು. ಮಾದ್ರೀಪುತ್ರರೀರ್ವರು ಕಿರೀಟವನ್ನು ಅವನ ತಲೆಯ ಕಡೆ ಇಟ್ಟರು.

13154011a ಸ್ತ್ರಿಯಃ ಕೌರವನಾಥಸ್ಯ ಭೀಷ್ಮಂ ಕುರುಕುಲೋದ್ಭವಮ್|

13154011c ತಾಲವೃಂತಾನ್ಯುಪಾದಾಯ ಪರ್ಯವೀಜನ್ಸಮಂತತಃ||

ಸ್ತ್ರೀಯರು ತಾಲಪತ್ರದ ಬೀಸಣಿಗೆಯನ್ನು ಹಿಡಿದು ಕುರುಕುಲೋದ್ಭವ ಕೌರವ ನಾಥ ಭೀಷ್ಮನ ಸುತ್ತಲೂ ಬೀಸತೊಡಗಿದರು.

13154012a ತತೋಽಸ್ಯ ವಿಧಿವಚ್ಚಕ್ರುಃ ಪಿತೃಮೇಧಂ ಮಹಾತ್ಮನಃ|

13154012c ಯಾಜಕಾ ಜುಹುವುಶ್ಚಾಗ್ನಿಂ ಜಗುಃ ಸಾಮಾನಿ ಸಾಮಗಾಃ||

ಅನಂತರ ಆ ಮಹಾತ್ಮನ ಪಿತೃಮೇಧ ಸಂಸ್ಕಾರವು ವಿಧಿವತ್ತಾಗಿ ನಡೆಯಿತು. ಯಾಜಕರು ಅಗ್ನಿಯಲ್ಲಿ ಆಹುತಿಗಳನ್ನಿತ್ತರು. ಸಾಮಗರು ಸಾಮಗಳನ್ನು ಹಾಡಿದರು.

13154013a ತತಶ್ಚಂದನಕಾಷ್ಠೈಶ್ಚ ತಥಾ ಕಾಲೇಯಕೈರಪಿ|

13154013c ಕಾಲಾಗರುಪ್ರಭೃತಿಭಿರ್ಗಂಧೈಶ್ಚೋಚ್ಚಾವಚೈಸ್ತಥಾ||

13154014a ಸಮವಚ್ಚಾದ್ಯ ಗಾಂಗೇಯಂ ಪ್ರಜ್ವಾಲ್ಯ ಚ ಹುತಾಶನಮ್|

13154014c ಅಪಸವ್ಯಮಕುರ್ವಂತ ಧೃತರಾಷ್ಟ್ರಮುಖಾ ನೃಪಾಃ||

ಅನಂತರ ಚಂದನ ಮತ್ತು ಕಪ್ಪುಚಂದನ ಕಾಷ್ಠಗಳು ಹಾಗು ಕಾಲಾಗರುವೇ ಮೊದಲಾದ ಉತ್ತಮ ಸುಗಂಧದ್ರವ್ಯಗಳಿಂದ ಗಾಂಗೇಯನನ್ನು ಮುಚ್ಚಿ ಅಗ್ನಿಯನ್ನು ಪ್ರಜ್ವಲಿಸಿ, ಧೃತರಾಷ್ಟ್ರ ಮುಖ್ಯ ನೃಪರು ಅಪಸವ್ಯವನ್ನು ಮಾಡಿದರು.

13154015a ಸಂಸ್ಕೃತ್ಯ ಚ ಕುರುಶ್ರೇಷ್ಠಂ ಗಾಂಗೇಯಂ ಕುರುಸತ್ತಮಾಃ|

13154015c ಜಗ್ಮುರ್ಭಾಗೀರಥೀತೀರಮೃಷಿಜುಷ್ಟಂ ಕುರೂದ್ವಹಾಃ||

ಕುರುಶ್ರೇಷ್ಠ ಗಾಂಗೇಯನಿಗೆ ಈ ರೀತಿ ಸಂಸ್ಕಾರವನ್ನೆಸಗಿ ಕುರೂದ್ವಹ ಕುರುಸತ್ತಮರು ಋಷಿಜುಷ್ಟ ಭಾಗೀರಥೀ ತೀರಕ್ಕೆ ಹೋದರು.

13154016a ಅನುಗಮ್ಯಮಾನಾ ವ್ಯಾಸೇನ ನಾರದೇನಾಸಿತೇನ ಚ|

13154016c ಕೃಷ್ಣೇನ ಭರತಸ್ತ್ರೀಭಿರ್ಯೇ ಚ ಪೌರಾಃ ಸಮಾಗತಾಃ||

ಅಲ್ಲಿ ಸೇರಿದ್ದ ವ್ಯಾಸ, ನಾರದ, ಅಸಿತ, ಕೃಷ್ಣ, ಭರತ ಸ್ತ್ರೀಯರು ಮತ್ತು ಪೌರ ಜನರು ಅವರನ್ನು ಅನುಸರಿಸಿ ಹೋದರು.

13154017a ಉದಕಂ ಚಕ್ರಿರೇ ಚೈವ ಗಾಂಗೇಯಸ್ಯ ಮಹಾತ್ಮನಃ|

13154017c ವಿಧಿವತ್ಕ್ಷತ್ರಿಯಶ್ರೇಷ್ಠಾಃ ಸ ಚ ಸರ್ವೋ ಜನಸ್ತದಾ||

ಆ ಕ್ಷತ್ರಿಯ ಶ್ರೇಷ್ಠರೂ ಎಲ್ಲ ಜನರೂ ವಿಧಿವತ್ತಾಗಿ ಮಹಾತ್ಮ ಗಾಂಗೇಯನ ಉದಕ ಕ್ರಿಯಯನ್ನು ನಡೆಸಿದರು.

13154018a ತತೋ ಭಾಗೀರಥೀ ದೇವೀ ತನಯಸ್ಯೋದಕೇ ಕೃತೇ|

13154018c ಉತ್ಥಾಯ ಸಲಿಲಾತ್ತಸ್ಮಾದ್ರುದತೀ ಶೋಕಲಾಲಸಾ||

ತನ್ನ ಮಗನ ಉದಕ ಕ್ರಿಯೆಗಳು ಮುಗಿಯಲು ದೇವೀ ಭಾಗೀರಥಿಯು ಶೋಕಲಾಲಸಳಾಗಿ ರೋದಿಸುತ್ತಾ ನೀರಿನಿಂದ ಮೇಲೆದ್ದಳು.

13154019a ಪರಿದೇವಯತೀ ತತ್ರ ಕೌರವಾನಭ್ಯಭಾಷತ|

13154019c ನಿಬೋಧತ ಯಥಾವೃತ್ತಮುಚ್ಯಮಾನಂ ಮಯಾನಘಾಃ||

ಪರಿವೇದಿಸುತ್ತಿರುವ ಅವಳು ಕೌರವರಿಗೆ ಹೇಳಿದಳು: “ಅನಘರೇ! ನಾನು ಈಗ ಹೇಳುವುದನ್ನು ಕೇಳಿ!

13154020a ರಾಜವೃತ್ತೇನ ಸಂಪನ್ನಃ ಪ್ರಜ್ಞಯಾಭಿಜನೇನ ಚ|

13154020c ಸತ್ಕರ್ತಾ ಕುರುವೃದ್ಧಾನಾಂ ಪಿತೃಭಕ್ತೋ ದೃಢವ್ರತಃ||

ಇವನು ರಾಜವೃತ್ತಿಯಿಂದ ಸಂಪನ್ನನಾಗಿದ್ದನು. ಪ್ರಜ್ಞಾವಂತನಾಗಿದ್ದನು. ಉತ್ತಮ ಕುಲದಲ್ಲಿ ಜನಿಸಿದ್ದನು. ದೃಢವ್ರತನಾಗಿ ಕುರುವೃದ್ಧರನ್ನು ಸತ್ಕರಿಸಿದನು. ಪಿತೃಭಕ್ತನಾಗಿದ್ದನು.

13154021a ಜಾಮದಗ್ನ್ಯೇನ ರಾಮೇಣ ಪುರಾ ಯೋ ನ ಪರಾಜಿತಃ|

13154021c ದಿವ್ಯೈರಸ್ತ್ರೈರ್ಮಹಾವೀರ್ಯಃ ಸ ಹತೋಽದ್ಯ ಶಿಖಂಡಿನಾ||

ಹಿಂದೆ ಜಾಮದಗ್ನಿ ರಾಮನ ದಿವ್ಯಾಸ್ತ್ರಗಳಿಂದಲೂ ಪರಾಜಿತನಾಗಿರದಿದ್ದ ಈ ಮಹಾವೀರ್ಯನು ಇಂದು ಶಿಖಂಡಿಯಿಂದ ಹತನಾದನು.

13154022a ಅಶ್ಮಸಾರಮಯಂ ನೂನಂ ಹೃದಯಂ ಮಮ ಪಾರ್ಥಿವಾಃ|

13154022c ಅಪಶ್ಯಂತ್ಯಾಃ ಪ್ರಿಯಂ ಪುತ್ರಂ ಯತ್ರ ದೀರ್ಯತಿ ಮೇಽದ್ಯ ವೈ||

ಪಾರ್ಥಿವರೇ! ನಿಶ್ಚಯವಾಗಿಯೂ ನನ್ನ ಹೃದಯವು ಲೋಹದಿಂದ ಮಾಡಲ್ಪಟ್ಟಿದೆ! ನನ್ನ ಪ್ರಿಯಪುತ್ರನನ್ನು ಕಳೆದುಕೊಂಡೂ ನನ್ನ ಹೃದಯವು ಇಂದು ಒಡೆಯದೇ ಹಾಗೆಯೇ ಇದೆ!

13154023a ಸಮೇತಂ ಪಾರ್ಥಿವಂ ಕ್ಷತ್ರಂ ಕಾಶಿಪುರ್ಯಾಂ ಸ್ವಯಂವರೇ|

13154023c ವಿಜಿತ್ಯೈಕರಥೇನಾಜೌ ಕನ್ಯಾಸ್ತಾ ಯೋ ಜಹಾರ ಹ||

ಕಾಶೀಪುರಿಯ ಸ್ವಯಂವರದಲ್ಲಿ ಸೇರಿದ್ದ ಕ್ಷತ್ರಿಯ ರಾಜರನ್ನು ಏಕರಥನಾಗಿ ಸೋಲಿಸಿ ಆ ಕನ್ಯೆಯರನ್ನು ಇವನು ಅಪಹರಿಸಿದ್ದನು.

13154024a ಯಸ್ಯ ನಾಸ್ತಿ ಬಲೇ ತುಲ್ಯಃ ಪೃಥಿವ್ಯಾಮಪಿ ಕಶ್ಚನ|

13154024c ಹತಂ ಶಿಖಂಡಿನಾ ಶ್ರುತ್ವಾ ಯನ್ನ ದೀರ್ಯತಿ ಮೇ ಮನಃ||

ಭೂಮಿಯ ಮೇಲೆ ಇವನ ಸಮನಾದ ಬಲಶಾಲಿಯು ಯಾರೂ ಇಲ್ಲದಿರುವಾಗ ಇವನು ಶಿಖಂಡಿಯಿಂದ ಹತನಾದನೆಂದು ಕೇಳಿ ನನ್ನ ಮನಸ್ಸು ಸೀಳಿಹೋಗುತ್ತಿಲ್ಲವಲ್ಲ!

13154025a ಜಾಮದಗ್ನ್ಯಃ ಕುರುಕ್ಷೇತ್ರೇ ಯುಧಿ ಯೇನ ಮಹಾತ್ಮನಾ|

13154025c ಪೀಡಿತೋ ನಾತಿಯತ್ನೇನ ನಿಹತಃ ಸ ಶಿಖಂಡಿನಾ||

ಕುರುಕ್ಷೇತ್ರದ ಯುದ್ಧದಲ್ಲಿ ಮಹಾತ್ಮ ಜಾಮದಗ್ನಿಯನ್ನು ಅತಿಯತ್ನದಿಂದ ಪೀಡಿಸಿದ ಅವನು ಶಿಖಂಡಿಯಿಂದ ಹತನಾದನು!”

13154026a ಏವಂವಿಧಂ ಬಹು ತದಾ ವಿಲಪಂತೀಂ ಮಹಾನದೀಮ್|

13154026c ಆಶ್ವಾಸಯಾಮಾಸ ತದಾ ಸಾಮ್ನಾ ದಾಮೋದರೋ ವಿಭುಃ||

ಈ ರೀತಿ ಬಹುವಿಧವಾಗಿ ವಿಲಪಿಸುತ್ತಿದ್ದ ಮಹಾನದಿಯನ್ನು ವಿಭು ದಾಮೋದರನು ಆಶ್ವಾಸನೆಯನ್ನಿತ್ತು ಸಮಾಧಾನಗೊಳಿಸಿದನು.

13154027a ಸಮಾಶ್ವಸಿಹಿ ಭದ್ರೇ ತ್ವಂ ಮಾ ಶುಚಃ ಶುಭದರ್ಶನೇ|

13154027c ಗತಃ ಸ ಪರಮಾಂ ಸಿದ್ಧಿಂ ತವ ಪುತ್ರೋ ನ ಸಂಶಯಃ||

“ಭದ್ರೇ! ಶುಭದರ್ಶನೇ! ಸಮಾಧಾನಗೊಳ್ಳು! ಶೋಕಿಸಬೇಡ! ನಿನ್ನ ಪುತ್ರನು  ಪರಮ ಸಿದ್ಧಿಯನ್ನು ಪಡೆದಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ.

13154028a ವಸುರೇಷ ಮಹಾತೇಜಾಃ ಶಾಪದೋಷೇಣ ಶೋಭನೇ|

13154028c ಮನುಷ್ಯತಾಮನುಪ್ರಾಪ್ತೋ ನೈನಂ ಶೋಚಿತುಮರ್ಹಸಿ||

ಶೋಭನೇ! ಶಾಪದೋಷದಿಂದ ಮನುಷ್ಯತ್ವವನ್ನು ಪಡೆದಿದ್ದ ಇವನು ಮಹಾತೇಜಸ್ವಿ ವಸುವು. ಇವನ ಕುರಿತು ಶೋಕಿಸಬಾರದು!

13154029a ಸ ಏಷ ಕ್ಷತ್ರಧರ್ಮೇಣ ಯುಧ್ಯಮಾನೋ ರಣಾಜಿರೇ|

13154029c ಧನಂಜಯೇನ ನಿಹತೋ ನೈಷ ನುನ್ನಃ ಶಿಖಂಡಿನಾ||

ರಣಾಜಿರದಲ್ಲಿ ಕ್ಷತ್ರಧರ್ಮದಂತೆ ಯುದ್ಧಮಾಡುತ್ತಿರುವಾಗ ಇವನು ಧನಂಜಯನಿಂದ ಹತನಾದನು. ಶಿಖಂಡಿಯಿಂದಲ್ಲ.

13154030a ಭೀಷ್ಮಂ ಹಿ ಕುರುಶಾರ್ದೂಲಮುದ್ಯತೇಷುಂ ಮಹಾರಣೇ|

13154030c ನ ಶಕ್ತಃ ಸಂಯುಗೇ ಹಂತುಂ ಸಾಕ್ಷಾದಪಿ ಶತಕ್ರತುಃ||

ಮಹಾರಣದಲ್ಲಿ ಆಯುಧಗಳನ್ನು ಮೇಲೆತ್ತಿದ್ದ ಕುರುಶಾರ್ದೂಲ ಭೀಷ್ಮನನ್ನು ಯುದ್ಧದಲ್ಲಿ ಸಂಹರಿಸಲು ಸಾಕ್ಷಾತ್ ಶತಕ್ರತುವೂ ಶಕ್ಯನಿರಲಿಲ್ಲ.

13154031a ಸ್ವಚ್ಚಂದೇನ ಸುತಸ್ತುಭ್ಯಂ ಗತಃ ಸ್ವರ್ಗಂ ಶುಭಾನನೇ|

13154031c ನ ಶಕ್ತಾಃ ಸ್ಯುರ್ನಿಹಂತುಂ ಹಿ ರಣೇ ತಂ ಸರ್ವದೇವತಾಃ||

ಶುಭಾನನೇ! ನಿನ್ನ ಮಗನು ಸ್ವಚ್ಚಂದದಿಂದ ಸ್ವರ್ಗಕ್ಕೆ ಹೋಗಿದ್ದಾನೆ. ರಣದಲ್ಲಿ ಅವನನ್ನು ಸಂಹರಿಸಲು ಸರ್ವದೇವತೆಗಳೂ ಶಕ್ಯರಿಲ್ಲ!””

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ಭೀಷ್ಮಸ್ವರ್ಗಾರೋಹಣಪರ್ವಣಿ ಭೀಷ್ಮಮುಕ್ತಿರ್ನಾಮ ಚತುಃಪಂಚಾಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ಭೀಷ್ಮಸ್ವರ್ಗಾರೋಹಣಪರ್ವದಲ್ಲಿ ಭೀಷ್ಮಮುಕ್ತಿ ಎನ್ನುವ ನೂರಾಐವತ್ನಾಲ್ಕನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಅನುಶಾಸನಪರ್ವಣಿ ಭೀಷ್ಮಸ್ವರ್ಗಾರೋಹಣಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ಭೀಷ್ಮಸ್ವರ್ಗಾರೋಹಣಪರ್ವವು|

ಇತಿ ಶ್ರೀ ಮಹಾಭಾರತೇ ಅನುಶಾಸನಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಅನುಶಾಸನಪರ್ವವು||

ಇದೂವರೆಗಿನ ಒಟ್ಟು ಮಹಾಪರ್ವಗಳು – ೧೩/೧೮, ಉಪಪರ್ವಗಳು-೮೮/೧೦೦, ಅಧ್ಯಾಯಗಳು-೧೮೩೫/೧೯೯೫, ಶ್ಲೋಕಗಳು-೬೯೪೦೭/೭೩೭೮೪

[1] ಅಷ್ಟಾಂಗ ಯೋಗಗಳಲ್ಲಿ ಧಾರಣೆಯು ಒಂದು ಅಂಗ. ಧಾರಣ ಎಂದರೆ ಮನಸ್ಸನ್ನು ಸ್ಥಿರಗೊಳಿಸುವ ಸ್ಥಳಗಳು ಎಂದರ್ಥ. ಯಮಾದಿ ಗುಣಯುಕ್ತಸ್ಯ ಮನಸಃ ಸ್ಥಿತಿರಾತ್ಮನಿ| ಧಾರಣೇತ್ಯುಚತೇ ಸದ್ಧಿಃ ಯೋಗಶಾಸ್ತ್ರ ವಿಶಾರದೈಃ|| ನಾಭಿಚಕ್ರೇ ಹೃದಯಪುಂಡರೀಕೇ ಮೂರ್ಧ್ನಿಜ್ಯೋತಿಷಿ ನಾಸಾಗ್ರೇ ಜಿಹ್ವಾಗ್ರೇ ಇತ್ಯೇವಮಾದಿಷು| ಬಾಹ್ಯೇ ವಾ ವಿಷಯೇ ಚಿತ್ತಸ್ಯ ವೃತ್ತಿಮಾತ್ರೇಣ ಬಂಧಃ|| ಅರ್ಥಾತ್ ನಾಭಿ ಚಕ್ರ, ಹೃದಯ, ನಾಲಿಗೆಯ ತುದಿ, ಶಿರಸ್ಸು ಮೊದಲಾದ ಶರೀರದ ಅವಯವಗಳಲ್ಲಿ ಅಥವಾ ಹೊರಗಿನ ಶುಭ ವಸ್ತುಗಳಲ್ಲಿ ಚಿತ್ತವನ್ನು ಸ್ಥಿರವಾಗಿ ನಿಲ್ಲಿಸುವ ಅಭ್ಯಾಸವೇ ಧಾರಣೆ.

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

Comments are closed.