Anushasana Parva: Chapter 142

ಅನುಶಾಸನ ಪರ್ವ: ದಾನಧರ್ಮ ಪರ್ವ

೧೪೨

ಬ್ರಾಹ್ಮಣರಿಂದ ಕಪ ದಾನವರ ನಾಶ; ಕಾರ್ತವೀರ್ಯನು ಬ್ರಾಹ್ಮಣರಿಗೆ ನಮಸ್ಕರಿಸಿದುದು (1-23).

13142001 ಭೀಷ್ಮ ಉವಾಚ|

13142001a ತೂಷ್ಣೀಮಾಸೀದರ್ಜುನಸ್ತು ಪವನಸ್ತ್ವಬ್ರವೀತ್ಪುನಃ|

13142001c ಶೃಣು ಮೇ ಬ್ರಾಹ್ಮಣೇಷ್ವೇವ ಮುಖ್ಯಂ ಕರ್ಮ ಜನಾಧಿಪ||

ಭೀಷ್ಮನು ಹೇಳಿದನು: “ಅರ್ಜುನನಾದರೋ ಸುಮ್ಮನಾಗಿರಲು ಪವನನು ಪುನಃ ಹೇಳಿದನು: “ಜನಾಧಿಪ! ಬ್ರಾಹ್ಮಣರ ಮುಖ್ಯ ಕರ್ಮವನ್ನು ಕೇಳು.

13142002a ಮದಸ್ಯಾಸ್ಯಮನುಪ್ರಾಪ್ತಾ ಯದಾ ಸೇಂದ್ರಾ ದಿವೌಕಸಃ|

13142002c ತದೇಯಂ ಚ್ಯವನೇನೇಹ ಹೃತಾ ತೇಷಾಂ ವಸುಂಧರಾ||

ಇಂದ್ರನೊಂದಿಗೆ ದಿವೌಕಸರು ಮದನ ಬಾಯಿಗೆ ಬಂದಿದ್ದಾಗ ಚ್ಯವನನು ಅವರ ವಸುಂಧರೆಯನ್ನು ಕಸಿದುಕೊಂಡಿದ್ದನು.

13142003a ಉಭೌ ಲೋಕೌ ಹೃತೌ ಮತ್ವಾ ತೇ ದೇವಾ ದುಃಖಿತಾಭವನ್|

13142003c ಶೋಕಾರ್ತಾಶ್ಚ ಮಹಾತ್ಮಾನಂ ಬ್ರಹ್ಮಾಣಂ ಶರಣಂ ಯಯುಃ||

ಎರಡೂ ಲೋಕಗಳೂ ತಮ್ಮಿಂದ ಅಪಹರಿಸಲ್ಪಟ್ಟವು ಎಂದು ತಿಳಿದು ದೇವತೆಗಳು ದುಃಖಿತರಾದರು. ಶೋಕಾರ್ತರಾದ ಅವರು ಮಹಾತ್ಮ ಬ್ರಹ್ಮನ ಶರಣು ಹೋದರು.

13142004 ದೇವಾ ಊಚುಃ|

13142004a ಮದಾಸ್ಯವ್ಯತಿಷಿಕ್ತಾನಾಮಸ್ಮಾಕಂ ಲೋಕಪೂಜಿತ|

13142004c ಚ್ಯವನೇನ ಹೃತಾ ಭೂಮಿಃ ಕಪೈಶ್ಚಾಪಿ ದಿವಂ ಪ್ರಭೋ||

ದೇವತೆಗಳು ಹೇಳಿದರು: “ಲೋಕಪೂಜಿತ! ಪ್ರಭೋ! ಮದನ ಬಾಯಿಯಲ್ಲಿ ನಾವು ಸಿಲುಕಿಕೊಂಡಿದ್ದಾಗ ಚ್ಯವನನು ಭೂಮಿಯನ್ನು ಮತ್ತು ಕಪರು ಸ್ವರ್ಗವನ್ನು ಅಪಹರಿಸಿದರು.”

13142005 ಬ್ರಹ್ಮೋವಾಚ|

13142005a ಗಚ್ಚಧ್ವಂ ಶರಣಂ ವಿಪ್ರಾನಾಶು ಸೇಂದ್ರಾ ದಿವೌಕಸಃ|

13142005c ಪ್ರಸಾದ್ಯ ತಾನುಭೌ ಲೋಕಾವವಾಪ್ಸ್ಯಥ ಯಥಾ ಪುರಾ||

ಬ್ರಹ್ಮನು ಹೇಳಿದನು: “ಇಂದ್ರನೊಡನಿರುವ ದಿವೌಕಸರೇ! ಕೂಡಲೇ ವಿಪ್ರರ ಶರಣು ಹೋಗಿ. ಅವರನ್ನು ಪ್ರಸನ್ನಗೊಳಿಸಿದರೆ ನೀವು ಹಿಂದಿನಂತೆ ಎರಡೂ ಲೋಕಗಳನ್ನು ಪಡೆದುಕೊಳ್ಳಬಲ್ಲಿರಿ!”

13142006a ತೇ ಯಯುಃ ಶರಣಂ ವಿಪ್ರಾಂಸ್ತ ಊಚುಃ ಕಾನ್ಜಯಾಮಹೇ|

13142006c ಇತ್ಯುಕ್ತಾಸ್ತೇ ದ್ವಿಜಾನ್ ಪ್ರಾಹುರ್ಜಯತೇಹ ಕಪಾನಿತಿ|

13142006e ಭೂಗತಾನ್ ಹಿ ವಿಜೇತಾರೋ ವಯಮಿತ್ಯೇವ ಪಾರ್ಥಿವ||

ಅವರು ಶರಣು ಹೋಗಲು ವಿಪ್ರರು “ಯಾರನ್ನು ಜಯಿಸಬೇಕು?” ಎಂದು ಕೇಳಿದರು. ದ್ವಿಜರು ಹೀಗೆ ಕೇಳಲು “ಕಪರನ್ನು ಜಯಿಸಿ!” ಎಂದು ದೇವತೆಗಳು ಹೇಳಿದರು. ಪಾರ್ಥಿವ! ಆಗ ಬ್ರಾಹ್ಮಣರು “ನಾವು ಭೂಗತರಾದವರನ್ನು ಮಾತ್ರ ಜಯಿಸಬಲ್ಲೆವು!” ಎಂದರು.

13142007a ತತಃ ಕರ್ಮ ಸಮಾರಬ್ಧಂ ಬ್ರಾಹ್ಮಣೈಃ ಕಪನಾಶನಮ್|

13142007c ತಚ್ಚ್ರುತ್ವಾ ಪ್ರೇಷಿತೋ ದೂತೋ ಬ್ರಾಹ್ಮಣೇಭ್ಯೋ ಧನೀ ಕಪೈಃ||

ಆಗ ಬ್ರಾಹ್ಮಣರು ಕಪನಾಶನ ಕರ್ಮವನ್ನು ಪ್ರಾರಂಭಿಸಿದರು. ಅದನ್ನು ಕೇಳಿ ಕಪರು ಧನೀ ಎಂಬ ದೂತನನ್ನು ಬ್ರಾಹ್ಮಣರ ಬಳಿ ಕಳುಹಿಸಿದರು.

13142008a ಸ ಚ ತಾನ್ ಬ್ರಾಹ್ಮಣಾನಾಹ ಧನೀ ಕಪವಚೋ ಯಥಾ|

13142008c ಭವದ್ಭಿಃ ಸದೃಶಾಃ ಸರ್ವೇ ಕಪಾಃ ಕಿಮಿಹ ವರ್ತತೇ||

ಧನಿಯು ಕಪರು ಹೇಳಿಕಳುಹಿಸಿದ್ದ ಮಾತನ್ನು ಬ್ರಾಹ್ಮಣರಿಗೆ ಹೇಳಿದನು: “ಸರ್ವ ಕಪರೂ ನಿಮ್ಮ ಸದೃಶರಾಗಿರುವಾಗ ನೀವು ಏಕೆ ಹೀಗೆ ವರ್ತಿಸುತ್ತಿದ್ದೀರಿ?

13142009a ಸರ್ವೇ ವೇದವಿದಃ ಪ್ರಾಜ್ಞಾಃ ಸರ್ವೇ ಚ ಕ್ರತುಯಾಜಿನಃ|

13142009c ಸರ್ವೇ ಸತ್ಯವ್ರತಾಶ್ಚೈವ ಸರ್ವೇ ತುಲ್ಯಾ ಮಹರ್ಷಿಭಿಃ||

ಅವರೆಲ್ಲರೂ ವೇದವಿದರೂ, ಪ್ರಾಜ್ಞರೂ ಆಗಿದ್ದಾರೆ. ಎಲ್ಲರೂ ಕ್ರತು-ಯಜ್ಞಗಳನ್ನು ಮಾಡಿದ್ದಾರೆ. ಸರ್ವರೂ ಸತ್ಯವ್ರತರು ಮತ್ತು ಸರ್ವರೂ ಮಹರ್ಷಿಗಳಿಗೆ ಸಮಾನರು.

13142010a ಶ್ರೀಶ್ಚೈವ ರಮತೇ ತೇಷು ಧಾರಯಂತಿ ಶ್ರಿಯಂ ಚ ತೇ|

13142010c ವೃಥಾ ದಾರಾನ್ನ ಗಚ್ಚಂತಿ ವೃಥಾಮಾಂಸಂ ನ ಭುಂಜತೇ||

ಲಕ್ಷ್ಮಿಯು ಅವರಲ್ಲಿ ರಮಿಸುತ್ತಾಳೆ ಮತ್ತು ಅವರು ಶ್ರೀಯನ್ನು ಧರಿಸಿದ್ದಾರೆ. ಋತುಸಮಯಗಳಲ್ಲದೇ ವೃಥಾ ಅವರು ಪತ್ನಿಯರನ್ನು ಕೂಡುವುದಿಲ್ಲ ಮತ್ತು ವೃಥಾ ನಿಷ್ಕಾರಣವಾಗಿ ಮಾಂಸವನ್ನು ತಿನ್ನುವುದಿಲ್ಲ.

13142011a ದೀಪ್ತಮಗ್ನಿಂ ಜುಹ್ವತಿ ಚ ಗುರೂಣಾಂ ವಚನೇ ಸ್ಥಿತಾಃ|

13142011c ಸರ್ವೇ ಚ ನಿಯತಾತ್ಮಾನೋ ಬಾಲಾನಾಂ ಸಂವಿಭಾಗಿನಃ||

ಪ್ರಜ್ವಲಿಸುವ ಅಗ್ನಿಯಲ್ಲಿ ಅವರು ಹೋಮಮಾಡುತ್ತಾರೆ. ಗುರುಗಳ ವಚನದಂತೆ ನಡೆಯುತ್ತಾರೆ. ಸರ್ವರೂ ನಿಯತಾತ್ಮರಾಗಿದ್ದರೆ ಮತ್ತು ಬಾಲಕರಿಗೆ ಯಥಾಯೋಗ್ಯವಾಗಿ ಐಶ್ವರ್ಯದ ಭಾಗವನ್ನು ನೀಡುತ್ತಾರೆ.

13142012a ಉಪೇತ್ಯ ಶಕಟೈರ್ಯಾಂತಿ[1] ನ ಸೇವಂತಿ ರಜಸ್ವಲಾಮ್|

[2]13142012c ಅಭುಕ್ತವತ್ಸು ನಾಶ್ನಂತಿ ದಿವಾ ಚೈವ ನ ಶೇರತೇ||

ಯಾರ ಬಳಿಗಾದರೂ ಹೋಗಬೇಕಾದರೆ ಬಂಡಿಗಳಲ್ಲಿ ಹೋಗುತ್ತಾರೆ. ರಜಸ್ವಲೆಯರನ್ನು ಸೇವಿಸುವುದಿಲ್ಲ. ಗರ್ಭಿಣಿಯರು ಮತ್ತು ವೃದ್ಧರ ಊಟವಾಗದ ಮೊದಲು ಊಟಮಾಡುವುದಿಲ್ಲ.

13142013a ಏತೈಶ್ಚಾನ್ಯೈಶ್ಚ ಬಹುಭಿರ್ಗುಣೈರ್ಯುಕ್ತಾನ್ಕಥಂ ಕಪಾನ್|

13142013c ವಿಜೇಷ್ಯಥ ನಿವರ್ತಧ್ವಂ ನಿವೃತ್ತಾನಾಂ ಶುಭಂ[3] ಹಿ ವಃ||

ಇದು ಮತ್ತು ಇನ್ನೂ ಅನ್ಯ ಅನೇಕ ಗುಣಗಳಿಂದ ಯುಕ್ತರಾದ ಕಪರನ್ನು ನೀವು ಏಕೆ ಜಯಿಸುವಿರಿ? ಹಿಂದಿರುಗಿ. ಹಿಂದಿರುಗುವುದರಿಂದಲೇ ನಿಮಗೆ ಶುಭವಾಗುತ್ತದೆ.”

13142014 ಬ್ರಾಹ್ಮಣಾ ಊಚುಃ|

13142014a ಕಪಾನ್ವಯಂ ವಿಜೇಷ್ಯಾಮೋ ಯೇ ದೇವಾಸ್ತೇ ವಯಂ ಸ್ಮೃತಾಃ|

13142014c ತಸ್ಮಾದ್ವಧ್ಯಾಃ ಕಪಾಸ್ಮಾಕಂ ಧನಿನ್ಯಾಹಿ ಯಥಾಗತಮ್||

ಬ್ರಾಹ್ಮಣರು ಹೇಳಿದರು: “ನಾವು ಕಪರನ್ನು ಜಯಿಸುತ್ತೇವೆ. ಯಾರನ್ನು ದೇವತೆಗಳೆಂದು ಕರೆಯುತ್ತಾರೋ ಅವರು ನಾವೇ ಆಗಿದ್ದೇವೆ. ಆದುದರಿಂದ ನಮಗೆ ಕಪರು ವಧ್ಯರು. ಧನಿ! ಹೇಗೆ ಬಂದಿದ್ದೀಯೋ ಹಾಗೆ ಹೊರಟುಹೋಗು!”

13142015a ಧನೀ ಗತ್ವಾ ಕಪಾನಾಹ ನ ವೋ ವಿಪ್ರಾಃ ಪ್ರಿಯಂಕರಾಃ|

13142015c ಗೃಹೀತ್ವಾಸ್ತ್ರಾಣ್ಯಥೋ ವಿಪ್ರಾನ್ಕಪಾಃ ಸರ್ವೇ ಸಮಾದ್ರವನ್||

ಧನಿಯು ಹೋಗಿ “ಬ್ರಾಹ್ಮಣರು ನಿಮಗೆ ಪ್ರಿಯವಾದುದನ್ನು ಮಾಡುವವರಲ್ಲ” ಎಂದು ಕಪರಿಗೆ ಹೇಳಿದನು. ಕೂಡಲೇ ಕಪರು ಎಲ್ಲರೂ ಅಸ್ತ್ರಗಳನ್ನು ಹಿಡಿದು ಬ್ರಾಹ್ಮಣರನ್ನು ಆಕಮಿಸಿದರು.

13142016a ಸಮುದಗ್ರಧ್ವಜಾನ್ ದೃಷ್ಟ್ವಾ ಕಪಾನ್ಸರ್ವೇ ದ್ವಿಜಾತಯಃ|

13142016c ವ್ಯಸೃಜನ್ ಜ್ವಲಿತಾನಗ್ನೀನ್ಕಪಾನಾಂ ಪ್ರಾಣನಾಶನಾನ್||

ಧ್ವಜವನ್ನು ಮೇಲೆತ್ತಿ ಹಿಡಿದಿದ್ದ ಕಪರೆಲ್ಲರನ್ನೂ ನೋಡಿ ಬ್ರಾಹ್ಮಣರು ಕಪರ ಪ್ರಾಣನಾಶಕ ಪ್ರಜ್ವಲಿತ ಅಗ್ನಿಯನ್ನು ಅವರ ಮೇಲೆ ವಿಸರ್ಜಿಸಿದರು.

13142017a ಬ್ರಹ್ಮಸೃಷ್ಟಾ ಹವ್ಯಭುಜಃ ಕಪಾನ್ ಭುಕ್ತ್ವಾ ಸನಾತನಾಃ|

13142017c ನಭಸೀವ ಯಥಾಭ್ರಾಣಿ ವ್ಯರಾಜಂತ ನರಾಧಿಪ||

[4]13142017e ಪ್ರಶಶಂಸುರ್ದ್ವಿಜಾಂಶ್ಚೈವ ಬ್ರಹ್ಮಾಣಂ ಚ ಯಶಸ್ವಿನಮ್|

ನರಾಧಿಪ! ಬ್ರಾಹ್ಮಣರು ಸೃಷ್ಟಿಸಿದ ಆ ಸನಾತನ ಹವ್ಯಭುಜನು ಕಪರನ್ನು ಭುಂಜಿಸಿ ನಭದಲ್ಲಿರುವ ಮೋಡಗಳಂತೆ ರಾರಾಜಿಸಿದನು. ಆಗ ದೇವತೆಗಳು ಯಶಸ್ವೀ ದ್ವಿಜ ಬ್ರಾಹ್ಮಣರನ್ನು ಪ್ರಶಂಸಿಸಿದರು.

13142018a ತೇಷಾಂ ತೇಜಸ್ತಥಾ ವೀರ್ಯಂ ದೇವಾನಾಂ ವವೃಧೇ ತತಃ|

13142018c ಅವಾಪ್ನುವಂಶ್ಚಾಮರತ್ವಂ ತ್ರಿಷು ಲೋಕೇಷು ಪೂಜಿತಮ್||

ಅನಂತರ ದೇವತೆಗಳ ತೇಜಸ್ಸು ಮತ್ತು ವೀರ್ಯವು ವೃದ್ಧಿಸಿತು. ಮೂರು ಲೋಕಗಳಲ್ಲಿಯೂ ಪೂಜಿತರಾಗಿ ಅಮರತ್ವವನ್ನು ಪಡೆದುಕೊಂಡರು.”

13142019a ಇತ್ಯುಕ್ತವಚನಂ ವಾಯುಮರ್ಜುನಃ ಪ್ರತ್ಯಭಾಷತ|

13142019c ಪ್ರತಿಪೂಜ್ಯ ಮಹಾಬಾಹೋ ಯತ್ತಚ್ಚೃಣು ನರಾಧಿಪ||

ನರಾಧಿಪ! ಮಹಾಬಾಹೋ! ವಾಯುವು ಹೀಗೆ ಹೇಳಲು ಅರ್ಜುನನು ಅವನನ್ನು ಪ್ರತಿಪೂಜಿಸಿ ಉತ್ತರಿಸಿದನು. ಅದನ್ನು ಕೇಳು.

13142020a ಜೀವಾಮ್ಯಹಂ ಬ್ರಾಹ್ಮಣಾರ್ಥೇ ಸರ್ವಥಾ ಸತತಂ ಪ್ರಭೋ|

13142020c ಬ್ರಹ್ಮಣೇ ಬ್ರಾಹ್ಮಣೇಭ್ಯಶ್ಚ ಪ್ರಣಮಾಮಿ ಚ ನಿತ್ಯಶಃ||

“ಪ್ರಭೋ! ನಾನು ಸರ್ವಥಾ ಸತತವೂ ಬ್ರಾಹ್ಮಣರಿಗಾಗಿಯೇ ಜೀವಿಸುತ್ತೇನೆ. ಬ್ರಹ್ಮ ಮತ್ತು ಬ್ರಾಹ್ಮಣರಿಗೆ ನಿತ್ಯವೂ ನಮಸ್ಕರಿಸುತ್ತೇನೆ.

13142021a ದತ್ತಾತ್ರೇಯಪ್ರಸಾದಾಚ್ಚ ಮಯಾ ಪ್ರಾಪ್ತಮಿದಂ ಯಶಃ|

13142021c ಲೋಕೇ ಚ ಪರಮಾ ಕೀರ್ತಿರ್ಧರ್ಮಶ್ಚ ಚರಿತೋ ಮಹಾನ್||

ದತ್ತಾತ್ರೇಯನ ಪ್ರಸಾದದಿಂದಲೇ ನನಗೆ ಈ ಯಶಸ್ಸು ಮತ್ತು ಲೋಕದಲ್ಲಿ ಪರಮ ಕೀರ್ತಿಯು ಪ್ರಾಪ್ತವಾಗಿದೆ. ಮಹಾನ್ ಧರ್ಮದಲ್ಲಿಯೇ ನಡೆಯುತ್ತೇನೆ.

13142022a ಅಹೋ ಬ್ರಾಹ್ಮಣಕರ್ಮಾಣಿ ಯಥಾ ಮಾರುತ ತತ್ತ್ವತಃ|

13142022c ತ್ವಯಾ ಪ್ರೋಕ್ತಾನಿ ಕಾರ್ತ್ಸ್ನ್ಯೇನ ಶ್ರುತಾನಿ ಪ್ರಯತೇನ ಹ||

ಅಹೋ! ಮಾರುತ! ನೀನು ಹೇಳಿದ ಬ್ರಾಹ್ಮಣಕರ್ಮಗಳೆಲ್ಲವನ್ನು ತತ್ತ್ವಸಹಿತವಾಗಿ ಸಂಪೂರ್ಣವಾಗಿ ಏಕಾಗ್ರಚಿತ್ತನಾಗಿ ಕೇಳಿದ್ದೇನೆ.”

13142023 ವಾಯುರುವಾಚ|

13142023a ಬ್ರಾಹ್ಮಣಾನ್ ಕ್ಷತ್ರಧರ್ಮೇಣ ಪಾಲಯಸ್ವೇಂದ್ರಿಯಾಣಿ ಚ|

13142023c ಭೃಗುಭ್ಯಸ್ತೇ ಭಯಂ ಘೋರಂ ತತ್ತು ಕಾಲಾದ್ಭವಿಷ್ಯತಿ||

ವಾಯುವು ಹೇಳಿದನು: “ಕ್ಷತ್ರಧರ್ಮದಿಂದ ಬ್ರಾಹ್ಮಣರನ್ನು ಪರಿಪಾಲಿಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸು. ಮುಂದೆ ನಿನಗೆ ಭೃಗುವಂಶೀಯರಿಂದ ಘೋರ ಭಯವಿದೆ. ಆದರೆ ಅದು ದೀರ್ಘಕಾಲದ ನಂತರ ಉಂಟಾಗುತ್ತದೆ.””

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪವನಾರ್ಜುನಸಂವಾದೇ ದ್ವಿಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಪವನಾರ್ಜುನಸಂವಾದ ಎನ್ನುವ ನೂರಾನಲ್ವತ್ತೆರಡನೇ ಅಧ್ಯಾಯವು.

[1] ಉಪೇತ್ಯ ಶನಕೈರ್ಯಾಂತಿ (ಭಾರತ ದರ್ಶನ/ಗೀತಾ ಪ್ರೆಸ್).

[2] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸ್ವರ್ಗತಿಂ ಚೈವ ಗಚ್ಛಂತಿ ತಥೈವ ಶುಭಕರ್ಮಿಣಃ| (ಭಾರತ ದರ್ಶನ/ಗೀತಾ ಪ್ರೆಸ್).

[3] ಸುಖಂ (ಭಾರತ ದರ್ಶನ/ಗೀತಾ ಪ್ರೆಸ್).

[4] ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ಹತ್ವಾ ವೈ ದಾನವಾನ್ ದೇವಾಃ ಸರ್ವೇ ಸಂಭೂಯ ಸಂಯುಗೇ| ತೇನಾಭ್ಯಜಾನನ್ ಹಿ ತದಾ ಬ್ರಾಹ್ಮಣೈರ್ನಿಹತಾನ್ ಕಪಾನ್|| ಅಥಾಗಮ್ಯ ಮಹಾತೇಜಾ ನಾರದೋಽಕಥಯದ್ವಿಭೋ| ಯಥಾ ಹತಾ ಮಹಾಭಾಗೈಸ್ತೇಜಸಾ ಬ್ರಾಹ್ಮಣೈಃ ಕಪಾಃ| ನಾರದಸ್ಯ ವಚಃ ಶ್ರುತ್ವಾ ಪ್ರೀತಾಃ ಸರ್ವೇ ದಿವೌಕಸಾಃ|| (ಗೀತಾ ಪ್ರೆಸ್).

Comments are closed.