Anushasana Parva: Chapter 123

ಅನುಶಾಸನ ಪರ್ವ: ದಾನಧರ್ಮ ಪರ್ವ

೧೨೩

13123001 ಭೀಷ್ಮ ಉವಾಚ|

13123001a ಏವಮುಕ್ತಃ ಸ ಭಗವಾನ್ಮೈತ್ರೇಯಂ ಪ್ರತ್ಯಭಾಷತ|

13123001c ದಿಷ್ಟ್ಯೈವಂ ತ್ವಂ ವಿಜಾನಾಸಿ ದಿಷ್ಟ್ಯಾ ತೇ ಬುದ್ಧಿರೀದೃಶೀ|

13123001e ಲೋಕೋ ಹ್ಯಯಂ ಗುಣಾನೇವ ಭೂಯಿಷ್ಠಂ ಸ್ಮ ಪ್ರಶಂಸತಿ||

ಭೀಷ್ಮನು ಹೇಳಿದನು: “ಹೀಗೆ ಹೇಳಲು ಭಗವಾನ್ ವ್ಯಾಸನು ಮೈತ್ರೇಯನಿಗೆ ಹೇಳಿದನು: “ನೀನು ಈ ಎಲ್ಲ ವಿಷಯಗಳನ್ನೂ ಹೀಗೆಯೇ ತಿಳಿದುಕೊಂಡಿರುವುದು ಸೌಭಾಗ್ಯವೇ ಸರಿ. ಭಾಗ್ಯದ ಕಾರಣದಿಂದಲೇ ನಿನಗೆ ಇಂತಹ ಬುದ್ಧಿಯುಂಟಾಗಿದೆ. ಲೋಕದಲ್ಲಿ ಜನರು ಉತ್ತಮ ಗುಣಗಳಿರುವವರನ್ನೇ ಯಾವಾಗಲೂ ಪ್ರಶಂಸಿಸುತ್ತಾರೆ.

13123002a ರೂಪಮಾನವಯೋಮಾನಶ್ರೀಮಾನಾಶ್ಚಾಪ್ಯಸಂಶಯಮ್|

13123002c ದಿಷ್ಟ್ಯಾ ನಾಭಿಭವಂತಿ ತ್ವಾಂ ದೈವಸ್ತೇಽಯಮನುಗ್ರಹಃ|

13123002e ಯತ್ತೇ ಭೃಶತರಂ ದಾನಾದ್ವರ್ತಯಿಷ್ಯಾಮಿ ತಚ್ಚೃಣು||

ಅದೃಷ್ಟವಶಾತ್ ರೂಪ, ವಯಸ್ಸು ಮತ್ತು ಸಂಪತ್ತುಗಳ ಅಭಿಮಾನವು ನಿನ್ನ ಮೇಲೆ ಯಾವ ವಿಧದ ಪ್ರಭಾವವನ್ನೂ ಬೀರಿಲ್ಲ. ಇದು ದೇವತೆಗಳ ಅನುಗ್ರಹವೇ ಆಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ನಾನೀಗ ದಾನಕ್ಕಿಂತಲೂ ವಿಶೇಷವಾದ ಧರ್ಮವನ್ನು ಹೇಳುತ್ತೇನೆ. ಕೇಳು.

13123003a ಯಾನೀಹಾಗಮಶಾಸ್ತ್ರಾಣಿ ಯಾಶ್ಚ ಕಾಶ್ಚಿತ್ಪ್ರವೃತ್ತಯಃ|

13123003c ತಾನಿ ವೇದಂ ಪುರಸ್ಕೃತ್ಯ ಪ್ರವೃತ್ತಾನಿ ಯಥಾಕ್ರಮಮ್||

ಈ ಜಗತ್ತಿನಲ್ಲಿ ಎಷ್ಟು ಶಾಸ್ತ್ರಗಳಿವೆಯೋ ಮತ್ತು ಎಷ್ಟು ಬಗೆಯ ಪ್ರವೃತ್ತಿಗಳಿವೆಯೋ ಅವೆಲ್ಲವೂ ವೇದವನ್ನೇ ಪುರಸ್ಕರಿಸಿ ಯಥಾಕ್ರಮವಾಗಿ ಪ್ರಚಲಿತವಾಗಿವೆ.

13123004a ಅಹಂ ದಾನಂ ಪ್ರಶಂಸಾಮಿ ಭವಾನಪಿ ತಪಃಶ್ರುತೇ|

13123004c ತಪಃ ಪವಿತ್ರಂ ವೇದಸ್ಯ ತಪಃ ಸ್ವರ್ಗಸ್ಯ ಸಾಧನಮ್||

ನಾನು ದಾನವನ್ನು ಪ್ರಶಂಸಿಸುತ್ತೇನೆ. ನೀನು ತಪಸ್ಸನ್ನೂ ಜ್ಞಾನವನ್ನೂ ಪ್ರಶಂಸಿಸುತ್ತೀಯೆ. ತಪಸ್ಸು ಪವಿತ್ರವಾದುದು. ತಮಸ್ಸು ವೇದ ಮತ್ತು ಸ್ವರ್ಗಕ್ಕೆ ಸಾಧನವು.

13123005a ತಪಸಾ ಮಹದಾಪ್ನೋತಿ ವಿದ್ಯಯಾ ಚೇತಿ ನಃ ಶ್ರುತಮ್|

13123005c ತಪಸೈವ ಚಾಪನುದೇದ್ಯಚ್ಚಾನ್ಯದಪಿ ದುಷ್ಕೃತಮ್||

ತಪಸ್ಸು ಮತ್ತು ವೇದವಿದ್ಯೆಯಿಂದ ಮನುಶ್ಯನು ಮಹತ್ತ್ವವನ್ನು ಪಡೆಯುತ್ತಾನೆಂದು ಕೇಳಿದ್ದೇವೆ. ನಾನಾವಿಧದ ಪಾಪಗಳನ್ನೂ ತಪಸ್ಸಿನಿಂದಲೇ ಹೋಗಲಾಡಿಸಿಕೊಳ್ಳಬಹುದು.

13123006a ಯದ್ಯದ್ಧಿ ಕಿಂ ಚಿತ್ಸಂಧಾಯ ಪುರುಷಸ್ತಪ್ಯತೇ ತಪಃ|

13123006c ಸರ್ವಮೇತದವಾಪ್ನೋತಿ ಬ್ರಾಹ್ಮಣೋ ವೇದಪಾರಗಃ||

ಯಾವ ಯಾವ ಉದ್ದೇಶದಿಂದ ಮನುಷ್ಯನು ತಪಸ್ಸನ್ನು ತಪಿಸುತ್ತಾನೋ ಅವೆಲ್ಲವನ್ನೂ ವೇದಪಾರಗ ಬ್ರಾಹ್ಮಣನು ಪಡೆದುಕೊಳ್ಳುತ್ತಾನೆ.

13123007a ದುರನ್ವಯಂ ದುಷ್ಪ್ರಧೃಷ್ಯಂ ದುರಾಪಂ ದುರತಿಕ್ರಮಮ್|

13123007c ಸರ್ವಂ ವೈ ತಪಸಾಭ್ಯೇತಿ ತಪೋ ಹಿ ಬಲವತ್ತರಮ್||

ಯಾರೊಡನೆ ಸಂಬಂಧವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಅದರೊಡನೆ ಸಂಬಂಧವನ್ನು ತಪಸ್ಸಿನಿಂದಲೇ ಕಲ್ಪಿಸಿಕೊಳ್ಳಬಹುದು. ಎದುರಿಸಲು ಸಾಧ್ಯವಾಗದೇ ಇರುವವವನ್ನು ತಪಸ್ಸಿನಿಂದ ಎದುರಿಸಬಹುದು. ದುರ್ಲಭವಾದುದನ್ನು ತಪಸ್ಸಿನಿಂದ ಪಡೆದುಕೊಳ್ಳಬಹುದು. ದಾಟಲು ಸಾದ್ಯವಾಗದೇ ಇರುವುದನ್ನೂ ತಪಸ್ಸಿನಿಂದ ದಾಟಬಹುದು. ಎಲ್ಲವೂ ತಪಸ್ಸಿನಿಂದಲೇ ಸಾಧ್ಯವಾಗುತ್ತವೆ. ಆದುದರಿಂದ ತಪಸ್ಸೇ ಬಲವತ್ತರವಾದುದು.

13123008a ಸುರಾಪೋಽಸಂಮತಾದಾಯೀ ಭ್ರೂಣಹಾ ಗುರುತಲ್ಪಗಃ|

13123008c ತಪಸಾ ತರತೇ ಸರ್ವಮೇನಸಶ್ಚ ಪ್ರಮುಚ್ಯತೇ||

ಸುರಾಪಾನಮಾಡಿದ, ದುರ್ದಾನಗಳನ್ನು ಸ್ವೀಕರಿಸುವ, ಅಥವಾ ಕಳ್ಳನು, ಭ್ರೂಣಹತ್ಯೆಯನ್ನು ಮಾಡಿದ ಮತ್ತು ಗುರುಪತ್ನಿಯೊಡನೆ ಕೂಡಿದ ಪಾಪಿಷ್ಠರೆಲ್ಲರೂ ಕೂಡ ತಪಸ್ಸಿನಿಂದ ಪಾಪಮುಕ್ತರಾಗಿ ಸಂಸಾರಸಾಗರವನ್ನು ದಾಟುತ್ತಾರೆ.

13123009a ಸರ್ವವಿದ್ಯಸ್ತು ಚಕ್ಷುಷ್ಮಾನಪಿ ಯಾದೃಶತಾದೃಶಃ|

13123009c ತಪಸ್ವಿನೌ ಚ ತಾವಾಹುಸ್ತಾಭ್ಯಾಂ ಕಾರ್ಯಂ ಸದಾ ನಮಃ||

ಸರ್ವವಿದ್ಯಾವಂತನನ್ನು ಚಕ್ಷುಷ್ಮಂತನೆಂದು ಕರೆಯುತ್ತಾರೆ. ಹಾಗೆಯೇ ತಪಸ್ವಿಯು ಎಂಥವನೇ ಆಗಿದ್ದರೂ ಅವನನ್ನು ನೇತ್ರವಂತನೆಂದು ಹೇಳುತ್ತಾರೆ. ಬಹುಶ್ರುತನಿಗೂ ತಪಸ್ವಿಗೂ ಸದಾ ನಮಸ್ಕರಿಸಬೇಕು.

13123010a ಸರ್ವೇ ಪೂಜ್ಯಾಃ ಶ್ರುತಧನಾಸ್ತಥೈವ ಚ ತಪಸ್ವಿನಃ|

13123010c ದಾನಪ್ರದಾಃ ಸುಖಂ ಪ್ರೇತ್ಯ ಪ್ರಾಪ್ನುವಂತೀಹ ಚ ಶ್ರಿಯಮ್||

ವೇದವನ್ನೇ ಧನವನ್ನಾಗಿ ಹೊಂದಿರುವವರು ಮತ್ತು ತಪಸ್ವಿಗಳೆಲ್ಲರೂ ಪೂಜನೀಯರೇ. ದಾನಿಗಳೂ ಕೂಡ ಇಲ್ಲಿ ಸಂಪತ್ತನ್ನು ಪಡೆದು ಪರಲೋಕದಲ್ಲಿ ಸುಖಿಗಳಾಗುತ್ತಾರೆ.

13123011a ಇಮಂ ಚ ಬ್ರಹ್ಮಲೋಕಂ ಚ ಲೋಕಂ ಚ ಬಲವತ್ತರಮ್|

13123011c ಅನ್ನದಾನೈಃ ಸುಕೃತಿನಃ ಪ್ರತಿಪದ್ಯಂತಿ ಲೌಕಿಕಾಃ||

ಪುಣ್ಯಕರ್ಮಿಗಳು ಅನ್ನದಾನಗಳಿಂದ ಲೌಕಿಕವಾದ ಫಲಗಳನ್ನೂ ಮತ್ತು ನಂತರ ಬ್ರಹ್ಮಲೋಕ ಹಾಗೂ ಅದಕ್ಕೂ ಬಲವತ್ತರವಾದ ಲೋಕಗಳನ್ನು ಪಡೆಯುತ್ತಾರೆ.

13123012a ಪೂಜಿತಾಃ ಪೂಜಯಂತ್ಯೇತಾನ್ಮಾನಿತಾ ಮಾನಯಂತಿ ಚ|

13123012c ಅದಾತಾ[1] ಯತ್ರ ಯತ್ರೈತಿ ಸರ್ವತಃ ಸಂಪ್ರಣುದ್ಯತೇ||

ಪೂಜಿತಗೊಂಡವರು ಪೂಜಿಸುತ್ತಾರೆ ಮತ್ತು ಸನ್ಮಾನಿತರಾದವರು ಸನ್ಮಾನಿಸುತ್ತಾರೆ. ದಾನಿಯು ಎಲ್ಲೆಲ್ಲಿ ಹೋಗುತ್ತಾನೋ ಎಲ್ಲಕಡೆ ಅವನನ್ನು ಸ್ತುತಿಸುತ್ತಾರೆ.

13123013a ಅಕರ್ತಾ ಚೈವ ಕರ್ತಾ ಚ ಲಭತೇ ಯಸ್ಯ ಯಾದೃಶಮ್|

13123013c ಯದ್ಯೇವೋರ್ಧ್ವಂ ಯದ್ಯವಾಕ್ಚ ತ್ವಂ ಲೋಕಮಭಿಯಾಸ್ಯಸಿ||

ದಾನಮಾಡುವವನು ಮತ್ತು ದಾನಮಾಡದವನು ತಮ್ಮ ತಮ್ಮ ಕರ್ಮಗಳಿಗೆ ತಕ್ಕಂತೆ ಫಲವನ್ನು ಪಡೆದುಕೊಳ್ಳುತ್ತಾರೆ. ಅವಸಾನಾನಂತರ ಕರ್ಮಫಲಾನುಸಾರವಾಗಿ ಮೇಲಿನ ಅಥವಾ ಕೆಳಗಿನ ಲೋಕಗಳಿಗೆ ಹೋಗುತ್ತಾರೆ.

13123014a ಪ್ರಾಪ್ಸ್ಯಸೇ ತ್ವನ್ನಪಾನಾನಿ ಯಾನಿ ದಾಸ್ಯಸಿ ಕಾನಿ ಚಿತ್|

13123014c ಮೇಧಾವ್ಯಸಿ ಕುಲೇ ಜಾತಃ ಶ್ರುತವಾನನೃಶಂಸವಾನ್||

13123015a ಕೌಮಾರದಾರವ್ರತವಾನ್ಮೈತ್ರೇಯ ನಿರತೋ ಭವ|

13123015c ಏತದ್ಗೃಹಾಣ ಪ್ರಥಮಂ ಪ್ರಶಸ್ತಂ ಗೃಹಮೇಧಿನಾಮ್||

ಮೈತ್ರೇಯ! ಬಯಸಿದ ವಸ್ತುಗಳೆಲ್ಲವನ್ನೂ ಪಡೆದುಕೊಳ್ಳುತ್ತೀಯೆ. ಅನ್ನಪಾನಗಳನ್ನೂ ಪಡೆದುಕೊಳ್ಳುತ್ತೀಯೆ. ನೀನು ಮೇಧಾವೀ. ಸತ್ಕುಲಪ್ರಸೂತ. ಶಾಸ್ತ್ರಜ್ಞ. ದಯಾಣು. ತರುಣ. ವ್ರತನಿಷ್ಠ. ಸದಾ ಧರ್ಮಪಾಲನೆಯಲ್ಲಿಯೇ ನಿರತನಾಗಿರು. ಗೃಹಸ್ಥರಿಗಿರುವ ಸರ್ವೋತ್ತಮ ಮುಖ್ಯಕರ್ತವ್ಯವನ್ನು ಅಂಗೀಕರಿಸು.

13123016a ಯೋ ಭರ್ತಾ ವಾಸಿತಾತುಷ್ಟೋ ಭರ್ತುಸ್ತುಷ್ಟಾ ಚ ವಾಸಿತಾ|

13123016c ಯಸ್ಮಿನ್ನೇವಂ ಕುಲೇ ಸರ್ವಂ ಕಲ್ಯಾಣಂ ತತ್ರ ವರ್ತತೇ||

ಪತಿಯು ತುಷ್ಟನಾಗಿ ಮತ್ತು ಪತ್ನಿಯು ತುಷ್ಟಳಾಗಿ ವಾಸಿಸುತ್ತಿರುವ ಕುಲದಲ್ಲಿ ಸರ್ವವೂ ಕಲ್ಯಾಣಮಯವಾಗಿಯೇ ಇರುತ್ತದೆ.

13123017a ಅದ್ಭಿರ್ಗಾತ್ರಾನ್ಮಲಮಿವ ತಮೋಽಗ್ನಿಪ್ರಭಯಾ ಯಥಾ|

13123017c ದಾನೇನ ತಪಸಾ ಚೈವ ಸರ್ವಪಾಪಮಪೋಹ್ಯತೇ||

ನೀರಿನಿಂದ ದೇಹದ ಕೊಳೆಯನ್ನು ತೊಳೆದುಕೊಳ್ಳುವಂತೆ, ಮತ್ತು ಅಗ್ನಿಯಿಂದ ಕತ್ತಲೆಯನ್ನು ಹೋಗಲಾಡಿಸುವಂತೆ ದಾನ-ತಪಸ್ಸುಗಳಿಂದ ಸರ್ವಪಾಪಗಳನ್ನೂ ಕಳೆದುಕೊಳ್ಳಬಹುದು.

13123018a ಸ್ವಸ್ತಿ ಪ್ರಾಪ್ನುಹಿ ಮೈತ್ರೇಯ ಗೃಹಾನ್ಸಾಧು ವ್ರಜಾಮ್ಯಹಮ್|

13123018c ಏತನ್ಮನಸಿ ಕರ್ತವ್ಯಂ ಶ್ರೇಯ ಏವಂ ಭವಿಷ್ಯತಿ||

ಮೈತ್ರೇಯ! ನಿನಗೆ ಮಂಗಳವಾಗಲಿ. ನಾನಿನ್ನು ನನ್ನ ಆಶ್ರಮಕ್ಕೆ ಹೋಗುತ್ತೇನೆ. ನಾನು ಹೇಳಿದುದನ್ನು ಸ್ಮರಿಸಿಕೊಂಡು ಅದರಂತೆಯೇ ಮಾಡು. ಶ್ರೇಯಸ್ಸುಂಟಾಗುತ್ತದೆ.”

13123019a ತಂ ಪ್ರಣಮ್ಯಾಥ ಮೈತ್ರೇಯಃ ಕೃತ್ವಾ ಚಾಭಿಪ್ರದಕ್ಷಿಣಮ್|

13123019c ಸ್ವಸ್ತಿ ಪ್ರಾಪ್ನೋತು ಭಗವಾನಿತ್ಯುವಾಚ ಕೃತಾಂಜಲಿಃ||

ವ್ಯಾಸನು ಹೀಗೆ ಹೇಳಿದ ನಂತರ ಮೈತ್ರೇಯನು ಅವನಿಗೆ ಪ್ರದಕ್ಷಿಣೆ ನಮಸ್ಕಾರವನ್ನು ಮಾಡಿ ಅಂಜಲೀಬದ್ಧನಾಗಿ “ಪೂಜ್ಯನಿಗೆ ಕಲ್ಯಾಣವಾಗಲಿ” ಎಂದು ಹೇಳಿ ಬೀಳ್ಕೊಟ್ಟನು.

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಮೈತ್ರೇಯಭಿಕ್ಷಾಯಾಂ ತ್ರಯೋವಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಮೈತ್ರೇಯಭಿಕ್ಷ ಎನ್ನುವ ನೂರಾಇಪ್ಪತ್ಮೂರನೇ ಅಧ್ಯಾಯವು.

[1] ಸ ದಾತಾ (ಭಾರತ ದರ್ಶನ/ಗೀತಾ ಪ್ರೆಸ್).

Comments are closed.