Anushasana Parva: Chapter 124

ಅನುಶಾಸನ ಪರ್ವ: ದಾನಧರ್ಮ ಪರ್ವ

೧೨೪

ಶಾಂಡಿಲೀ-ಸುಮನಾ ಸಂವಾದ

ಪತಿವ್ರತಾಸ್ತ್ರೀಯರ ಕರ್ತವ್ಯದ ವರ್ಣನೆ (೧-೨೨).

13124001 ಯುಧಿಷ್ಠಿರ ಉವಾಚ|

13124001a ಸತ್ಸ್ತ್ರೀಣಾಂ ಸಮುದಾಚಾರಂ ಸರ್ವಧರ್ಮಭೃತಾಂ ವರ|

13124001c ಶ್ರೋತುಮಿಚ್ಚಾಮ್ಯಹಂ ತ್ವತ್ತಸ್ತಂ ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಸರ್ವಧರ್ಮಭೃತರಲ್ಲಿ ಶ್ರೇಷ್ಠ! ಪಿತಾಮಹ! ಸತ್ಸ್ತ್ರೀಯರ ಸಮುದಾಚಾರವನ್ನು ಕೇಳಬಯಸುತ್ತೇನೆ. ಅದನ್ನು ನನಗೆ ಹೇಳು.”

13124002 ಭೀಷ್ಮ ಉವಾಚ|

13124002a ಸರ್ವಜ್ಞಾಂ ಸರ್ವಧರ್ಮಜ್ಞಾಂ ದೇವಲೋಕೇ ಮನಸ್ವಿನೀಮ್|

13124002c ಕೈಕೇಯೀ ಸುಮನಾ ನಾಮ ಶಾಂಡಿಲೀಂ ಪರ್ಯಪೃಚ್ಚತ||

ಭೀಷ್ಮನು ಹೇಳಿದನು: “ದೇವಲೋಕದಲ್ಲಿ ಸರ್ವಜ್ಞೆ ಸರ್ವಧರ್ಮಜ್ಞೆ ಮನಸ್ವಿನೀ ಶಾಂಡಿಲಿಯನ್ನು ಸುಮನಾ ಎಂಬ ಹೆಸರಿನ ಕೈಕೇಯಿಯು ಪ್ರಶ್ನಿಸಿದಳು:

13124003a ಕೇನ ವೃತ್ತೇನ ಕಲ್ಯಾಣಿ ಸಮಾಚಾರೇಣ ಕೇನ ವಾ|

13124003c ವಿಧೂಯ ಸರ್ವಪಾಪಾನಿ ದೇವಲೋಕಂ ತ್ವಮಾಗತಾ||

“ಕಲ್ಯಾಣೀ! ನೀನು ಯಾವ ವರ್ತನೆಯಿಂದ ಅಥವಾ ಸದಾಚಾರದ ಪ್ರಭಾವದಿಂದ ಸರ್ವಪಾಪಗಳನ್ನೂ ತೊಳೆದುಕೊಂಡು ದೇವಲೋಕಕ್ಕೆ ಆಗಮಿಸಿದೆ?

13124004a ಹುತಾಶನಶಿಖೇವ ತ್ವಂ ಜ್ವಲಮಾನಾ ಸ್ವತೇಜಸಾ|

13124004c ಸುತಾ ತಾರಾಧಿಪಸ್ಯೇವ ಪ್ರಭಯಾ ದಿವಮಾಗತಾ||

ದಿವಕ್ಕೆ ಆಗಮಿಸಿರುವ ನೀನು ಅಗ್ನಿಯ ಜ್ವಾಲೆಯಂತೆ ನಿನ್ನ ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದೀಯೆ. ತಾರಾಧಿಪ ಚಂದ್ರನ ಮಗಳೋ ಎಂಬ ಪ್ರಭೆಯನ್ನು ಹೊಂದಿರುವೆ.

13124005a ಅರಜಾಂಸಿ ಚ ವಸ್ತ್ರಾಣಿ ಧಾರಯಂತೀ ಗತಕ್ಲಮಾ|

13124005c ವಿಮಾನಸ್ಥಾ ಶುಭೇ ಭಾಸಿ ಸಹಸ್ರಗುಣಮೋಜಸಾ||

ಶುಭೇ! ನಿರ್ಮಲ ವಸ್ತ್ರಗಳನ್ನು ಧರಿಸಿ, ಆಯಾಸವಿಲ್ಲದವಳಾಗಿ, ವಿಮಾನಸ್ಥಳಾಗಿ ನೀನು ನಿನ್ನ ಮೊದಲಿನ ತೇಜಸ್ಸಿಗಿಂತಲೂ ಸಾವಿರಪಟ್ಟು ಮಿಗಿಲಾಗಿ ಪ್ರಕಾಶಿಸುತ್ತಿರುವೆ.

13124006a ನ ತ್ವಮಲ್ಪೇನ ತಪಸಾ ದಾನೇನ ನಿಯಮೇನ ವಾ|

13124006c ಇಮಂ ಲೋಕಮನುಪ್ರಾಪ್ತಾ ತಸ್ಮಾತ್ತತ್ತ್ವಂ ವದಸ್ವ ಮೇ||

ನೀನು ಅಲ್ಪ ತಪಸ್ಸಿನಿಂದ, ದಾನದಿಂದ ಅಥವಾ ನಿಯಮದಿಂದ ಈ ಲೋಕವನ್ನು ಪಡೆದಿರಲಿಕ್ಕಿಲ್ಲ. ನೀನು ದೇವಲೋಕಕ್ಕೆ ಹೇಗೆ ಬಂದೆಯೆಂದು ಯಥಾವತ್ತಾಗಿ ಹೇಳು.”

13124007a ಇತಿ ಪೃಷ್ಟಾ ಸುಮನಯಾ ಮಧುರಂ ಚಾರುಹಾಸಿನೀ|

13124007c ಶಾಂಡಿಲೀ ನಿಭೃತಂ ವಾಕ್ಯಂ ಸುಮನಾಮಿದಮಬ್ರವೀತ್||

ಸುಮನೆಯು ಹೀಗೆ ಕೇಳಲು ಚಾರುಹಾಸಿನೀ ಶಾಂಡಿಲಿಯು ಮದುರವಾದ ಮತ್ತು ವಿನಯಯುಕ್ತವಾದ ಈ ಮಾತನ್ನು ಸುಮನೆಗೆ ಹೇಳಿದಳು:

13124008a ನಾಹಂ ಕಾಷಾಯವಸನಾ ನಾಪಿ ವಲ್ಕಲಧಾರಿಣೀ|

13124008c ನ ಚ ಮುಂಡಾ ನ ಜಟಿಲಾ ಭೂತ್ವಾ ದೇವತ್ವಮಾಗತಾ||

“ನಾನು ಕಾಷಾಯವಸ್ತ್ರಗಳನ್ನು ಉಟ್ಟುಕೊಂಡಾಗಲೀ, ವಲ್ಕಲಗಳನ್ನು ಧರಿಸಿಯಾಗಲೀ, ಮುಂಡನ ಮಾಡಿಕೊಂಡಾಗಲೀ, ಸಂನ್ಯಾಸಿಯಾಗಿ ಆಗಲೀ ಸ್ವರ್ಗಕ್ಕೆ ಬಂದಿಲ್ಲ.

13124009a ಅಹಿತಾನಿ ಚ ವಾಕ್ಯಾನಿ ಸರ್ವಾಣಿ ಪರುಷಾಣಿ ಚ|

13124009c ಅಪ್ರಮತ್ತಾ ಚ ಭರ್ತಾರಂ ಕದಾ ಚಿನ್ನಾಹಮಬ್ರುವಮ್||

ನಾನು ಯಾವಾಗಲೂ ಅಪ್ರಮತ್ತಳಾಗಿದ್ದು ಪತಿಯೊಂದಿಗೆ ಒಮ್ಮೆಯೂ ಅಹಿತವಾಕ್ಯಗಳನ್ನಾಗಲೀ ಕಠೋರಮಾತನ್ನಾಗಲೀ ಆಡಲಿಲ್ಲ.

13124010a ದೇವತಾನಾಂ ಪಿತೄಣಾಂ ಚ ಬ್ರಾಹ್ಮಣಾನಾಂ ಚ ಪೂಜನೇ|

13124010c ಅಪ್ರಮತ್ತಾ ಸದಾಯುಕ್ತಾ ಶ್ವಶ್ರೂಶ್ವಶುರವರ್ತಿನೀ||

ಸದಾ ಅಪ್ರಮತ್ತಳಾಗಿದ್ದು ಅತ್ತೆ-ಮಾವಂದಿರ ಅಜ್ಞಾನುಸಾರವಾಗಿ ನಡೆದುಕೊಳ್ಳುತ್ತಾ ದೇವತೆಗಳು, ಪಿತೃಗಳ ಮತ್ತು ಬ್ರಾಹ್ಮಣರ ಪೂಜೆಯಲ್ಲಿ ತೊಡಗಿದ್ದೆನು.

13124011a ಪೈಶುನ್ಯೇ ನ ಪ್ರವರ್ತಾಮಿ ನ ಮಮೈತನ್ಮನೋಗತಮ್|

13124011c ಅದ್ವಾರೇ ನ ಚ ತಿಷ್ಠಾಮಿ ಚಿರಂ ನ ಕಥಯಾಮಿ ಚ||

ಚಾಡಿಯ ಮಾತುಗಳನ್ನು ಕೇಳಿ ಅದರಂತೆ ನಡೆಯುತ್ತಿರಲಿಲ್ಲ. ಬೇರೆಯವರ ಕುರಿತು ಚಾಡಿಹೇಳುವುದನ್ನೂ ಬಯಸುತ್ತಿರಲಿಲ್ಲ. ದುಷ್ಟರ ಮನೆಯ ಬಾಗಿಲಲ್ಲೂ ನಿಂತವಳಲ್ಲ. ಬಹಳ ಹೊತ್ತಿನವರೆಗೆ ಬೇರೆಯವರೊಡನೆ ಮಾತನಾಡಿದವಳಲ್ಲ.

13124012a ಅಸದ್ವಾ ಹಸಿತಂ ಕಿಂ ಚಿದಹಿತಂ ವಾಪಿ ಕರ್ಮಣಾ|

13124012c ರಹಸ್ಯಮರಹಸ್ಯಂ ವಾ ನ ಪ್ರವರ್ತಾಮಿ ಸರ್ವಥಾ||

ಏಕಾಂತದಲ್ಲಿ ಅಥವಾ ಬಹಿರಂಗವಾಗಿ ಯಾರೊಡನೆಯೂ ಅಶ್ಲೀಲವಾಗಿ ಪರಿಹಾಸ್ಯ ಮಾಡುತ್ತಿರಲಿಲ್ಲ. ಯಾರಿಗೂ ಯಾವುದೇ ರೀತಿಯ ಅಹಿತಕಾರ್ಯಗಳನ್ನೂ ಮಾಡುತ್ತಿರಲಿಲ್ಲ. ರಹಸ್ಯವಾಗಿ ಅಥವಾ ಬಹಿರಂಗವಾಗಿ ನಾನು ಇವುಗಳನ್ನು ಮಾಡುತ್ತಿರಲಿಲ್ಲ.

13124013a ಕಾರ್ಯಾರ್ಥೇ ನಿರ್ಗತಂ ಚಾಪಿ ಭರ್ತಾರಂ ಗೃಹಮಾಗತಮ್|

13124013c ಆಸನೇನೋಪಸಂಯೋಜ್ಯ ಪೂಜಯಾಮಿ ಸಮಾಹಿತಾ||

ಕಾರ್ಯಾರ್ಥವಾಗಿ ಹೊರಗೆ ಹೋಗಿದ್ದ ಪತಿಯು ಮನೆಗೆ ಬಂದೊಡನೆಯೇ ಮೇಲೆದ್ದು ಅವನಿಗೆ ಆಸನವನ್ನಿತ್ತು ಏಕಾಗ್ರಚಿತ್ತಳಾಗಿ ಅವನನ್ನು ಸತ್ಕರಿಸುತ್ತಿದ್ದೆನು.

13124014a ಯದ್ಯಚ್ಚ ನಾಭಿಜಾನಾತಿ ಯದ್ಭೋಜ್ಯಂ ನಾಭಿನಂದತಿ|

13124014c ಭಕ್ಷ್ಯಂ ವಾಪ್ಯಥ ವಾ ಲೇಹ್ಯಂ ತತ್ಸರ್ವಂ ವರ್ಜಯಾಮ್ಯಹಮ್||

ಅವನು ಯಾವ ಭಕ್ಷ್ಯ ಅಥವಾ ಲೇಹವನ್ನು ತಿನ್ನಲು ಬಯಸುತ್ತಿರಲಿಲ್ಲವೋ ಮತ್ತು ತಿನ್ನಲು ಯೋಗ್ಯವಲ್ಲ ಎಂದು ತಿಳಿದಿದ್ದನೋ ಅವೆಲ್ಲವನ್ನೂ ನಾನು ತ್ಯಜಿಸಿದ್ದೆನು.

13124015a ಕುಟುಂಬಾರ್ಥೇ ಸಮಾನೀತಂ ಯತ್ಕಿಂ ಚಿತ್ಕಾರ್ಯಮೇವ ತು|

13124015c ಪ್ರಾತರುತ್ಥಾಯ ತತ್ಸರ್ವಂ ಕಾರಯಾಮಿ ಕರೋಮಿ ಚ||

ಕುಟುಂಬಕ್ಕಾಗಿ ಯಾವುದಾದರೂ ಕಾರ್ಯವನ್ನು ಮಾಡಬೇಕಾದಾಗ ಬೆಳಿಗ್ಗೆ ಎದ್ದು ಅವೆಲ್ಲವನ್ನು ಮಾಡುತ್ತಿದ್ದೆ ಮತ್ತು ಮಾಡಿಸುತ್ತಿದ್ದೆ.

13124016a ಪ್ರವಾಸಂ ಯದಿ ಮೇ ಭರ್ತಾ ಯಾತಿ ಕಾರ್ಯೇಣ ಕೇನ ಚಿತ್|

13124016c ಮಂಗಲೈರ್ಬಹುಭಿರ್ಯುಕ್ತಾ ಭವಾಮಿ ನಿಯತಾ ಸದಾ||

ನನ್ನ ಪತಿಯು ಯಾವುದಾದರೂ ಕಾರ್ಯದ ಸಲುವಾಗಿ ಪ್ರವಾಸದಲ್ಲಿದ್ದರೆ ನಾನು ನಿಯಮದಿಂದಿರುತ್ತಾ ಪತಿಯ ಪ್ರವಾಸವು ಸುಖಮಯವಾಗಲೆಂದೇ ಆಶಿಸಿ ಅನೇಕ ಮಂಗಳ ಕಾರ್ಯಗಳನ್ನು ಮಾಡುತ್ತಿದ್ದೆ.

13124017a ಅಂಜನಂ ರೋಚನಾಂ ಚೈವ ಸ್ನಾನಂ ಮಾಲ್ಯಾನುಲೇಪನಮ್|

13124017c ಪ್ರಸಾಧನಂ ಚ ನಿಷ್ಕ್ರಾಂತೇ ನಾಭಿನಂದಾಮಿ ಭರ್ತರಿ||

ಪತಿಯು ಪ್ರವಾಸದಲ್ಲಿದ್ದಾಗ ನಾನು ಕಣ್ಣುಗಳಿಗೆ ಕಾಡಿಗೆಯನ್ನು ಹಚ್ಚುತ್ತಿರಲಿಲ್ಲ. ತಿಲಕವನ್ನಿಡುತ್ತಿರಲಿಲ್ಲ. ಸ್ನಾನ, ಮಾಲ್ಯಾನುಲೇಪನಗಳನ್ನು ಮಾಡಿಕೊಳ್ಳುತ್ತಿರಲಿಲ್ಲ. ಅಲಂಕಾರವನ್ನೂ ಮಾಡಿಕೊಳ್ಳಲು ಬಯಸುತ್ತಿರಲಿಲ್ಲ.

13124018a ನೋತ್ಥಾಪಯಾಮಿ ಭರ್ತಾರಂ ಸುಖಸುಪ್ತಮಹಂ ಸದಾ|

13124018c ಆತುರೇಷ್ವಪಿ ಕಾರ್ಯೇಷು ತೇನ ತುಷ್ಯತಿ ಮೇ ಮನಃ||

ಸುಖಸುಪ್ತನಾಗಿದ್ದ ಪತಿಯನ್ನು ಎಂದೂ ನಾನು ಎಬ್ಬಿಸುತ್ತಿರಲಿಲ್ಲ. ಯಾವುದೇ ಕೆಲಸವಾಗಬೇಕಾಗಿದ್ದರೂ ಅವನನ್ನು ಎಚ್ಚರಗೊಳಿಸುತ್ತಿರಲಿಲ್ಲ. ಅದರಿಂದ ನಾನು ತೃಪ್ತಳಾಗಿದ್ದೆನು.

13124019a ನಾಯಾಸಯಾಮಿ ಭರ್ತಾರಂ ಕುಟುಂಬಾರ್ಥೇ ಚ ಸರ್ವದಾ|

13124019c ಗುಪ್ತಗುಹ್ಯಾ ಸದಾ ಚಾಸ್ಮಿ ಸುಸಂಮೃಷ್ಟನಿವೇಶನಾ||

ಕುಂಟುಬದ ವಿಷಯದಲ್ಲಿಯೂ ನಾನು ಸರ್ವದಾ ಪತಿಗೆ ಕಷ್ಟವನ್ನು ಕೊಡುತ್ತಿರಲಿಲ್ಲ. ಗುಪ್ತವಿಷಯಗಳನ್ನು ಗೋಪ್ಯವಾಗಿಯೇ ಇಡುತ್ತಿದ್ದೆ. ಗುಡಿಸಿ-ಸಾರಿಸಿ ಮನೆಯನ್ನು ಸದಾ ಸ್ವಚ್ಛವಾಗಿಡುತ್ತಿದ್ದೆ.

13124020a ಇಮಂ ಧರ್ಮಪಥಂ ನಾರೀ ಪಾಲಯಂತೀ ಸಮಾಹಿತಾ|

13124020c ಅರುಂಧತೀವ ನಾರೀಣಾಂ ಸ್ವರ್ಗಲೋಕೇ ಮಹೀಯತೇ||

ಸಮಾಹಿತಳಾಗಿ ಈ ಪಥದಲ್ಲಿದ್ದು ಧರ್ಮವನ್ನು ಪಾಲಿಸುವವಳು ನಾರಿಯರಲ್ಲಿ ಅರುಂಧತಿಯಂತೆ ಸ್ವರ್ಗಲೋಕದಲ್ಲಿ ಮೆರೆಯುತ್ತಾಳೆ.””

13124021 ಭೀಷ್ಮ ಉವಾಚ|

13124021a ಏತದಾಖ್ಯಾಯ ಸಾ ದೇವೀ ಸುಮನಾಯೈ ತಪಸ್ವಿನೀ|

13124021c ಪತಿಧರ್ಮಂ ಮಹಾಭಾಗಾ ಜಗಾಮಾದರ್ಶನಂ ತದಾ||

ಭೀಷ್ಮನು ಹೇಳಿದನು: “ಸುಮನೆಗೆ ಹೀಗೆ ಪತಿಧರ್ಮವನ್ನು ಹೇಳಿ ಆ ದೇವೀ ಮಹಾಭಾಗೆ ತಪಸ್ವಿನೀ ಶಾಂಡಿಲಿಯು ಅದೃಶ್ಯಳಾದಳು.

13124022a ಯಶ್ಚೇದಂ ಪಾಂಡವಾಖ್ಯಾನಂ ಪಠೇತ್ಪರ್ವಣಿ ಪರ್ವಣಿ|

13124022c ಸ ದೇವಲೋಕಂ ಸಂಪ್ರಾಪ್ಯ ನಂದನೇ ಸುಸುಖಂ ವಸೇತ್||

ಪಾಂಡವ! ಪರ್ವ-ಪರ್ವಗಳಲ್ಲಿ ಈ ಆಖ್ಯಾನವನ್ನು ಪಠಿಸುವವನು ದೇವಲೋಕವನ್ನು ಪಡೆದು ನಂದನವನದಲ್ಲಿ ಸುಖಿಯಾಗಿ ವಾಸಿಸುತ್ತಾನೆ.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶಾಂಡಿಲೀಸುಮನಾಸಂವಾದೇ ಚತುರ್ವಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶಾಂಡಿಲೀಸುಮನಾಸಂವಾದ ಎನ್ನುವ ನೂರಾಇಪ್ಪತ್ನಾಲ್ಕನೇ ಅಧ್ಯಾಯವು.

Comments are closed.