Anushasana Parva: Chapter 122

ಅನುಶಾಸನ ಪರ್ವ: ದಾನಧರ್ಮ ಪರ್ವ

೧೨೨

ಸದಾಚಾರೀ ಬ್ರಾಹ್ಮಣನಿಗೆ ಅನ್ನದಾನಮಾಡುವುದರ ಪ್ರಶಂಸೆ (1-16).

13122001 ಭೀಷ್ಮ ಉವಾಚ|

13122001a ಏವಮುಕ್ತಃ ಪ್ರತ್ಯುವಾಚ ಮೈತ್ರೇಯಃ ಕರ್ಮಪೂಜಕಃ|

13122001c ಅತ್ಯಂತಂ ಶ್ರೀಮತಿ ಕುಲೇ ಜಾತಃ ಪ್ರಾಜ್ಞೋ ಬಹುಶ್ರುತಃ||

ಭೀಷ್ಮನು ಹೇಳಿದನು: “ವ್ಯಾಸನು ಹೀಗೆ ಹೇಳಲು ಅತ್ಯಂತ ಶ್ರೀಮಂತಕುಲದಲ್ಲಿ ಹುಟ್ಟಿದ್ದ ಪ್ರಾಜ್ಞ ಬಹುಶ್ರುತ ಕರ್ಮಪೂಜಕ ಮೈತ್ರೇಯನು ಹೇಳಿದನು:

13122002a ಅಸಂಶಯಂ ಮಹಾಪ್ರಾಜ್ಞ ಯಥೈವಾತ್ಥ ತಥೈವ ತತ್|

13122002c ಅನುಜ್ಞಾತಸ್ತು ಭವತಾ ಕಿಂ ಚಿದ್ಬ್ರೂಯಾಮಹಂ ವಿಭೋ||

“ಮಹಾಪ್ರಾಜ್ಞ! ವಿಭೋ! ನೀನು ಹೇಗೆ ಹೇಳಿದ್ದೀಯೋ ಅದು ಹಾಗೆಯೇ ಸರಿ. ನಿನ್ನ ಅನುಜ್ಞೆಯಿದ್ದರೆ ನಾನೂ ಕೂಡ ಈ ವಿಷಯದಲ್ಲಿ ಸ್ವಲ್ಪ ಹೇಳುತ್ತೇನೆ.”

13122003 ವ್ಯಾಸ ಉವಾಚ|

13122003a ಯದ್ಯದಿಚ್ಚಸಿ ಮೈತ್ರೇಯ ಯಾವದ್ಯಾವದ್ಯಥಾ ತಥಾ|

13122003c ಬ್ರೂಹಿ ತಾವನ್ಮಹಾಪ್ರಾಜ್ಞ ಶುಶ್ರೂಷೇ ವಚನಂ ತವ||

ವ್ಯಾಸನು ಹೇಳಿದನು: “ಮೈತ್ರೇಯ! ಮಹಾಪ್ರಾಜ್ಞ! ನೀನು ಯಾವ ವಿಷಯವನ್ನು ಎಷ್ಟು ಮತ್ತು ಹೇಗೆ ಹೇಳಬಯಸುತ್ತೀಯೋ ಅದನ್ನು ಹೇಳು. ನಿನ್ನ ಮಾತನ್ನು ನಾನು ಕೇಳುತ್ತೇನೆ.”

13122004 ಮೈತ್ರೇಯ ಉವಾಚ|

13122004a ನಿರ್ದೋಷಂ ನಿರ್ಮಲಂ ಚೈವ ವಚನಂ ದಾನಸಂಹಿತಮ್|

13122004c ವಿದ್ಯಾತಪೋಭ್ಯಾಂ ಹಿ ಭವಾನ್ಭಾವಿತಾತ್ಮಾ ನ ಸಂಶಯಃ||

ಮೈತ್ರೇಯನು ಹೇಳಿದನು: “ದಾನದ ಕುರಿತಾಗಿ ನೀನು ಹೇಳಿದ ಮಾತು ನಿರ್ದೋಷವೂ ನಿರ್ಮಲವೂ ಆಗಿದೆ. ನೀನು ವಿದ್ಯೆ ಮತ್ತು ತಪಸ್ಸುಗಳಿಂದ ಕೃತಾರ್ಥನಾಗಿರುವೆ ಎನ್ನುವುದರಲ್ಲಿ ಸಂಶಯವಿಲ್ಲ.

13122005a ಭವತೋ ಭಾವಿತಾತ್ಮತ್ವಾದ್ದಾಯೋಽಯಂ ಸುಮಹಾನ್ಮಮ|

13122005c ಭೂಯೋ ಬುದ್ಧ್ಯಾನುಪಶ್ಯಾಮಿ ಸುಸಮೃದ್ಧತಪಾ ಇವ||

ಭಾವಿತಾತ್ಮನಾದ ನೀನು ಇಲ್ಲಿಗೆ ಬಂದಿರುವುದೇ ನನಗೆ ಅತ್ಯಂತ ಲಾಭದಾಯಕವಾಗಿದೆ. ತಪಸ್ಸಿನಿಂದ ಸಮೃದ್ಧನಾದ ಬುದ್ಧಿಯು ಹೇಗೋ ಹಾಗೆ ನಾನು ಎಲ್ಲವನ್ನೂ ಕಾಣುತ್ತಿದ್ದೇನೆ.

13122006a ಅಪಿ ಮೇ ದರ್ಶನಾದೇವ ಭವತೋಽಭ್ಯುದಯೋ ಮಹಾನ್|

13122006c ಮನ್ಯೇ ಭವತ್ಪ್ರಸಾದೋಽಯಂ ತದ್ಧಿ ಕರ್ಮ ಸ್ವಭಾವತಃ||

ನಿನ್ನ ದರ್ಶನದಿಂದಲೇ ನನಗೆ ಮಹಾ ಅಭ್ಯುದಯವುಂಟಾಗಿದೆ. ನಿನ್ನ ಪ್ರಸಾದದಿಂದಲೇ ಈ ಅನ್ನದಾನ ಕರ್ಮವೂ ಸ್ವಭಾವತಃ ನಡೆಯುತ್ತಿದೆ ಎಂದು ತಿಳಿದಿದ್ದೇನೆ.

13122007a ತಪಃ ಶ್ರುತಂ ಚ ಯೋನಿಶ್ಚಾಪ್ಯೇತದ್ಬ್ರಾಹ್ಮಣ್ಯಕಾರಣಮ್|

13122007c ತ್ರಿಭಿರ್ಗುಣೈಃ ಸಮುದಿತಸ್ತತೋ ಭವತಿ ವೈ ದ್ವಿಜಃ||

ಮೂರು ಗುಣಗಳಿಂದ ಸಮುದಿತನಾದವನು ದ್ವಿಜನಾಗುತ್ತಾನೆ: ತಪಸ್ಸು, ಶಾಸ್ತ್ರಜ್ಞಾನ ಮತ್ತು ಬ್ರಾಹ್ಮಣ ಯೋನಿಯಲ್ಲಿ ಜನ್ಮ.

13122008a ತಸ್ಮಿಂಸ್ತೃಪ್ತೇ ಚ ತೃಪ್ಯಂತೇ ಪಿತರೋ ದೈವತಾನಿ ಚ|

13122008c ನ ಹಿ ಶ್ರುತವತಾಂ ಕಿಂ ಚಿದಧಿಕಂ ಬ್ರಾಹ್ಮಣಾದೃತೇ||

ಈ ಮೂರುಗುಣಗಳಿಂದ ಯುಕ್ತನಾದ ಬ್ರಾಹ್ಮಣನು ತೃಪ್ತನಾದರೆ ಪಿತೃಗಳು ಮತ್ತು ದೇವತೆಗಳೂ ತೃಪ್ತರಾಗುತ್ತಾರೆ. ಶ್ರುತವಂತನಾದ ಬ್ರಾಹ್ಮಣನನ್ನು ಬಿಟ್ಟು ಬೇರೆ ಯಾರುತಾನೇ ಹೆಚ್ಚಿನವನಾಗುತ್ತಾನೆ?

[1]13122009a ಯಥಾ ಹಿ ಸುಕೃತೇ ಕ್ಷೇತ್ರೇ ಫಲಂ ವಿಂದತಿ ಮಾನವಃ|

13122009c ಏವಂ ದತ್ತ್ವಾ ಶ್ರುತವತಿ ಫಲಂ ದಾತಾ ಸಮಶ್ನುತೇ||

ಚೆನ್ನಾಗಿ ಕೃಷಿಮಾಡಿದ ಕ್ಷೇತ್ರದಲ್ಲಿ ಮಾನವನು ಫಲವನ್ನು ಪಡೆದುಕೊಳ್ಳುವಂತೆ ಶಾಸ್ತ್ರಪಾರಂಗತ ಬ್ರಾಹ್ಮಣನಿಗೆ ದಾನವನ್ನಿತ್ತು ದಾನಿಯು ಮಹಾಫಲವನ್ನು ಹೊಂದುತ್ತಾನೆ.

13122010a ಬ್ರಾಹ್ಮಣಶ್ಚೇನ್ನ ವಿದ್ಯೇತ ಶ್ರುತವೃತ್ತೋಪಸಂಹಿತಃ|

13122010c ಪ್ರತಿಗ್ರಹೀತಾ ದಾನಸ್ಯ ಮೋಘಂ ಸ್ಯಾದ್ಧನಿನಾಂ ಧನಮ್||

ವಿದ್ಯೆ-ನಡತೆಗಳಿಂದ ಸಂಪನ್ನನಾದ ಬ್ರಾಹ್ಮಣನು ದಾನವನ್ನು ಸ್ವೀಕರಿಸದೇ ಇದ್ದರೆ ಧನಿಕನ ಧನವೇ ವ್ಯರ್ಥವಾಗಿ ಹೋಗುತ್ತದೆ.

13122011a ಅದನ್ ಹ್ಯವಿದ್ವಾನ್ ಹಂತ್ಯನ್ನಮದ್ಯಮಾನಂ ಚ ಹಂತಿ ತಮ್|

13122011c ತಂ ಚ ಹನ್ಯತಿ ಯಸ್ಯಾನ್ನಂ ಸ ಹತ್ವಾ ಹನ್ಯತೇಽಬುಧಃ||

ಇತರರಿಗೆ ಸಲ್ಲಬೇಕಾದ ಅನ್ನವನ್ನು ಉಂಡ ಮೂರ್ಖನನ್ನು ಆ ಅನ್ನವೇ ನಾಶಪಡಿಸುತ್ತದೆ. ಸತ್ಪಾತ್ರನು ಉಂಡ ಅನ್ನವು ಸಾರ್ಥಕವಾಗುವುದಲ್ಲದೇ ಅನ್ನದಾನಿಯನ್ನೂ ಉದ್ಧರಿಸುತ್ತದೆ. ಮೂರ್ಖನು ಯಾವ ದಾನದ ಫಲವನ್ನು ನಾಶಪಡಿಸುವನೋ ಆ ದಾನವೇ ದಾನಪಡೆದ ಮೂರ್ಖನನ್ನೂ ನಾಶಪಡಿಸುತ್ತದೆ.

13122012a ಪ್ರಭುರ್ಹ್ಯನ್ನಮದನ್ವಿದ್ವಾನ್ಪುನರ್ಜನಯತೀಶ್ವರಃ|

13122012c ಸ ಚಾನ್ನಾಜ್ಜಾಯತೇ ತಸ್ಮಾತ್ಸೂಕ್ಷ್ಮ ಏವ ವ್ಯತಿಕ್ರಮಃ||

ಪ್ರಭಾವ ಮತ್ತು ಶಕ್ತಿ ಸಂಪನ್ನ ವಿದ್ವಾಂಸ ಬ್ರಾಹ್ಮಣನು ತಿಂದ ಅನ್ನವನ್ನು ಪುನಃ ಉತ್ಪಾದಿಸುತ್ತಾನೆ. ಅವನೂ ಅನ್ನದಿಂದಲೇ ಹುಟ್ಟುವುದರಿಂದ ಅವನೇ ಅನ್ನವನ್ನು ಹುಟ್ಟಿಸುತ್ತಾನೆ ಎನ್ನುವು ಈ ವ್ಯತಿಕ್ರಮವು ಅತ್ಯಂತ ಸೂಕ್ಷ್ಮವಾದುದು ಮತ್ತು ತಿಳಿಯಲು ಕಷ್ಟಸಾಧ್ಯವಾದುದು.

13122013a ಯದೇವ ದದತಃ ಪುಣ್ಯಂ ತದೇವ ಪ್ರತಿಗೃಹ್ಣತಃ|

13122013c ನ ಹ್ಯೇಕಚಕ್ರಂ ವರ್ತೇತ ಇತ್ಯೇವಮೃಷಯೋ ವಿದುಃ||

ದಾನವನ್ನು ಮಾಡಿದವನಿಗೆ ದೊರೆಯುವ ಪುಣ್ಯವೇ ದಾನವನ್ನು ಪ್ರತಿಗ್ರಹಿಸಿದವನಿಗೂ ದೊರೆಯುತ್ತದೆ. ಒಂದೇ ಚಕ್ರದಿಂದ ಗಾಡಿಯು ಮುಂದೆ ಹೋಗಲಾರದಂತೆ ಸತ್ಪಾತ್ರ ಪ್ರತಿಗ್ರಾಹಿಯೂ ದೊರೆಯದಿದ್ದರೆ ಮಾಡಿದ ದಾನವು ಸಫಲವಾಗುವುದಿಲ್ಲ ಎಂದು ಋಷಿಗಳು ತಿಳಿದಿದ್ದಾರೆ.

13122014a ಯತ್ರ ವೈ ಬ್ರಾಹ್ಮಣಾಃ ಸಂತಿ ಶ್ರುತವೃತ್ತೋಪಸಂಹಿತಾಃ|

13122014c ತತ್ರ ದಾನಫಲಂ ಪುಣ್ಯಮಿಹ ಚಾಮುತ್ರ ಚಾಶ್ನುತೇ||

ಶಾಸ್ತ್ರಜ್ಞ, ಸದಾಚಾರಪರಾಯಣ ಬ್ರಾಹ್ಮಣರಿಗೆ ಕೊಡುವ ದಾನದ ಫಲವನ್ನು ದಾನಿಯು ಇಹ-ಪರಗಳೆರಡರಲ್ಲಿಯೂ ಉಪಭೋಗಿಸುತ್ತಾನೆ.

13122015a ಯೇ ಯೋನಿಶುದ್ಧಾಃ ಸತತಂ ತಪಸ್ಯಭಿರತಾ ಭೃಶಮ್|

13122015c ದಾನಾಧ್ಯಯನಸಂಪನ್ನಾಸ್ತೇ ವೈ ಪೂಜ್ಯತಮಾಃ ಸದಾ||

ಶುದ್ಧಯೋನಿಯಲ್ಲಿ ಹುಟ್ಟಿದ, ಸತತವೂ ತಪಸ್ಸಿನಲ್ಲಿಯೇ ನಿರತರಾಗಿರುವ, ದಾನ-ಅಧ್ಯಯನ ಸಂಪನ್ನ ಬ್ರಾಹ್ಮಣರು ಸದಾ ಪೂಜ್ಯತಮರು.

13122016a ತೈರ್ಹಿ ಸದ್ಭಿಃ ಕೃತಃ ಪಂಥಾಶ್ಚೇತಯಾನೋ ನ ಮುಹ್ಯತೇ|

13122016c ತೇ ಹಿ ಸ್ವರ್ಗಸ್ಯ ನೇತಾರೋ ಯಜ್ಞವಾಹಾಃ ಸನಾತನಾಃ||

ಅಂತಹ ಸತ್ಪುರುಷರು ನಿರ್ಮಿಸಿದ ಧರ್ಮಮಾರ್ಗದಲ್ಲಿ ಹೋಗುವವನು ಯಾವಕಾರಣದಿಂದಲೂ ಮೋಹವಶನಾಗುವುದಿಲ್ಲ. ಅಂಥವರೇ ಸನಾತನ ಯಜ್ಞಗಳನ್ನು ನಿರ್ವಹಿಸುವವರು ಮತ್ತು ಸ್ವರ್ಗದ ನೇತಾರರೂ ಆಗಿರುತ್ತಾರೆ.””

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಮೈತ್ರೇಯಭಿಕ್ಷಾಯಾಂ ದ್ವಾವಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಮೈತ್ರೇಯಭಿಕ್ಷ ಎನ್ನುವ ನೂರಾಇಪ್ಪತ್ತೆರಡನೇ ಅಧ್ಯಾಯವು.

[1] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅಂಧಂ ಸ್ಯಾತ್ತಮ ಏವೇದಂ ನ ಪ್ರಜ್ಞಾಯೇತ ಕಿಂಚನ| ಚಾತುರ್ವರ್ಣ್ಯಂ ನ ವರ್ತೇತ ಧರ್ಮಾಧರ್ಮಾವೃತಾನೃತೇ|| (ಭಾರತ ದರ್ಶನ).

Comments are closed.