Anushasana Parva: Chapter 116

ಅನುಶಾಸನ ಪರ್ವ: ದಾನಧರ್ಮ ಪರ್ವ

೧೧೬

ಮಾಂಸಭಕ್ಷಣದ ದೋಷ ಮತ್ತು ಅದರ ತ್ಯಾಗದ ಮಹಿಮೆ (1-76).

13116001 ಯುಧಿಷ್ಠಿರ ಉವಾಚ|

13116001a ಅಹಿಂಸಾ ಪರಮೋ ಧರ್ಮ ಇತ್ಯುಕ್ತಂ ಬಹುಶಸ್ತ್ವಯಾ|

13116001c ಶ್ರಾದ್ಧೇಷು ಚ ಭವಾನಾಹ ಪಿತೄನಾಮಿಷಕಾಂಕ್ಷಿಣಃ||

ಯುಧಿಷ್ಠಿರನು ಹೇಳಿದನು: “ಅಹಿಂಸೆಯೇ ಪರಮ ಧರ್ಮವೆಂದು ನೀನು ಅನೇಕ ಬಾರಿ ಹೇಳಿರುವೆ. ಆದರೆ ಶ್ರಾದ್ಧಗಳಲ್ಲಿ ಪಿತೃಗಳು ಮಾಂಸವನ್ನು ಇಷ್ಟಪಡುತ್ತಾರೆ ಎಂದೂ ನೀನು ಹೇಳಿದ್ದೀಯೆ.

13116002a ಮಾಂಸೈರ್ಬಹುವಿಧೈಃ ಪ್ರೋಕ್ತಸ್ತ್ವಯಾ ಶ್ರಾದ್ಧವಿಧಿಃ ಪುರಾ|

13116002c ಅಹತ್ವಾ ಚ ಕುತೋ ಮಾಂಸಮೇವಮೇತದ್ವಿರುಧ್ಯತೇ||

ಹಿಂದೆ ನೀನು ಶ್ರಾದ್ಧವಿಧಿಯ ಕುರಿತು ಹೇಳುವಾಗ ಅನೇಕ ವಿಧದ ಮಾಂಸದ ಕುರಿತು ಹೇಳಿದ್ದೆ. ಹಾಗೆ ಹೇಳಿ ಈಗ ಏಕೆ ಮಾಂಸವನ್ನು ವಿರೋಧಿಸುತ್ತಿರುವೆ?

13116003a ಜಾತೋ ನಃ ಸಂಶಯೋ ಧರ್ಮೇ ಮಾಂಸಸ್ಯ ಪರಿವರ್ಜನೇ|

13116003c ದೋಷೋ ಭಕ್ಷಯತಃ ಕಃ ಸ್ಯಾತ್ಕಶ್ಚಾಭಕ್ಷಯತೋ ಗುಣಃ||

ಮಾಂಸವನ್ನು ವರ್ಜಿಸುವುದರ ಕುರಿತು ನನ್ನಲ್ಲಿ ಸಂಶಯವುಂಟಾಗಿದೆ. ಮಾಂಸವನ್ನು ಭಕ್ಷಿಸುವುದರಿಂದಾಗುವ ದೋಷವೇನು ಮತ್ತು ಮಾಂಸವನ್ನು ತಿನ್ನದೇ ಇರುವುದರಲ್ಲಿರುವ ಗುಣಗಳ್ಯಾವುವು?

13116004a ಹತ್ವಾ ಭಕ್ಷಯತೋ ವಾಪಿ ಪರೇಣೋಪಹೃತಸ್ಯ ವಾ|

13116004c ಹನ್ಯಾದ್ವಾ ಯಃ ಪರಸ್ಯಾರ್ಥೇ ಕ್ರೀತ್ವಾ ವಾ ಭಕ್ಷಯೇನ್ನರಃ||

ತಾನೇ ಕೊಂದು ಅದರ ಮಾಂಸವನ್ನು ತಿನ್ನುವವನು, ಇತರರು ಕೊಟ್ಟ ಮಾಂಸವನ್ನು ತಿನ್ನುವವನು, ಇತರರಿಗಾಗಿ ಕೊಲ್ಲುವವನು ಮತ್ತು ಮಾಂಸವನ್ನು ಖರೀದಿಸಿ ತಿನ್ನುವವನು – ಇವರಿಗೆ ಯಾವ ದೋಷಗಳುಂಟಾಗುತ್ತವೆ?

13116005a ಏತದಿಚ್ಚಾಮಿ ತತ್ತ್ವೇನ ಕಥ್ಯಮಾನಂ ತ್ವಯಾನಘ|

13116005c ನಿಶ್ಚಯೇನ ಚಿಕೀರ್ಷಾಮಿ ಧರ್ಮಮೇತಂ ಸನಾತನಮ್||

ಅನಘ! ಈ ವಿಷಯದಲ್ಲಿ ನೀನು ತತ್ತ್ವತಃ ಹೇಳಬೇಕೆಂದು ಬಯಸುತ್ತೇನೆ. ನಿಶ್ಚಯವಾಗಿಯೂ ನಾನು ಈ ಸನಾತನ ಧರ್ಮವನ್ನು ಪಾಲಿಸಬಯಸುತ್ತೇನೆ.

13116006a ಕಥಮಾಯುರವಾಪ್ನೋತಿ ಕಥಂ ಭವತಿ ಸತ್ತ್ವವಾನ್|

13116006c ಕಥಮವ್ಯಂಗತಾಮೇತಿ ಲಕ್ಷಣ್ಯೋ ಜಾಯತೇ ಕಥಮ್||

ಹೇಗೆ ದೀರ್ಘಾಯುವಾಗುತ್ತಾನೆ? ಹೇಗೆ ಸತ್ತ್ವಯುತನಾಗುತ್ತಾನೆ? ಪೂರ್ಣಾಂಗನು ಹೇಗಾಗುತ್ತಾನೆ ಮತ್ತು ಲಕ್ಷಣಸಂಪನ್ನನು ಹೇಗಾಗುತ್ತಾನೆ?”

13116007 ಭೀಷ್ಮ ಉವಾಚ|

13116007a ಮಾಂಸಸ್ಯ ಭಕ್ಷಣೇ ರಾಜನ್ ಯೋಽಧರ್ಮಃ ಕುರುಪುಂಗವ|

13116007c ತಂ ಮೇ ಶೃಣು ಯಥಾತತ್ತ್ವಂ ಯಶ್ಚಾಸ್ಯ ವಿಧಿರುತ್ತಮಃ||

ಭೀಷ್ಮನು ಹೇಳಿದನು: “ರಾಜನ್! ಕುರುಪುಂಗವ! ಮಾಂಸವನ್ನು ತಿನ್ನುವುದರಿಂದಾಗುವ ಅಧರ್ಮದ ಕುರಿತೂ ಮತ್ತು ಅದರ ಉತ್ತಮ ವಿಧಿಯನ್ನೂ ಯಥಾತತ್ತ್ವವಾಗಿ ಕೇಳು.

13116008a ರೂಪಮವ್ಯಂಗತಾಮಾಯುರ್ಬುದ್ಧಿಂ ಸತ್ತ್ವಂ ಬಲಂ ಸ್ಮೃತಿಮ್|

13116008c ಪ್ರಾಪ್ತುಕಾಮೈರ್ನರೈರ್ಹಿಂಸಾ ವರ್ಜಿತಾ ವೈ ಕೃತಾತ್ಮಭಿಃ||

ರೂಪ, ಪೂರ್ಣಾಂಗಗಳು, ಆಯುಸ್ಸು, ಬುದ್ಧಿ, ಸತ್ತ್ವ, ಬಲ ಮತ್ತು ಸ್ಮೃತಿ ಇವುಗಳನ್ನು ಪಡೆದುಕೊಳ್ಳ ಬಯಸುವ ಕೃತಾತ್ಮ ನರರು ಹಿಂಸೆಯನ್ನು ವರ್ಜಿಸುತ್ತಾರೆ.

13116009a ಋಷೀಣಾಮತ್ರ ಸಂವಾದೋ ಬಹುಶಃ ಕುರುಪುಂಗವ|

13116009c ಬಭೂವ ತೇಷಾಂ ತು ಮತಂ ಯತ್ತಚ್ಚೃಣು ಯುಧಿಷ್ಠಿರ||

ಕುರುಪುಂಗವ! ಯುಧಿಷ್ಠಿರ! ಈ ವಿಷಯದಲ್ಲಿ ಋಷಿಗಳಲ್ಲಿಯೇ ಬಹುಬಾರಿ ಅನೇಕ ಸಂವಾದಗಳಾಗಿವೆ. ಅವರೆಲ್ಲರೂ ನಿಶ್ಚಯಿಸಿದ ಮತವನ್ನು ಕೇಳು.

13116010a ಯೋ ಯಜೇತಾಶ್ವಮೇಧೇನ ಮಾಸಿ ಮಾಸಿ ಯತವ್ರತಃ|

13116010c ವರ್ಜಯೇನ್ಮಧು ಮಾಂಸಂ ಚ ಸಮಮೇತದ್ಯುಧಿಷ್ಠಿರ||

ಯುಧಿಷ್ಠಿರ! ಪ್ರತಿತಿಂಗಳೂ ಯತವ್ರತನಾಗಿದ್ದು ಅಶ್ವಮೇಧ ಯಜ್ಞವನ್ನು ಮಾಡುವವನು ಮತ್ತು ಮಧು-ಮಾಂಸಗಳನ್ನು ವರ್ಜಿಸಿದವನು ಇಬ್ಬರೂ ಸಮಾನರೇ.

13116011a ಸಪ್ತರ್ಷಯೋ ವಾಲಖಿಲ್ಯಾಸ್ತಥೈವ ಚ ಮರೀಚಿಪಾಃ|

13116011c ಅಮಾಂಸಭಕ್ಷಣಂ ರಾಜನ್ ಪ್ರಶಂಸಂತಿ ಮನೀಷಿಣಃ||

ರಾಜನ್! ಮನೀಷಿಣರಾದ ಸಪ್ತರ್ಷಿಗಳು, ವಾಲಖಿಲ್ಯರು ಮತ್ತು ಮರೀಚಿಪರು ಅಮಾಂಸಭಕ್ಷಣವನ್ನೇ ಪ್ರಶಂಸಿಸುತ್ತಾರೆ.

13116012a ನ ಭಕ್ಷಯತಿ ಯೋ ಮಾಂಸಂ ನ ಹನ್ಯಾನ್ನ ಚ ಘಾತಯೇತ್|

13116012c ತಂ ಮಿತ್ರಂ ಸರ್ವಭೂತಾನಾಂ ಮನುಃ ಸ್ವಾಯಂಭುವೋಽಬ್ರವೀತ್||

ಯಾರು ಮಾಂಸವನ್ನು ತಿನ್ನುವುದಿಲ್ಲವೋ ಮತ್ತು ಪ್ರಾಣಿಗಳನ್ನು ಕೊಲ್ಲುವುದಿಲ್ಲವೋ ಅಥವಾ ಕೊಲ್ಲಿಸುವುದಿಲ್ಲವೋ ಅವನು ಸರ್ವಭೂತಗಳಿಗೂ ಮಿತ್ರನು ಎಂದು ಸ್ವಾಯಂಭುವ ಮನುವು ಹೇಳಿದ್ದಾನೆ.

13116013a ಅಧೃಷ್ಯಃ ಸರ್ವಭೂತಾನಾಂ ವಿಶ್ವಾಸ್ಯಃ ಸರ್ವಜಂತುಷು|

13116013c ಸಾಧೂನಾಂ ಸಂಮತೋ ನಿತ್ಯಂ ಭವೇನ್ಮಾಂಸಸ್ಯ ವರ್ಜನಾತ್||

ನಿತ್ಯವೂ ಮಾಂಸವನ್ನು ವರ್ಜಿಸಿದವನನ್ನು ಸರ್ವಭೂತಗಳೂ ತಿರಸ್ಕರಿಸುವುದಿಲ್ಲ. ಸರ್ವಜಂತುಗಳೂ ಅವನಲ್ಲಿ ವಿಶ್ವಾಸವನ್ನಿಡುತ್ತವೆ. ಮತ್ತು ಸಾಧುಗಳು ಅವನನ್ನು ಸಮ್ಮತಿಸುತ್ತಾರೆ.

13116014a ಸ್ವಮಾಂಸಂ ಪರಮಾಂಸೇನ ಯೋ ವರ್ಧಯಿತುಮಿಚ್ಚತಿ|

13116014c ನಾರದಃ ಪ್ರಾಹ ಧರ್ಮಾತ್ಮಾ ನಿಯತಂ ಸೋಽವಸೀದತಿ||

ಇತರರ ಮಾಂಸದಿಂದ ತನ್ನ ಮಾಂಸಖಂಡವನ್ನು ಬೆಳೆಯಿಸಲು ಇಚ್ಛಿಸುವವನು ವಿನಾಶಹೊಂದುವುದು ನಿಶ್ಚಯ ಎಂದು ಧರ್ಮಾತ್ಮಾ ನಾರದನು ಹೇಳಿದ್ದಾನೆ.

13116015a ದದಾತಿ ಯಜತೇ ಚಾಪಿ ತಪಸ್ವೀ ಚ ಭವತ್ಯಪಿ|

13116015c ಮಧುಮಾಂಸನಿವೃತ್ತ್ಯೇತಿ ಪ್ರಾಹೈವಂ ಸ ಬೃಹಸ್ಪತಿಃ||

ಮಧು-ಮಾಂಸಗಳನ್ನು ತ್ಯಜಿಸಿದವನು ದಾನಿಯೂ, ಯಾಜಕನೂ ಮತ್ತು ತಪಸ್ವಿಯೂ ಆಗುವನೆಂದು ಬೃಹಸ್ಪತಿಯು ಹೇಳಿದ್ದಾನೆ.

13116016a ಮಾಸಿ ಮಾಸ್ಯಶ್ವಮೇಧೇನ ಯೋ ಯಜೇತ ಶತಂ ಸಮಾಃ|

13116016c ನ ಖಾದತಿ ಚ ಯೋ ಮಾಂಸಂ ಸಮಮೇತನ್ಮತಂ ಮಮ||

ನೂರು ವರ್ಷಗಳ ಪರ್ಯಂತ ಪ್ರತಿ ತಿಂಗಳೂ ಅಶ್ವಮೇಧ ಯಾಗವನ್ನು ಮಾಡುವವನು ಮತ್ತು ಮಾಂಸವನ್ನು ತಿನ್ನದೇ ಇರುವವನು ಇಬ್ಬರೂ ಸಮಾನರು ಎಂದು ನನ್ನ ಅಭಿಪ್ರಾಯ.

13116017a ಸದಾ ಯಜತಿ ಸತ್ರೇಣ ಸದಾ ದಾನಂ ಪ್ರಯಚ್ಚತಿ|

13116017c ಸದಾ ತಪಸ್ವೀ ಭವತಿ ಮಧುಮಾಂಸಸ್ಯ ವರ್ಜನಾತ್||

ಮಧು-ಮಾಂಸಗಳನ್ನು ವರ್ಜಿಸಿದವನು ಸದಾ ಸತ್ರಯಾಗವನ್ನು ಮಾಡುವವನಾಗುತ್ತಾನೆ. ಸದಾ ದಾನವನ್ನು ಕೊಡುವವನಾಗುತ್ತಾನೆ. ಮತ್ತು ಸದಾ ತಪಸ್ವಿಯಾಗಿರುತ್ತಾನೆ.

13116018a ಸರ್ವೇ ವೇದಾ ನ ತತ್ಕುರ್ಯುಃ ಸರ್ವಯಜ್ಞಾಶ್ಚ ಭಾರತ|

13116018c ಯೋ ಭಕ್ಷಯಿತ್ವಾ ಮಾಂಸಾನಿ ಪಶ್ಚಾದಪಿ ನಿವರ್ತತೇ||

ಭಾರತ! ಮೊದಲು ಮಾಂಸವನ್ನು ತಿನ್ನುತ್ತಿದ್ದರೂ ನಂತರ ಅದನ್ನು ನಿಲ್ಲಿಸುವವನಿಗೆ ದೊರೆಯುವ ಪುಣ್ಯವನ್ನು ಸರ್ವವೇದಗಳೂ ಮತ್ತು ಸರ್ವಯಜ್ಞಗಳೂ ನೀಡುವುದಿಲ್ಲ.

13116019a ದುಷ್ಕರಂ ಹಿ ರಸಜ್ಞೇನ ಮಾಂಸಸ್ಯ ಪರಿವರ್ಜನಮ್|

13116019c ಚರ್ತುಂ ವ್ರತಮಿದಂ ಶ್ರೇಷ್ಠಂ ಸರ್ವಪ್ರಾಣ್ಯಭಯಪ್ರದಮ್||

ರುಚಿಯು ಹತ್ತಿದನಂತರ ಮಾಂಸವನ್ನು ವರ್ಜಿಸುವುದು ದುಷ್ಕರವಾದುದು. ಸರ್ವಪ್ರಾಣಿಗಳಿಗೂ ಅಭಯಪ್ರದವಾದ ಈ ವ್ರತವನ್ನು ನಡೆಸುವುದು ಶ್ರೇಷ್ಠವು.

13116020a ಸರ್ವಭೂತೇಷು ಯೋ ವಿದ್ವಾನ್ದದಾತ್ಯಭಯದಕ್ಷಿಣಾಮ್|

13116020c ದಾತಾ ಭವತಿ ಲೋಕೇ ಸ ಪ್ರಾಣಾನಾಂ ನಾತ್ರ ಸಂಶಯಃ||

ಸರ್ವಭೂತಗಳಿಗೂ ಅಭಯದಕ್ಷಿಣೆಯನ್ನು ನೀಡುವ ವಿದ್ವಾನನು ಲೋಕದಲ್ಲಿ ಪ್ರಾಣದಾತನಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

13116021a ಏವಂ ವೈ ಪರಮಂ ಧರ್ಮಂ ಪ್ರಶಂಸಂತಿ ಮನೀಷಿಣಃ|

13116021c ಪ್ರಾಣಾ ಯಥಾತ್ಮನೋಽಭೀಷ್ಟಾ ಭೂತಾನಾಮಪಿ ತೇ ತಥಾ||

ಹೀಗೆ ಮನೀಷಿಣರು ಇದನ್ನೇ ಪರಮ ಧರ್ಮವೆಂದು ಪ್ರಶಂಸಿಸುತ್ತಾರೆ. ತನಗೆ ತನ್ನ ಪ್ರಾಣಗಳು ಎಷ್ಟು ಪ್ರಿಯವೋ ಅಷ್ಟೇ ಸರ್ವ ಭೂತಗಳಿಗೂ ಅವರವರ ಪ್ರಾಣಗಳು ಪ್ರಿಯವಾಗಿರುತ್ತವೆ.

13116022a ಆತ್ಮೌಪಮ್ಯೇನ ಗಂತವ್ಯಂ ಬುದ್ಧಿಮದ್ಭಿರ್ಮಹಾತ್ಮಭಿಃ|

13116022c ಮೃತ್ಯುತೋ ಭಯಮಸ್ತೀತಿ ವಿದುಷಾಂ ಭೂತಿಮಿಚ್ಚತಾಮ್||

ಬುದ್ಧಿಮಾನ ಮಹಾತ್ಮರು ಎಲ್ಲ ಪ್ರಾಣಿಗಳೂ ತಮ್ಮಂತೆಯೇ ಎಂದು ತಿಳಿಯಬೇಕು. ಕಲ್ಯಾಣವನ್ನು ಬಯಸುವ ವಿದುಷರಿಗೂ ಮೃತ್ಯುವಿನ ಭಯವಿದ್ದೇ ಇರುತ್ತದೆ.

13116023a ಕಿಂ ಪುನರ್ಹನ್ಯಮಾನಾನಾಂ ತರಸಾ ಜೀವಿತಾರ್ಥಿನಾಮ್|

13116023c ಅರೋಗಾಣಾಮಪಾಪಾನಾಂ ಪಾಪೈರ್ಮಾಂಸೋಪಜೀವಿಭಿಃ||

ಹೀಗಿರುವಾಗ ಮಾಂಸದಿಂದಲೇ ಜೀವಿಸುವ ಪಾಪಿಷ್ಠರಿಂದ ಕೊಲ್ಲಲ್ಪಡುವ ರೋಗರಹಿತವಾಗಿ ಯಾವಪಾಪವನ್ನೂ ಮಾಡದೇ ಜೀವಿಸಲು ಇಚ್ಛಿಸುತ್ತಿರುವ ಪ್ರಾಣಿಗಳಿಗೆ ಮೃತ್ಯುಭಯವಿಲ್ಲದಿರುವುದಾದರೂ ಹೇಗೆ ಸಾಧ್ಯ?

13116024a ತಸ್ಮಾದ್ವಿದ್ಧಿ ಮಹಾರಾಜ ಮಾಂಸಸ್ಯ ಪರಿವರ್ಜನಮ್|

13116024c ಧರ್ಮಸ್ಯಾಯತನಂ ಶ್ರೇಷ್ಠಂ ಸ್ವರ್ಗಸ್ಯ ಚ ಸುಖಸ್ಯ ಚ||

ಮಹಾರಾಜ! ಮಾಂಸವನ್ನು ವರ್ಜಿಸುವುದು ಧರ್ಮಕ್ಕೂ ಸ್ವರ್ಗಕ್ಕೂ ಮತ್ತು ಸುಖಕ್ಕೂ ಶ್ರೇಷ್ಠ ಆಧಾರಭೂತವಾಗಿದೆ ಎಂದು ತಿಳಿ.

13116025a ಅಹಿಂಸಾ ಪರಮೋ ಧರ್ಮಸ್ತಥಾಹಿಂಸಾ ಪರಂ ತಪಃ|

13116025c ಅಹಿಂಸಾ ಪರಮಂ ಸತ್ಯಂ ತತೋ ಧರ್ಮಃ ಪ್ರವರ್ತತೇ||

ಅಹಿಂಸೆಯೇ ಪರಮ ಧರ್ಮವು. ಅಹಿಂಸೆಯೇ ಪರಮ ತಪವು. ಅಹಿಂಸೆಯೇ ಪರಮ ಸತ್ಯವು ಮತ್ತು ಅದರಿಂದಲೇ ಧರ್ಮವು ಪ್ರಾರಂಭವಾಗುತ್ತದೆ.

13116026a ನ ಹಿ ಮಾಂಸಂ ತೃಣಾತ್ಕಾಷ್ಠಾದುಪಲಾದ್ವಾಪಿ ಜಾಯತೇ|

13116026c ಹತ್ವಾ ಜಂತುಂ ತತೋ ಮಾಂಸಂ ತಸ್ಮಾದ್ದೋಷೋಽಸ್ಯ ಭಕ್ಷಣೇ||

ಹುಲ್ಲಿನಿಂದಾಗಲೀ, ಕಟ್ಟಿಗೆಯಿಂದಾಗಲೀ ಅಥವಾ ಕಲ್ಲಿನಿಂದಾಗಲೀ ಮಾಂಸವು ಹುಟ್ಟುವುದಿಲ್ಲ. ಜಂತುವನ್ನು ಕೊಂದೇ ಮಾಂಸವನ್ನು ಪಡೆದುಕೊಳ್ಳಬೇಕಾಗುತ್ತದೆ. ಆದುದರಿಂದಲೇ ಮಾಂಸವನ್ನು ತಿನ್ನುವುದು ಮಹಾದೋಷಯುಕ್ತವಾದುದು.

13116027a ಸ್ವಾಹಾಸ್ವಧಾಮೃತಭುಜೋ ದೇವಾಃ ಸತ್ಯಾರ್ಜವಪ್ರಿಯಾಃ|

13116027c ಕ್ರವ್ಯಾದಾನ್ರಾಕ್ಷಸಾನ್ವಿದ್ಧಿ ಜಿಹ್ಮಾನೃತಪರಾಯಣಾನ್||

ಸ್ವಾಹಾ-ಸ್ವಧಾಮೃತವಾದ ಹವ್ಯ-ಕವ್ಯಗಳನ್ನು ತಿನ್ನುವವರು ಮತ್ತು ಸತ್ಯ-ಸರಳತೆಗಳ ಪ್ರಿಯರಾಗಿರುವವರೇ ದೇವತೆಗಳು. ಕುಟಿಲತೆ ಮತ್ತು ಸುಳ್ಳಿನಲ್ಲಿ ತೊಡಗಿದ್ದು ಮಾಂಸವನ್ನು ಭಕ್ಷಿಸುವವರು ರಾಕ್ಷಸರೆಂದು ತಿಳಿ.

13116028a ಕಾಂತಾರೇಷ್ವಥ ಘೋರೇಷು ದುರ್ಗೇಷು ಗಹನೇಷು ಚ|

13116028c ರಾತ್ರಾವಹನಿ ಸಂಧ್ಯಾಸು ಚತ್ವರೇಷು ಸಭಾಸು ಚ|

[1]13116028e ಅಮಾಂಸಭಕ್ಷಣೇ ರಾಜನ್ ಭಯಮಂತೇ ನ ಗಚ್ಚತಿ||

ರಾಜನ್! ಮಾಂಸವನ್ನು ತಿನ್ನದವನು ಘೋರ ಕಾಡಲ್ಲಾಗಲೀ, ಗಹನ ದುರ್ಗಗಳಲ್ಲಾಗಲೀ, ರಾತ್ರಿ-ಹಗಲಿನಲ್ಲಿಯಾಗಲೀ, ಸಂಧ್ಯಾಸಮಯದಲ್ಲಿಯಾಗಲೀ, ನಾಲ್ಕು ರಸ್ತೆಗಳು ಕೂಡುವ ಸ್ಥಳಗಳಲ್ಲಾಗಲೀ, ಸಭೆಗಳಲ್ಲಾಗಲೀ ಭಯವನ್ನು ಹೊಂದುವುದಿಲ್ಲ.

[2]13116029a ಯದಿ ಚೇತ್ಖಾದಕೋ ನ ಸ್ಯಾನ್ನ ತದಾ ಘಾತಕೋ ಭವೇತ್|

13116029c ಘಾತಕಃ ಖಾದಕಾರ್ಥಾಯ ತಂ ಘಾತಯತಿ ವೈ ನರಃ||

ಮಾಂಸವನ್ನು ತಿನ್ನುವವನೇ ಇಲ್ಲದಿದ್ದರೆ ಪಶುಗಳನ್ನು ಕೊಲ್ಲುವವನೂ ಇರುತ್ತಿರಲಿಲ್ಲ. ಮಾಂಸವನ್ನು ತಿನ್ನುವವರ ಸಲುವಾಗಿಯೇ ಕಟುಕನು ಪ್ರಾಣಿಗಳನ್ನು ಕೊಲ್ಲುತ್ತಾನೆ.

13116030a ಅಭಕ್ಷ್ಯಮೇತದಿತಿ ವಾ ಇತಿ ಹಿಂಸಾ ನಿವರ್ತತೇ|

13116030c ಖಾದಕಾರ್ಥಮತೋ ಹಿಂಸಾ ಮೃಗಾದೀನಾಂ ಪ್ರವರ್ತತೇ||

ಅಭಕ್ಷವೆಂದು ಮಾಂಸವನ್ನು ತಿನ್ನುವುದನ್ನು ನಿಲ್ಲಿಸಿದರೆ ಪ್ರಾಣಿಹಿಂಸೆಯೂ ನಿಲ್ಲುತ್ತದೆ. ಮಾಂಸವನ್ನು ತಿನ್ನುವವರ ಸಲುವಾಗಿಯೇ ಮೃಗಾದಿಗಳ ಹಿಂಸೆಯು ನಡೆಯುತ್ತಿದೆ.

13116031a ಯಸ್ಮಾದ್ ಗ್ರಸತಿ ಚೈವಾಯುರ್ಹಿಂಸಕಾನಾಂ ಮಹಾದ್ಯುತೇ|

13116031c ತಸ್ಮಾದ್ವಿವರ್ಜಯೇನ್ಮಾಂಸಂ ಯ ಇಚ್ಚೇದ್ಭೂತಿಮಾತ್ಮನಃ||

ಮಹಾದ್ಯುತೇ! ಹಿಂಸಕರ ಪಾಪವು ಅವರ ಆಯಸ್ಸನ್ನೇ ನುಂಗಿಹಾಕುತ್ತದೆ. ಆದುದರಿಂದ ಆತ್ಮಕಲ್ಯಾಣವನ್ನು ಬಯಸುವರು ಮಾಂಸವನ್ನು ವರ್ಜಿಸಬೇಕು.

13116032a ತ್ರಾತಾರಂ ನಾಧಿಗಚ್ಚಂತಿ ರೌದ್ರಾಃ ಪ್ರಾಣಿವಿಹಿಂಸಕಾಃ|

13116032c ಉದ್ವೇಜನೀಯಾ ಭೂತಾನಾಂ ಯಥಾ ವ್ಯಾಲಮೃಗಾಸ್ತಥಾ||

ವ್ಯಾಲ-ಮೃಗ ಜೀವಿಗಳಿಗೆ ಉದ್ವೇಗವನ್ನುಂಟುಮಾಡುವ ರೌದ್ರ ಪ್ರಾಣಿಹಿಂಸಕರು ರಕ್ಷಕರನ್ನು ಪಡೆದುಕೊಳ್ಳುವುದಿಲ್ಲ.

13116033a ಲೋಭಾದ್ವಾ ಬುದ್ಧಿಮೋಹಾದ್ವಾ ಬಲವೀರ್ಯಾರ್ಥಮೇವ ಚ|

13116033c ಸಂಸರ್ಗಾದ್ವಾಥ ಪಾಪಾನಾಮಧರ್ಮರುಚಿತಾ ನೃಣಾಮ್||

ಲೋಭದಿಂದ ಅಥವಾ ಬುದ್ಧಿಮೋಹದಿಂದ ಅಥವಾ ಬಲವೀರ್ಯಗಳಿಗಾಗಿ ಅಥವಾ ಪಾಪಿಗಳ ಸಂಸರ್ಗದಿಂದ ಮನುಷ್ಯರಿಗೆ ಅಧರ್ಮದಲ್ಲಿ ರುಚಿಯುಂಟಾಗುತ್ತದೆ.

13116034a ಸ್ವಮಾಂಸಂ ಪರಮಾಂಸೇನ ಯೋ ವರ್ಧಯಿತುಮಿಚ್ಚತಿ|

13116034c ಉದ್ವಿಗ್ನವಾಸೇ ವಸತಿ ಯತ್ರತತ್ರಾಭಿಜಾಯತೇ||

ಇತರರ ಮಾಂಸದಿಂದ ತನ್ನ ಮಾಂಸವನ್ನು ವರ್ಧಿಸಲು ಬಯಸುವವನು ಎಲ್ಲಿ ಹೇಗೆಯೇ ಹುಟ್ಟಲಿ, ಉದ್ವಿಗ್ನ ಜೀವನವನ್ನೇ ಬದುಕುತ್ತಾನೆ.

13116035a ಧನ್ಯಂ ಯಶಸ್ಯಮಾಯುಷ್ಯಂ ಸ್ವರ್ಗ್ಯಂ ಸ್ವಸ್ತ್ಯಯನಂ ಮಹತ್|

13116035c ಮಾಂಸಸ್ಯಾಭಕ್ಷಣಂ ಪ್ರಾಹುರ್ನಿಯತಾಃ ಪರಮರ್ಷಯಃ||

ನಿಯತ ಪರಮಋಷಿಗಳು ಮಾಂಸವನ್ನು ತಿನ್ನದೇ ಇರುವುದು ಧನ, ಯಶಸ್ಸು, ಆಯುಷ್ಯ ಮತ್ತು ಸ್ವರ್ಗ ಇವುಗಳಿಗೆ ಪ್ರಧಾನ ಉಪಾಯವೆಂದು ಹೇಳಿದ್ದಾರೆ.

13116036a ಇದಂ ತು ಖಲು ಕೌಂತೇಯ ಶ್ರುತಮಾಸೀತ್ಪುರಾ ಮಯಾ|

13116036c ಮಾರ್ಕಂಡೇಯಸ್ಯ ವದತೋ ಯೇ ದೋಷಾ ಮಾಂಸಭಕ್ಷಣೇ||

ಕೌಂತೇಯ! ಹಿಂದೆ ಮಾರ್ಕಂಡೇಯನು ಮಾಂಸಭಕ್ಷಣದ ದೋಷಗಳ ಕುರಿತು ಮಾತನಾಡುತ್ತಿರುವಾಗ ಅವನಿಂದ ನಾನು ಇದನ್ನು ಕೇಳಿದ್ದೆ.

13116037a ಯೋ ಹಿ ಖಾದತಿ ಮಾಂಸಾನಿ ಪ್ರಾಣಿನಾಂ ಜೀವಿತಾರ್ಥಿನಾಮ್|

13116037c ಹತಾನಾಂ ವಾ ಮೃತಾನಾಂ ವಾ ಯಥಾ ಹಂತಾ ತಥೈವ ಸಃ||

ಜೀವಿಸಿರಲು ಬಯಸುವ ಪ್ರಾಣಿಗಳ ಮಾಂಸಗಳನ್ನು ತಿನ್ನುವವನು – ಅವನೇ ಕೊಂದಿರಲಿ ಅಥವಾ ಇನ್ನೊಬ್ಬರು ಕೊಂದಿರಲಿ – ಆ ಪ್ರಾಣಿಯ ಹಂತಕನಾಗುತ್ತಾನೆ.

13116038a ಧನೇನ ಕ್ರಾಯಕೋ ಹಂತಿ ಖಾದಕಶ್ಚೋಪಭೋಗತಃ|

13116038c ಘಾತಕೋ ವಧಬಂಧಾಭ್ಯಾಮಿತ್ಯೇಷ ತ್ರಿವಿಧೋ ವಧಃ||

ಮಾಂಸವನ್ನು ಖರೀದಿಸುವವನು ಧನದ ಮೂಲಕ ಪ್ರಾಣಿಯನ್ನು ಕೊಲ್ಲುತ್ತಾನೆ. ಮಾಂಸವನ್ನು ತಿನ್ನುವವನು ಉಪಭೋಗದ ಮೂಲಕ ಪ್ರಾಣಿಯನ್ನು ಕೊಲ್ಲುತ್ತಾನೆ. ಕಟುಕನು ಬಂಧನ-ವಧೆಗಳಿಂದ ಪ್ರಾಣಿಯನ್ನು ಕೊಲ್ಲುತ್ತಾನೆ. ಹೀಗೆ ಮೂರುವಿಧದಲ್ಲಿ ಪ್ರಾಣಿಯ ವಧೆಯಾಗುತ್ತದೆ.

13116039a ಅಖಾದನ್ನನುಮೋದಂಶ್ಚ ಭಾವದೋಷೇಣ ಮಾನವಃ|

13116039c ಯೋಽನುಮನ್ಯೇತ ಹಂತವ್ಯಂ ಸೋಽಪಿ ದೋಷೇಣ ಲಿಪ್ಯತೇ||

ತಾನು ಮಾಂಸವನ್ನು ತಿನ್ನದೇ ಇದ್ದರೂ ಇನ್ನೊಬ್ಬರಿಗೆ ಮಾಂಸವನ್ನು ತಿನ್ನಲು ಅನುಮೋದಿಸುವ ಮನುಷ್ಯನೂ ಕೂಡ ಭಾವದೋಷದಿಂದ ಮಾಂಸಭಕ್ಷಣೆಯ ದೋಷಕ್ಕೆ ಗುರಿಯಾಗುತ್ತಾನೆ. ಹಾಗೆಯೇ ಪ್ರಾಣಿಯನ್ನು ಕೊಲ್ಲಲು ಅನುಮತಿಸಿದವನೂ ಮಾಂಸವನ್ನು ತಿಂದ ಪಾಪಕ್ಕೆ ಗುರಿಯಾಗುತ್ತಾನೆ.

13116040a ಅಧೃಷ್ಯಃ ಸರ್ವಭೂತಾನಾಮಾಯುಷ್ಮಾನ್ನೀರುಜಃ ಸುಖೀ|

13116040c ಭವತ್ಯಭಕ್ಷಯನ್ಮಾಂಸಂ ದಯಾವಾನ್ ಪ್ರಾಣಿನಾಮಿಹ||

ಮಾಂಸವನ್ನು ತಿನ್ನದೇ ಸರ್ವಭೂತಗಳ ಕುರಿತು ದಯಾಪರನಾಗಿರುವವನನ್ನು ಪ್ರಾಣಿಗಳು ತಿರಸ್ಕರಿಸುವುದಿಲ್ಲ. ಅವನು ಅರೋಗಿಯಾಗಿ ಆಯುಷ್ಯವಂತನಾಗುತ್ತಾನೆ.

13116041a ಹಿರಣ್ಯದಾನೈರ್ಗೋದಾನೈರ್ಭೂಮಿದಾನೈಶ್ಚ ಸರ್ವಶಃ|

13116041c ಮಾಂಸಸ್ಯಾಭಕ್ಷಣೇ ಧರ್ಮೋ ವಿಶಿಷ್ಟಃ ಸ್ಯಾದಿತಿ ಶ್ರುತಿಃ||

ಹಿರಣ್ಯದಾನ, ಗೋದಾನ, ಭೂಮಿದಾನಗಳಿಂದ ದೊರೆಯುವ ಪುಣ್ಯಕ್ಕಿಂತ ಮಾಂಸವನ್ನು ತಿನ್ನದೇ ಇರುವುದರಿಂದ ದೊರೆಯುವ ಪುಣ್ಯವೇ ವಿಶಿಷ್ಟವಾದುದೆಂದು ಕೇಳುತ್ತೇವೆ.

13116042a ಅಪ್ರೋಕ್ಷಿತಂ ವೃಥಾಮಾಂಸಂ ವಿಧಿಹೀನಂ ನ ಭಕ್ಷಯೇತ್|

13116042c ಭಕ್ಷಯನ್ನಿರಯಂ ಯಾತಿ ನರೋ ನಾಸ್ತ್ಯತ್ರ ಸಂಶಯಃ||

ಪ್ರೋಕ್ಷಣೆಮಾಡಿರದ ವಿಧಿಹೀನವಾದ ವೃಥಾಮಾಂಸವನ್ನು ತಿನ್ನಬಾರದು. ಹಾಗೆ ಮಾಂಸವನ್ನು ತಿನ್ನುವ ನರನು ನರಕಕ್ಕೆ ಹೋಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

13116043a ಪ್ರೋಕ್ಷಿತಾಭ್ಯುಕ್ಷಿತಂ ಮಾಂಸಂ ತಥಾ ಬ್ರಾಹ್ಮಣಕಾಮ್ಯಯಾ|

13116043c ಅಲ್ಪದೋಷಮಿಹ ಜ್ಞೇಯಂ ವಿಪರೀತೇ ತು ಲಿಪ್ಯತೇ||

ಪ್ರೋಕ್ಷಿತವಾದ ಮತ್ತು ಬ್ರಾಹ್ಮಣರಿಗಾಗಿ ಸಿದ್ಧಪಡಿಸಿದ ಮಾಂಸವನ್ನು ತಿನ್ನುವುದರಿಂದ ಅಲ್ಪ ದೋಷವುಂಟಾಗುತ್ತದೆ ಮತ್ತು ಅದಕ್ಕೆ ವಿರದ್ಧವಾಗಿ ಮಾಂಸವನ್ನು ತಿಂದರೆ ಹೆಚ್ಚಿನ ದೋಷವುಂಟಾಗುತ್ತದೆ ಎಂದು ತಿಳಿಯಬೇಕು.

13116044a ಖಾದಕಸ್ಯ ಕೃತೇ ಜಂತುಂ ಯೋ ಹನ್ಯಾತ್ಪುರುಷಾಧಮಃ|

13116044c ಮಹಾದೋಷಕರಸ್ತತ್ರ ಖಾದಕೋ ನ ತು ಘಾತಕಃ||

ಮಾಂಸವನ್ನು ತಿನ್ನುವುದಕ್ಕಾಗಿ ಪ್ರಾಣಿಯನ್ನು ಕೊಲ್ಲುವವನು ಪುರುಷಾಧಮನೇ ಸರಿ. ಖಾದಕ ಮತ್ತು ಘಾತರ ಇವರಿಬ್ಬರಲ್ಲಿ ಘಾತಕನಿಗಾಗುವ ಮಹಾದೋಷವು ಖಾದಕನಿಗಾಗುವುದಿಲ್ಲ.

13116045a ಇಜ್ಯಾಯಜ್ಞಶ್ರುತಿಕೃತೈರ್ಯೋ ಮಾರ್ಗೈರಬುಧೋ ಜನಃ|

13116045c ಹನ್ಯಾಜ್ಜಂತುಂ ಮಾಂಸಗೃದ್ಧ್ರೀ ಸ ವೈ ನರಕಭಾಕ್ನರಃ||

ಮಾಂಸದ ಆಸೆಗಾಗಿ ಯಜ್ಞಯಾಗಾದಿ ವೈದಿಕ ಕರ್ಮಗಳ ನೆಪದಿಂದ ಪ್ರಾಣಿಗಳನ್ನು ಕೊಲ್ಲುವ ಮೂಢ ಜನರು ನರಕ ಭಾಗಿಗಳಾಗುತ್ತಾರೆ.

13116046a ಭಕ್ಷಯಿತ್ವಾ ತು ಯೋ ಮಾಂಸಂ ಪಶ್ಚಾದಪಿ ನಿವರ್ತತೇ|

13116046c ತಸ್ಯಾಪಿ ಸುಮಹಾನ್ಧರ್ಮೋ ಯಃ ಪಾಪಾದ್ವಿನಿವರ್ತತೇ||

ಮೊದಲು ಮಾಂಸವನ್ನು ತಿನ್ನುತ್ತಿದ್ದವನು ನಂತರ ಅದನ್ನು ನಿಲ್ಲಿಸುವವನಿಗೂ ಕೂಡ, ಪಾಪದಿಂದ ಹಿಂದೆಸರಿದುದಕ್ಕಾಗಿ, ಮಹಾ ಧರ್ಮವು ದೊರೆಯುತ್ತದೆ.

13116047a ಆಹರ್ತಾ ಚಾನುಮಂತಾ ಚ ವಿಶಸ್ತಾ ಕ್ರಯವಿಕ್ರಯೀ|

13116047c ಸಂಸ್ಕರ್ತಾ ಚೋಪಭೋಕ್ತಾ ಚ ಘಾತಕಾಃ ಸರ್ವ ಏವ ತೇ||

ಪಶುವನ್ನು ತರುವವನು, ಕೊಲ್ಲಲು ಅನುಮತಿಸುವವನು, ಕೊಲ್ಲುವವನು, ಮಾಂಸದ ಕ್ರಯವಿಕ್ರಯವನ್ನು ಮಾಡುವವನು, ಅದನ್ನು ಊಟಕ್ಕೆ ತಯಾರಿಸುವವನು, ಅದನ್ನು ತಿನ್ನುವವನು ಇವರೆಲ್ಲರೂ ಮಾಂಸಭಕ್ಷಕರೇ.

13116048a ಇದಮನ್ಯತ್ತು ವಕ್ಷ್ಯಾಮಿ ಪ್ರಮಾಣಂ ವಿಧಿನಿರ್ಮಿತಮ್|

13116048c ಪುರಾಣಮೃಷಿಭಿರ್ಜುಷ್ಟಂ ವೇದೇಷು ಪರಿನಿಶ್ಚಿತಮ್||

ಋಷಿಗಳು ಅನುಮೋದಿಸಿ ಆಚರಿಸುವ ಮತ್ತು ವೇದಗಳು ನಿಶ್ಚಯಿಸಿರುವ ಇನ್ನೊಂದು ಪುರಾತನ ವಿಧಿನಿರ್ಮಿತ ಪ್ರಮಾಣವನ್ನು ಹೇಳುತ್ತೇನೆ.

13116049a ಪ್ರವೃತ್ತಿಲಕ್ಷಣೇ ಧರ್ಮೇ ಫಲಾ[3]ರ್ಥಿಭಿರಭಿದ್ರುತೇ|

13116049c ಯಥೋಕ್ತಂ ರಾಜಶಾರ್ದೂಲ ನ ತು ತನ್ಮೋಕ್ಷಕಾಂಕ್ಷಿಣಾಮ್||

ರಾಜಶಾರ್ದೂಲ! ಫಲಾರ್ಥಿಗಳು ಪ್ರವೃತ್ತಿಲಕ್ಷಣ ಧರ್ಮವನ್ನು ಪ್ರತಿಪಾದಿಸುತ್ತಾರೆ. ಆದರೆ ಮೋಕ್ಷವನ್ನು ಬಯಸುವವರು ಇದನ್ನು ಸಮ್ಮತಿಸುವುದಿಲ್ಲ.

13116050a ಹವಿರ್ಯತ್ಸಂಸ್ಕೃತಂ ಮಂತ್ರೈಃ ಪ್ರೋಕ್ಷಿತಾಭ್ಯುಕ್ಷಿತಂ ಶುಚಿ|

13116050c ವೇದೋಕ್ತೇನ ಪ್ರಮಾಣೇನ ಪಿತೄಣಾಂ ಪ್ರಕ್ರಿಯಾಸು ಚ|

13116050e ಅತೋಽನ್ಯಥಾ ವೃಥಾಮಾಂಸಮಭಕ್ಷ್ಯಂ ಮನುರಬ್ರವೀತ್||

ಮಂತ್ರಗಳಿಂದ ಸುಸಂಸ್ಕೃತಗೊಂಡು ಪ್ರೋಕ್ಷಿಸಲ್ಪಟ್ಟ ಹವಿಸ್ಸು, ಅದು ಮಾಂಸವೇ ಆಗಿದ್ದರೂ, ಶುಚಿಯೇ ಆಗಿರುತ್ತದೆ. ವೇದೋಕ್ತ ಪ್ರಮಾಣದಂತೆ ಅದನ್ನು ಪ್ರಿತೃಕರ್ಮಗಳಲ್ಲಿ ಬಳಸುತ್ತಾರೆ. ಬೇರೆ ಎಲ್ಲವೂ ವೃಥಾಮಾಂಸವು ಮತ್ತು ಅದನ್ನು ತಿನ್ನುವುದು ದೋಷಯುಕ್ತವಾದುದು ಎಂದು ಮನುವು ಹೇಳಿದ್ದಾನೆ.

13116051a ಅಸ್ವರ್ಗ್ಯಮಯಶಸ್ಯಂ ಚ ರಕ್ಷೋವದ್ಭರತರ್ಷಭ|

13116051c ವಿಧಿನಾ ಹಿ ನರಾಃ ಪೂರ್ವಂ ಮಾಂಸಂ ರಾಜನ್ನಭಕ್ಷಯನ್||

ಭರತರ್ಷಭ! ರಾಜನ್! ಹಿಂದೆ ಹೇಳಿದ ವಿಧಿಯಿಂದಲ್ಲದೇ ರಾಕ್ಷಸರಂತೆ ಮಾಂಸವನ್ನು ತಿನ್ನುವುದು ಸ್ವರ್ಗವನ್ನು ಅಥವಾ ಯಶಸ್ಸನ್ನು ನೀಡುವುದಿಲ್ಲ.

13116052a ಯ ಇಚ್ಚೇತ್ಪುರುಷೋಽತ್ಯಂತಮಾತ್ಮಾನಂ ನಿರುಪದ್ರವಮ್|

13116052c ಸ ವರ್ಜಯೇತ ಮಾಂಸಾನಿ ಪ್ರಾಣಿನಾಮಿಹ ಸರ್ವಶಃ||

ಅತ್ಯಂತ ನಿರುಪದ್ರವಿಯಾಗಿರಲು ಬಯಸುವ ಪುರುಷನು ಪ್ರಾಣಿಗಳ ಮಾಂಸವನ್ನು ಸರ್ವಥಾ ವರ್ಜಿಸಬೇಕು.

13116053a ಶ್ರೂಯತೇ ಹಿ ಪುರಾಕಲ್ಪೇ ನೃಣಾಂ ವ್ರೀಹಿಮಯಃ ಪಶುಃ|

13116053c ಯೇನಾಯಜಂತ ಯಜ್ವಾನಃ ಪುಣ್ಯಲೋಕಪರಾಯಣಾಃ||

ಹಿಂದಿನ ಕಲ್ಪದಲ್ಲಿ ಮನುಷ್ಯರು ಯಜ್ಞದಲ್ಲಿ ತಂಡುಲಪಿಷ್ಟಮಯ ಪಶುವನ್ನೇ ಉಪಯೋಗಿಸುತ್ತಿದ್ದರೆಂದು ಕೇಳಿದ್ದೇವೆ. ಪುಣ್ಯಲೋಕಪರಾಯಣರು ಪಿಷ್ಟಪಶುವಿನಿಂದಲೇ ಯಜ್ಞಗಳನ್ನು ಮಾಡುತ್ತಿದ್ದರು.

13116054a ಋಷಿಭಿಃ ಸಂಶಯಂ ಪೃಷ್ಟೋ ವಸುಶ್ಚೇದಿಪತಿಃ ಪುರಾ|

13116054c ಅಭಕ್ಷ್ಯಮಿತಿ ಮಾಂಸಂ ಸ ಪ್ರಾಹ ಭಕ್ಷ್ಯಮಿತಿ ಪ್ರಭೋ||

ಹಿಂದೆ ಋಷಿಗಳು ತಮ್ಮ ಸಂಶಯವನ್ನು ಚೇದಿಪತಿ ವಸುವಿನಲ್ಲಿ ಕೇಳಿದರು. ಪ್ರಭೋ! ಮಾಂಸವನ್ನು ತಿನ್ನಬಾರದು ಎಂದು ತಿಳಿದಿದ್ದರೂ ಅವನು ಮಾಂಸವನ್ನು ತಿನ್ನಬಹುದು ಎಂದನು.

13116055a ಆಕಾಶಾನ್ಮೇದಿನೀಂ ಪ್ರಾಪ್ತಸ್ತತಃ ಸ ಪೃಥಿವೀಪತಿಃ|

13116055c ಏತದೇವ ಪುನಶ್ಚೋಕ್ತ್ವಾ ವಿವೇಶ ಧರಣೀತಲಮ್||

ಆಗ ಆ ಪೃಥಿವೀಪತಿಯು ಆಕಾಶದಿಂದ ಮೇದಿನಿಯ ಮೇಲೆ ಬಿದ್ದನು. ಅದನ್ನೇ ಪುನಃ ಹೇಳಿ ಅವನು ಧರಣೀತಲವನ್ನು ಪ್ರವೇಶಿಸಿದನು[4].

13116056a ಪ್ರಜಾನಾಂ ಹಿತಕಾಮೇನ ತ್ವಗಸ್ತ್ಯೇನ ಮಹಾತ್ಮನಾ|

13116056c ಆರಣ್ಯಾಃ ಸರ್ವದೈವತ್ಯಾಃ ಪ್ರೋಕ್ಷಿತಾಸ್ತಪಸಾ ಮೃಗಾಃ||

ಪ್ರಜೆಗಳ ಹಿತವನ್ನು ಬಯಸಿ ಮಹಾತ್ಮಾ ಅಗಸ್ತ್ಯನು ತನ್ನ ತಪಸ್ಸಿನಿಂದ ಪ್ರೋಕ್ಷಣೆಮಾಡಿ ಸರ್ವ ವನ್ಯ ಪ್ರಾಣಿಗಳನ್ನೂ ಮತ್ತು ಜಿಂಕೆಗಳನ್ನೂ ದೇವತೆಗಳಿಗೆ ಅರ್ಪಿಸಿದ್ದನು.

13116057a ಕ್ರಿಯಾ ಹ್ಯೇವಂ ನ ಹೀಯಂತೇ ಪಿತೃದೈವತಸಂಶ್ರಿತಾಃ|

13116057c ಪ್ರೀಯಂತೇ ಪಿತರಶ್ಚೈವ ನ್ಯಾಯತೋ ಮಾಂಸತರ್ಪಿತಾಃ||

ಆದುದರಿಂದ ಪಿತೃ-ದೇವತಾ ಕಾರ್ಯಗಳಲ್ಲಿ ಮಾಂಸವನ್ನು ಬಳಸದೇ ಇದ್ದರೂ ಆ ಕ್ರಿಯೆಗಳು ಹೀನವಾದವುಗಳೆಂದೆನಿಸಿಕೊಳ್ಳುವುದಿಲ್ಲ. ಮಾಂಸವನ್ನು ನೀಡದೇ ಇದ್ದರೂ ಪಿತೃಗಳು ತೃಪ್ತರಾಗುತ್ತಾರೆ.

13116058a ಇದಂ ತು ಶೃಣು ರಾಜೇಂದ್ರ ಕೀರ್ತ್ಯಮಾನಂ ಮಯಾನಘ|

13116058c ಅಭಕ್ಷಣೇ ಸರ್ವಸುಖಂ ಮಾಂಸಸ್ಯ ಮನುಜಾಧಿಪ||

ರಾಜೇಂದ್ರ! ಅನಘ! ಮನುಜಾಧಿಪ! ಮಾಂಸವನ್ನು ತಿನ್ನದೇ ಇರುವುದರಿಂದ ದೊರೆಯುವ ಸರ್ವಸುಖವನ್ನೂ ವರ್ಣಿಸುತ್ತೇನೆ. ಕೇಳು.

13116059a ಯಸ್ತು ವರ್ಷಶತಂ ಪೂರ್ಣಂ ತಪಸ್ತಪ್ಯೇತ್ಸುದಾರುಣಮ್|

13116059c ಯಶ್ಚೈಕಂ ವರ್ಜಯೇನ್ಮಾಂಸಂ ಸಮಮೇತನ್ಮತಂ ಮಮ||

ಸಂಪೂರ್ಣ ನೂರುವರ್ಷಗಳು ದಾರುಣ ತಪಸ್ಸನ್ನಾಚರಿಸುವುದು ಮತ್ತು ಒಂದೇ ತಿಂಗಳು ಮಾಂಸವನ್ನು ವರ್ಜಿಸುವುದು ಎವೆರಡೂ ಸಮ ಎಂದು ನನ್ನ ಮತ.

13116060a ಕೌಮುದೇ ತು ವಿಶೇಷೇಣ ಶುಕ್ಲಪಕ್ಷೇ ನರಾಧಿಪ|

13116060c ವರ್ಜಯೇತ್ಸರ್ವಮಾಂಸಾನಿ ಧರ್ಮೋ ಹ್ಯತ್ರ ವಿಧೀಯತೇ||

ನರಾಧಿಪ! ವಿಶೇಷವಾಗಿ ಕಾರ್ತೀಕಮಾಸದ ಶುಕ್ಲಪಕ್ಷದಲ್ಲಿ ಸರ್ವಮಾಂಸಗಳನ್ನೂ ವರ್ಜಿಸಬೇಕು ಎಂದು ಧರ್ಮಶಾಸ್ತ್ರಗಳು ವಿಧಿಸಿವೆ.

13116061a ಚತುರೋ ವಾರ್ಷಿಕಾನ್ಮಾಸಾನ್ಯೋ ಮಾಂಸಂ ಪರಿವರ್ಜಯೇತ್|

13116061c ಚತ್ವಾರಿ ಭದ್ರಾಣ್ಯಾಪ್ನೋತಿ ಕೀರ್ತಿಮಾಯುರ್ಯಶೋ ಬಲಮ್||

ಮಳೆಗಾಲದ ನಾಲ್ಕು ತಿಂಗಳು ಮಾಂಸವನ್ನು ವರ್ಜಿಸಿದವನು ಕೀರ್ತಿ, ಆಯುಶ್ಸು, ಬಲ ಮತ್ತು ಯಶಸ್ಸುಗಳೆಂಬ ನಾಲ್ಕು ವಿಧದ ಕಲ್ಯಾಣಗಳನ್ನು ಪಡೆದುಕೊಳ್ಳುತ್ತಾನೆ.

13116062a ಅಥ ವಾ ಮಾಸಮಪ್ಯೇಕಂ ಸರ್ವಮಾಂಸಾನ್ಯಭಕ್ಷಯನ್|

13116062c ಅತೀತ್ಯ ಸರ್ವದುಃಖಾನಿ ಸುಖೀ ಜೀವೇನ್ನಿರಾಮಯಃ||

ಅಥವಾ ಒಂದು ತಿಂಗಳಾದರೂ ಸರ್ವ ಮಾಂಸಗಳನ್ನೂ ತಿನ್ನದೇ ಇರುವವನು ಸರ್ವದುಃಖಗಳನ್ನು ಕಳೆದುಕೊಂಡು ನಿರಾಮಯನಾಗಿ ಸುಖಿಯಾಗಿ ಜೀವಿಸುತ್ತಾನೆ.

13116063a ಯೇ ವರ್ಜಯಂತಿ ಮಾಂಸಾನಿ ಮಾಸಶಃ ಪಕ್ಷಶೋಽಪಿ ವಾ|

13116063c ತೇಷಾಂ ಹಿಂಸಾನಿವೃತ್ತಾನಾಂ ಬ್ರಹ್ಮಲೋಕೋ ವಿಧೀಯತೇ||

ಒಂದೊಂದು ತಿಂಗಳು ಅಥವಾ ಒಂದೊಂದು ಪಕ್ಷ ಮಾಂಸವನ್ನು ತಿನ್ನದೇ ಹಿಂಸೆಯಿಂದ ನಿವೃತ್ತರಾದವರು ಬ್ರಹ್ಮಲೋಕವನ್ನು ಪಡೆಯುತ್ತಾರೆ.

13116064a ಮಾಂಸಂ ತು ಕೌಮುದಂ ಪಕ್ಷಂ ವರ್ಜಿತಂ ಪಾರ್ಥ ರಾಜಭಿಃ|

13116064c ಸರ್ವಭೂತಾತ್ಮಭೂತೈಸ್ತೈರ್ವಿಜ್ಞಾತಾರ್ಥಪರಾವರೈಃ||

ಪಾರ್ಥ! ಸರ್ವಭೂತಾತ್ಮಭೂತರಾದ ಮತ್ತು ಪರಾವರಗಳ ಅರ್ಥವನ್ನು ತಿಳಿದಿದ್ದ ರಾಜರು ಕಾರ್ತೀಕಮಾಸದ ಶುಕ್ಲಪಕ್ಷದಲ್ಲಿ ಮಾಂಸವನ್ನು ವರ್ಜಿಸುತ್ತಿದ್ದರು.

13116065a ನಾಭಾಗೇನಾಂಬರೀಷೇಣ ಗಯೇನ ಚ ಮಹಾತ್ಮನಾ|

13116065c ಆಯುಷಾ ಚಾನರಣ್ಯೇನ ದಿಲೀಪರಘುಪೂರುಭಿಃ||

13116066a ಕಾರ್ತವೀರ್ಯಾನಿರುದ್ಧಾಭ್ಯಾಂ ನಹುಷೇಣ ಯಯಾತಿನಾ|

13116066c ನೃಗೇಣ ವಿಷ್ವಗಶ್ವೇನ ತಥೈವ ಶಶಬಿಂದುನಾ|

13116066e ಯುವನಾಶ್ವೇನ ಚ ತಥಾ ಶಿಬಿನೌಶೀನರೇಣ ಚ||

13116067a ಶ್ಯೇನಚಿತ್ರೇಣ ರಾಜೇಂದ್ರ ಸೋಮಕೇನ ವೃಕೇಣ ಚ|

13116067c ರೈವತೇನ ರಂತಿದೇವೇನ ವಸುನಾ ಸೃಂಜಯೇನ ಚ||

13116068a ದುಃಷಂತೇನ ಕರೂಷೇಣ ರಾಮಾಲರ್ಕನಲೈಸ್ತಥಾ|

13116068c ವಿರೂಪಾಶ್ವೇನ ನಿಮಿನಾ ಜನಕೇನ ಚ ಧೀಮತಾ||

13116069a ಸಿಲೇನ ಪೃಥುನಾ ಚೈವ ವೀರಸೇನೇನ ಚೈವ ಹ|

13116069c ಇಕ್ಷ್ವಾಕುಣಾ ಶಂಭುನಾ ಚ ಶ್ವೇತೇನ ಸಗರೇಣ ಚ||

13116070a ಏತೈಶ್ಚಾನ್ಯೈಶ್ಚ ರಾಜೇಂದ್ರ ಪುರಾ ಮಾಂಸಂ ನ ಭಕ್ಷಿತಮ್|

13116070c ಶಾರದಂ ಕೌಮುದಂ ಮಾಸಂ ತತಸ್ತೇ ಸ್ವರ್ಗಮಾಪ್ನುವನ್||

13116071a ಬ್ರಹ್ಮಲೋಕೇ ಚ ತಿಷ್ಠಂತಿ ಜ್ವಲಮಾನಾಃ ಶ್ರಿಯಾನ್ವಿತಾಃ|

13116071c ಉಪಾಸ್ಯಮಾನಾ ಗಂಧರ್ವೈಃ ಸ್ತ್ರೀಸಹಸ್ರಸಮನ್ವಿತಾಃ||

ರಾಜೇಂದ್ರ! ನಾಭಾಗ, ಅಂಬರೀಷ, ಮಹಾತ್ಮ ಗಯ, ಆಯು, ಅನರಣ್ಯ, ದಿಲೀಪ, ರಘು, ಪೂರು, ಕಾರ್ತವೀರ್ಯ, ಅನಿರುದ್ಧ, ನಹುಷ, ಯಯಾತಿ, ನೃಗ, ವಿಷ್ವಗಶ್ವ, ಶಶಬಿಂದು, ಯುವನಾಶ್ವ, ಶಿಬಿ ಔಶೀನರ, ಶ್ಯೇನಚಿತ್ರ, ಸೋಮಕ, ವೃಕ, ರೈವತ, ರಂತಿದೇವ, ವಸು, ಸೃಂಜಯ, ದುಃಷಂತ, ಕರೂಷ, ರಾಮ, ಅಲರ್ಕ, ಅನಲ, ವಿರೂಪಾಶ್ವ, ನಿಮಿ, ಧೀಮತ ಜನಕ, ಸಿಲ, ಪೃಥು, ವೀರಸೇನ, ಇಕ್ಷ್ವಾಕು, ಶಂಭು, ಶ್ವೇತ, ಸಗರ – ಇವರು ಮತ್ತು ಅನ್ಯ ರಾಜರು ಹಿಂದೆ ಕಾರ್ತೀಕಮಾಸದ ಶುಕ್ಲಪಕ್ಷದಲ್ಲಿ ಮಾಂಸವನ್ನು ತಿನ್ನದೇ ಸ್ವರ್ಗವನ್ನು ಪಡೆದುಕೊಂಡರು. ಇವರು ಶ್ರಿಯಾನ್ವಿತರಾಗಿ ಬೆಳಗುತ್ತಾ ಸಹಸ್ರ ಗಂಧರ್ವಸ್ತ್ರೀಯರಿಂದ ಪೂಜಿಸಲ್ಪಡುತ್ತಾ ಬ್ರಹ್ಮಲೋಕದಲ್ಲಿ ನೆಲೆಸಿದ್ದಾರೆ.

13116072a ತದೇತದುತ್ತಮಂ ಧರ್ಮಮಹಿಂಸಾಲಕ್ಷಣಂ ಶುಭಮ್|

13116072c ಯೇ ಚರಂತಿ ಮಹಾತ್ಮಾನೋ ನಾಕಪೃಷ್ಠೇ ವಸಂತಿ ತೇ||

ಆದುದರಿಂದ ಈ ಅಹಿಂಸಾಲಕ್ಷಣವು ಶುಭವಾದ ಉತ್ತಮ ಧರ್ಮವು. ಇದನ್ನು ಆಚರಿಸುವ ಮಹಾತ್ಮರು ನಾಕಪೃಷ್ಠದಲ್ಲಿ ನೆಲೆಸುತ್ತಾರೆ.

13116073a ಮಧು ಮಾಂಸಂ ಚ ಯೇ ನಿತ್ಯಂ ವರ್ಜಯಂತೀಹ ಧಾರ್ಮಿಕಾಃ|

13116073c ಜನ್ಮಪ್ರಭೃತಿ ಮದ್ಯಂ ಚ ಸರ್ವೇ ತೇ ಮುನಯಃ ಸ್ಮೃತಾಃ|

13116073e ವಿಶಿಷ್ಟತಾಂ ಜ್ಞಾತಿಷು ಚ ಲಭಂತೇ ನಾತ್ರ ಸಂಶಯಃ||

ಧಾರ್ಮಿಕರಾದವರು ನಿತ್ಯವೂ ಮಧು-ಮಾಂಸವನ್ನು ವರ್ಜಿಸುತ್ತಾರೆ. ಜನ್ಮಪ್ರಭೃತಿ ಮದ್ಯವನ್ನು ಸೇವಿಸಿದೇ ಇರುವವರನ್ನು ಮುನಿಗಳೆಂದೇ ತಿಳಿಯಬೇಕು. ಅವರಿಗೆ ಜ್ಞಾತಿಬಾಂಧವರಲ್ಲಿ ವಿಶಿಷ್ಟತೆಯು ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

13116074a ಆಪನ್ನಶ್ಚಾಪದೋ ಮುಚ್ಯೇದ್ಬದ್ಧೋ ಮುಚ್ಯೇತ ಬಂಧನಾತ್|

13116074c ಮುಚ್ಯೇತ್ತಥಾತುರೋ ರೋಗಾದ್ದುಃಖಾನ್ಮುಚ್ಯೇತ ದುಃಖಿತಃ||

ಇದರಿಂದ ಆಪತ್ತಿರುವವರು ಆಪತ್ತುಗಳಿಂದ ಮುಕ್ತರಾಗುತ್ತಾರೆ. ಬಂಧನದಲ್ಲಿರುವವರು ಬಿಡುಗಡೆ ಹೊಂದುತ್ತಾರೆ. ರೋಗಿಗಳು ರೋಗದಿಂದ ಮುಕ್ತರಾಗುತ್ತಾರೆ. ಮತ್ತ ದುಃಖಿತರು ದುಃಖದಿಂದ ಮುಕ್ತರಾಗುತ್ತಾರೆ.

13116075a ತಿರ್ಯಗ್ಯೋನಿಂ ನ ಗಚ್ಚೇತ ರೂಪವಾಂಶ್ಚ ಭವೇನ್ನರಃ|

13116075c ಬುದ್ಧಿಮಾನ್ವೈ ಕುರುಶ್ರೇಷ್ಠ ಪ್ರಾಪ್ನುಯಾಚ್ಚ ಮಹದ್ಯಶಃ||

ಕುರುಶ್ರೇಷ್ಠ! ತಿರ್ಯಗ್ಯೋನಿಗಳಲ್ಲಿ ಹುಟ್ಟುವುದಿಲ್ಲ. ರೂಪವಾನ ನರನಾಗುತ್ತಾನೆ. ಬುದ್ಧಿವಂತನಾಗಿ ಮಹಾ ಯಶಸ್ಸನ್ನು ಪಡೆಯುತ್ತಾನೆ.

13116076a ಏತತ್ತೇ ಕಥಿತಂ ರಾಜನ್ಮಾಂಸಸ್ಯ ಪರಿವರ್ಜನೇ|

13116076c ಪ್ರವೃತ್ತೌ ಚ ನಿವೃತ್ತೌ ಚ ವಿಧಾನಮೃಷಿನಿರ್ಮಿತಮ್||

ರಾಜನ್! ಇದೋ ಋಷಿನಿರ್ಮಿತವಾದ ಮಾಂಸವರ್ಜನೆ, ಪ್ರವೃತ್ತಿ ಮತ್ತು ನಿವೃತ್ತಿಗಳ ವಿಧಾನಗಳನ್ನು ಹೇಳಿದ್ದೇನೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಮಾಂಸಭಕ್ಷಣನಿಷೇಧೇ ಷೋಡಶಾಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಮಾಂಸಭಕ್ಷಣನಿಷೇಧ ಎನ್ನುವ ನೂರಾಹದಿನಾರನೇ ಅಧ್ಯಾಯವು.

[1] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಉದ್ಯತೇಷು ಚ ಶಸ್ತ್ರೇಷು ಮೃಗವ್ಯಾಲಭಯೇಷು ಚ| (ಭಾರತ ದರ್ಶನ).

[2] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಶರಣ್ಯಃ ಸರ್ವಭೂತಾನಾಂ ವಿಶ್ವಾಸ್ಯಃ ಸರ್ವಜಂತುಷು| ಅನುದ್ವೇಗಕರೋ ಲೋಕೇ ನ ಚಾಪ್ಯುದ್ವಿಜತೇ ಸದಾ|| ಅರ್ಥಾತ್: ಮಾಂಸವನ್ನು ತಿನ್ನದವನು ಸರ್ವಪ್ರಾಣಿಗಳಿಗೂ ರಕ್ಷಕನಾಗುತ್ತಾನೆ. ಸರ್ವಜಂತುಗಳ ವಿಶ್ವಾಸಕ್ಕೂ ಪಾತ್ರನಾಗುತ್ತಾನೆ. ಲೋಕದಲ್ಲಿ ಯಾರಿಗೂ ಅವನು ಉದ್ವೇಗವನ್ನುಂಟುಮಾಡುವುದಿಲ್ಲ ಮತ್ತು ತಾನೂ ಉದ್ವೇಗಗೊಳ್ಳುವುದಿಲ್ಲ. (ಭಾರತ ದರ್ಶನ)

[3] ಪ್ರಜಾ (ಭಾರತ ದರ್ಶನ).

[4] ಉಪರಿಚರ ವಸುವಿನ ಈ ವೃತ್ತಾಂತವು ಹಿಂದೆ ಶಾಂತಿಪರ್ವದ ಮೋಕ್ಷಧರ್ಮಪರ್ವದ ಅಧ್ಯಾಯ 324ರಲ್ಲಿಯೂ ಬಂದಿದೆ.

Comments are closed.