Anushasana Parva: Chapter 117

ಅನುಶಾಸನ ಪರ್ವ: ದಾನಧರ್ಮ ಪರ್ವ

೧೧೭

ಮಾಂಸವನ್ನು ತಿನ್ನದೇ ಇರುವುದರಿಂದಾಗುವ ಲಾಭ ಮತ್ತು ಅಹಿಂಸಾಧರ್ಮದ ಪ್ರಶಂಸೆ (1-41).

13117001 ಯುಧಿಷ್ಠಿರ ಉವಾಚ|

13117001a ಇಮೇ ವೈ ಮಾನವಾ ಲೋಕೇ ಭೃಶಂ ಮಾಂಸಸ್ಯ ಗೃದ್ಧಿನಃ[1]|

13117001c ವಿಸೃಜ್ಯ ಭಕ್ಷಾನ್ವಿವಿಧಾನ್ಯಥಾ ರಕ್ಷೋಗಣಾಸ್ತಥಾ||

ಯುಧಿಷ್ಠಿರನು ಹೇಳಿದನು: “ಈ ಲೋಕದಲ್ಲಿ ಮಾನವರು ವಿವಿಧ ಭಕ್ಷ್ಯಗಳನ್ನು ತಿನ್ನುವುದನ್ನು ಬಿಟ್ಟು ರಾಕ್ಷಸರಂತೆ ಮಾಂಸವನ್ನು ತಿನ್ನಲು ಅತ್ಯಂತ ಆಸೆಪಡುತ್ತಾರೆ.

13117002a ನಾಪೂಪಾನ್ವಿವಿಧಾಕಾರಾನ್ ಶಾಕಾನಿ ವಿವಿಧಾನಿ ಚ|

13117002c ಷಾಡವಾನ್ರಸಯೋಗಾಂಶ್ಚ ತಥೇಚ್ಚಂತಿ ಯಥಾಮಿಷಮ್||

ಮಾಂಸವನ್ನು ತಿನ್ನಲು ಬಯಸುವಷ್ಟು ವಿವಿಧಾಕಾರದ ಅಪೂಪಗಳನ್ನೂ, ವಿವಿಧ ತರಕಾರಿಗಳನ್ನೂ ಮತ್ತು ಷಡ್ರಸಯುಕ್ತ ಮೋದಕಗಳನ್ನೂ ತಿನ್ನಲು ಬಯಸುವುದಿಲ್ಲ.

13117003a ತತ್ರ ಮೇ ಬುದ್ಧಿರತ್ರೈವ ವಿಸರ್ಗೇ ಪರಿಮುಹ್ಯತೇ|

13117003c ನ ಮನ್ಯೇ ರಸತಃ ಕಿಂ ಚಿನ್ಮಾಂಸತೋಽಸ್ತೀಹ ಕಿಂ ಚನ||

ಈ ವಿಷಯದಲ್ಲಿ ನನ್ನ ಬುದ್ಧಿಯು ಮೋಹಗೊಂಡಿದೆ. ಮಾಂಸದಲ್ಲಿರುವ ರುಚಿಯು ಅನ್ಯ ಆಹಾರಗಳಿಗಿಂತ ಅಧಿಕವಾಗಿರಬಹುದು.

13117004a ತದಿಚ್ಚಾಮಿ ಗುಣಾನ್ ಶ್ರೋತುಂ ಮಾಂಸಸ್ಯಾಭಕ್ಷಣೇಽಪಿ ವಾ|

13117004c ಭಕ್ಷಣೇ ಚೈವ ಯೇ ದೋಷಾಸ್ತಾಂಶ್ಚೈವ ಪುರುಷರ್ಷಭ||

ಪುರುಷರ್ಷಭ! ಆದುದರಿಂದ ಮಾಂಸದ ಅಭಕ್ಷಣದ ಗುಣಗಳನ್ನೂ ಮಾಂಸಭಕ್ಷಣದ ದೋಷಗಳನ್ನೂ ಕೇಳಬಯಸುತ್ತೇನೆ.

13117005a ಸರ್ವಂ ತತ್ತ್ವೇನ ಧರ್ಮಜ್ಞ ಯಥಾವದಿಹ ಧರ್ಮತಃ|

13117005c ಕಿಂ ವಾ ಭಕ್ಷ್ಯಮಭಕ್ಷ್ಯಂ ವಾ ಸರ್ವಮೇತದ್ವದಸ್ವ ಮೇ||

ಧರ್ಮಜ್ಞ! ತಿನ್ನಬಹುದಾದುದು ಯಾವುದು ಮತ್ತು ಅಭಕ್ಷವಾದುದು ಯಾವುದು ಎಲ್ಲವನ್ನೂ ನನಗೆ ಧರ್ಮತಃ ಸರ್ವ ತತ್ತ್ವಗಳೊಂದಿಗೆ ಹೇಳು.”

13117006 ಭೀಷ್ಮ ಉವಾಚ|

13117006a ಏವಮೇತನ್ಮಹಾಬಾಹೋ ಯಥಾ ವದಸಿ ಭಾರತ|

13117006c ನ ಮಾಂಸಾತ್ಪರಮತ್ರಾನ್ಯದ್ರಸತೋ ವಿದ್ಯತೇ ಭುವಿ||

ಭೀಷ್ಮನು ಹೇಳಿದನು: “ಭಾರತ! ಮಹಾಬಾಹೋ! ನೀನು ಹೇಳಿದುದು ಸರಿ. ಭುವಿಯಲ್ಲಿ ಅಪೂಪಾದಿಗಳನ್ನು ಅಪೇಕ್ಷಿಸುವವರಿಗಿಂತ ಮಾಂಸಾಪೇಕ್ಷಿಗಳೇ ಹೆಚ್ಚಾಗಿದ್ದಾರೆ.

13117007a ಕ್ಷತಕ್ಷೀಣಾಭಿತಪ್ತಾನಾಂ ಗ್ರಾಮ್ಯಧರ್ಮರತಾಶ್ಚ ಯೇ|

13117007c ಅಧ್ವನಾ ಕರ್ಶಿತಾನಾಂ ಚ ನ ಮಾಂಸಾದ್ವಿದ್ಯತೇ ಪರಮ್||

ಯುದ್ಧದಲ್ಲಿ ಗಾಯಗೊಂಡಿರುವವರಿಗೂ, ರೋಗಗಳಿಂದ ಕ್ಷೀಣಿಸಿದವರಿಗೂ, ಗ್ರಾಮ್ಯಧರ್ಮಗಳಲ್ಲಿಯೇ ಹೆಚ್ಚಿನ ಆಸಕ್ತಿಯಿರುವವರಿಗೂ, ನಡೆದು ಆಯಾಸಗೊಂಡಿರುವವರಿಗೂ ಮಾಂಸವೇ ಪರಮ ಆಹಾರವೆಂದು ತಿಳಿದಿದೆ.

13117008a ಸದ್ಯೋ ವರ್ಧಯತಿ ಪ್ರಾಣಾನ್ಪುಷ್ಟಿಮಗ್ರ್ಯಾಂ ದದಾತಿ ಚ|

13117008c ನ ಭಕ್ಷೋಽಭ್ಯಧಿಕಃ ಕಶ್ಚಿನ್ಮಾಂಸಾದಸ್ತಿ ಪರಂತಪ||

ಪರಂತಪ! ಮಾಂಸವು ಬಹುಬೇಗ ಬಲವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಪುಷ್ಟಿಯನ್ನು ನೀಡುತ್ತದೆ. ಇದರಿಂದಲೇ ಮಾಂಸಕ್ಕಿಂತ ಅಧಿಕ ಶ್ರೇಷ್ಠ ಆಹಾರವಿಲ್ಲ.

13117009a ವಿವರ್ಜನೇ ತು ಬಹವೋ ಗುಣಾಃ ಕೌರವನಂದನ|

13117009c ಯೇ ಭವಂತಿ ಮನುಷ್ಯಾಣಾಂ ತಾನ್ಮೇ ನಿಗದತಃ ಶೃಣು||

ಕೌರವನಂದನ! ಆದರೆ ಮಾಂಸವನ್ನು ವರ್ಜಿಸುವುದರಲ್ಲಿ ಅನೇಕ ಗುಣಗಳಿವೆ. ಮಾಂಸವನ್ನು ತಿನ್ನದೇ ಇರುವುದರಿಂದ ಮನುಷ್ಯರಿಗಾಗುವ ಲಾಭಗಳ ಕುರಿತು ಹೇಳುತ್ತೇನೆ. ಕೇಳು.

13117010a ಸ್ವಮಾಂಸಂ ಪರಮಾಂಸೈರ್ಯೋ ವಿವರ್ಧಯಿತುಮಿಚ್ಚತಿ|

13117010c ನಾಸ್ತಿ ಕ್ಷುದ್ರತರಸ್ತಸ್ಮಾನ್ನ ನೃಶಂಸತರೋ ನರಃ||

ಇನ್ನೊಬ್ಬರ ಮಾಂಸದಿಂದ ತನ್ನ ಮಾಂಸವನ್ನು ವರ್ಧಿಸಲು ಬಯಸುವವನಷ್ಟು ನೀಚ ಮತ್ತು ನಿರ್ದಯಿ ಮನುಷ್ಯನಿಲ್ಲ.

13117011a ನ ಹಿ ಪ್ರಾಣಾತ್ಪ್ರಿಯತರಂ ಲೋಕೇ ಕಿಂ ಚನ ವಿದ್ಯತೇ|

13117011c ತಸ್ಮಾದ್ದಯಾಂ ನರಃ ಕುರ್ಯಾದ್ಯಥಾತ್ಮನಿ ತಥಾ ಪರೇ||

ಲೋಕದಲ್ಲಿ ಪ್ರಾಣಕ್ಕಿಂತ ಪ್ರಿಯತರವಾದುದು ಯಾವುದೂ ಇಲ್ಲ. ಆದುದರಿಂದ ಮನುಷ್ಯನು ತನ್ನ ಕುರಿತು ಇತರರು ಹೇಗೆ ದಯಾವಂತರಾಗಿರಬೇಕೆಂದು ಬಯಸುತ್ತಾನೋ ಹಾಗೆ ತಾನೂ ಇತರ ಪ್ರಾಣಿಗಳ ಮೇಲೆ ದಯೆಯನ್ನು ತೋರಿಸಬೇಕು.

13117012a ಶುಕ್ರಾಚ್ಚ ತಾತ ಸಂಭೂತಿರ್ಮಾಂಸಸ್ಯೇಹ ನ ಸಂಶಯಃ|

13117012c ಭಕ್ಷಣೇ ತು ಮಹಾನ್ದೋಷೋ ವಧೇನ ಸಹ ಕಲ್ಪತೇ||

ಅಯ್ಯಾ! ಶುಕ್ರದಿಂದಲೇ ಮಾಂಸದ ಉತ್ಪತ್ತಿಯಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದುದರಿಂದ ಅದನ್ನು ಕೊಲ್ಲುವುದರಿಂದ ಮತ್ತು ತಿನ್ನುವುದರಿಂದ ಮಹಾದೋಷವೆಂದು ಕಲ್ಪಿಸಿದ್ದಾರೆ.

13117013a ಅಹಿಂಸಾಲಕ್ಷಣೋ ಧರ್ಮ ಇತಿ ವೇದವಿದೋ ವಿದುಃ|

13117013c ಯದಹಿಂಸ್ರಂ ಭವೇತ್ಕರ್ಮ ತತ್ಕುರ್ಯಾದಾತ್ಮವಾನ್ನರಃ||

ಅಹಿಂಸೆಯು ಧರ್ಮದ ಲಕ್ಷಣವೆಂದು ವೇದವಿದರು ತಿಳಿದಿದ್ದಾರೆ. ಆದುದರಿಂದ ಹಿಂಸೆಯನ್ನು ಮಾಡಬಾರದು. ತನ್ನೊಡನೆ ತಾನು ಹೇಗೆ ವ್ಯವಹರಿಸುತ್ತಾನೋ ಹಾಗೆ ಇತರರೊಂದಿಗೂ ವ್ಯವಹರಿಸಬೇಕು.

13117014a ಪಿತೃದೈವತಯಜ್ಞೇಷು ಪ್ರೋಕ್ಷಿತಂ ಹವಿರುಚ್ಯತೇ|

13117014c ವಿಧಿನಾ ವೇದದೃಷ್ಟೇನ ತದ್ಭುಕ್ತ್ವೇಹ ನ ದುಷ್ಯತಿ||

ಪಿತೃ-ದೇವ ಯಜ್ಞಗಳಲ್ಲಿ ಪ್ರೋಕ್ಷಿತಗೊಂಡ ಮಾಂಸವನ್ನು ಹವಿಸ್ಸೆಂದು ಹೇಳುತ್ತಾರೆ. ವೇದದೃಷ್ಟ ವಿಧಿಯಿಂದ ಅದನ್ನು ತಿಂದರೆ ದೋಷವುಂಟಾಗುವುದಿಲ್ಲ.

13117015a ಯಜ್ಞಾರ್ಥೇ ಪಶವಃ ಸೃಷ್ಟಾ ಇತ್ಯಪಿ ಶ್ರೂಯತೇ ಶ್ರುತಿಃ|

13117015c ಅತೋಽನ್ಯಥಾ ಪ್ರವೃತ್ತಾನಾಂ ರಾಕ್ಷಸೋ ವಿಧಿರುಚ್ಯತೇ||

ಪಶುಗಳು ಯಜ್ಞಕ್ಕಾಗಿಯೇ ಸೃಷ್ಟಿಸಲ್ಪಟ್ಟಿವೆ ಎಂಬ ಶ್ರುತಿಯನ್ನೂ ಕೇಳುತ್ತೇವೆ. ಇದಕ್ಕಿಂತ ಹೊರತಾಗಿ ಮಾಂಸಭಕ್ಷಣ ಪ್ರವೃತ್ತಿಯನ್ನು ರಾಕ್ಷಸ ವಿಧಿ ಎನ್ನುತ್ತಾರೆ.

13117016a ಕ್ಷತ್ರಿಯಾಣಾಂ ತು ಯೋ ದೃಷ್ಟೋ ವಿಧಿಸ್ತಮಪಿ ಮೇ ಶೃಣು|

13117016c ವೀರ್ಯೇಣೋಪಾರ್ಜಿತಂ ಮಾಂಸಂ ಯಥಾ ಖಾದನ್ನ ದುಷ್ಯತಿ||

ಕ್ಷತ್ರಿಯರಿಗೆ ತೋರಿಸಿಕೊಟ್ಟ ವಿಧಿಯ ಕುರಿತೂ ನನ್ನಿಂದ ಕೇಳು. ವೀರ್ಯ-ಪರಾಕ್ರಮದಿಂದ ಸಂಪಾದಿಸಿದ ಮಾಂಸವನ್ನು ತಿನ್ನುವುದರಿಂದ ಕ್ಷತ್ರಿಯರಿಗೆ ದೋಷವುಂಟಾಗುವುದಿಲ್ಲ.

13117017a ಆರಣ್ಯಾಃ ಸರ್ವದೈವತ್ಯಾಃ ಪ್ರೋಕ್ಷಿತಾಃ ಸರ್ವಶೋ ಮೃಗಾಃ|

13117017c ಅಗಸ್ತ್ಯೇನ ಪುರಾ ರಾಜನ್ಮೃಗಯಾ ಯೇನ ಪೂಜ್ಯತೇ||

ರಾಜನ್! ಅರಣ್ಯದಲ್ಲಿರುವ ಸರ್ವ ಮೃಗಗಳೂ ದೇವತೆಗಳಿಗೆಂದು ಹಿಂದೆ ಅಗಸ್ತ್ಯನು ಪ್ರೋಕ್ಷಣೆ ಮಾಡಿದ್ದನು. ಆದುದರಿಂದಲೇ ಕ್ಷತ್ರಿಯರು ಬೇಟೆಯನ್ನು ಗೌರವಿಸುತ್ತಾರೆ.

13117018a ನಾತ್ಮಾನಮಪರಿತ್ಯಜ್ಯ ಮೃಗಯಾ ನಾಮ ವಿದ್ಯತೇ|

13117018c ಸಮತಾಮುಪಸಂಗಮ್ಯ ರೂಪಂ ಹನ್ಯಾನ್ನ ವಾ ನೃಪ[2]||

ನೃಪ! ತನ್ನ ಪ್ರಾಣವನ್ನೂ ತೊರೆಯಲು ಸಿದ್ಧನಿಲ್ಲದಿದ್ದರೆ ಬೇಟೆಯೆನ್ನುವುದೇ ಇರುವುದಿಲ್ಲ. ಆದುದರಿಂದ ಬೇಟೆಯಲ್ಲಿ ಕೊಲ್ಲುವವನಿಗೂ ಕೊಲ್ಲಲ್ಪಡುವವನಿಗೂ ಯಾವ ವ್ಯತ್ಯಾಸವೂ ಇಲ್ಲ[3]

13117019a ಅತೋ ರಾಜರ್ಷಯಃ ಸರ್ವೇ ಮೃಗಯಾಂ ಯಾಂತಿ ಭಾರತ|

13117019c ಲಿಪ್ಯಂತೇ ನ ಹಿ ದೋಷೇಣ ನ ಚೈತತ್ಪಾತಕಂ ವಿದುಃ||

ಭಾರತ! ಆದುದರಿಂದ ರಾಜರ್ಷಿಗಳೆಲ್ಲರೂ ಬೇಟೆಗೆ ಹೋಗುತ್ತಿದ್ದರು. ಇದರಿಂದ ದೋಷವು ತಗಲುವುದಿಲ್ಲ ಮತ್ತು ಇದು ಪಾಪಕರವಲ್ಲ ಎಂದು ತಿಳಿದಿದ್ದರು.

13117020a ನ ಹಿ ತತ್ಪರಮಂ ಕಿಂ ಚಿದಿಹ ಲೋಕೇ ಪರತ್ರ ಚ|

13117020c ಯತ್ಸರ್ವೇಷ್ವಿಹ ಲೋಕೇಷು[4] ದಯಾ ಕೌರವನಂದನ||

ಕೌರವನಂದನ! ಆದರೆ ಸರ್ವಜೀವಿಗಳ ಮೇಲಿನ ದಯೆಯ ಹೊರತಾದ ಶ್ರೇಷ್ಠ ಧರ್ಮವು ಈ ಲೋಕದಲ್ಲಾಗಲೀ ಪರಲೋಕದಲ್ಲಾಗಲೀ ಬೇರೆ ಯಾವುದೂ ಇಲ್ಲ.

13117021a ನ ಭಯಂ ವಿದ್ಯತೇ ಜಾತು ನರಸ್ಯೇಹ ದಯಾವತಃ|

13117021c ದಯಾವತಾಮಿಮೇ ಲೋಕಾಃ ಪರೇ ಚಾಪಿ ತಪಸ್ವಿನಾಮ್||

ದಯಾವಂತ ಮನುಷ್ಯನಿಗೆ ಯಾವುದೇ ಭಯವೆಂಬುದಿರುವುದಿಲ್ಲ. ದಯಾವಂತರು ಇಹ-ಪರ ಲೋಕಗಳಲ್ಲಿಯೂ ತಪಸ್ವಿಗಳು.

13117022a ಅಭಯಂ ಸರ್ವಭೂತೇಭ್ಯೋ ಯೋ ದದಾತಿ ದಯಾಪರಃ|

13117022c ಅಭಯಂ ತಸ್ಯ ಭೂತಾನಿ ದದತೀತ್ಯನುಶುಶ್ರುಮಃ||

ಸರ್ವಭೂತಗಳಿಗೂ ಅಭಯವನ್ನೀಡುವ ದಯಾಪರನಿಗೆ ಸರ್ವಭೂತಗಳೂ ಅಭಯವನ್ನೀಡುತ್ತವೆ ಎಂದು ಕೇಳಿದ್ದೇವೆ.

13117023a ಕ್ಷತಂ ಚ ಸ್ಖಲಿತಂ ಚೈವ ಪತಿತಂ ಕ್ಲಿಷ್ಟಮಾಹತಮ್[5]|

13117023c ಸರ್ವಭೂತಾನಿ ರಕ್ಷಂತಿ ಸಮೇಷು ವಿಷಮೇಷು ಚ||

ದಯಾವಂತನು ಗಾಯಗೊಂಡಿರಲಿ, ಜಾರಿಬಿದ್ದಿರಲಿ, ಕೆಳಕ್ಕೆ ಬಿದ್ದಿರಲಿ, ಕಷ್ಟದಲ್ಲಿರಲಿ ಅಥವಾ ಪೆಟ್ಟುತಿಂದಿರಲಿ, ಅಥವ ಸಮ-ವಿಷಮ ಪ್ರದೇಶಗಳಲ್ಲಿರಲಿ, ಸರ್ವಭೂತಗಳೂ ಅವನನ್ನು ರಕ್ಷಿಸುತ್ತವೆ.

13117024a ನೈನಂ ವ್ಯಾಲಮೃಗಾ ಘ್ನಂತಿ ನ ಪಿಶಾಚಾ ನ ರಾಕ್ಷಸಾಃ|

13117024c ಮುಚ್ಯಂತೇ ಭಯಕಾಲೇಷು ಮೋಕ್ಷಯಂತಿ ಚ ಯೇ ಪರಾನ್||

ದಯಾವಂತನನ್ನು ವ್ಯಾಲ-ಮೃಗಗಳು ಅಥವಾ ಪಿಶಾಚಿ-ರಾಕ್ಷಸರು ಕೊಲ್ಲುವುದಿಲ್ಲ. ಭಯದ ಸಮಯದಲ್ಲಿಯೂ ಭಯದಿಂದ ಬಿಡುಗಡೆಹೊಂದುತ್ತಾನೆ ಮತ್ತು ಇತರರನ್ನೂ ಭಯದಿಂದ ಬಿಡುಗಡೆಗೊಳಿಸುತ್ತಾನೆ.

13117025a ಪ್ರಾಣದಾನಾತ್ಪರಂ ದಾನಂ ನ ಭೂತಂ ನ ಭವಿಷ್ಯತಿ|

13117025c ನ ಹ್ಯಾತ್ಮನಃ ಪ್ರಿಯತರಃ ಕಶ್ಚಿದಸ್ತೀತಿ ನಿಶ್ಚಿತಮ್||

ಪ್ರಾಣದಾನಕ್ಕಿಂತ ಶ್ರೇಷ್ಠ ದಾನವು ಹಿಂದೆಯೂ ಇರಲಿಲ್ಲ ಮತ್ತು ಮುಂದೆಯೂ ಇರುವುದಿಲ್ಲ. ತನ್ನ ಜೀವಕ್ಕಿಂತಲೂ ಪ್ರಿಯತರವಾದುದು ಬೇರೆ ಯಾವುದೂ ಇಲ್ಲ ಎನ್ನುವುದು ನಿಶ್ಚಿತ.

13117026a ಅನಿಷ್ಟಂ ಸರ್ವಭೂತಾನಾಂ ಮರಣಂ ನಾಮ ಭಾರತ|

13117026c ಮೃತ್ಯುಕಾಲೇ ಹಿ ಭೂತಾನಾಂ ಸದ್ಯೋ ಜಾಯತಿ ವೇಪಥುಃ||

ಭಾರತ! ಸರ್ವಭೂತಗಳಿಗೂ ಮರಣವೆಂಬುದು ಇಷ್ಟವಾಗುವುದಿಲ್ಲ. ಆದುದರಿಂದ ಮೃತ್ಯುಕಾಲದಲ್ಲಿ ಎಲ್ಲ ಪ್ರಾಣಿಗಳಿಗೂ ನಡುಕವುಂಟಾಗುತ್ತದೆ.

13117027a ಜಾತಿಜನ್ಮಜರಾದುಃಖೇ ನಿತ್ಯಂ ಸಂಸಾರಸಾಗರೇ|

13117027c ಜಂತವಃ ಪರಿವರ್ತಂತೇ ಮರಣಾದುದ್ವಿಜಂತಿ ಚ||

ನಿತ್ಯವೂ ಗರ್ಭವಾಸ, ಹುಟ್ಟು, ಮುಪ್ಪು ಮತ್ತು ದುಃಖಗಳಿರುವ ಈ ಸಂಸಾರಸಾಗರಲ್ಲಿ ಜಂತುಗಳು ಸುತ್ತುತ್ತಿರುತ್ತವೆ. ಮರಣವನ್ನು ನೆನೆದೊಡನೆಯೇ ಉದ್ವೇಗಗೊಳ್ಳುತ್ತವೆ.

13117028a ಗರ್ಭವಾಸೇಷು ಪಚ್ಯಂತೇ ಕ್ಷಾರಾಮ್ಲಕಟುಕೈ ರಸೈಃ|

13117028c ಮೂತ್ರಶ್ಲೇಷ್ಮಪುರೀಷಾಣಾಂ ಸ್ಪರ್ಶೈಶ್ಚ ಭೃಶದಾರುಣೈಃ[6]||

ಗರ್ಭವಾಸದಲ್ಲಿ ಜಂತುಗಳು ಮಲ-ಮೂತ್ರ-ಬೆವರುಗಳ ಮಧ್ಯದಲ್ಲಿದ್ದುಕೊಂಡು ಅತ್ಯಂತ ದಾರುಣ ಸ್ಪರ್ಶಗಳಿಂದ ಮತ್ತು ಉಪ್ಪು-ಹುಳಿ-ಖಾರ ಮೊದಲಾದ ರಸಗಳಿಂದ ಬೇಯಿಸಲ್ಪಡುತ್ತವೆ.

13117029a ಜಾತಾಶ್ಚಾಪ್ಯವಶಾಸ್ತತ್ರ ಭಿದ್ಯಮಾನಾಃ ಪುನಃ ಪುನಃ|

13117029c ಪಾಟ್ಯಮಾನಾಶ್ಚ ದೃಶ್ಯಂತೇ ವಿವಶಾ ಮಾಂಸಗೃದ್ಧಿನಃ||

ಮಾಂಸಲೋಲುಪರು ಜೀವಿತವಾಗಿರುವಾಗ ಯಾವ ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೋ ಆಯಾ ಪ್ರಾಣಿಗಳಾಗಿಯೇ ಜನ್ಮತಾಳುತ್ತಾರೆ. ಹಾಗೆ ಪ್ರಾಣಿಗಳಾಗಿ ಪುನಃ ಪುನಃ ತುಂಡರಿಸಲ್ಪಟ್ಟು ಬೇಯಿಸಲ್ಪಡುವುದು ಕಾಣುತ್ತದೆ.

13117030a ಕುಂಭೀಪಾಕೇ ಚ ಪಚ್ಯಂತೇ ತಾಂ ತಾಂ ಯೋನಿಮುಪಾಗತಾಃ|

13117030c ಆಕ್ರಮ್ಯ ಮಾರ್ಯಮಾಣಾಶ್ಚ ಭ್ರಾಮ್ಯಂತೇ ವೈ ಪುನಃ ಪುನಃ||

ಕುಂಭಿಪಾಕವೆಂಬ ನರಕದಲ್ಲಿ ಅವರು ಬೇಯಿಸಲ್ಪಡುತ್ತಾರೆ. ಆಯಾ ಪ್ರಾಣಿಗಳ ಯೋನಿಗಳಲ್ಲಿ ಹುಟ್ಟಿ, ಮಾಂಸಭಕ್ಷಿಗಳಿಂದ ಆಕ್ರಮಿಸಲ್ಪಟ್ಟು ಕೊಲ್ಲಲ್ಪಡುತ್ತಾ ಪುನಃ ಪುನಃ ಸಂಸಾರಚಕ್ರದಲ್ಲಿ ಸುತ್ತುತ್ತಲೇ ಇರುತ್ತಾರೆ.

13117031a ನಾತ್ಮನೋಽಸ್ತಿ ಪ್ರಿಯತರಃ ಪೃಥಿವ್ಯಾಮನುಸೃತ್ಯ ಹ|

13117031c ತಸ್ಮಾತ್ಪ್ರಾಣಿಷು ಸರ್ವೇಷು ದಯಾವಾನಾತ್ಮವಾನ್ಭವೇತ್||

ಆತ್ಮನಿಗಿಂತ ಪ್ರಿಯತರವಾದುದು ಈ ಭೂಮಿಯಲ್ಲಿ ಬೇರೆ ಯಾವುದೂ ಇಲ್ಲ. ಆದುದರಿಂದ ಸರ್ವಪ್ರಾಣಿಗಳಲ್ಲಿಯೂ ದಯಾವಂತನಾಗಿರಬೇಕು.

13117032a ಸರ್ವಮಾಂಸಾನಿ ಯೋ ರಾಜನ್ಯಾವಜ್ಜೀವಂ ನ ಭಕ್ಷಯೇತ್|

13117032c ಸ್ವರ್ಗೇ ಸ ವಿಪುಲಂ ಸ್ಥಾನಂ ಪ್ರಾಪ್ನುಯಾನ್ನಾತ್ರ ಸಂಶಯಃ||

ರಾಜನ್! ಆಜೀವನ ಪರ್ಯಂತ ಯಾವ ಮಾಂಸಗಳನ್ನೂ ತಿನ್ನದಿರುವವನು ಸ್ವರ್ಗದಲ್ಲಿ ವಿಪುಲ ಸ್ಥಾನವನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

13117033a ಯೇ ಭಕ್ಷಯಂತಿ ಮಾಂಸಾನಿ ಭೂತಾನಾಂ ಜೀವಿತೈಷಿಣಾಮ್|

13117033c ಭಕ್ಷ್ಯಂತೇ ತೇಽಪಿ ತೈರ್ಭೂತೈರಿತಿ ಮೇ ನಾಸ್ತಿ ಸಂಶಯಃ||

ಜೀವಿತವಾಗಿರಬೇಕೆಂದು ಬಯಸುವ ಪ್ರಾಣಿಯ ಮಾಂಸವನ್ನು ತಿನ್ನುವವನನ್ನು ಇನ್ನೊಂದು ಜನ್ಮದಲ್ಲಿ ಆ ಪ್ರಾಣಿಗಳೂ ಹಾಗೆಯೇ ತಿನ್ನುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.

13117034a ಮಾಂ ಸ ಭಕ್ಷಯತೇ ಯಸ್ಮಾದ್ಭಕ್ಷಯಿಷ್ಯೇ ತಮಪ್ಯಹಮ್|

13117034c ಏತನ್ಮಾಂಸಸ್ಯ ಮಾಂಸತ್ವಮತೋ ಬುಧ್ಯಸ್ವ ಭಾರತ||

ಭಾರತ! “ನನ್ನನ್ನು ಯಾವಕಾರಣದಿಂದ ಇವನು ಭಕ್ಷಿಸುತ್ತಿರುವನೋ ಅದೇ ಕಾರಣದಿಂದ ನಾನೂ ಕೂಡ ಇವನನ್ನು ಭಕ್ಷಿಸುತ್ತೇನೆ”[7] – ಇದೇ ಮಾಂಸ ಶಬ್ದದ ಮಾಂಸತ್ವ ಎಂದು ತಿಳಿ.

13117035a ಘಾತಕೋ ವಧ್ಯತೇ ನಿತ್ಯಂ ತಥಾ ವಧ್ಯೇತ ಬಂಧಕಃ|

13117035c ಆಕ್ರೋಷ್ಟಾಕ್ರುಶ್ಯತೇ ರಾಜನ್ ದ್ವೇಷ್ಟಾ ದ್ವೇಷ್ಯತ್ವಮಾಪ್ನುತೇ[8]||

ರಾಜನ್! ನಿಂದಿಸುವವನು ನಿಂದೆಗೊಳಗಾಗುವಂತೆ ಮತ್ತು ದ್ವೇಷಿಸುವವನು ದ್ವೇಷಕ್ಕೆ ಗುರಿಯಾಗುವಂತೆ ನಿತ್ಯವೂ ಹಿಂಸಿಸಿ ಕೊಲ್ಲುವವನು ಬಂಧನಕ್ಕೊಳಗಾಗಿ ಕೊಲ್ಲಲ್ಪಡುತ್ತಾನೆ.

13117036a ಯೇನ ಯೇನ ಶರೀರೇಣ ಯದ್ಯತ್ಕರ್ಮ ಕರೋತಿ ಯಃ|

13117036c ತೇನ ತೇನ ಶರೀರೇಣ ತತ್ತತ್ಫಲಮುಪಾಶ್ನುತೇ||

ಯಾವ ಯಾವ ಶರೀರದಲ್ಲಿ ಯಾವ ಕರ್ಮಗಳನ್ನು ಮಾಡುತ್ತಾನೋ ಆಯಾ ಶರೀರಗಳಲ್ಲಿಯೇ ಅವುಗಳ ಫಲವನ್ನು ಅನುಭವಿಸುತ್ತಾನೆ.

13117037a ಅಹಿಂಸಾ ಪರಮೋ ಧರ್ಮಸ್ತಥಾಹಿಂಸಾ ಪರೋ ದಮಃ|

13117037c ಅಹಿಂಸಾ ಪರಮಂ ದಾನಮಹಿಂಸಾ ಪರಮಂ ತಪಃ||

ಅಹಿಂಸೆಯೇ ಪರಮ ಧರ್ಮ. ಅಹಿಂಸೆಯೇ ಪರಮ ಇಂದ್ರಿಯ ನಿಗ್ರಹವು. ಅಹಿಂಸೆಯೇ ಪರಮ ದಾನ ಮತ್ತು ಅಹಿಂಸೆಯೇ ಪರಮ ತಪಸ್ಸು.

13117038a ಅಹಿಂಸಾ ಪರಮೋ ಯಜ್ಞಸ್ತಥಾಹಿಂಸಾ ಪರಂ ಬಲಮ್|

13117038c ಅಹಿಂಸಾ ಪರಮಂ ಮಿತ್ರಮಹಿಂಸಾ ಪರಮಂ ಸುಖಮ್||

13117038e ಅಹಿಂಸಾ ಪರಮಂ ಸತ್ಯಮಹಿಂಸಾ ಪರಮಂ ಶ್ರುತಮ್||

ಅಹಿಂಸೆಯೇ ಪರಮ ಯಜ್ಞ ಮತ್ತು ಅಹಿಂಸೆಯೇ ಪರಮ ಬಲವು. ಅಹಿಂಸೆಯೇ ಪರಮ ಮಿತ್ರನು ಮತ್ತು ಅಹಿಂಸೆಯೇ ಪರಮ ಸುಖವು. ಅಹಿಂಸೆಯೇ ಪರಮ ಸತ್ಯ ಮತ್ತು ಅಹಿಂಸೆಯೇ ಪರಮ ವಿದ್ಯೆಯು.

13117039a ಸರ್ವಯಜ್ಞೇಷು ವಾ ದಾನಂ ಸರ್ವತೀರ್ಥೇಷು ಚಾಪ್ಲುತಮ್|

13117039c ಸರ್ವದಾನಫಲಂ ವಾಪಿ ನೈತತ್ತುಲ್ಯಮಹಿಂಸಯಾ||

ಸರ್ವಯಜ್ಞಗಳೂ, ದಾನಗಳೂ, ಸರ್ವತೀರ್ಥಸ್ನಾನಗಳೂ, ಸರ್ವದಾನಫಲಗಳೂ ಅಹಿಂಸೆಗೆ ಸಮನಾಗಲಾರವು.

13117040a ಅಹಿಂಸ್ರಸ್ಯ ತಪೋಽಕ್ಷಯ್ಯಮಹಿಂಸ್ರೋ ಯಜತೇ ಸದಾ|

13117040c ಅಹಿಂಸ್ರಃ ಸರ್ವಭೂತಾನಾಂ ಯಥಾ ಮಾತಾ ಯಥಾ ಪಿತಾ||

ಅಹಿಂಸಕನ ತಪಸ್ಸು ಅಕ್ಷಯವಾಗುತ್ತದೆ. ಅಹಿಂಸಕನು ಸದಾ ಯಜ್ಞಮಾಡಿದ ಫಲವನ್ನು ಪಡೆಯುತ್ತಾನೆ. ಅಹಿಂಸಕನು ಎಲ್ಲಭೂತಗಳಿಗೂ ತಂದೆ-ತಾಯಿಯರಂತೆ.

13117041a ಏತತ್ಫಲಮಹಿಂಸಾಯಾ ಭೂಯಶ್ಚ ಕುರುಪುಂಗವ|

13117041c ನ ಹಿ ಶಕ್ಯಾ ಗುಣಾ ವಕ್ತುಮಿಹ ವರ್ಷಶತೈರಪಿ||

ಕುರುಪುಂಗವ! ಇದು ಮತ್ತು ಇನ್ನೂ ಬಹಳಷ್ಟು ಅಹಿಂಸೆಯ ಫಲಗಳಾಗಿವೆ. ಇದರ ಗುಣಗಳನ್ನು ನೂರುವರ್ಷ ಹೇಳಿದರೂ ಮುಗಿಸಲು ಸಾಧ್ಯವಿಲ್ಲ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಹಿಂಸಾಫಲಕಥನೇ ಸಪ್ತದಶಾಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅಹಿಂಸಾಫಲಕಥನ ಎನ್ನುವ ನೂರಾಹದಿನೇಳನೇ ಅಧ್ಯಾಯವು.

[1] ನೃಶಂಸಾ ಮಾಂಸಗೃದ್ಧಿನಃ| (ಭಾರತ ದರ್ಶನ).

[2] ಭೂತಂ ಹನ್ಯತಿ ಹಂತಿ ವಾ| (ಭಾರತ ದರ್ಶನ).

[3] ಮೃಗವೂ ಬೇಟೆಗಾರನನ್ನು ಕೊಲ್ಲಬಹುದು ಮತ್ತು ಬೇಟೆಗಾರನೂ ಮೃಗವನ್ನು ಕೊಲ್ಲಬಹುದು.

[4] ಭೂತೇಷು (ಭಾರತ ದರ್ಶನ).

[5] ಕೃಷ್ಟಮಾಹತಮ್| (ಭಾರತ ದರ್ಶನ).

[6] ಪರುಷೈರ್ಭೃಶದಾರುಣೈಃ| (ಭಾರತ ದರ್ಶನ).

[7] ಹೀಗೆ ಸಂಕಲ್ಪಿಸಿ ಸಾಯುವ ಪ್ರಾಣಿಯು ಜನ್ಮಾಂತರದಲ್ಲಿ ತನ್ನ ಸಂಕಲ್ಪವನ್ನು ಈಡೇರಿಸಿಕೊಳ್ಳುತ್ತದೆ. (ಭಾರತ ದರ್ಶನ)

[8] ಘಾತಕೋ ವಧ್ಯತೇ ನಿತ್ಯಂ ತಥಾ ವಧ್ಯತಿ ಭಕ್ಷಿತಾ| ಅಕ್ರೋಷ್ಟಾ ಕ್ರುಧ್ಯತೇ ರಾಜನ್ ತಥಾ ದ್ವೇಷತ್ವಮಾಪ್ನುತೇ|| (ಭಾರತ ದರ್ಶನ).

Comments are closed.