Anushasana Parva: Chapter 115

ಅನುಶಾಸನ ಪರ್ವ: ದಾನಧರ್ಮ ಪರ್ವ

೧೧೫

ಅಹಿಂಸಾಫಲ

ಹಿಂಸೆ ಮತ್ತು ಮಾಂಸಭಕ್ಷಣದ ನಿಂದೆ (1-16).

13115001 ವೈಶಂಪಾಯನ ಉವಾಚ|

13115001a ತತೋ ಯುಧಿಷ್ಠಿರೋ ರಾಜಾ ಶರತಲ್ಪೇ ಪಿತಾಮಹಮ್|

13115001c ಪುನರೇವ ಮಹಾತೇಜಾಃ ಪಪ್ರಚ್ಚ ವದತಾಂ ವರಮ್||

ವೈಶಂಪಾಯನನು ಹೇಳಿದನು: “ಅನಂತರ ಮಹಾತೇಜಸ್ವೀ ರಾಜಾ ಯುಧಿಷ್ಠಿರನು ಶರತಲ್ಪದಲ್ಲಿದ್ದ ಮಾತನಾಡುವವರಲ್ಲಿ ಶ್ರೇಷ್ಠ ಪಿತಾಮಹನಲ್ಲಿ ಪುನಃ ಕೇಳಿದನು:

13115002a ಋಷಯೋ ಬ್ರಾಹ್ಮಣಾ ದೇವಾಃ ಪ್ರಶಂಸಂತಿ ಮಹಾಮತೇ|

13115002c ಅಹಿಂಸಾಲಕ್ಷಣಂ ಧರ್ಮಂ ವೇದಪ್ರಾಮಾಣ್ಯದರ್ಶನಾತ್||

“ಮಹಾಮತೇ! ಋಷಿಗಳು, ಬ್ರಾಹ್ಮಣರು ಮತ್ತು ದೇವತೆಗಳು ವೇದಪ್ರಾಮಾಣ್ಯವನ್ನೇ ಆಧಾರವಾಗಿಟ್ಟುಕೊಂಡು ಧರ್ಮದ ಅಹಿಂಸಾಲಕ್ಷಣವನ್ನು ಪ್ರಶಂಸಿಸುತ್ತಾರೆ.

13115003a ಕರ್ಮಣಾ ಮನುಜಃ ಕುರ್ವನ್ ಹಿಂಸಾಂ ಪಾರ್ಥಿವಸತ್ತಮ|

13115003c ವಾಚಾ ಚ ಮನಸಾ ಚೈವ ಕಥಂ ದುಃಖಾತ್ಪ್ರಮುಚ್ಯತೇ||

ಪಾರ್ಥಿವಸತ್ತಮ! ವಾಚಾ, ಮನಸಾ ಮತ್ತು ಕರ್ಮಗಳಿಂದ ಹಿಂಸೆಯನ್ನು ಮಾಡುವ ಮನುಷ್ಯನು ಆ ದುಃಖದಿಂದ ಹೇಗೆ ಮುಕ್ತನಾಗುತ್ತಾನೆ?”

13115004 ಭೀಷ್ಮ ಉವಾಚ|

13115004a ಚತುರ್ವಿಧೇಯಂ ನಿರ್ದಿಷ್ಟಾ ಅಹಿಂಸಾ ಬ್ರಹ್ಮವಾದಿಭಿಃ|

13115004c ಏಷೈಕತೋಽಪಿ ವಿಭ್ರಷ್ಟಾ ನ ಭವತ್ಯರಿಸೂದನ||

ಭೀಷ್ಮನು ಹೇಳಿದನು: “ಅರಿಸೂದನ! ಬ್ರಹ್ಮವಾದಿಗಳು ನಾಲ್ಕು ವಿಧದ[1] ಅಹಿಂಸೆಯನ್ನು ನಿರ್ದೇಶಿಸಿದ್ದಾರೆ. ಈ ನಾಲ್ಕರಲ್ಲಿ ಒಂದರಿಂದ ಭ್ರಷ್ಟನಾದರೂ ಅದು ಅಹಿಂಸೆಯೆನಿಸಿಕೊಳ್ಳುವುದಿಲ್ಲ.

13115005a ಯಥಾ ಸರ್ವಶ್ಚತುಷ್ಪಾದಸ್ತ್ರಿಭಿಃ ಪಾದೈರ್ನ ತಿಷ್ಠತಿ|

13115005c ತಥೈವೇಯಂ ಮಹೀಪಾಲ ಪ್ರೋಚ್ಯತೇ ಕಾರಣೈಸ್ತ್ರಿಭಿಃ||

ನಾಲ್ಕು ಕಾಲುಗಳಿರುವ ಪಶುವು ಮೂರೇ ಕಾಲುಗಳಿಂದ ಹೇಗೆ ನಿಂತುಕೊಳ್ಳುವುದಿಲ್ಲವೋ ಹಾಗೆ ಮೂರೇ ಪ್ರಕಾರಗಳಿಂದ ಪಾಲಿಸಿದ ಅಹಿಂಸಾವ್ರತವೂ ಪೂರ್ಣವಾಗುವುದಿಲ್ಲ.

13115006a ಯಥಾ ನಾಗಪದೇಽನ್ಯಾನಿ ಪದಾನಿ ಪದಗಾಮಿನಾಮ್|

13115006c ಸರ್ವಾಣ್ಯೇವಾಪಿಧೀಯಂತೇ ಪದಜಾತಾನಿ ಕೌಂಜರೇ|

13115006e ಏವಂ ಲೋಕೇಷ್ವಹಿಂಸಾ ತು ನಿರ್ದಿಷ್ಟಾ ಧರ್ಮತಃ ಪರಾ[2]||

ಆನೆಯು ಹೆಜ್ಜೆಯನ್ನಿಟ್ಟ ಸ್ಥಳದಲ್ಲಿ ಇತರ ಪ್ರಾಣಿಗಳು ಹೆಜ್ಜೆಯನ್ನಿಟ್ಟರೆ ಆನೆಯ ಹೆಜ್ಜೆಯೊಳಗೇ ಇತರ ಪ್ರಾಣಿಗಳ ಹೆಜ್ಜೆಗಳೂ ಐಕ್ಯವಾಗಿ ಹೋಗುವಂತೆ ಇತರ ಎಲ್ಲ ಧರ್ಮಗಳೂ ಅಹಿಂಸೆಯಲ್ಲಿಯೇ ಅಡಕವಾಗಿವೆ ಎಂದು ಹೇಳಿದ್ದಾರೆ.

13115007a ಕರ್ಮಣಾ ಲಿಪ್ಯತೇ ಜಂತುರ್ವಾಚಾ ಚ ಮನಸೈವ ಚ|

13115008a ಪೂರ್ವಂ ತು ಮನಸಾ ತ್ಯಕ್ತ್ವಾ ತಥಾ ವಾಚಾಥ ಕರ್ಮಣಾ[3]|

ಮನಸಾ, ವಾಚಾ ಮತ್ತು ಕರ್ಮಗಳಿಂದ ಜಂತುವು ಹಿಂಸೆಯ ದೋಷದಿಂದ ಲಿಪ್ತವಾಗುತ್ತದೆ. ಮೊದಲು ಮನಸ್ಸಿನಿಂದ ಹಿಂಸೆಯನ್ನು ತ್ಯಜಿಸಬೇಕು. ನಂತರ ಮಾತು ಮತ್ತು ಕರ್ಮಗಳಿಂದ ಹಿಂಸೆಯನ್ನು ತ್ಯಜಿಸಬೇಕು.

13115008c ತ್ರಿಕಾರಣಂ ತು ನಿರ್ದಿಷ್ಟಂ ಶ್ರೂಯತೇ ಬ್ರಹ್ಮವಾದಿಭಿಃ||

13115009a ಮನೋವಾಚಿ ತಥಾಸ್ವಾದೇ ದೋಷಾ ಹ್ಯೇಷು ಪ್ರತಿಷ್ಠಿತಾಃ|

ಬ್ರಹ್ಮವಾದಿಗಳು ಹಿಂಸಾದೋಷಕ್ಕೆ ಪ್ರಧಾನವಾದ ಮೂರು ಕಾರಣಗಳನ್ನು ಹೇಳುತ್ತಾರೆ. ಮಾಂಸವನ್ನು ತಿನ್ನಲು ಬಯಸುವ ಮನಸ್ಸು, ಮಾಂಸವನ್ನು ತಿನ್ನಬೇಕೆಂಬ ಮಾತು, ಹಾಗೂ ಮಾಂಸವನ್ನು ಆಸ್ವಾದಿಸುವುದು – ಇವುಗಳ ಮೇಲೆಯೇ ದೋಷವು ಪ್ರತಿಷ್ಠಿತಗೊಂಡಿದೆ.

13115009c ನ ಭಕ್ಷಯಂತ್ಯತೋ ಮಾಂಸಂ ತಪೋಯುಕ್ತಾ ಮನೀಷಿಣಃ||

13115010a ದೋಷಾಂಸ್ತು ಭಕ್ಷಣೇ ರಾಜನ್ಮಾಂಸಸ್ಯೇಹ ನಿಬೋಧ ಮೇ|

13115010c ಪುತ್ರಮಾಂಸೋಪಮಂ ಜಾನನ್ಖಾದತೇ ಯೋ ವಿಚೇತನಃ[4]||

ಆದುದರಿಂದ ತಪೋಯುಕ್ತ ಮನೀಷಿಣರು ಮಾಂಸವನ್ನು ತಿನ್ನುವುದಿಲ್ಲ. ರಾಜನ್! ತನ್ನ ಮಗನ ಮಾಂಸಕ್ಕೂ ಇತರ ಪ್ರಾಣಿಗಳ ಮಾಂಸಕ್ಕೂ ಯಾವ ವ್ಯತ್ಯಾಸವೂ ಇಲ್ಲವೆಂದು ತಿಳಿದೂ ವಿಚೇತನನಾದವನು ಮಾಡುವ ಮಾಂಸಭಕ್ಷಣದ ದೋಷಗಳನ್ನು ನನ್ನಿಂದ ಕೇಳು.

13115011a ಮಾತಾಪಿತೃಸಮಾಯೋಗೇ ಪುತ್ರತ್ವಂ ಜಾಯತೇ ಯಥಾ|

[5]13115011c ರಸಂ ಚ ಪ್ರತಿ ಜಿಹ್ವಾಯಾಃ ಪ್ರಜ್ಞಾನಂ ಜಾಯತೇ ತಥಾ|

13115011e ತಥಾ ಶಾಸ್ತ್ರೇಷು ನಿಯತಂ ರಾಗೋ ಹ್ಯಾಸ್ವಾದಿತಾದ್ಭವೇತ್||

ಮಾತಾಪಿತೃಗಳ ಸಂಯೋಗದಿಂದ ಪುತ್ರನು ಹೇಗೆ ಹುಟ್ಟುಕೊಳ್ಳುತ್ತಾನೋ ಅದೇ ರೀತಿ ರಸವು ನಾಲಿಗೆಯನ್ನು ಮುಟ್ಟಿದಾಗ ರುಚಿಯ ಜ್ಞಾನವುಂಟಾಗುತ್ತದೆ. ವಿಷಯಗಳ ಆಸ್ವಾದನೆಯಿಂದ ಅವುಗಳಲ್ಲಿಯ ಆಸಕ್ತಿಯು ಹೆಚ್ಚುವುದೆಂದು ಶಾಸ್ತ್ರಗಳು ಹೇಳುತ್ತವೆ.

13115012a ಅಸಂಸ್ಕೃತಾಃ ಸಂಸ್ಕೃತಾಶ್ಚ ಲವಣಾಲವಣಾಸ್ತಥಾ|

13115012c ಪ್ರಜ್ಞಾಯಂತೇ ಯಥಾ ಭಾವಾಸ್ತಥಾ ಚಿತ್ತಂ ನಿರುಧ್ಯತೇ||

ಚೆನ್ನಾಗಿ ತಯಾರಿಸಿಲ್ಲದ ಮತ್ತು ಚೆನ್ನಾಗಿ ತಯಾರಿಸಿದ, ಉಪ್ಪಿಲ್ಲದ ಮತ್ತು ಉಪ್ಪಿರುವ ಮಾಂಸದ ರುಚಿಯನ್ನು ಮನಸ್ಸು ತಿಳಿದುಕೊಂಡಿರುತ್ತದೆ. ಅದರಿಂದಲೇ ಚಿತ್ತವು ಇವುಗಳಿಗೆ ಬಂಧಿತವಾಗಿರುತ್ತದೆ.

13115013a ಭೇರೀಶಂಖಮೃದಂಗಾದ್ಯಾಂಸ್ತಂತ್ರೀಶಬ್ದಾಂಶ್ಚ ಪುಷ್ಕಲಾನ್|

13115013c ನಿಷೇವಿಷ್ಯಂತಿ ವೈ ಮಂದಾ ಮಾಂಸಭಕ್ಷಾಃ ಕಥಂ ನರಾಃ||

ಮೂಢ ಮಾಂಸಭಕ್ಷಕರು ಸ್ವರ್ಗದಲ್ಲಿ ಕೇಳಿಬರುವ ಭೇರೀ-ಮೃದಂಗ ಶಬ್ದಗಳನ್ನೂ ಪುಷ್ಕಲ ವೀಣಾವಾದನಗಳನ್ನೂ ಹೇಗೆ ತಾನೇ ಕೇಳಬಲ್ಲರು?

13115014a ಅಚಿಂತಿತಮನುದ್ದಿಷ್ಟಮಸಂಕಲ್ಪಿತಮೇವ ಚ|

13115014c ರಸಂ ಗೃದ್ಧ್ಯಾಭಿಭೂತಾ ವೈ ಪ್ರಶಂಸಂತಿ ಫಲಾರ್ಥಿನಃ|

13115014e ಪ್ರಶಂಸಾ ಹ್ಯೇವ ಮಾಂಸಸ್ಯ ದೋಷಕರ್ಮಫಲಾನ್ವಿತಾ||

ಮಾಂಸದ ರುಚಿಯ ಮೇಲಿನ ಪ್ರೀತಿಯಿಂದ ಆವಿಷ್ಟರಾಗಿ ಅಭೀಷ್ಟಫಲ ಮಾಂಸದಲ್ಲಿಯೇ ಆಸಕ್ತರಾಗಿ ಅದರ ಗುಣಗಳನ್ನೇ ಪ್ರಶಂಸಿಸುವವರಿಗೆ ಪ್ರಾಪ್ತವಾಗುವ ಅಧೋಗತಿಯನ್ನು ಊಹಿಸಲೂ ಸಾಧ್ಯವಾಗುವುದಿಲ್ಲ. ಮಾಂಸವನ್ನು ಪ್ರಶಂಸೆಮಾಡುವುದೂ ಕೂಡ ದೋಷಕರ್ಮದ ಫಲವನ್ನು ಕೊಡುತ್ತದೆ.

13115015a ಜೀವಿತಂ ಹಿ ಪರಿತ್ಯಜ್ಯ ಬಹವಃ ಸಾಧವೋ ಜನಾಃ|

13115015c ಸ್ವಮಾಂಸೈಃ ಪರಮಾಂಸಾನಿ ಪರಿಪಾಲ್ಯ ದಿವಂ ಗತಾಃ||

ಅನೇಕ ಸತ್ಪುರುಷರು ಬೇರೆಯವರ ಮಾಂಸವನ್ನು ರಕ್ಷಿಸುವ ಸಲುವಾಗಿ ತಮ್ಮ ಮಾಂಸಗಳನ್ನೇ ಕೊಟ್ಟು ಜೀವವನ್ನು ಪರಿತ್ಯಜಿಸಿ ಸ್ವರ್ಗಕ್ಕೆ ಹೋಗಿದ್ದಾರೆ.

13115016a ಏವಮೇಷಾ ಮಹಾರಾಜ ಚತುರ್ಭಿಃ ಕಾರಣೈರ್ವೃತಾ|

13115016c ಅಹಿಂಸಾ ತವ ನಿರ್ದಿಷ್ಟಾ ಸರ್ವಧರ್ಮಾರ್ಥಸಂಹಿತಾ||

ಮಹಾರಾಜ! ಹೀಗೆ ನಾನು ನಾಲ್ಕು ಉಪಾಯಗಳಿಂದ ಸಾಧಿಸಬಹುದಾದ ಸರ್ವಧರ್ಮಾರ್ಥಸಂಹಿತೆ ಅಹಿಂಸೆಯ ಕುರಿತು ಹೇಳಿದ್ದೇನೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಮಾಂಸವರ್ಜನಕಥನೇ ಪಂಚದಶಾಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಮಾಂಸವರ್ಜನಕಥನ ಎನ್ನುವ ನೂರಾಹದಿನೈದನೇ ಅಧ್ಯಾಯವು.

[1] ಮನಸ್ಸು, ಮಾತು ಮತ್ತು ಕರ್ಮಗಳ ಮೂಲಕ ಯಾವುದೇ ಪ್ರಾಣಿಯನ್ನು ಹಿಂಸಿಸದಿರುವುದು ಮತ್ತು ಮಾಂಸವನ್ನು ತಿನ್ನದೇ ಇರುವುದು (ಭಾರತ ದರ್ಶನ).

[2] ಪುರಾ (ಭಾರತ ದರ್ಶನ).

[3] ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ನ ಭಕ್ಷಯತಿ ಯೋ ಮಾಂಸಂ ತ್ರಿವಿಧಂ ಸ ವಿಮುಚ್ಯತೇ| (ಭಾರತ ದರ್ಶನ).

[4] ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಮಾಂಸಂ ಮೋಹಸಮಾಯುಕ್ತಃ ಪುರುಷಃ ಸೋಽಧಮಃ ಸ್ಮೃತಃ| (ಭಾರತ ದರ್ಶನ).

[5] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಹಿಂಸಾಂ ಕೃತ್ವಾವಶಃ ಪಾಪೋ ಭೂಯಿಷ್ಠಂ ಜಾಯತೇ ತಥಾ| (ಭಾರತ ದರ್ಶನ).

Comments are closed.