Anushasana Parva: Chapter 103

ಅನುಶಾಸನ ಪರ್ವ: ದಾನಧರ್ಮ ಪರ್ವ

೧೦೩

ನಹುಷನ ಪತನ, ಶತಕ್ರತುವನ್ನು ಇಂದ್ರಪದವಿಯಲ್ಲಿ ಪುನಃ ಅಭಿಷೇಕಿಸಿದುದು; ದೀಪದಾನದ ಮಹಿಮೆ (೧-೩೭).

13103001 ಯುಧಿಷ್ಠಿರ ಉವಾಚ|

13103001a ಕಥಂ ಸ ವೈ ವಿಪನ್ನಶ್ಚ ಕಥಂ ವೈ ಪಾತಿತೋ ಭುವಿ|

13103001c ಕಥಂ ಚಾನಿಂದ್ರತಾಂ ಪ್ರಾಪ್ತಸ್ತದ್ಭವಾನ್ವಕ್ತುಮರ್ಹತಿ||

ಯುಧಿಷ್ಠಿರನು ಹೇಳಿದನು: “ನಹುಷನು ಹೇಗೆ ವಿಪತ್ತಿಗೊಳಗಾದನು? ಅವನು ಹೇಗೆ ಭೂಮಿಯ ಮೇಲೆ ಬಿದ್ದನು ಮತ್ತು ಅನಿಂದ್ರತ್ವವನ್ನು ಹೊಂದಿದನು? ಇದರ ಕುರಿತು ಹೇಳಬೇಕು.”

13103002 ಭೀಷ್ಮ ಉವಾಚ|

13103002a ಏವಂ ತಯೋಃ ಸಂವದತೋಃ ಕ್ರಿಯಾಸ್ತಸ್ಯ ಮಹಾತ್ಮನಃ|

13103002c ಸರ್ವಾ ಏವಾಭ್ಯವರ್ತಂತ ಯಾ ದಿವ್ಯಾ ಯಾಶ್ಚ ಮಾನುಷಾಃ||

ಭೀಷ್ಮನು ಹೇಳಿದನು: “ಹೀಗೆ ಭೃಗು ಮತ್ತು ಅಗಸ್ತ್ಯರು ಮಾತನಾಡಿಕೊಳ್ಳುತ್ತಿರುವಾಗ ಆ ಮಹಾತ್ಮಾ ನಹುಷನ ಮನೆಯಲ್ಲಿ ದಿವ್ಯ ಮತ್ತು ಮಾನುಷ ಕ್ರಿಯೆಗಳೆಲ್ಲವೂ ನಡೆಯುತ್ತಿದ್ದವು.

13103003a ತಥೈವ ದೀಪದಾನಾನಿ ಸರ್ವೋಪಕರಣಾನಿ ಚ|

13103003c ಬಲಿಕರ್ಮ ಚ ಯಚ್ಚಾನ್ಯದುತ್ಸೇಕಾಶ್ಚ ಪೃಥಗ್ವಿಧಾಃ||

13103003e ಸರ್ವಾಸ್ತಸ್ಯ ಸಮುತ್ಪನ್ನಾ ದೇವರಾಜ್ಞೋ ಮಹಾತ್ಮನಃ|

13103004a ದೇವಲೋಕೇ ನೃಲೋಕೇ ಚ ಸದಾಚಾರಾ ಬುಧೈಃ ಸ್ಮೃತಾಃ||

ದೀಪದಾನ, ಸರ್ವೋಪಕರಣಗಳ ಸಹಿತ ಬಲಿಕರ್ಮ, ಮತ್ತು ವಿವಿಧ ಪ್ರಕಾರದ ಸ್ನಾನ-ಅಭಿಷೇಕ ಮೊದಲಾದವುಗಳು ಹಿಂದಿನಂತೆಯೇ ಪ್ರಾರಂಭಗೊಂಡಿದ್ದವು. ದೇವಲೋಕ ಮತ್ತು ನರಲೋಕಗಳಲ್ಲಿ ವಿದ್ವಾಂಸರು ಸದಾಚಾರಗಳೆಂದು ಹೇಳಿದ್ದ ಎಲ್ಲವೂ ಆ ಮಹಾತ್ಮ ದೇವರಾಜ ನಹುಷನಲ್ಲಿ ನಡೆಯುತ್ತಿದ್ದವು.

13103004c ತೇ ಚೇದ್ಭವಂತಿ ರಾಜೇಂದ್ರ ಋಧ್ಯಂತೇ ಗೃಹಮೇಧಿನಃ|

13103004e ಧೂಪಪ್ರದಾನೈರ್ದೀಪೈಶ್ಚ ನಮಸ್ಕಾರೈಸ್ತಥೈವ ಚ||

ರಾಜೇಂದ್ರ! ಗೃಹಸ್ಥನ ಮನೆಯಲ್ಲಿ ಧೂಪದಾನ, ದೀಪದಾನ ಮತ್ತು ನಮಸ್ಕಾರಗಳೇ ಮೊದಲಾದ ಸದಾಚಾರಗಳ ಪಾಲನೆಯಾಗುತ್ತಿದ್ದರೆ ಆ ಗೃಹಸ್ಥನು ಸರ್ವಥಾ ಉನ್ನತಿಯನ್ನು ಹೊಂದುತ್ತಾನೆ.

13103005a ಯಥಾ ಸಿದ್ಧಸ್ಯ ಚಾನ್ನಸ್ಯ ದ್ವಿಜಾಯಾಗ್ರಂ[1] ಪ್ರದೀಯತೇ|

13103005c ಬಲಯಶ್ಚ ಗೃಹೋದ್ದೇಶೇ ಅತಃ ಪ್ರೀಯಂತಿ ದೇವತಾಃ||

ತಯಾರಾದ ಅಡುಗೆಯನ್ನು ಹೇಗೆ ಮೊದಲು ಬ್ರಾಹ್ಮಣರಿಗೆ ಬಡಿಸುತ್ತಾರೋ ಹಾಗೆ ಮನೆಯಲ್ಲಿ ದೇವತೆಗಳಿಗೆ ಅನ್ನದ ಬಲಿಯನ್ನು ಕೊಡುತ್ತಾರೆ. ಅದರಿಂದ ದೇವತೆಗಳು ಪ್ರೀತರಾಗುತ್ತಾರೆ.

13103006a ಯಥಾ ಚ ಗೃಹಿಣಸ್ತೋಷೋ ಭವೇದ್ವೈ ಬಲಿಕರ್ಮಣಾ|

13103006c ತಥಾ ಶತಗುಣಾ ಪ್ರೀತಿರ್ದೇವತಾನಾಂ ಸ್ಮ ಜಾಯತೇ||

ಬಲಿಕರ್ಮಗಳನ್ನು ಮಾಡುವುದರಿಂದ ಗೃಹಸ್ಥನಿಗೆ ಎಷ್ಟು ಸಂತೋಷವಾಗುತ್ತದೆಯೋ ಅದಕ್ಕೂ ನೂರು ಪಟ್ಟು ಸಂತೋಷವು ದೇವತೆಗಳಿಗಾಗುತ್ತದೆ.

13103007a ಏವಂ ಧೂಪಪ್ರದಾನಂ ಚ ದೀಪದಾನಂ ಚ ಸಾಧವಃ|

13103007c ಪ್ರಶಂಸಂತಿ ನಮಸ್ಕಾರೈರ್ಯುಕ್ತಮಾತ್ಮಗುಣಾವಹಮ್||

ಹೀಗೆ ಸಾಧುಜನರು ತಮಗೆ ಗುಣದಾಯಕವಾದ ದೇವತೆಗಳಿಗೆ ನಮಸ್ಕಾರ ಮತ್ತು ಅವರಿಗೆ ಧೂಪ-ದೀಪಗಳನ್ನು ನೀಡುವುದನ್ನು ಪ್ರಶಂಸಿಸುತ್ತಾರೆ.

13103008a ಸ್ನಾನೇನಾದ್ಭಿಶ್ಚ ಯತ್ಕರ್ಮ ಕ್ರಿಯತೇ ವೈ ವಿಪಶ್ಚಿತಾ|

13103008c ನಮಸ್ಕಾರಪ್ರಯುಕ್ತೇನ ತೇನ ಪ್ರೀಯಂತಿ ದೇವತಾಃ|

[2]13103008e ಗೃಹ್ಯಾಶ್ಚ ದೇವತಾಃ ಸರ್ವಾಃ ಪ್ರೀಯಂತೇ ವಿಧಿನಾರ್ಚಿತಾಃ||

ವಿದ್ವಾಂಸರು ನೀರಿನಿಂದ ಸ್ನಾನ ಮಾಡಿ ದೇವತೆಗಳಿಗೆ ಮಾಡುವ ನಮಸ್ಕಾರ ಪೂರ್ವಕ ತರ್ಪಣಾದಿ ಕರ್ಮಗಳಿಂದ ದೇವತೆಗಳು ಸಂತುಷ್ಟರಾಗುತ್ತಾರೆ. ಮನೆಯಲ್ಲಿ ವಿಧಿಪೂರ್ವಕ ಅರ್ಚಿತರಾದ ದೇವತೆಗಳೆಲ್ಲರೂ ಪ್ರೀತರಾಗುತ್ತಾರೆ.

13103009a ಇತ್ಯೇತಾಂ ಬುದ್ಧಿಮಾಸ್ಥಾಯ ನಹುಷಃ ಸ ನರೇಶ್ವರಃ|

13103009c ಸುರೇಂದ್ರತ್ವಂ ಮಹತ್ ಪ್ರಾಪ್ಯ ಕೃತವಾನೇತದದ್ಭುತಮ್||

ಇದೇ ವಿಚಾರವನ್ನು ತಾಳಿ ನರೇಶ್ವರ ನಹುಷನು ಮಹಾ ಸುರೇಂದ್ರತ್ವವನ್ನು ಪಡೆದುಕೊಂಡು ಆ ಅದ್ಭುತಕರ್ಮವನ್ನು ನಡೆಸಿಕೊಂಡು ಹೋಗುತ್ತಿದ್ದನು.

13103010a ಕಸ್ಯ ಚಿತ್ತ್ವಥ ಕಾಲಸ್ಯ ಭಾಗ್ಯಕ್ಷಯ ಉಪಸ್ಥಿತೇ|

13103010c ಸರ್ವಮೇತದವಜ್ಞಾಯ ನ ಚಕಾರೈತದೀದೃಶಮ್||

ಆದರೆ ಸ್ವಲ್ಪ ಸಮಯದ ನಂತರ ಅವನ ಭಾಗ್ಯಕ್ಷಯದ ಕಾಲವು ಬರಲು ಇವೆಲ್ಲವನ್ನೂ ಅಲ್ಲಗಳೆದು ಈ ತರಹದ ಪಾಪಕರ್ಮವನ್ನು ಮಾಡತೊಡಗಿದನು.

13103011a ತತಃ ಸ ಪರಿಹೀಣೋಽಭೂತ್ಸುರೇಂದ್ರೋ ಬಲಿಕರ್ಮತಃ[3]|

13103011c ಧೂಪದೀಪೋದಕವಿಧಿಂ ನ ಯಥಾವಚ್ಚಕಾರ ಹ|

13103011e ತತೋಽಸ್ಯ ಯಜ್ಞವಿಷಯೋ ರಕ್ಷೋಭಿಃ ಪರ್ಯಬಾಧ್ಯತ||

ಆಗ ಆ ಸುರೇಂದ್ರನು ಬಲಿಕರ್ಮಗಳಿಂದ, ಧೂಪದೀಪೋದಕವಿಧಿಗಳನ್ನು ಮಾಡದೇ ಸತ್ಕರ್ಮಗಳಿಂದ ವಿಹೀನನಾದನು. ಆಗ ಅವನ ಯಜ್ಞಶಾಲೆಗಳಿಗೆ ರಾಕ್ಷಸರೂ ಬಂದು ಬಾಧಿಸತೊಡಗಿದರು.

13103012a ಅಥಾಗಸ್ತ್ಯಮೃಷಿಶ್ರೇಷ್ಠಂ ವಾಹನಾಯಾಜುಹಾವ ಹ|

13103012c ದ್ರುತಂ ಸರಸ್ವತೀಕೂಲಾತ್ ಸ್ಮಯನ್ನಿವ ಮಹಾಬಲಃ||

ಆಗ ಆ ಮಹಾಬಲನು ನಸುನಗುತ್ತಾ ಋಷಿಶ್ರೇಷ್ಠ ಅಗಸ್ತ್ಯನನ್ನು ತನ್ನ ರಥಕ್ಕೆ ಕಟ್ಟಿ ಸರಸ್ವತೀ ತಟಕ್ಕೆ ತನ್ನನ್ನು ಕೊಂಡೊಯ್ಯಲು ಹೇಳಿದನು.

13103013a ತತೋ ಭೃಗುರ್ಮಹಾತೇಜಾ ಮೈತ್ರಾವರುಣಿಮಬ್ರವೀತ್|

13103013c ನಿಮೀಲಯಸ್ವ ನಯನೇ ಜಟಾ ಯಾವದ್ವಿಶಾಮಿ ತೇ||

ಆಗ ಮಹಾತೇಜಸ್ವೀ ಭೃಗುವು ಮೈತ್ರಾವರುಣೀ ಅಗಸ್ತ್ಯನಿಗೆ ಹೇಳಿದನು: “ನಾನು ನಿನ್ನ ಜಟೆಯನ್ನು ಪ್ರವೇಶಿಸುವ ವರೆಗೆ ನಿನ್ನ ಕಣ್ಣುಗಳನ್ನು ಮುಚ್ಚಬೇಡ!”

13103014a ಸ್ಥಾಣುಭೂತಸ್ಯ ತಸ್ಯಾಥ ಜಟಾಃ ಪ್ರಾವಿಶದಚ್ಯುತಃ|

13103014c ಭೃಗುಃ ಸ ಸುಮಹಾತೇಜಾಃ ಪಾತನಾಯ ನೃಪಸ್ಯ ಹ||

ಸ್ಥಾಣುವಿನಂತೆ ನಿಂತಿದ್ದ ಅವನ ಜಟೆಯನ್ನು ಅಚ್ಯುತ ಸುಮಹಾತೇಜಸ್ವೀ ಭೃಗುವು ನೃಪನನ್ನು ಕೆಳಗುರುಳಿಸುವ ಸಲುವಾಗಿ ಪ್ರವೇಶಿಸಿದನು.

13103015a ತತಃ ಸ ದೇವರಾಟ್ ಪ್ರಾಪ್ತಸ್ತಮೃಷಿಂ ವಾಹನಾಯ ವೈ|

13103015c ತತೋಽಗಸ್ತ್ಯಃ ಸುರಪತಿಂ ವಾಕ್ಯಮಾಹ ವಿಶಾಂ ಪತೇ||

ದೇವರಾಜನು ವಾಹನವನ್ನಾಗಿ ಮಾಡಿಕೊಳ್ಳಲು ಆ ಋಷಿಯ ಸಮೀಪ ಬಂದನು. ವಿಶಾಂಪತೇ! ಆಗ ಅಗಸ್ತ್ಯನು ಸುರಪತಿಗೆ ಈ ಮಾತನ್ನಾಡಿದನು:

13103016a ಯೋಜಯಸ್ವೇಂದ್ರ ಮಾಂ ಕ್ಷಿಪ್ರಂ ಕಂ ಚ ದೇಶಂ ವಹಾಮಿ ತೇ|

13103016c ಯತ್ರ ವಕ್ಷ್ಯಸಿ ತತ್ರ ತ್ವಾಂ ನಯಿಷ್ಯಾಮಿ ಸುರಾಧಿಪ||

“ಇಂದ್ರ! ಶೀಘ್ರವಾಗಿ ನನ್ನನ್ನು ಹೂಡು ಮತ್ತು ಎಲ್ಲಿಗೆ ಒಯ್ಯಬೇಕು ಎನ್ನುವುದನ್ನೂ ಹೇಳು. ಸುರಾಧಿಪ! ನೀನು ಎಲ್ಲಿಗೆ ಹೋಗಬೇಕೆಂದು ಹೇಳುತ್ತೀಯೋ ಅಲ್ಲಿಗೆ ನಿನ್ನನ್ನು ಕೊಂಡೊಯ್ಯುತ್ತೇನೆ.”

13103017a ಇತ್ಯುಕ್ತೋ ನಹುಷಸ್ತೇನ ಯೋಜಯಾಮಾಸ ತಂ ಮುನಿಮ್|

13103017c ಭೃಗುಸ್ತಸ್ಯ ಜಟಾಸಂಸ್ಥೋ ಬಭೂವ ಹೃಷಿತೋ ಭೃಶಮ್||

ಅವನು ಹೀಗೆ ಹೇಳಲು ನಹುಷನು ಆ ಮುನಿಯನ್ನು ರಥಕ್ಕೆ ಹೂಡಿದನು. ಆಗ ಅಗಸ್ತ್ಯನ ಜಟೆಯಲ್ಲಿದ್ದ ಭೃಗುವು ಅತ್ಯಂತ ಹರ್ಷಿತನಾದನು.

13103018a ನ ಚಾಪಿ ದರ್ಶನಂ ತಸ್ಯ ಚಕಾರ ಸ ಭೃಗುಸ್ತದಾ|

13103018c ವರದಾನಪ್ರಭಾವಜ್ಞೋ ನಹುಷಸ್ಯ ಮಹಾತ್ಮನಃ||

ಮಹಾತ್ಮ ನಹುಷನ ವರದಾನದ ಪ್ರಭಾವವನ್ನು ಅರಿತಿದ್ದ ಭೃಗುವು ಆಗ ಅವನಿಗೆ ತನ್ನನ್ನು ಕಾಣಿಸಿಕೊಳ್ಳಲಿಲ್ಲ.

13103019a ನ ಚುಕೋಪ ಸ ಚಾಗಸ್ತ್ಯೋ ಯುಕ್ತೋಽಪಿ ನಹುಷೇಣ ವೈ|

13103019c ತಂ ತು ರಾಜಾ ಪ್ರತೋದೇನ ಚೋದಯಾಮಾಸ ಭಾರತ||

ಭಾರತ! ನಹುಷನು ರಥಕ್ಕೆ ಹೂಡಿದರೂ ಅಗಸ್ತ್ಯನು ಕುಪಿತನಾಗಲಿಲ್ಲ. ರಾಜನಾದರೋ ಅವನನ್ನು ಬಾರಿಕೋಲಿನಿಂದ ಹೊಡೆದು ಓಡಿಸಿದನು.

13103020a ನ ಚುಕೋಪ ಸ ಧರ್ಮಾತ್ಮಾ ತತಃ ಪಾದೇನ ದೇವರಾಟ್|

13103020c ಅಗಸ್ತ್ಯಸ್ಯ ತದಾ ಕ್ರುದ್ಧೋ ವಾಮೇನಾಭ್ಯಹನಚ್ಚಿರಃ||

ಆಗಲೂ ಆ ಧರ್ಮಾತ್ಮನು ಕುಪಿತನಾಗಲಿಲ್ಲ. ಆಗ ಕುಪಿತನಾಗಿ ದೇವರಾಜನು ತನ್ನ ಎಡಗಾಲಿನಿಂದ ಅಗಸ್ತ್ಯನ ಶಿರವನ್ನು ಒದೆದನು.

13103021a ತಸ್ಮಿನ್ ಶಿರಸ್ಯಭಿಹತೇ ಸ ಜಟಾಂತರ್ಗತೋ ಭೃಗುಃ|

13103021c ಶಶಾಪ ಬಲವತ್ಕ್ರುದ್ಧೋ ನಹುಷಂ ಪಾಪಚೇತಸಮ್||

ಅವನ ಶಿರದ ಜಟೆಯಲ್ಲಿ ಅಡಗಿದ್ದ ಭೃಗುವು ಅತ್ಯಂತ ಕೃದ್ಧನಾಗಿ ಪಾಪಚೇತಸ ನಹುಷನನ್ನು ಶಪಿಸಿದನು.

13103022 ಭೃಗುರುವಾಚ|

13103022a ಯಸ್ಮಾತ್ಪದಾಹನಃ ಕ್ರೋಧಾಚ್ಚಿರಸೀಮಂ ಮಹಾಮುನಿಮ್|

13103022c ತಸ್ಮಾದಾಶು ಮಹೀಂ ಗಚ್ಚ ಸರ್ಪೋ ಭೂತ್ವಾ ಸುದುರ್ಮತೇ||

ಭೃಗುವು ಹೇಳಿದನು: “ದುರ್ಮತೇ! ನೀನು ಕ್ರೋಧದಿಂದ ಈ ಮಹಾಮುನಿಯ ಶಿರವನ್ನು ಕಾಲಿನಿಂದ ಒದೆದಿದ್ದೀಯೆ. ಆದುದರಿಂದ ಶೀಘ್ರದಲ್ಲಿಯೇ ನೀನು ಸರ್ಪವಾಗಿ ಭೂಮಿಗೆ ಹೊರಟು ಹೋಗು!”

13103023a ಇತ್ಯುಕ್ತಃ ಸ ತದಾ ತೇನ ಸರ್ಪೋ ಭೂತ್ವಾ ಪಪಾತ ಹ|

13103023c ಅದೃಷ್ಟೇನಾಥ ಭೃಗುಣಾ ಭೂತಲೇ ಭರತರ್ಷಭ||

ಭರತರ್ಷಭ! ಅದೃಷ್ಟನಾಗಿದ್ದ ಭೃಗುವು ಹೀಗೆ ಹೇಳಲು ಅದರಿಂದಾಗಿ ನಹುಷನು ಸರ್ಪವಾಗಿ ಭೂಮಿಯ ಮೇಲೆ ಬಿದ್ದನು.

13103024a ಭೃಗುಂ ಹಿ ಯದಿ ಸೋಽದ್ರಾಕ್ಷೀನ್ನಹುಷಃ ಪೃಥಿವೀಪತೇ|

13103024c ನ ಸ ಶಕ್ತೋಽಭವಿಷ್ಯದ್ವೈ ಪಾತನೇ ತಸ್ಯ ತೇಜಸಾ||

ಪೃಥಿವೀಪತೇ! ಒಂದು ವೇಳೆ ನಹುಷನು ಭೃಗುವನ್ನು ನೋಡಿದ್ದರೆ ಭೃಗುವಿಗೆ ತನ್ನ ತೇಜಸ್ಸಿನಿಂದ ಅವನನ್ನು ಕೆಳಗುರುಳಿಸಲು ಶಕ್ಯವಾಗುತ್ತಿರಲಿಲ್ಲ.

13103025a ಸ ತು ತೈಸ್ತೈಃ ಪ್ರದಾನೈಶ್ಚ ತಪೋಭಿರ್ನಿಯಮೈಸ್ತಥಾ|

13103025c ಪತಿತೋಽಪಿ ಮಹಾರಾಜ ಭೂತಲೇ ಸ್ಮೃತಿಮಾನಭೂತ್|

13103025e ಪ್ರಸಾದಯಾಮಾಸ ಭೃಗುಂ ಶಾಪಾಂತೋ ಮೇ ಭವೇದಿತಿ||

ಮಹಾರಾಜ! ನಹುಷನು ಅನೇಕ ಪ್ರಕಾರದ ದಾನಗಳನ್ನು ಮಾಡಿದ್ದನು ಮತ್ತು ತಪ-ನಿಯಮಗಳ ಅನುಷ್ಠಾನವನ್ನು ಮಾಡಿದ್ದನು. ಅದರ ಪ್ರಭಾವದಿಂದ ಅವನು ಭೂಮಿಯ ಮೇಲೆ ಬಿದ್ದರೂ ಪೂರ್ವಜನ್ಮದ ಸ್ಮೃತಿಯು ಅವನಲ್ಲಿತ್ತು. ಅವನು “ನನ್ನ ಶಾಪವು ಅಂತ್ಯವಾಗಲಿ” ಎಂದು ಭೃಗುವನ್ನು ಪ್ರಸನ್ನಗೊಳಿಸತೊಡಗಿದನು.

13103026a ತತೋಽಗಸ್ತ್ಯಃ ಕೃಪಾವಿಷ್ಟಃ ಪ್ರಾಸಾದಯತ ತಂ ಭೃಗುಮ್|

13103026c ಶಾಪಾಂತಾರ್ಥಂ ಮಹಾರಾಜ ಸ ಚ ಪ್ರಾದಾತ್ಕೃಪಾನ್ವಿತಃ||

ಮಹಾರಾಜ! ಆಗ ಕೃಪಾವಿಷ್ಟನಾದ ಅಗಸ್ತ್ಯನು ಅವನ ಶಾಪವನ್ನು ಅಂತ್ಯಗೊಳಿಸಲು ಭೃಗುವನ್ನು ಪ್ರಸನ್ನಗೊಳಿಸಿದನು. ಆಗ ಕೃಪಾನ್ವಿತನಾದ ಭೃಗುವು ಅವನಿಗೆ ಅದನ್ನು ನೀಡಿದನು.

13103027 ಭೃಗುರುವಾಚ|

13103027a ರಾಜಾ ಯುಧಿಷ್ಠಿರೋ ನಾಮ ಭವಿಷ್ಯತಿ ಕುರೂದ್ವಹಃ[4]|

13103027c ಸ ತ್ವಾಂ ಮೋಕ್ಷಯಿತಾ ಶಾಪಾದಿತ್ಯುಕ್ತ್ವಾಂತರಧೀಯತ||

ಭೃಗುವು ಹೇಳಿದನು: “ಕುರೂದ್ವಹ ಯುಧಿಷ್ಠಿರನೆಂಬ ಹೆಸರಿನ ರಾಜನಾಗುತ್ತಾನೆ. ಅವನು ನಿನ್ನನ್ನು ಶಾಪದಿಂದ ಮೋಕ್ಷಗೊಳಿಸುತ್ತಾನೆ.” ಹೀಗೆ ಹೇಳಿ ಅವನು ಅಂತರ್ಧಾನನಾದನು.

13103028a ಅಗಸ್ತ್ಯೋಽಪಿ ಮಹಾತೇಜಾಃ ಕೃತ್ವಾ ಕಾರ್ಯಂ ಶತಕ್ರತೋಃ|

13103028c ಸ್ವಮಾಶ್ರಮಪದಂ ಪ್ರಾಯಾತ್ಪೂಜ್ಯಮಾನೋ ದ್ವಿಜಾತಿಭಿಃ||

ಮಹಾತೇಜಸ್ವೀ ಅಗಸ್ತ್ಯನೂ ಕೂಡ ಶತಕ್ರತುವಿನ ಕಾರ್ಯವನ್ನು ಮಾಡಿ ತನ್ನ ಆಶ್ರಮಪದವನ್ನು ಸೇರಿ ದ್ವಿಜಾತಿಯವರಿಂದ ಪೂಜಿತನಾದನು.

13103029a ನಹುಷೋಽಪಿ ತ್ವಯಾ ರಾಜಂಸ್ತಸ್ಮಾಚ್ಚಾಪಾತ್ಸಮುದ್ಧೃತಃ|

13103029c ಜಗಾಮ ಬ್ರಹ್ಮಸದನಂ ಪಶ್ಯತಸ್ತೇ ಜನಾಧಿಪ||

ರಾಜನ್! ಜನಾಧಿಪ! ನೀನೂ ಕೂಡ ನಹುಷನನ್ನು ಶಾಪದಿಂದ ಮುಕ್ತಗೊಳಿಸಿದೆ. ನೀನು ನೋಡುತ್ತಿದ್ದಂತೆಯೇ ಅವನು ಬ್ರಹ್ಮಸದನಕ್ಕೆ ಹೋದನು.

13103030a ತದಾ ತು ಪಾತಯಿತ್ವಾ ತಂ ನಹುಷಂ ಭೂತಲೇ ಭೃಗುಃ|

13103030c ಜಗಾಮ ಬ್ರಹ್ಮಸದನಂ ಬ್ರಹ್ಮಣೇ ಚ ನ್ಯವೇದಯತ್||

ನಹುಷನನ್ನು ಭೂತಲಕ್ಕೆ ಉರುಳಿಸಿ ಭೃಗುವು ಬ್ರಹ್ಮಸದನಕ್ಕೆ ಹೋಗಿ ಬ್ರಹ್ಮನಿಗೆ ಇದನ್ನು ನಿವೇದಿಸಿದನು.

13103031a ತತಃ ಶಕ್ರಂ ಸಮಾನಾಯ್ಯ ದೇವಾನಾಹ ಪಿತಾಮಹಃ|

13103031c ವರದಾನಾನ್ಮಮ ಸುರಾ ನಹುಷೋ ರಾಜ್ಯಮಾಪ್ತವಾನ್|

13103031e ಸ ಚಾಗಸ್ತ್ಯೇನ ಕ್ರುದ್ಧೇನ ಭ್ರಂಶಿತೋ ಭೂತಲಂ ಗತಃ||

ಆಗ ಪಿತಾಮಹನು ಶಕ್ರ ಮತ್ತು ದೇವತೆಗಳನ್ನು ಕರೆದು ಹೇಳಿದನು: “ಸುರರೇ! ನನ್ನ ವರದಾನದಿಂದ ನಹುಷನು ದೇವರಾಜ್ಯವನ್ನು ಪಡೆದುಕೊಂಡನು. ಆದರೆ ಕುಪಿತನಾದ ಅಗಸ್ತ್ಯನಿಂದ ಅವನು ಸ್ವರ್ಗದಿಂದ ಭ್ರಷ್ಟನಾಗಿ ಭೂತಲಕ್ಕೆ ಹೊರಟುಹೋದನು.

13103032a ನ ಚ ಶಕ್ಯಂ ವಿನಾ ರಾಜ್ಞಾ ಸುರಾ ವರ್ತಯಿತುಂ ಕ್ವ ಚಿತ್|

13103032c ತಸ್ಮಾದಯಂ ಪುನಃ ಶಕ್ರೋ ದೇವರಾಜ್ಯೇಽಭಿಷಿಚ್ಯತಾಮ್||

ಸುರರೇ! ರಾಜನಿಲ್ಲದೇ ಇರುವುದು ಶಕ್ಯವಿಲ್ಲ. ಆದುದರಿಂದ ಪುನಃ ಈ ಶಕ್ರನನ್ನು ದೇವರಾಜ್ಯದಲ್ಲಿ ಅಭಿಷೇಕಿಸಿರಿ.”

13103033a ಏವಂ ಸಂಭಾಷಮಾಣಂ ತು ದೇವಾಃ ಪಾರ್ಥ ಪಿತಾಮಹಮ್|

13103033c ಏವಮಸ್ತ್ವಿತಿ ಸಂಹೃಷ್ಟಾಃ ಪ್ರತ್ಯೂಚುಸ್ತೇ ಪಿತಾಮಹಮ್||

ಪಾರ್ಥ! ಪಿತಾಮಹನ ಈ ಮಾತನ್ನು ಕೇಳಿ ದೇವತೆಗಳು ಸಂಹೃಷ್ಟರಾಗಿ ಹಾಗೆಯೇ ಆಗಲೆಂದು ಪಿತಾಮಹನಿಗೆ ಹೇಳಿದರು.

13103034a ಸೋಽಭಿಷಿಕ್ತೋ ಭಗವತಾ ದೇವರಾಜ್ಯೇನ ವಾಸವಃ|

13103034c ಬ್ರಹ್ಮಣಾ ರಾಜಶಾರ್ದೂಲ ಯಥಾಪೂರ್ವಂ ವ್ಯರೋಚತ||

ರಾಜಶಾರ್ದೂಲ! ಭಗವಂತ ಬ್ರಹ್ಮನಿಂದ ದೇವರಾಜ್ಯದಲ್ಲಿ ಅಭಿಷಿಕ್ತನಾದ ವಾಸವನು ಮೊದಲಿನಂತೆಯೇ ವಿರಾಜಿಸಿದನು.

13103035a ಏವಮೇತತ್ಪುರಾವೃತ್ತಂ ನಹುಷಸ್ಯ ವ್ಯತಿಕ್ರಮಾತ್|

13103035c ಸ ಚ ತೈರೇವ ಸಂಸಿದ್ಧೋ ನಹುಷಃ ಕರ್ಮಭಿಃ ಪುನಃ||

ಹೀಗೆ ಪೂರ್ವಕಾಲದಲ್ಲಿ ನಹುಷನ ಅಪರಾಧದಿಂದ ಈ ಘಟನೆಯು ನಡೆಯಿತು ಮತ್ತು ನಹುಷನು ಪುನಃ ಪುನಃ ಮಾಡಿದ್ದ ದೀಪದಾನಾದಿ ಪುಣ್ಯಕರ್ಮಗಳಿಂದ ಸಿದ್ಧಿಯನ್ನು ಪಡೆದುಕೊಂಡನು.

13103036a ತಸ್ಮಾದ್ದೀಪಾಃ ಪ್ರದಾತವ್ಯಾಃ ಸಾಯಂ ವೈ ಗೃಹಮೇಧಿಭಿಃ|

13103036c ದಿವ್ಯಂ ಚಕ್ಷುರವಾಪ್ನೋತಿ ಪ್ರೇತ್ಯ ದೀಪಪ್ರದಾಯಕಃ|

13103036e ಪೂರ್ಣಚಂದ್ರಪ್ರತೀಕಾಶಾ ದೀಪದಾಶ್ಚ ಭವಂತ್ಯುತ||

ಆದುದರಿಂದ ಗೃಹಸ್ಥನು ಸಾಯಂಕಾಲ ಅವಶ್ಯವಾಗಿ ದೀಪದಾನವನ್ನು ಮಾಡಬೇಕು. ದೀಪದಾನಮಾಡುವವನು ಮರಣಾನಂತರ ದಿವ್ಯಚಕ್ಷುಗಳನ್ನು ಪಡೆದುಕೊಳ್ಳುತ್ತಾನೆ. ದೀಪದಾನಿಯು ಪೂರ್ಣಚಂದ್ರನ ಪ್ರಕಾಶದಂತೆ ಕಾಂತಿಮತನಾಗುತ್ತಾನೆ.

13103037a ಯಾವದಕ್ಷಿನಿಮೇಷಾಣಿ ಜ್ವಲತೇ ತಾವತೀಃ ಸಮಾಃ|

13103037c ರೂಪವಾನ್ ಧನವಾಂಶ್ಚಾಪಿ[5] ನರೋ ಭವತಿ ದೀಪದಃ||

ಎಷ್ಟು ಕಣ್ಣುರೆಪ್ಪೆಗಳು ಬಡಿಯುವವರೆಗೆ ದೀಪವು ಉರಿಯುತ್ತಿರುವುದೋ ಅಷ್ಟು ವರ್ಷಗಳ ವರೆಗೆ ದೀಪದಾನ ಮಾಡಿದ ಮನುಷ್ಯನು ರೂಪವಂತನೂ ಧನವಾನನೂ ಆಗಿರುತ್ತಾನೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಗಸ್ತ್ಯಭೃಗುಸಂವಾದೋ ನಾಮ ತ್ರ್ಯಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅಗಸ್ತ್ಯಭೃಗುಸಂವಾದ ಎನ್ನುವ ನೂರಾಮೂರನೇ ಅಧ್ಯಾಯವು.

[1] ಗ್ರಹಾಯಾಗ್ರಂ (ಗೀತಾ ಪ್ರೆಸ್).

[2] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಪಿತರಶ್ಚ ಮಹಾಭಾಗಾ ಋಷಯಶ್ಚ ತಪೋಧನಾಃ| (ಗೀತಾ ಪ್ರೆಸ್).

[3] ಬಲದರ್ಪತಃ (ಗೀತಾ ಪ್ರೆಸ್).

[4] ಕುಲೋದ್ವಹಃ (ಗೀತಾ ಪ್ರೆಸ್).

[5] ಬಲವಾಂಶ್ಚಾಪಿ (ಗೀತಾ ಪ್ರೆಸ್).

Comments are closed.