Anushasana Parva: Chapter 104

ಅನುಶಾಸನ ಪರ್ವ: ದಾನಧರ್ಮ ಪರ್ವ

೧೦೪

ಬ್ರಹ್ಮಸ್ವಹರಣ

ಬ್ರಾಹ್ಮಣನ ಸ್ವತ್ತನ್ನು ಅಪಹರಿಸಿದರೆ ಪ್ರಾಪ್ತವಾಗುವ ದೋಷಗಳ ವಿಷಯದಲ್ಲಿ ಕ್ಷತ್ರಿಯ ಮತ್ತು ಚಾಂಡಾಲರ ಸಂವಾದ; ಬ್ರಾಹ್ಮಣನ ಸ್ವತ್ತನ್ನು ರಕ್ಷಿಸಲು ಪ್ರಾಣತ್ಯಾಗಮಾಡಿದ ಚಾಂಡಾಲನಿಗೆ ಮೋಕ್ಷಪ್ರಾಪ್ತಿ (೧-೨೯).

13104001 ಯುಧಿಷ್ಠಿರ ಉವಾಚ|

13104001a ಬ್ರಾಹ್ಮಣಸ್ವಾನಿ ಯೇ ಮಂದಾ ಹರಂತಿ ಭರತರ್ಷಭ|

13104001c ನೃಶಂಸಕಾರಿಣೋ ಮೂಢಾಃ ಕ್ವ ತೇ ಗಚ್ಚಂತಿ ಮಾನವಾಃ||

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಬ್ರಾಹ್ಮಣರ ಸ್ವತ್ತನ್ನು ಅಪಹರಿಸುವ ಮಂದಬುದ್ಧಿ, ಕ್ರೂರಕರ್ಮಿ ಮೂಢ ಮಾನವರು ಯಾವ ಗತಿಯನ್ನು ಹೊಂದುತ್ತಾರೆ?”

13104002 ಭೀಷ್ಮ ಉವಾಚ|

[1]13104002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13104002c ಚಂಡಾಲಸ್ಯ ಚ ಸಂವಾದಂ ಕ್ಷತ್ರಬಂಧೋಶ್ಚ ಭಾರತ||

ಭೀಷ್ಮನು ಹೇಳಿದನು: “ಭಾರತ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಕ್ಷತ್ರಬಂಧು ಮತ್ತು ಚಂಡಾಲರ ಸಂವಾದವನ್ನು ಉದಾಹರಿಸುತ್ತಾರೆ.

13104003 ರಾಜನ್ಯ ಉವಾಚ|

13104003a ವೃದ್ಧರೂಪೋಽಸಿ ಚಂಡಾಲ ಬಾಲವಚ್ಚ ವಿಚೇಷ್ಟಸೇ|

13104003c ಶ್ವಖರಾಣಾಂ ರಜಃಸೇವೀ ಕಸ್ಮಾದುದ್ವಿಜಸೇ ಗವಾಮ್||

ಕ್ಷತ್ರಿಯ[2]ನು ಹೇಳಿದನು: “ಚಂಡಾಲ! ನೀನು ವೃದ್ಧನಾಗಿ ಕಾಣುತ್ತಿದ್ದರೂ ಬಾಲಕನಂತೆ ವರ್ತಿಸುತ್ತಿರುವೆ. ನಾಯಿ ಮತ್ತು ಕತ್ತೆಗಳ ಧೂಳನ್ನು ಸೇವಿಸುವ ನೀನು ಈ ಗೋವುಗಳ ಧೂಳಿನಿಂದ ಏಕೆ ಉದ್ವಿಗ್ನನಾಗುತ್ತಿರುವೆ?

13104004a ಸಾಧುಭಿರ್ಗರ್ಹಿತಂ ಕರ್ಮ ಚಂಡಾಲಸ್ಯ ವಿಧೀಯತೇ|

13104004c ಕಸ್ಮಾದ್ಗೋರಜಸಾ ಧ್ವಸ್ತಮಪಾಂ ಕುಂಡೇ ನಿಷಿಂಚಸಿ||

ಚಂಡಾಲನಿಗೆ ವಿಹಿತವಾಗಿರುವ ಕರ್ಮಗಳನ್ನು ಸಾಧುಗಳು ನಿಂದಿಸುತ್ತಾರೆ. ಗೋವಿನ ಧೂಳಿನಿಂದ ಮುಸುಕಿಕೊಂಡು ನೀನು ಏಕೆ ನೀರಿನ ಕುಂಡದಲ್ಲಿ ಮುಳುಗುತ್ತಿದ್ದೀಯೆ?”

13104005 ಚಂಡಾಲ ಉವಾಚ|

13104005a ಬ್ರಾಹ್ಮಣಸ್ಯ ಗವಾಂ ರಾಜನ್ ಹ್ರಿಯತೀನಾಂ ರಜಃ ಪುರಾ|

13104005c ಸೋಮಮುದ್ಧ್ವಂಸಯಾಮಾಸ ತಂ ಸೋಮಂ ಯೇಽಪಿಬನ್ದ್ವಿಜಾಃ||

13104006a ದೀಕ್ಷಿತಶ್ಚ ಸ ರಾಜಾಪಿ ಕ್ಷಿಪ್ರಂ ನರಕಮಾವಿಶತ್|

13104006c ಸಹ ತೈರ್ಯಾಜಕೈಃ ಸರ್ವೈರ್ಬ್ರಹ್ಮಸ್ವಮುಪಜೀವ್ಯ ತತ್||

ಚಂಡಾಲನು ಹೇಳಿದನು: “ರಾಜನ್! ಹಿಂದೆ ಬ್ರಾಹ್ಮಣನೋರ್ವನ ಗೋವುಗಳನ್ನು ಅಪಹರಿಸಲಾಗಿತ್ತು. ಆ ಗೋವುಗಳನ್ನು ಕದ್ದು ಓಡಿಸಿಕೊಂಡು ಹೋಗುತ್ತಿರುವಾಗ ಅವುಗಳ ಹಾಲಿನ ಕಣಗಳಿಂದ ಮಿಶ್ರಿತವಾದ ಗೋಧೂಳಿಯು ಸೋಮರಸದಲ್ಲಿ ಬಿದ್ದು ಅದನ್ನು ದೂಷಿತಗೊಳಿಸಿತ್ತು. ಆ ಸೋಮರಸವನ್ನು ಕುಡಿದ ಬ್ರಾಹ್ಮಣರು ಮತ್ತು ಆ ಯಜ್ಞದ ದೀಕ್ಷಿತನಾಗಿದ್ದ ರಾಜ ಎಲ್ಲರೂ ಶೀಘ್ರದಲ್ಲಿಯೇ ನರಕದಲ್ಲಿ ಬಿದ್ದರು. ಆ ಯಜ್ಞದ ಯಾಜಕರೆಲ್ಲರೂ ಬ್ರಾಹ್ಮಣರ ಸ್ವತ್ತನ್ನು ಉಪಭೋಗಿಸಿ ನರಕಕ್ಕೆ ಹೋದರು.

13104007a ಯೇಽಪಿ ತತ್ರಾಪಿಬನ್ ಕ್ಷೀರಂ ಘೃತಂ ದಧಿ ಚ ಮಾನವಾಃ|

13104007c ಬ್ರಾಹ್ಮಣಾಃ ಸಹರಾಜನ್ಯಾಃ ಸರ್ವೇ ನರಕಮಾವಿಶನ್||

ಗೋವುಗಳನ್ನು ಅಪಹರಿಸಿ ತಂದ ಆ ರಾಜ್ಯದಲ್ಲಿ ಯಾರೆಲ್ಲ ಆ ಹಸುಗಳ ಹಾಲು, ತುಪ್ಪ ಮತ್ತು ಮೊಸರನ್ನು ಸೇವಿಸಿದರೋ ಆ ಎಲ್ಲ ಮಾನವರೂ ಬ್ರಾಹ್ಮಣರೂ ರಾಜನೊಂದಿಗೆ ನರಕಕ್ಕೆ ಹೋದರು.

13104008a ಜಘ್ನುಸ್ತಾಃ ಪಯಸಾ ಪುತ್ರಾಂಸ್ತಥಾ ಪೌತ್ರಾನ್ ವಿಧುನ್ವತೀಃ|

13104008c ಪಶೂನವೇಕ್ಷಮಾಣಾಶ್ಚ ಸಾಧುವೃತ್ತೇನ ದಂಪತೀ||

ಹಾಲಿನೊಂದಿಗೆ ಆ ಗೋವುಗಳು ತಮ್ಮ ಶರೀರಗಳನ್ನು ಕೊಡವಿದಾಗ ಪುತ್ರ ಪೌತ್ರರು ತೀರಿಕೊಂಡರು. ರಾಜ ದಂಪತಿಗಳು ಸದಾಚಾರಿಗಳಾಗಿದ್ದರೂ ಆ ಪಶುಗಳನ್ನು ನೋಡಿದುದರಿಂದ ಅವರೂ ನಾಶಹೊಂದಿದರು.

13104009a ಅಹಂ ತತ್ರಾವಸಂ ರಾಜನ್ ಬ್ರಹ್ಮಚಾರೀ ಜಿತೇಂದ್ರಿಯಃ|

13104009c ತಾಸಾಂ ಮೇ ರಜಸಾ ಧ್ವಸ್ತಂ ಭೈಕ್ಷಮಾಸೀನ್ನರಾಧಿಪ||

ರಾಜನ್! ನರಾಧಿಪ! ನಾನು ಅಲ್ಲಿ ಜಿತೇಂದ್ರಿಯ ಬ್ರಹ್ಮಚಾರಿಯಾಗಿ ವಾಸಿಸುತ್ತಿದ್ದೆ. ನನ್ನ ಅನ್ನದಲ್ಲಿ ಗೋವುಗಳ ಆ ಧೂಳು ಬಿದ್ದಿತ್ತು.

13104010a ಚಂಡಾಲೋಽಹಂ ತತೋ ರಾಜನ್ಭುಕ್ತ್ವಾ ತದಭವಂ ಮೃತಃ|

13104010c ಬ್ರಹ್ಮಸ್ವಹಾರೀ ಚ ನೃಪಃ ಸೋಽಪ್ರತಿಷ್ಠಾಂ ಗತಿಂ ಯಯೌ||

ರಾಜನ್! ಅದನ್ನು ತಿಂದ ನಾನು, ಮರಣಾನಂತರ, ಚಂಡಾಲನಾಗಿದ್ದೇನೆ. ಬ್ರಾಹ್ಮಣನ ಸ್ವತ್ತನ್ನು ಅಪಹರಿಸಿದ್ದ ಆ ನೃಪನು ಅಪ್ರತಿಷ್ಠ ಗತಿಯನ್ನು ಹೊಂದಿದನು.

13104011a ತಸ್ಮಾದ್ಧರೇನ್ನ ವಿಪ್ರಸ್ವಂ ಕದಾ ಚಿದಪಿ ಕಿಂ ಚನ|

13104011c ಬ್ರಹ್ಮಸ್ವರಜಸಾ ಧ್ವಸ್ತಂ ಭುಕ್ತ್ವಾ ಮಾಂ ಪಶ್ಯ ಯಾದೃಶಮ್||

ಆದುದರಿಂದ ಎಂದೂ ಯಾವ ಕಾರಣಕ್ಕೂ ವಿಪ್ರರ ಸ್ವತ್ತನ್ನು ಅಪಹರಿಸಬಾರದು. ನಾನು ಕೇವಲ ಬ್ರಾಹ್ಮಣನ ಗೋವುಗಳ ಧೂಳು ಸೋಂಕಿದ್ದ ಅನ್ನವನ್ನು ಉಂಡಿದ್ದೆ. ನನ್ನ ಈಗಿನ ಪರಿಸ್ಥಿತಿಯನ್ನು ನೋಡು.

13104012a ತಸ್ಮಾತ್ಸೋಮೋಽಪ್ಯವಿಕ್ರೇಯಃ ಪುರುಷೇಣ ವಿಪಶ್ಚಿತಾ|

13104012c ವಿಕ್ರಯಂ ಹೀಹ ಸೋಮಸ್ಯ ಗರ್ಹಯಂತಿ ಮನೀಷಿಣಃ||

ಆದುದರಿಂದಲೇ ವಿದ್ವಾಂಸ ಪುರುಷನು ಸೋಮವನ್ನು ಮಾರಬಾರದು. ಮನೀಷೀಣರು ಸೋಮವನ್ನು ಮಾರುವವನನ್ನು ನಿಂದಿಸುತ್ತಾರೆ.

13104013a ಯೇ ಚೈನಂ ಕ್ರೀಣತೇ ರಾಜನ್ಯೇ ಚ ವಿಕ್ರೀಣತೇ ಜನಾಃ|

13104013c ತೇ ತು ವೈವಸ್ವತಂ ಪ್ರಾಪ್ಯ ರೌರವಂ ಯಾಂತಿ ಸರ್ವಶಃ||

ರಾಜನ್! ವೈವಸ್ವತ ಪುರಿಗೆ ಹೋದಾಗ ಸೋಮವನ್ನು ಮಾರಿದ ಮತ್ತು ಕೊಂಡುಕೊಂಡ ಜನರೆಲ್ಲರೂ ರೌರವ ನರಕಕ್ಕೆ ಹೋಗುತ್ತಾರೆ.

13104014a ಸೋಮಂ ತು ರಜಸಾ ಧ್ವಸ್ತಂ ವಿಕ್ರೀಯಾದ್ಬುದ್ಧಿಪೂರ್ವಕಮ್[3]|

13104014c ಶ್ರೋತ್ರಿಯೋ ವಾರ್ಧುಷೀ ಭೂತ್ವಾ ಚಿರರಾತ್ರಾಯ ನಶ್ಯತಿ|

13104014e ನರಕಂ ತ್ರಿಂಶತಂ ಪ್ರಾಪ್ಯ ಶ್ವವಿಷ್ಠಾಮುಪಜೀವತಿ[4]||

ಶ್ರೋತ್ರಿಯೂ ವೇದವಿದನೂ ಆಗಿದ್ದರೂ ಗೋಧೂಳಿಯು ತಾಗಿದ್ದ ಸೋಮವನ್ನು ಬುದ್ಧಿಪೂರ್ವಕವಾಗಿ ಮಾರಾಟಮಾಡಿದರೆ ತಕ್ಷಣವೇ ಅವನು ನಾಶವಾಗುತ್ತಾನೆ. ಅವನು ಮುನ್ನೂರು[5] ನರಕಗಳಲ್ಲಿ ಬಿದ್ದು ನಾಯಿಯ ಮಲವನ್ನು ತಿನ್ನುವ ಕೀಟವಾಗುತ್ತಾನೆ.

13104015a ಶ್ವಚರ್ಯಾಮತಿಮಾನಂ ಚ ಸಖಿದಾರೇಷು ವಿಪ್ಲವಮ್|

13104015c ತುಲಯಾಧಾರಯದ್ಧರ್ಮೋ ಹ್ಯತಿಮಾನೋಽತಿರಿಚ್ಯತೇ||

ನಾಯಿಗಳ ಜೊತೆ ವಾಸಿಸುವುದು, ಅತಿ ಅಭಿಮಾನ ಮತ್ತು ಮಿತ್ರನ ಪತ್ನಿಯೊಡನೆ ವ್ಯಭಿಚಾರ – ಈ ಮೂರನ್ನೂ ತುಲನೆ ಮಾಡಿದರೆ ಅಭಿಮಾನದ ಪಾಪವೇ ಹೆಚ್ಚು ಭಾರವಾದದ್ದಾಗುತ್ತದೆ.

13104016a ಶ್ವಾನಂ ವೈ ಪಾಪಿನಂ ಪಶ್ಯ ವಿವರ್ಣಂ ಹರಿಣಂ ಕೃಶಮ್|

13104016c ಅತಿಮಾನೇನ ಭೂತಾನಾಮಿಮಾಂ ಗತಿಮುಪಾಗತಮ್||

ಬಣ್ಣ ಕಳೆದುಕೊಂಡು ಬಿಳಿಚಿಕೊಂಡಿರುವ ಮತ್ತು ಬಡಕಲಾಗಿರುವ ಈ ಪಾಪಿ ನಾಯಿಯನ್ನು ನೋಡು. ಅತಿ ಅಭಿಮಾನದಿಂದಿರುವ ಜೀವಿಗಳಿಗೆ ಈ ಗತಿಯುಂಟಾಗುತ್ತದೆ.

13104017a ಅಹಂ ವೈ ವಿಪುಲೇ ಜಾತಃ ಕುಲೇ ಧನಸಮನ್ವಿತೇ|

13104017c ಅನ್ಯಸ್ಮಿನ್ ಜನ್ಮನಿ ವಿಭೋ ಜ್ಞಾನವಿಜ್ಞಾನಪಾರಗಃ||

ಅಯ್ಯಾ! ವಿಭೋ! ಅನ್ಯ ಜನ್ಮದಲ್ಲಿ ನಾನೂ ಕೂಡ ಧನಸಂಪನ್ನ ಮಹಾನ್ ಕುಲದಲ್ಲಿ ಹುಟ್ಟಿದ್ದೆ. ಜ್ಞಾನವಿಜ್ಞಾನ ಪಾರಂಗತನಾಗಿದ್ದೆ.

13104018a ಅಭವಂ ತತ್ರ ಜಾನಾನೋ ಹ್ಯೇತಾನ್ದೋಷಾನ್ಮದಾತ್ತದಾ|

13104018c ಸಂರಬ್ಧ ಏವ ಭೂತಾನಾಂ ಪೃಷ್ಠಮಾಂಸಾನ್ಯಭಕ್ಷಯಮ್||

ಈ ದೋಷಗಳ ಕುರಿತು ತಿಳಿದಿದ್ದರೂ ನಾನು ಅಭಿಮಾನವಶನಾಗಿ ಪ್ರಾಣಿಗಳ ಮೇಲೆ ಕುಪಿತನಾಗುತ್ತಿದ್ದೆ ಮತ್ತು ಪಶುಗಳ ಪೃಷ್ಠಭಾಗದ ಮಾಂಸವನ್ನು ತಿನ್ನುತ್ತಿದ್ದೆ.

13104019a ಸೋಽಹಂ ತೇನ ಚ ವೃತ್ತೇನ ಭೋಜನೇನ ಚ ತೇನ ವೈ|

13104019c ಇಮಾಮವಸ್ಥಾಂ ಸಂಪ್ರಾಪ್ತಃ ಪಶ್ಯ ಕಾಲಸ್ಯ ಪರ್ಯಯಮ್||

ಅದೇ ದುರಾಚಾರ ಮತ್ತು ಅಭಕ್ಷ್ಯ ಭಕ್ಷ್ಯಣದಿಂದ ನಾನು ಈ ಅವಸ್ಥೆಯನ್ನು ಪಡೆದುಕೊಂಡಿದ್ದೇನೆ. ಕಾಲದ ಈ ತಿರುವು-ಮುರುವನ್ನಾದರೂ ನೋಡು.

13104020a ಆದೀಪ್ತಮಿವ ಚೈಲಾಂತಂ ಭ್ರಮರೈರಿವ ಚಾರ್ದಿತಮ್|

13104020c ಧಾವಮಾನಂ ಸುಸಂರಬ್ಧಂ ಪಶ್ಯ ಮಾಂ ರಜಸಾನ್ವಿತಮ್||

ಬಟ್ಟೆಗೆ ಬೆಂಕಿಯು ಹೊತ್ತಿಕೊಂಡವನಂತೆ ಅಥವಾ ಜೇನುಹುಳುಗಳಿಂದ ಮುತ್ತಲ್ಪಟ್ಟವನಂತೆ ಉದ್ವೇಗದಿಂದ ಧೂಳುತುಂಬಿಕೊಂಡು ಓಡುತ್ತಿರುವ ನನ್ನನ್ನು ನೋಡು. 

13104021a ಸ್ವಾಧ್ಯಾಯೈಸ್ತು ಮಹತ್ಪಾಪಂ ತರಂತಿ ಗೃಹಮೇಧಿನಃ|

13104021c ದಾನೈಃ ಪೃಥಗ್ವಿಧೈಶ್ಚಾಪಿ ಯಥಾ ಪ್ರಾಹುರ್ಮನೀಷಿಣಃ||

ಗೃಹಸ್ಥನು ಸ್ವಾಧ್ಯಾಯ ಮತ್ತು ವಿವಿಧ ದಾನಗಳಿಂದ ಮಹಾಪಾಪವನ್ನೂ ಕಳೆದುಕೊಳ್ಳುತ್ತಾನೆ ಎಂದು ಮನೀಷಿಣರು ಹೇಳುತ್ತಾರೆ.

13104022a ತಥಾ ಪಾಪಕೃತಂ ವಿಪ್ರಮಾಶ್ರಮಸ್ಥಂ ಮಹೀಪತೇ|

13104022c ಸರ್ವಸಂಗವಿನಿರ್ಮುಕ್ತಂ ಚಂದಾಂಸ್ಯುತ್ತಾರಯಂತ್ಯುತ||

ಮಹೀಪತೇ! ಸರ್ವಸಂಗವಿನಿರ್ಮುಕ್ತನಾಗಿ ಆಶ್ರಮಸ್ಥನಾಗಿರುವವನು ಪಾಪಕೃತವನ್ನೆಸಗಿದರೂ ಅವನು ಮಾಡಿದ ವೇದಾಧ್ಯಯನವು ಅವನನ್ನು ಪಾಪಮುಕ್ತನನ್ನಾಗಿ ಮಾಡುತ್ತದೆ ಎಂದು ಹೇಳಿದ್ದಾರೆ.

13104023a ಅಹಂ ತು ಪಾಪಯೋನ್ಯಾಂ ವೈ ಪ್ರಸೂತಃ ಕ್ಷತ್ರಿಯರ್ಷಭ|

13104023c ನಿಶ್ಚಯಂ ನಾಧಿಗಚ್ಚಾಮಿ ಕಥಂ ಮುಚ್ಯೇಯಮಿತ್ಯುತ||

ಕ್ಷತ್ರಿಯರ್ಷಭ! ನಾನಾದರೋ ಪಾಪಯೋನಿಯಲ್ಲಿ ಹುಟ್ಟಿದ್ದೇನೆ. ನಾನು ಯಾವುದರಿಂದ ಮುಕ್ತನಾಗಬಲ್ಲೆ ಎಂದು ನನಗೆ ನಿಶ್ಚಯಿಸಲಾಗುತ್ತಿಲ್ಲ.

13104024a ಜಾತಿಸ್ಮರತ್ವಂ ತು ಮಮ ಕೇನ ಚಿತ್ಪೂರ್ವಕರ್ಮಣಾ|

13104024c ಶುಭೇನ ಯೇನ ಮೋಕ್ಷಂ ವೈ ಪ್ರಾಪ್ತುಮಿಚ್ಚಾಮ್ಯಹಂ ನೃಪ||

ನೃಪ! ಹಿಂದೆ ಮಾಡಿದ ಯಾವುದೋ ಶುಭ ಕರ್ಮದಿಂದ ನನಗೆ ಹಿಂದಿನ ಜನ್ಮದ ಸ್ಮರಣೆಯಿದೆ. ಈ ಕಾರಣದಿಂದಲೇ ನಾನು ಮೋಕ್ಷವನ್ನು ಹೊಂದಲು ಇಚ್ಛಿಸುತ್ತೇನೆ.

13104025a ತ್ವಮಿಮಂ ಮೇ ಪ್ರಪನ್ನಾಯ ಸಂಶಯಂ ಬ್ರೂಹಿ ಪೃಚ್ಚತೇ|

13104025c ಚಂಡಾಲತ್ವಾತ್ಕಥಮಹಂ ಮುಚ್ಯೇಯಮಿತಿ ಸತ್ತಮ||

ಸತ್ತಮ! ನಾನು ನಿನಗೆ ಶರಣುಬಂದು ಈ ಸಂಶಯವನ್ನು ಕೇಳುತ್ತಿದ್ದೇನೆ. ಹೇಳು. ಈ ಚಾಂಡಾಲತ್ವದಿಂದ ನಾನು ಹೇಗೆ ಮುಕ್ತನಾಗಬಲ್ಲೆ?”

13104026 ರಾಜನ್ಯ ಉವಾಚ|

13104026a ಚಂಡಾಲ ಪ್ರತಿಜಾನೀಹಿ ಯೇನ ಮೋಕ್ಷಮವಾಪ್ಸ್ಯಸಿ|

13104026c ಬ್ರಾಹ್ಮಣಾರ್ಥೇ ತ್ಯಜನ್ಪ್ರಾಣಾನ್ಗತಿಮಿಷ್ಟಾಮವಾಪ್ಸ್ಯಸಿ||

ಕ್ಷತ್ರಿಯನು ಹೇಳಿದನು: “ಚಂಡಾಲ! ನೀನು ಹೇಗೆ ಮೋಕ್ಷವನ್ನು ಪಡೆಯಬಲ್ಲೆ ಎನ್ನುವುದನ್ನು ತಿಳಿದುಕೋ. ಬ್ರಾಹ್ಮಣನಿಗಾಗಿ ನೀನು ನಿನ್ನ ಪ್ರಾಣಗಳನ್ನು ತ್ಯಜಿಸಿದರೆ ಅಭೀಷ್ಟ ಗತಿಯನ್ನು ಪಡೆದುಕೊಳ್ಳುತ್ತೀಯೆ.

13104027a ದತ್ತ್ವಾ ಶರೀರಂ ಕ್ರವ್ಯಾದ್ಭ್ಯೋ ರಣಾಗ್ನೌ ದ್ವಿಜಹೇತುಕಮ್|

13104027c ಹುತ್ವಾ ಪ್ರಾಣಾನ್ ಪ್ರಮೋಕ್ಷಸ್ತೇ ನಾನ್ಯಥಾ ಮೋಕ್ಷಮರ್ಹಸಿ||

ಒಂದು ವೇಳೆ ನೀನು ಬ್ರಾಹ್ಮಣನ ರಕ್ಷಣೆಗಾಗಿ ರಣಾಗ್ನಿಯಲ್ಲಿ ಪ್ರಾಣಗಳನ್ನು ಹೋಮಿಸಿ ಕ್ರವ್ಯಾದಗಳಿಗೆ ಶರೀರವನ್ನಿತ್ತರೆ ನೀನು ಮೋಕ್ಷವನ್ನು ಹೊಂದುತ್ತೀಯೆ. ಅನ್ಯಥಾ ನಿನಗೆ ಮೋಕ್ಷವು ಸಿಗುವುದಿಲ್ಲ.””

13104028 ಭೀಷ್ಮ ಉವಾಚ|

13104028a ಇತ್ಯುಕ್ತಃ ಸ ತದಾ ರಾಜನ್ ಬ್ರಹ್ಮಸ್ವಾರ್ಥೇ ಪರಂತಪ|

13104028c ಹುತ್ವಾ ರಣಮುಖೇ ಪ್ರಾಣಾನ್ಗತಿಮಿಷ್ಟಾಮವಾಪ ಹ||

ಭೀಷ್ಮನು ಹೇಳಿದನು: “ಪರಂತಪ! ರಾಜನ್! ಅದನ್ನು ಕೇಳಿ ಆ ಚಂಡಾಲನು ಬ್ರಾಹ್ಮಣನಿಗಾಗಿ ರಣಮುಖದಲ್ಲಿ ಪ್ರಾಣಗಳನ್ನು ಹೋಮಿಸಿ ಇಷ್ಟಗತಿಯನ್ನು ಪಡೆದುಕೊಂಡನು.

13104029a ತಸ್ಮಾದ್ರಕ್ಷ್ಯಂ ತ್ವಯಾ ಪುತ್ರ ಬ್ರಹ್ಮಸ್ವಂ ಭರತರ್ಷಭ|

13104029c ಯದೀಚ್ಚಸಿ ಮಹಾಬಾಹೋ ಶಾಶ್ವತೀಂ ಗತಿಮುತ್ತಮಾಮ್||

ಪುತ್ರ! ಭರತರ್ಷಭ! ಮಹಾಬಾಹೋ! ಆದುದರಿಂದ ಶಾಶ್ವತವಾದ ಉತ್ತಮ ಗತಿಯನ್ನು ಇಚ್ಛಿಸುವೆಯಾದರೆ ನೀನು ಬ್ರಾಹ್ಮಣರ ಸ್ವತ್ತನ್ನು ರಕ್ಷಿಸು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ರಾಜನ್ಯಚಾಂಡಾಲಸಂವಾದೋ ನಾಮ ಚತುರಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ರಾಜನ್ಯಚಾಂಡಾಲಸಂವಾದ ಎನ್ನುವ ನೂರಾನಾಲ್ಕನೇ ಅಧ್ಯಾಯವು.

[1] ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಪಾತಕಾನಾಂ ಪರಂ ಹ್ಯೇತದ್ ಬ್ರಹ್ಮಸ್ವಹರಣಂ ಬಲಾತ್| ಸಾನ್ವಯಾಸ್ತೇ ವಿನಶ್ಯಂತಿ ಚಂಡಾಲಾಃ ಪ್ರೇತ್ಯ ಚೇಹ ಚ|| (ಗೀತಾ ಪ್ರೆಸ್).

[2] ರಾಜನ್ಯ ಎಂಬ ಪದಕ್ಕೆ ರಾಜ ಎಂಬ ಅನುವಾದವೂ ಇದೆ (ಬಿಬೇಕ್ ದೆಬ್ರೋಯ್).

[3] ವಿಕ್ರೀಣಾನ್ ವಿಧಿಪೂರ್ವಕಮ್ (ಗೀತಾ ಪ್ರೆಸ್).

[4] ಸ್ವವಿಷ್ಠಾಮುಪಜೀವತಿ (ಗೀತಾ ಪ್ರೆಸ್).

[5] ಮೂವತ್ತು (ಗೀತಾ ಪ್ರೆಸ್).

Comments are closed.