Anushasana Parva: Chapter 10

ಅನುಶಾಸನ ಪರ್ವ: ದಾನಧರ್ಮ ಪರ್ವ

೧೦

ನೀಚನ ಉಪದೇಶ ನಿಷೇದ

ಮಿತ್ರಸೌಹಾರ್ದಭಾವದಿಂದ ಕೀಳುಜಾತಿಯವನಿಗೆ ಉಪದೇಶವನ್ನು ಮಾಡಿದರೆ ದೋಷವುಂಟಾಗುತ್ತದೆಯೇ ಎಂದು ಪ್ರಶ್ನಿಸಿದ ಯುಧಿಷ್ಠಿರನಿಗೆ ಭೀಷ್ಮನು ಹಿಂದೆ ಶೂದ್ರಮುನಿಗೆ ಓರ್ವ ಋಷಿಯು ಉಪದೇಶನೀಡಿದುದರಿಂದ ಪಡೆದುಕೊಂಡ ಕಷ್ಟಗಳ ಕಥೆಯನ್ನು ಹೇಳಿದುದು (೧-೭೦).

13010001 ಯುಧಿಷ್ಠಿರ ಉವಾಚ|

13010001a ಮಿತ್ರಸೌಹೃದಭಾವೇನ ಉಪದೇಶಂ ಕರೋತಿ ಯಃ|

13010001c ಜಾತ್ಯಾವರಸ್ಯ ರಾಜರ್ಷೇ ದೋಷಸ್ತಸ್ಯ ಭವೇನ್ನ ವಾ||

ಯುಧಿಷ್ಠಿರನು ಹೇಳಿದನು: “ರಾಜರ್ಷೇ! ಮಿತ್ರಸೌಹಾರ್ದಭಾವದಿಂದ ಕೀಳುಜಾತಿಯವನಿಗೆ ಉಪದೇಶವನ್ನು ಮಾಡಿದರೆ ದೋಷವುಂಟಾಗುತ್ತದೆಯೇ ಅಥವಾ ಇಲ್ಲವೇ?

13010002a ಏತದಿಚ್ಚಾಮಿ ತತ್ತ್ವೇನ ವ್ಯಾಖ್ಯಾತುಂ ವೈ ಪಿತಾಮಹ|

13010002c ಸೂಕ್ಷ್ಮಾ ಗತಿರ್ಹಿ ಧರ್ಮಸ್ಯ ಯತ್ರ ಮುಹ್ಯಂತಿ ಮಾನವಾಃ||

ಪಿತಾಮಹ! ನಾನು ಈ ವಿಷಯದಲ್ಲಿ ಯಥಾವತ್ತಾಗಿ ವಿಷದವಾಗಿ ತಿಳಿದುಕೊಳ್ಳಲು ಬಯಸುತ್ತೇನೆ. ಧರ್ಮದ ಗತಿಯು ಅತಿಸೂಕ್ಷ್ಮ. ಇಂತಹ ವಿಷಯಗಳಲ್ಲಿಯೇ ಮನುಷ್ಯರು ಸುಲಭವಾಗಿ ಮೋಹಗೊಳ್ಳುತ್ತಾರೆ.”

13010003 ಭೀಷ್ಮ ಉವಾಚ|

13010003a ಅತ್ರ ತೇ ವರ್ತಯಿಷ್ಯಾಮಿ ಶೃಣು ರಾಜನ್ಯಥಾಗಮಮ್|

13010003c ಋಷೀಣಾಂ ವದತಾಂ ಪೂರ್ವಂ ಶ್ರುತಮಾಸೀದ್ಯಥಾ ಮಯಾ||

ಭೀಷ್ಮನು ಹೇಳಿದನು: “ರಾಜನ್! ಈ ವಿಷಯದಲ್ಲಿ ಹಿಂದೆ ಋಷಿಗಳು ಹೇಳಿದ್ದುದನನ್ನು ಕೇಳಿದ್ದೇನೆ. ಅದನ್ನೇ ನಿನಗೆ ಯಥಾಕ್ರಮವಾಗಿ ಹೇಳುತ್ತೇನೆ. ಕೇಳು.

13010004a ಉಪದೇಶೋ ನ ಕರ್ತವ್ಯೋ ಜಾತಿಹೀನಸ್ಯ ಕಸ್ಯ ಚಿತ್|

13010004c ಉಪದೇಶೇ ಮಹಾನ್ದೋಷ ಉಪಾಧ್ಯಾಯಸ್ಯ ಭಾಷ್ಯತೇ||

ಜಾತಿಹೀನನು ಯಾರೇ ಆಗಿದ್ದರೂ ಅವನಿಗೆ ಉಪದೇಶವನ್ನು ಮಾಡಬಾರದು. ಅಂತಹ ಉಪದೇಶದಲ್ಲಿ ಉಪಾಧ್ಯಾಯನ ದೋಷವು ಹೆಚ್ಚಿನದೆಂದು ಹೇಳುತ್ತಾರೆ.

13010005a ನಿದರ್ಶನಮಿದಂ ರಾಜನ್ ಶೃಣು ಮೇ ಭರತರ್ಷಭ|

13010005c ದುರುಕ್ತವಚನೇ ರಾಜನ್ಯಥಾ ಪೂರ್ವಂ ಯುಧಿಷ್ಠಿರ|

13010005e ಬ್ರಹ್ಮಾಶ್ರಮಪದೇ ವೃತ್ತಂ ಪಾರ್ಶ್ವೇ ಹಿಮವತಃ ಶುಭೇ||

ರಾಜನ್! ಭರತರ್ಷಭ! ಯುಧಿಷ್ಠಿರ! ಇದಕ್ಕೆ ಸಂಬಂದಿಸಿದ ಒಂದು ನಿದರ್ಶನವನ್ನು ಕೇಳು. ದುಃಖದಲ್ಲಿರುವವನಿಗೆ ಉಪದೇಶಿಸಿದ ಈ ಘಟನೆಯು ಶುಭ ಹಿಮವತ್ಪರ್ವದ ತಪ್ಪಲಿನಲ್ಲಿದ್ದ ಬ್ರಹ್ಮಾಶ್ರಮಪದದಲ್ಲಿ ನಡೆಯಿತು.

13010006a ತತ್ರಾಶ್ರಮಪದಂ ಪುಣ್ಯಂ ನಾನಾವೃಕ್ಷಗಣಾಯುತಮ್|

13010006c ಬಹುಗುಲ್ಮಲತಾಕೀರ್ಣಂ ಮೃಗದ್ವಿಜನಿಷೇವಿತಮ್||

ನಾನಾವೃಕ್ಷಗಣಗಳಿಂದ ಮತ್ತು ಬಹುಗುಲ್ಮಲತಾಕೀರ್ಣಗಳಿಂದ ಕೂಡಿದ್ದ ಆ ಪುಣ್ಯ ಆಶ್ರಮಪದದಲ್ಲಿ ಮೃಗ-ಪಕ್ಷಿಗಳು ವಾಸಿಸುತ್ತಿದ್ದವು.

13010007a ಸಿದ್ಧಚಾರಣಸಂಘುಷ್ಟಂ ರಮ್ಯಂ ಪುಷ್ಪಿತಕಾನನಮ್|

13010007c ವ್ರತಿಭಿರ್ಬಹುಭಿಃ ಕೀರ್ಣಂ ತಾಪಸೈರುಪಶೋಭಿತಮ್||

ಸಿದ್ಧಚಾರಣರ ಗುಂಪುಗಳಿದ್ದ ಆ ರಮ್ಯ ಪುಷ್ಪಿತ ಕಾನನವು ಅನೇಕ ವ್ರತಿಗಳು ಮತ್ತು ತಾಪಸರಿಂದ ಕೂಡಿ ಶೋಭಿಸುತ್ತಿತ್ತು.

13010008a ಬ್ರಾಹ್ಮಣೈಶ್ಚ ಮಹಾಭಾಗೈಃ ಸೂರ್ಯಜ್ವಲನಸಂನಿಭೈಃ|

13010008c ನಿಯಮವ್ರತಸಂಪನ್ನೈಃ ಸಮಾಕೀರ್ಣಂ ತಪಸ್ವಿಭಿಃ|

13010008e  ದೀಕ್ಷಿತೈರ್ಭರತಶ್ರೇಷ್ಠ ಯತಾಹಾರೈಃ ಕೃತಾತ್ಮಭಿಃ||

ಭರತಶ್ರೇಷ್ಠ! ಆ ಆಶ್ರಮಪದವು ಸೂರ್ಯಜ್ವಲನ ಸನ್ನಿಭರಾದ ಮಹಾಭಾಗ ಬ್ರಾಹ್ಮಣರಿಂದ, ವ್ರತ-ನಿಯಮ ಸಂಪನ್ನರಿಂದ, ತಪಸ್ವಿಗಳಿಂದ, ದೀಕ್ಷಿತರಿಂದ ಮತ್ತು ಯತಾಹಾರ ಕೃತಾತ್ಮರಿಂದ ತುಂಬಿತ್ತು.

13010009a ವೇದಾಧ್ಯಯನಘೋಷೈಶ್ಚ ನಾದಿತಂ ಭರತರ್ಷಭ|

13010009c ವಾಲಖಿಲ್ಯೈಶ್ಚ ಬಹುಭಿರ್ಯತಿಭಿಶ್ಚ ನಿಷೇವಿತಮ್||

ಭರತರ್ಷಭ! ವೇದಾಧ್ಯಯನಘೋಷಗಳಿಂದ ನಿನಾದಿಸುತ್ತಿದ್ದ ಆ ಆಶ್ರಮಪದವು ವಾಲಖಿಲ್ಯರಿಂದ ಮತ್ತು ಅನೇಕ ಯತಿಗಳಿಂದ ಕೂಡಿತ್ತು.

13010010a ತತ್ರ ಕಶ್ಚಿತ್ಸಮುತ್ಸಾಹಂ ಕೃತ್ವಾ ಶೂದ್ರೋ ದಯಾನ್ವಿತಃ|

13010010c ಆಗತೋ ಹ್ಯಾಶ್ರಮಪದಂ ಪೂಜಿತಶ್ಚ ತಪಸ್ವಿಭಿಃ||

ಯಾವನೋ ಒಬ್ಬ ದಯಾನ್ವಿತ ಶೂದ್ರನು ಆ ಆಶ್ರಮಪದಕ್ಕೆ ಆಗಮಿಸಲು, ತಪಸ್ವಿಗಳು ಅವನನ್ನು ಉತ್ಸಾಹದಿಂದ ಆದರಿಸಿ ಸತ್ಕರಿಸಿದರು.

13010011a ತಾಂಸ್ತು ದೃಷ್ಟ್ವಾ ಮುನಿಗಣಾನ್ದೇವಕಲ್ಪಾನ್ಮಹೌಜಸಃ|

13010011c ವಹತೋ ವಿವಿಧಾ ದೀಕ್ಷಾಃ ಸಂಪ್ರಹೃಷ್ಯತ ಭಾರತ||

ಭಾರತ! ದೇವಕಲ್ಪರಾದ ಮಹೌಜಸರಾದ ಮತ್ತು ವಿವಿಧ ದೀಕ್ಷೆಗಳನ್ನು ನಡೆಸುತ್ತಿದ್ದ ಆ ಮುನಿಗಣಗಳನ್ನು ನೋಡಿ ಅವನಿಗೆ ಅತ್ಯಂತ ಸಂತೋಷವಾಯಿತು.

13010012a ಅಥಾಸ್ಯ ಬುದ್ಧಿರಭವತ್ತಪಸ್ಯೇ ಭರತರ್ಷಭ|

13010012c ತತೋಽಬ್ರವೀತ್ಕುಲಪತಿಂ ಪಾದೌ ಸಂಗೃಹ್ಯ ಭಾರತ||

ಭರತರ್ಷಭ! ಭಾರತ! ಆಗ ಅವನಿಗೆ ತಪಸ್ಸನ್ನಾಚರಿಸುವ ಬುದ್ಧಿಯುಂಟಾಯಿತು. ಕುಲಪತಿಯ ಪಾದಗಳನ್ನು ಹಿಡಿದು ಅವನು ಹೇಳಿದನು:

13010013a ಭವತ್ಪ್ರಸಾದಾದಿಚ್ಚಾಮಿ ಧರ್ಮಂ ಚರ್ತುಂ ದ್ವಿಜರ್ಷಭ|

13010013c ತನ್ಮಾಂ ತ್ವಂ ಭಗವನ್ವಕ್ತುಂ ಪ್ರವ್ರಾಜಯಿತುಮರ್ಹಸಿ||

“ದ್ವಿಜರ್ಷಭ! ನಿನ್ನ ಪ್ರಸಾದದಿಂದ ನಾನು ಧರ್ಮವನ್ನು ಆಚರಿಸಲು ಇಚ್ಛಿಸುತ್ತೇನೆ. ಭಗವನ್! ಆದುದರಿಂದ ನೀನು ನನಗೆ ಪ್ರವ್ರಾಜನನ್ನಾಗಿ ಮಾಡಬೇಕು.

13010014a ವರ್ಣಾವರೋಽಹಂ ಭಗವನ್ಶೂದ್ರೋ ಜಾತ್ಯಾಸ್ಮಿ ಸತ್ತಮ|

13010014c ಶುಶ್ರೂಷಾಂ ಕರ್ತುಮಿಚ್ಚಾಮಿ ಪ್ರಪನ್ನಾಯ ಪ್ರಸೀದ ಮೇ||

ಸತ್ತಮ! ಭಗವನ್! ಕಡೆಯ ವರ್ಣದವನಾಗಿ ಶೂದ್ರನಾಗಿ ಹುಟ್ಟಿದ್ದೇನೆ. ಶುಶ್ರೂಷೆ ಮಾಡಲು ಬಯಸುತ್ತೇನೆ. ಶರಣಾಗತನಾಗಿರುವ ನನ್ನ ಮೇಲೆ ಕರುಣೆ ತೋರು.”

13010015 ಕುಲಪತಿರುವಾಚ|

13010015a ನ ಶಕ್ಯಮಿಹ ಶೂದ್ರೇಣ ಲಿಂಗಮಾಶ್ರಿತ್ಯ ವರ್ತಿತುಮ್|

13010015c ಆಸ್ಯತಾಂ ಯದಿ ತೇ ಬುದ್ಧಿಃ ಶುಶ್ರೂಷಾನಿರತೋ ಭವ||

ಕುಲಪತಿಯು ಹೇಳಿದನು: “ಶೂದ್ರನಾದವನು ಪ್ರವ್ರಾಜನ ಚಿಹ್ನೆಯನ್ನು ಧರಿಸಿ ಇರಲು ಶಕ್ಯವಿಲ್ಲ. ಇಲ್ಲಿರಲು ನಿನ್ನ ಮನಸ್ಸಾದರೆ ಶುಶ್ರೂಷನಿರತನಾಗಿ ಇರು!””

13010016 ಭೀಷ್ಮ ಉವಾಚ|

13010016a ಏವಮುಕ್ತಸ್ತು ಮುನಿನಾ ಸ ಶೂದ್ರೋಽಚಿಂತಯನ್ನೃಪ|

13010016c ಕಥಮತ್ರ ಮಯಾ ಕಾರ್ಯಂ ಶ್ರದ್ಧಾ ಧರ್ಮೇ ಪರಾ ಚ ಮೇ|

13010016e ವಿಜ್ಞಾತಮೇವಂ ಭವತು ಕರಿಷ್ಯೇ ಪ್ರಿಯಮಾತ್ಮನಃ||

ಭೀಷ್ಮನು ಹೇಳಿದನು: “ನೃಪ! ಮುನಿಯು ಹೀಗೆ ಹೇಳಲು ಶೂದ್ರನು ಯೋಚಿಸಿದನು: “ಧರ್ಮದ ಮೇಲಿರುವ ನನ್ನ ಪರಮಶ್ರದ್ಧೆಯನ್ನು ಹೇಗೆ ಕಾರ್ಯಗತಗೊಳಿಸಲಿ? ತಿಳಿಯಿತು! ನನಗೆ ಪ್ರಿಯವಾದುದನ್ನೇ ಮಾಡುತ್ತೇನೆ!”

13010017a ಗತ್ವಾಶ್ರಮಪದಾದ್ದೂರಮುಟಜಂ ಕೃತವಾಂಸ್ತು ಸಃ|

13010017c ತತ್ರ ವೇದಿಂ ಚ ಭೂಮಿಂ ಚ ದೇವತಾಯತನಾನಿ ಚ|

13010017e ನಿವೇಶ್ಯ ಭರತಶ್ರೇಷ್ಠ ನಿಯಮಸ್ಥೋಽಭವತ್ಸುಖಮ್||

ಆ ಆಶ್ರಮಪದದಿಂದ ದೂರ ಹೋಗಿ ಅಲ್ಲೊಂದು ಗುಡಿಸಲನ್ನು ಕಟ್ಟಿಕೊಂಡನು. ಅಲ್ಲಿ ವೇದಿಯನ್ನೂ, ವಾಸಸ್ಥಳವನ್ನೂ, ದೇವಾಲಯವನ್ನೂ ಕಲ್ಪಿಸಿಕೊಂಡು ನಿಯಮಸ್ಥನಾಗಿ ವಾಸಿಸಿ ಸುಖದಿಂದ ಇರತೊಡಗಿದನು.

13010018a ಅಭಿಷೇಕಾಂಶ್ಚ ನಿಯಮಾನ್ದೇವತಾಯತನೇಷು ಚ|

13010018c ಬಲಿಂ ಚ ಕೃತ್ವಾ ಹುತ್ವಾ ಚ ದೇವತಾಂ ಚಾಪ್ಯಪೂಜಯತ್||

ನಿಯಮದಿಂದ ಸ್ನಾನಮಾಡಿ ದೇವತಾಸ್ಥಾನದಲ್ಲಿ ಬಲಿಯನ್ನಿತ್ತು, ಹೋಮಮಾಡಿ ದೇವತೆಗಳನ್ನು ಪೂಜಿಸುತ್ತಿದ್ದನು.

13010019a ಸಂಕಲ್ಪನಿಯಮೋಪೇತಃ ಫಲಾಹಾರೋ ಜಿತೇಂದ್ರಿಯಃ|

13010019c ನಿತ್ಯಂ ಸಂನಿಹಿತಾಭಿಶ್ಚ ಓಷಧೀಭಿಃ ಫಲೈಸ್ತಥಾ||

13010020a ಅತಿಥೀನ್ಪೂಜಯಾಮಾಸ ಯಥಾವತ್ಸಮುಪಾಗತಾನ್|

13010020c ಏವಂ ಹಿ ಸುಮಹಾನ್ಕಾಲೋ ವ್ಯತ್ಯಕ್ರಾಮತ್ಸ ತಸ್ಯ ವೈ||

ಸಂಕಲ್ಪನಿಯಮಗಳಿಂದ ಕೂಡಿ ಫಲಾಹಾರನೂ ಜಿತೇಂದ್ರಿಯನೂ ಆಗಿದ್ದ ಅವನು ನಿತ್ಯವೂ ಅಲ್ಲಿಗೆ ಆಗಮಿಸುತ್ತಿದ್ದ ಅತಿಥಿಗಳನ್ನು ಹತ್ತಿರದಲ್ಲಿಯೇ ದೊರಕುತ್ತಿದ್ದ ಮೂಲಿಕೆಗಳು ಮತ್ತು ಹಣ್ಣುಗಳಿಂದ ಸತ್ಕರಿಸುತ್ತಿದ್ದನು. ಹೀಗೆ ಅವನು ಬಹಳ ಕಾಲವನ್ನು ಕಳೆದನು.

13010021a ಅಥಾಸ್ಯ ಮುನಿರಾಗಚ್ಚತ್ಸಂಗತ್ಯಾ ವೈ ತಮಾಶ್ರಮಮ್|

13010021c ಸಂಪೂಜ್ಯ ಸ್ವಾಗತೇನರ್ಷಿಂ ವಿಧಿವತ್ಪರ್ಯತೋಷಯತ್||

ಒಮ್ಮೆ ಅವನ ಆಶ್ರಮಕ್ಕೆ ಸತ್ಸಂಗವನ್ನು ಬಯಸಿ ಓರ್ವ ಮುನಿಯು ಆಗಮಿಸಿದನು. ಅವನನ್ನು ಆ ಋಷಿಯನ್ನು ವಿಥಿವತ್ತಾಗಿ ಸ್ವಾಗತಿಸಿ ಪೂಜಿಸಿ ಸಂತುಷ್ಟಗೊಳಿಸಿದನು.

13010022a ಅನುಕೂಲಾಃ ಕಥಾಃ ಕೃತ್ವಾ ಯಥಾವತ್ಪರ್ಯಪೃಚ್ಚತ|

13010022c ಋಷಿಃ ಪರಮತೇಜಸ್ವೀ ಧರ್ಮಾತ್ಮಾ ಸಂಯತೇಂದ್ರಿಯಃ||

ಅನುಕೂಲಕರ ಮಾತುಗಳನ್ನಾಡುತ್ತಾ ಆ ಪರಮತೇಜಸ್ವೀ ಧರ್ಮಾತ್ಮಾ ಸಂಯತೇಂದ್ರಿಯ ಋಷಿಯು ಯಥಾವತ್ತಾಗಿ ಹೊರಟುಹೋದನು.

13010023a ಏವಂ ಸ ಬಹುಶಸ್ತಸ್ಯ ಶೂದ್ರಸ್ಯ ಭರತರ್ಷಭ|

13010023c ಸೋಽಗಚ್ಚದಾಶ್ರಮಮೃಷಿಃ ಶೂದ್ರಂ ದ್ರಷ್ಟುಂ ನರರ್ಷಭ||

ನರರ್ಷಭ! ಭರತರ್ಷಭ! ಹೀಗೆ ಅನೇಕಬಾರಿ ಶೂದ್ರನನ್ನು ನೋಡಲ್ ಆ ಋಷಿಯು ಅವನ ಆಶ್ರಮಕ್ಕೆ ಹೋದನು.

13010024a ಅಥ ತಂ ತಾಪಸಂ ಶೂದ್ರಃ ಸೋಽಬ್ರವೀದ್ಭರತರ್ಷಭ|

13010024c ಪಿತೃಕಾರ್ಯಂ ಕರಿಷ್ಯಾಮಿ ತತ್ರ ಮೇಽನುಗ್ರಹಂ ಕುರು||

ಭರತರ್ಷಭ! ಒಮ್ಮೆ ಆ ಶೂದ್ರನು ತಾಪಸನಿಗೆ ಹೇಳಿದನು: “ಪಿತೃಕಾರ್ಯವನ್ನು ಮಾಡುತ್ತೇನೆ. ಅದಕ್ಕೆ ನನಗೆ ಅನುಗ್ರಹಿಸು.”

13010025a ಬಾಢಮಿತ್ಯೇವ ತಂ ವಿಪ್ರ ಉವಾಚ ಭರತರ್ಷಭ|

13010025c ಶುಚಿರ್ಭೂತ್ವಾ ಸ ಶೂದ್ರಸ್ತು ತಸ್ಯರ್ಷೇಃ ಪಾದ್ಯಮಾನಯತ್||

ಭರತರ್ಷಭ! ವಿಪ್ರನು ಹಾಗೆಯೇ ಆಗಲೆಂದು ಹೇಳಿದನು. ಶೂದ್ರನಾದರೋ ಶುಚಿಯಾಗಿ ಆ ಋಷಿಗೆ ಪಾದ್ಯವನ್ನು ತಂದನು.

13010026a ಅಥ ದರ್ಭಾಂಶ್ಚ ವನ್ಯಾಶ್ಚ ಓಷಧೀರ್ಭರತರ್ಷಭ|

13010026c ಪವಿತ್ರಮಾಸನಂ ಚೈವ ಬೃಸೀಂ ಚ ಸಮುಪಾನಯತ್||

ಭರತರ್ಷಭ! ಅನಂತರ ಅವನು ದರ್ಭೆಗಳನ್ನೂ, ವನ್ಯ ಮೂಲಿಕಗಳನ್ನೂ, ಪವಿತ್ರ ಆಸನವನ್ನೂ, ಚಾಪೆಯನ್ನೂ ತಂದನು.

13010027a ಅಥ ದಕ್ಷಿಣಮಾವೃತ್ಯ ಬೃಸೀಂ ಪರಮಶೀರ್ಷಿಕಾಮ್|

13010027c ಕೃತಾಮನ್ಯಾಯತೋ ದೃಷ್ಟ್ವಾ ತತಸ್ತಮೃಷಿರಬ್ರವೀತ್||

ಋಷಿಯು ಕುಳಿತುಕೊಳ್ಳಲು ಚಾಪೆಯನ್ನು ದಕ್ಷಿಣದಿಕ್ಕಿಗೆ ಅಭಿಮುಖವಾಗಿ ಹಾಕಿ, ಆಸನ ಕೂರ್ಚವನ್ನು ಪಶ್ಚಿಮಾಗ್ರವಾಗಿ ಹಾಕಿದನು. ಅದನ್ನು ನೋಡಿ ಋಷಿಯು ಹೇಳಿದನು:

13010028a ಕುರುಷ್ವೈತಾಂ ಪೂರ್ವಶೀರ್ಷಾಂ ಭವ ಚೋದಙ್ಮುಖಃ ಶುಚಿಃ|

13010028c ಸ ಚ ತತ್ಕೃತವಾನ್ಶೂದ್ರಃ ಸರ್ವಂ ಯದೃಷಿರಬ್ರವೀತ್||

“ಈ ಆಸನ ಕೂರ್ಚವನ್ನು ಪೂರ್ವಾಗ್ರವಾಗಿ ಮಾಡು. ನೀನು ಶುಚಿಯಾಗಿ ಉತ್ತರಾಭಿಮುಖವಾಗಿ ಕುಳಿತುಕೋ!” ಋಷಿಯು ಹೇಳಿದಂತೆಯೇ ಶೂದ್ರನು ಎಲ್ಲವನ್ನೂ ಮಾಡಿದನು.

13010029a ಯಥೋಪದಿಷ್ಟಂ ಮೇಧಾವೀ ದರ್ಭಾದೀಂಸ್ತಾನ್ಯಥಾತಥಮ್|

13010029c ಹವ್ಯಕವ್ಯವಿಧಿಂ ಕೃತ್ಸ್ನಮುಕ್ತಂ ತೇನ ತಪಸ್ವಿನಾ||

ಉಪದೇಶಿಸಲ್ಪಟ್ಟಂತೆ ಆ ಮೇಧಾವಿಯು ದರ್ಭಾದಿಗಳನ್ನು ಹೇಗೆ ಇರಬೇಕೋ ಹಾಗೆ ಬಳಸಿದನು. ಆ ತಪಸ್ವಿಯು ಹೇಳಿದಂತೆಯೇ ಹವ್ಯಕವ್ಯವಿಧಿಗಳೆಲ್ಲವನ್ನೂ ಮಾಡಿದನು.

13010030a ಋಷಿಣಾ ಪಿತೃಕಾರ್ಯೇ ಚ ಸ ಚ ಧರ್ಮಪಥೇ ಸ್ಥಿತಃ|

13010030c ಪಿತೃಕಾರ್ಯೇ ಕೃತೇ ಚಾಪಿ ವಿಸೃಷ್ಟಃ ಸ ಜಗಾಮ ಹ||

ಋಷಿಯ ನಿರ್ದೇಶನದಂತೆಯೇ ಧರ್ಮಪಥದಲ್ಲಿ ನಿಂತು ಅವನು ಪಿತೃಕಾರ್ಯಗಳನ್ನು ಮುಗಿಸಿದ ನಂತರ, ಋಷಿಯು ಹೊರಟುಹೋದನು.

13010031a ಅಥ ದೀರ್ಘಸ್ಯ ಕಾಲಸ್ಯ ಸ ತಪ್ಯನ್ಶೂದ್ರತಾಪಸಃ|

13010031c ವನೇ ಪಂಚತ್ವಮಗಮತ್ಸುಕೃತೇನ ಚ ತೇನ ವೈ|

13010031e ಅಜಾಯತ ಮಹಾರಾಜರಾಜವಂಶೇ ಮಹಾದ್ಯುತಿಃ||

ದೀರ್ಘಕಾಲದವರೆಗೆ ತಪಸ್ಸನ್ನು ತಪಿಸಿ ಆ ಶೂದ್ರತಪಸ್ವಿಯು ವನದಲ್ಲಿಯೇ ಪಂಚತ್ವವನ್ನು ಹೊಂದಿದನು. ಮಹಾರಾಜ! ಅವನ ಕರ್ಮಫಲಗಳಿಂದಾಗಿ ಅವನು ರಾಜವಂಶದಲ್ಲಿ ಮಹಾದ್ಯುತಿಯಾಗಿ ಜನಿಸಿದನು.

13010032a ತಥೈವ ಸ ಋಷಿಸ್ತಾತ ಕಾಲಧರ್ಮಮವಾಪ್ಯ ಹ|

13010032c ಪುರೋಹಿತಕುಲೇ ವಿಪ್ರ ಆಜಾತೋ ಭರತರ್ಷಭ||

ಭರತರ್ಷಭ! ಮಗೂ! ಹಾಗೆಯೇ ಆ ಋಷಿಯೂ ಕಾಲಧರ್ಮವನ್ನು ಹೊಂದಿ ಪುರೋಹಿತಕುಲದಲ್ಲಿ ವಿಪ್ರನಾಗಿ ಜನಿಸಿದನು.

13010033a ಏವಂ ತೌ ತತ್ರ ಸಂಭೂತಾವುಭೌ ಶೂದ್ರಮುನೀ ತದಾ|

13010033c ಕ್ರಮೇಣ ವರ್ಧಿತೌ ಚಾಪಿ ವಿದ್ಯಾಸು ಕುಶಲಾವುಭೌ||

ಹೀಗೆ ಶೂದ್ರಮುನಿ ಮತ್ತು ಋಷಿ ಇರಿಬ್ಬರೂ ಹಾಗೆ ಹುಟ್ಟಿ ಕ್ರಮೇಣ ಬೆಳೆದರು. ಇಬ್ಬರೂ ವಿದ್ಯೆಗಳಲ್ಲಿ ಕುಶಲರಾಗಿದ್ದರು.

13010034a ಅಥರ್ವವೇದೇ ವೇದೇ ಚ ಬಭೂವರ್ಷಿಃ ಸುನಿಶ್ಚಿತಃ|

13010034c ಕಲ್ಪಪ್ರಯೋಗೇ ಚೋತ್ಪನ್ನೇ ಜ್ಯೋತಿಷೇ ಚ ಪರಂ ಗತಃ|

13010034e ಸಖ್ಯೇ ಚಾಪಿ ಪರಾ ಪ್ರೀತಿಸ್ತಯೋಶ್ಚಾಪಿ ವ್ಯವರ್ಧತ||

ಪುರೋಹಿತಕುಲದಲ್ಲಿ ಹುಟ್ಟಿದ ಋಷಿಯು ವೇದಗಳಲ್ಲಿ ಅದರಲ್ಲೂ ವಿಶೇಷವಾಗಿ ಅಥರ್ವವೇದದಲ್ಲಿ ಪೂರ್ಣ ಪಾಂಡಿತ್ಯವನ್ನು ಪಡೆದಿದ್ದನು. ಕಲ್ಪ ಪ್ರಯೋಗ ಮತ್ತು ಜ್ಯೋತಿಃಶಾಸ್ತ್ರಗಳಲ್ಲಿ ಪಾರಂಗತನಾದನು. ಸಾಂಖ್ಯಶಾಸ್ತ್ರದಲ್ಲಿಯೂ ಅವನಿಗೆ ವಿಶೇಷ ಆಸಕ್ತಿಯಿದ್ದಿತು.

13010035a ಪಿತರ್ಯುಪರತೇ ಚಾಪಿ ಕೃತಶೌಚಃ ಸ ಭಾರತ|

13010035c ಅಭಿಷಿಕ್ತಃ ಪ್ರಕೃತಿಭೀ ರಾಜಪುತ್ರಃ ಸ ಪಾರ್ಥಿವಃ|

13010035e ಅಭಿಷಿಕ್ತೇನ ಸ ಋಷಿರಭಿಷಿಕ್ತಃ ಪುರೋಹಿತಃ||

ಭಾರತ! ತಂದೆಯು ಮರಣಹೊಂದಲು ಶೌಚಗಳು ಮುಗಿದನಂತರ ಆ ರಾಜಪುತ್ರನು ಪ್ರಜೆಗಳಿಂದ ಪಾರ್ಥಿವನಾಗಿ ಅಭಿಷಿಕ್ತನಾದನು. ಅವನು ಅಭಿಷಿಕ್ತನಾದಾಗಲೇ ಋಷಿಯೂ ಅವನ ಪುರೋಹಿತನಾಗಿ ಅಭಿಷಿಕ್ತನಾದನು.

13010036a ಸ ತಂ ಪುರೋಧಾಯ ಸುಖಮವಸದ್ಭರತರ್ಷಭ|

13010036c ರಾಜ್ಯಂ ಶಶಾಸ ಧರ್ಮೇಣ ಪ್ರಜಾಶ್ಚ ಪರಿಪಾಲಯನ್||

ಭರತರ್ಷಭ! ಅವನನ್ನು ಪುರೋಹಿತನನ್ನಾಗಿ ಪಡೆದು ರಾಜನ್ ಸುಖವಾಗಿದ್ದನು. ಧರ್ಮದಿಂದ ರಾಜ್ಯವನ್ನಾಳಿದನು ಮತ್ತು ಪ್ರಜೆಗಳನ್ನು ಪರಿಪಾಲಿಸಿದನು.

13010037a ಪುಣ್ಯಾಹವಾಚನೇ ನಿತ್ಯಂ ಧರ್ಮಕಾರ್ಯೇಷು ಚಾಸಕೃತ್|

13010037c ಉತ್ಸ್ಮಯನ್ಪ್ರಾಹಸಚ್ಚಾಪಿ ದೃಷ್ಟ್ವಾ ರಾಜಾ ಪುರೋಹಿತಮ್|

13010037e ಏವಂ ಸ ಬಹುಶೋ ರಾಜನ್ಪುರೋಧಸಮುಪಾಹಸತ್||

ನಿತ್ಯವೂ ಪುಣ್ಯಾಹವಾಚನ ಮತ್ತು ಧರ್ಮಕಾರ್ಯಗಳನ್ನು ನಡೆಸುತ್ತಿರುವಾಗ ರಾಜನು ಪುರೋಹಿತನನ್ನು ನೋಡಿ ನಸುನಗುತ್ತಿದ್ದನು ಮತ್ತು ಹಲವು ಬಾರಿ ಜೋರಾಗಿ ನಗುತ್ತಿದ್ದನು ಕೂಡ. ಹೀಗೆ ರಾಜನು ಪುರೋಹಿತನ ಅಪಹಾಸ್ಯಮಾಡುತ್ತಿದ್ದನು.

13010038a ಲಕ್ಷಯಿತ್ವಾ ಪುರೋಧಾಸ್ತು ಬಹುಶಸ್ತಂ ನರಾಧಿಪಮ್|

13010038c ಉತ್ಸ್ಮಯಂತಂ ಚ ಸತತಂ ದೃಷ್ಟ್ವಾಸೌ ಮನ್ಯುಮಾನಭೂತ್||

ನರಾಧಿಪನು ಸತತವೂ ನಸುನಗುವುದನ್ನು ನೋಡಿ ಪುರೋಹಿತನಿಗೆ ಕೋಪವುಂಟಾಯಿತು. ಆದರೆ ರಾಜನ ಮುಂದೆ ಕೋಪವನ್ನು ಪ್ರಕಟಗೊಳಿಸಲಾಗುತ್ತಿರಲಿಲ್ಲ.

13010039a ಅಥ ಶೂನ್ಯೇ ಪುರೋಧಾಸ್ತು ಸಹ ರಾಜ್ಞಾ ಸಮಾಗತಃ|

13010039c ಕಥಾಭಿರನುಕೂಲಾಭೀ ರಾಜಾನಮಭಿರಾಮಯತ್||

ಒಮ್ಮೆ ಪುರೋಹಿತನು ರಾಜನನ್ನು ಏಕಾಂತರಲ್ಲಿ ಭೇಟಿಯಾದನು. ಅನುಕೂಲಕರ ಮಾತುಗಳಿಂದ ರಾಜನನ್ನು ಸಂತುಷ್ಟಗೊಳಿಸಿದನು.

13010040a ತತೋಽಬ್ರವೀನ್ನರೇಂದ್ರಂ ಸ ಪುರೋಧಾ ಭರತರ್ಷಭ|

13010040c ವರಮಿಚ್ಚಾಮ್ಯಹಂ ತ್ವೇಕಂ ತ್ವಯಾ ದತ್ತಂ ಮಹಾದ್ಯುತೇ||

ಭರತರ್ಷಭ! ಆಗ ಪುರೋಹಿತನು ನರೇಂದ್ರನಿಗೆ ಹೇಳಿದನು: “ಮಹಾದ್ಯುತೇ! ನಿನ್ನಿಂದ ಒಂದು ವರವನ್ನು ಪಡೆದುಕೊಳ್ಳಲು ಬಯಸುತ್ತೇನೆ.”

13010041 ರಾಜೋವಾಚ|

13010041a ವರಾಣಾಂ ತೇ ಶತಂ ದದ್ಯಾಂ ಕಿಮುತೈಕಂ ದ್ವಿಜೋತ್ತಮ|

13010041c ಸ್ನೇಹಾಚ್ಚ ಬಹುಮಾನಾಚ್ಚ ನಾಸ್ತ್ಯದೇಯಂ ಹಿ ಮೇ ತವ||

ರಾಜನು ಹೇಳಿದನು: “ದ್ವಿಜೋತ್ತಮ! ಒಂದೇ ವರವೇಕೆ? ನೂರು ವರಗಳನ್ನಾದರೂ ಕೊಡಬಲ್ಲೆ. ನಿನ್ನ ಮೇಲಿನ ಸ್ನೇಹದಿಂದಾಗಿ ನನಗೆ ನಿನಗೆ ಕೊಡಬಾರದೆನ್ನುವ ವಸ್ತುವು ನನ್ನಲ್ಲಿ ಇಲ್ಲವಾಗಿದೆ.”

13010042 ಪುರೋಹಿತ ಉವಾಚ|

13010042a ಏಕಂ ವೈ ವರಮಿಚ್ಚಾಮಿ ಯದಿ ತುಷ್ಟೋಽಸಿ ಪಾರ್ಥಿವ|

13010042c ಯದ್ದದಾಸಿ ಮಹಾರಾಜ ಸತ್ಯಂ ತದ್ವದ ಮಾನೃತಮ್||

ಪುರೋಹಿತನು ಹೇಳಿದನು: “ಪಾರ್ಥಿವ! ನೀನು ಸಂತುಷ್ಟನಾಗಿದ್ದರೆ ಒಂದೇ ವರವನ್ನು ಬಯಸುತ್ತೇನೆ. ಮಹಾರಾಜ! ಅದನ್ನು ಕೊಡುತ್ತೇನೆ ಎನ್ನುವ ಸತ್ಯವನ್ನು ನುಡಿ. ಸುಳ್ಳನ್ನಾಡಬೇಡ!””

13010043 ಭೀಷ್ಮ ಉವಾಚ|

13010043a ಬಾಢಮಿತ್ಯೇವ ತಂ ರಾಜಾ ಪ್ರತ್ಯುವಾಚ ಯುಧಿಷ್ಠಿರ|

13010043c ಯದಿ ಜ್ಞಾಸ್ಯಾಮಿ ವಕ್ಷ್ಯಾಮಿ ಅಜಾನನ್ನ ತು ಸಂವದೇ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಹಾಗೆಯೇ ಆಗಲಿ ಎಂದು ರಾಜನು ಉತ್ತರಿಸಿದನು. “ನನಗೆ ತಿಳಿದಿದ್ದರೆ ಹೇಳುತ್ತೇನೆ. ತಿಳಿಯದೇ ಇದ್ದರೆ ಹೇಳುವುದಿಲ್ಲ.”

13010044 ಪುರೋಹಿತ ಉವಾಚ|

13010044a ಪುಣ್ಯಾಹವಾಚನೇ ನಿತ್ಯಂ ಧರ್ಮಕೃತ್ಯೇಷು ಚಾಸಕೃತ್|

13010044c ಶಾಂತಿಹೋಮೇಷು ಚ ಸದಾ ಕಿಂ ತ್ವಂ ಹಸಸಿ ವೀಕ್ಷ್ಯ ಮಾಮ್||

ಪುರೋಹಿತನು ಹೇಳಿದನು: “ನಿತ್ಯವೂ ಪುಣ್ಯಾಹವಾಚನ ಮತ್ತು ಧರ್ಮಕಾರ್ಯಗಳನ್ನು ಮಾಡಿಸುವಾಗ, ಶಾಂತಿಹೋಮಗಳಲ್ಲಿ ಏಕೆ ನೀನು ಸದಾ ನನ್ನನ್ನು ನೋಡಿ ನಗುತ್ತಿರುತ್ತೀಯೆ?

13010045a ಸವ್ರೀಡಂ ವೈ ಭವತಿ ಹಿ ಮನೋ ಮೇ ಹಸತಾ ತ್ವಯಾ|

13010045c ಕಾಮಯಾ ಶಾಪಿತೋ ರಾಜನ್ನಾನ್ಯಥಾ ವಕ್ತುಮರ್ಹಸಿ||

ನೀನು ನನ್ನ ಕುರಿತು ನಗುವಾಗ ನನ್ನ ಮನಸ್ಸಿಗೆ ತುಂಬಾ ನಾಚಿಕೆಯಾಗುತ್ತದೆ. ರಾಜನ್! ಆಣೆಯಿಟ್ಟು ಹೇಳುತ್ತಿದ್ದೇನೆ. ಅನ್ಯಥಾ ಹೇಳಬಾರದು.

13010046a ಭಾವ್ಯಂ ಹಿ ಕಾರಣೇನಾತ್ರ ನ ತೇ ಹಾಸ್ಯಮಕಾರಣಮ್|

13010046c ಕೌತೂಹಲಂ ಮೇ ಸುಭೃಶಂ ತತ್ತ್ವೇನ ಕಥಯಸ್ವ ಮೇ||

ಇದಕ್ಕೆ ಯಾವುದೋ ಒಂದು ಕಾರಣವಿದೆ. ಅಕಾರಣವಾಗಿ ನೀನು ನನ್ನನ್ನು ಹಾಸ್ಯಮಾಡುತ್ತಿಲ್ಲ. ಇದರ ಕುರಿತು ನನಗೆ ತುಂಬಾ ಕುತೂಹಲವಾಗಿದೆ. ತತ್ತ್ವಯುತವಾಗಿ ನನಗೆ ಹೇಳು.”

13010047 ರಾಜೋವಾಚ|

13010047a ಏವಮುಕ್ತೇ ತ್ವಯಾ ವಿಪ್ರ ಯದವಾಚ್ಯಂ ಭವೇದಪಿ|

13010047c ಅವಶ್ಯಮೇವ ವಕ್ತವ್ಯಂ ಶೃಣುಷ್ವೈಕಮನಾ ದ್ವಿಜ||

ರಾಜನು ಹೇಳಿದನು: “ವಿಪ್ರ! ದ್ವಿಜ! ನೀನು ಇದನ್ನು ಕೇಳಿದುದರಿಂದ ಹೇಳಬಾರದಾಗಿದ್ದರೂ ಅವಶ್ಯವಾಗಿ ಅದನ್ನು ಹೇಳಲೇ ಬೇಕಾಗಿದೆ. ಏಕಮನಸ್ಕನಾಗಿ ಕೇಳು.

13010048a ಪೂರ್ವದೇಹೇ ಯಥಾ ವೃತ್ತಂ ತನ್ನಿಬೋಧ ದ್ವಿಜೋತ್ತಮ|

13010048c ಜಾತಿಂ ಸ್ಮರಾಮ್ಯಹಂ ಬ್ರಹ್ಮನ್ನವಧಾನೇನ ಮೇ ಶೃಣು||

ದ್ವಿಜೋತ್ತಮ! ಪೂರ್ವದೇಹದಲ್ಲಿ ಏನಾಯಿತು ಎನ್ನುವುದನ್ನು ಕೇಳು. ಬ್ರಹ್ಮನ್! ಪೂರ್ವಜನ್ಮವು ನನ್ನ ಸ್ಮರಣೆಯಲ್ಲಿದೆ. ಏಕಾಗ್ರಚಿತ್ತನಾಗಿ ನನ್ನನ್ನು ಕೇಳು.

13010049a ಶೂದ್ರೋಽಹಮಭವಂ ಪೂರ್ವಂ ತಾಪಸೋ ಭೃಶಸಂಯುತಃ|

13010049c ಋಷಿರುಗ್ರತಪಾಸ್ತ್ವಂ ಚ ತದಾಭೂರ್ದ್ವಿಜಸತ್ತಮ||

ದ್ವಿಜಸತ್ತಮ! ಹಿಂದೆ ನಾನು ಶೂದ್ರನಾಗಿದ್ದೆ. ಮಹಾ ತಪಸ್ಸಿನಿಂದ ಕೂಡಿದ್ದೆ. ನೀನು ಆಗ ಉಗ್ರತಪಸ್ವಿ ಋಷಿಯಾಗಿದ್ದೆ.

13010050a ಪ್ರೀಯತಾ ಹಿ ತದಾ ಬ್ರಹ್ಮನ್ಮಮಾನುಗ್ರಹಬುದ್ಧಿನಾ|

13010050c ಪಿತೃಕಾರ್ಯೇ ತ್ವಯಾ ಪೂರ್ವಮುಪದೇಶಃ ಕೃತೋಽನಘ|

13010050e ಬೃಸ್ಯಾಂ ದರ್ಭೇಷು ಹವ್ಯೇ ಚ ಕವ್ಯೇ ಚ ಮುನಿಸತ್ತಮ||

ಬ್ರಹ್ಮನ್! ಅನಘ! ಮುನಿಸತ್ತಮ! ಆಗ ಪ್ರೀತಿಯಿಂದ ನನ್ನ ಮೇಲಿನ ಅನುಗ್ರಹ ಬುದ್ಧಿಯಿಂದ ನೀನು ಹಿಂದೆ ಪಿತೃಕಾರ್ಯದಲ್ಲಿ ಚಾಪೆ, ದರ್ಭೆ ಮತ್ತು ಹವ್ಯ ಕವ್ಯಗಳ ವಿಷಯಗಳಲ್ಲಿ ನನಗೆ ಉಪದೇಶಮಾಡಿದ್ದೆ.

13010051a ಏತೇನ ಕರ್ಮದೋಷೇಣ ಪುರೋಧಾಸ್ತ್ವಮಜಾಯಥಾಃ|

13010051c ಅಹಂ ರಾಜಾ ಚ ವಿಪ್ರೇಂದ್ರ ಪಶ್ಯ ಕಾಲಸ್ಯ ಪರ್ಯಯಮ್|

13010051e ಮತ್ಕೃತೇ ಹ್ಯುಪದೇಶೇನ ತ್ವಯಾ ಪ್ರಾಪ್ತಮಿದಂ ಫಲಮ್||

ಈ ಕರ್ಮದೋಷದಿಂದ ನೀನು ಪುರೋಹಿತನಾಗಿ ಹುಟ್ಟಿದೆ. ವಿಪ್ರೇಂದ್ರ! ನಾನು ರಾಜನಾಗಿ ಹುಟ್ಟಿದೆ. ಕಾಲ್ಯದ ಪರ್ಯಯವನ್ನು ನೋಡು! ನನಗೆ ಉಪದೇಶಮಾಡಿದುದರಿಂದ ನಿನಗೆ ಈ ಫಲವು ಪ್ರಾಪ್ತವಾಯಿತು.

13010052a ಏತಸ್ಮಾತ್ಕಾರಣಾದ್ಬ್ರಹ್ಮನ್ಪ್ರಹಸೇ ತ್ವಾಂ ದ್ವಿಜೋತ್ತಮ|

13010052c ನ ತ್ವಾಂ ಪರಿಭವನ್ಬ್ರಹ್ಮನ್ಪ್ರಹಸಾಮಿ ಗುರುರ್ಭವಾನ್||

ಬ್ರಹ್ಮನ್! ದ್ವಿಜೋತ್ತಮ! ಈ ಕಾರಣದಿಂದಲೇ ನಾನು ನಿನ್ನನ್ನು ನೋಡು ನಗುತ್ತಿದ್ದೆ. ನಿನ್ನನ್ನು ಅಪಮಾನಗೊಳಿಸಲು ನಾನು ನಗುತ್ತಿರಲಿಲ್ಲ. ನೀನು ನನ್ನ ಗುರುವಾಗಿರುವೆ!

13010053a ವಿಪರ್ಯಯೇಣ ಮೇ ಮನ್ಯುಸ್ತೇನ ಸಂತಪ್ಯತೇ ಮನಃ|

13010053c ಜಾತಿಂ ಸ್ಮರಾಮ್ಯಹಂ ತುಭ್ಯಮತಸ್ತ್ವಾಂ ಪ್ರಹಸಾಮಿ ವೈ||

ಈ ವೈಪರೀತ್ಯದಿಂದಾಗಿ ನನ್ನ ಮನಸ್ಸಿಗೆ ಖೇದವುಂಟಾಗಿದೆ. ಪರಿತಾಪವುಂಟಾಗುತ್ತಿದೆ. ನಮ್ಮ ಹಿಂದಿನ ಜನ್ಮವನ್ನು ಸ್ಮರಿಸಿಕೊಂಡು ನಿನ್ನನ್ನು ನೋಡಿದಾಗಲೆಲ್ಲಾ ನಗುತ್ತೇನೆ.

13010054a ಏವಂ ತವೋಗ್ರಂ ಹಿ ತಪ ಉಪದೇಶೇನ ನಾಶಿತಮ್|

13010054c ಪುರೋಹಿತತ್ವಮುತ್ಸೃಜ್ಯ ಯತಸ್ವ ತ್ವಂ ಪುನರ್ಭವೇ||

ಆ ಉಪದೇಶದಿಂದ ನಿನ್ನ ಉಗ್ರ ತಪಸ್ಸು ನಾಶವಾಯಿತು. ಆದುದರಿಂದ ಈ ಪುರೋಹಿತತ್ವವನ್ನು ತೊರೆದು ಶ್ರೇಷ್ಠ ಜನ್ಮವನ್ನು ಪಡೆಯಲು ಪುನಃ ಪ್ರಯತ್ನಿಸು.

13010055a ಇತಸ್ತ್ವಮಧಮಾಮನ್ಯಾಂ ಮಾ ಯೋನಿಂ ಪ್ರಾಪ್ಸ್ಯಸೇ ದ್ವಿಜ|

13010055c ಗೃಹ್ಯತಾಂ ದ್ರವಿಣಂ ವಿಪ್ರ ಪೂತಾತ್ಮಾ ಭವ ಸತ್ತಮ||

ದ್ವಿಜ! ಸತ್ತಮ! ಇನ್ನು ಮುಂದಾದರೂ ನಿನಗೆ ಅನ್ಯ ಯೋನಿಯು ಪ್ರಾಪ್ತವಾಗದಿರಲಿ. ವಿಪ್ರ! ಬೇಕಾದಷ್ಟು ಧನವನ್ನು ತೆಗೆದುಕೋ! ಪೂತಾತ್ಮನಾಗು!””

13010056 ಭೀಷ್ಮ ಉವಾಚ|

13010056a ತತೋ ವಿಸೃಷ್ಟೋ ರಾಜ್ಞಾ ತು ವಿಪ್ರೋ ದಾನಾನ್ಯನೇಕಶಃ|

13010056c ಬ್ರಾಹ್ಮಣೇಭ್ಯೋ ದದೌ ವಿತ್ತಂ ಭೂಮಿಂ ಗ್ರಾಮಾಂಶ್ಚ ಸರ್ವಶಃ||

ಭೀಷ್ಮನು ಹೇಳಿದನು: “ರಾಜನಿಂದ ಕಳುಹಿಸಲ್ಪಟ್ಟ ಆ ವಿಪ್ರನು ಅನೇಕ ಬ್ರಾಹ್ಮಣರಿಗೆ ವಿತ್ತ, ಭೂಮಿ, ಗ್ರಾಮ ಮತ್ತು ಸರ್ವವನ್ನೂ ದಾನಗಳನ್ನಾಗಿತ್ತನು.

13010057a ಕೃಚ್ಚ್ರಾಣಿ ಚೀರ್ತ್ವಾ ಚ ತತೋ ಯಥೋಕ್ತಾನಿ ದ್ವಿಜೋತ್ತಮಃ|

13010057c ತೀರ್ಥಾನಿ ಚಾಭಿಗತ್ವಾ ವೈ ದಾನಾನಿ ವಿವಿಧಾನಿ ಚ||

ಆ ದ್ವಿಜೋತ್ತಮನು ಬ್ರಾಹ್ಮಣರಿಗೆ ಹೇಳಿದಂತಹ ಕೃಚ್ಚ್ರಾದಿ ವ್ರತಗಳನ್ನು ಮಾಡಿ ತೀರ್ಥಗಳಿಗೆ ಹೋಗಿ ವಿವಿಧ ದಾನಗಳನ್ನಿತ್ತನು.

13010058a ದತ್ತ್ವಾ ಗಾಶ್ಚೈವ ವಿಪ್ರಾಣಾಂ ಪೂತಾತ್ಮಾ ಸೋಽಭವದ್ದ್ವಿಜಃ|

13010058c ತಮೇವ ಚಾಶ್ರಮಂ ಗತ್ವಾ ಚಚಾರ ವಿಪುಲಂ ತಪಃ||

ಆ ದ್ವಿಜನು ಗೋವುಗಳನ್ನೂ ವಿಪ್ರರಿಗೆ ನೀಡಿ ಪೂತಾತ್ಮನಾಗಿ ಅದೇ ಆಶ್ರಮಕ್ಕೆ ಹೋಗಿ ವಿಪುಲ ತಪಸ್ಸನ್ನು ಆಚರಿಸಿದನು.

13010059a ತತಃ ಸಿದ್ಧಿಂ ಪರಾಂ ಪ್ರಾಪ್ತೋ ಬ್ರಾಹ್ಮಣೋ ರಾಜಸತ್ತಮ|

13010059c ಸಂಮತಶ್ಚಾಭವತ್ತೇಷಾಮಾಶ್ರಮೇಽ’ಶ್ರಮವಾಸಿನಾಮ್||

ರಾಜಸತ್ತಮ! ಅನಂತರ ಆ ಬ್ರಾಹ್ಮಣನು ಪರಮ ಸಿದ್ಧಿಯನ್ನು ಪಡೆದನು. ಆ ಆಶ್ರಮದಲ್ಲಿ ಆಶ್ರಮವಾಸಿಗಳ ಮಾನನೀಯನೂ ಆದನು.

13010060a ಏವಂ ಪ್ರಾಪ್ತೋ ಮಹತ್ಕೃಚ್ಚ್ರಮೃಷಿಃ ಸ ನೃಪಸತ್ತಮ|

13010060c ಬ್ರಾಹ್ಮಣೇನ ನ ವಕ್ತವ್ಯಂ ತಸ್ಮಾದ್ವರ್ಣಾವರೇ ಜನೇ||

ನೃಪಸತ್ತಮ! ಹೀಗೆ ಆ ಋಷಿಯು ಮಹಾ ಕಷ್ಟವನ್ನು ಅನುಭವಿಸಿದನು. ಆದುದರಿಂದ ಬ್ರಾಹ್ಮಣನು ಕೆಳವರ್ಣದ ಜನರಿಗೆ ಉಪದೇಶಿಸಬಾರದು.

13010061a ವರ್ಜಯೇದುಪದೇಶಂ ಚ ಸದೈವ ಬ್ರಾಹ್ಮಣೋ ನೃಪ|

13010061c ಉಪದೇಶಂ ಹಿ ಕುರ್ವಾಣೋ ದ್ವಿಜಃ ಕೃಚ್ಚ್ರಮವಾಪ್ನುಯಾತ್||

ನೃಪ! ಯಾವಾಗಲೂ ಉಪದೇಶಮಾಡುವುದನ್ನು ಬ್ರಾಹ್ಮಣನು ವರ್ಜಿಸಬೇಕು. ಏಕೆಂದರೆ ಉಪದೇಶ ಮಾಡುವ ದ್ವಿಜನು ಕಷ್ಟಗಳನ್ನು ಪಡೆದುಕೊಳ್ಳುತ್ತಾನೆ.

13010062a ಏಷಿತವ್ಯಂ ಸದಾ ವಾಚಾ ನೃಪೇಣ ದ್ವಿಜಸತ್ತಮಾತ್|

13010062c ನ ಪ್ರವಕ್ತವ್ಯಮಿಹ ಹಿ ಕಿಂ ಚಿದ್ವರ್ಣಾವರೇ ಜನೇ||

 

13010063a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಸ್ತ್ರಯೋ ವರ್ಣಾ ದ್ವಿಜಾತಯಃ|

13010063c ಏತೇಷು ಕಥಯನ್ರಾಜನ್ಬ್ರಾಹ್ಮಣೋ ನ ಪ್ರದುಷ್ಯತಿ||

ರಾಜನ್! ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ – ಈ ಮೂರು ವರ್ಣದವರು ದ್ವಿಜಾತಿಗಳು. ಇವರೊಂದಿಗೆ ಮಾತನಾಡುವುದರಿಂದ ಬ್ರಾಹ್ಮಣನು ಪ್ರದೂಷಿತನಾಗುವುದಿಲ್ಲ.

13010064a ತಸ್ಮಾತ್ಸದ್ಭಿರ್ನ ವಕ್ತವ್ಯಂ ಕಸ್ಯ ಚಿತ್ಕಿಂ ಚಿದಗ್ರತಃ|

13010064c ಸೂಕ್ಷ್ಮಾ ಗತಿರ್ಹಿ ಧರ್ಮಸ್ಯ ದುರ್ಜ್ಞೇಯಾ ಹ್ಯಕೃತಾತ್ಮಭಿಃ||

ಆದುದರಿಂದ ಸಾಧುಜನರು ಯಾರೊಡನೆಯಾದರೂ ಮಾತನಾಡಲು ಮುಂದಾಗಬಾರದು. ಧರ್ಮದ ಗತಿಯು ಸೂಕ್ಷ್ಮ. ಅಕೃತಾತ್ಮರಿಗೆ ಇದು ಸುಲಭವಾಗಿ ತಿಳಿಯುವುದಿಲ್ಲ.

13010065a ತಸ್ಮಾನ್ಮೌನಾನಿ ಮುನಯೋ ದೀಕ್ಷಾಂ ಕುರ್ವಂತಿ ಚಾದೃತಾಃ|

13010065c ದುರುಕ್ತಸ್ಯ ಭಯಾದ್ರಾಜನ್ನಾನುಭಾಷಂತಿ ಕಿಂ ಚನ||

ರಾಜನ್! ಆದುದರಿಂದ ಮುನಿಗಳು ಮೌನದಿಂದ ದೀಕ್ಷೆಗಳನ್ನು ನಡೆಸುತ್ತಾರೆ. ಅನುಚಿತ ಮಾತುಗಳು ಹೊರಟುಬಿಡಬಹುದೆಂಬ ಭಯದಿಂದ ಅವರು ಯಾರೊಡನೆಯೂ ಮಾತನ್ನಾಡುವುದಿಲ್ಲ.

13010066a ಧಾರ್ಮಿಕಾ ಗುಣಸಂಪನ್ನಾಃ ಸತ್ಯಾರ್ಜವಪರಾಯಣಾಃ|

13010066c ದುರುಕ್ತವಾಚಾಭಿಹತಾಃ ಪ್ರಾಪ್ನುವಂತೀಹ ದುಷ್ಕೃತಮ್||

ಧಾರ್ಮಿಕರು, ಗುಣಸಂಪನ್ನರು, ಸತ್ಯ-ಸರಳತೆಗಳನ್ನು ಪರಿಪಾಲಿಸುವವರು ಅನುಚಿತ ಮಾತಗಳನ್ನಾಡುವುದರಿಂದ ಪಾಪವನ್ನು ಪಡೆದುಕೊಳ್ಳುತ್ತಾರೆ.

13010067a ಉಪದೇಶೋ ನ ಕರ್ತವ್ಯಃ ಕದಾ ಚಿದಪಿ ಕಸ್ಯ ಚಿತ್|

13010067c ಉಪದೇಶಾದ್ಧಿ ತತ್ಪಾಪಂ ಬ್ರಾಹ್ಮಣಃ ಸಮವಾಪ್ನುಯಾತ್||

ಬ್ರಾಹ್ಮಣನು ಯಾವಾಗಲೂ ಯಾರಿಗೂ ಉಪದೇಶವನ್ನು ಮಾಡಬಾರದು. ಉಪದೇಶಮಾಡುವುದರಿಂದ ಶಿಷ್ಯನ ಪಾಪವನ್ನು ಅವನು ಪಡೆದುಕೊಳ್ಳುತ್ತಾನೆ.

13010068a ವಿಮೃಶ್ಯ ತಸ್ಮಾತ್ಪ್ರಾಜ್ಞೇನ ವಕ್ತವ್ಯಂ ಧರ್ಮಮಿಚ್ಚತಾ|

13010068c ಸತ್ಯಾನೃತೇನ ಹಿ ಕೃತ ಉಪದೇಶೋ ಹಿನಸ್ತಿ ವೈ||

ಆದುದರಿಂದ ಧರ್ಮವನ್ನು ಬಯಸುವವನು ಪ್ರಜ್ಞೆಯಿಂದ ವಿಮರ್ಶಿಸಿ ಹೇಳಬೇಕು. ಸತ್ಯ-ಅನೃತಗಳನ್ನು ಕೂಡಿಸಿ ಮಾಡಿದ ಉಪದೇಶವು ಅವನನ್ನೇ ನಾಶಗೊಳಿಸುತ್ತದೆ.

13010069a ವಕ್ತವ್ಯಮಿಹ ಪೃಷ್ಟೇನ ವಿನಿಶ್ಚಿತ್ಯ ವಿಪರ್ಯಯಮ್|

13010069c ಸ ಚೋಪದೇಶಃ ಕರ್ತವ್ಯೋ ಯೇನ ಧರ್ಮಮವಾಪ್ನುಯಾತ್||

ಕೇಳಿದಾಗ ವಿಪರ್ಯಾಸಗಳನ್ನು ವಿಮರ್ಶಿಸಿ ಉಪದೇಶಿಸಬೇಕು. ಅದರಿಂದ ಪುಣ್ಯವು ಲಭಿಸುತ್ತದೆ.

13010070a ಏತತ್ತೇ ಸರ್ವಮಾಖ್ಯಾತಮುಪದೇಶೇ ಕೃತೇ ಸತಿ|

13010070c ಮಹಾನ್ ಕ್ಲೇಶೋ ಹಿ ಭವತಿ ತಸ್ಮಾನ್ನೋಪದಿಶೇತ್ಕ್ವ ಚಿತ್||

ಉಪದೇಶದ ಸಂಬಂಧವಾಗಿ ನಾನು ಎಲ್ಲವನ್ನೂ ನಿನಗೆ ಹೇಳಿದ್ದೇನೆ. ಉಪದೇಶಮಾಡುವುದರಿಂದ ಮಹಾಕ್ಲೇಶವುಂಟಾಗುತ್ತದೆ. ಆದುದರಿಂದ ಯಾರಿಗೂ ಉಪದೇಶಮಾಡಬಾರದು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶೂದ್ರಮುನಿಸಂವಾದೇ ದಶಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶೂದ್ರಮುನಿಸಂವಾದ ಎನ್ನುವ ಹತ್ತನೇ ಅಧ್ಯಾಯವು.

Related image

Comments are closed.