ಅಶ್ವತ್ಥಾಮನು ರಾತ್ರಿ ಮಲಗಿದ್ದ ಪಾಂಡವ ಸೇನೆಯನ್ನು ಆಕ್ರಮಣಿಸಲು ನಿಶ್ಚಯಿಸಿದುದು

ಅನಂತರ ವೀರ ಅಶ್ವತ್ಥಾಮ, ಕೃಪ ಮತ್ತು ಕೃತವರ್ಮರು ಒಟ್ಟಾಗಿ ದಕ್ಷಿಣಾಭಿಮುಖವಾಗಿ ಪ್ರಯಾಣಿಸುತ್ತಾ ಸೂರ್ಯಾಸ್ತಮನದ ವೇಳೆಯಲ್ಲಿ ಶಿಬಿರಗಳ ಬಳಿ ಆಗಮಿಸಿದರು. ಭೀತರಾದ ಅವರು ಗಹನವನಪ್ರದೇಶವನ್ನು ಸೇರಿ ತ್ವರೆಮಾಡಿ ಕುದುರೆಗಳನ್ನು ಬಿಚ್ಚಿ ಯಾರಿಗೂ ಕಾಣದಂತೆ ಒಂದೆಡೆ ಕುಳಿತುಕೊಂಡರು. ಸೇನಾಡೇರೆಗಳ ಅನತಿದೂರದಲ್ಲಿಯೇ ಕುಳಿತುಕೊಂಡಿದ್ದ ಅವರು ನಿಶಿತ ಶಸ್ತ್ರಗಳಿಂದ ಪ್ರಹೃತರಾಗಿ ಶರೀರಾದ್ಯಂತ ಕ್ಷತವಿಕ್ಷತರಾಗಿದ್ದರು. ಜಯೋಲ್ಲಾಸಿತರಾದ ಪಾಂಡವರ ಘೋರ ನಿನಾದವನ್ನು ಕೇಳಿ ಪಾಂಡವರನ್ನೇ ಬಾರಿ ಬಾರಿಗೂ ಚಿಂತಿಸುತ್ತಾ ಸುದೀರ್ಘವಾದ ಬಿಸಿಬಿಸಿಯಾದ ನಿಟ್ಟುಸಿರನ್ನು ಬಿಡುತ್ತಿದ್ದರು. ಅವರೇನಾದರೂ ತಮ್ಮನ್ನು ಹಿಂಬಾಲಿಸಿ ಬರಬಹುದೆಂಬ ಭಯದಿಂದ ಪುನಃ ಪೂರ್ವಾಭಿಮುಖವಾಗಿ ಓಡಿದರು. ಮುಹೂರ್ತಕಾಲ ಹೋಗಲು ಕುದುರೆಗಳು ಬಳಲಿದವು ಮತ್ತು ಬಾಯಾರಿದವು. ರಾಜನ ವಧೆಯಿಂದುಂಟಾದ ಕೋಪವನ್ನು ಸಹಿಸಿಕೊಳ್ಳಲಾಗದೇ ಆ ಮಹೇಷ್ವಾಸರು ಸಂತಪ್ತರಾಗಿ ಮುಹೂರ್ತಕಾಲ ಸುಮ್ಮನೇ ಕುಳಿತುಕೊಂಡರು.

ಅವರು ಕುಳಿತಿದ್ದ ಅನತಿ ದೂರದಲ್ಲಿ ನಾನಾ ವೃಕ್ಷ-ಲತೆಗಳಿಂದ ಕೂಡಿದ್ದ ಘೋರವನವೊಂದನ್ನು ನೋಡಿದರು. ಮುಹೂರ್ತಕಾಲ ವಿಶ್ರಮಿಸಿದ ಅವರು ಉತ್ತಮ ಕುದುರೆಗಳಿಗೆ ನೀರುಕುಡಿಸಿ ಸೂರ್ಯಾಸ್ತದ ಸಮಯದಲ್ಲಿ ಆ ಮಹಾವನವನ್ನು ಪ್ರವೇಶಿಸಿದರು. ಆ ಅರಣ್ಯದಲ್ಲಿ ನಾನಾ ಮೃಗಗಣಗಳು ವಾಸಿಸುತ್ತಿದ್ದವು. ನಾನಾ ಪಕ್ಷಿಸಮಾಕುಲಗಳಿದ್ದವು. ನಾನಾದ್ರುಮಲತೆಗಳಿಂದ ಮುಚ್ಚಿಕೊಂಡಿತ್ತು. ನಾನಾವಿಷಜಂತುಗಳಿಂದ ತುಂಬಿತ್ತು. ನೂರಾರು ಕಮಲಪುಷ್ಪಗಳಿಂದ ಮತ್ತು ನೀಲೋತ್ಪಲಗಳಿಂದ ಮುಚ್ಚಿಹೋಗಿದ್ದ ನಾನಾವಿಧದ ಸರೋವರ-ಕೊಳಗಳಿಂದ ಶೋಭಿಸುತ್ತಿತ್ತು. ಆ ಘೋರ ವನವನ್ನು ಪ್ರವೇಶಿಸಿ ಸುತ್ತಲೂ ನೋಡುತ್ತಿದ್ದ ಅವರು ಸಹಸ್ರ ರೆಂಬೆಗಳಿಂದ ವಿಶಾಲವಾಗಿ ಹರಡಿದ್ದ ಆಲದ ಮರವನ್ನು ಕಂಡರು. ಮನುಜರಲ್ಲಿ ಶ್ರೇಷ್ಠ ಆ ಮಹಾರಥರು ಆಲದಮರದ ಬಳಿಹೋಗಿ ಆ ಶ್ರೇಷ್ಠ ವನಸ್ಪತಿಯನ್ನು ನೋಡಿದರು. ಅವರು ರಥಗಳಿಂದ ಕೆಳಗಿಳಿದು ಕುದುರೆಗಳನ್ನು ಬಿಚ್ಚಿದರು. ಯಥಾನ್ಯಾಯವಾಗಿ ಅವರು ಸ್ನಾನಾಚಮನಾದಿಗಳನ್ನು ಮಾಡಿ ಸಂಧ್ಯಾವಂದನೆಯನ್ನೂ ಪೂರೈಸಿದರು. ಆಗ ದಿವಾಕರನು ಪರ್ವತಶ್ರೇಷ್ಠನನ್ನು ಸೇರಿ ಅಸ್ತನಾಗಲು ಸರ್ವ ಜಗತ್ತಿನ ಧಾತ್ರೀ ಶರ್ವರಿಯು ಆವರಿಸಿದಳು. ಗ್ರಹನಕ್ಷತ್ರತಾರೆಗಳಿಂದ ಅಲಂಕೃತವಾಗಿ ಹರಡಿದ್ದ ನಭೆಯು ಅಂಶುಕ[1]ದಂತೆ ಎಲ್ಲೆಡೆ ಪ್ರೇಕ್ಷಣೀಯವಾಗಿ ಹೊಳೆಯುತ್ತಿತ್ತು. ರಾತ್ರಿಯಲ್ಲಿ ಸಂಚರಿಸುವ ಪ್ರಾಣಿಗಳು ಇಚ್ಛಾನುಸಾರವಾಗಿ ಸಂಚರಿಸಲೂ ಕೂಗಲೂ ತೊಡಗಿದವು. ಹಗಲಲ್ಲಿ ಸಂಚರಿಸುವ ಪ್ರಾಣಿಗಳು ನಿದ್ರಾವಶವಾದವು. ಕತ್ತಲೆಯು ಕವಿಯುತ್ತಲೇ ರಾತ್ರಿಸಂಚರಿಸುವ ಮಾಂಸಾಹಾರಿ ಪ್ರಾಣಿಗಳು ಸಂತೋಷದಿಂದ ಘೋರವಾಗಿ ಸುದಾರುಣವಾಗಿ ಕೂಗತೊಡಗಿದವು. ಘೋರ ರಾತ್ರಿಯ ಪ್ರಾರಂಭದಲ್ಲಿ ದುಃಖಶೋಕಸಮನ್ವಿತರಾದ ಕೃತವರ್ಮ, ಕೃಪ, ಮತ್ತು ದ್ರೌಣಿಯರು ಒಂದೇ ಸಾಲಿನಲ್ಲಿ ಕುಳಿತುಕೊಂಡರು. ಆಲದ ಮರದ ಸಮೀಪದಲ್ಲಿ ಕುಳಿತಿದ್ದ ಅವರು ಅತಿಕ್ರಮಿಸಲು ಸಾಧ್ಯವಾಗದ ಕುರುಪಾಂಡವರ ಕ್ಷಯದ ಕುರಿತೇ ಮಾತನಾಡಿಕೊಳ್ಳುತ್ತಾ ಶೋಕಿಸುತ್ತಿದ್ದರು. ವಿವಿಧ ಶರಗಳಿಂದ ಗಾಢವಾಗಿ ಕ್ಷತವಿಕ್ಷತರಾಗಿದ್ದ ಅವರು ಬಳಲಿದ್ದು ನಿದ್ದೆಯಿಂದ ತೂಕಡಿಸುತ್ತಾ ನೆಲದ ಮೇಲೆಯೇ ಕುಳಿತಿದ್ದರು. ಆಗ ಸುಖೋಚಿತರಾಗಿದ್ದ ಮತ್ತು ದುಃಖಕ್ಕೆ ಅನರ್ಹರಾಗಿದ್ದ ಮಹಾರಥ ಕೃಪ-ಕೃತವರ್ಮರು ನಿದ್ರಾವಶರಾಗಿ ಆಯಾಸ-ಶೋಕಸಮನ್ವಿತರಾಗಿ ನೆಲದ ಮೇಲೆಯೇ ಮಲಗಿಕೊಂಡರು.

ಆದರೆ ಕ್ರೋಧ-ಅಸಹನೆಗಳ ವಶನಾಗಿದ್ದ ದ್ರೋಣಪುತ್ರನಿಗೆ ಮಾತ್ರ ನಿದ್ದೆಯು ಬರಲಿಲ್ಲ. ಅವನು ಸರ್ಪದಂತೆ ಸುದೀರ್ಘವಾಗಿ ನಿಟ್ಟುಸಿರು ಬಿಡುತ್ತಾ ಎಚ್ಚೆತ್ತೇ ಇದ್ದನು. ಅತಿಕೋಪದಿಂದ ಸುಡುತ್ತಾ ನಿದ್ರೆಯೇ ಬರದಿದ್ದ ಮಹಾಬಾಹುವು ಘೋರವಾಗಿ ಕಾಣುತ್ತಿದ್ದ ವನವನ್ನೇ ವೀಕ್ಷಿಸುತ್ತಿದ್ದನು. ನಾನಾ ಪ್ರಾಣಿಗಳಿಂದ ಕೂಡಿದ್ದ ವನಪ್ರದೇಶವನ್ನು ನೋಡುತ್ತಿದ್ದ ಮಹಾಬಾಹುವು ಆಲದ ಮರದಲ್ಲಿ ವಾಸಿಸುತ್ತಿದ್ದ ಕಾಗೆಗಳ ಗುಂಪನ್ನು ಕಂಡನು. ಸಹಸ್ರಾರು ಕಾಗೆಗಳು ಮರದ ಪ್ರತ್ಯೇಕ ಪ್ರತ್ಯೇಕ ರೆಂಬೆಗಳನ್ನು ಆಶ್ರಯಿಸಿ ಸುಖವಾಗಿ ನಿದ್ರೆಮಾಡುತ್ತಾ ರಾತ್ರಿಯನ್ನು ಕಳೆಯುತ್ತಿದ್ದವು. ಸುತ್ತಲೂ ನಿಃಶಬ್ಧವಾಗಿದ್ದು ಕಾಗೆಗಳು ಮಲಗಿರಲು ಒಮ್ಮೆಲೇ ಅಲ್ಲಿ ಮಹಾಸ್ವರದ, ಮಹಾಕಾಯದ, ಹಳದೀ ಬಣ್ಣದ ಕಣ್ಣುಳ್ಳ, ಪಿಂಗಲ ಹುಬ್ಬುಗಳುಳ್ಳ, ಸುದೀರ್ಘ ಕೊಕ್ಕು-ಉಗುರುಗಳುಳ್ಳ, ಗರುಡನಂತಹ ವೇಗವುಳ್ಳ ಘೋರ ಗೂಬೆಯೊಂದು ಕಂಡುಬಂದಿತು. ಆಗ ಶಬ್ಧವನ್ನು ಮೃದುವಾಗಿಸಿ, ಅಡಗಿಕೊಂಡೇ ಪಕ್ಷಿಯು ಆಲದಮರದ ರೆಂಬೆಗಳ ಮೇಲೆ ಹಾರಿ ಹುಡುಕತೊಡಗಿತು. ಆಲದಮರದ ರೆಂಬೆಯಿಂದ ರೆಂಬೆಗೆ ಹಾರುತ್ತಾ ಕಾಗೆಗಳ ಅಂತಕ ಪಕ್ಷಿಯು ಮಲಗಿದ್ದ ಅನೇಕ ಕಾಗೆಗಳನ್ನು ಸಂಹರಿಸಿತು. ಕಾಲುಗಳೇ ಆಯುಧವಾಗಿದ್ದ ಗೂಬೆಯು ಕೆಲವು ಕಾಗೆಗಳ ರೆಕ್ಕೆಗಳನ್ನು ಕತ್ತರಿಸಿತು. ಕೆಲವು ಕಾಗೆಗಳ ತಲೆಗಳನ್ನು ಕತ್ತರಿಸಿತು. ಕೆಲವು ಕಾಗೆಗಳ ಕಾಲುಗಳನ್ನು ಮುರಿಯಿತು. ಕ್ಷಣದಲ್ಲಿಯೇ ಬಲವಾನ್ ಪಕ್ಷಿಯು ತನ್ನ ದೃಷ್ಟಿ ಪಥದಲ್ಲಿ ಬಂದ ಕಾಗೆಗಳೆಲ್ಲವನ್ನೂ ಕೊಂದುಹಾಕಿತು. ವಟವೃಕ್ಷದ ಮಡಲವು ಸತ್ತುಹೋದ ಕಾಗೆಗಳಿಂದಲೂ ಮತ್ತು ಅವುಗಳ ಛಿನ್ನ-ಛಿನ್ನ ಅವಯವಗಳಿಂದಲೂ ತುಂಬಿಹೋಯಿತು. ಶತ್ರುಸೂದನ ಗೂಬೆಯು ಬೇಕಾದಂತೆ ಶತ್ರುಗಳನ್ನು ಸಂಹರಿಸಿ ಪ್ರತೀಕಾರಮಾಡಿ ಆನಂದಿಸಿತು.

ಗೂಬೆಯು ರಾತ್ರಿಯಲ್ಲಿ ವಂಚನೆಯಿಂದ ಮಾಡಿದ ಕ್ರೂರ ಕರ್ಮವನ್ನು ನೋಡಿದ ದ್ರೌಣಿಯು ತಾನೂ ಕೂಡ ಹಾಗೆ ಮಾಡಬೇಕೆಂಬ ಸಂಕಲ್ಪದಿಂದ ಒಬ್ಬನೇ ಯೋಚಿಸತೊಡಗಿದನು. “ಯುದ್ಧದಲ್ಲಿ ನಾನು ಏನು ಮಾಡಬೇಕೆನ್ನುವುದನ್ನು ಪಕ್ಷಿಯೇ ನನಗೆ ಉಪದೇಶಿಸಿದಂತಿದೆ! ಶತ್ರುಗಳ ವಿನಾಶಕಾರ್ಯಕ್ಕೆ ಸಮಯವು ಬಂದೊದಗಿದೆಯೆಂದು ನನಗನ್ನಿಸುತ್ತದೆ. ವಿಜಯದ ಉತ್ಸಾಹದಿಂದ ಬಲವಂತರಾಗಿರುವ ಗುರಿಯಿಟ್ಟು ಪ್ರಹರಿಸಬಲ್ಲ ವಿಜಯಶಾಲಿ ಪಾಂಡವರನ್ನು ಸಂಹರಿಸಲು ಇಂದು ನನಗೆ ಶಕ್ಯವಿಲ್ಲ. ಆದರೆ ರಾಜ ದುರ್ಯೋಧನ ಸಮಕ್ಷಮದಲ್ಲಿ ಅವರನ್ನು ವಧಿಸುತ್ತೇನೆಂದು ನಾನು ಪ್ರತಿಜ್ಞೆಗೈದಿದ್ದೇನೆ. ಆತ್ಮವಿನಾಶಕಾರಿ ಪತಂಗಾಗ್ನಿಸಮ ವೃತ್ತಿ[2]ಯನ್ನನುಸರಿಸಿ ಅವರೊಡನೆ ನ್ಯಾಯರೀತಿಯಲ್ಲಿ ಯುದ್ಧಮಾಡಿದರೆ ಪ್ರಾಣತ್ಯಾಗವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ವಂಚನೆಯಿಂದಲೂ ಶತ್ರುಗಳ ಮಹಾಕ್ಷಯವು ಸಾಧ್ಯವಾಗುತ್ತದೆ. ಅರ್ಥಸಿದ್ಧಿಯ ಸಂಶಯವಿದ್ದಾಗ ನಿಃಸಂಶಯವಾಗಿ ಅರ್ಥಸಿದ್ಧಿಯನ್ನುಂಟು ಮಾಡಬಲ್ಲ ಮಾರ್ಗವನ್ನು ಅನುಸರಿಸಬೇಕೆಂದು ಅರ್ಥಶಾಸ್ತ್ರವಿಶಾರದ ಅನೇಕ ಜನರು ಅಭಿಪ್ರಾಯಪಡುತ್ತಾರೆ. ಕ್ಷತ್ರಧರ್ಮವನ್ನು ಅನುಸರಿಸಿ ನಡೆದುಕೊಳ್ಳುವ ಮನುಷ್ಯನು ಲೋಕನಿಂದಿತವಾದುದನ್ನು ಅಥವಾ ಲೋಕವು ದೂಷಿತವೆಂದು ಹೇಳುವುದನ್ನು ಕರ್ತವ್ಯವೆಂದು ಪಾಲಿಸಬಹುದು. ಅಕೃತಾತ್ಮ ಪಾಂಡವರೆಲ್ಲರೂ ಕೂಡ ಪದೇ ಪದೇ ನಿಂದನೀಯ ಕುತ್ಸಿತ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದೇ ವಿಷಯದ ಮೇಲೆ ಹಿಂದೆ ಧರ್ಮಚಿಂತಕ ತತ್ತ್ವದರ್ಶಿಗಳು ನ್ಯಾಯದೃಷ್ಟಿಯ ತತ್ತ್ವಾರ್ಥಗಳನ್ನು ಎರಡು ಶ್ಲೋಕಗಳ ಗೀತೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಶತ್ರುಗಳು ಬಳಲಿರುವಾಗ, ಚದುರಿಹೋಗಿರುವಾಗ, ಊಟಮಾಡುತ್ತಿರುವಾಗ, ಪ್ರಯಾಣಮಾಡುತ್ತಿರುವಾಗ, ಎಲ್ಲಿಯಾದರೂ ಪ್ರವೇಶಿಸುತ್ತಿರುವಾಗ ಶತ್ರುಸೇನೆಯನ್ನು ಸಂಹರಿಸಬಹುದು. ಅರ್ಥಸಿದ್ಧಿಯನ್ನು ಬಯಸುವ ಕ್ಷತ್ರಿಯನು ಅರ್ಧರಾತ್ರಿಯಲ್ಲಿ ನಿದ್ರಾವಶರಾಗಿರುವ, ಸೇನಾನಾಯಕನನ್ನು ಹೊಂದಿರದ, ಮತ್ತು ಯೋಧರು ಒಟ್ಟಾಗಿರದ ಸೇನೆಯನ್ನು ಸಂಹರಿಸಬೇಕು.”

ಹೀಗೆ ಪ್ರತಾಪವಾನ್ ದ್ರೋಣಪುತ್ರನು ರಣದಲ್ಲಿ ಮಲಗಿರುವ ಪಾಂಡವರನ್ನು ಪಾಂಚಾಲರೊಂದಿಗೆ ಸಂಹರಿಸಲು ನಿಶ್ಚಯಿಸಿದನು. ಕ್ರೂರ ಬುದ್ಧಿಯನ್ನನುಸರಿಸಿ ಪುನಃ ಪುನಃ ನಿರ್ಧಾರಕ್ಕೆ ಬಂದು ಅವನು ಮಲಗಿದ್ದ ಸೋದರಮಾವನನ್ನೂ ಬೋಜ ಕೃತವರ್ಮನನ್ನೂ ಎಚ್ಚರಿಸಿದನು. ನಾಚಿಕೆಗೊಂಡ ಅವರು ಅವನಿಗೆ ಆಗ ಯುಕ್ತವಾದ ಯಾವ ಉತ್ತರವನ್ನೂ ಕೊಡದೇ ಹೋದರು. ಆಗ ಅಶ್ವತ್ಥಾಮನು ಮುಹೂರ್ತಕಾಲ ಯೋಚಿಸಿ ಕಣ್ಣೀರುತುಂಬಿ ವಿಹ್ವಲನಾಗಿ ಹೇಳಿದನು: “ಯಾರಿಗಾಗಿ ನಾವು ಪಾಂಡವರೊಂದಿಗೆ ವೈರವನ್ನು ಕಟ್ಟಿಕೊಂಡೆವೋ ಏಕವೀರ ಮಹಾಬಲ ರಾಜಾ ದುರ್ಯೋಧನನು ಹತನಾದನು. ಹನ್ನೊಂದು ಅಕ್ಷೌಹಿಣೀ ಸೇನೆಗೆ ಒಡೆಯನಾಗಿದ್ದ ಆ ಶುದ್ಧವಿಕ್ರಮನು ಯುದ್ಧದಲ್ಲಿ ಅನೇಕ ಕ್ಷುದ್ರರಿಂದ ಸುತ್ತುವರೆಯಲ್ಪಟ್ಟು ಏಕಾಂಗಿಯಾಗಿ ಭೀಮಸೇನನಿಂದ ಕೆಳಗುರುಳಿಸಲ್ಪಟ್ಟನು. ಮೂರ್ಧಾಭಿಷಿಕ್ತನಾಗಿದ್ದವನ ಶಿರವನ್ನು ಪಾದದಿಂದ ಒದೆದು ವೃಕೋದರನು ಅತಿ ಹೀನ ಮತ್ತು ಕ್ರೂರ ಕಾರ್ಯವನ್ನೆಸಗಿದನು. ಪಾಂಚಾಲರು ಸಂತೋಷದಿಂದ ಸಿಂಹನಾದಮಾಡುತ್ತಿದ್ದಾರೆ. ಅಟ್ಟಹಾಸದಿಂದ ನಗುತ್ತಿದ್ದಾರೆ. ಪ್ರಹೃಷ್ಟರಾಗಿ ನೂರಾರು ಶಂಖಗಳನ್ನು ಊದುತ್ತಿದ್ದಾರೆ. ದುಂದುಭಿಗಳನ್ನು ಬಾರಿಸುತ್ತಿದ್ದಾರೆ. ವಾದ್ಯಘೋಷಗಳ ತುಮುಲ ಶಬ್ಧವು ಶಂಖನಿನಾದಗಳಿಂದ ಕೂಡಿ ಗಾಳಿಯಲ್ಲಿ ತೇಲಿ ಘೋರವಾಗಿ ದಿಕ್ಕುಗಳಲ್ಲಿ ಮೊಳಗುತ್ತಿವೆ. ಕುದುರೆಗಳ ಹೇಂಕಾರವೂ, ಆನೆಗಳ ಘೀಂಕಾರವೂ, ಶೂರರ ಸಿಂಹನಾದಗಳೂ ಜೋರಾಗಿ ಕೇಳಿಬರುತ್ತಿವೆ. ಆನಂದತುಂದಿಲರಾಗಿ ಪೂರ್ವದಿಕ್ಕಿನಕಡೆ ಜೋರಾಗಿ ಗರ್ಜಿಸುತ್ತಾ ಹೋಗುತ್ತಿರುವವರ ರಥಚಕ್ರಗಳ ರೋಮಾಂಚಕಾರೀ ಶಬ್ಧಗಳೂ ಕೇಳಿಬರುತ್ತಿವೆ. ಧಾರ್ತರಾಷ್ಟ್ರರೊಂದಿಗೆ ಪಾಂಡವರು ನಡೆಸಿದ ಕದನದ ಮಹಾ ಸಂಹಾರಕಾರ್ಯದಲ್ಲಿ ನಾವು ಮೂವರು ಮಾತ್ರ ಉಳಿದುಕೊಂಡಿದ್ದೇವೆ. ನಮ್ಮಲ್ಲಿ ಕೆಲವರಿಗೆ ನೂರು ಆನೆಗಳ ಬಲವಿದ್ದಿತು. ಕೆಲವರು ಸರ್ವಾಸ್ತ್ರಕೋವಿದರಾಗಿದ್ದರು. ಅವರು ಪಾಂಡವರಿಂದ ಹತರಾದರೆಂದರೆ ಇದು ಕಾಲದ ವೈಪರಿತ್ಯವೆಂದೇ ನಾವು ಭಾವಿಸಬೇಕಾಗುತ್ತದೆ. ನಿಶ್ಚಯವಾಗಿಯೂ ಕಾರ್ಯದ ಪರಿಣಾಮವು ಹೀಗೆಯೇ ಆಗಬೇಕೆಂದಿತ್ತೇನೋ! ದುಷ್ಕರ ಕಾರ್ಯವನ್ನು ನಿಷ್ಠೆಯಿಂದ ಮಾಡಿದ್ದರೂ ಪರಿಣಾಮವು ಹೀಗಾಯಿತಲ್ಲ! ಮೋಹದಿಂದ ನಿಮ್ಮ ಪ್ರಜ್ಞೆಯು ನಷ್ಟವಾಗಿ ಹೋಗದೇ ಇದ್ದರೆ ನಮ್ಮ ಕಡೆಯ ಎಲ್ಲವೂ ನಾಶವಾಗಿರುವಾಗ ನಮಗೆ ಶ್ರೇಯಸ್ಕರವಾದ ಏನನ್ನು ಮಾಡಬೇಕು ಎನ್ನುವುದನ್ನು ನೀವು ಹೇಳಬೇಕು!”

ಕೃಪನು ಹೇಳಿದನು: “ಮಹಾಭುಜ! ನೀನು ಹೇಳಿದ ಎಲ್ಲವನ್ನೂ ನಾನು ಕೇಳಿದೆನು. ಈಗ ನೀನು ನನ್ನ ಮಾತುಗಳಲ್ಲಿ ಕಿಂಚಿತ್ತನ್ನಾದರೂ ಕೇಳು! ಮನುಷ್ಯರೆಲ್ಲರೂ ಎರಡು ಕರ್ಮಗಳಿಂದ ಬದ್ಧರಾಗಿರುತ್ತಾರೆದೈವ ಮತ್ತು ಪುರುಷಕರ್ಮ. ಇವೆರಡರ ಹೊರತಾಗಿ ಯಾವುದರಿಂದಲೂ ಬದ್ಧನಾಗಿರುವುದಿಲ್ಲ. ದೈವವೊಂದರಿಂದಲೇ ಕಾರ್ಯಗಳು ಸಿದ್ಧಿಸುವುದಿಲ್ಲ. ಹಾಗೆಯೇ ಕೇವಲ ಕರ್ಮಗಳನ್ನು ಮಾಡುವುದರಿಂದಲೂ ಕಾರ್ಯಗಳು ಸಿದ್ಧಿಸುವುದಿಲ್ಲ. ಎರಡೂ ಒಂದುಗೂಡಿದಾಗಲೇ ಕಾರ್ಯಗಳು ಸಿದ್ಧಿಯಾಗುತ್ತವೆ. ಎರಡರಿಂದಲೇ ಉತ್ತಮ ಮತ್ತು ಅಧಮ ಕರ್ಮಗಳೆಲ್ಲವೂ ಬದ್ಧವಾಗಿವೆ. ಎಲ್ಲೆಡೆ ಕಾಣುವ ಆಗುಹೋಗುಗಳೂ ಇವುಗಳಿಂದಲೇ ನಡೆಯುತ್ತವೆ. ಪರ್ಜನ್ಯನು ಪರ್ವತದ ಮೇಲೆ ಮಳೆಸುರಿಸಿದರೆ ಯಾವ ಫಲವು ದೊರಕುತ್ತದೆ? ಹಾಗೆಯೇ ಫಲವತ್ತಾದ ಭೂಮಿಯಮೇಲೆ ಮಳೆಸುರಿಸದೇ ಯಾವ ಫಲವು ದೊರಕುತ್ತದೆ?[3] ದೈವಬಲವಿಲ್ಲದ ಪುರುಷಪ್ರಯತ್ನವೂ ಪುರುಷಯತ್ನವಿಲ್ಲದ ದೈವಬಲವೂ ಸರ್ವಪ್ರಕಾರದಲ್ಲಿ ವ್ಯರ್ಥವಾಗುತ್ತದೆ. ಆದರೆ ಮೊದಲನೆಯ ದೈವವಿಲ್ಲದ ಪುರುಷಪ್ರಯತ್ನವು ವ್ಯರ್ಥವೆನ್ನುವುದು ನಿಶ್ಚಯವೇ ಸರಿ! ಚೆನ್ನಾಗಿ ಉತ್ತಿರುವ ಹೊಲದಲ್ಲಿ ಮಳೆಸುರಿದರೆ ಬೀಜವು ಮಹಾಫಲದಾಯಕವಾಗುತ್ತದೆ. ಹಾಗೆಯೇ ಮನುಷ್ಯನ ಕಾರ್ಯಸಿದ್ಧಿಯು ದೈವದ ಸಹಯೋಗದಿಂದಲೇ ಸಾಧ್ಯ. ಇವೆರಡರಲ್ಲಿ ದೈವವು ಸ್ವಯಂ ನಿಶ್ಚಯಿಸಿ ವರ್ತಿಸುತ್ತದೆ. ತಮ್ಮ ಸಾಮರ್ಥ್ಯವನ್ನು ಅವಲಂಬಿಸಿರುವವರು ಪುರುಷಪ್ರಯತ್ನವೇ ಹೆಚ್ಚೆಂದು ತಿಳಿತು ನಡೆಯುತ್ತಿರುತ್ತಾರೆ. ಮನುಷ್ಯರ ಸರ್ವ ಕಾರ್ಯಾರ್ಥಗಳೂ ಇವೆರಡರಿಂದ ನಡೆಯುತ್ತಿರುವಂತೆ ಮತ್ತು ನಿಲ್ಲುತ್ತಿರುವಂತೆ ಕಾಣುತ್ತವೆ. ಪುರುಷಪ್ರಯತ್ನವೂ ಕೂಡ ದೈವಸಂಕಲ್ಪದಿಂದಲೇ ಮಾಡಲ್ಪಡುತ್ತದೆ. ದೈವದ ಪ್ರೇರಣೆಗೆ ಅನುಸಾರವಾಗಿ ಕಾರ್ಯವನ್ನು ಮಾಡುತ್ತಿದ್ದರೆ ಅದು ಫಲವನ್ನು ನೀಡುತ್ತದೆ. ದಕ್ಷ ಮನುಷ್ಯರ ಪ್ರಯತ್ನಗಳೂ ಕೂಡ ದೈವದಿಂದ ವರ್ಜಿತಗೊಂಡರೆ ಅಫಲವಾಗುತ್ತದೆ ಎನ್ನುವುದಕ್ಕೆ ಅನೇಕ ಉದಾಹರಣೆಗಳು ಲೋಕದಲ್ಲಿ ಕಾಣಸಿಗುತ್ತವೆ. ಆಲಸ್ಯ ಮನುಷ್ಯರು ಇದು ಹೀಗಾಗುತ್ತದೆಯೆಂದು ತಿಳಿದು ಪ್ರಯತ್ನವನ್ನೇ ಮಾಡಲು ಹಿಂಜರಿಯುತ್ತಾರೆ. ಪ್ರಾಜ್ಞರಿಗೆ ಅದು ಸರಿಯೆನಿಸುವುದಿಲ್ಲ. ಪ್ರಾಯಶಃ ಭುವಿಯಲ್ಲಿ ಮಾಡುವ ಕರ್ಮಗಳು ಅಫಲವಾದಂತೆ ಕಾಣುತ್ತವೆ. ಆದರೆ ಕರ್ಮಗಳನ್ನು ಮಾಡದೇ ಇದ್ದರೆ ಪುನಃ ಪುನಃ ದುಃಖಗಳು ದೊರೆಯುತ್ತವೆ. ಕರ್ಮಗಳಲ್ಲಿ ತೊಡಗಿರುವುದೇ ಮಹಾಫಲದಾಯಕವೆಂದು ಕಾಣುತ್ತದೆ. ಪ್ರಯತ್ನಮಾಡದೇ ಕೇವಲ ದೈವೇಚ್ಛೆಯಿಂದಲೇ ಫಲವನ್ನು ಅನುಭವಿಸುವವರು ಅಥವಾ ಪ್ರಯತ್ನಮಾಡುತ್ತಿದ್ದರೂ ಫಲವನ್ನು ಅನುಭವಿಸದೇ ಇರತಕ್ಕವರು - ಈ ಇಬ್ಬರನ್ನೂ ಲೋಕದಲ್ಲಿ ಕಾಣುವುದು ದುರ್ಲಭ. ದಕ್ಷನಾದವನು ಸುಖವಾಗಿ ಜೀವಿಸಬಹುದು. ಆದರೆ ಆಲಸಿಯು ಸುಖವನ್ನು ಪಡೆಯುವುದಿಲ್ಲ. ಜೀವಲೋಕದಲ್ಲಿ ದಕ್ಷರಾಗಿರುವವರು ಪ್ರಾಯಶಃ ಹಿತೈಷಿಗಳೂ ಆಗಿರುತ್ತಾರೆ. ಒಂದುವೇಳೆ ದಕ್ಷನಾದವನು ಕರ್ಮಗಳನ್ನು ಪ್ರಾರಂಭಿಸಿ ಫಲವನ್ನು ಪಡೆಯದೇ ಇದ್ದರೆ ಅವನು ನಿಂದನೆಗೆ ಒಳಗಾಗುವುದಿಲ್ಲ. ಅದಕ್ಕೆ ಕಿಂಚಿತ್ತಾದರೂ ಫಲವು ಲಭಿಸಿಯೇ ಲಭಿಸುತ್ತದೆ. ಆದರೆ ಕರ್ಮಗಳನ್ನು ಮಾಡದೆಯೇ ಕೇವಲ ಅದೃಷ್ಟವಶದಿಂದ ಫಲವನ್ನು ಅನುಭವಿಸುವವನು ಲೋಕನಿಂದನೆಗೆ ಒಳಗಾಗುತ್ತಾನೆ. ಅಂಥವನನ್ನು ಪ್ರಾಯಶಃ ಜನರು ದ್ವೇಷಿಸುತ್ತಾರೆ. ಹೀಗೆ ದೈವ ಮತ್ತು ಪುರುಷಕಾರಗಳ ಸಹಯೋಗವನ್ನು ಅನಾದರಿಸಿ ಅದಕ್ಕೆ ವಿರುದ್ಧವಾಗಿ ವರ್ತಿಸುವವನು ತನಗೆ ತಾನೇ ಅನರ್ಥವನ್ನು ತಂದುಕೊಳ್ಳುತ್ತಾನೆ. ಪ್ರಯತ್ನವನ್ನು ಮಾಡುತ್ತಾ ಕಾರ್ಯಸಿದ್ಧಿಗೆ ದೈವದ ಒಲುಮೆಯನ್ನು ಪಡೆದುಕೊಳ್ಳಬೇಕೆಂಬುದು ಬುದ್ಧಿವಂತರ ನೀತಿಯಾಗಿದೆ. ಪುರುಷಪ್ರಯತ್ನವಿಲ್ಲದೇ ಅದೃಷ್ಟದ ನಿರೀಕ್ಷಣೆ ಅಥವಾ ಪ್ರಯತ್ನಿಸಿದರೂ ದೈವದ ಒಲುಮೆಯಿಲ್ಲದೇ ಇರುವುದು – ಈ ಎರಡು ಕಾರಣಗಳಿಂದಲೂ ಮನುಷ್ಯನ ಪ್ರಯತ್ನಗಳು ನಿಷ್ಫಲವಾಗುತ್ತವೆ. ಪುರುಷಪ್ರಯತ್ನವಿಲ್ಲದೇ ಈ ಲೋಕದಲ್ಲಿ ಯಾವ ಕರ್ಮಗಳೂ ಸಿದ್ಧಿಸುವುದಿಲ್ಲ. ದೇವತೆಗಳಿಗೆ ನಮಸ್ಕರಿಸಿ ಪ್ರಯತ್ನಿಸುವ ದಕ್ಷ ದಾಕ್ಷಿಣ್ಯಸಂಪನ್ನನು ಸಿದ್ಧಿಯನ್ನು ಪಡೆಯುತ್ತಾನೆ. ಎಂದೂ ಅಸಫಲತೆಯನ್ನು ಹೊಂದುವುದಿಲ್ಲ. ಸಮ್ಯಕ್ಪ್ರಯತ್ನವು ಪುನಃ ವೃದ್ಧರ ಸೇವೆಯನ್ನು ಮಾಡುವವರಿಗೆ, ಶ್ರೇಯಸ್ಕರವಾದುದೇನೆಂದು ವೃದ್ಧರಿಂದ ಕೇಳಿ ಅವರ ಹಿತವಚನದಂತೆ ಮಾಡುವವರಿಗೆ ಮಾತ್ರ ಸಾಧ್ಯವಾಗುತ್ತದೆ. ಸಿದ್ಧಿಯಾಗುವ ಕಾರ್ಯದ ಕುರಿತು ವೃದ್ಧಸಮ್ಮತರನ್ನು ಸದಾ ಕೇಳಬೇಕು. ಯಾವುದರಿಂದ ಸಿದ್ಧಿಯುಂಟಾಗುತ್ತದೆಯೆಂದು ಹೇಳುವ ಅವರೇ ಆ ದೈವಯೋಗದ ಪರಮ ಮೂಲರು. ವೃದ್ಧರ ವಚನವನ್ನು ಕೇಳಿ ಯಾರು ಪ್ರಯತ್ನವನ್ನು ಪ್ರಾರಂಭಿಸುತ್ತಾರೋ ಅವರು ಬೇಗ ಉತ್ತಮ ಫಲವನ್ನು ಪಡೆದುಕೊಳ್ಳುತ್ತಾರೆ. ರಾಗ-ಕ್ರೋಧ-ಭಯ-ಲೋಭಗಳಿಂದ ಅರ್ಥಸಿದ್ಧಿಯನ್ನು ಪಡೆಯಲು ಬಯಸುವ ಮಾನವನು ಅದನ್ನು ಪಡೆಯದೇ ಅಪಮಾನಕ್ಕೂ ಗುರಿಯಾಗುತ್ತಾನೆ ಮತ್ತು ಶೀಘ್ರವಾಗಿ ಐಶ್ವರ್ಯದಿಂದಲೂ ಭ್ರಷ್ಟನಾಗುತ್ತಾನೆ. ದುರ್ಯೋಧನನಾದರೋ ಮಹಾಲೋಭಿ. ಮುಂದೇನಾಗುವುದೆಂಬುದರ ಬಗೆಗೆ ತಿಳುವಳಿಕೆಯಿಲ್ಲದವನು. ಅಸಮರ್ಥನು. ದುಡುಕುವವನು. ಮೂಢತ್ವದಿಂದಾಗಿ ಯೋಚನೆಯನ್ನೇ ಮಾಡದವನು. ಅವನಿಗೆ ಹಿತವಾಗಬೇಕೆಂಬ ಮನಸ್ಸಿದ್ದವರ ಮಾತುಗಳೆಲ್ಲವನ್ನೂ ಅವನು ಅನಾದರಿಸಿ, ದುಷ್ಟರೊಡನೆ ಸಮಾಲೋಚನೆ ನಡೆಸಿ, ಬೇಡವೆಂದು ಎಷ್ಟು ಹೇಳಿದರೂ ಗುಣದಲ್ಲಿ ಅವನಿಗಿಂತಲೂ ವರಿಷ್ಟರಾದ ಪಾಂಡವರೊಂದಿಗೆ ವೈರವನ್ನು ಸಾಧಿಸಿದನು. ಮೊದಲಿನಿಂದಲೂ ಅವನು ದುಃಶೀಲನಾಗಿದ್ದನು. ದೈನ್ಯವೆಂಬುದೇ ಇರಲಿಲ್ಲ. ಮಿತ್ರರ ವಚನದಂತೆ ಮಾಡುತ್ತಿರಲಿಲ್ಲ. ಅದರ ಕಾರಣದಿಂದಲೇ ಅವನು ವಿಪತ್ತಿಗೆ ಒಳಗಾಗಿದ್ದಾನೆ. ನಾವು ಕೂಡ ಪಾಪಪುರುಷನನ್ನೇ ಅನುಸರಿಸಿ ನಡೆದುಕೊಂಡು ಬಂದೆವು. ಅದರಿಂದಲೇ ನಾವು ಮಹಾ ದಾರುಣ ದುಃಖವನ್ನು ಅನುಭವಿಸುತ್ತಿದ್ದೇವೆ. ವ್ಯಸನದಿಂದ ಸಂತಾಪಗೊಂಡಿರುವ ನನ್ನ ಬುದ್ಧಿಯು ಎಷ್ಟೇ ಯೋಚಿಸಿದರೂ ನಮಗೆ ಶ್ರೇಯಸ್ಕರವಾದುದೇನೂ ತಿಳಿಯುತ್ತಿಲ್ಲ. ತಿಳಿದಿರುವವರು ಮೋಹಗೊಂಡಿರುವಾಗ ಸುಹೃದಯರನ್ನು ಕೇಳಬೇಕು. ಅವರು ಏನನ್ನು ಹೇಳುತ್ತಾರೋ ಅದೇ ಅವರಿಗೆ ಕರ್ತವ್ಯವಾಗುತ್ತದೆ. ಆದುದರಿಂದ ನಾವು ಒಟ್ಟಾಗಿ ಧೃತರಾಷ್ಟ್ರ, ಗಾಂಧಾರೀ ಮತ್ತು ಮಹಾಮತಿ ವಿದುರರ ಬಳಿಹೋಗಿ ಅವರನ್ನು ಕೇಳೋಣ. ನಮ್ಮ ಕೇಳಿಕೆಗೆ ಅವರು ನಮಗೆ ಶ್ರೇಯಸ್ಕರವಾದುದನ್ನೇ ಹೇಳಿಯಾರು. ಅನಂತರ ನಾವು ಅವರ ಸಲಹೆಯಂತೆ ಮಾಡಬೇಕು. ಇದು ನನ್ನ ಬುದ್ಧಿಯ ನಿಶ್ಚಯವಾಗಿರುತ್ತದೆ. ಕಾರ್ಯಗಳನ್ನು ಆರಂಭಿಸದೇ ಇದ್ದರೆ ಯಾವ ಪ್ರಯೋಜನವೂ ಇಲ್ಲ. ಒಂದು ವೇಳೆ ಪುರುಷಪ್ರಯತ್ನದಿಂದಲೂ ಕಾರ್ಯವು ಸಿದ್ಧಿಯಾಗದಿದ್ದರೆ ಅವರು ದೈವೋಪಹತರೆಂದೇ ತಿಳಿದುಕೊಳ್ಳಬೇಕು. ವಿಷಯದಲ್ಲಿ ಪುನಃ ವಿಮರ್ಶಿಸುವ ಅವಶ್ಯಕತೆಯೇ ಇಲ್ಲ.”

ಕೃಪನ ಧರ್ಮಾರ್ಥಸಂಹಿತ ಶುಭ ಮಾತುಗಳನ್ನು ಕೇಳಿ ದುಃಖಶೋಕಸಮನ್ವಿತನಾದ ಅಶ್ವತ್ಥಾಮನು ಪ್ರಜ್ವಲಿಸುತ್ತಿರುವ ಅಗ್ನಿಯಂತೆ ಶೋಕದಿಂದ ದಹಿಸುತ್ತಾ ಮನಸ್ಸನ್ನು ಕ್ರೂರವನ್ನಾಗಿಸಿಕೊಂಡು ಅವರಿಬ್ಬರಿಗೂ ಉತ್ತರಿಸಿದನು: ಪ್ರತಿಯೊಬ್ಬ ಪುರುಷನಿಗೂ ಅವನಿಗಿರುವ ಬುದ್ಧಿಯು ಉತ್ತಮವಾದುದೆಂದು ಅನ್ನಿಸುತ್ತದೆ. ಎಲ್ಲರೂ ತಮ್ಮ ತಮ್ಮ ಬುದ್ಧಿಯಿಂದ ಪ್ರತ್ಯೇಕವಾಗಿ ತೃಪ್ತರಾಗಿರುತ್ತಾರೆ. ಲೋಕದಲ್ಲಿ ಎಲ್ಲರೂ ತಮ್ಮ ತಮ್ಮನ್ನೇ ಅತಿ ಬುದ್ಧಿವಂತರೆಂದು ತಿಳಿದುಕೊಂಡಿರುತ್ತಾರೆ. ಎಲ್ಲರೂ ತಮ್ಮ ಮತವೇ ಬಹುಮತವೆಂದು ತಿಳಿದುಕೊಂಡಿರುತ್ತಾರೆ. ಎಲ್ಲರೂ ತಮ್ಮ ಬುದ್ಧಿಯನ್ನೇ ಪ್ರಶಂಸೆಮಾಡಿಕೊಳ್ಳುತ್ತಾರೆ. ಎಲ್ಲರೂ ತಮ್ಮ ಪ್ರಜ್ಞೆಯೇ ಸಾಧುವಾದುದೆಂದೂ ಪ್ರತಿಷ್ಠಿತವಾದುದೆಂದೂ ಹೇಳಿಕೊಳ್ಳುತ್ತಿರುತ್ತಾರೆ. ಇತರರ ಬುದ್ಧಿಯನ್ನು ನಿಂದಿಸುತ್ತಾರೆ. ಮತ್ತು ತಮ್ಮದನ್ನು ಪ್ರಶಂಸಿಸಿಕೊಳ್ಳುತ್ತಿರುತ್ತಾರೆ. ಕಾರಣಾಂತರದಿಂದ ಯೋಗವಶಾತ್ ಇಬ್ಬರ ಬುದ್ಧಿಯೂ ಹೊಂದಿಕೊಂಡರೆ ಆಗ ಅವರು ಅನ್ಯೋನ್ಯರಿಂದ ಸಂತುಷ್ಟರಾಗುತ್ತಾರೆ. ಒಬ್ಬರು ಮತ್ತೊಬ್ಬರನ್ನು ಗೌರವಿಸುತ್ತಾರೆ. ಆದರೆ ಕಾಲಯೋಗದಿಂದ ಅದೇ ಮನುಷ್ಯರ ವಿಚಾರಗಳಲ್ಲಿ ವಿಪರ್ಯಾಸಗಳುಂಟಾದರೆ ಅನ್ಯೋನ್ಯರಲ್ಲಿ ಒಡಕು ಉಂಟಾಗುತ್ತದೆ. ವಿಶೇಷವಾಗಿ ಮನುಷ್ಯರ ಚಿತ್ತಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಚಿತ್ತಗಳ ವ್ಯತ್ಯಾಸಗಳಿಂದಾಗಿ ಒಬ್ಬೊಬ್ಬರಿಗೆ ಒಂದೊಂದುರೀತಿಯ ಯೋಚನೆಗಳುಂಟಾಗುತ್ತವೆ. ಕುಶಲ ವೈದ್ಯನು ಯಥಾವಿಧಿಯಾಗಿ ವ್ಯಾಧಿಯನ್ನು ತಿಳಿದುಕೊಂಡು ರೋಗಕ್ಕೆ ತಕ್ಕುದಾದ ಚಿಕಿತ್ಸೆಯನ್ನು ಮಾಡುವ ಹಾಗೆ ಮನುಷ್ಯರು ಪ್ರತಿಯೊಂದು ಉದ್ದೇಶಕ್ಕೂ ಯೋಚನೆಮಾಡಿ ಕಾರ್ಯಗತರಾಗುತ್ತಾರೆ. ಆದರೆ ಸ್ವಯಂ ಬುದ್ಧಿಯನ್ನುಪಯೋಗಿಸುವವನನ್ನು ಇತರ ಮನುಷ್ಯರು ನಿಂದಿಸುತ್ತಾರೆ! ಮನುಷ್ಯನು ಯೌವನದಲ್ಲಿ ಬೇರೊಂದು ರೀತಿಯ ಬುದ್ಧಿಯಿಂದ ಮೋಹಿತನಾಗುತ್ತಾನೆ. ಮಧ್ಯವಯಸ್ಸಿನಲ್ಲಿ ಬೇರೊಂದರಿಂದ ಮತ್ತು ವೃದ್ಧಾಪ್ಯದಲ್ಲಿ ಇನ್ನೊಂದರಿಂದ ಅವನ ಬುದ್ಧಿಯು ಪ್ರಭಾವಿತಗೊಳ್ಳುತ್ತದೆ. ಮನುಷ್ಯನು ಘೋರ ವ್ಯಸನವನ್ನು ಅಥವಾ ಅಷ್ಟೇ ಮಹತ್ತರ ಸಮೃದ್ಧಿಯನ್ನು ಹೊಂದಿದಾಗ ಅವನ ಬುದ್ಧಿಯು ವಿಕೃತವಾಗುತ್ತದೆ. ಹೀಗೆ ಒಬ್ಬನೇ ಮನುಷ್ಯನಲ್ಲಿ ವಯಸ್ಸಿಗೆ ತಕ್ಕಂತೆ ಮತ್ತು ಸಂದರ್ಭಕ್ಕೆ ತಕ್ಕಂತೆ ಬುದ್ಧಿಯು ಬದಲಾಗುತ್ತಾ ಇರುತ್ತದೆಯಾದುದರಿಂದ ಎಷ್ಟೋ ವೇಳೆ ಅವನ ನಿರ್ಧಾರಗಳು ಅವನಿಗೇ ಇಷ್ಟವಾಗುವುದಿಲ್ಲ. ತನಗೆ ತಿಳಿದಂತೆ ಯಾವುದು ಒಳ್ಳೆಯದೆಂದು ಕಾಣುತ್ತಾನೋ ಅದನ್ನೇ ನಿಶ್ಚಯಿಸುತ್ತಾನೆ. ಆ ಬುದ್ಧಿಯೇ ಅವನನ್ನು ಕಾರ್ಯಪ್ರವೃತ್ತನನ್ನಾಗಿ ಮಾಡುತ್ತದೆ. ಆದುದರಿಂದ ಎಲ್ಲ ಮನುಷ್ಯರು ತಮಗೆ ಒಳ್ಳೆಯದೆಂದು ನಿಶ್ಚಯಿಸಿದುದನ್ನು – ಅದು ಮರಣವನ್ನೇ ತರುವಂತಹುದಾದರೂ, ಸಂತೋಷದಿಂದ ಕೈಗೊಳ್ಳುತ್ತಾರೆ. ಹಾಗೆ ಎಲ್ಲರೂ ತಮ್ಮ ತಮ್ಮ ಯುಕ್ತಿ ಮತ್ತು ಪ್ರಜ್ಞೆಗೆ ತಕ್ಕಂತೆ ವಿವಿಧ ಕರ್ಮಗಳಲ್ಲಿ ತೊಡಗುತ್ತಾರೆ ಮತ್ತು ಅವು ತಮ್ಮ ಹಿತದಲ್ಲಿಯೇ ಇದೆ ಎಂದು ತಿಳಿಯುತ್ತಾರೆ. ಇಂದು ವ್ಯಸನದಿಂದ ನನ್ನ ಮತಿಯಲ್ಲಿ ಹುಟ್ಟಿದ, ಶೋಕವಿನಾಶಿನೀ ವಿಚಾರವನ್ನು ನಿಮಗೆ ಹೇಳುತ್ತೇನೆ. ಪ್ರಜಾಪತಿಯು ಪ್ರಜೆಗಳನ್ನು ಸೃಷ್ಟಿಸಿ ಅವುಗಳಿಗೆ ಕರ್ಮಗಳನ್ನು ವಿಭಜಿಸಿ ಕೊಟ್ಟನು. ಒಂದೊಂದು ವರ್ಣಕ್ಕೂ ವಿಶೇಷ ಗುಣಗಳನ್ನೂ ಕಲ್ಪಿಸಿದನು. ಬ್ರಾಹ್ಮಣನಿಗೆ ಅವ್ಯಗ್ರ ದಮವನ್ನೂ, ಕ್ಷತ್ರಿಯನಿಗೆ ಉತ್ತಮ ತೇಜಸ್ಸನ್ನೂ, ವೈಶ್ಯನಿಗೆ ದಕ್ಷತೆಯನ್ನೂ ಮತ್ತು ಶೂದ್ರನಿಗೆ ಸರ್ವವರ್ಣದವರಿಗೆ ಅನುಕೂಲವಾಗಿರುವಂತೆ ಗುಣಗಳನ್ನಿತ್ತನು. ನಿಯಂತ್ರಣದಲ್ಲಿರದ ಬ್ರಾಹ್ಮಣನು ಒಳ್ಳೆಯವನಲ್ಲ. ತೇಜಸ್ಸಿಲ್ಲದ ಕ್ಷತ್ರಿಯನು ಅಧಮನು. ದಕ್ಷನಲ್ಲದ ವೈಶ್ಯ ಮತ್ತು ಪ್ರತಿಕೂಲನಾದ ಶೂದ್ರ ಇವರು ನಿಂದನೀಯರು. ನಾನು ಸುಪೂಜಿತ ಶೇಷ್ಠ ಬ್ರಾಹ್ಮಣರ ಕುಲದಲ್ಲಿ ಹುಟ್ಟಿದೆನು. ಆದರೆ ಮಂದಭಾಗ್ಯವು ನನ್ನನ್ನು ಕ್ಷತ್ರಧರ್ಮವನ್ನು ಅನುಸರಿಸುವಂತೆ ಮಾಡಿತು. ಕ್ಷತ್ರಧರ್ಮವನ್ನು ಚೆನ್ನಾಗಿ ತಿಳಿದುಕೊಂಡಿರುವ ನಾನು ಒಂದು ವೇಳೆ ಬ್ರಾಹ್ಮಣ್ಯಧರ್ಮವನ್ನು ಅನುಸರಿಸಿ ಅತ್ಯಂತ ಮಹತ್ತರ ಕಾರ್ವವನ್ನು ಮಾಡಿದರೂ ಅದು ಸತ್ಪುರುಷರ ಮಾನ್ಯತೆಯನ್ನು ಪಡೆಯುವುದಿಲ್ಲ. ಯುದ್ಧದಲ್ಲಿ ದಿವ್ಯ ಧನುಸ್ಸನ್ನೂ ದಿವ್ಯ ಅಸ್ತ್ರಗಳನ್ನೂ ಧರಿಸಿದ ಮತ್ತು ತಂದೆಯು ಕೊಲ್ಲಲ್ಪಟ್ಟುದನ್ನು ನೋಡಿದ ನಾನು, ಈಗ ಹೇಗೆ ತಾನೇ ಯಾಗಗಳಲ್ಲಿ ಮಂತ್ರಗಳನ್ನು ಹೇಳಿಕೊಂಡಿರಲಿ?[4] ಆದುದರಿಂದ ಇಂದು ನನಗಿಷ್ಟವಾದ ಕ್ಷತ್ರಧರ್ಮವನ್ನು ಗೌರವಿಸಿ ರಾಜ ದುರ್ಯೋಧನನ ಮತ್ತು ಮಹಾದ್ಯುತಿ ತಂದೆಯ ಹೆಜ್ಜೆಗಳಲ್ಲಿ ನಡೆಯುತ್ತೇನೆ. ವಿಜಯದಿಂದ ಉಬ್ಬಿರುವ ಪಾಂಚಾಲರು ಇಂದು ನಮ್ಮನ್ನು ಗೆದ್ದೆವೆಂದು ತಿಳಿದು ಹರ್ಷಸಮನ್ವಿತರಾಗಿ ಮತ್ತು ಹೋರಾಟದಿಂದ ಬಳಲಿ ಕುದುರೆಗಳನ್ನೂ ಕವಚಗಳನ್ನೂ ಕಳಚಿ ಆತಂಕದ ಭಯವೇನೂ ಇಲ್ಲದೇ ನಿದ್ರಿಸುತ್ತಿದ್ದಾರೆ. ರಾತ್ರಿಯಲ್ಲಿ ತಮ್ಮ ಶಿಬಿರಗಳಲ್ಲಿ ತಮ್ಮವರೊಂದಿಗೆ ಮಲಗಿರುವ ಅವರ ಶಿಬಿರಗಳ ಮೇಲೆ ಇಂದು ದುಷ್ಕರ ಮುತ್ತಿಗೆಯನ್ನು ಹಾಕಿ ಅವರನ್ನು ಸಂಹರಿಸುತ್ತೇನೆ. ಎಚ್ಚರವಿಲ್ಲದೆ ಪ್ರೇತಗಳಂತೆ ಮಲಗಿರುವ ಅವರನ್ನು ವಿಕ್ರಮದಿಂದ ಮಘವಾನ್ ಇಂದ್ರನು ದಾನವರನ್ನು ಹೇಗೋ ಹಾಗೆ ಸಂಹರಿಸುತ್ತೇನೆ. ಧೃಷ್ಟದ್ಯುಮ್ನನ ನಾಯಕತ್ವದಲ್ಲಿರುವ ಅವರೆಲ್ಲರನ್ನೂ ಒಟ್ಟಿಗೇ ಇಂದು ವಿಕ್ರಮದಿಂದ ಒಣಹುಲ್ಲಿನ ಮೆದೆಗಳನ್ನು ಬೆಂಕಿಯು ಭಸ್ಮಮಾಡುವಂತೆ ಸಂಹರಿಸುತ್ತೇನೆ. ಪಾಂಚಾಲರನ್ನು ಸಂಹರಿಸಿದ ನಂತರವೇ ನಾನು ಮನಃಶಾಂತಿಯನ್ನು ಪಡೆಯುತ್ತೇನೆ. ಸಂಕ್ರುದ್ಧ ಸ್ವಯಂ ಪಿನಾಕಪಾಣಿ ರುದ್ರನು ಪ್ರಾಣಿಗಳ ಮಧ್ಯೆ ಸಂಚರಿಸುವಂತೆ ಇಂದು ನಾನು ರಣದಲ್ಲಿ ಪಾಂಚಾಲರನ್ನು ಸಂಹರಿಸುತ್ತಾ ಸಂಚರಿಸುತ್ತೇನೆ. ಇಂದು ಸಂಕ್ರುದ್ಧನಾಗಿ ಪಾಂಚಾಲರೆಲ್ಲರನ್ನು ಕತ್ತರಿಸಿ ಕೊಂದು ರಣದಲ್ಲಿ ಪಾಂಡುಸುತರನ್ನು ಕಾಡುತ್ತೇನೆ. ಇಂದು ಅವರಲ್ಲಿ ಒಬ್ಬೊಬ್ಬರನ್ನೂ ಸಂಹರಿಸಿ, ಭೂಮಿಯು ಪಾಂಚಾಲರೆಲ್ಲರ ಮೃತಶರೀರಗಳನ್ನು ಹೊರುವಂತೆ ಮಾಡಿ ನನ್ನ ತಂದೆಯ ಋಣವನ್ನು ತೀರಿಸಿಕೊಳ್ಳುತ್ತೇನೆ. ದುರ್ಯೋಧನ, ಕರ್ಣ, ಭೀಷ್ಮ ಮತ್ತು ಸೈಂಧವರು ಹೋದ ದುರ್ಗಮ ಮಾರ್ಗದಲ್ಲಿ ಇಂದು ಪಾಂಚಾಲರನ್ನು ಕೂಡ ಕಳುಹಿಸುತ್ತೇನೆ. ಇಂದಿನ ರಾತ್ರಿಯು ಕಳೆಯುವುದರಲ್ಲಿ ಕತ್ತಲೆಯಲ್ಲಿ ನಾನು ಪಾಂಚಾಲರಾಜ ಧೃಷ್ಟದ್ಯುಮ್ನನ ಶಿರವನ್ನು ಬಲವನ್ನುಪಯೋಗಿಸಿ ಪಶುವೊಂದರ ಶಿರದಂತೆ ಅರೆಯುತ್ತೇನೆ. ಇಂದಿನ ರಾತ್ರಿ ಮಲಗಿರುವ ಪಾಂಚಾಲ-ಪಾಂಡವರನ್ನು ನಾನು ಎಳೆದ ನಿಶಿತ ಖಡ್ಗದಿಂದ ತುಂಡರಿಸುತ್ತೇನೆ. ಇಂದಿನ ರಾತ್ರಿ ಮಲಗಿರುವ ಪಾಂಚಾಲಸೇನೆಯನ್ನು ಸಂಹರಿಸಿ ನಾನು ಕೃತಕೃತ್ಯನೂ ಸುಖಿಯೂ ಆಗುತ್ತೇನೆ!”

ಕೃಪನು ಹೇಳಿದನು: “ಅಚ್ಯುತ! ಒಳ್ಳೆಯದಾಯಿತು! ನಿನ್ನಲ್ಲಿ ಪ್ರತೀಕಾರವನ್ನು ಮಾಡುವ ಯೋಚನೆಯುಂಟಾಗಿದೆ! ಸ್ವಯಂ ವಜ್ರಪಾಣಿಯೂ ನಿನ್ನನ್ನು ತಡೆಯಲು ಶಕ್ತನಿಲ್ಲ! ಆದರೆ ಇಂದಿನ ರಾತ್ರಿ ಕವಚ-ಧ್ವಜಗಳನ್ನು ಕಳಚಿ ವಿಶ್ರಮಿಸು. ಬೆಳಗಾಗುತ್ತಲೇ ನಾವಿಬ್ಬರೂ ನಿನ್ನನ್ನು ಅನುಸರಿಸಿ ಯುದ್ಧಮಾಡುತ್ತೇವೆ. ಸಾತ್ವತ ಕೃತವರ್ಮ ಮತ್ತು ನಾನು ಕವಚಗಳನ್ನು ಧರಿಸಿ ರಥಗಳನ್ನೇರಿ ಶತ್ರುಗಳನ್ನು ಎದುರಿಸುವ ನಿನ್ನನ್ನು ಅನುಸರಿಸುತ್ತೇವೆ. ನಮ್ಮಿಬ್ಬರ ಜೊತೆಗೆ ನೀನು ವಿಕ್ರಮದಿಂದ ರಣದಲ್ಲಿ ಪಾಂಚಾಲರನ್ನು ಎದುರಿಸಿ ಅವರ ಅನುಯಾಯಿಗಳೊಂದಿಗೆ ಶತ್ರುಗಳನ್ನು ಜಯಿಸಬಲ್ಲೆ! ಮಗೂ! ಈ ರಾತ್ರಿ ವಿಶ್ರಮಿಸು! ಈ ವಿಕ್ರಾಂತಕ್ಕೆ ನೀನು ಶಕ್ತನಾಗಿದ್ದೀಯೆ! ಬೇಗನೆ ಏಳುವಿಯಂತೆ. ಇಂದು ರಾತ್ರಿ ಮಲಗಿಕೋ! ವಿಶ್ರಮಿಸು. ಸ್ವಸ್ಥಚಿತ್ತನಾಗಿ ನಿದ್ರಿಸು! ಒಟ್ಟಿಗೇ ಸಮರದಲ್ಲಿ ಶತ್ರುಗಳನ್ನು ವಧಿಸುತ್ತೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ವರಾಯುಧವನ್ನು ಹಿಡಿದಿರುವ ನಿನ್ನನ್ನು ದೇವತೆಗಳ ಪಾವಕಿಯು ಕೂಡ ಗೆಲ್ಲಲು ಇಚ್ಛಿಸುವುದಿಲ್ಲ! ಕೃಪನೊಂದಿಗೆ ಮತ್ತು ಕೃತವರ್ಮನನ್ನು ಕೂಡಿಕೊಂಡು ಯುದ್ಧದಲ್ಲಿ ಸಂರಬ್ಧನಾಗಿ ಬರುತ್ತಿರುವ ದ್ರೌಣಿಯನ್ನು ಯಾರುತಾನೇ ಎದುರಿಸಿಯಾರು? ಯೋಧನು ದೇವರಾಜನೇ ಆದರೂ ಎದುರಿಸಲಾರನು. ವ್ಯಾಕುಲವಿಲ್ಲದೇ ರಾತ್ರಿ ನಿದ್ದೆಮಾಡಿ ವಿಶ್ರಾಂತಿಪಡೆಯೋಣ! ಬೆಳಗಾಗುತ್ತಲೇ ನಾವು ಶತ್ರುಗಳನ್ನು ಸಂಹರಿಸೋಣ! ನಿನ್ನಲ್ಲಿ ದಿವ್ಯಾಸ್ತ್ರಗಳಿವೆ ಮತ್ತು ನನ್ನಲ್ಲಿಯೂ ಇವೆ ಎನ್ನುವುದರಲ್ಲಿ ಸಂಶಯವಿಲ್ಲ. ಮಹೇಷ್ವಾಸ ಸಾತ್ವತನು ಕೂಡ ನಿತ್ಯವೂ ಯುದ್ಧದಲ್ಲಿ ಕೋವಿದನಾಗಿದ್ದಾನೆ. ಸೇರಿರುವ ಸರ್ವ ಶತ್ರುಗಳನ್ನೂ ನಾವು ಒಟ್ಟಿಗೇ ಸಮರದಲ್ಲಿ ಹೊಡೆದು ಸಂಹರಿಸಿ ಪುಷ್ಕಲ ಸಂತೋಷವನ್ನು ಹೊಂದೋಣ! ಅವ್ಯಗ್ರನಾಗಿ ನೀನು ವಿಶ್ರಮಿಸು. ಈ ರಾತ್ರಿ ಸುಖವಾಗಿ ನಿದ್ರಿಸು! ತ್ವರೆಮಾಡಿ ರಥವನ್ನೇರಿ ಹೋಗುವ ನಿನ್ನನ್ನು ಧನ್ವಿಗಳೂ ಪರತಾಪಿಗಳೂ ಆದ ನಾನು ಮತ್ತು ಕೃತವರ್ಮ ಇಬ್ಬರೂ ಕವಚಗಳನ್ನು ಧರಿಸಿ ರಥವನ್ನೇರಿ ನಿನ್ನನ್ನು ಅನುಸರಿಸಿ ಬರುತ್ತೇವೆ. ಅವರ ಶಿಬಿರಕ್ಕೆ ಹೋಗಿ ನೀನು ನಿನ್ನ ಹೆಸರನ್ನು ಕೂಗಿ ಯುದ್ಧಕ್ಕೆ ಅವರನ್ನು ಕರೆಯಬೇಕು. ಆಗ ನೀನು ಶತ್ರುಗಳೊಂದಿಗೆ ಮಹಾ ಕದನವನ್ನು ಹೋರಾಡುವೆಯಂತೆ! ಪ್ರಭಾತವಾಗುತ್ತಲೇ ಶುಭ್ರದಿನದಲ್ಲಿ ನೀನು ಅವರೊಂದಿಗೆ ಕದನವಾಡಿ ಮಹಾಸುರರನ್ನು ಸಂಹರಿಸುತ್ತಾ ವಿಹರಿಸಿದ ಇಂದ್ರನಂತೆ ರಣರಂಗದಲ್ಲಿ ವಿಹರಿಸುವಿಯಂತೆ! ಕ್ರುದ್ಧ ಸರ್ವದಾನವಸೂದನ ಇಂದ್ರನು ದೈತ್ಯಸೇನೆಯನ್ನು ಹೇಗೋ ಹಾಗೆ ಪಾಂಚಾಲರ ಸೇನೆಗಳನ್ನು ರಣದಲ್ಲಿ ಗೆಲ್ಲಲು ನೀನುಬ್ಬನೇ ಶಕ್ತ! ಕೃತವರ್ಮ ಮತ್ತು ನನ್ನಿಂದ ರಕ್ಷಿತನಾದ ನಿನ್ನನ್ನು ಯುದ್ಧದಲ್ಲಿ ಸಾಕ್ಷಾದ್ ಸ್ವಯಂ ವಿಭು ವಜ್ರಪಾಣಿಯೂ ಸಹಿಸಿಕೊಳ್ಳಲಾರನು. ನಾನಾಗಲೀ ಕೃತವರ್ಮನಾಗಲೀ ಸಮರದಲ್ಲಿ ಪಾಂಡವರನ್ನು ಸೋಲಿಸದೇ ರಣದಿಂದ ಎಂದೂ ಹಿಂದಿರುಗುವುದಿಲ್ಲ, ಸಮರದಲ್ಲಿ ಪಾಂಡವರೊಂದಿಗೆ ಕ್ಷುದ್ರ ಪಾಂಚಾಲರನ್ನು ಎಲ್ಲರನ್ನೂ ಸಂಹರಿಸಿ ಹಿಂದಿರುಗುತ್ತೇವೆ ಅಥವಾ ನಾವೇ ಹತರಾಗಿ ಸ್ವರ್ಗಕ್ಕೆ ಹೋಗುತ್ತೇವೆ! ಬೆಳಗಾಗುತ್ತಲೇ ನಿನ್ನ ಸರ್ವ ಉಪಾಯಗಳಲ್ಲಿ ನಾವು ಸಹಾಯಮಾಡುತ್ತೇವೆ. ಸತ್ಯವನ್ನೇ ಹೇಳುತ್ತಿದ್ದೇನೆ!”

ಸೋದರಮಾವನ ಹಿತಮಾತನ್ನು ಕೇಳಿ ಕ್ರೋಧದಿಂದ ಕಣ್ಣುಗಳು ಉಬ್ಬಿದ ದ್ರೌಣಿಯು ಮಾತುಗಳನ್ನಾಡಿದನು: “ಆತುರನಾದವನಿಗೆ, ಕುಪಿತನಾದ ಮನುಷ್ಯನಿಗೆ, ಉದ್ದೇಶಗಳ ಕುರಿತು ಚಿಂತಿಸುವವನಿಗೆ ಮತ್ತು ಆಸೆಗಳಿರುವವನಿಗೆ ಎಲ್ಲಿಂದ ನಿದ್ರೆಬರಬೇಕು? ನಾಲ್ಕರಲ್ಲಿ ಒಂದನ್ನು ಪಡೆದಿದ್ದರೂ ಅದು ನಿದ್ರೆಯನ್ನು ನಾಶಗೊಳಿಸುವಾಗ ಇಂದು ನಾಲ್ಕನ್ನೂ ಹೊಂದಿ ನಾನು ಪೀಡೆಗೊಳಗಾಗಿರುವುದು ನಿನಗೆ ಕಾಣುತ್ತಿಲ್ಲವೇ? ತಂದೆಯ ವಧೆಯನ್ನು ಸ್ಮರಿಸಿಕೊಂಡು ಆಗುವ ದುಃಖಕ್ಕೆ ಲೋಕದಲ್ಲಿ ಯಾವ ಹೆಸರಿದೆ? ಇಂದು ನನ್ನ ಹೃದಯವನ್ನು ಸುಡುತ್ತಿರುವ ದುಃಖವು ರಾತ್ರಿಯಾಗಲೀ ಹಗಲಾಗಲೀ ಶಾಂತವಾಗುವುದಿಲ್ಲ. ಪಾಪಿಗಳಿಂದ ನನ್ನ ತಂದೆಯು ಹತನಾದುದನ್ನು ವಿಶೇಷತಃ ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ. ಅದು ನನ್ನ ಮರ್ಮಗಳನ್ನು ಕತ್ತರಿಸುತ್ತಿದೆ. “ದ್ರೋಣನು ಹತನಾದನು!” ಎಂದು ಪಾಂಚಾಲರು ಹೇಳಿದುದನ್ನು ಕೇಳಿಯೂ ನನ್ನಂಥವನು ಮುಹೂರ್ತಕಾಲವಾದರೂ ಲೋಕದಲ್ಲಿ ಹೇಗೆ ಜೀವವನ್ನಿಟ್ಟುಕೊಂಡಿರಬಲ್ಲನು? ಧೃಷ್ಟದ್ಯುಮ್ನನನ್ನು ಕೊಲ್ಲುವವರೆಗೆ ನನಗೆ ಜೀವನದಲ್ಲಿ ಉತ್ಸಾಹವಿಲ್ಲ! ನನ್ನ ತಂದೆಯನ್ನು ಕೊಂದಿರುವುದರಿಂದ ಪಾಂಚಾಲನು ತನ್ನ ಅನುಯಾಯಿಗಳೊಂದಿಗೆ ವಧಿಸಲ್ಪಡಬೇಕು! ನಾನು ಕೇಳಿದಂತೆ ತೊಡೆಮುರಿದು ಬಿದ್ದಿರುವ ರಾಜನ ವಿಲಾಪವನ್ನು ಕೇಳಿದ ಬೇರೆ ಯಾವ ಹೃದಯವು, ಅವನು ಎಷ್ಟೇ ಕ್ರೂರನಾಗಿದ್ದರೂ, ಸುಡುವುದಿಲ್ಲ? ತೊಡೆಮುರಿದಿರುವ ನೃಪತಿಯ ಮಾತುಗಳನ್ನು ಕೇಳಿದ ಯಾರ ಕಣ್ಣುಗಳು, ಅವನು ಎಷ್ಟೇ ನಿಷ್ಕರುಣಿಯಾಗಿದ್ದರೂ, ಕಂಬನಿಯನ್ನು ಸುರಿಸುವುದಿಲ್ಲ? ನನ್ನ ಮಿತ್ರಪಕ್ಷನಾಗಿರುವವನು ನಾನು ಜೀವಿತವಾಗಿರುವಾಗಲೇ ಸೋತುಹೋದನೆಂದರೆ ಭರತದಲ್ಲಿರುವ ಸಮುದ್ರದಂತೆ ನನ್ನ ಶೋಕವು ಉಕ್ಕಿಬರುತ್ತದೆ! ಏಕಾಗ್ರಮನಸ್ಕನಾಗಿರುವ ನನಗೆ ಇಂದು ನಿದ್ರೆಯೆಲ್ಲಿಂದ? ಸುಖವೆಲ್ಲಿಂದ? ಮಾವ! ವಾಸುದೇವ-ಅರ್ಜುನರ ರಕ್ಷಿಸುತ್ತಿರುವವರೆಗೆ ಮಹೇಂದ್ರನು ಕೂಡ ಅವರನ್ನು ಸೋಲಿಸಲಾರನೆಂದು ನನಗೆ ಗೊತ್ತು. ಆದುದರಿಂದ ನನ್ನ ಕಾರ್ಯದಿಂದ ಹಿಂದೆಸರಿಯುವುದು ಎಂದಿಗೂ ಸಾಧ್ಯವಿಲ್ಲ. ಲೋಕದಲ್ಲಿ ನನ್ನ ಕಾರ್ಯದಿಂದ ತಡೆಯುವವನನ್ನು ಯಾರನ್ನೂ ಕಾಣೆ! ಇದು ನನ್ನ ನಿಶ್ಚಯ! ಯೋಚನೆಯು ಒಳ್ಳೆಯದು ಎಂದು ನನಗನ್ನಿಸುತ್ತಿದೆ. ವಾರ್ತಾಕಾರರು ಹೇಳಿದ ನನ್ನ ಮಿತ್ರರ ಪರಾಭವ ಮತ್ತು ಪಾಂಡವರ ವಿಜಯವು ನನ್ನ ಹೃದಯವನ್ನು ಸುಡುತ್ತಿದೆ. ನಾನಾದರೋ ಇಂದು ಕದನಗೈದು ಮಲಗಿರುವ ಶತ್ರುಗಳನ್ನು ಸಂಹರಿಸುತ್ತೇನೆ. ನಂತರವೇ ನಾನು ಉದ್ವೇಗಗಳಿಲ್ಲದೇ ನಿದ್ರಿಸುತ್ತೇನೆ ಮತ್ತು ವಿಶ್ರಮಿಸುತ್ತೇನೆ!”

ಕೃಪನು ಹೇಳಿದನು: “ಬುದ್ಧಿಯಿಲ್ಲದ ಪುರುಷನು ತನ್ನ ಇಂದ್ರಿಯಗಳನ್ನು ನಿಯಂತ್ರಿಸಿಕೊಂಡಿರದಿದ್ದರೆ ಗುರುವಿನ ಶುಶ್ರೂಷೆಯನ್ನು ಮಾಡಿದ್ದರೂ ಧರ್ಮಾರ್ಥಗಳನ್ನು ತಿಳಿದುಕೊಳ್ಳುವುದಿಲ್ಲ ಎಂದು ನನ್ನ ದೃಢ ವಿಚಾರ. ಹಾಗೆಯೇ ಮೇಧಾವಿಯು ವಿನದಿಂದ ಕಲಿಯದಿದ್ದರೆ ಅವನೂ ಕೂಡ ಧರ್ಮಾರ್ಥನಿಶ್ಚಯವೇನನ್ನೂ ತಿಳಿದುಕೊಳ್ಳಲಾರ. ಶುಶ್ರೂಷೆಮಾಡಿರುವ ನಿಯತೇಂದ್ರಿಯ ಮೇಧಾವೀ ಪುರುಷನು ಸರ್ವ ಆಗಮಗಳನ್ನೂ ತಿಳಿದುಕೊಂಡಿರುತ್ತಾನೆ ಮತ್ತು ಸ್ವೀಕರಿಸಬೇಕಾದುದನ್ನು ವಿರೋಧಿಸುವುದಿಲ್ಲ. ಆದರೆ ನೀತಿಮಾರ್ಗದಲ್ಲಿ ಕರೆದೊಯ್ಯಲು ಅಸಾಧ್ಯನಾದ ಮತ್ತು ಇತರರನ್ನು ಅಪಮಾನಗೊಳಿಸುವ ದುರಾತ್ಮ ಪಾಪಪುರುಷನು ತೋರಿಸಲ್ಪಟ್ಟ ಕಲ್ಯಾಣಮಾರ್ಗವನ್ನು ತ್ಯಜಿಸಿ ಬಹುಪಾಪಕಾರೀ ಕರ್ಮಗಳನ್ನೇ ಮಾಡುತ್ತಾನೆ. ಹೇಳಿ-ಕೇಳುವವರು ಇರುವವನನ್ನು ಸುಹೃದಯರು ಪಾತಕಕರ್ಮಗಳನ್ನು ಮಾಡದಂತೆ ತಡೆಯುತ್ತಾರೆ. ಭಾಗ್ಯಶಾಲಿಯು ಪಾಪಕರ್ಮಗಳಿಂದ ಹಿಂದೆಸರಿಯುತ್ತಾನೆ. ದುರ್ಭಾಗ್ಯಶಾಲಿಯು ಹಿಂದೆಸರಿಯುವುದಿಲ್ಲ. ಮನಸ್ಸು ಕದಡಿದವನು ನಯವಾದ ಮಾತುಗಳಿಂದ ಹೇಗೋ ಹಾಗೆ ಸುಹೃದಯರ ಮಾತನ್ನು ಕೇಳಿದವನು ಸುಪ್ರಸನ್ನನಾಗುತ್ತಾನೆ. ಕೇಳದವನು ನಾಶಗೊಳ್ಳುತ್ತಾನೆ. ಹಾಗೆಯೇ ಪ್ರಾಜ್ಞನಾದ ಸುಹೃದಯನು ಪಾಪ ಕರ್ಮವನ್ನು ಮಾಡಲು ಹೊರಡುವಾಗ ಪ್ರಾಜ್ಞರು ಅವನನ್ನು ಯಥಾಶಕ್ತಿ ತಡೆಯಲು ಪುನಃ ಪುನಃ ಪ್ರಯತ್ನಿಸುತ್ತಿರುತ್ತಾರೆ. ಮಗೂ! ಕಲ್ಯಾಣಕರವಾದುದರ ಕುರಿತು ಬುದ್ಧಿಮಾಡಿ ನಿನ್ನನ್ನು ನೀನೇ ನಿಯಂತ್ರಿಸಿಕೋ! ಯಾವುದರಿಂದ ನೀನು ಪಶ್ಚಾತ್ತಾಪಪಡಬೇಕಾಗುವುದಿಲ್ಲವೋ ನನ್ನ ಮಾತನ್ನು ಕೇಳು! ಮಲಗಿರುವವರನ್ನು, ಶಸ್ತ್ರಗಳನ್ನು ಕೆಳಗಿಟ್ಟವರನ್ನು, ರಥಗಳಿಂದ ಕುದುರೆಗಳನ್ನು ಬಿಚ್ಚಿರುವವರನ್ನು, ನಾನು ನಿನ್ನವನೆಂದು ಹೇಳುವವರನ್ನು, ಶರಣಾಗತರಾದವರನ್ನು, ಕೂದಲು ಬಿಚ್ಚಿರುವವರನ್ನು, ಮತ್ತು ವಾಹನಗಳನ್ನು ಕಳೆದುಕೊಂಡಿರುವವರನ್ನು ವಧಿಸುವುದು ಧರ್ಮದ ದೃಷ್ಟಿಯಲ್ಲಿ ಪ್ರಶಂಸನೀಯವಲ್ಲ. ಇಂದು ಪಾಂಚಾಲರು ಕವಚಗಳನ್ನು ಕಳಚಿ ಮಲಗಿದ್ದಾರೆ. ಎಲ್ಲರೂ ಪ್ರೇತಗಳಂತೆ ಎಚ್ಚರವಿಲ್ಲದೇ ರಾತ್ರಿಯಲ್ಲಿ ವಿಶ್ರಮಿಸುತ್ತಿದ್ದಾರೆ. ಅವಸ್ಥೆಯಲ್ಲಿರುವ ಅವರ ಮೇಲೆ ಯಾವ ಕ್ರೂರ ಮನುಷ್ಯನು ದ್ರೋಹವೆಸಗುತ್ತಾನೋ ಅವನು ಅಗಾಧ, ವಿಶಾಲ, ದಾಟಲು ಅಸಾಧ್ಯ ಮಹಾನರಕದಲ್ಲಿ ಬೀಳುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಲೋಕದಲ್ಲಿ ನೀನು ಸರ್ವಾಸ್ತ್ರಗಳನ್ನು ತಿಳಿದಿರುವವರಲ್ಲಿ ಶ್ರೇಷ್ಠನೆಂದು ವಿಶ್ರುತನಾಗಿರುವೆ. ನಿನ್ನಲ್ಲಿ ಸೂಕ್ಷ್ಮವಾದ ಕಿಲ್ಬಿಷವೂ ಇದೂವರೆಗೆ ಲೋಕದಲ್ಲಿ ತಿಳಿದಿಲ್ಲ. ಪುನಃ ನಾಳೆ ರವಿಯು ಉದಿಸಿ ಸರ್ವಭೂತಗಳನ್ನು ಪ್ರಕಾಶಗೊಳಿಸಲು ಸೂರ್ಯಸಂಕಾಶನಾದ ನೀನು ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲುವಿಯಂತೆ. ಬಿಳಿಯ ಬಟ್ಟೆಯ ಮೇಲೆ ರಕ್ತದ ಕಲೆಯಿರುವುದು ಎಷ್ಟು ಅಸಂಭವವೋ ಹಾಗೆ ನಿನ್ನಿಂದ ನಿಂದನೀಯ ಕರ್ಮವು ಮಾಡಲ್ಪಡುತ್ತದೆ ಎನ್ನುವುದೂ ಕೂಡ ಅಸಂಭವವೆಂದು ನನಗನ್ನಿಸುತ್ತದೆ!”

ಅಶ್ವತ್ಥಾಮನು ಹೇಳಿದನು: “ಮಾವ! ನೀನು ಏನು ಹೇಳಿರುವೆಯೋ ಅದು ಯಥಾರ್ಥವಾಗಿಯೇ ಇದೆ. ಆದರೆ ಪಾಂಡವರು ಮೊದಲೇ ಧರ್ಮದ ಗಡಿಯನ್ನು ನೂರಾರು ಚೂರುಗಳನ್ನಾಗಿ ಒಡೆದುಬಿಟ್ಟಿದ್ದಾರೆ! ಭೂಮಿಪಾಲರ ಪ್ರತ್ಯಕ್ಷದಲ್ಲಿ ಮತ್ತು ನಿನ್ನ ಸನ್ನಿಧಿಯಲ್ಲಿ ಕೂಡ ಶಸ್ತ್ರಗಳನ್ನು ತ್ಯಜಿಸಿದ್ದ ನನ್ನ ತಂದೆಯನ್ನು ಧೃಷ್ಟದ್ಯುಮ್ನನು ಕೆಳಗುರುಳಿಸಿದನು! ರಥಿಗಳಲ್ಲಿ ಶ್ರೇಷ್ಠ ಕರ್ಣನೂ ಕೂಡ ಅವನ ರಥವು ಹುದುಗಿ ಮಹಾವ್ಯಸನದಲ್ಲಿದ್ದಾಗ ಗಾಂಡೀವಧನ್ವಿಯಿಂದ ಹತನಾದನು. ಹಾಗೆಯೇ ಶಾಂತನವ ಭೀಷ್ಮನೂ ಕೂಡ ಶಸ್ತ್ರಗಳನ್ನು ಬಿಸುಟು ನಿರಾಯುಧನಾಗಿದ್ದಾಗ ಶಿಖಂಡಿಯನ್ನು ಮುಂಡಿಟ್ಟುಕೊಂಡಿದ್ದ ಗಾಂಡೀವಧನ್ವಿಯಿಂದ ಹತನಾದನು. ಮಹೇಷ್ವಾಸ ಭೂರಿಶ್ರವನೂ ಕೂಡ ರಣದಲ್ಲಿ ಪ್ರಾಯೋಪವೇಶನಾಗಿದ್ದಾಗ ಭೂಮಿಪಾಲರು ಬೇಡಬೇಡವೆಂದು ಕೂಗಿ ಹೇಳುತ್ತಿದ್ದರೂ, ಯುಯುಧಾನನಿಂದ ಬೀಳಿಸಲ್ಪಟ್ಟನು. ದುರ್ಯೋಧನನು ಕೂಡ ಭೀಮನೊಡನೆಯ ಗದಾಯುದ್ಧದಲ್ಲಿ ಭೂಮಿಪಾಲರು ನೋಡುತ್ತಿದ್ದಂತೆಯೇ ಅಧರ್ಮದಿಂದ ಕೆಳಗುರುಳಿಸಲ್ಪಟ್ಟನು. ಅನೇಕ ಮಹಾರಥರಿಂದ ಸುತ್ತುವರೆಯಲ್ಪಟ್ಟಿದ್ದ ಏಕಾಕೀ ನರವ್ಯಾಘ್ರನನ್ನು ಭೀಮಸೇನನು ಅಧರ್ಮದಿಂದಲೇ ಉರುಳಿಸಿದನು! ನನ್ನ ರಾಜನು ಹೀಗೆ ತೊಡೆಯೊಡೆದು ವಿಲಪಿಸುತ್ತಿದ್ದಾನೆ ಎಂದು ದೂತರು ಹೇಳಿದುದನ್ನು ಕೇಳಿದ ನನ್ನ ಮರ್ಮಗಳು ಕತ್ತರಿಸಿದಂತಾಗುತ್ತಿತ್ತು. ಹೀಗೆ ಪಾಪಿ ಪಾಂಚಾಲರೇ ಅಧರ್ಮಿಗಳಾಗಿದ್ದುಕೊಂಡು ಧರ್ಮದ ಸೇತುವೆಯನ್ನು ಒಡೆದಿರುವರು. ಮರ್ಯಾದೆಗಳನ್ನು ಒಡೆದಿರುವ ಅವರನ್ನೇ ನೀನು ಏಕೆ ನಿಂದಿಸುತ್ತಿಲ್ಲ? ಪಿತೃಹಂತಕರಾದ ಪಾಂಚಾಲರನ್ನು ರಾತ್ರಿವೇಳೆ ಮಲಗಿರುವಾಗಲೇ ಕೊಂದು ಕೀಟ ಅಥವಾ ಪತಂಗದ ಜನ್ಮವು ದೊರಕಿದರೂ ನನಗೆ ಇಷ್ಟವಾದುದೇ! ನಾನು ಬಯಸಿದ ಕಾರ್ಯವನ್ನು ಇಂದೇ ಮಾಡಿ ಮುಗಿಸಲು ನಾನು ಅವಸರಪಡುತ್ತಿದ್ದೇನೆ. ಹಾಗೆ ತ್ವರೆಯಲ್ಲಿರುವ ನನಗೆ ನಿದ್ರೆಯೆಲ್ಲಿಂದ ಮತ್ತು ಸುಖವೆಲ್ಲಿಂದ? ಅವರ ವಧೆಯ ಕುರಿತು ಮನಸ್ಸುಮಾಡಿರುವ ನನ್ನನ್ನು ತಡೆಯುವ ಪುರುಷನು ಲೋಕದಲ್ಲಿ ಇದೂವರೆಗೆ ಹುಟ್ಟಿಲ್ಲ ಮತ್ತು ಮುಂದೆ ಹುಟ್ಟುವುದೂ ಇಲ್ಲ!”

ಹೀಗೆ ಹೇಳಿ ಪ್ರತಾಪವಾನ್ ದ್ರೋಣಪುತ್ರನು ಏಕಾಂತದಲ್ಲಿ ಕುದುರೆಗಳನ್ನು ಹೂಡಿ ಶತ್ರುಗಳಿಗೆ ಅಭಿಮುಖನಾಗಿ ಹೊರಟನು. ಆಗ ಅವನನ್ನುದ್ದೇಶಿಸಿ ಭೋಜ ಮತ್ತು ಶಾರದ್ವತ ಇಬ್ಬರು ಮಹಾತ್ಮರೂರಥವನ್ನೇಕೆ ಸಜ್ಜುಗೊಳಿಸುತ್ತಿರುವೆ? ಏನನ್ನು ಮಾಡಲು ಬಯಸುತ್ತಿರುವೆ?” ಎಂದು ಕೇಳಿದರು. “ನಾವಿಬ್ಬರೂ ನಿನ್ನ ಸಹಾಯಕ್ಕಾಗಿಯೇ ಜೊತೆಗೂಡಿ ಬಂದಿದ್ದೇವೆ. ನಿನ್ನ ಸುಖ-ದುಃಖಗಳೆರಡರಲ್ಲೂ ನಾವು ಸಮಭಾಗಿಗಳು. ನಮ್ಮನ್ನು ನೀನು ಶಂಕಿಸಬಾರದು!” ಅಶ್ವತ್ಥಾಮನಾದರೋ ತಂದೆಯ ವಧೆಯನ್ನು ಸ್ಮರಿಸಿಕೊಂಡು ಸಂಕ್ರುದ್ಧನಾಗಿ ತಾನು ಏನು ಮಾಡಲು ಹೊರಟಿರುವನೆಂದು ಅವರಿಬ್ಬರಿಗೆ ಸ್ಪಷ್ಟವಾಗಿಯೇ ಹೇಳಿದನು: “ನೂರುಸಾವಿರ ಯೋಧರನ್ನು ನಿಶಿತ ಶರಗಳಿಂದ ಸಂಹರಿಸಿ ಶಸ್ತ್ರವನ್ನು ತ್ಯಜಿಸಿದ ನನ್ನ ತಂದೆಯನ್ನು ಧೃಷ್ಟಧ್ಯುಮ್ನನು ಸಂಹರಿಸಿದನು. ಅದೇರೀತಿಯಲ್ಲಿ ಇಂದು ಕವಚಗಳನ್ನು ಕಳಚಿಟ್ಟಿರುವ ಪಾಪಿ ಪಾಂಚಾಲರಾಜನ ಪುತ್ರನನ್ನು ಪಾಪ ಕರ್ಮದಿಂದಲೇ ನಾನು ಸಂಹರಿಸುತ್ತೇನೆ. ಪಶುವಿನಂತೆ ನನ್ನಿಂದ ಹತನಾಗುವ ಪಾಪಿ ಪಾಂಚಾಲನು ಶಸ್ತ್ರಗಳಿಂದ ಹೋರಾಡಿ ಸೋತವನಿಗೆ ದೊರೆಯುವ ಲೋಕಗಳನ್ನು ಯಾವ ರೀತಿಯಲ್ಲಿಯೂ ಪಡೆಯಕೂಡದೆಂದೇ ನನ್ನ ನಿಶ್ಚಯವಾಗಿದೆ. ರಥವರ್ಯರಾದ ಪರಂತಪರಾದ ನೀವಿಬ್ಬರೂ ಬೇಗನೇ ಕವಚಗಳನ್ನು ಧರಿಸಿ, ಖಡ್ಗ ಮತ್ತು ಕಾರ್ಮುಕಗಳನ್ನು ಹಿಡಿದು ಸನ್ನದ್ಧರಾಗಿ ರಥವನ್ನೇರಿ ನನ್ನ ಪ್ರತೀಕ್ಷೆಯಲ್ಲಿರಿ!”

ಹೀಗೆ ಹೇಳಿ ರಥವನ್ನೇರಿ ಅವನು ಶತ್ರುಗಳಿದ್ದ ಕಡೆ ಹೊರಟುಹೋದನು. ಅವನನ್ನು ಕೃಪ ಮತ್ತು ಸಾತ್ವತ ಕೃತವರ್ಮರು ಅನುಸರಿಸಿ ಹೋದರು. ಶತ್ರುಗಳ ಅಭಿಮುಖವಾಗಿ ಪ್ರಯಾಣಿಸುತ್ತಿದ್ದ ಅವರು ಸಮಿದ್ಧೆಗಳ ಆಹುತಿಯನ್ನು ಪಡೆದು ಪ್ರಜ್ವಲಿಸುವ ತ್ರೇತಾಗ್ನಿಗಳಂತೆಯೇ ಪ್ರಕಾಶಿಸುತ್ತಿದ್ದರು. ನಿರಾತಂಕರಾಗಿ ಜನರು ಮಲಗಿದ್ದ ಶಿಬಿರದ ಸಮೀಪಕ್ಕೆ ಉತ್ತಮ ರಥದಲ್ಲಿ ಹೋಗಿ ದ್ರೌಣಿಯು ಅದರ ದ್ವಾರಪ್ರದೇಶದಲ್ಲಿ ನಿಂತುಕೊಂಡನು.

[1] ನವಿರಾದ ಕಲಾಬತ್ತಿನ ವಸ್ತ್ರ

[2] ಪತಂಗವು ಬೆಂಕಿಯಿಂದ ಆಕರ್ಶಿತವಾಗಿ ತಾನೇ ತಾನಾಗಿ ಬೆಂಕಿಯೊಳಗೆ ಬಿದ್ದು ಪ್ರಾಣತೊರೆಯುವಂತೆ ತಾನೇ ತಾನಾಗಿ ಪಾಂಡವರೊಡನೆ ಯುದ್ಧಕ್ಕೆ ಹೋಗಿ ಪ್ರಾಣತೊರೆಯುವುದು.

[3] ಪರ್ವತದ ಮೇಲೆ ಮಳೆಬೀಳುವುದೂ ದೈವಯೋಗದಿಂದಲೇ. ಹೊಲದ ಮೇಲೆ ಬೀಳುವ ಮಳೆಯೂ ದೈವಯೋಗದಿಂದಲೇ. ಆದರೆ ಪರ್ವತದ ಮೇಲೆ ಮಳೆಬಿದ್ದಾಗ ಅಲ್ಲಿ ಪುರುಷಪ್ರಯತ್ನದ ಸಂಯೋಗವಿಲ್ಲದೇ ಇರುವುದರಿಂದ ವ್ಯರ್ಥವಾಗಿ ಹೋಗುತ್ತದೆ. ಪುರುಷಪ್ರಯತ್ನದ ಸಂಯೋಗವಿರುವುದರಿಂದ ಹೊಲದ ಮೇಲೆ ಬೀಳುವ ಮಳೆಯು ಫಲವನ್ನು ನೀಡುತ್ತದೆ.

[4] ಅಥವಾ ಜನರ ಮಧ್ಯೆ ಏನು ಮಾತನಾಡಲಿ? ಜನರಿಗೆ ಏನು ಹೇಳಲಿ?

Leave a Reply

Your email address will not be published. Required fields are marked *