[spacer height="20px"]
ಯುದ್ಧದ ಹದಿನೆಂಟನೇ ದಿನದ ರಾತ್ರಿ ಅಶ್ವತ್ಥಾಮನು ಪಾಂಡವ ಶಿಬಿರದಲ್ಲಿದ್ದವರೆಲ್ಲರನ್ನೂ ಸಂಹರಿಸಿದುದು
ಅಶ್ವತ್ಥಾಮನ ಶಿವಾರ್ಚನೆ
ಕೃತವರ್ಮನನ್ನೂ ಮತ್ತು ಮಹಾರಥ ಕೃಪನನ್ನೂ ಬರಹೇಳಿ ಕೋಪದಿಂದ ಪರೀತಾತ್ಮ ದ್ರೌಣಿಯು ಶಿಬಿರದ ದ್ವಾರವನ್ನು ತಲುಪಿದನು. ಅಲ್ಲಿ ಅವನು ದ್ವಾರವನ್ನು ಆವರಿಸಿ ನಿಂತಿರುವ ಚಂದ್ರ-ಸೂರ್ಯರ ಸಮಾನ ಬೆಳಗುತ್ತಿರುವ ಮೈನವಿರೇಳಿಸುವ ಮಹಾಕಾಯದ ಭೂತವೊಂದನ್ನು ನೋಡಿದನು. ಅವನು ಮಹಾರಕ್ತವನ್ನು ಸುರಿಸುತ್ತಿರುವ ವ್ಯಾಘ್ರಚರ್ಮವನ್ನು ಉಟ್ಟಿದ್ದನು. ಕೃಷ್ಣಾಜಿನವನ್ನೇ ಉತ್ತರೀಯವನ್ನಾಗಿ ಹೊದ್ದಿದ್ದನು. ಸರ್ಪವೇ ಅವನ ಯಜ್ಞೋಪವೀತವಾಗಿತ್ತು. ಅವನ ನೀಳ ದಪ್ಪ ಬಾಹುಗಳು ನಾನಾಪ್ರಕಾರದ ಆಯುಧಗಳನ್ನು ಎತ್ತಿ ಹಿಡಿದಿದ್ದವು. ಮಹಾಸರ್ಪಗಳೇ ಅವನ ತೋಳ್ಬಂದಿಗಳಾಗಿದ್ದವು. ಮುಖದ ಸುತ್ತಲೂ ಜ್ವಾಲೆಗಳ ಮಾಲೆಯಿದ್ದಿತು. ಕೋರೆದಾಡೆಗಳಿಂದ ಕೂಡಿದ್ದ ಅವನ ಕರಾಳ ವದನದಲ್ಲಿನ ತೆರೆದ ಬಾಯಿಯು ಭಯವನ್ನುಂಟುಮಾಡುತ್ತಿತ್ತು. ಸಹಸ್ರಾರು ವಿಚಿತ್ರ ಕಣ್ಣುಗಳಿಂದ ವಿಭೂಷಿತನಾಗಿದ್ದನು. ಅವನ ಶರೀರವನ್ನೂ ವೇಷವನ್ನೂ ವರ್ಣಿಸಲು ಯಾರಿಗೂ ಶಕ್ಯವಾಗದಂತಿತ್ತು. ಅವನನ್ನು ನೋಡಿ ಪರ್ವತಗಳು ಕೂಡ ಭಯದಿಂದ ಸ್ಪೋಟಗೊಳ್ಳುತ್ತಿದ್ದವೇನೋ! ಅವನ ಮೂಗಿನ ಹೊಳ್ಳೆಗಳಿಂದಲೂ, ಕಿವಿಗಳಿಂದಲೂ, ಸಹಸ್ರ ಕಣ್ಣುಗಳಿಂದಲೂ ಮತ್ತು ಎಲ್ಲೆಡೆಗಳಿಂದಲೂ ಮಹಾಜ್ವಾಲೆಗಳು ಹೊರಹೊಮ್ಮುತ್ತಿದ್ದವು. ಅವನ ತೇಜಸ್ಸಿನ ಕಿರಣಗಳಿಂದ ನೂರಾರು ಸಹಸ್ರಾರು ಶಂಖ-ಚಕ್ರ-ಗದೆಗಳನ್ನು ಧರಿಸಿದ್ದ ಹೃಷೀಕೇಶರು ಪ್ರಕಟವಾಗುತ್ತಿದ್ದರು. ಲೋಕಭಯಂಕರನಾದ ಆ ಅದ್ಭುತ ಭೂತನನ್ನು ನೋಡಿದ ದ್ರೌಣಿಯು ಸ್ವಲ್ಪವೂ ವ್ಯಥಿತನಾಗದೇ ದಿವ್ಯಾಸ್ತ್ರಗಳಿಂದ ಅವನನ್ನು ಮುಸುಕಿದನು. ಸಮುದ್ರದಲ್ಲಿರುವ ವಡವಾಗ್ನಿಯು ಜಲರಾಶಿಗಳನ್ನೇ ಕುಡಿದುಬಿಡುವಂತೆ ದ್ರೌಣಿಯು ಪ್ರಯೋಗಿಸಿದ ಶರಗಳೆಲ್ಲವನ್ನೂ ಆ ಮಹಾಭೂತನು ನುಂಗಿಬಿಟ್ಟನು. ಆ ಶರಸಮೂಹಗಳು ನಿರರ್ಥಕವಾದುದನ್ನು ನೋಡಿದ ಅಶ್ವತ್ಥಾಮನು ಉರಿಯುತ್ತಿದ್ದ ಅಗ್ನಿಯ ಶಿಖೆಯಂತಿರುವ ರಥಶಕ್ತಿಯನ್ನು ಅವನ ಮೇಲೆ ಪ್ರಯೋಗಿಸಿದನು. ಯುಗಾಂತದಲ್ಲಿ ಸೂರ್ಯನನ್ನು ಅಪ್ಪಳಿಸಿ ನುಚ್ಚುನೂರಾಗಿ ಆಕಾಶದಿಂದ ಕೆಳಕ್ಕೆ ಬೀಳುವ ಮಹಾ ಉಲ್ಕೆಯಂತೆ ದೀಪ್ತಾಗ್ರದ ಆ ರಥಶಕ್ತಿಯು ಆ ಮಹಾಪುರುಷನಿಗೆ ಬಡಿದು ಸೀಳಿ ಕೆಳಗೆ ಬಿದ್ದಿತು. ಆಗ ಅಶ್ವತ್ಥಾಮನು ಬಂಗಾರದ ಹಿಡಿಯಿದ್ದ ಆಕಾಶದಂತೆ ಹೊಳೆಯುತ್ತಿದ್ದ ದಿವ್ಯ ಖಡ್ಗವನ್ನು ಬಿಲದಲ್ಲಿದ್ದ ಬೆಳಗುವ ಸರ್ಪವನ್ನು ಹೊರಕ್ಕೆಳೆಯುವಂತೆ ಒರೆಯಿಂದ ಹೊರತೆಗೆದನು. ಆ ಧೀಮಂತನು ಶ್ರೇಷ್ಠ ಖಡ್ಗವನ್ನು ಮಹಾಪುರುಷನ ಮೇಲೆ ರಭಸದಿಂದ ಎಸೆಯಲು ಅದು ಮುಂಗುಸಿಯು ಬಿಲವನ್ನು ಸೇರುವಂತೆ ಆ ಮಹಾಪುರುಷನಲ್ಲಿ ಲೀನವಾಯಿತು. ಆಗ ಕುಪಿತ ದ್ರೌಣಿಯು ಇಂದ್ರನ ಧ್ವಜದಂತೆ ಪ್ರಜ್ವಲಿಸುತ್ತಿದ್ದ ಗದೆಯನ್ನು ಅವನ ಮೇಲೆ ಎಸೆಯಲು, ಅದನ್ನೂ ಕೂಡ ಆ ಮಹಾಭೂತನು ನುಂಗಿಬಿಟ್ಟನು. ಆಯುಧಗಳೆಲ್ಲವೂ ಮುಗಿದು ಹೋಗಿ ದಿಕ್ಕುಕಾಣದೇ ಅತ್ತಿತ್ತ ಹುಡುಕುತ್ತಿರುವಾಗ ಅಶ್ವತ್ಥಾಮನು ಅಸಂಖ್ಯಾತ ಜನಾರ್ದನರಿಂದ ಆಕಾಶವು ತುಂಬಿಹೋಗಿರುವುದನ್ನು ನೋಡಿದನು.
ಆ ಮಹಾ ಅದ್ಭುತವನ್ನು ನೋಡಿ, ನಿರಾಯುಧನಾಗಿದ್ದ ದ್ರೋಣಪುತ್ರನು ಪರಿತಪಿಸುತ್ತಾ ಕೃಪನು ಹೇಳಿದ್ದ ಮಾತನ್ನು ನೆನಪಿಸಿಕೊಂಡು ತನ್ನಲ್ಲಿಯೇ ಹೀಗೆ ಹೇಳಿಕೊಂಡನು: “ಅಪ್ರಿಯವಾದರೂ ಹಿತವಾದುದನ್ನು ಹೇಳುವ ಸುಹೃದಯರನ್ನು ಕೇಳದವನು ಕೃಪ-ಕೃತವರ್ಮರನ್ನು ಮೀರಿ ನಡೆದ ನನ್ನಂತೆ ಕಷ್ಟವನ್ನು ಹೊಂದಿ ಪಶ್ಚಾತ್ತಾಪ ಪಡುತ್ತಾನೆ! ಶಾಸ್ತ್ರಗಳು ಕಂಡು ಹೇಳಿರುವುದನ್ನು ಮೀರಿ ಅವಧ್ಯರನ್ನು ಸಂಹರಿಸಲು ಹೊರಟವನು ಧರ್ಮಮಾರ್ಗದಿಂದ ಭ್ರಷ್ಟನಾಗಿ ಕೆಟ್ಟಮಾರ್ಗದಲ್ಲಿಯೇ ಹೋಗಿ ನಾಶಹೊಂದುತ್ತಾನೆ! ಗೋವು, ಬ್ರಾಹ್ಮಣ, ನೃಪ, ಸ್ತ್ರೀ, ಸಖ, ತಾಯಿ, ಗುರು, ವೃದ್ಧ, ಬಾಲಕ, ಜಡ, ಅಂಧ, ಮಲಗಿರುವವನು, ಹೆದರಿದವನು, ಹಾಸಿಗೆಯಿಂದ ಮೇಲೆದ್ದವನು, ಉನ್ಮತ್ತನಾದವನು, ಮತ್ತು ಹುಚ್ಚ – ಇವರ ಮೇಲೆ ಎಂದೂ ಶಸ್ತ್ರಗಳನ್ನು ಎತ್ತಿ ಪ್ರಹರಿಸಕೂಡದೆಂದು ಗುರುಗಳು ಈ ಮೊದಲೇ ಮನುಷ್ಯರಿಗೆ ಉಪದೇಶಿಸಿದ್ದಾರೆ. ಶಾಸ್ತ್ರವು ತೋರಿಸಿಕೊಟ್ಟ ಸನಾತನ ಮಾರ್ಗವನ್ನು ಉಲ್ಲಂಘಿಸಿ ಕೆಟ್ಟ ಮಾರ್ಗವನ್ನು ಹಿಡಿದು ಮಾಡಬಾರದುದನ್ನು ಮಾಡಲು ಪ್ರಾರಂಭಿಸಿ ನಾನು ಇಂತಹ ಘೋರ ಆಪತ್ತಿಗೆ ಒಳಗಾಗಿದ್ದೇನೆ. ಮಹಾಕಾರ್ಯವನ್ನು ಮಾಡಲು ಹೋಗಿ ಭಯದಿಂದ ಅಥವಾ ಶಕ್ತಿ-ಬಲಗಳಿಲ್ಲದೇ ಅಶಕ್ಯನಾಗಿ ಹಿಂದಿರುಗುವುದು ಘೋರತರ ಆಪತ್ತೆಂದು ತಿಳಿದವರು ಹೇಳುತ್ತಾರೆ. ಮನುಷ್ಯಪ್ರಯತ್ನವು ದೈವಸಂಕಲ್ಪಕ್ಕಿಂತಲೂ ಹೆಚ್ಚಿನದಲ್ಲವೆಂದೂ ಹೇಳುತ್ತಾರೆ. ಮನುಷ್ಯನು ಮಾಡುವ ಕರ್ಮವು ಒಂದು ವೇಳೆ ದೈವಬಲದಿಂದ ಸಿದ್ಧಿಸದಿದ್ದರೆ ಅವನು ಧರ್ಮಮಾರ್ಗವನ್ನು ಬಿಟ್ಟು ಹೋದುದಕ್ಕಾಗಿ ವಿಪತ್ತನ್ನು ಎದುರಿಸಬೇಕಾಗುತ್ತದೆ. ಭಯದ ಕಾರಣದಿಂದಾಗಿ ಆರಂಭಿಸಿದ ಕಾರ್ಯದಿಂದ ಹಿಂದೆ ಸರಿದರೆ ಆ ಪ್ರತಿಜ್ಞೆಯು ಅಜ್ಞಾನದಿಂದ ಮಾಡಿದುದು ಎಂದು ತಿಳಿದವರು ಹೇಳುತ್ತಾರೆ. ಕೆಟ್ಟ ಕಾರ್ಯವನ್ನು ಮಾಡಲು ಹೊರಟಿರುವುದರಿಂದಲೇ ನನಗೆ ಈ ಭಯವು ಆವರಿಸಿದೆ. ಆದರೆ ಈ ದ್ರೋಣ ಸುತನು ಎಂದೂ ಯುದ್ಧದಿಂದ ಹಿಂದಿರುಗುವವನಲ್ಲ! ಈ ಮಹಾಭೂತನಾದರೋ ದೈವದಂಡದಂತೆ ಎದ್ದು ನಿಂತಿದ್ದಾನೆ! ನಾನು ಎಷ್ಟೇ ಯೋಚಿಸಿದರೂ ಇವನು ಯಾರೆಂದು ನನಗೆ ತಿಳಿಯುತ್ತಿಲ್ಲ! ಕಲ್ಮಷ ಬುದ್ಧಿಯಿಂದ ನಾನು ಅಧರ್ಮಮಾರ್ಗದಲ್ಲಿ ಹೊರಟಿರುವುದರಿಂದಲೇ ಇದು ಆಗಿದೆಯೆನ್ನುವುದು ಖಂಡಿತ! ಅದನ್ನು ವಿರೋಧಿಸಿಯೇ ನನಗೆ ಈ ಘೋರ ಫಲವು ದೊರಕಿದೆಯೆಂದು ಕಾಣುತ್ತದೆ. ನಾನು ಯುದ್ಧದಿಂದ ಹಿಂದೆಸರಿಯಬೇಕೆಂಬುದೇ ದೈವವಿಹಿತವಾಗಿರಬಹುದು. ದೈವಾನುಕೂಲವಿಲ್ಲದೇ ಎಂದೂ ನಾನು ಯುದ್ಧವನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ! ಆದುದರಿಂದ ಇಂದು ನಾನು ಪ್ರಭು ಮಹಾದೇವನ ಶರಣು ಹೋಗುತ್ತೇನೆ. ಅವನೇ ಈ ಘೋರ ದೈವದಂಡವನ್ನು ನಾಶಗೊಳಿಸುತ್ತಾನೆ. ಈಗ ಕಪರ್ದಿ, ದೇವದೇವ, ಉಮಾಪತಿ, ಕಪಾಲಮಾಲಿ, ರುದ್ರ, ಭಗನೇತ್ರಹರ, ಹರನನ್ನು ಶರಣುಹೊಗುತ್ತೇನೆ. ಅವನೇ ತಪಸ್ಸು ಮತ್ತು ವಿಕ್ರಮಗಳಿಂದ ದೇವತೆಗಳನ್ನು ಅತಿಶಯಿಸಿದ್ದಾನೆ. ಆದುದರಿಂದ ಆ ಗಿರಿಶ, ಶೂಲಪಾಣಿಯ ಚರಣಗಳಿಗೆ ಬೀಳುತ್ತೇನೆ!”
ಹೀಗೆ ಯೋಚಿಸಿ ದ್ರೋಣಪುತ್ರನು ರಥದಿಂದ ಕೆಳಗಿಳಿದು ಕೈಜೋಡಿಸಿ ನಿಂತು ಸ್ತುತಿಸಲು ಉಪಕ್ರಮಿಸಿದನು. ದ್ರೌಣಿಯು ಹೇಳಿದನು: “ಉಗ್ರ, ಸ್ಥಾಣು, ಶಿವ, ರುದ್ರ, ಶರ್ವ, ಈಶಾನ, ಈಶ್ವರ, ಗಿರಿಶ, ವರದ, ದೇವ, ಭವ, ಭಾವನ, ಅವ್ಯಯ, ಶಿತಿಕಂಠ, ಅಜ, ಶಕ್ರ, ಕ್ರಥ, ಕ್ರತುಹರ, ಹರ, ವಿಶ್ವರೂಪ, ವಿರೂಪಾಕ್ಷ, ಬಹುರೂಪ, ಉಮಾಪತಿ, ಶ್ಮಶಾನವಾಸಿ, ದೃಪ್ತ, ಮಹಾಗಣಪತಿ, ಪ್ರಭು, ಖಟ್ವಾಂಗಧಾರಿ, ಮುಂಡ, ಜಟಿಲ, ಬಹ್ಮಚಾರಿಣಿ, ಮತ್ತು ತ್ರಿಪುರಘಾತಿನಿಯನ್ನು ಪರಿಶುದ್ಧ ಮನಸ್ಸಿನಿಂದ ಕೂಡಿದವನಾಗಿ ದುರ್ಬಲರಿಗೆ ದುಷ್ಕರವಾದ ಆತ್ಮೋಪಹಾರ ವಿಧಾನದಿಂದ ಪೂಜಿಸುತ್ತೇನೆ. ಸ್ತುತ, ಸ್ತುತ್ಯ, ಸ್ತೂಯಮಾನ, ಅಮೋಘ, ಚರ್ಮವಾಸಸ, ವಿಲೋಹಿತ, ನೀಲಕಂಠ, ಅಪೃಕ್ತ, ದುರ್ನಿವಾರಣ, ಶುಕ್ರ, ವಿಶ್ವಸೃಜ, ಬ್ರಹ್ಮ, ಬ್ರಹ್ಮಚಾರಿಣಿ, ವ್ರತವಂತ, ತಪೋನಿತ್ಯ, ಅನಂತ, ತಪಸ್ವಿಗಳ ಗತಿ, ಬಹುರೂಪ, ಗಣಾಧ್ಯಕ್ಷ, ತ್ರ್ಯಕ್ಷ, ಪಾರಿಷದಪ್ರಿಯ, ಗಣಾಧ್ಯಕ್ಷ, ಇಕ್ಷಿತಮುಖ, ಗೌರೀಹೃದಯವಲ್ಲಭ, ಕುಮಾರನ ತಂದೆ, ಪಿಂಗ, ಗೋವೃಷನನ್ನೇ ಉತ್ತಮ ವಾಹನವಾಗುಳ್ಳ ತನುವಾಸಸ, ಉಗ್ರ, ಆಭೂಷಣತತ್ಪರ, ಪರ, ತಿಳಿಯಲು ಅಸಾಧ್ಯ ಪರೇಭ್ಯ, ಇಷ್ವಸ್ತ್ರೋತ, ಭರ್ತಾರ, ದಕ್ಷಿಣ ದಿಗಂತ, ಹಿರಣ್ಯಕವಚ, ದೇವ ಚಂದ್ರಮೌಲಿವಿಭೂಷಿತ ದೇವನನ್ನು ಪರಮ ಸಮಾಧಿಯಲ್ಲಿದ್ದುಕೊಂಡು ಶರಣುಹೊಗುತ್ತೇನೆ. ಈ ಸುದುಸ್ತರ ಘೋರ ಆಪತ್ತನ್ನು ಪಾರುಮಾಡಲು ನಾನು ಇಂದು ಶುಚಿ ಸರ್ವಭೂತೋಪಹಾರದಿಂದ ಆ ಶುಚಿ ಶಿವನನ್ನು ಅರ್ಚಿಸುತ್ತೇನೆ.”
ತ್ಯಾಗಾತ್ಮಕ ಮನಸ್ಸಿನಿಂದ ಅಶ್ವತ್ಥಾಮನು ದೃಢನಿಶ್ಚಿತನಾಗಿರುವವನೆಂದು ತಿಳಿದು ಆ ಮಹಾತ್ಮನ ಎದಿರು ಸುವರ್ಣಮಯ ವೇದಿಯೊಂದು ಕಾಣಿಸಿಕೊಂಡಿತು. ಆಗ ಆ ವೇದಿಯಲ್ಲಿ ಆಕಾಶ, ದಿಕ್ಕುಗಳು ಮತ್ತು ಉಪದಿಕ್ಕುಗಳನ್ನೂ ಜ್ವಾಲೆಗಳಿಂದ ತುಂಬಿಸುತ್ತಿರುವ ಯಜ್ಞೇಶ್ವರನು ಉದಯಿಸಿದನು. ಆಗ ಅಲ್ಲಿಂದ ಉರಿಯುತ್ತಿರುವ ಮುಖ-ಕಣ್ಣುಗಳುಳ್ಳ, ಅನೇಕ ಪಾದ-ಶಿರ-ಭುಜಗಳುಳ್ಳ ಆನೆ ಮತ್ತು ಪರ್ವತಗಳಂತಿರುವ ಮಹಾಕಾಯಗಳು ಉದ್ಭವಿಸಿದವು. ಅವುಗಳು ನಾಯಿ, ಹಂದಿ ಮತ್ತು ಒಂಟೆಗಳ, ಕುದುರೆ, ನರಿ ಮತ್ತು ಹಸುಗಳ ರೂಪವನ್ನು ಹೊಂದಿದ್ದವು. ಕೆಲವು ಕರಡಿ ಮತ್ತು ಬೆಕ್ಕುಗಳ ಮುಖವನ್ನು ಹೊಂದಿದ್ದವು. ಇನ್ನು ಕೆಲವಕ್ಕೆ ಹುಲಿ ಮತ್ತು ಚಿರತೆಯ ಮುಖಗಳಿದ್ದವು. ಕಾಗೆಗಳ ಮುಖಗಳು, ಕಪಿಗಳ ಮುಖಗಳು, ಗಿಳಿಗಳ ಮುಖಗಳು, ಹೆಬ್ಬಾವಿನ ಮುಖಗಳು ಮತ್ತು ಬಿಳಿಯ ಹಂಸಗಳ ಮುಖಗಳನ್ನು ಹೊಂದಿದ್ದವು. ಮರಕುಟುಕಹಕ್ಕಿಗಳ ಮುಖ, ನವಿಲಿನ ಮುಖ, ಆಮೆ, ಮೊಸಳೆ, ಮತ್ತು ಮೊಲಗಳ ಮುಖಗಳನ್ನು ಹೊಂದಿದ್ದವು. ಮಹಾಮಕರಗಳ ಮುಖ, ತಿಮಿಂಗಿಲುಗಳ ಮುಖ ಮತ್ತು ಹಾಗೆಯೇ ಸಿಂಹ, ಕ್ರೌಂಚ, ಕಾಡುಪಾರಿವಾಳಗಳ ಮುಖಗಳನ್ನು ಹೊಂದಿದ್ದವು. ಪಾರಿವಾಳಗಳ ಮುಖಗಳನ್ನು ಮತ್ತು ನೀರುಕಾಗೆಗಳ ಮುಖಗಳನ್ನು ಹೊಂದಿದ್ದವು. ಕೆಲವರ ಕೈಗಳಲ್ಲಿ ಕಿವಿಗಳಿದ್ದವು. ಕೆಲವರಿಗೆ ಸಹಸ್ರಾರು ಕಣ್ಣುಗಳಿದ್ದವು. ನೂರಾರು ಹೊಟ್ಟೆಗಳಿದ್ದವು. ಕೆಲವರಲ್ಲಿ ಮಾಂಸಗಳೇ ಇರಲಿಲ್ಲ. ಕೆಲವರಿಗೆ ಕಾಗೆ ಮತ್ತು ಗಿಡುಗದ ಮುಖಗಳಿದ್ದವು. ಕೆಲವಕ್ಕೆ ಶಿರಗಳೇ ಇರಲಿಲ್ಲ. ಕೆಲವಕ್ಕೆ ಕರಡಿಯ ಮುಖಗಳಿದ್ದು ಭೀಷಣವಾಗಿ ತೋರುತ್ತಿದ್ದವು. ಉರಿಯುತ್ತಿರುವ ಕಣ್ಣು ನಾಲಿಗೆಗಳಿದ್ದವು. ಪ್ರಜ್ವಲಿಸುತ್ತಿರುವ ಮುಖಗಳಿದ್ದವು. ಕೆಲವಕ್ಕೆ ಟಗರಿನ ಮುಖಗಳಿದ್ದವು. ಇನ್ನು ಕೆಲವಕ್ಕೆ ಮೇಕೆಯ ಮುಖಗಳಿದ್ದವು. ಕೆಲವಕ್ಕೆ ಶಂಖದ ಕಾಂತಿಯಿದ್ದಿತು. ಕೆಲವು ಶಂಖದಂತ ಮುಖಗಳನ್ನು, ಶಂಖದಂತ ಕಿವಿಗಳನ್ನು ಹೊಂದಿದ್ದವು. ಕೆಲವು ಶಂಖಗಳ ಮಾಲೆಗಳನ್ನು ಧರಿಸಿದ್ದವು. ಕೆಲವರ ಧ್ವನಿಯು ಶಂಖಧ್ವನಿಗೆ ಸಮನಾಗಿತ್ತು. ಕೆಲವು ಜಟೆಗಳನ್ನು ಧರಿಸಿದ್ದವು. ಐದು ಜುಟ್ಟುಗಳಿದ್ದವು. ಬೋಳಾಗಿದ್ದವು. ತೆಳು ಹೊಟ್ಟೆಗಳಿದ್ದವು. ಕೆಲವಕ್ಕೆ ನಾಲ್ಕು ಹಲ್ಲುಗಳಿದ್ದವು. ನಾಲ್ಕು ನಾಲಿಗೆಗಳಿದ್ದವು. ಕೆಲವಕ್ಕೆ ಶಂಖದಂತಹ ಕಿವಿಗಳಿದ್ದವು. ಕಿರೀಟಗಳನ್ನು ಧರಿಸಿದ್ದವು. ಕೆಲವು ಸೊಂಟಕ್ಕೆ ಸುತ್ತಿಕೊಂಡಿದ್ದವು. ಗುಂಗುರು ಕೂದಲಿನವಾಗಿದ್ದವು. ಕೆಲವಕ್ಕೆ ಮುಂಡಾಸಗಳಿದ್ದವು. ಕೆಲವು ಮುಕುಟಗಳನ್ನು ಧರಿಸಿದ್ದವು. ಸುಂದರಮುಖವುಳ್ಳ ಕೆಲವು ಅಲಂಕೃತಗೊಂಡಿದ್ದವು. ಕೆಲವು ಕಮಲಗಳಿಂದ ಮಾಡಿದ ಕಿರೀಟಗಳನ್ನು ಧರಿಸಿದ್ದವು. ಕೆಲವು ನೈದಿಲೆಗಳ ಕಿರೀಟಗಳನ್ನು ಧರಿಸಿದ್ದವು. ಆ ನೂರಾರು ಸಹಸ್ರಾರು ಭೂತಗಳು ಮಹಾತ್ಮೆಗಳಿಂದ ಕೂಡಿದ್ದವು. ಶತಘ್ನಿಗಳನ್ನೂ ಚಕ್ರಗಳನ್ನೂ ಹಿಡಿದಿದ್ದವು. ಮುಸಲಗಳನ್ನು ಹಿಡಿದಿದ್ದವು. ಕೆಲವು ಭುಶುಂಡೀ ಮತ್ತು ಪಾಶಗಳನ್ನು ಹಿಡಿದಿದ್ದರೆ ಕೆಲವು ಗದೆಗಳನ್ನು ಹಿಡಿದಿದ್ದವು. ರಣೋತ್ಕಟರಾದ ಕೆಲವು ಬೆನ್ನಿಗೆ ವಿಚಿತ್ರಬಾಣಗಳುಳ್ಳ ಭತ್ತಳಿಕೆಗಳನ್ನು ಕಟ್ಟಿಕೊಂಡಿದ್ದವು. ಅವು ಧ್ವಜ, ಪತಾಕೆ, ಘಂಟೆ ಮತ್ತು ಪರಶು ಮೊದಲಾದ ಆಯುಧಗಳನ್ನೂ ಹೊಂದಿದ್ದವು. ಮಹಾಪಾಶಗಳನ್ನು ಮೇಲಿತ್ತಿ ಹಿಡಿದಿದ್ದವು. ಹಾಗೆಯೇ ದೊಣ್ಣೆಗಳನ್ನು ಹಿಡಿದಿದ್ದವು. ಕೆಲವು ಕಂಬಗಳನ್ನೂ ಕೆಲವು ಖಡ್ಗಗಳನ್ನೂ ಹಿಡಿದಿದ್ದವು. ಕೆಲವು ಸರ್ಪಗಳಿಂದ ಮಾಡಿದ್ದ ಎತ್ತರ ಕಿರೀಟಗಳನ್ನು ಧರಿಸಿದ್ದವು. ಕೆಲವು ಮಹಾಸರ್ಪಗಳನ್ನೇ ತೋಳ್ಬಂದಿಯನ್ನಾಗಿ ಧರಿಸಿದ್ದವು. ವಿಚಿತ್ರ ಆಭರಣಗಳನ್ನು ಧರಿಸಿದ್ದವು. ಕೆಲವು ಧೂಳಿನಿಂದ ಮುಚ್ಚಿಕೊಂಡಿದ್ದರೆ ಕೆಲವು ಕೆಸರನ್ನು ಲೇಪಿಸಿಕೊಂಡಿದ್ದವು. ಎಲ್ಲವೂ ಬಿಳಿಯ ವಸ್ತ್ರ ಮತ್ತು ಬಿಳೀ ಮಾಲೆಗಳನ್ನು ಧರಿಸಿದ್ದವು. ಕೆಲವರ ದೇಹಗಳು ನೀಲಿ ವರ್ಣದ್ದಾಗಿದ್ದರೆ ಕೆಲವರ ದೇಹಗಳು ಪಿಂಗಲವರ್ಣದ್ದಾಗಿದ್ದವು. ಕೆಲವು ತಮ್ಮ ತಲೆಗಳನ್ನು ಬೋಳಿಸಿಕೊಂಡಿದ್ದವು. ಅ ಕನಕಪ್ರಭೆಯುಳ್ಳ ಪಾರಿಷದರು ಪ್ರಹೃಷ್ಟರಾಗಿ ಭೇರೀ, ಶಂಖ, ಮೃದಂಗ, ಝರ್ಝರ, ಆನಕ ಮತ್ತು ಗೋಮುಖಗಳನ್ನು ಬಾರಿಸುತ್ತಿದ್ದರು. ಆ ಮಹಾಬಲರಲ್ಲಿ ಕೆಲವು ಹಾಡುತ್ತಿದ್ದರೆ ಇನ್ನು ಇತರರು ನರ್ತಿಸುತ್ತಿದ್ದರು. ಇನ್ನೂ ಕೆಲವರು ಹಾರುತ್ತಿದ್ದರು, ನೆಗೆಯುತ್ತಿದ್ದರು ಮತ್ತು ಕುಪ್ಪಳಿಸುತ್ತಿದ್ದರು. ವೇಗವಾಗಿ ಓಡುತ್ತಿದ್ದವು. ಹಾಗೆ ಓಡುವಾಗ ಕೆಲವರ ಉದ್ದ ಕೂದಲುಗಳು ಗಾಳಿಯಿಂದಾಗಿ ಹಾರುತ್ತಿದ್ದವು. ಮದಿಸಿದ ಆನೆಗಳಂತೆ ಪುನಃ ಪುನಃ ಘೀಳಿಡುತ್ತಿದ್ದವು. ಅತ್ಯಂತ ಭಯಂಕರರಾಗಿದ್ದ, ಘೋರರೂಪದ ಗಣಗಳು ಶೂಲ-ಪಟ್ಟಿಶಗಳನ್ನು ಹಿಡಿದಿದ್ದವು. ನಾನಾ ಬಣ್ಣದ ವಸ್ತ್ರಗಳನ್ನೂ, ಮಾಲೆಗಳನ್ನೂ, ಲೇಪನಗಳನ್ನೂ ಧರಿಸಿದ್ದವು. ಕೆಲವು ಶೂರರು ಮತ್ತು ಸಹಿಸಲು ಅಸಾಧ್ಯ ವಿಕ್ರಮವುಳ್ಳವರು ಶತ್ರುಗಳ ಹಂತಾರರಂತೆ ತಮ್ಮ ಬಣ್ಣಬಣ್ಣದ ರತ್ನಗಳ ತೋಳ್ಬಂದಿಗಳನ್ನು ಧರಿಸಿದ್ದ ಕೈಗಳನ್ನು ಮೇಲಿತ್ತಿದ್ದವು. ರಕ್ತ-ವಸೆಗಳನ್ನು ಕುಡಿಯುತ್ತಿದ್ದವು. ಮಾಂಸ-ಕರುಳುಗಳನ್ನು ತಿನ್ನುತ್ತಿದ್ದವು. ಕೆಲವಕ್ಕೆ ಶಿಖೆಗಳಿದ್ದವು. ಕೆಲವು ಬೆಟ್ಟ ಕಣಗಿಲೇ ಹೂಗಳನ್ನು ಮುಡಿದಿದ್ದವು. ಕೆಲವು ಬಡಕಲಾಗಿದ್ದರೆ ಕೆಲವರಿಗೆ ಗಡಿಗೆಯಂತಹ ಹೊಟ್ಟಿಯಿದ್ದಿತು. ಅತಿ ಕುಳ್ಳರಿದ್ದರು. ಅತಿ ಎತ್ತರದವರೂ ಇದ್ದರು. ಬಲಶಾಲಿಗಳೂ ಭೈರವರೂ ಇದ್ದರು. ಕೆಲವರು ವಿಕಾರರೂಪವುಳ್ಳವರಾಗಿದ್ದರು. ಕೆಲವರಿಗೆ ಉದ್ದವಾದ ಕಪ್ಪು ತುಟಿಗಳಿದ್ದವು. ಕೆಲವಕ್ಕೆ ಅತಿ ದೊಡ್ಡ ಲಿಂಗಗಳಿದ್ದವು. ಬೆಲೆಬಾಳುವ ಅನೇಕ ಮುಕುಟಗಳನ್ನು ಧರಿಸಿದ್ದವು, ಕೆಲವು ಬೋಳುತಲೆಗಳುಳ್ಳವದಾಗಿದ್ದರೆ ಕೆಲವುಗಳಿಗೆ ಜುಟ್ಟುಗಳಿದ್ದವು. ಅವು ಸೂರ್ಯ-ಚಂದ್ರ-ಗ್ರಹ-ನಕ್ಷತ್ರಗಳೊಂದಿಗೆ ಆಕಾಶವನ್ನೇ ಭೂಮಿಯಮೇಲೆ ಬೀಳುವಂತೆ ಮಾಡಬಲ್ಲವರಾಗಿದ್ದವು. ಚತುರ್ವಿಧ ಭೂತಗಣಗಳನ್ನೂ ಸಂಹರಿಸಲು ಉತ್ಸುಕವಾಗಿದ್ದವು. ಹರನ ಹುಬ್ಬುಗಂಟನ್ನೂ ಸಹಿಸಿಕೊಳ್ಳಬಲ್ಲ ಅವು ಸದಾ ನಿರ್ಭಯವಾಗಿದ್ದವು. ಬಯಸಿದಂತೆ ಮಾಡುವ ಆ ಸಿದ್ಧರು ತ್ರೈಲೋಕ್ಯಗಳ ಈಶ್ವರರಿಗೂ ಈಶ್ವರರಂತಿದ್ದರು. ನಿತ್ಯವೂ ಆನಂದದಿಂದ ಮುದಿತರಾಗಿದ್ದ ಆ ವಾಗೀಶ್ವರರು ಮತ್ಸರಗಳಿಂದ ವಿಹೀನರಾಗಿದ್ದರು. ಅಷ್ಟಗುಣ ಐಶ್ವರ್ಯಗಳನ್ನು ಪಡೆದಿದ್ದ ಅವರು ನಿರಭಿಮಾನಿಗಳಾಗಿದ್ದರು.
ಅವರ ಕರ್ಮಗಳಿಂದ ಭಗವಾನ್ ಹರನು ನಿತ್ಯವೂ ವಿಸ್ಮಿತಗೊಳ್ಳುತ್ತಿದ್ದನು. ಮನಸ್ಸು, ಮಾತು, ಮತ್ತು ಕರ್ಮಗಳ ಮೂಲಕವಾಗಿ ಭಕ್ತಿಯಿಂದ ನಿತ್ಯವೂ ಆರಾಧಿಸುವ ಆ ಭಕ್ತರನ್ನು ಭಗವಾನನು ಮನಸ್ಸು, ಮಾತು ಮತ್ತು ಕರ್ಮಗಳ ಮೂಲಕವಾಗಿ, ತನ್ನ ಔರಸಪುತ್ರರ ಹಾಗೆ, ರಕ್ಷಿಸುತ್ತಾನೆ. ಅನ್ಯ ಬ್ರಹ್ಮದ್ವೇಷಿಗಳ ರಕ್ತ-ವಸೆಗಳನ್ನು ಅವರು ಕ್ರುದ್ಧರಾಗಿ ಸದಾ ಕುಡಿಯುತ್ತಿರುತ್ತಾರೆ. ಅವರು ನಿತ್ಯವೂ ಇಪ್ಪತ್ನಾಲ್ಕು ಅಂಶಗಳುಳ್ಳ ಸೋಮವನ್ನು ಕುಡಿಯುತ್ತಾರೆ. ಶ್ರುತಿ, ಬ್ರಹ್ಮಚರ್ಯ, ತಪಸ್ಸು ಮತ್ತು ಸಮಗಳಿಂದ ಶೂಲಾಂಕನನ್ನು ಆರಾಧಿಸಿ ಭವನ ಸಾಯುಜ್ಯವನ್ನೇ ಪಡೆದಿದ್ದಾರೆ. ತನ್ನಂತೆಯೇ ಇರುವ ಈ ಭೂತಗಣಗಳೊಂದಿಗೆ ಮತ್ತು ಪಾರ್ವತಿಯೊಂದಿಗೆ ಭೂತ ಭವ್ಯ ಭವಿಷ್ಯತ್ತುಗಳ ಪ್ರಭುವಾದ ಭಗವಾನ್ ಮಹೇಶ್ವರನು ಹವಿಸ್ಸನ್ನು ಸ್ವೀಕರಿಸುತ್ತಾನೆ. ನಾನಾವಿಧವಾದ ವಿಚಿತ್ರ ಅಟ್ಟಹಾಸಗಳಿಂದ, ಸಿಂಹನಾದಗಳಿಂದ, ಗರ್ಜನೆಯಿಂದ ಮತ್ತು ವಾದ್ಯಘೋಷಗಳಿಂದ ಪ್ರಪಂಚವನ್ನೇ ಭಯಪಡಿಸುತ್ತಾ ಅವು ಅಶ್ವತ್ಥಾಮನ ಬಳಿ ಬಂದವು. ಮಹಾದೇವನನ್ನು ಸಂಸ್ತುತಿಸುತ್ತಿದ್ದ ಆ ಸುವರ್ಚಸರು ತಮ್ಮ ಪ್ರಭೆಯನ್ನು ಸುತ್ತಲೂ ಹರಡುತ್ತಿದ್ದರು. ಮಹಾತ್ಮ ದ್ರೌಣಿಯ ಮಹಿಮೆಯನ್ನು ವರ್ಧಿಸಲು ಬಯಸುತ್ತಿದ್ದರು.
ಅವನ ತೇಜಸ್ಸು ಎಷ್ಟೆಂದು ಮತ್ತು ಮಲಗಿದ್ದವರ ನಾಶವು ಹೇಗೆ ನಡೆಯುವುದೆಂದು ಪರೀಕ್ಷಿಸಲು ಅವರು ಬಂದಿದ್ದರು. ಹಾಗೆ ಭಯಂಕರವಾದ, ಉಗ್ರರೂಪಗಳ, ಪರಿಘಾಯುಧಗಳನ್ನೂ, ಕೊಳ್ಳಿಗಳನ್ನೂ, ತ್ರಿಶೂಲಗಳನ್ನೂ, ಪಟ್ಟಿಶಗಳನ್ನು ಹಿಡಿದಿದ್ದ ಆ ಘೋರರೂಪದ ಭೂತಗಣಗಳು ಅವನನ್ನು ಸುತ್ತುವರೆದು ನಿಂತವು. ದರ್ಶನಮಾತ್ರದಿಂದಲೇ ಮೂರುಲೋಕಗಳಿಗೂ ಭಯವನ್ನುಂಟುಮಾಡುವ ಅವರನ್ನು ನೋಡಿಯೂ ಮಹಾಬಲ ಅಶ್ವತ್ಥಾಮನು ಸ್ವಲ್ಪವೂ ವ್ಯಥೆಗೊಳ್ಳಲಿಲ್ಲ.
ಆಗ ಧನುಷ್ಪಾಣಿಯಾಗಿದ್ದ, ಗೋಧಾಂಗುಲಿತ್ರಗಳನ್ನು ಧರಿಸಿದ್ದ ದ್ರೌಣಿಯು ಸ್ವಯಂ ತನ್ನನ್ನೇ ತಾನು ಶಿವನಿಗೆ ಉಪಹಾರವನ್ನಾಗಿ ಅರ್ಪಿಸಿದನು. ಆ ಆತ್ಮಸಪರ್ಪಣಕರ್ಮದಲ್ಲಿ ಧನುಸ್ಸೇ ಸಮಿತ್ತಾಗಿತ್ತು. ನಿಶಿತ ಶರಗಳೇ ಪವಿತ್ರಗಳಾಗಿದ್ದವು. ಅಶ್ವತ್ಥಾಮನ ಶರೀರವೇ ಹವಿಸ್ಸಾಗಿತ್ತು. ಆಗ ಮಹಾಮನ್ಯು ಪ್ರತಾಪವಾನ್ ದ್ರೋಣಪುತ್ರನು ಸೋಮ ಮಂತ್ರಪೂರ್ವಕವಾಗಿ ತನ್ನ ಶರೀರವನ್ನೇ ಹವಿಸ್ಸನ್ನಾಗಿ ಅಗ್ನಿಯಲ್ಲಿ ಸಮರ್ಪಿಸಿಕೊಂಡನು. ಆ ರೌದ್ರಕರ್ಮಿ ಅಚ್ಯುತ ರುದ್ರನನ್ನು ತನ್ನ ರೌದ್ರ ಕರ್ಮಗಳಿಂದಲೇ ತಣಿಸುತ್ತಾ ಕೈಮುಗಿದು ಆ ಮಹಾತ್ಮನನ್ನು ಸ್ತುತಿಸಿದನು: “ಭಗವನ್! ಆಂಗಿರಸ ಕುಲದಲ್ಲಿ ಹುಟ್ಟಿದ ನಾನು ಈ ನನ್ನ ದೇಹವನ್ನು ಅಗ್ನಿಯಲ್ಲಿ ಆಹುತಿಯನ್ನಾಗಿ ಅರ್ಪಿಸುತ್ತಿದ್ದೇನೆ. ಬಲಿರೂಪವಾಗಿ ನನ್ನನ್ನು ಸ್ವೀಕರಿಸು! ಮಹಾದೇವ! ವಿಶ್ವಾತ್ಮಾ! ಈ ಆಪತ್ತಿನಲ್ಲಿ ಭಕ್ತಿಯಿಂದ ಪರಮ ಸಮಾಧಿಯಿಂದ ನಿನ್ನ ಎದುರು ನನ್ನನ್ನು ಸಮರ್ಪಿಸುತ್ತಿದ್ದೇನೆ. ಸರ್ವಭೂತಗಳೂ ನಿನ್ನಲ್ಲಿವೆ. ಸರ್ವಭೂತಗಳಲ್ಲಿಯೂ ನೀನಿರುವೆ. ಎಲ್ಲ ಪ್ರಧಾನಗುಣಗಳೂ ನಿನ್ನಲ್ಲಿ ಏಕತ್ರವಾಗಿ ನೆಲೆಸಿವೆ. ಸರ್ವಭೂತಾಶ್ರಯನೇ! ವಿಭೋ! ಶತ್ರುಗಳನ್ನು ಪರಾಭವಗೊಳಿಸಲು ನನಗೆ ಅಶಕ್ಯವೆಂದಾದರೆ ನನ್ನನ್ನೇ ಬಲಿಗೊಡಲು ಸಿದ್ಧನಾಗಿರುವ ನನ್ನನ್ನು ಸ್ವೀಕರಿಸು!”
ಹೀಗೆ ಹೇಳಿ ದ್ರೌಣಿಯು ಪ್ರಜ್ವಲಿಸುತ್ತಿರುವ ಅಗ್ನಿಯಿಂದ ದೇದೀಪ್ಯಮಾನವಾಗಿರುವ ವೇದಿಯನ್ನು ಹತ್ತಿ ದೇಹದ ಮೇಲಿನ ಮೋಹವನ್ನು ಸಂಪೂರ್ಣವಾಗಿ ತೊರೆದು ಧಗಧಗನೆ ಉರಿಯುತ್ತಿರುವ ಅಗ್ನಿಯನ್ನು ಪ್ರವೇಶಿಸಿದನು. ಕೈಗಳೆರಡನ್ನೂ ಮೇಲೆತ್ತಿ ಹಂದಾಡದೇ ಹವಿಸ್ಸಾಗಿ ಕುಳಿತಿದ್ದ ಅವನನ್ನು ನೋಡಿ ಸಾಕ್ಷಾತ್ ಭಗವಾನ್ ಮಹಾದೇವನು ನಸುನಗುತ್ತಾ ಹೇಳಿದನು: “ಅಕ್ಲಿಷ್ಟಕರ್ಮಿ ಕೃಷ್ಣನು ಸತ್ಯ, ಶೌಚ, ಸರಳತೆ, ತ್ಯಾಗ, ತಪಸ್ಸು, ನಿಯಮ, ಕ್ಷಮೆ, ಭಕ್ತಿ, ಧೈರ್ಯ, ಬುದ್ಧಿ ಮತ್ತು ಮಾತುಗಳಿಂದ ಯಥೋಚಿತವಾಗಿ ನನ್ನನ್ನು ಆರಾಧಿಸಿದ್ದಾನೆ. ಆದುದರಿಂದ ಕೃಷ್ಣನಿಗಿಂತಲೂ ಪ್ರಿಯನಾದವನು ಬೇರೆ ಯಾರೂ ನನಗಿಲ್ಲ. ಅವನನ್ನು ಸಮ್ಮಾನಿಸಲೋಸುಗ ಮತ್ತು ನಿನ್ನನ್ನು ಪರೀಕ್ಷಿಸಲೋಸುಗ ನಾನು ಪಾಂಚಾಲರನ್ನು ಎಲ್ಲರೀತಿಗಳಿಂದ ರಕ್ಷಿಸುತ್ತಿದ್ದೆನು. ನಿನ್ನ ಮೇಲೆ ಅನೇಕ ಮಾಯೆಗಳನ್ನೂ ಪ್ರಯೋಗಿಸಿದೆನು. ಇದೂವರೆಗೆ ಪಾಂಚಾಲರನ್ನು ರಕ್ಷಿಸಿ ಅವನಿಗೆ ಸಮ್ಮಾನಮಾಡಿಯಾಯಿತು. ಕಾಲನ ವಶರಾಗಿರುವ ಇವರು ಇನ್ನು ಜೀವಿತವಾಗಿರಲಾರರು!”
ಹೀಗೆ ಹೇಳಿ ಭಗವಾನನು ತನ್ನ ಶರೀರದಿಂದ ಅವನ ಶರೀರದೊಳಗೆ ಪ್ರವೇಶಿಸಿದನು ಮತ್ತು ಅವನಿಗೆ ಉತ್ತಮ ವಿಮಲಖಡ್ಗವನ್ನು ಪ್ರದಾನಿಸಿದನು. ಭಗವಂತನ ಆವೇಶವಾದೊಡನೆಯೇ ಅಶ್ವತ್ಥಾಮನು ಇನ್ನೂ ಹೆಚ್ಚು ತೇಜಸ್ಸಿನಿಂದ ಬೆಳಗಿದನು. ದೇವಸೃಷ್ಟಿಯ ತೇಜಸ್ಸಿನಿಂದ ಅವನು ಯುದ್ಧದಲ್ಲಿ ಕಲ್ಲಿನ ಅಂಶವೇ ಆದನು. ಸಾಕ್ಷಾದ್ ಈಶ್ವರನಂತೆ ಶತ್ರುಶಿಬಿರದೊಳಗೆ ಪ್ರವೇಶಿಸುತ್ತಿದ್ದ ಅವನನ್ನು ಅದೃಶ್ಯರೂಪದಲ್ಲಿ ಭೂತಗಣಗಳೂ ರಾಕ್ಷಸಗಣಗಳೂ ಅನುಸರಿಸಿ ಹೋದರು.
ಹದಿನೆಂಟನೆಯ ದಿನದ ರಾತ್ರಿಯುದ್ಧ
ಮಹಾತ್ಮ ದ್ರೋಣಪುತ್ರನು ಆ ಶಿಬಿರವನ್ನು ಪ್ರವೇಶಿಸಲಾಗಿ ಕೃಪ ಮತ್ತು ಕೃತವರ್ಮರು ಶಿಬಿರದ್ವಾರದಲ್ಲಿಯೇ ಉಳಿದುಕೊಂಡರು. ಪ್ರಯತ್ನಶೀಲರಾದ ಆ ಮಹರಥರಿಬ್ಬರನ್ನೂ ನೋಡಿ ಪ್ರಹೃಷ್ಟನಾದ ಅಶ್ವತ್ಥಾಮನು ಮೆಲ್ಲನೇ ಈ ಮಾತನ್ನಾಡಿದನು: “ಪ್ರಯತ್ನಶೀಲರಾದ ನೀವಿಬ್ಬರೂ ಸರ್ವಕ್ಷತ್ರಿಯರ ನಾಶಕ್ಕೆ ಸಮರ್ಥರಾಗಿರುವಿರಿ. ಹೀಗಿರುವಾಗ ಅಳಿದುಳಿದವರ ಮತ್ತು ಅದರಲ್ಲೂ ವಿಶೇಷವಾಗಿ ಮಲಗಿರುವವರ ನಾಶದ ಕುರಿತು ಹೇಳುವುದೇನಿದೆ? ನಾನು ಶಿಬಿರವನ್ನು ಪ್ರವೇಶಿಸಿ ಕಾಲನಂತೆ ಸಂಚರಿಸುತ್ತೇನೆ. ಆದರೆ ನನ್ನಿಂದ ಯಾವನೊಬ್ಬ ಮಾನವನೂ ಜೀವಂತನಾಗಿ ತಪ್ಪಿಸಿಕೊಂಡು ಹೋಗಬಾರದು!”
ಹೀಗೆ ಹೇಳಿ ದ್ರೌಣಿಯು ಪಾರ್ಥರ ಅ ಮಹಾ ಶಿಬಿರವನ್ನು ದ್ವಾರದ ಮೂಲಕವಾಗಿ ಹೋಗದೇ ಬೇರೊಂದು ಕಡೆಯಿಂದ ನೆಗೆದು, ತನಗಾಗಿ ಸ್ವಲ್ಪವೂ ಭಯಗೊಳ್ಳದೇ, ಪ್ರವೇಶಿಸಿದನು. ಆ ಬಿಡಾರವನ್ನು ಚೆನ್ನಾಗಿ ತಿಳಿದಿದ್ದ ಮಹಾಬಾಹುವು ಮೆಲ್ಲನೇ ಧೃಷ್ಟದ್ಯುಮ್ನನ ನಿಲಯದ ಬಳಿಸಾರಿದನು. ಅವನಾದರೋ ರಣದಲ್ಲಿ ಬಲವನ್ನುಪಯೋಗಿಸಿ ಮಹಾಕರ್ಮಗಳನ್ನೆಸಗಿ ಬಳಲಿ ಸ್ವಸೈನ್ಯದಿಂದ ಸುತ್ತುವರೆಯಲ್ಪಟ್ಟು ಸಂಪೂರ್ಣ ವಿಶ್ವಾಸದಿಂದ ಮಲಗಿದ್ದನು. ಧೃಷ್ಟದ್ಯುಮ್ನನ ಆ ನಿಲಯವನ್ನು ಪ್ರವೇಶಿಸಿ ದ್ರೌಣಿಯು ಶಯನದಲ್ಲಿ ಮಲಗಿದ್ದ ಪಾಂಚಾಲ್ಯನನ್ನು ಹತ್ತಿರದಿಂದ ನೋಡಿದನು. ಅವನು ಶ್ರೇಷ್ಠ ಹೂವಿನ ಹಾರಗಳಿಂದ ಸಮಲಂಕೃತನಾಗಿದ್ದನು. ಧೂಪ-ಚಂದನ-ಚೂರ್ಣಗಳಿಂದ ಸುವಾಸಿತವಾಗಿದ್ದ ಬಹುಮೂಲ್ಯ ಹಚ್ಚಡವನ್ನು ಹೊದ್ದು ಶುದ್ಧ ರೇಷ್ಮೆಯಿಂದ ಮಾಡಲ್ಪಟ್ಟ ದೊಡ್ಡ ಹಾಸಿಗೆಯ ಮೇಲೆ ಮಲಗಿದ್ದನು. ನಿಶ್ಚಿಂತನಾಗಿ ಭಯರಹಿತನಾಗಿ ಹಾಸಿಗೆಯ ಮೇಲೆ ಮಲಗಿದ್ದ ಆ ಮಹಾತ್ಮನನ್ನು ಅವನು ಕಾಲಿನಿಂದ ಒದೆದು ಎಬ್ಬಿಸಿದನು. ಚರಣಸ್ಪರ್ಶದಿಂದ ಎಚ್ಚೆದ್ದ ಅಮೇಯಾತ್ಮ ರಣದುರ್ಮದನು ಮಹಾರಥ ದ್ರೋಣಪುತ್ರನನ್ನು ಗುರುತಿಸಿದನು. ಶಯನದಿಂದ ಮೇಲೆಳುತ್ತಿದ್ದ ಅವನನ್ನು ಮಹಾಬಲ ಅಶ್ವತ್ಥಾಮನು ತನ್ನೆರಡು ಕೈಗಳಿಂದ ಅವನ ತಲೆಗೂದಲನ್ನು ಹಿಡಿದು ಮೇಲೆತ್ತಿ ಅತ್ಯಂತ ರಭಸದಿಂದ ನೆಲಕ್ಕೆ ಅಪ್ಪಳಿಸಿದನು. ಬಲಪೂರ್ವಕವಾಗಿ ಒಮ್ಮಿಂದೊಮ್ಮೆಲೇ ಅಪ್ಪಳಿಸಲ್ಪಟ್ಟ ಪಾಂಚಾಲ್ಯನು ನಿದ್ರೆಯ ಜಡದಿಂದಾಗಿ ಅವನಿಂತ ತಪ್ಪಿಸಿಕೊಳ್ಳಲು ಅಶಕ್ಯನಾದನು. ಅವನ ಕಂಠ ಮತ್ತು ಎದೆಯನ್ನು ಎರಡೂ ಪಾದಗಳಿಂದ ಮೆಟ್ಟಿ ಹಿಡಿದು ಅಶ್ವತ್ಥಾಮನು ಚಡಪಡಿಸುತ್ತಿದ್ದ ಮತ್ತು ಕೂಗಿಕೊಳ್ಳುತ್ತಿದ್ದ ಧೃಷ್ಟದ್ಯುಮ್ನನನ್ನು ಪಶುವಂತೆ ಹೊಡೆಯತೊಡಗಿದನು. ತನ್ನ ಉಗುರುಗಳಿಂದಲೇ ದ್ರೌಣಿಯನ್ನು ಪರಚುತ್ತಾ ಧೃಷ್ಟದ್ಯುಮ್ನನು ಅಸ್ಪಷ್ಟವಾಗಿ ಕೂಗಿಕೊಂಡನು: “ಆಚಾರ್ಯಪುತ್ರ! ಬೇಗನೇ ಶಸ್ತ್ರದಿಂದ ನನ್ನನ್ನು ಕೊಲ್ಲು! ನೀನು ಹೀಗೆ ಮಾಡಿದರೆ ನಾನು ಸುಕೃತರ ಲೋಕಗಳಿಗೆ ಹೋಗಬಲ್ಲೆ!” ಅವನ ಆ ಅವ್ಯಕ್ತ ಮಾತುಗಳನ್ನು ಕೇಳಿ ದ್ರೌಣಿಯು ಹೇಳಿದನು: “ಕುಲಪಾಂಸಕನೇ! ಆಚಾರ್ಯರನ್ನು ಸಂಹರಿಸಿದವರಿಗೆ ಯಾವ ಪುಣ್ಯ ಲೋಕಗಳೂ ಇಲ್ಲ! ಆದುದರಿಂದ ದುರ್ಮತೇ! ನೀನು ಶಸ್ತ್ರದಿಂದಾದ ವಧೆಗೆ ಅರ್ಹನಲ್ಲ!” ಹೀಗೆ ಹೇಳುತ್ತಾ ಆ ಕ್ರುದ್ಧ ವೀರನು ಮದಿಸಿದ ಆನೆಯು ಸಿಂಹವನ್ನು ಹೇಗೋ ಹಾಗೆ ಭಯಂಕರ ಕಾಲುಗಳಿಂದ, ಮೊಣಕಾಲುಗಳಿಂದ ಮತ್ತು ಮಂಡಿಗಳಿಂದ ಅವನ ಮರ್ಮಸ್ಥಾನಗಳಲ್ಲಿ ಪ್ರಹರಿಸಿ ಸಂಹರಿಸಿದನು.
ವಧಿಸಲ್ಪಡುತ್ತಿದ್ದ ಆ ವೀರನ ಶಬ್ಧದಿಂದ ನಿವಾಸದಲ್ಲಿದ್ದ ಸ್ತ್ರೀಯರು ಮತ್ತು ಅನ್ಯ ರಕ್ಷಕರು ಎಚ್ಚೆತ್ತರು. ಪ್ರಹರಿಸುತ್ತಿದ್ದ ಆ ಅತಿಮಾನುಷ ಮಿಕ್ರಮನನ್ನು ನೋಡಿ ಇವನು ಯಾವುದೋ ಭೂತವಿರಬಹುದೆಂದು ಬಗೆದು ಭಯದಿಂದ ಉದ್ವಿಗ್ನರಾಗಿ ಮಾತೇ ಹೊರಡದೇ ಸುಮ್ಮನಾಗಿದ್ದರು. ತನ್ನ ಉಪಾಯದಂತೆ ಅವನನ್ನು ಯಮಕ್ಷಯಕ್ಕೆ ಕಳುಹಿಸಿ ಆ ತೇಜಸ್ವೀ ಅಶ್ವತ್ಥಾಮನು ತನ್ನ ಸುಂದರ ರಥದ ಬಳಿಬಂದು ಅದನ್ನೇರಿದನು. ಶತ್ರುಗಳನ್ನು ಸಂಹರಿಸಲು ಬಯಸಿದ್ದ ಆ ಬಲಶಾಲಿಯು ಅವನ ಭವನದಿಂದ ಹೊರಬಂದು ರಥದಿಂದ ದಿಕ್ಕುಗಳನ್ನು ಮೊಳಗಿಸುತ್ತಾ ಇನ್ನೊಂದು ಶಿಬಿರವನ್ನು ಪ್ರವೇಶಿಸಿದನು. ಮಹಾರಥ ದ್ರೋಣಪುತ್ರನು ಹೊರಟುಹೋಗಲು ಅಲ್ಲಿದ್ದ ರಕ್ಷಕರೆಲ್ಲರೂ ಸ್ತ್ರೀಯರೊಂದಿಗೆ ಗಟ್ಟಿಯಾಗಿ ಅಳತೊಡಗಿದರು. ರಾಜನು ಹತನಾದುದನ್ನು ನೋಡಿ ಅತ್ಯಂತ ಶೋಕಪರಾಯಣರಾದ ಧೃಷ್ಟದ್ಯುಮ್ನನ ಕ್ಷತ್ರಿಯರೆಲ್ಲರೂ ಕೂಗಿಕೊಳ್ಳತೊಡಗಿದರು.
ಅವರ ಆ ಶಬ್ಧದಿಂದಾಗಿ ಸಮೀಪದಲ್ಲಿದ್ದ ಕ್ಷತ್ರಿಯರ್ಷಭರು ಬೇಗನೆ ಸನ್ನದ್ಧರಾಗಿ ಇದೇನೆಂದು ವಿಚಾರಿಸತೊಡಗಿದರು. ಭಾರದ್ವಾಜ ಅಶ್ವತ್ಥಾಮನನ್ನು ನೋಡಿ ಭಯಭೀತರಾದ ಸ್ತ್ರೀಯರಾದರೋ ದೀನಕಂಠದಿಂದ “ಬೇಗನೇ ಓಡಿಹೋಗಿರಿ!” ಎಂದು ಕೂಗಿಕೊಂಡರು. “ಪಾಂಚಾಲರಾಜನನ್ನು ಸಂಹರಿಸಿ ರಥವನ್ನೇರಿ ನಿಂತಿರುವವನು ರಾಕ್ಷಸನೋ ಅಥವಾ ಮನುಷ್ಯನೋ ಎನ್ನುವುದನ್ನು ನಾವು ತಿಳಿಯಲಾರೆವು!” ಆಗ ಆ ಯೋಧಮುಖ್ಯರು ಒಡನೆಯೇ ಅಶ್ವತ್ಥಾಮನನ್ನು ಸುತ್ತುವರೆಯಲು ಅವನು ರುದ್ರಾಸ್ತ್ರದಿಂದ ತನ್ನ ಮೇಲೆ ಆಕ್ರಮಣಿಸುತ್ತಿದ್ದ ಅವರೆಲ್ಲರನ್ನೂ ಸಂಹರಿಸಿದನು. ಧೃಷ್ಟದ್ಯುಮ್ನ ಮತ್ತು ಅವನ ಅನುಯಾಯಿಗಳನ್ನು ಸಂಹರಿಸಿ ಅವನು ಶಯನದಲ್ಲಿ ಮಲಗಿದ್ದ ಉತ್ತಮೌಜಸನನ್ನು ಹತ್ತಿರದಿಂದ ನೋಡಿದನು. ಓಜಸ್ಸಿನಿಂದ ಮತ್ತು ಪಾದದಿಂದ ಅವನ ಕಂಠ ಮತ್ತು ಎದೆಗಳನ್ನು ಮೆಟ್ಟಿ ಧೃಷ್ಟದ್ಯುಮ್ನನನ್ನು ಕೊಂದ ಹಾಗೆಯೇ ಕೂಗಿಕೊಳ್ಳುತ್ತಿದ್ದ ಆ ಅರಿಂದಮನನ್ನು ಸಂಹರಿಸಿದನು.
ಉತ್ತಮೌಜಸನು ರಾಕ್ಷಸನಿಂದ ಹತನಾದನೆಂದು ತಿಳಿದ ಯುಧಾಮನ್ಯುವು ಗದೆಯನ್ನು ಮೇಲೆತ್ತಿ ವೇಗದಿಂದ ದ್ರೌಣಿಯ ಎದೆಗೆ ಅಪ್ಪಳಿಸಿದನು. ಮುಂದೆ ಧಾವಿಸಿ ಬಂದ ಯುಧಾಮನ್ಯುವನ್ನೂ ಹಿಡಿದು ನೆಲದ ಮೇಲೆ ಬೀಳಿಸಿ ವಿಲಿವಿಲಿ ಒದ್ದಾಡುತ್ತಿರುವ ಅವನನ್ನು ಪಶುವಂತೆ ಹೊಡೆದು ಸಂಹರಿಸಿದನು. ಅವನನ್ನು ಕೊಂದ ಹಾಗೆಯೇ ಆ ವೀರನು ಅಲ್ಲಲ್ಲಿ ಮಲಗಿದ್ದ ಇತರ ಮಹಾರಥರನ್ನೂ ವಿಲಿವಿಲಿ ಒದ್ದಾಡುವಂತೆ ಮಾಡಿ ಯಜ್ಞದಲ್ಲಿ ಪಶುಗಳನ್ನು ಹೇಗೋ ಹಾಗೆ ಹಿಸುಕಿ ಸಂಹರಿಸಿದನು. ಆಗ ಆ ಖಡ್ಗಯುದ್ಧವಿಶಾರದನು ಖಡ್ಗವನ್ನು ತೆಗೆದುಕೊಂಡು ಶಿಬಿರದ ಒಂದೊಂದು ಭಾಗದಲ್ಲಿಯೂ ಪ್ರತ್ಯೇಕ ಪ್ರತ್ಯೇಕ ಮಾರ್ಗಗಳಲ್ಲಿ ಸಂಚರಿಸುತ್ತಾ ಅನ್ಯರನ್ನೂ ಸಂಹರಿಸಿದನು. ಹಾಗೆಯೇ ಆಯುಧಗಳನ್ನು ಕೆಳಗಿಟ್ಟು ಬಳಲಿ ಮಲಗಿದ್ದ ಮಧ್ಯಗೌಲ್ಮಿಕರ ಗುಲ್ಮವನ್ನು ನೋಡಿ ಅವರೆಲ್ಲರನ್ನೂ ಕ್ಷಣಮಾತ್ರದಲ್ಲಿ ಸಂಹರಿಸಿದನು. ಶ್ರೇಷ್ಠ ಖಡ್ಗದಿಂದ ಯೋಧರನ್ನೂ, ಕುದುರೆಗಳನ್ನೂ ಮತ್ತು ಆನೆಗಳನ್ನೂ ತುಂಡರಿಸುತ್ತಿದ್ದ ಅವನ ಸರ್ವಾಂಗಗಳೂ ರಕ್ತದಿಂದ ತೋಯ್ದು ಕಾಲವು ಸೃಷ್ಟಿಸಿದ ಅಂತಕನಂತೆಯೇ ತೋರುತ್ತಿದ್ದನು. ಅವರು ವಿಲವಿಲನೆ ಒದ್ದಾಡುತ್ತಿರುವುದರಿಂದ, ಕತ್ತಿಯನ್ನು ಬಾರಿ ಬಾರಿ ಮೇಲೆತ್ತುತ್ತಿದ್ದುದರಿಂದ ಮತ್ತು ಖಡ್ಗವನ್ನು ಪ್ರಹರಿಸುತ್ತಿದ್ದುದರಿಂದ – ಈ ಮೂರು ಕಾರಣಗಳಿಂದ ಅವನು ರಕ್ತಸಿಕ್ತನಾದನು.
ಕೆಂಪುಬಣ್ಣವನ್ನು ತಾಳಿದ್ದ ಅವನ ದೇಹ ಮತ್ತು ಯುದ್ಧದಲ್ಲಿ ಬಳಸುತ್ತಿದ್ದ ಕೆಂಪಾಗಿ ಹೊಳೆಯುತ್ತಿದ್ದ ಖಡ್ಗದಿಂದ ಅವನು ಪರಮ ಭೀಷಣ ಅಮಾನುಷ ಆಕಾರವನ್ನು ತಾಳಿದನು. ಅವರು ಕೂಡ ಶಬ್ಧದಿಂದ ಮೋಹಿತರಾಗಿ ಎಚ್ಚೆತ್ತು ಅನ್ಯೋನ್ಯರನ್ನು ನಿರೀಕ್ಷಿಸುತ್ತಾ ದ್ರೌಣಿಯನ್ನು ನೋಡಿ ವ್ಯಥಿತರಾದರು. ಅವನ ಆ ರೂಪವನ್ನು ನೋಡಿ ಶತ್ರುಕರ್ಶನ ಕ್ಷತ್ರಿಯರು ಅವನೊಬ್ಬ ರಾಕ್ಷಸನೆಂದೇ ತಿಳಿದು ಕಣ್ಣುಗಳನ್ನು ಮುಚ್ಚಿಕೊಂಡರು. ಘೋರರೂಪದ ಕಾಲನಂತೆ ಶಿಬಿರದಲ್ಲಿ ಸಂಚರಿಸುತ್ತಿದ್ದ ಅವನನ್ನು ದ್ರೌಪದೀಪುತ್ರರು ಮತ್ತು ಅಳಿದುಳಿದ ಸೋಮಕರು ನೋಡಿದರು. ಅವನ ಶಬ್ಧದಿಂದ ಎಚ್ಚೆತ್ತ ಆ ಮಹಾರಥ ದ್ರೌಪದೇಯರು ಧೃಷ್ಟದ್ಯುಮ್ನನು ಹತನಾದುದನ್ನು ಕೇಳಿ ಧನುಸ್ಸನ್ನು ಹಿಡಿದು ಭಯಗೊಳ್ಳದೇ ಶರವ್ರಾತಗಳಿಂದ ಭಾರದ್ವಾಜ ಅಶ್ವತ್ಥಾಮನನ್ನು ಮುಸುಕಿದರು. ಅವರ ಆ ನಿನಾದದಿಂದ ಸಂಪೂರ್ಣವಾಗಿ ಎಚ್ಚೆತ್ತ ಪ್ರಭದ್ರಕರೂ ಮತ್ತು ಶಿಖಂಡಿಯೂ ದ್ರೋಣಪುತ್ರನನ್ನು ಶಿಲೀಮುಖಗಳಿಂದ ಪ್ರಹರಿಸಿದರು. ಭಾರದ್ವಾಜನಾದರೋ ಅವರನ್ನು ನೋಡಿ ಬಲವತ್ತಾಗಿ ನಿನಾದಿಸಿ ಶರವರ್ಷಗಳನ್ನು ಸುರಿಸಿ ಆ ಸುದುರ್ಜಯರನ್ನು ಸಂಹರಿಸಿದನು. ಆಗ ತಂದೆಯ ವಧೆಯನ್ನು ನೆನಪಿಸಿಕೊಂಡು ಪರಮ ಸಂಕ್ರುದ್ಧನಾದ ಅಶ್ವತ್ಥಾಮನು ರಥದಿಂದ ಕೆಳಗಿಳಿದು ತ್ವರೆಮಾಡಿ ಆಕ್ರಮಣಿಸಿದನು.
ಸಹಸ್ರಚಂದ್ರಗಳುಳ್ಳ ವಿಶಾಲ ಗುರಾಣಿಯನ್ನು ಮತ್ತು ಬಂಗಾರದಿಂದ ಪರಿಷ್ಕೃತಗೊಂಡಿದ್ದ ವಿಶಾಲ ದಿವ್ಯ ಖಡ್ಗವನ್ನು ಹಿಡಿದು ಬಲಶಾಲೀ ಅಶ್ವತ್ಥಾಮನು ಸಂಯುಗದಲ್ಲಿ ದ್ರೌಪದೇಯರನ್ನು ಖಡ್ಗದಿಂದ ಆಕ್ರಮಣಿಸುತ್ತಾ ಸಂಚರಿಸಿದನು. ಆಗ ಆ ನರಶಾರ್ದೂಲನು ರಣದಲ್ಲಿ ಪ್ರತಿವಿಂಧ್ಯನ ಹೊಟ್ಟೆಯನ್ನು ತಿವಿಯಲು ಅವನು ಹತನಾಗಿ ಭೂಮಿಯ ಮೇಲೆ ಬಿದ್ದನು. ಪ್ರತಾಪವಾನ್ ಸುತಸೋಮನಾದರೋ ದ್ರೌಣಿಯನ್ನು ಪ್ರಾಸದಿಂದ ಹೊಡೆದು ಪುನಃ ಖಡ್ಗವನ್ನೆತ್ತಿ ದ್ರೋಣಪುತ್ರನನ್ನು ಆಕ್ರಮಣಿಸಿದನು. ನರರ್ಷಭನು ಖಡ್ಗವನ್ನು ಹಿಡಿದಿದ್ದ ಸುತಸೋಮನ ಬಾಹುವನ್ನು ಕತ್ತರಿಸಿ ಪುನಃ ಅವನ ಪಕ್ಕೆಗೆ ಹೊಡೆಯಲು ಅವನು ಹೃದಯವೊಡೆದು ಬಿದ್ದನು. ವೀರ್ಯವಾನ್ ನಾಕುಲಿ ಶತಾನೀಕನಾದರೋ ತನ್ನೆರಡು ಭುಜಗಳಿಂದಲೂ ರಥಚಕ್ರವನ್ನು ಮೇಲೆತ್ತಿ ರಭಸದಿಂದ ಅಶ್ವತ್ಥಾಮನ ಎದೆಯಮೇಲೆ ಪ್ರಹರಿಸಿದನು. ಆ ದ್ವಿಜನಾದರೋ ಚಕ್ರವನ್ನು ಬಿಸುಟ ಶತಾನೀಕನನ್ನು ಹೊಡೆಯಲು ಅವನು ವಿಹ್ವಲನಾಗಿ ಭೂಮಿಯ ಮೇಲೆ ಬೀಳಿಸಿ ಅವನ ಶಿರವನ್ನು ಅಪಹರಿಸಿದನು. ಆಗ ಶ್ರುತಕರ್ಮನು ಪರಿಘವನ್ನು ಹಿಡಿದು ದ್ರೌಣಿಯನ್ನು ಬೆನ್ನಟ್ಟಿ ಅವನ ಎಡಗೈಯನ್ನು ಬಲವಾಗಿ ಪ್ರಹರಿಸಿದನು. ಅಶ್ವತ್ಥಾಮನಾದರೋ ಶ್ರುತಕರ್ಮನನ್ನು ಶ್ರೇಷ್ಠ ಖಡ್ಗದಿಂದ ಹೊಡೆದು ಸಂಹರಿಸಲು ಅವನು ಹತನಾಗಿ ವಿಕೃತ ಮುಖವುಳ್ಳವನಾಗಿ ವಿಮೂಢನಾಗಿ ನೆಲದ ಮೇಲೆ ಬಿದ್ದನು.ಆ ಶಬ್ಧವನ್ನು ಕೇಳಿದ ಮಹಾಧನ್ವಿ ವೀರ ಶ್ರುತಕೀರ್ತಿಯು ಅಶ್ವತ್ಥಾಮನ ಬಳಿಸಾರಿ ಅವನನ್ನು ಶರವರ್ಷಗಳಿಂದ ಮುಚ್ಚಿದನು. ಅವನ ಶರವರ್ಷಗಳನ್ನು ಕೂಡ ಗುರಾಣಿಯಿಂದ ತಡೆದು ಅಶ್ವತ್ಥಾಮನು ಕುಂಡಲಗಳೊಂದಿಗೆ ಹೊಳೆಯುತ್ತಿದ್ದ ಅವನ ಶಿರವನ್ನು ಶರೀರದಿಂದ ಬೇರ್ಪಡಿಸಿದನು.
ಆಗ ಭೀಷ್ಮಹಂತಕ ಶಿಖಂಡಿಯು ಸರ್ವ ಪ್ರಭದ್ರಕರೊಂದಿಗೆ ನಾನಾ ಪ್ರಹರಣಗಳಿಂದ ಬಲಶಾಲೀ ಅಶ್ವತ್ಥಾಮನನ್ನು ಎಲ್ಲ ಕಡೆಗಳಿಂದ ಮುತ್ತಿದನು. ಮತ್ತು ಶಿಲೀಮುಖದಿಂದ ಅವನ ಹುಬ್ಬುಗಳ ಮಧ್ಯೆ ಹೊಡೆದನು. ಅದರಿಂದ ಕ್ರೋಧಸಮಾವಿಷ್ಟನಾದ ಮಹಾಬಲಿ ದ್ರೋಣಪುತ್ರನು ಶಿಖಂಡಿಯ ಬಳಿಸಾರಿ ಖಡ್ಗದಿಂದ ಅವನನ್ನು ಎರಡಾಗಿ ಸೀಳಿದನು. ಶಿಖಂಡಿಯನ್ನು ಸಂಹರಿಸಿ ಕ್ರೋಧಾವಿಷ್ಟನಾದ ವೇಗವಾನ್ ಪರಂತಪನು ಪ್ರಭದ್ರಕ ಗಣಗಳೆಲ್ಲವನ್ನೂ ಆಕ್ರಮಣಿಸಿದನು. ಹಾಗೆಯೇ ಉಳಿದಿದ್ದ ವಿರಾಟನ ಸೇನೆಯನ್ನೂ ಆಕ್ರಮಣಿಸಿದನು. ಆ ಮಹಾಬಲನು ದ್ರುಪದನ ಪುತ್ರರು, ಪೌತ್ರರು ಮತ್ತು ಸುಹೃದರನ್ನು ಬಿಡದೇ ಹುಡುಕಿ ಹುಡುಕಿ ಘೋರ ಕದನವನ್ನು ನಡೆಸಿದನು. ಖಡ್ಗಪ್ರಹರಣದಲ್ಲಿ ವಿಶಾರದನಾದ ದ್ರೌಣಿಯು ಅನ್ಯ ಯೋಧರ ಬಳಿಗೆ ಹೋಗಿ ನಿದ್ರಿಸುತ್ತಿದ್ದ ಎಲ್ಲರನ್ನೂ ಕತ್ತಿಯಿಂದ ಕತ್ತರಿಸಿ ಹಾಕಿದನು.
ಅವರು ನಸುನಗುತ್ತಾ ಕುಳಿತಿರುವ, ಕೆಂಪು ಮುಖ ಮತ್ತು ಕಣ್ಣುಗಳುಳ್ಳ, ಕೆಂಪು ಮಾಲೆ ಮತ್ತು ಲೇಪನಗಳನ್ನು ಧರಿಸಿರುವ, ಕೆಂಪು ವಸ್ತ್ರವನ್ನು ಉಟ್ಟಿರುವ, ಪಾಶವನ್ನು ಹಿಡಿದಿರುವ ಏಕಾಂಗೀ, ಶಿಖಂಡಿನೀ, ಕಾಲೀ ಕಾಲರಾತ್ರಿಯನ್ನು ನೋಡಿದರು. ಅವಳು ಮನುಷ್ಯ-ಕುದುರೆ-ಕುಂಜರಗಳನ್ನು ಪಾಶಗಳಲ್ಲಿ ಕಟ್ಟಿ ಎಳೆದುಕೊಂಡು ಹೋಗುತ್ತಿದ್ದಳು. ಅವಳು ಬೋಳುತಲೆಯ ವಿವಿಧ ಪ್ರೇತಗಳನ್ನು ಪಾಶಗಳಲ್ಲಿ ಬಂಧಿಸಿ ಸೆಳೆದುಕೊಂಡು ಹೋಗುತ್ತಿದ್ದಳು. ಆ ಯೋಧಪ್ರಮುಖರು ಮಲಗಿದ್ದಾಗ ನಿತ್ಯವೂ ಕೊಂಡೊಯ್ಯುತ್ತಿದ್ದ ಕಾಳಿಯನ್ನು ಮತ್ತು ಸಂಹರಿಸುತ್ತಿದ್ದ ದ್ರೌಣಿಯನ್ನು ಸ್ವಪ್ನದಲ್ಲಿ ಕಾಣುತ್ತಿದ್ದರು. ಕುರುಪಾಂಡವ ಸೇನೆಗಳ ಸಂಗ್ರಾಮವು ಪ್ರಾರಂಭವಾದಾಗಿನಿಂದಲೇ ಅವರು ಆ ಕಾಳಿಯ ಮತ್ತು ದ್ರೌಣಿಯ ಕೃತ್ಯಗಳನ್ನು ಕನಸಿನಲ್ಲಿ ಕಾಣುತ್ತಿದ್ದರು. ಮೊದಲೇ ದೈವದಿಂದ ಹತರಾದ ಅವರನ್ನು ದ್ರೌಣಿಯು ನಂತರ ಕೆಳಗುರುಳಿಸಿ, ಸರ್ವಭೂತಗಳನ್ನೂ ಭಯಗೊಳಿಸುವಂತೆ ಭೈರವ ಕೂಗನ್ನು ಕೂಗಿದನು. ದೈವದಿಂದ ಪೀಡಿತರಾದ ಆ ವೀರರು ಹಿಂದೆ ಕನಸಿನಲ್ಲಿ ಕಂಡ ಕಾಲಿಕೆಯನ್ನು ಸ್ಮರಿಸಿಕೊಂಡು ಇದು ಅದೇ ಎಂದು ಅಂದುಕೊಂಡರು. ಆಗ ಆ ಕೋಲಾಹಲದಿಂದ ಪಾಂಡವೇಯರ ಶಿಬಿರದಲ್ಲಿದ್ದ ನೂರಾರು ಸಹಸ್ರಾರು ಧನ್ವಿಗಳು ಎಚ್ಚೆತ್ತರು. ಕಾಲವು ಸೃಷ್ಟಿಸಿದ ಅಂತಕನಂತೆ ದ್ರೌಣಿಯು ಅವರಲ್ಲಿ ಕೆಲವರನ್ನು ತುಂಡರಿಸಿದನು. ಕೆಲವರನ್ನು ಪಾದಗಳಿಂದ ತುಳಿದು ಕೊಂದನು. ಇನ್ನು ಕೆಲವರನ್ನು ಪಕ್ಕೆಗಳಲ್ಲಿ ತಿವಿದು ಕೊಂದನು. ಆ ಶಿಬಿರ ಪ್ರದೇಶವು ಅತಿ ಉಗ್ರರೀತಿಯಲ್ಲಿ ಉಂಡೆಯಾಗಿಬಿಟ್ಟಿದ್ದ, ಆತುರದಿಂದ ಜೋರಾಗಿ ಕೂಗುತ್ತಿದ್ದ ಯೋಧರಿಂದಲೂ, ಅನ್ಯ ಆನೆ-ಕುದುರೆಗಳಿಂದಲೂ ತುಂಬಿಹೋಯಿತು. “ಇದೇನಿದು? ಇವನ್ಯಾರು? ಏನು ಶಬ್ಧ? ಇವನೇನು ಮಾಡುತ್ತಿರುವನು?” ಎಂದು ಕೂಗಿಕೊಳ್ಳುತ್ತಿರುವ ಅವರಿಗೆ ದ್ರೌಣಿಯು ಅಂತಕನಾದನು.
ಪ್ರಹರಿಗಳಲ್ಲಿ ಶ್ರೇಷ್ಠ ದ್ರೌಣಿಯು ಶಸ್ತ್ರಗಳನ್ನು ಕೆಳಗಿಟ್ಟಿದ್ದ, ಶಸ್ತ್ರಗಳನ್ನು ತೊಟ್ಟಿದ್ದ ಆದರೆ ಗಾಬರಿಗೊಂಡಿದ್ದ ಪಾಂಡು-ಸೃಂಜಯರನ್ನು ಮೃತ್ಯುಲೋಕಕ್ಕೆ ಕಳುಹಿಸಿದನು. ನಿದ್ರೆಯಿಂದ ಕುರುಡರಾಗಿ ಸಂಜ್ಞೆಗಳನ್ನು ಕಳೆದುಕೊಂಡಿದ್ದ ಅವರು ಭಯಾತುರರಾಗಿ ಶಸ್ತ್ರಗಳನ್ನು ಅಲ್ಲಲ್ಲಿಯೇ ಬಿಸುಟು ಹಾರಿ ಅಲ್ಲಲ್ಲಿಯೇ ಅಡಗಿಕೊಳುತ್ತಿದ್ದರು. ಕೆಲವರ ತೊಡೆಗಳು ಕಂಭಗಳಂತಾಗಿ ಬಗ್ಗಿಸಲಾಗದೇ ಹಿಡಿದುಕೊಂಡಿದ್ದವು. ದುಃಖದಿಂದ ಅವರ ಉತ್ಸಾಹಗಳು ಉಡುಗಿಹೋಗಿದ್ದವು. ನಡುಗಿ ಜೋರಾಗಿ ಕೂಗಿಕೊಳ್ಳುತ್ತಾ ಪರಸ್ಪರರನ್ನು ಅಪ್ಪಿಕೊಳ್ಳುತ್ತಿದ್ದರು. ಅನಂತರ ದ್ರೌಣಿಯು ಪುನಃ ಭಯಂಕರ ಶಬ್ಧವುಳ್ಳ ರಥವನ್ನೇರಿ ಧನುಷ್ಪಾಣಿಯಾಗಿ ಅನ್ಯರನ್ನೂ ಶರಗಳಿಂದ ಯಮಕ್ಷಯಕ್ಕೆ ಕಳುಹಿಸಿದನು. ಹಾರುತ್ತಿದ್ದ ಮತ್ತು ತನ್ನ ಮೇಲೆ ಬೀಳುತ್ತಿದ್ದ ನರೋತ್ತಮ ಶೂರರನ್ನು ಅವರೆಷ್ಟೇ ದೂರದಲ್ಲಿದ್ದರೂ ಸಂಹರಿಸಿ ಕಾಲರಾತ್ರಿಗೆ ನಿವೇದಿಸುತ್ತಿದ್ದನು. ಅದೇ ರೀತಿಯಲ್ಲಿ ರಥದ ಎದಿರು ನಿಂತ ಶತ್ರುಗಳನ್ನು ಮರ್ದಿಸಿದನು. ವಿವಧ ಶರವರ್ಷಗಳನ್ನು ಅವರ ಮೇಲೆ ಸುರಿಸಿದನು. ಪುನಃ ಅವನು ಶತಚಂದ್ರರ ಚಿತ್ರಗಳಿರುವ ಗುರಾಣಿಯನ್ನೂ ಆಕಾಶವರ್ಣದ ಖಡ್ಗವನ್ನೂ ತಿರುಗಿಸುತ್ತಾ ಸಂಚರಿಸುತ್ತಿದ್ದನು. ಹಾಗೆ ಯುದ್ಧದುರ್ಮದ ದ್ರೌಣಿಯು ಆ ಶಿಬಿರವನ್ನು ಒಂದು ಸಲಗವು ಮಹಾಸರೋವರವನ್ನು ಅಲ್ಲೋಲಕಲ್ಲೋಲಗೊಳಿಸುವಂತೆ ಧ್ವಂಸಮಾಡಿದನು. ನಿದ್ರೆ ಮತ್ತು ಬಳಲಿಕೆಯಿಂದ ವಿಚೇತಸರಾಗಿದ್ದ ಯೋಧರು ಆ ಶಬ್ಧದಿಂದ ಎಚ್ಚೆತ್ತು ಭಯಾರ್ತರಾಗಿ ಅಲ್ಲಿಂದಲ್ಲಿಗೆ ಓಡಿಹೋಗುತ್ತಿದ್ದರು. ಇತರರು ವಿಸ್ವರವಾಗಿ ಕೂಗಿಕೊಳ್ಳುತ್ತಿದ್ದರು. ಬಾಯಿಗೆ ಬಂದಂತೆ ಮಾತನಾಡಿಕೊಳ್ಳುತ್ತಿದ್ದರು. ಕೆಲವರಿಗೆ ಶಸ್ತ್ರಗಳಾಗಲೀ ಕವಚಗಳಾಗಲೀ ದೊರೆಯುತ್ತಲೇ ಇರಲಿಲ್ಲ. ಕೆಲವರು ಕೂದಲುಬಿಚ್ಚಿಕೊಂಡಿದ್ದರು. ಇನ್ನು ಕೆಲವರು ಪರಸ್ಪರರನ್ನು ಗುರುತಿಸುತ್ತಿರಲಿಲ್ಲ. ಇತರರು ಭೀತರಾಗಿ ಕುಪ್ಪಳಿಸುತ್ತಿದ್ದರೆ ಇನ್ನು ಕೆಲವರು ಅಲ್ಲಲ್ಲಿಯೇ ಸುತ್ತುತ್ತಿದ್ದರು. ಕೆಲವರು ಮಲವಿಸರ್ಜನೆ ಮಾಡಿದರೆ ಇನ್ನು ಕೆಲವರು ಮೂತ್ರವಿಸರ್ಜನೆ ಮಾಡಿದರು. ಆನೆ-ಕುದುರೆಗಳು ಕಟ್ಟನ್ನು ಬಿಚ್ಚಿಕೊಂಡು ಓಡಿಹೋಗಲು ಅನ್ಯರಿಗೆ ಮಹಾ ವ್ಯಾಕುಲವನ್ನುಂಟುಮಾಡುತ್ತಿದ್ದವು. ಅಲ್ಲಿ ಕೆಲವರು ಭೀತರಾಗಿ ನೆಲದಮೇಲೆಯೇ ಅಡಗಿರಲು ಅವರನ್ನೇ ಓಡಿಹೋಗುತ್ತಿದ್ದ ಆನೆ-ಕುದುರೆಗಳು ತುಳಿದು ಸಾಯಿಸುತ್ತಿದ್ದವು. ಅಲ್ಲಿ ಹಾಗೆ ನಡೆಯುತ್ತಿರುವಾಗ ರಾಕ್ಷಸರು ತೃಪ್ತರಾಗಿ ಮುದದಿಂದ ನಾದಗೈಯುತ್ತಿದ್ದರು.
ಮುದಿತ ಭೂತಸಂಘಗಳಿಂದ ಪ್ರೇರಿತ ಆ ಶಬ್ಧವು ಜೋರಾಗಿ ದಿಕ್ಕುಗಳೆಲ್ಲವನ್ನೂ ಆಕಾಶವನ್ನೂ ತುಂಬಿತು. ಅವರ ಆರ್ತಸ್ವರವನ್ನು ಕೇಳಿ ಬೆದರಿದ ಆನೆ-ಕುದುರೆಗಳು ಕಟ್ಟುಗಳನ್ನು ಕಿತ್ತುಕೊಂಡು ಶಿಬಿರದಲ್ಲಿದ್ದ ಜನರನ್ನು ತುಳಿದು ನಾಶಗೊಳಿಸಿದವು. ಅಲ್ಲಿ ಓಡಿಹೋಗುತ್ತಿದ್ದ ಅವುಗಳ ಕಾಲುಗಳಿಂದ ಮೇಲೇರಿದ ಧೂಳು ಶಿಬಿರದಲ್ಲಿ ಕವಿದ ರಾತ್ರಿಯ ಕತ್ತಲೆಯನ್ನು ದ್ವಿಗುಣಗೊಳಿಸಿತು. ಹಾಗೆ ಕಪ್ಪಾಗಲು ಎಲ್ಲಕಡೆ ಜನರು ಪ್ರಮೂಢರಾದರು. ತಂದೆಯಂದಿರು ಮಕ್ಕಳನ್ನೂ ಸಹೋದರರು ಸಹೋದರರನ್ನೂ ಗುರುತಿಸಲಾರದೇ ಹೋದರು. ಸವಾರರಿಲ್ಲದ ಆನೆಗಳು ಆನೆಗಳನ್ನು ಮತ್ತು ಕುದುರೆಗಳು ಕುದುರೆಗಳನ್ನು ಆಕ್ರಮಿಣಿಸಿ, ಕಾಲಿನಿಂದ ತುಳಿದು ನಾಶಗೊಳಿಸುತ್ತಿದ್ದವು. ಅವುಗಳು ಪರಸ್ಪರರನ್ನು ಒಡೆದು ಕೆಳಗುರುಳಿಸುತ್ತಿದ್ದವು ಮತ್ತು ಕೊಲ್ಲುತ್ತಿದ್ದವು. ಇತರರನ್ನು ಕೆಳಗೆ ಬೀಳಿಸಿ ತುಳಿದು ಸಾಯಿಸುತ್ತಿದ್ದವು. ಕಾಲನಿಂದ ಪ್ರಚೋದಿತರಾದ ಆ ನರರು ಕತ್ತಲೆಯಿಂದ ಆವೃತರಾಗಿ ಮತ್ತು ನಿದ್ರೆಯಿಂದ ಬುದ್ಧಿಕಳೆದುಕೊಂಡು ತಮ್ಮವರನ್ನೇ ಕೊಲ್ಲುತ್ತಿದ್ದರು. ದ್ವಾರಪಾಲಕರು ದ್ವಾರಗಳನ್ನು ಮತ್ತು ಗೌಲ್ಮಿಕರು ಗುಲ್ಮಗಳನ್ನು ಬಿಟ್ಟು ಯಥಾಶಕ್ತಿಯಾಗಿ, ಯಾವ ದಿಕ್ಕಿನಲ್ಲಿ ಓಡಿಹೋಗುತ್ತಿದ್ದೇವೆಂಬ ವಿಚಾರವಿಲ್ಲದೇ, ಓಡುತ್ತಿದ್ದರು. ಅವರು ಅನ್ಯೋನ್ಯರನ್ನು ಗುರುತಿಸದೇ ಸಂಹರಿಸುತ್ತಿದ್ದರು. ದೈವದಿಂದಾಗಿ ಬುದ್ಧಿಯನ್ನೇ ಕಳೆದುಕೊಂಡು ಅಪ್ಪಾ! ಮಗನೇ! ಎಂದು ಕೂಗಿಕೊಳ್ಳುತ್ತಿದ್ದರು. ಮಲಗಿದ್ದ ಬಾಂಧವರನ್ನೂ ಬಿಟ್ಟು ದಿಕ್ಕಾಪಾಲಾಗಿ ಓಡಿ ಹೋಗುತ್ತಿದ್ದರು. ಆಗ ಜನರು ಗೋತ್ರ-ನಾಮಗಳನ್ನು ಹೇಳಿಕೊಂಡು ಅನ್ಯೋನ್ಯರನ್ನು ಕರೆಯುತ್ತಿದ್ದರು. ಕೆಲವರು ಹಾಹಾಕಾರವನ್ನು ಮಾಡುತ್ತಾ ನೆಲದಮೇಲೆ ಮಲಗಿಕೊಂಡಿದ್ದರು. ರಣಮತ್ತ ದ್ರೋಣಪುತ್ರನು ಅವರೆಲ್ಲಿರುವರೆಂದು ತಿಳಿದು ತುಳಿದು ಕೊಲ್ಲುತ್ತಿದ್ದನು. ಪುನಃ ಪುನಃ ಅವನಿಂದ ವಧಿಸಲ್ಪಡುತ್ತಿದ್ದ ಇನ್ನು ಕೆಲವು ಕ್ಷತ್ರಿಯರು ಭಯಪೀಡಿತರಾಗಿ ಶಿಬಿರದಿಂದ ಹೊರಗೆ ಹೋಗಲು ಪ್ರಯತ್ನಿಸುತ್ತಿದ್ದರು. ಜೀವದ ಆಸೆಯಿಂದ ಶಿಬಿರದ ಹೊರಗೆ ಹೋಗಲು ಪ್ರಯತ್ನಿಸುತ್ತಿದ್ದ ಅವರನ್ನು ಕೃತವರ್ಮ ಮತ್ತು ಕೃಪರು ದ್ವಾರಪ್ರದೇಶದಲ್ಲಿಯೇ ಕೊಲ್ಲುತ್ತಿದ್ದರು. ಅವರ ಯಂತ್ರ-ಕವಚಗಳು ಕಳಚಿಹೋಗಿದ್ದವು. ಕೂದಲು ಕೆದರಿದ್ದವು. ಕೆಲವರು ಬಿಟ್ಟುಬಿಡಿರೆಂದು ಕೈಮುಗಿದು ಭಯದಿಂದ ನಡುಗುತ್ತಾ ನೆಲದಲ್ಲಿ ಉರುಳುತ್ತಿದ್ದರು.
ಆದರೆ ದುರ್ಮತಿ ಕೃಪ ಮತ್ತು ಹಾರ್ದಿಕರು ಅವರಲ್ಲಿ ಯಾರನ್ನೂ ಶಿಬಿರದಿಂದ ಹೊರಗೆ ಹೋಗಲು ಬಿಡಲಿಲ್ಲ. ಅದಕ್ಕೂ ಹೆಚ್ಚಾಗಿ ದ್ರೋಣಪುತ್ರನಿಗೆ ಪ್ರಿಯವಾದುದನ್ನು ಮಾಡಲು ಬಯಸಿ ಶಿಬಿರದ ಮೂರು ಕಡೆಗಳಲ್ಲಿ ಬೆಂಕಿಯನ್ನು ಹೊತ್ತಿಸಿದರು. ಅದರ ಬೆಳಕಿನಲ್ಲಿ ಪಿತೃನಂದನ ಅಶ್ವತ್ಥಾಮನು ಖಡ್ಗವನ್ನು ಕೈಯಲ್ಲಿ ಹಿಡಿದು ಸಂಚರಿಸಿದನು. ಆ ದ್ವಿಜವರನು ತನ್ನ ಮೇಲೆ ಬೀಳುತ್ತಿದ್ದ ಕೆಲವು ವೀರರನ್ನೂ, ಓಡಿಹೋಗುತ್ತಿದ್ದ ಇತರರನ್ನೂ ಖಡ್ಗದಿಂದ ಪ್ರಾಣವಿಲ್ಲದಂತೆ ಮಾಡಿದನು. ಆ ವೀರ್ಯವಾನನು ಕೆಲವರನ್ನು ಖಡ್ಗದಿಂದ ಮಧ್ಯದಲ್ಲಿಯೇ ಸೀಳಿದನು. ದ್ರೋಣಸುತನು ಸಂರಬ್ಧನಾಗಿ ಸೇನೆಯನ್ನು ಎಳ್ಳಿನ ಹೊಲದಂತೆ ಕಡಿದು ಕೆಳಗುರುಳಿಸಿದನು. ಬಹಳವಾಗಿ ಗಾಯಗೊಂಡು ಕಿರುಚುತ್ತಾ ಬಿದ್ದಿದ್ದ ಉತ್ತಮ ಆನೆ, ಕುದುರೆ ಮತ್ತು ಮನುಷ್ಯರ ರಾಶಿಗಳಿಂದ ಮೇದಿನಿಯು ತುಂಬಿಹೋಯಿತು. ಸಹಸ್ರಾರು ಮನುಷ್ಯರು ಹತರಾಗಿ ಬೀಳುತ್ತಿರಲು ಅನೇಕ ಶಿರವಿಲ್ಲದ ದೇಹಗಳು ಎದ್ದುನಿಲ್ಲುತ್ತಿದ್ದವು. ಎದ್ದು ಬೀಳುತ್ತಿದ್ದವು. ಆಯುಧಗಳಿದ್ದ ಮತ್ತು ಅಂಗದಗಳನ್ನು ಧರಿಸಿದ್ದ ಬಾಹುಗಳನ್ನು ಮತ್ತು ಶಿರಗಳನ್ನು, ಆನೆಯ ಸೊಂಡಿಲಿನಂತಿರುವ ತೊಡೆಗಳನ್ನೂ, ಕೈಗಳನ್ನೂ, ಪಾದಗಳನ್ನೂ ಅವನು ಕತ್ತರಿಸಿದನು. ದ್ರೌಣಿಯು ಕೆಲವರ ಪೃಷ್ಠಭಾಗಗಳನ್ನು, ಕೆಲವರ ಶಿರಸ್ಸುಗಳನ್ನು ಮತ್ತು ಇನ್ನು ಕೆಲವರ ಪಕ್ಕೆಗಳನ್ನು ಕತ್ತರಿಸಿದನು. ಇನ್ನು ಕೆಲವು ಓಡಿಹೋಗುತ್ತಿದ್ದವರ ತಲೆಗಳನ್ನು ಹಿಂದು-ಮುಂದಾಗಿಸಿದನು. ಕೆಲವರನ್ನು ಕಟಿಪ್ರದೇಶದಲ್ಲಿ ಕತ್ತರಿಸಿದನು. ಕೆಲವರ ಕಿವಿಗಳನ್ನು ಕತ್ತರಿಸಿದನು. ಅನ್ಯರ ಕುತ್ತಿಗೆಯಮೇಲೆ ಹೊಡೆದು ತಲೆಯು ಶರೀರದೊಳಕ್ಕೆ ಸೇರಿಕೊಳ್ಳುವಂತೆ ಮಾಡುತ್ತಿದ್ದನು. ಹೀಗೆ ಅವನು ಅನೇಕ ಮನುಷ್ಯರನ್ನು ಸಂಹರಿಸುತ್ತಾ ಸಂಚರಿಸುತ್ತಿರಲು ರಾತ್ರಿಯ ಕತ್ತಲೆಯು ಘೋರವೂ ನೋಡಲು ದಾರುಣವಾಗಿಯೂ ಕಂಡಿತು.
ಇನ್ನೂ ಪ್ರಾಣವಿಟ್ಟುಕೊಂಡಿದ್ದವರ ಕೆಲವರು ಮತ್ತು ಅನ್ಯ ಸಹಸ್ರಾರು ಹತರಾದ ನರ, ಕುದುರೆ, ಆನೆಗಳಿಂದ ಭೂಮಿಯು ತುಂಬಿಕೊಂಡು ನೋಡಲು ಭಯಂಕರವಾಗಿತ್ತು. ಯಕ್ಷ-ರಾಕ್ಷಸರಿಂದ ಮತ್ತು ಕ್ರುದ್ಧ ದ್ರೋಣಪುತ್ರನಿಂದ ಧ್ವಂಸಗೊಳ್ಳುತ್ತಿದ್ದ ರಥ-ಕುದುರೆ-ಆನೆಗಳು ದಾರುಣವಾಗಿ ಕತ್ತರಿಸಲ್ಪಟ್ಟು ಭೂಮಿಯ ಮೇಲೆ ಬೀಳುತ್ತಿದ್ದವು. ಕೆಲವರು ತಾಯಿಯರನ್ನೂ, ಕೆಲವರು ತಂದೆಯರನ್ನೂ ಮತ್ತು ಕೆಲವರು ಸೋದರರನ್ನೂ ಕೂಗಿ ಕರೆಯುತ್ತಿದ್ದರು. ಕೆಲವರು ಹೀಗೆ ಅಂದುಕೊಳ್ಳುತ್ತಿದ್ದರು: “ಈ ರೀತಿ ಮಲಗಿರುವವರನ್ನು ರಾಕ್ಷಸರಂತೆ ಕ್ರೂರವಾಗಿ ಧಾಳಿನಡೆಸಿದಂತೆ ರಣದಲ್ಲಿ ಕ್ರುದ್ಧ ಧಾರ್ತರಷ್ಟ್ರರೂ ಮಾಡಲಿಲ್ಲ! ಪಾರ್ಥರು ಇಲ್ಲಿ ಇಲ್ಲವೆಂದು ತಿಳಿದೇ ಇವರು ನಮ್ಮೊಂದಿಗೆ ಕದನವಾಡುತ್ತಿದ್ದಾರೆ! ಯಾರನ್ನು ಜನಾರ್ದನನು ರಕ್ಷಿಸುತ್ತಿದ್ದಾನೋ ಆ ಕೌಂತೇಯನನ್ನು ದೇವ-ಅಸುರ-ಗಂಧರ್ವರಿಂದಲೂ, ಯಕ್ಷ-ರಾಕ್ಷಸರಿಂದಲೂ ಗೆಲ್ಲಲು ಶಕ್ಯವಿಲ್ಲ! ಬ್ರಹ್ಮಣ್ಯನೂ, ಸತ್ಯವಾಗ್ಮಿಯೂ, ಜಿತೇಂದ್ರಿಯನೂ, ಸರ್ವಭೂತಗಳ ಮೇಲೆ ಅನುಕಂಪನಾಗಿರುವ ಪಾರ್ಥ ಧನಂಜಯನು ಮಲಗಿರುವವರನ್ನು, ಪ್ರಮತ್ತರಾಗಿರುವವರನ್ನು, ಶಸ್ತ್ರವನ್ನು ಕೆಳಗಿಟ್ಟವರನ್ನು, ಕೈಮುಗಿದು ಕೇಳಿಕೊಳ್ಳುವವರನ್ನು, ಓಡಿಹೋಗುತ್ತಿರುವವರನ್ನು ಮತ್ತು ತಲೆ ಬಿಚ್ಚಿಕೊಂಡಿರುವವರನ್ನು ಕೊಲ್ಲುವುದಿಲ್ಲ! ಕ್ರೂರಕರ್ಮಿಗಳಾದ ರಾಕ್ಷಸರೇ ನಮ್ಮ ಮೇಲೆ ಈ ಘೋರ ಕೃತ್ಯವನ್ನೆಸಗುತ್ತಿದ್ದಾರೆ!” ಹೀಗೆ ವಿಲಪಿಸುತ್ತಾ ಅನೇಕ ಜನರು ಭೂಮಿಯ ಮೇಲೆ ಮಲಗಿದ್ದರು. ಸ್ವಲ್ಪವೇ ಸಮಯದಲ್ಲಿ ಕೂಗಿಕೊಳ್ಳುತ್ತಿದ್ದ ಮತ್ತು ವಿಲಪಿಸುತ್ತಿದ್ದ ಮನುಷ್ಯರ ಮಹಾ ತುಮುಲ ಶಬ್ಧವು ಉಡುಗಿಹೋಯಿತು.
ಮೇಲೆದ್ದಿದ್ದ ಆ ತುಮುಲ ಘೋರ ಧೂಳು ಕೂಡ ರಕ್ತದಿಂದ ಭೂಮಿಯು ತೋಯ್ದುಹೋಗಲು ಕ್ಷಣಮಾತ್ರದಲ್ಲಿ ಅದೃಶ್ಯವಾಯಿತು. ಕೃದ್ಧನಾದ ಪಶುಪತಿಯು ಪಶುಗಳನ್ನು ಹೇಗೋ ಹಾಗೆ ಅಶ್ವತ್ಥಾಮನು ಪ್ರಾಣವುಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ, ಉದ್ವಿಗ್ನರಾಗಿದ್ದ, ನಿರುತ್ಸಾಹಿಗಳಾಗಿದ್ದ ಸಹಸ್ರಾರು ಜನರನ್ನು ಕೆಳಗುರುಳಿಸಿದನು. ಅನ್ಯೋನ್ಯರನ್ನು ಅಪ್ಪಿಕೊಂಡು ಮಲಗಿದ್ದವರನ್ನು, ಓಡಿಹೋಗುತ್ತಿರುವವರನ್ನು, ಅಡಗಿಕೊಂಡಿದ್ದವರನ್ನು ಮತ್ತು ಯುದ್ಧಮಾಡುತ್ತಿದ್ದವರನ್ನು ಎಲ್ಲರನ್ನೂ ದ್ರೌಣಿಯು ಸಂಹರಿಸಿದನು. ಕೆಲವರು ಬೆಂಕಿಯಲ್ಲಿ ಸುಟ್ಟುಹೋದರು. ಕೆಲವರನ್ನು ಅಶ್ವತ್ಥಾಮನು ವಧಿಸಿದನು. ಇನ್ನು ಕೆಲವು ಯೋಧರು ಪರಸ್ಪರರನ್ನು ಕೊಂದು ಯಮಸಾದನಕ್ಕೆ ಹೋದರು. ಆ ರಾತ್ರಿಯ ಅರ್ಧಭಾಗವು ಕಳೆಯುವುದರೊಳಗಾಗಿ ದ್ರೌಣಿಯು ಪಾಂಡವರ ಆ ಮಹಾಸೇನೆಯನ್ನು ಯಮನಿವೇಶನಕ್ಕೆ ಕಳುಹಿಸಿದನು. ಆ ರಾತ್ರಿಯು ನಿಶಾಚರ ಪ್ರಾಣಿಗಳ ಹರ್ಷವನ್ನು ಹೆಚ್ಚಿಸುತ್ತಿದ್ದರೆ ಮನುಷ್ಯ-ಆನೆ-ಕುದುರೆಗಳಿಗೆ ರೌದ್ರವೂ ಕ್ಷಯಕಾರಿಯೂ ಆಗಿತ್ತು. ಅಲ್ಲಿ ಅನೇಕ ವಿಧದ ರಾಕ್ಷಸರೂ ಪಿಶಾಚಿಗಳೂ ನರಮಾಂಸಗಳನ್ನು ಭಕ್ಷಿಸುತ್ತಿರುವುದು ಮತ್ತು ರಕ್ತವನ್ನು ಕುಡಿಯುತ್ತಿರುವುದು ಕಾಣುತ್ತಿತ್ತು. ಕಪ್ಪಾಗಿದ್ದ, ಹಳದಿ ಬಣ್ಣದ, ರೌದ್ರರಾಗಿ ತೋರುತ್ತಿದ್ದ, ಪರ್ವತದಂತಹ ಹಲ್ಲುಗಳುಳ್ಳ, ಧೂಳಿನಿಂದ ತುಂಬಿಕೊಂಡಿದ್ದ, ಜಟಾಧಾರಿಗಳಾಗಿದ್ದ, ಅಗಲ ಹಣೆಗಳನ್ನು ಹೊಂದಿದ್ದ, ಐದು ಕಾಲುಗಳುಳ್ಳ, ದೊಡ್ಡ ದೊಡ್ಡ ಹೊಟ್ಟೆಗಳನ್ನುಳ್ಳ, ಹಿಂದುಮುಂದಾದ ಬೆರಳುಗಳುಳ್ಳ, ಕಠೋರರಾದ, ವಿರೂಪರಾದ, ಭೈರವ ಸ್ವರವುಳ್ಳ, ದೊಡ್ಡ ಶರೀರವುಳ್ಳ, ಹ್ರಸ್ವ ಶರೀರವುಳ್ಳ, ನೀಲಕಂಠಗಳುಳ್ಳ, ವಿಭೀಷಣರಾದ, ಕ್ರೂರರೂ, ದುರ್ಧರ್ಷರೂ, ನಿರ್ದಯಿಗಳೂ ಆದ ಆ ರಾಕ್ಷಸರು ವಿವಿಧರೂಪಗಳಲ್ಲಿ ಕಾಣುತ್ತಿದ್ದರು. ರಕ್ತವನ್ನು ಕುಡಿದು ಹರ್ಷಗೊಂಡ ಕೆಲವರು “ಇದು ಉತ್ತಮವಾಗಿದೆ! ಇದು ರುಚಿಯಾಗಿದೆ! ಪವಿತ್ರವಾಗಿದೆ!” ಎಂದು ಹೇಳಿಕೊಳ್ಳುತ್ತಾ ಗುಂಪಿನಲ್ಲಿ ನರ್ತಿಸುತ್ತಿದ್ದರು. ಮೇದಸ್ಸು, ಮಜ್ಜೆ, ಅಸ್ಥಿ, ರಕ್ತ ಮತ್ತು ಮಾಂಸಗಳನ್ನು ತುಂಬಾ ಆತುರವಾಗಿ ತಿನ್ನುವ ಮಾಂಸಜೀವಿ ಕ್ರವ್ಯಾದರು ಯೋಧರ ಮಾಂಸವನ್ನು ಯಥೇಚ್ಛವಾಗಿ ತಿನ್ನುತ್ತಿದ್ದರು. ಹೊಟ್ಟೆಯೇ ಇಲ್ಲದ ಕೆಲವರು ವಸೆಯನ್ನು ಕುಡಿದು ಓಡಿಹೋಗುತ್ತಿದ್ದರು. ಹಸಿ ಮಾಂಸವನ್ನು ತಿನ್ನುತ್ತಿದ್ದ ಆ ರೌದ್ರ ಕ್ರವ್ಯಾದಗಳಿಗೆ ಅನೇಕ ಮುಖಗಳಿದ್ದವು. ಆ ಗುಂಪುಗಳಲ್ಲಿ ಹತ್ತುಸಾವಿರ, ಲಕ್ಷ, ಹತ್ತು ಲಕ್ಷ ಘೋರರೂಪಿ ಮಹಾ ಕ್ರೂರಕರ್ಮಿ ರಾಕ್ಷಸರಿದ್ದರು. ಆ ಮಹಾಜನಸಂಹಾರದಿಂದ ತೃಪ್ತರಾಗಿ ಮುದಿತರಾಗಿದ್ದ ಆ ಭೂತಗಳು ಅನೇಕ ಸಂಖ್ಯೆಗಳಲ್ಲಿ ಸೇರಿಕೊಂಡಿದ್ದವು.
ಪ್ರಾತಃಕಾಲವಾಗುತ್ತಲೇ ದ್ರೌಣಿಯು ಶಿಬಿರದಿಂದ ಹೊರಡಲು ಅನುವಾಗಲು, ರಕ್ತದಿಂದ ತೋಯ್ದುಹೋಗಿದ್ದ ಅವನ ಖಡ್ಗದ ಹಿಡಿಯು ಅವನ ಕೈಯೊಂದಿಗೆ ಅಂಟಿಕೊಂಡಿತ್ತು! ಪ್ರಭೋ! ಆಗ ಖಡ್ಗದ ಹಿಡಿ ಮತ್ತು ಅವನ ಕೈ ಒಂದೇ ಎಂಬಂತೆ ಕಾಣುತ್ತಿತ್ತು. ಯುಗಾಂತದಲ್ಲಿ ಸರ್ವಭೂತಗಳನ್ನು ಭಸ್ಮಮಾಡಿದ ಪಾವಕನು ಹೇಗೋ ಹಾಗೆ ಆ ಜನಕ್ಷಯದಲ್ಲಿ ಶತ್ರುಗಳನ್ನು ನಿಃಶೇಷರನ್ನಾಗಿ ಮಾಡಿದ ಅಶ್ವತ್ಥಾಮನು ವಿರಾಜಿಸಿದನು. ಪ್ರತಿಜ್ಞೆ ಮಾಡಿದಂತೆ ಆ ಕೃತ್ಯವನ್ನು ಮಾಡಿ ತಂದೆಗೆ ದುರ್ಗಮ ಪದವಿಯನ್ನು ಇತ್ತು ಅವನು ಚಿಂತಾಶೋಕಗಳಿಂದ ವಿಮುಕ್ತನಾದನು. ರಾತ್ರಿ ಜನರು ಮಲಗಿದ್ದಾಗ ಶಿಬಿರವನ್ನು ಹೇಗೆ ಪ್ರವೇಶಿಸಿದ್ದನೋ ಹಾಗೆಯೇ ಅವರನ್ನು ಕೊಂದ ನರರ್ಷಭನು ನಿಃಶಬ್ಧನಾಗಿ ಹೊರಬಂದನು. ಆ ವೀರ್ಯವಾನನು ಶಿಬಿರದಿಂದ ಹೊರಬಂದು ಅವರಿಬ್ಬರನ್ನೂ ಸೇರಿ ಹೃಷ್ಟನಾಗಿ ಅವರಿಗೂ ಹರ್ಷವನ್ನು ತರುತ್ತಾ ತಾನು ಮಾಡಿದ ಕರ್ಮವೆಲ್ಲವನ್ನೂ ಹೇಳಿಕೊಂಡನು. ಆಗ ಅವರಿಬ್ಬರು ಪ್ರಿಯಕರರೂ ಅವನಿಗೆ ಪ್ರಿಯವಾದುದನ್ನು ಮಾಡಲೋಸುಗ ತಾವೂ ಕೂಡ ಸಹಸ್ರಾರು ಪಾಂಚಾಲರನ್ನು ಮತ್ತು ಸೃಂಜಯರನ್ನು ಕೊಂದ ವಿಷಯವನ್ನು ಹೇಳಿಕೊಂಡರು. ಮೂವರೂ ಆನಂದದಿಂದ ಜೋರಾಗಿ ಗರ್ಜಿಸಿ ಚಪ್ಪಾಳೆ ತಟ್ಟಿದರು. ಈ ವಿಧವಾಗಿ ಆ ರಾತ್ರಿ ಮೈಮರೆತು ಮಲಗಿದ್ದ ಸೋಮಕರ ತುಂಬಾ ದಾರುಣ ಜನಕ್ಷಯವು ನಡೆದುಹೋಯಿತು. ಕಾಲವನ್ನು ಅತಿಕ್ರಮಿಸುವುದು ನಿಸ್ಸಂಶಯವಾಗಿಯೂ ಅಶಕ್ಯವಾದುದು. ನಮ್ಮವರ ಜನಕ್ಷಯವನ್ನು ಮಾಡಿದ ಅವರು ಹೀಗೆ ಹತರಾದರು.
ಪಾರ್ಥ, ಧೀಮತ ಕೇಶವ ಮತ್ತು ಸಾತ್ಯಕಿಯರ ಭಯದಿಂದಾಗಿ ಅವನು ಈ ಕಾರ್ಯವನ್ನು ಮೊದಲೇ ಮಾಡಲಿಲ್ಲ. ಅವರಿಲ್ಲದಿರುವುದರಿಂದಲೇ ಈಗ ದ್ರೋಣಪುತ್ರನಿಗೆ ಈ ಕಾರ್ಯವು ಸಾಧ್ಯವಾಯಿತು. ಅವರ ಸಮಕ್ಷಮದಲ್ಲಿ ಸಂಹರಿಸಲು ಮರುತ್ಪತಿ ಇಂದ್ರನಿಗೂ ಸಾಧ್ಯವಾಗುತ್ತಿರಲಿಲ್ಲ! ಜನರು ಮಲಗಿರುವಾಗ ಈ ರೀತಿಯ ಘಟನೆಯು ನಡೆದುಹೋಯಿತು! ಪಾಂಡವರಿಗೆ ಮಹಾವಿನಾಶಕಾರಿಯಾದ ಈ ಜನಕ್ಷಯವನ್ನು ಮಾಡಿ ಆ ಮಹಾರಥರು ಅನ್ಯೋನ್ಯರನ್ನು ಸೇರಿ “ಒಳ್ಳೆಯದಾಯಿತು! ಒಳ್ಳೆಯದಾಯಿತು!” ಎಂದು ಅಂದುಕೊಂಡರು. ಅವರಿಬ್ಬರ ಅಭಿನಂದನೆಗಳನ್ನು ಹರ್ಷದಿಂದ ಸ್ವೀಕರಿಸಿ, ಅವರಿಬ್ಬರನ್ನೂ ಆಲಂಗಿಸಿ, ದ್ರೌಣಿಯು ಆನಂದದಿಂದ ಈ ಮಹಾಸತ್ವಪೂರ್ಣಮಾತನ್ನು ಹೇಳಿದನು: “ನನ್ನಿಂದ ಸರ್ವ ಪಾಂಚಾಲರೂ ಎಲ್ಲ ದ್ರೌಪದೇಯರೂ ಹತರಾದರು. ಉಳಿದ ಸೋಮಕರೂ ಮತ್ಸ್ಯರು ಎಲ್ಲರೂ ಹತರಾದರು. ಈಗ ನಾವು ಕೃತಕೃತ್ಯರಾದೆವು. ತಡಮಾಡದೇ ಅಲ್ಲಿಗೆ ಹೋಗೋಣ. ಒಂದು ವೇಳೆ ನಮ್ಮ ರಾಜನು ಜೀವಂತನಾಗಿದ್ದರೆ ಅವನಿಗೆ ಈ ಪ್ರಿಯವಿಷಯವನ್ನು ತಿಳಿಸೋಣ!”