ತೈತ್ತಿರೀಯೋಪನಿಷತ್ ದ್ವಿತೀಯಾಬ್ರಹ್ಮಾನಂದವಲ್ಲೀ ಅಷ್ಟಮೋಽನುವಾಕಃ

[ಆಧಾರಗ್ರಂಥಗಳು: (1) ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು, ಶ್ರೀಶಾಂಕರಭಾಷ್ಯಸಮೇತ ತೈತ್ತಿರೀಯೋಪನಿಷತ್ತು, ಅಧ್ಯಾತ್ಮಪ್ರಕಾಶಕಾರ್ಯಾಲಯ, ಹೊಳೆನರಸೀಪುರ, 1998; (2) ಸ್ವಾಮಿ ಸೋಮನಾಥಾನಂದ, ಉಪನಿಷತ್ ಭಾವಧಾರೆ, ಶ್ರೀರಾಮಕೃಷ್ಣ ಆಶ್ರಮ, ಮೈಸೂರು, 2021]

ಭೀಷಾಽಸ್ಮಾದ್ವಾತಃ ಪವತೇ ಭೀಷೋದೇತಿ ಸೂರ್ಯಃ ಭೀಷಾಽಸ್ಮಾದಗ್ನಿಶ್ಚೇಂದ್ರಶ್ಚ ಮೃತ್ಯುರ್ಧಾವತಿ ಪಂಚಮ ಇತಿ ।। 1 ।। ಸೈಷಾಽಽನಂದಸ್ಯ ಮೀಮಾಗ್ಂಸಾ ಭವತಿ ।। 2 ।।

ಇವನ ಭಯದಿಂದ ವಾಯುವು ಬೀಸುತ್ತಾನೆ. ಭಯದಿಂದ ಸೂರ್ಯನು ಉದಯಿಸುತ್ತಾನೆ. ಇವನ ಭಯದಿಂದ ಅಗ್ನಿಯೂ ಇಂದ್ರನೂ ಕೆಲಸಮಾಡುತ್ತಾರೆ. ಐದನೆಯವನಾದ ಮೃತ್ಯುವೂ ಓಡುತ್ತಾನೆ. ಇದು ಆನಂದಮೀಮಾಂಸೆಯಾಗಿದೆ.

ನಾಶಕ್ಕೆ ಕಾರಣವಾದದ್ದನ್ನು ಕಾಣುವುದರಿಂದಲೇ ಅಲ್ಲವೇ ತಾನು ನಾಶವಾಗುತ್ತೇನೆ ಎಂದು ತಿಳಿದುಕೊಂಡವನಿಗೆ ಹೆದರಿಕೆಯುಂಟಾಗುವುದು? ನಾಶಕ್ಕೆ ಯಾವುದು ಕಾರಣವೆಂದು ತಿಳಿದಿದ್ದೀವೋ ಅದು ತಾನೇ ನಾಶವಾಗತಕ್ಕದ್ದು ಆಗಿರಲಾರದಷ್ಟೆ? ಹೀಗಿರುವಾಗ, ನಾಶಕ್ಕೆ ಕಾರಣವಾದದ್ದು ಇಲ್ಲದಿದ್ದರೆ ಅದನ್ನು ಕಂಡದ್ದರಿಂದ ಆಗಬೇಕಾದ ಹೆದರಿಕೆ ಎನ್ನುವ ಕಾರ್ಯವು ನಾಶವಾಗುವಂಥವನಲ್ಲಿ ಆಗುವುದು ಸರಿಯೆನಿಸುವುದಿಲ್ಲ. ಇಡಿಯ ಜಗತ್ತೇ ಹೆದರಿರುವುದು ಕಾಣುತ್ತದೆ. ಆದ್ದರಿಂದ ಯಾವುದಕ್ಕೆ ಈ ಜಗತ್ತು ಹೆದರುತ್ತದೆಯೋ ಆ ನಾಶಕ್ಕೆ ಹೇತುವಾದ, ತನಗೆ ನಾಶವಿಲ್ಲದ, ಹೆದರಿಕೆಗೆ ಕಾರಣವಾದ ಆ ಬ್ರಹ್ಮವು ಇದೆ ಎಂದ ನಿಶ್ಚಿತವಾಗುತ್ತದೆ. ಈ ವಿಷಯದಲ್ಲಿ ಈ ಮಂತ್ರವಿದೆ.

ಭೀಷಾ ಎಂದರೆ ಅವನ ಅಂಜಿಕೆಯಿಂದ ವಾಯುವು ಬೀಸುತ್ತಾನೆ. ಸೂರ್ಯನು ಅಂಜಿಕೆಯಿಂದ ಉದಯಿಸುತ್ತಾನೆ. ಇವನ ಅಂಜಿಕೆಯಿಂದ ಅಗ್ನಿಯೂ ಇಂದ್ರನೂ ಕೆಲಸಮಾಡುತ್ತಾರೆ. ಐದನೆಯವನಾದ ಮೃತ್ಯುವೂ ಓಡುತ್ತಾನೆ. ಇಲ್ಲಿ ಉದಾಹರಿಸಿರುವ ವಾಯುವೇ ಮೊದಲಾದವರು ಬಹು ಪೂಜ್ಯರೂ, ಸ್ವತಃ ಸ್ವತಂತ್ರರಾಗಿದ್ದುಕೊಂಡೂ ಬಹಳ ಆಯಾಸಕರವಾದ ಬೀಸುವುದೇ ಮೊದಲಾದ ಕಾರ್ಯಗಳಲ್ಲಿ ಗೊತ್ತಾಗಿ ತೊಡಗಿರುತ್ತಾರೆ. ಅವರಿಗಿಂತ ಬೇರೆಯಾದ, ಅವರಿಗೆ ಅಪ್ಪಣೆಮಾಡುವವನು ಯಾರಾದರೂ ಇದ್ದರೆ ತಾನೇ ಅವರು ಹೀಗೆ ಗೊತ್ತಾಗಿ ಕೆಲಸಗಳಲ್ಲಿ ತೊಡಗಿರುವುದು? ಆದ್ದರಿಂದ ಅಂಜಿಕೆಗೆ ಕಾರಣವಾಗಿ ಅವರನ್ನು ಆಳುತ್ತಿರುವ ಬ್ರಹ್ಮವು ಇದೆ ಎಂದಾಯಿತು. ಆ ಬ್ರಹ್ಮದ ಅಂಜಿಕೆಯಿಂದಲೇ ಅರಸನ ಭಯದಿಂದ ಕೆಲಸದಲ್ಲಿ ತೊಡಗುವ ಸಂಬಳದ ಆಳುಗಳಂತೆ ಅವರು ತಮಗೆ ನಿರ್ದಿಷ್ಟಪಡಿಸಿದ ಕೆಲಸಗಳಲ್ಲಿ ತೊಡಗಿರುತ್ತಾರೆ.

ಆ ಭಯಕ್ಕೆ ಕಾರಣವಾದದ್ದು ಆನಂದರೂಪವಾದ ಬ್ರಹ್ಮವು. ಆ ಬ್ರಹ್ಮದ ಆನಂದದ ಕುರಿತು ಈ ಮೀಮಾಂಸೆ ಅಂದರೆ ವಿಚಾರವು ಉಂಟಾಗುತ್ತದೆ. ಈ ಆನಂದವು ಲೌಕಿಕ ಆನಂದದಂತೆ ವಿಷಯ-ವಿಷಯಿಗಳ ಸಂಬಂಧದಿಂದ ಉಂಟಾದದ್ದೋ ಅಥವಾ ಸ್ವಾಭಾವಿಕವಾದದ್ದೋ? ಇದೇ ಈ ವಿಷಯದಲ್ಲಿ ಮಾಡಬೇಕಾದ ವಿಚಾರವು.

ಹೊರಗಿನ ಮತ್ತು ಒಳಗಿನ ಸಾಧನ ನಿಮಿತ್ತದಿಂದ ಯಾವುದು ಉತ್ಕೃಷ್ಟವಾಗಿದೆಯೋ ಆ ಬ್ರಹ್ಮಾನಂದವನ್ನು ತಿಳಿದುಕೊಳ್ಳಲು ಇಲ್ಲಿ ಲೌಕಿಕವಾದ ಆನಂದದ ಕುರಿತು ತಿಳಿಸಿದೆ. ಏಕೆಂದರೆ ಲೌಕಿಕ ಆನಂದಕ್ಕೆ ಕಾರಣವಾದ ವಿಷಯಗಳಿಂದ ಹಿಂದಿರುಗಿದ ಬುದ್ಧಿಗೆ ಮಾತ್ರ ತಿಳಿದುಬರುವ ಆನಂದವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಲೌಕಿಕವಾದ ಆನಂದವೂ ಕೂಡ ಬ್ರಹ್ಮಾನಂದದ್ದೇ ಒಂದು ಅಂಶವು. ಅವಿದ್ಯೆಯಿಂದ ಜ್ಞಾನವು ಮರೆಯಾಗಿ, ಅವಿದ್ಯೆಯು ಹೆಚ್ಚುತ್ತಾ ಬಂದಂತೆ, ಪ್ರಾಣಿಗಳ ಕರ್ಮವಶದಿಂದಲೂ, ಅವರವರ ತಿಳುವಳಿಕೆಯ ವಾಸನೆಯಿಂದಲೂ, ವಿಷಯವೇ ಮೊದಲಾದ ಸಾಧನಗಳ ಸಂಬಂಧದ ಕಾರಣದಿಂದಲೂ ಲೋಕದಲ್ಲಿ ಬ್ರಹ್ಮವೇ ಅನುಭವಕ್ಕೆ ಬರುತ್ತಿದ್ದರೂ, ಆ ಲೌಕಿಕ ಆನಂದವು ನಿತ್ಯವಲ್ಲ. ಅವಿದ್ಯೆ, ಕಾಮ, ಕರ್ಮ ಇವುಗಳು ಕಡಿಮೆ ಕಡಿಮೆ ಆಗುವುದರಿಂದ ಮನುಷ್ಯಗಂಧರ್ವರೇ ಮೊದಲಾದ ಮೇಲು ಮೇಲಿನ ಅಂತಸ್ತುಗಳಲ್ಲಿ, ಕಾಮದ ಹೊಡೆತವಿಲ್ಲದ ಜ್ಞಾನಿಯಾದ ಶ್ರೋತ್ರಿಯನಿಗೆ ಪ್ರತ್ಯಕ್ಷವಾಗಿ ಅನುಭವಕ್ಕೆ ಬರುತ್ತಿರುವ ಆ ಬ್ರಹ್ಮಾನಂದವೇ ನೂರು ಮಡಿಯಾಗಿ ಮುಂದು ಮುಂದಕ್ಕೆ ಹೆಚ್ಚುತ್ತಾ ಹಿರಣ್ಯಗರ್ಭನೆಂಬ ಬ್ರಹ್ಮನ ಆನಂದದ ವರೆಗೂ ಹಬ್ಬಿರುತ್ತದೆ. ಆನಂದವು ಬ್ರಹ್ಮಾದಿಯಾಗಿ ಸ್ಥಾವರ-ಪ್ರಾಣಿಯವರೆಗೂ ಸಾಧನ ತರತಮ್ಯದಿಂದ ಕಡಿಮೆಯಾಗಿ ತೋರುತ್ತದೆ. ಮೇಲು ಮೇಲಕ್ಕೆ ಹೋಗುತ್ತಾ ಹೆಚ್ಚಾಗಿ ತೋರುತ್ತದೆ. ಜ್ಞಾನೈಶ್ವರ್ಯಗಳು ಬ್ರಹ್ಮನ ವರೆಗ ಹೆಚ್ಚುತ್ತಿರುವುದೇ ಆನಂದದ ತಾರತಮ್ಯಕ್ಕೆ ಕಾರಣ.

ಆದ್ದರಿಂದ ಅವಿದ್ಯಾಕಲ್ಪಿತವಾದ ವಿಷಯ, ವಿಷಯಿ ಎಂಬ ವಿಭಜನೆಯು ವಿದ್ಯೆಯಿಂದ ಹೊರಟುಹೋದರೆ, ಸ್ವಾಭಾವಿಕವೂ, ಪರಿಪೂರ್ಣವೂ ಆಗಿ ಒಂದೇ ಆಗಿರುವ ಅದ್ವೈತಾನಂದವಾಗುತ್ತದೆ.   

ಯುವಾ ಸ್ಯಾತ್ಸಾಧುಯುವಾಽಧ್ಯಾಯಕಃ ಆಶಿಷ್ಠೋ ದ್ರಢಿಷ್ಠೋ ಬಲಿಷ್ಠಃ ತಸ್ಯೇಯಂ ಪೃಥಿವೀ ಸರ್ವಾ ವಿತ್ತಸ್ಯ ಪೂರ್ಣಾ ಸ್ಯಾತ್ ಸ ಏಕೋ ಮಾನುಷ ಆನಂದಃ ತೇ ಯೇ ಶತಂ ಮಾನುಷಾ ಆನಂದಾಃ ಸ ಏಕೋ ಮನುಷ್ಯಗಂಧರ್ವಾಣಾಮಾನಂದಃ ಶ್ರೋತ್ರಿಯಸ್ಯ ಚಾಕಾಮಹತಸ್ಯ ತೇ ಯೇ ಶತಂ ಮನುಷ್ಯಗಂಧರ್ವಾಣಾಮಾನಂದಾಃ ಸ ಏಕೋ ದೇವಗಂಧರ್ವಾಣಾಮಾನಂದಃ ಶ್ರೋತ್ರಿಯಸ್ಯ ಚಾಕಾಮಹತಸ್ಯ ತೇ ಯೇ ಶತಂ ದೇವಗಂಧರ್ವಾಣಾಮಾನಂದಾಃ ಸ ಏಕಃ ಪಿತೃಣಾಂ ಚಿರಲೋಕಲೋಕಾನಾಮಾನಂದಃ ಶ್ರೋತ್ರಿಯಸ್ಯ ಚಾಕಾಮಹತಸ್ಯ ತೇ ಯೇ ಶತಂ ಪಿತೃಣಾಂ ಚಿರಲೋಕಲೋಕಾನಾಮಾನಂದಾಃ ಸ ಏಕ ಆಜಾನಜಾನಾಂ ದೇವಾನಾಮಾನಂದಃ ಶ್ರೋತ್ರಿಯಸ್ಯ ಚಾಕಾಮಹತಸ್ಯ ತೇ ಯೇ ಶತಂ ಆಜಾನಜಾನಾಂ ದೇವಾನಾಮಾನಂದಾಃ ಸ ಏಕಃ ಕರ್ಮದೇವಾನಾಂ ದೇವಾನಾಮಾನಂದಃ ಯೇ ಕರ್ಮಣಾ ದೇವಾನಪಿಯಂತಿ ಶ್ರೋತ್ರಿಯಸ್ಯ ಚಾಕಾಮಹತಸ್ಯ ತೇ ಯೇ ಶತಂ ಕರ್ಮದೇವಾನಾಂ ದೇವಾನಾಮಾನಂದಾಃ ಸ ಏಕೋ ದೇವಾನಾಮಾನಂದಃ ಶ್ರೋತ್ರಿಯಸ್ಯ ಚಾಕಾಮಹತಸ್ಯ ತೇ ಯೇ ಶತಂ ದೇವಾನಾಮಾನಂದಾಃ ಸ ಏಕ ಇಂದ್ರಸ್ಯಾಽಽನಂದಃ ಶ್ರೋತ್ರಿಯಸ್ಯ ಚಾಕಾಮಹತಸ್ಯ ತೇ ಯೇ ಶತಮಿಂದ್ರಸ್ಯಾಽಽನಂದಾಃ ಸ ಏಕೋ ಬೃಹಸ್ಪತೇರಾನಂದಃ ಶ್ರೋತ್ರಿಯಸ್ಯ ಚಾಕಾಮಹತಸ್ಯ ತೇ ಯೇ ಶತಂ ಬೃಹಸ್ಪತೇರಾನಂದಾಃ ಸ ಏಕಃ ಪ್ರಜಾಪತೇರಾನಂದಃ ಶ್ರೋತ್ರಿಯಸ್ಯ ಚಾಕಾಮಹತಸ್ಯ ತೇ ಯೇ ಶತಂ ಪ್ರಜಾಪತೇರಾನಂದಾಃ ಸ ಏಕೋ ಬ್ರಹ್ಮಣ ಆನಂದಃ ಶ್ರೋತ್ರಿಯಸ್ಯ ಚಾಕಾಮಹತಸ್ಯ ।। 3 ।। ಸ ಯಶ್ಚಾಯಂ ಪುರುಷೇ ಯಶ್ಚಾಸಾವಾದಿತ್ಯೇ ಸ ಏಕಃ ।। 4 ।।

ಯೌವನವಂತನಾಗಿರಬೇಕು. ಒಳ್ಳೆಯ ಯೌವನವಂತನಾಗಿರಬೇಕು. ಅಧ್ಯಯನ ಮಾಡಿದವನಾಗಿರಬೇಕು, ಆಶಿಷ್ಠನಾಗಿ ದ್ರಡಿಷ್ಠನಾಗಿ ಬಲಿಷ್ಠನಾಗರಬೇಕು. ಅವನಿಗೆ ಈ ವಿತ್ತಪೂರ್ಣವಾದ ಇಡೀ ಪೃಥ್ವಿಯೂ ಇರಬೇಕು. ಅದು ಒಂದು ಮಾನುಷ ಆನಂದವು. ಆ ಮಾನುಷ ಆನಂದಗಳು ನೂರಾಗುವವಲ್ಲ, ಅದು ಮನುಷ್ಯಗಂಧರ್ವರ ಆನಂದವು ಮತ್ತು ಅಕಾಮಹತನಾದ ಶ್ರೋತ್ರಿಯನದು. ಆ ಮನುಷ್ಯಗಂಧರ್ವರ ಆನಂದಗಳು ನೂರಾಗುವವಲ್ಲ, ಅದು ದೇವಗಂಧರ್ವರ ಆನಂದವು ಮತ್ತು ಅಕಾಮಹತನಾದ ಶ್ರೋತ್ರಿಯನದು. ಆ ದೇವಗಂಧರ್ವರ ಆನಂದಗಳು ನೂರಾಗುವವಲ್ಲ, ಅದು ಒಂದು ಚಿರಲೋಕವಿರುವ ಪಿತೃಗಳ ಆನಂದವು ಮತ್ತು ಅಕಾಮಹತನಾದ ಶ್ರೋತ್ರಿಯನದು. ಆ ಚಿರಲೋಕವಿರುವ ಪಿತೃಗಳ ಆನಂದವು ನೂರಾಗುವವಲ್ಲ, ಅದು ಆಜಾನಜದೇವತೆಗಳ ಆನಂದವು ಮತ್ತು ಅಕಾಮಹತನಾದ ಶ್ರೋತ್ರಿಯನದು. ಆ ಅಜಾನಜದೇವತೆಗಳ ಆನಂದವು ನೂರಾಗುವವಲ್ಲ, ಅದು ಕರ್ಮದೇವತೆಗಳ ಆನಂದವು; ಅವರು ಕರ್ಮದಿಂದ ದೇವತೆಗಳನ್ನು ಸೇರಿಕೊಂಡಿರುತ್ತಾರೆ. ಮತ್ತು ಅದು ಅಕಾಮಹತನಾದ ಶ್ರೋತ್ರಿಯನದೂ ಆಗಿರುತ್ತದೆ. ಆ ಕರ್ಮದೇವತೆಗಳ ಆನಂದಗಳು ನೂರು ಆಗುವವಲ್ಲ, ಅದು ಒಂದು ಬೃಹಸ್ಪತಿಯ ಆನಂದವು ಮತ್ತು ಅಕಾಮಹತನಾದ ಶ್ರೋತ್ರಿಯನದು. ಆ ಬೃಹಸ್ಪತಿಯ ಆನಂದಗಳು ನೂರಾಗುವವಲ್ಲ, ಅದು ಒಂದು ಪ್ರಜಾಪತಿಯ ಆನಂದವು ಮತ್ತು ಅಕಾಮಹತನಾದ ಶ್ರೋತ್ರಿಯನದು. ಆ ಪ್ರಜಾಪತಿಯ ಆನಂದಗಳು ನೂರಾಗುವವಲ್ಲ, ಅದು ಒಂದು ಬ್ರಹ್ಮದ ಆನಂದವು ಮತ್ತು ಅಕಾಮಹತನಾದ ಶ್ರೋತ್ರಿಯನದು. ಪುರುಷನಲ್ಲಿರುವವನೂ ಆದಿತ್ಯನಲ್ಲಿರುವವನೂ ಒಬ್ಬನೇ.

ಇಲ್ಲಿ ಯೌವನವಂತ ಎಂದರೆ ಮೊದಲನೆಯ ವಯಸ್ಸಿನವನು.  “ಒಳ್ಳೆಯ ಯೌವನವಂತನು” ಎಂಬಲ್ಲಿ ಒಳ್ಳೆಯವನೂ, ಯೌವನವಂತನೂ ಆಗಿರಬೇಕು ಎಂದು ಯೌವನವಂತನಿಗೆ ವಿಶೇಷಣವನ್ನು ಕೊಟ್ಟಿದೆ. ಯೌವನವಂತನಾದರೂ ಒಳ್ಳೆಯವನಾಗದೇ ಇರಬಹುದು; ಒಳ್ಳೆಯವನಾದರೂ ಯೌವನವಂತನಾಗದೇ ಇರಬಹುದು. ಆದ್ದರಿಂದ ಯೌವನವಂತನಾಗಿರಬೇಕು, ಒಳ್ಳೆಯ ಯೌವನವಂತನಾಗಿರಬೇಕು ಎಂದು ವಿಶೇಷಣವನ್ನು ಕೊಟ್ಟಿದೆ.

ಅಧ್ಯಯನವನ್ನು ಮಾಡಿದವನು ಎಂದರೆ ವೇದವನ್ನು ಅಧ್ಯಯನಮಾಡಿದವನು. ಆಶಿಷ್ಠನು ಎಂದರೆ ಅತ್ಯಂತವಾಗಿ ಆಸೆಯುಳ್ಳವನು. ದ್ರಡಿಷ್ಠನು ಎಂದರೆ ಅತ್ಯಂತ ಗಟ್ಟಿಗನು. ಬಲಿಷ್ಠನು ಎಂದರೆ ಅತ್ಯಂತ ಬಲವಂತನು. ಹೀಗೆ ಒಳಗಿನ ಸಾಧನೆಗಳಿಂದ ಕೂಡಿದವನಾಗಿರಬೇಕು. ಅವನಿಗೆ ಈ ಭೂಮಿಯ ಎಲ್ಲ ವಿತ್ತಗಳಿಂದ ಅಂದರೆ ಉಪಭೋಗಸಧಾನವಾದ  - ಈ ದೃಷ್ಟಲೋಕದ ಪ್ರಯೋಜನವನ್ನೂ, ಅದೃಷ್ಟವಾದ ಪರಲೋಕದ ಪ್ರಯೋಜನವನ್ನೂ ಕೊಡುವ ಕರ್ಮಸಾಧನದಿಂದ ಪರಿಪೂರ್ಣನಾಗಿರಬೇಕು. ರಾಜನಾಗಿ ಇಡಿಯ ಭೂಮಿಯ ಒಡೆಯನಾಗಿರಬೇಕು ಎಂದರ್ಥ. ಅವನಿಗಿರುವ ಆನಂದವಿದೆಯಲ್ಲ ಅದು ಮಾನುಷ್ಯವಾದ ಆನಂದ. ಅಂದರೆ ಮನುಷ್ಯರಿಗೆ ಉಂಟಾಗಬಲ್ಲ ಅತ್ಯುತ್ತಮವಾದ ಆನಂದ.

ಆ ಮಾನುಷ ಆನಂದಗಳು ನೂರಾಗುವವಲ್ಲ, ಅದು ಒಂದು ಮನುಷ್ಯಗಂಧರ್ವನ ಆನಂದವು. ಮಾನುಷ ಆನಂದಕ್ಕಿಂತ ಮನುಷ್ಯ ಗಂಧರ್ವರ ಆನಂದವು ನೂರುಪಟ್ಟು ಹೆಚ್ಚಾಗಿರುತ್ತದೆ. ಮನುಷ್ಯಗಂಧರ್ವರು ಎಂದರೆ ಮನುಷ್ಯರಾಗಿದ್ದುಕೊಂಡು, ಕರ್ಮವಿಶೇಷದಿಂದಲೂ, ಜ್ಞಾನ (ವಾಸನೆಯ) ವಿಶೇಷದಿಂದಲೂ, ಗಂಧರ್ವತ್ವವನ್ನು ಹೊಂದಿದವರು. ಏಕೆಂದರೆ ಅವರು ಅಂತರ್ಧಾನವೇ ಮೊದಲಾದ ಶಕ್ತಿಗಳಿಂದೊಡಗೂಡಿ ಸೂಕ್ಷ್ಮವಾದ ದೇಹೇಂದ್ರಿಯಗಳಿರುವವರಾಗಿರುತ್ತಾರೆ. ಆದ್ದರಿಂದ ಅವರಿಗೆ ಅಡಚಣೆಗಳು ಅಲ್ಪವಾಗಿರುತ್ತವೆ. ದ್ವಂದ್ವಗಳಿಂದಾಗುವ ಅಡಚಣೆಗಳನ್ನು ತಪ್ಪಿಸಿಕೊಳ್ಳುವ ಶಕ್ತಿಯೂ-ಸಾಧನವೂ ಅವರಿಗಿರುತ್ತದೆ. ಆದ್ದರಿಂದ ಯಾವ ಅಡಚಣೆಯೂ ಇಲ್ಲದೇ ಅಡಚಣೆಗೆ ಪರಿಹಾರವನ್ನೂ ಇಟ್ಟುಕೊಂಡಿರುವ ಮನುಷ್ಯಗಂಧರ್ವನ ಚಿತ್ತವು ತಿಳಿಯಾಗಿರುತ್ತದೆ. ಚಿತ್ತವು ಶುದ್ಧವಾಗಿರುವುದರಿಂದ ಸುಖವು ಹೆಚ್ಚಾಗಿ ತೋರಿಕೊಳ್ಳುತ್ತದೆ. ಹೀಗೆಯೇ ಹಿಂದುಹಿಂದಿನ ಅಂತಸ್ತಿಗಿಂತ ಮುಂದುಮುಂದಿನ ಅಂತಸ್ತಿನಲ್ಲಿ ಚಿತ್ತವು ಹೆಚ್ಚು ಹೆಚ್ಚು ತಿಳಿಯಾಗಿರುತ್ತದೆ ಮತ್ತು ಅದರಿಂದಾಗಿ ಆನಂದವೂ ನೂರುಪಟ್ಟು ಹೆಚ್ಚಾಗಿರುತ್ತದೆ.[1]

ಮನುಷ್ಯರ ವಿಷಯಭೋಗಗಳ ಕಾಮದ ಹೊಡೆತವಿಲ್ಲದ ಶ್ರೋತ್ರಿಯನಿಗೆ ಮನುಷ್ಯಾನಂದಕ್ಕಿಂತ ನೂರುಪಟ್ಟು ಹೆಚ್ಚಿನ ಮನುಷ್ಯಗಂಧರ್ವನ ಆನಂದಕ್ಕೆ ಸಮನಾದ ಆನಂದವು ಉಂಟಾಗುತ್ತದೆ ಎನ್ನುವುದನ್ನು ಹೇಳುವುದಕ್ಕಾಗಿಯೇ ಮೊದಲನೇ ಪರ್ಯಾಯದಲ್ಲಿ “ಅಕಾಮಹತ” ಎಂಬ ಶಬ್ದವನ್ನು ಉಪಯೋಗಿಸಿಲ್ಲ. “ಸಾಧು ಯುವಾ”, “ಅಧ್ಯಾಯಕಃ” ಮೊದಲಾದ ಶಬ್ದಗಳಿಂದ ಶ್ರೋತ್ರಿಯತ್ವ, ಆವೃಜಿನತ್ವ ಇವುಗಳನ್ನು ಗ್ರಹಿಸಬೇಕು. ಏಕೆಂದರೆ ಇವು ಎಲ್ಲರಲ್ಲಿಯೂ ಸಮನಾಗಿರುತ್ತವೆ. ಆದರೆ ಕಾಮದ ಹೊಡೆತವಿಲ್ಲದಿರುವಿಕೆ ಎನ್ನುವುದು ಮಾತ್ರ ವಿಷಯದ ಹೆಚ್ಚುಗಾರಿಕೆ ಅಥವಾ ಕೀಳುತನ – ಇವುಗಳಿಂದ ಸುಖವೂ ಉತ್ತಮವಾದದ್ದು ಅಥವಾ ಕೀಳಾದುದ್ದು (ಆಗುವುದೆಂದು ತಿಳಿಸುವುದಕ್ಕಾಗಿ) ವಿಶೇಷವನ್ನು ಹೇಳಿರುತ್ತದೆ.

ದೇವಗಂಧರ್ವರು ಎಂದರೆ ಹುಟ್ಟುವಾಗಲೇ ಗಂಧರ್ವರಾಗಿ ಹುಟ್ಟಿರುವವರು. ಚಿರಲೋಕಲೋಕವುಳ್ಳ ಪಿತೃಗಳು ಎಂದರೆ ಬಹುಕಾಲ ನಿಲ್ಲುವ ಲೋಕಗಳಿರುವ ಪಿತೃಗಳು. ಅಜಾನವೆಂದರೆ ದೇವಲೋಕ. ಆ ಅಜಾನದಲ್ಲಿ ಹುಟ್ಟಿದವರು ಅಜಾನಜದೇವತೆಗಳು. ಕೆಲವು ಸ್ಮಾರ್ತಕರ್ಮಗಳಿಂದ ದೇವತೆಗಳ ಸ್ಥಾನದಲ್ಲಿ ಹುಟ್ಟಿರುವವರು. ಕರ್ಮದೇವತೆಗಳು ಅಂದರೆ ಅಗ್ನಿಹೋತ್ರವೇ ಮೊದಲಾದ ಕೇವಲ ಶ್ರೌತಕರ್ಮಗಳಿಂದಲೇ ದೇವತೆಗಳ ಸಾಯುಜ್ಯವನ್ನು ಪಡೆದಿರುವವರು. ದೇವತೆಗಳು ಎಂದರೆ ಹವಿಸ್ಸನ್ನು ಅನುಭವಿಸುವ ಮೂವತ್ತುಮೂರು ಮಂದಿ.[2] ಇಂದ್ರನೆಂದರೆ ಆ ದೇವತೆಗಳ ಒಡೆಯ. ಅವನ ಆಚಾರ್ಯನು ಬೃಹಸ್ಪತಿ. ಪ್ರಜಾಪತಿ ಎಂದರೆ ಮೂರು ಲೋಕಗಳೆಂಬ ಶರೀರವಿರುವ ವಿರಾಟ್ಪುರುಷ.  ಬ್ರಹ್ಮ ಎಂದರೆ ಸಮಷ್ಟಿರೂಪನಾಗಿಯೂ, ವ್ಯಷ್ಟಿರೂಪನಾಗಿಯೂ ಸಂಸಾರಮಂಡಲವನ್ನೆಲ್ಲ ವ್ಯಾಪಿಸಿರುವವನು. ಅವನಲ್ಲಿ ಈ ಮೇಲೆ ಹೇಳಿದ ಬೇರೆ ಬೇರೆಯ ಆನಂದಗಳು ಒಂದಾಗಿ ಸೇರಿಕೊಂಡಿರುತ್ತವೆ. ಆ ಆನಂದಕ್ಕೆ ನಿಮಿತ್ತವಾದ ಧರ್ಮವೂ ಅದರ ವಿಷಯವಾದ ಜ್ಞಾನವೂ ಕಾಮದ ಹೊಡೆತವಿಲ್ಲದಿರುವಿಕೆಯೂ, ಅವನಲ್ಲಿ ಮಿತಿಯಿಲ್ಲದಷ್ಟು ಇವೆ. ಅವನೇ ಹಿರಣ್ಯಗರ್ಭನೆಂಬ ಬ್ರಹ್ಮನು. ಅವನ ಈ ಆನಂದವೇ ಶ್ರೋತ್ರಿಯನೂ ಆವ್ಯಜಿನನೂ ಅಕಾಮನೂ ಆಗಿರುವವನಿಗೆ ಎಲ್ಲೆಲ್ಲಿಯೂ ಪ್ರತ್ಯಕ್ಷವಾಗಿ ಕಾಣಬರುತ್ತಿರುವುದು.

ಹೀಗಿರುವುದರಿಂದ ಈ ಮೂರೂ ಪರಮಾನಂದಕ್ಕೆ ಸಾಧನಗಳು ಎಂದಾಯಿತು. ಇವುಗಳಲ್ಲಿ ಶ್ರೋತ್ರಿಯತ್ವ, ಅವೃಜಿನತ್ವ – ಇವು ಒಂದೇ ಸಮವಾಗಿರುತ್ತವೆ. ಅಕಾಮಹತತ್ವವು ಮಾತ್ರ ಹೆಚ್ಚಿರುತ್ತದೆ. ಆದ್ದರಿಂದ ಅಕಾಮಹ ತತ್ವವು ಪರಮಾನಂದಕ್ಕೆ ಹೆಚ್ಚಿನ ಸಾಧನವೆಂದಾಯಿತು.

ಅಕಾಮಹ ತತ್ವವು ತೀರ ಹೆಚ್ಚಾಗಿರುವುದರಿಂದ ಅನುಭವಕ್ಕೆ ಬರುವುದಾಗಿಯೂ ಶ್ರೋತ್ರಿಯರಿಗೆ ಪ್ರತ್ಯಕ್ಷವಾಗಿರುವುದಾಗಿಯೂ ಇರುವ ಆ ಬ್ರಹ್ಮನ ಆನಂದವು “ಏತಸ್ಯೈವಾನಂದಸ್ಯಾನ್ಯಾನಿ ಭೂತಾನಿ ಮಾತ್ರಾಮುಪಜೀವಂತಿ” – ಇದೇ ಆನಂದದ ಮಾತ್ರೆಯನ್ನು ಉಳಿದ ಭೂತಗಳು ಆಶ್ರಯಿಸಿಕೊಂಡಿವೆ (ಬೃಹದಾರಣ್ಯಕೋಪನಿಷತ್ತು 4-3-32) ಎಂಬಂತೆ ಪರಮಾನಂದಕ್ಕೆ ಮಾತ್ರವಾಗಿ ಎಂದರೆ ಒಂದಂಶವಾಗಿ ಇರುವುದೋ ಆ ಆನಂದವು, ಯಾವುದರ ಅಂಶಗಳಾಗಿ ಮಿಕ್ಕ ಆನಂದಗಳು ಸಮುದ್ರದ ನೀರಿನ ಬೇರೆ ಬೇರೆಯಾಗಿರುವ ಹನಿಗಳಂತೆ ಯಾವುದರಲ್ಲಿ ಒಂದಾಗಿರುವವೋ ಆ ಪರಮಾನಂದವು. ಸ್ವಾಭಾವಿಕವಾದದ್ದು. ಏಕೆಂದರೆ ಅದಕ್ಕೆ ಎರಡನೆಯದಿಲ್ಲ. ಮತ್ತು ಅದರಲ್ಲಿ ಅನಂದ-ಆನಂದಿ ಇವೆರಡೂ ಬೇರೆಬೇರೆಯಾಗಿರದೇ ಒಂದೇ ಆಗಿರುತ್ತವೆ.

ಪರಮವ್ಯೋಮದ ಗುಹೆಯಲ್ಲಿರುವ, ಆಕಾಶವೇ ಮೊದಲಾದ ಅನ್ನಮಯದವರೆಗಿನ ಕಾರ್ಯವನ್ನು ಸೃಷ್ಟಿಸಿ ಅದನ್ನೇ ಪ್ರವೇಶಿಸಿರುವ ಅವನನ್ನು ಇಲ್ಲಿ “ಸಃ ಯಃ” ಎಂದು ತಿಳಿಸಿರುತ್ತದೆ. ಪುರುಷನಲ್ಲಿರುವ ಇವನು ಮತ್ತು ಆದಿತ್ಯನಲ್ಲಿರುವವನು. ಬೇರೆ ಬೇರೆ ಪ್ರದೇಶಗಳಲ್ಲಿರುವ ಗಡಿಗೆಯ ಆಕಾಶವೂ ಮಹಾಕಾಶವೂ ಒಂದೇ ಆಗಿರುವಂತೆ ಎಲ್ಲದರಲ್ಲಿ ಇರುವವನು ಒಬ್ಬನೇ. ಗಡಿಗೆ ಎಂಬ ಉಪಾಧಿಯಿಂದ ಬೇರೆ ಬೇರೆಯಾಗಿ ತೋರಿದರೂ, ಆಕಾಶವು ಯಾವಾಗಲೂ ಅಖಂಡವಾಗಿ ಒಂದೇ ಆಗಿರುವಂತೆ ಆತ್ಮನ ಸ್ವರೂಪವಾದ ಆನಂದವು ಆಯಾ ಜೀವರಲ್ಲಿ ಉಪಾಧಿಯಿಂದ ಬೇರೆಬೇರೆಯಾಗಿ ತೋರಿದರೂ ಅಖಂಡಿತವಾಗಿ ಒಂದೇ ಆಗಿರುತ್ತದೆ ಎಂದರ್ಥ.

“ಅಸ್ತಿ ನಾಸ್ತಿ” – ಬ್ರಹ್ಮವು ಇದೆಯೋ ಇಲ್ಲವೋ ಎಂಬ ಅನುಪ್ರಶ್ನೆಗೆ ಉತ್ತರವನ್ನು ಹೇಳಿದ್ದಾಯಿತು. ಕಾರ್ಯ, ರಸಲಾಭ, ಪ್ರಾಣನ, ಅಭಯಪ್ರತಿಷ್ಠೆ, ಭಯದರ್ಶನಗಳೆಂಬ ಯುಕ್ತಿಗಳಿಂದ ಆಕಾಶವೇ ಮೊದಲಾದವುಗಳಿಗೆ ಕಾರಣವಾದ ಬ್ರಹ್ಮವು ಇದ್ದೇ ಇದೆ ಎಂದು ಹೇಳಿ ಆ ಅನುಪ್ರಶ್ನೆಗೆ ಉತ್ತರಿಸಿಯಾಯಿತು. ಜ್ಞಾನಿ ಮತ್ತು ಅಜ್ಞಾನಿ – ಇಬ್ಬರಿಗೂ ಬ್ರಹ್ಮಪ್ರಾಪ್ತಿಯಾಗುತ್ತದೆಯೋ ಇಲ್ಲವೋ ಎನ್ನುವ ವಿಷಯದಲ್ಲಿ ಇನ್ನೆರಡು ಅನುಪ್ರಶ್ನೆಗಳು ಉಳಿದುಕೊಂಡಿವೆ. ಜ್ಞಾನಿಯು ಬ್ರಹ್ಮಪ್ರಾಪ್ತಿಯನ್ನು ಹೊಂದುತ್ತಾನೋ ಇಲ್ಲವೋ ಎನ್ನುವುದಕ್ಕೆ ಈ ಉತ್ತರವಾಗಿ ಮುಂದಿನ ಮಂತ್ರವಿದೆ. ಈ ಉತ್ತರದಿಂದಲೇ ಅಜ್ಞಾನಿಗೆ ಬ್ರಹ್ಮಪ್ರಾಪ್ತಿಯಾಗುತ್ತದೆಯೋ ಇಲ್ಲವೋ ಎಂಬ ಪ್ರಶ್ನೆಗೂ ಉತ್ತರವನ್ನು ಕೊಟ್ಟಂತಾಗುತ್ತದೆಯೆಂದು ಆ ಪ್ರಶ್ನೆಗೆ ಬೇರೆಯಾಗಿ ಉತ್ತರಕೊಡಲು ಶ್ರುತಿಯು ಪ್ರಯತ್ನಿಸುವುದಿಲ್ಲ.

ಸ ಯ ಏವಂವಿತ್ ಅಸ್ಮಾಲ್ಲೋಕಾತ್ಪ್ರೇತ್ಯ ಏತಮನ್ನಮಯಮಾತ್ಮಾನಮುಪಸಂಕ್ರಾಮತಿ ಏತಂ ಪ್ರಾಣಮಯಮಾತ್ಮಾನಮುಪಸಂಕ್ರಾಮತಿ ಏತಂ ನೋಮಯಮಾತ್ಮಾನಮುಪಸಂಕ್ರಾಮತಿ ಏತಂ ವಿಜ್ಞಾನಮಯಮಾತ್ಮಾನಮುಪಸಂಕ್ರಾಮತಿ ಏತಮಾನಂದಮಯಮಾತ್ಮಾನಮುಪಸಂಕ್ರಾಮತಿ ।। 5 ।। ತದಪ್ಯೇಷ ಶ್ಲೋಕೋ ಭವತಿ ।। 6 ।। ಇತ್ಯಷ್ಟಮೋಽನುವಾಕಃ ।। 8 ।।

ಯಾರು ಹೀಗೆ ಅರಿತುಕೊಂಡಿರುವನೋ ಅವನು ಈ ಲೋಕದಿಂದ ಹೊರಟುಹೋಗಿ ಈ ಅನ್ನಮಯನೆಂಬ ಆತ್ಮನನ್ನು ಪಡೆದುಕೊಳ್ಳುತ್ತಾನೆ. ಈ ಪ್ರಾಣಮಯನೆಂಬ ಆತ್ಮನನ್ನು ಪಡೆದುಕೊಳ್ಳುತ್ತಾನೆ. ಈ ಮನೋಮಯನೆಂಬ ಆತ್ಮನನ್ನು ಪಡೆದುಕೊಳ್ಳುತ್ತಾನೆ. ಈ ವಿಜ್ಞಾನಮಯನೆಂಬ ಆತ್ಮನನ್ನು ಪಡೆದುಕೊಳ್ಳುತ್ತಾನೆ. ಈ ಆನಂದಮಯನೆಂಬ ಆತ್ಮನನ್ನು ಪಡೆದುಕೊಳ್ಳುತ್ತಾನೆ. ಅದರ ವಿಷಯದಲ್ಲಿಯೇ ಈ ಶ್ಲೋಕವಿದೆ.

ಯಾರೇ ಆಗಲಿ, ಹೀಗೆ, ಮೇಲೆ ಹೇಳಿದ ಬ್ರಹ್ಮವನ್ನು, ಹೆಚ್ಚುಕುಂದುಗಳ ಭಾವವನ್ನು ಬಿಟ್ಟು, “ಅದ್ವೈತವೂ ಸತ್ಯವೂ ಜ್ಞಾನವೂ ಅನಂತವೂ ಆದ ಬ್ರಹ್ಮವೇ ನಾನಾಗಿದ್ದೇನೆ” ಎಂದು ಅರಿತುಕೊಂಡಿರುತ್ತಾನೋ ಅವನೇ “ಏವಂವಿತ್” – ಹೀಗೆ ಅರಿತುಕೊಂಡವನು. ಏಕೆಂದರೆ “ಏವಮ್” ಹೀಗೆ ಎಂಬ ಮಾತು ಪ್ರಕೃತವಾದದ್ದನ್ನು ಪರಾಮರ್ಶಿಸುವುದಕ್ಕೇ ಬರುತ್ತದೆ. ತನ್ನನ್ನು ತಾನು ಹೀಗೆ ಅರಿತುಕೊಂಡವನು ಈ ಲೋಕದಿಂದ – ಕಂಡ ಮತ್ತು ಕಾಣದ ಇಷ್ಟವಿಷಯಗಳ ಸಮುದಾಯವಾದ ಈ ಲೋಕದಿಂದ – ಹೊರಟುಹೋಗಿ, ಅಂದರೆ ಹಿಂತಿರುಗಿ ಯಾವ ಅಪೇಕ್ಷೆಯೂ ಇಲ್ಲದವನಾಗಿ, ಈ ಹಿಂದೆ ವಿವರಿಸಿದ ಅನ್ನಮಯ ಆತ್ಮನನ್ನು ಪಡೆದುಕೊಳ್ಳುತ್ತಾನೆ. ವಿಷಯಸಮೂಹವೆಲ್ಲವೂ ಅನ್ನಮಯನಾದ ಶರೀರಾತ್ಮನಿಗಿಂತ ಬೇರೆಯಾಗಿ ಏನೂ ಕಾಣುವುದಿಲ್ಲ. ಎಲ್ಲವೂ ಸ್ಥೂಲವಾದ ಅನ್ನಮಯಾತ್ಮನೇ ಎಂದು ಅರಿತುಕೊಳ್ಳುತ್ತಾನೆ ಎಂದರ್ಥ. ಅದಕ್ಕೂ ಒಳಗಾದ ಈ ಪ್ರಾಣಮಯನ್ನು, ಎಲ್ಲಾ ಅನ್ನಮಯಾತ್ಮರೊಳಗೆ ಇರುವ, ವಿಂಗಡವಾಗಿಲ್ಲದ ಪ್ರಾಣಮಯಾತ್ಮನನ್ನು, ನಂತರ ಈ ಮನೋಮಯನೆಂಬ, ವಿಜ್ಞಾನಮಯನೆಂಬ, ಆನಂದಮಯನೆಂಬ ಆತ್ಮವನ್ನು ಪಡೆದುಕೊಳ್ಳುತ್ತಾನೆ. ನಂತರ ಅದೃಶ್ಯವಾದ, ಅನಾತ್ಮ್ಯವಾದ, ಅನಿರುಕ್ತವದ, ಅನಿಲಯನವಾದ ಬ್ರಹ್ಮದಲ್ಲಿ ಅಭಯವಾದ ಪ್ರತಿಷ್ಠೆಯನ್ನು ಹೊಂದುತ್ತಾನೆ.

ಇಲ್ಲಿ ಹೀಗೆ ಅರಿತುಕೊಂಡವನು ಎಂದರೆ ಯಾರು? ಮತ್ತು ಅವನು ಬ್ರಹ್ಮವನ್ನು ಪಡೆದುಕೊಳ್ಳುವನು ಎನ್ನುವುದಾದರೂ ಹೇಗೆ? ಪಡೆದುಕೊಳ್ಳುವವನು ಪರಮಾತ್ಮನಿಗಿಂತ ಬೇರೆಯಾಗಿ, ಅವನಿಗಿಂತ ವಿಂಗಡನಾಗಿ, ಇರುತ್ತಾನೋ, ಅಥವಾ ಅವನು ಅವನೇಯೋ? ಎಂಬ ಪ್ರಶ್ನೆಗಳು ಬರುತ್ತವೆ.

ಬ್ರಹ್ಮಜ್ಞಾನಿಯು ಬ್ರಹ್ಮಕ್ಕಿಂತ ಬೇರೆಯಾದರೆ “ತತ್ ಸೃಷ್ಟ್ವಾ ತದೇವಾನುಪ್ರಾವಿಶತ್” (2-6), “ಅನ್ಯೋಽಸಾವನ್ಯೋಽಹಮಸ್ಮೀತಿ ನ ಸ ವೇದ” (ಬೃಹದಾರಣ್ಯಕೋಪನಿಷತ್ತು 1-4-10), “ಏಕಮೇವಾಽದ್ವಿತೀಯಮ್” (ಛಾಂದೋಗ್ಯೋಪನಿಷತ್ತು 6-2-1), “ತತ್ತ್ವಮಸಿ” (ಛಾಂದೋಗ್ಯೋಪನಿಷತ್ತು 6-8-7) ಎಂಬ ಶ್ರುತಿಗಳಿಗೆ ವಿರೋಧವಾಗುತ್ತದೆ. ಹಾಗಿಲ್ಲದೇ ಅವನೇ ಆನಂದಮಯಾತ್ಮನನ್ನು ಪಡೆದುಕೊಳ್ಳುತ್ತಾನೆ ಎಂದಾದರೆ ಪಡೆದುಕೊಳ್ಳುವ ಕ್ರಿಯೆಗೆ ತಾನೇ ಕರ್ಮವು ಮತ್ತು ತಾನೇ ಕರ್ತೃ ಎಂಬುದು ವಿರುದ್ಧವಾಗುತ್ತದೆ. ಮತ್ತು ಪರಮಾತ್ಮನಿಗೆ ಸಂಸಾರಿತ್ವವೆಂದೋ, ಪರಮಾತ್ಮನೇ ಇಲ್ಲವೆಂದೋ ಆಗುತ್ತದೆ.

ಆದ್ದರಿಂದ ಬ್ರಹ್ಮಜ್ಞಾನಿಯು ಬ್ರಹ್ಮವೇ ಆಗಿರಬೇಕು. ಏಕೆಂದರೆ ಅದೇ ರೂಪವನ್ನು ಪಡೆಯುತ್ತಾನೆಂದು ಹೇಳುವುದು ಶ್ರುತಿಯ ಅಭಿಪ್ರಾಯವಾಗಿದೆ. ಅದನ್ನು ಅರಿಯುವುದರಿಂದ ಪರಮಾತ್ಮ ಸ್ವರೂಪವನ್ನೇ ಪಡೆಯುತ್ತಾನೆಂದಲ್ಲವೇ “ಬ್ರಹ್ಮವಿದಾಪ್ನೋತಿ ಪರಮ್” (2-1) ಎಂದು ಹೇಳಿರುವುದು? ಒಬ್ಬನು ಮತ್ತೊಂದರ ಭಾವವನ್ನು ಹೊಂದುತ್ತಾನೆ ಎನ್ನುವುದು ಯುಕ್ತವಾಗುವುದೇ ಇಲ್ಲ. ಅವಿದ್ಯೆಯಿಂದ ಕಲ್ಪಿತವಾದ ತಾದಾತ್ಮ್ಯವನ್ನು ಕಳೆಯುವುದಕ್ಕಾಗಿ ಈ ಮಂತ್ರವು ಬಂದಿದೆ. ಬ್ರಹ್ಮವಿದ್ಯೆಯಿಂದ ತನ್ನ ಆತ್ಮನ ಪ್ರಾಪ್ತಿಯಾಗುತ್ತದೆ ಎಂದು ಉಪದೇಶಿಸಿರುವುದು ಅವಿದ್ಯಾಕಲ್ಪಿತವಾದ ಅನ್ನಮಯನೇ ಮೊದಲಾದ ವಿಶೇಷರೂಪವೇ ತನ್ನ ಆತ್ಮನೆಂದು ಹುಟ್ಟುಗಟ್ಟಿರುವ ಅನಾತ್ಮನನ್ನು ಅಲ್ಲಗಳೆಯುವುದಕ್ಕೆ.

ಇಲ್ಲಿ ವಿದ್ಯೆಯನ್ನು ಮಾತ್ರ ಉಪದೇಶಿಸಿದೆ. ಅವಿದ್ಯೆಯನ್ನು ತೊಲಗಿಸುವುದೊಂದೇ ವಿದ್ಯೆಯ ಕಾರ್ಯವಾದುದರಿಂದ ಆ ವಿದ್ಯೆಯು ಮಾತ್ರ ಆತ್ಮಪ್ರಾಪ್ತಿಗೆ ಸಾಧನವೆಂದು ಇಲ್ಲಿ ಉಪದೇಶಿಸಿದೆ. ಆದರೆ ಮತ್ತೊಂದು ಸ್ಥಳವನ್ನು ಪಡೆಯುವುದಕ್ಕೆ ಮಾರ್ಗದ ಜ್ಞಾನವನ್ನು ಉಪದೇಶಿಸುವುದೂ ಇದೆಯಲ್ಲ? ಹಳ್ಳಿಗೆ ಹೋಗುವವನೂ ಮತ್ತು ಹಳ್ಳಿ ಎರಡೂ ಒಂದೇ ಆಗುವುದಿಲ್ಲವಷ್ಟೇ? ಹಾಗಲ್ಲ. ಏಕೆಂದರೆ, ಅದಕ್ಕೂ ಇದಕ್ಕೂ ವ್ಯತ್ಯಾಸವಿದೆ. ಆ ದೃಷ್ಟಾಂತದಲ್ಲಿ ಹಳ್ಳಿಯ ವಿಷಯದ ಜ್ಞಾನವನ್ನಲ್ಲ ಉಪದೇಶಿಸುವುದು. ಹಳ್ಳಿಗೆ ಹೋಗುವ ಮಾರ್ಗವನ್ನು ಮಾತ್ರ ಉಪದೇಶಿಸಿರುತ್ತದೆ. ಅಲ್ಲಿ ಹೋಗಲು ಬಯಸಿದ ಹಳ್ಳಿಯ ಕುರಿತು ಏನನ್ನೂ ಉಪದೇಶಿಸಿಲ್ಲ.

ಅಂಜಿಕೆಯಿಲ್ಲದೇ ಪ್ರತಿಷ್ಠೆಯನ್ನು ಹೊಂದುತ್ತಾನೆ ಎಂದಿರುವುದರಿಂದಲೂ ಏಕತ್ವವೇ ಸತ್ಯವೆಂದು ತಿಳಿಯಬೇಕು. ಜ್ಞಾನವಿರುವವನು ತನಗಿಂತ ಬೇರೆಯಾಗಿ ಮತ್ತೇನನ್ನೂ ಕಾಣುವುದಿಲ್ಲ ಎಂದಾದರೆ ಆಗ “ಅಭಯಂ ಪ್ರತಿಷ್ಠಾಂ ವಿಂದತೇ” (2-7) ಎಂದು ಹೇಳಿರುವುದು ಸರಿಯಾದೀತು. ಏಕೆಂದರೆ ಅಂಜಿಕೆಗೆ ಕಾರಣವಾದ ಮತ್ತೊಂದು ವಸ್ತುವು ಆಗ ಇರುವುದಿಲ್ಲ. ಮತ್ತೊಂದು ವಸ್ತುವು ಅವಿದ್ಯಾಕಲ್ಪಿತವೆಂದಾದರೆ ಜ್ಞಾನದಿಂದ ಅದು ನಿಜವಾದ ವಸ್ತುವಲ್ಲವೆಂದು ಕಂಡುಕೊಳ್ಳಲೂ ಬಹುದು. ಕಣ್ಣುಪರೆಯಿಲ್ಲದ ಸರಿಯಾದ ಕಣ್ಣುಳ್ಳವನಿಗೆ ಕಾಣದೇ ಇರುವುದೇ ಅಲ್ಲವೇ ಎರಡನೆಯ ಚಂದ್ರನು ಮಿಥ್ಯೆ ಎಂದಾಗಿರುವುದು?

ಹಾಗೆಂದರೆ ದ್ವೈತವು ಕಾಣುವುದಿಲ್ಲ ಎನ್ನುವುದು ಇಲ್ಲವಲ್ಲ! ಹಾಗಲ್ಲ. ಏಕೆಂದರೆ ಸುಷುಪ್ತಾವಸ್ಥೆಯಲ್ಲಿ ಅಂದರೆ ತನಿನಿದ್ರೆಯಲ್ಲಿರುವವನಿಗೂ ಸಮಾಧಿಯಲ್ಲಿರುವವನಿಗೂ ಮತ್ತೊಂದು ವಸ್ತುವು ಕಾಣಿಸುವುದಿಲ್ಲ. ಜಾಗೃತ್ ಮತ್ತು ಸ್ವಪ್ನಾವಸ್ಥೆಗಳಲ್ಲಿ ಮತ್ತೊಂದು ವಸ್ತುವು ಕಾಣುವುದರಿಂದ ಅದು ನಿಜವಾಗಿ ಇದೆ ಎಂದೇ ಹೇಳಬಹುದಲ್ಲ! ಹಾಗಲ್ಲ. ಏಕೆಂದರೆ ಜಾಗೃತ್ ಮತ್ತು ಸ್ವಪ್ನಾವಸ್ಥೆಗಳು ಅವಿದ್ಯೆಯಿಂದ ಉಂಟಾದವುಗಳು. ಎಚ್ಚರ-ಕನಸುಗಳಲ್ಲಿ ಮತ್ತೊಂದು ವಸ್ತುವನ್ನು ಕಾಣುತ್ತದೆ ಎನ್ನುವುದು ಅವಿದ್ಯೆಯಿಂದ ಆಗಿರುತ್ತದೆ. ಏಕೆಂದರೆ ಅವಿದ್ಯೆಯಿಲ್ಲದಾಗ ಅದು ಇರುವುದಿಲ್ಲ. ಸುಷುಪ್ತಿಯಲ್ಲಿ ಮತ್ತೊಂದು ವಸ್ತುವನ್ನು ಕಾಣದೇ ಇರುವುದೂ ಅವಿದ್ಯೆಯಿಂದ ಆಗಿರಬಹುದಲ್ಲ?

ಹಾಗಲ್ಲ. ಏಕೆಂದರೆ ಅದು ಸ್ವಾಭಾವಿಕವಾಗಿಯೇ ಇರುತ್ತದೆ. ಹೇಗೆಂದರೆ, ದ್ರವ್ಯಕ್ಕೆ ವಿಕಾರವಿಲ್ಲದಿರುವುದೇ ತತ್ತ್ವವು. ಏಕೆಂದರೆ ಅದು ಮತ್ತೊಂದನ್ನು ಅವಲಂಬಿಸಿರುವುದಿಲ್ಲ. ವಿಕಾರವಾಗುವುದು ದ್ರವ್ಯದ ತತ್ತ್ವವಲ್ಲ. ಏಕೆಂದರೆ ಅದು ಮತ್ತೊಂದರ ಅವಲಂಬನೆಯಿಂದ ಆಗುವಂಥದ್ದು. ವಸ್ತುವಿನ ತತ್ತ್ವವು ಕಾರಕಗಳನ್ನು ಅವಲಂಬಿಸಿರುವುದಿಲ್ಲ. ಇರುವ ವಸ್ತುವಿಗೆ ಆಗುವ ವಿಶೇಷವು ಕಾರಕಗಳನ್ನು ಅವಲ್ಬಿಸಿ ಆಗುತ್ತವೆ. ವಿಶೇಷವೆನ್ನುವುದು ವಿಕಾರವು. ಎಚ್ಚರ-ಕನಸುಗಳಲ್ಲಿ ಮತ್ತೊಂದು ವಸ್ತುವನ್ನು ಕಾಣುವುದು ಒಂದು ವಿಶೇಷವಾಗಿರುತ್ತದೆ. ಯಾವುದಕ್ಕೆ ಯಾವುದು ಮತ್ತೊಂದನ್ನು ಬಯಸುವುದೋ ಅದು ಅದರ ತತ್ತ್ವವಲ್ಲ. ಏಕೆಂದರೆ ಅದು ಆ ಮತ್ತೊಂದಿಲ್ಲದಾಗ ಇರುವುದಿಲ್ಲ. ಆದ್ದರಿಂದ ನಿದ್ರೆಯಲ್ಲಿರುವ ಆತ್ಮರೂಪವು ಸ್ವಾಭಾವಿಕವಾಗಿರುವುದರಿಂದ ಎಚ್ಚರ-ಕನಸುಗಳಂತೆ ತನಿನಿದ್ರೆಯಲ್ಲಿ ವಿಶೇಷವು ಇರುವುದಿಲ್ಲ.

ಆದರೆ ಯಾರ ಮತದಲ್ಲಿ ಈಶ್ವರನು ತನಗಿಂತ ಬೇರೆಯಾಗಿದ್ದಾನೆಯೋ ಮತ್ತು ಕಾರ್ಯವಾದ ಜಗತ್ತೂ ಬೇರೆಯಾಗಿದೆಯೋ ಅವರ ಮತದಲ್ಲಿ ಭಯವು ತೊಲಗುವ ಹಾಗೇ ಇಲ್ಲ. ಏಕೆಂದರೆ ಭಯವು ಮತ್ತೊಂದು ನಿಮಿತ್ತದಿಂದ ಆಗಿರುತ್ತದೆ. ಇರುವ ಆ ಮತ್ತೊಂದು ನಾಶವಾಗುವ ಹಾಗಿಲ್ಲ. ಇಲ್ಲದಿರುವುದು ಹುಟ್ಟುವ ಹಾಗೂ ಇಲ್ಲ. ಇರುವ ಸಂಸಾರಭಯವು ಹೋಗಲಾರದು. ಇಲ್ಲದ ಮುಕ್ತಿಯೂ ಉಂಟಾಗಲಾರದು.

ಹಾಗಾದರೆ ವಿದ್ಯಾವಿದ್ಯೆಗಳು ಆ ಆತ್ಮನ ಧರ್ಮಗಳೇ? ಅಲ್ಲ. ಏಕೆಂದರೆ, ಅವು ಪ್ರತ್ಯಕ್ಷವಾಗಿರುತ್ತವೆ. ವಿವೇಕ-ಅವಿವೇಕ ಇವೆರಡೂ ರೂಪವೇ ಮೊದಲಾದವುಗಳಂತೆ ಅಂತಃಕರಣದಲ್ಲಿರುವುದು. ಪ್ರತ್ಯಕ್ಷವಾಗಿರುವ ರೂಪವು ಅದನ್ನು ನೋಡುವವನ ಧರ್ಮವಲ್ಲವಷ್ಟೇ? “ನಾನು ಮೂಢನು. ನನ್ನ ಜ್ಞಾನವು ವಿಂಗಡಿಸಿ ತಿಳಿಸುವುದಿಲ್ಲ” ಎಂದು ಅವಿದ್ಯೆಯು ತನ್ನ ಅನುಭವಕ್ಕೆ ವಿಷಯವಾಗುತ್ತದೆ. ಇದರಂತೆ ವಿದ್ಯೆಯೆಂಬ ವಿವೇಕವೂ ಅನುಭವಕ್ಕೆ ಬರುತ್ತದೆ. ತಿಳಿದವರು ತಮ್ಮ ವಿದ್ಯೆಯನ್ನು ಮತ್ತೊಬ್ಬರಿಗೆ ಉಪದೇಶ ಮಾಡುತ್ತಾರೆ. ಆದ್ದರಿಂದ ವಿದ್ಯೆ-ಅವಿದ್ಯೆ ಇವೆರಡೂ ನಾಮ-ರೂಪಗಳ ಪಕ್ಷಕ್ಕೇ ಸೇರಿದವುಗಳು. ನಾಮ-ರೂಪಗಳಂತೂ ಆತ್ಮನ ಧರ್ಮವಲ್ಲ. “ನಾಮರೂಪಯೋರ್ನಿರ್ವಹಿತ ತೇ ಯದಂತರಾ ತದ್ ಬ್ರಹ್ಮ” – ಆಕಾಶನೆಂದು ಪ್ರಸಿದ್ಧನಾಗಿರುವ ಆತ್ಮನು ನಾಮರೂಪಗಳನ್ನು ಬಿಡಿಸುವವನು; ಅವುಗಳಿಗಿಂತ ಬೇರೆಯಾಗಿರುವುದೇ ಬ್ರಹ್ಮವು (ಛಾಂದೋಗ್ಯೋಪನಿಷತ್ತು 8-14-1) ಎಂಬ ಶ್ರುತಿವಾಕ್ಯವು ಇದಕ್ಕೆ ಪ್ರಮಾಣವು. ಈ ನಾಮ-ರೂಪಗಳೆನ್ನುವವು ಸೂರ್ಯನಲ್ಲಿ ಹಗಲು-ರಾತ್ರಿಗಳಂತೆ ಕಲ್ಪಿತವಾಗಿರುವವೇ ಹೊರತು ನಿಜವಾಗಿ ಇರುವವನಲ್ಲ.

ಇಲ್ಲಿ ಬಳಸಿರುವ ಸಂಕ್ರಮಣ ಎಂಬ ಪದಕ್ಕೆ ಬಂದು ಪಡೆಯುವಿಕೆ ಎಂಬ ಅರ್ಥವಿರುವಾಗ – ಕ್ರಿಯೆಗೆ ತಾನೇ ಕಾರ್ಮವೂ ಕರ್ತೃವೂ ಆಗಿರುವುದು ಸರಿಯಲ್ಲವಲ್ಲ! ಹಾಗಲ್ಲ. ಏಕೆಂದರೆ ಸಂಕ್ರಮಣ ಅಥವಾ ಪಡೆದುಕೊಳ್ಳುವುದು ಎಂದರೆ ಬರಿಯ ಜ್ಞಾನವೇ ಆಗಿರುತ್ದೆ. ಜಿಗಣೆಯ ಹುಳುವೇ ಮೊದಲಾದವುಗಳಂತೆ ಚಲಿಸಿಕೊಂಡು ಹೋಗಿ ಪಡೆದುಕೊಳ್ಳುವ ಕ್ರಿಯೆಯನ್ನೇನೂ ಇಲ್ಲಿ ಹೇಳಿಲ್ಲ. ಅಲ್ಲದೇ “ಸಂಕ್ರಮಣ” ಎಂಬ ಶ್ರುತಿಗೆ ಅರಿತುಕೊಳ್ಳುವುದು ಎನ್ನುವುದು ಮಾತ್ರ ಅರ್ಥವಾಗಿರುತ್ತದೆ. ಇಲ್ಲಿ ಸಂಕ್ರಮಣ ಎಂದರೆ ನಿಜವಾಗಿ ಹೋಗಿ ಪಡೆದುಕೊಳ್ಳುವುದು ಎಂಬ ಅರ್ಥವಲ್ಲ. ಅನ್ನಮಯನೇ ಮೊದಲಾದ ಆತ್ಮರುಗಳಲ್ಲಿ ಯಾವನೋ ಒಬ್ಬನು ಪಡೆದುಕೊಳ್ಳುವುದು ಎಂದೂ ಅಲ್ಲ. ಅನ್ನಮಯನಿಂದ ಹಿಡಿದು ಆನಂದಮಯನ ವರಗಿನ ಆತ್ಮರುಗಳಿಗಿಂತ ಬೇರೆಯಾಗಿರುವವನು ಸಂಕ್ರಮಣಕ್ಕೆ ಕರ್ತೃ. ಆತ್ಮನನ್ನು ಅರಿತುಕೊಳ್ಳುವುದೇ ಸಂಕ್ರಮಣವು ಎನ್ನುವುದು ಸರಿಯಾಗುತ್ತದೆ. ಹೀಗೆ ಅರಿಯುವುದೊಂದೇ ಸಂಕ್ರಮಣವಾಗಿ ಆನಂದಮಯನ ಒಳಗಿರುವ, ಎಲ್ಲರಿಗೂ ಒಳಗಿನ ಆತ್ಮನು ಆಕಾಶವೇ ಮೊದಲಾಗಿ ಅನ್ನಮಯದವರೆಗಿನ ಕಾರ್ಯವನ್ನು ಸೃಷ್ಟಿಸಿ ತಾನೇ ಒಳಹೊಕ್ಕಿರುವಲ್ಲಿ ಹೃದಯಗುಹೆಯ ಸಂಬಂಧದಿಂದ ಅನ್ನಮಯವೇ ಮೊದಲಾದ ಅನಾತ್ಮಗಳಲ್ಲಿ ಉಂಟಾಗಿದ್ದ ಆತ್ಮತ್ವಭ್ರಾಂತಿಯು ಸಂಕ್ರಮಣದಿಂದ, ಅಂದರೆ ಆತ್ಮನನ್ನು ವಿಂಗಡಿಸಿ ಅರಿತುಕೊಂಡ ತಿಳುವಳಿಕೆಯು ಹುಟ್ಟುವುದರಿಂದ ಹೋಗುತ್ತದೆ. ಈ ಅವಿದ್ಯಾಭ್ರಾಂತಿಯ ನಾಶವನ್ನು ಸಂಕ್ರಮಣ ಎಂಬ ಶಬ್ದವನ್ನು ಬಳಸುವುದರ ಮೂಲಕ ಹೇಳಿರುತ್ತದೆ. ಸರ್ವಗತನಾದ ಆತ್ಮನಿಗೆ ಇನ್ನು ಬೇರೆ ಯಾವ ವಿಧದಿಂದಲೂ ಸಂಕ್ರಮಣ ಎನ್ನುವುದ ಹೊಂದುವುದಿಲ್ಲ. ಮತ್ತೊಂದು ವಸ್ತುವು ಇಲ್ಲದಿರುವುದರಿಂದಲೂ ಹೀಗೆಂದು ತಿಳಿಯಬೇಕು. ಆತ್ಮನಿಗಿಂತ ಬೇರೆಯಾದ ವಸ್ತುವೇ ಇಲ್ಲ. ನಾಮ-ರೂಪಗಳೆಲ್ಲವೂ ಆತ್ಮವ್ಯಾಪ್ತವಾಗಿಯೇ ಇವೆ. ಹೀಗಿರುವಾಗ ಆತ್ಮವ ಏನನ್ನು ಪಡೆಯಬೇಕಾಗಿದೆ? ತನ್ನನ್ನು ತಾನೇ ಪಡೆದುಕೊಳ್ಳುತ್ತಾನೆ ಎನ್ನುವುದೂ ಸಲ್ಲದು. ಏಕೆಂದರೆ ಜಿಗಣೆಯ ಹುಳು ತನ್ನನ್ನು ತಾನೇ ಸೇರಿಕೊಳ್ಳುವುದಿಲ್ಲ ತಾನೆ? ಅದರ ವಿಷಯದಲ್ಲಿಯೇ ಈ ಶ್ಲೋಕವಿರುವುದು.

[1] “…, to generate interest in Moksha, an attempt is made in the Brahma Valli to quantify such bliss by comparing it with the highest happiness that one can possible get in this mundane world. Sri Madhwacharya, in his Bhasya, explains how this Upanishadic revelation silences the claims of several philosophical schools that there will be identity and equality in the state of liberation. He also takes this opportunity to explain in detail with valid proofs that each soul is unique and that the difference between the souls is intrinsic to the soul's nature.

There is a popular belief that the passage "Asat va idam agra asit" says that nothing existed at the time of the Pralaya. But Sri Madhwacharya in his Bhashya, beautifully explains how the Upanishad calls Lord Sri Narayana as Asat. Lord Sri Narayana is known as Asat as he is not reachable by anyone. From Him, the Vasudeva form of the Lord manifested.. Hence Lord Sri Vasudeva is known as Sat. (https://atmashrama.org/index.php?Itemid=0&catid=6&cid=60-taittiriya-upanishad-bhashya&module=29-overview&option=com_guru&tmpl=component&view=gurutasks&utm_source=chatgpt.com , accessed on 8 Aug 2025)

[2] ಅಷ್ಟವಸುಗಳು, ಏಕಾದಶರುದ್ರರು, ದ್ವಾದಶಾದಿತ್ಯರು, ಇಂದ್ರ ಮತ್ತು ಪ್ರಜಾಪತಿ – ಇವರು 33 ದೇವತೆಗಳು. ಇಲ್ಲಿ ಇಂದ್ರ ಮತ್ತು ಪ್ರಜಾಪತಿ ಇಬ್ಬರನ್ನು ಬಿಟ್ಟು ಮಿಕ್ಕವರನ್ನು ಗ್ರಹಿಸಬೇಕು.

Leave a Reply

Your email address will not be published. Required fields are marked *