ನೈಮಿಷಾರಣ್ಯೋಪಾಖ್ಯಾನ
ಸೂತ-ಶೌನಕರ ಸಂವಾದ ರೂಪದ ಮಹಾಭಾರತವನ್ನು ನೈಮಿಷಾರಣ್ಯದಲ್ಲಿ ಹೇಳಲಾಯಿತು. ನೈಮಿಷಾರಣ್ಯವು ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖವಾಗಿರುವ ಒಂದು ತೀರ್ಥಕ್ಷೇತ್ರವು. ವರಾಹ ಪುರಾಣದ ಪ್ರಕಾರ ಈ ಅರಣ್ಯದಲ್ಲಿ ಗೌರಮುಖ ಎಂಬ ಋಷಿಯು ವಾಸಿಸುತ್ತಿದ್ದನು. ಒಮ್ಮೆ ಅವನಲ್ಲಿಗೆ ದುರ್ಜಯ ಎಂಬ ದಾನವನು ತನ್ನ ಅಕ್ಷೋಹಿಣೀ ಸೇನೆಯೊಂದಿಗೆ ಆಗಮಿಸಿದನು. ವಿಷ್ಣುವಿನಿಂದ ಪಡೆದು ಕೊಂಡಿದ್ದ ಒಂದು ದಿವ್ಯ ಮಣಿಯ ಸಹಾಯದಿಂದ ಗೌರಮುಖನು ದಾನವನ ಸೇನೆಗೆ ಆತಿಥ್ಯವನ್ನು ನೀಡಿದನು. ದುರ್ಜಯನು ಆ ಮಣಿಯನ್ನು ಬಲತ್ಕಾರವಾಗಿ ಪಡೆದುಕೊಳ್ಳಲು ಮುಂದಾದಾಗ ವಿಷ್ಣುವು ಸುದರ್ಶನ ಚಕ್ರವನ್ನು ಪ್ರಯೋಗಿಸಿ ಒಂದೇ ಕ್ಷಣದಲ್ಲಿ ದುರ್ಜಯನ ಇಡೀ ಸೇನೆಯನ್ನು ನಾಶಗೊಳಿಸಿದನು. ಇದನ್ನು ಮಾಡಿದ ದೇವನು ಗೌರಮುಖ ಮುನಿಗೆ ಹೇಳಿದನು: “ನಿಮಿಷ ಮಾತ್ರದಲ್ಲಿ ದಾನವ ಬಲವನ್ನು ಇಲ್ಲಿ ಸಂಹರಿಸಿದುದರಿಂದ ಈ ಅರಣ್ಯವು ನೈಮಿಷಾರಣ್ಯವೆಂದು ಕರೆಯಲ್ಪಡಲಿ.”[1]
ಇದು ಉತ್ತರ ಪ್ರದೇಶದಲ್ಲಿ ಗೋಮತೀ ನದೀತೀರದಲ್ಲಿ ಲಖ್ನೌದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿ ಈಗಲೂ ಇದೆ ಹಾಗೂ ಅಲ್ಲಿ ಚಕ್ರತೀರ್ಥವೆಂಬ ಬಾವಿ ಮತ್ತು ವಿಷ್ಣುವಿನ ಮಂದಿರವಿದೆ. ಇದು ವಿಷ್ಣುವಿನ ಎಂಟು ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಒಂದು ಎಂದು ಹೇಳುತ್ತಾರೆ.
ಒಂದು ಕಾಲದಲ್ಲಿ ಇದೇ ನೈಮಿಷಾರಣ್ಯವು ಋಷಿ ದಧೀಚಿಯ ಆಶ್ರಮವಾಗಿತ್ತೆಂದೂ, ಅಲ್ಲಿ ಅವನು ಇಂದ್ರನ ವಜ್ರಾಯುಧಕ್ಕಾಗಿ ತನ್ನ ದೇಹವನ್ನು ತೊರೆದು ಎಲುಬುಗಳನ್ನಿತ್ತನು ಎಂಬ ಪ್ರತೀತಿಯಿದೆ.
ಇನ್ನೊಂದು ಪುರಾಣ ಕಥೆಯ ಪ್ರಕಾರ ಋಷಿಗಳು ತಪಸ್ಸಿಗಾಗಿ ಉತ್ತಮ ಸ್ಥಳವನ್ನು ಹುಡುಕುತ್ತಿರಲು ಬ್ರಹ್ಮನು ದರ್ಭೆಯ ಒಂದು ಉಂಗುರವನ್ನು ಭೂಮಿಯ ಮೇಲೆ ಬೀಳಿಸಲು ಅದು ನೈಮಿಷಾರಣ್ಯದಲ್ಲಿ ಬಿದ್ದು, ತಪಸ್ಸಿಗೆ ಪವಿತ್ರ ಸ್ಥಳವೆನಿಸಿಕೊಂಡಿತು. ಇದೇ ನೈಮಿಷಾರಣ್ಯದಲ್ಲಿ ಹಲವಾರು ಯಜ್ಞಕಾರ್ಯಗಳು ನಡೆದವು ಮತ್ತು ಇಲ್ಲಿಯೇ ಹಲವಾರು ಪುರಾಣಗಳನ್ನು ಋಷಿ-ಮುನಿಗಳು ಕೇಳಿದರು.
ಪದ್ಮಪುರಾಣದ ಸೃಷ್ಟಿಖಂಡದ ಪ್ರಕಾರ ಪ್ರಯಾಗದಲ್ಲಿ ಋಷಿಗಳು ಅತಿಪುಣ್ಯಪ್ರದೇಶದ ಕುರಿತು ಬೃಹಸ್ಪತಿಯನ್ನು ಕೇಳಲು ಅವರ ಹಿತೈಷಿಯಾದ ಬೃಹಸ್ಪತಿಯು ಗಟ್ಟಿಯಾದ ಅಚ್ಚುಳ್ಳ, ಸತ್ಯದಿಂದ ನಡೆಯುವ ಅತ್ಯುತ್ತಮ ಚಕ್ರವನ್ನು ಬಿಟ್ಟು “ಜಾಗರೂಕತೆಯಿಂದ ಇದನ್ನು ಅನುಸರಿಸುತ್ತಾ ಹೋದರೆ ನಿಮಗೆ ಬೇಕಾದುದು ದೊರೆಯುತ್ತದೆ. ಹೋಗುತ್ತಿರುವಾಗ ಈ ಧರ್ಮಚಕ್ರದ ಅಂಚು ಎಲ್ಲಿ ಹೂಳಿಕೊಳ್ಳುತ್ತದೆಯೋ ಅದೇ ಪುಣ್ಯದೇಶವೆಂದು ತಿಳಿಯಿರಿ” ಎಂದನು. ಗಂಗೆಯನ್ನೇ ಅನುಸರಿಸಿ ಬರುತ್ತಿದ್ದ ಆ ಚಕ್ರದ ಅಂಚು (ನೇಮಿಯು) ಒಂದೆಡೆ ಹೂತುಕೊಂಡಿತು. ಅದೇ ನೈಮಿಷಾರಣ್ಯವು.
ಈ ಕೆಳಗಿನ ಪುರಾಣಗಳಲ್ಲಿ ನೈಮಿಷಾರಣ್ಯೋಪಾಖ್ಯಾನವು ಬರುತ್ತದೆ:
[1] ಏವಂ ಕೃತ್ವಾ ತತೋ ದೇವೋ ಮುನಿಂ ಗೌರಮುಖಂ ತದಾ । ಉವಾಚ ನಿಮಿ-ಷೇಣೇದಂ ನಿಹತಂ ದಾನವಂ ಬಲಂ ।। ಅರಣ್ಯೇಽಸ್ಮಿಂಸ್ತತಸ್ತ್ವೇತನ್ನೈಮಿಷಾರಣ್ಯ ಸಂಜ್ಞಿತಂ ।