ಅನುಶಾಸನ ಪರ್ವ: ದಾನಧರ್ಮ ಪರ್ವ
Contents
Toggle೧೧೨[1]
ಸಂಸಾರಚಕ್ರ
ಸಂಸಾರಚಕ್ರವನ್ನು ವರ್ಣಿಸುವ ಯುಧಿಷ್ಠಿರ-ಬೃಹಸ್ಪತಿ ಸಂವಾದ (1-113).
13112001 ಯುಧಿಷ್ಠಿರ ಉವಾಚ|
13112001a ಪಿತಾಮಹ ಮಹಾಬಾಹೋ ಸರ್ವಶಾಸ್ತ್ರವಿಶಾರದ|
13112001c ಶ್ರೋತುಮಿಚ್ಚಾಮಿ ಮರ್ತ್ಯಾನಾಂ ಸಂಸಾರವಿಧಿಮುತ್ತಮಮ್||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಬಾಹೋ! ಸರ್ವಶಾಸ್ತ್ರವಿಶಾರದ! ಮರ್ತ್ಯರ ಉತ್ತಮ ಸಂಸಾರವಿಧಿಯನ್ನು ಕೇಳಬಯಸುತ್ತೇನೆ.
13112002a ಕೇನ ವೃತ್ತೇನ ರಾಜೇಂದ್ರ ವರ್ತಮಾನಾ ನರಾ ಯುಧಿ|
13112002c ಪ್ರಾಪ್ನುವಂತ್ಯುತ್ತಮಂ ಸ್ವರ್ಗಂ ಕಥಂ ಚ ನರಕಂ ನೃಪ||
ರಾಜೇಂದ್ರ! ನೃಪ! ಯಾವ ನಡತೆಯಿಂದ ನಡೆದುಕೊಳ್ಳುವುದರಿಂದ ನರರು ಉತ್ತಮ ಸ್ವರ್ಗವನ್ನು ಪಡೆಯುತ್ತಾರೆ ಮತ್ತು ಯಾವುದರಿಂದ ನರಕವನ್ನು ಪಡೆಯುತ್ತಾರೆ?
13112003a ಮೃತಂ ಶರೀರಮುತ್ಸೃಜ್ಯ ಕಾಷ್ಠಲೋಷ್ಟಸಮಂ ಜನಾಃ|
13112003c ಪ್ರಯಾಂತ್ಯಮುಂ ಲೋಕಮಿತಃ ಕೋ ವೈ ತಾನನುಗಚ್ಚತಿ||
ಕಟ್ಟಿಗೆ ಮತ್ತು ಮಣ್ಣುಹೆಂಟೆಗೆ ಸಮನಾದ ಈ ಶರೀರವನ್ನು ಬಿಟ್ಟು ಜನರು ಮುಂದಿನ ಲೋಕಗಳಿಗೆ ಹೋಗುವಾಗ ಯಾರು ಅವರನ್ನು ಅನುಸರಿಸಿ ಹೋಗುತ್ತಾರೆ?”
13112004 ಭೀಷ್ಮ ಉವಾಚ|
13112004a ಅಸಾವಾಯಾತಿ ಭಗವಾನ್ಬೃಹಸ್ಪತಿರುದಾರಧೀಃ|
13112004c ಪೃಚ್ಚೈನಂ ಸುಮಹಾಭಾಗಮೇತದ್ಗುಹ್ಯಂ ಸನಾತನಮ್||
ಭೀಷ್ಮನು ಹೇಳಿದನು: “ಈಗ ಇಲ್ಲಿಗೆ ಉದಾರಬುದ್ಧಿ ಭಗವಾನ್ ಬೃಹಸ್ಪತಿಯು ಬರುತ್ತಾನೆ. ಈ ಸನಾತನ ಗುಟ್ಟನ್ನು ಆ ಸುಮಹಾಭಾಗನಲ್ಲಿಯೇ ಕೇಳು.
13112005a ನೈತದನ್ಯೇನ ಶಕ್ಯಂ ಹಿ ವಕ್ತುಂ ಕೇನ ಚಿದದ್ಯ ವೈ|
13112005c ವಕ್ತಾ ಬೃಹಸ್ಪತಿಸಮೋ ನ ಹ್ಯನ್ಯೋ ವಿದ್ಯತೇ ಕ್ವ ಚಿತ್||
ಅವನನ್ನು ಬಿಟ್ಟು ಬೇರೆ ಯಾರೂ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ. ಬೃಹಸ್ಪತಿಯ ಸಮನಾದ ವಾಗ್ಮಿಯು ಬೇರೆ ಯಾರೂ ಎಲ್ಲಿಯೂ ಇಲ್ಲ.””
13112006 ವೈಶಂಪಾಯನ ಉವಾಚ|
13112006a ತಯೋಃ ಸಂವದತೋರೇವಂ ಪಾರ್ಥಗಾಂಗೇಯಯೋಸ್ತದಾ|
13112006c ಆಜಗಾಮ ವಿಶುದ್ಧಾತ್ಮಾ ಭಗವಾನ್ಸ ಬೃಹಸ್ಪತಿಃ||
ವೈಶಂಪಾಯನನು ಹೇಳಿದನು: “ಗಾಂಗೇಯ ಮತ್ತು ಪಾರ್ಥರು ಹೀಗೆ ಮಾತನಾಡಿಕೊಳ್ಳುತ್ತಿರಲು ಅಲ್ಲಿಗೆ ವಿಶುದ್ಧಾತ್ಮಾ ಭಗವಾನ್ ಬೃಹಸ್ಪತಿಯು ಅಗಮಿಸಿದನು.
13112007a ತತೋ ರಾಜಾ ಸಮುತ್ಥಾಯ ಧೃತರಾಷ್ಟ್ರಪುರೋಗಮಃ|
13112007c ಪೂಜಾಮನುಪಮಾಂ ಚಕ್ರೇ ಸರ್ವೇ ತೇ ಚ ಸಭಾಸದಃ||
ಆಗ ಧೃತರಾಷ್ಟ್ರನನ್ನು ಮುಂದಿಟ್ಟುಕೊಂಡು ರಾಜಾ ಯುಧಿಷ್ಠಿರನು ಮೇಲೆದ್ದು ಅವನಿಗೆ ಅನುಪಮ ಪೂಜೆಯನ್ನಿತ್ತನು. ಸರ್ವ ಸಭಾಸದರೂ ಹಾಗೆಯೇ ಮಾಡಿದರು.
13112008a ತತೋ ಧರ್ಮಸುತೋ ರಾಜಾ ಭಗವಂತಂ ಬೃಹಸ್ಪತಿಮ್|
13112008c ಉಪಗಮ್ಯ ಯಥಾನ್ಯಾಯಂ ಪ್ರಶ್ನಂ ಪಪ್ರಚ್ಚ ಸುವ್ರತಃ||
ಆಗ ಸುವ್ರತ ಧರ್ಮಸುತ ರಾಜನು ಭಗವಾನ್ ಬೃಹಸ್ಪತಿಯ ಬಳಿಸಾರಿ ಯಥಾನ್ಯಾಯವಾದ ಪ್ರಶ್ನೆಯನ್ನು ಕೇಳಿದನು.
13112009a ಭಗವನ್ಸರ್ವಧರ್ಮಜ್ಞ ಸರ್ವಶಾಸ್ತ್ರವಿಶಾರದ|
13112009c ಮರ್ತ್ಯಸ್ಯ ಕಃ ಸಹಾಯೋ ವೈ ಪಿತಾ ಮಾತಾ ಸುತೋ ಗುರುಃ||
ಯುಧಿಷ್ಠಿರನು ಹೇಳಿದನು: “ಭಗವನ್! ಸರ್ವಧರ್ಮಜ್ಞ! ಸರ್ವಶಾಸ್ತ್ರವಿಶಾರದ! ಮನುಷ್ಯರ ಸಹಾಯಕರ್ಯಾರು? ತಂದೆಯೋ? ತಾಯಿಯೋ? ಮಗನೋ ಅಥವಾ ಗುರುವೋ?
13112010a ಮೃತಂ ಶರೀರಮುತ್ಸೃಜ್ಯ ಕಾಷ್ಠಲೋಷ್ಟಸಮಂ ಜನಾಃ|
13112010c ಗಚ್ಚಂತ್ಯಮುತ್ರಲೋಕಂ ವೈ ಕ ಏನಮನುಗಚ್ಚತಿ||
ಕಟ್ಟಿಗೆ ಮತ್ತು ಮಣ್ಣುಹೆಂಟೆಗೆ ಸಮನಾದ ಶರೀರವನ್ನು ತೊರೆದು ಮೃತರಾಗಿ ಮನುಷ್ಯರು ಪರಲೋಕಕ್ಕೆ ಹೋಗುವಾಗ ಅವರನ್ನು ಯಾರು ಅನುಸರಿಸಿಹೋಗುತ್ತಾರೆ?”
13112011 ಬೃಹಸ್ಪತಿರುವಾಚ|
13112011a ಏಕಃ ಪ್ರಸೂತೋ ರಾಜೇಂದ್ರ ಜಂತುರೇಕೋ ವಿನಶ್ಯತಿ|
13112011c ಏಕಸ್ತರತಿ ದುರ್ಗಾಣಿ ಗಚ್ಚತ್ಯೇಕಶ್ಚ ದುರ್ಗತಿಮ್||
ಬೃಹಸ್ಪತಿಯು ಹೇಳಿದನು: “ರಾಜೇಂದ್ರ! ಜಂತುವು ಒಬ್ಬಂಟಿಯಾಗಿ ಹುಟ್ಟುತ್ತದೆ ಮತ್ತು ಒಬ್ಬಂಟಿಯಾಗಿಯೇ ಸಾಯುತ್ತದೆ. ಏಕಾಕಿಯಾಗಿಯೇ ಕಷ್ಟಗಳನ್ನು ದಾಟುತ್ತಾನೆ ಮತ್ತು ಏಕಾಕಿಯಾಗಿಯೇ ದುರ್ಗತಿಯನ್ನೂ ಹೊಂದುತ್ತಾನೆ.
13112012a ಅಸಹಾಯಃ ಪಿತಾ ಮಾತಾ ತಥಾ ಭ್ರಾತಾ ಸುತೋ ಗುರುಃ|
13112012c ಜ್ಞಾತಿಸಂಬಂಧಿವರ್ಗಶ್ಚ ಮಿತ್ರವರ್ಗಸ್ತಥೈವ ಚ||
ತಂದೆ, ತಾಯಿ, ಸಹೋದರ, ಮಗ, ಗುರು, ಜ್ಞಾತಿಬಾಂಧವ ವರ್ಗದವರು ಮತ್ತು ಮಿತ್ರವರ್ಗದವರು ಅವನಿಗೆ ಸಹಾಯಕರಾಗುವುದಿಲ್ಲ.
13112013a ಮೃತಂ ಶರೀರಮುತ್ಸೃಜ್ಯ ಕಾಷ್ಠಲೋಷ್ಟಸಮಂ ಜನಾಃ|
13112013c ಮುಹೂರ್ತಮುಪತಿಷ್ಠಂತಿ ತತೋ ಯಾಂತಿ ಪರಾಙ್ಮುಖಾಃ|
13112013e ತೈಸ್ತಚ್ಚರೀರಮುತ್ಸೃಷ್ಟಂ ಧರ್ಮ ಏಕೋಽನುಗಚ್ಚತಿ||
ಅವರು ಕಟ್ಟಿಗೆ-ಮಣ್ಣುಹೆಂಟೆಗೆ ಸಮನಾದ ಮೃತನ ಶರೀರವನ್ನು ಬಿಟ್ಟು ಮುಹೂರ್ತಕಾಲ ನಿಲ್ಲುತ್ತಾರೆ. ನಂತರ ಹಿಂದಿರುಗಿ ಹೋಗುತ್ತಾರೆ. ಆದರೆ ಶರೀರವನ್ನು ಬಿಟ್ಟ ಅವನನ್ನು ಧರ್ಮವೊಂದೇ ಹಿಂಬಾಲಿಸಿ ಹೋಗುತ್ತದೆ.
13112014a ತಸ್ಮಾದ್ಧರ್ಮಃ ಸಹಾಯಾರ್ಥೇ ಸೇವಿತವ್ಯಃ ಸದಾ ನೃಭಿಃ|
13112014c ಪ್ರಾಣೀ ಧರ್ಮಸಮಾಯುಕ್ತೋ ಗಚ್ಚತೇ ಸ್ವರ್ಗತಿಂ ಪರಾಮ್|
13112014e ತಥೈವಾಧರ್ಮಸಂಯುಕ್ತೋ ನರಕಾಯೋಪಪದ್ಯತೇ||
ಆದುದರಿಂದ ಸಹಾಯಕ್ಕಾಗಿ ಮನುಷ್ಯರು ಸದಾ ಧರ್ಮವನ್ನೇ ಆಚರಿಸುತ್ತಿರಬೇಕು. ಧರ್ಮಸಮಾಯುಕ್ತ ಪ್ರಾಣಿಗಳು ಪರಮ ಉತ್ತಮ ಗತಿಯನ್ನು ಪಡೆಯುತ್ತವೆ. ಹಾಗೆಯೇ ಅಧರ್ಮಸಂಯುಕ್ತ ಪ್ರಾಣಿಗಳು ನರಕಗಳನ್ನು ಪಡೆಯುತ್ತವೆ.
13112015a ತಸ್ಮಾನ್ನ್ಯಾಯಾಗತೈರರ್ಥೈರ್ಧರ್ಮಂ ಸೇವೇತ ಪಂಡಿತಃ|
13112015c ಧರ್ಮ ಏಕೋ ಮನುಷ್ಯಾಣಾಂ ಸಹಾಯಃ ಪಾರಲೌಕಿಕಃ||
ಆದುದರಿಂದ ಪಂಡಿತನಾದವನು ನ್ಯಾಯದಿಂದ ಪಡೆದ ಧನದಿಂದ ಧರ್ಮವನ್ನು ಆಚರಿಸಬೇಕು. ಧರ್ಮವೊಂದೇ ಮನುಷ್ಯರ ಪಾರಲೌಕಿಕ ವಿಷಯದಲ್ಲಿ ಸಹಾಯಮಾಡುತ್ತದೆ.
13112016a ಲೋಭಾನ್ಮೋಹಾದನುಕ್ರೋಶಾದ್ಭಯಾದ್ವಾಪ್ಯಬಹುಶ್ರುತಃ|
13112016c ನರಃ ಕರೋತ್ಯಕಾರ್ಯಾಣಿ ಪರಾರ್ಥೇ ಲೋಭಮೋಹಿತಃ||
ಅವಿದ್ಯಾವಂತ ನರನು ಲೋಭ-ಮೋಹ-ಆಕ್ರೋಶ-ಭಯಗಳಿಂದ ಲೋಭಮೋಹಿತನಾಗಿ ಇತರರ ಸಲುವಾಗಿ ಅಕಾರ್ಯಗಳನ್ನು ಮಾಡುತ್ತಾನೆ.
13112017a ಧರ್ಮಶ್ಚಾರ್ಥಶ್ಚ ಕಾಮಶ್ಚ ತ್ರಿತಯಂ ಜೀವಿತೇ ಫಲಮ್|
13112017c ಏತತ್ತ್ರಯಮವಾಪ್ತವ್ಯಮಧರ್ಮಪರಿವರ್ಜಿತಮ್||
ಧರ್ಮ-ಅರ್ಥ-ಕಾಮ ಈ ಮೂರೂ ಜೀವಿತದ ಫಲಗಳು. ಈ ಮೂರನ್ನೂ ಅಧರ್ಮವನ್ನು ಪರಿತ್ಯಜಿಸಿ ಪಡೆದುಕೊಳ್ಳಬೇಕು.”
13112018 ಯುಧಿಷ್ಠಿರ ಉವಾಚ|
13112018a ಶ್ರುತಂ ಭಗವತೋ ವಾಕ್ಯಂ ಧರ್ಮಯುಕ್ತಂ ಪರಂ ಹಿತಮ್|
13112018c ಶರೀರವಿಚಯಂ ಜ್ಞಾತುಂ ಬುದ್ಧಿಸ್ತು ಮಮ ಜಾಯತೇ||
ಯುಧಿಷ್ಠಿರನು ಹೇಳಿದನು: “ಭಗವನ್! ಧರ್ಮಯುಕ್ತವಾದ ಪರಮ ಹಿತ ವಚನವನ್ನು ನಿನ್ನಿಂದ ಕೇಳಿದೆ. ಶರೀರದ ಕುರಿತು ತಿಳಿಯಬೇಕೆಂದು ನನ್ನ ಬುದ್ಧಿಯು ಬಯಸುತ್ತಿದೆ.
13112019a ಮೃತಂ ಶರೀರರಹಿತಂ ಸೂಕ್ಷ್ಮಮವ್ಯಕ್ತತಾಂ ಗತಮ್|
13112019c ಅಚಕ್ಷುರ್ವಿಷಯಂ ಪ್ರಾಪ್ತಂ ಕಥಂ ಧರ್ಮೋಽನುಗಚ್ಚತಿ||
ಮೃತನಾಗಿ ಶರೀರರಹಿತನಾದವನು ಅವ್ಯಕ್ತವಾದ ಸೂಕ್ಷ್ಮಗತಿಯನ್ನು ಹೊಂದುತ್ತಾನೆ. ಕಣ್ಣುಗಳಿಗೆ ಕಾಣಿಸದೇ ಇರುವ ಅದನ್ನು ಧರ್ಮವು ಹೇಗೆ ಅನುಸರಿಸುತ್ತದೆ?”
13112020 ಬೃಹಸ್ಪತಿರುವಾಚ|
13112020a ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್|
13112020c ಬುದ್ಧಿರಾತ್ಮಾ ಚ ಸಹಿತಾ ಧರ್ಮಂ ಪಶ್ಯಂತಿ ನಿತ್ಯದಾ||
ಬೃಹಸ್ಪತಿಯು ಹೇಳಿದನು: “ಪೃಥ್ವೀ, ವಾಯು, ಆಕಾಶ, ಜಲ, ಅಗ್ನಿ ಈ ಐದು ಮತ್ತು ಬುದ್ಧಿ-ಆತ್ಮಗಳು ಒಟ್ಟಿಗೇ ನಿತ್ಯವೂ ಜೀವನು ಆಚರಿಸುವ ಧರ್ಮವನ್ನು ನೋಡುತ್ತಿರುತ್ತವೆ.
13112021a ಪ್ರಾಣಿನಾಮಿಹ ಸರ್ವೇಷಾಂ ಸಾಕ್ಷಿಭೂತಾನಿ ಚಾನಿಶಮ್|
13112021c ಏತೈಶ್ಚ ಸ ಹ ಧರ್ಮೋಽಪಿ ತಂ ಜೀವಮನುಗಚ್ಚತಿ||
ನಿರಂತರವೂ ಇವು ಜೀವಿಗಳ ಎಲ್ಲ ಕರ್ಮಗಳಿಗೆ ಸಾಕ್ಷಿಗಳಾಗಿರುತ್ತವೆ. ಇವುಗಳೊಡನೆ ಧರ್ಮವೂ ಜೀವವನ್ನು ಅನುಸರಿಸಿ ಹೋಗುತ್ತವೆ.
13112022a ತ್ವಗಸ್ಥಿಮಾಂಸಂ ಶುಕ್ರಂ ಚ ಶೋಣಿತಂ ಚ ಮಹಾಮತೇ|
13112022c ಶರೀರಂ ವರ್ಜಯಂತ್ಯೇತೇ ಜೀವಿತೇನ ವಿವರ್ಜಿತಮ್||
ಮಹಾಮತೇ! ಚರ್ಮ, ಮೂಳೆ, ಮಾಂಸ, ಶುಕ್ರ, ಶೋಣಿತ ಇವು ಜೀವವು ಬಿಟ್ಟ ಶರೀರಗಳೊಂದಿಗೆ ನಾಶವಾಗುತ್ತವೆ.
13112023a ತತೋ ಧರ್ಮಸಮಾಯುಕ್ತಃ ಸ ಜೀವಃ ಸುಖಮೇಧತೇ|
13112023c ಇಹ ಲೋಕೇ ಪರೇ ಚೈವ ಕಿಂ ಭೂಯಃ ಕಥಯಾಮಿ ತೇ[2]||
ಆದುದರಿಂದ ಧರ್ಮಸಮಾಯುಕ್ತ ಜೀವವೇ ಇಹ ಮತ್ತು ಪರಲೋಕಗಳಲ್ಲಿ ಸುಖವನ್ನು ಹೊಂದುತ್ತದೆ. ನಿನಗೆ ಇನ್ನೂ ಏನನ್ನು ಹೇಳಲಿ?”
13112024 ಯುಧಿಷ್ಠಿರ ಉವಾಚ|
13112024a ಅನುದರ್ಶಿತಂ ಭಗವತಾ ಯಥಾ ಧರ್ಮೋಽನುಗಚ್ಚತಿ|
13112024c ಏತತ್ತು ಜ್ಞಾತುಮಿಚ್ಚಾಮಿ ಕಥಂ ರೇತಃ ಪ್ರವರ್ತತೇ||
ಯುಧಿಷ್ಠಿರನು ಹೇಳಿದನು: “ಧರ್ಮವು ಜೀವವನ್ನು ಹೇಗೆ ಅನುಸರಿಸಿ ಹೋಗುತ್ತದೆ ಎನ್ನುವುದನ್ನು ನೀನು ತೋರಿಸಿಕೊಟ್ಟೆ. ಈಗ ನಾನು ರೇತಸ್ಸು ಹೇಗಾಗುವುದೆನ್ನುವುದನ್ನು ತಿಳಿಯಬಯಸುತ್ತೇನೆ.”
13112025 ಬೃಹಸ್ಪತಿರುವಾಚ|
13112025a ಅನ್ನಮಶ್ನಂತಿ ಯೇ ದೇವಾಃ ಶರೀರಸ್ಥಾ ನರೇಶ್ವರ|
13112025c ಪೃಥಿವೀ ವಾಯುರಾಕಾಶಮಾಪೋ ಜ್ಯೋತಿರ್ಮನಸ್ತಥಾ||
ಬೃಹಸ್ಪತಿಯು ಹೇಳಿದನು: “ನರೇಶ್ವರ! ಶರೀರಸ್ಥರಾಗಿರುವ ಪೃಥಿವೀ, ವಾಯು, ಆಕಾಶ, ಜಲ, ಜ್ಯೋತಿ ಮತ್ತು ಮನಸ್ಸುಗಳ ಅಧಿದೇವತೆಗಳು ಆಹಾರವನ್ನು ಸೇವಿಸುತ್ತಾರೆ.
13112026a ತತಸ್ತೃಪ್ತೇಷು ರಾಜೇಂದ್ರ ತೇಷು ಭೂತೇಷು ಪಂಚಸು|
13112026c ಮನಃಷಷ್ಠೇಷು ಶುದ್ಧಾತ್ಮನ್ರೇತಃ ಸಂಪದ್ಯತೇ ಮಹತ್||
ರಾಜೇಂದ್ರ! ಶುದ್ಧಾತ್ಮನ್! ಪಂಚಭೂತಗಳು ಮತ್ತು ಆರನೆಯ ಮನಸ್ಸು ಇವು ತೃಪ್ತರಾದಾಗ ಮಹತ್ತಾದ ರೇತಸ್ಸು ಹುಟ್ಟುತ್ತದೆ.
13112027a ತತೋ ಗರ್ಭಃ ಸಂಭವತಿ ಸ್ತ್ರೀಪುಂಸೋಃ ಪಾರ್ಥ ಸಂಗಮೇ|
13112027c ಏತತ್ತೇ ಸರ್ವಮಾಖ್ಯಾತಂ ಕಿಂ ಭೂಯಃ ಶ್ರೋತುಮಿಚ್ಚಸಿ||
ಪಾರ್ಥ! ಅನಂತರ ಸ್ತ್ರೀಪುರುಷರ ಸಂಗಮದಲ್ಲಿ ಗರ್ಭವುಂಟಾಗುತ್ತದೆ. ಇದರ ಕುರಿತಾದ ಎಲ್ಲವನ್ನೂ ಹೇಳಿದ್ದೇನೆ. ಇನ್ನೂ ಏನನ್ನು ಕೇಳಬಯಸುತ್ತೀಯೆ?”
13112028 ಯುಧಿಷ್ಠಿರ ಉವಾಚ|
13112028a ಆಖ್ಯಾತಮೇತದ್ಭವತಾ ಗರ್ಭಃ ಸಂಜಾಯತೇ ಯಥಾ|
13112028c ಯಥಾ ಜಾತಸ್ತು ಪುರುಷಃ ಪ್ರಪದ್ಯತಿ ತದುಚ್ಯತಾಮ್||
ಯುಧಿಷ್ಠಿರನು ಹೇಳಿದನು: “ನೀನು ಗರ್ಭವು ಹೇಗಾಗುತ್ತದೆ ಎಂದು ಹೇಳಿದೆ. ಹಾಗೆ ಹುಟ್ಟಿದ ಮನುಷ್ಯನು ಬಂಧನವನ್ನು ಹೇಗೆ ಹೊಂದುತ್ತಾನೆ ಎನ್ನುವುದನ್ನು ಹೇಳಬೇಕು.”
13112029 ಬೃಹಸ್ಪತಿರುವಾಚ|
13112029a ಆಸನ್ನಮಾತ್ರಃ ಸತತಂ ತೈರ್ಭೂತೈರಭಿಭೂಯತೇ|
13112029c ವಿಪ್ರಮುಕ್ತಶ್ಚ ತೈರ್ಭೂತೈಃ ಪುನರ್ಯಾತ್ಯಪರಾಂ ಗತಿಮ್|
13112029e ಸ ತು ಭೂತಸಮಾಯುಕ್ತಃ ಪ್ರಾಪ್ನುತೇ ಜೀವ ಏವ ಹ||
ಬೃಹಸ್ಪತಿಯು ಹೇಳಿದನು: “ಗರ್ಭವನ್ನು ಸೇರಿದೊಡನೆಯೇ ಅದರಲ್ಲಿರುವ ಪಂಚಭೂತಗಳು ಶರೀರವಾಗಿ ಪರಿವರ್ತನಗೊಂಡು ಜೀವವನ್ನು ಬಂಧಿಸಿಬಿಡುತ್ತವೆ. ಆ ಪಂಚಭೂತಗಳಿಂದ ಬಿಡುಗಡೆ ಹೊಂದಿದ ಜೀವವು ಪುನಃ ಇನ್ನೊಂದು ಗತಿಯನ್ನು ಹೊಂದುತ್ತದೆ. ಶರೀರದಲ್ಲಿ ಸರ್ವಭೂತಗಳಿಂದ ಯುಕ್ತನಾದ ಜೀವವೇ ಸುಖ ಅಥವಾ ದುಃಖವನ್ನು ಅನುಭವಿಸುತ್ತದೆ.
13112030a ತತೋಽಸ್ಯ ಕರ್ಮ ಪಶ್ಯಂತಿ ಶುಭಂ ವಾ ಯದಿ ವಾಶುಭಮ್|
13112030c ದೇವತಾಃ ಪಂಚಭೂತಸ್ಥಾಃ ಕಿಂ ಭೂಯಃ ಶ್ರೋತುಮಿಚ್ಚಸಿ||
ಹೀಗೆ ಪಂಚಭೂತಗಳಲ್ಲಿರುವ ದೇವತೆಗಳು ಅವನ ಶುಭ ಅಥವಾ ಅಶುಭ ಕರ್ಮಗಳನ್ನು ನೋಡುತ್ತಲೇ ಇರುತ್ತಾರೆ. ಇನ್ನೂ ಏನನ್ನು ಕೇಳಬಯಸುತ್ತೀಯೆ?”
13112031 ಯುಧಿಷ್ಠಿರ ಉವಾಚ|
13112031a ತ್ವಗಸ್ಥಿಮಾಂಸಮುತ್ಸೃಜ್ಯ ತೈಶ್ಚ ಭೂತೈರ್ವಿವರ್ಜಿತಃ|
13112031c ಜೀವಃ ಸ ಭಗವನ್ ಕ್ವಸ್ಥಃ ಸುಖದುಃಖೇ ಸಮಶ್ನುತೇ||
ಯುಧಿಷ್ಠಿರನು ಹೇಳಿದನು: “ಭಗವನ್! ಚರ್ಮ, ಮೂಳೆ, ಮಾಂಸಗಳನ್ನು ತೊರೆದು ಪಂಚಭೂತಗಳಿಂದ ವಿವರ್ಜಿತನಾದ ಜೀವವು ಎಲ್ಲಿದ್ದುಕೊಂಡು ಸುಖದುಃಖಗಳನ್ನು ಅನುಭವಿಸುತ್ತದೆ?”
13112032 ಬೃಹಸ್ಪತಿರುವಾಚ|
13112032a ಜೀವೋ ಧರ್ಮ[3]ಸಮಾಯುಕ್ತಃ ಶೀಘ್ರಂ ರೇತಸ್ತ್ವಮಾಗತಃ|
13112032c ಸ್ತ್ರೀಣಾಂ ಪುಷ್ಪಂ ಸಮಾಸಾದ್ಯ ಸೂತೇ ಕಾಲೇನ ಭಾರತ||
ಬೃಹಸ್ಪತಿಯು ಹೇಳಿದನು: “ಭಾರತ! ಧರ್ಮಸಮಾಯುಕ್ತನಾದ ಜೀವವು ಮರಣಾನಂತರ ಶೀಘ್ರದಲ್ಲಿಯೇ ರೇತಸ್ತ್ವವನ್ನು ಪಡೆದುಕೊಳ್ಳುತ್ತದೆ. ಸ್ತ್ರೀಯರ ರಜಸ್ಸಿನಲ್ಲಿ ಸೇರಿಕೊಂಡು ಸಮಯಾನುಸಾರವಾಗಿ ಜನ್ಮತಾಳುತ್ತದೆ.
13112033a ಯಮಸ್ಯ ಪುರುಷೈಃ ಕ್ಲೇಶಂ ಯಮಸ್ಯ ಪುರುಷೈರ್ವಧಮ್|
13112033c ದುಃಖಂ ಸಂಸಾರಚಕ್ರಂ ಚ ನರಃ ಕ್ಲೇಶಂ ಚ ವಿಂದತಿ||
ರೇತಸ್ಸಾಗಿ ಪರಿವರ್ತನೆಗೊಳ್ಳುವ ಮೊದಲು ಸೂಕ್ಷ್ಮಶರೀರದಲ್ಲಿರುವಾಗಲೇ ಜೀವವು ಯಮದೂತರಿಂದ ಕ್ಲೇಶಗಳನ್ನು ಮತ್ತು ಯಮದೂತರಿಂದ ಹಿಂಸೆಗಳನ್ನು ಅನುಭವವಿಸುತ್ತದೆ. ಸಂಸಾರಚಕ್ರವನ್ನೂ ಅದರಿಂದುಂಟಾಗುವ ದುಃಖ-ಕ್ಲೇಶಗಳನ್ನು ಮನುಷ್ಯನು ಅನುಭವಿಸುತ್ತಿರುತ್ತಾನೆ.
13112034a ಇಹಲೋಕೇ ಚ ಸ ಪ್ರಾಣೀ ಜನ್ಮಪ್ರಭೃತಿ ಪಾರ್ಥಿವ|
13112034c ಸ್ವಕೃತಂ[4] ಕರ್ಮ ವೈ ಭುಂಕ್ತೇ ಧರ್ಮಸ್ಯ ಫಲಮಾಶ್ರಿತಃ||
ಪಾರ್ಥಿವ! ಜನ್ಮಪ್ರಭೃತಿ ಆ ಪ್ರಾಣಿಯು ಇಹಲೋಕದಲ್ಲಿ ಹಿಂದಿನ ಜನ್ಮದಲ್ಲಿ ತಾನೇ ಮಾಡಿದ ಕರ್ಮ-ಧರ್ಮಗಳ ಫಲವನ್ನಾಶ್ರಯಿಸಿ ಸುಖ-ದುಃಖಗಳನ್ನು ಅನುಭವಿಸುತ್ತಿರುತ್ತದೆ.
13112035a ಯದಿ ಧರ್ಮಂ ಯಥಾಶಕ್ತಿ ಜನ್ಮಪ್ರಭೃತಿ ಸೇವತೇ|
13112035c ತತಃ ಸ ಪುರುಷೋ ಭೂತ್ವಾ ಸೇವತೇ ನಿತ್ಯದಾ ಸುಖಮ್||
ಈ ಜನ್ಮದಲ್ಲಿ ಹುಟ್ಟಿದಾಗಿನಿಂದ ಯಥಾಶಕ್ತಿ ಧರ್ಮಕಾರ್ಯಗಳನ್ನೇ ಮಾಡುತ್ತಿದ್ದರೆ ಅದು ಮುಂದಿನ ಜನ್ಮದಲ್ಲಿ ಮನುಷ್ಯನಾಗಿ ಹುಟ್ಟಿ ನಿತ್ಯವೂ ಸುಖವನ್ನೇ ಅನುಭವಿಸುತ್ತದೆ.
13112036a ಅಥಾಂತರಾ ತು ಧರ್ಮಸ್ಯ ಅಧರ್ಮಮುಪಸೇವತೇ|
13112036c ಸುಖಸ್ಯಾನಂತರಂ ದುಃಖಂ ಸ ಜೀವೋಽಪ್ಯಧಿಗಚ್ಚತಿ||
ಧರ್ಮಕಾರ್ಯಗಳ ಮಧ್ಯೆ ಅಧರ್ಮಕಾರ್ಯಗಳನ್ನೂ ಮಾಡುತ್ತಿದ್ದರೆ ಜೀವವು ಸುಖದ ನಂತರ ದುಃಖವನ್ನೂ ಅನುಭವಿಸುತ್ತದೆ.
13112037a ಅಧರ್ಮೇಣ ಸಮಾಯುಕ್ತೋ ಯಮಸ್ಯ ವಿಷಯಂ ಗತಃ|
13112037c ಮಹದ್ದುಃಖಂ ಸಮಾಸಾದ್ಯ ತಿರ್ಯಗ್ಯೋನೌ ಪ್ರಜಾಯತೇ||
ಅಧರ್ಮದಿಂದ ಸಮಾಯುಕ್ತನಾಗಿ ಯಮರಾಜ್ಯಕ್ಕೆ ಹೋದವನು ಮಹಾ ದುಃಖವನ್ನು ಎದುರಿಸಿ ತಿರ್ಯಗ್ಯೋನಿಗಳಲ್ಲಿ ಹುಟ್ಟುತ್ತಾನೆ.
13112038a ಕರ್ಮಣಾ ಯೇನ ಯೇನೇಹ ಯಸ್ಯಾಂ ಯೋನೌ ಪ್ರಜಾಯತೇ|
13112038c ಜೀವೋ ಮೋಹಸಮಾಯುಕ್ತಸ್ತನ್ಮೇ ನಿಗದತಃ ಶೃಣು||
ಮೋಹ ಸಮಾಯುಕ್ತವಾದ ಜೀವವು ಯಾವ ಯಾವ ಕರ್ಮಗಳಿಂದ ಯಾವ ಯಾವ ಯೋನಿಯಲ್ಲಿ ಹುಟ್ಟುತ್ತದೆ ಎಂದು ನಾನು ಹೇಳುವುದನ್ನು ಕೇಳು.
13112039a ಯದೇತದುಚ್ಯತೇ ಶಾಸ್ತ್ರೇ ಸೇತಿಹಾಸೇ ಸಚ್ಚಂದಸಿ|
13112039c ಯಮಸ್ಯ ವಿಷಯಂ ಘೋರಂ ಮರ್ತ್ಯೋ ಲೋಕಃ ಪ್ರಪದ್ಯತೇ||
ಮರಣಹೊಂದಿದ ಮನುಷ್ಯನು ಸೂಕ್ಷ್ಮಶರೀರದಲ್ಲಿ ಯಮನ ಘೋರ ಲೋಕಕ್ಕೆ ಹೋಗುತ್ತಾನೆ ಎಂದು ಶಾಸ್ತ್ರ-ಇತಿಹಾಸ-ಛಂದಸ್ಸುಗಳಲ್ಲಿ ಹೇಳಿರುವುದು ಸತ್ಯ.
[5]13112040a ಅಧೀತ್ಯ ಚತುರೋ ವೇದಾನ್ದ್ವಿಜೋ ಮೋಹಸಮನ್ವಿತಃ|
13112040c ಪತಿತಾತ್ ಪ್ರತಿಗೃಹ್ಯಾಥ ಖರಯೋನೌ ಪ್ರಜಾಯತೇ||
ನಾಲ್ಕು ವೇದಗಳನ್ನು ಅಧ್ಯಯನಮಾಡಿದ್ದರೂ ಮೋಹಸಮನ್ವಿತನಾಗಿ ಪತಿತನಿಂದ ದಾನಪಡೆದ ದ್ವಿಜನು ಕತ್ತೆಯ ಯೋನಿಯಲ್ಲಿ ಹುಟ್ಟುತ್ತಾನೆ.
13112041a ಖರೋ ಜೀವತಿ ವರ್ಷಾಣಿ ದಶ ಪಂಚ ಚ ಭಾರತ|
13112041c ಖರೋ ಮೃತೋ ಬಲೀವರ್ದಃ ಸಪ್ತ ವರ್ಷಾಣಿ ಜೀವತಿ||
ಭಾರತ! ಕತ್ತೆಯಾಗಿ ಅವನು ಹದಿನೈದು ವರ್ಷ ಜೀವಿಸಿರುತ್ತಾನೆ. ಕತ್ತೆಯು ಸತ್ತ ನಂತರ ಎತ್ತಾಗಿ ಹುಟ್ಟಿ ಏಳು ವರ್ಷಗಳು ಜೀವಿಸುತ್ತಾನೆ.
13112042a ಬಲೀವರ್ದೋ ಮೃತಶ್ಚಾಪಿ ಜಾಯತೇ ಬ್ರಹ್ಮರಾಕ್ಷಸಃ|
13112042c ಬ್ರಹ್ಮರಕ್ಷಸ್ತು ತ್ರೀನ್ಮಾಸಾಂಸ್ತತೋ ಜಾಯತಿ ಬ್ರಾಹ್ಮಣಃ||
ಎತ್ತಾಗಿಯೂ ಮೃತನಾದ ನಂತರ ಅವನು ಬ್ರಹ್ಮರಾಕ್ಷಸನಾಗಿ ಹುಟ್ಟುತ್ತಾನೆ. ಮೂರು ತಿಂಗಳು ಬ್ರಹ್ಮರಾಕ್ಷಸನಾಗಿದ್ದು ನಂತರ ಬ್ರಾಹ್ಮಣನಾಗಿ ಹುಟ್ಟುತ್ತಾನೆ.
13112043a ಪತಿತಂ ಯಾಜಯಿತ್ವಾ ತು ಕೃಮಿಯೋನೌ ಪ್ರಜಾಯತೇ|
13112043c ತತ್ರ ಜೀವತಿ ವರ್ಷಾಣಿ ದಶ ಪಂಚ ಚ ಭಾರತ||
ಭಾರತ! ವೇದ-ವೇದಾಂಗ ಪಾರಂಗತನು ಪತಿತನಿಗೆ ಯಜ್ಞಮಾಡಿಸಿದರೆ ಕೃಮಿಯೋನಿಯಲ್ಲಿ ಹುಟ್ಟುತ್ತಾನೆ. ಅಲ್ಲಿ ಹದಿನೈದು ವರ್ಷಗಳು ಜೀವಿಸುತ್ತಾನೆ.
13112044a ಕೃಮಿಭಾವಾತ್ ಪ್ರಮುಕ್ತಸ್ತು ತತೋ ಜಾಯತಿ ಗರ್ದಭಃ|
13112044c ಗರ್ದಭಃ ಪಂಚ ವರ್ಷಾಣಿ ಪಂಚ ವರ್ಷಾಣಿ ಸೂಕರಃ|
13112044e ಶ್ವಾ ವರ್ಷಮೇಕಂ ಭವತಿ ತತೋ ಜಾಯತಿ ಮಾನವಃ||
ಕೃಮಿಭಾವದಿಂದ ವಿಮುಕ್ತನಾದ ನಂತರ ಅವನು ಕತ್ತೆಯಾಗಿ ಹುಟ್ಟುತ್ತಾನೆ. ಕತ್ತೆಯಾಗಿ ಐದು ವರ್ಷಗಳಿದ್ದು ನಂತರ ಐದು ವರ್ಷಗಳು ಹಂದಿಯಾಗಿ ಹುಟ್ಟುತ್ತಾನೆ. ಅನಂತರ ಒಂದು ವರ್ಷ ನಾಯಿಯಾಗಿ ಹುಟ್ಟಿ ನಂತರ ಮಾನವನಾಗಿ ಹುಟ್ಟುತ್ತಾನೆ.
13112045a ಉಪಾಧ್ಯಾಯಸ್ಯ ಯಃ ಪಾಪಂ ಶಿಷ್ಯಃ ಕುರ್ಯಾದಬುದ್ಧಿಮಾನ್|
13112045c ಸ ಜೀವ ಇಹ ಸಂಸಾರಾಂಸ್ತ್ರೀನಾಪ್ನೋತಿ ನ ಸಂಶಯಃ||
ಉಪಾಧ್ಯಾಯನಿಗೆ ಪಾಪವನ್ನೆಸಗಿದ ಮೂಢ ಶಿಷ್ಯನು ಈ ಸಂಸಾರದಲ್ಲಿ ಮೂರು ಯೋನಿಗಳಲ್ಲಿ ಹುಟ್ಟುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
13112046a ಪ್ರಾಕ್ ಶ್ವಾ ಭವತಿ ರಾಜೇಂದ್ರ ತತಃ ಕ್ರವ್ಯಾತ್ತತಃ ಖರಃ|
13112046c ತತಃ ಪ್ರೇತಃ ಪರಿಕ್ಲಿಷ್ಟಃ ಪಶ್ಚಾಜ್ಜಾಯತಿ ಬ್ರಾಹ್ಮಣಃ||
ರಾಜೇಂದ್ರ! ಮೊದಲು ನಾಯಿಯಾಗುತ್ತಾನೆ. ಅನಂತರ ಮಾಂಸಾಹಾರೀ ಕ್ರೂರ ಪ್ರಾಣಿಯಾಗುತ್ತಾನೆ. ನಂತರ ಕತ್ತೆಯಾಗಿ ಹುಟ್ಟುತ್ತಾನೆ. ಅನಂತರ ಪ್ರೇತಾವಸ್ಥೆಯಲ್ಲಿ ಕಷ್ಟಗಳನ್ನು ಅನುಭವಿಸಿ ನಂತರ ಬ್ರಾಹ್ಮಣನಾಗಿ ಹುಟ್ಟುತ್ತಾನೆ.
13112047a ಮನಸಾಪಿ ಗುರೋರ್ಭಾರ್ಯಾಂ ಯಃ ಶಿಷ್ಯೋ ಯಾತಿ ಪಾಪಕೃತ್|
13112047c ಸೋಽಧಮಾನ್ಯಾತಿ ಸಂಸಾರಾನಧರ್ಮೇಣೇಹ ಚೇತಸಾ||
ಮನಸ್ಸಿನಲ್ಲಿಯೇ ಆದರೂ ಗುರುಪತ್ನಿಗೆ ಪಾಪವನ್ನೆಸಗುವ ಶಿಷ್ಯನು ಅಧರ್ಮ ಚೇತಸನಾಗಿ ಅಧಮ ಯೋನಿಗಳಲ್ಲಿ ಹುಟ್ಟುತ್ತಾನೆ.
13112048a ಶ್ವಯೋನೌ ತು ಸ ಸಂಭೂತಸ್ತ್ರೀಣಿ ವರ್ಷಾಣಿ ಜೀವತಿ|
13112048c ತತ್ರಾಪಿ ನಿಧನಂ ಪ್ರಾಪ್ತಃ ಕೃಮಿಯೋನೌ ಪ್ರಜಾಯತೇ||
ಅವನು ನಾಯಿಯ ಯೋನಿಯಲ್ಲಿ ಹುಟ್ಟಿ ಮೂರು ವರ್ಷಗಳು ಜೀವಿಸುತ್ತಾನೆ. ಅಲ್ಲಿಯೂ ನಿಧನವನ್ನು ಹೊಂದಿ ಕೃಮಿಯೋನಿಯಲ್ಲಿ ಹುಟ್ಟುತ್ತಾನೆ.
13112049a ಕೃಮಿಭಾವಮನುಪ್ರಾಪ್ತೋ ವರ್ಷಮೇಕಂ ಸ ಜೀವತಿ|
13112049c ತತಸ್ತು ನಿಧನಂ ಪ್ರಾಪ್ಯ ಬ್ರಹ್ಮಯೋನೌ ಪ್ರಜಾಯತೇ||
ಕೃಮಿಭಾವವನ್ನು ಪಡೆದು ಒಂದು ವರ್ಷ ಜೀವಿಸುತ್ತಾನೆ. ಅನಂತರ ನಿಧನವನ್ನು ಹೊಂದಿ ಬ್ರಹ್ಮಯೋನಿಯಲ್ಲಿ ಹುಟ್ಟುತ್ತಾನೆ.
13112050a ಯದಿ ಪುತ್ರಸಮಂ ಶಿಷ್ಯಂ ಗುರುರ್ಹನ್ಯಾದಕಾರಣೇ|
13112050c ಆತ್ಮನಃ ಕಾಮಕಾರೇಣ ಸೋಽಪಿ ಹಂಸಃ[6] ಪ್ರಜಾಯತೇ||
ಪುತ್ರಸಮ ಶಿಷ್ಯನನ್ನು ಗುರುವು ವಿನಾಕಾರಣ ಹೊಡೆದರೆ ತನ್ನ ಕಾಮಕಾರಣದಿಂದ ಅವನೂ ಕೂಡ ಹಂಸವಾಗಿ ಹುಟ್ಟುತ್ತಾನೆ.
13112051a ಪಿತರಂ ಮಾತರಂ ವಾಪಿ ಯಸ್ತು ಪುತ್ರೋಽವಮನ್ಯತೇ|
13112051c ಸೋಽಪಿ ರಾಜನ್ಮೃತೋ ಜಂತುಃ ಪೂರ್ವಂ ಜಾಯತಿ ಗರ್ದಭಃ||
ರಾಜನ್! ತಂದೆ ಅಥವಾ ತಾಯಿಯನ್ನು ಪುತ್ರನು ಅಪಮಾನಿಸಿದರೆ ಅವನೂ ಕೂಡ ಮರಣಾನಂತರ ಮೊದಲು ಕತ್ತೆಯಾಗಿ ಹುಟ್ಟುತ್ತಾನೆ.
[7]13112052a ಖರೋ ಜೀವತಿ ಮಾಸಾಂಸ್ತು ದಶ ಶ್ವಾ ಚ ಚತುರ್ದಶ|
13112052c ಬಿಡಾಲಃ ಸಪ್ತ ಮಾಸಾಂಸ್ತು ತತೋ ಜಾಯತಿ ಮಾನವಃ||
ಕತ್ತೆಯಾಗಿ ಅವನು ಹತ್ತು ತಿಂಗಳು ಜೀವಿಸಿದ್ದು ಹನ್ನೆರಡು ತಿಂಗಳು ನಾಯಿಯಾಗಿ ಹುಟ್ಟುತ್ತಾನೆ. ನಂತರ ಏಳು ತಿಂಗಳು ಬೆಕ್ಕಾಗಿ ಹುಟ್ಟಿ ನಂತರ ಮಾನವನಾಗಿ ಜನಿಸುತ್ತಾನೆ.
13112053a ಮಾತಾಪಿತರಮಾಕ್ರುಶ್ಯ ಸಾರಿಕಃ ಸಂಪ್ರಜಾಯತೇ|
13112053c ತಾಡಯಿತ್ವಾ ತು ತಾವೇವ ಜಾಯತೇ ಕಚ್ಚಪೋ ನೃಪ||
ನೃಪ! ಮಾತಾಪಿತೃಗಳನ್ನು ನಿಂದಿಸುವವನು ಮೈನಾಕ ಪಕ್ಷಿಯಾಗಿ ಹುಟ್ಟುತ್ತಾನೆ. ತಂದೆ-ತಾಯಿಗಳನ್ನು ಹೊಡೆದವನು ಆಮೆಯಾಗಿ ಹುಟ್ಟುತ್ತಾನೆ.
13112054a ಕಚ್ಚಪೋ ದಶ ವರ್ಷಾಣಿ ತ್ರೀಣಿ ವರ್ಷಾಣಿ ಶಲ್ಯಕಃ|
13112054c ವ್ಯಾಲೋ ಭೂತ್ವಾ ತು ಷಣ್ಮಾಸಾಂಸ್ತತೋ ಜಾಯತಿ ಮಾನುಷಃ||
ಅಂಥವನು ಹತ್ತು ವರ್ಷಗಳು ಆಮೆಯಾಗಿದ್ದು, ಮೂರು ವರ್ಷಗಳು ಮುಳ್ಳುಹಂದಿಯಾಗಿ ಹುಟ್ಟುತ್ತಾನೆ. ಅನಂತರ ಸರ್ಪಜನ್ಮದಲ್ಲಿ ಆರು ತಿಂಗಳು ಕಳೆದು ನಂತರ ಮನುಷ್ಯನಾಗಿ ಹುಟ್ಟುತ್ತಾನೆ.
13112055a ಭರ್ತೃಪಿಂಡಮುಪಾಶ್ನನ್ಯೋ ರಾಜದ್ವಿಷ್ಟಾನಿ ಸೇವತೇ|
13112055c ಸೋಽಪಿ ಮೋಹಸಮಾಪನ್ನೋ ಮೃತೋ ಜಾಯತಿ ವಾನರಃ||
ಒಬ್ಬ ರಾಜನ ಅನ್ನವನ್ನು ತಿಂದುಕೊಂಡಿದ್ದು ಇನ್ನೊಬ್ಬ ರಾಜನನ್ನು ಸೇವಿಸುವ ಮೋಹಸಂಪನ್ನನು ಮೃತನಾದ ನಂತರ ವಾನರನಾಗಿ ಹುಟ್ಟುತ್ತಾನೆ.
13112056a ವಾನರೋ ದಶ ವರ್ಷಾಣಿ ತ್ರೀಣಿ ವರ್ಷಾಣಿ ಮೂಷಕಃ|
13112056c ಶ್ವಾ ಭೂತ್ವಾ ಚಾಥ ಷಣ್ಮಾಸಾಂಸ್ತತೋ ಜಾಯತಿ ಮಾನುಷಃ||
ಹತ್ತು ವರ್ಷಗಳು ವಾನರನಾಗಿದ್ದು, ಮೂರು ವರ್ಷಗಳು ಇಲಿಯಾಗಿದ್ದು, ಮತ್ತು ಆರು ತಿಂಗಳು ನಾಯಿಯಾಗಿದ್ದು ನಂತರ ಮನುಷ್ಯನಾಗಿ ಹುಟ್ಟುತ್ತಾನೆ.
13112057a ನ್ಯಾಸಾಪಹರ್ತಾ ತು ನರೋ ಯಮಸ್ಯ ವಿಷಯಂ ಗತಃ|
13112057c ಸಂಸಾರಾಣಾಂ ಶತಂ ಗತ್ವಾ ಕೃಮಿಯೋನೌ ಪ್ರಜಾಯತೇ||
ನ್ಯಾಸವನ್ನು ಅಪಹರಿಸಿದ ನರನು ಯಮಲೋಕಕ್ಕೆ ಹೋಗಿ ಸಂಸಾರದಲ್ಲಿ ನೂರಾರು ಸಲ ಹುಟ್ಟಿ ಕೃಮಿಯೋನಿಗಳಲ್ಲಿ ಹುಟ್ಟುತ್ತಾನೆ.
13112058a ತತ್ರ ಜೀವತಿ ವರ್ಷಾಣಿ ದಶ ಪಂಚ ಚ ಭಾರತ|
13112058c ದುಷ್ಕೃತಸ್ಯ ಕ್ಷಯಂ ಗತ್ವಾ ತತೋ ಜಾಯತಿ ಮಾನುಷಃ||
ಭಾರತ! ಅಲ್ಲಿ ಹದಿನೈದು ವರ್ಷಗಳು ಜೀವಿಸಿ ದುಷ್ಕೃತವು ಕ್ಷಯವಾದ ನಂತರ ಮನುಷ್ಯನಾಗಿ ಹುಟ್ಟುತ್ತಾನೆ.
13112059a ಅಸೂಯಕೋ ನರಶ್ಚಾಪಿ ಮೃತೋ ಜಾಯತಿ ಶಾರ್ಙ್ಗಕಃ|
13112059c ವಿಶ್ವಾಸಹರ್ತಾ ತು ನರೋ ಮೀನೋ ಜಾಯತಿ ದುರ್ಮತಿಃ||
ಅಸೂಯಕ ನರನು ಮೃತನಾದ ನಂತರ ಜಿಂಕೆಯಾಗಿ ಹುಟ್ಟುತ್ತಾನೆ. ವಿಶ್ವಾಸಘಾತಕ ದುರ್ಮತಿ ನರನು ಮೀನಾಗಿ ಹುಟ್ಟುತ್ತಾನೆ.
13112060a ಭೂತ್ವಾ ಮೀನೋಽಷ್ಟ ವರ್ಷಾಣಿ ಮೃಗೋ ಜಾಯತಿ ಭಾರತ|
13112060c ಮೃಗಸ್ತು ಚತುರೋ ಮಾಸಾಂಸ್ತತಶ್ಚಾಗಃ ಪ್ರಜಾಯತೇ||
ಭಾರತ! ಎಂಟು ವರ್ಷಗಳು ಮೀನಾಗಿದ್ದು ನಂತರ ಮೃಗವಾಗಿ ಹುಟ್ಟುತ್ತಾನೆ. ಮೃಗನಾಗಿ ನಾಲ್ಕು ತಿಂಗಳು ಇದ್ದು ನಂತರ ಆಡಾಗಿ ಹುಟ್ಟುತ್ತಾನೆ.
13112061a ಚಾಗಸ್ತು ನಿಧನಂ ಪ್ರಾಪ್ಯ ಪೂರ್ಣೇ ಸಂವತ್ಸರೇ ತತಃ|
13112061c ಕೀಟಃ ಸಂಜಾಯತೇ ಜಂತುಸ್ತತೋ ಜಾಯತಿ ಮಾನುಷಃ||
ಒಂದು ವರ್ಷವು ಪೂರ್ಣವಾದ ನಂತರ ಆಡಾಗಿ ನಿಧನವನ್ನು ಹೊಂದಿ ಕೀಟವಾಗಿ ಹುಟ್ಟುತ್ತಾನೆ. ಅನಂತರ ಆ ಜೀವವು ಮನುಷ್ಯನಾಗಿ ಹುಟ್ಟುತ್ತದೆ.
13112062a ಧಾನ್ಯಾನ್ಯವಾಂಸ್ತಿಲಾನ್ಮಾಷಾನ್ಕುಲತ್ಥಾನ್ಸರ್ಷಪಾಂಶ್ಚಣಾನ್|
13112062c ಕಲಾಯಾನಥ ಮುದ್ಗಾಂಶ್ಚ ಗೋಧೂಮಾನತಸೀಸ್ತಥಾ||
13112063a ಸಸ್ಯಸ್ಯಾನ್ಯಸ್ಯ ಹರ್ತಾ ಚ ಮೋಹಾಜ್ಜಂತುರಚೇತನಃ|
13112063c ಸ ಜಾಯತೇ ಮಹಾರಾಜ ಮೂಷಕೋ ನಿರಪತ್ರಪಃ||
ಮಹಾರಾಜ! ಮೋಹಪರವಶನಾಗಿ ನಾಚಿಕೆಯಿಲ್ಲದೇ ಯವೆ, ಎಳ್ಳು, ಉದ್ದು, ಹುರುಳಿ, ಸಾಸಿವೆ, ಕಡಲೆ, ಬಟಾಣಿ, ಹೆಸರು, ಗೋಧಿ, ಅಗಸೆ – ಮೊದಲಾದ ಧಾನ್ಯಗಳನ್ನೂ ಹಾಗೂ ಇತರ ಸಸ್ಯಗಳಿಂದ ದೊರಕುವ ಭತ್ತ, ರಾಗಿ ಮೊದಲಾದ ಧಾನ್ಯಗಳನ್ನೂ ಅಪಹರಿಸುವ ಮೂಢನು ಮರಣಾನಂತರ ಇಲಿಯಾಗಿ ಹುಟ್ಟುತ್ತಾನೆ.
13112064a ತತಃ ಪ್ರೇತ್ಯ ಮಹಾರಾಜ ಪುನರ್ಜಾಯತಿ ಸೂಕರಃ|
13112064c ಸೂಕರೋ ಜಾತಮಾತ್ರಸ್ತು ರೋಗೇಣ ಮ್ರಿಯತೇ ನೃಪ||
ಮಹಾರಾಜ! ನೃಪ! ಇಲಿಯಾಗಿ ಸತ್ತು ಪುನಃ ಹಂದಿಯಾಗಿ ಹುಟ್ಟುತ್ತಾನೆ. ಹಂದಿಯಾಗಿ ಹುಟ್ಟುತ್ತಲೇ ರೋಗದಿಂದ ಮರಣಹೊಂದುತ್ತಾನೆ.
13112065a ಶ್ವಾ ತತೋ ಜಾಯತೇ ಮೂಢಃ ಕರ್ಮಣಾ ತೇನ ಪಾರ್ಥಿವ|
13112065c ಶ್ವಾ ಭೂತ್ವಾ ಪಂಚ ವರ್ಷಾಣಿ ತತೋ ಜಾಯತಿ ಮಾನುಷಃ||
ಪಾರ್ಥಿವ! ಆ ಮೂಢನು ತನ್ನ ಕರ್ಮದ ಫಲವಾಗಿ ನಂತರ ನಾಯಿಯಾಗಿ ಹುಟ್ಟುತ್ತಾನೆ. ಐದು ವರ್ಷಗಳು ನಾಯಿಯಾಗಿದ್ದು ನಂತರ ಮನುಷ್ಯನಾಗಿ ಹುಟ್ಟುತ್ತಾನೆ.
13112066a ಪರದಾರಾಭಿಮರ್ಶಂ ತು ಕೃತ್ವಾ ಜಾಯತಿ ವೈ ವೃಕಃ|
13112066c ಶ್ವಾ ಸೃಗಾಲಸ್ತತೋ ಗೃಧ್ರೋ ವ್ಯಾಲಃ ಕಂಕೋ ಬಕಸ್ತಥಾ||
ಪರದಾರೆಯರನ್ನು ಕೂಡಿದವನು ಕ್ರಮೇಣವಾಗಿ ತೋಳ, ನಾಯಿ, ಗುಳ್ಳೇನರಿ, ರಣಹದ್ದು, ಸರ್ಪ, ಹದ್ದು ಮತ್ತು ಬಕಗಳಾಗಿ ಹುಟ್ಟುತ್ತಾನೆ.
13112067a ಭ್ರಾತುರ್ಭಾರ್ಯಾಂ ತು ದುರ್ಬುದ್ಧಿರ್ಯೋ ಧರ್ಷಯತಿ ಮೋಹಿತಃ|
13112067c ಪುಂಸ್ಕೋಕಿಲತ್ವಮಾಪ್ನೋತಿ ಸೋಽಪಿ ಸಂವತ್ಸರಂ ನೃಪ||
ನೃಪ! ಮೋಹಿತನಾಗಿ ಸೋದರನ ಪತ್ನಿಯನ್ನು ಕೆಡಿಸುವ ದುರ್ಬುದ್ಧಿಯು ಒಂದು ವರ್ಷದ ವರೆಗೆ ಗಂಡು ಕೋಗಿಲೆಯಾಗಿ ಹುಟ್ಟುತ್ತಾನೆ.
13112068a ಸಖಿಭಾರ್ಯಾಂ ಗುರೋರ್ಭಾರ್ಯಾಂ ರಾಜಭಾರ್ಯಾಂ ತಥೈವ ಚ|
13112068c ಪ್ರಧರ್ಷಯಿತ್ವಾ ಕಾಮಾದ್ಯೋ ಮೃತೋ ಜಾಯತಿ ಸೂಕರಃ||
ಸ್ನೇಹಿತನ ಪತ್ನಿಯನ್ನೂ, ಗುರುಪತ್ನಿಯನ್ನೂ, ರಾಜಪತ್ನಿಯನ್ನೂ ಕಾಮಾಸಕ್ತನಾಗಿ ದೂಷಿಸುವವನು ಮರಣಾನಂತರ ಹಂದಿಯಾಗಿ ಹುಟ್ಟುತ್ತಾನೆ.
13112069a ಸೂಕರಃ ಪಂಚ ವರ್ಷಾಣಿ ಪಂಚ ವರ್ಷಾಣಿ ಶ್ವಾವಿಧಃ|
[8]13112069c ಪಿಪೀಲಕಸ್ತು ಷಣ್ಮಾಸಾನ್ಕೀಟಃ[9] ಸ್ಯಾನ್ಮಾಸಮೇವ ಚ|
13112069e ಏತಾನಾಸಾದ್ಯ ಸಂಸಾರಾನ್ ಕೃಮಿಯೋನೌ ಪ್ರಜಾಯತೇ||
ಐದು ವರ್ಷಗಳು ಹಂದಿಯಾಗಿದ್ದು, ಐದು ವರ್ಷಗಳು ಮುಳ್ಳುಹಂದಿಯಾಗಿದ್ದು, ಆರು ತಿಂಗಳು ಇರುವೆಯಾಗಿದ್ದು, ನಂತರ ಕೀಟವಾಗಿ ಹುಟ್ಟುತ್ತಾನೆ. ಹೀಗೆ ಕೀಟಯೋನಿಯ ಸಂಸಾರದಿಂದ ಕೃಮಿಯೋನಿಯಲ್ಲಿ ಹುಟ್ಟುತ್ತಾನೆ.
13112070a ತತ್ರ ಜೀವತಿ ಮಾಸಾಂಸ್ತು ಕೃಮಿಯೋನೌ ತ್ರಯೋದಶ|
13112070c ತತೋಽಧರ್ಮಕ್ಷಯಂ ಕೃತ್ವಾ ಪುನರ್ಜಾಯತಿ ಮಾನುಷಃ||
ಅಲ್ಲಿ ಕೃಮಿಯೋನಿಯಲ್ಲಿ ಹದಿಮೂರು ತಿಂಗಳು ಜೀವಿಸುತ್ತಾನೆ. ಅನಂತರ ಅಧರ್ಮವನ್ನು ಕಳೆದುಕೊಂಡು ಪುನಃ ಮನುಷ್ಯನಾಗಿ ಹುಟ್ಟುತ್ತಾನೆ.
13112071a ಉಪಸ್ಥಿತೇ ವಿವಾಹೇ ತು ದಾನೇ ಯಜ್ಞೇಽಪಿ ವಾಭಿಭೋ|
13112071c ಮೋಹಾತ್ಕರೋತಿ ಯೋ ವಿಘ್ನಂ ಸ ಮೃತೋ ಜಾಯತೇ ಕೃಮಿಃ||
ವಿಭೋ! ವಿವಾಹ, ದನ ಮತ್ತು ಯಜ್ಞಗಳು ನಡೆಯುತ್ತಿರುವಾಗ ಮೋಹದಿಂದ ವಿಘ್ನವನ್ನುಂಟುಮಾಡುವವನು ಮೃತನಾಗಿ ಕೃಮಿಯಾಗಿ ಹುಟ್ಟುತ್ತಾನೆ.
13112072a ಕೃಮಿರ್ಜೀವತಿ ವರ್ಷಾಣಿ ದಶ ಪಂಚ ಚ ಭಾರತ|
13112072c ಅಧರ್ಮಸ್ಯ ಕ್ಷಯಂ ಕೃತ್ವಾ ತತೋ ಜಾಯತಿ ಮಾನುಷಃ||
ಭಾರತ! ಕೃಮಿಯಾಗಿ ಹದಿನೈದು ವರ್ಷಗಳು ಜೀವಿಸುತ್ತಾನೆ. ಅಧರ್ಮವನ್ನು ಕಳೆದುಕೊಂಡು ನಂತರ ಮನುಷ್ಯನಾಗಿ ಹುಟ್ಟುತ್ತಾನೆ.
13112073a ಪೂರ್ವಂ ದತ್ತ್ವಾ ತು ಯಃ ಕನ್ಯಾಂ ದ್ವಿತೀಯೇ ಸಂಪ್ರಯಚ್ಚತಿ|
13112073c ಸೋಽಪಿ ರಾಜನ್ಮೃತೋ ಜಂತುಃ ಕೃಮಿಯೋನೌ ಪ್ರಜಾಯತೇ||
ರಾಜನ್! ತನ್ನ ಕನ್ಯೆಯನ್ನು ಮೊದಲು ಒಬ್ಬನಿಗೆ ಕೊಟ್ಟು ನಂತರ ಇನ್ನೊಬ್ಬನಿಗೆ ಕೊಡುವವನೂ ಕೂಡ ಮರಣಾನಂತರ ಕೃಮಿಯಾಗಿ ಹುಟ್ಟುತ್ತಾನೆ.
13112074a ತತ್ರ ಜೀವತಿ ವರ್ಷಾಣಿ ತ್ರಯೋದಶ ಯುಧಿಷ್ಠಿರ|
13112074c ಅಧರ್ಮಸಂಕ್ಷಯೇ ಯುಕ್ತಸ್ತತೋ ಜಾಯತಿ ಮಾನುಷಃ||
ಯುಧಿಷ್ಠಿರ! ಅಲ್ಲಿ ಅವನು ಹದಿಮೂರು ವರ್ಷಗಳು ಜೀವಿಸಿದ್ದು ಅಧರ್ಮವು ಕಳೆದನಂತರ ಪುನಃ ಮನುಷ್ಯನಾಗಿ ಹುಟ್ಟುತ್ತಾನೆ.
13112075a ದೇವಕಾರ್ಯಮುಪಾಕೃತ್ಯ ಪಿತೃಕಾರ್ಯಮಥಾಪಿ ಚ|
13112075c ಅನಿರ್ವಾಪ್ಯ ಸಮಶ್ನನ್ವೈ ತತೋ ಜಾಯತಿ ವಾಯಸಃ||
ದೇವಕಾರ್ಯ ಮತ್ತು ಪಿತೃಕಾರ್ಯಗಳನ್ನು ಮಾಡದೇ ಊಟಮಾಡುವವನು ಕಾಗೆಯಾಗಿ ಹುಟ್ಟುತ್ತಾನೆ.
13112076a ವಾಯಸೋ ದಶ[10] ವರ್ಷಾಣಿ ತತೋ ಜಾಯತಿ ಕುಕ್ಕುಟಃ|
13112076c ಜಾಯತೇ ಲವಕಶ್ಚಾಪಿ ಮಾಸಂ ತಸ್ಮಾತ್ತು ಮಾನುಷಃ||
ಹತ್ತು ವರ್ಷಗಳು ಕಾಗೆಯಾಗಿದ್ದು ನಂತರ ಕೋಳಿಯಾಗಿ ಹುಟ್ಟುತ್ತಾನೆ. ನಂತರ ಒಂದು ತಿಂಗಳು ಸರ್ಪವಾಗಿ ಹುಟ್ಟಿ ಅನಂತರ ಮಾನವನಾಗಿ ಹುಟ್ಟುತ್ತಾನೆ.
13112077a ಜ್ಯೇಷ್ಠಂ ಪಿತೃಸಮಂ ಚಾಪಿ ಭ್ರಾತರಂ ಯೋಽವಮನ್ಯತೇ|
13112077c ಸೋಽಪಿ ಮೃತ್ಯುಮುಪಾಗಮ್ಯ ಕ್ರೌಂಚಯೋನೌ ಪ್ರಜಾಯತೇ||
ಪಿತೃಸಮನಾದ ಜ್ಯೇಷ್ಠ ಬ್ರಾತೃವನ್ನು ಅಪಮಾನಿಸುವವನೂ ಕೂಡ ಮರಣಾನಂತರ ಕ್ರೌಂಚಯೋನಿಯಲ್ಲಿ ಹುಟ್ಟುತ್ತಾನೆ.
13112078a ಕ್ರೌಂಚೋ ಜೀವತಿ ಮಾಸಾಂಸ್ತು ದಶ ದ್ವೌ ಸಪ್ತ ಪಂಚ ಚ[11]|
13112078c ತತೋ ನಿಧನಮಾಪನ್ನೋ ಮಾನುಷತ್ವಮುಪಾಶ್ನುತೇ||
ಕ್ರೌಂಚನಾಗಿ ಅವನು ಮೂವತ್ತೆರಡು ತಿಂಗಳು ಜೀವಿಸುತ್ತಾನೆ. ನಂತರ ನಿಧನವನ್ನು ಹೊಂದಿ ಮಾನುಷತ್ವವನ್ನು ಪಡೆಯುತ್ತಾನೆ.
13112079a ವೃಷಲೋ ಬ್ರಾಹ್ಮಣೀಂ ಗತ್ವಾ ಕೃಮಿಯೋನೌ ಪ್ರಜಾಯತೇ|
[12]13112079c ತತ್ರಾಪತ್ಯಂ ಸಮುತ್ಪಾದ್ಯ ತತೋ[13] ಜಾಯತಿ ಮೂಷಕಃ||
ಶೂದ್ರನು ಬ್ರಾಹ್ಮಣಿಯನ್ನು ಕೂಡಿದರೆ ಕೃಮಿಯೋನಿಯಲ್ಲಿ ಹುಟ್ಟುತ್ತಾನೆ. ಅಲ್ಲಿ ಸಂತಾನಗಳನ್ನು ಹುಟ್ಟಿಸಿ ನಂತರ ಇಲಿಯಾಗಿ ಹುಟ್ಟುತ್ತಾನೆ.
13112080a ಕೃತಘ್ನಸ್ತು ಮೃತೋ ರಾಜನ್ಯಮಸ್ಯ ವಿಷಯಂ ಗತಃ|
13112080c ಯಮಸ್ಯ ವಿಷಯೇ ಕ್ರುದ್ಧೈರ್ವಧಂ ಪ್ರಾಪ್ನೋತಿ ದಾರುಣಮ್||
ರಾಜನ್! ಕೃತಘ್ನನಾದರೋ ಮೃತನಾಗಿ ಯಮನ ಲೋಕಕ್ಕೆ ಹೋಗಿ ಅಲ್ಲಿ ಕೃದ್ಧ ಯಮಭಟರು ಅವನಿಗೆ ದಾರುಣ ಯಾತನೆಯನ್ನು ಕೊಡುತ್ತಾರೆ.
13112081a ಪಟ್ಟಿಶಂ ಮುದ್ಗರಂ[14] ಶೂಲಮಗ್ನಿಕುಂಭಂ ಚ ದಾರುಣಮ್|
13112081c ಅಸಿಪತ್ರವನಂ ಘೋರಂ ವಾಲುಕಾಂ ಕೂಟಶಾಲ್ಮಲೀಮ್||
13112082a ಏತಾಶ್ಚಾನ್ಯಾಶ್ಚ ಬಹ್ವೀಃ ಸ ಯಮಸ್ಯ ವಿಷಯಂ ಗತಃ|
13112082c ಯಾತನಾಃ ಪ್ರಾಪ್ಯ ತತ್ರೋಗ್ರಾಸ್ತತೋ ವಧ್ಯತಿ ಭಾರತ||
ಭಾರತ! ಯಮಲೋಕದಲ್ಲಿ ಅವನು ಪಟ್ಟಿಶ, ಮುದ್ಗರ, ಶೂಲ, ಅಗ್ನಿಕುಂಭ[15], ದಾರುಣ ಅಸಿಪತ್ರವನ[16], ಘೋರ ವಾಲುಕ[17] ಮತ್ತು ಕೂಟಶಾಲ್ಮಲಿಗಳು[18] ಮತ್ತು ಅನ್ಯ ಅನೇಕ ಯಾತನೆಗಳನ್ನು ಹೊಂದಿ ಯಮದೂತರ ಹಿಂಸೆಗೊಳಗಾಗುತ್ತಾನೆ.
[19]13112083a ಸಂಸಾರಚಕ್ರಮಾಸಾದ್ಯ ಕೃಮಿಯೋನೌ ಪ್ರಜಾಯತೇ|
13112083c ಕೃಮಿರ್ಭವತಿ ವರ್ಷಾಣಿ ದಶ ಪಂಚ ಚ ಭಾರತ|
13112083e ತತೋ ಗರ್ಭಂ ಸಮಾಸಾದ್ಯ ತತ್ರೈವ ಮ್ರಿಯತೇ ಶಿಶುಃ||
ಭಾರತ! ನಂತರ ಸಂಸಾರಚಕ್ರಕ್ಕೆ ಸಿಲುಕಿ ಕೃಮಿಯೋನಿಯಲ್ಲಿ ಹುಟ್ಟುತ್ತಾನೆ. ಹದಿನೈದು ವರ್ಷಗಳು ಕೃಮಿಯಾಗಿರುತ್ತಾನೆ. ಅನಂತರ ಗರ್ಭಸ್ಥನಾಗಿ ಅಲ್ಲಿ ಶಿಶುವಾಗಿಯೇ ಸಾಯುತ್ತಾನೆ.
13112084a ತತೋ ಗರ್ಭಶತೈರ್ಜಂತುರ್ಬಹುಭಿಃ ಸಂಪ್ರಜಾಯತೇ|
13112084c ಸಂಸಾರಾಂಶ್ಚ ಬಹೂನ್ಗತ್ವಾ ತತಸ್ತಿರ್ಯಕ್ಪ್ರಜಾಯತೇ||
ಅನಂತರ ನೂರಾರು ಅನೇಕ ಜಂತುಗಳ ಗರ್ಭವನ್ನು ಸೇರಿ ಅಲ್ಲಿಯೇ ಸಾಯುತ್ತಿರುತ್ತಾನೆ. ಹೀಗೆ ಅನೇಕ ಸಂಸಾರಗಳಿಗೆ ಹೋಗಿ ನಂತರ ತಿರ್ಯಗ್ಯೋನಿಯಲ್ಲಿ ಹುಟ್ಟುತ್ತಾನೆ.
13112085a ಮೃತೋ ದುಃಖಮನುಪ್ರಾಪ್ಯ ಬಹುವರ್ಷಗಣಾನಿಹ|
13112085c ಅಪುನರ್ಭಾವಸಂಯುಕ್ತಸ್ತತಃ ಕೂರ್ಮಃ ಪ್ರಜಾಯತೇ||
ಹೀಗೆ ಅನೇಕ ವರ್ಷಗಳು ದುಃಖವನ್ನು ಪಡೆಯುತ್ತಾ ಮೃತನಾಗುತ್ತಿರುತ್ತಾನೆ. ಆಗಲೂ ಮನುಷ್ಯಯೋನಿಯನ್ನು ಪಡೆಯಲಾಗದೇ ಆಮೆಯಾಗಿ ಹುಟ್ಟುತ್ತಾನೆ.
[20]13112086a ಅಶಸ್ತ್ರಂ ಪುರುಷಂ ಹತ್ವಾ ಸಶಸ್ತ್ರಃ ಪುರುಷಾಧಮಃ|
13112086c ಅರ್ಥಾರ್ಥೀ ಯದಿ ವಾ ವೈರೀ ಸ ಮೃತೋ ಜಾಯತೇ ಖರಃ||
ಅರ್ಥಾರ್ಥಿಯಾಗಿ ಅಥವಾ ವೈರದಿಂದ ಅಶಸ್ತ್ರಪುರುಷನನ್ನು ಕೊಂದ ಸಶಸ್ತ್ರಪುರುಷಾಧಮನು ಮರಣಾನಂತರ ಕತ್ತೆಯಾಗಿ ಹುಟ್ಟುತ್ತಾನೆ.
13112087a ಖರೋ ಜೀವತಿ ವರ್ಷೇ ದ್ವೇ ತತಃ ಶಸ್ತ್ರೇಣ ವಧ್ಯತೇ|
13112087c ಸ ಮೃತೋ ಮೃಗಯೋನೌ ತು ನಿತ್ಯೋದ್ವಿಗ್ನೋಽಭಿಜಾಯತೇ||
ಕತ್ತೆಯಾಗಿ ಎರಡು ವರ್ಷಗಳಿದ್ದು ನಂತರ ಶಸ್ತ್ರದಿಂದಲೇ ಸಾಯುತ್ತಾನೆ. ಸತ್ತನಂತರ ಮೃಗಯೋನಿಯಲ್ಲಿ ಹುಟ್ಟಿ ನಿತ್ಯವೂ ಉದ್ವಿಗ್ನನಾಗಿರುತ್ತಾನೆ.
13112088a ಮೃಗೋ ವಧ್ಯತಿ ಶಸ್ತ್ರೇಣ ಗತೇ ಸಂವತ್ಸರೇ ತು ಸಃ|
13112088c ಹತೋ ಮೃಗಸ್ತತೋ ಮೀನಃ ಸೋಽಪಿ ಜಾಲೇನ ಬಧ್ಯತೇ||
ಒಂದು ವರ್ಷದ ನಂತರ ಆ ಮೃಗವೂ ಶಸ್ತ್ರದಿಂದ ವಧೆಗೀಡಾಗುತ್ತದೆ. ಮೃಗವಾಗಿ ಸತ್ತನಂತರ ಮೀನಾಗಿ ಹುಟ್ಟಿ ಜಾಲದಿಂದ ಬಂಧಿತನಾಗುತ್ತಾನೆ.
13112089a ಮಾಸೇ ಚತುರ್ಥೇ ಸಂಪ್ರಾಪ್ತೇ ಶ್ವಾಪದಃ ಸಂಪ್ರಜಾಯತೇ|
13112089c ಶ್ವಾಪದೋ ದಶ ವರ್ಷಾಣಿ ದ್ವೀಪೀ ವರ್ಷಾಣಿ ಪಂಚ ಚ|
ನಾಲ್ಕು ತಿಂಗಳು ಕಳೆದನಂತರ ನಾಯಿಯಾಗಿ ಹುಟ್ಟುತ್ತಾನೆ. ಹತ್ತುವರ್ಷಗಳು ನಾಯಿಯಾದ ನಂತರ ಐದು ವರ್ಷಗಳು ಚಿರತೆಯಾಗಿ ಹುಟ್ಟುತ್ತಾನೆ.
13112090a ತತಸ್ತು ನಿಧನಂ ಪ್ರಾಪ್ತಃ ಕಾಲಪರ್ಯಾಯಚೋದಿತಃ|
13112090c ಅಧರ್ಮಸ್ಯ ಕ್ಷಯಂ ಕೃತ್ವಾ ತತೋ ಜಾಯತಿ ಮಾನುಷಃ||
ಕಾಲಪರ್ಯಾಯದಿಂದ ಚೋದಿತನಾಗಿ ಅಲ್ಲಿಯೂ ನಿಧನವನ್ನು ಹೊಂದಿ ಅಧರ್ಮವನ್ನು ಕಳೆದುಕೊಂಡು ನಂತರ ಮನುಷ್ಯನಾಗಿ ಹುಟ್ಟುತ್ತಾನೆ.
13112091a ಸ್ತ್ರಿಯಂ ಹತ್ವಾ ತು ದುರ್ಬುದ್ಧಿರ್ಯಮಸ್ಯ ವಿಷಯಂ ಗತಃ|
13112091c ಬಹೂನ್ ಕ್ಲೇಶಾನ್ಸಮಾಸಾದ್ಯ ಸಂಸಾರಾಂಶ್ಚೈವ ವಿಂಶತಿಮ್||
ಸ್ತ್ರೀಯನ್ನು ಸಂಹರಿಸಿದ ದುರ್ಬುದ್ಧಿಯು ಯಮಲೋಕಕ್ಕೆ ಹೋಗಿ ಅನೇಕ ಕ್ಲೇಶಗಳನ್ನು ಹೊಂದಿ ಇಪ್ಪತ್ತು ಸಂಸಾರಗಳಲ್ಲಿ ಹುಟ್ಟುತ್ತಾನೆ.
13112092a ತತಃ ಪಶ್ಚಾನ್ಮಹಾರಾಜ ಕೃಮಿಯೋನೌ ಪ್ರಜಾಯತೇ|
13112092c ಕೃಮಿರ್ವಿಂಶತಿವರ್ಷಾಣಿ ಭೂತ್ವಾ ಜಾಯತಿ ಮಾನುಷಃ||
ಮಹಾರಾಜ! ಅನಂತರ ಕೃಮಿಯೋನಿಯಲ್ಲಿ ಹುಟ್ಟುತ್ತಾನೆ. ಇಪ್ಪತ್ತು ವರ್ಷಗಳು ಕೃಮಿಯಾಗಿದ್ದು ನಂತರ ಮನುಷ್ಯನಾಗಿ ಹುಟ್ಟುತ್ತಾನೆ.
13112093a ಭೋಜನಂ ಚೋರಯಿತ್ವಾ ತು ಮಕ್ಷಿಕಾ ಜಾಯತೇ ನರಃ|
13112093c ಮಕ್ಷಿಕಾಸಂಘವಶಗೋ ಬಹೂನ್ಮಾಸಾನ್ಭವತ್ಯುತ|
13112093e ತತಃ ಪಾಪಕ್ಷಯಂ ಕೃತ್ವಾ ಮಾನುಷತ್ವಮವಾಪ್ನುತೇ||
ಊಟವನ್ನು ಕದ್ದ ನರನು ನೊಣವಾಗಿ ಹುಟ್ಟುತ್ತಾನೆ. ನೊಣಗಳ ಸಂಘದಲ್ಲಿಯೇ ಅನೇಕ ತಿಂಗಳುಗಳು ಇರುತ್ತಾನೆ. ಅನಂತರ ಪಾಪವನ್ನು ಕಳೆದುಕೊಂಡು ಮಾನುಷತ್ವವನ್ನು ಪಡೆಯುತ್ತಾನೆ.
13112094a ವಾದ್ಯಂ ಹೃತ್ವಾ ತು ಪುರುಷೋ ಮಶಕಃ ಸಂಪ್ರಜಾಯತೇ|
13112094c ತಥಾ ಪಿಣ್ಯಾಕಸಂಮಿಶ್ರಮಶನಂ ಚೋರಯೇನ್ನರಃ|
13112094e ಸ ಜಾಯತೇ ಬಭ್ರುಸಮೋ ದಾರುಣೋ ಮೂಷಕೋ ನರಃ||
ವಾದ್ಯವನ್ನು ಕದ್ದ ಪುರುಷನು ಸೊಳ್ಳೆಯಾಗಿ ಹುಟ್ಟುತ್ತಾನೆ. ಎಳ್ಳಿನ ಪುಡಿಯನ್ನು ಸೇರಿಸಿದ ಅನ್ನವನ್ನು ಕದ್ದ ನರನು ಮುಂಗುಸಿಯಂತಿರುವ ದಾರುಣ ಹೆಗ್ಗಣವಾಗಿ ಹುಟ್ಟುತ್ತಾನೆ.
13112095a ಲವಣಂ ಚೋರಯಿತ್ವಾ ತು ಚೀರೀವಾಕಃ ಪ್ರಜಾಯತೇ|
13112095c ದಧಿ ಹೃತ್ವಾ ಬಕಶ್ಚಾಪಿ ಪ್ಲವೋ ಮತ್ಸ್ಯಾನಸಂಸ್ಕೃತಾನ್||
ಉಪ್ಪನ್ನು ಕದ್ದವನು ಚೀರೀವಾಕವಾಗಿ ಹುಟ್ಟುತ್ತಾನೆ. ಮೊಸರನ್ನು ಕದ್ದವನು ಬಕಪಕ್ಷಿಯಾಗಿಯೂ ಅಸಂಸ್ಕೃತ ಮೀನುಗಳನ್ನು ಕದ್ದವನು ಕಪ್ಪೆಯಾಗಿಯೂ ಹುಟ್ಟುತ್ತಾರೆ.
13112096a ಚೋರಯಿತ್ವಾ ಪಯಶ್ಚಾಪಿ ಬಲಾಕಾ ಸಂಪ್ರಜಾಯತೇ|
13112096c ಯಸ್ತು ಚೋರಯತೇ ತೈಲಂ ತೈಲಪಾಯೀ ಪ್ರಜಾಯತೇ|
13112096e ಚೋರಯಿತ್ವಾ ತು ದುರ್ಬುದ್ಧಿರ್ಮಧು ದಂಶಃ ಪ್ರಜಾಯತೇ||
ಹಾಲನ್ನು ಕದ್ದವನು ಬೆಳ್ಳಕ್ಕಿಯಾಗಿ ಹುಟ್ಟುತ್ತಾನೆ. ಎಣ್ಣೆಯನ್ನು ಕದ್ದವನು ಜಿರಲೆಯಾಗಿ ಹುಟ್ಟುತ್ತಾನೆ. ಜೇನುತುಪ್ಪವನ್ನು ಕದ್ದ ದುರ್ಬುದ್ಧಿಯು ಕಾಡುನೊಣವಾಗಿ ಹುಟ್ಟುತ್ತಾನೆ.
13112097a ಅಯೋ ಹೃತ್ವಾ ತು ದುರ್ಬುದ್ಧಿರ್ವಾಯಸೋ ಜಾಯತೇ ನರಃ|
13112097c ಪಾಯಸಂ ಚೋರಯಿತ್ವಾ ತು ತಿತ್ತಿರಿತ್ವಮವಾಪ್ನುತೇ||
ಕಬ್ಬಿಣವನ್ನು ಕದ್ದ ದುರ್ಬುದ್ಧಿ ನರನು ಕಾಗೆಯಾಗಿ ಹುಟ್ಟುತ್ತಾನೆ. ಪಾಯಸವನ್ನು ಕದ್ದವನು ತಿತ್ತಿರಿಪಕ್ಷಿಯಾಗಿ ಹುಟ್ಟುತ್ತಾನೆ.
13112098a ಹೃತ್ವಾ ಪೈಷ್ಟಮಪೂಪಂ ಚ ಕುಂಭೋಲೂಕಃ ಪ್ರಜಾಯತೇ|
13112098c ಫಲಂ ವಾ ಮೂಲಕಂ ಹೃತ್ವಾ ಅಪೂಪಂ ವಾ ಪಿಪೀಲಿಕಃ||
ಹಿಟ್ಟಿನಿಂದ ಮಾಡಿದ ರೊಟ್ಟಿಯನ್ನು ಕದ್ದವನು ಕುಂಭಜಾತಿಯ ಗೂಬೆಯಾಗಿ ಹುಟ್ಟುತ್ತಾನೆ. ಫಲ ಅಥವಾ ಗೆಡ್ಡೆ-ಗೆಣಸು ಅಥವಾ ಹೋಳಿಗೆಯನ್ನು ಕದ್ದವನು ಇರುವೆಯಾಗುತ್ತಾನೆ.
13112099a ಕಾಂಸ್ಯಂ ಹೃತ್ವಾ ತು ದುರ್ಬುದ್ಧಿರ್ಹಾರೀತೋ ಜಾಯತೇ ನರಃ|
13112099c ರಾಜತಂ ಭಾಜನಂ ಹೃತ್ವಾ ಕಪೋತಃ ಸಂಪ್ರಜಾಯತೇ||
ಕಂಚನ್ನು ಕದ್ದ ದುರ್ಬುದ್ಧಿ ನರನು ಹಾರಿತವೆಂಬ ಪಕ್ಷಿಯಾಗಿ ಹುಟ್ಟುತ್ತಾನೆ. ಬೆಳ್ಳಿಯ ಪಾತ್ರೆಯನ್ನು ಕದ್ದವನು ಪಾರಿವಾಳವಾಗಿ ಹುಟ್ಟುತ್ತಾನೆ.
13112100a ಹೃತ್ವಾ ತು ಕಾಂಚನಂ ಭಾಂಡಂ ಕೃಮಿಯೋನೌ ಪ್ರಜಾಯತೇ|
13112100c ಕ್ರೌಂಚಃ ಕಾರ್ಪಾಸಿಕಂ ಹೃತ್ವಾ ಮೃತೋ ಜಾಯತಿ ಮಾನವಃ||
ಚಿನ್ನದ ಪಾತ್ರೆಯನ್ನು ಕದ್ದವನು ಕೃಮಿಯೋನಿಯಲ್ಲಿ ಹುಟ್ಟುತ್ತಾನೆ. ಹತ್ತಿಯ ಬಟ್ಟೆಯನ್ನು ಕದ್ದ ಮಾನವನು ಮರಣಾನಂತರ ಕೊಕ್ಕರೆಯಾಗಿ ಹುಟ್ಟುತ್ತಾನೆ.
13112101a ಚೋರಯಿತ್ವಾ ನರಃ ಪಟ್ಟಂ ತ್ವಾವಿಕಂ ವಾಪಿ ಭಾರತ|
13112101c ಕ್ಷೌಮಂ ಚ ವಸ್ತ್ರಮಾದಾಯ ಶಶೋ ಜಂತುಃ ಪ್ರಜಾಯತೇ||
ಭಾರತ! ಪೀತಾಂಬರ, ಉಣ್ಣೆಬಟ್ಟೆ ಮತ್ತು ರೇಷ್ಮೆಯ ವಸ್ತ್ರಗಳನ್ನು ಕದ್ದವನು ಮರಣಾನಂತರ ಮೊಲವಾಗಿ ಹುಟ್ಟುತ್ತಾನೆ.
13112102a ವರ್ಣಾನ್ ಹೃತ್ವಾ ತು ಪುರುಷೋ ಮೃತೋ ಜಾಯತಿ ಬರ್ಹಿಣಃ|
13112102c ಹೃತ್ವಾ ರಕ್ತಾನಿ ವಸ್ತ್ರಾಣಿ ಜಾಯತೇ ಜೀವಜೀವಕಃ||
ಬಣ್ಣದ ಬಟ್ಟೆಗಳನ್ನು ಕದ್ದ ಪುರುಷನು ಮರಣಾನಂತರ ನವಿಲಾಗಿ ಹುಟ್ಟುತ್ತಾನೆ. ಕೆಂಪು ವಸ್ತ್ರಗಳನ್ನು ಕದ್ದವನು ಚಕೋರಪಕ್ಷಿಯಾಗಿ ಹುಟ್ಟುತ್ತಾನೆ.
13112103a ವರ್ಣಕಾದೀಂಸ್ತಥಾ ಗಂಧಾಂಶ್ಚೋರಯಿತ್ವಾ ತು ಮಾನವಃ|
13112103c ಚುಚ್ಚುಂದರಿತ್ವಮಾಪ್ನೋತಿ ರಾಜನ್ ಲೋಭಪರಾಯಣಃ||
ರಾಜನ್! ಸುಗಂಧದ್ರವ್ಯಗಳನ್ನೂ ವರ್ಣಗಳನ್ನೂ ಲೋಭಪರಾಯಣನಾಗಿ ಕದ್ದ ಮಾನವನು ಮೂಗಿಲಿಯಾಗಿ ಹುಟ್ಟುತ್ತಾನೆ.
13112104a ವಿಶ್ವಾಸೇನ ತು ನಿಕ್ಷಿಪ್ತಂ ಯೋ ನಿಹ್ನವತಿ ಮಾನವಃ|
13112104c ಸ ಗತಾಸುರ್ನರಸ್ತಾದೃಗ್ಮತ್ಸ್ಯಯೋನೌ ಪ್ರಜಾಯತೇ||
ವಿಶ್ವಾಸದಿಂದ ಇಟ್ಟಿದ್ದುದನ್ನು ನುಂಗಿಹಾಕುವ ಮಾನವನು ಮೃತನಾದನಂತರ ಮೀನಾಗಿ ಹುಟ್ಟುತ್ತಾನೆ.
13112105a ಮತ್ಸ್ಯಯೋನಿಮನುಪ್ರಾಪ್ಯ ಮೃತೋ ಜಾಯತಿ ಮಾನುಷಃ|
13112105c ಮಾನುಷತ್ವಮನುಪ್ರಾಪ್ಯ ಕ್ಷೀಣಾಯುರುಪಪದ್ಯತೇ||
ಮತ್ಸ್ಯಯೋನಿಯನ್ನು ಪಡೆದು ಮರಣಾನಂತರ ಮನುಷ್ಯನಾಗಿ ಹುಟ್ಟುತ್ತಾನೆ. ಮಾನುಷತ್ವವನ್ನು ಪಡೆದು ಕ್ಷೀಣಾಯುವಾಗಿರುತ್ತಾನೆ.
13112106a ಪಾಪಾನಿ ತು ನರಃ ಕೃತ್ವಾ ತಿರ್ಯಗ್ಜಾಯತಿ ಭಾರತ|
13112106c ನ ಚಾತ್ಮನಃ ಪ್ರಮಾಣಂ ತೇ ಧರ್ಮಂ ಜಾನಂತಿ ಕಿಂ ಚನ||
ಭಾರತ! ಪಾಪಗಳನ್ನು ಮಾಡಿ ನರರು ತಿರ್ಯಗ್ಯೋನಿಗಳಿಗೆ ಹೋಗುತ್ತಾರೆ. ಆ ಯೋನಿಗಳಲ್ಲಿ ತಾವು ಯಾರೆಂಬ ಅರಿವು ಅವರಿಗಿರುವುದಿಲ್ಲ. ಯಾವ ರೀತಿಯ ಧರ್ಮವನ್ನೂ ಅರಿತಿರುವುದಿಲ್ಲ.
13112107a ಯೇ ಪಾಪಾನಿ ನರಾಃ ಕೃತ್ವಾ ನಿರಸ್ಯಂತಿ ವ್ರತೈಃ ಸದಾ|
13112107c ಸುಖದುಃಖಸಮಾಯುಕ್ತಾ ವ್ಯಾಧಿತಾಸ್ತೇ ಭವಂತ್ಯುತ||
13112108a ಅಸಂವಾಸಾಃ ಪ್ರಜಾಯಂತೇ ಮ್ಲೇಚ್ಚಾಶ್ಚಾಪಿ ನ ಸಂಶಯಃ|
13112108c ನರಾಃ ಪಾಪಸಮಾಚಾರಾ ಲೋಭಮೋಹಸಮನ್ವಿತಾಃ||
ಲೋಭಮೋಹಸಮನ್ವಿತ ನರರು ಪಾಪಗಳನ್ನೆಸಗುತ್ತಿರುತ್ತಾರೆ. ವ್ರತಗಳಿಂದ ಸದಾ ಆ ಪಾಪಗಳನ್ನು ತೊಳೆದುಕೊಳ್ಳಲು ಪ್ರಯತ್ನಿಸುತ್ತಾರೆ. ಸುಖ-ದುಃಖಗಳನ್ನು ವ್ಯಾಧಿಗಳನ್ನೂ ಅವರು ಅನುಭವಿಸುತ್ತಾರೆ. ಅಂಥವರು ಮರಣಾನಂತರ ನೆಲೆಯಿಲ್ಲದವರಾಗಿಯೂ ಮ್ಲೇಚ್ಛರಾಗಿಯೂ ಹುಟ್ಟುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.
13112109a ವರ್ಜಯಂತಿ ಚ ಪಾಪಾನಿ ಜನ್ಮಪ್ರಭೃತಿ ಯೇ ನರಾಃ|
13112109c ಅರೋಗಾ ರೂಪವಂತಸ್ತೇ ಧನಿನಶ್ಚ ಭವಂತ್ಯುತ||
ಜನ್ಮಪ್ರಭೃತಿ ಪಾಪಗಳನ್ನು ವರ್ಜಿಸಿದ ನರರು ಅರೋಗಿಗಳಾಗಿ ರೂಪವಂತರೂ ಮತ್ತು ಧನಿಕರೂ ಆಗುತ್ತಾರೆ.
13112110a ಸ್ತ್ರಿಯೋಽಪ್ಯೇತೇನ ಕಲ್ಪೇನ ಕೃತ್ವಾ ಪಾಪಮವಾಪ್ನುಯುಃ|
13112110c ಏತೇಷಾಮೇವ ಜಂತೂನಾಂ ಪತ್ನೀತ್ವಮುಪಯಾಂತಿ ತಾಃ||
ಸ್ತ್ರೀಯರೂ ಕೂಡ ಇದೇ ರೀತಿಯ ಪಾಪಗಳಿಗೆ ಇದೇ ವಿಧದ ಜನ್ಮಗಳನ್ನು ಪಡೆಯುತ್ತಾರೆ. ಹಾಗೆ ಹುಟ್ಟುವಾಗ ಆಯಾ ಪ್ರಾಣಿಗಳ ಪತ್ನಿಯರಾಗಿಯೇ ಹುಟ್ಟುತ್ತಾರೆ.
13112111a ಪರಸ್ವಹರಣೇ ದೋಷಾಃ ಸರ್ವ ಏವ ಪ್ರಕೀರ್ತಿತಾಃ|
13112111c ಏತದ್ವೈ ಲೇಶಮಾತ್ರೇಣ ಕಥಿತಂ ತೇ ಮಯಾನಘ|
13112111e ಅಪರಸ್ಮಿನ್ಕಥಾಯೋಗೇ ಭೂಯಃ ಶ್ರೋಷ್ಯಸಿ ಭಾರತ||
ಹೀಗೆ ನಾನು ಇತರರದ್ದನ್ನು ಅಪಹರಿಸುವುದರಲ್ಲಿರುವ ದೋಷಗಳೆಲ್ಲವನ್ನೂ ಹೇಳಿದ್ದೇನೆ. ಅನಘ! ಆದರೆ ಈಗ ನಾನು ಹೇಳಿರುವುದು ಲೇಶಮಾತ್ರವು. ಭಾರತ! ಬೇರೆ ಸಂದರ್ಭದಲ್ಲಿ ಇದಕ್ಕೂ ವಿಸ್ತಾರವಾಗಿ ಕೇಳುವೆಯಂತೆ.
13112112a ಏತನ್ಮಯಾ ಮಹಾರಾಜ ಬ್ರಹ್ಮಣೋ ವದತಃ ಪುರಾ|
13112112c ಸುರರ್ಷೀಣಾಂ ಶ್ರುತಂ ಮಧ್ಯೇ ಪೃಷ್ಟಶ್ಚಾಪಿ ಯಥಾತಥಮ್||
ಮಹಾರಾಜ! ಹಿಂದೆ ಸುರರ್ಷಿಗಳ ಮಧ್ಯೆ ಬ್ರಹ್ಮನು ಹೇಳುತ್ತಿದ್ದ ಇದನ್ನು ನಾನು ಕೇಳಿದ್ದೆ. ಅದನ್ನೇ ನೀನು ಕೇಳಿದ್ದುದರಿಂದ ಯಥಾವತ್ತಾಗಿ ಹೇಳಿದ್ದೇನೆ.
13112113a ಮಯಾಪಿ ತವ ಕಾರ್ತ್ಸ್ನ್ಯೇನ ಯಥಾವದನುವರ್ಣಿತಮ್|
13112113c ಏತಚ್ಚ್ರುತ್ವಾ ಮಹಾರಾಜ ಧರ್ಮೇ ಕುರು ಮನಃ ಸದಾ||
ಮಹಾರಾಜ! ನಾನೂ ಕೂಡ ನಿನಗೆ ಸಂಪೂರ್ಣವಾಗಿ ಹೇಗೆ ಕೇಳಿದ್ದೆನೋ ಹಾಗೆ ವರ್ಣಿಸಿದ್ದೇನೆ. ಇದನ್ನು ಕೇಳಿ ಸದಾ ಮನಸ್ಸನ್ನು ಧರ್ಮದಲ್ಲಿ ತೊಡಗಿಸಿಕೋ.”
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಸಂಸಾರಚಕ್ರಂ ನಾಮ ದ್ವಾದಶಾಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಸಂಸಾರಚಕ್ರ ಎನ್ನುವ ನೂರಾಹನ್ನೆರಡನೇ ಅಧ್ಯಾಯವು.
[1] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ದ್ವಾದಶೀತಿಥಿಯ ಉಪಾಸನೆಯ ಫಲ ಮತ್ತು ಮಾರ್ಗಶೀರ್ಷಮಾಸದಲ್ಲಿ ಮಾಡುವ ಚಂದ್ರವ್ರತದ ಕುರಿತಾದ ಎರಡು ಅಧ್ಯಾಯಗಳಿವೆ. ಅನುಕ್ರಮವಾಗಿ 17 ಮತ್ತು 10 ಶ್ಲೋಕಗಳಿರುವ ಈ ಅಧ್ಯಾಯಗಳನ್ನು ಅನುಬಂಧದಲ್ಲಿ ನೀಡಲಾಗಿದೆ.
[2] ತತೋ ಧರ್ಮಸಮಾಯುಕ್ತಃ ಪ್ರಾಪ್ನುತೇ ಜೀವ ಏವ ಹಿ| ತತೋಽಸ್ಯ ಕರ್ಮ ಪಶ್ಯಂತಿ ಶುಭಂ ವಾ ಯದಿ ವಾಶುಭಮ್| ದೇವತಾಃ ಪಂಚಭೂತಸ್ಥಾಃ ಕಿಂ ಭೂಯಃ ಶ್ರೋತುಮಿಚ್ಛಸಿ|| (ಭಾರತ ದರ್ಶನ).
[3] ಕರ್ಮ (ಭಾರತ ದರ್ಶನ).
[4] ಸುಕೃತಂ (ಭಾರತ ದರ್ಶನ).
[5] ಇದಕ್ಕೆ ಮೊದಲು ಈ ಮೂರು ಅಧಿಕ ಶ್ಲೋಕಗಳಿವೆ: ಇಹ ಸ್ಥಾನಾನಿ ಪುಣ್ಯಾನಿ ದೇವತುಲ್ಯಾನಿ ಭೂಪತೇ| ತಿರ್ಯಗ್ಯೋನ್ಯತಿರಿಕ್ತಾನಿ ಗತಿಮಂತಿ ಚ ಸರ್ವಶಃ|| ಯಮಸ್ಯ ಭವನೇ ದಿವ್ಯೇ ಬ್ರಹ್ಮಲೋಕಸಮೇ ಗುಣೈಃ| ಕರ್ಮಭಿರ್ನಿಯತೈರ್ಬದ್ಧೋ ಜಂತುರ್ದುಃಖಾನ್ಯುಪಾಶ್ನುತೇ|| ಯೇನ ಯೇನ ತು ಭಾವೇನ ಕರ್ಮಣಾ ಪುರುಷೋ ಗತಿಮ್| ಪ್ರಯಾತಿ ಪರುಷಾಂ ಘೋರಂ ತತ್ತೇ ವಕ್ಷ್ಯಾಮ್ಯತಃ ಪರಮ್|| (ಗೀತಾ ಪ್ರೆಸ್).
[6] ಹಿಂಸ್ರಃ (ಭಾರತ ದರ್ಶನ).
[7] ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ಗರ್ದಭತ್ವಂ ತು ಸಂಪ್ರಾಪ್ಯ ದಶ ವರ್ಷಾಣಿ ಜೀವತಿ| ಸಂವತ್ಸರಂ ತು ಕುಂಭೀರಸ್ತತೋ ಜಾಯೇತ ಮಾನವಃ|| ಪುತ್ರಸ್ಯ ಮಾತಾಪಿತರೌ ಯಸ್ಯ ರುಷ್ಟಾವುಭಾವಪಿ| ಗುರ್ವಪಧ್ಯಾನತಃ ಸೋಽಪಿ ಮೃತೋ ಜಾಯತಿ ಗರ್ದಭಃ|| (ಭಾರತ ದರ್ಶನ).
[8] ಇದಕ್ಕೆ ಮೊದಲು ಈ ಅಧಿಕ ಶ್ಲೋಕಾರ್ಧವಿದೆ: ಬಿಡಾಲಃ ಪಂಚ ವರ್ಷಾಣಿ ದಶ ವರ್ಷಾಣಿ ಕುಕ್ಕುಟಃ| (ಭಾರತ ದರ್ಶನ).
[9] ಪಿಪೀಲಕಸ್ತು ಮಾಸಾಂಸ್ತ್ರೀನ್ಕೀಟಃ (ಭಾರತ ದರ್ಶನ).
[10] ಶತ (ಭಾರತ ದರ್ಶನ).
[11] ಕ್ರೌಂಚೋ ಜೀವತಿ ವರ್ಷಂ ತು ತತೋ ಜಾಯತಿ ಚೀರಕಃ| (ಭಾರತ ದರ್ಶನ).
[12] ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ತತಃ ಸಂಪ್ರಾಪ್ಯ ನಿಧನಂ ಜಾಯತೇ ಸೂಕರಃ ಪುನಃ| ಸೂಕರೋ ಜಾತಮಾತ್ರಸ್ತು ರೋಗೇಣ ಮ್ರಿಯತೇ ನೃಪ|| ಶ್ವಾ ತತೋ ಜಾಯತೇ ಮೂಢಃ ಕರ್ಮಣಾ ತೇನ ಪಾರ್ಥಿವ| ಶ್ವಾ ಭೂತ್ವಾ ಕೃತಕರ್ಮಾಸೌ ಜಾಯತೇ ಮಾನುಷಸ್ತತಃ||
[13] ಮೃತೋ (ಭಾರತ ದರ್ಶನ).
[14] ದಂಡಂ ಸಮುದ್ಗರಂ (ಭಾರತ ದರ್ಶನ).
[15] ಕುಂಭೀಪಾಕವೆಂಬ ನರಕ (ಭಾರತ ದರ್ಶನ).
[16] ಕತ್ತಿಗಳೇ ಎಲೆಗಳಾಗಿರುವ ವನ (ಭಾರತ ದರ್ಶನ).
[17] ಕಾದ ಮರಳಿರುವ ನರಕ (ಭಾರತ ದರ್ಶನ).
[18] ಮುಳ್ಳಿರುವ ಶಾಲ್ಮಲೀ ವನ (ಭಾರತ ದರ್ಶನ).
[19] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ತತೋ ಹತಃ ಕೃತಘ್ನಃ ಸ ತತ್ರೋಗ್ರೈರ್ಭರತರ್ಷಭ| (ಭಾರತ ದರ್ಶನ).
[20] ಇದಕ್ಕೆ ಮೊದಲು ಈ ಹನ್ನೊಂದು ಅಧಿಕ ಶ್ಲೋಕಗಳಿವೆ: ದಧಿ ಹೃತ್ವಾ ಬಕಶ್ಚಾಪಿ ಪ್ಲವೋ ಮತ್ಸ್ಯಾನಸಂಕೃತಾನ್| ಜೋರಯಿತ್ವಾ ತು ದುರ್ಬುದ್ಧಿರ್ಮಧು ದಂಶಃ ಪ್ರಜಾಯತೇ|| ಫಲಂ ವಾ ಮೂಲಕಂ ಹೃತ್ವಾ ಅಪೂಪಂ ವಾ ಪಿಪೀಲಿಕಾಃ| ಚೋರಯಿತ್ವಾ ಚ ನಿಷ್ಪಾವಂ ಜಾಯತೇ ಹಲಗೋಲಕಃ|| ಪಾಯಸಂ ಚೋರಯಿತ್ವಾ ತು ತಿತ್ತಿರಿತ್ವಮವಾಪ್ನುತೇ| ಹೃತ್ವಾ ಪಿಷ್ಟಮಯಂ ಪೂಪಂ ಕುಂಭೋಲೂಕಃ ಪ್ರಜಾಯತೇ|| ಅಯೋ ಹೃತ್ವಾ ತು ದುರ್ಬುದ್ಧಿರ್ವಾಯಸೋ ಜಾಯತೇ ನರಃ| ಕಾಂಸ್ಯಂ ಹೃತ್ವಾ ತು ದುರ್ಬುದ್ಧಿರ್ಹಾರಿತೋ ಜಾಯತೇ ನರಃ|| ರಾಜತಂ ಭಾಜನಂ ಹೃತ್ವಾ ಕಪೋತಃ ಸಂಪ್ರಜಾಯತೇ| ಹೃತ್ವಾ ತು ಕಾಂಚನಂ ಭಾಂಡಂ ಕೃಮಿಯೋನೌ ಪ್ರಜಾಯತೇ|| ಪತ್ರೋರ್ಣಂ ಚೋರಯಿತ್ವಾ ತು ಕೃಕಲತ್ವಂ ನಿಗಚ್ಛತಿ| ಕೌಶಿಕಂ ತ ತತೋ ಹೃತ್ವಾ ನರೋ ಜಾಯತಿ ವರ್ತಕಃ|| ಅಂಶುಕಂ ಚೋರಯಿತ್ವಾ ತು ಶುಕೋ ಜಾಯತಿ ಮಾನವಃ| ಚೋರಯಿತ್ವಾ ದುಕೂಲಂ ತು ಮೃತೋ ಹಂಸಃ ಪ್ರಜಾಯತೇ|| ಕ್ರೌಂಚಃ ಕಾರ್ಪಾಸಿಕಂ ಹೃತ್ವಾ ಮೃತೋ ಜಾಯತಿ ಮಾನವಃ| ಚೋರಯಿತ್ವಾ ನರಃ ಪಟ್ಟಂ ತ್ವಾವಿಕಂ ಚೈವ ಭಾರತ| ಕ್ಷೌಮಂ ಚ ವಸ್ತ್ರಮಾದಾಯ ಶಶೋ ಜಂತುಃ ಪ್ರಜಾಯತೇ|| ವರ್ಣಾನ್ ಹೃತ್ವಾ ತು ಪುರುಷೋ ಮೃತೋ ಜಾಯತಿ ಬರ್ಹಿಣಃ| ಹೃತ್ವಾ ರಕ್ತಾನಿ ವಸ್ತ್ರಾಣಿ ಜಾಯತೇ ಜೀವಜೀವಿಕಃ|| ವರ್ಣಕಾದೀಂಸ್ತಥಾ ಗಂಧಾನ್ ಚೋರಯಿತ್ವೇಹ ಮಾನವಃ| ಛುಚ್ಛುಂದರಿತ್ವಮಾಪ್ನೋತಿ ರಾಜನ್ ಲೋಭಪರಾಯಣಃ|| ತತ್ರ ಜೀವತಿ ವರ್ಷಾಣಿ ತತೋ ದಶ ಚ ಪಂಚ ಚ| ಅಧರ್ಮಸ್ಯ ಕ್ಷಯಂ ಗತ್ವಾ ತತೋ ಜಾಯತಿ ಮಾನುಷಃ|| ಚೋರಯಿತ್ವಾ ಪಯಶ್ಚಾಪಿ ಬಲಾಕಾ ಸಂಪ್ರಜಾಯತೇ| ಯಸ್ತು ಚೋರಯತೇ ತೈಲಂ ನರೋ ಮೋಹಸಮನ್ವಿತಃ| ಸೋಽಪಿ ರಾಜನ್ಮೃತೋ ಜಂತುಸ್ತೈಲಪಾಯೀ ಪ್ರಜಾಯತೇ|| (ಭಾರತ ದರ್ಶನ).
