Anushasana Parva: Chapter 111

ಅನುಶಾಸನ ಪರ್ವ: ದಾನಧರ್ಮ ಪರ್ವ

೧೧೧

ಶೌಚಾನುಪೃಚ್ಛ

ಶರೀರ ಮತ್ತು ತೀರ್ಥಶೌಚಗಳ ಮಹತ್ವ (1-19).

13111001 ಯುಧಿಷ್ಠಿರ ಉವಾಚ|

13111001a ಯದ್ವರಂ ಸರ್ವತೀರ್ಥಾನಾಂ ತದ್ಬ್ರವೀಹಿ ಪಿತಾಮಹ|

13111001c ಯತ್ರ ವೈ ಪರಮಂ ಶೌಚಂ ತನ್ಮೇ ವ್ಯಾಖ್ಯಾತುಮರ್ಹಸಿ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಸರ್ವತೀರ್ಥಗಳಲ್ಲಿಯೂ ಶ್ರೇಷ್ಠವಾದುದು ಯಾವುದು ಎನ್ನುವುದನ್ನು ಹೇಳು. ಯಾವುದು ಪರಮ ಪವಿತ್ರವಾದುದು? ಅದನ್ನು ನನಗೆ ಹೇಳಬೇಕು.”

13111002 ಭೀಷ್ಮ ಉವಾಚ|

13111002a ಸರ್ವಾಣಿ ಖಲು ತೀರ್ಥಾನಿ ಗುಣವಂತಿ ಮನೀಷಿಣಾಮ್|

13111002c ಯತ್ತು ತೀರ್ಥಂ ಚ ಶೌಚಂ ಚ ತನ್ಮೇ ಶೃಣು ಸಮಾಹಿತಃ||

ಭೀಷ್ಮನು ಹೇಳಿದನು: “ವಿದ್ವಾಂಸರಿಗೆ ಸರ್ವ ತೀರ್ಥಗಳೂ ಗುಣಯುಕ್ತವೇ ಆಗಿವೆ. ಆದರೂ ಪವಿತ್ರ ತೀರ್ಥವು ಯಾವುದು ಎನ್ನುವುದನ್ನು ಸಮಾಹಿತನಾಗಿ ಕೇಳು.

13111003a ಅಗಾಧೇ ವಿಮಲೇ ಶುದ್ಧೇ ಸತ್ಯತೋಯೇ ಧೃತಿಹ್ರದೇ|

13111003c ಸ್ನಾತವ್ಯಂ ಮಾನಸೇ ತೀರ್ಥೇ ಸತ್ತ್ವಮಾಲಂಬ್ಯ ಶಾಶ್ವತಮ್||

ಅಗಾಧವೂ, ವಿಮಲವೂ, ಶುದ್ಧವೂ, ಸತ್ಯವೆಂಬ ನೀರಿರುವ ಮತ್ತು ಧೈರ್ಯವೆಂಬ ಮಡುವಿರುವ ಅಗಾಧವೂ, ವಿಮಲವೂ, ಶುದ್ಧವೂ ಆದ ಮಾನಸ ತೀರ್ಥದಲ್ಲಿ ಶಾಶ್ವತ ಸತ್ತ್ವವನ್ನು ಅವಲಂಬಿಸಿ ಸ್ನಾನಮಾಡಬೇಕು.

13111004a ತೀರ್ಥಶೌಚಮನರ್ಥಿತ್ವಮಾರ್ದವಂ ಸತ್ಯಮಾರ್ಜವಮ್[1]|

13111004c ಅಹಿಂಸಾ ಸರ್ವಭೂತಾನಾಮಾನೃಶಂಸ್ಯಂ ದಮಃ ಶಮಃ||

ಯಾಚನೆ ಮಾಡದೇ ಇರುವುದು, ಮೃದುತ್ವ, ಸತ್ಯನಿಷ್ಠೆ, ಸರಳತೆ, ಸರ್ವಭೂತಗಳ ಕುರಿತು ಅಹಿಂಸೆ, ದಯೆ, ಇಂದ್ರಿಯ ನಿಗ್ರಹ ಮತ್ತು ಮನೋನಿಗ್ರಹ – ಇವುಗಳು ಮಾನಸತೀರ್ಥಸ್ನಾನದಿಂದ ಪ್ರಾಪ್ತವಾಗುವ ಶೌಚಗುಣಗಳು. 

13111005a ನಿರ್ಮಮಾ ನಿರಹಂಕಾರಾ ನಿರ್ದ್ವಂದ್ವಾ ನಿಷ್ಪರಿಗ್ರಹಾಃ|

13111005c ಶುಚಯಸ್ತೀರ್ಥಭೂತಾಸ್ತೇ ಯೇ ಭೈಕ್ಷಮುಪಭುಂಜತೇ||

ಮಮಕಾರವಿಲ್ಲದ, ನಿರಹಂಕಾರ ನಿರ್ದ್ವಂದ್ವ ನಿಷ್ಪರಿಗ್ರಹರು ಮತ್ತು ಭಿಕ್ಷವನ್ನೇ ಸೇವಿಸುವವರು ಶುದ್ಧ ತೀರ್ಥಸ್ವರೂಪರು.

13111006a ತತ್ತ್ವವಿತ್ತ್ವನಹಂಬುದ್ಧಿಸ್ತೀರ್ಥಂ ಪರಮಮುಚ್ಯತೇ|

13111006c ಶೌಚಲಕ್ಷಣಮೇತತ್ತೇ ಸರ್ವತ್ರೈವಾನ್ವವೇಕ್ಷಣಮ್||

ಅಹಂಕಾರದ ಕುರುಹೂ ಇಲ್ಲದ ತತ್ತ್ವವಿದುವನ್ನು ಪರಮ ತೀರ್ಥವೆಂದು ಹೇಳುತ್ತಾರೆ. ಇವರ ಶೌಚಲಕ್ಷಣಗಳ ಕುರಿತು ಎಲ್ಲವನ್ನೂ ಇದಾಗಲೇ ಹೇಳಿದ್ದೇನೆ.

13111007a ರಜಸ್ತಮಃ ಸತ್ತ್ವಮಥೋ ಯೇಷಾಂ ನಿರ್ಧೌತಮಾತ್ಮನಃ|

13111007c ಶೌಚಾಶೌಚೇ ನ ತೇ ಸಕ್ತಾಃ[2] ಸ್ವಕಾರ್ಯಪರಿಮಾರ್ಗಿಣಃ||

13111008a ಸರ್ವತ್ಯಾಗೇಷ್ವಭಿರತಾಃ ಸರ್ವಜ್ಞಾಃ ಸರ್ವದರ್ಶಿನಃ|

13111008c ಶೌಚೇನ ವೃತ್ತಶೌಚಾರ್ಥಾಸ್ತೇ ತೀರ್ಥಾಃ ಶುಚಯಶ್ಚ ತೇ||

ಯಾರ ಆತ್ಮವು ಸತ್ತ್ವರಜಸ್ತಮೋಗುಣಗಳನ್ನು ತೊಳೆದುಕೊಂಡಿದೆಯೋ, ಯಾರು ಶೌಚ-ಅಶೌಚಗಳಲ್ಲಿ ಆಸಕ್ತರಾಗಿರದೇ ಸ್ವಕಾರ್ಯಪರಿಮಾರ್ಗಿಗಳಾಗಿರುವರೋ, ಸರ್ವವನ್ನೂ ತ್ಯಜಿಸುವುದರಲ್ಲಿಯೇ ತೊಡಗಿರುವರೋ, ಮತ್ತು ಶೌಚಾಚಾರಗಳ ಪಾಲನೆಯಿಂದ ಆತ್ಮಶುದ್ಧಿಯನ್ನು ಸಾಧಿಸಿರುವ ಸರ್ವಜ್ಞ ಸಮದರ್ಶಿಗಳು ಪರಮತೀರ್ಥ ಸ್ವರೂಪರು. ಅವರೇ ಶುಚಿಗಳು.

13111009a ನೋದಕಕ್ಲಿನ್ನಗಾತ್ರಸ್ತು ಸ್ನಾತ ಇತ್ಯಭಿಧೀಯತೇ|

13111009c ಸ ಸ್ನಾತೋ ಯೋ ದಮಸ್ನಾತಃ ಸಬಾಹ್ಯಾಭ್ಯಂತರಃ ಶುಚಿಃ||

ಕೇವಲ ನೀರಿನಿಂದ ಶರೀರವನ್ನು ತೊಳೆದವನನ್ನು ಸ್ನಾನಮಾಡಿದವನೆಂದು ಹೇಳಲಿಕ್ಕಾಗುವುದಿಲ್ಲ. ಇಂದ್ರಿಯನಿಗ್ರಹವೆಂಬ ನೀರಿನಲ್ಲಿ ಸ್ನಾನಮಾಡಿದವನೇ ಹೊರಗಿನಿಂದಲೂ ಮತ್ತು ಒಳಗಿನಿಂದಲೂ ಸ್ನಾನಮಾಡಿದವನು ಎನ್ನಬಹುದು.

13111010a ಅತೀತೇಷ್ವನಪೇಕ್ಷಾ ಯೇ ಪ್ರಾಪ್ತೇಷ್ವರ್ಥೇಷು ನಿರ್ಮಮಾಃ|

13111010c ಶೌಚಮೇವ ಪರಂ ತೇಷಾಂ ಯೇಷಾಂ ನೋತ್ಪದ್ಯತೇ ಸ್ಪೃಹಾ||

ಕಳೆದುಹೋದುದಕ್ಕೆ ಅಥವಾ ನಷ್ಟವಾದುದಕ್ಕೆ ಅಪೇಕ್ಷೆಪಡದ, ಪ್ರಾಪ್ತವಾದ ಪದಾರ್ಥಗಳಲ್ಲಿ ಮಮಕಾರವಿಲ್ಲದ ಮತ್ತು ಬಯಕೆಯೇ ಹುಟ್ಟದವನಲ್ಲಿ ಪರಮ ಶೌಚವಿರುತ್ತದೆ.

13111011a ಪ್ರಜ್ಞಾನಂ ಶೌಚಮೇವೇಹ ಶರೀರಸ್ಯ ವಿಶೇಷತಃ|

13111011c ತಥಾ ನಿಷ್ಕಿಂಚನತ್ವಂ ಚ ಮನಸಶ್ಚ ಪ್ರಸನ್ನತಾ||

ಇಲ್ಲಿ ಪ್ರಜ್ಞಾನವೇ ಶರೀರದ ವಿಶೇಷ ಶೌಚವು. ಹಾಗೆಯೇ ನಿಷ್ಕಿಂಚನತ್ವ[3] ಮತ್ತು ಮನಸ್ಸಿನ ಪ್ರಸನ್ನತೆಗಳು ಶರೀರ ಶುಚಿಗೆ ಸಾಧನಗಳು.

13111012a ವೃತ್ತಶೌಚಂ ಮನಃಶೌಚಂ ತೀರ್ಥಶೌಚಂ ಪರಂ ಹಿತಮ್[4]|

13111012c ಜ್ಞಾನೋತ್ಪನ್ನಂ ಚ ಯಚ್ಚೌಚಂ ತಚ್ಚೌಚಂ ಪರಮಂ ಮತಮ್||

ಆಚಾರಶುದ್ಧಿ, ಮನಃಶುದ್ಧಿ, ಮತ್ತು ತೀರ್ಥಶುದ್ಧಿಗಳು ಪರಮ ಹಿತವಾದವುಗಳು. ಆದರೆ ಜ್ಞಾನೋತ್ಪತ್ತಿಯಿಂದ ದೊರೆಯುವ ಶುಚಿತ್ವವು ಇವೆಲ್ಲವುಗಳಿಗಿಂತ ಶ್ರೇಷ್ಠವೆಂಬ ಮತವಿದೆ.

13111013a ಮನಸಾಥ ಪ್ರದೀಪೇನ ಬ್ರಹ್ಮಜ್ಞಾನಬಲೇನ ಚ|

13111013c ಸ್ನಾತಾ ಯೇ ಮಾನಸೇ ತೀರ್ಥೇ ತಜ್ಜ್ಞಾಃ ಕ್ಷೇತ್ರಜ್ಞದರ್ಶಿನಃ[5]||

ಬ್ರಹ್ಮಜ್ಞಾನಬಲದಿಂದ ಮನಸ್ಸನ್ನು ಪ್ರದೀಪ್ತಗೊಳಿಸಿ ಮಾನಸ ತೀರ್ಥದಲ್ಲಿ ಸ್ನಾನಮಾಡುವವನು ಜ್ಞಾನಿಯು. ಕ್ಷೇತ್ರಜ್ಞದರ್ಶಿಯು.

13111014a ಸಮಾರೋಪಿತಶೌಚಸ್ತು ನಿತ್ಯಂ ಭಾವಸಮನ್ವಿತಃ|

13111014c ಕೇವಲಂ ಗುಣಸಂಪನ್ನಃ ಶುಚಿರೇವ ನರಃ ಸದಾ||

ಶೌಚಾಚಾರಸಂಪನ್ನನಾಗಿರುವ ನಿತ್ಯವೂ ವಿಶುದ್ಧಭಾವದಿಂದಿರುವ ಮತ್ತು ಸಕಲ ಗುಣಸಂಪನ್ನನಾಗಿರುವ ನರನು ಸದಾ ಶುಚಿಯೆಂದೇ ತಿಳಿಯಬೇಕು.

13111015a ಶರೀರಸ್ಥಾನಿ ತೀರ್ಥಾನಿ ಪ್ರೋಕ್ತಾನ್ಯೇತಾನಿ ಭಾರತ|

13111015c ಪೃಥಿವ್ಯಾಂ ಯಾನಿ ತೀರ್ಥಾನಿ ಪುಣ್ಯಾನಿ ಶೃಣು ತಾನ್ಯಪಿ||

ಭಾರತ! ಈಗ ನಾನು ಹೇಳಿದವು ಶರೀರದಲ್ಲಿರುವ ತೀರ್ಥಗಳು. ಪೃಥ್ವಿಯಲ್ಲಿರುವ ಪುಣ್ಯ ತೀರ್ಥಗಳ ಕುರಿತೂ ಕೇಳು.

13111016a ಯಥಾ ಶರೀರಸ್ಯೋದ್ದೇಶಾಃ ಶುಚಯಃ ಪರಿನಿರ್ಮಿತಾಃ|

13111016c ತಥಾ ಪೃಥಿವ್ಯಾ ಭಾಗಾಶ್ಚ ಪುಣ್ಯಾನಿ ಸಲಿಲಾನಿ ಚ||

ಶರೀರದಲ್ಲಿ ಹೇಗೆ ಕೆಲವು ಸ್ಥಳಗಳು ಪವಿತ್ರವಾದವುಗಳೆಂದು ಹೇಳಿದ್ದಾರೋ ಹಾಗೆ ಭೂಮಿಯ ಕೆಲವು ಭಾಗಗಳ ತೀರ್ಥಗಳನ್ನೂ ಪವಿತ್ರವೆಂದು ಹೇಳಿದ್ದಾರೆ.

13111017a ಪ್ರಾರ್ಥನಾಚ್ಚೈವ[6] ತೀರ್ಥಸ್ಯ ಸ್ನಾನಾಚ್ಚ ಪಿತೃತರ್ಪಣಾತ್|

13111017c ಧುನಂತಿ ಪಾಪಂ ತೀರ್ಥೇಷು ಪೂತಾ ಯಾಂತಿ ದಿವಂ ಸುಖಮ್||

ಆ ತೀರ್ಥಗಳನ್ನು ಪ್ರಾರ್ಥಿಸುವುದರಿಂದ, ಅವುಗಳಲ್ಲಿ ಸ್ನಾನಮಾಡುವುದರಿಂದ ಮತ್ತು ಪಿತೃತರ್ಪಣಗಳನ್ನು ನೀಡುವವರು ಪಾಪಗಳನ್ನು ತೊಳೆದು ಪವಿತ್ರನಾಗಿ ಸ್ವರ್ಗಸುಖವನ್ನು ಪಡೆಯುತ್ತಾರೆ.

13111018a ಪರಿಗ್ರಹಾಚ್ಚ ಸಾಧೂನಾಂ ಪೃಥಿವ್ಯಾಶ್ಚೈವ ತೇಜಸಾ|

13111018c ಅತೀವ ಪುಣ್ಯಾಸ್ತೇ ಭಾಗಾಃ ಸಲಿಲಸ್ಯ ಚ ತೇಜಸಾ||

ಅಲ್ಲಿ ಸಾಧುಗಳು ಸ್ನಾನಮಾಡುವುದರಿಂದಲೂ ಮತ್ತು ಅಲ್ಲಿಯ ಭೂಮಿ ಮತ್ತು ನೀರಿನ ತೇಜಸ್ಸುಗಳಿಂದ ಅಲ್ಲಿ ಸ್ನಾನಮಾಡಿದವರು ಅತೀವ ಪುಣ್ಯಗಳಿಗೆ ಭಾಗಿಗಳಾಗುತ್ತಾರೆ.

13111019a ಮನಸಶ್ಚ ಪೃಥಿವ್ಯಾಶ್ಚ ಪುಣ್ಯತೀರ್ಥಾಸ್ತಥಾಪರೇ|

13111019c ಉಭಯೋರೇವ ಯಃ ಸ್ನಾತಃ ಸ ಸಿದ್ಧಿಂ ಶೀಘ್ರಮಾಪ್ನುಯಾತ್||

ಹೀಗೆ ಮನಸ್ಸಿನಲ್ಲಿಯೂ ಪೃಥ್ವಿಯಲ್ಲಿಯೂ ಅನೇಕ ಪುಣ್ಯ ತೀರ್ಥಗಳಿವೆ. ಇವೆರಡರಲ್ಲಿಯೂ ಸ್ನಾನಮಾಡುವವನು ಶೀಘ್ರದಲ್ಲಿಯೇ ಸಿದ್ಧಿಯನ್ನು ಹೊಂದುತ್ತಾನೆ.

13111020a ಯಥಾ ಬಲಂ ಕ್ರಿಯಾಹೀನಂ ಕ್ರಿಯಾ ವಾ ಬಲವರ್ಜಿತಾ|

13111020c ನೇಹ ಸಾಧಯತೇ ಕಾರ್ಯಂ ಸಮಾಯುಕ್ತಸ್ತು ಸಿಧ್ಯತಿ||

ಕ್ರಿಯಾಹೀನ ಬಲದಿಂದಾಗಲೀ ಅಥವಾ ಬಲವಿಲ್ಲದ ಕ್ರಿಯೆಯಿಂದಾಗಲೀ ಯಾವ ಕಾರ್ಯವೂ ಸಿದ್ಧಿಸುವುದಿಲ್ಲ. ಇವೆರಡೂ ಸೇರಿದರೆ ಕಾರ್ಯಸಿದ್ಧಿಯಾಗುತ್ತದೆ.

13111021a ಏವಂ ಶರೀರಶೌಚೇನ ತೀರ್ಥಶೌಚೇನ ಚಾನ್ವಿತಃ|

13111021c ತತಃ ಸಿದ್ಧಿಮವಾಪ್ನೋತಿ ದ್ವಿವಿಧಂ ಶೌಚಮುತ್ತಮಮ್||

ಹಾಗೆಯೇ ಶರೀರಶೌಚ ಮತ್ತು ತೀರ್ಥಶೌಚ ಈ ಎರಡು ವಿಧದ ಉತ್ತಮ ಶೌಚಗಳಿಂದ ಕೂಡಿದವನು ಸಿದ್ಧಿಯನ್ನು ಪಡೆಯುತ್ತಾನೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಶೌಚಾನುಪೃಚ್ಛಾ ಏಕಾದಶಾಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಶೌಚಾನುಪೃಚ್ಛ ಎನ್ನುವ ನೂರಾಹನ್ನೊಂದನೇ ಅಧ್ಯಾಯವು.

[1] ಆರ್ಜವಂ ಸತ್ಯಮಾರ್ದವಮ್| (ಭಾರತ ದರ್ಶನ).

[2] ಶೌಚಾಶೌಚಸಮಾಯುಕ್ತಾಃ (ಭಾರತ ದರ್ಶನ).

[3] ತನ್ನದೆಂಬುದು ಯಾವುದೂ ಇಲ್ಲದಿರುವುದು (ಭಾರತ ದರ್ಶನ).

[4] ತೀರ್ಥಶೌಚಮತಃ ಪರಮ್| (ಭಾರತ ದರ್ಶನ).

[5] ಮನಸಾ ಚ ಪ್ರದೀಪ್ತೇನ ಬ್ರಹ್ಮಜ್ಞಾನಜಲೇನ ಚ| ಸ್ನಾತಿ ಯೋ ಮಾನಸೇ ತೀರ್ಥೇ ತತ್ಸ್ನಾನಂ ತತ್ತ್ವದರ್ಶಿನಃ|| (ಭಾರತ ದರ್ಶನ).

[6] ಕೀರ್ತನಾಚ್ಚೈವ (ಭಾರತ ದರ್ಶನ).

Comments are closed.