Anushasana Parva: Chapter 84

ಅನುಶಾಸನ ಪರ್ವ: ದಾನಧರ್ಮ ಪರ್ವ

೮೪

ಕಾರ್ತಿಕೇಯೋತ್ಪತ್ತಿ[1]

ಬ್ರಹ್ಮನು ದೇವತೆಗಳಿಗೆ ಆಶ್ವಾಸನೆಯನ್ನು ನೀಡಿದುದು (೧-೧೮), ಅಗ್ನಿಯ ಅನ್ವೇಷಣೆ (೧೯-೪೪), ತನ್ನಲ್ಲಿ ಅಗ್ನಿಯು ಸ್ಥಾಪಿಸಿದ ಗರ್ಭದಲ್ಲಿದ್ದ ಶಿವನ ತೇಜಸ್ಸಿನಿಂದ ಸಂತಪ್ತಳಾದ ಗಂಗೆಯು ಅದನ್ನು ಮೇರುಪರ್ವತದ ಮೇಲೆ ವಿಸರ್ಜಿಸುವುದು (೪೫-೭೪),  ಕಾರ್ತಿಕೇಯ ಮತ್ತು ಸುವರ್ಣದ ಉತ್ಪತ್ತಿ (೭೫-೮೧).

13084001 ದೇವಾ ಊಚುಃ|

13084001a ಅಸುರಸ್ತಾರಕೋ ನಾಮ ತ್ವಯಾ ದತ್ತವರಃ ಪ್ರಭೋ|

13084001c ಸುರಾನೃಷೀಂಶ್ಚ ಕ್ಲಿಶ್ನಾತಿ ವಧಸ್ತಸ್ಯ ವಿಧೀಯತಾಮ್||

ದೇವತೆಗಳು ಹೇಳಿದರು: “ಪ್ರಭೋ! ನಿನ್ನಿಂದ ವರವನ್ನು ಪಡೆದಿರುವ ತಾರಕ ಎಂಬ ಅಸುರನು ಸುರರನ್ನೂ ಋಷಿಗಳನ್ನೂ ಕಾಡುತ್ತಿದ್ದಾನೆ. ಅವನ ವಧೆಯ ಕುರಿತು ಯೋಚಿಸು.

13084002a ತಸ್ಮಾದ್ಭಯಂ ಸಮುತ್ಪನ್ನಮಸ್ಮಾಕಂ ವೈ ಪಿತಾಮಹ|

13084002c ಪರಿತ್ರಾಯಸ್ವ ನೋ ದೇವ ನ ಹ್ಯನ್ಯಾ ಗತಿರಸ್ತಿ ನಃ||

ಪಿತಾಮಹ! ಅವನಿಂದ ನಮಗೆ ಭಯವುಂಟಾಗಿದೆ. ದೇವ! ನಮ್ಮನ್ನು ಕಾಪಾಡು. ನೀನಲ್ಲದೇ ನಮಗೆ ಅನ್ಯ ಗತಿಯಿಲ್ಲ.”

13084003 ಬ್ರಹ್ಮೋವಾಚ|

13084003a ಸಮೋಽಹಂ ಸರ್ವಭೂತಾನಾಮಧರ್ಮಂ ನೇಹ ರೋಚಯೇ|

13084003c ಹನ್ಯತಾಂ ತಾರಕಃ ಕ್ಷಿಪ್ರಂ ಸುರರ್ಷಿಗಣಬಾಧಕಃ||

ಬ್ರಹ್ಮನು ಹೇಳಿದನು: “ಸರ್ವ ಭೂತಗಳಲ್ಲಿ ನನಗೆ ಸಮಭಾವವಿದ್ದರೂ ಅಧರ್ಮಿಗಳು ನನಗೆ ಇಷ್ಟವಾಗುವುದಿಲ್ಲ. ಆದುದರಿಂದ ಸುರರ್ಷಿಗಣಗಳನ್ನು ಬಾಧಿಸುವ ತಾರಕನನ್ನು ನೀವು ಶೀಘ್ರವೇ ಸಂಹರಿಸಿ.

13084004a ವೇದಾ ಧರ್ಮಾಶ್ಚ ನೋತ್ಸಾದಂ[2] ಗಚ್ಚೇಯುಃ ಸುರಸತ್ತಮಾಃ|

13084004c ವಿಹಿತಂ ಪೂರ್ವಮೇವಾತ್ರ ಮಯಾ ವೈ ವ್ಯೇತು ವೋ ಜ್ವರಃ||

ಸುರಸತ್ತಮರೇ! ವೇದ-ಧರ್ಮಗಳ ಉಚ್ಛೇದವಾಗದಿರಲಿ. ನಿಮ್ಮ ಮಾನಸಿಕ ಚಿಂತೆಯು ದೂರವಾಗುವ ಉಪಾಯವನ್ನು ನಾನು ಮೊದಲೇ ಮಾಡಿಟ್ಟಿದ್ದೇನೆ.”

13084005 ದೇವಾ ಊಚುಃ|

13084005a ವರದಾನಾದ್ಭಗವತೋ ದೈತೇಯೋ ಬಲಗರ್ವಿತಃ|

13084005c ದೇವೈರ್ನ ಶಕ್ಯತೇ ಹಂತುಂ ಸ ಕಥಂ ಪ್ರಶಮಂ ವ್ರಜೇತ್||

ದೇವತೆಗಳು ಹೇಳಿದರು: “ಭಗವನ್! ನಿನ್ನದೇ ವರದಾನದಿಂದ ಬಲಗರ್ವಿತನಾದ ಆ ದೈತ್ಯನನ್ನು ದೇವತೆಗಳು ಸಂಹರಿಸಲು ಶಕ್ಯರಿಲ್ಲ. ಹೀಗಿರುವಾಗ ಅವನನ್ನು ಹೇಗೆ ಶಾಂತಗೊಳಿಸಬಲ್ಲೆವು?

13084006a ಸ ಹಿ ನೈವ ಸ್ಮ ದೇವಾನಾಂ ನಾಸುರಾಣಾಂ ನ ರಕ್ಷಸಾಮ್|

13084006c ವಧ್ಯಃ ಸ್ಯಾಮಿತಿ ಜಗ್ರಾಹ ವರಂ ತ್ವತ್ತಃ ಪಿತಾಮಹ||

ಪಿತಾಮಹ! ತನಗೆ ದೇವತೆಗಳು, ಅಸುರರು ಮತ್ತು ರಾಕ್ಷಸರಿಂದ ವಧೆಯಾಗಬಾರದೆಂದು ಅವನು ನಿನ್ನಿಂದ ವರವನ್ನು ಪಡೆದಿದ್ದಾನೆ.

13084007a ದೇವಾಶ್ಚ ಶಪ್ತಾ ರುದ್ರಾಣ್ಯಾ ಪ್ರಜೋಚ್ಚೇದೇ ಪುರಾ ಕೃತೇ|

13084007c ನ ಭವಿಷ್ಯತಿ ವೋಽಪತ್ಯಮಿತಿ ಸರ್ವಜಗತ್ಪತೇ||

ಜಗತ್ಪತೇ! ಹಿಂದೆ ನಾವು ರುದ್ರಾಣಿಯ ಸಂತತಿಯನ್ನು ಉಚ್ಛೇದಗೊಳಿಸಿದಾಗ ಅವಳು ಎಲ್ಲ ದೇವತೆಗಳಿಗೂ “ನಿಮಗೆ ಸಂತಾನವಾಗುವುದಿಲ್ಲ” ಎಂದು ಶಪಿಸಿದ್ದಳು.”

13084008 ಬ್ರಹ್ಮೋವಾಚ|

13084008a ಹುತಾಶನೋ ನ ತತ್ರಾಸೀಚ್ಚಾಪಕಾಲೇ ಸುರೋತ್ತಮಾಃ|

13084008c ಸ ಉತ್ಪಾದಯಿತಾಪತ್ಯಂ ವಧಾರ್ಥಂ ತ್ರಿದಶದ್ವಿಷಾಮ್||

ಬ್ರಹ್ಮನು ಹೇಳಿದನು: “ಸುರೋತ್ತಮರೇ! ಆ ಶಾಪದ ಕಾಲದಲ್ಲಿ ಅಲ್ಲಿ ಅಗ್ನಿಯು ಇರಲಿಲ್ಲ. ತ್ರಿದಷರ ದ್ವೇಷಿಗಳ ವಧೆಗೆ ಅವನೇ ಸಂತಾನವನ್ನು ಹುಟ್ಟಿಸುತ್ತಾನೆ.

13084009a ತದ್ವೈ ಸರ್ವಾನತಿಕ್ರಮ್ಯ ದೇವದಾನವರಾಕ್ಷಸಾನ್|

13084009c ಮಾನುಷಾನಥ ಗಂಧರ್ವಾನ್ನಾಗಾನಥ ಚ ಪಕ್ಷಿಣಃ||

13084010a ಅಸ್ತ್ರೇಣಾಮೋಘಪಾತೇನ ಶಕ್ತ್ಯಾ ತಂ ಘಾತಯಿಷ್ಯತಿ|

13084010c ಯತೋ ವೋ ಭಯಮುತ್ಪನ್ನಂ ಯೇ ಚಾನ್ಯೇ ಸುರಶತ್ರವಃ||

ಅವನೇ ದೇವ-ದಾನವ-ರಾಕ್ಷಸರನ್ನು, ಮನುಷ್ಯರನ್ನು, ಗಂಧರ್ವರನ್ನು, ನಾಗ-ಪಕ್ಷಿ ಎಲ್ಲರನ್ನೂ ಅತಿಕ್ರಮಿಸಿ ತನ್ನ ಅಮೋಘ ಅಸ್ತ್ರ ಶಕ್ತಿಯಿಂದ ಹೊಡೆದು ನಿಮಗೆ ಭಯವನ್ನುಂಟುಮಾಡಿರುವ ಅವನನ್ನು ಸಂಹರಿಸುತ್ತಾನೆ. ಅನ್ಯ ಸುರಶತ್ರುಗಳನ್ನೂ ಅವನು ಸಂಹರಿಸುತ್ತಾನೆ.

13084011a ಸನಾತನೋ ಹಿ ಸಂಕಲ್ಪಃ ಕಾಮ ಇತ್ಯಭಿಧೀಯತೇ|

13084011c ರುದ್ರಸ್ಯ ತೇಜಃ ಪ್ರಸ್ಕನ್ನಮಗ್ನೌ ನಿಪತಿತಂ ಚ ತತ್||

13084012a ತತ್ತೇಜೋಽಗ್ನಿರ್ಮಹದ್ಭೂತಂ ದ್ವಿತೀಯಮಿವ ಪಾವಕಮ್|

13084012c ವಧಾರ್ಥಂ ದೇವಶತ್ರೂಣಾಂ ಗಂಗಾಯಾಂ ಜನಯಿಷ್ಯತಿ||

ಸನಾತನ ಸಂಕಲ್ಪವನ್ನೇ ಕಾಮವೆನ್ನುತ್ತಾರೆ. ಅದೇ ಕಾಮದಿಂದ ಸ್ಖಲಿತವಾದ ರುದ್ರನ ತೇಜಸ್ಸು ಅಗ್ನಿಯಲ್ಲಿ ಬಿದ್ದಿತ್ತು. ಎರಡನೇ ಅಗ್ನಿಯಂತಿದ್ದ ಆ ಮಹಾ ತೇಜಸ್ಸಿನಿಂದ ಗಂಗೆಯಲ್ಲಿ ಅಗ್ನಿಯು ದೇವಶತ್ರುಗಳನ್ನು ವಧಿಸುವವನನ್ನು ಹುಟ್ಟಿಸುತ್ತಾನೆ.

13084013a ಸ ತು ನಾವಾಪ ತಂ ಶಾಪಂ ನಷ್ಟಃ ಸ ಹುತಭುಕ್ತದಾ|

13084013c ತಸ್ಮಾದ್ವೋ ಭಯಹೃದ್ದೇವಾಃ ಸಮುತ್ಪತ್ಸ್ಯತಿ ಪಾವಕಿಃ||

ಆ ಸಮಯದಲ್ಲಿ ಅಗ್ನಿಯು ಅಡಗಿದ್ದನು. ಆದುದರಿಂದ ಆ ಶಾಪವು ಅವನಿಗೆ ತಾಗಲಿಲ್ಲ. ದೇವತೆಗಳೇ! ಅಗ್ನಿಯಿಂದ ಹುಟ್ಟುವ ಪುತ್ರನು ನಿಮ್ಮ ಸರ್ವ ಭಯಗಳನ್ನೂ ಕಿತ್ತುಹಾಕುತ್ತಾನೆ.

13084014a ಅನ್ವಿಷ್ಯತಾಂ ವೈ ಜ್ವಲನಸ್ತಥಾ ಚಾದ್ಯ ನಿಯುಜ್ಯತಾಮ್|

13084014c ತಾರಕಸ್ಯ ವಧೋಪಾಯಃ ಕಥಿತೋ ವೈ ಮಯಾನಘಾಃ||

ನೀವು ಅಗ್ನಿಯನ್ನು ಹುಡುಕಿ ಇಂದೇ ಅವನನ್ನು ಈ ಕಾರ್ಯಕ್ಕೆ ನಿಯೋಜಿಸಿ. ಅನಘರೇ! ತಾರಕನ ವಧೆಯ ಉಪಾಯವನ್ನು ನಾನು ನಿಮಗೆ ಹೇಳಿದ್ದೇನೆ.

13084015a ನ ಹಿ ತೇಜಸ್ವಿನಾಂ ಶಾಪಾಸ್ತೇಜಃಸು ಪ್ರಭವಂತಿ ವೈ|

13084015c ಬಲಾನ್ಯತಿಬಲಂ ಪ್ರಾಪ್ಯ ನಬಲಾನಿ ಭವಂತಿ ವೈ||

ತೇಜಸ್ವಿಗಳ ಶಾಪವು ತೇಜಸ್ವಿಗಳ ಮೇಲೆ ಪ್ರಭಾವಬೀರುವುದಿಲ್ಲ. ಬಲಶಾಲಿಯು ತನಗಿಂತಲೂ ಹೆಚ್ಚಿನ ಬಲಶಾಲಿಯನ್ನು ಎದುರಿಸಿ ದುರ್ಬಲನೇ ಆಗುತ್ತಾನೆ.

13084016a ಹನ್ಯಾದವಧ್ಯಾನ್ವರದಾನಪಿ ಚೈವ ತಪಸ್ವಿನಃ|

13084016c ಸಂಕಲ್ಪಾಭಿರುಚಿಃ ಕಾಮಃ ಸನಾತನತಮೋಽನಲಃ||

ತಪಸ್ವಿಯ ಕಾಮವೇ ಸಂಕಲ್ಪ ಮತ್ತು ಅಭಿರುಚಿಯಾಗುತ್ತದೆ. ಆ ಸನಾತನತಮ ಅಗ್ನಿಯು ವರವನ್ನು ಪಡೆದುಕೊಂಡವನನ್ನೂ ವಧಿಸಬಲ್ಲನು.

13084017a ಜಗತ್ಪತಿರನಿರ್ದೇಶ್ಯಃ ಸರ್ವಗಃ ಸರ್ವಭಾವನಃ|

13084017c ಹೃಚ್ಚಯಃ ಸರ್ವಭೂತಾನಾಂ ಜ್ಯೇಷ್ಠೋ ರುದ್ರಾದಪಿ ಪ್ರಭುಃ||

ಆ ಪ್ರಭು ಅಗ್ನಿಯು ಜಗತ್ಪತಿಯು. ಅನಿರ್ದೇಶ್ಯನು. ಸರ್ವಗ ಮತ್ತು ಸರ್ವಭಾವನನು. ಸರ್ವಭೂತಗಳ ಹೃದಯದಲ್ಲಿ ವಾಸಿಸುವ ಅವನು ರುದ್ರನಿಗಿಂತಲೂ ಹಿರಿಯನು.

13084018a ಅನ್ವಿಷ್ಯತಾಂ ಸ ತು ಕ್ಷಿಪ್ರಂ ತೇಜೋರಾಶಿರ್ಹುತಾಶನಃ|

13084018c ಸ ವೋ ಮನೋಗತಂ ಕಾಮಂ ದೇವಃ ಸಂಪಾದಯಿಷ್ಯತಿ||

ಆ ತೇಜೋರಾಶಿ ಹುತಾಶನನನ್ನು ನೀವು ಬೇಗನೆ ಹುಡುಕಿ. ಆ ದೇವನೇ ನಿಮ್ಮ ಮನೋಗತ ಕಾಮನೆಗಳನ್ನು ಪೂರ್ಣಗೊಳಿಸುತ್ತಾನೆ.”

13084019a ಏತದ್ವಾಕ್ಯಮುಪಶ್ರುತ್ಯ ತತೋ ದೇವಾ ಮಹಾತ್ಮನಃ|

13084019c ಜಗ್ಮುಃ ಸಂಸಿದ್ಧಸಂಕಲ್ಪಾಃ ಪರ್ಯೇಷಂತೋ ವಿಭಾವಸುಮ್||

ಮಹಾತ್ಮ ಬ್ರಹ್ಮನ ಆ ಮಾತನ್ನು ಕೇಳಿ ದೇವತೆಗಳು ಸಂಸಿದ್ಧಸಂಕಲ್ಪರಾಗಿ ವಿಭಾವಸುವನ್ನು ಹುಡುಕಲು ತೆರಳಿದರು.

13084020a ತತಸ್ತ್ರೈಲೋಕ್ಯಮೃಷಯೋ ವ್ಯಚಿನ್ವಂತ ಸುರೈಃ ಸಹ|

13084020c ಕಾಂಕ್ಷಂತೋ ದರ್ಶನಂ ವಹ್ನೇಃ ಸರ್ವೇ ತದ್ಗತಮಾನಸಾಃ||

ಆಗ ಋಷಿಗಳು ಸುರರೊಂದಿಗೆ ಮೂರು ಲೋಕಗಳಲ್ಲಿಯೂ ಅಗ್ನಿಯನ್ನು ಹುಡುಕಿದರು. ಅವರೆಲ್ಲರ ಮನಸ್ಸುಗಳೂ ಅಗ್ನಿಯ ಮೇಲೆಯೇ ಇತ್ತು ಮತ್ತು ಎಲ್ಲರೂ ಅವನನ್ನೇ ಕಾಣಲು ಬಯಸಿದ್ದರು.

13084021a ಪರೇಣ ತಪಸಾ ಯುಕ್ತಾಃ ಶ್ರೀಮಂತೋ ಲೋಕವಿಶ್ರುತಾಃ|

13084021c ಲೋಕಾನನ್ವಚರನ್ಸಿದ್ಧಾಃ ಸರ್ವ ಏವ ಭೃಗೂದ್ವಹ|

13084021e ನಷ್ಟಮಾತ್ಮನಿ ಸಂಲೀನಂ ನಾಧಿಜಗ್ಮುರ್ಹುತಾಶನಮ್||

ಭೃಗೂದ್ವಹ! ಉತ್ತಮ ತಪಸ್ಸಿನಿಂದ ಕೂಡಿದ್ದ ತೇಜಸ್ವೀ ಮತ್ತು ಲೋಕವಿಖ್ಯಾತ ಎಲ್ಲ ಸಿದ್ಧ-ದೇವಗಣಗಳೂ ಎಲ್ಲ ಲೋಕಗಳಲ್ಲಿ ಅಗ್ನಿಯನ್ನು ಹುಡುಕತೊಡಗಿದರು. ತನ್ನಲ್ಲಿ ತಾನೇ ಲೀನನಾಗಿದ್ದ ಅಗ್ನಿಯ ಬಳಿ ಅವರಿಗೆ ಹೋಗಲಿಕ್ಕಾಗಲಿಲ್ಲ.

13084022a ತತಃ ಸಂಜಾತಸಂತ್ರಾಸಾನಗ್ನೇರ್ದರ್ಶನಲಾಲಸಾನ್|

13084022c ಜಲೇಚರಃ ಕ್ಲಾಂತಮನಾಸ್ತೇಜಸಾಗ್ನೇಃ ಪ್ರದೀಪಿತಃ|

13084022e ಉವಾಚ ದೇವಾನ್ಮಂಡೂಕೋ ರಸಾತಲತಲೋತ್ಥಿತಃ||

ಆಗ ಅಗ್ನಿಯದರ್ಶನವನ್ನೇ ಬಯಸಿದ್ದ ಮತ್ತು ಭಯಭೀತರಾಗಿದ್ದ ದೇವತೆಗಳು ರಸಾತಲದಿಂದ ಮೇಲೆ ಬಂದಿದ್ದ ಉರಿಯುತ್ತಿರುವ ಅಗ್ನಿಯತೇಜಸ್ಸಿನಿಂದ ಕ್ಲಾಂತಚಿತ್ತಗೊಂಡಿದ್ದ ಒಂದು ಜಲೇಚರ ಕಪ್ಪೆಯನ್ನು ನೋಡಿದರು. ಅದು ದೇವತೆಗಳಿಗೆ ಹೇಳಿತು:

13084023a ರಸಾತಲತಲೇ ದೇವಾ ವಸತ್ಯಗ್ನಿರಿತಿ ಪ್ರಭೋ|

13084023c ಸಂತಾಪಾದಿಹ ಸಂಪ್ರಾಪ್ತಃ ಪಾವಕಪ್ರಭವಾದಹಮ್||

“ದೇವತೆಗಳೇ! ಅಗ್ನಿಯು ರಸಾತಲದಲ್ಲಿ ವಾಸಿಸುತ್ತಿದ್ದಾನೆ. ನಾನು ಆ ಪ್ರಭು ಅಗ್ನಿಯಿಂದ ಹುಟ್ಟಿದ ಸಂತಾಪದಿಂದ ಗಾಭರಿಗೊಂಡು ಇಲ್ಲಿಗೆ ಬಂದಿದ್ದೇನೆ.

13084024a ಸ ಸಂಸುಪ್ತೋ ಜಲೇ ದೇವಾ ಭಗವಾನ್ ಹವ್ಯವಾಹನಃ|

13084024c ಅಪಃ ಸಂಸೃಜ್ಯ ತೇಜೋಭಿಸ್ತೇನ ಸಂತಾಪಿತಾ ವಯಮ್||

ಭಗವಾನ್ ಹವ್ಯವಾಹನನು ತನ್ನ ತೇಜಸ್ಸಿನಲ್ಲಿ ಜಲವನ್ನು ಸಂಯೋಜಿಸಿ ಜಲದಲ್ಲಿಯೇ ಮಲಗಿದ್ದಾನೆ. ಅವನ ತೇಜಸ್ಸಿನಿಂದಲೇ ನಾವು ಸಂತಪ್ತರಾಗಿದ್ದೇವೆ.

13084025a ತಸ್ಯ ದರ್ಶನಮಿಷ್ಟಂ ವೋ ಯದಿ ದೇವಾ ವಿಭಾವಸೋಃ|

13084025c ತತ್ರೈನಮಭಿಗಚ್ಚಧ್ವಂ ಕಾರ್ಯಂ ವೋ ಯದಿ ವಹ್ನಿನಾ||

ದೇವತೆಗಳೇ! ನೀವು ಅಗ್ನಿಯನ್ನು ನೋಡಬಯಸಿದರೆ ಮತ್ತು ನಿಮಗೆ ಅವನಲ್ಲಿ ಏನಾದರೂ ಕೆಲಸವಿದ್ದರೆ ಅಲ್ಲಿಗೆ ಹೋಗಿ ಅವನನ್ನು ಭೇಟಿಮಾಡಿ.

13084026a ಗಮ್ಯತಾಂ ಸಾಧಯಿಷ್ಯಾಮೋ ವಯಂ ಹ್ಯಗ್ನಿಭಯಾತ್ಸುರಾಃ|

13084026c ಏತಾವದುಕ್ತ್ವಾ ಮಂಡೂಕಸ್ತ್ವರಿತೋ ಜಲಮಾವಿಶತ್||

ಸುರರೇ! ಹೋಗಿ. ನಾವೂ ಕೂಡ ಅಗ್ನಿಯ ಭಯದಿಂದ ಬೇರೆ ಕಡೆ ಹೊರಟು ಹೋಗುತ್ತೇವೆ.” ಹೀಗೆ ಹೇಳಿ ಆ ಕಪ್ಪೆಯು ಬೇಗನೇ ಜಲವನ್ನು ಪ್ರವೇಶಿಸಿತು.

13084027a ಹುತಾಶನಸ್ತು ಬುಬುಧೇ ಮಂಡೂಕಸ್ಯಾಥ ಪೈಶುನಮ್|

13084027c ಶಶಾಪ ಸ ತಮಾಸಾದ್ಯ ನ ರಸಾನ್ವೇತ್ಸ್ಯಸೀತಿ ವೈ||

ಮಂಡೂಕವು ಚಾಡಿಹೇಳಿದುದು ಅಗ್ನಿಗೆ ತಿಳಿಯಿತು. ಅಗ ಅವನು ಮಂಡೂಕಕ್ಕೆ “ನಿನಗೆ ರಸದ ಅನುಭವವಾಗದಿರಲಿ!” ಎಂದು ಶಪಿಸಿದನು.

13084028a ತಂ ಸ ಸಂಯುಜ್ಯ ಶಾಪೇನ ಮಂಡೂಕಂ ಪಾವಕೋ ಯಯೌ|

13084028c ಅನ್ಯತ್ರ ವಾಸಾಯ ವಿಭುರ್ನ ಚ ದೇವಾನದರ್ಶಯತ್||

ಮಂಡೂಕಕ್ಕೆ ಶಾಪವನ್ನಿತ್ತು ಅಗ್ನಿಯು ವಾಸಿಸಲು ಇನ್ನೊಂದು ಕಡೆ ಹೋದನು. ಆ ವಿಭುವು ದೇವತೆಗಳಿಗೆ ಕಾಣಿಸಿಕೊಳ್ಳಲಿಲ್ಲ.

13084029a ದೇವಾಸ್ತ್ವನುಗ್ರಹಂ ಚಕ್ರುರ್ಮಂಡೂಕಾನಾಂ ಭೃಗೂದ್ವಹ|

13084029c ಯತ್ತಚ್ಚೃಣು ಮಹಾಬಾಹೋ ಗದತೋ ಮಮ ಸರ್ವಶಃ||

ಭೃಗೂದ್ವಹ! ಆಗ ದೇವತೆಗಳು ಮಂಡೂಕಗಳಿಗೆ ಮಾಡಿದ ಅನುಗ್ರಹವನ್ನು ಹೇಳುತ್ತೇನೆ. ಮಹಾಬಾಹೋ! ಎಲ್ಲವನ್ನೂ ಕೇಳು.

13084030 ದೇವಾ ಊಚುಃ|

13084030a ಅಗ್ನಿಶಾಪಾದಜಿಹ್ವಾಪಿ ರಸಜ್ಞಾನಬಹಿಷ್ಕೃತಾಃ|

13084030c ಸರಸ್ವತೀಂ ಬಹುವಿಧಾಂ ಯೂಯಮುಚ್ಚಾರಯಿಷ್ಯಥ||

ದೇವತೆಗಳು ಹೇಳಿದರು: “ಅಗ್ನಿಶಾಪದಿಂದ ನಿಮಗೆ ನಾಲಿಗೆಯಿಲ್ಲದೇ ರಸದ ಜ್ಞಾನವಾಗದೇ ಇದ್ದರೂ ನೀವು ನಮ್ಮ ಕೃಪೆಯಿಂದ ಬಹುವಿಧದ ವಾಣಿಯನ್ನು ಉಚ್ಛರಿಸಬಲ್ಲಿರಿ.

13084031a ಬಿಲವಾಸಗತಾಂಶ್ಚೈವ ನಿರಾದಾನಾನಚೇತಸಃ|

13084031c ಗತಾಸೂನಪಿ ವಃ ಶುಷ್ಕಾನ್ ಭೂಮಿಃ ಸಂಧಾರಯಿಷ್ಯತಿ|

13084031e ತಮೋಗತಾಯಾಮಪಿ ಚ ನಿಶಾಯಾಂ ವಿಚರಿಷ್ಯಥ||

ಬಿಲದಲ್ಲಿ ವಾಸಿಸುವಾಗ ಆಹಾರಸಿಗದೇ ನೀವು ಪ್ರಾಣರಹಿತರಾಗಿ ಒಣಗಿ ಹೋದರೂ ಭೂಮಿಯು ನಿಮ್ಮನ್ನು ಧಾರಣೆಮಾಡಿಕೊಂಡಿರುತ್ತದೆ. ಮಳೆಯ ನೀರು ದೊರೆಯಲು ಪುನಃ ನೀವು ಜೀವದಿಂದ ಮೇಲೇಳುತ್ತೀರಿ. ಘನ ಅಂಧಕಾರದಿಂದ ತುಂಬಿರುವ ರಾತ್ರಿಯಲ್ಲಿಯೂ ನೀವು ವಿಚರಿಸಬಲ್ಲಿರಿ.”

13084032a ಇತ್ಯುಕ್ತ್ವಾ ತಾಂಸ್ತತೋ ದೇವಾಃ ಪುನರೇವ ಮಹೀಮಿಮಾಮ್|

13084032c ಪರೀಯುರ್ಜ್ವಲನಸ್ಯಾರ್ಥೇ ನ ಚಾವಿಂದನ್ ಹುತಾಶನಮ್||

ಕಪ್ಪೆಗಳಿಗೆ ಹೀಗೆ ಹೇಳಿದ ದೇವತೆಗಳು ಪುನಃ ಮಹಿಯಲ್ಲಿ ಹುತಾಶನನನ್ನು ಹುಡುಕತೊಡಗಿದರು. ಆದರೆ ಅವರಿಗೆ ಅಗ್ನಿಯು ಎಲ್ಲಿಯೂ ದೊರಕಲಿಲ್ಲ.

13084033a ಅಥ ತಾನ್ ದ್ವಿರದಃ ಕಶ್ಚಿತ್ಸುರೇಂದ್ರದ್ವಿರದೋಪಮಃ|

13084033c ಅಶ್ವತ್ಥಸ್ಥೋಽಗ್ನಿರಿತ್ಯೇವಂ ಪ್ರಾಹ ದೇವಾನ್ ಭೃಗೂದ್ವಹ||

ಭೃಗೂದ್ವಹ! ಆಗ ಇಂದ್ರನ ಐರಾವತನ ಸಮನಾದ ವಿಶಾಲಕಾಯ ಗಜರಾಜನು “ಅಶ್ವತ್ಥವು ಅಗ್ನಿರೂಪವು” ಎಂದು ದೇವತೆಗಳಿಗೆ ಹೇಳಿದನು.

13084034a ಶಶಾಪ ಜ್ವಲನಃ ಸರ್ವಾನ್ ದ್ವಿರದಾನ್ಕ್ರೋಧಮೂರ್ಚಿತಃ|

13084034c ಪ್ರತೀಪಾ ಭವತಾಂ ಜಿಹ್ವಾ ಭವಿತ್ರೀತಿ ಭೃಗೂದ್ವಹ||

ಆಗ ಕ್ರೋಧಮೂರ್ಛಿತನಾದ ಅಗ್ನಿಯು ಎಲ್ಲ ಆನೆಗಳನ್ನೂ ಶಪಿಸುತ್ತಾ “ನಿಮ್ಮ ನಾಲಿಗೆಯು ಹಿಂದುಮುಂದಾಗಲಿ!” ಎಂದನು.

13084035a ಇತ್ಯುಕ್ತ್ವಾ ನಿಃಸೃತೋಽಶ್ವತ್ಥಾದಗ್ನಿರ್ವಾರಣಸೂಚಿತಃ|

13084035c ಪ್ರವಿವೇಶ ಶಮೀಗರ್ಭಮಥ ವಹ್ನಿಃ ಸುಷುಪ್ಸಯಾ||

ತನ್ನ ಇರುವಿಕೆಯನ್ನು ಸೂಚಿಸಿದ ಆನೆಗಳಿಗೆ ಹೀಗೆ ಹೇಳಿ ಅಗ್ನಿಯು ಅಶ್ವತ್ಥದಿಂದ ಹೊರಬಂದು ಮಲಗಲು ಬಯಸಿ ಶಮೀವೃಕ್ಷದೊಳಗೆ ಪ್ರವೇಶಿಸಿದನು.

13084036a ಅನುಗ್ರಹಂ ತು ನಾಗಾನಾಂ ಯಂ ಚಕ್ರುಃ ಶೃಣು ತಂ ಪ್ರಭೋ|

13084036c ದೇವಾ ಭೃಗುಕುಲಶ್ರೇಷ್ಠ ಪ್ರೀತಾಃ ಸತ್ಯಪರಾಕ್ರಮಾಃ||

ಪ್ರಭೋ! ಭೃಗುಕುಲಶ್ರೇಷ್ಠ! ಆಗ ಪ್ರೀತರಾದ ಸತ್ಯಪರಾಕ್ರಮಿ ದೇವತೆಗಳು ಆನೆಗಳಿಗೆ ಯಾವ ಅನುಗ್ರಹ ಮಾಡಿದರು ಎನ್ನುವುದನ್ನು ಕೇಳು.

13084037 ದೇವಾ ಊಚುಃ|

13084037a ಪ್ರತೀಪಯಾ ಜಿಹ್ವಯಾಪಿ ಸರ್ವಾಹಾರಾನ್ಕರಿಷ್ಯಥ|

13084037c ವಾಚಂ ಚೋಚ್ಚಾರಯಿಷ್ಯಧ್ವಮುಚ್ಚೈರವ್ಯಂಜಿತಾಕ್ಷರಮ್|

13084037e ಇತ್ಯುಕ್ತ್ವಾ ಪುನರೇವಾಗ್ನಿಮನುಸಸ್ರುರ್ದಿವೌಕಸಃ||

ದೇವತೆಗಳು ಹೇಳಿದರು: “ನಿಮ್ಮ ನಾಲಿಗೆಯು ಹಿಂದುಮುಂದಾದರೂ ನೀವು ಎಲ್ಲ ವಿಧದ ಆಹಾರವನ್ನೂ ಸೇವಿಸಬಲ್ಲಿರಿ. ಮತ್ತು ಉಚ್ಛಸ್ವರದಲ್ಲಿ ವಾಣಿಯನ್ನು ಉಚ್ಛರಿಸಬಲ್ಲಿರಿ. ಆದರೆ ಅದರಿಂದ ಯಾವುದೇ ಅಕ್ಷರದ ಅಭಿವ್ಯಕ್ತಿಯಾಗುವುದಿಲ್ಲ.” ಹೀಗೆ ಹೇಳಿ ದೇವತೆಗಳು ಪುನಃ ಅಗ್ನಿಯನ್ನು ಅನುಸರಿಸಿದರು.

13084038a ಅಶ್ವತ್ಥಾನ್ನಿಃಸೃತಶ್ಚಾಗ್ನಿಃ ಶಮೀಗರ್ಭಗತಸ್ತದಾ|

13084038c ಶುಕೇನ ಖ್ಯಾಪಿತೋ ವಿಪ್ರ ತಂ ದೇವಾಃ ಸಮುಪಾದ್ರವನ್||

ಅಷ್ಟರಲ್ಲಿ ಅಗ್ನಿಯು ಅಶ್ವತ್ಥದಿಂದ ಹೊರಬಂದು ಶಮೀಗರ್ಭವನ್ನು ಪ್ರವೇಶಿಸಿದನು. ವಿಪ್ರ! ಗಿಳಿಗಳು ಅಗ್ನಿಯ ಕುರುಹನ್ನು ದೇವತೆಗಳಿಗೆ ಹೇಳಲು ಅವರು ಶಮೀವೃಕ್ಷದೆಡೆಗೆ ಓಡಿದರು.

13084039a ಶಶಾಪ ಶುಕಮಗ್ನಿಸ್ತು ವಾಗ್ವಿಹೀನೋ ಭವಿಷ್ಯಸಿ|

13084039c ಜಿಹ್ವಾಂ ಚಾವರ್ತಯಾಮಾಸ ತಸ್ಯಾಪಿ ಹುತಭುಕ್ತದಾ||

ಅಗ್ನಿಯಾದರೋ ಗಿಳಿಗಳಿಗೆ “ಮಾತಿಲ್ಲದವರಾಗುತ್ತೀರಿ!” ಎಂದು ಶಪಿಸಿದನು. ಅಗ್ನಿಯು ಅವರ ನಾಲಿಗೆಯನ್ನು ಹಿಂದುಮುಂದೆ ಮಾಡಿದನು.

13084040a ದೃಷ್ಟ್ವಾ ತು ಜ್ವಲನಂ ದೇವಾಃ ಶುಕಮೂಚುರ್ದಯಾನ್ವಿತಾಃ|

13084040c ಭವಿತಾ ನ ತ್ವಮತ್ಯಂತಂ ಶಕುನೇ[3] ನಷ್ಟವಾಗಿತಿ||

ಆಗ ಅಗ್ನಿಯನ್ನು ನೋಡಿ ದೇವತೆಗಳು ಗಿಳಿಗಳ ಮೇಲೆ ದಯಾನ್ವಿತರಾಗಿ “ಪಕ್ಷಿಗಳೇ! ನಿಮ್ಮ ವಾಣಿಯು ಸಂಪೂರ್ಣವಾಗಿ ನಷ್ಟವಾಗದಿರಲಿ.

13084041a ಆವೃತ್ತಜಿಹ್ವಸ್ಯ ಸತೋ ವಾಕ್ಯಂ ಕಾಂತಂ ಭವಿಷ್ಯತಿ|

13084041c ಬಾಲಸ್ಯೇವ ಪ್ರವೃದ್ಧಸ್ಯ ಕಲಮವ್ಯಕ್ತಮದ್ಭುತಮ್||

ನಾಲಿಗೆಯು ಹಿಂದುಮುಂದಾದರೂ ನಿಮ್ಮ ವಾಣಿಯು ಮಧುರವಾಗುವುದು. ಪ್ರವೃದ್ಧರಿಗೆ ಬಾಲಕರ ವಾಣಿಯು ಹೇಗೆ ಮಧುರವೆನಿಸುವುದೋ ಹಾಗೆ ನಿನ್ನ ವಾಣಿಯೂ ಕೂಡ ಅದ್ಭುತವೆನಿಸುವುದು.”

13084042a ಇತ್ಯುಕ್ತ್ವಾ ತಂ ಶಮೀಗರ್ಭೇ ವಹ್ನಿಮಾಲಕ್ಷ್ಯ ದೇವತಾಃ|

13084042c ತದೇವಾಯತನಂ ಚಕ್ರುಃ ಪುಣ್ಯಂ ಸರ್ವಕ್ರಿಯಾಸ್ವಪಿ||

ಹೀಗೆ ಹೇಳಿ ಶಮೀಗರ್ಭದಲ್ಲಿ ಅಗ್ನಿಯನ್ನು ನೋಡಿ ದೇವತೆಗಳು ಸರ್ವಕ್ರಿಯೆಗಳಿಗೂ ಶಮೀವೃಕ್ಷವೇ ಅಗ್ನಿಯ ಪವಿತ್ರಸ್ಥಾನವೆಂದು ನಿಯಮಿಸಿದರು.

13084043a ತತಃಪ್ರಭೃತಿ ಚಾಪ್ಯಗ್ನಿಃ ಶಮೀಗರ್ಭೇಷು ದೃಶ್ಯತೇ|

13084043c ಉತ್ಪಾದನೇ ತಥೋಪಾಯಮನುಜಗ್ಮುಶ್ಚ ಮಾನವಾಃ||

ಅಂದಿನಿಂದ ಅಗ್ನಿಯು ಶಮೀಗರ್ಭದಲ್ಲಿ ದೃಷ್ಟಿಗೋಚರನಾಗತೊಡಗಿದನು. ಮಾನವರು ಅಗ್ನಿಯನ್ನು ಪ್ರಕಟಗೊಳಿಸಲು ಶಮಿಯ ಮಂಥನದ ಉಪಾಯವನ್ನು ಕಂಡುಕೊಂಡರು.

13084044a ಆಪೋ ರಸಾತಲೇ ಯಾಸ್ತು ಸಂಸೃಷ್ಟಾಶ್ಚಿತ್ರಭಾನುನಾ|

13084044c ತಾಃ ಪರ್ವತಪ್ರಸ್ರವಣೈರೂಷ್ಮಾಂ ಮುಂಚಂತಿ ಭಾರ್ಗವ|

13084044e ಪಾವಕೇನಾಧಿಶಯತಾ ಸಂತಪ್ತಾಸ್ತಸ್ಯ ತೇಜಸಾ||

ಭಾರ್ಗವ! ರಸಾತಲದಲ್ಲಿ ಅಗ್ನಿಯು ಸ್ಪರ್ಶಿಸಿದ್ದ ಮತ್ತು ಮಲಗಿದ್ದ ನೀರು ಅವನ ತೇಜಸ್ಸಿನಿಂದ ಸಂತಪ್ತಗೊಂಡು ಪರ್ವತದ ಬಿಸಿ ಚಿಲುಮೆಗಳ ರೂಪದಲ್ಲಿ ಹೊರಬಂದಿತು.

13084045a ತತೋಽಗ್ನಿರ್ದೇವತಾ ದೃಷ್ಟ್ವಾ ಬಭೂವ ವ್ಯಥಿತಸ್ತದಾ|

13084045c ಕಿಮಾಗಮನಮಿತ್ಯೇವಂ ತಾನಪೃಚ್ಚತ ಪಾವಕಃ||

ದೇವತೆಗಳನ್ನು ನೋಡಿ ಅಗ್ನಿಯು ವ್ಯಥಿತನಾಗಿ ಕೇಳಿದನು: “ಯಾವ ಉದ್ದೇಶದಿಂದ ಇಲ್ಲಿಗೆ ನಿಮ್ಮ ಶುಭಾಗಮನವಾಯಿತು?”

13084046a ತಮೂಚುರ್ವಿಬುಧಾಃ ಸರ್ವೇ ತೇ ಚೈವ ಪರಮರ್ಷಯಃ|

13084046c ತ್ವಾಂ ನಿಯೋಕ್ಷ್ಯಾಮಹೇ ಕಾರ್ಯೇ ತದ್ಭವಾನ್ಕರ್ತುಮರ್ಹತಿ|

13084046e ಕೃತೇ ಚ ತಸ್ಮಿನ್ ಭವಿತಾ ತವಾಪಿ ಸುಮಹಾನ್ಗುಣಃ||

ಆಗ ಸರ್ವ ದೇವತೆಗಳೂ ಮತ್ತು ಮಹರ್ಷಿಗಳೂ ಅವನಿಗೆ ಹೇಳಿದರು: “ನಾವು ನಿನ್ನನ್ನು ಒಂದು ಕಾರ್ಯದಲ್ಲಿ ನಿಯೋಜಿಸುತ್ತೇವೆ. ಅದನ್ನು ನೀನು ಮಾಡಬೇಕು. ಆ ಕಾರ್ಯವನ್ನು ಸಂಪನ್ನಗೊಳಿಸಿದರೆ ನಿನಗೂ ಕೂಡ ಅತಿ ದೊಡ್ಡ ಲಾಭವಾಗುವುದು.”

13084047 ಅಗ್ನಿರುವಾಚ|

13084047a ಬ್ರೂತ ಯದ್ಭವತಾಂ ಕಾರ್ಯಂ ಸರ್ವಂ ಕರ್ತಾಸ್ಮಿ ತತ್ಸುರಾಃ|

13084047c ಭವತಾಂ ಹಿ ನಿಯೋಜ್ಯೋಽಹಂ ಮಾ ವೋಽತ್ರಾಸ್ತು ವಿಚಾರಣಾ||

ಅಗ್ನಿಯು ಹೇಳಿದನು: “ಸುರರೇ! ನಿಮ್ಮ ಕಾರ್ಯವೇನಿದೆಯೋ ಹೇಳಿರಿ. ಅವೆಲ್ಲವನ್ನೂ ನಾನು ಮಾಡುತ್ತೇನೆ. ನಾನು ನಿಮ್ಮ ಆಜ್ಞಾಪಾಲಕನು. ಈ ವಿಷಯದಲ್ಲಿ ನೀವು ಅನ್ಯಥಾ ವಿಚಾರಿಸಬೇಕಾದುದೇನೂ ಇಲ್ಲ.”

13084048 ದೇವಾ ಊಚುಃ|

13084048a ಅಸುರಸ್ತಾರಕೋ ನಾಮ ಬ್ರಹ್ಮಣೋ ವರದರ್ಪಿತಃ|

13084048c ಅಸ್ಮಾನ್ ಪ್ರಬಾಧತೇ ವೀರ್ಯಾದ್ವಧಸ್ತಸ್ಯ ವಿಧೀಯತಾಮ್||

ದೇವತೆಗಳು ಹೇಳಿದರು: “ತಾರಕನೆಂಬ ಅಸುರನು ಬ್ರಹ್ಮನ ವರವನ್ನು ಪಡೆದು ದರ್ಪಿತನಾಗಿ ತನ್ನ ವೀರ್ಯದಿಂದ ನಮ್ಮನ್ನು ಬಾಧಿಸುತ್ತಿದ್ದಾನೆ. ಅವನ ವಧೆಗೆ ಯಾವುದಾದರೂ ಉಪಾಯವನ್ನು ಮಾಡಬೇಕು.

13084049a ಇಮಾನ್ದೇವಗಣಾಂಸ್ತಾತ ಪ್ರಜಾಪತಿಗಣಾಂಸ್ತಥಾ|

13084049c ಋಷೀಂಶ್ಚಾಪಿ ಮಹಾಭಾಗಾನ್ಪರಿತ್ರಾಯಸ್ವ ಪಾವಕ||

ಅಯ್ಯಾ! ಪಾವಕ! ಈ ಮಹಾಭಾಗ ದೇವಗಣಗಳನ್ನು, ಪ್ರಜಾಪತಿಗಣಗಳನ್ನು ಮತ್ತು ಋಷಿಗಳನ್ನೂ ಪರಿಪಾಲಿಸು!

13084050a ಅಪತ್ಯಂ ತೇಜಸಾ ಯುಕ್ತಂ ಪ್ರವೀರಂ ಜನಯ ಪ್ರಭೋ|

13084050c ಯದ್ಭಯಂ ನೋಽಸುರಾತ್ತಸ್ಮಾನ್ನಾಶಯೇದ್ಧವ್ಯವಾಹನ||

ಪ್ರಭೋ! ಹವ್ಯವಾಹನ! ತೇಜಸ್ವೀ ಮತ್ತು ಮಹಾವೀರ ಪುತ್ರನನ್ನು ಹುಟ್ಟಿಸು. ಅವನು ಅಸುರನಿಂದಾಗುವ ನಮ್ಮ ಭಯವನ್ನು ನಾಶಮಾಡುತ್ತಾನೆ.

13084051a ಶಪ್ತಾನಾಂ ನೋ ಮಹಾದೇವ್ಯಾ ನಾನ್ಯದಸ್ತಿ ಪರಾಯಣಮ್|

13084051c ಅನ್ಯತ್ರ ಭವತೋ ವೀರ್ಯಂ ತಸ್ಮಾತ್ತ್ರಾಯಸ್ವ ನಸ್ತತಃ||

ಮಹಾದೇವಿಯ ಶಾಪಕ್ಕೊಳಗಾದ ನಮಗೆ ನಿನ್ನ ಬಲವೀರ್ಯವಲ್ಲದೇ ಬೇರೆ ಯಾವ ಆಶ್ರಯವೂ ಇಲ್ಲ. ನಮ್ಮನ್ನು ರಕ್ಷಿಸು.

13084052a ಇತ್ಯುಕ್ತಃ ಸ ತಥೇತ್ಯುಕ್ತ್ವಾ ಭಗವಾನ್ ಹವ್ಯಕವ್ಯಭುಕ್|

13084052c ಜಗಾಮಾಥ ದುರಾಧರ್ಷೋ ಗಂಗಾಂ ಭಾಗೀರಥೀಂ ಪ್ರತಿ||

ಇದನ್ನು ಕೇಳಿ ಹಾಗೆಯೇ ಆಗಲೆಂದು ಹೇಳಿ ಭಗವಾನ್ ದುರಾಧರ್ಷ ಅಗ್ನಿಯು ಭಾಗೀರಥೀ ಗಂಗಾತೀರಕ್ಕೆ ಹೋದನು.

13084053a ತಯಾ ಚಾಪ್ಯಭವನ್ಮಿಶ್ರೋ ಗರ್ಭಶ್ಚಾಸ್ಯಾಭವತ್ತದಾ|

13084053c ವವೃಧೇ ಸ ತದಾ ಗರ್ಭಃ ಕಕ್ಷೇ ಕೃಷ್ಣಗತಿರ್ಯಥಾ||

ಗಂಗೆಯು ರುದ್ರನ ಆ ತೇಜಸ್ಸನ್ನು ಗರ್ಭರೂಪದಲ್ಲಿ ಧರಿಸಿದಳು. ಆಗ ಅದು ಒಣ ಕಟ್ಟಿಗೆಯ ಮಧ್ಯೆ ಬೆಳೆಯುವ ಅಗ್ನಿಯಂತೆ ವರ್ಧಿಸಿತು.

13084054a ತೇಜಸಾ ತಸ್ಯ ಗರ್ಭಸ್ಯ ಗಂಗಾ ವಿಹ್ವಲಚೇತನಾ|

13084054c ಸಂತಾಪಮಗಮತ್ತೀವ್ರಂ ಸಾ ಸೋಢುಂ ನ ಶಶಾಕ ಹ||

ಆ ಗರ್ಭದ ತೇಜಸ್ಸಿನಿಂದ ವಿಹ್ವಲಳಾದ ಗಂಗೆಯು ತೀವ್ರ ಸಂತಾಪಪಟ್ಟಳು ಮತ್ತು ಅದನ್ನು ಸಹಿಸಿಕೊಳ್ಳಲು ಅವಳಿಗಾಗಲಿಲ್ಲ.

13084055a ಆಹಿತೇ ಜ್ವಲನೇನಾಥ ಗರ್ಭೇ ತೇಜಃಸಮನ್ವಿತೇ|

13084055c ಗಂಗಾಯಾಮಸುರಃ ಕಶ್ಚಿದ್ ಭೈರವಂ ನಾದಮುತ್ಸೃಜತ್||

ಅಗ್ನಿಯಿಂದ ಗಂಗೆಯಲ್ಲಿ ಸ್ಥಾಪಿತಗೊಂಡ ಆ ತೇಜಸ್ವೀ ಗರ್ಭವು ಬೆಳೆಯುತ್ತಿರುವಾಗ ಓರ್ವ ಅಸುರನು ಬಂದು ಭೈರವ ಕೂಗನ್ನು ಕೂಗಿದನು.

13084056a ಅಬುದ್ಧಾಪತಿತೇನಾಥ ನಾದೇನ ವಿಪುಲೇನ ಸಾ|

13084056c ವಿತ್ರಸ್ತೋದ್ಭ್ರಾಂತನಯನಾ ಗಂಗಾ ವಿಪ್ಲುತಲೋಚನಾ|

13084056e ವಿಸಂಜ್ಞಾ ನಾಶಕದ್ಗರ್ಭಂ ಸಂಧಾರಯಿತುಮಾತ್ಮನಾ||

ಆ ಆಕಸ್ಮಿಕ ಮಹಾ ಸಿಂಹನಾದದಿಂದ ಭಯಭೀತಳಾದ ಗಂಗೆಯ ಕಣ್ಣುಗಳು ತಿರುಗತೊಡಗಿದವು ಮತ್ತು ಅವಳ ಕಣ್ಣುಗಳಿಂದ ಕಣ್ಣೀರು ಸುರಿಯತೊಡಗಿತು. ಮೂರ್ಛಿತಳಾದ ಅವಳಿಗೆ ಆ ಗರ್ಭವನ್ನು ಮತ್ತು ತನ್ನನ್ನು ತಾನೇ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.

13084057a ಸಾ ತು ತೇಜಃಪರೀತಾಂಗೀ ಕಂಪಮಾನಾ ಚ ಜಾಹ್ನವೀ|

13084057c ಉವಾಚ ವಚನಂ ವಿಪ್ರ ತದಾ ಗರ್ಭಬಲೋದ್ಧತಾ|

13084057e ನ ತೇ ಶಕ್ತಾಸ್ಮಿ ಭಗವಂಸ್ತೇಜಸೋಽಸ್ಯ ವಿಧಾರಣೇ||

ವಿಪ್ರ! ಆ ತೇಜಸ್ಸಿನಿಂದ ಅಂಗಾಂಗಳಲ್ಲಿ ಸಂತಪ್ತಳಾದ ಜಾಹ್ನವಿಯು ನಡುಗುತ್ತಾ ಗರ್ಭದ ಬಲದಿಂದ ಕರ್ಶಿತಳಾಗಿ ಹೇಳಿದಳು: “ಭಗವನ್! ನಿನ್ನ ಈ ತೇಜಸ್ಸನ್ನು ಸಹಿಸಿಕೊಳ್ಳಲಾರೆ!

13084058a ವಿಮೂಢಾಸ್ಮಿ ಕೃತಾನೇನ ತಥಾಸ್ವಾಸ್ಥ್ಯಂ ಕೃತಂ ಪರಮ್|

13084058c ವಿಹ್ವಲಾ ಚಾಸ್ಮಿ ಭಗವಂಸ್ತೇಜೋ ನಷ್ಟಂ ಚ ಮೇಽನಘ||

ಅನಘ! ಭಗವನ್! ಇದರಿಂದ ನಾನು ವಿಮೂಢಳಾಗಿಬಿಟ್ಟಿದ್ದೇನೆ. ಮೊದಲಿನಂತೆ ಸ್ವಸ್ಥಳಾಗಿಲ್ಲ. ನಾನು ವಿಹ್ವಲಳಾಗಿದ್ದೇನೆ. ನನ್ನ ತೇಜಸ್ಸು ನಷ್ಟವಾಗುತ್ತಿದೆ.

13084059a ಧಾರಣೇ ನಾಸ್ಯ ಶಕ್ತಾಹಂ ಗರ್ಭಸ್ಯ ತಪತಾಂ ವರ|

13084059c ಉತ್ಸ್ರಕ್ಷ್ಯೇಽಹಮಿಮಂ ದುಃಖಾನ್ನ ತು ಕಾಮಾತ್ಕಥಂ ಚನ||

ತಪನರಲ್ಲಿ ಶ್ರೇಷ್ಠ! ಇನ್ನು ನನಗೆ ಈ ಗರ್ಭವನ್ನು ಧರಿಸಿಕೊಂಡಿರುವ ಶಕ್ತಿಯಿಲ್ಲವಾಗಿದೆ. ಈ ಅಸಹ್ಯ ದುಃಖದಿಂದಾಗಿ ನಾನು ಇದನ್ನು ತ್ಯಜಿಸಲು ಬಯಸುತ್ತೇನೆ. ನನ್ನದೇ ಇಷ್ಟದಿಂದಲ್ಲ.

13084060a ನ ಚೇತಸೋಽಸ್ತಿ[4] ಸಂಸ್ಪರ್ಶೋ ಮಮ ದೇವ ವಿಭಾವಸೋ|

13084060c ಆಪದರ್ಥೇ ಹಿ ಸಂಬಂಧಃ ಸುಸೂಕ್ಷ್ಮೋಽಪಿ ಮಹಾದ್ಯುತೇ||

ವಿಭಾವಸೋ! ಮಹಾದ್ಯುತೇ! ದೇವ! ಈ ಚೇತಸ್ಸಿನೊಂದಿಗೆ ನನ್ನ ಸಂಪರ್ಕವೇನೂ ಇಲ್ಲ. ಈ ಸಮಯದಲ್ಲಿ ಉಂಟಾಗಿರುವ ಅತಿ ಸೂಕ್ಷ್ಮ ಸಂಬಂಧವೂ ಕೂಡ ದೇವತೆಗಳಿಗೆ ಬಂದಿರುವ ವಿಪತ್ತನ್ನು ದೂರಮಾಡಬೇಕೆಂಬ ಉದ್ದೇಶದಿಂದಲೇ ಆಗಿದೆ.

13084061a ಯದತ್ರ ಗುಣಸಂಪನ್ನಮಿತರಂ ವಾ ಹುತಾಶನ|

13084061c ತ್ವಯ್ಯೇವ ತದಹಂ ಮನ್ಯೇ ಧರ್ಮಾಧರ್ಮೌ ಚ ಕೇವಲೌ||

ಹುತಾಶನ! ಈ ಕಾರ್ಯದಲ್ಲಿ ಯಾವುದಾದರೂ ಗುಣ ಅಥವಾ ದೋಷವಿದ್ದರೆ ಅಥವಾ ಧರ್ಮ-ಅಧರ್ಮಗಳಿದ್ದರೆ ಅವೆಲ್ಲವುಗಳ ಉತ್ತರದಾಯಿತ್ವವು ನಿನ್ನ ಮೇಲೆಯೇ ಇದೆ. ಇದು ನನ್ನ ಮತ.”

13084062a ತಾಮುವಾಚ ತತೋ ವಹ್ನಿರ್ಧಾರ್ಯತಾಂ ಧಾರ್ಯತಾಮಯಮ್|

13084062c ಗರ್ಭೋ ಮತ್ತೇಜಸಾ ಯುಕ್ತೋ ಮಹಾಗುಣಫಲೋದಯಃ||

ಆಗ ವಹ್ನಿಯು ಅವಳಿಗೆ “ಈ ಗರ್ಭವು ನನ್ನ ತೇಜಸ್ಸಿನಿಂದ ಯುಕ್ತವಾಗಿದೆ. ಇದರಿಂದ ಮಹಾ ಗುಣಯುಕ್ತ ಫಲವುಂಟಾಗುವುದು. ಇದನ್ನು ಧರಿಸಿಕೊಂಡಿರು. ಧಾರಣೆಮಾಡಿಕೊಂಡಿರು.

13084063a ಶಕ್ತಾ ಹ್ಯಸಿ ಮಹೀಂ ಕೃತ್ಸ್ನಾಂ ವೋಢುಂ ಧಾರಯಿತುಂ ತಥಾ|

13084063c ನ ಹಿ ತೇ ಕಿಂ ಚಿದಪ್ರಾಪ್ಯಂ ಮದ್ರೇತೋಧಾರಣಾದೃತೇ||

ನೀನು ಇಡೀ ಪೃಥ್ವಿಯನ್ನೇ ಧರಿಸಲು ಸಮರ್ಥಳಾಗಿರುವೆ. ಇನ್ನು ಈ ಗರ್ಭಧಾರಣೆ ಮಾಡಿಕೊಳ್ಳಲು ನಿನಗೆ ಸ್ವಲ್ಪವೂ ಅಸಾಧ್ಯವಲ್ಲ.”

13084064a ಸಾ ವಹ್ನಿನಾ ವಾರ್ಯಮಾಣಾ ದೇವೈಶ್ಚಾಪಿ ಸರಿದ್ವರಾ|

13084064c ಸಮುತ್ಸಸರ್ಜ ತಂ ಗರ್ಭಂ ಮೇರೌ ಗಿರಿವರೇ ತದಾ||

ಅಗ್ನಿ ಮತ್ತು ದೇವತೆಗಳು ತಡೆದರೂ ಆ ಸರಿದ್ವರೆಯು ಆ ಗರ್ಭವನ್ನು ಗಿರಿಶ್ರೇಷ್ಠ ಮೇರುಪರ್ವತದ ಮೇಲೆ ವಿಸರ್ಜಿಸಿದಳು.

13084065a ಸಮರ್ಥಾ ಧಾರಣೇ ಚಾಪಿ ರುದ್ರತೇಜಃಪ್ರಧರ್ಷಿತಾ|

13084065c ನಾಶಕತ್ತಂ ತದಾ ಗರ್ಭಂ ಸಂಧಾರಯಿತುಮೋಜಸಾ||

ಗರ್ಭವನ್ನು ಧರಿಸಲು ಸಮರ್ಥಳಾಗಿದ್ದರೂ ರುದ್ರನ ತೇಜಸ್ಸಿನಿಂದ ಪ್ರಧರ್ಷಿತಗೊಂಡಿದ್ದ ಆ ಗರ್ಭವನ್ನು ಅವಳಿಗೆ ಧರಿಸಲಾಗಲಿಲ್ಲ.

13084066a ಸಾ ಸಮುತ್ಸೃಜ್ಯ ತಂ ದುಃಖಾದ್ದೀಪ್ತವೈಶ್ವಾನರಪ್ರಭಮ್|

13084066c ದರ್ಶಯಾಮಾಸ ಚಾಗ್ನಿಸ್ತಾಂ ತದಾ ಗಂಗಾಂ ಭೃಗೂದ್ವಹ|

13084066e ಪಪ್ರಚ್ಚ ಸರಿತಾಂ ಶ್ರೇಷ್ಠಾಂ ಕಚ್ಚಿದ್ಗರ್ಭಃ ಸುಖೋದಯಃ||

13084067a ಕೀದೃಗ್ವರ್ಣೋಽಪಿ ವಾ ದೇವಿ ಕೀದೃಗ್ರೂಪಶ್ಚ ದೃಶ್ಯತೇ|

13084067c ತೇಜಸಾ ಕೇನ ವಾ ಯುಕ್ತಃ ಸರ್ವಮೇತದ್ ಬ್ರವೀಹಿ ಮೇ||

ಭೃಗೂದ್ವಹ! ಗಂಗೆಯು ವೈಶ್ವಾನರನ ಪ್ರಭೆಯಿಂದ ಬೆಳಗುತ್ತಿದ್ದ ಆ ಗರ್ಭವನ್ನು ದುಃಖದಿಂದಲೇ ತ್ಯಜಿಸಿದ ನಂತರ ಅದನ್ನು ಅವಳು ಅಗ್ನಿಗೆ ತೋರಿಸಿದಳು. ಆಗ ಅವನು ಸರಿತ್ತುಗಳಲ್ಲಿ ಶ್ರೇಷ್ಠೆ ಗಂಗೆಯನ್ನು ಪ್ರಶ್ನಿಸಿದನು: “ದೇವೀ! ನಿನ್ನ ಗರ್ಭವು ಸುಖದಿಂದ ಬೆಳೆಯುತ್ತಿದೆ ತಾನೇ? ಅದರ ಕಾಂತಿಯು ಹೇಗಿದೆ ಅಥವಾ ಅದರ ರೂಪವು ಹೇಗೆ ಕಾಣುತ್ತಿದೆ? ಅವನು ಎಷ್ಟು ತೇಜೋಯುಕ್ತನಾಗಿದ್ದಾನೆ? ಇವೆಲ್ಲವನ್ನೂ ನನಗೆ ಹೇಳು.”

13084068 ಗಂಗೋವಾಚ|

13084068a ಜಾತರೂಪಃ ಸ ಗರ್ಭೋ ವೈ ತೇಜಸಾ ತ್ವಮಿವಾನಲ|

13084068c ಸುವರ್ಣೋ ವಿಮಲೋ ದೀಪ್ತಃ ಪರ್ವತಂ ಚಾವಭಾಸಯತ್||

ಗಂಗೆಯು ಹೇಳಿದಳು: “ಅನಲ! ಆ ಗರ್ಭವಾದರೋ ಚಿನ್ನವು. ತೇಜಸ್ಸಿನಲ್ಲಿ ಅವನು ನಿನ್ನಂತೆಯೇ ಇದ್ದಾನೆ. ಸುವರ್ಣದಂತೆ ವಿಮಲನೂ, ಪ್ರಕಾಶಿತನೂ ಆಗಿದ್ದಾನೆ. ಇಡೀ ಪರ್ವತವನ್ನೇ ಬೆಳಗಿಸುತ್ತಿದ್ದಾನೆ.

13084069a ಪದ್ಮೋತ್ಪಲವಿಮಿಶ್ರಾಣಾಂ ಹ್ರದಾನಾಮಿವ ಶೀತಲಃ|

13084069c ಗಂಧೋಽಸ್ಯ ಸ ಕದಂಬಾನಾಂ ತುಲ್ಯೋ ವೈ ತಪತಾಂ ವರ||

ತಾಪನರಲ್ಲಿ ಶ್ರೇಷ್ಠ! ಕಮಲ ಮತ್ತು ಉತ್ಪಲಗಳಿಂದ ಕೂಡಿದ ಸರೋವರದಂತೆ ಅವನ ಅಂಗಗಳು ಶೀತಲವಾಗಿವೆ ಮತ್ತು ಕದಂಬ ಪುಷ್ಪಗಳಂತೆ ಅವನಿಂದ ಮಧುರ ಸುಗಂಧವು ಸೂಸುತ್ತಿದೆ.

13084070a ತೇಜಸಾ ತಸ್ಯ ಗರ್ಭಸ್ಯ ಭಾಸ್ಕರಸ್ಯೇವ ರಶ್ಮಿಭಿಃ|

13084070c ಯದ್ದ್ರವ್ಯಂ ಪರಿಸಂಸೃಷ್ಟಂ ಪೃಥಿವ್ಯಾಂ ಪರ್ವತೇಷು ವಾ|

13084070e ತತ್ಸರ್ವಂ ಕಾಂಚನೀಭೂತಂ ಸಮಂತಾತ್ ಪ್ರತ್ಯದೃಶ್ಯತ||

ಭಾಸ್ಕರನ ಕಿರಣಗಳಂತಿರುವ ಆ ಗರ್ಭದ ತೇಜಸ್ಸು ಯಾವ ದ್ರವ್ಯದ ಮೇಲೆ ಬೀಳುತ್ತಿದೆಯೋ – ಭೂಮಿಯಲ್ಲಾಗಲೀ ಅಥವಾ ಪರ್ವತಗಳಲ್ಲಿಯಾಗಲೀ – ಎಲ್ಲವೂ ಕಾಂಚನರೂಪವನ್ನು ತಳೆದಂತೆ ಎಲ್ಲಕಡೆ ಕಾಣುತ್ತಿದೆ.

13084071a ಪರ್ಯಧಾವತ ಶೈಲಾಂಶ್ಚ ನದೀಃ ಪ್ರಸ್ರವಣಾನಿ ಚ|

13084071c ವ್ಯದೀಪಯತ್ತೇಜಸಾ ಚ ತ್ರೈಲೋಕ್ಯಂ ಸಚರಾಚರಮ್||

ಆ ಬಾಲಕನು ತನ್ನ ತೇಜಸ್ಸಿನಿಂದ ಚರಾಚರ ಪ್ರಾಣಿಗಳನ್ನು ಪ್ರಕಾಶಿತಗೊಳಿಸುತ್ತಾ ಪರ್ವತಗಳು, ನದಿಗಳು ಮತ್ತು ಚಿಲುಮೆಗಳ ಕಡೆ ಓಡುತ್ತಿದ್ದಾನೆ.

13084072a ಏವಂರೂಪಃ ಸ ಭಗವಾನ್ ಪುತ್ರಸ್ತೇ ಹವ್ಯವಾಹನ|

13084072c ಸೂರ್ಯವೈಶ್ವಾನರಸಮಃ ಕಾಂತ್ಯಾ ಸೋಮ ಇವಾಪರಃ|

13084072e ಏವಮುಕ್ತ್ವಾ ತು ಸಾ ದೇವೀ ತತ್ರೈವಾಂತರಧೀಯತ||

ಹವ್ಯವಾಹನ! ಭಗವನ್! ನಿನ್ನ ಪುತ್ರನು ಇಂಥಹದೇ ರೂಪವಂತನು. ಅವನು ಸೂರ್ಯ ಮತ್ತು ನಿನ್ನ ಸಮಾನ ಕಾಂತಿಯಿಂದ ಇನ್ನೊಂದು ಸೋಮನೋ ಎಂಬಂತೆ ತೋರುತ್ತಿದ್ದಾನೆ.” ಹೀಗೆ ಹೇಳಿ ಆ ದೇವಿಯು ಅಲ್ಲಿಯೇ ಅಂತರ್ಧಾನಳಾದಳು.

13084073a ಪಾವಕಶ್ಚಾಪಿ ತೇಜಸ್ವೀ ಕೃತ್ವಾ ಕಾರ್ಯಂ ದಿವೌಕಸಾಮ್|

13084073c ಜಗಾಮೇಷ್ಟಂ ತತೋ ದೇಶಂ ತದಾ ಭಾರ್ಗವನಂದನ||

ಭಾರ್ಗವನಂದನ! ತೇಜಸ್ವೀ ಪಾವಕನೂ ಕೂಡ ದಿವೌಕಸರ ಕಾರ್ಯವನ್ನು ಮಾಡಿ ತನಗಿಷ್ಟವಾದ ಪ್ರದೇಶಕ್ಕೆ ಹೊರಟುಹೋದನು.

13084074a ಏತೈಃ ಕರ್ಮಗುಣೈರ್ಲೋಕೇ ನಾಮಾಗ್ನೇಃ ಪರಿಗೀಯತೇ|

13084074c ಹಿರಣ್ಯರೇತಾ ಇತಿ ವೈ ಋಷಿಭಿರ್ವಿಬುಧೈಸ್ತಥಾ|

13084074e ಪೃಥಿವೀ ಚ ತದಾ ದೇವೀ ಖ್ಯಾತಾ ವಸುಮತೀತಿ ವೈ||

ಈ ಕರ್ಮ ಮತ್ತು ಗುಣಗಳಿಂದ ಋಷಿಗಳು ಮತ್ತು ದೇವತೆಗಳು ಅಗ್ನಿಯನ್ನು ಹಿರಣ್ಯರೇತಾ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಹಾಗೆಯೇ ದೇವೀ ಪೃಥ್ವಿಯು ವಸುಮತಿ ಎಂದಾದಳು.

13084075a ಸ ತು ಗರ್ಭೋ ಮಹಾತೇಜಾ ಗಾಂಗೇಯಃ ಪಾವಕೋದ್ಭವಃ|

13084075c ದಿವ್ಯಂ ಶರವಣಂ ಪ್ರಾಪ್ಯ ವವೃಧೇಽದ್ಭುತದರ್ಶನಃ||

ಪಾವಕೋದ್ಭವ ಗಾಂಗೇಯ ಆ ಮಹಾತೇಜಸ್ವೀ ಗರ್ಭವು ದಿವ್ಯ ಶರವಣವನ್ನು ಸೇರಿ ಅಲ್ಲಿ ಬೆಳೆದು ಅದ್ಭುತನಾಗಿ ಕಂಡನು.

13084076a ದದೃಶುಃ ಕೃತ್ತಿಕಾಸ್ತಂ ತು ಬಾಲಾರ್ಕಸದೃಶದ್ಯುತಿಮ್|

13084076c ಜಾತಸ್ನೇಹಾಶ್ಚ ತಂ ಬಾಲಂ ಪುಪುಷುಃ ಸ್ತನ್ಯವಿಸ್ರವೈಃ||

ಬಾಲಾರ್ಕಸದೃಶನಾಗಿ ಬೆಳಗುತ್ತಿದ್ದ ಆ ಬಾಲಕನನ್ನು ಕೃತ್ತಿಕೆಯರು ನೋಡಿದರು ಮತ್ತು ಅವನನ್ನು ತಮ್ಮ ಪುತ್ರನೆಂದೇ ತಿಳಿದು ತಮ್ಮ ಸ್ತನಪಾನದಿಂದ ಅವನನ್ನು ಪೋಷಿಸಿದರು.

13084077a ತತಃ ಸ ಕಾರ್ತ್ತಿಕೇಯತ್ವಮವಾಪ ಪರಮದ್ಯುತಿಃ|

13084077c ಸ್ಕನ್ನತ್ವಾತ್ಸ್ಕಂದತಾಂ ಚಾಪಿ ಗುಹಾವಾಸಾದ್ಗುಹೋಽಭವತ್||

ಆಗ ಆ ಪರಮದ್ಯುತಿಯು ಕಾರ್ತಿಕೇಯತ್ವವನ್ನು ಪಡೆದುಕೊಂಡನು. ಶಿವನ ಸ್ಖಲಿತ ವೀರ್ಯದಿಂದ ಉತ್ಪನ್ನನಾದುದರಿಂದ ಅವನ ಹೆಸರು ಸ್ಕಂದ ಎಂದೂ ಆಯಿತು ಮತ್ತು ಪರ್ವತ ಗುಹೆಗಳಲ್ಲಿ ನಿವಾಸಮಾಡುತ್ತಿದ್ದುದರಿಂದ ಅವನು ಗುಹ ಎಂದೂ ಆದನು.

13084078a ಏವಂ ಸುವರ್ಣಮುತ್ಪನ್ನಮಪತ್ಯಂ ಜಾತವೇದಸಃ|

13084078c ತತ್ರ ಜಾಂಬೂನದಂ ಶ್ರೇಷ್ಠಂ ದೇವಾನಾಮಪಿ ಭೂಷಣಮ್||

ಹೀಗೆ ಜಾತವೇದಸನ ಸಂತಾನರೂಪದಲ್ಲಿ ಸುವರ್ಣದ ಉತ್ಪತ್ತಿಯಾಯಿತು. ಅದರಲ್ಲಿಯೂ ಜಾಂಬೂನದ ಎಂಬ ಸುವರ್ಣವು ಅತ್ಯಂತ ಶ್ರೇಷ್ಠವು ಮತ್ತು ಅದು ದೇವತೆಗಳ ಭೂಷಣವೂ ಹೌದು.

13084079a ತತಃಪ್ರಭೃತಿ ಚಾಪ್ಯೇತಜ್ಜಾತರೂಪಮುದಾಹೃತಮ್|

13084079c ಯತ್ಸುವರ್ಣಂ ಸ ಭಗವಾನಗ್ನಿರೀಶಃ ಪ್ರಜಾಪತಿಃ||

ಅಂದಿನಿಂದ ಸುವರ್ಣದ ಹೆಸರು ಜಾತರೂಪ ಎಂದಾಯಿತು. ಸುವರ್ಣವು ಭಗವಾನ್ ಅಗ್ನಿಯು. ಅದು ಈಶ್ವರ ಮತ್ತು ಪ್ರಜಾಪತಿಯು.

13084080a ಪವಿತ್ರಾಣಾಂ ಪವಿತ್ರಂ ಹಿ ಕನಕಂ ದ್ವಿಜಸತ್ತಮ|

13084080c ಅಗ್ನೀಷೋಮಾತ್ಮಕಂ ಚೈವ ಜಾತರೂಪಮುದಾಹೃತಮ್||

ದ್ವಿಜಸತ್ತಮ! ಕನಕವು ಪವಿತ್ರವಾದವುಗಳಲ್ಲಿಯೇ ಪವಿತ್ರವಾದುದು. ಜಾತರೂಪವನ್ನು ಅಗ್ನಿ-ಸೋಮ ಸ್ವರೂಪವೆಂದು ಹೇಳಿದ್ದಾರೆ.

13084081a ರತ್ನಾನಾಮುತ್ತಮಂ ರತ್ನಂ ಭೂಷಣಾನಾಂ ತಥೋತ್ತಮಮ್|

13084081c ಪವಿತ್ರಂ ಚ ಪವಿತ್ರಾಣಾಂ ಮಂಗಲಾನಾಂ ಚ ಮಂಗಲಮ್||

ಸುವರ್ಣವು ರತ್ನಗಳಲ್ಲಿಯೇ ಉತ್ತಮ ರತ್ನವು. ಭೂಷಣಗಳಲ್ಲಿಯೇ ಉತ್ತಮವು. ಪವಿತ್ರವಾದವುಗಳಲ್ಲಿ ಪವಿತ್ರವು ಮತ್ತು ಮಂಗಳವಾದವುಗಳಲ್ಲಿ ಮಂಗಳವು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಕಾರ್ತಿಕೇಯೋತ್ಪತ್ತಿರ್ನಾಮ ಚತುರಾಶೀತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಕಾರ್ತಿಕೇಯೋತ್ಪತ್ತಿ ಎನ್ನುವ ಎಂಭತ್ನಾಲ್ಕನೇ ಅಧ್ಯಾಯವು.

[1] ಈ ಅಧ್ಯಾಯದಲ್ಲಿ ಬರುವ ಕಾರ್ತೀಕೇಯನ ಜನ್ಮದ ಕಥೆಯು ಹಿಂದೆ ಅರಣ್ಯಕಪರ್ವದಲ್ಲಿ ಮಾರ್ಕಂಡೇಯ ಸಮಸ್ಯಾಪರ್ವದ ಅಧ್ಯಾಯ ೨೧೩-೨೨೦ ರಲ್ಲಿ ಬರುವ ಸ್ಕಂದೋತ್ಪತ್ತಿಯ ಕಥೆಗಿಂತ ಭಿನ್ನವಾಗಿದೆ.

[2] ನೋಚ್ಛೇದಂ (ಗೀತಾ ಪ್ರೆಸ್).

[3] ಶುಕತ್ವೇ (ಗೀತಾ ಪ್ರೆಸ್).

[4] ತೇಜಸೋಽಸ್ತಿ (ಗೀತಾ ಪ್ರೆಸ್).

Comments are closed.