Aranyaka Parva: Chapter 213

ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ

೨೧೩

ಕಾರ್ತಿಕೇಯನ ಜನ್ಮ

ದೇವಸೇನೆಯ ನಾಯಕನನ್ನು ಇಂದ್ರನು ಹುಡುಕುವುದು; ದೇವಸೇನಾ ಎಂಬ ಕನ್ಯೆಯನ್ನು ಕಾಡಿಸುತ್ತಿದ್ದ ದೈತ್ಯ ಕೇಶಿಯನ್ನು ಇಂದ್ರನು ಓಡಿಸಿದುದು (೧-೧೪). ದೇವಸೇನೆಯು ಇಂದ್ರನಿಗೆ ತನ್ನ ಪತಿಯಾಗಿರಬೇಕಾದವನ ಗುಣಲಕ್ಷಣಗಳನ್ನು ಹೇಳುವುದು (೧೫-೨೪). ಸೋಮ ಮತ್ತು ಅಗ್ನಿಗಳಿಂದ ಹುಟ್ಟುವವನು ದೇವಸೇನೆಯ ಪತಿಯಾಗುತ್ತಾನೆಂದು ಯೋಚಿಸಿ ಇಂದ್ರನು ಬ್ರಹ್ಮನಲ್ಲಿ ಕೇಳಲು ಅವನೂ ಕೂಡ ನೀನು ಯೋಚಿಸಿದಂತೆಯೇ ಆಗುತ್ತದೆ ಎನ್ನುವುದು (೨೫-೩೬). ವಸಿಷ್ಠಾದಿ ಋಷಿಗಳು ನಡೆಸಿದ ಅಧ್ವರದಲ್ಲಿ ಹವಿಸ್ಸನ್ನು ಕೊಂಡೊಯ್ಯುತ್ತಿದ್ದ ಅಗ್ನಿಯು ಹಾಸಿಗೆಯ ಮೇಲೆ ಮಲಗಿದ್ದ ಋಷಿಪತ್ನಿಯರನ್ನು ನೋಡಿ ಕಾಮವಶನಾದುದು (೩೭-೪೪). ಕಾಮಸಂತಪ್ತಹೃದಯನಾದ ಅಗ್ನಿಯು ದೇಹತ್ಯಾಗ ಮಾಡಲು ವನಕ್ಕೆ ಬಂದಾಗ ಅವನೊಡನೆ ಮೊದಲೇ ಅನುರಕ್ತಳಾಗಿದ್ದ ದಕ್ಷಸುತೆ ಸ್ವಾಹಾಳು ಸಪ್ತರ್ಷಿಗಳ ಪತ್ನಿಯರ ರೂಪವನ್ನು ತಾಳಿ ಅಗ್ನಿಯನ್ನು ಕಾಮಿಸುತ್ತೇನೆಂದು ಯೋಚಿಸುವುದು (೪೫-೫೨).

[1]03213001 ಮಾರ್ಕಂಡೇಯ ಉವಾಚ|

03213001a ಅಗ್ನೀನಾಂ ವಿವಿಧೋ ವಂಶಃ ಕೀರ್ತಿತಸ್ತೇ ಮಯಾನಘ|

03213001c ಶೃಣು ಜನ್ಮ ತು ಕೌರವ್ಯ ಕಾರ್ತ್ತಿಕೇಯಸ್ಯ ಧೀಮತಃ||

ಮಾರ್ಕಂಡೇಯನು ಹೇಳಿದನು: “ಅನಘ! ಅಗ್ನಿಗಳ ವಿವಿಧ ವಂಶಗಳನ್ನು ನಿನಗೆ ವಿವರಿಸಿದ್ದೇನೆ. ಕೌರವ್ಯ! ಧೀಮಂತ ಕಾರ್ತಿಕೇಯನ ಜನ್ಮದ ಕುರಿತು ಕೇಳು.

03213002a ಅದ್ಭುತಸ್ಯಾದ್ಭುತಂ ಪುತ್ರಂ ಪ್ರವಕ್ಷ್ಯಾಮ್ಯಮಿತೌಜಸಂ|

03213002c ಜಾತಂ ಸಪ್ತರ್ಷಿಭಾರ್ಯಾಭಿರ್ಬ್ರಹ್ಮಣ್ಯಂ ಕೀರ್ತಿವರ್ಧನಂ||

ಸಪ್ತ‌ ಋಷಿಗಳ ಪತ್ನಿಯರಲ್ಲಿ ಅದ್ಭುತನಿಗೆ ಜನಿಸಿದ ಅಮಿತೌಜಸ, ಬ್ರಹ್ಮಣ್ಯ, ಕೀರ್ತಿವರ್ಧಕ, ಅದ್ಭುತ ಪುತ್ರನ ಕುರಿತು ಹೇಳುತ್ತೇನೆ.

03213003a ದೇವಾಸುರಾಃ ಪುರಾ ಯತ್ತಾ ವಿನಿಘ್ನಂತಃ ಪರಸ್ಪರಂ|

03213003c ತತ್ರಾಜಯನ್ಸದಾ ದೇವಾನ್ದಾನವಾ ಘೋರರೂಪಿಣಃ||

ಹಿಂದೆ ದೇವತೆಗಳು ಮತ್ತು ಅಸುರರು ಪರಸ್ಪರರನ್ನು ಕೊಲ್ಲುವುದರಲ್ಲಿ ನಿರತರಾಗಿದ್ದರು. ಮತ್ತು ಘೋರರೂಪೀ ದಾನವರು ಯಾವಾಗಲೂ ದೇವತೆಗಳನ್ನು ಜಯಿಸುತ್ತಿದ್ದರು.

03213004a ವಧ್ಯಮಾನಂ ಬಲಂ ದೃಷ್ಟ್ವಾ ಬಹುಶಸ್ತೈಃ ಪುರಂದರಃ|

03213004c ಸ್ವಸೈನ್ಯನಾಯಕಾರ್ಥಾಯ ಚಿಂತಾಮಾಪ ಭೃಶಂ ತದಾ||

ಬಹುಶಸ್ತ್ರಗಳಿಂದ ವಧಿಸಲ್ಪಡುತ್ತಿದ್ದ ತನ್ನ ಸೇನೆಯನ್ನು ನೋಡಿ ಪುರಂದರನು ತನ್ನ ಸೇನೆಯ ನಾಯಕನಿಗಾಗಿ ಬಹಳಷ್ಟು ಚಿಂತಿಸಿದನು.

03213005a ದೇವಸೇನಾಂ ದಾನವೈರ್ಯೋ ಭಗ್ನಾಂ ದೃಷ್ಟ್ವಾ ಮಹಾಬಲಃ|

03213005c ಪಾಲಯೇದ್ವೀರ್ಯಮಾಶ್ರಿತ್ಯ ಸ ಜ್ಞೇಯಃ ಪುರುಷೋ ಮಯಾ||

“ದಾನವರಿಂದ ಭಗ್ನವಾಗುತ್ತಿರುವ ದೇವಸೇನೆಯನ್ನು ನೋಡಿ ವೀರತನದಿಂದ ಅದನ್ನು ಪಾಲಿಸುವ ಮಹಾಬಲಿ ಪುರುಷನನ್ನು ನಾನು ಹುಡುಕಬೇಕು.”

03213006a ಸ ಶೈಲಂ ಮಾನಸಂ ಗತ್ವಾ ಧ್ಯಾಯನ್ನರ್ಥಮಿಮಂ ಭೃಶಂ|

03213006c ಶುಶ್ರಾವಾರ್ತಸ್ವರಂ ಘೋರಮಥ ಮುಕ್ತಂ ಸ್ತ್ರಿಯಾ ತದಾ||

ಆಗ ಅವನು ಮಾನಸ ಪರ್ವತಕ್ಕೆ ಹೋಗಿ ತುಂಬಾ ಆಳವಾದ ಧ್ಯಾನದಲ್ಲಿರಲು ಅಲ್ಲಿ ಘೋರವೂ ಆರ್ತವೂ ಆದ ಸ್ವರದಲ್ಲಿ ಸ್ತ್ರೀಯೋರ್ವಳ ಕೂಗನ್ನು ಕೇಳಿದನು:

03213007a ಅಭಿಧಾವತು ಮಾ ಕಶ್ಚಿತ್ಪುರುಷಸ್ತ್ರಾತು ಚೈವ ಹ|

03213007c ಪತಿಂ ಚ ಮೇ ಪ್ರದಿಶತು ಸ್ವಯಂ ವಾ ಪತಿರಸ್ತು ಮೇ||

“ಯಾರಾದರೂ ಬೇಗ ಬಂದು ನನ್ನನ್ನು ರಕ್ಷಿಸಿ. ಅವನು ನನ್ನ ಪತಿಯಾಗಲಿ ಅಥವಾ ನನಗೆ ಓರ್ವ ಪತಿಯನ್ನು ಹುಡುಕಿಕೊಡಲಿ!”

03213008a ಪುರಂದರಸ್ತು ತಾಮಾಹ ಮಾ ಭೈರ್ನಾಸ್ತಿ ಭಯಂ ತವ|

03213008c ಏವಮುಕ್ತ್ವಾ ತತೋಽಪಶ್ಯತ್ಕೇಶಿನಂ ಸ್ಥಿತಮಗ್ರತಃ||

“ಹೆದರಬೇಡ! ನಿನಗೇನೂ ಭಯವಿಲ್ಲ!” ಎಂದು ಅವಳಿಗೆ ಪುರಂದರನು ಹೇಳಿದನು. ಹೀಗೆ ಹೇಳುತ್ತಿದ್ದಂತೆಯೇ ಮುಂದೆ ನಿಂತಿರುವ ಕೇಶಿನಿಯನ್ನು ನೋಡಿದನು.

03213009a ಕಿರೀಟಿನಂ ಗದಾಪಾಣಿಂ ಧಾತುಮಂತಮಿವಾಚಲಂ|

03213009c ಹಸ್ತೇ ಗೃಹೀತ್ವಾ ತಾಂ ಕನ್ಯಾಮಥೈನಂ ವಾಸವೋಽಬ್ರವೀತ್||

ಕಿರೀಟವನ್ನು ಧರಿಸಿ, ಗದೆಯನ್ನು ಹಿಡಿದು, ಕೈಯಲ್ಲಿ ಆ ಕನ್ಯೆಯನ್ನು ಹಿಡಿದು, ಖನಿಜಗಳ ಪರ್ವತದಂತೆ ನಿಂತಿದ್ದ ಅವನಿಗೆ ವಾಸವನು ಹೇಳಿದನು.

03213010a ಅನಾರ್ಯಕರ್ಮನ್ಕಸ್ಮಾತ್ತ್ವಮಿಮಾಂ ಕನ್ಯಾಂ ಜಿಹೀರ್ಷಸಿ|

03213010c ವಜ್ರಿಣಂ ಮಾಂ ವಿಜಾನೀಹಿ ವಿರಮಾಸ್ಯಾಃ ಪ್ರಬಾಧನಾತ್||

“ಈ ಕನ್ಯೆಯಮೇಲೆ ಅನಾರ್ಯಕರ್ಮವನ್ನು ಎಸೆಗಲು ಏಕೆ ತೊಡಗಿದ್ದೀಯೆ. ನನ್ನನ್ನು ವಜ್ರಿಯೆಂದು ತಿಳಿ. ಇವಳಿಗೆ ಏನೂ ಅಪಾಯಮಾಡದಂತೆ ನಿನ್ನನ್ನು ತಡೆಯುತ್ತೇನೆ.”

03213011 ಕೇಶ್ಯುವಾಚ|

03213011a ವಿಸೃಜಸ್ವ ತ್ವಮೇವೈನಾಂ ಶಕ್ರೈಷಾ ಪ್ರಾರ್ಥಿತಾ ಮಯಾ|

03213011c ಕ್ಷಮಂ ತೇ ಜೀವತೋ ಗಂತುಂ ಸ್ವಪುರಂ ಪಾಕಶಾಸನ||

ಕೇಶಿಯು ಹೇಳಿದನು: “ಶಕ್ರ! ಇವಳನ್ನು ನೀನು ಬಿಟ್ಟುಬಿಡು. ಇವಳನ್ನು ನಾನು ಬಯಸಿದ್ದೇನೆ. ಪಾಕಶಾಸನ! ಜೀವಂತವಾಗಿ ನೀನು ನಿನ್ನ ಪುರಕ್ಕೆ ಹೋಗಬಲ್ಲೆ.””

03213012 ಮಾರ್ಕಂಡೇಯ ಉವಾಚ|

03213012a ಏವಮುಕ್ತ್ವಾ ಗದಾಂ ಕೇಶೀ ಚಿಕ್ಷೇಪೇಂದ್ರವಧಾಯ ವೈ|

03213012c ತಾಮಾಪತಂತೀಂ ಚಿಚ್ಚೇದ ಮಧ್ಯೇ ವಜ್ರೇಣ ವಾಸವಃ||

ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಿ ಕೇಶಿಯು ಇಂದ್ರನನ್ನು ವಧಿಸಲು ಗದೆಯನ್ನು ಎಸೆದನು. ಮೇಲೆ ಬೀಳುತ್ತಿರುವ ಅದನ್ನು ಮಧ್ಯದಲ್ಲಿಯೇ ವಾಸವನು ವಜ್ರದಿಂದ ತುಂಡರಿಸಿದನು.

03213013a ಅಥಾಸ್ಯ ಶೈಲಶಿಖರಂ ಕೇಶೀ ಕ್ರುದ್ಧೋ ವ್ಯವಾಸೃಜತ್|

03213013c ತದಾಪತಂತಂ ಸಂಪ್ರೇಕ್ಷ್ಯ ಶೈಲಶೃಂಗಂ ಶತಕ್ರತುಃ|

03213013e ಬಿಭೇದ ರಾಜನ್ವಜ್ರೇಣ ಭುವಿ ತನ್ನಿಪಪಾತ ಹ||

ರಾಜನ್! ಆಗ ಕೃದ್ಧನಾದ ಕೇಶಿಯು ಕಲ್ಲುಗಳ ಶಿಖರವನ್ನು ಅವನ ಮೇಲೆ ಎಸೆದನು. ಬೀಳುತ್ತಿದ್ದ ಆ ಶೈಲಶೃಂಗವನ್ನು ನೋಡಿ ಶತಕ್ರತುವು ವಜ್ರದಿಂದ ತುಂಡರಿಸಲು ಅದು ಭೂಮಿಯ ಮೇಲೆ ಬಿದ್ದಿತು.

03213014a ಪತತಾ ತು ತದಾ ಕೇಶೀ ತೇನ ಶೃಂಗೇಣ ತಾಡಿತಃ|

03213014c ಹಿತ್ವಾ ಕನ್ಯಾಂ ಮಹಾಭಾಗಾಂ ಪ್ರಾದ್ರವದ್ಭೃಶಪೀಡಿತಃ||

ಬೀಳುತ್ತಿರುವ ಆ ಶೃಂಗದಿಂದ ಪೆಟ್ಟುತಿಂದು ತುಂಬಾ ಪೀಡಿತನಾದ ಕೇಶಿಯು ಆ ಮಹಾಭಾಗೆ ಕನ್ಯೆಯನ್ನು ಅಲ್ಲಿಯೇ ಬಿಟ್ಟು ಓಡಿಹೋದನು.

03213015a ಅಪಯಾತೇಽಸುರೇ ತಸ್ಮಿಂಸ್ತಾಂ ಕನ್ಯಾಂ ವಾಸವೋಽಬ್ರವೀತ್|

03213015c ಕಾಸಿ ಕಸ್ಯಾಸಿ ಕಿಂ ಚೇಹ ಕುರುಷೇ ತ್ವಂ ಶುಭಾನನೇ||

ಆ ಅಸುರನು ಹೊರಟುಹೋಗಲು ವಾಸವನು ಕನ್ಯೆಯನ್ನು ಕೇಳಿದನು: “ಶುಭಾನನೇ! ನೀನು ಯಾರು ಮತ್ತು ಯಾರವಳು? ಮತ್ತು ಇಲ್ಲಿ ನೀನು ಏನು ಮಾಡುತ್ತಿರುವೆ?”

03213016 ಕನ್ಯೋವಾಚ|

03213016a ಅಹಂ ಪ್ರಜಾಪತೇಃ ಕನ್ಯಾ ದೇವಸೇನೇತಿ ವಿಶ್ರುತಾ|

03213016c ಭಗಿನೀ ದೈತ್ಯಸೇನಾ ಮೇ ಸಾ ಪೂರ್ವಂ ಕೇಶಿನಾ ಹೃತಾ||

ಕನ್ಯೆಯು ಹೇಳಿದಳು: “ನಾನು ದೇವಸೇನಾ ಎಂದು ವಿಶ್ರುತಳಾದ ಪ್ರಜಾಪತಿಯ ಮಗಳು. ನನ್ನ ತಂಗಿ ದೈತ್ಯಸೇನಳನ್ನು ಮೊದಲೇ ಕೇಶಿಯು ಅಪಹರಿಸಿಕೊಂಡು ಹೋಗಿದ್ದಾನೆ.

03213017a ಸಹೈವಾವಾಂ ಭಗಿನ್ಯೌ ತು ಸಖೀಭಿಃ ಸಹ ಮಾನಸಂ|

03213017c ಆಗಚ್ಚಾವೇಹ ರತ್ಯರ್ಥಮನುಜ್ಞಾಪ್ಯ ಪ್ರಜಾಪತಿಂ||

ಪ್ರಜಾಪತಿಯ ಅಪ್ಪಣೆಯನ್ನು ಪಡೆದು ನಾವಿಬ್ಬರು ಸಹೋದರಿಯರೂ ಸಖಿಗಳ ಸಹಿತ ಈ ಮಾನಸ ಪರ್ವತಕ್ಕೆ ಸಂತೋಷಪಡಲು ಬರುತ್ತಿದ್ದೆವು.

03213018a ನಿತ್ಯಂ ಚಾವಾಂ ಪ್ರಾರ್ಥಯತೇ ಹರ್ತುಂ ಕೇಶೀ ಮಹಾಸುರಃ|

03213018c ಇಚ್ಚತ್ಯೇನಂ ದೈತ್ಯಸೇನಾ ನ ತ್ವಹಂ ಪಾಕಶಾಸನ||

ಪಾಕಶಾಸನ! ನಿತ್ಯವೂ ಮಹಾಸುರ ಕೇಶಿಯು ನಮ್ಮನ್ನು ಬಯಸಿ ಕಾಡುತ್ತಿದ್ದನು. ದೈತ್ಯಸೇನೆಯು ಅವನನ್ನು ಕೇಳಿದಳು. ಆದರೆ ನಾನು ಕೇಳಲಿಲ್ಲ.

03213019a ಸಾ ಹೃತಾ ತೇನ ಭಗವನ್ಮುಕ್ತಾಹಂ ತ್ವದ್ಬಲೇನ ತು|

03213019c ತ್ವಯಾ ದೇವೇಂದ್ರ ನಿರ್ದಿಷ್ಟಂ ಪತಿಮಿಚ್ಚಾಮಿ ದುರ್ಜಯಂ||

ಭಗವನ್! ಅವಳನ್ನು ಅವನು ಅಪಹರಿಸಿಕೊಂಡು ಹೋದನು. ಆದರೆ ನಿನ್ನ ಬಲದಿಂದ ನಾನು ಬಿಡುಗಡೆಹೊಂದಿದೆನು. ದೇವೇಂದ್ರ! ಈಗ ನೀನು ನನಗೆ ದುರ್ಜಯನಾದ ಪತಿಯನ್ನು ನಿರ್ಧರಿಸಿಕೊಡಬೇಕೆಂದು ಬಯಸುತ್ತೇನೆ.”

03213020 ಇಂದ್ರ ಉವಾಚ|

03213020a ಮಮ ಮಾತೃಷ್ವಸೇಯಾ ತ್ವಂ ಮಾತಾ ದಾಕ್ಷಾಯಣೀ ಮಮ|

03213020c ಆಖ್ಯಾತಂ ತ್ವಹಮಿಚ್ಚಾಮಿ ಸ್ವಯಮಾತ್ಮಬಲಂ ತ್ವಯಾ||

ಇಂದ್ರನು ಹೇಳಿದನು: “ನೀನು ನನ್ನ ಮಾತೆ ದಾಕ್ಷಾಯಣಿಯ ತಂಗಿಯ ಮಗಳು. ಈಗ ನಿನ್ನ ಬಲದ ಕುರಿತು ನೀನೇ ಹೇಳಬೇಕೆಂದು ನಾನು ಬಯಸುತ್ತೇನೆ.”

03213021 ಕನ್ಯೋವಾಚ|

03213021a ಅಬಲಾಹಂ ಮಹಾಬಾಹೋ ಪತಿಸ್ತು ಬಲವಾನ್ಮಮ|

03213021c ವರದಾನಾತ್ಪಿತುರ್ಭಾವೀ ಸುರಾಸುರನಮಸ್ಕೃತಃ||

ಕನ್ಯೆಯು ಹೇಳಿದಳು: “ಮಹಾಬಾಹೋ! ನಾನು ಅಬಲೆ; ಆದರೆ ನನ್ನ ಪತಿಯು ಬಲವಂತ. ತಂದೆಯ ವರದಾನದಂತೆ ಅವನನ್ನು ಸುರಾಸರರಿಂದಲೂ ನಮಸ್ಕರಿಸಲ್ಪಡುವವನಾಗುತ್ತಾನೆ.”

03213022 ಇಂದ್ರ ಉವಾಚ|

03213022a ಕೀದೃಶಂ ವೈ ಬಲಂ ದೇವಿ ಪತ್ಯುಸ್ತವ ಭವಿಷ್ಯತಿ|

03213022c ಏತದಿಚ್ಚಾಮ್ಯಹಂ ಶ್ರೋತುಂ ತವ ವಾಕ್ಯಮನಿಂದಿತೇ||

ಇಂದ್ರನು ಹೇಳಿದನು: “ದೇವಿ! ಅನಿಂದಿತೇ! ನಿನ್ನ ಪತಿಯು ಯಾವರೀತಿಯ ಬಲವನ್ನು ಹೊಂದಿರುತ್ತಾನೆ? ಇದರ ಕುರಿತಾದ ನಿನ್ನ ಮಾತನ್ನು ಕೇಳಲು ಬಯಸುತ್ತೇನೆ.”

03213023 ಕನ್ಯೋವಾಚ|

03213023a ದೇವದಾನವಯಕ್ಷಾಣಾಂ ಕಿನ್ನರೋರಗರಕ್ಷಸಾಂ|

03213023c ಜೇತಾ ಸ ದೃಷ್ಟೋ ದುಷ್ಟಾನಾಂ ಮಹಾವೀರ್ಯೋ ಮಹಾಬಲಃ||

03213024a ಯಸ್ತು ಸರ್ವಾಣಿ ಭೂತಾನಿ ತ್ವಯಾ ಸಹ ವಿಜೇಷ್ಯತಿ|

03213024c ಸ ಹಿ ಮೇ ಭವಿತಾ ಭರ್ತಾ ಬ್ರಹ್ಮಣ್ಯಃ ಕೀರ್ತಿವರ್ಧನಃ||

ಕನ್ಯೆಯು ಹೇಳಿದಳು: “ದೇವ-ದಾನವ-ಯಕ್ಷ-ಕಿನ್ನರ-ಉರಗ- ರಾಕ್ಷಸರನ್ನು ಗೆಲ್ಲುವ, ನಿನ್ನೊಡನೆ ಎಲ್ಲ ಭೂತಗಳನ್ನೂ ಜಯಿಸಬಲ್ಲ, ದುಷ್ಟರನ್ನು ನಿಯಂತ್ರಿಸುವ, ಮಹಾವೀರ್ಯ, ಮಹಾಬಲ, ಕೀರ್ತಿವರ್ಧನ, ಬ್ರಹ್ಮಣ್ಯನೇ ನನ್ನ ಪತಿಯಾಗುತ್ತಾನೆ.””

03213025 ಮಾರ್ಕಂಡೇಯ ಉವಾಚ|

03213025a ಇಂದ್ರಸ್ತಸ್ಯಾ ವಚಃ ಶ್ರುತ್ವಾ ದುಃಖಿತೋಽಚಿಂತಯದ್ಭೃಶಂ|

03213025c ಅಸ್ಯಾ ದೇವ್ಯಾಃ ಪತಿರ್ನಾಸ್ತಿ ಯಾದೃಶಂ ಸಂಪ್ರಭಾಷತೇ||

ಮಾರ್ಕಂಡೇಯನು ಹೇಳಿದನು: “ಅವಳ ಮಾತುಗಳನ್ನು ಕೇಳಿ ಇಂದ್ರನು ತುಂಬಾ ದುಃಖಿತನಾಗಿ ಆಲೋಚಿಸಿದನು: “ಈ ದೇವಿಯು ಹೇಳುವಂತಹ ಪತಿಯು ಇವಳಿಗೆ ಇಲ್ಲವಲ್ಲ!”

03213026a ಅಥಾಪಶ್ಯತ್ಸ ಉದಯೇ ಭಾಸ್ಕರಂ ಭಾಸ್ಕರದ್ಯುತಿಃ|

03213026c ಸೋಮಂ ಚೈವ ಮಹಾಭಾಗಂ ವಿಶಮಾನಂ ದಿವಾಕರಂ||

ಆಗ ಆ ಭಾಸ್ಕರದ್ಯುತಿಯು ಉದಯಿಸುತ್ತಿರುವ ಭಾಸ್ಕರನನ್ನೂ ಮತ್ತು ದಿವಾಕರನನ್ನು ಪ್ರವೇಶಿಸುತ್ತಿರುವ ಮಹಾಭಾಗ ಸೋಮನನ್ನು ನೋಡಿದನು.

03213027a ಅಮಾವಾಸ್ಯಾಂ ಸಂಪ್ರವೃತ್ತಂ ಮುಹೂರ್ತಂ ರೌದ್ರಮೇವ ಚ|

03213027c ದೇವಾಸುರಂ ಚ ಸಂಗ್ರಾಮಂ ಸೋಽಪಶ್ಯದುದಯೇ ಗಿರೌ||

ಆ ಅಮವಾಸ್ಯೆಯ ರೌದ್ರ ಮುಹೂರ್ತದಲ್ಲಿ ಅವನು ಉದಯಗಿರಿಯಲ್ಲಿ ದೇವಾಸುರರ ಸಂಗ್ರಾಮವನ್ನು ನೋಡಿದನು.

03213028a ಲೋಹಿತೈಶ್ಚ ಘನೈರ್ಯುಕ್ತಾಂ ಪೂರ್ವಾಂ ಸಂಧ್ಯಾಂ ಶತಕ್ರತುಃ|

03213028c ಅಪಶ್ಯಲ್ಲೋಹಿತೋದಂ ಚ ಭಗವಾನ್ವರುಣಾಲಯಂ||

ಶತಕ್ರತುವು ಆ ಪೂರ್ವ ಸಂಧ್ಯೆಯು ಕೆಂಪು ಮೋಡಗಳಿಂದ ಕವಿದಿರುವುದನ್ನೂ, ಭಗವಾನ್ ಸಮುದ್ರವು ಕೆಂಪಾಗಿರುವುದನ್ನು ನೋಡಿದನು.

03213029a ಭೃಗುಭಿಶ್ಚಾಂಗಿರೋಭಿಶ್ಚ ಹುತಂ ಮಂತ್ರೈಃ ಪೃಥಗ್ವಿಧೈಃ|

03213029c ಹವ್ಯಂ ಗೃಹೀತ್ವಾ ವಹ್ನಿಂ ಚ ಪ್ರವಿಶಂತಂ ದಿವಾಕರಂ||

ಅಗ್ನಿಯು ಭೃಗು ಮತ್ತು ಅಂಗಿರಸರು ಮಂತ್ರಗಳಿಂದ ಹಾಕಿದ ವಿವಿಧ ಹವಿಸ್ಸುಗಳನ್ನು ಎತ್ತಿಕೊಂಡು ದಿವಾಕರನನ್ನು ಪ್ರವೇಶಿಸುತ್ತಿರುವುದನ್ನೂ ನೋಡಿದನು.

03213030a ಪರ್ವ ಚೈವ ಚತುರ್ವಿಂಶಂ ತದಾ ಸೂರ್ಯಮುಪಸ್ಥಿತಂ|

03213030c ತಥಾ ಧರ್ಮಗತಂ ರೌದ್ರಂ ಸೋಮಂ ಸೂರ್ಯಗತಂ ಚ ತಂ||

ಆಗ ಹದಿನಾಲ್ಕು ಪರ್ವಗಳೂ ಸೂರ್ಯನ ಉಪಸ್ಥಿತಿಯಲ್ಲಿರುವುದನ್ನು ಮತ್ತು ಹಾಗೆಯೇ ರೌದ್ರನಾದ ಸೋಮನು ಸೂರ್ಯನಲ್ಲಿಗೆ ಹೋಗುವುದನ್ನು ನೋಡಿದನು.

03213031a ಸಮಾಲೋಕ್ಯೈಕತಾಮೇವ ಶಶಿನೋ ಭಾಸ್ಕರಸ್ಯ ಚ|

03213031c ಸಮವಾಯಂ ತು ತಂ ರೌದ್ರಂ ದೃಷ್ಟ್ವಾ ಶಕ್ರೋ ವ್ಯಚಿಂತಯತ್||

ಈ ರೀತಿಯ ಶಶಿ ಮತ್ತು ಭಾಸ್ಕರರು ಒಂದಾಗುವ ಆ ರೌದ್ರಸಮಯವನ್ನು ನೋಡಿ ಶಕ್ರನು ಯೋಚಿಸಿದನು:

03213032a ಏಷ ರೌದ್ರಶ್ಚ ಸಂಘಾತೋ ಮಹಾನ್ಯುಕ್ತಶ್ಚ ತೇಜಸಾ|

03213032c ಸೋಮಸ್ಯ ವಹ್ನಿಸೂರ್ಯಾಭ್ಯಾಮದ್ಭುತೋಽಯಂ ಸಮಾಗಮಃ|

03213032e ಜನಯೇದ್ಯಂ ಸುತಂ ಸೋಮಃ ಸೋಽಸ್ಯಾ ದೇವ್ಯಾಃ ಪತಿರ್ಭವೇತ್||

“ಈ ಸೋಮ ಮತ್ತು ಸೂರ್ಯರ ಅದ್ಭುತ ಸಮಾಗಮದ ವಹ್ನಿಯು ರೌದ್ರ ಮತ್ತು ತೇಜಸ್ವಿಯಾಗಿದ್ದು ಮಹಾ ಯುದ್ಧವನ್ನು ಸೂಚಿಸುತ್ತದೆ. ಇಂದು ಸೋಮನಲ್ಲಿ ಜನಿಸುವ ಮಗನು ಈ ದೇವಿಯ ಪತಿಯಾಗುತ್ತಾನೆ.

03213033a ಅಗ್ನಿಶ್ಚೈತೈರ್ಗುಣೈರ್ಯುಕ್ತಃ ಸರ್ವೈರಗ್ನಿಶ್ಚ ದೇವತಾ|

03213033c ಏಷ ಚೇಜ್ಜನಯೇದ್ಗರ್ಭಂ ಸೋಽಸ್ಯಾ ದೇವ್ಯಾಃ ಪತಿರ್ಭವೇತ್||

ಅಗ್ನಿಯೂ ಕೂಡ ಈ ಗುಣಗಳಿಂದ ಕೂಡಿದ್ದು ಅಗ್ನಿಯೂ ಎಲ್ಲರ ದೇವತೆಯಾಗಿದ್ದಾನೆ. ಇವನ ಗರ್ಭದಿಂದಲೂ ಜನಿಸುವವನು ಈ ದೇವಿಯ ಪತಿಯಾಗುತ್ತಾನೆ.”

03213034a ಏವಂ ಸಂಚಿಂತ್ಯ ಭಗವಾನ್ಬ್ರಹ್ಮಲೋಕಂ ತದಾ ಗತಃ|

03213034c ಗೃಹೀತ್ವಾ ದೇವಸೇನಾಂ ತಾಮವಂದತ್ಸ ಪಿತಾಮಹಂ|

03213034e ಉವಾಚ ಚಾಸ್ಯಾ ದೇವ್ಯಾಸ್ತ್ವಂ ಸಾಧು ಶೂರಂ ಪತಿಂ ದಿಶ||

ಹೀಗೆ ಯೋಚಿಸಿ ಆ ಭಗವಾನನು ದೇವಸೇನೆಯನ್ನು ಕರೆದುಕೊಂಡು ಬ್ರಹ್ಮಲೋಕಕ್ಕೆ ಹೋದನು. ಪಿತಾಮಹನಿಗೆ ವಂದಿಸಿ “ಈ ದೇವಿಗೆ ನೀನು ಓರ್ವ ಸಾಧು ಶೂರನನ್ನು ಪತಿಯನ್ನಾಗಿ ನಿರ್ಧರಿಸು” ಎಂದನು.

03213035 ಬ್ರಹ್ಮೋವಾಚ|

03213035a ಯಥೈತಚ್ಚಿಂತಿತಂ ಕಾರ್ಯಂ ತ್ವಯಾ ದಾನವಸೂದನ|

03213035c ತಥಾ ಸ ಭವಿತಾ ಗರ್ಭೋ ಬಲವಾನುರುವಿಕ್ರಮಃ||

ಬ್ರಹ್ಮನು ಹೇಳಿದನು: “ದಾನವಸೂದನ! ನೀನು ಏನನ್ನು ಯೋಚಿಸಿದ್ದೀಯೋ ಹಾಗೆಯೇ ಆಗುತ್ತದೆ. ಆ ಗರ್ಭವು ಬಲವಾನನೂ ವಿಕ್ರಮಿಯೂ ಆಗುತ್ತಾನೆ.

03213036a ಸ ಭವಿಷ್ಯತಿ ಸೇನಾನೀಸ್ತ್ವಯಾ ಸಹ ಶತಕ್ರತೋ|

03213036c ಅಸ್ಯಾ ದೇವ್ಯಾಃ ಪತಿಶ್ಚೈವ ಸ ಭವಿಷ್ಯತಿ ವೀರ್ಯವಾನ್||

ಶತಕ್ರತೋ! ನಿನ್ನೊಡನೆ ಅವನು ಸೇನಾನಿಯಾಗುತ್ತಾನೆ. ಆ ವೀರ್ಯವಾನನು ಈ ದೇವಿಯ ಪತಿಯೂ ಆಗುತ್ತಾನೆ.””

03213037 ಮಾರ್ಕಂಡೇಯ ಉವಾಚ|

03213037a ಏತಚ್ಚ್ರುತ್ವಾ ನಮಸ್ತಸ್ಮೈ ಕೃತ್ವಾಸೌ ಸಹ ಕನ್ಯಯಾ|

03213037c ತತ್ರಾಭ್ಯಗಚ್ಚದ್ದೇವೇಂದ್ರೋ ಯತ್ರ ದೇವರ್ಷಯೋಽಭವನ್|

03213037e ವಸಿಷ್ಠಪ್ರಮುಖಾ ಮುಖ್ಯಾ ವಿಪ್ರೇಂದ್ರಾಃ ಸುಮಹಾವ್ರತಾಃ||

ಮಾರ್ಕಂಡೇಯನು ಹೇಳಿದನು: “ಇದನ್ನು ಕೇಳಿ ಅವನಿಗೆ ನಮಸ್ಕರಿಸಿ ದೇವೇಂದ್ರನು ಆ ಕನ್ಯೆಯೊಡನೆ ವಸಿಷ್ಠ ಪ್ರಮುಖರಾದ ಮುಖ್ಯ ಸುಮಹಾವ್ರತ ವಿಪ್ರೇಂದ್ರ ದೇವರ್ಷಿಗಳಿರುವಲ್ಲಿಗೆ ಹೋದನು.

03213038a ಭಾಗಾರ್ಥಂ ತಪಸೋಪಾತ್ತಂ ತೇಷಾಂ ಸೋಮಂ ತಥಾಧ್ವರೇ|

03213038c ಪಿಪಾಸವೋ ಯಯುರ್ದೇವಾಃ ಶತಕ್ರತುಪುರೋಗಮಾಃ||

ಸೋಮದ ಭಾಗಾರ್ಥಿಗಳಾಗಿ ಆ ತಪಸ್ವಿಗಳ ಅಧ್ವರಕ್ಕೆ  ಶತಕ್ರತುವನ್ನು ಮುಂದಿರಿಸಿಕೊಂಡು ದೇವತೆಗಳು ಹೋದರು.

03213039a ಇಷ್ಟಿಂ ಕೃತ್ವಾ ಯಥಾನ್ಯಾಯಂ ಸುಸಮಿದ್ಧೇ ಹುತಾಶನೇ|

03213039c ಜುಹುವುಸ್ತೇ ಮಹಾತ್ಮಾನೋ ಹವ್ಯಂ ಸರ್ವದಿವೌಕಸಾಂ||

ಯಥಾನ್ಯಾಯವಾಗಿ ಚೆನ್ನಾಗಿ ಉರಿಯುತ್ತಿದ್ದ ಅಗ್ನಿಯಲ್ಲಿ ಇಷ್ಟಿಯನ್ನು ಮಾಡಿ ಆ ಮಹಾತ್ಮರು ಎಲ್ಲ ದಿವೌಕಸರಿಗೆ ಹವಿಸ್ಸನ್ನು ನೀಡಿದರು.

03213040a ಸಮಾಹೂತೋ ಹುತವಹಃ ಸೋಽದ್ಭುತಃ ಸೂರ್ಯಮಂಡಲಾತ್|

03213040c ವಿನಿಃಸೃತ್ಯಾಯಯೌ ವಹ್ನಿರ್ವಾಗ್ಯತೋ ವಿಧಿವತ್ಪ್ರಭುಃ|

03213040e ಆಗಮ್ಯಾಹವನೀಯಂ ವೈ ತೈರ್ದ್ವಿಜೈರ್ಮಂತ್ರತೋ ಹುತಂ||

ಸೂರ್ಯಮಂಡಲದಿಂದ ಅಗ್ನಿ ಅದ್ಭುತನನ್ನು ಮಂತ್ರಗಳ ಮೂಲಕ ಕರೆಯಲಾಯಿತು. ಆ ಪ್ರಭು ಅಗ್ನಿಯು ವಿಧಿವತ್ತಾಗಿ ಅಲ್ಲಿಂದ ಹೊರಟು ದ್ವಿಜರು ಮಂತ್ರಪೂರ್ವಕವಾಗಿ ನೀಡುತ್ತಿದ್ದ ಆಹುತಿಯನ್ನು ಕೊಂಡೊಯ್ಯಲು ಆಗಮಿಸಿದನು.

03213041a ಸ ತತ್ರ ವಿವಿಧಂ ಹವ್ಯಂ ಪ್ರತಿಗೃಹ್ಯ ಹುತಾಶನಃ|

03213041c ಋಷಿಭ್ಯೋ ಭರತಶ್ರೇಷ್ಠ ಪ್ರಾಯಚ್ಚತ ದಿವೌಕಸಾಂ||

ಭರತಶ್ರೇಷ್ಠ! ಅಲ್ಲಿ ಋಷಿಗಳು ನೀಡಿದ ವಿವಿಧ ಹವ್ಯಗಳನ್ನು ತೆಡೆದುಕೊಂಡು ಆ ಅಗ್ನಿಯು ದಿವೌಕಸರಿಗೆ ನೀಡಿದನು.

03213042a ನಿಷ್ಕ್ರಾಮಂಶ್ಚಾಪ್ಯಪಶ್ಯತ್ಸ ಪತ್ನೀಸ್ತೇಷಾಂ ಮಹಾತ್ಮನಾಂ|

03213042c ಸ್ವೇಷ್ವಾಶ್ರಮೇಷೂಪವಿಷ್ಟಾಃ ಸ್ನಾಯಂತೀಶ್ಚ ಯಥಾಸುಖಂ||

ಹಿಂದಿರುಗಿ ಬರುವಾಗ ಅವನು ಮಹಾತ್ಮ ಋಷಿಗಳ ಪತ್ನಿಯರು ಯಥಾಸುಖವಾಗಿ ಹಾಸಿಗೆಗಳ ಮೇಲೆ ಮಲಗಿಕೊಂಡಿರುವುದನ್ನು ನೋಡಿದನು.

03213043a ರುಕ್ಮವೇದಿನಿಭಾಸ್ತಾಸ್ತು ಚಂದ್ರಲೇಖಾ ಇವಾಮಲಾಃ|

03213043c ಹುತಾಶನಾರ್ಚಿಪ್ರತಿಮಾಃ ಸರ್ವಾಸ್ತಾರಾ ಇವಾದ್ಭುತಾಃ||

ಅವರೆಲ್ಲರೂ ಬಂಗಾರದ ವೇದಿಗಳಂತೆ ಹೊಳೆಯುತ್ತಿದ್ದರು; ಚಂದ್ರಲೇಖದಂತೆ ಶುಭ್ರರಾಗಿದ್ದರು; ಉರಿಯುತ್ತಿರುವ ಅಗ್ನಿಯಂತಿದ್ದರು ಮತ್ತು ನಕ್ಷತ್ರಗಳಂತೆ ಅದ್ಭುತರಾಗಿದ್ದರು.

03213044a ಸ ತದ್ಗತೇನ ಮನಸಾ ಬಭೂವ ಕ್ಷುಭಿತೇಂದ್ರಿಯಃ|

03213044c ಪತ್ನೀರ್ದೃಷ್ಟ್ವಾ ದ್ವಿಜೇಂದ್ರಾಣಾಂ ವಹ್ನಿಃ ಕಾಮವಶಂ ಯಯೌ||

ಆ ದ್ವಿಜೇಂದ್ರರ ಪತ್ನಿಯರನ್ನು ನೋಡಿ ಅಗ್ನಿಯ ಮನಸ್ಸು ಕ್ಷೋಭೆಗೊಂಡಿತು, ಮತ್ತು ಇಂದ್ರಿಯವು ಕಾಮವಶವಾಯಿತು.

03213045a ಸ ಭೂಯಶ್ಚಿಂತಯಾಮಾಸ ನ ನ್ಯಾಯ್ಯಂ ಕ್ಷುಭಿತೋಽಸ್ಮಿ ಯತ್|

03213045c ಸಾಧ್ವೀಃ ಪತ್ನೀರ್ದ್ವಿಜೇಂದ್ರಾಣಾಮಕಾಮಾಃ ಕಾಮಯಾಮ್ಯಹಂ||

ಅವನು ಮತ್ತೆ ಮತ್ತೆ ಯೋಚಿಸಿದನು: “ನಾನು ಹೀಗೆ ಕ್ಷೋಭೆಗೊಳಗಾಗುವುದು ಸರಿಯಲ್ಲ. ದ್ವಿಜೇಂದ್ರರ ಈ ಪತ್ನಿಯರು ಸಾಧ್ವಿಯರು. ಬಯಸಬಾರದವರನ್ನು ನಾನು ಬಯಸುತ್ತಿದ್ದೇನೆ.

03213046a ನೈತಾಃ ಶಕ್ಯಾ ಮಯಾ ದ್ರಷ್ಟುಂ ಸ್ಪ್ರಷ್ಟುಂ ವಾಪ್ಯನಿಮಿತ್ತತಃ|

03213046c ಗಾರ್ಹಪತ್ಯಂ ಸಮಾವಿಶ್ಯ ತಸ್ಮಾತ್ಪಶ್ಯಾಮ್ಯಭೀಕ್ಷ್ಣಶಃ||

ನಾನು ಇವರ ಮೇಲೆ ನನ್ನ ದೃಷ್ಟಿಯನ್ನು ಹಾಯಿಸಲೂ ಶಕ್ಯನಿಲ್ಲ. ಅವರಾಗಿ ಬಯಸದೇ ನಾನು ಅವರನ್ನು ಸ್ಪರ್ಷಿಸಲೂ ಸಾಧ್ಯವಿಲ್ಲ. ಆದುದರಿಂದ ನಾನು ಗಾರ್ಹಪತ್ಯನಾಗಿದ್ದುಕೊಂಡು ಅವರನ್ನು ನಿತ್ಯವೂ ನೋಡುತ್ತಾ ತೃಪ್ತಿಪಡೆಯುತ್ತೇನೆ.”

03213047a ಸಂಸ್ಪೃಶನ್ನಿವ ಸರ್ವಾಸ್ತಾಃ ಶಿಖಾಭಿಃ ಕಾಂಚನಪ್ರಭಾಃ|

03213047c ಪಶ್ಯಮಾನಶ್ಚ ಮುಮುದೇ ಗಾರ್ಹಪತ್ಯಂ ಸಮಾಶ್ರಿತಃ||

ಅವನು ಗಾರ್ಹಪತ್ಯನಾಗಿ ಆ ಎಲ್ಲ ಕಾಂಚನಪ್ರಭೆಗಳುಳ್ಳವರನ್ನೂ ತನ್ನ ಜ್ವಾಲೆಗಳಿಂದ ಸ್ಪರ್ಷಿಸುತ್ತಾ ನೋಡುತ್ತಾ ಮುದದಿಂದಿದ್ದನು.

03213048a ನಿರುಷ್ಯ ತತ್ರ ಸುಚಿರಮೇವಂ ವಹ್ನಿರ್ವಶಂ ಗತಃ|

03213048c ಮನಸ್ತಾಸು ವಿನಿಕ್ಷಿಪ್ಯ ಕಾಮಯಾನೋ ವರಾಂಗನಾಃ||

ಆ ವರಾಂಗನೆಯರನ್ನು ಕಾಮಿಸುತ್ತಾ ಮನಸ್ಸನ್ನು ಅವರ ವಶದಲ್ಲಿಟ್ಟು ಅಗ್ನಿಯು ಅಲ್ಲಿ ಬಹಳ ಕಾಲ ವಾಸಿಸಿದನು.

03213049a ಕಾಮಸಂತಪ್ತಹೃದಯೋ ದೇಹತ್ಯಾಗೇ ಸುನಿಶ್ಚಿತಃ|

03213049c ಅಲಾಭೇ ಬ್ರಾಹ್ಮಣಸ್ತ್ರೀಣಾಮಗ್ನಿರ್ವನಮುಪಾಗತಃ||

ಬ್ರಾಹ್ಮಣಸ್ತ್ರೀಯರು ದೊರಕದೇ ಇದ್ದಾಗ ಕಾಮಸಂತಪ್ತಹೃದಯನಾಗಿ ಅಗ್ನಿಯು ದೇಹತ್ಯಾಗಮಾಡಲು ನಿರ್ಧರಿಸಿ ವನಕ್ಕೆ ಬಂದನು.

03213050a ಸ್ವಾಹಾ ತಂ ದಕ್ಷದುಹಿತಾ ಪ್ರಥಮಂ ಕಾಮಯತ್ತದಾ|

03213050c ಸಾ ತಸ್ಯ ಚಿದ್ರಮನ್ವೈಚ್ಚಚ್ಚಿರಾತ್ಪ್ರಭೃತಿ ಭಾಮಿನೀ||

03213050e ಅಪ್ರಮತ್ತಸ್ಯ ದೇವಸ್ಯ ನ ಚಾಪಶ್ಯದನಿಂದಿತಾ||

ಇದಕ್ಕೆ ಮೊದಲೇ ದಕ್ಷನ ಮಗಳು ಸ್ವಾಹಾಳು ಅವನನ್ನು ಬಯಸಿದ್ದಳು. ಅವಳು ತುಂಬಾ ಸಮಯದಿಂದ ಅವನಲ್ಲಿಯ ದುರ್ಬಲತೆಯನ್ನು ಕಾಣಲು ಕಾದುಕೊಂಡಿದ್ದಳು. ಆದರೆ ಆ ಭಾಮಿನಿ ಅನಿಂದಿತೆಯು ಅಲ್ಲಿಯವರೆಗೆ ಆ ದೇವನಲ್ಲಿ ಅಪ್ರಮತ್ತತೆಯನ್ನು ಕಂಡಿರಲಿಲ್ಲ.

03213051a ಸಾ ತಂ ಜ್ಞಾತ್ವಾ ಯಥಾವತ್ತು ವಹ್ನಿಂ ವನಮುಪಾಗತಂ|

03213051c ತತ್ತ್ವತಃ ಕಾಮಸಂತಪ್ತಂ ಚಿಂತಯಾಮಾಸ ಭಾಮಿನೀ||

ಕಾಮಸಂತಪ್ತನಾಗಿ ಅಗ್ನಿಯು ವನಕ್ಕೆ ಬಂದಿರುವುದನ್ನು ತಿಳಿದ ಆ ಭಾಮಿನಿಯು ಆಲೋಚಿಸಿದಳು:

03213052a ಅಹಂ ಸಪ್ತರ್ಷಿಪತ್ನೀನಾಂ ಕೃತ್ವಾ ರೂಪಾಣಿ ಪಾವಕಂ|

03213052c ಕಾಮಯಿಷ್ಯಾಮಿ ಕಾಮಾರ್ತಂ ತಾಸಾಂ ರೂಪೇಣ ಮೋಹಿತಂ|

03213052e ಏವಂ ಕೃತೇ ಪ್ರೀತಿರಸ್ಯ ಕಾಮಾವಾಪ್ತಿಶ್ಚ ಮೇ ಭವೇತ್||

“ನಾನು ಸಪ್ತರ್ಷಿಗಳ ಪತ್ನಿಯರ ರೂಪವನ್ನು ತಾಳಿ ಅವರ ರೂಪಗಳಿಂದ ಮೋಹಿತನಾಗಿ ಕಾಮಾರ್ತನಾಗಿರುವ ಪಾವಕನನ್ನು ಕಾಮಿಸುತ್ತೇನೆ. ಹೀಗೆ ಮಾಡುವುದರಿಂದ ಅವನೂ ಸಂತೋಷಗೊಳ್ಳುತ್ತಾನೆ ಮತ್ತು ನನ್ನ ಆಸೆಯೂ ಪೂರೈಸುತ್ತದೆ.””

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗೀರಸೋಪಾಖ್ಯಾನೇ ಸ್ಕಂದೋತ್ಪತ್ತೌ ತ್ರಯೋದಶಾಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗೀರಸೋಪಾಖ್ಯಾನದಲ್ಲಿ ಸ್ಕಂದೋತ್ಪತ್ತಿಯಲ್ಲಿ ಇನ್ನೂರಾಹದಿಮೂರನೆಯ ಅಧ್ಯಾಯವು.

Related image

[1]ಸ್ಕಂದನ ಜನನದ ಕುರಿತಾದ ಹಲವಾರು ಕಥೆಗಳಿವೆ. ಮಹಾಭಾರತದಲ್ಲಿಯೇ ಮುಂದೆ ಶಲ್ಯಪರ್ವದಲ್ಲಿ ಬರುವ ಸ್ಕಂದನ ಕಥೆಗೂ ಇಲ್ಲಿಯ ಕಥೆಗೂ ವ್ಯತ್ಯಾಸಗಳಿವೆ. ಮಹಾಭಾರತದಲ್ಲಿಯೇ ಇರುವ ಈ ಎರಡು ಕಥೆಗಳು ಸ್ಕಾಂದ ಪುರಾಣದ ಮಾಹೇಶ್ವರ ಖಂಡದ ಎರಡನೆಯ ಕಮಾರಿಕಾ ಖಂಡದಲ್ಲಿ ೨೯ನೆಯ ಅಧ್ಯಾಯದಲ್ಲಿ ಕೊಟ್ಟಿರುವ ಸ್ಕಂದೋತ್ಪತ್ತಿಯ ಕಥೆಗಿಂಥ ಭಿನ್ನವಾಗಿವೆ.

Comments are closed.