Anushasana Parva: Chapter 83

ಅನುಶಾಸನ ಪರ್ವ: ದಾನಧರ್ಮ ಪರ್ವ

೮೩

ಸುವರ್ಣೋತ್ಪತ್ತಿ

ಭೀಷ್ಮನು ಪಿಂಡವನ್ನು ತಂದೆಯ ಕೈಯಲ್ಲಿಡದೇ ದರ್ಭೆಯ ಮೇಲಿಟ್ಟಿದುದು; ಸುವರ್ಣದ ಉತ್ಪತ್ತಿ (೧-೨೭). ಸುವರ್ಣದಾನದ ಮಹಿಮೆಯ ವಿಷಯವಾಗಿ ವಸಿಷ್ಠ -ಪರಶುರಾಮರ ಸಂವಾದದಲ್ಲಿ ದೇವತೆಗಳಿಗೆ ಪಾರ್ವತಿಯ ಶಾಪ ಮತ್ತು ತಾರಕಾಸುರನಿಗೆ ಹೆದರಿ ದೇವತೆಗಳು ಬ್ರಹ್ಮನ ಶರಣುಹೋದ ಕಥೆ (೨೮-೫೭).

13083001 ಯುಧಿಷ್ಠಿರ ಉವಾಚ|

13083001a ಉಕ್ತಂ ಪಿತಾಮಹೇನೇದಂ ಗವಾಂ ದಾನಮನುತ್ತಮಮ್|

13083001c ವಿಶೇಷೇಣ ನರೇಂದ್ರಾಣಾಮಿತಿ ಧರ್ಮಮವೇಕ್ಷತಾಮ್||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಉತ್ತಮ ಗೋದಾನದ ಕುರಿತು, ಅದರಲ್ಲಿಯೂ ವಿಶೇಷವಾಗಿ ಧರ್ಮದೃಷ್ಟಿಯುಳ್ಳ ನರೇಂದ್ರರು ಮಾಡಬಲ್ಲ ಗೋದಾನದ ವಿಷಯವನ್ನು ನೀನು ಹೇಳಿದೆ.

13083002a ರಾಜ್ಯಂ ಹಿ ಸತತಂ ದುಃಖಮಾಶ್ರಮಾಶ್ಚ ಸುದುರ್ವಿದಾಃ|

13083002c ಪರಿವಾರೇಣ ವೈ ದುಃಖಂ ದುರ್ಧರಂ ಚಾಕೃತಾತ್ಮಭಿಃ|

13083002e ಭೂಯಿಷ್ಠಂ ಚ ನರೇಂದ್ರಾಣಾಂ ವಿದ್ಯತೇ ನ ಶುಭಾ ಗತಿಃ||

ರಾಜ್ಯವೆನ್ನುವುದು ಸತತವೂ ದುಃಖದಾಯಕವಾದುದು. ಮನಸ್ಸನ್ನು ವಶದಲ್ಲಿಟ್ಟುಕೊಂಡಿರದವರಿಗಂತೂ ತಮ್ಮ ರಾಜ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಅತ್ಯಂತ ಕಠಿಣವು. ಪ್ರಾಯಶಃ ಇದರಿಂದಾಗಿ ರಾಜರಿಗೆ ಶುಭಗತಿಯು ಪ್ರಾಪ್ತವಾಗುವುದಿಲ್ಲ.

13083003a ಪೂಯಂತೇ ತೇಽತ್ರ ನಿಯತಂ ಪ್ರಯಚ್ಚಂತೋ ವಸುಂಧರಾಮ್|

13083003c ಪೂರ್ವಂ ಚ ಕಥಿತಾ ಧರ್ಮಾಸ್ತ್ವಯಾ ಮೇ ಕುರುನಂದನ||

ಅವರಲ್ಲಿ ನಿಯಮಪೂರ್ವಕವಾಗಿ ಭೂಮಿಯನ್ನು ದಾನಮಾಡುವವರೇ ಪುನೀತರಾಗುತ್ತಾರೆ. ಕುರುನಂದನ! ಮೊದಲು ನೀನು ನನಗೆ ಧರ್ಮಗಳ ಕುರಿತು ಹೇಳಿದೆ.

13083004a ಏವಮೇವ ಗವಾಮುಕ್ತಂ ಪ್ರದಾನಂ ತೇ ನೃಗೇಣ ಹ|

13083004c ಋಷಿಣಾ ನಾಚಿಕೇತೇನ ಪೂರ್ವಮೇವ ನಿದರ್ಶಿತಮ್||

ಹಾಗೆಯೇ ನೃಗ ಮತ್ತು ಋಷಿ ನಾಚಿಕೇತರು ಗೋದಾನಮಾಡಿದುದರ ಕುರಿತು ಮೊದಲೇ ಹೇಳಿ ನಿರ್ದೇಶಿಸಿರುವೆ.

13083005a ವೇದೋಪನಿಷದೇ ಚೈವ ಸರ್ವಕರ್ಮಸು ದಕ್ಷಿಣಾ|

13083005c ಸರ್ವಕ್ರತುಷು ಚೋದ್ದಿಷ್ಟಂ ಭೂಮಿರ್ಗಾವೋಽಥ ಕಾಂಚನಮ್||

ವೇದೋಪನಿಷತ್ತುಗಳಲ್ಲಿಯೂ ಕೂಡ ಸರ್ವಕರ್ಮಗಳಿಗೆ ದಕ್ಷಿಣೆಯ ವಿಧಿಯನ್ನು ಹೇಳಿದ್ದಾರೆ. ಎಲ್ಲ ಯಜ್ಞಗಳಲ್ಲಿ ಭೂಮಿ, ಗೋವು ಮತ್ತು ಸುವರ್ಣ ದಕ್ಷಿಣೆಯನ್ನು ಹೇಳಿದ್ದಾರೆ.

13083006a ತತ್ರ ಶ್ರುತಿಸ್ತು ಪರಮಾ ಸುವರ್ಣಂ ದಕ್ಷಿಣೇತಿ ವೈ|

13083006c ಏತದಿಚ್ಚಾಮ್ಯಹಂ ಶ್ರೋತುಂ ಪಿತಾಮಹ ಯಥಾತಥಮ್||

ಇವುಗಳಲ್ಲಿ ಸುವರ್ಣವು ಪರಮ ದಕ್ಷಿಣೆಯೆಂದು ಶೃತಿಯಿದೆ. ಆದುದರಿಂದ ಪಿತಾಮಹ! ಈ ವಿಷಯದ ಕುರಿತು ಯಥಾರ್ಥರೂಪದಲ್ಲಿ ಕೇಳಬಯಸುತ್ತೇನೆ.

13083007a ಕಿಂ ಸುವರ್ಣಂ ಕಥಂ ಜಾತಂ ಕಸ್ಮಿನ್ಕಾಲೇ ಕಿಮಾತ್ಮಕಮ್|

13083007c ಕಿಂ ದಾನಂ ಕಿಂ ಫಲಂ ಚೈವ ಕಸ್ಮಾಚ್ಚ ಪರಮುಚ್ಯತೇ||

ಸುವರ್ಣವೆಂದರೆ ಏನು? ಯಾವಾಗ ಮತ್ತು ಹೇಗೆ ಅದು ಉತ್ಪನ್ನವಾಯಿತು? ಸುವರ್ಣವು ಎಂಥಹುದು? ಇದರ ದಾನದ ಫಲವೇನು? ಮತ್ತು ಸುವರ್ಣವನ್ನು ಏಕೆ ಉತ್ತಮ ದಕ್ಷಿಣೆಯೆಂದು ಹೇಳುತ್ತಾರೆ?

13083008a ಕಸ್ಮಾದ್ದಾನಂ ಸುವರ್ಣಸ್ಯ ಪೂಜಯಂತಿ ಮನೀಷಿಣಃ|

13083008c ಕಸ್ಮಾಚ್ಚ ದಕ್ಷಿಣಾರ್ಥಂ ತದ್ಯಜ್ಞಕರ್ಮಸು ಶಸ್ಯತೇ||

ಮನೀಷಿಣರು ಏಕೆ ಸುವರ್ಣ ದಾನವನ್ನು ಅಧಿಕ ಗೌರವಿಸುತ್ತಾರೆ? ಮತ್ತು ಯಜ್ಞಕರ್ಮಗಳಲ್ಲಿ ಸುವರ್ಣ ದಕ್ಷಿಣೆಗಳನ್ನು ಏಕೆ ಪ್ರಶಂಸಿಸುತ್ತಾರೆ?

13083009a ಕಸ್ಮಾಚ್ಚ ಪಾವನಂ ಶ್ರೇಷ್ಠಂ ಭೂಮೇರ್ಗೋಭ್ಯಶ್ಚ ಕಾಂಚನಮ್|

13083009c ಪರಮಂ ದಕ್ಷಿಣಾರ್ಥೇ ಚ ತದ್ಬ್ರವೀಹಿ ಪಿತಾಮಹ||

ಪಿತಾಮಹ! ಸುವರ್ಣವು ಭೂಮಿ ಮತ್ತು ಗೋವುಗಳಿಗಿಂತಲೂ ಏಕೆ ಶ್ರೇಷ್ಠ ಮತ್ತು ಪಾವನವೆನಿಸಿಕೊಂಡಿದೆ? ದಕ್ಷಿಣೆಗಾಗಿ ಅದು ಎಲ್ಲಕ್ಕಿಂತಲೂ ಶ್ರೇಷ್ಠ ಎಂದು ಏಕೆ ಹೇಳುತ್ತಾರೆ? ಅದನ್ನು ಹೇಳು.”

13083010 ಭೀಷ್ಮ ಉವಾಚ|

13083010a ಶೃಣು ರಾಜನ್ನವಹಿತೋ ಬಹುಕಾರಣವಿಸ್ತರಮ್|

13083010c ಜಾತರೂಪಸಮುತ್ಪತ್ತಿಮನುಭೂತಂ ಚ ಯನ್ಮಯಾ||

ಭೀಷ್ಮನು ಹೇಳಿದನು: “ರಾಜನ್! ಮನಗೊಟ್ಟು ಕೇಳು. ಸುವರ್ಣದ ಉತ್ಪತ್ತಿಯ ಕಾರಣವು ಬಹಳ ವಿಸ್ತಾರವಾಗಿದೆ. ಈ ವಿಷಯದಲ್ಲಿ ನನಗಾದ ಅನುಭವದಂತೆ ಎಲ್ಲವನ್ನೂ ಹೇಳುತ್ತೇನೆ.

13083011a ಪಿತಾ ಮಮ ಮಹಾತೇಜಾಃ ಶಂತನುರ್ನಿಧನಂ ಗತಃ|

13083011c ತಸ್ಯ ದಿತ್ಸುರಹಂ ಶ್ರಾದ್ಧಂ ಗಂಗಾದ್ವಾರಮುಪಾಗಮಮ್||

ನನ್ನ ಮಹಾತೇಜಸ್ವೀ ಪಿತ ಶಂತನುವಿನ ನಿಧನವಾದಾಗ ನಾನು ಅವನ ಶ್ರಾದ್ಧವನ್ನು ಮಾಡಲು ಗಂಗಾದ್ವಾರಕ್ಕೆ ಹೋದೆನು.

13083012a ತತ್ರಾಗಮ್ಯ ಪಿತುಃ ಪುತ್ರ ಶ್ರಾದ್ಧಕರ್ಮ ಸಮಾರಭಮ್|

13083012c ಮಾತಾ ಮೇ ಜಾಹ್ನವೀ ಚೈವ ಸಾಹಾಯ್ಯಮಕರೋತ್ತದಾ||

ಪುತ್ರ! ಅಲ್ಲಿ ಆಗಮಿಸಿ ನಾನು ತಂದೆಯ ಶ್ರಾದ್ಧವನ್ನು ಆರಂಭಿಸಿದೆನು. ನನ್ನ ಮಾತೆ ಜಾಹ್ನವಿಯೂ ಕೂಡ ನನಗೆ ಸಹಾಯವನ್ನು ಮಾಡಿದಳು.

13083013a ತತೋಽಗ್ರತಸ್ತಪಃಸಿದ್ಧಾನುಪವೇಶ್ಯ ಬಹೂನೃಷೀನ್|

13083013c ತೋಯಪ್ರದಾನಾತ್ ಪ್ರಭೃತಿ ಕಾರ್ಯಾಣ್ಯಹಮಥಾರಭಮ್||

ಅನಂತರ ಎದಿರು ಅನೇಕ ಸಿದ್ಧ ಮಹರ್ಷಿಗಳನ್ನು ಕುಳ್ಳಿರಿಸಿ ನಾನು ಜಲದಾನಾದಿ ಕಾರ್ಯಗಳನ್ನು ಆರಂಭಿಸಿದೆನು.

13083014a ತತ್ಸಮಾಪ್ಯ ಯಥೋದ್ದಿಷ್ಟಂ ಪೂರ್ವಕರ್ಮ ಸಮಾಹಿತಃ|

13083014c ದಾತುಂ ನಿರ್ವಪಣಂ ಸಮ್ಯಗ್ಯಥಾವದಹಮಾರಭಮ್||

ಏಕಾಗ್ರಚಿತ್ತನಾಗಿ ಶಾಸ್ತ್ರೋಕ್ತವಿಧಿಯಿಂದ ಪಿಂಡದಾನದ ಮೊದಲಿನ ಎಲ್ಲ ಕಾರ್ಯಗಳನ್ನೂ ಮುಗಿಸಿ ವಿಧಿವತ್ತಾಗಿ ಪಿಂಡದಾನವನ್ನು ಮಾಡಲು ಪ್ರಾರಂಭಿಸಿದೆನು.

13083015a ತತಸ್ತಂ ದರ್ಭವಿನ್ಯಾಸಂ ಭಿತ್ತ್ವಾ ಸುರುಚಿರಾಂಗದಃ|

13083015c ಪ್ರಲಂಬಾಭರಣೋ ಬಾಹುರುದತಿಷ್ಠದ್ವಿಶಾಂ ಪತೇ||

ವಿಶಾಂಪತೇ! ಆಗ ಪಿಂಡದಾನಕ್ಕಾಗಿ ಹರಡಿದ್ದ ದರ್ಬೆಗಳನ್ನು ಸರಿಸಿ ಒಂದು ಅತ್ಯಂತ ಸುಂದರವಾದ ಕೈಯು ಹೊರಚಾಚಿತು. ಆ ವಿಶಾಲ ಭುಜದಲ್ಲಿ ತೋಳ್ಬಂದಿಯೇ ಮೊದಲಾದ ಅನೇಕ ಆಭರಣಗಳು ಶೋಭಿಸುತ್ತಿದ್ದವು.

13083016a ತಮುತ್ಥಿತಮಹಂ ದೃಷ್ಟ್ವಾ ಪರಂ ವಿಸ್ಮಯಮಾಗಮಮ್|

13083016c ಪ್ರತಿಗ್ರಹೀತಾ ಸಾಕ್ಷಾನ್ಮೇ ಪಿತೇತಿ ಭರತರ್ಷಭ||

ಭರತರ್ಷಭ! ಮೇಲೆದ್ದಿದ್ದ ಅದನ್ನು ನೋಡಿ ನನಗೆ ಪರಮವಿಸ್ಮಯವಾಯಿತು. ಸಾಕ್ಷಾತ್ ನನ್ನ ತಂದೆಯೇ ಪಿಂಡವನ್ನು ಸ್ವೀಕರಿಸಲು ಅಲ್ಲಿ ಉಪಸ್ಥಿತನಾಗಿದ್ದನು!

13083017a ತತೋ ಮೇ ಪುನರೇವಾಸೀತ್ಸಂಜ್ಞಾ ಸಂಚಿಂತ್ಯ ಶಾಸ್ತ್ರತಃ|

13083017c ನಾಯಂ ವೇದೇಷು ವಿಹಿತೋ ವಿಧಿರ್ಹಸ್ತ ಇತಿ ಪ್ರಭೋ|

13083017e ಪಿಂಡೋ ದೇಯೋ ನರೇಣೇಹ ತತೋ ಮತಿರಭೂನ್ಮಮ||

ಪ್ರಭೋ! ಆದರೆ ಶಾಸ್ತ್ರವಿಧಿಯ ಕುರಿತು ವಿಚಾರಿಸಿದಾಗ ನನ್ನ ಮನಸ್ಸಿನಲ್ಲಿ ಕೂಡಲೇ “ಮನುಷ್ಯರಿಗೆ ಕೈಯಲ್ಲಿ ಪಿಂಡವನ್ನು ನೀಡುವ ವಿಧಿಯು ವೇದಗಳಲ್ಲಿ ವಿಹಿತವಾಗಿಲ್ಲ” ಎಂಬ ವಿಷಯವು ನೆನಪಿಗೆ ಬಂದಿತು.

13083018a ಸಾಕ್ಷಾನ್ನೇಹ ಮನುಷ್ಯಸ್ಯ ಪಿತರೋಽಂತರ್ಹಿತಾಃ ಕ್ವ ಚಿತ್|

13083018c ಗೃಹ್ಣಂತಿ ವಿಹಿತಂ ತ್ವೇವಂ ಪಿಂಡೋ ದೇಯಃ ಕುಶೇಷ್ವಿತಿ||

ಸಾಕ್ಷಾತ್ ತಂದೆಯೇ ಪ್ರಕಟನಾಗಿ ಮನುಷ್ಯನ ಕೈಯಿಂದ ಪಿಂಡವನ್ನು ಎಂದೂ ತೆಗೆದುಕೊಳ್ಳುವುದಿಲ್ಲ. ಶಾಸ್ತ್ರವು ಪಿಂಡವನ್ನು ದರ್ಬೆಯ ಮೇಲೇ ಇಡಬೇಕೆಂದು ವಿಹಿಸಿದೆ.

13083019a ತತೋಽಹಂ ತದನಾದೃತ್ಯ ಪಿತುರ್ಹಸ್ತನಿದರ್ಶನಮ್|

13083019c ಶಾಸ್ತ್ರಪ್ರಮಾಣಾತ್ಸೂಕ್ಷ್ಮಂ ತು ವಿಧಿಂ ಪಾರ್ಥಿವ ಸಂಸ್ಮರನ್||

13083020a ತತೋ ದರ್ಭೇಷು ತತ್ಸರ್ವಮದದಂ ಭರತರ್ಷಭ|

13083020c ಶಾಸ್ತ್ರಮಾರ್ಗಾನುಸಾರೇಣ ತದ್ವಿದ್ಧಿ ಮನುಜರ್ಷಭ||

ಹೀಗೆ ಯೋಚಿಸಿದ ನಾನು ಪ್ರತ್ಯಕ್ಷ ಕಾಣುತ್ತಿದ್ದ ತಂದೆಯ ಕೈಯನ್ನು ಅನಾದರಿಸಿ ಶಾಸ್ತ್ರದ ಪ್ರಮಾಣದಂತೆ ಪಿಂಡದಾನದ ಸೂಕ್ಷ್ಮವಿಧಿಯನ್ನು ನೆನಪಿಸಿಕೊಂಡು ದರ್ಬೆಗಳ ಮೇಲೆಯೇ ಪಿಂಡದಾನವನ್ನು ಮಾಡಿದೆ. ಮನುಜರ್ಷಭ! ಶಾಸ್ತ್ರಮಾರ್ಗವನ್ನು ಅನುಸರಿಸುವುದಕ್ಕಾಗಿಯೇ ನಾನು ಹಾಗೆ ಮಾಡಿದೆ ಎಂದು ತಿಳಿ.

13083021a ತತಃ ಸೋಽಂತರ್ಹಿತೋ ಬಾಹುಃ ಪಿತುರ್ಮಮ ನರಾಧಿಪ|

13083021c ತತೋ ಮಾಂ ದರ್ಶಯಾಮಾಸುಃ ಸ್ವಪ್ನಾಂತೇ ಪಿತರಸ್ತದಾ||

ಜನಾಧಿಪ! ಆಗ ನನ್ನ ತಂದೆಯ ಬಾಹುವು ಅಂತರ್ಹಿತವಾಯಿತು. ಅನಂತರ ಸ್ವಪ್ನದಲ್ಲಿ ತಂದೆಯು ನನಗೆ ಕಾಣಿಸಿಕೊಂಡನು.

13083022a ಪ್ರೀಯಮಾಣಾಸ್ತು ಮಾಮೂಚುಃ ಪ್ರೀತಾಃ ಸ್ಮ ಭರತರ್ಷಭ|

13083022c ವಿಜ್ಞಾನೇನ ತವಾನೇನ ಯನ್ನ ಮುಹ್ಯಸಿ ಧರ್ಮತಃ||

ಸಂತೋಷದಿಂದ ಅವನು ನನಗೆ ಹೇಳಿದನು: “ಭರತರ್ಷಭ! ನಿನ್ನ ಈ ಶಾಸ್ತ್ರಜ್ಞಾನದಿಂದ ಪ್ರಸನ್ನನಾಗಿದ್ದೇನೆ. ಏಕೆಂದರೆ ನೀನು ಧರ್ಮದ ವಿಷಯದಲ್ಲಿ ಮೋಹಿತನಾಗಲಿಲ್ಲ.

13083023a ತ್ವಯಾ ಹಿ ಕುರ್ವತಾ ಶಾಸ್ತ್ರಂ ಪ್ರಮಾಣಮಿಹ ಪಾರ್ಥಿವ|

13083023c ಆತ್ಮಾ ಧರ್ಮಃ ಶ್ರುತಂ ವೇದಾಃ ಪಿತರಶ್ಚ ಮಹರ್ಷಿಭಿಃ||

13083024a ಸಾಕ್ಷಾತ್ಪಿತಾಮಹೋ ಬ್ರಹ್ಮಾ ಗುರವೋಽಥ ಪ್ರಜಾಪತಿಃ|

13083024c ಪ್ರಮಾಣಮುಪನೀತಾ ವೈ ಸ್ಥಿತಿಶ್ಚ ನ ವಿಚಾಲಿತಾ||

ಪಾರ್ಥಿವ! ನೀನು ಇಲ್ಲಿ ಶಾಸ್ತ್ರಗಳ ಪ್ರಮಾಣಗಳನ್ನು ಸ್ವೀಕರಿಸಿ ಆತ್ಮ, ಧರ್ಮ, ವೇದ, ಪಿತೃಗಣ, ಮಹರ್ಷಿಗಳು, ಸಾಕ್ಷಾತ್ ಪಿತಾಮಹ ಬ್ರಹ್ಮ, ಗುರು ಪ್ರಜಾಪತಿ – ಇವರೆಲ್ಲರ ಗೌರವವನ್ನೂ ಹೆಚ್ಚಿಸಿದೆ ಮತ್ತು ಧರ್ಮನಿರತರಾದವರಿಗೆ ನಿನ್ನ ಈ ಆದರ್ಶವನ್ನು ತೋರಿಸಿ ವಿಚಲಿತರಾಗಲು ಬಿಡಲಿಲ್ಲ.

13083025a ತದಿದಂ ಸಮ್ಯಗಾರಬ್ಧಂ ತ್ವಯಾದ್ಯ ಭರತರ್ಷಭ|

13083025c ಕಿಂ ತು ಭೂಮೇರ್ಗವಾಂ ಚಾರ್ಥೇ ಸುವರ್ಣಂ ದೀಯತಾಮಿತಿ||

ಭರತರ್ಷಭ! ಇಂದು ನೀನು ಉತ್ತಮವಾಗಿ ಪ್ರಾರಂಭಿಸಿದ್ದೀಯೆ. ಆದರೆ ಈಗ ನೀನು ಭೂದಾನ ಮತ್ತು ಗೋದಾನಗಳ ನಿಷ್ಕ್ರಯರೂಪದಲ್ಲಿ ಸ್ವಲ್ಪ ಸುವರ್ಣದಾನವನ್ನೂ ಮಾಡು.

13083026a ಏವಂ ವಯಂ ಚ ಧರ್ಮಶ್ಚ ಸರ್ವೇ ಚಾಸ್ಮತ್ಪಿತಾಮಹಾಃ|

13083026c ಪಾವಿತಾ ವೈ ಭವಿಷ್ಯಂತಿ ಪಾವನಂ ಪರಮಂ ಹಿ ತತ್||

ಹೀಗೆ ಮಾಡುವುದರಿಂದ ನಮ್ಮ ಮತ್ತು ನಮ್ಮ ಎಲ್ಲ ಪಿತಾಮಹರೂ ಪವಿತ್ರರಾಗುತ್ತಾರೆ. ಏಕೆಂದರೆ ಸುವರ್ಣವು ಪರಮ ಪಾವನವಾದುದು.

13083027a ದಶ ಪೂರ್ವಾನ್ದಶ ಪರಾಂಸ್ತಥಾ ಸಂತಾರಯಂತಿ ತೇ|

13083027c ಸುವರ್ಣಂ ಯೇ ಪ್ರಯಚ್ಚಂತಿ ಏವಂ ಮೇ ಪಿತರೋಽಬ್ರುವನ್||

13083028a ತತೋಽಹಂ ವಿಸ್ಮಿತೋ ರಾಜನ್ ಪ್ರತಿಬುದ್ಧೋ ವಿಶಾಂ ಪತೇ|

13083028c ಸುವರ್ಣದಾನೇಽಕರವಂ ಮತಿಂ ಭರತಸತ್ತಮ||

ರಾಜನ್! “ಸುವರ್ಣದಾನವನ್ನು ಮಾಡುವವರು ತಮ್ಮ ಹಿಂದಿನ ಮತ್ತು ಮುಂದಿನ ಹತ್ತು ಹತ್ತು ತಲೆಮಾರುಗಳನ್ನು ಉದ್ಧರಿಸುತ್ತಾರೆ.” ನನ್ನ ತಂದೆಯು ಹೀಗೆ ಹೇಳಲು ನನಗೆ ಎಚ್ಚರವಾಯಿತು. ಸ್ವಪ್ನವನ್ನು ನೆನಪಿಸಿಕೊಂಡು ನನಗೆ ಬಹಳ ವಿಸ್ಮಯವಾಯಿತು. ವಿಶಾಂಪತೇ! ಭರತಸತ್ತಮ! ಆಗ ನಾನು ಸುವರ್ಣದಾನವನ್ನು ಮಾಡಲು ನಿಶ್ಚಯಿಸಿದೆ.

13083029a ಇತಿಹಾಸಮಿಮಂ ಚಾಪಿ ಶೃಣು ರಾಜನ್ಪುರಾತನಮ್|

13083029c ಜಾಮದಗ್ನ್ಯಂ ಪ್ರತಿ ವಿಭೋ ಧನ್ಯಮಾಯುಷ್ಯಮೇವ ಚ||

ರಾಜನ್! ವಿಭೋ! ಜಾಮದಗ್ನಿಯ ಕುರಿತಾದ ಈ ಪುರಾತನ ಇತಿಹಾಸವನ್ನು ಕೇಳು. ಈ ಆಖ್ಯಾನವು ಧನ ಮತ್ತು ಆಯುಸ್ಸನ್ನು ವೃದ್ಧಿಸುತ್ತದೆ.

13083030a ಜಾಮದಗ್ನ್ಯೇನ ರಾಮೇಣ ತೀವ್ರರೋಷಾನ್ವಿತೇನ ವೈ|

13083030c ತ್ರಿಃಸಪ್ತಕೃತ್ವಃ ಪೃಥಿವೀ ಕೃತಾ ನಿಃಕ್ಷತ್ರಿಯಾ ಪುರಾ||

ಹಿಂದೆ ಜಾಮದಗ್ನಿ ರಾಮನು ತೀವ್ರ ರೋಷಾನ್ವಿತನಾಗಿ ಎಪ್ಪತ್ತೊಂದು ಬಾರಿ ಭೂಮಿಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿದನು.

13083031a ತತೋ ಜಿತ್ವಾ ಮಹೀಂ ಕೃತ್ಸ್ನಾಂ ರಾಮೋ ರಾಜೀವಲೋಚನಃ|

13083031c ಆಜಹಾರ ಕ್ರತುಂ ವೀರೋ ಬ್ರಹ್ಮಕ್ಷತ್ರೇಣ ಪೂಜಿತಮ್||

13083032a ವಾಜಿಮೇಧಂ ಮಹಾರಾಜ ಸರ್ವಕಾಮಸಮನ್ವಿತಮ್|

ಮಹಾರಾಜ! ಆಗ ಸಂಪೂರ್ಣ ಪೃಥ್ವಿಯನ್ನು ಗೆದ್ದು ವೀರ ರಾಜೀವಲೋಚನ ರಾಮನು ಬ್ರಾಹ್ಮಣರು ಮತ್ತು ಕ್ಷತ್ರಿಯರು ಸನ್ಮಾನಿಸುವ ಮತ್ತು ಸರ್ವಕಾಮಗಳನ್ನೂ ಪೂರೈಸುವ ಅಶ್ವಮೇಧವನ್ನು ನಡೆಸಿದನು.

13083032c ಪಾವನಂ ಸರ್ವಭೂತಾನಾಂ ತೇಜೋದ್ಯುತಿವಿವರ್ಧನಮ್||

13083033a ವಿಪಾಪ್ಮಾಪಿ ಸ ತೇಜಸ್ವೀ ತೇನ ಕ್ರತುಫಲೇನ ವೈ|

13083033c ನೈವಾತ್ಮನೋಽಥ ಲಘುತಾಂ ಜಾಮದಗ್ನ್ಯೋಽಭ್ಯಗಚ್ಚತ||

ಅಶ್ವಮೇಧವು ಸರ್ವಭೂತಗಳನ್ನು ಪಾವನಗೊಳಿಸುತ್ತದೆಯಾದರೂ ಮತ್ತು ತೇಜೋದ್ಯುತಿಗಳನ್ನು ವೃದ್ಧಿಸುತ್ತದೆಯಾದರೂ ಆ ತೇಜಸ್ವಿಯು ಆ ಕ್ರತುವಿನ ಫಲದಿಂದ ಪಾಪಮುಕ್ತನಾಗಲಿಲ್ಲ. ಇದರಿಂದಾಗಿ ಅವನಿಗೆ ತನ್ನ ಲಘುತ್ವದ ಅನುಭವವಾಯಿತು.

13083034a ಸ ತು ಕ್ರತುವರೇಣೇಷ್ಟ್ವಾ ಮಹಾತ್ಮಾ ದಕ್ಷಿಣಾವತಾ|

13083034c ಪಪ್ರಚ್ಚಾಗಮಸಂಪನ್ನಾನೃಷೀನ್ದೇವಾಂಶ್ಚ ಭಾರ್ಗವಃ||

13083035a ಪಾವನಂ ಯತ್ಪರಂ ನೃಣಾಮುಗ್ರೇ ಕರ್ಮಣಿ ವರ್ತತಾಮ್|

13083035c ತದುಚ್ಯತಾಂ ಮಹಾಭಾಗಾ ಇತಿ ಜಾತಘೃಣೋಽಬ್ರವೀತ್||

ಪ್ರಚುರ ದಕ್ಷಿಣೆಗಳಿಂದ ಸಂಪನ್ನವಾಗಿದ್ದ ಆ ಶ್ರೇಷ್ಠ ಯಜ್ಞವನ್ನು ಪೂರ್ಣಗೊಳಿಸಿ ಮಹಾಮನಸ್ವೀ ಭಾರ್ಗವನು ಮನಸ್ಸಿನಲ್ಲಿ ದಯಾಭಾವವನ್ನು ತಾಳಿ ಶಾಸ್ತ್ರಜ್ಞ ಋಷಿಗಳು ಮತ್ತು ದೇವತೆಗಳಲ್ಲಿ ಹೀಗೆ ಪ್ರಶ್ನಿಸಿದನು: “ಮಹಾಭಾಗರೇ! ಉಗ್ರಕರ್ಮದಲ್ಲಿ ತೊಡಗಿದ ಮನುಷ್ಯನಿಗೆ ಪರಮ ಪಾವನ ವಸ್ತು ಯಾವುದು ಅದನ್ನು ನನಗೆ ಹೇಳಿ.”

[1]13083036 ವಸಿಷ್ಠ ಉವಾಚ|

13083036a ದೇವತಾಸ್ತೇ ಪ್ರಯಚ್ಚಂತಿ ಸುವರ್ಣಂ ಯೇ ದದತ್ಯುತ|

13083036c ಅಗ್ನಿರ್ಹಿ ದೇವತಾಃ ಸರ್ವಾಃ ಸುವರ್ಣಂ ಚ ತದಾತ್ಮಕಮ್||

ಸುವರ್ಣವನ್ನು ದಾನಮಾಡುವವರು ದೇವತೆಗಳನ್ನೇ ದಾನಮಾಡಿದಂತೆ. ಏಕೆಂದರೆ ಅಗ್ನಿಯು ಸರ್ವದೇವತಾಮಯನು ಮತ್ತು ಸುವರ್ಣವು ಅಗ್ನಿಸ್ವರೂಪವು.

13083037a ತಸ್ಮಾತ್ಸುವರ್ಣಂ ದದತಾ ದತ್ತಾಃ ಸರ್ವಾಶ್ಚ ದೇವತಾಃ|

13083037c ಭವಂತಿ ಪುರುಷವ್ಯಾಘ್ರ ನ ಹ್ಯತಃ ಪರಮಂ ವಿದುಃ||

ಪುರುಷವ್ಯಾಘ್ರ! ಆದುದರಿಂದ ಸುವರ್ಣವನ್ನು ದಾನಮಾಡುವವರು ಸರ್ವ ದೇವತೆಗಳನ್ನೂ ದಾನಮಾಡಿದಂತೆ. ಇದರಿಂದಾಗಿ ವಿದ್ವಾಂಸರು ಸುವರ್ಣದಾನಕ್ಕಿಂತ ಹೆಚ್ಚಿನ ದಾನವಿಲ್ಲ ಎನ್ನುತ್ತಾರೆ.

13083038a ಭೂಯ ಏವ ಚ ಮಾಹಾತ್ಮ್ಯಂ ಸುವರ್ಣಸ್ಯ ನಿಬೋಧ ಮೇ|

13083038c ಗದತೋ ಮಮ ವಿಪ್ರರ್ಷೇ ಸರ್ವಶಸ್ತ್ರಭೃತಾಂ ವರ||

ವಿಪ್ರರ್ಷೇ! ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ! ನಾನು ಹೇಳುವ ಸುವರ್ಣದ ಮಹಾತ್ಮೆಯನ್ನು ಇನ್ನೂ ಕೇಳು.

13083039a ಮಯಾ ಶ್ರುತಮಿದಂ ಪೂರ್ವಂ ಪುರಾಣೇ ಭೃಗುನಂದನ|

13083039c ಪ್ರಜಾಪತೇಃ ಕಥಯತೋ ಮನೋಃ ಸ್ವಾಯಂಭುವಸ್ಯ ವೈ[2]||

ಭೃಗುನಂದನ! ಹಿಂದೆ ಪ್ರಜಾಪತಿಯು ಮನು ಸ್ವಾಯಂಭುವುವಿಗೆ ಹೇಳಿದ ಈ ಪುರಾಣವನ್ನು ಕೇಳಿದ್ದೇನೆ.

13083040a ಶೂಲಪಾಣೇರ್ಭಗವತೋ ರುದ್ರಸ್ಯ ಚ ಮಹಾತ್ಮನಃ|

13083040c ಗಿರೌ ಹಿಮವತಿ ಶ್ರೇಷ್ಠೇ ತದಾ ಭೃಗುಕುಲೋದ್ವಹ||

13083041a ದೇವ್ಯಾ ವಿವಾಹೇ ನಿರ್ವೃತ್ತೇ ರುದ್ರಾಣ್ಯಾ ಭೃಗುನಂದನ|

13083041c ಸಮಾಗಮೇ ಭಗವತೋ ದೇವ್ಯಾ ಸಹ ಮಹಾತ್ಮನಃ|

ಭೃಗುಕುಲೋದ್ವಹ! ಭೃಗುನಂದನ! ಶ್ರೇಷ್ಠ ಪರ್ವತ ಹಿಮಾಲಯದಲ್ಲಿ ಶೂಲಪಾಣೀ ಮಹಾತ್ಮಾ ಭಗವಾನ್ ರುದ್ರನಿಗೆ ದೇವೀ ರುದ್ರಾಣಿಯೊಡನೆ ವಿವಾಹವು ನಡೆಯಿತು ಮತ್ತು ಮಹಾಮನ ಭಗವಾನ್ ಶಿವನು ಉಮಾದೇವಿಯೊಡನೆ ಸಮಾಗಮ-ಸುಖವನ್ನು ಪಡೆಯುತ್ತಿದ್ದನು.

13083041e ತತಃ ಸರ್ವೇ ಸಮುದ್ವಿಗ್ನಾ ಭಗವಂತಮುಪಾಗಮನ್||

13083042a ತೇ ಮಹಾದೇವಮಾಸೀನಂ ದೇವೀಂ ಚ ವರದಾಮುಮಾಮ್|

13083042c ಪ್ರಸಾದ್ಯ ಶಿರಸಾ ಸರ್ವೇ ರುದ್ರಮೂಚುರ್ಭೃಗೂದ್ವಹ||

ಭೃಗೂದ್ವಹ! ಆಗ ಎಲ್ಲ ದೇವತೆಗಳೂ ಉದ್ವಿಗ್ನರಾಗಿ ಕೈಲಾಸಶಿಖರದಲ್ಲಿ ಕುಳಿತಿದ್ದ ಮಹಾದೇವ ಮತ್ತು ವರದಾಯಿನೀ ದೇವೀ ಉಮೆಯ ಬಳಿ ಹೋಗಿ ಶಿರಸಾ ಸಮಸ್ಕರಿಸಿ ರುದ್ರನಿಗೆ ಹೇಳಿದರು:

13083043a ಅಯಂ ಸಮಾಗಮೋ ದೇವ ದೇವ್ಯಾ ಸಹ ತವಾನಘ|

13083043c ತಪಸ್ವಿನಸ್ತಪಸ್ವಿನ್ಯಾ ತೇಜಸ್ವಿನ್ಯಾತಿತೇಜಸಃ|

13083043e ಅಮೋಘತೇಜಾಸ್ತ್ವಂ ದೇವ ದೇವೀ ಚೇಯಮುಮಾ ತಥಾ||

“ಅನಘ! ದೇವ! ದೇವಿಯೊಡನೆ ನಿನ್ನ ಈ ಸಮಾಗಮವು ತಪಸ್ವಿನಿಯೊಡನೆ ತಪಸ್ವಿಯ ಮತ್ತು ತೇಜಸ್ವಿನಿಯೊಡನೆ ಮಹಾತೇಜಸ್ವಿಯ ಸಂಯೋಗವಾಗಿದೆ. ದೇವ! ನಿನ್ನ ತೇಜಸ್ಸು ಅಮೋಘವಾದುದು. ಅಂತೆಯೇ ದೇವಿ ಉಮೆಯ ತೇಜಸ್ಸೂ ಕೂಡ ಅಮೋಘವಾದುದು.

13083044a ಅಪತ್ಯಂ ಯುವಯೋರ್ದೇವ ಬಲವದ್ಭವಿತಾ ಪ್ರಭೋ|

13083044c ತನ್ನೂನಂ ತ್ರಿಷು ಲೋಕೇಷು ನ ಕಿಂ ಚಿಚ್ಚೇಷಯಿಷ್ಯತಿ||

ಪ್ರಭೋ! ನಿಮ್ಮಿಬ್ಬರ ಸಂತಾನವು ಅತ್ಯಂತ ಪ್ರಬಲವಾಗುವುದು. ನಿಶ್ಚಯವಾಗಿಯೂ ಅವನು ಮೂರು ಲೋಕಗಳಲ್ಲಿ ಯಾರನ್ನೂ ಉಳಿಸಲಾರನು.

13083045a ತದೇಭ್ಯಃ ಪ್ರಣತೇಭ್ಯಸ್ತ್ವಂ ದೇವೇಭ್ಯಃ ಪೃಥುಲೋಚನ|

13083045c ವರಂ ಪ್ರಯಚ್ಚ ಲೋಕೇಶ ತ್ರೈಲೋಕ್ಯಹಿತಕಾಮ್ಯಯಾ|

13083045e ಅಪತ್ಯಾರ್ಥಂ ನಿಗೃಹ್ಣೀಷ್ವ ತೇಜೋ ಜ್ವಲಿತಮುತ್ತಮಮ್[3]||

ಪೃಥುಲೋಚನ! ಲೋಕೇಶ! ದೇವತೆಗಳು ನಿನ್ನ ಚರಣಗಳಿಗೆ ನಮಸ್ಕರಿಸುತ್ತಿದ್ದಾರೆ. ತ್ರೈಲೋಕ್ಯದ ಹಿತವನ್ನು ಬಯಸಿ ನಮಗೆ ವರವನ್ನು ನೀಡು. ಸಂತಾನಕ್ಕಾಗಿ ಪ್ರಕಟವಾಗುವ ನಿನ್ನ ಆ ಉತ್ತಮ ಜ್ವಲಿತ ತೇಜಸ್ಸನ್ನು ನಿನ್ನಲ್ಲಿಯೇ ಹಿಡಿದಿಟ್ಟುಕೋ!”

13083046a ಇತಿ ತೇಷಾಂ ಕಥಯತಾಂ ಭಗವಾನ್ಗೋವೃಷಧ್ವಜಃ|

13083046c ಏವಮಸ್ತ್ವಿತಿ ದೇವಾಂಸ್ತಾನ್ವಿಪ್ರರ್ಷೇ ಪ್ರತ್ಯಭಾಷತ||

ವಿಪ್ರರ್ಷೇ! ದೇವತೆಗಳು ಹೀಗೆ ಹೇಳಲು ಭಗವಾನ್ ವೃಷಧ್ವಜನು “ಹಾಗೆಯೇ ಆಗಲಿ!” ಎಂದು ಹೇಳಿದನು.

13083047a ಇತ್ಯುಕ್ತ್ವಾ ಚೋರ್ಧ್ವಮನಯತ್ತದ್ರೇತೋ ವೃಷವಾಹನಃ|

13083047c ಊರ್ಧ್ವರೇತಾಃ ಸಮಭವತ್ತತಃಪ್ರಭೃತಿ ಚಾಪಿ ಸಃ||

ಹೀಗೆ ಹೇಳಿ ವೃಷವಾಹನನು ತನ್ನ ರೇತಸ್ಸನ್ನು ಮೇಲಕ್ಕೆಳೆದುಕೊಂಡನು. ಅಂದಿನಿಂದ ಅವನು ಊರ್ಧ್ವರೇತ ಎಂದು ವಿಖ್ಯಾತನಾದನು.

13083048a ರುದ್ರಾಣೀ ತು ತತಃ ಕ್ರುದ್ಧಾ ಪ್ರಜೋಚ್ಚೇದೇ ತಥಾ ಕೃತೇ|

13083048c ದೇವಾನಥಾಬ್ರವೀತ್ತತ್ರ ಸ್ತ್ರೀಭಾವಾತ್ಪರುಷಂ ವಚಃ||

ತನ್ನ ಸಂತಾನವನ್ನು ಕಿತ್ತುಹಾಕಿದುದರಿಂದ ಕ್ರುದ್ಧಳಾದ ರುದ್ರಾಣಿಯು ಸ್ತ್ರೀಭಾವದಿಂದ ದೇವತೆಗಳಿಗೆ ಈ ಕಠೋರ ಮಾತನ್ನಾಡಿದಳು:

13083049a ಯಸ್ಮಾದಪತ್ಯಕಾಮೋ ವೈ ಭರ್ತಾ ಮೇ ವಿನಿವರ್ತಿತಃ|

13083049c ತಸ್ಮಾತ್ಸರ್ವೇ ಸುರಾ ಯೂಯಮನಪತ್ಯಾ ಭವಿಷ್ಯಥ||

“ಸುರರೇ! ನನ್ನ ಪತಿಯು ನನ್ನಲ್ಲಿ ಸಂತಾನವನ್ನು ಪಡೆಯಲು ಇಚ್ಛಿಸಿದಾಗ ನೀವು ಅವನನ್ನು ತಡೆದಿರಿ. ಆದುದರಿಂದ ನೀವೆಲ್ಲರೂ ಸಂತಾನವಿಲ್ಲದವರಾಗುತ್ತೀರಿ!

13083050a ಪ್ರಜೋಚ್ಚೇದೋ ಮಮ ಕೃತೋ ಯಸ್ಮಾದ್ಯುಷ್ಮಾಭಿರದ್ಯ ವೈ|

13083050c ತಸ್ಮಾತ್ಪ್ರಜಾ ವಃ ಖಗಮಾಃ ಸರ್ವೇಷಾಂ ನ ಭವಿಷ್ಯತಿ||

ಆಕಾಶಚಾರೀ ದೇವತೆಗಳೇ! ನೀವೆಲ್ಲ ಸೇರಿ ನನ್ನ ಸಂತತಿಯನ್ನು ತುಂಡುಮಾಡಿದಿರಿ. ಆದುದರಿಂದ ನಿಮ್ಮೆಲ್ಲರಿಗೂ ಸಂತಾನವಾಗುವುದಿಲ್ಲ.”

13083051a ಪಾವಕಸ್ತು ನ ತತ್ರಾಸೀಚ್ಚಾಪಕಾಲೇ ಭೃಗೂದ್ವಹ|

13083051c ದೇವಾ ದೇವ್ಯಾಸ್ತಥಾ ಶಾಪಾದನಪತ್ಯಾಸ್ತದಾಭವನ್||

ಭೃಗೂದ್ವಹ! ಆ ಸಮಯದಲ್ಲಿ ಅಗ್ನಿದೇವನು ಅಲ್ಲಿರಲಿಲ್ಲ. ಆದುದರಿಂದ ಅವನಿಗೆ ಆ ಶಾಪವು ತಗಲಲಿಲ್ಲ. ಉಳಿದ ಎಲ್ಲ ದೇವತೆಗಳೂ ದೇವಿಯ ಶಾಪದಿಂದ ಸಂತಾನಹೀನರಾದರು.

13083052a ರುದ್ರಸ್ತು ತೇಜೋಽಪ್ರತಿಮಂ ಧಾರಯಾಮಾಸ ತತ್ತದಾ|

13083052c ಪ್ರಸ್ಕನ್ನಂ ತು ತತಸ್ತಸ್ಮಾತ್ಕಿಂ ಚಿತ್ತತ್ರಾಪತದ್ಭುವಿ||

ರುದ್ರನು ಆಗ ತನ್ನ ಪ್ರತಿಮ ತೇಜಸ್ಸನ್ನು ಎಳೆದುಕೊಂಡಿದ್ದರೂ ಸ್ವಲ್ಪ ವೀರ್ಯವು ಸ್ಖಲಿತವಾಗಿ ಅಲ್ಲಿಯೇ ಭೂಮಿಯ ಮೇಲೆ ಬಿದ್ದಿತು.

13083053a ತತ್ಪಪಾತ ತದಾ ಚಾಗ್ನೌ ವವೃಧೇ ಚಾದ್ಭುತೋಪಮಮ್|

13083053c ತೇಜಸ್ತೇಜಸಿ ಸಂಪೃಕ್ತಮೇಕಯೋನಿತ್ವಮಾಗತಮ್||

ಆ ಅದ್ಭುತ ತೇಜಸ್ಸು ಅಗ್ನಿಯಲ್ಲಿ ಬಿದ್ದು ವೃದ್ಧಿಯಾಯಿತು. ತೇಜಸ್ಸು ತೇಜಸ್ಸಿನಲ್ಲಿ ಸೇರಿ ಒಂದು ಸ್ವಯಂಭೂ ಪುರುಷನ ರೂಪದಲ್ಲಿ ಅಭಿವ್ಯಕ್ತವಾಗತೊಡಗಿತು.

13083054a ಏತಸ್ಮಿನ್ನೇವ ಕಾಲೇ ತು ದೇವಾಃ ಶಕ್ರಪುರೋಗಮಾಃ|

13083054c ಅಸುರಸ್ತಾರಕೋ ನಾಮ ತೇನ ಸಂತಾಪಿತಾ ಭೃಶಮ್||

ಇದೇ ಸಮಯದಲ್ಲಿ ತಾರಕ ಎಂಬ ಹೆಸರಿನ ಅಸುರನು ಶಕ್ರನೇ ಮೊದಲಾದ ದೇವತೆಗಳನ್ನು ಅತಿಯಾಗಿ ಕಾಡುತ್ತಿದ್ದನು.

13083055a ಆದಿತ್ಯಾ ವಸವೋ ರುದ್ರಾ ಮರುತೋಽಥಾಶ್ವಿನಾವಪಿ|

13083055c ಸಾಧ್ಯಾಶ್ಚ ಸರ್ವೇ ಸಂತ್ರಸ್ತಾ ದೈತೇಯಸ್ಯ ಪರಾಕ್ರಮಾತ್||

ಆದಿತ್ಯರು, ವಸುಗಳು, ರುದ್ರರು, ಮರುತರು ಮತ್ತು ಅಶ್ವಿನೀ ದೇವತೆಗಳು, ಸಾಧ್ಯರು ಎಲ್ಲರೂ ಆ ದೈತ್ಯನ ಪರಾಕ್ರಮದಿಂದ ಸಂತ್ರಸ್ತರಾಗಿದ್ದರು.

13083056a ಸ್ಥಾನಾನಿ ದೇವತಾನಾಂ ಹಿ ವಿಮಾನಾನಿ ಪುರಾಣಿ ಚ|

13083056c ಋಷೀಣಾಮಾಶ್ರಮಾಶ್ಚೈವ ಬಭೂವುರಸುರೈರ್ಹೃತಾಃ||

ದೇವತೆಗಳ ಸ್ಥಾನ-ವಿಮಾನ ಮತ್ತು ಪುರಗಳನ್ನೂ ಹಾಗೂ ಋಷಿಗಳ ಆಶ್ರಮಗಳನ್ನೂ ಆ ಅಸುರನು ಅಪಹರಿಸಿದನು.

13083057a ತೇ ದೀನಮನಸಃ ಸರ್ವೇ ದೇವಾಶ್ಚ ಋಷಯಶ್ಚ ಹ|

13083057c ಪ್ರಜಗ್ಮುಃ ಶರಣಂ ದೇವಂ ಬ್ರಹ್ಮಾಣಮಜರಂ ಪ್ರಭುಮ್||

ದೀನಮನಸ್ಕರಾದ ದೇವತೆಗಳು ಮತ್ತು ಋಷಿಗಳೆಲ್ಲರೂ ದೇವ ಅಜರ ಪ್ರಭು ಬ್ರಹ್ಮನ ಶರಣು ಹೋದರು.

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಸುವರ್ಣೋತ್ಪತ್ತಿರ್ನಾಮ ತ್ರ್ಯಾಶೀತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಸುವರ್ಣೋತ್ಪತ್ತಿ ಎನ್ನುವ ಎಂಭತ್ಮೂರನೇ ಅಧ್ಯಾಯವು.

[1] ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಇತ್ಯುಕ್ತ್ವಾ ವೇದಶಾಸ್ತ್ರಜ್ಞಾಸ್ತಮೂಚುಸ್ತಂ ಮಹರ್ಷಯಃ| ರಾಮ ವಿಪ್ರಾಃ ಸತ್ಕ್ರಿಯಂತಾಂ ವೇದಪ್ರಾಮಾಣ್ಯದರ್ಶನಾತ್| ಭೂಯಶ್ಚ ವಿಪ್ರರ್ಷಿಗಣಾಃ ಪ್ರಷ್ಠವ್ಯಾಃ ಪಾವನಂ ಪ್ರತಿ|| ಯೇ ತದ್ ಬ್ರೂಯುರ್ಮಹಾಪ್ರಾಜ್ಞಾಸ್ತಚ್ಚೈವ ಸಮುದಾಚರ| ತತೋ ವಸಿಷ್ಠಂ ದೇವರ್ಷಿಮಗಸ್ತ್ಯಮಥ ಕಾಶಪಮ್|| ತಮೇವಾರ್ಥಂ ಮಹಾತೇಜಾಃ ಪಪ್ರಚ್ಛ ಭೃಗುನಂದನಃ| ಜಾತಾ ಮತಿರ್ಮೇ ವಿಪ್ರೇಂದ್ರಾಃ ಕಥಂ ಪೂಯೇಯಮಿತ್ಯುತ|| ಕೇನ ವಾ ಕರ್ಮಯೋಗೇನ ಪ್ರದಾನೇನೇಹ ಕೇನ ವಾ| ಯದಿ ವೋಽನುಗ್ರಹಕೃತಾ ಬುದ್ಧಿರ್ಮಾಂ ಪ್ರತಿ ಸತ್ತಮಾಃ| ಪ್ರಬ್ರೂತ ಪಾವನಂ ಕಿಂ ಮೇ ಭವೇದಿತಿ ತಪೋಧನಾಃ|| ಋಷಯ ಊಚುಃ| ಗಾಶ್ಚ ಭೂಮಿಂ ಚ ವಿತ್ತಂ ಚ ದತ್ವೇಹ ಭೃಗುನಂದನ| ಪಾಪಕೃತ್ಪೂಯತೇ ಮರ್ತ್ಯ ಇತಿ ಭಾರ್ಗವ ಶುಶೃಮ|| ಅನ್ಯದ್ದಾನಂ ತು ವಿಪ್ರರ್ಷೇ ಶ್ರೂಯತಾಂ ಪಾವನಂ ಮಹತ್| ದಿವ್ಯಮತ್ಯದ್ಭುತಾಕಾರಮಪತ್ಯಂ ಜಾತವೇದಸಃ|| ದಗ್ಧ್ವಾ ಲೋಕಾನ್ಪುರಾ ವೀರ್ಯಾತ್ಸಂಭೂತಮಿಹಷುಶ್ರುಮ| ಸುವರ್ಣಮಿತಿ ವಿಖ್ಯಾತಂ ತದ್ದದತ್ಸಿದ್ಧಮೇಷ್ಯಸಿ|| ತತೋಽಬ್ರವೀದ್ವಸಿಷ್ಠಸ್ತಂ ಭಗವಾನ್ ಸಂಶಿತವ್ರತಃ| ಶೃಣು ರಾಮ ಯಥೋತ್ಪನ್ನಂ ಸುವರ್ಣಮನಲಪ್ರಭಮ್|| ಫಲಂ ದಾಸ್ಯತಿ ತೇ ಯತ್ತು ದಾನಂ ಪರಮಿಹೋಚ್ಯತೇ| ಸುವರ್ಣಂ ಯಚ್ಚ ಯಸ್ಮಾಚ್ಚ ಯಥಾ ಚ ಗುಣವತ್ತಮಮ್|| ತನ್ನಿಬೋಧ ಮಹಾಬಾಹೋ ಸರ್ವಂ ನಿಗದತೋ ಮಮ| ಅಗ್ನೀಷೋಮಾತ್ಮಕಮಿದಂ ಸುವರ್ಣಂ ವಿದ್ಧಿ ನಿಶ್ಚಯೇ|| ಅಜೋಽಗ್ನಿರ್ವರುಣೋ ಮೇಷಃ ಸೂರ್ಯೋಽಶ್ವ ಇತಿ ದರ್ಶನಮ್| ಕುಂಜರಾಶ್ಚ ಮೃಗಾ ನಾಗ ಮಹಿಷಾಶ್ಚಾಸುರಾ ಇತಿ|| ಕುಕ್ಕುಟಾಶ್ಚ ವರಾಹಾಶ್ಚ ರಾಕ್ಷಸಾ ಭೃಗುನಂದನ| ಇಡಾ ಗಾವಃ ಪಯಃ ಸೋಮೋ ಭೂಮಿರಿತ್ಯೇವ ಚ ಸ್ಮೃತಿಃ|| ಜಗತ್ಸರ್ವಂ ಚ ನಿರ್ಮಥ್ಯ ತೇಜೋರಾಶಿಃ ಸಮುತ್ಥಿತಃ| ಸುವರ್ಣಮೇಭ್ಯೋ ವಿಪ್ರರ್ಷೇ ರತ್ನಂ ಪರಮಮುತ್ತಮಮ್|| ಏತಸ್ಮಾತ್ ಕಾರಣಾದ್ದೇವಾ ಗಂಧರ್ವೋರಗರಾಕ್ಷಸಾಃ| ಮನುಷ್ಯಾಶ್ಚ ವಿಶಾಚಾಶ್ಚ ಪ್ರಯತಾ ಧಾರಯಂತಿ ತತ್|| ಮುಕುಟೈರಂಗದಯುತೈರಲಂಕಾರೈಃ ಪೃಥಗ್ವಿಧೈಃ| ಸುವರ್ಣವಿಕೃತೈಸ್ತತ್ರ ವಿರಾಜಂತೇ ಭೃಗೂತ್ತಮ|| ತಸ್ಮಾತ್ಸರ್ವಪವಿತ್ರೇಭ್ಯಃ ಪವಿತ್ರಂ ಪರಮಂ ಸ್ಮೃತಮ್| ಭೂಮೇರ್ಗೋಭ್ಯೋಽಥ ರತ್ನೇಭ್ಯಸ್ತದ್ವಿದ್ಧಿ ಮನುಜರ್ಷಭ|| ಪೃಥಿವೀಂ ಗಾಶ್ಚ ದತ್ವೇಹ ಯಚ್ಚಾನ್ಯದಪಿ ಕಿಂಚನ| ವಿಶಿಷ್ಯತೇ ಸುವರ್ಣಸ್ಯ ದಾನಂ ಪರಮಕಂ ವಿಭೋ|| ಅಕ್ಷಯಂ ಪಾವನಂ ಚೈವ ಸುವರ್ಣಮಮರದ್ಯುತೇ| ಪ್ರಯಚ್ಛ ದ್ವಿಜಮುಖ್ಯೇಭ್ಯಃ ಪಾವನಂ ಹ್ಯೇತದುತ್ತಮಮ್|| ಸುವರ್ಣಮೇವ ಸರ್ವಾಸು ದಕ್ಷಿಣಾಸು ವಿಧೀಯತೇ| ಸುವರ್ಣಂ ಯೇ ಪ್ರಯಚ್ಛಂತಿ ದರ್ವದಾಸ್ತೇ ಭವನ್ತ್ಯುತ|| (ಗೀತಾ ಪ್ರೆಸ್/ಭಾರತ ದರ್ಶನ).

[2] ಯಥಾನ್ಯಾಯಂ ತು ತಸ್ಯ ವೈ|| (ಗೀತಾ ಪ್ರೆಸ್).

[3] ಇದರ ನಂತರ ಈ ಮೂರು ಅಧಿಕ ಶ್ಲೋಕಗಳಿವೆ: ತ್ರೈಲೋಕ್ಯಸಾರೌ ಹಿ ಯುವಾಂ ಲೋಕಂ ಸಂತಾಪಯಿಷ್ಯಥಃ| ತದಪತ್ಯಂ ಹಿ ಯುವಯೋರ್ದೇವಾನಭಿಭವೇದ್ಧ್ರುವಮ್| ನ ಹಿ ತೇ ಪೃಥಿವೀ ದೇವೀ ನ ಚ ಧೌರ್ನ ದಿವಂ ವಿಭೋ|| ನೇದಂ ಧಾರಯಿತುಂ ಶಕ್ತಾಃ ಸಮಸ್ತಾ ಇತಿ ಮೇ ಮತಿಃ| ತೇಜಃಪಭಾವನಿರ್ದಗ್ಧಂ ತಸ್ಮಾತ್ಸರ್ವಮಿದಂ ಜಗತ್|| ತಸ್ಮಾತ್ಪ್ರಸಾದಂ ಭಗವನ್ಕರ್ತುಮರ್ಹಸಿ ನಃ ಪ್ರಭೋ| ನ ದೇವ್ಯಾಂ ಸಂಭವೇತ್ಪುತ್ರೋ ಭವತಃ ಸುರಸತ್ತಮ| ಧೈರ್ಯಾದೇವ ನಿಗೃಹ್ಣೀಷ್ವ ತೇಜೋ ಜ್ವಲಿತಮುತ್ತಮಮ್|| (ಗೀತಾ ಪ್ರೆಸ್).

Comments are closed.