ಯದಾಶ್ರೌಷ ಪರ್ವ

ಇದು ಪುಣೆಯ ಪರಿಷ್ಕೃತ ಸಂಪುಟದ ಆದಿಪರ್ವದ ಅನುಕ್ರಮಣಿಕಾ ಪರ್ವದಲ್ಲಿ ಬರುತ್ತದೆ. ನೈಮಿಷಾರಣ್ಯದಲ್ಲಿ ಶೌನಕನ ದಿರ್ಘಸತ್ರದಲ್ಲಿ ಸೇರಿದ್ದ ಮುನಿಜನರೊಂದಿಗೆ ಲೋಮಹರ್ಷಣ ಸೂತ ಪುರಾಣಿಕ ಉಗ್ರಶ್ರವನ ಸಂವಾದದಲ್ಲಿ ಬರುತ್ತದೆ. ಇದು ಮಹಾಭಾರತದಲ್ಲಿ ನಡೆದ ಅನೇಕ ಮುಖ್ಯಘಟನೆಗಳನ್ನು ಯುದ್ದಾನಂತರ ನಡೆದ ಧೃತರಾಷ್ಟ್ರ-ಸಂಜಯರ ಸಂವಾದ ರೂಪದಲ್ಲಿದೆ. ಇದನ್ನು ಮಹಾಭಾರತದ ಒಂದು ಕಿರುಸಾರಾಂಶ ಎಂದೂ ಪರಿಗಣಿಸುತ್ತಾರೆ.

01001095a ಜಯತ್ಸು ಪಾಂಡುಪುತ್ರೇಷು ಶ್ರುತ್ವಾ ಸುಮಹದಪ್ರಿಯಂ |

01001095c ದುರ್ಯೋಧನಮತಂ ಜ್ಞಾತ್ವಾ ಕರ್ಣಸ್ಯ ಶಕುನೇಸ್ತಥಾ |

01001095e ಧೃತರಾಷ್ಟ್ರಶ್ಚಿರಂ ಧ್ಯಾತ್ವಾ ಸಂಜಯಂ ವಾಕ್ಯಮಬ್ರವೀತ್ ||

ಪಾಂಡುಪುತ್ರರು ದುರ್ಯೋಧನ, ಕರ್ಣ ಮತ್ತು ಶಕುನಿಯರ ಮೇಲೆ ಜಯವನ್ನು ಗಳಿಸಿದರು ಎಂಬ ಅತಿ ಅಪ್ರಿಯ ವಿಷಯವನ್ನು ಕೇಳಿದ ಧೃತರಾಷ್ಟ್ರನು ಒಂದು ಕ್ಷಣ ಯೋಚಿಸಿ ಸಂಜಯನನ್ನುದ್ದೇಶಿಸಿ ಹೇಳಿದನು:

01001096a ಶೃಣು ಸಂಜಯ ಮೇ ಸರ್ವಂ ನ ಮೇಽಸೂಯಿತುಮರ್ಹಸಿ|

01001096c ಶ್ರುತವಾನಸಿ ಮೇಧಾವೀ ಬುದ್ಧಿಮಾನ್ ಪ್ರಾಜ್ಞಸಮ್ಮತಃ ||

“ಸಂಜಯ! ನಾನು ಹೇಳುವುದೆಲ್ಲವನ್ನೂ ಕೇಳು. ಮೇಧಾವಿ, ಬುದ್ಧಿವಂತ ಮತ್ತು ಪ್ರಜ್ಞಸಮ್ಮತನಾದ ನೀನು ಇದಕ್ಕೆಲ್ಲಾ ನಾನೇ ಕಾರಣನೆಂದು ತಿಳಿದುಕೊಳ್ಳಬೇಡ.

01001097a ನ ವಿಗ್ರಹೇ ಮಮ ಮತಿರ್ನ ಚ ಪ್ರೀಯೇ ಕುರುಕ್ಷಯೇ |

01001097c ನ ಮೇ ವಿಶೇಷಃ ಪುತ್ರೇಷು ಸ್ವೇಷು ಪಾಂಡುಸುತೇಷು ಚ ||

ಈ ಕುರುಕ್ಷಯಕ್ಕೆ ನನ್ನ ಒಪ್ಪಿಗೆ ಇರಲಿಲ್ಲ ಮತ್ತು ಇದು ನನ್ನ ಮನಸ್ಸಿಗೆ ಪ್ರಿಯವೂ ಆಗಿರಲಿಲ್ಲ. ನನ್ನ ಪುತ್ರರಲ್ಲಿ ಮತ್ತು ಪಾಂಡುಸುತರಲ್ಲಿ ನನಗೆ ಯಾವುದೇ ವ್ಯತ್ಯಾಸಗಳೂ ಇರಲಿಲ್ಲ.

01001098a ವೃದ್ಧಂ ಮಾಮಭ್ಯಸೂಯಂತಿ ಪುತ್ರಾ ಮನ್ಯುಪರಾಯಣಾಃ |

01001098c ಅಹಂ ತ್ವಚಕ್ಷುಃ ಕಾರ್ಪಣ್ಯಾತ್ಪುತ್ರಪ್ರೀತ್ಯಾ ಸಹಾಮಿ ತತ್ |

01001098e ಮುಹ್ಯಂತಂ ಚಾನುಮುಹ್ಯಾಮಿ ದುರ್ಯೋಧನಮಚೇತನಂ ||

ಕೆಟ್ಟದಾರಿ ಹಿಡಿದಿದ್ದ ನನ್ನ ಪುತ್ರರು ಈ ಕುರುಡ ವೃದ್ಧ ದೀನನನ್ನು ಕೀಳಾಗಿ ಕಾಣುತ್ತಿದ್ದರು. ಆದರೆ ಪುತ್ರರ ಮೇಲಿನ ಪ್ರೀತಿಯಿಂದ ಅವೆಲ್ಲವನ್ನೂ ಸಹಿಸಿಕೊಂಡೆನು. ಮೂಢ ದುರ್ಯೋಧನನು ಬೇಸರದಿಂದಿದ್ದಾಗಲೆಲ್ಲಾ ನಾನೂ ಬೇಸರಗೊಳ್ಳುತ್ತಿದ್ದೆನು.

01001099a ರಾಜಸೂಯೇ ಶ್ರಿಯಂ ದೃಷ್ಠ್ವಾ ಪಾಂಡವಸ್ಯ ಮಹೌಜಸಃ |

01001099c ತಚ್ಚಾವಹಸನಂ ಪ್ರಾಪ್ಯ ಸಭಾರೋಹಣದರ್ಶನೇ ||

01001100a ಅಮರ್ಷಿತಃ ಸ್ವಯಂ ಜೇತುಮಶಕ್ತಃ ಪಾಂಡವಾನ್ರಣೇ |

01001100c ನಿರುತ್ಸಾಹಶ್ಚ ಸಂಪ್ರಾಪ್ತುಂ ಶ್ರಿಯಮಕ್ಷತ್ರಿಯೋ ಯಥಾ |

01001100e ಗಾಂಧಾರರಾಜಸಹಿತಶ್ಚದ್ಮದ್ಯೂತಮಮಂತ್ರಯತ್ ||

ರಾಜಸೂಯದಲ್ಲಿ ಮಹೌಜಸ ಪಾಂಡವರ ಸಂಪತ್ತನ್ನು ನೋಡಿ ಮತ್ತು ಸಭಾ ದರ್ಶನದ ಸಮಯದಲ್ಲಿ ಹಾಸ್ಯಕ್ಕೊಳಪಟ್ಟ ಅವನು ಪಾಂಡವರನ್ನು ರಣದಲ್ಲಿ ಗೆಲ್ಲುವುದು ತನಗೆ ಸಾದ್ಯವಾದುದಲ್ಲ ಎಂದು ತಿಳಿದು ನಿರುತ್ಸಾಹಗೊಂಡು ಗಾಂಧಾರರಾಜನ ಜೊತೆಗೂಡಿ ಸಂಪತ್ತನ್ನು ಪಡೆಯಲೋಸುಗ ಕ್ಷತ್ರಿಯರಿಗೆ ಶೋಭಿಸದ ದ್ಯೂತಕ್ಕೆ ಅವರನ್ನು ಆಮಂತ್ರಿಸಿದನು.

01001101a ತತ್ರ ಯದ್ಯದ್ಯಥಾ ಜ್ಞಾತಂ ಮಯಾ ಸಂಜಯ ತಚ್ಛೃಣು |

01001101c ಶ್ರುತ್ವಾ ಹಿ ಮಮ ವಾಕ್ಯಾನಿ ಬುದ್ಧ್ಯಾ ಯುಕ್ತಾನಿ ತತ್ತ್ವತಃ |

01001101e ತತೋ ಜ್ಞಾಸ್ಯಸಿ ಮಾಂ ಸೌತೇ ಪ್ರಜ್ಞಾಚಕ್ಷುಷಮಿತ್ಯುತ ||

ಸಂಜಯ! ಇದರ ಮೊದಲು ಮತ್ತು ನಂತರ ಏನೆಲ್ಲ ಆಯಿತು ಎಂದು ನನಗೆ ತಿಳಿದಿದ್ದನ್ನು ಹೇಳುತ್ತೇನೆ ಕೇಳು. ಸೌತಿ! ನನ್ನ ಈ ಮಾತುಗಳನ್ನು ಕೇಳಿದರೆ ನನಗೂ ಪ್ರಜ್ಞೆಯ ಕಣ್ಣೊಂದಿದೆ ಎಂದು ನಿನಗೆ ತಿಳಿಯುತ್ತದೆ.

[1]01001102a ಯದಾಶ್ರೌಷಂ ಧನುರಾಯಮ್ಯ ಚಿತ್ರಂ ವಿದ್ಧಂ

         ಲಕ್ಷ್ಯಂ ಪಾತಿತಂ ವೈ ಪೃಥಿವ್ಯಾಂ |

01001102c ಕೃಷ್ಣಾಂ ಹೃತಾಂ ಪಶ್ಯತಾಂ ಸರ್ವರಾಜ್ಞಾಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಸಂಜಯ! ಸರ್ವ ರಾಜರುಗಳೂ ನೋಡುತ್ತಿದ್ದಂತೆಯೇ ಅರ್ಜುನನು ಅದ್ಭುತವಾಗಿ ಧನಸ್ಸು ಹೂಡಿ ಲಕ್ಷ್ಯವನ್ನು ಪೃಥಿವಿಗೆ ಉರುಳಿಸಿ ಕೃಷ್ಣೆಯನ್ನು ಕೊಂಡೊಯ್ದ ಎಂದು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದಲ್ಲಿ ಸಂಶಯವಿತ್ತು.

01001103a ಯದಾಶ್ರೌಷಂ ದ್ವಾರಕಾಯಾಂ ಸುಭದ್ರಾಂ

         ಪ್ರಸಹ್ಯೋಧಾಂ ಮಾಧವೀಮರ್ಜುನೇನ |

01001103c ಇಂದ್ರಪ್ರಸ್ಥಂ ವೃಷ್ಣಿವೀರೌ ಚ ಯಾತೌ

         ತದಾ ನಾಶಂಸೇ ವಿಜಯಾಯ ಸಂಜಯ ||

ಅರ್ಜುನನು ಮಾಧವಿ ಸುಭದ್ರೆಯನ್ನು ದ್ವಾರಕೆಯಿಂದ ಅಪಹರಿಸಿದ ಮತ್ತು ನಂತರ ವೃಷ್ಣಿವೀರರಿಬ್ಬರೂ ಇಂದ್ರಪ್ರಸ್ಥಕ್ಕೆ ಬಂದ ಎಂದು ನಾನು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001104a ಯದಾಶ್ರೌಷಂ ದೇವರಾಜಂ ಪ್ರವೃಷ್ಟಂ

         ಶರೈರ್ದಿವ್ಯೈರ್ವಾರಿತಂ ಚಾರ್ಜುನೇನ |

01001104c ಅಗ್ನಿಂ ತಥಾ ತರ್ಪಿತಂ ಖಾಂಡವೇ ಚ

         ತದಾ ನಾಶಂಸೇ ವಿಜಯಾಯ ಸಂಜಯ ||

ದಿವ್ಯ ಶರಗಳ ಮಳೆಯನ್ನೇ ಸುರಿಸುತ್ತಿರುವ ದೇವರಾಜನನ್ನು ತಡೆಹಿಡಿದು ಅರ್ಜುನನು ಅಗ್ನಿಗೆ ಖಾಂಡವವನ್ನಿತ್ತು ತೃಪ್ತಿಪಡಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

[2]01001105a ಯದಾಶ್ರೌಷಂ ಹೃತರಾಜ್ಯಂ ಯುಧಿಷ್ಠಿರಂ

         ಪರಾಜಿತಂ ಸೌಬಲೇನಾಕ್ಷವತ್ಯಾಂ |

01001105c ಅನ್ವಾಗತಂ ಭ್ರಾತೃಭಿರಪ್ರಮೇಯೈಸ್

         ತದಾ ನಾಶಂಸೇ ವಿಜಯಾಯ ಸಂಜಯ ||

ಸಂಜಯ! ಜೂಜಿನಲ್ಲಿ ಸೌಬಲನಿಂದ ಪರಾಜಿತನಾಗಿ ಯುಧಿಷ್ಠಿರನು ರಾಜ್ಯವನ್ನು ಕಳೆದುಕೊಂಡರೂ, ಅಪ್ರಮೇಯ ಸಹೋದರರು ಅವನನ್ನು ಅನುಸರಿಸಿದರು ಎಂದು ಕೇಳಿದಂದೇ ನನಗೆ ವಿಜಯದಲ್ಲಿ ಸಂಶಯವಿತ್ತು.

01001106a ಯದಾಶ್ರೌಷಂ ದ್ರೌಪದೀಮಶ್ರುಕಂಠೀಮ್

         ಸಭಾಂ ನೀತಾಂ ದುಃಖಿತಾಮೇಕವಸ್ತ್ರಾಂ |

01001106c ರಜಸ್ವಲಾಂ ನಾಥವತೀಮನಾಥವತ್

         ತದಾ ನಾಶಂಸೇ ವಿಜಯಾಯ ಸಂಜಯ ||

ಸಂಜಯ! ಪತಿಗಳಿದ್ದರೂ ಅನಾಥಳಂತೆ ದುಃಖಿತಳಾಗಿ, ಏಕವಸ್ತ್ರಧಾರಿಯಾಗಿ, ಕಣ್ಣೀರಿನಿಂದ ಗಂಟಲು ಕಟ್ಟಿಹೋಗಿದ್ದ ರಜಸ್ವಲೆ ಅಶೃಕಂಠೀ ದ್ರೌಪದಿಯನ್ನು ಸಭೆಗೆ ಎಳೆತಂದುದನ್ನು ಕೇಳಿದಾಗಲೇ ನನಗೆ ವಿಜಯದ ಕುರಿತು ಸಂಶಯವಾಗಿತ್ತು.

[3]01001107a ಯದಾಶ್ರೌಷಂ ವಿವಿಧಾಸ್ತಾತ ಚೇಷ್ಠಾ

         ಧರ್ಮಾತ್ಮನಾಂ ಪ್ರಸ್ಥಿತಾನಾಂ ವನಾಯ |

01001107c ಜ್ಯೇಷ್ಠಪ್ರೀತ್ಯಾ ಕ್ಲಿಶ್ಯತಾಂ ಪಾಂಡವಾನಾಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಯಾವಾಗ ಧರ್ಮಾತ್ಮ ಪಾಂಡವರು ಜ್ಯೇಷ್ಠನನ್ನು ವನಕ್ಕೆ ಹಿಂಬಾಲಿಸಿ, ಅವನಿಗೋಸ್ಕರ ಎಲ್ಲ ಕಷ್ಟಗಳನ್ನೂ ಅನುಭವಿಸಿದರೆಂದು ಕೇಳಿದೆನೋ ಅಂದೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001108a ಯದಾಶ್ರೌಷಂ ಸ್ನಾತಕಾನಾಂ ಸಹಸ್ರೈರ್

         ಅನ್ವಾಗತಂ ಧರ್ಮರಾಜಂ ವನಸ್ಥಂ |

01001108c ಭಿಕ್ಷಾಭುಜಾಂ ಬ್ರಾಹ್ಮಣಾನಾಂ ಮಹಾತ್ಮನಾಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಸಂಜಯ! ಸಹಸ್ರಾರು ಸ್ನಾತಕರು ಧರ್ಮರಾಜನನ್ನು ವನಕ್ಕೆ ಅನುಸರಿಸಿ ಹೋದರು ಮತ್ತು ಅವನು ಆ ಎಲ್ಲ ಮಹಾತ್ಮ ಬ್ರಾಹ್ಮಣರಿಗೆ ಭಿಕ್ಷೆ-ಭೋಜನಗಳನ್ನಿತ್ತನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು.

01001109a ಯದಾಶ್ರೌಷಂ ಅರ್ಜುನೋ ದೇವದೇವಂ

         ಕಿರಾತರೂಪಂ ತ್ರ್ಯಂಬಕಂ ತೋಷ್ಯ ಯುದ್ಧೇ |

01001109c ಅವಾಪ ತತ್ಪಾಶುಪತಂ ಮಹಾಸ್ತ್ರಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಸಂಜಯ! ಅರ್ಜುನನು ಕಿರಾತರೂಪಿ ದೇವದೇವ ತ್ರಯಂಬಕನನ್ನು ಯುದ್ಧದಲ್ಲಿ ತೃಪ್ತಿಗೊಳಿಸಿ ಮಹಾಸ್ತ್ರ ಪಾಶುಪತವನ್ನು ಪಡೆದನೆಂದು ಯಾವಾಗ ಕೇಳಿದೆನೋ ಅಂದೇ ನಾನು ವಿಜಯದ ಆಸೆಯನ್ನು ತೊರೆದಿದ್ದೆನು.

[4]01001110a ಯದಾಶ್ರೌಷಂ ತ್ರಿದಿವಸ್ಥಂ ಧನಂಜಯಂ

         ಶಕ್ರಾತ್ಸಾಕ್ಷಾದ್ದಿವ್ಯಮಸ್ತ್ರಂ ಯಥಾವತ್ |

01001110c ಅಧೀಯಾನಂ ಶಂಸಿತಂ ಸತ್ಯಸಂಧಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಸತ್ಯಸಂಧ, ಪ್ರಸಿದ್ಧ ಧನಂಜಯನು ದೇವಲೋಕವನ್ನು ಪ್ರವೇಶಿಸಿ ಅಲ್ಲಿ ಸಾಕ್ಷಾತ್ ಶಕ್ರನಿಂದ ದಿವ್ಯಾಸ್ತ್ರಗಳನ್ನು ಪಡೆದನೆಂದು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ!

[5]01001111a ಯದಾಶ್ರೌಷಂ ವೈಶ್ರವಣೇನ ಸಾರ್ಧಂ

         ಸಮಾಗತಂ ಭೀಮಮನ್ಯಾಂಶ್ಚ ಪಾರ್ಥಾನ್ |

01001111c ತಸ್ಮಿನ್ದೇಶೇ ಮಾನುಷಾಣಾಮಗಮ್ಯೇ

         ತದಾ ನಾಶಂಸೇ ವಿಜಯಾಯ ಸಂಜಯ ||

ಸಂಜಯ! ವೈಶ್ರವಣನನ್ನೊಡಗೂಡಿ ಭೀಮ ಮತ್ತು ಇತರ ಪಾರ್ಥರು ಮನುಷ್ಯರು ಮೊದಲೆಂದೂ ಹೋಗದೇ ಇದ್ದ ಪ್ರದೇಶಗಳಿಗೆ ಹೋದರು ಎಂದು ಕೇಳಿದಾಗಲೇ ನನಗೆ ವಿಜಯದ ಕುರಿತು ಸಂಶಯವಾಗಿತ್ತು.

01001112a ಯದಾಶ್ರೌಷಂ ಘೋಷಯಾತ್ರಾಗತಾನಾಂ

         ಬಂಧಂ ಗಂಧರ್ವೈರ್ಮೋಕ್ಷಣಂ ಚಾರ್ಜುನೇನ |

01001112c ಸ್ವೇಷಾಂ ಸುತಾನಾಂ ಕರ್ಣಬುದ್ಧೌ ರತಾನಾಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಸಂಜಯ! ಕರ್ಣನನ್ನೇ ನಂಬಿ ಅವನು ಹೇಳಿದಂತೆಯೇ ನಡೆದುಕೊಳ್ಳುತ್ತಿದ್ದ ನನ್ನ ಮಗನು ಘೋಷಯಾತ್ರೆಯ ವೇಳೆಯಲ್ಲಿ ಗಂಧರ್ವರಿಂದ ಬಂಧಿಯಾಗಿದ್ದಾಗ ಅರ್ಜುನನಿಂದ ಬಿಡುಗಡೆ ಹೊಂದಿದನೆಂದು ಕೇಳಿದಾಗಲೇ ನಾನು ವಿಜಯದ ಕುರಿತು ಸಂಶಯವನ್ನು ತಾಳಿದ್ದೆ.

01001113a ಯದಾಶ್ರೌಷಂ ಯಕ್ಷರೂಪೇಣ ಧರ್ಮಂ

         ಸಮಾಗತಂ ಧರ್ಮರಾಜೇನ ಸೂತ |

01001113c ಪ್ರಶ್ನಾನುಕ್ತಾನ್ವಿಬ್ರುವಂತಂ ಚ ಸಮ್ಯಕ್

         ತದಾ ನಾಶಂಸೇ ವಿಜಯಾಯ ಸಂಜಯ ||

ಸೂತ ಸಂಜಯ! ಯಕ್ಷರೂಪದಲ್ಲಿ ಬಂದ ಧರ್ಮನು ಕೇಳಿದ ಪ್ರಶ್ನೆಗಳಿಗೆಲ್ಲ ಧರ್ಮರಾಜನು ಉತ್ತರಿಸಿ ಅವನನ್ನು ತೃಪ್ತಿಗೊಳಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು.

[6]01001114a ಯದಾಶ್ರೌಷಂ ಮಾಮಕಾನಾಂ ವರಿಷ್ಠಾನ್

         ಧನಂಜಯೇನೈಕರಥೇನ ಭಘ್ನಾನ್ |

01001114c ವಿರಾಟರಾಷ್ಟ್ರೇ ವಸತಾ ಮಹಾತ್ಮನಾ

         ತದಾ ನಾಶಂಸೇ ವಿಜಯಾಯ ಸಂಜಯ ||

ಆ ಮಹಾತ್ಮರು ವಿರಾಟರಾಷ್ಟ್ರದಲ್ಲಿ ವಾಸಿಸುತ್ತಿರುವಾಗ ಹಿರಿಯರಿಂದೊಡಗೂಡಿದ ನಮ್ಮವರನ್ನು ಧನಂಜಯನು ಏಕಾಕಿಯಾಗಿಯೇ ಸೋಲಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001115a ಯದಾಶ್ರೌಷಂ ಸತ್ಕೃತಾಂ ಮತ್ಸ್ಯರಾಜ್ಞಾ

         ಸುತಾಂ ದತ್ತಾಮುತ್ತರಾಮರ್ಜುನಾಯ |

01001115c ತಾಂ ಚಾರ್ಜುನಃ ಪ್ರತ್ಯಗೃಹ್ಣಾತ್ ಸುತಾರ್ಥೇ

         ತದಾ ನಾಶಂಸೇ ವಿಜಯಾಯ ಸಂಜಯ ||

ಮತ್ಸ್ಯರಾಜನು ಅರ್ಜುನನನ್ನು ಸತ್ಕರಿಸಿ ತನ್ನ ಸುತೆ ಉತ್ತರೆಯನ್ನು ಕೊಟ್ಟಾಗ ಅರ್ಜುನನು ಅವಳನ್ನು ತನ್ನ ಸುತನಿಗಾಗಿ ಸ್ವೀಕರಿಸಿದನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು, ಸಂಜಯ!

01001116a ಯದಾಶ್ರೌಷಂ ನಿರ್ಜಿತಸ್ಯಾಧನಸ್ಯ

         ಪ್ರವ್ರಾಜಿತಸ್ಯ ಸ್ವಜನಾತ್ಪ್ರಚ್ಯುತಸ್ಯ |

01001116c ಅಕ್ಷೌಹಿಣೀಃ ಸಪ್ತ ಯುಧಿಷ್ಠಿರಸ್ಯ

         ತದಾ ನಾಶಂಸೇ ವಿಜಯಾಯ ಸಂಜಯ ||

ರಾಜ್ಯ ಸಂಪತ್ತುಗಳನ್ನು ದ್ಯೂತದಲ್ಲಿ ಕಳೆದುಕೊಂಡು ತನ್ನವರ ಸಂಪರ್ಕವನ್ನೇ ಕಳೆದುಕೊಂಡಿದ್ದ ಯುಧಿಷ್ಠಿರನು ಏಳು ಅಕ್ಷೌಹಿಣೀ ಸೇನೆಯನ್ನು ಒಂದುಗೂಡಿಸಿದ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001117a ಯದಾಶ್ರೌಷಂ ನರನಾರಾಯಣೌ ತೌ

         ಕೃಷ್ಣಾರ್ಜುನೌ ವದತೋ ನಾರದಸ್ಯ |

01001117c ಅಹಂ ದ್ರಷ್ಟಾ ಬ್ರಹ್ಮಲೋಕೇ ಸದೇತಿ

         ತದಾ ನಾಶಂಸೇ ವಿಜಯಾಯ ಸಂಜಯ ||

ಕೃಷ್ಣಾರ್ಜುನರು ಬ್ರಹ್ಮಲೋಕದಲ್ಲಿ ಜೊತೆಯಲ್ಲಿಯೇ ಕಂಡುಬರುವ ನರನಾರಯಣರು ಎಂದು ನಾರದನಿಂದ ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001118a ಯದಾಶ್ರೌಷಂ ಮಾಧವಂ ವಾಸುದೇವಂ

         ಸರ್ವಾತ್ಮನಾ ಪಾಂಡವಾರ್ಥೇ ನಿವಿಷ್ಠಂ |

01001118c ಯಸ್ಯೇಮಾಂ ಗಾಂ ವಿಕ್ರಮಮೇಕಮಾಹುಸ್

         ತದಾ ನಾಶಂಸೇ ವಿಜಯಾಯ ಸಂಜಯ ||

ಇಡೀ ವಿಶ್ವವನ್ನೇ ಒಂದು ಪಾದದಲ್ಲಿ ಅಳೆದ ವಿಕ್ರಮಿ ಮಾಧವ ವಾಸುದೇವನ ಆತ್ಮವು ಪಾಂಡವರ ಹಿತವನ್ನೇ ಬಯಸುತ್ತದೆ ಎಂದು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದ ಸಂಶಯವಿತ್ತು ಸಂಜಯ!

[7]01001119a ಯದಾಶ್ರೌಷಂ ಕರ್ಣದುರ್ಯೋಧನಾಭ್ಯಾಂ

         ಬುದ್ಧಿಂ ಕೃತಾಂ ನಿಗ್ರಹೇ ಕೇಶವಸ್ಯ |

01001119c ತಂ ಚಾತ್ಮಾನಂ ಬಹುಧಾ ದರ್ಶಯಾನಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಕೇಶವನನ್ನು ಬಂಧಿಸಲು ಯೋಚಿಸುತ್ತಿದ್ದ ಕರ್ಣ-ದುರ್ಯೋಧನರಿಗೆ ಅವನು ತನ್ನ ಬಹು ರೂಪಗಳನ್ನು ಕಾಣಿಸಿದನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001120a ಯದಾಶ್ರೌಷಂ ವಾಸುದೇವೇ ಪ್ರಯಾತೇ

         ರಥಸ್ಯೈಕಾಮಗ್ರತಸ್ತಿಷ್ಟಮಾನಾಂ |

01001120c ಆರ್ತಾಂ ಪೃಥಾಂ ಸಾಂತ್ವಿತಾಂ ಕೇಶವೇನ

         ತದಾ ನಾಶಂಸೇ ವಿಜಯಾಯ ಸಂಜಯ ||

ವಾಸುದೇವನು ಇಲ್ಲಿಂದ ಹಿಂತಿರುಗುವಾಗ ಕುಂತಿಯು ಅವನ ರಥದ ಎದುರಿನಲ್ಲಿ ನಿಂತು ಶೋಕಿಸಲು ಕೇಶವನು ಅವಳನ್ನು ಸಂತವಿಸಿದ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001121a ಯದಾಶ್ರೌಷಂ ಮಂತ್ರಿಣಂ ವಾಸುದೇವಂ

         ತಥಾ ಭೀಷ್ಮಂ ಶಾಂತನವಂ ಚ ತೇಷಾಂ |

01001121c ಭಾರದ್ವಾಜಂ ಚಾಶಿಷೋಽನುಬ್ರುವಾಣಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಅವರಿಗೆ ವಾಸುದೇವನ ಮಂತ್ರಿತ್ವ, ಶಾಂತನವ ಭೀಷ್ಮ, ಭಾರದ್ವಾಜ ಮೊದಲಾದವರ ಆಶೀರ್ವಾದವಿದೆ ಎಂದು ಕೇಳಿದಾಗಲೇ ನಮ್ಮ ಗೆಲುವಿನ ಮೇಲೆ ಸಂಶಯ ಬಂದಿತ್ತು ಸಂಜಯ!

01001122a ಯದಾಶ್ರೌಷಂ ಕರ್ಣ ಉವಾಚ ಭೀಷ್ಮಂ

         ನಾಹಂ ಯೋತ್ಸ್ಯೇ ಯುಧ್ಯಮಾನೇ ತ್ವಯೀತಿ |

01001122c ಹಿತ್ವಾ ಸೇನಾಮಪಚಕ್ರಾಮ ಚೈವ

         ತದಾ ನಾಶಂಸೇ ವಿಜಯಾಯ ಸಂಜಯ ||

“ನೀನಿರುವವರೆಗೆ ನಾನು ಯುದ್ಧ ಮಾಡುವುದಿಲ್ಲ!” ಎಂದು ಭೀಷ್ಮನಿಗೆ ಹೇಳಿ ಕರ್ಣನು ಸೇನೆಯನ್ನು ಬಿಟ್ಟು ಹೋದುದನ್ನು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ!

01001123a ಯದಾಶ್ರೌಷಂ ವಾಸುದೇವಾರ್ಜುನೌ ತೌ

         ತಥಾ ಧನುರ್ಗಾಂಡಿವಮಪ್ರಮೇಯಂ |

01001123c ತ್ರೀಣ್ಯುಗ್ರವೀರ್ಯಾಣಿ ಸಮಾಗತಾನಿ

         ತದಾ ನಾಶಂಸೇ ವಿಜಯಾಯ ಸಂಜಯ ||

ವಾಸುದೇವ, ಅರ್ಜುನ ಮತ್ತು ಅಪ್ರಮೇಯ ಗಾಂಡೀವ ಈ ಮೂವರು ಉಗ್ರವೀರ್ಯರೂ ಒಂದಾಗಿದ್ದಾರೆ ಎಂದು ತಿಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ!

01001124a ಯದಾಶ್ರೌಷಂ ಕಶ್ಮಲೇನಾಭಿಪನ್ನೇ

         ರಥೋಪಸ್ಥೇ ಸೀದಮಾನೇಽರ್ಜುನೇ ವೈ |

01001124c ಕೃಷ್ಣಂ ಲೋಕಾನ್ದರ್ಶಯಾನಂ ಶರೀರೇ

         ತದಾ ನಾಶಂಸೇ ವಿಜಯಾಯ ಸಂಜಯ ||

ದುಃಖಿತ ಅರ್ಜುನನು ರಥದ ಮೇಲೆ ಕುಸಿದು ಶೋಕಿಸುತ್ತಿರುವಾಗ ಕೃಷ್ಣನು ತನ್ನ ಶರೀರದಲ್ಲಿ ವಿಶ್ವವನ್ನೇ ತೋರಿಸಿದನೆಂದು ಕೇಳಿದಾಗಲೇ ನನಗೆ ಗೆಲುವಿನ ಸಂಶಯವಾಗಿತ್ತು ಸಂಜಯ!

01001125a ಯದಾಶ್ರೌಷಂ ಭೀಷ್ಮಮಮಿತ್ರಕರ್ಶನಂ

         ನಿಘ್ನಂತಮಾಜಾವಯುತಂ ರಥಾನಾಂ |

01001125c ನೈಷಾಂ ಕಶ್ಚಿದ್ವಧ್ಯತೇ ದೃಶ್ಯರೂಪಸ್

         ತದಾ ನಾಶಂಸೇ ವಿಜಯಾಯ ಸಂಜಯ ||

ಅಮಿತ್ರಕರ್ಶನ ಭೀಷ್ಮನು ಹತ್ತುಸಾವಿರ ರಥಿಗಳನ್ನು ಕೊಂದರೂ ಯಾರೇ ಪ್ರಮುಖ ಪಾಂಡವನೊಬ್ಬನನ್ನೂ ಕೊಲ್ಲಲಿಲ್ಲ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

[8]01001126a ಯದಾಶ್ರೌಷಂ ಭೀಷ್ಮಮತ್ಯಂತಶೂರಂ

         ಹತಂ ಪಾರ್ಥೇನಾಹವೇಷ್ವಪ್ರಧೃಷ್ಯಂ |

01001126c ಶಿಖಂಡಿನಂ ಪುರತಃ ಸ್ಥಾಪಯಿತ್ವಾ

         ತದಾ ನಾಶಂಸೇ ವಿಜಯಾಯ ಸಂಜಯ ||

ಶಿಖಂಡಿಯನ್ನು ರಥದ ಮುಂದೆ ನಿಲ್ಲಿಸಿಕೊಂಡು ಪಾರ್ಥನು ಅತ್ಯಂತ ಶೂರ, ಗೆಲ್ಲಲಸಾದ್ಯ ಭೀಷ್ಮನನ್ನು ಉರುಳಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001127a ಯದಾಶ್ರೌಷಂ ಶರತಲ್ಪೇ ಶಯಾನಂ

         ವೃದ್ಧಂ ವೀರಂ ಸಾದಿತಂ ಚಿತ್ರಪುಂಖೈಃ |

01001127c ಭೀಷ್ಮಂ ಕೃತ್ವಾ ಸೋಮಕಾನಲ್ಪಶೇಷಾಂಸ್

         ತದಾ ನಾಶಂಸೇ ವಿಜಯಾಯ ಸಂಜಯ ||

ಸೋಮಕರನ್ನು ಅಲ್ಪಗೊಳಿಸಿದ ಆ ವೃದ್ಧ ವೀರ ಭೀಷ್ಮನು ಗಾಯಗಳಿಂದ ಬಳಲುತ್ತಾ ಶರತಲ್ಪದಮೇಲೆ ಮಲಗಿದ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001128a ಯದಾಶ್ರೌಷಂ ಶಾಂತನವೇ ಶಯಾನೇ

         ಪಾನೀಯಾರ್ಥೇ ಚೋದಿತೇನಾರ್ಜುನೇನ |

01001128c ಭೂಮಿಂ ಭಿತ್ತ್ವಾ ತರ್ಪಿತಂ ತತ್ರ ಭೀಷ್ಮಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಮಲಗಿದ್ದ ಶಾಂತನವನು ಪಾನೀಯವನ್ನು ಕೇಳಿದಾಗ ಅರ್ಜುನನು ಭೂಮಿಯನ್ನು ಸೀಳಿ ಭೀಷ್ಮನಿಗೆ ನೀರನ್ನಿತ್ತ ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001129a ಯದಾಶ್ರೌಷಂ ಶುಕ್ರಸೂರ್ಯೌ ಚ ಯುಕ್ತೌ

         ಕೌಂತೇಯಾನಾಮನುಲೋಮೌ ಜಯಾಯ |

01001129c ನಿತ್ಯಂ ಚಾಸ್ಮನ್ ಶ್ವಾಪದಾ ವ್ಯಾಭಷಂತಸ್

         ತದಾ ನಾಶಂಸೇ ವಿಜಯಾಯ ಸಂಜಯ ||

ಶುಕ್ರ ಮತ್ತು ಸೂರ್ಯ ಇಬ್ಬರೂ ಕೌಂತೇಯರ ಜಯವನ್ನೇ ಬಯಸುತ್ತಿದ್ದಾರೆ ಮತ್ತು ಪಶುಗಳೂ ಕೂಡ ನಿತ್ಯವೂ ನಮ್ಮನ್ನು ಭಯಪಡಿಸುತ್ತಿವೆ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001130a ಯದಾ ದ್ರೋಣೋ ವಿವಿಧಾನಸ್ತ್ರಮಾರ್ಗಾನ್

         ವಿದರ್ಶಯನ್ಸಮರೇ ಚಿತ್ರಯೋಧೀ |

01001130c ನ ಪಾಂಡವಾನ್ ಶ್ರೇಷ್ಠತಮಾನ್ನಿಹಂತಿ

         ತದಾ ನಾಶಂಸೇ ವಿಜಯಾಯ ಸಂಜಯ ||

ಚಿತ್ರಯೋಧಿ ದ್ರೋಣನು ಸಮರದಲ್ಲಿ ವಿವಿಧ ಅಸ್ತ್ರಗಳ ಪ್ರದರ್ಶನ ಮಾಡಿದರೂ ಪಾಂಡವರಲ್ಲಿ ಶ್ರೇಷ್ಠನಾದ ಯಾರನ್ನೂ ಕೊಲ್ಲಲಿಲ್ಲ ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001131a ಯದಾಶ್ರೌಷಂ ಚಾಸ್ಮದೀಯಾನ್ಮಹಾರಥಾನ್

         ವ್ಯವಸ್ಥಿತಾನರ್ಜುನಸ್ಯಾಂತಕಾಯ |

01001131c ಸಂಶಪ್ತಕಾನ್ನಿಹತಾನರ್ಜುನೇನ

         ತದಾ ನಾಶಂಸೇ ವಿಜಯಾಯ ಸಂಜಯ ||

ಅರ್ಜುನನನ್ನು ಕೊಲ್ಲುವುದಕ್ಕಾಗಿ ಹಠಹಿಡಿದಿದ್ದ ನಮ್ಮವರಾದ ಮಹಾರಥಿ ಸಂಶಪ್ತಕರು ಅರ್ಜುನನಿಂದಲೇ ಮರಣಹೊಂದಿದರೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001132a ಯದಾಶ್ರೌಷಂ ವ್ಯೂಹಮಭೇದ್ಯಮನ್ಯೈ

         ರ್ಭಾರದ್ವಾಜೇನಾತ್ತಶಸ್ತ್ರೇಣ ಗುಪ್ತಂ |

01001132c ಭಿತ್ತ್ವಾ ಸೌಭದ್ರಂ ವೀರಮೇಕಂ ಪ್ರವಿಷ್ಟಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಭಾರದ್ವಾಜನಿಂದ ರಚಿತಗೊಂಡು ಶಸ್ತ್ರಗಳಿಂದ ರಕ್ಷಿಸಲ್ಪಟ್ಟ ಅನ್ಯರಿಂದ ಅಭೇಧ್ಯವಾದ ವ್ಯೂಹವನ್ನು ವೀರ ಸೌಭದ್ರಿಯೊಬ್ಬನೇ ಒಡೆದು ಒಳಹೊಕ್ಕಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001133a ಯದಾಭಿಮನ್ಯುಂ ಪರಿವಾರ್ಯ ಬಾಲಂ

         ಸರ್ವೇ ಹತ್ವಾ ಹೃಷ್ಟರೂಪಾ ಬಭೂವುಃ |

01001133c ಮಹಾರಥಾಃ ಪಾರ್ಥಮಶಕ್ನುವಂತಸ್

         ತದಾ ನಾಶಂಸೇ ವಿಜಯಾಯ ಸಂಜಯ ||

ಪಾರ್ಥನನ್ನು ಎದುರಿಸಲು ಅಶಕ್ತರಾದ ಮಹಾರಥಿಗಳೆಲ್ಲರೂ ಬಾಲಕ ಅಭಿಮನ್ಯುವನ್ನು ಸುತ್ತುವರೆದು ಕೊಂದು ಹರ್ಷಿತರಾದರೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001134a ಯದಾಶ್ರೌಷಮಭಿಮನ್ಯುಂ ನಿಹತ್ಯ

         ಹರ್ಷಾನ್ಮೂಧಾನ್ಕ್ರೋಶತೋ ಧಾರ್ತರಾಷ್ಟ್ರಾನ್

01001134c ಕ್ರೋಧಂ ಮುಕ್ತಂ ಸೈಂಧವೇ ಚಾರ್ಜುನೇನ

         ತದಾ ನಾಶಂಸೇ ವಿಜಯಾಯ ಸಂಜಯ ||

ಅಭಿಮನ್ಯುವನ್ನು ಕೊಂದು ಹರ್ಷಿತರಾಗಿ ಮೂಢ ಧಾರ್ತರಾಷ್ಟ್ರರು ಹರ್ಷೋದ್ಗಾರ ಮಾಡುತ್ತಿರುವಾಗ ಕ್ರೋಧಿತ ಅರ್ಜುನನು ಸೈಂಧವನನ್ನು ಕೊಲ್ಲುವ ಪ್ರತಿಜ್ಞೆ ಮಾಡಿದನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ!

01001135a ಯದಾಶ್ರೌಷಂ ಸೈಂಧವಾರ್ಥೇ ಪ್ರತಿಜ್ಞಾಂ

         ಪ್ರತಿಜ್ಞಾತಾಂ ತದ್ವಧಾಯಾರ್ಜುನೇನ |

01001135c ಸತ್ಯಾಂ ನಿಸ್ತೀರ್ಣಾಂ ಶತ್ರುಮಧ್ಯೇ ಚ ತೇನ

         ತದಾ ನಾಶಂಸೇ ವಿಜಯಾಯ ಸಂಜಯ ||

ಸೈಂಧವನನ್ನು ಕೊಲ್ಲುವ ಪ್ರತಿಜ್ಞೆಯನ್ನು ಮಾಡಿದ ಅರ್ಜುನನು ಶತ್ರುಗಳ ಮಧ್ಯದಲ್ಲಿಯೇ ಪ್ರತಿಜ್ಞೆಯನ್ನು ಸತ್ಯವಾಗಿಸಿದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಾಗಿತ್ತು ಸಂಜಯ!

01001136a ಯದಾಶ್ರೌಷಂ ಶ್ರಾಂತಹಯೇ ಧನಂಜಯೇ

         ಮುಕ್ತ್ವಾ ಹಯಾನ್ಪಾಯಯಿತ್ವೋಪವೃತ್ತಾನ್ |

01001136c ಪುನರ್ಯುಕ್ತ್ವಾ ವಾಸುದೇವಂ ಪ್ರಯಾತಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಧನಂಜಯನ ಕುದುರೆಗಳು ಬಳಲಿರುವಾಗ ಮಾಧವನು ರಣಭೂಮಿಯ ಮಧ್ಯದಲ್ಲಿಯೇ ಅವುಗಳನ್ನು ಬಿಚ್ಚಿ ನೀರುಕುಡಿಸಿ ಪುನಃ ಕಟ್ಟಿ ಮೊದಲಿನಂತೆಯೇ ರಥವನ್ನು ಓಡಿಸಿದ ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001137a ಯದಾಶ್ರೌಷಂ ವಾಹನೇಷ್ವಾಶ್ವಸತ್ಸು

         ರಥೋಪಸ್ಥೇ ತಿಷ್ಠತಾ ಗಾಂಡಿವೇನ |

01001137c ಸರ್ವಾನ್ಯೋಧಾನ್ವಾರಿತಾನರ್ಜುನೇನ

         ತದಾ ನಾಶಂಸೇ ವಿಜಯಾಯ ಸಂಜಯ ||

ಕುದುರೆಗಳು ನೀರು ಕುಡಿಯುತ್ತಿರುವಾಗ ಅರ್ಜುನನು ರಥದಲ್ಲಿಯೇ ನಿಂತು ಗಾಂಡೀವದಿಂದ ಸರ್ವ ಯೋದ್ಧರನ್ನೂ ತಡೆಹಿಡಿದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001138a ಯದಾಶ್ರೌಷಂ ನಾಗಬಲೈರ್ದುರುತ್ಸಹಂ

         ದ್ರೋಣಾನೀಕಂ ಯುಯುಧಾನಂ ಪ್ರಮಥ್ಯ |

01001138c ಯಾತಂ ವಾರ್ಷ್ಣೇಯಂ ಯತ್ರ ತೌ ಕೃಷ್ಣಪಾರ್ಥೌ

         ತದಾ ನಾಶಂಸೇ ವಿಜಯಾಯ ಸಂಜಯ ||

ವಾರ್ಷ್ಣೇಯ ಯುಯುಧಾನನು ದ್ರೋಣನ ಆನೆಗಳ ಸೇನೆಯನ್ನು ಎಲ್ಲ ಕಡೆ ಚದುರುವಂತೆ ಮಾಡಿ ಅವುಗಳು ಕೃಷ್ಣಪಾರ್ಥರಿದ್ದೆಡೆ ತಲುಪದಂತೆ ತಡೆಗಟ್ಟಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001139a ಯದಾಶ್ರೌಷಂ ಕರ್ಣಮಾಸಾದ್ಯ ಮುಕ್ತಂ

         ವಧಾದ್ಭೀಮಂ ಕುತ್ಸಯಿತ್ವಾ ವಚೋಭಿಃ |

01001139c ಧನುಷ್ಕೋಟ್ಯಾ ತುದ್ಯ ಕರ್ಣೇನ ವೀರಂ

         ತದಾ ನಾಶಂಸೇ ವಿಜಯಾಯ ಸಂಜಯ ||

ವೀರ ಕರ್ಣನು ಧನುಸ್ಸಿನ ತುದಿಯಿಂದ ಭೀಮನನ್ನು ಎಳೆಯುತ್ತಾ ತನ್ನ ವಶದಲ್ಲಿ ತೆಗೆದುಕೊಂಡಿದ್ದರೂ ಬರಿಯ ಮೂದಲಿಕೆಯ ಮಾತುಗಳನ್ನು ಮಾತ್ರ ಹೇಳಿ ಅವನನ್ನು ವಧಿಸದೇ ಬಿಡುಗಡೆಮಾಡಿದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001140a ಯದಾ ದ್ರೋಣಃ ಕೃತವರ್ಮಾ ಕೃಪಶ್ಚ

         ಕರ್ಣೋ ದ್ರೌಣಿರ್ಮದ್ರರಾಜಶ್ಚ ಶೂರಃ |

01001140c ಅಮರ್ಷಯನ್ಸೈಂಧವಂ ವಧ್ಯಮಾನಂ

         ತದಾ ನಾಶಂಸೇ ವಿಜಯಾಯ ಸಂಜಯ ||

ದ್ರೋಣ, ಕೃತವರ್ಮ, ಕೃಪ, ಕರ್ಣ, ದ್ರೌಣಿ, ಮತ್ತು ಶೂರ ಮದ್ರರಾಜ ಇವರೆಲ್ಲರೂ ಸೈಂಧವನ ವಧೆಯಾಗಲು ಬಿಟ್ಟರು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001141a ಯದಾಶ್ರೌಷಂ ದೇವರಾಜೇನ ದತ್ತಾಂ

         ದಿವ್ಯಾಂ ಶಕ್ತಿಂ ವ್ಯಂಸಿತಾಂ ಮಾಧವೇನ |

01001141c ಘಟೋತ್ಕಚೇ ರಾಕ್ಷಸೇ ಘೋರರೂಪೇ

         ತದಾ ನಾಶಂಸೇ ವಿಜಯಾಯ ಸಂಜಯ ||

ದೇವರಾಜನಿಂದ ದೊರೆತ ದಿವ್ಯ ಶಕ್ತಿಯನ್ನು ಮಾಧವನ ಯೋಜನೆಯಂತೆ ಘೋರರೂಪಿ ರಾಕ್ಷಸ ಘಟೋತ್ಕಚನ ಮೇಲೆ ಉಪಯೋಗಿಸಲಾಯಿತು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು, ಸಂಜಯ!

01001142a ಯದಾಶ್ರೌಷಂ ಕರ್ಣಘಟೋತ್ಕಚಾಭ್ಯಾಂ

         ಯುದ್ಧೇ ಮುಕ್ತಾಂ ಸೂತಪುತ್ರೇಣ ಶಕ್ತಿಂ |

01001142c ಯಯಾ ವಧ್ಯಃ ಸಮರೇ ಸವ್ಯಸಾಚೀ

         ತದಾ ನಾಶಂಸೇ ವಿಜಯಾಯ ಸಂಜಯ ||

ಸಮರದಲ್ಲಿ ಸವ್ಯಸಾಚಿಯ ವಧೆಗೆಂದು ಮೀಸಲಾಗಿಟ್ಟಿದ್ದ ಶಕ್ತಿಯನ್ನು ಕರ್ಣ-ಘಟೋತ್ಕಚರ ಯುದ್ಧದಲ್ಲಿ ಸೂತಪುತ್ರನು ಬಳಸಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001143a ಯದಾಶ್ರೌಷಂ ದ್ರೋಣಮಾಚಾರ್ಯಮೇಕಂ

         ಧೃಷ್ಟದ್ಯುಮ್ನೇನಾಭ್ಯತಿಕ್ರಮ್ಯ ಧರ್ಮಂ |

01001143c ರಥೋಪಸ್ಥೇ ಪ್ರಾಯಗತಂ ವಿಶಸ್ತಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಆಚಾರ್ಯ ದ್ರೊಣನು ಒಬ್ಬನೇ ರಥದಲ್ಲಿ ಕುಳಿತು ಪ್ರಾಯಗತನಾಗಿದ್ದಾಗ ಧರ್ಮವನ್ನು ಅತಿಕ್ರಮಿಸಿ ಧೃಷ್ಟದ್ಯುಮ್ನನು ಅವನನ್ನು ಸಂಹರಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001144a ಯದಾಶ್ರೌಷಂ ದ್ರೌಣಿನಾ ದ್ವೈರಥಸ್ಥಂ

         ಮಾದ್ರೀಪುತ್ರಂ ನಕುಲಂ ಲೋಕಮಧ್ಯೇ |

01001144c ಸಮಂ ಯುದ್ಧೇ ಪಾಂಡವಂ ಯುಧ್ಯಮಾನಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಮಾದ್ರೀಪುತ್ರ ನಕುಲನು ಸೇನೆಯ ಮಧ್ಯದಲ್ಲಿ ದ್ರೌಣಿಯ ರಥವನ್ನು ಅಸ್ತವ್ಯಸ್ತ ಮಾಡಿ ಯುದ್ಧದಲ್ಲಿ ಪಾಂಡವನಾದ ತಾನೂ ಸರಿಸಾಟಿಯೆಂದು ತೋರಿಸಿದಲಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001145a ಯದಾ ದ್ರೋಣೇ ನಿಹತೇ ದ್ರೋಣಪುತ್ರೋ

         ನಾರಾಯಣಂ ದಿವ್ಯಮಸ್ತ್ರಂ ವಿಕುರ್ವನ್ |

01001145c ನೈಷಾಮಂತಂ ಗತವಾನ್ಪಾಂಡವಾನಾಂ

         ತದಾ ನಾಶಂಸೇ ವಿಜಯಾಯ ಸಂಜಯ ||

ದ್ರೋಣಾವಸಾನದ ನಂತರ ದ್ರೋಣಪುತ್ರನು ಬಿಟ್ಟ ದಿವ್ಯ ನಾರಾಯಣಾಸ್ತ್ರವು ಪಾಂಡವರನ್ನು ಕೊನೆಗೊಳಿಸುವಲ್ಲಿ ಅಸಫಲವಾದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

[9]01001146a ಯದಾಶ್ರೌಷಂ ಕರ್ಣಮತ್ಯಂತಶೂರಂ

         ಹತಂ ಪಾರ್ಥೇನಾಹವೇಷ್ವಪ್ರಧೃಷ್ಯಂ |

01001146c ತಸ್ಮಿನ್ ಭ್ರಾತೄಣಾಂ ವಿಗ್ರಹೇ ದೇವಗುಹ್ಯೇ

         ತದಾ ನಾಶಂಸೇ ವಿಜಯಾಯ ಸಂಜಯ ||

ಯುದ್ಧದಲ್ಲಿ ಗೆಲ್ಲಲಸಾದ್ಯ ಅತಿ ಶೂರ ಕರ್ಣನು ದೇವತೆಗಳಿಗೂ ಗುಹ್ಯವಾದ ಆ ಸಹೋದರರ ಸಮರದಲ್ಲಿ ಪಾರ್ಥನಿಂದ ಹತನಾದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001147a ಯದಾಶ್ರೌಷಂ ದ್ರೋಣಪುತ್ರಂ ಕೃಪಂ ಚ

         ದುಃಶಾಸನಂ ಕೃತವರ್ಮಾಣಮುಗ್ರಂ |

01001147c ಯುಧಿಷ್ಠಿರಂ ಶೂನ್ಯಮಧರ್ಷಯಂತಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಯುಧಿಷ್ಠಿರನು ದ್ರೋಣಪುತ್ರ, ಕೃಪ, ದುಃಶಾಸನ ಮತ್ತು ಉಗ್ರ ಕೃತವರ್ಮರನ್ನು ಸಮರದಲ್ಲಿ ಸೋಲಿಸಿದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001148a ಯದಾಶ್ರೌಷಂ ನಿಹತಂ ಮದ್ರರಾಜಂ

         ರಣೇ ಶೂರಂ ಧರ್ಮರಾಜೇನ ಸೂತ |

01001148c ಸದಾ ಸಂಗ್ರಾಮೇ ಸ್ಪರ್ಧತೇ ಯಃ ಸ ಕೃಷ್ಣಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಸಂಜಯ! ಸಂಗ್ರಾಮ ಸಾರಥ್ಯದಲ್ಲಿ ಕೃಷ್ಣನೊಂದಿಗೆ ಸ್ಪರ್ಧಿಸುತ್ತಿದ್ದ ಶೂರ ಮದ್ರರಾಜನು ಧರ್ಮರಾಜನಿಂದ ರಣದಲ್ಲಿ ಹತನಾದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು.

01001149a ಯದಾಶ್ರೌಷಂ ಕಲಹದ್ಯೂತಮೂಲಂ

         ಮಾಯಾಬಲಂ ಸೌಬಲಂ ಪಾಂಡವೇನ |

01001149c ಹತಂ ಸಂಗ್ರಾಮೇ ಸಹದೇವೇನ ಪಾಪಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಕಲಹದ್ಯೂತ ಮೂಲ, ಮಾಯಾಬಲ ಪಾಪಿ ಸೌಬಲನು ಸಂಗ್ರಾಮದಲ್ಲಿ ಪಾಂಡವ ಸಹದೇವನಿಂದ ಹತನಾದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

01001150a ಯದಾಶ್ರೌಷಂ ಶ್ರಾಂತಮೇಕಂ ಶಯಾನಂ

         ಹ್ರದಂ ಗತ್ವಾ ಸ್ತಂಭಯಿತ್ವಾ ತದಂಭಃ |

01001150c ದುರ್ಯೋಧನಂ ವಿರಥಂ ಭಗ್ನದರ್ಪಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಭಗ್ನದರ್ಪ ದುರ್ಯೋಧನನು ವಿರಥನಾಗಿ ಸರೋವರಕ್ಕೆ ಹೋಗಿ ಅಲ್ಲಿ ನೀರನ್ನು ಸ್ಥಿರಗೊಳಿಸಿ ಒಬ್ಬನೇ ಮಲಗಿ ವಿಶ್ರಾಂತಿ ತೆಗೆದುಕೊಂಡ ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಾಗಿತ್ತು ಸಂಜಯ!

01001151a ಯದಾಶ್ರೌಷಂ ಪಾಂಡವಾಂಸ್ತಿಷ್ಟಮಾನ್

         ಆಂಗಂಗಾಹ್ರದೇ ವಾಸುದೇವೇನ ಸಾರ್ಧಂ |

01001151c ಅಮರ್ಷಣಂ ಧರ್ಷಯತಃ ಸುತಂ ಮೇ

         ತದಾ ನಾಶಂಸೇ ವಿಜಯಾಯ ಸಂಜಯ ||

ವಾಸುದೇವನನ್ನೊಡಗೂಡಿದ ಪಾಂಡವರು ಅದೇ ಸರೋವರದ ದಡದಮೇಲೆ ನಿಂತು ನನ್ನ ಮಗನನ್ನು ಅಸಹ್ಯ ಮತ್ತು ಅಶ್ಲೀಲವಾಗಿ ಮೂದಲಿಸಿದರು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001152a ಯದಾಶ್ರೌಷಂ ವಿವಿಧಾಂಸ್ತಾತ ಮಾರ್ಗಾನ್

         ಗದಾಯುದ್ಧೇ ಮಂಡಲಂ ಸಂಚರಂತಂ |

01001152c ಮಿಥ್ಯಾ ಹತಂ ವಾಸುದೇವಸ್ಯ ಬುದ್ಧ್ಯಾ

         ತದಾ ನಾಶಂಸೇ ವಿಜಯಾಯ ಸಂಜಯ ||

ಗದಾಯುದ್ಧದಲ್ಲಿ ಸುತ್ತುಬಳಸಿ ವಿವಿಧ ಕುಶಲತೆಗಳನ್ನು ತೋರಿಸುತ್ತಿದ್ದ ನನ್ನ ಮಗನನ್ನು ವಾಸುದೇವನ ಸಲಹೆಯಂತೆ ಅನ್ಯಾಯವಾಗಿ ಹೊಡೆಯಲಾಯಿತು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001153a ಯದಾಶ್ರೌಷಂ ದ್ರೋಣಪುತ್ರಾದಿಭಿಸ್ತೈರ್ಹತಾನ್

         ಪಾಂಚಾಲಾನ್ದ್ರೌಪದೇಯಾಂಶ್ಚ ಸುಪ್ತಾನ್ |

01001153c ಕೃತಂ ಬೀಭತ್ಸಮಯಶಸ್ಯಂ ಚ ಕರ್ಮ

         ತದಾ ನಾಶಂಸೇ ವಿಜಯಾಯ ಸಂಜಯ ||

ಮಲಗಿದ್ದ ಪಾಂಚಾಲ ಮತ್ತು ದ್ರೌಪದೇಯರನ್ನು ದ್ರೋಣಪುತ್ರ ಮತ್ತು ಇತರರು ಅನಾವಶ್ಯಕವಾಗಿ ಕೊಲ್ಲುವ ಬೀಭತ್ಸ ಕರ್ವವನ್ನೆಸಗಿದರೆಂದು ಯಾವಾಗ ಕೇಳಿದೆನೋ ಅಂದೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001154a ಯದಾಶ್ರೌಷಂ ಭೀಮಸೇನಾನುಯಾತೇನ

         ಅಶ್ವತ್ಥಾಮ್ನಾ ಪರಮಾಸ್ತ್ರಂ ಪ್ರಯುಕ್ತಂ |

01001154c ಕ್ರುದ್ಧೇನೈಷೀಕಮವಧೀದ್ಯೇನ ಗರ್ಭಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಭೀಮಸೇನನಿಂದ ಬೆನ್ನಟ್ಟಲ್ಪಟ್ಟ ಅಶ್ವತ್ಥಾಮನು ಸಿಟ್ಟಿನಿಂದ ಹುಲ್ಲಿನ ಮೂಲಕ ಪರಮಾಸ್ತ್ರವನ್ನು ಬಿಟ್ಟು ಗರ್ಭವಧೆಗೈದುದನ್ನು ಕೇಳಿದಾಗಲೇ ವಿಜಯದ ಸಂಶಯವಿತ್ತು ಸಂಜಯ!

01001155a ಯದಾಶ್ರೌಷಂ ಬ್ರಹ್ಮಶಿರೋಽರ್ಜುನೇನ

         ಮುಕ್ತಂ ಸ್ವಸ್ತೀತ್ಯಸ್ತ್ರಮಸ್ತ್ರೇಣ ಶಾಂತಂ |

01001155c ಅಶ್ವತ್ಥಾಮ್ನಾ ಮಣಿರತ್ನಂ ಚ ದತ್ತಂ

         ತದಾ ನಾಶಂಸೇ ವಿಜಯಾಯ ಸಂಜಯ ||

ಅಶ್ವತ್ಥಾಮನ ಬ್ರಹ್ಮಶಿರವು ಅರ್ಜುನನು ಸ್ವಸ್ತಿ ಎಂದು ಬಿಟ್ಟ ಅಸ್ತ್ರದಿಂದ ಶಾಂತಗೊಂಡಿತು ಮತ್ತು ಅಶ್ವತ್ಥಾಮನು ತನ್ನ ಮಣಿರತ್ನವನ್ನು ಕೊಟ್ಟನೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001156a ಯದಾಶ್ರೌಷಂ ದ್ರೋಣಪುತ್ರೇಣ ಗರ್ಭೇ

         ವೈರಾಟ್ಯಾ ವೈ ಪಾತ್ಯಮಾನೇ ಮಹಾಸ್ತ್ರೇ |

01001156c ದ್ವೈಪಾಯನಃ ಕೇಶವೋ ದ್ರೋಣಪುತ್ರಂ

         ಪರಸ್ಪರೇಣಾಭಿಶಾಪೈಃ ಶಶಾಪ ||

ದ್ರೋಣಪುತ್ರನ ಮಹಾಸ್ತ್ರದಿಂದ ವೈರಾಟಿಯ ಗರ್ಭವು ಹನನಗೊಂಡಾಗ ದ್ವೈಪಾಯನ, ಕೇಶವ ಮತ್ತು ದ್ರೋಣಪುತ್ರರು ಪರಸ್ಪರರಿಗೆ ಶಾಪ-ಅಭಿಶಾಪಗಳನ್ನಿತ್ತರು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

01001157a ಶೋಚ್ಯಾ ಗಾಂಧಾರೀ ಪುತ್ರಪೌತ್ರೈರ್ವಿಹೀನಾ

         ತಥಾ ವಧ್ವಃ ಪಿತೃಭಿರ್ಭ್ರಾತೃಭಿಶ್ಚ |

01001157c ಕೃತಂ ಕಾರ್ಯಂ ದುಷ್ಕರಂ ಪಾಂಡವೇಯೈಃ

         ಪ್ರಾಪ್ತಂ ರಾಜ್ಯಮಸಪತ್ನಂ ಪುನಸ್ತೈಃ ||

ಸರಿಸಾಟಿಯಿಲ್ಲದ ರಾಜ್ಯವನ್ನು ಪುನಃ ಪಡೆಯುವ ದುಷ್ಕರ ಕಾರ್ಯದಲ್ಲಿ ಪಾಂಡವರು ಯಶಸ್ವಿಯಾಗಿದ್ದಾರೆ. ಆದರೆ ಪುತ್ರ, ಪೌತ್ರ, ತಂದೆ ಮತ್ತು ಸಹೋದರರನ್ನು ಕಳೆದುಕೊಂಡ ಗಾಂಧಾರಿಯ ಬಗ್ಗೆ ಶೋಕಿಸಬೇಕು.

01001158a ಕಷ್ಟಂ ಯುದ್ಧೇ ದಶ ಶೇಷಾಃ ಶ್ರುತಾ ಮೇ

         ತ್ರಯೋಽಸ್ಮಾಕಂ ಪಾಂಡವಾನಾಂ ಚ ಸಪ್ತ |

01001158c ದ್ವ್ಯೂನಾ ವಿಂಶತಿರಾಹತಾಕ್ಷೌಹಿಣೀನಾಂ

         ತಸ್ಮಿನ್ಸಂಗ್ರಾಮೇ ವಿಗ್ರಹೇ ಕ್ಷತ್ರಿಯಾಣಾಂ ||

ಆ ಸಂಗ್ರಾಮದಲ್ಲಿ ೧೮ ಅಕ್ಷೌಹಿಣೀ ಕ್ಷತ್ರಿಯರು ಹತರಾಗಿ ಯುದ್ಧದಲ್ಲಿ ಕೇವಲ ೧೦ ಮಂದಿ ಉಳಿದುಕೊಂಡಿದ್ದಾರೆ - ನಮ್ಮವರು ಮೂರು ಮತ್ತು ಪಾಂಡವರ ಕಡೆಯವರು ಏಳು - ಎಂದು ಕೇಳಲು ಬಹಳ ಕಷ್ಟವಾಗುತ್ತಿದೆ.

01001159a ತಮಸಾತ್ವಭ್ಯವಸ್ತೀರ್ಣೋ ಮೋಹ ಆವಿಶತೀವ ಮಾಂ |

01001159c ಸಂಜ್ಞಾಂ ನೋಪಲಭೇ ಸೂತ ಮನೋ ವಿಹ್ವಲತೀವ ಮೇ ||

ಸೂತ! ನನ್ನ ಮನಸ್ಸು ವಿಹ್ವಲವಾಗಿದೆ. ಪ್ರಜ್ಞೆಯನ್ನು ಕಳೆದುಕೊಂಡಂಥವನಾಗಿದ್ದೇನೆ. ಮೋಹಪರವಶನಾದ ನನ್ನನ್ನು ಕತ್ತಲೆಯು ಆವರಿಸುತ್ತಿದೆ.”

01001160a ಇತ್ಯುಕ್ತ್ವಾ ಧೃತರಾಷ್ಟ್ರೋಽಥ ವಿಲಪ್ಯ ಬಹುದುಃಖಿತಃ |

01001160c ಮೂರ್ಚ್ಛಿತಃ ಪುನರಾಶ್ವಸ್ತಃ ಸಂಜಯಂ ವಾಕ್ಯಮಬ್ರವೀತ್ ||

ಬಹು ದುಃಖಿತ ಧೃತರಾಷ್ಟ್ರನು ಈ ರೀತಿ ಹೇಳಿ ವಿಲಪಿಸುತ್ತಾ ಮೂರ್ಛೆ ಹೊಂದಿ, ಪುನಃ ಎಚ್ಚೆತ್ತು ಸಂಜಯನಿಗೆ ಹೇಳಿದನು:

01001161a ಸಂಜಯೈವಂಗತೇ ಪ್ರಾಣಾಂಸ್ತ್ಯಕ್ತುಮಿಚ್ಛಾಮಿ ಮಾಚಿರಂ |

01001161c ಸ್ತೋಕಂ ಹ್ಯಪಿ ನ ಪಶ್ಯಾಮಿ ಫಲಂ ಜೀವಿತಧಾರಣೇ ||

“ಸಂಜಯ! ಈಗಲೇ ಈ ಪ್ರಾಣವನ್ನು ತ್ಯಜಿಸ ಬಯಸುತ್ತೇನೆ. ಬದುಕಿರುವುದರಲ್ಲಿ ಯಾವ ಫಲವನ್ನೂ ಕಾಣುತ್ತಿಲ್ಲ.”

01001162a ತಂ ತಥಾವಾದಿನಂ ದೀನಂ ವಿಲಪಂತಂ ಮಹೀಪತಿಂ |

01001162c ಗಾವಲ್ಗಣಿರಿದಂ ಧೀಮಾನ್ಮಹಾರ್ಥಂ ವಾಕ್ಯಮಬ್ರವೀತ್ ||

ಈ ರೀತಿ ಹೇಳಿ ದೀನನಾಗಿ ವಿಲಪಿಸುತ್ತಿದ್ದ ಮಹೀಪತಿಗೆ ಧೀಮಂತ ಗಾವಲ್ಗಣಿಯು ಮಹಾರ್ಥವುಳ್ಳ ಈ ಮಾತುಗಳನ್ನಾಡಿದನು:

01001163a ಶ್ರುತವಾನಸಿ ವೈ ರಾಜ್ಞೋ ಮಹೋತ್ಸಾಹಾನ್ಮಹಾಬಲಾನ್|

01001163c ದ್ವೈಪಾಯನಸ್ಯ ವದತೋ ನಾರದಸ್ಯ ಚ ಧೀಮತಃ ||

“ಮಹಾಬಲಶಾಲಿಗಳೂ ಮಹೋತ್ಸಾಹಿಗಳೂ ಆದ ರಾಜರ ಕುರಿತು ಧೀಮಂತ ವೈಶಂಪಾಯನ ಮತ್ತು ನಾರದರು ಹೇಳಿದ ಮಾತುಗಳನ್ನು ಕೇಳಿದ್ದೀಯೆ.

01001164a ಮಹತ್ಸು ರಾಜವಂಶೇಷು ಗುಣೈಃ ಸಮುದಿತೇಷು ಚ |

01001164c ಜಾತಾನ್ದಿವ್ಯಾಸ್ತ್ರವಿದುಷಃ ಶಕ್ರಪ್ರತಿಮತೇಜಸಃ ||

01001165a ಧರ್ಮೇಣ ಪೃಥಿವೀಂ ಜಿತ್ವಾ ಯಜ್ಞೈರಿಷ್ಟ್ವಾಪ್ತದಕ್ಷಿಣೈಃ |

01001165c ಅಸ್ಮಿನ್ಲೋಕೇ ಯಶಃ ಪ್ರಾಪ್ಯ ತತಃ ಕಾಲವಶಂ ಗತಾಃ ||

ಮಹಾ ರಾಜವಂಶಗಳಲ್ಲಿ ಜನಿಸಿದ ಹಲವಾರು ಉತ್ತಮ ಗುಣಶಾಲಿಗಳೂ, ದಿವ್ಯಾಸ್ತ್ರ ವಿದುಷರೂ, ಶಕ್ರನಂತೆ ತೇಜಸ್ವಿಗಳೂ ಆದ ರಾಜರುಗಳು ಧರ್ಮ ಪೂರಕವಾಗಿ ಪೃಥ್ವಿಯನ್ನು ಗೆದ್ದು ಧಾರಾಳ ದಕ್ಷಿಣೆಗಳಿಂದ ಯಜ್ಞಕಾರ್ಯಗಳನ್ನೆಸಗಿ ಈ ಲೋಕದಲ್ಲಿ ಯಶವನ್ನು ಹೊಂದಿ ನಂತರದಲ್ಲಿ ಎಲ್ಲರೂ ಕಾಲವಶರಾದರು.

01001166a ವೈನ್ಯಂ ಮಹಾರಥಂ ವೀರಂ ಸೃಂಜಯಂ ಜಯತಾಂ ವರಂ |

01001166c ಸುಹೋತ್ರಂ ರಂತಿದೇವಂ ಚ ಕಕ್ಷೀವಂತಂ ತಥೌಶಿಜಂ ||

01001167a ಬಾಹ್ಲೀಕಂ ದಮನಂ ಶೈಬ್ಯಂ ಶರ್ಯಾತಿಮಜಿತಂ ನಲಂ |

01001167c ವಿಶ್ವಾಮಿತ್ರಮಮಿತ್ರಘ್ನಂ ಅಂಬರೀಷಂ ಮಹಾಬಲಂ ||

01001168a ಮರುತ್ತಂ ಮನುಮಿಕ್ಷ್ವಾಕುಂ ಗಯಂ ಭರತಮೇವ ಚ |

01001168c ರಾಮಂ ದಾಶರಥಿಂ ಚೈವ ಶಶಬಿಂದುಂ ಭಗೀರಥಂ ||

[10]01001168c ಕೃತವೀರ್ಯಂ ಮಹಾಭಾಗಂ ತಥೈವ ಜನಮೇಜಯ||

01001169a ಯಯಾತಿಂ ಶುಭಕರ್ಮಾಣಂ ದೇವೈರ್ಯೋ ಯಾಜಿತಃ ಸ್ವಯಂ|

01001169c ಚೈತ್ಯಯೂಪಾಂಕಿತಾ ಭೂಮಿರ್ಯಸ್ಯೇಯಂ ಸವನಾಕರಾ ||

ಈ ರಾಜರುಗಳಲ್ಲಿ ಮಹಾರಥಿ ವೀರ ವೈನ್ಯ, ವಿಜಯಿಗಳಲ್ಲಿ ಶ್ರೇಷ್ಠ ಸೃಂಜಯ, ಸುಹೋತ್ರ, ರಂತಿದೇವ, ಕಕ್ಷೀವಂತ, ಔಶಿಜ, ಬಾಹ್ಲೀಕ, ದಮನ, ಶೈಭ್ಯ, ಶರ್ಯಾತಿ, ಅಪರಾಜಿತ ನಲ, ಅಮಿತ್ರಘ್ನ ವಿಶ್ವಾಮಿತ್ರ, ಮಹಾಬಲಿ ಅಂಬರೀಷ, ಮರುತ್ತ, ಮನು, ಇಕ್ಷ್ವಾಕು, ಗಯ, ಭರತ, ದಾಶರಥಿ ರಾಮ, ಶಶಬಿಂದು, ಭಗೀರಥ, ಮಹಾಭಾಗ ಕೃತವೀರ್ಯ, ಜನಮೇಜಯ ಮತ್ತು ಇಡೀ ಭೂಮಿಯನ್ನೇ ಯಜ್ಞಕುಂಡವನ್ನಾಗಿ ಗುರುತುಹಾಕಿ ಸ್ವಯಂ ದೇವತೆಗಳೊಂದಿಗೆ ಯಜ್ಞ ಮೊದಲಾದ ಶುಭಕರ್ಮಗಳನ್ನು ಮಾಡಿದ ಯಯಾತಿ ಸೇರಿರುತ್ತಾರೆ.

01001170a ಇತಿ ರಾಜ್ಞಾಂ ಚತುರ್ವಿಂಶನ್ನಾರದೇನ ಸುರರ್ಷಿಣಾ |

01001170c ಪುತ್ರಶೋಕಾಭಿತಪ್ತಾಯ ಪುರಾ ಶೈಬ್ಯಾಯ ಕೀರ್ತಿತಾಃ ||

ಹಿಂದೆ ಪುತ್ರಶೋಕದಿಂದ ಬಳಲುತ್ತಿದ್ದ ಶೈಬ್ಯನಿಗೆ ಸುರರ್ಷಿ ನಾರದನು ಈ ೨೪ ರಾಜರುಗಳ ಕುರಿತು ಹೇಳಿದ್ದನು.

01001171a ತೇಭ್ಯಶ್ಚಾನ್ಯೇ ಗತಾಃ ಪೂರ್ವಂ ರಾಜಾನೋ ಬಲವತ್ತರಾಃ |

01001171c ಮಹಾರಥಾ ಮಹಾತ್ಮಾನಃ ಸರ್ವೈಃ ಸಮುದಿತಾ ಗುಣೈಃ ||

01001172a ಪೂರುಃ ಕುರುರ್ಯದುಃ ಶೂರೋ ವಿಷ್ವಗಶ್ವೋ ಮಹಾಧೃತಿಃ |

01001172c ಅನೇನಾ ಯುವನಾಶ್ವಶ್ಚ ಕಕುತ್ಸ್ಥೋ ವಿಕ್ರಮೀ ರಘುಃ ||

01001173a ವಿಜಿತೀ ವೀತಿಹೋತ್ರಶ್ಚ ಭವಃ ಶ್ವೇತೋ ಬೃಹದ್ಗುರುಃ |

01001173c ಉಶೀನರಃ ಶತರಥಃ ಕಂಕೋ ದುಲಿದುಹೋ ದ್ರುಮಃ ||

01001174a ದಂಭೋದ್ಭವಃ ಪರೋ ವೇನಃ ಸಗರಃ ಸಂಕೃತಿರ್ನಿಮಿಃ |

01001174c ಅಜೇಯಃ ಪರಶುಃ ಪುಂಡ್ರಃ ಶಂಭುರ್ದೇವಾವೃಧೋಽನಘಃ ||

01001175a ದೇವಾಹ್ವಯಃ ಸುಪ್ರತಿಮಃ ಸುಪ್ರತೀಕೋ ಬೃಹದ್ರಥಃ |

01001175c ಮಹೋತ್ಸಾಹೋ ವಿನೀತಾತ್ಮಾ ಸುಕ್ರತುರ್ನೈಷಧೋ ನಲಃ ||

01001176a ಸತ್ಯವ್ರತಃ ಶಾಂತಭಯಃ ಸುಮಿತ್ರಃ ಸುಬಲಃ ಪ್ರಭುಃ |

01001176c ಜಾನುಜಂಘೋಽನರಣ್ಯೋಽರ್ಕಃ ಪ್ರಿಯಭೃತ್ಯಃ ಶುಭವ್ರತಃ ||

01001177a ಬಲಬಂಧುರ್ನಿರಾಮರ್ದಃ ಕೇತುಶೃಂಗೋ ಬೃಹದ್ಬಲಃ |

01001177c ಧೃಷ್ಟಕೇತುರ್ಬೃಹತ್ಕೇತುರ್ದೀಪ್ತಕೇತುರ್ನಿರಾಮಯಃ ||

01001178a ಅವಿಕ್ಷಿತ್ಪ್ರಬಲೋ ಧೂರ್ತಃ ಕೃತಬಂಧುರ್ದೃಧೇಷುಧಿಃ |

01001178c ಮಹಾಪುರಾಣಃ ಸಂಭಾವ್ಯಃ ಪ್ರತ್ಯಂಗಃ ಪರಹಾ ಶ್ರುತಿಃ ||

ಇವರಲ್ಲದೇ ಇನ್ನೂ ಇತರ ಬಲಶಾಲಿ ಮಹಾತ್ಮ ಮಹಾರಥಿ ಸರ್ವ ಸುಗುಣೋಪೇತ ರಾಜರುಗಳು ಈ ಹಿಂದೆ ಕಾಲವಶರಾಗಿದ್ದಾರೆ: ಪುರು, ಕುರು, ಯದು, ಶೂರ, ವಿಶಗಶ್ವ, ಮಹಾಧೃತಿ, ಅನೇನ, ಯುವನಾಶ್ವ, ಕುಕುತ್ಸ್ಥ, ವಿಕ್ರಮೀ, ರಘು, ವಿಜಯ, ವೀತಿಹೋತ್ರ, ಭವ, ಶ್ವೇತ, ಬೃಹದ್ಗುರು, ಉಶೀನರ, ಶತರಥ, ಕಂಕ, ದುಲಿದುಹ, ದೃಪ, ದಂಭೋದ್ಭವ, ಪರ, ವೇನ, ಸಗರ, ಸಂಕೃತಿ, ನಿಮಿ, ಅಜೇಯ, ಪರಶು, ಪುಂಡ್ರ, ಶಂಭು, ದೇವಾವೃಧ, ಅನಘ, ದೇವಾಹ್ವಯ, ಸುಪ್ರತಿಮ, ಸುಪ್ರತೀಕ, ಬೃಹದ್ರಥ, ಮಹೋತ್ಸಾಹ, ವಿನೀತಾತ್ಮ, ಸುಕರ್ತು, ನೈಷಧ ನಲ, ಸತ್ಯವ್ರತ, ಶಾಂತಭಯ, ಸುಮಿತ್ರ, ಸುಬಲ, ಪ್ರಭು, ಜಾನುಜಂಘ, ಅನರಣ್ಯ, ಅರ್ಕ, ಪ್ರಿಯಭೃತ್ಯ, ಶುಭವ್ರತ, ಬಲಬಂಧು, ನಿರಾಮರ್ದ, ಕೇತುಶಂಗ, ಬೃಹದ್ಬಲ, ಧೃತಕೇತು, ಬೃಹತ್ಕೇತು, ದೀಪ್ತಕೇತು, ನಿರಾಮಯ, ಅವಿಕ್ಷಿತ್, ಪ್ರಬಲ, ಧೂರ್ತ, ಕೃತಬಂಧು, ದೃಢೇಷುಧಿ, ಮಹಾಪುರಾಣ, ಸಂಭಾವ್ಯ, ಪ್ರತ್ಯಂಗ, ಪರಹಾ ಮತ್ತು ಶೃತಿ.

01001179a ಏತೇ ಚಾನ್ಯೇ ಚ ಬಹವಃ ಶತಶೋಽಥ ಸಹಸ್ರಶಃ |

01001179c ಶ್ರೂಯಂತೇಽಯುತಶಶ್ಚಾನ್ಯೇ ಸಂಖ್ಯಾತಾಶ್ಚಾಪಿ ಪದ್ಮಶಃ ||

01001180a ಹಿತ್ವಾ ಸುವಿಪುಲಾನ್ಭೋಗಾನ್ಬುದ್ಧಿಮಂತೋ ಮಹಾಬಲಾಃ|

01001180c ರಾಜಾನೋ ನಿಧನಂ ಪ್ರಾಪ್ತಾಸ್ತವ ಪುತ್ರೈರ್ಮಹತ್ತಮಾಃ ||

ಇವರು ಮತ್ತು ಇನ್ನೂ ಹಲವರು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಬುದ್ಧಿವಂತ ಮಹಾಬಲ ರಾಜರುಗಳು ವಿಪುಲ ಭೋಗಗಳನ್ನು ತೊರೆದು ನಿನ್ನ ಪುತ್ರರ ಹಾಗೆ ಮಹತ್ತಮ ನಿಧನ ಹೊಂದಿದ್ದಾರೆ.

01001181a ಯೇಷಾಂ ದಿವ್ಯಾನಿ ಕರ್ಮಾಣಿ ವಿಕ್ರಮಸ್ತ್ಯಾಗ ಏವ ಚ |

01001181c ಮಾಹಾತ್ಮ್ಯಮಪಿ ಚಾಸ್ತಿಕ್ಯಂ ಸತ್ಯತಾ ಶೌಚಮಾರ್ಜವಂ ||

01001182a ವಿದ್ವದ್ಭಿಃ ಕಥ್ಯತೇ ಲೋಕೇ ಪುರಾಣೈಃ ಕವಿಸತ್ತಮೈಃ |

01001182c ಸರ್ವರ್ದ್ಧಿಗುಣಸಂಪನ್ನಾಸ್ತೇ ಚಾಪಿ ನಿಧನಂ ಗತಾಃ ||

ಯಾರ ದಿವ್ಯ ಕರ್ಮಗಳು, ವಿಕ್ರಮ, ತ್ಯಾಗ, ಮಹಾತ್ಮೆ, ಅಸ್ತಿತ್ವ, ಸತ್ಯತೆ ಮತ್ತು ಶುದ್ಧತೆಯನ್ನು ಲೋಕದ ವಿದ್ವಾಂಸ ಕವಿಸತ್ತಮರು ಪುರಾಣಗಳಲ್ಲಿ ಹೇಳುತ್ತಾರೋ ಆ ಎಲ್ಲ ಗುಣಸಂಪನ್ನರೂ ಏಷ್ಟೋ ಕಾಲದ ಹಿಂದೆಯೇ ನಿಧನರಾಗಿ ಹೋಗಿದ್ದಾರೆ.

01001183a ತವ ಪುತ್ರಾ ದುರಾತ್ಮಾನಃ ಪ್ರತಪ್ತಾಶ್ಚೈವ ಮನ್ಯುನಾ |

01001183c ಲುಬ್ಧಾ ದುರ್ವೃತ್ತಭೂಯಿಷ್ಠಾ ನ ತಾನ್ಶೋಚಿತುಮರ್ಹಸಿ ||

ನಿನ್ನ ಮಕ್ಕಳಾದರೋ ದುರಾತ್ಮರಾಗಿದ್ದರು. ಸಿಟ್ಟು ಮತ್ತು ಲೋಭದಿಂದ ಉರಿಯುತ್ತಿದ್ದರು. ದುರ್ವೃತ್ತಿಗಳಾಗಿದ್ದರು. ಅಂಥವರಿಗಾಗಿ ನೀನು ಶೋಚಿಸುವುದು ಸರಿಯಲ್ಲ.

01001184a ಶ್ರುತವಾನಸಿ ಮೇಧಾವೀ ಬುದ್ಧಿಮಾನ್ಪ್ರಾಜ್ಞಸಮ್ಮತಃ |

01001184c ಯೇಷಾಂ ಶಾಸ್ತ್ರಾನುಗಾ ಬುದ್ಧಿರ್ನ ತೇ ಮುಹ್ಯಂತಿ ಭಾರತ ||

ಭಾರತ! ನೀನು ಶೃತಿಗಳನ್ನು ಅರಿತವನೂ, ಮೇಧಾವಿಯೂ, ಬುದ್ಧಿವಂತನೂ, ಪ್ರಜ್ಞಸಮ್ಮತನೂ ಆಗಿದ್ದೀಯೆ. ಶಾಸ್ತ್ರಗಳನ್ನು ಅನುಸರಿಸುವವರು ಹೀಗೆ ಶೋಕಿಸುವುದಿಲ್ಲ.

01001185a ನಿಗ್ರಹಾನುಗ್ರಹೌ ಚಾಪಿ ವಿದಿತೌ ತೇ ನರಾಧಿಪ |

01001185c ನಾತ್ಯಂತಮೇವಾನುವೃತ್ತಿಃ ಶ್ರೂಯತೇ ಪುತ್ರರಕ್ಷಣೇ ||

ನರಾಧಿಪ! ನೀನು ವಿಧಿಯ ನಿಗ್ರಹ-ಅನುಗ್ರಹಗಳನ್ನು ತಿಳಿದಿದ್ದೀಯೆ. ಪುತ್ರರಕ್ಷಣೆಗೆಂದು ನೀನು ಮಾಡಿದುದೆಲ್ಲವನ್ನೂ ವಿಧಿಯು ಮೊದಲೇ ನಿರ್ಧರಿಸಿತ್ತು.

01001186a ಭವಿತವ್ಯಂ ತಥಾ ತಚ್ಚ ನಾತಃ ಶೋಚಿತುಮರ್ಹಸಿ |

01001186c ದೈವಂ ಪ್ರಜ್ಞಾವಿಶೇಷೇಣ ಕೋ ನಿವರ್ತಿತುಮರ್ಹತಿ ||

ಹೀಗೆಯೇ ಆಗಬೇಕೆಂದು ಇದ್ದುದಕ್ಕೆ ಶೋಚಿಸುವುದು ಸರಿಯಲ್ಲ. ಪ್ರಜ್ಞಾವಿಷೇಶದಿಂದ ಯಾರುತಾನೆ ದೈವವನ್ನು ತಡೆಗಟ್ಟಲು ಸಾದ್ಯ?

01001187a ವಿಧಾತೃವಿಹಿತಂ ಮಾರ್ಗಂ ನ ಕಶ್ಚಿದತಿವರ್ತತೇ |

01001187c ಕಾಲಮೂಲಮಿದಂ ಸರ್ವಂ ಭಾವಾಭಾವೌ ಸುಖಾಸುಖೇ ||

ವಿಧಾತನಿಂದ ಹಾಕಿ ಕೊಟ್ಟ ಮಾರ್ಗವನ್ನು ಬಿಟ್ಟು ಹೋಗುವುದು ಯಾರಿಗೂ ಅಸಾದ್ಯ. ಆಗುವಂತದ್ದು-ಆಗದಿರುವಂತದ್ದು, ಸುಖ-ದುಃಖ ಇವೆಲ್ಲವೂ ಕಾಲದಿಂದಲೇ ಹುಟ್ಟುತ್ತವೆ.

01001188a ಕಾಲಃ ಪಚತಿ ಭೂತಾನಿ ಕಾಲಃ ಸಂಹರತಿ ಪ್ರಜಾಃ |

01001188c ನಿರ್ದಹಂತಂ ಪ್ರಜಾಃ ಕಾಲಂ ಕಾಲಃ ಶಮಯತೇ ಪುನಃ ||

ಇರುವ ಎಲ್ಲವನ್ನೂ ಕಾಲವೇ ಸೃಸ್ಟಿಸುತ್ತದೆ ಮತ್ತು ಇರುವ ಎಲ್ಲವನ್ನೂ ಅದೇ ನಾಶಪಡಿಸುತ್ತದೆ. ಹುಟ್ಟಿದ ಎಲ್ಲವನ್ನೂ ಕಾಲವು ಸುಡುತ್ತದೆ ಮತ್ತು ಕಾಲವೇ ಆ ಅಗ್ನಿಯನ್ನು ಆರಿಸುತ್ತದೆ.

01001189a ಕಾಲೋ ವಿಕುರುತೇ ಭಾವಾನ್ಸರ್ವಾನ್ಲೋಕೇ ಶುಭಾಶುಭಾನ್|

01001189c ಕಾಲಃ ಸಂಕ್ಷಿಪತೇ ಸರ್ವಾಃ ಪ್ರಜಾ ವಿಸೃಜತೇ ಪುನಃ |

01001189e ಕಾಲಃ ಸರ್ವೇಷು ಭೂತೇಷು ಚರತ್ಯವಿಧೃತಃ ಸಮಃ ||

ಲೋಕದಲ್ಲಿರುವ ಸರ್ವ ಶುಭಾಶುಭ ಭಾವಗಳನ್ನೂ ಕಾಲವೇ ಹುಟ್ಟಿಸಿದೆ. ಹುಟ್ಟಿಸಿದ ಎಲ್ಲವನ್ನೂ ಕಾಲವು ನಾಶಗೊಳಿಸಿ ಪುನಃ ಸೃಸ್ಟಿಸುತ್ತದೆ. ಇರುವ ಎಲ್ಲದರಲ್ಲಿಯೂ ಕಾಲವು ಒಂದೇ ಸಮನೆ ಕೆಲಸಮಾಡುತ್ತಿರುತ್ತದೆ.

01001190a ಅತೀತಾನಾಗತಾ ಭಾವಾ ಯೇ ಚ ವರ್ತಂತಿ ಸಾಂಪ್ರತಂ |

01001190c ತಾನ್ಕಾಲನಿರ್ಮಿತಾನ್ಬುದ್ಧ್ವಾ ನ ಸಂಜ್ಞಾಂ ಹಾತುಮರ್ಹಸಿ||

ಹಿಂದೆ ನಡೆದ ಮತ್ತು ಮುಂದೆ ನಡೆಯುವ ಎಲ್ಲವೂ ಕಾಲನಿರ್ಮಿತವಾದವು ಎಂದು ತಿಳಿದೂ ಶೋಕಿಸಿ ಬಳಲುವುದು ಸರಿಯಲ್ಲ.”

***

[1] ಈ ಶ್ಲೋಕವನ್ನೂ ಸೇರಿ ಮುಂದಿನ ಯದಾಶ್ರೌಷಂ ಎಂಬ ಶಬ್ಧದಿಂದ ಪ್ರಾರಂಭವಾಗುವ ೫೫ ಶ್ಲೋಕಗಳ ಸಂಕಲನವನ್ನು ಯದಾಶ್ರೌಷಪರ್ವವೆಂದೂ ಕರೆಯುತ್ತಾರೆ. ಇದು ಈ ಉಪಪರ್ವದಲ್ಲಿರುವ ಮಹಾಭಾರತದ ಎರಡನೆಯ ಸಾರಾಂಶವೆನ್ನಬಹುದು.

[2] ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕಗಳಿವೆ:

ಯದಾಶ್ರೌಷಂ ಜಾತುಷಾದ್ ವೇಸ್ಮನಸ್ತಾನ್ ಮುಕ್ತಾನ್ ಪಾರ್ಥಾನ್ ಪಂಚ ಕುಂತ್ಯಾ ಸಮೇತಾನ್|  ಯುಕ್ತಂ ಚೈಷಾಂ ವಿದುರಂ ಸ್ವಾರ್ಥಸಿದ್ಧೌ ತದಾ ನಾಶಂಸೇ ವಿಜಯಾಯ ಸಂಜಯ|| ಅರ್ಥಾತ್: ಜಾತುಗೃಹದಿಂದ ಪಂಚಪಾಂಡವರು ಕುಂತಿಯೊಡನೆ ಮುಕ್ತರಾಗುವುದರಲ್ಲಿ ಸ್ವಾರ್ಥಸಿದ್ಧಿ ವಿದುರನ ಕೈವಾಡವಿತ್ತೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

ಯದಾಶ್ರೌಷಂ ದ್ರೌಪದೀಂ ರಂಗಮಧ್ಯೇ ಲಕ್ಷ್ಯಂ ಭಿತ್ವಾ ನಿರ್ಜಿತಾಮರ್ಜುನೇನ| ಶೂರಾನ್ ಪಾಂಚಾಲಾನ್ ಪಾಂಡವೇಯಾಂಶ್ಚ ಯುಕ್ತಾಂಸ್ತದಾ ನಾಶಂಸೇ ವಿಜಯಾಯ ಸಂಜಯ|| ಅರ್ಥಾತ್: ರಂಗಮಧ್ಯದಲ್ಲಿ ಲಕ್ಷ್ಯವನ್ನು ಭೇದಿಸಿ ಅರ್ಜುನನು ದ್ರೌಪದಿಯನ್ನು ಪಡೆದು ಪಾಂಡವರು ಶೂರ ಪಾಂಚಾಲರೊಂದಿಗೆ ಸೇರಿದರು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

ಯದಾಶ್ರೌಷಂ ಮಾಗಧಾನಾಂ ವರಿಷ್ಠಂ ಜರಾಸಂಧಂ ಕ್ಷತ್ರಮಧ್ಯೇ ಜ್ವಲಂತಂ| ದೋರ್ಮ್ಯಾಂ ಹತಂ ಭೀಮಸೇನೇನ ಗತ್ವಾ ತದಾ ನಶಂಸೇ ವಿಜಯಾಯ ಸಂಜಯ|| ಅರ್ಥಾತ್: ಕ್ಷತ್ರಿಯರ ಮಧ್ಯದಲ್ಲಿ ಬೆಳಗುತ್ತಿದ್ದ ಮಾಗಧರ ವರಿಷ್ಠ ಜರಾಸಂಧನನ್ನು ಭೀಮಸೇನನು ಬಾಹುಬಲದಿಂದಲೇ ಸಂಹರಿಸಿದನು ಎಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

ಯದಾಶ್ರೌಷಂ ದಿಗ್ವಿಜಯೇ ಪಾಂಡುಪುತ್ರೈರ್ವಶೀಕೃತಾನ್ ಭೂಮಿಪಾಲಾನ್ ಪ್ರಸಹ್ಯ| ಮಹಾಕ್ರತುಂ ರಾಜಸೂಯಂ ಕೃತಂ ಚ ತದಾ ನಾಶಂಸೇ ವಿಜಯಾಯ ಸಂಜಯ|| ಅರ್ಥಾತ್: ದಿಗ್ವಿಜಯದಲ್ಲಿ ಪಾಂಡುಪುತ್ರರು ಭೂಮಿಪಾಲರನ್ನು ಸೋಲಿಸಿ ವಶೀಕರಿಸಿದ ಸಂಪತ್ತಿನಿಂದ ರಾಜಸೂಯ ಕ್ರತುವನ್ನು ಮಾಡಿದರೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ!

[3] ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಯದಾಶ್ರೌಷಂ ವಾಸಸಾಂ ತತ್ರ ರಾಶಿಂ ಸಮಾಕ್ಷಿಪತ್ ಕಿತವೋ ಮಂದಬುದ್ಧಿಃ| ದುಃಶಾಸನೋ ಗತವಾನ್ ನೈವ ಚಾಂತಂ ತದಾ ನಾಶಂಸೇ ವಿಜಯಾಯ ಸಂಜಯ|| ಅರ್ಥಾತ್: ಜೂಜುಗಾರ ಮಂದಬುದ್ಧಿ ದುಃಶಾಸನನು ವಸ್ತ್ರದ ರಾಶಿಯನ್ನು ಕಂಡನೇ ಹೊರತು ಅದರ ಕೊನೆಯನ್ನು ಕಾಣಲಿಲ್ಲ ಎಂದು ಕೇಳಿದಾಗಲೇ ನನಗೆ ವಿಜಯದ ಕುರಿತು ಸಂಶಯವಿತ್ತು ಸಂಜಯ!

[4] ಕುಂಭಕೋಣ ಸಂಪುಟದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಯದಾಶ್ರೌಷಂ ವನವಾಸೇ ತು ಪಾರ್ಥಾನ್ ಸಮಾಗತಾನ್ ಮಹರ್ಷಿಭಿಃ ಪುರಾಣೈಃ| ಉಪಾಸ್ಯಮಾನಾನ್ ಸಗಣೈರ್ಜಾತಸಖ್ಯಾನ್ ತದಾ ನಾಶಂಸೇ ವಿಜಯಾಯ ಸಂಜಯ|| ಅರ್ಥಾತ್: ವನವಾಸದಲ್ಲಿರುವಾಗಲೂ ಪಾರ್ಥರನ್ನು ಪುರಾತನ ಮಹರ್ಷಿಗಳು ಸಂದರ್ಶಿಸುತ್ತಿದ್ದರು, ಮತ್ತು ಅವರ ಸಖ್ಯಗಣಗಳೊಂದಿಗೆ ಸೇರಿಕೊಂಡಿದ್ದರು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

[5] ನೀಲಕಂಠೀಯದಲ್ಲಿ ಈ ಶ್ಲೋಕದ ಮೊದಲು ಎರಡು ಶ್ಲೋಕಗಳಿವೆ:

ಯದಾಶ್ರೌಷಂ ಕಾಲಕೇಯಾಸ್ತತಸ್ತೇ ಪೌಲೋಮಾನೋ ವರದಾನಾಚ್ಚ ದೃಪ್ತಾಃ| ದೇವೈರಜೇಯಾ ನಿರ್ಜಿತಾಶ್ಚಾರ್ಜುನೇನ ತನಾ ನಾಶಂಸೇ ವಿಜಯಾಯ ಸಂಜಯ|| ಅರ್ಥಾತ್: ವರಪ್ರಾಪ್ತಿಯಿಂದ ಕೊಬ್ಬಿಹೋಗಿದ್ದ, ದೇವತೆಗಳಿಂದಲೂ ಜಯಿಸಲು ಅಸಾಧ್ಯರಾಗಿದ್ದ ಪೌಲೋಮರೂ ಕಾಲಕೇಯರೂ ಅರ್ಜುನನಿಂದ ಪರಾಜಿತರಾದರೆಂದು ಕೇಳಿದಾಗಲೇ ನನಗೆ ವಿಜಯದ ಸಂಶಯವಿತ್ತು ಸಂಜಯ|

ಯದಾಶೌಷಮಸುರಾಣಾಂ ವಧಾರ್ಥೇ ಕಿರೀಟೀನಂ ಯಾಂತಮಮಿತ್ರಕರ್ಶನಮ್| ಕೃತಾರ್ಥಂ ಚಾಪ್ಯಾಗತಂ ಶಕ್ರಲೋಕಾತ್ತದಾ ನಾಶಂಸೇ ವಿಜಯಾಯ ಸಂಜಯ|| ಅರ್ಥಾತ್: ಅಮಿತ್ರಕರ್ಶನ ಅರ್ಜುನನು ಅಸುರರ ಸಂಹಾರಕ್ಕಾಗಿ ಇಂದ್ರಲೋಕಕ್ಕೆ ಹೋಗಿ ದೇವತೆಗಳ ಶತ್ರುಗಳನ್ನು ಸಂಹರಿಸಿ ದಿವ್ಯಾಸ್ತ್ರಗಳನ್ನು ಪಡೆದು ಕೃತಾರ್ಥನಾಗಿ ಭೂಮಿಗೆ ಹಿಂದಿರುಗಿದನೆಂಬ ವಾರ್ತೆಯನ್ನು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

ಕುಂಭಕೋಣ ಸಂಪುಟದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಯದಾಶ್ರೌಷಂ ತೀರ್ಥಯಾತ್ರಾಪ್ರವೃತ್ತಂ ಪಾಂಡೋಃ ಸುತಂ ಸಹಿತಂ ಲೋಮಶೇನ| ತಸ್ಮಾದಶ್ರೌಷೀದರ್ಜುನಸ್ಯಾರ್ಥಲಾಭಂ ತದಾ ನಾಶಂಸೇ ವಿಜಯಾಯ ಸಂಜಯ|| ಅರ್ಥಾತ್: ಲೋಮಶನೊಂದಿಗೆ ತೀರ್ಥಯಾತ್ರೆಯಲ್ಲಿ ತೊಡಗಿರುವಾದ ಪಾಂಡುಸುತ ಯುಧಿಷ್ಠಿರನು ಅರ್ಜುನನಿಗೆ ಅರ್ಥಲಾಭವಾಗಿದೆ ಎಂದು ತಿಳಿದುಕೊಂಡಿದುದನ್ನು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

[6] ನೀಲಕಂಠೀಯದಲ್ಲಿ ಈ ಶ್ಲೋಕದ ಮೊದಲು ಒಂದು ಶ್ಲೋಕವೆದೆ: ಯದಾಶ್ರೌಷಂ ನ ವಿದುರ್ಮಾಮಕಾಸ್ತಾನ್ಪ್ರಚ್ಛನ್ನರೂಪಾನ್ವಸತಃ ಪಾಂಡವೇಯಾನ್| ವಿರಾಟರಾಷ್ಟ್ರೇ ಸಹ ಕೃಷ್ಣಯಾ ಚ ತದಾ ನಾಶಂಸೇ ವಿಜಯಾಯ ಸಂಜಯ|| ಅರ್ಥಾತ್: ವಿರಾಟರಾಷ್ಟ್ರದಲ್ಲಿ ಕೃಷ್ಣೆಯೊಂದಿಗೆ ವೇಷಮರೆಸಿಕೊಂಡು ವಾಸಿಸುತ್ತಿದ್ದ ಪಾಂಡವೇಯರನ್ನು ನಮ್ಮವರಿಗೆ ಗುರುತಿಸಲಿಕ್ಕಾಗಲಿಲ್ಲವೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

ಕುಂಭಕೋಣ ಪ್ರತಿಯಲ್ಲಿ ಇದರ ಜೊತೆಗೆ ಇನ್ನೊಂದು ಶ್ಲೋಕವಿದೆ: ಯದಾಶ್ರೌಷಂ ಕೀಚಕಾನಾಂ ವರಿಷ್ಠಂ ನಿಷೂದಿತಂ ಭ್ರಾತೃಶತೇನ ಸಾರ್ಧಮ್| ದ್ರೌಪದ್ಯರ್ಥಂ ಭೀಮಸೇನೇನ ಸಂಖ್ಯೇ ತದಾ ನಾಶಂಸೇ ವಿಜಯಾಯ ಸಂಜಯ|| ಅರ್ಥಾತ್: ದ್ರೌಪದಿಗಾಗಿ ಭೀಮಸೇನನು ಕೀಚಕರ ಹಿರಿಯನನ್ನು, ಅವನ ನೂರು ಸಹೋದರರೊಂದಿಗೆ ಯುದ್ಧದಲ್ಲಿ ಕೊಂದನೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ|

[7] ನೀಲಕಂಠೀಯದಲ್ಲಿ ಈ ಶ್ಲೋಕದ ಮೊದಲು ಇನ್ನೊಂದು ಶ್ಲೋಕವಿದೆ: ಯದಾಶ್ರೌಷಂ ಲೋಕಹಿತಾಯ ಕೃಷ್ಣಂ ಶಮಾರ್ಥಿನಮುಪಯಾತಂ ಕುರೂಣಾಮ್| ಶಮಂ ಕುರ್ವಾಣಮಕೃತಾರ್ಥಂ ಚ ಯಾತಂ ತದಾ ನಾಶಂಸೇ ವಿಜಯಾಯ ಸಂಜಯ|| ಅರ್ಥಾತ್: ಲೋಕಹಿತಕ್ಕಾಗಿ ಮತ್ತು ಕುರುಗಳಲ್ಲಿ ಶಾಂತಿಯನ್ನು ಸ್ಥಾಪಿಸಲು ಕೃಷ್ಣನೇ ಬಂದಾಗ ಅವನು ಕೃತಕೃತ್ಯನಾಗದೇ ಹಿಂದಿರುಗಬೇಕಾಯಿತು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ|

[8] ನೀಲಕಂಠೀಯದಲ್ಲಿ ಈ ಶ್ಲೋಕದ ಮೊದಲು ಇನ್ನೊಂದು ಶ್ಲೋಕವಿದೆ: ಯದಾಶ್ರೌಷಂ ಚಾಪಗೇಯೇನ ಸಂಖ್ಯೇ ಸ್ವಯಂ ಮೃತ್ಯುಂ ವಿಹಿತಂ ಧಾರ್ಮಿಕೇಣ| ತಚ್ಚಾಕಾರ್ಷುಃ ಪಾಂಡವೇಯಾಃ ಪ್ರಹೃಷ್ಟಾಸ್ತದಾ ನಾಶಂಸೇ ವಿಜಯಾಯ ಸಂಜಯ|| ಅರ್ಥಾತ್: ಧರ್ಮಾತ್ಮ ಗಾಂಗೇಯನೇ ತನ್ನ ಮರಣದ ರಹಸ್ಯವನ್ನು ಪಾಂಡವರಿಗೆ ಹೇಳಿದನು ಮತ್ತು ಅದನ್ನು ತಿಳಿದ ಪಾಂಡವರು ಸಂತೋಷಪಟ್ಟರಲ್ಲದೇ ಅವನು ಹೇಳಿದಂತೆಯೇ ಮಾಡಿದರು ಎಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

[9] ನೀಲಕಂಠೀಯದಲ್ಲಿ ಈ ಶ್ಲೋಕದ ಮೊದಲು ಇನ್ನೊಂದು ಶ್ಲೋಕವಿದೆ: ಯದಾಶ್ರೌಷಂ ಭೀಮಸೇನೇನ ಪೀತಂ ರಕ್ತಂ ಭ್ರಾತುರ್ಯುಧಿ ದುಃಶಾಸನಸ್ಯ| ನಿವಾರಿತಂ ನಾನ್ಯತಮೇನ ಭೀಮಂ ತದಾ ನಾಶಂಸೇ ವಿಜಯಾಯ ಸಂಜಯ|| ಅರ್ಥಾತ್: ಯುದ್ಧದಲ್ಲಿ ಭೀಮಸೇನನು ತಮ್ಮ ದುಃಶಾಸನನ ರಕ್ತವನ್ನು ಕುಡಿಯುವಾಗ ಯಾರೊಬ್ಬರೂ ಆ ಘೋರ ಕೃತ್ಯವನ್ನು ತಡೆಯುವ ಧೈರ್ಯಮಡಲಿಲ್ಲವೆಂದು ಕೇಳಿದಾಗಲೇ ನನಗೆ ವಿಜಯದಲ್ಲಿ ಸಂಶಯವಿತ್ತು ಸಂಜಯ!

[10] ಮುಂದಿನ ಶ್ಲೋಕದ ಪ್ರಕಾರ ನಾರದನು ಶೈತ್ಯರಾಜನಿಗೆ ೨೪ ರಾಜರುಗಳ ಕುರಿತು ಹೇಳುತ್ತಾನೆ. ಆದರೆ ಪುಣೆಯ ಈ ಸಂಸ್ಕರಣದಲ್ಲಿರುವ ಶ್ಲೋಕಗಳು ಕೇವಲ ೨೨ ಮಂದಿ ರಾಜರುಗಳ ಹೆಸರುಗಳನ್ನು ಹೇಳುತ್ತವೆ. ಆದುದರಿಂದ ಈ ಒಂದು ಶ್ಲೋಕವನ್ನು ಇಲ್ಲಿ ಸೇರಿಸಲಾಗಿದೆ.

Leave a Reply

Your email address will not be published. Required fields are marked *