Bhishma Parva: Chapter 13

ಭೀಷ್ಮ ಪರ್ವ: ಭೂಮಿ ಪರ್ವ

೧೩

ಉತ್ತರದ್ವೀಪಾದಿಸಂಸ್ಥಾನ ವರ್ಣನ (೧-೫೦).

06013001 ಸಂಜಯ ಉವಾಚ|

06013001a ಉತ್ತರೇಷು ತು ಕೌರವ್ಯ ದ್ವೀಪೇಷು ಶ್ರೂಯತೇ ಕಥಾ|

06013001c ಯಥಾಶ್ರುತಂ ಮಹಾರಾಜ ಬ್ರುವತಸ್ತನ್ನಿಬೋಧ ಮೇ||

ಸಂಜಯನು ಹೇಳಿದನು: “ಕೌರವ್ಯ! ಉತ್ತರದಲ್ಲಿರುವ ದ್ವೀಪಗಳ ಕುರಿತು ಹೇಳಿದುದನ್ನು ಕೇಳಿದ್ದೇವಲ್ಲ? ಮಹಾರಾಜ! ಕೇಳಿದಹಾಗೆ ಅದನ್ನು ನಿನಗೆ ಹೇಳುತ್ತೇನೆ. ಕೇಳು.

06013002a ಘೃತತೋಯಃ ಸಮುದ್ರೋಽತ್ರ ದಧಿಮಂಡೋದಕೋಽಪರಃ|

06013002c ಸುರೋದಃ ಸಾಗರಶ್ಚೈವ ತಥಾನ್ಯೋ ಘರ್ಮಸಾಗರಃ||

ಅಲ್ಲಿರುವ ಸಮುದ್ರದ ನೀರು ತುಪ್ಪ. ಅದರ ನಂತರದ ಸಮುದ್ರದ ನೀರು ಮೊಸರು. ನಂತರದ್ದು ಸುರೆಯೇ ನೀರಾಗಿರುವ ಸಾಗರ ಮತ್ತು ಇನ್ನೊಂದು ನೀರಿರುವ ಘರ್ಮಸಾಗರ.

06013003a ಪರಸ್ಪರೇಣ ದ್ವಿಗುಣಾಃ ಸರ್ವೇ ದ್ವೀಪಾ ನರಾಧಿಪ|

06013003c ಸರ್ವತಶ್ಚ ಮಹಾರಾಜ ಪರ್ವತೈಃ ಪರಿವಾರಿತಾಃ||

ನರಾಧಿಪ! ಅವೆಲ್ಲವೂ ಪರಸ್ಪರರರಿಗಿಂತ ದ್ವಿಗುಣವಾಗಿವೆ. ಮಹಾರಾಜ! ಎಲ್ಲವೂ ಪರ್ವತಗಳಿಂದ ಸುತ್ತುವರೆಯಲ್ಪಟ್ಟಿವೆ.

06013004a ಗೌರಸ್ತು ಮಧ್ಯಮೇ ದ್ವೀಪೇ ಗಿರಿರ್ಮಾನಃಶಿಲೋ ಮಹಾನ್|

06013004c ಪರ್ವತಃ ಪಶ್ಚಿಮಃ ಕೃಷ್ಣೋ ನಾರಾಯಣನಿಭೋ ನೃಪ||

ಮಧ್ಯಮ ದ್ವೀಪದಲ್ಲಿ ಕೆಂಪುಶಿಲೆಯ ಗೌರವೆನ್ನುವ ಮಹಾ ಗಿರಿಯಿದೆ. ನೃಪ! ಅದಕ್ಕೆ ಪಶ್ಚಿಮದಲ್ಲಿ ಕೃಷ್ಣ ಎಂಬ, ನಾರಾಯಣನಿಗೆ ಪ್ರಿಯವಾದ ಗಿರಿಯಿದೆ.

06013005a ತತ್ರ ರತ್ನಾನಿ ದಿವ್ಯಾನಿ ಸ್ವಯಂ ರಕ್ಷತಿ ಕೇಶವಃ|

06013005c ಪ್ರಜಾಪತಿಮುಪಾಸೀನಃ ಪ್ರಜಾನಾಂ ವಿದಧೇ ಸುಖಂ||

ಅಲ್ಲಿ ಕೇಶವನು ದಿವ್ಯ ರತ್ನಗಳನ್ನು ಸ್ವಯಂ ರಕ್ಷಿಸುತ್ತಾನೆ. ಪ್ರಜಾಪತಿಯಂತೆ ಆಸೀನನಾಗಿ ಪ್ರಜೆಗಳೆಗೆ ವಿವಿಧ ಸುಖಗಳನ್ನು ಕರುಣಿಸುತ್ತಾನೆ.

06013006a ಕುಶದ್ವೀಪೇ ಕುಶಸ್ತಂಬೋ ಮಧ್ಯೇ ಜನಪದಸ್ಯ ಹ|

06013006c ಸಂಪೂಜ್ಯತೇ ಶಲ್ಮಲಿಶ್ಚ ದ್ವೀಪೇ ಶಾಲ್ಮಲಿಕೇ ನೃಪ||

ನೃಪ! ಅಲ್ಲಿಯ ಜನಪದಗಳ ಮಧ್ಯೆಯಿರುವ ಕುಶದ್ವೀಪ ಕುಶಸ್ತಂಬಗಳು, ಮತ್ತು ಶಲ್ಮಲಿ ದ್ವೀಪ ಮತ್ತು ಶಲ್ಮಲೀ ವೃಕ್ಷಗಳು (ಬೂರುಗದ ಮರಗಳು) ಸಂಪೂಜ್ಯವಾದವು.

06013007a ಕ್ರೌಂಚದ್ವೀಪೇ ಮಹಾಕ್ರೌಂಚೋ ಗಿರೀ ರತ್ನಚಯಾಕರಃ|

06013007c ಸಂಪೂಜ್ಯತೇ ಮಹಾರಾಜ ಚಾತುರ್ವರ್ಣ್ಯೇನ ನಿತ್ಯದಾ||

ಮಹಾರಾಜ! ಕ್ರೌಂಚದ್ವೀಪದಲ್ಲಿರುವ ರತ್ನಗಳ ಆಕರ ಮಹಾಕ್ರೌಂಚ ಗಿರಿಯನ್ನು ಚಾತುರ್ವರ್ಣದವರು ನಿತ್ಯವೂ ಪೂಜಿಸುತ್ತಾರೆ.

06013008a ಗೋಮಂದಃ ಪರ್ವತೋ ರಾಜನ್ಸುಮಹಾನ್ಸರ್ವಧಾತುಮಾನ್|

06013008c ಯತ್ರ ನಿತ್ಯಂ ನಿವಸತಿ ಶ್ರೀಮಾನ್ಕಮಲಲೋಚನಃ|

06013008e ಮೋಕ್ಷಿಭಿಃ ಸಂಸ್ತುತೋ ನಿತ್ಯಂ ಪ್ರಭುರ್ನಾರಾಯಣೋ ಹರಿಃ||

ರಾಜನ್! ಗೋಮಂದ ಪರ್ವತವು ತುಂಬಾ ದೊಡ್ಡದು ಮತ್ತು ಸರ್ವ ಧಾತುಗಳನ್ನೂ ಹೊಂದಿರುವಂಥಹುದು. ಅಲ್ಲಿ ನಿತ್ಯವೂ ಮೋಕ್ಷಹೊಂದಿದವರಿಂದ ಸ್ತುತಿಸಲ್ಪಟ್ಟು ಶ್ರೀಮಾನ್ ಕಮಲಲೋಚನ ಪ್ರಭು ಹರಿ ನಾರಾಯಣನು ವಾಸಿಸುತ್ತಾನೆ.

06013009a ಕುಶದ್ವೀಪೇ ತು ರಾಜೇಂದ್ರ ಪರ್ವತೋ ವಿದ್ರುಮೈಶ್ಚಿತಃ|

06013009c ಸುಧಾಮಾ ನಾಮ ದುರ್ಧರ್ಷೋ ದ್ವಿತೀಯೋ ಹೇಮಪರ್ವತಃ||

06013010a ದ್ಯುತಿಮಾನ್ನಾಮ ಕೌರವ್ಯ ತೃತೀಯಃ ಕುಮುದೋ ಗಿರಿಃ|

06013010c ಚತುರ್ಥಃ ಪುಷ್ಪವಾನ್ನಾಮ ಪಂಚಮಸ್ತು ಕುಶೇಶಯಃ||

06013011a ಷಷ್ಠೋ ಹರಿಗಿರಿರ್ನಾಮ ಷಡೇತೇ ಪರ್ವತೋತ್ತಮಾಃ|

06013011c ತೇಷಾಮಂತರವಿಷ್ಕಂಭೋ ದ್ವಿಗುಣಃ ಪ್ರವಿಭಾಗಶಃ||

ರಾಜೇಂದ್ರ! ಕುಶದ್ವೀಪದಲ್ಲಿ ವಿದ್ರುಮಗಳಿಂದ ಕೂಡಿರುವ ಸುಧಾಮ ಎಂಬ ಹೆಸರಿನ ದುರ್ಧರ್ಷ ಪರ್ವತವೂ ಮತ್ತು ಎರಡನೆಯದಾಗಿ ಹೇಮಪರ್ವತ ದ್ಯುತಿಮಾನ್, ಮೂರನೆಯದು ಕುಮುದ ಗಿರಿ, ನಾಲ್ಕನೆಯದು ಪುಷ್ಪವಾನ್, ಐದನೆಯದು ಕುಶೇಶಯ ಮತ್ತು ಆರನೆಯದರ ಹೆಸರು ಹರಿಗಿರಿ. ಈ ಆರು ಉತ್ತಮ ಪರ್ವತಗಳು. ಅವುಗಳ ವಿಸ್ತಾರಗಳು ಕ್ರಮೇಣವಾಗಿ ಹಿಂದಿನದಕ್ಕಿಂತ ದ್ವಿಗುಣವಾಗಿವೆ[1].

06013012a ಔದ್ಭಿದಂ ಪ್ರಥಮಂ ವರ್ಷಂ ದ್ವಿತೀಯಂ ವೇಣುಮಂಡಲಂ|

06013012c ತೃತೀಯಂ ವೈ ರಥಾಕಾರಂ ಚತುರ್ಥಂ ಪಾಲನಂ ಸ್ಮೃತಂ||

06013013a ಧೃತಿಮತ್ಪಂಚಮಂ ವರ್ಷಂ ಷಷ್ಠಂ ವರ್ಷಂ ಪ್ರಭಾಕರಂ|

06013013c ಸಪ್ತಮಂ ಕಾಪಿಲಂ ವರ್ಷಂ ಸಪ್ತೈತೇ ವರ್ಷಪುಂಜಕಾಃ||

ಔದ್ಭಿದವು ಮೊದಲನೆಯ ವರ್ಷ. ಎರಡನೆಯದು ವೇಣುಮಂಡಲ. ಮೂರನೆಯದು ರಥಾಕಾರ. ನಾಲ್ಕನೆಯದು ಪಾಲನವೆಂದು ಹೇಳುತ್ತಾರೆ. ಧೃತಿಮತ್ ಐದನೆಯ ವರ್ಷ. ಆರನೆಯ ವರ್ಷವು ಪ್ರಭಾಕರ. ಏಳನೆಯದು ಕಪಿಲ ವರ್ಷ. ಈ ಏಳು ವರ್ಷಪುಂಜಕಗಳು.

06013014a ಏತೇಷು ದೇವಗಂಧರ್ವಾಃ ಪ್ರಜಾಶ್ಚ ಜಗತೀಶ್ವರ|

06013014c ವಿಹರಂತಿ ರಮಂತೇ ಚ ನ ತೇಷು ಮ್ರಿಯತೇ ಜನಃ||

ಜಗತೀಶ್ವರ! ಇವುಗಳಲ್ಲಿ ದೇವ-ಗಂಧರ್ವರು ಮತ್ತು ಪ್ರಜೆಗಳು ವಿಹರಿಸಿ ರಮಿಸುತ್ತಾರೆ. ಅವುಗಳಲ್ಲಿ ಜನರು ಸಾಯುವುದಿಲ್ಲ.

06013015a ನ ತೇಷು ದಸ್ಯವಃ ಸಂತಿ ಮ್ಲೇಚ್ಛಜಾತ್ಯೋಽಪಿ ವಾ ನೃಪ|

06013015c ಗೌರಪ್ರಾಯೋ ಜನಃ ಸರ್ವಃ ಸುಕುಮಾರಶ್ಚ ಪಾರ್ಥಿವ||

ನೃಪ! ಆ ವರ್ಷಗಳಲ್ಲಿ ದಸ್ಯುಗಳೂ ಮ್ಲೇಚ್ಛ ಜಾತಿಯವರೂ ಇರುವುದಿಲ್ಲ. ಪಾರ್ಥಿವ! ಜನರೆಲ್ಲರೂ ಗೌರವರ್ಣದವರೂ ಸುಕುಮಾರರೂ ಆಗಿರುತ್ತಾರೆ.

06013016a ಅವಶಿಷ್ಟೇಷು ವರ್ಷೇಷು ವಕ್ಷ್ಯಾಮಿ ಮನುಜೇಶ್ವರ|

06013016c ಯಥಾಶ್ರುತಂ ಮಹಾರಾಜ ತದವ್ಯಗ್ರಮನಾಃ ಶೃಣು||

ಮನುಜೇಶ್ವರ! ಉಳಿದಿರುವ ವರ್ಷಗಳ ಕುರಿತು ಕೇಳಿದಂತೆ ಹೇಳುತ್ತೇನೆ. ಮಹಾರಾಜ! ಅವ್ಯಗ್ರಮಸ್ಸಿನಿಂದ ಅದನ್ನು ಕೇಳು.

06013017a ಕ್ರೌಂಚದ್ವೀಪೇ ಮಹಾರಾಜ ಕ್ರೌಂಚೋ ನಾಮ ಮಹಾಗಿರಿಃ|

06013017c ಕ್ರೌಂಚಾತ್ಪರೋ ವಾಮನಕೋ ವಾಮನಾದಂಧಕಾರಕಃ||

ಮಹಾರಾಜ! ಕ್ರೌಂಚದ್ವೀಪದಲ್ಲಿ ಕ್ರೌಂಚವೆಂಬ ಮಹಾಗಿರಿ. ಕ್ರೌಂಚದಿಂದ ಆಚೆಗೆ ವಾಮನಕ. ವಾಮನದಿಂದ ಅಂಧಕಾರಕ.

06013018a ಅಂಧಕಾರಾತ್ಪರೋ ರಾಜನ್ಮೈನಾಕಃ ಪರ್ವತೋತ್ತಮಃ|

06013018c ಮೈನಾಕಾತ್ಪರತೋ ರಾಜನ್ಗೋವಿಂದೋ ಗಿರಿರುತ್ತಮಃ||

ರಾಜನ್! ಅಂಧಕಾರದ ಆಚೆ ಪರ್ವತೋತ್ತಮ ಮೈನಾಕವಿದೆ. ರಾಜನ್! ಮೈನಾಕದ ಆಚೆ ಉತ್ತಮ ಗಿರಿ ಗೋವಿಂದವಿದೆ.

06013019a ಗೋವಿಂದಾತ್ತು ಪರೋ ರಾಜನ್ನಿಬಿಡೋ ನಾಮ ಪರ್ವತಃ|

06013019c ಪರಸ್ತು ದ್ವಿಗುಣಸ್ತೇಷಾಂ ವಿಷ್ಕಂಭೋ ವಂಶವರ್ಧನ||

ವಂಶವರ್ಧನ! ಗೋವಿಂದದ ಆಚೆ ವಿಸ್ತೀರ್ಣದಲ್ಲಿ ಅದರ ಎರಡು ಪಟ್ಟಿರುವ ನಿಬಿಡ ಎಂಬ ಹೆಸರಿನ ಪರ್ವತವಿದೆ.

06013020a ದೇಶಾಂಸ್ತತ್ರ ಪ್ರವಕ್ಷ್ಯಾಮಿ ತನ್ಮೇ ನಿಗದತಃ ಶೃಣು|

06013020c ಕ್ರೌಂಚಸ್ಯ ಕುಶಲೋ ದೇಶೋ ವಾಮನಸ್ಯ ಮನೋನುಗಃ||

ಅಲ್ಲಿ ಇರುವ ದೇಶಗಳ ಕುರಿತು ಹೇಳುತ್ತೇನೆ. ಕೇಳು. ಕ್ರೌಂಚದಲ್ಲಿರುವುದು ಕುಶಲ ದೇಶ. ವಾಮನದಲ್ಲಿರುವುದು ಮನೋನುಗ.

06013021a ಮನೋನುಗಾತ್ಪರಶ್ಚೋಷ್ಣೋ ದೇಶಃ ಕುರುಕುಲೋದ್ವಹ|

06013021c ಉಷ್ಣಾತ್ಪರಃ ಪ್ರಾವರಕಃ ಪ್ರಾವರಾದಂಧಕಾರಕಃ||

ಕುರುಕುಲೋದ್ವಹ! ಮನೋನುಗದ ಆಚೆಯಿರುವ ದೇಶವು ಉಷ್ಣ. ಉಷ್ಣದ ಆಚೆ ಪ್ರಾವರಕ. ಪ್ರಾವರಕದ ಆಚೆಯಿರುವುದು ಅಂಧಕಾರಕ.

06013022a ಅಂಧಕಾರಕದೇಶಾತ್ತು ಮುನಿದೇಶಃ ಪರಃ ಸ್ಮೃತಃ|

06013022c ಮುನಿದೇಶಾತ್ಪರಶ್ಚೈವ ಪ್ರೋಚ್ಯತೇ ದುಂದುಭಿಸ್ವನಃ||

ಅಂಧಕಾರಕದೇಶದ ನಂತರ ಮುನಿದೇಶವೆಂದು ಹೇಳುತ್ತಾರೆ. ಮುನಿದೇಶದ ಆಚೆ ದುಂದುಭಿಸ್ವನವೆಂದು ಹೇಳುತ್ತಾರೆ.

06013023a ಸಿದ್ಧಚಾರಣಸಂಕೀರ್ಣೋ ಗೌರಪ್ರಾಯೋ ಜನಾಧಿಪ|

06013023c ಏತೇ ದೇಶಾ ಮಹಾರಾಜ ದೇವಗಂಧರ್ವಸೇವಿತಾಃ||

ಜನಾಧಿಪ! ಮಹಾರಾಜ! ಈ ಸಿದ್ಧ-ಚಾರಣರಿಂದ ಕೂಡಿದ, ದೇವ-ಗಂಧರ್ವ ಸೇವಿತ ದೇಶಗಳಲ್ಲಿರುವವವರು ಗೌರವರ್ಣದವರು.

06013024a ಪುಷ್ಕರೇ ಪುಷ್ಕರೋ ನಾಮ ಪರ್ವತೋ ಮಣಿರತ್ನಮಾನ್|

06013024c ತತ್ರ ನಿತ್ಯಂ ನಿವಸತಿ ಸ್ವಯಂ ದೇವಃ ಪ್ರಜಾಪತಿಃ||

ಪುಷ್ಕರದಲ್ಲಿ ಪುಷ್ಕರ ಎನ್ನುವ ಮಣಿರತ್ನಗಳ ಪರ್ವತವಿದೆ. ಅಲ್ಲಿ ನಿತ್ಯವೂ ಸ್ವಯಂ ದೇವ ಪ್ರಜಾಪತಿಯು ವಾಸಿಸುತ್ತಾನೆ.

06013025a ತಂ ಪರ್ಯುಪಾಸತೇ ನಿತ್ಯಂ ದೇವಾಃ ಸರ್ವೇ ಮಹರ್ಷಿಭಿಃ|

06013025c ವಾಗ್ಭಿರ್ಮನೋನುಕೂಲಾಭಿಃ ಪೂಜಯಂತೋ ಜನಾಧಿಪ||

ಜನಾಧಿಪ! ಅವನನ್ನು ನಿತ್ಯವೂ ಎಲ್ಲ ದೇವತೆಗಳೂ, ಮಹರ್ಷಿಗಳೂ ವಾಕ್, ಮನಸ್ಸು ಮತ್ತು ಅನುಕೂಲಗಳಿಂದ ಪೂಜಿಸುತ್ತಾರೆ.

06013026a ಜಂಬೂದ್ವೀಪಾತ್ಪ್ರವರ್ತಂತೇ ರತ್ನಾನಿ ವಿವಿಧಾನ್ಯುತ|

06013026c ದ್ವೀಪೇಷು ತೇಷು ಸರ್ವೇಷು ಪ್ರಜಾನಾಂ ಕುರುನಂದನ||

06013027a ವಿಪ್ರಾಣಾಂ ಬ್ರಹ್ಮಚರ್ಯೇಣ ಸತ್ಯೇನ ಚ ದಮೇನ ಚ|

06013027c ಆರೋಗ್ಯಾಯುಃಪ್ರಮಾಣಾಭ್ಯಾಂ ದ್ವಿಗುಣಂ ದ್ವಿಗುಣಂ ತತಃ||

ಕುರುನಂದನ! ಜಂಬೂದ್ವೀಪದ ವಿವಿಧ ರತ್ನಗಳನ್ನು ತಂದು ಇಲ್ಲಿ ಬಳಸಲಾಗುತ್ತದೆ. ಈ ಎಲ್ಲ ದ್ವೀಪಗಳ ಪ್ರಜೆಗಳು ಬ್ರಹ್ಮಚರ್ಯ, ಸತ್ಯ, ಮತ್ತು ದಮಗಳಿಂದ ಕೂಡಿದ ವಿಪ್ರರು. ಇವರ ಆರೋಗ್ಯ ಮತ್ತು ಆಯುಸ್ಸಿನ ಪ್ರಮಾಣಗಳೆರಡೂ ದ್ವಿಗುಣ ದ್ವಿಗುಣಗಳಾಗುತ್ತಾ ಹೋಗುತ್ತವೆ.

06013028a ಏಕೋ ಜನಪದೋ ರಾಜನ್ದ್ವೀಪೇಷ್ವೇತೇಷು ಭಾರತ|

06013028c ಉಕ್ತಾ ಜನಪದಾ ಯೇಷು ಧರ್ಮಶ್ಚೈಕಃ ಪ್ರದೃಶ್ಯತೇ||

ಭಾರತ! ಈ ದ್ವೀಪಗಳಲ್ಲಿ ಒಂದೇ ಜನಪದವಿದೆ. ಈ ಜನಪದದಲ್ಲಿ ಒಂದೇ ಧರ್ಮವು ಕಾಣಿಸುತ್ತದೆ ಎಂದು ಹೇಳುತ್ತಾರೆ.

06013029a ಈಶ್ವರೋ ದಂಡಮುದ್ಯಮ್ಯ ಸ್ವಯಮೇವ ಪ್ರಜಾಪತಿಃ|

06013029c ದ್ವೀಪಾನೇತಾನ್ಮಹಾರಾಜ ರಕ್ಷಂಸ್ತಿಷ್ಠತಿ ನಿತ್ಯದಾ||

ಮಹಾರಾಜ! ಸ್ವಯಂ ಪ್ರಜಾಪತಿ ಈಶ್ವರನು ದಂಡವನ್ನು ಹಿಡಿದು ನಿತ್ಯವೂ ಈ ದ್ವೀಪಗಳನ್ನು ರಕ್ಷಿಸಲು ನಿಂತಿರುವನು.

06013030a ಸ ರಾಜಾ ಸ ಶಿವೋ ರಾಜನ್ಸ ಪಿತಾ ಸ ಪಿತಾಮಹಃ|

06013030c ಗೋಪಾಯತಿ ನರಶ್ರೇಷ್ಠ ಪ್ರಜಾಃ ಸಜಡಪಂಡಿತಾಃ||

ರಾಜನ್! ಅವನೇ ರಾಜಾ. ಅವನೇ ಶಿವ. ಅವನೇ ಪಿತ ಮತ್ತು ಪಿತಾಮಹ. ನರಶ್ರೇಷ್ಠ! ಜಡ-ಪಂಡಿತರನ್ನೂ ಸೇರಿ ಪ್ರಜೆಗಳನ್ನು ಅವನೇ ಕಾಯುತ್ತಾನೆ.

06013031a ಭೋಜನಂ ಚಾತ್ರ ಕೌರವ್ಯ ಪ್ರಜಾಃ ಸ್ವಯಮುಪಸ್ಥಿತಂ|

06013031c ಸಿದ್ಧಮೇವ ಮಹಾರಾಜ ಭುಂಜತೇ ತತ್ರ ನಿತ್ಯದಾ||

ಕೌರವ್ಯ! ಮಹಾರಾಜ! ಅಲ್ಲಿ ಭೋಜನವು ತಾನೇ ತಯಾರಾಗಿ ಬರುತ್ತದೆ. ಅಲ್ಲಿ ಸಿದ್ಧವಾಗಿರುವ ಅದನ್ನು ಅಲ್ಲಿಯವರು ನಿತ್ಯವೂ ಭುಂಜಿಸುತ್ತಾರೆ.

06013032a ತತಃ ಪರಂ ಸಮಾ ನಾಮ ದೃಶ್ಯತೇ ಲೋಕಸಂಸ್ಥಿತಿಃ|

06013032c ಚತುರಶ್ರಾ ಮಹಾರಾಜ ತ್ರಯಸ್ತ್ರಿಂಶತ್ತು ಮಂಡಲಂ||

ಅದರ ಆಚೆ ಸಮಾ ಎಂಬ ಹೆಸರಿನ ಲೋಕಸಂಸ್ಥಿತಿಯು ಕಾಣಿಸುತ್ತದೆ. ಮಹಾರಾಜ! ಅದು ನಾಲ್ಕು ಕೋಣಗಳಿಂದ ಕೂಡಿದ್ದು ಮೂವತ್ಮೂರು ಮಂಡಲಗಳನ್ನು ಹೊಂದಿದೆ.

06013033a ತತ್ರ ತಿಷ್ಠಂತಿ ಕೌರವ್ಯ ಚತ್ವಾರೋ ಲೋಕಸಮ್ಮತಾಃ|

06013033c ದಿಗ್ಗಜಾ ಭರತಶ್ರೇಷ್ಠ ವಾಮನೈರಾವತಾದಯಃ|

06013033e ಸುಪ್ರತೀಕಸ್ತಥಾ ರಾಜನ್ಪ್ರಭಿನ್ನಕರಟಾಮುಖಃ||

ಕೌರವ್ಯ! ಭರತಶ್ರೇಷ್ಠ! ರಾಜನ್! ಅಲ್ಲಿ ನಾಲ್ಕು ಲೋಕಸಮ್ಮತ ದಿಗ್ಗಜಗಳು - ವಾಮನ, ಐರಾವತದಿಂದ ಶುರುವಾಗಿ ಸುಪ್ರತೀಕ ಮತ್ತು ಇನ್ನೊಂದು ಕರಟಾಮುಖ.

06013034a ತಸ್ಯಾಹಂ ಪರಿಮಾಣಂ ತು ನ ಸಂಖ್ಯಾತುಮಿಹೋತ್ಸಹೇ|

06013034c ಅಸಂಖ್ಯಾತಃ ಸ ನಿತ್ಯಂ ಹಿ ತಿರ್ಯಗೂರ್ಧ್ವಮಧಸ್ತಥಾ||

ಅವುಗಳ ಪರಿಮಾಣಗಳನ್ನು ಲೆಕ್ಕಮಾಡಿ ಹೇಳಲು ನನಗೆ ಉತ್ಸಾಹವಿಲ್ಲ. ಅವುಗಳ ಅಗಲ, ಎತ್ತರ ಮತ್ತು ಗಾತ್ರಗಳು ನಿತ್ಯವೂ ಅಸಂಖ್ಯವಾದುದು.

06013035a ತತ್ರ ವೈ ವಾಯವೋ ವಾಂತಿ ದಿಗ್ಭ್ಯಃ ಸರ್ವಾಭ್ಯ ಏವ ಚ|

06013035c ಅಸಂಬಾಧಾ ಮಹಾರಾಜ ತಾನ್ನಿಗೃಹ್ಣಂತಿ ತೇ ಗಜಾಃ||

06013036a ಪುಷ್ಕರೈಃ ಪದ್ಮಸಂಕಾಶೈರ್ವರ್ಷ್ಮವದ್ಭಿರ್ಮಹಾಪ್ರಭೈಃ|

06013036c ತೇ ಶನೈಃ ಪುನರೇವಾಶು ವಾಯೂನ್ಮುಂಚಂತಿ ನಿತ್ಯಶಃ||

ಅಲ್ಲಿ ವಾಯುವು ಎಲ್ಲ ದಿಕ್ಕುಗಳಿಂದಲೂ ಬೀಸುತ್ತಿರುತ್ತಾನೆ. ಆ ಗಾಳಿಯನ್ನು ಈ ಗಜಗಳು ಪದ್ಮಸಂಕಾಶವಾದ, ಏನನ್ನೂ ಎಳೆದುಕೊಳ್ಳಬಹುದಾದ, ಮಹಾಪ್ರಭೆಯನ್ನುಳ್ಳ ತಮ್ಮ ಸೊಂಡಿಲುಗಳಿಂದ ಹಿಡಿದಿಟ್ಟುಕೊಂಡು, ಗಾಳಿಯನ್ನು ಪುನಃ ಮೆಲ್ಲನೇ ನಿತ್ಯವೂ ಬಿಡುತ್ತಿರುತ್ತವೆ.

06013037a ಶ್ವಸದ್ಭಿರ್ಮುಚ್ಯಮಾನಾಸ್ತು ದಿಗ್ಗಜೈರಿಹ ಮಾರುತಾಃ|

06013037c ಆಗಚ್ಛಂತಿ ಮಹಾರಾಜ ತತಸ್ತಿಷ್ಠಂತಿ ವೈ ಪ್ರಜಾಃ||

ಮಹಾರಾಜ! ಈ ರೀತಿ ದಿಗ್ಗಜಗಳ ಉಸಿರಾಟದಿಂದ ಹೊರಬಂದ ಗಾಳಿಯೇ ಇಲ್ಲಿಗೆ ಬಂದು, ಪ್ರಜೆಗಳು ಉಸಿರಾಡುತ್ತವೆ[2].”

06013038 ಧೃತರಾಷ್ಟ್ರ ಉವಾಚ|

06013038a ಪರೋ ವೈ ವಿಸ್ತರೋಽತ್ಯರ್ಥಂ ತ್ವಯಾ ಸಂಜಯ ಕೀರ್ತಿತಃ|

06013038c ದರ್ಶಿತಂ ದ್ವೀಪಸಂಸ್ಥಾನಂ ಉತ್ತರಂ ಬ್ರೂಹಿ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಮೊದಲನೆಯ ವಿಷಯವನ್ನು ನೀನು ಬಹಳ ವಿಸ್ತಾರವಾಗಿ ಹೇಳಿದ್ದೀಯೆ. ದ್ವೀಪಗಳಿರುವ ಜಾಗಗಳನ್ನೂ ಹೇಳಿದ್ದೀಯೆ. ಸಂಜಯ! ಇನ್ನು ಉಳಿದ ವಿಷಯಗಳ ಕುರಿತು ಹೇಳು.”

06013039 ಸಂಜಯ ಉವಾಚ|

06013039a ಉಕ್ತಾ ದ್ವೀಪಾ ಮಹಾರಾಜ ಗ್ರಹಾನ್ಮೇ ಶೃಣು ತತ್ತ್ವತಃ|

06013039c ಸ್ವರ್ಭಾನುಃ ಕೌರವಶ್ರೇಷ್ಠ ಯಾವದೇಷ ಪ್ರಭಾವತಃ||

ಸಂಜಯನು ಹೇಳಿದನು: “ಮಹಾರಾಜ! ದ್ವೀಪಗಳ ಕುರಿತು ಹೇಳಿಯಾಯಿತು. ಗ್ರಹಗಳ ಕುರಿತು ತತ್ವತವಾಗಿ ನಾನು ಹೇಳುವುದನ್ನು ಕೇಳು.

06013040a ಪರಿಮಂಡಲೋ ಮಹಾರಾಜ ಸ್ವರ್ಭಾನುಃ ಶ್ರೂಯತೇ ಗ್ರಹಃ|

06013040c ಯೋಜನಾನಾಂ ಸಹಸ್ರಾಣಿ ವಿಷ್ಕಂಭೋ ದ್ವಾದಶಾಸ್ಯ ವೈ||

ಮಹಾರಾಜ! ಗ್ರಹ ಸ್ವರ್ಭಾನು[3]ವು ಗೋಲಾಕರದ ಮಂಡಲದಲ್ಲಿದ್ದಾನೆಂದು ಕೇಳಿದ್ದೇವೆ. ಅದರ ವ್ಯಾಸವು ಹನ್ನೆರಡು ಸಾವಿರ ಯೋಜನಗಳು.

06013041a ಪರಿಣಾಹೇನ ಷಟ್ತ್ರಿಂಶದ್ವಿಪುಲತ್ವೇನ ಚಾನಘ|

06013041c ಷಷ್ಟಿಮಾಹುಃ ಶತಾನ್ಯಸ್ಯ ಬುಧಾಃ ಪೌರಾಣಿಕಾಸ್ತಥಾ||

ಅನಘ! ಅದರ ಸುತ್ತಳತೆ ೩೬ ಸಾವಿರ ಯೋಜನ, ಗಾತ್ರ(ದಪ್ಪ)ವು ೬ ಸಾವಿರ ಯೋಜನವೆಂದು ತಿಳಿದ ಪೌರಾಣಿಕರು ಹೇಳುತ್ತಾರೆ.

06013042a ಚಂದ್ರಮಾಸ್ತು ಸಹಸ್ರಾಣಿ ರಾಜನ್ನೇಕಾದಶ ಸ್ಮೃತಃ|

06013042c ವಿಷ್ಕಂಭೇಣ ಕುರುಶ್ರೇಷ್ಠ ತ್ರಯಸ್ತ್ರಿಂಶತ್ತು ಮಂಡಲಂ|

06013042e ಏಕೋನಷಷ್ಟಿರ್ವೈಪುಲ್ಯಾಚ್ಚೀತರಶ್ಮೇರ್ಮಹಾತ್ಮನಃ||

ರಾಜನ್! ಚಂದ್ರನ ವ್ಯಾಸವು ಹನ್ನೊಂದು ಸಾವಿರ ಯೋಜನಗಳೆಂದು ಹೇಳುತ್ತಾರೆ. ಕುರುಶ್ರೇಷ್ಠ! ಆ ಶೀತಾಂಶುವಿನ ಮಂಡಲದ ಸುತ್ತಳತೆಯು ೩೩ ಸಾವಿರ ಯೋಜನಗಳು ಮತ್ತು ದಪ್ಪವು ೫,೯೦೦ ಯೋಜನಗಳೆಂದು ಮಹಾತ್ಮರು ಹೇಳುತ್ತಾರೆ[4].

06013043a ಸೂರ್ಯಸ್ತ್ವಷ್ಟೌ ಸಹಸ್ರಾಣಿ ದ್ವೇ ಚಾನ್ಯೇ ಕುರುನಂದನ|

06013043c ವಿಷ್ಕಂಭೇಣ ತತೋ ರಾಜನ್ಮಂಡಲಂ ತ್ರಿಂಶತಂ ಸಮಂ||

ಕುರುನಂದನ! ರಾಜನ್! ಸೂರ್ಯಗ್ರಹದ ವಿಸ್ತಾರ ೧೦,೦೦೦ ಯೋಜನಗಳು. ಸುತ್ತಳತೆ ೩೦,೦೦೦ ಯೋಜನಗಳು.

06013044a ಅಷ್ಟಪಂಚಾಶತಂ ರಾಜನ್ವಿಪುಲತ್ವೇನ ಚಾನಘ|

06013044c ಶ್ರೂಯತೇ ಪರಮೋದಾರಃ ಪತಂಗೋಽಸೌ ವಿಭಾವಸುಃ|

06013044e ಏತತ್ಪ್ರಮಾಣಮರ್ಕಸ್ಯ ನಿರ್ದಿಷ್ಟಮಿಹ ಭಾರತ||

ರಾಜನ್! ಅನಘ! ಸೂರ್ಯನ ಗಾತ್ರ ೫,೮೦೦ ಯೋಜನಗಳು. ಭಾರತ! ಹೀಗೆ ಪರಮೋದಾರನಾದ ಶೀಘ್ರಗಾಮಿಯಾದ ವಿಭಾವಸುವಿನ ನಿರ್ದಿಷ್ಟ ಪರಿಮಾಣವನ್ನು ಹೇಳುತ್ತಾರೆ.

06013045a ಸ ರಾಹುಶ್ಚಾದಯತ್ಯೇತೌ ಯಥಾಕಾಲಂ ಮಹತ್ತಯಾ|

06013045c ಚಂದ್ರಾದಿತ್ಯೌ ಮಹಾರಾಜ ಸಂಕ್ಷೇಪೋಽಯಮುದಾಹೃತಃ||

ಮಹಾರಾಜ! ಇವುಗಳಲ್ಲಿ ರಾಹುವೇ ದೊಡ್ಡಗ್ರಹವಾದುದರಿಂದ ಕೆಲವು ಸಮಯಗಳಲ್ಲಿ ಇದು ಚಂದ್ರ-ಆದಿತ್ಯರನ್ನು ಮುಚ್ಚಿಬಿಡುತ್ತದೆ.

06013046a ಇತ್ಯೇತತ್ತೇ ಮಹಾರಾಜ ಪೃಚ್ಛತಃ ಶಾಸ್ತ್ರಚಕ್ಷುಷಾ|

06013046c ಸರ್ವಮುಕ್ತಂ ಯಥಾತತ್ತ್ವಂ ತಸ್ಮಾಚ್ಚಮಮವಾಪ್ನುಹಿ||

ಮಹಾರಾಜ! ನೀನು ಕೇಳಿದುದಕ್ಕೆ ಈ ಮೂರು ಗ್ರಹಗಳ ಕುರಿತು ನಿನಗೆ ಶಾಸ್ತ್ರಗಳ ಆಧಾರದಂತೆ ಎಲ್ಲವನ್ನೂ ಹೇಳಿದ್ದೇನೆ.

06013047a ಯಥಾದೃಷ್ಟಂ ಮಯಾ ಪ್ರೋಕ್ತಂ ಸನಿರ್ಯಾಣಮಿದಂ ಜಗತ್|

06013047c ತಸ್ಮಾದಾಶ್ವಸ ಕೌರವ್ಯ ಪುತ್ರಂ ದುರ್ಯೋಧನಂ ಪ್ರತಿ||

ಜಗತ್ತಿನ ನಿರ್ಮಾಣ ಮತ್ತು ಅದರ ಸ್ವರೂಪವನ್ನು ನೀನು ಬಯಸಿದಂತೆ ನಾನು ಹೇಳಿದ್ದೇನೆ. ಈ ಕಥನವನ್ನು ಕೇಳಿ ಕೌರವ್ಯ! ನಿನ್ನ ಮಗ ದುರ್ಯೋಧನನ ಕುರಿತು ಆಶ್ವಾಸನೆಯನ್ನು ಹೊಂದು.

06013048a ಶ್ರುತ್ವೇದಂ ಭರತಶ್ರೇಷ್ಠ ಭೂಮಿಪರ್ವ ಮನೋನುಗಂ|

06013048c ಶ್ರೀಮಾನ್ಭವತಿ ರಾಜನ್ಯಃ ಸಿದ್ಧಾರ್ಥಃ ಸಾಧುಸಮ್ಮತಃ|

06013048e ಆಯುರ್ಬಲಂ ಚ ವೀರ್ಯಂ ಚ ತಸ್ಯ ತೇಜಶ್ಚ ವರ್ಧತೇ||

ಭರತಶ್ರೇಷ್ಠ! ಈ ಭೂಮಿಪರ್ವವನ್ನು ಮನಸ್ಸಿಟ್ಟು ಕೇಳುವ ರಾಜನು ಶ್ರೀಮಂತನಾಗುತ್ತಾನೆ, ಸಿದಾರ್ಥನಾಗುತ್ತಾನೆ, ಸಾಧುಸಮ್ಮತನಾಗುತ್ತಾನೆ. ಅವನ ಆಯಸ್ಸು, ಬಲ, ವೀರ್ಯ ಮತ್ತು ತೇಜಸ್ಸುಗಳು ವೃದ್ಧಿಸುತ್ತವೆ.

06013049a ಯಃ ಶೃಣೋತಿ ಮಹೀಪಾಲ ಪರ್ವಣೀದಂ ಯತವ್ರತಃ|

06013049c ಪ್ರೀಯಂತೇ ಪಿತರಸ್ತಸ್ಯ ತಥೈವ ಚ ಪಿತಾಮಹಾಃ||

ಮಹೀಪಾಲ! ನಿಯತವಾದ ವ್ರತಾನುಷ್ಟಾನಗಳಲ್ಲಿದ್ದುಕೊಂಡು ಪರ್ವಕಲಗಳಲ್ಲಿ ಈ ಭೂಮಿಪರ್ವವನ್ನು ಶ್ರದ್ಧೆಯಿಂದ ಕೇಳುವವವರ ಪಿತೃಗಳೂ ಪಿತಾಮಹರೂ ಸಂಪ್ರೀತರಾಗುತ್ತಾರೆ.

06013050a ಇದಂ ತು ಭಾರತಂ ವರ್ಷಂ ಯತ್ರ ವರ್ತಾಮಹೇ ವಯಂ|

06013050c ಪೂರ್ವಂ ಪ್ರವರ್ತತೇ ಪುಣ್ಯಂ ತತ್ಸರ್ವಂ ಶ್ರುತವಾನಸಿ||

ಈಗ ನಾವು ಇರುವ ಮತ್ತು ಪೂರ್ವಜರು ಪುಣ್ಯಕರ್ಮಗಳನ್ನು ಮಾಡಿರುವ ಈ ಭಾರತವರ್ಷದ ಕುರಿತು ನೀನು ಎಲ್ಲವನ್ನೂ ಕೇಳಿದಂತಾಯಿತು.”

ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭೂಮಿ ಪರ್ವಣಿ ಉತ್ತರದ್ವೀಪಾದಿಸಂಸ್ಥಾನ ವರ್ಣನೇ ತ್ರಯೋದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭೂಮಿ ಪರ್ವದಲ್ಲಿ ಉತ್ತರದ್ವೀಪಾದಿಸಂಸ್ಥಾನ ವರ್ಣನವೆಂಬ ಹದಿಮೂರನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೂಮಿ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೂಮಿ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೫/೧೮, ಉಪಪರ್ವಗಳು-೬೨/೧೦೦, ಅಧ್ಯಾಯಗಳು-೮೭೩/೧೯೯೫, ಶ್ಲೋಕಗಳು-೨೮೨೩೯/೭೩೭೮೪

Image result for indian motifs earth

[1]ಕುಶದ್ವೀಪದಲ್ಲಿ ಮೊದಲನೆಯದಾದ ಗೌರಪರ್ವತಕ್ಕೂ ಎರಡನೆಯದಾದ ಸುಧಾಮಪರ್ವತಕ್ಕೂ ಅಂತರವು ಒಂದು ಸಾವಿರ ಯೋಜನೆಗಳಾಗಿದ್ದರೆ ಸುಧಾಮ ಪರ್ವತಕ್ಕೂ ಮೂರನೆಯದಾದ ಕುಮುದಪರ್ವತಕ್ಕೂ ಎರಡು ಸಾವಿರ ಯೋಜನೆಗಳು. ಕುಮುದಪರ್ವತಕ್ಕೂ ಪುಷ್ಪವತ್ಪರ್ವತಕ್ಕೂ ಅಂತರ ನಾಲ್ಕು ಸಾವಿರ ಯೋಜನೆಗಳು. ಹೀಗೆ ಉತ್ತರೋತ್ತರ ಪರ್ವತಗಳ ವಿಸ್ತೀರ್ಣವು ದ್ವಿಗುಣವಾಗುತ್ತಾ ಹೋಗುತ್ತದೆ.

[2]ದಿಗ್ಗಜಗಳ ಅಪರಿಮೇಯತ್ವವನ್ನು ಈ ಶ್ಲೋಕಗಳು ಸೂಚಿಸುತ್ತವೆ.

[3]ರಾಹುಗ್ರಹ.

[4] ಆಧುನಿಕ ಖಗೋಳಶಾಸ್ತ್ರದ ಪ್ರಕಾರ ಚಂದ್ರನ ಪರಿಧಿ (ಸುತ್ತಳತೆ) ೧೦,೯೫೧ ಕಿಲೋ ಮೀಟರ್‌ಗಳು ಅಥವಾ ೬.೭೮೩ ಮೈಲುಗಳು. ಅದರ ವ್ಯಾಸವು ೧೭೩೭.೪ ಕಿಲೋ ಮೀಟರ್ ಗಳು. http://www.universetoday.com/66662/circumference-of-the-moon/

Comments are closed.