Drona Parva: Chapter 148

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೪೮

ಕರ್ಣ-ಧೃಷ್ಟದ್ಯುಮ್ನರ ಯುದ್ಧ (೧-೭). ಕರ್ಣನ ಪರಾಕ್ರಮ; ಪಾಂಡವ ಸೇನೆಯ ಪಲಾಯನ (೮-೧೯). ಯುಧಿಷ್ಠಿರನು ಅರ್ಜುನನನಿಗೆ ಕರ್ಣನನ್ನು ಎದುರಿಸಲು ಹೇಳಿದುದು (೨೦-೨೪). ಕೃಷ್ಣಾರ್ಜುನರ ಸಂವಾದ (೨೫-೩೬). ಆಗ ಕೃಷ್ಣ-ಅರ್ಜುನರು ಕರ್ಣನೊಡನೆ ಯುದ್ಧಮಾಡಲು ಘಟೋತ್ಕಚನನ್ನು ಪ್ರೋತ್ಸಾಹಿಸಿದುದು (೩೭-೫೬). ಘಟೋತ್ಕಚನು ಒಪ್ಪಿಕೊಂಡು ಕರ್ಣನನ್ನು ಎದುರಿಸಿದುದು (೫೭-೬೨).

07148001 ಸಂಜಯ ಉವಾಚ|

07148001a ತತಃ ಕರ್ಣೋ ರಣೇ ದೃಷ್ಟ್ವಾ ಪಾರ್ಷತಂ ಪರವೀರಹಾ|

07148001c ಆಜಘಾನೋರಸಿ ಶರೈರ್ದಶಭಿರ್ಮರ್ಮಭೇದಿಭಿಃ||

ಸಂಜಯನು ಹೇಳಿದನು: “ಆಗ ಪರವೀರಹ ಕರ್ಣನು ಪಾರ್ಷತನನ್ನು ನೋಡಿ ಅವನ ಎದೆಗೆ ಹತ್ತು ಮರ್ಮಭೇದಿಗಳಿಂದ ಹೊಡೆದನು.

07148002a ಪ್ರತಿವಿವ್ಯಾಧ ತಂ ತೂರ್ಣಂ ಧೃಷ್ಟದ್ಯುಮ್ನೋಽಪಿ ಮಾರಿಷ|

07148002c ಪಂಚಭಿಃ ಸಾಯಕೈರ್ಹೃಷ್ಟಸ್ತಿಷ್ಠ ತಿಷ್ಠೇತಿ ಚಾಬ್ರವೀತ್||

ಮಾರಿಷ! ಕೂಡಲೆ ಧೃಷ್ಟದ್ಯುಮ್ನನು ಕೂಡ ಅವನನ್ನು ಐದು ಸಾಯಕಗಳಿಂದ ಹೊಡೆದು “ನಿಲ್ಲು! ನಿಲ್ಲು!” ಎಂದು ಕೂಗಿದನು.

07148003a ತಾವನ್ಯೋನ್ಯಂ ಶರೈಃ ಸಂಖ್ಯೇ ಸಂಚಾದ್ಯ ಸುಮಹಾರಥೌ|

07148003c ಪುನಃ ಪೂರ್ಣಾಯತೋತ್ಸೃಷ್ಟೈರ್ವಿವ್ಯಧಾತೇ ಪರಸ್ಪರಂ||

ಅವರಿಬ್ಬರು ಮಹಾರಥರೂ ಅನ್ಯೋನ್ಯರನ್ನು ರಣದಲ್ಲಿ ಶರಗಳಿಂದ ಮುಚ್ಚಿ ಪೂರ್ಣವಾಗಿ ಸೆಳೆದು ಬಿಟ್ಟ ಬಾಣಗಳಿಂದ ಪುನಃ ಪರಸ್ಪರರನ್ನು ಗಾಯಗೊಳಿಸಿದರು.

07148004a ತತಃ ಪಾಂಚಾಲಮುಖ್ಯಸ್ಯ ಧೃಷ್ಟದ್ಯುಮ್ನಸ್ಯ ಸಮ್ಯುಗೇ|

07148004c ಸಾರಥಿಂ ಚತುರಶ್ಚಾಶ್ವಾನ್ಕರ್ಣೋ ವಿವ್ಯಾಧ ಸಾಯಕೈಃ||

ಆಗ ಸಂಯುಗದಲ್ಲಿ ಕರ್ಣನು ಪಾಂಚಾಲಮುಖ್ಯ ಧೃಷ್ಟದ್ಯುಮ್ನನ ಸಾರಥಿಯನ್ನೂ ನಾಲ್ಕು ಕುದುರೆಗಳನ್ನೂ ಸಾಯಕಗಳಿಂದ ಹೊಡೆದನು.

07148005a ಕಾರ್ಮುಕಪ್ರವರಂ ಚಾಸ್ಯ ಪ್ರಚಿಚ್ಚೇದ ಶಿತೈಃ ಶರೈಃ|

07148005c ಸಾರಥಿಂ ಚಾಸ್ಯ ಭಲ್ಲೇನ ರಥನೀಡಾದಪಾತಯತ್||

ಅವನ ಕಾರ್ಮುಕಪ್ರವರವನ್ನು ನಿಶಿತ ಶರಗಳಿಂದ ತುಂಡರಿಸಿದನು ಮತ್ತು ಭಲ್ಲದಿಂದ ಅವನ ಸಾರಥಿಯನ್ನು ಆಸನದಿಂದ ಬೀಳಿಸಿದನು.

07148006a ಧೃಷ್ಟದ್ಯುಮ್ನಸ್ತು ವಿರಥೋ ಹತಾಶ್ವೋ ಹತಸಾರಥಿಃ|

07148006c ಗೃಹೀತ್ವಾ ಪರಿಘಂ ಘೋರಂ ಕರ್ಣಸ್ಯಾಶ್ವಾನಪೀಪಿಷತ್||

ಧೃಷ್ಟದ್ಯುಮ್ನನಾದರೋ ಕುದುರೆಗಳು ಹತವಾಗಿ ಸಾರಥಿಯು ಹತನಾಗಿ ವಿರಥನಾದನು ಮತ್ತು ಘೋರ ಪರಿಘವನ್ನು ಹಿಡಿದು ಕರ್ಣನ ಕುದುರೆಗಳನ್ನು ಅರೆದನು.

07148007a ವಿದ್ಧಶ್ಚ ಬಹುಭಿಸ್ತೇನ ಶರೈರಾಶೀವಿಷೋಪಮೈಃ|

07148007c ತತೋ ಯುಧಿಷ್ಠಿರಾನೀಕಂ ಪದ್ಭ್ಯಾಮೇವಾನ್ವವರ್ತತ|

07148007e ಆರುರೋಹ ರಥಂ ಚಾಪಿ ಸಹದೇವಸ್ಯ ಮಾರಿಷ||

ಕರ್ಣನ ಸರ್ಪಗಳ ವಿಷದಂತಿದ್ದ ಬಾಣಗಳಿಂದ ಬಹಳ ಪೀಡಿತನಾದ ಧೃಷ್ಟದ್ಯುಮ್ನನು ಕಾಲ್ನಡುಗೆಯಲ್ಲಿಯೇ ಯುಧಿಷ್ಠಿರನ ಸೇನೆಯನ್ನು ಸೇರಿಕೊಂಡನು. ಮಾರಿಷ! ಅಲ್ಲಿ ಅವನು ಸಹದೇವನ ರಥವನ್ನೇರಿದನು.

07148008a ಕರ್ಣಸ್ಯಾಪಿ ರಥೇ ವಾಹಾನನ್ಯಾನ್ಸೂತೋ ನ್ಯಯೋಜಯತ್|

07148008c ಶಂಖವರ್ಣಾನ್ಮಹಾವೇಗಾನ್ಸೈಂಧವಾನ್ಸಾಧುವಾಹಿನಃ||

ಕರ್ಣನ ರಥಕ್ಕೆ ಕೂಡ ಅವನ ಸೂತನು ಅನ್ಯ ಕುದುರೆಗಳನ್ನು ಶಂಖವರ್ಣದ ಮಹಾವೇಗದ ಸುಶಿಕ್ಷಿತ ಸೈಂಧವ ಕುದುರೆಗಳನ್ನು ಕಟ್ಟಿದನು.

07148009a ಲಬ್ಧಲಕ್ಷ್ಯಸ್ತು ರಾಧೇಯಃ ಪಾಂಚಾಲಾನಾಂ ಮಹಾರಥಾನ್|

07148009c ಅಭ್ಯಪೀಡಯದಾಯಸ್ತಃ ಶರೈರ್ಮೇಘ ಇವಾಚಲಾನ್||

ರಾಧೇಯನು ತನ್ನ ಲಕ್ಷ್ಯ ಮಹಾರಥ ಪಾಂಚಾಲರನ್ನು ಪಡೆದು ಅವರನ್ನು ಮೇಘಗಳು ಪರ್ವತವನ್ನು ಹೇಗೋ ಹಾಗೆ ಶರಗಳನ್ನು ಸುರಿದು ಪೀಡಿಸಿದನು.

07148010a ಸಾ ಪೀಡ್ಯಮಾನಾ ಕರ್ಣೇನ ಪಾಂಚಾಲಾನಾಂ ಮಹಾಚಮೂಃ|

07148010c ಸಂಪ್ರಾದ್ರವತ್ಸುಸಂತ್ರಸ್ತಾ ಸಿಂಹೇನೇವಾರ್ದಿತಾ ಮೃಗೀ||

ಕರ್ಣನಿಂದ ಹಾಗೆ ಪೀಡಿಸಲ್ಪಟ್ಟ ಪಾಂಚಾಲರ ಆ ಮಹಾಸೇನೆಯು ಸಿಂಹದಿಂದ ಕಾಡಲ್ಪಟ್ಟ ಜಿಂಕೆಯಂತೆ ಭಯದಿಂದ ತತ್ತರಿಸಿ ಓಡತೊಡಗಿತು.

07148011a ಪತಿತಾಸ್ತುರಗೇಭ್ಯಶ್ಚ ಗಜೇಭ್ಯಶ್ಚ ಮಹೀತಲೇ|

07148011c ರಥೇಭ್ಯಶ್ಚ ನರಾಸ್ತೂರ್ಣಮದೃಶ್ಯಂತ ತತಸ್ತತಃ||

ಕ್ಷಣದಲ್ಲಿಯೇ ರಣಭೂಮಿಯಲ್ಲಿ ಅಲ್ಲಲ್ಲಿ ಬಿದ್ದಿದ್ದ ಕುದುರೆಗಳೂ, ಆನೆಗಳೂ, ರಥಗಳೂ, ಮನುಷ್ಯರೂ ಕಂಡುಬಂದರು.

07148012a ಧಾವಮಾನಸ್ಯ ಯೋಧಸ್ಯ ಕ್ಷುರಪ್ರೈಃ ಸ ಮಹಾಮೃಧೇ|

07148012c ಬಾಹೂ ಚಿಚ್ಚೇದ ವೈ ಕರ್ಣಃ ಶಿರಶ್ಚೈವ ಸಕುಂಡಲಂ||

ಆ ಮಹಾಯುದ್ಧದಲ್ಲಿ ಕರ್ಣನು ಓಡಿಹೋಗುತ್ತಿದ್ದ ಯೋಧರ ಬಾಹುಗಳನ್ನೂ ಕುಂಡಲಗಳೊಂದಿಗಿನ ಶಿರಗಳನ್ನೂ ಕತ್ತರಿಸಿದನು.

07148013a ಊರೂ ಚಿಚ್ಚೇದ ಚಾನ್ಯಸ್ಯ ಗಜಸ್ಥಸ್ಯ ವಿಶಾಂ ಪತೇ|

07148013c ವಾಜಿಪೃಷ್ಠಗತಸ್ಯಾಪಿ ಭೂಮಿಷ್ಠಸ್ಯ ಚ ಮಾರಿಷ||

ಮಾರಿಷ! ವಿಶಾಂಪತೇ! ಅನ್ಯ ಗಜಾರೂಢರ ಅಶ್ವಾರೂಢರ ಮತ್ತು ಪದಾತಿಗಳ ತೊಡೆಗಳನ್ನು ಕತ್ತರಿಸಿದನು.

07148014a ನಾಜ್ಞಾಸಿಷುರ್ಧಾವಮಾನಾ ಬಹವಶ್ಚ ಮಹಾರಥಾಃ|

07148014c ಸಂಚಿನ್ನಾನ್ಯಾತ್ಮಗಾತ್ರಾಣಿ ವಾಹನಾನಿ ಚ ಸಮ್ಯುಗೇ||

ಓಡಿಹೋಗುತ್ತಿರುವ ಬಹಳಷ್ಟು ಮಹಾರಾಥರಿಗೆ ತಮ್ಮ ಶರೀರದ ಅಂಗಾಂಗಗಳು ಕತ್ತರಿಸಿಹೋದದ್ದು ಅಥವಾ ಕುದುರೆಗಳು ನಾಶಹೊಂದಿದ್ದುದು ತಿಳಿಯುತ್ತಲೇ ಇರಲಿಲ್ಲ.

07148015a ತೇ ವಧ್ಯಮಾನಾಃ ಸಮರೇ ಪಾಂಚಾಲಾಃ ಸೃಂಜಯೈಃ ಸಹ|

07148015c ತೃಣಪ್ರಸ್ಪಂದನಾಚ್ಚಾಪಿ ಸೂತಪುತ್ರಂ ಸ್ಮ ಮೇನಿರೇ||

ಆ ಸಮರದಲ್ಲಿ ವಧಿಸಲ್ಪಡುತ್ತಿದ್ದ ಸೃಂಜಯರೊಂದಿಗಿನ ಪಾಂಚಾಲರು ಹುಲ್ಲುಕಡ್ಡಿಯು ಹಂದಾಡಿದರೂ ಸೂತಪುತ್ರನೇ ಬಂದನೆಂದು ತಿಳಿದು ಭಯಪಡುತ್ತಿದ್ದರು.

07148016a ಅಪಿ ಸ್ವಂ ಸಮರೇ ಯೋಧಂ ಧಾವಮಾನಂ ವಿಚೇತಸಃ|

07148016c ಕರ್ಣಮೇವಾಭ್ಯಮನ್ಯಂತ ತತೋ ಭೀತಾ ದ್ರವಂತಿ ತೇ||

ಸಮರದಲ್ಲಿ ತಮ್ಮ ಕಡೆಯ ಯೋಧರು ಓಡಿಬಂದರೂ ಬುದ್ಧಿಗೆಟ್ಟು ಭೀತರಾಗಿ ಕರ್ಣನೇ ಓಡಿಬರುತ್ತಿದ್ದಾನೆಂದು ಭಾವಿಸಿ ಓಡಿಹೋಗುತ್ತಿದ್ದರು.

07148017a ತಾನ್ಯನೀಕಾನಿ ಭಗ್ನಾನಿ ದ್ರವಮಾಣಾನಿ ಭಾರತ|

07148017c ಅಭ್ಯದ್ರವದ್ದ್ರುತಂ ಕರ್ಣಃ ಪೃಷ್ಠತೋ ವಿಕಿರಂ ಶರಾನ್||

ಭಾರತ! ಆ ಸೇನೆಗಳು ಭಗ್ನವಾಗಿ ಓಡಿಹೋಗುತ್ತಿರಲು ಕರ್ಣನು ಅವರ ಹಿಂದೆಯೇ ಓಡಿ ಹೋಗಿ ಶರಗಳನ್ನು ಸುರಿಯುತ್ತಾ ಹೊಡೆಯುತ್ತಿದ್ದನು.

07148018a ಅವೇಕ್ಷಮಾಣಾಸ್ತೇಽನ್ಯೋನ್ಯಂ ಸುಸಮ್ಮೂಢಾ ವಿಚೇತಸಃ|

07148018c ನಾಶಕ್ನುವನ್ನವಸ್ಥಾತುಂ ಕಾಲ್ಯಮಾನಾ ಮಹಾತ್ಮನಾ||

ಆ ಮಹಾತ್ಮನಿಂದ ನಾಶಗೊಳ್ಳುತ್ತಿದ್ದ ಅವರು ಸಮ್ಮೂಢರಾಗಿ ಚೇತನವನ್ನೇ ಕಳೆದುಕೊಂಡು ಅನ್ಯೋನ್ಯರನ್ನು ನೋಡುತ್ತಿದ್ದರು. ಅವನ ಎದಿರು ನಿಲ್ಲಲು ಅಶಕ್ಯರಾದರು.

07148019a ಕರ್ಣೇನಾಭ್ಯಾಹತಾ ರಾಜನ್ಪಾಂಚಾಲಾಃ ಪರಮೇಷುಭಿಃ|

07148019c ದ್ರೋಣೇನ ಚ ದಿಶಃ ಸರ್ವಾ ವೀಕ್ಷಮಾಣಾಃ ಪ್ರದುದ್ರುವುಃ||

ರಾಜನ್! ಕರ್ಣನ ಮತ್ತು ದ್ರೋಣನ ಪರಮ ಬಾಣಗಳಿಂದ ಹತರಾಗುತ್ತಿದ್ದ ಪಾಂಚಾಲರು ಎಲ್ಲ ದಿಕ್ಕುಗಳನ್ನೂ ನೋಡುತ್ತಾ ಪಲಾಯನಗೈದರು.

07148020a ತತೋ ಯುಧಿಷ್ಠಿರೋ ರಾಜಾ ಸ್ವಸೈನ್ಯಂ ಪ್ರೇಕ್ಷ್ಯ ವಿದ್ರುತಂ|

07148020c ಅಪಯಾನೇ ಮತಿಂ ಕೃತ್ವಾ ಫಲ್ಗುನಂ ವಾಕ್ಯಮಬ್ರವೀತ್||

ಆಗ ರಾಜಾ ಯುಧಿಷ್ಠಿರನು ತನ್ನ ಸೇನೆಯು ಓಡಿಹೋಗುತ್ತಿರುವುದನ್ನು ನೋಡಿ ತಾನೂ ಪಲಾಯನಮಾಡಬೇಕೆಂದು ಯೋಚಿಸಿ ಫಲ್ಗುನನಿಗೆ ಈ ಮಾತನ್ನಾಡಿದನು:

07148021a ಪಶ್ಯ ಕರ್ಣಂ ಮಹೇಷ್ವಾಸಂ ಧನುಷ್ಪಾಣಿಮವಸ್ಥಿತಂ|

07148021c ನಿಶೀಥೇ ದಾರುಣೇ ಕಾಲೇ ತಪಂತಮಿವ ಭಾಸ್ಕರಂ||

“ಈ ದಾರುಣ ರಾತ್ರಿವೇಳೆಯಲ್ಲಿ ಭಾಸ್ಕರನಂತೆ ಸುಡುತ್ತಿರುವ ಧನುಷ್ಪಾಣಿ ಮಹೇಷ್ವಾಸ ಕರ್ಣನನ್ನು ನೋಡು!

07148022a ಕರ್ಣಸಾಯಕನುನ್ನಾನಾಂ ಕ್ರೋಶತಾಮೇಷ ನಿಸ್ವನಃ|

07148022c ಅನಿಶಂ ಶ್ರೂಯತೇ ಪಾರ್ಥ ತ್ವದ್ಬಂಧೂನಾಮನಾಥವತ್||

ಕರ್ಣನ ಸಾಯಕಗಳಿಂದ ಗಾಯಗೊಂಡ ನಿನ್ನ ಬಂಧುಗಳು ಅನಾಥರಂತೆ ಗೋಳಾಡುವುದು ಒಂದೇಸಮನೆ ಹತ್ತಿರದಿಂದಲೇ ಕೇಳಿಬರುತ್ತಿದೆ.

07148023a ಯಥಾ ವಿಸೃಜತಶ್ಚಾಸ್ಯ ಸಂದಧಾನಸ್ಯ ಚಾಶುಗಾನ್|

07148023c ಪಶ್ಯಾಮಿ ಜಯವಿಕ್ರಾಂತಂ ಕ್ಷಪಯಿಷ್ಯತಿ ನೋ ಧ್ರುವಂ||

ಅವನು ಬಾಣಗಳನ್ನು ಸಂಧಾನಮಾಡುವುದನ್ನು ಮತ್ತು ಬಿಡುವುದನ್ನು ನೋಡಿದರೆ ಇವನು ನಮ್ಮನ್ನು ನಾಶಗೊಳಿಸಿ ಜಯವನ್ನು ಗಳಿಸುತ್ತಾನೆ ಎನ್ನುವುದು ನಿಶ್ಚಯವೆನಿಸುತ್ತಿದೆ.

07148024a ಯದತ್ರಾನಂತರಂ ಕಾರ್ಯಂ ಪ್ರಾಪ್ತಕಾಲಂ ಪ್ರಪಶ್ಯಸಿ|

07148024c ಕರ್ಣಸ್ಯ ವಧಸಮ್ಯುಕ್ತಂ ತತ್ಕುರುಷ್ವ ಧನಂಜಯ||

ಧನಂಜಯ! ಇದರ ಮಧ್ಯೆ ಕಾಲಕ್ಕೆ ತಕ್ಕಂತೆ ಏನು ಮಾಡಬೇಕೆಂದು ನಿನಗೆ ತೋರುತ್ತದೆಯೋ ಕರ್ಣನ ವಧೆಗೆ ಯುಕ್ತವಾದ ಕಾರ್ಯವನ್ನು ಮಾಡು!”

07148025a ಏವಮುಕ್ತೋ ಮಹಾಬಾಹುಃ ಪಾರ್ಥಃ ಕೃಷ್ಣಮಥಾಬ್ರವೀತ್|

07148025c ಭೀತಃ ಕುಂತೀಸುತೋ ರಾಜಾ ರಾಧೇಯಸ್ಯಾತಿವಿಕ್ರಮಾತ್||

ಇದನ್ನು ಕೇಳಿದ ಮಹಾಬಾಹು ಪಾರ್ಥನು ಕೃಷ್ಣನಿಗೆ ಹೇಳಿದನು: “ರಾಧೇಯನ ಅತಿವಿಕ್ರಮವನ್ನು ನೋಡಿ ರಾಜಾ ಕುಂತೀಸುತನು ಭೀತನಾಗಿದ್ದಾನೆ.

07148026a ಏವಂ ಗತೇ ಪ್ರಾಪ್ತಕಾಲಂ ಕರ್ಣಾನೀಕೇ ಪುನಃ ಪುನಃ|

07148026c ಭವಾನ್ವ್ಯವಸ್ಯತಾಂ ಕ್ಷಿಪ್ರಂ ದ್ರವತೇ ಹಿ ವರೂಥಿನೀ||

ಈಗ  ಬಂದಿರುವ ಸಮಯಕ್ಕೆ ಸರಿಯಾದುದೇನೆಂದು ಕ್ಷಿಪ್ರವಾಗಿ ನೀನೇ ಹೇಳಬೇಕು. ಕರ್ಣನಿಂದ ಪುನಃ ಪುನಃ ನಮ್ಮ ಸೇನೆಯು ಓಡಿಹೋಗುತ್ತಿದೆ.

07148027a ದ್ರೋಣಸಾಯಕನುನ್ನಾನಾಂ ಭಗ್ನಾನಾಂ ಮಧುಸೂದನ|

07148027c ಕರ್ಣೇನ ತ್ರಾಸ್ಯಮಾನಾನಾಮವಸ್ಥಾನಂ ನ ವಿದ್ಯತೇ||

ಮಧುಸೂದನ! ದ್ರೋಣನ ಸಾಯಕಗಳಿಂದ ಗಾಯಗೊಳ್ಳುತ್ತಿರುವ ಮತ್ತು ಕರ್ಣನಿಂದ ಭಯಗೊಂಡಿರುವ ನಮ್ಮವರಿಗೆ ನಿಲ್ಲುವ ಸ್ಥಾನವೇ ತಿಳಿಯದಂತಾಗಿದೆ.

07148028a ಪಶ್ಯಾಮಿ ಚ ತಥಾ ಕರ್ಣಂ ವಿಚರಂತಮಭೀತವತ್|

07148028c ದ್ರವಮಾಣಾನ್ ರಥೋದಾರಾನ್ಕಿರಂತಂ ವಿಶಿಖೈಃ ಶಿತೈಃ||

ಏನೂ ಭಯವಿಲ್ಲದೇ ಕರ್ಣನು ರಣಾಂಗಣದಲ್ಲಿ ನಿಶಿತ ವಿಶಿಖಗಳನ್ನು ಸುರಿಸುತ್ತಾ ರಥೋದಾರರನ್ನು ಬೆನ್ನಟ್ಟಿ ಓಡಾಡುತ್ತಿರುವುದನ್ನು ನೋಡುತ್ತಿದ್ದೇನೆ.

07148029a ನೈತದಸ್ಯೋತ್ಸಹೇ ಸೋಢುಂ ಚರಿತಂ ರಣಮೂರ್ಧನಿ|

07148029c ಪ್ರತ್ಯಕ್ಷಂ ವೃಷ್ಣಿಶಾರ್ದೂಲ ಪಾದಸ್ಪರ್ಶಮಿವೋರಗಃ||

ವೃಷ್ಣಿಶಾರ್ದೂಲ! ಉತ್ಸಾಹದಿಂದ ರಣಮೂರ್ಧನಿಯಲ್ಲಿ ಸಂಚರಿಸುತ್ತಿರುವ ಕರ್ಣನನ್ನು ಪ್ರತ್ಯಕ್ಷ ನೋಡಿ ಕಾಲಿನಿಂದ ತುಳಿಯಲ್ಪಟ್ಟ ಸರ್ಪದಂತೆ ನನ್ನ ಸಹನೆಯು ಮೀರಿಹೋಗುತ್ತಿದೆ.

07148030a ಸ ಭವಾನತ್ರ ಯಾತ್ವಾಶು ಯತ್ರ ಕರ್ಣೋ ಮಹಾರಥಃ|

07148030c ಅಹಮೇನಂ ವಧಿಷ್ಯಾಮಿ ಮಾಂ ವೈಷ ಮಧುಸೂದನ||

ಮಧುಸೂದನ! ಮಹಾರಥ ಕರ್ಣನಿರುವಲ್ಲಿಗೆ ಹೋಗು! ಅವನನ್ನು ನಾನಾಗಲೀ ಅಥವ ನನ್ನನ್ನು ಅವನಾಗಲೀ ಸಂಹರಿಸುತ್ತೇವೆ!”

07148031 ವಾಸುದೇವ ಉವಾಚ|

07148031a ಪಶ್ಯಾಮಿ ಕರ್ಣಂ ಕೌಂತೇಯ ದೇವರಾಜಮಿವಾಹವೇ|

07148031c ವಿಚರಂತಂ ನರವ್ಯಾಘ್ರಮತಿಮಾನುಷವಿಕ್ರಮಂ||

ವಾಸುದೇವನು ಹೇಳಿದನು: “ಕೌಂತೇಯ! ದೇವರಾಜನಂತೆ ಈ ರಣಾಂಗಣದಲ್ಲಿ ಸಂಚರಿಸುತ್ತಿರುವ ನರವ್ಯಾಘ್ರ ಅತಿಮಾನುಷ ವಿಕ್ರಮಿ ಕರ್ಣನನ್ನು ನೋಡುತ್ತಿದ್ದೇನೆ.

07148032a ನೈತಸ್ಯಾನ್ಯೋಽಸ್ತಿ ಸಮರೇ ಪ್ರತ್ಯುದ್ಯಾತಾ ಧನಂಜಯ|

07148032c ಋತೇ ತ್ವಾಂ ಪುರುಷವ್ಯಾಘ್ರ ರಾಕ್ಷಸಾದ್ವಾ ಘಟೋತ್ಕಚಾತ್||

ಧನಂಜಯ! ಪುರುಷವ್ಯಾಘ್ರ! ನಿನ್ನನ್ನು ಮತ್ತು ರಾಕ್ಷಸ ಘಟೋತ್ಕಚನನ್ನು ಹೊರತಾಗಿ ಇವನನ್ನು ಸಮರದಲ್ಲಿ ಎದುರಿಸುವವರು ಬೇರೆ ಯಾರೂ ಇಲ್ಲ.

07148033a ನ ತು ತಾವದಹಂ ಮನ್ಯೇ ಪ್ರಾಪ್ತಕಾಲಂ ತವಾನಘ|

07148033c ಸಮಾಗಮಂ ಮಹಾಬಾಹೋ ಸೂತಪುತ್ರೇಣ ಸಮ್ಯುಗೇ||

ಅನಘ! ಮಹಾಬಾಹೋ! ಆದರೆ ನೀನು ಸೂತಪುತ್ರನನ್ನು ಎದುರಿಸುವ ಕಾಲವು ಬಂದೊದಗಿದೆಯೆಂದು ನನಗನ್ನಿಸುವುದಿಲ್ಲ.

07148034a ದೀಪ್ಯಮಾನಾ ಮಹೋಲ್ಕೇವ ತಿಷ್ಠತ್ಯಸ್ಯ ಹಿ ವಾಸವೀ|

07148034c ತ್ವದರ್ಥಂ ಹಿ ಮಹಾಬಾಹೋ ರೌದ್ರರೂಪಂ ಬಿಭರ್ತಿ ಚ||

ಮಹಾಬಾಹೋ! ನಿನಗೋಸ್ಕರವಾಗಿ ಇಟ್ಟುಕೊಂಡಿರುವ ಮಹಾ ಉಲ್ಕೆಯಂತೆ ಬೆಳಗುತ್ತಿರುವ ಇಂದ್ರನು ಕೊಟ್ಟ ರೌದ್ರರೂಪದ ಶಕ್ತಿಯು ಅವನಲ್ಲಿದೆ.

07148035a ಘಟೋತ್ಕಚಸ್ತು ರಾಧೇಯಂ ಪ್ರತ್ಯುದ್ಯಾತು ಮಹಾಬಲಃ|

07148035c ಸ ಹಿ ಭೀಮೇನ ಬಲಿನಾ ಜಾತಃ ಸುರಪರಾಕ್ರಮಃ||

ಬಲಿಷ್ಟನಾದ ಭೀಮನಿಗೆ ಹುಟ್ಟಿದ ಸುರಪರಾಕ್ರಮಿ ಮಹಾಬಲ ಘಟೋತ್ಕಚನು ರಾಧೇಯನನ್ನು ಎದುರಿಸಬಲ್ಲನು.

07148036a ತಸ್ಮಿನ್ನಸ್ತ್ರಾಣಿ ದಿವ್ಯಾನಿ ರಾಕ್ಷಸಾನ್ಯಾಸುರಾಣಿ ಚ|

07148036c ಸತತಂ ಚಾನುರಕ್ತೋ ವೋ ಹಿತೈಷೀ ಚ ಘಟೋತ್ಕಚಃ|

07148036e ವಿಜೇಷ್ಯತಿ ರಣೇ ಕರ್ಣಮಿತಿ ಮೇ ನಾತ್ರ ಸಂಶಯಃ||

ಅವನಲ್ಲಿ ದೇವ, ರಾಕ್ಷಸ, ಅಸುರರ ಅಸ್ತ್ರಗಳಿವೆ. ಘಟೋತ್ಕಚನು ಸತತವೂ ನಿಮ್ಮ ಹಿತೈಷಿಯಾಗಿದ್ದು ಅನುರಕ್ತನಾಗಿದ್ದಾನೆ. ರಣದಲ್ಲಿ ಅವನು ಕರ್ಣನನ್ನು ಜಯಿಸುತ್ತಾನೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.””

07148037 ಸಂಜಯ ಉವಾಚ|

07148037a ಏವಮುಕ್ತ್ವಾ ಮಹಾಬಾಹುಃ ಪಾರ್ಥಂ ಪುಷ್ಕರಲೋಚನಃ|

07148037c ಆಜುಹಾವಾಥ ತದ್ರಕ್ಷಃ ತಚ್ಚಾಸೀತ್ಪ್ರಾದುರಗ್ರತಃ||

ಸಂಜಯನು ಹೇಳಿದನು: “ಪಾರ್ಥನಿಗೆ ಹೀಗೆ ಹೇಳಿ ಪುಷ್ಕರಲೋಚನನು ರಾಕ್ಷಸನಿಗೆ ಹೇಳಿ ಕಳುಹಿಸಿದನು. ಅವನು ಅವರ ಮುಂದೆ ಬಂದು ನಿಂತುಕೊಂಡನು.

07148038a ಕವಚೀ ಸ ಶರೀ ಖಡ್ಗೀ ಸಧನ್ವಾ ಚ ವಿಶಾಂ ಪತೇ|

07148038c ಅಭಿವಾದ್ಯ ತತಃ ಕೃಷ್ಣಂ ಪಾಂಡವಂ ಚ ಧನಂಜಯಂ|

07148038e ಅಬ್ರವೀತ್ತಂ ತದಾ ಹೃಷ್ಟಸ್ತ್ವಯಮಸ್ಮ್ಯನುಶಾಧಿ ಮಾಂ||

ವಿಶಾಂಪತೇ! ಕವಚ, ಬಾಣ, ಖಡ್ಗ ಮತ್ತು ಧನುಸ್ಸನ್ನು ಧರಿಸಿದ್ದ ಅವನು ಕೃಷ್ಣನನ್ನೂ ಪಾಂಡವ ಧನಂಜಯನನ್ನೂ ನಮಸ್ಕರಿಸಿ ಹೃಷ್ಟಮನಸ್ಕನಾಗಿ “ನನಗೆ ಆಜ್ಞಾಪಿಸಿ!” ಎಂದು ಹೇಳಿದನು.

07148039a ತತಸ್ತಂ ಮೇಘಸಂಕಾಶಂ ದೀಪ್ತಾಸ್ಯಂ ದೀಪ್ತಕುಂಡಲಂ|

07148039c ಅಭ್ಯಭಾಷತ ಹೈಡಿಂಬಂ ದಾಶಾರ್ಹಃ ಪ್ರಹಸನ್ನಿವ||

ಆಗ ನಸುನಗುತ್ತಾ ಧಾಶಾರ್ಹನು ಆ ಮೇಘಸಂಕಾಶ, ಉರಿಯುತ್ತಿರುವ ಮುಖವುಳ್ಳ, ಉರಿಯುತ್ತಿರುವ ಕುಂಡಲಗಳುಳ್ಳ ಹೈಡಿಂಬನಿಗೆ ಹೇಳಿದನು:

07148040a ಘಟೋತ್ಕಚ ವಿಜಾನೀಹಿ ಯತ್ತ್ವಾಂ ವಕ್ಷ್ಯಾಮಿ ಪುತ್ರಕ|

07148040c ಪ್ರಾಪ್ತೋ ವಿಕ್ರಮಕಾಲೋಽಯಂ ತವ ನಾನ್ಯಸ್ಯ ಕಸ್ಯ ಚಿತ್||

“ಘಟೋತ್ಕಚ! ಮಗನೇ! ನಾನು ಹೇಳುವುದನ್ನು ಅರ್ಥಮಾಡಿಕೋ! ನಿನ್ನ ವಿಕ್ರಮವನ್ನು ತೋರಿಸುವ ಕಾಲವು ಬಂದೊದಗಿದೆ. ಈ ಅವಕಾಶವು ಬೇರೆ ಯಾರಿಗೂ ಇನ್ನೂ ಬಂದಿಲ್ಲ!

07148041a ಸ ಭವಾನ್ಮಜ್ಜಮಾನಾನಾಂ ಬಂಧೂನಾಂ ತ್ವಂ ಪ್ಲವೋ ಯಥಾ|

07148041c ವಿವಿಧಾನಿ ತವಾಸ್ತ್ರಾಣಿ ಸಂತಿ ಮಾಯಾ ಚ ರಾಕ್ಷಸೀ||

ಮುಳುಗುತ್ತಿರುವ ಬಂಧುಗಳಿಗೆ ನೀನು ತೆಪ್ಪದಂತಾಗು! ನಿನ್ನಲ್ಲಿ ವಿವಿಧ ಅಸ್ತ್ರಗಳಿವೆ. ರಾಕ್ಷಸೀ ಮಾಯೆಯೂ ಇದೆ.

07148042a ಪಶ್ಯ ಕರ್ಣೇನ ಹೈಡಿಂಬ ಪಾಂಡವಾನಾಮನೀಕಿನೀ|

07148042c ಕಾಲ್ಯಮಾನಾ ಯಥಾ ಗಾವಃ ಪಾಲೇನ ರಣಮೂರ್ಧನಿ||

ಹೈಡಿಂಬ! ಗೋಪಾಲಕನು ಗೋವುಗಳನ್ನು ಒಟ್ಟುಹಾಕಿ ಹೊಡೆಯುವಂತೆ ರಣಮೂರ್ಧನಿಯಲ್ಲಿ ಕರ್ಣನು ಪಾಂಡವರ ಸೇನೆಯನ್ನು ಸದೆಬಡಿಯುತ್ತಿರುವುದನ್ನು ನೋಡು!

07148043a ಏಷ ಕರ್ಣೋ ಮಹೇಷ್ವಾಸೋ ಮತಿಮಾನ್ದೃಢವಿಕ್ರಮಃ|

07148043c ಪಾಂಡವಾನಾಮನೀಕೇಷು ನಿಹಂತಿ ಕ್ಷತ್ರಿಯರ್ಷಭಾನ್||

ಈ ಮಹೇಷ್ವಾಸ ಮತಿವಂತ ದೃಢವಿಕ್ರಮಿ ಕರ್ಣನು ಪಾಂಡವರ ಸೇನೆಯಲ್ಲಿರುವ ಕ್ಷತ್ರಿಯರ್ಷಭರನ್ನು ಸಂಹರಿಸುತ್ತಿದ್ದಾನೆ.

07148044a ಕಿರಂತಃ ಶರವರ್ಷಾಣಿ ಮಹಾಂತಿ ದೃಢಧನ್ವಿನಃ|

07148044c ನ ಶಕ್ನುವಂತ್ಯವಸ್ಥಾತುಂ ಪೀಡ್ಯಮಾನಾಃ ಶರಾರ್ಚಿಷಾ||

ನಮ್ಮಲ್ಲಿರುವ ದೃಡಧನ್ವಿಗಳಲ್ಲಿ ಯಾರೂ ಕೂಡ ಮಹಾ ಶರವರ್ಷಗಳನ್ನು ಸುರಿಸಿ ಪೀಡಿಸುತ್ತಿರುವ ಅವನನ್ನು ಎದುರಿಸಿ ನಿಲ್ಲಲು ಶಕ್ಯರಾಗಿಲ್ಲ.

07148045a ನಿಶೀಥೇ ಸೂತಪುತ್ರೇಣ ಶರವರ್ಷೇಣ ಪೀಡಿತಾಃ|

07148045c ಏತೇ ದ್ರವಂತಿ ಪಾಂಚಾಲಾಃ ಸಿಂಹಸ್ಯೇವ ಭಯಾನ್ಮೃಗಾಃ||

ಸೂತಪುತ್ರನ ಶರವರ್ಷಗಳಿಂದ ಪೀಡಿತರಾದ ಪಾಂಚಾಲರು ಈ ರಾತ್ರಿ ಸಿಂಹದ ಭಯದಿಂದ ಜಿಂಕೆಗಳು ಓಡುವಂತೆ ಓಡಿಹೋಗುತ್ತಿದ್ದಾರೆ.

07148046a ಏತಸ್ಯೈವಂ ಪ್ರವೃದ್ಧಸ್ಯ ಸೂತಪುತ್ರಸ್ಯ ಸಮ್ಯುಗೇ|

07148046c ನಿಷೇದ್ಧಾ ವಿದ್ಯತೇ ನಾನ್ಯಸ್ತ್ವದೃತೇ ಭೀಮವಿಕ್ರಮ||

ಈ ರೀತಿ ರಣದಲ್ಲಿ ವೃದ್ಧಿಸುತ್ತಿರುವ ಸೂತಪುತ್ರನನ್ನು ಎದುರಿಸುವವನು ಭೀಮವಿಕ್ರಮನಾದ ನೀನಲ್ಲದೇ ಬೇರೆ ಯಾರೂ ಇಲ್ಲ.

07148047a ಸ ತ್ವಂ ಕುರು ಮಹಾಬಾಹೋ ಕರ್ಮ ಯುಕ್ತಮಿಹಾತ್ಮನಃ|

07148047c ಮಾತುಲಾನಾಂ ಪಿತೄಣಾಂ ಚ ತೇಜಸೋಽಸ್ತ್ರಬಲಸ್ಯ ಚ||

ಆದುದರಿಂದ ಮಹಾಬಾಹೋ! ನಿನಗೂ, ನಿನ್ನ ತಾಯಿಯ ಕುಲದವರಿಗೂ, ತಂದೆಯ ಕುಲದವರಿಗೂ, ನಿನ್ನ ತೇಜಸ್ಸಿಗೂ, ಅಸ್ತ್ರಬಲಕ್ಕೂ ಯುಕ್ತವಾದುದನ್ನು ಮಾಡು!

07148048a ಏತದರ್ಥಂ ಹಿ ಹೈಡಿಂಬ ಪುತ್ರಾನಿಚ್ಚಂತಿ ಮಾನವಾಃ|

07148048c ಕಥಂ ನಸ್ತಾರಯೇದ್ದುಃಖಾತ್ಸ ತ್ವಂ ತಾರಯ ಬಾಂಧವಾನ್||

ಹೈಡಿಂಬ! ಇದಕ್ಕಾಗಿಯೇ ಮಾನವರು ಮಕ್ಕಳನ್ನು ಬಯಸುತ್ತಾರೆ. ತಮ್ಮನ್ನು ದುಃಖದಿಂದ ಹೇಗೆ ಅವರು ಪಾರುಮಾಡುತ್ತಾರೆಂದು ಯೋಚಿಸುತ್ತಿರುತ್ತಾರೆ. ನೀನು ನಿನ್ನ ಬಾಂಧವರನ್ನು ಪಾರುಮಾಡು!

07148049a ತವ ಹ್ಯಸ್ತ್ರಬಲಂ ಭೀಮಂ ಮಾಯಾಶ್ಚ ತವ ದುಸ್ತರಾಃ|

07148049c ಸಂಗ್ರಾಮೇ ಯುಧ್ಯಮಾನಸ್ಯ ಸತತಂ ಭೀಮನಂದನ||

ಭೀಮನಂದನ! ಸಂಗ್ರಾಮದಲ್ಲಿ ಯುದ್ಧಮಾಡುವಾಗ ನಿನ್ನ ಅಸ್ತ್ರಬಲವೂ ನಿನ್ನ ದುಸ್ತರ ಮಾಯೆಯೂ ಸತತವಾಗಿ ವೃದ್ಧಿಯಾಗುತ್ತಲೇ ಇರುತ್ತದೆ.

07148050a ಪಾಂಡವಾನಾಂ ಪ್ರಭಗ್ನಾನಾಂ ಕರ್ಣೇನ ಶಿತಸಾಯಕೈಃ|

07148050c ಮಜ್ಜತಾಂ ಧಾರ್ತರಾಷ್ಟ್ರೇಷು ಭವ ಪಾರಂ ಪರಂತಪ||

ಪರಂತಪ! ಕರ್ಣನ ನಿಶಿತ ಸಾಯಕಗಳಿಂದ ಮತ್ತು ಧಾರ್ತರಾಷ್ಟ್ರರಿಂದ ಮುಳುಗಿಹೋಗುತ್ತಿರುವ ಪಾಂಡವರಿಗೆ ತೀರದಂತಾಗು!

07148051a ರಾತ್ರೌ ಹಿ ರಾಕ್ಷಸಾ ಭೂಯೋ ಭವಂತ್ಯಮಿತವಿಕ್ರಮಾಃ|

07148051c ಬಲವಂತಃ ಸುದುರ್ಧರ್ಷಾಃ ಶೂರಾ ವಿಕ್ರಾಂತಚಾರಿಣಃ||

ರಾತ್ರಿಯ ವೇಳೆಯಲ್ಲಿ ರಾಕ್ಷಸರು ಹೆಚ್ಚಿನ ಪರಾಕ್ರಮವುಳ್ಳವರೂ, ಬಲವಂತರೂ, ಹೆಚ್ಚಿನ ದುರ್ಧರ್ಷರೂ, ಶೂರರೂ, ವಿಕ್ರಾಂತಚಾರಿಗಳೂ ಆಗುತ್ತಾರೆ.

07148052a ಜಹಿ ಕರ್ಣಂ ಮಹೇಷ್ವಾಸಂ ನಿಶೀಥೇ ಮಾಯಯಾ ರಣೇ|

07148052c ಪಾರ್ಥಾ ದ್ರೋಣಂ ವಧಿಷ್ಯಂತಿ ಧೃಷ್ಟದ್ಯುಮ್ನಪುರೋಗಮಾಃ||

ಈ ರಾತ್ರಿಯ ರಣದಲ್ಲಿ ಮಾಯೆಯಿಂದ ಮಹೇಷ್ವಾಸ ಕರ್ಣನನ್ನು ವಧಿಸು. ಧೃಷ್ಟದ್ಯುಮ್ನನನ್ನು ಮುಂದಿಟ್ಟುಕೊಂಡು ಪಾರ್ಥರು ದ್ರೋಣನನ್ನು ವಧಿಸುತ್ತಾರೆ.”

07148053a ಕೇಶವಸ್ಯ ವಚಃ ಶ್ರುತ್ವಾ ಬೀಭತ್ಸುರಪಿ ರಾಕ್ಷಸಂ|

07148053c ಅಭ್ಯಭಾಷತ ಕೌರವ್ಯ ಘಟೋತ್ಕಚಮರಿಂದಮಂ||

ಕೌರವ್ಯ! ಕೇಶವನ ಮಾತನ್ನು ಕೇಳಿ ಬೀಭತ್ಸುವೂ ಕೂಡ ಅರಿಂದಮ ರಾಕ್ಷಸ ಘಟೋತ್ಕಚನಿಗೆ ಹೇಳಿದನು:

07148054a ಘಟೋತ್ಕಚ ಭವಾಂಶ್ಚೈವ ದೀರ್ಘಬಾಹುಶ್ಚ ಸಾತ್ಯಕಿಃ|

07148054c ಮತೌ ಮೇ ಸರ್ವಸೈನ್ಯೇಷು ಭೀಮಸೇನಶ್ಚ ಪಾಂಡವಃ||

“ಘಟೋತ್ಕಚ! ನೀನು, ದೀರ್ಘಬಾಹು ಸಾತ್ಯಕಿ ಮತ್ತು ಪಾಂಡವ ಭೀಮಸೇನರು ಸರ್ವಸೈನ್ಯಗಳಲ್ಲಿ ವೀರಶ್ರೇಷ್ಠರೆಂದು ನನ್ನ ಅಭಿಪ್ರಾಯ.

07148055a ಸ ಭವಾನ್ಯಾತು ಕರ್ಣೇನ ದ್ವೈರಥಂ ಯುಧ್ಯತಾಂ ನಿಶಿ|

07148055c ಸಾತ್ಯಕಿಃ ಪೃಷ್ಠಗೋಪಸ್ತೇ ಭವಿಷ್ಯತಿ ಮಹಾರಥಃ||

ಈ ರಾತ್ರಿ ನೀನು ಹೋಗಿ ಕರ್ಣನೊಂದಿಗೆ ದ್ವೈರಥದಲ್ಲಿ ಯುದ್ಧಮಾಡು. ಮಹಾರಥ ಸಾತ್ಯಕಿಯು ನಿನ್ನ ಹಿಂದೆಯೇ ಇರುತ್ತಾನೆ.

07148056a ಜಹಿ ಕರ್ಣಂ ರಣೇ ಶೂರಂ ಸಾತ್ವತೇನ ಸಹಾಯವಾನ್|

07148056c ಯಥೇಂದ್ರಸ್ತಾರಕಂ ಪೂರ್ವಂ ಸ್ಕಂದೇನ ಸಹ ಜಘ್ನಿವಾನ್||

ಹಿಂದೆ ಇಂದ್ರನು ಸ್ಕಂದನ ಸಹಾಯದಿಂದ ತಾರಕನನ್ನು ಸಂಹರಿಸಿದಂತೆ ಸಾತ್ವತನ ಸಹಾಯವನ್ನು ಪಡೆದವನಾಗಿ ರಣದಲ್ಲಿ ಶೂರ ಕರ್ಣನನ್ನು ಸಂಹರಿಸು! “

07148057 ಘಟೋತ್ಕಚ ಉವಾಚ|

07148057a ಅಲಮೇವಾಸ್ಮಿ ಕರ್ಣಾಯ ದ್ರೋಣಾಯಾಲಂ ಚ ಸತ್ತಮ|

07148057c ಅನ್ಯೇಷಾಂ ಕ್ಷತ್ರಿಯಾಣಾಂ ಚ ಕೃತಾಸ್ತ್ರಾಣಾಂ ಮಹಾತ್ಮನಾಂ||

ಘಟೋತ್ಕಚನು ಹೇಳಿದನು: “ಸತ್ತಮ! ಕರ್ಣನಿಗೆ, ದ್ರೋಣನಿಗೆ ಮತ್ತು ಅನ್ಯ ಕೃತಾಸ್ತ್ರ ಮಹಾತ್ಮ ಕ್ಷತ್ರಿಯರಿಗೆ ನಾನೊಬ್ಬನೇ ಸಾಕು!

07148058a ಅದ್ಯ ದಾಸ್ಯಾಮಿ ಸಂಗ್ರಾಮಂ ಸೂತಪುತ್ರಾಯ ತಂ ನಿಶಿ|

07148058c ಯಂ ಜನಾಃ ಸಂಪ್ರವಕ್ಷ್ಯಂತಿ ಯಾವದ್ಭೂಮಿರ್ಧರಿಷ್ಯತಿ||

ಭೂಮಿಯಿರುವವರೆಗೆ ಜನರು ಇದರ ಕುರಿತು ಮಾತನಾಡಿಕೊಳ್ಳುತ್ತಿರುವಂತೆ ಇಂದಿನ ರಾತ್ರಿ ನಾನು ಸೂತಪುತ್ರನಿಗೆ ಸಂಗ್ರಾಮದ ಆತಿಥ್ಯವನ್ನು ಬಡಿಸುತ್ತೇನೆ.

07148059a ನ ಚಾತ್ರ ಶೂರಾನ್ಮೋಕ್ಷ್ಯಾಮಿ ನ ಭೀತಾನ್ನ ಕೃತಾಂಜಲೀನ್|

07148059c ಸರ್ವಾನೇವ ವಧಿಷ್ಯಾಮಿ ರಾಕ್ಷಸಂ ಧರ್ಮಮಾಸ್ಥಿತಃ||

ರಾಕ್ಷಸಧರ್ಮವನ್ನು ಅನುಸರಿಸಿ ಅಲ್ಲಿ ಯಾವಶೂರರನ್ನೂ ಭೀತರಾಗಿ ಕೈಮುಗಿಯುವವರನ್ನೂ ಬಿಡದೇ ಎಲ್ಲರನ್ನೂ ವಧಿಸುತ್ತೇನೆ.””

07148060 ಸಂಜಯ ಉವಾಚ|

07148060a ಏವಮುಕ್ತ್ವಾ ಮಹಾಬಾಹುರ್ಹೈಡಿಂಬಃ ಪರವೀರಹಾ|

07148060c ಅಭ್ಯಯಾತ್ತುಮುಲೇ ಕರ್ಣಂ ತವ ಸೈನ್ಯಂ ವಿಭೀಷಯನ್||

ಸಂಜಯನು ಹೇಳಿದನು: “ಹೀಗೆ ಹೇಳಿ ಮಹಾಬಾಹು ಪರವೀರಹ ಹೈಡಿಂಬನು ನಿನ್ನ ಸೇನೆಯನ್ನು ಭೀತಗೊಳಿಸುತ್ತಾ ಯುದ್ಧದಲ್ಲಿ ಕರ್ಣನನ್ನು ಎದುರಿಸಿದನು.

07148061a ತಮಾಪತಂತಂ ಸಂಕ್ರುದ್ಧಂ ದೀಪ್ತಾಸ್ಯಮಿವ ಪನ್ನಗಂ|

07148061c ಅಭ್ಯಸ್ಯನ್ಪರಮೇಷ್ವಾಸಃ ಪ್ರತಿಜಗ್ರಾಹ ಸೂತಜಃ||

ಸಂಕ್ರುದ್ಧ ಪನ್ನಗದಂತೆ ಉರಿಯುತ್ತಿರುವ ಮುಖವುಳ್ಳವನಾಗಿ ಮೇಲೆ ಬೀಳುತ್ತಿದ್ದ ಅವನನ್ನು ಪರಮೇಷ್ವಾಸ ಸೂತಜನು ಸ್ವೀಕರಿಸಿದನು.

07148062a ತಯೋಃ ಸಮಭವದ್ಯುದ್ಧಂ ಕರ್ಣರಾಕ್ಷಸಯೋರ್ನಿಶಿ|

07148062c ಗರ್ಜತೋ ರಾಜಶಾರ್ದೂಲ ಶಕ್ರಪ್ರಹ್ರಾದಯೋರಿವ||

ಆಗ ರಾಜಶಾರ್ದೂಲ! ಗರ್ಜಿಸುತ್ತಿರುವ ಕರ್ಣ-ರಾಕ್ಷಸರ ನಡುವೆ ಆ ರಾತ್ರಿ ಶಕ್ರ-ಪ್ರಹ್ರಾದರ ನಡುವೆ ನಡೆದ ಯುದ್ಧದಂತೆ ಯುದ್ಧವು ಪ್ರಾರಂಭವಾಯಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಘಟೋತ್ಕಚಪ್ರೋತ್ಸಾಹನೇ ಅಷ್ಠಚತ್ವಾರಿಂಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಘಟೋತ್ಕಚಪ್ರೋತ್ಸಾಹನ ಎನ್ನುವ ನೂರಾನಲ್ವತ್ತೆಂಟನೇ ಅಧ್ಯಾಯವು.

Related image

Comments are closed.