Drona Parva: Chapter 147

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೪೭

ತನ್ನ ಸೇನೆಯು ನಾಶವಾಗುತ್ತಿರುವುದನ್ನು ನೋಡಿ ದುರ್ಯೋಧನನು ದ್ರೋಣ-ಕರ್ಣರನ್ನು ಮೂದಲಿಸಿ ಮಾತನಾಡಿದುದು (೧-೭). ದ್ರೋಣ-ಕರ್ಣರ ಪರಾಕ್ರಮ; ಪಾಂಡವ ಸೇನೆಯ ಪಲಾಯನ (೮-೨೧). ಕೃಷ್ಣನು ಅರ್ಜುನನಿಗೆ ದ್ರೋಣ-ಕರ್ಣರನ್ನು ಆಕ್ರಮಣಿಸಲು ಹೇಳಿದುದು (೨೨-೩೦). ಸಂಕುಲಯುದ್ಧ (೩೧-೩೮).

07147001 ಸಂಜಯ ಉವಾಚ|

07147001a ವಿದ್ರುತಂ ಸ್ವಬಲಂ ದೃಷ್ಟ್ವಾ ವಧ್ಯಮಾನಂ ಮಹಾತ್ಮಭಿಃ|

07147001c ಕ್ರೋಧೇನ ಮಹತಾವಿಷ್ಟಃ ಪುತ್ರಸ್ತವ ವಿಶಾಂ ಪತೇ||

ಸಂಜಯನು ಹೇಳಿದನು: “ವಿಶಾಂಪತೇ! ಮಹಾತ್ಮರಿಂದ ವಧಿಸಲ್ಪಡುತ್ತಾ ಓಡಿಹೋಗುತ್ತಿರುವ ತನ್ನ ಸೇನೆಯನ್ನು ಕಂಡು ನಿನ್ನ ಮಗನು ಮಹಾ ಕ್ರೋಧದಿಂದ ಆವಿಷ್ಟನಾದನು.

07147002a ಅಭ್ಯೇತ್ಯ ಸಹಸಾ ಕರ್ಣಂ ದ್ರೋಣಂ ಚ ಜಯತಾಂ ವರಂ|

07147002c ಅಮರ್ಷವಶಮಾಪನ್ನೋ ವಾಕ್ಯಜ್ಞೋ ವಾಕ್ಯಮಬ್ರವೀತ್||

ವಾಕ್ಯಜ್ಞನಾದ ಅವನು ಕ್ರೋಧದ ವಶಕ್ಕೆ ಸಿಲುಕಿ ತ್ವರೆಮಾಡಿ ಕರ್ಣ ಮತ್ತು ಜಯಿಗಳಲ್ಲಿ ಶ್ರೇಷ್ಠ ದ್ರೋಣರ ಬಳಿಸಾರಿ ಈ ಮಾತುಗಳನ್ನಾಡಿದನು:

07147003a ಭವದ್ಭ್ಯಾಮಿಹ ಸಂಗ್ರಾಮೋ ಕ್ರುದ್ಧಾಭ್ಯಾಂ ಸಂಪ್ರವರ್ತಿತಃ|

07147003c ಆಹವೇ ನಿಹತಂ ದೃಷ್ಟ್ವಾ ಸೈಂಧವಂ ಸವ್ಯಸಾಚಿನಾ||

“ಸವ್ಯಸಾಚಿಯಿಂದ ಯುದ್ಧದಲ್ಲಿ ಸೈಂಧವನು ಹತನಾದುದನ್ನು ಕಂಡು ಕ್ರೋಧಿತರಾಗಿ ನೀವು ಈ ಯುದ್ಧವನ್ನು ರಾತ್ರಿಯಲ್ಲಿಯೂ ಮುಂದುವರಿಸಿದಿರಿ.

07147004a ನಿಹನ್ಯಮಾನಾಂ ಪಾಂಡೂನಾಂ ಬಲೇನ ಮಮ ವಾಹಿನೀಂ|

07147004c ಭೂತ್ವಾ ತದ್ವಿಜಯೇ ಶಕ್ತಾವಶಕ್ತಾವಿವ ಪಶ್ಯತಃ||

ಆದರೆ ಪಾಂಡವರ ಸೇನೆಯು ನನ್ನ ಸೇನೆಯನ್ನು ಸಂಹರಿಸುತ್ತಲೇ ಇದೆ. ಇದರಲ್ಲಿ ವಿಜಯವನ್ನು ಹೊಂದಲು ಶಕ್ತರಾಗಿದ್ದರೂ ನೀವು ಅಶಕ್ತರೆಂದು ತೋರ್ಪಡಿಸಿಕೊಳ್ಳುತ್ತಿದ್ದೀರಿ.

07147005a ಯದ್ಯಹಂ ಭವತೋಸ್ತ್ಯಾಜ್ಯೋ ನ ವಾಚ್ಯೋಽಸ್ಮಿ ತದೈವ ಹಿ|

07147005c ಆವಾಂ ಪಾಂಡುಸುತಾನ್ಸಂಖ್ಯೇ ಜೇಷ್ಯಾವ ಇತಿ ಮಾನದೌ||

ಒಂದುವೇಳೆ ನಿಮ್ಮಿಬ್ಬರಿಗೂ ನಾನು ಬೇಡವೆಂದಾದರೆ ಮಾನದರಾದ ನೀವು ಆಗ “ನಾವು ಪಾಂಡುಸುತರನ್ನು ಯುದ್ಧದಲ್ಲಿ ಜಯಿಸುತ್ತೇವೆ” ಎಂದು ನನಗೆ ಹೇಳಬಾರದಿತ್ತು!

07147006a ತದೈವಾಹಂ ವಚಃ ಶ್ರುತ್ವಾ ಭವದ್ಭ್ಯಾಮನುಸಮ್ಮತಂ|

07147006c ಕೃತವಾನ್ಪಾಂಡವೈಃ ಸಾರ್ಧಂ ವೈರಂ ಯೋಧವಿನಾಶನಂ||

ನಿಮಗೆ ಸಮ್ಮತಿಯಿರದಿದ್ದರೆ ನಿಮ್ಮ ಆ ಮಾತನ್ನು ಕೇಳಿ ಈ ಯೋಧರ ವಿನಾಶಕಾರಕ ವೈರವನ್ನು ನಾನು ಪಾಂಡವರೊಡನೆ ಕಟ್ಟಿಕೊಳ್ಳುತ್ತಿರಲಿಲ್ಲ.

07147007a ಯದಿ ನಾಹಂ ಪರಿತ್ಯಾಜ್ಯೋ ಭವದ್ಭ್ಯಾಂ ಪುರುಷರ್ಷಭೌ|

07147007c ಯುಧ್ಯೇತಾಮನುರೂಪೇಣ ವಿಕ್ರಮೇಣ ಸುವಿಕ್ರಮೌ||

ಪುರುಷರ್ಷಭರೇ! ಸುವಿಕ್ರಮಿಗಳೇ! ಒಂದುವೇಳೆ ನಿಮಗೆ ನಾನು ಪರಿತ್ಯಾಜ್ಯನೆನಿಸದಿದ್ದರೆ ವಿಕ್ರಮದಿಂದ ನಿಮಗೆ ಅನುರೂಪ ಯುದ್ಧವನ್ನು ಮಾಡಿ!”

07147008a ವಾಕ್ಪ್ರತೋದೇನ ತೌ ವೀರೌ ಪ್ರಣುನ್ನೌ ತನಯೇನ ತೇ|

07147008c ಪ್ರಾವರ್ತಯೇತಾಂ ತೌ ಯುದ್ಧಂ ಘಟ್ಟಿತಾವಿವ ಪನ್ನಗೌ||

ತುಳಿಯಲ್ಪಟ್ಟ ಸರ್ಪಗಳಂತೆ ಮತ್ತು ಮಾತಿನ ಚಾವಟಿಯಿಂದ ಹೊಡೆಯಲ್ಪಟ್ಟವರಂತೆ ಆ ವೀರರಿಬ್ಬರೂ ಪುನಃ ಯುದ್ಧವನ್ನು ಪ್ರಾರಂಭಿಸಿದರು.

07147009a ತತಸ್ತೌ ರಥಿನಾಂ ಶ್ರೇಷ್ಠೌ ಸರ್ವಲೋಕಧನುರ್ಧರೌ|

07147009c ಶೈನೇಯಪ್ರಮುಖಾನ್ಪಾರ್ಥಾನಭಿದುದ್ರುವತೂ ರಣೇ||

ಆಗ ಅವರಿಬ್ಬರು ರಥಶ್ರೇಷ್ಠರೂ ಸರ್ವಲೋಕಧನುರ್ಧರರೂ ರಣದಲ್ಲಿ ಶೈನೇಯಪ್ರಮುಖ ಪಾರ್ಥರನ್ನು ಆಕ್ರಮಣಿಸಿದರು.

07147010a ತಥೈವ ಸಹಿತಾಃ ಪಾರ್ಥಾಃ ಸ್ವೇನ ಸೈನ್ಯೇನ ಸಂವೃತಾಃ|

07147010c ಅಭ್ಯವರ್ತಂತ ತೌ ವೀರೌ ನರ್ದಮಾನೌ ಮುಹುರ್ಮುಹುಃ||

ಹಾಗೆಯೇ ಪಾರ್ಥರೂ ಕೂಡ ತಮ್ಮ ತಮ್ಮ ಸೇನೆಗಳಿಂದ ಸುತ್ತುವರೆಯಲ್ಪಟ್ಟು ಪುನಃ ಪುನಃ ಸಿಂಹನಾದಗೈಯುತ್ತಾ ಆ ವೀರರಿಬ್ಬರನ್ನೂ ಎದುರಿಸಿದರು.

07147011a ಅಥ ದ್ರೋಣೋ ಮಹೇಷ್ವಾಸೋ ದಶಭಿಃ ಶಿನಿಪುಂಗವಂ|

07147011c ಅವಿಧ್ಯತ್ತ್ವರಿತಂ ಕ್ರುದ್ಧಃ ಸರ್ವಶಸ್ತ್ರಭೃತಾಂ ವರಃ||

ಆಗ ಮಹೇಷ್ವಾಸ, ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠ ದ್ರೋಣನು ಕ್ರುದ್ಧನಾಗಿ ತ್ವರೆಯಿಂದ ಹತ್ತು ಬಾಣಗಳಿಂದ ಶಿನಿಪುಂಗವನನ್ನು ಹೊಡೆದನು.

07147012a ಕರ್ಣಶ್ಚ ದಶಭಿರ್ಬಾಣೈಃ ಪುತ್ರಶ್ಚ ತವ ಸಪ್ತಭಿಃ|

07147012c ದಶಭಿರ್ವೃಷಸೇನಶ್ಚ ಸೌಬಲಶ್ಚಾಪಿ ಸಪ್ತಭಿಃ|

07147012e ಏತೇ ಕೌರವ ಸಂಕ್ರಂದೇ ಶೈನೇಯಂ ಪರ್ಯವಾರಯನ್||

ಹಾಗೆಯೇ ಕರ್ಣನು ಹತ್ತು ಬಾಣಗಳಿಂದ, ನಿನ್ನ ಮಗನು ಏಳರಿಂದ, ವೃಷಸೇನನು ಹತ್ತರಿಂದ, ಸೌಬಲನು ಏಳರಿಂದ ಹೊಡೆದು ಹೀಗೆ ಕೌರವರು ಶೈನೇಯನನ್ನು ಸುತ್ತುವರೆದರು.

07147013a ದೃಷ್ಟ್ವಾ ಚ ಸಮರೇ ದ್ರೋಣಂ ನಿಘ್ನಂತಂ ಪಾಂಡವೀಂ ಚಮೂಂ|

07147013c ವಿವ್ಯಧುಃ ಸೋಮಕಾಸ್ತೂರ್ಣಂ ಸಮಂತಾಚ್ಚರವೃಷ್ಟಿಭಿಃ||

ಸಮರದಲ್ಲಿ ದ್ರೋಣನು ಪಾಂಡವೀ ಸೇನೆಯನ್ನು ಧ್ವಂಸಗೊಳಿಸುತ್ತಿರುವುದನ್ನು ನೋಡಿ ತಕ್ಷಣವೇ ಸೋಮಕರು ಎಲ್ಲಕಡೆಗಳಿಂದ ಶರವರ್ಷವನ್ನು ಸುರಿಸಿ ಅವನನ್ನು ಗಾಯಗೊಳಿಸಿದರು.

07147014a ತತೋ ದ್ರೋಣೋಽಹರತ್ಪ್ರಾಣಾನ್ಕ್ಷತ್ರಿಯಾಣಾಂ ವಿಶಾಂ ಪತೇ|

07147014c ರಶ್ಮಿಭಿರ್ಭಾಸ್ಕರೋ ರಾಜಂಸ್ತಮಸಾಮಿವ ಭಾರತ||

ಭಾರತ! ರಾಜನ್! ವಿಶಾಂಪತೇ! ಆಗ ದ್ರೋಣನು ಭಾಸ್ಕರನು ಕತ್ತಲೆಯನ್ನು ತನ್ನ ಕಿರಣಗಳಿಂದ ಹೇಗೋ ಹಾಗೆ ಕ್ಷತ್ರಿಯರ ಪ್ರಾಣಗಳನ್ನು ಅಪಹರಿಸಿದನು.

07147015a ದ್ರೋಣೇನ ವಧ್ಯಮಾನಾನಾಂ ಪಾಂಚಾಲಾನಾಂ ವಿಶಾಂ ಪತೇ|

07147015c ಶುಶ್ರುವೇ ತುಮುಲಃ ಶಬ್ದಃ ಕ್ರೋಶತಾಮಿತರೇತರಂ||

ವಿಶಾಂಪತೇ! ದ್ರೋಣನಿಂದ ವಧಿಸಲ್ಪಡುತ್ತಿರುವ ಪಾಂಚಾಲರ ಪರಸ್ಪರರ ತುಮುಲ ಶಬ್ಧವು ಒಂದು ಕ್ರೋಶ ದೂರದವರೆಗೂ ಕೇಳಿಬರುತ್ತಿತ್ತು.

07147016a ಪುತ್ರಾನನ್ಯೇ ಪಿತೄನನ್ಯೇ ಭ್ರಾತೄನನ್ಯೇ ಚ ಮಾತುಲಾನ್|

07147016c ಭಾಗಿನೇಯಾನ್ವಯಸ್ಯಾಂಶ್ಚ ತಥಾ ಸಂಬಂಧಿಬಾಂಧವಾನ್|

07147016e ಉತ್ಸೃಜ್ಯೋತ್ಸೃಜ್ಯ ಗಚ್ಚಂತಿ ತ್ವರಿತಾ ಜೀವಿತೇಪ್ಸವಃ||

ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ತ್ವರೆಮಾಡಿ ಪುತ್ರರು ಪಿತೃಗಳನ್ನೂ, ಸಹೋದರರು ಸಹೋದರರನ್ನೂ, ಅಳಿಯಂದಿರು ಮಾವಂದಿರನ್ನೂ, ಸ್ನೇಹಿತರನ್ನೂ, ಸಂಬಂಧಿ-ಬಾಂಧವರನ್ನೂ ಅಲ್ಲಲ್ಲಿಯೇ ಬಿಟ್ಟು ಓಡಿಹೋಗುತ್ತಿದ್ದರು.

07147017a ಅಪರೇ ಮೋಹಿತಾ ಮೋಹಾತ್ತಮೇವಾಭಿಮುಖಾ ಯಯುಃ|

07147017c ಪಾಂಡವಾನಾಂ ರಣೇ ಯೋಧಾಃ ಪರಲೋಕಂ ತಥಾಪರೇ||

ಕೆಲವರು ಮೋಹಿತರಾಗಿ ಮೋಹದಿಂದ ದ್ರೋಣನ ಎದುರಾಗಿಯೇ ಹೋಗುತ್ತಿದ್ದರು. ಇನ್ನು ಇತರ ಪಾಂಡವ ಯೋಧರು ರಣದಲ್ಲಿ ಪರಲೋಕವನ್ನು ಸೇರಿದರು.

07147018a ಸಾ ತಥಾ ಪಾಂಡವೀ ಸೇನಾ ವಧ್ಯಮಾನಾ ಮಹಾತ್ಮಭಿಃ|

07147018c ನಿಶಿ ಸಂಪ್ರಾದ್ರವದ್ರಾಜನ್ನುತ್ಸೃಜ್ಯೋಲ್ಕಾಃ ಸಹಸ್ರಶಃ||

07147019a ಪಶ್ಯತೋ ಭೀಮಸೇನಸ್ಯ ವಿಜಯಸ್ಯಾಚ್ಯುತಸ್ಯ ಚ|

07147019c ಯಮಯೋರ್ಧರ್ಮಪುತ್ರಸ್ಯ ಪಾರ್ಷತಸ್ಯ ಚ ಪಶ್ಯತಃ||

ರಾಜನ್! ಆ ಮಹಾತ್ಮನಿಂದ ಹಾಗೆ ವಧಿಸಲ್ಪಡುತ್ತಿದ್ದ ಪಾಂಡವೀ ಸೇನೆಯು ಸಹಸ್ರಾರು ಸಂಖ್ಯೆಗಳಲ್ಲಿ ದೀವಟಿಗೆಗಳನ್ನು ಬಿಸುಟು ರಾತ್ರಿಯಲ್ಲಿ ಭೀಮಸೇನ, ವಿಜಯ, ಅಚ್ಯುತ, ನಕುಲ-ಸಹದೇವರು, ಧರ್ಮಪುತ್ರ ಮತ್ತು ಪಾರ್ಷತರು ನೋಡುತ್ತಿದ್ದಂತೆಯೇ ಓಡಿಹೋಗುತ್ತಿದ್ದರು.

07147020a ತಮಸಾ ಸಂವೃತೇ ಲೋಕೇ ನ ಪ್ರಾಜ್ಞಾಯತ ಕಿಂ ಚನ|

07147020c ಕೌರವಾಣಾಂ ಪ್ರಕಾಶೇನ ದೃಶ್ಯಂತೇ ತು ದ್ರುತಾಃ ಪರೇ||

ಕತ್ತಲೆಯಿಂದ ಲೋಕವೇ ತುಂಬಿಹೋಗಿರಲು ಅಲ್ಲಿ ಏನೊಂದೂ ತಿಳಿಯುತ್ತಿರಲಿಲ್ಲ. ಆದರೆ ಕೌರವರ ದೀವಟಿಗೆಗಳ ಪ್ರಕಾಶದಿಂದ ಶತ್ರುಗಳು ಓಡಿಹೋಗುತ್ತಿರುವುದು ಕಾಣುತ್ತಿತ್ತು.

07147021a ದ್ರವಮಾಣಂ ತು ತತ್ಸೈನ್ಯಂ ದ್ರೋಣಕರ್ಣೌ ಮಹಾರಥೌ|

07147021c ಜಘ್ನತುಃ ಪೃಷ್ಠತೋ ರಾಜನ್ಕಿರಂತೌ ಸಾಯಕಾನ್ಬಹೂನ್||

ರಾಜನ್! ಓಡಿಹೋಗುತ್ತಿರುವ ಆ ಸೈನ್ಯವನ್ನು ಮಹಾರಥ ದ್ರೋಣ-ಕರ್ಣರು ಹಿಂದಿನಿಂದ ಅನೇಕ ಸಾಯಕಗಳನ್ನು ಎರಚುತ್ತಾ ಸಂಹರಿಸಿದರು.

07147022a ಪಾಂಚಾಲೇಷು ಪ್ರಭಗ್ನೇಷು ದೀರ್ಯಮಾಣೇಷು ಸರ್ವಶಃ|

07147022c ಜನಾರ್ದನೋ ದೀನಮನಾಃ ಪ್ರತ್ಯಭಾಷತ ಫಲ್ಗುನಂ||

ಪಾಂಚಾಲರು ಎಲ್ಲಕಡೆಗಳಿಂದ ಸೀಳಿಕೊಂಡು ಭಗ್ನರಾಗುತ್ತಿರಲು ದೀನಮನಸ್ಕ ಜನಾರ್ದನನು ಫಲ್ಗುನನಿಗೆ ಹೇಳಿದನು:

07147023a ದ್ರೋಣಕರ್ಣೌ ಮಹೇಷ್ವಾಸಾವೇತೌ ಪಾರ್ಷತಸಾತ್ಯಕೀ|

07147023c ಪಾಂಚಾಲಾಂಶ್ಚೈವ ಸಹಿತೌ ಜಘ್ನತುಃ ಸಾಯಕೈರ್ಭೃಶಂ||

“ಮಹೇಷ್ವಾಸ ದ್ರೋಣ-ಕರ್ಣರು ಪಾರ್ಷತ-ಸಾತ್ಯಕಿಯರನ್ನೂ ಪಾಂಚಾಲ ಸೇನೆಯೊಡನೆ ಅನೇಕ ಸಾಯಕಗಳಿಂದ ಸಂಹರಿಸುತ್ತಿದ್ದಾರೆ.

07147024a ಏತಯೋಃ ಶರವರ್ಷೇಣ ಪ್ರಭಗ್ನಾ ನೋ ಮಹಾರಥಾಃ|

07147024c ವಾರ್ಯಮಾಣಾಪಿ ಕೌಂತೇಯ ಪೃತನಾ ನಾವತಿಷ್ಠತೇ||

ಕೌಂತೇಯ! ಇವರ ಈ ಶರವರ್ಷಗಳಿಂದ ಪ್ರಭಗ್ನರಾದ ನಮ್ಮ ಮಹಾರಥರು ತಡೆದರೂ ರಣರಂಗದಲ್ಲಿ ನಿಲ್ಲುತ್ತಿಲ್ಲ.

07147025a ಏತಾವಾವಾಂ ಸರ್ವಸೈನ್ಯೈರ್ವ್ಯೂಢೈಃ ಸಮ್ಯಗುದಾಯುಧೈಃ|

07147025c ದ್ರೋಣಂ ಚ ಸೂತಪುತ್ರಂ ಚ ಪ್ರಯತಾವಃ ಪ್ರಬಾಧಿತುಂ||

ನಾವಿಬ್ಬರೂ ಸರ್ವಸೇನೆಗಳ ವ್ಯೂಹವನ್ನು ರಚಿಸಿ ಎಲ್ಲ ಆಯುಧಗಳೊಂದಿಗೆ ದ್ರೋಣ ಮತ್ತು ಸೂತಪುತ್ರರನ್ನು ಬಾಧೆಪಡಿಸಲು ಸಂಪೂರ್ಣ ಪ್ರಯತ್ನಿಸಬೇಕು.

07147026a ಏತೌ ಹಿ ಬಲಿನೌ ಶೂರೌ ಕೃತಾಸ್ತ್ರೌ ಜಿತಕಾಶಿನೌ|

07147026c ಉಪೇಕ್ಷಿತೌ ಬಲಂ ಕ್ರುದ್ಧೌ ನಾಶಯೇತಾಂ ನಿಶಾಮಿಮಾಂ|

07147026e ಏಷ ಭೀಮೋಽಭಿಯಾತ್ಯುಗ್ರಃ ಪುನರಾವರ್ತ್ಯ ವಾಹಿನೀಂ||

ಇವರಿಬ್ಬರೂ ಬಲಶಾಲಿಗಳು, ಶೂರರು, ಕೃತಾಸ್ತ್ರರು ಮತ್ತು ವಿಜಯವನ್ನು ಬಯಸುವವರು. ಕ್ರುದ್ಧರಾದ ಇವರು ಬಯಸಿದರೆ ಈ ರಾತ್ರಿಯೇ ನಮ್ಮ ಸೇನೆಯನ್ನು ನಾಶಗೊಳಿಸಬಲ್ಲರು.” ಹೀಗೆ ಮಾತನಾಡಿಕೊಳ್ಳುತ್ತಿದ್ದಾಗ ಅತಿ ಉಗ್ರ ಭೀಮನು ಸೇನೆಯನ್ನು ಪುನಃ ಕರೆದು ತಂದನು.

07147027a ವೃಕೋದರಂ ತಥಾಯಾಂತಂ ದೃಷ್ಟ್ವಾ ತತ್ರ ಜನಾರ್ದನಃ|

07147027c ಪುನರೇವಾಬ್ರವೀದ್ರಾಜನ್ ಹರ್ಷಯನ್ನಿವ ಪಾಂಡವಂ||

ರಾಜನ್! ಹಾಗೆ ವೃಕೋದರನು ಅಲ್ಲಿಗೆ ಬರುತ್ತಿದ್ದುದನ್ನು ನೋಡಿದ ಜನಾರ್ದನನು ಹರ್ಷಗೊಂಡವನಾಗಿ ಪಾಂಡವನಿಗೆ ಪುನಃ ಹೇಳಿದನು:

07147028a ಏಷ ಭೀಮೋ ರಣಶ್ಲಾಘೀ ವೃತಃ ಸೋಮಕಪಾಂಡವೈಃ|

07147028c ರುಷಿತೋಽಭ್ಯೇತಿ ವೇಗೇನ ದ್ರೋಣಕರ್ಣೌ ಮಹಾಬಲೌ||

“ಇಗೋ! ರಣಶ್ಲಾಘೀ ಭೀಮನು ಸೋಮಕ-ಪಾಂಡವರಿಂದ ಸುತ್ತುವರೆಯಲ್ಪಟ್ಟು ರೋಷದಿಂದ ವೇಗವಾಗಿ ಮಹಾಬಲ ದ್ರೋಣ-ಕರ್ಣರು ಇರುವಲ್ಲಿಗೆ ಬರುತ್ತಿದ್ದಾನೆ.

07147029a ಏತೇನ ಸಹಿತೋ ಯುಧ್ಯ ಪಾಂಚಾಲೈಶ್ಚ ಮಹಾರಥೈಃ|

07147029c ಆಶ್ವಾಸನಾರ್ಥಂ ಸರ್ವೇಷಾಂ ಸೈನ್ಯಾನಾಂ ಪಾಂಡುನಂದನ||

ಪಾಂಡುನಂದನ! ಸೇನೆಗಳೆಲ್ಲವಕ್ಕೆ ಆಶ್ವಾಸನೆ ನೀಡುವ ಸಲುವಾಗಿ ನೀನು ಪಾಂಚಾಲ ಮಹಾರಥರೊಂದಿಗೆ ಸೇರಿಕೊಂಡು ದ್ರೋಣ-ಕರ್ಣರೊಡನೆ ಯುದ್ಧಮಾಡು!”

07147030a ತತಸ್ತೌ ಪುರುಷವ್ಯಾಘ್ರಾವುಭೌ ಮಾಧವಪಾಂಡವೌ|

07147030c ದ್ರೋಣಕರ್ಣೌ ಸಮಾಸಾದ್ಯ ಧಿಷ್ಠಿತೌ ರಣಮೂರ್ಧನಿ||

ಆಗ ಪುರುಷವ್ಯಾಘ್ರ ಮಾಧವ-ಪಾಂಡವರು ರಣಮೂರ್ದನಿಯಲ್ಲಿ ದ್ರೋಣ ಮತ್ತು ಕರ್ಣರ ಎದಿರಾಗಿ ಯುದ್ಧಸನ್ನದ್ಧರಾಗಿ ನಿಂತರು.

07147031a ತತಸ್ತತ್ಪುನರಾವೃತ್ತಂ ಯುಧಿಷ್ಠಿರಬಲಂ ಮಹತ್|

07147031c ತತೋ ದ್ರೋಣಶ್ಚ ಕರ್ಣಶ್ಚ ಪರಾನ್ಮಮೃದತುರ್ಯುಧಿ||

ಆಗ ಯುಧಿಷ್ಠಿರನ ಮಹಾಸೇನೆಯು ಹಿಂದಿರುಗಿತು. ಮತ್ತು ದ್ರೋಣ-ಕರ್ಣರು ಯುದ್ಧದಲ್ಲಿ ಆ ಶತ್ರುಬಲವನ್ನು ಧ್ವಂಸಗೊಳಿಸತೊಡಗಿದರು.

07147032a ಸ ಸಂಪ್ರಹಾರಸ್ತುಮುಲೋ ನಿಶಿ ಪ್ರತ್ಯಭವನ್ಮಹಾನ್|

07147032c ಯಥಾ ಸಾಗರಯೋ ರಾಜಂಶ್ಚಂದ್ರೋದಯವಿವೃದ್ಧಯೋಃ||

ಚಂದ್ರೋದಯದಿಂದ ಉಕ್ಕಿಬರುವ ಎರಡು ಮಹಾಸಾಗರಗಳಂತಿದ್ದ ಆ ಎರಡು ಸೇನೆಗಳ ನಡುವೆ ಆ ರಾತ್ರಿ ಪುನಃ ಸಂಪ್ರಹಾರಗಳನ್ನೊಡಗೂಡಿದ ಮಹಾ ತುಮುಲ ಯುದ್ಧವು ಪ್ರಾರಂಭವಾಯಿತು.

07147033a ತತ ಉತ್ಸೃಜ್ಯ ಪಾಣಿಭ್ಯಃ ಪ್ರದೀಪಾಂಸ್ತವ ವಾಹಿನೀ|

07147033c ಯುಯುಧೇ ಪಾಂಡವೈಃ ಸಾರ್ಧಮುನ್ಮತ್ತವದಹಃಕ್ಷಯೇ||

ಆಗ ನಿನ್ನ ಸೇನೆಯು ಕೈಗಳಲ್ಲಿದ್ದ ದೀವಟಿಗೆಗಳನ್ನು ಬಿಸುಟು ಪಾಂಡವರೊಡನೆ ಉನ್ಮತ್ತರಾದವರಂತೆ ಯುದ್ಧಮಾಡತೊಡಗಿದರು.

07147034a ರಜಸಾ ತಮಸಾ ಚೈವ ಸಂವೃತೇ ಭೃಶದಾರುಣೇ|

07147034c ಕೇವಲಂ ನಾಮಗೋತ್ರೇಣ ಪ್ರಾಯುಧ್ಯಂತ ಜಯೈಷಿಣಃ||

ಧೂಳು ಮತ್ತು ಕತ್ತಲಿನಿಂದ ಆವೃತವಾದ ಆ ಅತ್ಯಂತ ದಾರುಣ ರಾತ್ರಿಯಲ್ಲಿ ಎರಡು ಕಡೆಯ ಜಯೈಷಿಗಳು ಕೇವಲ ನಾಮಗೋತ್ರಗಳನ್ನು ಹೇಳಿಕೊಂಡು ಯುದ್ಧಮಾಡುತ್ತಿದ್ದರು.

07147035a ಅಶ್ರೂಯಂತ ಹಿ ನಾಮಾನಿ ಶ್ರಾವ್ಯಮಾಣಾನಿ ಪಾರ್ಥಿವೈಃ|

07147035c ಪ್ರಹರದ್ಭಿರ್ಮಹಾರಾಜ ಸ್ವಯಂವರ ಇವಾಹವೇ||

ಮಹಾರಾಜ! ಸ್ವಯಂವರದಲ್ಲಿ ರಾಜರು ತಮ್ಮ ತಮ್ಮ ಹೆಸರುಗಳನ್ನು ಹೇಳಿಕೊಳ್ಳುವಂತೆ ಯುದ್ಧದಲ್ಲಿ ತಮ್ಮ ತಮ್ಮ ಹೆಸರುಗಳನ್ನು ಕೇಳುವಂತೆ ಹೇಳಿಕೊಳ್ಳುತ್ತಾ ಯುದ್ಧಮಾಡುತ್ತಿದ್ದರು.

07147036a ನಿಃಶಬ್ದಮಾಸೀತ್ಸಹಸಾ ಪುನಃ ಶಬ್ದೋ ಮಹಾನಭೂತ್|

07147036c ಕ್ರುದ್ಧಾನಾಂ ಯುಧ್ಯಮಾನಾನಾಂ ಜಯತಾಂ ಜೀಯತಾಮಪಿ||

ಯುದ್ಧಮಾಡಿ ವಿಜಯಿಗಳಾಗುತ್ತಿದ್ದವರ ಮತ್ತು ಪರಾಜಿತರಾಗುತ್ತಿದ್ದವರ ಧ್ವನಿಗಳು ಒಮ್ಮಿಂದೊಮ್ಮೆಲೇ ನಿಃಶಬ್ಧವಾಗುತ್ತಿದ್ದವು. ಪುನಃ ಮಹಾ ಶಬ್ಧವುಂಟಾಗುತ್ತಿತ್ತು.

07147037a ಯತ್ರ ಯತ್ರ ಸ್ಮ ದೃಶ್ಯಂತೇ ಪ್ರದೀಪಾಃ ಕುರುಸತ್ತಮ|

07147037c ತತ್ರ ತತ್ರ ಸ್ಮ ತೇ ಶೂರಾ ನಿಪತಂತಿ ಪತಂಗವತ್||

ಕುರುಸತ್ತಮ! ಎಲ್ಲೆಲ್ಲಿ ದೀವಟಿಗೆಗಳ ಬೆಳಕು ಕಾಣುತ್ತಿತ್ತೋ ಅಲ್ಲಲ್ಲಿ ಪತಂಗದ ಹುಳುಗಳೋಪಾದಿಯಲ್ಲಿ ಶೂರರು ಕೆಳಗೆ ಬೀಳುತ್ತಿದ್ದರು.

07147038a ತಥಾ ಸಮ್ಯುಧ್ಯಮಾನಾನಾಂ ವಿಗಾಢಾಭೂನ್ಮಹಾನಿಶಾ|

07147038c ಪಾಂಡವಾನಾಂ ಚ ರಾಜೇಂದ್ರ ಕೌರವಾಣಾಂ ಚ ಸರ್ವಶಃ||

ರಾಜೇಂದ್ರ! ಹಾಗೆ ಯುದ್ಧಮಾಡುತ್ತಿದ್ದ ಪಾಂಡವರ ಮತ್ತು ಕೌರವರ ಸುತ್ತಲೂ ದಟ್ಟವಾದ ಮಹಾ ಕತ್ತಲೆಯು ಆವರಿಸಿತು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಸಂಕುಲಯುದ್ಧೇ ಸಪ್ತಚತ್ವಾರಿಂಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಸಂಕುಲಯುದ್ಧ ಎನ್ನುವ ನೂರಾನಲ್ವತ್ತೇಳನೇ ಅಧ್ಯಾಯವು.

Related image

Comments are closed.