ಆರಣ್ಯಕ ಪರ್ವ: ಘೋಷಯಾತ್ರಾ ಪರ್ವ
Contents
Toggle೨೩೮
ಗಂಧರ್ವರು ಪಾಂಡವರೊಂದಿಗೆ ಯುಧಿಷ್ಠಿರನಲ್ಲಿಗೆ ಹೋಗಿ ನಮ್ಮ ಕೆಟ್ಟ ಉಪಾಯದ ಕುರಿತು ಹೇಳಿ ಬಂಧನದಲ್ಲಿದ್ದ ನಮ್ಮನ್ನು ಅರ್ಪಿಸಿದರು ಎಂದು ದುರ್ಯೋಧನನು ಹೇಳಿಕೊಂಡು ದುಃಖಿಸಿ ತಾನು ಪ್ರಾಯೋಪವೇಶ ಮಾಡಿ ಜೀವತೆಗೆದುಕೊಳ್ಳುತ್ತೇನೆಂದು ಕರ್ಣನಿಗೆ ಹೇಳುವುದು (೧-೨೦). ದುಃಶಾಸನನಿಗೆ ರಾಜ್ಯವಾಳು ಹೋಗು ಎಂದು ಹೇಳುವುದು (೨೧-೨೬). ದುಃಶಾಸನ ಮತ್ತು ಕರ್ಣರು ದುರ್ಯೋಧನನನ್ನು ತಡೆಯಲು ಪ್ರಯತ್ನಿಸಿದುದು (೨೭-೪೯).
03238001 ದುರ್ಯೋಧನ ಉವಾಚ|
03238001a ಚಿತ್ರಸೇನಂ ಸಮಾಗಮ್ಯ ಪ್ರಹಸನ್ನರ್ಜುನಸ್ತದಾ|
03238001c ಇದಂ ವಚನಮಕ್ಲೀಬಮಬ್ರವೀತ್ಪರವೀರಹಾ||
ದುರ್ಯೋಧನನು ಹೇಳಿದನು: “ಚಿತ್ರಸೇನನನ್ನು ಸೇರಿ ಪರವೀರಹ ಅರ್ಜುನನು ನಕ್ಕು ಹೇಡಿತನದಲ್ಲದ ಈ ಮಾತುಗಳನ್ನಾಡಿದನು.
03238002a ಭ್ರಾತೄನರ್ಹಸಿ ನೋ ವೀರ ಮೋಕ್ತುಂ ಗಂಧರ್ವಸತ್ತಮ|
03238002c ಅನರ್ಹಾ ಧರ್ಷಣಂ ಹೀಮೇ ಜೀವಮಾನೇಷು ಪಾಂಡುಷು||
“ಗಂಧರ್ವಸತ್ತಮ! ವೀರ! ನಮ್ಮ ಸಹೋದರನನ್ನು ನೀನು ಬಿಡಬೇಕು. ಪಾಂಡವರು ಜೀವಂತವಾಗಿರುವವರೆಗೆ ಇವರು ಪೀಡೆಗೊಳಗಾಗಲು ಅನರ್ಹರು.”
03238003a ಏವಮುಕ್ತಸ್ತು ಗಂಧರ್ವಃ ಪಾಂಡವೇನ ಮಹಾತ್ಮನಾ|
03238003c ಉವಾಚ ಯತ್ಕರ್ಣ ವಯಂ ಮಂತ್ರಯಂತೋ ವಿನಿರ್ಗತಾಃ|
03238003e ದ್ರಷ್ಟಾರಃ ಸ್ಮ ಸುಖಾದ್ಧೀನಾನ್ಸದಾರಾನ್ಪಾಂಡವಾನಿತಿ||
ಕರ್ಣ! ಮಹಾತ್ಮ ಪಾಂಡವನು ಹೀಗೆ ಹೇಳಲು ಗಂಧರ್ವನು ನಾವು ಯಾವ ಉಪಾಯದಿಂದ ಅಲ್ಲಿಗೆ ಬಂದಿದ್ದೆವು - ಪತ್ನಿಯೊಂದಿಗೆ ಪಾಂಡವರು ದೀನರಾಗಿರುವುದನ್ನು ನೋಡಿ ಸುಖಪಡಲು - ಎನ್ನುವುದನ್ನು ಹೇಳಿದನು.
03238004a ತಸ್ಮಿನ್ನುಚ್ಚಾರ್ಯಮಾಣೇ ತು ಗಂಧರ್ವೇಣ ವಚಸ್ಯಥ|
03238004c ಭೂಮೇರ್ವಿವರಮನ್ವೈಚ್ಚಂ ಪ್ರವೇಷ್ಟುಂ ವ್ರೀಡಯಾನ್ವಿತಃ||
ಗಂಧರ್ವನು ಈ ಮಾತುಗಳನ್ನಾಡುತ್ತಿರಲು ನಾಚಿಕೆಯಿಂದ ತುಂಬಿದ ನಾನು ಮನದಲ್ಲಿಯೇ ಭೂಮಿಯು ಸೀಳಿ ಅದರೊಳಗೆ ಪ್ರವೇಶಿಸಲು ಇಚ್ಛಿಸಿದೆ.
03238005a ಯುಧಿಷ್ಠಿರಮಥಾಗಮ್ಯ ಗಂಧರ್ವಾಃ ಸಹ ಪಾಂಡವೈಃ|
03238005c ಅಸ್ಮದ್ದುರ್ಮಂತ್ರಿತಂ ತಸ್ಮೈ ಬದ್ಧಾಂಶ್ಚಾಸ್ಮಾನ್ನ್ಯವೇದಯನ್||
ಆಗ ಗಂಧರ್ವರು ಪಾಂಡವರೊಂದಿಗೆ ಯುಧಿಷ್ಠಿರನಲ್ಲಿಗೆ ಹೋಗಿ ನಮ್ಮ ಕೆಟ್ಟ ಉಪಾಯದ ಕುರಿತು ಹೇಳಿ ಬಂಧನದಲ್ಲಿದ್ದ ನಮ್ಮನ್ನು ಅರ್ಪಿಸಿದರು.
03238006a ಸ್ತ್ರೀಸಮಕ್ಷಮಹಂ ದೀನೋ ಬದ್ಧಃ ಶತ್ರುವಶಂ ಗತಃ|
03238006c ಯುಧಿಷ್ಠಿರಸ್ಯೋಪಹೃತಃ ಕಿಂ ನು ದುಃಖಮತಃ ಪರಂ||
ಅಲ್ಲಿ ನಾನು ಸ್ತ್ರೀಯರ ಸಮಕ್ಷಮದಲ್ಲಿ ದೀನನಾಗಿ ಬಂದಿಯಾಗಿ ಶತ್ರುವಶನಾಗಿದ್ದ ಯುಧಿಷ್ಠಿರನಿಗೆ ಸಮರ್ಪಣಗೊಂಡಾಗ ಅದಕ್ಕಿಂತಲೂ ಹೆಚ್ಚಿನ ದುಃಖವಾದರೂ ಏನಿದೆ?
03238007a ಯೇ ಮೇ ನಿರಾಕೃತಾ ನಿತ್ಯಂ ರಿಪುರ್ಯೇಷಾಮಹಂ ಸದಾ|
03238007c ತೈರ್ಮೋಕ್ಷಿತೋಽಹಂ ದುರ್ಬುದ್ಧಿರ್ದತ್ತಂ ತೈರ್ಜೀವಿತಂ ಚ ಮೇ||
ಯಾರನ್ನು ನಾನು ನಿತ್ಯವೂ ನಿರಾಕರಿಸಿ ಸದಾ ದ್ವೇಷಿಸುತ್ತೇನೋ ಅವರೇ ದುರ್ಬುದ್ಧಿಯಾದ ನನ್ನನ್ನು ಬಿಡುಗಡೆಗೊಳಿಸಿದರು. ನನ್ನ ಜೀವವು ಅವರ ಋಣಿಯಾಗಿದೆ.
03238008a ಪ್ರಾಪ್ತಃ ಸ್ಯಾಂ ಯದ್ಯಹಂ ವೀರ ವಧಂ ತಸ್ಮಿನ್ಮಹಾರಣೇ|
03238008c ಶ್ರೇಯಸ್ತದ್ಭವಿತಾ ಮಹ್ಯಮೇವಂಭೂತಂ ನ ಜೀವಿತಂ||
ವೀರ! ಈ ರೀತಿಯ ಜೀವನವನ್ನು ಜೀವಿಸುವುದಕ್ಕಿಂತ ಆ ಮಹಾರಣದಲ್ಲಿ ನಾನು ವಧಿಸಲ್ಪಟ್ಟಿದ್ದರೇ ಒಳ್ಳೆಯದಾಗುತ್ತಿತ್ತು.
03238009a ಭವೇದ್ಯಶಃ ಪೃಥಿವ್ಯಾಂ ಮೇ ಖ್ಯಾತಂ ಗಂಧರ್ವತೋ ವಧಾತ್|
03238009c ಪ್ರಾಪ್ತಾಶ್ಚ ಲೋಕಾಃ ಪುಣ್ಯಾಃ ಸ್ಯುರ್ಮಹೇಂದ್ರಸದನೇಽಕ್ಷಯಾಃ||
ಗಂಧರ್ವನಿಂದ ಹತನಾದೆನೆಂದು ನನ್ನ ಯಶವು ಭೂಮಿಯಲ್ಲಿ ಖ್ಯಾತಿಯಾಗುತ್ತಿತ್ತು ಮತ್ತು ಮಹೇಂದ್ರಸದನದಲ್ಲಿ ಅಕ್ಷಯವಾದ, ಪುಣ್ಯ ಲೋಕಗಳನ್ನು ಪಡೆಯುತ್ತಿದ್ದೆ.
03238010a ಯತ್ತ್ವದ್ಯ ಮೇ ವ್ಯವಸಿತಂ ತಚ್ಚೃಣುಧ್ವಂ ನರರ್ಷಭಾಃ|
03238010c ಇಹ ಪ್ರಾಯಮುಪಾಸಿಷ್ಯೇ ಯೂಯಂ ವ್ರಜತ ವೈ ಗೃಹಾನ್|
03238010e ಭ್ರಾತರಶ್ಚೈವ ಮೇ ಸರ್ವೇ ಪ್ರಯಾಂತ್ವದ್ಯ ಪುರಂ ಪ್ರತಿ||
ನರಷರ್ಷಭರೇ! ಇಂದು ನಾನು ಏನು ಮಾಡಬೇಕೆಂದು ನಿರ್ಧರಿಸಿದ್ದೇನೆ ಎನ್ನುವುದನ್ನು ಕೇಳಿ. ನಾನು ಇಲ್ಲಿಯೇ ಕುಳಿತು ಸಾಯುವವರೆಗೆ ಉಪವಾಸಮಾಡುತ್ತೇನೆ. ನೀವು ಮನೆಗೆ ಹೋಗಿ. ನನ್ನ ಸಹೋದರರೆಲ್ಲರೂ ಕೂಡ ಪುರದ ಕಡೆ ಪ್ರಯಾಣಿಸಿ.
03238011a ಕರ್ಣಪ್ರಭೃತಯಶ್ಚೈವ ಸುಹೃದೋ ಬಾಂಧವಾಶ್ಚ ಯೇ|
03238011c ದುಃಶಾಸನಂ ಪುರಸ್ಕೃತ್ಯ ಪ್ರಯಾಂತ್ವದ್ಯ ಪುರಂ ಪ್ರತಿ||
ಕರ್ಣನೇ ಮೊದಲಾದ ಸುಹೃದಯರೂ ಬಾಂಧವರೂ ದುಃಶಾಸನನನ್ನು ಮುಂದಿಟ್ಟುಕೊಂಡು ಪುರದ ಕಡೆ ಪ್ರಯಾಣಿಸಲಿ.
03238012a ನ ಹ್ಯಹಂ ಪ್ರತಿಯಾಸ್ಯಾಮಿ ಪುರಂ ಶತ್ರುನಿರಾಕೃತಃ|
03238012c ಶತ್ರುಮಾನಾಪಹೋ ಭೂತ್ವಾ ಸುಹೃದಾಂ ಮಾನಕೃತ್ತಥಾ||
ಶತ್ರುಗಳ ಮಾನವನ್ನು ಅಪಹರಿಸಿದ ಮತ್ತು ಸುಹೃದರ ಮಾನವನ್ನು ಹೆಚ್ಚಿಸಿದ ನಾನು ಈಗ ಶತ್ರುಗಳಿಂದ ನಿರಾಕೃತನಾದುದರಿಂದ ಪುರಕ್ಕೆ ಹಿಂದಿರುಗುವುದಿಲ್ಲ.
03238013a ಸ ಸುಹೃಚ್ಚೋಕದೋ ಭೂತ್ವಾ ಶತ್ರೂಣಾಂ ಹರ್ಷವರ್ಧನಃ|
03238013c ವಾರಣಾಹ್ವಯಮಾಸಾದ್ಯ ಕಿಂ ವಕ್ಷ್ಯಾಮಿ ಜನಾಧಿಪಂ||
ಸುಹೃದಯರ ಶೋಕವನ್ನು ಹೆಚ್ಚಿಸಿದವನಾಗಿ ಮತ್ತು ಶತ್ರುಗಳ ಹರ್ಷವನ್ನು ಹೆಚ್ಚಿಸಿದ ನಾನು ವಾರಣಾಹ್ವಯಕ್ಕೆ ಬಂದು ಜನಾಧಿಪನಿಗೆ ಏನು ಹೇಳಲಿ?
03238014a ಭೀಷ್ಮೋ ದ್ರೋಣಃ ಕೃಪೋ ದ್ರೌಣಿರ್ವಿದುರಃ ಸಂಜಯಸ್ತಥಾ|
03238014c ಬಾಹ್ಲೀಕಃ ಸೋಮದತ್ತಶ್ಚ ಯೇ ಚಾನ್ಯೇ ವೃದ್ಧಸಮ್ಮತಾಃ||
03238015a ಬ್ರಾಹ್ಮಣಾಃ ಶ್ರೇಣಿಮುಖ್ಯಾಶ್ಚ ತಥೋದಾಸೀನವೃತ್ತಯಃ|
03238015c ಕಿಂ ಮಾಂ ವಕ್ಷ್ಯಂತಿ ಕಿಂ ಚಾಪಿ ಪ್ರತಿವಕ್ಷ್ಯಾಮಿ ತಾನಹಂ||
ಭೀಷ್ಮ, ದ್ರೋಣ, ಕೃಪ, ದ್ರೌಣಿ, ವಿದುರ, ಸಂಜಯ, ಬಾಹ್ಲೀಕ, ಸೋಮದತ್ತ ಮತ್ತು ವೃದ್ಧರಿಂದ ಗೌರವಿಸಲ್ಪಟ್ಟ ಇತರರು, ಬ್ರಾಹ್ಮಣರು, ಶ್ರೇಣಿಮುಖ್ಯರು, ಮತ್ತು ತಮ್ಮದೇ ವೃತ್ತಿಯಲ್ಲಿರುವವರು - ಇವರೆಲ್ಲರೂ ನನಗೆ ಏನು ಹೇಳಬಹುದು ಮತ್ತು ನಾನು ಅವರಿಗೆ ಏನು ಉತ್ತರಿಸಿಯೇನು?
03238016a ರಿಪೂಣಾಂ ಶಿರಸಿ ಸ್ಥಿತ್ವಾ ತಥಾ ವಿಕ್ರಮ್ಯ ಚೋರಸಿ|
03238016c ಆತ್ಮದೋಷಾತ್ಪರಿಭ್ರಷ್ಟಃ ಕಥಂ ವಕ್ಷ್ಯಾಮಿ ತಾನಹಂ||
ರಿಪುಗಳ ತಲೆಯನ್ನು ತುಳಿದು ಅವರ ಎದೆಯ ಮೇಲೆ ನಡೆದ ನಾನು ನನ್ನದೇ ತಪ್ಪಿನಿಂದ ಪರಿಭ್ರಷ್ಟನಾದೆನೆಂದು ಅವರಿಗೆ ಹೇಗೆ ಹೇಳಲಿ?
03238017a ದುರ್ವಿನೀತಾಃ ಶ್ರಿಯಂ ಪ್ರಾಪ್ಯ ವಿದ್ಯಾಮೈಶ್ವರ್ಯಮೇವ ಚ|
03238017c ತಿಷ್ಠಂತಿ ನ ಚಿರಂ ಭದ್ರೇ ಯಥಾಹಂ ಮದಗರ್ವಿತಃ||
ನನ್ನಂಥ ಮದಗರ್ವಿತ ದುರ್ವಿನೀತರು ಶ್ರೀ, ವಿದ್ಯೆ, ಮತ್ತು ಐಶ್ವರ್ಯಗಳನ್ನು ಹೊಂದಿ ಬಹುಕಾಲ ಇಟ್ಟುಕೊಳ್ಳುವುದಿಲ್ಲ.
03238018a ಅಹೋ ಬತ ಯಥೇದಂ ಮೇ ಕಷ್ಟಂ ದುಶ್ಚರಿತಂ ಕೃತಂ|
03238018c ಸ್ವಯಂ ದುರ್ಬುದ್ಧಿನಾ ಮೋಹಾದ್ಯೇನ ಪ್ರಾಪ್ತೋಽಸ್ಮಿ ಸಂಶಯಂ||
ಅಯ್ಯೋ! ನಾನು ಇದೆಂಥಹ ಕಷ್ಟ ದುಶ್ಚರಿತವನ್ನು ಮಾಡಿಬಿಟ್ಟೆ! ಸ್ವಯಂ ದುರ್ಬುದ್ಧಿ ಮೋಹದಿಂದ ಇದನ್ನು ಪಡೆದೆ ಎನ್ನುವುದರಲ್ಲಿ ಸಂಶಯವಿಲ್ಲ.
03238019a ತಸ್ಮಾತ್ಪ್ರಾಯಮುಪಾಸಿಷ್ಯೇ ನ ಹಿ ಶಕ್ಷ್ಯಾಮಿ ಜೀವಿತುಂ|
03238019c ಚೇತಯಾನೋ ಹಿ ಕೋ ಜೀವೇತ್ಕೃಚ್ಚ್ರಾಚ್ಚತ್ರುಭಿರುದ್ಧೃತಃ||
ಆದುದರಿಂದ ಪ್ರಾಯದಲ್ಲಿ ಕುಳಿತುಕೊಳ್ಳುತ್ತೇನೆ. ಜೀವಿಸಲು ಶಕ್ತನಾಗಿಲ್ಲ. ಚೇತನವಿರುವ ಯಾರು ತಾನೇ ಕಷ್ಟದಲ್ಲಿ ಶತ್ರುವಿನಿಂದ ಜೀವ ಉಳಿಸಿಕೊಂಡು ಜೀವಿಸಿರುತ್ತಾನೆ?
03238020a ಶತ್ರುಭಿಶ್ಚಾವಹಸಿತೋ ಮಾನೀ ಪೌರುಷವರ್ಜಿತಃ|
03238020c ಪಾಂಡವೈರ್ವಿಕ್ರಮಾಢ್ಯೈಶ್ಚ ಸಾವಮಾನಮವೇಕ್ಷಿತಃ||
ಮಾನಿಯಾದ ನನ್ನನ್ನು ಶತ್ರುಗಳು ಅಣಗಿಸಿದ್ದಾರೆ. ನನ್ನಿಂದ ಪುರುಷತ್ವವನ್ನು ತೆಗೆದುಹಾಕಿದ್ದಾರೆ. ವಿಕ್ರಮಾಢ್ಯರಾದ ಪಾಂಡವರು ನನ್ನನ್ನು ಕೀಳಾಗಿ ಕಂಡಿದ್ದಾರೆ.””
03238021 ವೈಶಂಪಾಯನ ಉವಾಚ|
03238021a ಏವಂ ಚಿಂತಾಪರಿಗತೋ ದುಃಶಾಸನಮಥಾಬ್ರವೀತ್|
03238021c ದುಃಶಾಸನ ನಿಬೋಧೇದಂ ವಚನಂ ಮಮ ಭಾರತ||
ವೈಶಂಪಾಯನನು ಹೇಳಿದನು: “ಹೀಗೆ ಚಿಂತಾಪರನಾಗಿ ದುಃಶಾಸನನಿಗೆ ಹೇಳಿದನು: “ಭಾರತ! ದುಃಶಾಸನ! ನನ್ನ ಈ ಮಾತನ್ನು ಕೇಳು.
03238022a ಪ್ರತೀಚ್ಚ ತ್ವಂ ಮಯಾ ದತ್ತಮಭಿಷೇಕಂ ನೃಪೋ ಭವ|
03238022c ಪ್ರಶಾಧಿ ಪೃಥಿವೀಂ ಸ್ಫೀತಾಂ ಕರ್ಣಸೌಬಲಪಾಲಿತಾಂ||
ನಾನು ನೀಡುವ ಅಭಿಷೇಕವನ್ನು ಸ್ವೀಕರಿಸು. ನೃಪನಾಗು. ಕರ್ಣ-ಸೌಬಲರಿಂದ ರಕ್ಷಿತವಾದ ಈ ಸಮೃದ್ಧ ಭೂಮಿಯನ್ನು ಆಳು.
03238023a ಭ್ರಾತೄನ್ಪಾಲಯ ವಿಸ್ರಬ್ಧಂ ಮರುತೋ ವೃತ್ರಹಾ ಯಥಾ|
03238023c ಬಾಂಧವಾಸ್ತ್ವೋಪಜೀವಂತು ದೇವಾ ಇವ ಶತಕ್ರತುಂ|
ವೃತ್ರಹನು ಮರುತರನ್ನು ಹೇಗೋ ಹಾಗೆ ತಮ್ಮಂದಿರನ್ನು ಘನತೆಯಿಂದ ಪಾಲಿಸು. ದೇವತೆಗಳು ಶತಕ್ರತುವಿನ ಮೇಲೆ ಹೇಗೋ ಹಾಗೆ ಬಾಂಧವರು ನಿನ್ನಿಂದ ಉಪಜೀವನವನ್ನು ಪಡೆಯಲಿ.
03238024a ಬ್ರಾಹ್ಮಣೇಷು ಸದಾ ವೃತ್ತಿಂ ಕುರ್ವೀಥಾಶ್ಚಾಪ್ರಮಾದತಃ|
03238024c ಬಂಧೂನಾಂ ಸುಹೃದಾಂ ಚೈವ ಭವೇಥಾಸ್ತ್ವಂ ಗತಿಃ ಸದಾ||
ತಪ್ಪದೇ ಸದಾ ಬ್ರಾಹ್ಮಣರ ವೃತ್ತಿಯನ್ನು ನಡೆಸುತ್ತಿರು. ಸದಾ ಬಂಧುಗಳ ಮತ್ತು ಸುಹೃದಯರ ಗತಿಯಾಗಿರು.
03238025a ಜ್ಞಾತೀಂಶ್ಚಾಪ್ಯನುಪಶ್ಯೇಥಾ ವಿಷ್ಣುರ್ದೇವಗಣಾನಿವ|
03238025c ಗುರವಃ ಪಾಲನೀಯಾಸ್ತೇ ಗಚ್ಚ ಪಾಲಯ ಮೇದಿನೀಂ||
ವಿಷ್ಣುವು ದೇವಗಣವನ್ನು ನೋಡಿಕೊಳ್ಳುವಂತೆ ನಿನ್ನ ಕುಲದವರನ್ನು ನೋಡಿಕೋ! ಹಿರಿಯರನ್ನು ಪಾಲಿಸು. ಹೋಗು! ಮೇದಿನಿಯನ್ನು ಪಾಲಿಸು.
03238026a ನಂದಯನ್ಸುಹೃದಃ ಸರ್ವಾಂ ಶಾತ್ರವಾಂಶ್ಚಾವಭರ್ತ್ಸಯನ್|
03238026c ಕಂಠೇ ಚೈನಂ ಪರಿಷ್ವಜ್ಯ ಗಮ್ಯತಾಮಿತ್ಯುವಾಚ ಹ||
ಸುಹೃದರೆಲ್ಲರನ್ನೂ ಸಂತೋಷಗೊಳಿಸುತ್ತಾ ಮತ್ತು ಶತ್ರುಗಳನ್ನು ಬೆದರಿಸುತ್ತಿರು.” ಅವನ ಕುತ್ತಿಗೆಯನ್ನು ಹಿಡಿದು ಬಿಗಿದಪ್ಪಿ “ಹೋಗು!” ಎಂದು ಹೇಳಿದನು.
03238027a ತಸ್ಯ ತದ್ವಚನಂ ಶ್ರುತ್ವಾ ದೀನೋ ದುಃಶಾಸನೋಽಬ್ರವೀತ್|
03238027c ಅಶ್ರುಕಂಠಃ ಸುದುಃಖಾರ್ತಃ ಪ್ರಾಂಜಲಿಃ ಪ್ರಣಿಪತ್ಯ ಚ|
03238027e ಸಗದ್ಗದಮಿದಂ ವಾಕ್ಯಂ ಭ್ರಾತರಂ ಜ್ಯೇಷ್ಠಮಾತ್ಮನಃ||
ಅವನ ಆ ವಚನವನ್ನು ಕೇಳಿ ದೀನನಾದ ದುಃಶಾಸನನು, ಕಂಠದಲ್ಲಿ ಕಣ್ಣೀರನ್ನು ತುಂಬಿಕೊಂಡು, ತುಂಬಾ ದುಃಖಾರ್ತನಾಗಿ, ಕೈಮುಗಿದು, ತನ್ನ ಹಿರಿಯ ಅಣ್ಣನ ಕಾಲಿಗೆ ಬಿದ್ದು, ಗದ್ಗದಭರಿತ ಈ ಮಾತನ್ನು ಹೇಳಿದನು.
03238028a ಪ್ರಸೀದೇತ್ಯಪತದ್ಭೂಮೌ ದೂಯಮಾನೇನ ಚೇತಸಾ|
03238028c ದುಃಖಿತಃ ಪಾದಯೋಸ್ತಸ್ಯ ನೇತ್ರಜಂ ಜಲಮುತ್ಸೃಜನ್||
“ಪ್ರಸೀದ!” ಎಂದು ಹೇಳಿ ಚೇತನವೇ ಕುಂದಿ ಅವನು ಭೂಮಿಯ ಮೇಲೆ ಬಿದ್ದನು. ದುಃಖಿತನಾಗಿ ಅವನ ಪಾದಗಳನ್ನು ಕಣ್ಣೀರಿನಿಂದ ತೊಳೆದನು.
03238029a ಉಕ್ತವಾಂಶ್ಚ ನರವ್ಯಾಘ್ರೋ ನೈತದೇವಂ ಭವಿಷ್ಯತಿ|
03238029c ವಿದೀರ್ಯೇತ್ಸನಗಾ ಭೂಮಿರ್ದ್ಯೌಶ್ಚಾಪಿ ಶಕಲೀಭವೇತ್|
03238029e ರವಿರಾತ್ಮಪ್ರಭಾಂ ಜಹ್ಯಾತ್ಸೋಮಃ ಶೀತಾಂಶುತಾಂ ತ್ಯಜೇತ್||
ಆಗ ಆ ನರವ್ಯಾಘ್ರನು ಪುನಃ ಹೇಳಿದನು: “ಹೀಗೆ ಎಂದೂ ಆಗುವುದಿಲ್ಲ! ಭೂಮಿಯು ಸೀಳಬಹುದು, ಸ್ವರ್ಗದ ಮಳಿಗೆಯು ಚೂರಾಗಿ ಕೆಳಗೆ ಬೀಳಬಹುದು, ಸೂರ್ಯನು ತನ್ನ ಪ್ರಭೆಯನ್ನು ತೊರೆದಾನು, ಚಂದ್ರನು ತನ್ನ ಶೀತಾಂಶುವನ್ನು ತ್ಯಜಿಸಿಯಾನು!
03238030a ವಾಯುಃ ಶೈಘ್ರ್ಯಮಥೋ ಜಹ್ಯಾದ್ಧಿಮವಾಂಶ್ಚ ಪರಿವ್ರಜೇತ್|
03238030c ಶುಷ್ಯೇತ್ತೋಯಂ ಸಮುದ್ರೇಷು ವಹ್ನಿರಪ್ಯುಷ್ಣತಾಂ ತ್ಯಜೇತ್||
ವಾಯುವು ತನ್ನ ವೇಗವನ್ನು ಕಡಿಮೆಮಾಡಿಯಾನು, ಹಿಮಾಲಯವು ತನ್ನ ಸ್ಥಳವನ್ನು ಬದಲಾಯಿಸಬಹುದು, ಸಮುದ್ರಗಳ ನೀರು ಬತ್ತಿಹೋಗಬಹುದು, ಮತ್ತು ಅಗ್ನಿಯು ಉಷ್ಣತೆಯನ್ನು ತ್ಯಜಿಸಬಹುದು.
03238031a ನ ಚಾಹಂ ತ್ವದೃತೇ ರಾಜನ್ಪ್ರಶಾಸೇಯಂ ವಸುಂಧರಾಂ|
03238031c ಪುನಃ ಪುನಃ ಪ್ರಸೀದೇತಿ ವಾಕ್ಯಂ ಚೇದಮುವಾಚ ಹ|
ಆದರೆ, ರಾಜನ್! ನೀನಿಲ್ಲದೇ ನಾನು ಈ ಭೂಮಿಯನ್ನು ಆಳುವುದಿಲ್ಲ!” ಪುನಃ ಪುನಃ “ಪ್ರಸೀದ!” ಎಂದು ಹೇಳುತ್ತಾ ಈ ಮಾತನ್ನಾಡಿದನು.
03238031e ತ್ವಮೇವ ನಃ ಕುಲೇ ರಾಜಾ ಭವಿಷ್ಯಸಿ ಶತಂ ಸಮಾಃ||
03238032a ಏವಮುಕ್ತ್ವಾ ಸ ರಾಜೇಂದ್ರ ಸಸ್ವನಂ ಪ್ರರುರೋದ ಹ|
03238032c ಪಾದೌ ಸಂಗೃಹ್ಯ ಮಾನಾರ್ಹೌ ಭ್ರಾತುರ್ಜ್ಯೇಷ್ಠಸ್ಯ ಭಾರತ||
“ನಮ್ಮ ಕುಲದಲ್ಲಿ ನೀನೇ ನೂರುವರ್ಷಗಳು ರಾಜನಾಗಿರುತ್ತೀಯೆ!” ರಾಜೇಂದ್ರ! ಭಾರತ! ಹೀಗೆ ಹೇಳಿ ಅವನು ಮಾನಾರ್ಹನಾದ ಹಿರಿಯಣ್ಣನ ಪಾದಗಳನ್ನು ಹಿಡಿದು ಜೋರಾಗಿ ಅತ್ತನು.
03238033a ತಥಾ ತೌ ದುಃಖಿತೌ ದೃಷ್ಟ್ವಾ ದುಃಶಾಸನಸುಯೋಧನೌ|
03238033c ಅಭಿಗಮ್ಯ ವ್ಯಥಾವಿಷ್ಟಃ ಕರ್ಣಸ್ತೌ ಪ್ರತ್ಯಭಾಷತ||
ಆಗ ದುಃಶಾಸನ-ಸುಯೋಧನರಿಬ್ಬರೂ ದುಃಖಿತರಾಗಿದುದನ್ನು ನೋಡಿ ವ್ಯಥೆಯಿಂದ ತುಂಬಿದ್ದ ಅವರ ಬಳಿ ಬಂದು ಕರ್ಣನು ಹೇಳಿದನು.
03238034a ವಿಷೀದಥಃ ಕಿಂ ಕೌರವ್ಯೌ ಬಾಲಿಶ್ಯಾತ್ಪ್ರಾಕೃತಾವಿವ|
03238034c ನ ಶೋಕಃ ಶೋಚಮಾನಸ್ಯ ವಿನಿವರ್ತೇತ ಕಸ್ಯ ಚಿತ್||
“ಕೌರವರೇ! ಸಾಮಾನ್ಯ ಜನರಂತೆ ಹೀಗೆ ಏಕೆ ಬಾಲತನದಿಂದ ಶೋಕಿಸುತ್ತಿರುವಿರಿ? ಶೋಕಿಸುವುದರಿಂದ ಶೋಕಿಸುತ್ತಿರುವವನ ಶೋಕವು ಕಡಿಮೆಯೇನೂ ಆಗುವುದಿಲ್ಲ.
03238035a ಯದಾ ಚ ಶೋಚತಃ ಶೋಕೋ ವ್ಯಸನಂ ನಾಪಕರ್ಷತಿ|
03238035c ಸಾಮರ್ಥ್ಯಂ ಕಿಂ ತ್ವತಃ ಶೋಕೇ ಶೋಚಮಾನೌ ಪ್ರಪಶ್ಯಥಃ|
ಯಾವಾಗ ಶೋಕಿಸುವುದರಿಂದ ಶೋಕವು ಕಡಿಮೆಯಾಗುವುದಿಲ್ಲವೋ ಆಗ ಶೋಕಿಸುವುದರಿಂದ ಶೋಕಿಸುವವನು ಏನು ಲಾಭವನ್ನು ಪಡೆಯಲು ಸಾಧ್ಯ?
03238035e ಧೃತಿಂ ಗೃಹ್ಣೀತ ಮಾ ಶತ್ರೂಂ ಶೋಚಂತೌ ನಂದಯಿಷ್ಯಥಃ||
03238036a ಕರ್ತವ್ಯಂ ಹಿ ಕೃತಂ ರಾಜನ್ಪಾಂಡವೈಸ್ತವ ಮೋಕ್ಷಣಂ|
ಧೃತಿಯನ್ನು ತೆಗೆದುಕೊಳ್ಳಿ! ಹೀಗೆ ಶೋಕಿಸಿ ಶತ್ರುಗಳನ್ನು ಸಂತೋಷಗೊಳಿಸಬೇಡಿ! ರಾಜನ್! ಪಾಂಡವರು ನಿನ್ನನ್ನು ಬಿಡಿಸಿ ತಮ್ಮ ಕರ್ತವ್ಯವನ್ನು ಮಾತ್ರ ಮಾಡಿದ್ದಾರೆ.
03238036c ನಿತ್ಯಮೇವ ಪ್ರಿಯಂ ಕಾರ್ಯಂ ರಾಜ್ಞೋ ವಿಷಯವಾಸಿಭಿಃ|
03238036e ಪಾಲ್ಯಮಾನಾಸ್ತ್ವಯಾ ತೇ ಹಿ ನಿವಸಂತಿ ಗತಜ್ವರಾಃ||
ರಾಜನ ರಾಜ್ಯದೊಳಗಿರುವವರು ನಿತ್ಯವೂ ಅವನಿಗೆ ಪ್ರಿಯವಾದ ಕಾರ್ಯವನ್ನು ಮಾಡಬೇಕು. ನಿನ್ನಿಂದಲೇ ಪಾಲನೆಗೊಂಡು ತಾನೇ ಅವರು ಭಯವಿಲ್ಲದೇ ವಾಸಿಸುತ್ತಿದ್ದಾರೆ?
03238037a ನಾರ್ಹಸ್ಯೇವಂಗತೇ ಮನ್ಯುಂ ಕರ್ತುಂ ಪ್ರಾಕೃತವದ್ಯಥಾ|
03238037c ವಿಷಣ್ಣಾಸ್ತವ ಸೋದರ್ಯಾಸ್ತ್ವಯಿ ಪ್ರಾಯಂ ಸಮಾಸ್ಥಿತೇ|
03238037e ಉತ್ತಿಷ್ಠ ವ್ರಜ ಭದ್ರಂ ತೇ ಸಮಾಶ್ವಾಸಯ ಸೋದರಾನ್||
ಸಾಮಾನ್ಯರಂತೆ ಈ ರೀತಿ ದುಃಖಪಡುವುದಕ್ಕೆ ನೀನು ಅನರ್ಹ. ಪ್ರಾಯದಲ್ಲಿ ಕುಳಿತಿರುವ ನಿನ್ನನ್ನು ನೋಡಿ ನಿನ್ನ ಸೋದರರು ವಿಷಣ್ಣರಾಗಿದ್ದಾರೆ. ನಿನಗೆ ಮಂಗಳವಾಗಲಿ! ಎದ್ದೇಳು! ಸೋದರರಿಗೆ ಅಶ್ವಾಸನೆಯನ್ನು ನೀಡು.
03238038a ರಾಜನ್ನದ್ಯಾವಗಚ್ಚಾಮಿ ತವೇಹ ಲಘುಸತ್ತ್ವತಾಂ|
03238038c ಕಿಮತ್ರ ಚಿತ್ರಂ ಯದ್ವೀರ ಮೋಕ್ಷಿತಃ ಪಾಂಡವೈರಸಿ|
03238038e ಸದ್ಯೋ ವಶಂ ಸಮಾಪನ್ನಃ ಶತ್ರೂಣಾಂ ಶತ್ರುಕರ್ಶನ||
ರಾಜನ್! ಇಂದಿನ ಈ ನಡತೆಯು ಕಡಿಮೆ ಸತ್ವದ್ದು ಎಂದೆನಿಸುತ್ತಿದೆ. ವೀರ! ಶತ್ರುಕರ್ಶನ! ಶತ್ರುಗಳ ವಶಕ್ಕೆ ಸಿಲುಕಿದ ನಿನ್ನನ್ನು ಪಾಂಡವರು ಬಿಡಿಸಿದರು ಎನ್ನುವುದರಲ್ಲಿ ವಿಶೇಷವೇನಿದೆ?
03238039a ಸೇನಾಜೀವೈಶ್ಚ ಕೌರವ್ಯ ತಥಾ ವಿಷಯವಾಸಿಭಿಃ|
03238039c ಅಜ್ಞಾತೈರ್ಯದಿ ವಾ ಜ್ಞಾತೈಃ ಕರ್ತವ್ಯಂ ನೃಪತೇಃ ಪ್ರಿಯಂ||
ಕೌರವ! ಸೇನಾಜೀವನನ್ನು ನಡೆಸುವವರು, ಅವರು ರಾಜನಿಗೆ ಗೊತ್ತಿದ್ದವರಿರಲಿ ಅಥವಾ ಗೊತ್ತಿಲ್ಲದೇ ಇರುವವರು ಇರಲಿ, ರಾಜ್ಯದಲ್ಲಿ ವಾಸಿಸುವವರು ರಾಜನಿಗೆ ಪ್ರಿಯವಾದುದನ್ನು ಮಾಡುವುದು ಕರ್ತವ್ಯ.
03238040a ಪ್ರಾಯಃ ಪ್ರಧಾನಾಃ ಪುರುಷಾಃ ಕ್ಷೋಭಯಂತ್ಯರಿವಾಹಿನೀಂ|
03238040c ನಿಗೃಹ್ಯಂತೇ ಚ ಯುದ್ಧೇಷು ಮೋಕ್ಷ್ಯಂತೇ ಚ ಸ್ವಸೈನಿಕೈಃ||
ಎಷ್ಟೋ ಬಾರಿ ಅರಿವಾಹಿನಿಯನ್ನು ಸದೆಬಡಿಯುವ ಪ್ರಧಾನ ಪುರುಷರು ಯುದ್ಧದಲ್ಲಿ ಅವರಿಂದ ಗೆಲ್ಲಲ್ಪಡಲು, ತನ್ನದೇ ಸೈನಿಕರಿಂದ ಬಿಡುಗಡೆಗೊಳ್ಳುತ್ತಾರೆ.
03238041a ಸೇನಾಜೀವಾಶ್ಚ ಯೇ ರಾಜ್ಞಾಂ ವಿಷಯೇ ಸಂತಿ ಮಾನವಾಃ|
03238041c ತೈಃ ಸಂಗಮ್ಯ ನೃಪಾರ್ಥಾಯ ಯತಿತವ್ಯಂ ಯಥಾತಥಂ||
ರಾಜ್ಯದಲ್ಲಿ ವಾಸಿಸುವ ಸೇನಾಜೀವನವನ್ನು ಮಾಡುವ ಮಾನವರು ನೃಪನಿಗಾಗಿ ಎಷ್ಟಾಗುತ್ತದೆಯೋ ಅಷ್ಟು ಪ್ರಯತ್ನವನ್ನು ಮಾಡಬೇಕು.
03238042a ಯದ್ಯೇವಂ ಪಾಂಡವೈ ರಾಜನ್ಭವದ್ವಿಷಯವಾಸಿಭಿಃ|
03238042c ಯದೃಚ್ಚಯಾ ಮೋಕ್ಷಿತೋಽದ್ಯ ತತ್ರ ಕಾ ಪರಿದೇವನಾ||
ಆದುದರಿಂದ ರಾಜನ್! ನಿನ್ನ ರಾಜ್ಯದಲ್ಲಿ ವಾಸಿಸುತ್ತಿರುವ ಪಾಂಡವರು ಇಂದು ನಿನ್ನನ್ನು ಬಿಡಿಸಿದ್ದರೆ ಅದರಲ್ಲಿ ದುಃಖಪಡುವ ವಿಷಯವಾದರೂ ಏನಿದೆ?
03238043a ನ ಚೈತತ್ಸಾಧು ಯದ್ರಾಜನ್ಪಾಂಡವಾಸ್ತ್ವಾಂ ನೃಪೋತ್ತಮ|
03238043c ಸ್ವಸೇನಯಾ ಸಂಪ್ರಯಾಂತಂ ನಾನುಯಾಂತಿ ಸ್ಮ ಪೃಷ್ಠತಃ||
ರಾಜನ್! ನೃಪೋತ್ತಮ! ನೀನು ನಿನ್ನ ಸೇನೆಯ ಮುಂದೆ ನಿಂತು ಯುದ್ಧಮಾಡುವಾಗಲೇ ಪಾಂಡವರು ನಿನ್ನನ್ನು ಕೂಡಿ ಹೋರಾಡದೇ ಇದ್ದುದು ಸರಿಯಲ್ಲ.
03238044a ಶೂರಾಶ್ಚ ಬಲವಂತಶ್ಚ ಸಂಯುಗೇಷ್ವಪಲಾಯಿನಃ|
03238044c ಭವತಸ್ತೇ ಸಭಾಯಾಂ ವೈ ಪ್ರೇಷ್ಯತಾಂ ಪೂರ್ವಮಾಗತಾಃ||
ಈ ಹಿಂದೆ ಪಾಂಡವರು ಸಭೆಯಲ್ಲಿ ನಿನ್ನ ದಾಸರಾಗಿ ನಿನ್ನ ಅಧಿಕಾರದಡಿಯಲ್ಲಿ ಬಂದಿದ್ದರು. ಆದುದರಿಂದ ಶೂರರಾದ, ಬಲವಂತರಾದ ಮತ್ತು ಯುದ್ಧದಲ್ಲಿ ಪಲಾಯನ ಮಾಡಲಾರದ ಅವರು ಈಗ ನಿನ್ನ ಸಹಾಯಮಾಡಲೇ ಬೇಕಿತ್ತು.
03238045a ಪಾಂಡವೇಯಾನಿ ರತ್ನಾನಿ ತ್ವಮದ್ಯಾಪ್ಯುಪಭುಂಜಸೇ|
03238045c ಸತ್ತ್ವಸ್ಥಾನ್ಪಾಂಡವಾನ್ಪಶ್ಯ ನ ತೇ ಪ್ರಾಯಮುಪಾವಿಶನ್|
03238045e ಉತ್ತಿಷ್ಠ ರಾಜನ್ಭದ್ರಂ ತೇ ನ ಚಿಂತಾಂ ಕರ್ತುಮರ್ಹಸಿ||
ಪಾಂಡವರ ರತ್ನಗಳನ್ನು ಇಂದು ನೀನು ಅನುಭೋಗಿಸುತ್ತಿದ್ದೀಯೆ. ಆದರೆ ಸತ್ವಸ್ಥರಾದ ಪಾಂಡವರು ಪ್ರಾಯವನ್ನು ಪ್ರವೇಶಿಸಲಿಲ್ಲ ನೋಡು! ಎದ್ದೇಳು ರಾಜನ್! ನಿನಗೆ ಮಂಗಳವಾಗಲಿ! ಚಿಂತೆಯನ್ನು ಮಾಡಬೇಕಾಗಿಲ್ಲ.
03238046a ಅವಶ್ಯಮೇವ ನೃಪತೇ ರಾಜ್ಞೋ ವಿಷಯವಾಸಿಭಿಃ|
03238046c ಪ್ರಿಯಾಣ್ಯಾಚರಿತವ್ಯಾನಿ ತತ್ರ ಕಾ ಪರಿದೇವನಾ||
ನೃಪತೇ! ರಾಜನ ರಾಜ್ಯದಲ್ಲಿ ವಾಸಿಸುವವರು ರಾಜನಿಗೆ ಪ್ರಿಯವಾಗಿ ನಡೆದುಕೊಂಡರೆ ಅದರಲ್ಲಿ ದುಃಖಿಸುವುದೇನಿದೆ?
03238047a ಮದ್ವಾಕ್ಯಮೇತದ್ರಾಜೇಂದ್ರ ಯದ್ಯೇವಂ ನ ಕರಿಷ್ಯಸಿ|
03238047c ಸ್ಥಾಸ್ಯಾಮೀಹ ಭವತ್ಪಾದೌ ಶುಶ್ರೂಷನ್ನರಿಮರ್ದನ||
ರಾಜೇಂದ್ರ! ಅರಿಮರ್ದನ! ನನ್ನ ಈ ಮಾತಿನಂತೆ ಮಾಡದೇ ಇದ್ದರೆ ನಿನ್ನ ಪಾದಗಳಲ್ಲಿ ಶುಶ್ರೂಷೆ ಮಾಡುತ್ತಾ ನಾನು ಇಲ್ಲಿಯೇ ನಿಲ್ಲುತ್ತೇನೆ.
03238048a ನೋತ್ಸಹೇ ಜೀವಿತುಮಹಂ ತ್ವದ್ವಿಹೀನೋ ನರರ್ಷಭ|
03238048c ಪ್ರಾಯೋಪವಿಷ್ಟಸ್ತು ನೃಪ ರಾಜ್ಞಾಂ ಹಾಸ್ಯೋ ಭವಿಷ್ಯಸಿ||
ನರರ್ಷಭ! ನೀನಿಲ್ಲದೇ ಜೀವಿಸಲು ನನಗೆ ಉತ್ಸಾಹವಿಲ್ಲ. ನೃಪ! ಪ್ರಾಯಕ್ಕೆ ಕುಳಿತುಕೊಳ್ಳುವ ರಾಜನು ಹಾಸ್ಯಾಸ್ಪದಕ್ಕೊಳಗಾಗುತ್ತಾನೆ.””
03238049 ವೈಶಂಪಾಯನ ಉವಾಚ|
03238049a ಏವಮುಕ್ತಸ್ತು ಕರ್ಣೇನ ರಾಜಾ ದುರ್ಯೋಧನಸ್ತದಾ|
03238049c ನೈವೋತ್ಥಾತುಂ ಮನಶ್ಚಕ್ರೇ ಸ್ವರ್ಗಾಯ ಕೃತನಿಶ್ಚಯಃ||
ವೈಶಂಪಾಯನನು ಹೇಳಿದನು: “ಕರ್ಣನು ಹೀಗೆ ಹೇಳಲು ರಾಜಾ ದುರ್ಯೋಧನನು ಸ್ವರ್ಗದ ಕುರಿತು ನಿಶ್ಚಯಿಸಿ ಮೇಲೇಳಬಾರದೆಂದು ಮನಸ್ಸು ಮಾಡಿದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಪ್ರಾಯೋಪವೇಶೇ ಅಷ್ಟತ್ರಿಂಶದಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಪ್ರಾಯೋಪವೇಶದಲ್ಲಿ ಇನ್ನೂರಾಮೂವತ್ತೆಂಟನೆಯ ಅಧ್ಯಾಯವು.
