|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
Contents
Toggleದ್ರೋಣ ಪರ್ವ: ನಾರಾಯಣಾಸ್ತ್ರಮೋಕ್ಷ ಪರ್ವ
೧೬೬
ಹದಿನೈದನೆಯ ದಿನ: ಅಶ್ವತ್ಥಾಮನ ಕ್ರೋಧ
ದ್ರೋಣನ ವಧೆಯ ನಂತರ ಅಶ್ವತ್ಥಾಮನು ಏನು ಮಾಡಿದನೆಂದು ಧೃತರಾಷ್ಟ್ರನು ಸಂಜಯನನ್ನು ಪ್ರಶ್ನಿಸಿದುದು (೧-೧೫). ತಂದೆಯ ಮರಣದ ಕುರಿತು ಕೇಳಿ ಕ್ರುದ್ಧನಾದ ಅಶ್ವತ್ಥಾಮನು ಮಹಾ ನಾರಾಯಣಾಸ್ತ್ರವನ್ನು ಪ್ರಯೋಗಿಸುವೆನೆಂದು ದುರ್ಯೋಧನನಿಗೆ ಹೇಳಿದುದು (೧೬-೬೦)
07166001 ಧೃತರಾಷ್ಟ್ರ ಉವಾಚ|
07166001a ಅಧರ್ಮೇಣ ಹತಂ ಶ್ರುತ್ವಾ ಧೃಷ್ಟದ್ಯುಮ್ನೇನ ಸಂಜಯ|
07166001c ಬ್ರಾಹ್ಮಣಂ ಪಿತರಂ ವೃದ್ಧಮಶ್ವತ್ಥಾಮಾ ಕಿಮಬ್ರವೀತ್||
ಧೃತರಾಷ್ಟ್ರನು ಹೇಳಿದನು: “ಸಂಜಯ! ಧೃಷ್ಟದ್ಯುಮ್ನನಿಂದ ತನ್ನ ತಂದೆ ಬ್ರಾಹ್ಮಣ ವೃದ್ಧನು ಅಧರ್ಮದಿಂದ ಹತನಾದನೆಂದು ಕೇಳಿ ಅಶ್ವತ್ಥಾಮನು ಏನು ಹೇಳಿದನು?
07166002a ಮಾನುಷಂ ವಾರುಣಾಗ್ನೇಯಂ ಬ್ರಾಹ್ಮಮಸ್ತ್ರಂ ಚ ವೀರ್ಯವಾನ್|
07166002c ಐಂದ್ರಂ ನಾರಾಯಣಂ ಚೈವ ಯಸ್ಮಿನ್ನಿತ್ಯಂ ಪ್ರತಿಷ್ಠಿತಂ||
07166003a ತಮಧರ್ಮೇಣ ಧರ್ಮಿಷ್ಠಂ ಧೃಷ್ಟದ್ಯುಮ್ನೇನ ಸಂಜಯ|
07166003c ಶ್ರುತ್ವಾ ನಿಹತಮಾಚಾರ್ಯಮಶ್ವತ್ಥಾಮಾ ಕಿಮಬ್ರವೀತ್||
ಮಾನುಷ, ವಾರುಣ, ಆಗ್ನೇಯ, ಬ್ರಹ್ಮಾಸ್ತ್ರಗಳು, ಐಂದ್ರ ಮತ್ತು ನಾರಾಯಣಾಸ್ತ್ರಗಳು ನಿತ್ಯವೂ ಯಾರಲ್ಲಿ ಪ್ರತಿಷ್ಠಿತವಾಗಿದ್ದವೋ ಆ ಧರ್ಮಿಷ್ಠ ಆಚಾರ್ಯನನ್ನು ಅಧರ್ಮದಿಂದ ಧೃಷ್ಟದ್ಯುಮ್ನನು ಕೊಂದನು ಎಂದು ಕೇಳಿ ವೀರ್ಯವಾನ್ ಅಶ್ವತ್ಥಾಮನು ಏನು ಹೇಳಿದನು?
07166004a ಯೇನ ರಾಮಾದವಾಪ್ಯೇಹ ಧನುರ್ವೇದಂ ಮಹಾತ್ಮನಾ|
07166004c ಪ್ರೋಕ್ತಾನ್ಯಸ್ತ್ರಾಣಿ ದಿವ್ಯಾನಿ ಪುತ್ರಾಯ ಗುರುಕಾಂಕ್ಷಿಣೇ||
ಅವನು ಮಹಾತ್ಮ ರಾಮನಿಂದ ಧನುರ್ವೇದವನ್ನು ಪಡೆದು ಮಗನನ್ನು ದೊಡ್ಡವನನ್ನಾಗಿ ಮಾಡಬೇಕೆಂದು ಬಯಸಿ ಅವನಿಗೆ ದಿವ್ಯ ಅಸ್ತ್ರಗಳನ್ನು ತಿಳಿಸಿಕೊಟ್ಟಿದ್ದನು.
07166005a ಏಕಮೇವ ಹಿ ಲೋಕೇಽಸ್ಮಿನ್ನಾತ್ಮನೋ ಗುಣವತ್ತರಂ|
07166005c ಇಚ್ಚಂತಿ ಪುತ್ರಂ ಪುರುಷಾ ಲೋಕೇ ನಾನ್ಯಂ ಕಥಂ ಚನ||
ಈ ಲೋಕದಲ್ಲಿ ಪುರುಷನು ತನಗಿಂತಲೂ ಮಗನು ಹೆಚ್ಚಿನ ಗುಣವಂತನಾಗಬೇಕೆಂದು ಬಯಸುತ್ತಾನೆಯೇ ಹೊರತು ಬೇರೆ ಏನನ್ನೂ ಬಯಸುವುದಿಲ್ಲ.
07166006a ಆಚಾರ್ಯಾಣಾಂ ಭವಂತ್ಯೇವ ರಹಸ್ಯಾನಿ ಮಹಾತ್ಮನಾಂ|
07166006c ತಾನಿ ಪುತ್ರಾಯ ವಾ ದದ್ಯುಃ ಶಿಷ್ಯಾಯಾನುಗತಾಯ ವಾ||
ಮಹಾತ್ಮ ಆಚಾರ್ಯರು ತಮ್ಮಲ್ಲಿರುವ ರಹಸ್ಯಗಳನ್ನು ತಮ್ಮ ಪುತ್ರನಿಗೆ ಅಥವಾ ಶುಶ್ರೂಷೆಮಾಡುವ ಶಿಷ್ಯರಿಗೆ ಕೊಟ್ಟಿರುತ್ತಾರೆ.
07166007a ಸ ಶಿಲ್ಪಂ ಪ್ರಾಪ್ಯ ತತ್ಸರ್ವಂ ಸವಿಶೇಷಂ ಚ ಸಂಜಯ|
07166007c ಶೂರಃ ಶಾರದ್ವತೀಪುತ್ರಃ ಸಂಖ್ಯೇ ದ್ರೋಣಾದನಂತರಃ||
ಆ ಎಲ್ಲ ಕುಶಲಗಳನ್ನು ವಿಶೇಷ ರಹಸ್ಯಗಳೊಂದಿಗೆ ಪಡೆದು ಶಾರದ್ವತೀಪುತ್ರನು ರಣದಲ್ಲಿ ದ್ರೋಣನ ನಂತರ ಶೂರನೆನಿಸಿಕೊಂಡಿರುವನು.
07166008a ರಾಮಸ್ಯಾನುಮತಃ ಶಾಸ್ತ್ರೇ ಪುರಂದರಸಮೋ ಯುಧಿ|
07166008c ಕಾರ್ತವೀರ್ಯಸಮೋ ವೀರ್ಯೇ ಬೃಹಸ್ಪತಿಸಮೋ ಮತೌ||
07166009a ಮಹೀಧರಸಮೋ ಧೃತ್ಯಾ ತೇಜಸಾಗ್ನಿಸಮೋ ಯುವಾ|
07166009c ಸಮುದ್ರ ಇವ ಗಾಂಭೀರ್ಯೇ ಕ್ರೋಧೇ ಸರ್ಪವಿಷೋಪಮಃ||
07166010a ಸ ರಥೀ ಪ್ರಥಮೋ ಲೋಕೇ ದೃಢಧನ್ವಾ ಜಿತಕ್ಲಮಃ|
07166010c ಶೀಘ್ರೋಽನಿಲ ಇವಾಕ್ರಂದೇ ಚರನ್ಕ್ರುದ್ಧ ಇವಾಂತಕಃ||
ಶಸ್ತ್ರವಿಧ್ಯೆಯಲ್ಲಿ ರಾಮನ ಸಮನಾದ, ಯುದ್ಧದಲ್ಲಿ ಪುರಂದರನ ಸಮನಾದ, ವೀರ್ಯದಲ್ಲಿ ಕಾರ್ತವೀರ್ಯನ ಸಮನಾದ, ಬುದ್ಧಿಯಲ್ಲಿ ಬೃಹಸ್ಪತಿಯ ಸಮನಾದ, ಧೃತಿಯಲ್ಲಿ ಮಹೀಧರೆಯ ಸಮನಾಗಿರುವ, ತೇಜಸ್ಸಿನಲ್ಲಿ ಅಗ್ನಿಯ ಸಮನಾಗಿರುವ, ಸಮುದ್ರದಂತೆ ಗಾಂಭೀರ್ಯವುಳ್ಳ, ಕ್ರೋಧದಲ್ಲಿ ಸರ್ಪದ ವಿಷದಂತಿರುವ ಆ ಯುವಕನು ಲೋಕದಲ್ಲಿ ಪ್ರಪ್ರಥಮ ರಥಿ. ದೃಢಧನ್ವಿ. ಶ್ರಮವನ್ನು ಜಯಿಸಿದವನು. ಅಂತಕನಂತೆ ಕ್ರುದ್ಧನಾಗಿ, ಅನಿಲನಂತೆ ಶೀಘ್ರವಾಗಿ ಸಂಚರಿಸುವವನು.
07166011a ಅಸ್ಯತಾ ಯೇನ ಸಂಗ್ರಾಮೇ ಧರಣ್ಯಭಿನಿಪೀಡಿತಾ|
07166011c ಯೋ ನ ವ್ಯಥತಿ ಸಂಗ್ರಾಮೇ ವೀರಃ ಸತ್ಯಪರಾಕ್ರಮಃ||
07166012a ವೇದಸ್ನಾತೋ ವ್ರತಸ್ನಾತೋ ಧನುರ್ವೇದೇ ಚ ಪಾರಗಃ|
07166012c ಮಹೋದಧಿರಿವಾಕ್ಷೋಭ್ಯೋ ರಾಮೋ ದಾಶರಥಿರ್ಯಥಾ||
ಅವನು ಸಂಗ್ರಾಮಕ್ಕೆ ತೊಡಗಲು ಭೂಮಿಯೇ ಪೀಡೆಗೊಳಗಾಗುತ್ತದೆ. ಆ ವೀರ ಸತ್ಯಪರಾಕ್ರಮನು ಸಂಗ್ರಾಮದಲ್ಲಿ ವ್ಯಥೆಪಡುವುದಿಲ್ಲ. ಅವನು ವೇದಸ್ನಾತ. ವ್ರತಸ್ನಾತ. ಧನುರ್ವೇದ ಪಾರಂಗತ. ದಾಶರಥಿ ರಾಮನಂತೆ, ಮಹಾಸಾಗರದಂತೆ ಶಾಂತನಾಗಿರುವವನು.
07166013a ತಮಧರ್ಮೇಣ ಧರ್ಮಿಷ್ಠಂ ಧೃಷ್ಟದ್ಯುಮ್ನೇನ ಸಂಯುಗೇ|
07166013c ಶ್ರುತ್ವಾ ನಿಹತಮಾಚಾರ್ಯಮಶ್ವತ್ಥಾಮಾ ಕಿಮಬ್ರವೀತ್||
ಅಂತಹ ಅಶ್ವತ್ಥಾಮನು ಸಂಯುಗದಲ್ಲಿ ಧರ್ಮಿಷ್ಠ ಆಚಾರ್ಯನು ಅಧರ್ಮಪೂರ್ವಕವಾಗಿ ಧೃಷ್ಟದ್ಯುಮ್ನನಿಂದ ಹತನಾದನೆಂದು ಕೇಳಿ ಏನು ಹೇಳಿದನು?
07166014a ಧೃಷ್ಟದ್ಯುಮ್ನಸ್ಯ ಯೋ ಮೃತ್ಯುಃ ಸೃಷ್ಟಸ್ತೇನ ಮಹಾತ್ಮನಾ|
07166014c ಯಥಾ ದ್ರೋಣಸ್ಯ ಪಾಂಚಾಲ್ಯೋ ಯಜ್ಞಸೇನಸುತೋಽಭವತ್||
ದ್ರೋಣನ ಮೃತ್ಯುವಾಗಿ ಪಾಂಚಾಲ ಯಜ್ಞಸೇನನಿಗೆ ಅವನು ಹೇಗೆ ಮಗನಾದನೋ ಹಾಗೆ ಧೃಷ್ಟದ್ಯುಮ್ನನ ಮೃತ್ಯುವಾಗಿ ಮಹಾತ್ಮ ದ್ರೋಣನು ಮಗನನ್ನು ಸೃಷ್ಟಿಸಿದ್ದನು.
07166015a ತಂ ನೃಶಂಸೇನ ಪಾಪೇನ ಕ್ರೂರೇಣಾತ್ಯಲ್ಪದರ್ಶಿನಾ|
07166015c ಶ್ರುತ್ವಾ ನಿಹತಮಾಚಾರ್ಯಮಶ್ವತ್ಥಾಮಾ ಕಿಮಬ್ರವೀತ್||
ಆ ನೃಶಂಸ, ಪಾಪಿ, ಕ್ರೂರಿ, ಅಲ್ಪದರ್ಶಿಯು ಆಚಾರ್ಯನನ್ನು ಕೊಂದನೆಂದು ಕೇಳಿ ಅಶ್ವತ್ಥಾಮನು ಏನು ಹೇಳಿದನು?”
07166016 ಸಂಜಯ ಉವಾಚ|
07166016a ಚದ್ಮನಾ ನಿಹತಂ ಶ್ರುತ್ವಾ ಪಿತರಂ ಪಾಪಕರ್ಮಣಾ|
07166016c ಬಾಷ್ಪೇಣಾಪೂರ್ಯತ ದ್ರೌಣೀ ರೋಷೇಣ ಚ ನರರ್ಷಭ||
ಸಂಜಯನು ಹೇಳಿದನು: “ನರರ್ಷಭ! ಪಾಪಕರ್ಮಿಯ ಮೋಸದಿಂದ ತನ್ನ ತಂದೆಯು ಹತನಾದನೆಂದು ಕೇಳಿ ದ್ರೌಣಿಯ ಕಣ್ಣುಗಳು ರೋಷದ ಕಣ್ಣೀರಿನಿಂದ ತುಂಬಿದವು.
07166017a ತಸ್ಯ ಕ್ರುದ್ಧಸ್ಯ ರಾಜೇಂದ್ರ ವಪುರ್ದಿವ್ಯಮದೃಶ್ಯತ|
07166017c ಅಂತಕಸ್ಯೇವ ಭೂತಾನಿ ಜಿಹೀರ್ಷೋಃ ಕಾಲಪರ್ಯಯೇ||
ರಾಜೇಂದ್ರ! ಪ್ರಳಯ ಕಾಲದಲ್ಲಿ ಪ್ರಾಣಿಗಳ ಅಸುವನ್ನು ಹೀರಿಕೊಳ್ಳುವ ಅಂತಕನೋಪಾದಿಯಲ್ಲಿ ಕ್ರುದ್ಧನಾದ ಅವನ ಶರೀರವು ದಿವ್ಯವಾಗಿ ಕಂಡಿತು.
07166018a ಅಶ್ರುಪೂರ್ಣೇ ತತೋ ನೇತ್ರೇ ಅಪಮೃಜ್ಯ ಪುನಃ ಪುನಃ|
07166018c ಉವಾಚ ಕೋಪಾನ್ನಿಃಶ್ವಸ್ಯ ದುರ್ಯೋಧನಮಿದಂ ವಚಃ||
ಕಣ್ಣುಗಳು ಕಣ್ಣೀರಿನಿಂದ ತುಂಬಿಕೊಳ್ಳುತ್ತಿರಲು ಅವನು ಪುನಃ ಪುನಃ ಒರೆಸಿಕೊಳ್ಳುತ್ತಾ, ಕೋಪದಿಂದ ನಿಟ್ಟುಸಿರು ಬಿಡುತ್ತಾ ದುರ್ಯೋಧನನಿಗೆ ಈ ಮಾತನ್ನಾಡಿದನು:
07166019a ಪಿತಾ ಮಮ ಯಥಾ ಕ್ಷುದ್ರೈರ್ನ್ಯಸ್ತಶಸ್ತ್ರೋ ನಿಪಾತಿತಃ|
07166019c ಧರ್ಮಧ್ವಜವತಾ ಪಾಪಂ ಕೃತಂ ತದ್ವಿದಿತಂ ಮಮ|
07166019e ಅನಾರ್ಯಂ ಸುನೃಶಂಸಸ್ಯ ಧರ್ಮಪುತ್ರಸ್ಯ ಮೇ ಶ್ರುತಂ||
“ಶಸ್ತ್ರಸಂನ್ಯಾಸವನ್ನು ಮಾಡಿದ ನನ್ನ ತಂದೆಯನ್ನು ಕ್ಷುದ್ರಜನರು ಕೊಂದರು. ಧರ್ಮಧ್ವಜನೆನಿಸಿಕೊಂಡವನು ಈ ಪಾಪದ ಕೆಲಸವನ್ನು ಮಾಡಿದನೆಂದು ನನಗೆ ತಿಳಿದಿದೆ. ಧರ್ಮಪುತ್ರನ ಅತ್ಯಂತ ಅನಾರ್ಯ ಕ್ರೂರಕೃತ್ಯದ ಕುರಿತು ನಾನು ಕೇಳಿದೆ.
07166020a ಯುದ್ಧೇಷ್ವಪಿ ಪ್ರವೃತ್ತಾನಾಂ ಧ್ರುವೌ ಜಯಪರಾಜಯೌ|
07166020c ದ್ವಯಮೇತದ್ಭವೇದ್ರಾಜನ್ವಧಸ್ತತ್ರ ಪ್ರಶಸ್ಯತೇ||
ಯುದ್ಧದಲ್ಲಿ ತೊಡಗಿದವರಿಗೆ ಜಯ ಅಪಜಯಗಳೆರಡರಲ್ಲಿ ಒಂದಾಗುವುದು ನಿಶ್ಚಿತವಾದುದು. ರಾಜನ್! ಆದರೆ ಅಲ್ಲಿ ವಧೆಗೆ ಹೆಚ್ಚಿನ ಪ್ರಾಶಸ್ತವಿದೆ.
07166021a ನ್ಯಾಯವೃತ್ತೋ ವಧೋ ಯಸ್ತು ಸಂಗ್ರಾಮೇ ಯುಧ್ಯತೋ ಭವೇತ್|
07166021c ನ ಸ ದುಃಖಾಯ ಭವತಿ ತಥಾ ದೃಷ್ಟೋ ಹಿ ಸ ದ್ವಿಜಃ||
ಸಂಗ್ರಾಮ ಯುದ್ಧದಲ್ಲಿ ನ್ಯಾಯರೀತಿಯಲ್ಲಿ ವಧೆಯಾದರೆ ಅದರಿಂದ ಯಾರಿಗೂ ಯಾವವಿಧವಾದ ದುಃಖವೂ ಆಗುವುದಿಲ್ಲ. ದ್ವಿಜರು ಈ ಧರ್ಮರಹಸ್ಯವನ್ನು ಕಂಡಿದ್ದಾರೆ.
07166022a ಗತಃ ಸ ವೀರಲೋಕಾಯ ಪಿತಾ ಮಮ ನ ಸಂಶಯಃ|
07166022c ನ ಶೋಚ್ಯಃ ಪುರುಷವ್ಯಾಘ್ರಸ್ತಥಾ ಸ ನಿಧನಂ ಗತಃ|
ನನ್ನ ತಂದೆಯು ವೀರಲೋಕಗಳಿಗೇ ಹೋಗಿದ್ದಾನೆ. ಅದರಲ್ಲಿ ನನಗೆ ಸಂಶಯವಿಲ್ಲ. ಪುರುಷವ್ಯಾಘ್ರ! ಆದುದರಿಂದ ಅವನು ನಿಧನನಾದನೆಂದು ಶೋಕಿಸುತ್ತಿಲ್ಲ.
07166023a ಯತ್ತು ಧರ್ಮಪ್ರವೃತ್ತಃ ಸನ್ಕೇಶಗ್ರಹಣಮಾಪ್ತವಾನ್|
07166023c ಪಶ್ಯತಾಂ ಸರ್ವಸೈನ್ಯಾನಾಂ ತನ್ಮೇ ಮರ್ಮಾಣಿ ಕೃಂತತಿ||
ಧರ್ಮಪ್ರವೃತ್ತನಾಗಿದ್ದ ಅವನ ತಲೆಕೂದಲನ್ನು ಸರ್ವ ಸೈನ್ಯಗಳೂ ನೋಡುತ್ತಿರುವಂತೆ ಧೃಷ್ಟದ್ಯುಮ್ನನು ಹಿಡಿದನು ಎನ್ನುವುದೇ ನನ್ನ ಮರ್ಮಗಳನ್ನು ಛಿದ್ರಗೊಳಿಸುತ್ತಿದೆ.
07166024a ಕಾಮಾತ್ಕ್ರೋಧಾದವಜ್ಞಾನಾದ್ದರ್ಪಾದ್ಬಾಲ್ಯೇನ ವಾ ಪುನಃ|
07166024c ವೈಧರ್ಮಿಕಾನಿ ಕುರ್ವಂತಿ ತಥಾ ಪರಿಭವೇನ ಚ||
ಲೋಕದಲ್ಲಿ ಜನರು ಕಾಮ, ಕ್ರೋಧ, ಅಜ್ಞಾನ, ದರ್ಪ, ಅಥವಾ ಬಾಲ್ಯತನದಿಂದ ಧರ್ಮಕ್ಕೆ ಬಾಹಿರ ಕೆಲಸಗಳನ್ನು ಮಾಡುತ್ತಾರೆ.
07166025a ತದಿದಂ ಪಾರ್ಷತೇನೇಹ ಮಹದಾಧರ್ಮಿಕಂ ಕೃತಂ|
07166025c ಅವಜ್ಞಾಯ ಚ ಮಾಂ ನೂನಂ ನೃಶಂಸೇನ ದುರಾತ್ಮನಾ||
ಇಂತಹ ಮಹಾ ಅಧರ್ಮಿಕ ಕೆಲಸವನ್ನು ದುರಾತ್ಮ ಕ್ರೂರಿ ಪಾರ್ಷತನು ನನ್ನನ್ನೂ ಅಲ್ಲಗಳೆದು ಮಾಡಿದ್ದಾನೆ.
07166026a ತಸ್ಯಾನುಬಂಧಂ ಸ ದ್ರಷ್ಟಾ ಧೃಷ್ಟದ್ಯುಮ್ನಃ ಸುದಾರುಣಂ|
07166026c ಅನಾರ್ಯಂ ಪರಮಂ ಕೃತ್ವಾ ಮಿಥ್ಯಾವಾದೀ ಚ ಪಾಂಡವಃ||
ಅದಕ್ಕೆ ತಕ್ಕುದಾದ ಸುದಾರುಣ ಫಲವನ್ನು ಧೃಷ್ಟದ್ಯುಮ್ನನೂ ಆ ಅನಾರ್ಯ ಕಾರ್ಯವನ್ನು ಮಾಡಿದ ಪರಮ ಮಿಥ್ಯಾವಾದೀ ಪಾಂಡವನೂ ಕಾಣಲಿದ್ದಾರೆ.
07166027a ಯೋ ಹ್ಯಸೌ ಚದ್ಮನಾಚಾರ್ಯಂ ಶಸ್ತ್ರಂ ಸಂನ್ಯಾಸಯತ್ತದಾ|
07166027c ತಸ್ಯಾದ್ಯ ಧರ್ಮರಾಜಸ್ಯ ಭೂಮಿಃ ಪಾಸ್ಯತಿ ಶೋಣಿತಂ||
ಶಸ್ತ್ರಸಂನ್ಯಾಸ ಮಾಡಿದ್ದ ಆಚಾರ್ಯನನ್ನು ಹೀಗೆ ಮೋಸದಿಂದ ಸಂಹರಿಸಿದ ಧರ್ಮರಾಜನ ರಕ್ತವನ್ನು ಭೂಮಿಯು ಇಂದು ಕುಡಿಯುತ್ತದೆ!
07166028a ಸರ್ವೋಪಾಯೈರ್ಯತಿಷ್ಯಾಮಿ ಪಾಂಚಾಲಾನಾಮಹಂ ವಧೇ|
07166028c ಧೃಷ್ಟದ್ಯುಮ್ನಂ ಚ ಸಮರೇ ಹಂತಾಹಂ ಪಾಪಕಾರಿಣಂ||
ನಾನು ಸರ್ವೋಪಾಯಗಳಿಂದ ಪಾಂಚಾಲನನ್ನು ವಧಿಸಲು ಪ್ರಯತ್ನಿಸುತ್ತೇನೆ. ಪಾಪಕಾರಿಣಿ ಧೃಷ್ಟದ್ಯುಮ್ನನನ್ನು ನಾನು ಸಮರದಲ್ಲಿ ಕೊಲ್ಲುತ್ತೇನೆ.
07166029a ಕರ್ಮಣಾ ಯೇನ ತೇನೇಹ ಮೃದುನಾ ದಾರುಣೇನ ವಾ|
07166029c ಪಾಂಚಾಲಾನಾಂ ವಧಂ ಕೃತ್ವಾ ಶಾಂತಿಂ ಲಬ್ಧಾಸ್ಮಿ ಕೌರವ||
ಕೌರವ! ಮೃದು ಅಥವಾ ದಾರುಣ ಕರ್ಮದಿಂದ ನಾನು ಆ ಪಾಂಚಾಲನ ವಧೆಯನ್ನು ಮಾಡಿಯೇ ಶಾಂತಿಯನ್ನು ಪಡೆಯುತ್ತೇನೆ.
07166030a ಯದರ್ಥಂ ಪುರುಷವ್ಯಾಘ್ರ ಪುತ್ರಮಿಚ್ಚಂತಿ ಮಾನವಾಃ|
07166030c ಪ್ರೇತ್ಯ ಚೇಹ ಚ ಸಂಪ್ರಾಪ್ತಂ ತ್ರಾಣಾಯ ಮಹತೋ ಭಯಾತ್||
ಪುರುಷವ್ಯಾಘ್ರ! ಪರಲೋಕದಲ್ಲಿ ಮತ್ತು ಈ ಲೋಕದಲ್ಲಿ ಬರಬಹುದಾದ ಮಹಾಭಯದ ರಕ್ಷಣೆಗೆಂದೇ ಜನರು ಮಕ್ಕಳನ್ನು ಬಯಸುತ್ತಾರೆ.
07166031a ಪಿತ್ರಾ ತು ಮಮ ಸಾವಸ್ಥಾ ಪ್ರಾಪ್ತಾ ನಿರ್ಬಂಧುನಾ ಯಥಾ|
07166031c ಮಯಿ ಶೈಲಪ್ರತೀಕಾಶೇ ಪುತ್ರೇ ಶಿಷ್ಯೇ ಚ ಜೀವತಿ||
ಪರ್ವತಸಮಾನ ಪುತ್ರನೂ ಶಿಷ್ಯನೂ ಆದ ನಾನು ಜೀವಂತವಿರುವಾಗಲೇ ಯಾರೂ ಬಂಧುಗಳೇ ಇಲ್ಲದವರಂತೆ ನನ್ನ ತಂದೆಗೆ ಈ ಅವಸ್ಥೆಯು ಪ್ರಾಪ್ತವಾಯಿತು!
07166032a ಧಿಙ್ಮಮಾಸ್ತ್ರಾಣಿ ದಿವ್ಯಾನಿ ಧಿಗ್ಬಾಹೂ ಧಿಕ್ಪರಾಕ್ರಮಂ|
07166032c ಯನ್ಮಾಂ ದ್ರೋಣಃ ಸುತಂ ಪ್ರಾಪ್ಯ ಕೇಶಗ್ರಹಣಮಾಪ್ತವಾನ್||
ನನ್ನಲ್ಲಿರುವ ದಿವ್ಯಾಸ್ತ್ರಗಳಿಗೆ ಧಿಕ್ಕಾರ! ನನ್ನ ಬಾಹುಗಳಿಗೆ ಧಿಕ್ಕಾರ! ಪರಾಕ್ರಮಕ್ಕೆ ಧಿಕ್ಕಾರ! ನನ್ನಂತಹ ಮಗನನ್ನು ಪಡೆದುದರಿಂದಲೇ ದ್ರೋಣನು ತಲೆಗೂದಲನ್ನು ಹಿಡಿಸಿಕೊಂಡವನಾದನು!
07166033a ಸ ತಥಾಹಂ ಕರಿಷ್ಯಾಮಿ ಯಥಾ ಭರತಸತ್ತಮ|
07166033c ಪರಲೋಕಗತಸ್ಯಾಪಿ ಗಮಿಷ್ಯಾಮ್ಯನೃಣಃ ಪಿತುಃ||
ಭರತಸತ್ತಮ! ನನ್ನ ತಂದೆಯು ಪರಲೋಕಕ್ಕೆ ಹೋಗಿದ್ದರೂ ಕೂಡ ಅವರ ಋಣವು ಮುಗಿಯುವಂತೆ ನಾನು ಮಾಡುತ್ತೇನೆ.
07166034a ಆರ್ಯೇಣ ತು ನ ವಕ್ತವ್ಯಾ ಕದಾ ಚಿತ್ಸ್ತುತಿರಾತ್ಮನಃ|
07166034c ಪಿತುರ್ವಧಮಮೃಷ್ಯಂಸ್ತು ವಕ್ಷ್ಯಾಮ್ಯದ್ಯೇಹ ಪೌರುಷಂ||
ಆರ್ಯನು ಎಂದೂ ಆತ್ಮಸ್ತುತಿಯನ್ನು ಮಾಡಿಕೊಳ್ಳಬಾರದು. ಆದರೆ ಪಿತೃವಧೆಯನ್ನು ಸಹಿಸಿಕೊಳ್ಳಲಾಗದೇ ನಾನು ನನ್ನ ಪೌರುಷದ ಕುರಿತು ಹೇಳುತ್ತೇನೆ.
07166035a ಅದ್ಯ ಪಶ್ಯಂತು ಮೇ ವೀರ್ಯಂ ಪಾಂಡವಾಃ ಸಜನಾರ್ದನಾಃ|
07166035c ಮೃದ್ನತಃ ಸರ್ವಸೈನ್ಯಾನಿ ಯುಗಾಂತಮಿವ ಕುರ್ವತಃ||
ಸರ್ವಸೇನೆಗಳನ್ನೂ ಅರೆದು ಯುಗಾಂತವನ್ನೇ ಉಂಟುಮಾಡುವ ನನ್ನ ಈ ವೀರ್ಯವನ್ನು ಇಂದು ಜನಾರ್ದನನೊಡನೆ ಪಾಂಡವರು ನೋಡಲಿ!
07166036a ನ ಹಿ ದೇವಾ ನ ಗಂಧರ್ವಾ ನಾಸುರಾ ನ ಚ ರಾಕ್ಷಸಾಃ|
07166036c ಅದ್ಯ ಶಕ್ತಾ ರಣೇ ಜೇತುಂ ರಥಸ್ಥಂ ಮಾಂ ನರರ್ಷಭ||
ನರರ್ಷಭ! ಇಂದು ರಥಸ್ಥನಾದ ನನ್ನನ್ನು ರಣದಲ್ಲಿ ದೇವತೆ-ಗಂಧರ್ವ-ಅಸುರ-ರಾಕ್ಷಸರು ಯಾರೂ ಗೆಲ್ಲಲು ಶಕ್ತರಾಗುವುದಿಲ್ಲ.
07166037a ಮದನ್ಯೋ ನಾಸ್ತಿ ಲೋಕೇಽಸ್ಮಿನ್ನರ್ಜುನಾದ್ವಾಸ್ತ್ರವಿತ್ತಮಃ|
07166037c ಅಹಂ ಹಿ ಜ್ವಲತಾಂ ಮಧ್ಯೇ ಮಯೂಖಾನಾಮಿವಾಂಶುಮಾನ್|
07166037e ಪ್ರಯೋಕ್ತಾ ದೇವಸೃಷ್ಟಾನಾಮಸ್ತ್ರಾಣಾಂ ಪೃತನಾಗತಃ||
ಈ ಲೋಕದಲ್ಲಿ ನನ್ನ ಮತ್ತು ಅರ್ಜುನನನ್ನು ಮೀರಿಸಿದ ಅಸ್ತ್ರವಿತ್ತಮನು ಬೇರೆ ಯಾರೂ ಇಲ್ಲ. ಸೂರ್ಯನು ಕಿರಣಗಳನ್ನು ಪಸರಿಸಿ ಹೇಗೆ ಸುಡುವನೋ ಹಾಗೆ ನಾನಿಂದು ಸೇನೆಗಳ ಮಧ್ಯದಲ್ಲಿ ದೇವತೆಗಳು ಸೃಷ್ಟಿಸಿದ ಅಸ್ತ್ರಗಳನ್ನು ಪ್ರಯೋಗಿಸುತ್ತೇನೆ.
07166038a ಕೃಶಾಶ್ವತನಯಾ ಹ್ಯದ್ಯ ಮತ್ಪ್ರಯುಕ್ತಾ ಮಹಾಮೃಧೇ|
07166038c ದರ್ಶಯಂತೋಽಽತ್ಮನೋ ವೀರ್ಯಂ ಪ್ರಮಥಿಷ್ಯಂತಿ ಪಾಂಡವಾನ್||
ಇಂದಿನ ಮಹಾಯುದ್ಧದಲ್ಲಿ ನನ್ನ ಧನುಸ್ಸಿನಿಂದ ಪ್ರಮುಕ್ತ ಬಾಣಗಳು ಪಾಂಡವರನ್ನು ಮಥಿಸಿ ನನ್ನ ವೀರ್ಯವನ್ನು ತೋರಿಸಿಕೊಡುತ್ತವೆ.
07166039a ಅದ್ಯ ಸರ್ವಾ ದಿಶೋ ರಾಜನ್ಧಾರಾಭಿರಿವ ಸಂಕುಲಾಃ|
07166039c ಆವೃತಾಃ ಪತ್ರಿಭಿಸ್ತೀಕ್ಷ್ಣೈರ್ದ್ರಷ್ಟಾರೋ ಮಾಮಕೈರಿಹ||
ರಾಜನ್! ಇಂದು ಎಲ್ಲ ದಿಕ್ಕುಗಳೂ ಮಳೆಯ ನೀರಿನಿಂದ ತುಂಬಿಬಿಡುವಂತೆ ನನ್ನ ತೀಕ್ಷ್ಣ ಬಾಣಗಳಿಂದ ಆವೃತವಾಗುವುದನ್ನು ಎಲ್ಲರೂ ನೋಡುವವರಿದ್ದಾರೆ!
07166040a ಕಿರನ್ ಹಿ ಶರಜಾಲಾನಿ ಸರ್ವತೋ ಭೈರವಸ್ವರಂ|
07166040c ಶತ್ರೂನ್ನಿಪಾತಯಿಷ್ಯಾಮಿ ಮಹಾವಾತ ಇವ ದ್ರುಮಾನ್||
ಭೈರವಸ್ವರದ ಶರಜಾಲಗಳನ್ನು ಎಲ್ಲೆಡೆ ಎರಚಿ ಚಂಡಮಾರುತವು ವೃಕ್ಷಗಳನ್ನು ಕೆಡಹುವಂತೆ ಶತ್ರುಗಳನ್ನು ಕೆಳಗುರುಳಿಸುತ್ತೇನೆ!
07166041a ನ ಚ ಜಾನಾತಿ ಬೀಭತ್ಸುಸ್ತದಸ್ತ್ರಂ ನ ಜನಾರ್ದನಃ|
07166041c ನ ಭೀಮಸೇನೋ ನ ಯಮೌ ನ ಚ ರಾಜಾ ಯುಧಿಷ್ಠಿರಃ||
07166042a ನ ಪಾರ್ಷತೋ ದುರಾತ್ಮಾಸೌ ನ ಶಿಖಂಡೀ ನ ಸಾತ್ಯಕಿಃ|
07166042c ಯದಿದಂ ಮಯಿ ಕೌರವ್ಯ ಸಕಲ್ಯಂ ಸನಿವರ್ತನಂ||
ಈ ಅಸ್ತ್ರವನ್ನು ಬೀಭತ್ಸುವಾಗಲೀ, ಜನಾರ್ದನನಾಗಲೀ, ಭೀಮಸೇನನಾಗಲೀ, ನಕುಲ-ಸಹದೇವರಾಗಲೀ, ರಾಜಾ ಯುಧಿಷ್ಠಿರನಾಗಲೀ, ದುರಾತ್ಮ ಪಾರ್ಷತ-ಶಿಖಂಡಿ-ಸಾತ್ಯಕಿಗಳಾಗಲೀ ತಿಳಿದಿಲ್ಲ. ಕೌರವ್ಯ! ಇದರ ಪ್ರಯೋಗ-ಸಂಹಾರಗಳೆರಡೂ ನನ್ನಲ್ಲಿ ಮಾತ್ರ ಪ್ರತಿಷ್ಠಿತವಾಗಿವೆ.
07166043a ನಾರಾಯಣಾಯ ಮೇ ಪಿತ್ರಾ ಪ್ರಣಮ್ಯ ವಿಧಿಪೂರ್ವಕಂ|
07166043c ಉಪಹಾರಃ ಪುರಾ ದತ್ತೋ ಬ್ರಹ್ಮರೂಪ ಉಪಸ್ಥಿತೇ||
ಹಿಂದೆ ನನ್ನ ತಂದೆಯು ವಿಧಿಪೂರ್ವಕವಾಗಿ ನಾರಾಯಣನನ್ನು ನಮಸ್ಕರಿಸಿ ಬ್ರಹ್ಮರೂಪ ಉಪಹಾರವನ್ನು ಸಮರ್ಪಿಸಿದ್ದನು.
07166044a ತಂ ಸ್ವಯಂ ಪ್ರತಿಗೃಹ್ಯಾಥ ಭಗವಾನ್ಸ ವರಂ ದದೌ|
07166044c ವವ್ರೇ ಪಿತಾ ಮೇ ಪರಮಮಸ್ತ್ರಂ ನಾರಾಯಣಂ ತತಃ||
ಅದನ್ನು ಸ್ವಯಂ ಸ್ವೀಕರಿಸಿದ ಭಗವಾನನು ವರವನ್ನಿತ್ತನು. ಆಗ ನನ್ನ ತಂದೆಯು ಶ್ರೇಷ್ಠ ನಾರಾಯಣಾಸ್ತ್ರವನ್ನು ವರವನ್ನಾಗಿ ಕೇಳಿದನು.
07166045a ಅಥೈನಮಬ್ರವೀದ್ರಾಜನ್ಭಗವಾನ್ದೇವಸತ್ತಮಃ|
07166045c ಭವಿತಾ ತ್ವತ್ಸಮೋ ನಾನ್ಯಃ ಕಶ್ಚಿದ್ಯುಧಿ ನರಃ ಕ್ವ ಚಿತ್||
ರಾಜನ್! ಆಗ ದೇವಸತ್ತಮ ಭಗವಾನನು ಹೀಗೆ ಹೇಳಿದ್ದನು: “ಇದರ ನಂತರ ಯುದ್ಧದಲ್ಲಿ ನಿನಗೆ ಸರಿಸಾಟಿಯಾದ ಯಾವ ನರನೂ ಇರುವುದಿಲ್ಲ.
07166046a ನ ತ್ವಿದಂ ಸಹಸಾ ಬ್ರಹ್ಮನ್ಪ್ರಯೋಕ್ತವ್ಯಂ ಕಥಂ ಚನ|
07166046c ನ ಹ್ಯೇತದಸ್ತ್ರಮನ್ಯತ್ರ ವಧಾಚ್ಚತ್ರೋರ್ನಿವರ್ತತೇ||
ಆದರೆ ಬ್ರಹ್ಮನ್! ಇದನ್ನು ವಿಚಾರಮಾಡದೇ ಎಂದೂ ಪ್ರಯೋಗಿಸಕೂಡದು. ಈ ಅಸ್ತ್ರವು ಶತ್ರುವನ್ನು ವಧಿಸದೇ ಹಿಂದಿರುಗುವುದಿಲ್ಲ.
07166047a ನ ಚೈತಚ್ಚಕ್ಯತೇ ಜ್ಞಾತುಂ ಕೋ ನ ವಧ್ಯೇದಿತಿ ಪ್ರಭೋ|
07166047c ಅವಧ್ಯಮಪಿ ಹನ್ಯಾದ್ಧಿ ತಸ್ಮಾನ್ನೈತತ್ಪ್ರಯೋಜಯೇತ್||
ಪ್ರಭೋ! ಇದು ಯಾರನ್ನು ವಧಿಸುತ್ತದೆ ಎನ್ನುವುದನ್ನು ತಿಳಿಯಲು ಶಕ್ಯವಿಲ್ಲ. ಅವಧ್ಯರಾದವರನ್ನೂ ವಧಿಸಿಬಿಡಬಹುದು. ಆದುದರಿಂದ ಇದನ್ನು ದುಡುಕಿ ಪ್ರಯೋಗಿಸಬಾರದು.
07166048a ವಧಃ ಸಂಖ್ಯೇ ದ್ರವಶ್ಚೈವ ಶಸ್ತ್ರಾಣಾಂ ಚ ವಿಸರ್ಜನಂ|
07166048c ಪ್ರಯಾಚನಂ ಚ ಶತ್ರೂಣಾಂ ಗಮನಂ ಶರಣಸ್ಯ ಚ||
07166049a ಏತೇ ಪ್ರಶಮನೇ ಯೋಗಾ ಮಹಾಸ್ತ್ರಸ್ಯ ಪರಂತಪ|
07166049c ಸರ್ವಥಾ ಪೀಡಿತೋ ಹಿ ಸ್ಯಾದವಧ್ಯಾನ್ಪೀಡಯನ್ರಣೇ||
ಪರಂತಪ! ಯುದ್ಧದಲ್ಲಿ ಪಲಾಯನ ಮಾಡಿದವರನ್ನೂ ಇದು ವಧಿಸುತ್ತದೆ. ಶಸ್ತ್ರಗಳನ್ನು ವಿಸರ್ಜಿಸುವುದು, ಅಭಯವನ್ನು ಯಾಚಿಸುವುದು, ಶತ್ರುಗಳಿಗೆ ಶರಣಾಗತರಾಗುವುದು ಇವುಗಳು ಈ ಮಹಾಸ್ತ್ರವನ್ನು ಶಮನಗೊಳಿಸತಕ್ಕ ಕೆಲವು ಉಪಾಯಗಳು. ಅವಧ್ಯರಾದವರನ್ನು ಇದು ಪೀಡಿಸಿದ್ದೇ ಆದರೆ ಅಸ್ತ್ರವನ್ನು ಪ್ರಯೋಗಿಸಿದವನೇ ಪೀಡೆಗೊಳಗಾಗುತ್ತಾನೆ.”
07166050a ತಜ್ಜಗ್ರಾಹ ಪಿತಾ ಮಹ್ಯಮಬ್ರವೀಚ್ಚೈವ ಸ ಪ್ರಭುಃ|
07166050c ತ್ವಂ ವರ್ಷಿಷ್ಯಸಿ ದಿವ್ಯಾನಿ ಶಸ್ತ್ರವರ್ಷಾಣ್ಯನೇಕಶಃ|
07166050e ಅನೇನಾಸ್ತ್ರೇಣ ಸಂಗ್ರಾಮೇ ತೇಜಸಾ ಚ ಜ್ವಲಿಷ್ಯಸಿ||
ಆಗ ನನ್ನ ತಂದೆಯು ಅದನ್ನು ಸ್ವೀಕರಿಸಿದನು. ಪ್ರಭುವು ಮತ್ತೆ ಹೇಳಿದನು: “ನೀನು ಅನೇಕ ದಿವ್ಯಾಸ್ತ್ರಗಳ ಮಳೆಗಳನ್ನು ಸುರಿಸುವೆ! ಈ ಅಸ್ತ್ರವನ್ನು ಹೊಂದಿರುವುದರಿಂದ ನೀನು ಸಂಗ್ರಾಮದಲ್ಲಿ ತೇಜಸ್ಸಿನಿಂದ ಪ್ರಜ್ವಲಿಸುತ್ತೀಯೆ!”
07166051a ಏವಮುಕ್ತ್ವಾ ಸ ಭಗವಾನ್ದಿವಮಾಚಕ್ರಮೇ ಪ್ರಭುಃ|
07166051c ಏತನ್ನಾರಾಯಣಾದಸ್ತ್ರಂ ತತ್ಪ್ರಾಪ್ತಂ ಮಮ ಬಂಧುನಾ||
ಹೀಗೆ ಹೇಳಿ ಆ ಭಗವಾನ್ ಪ್ರಭುವು ದಿವಕ್ಕೆ ತೆರಳಿದನು. ಇಗೋ ಇದು ನನ್ನ ಬಂಧುವಿನಿಂದ ಪಡೆದ ಆ ನಾರಾಯಣಾಸ್ತ್ರವು.
07166052a ತೇನಾಹಂ ಪಾಂಡವಾಂಶ್ಚೈವ ಪಾಂಚಾಲಾನ್ಮತ್ಸ್ಯಕೇಕಯಾನ್|
07166052c ವಿದ್ರಾವಯಿಷ್ಯಾಮಿ ರಣೇ ಶಚೀಪತಿರಿವಾಸುರಾನ್||
ಶಚೀಪತಿಯು ಅಸುರರನ್ನು ಹೇಗೋ ಹಾಗೆ ಇದರಿಂದ ರಣದಲ್ಲಿ ನಾನು ಪಾಂಡವರನ್ನೂ, ಪಾಂಚಾಲರನ್ನೂ, ಮತ್ಸ್ಯ-ಕೇಕಯರನ್ನೂ ಓಡಿಸುತ್ತೇನೆ.
07166053a ಯಥಾ ಯಥಾಹಮಿಚ್ಛೇಯಂ ತಥಾ ಭೂತ್ವಾ ಶರಾ ಮಮ|
07166053c ನಿಪತೇಯುಃ ಸಪತ್ನೇಷು ವಿಕ್ರಮತ್ಸ್ವಪಿ ಭಾರತ||
ನನ್ನ ಶರಗಳು ಹೇಗೆ ಹೋಗಬೇಕೆಂದು ಇಚ್ಛಿಸುವೆನೋ ಹಾಗೆ ಅವು ಪರಾಕ್ರಮಿ ಶತ್ರುಗಳ ಮೇಲೆ ಬೀಳುವವು ಭಾರತ!
07166054a ಯಥೇಷ್ಟಮಶ್ಮವರ್ಷೇಣ ಪ್ರವರ್ಷಿಷ್ಯೇ ರಣೇ ಸ್ಥಿತಃ|
07166054c ಅಯೋಮುಖೈಶ್ಚ ವಿಹಗೈರ್ದ್ರಾವಯಿಷ್ಯೇ ಮಹಾರಥಾನ್|
07166054e ಪರಶ್ವಧಾಂಶ್ಚ ವಿವಿಧಾನ್ಪ್ರಸಕ್ಷ್ಯೇಽಹಮಸಂಶಯಂ||
ನಾನು ರಣದಲ್ಲಿ ನಿಂತು ಯಥೇಚ್ಛವಾದ ಕಲ್ಲಿನ ಮಳೆಗರೆಯುತ್ತೇನೆ. ಲೋಹದ ಕೊಕ್ಕುಗಳಿರುವ ಪಕ್ಷಿಗಳಿಂದ ಮಹಾರಥರನ್ನು ಪಲಾಯನಗೊಳಿಸುತ್ತೇನೆ. ವಿವಿಧ ಪರಶುಗಳನ್ನೂ ಸುರಿಸುತ್ತೇನೆ. ಇದರಲ್ಲಿ ಸಂಶಯವಿಲ್ಲದಿರಲಿ!
07166055a ಸೋಽಹಂ ನಾರಾಯಣಾಸ್ತ್ರೇಣ ಮಹತಾ ಶತ್ರುತಾಪನ|
07166055c ಶತ್ರೂನ್ವಿಧ್ವಂಸಯಿಷ್ಯಾಮಿ ಕದರ್ಥೀಕೃತ್ಯ ಪಾಂಡವಾನ್||
ಶತ್ರುತಾಪನ! ಹೀಗೆ ನಾನು ಮಹಾ ನಾರಾಯಣಾಸ್ತ್ರದಿಂದ ಪಾಂಡವರನ್ನು ವ್ಯರ್ಥಗೊಳಿಸಿ ಶತ್ರುಗಳನ್ನು ಧ್ವಂಸಮಾಡುತ್ತೇನೆ.
07166056a ಮಿತ್ರಬ್ರಹ್ಮಗುರುದ್ವೇಷೀ ಜಾಲ್ಮಕಃ ಸುವಿಗರ್ಹಿತಃ|
07166056c ಪಾಂಚಾಲಾಪಸದಶ್ಚಾದ್ಯ ನ ಮೇ ಜೀವನ್ವಿಮೋಕ್ಷ್ಯತೇ||
ಮಿತ್ರ, ಬ್ರಾಹ್ಮಣ ಮತ್ತು ಗುರು-ದ್ವೇಷಿಯಾದ ನೀಚ, ಅತಿನಿಂದ್ಯ, ಪಾಂಚಾಲಕುಲಕಳಂಕ ಆ ಧೃಷ್ಟದ್ಯುಮ್ನನನ್ನು ಜೀವದಿಂದ ಮೋಕ್ಷಗೊಳಿಸುತ್ತೇನೆ.”
07166057a ತಚ್ಛೃತ್ವಾ ದ್ರೋಣಪುತ್ರಸ್ಯ ಪರ್ಯವರ್ತತ ವಾಹಿನೀ|
07166057c ತತಃ ಸರ್ವೇ ಮಹಾಶಂಖಾನ್ದಧ್ಮುಃ ಪುರುಷಸತ್ತಮಾಃ||
ದ್ರೋಣಪುತ್ರನ ಆ ಮಾತನ್ನು ಕೇಳಿ ಸೇನೆಯು ಹಿಂದಿರುಗಿತು. ಆಗ ಎಲ್ಲ ಪುರುಷಸತ್ತಮರೂ ಮಹಾಶಂಖಗಳನ್ನೂದಿದರು.
07166058a ಭೇರೀಶ್ಚಾಭ್ಯಹನನ್ ಹೃಷ್ಟಾ ಡಿಂಡಿಮಾಂಶ್ಚ ಸಹಸ್ರಶಃ|
07166058c ತಥಾ ನನಾದ ವಸುಧಾ ಖುರನೇಮಿಪ್ರಪೀಡಿತಾ|
07166058e ಸ ಶಬ್ದಸ್ತುಮುಲಃ ಖಂ ದ್ಯಾಂ ಪೃಥಿವೀಂ ಚ ವ್ಯನಾದಯತ್||
ಹೃಷ್ಟರಾಗಿ ಸಹಸ್ರಾರು ಭೇರಿ-ಡಿಂಡಿಮಗಳನ್ನು ಬಾರಿಸಿದರು. ಕುದುರೆಗಳ ಗೊರಸುಗಳಿಂದಲೂ ರಥಚಕ್ರಗಳ ಸಂಚಲನದಿಂದಲೂ ವಸುಧೆಯು ಪೀಡಿತಳಾದಳು. ಆ ತುಮುಲ ಶಬ್ಧವು ಆಕಾಶ, ಸ್ವರ್ಗ ಮತ್ತು ಪೃಥ್ವಿಯಲ್ಲಿ ಮೊಳಗಿತು.
07166059a ತಂ ಶಬ್ಧಂ ಪಾಂಡವಾಃ ಶ್ರುತ್ವಾ ಪರ್ಜನ್ಯನಿನದೋಪಮಂ|
07166059c ಸಮೇತ್ಯ ರಥಿನಾಂ ಶ್ರೇಷ್ಠಾಃ ಸಹಿತಾಃ ಸಂನ್ಯಮಂತ್ರಯನ್||
ಮೇಘಗರ್ಜನೆಗೆ ಸಮಾನ ಆ ಶಬ್ಧವನ್ನು ಕೇಳಿ ಪಾಂಡವರು ರಥಶ್ರೇಷ್ಠರೊಡನೆ ಕಲೆತು ಒಟ್ಟಿಗೇ ಮಂತ್ರಾಲೋಚನೆಗೆ ತೊಡಗಿದರು.
07166060a ತಥೋಕ್ತ್ವಾ ದ್ರೋಣಪುತ್ರೋಽಪಿ ತದೋಪಸ್ಪೃಶ್ಯ ಭಾರತ|
07166060c ಪ್ರಾದುಶ್ಚಕಾರ ತದ್ದಿವ್ಯಮಸ್ತ್ರಂ ನಾರಾಯಣಂ ತದಾ||
ಭಾರತ! ಹಾಗೆ ಹೇಳಿ ದ್ರೋಣಪುತ್ರನೂ ಕೂಡ ನೀರನ್ನು ಮುಟ್ಟಿ ಆ ದಿವ್ಯ ನಾರಾಯಣಾಸ್ತ್ರವನ್ನು ಪ್ರಕಟಿಸಿದನು.”
ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ನಾರಾಯಣಾಸ್ತ್ರಮೋಕ್ಷಣಪರ್ವಣಿ ಅಶ್ವತ್ಥಾಮಕ್ರೋಧೇ ಷಟ್ಷಷ್ಟ್ಯಾಧಿಕಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ನಾರಾಯಣಾಸ್ತ್ರಮೋಕ್ಷಣಪರ್ವದಲ್ಲಿ ಅಶ್ವತ್ಥಾಮಕ್ರೋಧ ಎನ್ನುವ ನೂರಾಅರವತ್ತಾರನೇ ಅಧ್ಯಾಯವು.
