Drona Parva: Chapter 165

ದ್ರೋಣ ಪರ್ವ: ದ್ರೋಣವಧ ಪರ್ವ

೧೬೫

ದ್ರೋಣವಧೆ

ಯುಧಿಷ್ಠಿರನು ದ್ರೋಣನೊಡನೆ ಯುದ್ಧಮಾಡಲು ಪಾಂಚಾಲರಿಗೆ ಹೇಳಿದುದು (೧-೮). ದ್ರೋಣನು ಪ್ರಾಣಗಳನ್ನು ತೊರೆಯಲು ನಿರ್ಧರಿಸಿ ಪಾಂಚಾಲರನ್ನು ಆಕ್ರಮಣಿಸಿದುದು (೯-೧೬). ಭೀಮಸೇನನಿಂದ ಪ್ರಚೋದಿತನಾದ ಧೃಷ್ಟದ್ಯುಮ್ನನು ದ್ರೋಣನನ್ನು ಆಕ್ರಮಣಿಸಿದುದು (೧೭-೨೬). ಭೀಮಸೇನನು ದ್ರೋಣನಿಗೆ ಅಶ್ವತ್ಥಾಮನು ಹತನಾದನೆಂದು ಪುನಃ ಹೇಳಿದುದು (೨೭-೩೨).  ದ್ರೋಣನ ಶಸ್ತ್ರನ್ಯಾಸ; ದೇವಲೋಕಕ್ಕೆ ತೆರಳಿದುದು (೩೩-೩೬).  ರಥದಲ್ಲಿ ಯೋಗಾರೂಢನಾಗಿದ್ದ ದ್ರೋಣನನ್ನು ಇತರರು ಬೇಡವೆಂದರೂ ಧೃಷ್ಟದ್ಯುಮ್ನನು ಸಂಹರಿಸಿದುದು (೩೭-೫೪). ಕೌರವ ಸೇನೆಯ ಪಲಾಯನ (೫೫-೮೬). ಕೃಪನು ಅಶ್ವತ್ಥಾಮನಿಗೆ ದ್ರೋಣವಧೆಯ ಕುರಿತು  ಹೇಳಿದುದು (೮೭-೧೨೫).  

07165001 ಸಂಜಯ ಉವಾಚ|

07165001a ಕ್ರೂರಮಾಯೋಧನಂ ಜಜ್ಞೇ ತಸ್ಮಿನ್ರಾಜಸಮಾಗಮೇ|

07165001c ರುದ್ರಸ್ಯೇವ ಹಿ ಕ್ರುದ್ಧಸ್ಯ ನಿಘ್ನತಸ್ತು ಪಶೂನ್ಯಥಾ||

ಸಂಜಯನು ಹೇಳಿದನು: “ಕ್ರುದ್ಧ ರುದ್ರನಿಂದ ಪಶುಗಳು ಹೇಗೆ ಸಂಹರಿಸಲ್ಪಡುತ್ತಾರೋ ಹಾಗೆ ಆ ರಾಜಸಮಾಗಮದಲ್ಲಿ ಅತ್ಯಂತ ಕ್ರೂರ ಯುದ್ಧವು ಪ್ರಾರಂಭವಾಯಿತು.

07165002a ಹಸ್ತಾನಾಮುತ್ತಮಾಂಗಾನಾಂ ಕಾರ್ಮುಕಾಣಾಂ ಚ ಭಾರತ|

07165002c ಚತ್ರಾಣಾಂ ಚಾಪವಿದ್ಧಾನಾಂ ಚಾಮರಾಣಾಂ ಚ ಸಮ್ಯುಗೇ||

07165003a ಭಗ್ನಚಕ್ರೈ ರಥೈಶ್ಚಾಪಿ ಪಾತಿತೈಶ್ಚ ಮಹಾಧ್ವಜೈಃ|

07165003c ಸಾದಿಭಿಶ್ಚ ಹತೈಃ ಶೂರೈಃ ಸಂಕೀರ್ಣಾ ವಸುಧಾಭವತ್||

ಭಾರತ! ಸಂಯುಗದಲ್ಲಿ ಕತ್ತರಿಸಲ್ಪಟ್ಟ ತೋಳುಗಳು, ಶಿರಸ್ಸುಗಳು, ಧನುಸ್ಸುಗಳು, ಛತ್ರಗಳು, ಚಾಮರಗಳು, ತುಂಡಾದ ಚಕ್ರಗಳು, ರಥಗಳು, ಕೆಳಗೆ ಬಿದ್ದಿದ್ದ ಮಹಾಧ್ವಜಗಳು, ಹತವಾದ ಕುದುರೆಗಳು ಮತ್ತು ಶೂರ ಸೈನಿಕರಿಂದ ರಣಭೂಮಿಯು ತುಂಬಿಹೋಗಿತ್ತು.

07165004a ಬಾಣಪಾತನಿಕೃತ್ತಾಸ್ತು ಯೋಧಾಸ್ತೇ ಕುರುಸತ್ತಮ|

07165004c ಚೇಷ್ಟಂತೋ ವಿವಿಧಾಶ್ಚೇಷ್ಟಾ ವ್ಯದೃಶ್ಯಂತ ಮಹಾಹವೇ||

ಕುರುಸತ್ತಮ! ಬೀಳುತ್ತಿರುವ ಬಾಣಗಳಿಂದ ಗಾಯಗೊಂಡ ಯೋಧರು ಆ ಮಹಾಯುದ್ಧದಲ್ಲಿ ವಿವಿಧ ಚೇಷ್ಟೆಗಳನ್ನು ಮಾಡುತ್ತಾ ಚಡಪಡಿಸುತ್ತಿರುವುದು ಅಲ್ಲಿ ಕಂಡುಬರುತ್ತಿತ್ತು.

07165005a ವರ್ತಮಾನೇ ತಥಾ ಯುದ್ಧೇ ಘೋರೇ ದೇವಾಸುರೋಪಮೇ|

07165005c ಅಬ್ರವೀತ್ ಕ್ಷತ್ರಿಯಾಂಸ್ತತ್ರ ಧರ್ಮರಾಜೋ ಯುಧಿಷ್ಠಿರಃ|

ದೇವಾಸುರರ ನಡುವಿನಂತೆ ಆ ಘೋರ ಯುದ್ಧವು ನಡೆಯುತ್ತಿರಲು ಧರ್ಮರಾಜ ಯುಧಿಷ್ಠಿರನು ಕ್ಷತ್ರಿಯರಿಗೆ ಹೇಳಿದನು:

07165005e ಅಭಿದ್ರವತ ಸಮ್ಯತ್ತಾಃ ಕುಂಭಯೋನಿಂ ಮಹಾರಥಾಃ||

07165006a ಏಷ ವೈ ಪಾರ್ಷತೋ ವೀರೋ ಭಾರದ್ವಾಜೇನ ಸಂಗತಃ|

07165006c ಘಟತೇ ಚ ಯಥಾಶಕ್ತಿ ಭಾರದ್ವಾಜಸ್ಯ ನಾಶನೇ||

“ಮಹಾರಥರೇ! ಚೆನ್ನಾಗಿ ಪ್ರಯತ್ನಪಟ್ಟು ಕುಂಭಯೋನಿಯೊಡನೆ ಯುದ್ಧಮಾಡಿ. ವೀರ ಪಾರ್ಷತನು ಯಥಾಶಕ್ತಿಯಾಗಿ ಭಾರದ್ವಾಜನನ್ನು ಕೆಳಗುರುಳಿಸಲು ಅವನೊಡನೆ ಯುದ್ಧಮಾಡುತ್ತಾನೆ.

07165007a ಯಾದೃಶಾನಿ ಹಿ ರೂಪಾಣಿ ದೃಶ್ಯಂತೇ ನೋ ಮಹಾರಣೇ|

07165007c ಅದ್ಯ ದ್ರೋಣಂ ರಣೇ ಕ್ರುದ್ಧಃ ಪಾತಯಿಷ್ಯತಿ ಪಾರ್ಷತಃ|

07165007e ತೇ ಯೂಯಂ ಸಹಿತಾ ಭೂತ್ವಾ ಕುಂಭಯೋನಿಂ ಪರೀಪ್ಸತ||

ಈ ಮಹಾರಣದಲ್ಲಿ ಕಾಣುವ ದೃಶ್ಯಗಳನ್ನು ನೋಡಿದರೆ ಇಂದು ರಣದಲ್ಲಿ ಕ್ರುದ್ಧ ಪಾರ್ಷತನು ದ್ರೋಣನನ್ನು ಕೆಳಗುರುಳಿಸುತ್ತಾನೆ. ಆದುದರಿಂದ ನೀವೆಲ್ಲರೂ ಒಂದಾಗಿ ಕುಂಭಯೋನಿಯೊಡನೆ ಯುದ್ಧಮಾಡಿರಿ!”

07165008a ಯುಧಿಷ್ಠಿರಸಮಾಜ್ಞಪ್ತಾಃ ಸೃಂಜಯಾನಾಂ ಮಹಾರಥಾಃ|

07165008c ಅಭ್ಯದ್ರವಂತ ಸಮ್ಯತ್ತಾ ಭಾರದ್ವಾಜಂ ಜಿಘಾಂಸವಃ||

ಯುಧಿಷ್ಠಿರನಿಂದ ಆಜ್ಞಪ್ತ ಮಹಾರಥ ಸೃಂಜಯರು ಒಟ್ಟಾಗಿ ಭಾರದ್ವಾಜನನ್ನು ಕೊಲ್ಲಲು ಬಯಸಿ ಅವನನ್ನು ಆಕ್ರಮಣಿಸಿದರು.

07165009a ತಾನ್ಸಮಾಪತತಃ ಸರ್ವಾನ್ಭಾರದ್ವಾಜೋ ಮಹಾರಥಃ|

07165009c ಅಭ್ಯದ್ರವತ ವೇಗೇನ ಮರ್ತವ್ಯಮಿತಿ ನಿಶ್ಚಿತಃ||

ಮೃತನಾಗಬೇಕೆಂದು ನಿಶ್ಚಯಿಸಿದ್ದ ಮಹಾರಥ ಭಾರದ್ವಾಜನು ಮೇಲೆರಗುತ್ತಿದ್ದ ಅವರೆಲ್ಲರನ್ನೂ ವೇಗದಿಂದ ಎದುರಿಸಿದನು.

07165010a ಪ್ರಯಾತೇ ಸತ್ಯಸಂಧೇ ತು ಸಮಕಂಪತ ಮೇದಿನೀ|

07165010c ವವುರ್ವಾತಾಃ ಸನಿರ್ಘಾತಾಸ್ತ್ರಾಸಯಂತೋ ವರೂಥಿನೀಂ||

ಆ ಸತ್ಯಸಂಧನು ಮುಂದುವರೆಯುತ್ತಿರಲು ಭೂಮಿಯು ನಡುಗಿತು. ಸೇನೆಗಳನ್ನು ಭಯಪಡಿಸುತ್ತಾ ಸಿಡಿಲುಗಳೊಂದಿಗೆ ಚಂಡಮಾರುತವು ಬೀಸತೊಡಗಿತು.

07165011a ಪಪಾತ ಮಹತೀ ಚೋಲ್ಕಾ ಆದಿತ್ಯಾನ್ನಿರ್ಗತೇವ ಹ|

07165011c ದೀಪಯಂತೀವ ತಾಪೇನ ಶಂಸಂತೀವ ಮಹದ್ಭಯಂ||

ಮುಂದೆಬರುವ ಮಹಾಭಯವನ್ನು ಸೂಚಿಸಲೋ ಎನ್ನುವಂತೆ ಆದಿತ್ಯಮಂಡಲದಿಂದ ಮಹಾ ಉಲ್ಕೆಯೊಂದು ಬೆಂಕಿಯಂತೆ ಸುಡುತ್ತಾ ಕೆಳಗೆ ಬಿದ್ದಿತು.

07165012a ಜಜ್ವಲುಶ್ಚೈವ ಶಸ್ತ್ರಾಣಿ ಭಾರದ್ವಾಜಸ್ಯ ಮಾರಿಷ|

07165012c ರಥಾಃ ಸ್ವನಂತಿ ಚಾತ್ಯರ್ಥಂ ಹಯಾಶ್ಚಾಶ್ರೂಣ್ಯವಾಸೃಜನ್||

ಮಾರಿಷ! ಭಾರದ್ವಾಜನ ಶಸ್ತ್ರಗಳು ತಾವೇ ತಾವಾಗಿ ಉರಿಯತೊಡಗಿದವು. ರಥಚಕ್ರಗಳು ಅಸಾಧಾರಣವಾಗಿ ಶಬ್ಧಮಾಡುತ್ತಿದ್ದವು. ಕುದುರೆಗಳು ಕಣ್ಣೀರನ್ನು ಸುರಿಸುತ್ತಿದ್ದವು.

07165013a ಹತೌಜಾ ಇವ ಚಾಪ್ಯಾಸೀದ್ಭಾರದ್ವಾಜೋ ಮಹಾರಥಃ|

07165013c ಋಷೀಣಾಂ ಬ್ರಹ್ಮವಾದಾನಾಂ ಸ್ವರ್ಗಸ್ಯ ಗಮನಂ ಪ್ರತಿ|

07165013e ಸುಯುದ್ಧೇನ ತತಃ ಪ್ರಾಣಾನುತ್ಸ್ರಷ್ಟುಮುಪಚಕ್ರಮೇ||

ಮಹಾರಥ ಭಾರದ್ವಾಜನ ತೇಜಸ್ಸು ಕುಂದುತ್ತಿದೆಯೋ ಎನ್ನುವಂತಾಯಿತು. ಸ್ವರ್ಗಗಮನದ ಕುರಿತು ಬ್ರಹ್ಮವಾದೀ ಋಷಿಗಳು ಹೇಳಿದುದನ್ನು ಸ್ಮರಿಸುತ್ತಾ ಅವನು ಉತ್ತಮ ಯುದ್ಧದಿಂದ ಪ್ರಾಣಗಳನ್ನು ತೊರೆಯಲು ನಿಶ್ಚಯಿಸಿದನು.

07165014a ತತಶ್ಚತುರ್ದಿಶಂ ಸೈನ್ಯೈರ್ದ್ರುಪದಸ್ಯಾಭಿಸಂವೃತಃ|

07165014c ನಿರ್ದಹನ್ ಕ್ಷತ್ರಿಯವ್ರಾತಾನ್ದ್ರೋಣಃ ಪರ್ಯಚರದ್ರಣೇ||

ದ್ರುಪದನ ಸೇನೆಗಳಿಂದ ನಾಲ್ಕೂ ಕಡೆಗಳಿಂದ ಪರಿವೃತನಾದ ದ್ರೋಣನು ಕ್ಷತ್ರಿಯ ಗುಂಪುಗಳನ್ನು ದಹಿಸುತ್ತಾ ರಣದಲ್ಲಿ ಸಂಚರಿಸುತ್ತಿದ್ದನು.

07165015a ಹತ್ವಾ ವಿಂಶತಿಸಾಹಸ್ರಾನ್ ಕ್ಷತ್ರಿಯಾನರಿಮರ್ದನಃ|

07165015c ದಶಾಯುತಾನಿ ತೀಕ್ಷ್ಣಾಗ್ರೈರವಧೀದ್ವಿಶಿಖೈಃ ಶಿತೈಃ||

ಆ ಅರಿಮರ್ದನನು ಇಪ್ಪತ್ತು ಸಾವಿರ ಕ್ಷತ್ರಿಯರನ್ನು ಸಂಹರಿಸಿ ನಿಶಿತ ಶಿಖಗಳಿಂದ ಹತ್ತು ಸಾವಿರ ಆನೆಗಳನ್ನು ಸಂಹರಿಸಿದನು.

07165016a ಸೋಽತಿಷ್ಠದಾಹವೇ ಯತ್ತೋ ವಿಧೂಮ ಇವ ಪಾವಕಃ|

07165016c ಕ್ಷತ್ರಿಯಾಣಾಮಭಾವಾಯ ಬ್ರಾಹ್ಮಮಾತ್ಮಾನಮಾಸ್ಥಿತಃ||

ಕ್ಷತ್ರಿಯರನ್ನು ನಿರ್ಮೂಲನ ಮಾಡುವ ಸಲುವಾಗಿ ಬ್ರಹ್ಮಾಸ್ತ್ರವನ್ನು ಇಟ್ಟುಕೊಂಡು ಹೊಗೆಯಿಲ್ಲದ ಅಗ್ನಿಯಂತೆ ಯುದ್ಧದಲ್ಲಿ ಪ್ರಯತ್ನಪಟ್ಟು ನಿಂತಿದ್ದನು.

07165017a ಪಾಂಚಾಲ್ಯಂ ವಿರಥಂ ಭೀಮೋ ಹತಸರ್ವಾಯುಧಂ ವಶೀ|

07165017c ಅವಿಷಣ್ಣಂ ಮಹಾತ್ಮಾನಂ ತ್ವರಮಾಣಃ ಸಮಭ್ಯಯಾತ್||

ವಿರಥನಾಗಿದ್ದ, ಎಲ್ಲ ಆಯುಧಗಳನ್ನೂ ಕಳೆದುಕೊಂಡಿದ್ದ, ವಿಷಣ್ಣನಾದ ಮಹಾತ್ಮ ಪಾಂಚಾಲ್ಯ ಧೃಷ್ಟದ್ಯುಮ್ನನನ್ನು ತ್ವರೆಮಾಡಿ ಭೀಮನು ಸಂಧಿಸಿದನು.

07165018a ತತಃ ಸ್ವರಥಮಾರೋಪ್ಯ ಪಾಂಚಾಲ್ಯಮರಿಮರ್ದನಃ|

07165018c ಅಬ್ರವೀದಭಿಸಂಪ್ರೇಕ್ಷ್ಯ ದ್ರೋಣಮಸ್ಯಂತಮಂತಿಕಾತ್||

ಆಗ ತನ್ನ ರಥದಲ್ಲಿ ಪಾಂಚಾಲ್ಯನನ್ನು ಏರಿಸಿಕೊಂಡು ಹತ್ತಿರದಿಂದಲೇ ದ್ರೋಣನನ್ನು ನೋಡುತ್ತಾ ಅರಿಮರ್ದನ ಭೀಮನು ಧೃಷ್ಟದ್ಯುಮ್ನನಿಗೆ ಹೇಳಿದನು:

07165019a ನ ತ್ವದನ್ಯ ಇಹಾಚಾರ್ಯಂ ಯೋದ್ಧುಮುತ್ಸಹತೇ ಪುಮಾನ್|

07165019c ತ್ವರಸ್ವ ಪ್ರಾಗ್ವಧಾಯೈವ ತ್ವಯಿ ಭಾರಃ ಸಮಾಹಿತಃ||

“ನಿನ್ನೊಬ್ಬನನ್ನು ಬಿಟ್ಟು ಬೇರೆ ಯಾರೂ ಈ ಆಚಾರ್ಯನೊಡನೆ ಯುದ್ಧಮಾಡಲು ಉತ್ಸಾಹಿತರಾಗಿಲ್ಲ. ಆದುದರಿಂದ ಅವನ ವಧೆಯ ಭಾರವು ಸಂಪೂರ್ಣವಾಗಿ ನಿನ್ನ ಮೇಲೆಯೇ ಇದೆ. ತ್ವರೆಮಾಡು!”

07165020a ಸ ತಥೋಕ್ತೋ ಮಹಾಬಾಹುಃ ಸರ್ವಭಾರಸಹಂ ನವಂ|

07165020c ಅಭಿಪತ್ಯಾದದೇ ಕ್ಷಿಪ್ರಮಾಯುಧಪ್ರವರಂ ದೃಢಂ||

ಹೀಗೆ ಹೇಳಲು ಮಹಾಬಾಹು ಧೃಷ್ಟದ್ಯುಮ್ನನು ಸರ್ವಭಾರಗಳನ್ನೂ ಹೊರಬಲ್ಲ ಹೊಸತಾದ ದೃಢ ಆಯುಧಪ್ರವರ ಧನುಸ್ಸನ್ನು ಮುಂದಕ್ಕೆ ಬಗ್ಗಿ ಎತ್ತಿಕೊಂಡನು.

07165021a ಸಂರಬ್ಧಶ್ಚ ಶರಾನಸ್ಯನ್ದ್ರೋಣಂ ದುರ್ವಾರಣಂ ರಣೇ|

07165021c ವಿವಾರಯಿಷುರಾಚಾರ್ಯಂ ಶರವರ್ಷೈರವಾಕಿರತ್||

ಧೃಷ್ಟದ್ಯುಮ್ನನು ಕುಪಿತನಾಗಿ ರಣದಲ್ಲಿ ದ್ರೋಣನನ್ನು ತಡೆಯಲು ಬಯಸಿ ಬಿಲ್ಲನ್ನು ಸೆಳೆದು ಶರವರ್ಷಗಳಿಂದ ಆಚಾರ್ಯನನ್ನು ಮುಚ್ಚಿಬಿಟ್ಟನು.

07165022a ತೌ ನ್ಯವಾರಯತಾಂ ಶ್ರೇಷ್ಠೌ ಸಂರಬ್ಧೌ ರಣಶೋಭಿನೌ|

07165022c ಉದೀರಯೇತಾಂ ಬ್ರಾಹ್ಮಾಣಿ ದಿವ್ಯಾನ್ಯಸ್ತ್ರಾಣ್ಯನೇಕಶಃ||

ಅವರಿಬ್ಬರು ರಣಶೋಭೀ ಶ್ರೇಷ್ಠರು ಕ್ರೋಧಿತರಾಗಿ ಬ್ರಹ್ಮಾಸ್ತ್ರವೇ ಮೊದಲಾದ ಅನೇಕ ದಿವ್ಯಾಸ್ತ್ರಗಳನ್ನು ಪ್ರಯೋಗಿಸುತ್ತಾ ಪರಸ್ಪರರನ್ನು ಮುಂದೆ ಬಾರದಂತೆ ತಡೆದರು.

07165023a ಸ ಮಹಾಸ್ತ್ರೈರ್ಮಹಾರಾಜ ದ್ರೋಣಮಾಚ್ಚಾದಯದ್ರಣೇ|

07165023c ನಿಹತ್ಯ ಸರ್ವಾಣ್ಯಸ್ತ್ರಾಣಿ ಭಾರದ್ವಾಜಸ್ಯ ಪಾರ್ಷತಃ||

ಮಹಾರಾಜ! ಪಾರ್ಷತನು ರಣದಲ್ಲಿ ಭಾರದ್ವಾಜನ ಸರ್ವ ಅಸ್ತ್ರಗಳನ್ನು ನಾಶಗೊಳಿಸಿ ದ್ರೋಣನನ್ನು ಮಹಾಸ್ತ್ರಗಳಿಂದ ಮುಚ್ಚಿಬಿಟ್ಟನು.

07165024a ಸ ವಸಾತೀಂ ಶಿಬೀಂಶ್ಚೈವ ಬಾಹ್ಲೀಕಾನ್ಕೌರವಾನಪಿ|

07165024c ರಕ್ಷಿಷ್ಯಮಾಣಾನ್ಸಂಗ್ರಾಮೇ ದ್ರೋಣಂ ವ್ಯಧಮದಚ್ಯುತಃ||

ಆ ಅಚ್ಯುತನು ಸಂಗ್ರಾಮದಲ್ಲಿ ದ್ರೋಣನನ್ನು ರಕ್ಷಿಸುತ್ತಿದ್ದ ವಸಾತಿ, ಶಿಬಿ, ಬಾಹ್ಲೀಕ ಮತ್ತು ಕೌರವರನ್ನು ಕೂಡ ವಧಿಸಿದನು.

07165025a ಧೃಷ್ಟದ್ಯುಮ್ನಸ್ತದಾ ರಾಜನ್ಗಭಸ್ತಿಭಿರಿವಾಂಶುಮಾನ್|

07165025c ಬಭೌ ಪ್ರಚ್ಚಾದಯನ್ನಾಶಾಃ ಶರಜಾಲೈಃ ಸಮಂತತಃ||

ರಾಜನ್! ಆಗ ಧೃಷ್ಟದ್ಯುಮ್ನನು ಕಿರಣಗಳಿಂದ ಸೂರ್ಯನು ಹೇಗೋ ಹಾಗೆ ಶರಜಾಲಗಳಿಂದ ಎಲ್ಲ ದಿಕ್ಕುಗಳನ್ನೂ ಪಸರಿಸುತ್ತಾ ಪ್ರಕಾಶಿಸಿದನು.

07165026a ತಸ್ಯ ದ್ರೋಣೋ ಧನುಶ್ಚಿತ್ತ್ವಾ ವಿದ್ಧ್ವಾ ಚೈನಂ ಶಿಲೀಮುಖೈಃ|

07165026c ಮರ್ಮಾಣ್ಯಭ್ಯಹನದ್ಭೂಯಃ ಸ ವ್ಯಥಾಂ ಪರಮಾಮಗಾತ್||

ದ್ರೋಣನು ಅವನ ಧನುಸ್ಸನ್ನು ಕತ್ತರಿಸಿ ಶಿಲೀಮುಖಗಳಿಂದ ಅವನ ಮರ್ಮಸ್ಥಾನಗಳಿಗೆ ಹೊಡೆದು ಗಾಯಗೊಳಿಸಲು ಧೃಷ್ಟದ್ಯುಮ್ನನು ಬಹಳ ವ್ಯಥಿತನಾದನು.

07165027a ತತೋ ಭೀಮೋ ದೃಢಕ್ರೋಧೋ ದ್ರೋಣಸ್ಯಾಶ್ಲಿಷ್ಯ ತಂ ರಥಂ|

07165027c ಶನಕೈರಿವ ರಾಜೇಂದ್ರ ದ್ರೋಣಂ ವಚನಮಬ್ರವೀತ್||

ರಾಜೇಂದ್ರ! ಆಗ ದೃಢಕ್ರೋಧ ಭೀಮನು ತನ್ನ ರಥವನ್ನು ದ್ರೋಣನ ರಥಕ್ಕೆ ತಾಗಿಸಿಕೊಂಡು ಮೆಲ್ಲ ಮೆಲ್ಲನೆ ದ್ರೋಣನೊಂದಿಗೆ ಈ ಮಾತನ್ನಾಡಿದನು:

07165028a ಯದಿ ನಾಮ ನ ಯುಧ್ಯೇರಂ ಶಿಕ್ಷಿತಾ ಬ್ರಹ್ಮಬಂಧವಃ|

07165028c ಸ್ವಕರ್ಮಭಿರಸಂತುಷ್ಟಾ ನ ಸ್ಮ ಕ್ಷತ್ರಂ ಕ್ಷಯಂ ವ್ರಜೇತ್||

“ಒಂದುವೇಳೆ ಬ್ರಹ್ಮಬಂಧುಗಳು ತಮ್ಮ ಕರ್ಮಗಳಿಂದ ಅಸಂತುಷ್ಟರಾಗಿ ಪರಧರ್ಮವನ್ನು ಆಶ್ರಯಿಸಿ ಯುದ್ಧವನ್ನು ಮಾಡದೇ ಇದ್ದಿದ್ದರೆ ಈ ಕ್ಷತ್ರಿಯ ಕ್ಷಯವು ನಡೆಯುತ್ತಿರಲಿಲ್ಲ.

07165029a ಅಹಿಂಸಾ ಸರ್ವಭೂತೇಷು ಧರ್ಮಂ ಜ್ಯಾಯಸ್ತರಂ ವಿದುಃ|

07165029c ತಸ್ಯ ಚ ಬ್ರಾಹ್ಮಣೋ ಮೂಲಂ ಭವಾಂಶ್ಚ ಬ್ರಹ್ಮವಿತ್ತಮಃ||

ಸರ್ವಭೂತಗಳೊಡನೆ ಅಹಿಂಸೆಯಿಂದ ನಡೆದುಕೊಳ್ಳುವುದು ಪರಮ ಧರ್ಮವೆಂದು ತಿಳಿದವರು ಹೇಳುತ್ತಾರೆ. ಅಹಿಂಸೆಗೆ ಬ್ರಾಹ್ಮಣನೇ ಮೂಲ. ನೀವಾದರೂ ಬ್ರಹ್ಮವಿತ್ತಮರಾಗಿದ್ದೀರಿ.

07165030a ಶ್ವಪಾಕವನ್ಮ್ಲೇಚ್ಚಗಣಾನ್ ಹತ್ವಾ ಚಾನ್ಯಾನ್ಪೃಥಗ್ವಿಧಾನ್|

07165030c ಅಜ್ಞಾನಾನ್ಮೂಢವದ್ಬ್ರಹ್ಮನ್ಪುತ್ರದಾರಧನೇಪ್ಸಯಾ||

ಬ್ರಹ್ಮನ್! ಪುತ್ರ-ಪತ್ನಿ-ಧನವನ್ನು ಬಯಸಿ ಅಜ್ಞಾನದಿಂದ ಮೂಢ ಚಾಂಡಾಲರಂತೆ ನೀವು ಮ್ಲೇಚ್ಛಗಣಗಳನ್ನೂ ಅನ್ಯ ಕ್ಷತ್ರಿಯರನ್ನೂ ಸಂಹರಿಸುತ್ತಿರುವಿರಿ.

07165031a ಏಕಸ್ಯಾರ್ಥೇ ಬಹೂನ್ ಹತ್ವಾ ಪುತ್ರಸ್ಯಾಧರ್ಮವಿದ್ಯಥಾ|

07165031c ಸ್ವಕರ್ಮಸ್ಥಾನ್ವಿಕರ್ಮಸ್ಥೋ ನ ವ್ಯಪತ್ರಪಸೇ ಕಥಂ||

ವಿಕರ್ಮಸ್ಥ ನೀವು ಒಬ್ಬರೇ ಒಬ್ಬ ಮಗನ ಸಲುವಾಗಿ ಸ್ವಕರ್ಮದಲ್ಲಿ ನಿರತರಾಗಿರುವ ಅನೇಕ ಕ್ಷತ್ರಿಯರನ್ನು ಸಂಹರಿಸುತ್ತಿದ್ದೀರಲ್ಲ! ಇದರಿಂದ ಹೇಗೆ ನಿಮಗೆ ನಾಚಿಕೆಯಾಗುವುದಿಲ್ಲ?

07165032a ಸ ಚಾದ್ಯ ಪತಿತಃ ಶೇತೇ ಪೃಷ್ಟೇನಾವೇದಿತಸ್ತವ|

07165032c ಧರ್ಮರಾಜೇನ ತದ್ವಾಕ್ಯಂ ನಾತಿಶಂಕಿತುಮರ್ಹಸಿ||

ಅವನೇ ಇಂದು ಕೆಳಗುರುಳಿ ಹಿಂದೆ ಮಲಗಿದ್ದಾನೆ. ಇದು ನಿಮಗೆ ತಿಳಿದಿಲ್ಲ. ಧರ್ಮರಾಜನ ಆ ಮಾತನ್ನು ನೀವು ಅತಿಯಾಗಿ ಶಂಕಿಸಬಾರದು!”

07165033a ಏವಮುಕ್ತಸ್ತತೋ ದ್ರೋಣೋ ಭೀಮೇನೋತ್ಸೃಜ್ಯ ತದ್ಧನುಃ|

07165033c ಸರ್ವಾಣ್ಯಸ್ತ್ರಾಣಿ ಧರ್ಮಾತ್ಮಾ ಹಾತುಕಾಮೋಽಭ್ಯಭಾಷತ|

ಭೀಮಸೇನನು ಹೀಗೆ ಹೇಳಲು ದ್ರೋಣನು ಆ ಧನುಸ್ಸನ್ನು ಬಿಸುಟನು. ಸರ್ವ ಅಸ್ತ್ರಗಳನ್ನೂ ತೊರೆಯಲು ಬಯಸಿ ಧರ್ಮಾತ್ಮನು ಹೇಳಿದನು:

07165033e ಕರ್ಣ ಕರ್ಣ ಮಹೇಷ್ವಾಸ ಕೃಪ ದುರ್ಯೋಧನೇತಿ ಚ||

07165034a ಸಂಗ್ರಾಮೇ ಕ್ರಿಯತಾಂ ಯತ್ನೋ ಬ್ರವೀಮ್ಯೇಷ ಪುನಃ ಪುನಃ|

07165034c ಪಾಂಡವೇಭ್ಯಃ ಶಿವಂ ವೋಽಸ್ತು ಶಸ್ತ್ರಮಭ್ಯುತ್ಸೃಜಾಮ್ಯಹಂ||

“ಕರ್ಣ! ಮಹೇಷ್ವಾಸ ಕರ್ಣ! ಕೃಪ! ದುರ್ಯೋಧನ! ಪುನಃ ಪುನಃ ಹೇಳುತ್ತಿದ್ದೇನೆ. ಸಂಗ್ರಾಮದಲ್ಲಿ ಪ್ರಯತ್ನವನ್ನು ಮಾಡಿ! ಪಾಂಡವರಿಂದ ನಿಮಗೆ ಮಂಗಳವಾಗಲಿ. ನಾನು ಶಸ್ತ್ರಪರಿತ್ಯಾಗ ಮಾಡುತ್ತಿದ್ದೇನೆ!”

07165035a ಇತಿ ತತ್ರ ಮಹಾರಾಜ ಪ್ರಾಕ್ರೋಶದ್ದ್ರೌಣಿಮೇವ ಚ|

07165035c ಉತ್ಸೃಜ್ಯ ಚ ರಣೇ ಶಸ್ತ್ರಂ ರಥೋಪಸ್ಥೇ ನಿವೇಶ್ಯ ಚ|

07165035e ಅಭಯಂ ಸರ್ವಭೂತಾನಾಂ ಪ್ರದದೌ ಯೋಗಯುಕ್ತವಾನ್||

ಮಹಾರಾಜ! ಹೀಗೆ ದ್ರೋಣನು ದ್ರೌಣಿಯನ್ನೇ ಕೂಗಿ ಕರೆಯುತ್ತಾ ರಣದಲ್ಲಿ ಶಸ್ತ್ರವನ್ನು ಬಿಸುಟು ರಥದಲ್ಲಿ ಕುಳಿತುಕೊಂಡನು. ಯೋಗಯುಕ್ತನಾಗಿ ಸರ್ವಭೂತಗಳಿಗೂ ಅಭಯವನ್ನಿತ್ತನು.

07165036a ತಸ್ಯ ತಚ್ಚಿದ್ರಮಾಜ್ಞಾಯ ಧೃಷ್ಟದ್ಯುಮ್ನಃ ಸಮುತ್ಥಿತಃ|

07165036c ಖಡ್ಗೀ ರಥಾದವಪ್ಲುತ್ಯ ಸಹಸಾ ದ್ರೋಣಮಭ್ಯಯಾತ್||

ಅವನ ಆ ರೂಪವನ್ನು ಅರ್ಥಮಾಡಿಕೊಂಡು ಧೃಷ್ಟದ್ಯುಮ್ನನು ಮೇಲೆದ್ದು ಖಡ್ಗವನ್ನು ಹಿಡಿದು ರಥದಿಂದ ಹಾರಿ ಒಮ್ಮೆಲೇ ದ್ರೋಣನನ್ನು ಆಕ್ರಮಣಿಸಿದನು.

07165037a ಹಾಹಾಕೃತಾನಿ ಭೂತಾನಿ ಮಾನುಷಾಣೀತರಾಣಿ ಚ|

07165037c ದ್ರೋಣಂ ತಥಾಗತಂ ದೃಷ್ಟ್ವಾ ಧೃಷ್ಟದ್ಯುಮ್ನವಶಂ ಗತಂ||

ಆ ಸ್ಥಿತಿಯಲ್ಲಿ ದ್ರೋಣನು ಧೃಷ್ಟದ್ಯುಮ್ನನ ವಶನಾದುದನ್ನು ಕಂಡು ಭೂತಗಳು, ಮನುಷ್ಯರು ಮತ್ತು ಇತರರು ಹಾಹಾಕಾರಗೈದರು.

07165038a ಹಾಹಾಕಾರಂ ಭೃಶಂ ಚಕ್ರುರಹೋ ಧಿಗಿತಿ ಚಾಬ್ರುವನ್|

07165038c ದ್ರೋಣೋಽಪಿ ಶಸ್ತ್ರಾಣ್ಯುತ್ಸೃಜ್ಯ ಪರಮಂ ಸಾಮ್ಯಮಾಸ್ಥಿತಃ||

ಜೋರಾಗಿ ಹಾಹಾಕಾರವುಂಟಾಯಿತು. ಧಿಕ್ಕಾರವೆಂದೂ ಕೂಗಿಕೊಂಡರು. ಆದರೆ ದ್ರೋಣನಾದರೋ ಶಸ್ತ್ರಗಳನ್ನು ಬಿಸುಟು ಪರಮ ಸಾಮ್ಯಸ್ಥಿತಿಯನ್ನು ಹೊಂದಿದ್ದನು.

07165039a ತಥೋಕ್ತ್ವಾ ಯೋಗಮಾಸ್ಥಾಯ ಜ್ಯೋತಿರ್ಭೂತೋ ಮಹಾತಪಾಃ|

07165039c ದಿವಮಾಕ್ರಾಮದಾಚಾರ್ಯಃ ಸದ್ಭಿಃ ಸಹ ದುರಾಕ್ರಮಂ||

ಹಾಗೆ ಹೇಳಿ ಆ ಮಹಾತಪಸ್ವಿ ಆಚಾರ್ಯನು ಯೋಗವನ್ನು ಆಶ್ರಯಿಸಿ ಜ್ಯೋತಿರ್ಭೂತನಾಗಿ ಸತ್ಪುರುಷರಿಗೂ ಅಸಾದ್ಯ ದಿವವನ್ನು ಪ್ರವೇಶಿಸಿದ್ದನು.

07165040a ದ್ವೌ ಸೂರ್ಯಾವಿತಿ ನೋ ಬುದ್ಧಿರಾಸೀತ್ತಸ್ಮಿಂಸ್ತಥಾ ಗತೇ|

07165040c ಏಕಾಗ್ರಮಿವ ಚಾಸೀದ್ಧಿ ಜ್ಯೋತಿರ್ಭಿಃ ಪೂರಿತಂ ನಭಃ|

07165040e ಸಮಪದ್ಯತ ಚಾರ್ಕಾಭೇ ಭಾರದ್ವಾಜನಿಶಾಕರೇ||

ಅವನು ಹಾಗೆ ಹೋಗುತ್ತಿರಲು ಎರಡು ಸೂರ್ಯಗಳಿವೆಯೋ ಎನ್ನುವಂತೆ ನಮ್ಮ ಬುದ್ಧಿಗಳಿಗನ್ನಿಸಿತು. ಭಾರದ್ವಾಜನಿಶಾಕರನು ಉದಯಿಸಲು ಆಕಾಶವೆಲ್ಲವೂ ಪ್ರಕಾಶಮಾನವಾಯಿತು. ಅದು ಸೂರ್ಯನ ಜ್ಯೋತಿಯೊಂದಿಗೆ ಸೇರಿಕೊಂಡು ಒಂದಾಯಿತು.

07165041a ನಿಮೇಷಮಾತ್ರೇಣ ಚ ತಜ್ಜ್ಯೋತಿರಂತರಧೀಯತ|

07165041c ಆಸೀತ್ಕಿಲಕಿಲಾಶಬ್ದಃ ಪ್ರಹೃಷ್ಟಾನಾಂ ದಿವೌಕಸಾಂ|

07165041e ಬ್ರಹ್ಮಲೋಕಂ ಗತೇ ದ್ರೋಣೇ ಧೃಷ್ಟದ್ಯುಮ್ನೇ ಚ ಮೋಹಿತೇ||

ನಿಮಿಷಮಾತ್ರದಲ್ಲಿ ಆ ಜ್ಯೋತಿಯು ಅಂತರ್ಧಾನವಾಯಿತು. ದ್ರೋಣನು ಬ್ರಹ್ಮಲೋಕಕ್ಕೆ ಹೋಗಲು ಮತ್ತು ಧೃಷ್ಟದ್ಯುಮ್ನನು ಮೋಹಿತನಾಗಲು ಪ್ರಹೃಷ್ಟ ದಿವೌಕಸರಲ್ಲಿ ಕಿಲ ಕಿಲ ಶಬ್ಧವುಂಟಾಯಿತು.

07165042a ವಯಮೇವ ತದಾದ್ರಾಕ್ಷ್ಮ ಪಂಚ ಮಾನುಷಯೋನಯಃ|

07165042c ಯೋಗಯುಕ್ತಂ ಮಹಾತ್ಮಾನಂ ಗಚ್ಚಂತಂ ಪರಮಾಂ ಗತಿಂ||

07165043a ಅಹಂ ಧನಂಜಯಃ ಪಾರ್ಥಃ ಕೃಪಃ ಶಾರದ್ವತೋ ದ್ವಿಜಃ|

07165043c ವಾಸುದೇವಶ್ಚ ವಾರ್ಷ್ಣೇಯೋ ಧರ್ಮರಾಜಶ್ಚ ಪಾಂಡವಃ||

ಯೋಗಯುಕ್ತನಾದ ಆ ಮಹಾತ್ಮನು ಪರಮಗತಿಯಲ್ಲಿ ಹೋಗಿದ್ದುದನ್ನು ಮಾನುಷಯೋನಿಗಳಾದ ನಾವು ಐವರು ಮಾತ್ರ ಕಂಡೆವು: ನಾನು, ಪಾರ್ಥ ಧನಂಜಯ, ದ್ವಿಜ ಶಾರದ್ವತ ಕೃಪ, ವಾರ್ಷ್ಣೇಯ ವಾಸುದೇವ ಮತ್ತು ಪಾಂಡವ ಧರ್ಮರಾಜ.

07165044a ಅನ್ಯೇ ತು ಸರ್ವೇ ನಾಪಶ್ಯನ್ಭಾರದ್ವಾಜಸ್ಯ ಧೀಮತಃ|

07165044c ಮಹಿಮಾನಂ ಮಹಾರಾಜ ಯೋಗಮುಕ್ತಸ್ಯ ಗಚ್ಚತಃ||

ಮಹಾರಾಜ! ಧೀಮತ ಭಾರದ್ವಾಜ ಮಹಿಮಾನನು ಯೋಗಮುಕ್ತನಾಗಿ ಹೋಗಿದುದನ್ನು ಅನ್ಯರೆಲ್ಲರೂ ನೋಡಲಿಲ್ಲ.

07165045a ಗತಿಂ ಪರಮಿಕಾಂ ಪ್ರಾಪ್ತಮಜಾನಂತೋ ನೃಯೋನಯಃ|

07165045c ನಾಪಶ್ಯನ್ಗಚ್ಚಮಾನಂ ಹಿ ತಂ ಸಾರ್ಧಂ ಋಷಿಪುಂಗವೈಃ|

07165045e ಆಚಾರ್ಯಂ ಯೋಗಮಾಸ್ಥಾಯ ಬ್ರಹ್ಮಲೋಕಮರಿಂದಮಂ||

ಆಚಾರ್ಯ ಅರಿಂದಮನು ಯೋಗವನ್ನು ಬಳಸಿ ಋಷಿಪುಂಗವರೊಡನೆ ಪರಮ ಗತಿಯನ್ನು ಹೊಂದಿ ಬ್ರಹ್ಮಲೋಕಕ್ಕೆ ಹೋಗುತ್ತಿದ್ದುದನ್ನು ಅಜ್ಞಾನಿ ಮನುಷ್ಯರು ನೋಡಲಿಲ್ಲ.

07165046a ವಿತುನ್ನಾಂಗಂ ಶರಶತೈರ್ನ್ಯಸ್ತಾಯುಧಮಸೃಕ್ಕ್ಷರಂ|

07165046c ಧಿಕ್ಕೃತಃ ಪಾರ್ಷತಸ್ತಂ ತು ಸರ್ವಭೂತೈಃ ಪರಾಮೃಶತ್||

ನೂರಾರು ಶರಗಳಿಂದ ಅವನ ಅಂಗಗಳು ಗಾಯಗೊಂಡಿದ್ದವು. ಆಯುಧವನ್ನು ಕೆಳಗಿಟ್ಟಿದ್ದನು. ದೇಹದಿಂದ ರಕ್ತವು ಸೋರುತ್ತಿತ್ತು. ಅಂತಹ ಸ್ಥಿತಿಯಲ್ಲಿ ಅವನನ್ನು ಹಿಡಿದ ಪಾರ್ಷತನನ್ನು ಸರ್ವಭೂತಗಳೂ ಧಿಕ್ಕರಿಸಿದವು.

07165047a ತಸ್ಯ ಮೂರ್ಧಾನಮಾಲಂಬ್ಯ ಗತಸತ್ತ್ವಸ್ಯ ದೇಹಿನಃ|

07165047c ಕಿಂ ಚಿದಬ್ರುವತಃ ಕಾಯಾದ್ವಿಚಕರ್ತಾಸಿನಾ ಶಿರಃ||

ಸತ್ವವನ್ನು ಕಳೆದುಕೊಂಡಿದ್ದ ದೇಹದ ತಲೆಗೂದಲನ್ನು ಹಿಡಿದು ಏನನ್ನೂ ಮಾತನಾಡದಂತಿದ್ದ ಅವನ ಶಿರವನ್ನು ಧೃಷ್ಟದ್ಯುಮ್ನನು ಕಾಯದಿಂದ ಕತ್ತರಿಸಿದನು.

07165048a ಹರ್ಷೇಣ ಮಹತಾ ಯುಕ್ತೋ ಭಾರದ್ವಾಜೇ ನಿಪಾತಿತೇ|

07165048c ಸಿಂಹನಾದರವಂ ಚಕ್ರೇ ಭ್ರಾಮಯನ್ಖಡ್ಗಮಾಹವೇ||

ಭಾರದ್ವಾಜನು ಕೆಳಗೆ ಬೀಳಲು ಮಹಾಹರ್ಷಯುಕ್ತ ಧೃಷ್ಟದ್ಯುಮ್ನನು ಯುದ್ಧದಲ್ಲಿ ಖಡ್ಗವನ್ನು ತಿರುಗಿಸುತ್ತಾ ಜೋರಾಗಿ ಸಿಂಹನಾದಗೈದನು.

07165049a ಆಕರ್ಣಪಲಿತಃ ಶ್ಯಾಮೋ ವಯಸಾಶೀತಿಪಂಚಕಃ|

07165049c ತ್ವತ್ಕೃತೇ ವ್ಯಚರತ್ಸಂಖ್ಯೇ ಸ ತು ಷೋಡಶವರ್ಷವತ್||

ಕಿವಿಯವರೆಗೂ ತಲೆಗೂದಲು ನೆರೆದಿದ್ದ ಕಪ್ಪುವರ್ಣದ ದ್ರೋಣನು ಎಂಭತ್ತೈದು ವರ್ಷದವನಾಗಿದ್ದನು. ಆದರೆ ನಿನ್ನ ಸಲುವಾಗಿ ಹದಿನಾರು ವರ್ಷದವನಂತೆ ರಣದಲ್ಲಿ ಸಂಚರಿಸುತ್ತಿದ್ದನು.

07165050a ಉಕ್ತವಾಂಶ್ಚ ಮಹಾಬಾಹುಃ ಕುಂತೀಪುತ್ರೋ ಧನಂಜಯಃ|

07165050c ಜೀವಂತಮಾನಯಾಚಾರ್ಯಂ ಮಾ ವಧೀರ್ದ್ರುಪದಾತ್ಮಜ||

ಆಗ ಮಾಹಾಬಾಹು ಕುಂತೀಪುತ್ರ ಧನಂಜಯನು “ದ್ರುಪದಾತ್ಮಜ! ಆಚಾರ್ಯನನ್ನು ಜೀವಂತವಾಗಿ ಹಿಡಿದುಕೊಂಡು ಬಾ! ಕೊಲ್ಲಬೇಡ!” ಎಂದು ಕೂಗಿ ಹೇಳಿದ್ದನು.

07165051a ನ ಹಂತವ್ಯೋ ನ ಹಂತವ್ಯ ಇತಿ ತೇ ಸೈನಿಕಾಶ್ಚ ಹ|

07165051c ಉತ್ಕ್ರೋಶನ್ನರ್ಜುನಶ್ಚೈವ ಸಾನುಕ್ರೋಶಸ್ತಮಾದ್ರವತ್||

“ಕೊಲ್ಲಬಾರದವರನ್ನು ಕೊಲ್ಲಬೇಡ!” ಎಂದು ಸೈನಿಕರು ಕೂಗಿ ಹೇಳುತ್ತಿದ್ದರು. ಅರ್ಜುನನು ಕೂಡ ಅದನ್ನೇ ಕೂಗಿ ಹೇಳುತ್ತಾ ಧೃಷ್ಟದ್ಯುಮ್ನನ ಬಳಿ ಧಾವಿಸಿ ಬಂದಿದ್ದನು.

07165052a ಕ್ರೋಶಮಾನೇಽರ್ಜುನೇ ಚೈವ ಪಾರ್ಥಿವೇಷು ಚ ಸರ್ವಶಃ|

07165052c ಧೃಷ್ಟದ್ಯುಮ್ನೋಽವಧೀದ್ದ್ರೋಣಂ ರಥತಲ್ಪೇ ನರರ್ಷಭಂ||

ಅರ್ಜುನನೂ ಮತ್ತು ಸರ್ವ ಪಾರ್ಥಿವರೂ ಕೂಗಿಕೊಳ್ಳುತ್ತಿರುವಾಗಲೇ ಧೃಷ್ಟದ್ಯುಮ್ನನು ರಥದಮೇಲೆ ಕುಳಿತಿದ್ದ ನರರ್ಷಭ ದ್ರೋಣನನ್ನು ವಧಿಸಿದನು.

07165053a ಶೋಣಿತೇನ ಪರಿಕ್ಲಿನ್ನೋ ರಥಾದ್ಭೂಮಿಮರಿಂದಮಃ|

07165053c ಲೋಹಿತಾಂಗ ಇವಾದಿತ್ಯೋ ದುರ್ದರ್ಶಃ ಸಮಪದ್ಯತ|

07165053e ಏವಂ ತಂ ನಿಹತಂ ಸಂಖ್ಯೇ ದದೃಶೇ ಸೈನಿಕೋ ಜನಃ||

ರಕ್ತದಿಂದ ತೋಯ್ದ ಆ ಅರಿಂದಮನು ರಥದಿಂದ ನೆಲಕ್ಕೆ ಬೀಳಲು ಲೋಹಿತಾಂಗ ಆ ದುರ್ದರ್ಷನು ಆದಿತ್ಯನಂತೆ ತೋರಿದನು. ರಣದಲ್ಲಿ ಹೀಗೆ ಅವನು ಸಂಹರಿಸಲ್ಪಟ್ಟಿದುದನ್ನು ಸೈನಿಕ ಜನರು ನೋಡಿದರು.

07165054a ಧೃಷ್ಟದ್ಯುಮ್ನಸ್ತು ತದ್ರಾಜನ್ಭಾರದ್ವಾಜಶಿರೋ ಮಹತ್|

07165054c ತಾವಕಾನಾಂ ಮಹೇಷ್ವಾಸಃ ಪ್ರಮುಖೇ ತತ್ಸಮಾಕ್ಷಿಪತ್||

ರಾಜನ್! ಮಹೇಷ್ವಾಸ ಧೃಷ್ಟದ್ಯುಮ್ನನಾದರೋ ಭಾರದ್ವಾಜನ ಆ ಮಹಾಶಿರವನ್ನು ನಿನ್ನವರ ಪ್ರಮುಖದಲ್ಲಿ ಎಸೆದನು.

07165055a ತೇ ತು ದೃಷ್ಟ್ವಾ ಶಿರೋ ರಾಜನ್ಭಾರದ್ವಾಜಸ್ಯ ತಾವಕಾಃ|

07165055c ಪಲಾಯನಕೃತೋತ್ಸಾಹಾ ದುದ್ರುವುಃ ಸರ್ವತೋದಿಶಂ||

ರಾಜನ್! ಭಾರದ್ವಾಜನ ಆ ಶಿರವನ್ನು ನೋಡಿ ನಿಮ್ಮವರು ಪಲಾಯನಮಾಡಲು ಉತ್ಸುಕರಾಗಿ ಸರ್ವ ದಿಕ್ಕುಗಳಲ್ಲಿ ಓಡಿ ಹೋದರು.

07165056a ದ್ರೋಣಸ್ತು ದಿವಮಾಸ್ಥಾಯ ನಕ್ಷತ್ರಪಥಮಾವಿಶತ್|

07165056c ಅಹಮೇವ ತದಾದ್ರಾಕ್ಷಂ ದ್ರೋಣಸ್ಯ ನಿಧನಂ ನೃಪ||

ನೃಪ! ದ್ರೋಣನಾದರೋ ದಿವವನ್ನು ಸೇರಿ ನಕ್ಷತ್ರಪಥವನ್ನು ಪ್ರವೇಶಿಸಿದನು. ದ್ರೋಣನ ನಿಧನವನ್ನು ನಾನೊಬ್ಬನೇ ನೋಡಿದೆನು.

07165057a ಋಷೇಃ ಪ್ರಸಾದಾತ್ಕೃಷ್ಣಸ್ಯ ಸತ್ಯವತ್ಯಾಃ ಸುತಸ್ಯ ಚ|

07165057c ವಿಧೂಮಾಮಿವ ಸಮ್ಯಾಂತೀಮುಲ್ಕಾಂ ಪ್ರಜ್ವಲಿತಾಮಿವ|

07165057e ಅಪಶ್ಯಾಮ ದಿವಂ ಸ್ತಬ್ಧ್ವಾ ಗಚ್ಚಂತಂ ತಂ ಮಹಾದ್ಯುತಿಂ||

ಸತ್ಯವತೀ ಸುತ ಋಷಿ ಕೃಷ್ಣನ ಪ್ರಸಾದದಿಂದ ನಾನು ಆ ಮಹಾದ್ಯುತಿಯು ಹೊಗೆಯಿಲ್ಲದ ಅಗ್ನಿಯಂತೆ ಮತ್ತು ಪ್ರಜ್ವಲಿಸುತ್ತಿರುವ ಉಲ್ಕೆಯಂತೆ ದಿವಿಯನ್ನು ಸೇರಿ ಹೋಗುತ್ತಿರುವುದನ್ನು ನೋಡಿದೆನು.

07165058a ಹತೇ ದ್ರೋಣೇ ನಿರುತ್ಸಾಹಾನ್ಕುರೂನ್ಪಾಂಡವಸೃಂಜಯಾಃ|

07165058c ಅಭ್ಯದ್ರವನ್ಮಹಾವೇಗಾಸ್ತತಃ ಸೈನ್ಯಂ ವ್ಯದೀರ್ಯತ||

ದ್ರೋಣನು ಹತನಾಗಲು ನಿರುತ್ಸಾಹಿತರಾಗಿದ್ದ ಕುರುಗಳನ್ನು ಪಾಂಡವ-ಸೃಂಜಯರು ಮಹಾವೇಗದಿಂದ ಆಕ್ರಮಣಿಸಿದರು. ಆಗ ಕೌರವ ಸೈನ್ಯವು ಒಡೆದುಹೋಯಿತು.

07165059a ನಿಹತಾ ಹಯಭೂಯಿಷ್ಠಾಃ ಸಂಗ್ರಾಮೇ ನಿಶಿತೈಃ ಶರೈಃ|

07165059c ತಾವಕಾ ನಿಹತೇ ದ್ರೋಣೇ ಗತಾಸವ ಇವಾಭವನ್||

ಸಂಗ್ರಾಮದಲ್ಲಿ ನಿಶಿತಶರಗಳಿಂದ ಅನೇಕರು ಹತರಾದರು. ದ್ರೋಣನು ಹತನಾಗಲು ನಿನ್ನವರು ಜೀವವನ್ನೇ ಕಳೆದುಕೊಂಡವರಂತೆ ಆಗಿದ್ದರು.

07165060a ಪರಾಜಯಮಥಾವಾಪ್ಯ ಪರತ್ರ ಚ ಮಹದ್ಭಯಂ|

07165060c ಉಭಯೇನೈವ ತೇ ಹೀನಾ ನಾವಿಂದನ್ಧೃತಿಮಾತ್ಮನಃ||

ಕೌರವ ಸೇನೆಯು ಇಲ್ಲಿ ಪರಾಜಯವನ್ನು ಹೊಂದಿ ಮರಣಾನಂತರದ ಮಹಾಭಯವನ್ನೂ ಹೊಂದಿದ್ದರು. ಇವೆರಡರಿಂದಲೂ ವಂಚಿತರಾದ ಆವರು ಆತ್ಮಧೃತಿಯನ್ನು ಕಳೆದುಕೊಂಡು ದುಃಖಿತರಾದರು.

07165061a ಅನ್ವಿಚ್ಚಂತಃ ಶರೀರಂ ತು ಭಾರದ್ವಾಜಸ್ಯ ಪಾರ್ಥಿವಾಃ|

07165061c ನಾಧ್ಯಗಚ್ಚಂಸ್ತದಾ ರಾಜನ್ಕಬಂಧಾಯುತಸಂಕುಲೇ||

ರಾಜನ್! ನಮ್ಮ ಕಡೆಯ ಪಾರ್ಥಿವರು ಭಾರದ್ವಾಜನ ಶರೀರವನ್ನು ಹುಡುಕಿದರೂ ಲಕ್ಷಗಟ್ಟಲೆ ಕಬಂಧಗಳ ರಾಶಿಗಳಲ್ಲಿ ಅವರಿಗೆ ಅದು ಸಿಗಲೇ ಇಲ್ಲ.

07165062a ಪಾಂಡವಾಸ್ತು ಜಯಂ ಲಬ್ಧ್ವಾ ಪರತ್ರ ಚ ಮಹದ್ಯಶಃ|

07165062c ಬಾಣಶಬ್ದರವಾಂಶ್ಚಕ್ರುಃ ಸಿಂಹನಾದಾಂಶ್ಚ ಪುಷ್ಕಲಾನ್||

ಪಾಂಡವರಾದರೋ ಜಯ ಮತ್ತು ಮರಣಾನಂತರದ ಮಹಾಯಶಸ್ಸನ್ನು ಗಳಿಸಿ ಬಾಣಗಳಿಂದ ಶಬ್ಧಮಾಡಿದರು ಮತ್ತು ಪುಷ್ಕಲ ಸಿಂಹನಾದಗೈದರು.

07165063a ಭೀಮಸೇನಸ್ತತೋ ರಾಜನ್ಧೃಷ್ಟದ್ಯುಮ್ನಶ್ಚ ಪಾರ್ಷತಃ|

07165063c ವರೂಥಿನ್ಯಾಮನೃತ್ಯೇತಾಂ ಪರಿಷ್ವಜ್ಯ ಪರಸ್ಪರಂ||

ರಾಜನ್! ಆಗ ಭೀಮಸೇನ ಮತ್ತು ಪಾರ್ಷತ ಧೃಷ್ಟದ್ಯುಮ್ನರು ಪರಸ್ಪರರನ್ನು ಬಿಗಿದಪ್ಪಿ ಸೇನೆಗಳ ಮಧ್ಯೆ ಕುಣಿದಾಡಿದರು.

07165064a ಅಬ್ರವೀಚ್ಚ ತದಾ ಭೀಮಃ ಪಾರ್ಷತಂ ಶತ್ರುತಾಪನಂ|

07165064c ಭೂಯೋಽಹಂ ತ್ವಾಂ ವಿಜಯಿನಂ ಪರಿಷ್ವಕ್ಷ್ಯಾಮಿ ಪಾರ್ಷತ|

07165064e ಸೂತಪುತ್ರೇ ಹತೇ ಪಾಪೇ ಧಾರ್ತರಾಷ್ಟ್ರೇ ಚ ಸಮ್ಯುಗೇ||

ಆಗ ಭೀಮನು ಶತ್ರುತಾಪನ ಪಾರ್ಷತನಿಗೆ ಹೇಳಿದನು: “ಪಾರ್ಷತ! ಸಂಯುಗದಲ್ಲಿ ಸೂತಪುತ್ರ ಮತ್ತು ಪಾಪಿ ಧಾರ್ತರಾಷ್ಟ್ರನು ಹತನಾದನಂತರ ವಿಜಯಿಯಾದ ನಿನ್ನನ್ನು ಪುನಃ ಅಪ್ಪಿಕೊಳ್ಳುತ್ತೇನೆ!”

07165065a ಏತಾವದುಕ್ತ್ವಾ ಭೀಮಸ್ತು ಹರ್ಷೇಣ ಮಹತಾ ಯುತಃ|

07165065c ಬಾಹುಶಬ್ದೇನ ಪೃಥಿವೀಂ ಕಂಪಯಾಮಾಸ ಪಾಂಡವಃ||

ಹೀಗೆ ಹೇಳಿ ಪಾಂಡವ ಭೀಮನು ಮಹಾ ಹರ್ಷಗೊಂಡವನಾಗಿ ತೋಳಿನ ಶಬ್ಧದಿಂದ ಭೂಮಿಯನ್ನೇ ನಡುಗಿಸತೊಡಗಿದನು.

07165066a ತಸ್ಯ ಶಬ್ದೇನ ವಿತ್ರಸ್ತಾಃ ಪ್ರಾದ್ರವಂಸ್ತಾವಕಾ ಯುಧಿ|

07165066c ಕ್ಷತ್ರಧರ್ಮಂ ಸಮುತ್ಸೃಜ್ಯ ಪಲಾಯನಪರಾಯಣಾಃ||

ಅವನ ಆ ಶಬ್ಧದಿಂದ ಭಯಭೀತರಾದ ನಿನ್ನವರು ಕ್ಷತ್ರಧರ್ಮವನ್ನು ತ್ಯಜಿಸಿ ಪಲಾಯನಪರಾಯಣರಾಗಿ ಓಡಿಹೋಗತೊಡಗಿದರು.

07165067a ಪಾಂಡವಾಸ್ತು ಜಯಂ ಲಬ್ಧ್ವಾ ಹೃಷ್ಟಾ ಹ್ಯಾಸನ್ವಿಶಾಂ ಪತೇ|

07165067c ಅರಿಕ್ಷಯಂ ಚ ಸಂಗ್ರಾಮೇ ತೇನ ತೇ ಸುಖಮಾಪ್ನುವನ್||

ವಿಶಾಂಪತೇ! ಪಾಂಡವರಾದರೋ ಜಯವನ್ನು ಪಡೆದು ಸಂತೋಷವನ್ನು ತಮ್ಮದಾಗಿಸಿಕೊಂಡರು. ಸಂಗ್ರಾಮದಲ್ಲಿ ಶತ್ರುನಾಶದಿಂದ ಸುಖವನ್ನು ಹೊಂದಿದರು.

07165068a ತತೋ ದ್ರೋಣೇ ಹತೇ ರಾಜನ್ಕುರವಃ ಶಸ್ತ್ರಪೀಡಿತಾಃ|

07165068c ಹತಪ್ರವೀರಾ ವಿಧ್ವಸ್ತಾ ಭೃಶಂ ಶೋಕಪರಾಯಣಾಃ||

ರಾಜನ್! ದ್ರೋಣನು ಹತನಾದ ನಂತರ ಮತ್ತು ಅನೇಕ ವೀರರು ಹತರಾದ ನಂತರ ಶಸ್ತ್ರಪೀಡಿತ ಗಾಯಗೊಂಡ ಕುರುಗಳು ತುಂಬಾ ಶೋಕಪರಾಯಣರಾದರು.

07165069a ವಿಚೇತಸೋ ಹತೋತ್ಸಾಹಾಃ ಕಶ್ಮಲಾಭಿಹತೌಜಸಃ|

07165069c ಆರ್ತಸ್ವರೇಣ ಮಹತಾ ಪುತ್ರಂ ತೇ ಪರ್ಯವಾರಯನ್||

ಚೇತನಗಳನ್ನೇ ಕಳೆದುಕೊಂಡ, ಉತ್ಸಾಹಹೀನರಾದ, ದೀನರೂ, ತೇಜಸ್ಸು ಕುಂದಿದವರೂ ಆದ ಅವರು ಮಹಾ ಆರ್ತಸ್ವರದಿಂದ ಅಳುತ್ತಾ ನಿನ್ನ ಮಗನನ್ನು ಸುತ್ತುವರೆದರು.

07165070a ರಜಸ್ವಲಾ ವೇಪಮಾನಾ ವೀಕ್ಷಮಾಣಾ ದಿಶೋ ದಶ|

07165070c ಅಶ್ರುಕಂಠಾ ಯಥಾ ದೈತ್ಯಾ ಹಿರಣ್ಯಾಕ್ಷೇ ಪುರಾ ಹತೇ||

ಹಿಂದೆ ಹಿರಣ್ಯಾಕ್ಷನು ಹತನಾದಾಗ ದೈತ್ಯರು ಹೇಗಾಗಿದ್ದರೋ ಹಾಗೆ ಕುರುಸೈನಿಕರು ಧೂಳುತುಂಬಿದವರಾಗಿ ದಿಕ್ಕು ದಿಕ್ಕುಗಳನ್ನು ನೋಡುತ್ತಾ ನಡುಗುತ್ತಿದ್ದರು.

07165071a ಸ ತೈಃ ಪರಿವೃತೋ ರಾಜಾ ತ್ರಸ್ತೈಃ ಕ್ಷುದ್ರಮೃಗೈರಿವ|

07165071c ಅಶಕ್ನುವನ್ನವಸ್ಥಾತುಮಪಾಯಾತ್ತನಯಸ್ತವ||

ಕ್ಷುದ್ರಮೃಗಗಳಂತೆ ಪರಿವೃತರಾಗಿದ್ದ ಅವರನ್ನು ಸಮಾಧಾನಗೊಳಿಸಲು ಅಸಮರ್ಥನಾಗಿ ನಿನ್ನ ಮಗ ರಾಜನು ಅಲ್ಲಿಂದ ಹೊರಟು ಹೋದನು.

07165072a ಕ್ಷುತ್ಪಿಪಾಸಾಪರಿಶ್ರಾಂತಾಸ್ತೇ ಯೋಧಾಸ್ತವ ಭಾರತ|

07165072c ಆದಿತ್ಯೇನ ಚ ಸಂತಪ್ತಾ ಭೃಶಂ ವಿಮನಸೋಽಭವನ್||

ಭಾರತ! ಹಸಿವು-ಬಾಯಾರಿಕೆಗಳಿಂದ ಬಳಲಿದ್ದ ನಿನ್ನ ಯೋಧರು ಸೂರ್ಯನ ಬಿಸಿಲಿನಿಂದ ತುಂಬಾ ಸಂತಪ್ತರಾಗಿ ವಿಮನಸ್ಕರಾದರು.

07165073a ಭಾಸ್ಕರಸ್ಯೇವ ಪತನಂ ಸಮುದ್ರಸ್ಯೇವ ಶೋಷಣಂ|

07165073c ವಿಪರ್ಯಾಸಂ ಯಥಾ ಮೇರೋರ್ವಾಸವಸ್ಯೇವ ನಿರ್ಜಯಂ||

07165074a ಅಮರ್ಷಣೀಯಂ ತದ್ದೃಷ್ಟ್ವಾ ಭಾರದ್ವಾಜಸ್ಯ ಪಾತನಂ|

07165074c ತ್ರಸ್ತರೂಪತರಾ ರಾಜನ್ಕೌರವಾಃ ಪ್ರಾದ್ರವನ್ಭಯಾತ್||

ಭಾಸ್ಕರನೇ ಬಿದ್ದುಬಿಟ್ಟನೋ ಅಥವಾ ಸಮುದ್ರವೇ ಒಣಗಿಹೋಯಿತೋ ಅಥವಾ ಮೇರುಪರ್ವತವೇ ತಲೆಕೆಳಗಾಯಿತೋ ಅಥವಾ ಇಂದ್ರನೇ ಸೋತುಹೋದನೋ ಎನ್ನುವಂತಿದ್ದ ಆ ಭಾರದ್ವಾಜನ ಪತನವನ್ನು ನೋಡಿ ಸಹಿಸಿಕೊಳ್ಳಲಾರದೇ ಅತ್ಯಂತ ಭಯಭೀತರಾಗಿ ನಡುಗುತ್ತಾ ಕೌರವರು ಪಲಾಯನಮಾಡತೊಡಗಿದರು.

07165075a ಗಾಂಧಾರರಾಜಃ ಶಕುನಿಸ್ತ್ರಸ್ತಸ್ತ್ರಸ್ತತರೈಃ ಸಹ|

07165075c ಹತಂ ರುಕ್ಮರಥಂ ದೃಷ್ಟ್ವಾ ಪ್ರಾದ್ರವತ್ಸಹಿತೋ ರಥೈಃ||

ರುಕ್ಮರಥ ದ್ರೋಣನು ಹತನಾದುದನ್ನು ಕಂಡ ಗಾಂಧಾರರಾಜ ಶಕುನಿಯು ಭಯಗೊಂಡು ತನಗಿಂತಲೂ ಹೆಚ್ಚು ಭಯಗೊಂಡಿದ್ದ ರಥಿಕರೊಡನೆ ಪಲಾಯನಮಾಡಿದನು.

07165076a ವರೂಥಿನೀಂ ವೇಗವತೀಂ ವಿದ್ರುತಾಂ ಸಪತಾಕಿನೀಂ|

07165076c ಪರಿಗೃಹ್ಯ ಮಹಾಸೇನಾಂ ಸೂತಪುತ್ರೋಽಪಯಾದ್ಭಯಾತ್||

ಸೂತಪುತ್ರ ಕರ್ಣನು ಭಯದಿಂದ ವೇಗವಾಗಿ ಓಡಿಹೋಗುತ್ತಿರುವ ಪತಾಕೆಗಳುಳ್ಳ ರಥಗಳ ಮಹಾಸೇನೆಯೊಂದಿಗೆ ಪಲಾಯನಮಾಡಿದನು.

07165077a ರಥನಾಗಾಶ್ವಕಲಿಲಾಂ ಪುರಸ್ಕೃತ್ಯ ತು ವಾಹಿನೀಂ|

07165077c ಮದ್ರಾಣಾಮೀಶ್ವರಃ ಶಲ್ಯೋ ವೀಕ್ಷಮಾಣೋಽಪಯಾದ್ಭಯಾತ್||

ಮದ್ರರ ರಾಜ ಶಲ್ಯನೂ ಕೂಡ ರಥ-ಆನೆ-ಕುದುರೆಗಳಿಂದ ಸಮೃದ್ಧ ತನ್ನ ಸೇನೆಯನ್ನು ಮುಂದೆಮಾಡಿಕೊಂಡು ಭಯದಿಂದ ಹಿಂದೆಮುಂದೆ ನೋಡುತ್ತಾ ಪಲಾಯನಮಾಡಿದನು.

07165078a ಹತಪ್ರವೀರೈರ್ಭೂಯಿಷ್ಠಂ ದ್ವಿಪೈರ್ಬಹುಪದಾತಿಭಿಃ|

07165078c ವೃತಃ ಶಾರದ್ವತೋಽಗಚ್ಚತ್ಕಷ್ಟಂ ಕಷ್ಟಮಿತಿ ಬ್ರುವನ್||

ಹತರಾಗಿದ್ದ ಅನೇಕ ವೀರರೂ, ಆನೆಗಳೂ ಮತ್ತು ಅನೇಕ ಪದಾತಿಗಳಿಂದ ಆವೃತರಾಗಿದ್ದ ಶಾರದ್ವತ ಕೃಪನು “ಕಷ್ಟ! ಕಷ್ಟ!” ಎಂದು ಹೇಳಿಕೊಳ್ಳುತ್ತಾ ರಣದಿಂದ ಹೊರಟುಹೋದನು.

07165079a ಭೋಜಾನೀಕೇನ ಶಿಷ್ಟೇನ ಕಲಿಂಗಾರಟ್ಟಬಾಹ್ಲಿಕೈಃ|

07165079c ಕೃತವರ್ಮಾ ವೃತೋ ರಾಜನ್ಪ್ರಾಯಾತ್ಸುಜವನೈರ್ಹಯೈಃ||

ರಾಜನ್! ಅಳಿದುಳಿದ ಭೋಜರಿಂದ, ಕಳಿಂಗ, ಆರಟ್ಟ ಮತ್ತು ಬಾಹ್ಲೀಕರಿಂದ ಪರಿವೃತನಾಗಿ ಕೃತವರ್ಮನು ವೇಗವಾಗಿ ಹೋಗುತ್ತಿರುವ ಕುದುರೆಗಳಿಂದ ಎಳೆಯಲ್ಪಟ್ಟ ರಥದಲ್ಲಿ ಕುಳಿತು ಪಲಾಯನಮಾಡಿದನು.

07165080a ಪದಾತಿಗಣಸಮ್ಯುಕ್ತಸ್ತ್ರಸ್ತೋ ರಾಜನ್ಭಯಾರ್ದಿತಃ|

07165080c ಉಲೂಕಃ ಪ್ರಾದ್ರವತ್ತತ್ರ ದೃಷ್ಟ್ವಾ ದ್ರೋಣಂ ನಿಪಾತಿತಂ||

ರಾಜನ್! ದ್ರೋಣನು ಕೆಳಗುರುಳಿದ್ದುದನ್ನು ನೋಡಿ ಉಲೂಕನು ಪದಾತಿಸೇನೆಗಳಿಂದ ಕೂಡಿ ಭಯಾರ್ದಿತನಾಗಿ ನಡುಗುತ್ತಾ ಪಲಾಯನಗೈದನು.

07165081a ದರ್ಶನೀಯೋ ಯುವಾ ಚೈವ ಶೌರ್ಯೇ ಚ ಕೃತಲಕ್ಷಣಃ|

07165081c ದುಃಶಾಸನೋ ಭೃಶೋದ್ವಿಗ್ನಃ ಪ್ರಾದ್ರವದ್ಗಜಸಂವೃತಃ||

ಪರಾಕ್ರಮಿಯ ಶೌರ್ಯದ ಲಕ್ಷಣಗಳುಳ್ಳ, ಯುವಕನೂ ಸುಂದರನೂ ಆದ ದುಃಶಾಸನನು ತುಂಬಾ ಉದ್ವಿಗ್ನನಾಗಿ ಗಜಸೇನೆಯಿಂದ ಸುತ್ತುವರೆಯಲ್ಪಟ್ಟು ಪಲಾಯನಮಾಡಿದನು.

07165082a ಗಜಾಶ್ವರಥಸಮ್ಯುಕ್ತೋ ವೃತಶ್ಚೈವ ಪದಾತಿಭಿಃ|

07165082c ದುರ್ಯೋಧನೋ ಮಹಾರಾಜ ಪ್ರಾಯಾತ್ತತ್ರ ಮಹಾರಥಃ||

ಮಹಾರಾಜ! ಮಹಾರಥ ದುರ್ಯೋಧನನು ಗಜಾಶ್ವರಥಗಳಿಂದೊಡಗೂಡಿದ ಸೇನೆಯಿಂದ ಮತ್ತು ಪದಾತಿಗಳಿಂದ ಸುತ್ತುವರೆಯಲ್ಪಟ್ಟು ಅಲ್ಲಿಂದ ಪಲಾಯನಮಾಡಿದನು.

07165083a ಗಜಾನ್ರಥಾನ್ಸಮಾರುಹ್ಯ ಪರಸ್ಯಾಪಿ ಹಯಾಂ ಜನಾಃ|

07165083c ಪ್ರಕೀರ್ಣಕೇಶಾ ವಿಧ್ವಸ್ತಾ ನ ದ್ವಾವೇಕತ್ರ ಧಾವತಃ||

ಆನೆ ರಥಗಳನ್ನು ಏರಿಕೊಂಡು, ಇತರ ಜನರು ಕುದುರೆಗಳನ್ನೇರಿಕೊಂಡು ತಲೆಕೂದಲಗಳು ಕೆದರಿಹೋಗಿರಲು ತಡವರಿಸುತ್ತಾ ಮುಗ್ಗರಿಸುತ್ತಾ ಓಡಿ ಹೋಗುತ್ತಿದ್ದರು.

07165084a ನೇದಮಸ್ತೀತಿ ಪುರುಷಾ ಹತೋತ್ಸಾಹಾ ಹತೌಜಸಃ|

07165084c ಉತ್ಸೃಜ್ಯ ಕವಚಾನನ್ಯೇ ಪ್ರಾದ್ರವಂಸ್ತಾವಕಾ ವಿಭೋ||

ವಿಭೋ! ನಿನ್ನವರು “ಇದು ಇನ್ನು ಉಳಿಯುವುದಿಲ್ಲ” ಎಂದು ಹೇಳಿಕೊಳ್ಳುತ್ತಾ, ಉತ್ಸಾಹ ತೇಜಸ್ಸುಗಳನ್ನು ಕಳೆದುಕೊಂಡು, ಇನ್ನು ಕೆಲವರು ಕವಚಗಳನ್ನೇ ಬಿಸುಟು ಓಡಿಹೋಗುತ್ತಿದ್ದರು.

07165085a ಅನ್ಯೋನ್ಯಂ ತೇ ಸಮಾಕ್ರೋಶನ್ಸೈನಿಕಾ ಭರತರ್ಷಭ|

07165085c ತಿಷ್ಠ ತಿಷ್ಠೇತಿ ನ ಚ ತೇ ಸ್ವಯಂ ತತ್ರಾವತಸ್ಥಿರೇ||

ಭರತರ್ಷಭ! ಸೈನಿಕರು “ನಿಲ್ಲು! ನಿಲ್ಲು!” ಎಂದು ಅನ್ಯೋನ್ಯರನ್ನು ಕೂಗಿ ಕರೆಯುತ್ತಾ ಓಡಿಹೋಗುತ್ತಿದ್ದರೂ ಸ್ವಯಂ ತಾವು ಯಾರಿಗೂ ನಿಲ್ಲುತ್ತಿರಲಿಲ್ಲ.

07165086a ಧುರ್ಯಾನ್ಪ್ರಮುಚ್ಯ ತು ರಥಾದ್ಧತಸೂತಾನ್ಸ್ವಲಂಕೃತಾನ್|

07165086c ಅಧಿರುಹ್ಯ ಹಯಾನ್ಯೋಧಾಃ ಕ್ಷಿಪ್ರಂ ಪದ್ಭಿರಚೋದಯನ್||

ಸಾರಥಿಗಳನ್ನು ಕಳೆದುಕೊಂಡ ಸ್ವಲಂಕೃತ ರಥಗಳಿಂದ ಕುದುರೆಗಳನ್ನು ಬಿಚ್ಚಿ ಏರಿ ಕಾಲುಗಳಿಂದಲೇ ಪ್ರಚೋದಿಸುತ್ತಾ ವೇಗದಿಂದ ಯೋಧರು ಓಡಿಹೋಗುತ್ತಿದ್ದರು.

07165087a ದ್ರವಮಾಣೇ ತಥಾ ಸೈನ್ಯೇ ತ್ರಸ್ತರೂಪೇ ಹತೌಜಸಿ|

07165087c ಪ್ರತಿಸ್ರೋತ ಇವ ಗ್ರಾಹೋ ದ್ರೋಣಪುತ್ರಃ ಪರಾನಿಯಾತ್||

ಈ ರೀತಿ ತೇಜೋಹೀನರಾಗಿ ಭಯದಿಂದ ಓಡಿಹೋಗುತ್ತಿದ್ದ ಸೇನೆಯನ್ನು ಪ್ರವಾಹಕ್ಕೆ ವಿರುದ್ಧವಾಗಿ ವೇಗದಿಂದ ಮೊಸಳೆಯೋಪಾದಿಯಲ್ಲಿ ಶತ್ರುಸೇನೆಯ ಕಡೆ ಬರುತ್ತಿದ್ದ ದ್ರೋಣಪುತ್ರನು ನೋಡಿದನು.

07165088a ಹತ್ವಾ ಬಹುವಿಧಾಂ ಸೇನಾಂ ಪಾಂಡೂನಾಂ ಯುದ್ಧದುರ್ಮದಃ|

07165088c ಕಥಂ ಚಿತ್ ಸಂಕಟಾನ್ಮುಕ್ತೋ ಮತ್ತದ್ವಿರದವಿಕ್ರಮಃ||

ಮದಿಸಿದ ಸಲಗದ ವಿಕ್ರಮವುಳ್ಳ ಆ ಯುದ್ಧದುರ್ಮದನು ಪಾಂಡವರ ಬಹುವಿಧದ ಸೇನೆಯನ್ನು ಸಂಹರಿಸಿ, ಎಷ್ಟೋ ಸಂಕಟಗಳಿಂದ ಪಾರಾಗಿ ಬರುತ್ತಿದ್ದನು.

07165089a ದ್ರವಮಾಣಂ ಬಲಂ ದೃಷ್ಟ್ವಾ ಪಲಾಯನಕೃತಕ್ಷಣಂ|

07165089c ದುರ್ಯೋಧನಂ ಸಮಾಸಾದ್ಯ ದ್ರೋಣಪುತ್ರೋಽಬ್ರವೀದಿದಂ||

ಪಲಾಯನಮಾಡುವುದರಲ್ಲಿಯೇ ಹೆಚ್ಚು ಉತ್ಸಾಹವಿಟ್ಟಿದ್ದ ಮತ್ತು ದಿಕ್ಕಾಪಾಲಾಗಿ ಓಡಿ ಹೋಗುತ್ತಿರುವ ಸೇನೆಯನ್ನು ನೋಡಿ ದ್ರೋಣಪುತ್ರನು ದುರ್ಯೋಧನನ ಬಳಿಸಾರಿ ಹೀಗೆ ಹೇಳಿದನು:

07165090a ಕಿಮಿಯಂ ದ್ರವತೇ ಸೇನಾ ತ್ರಸ್ತರೂಪೇವ ಭಾರತ|

07165090c ದ್ರವಮಾಣಾಂ ಚ ರಾಜೇಂದ್ರ ನಾವಸ್ಥಾಪಯಸೇ ರಣೇ||

“ಭಾರತ! ರಾಜೇಂದ್ರ! ಬಹಳ ಭಯಗೊಂಡವರಂತೆ ಈ ಸೇನೆಯೇಕೆ ಓಡಿಹೋಗುತ್ತಿದೆ? ರಣದಿಂದ ಓಡಿಹೋಗುತ್ತಿರುವವರನ್ನು ನೀನೇಕೆ ತಡೆಯುತ್ತಿಲ್ಲ?

07165091a ತ್ವಂ ಚಾಪಿ ನ ಯಥಾಪೂರ್ವಂ ಪ್ರಕೃತಿಸ್ಥೋ ನರಾಧಿಪ|

07165091c ಕರ್ಣಪ್ರಭೃತಯಶ್ಚೇಮೇ ನಾವತಿಷ್ಠಂತಿ ಪಾರ್ಥಿವಾಃ||

ನರಾಧಿಪ! ನೀನೂ ಕೂಡ ಮೊದಲಿನಂತೆ ಕಾಣುತ್ತಿಲ್ಲ! ಕರ್ಣಾದಿ ರಾಜರೂ ಕೂಡ ರಣಾಂಗಣದಲ್ಲಿ ನಿಲ್ಲುತ್ತಿಲ್ಲ!

07165092a ಅನ್ಯೇಷ್ವಪಿ ಚ ಯುದ್ಧೇಷು ನೈವ ಸೇನಾದ್ರವತ್ತದಾ|

07165092c ಕಚ್ಚಿತ್ ಕ್ಷೇಮಂ ಮಹಾಬಾಹೋ ತವ ಸೈನ್ಯಸ್ಯ ಭಾರತ||

ಬೇರೆ ಯುದ್ಧಗಳಲ್ಲಿ ನಿನ್ನ ಸೇನೆಯು ಹೀಗೆ ಓಡಿಹೋಗುತ್ತಿರಲಿಲ್ಲ. ಮಹಾಬಾಹೋ! ಭಾರತ! ನಿನ್ನ ಸೇನೆಯಲ್ಲಿ ಎಲ್ಲರೂ ಕ್ಷೇಮವಷ್ಟೇ?

07165093a ಕಸ್ಮಿನ್ನಿದಂ ಹತೇ ರಾಜನ್ರಥಸಿಂಹೇ ಬಲಂ ತವ|

07165093c ಏತಾಮವಸ್ಥಾಂ ಸಂಪ್ರಾಪ್ತಂ ತನ್ಮಮಾಚಕ್ಷ್ವ ಕೌರವ||

ರಾಜನ್! ನಿನ್ನ ಸೇನೆಯಲ್ಲಿ ಯಾವ ರಥಸಿಂಹನು ಹತನಾದುದರಿಂದ ನಿನ್ನ ಸೇನೆಗೆ ಈ ಅವಸ್ಥೆಯುಂಟಾಯಿತು ಎನ್ನುವುದನ್ನು ನನಗೆ ಹೇಳು ಕೌರವ!”

07165094a ತತ್ತು ದುರ್ಯೋಧನಃ ಶ್ರುತ್ವಾ ದ್ರೋಣಪುತ್ರಸ್ಯ ಭಾಷಿತಂ|

07165094c ಘೋರಮಪ್ರಿಯಮಾಖ್ಯಾತುಂ ನಾಶಕತ್ಪಾರ್ಥಿವರ್ಷಭಃ||

ದ್ರೋಣಪುತ್ರನಾಡಿದ ಆ ಮಾತನ್ನು ಕೇಳಿ ಪಾರ್ಥಿವರ್ಷಭ ದುರ್ಯೋಧನನು ಘೋರವೂ ಅಪ್ರಿಯವೂ ಆದ ವಿಷಯವನ್ನು ಅವನಿಗೆ ಹೇಳಲು ಶಕ್ಯನಾಗಲಿಲ್ಲ.

07165095a ಭಿನ್ನಾ ನೌರಿವ ತೇ ಪುತ್ರೋ ನಿಮಗ್ನಃ ಶೋಕಸಾಗರೇ|

07165095c ಬಾಷ್ಪೇಣ ಪಿಹಿತೋ ದೃಷ್ಟ್ವಾ ದ್ರೋಣಪುತ್ರಂ ರಥೇ ಸ್ಥಿತಂ||

ಶೋಕವೆಂಬ ಮಹಾಸಾಗರದಲ್ಲಿ ನೌಕೆಯು ಒಡೆದು ಮುಳುಗಿಹೋಗಿದ್ದ ನಿನ್ನ ಪುತ್ರನು ರಥದಲ್ಲಿದ್ದ ದ್ರೋಣಪುತ್ರನನ್ನು ನೋಡಿ ಕಣ್ಣುಗಳಲ್ಲಿ ನೀರುತುಂಬಿಸಿಕೊಂಡನು.

07165096a ತತಃ ಶಾರದ್ವತಂ ರಾಜಾ ಸವ್ರೀಡಮಿದಮಬ್ರವೀತ್|

07165096c ಶಂಸೇಹ ಸರ್ವಂ ಭದ್ರಂ ತೇ ಯಥಾ ಸೈನ್ಯಮಿದಂ ದ್ರುತಂ||

ಆಗ ರಾಜನು ಲಜ್ಜಿತನಾಗಿ ಶಾರದ್ವತನಿಗೆ “ಈ ಸೇನೆಯು ಏಕೆ ಓಡಿಹೋಗುತ್ತಿದೆ ಎನ್ನುವುದನ್ನು ಸರ್ವಸ್ವವಾಗಿ ಹೇಳು! ನಿನಗೆ ಮಂಗಳವಾಗಲಿ!” ಎಂದನು.

07165097a ಅಥ ಶಾರದ್ವತೋ ರಾಜನ್ನಾರ್ತಿಂ ಗಚ್ಚನ್ಪುನಃ ಪುನಃ|

07165097c ಶಶಂಸ ದ್ರೋಣಪುತ್ರಾಯ ಯಥಾ ದ್ರೋಣೋ ನಿಪಾತಿತಃ||

ರಾಜನ್! ಆಗ ಶಾರದ್ವತನು ಬಾರಿ ಬಾರಿ ಸಂಕಟಪಡುತ್ತಾ ದ್ರೋಣಪುತ್ರನಿಗೆ ದ್ರೋಣನು ಹೇಗೆ ಕೆಳಗುರುಳಿಸಲ್ಪಟ್ಟನು ಎನ್ನುವುದನ್ನು ಹೇಳಿದನು:

07165098 ಕೃಪ ಉವಾಚ|

07165098a ವಯಂ ದ್ರೋಣಂ ಪುರಸ್ಕೃತ್ಯ ಪೃಥಿವ್ಯಾಂ ಪ್ರವರಂ ರಥಂ|

07165098c ಪ್ರಾವರ್ತಯಾಮ ಸಂಗ್ರಾಮಂ ಪಾಂಚಾಲೈರೇವ ಕೇವಲೈಃ||

ಕೃಪನು ಹೇಳಿದನು: “ನಾವು ಪೃಥ್ವಿಯಲ್ಲಿಯೇ ರಥಶ್ರೇಷ್ಠ ದ್ರೋಣನನ್ನೇ ಮುಂದಿರಿಸಿಕೊಂಡು ಕೇವಲ ಪಾಂಚಾಲರೊಡನೆ ಯುದ್ಧವನ್ನು ಪ್ರಾರಂಭಿಸಿದೆವು.

07165099a ತತಃ ಪ್ರವೃತ್ತೇ ಸಂಗ್ರಾಮೇ ವಿಮಿಶ್ರಾಃ ಕುರುಸೋಮಕಾಃ|

07165099c ಅನ್ಯೋನ್ಯಮಭಿಗರ್ಜಂತಃ ಶಸ್ತ್ರೈರ್ದೇಹಾನಪಾತಯನ್||

ಹಾಗೆ ಸಂಗ್ರಾಮವು ನಡೆಯುತ್ತಿರಲು ಕುರು-ಸೋಮಕರು ಒಟ್ಟಾಗಿ ಅನ್ಯೋನ್ಯರೊಡನೆ ಗರ್ಜಿಸುತ್ತಾ ಶಸ್ತ್ರಗಳಿಂದ ಶತ್ರುಗಳ ಶರೀರಗಳನ್ನು ಕೆಳಗುರುಳಿಸಿದರು.

07165100a ತತೋ ದ್ರೋಣೋ ಬ್ರಾಹ್ಮಮಸ್ತ್ರಂ ವಿಕುರ್ವಾಣೋ ನರರ್ಷಭಃ|

07165100c ಅಹನಚ್ಚಾತ್ರವಾನ್ಭಲ್ಲೈಃ ಶತಶೋಽಥ ಸಹಸ್ರಶಃ||

ಆಗ ನರರ್ಷಭ ದ್ರೋಣನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಭಲ್ಲಗಳಿಂದ ನೂರಾರು ಸಹಸ್ರಾರು ಶತ್ರುಸೈನಿಕರನ್ನು ಸಂಹರಿಸಿದನು.

07165101a ಪಾಂಡವಾಃ ಕೇಕಯಾ ಮತ್ಸ್ಯಾಃ ಪಾಂಚಾಲಾಶ್ಚ ವಿಶೇಷತಃ|

07165101c ಸಂಖ್ಯೇ ದ್ರೋಣರಥಂ ಪ್ರಾಪ್ಯ ವ್ಯನಶನ್ಕಾಲಚೋದಿತಾಃ||

ಕಾಲಚೋದಿತ ಪಾಂಡವರು, ಕೇಕಯರು, ಮತ್ಸ್ಯರು ಮತ್ತು ವಿಶೇಷವಾಗಿ ಪಾಂಚಾಲರು ರಣದಲ್ಲಿ ದ್ರೋಣನ ರಥದ ಸಮೀಪಕ್ಕೆ ಬಂದು ನಾಶಹೊಂದಿದರು.

07165102a ಸಹಸ್ರಂ ರಥಸಿಂಹಾನಾಂ ದ್ವಿಸಾಹಸ್ರಂ ಚ ದಂತಿನಾಂ|

07165102c ದ್ರೋಣೋ ಬ್ರಹ್ಮಾಸ್ತ್ರನಿರ್ದಗ್ಧಂ ಪ್ರೇಷಯಾಮಾಸ ಮೃತ್ಯವೇ||

ಬ್ರಹ್ಮಾಸ್ತ್ರದ ಪ್ರಯೋಗದಿಂದ ದ್ರೋಣನು ಸಾವಿರ ರಥಸಿಂಹರನ್ನೂ ಎರಡು ಸಾವಿರ ಆನೆಗಳನ್ನೂ ಸುಟ್ಟು ಮೃತ್ಯುಲೋಕಕ್ಕೆ ಕಳುಹಿಸಿದನು.

07165103a ಆಕರ್ಣಪಲಿತಃ ಶ್ಯಾಮೋ ವಯಸಾಶೀತಿಪಂಚಕಃ|

07165103c ರಣೇ ಪರ್ಯಚರದ್ದ್ರೋಣೋ ವೃದ್ಧಃ ಷೋಡಶವರ್ಷವತ್||

ಕಿವಿಯವರೆಗೂ ಕೂದಲು ನೆರೆತಿದ್ದ, ಎಂಭತ್ತೈದು ವರ್ಷದ ಆ ಶ್ಯಾಮಲವರ್ಣದ ವೃದ್ಧನು ರಣದಲ್ಲಿ ಹದಿನಾರು ವರ್ಷದವನಂತೆ ಸಂಚರಿಸುತ್ತಿದ್ದನು.

07165104a ಕ್ಲಿಶ್ಯಮಾನೇಷು ಸೈನ್ಯೇಷು ವಧ್ಯಮಾನೇಷು ರಾಜಸು|

07165104c ಅಮರ್ಷವಶಮಾಪನ್ನಾಃ ಪಾಂಚಾಲಾ ವಿಮುಖಾಭವನ್||

ಸೈನ್ಯಗಳು ಕಷ್ಟಕ್ಕೊಳಗಾಗಲು, ರಾಜರು ವಧಿಸಲ್ಪಡುತ್ತಿರಲು ಕೋಪಗೊಂಡ ಪಾಂಚಾಲರು ಯುದ್ಧದಿಂದ ವಿಮುಖರಾದರು.

07165105a ತೇಷು ಕಿಂ ಚಿತ್ಪ್ರಭಗ್ನೇಷು ವಿಮುಖೇಷು ಸಪತ್ನಜಿತ್|

07165105c ದಿವ್ಯಮಸ್ತ್ರಂ ವಿಕುರ್ವಾಣೋ ಬಭೂವಾರ್ಕ ಇವೋದಿತಃ||

ಅವರು ಹೀಗೆ ಪ್ರಭಗ್ನರಾಗಿ ವಿಮುಖರಾಗಲು ಶತ್ರುಗಳನ್ನು ಜಯಿಸುವ ದ್ರೋಣನು ದಿವ್ಯಾಸ್ತ್ರಗಳನ್ನು ಪ್ರಕಟಿಸುತ್ತಾ ಉದಯಿಸಿದ ಸೂರ್ಯನಂತೆ ಪ್ರಕಾಶಿಸಿದನು.

07165106a ಸ ಮಧ್ಯಂ ಪ್ರಾಪ್ಯ ಪಾಂಡೂನಾಂ ಶರರಶ್ಮಿಃ ಪ್ರತಾಪವಾನ್|

07165106c ಮಧ್ಯಂಗತ ಇವಾದಿತ್ಯೋ ದುಷ್ಪ್ರೇಕ್ಷ್ಯಸ್ತೇ ಪಿತಾಭವತ್||

ನಿನ್ನ ತಂದೆ ಆ ಪ್ರತಾಪವಾನನು ಪಾಂಡವಸೇನೆಯ ಮಧ್ಯದಲ್ಲಿ ಬಿಡುತ್ತಿರುವ ಶರಗಳ ಕಿರಣಗಳಿಂದಾಗಿ ಮಧ್ಯಾಹ್ನದ ಸೂರ್ಯನಂತೆ ನೋಡಲೂ ಕಷ್ಟಕರನಾಗಿದ್ದನು.

07165107a ತೇ ದಹ್ಯಮಾನಾ ದ್ರೋಣೇನ ಸೂರ್ಯೇಣೇವ ವಿರಾಜತಾ|

07165107c ದಗ್ಧವೀರ್ಯಾ ನಿರುತ್ಸಾಹಾ ಬಭೂವುರ್ಗತಚೇತಸಃ||

ಸೂರ್ಯನಂತೆ ವಿರಾಜಿಸುತ್ತಿದ್ದ ದ್ರೋಣನಿಂದ ದಹಿಸಲ್ಪಡುತ್ತಿದ್ದ ಅವರು ವೀರ್ಯವೇ ಸುಟ್ಟುಹೋದಂತವರಾಗಿ ನಿರುತ್ಸಾಹರಾಗಿ ಚೇತನವನ್ನೇ ಕಳೆದುಕೊಂಡರು.

07165108a ತಾನ್ದೃಷ್ಟ್ವಾ ಪೀಡಿತಾನ್ಬಾಣೈರ್ದ್ರೋಣೇನ ಮಧುಸೂದನಃ|

07165108c ಜಯೈಷೀ ಪಾಂಡುಪುತ್ರಾಣಾಮಿದಂ ವಚನಮಬ್ರವೀತ್||

ದ್ರೋಣನ ಬಾಣಗಳಿಂದ ಪೀಡಿತರಾದ ಅವರನ್ನು ನೋಡಿ ಅವರ ಜಯವನ್ನೇ ಬಯಸುವ ಮಧುಸೂದನನು ಪಾಂಡುಪುತ್ರರಿಗೆ ಹೀಗೆಂದನು:

07165109a ನೈಷ ಜಾತು ಪರೈಃ ಶಕ್ಯೋ ಜೇತುಂ ಶಸ್ತ್ರಭೃತಾಂ ವರಃ|

07165109c ಅಪಿ ವೃತ್ರಹಣಾ ಸಂಖ್ಯೇ ರಥಯೂಥಪಯೂಥಪಃ||

“ಶಸ್ತ್ರಧಾರಿಗಳಲ್ಲಿಯೇ ಶ್ರೇಷ್ಠನಾದ, ರಥಿಗಳ ನಾಯಕರಿಗೂ ನಾಯಕನಾಗಿರುವ ಇವನನ್ನು ಜಯಿಸಲು ರಣದಲ್ಲಿ ಯಾವ ಶತ್ರುವಿಗೂ, ವೃತ್ರಹ ಇಂದ್ರನಿಗೂ, ಸಾಧ್ಯವಿಲ್ಲ.

07165110a ತೇ ಯೂಯಂ ಧರ್ಮಮುತ್ಸೃಜ್ಯ ಜಯಂ ರಕ್ಷತ ಪಾಂಡವಾಃ|

07165110c ಯಥಾ ವಃ ಸಮ್ಯುಗೇ ಸರ್ವಾನ್ನ ಹನ್ಯಾದ್ರುಕ್ಮವಾಹನಃ||

ಪಾಂಡವರೇ! ರುಕ್ಮರಥ ದ್ರೋಣನು ಯುದ್ಧದಲ್ಲಿ ನಮ್ಮೆಲ್ಲರನ್ನೂ ಸಂಹರಿಸಿಬಿಡಬಾರದೆಂದಾದರೆ ನೀವು ಧರ್ಮವನ್ನು ಬದಿಗೊತ್ತಿ ಜಯವನ್ನು ರಕ್ಷಿಸಬೇಕು!

07165111a ಅಶ್ವತ್ಥಾಮ್ನಿ ಹತೇ ನೈಷ ಯುಧ್ಯೇದಿತಿ ಮತಿರ್ಮಮ|

07165111c ಹತಂ ತಂ ಸಮ್ಯುಗೇ ಕಶ್ಚಿದಾಖ್ಯಾತ್ವಸ್ಮೈ ಮೃಷಾ ನರಃ||

ಅಶ್ವತ್ಥಾಮನು ಹತನಾದರೆ ಇವನು ಯುದ್ಧಮಾಡುವುದಿಲ್ಲ ಎಂದು ನನ್ನ ಅಭಿಪ್ರಾಯ. ಆದುದರಿಂದ ಯಾರಾದರೊಬ್ಬನು ಯುದ್ಧದಲ್ಲಿ ಅಶ್ವತ್ಥಾಮನು ಹತನಾದನೆಂಬ ಸುಳ್ಳನ್ನು ಅವನಿಗೆ ಹೇಳಬೇಕು!”

07165112a ಏತನ್ನಾರೋಚಯದ್ವಾಕ್ಯಂ ಕುಂತೀಪುತ್ರೋ ಧನಂಜಯಃ|

07165112c ಅರೋಚಯಂಸ್ತು ಸರ್ವೇಽನ್ಯೇ ಕೃಚ್ಚ್ರೇಣ ತು ಯುಧಿಷ್ಠಿರಃ||

ಈ ಮಾತು ಕುಂತೀಪುತ್ರ ಧನಂಜಯನಿಗೆ ಹಿಡಿಸಲಿಲ್ಲ. ಅನ್ಯರೆಲ್ಲರೂ, ಬಹಳ ಕಷ್ಟದಿಂದ ಯುಧಿಷ್ಠಿರನೂ, ಅದಕ್ಕೆ ಸಮ್ಮತಿಸಿದರು.

07165113a ಭೀಮಸೇನಸ್ತು ಸವ್ರೀಡಮಬ್ರವೀತ್ಪಿತರಂ ತವ|

07165113c ಅಶ್ವತ್ಥಾಮಾ ಹತ ಇತಿ ತಚ್ಚಾಬುಧ್ಯತ ತೇ ಪಿತಾ||

ಭೀಮಸೇನನು ನಾಚಿಕೆಗೊಂಡೇ ಅಶ್ವತ್ಥಾಮನು ಹತನಾದನೆಂದು ನಿನ್ನ ತಂದೆಗೆ ಹೇಳಿದನು. ಆದರೆ ನಿನ್ನ ತಂದೆಯು ಅವನ ಮಾತನ್ನು ನಂಬಲಿಲ್ಲ.

07165114a ಸ ಶಂಕಮಾನಸ್ತನ್ಮಿಥ್ಯಾ ಧರ್ಮರಾಜಮಪೃಚ್ಚತ|

07165114c ಹತಂ ವಾಪ್ಯಹತಂ ವಾಜೌ ತ್ವಾಂ ಪಿತಾ ಪುತ್ರವತ್ಸಲಃ||

ಆದರೂ ಪುತ್ರವತ್ಸಲ ನಿನ್ನ ತಂದೆಯು ಅದು ಸುಳ್ಳೆಂದು ಸಂದೇಹಗೊಂಡು ಅಶ್ವತ್ಥಾಮನು ಹತನಾದನೇ ಅಥವಾ ಅಲ್ಲವೇ ಎಂದು ಧರ್ಮರಾಜನನ್ನು ಕೇಳಿದನು.

07165115a ತದತಥ್ಯಭಯೇ ಮಗ್ನೋ ಜಯೇ ಸಕ್ತೋ ಯುಧಿಷ್ಠಿರಃ|

07165115c ಅಶ್ವತ್ಥಾಮಾನಮಾಹೇದಂ ಹತಃ ಕುಂಜರ ಇತ್ಯುತ|

07165115e ಭೀಮೇನ ಗಿರಿವರ್ಷ್ಮಾಣಂ ಮಾಲವಸ್ಯೇಂದ್ರವರ್ಮಣಃ||

ಆಗ ಸುಳ್ಳುಹೇಳಲು ಭಯಗೊಂಡಿದ್ದ ಆದರೆ ಜಯದಲ್ಲಿ ಆಸಕ್ತನಾಗಿದ್ದ ಯುಧಿಷ್ಠಿರನು ಮಾಲವದ ಇಂದ್ರವರ್ಮನ ಅಶ್ವತ್ಥಾಮ ಎಂಬ ಹೆಸರಿನ ಪರ್ವತಾಕಾರದ ಆನೆಯು ಭೀಮನಿಂದ ಹತವಾಯಿತು ಎಂದು ಹೇಳಿದನು.

07165116a ಉಪಸೃತ್ಯ ತದಾ ದ್ರೋಣಮುಚ್ಚೈರಿದಮಭಾಷತ|

07165116c ಯಸ್ಯಾರ್ಥೇ ಶಸ್ತ್ರಮಾಧತ್ಸೇ ಯಮವೇಕ್ಷ್ಯ ಚ ಜೀವಸಿ|

07165116e ಪುತ್ರಸ್ತೇ ದಯಿತೋ ನಿತ್ಯಂ ಶೋಽಶ್ವತ್ಥಾಮಾ ನಿಪಾತಿತಃ||

ದ್ರೋಣನ ಹತ್ತಿರ ಹೋಗಿ ಗಟ್ಟಿಯಾಗಿ ಹೀಗೆ ಹೇಳಿದನು: “ಯಾರಿಗಾಗಿ ಶಸ್ತ್ರಗಳನ್ನು ಹಿಡಿದಿರುವೆಯೋ ಮತ್ತು ಯಾರನ್ನು ನೋಡಿ ಜೀವಂತನಾಗಿರುವೆಯೋ ಆ ನಿನ್ನ ನಿತ್ಯ ಪ್ರಿಯಪುತ್ರ ಅಶ್ವತ್ಥಾಮನು ಕೆಳಗುರುಳಿಸಲ್ಪಟ್ಟಿದ್ದಾನೆ.”

07165117a ತಚ್ಚ್ರುತ್ವಾ ವಿಮನಾಸ್ತತ್ರ ಆಚಾರ್ಯೋ ಮಹದಪ್ರಿಯಂ|

07165117c ನಿಯಮ್ಯ ದಿವ್ಯಾನ್ಯಸ್ತ್ರಾಣಿ ನಾಯುಧ್ಯತ ಯಥಾ ಪುರಾ||

ಆ ಮಹಾ ಅಪ್ರಿಯವಾದುದನ್ನು ಕೇಳಿ ಆಚಾರ್ಯನು ಅಲ್ಲಿ ವಿಮನಸ್ಕನಾಗಿ, ದಿವ್ಯಾಸ್ತ್ರಗಳನ್ನು ನಿಲ್ಲಿಸಿ ಹಿಂದಿನಂತೆ ಯುದ್ಧಮಾಡಲಿಲ್ಲ.

07165118a ತಂ ದೃಷ್ಟ್ವಾ ಪರಮೋದ್ವಿಗ್ನಂ ಶೋಕೋಪಹತಚೇತಸಂ|

07165118c ಪಾಂಚಾಲರಾಜಸ್ಯ ಸುತಃ ಕ್ರೂರಕರ್ಮಾ ಸಮಾದ್ರವತ್||

ಪರಮ ಉದ್ವಿಗ್ನನಾಗಿದ್ದ, ಶೋಕದಿಂದ ಹತಚೇತನನಾಗಿದ್ದ ಅವನನ್ನು ಪಾಂಚಾಲರಾಜನ ಕ್ರೂರಕರ್ಮಿ ಮಗನು ಆಕ್ರಮಣಿಸಿದನು.

07165119a ತಂ ದೃಷ್ಟ್ವಾ ವಿಹಿತಂ ಮೃತ್ಯುಂ ಲೋಕತತ್ತ್ವವಿಚಕ್ಷಣಃ|

07165119c ದಿವ್ಯಾನ್ಯಸ್ತ್ರಾಣ್ಯಥೋತ್ಸೃಜ್ಯ ರಣೇ ಪ್ರಾಯ ಉಪಾವಿಶತ್||

ಮೃತ್ಯುವೆಂದು ವಿಹಿತನಾಗಿದ್ದ ಅವನನ್ನು ನೋಡಿ ಲೋಕತತ್ವಗಳನ್ನು ಕಂಡಿದ್ದ ದ್ರೋಣನು ರಣದಲ್ಲಿ ದಿವ್ಯಾಸ್ತ್ರಗಳನ್ನು ವಿಸರ್ಜಿಸಿ ಪ್ರಾಯೋಪವೇಶಮಾಡಿದನು.

07165120a ತತೋಽಸ್ಯ ಕೇಶಾನ್ಸವ್ಯೇನ ಗೃಹೀತ್ವಾ ಪಾಣಿನಾ ತದಾ|

07165120c ಪಾರ್ಷತಃ ಕ್ರೋಶಮಾನಾನಾಂ ವೀರಾಣಾಮಚ್ಚಿನಚ್ಚಿರಃ||

ತಕ್ಷಣವೇ ಪಾರ್ಷತನು, ವೀರರು ಬೇಡವೆಂದು ಕೂಗಿಕೊಳ್ಳುತ್ತಿದ್ದರೂ, ಎಡಗೈಯಿಂದ ದ್ರೋಣನ ತಲೆಗೂದಲನ್ನು ಹಿಡಿದುಕೊಂಡನು.

07165121a ನ ಹಂತವ್ಯೋ ನ ಹಂತವ್ಯ ಇತಿ ತೇ ಸರ್ವತೋಽಬ್ರುವನ್|

07165121c ತಥೈವ ಚಾರ್ಜುನೋ ವಾಹಾದವರಹೈನಮಾದ್ರವತ್||

“ವಧ್ಯನಲ್ಲದವನನ್ನು ವಧಿಸಬೇಡ!” ಎಂದು ಸುತ್ತಲಿದ್ದ ಎಲ್ಲರೂ ಹೇಳುತ್ತಿದ್ದರು. ಹಾಗೆಯೇ ಅರ್ಜುನನೂ ಕೂಡ ರಥದಿಂದ ಕೆಳಕ್ಕಿಳಿದು ಅವನನ್ನು ತಡೆಯಲು ಓಡಿ ಬಂದನು.

07165122a ಉದ್ಯಮ್ಯ ಬಾಹೂ ತ್ವರಿತೋ ಬ್ರುವಾಣಶ್ಚ ಪುನಃ ಪುನಃ|

07165122c ಜೀವಂತಮಾನಯಾಚಾರ್ಯಂ ಮಾ ವಧೀರಿತಿ ಧರ್ಮವಿತ್||

ಧರ್ಮವಿದು ಅರ್ಜುನನು “ಜೀವಂತವಾಗಿ ಆಚಾರ್ಯನನ್ನು ಕರೆದುಕೊಂಡು ಬಾ! ಕೊಲ್ಲಬೇಡ!” ಎಂದು ಪುನಃ ಪುನಃ ಹೇಳುತ್ತಾ ಬಾಹುಗಳನ್ನು ಮೇಲೆತ್ತಿ ಓಡಿ ಬರುತ್ತಿದ್ದನು.

07165123a ತಥಾಪಿ ವಾರ್ಯಮಾಣೇನ ಕೌರವೈರರ್ಜುನೇನ ಚ|

07165123c ಹತ ಏವ ನೃಶಂಸೇನ ಪಿತಾ ತವ ನರರ್ಷಭ||

ಕೌರವರು ಮತ್ತು ಅರ್ಜುನರು ತಡೆಯುತ್ತಿದ್ದರೂ ಆ ನರರ್ಷಭನು ನಿನ್ನ ತಂದೆಯನ್ನು ಕ್ರೂರತನದಿಂದ ಕೊಂದೇಬಿಟ್ಟನು.

07165124a ಸೈನಿಕಾಶ್ಚ ತತಃ ಸರ್ವೇ ಪ್ರಾದ್ರವಂತ ಭಯಾರ್ದಿತಾಃ|

07165124c ವಯಂ ಚಾಪಿ ನಿರುತ್ಸಾಹಾ ಹತೇ ಪಿತರಿ ತೇಽನಘ||

ಆಗ ಸೈನಿಕರೆಲ್ಲರೂ ಭಯಾರ್ದಿತರಾಗಿ ಓಡತೊಡಗಿದರು. ಅನಘ! ನಾವೂ ಕೂಡ ನಿನ್ನ ತಂದೆಯ ಮರಣದಿಂದ ನಿರುತ್ಸಾಹಿಗಳಾಗಿದ್ದೇವೆ.””

07165125 ಸಂಜಯ ಉವಾಚ|

07165125a ತಚ್ಚ್ರುತ್ವಾ ದ್ರೋಣಪುತ್ರಸ್ತು ನಿಧನಂ ಪಿತುರಾಹವೇ|

07165125c ಕ್ರೋಧಮಾಹಾರಯತ್ತೀವ್ರಂ ಪದಾಹತ ಇವೋರಗಃ||

ಸಂಜಯನು ಹೇಳಿದನು: “ಯುದ್ಧದಲ್ಲಿ ತನ್ನ ತಂದೆಯು ಹತನಾದನೆಂದು ಕೇಳಿದ ದ್ರೋಣಪುತ್ರನು ಕಾಲಿನಿಂದ ಮೆಟ್ಟಲ್ಪಟ್ಟ ಸರ್ಪದಂತೆ ಅತಿ ತೀವ್ರ ಕ್ರೋಧವನ್ನು ತಾಳಿದನು.” 

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣವಧ ಪರ್ವಣಿ ದ್ರೋಣವಧೇ ಪಂಚಷಷ್ಟ್ಯಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣವಧ ಪರ್ವದಲ್ಲಿ ದ್ರೋಣವಧ ಎನ್ನುವ ನೂರಾಅರವತ್ತೈದನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣವಧ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣವಧ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೬/೧೮, ಉಪಪರ್ವಗಳು-೭೧/೧೦೦, ಅಧ್ಯಾಯಗಳು-೧೧೪೨/೧೯೯೫, ಶ್ಲೋಕಗಳು-೪೦೭೮೦/೭೩೭೮೪

Image result for indian motifs

Comments are closed.