ಕರ್ಣ ಪರ್ವ
Contents
Toggle೩೨
ಪಾಂಡವ ಸೇನಾವ್ಯೂಹದ ವರ್ಣನೆ (೧-೭). ಸಂಶಪ್ತಕರೊಡನೆ ಅರ್ಜುನನ ಯುದ್ಧ (೮-೧೪). ಪಾಂಡವಸೇನೆಯೊಡನೆ ಕರ್ಣನ ಯುದ್ಧ (೧೫-೪೫). ಭೀಮಸೇನನಿಂದ ಕರ್ಣಪುತ್ರ ಸತ್ಯಸೇನನ ವಧೆ (೪೬-೫೦). ಸಂಕುಲ ಯುದ್ಧದ ವರ್ಣನೆ (೫೧-೮೪).
08032001 ಧೃತರಾಷ್ಟ್ರ ಉವಾಚ|
08032001a ತಥಾ ವ್ಯೂಢೇಷ್ವನೀಕೇಷು ಸಂಸಕ್ತೇಷು ಚ ಸಂಜಯ|
08032001c ಸಂಶಪ್ತಕಾನ್ಕಥಂ ಪಾರ್ಥೋ ಗತಃ ಕರ್ಣಶ್ಚ ಪಾಂಡವಾನ್||
ಧೃತರಾಷ್ಟ್ರನು ಹೇಳಿದನು: “ಸಂಜಯ! ಹಾಗೆ ವ್ಯೂಹಗಳು ಸಂಘರ್ಷಿಸಲು ಪಾರ್ಥನು ಸಂಶಪ್ತಕರೊಡನೆ ಮತ್ತು ಅವನು ಇಲ್ಲದಾಗ ಕರ್ಣನು ಪಾಂಡವರೊಡನೆ ಹೇಗೆ ಯುದ್ಧಮಾಡಿದರು?
08032002a ಏತದ್ವಿಸ್ತರತೋ ಯುದ್ಧಂ ಪ್ರಬ್ರೂಹಿ ಕುಶಲೋ ಹ್ಯಸಿ|
08032002c ನ ಹಿ ತೃಪ್ಯಾಮಿ ವೀರಾಣಾಂ ಶೃಣ್ವಾನೋ ವಿಕ್ರಮಾನ್ರಣೇ||
ಯುದ್ಧವನ್ನು ವಿಸ್ತಾರವಾಗಿ ವರ್ಣಿಸುವುದರಲ್ಲಿ ನೀನು ಕುಶಲನಾಗಿದ್ದೀಯೆ. ರಣದಲ್ಲಿ ವೀರರ ವಿಕ್ರಮವನ್ನು ಕೇಳುವುದರಲ್ಲಿ ನನಗೆ ತೃಪ್ತಿಯೆಂಬುದೇ ಇಲ್ಲದಾಗಿದೆ!”
08032003 ಸಂಜಯ ಉವಾಚ|
08032003a ತತ್ ಸ್ಥಾನೇ ಸಮವಸ್ಥಾಪ್ಯ ಪ್ರತ್ಯಮಿತ್ರಂ ಮಹಾಬಲಂ|
08032003c ಅವ್ಯೂಹತಾರ್ಜುನೋ ವ್ಯೂಹಂ ಪುತ್ರಸ್ಯ ತವ ದುರ್ನಯೇ||
ಸಂಜಯನು ಹೇಳಿದನು: “ನಿನ್ನ ಪುತ್ರನ ದುರ್ನೀತಿಯಿಂದಾಗಿ ರಚಿಸಿದ ವ್ಯೂಹಕ್ಕೆ ಪ್ರತಿಯಾಗಿ ಮಹಾಬಲ ಅರ್ಜುನನು ತನ್ನ ಸೇನೆಯನ್ನೂ ವ್ಯೂಹಕ್ರಮದಲ್ಲಿ ನಿಲ್ಲಿಸಿದನು.
08032004a ತತ್ಸಾದಿನಾಗಕಲಿಲಂ ಪದಾತಿರಥಸಂಕುಲಂ|
08032004c ಧೃಷ್ಟದ್ಯುಮ್ನಮುಖೈರ್ವ್ಯೂಢಮಶೋಭತ ಮಹದ್ಬಲಂ||
ಕುದುರೆಸವಾರರು, ಗಜಸೈನಿಕರು, ಪದಾತಿಗಳು ಮತ್ತು ರಥಸಂಕುಲಗಳಿಂದ ಕೂಡಿದ್ದ ಮತ್ತು ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಆ ಮಹಾಸೇನೆಯು ಶೋಭಿಸುತ್ತಿತ್ತು.
08032005a ಪಾರಾವತಸವರ್ಣಾಶ್ವಶ್ಚಂದ್ರಾದಿತ್ಯಸಮದ್ಯುತಿಃ|
08032005c ಪಾರ್ಷತಃ ಪ್ರಬಭೌ ಧನ್ವೀ ಕಾಲೋ ವಿಗ್ರಹವಾನಿವ||
ಪಾರಿವಾಳಗಳ ಬಣ್ಣದ ಕುದುರೆಗಳನ್ನು ಹೊಂದಿದ್ದ, ಚಂದ್ರಾದಿತ್ಯ ಸಮದ್ಯುತಿ ಧನ್ವೀ ಪಾರ್ಷತ ಧೃಷ್ಟದ್ಯುಮ್ನನು ಮೂರ್ತಿಮತ್ತಾಗಿ ನಿಂತಿರುವ ಕಾಲನಂತೆಯೇ ಪ್ರಕಾಶಿಸುತ್ತಿದ್ದನು.
08032006a ಪಾರ್ಷತಂ ತ್ವಭಿ ಸಂತಸ್ಥುರ್ದ್ರೌಪದೇಯಾ ಯುಯುತ್ಸವಃ|
08032006c ಸಾನುಗಾ ಭೀಮವಪುಷಶ್ಚಂದ್ರಂ ತಾರಾಗಣಾ ಇವ||
ಭಯಂಕರರಾಗಿ ಕಾಣುತ್ತಿದ್ದ ಯುದ್ಧೋತ್ಸುಕ ದ್ರೌಪದೇಯರು ಸೈನಿಕರೊಂದಿಗೆ ತಾರಾಗಣಗಳು ಚಂದ್ರನನ್ನು ಹೇಗೋ ಹಾಗೆ ಪಾರ್ಷತನನ್ನು ರಕ್ಷಿಸುತ್ತಿದ್ದರು.
08032007a ಅಥ ವ್ಯೂಢೇಷ್ವನೀಕೇಷು ಪ್ರೇಕ್ಷ್ಯ ಸಂಶಪ್ತಕಾನ್ರಣೇ|
08032007c ಕ್ರುದ್ಧೋಽರ್ಜುನೋಽಭಿದುದ್ರಾವ ವ್ಯಾಕ್ಷಿಪನ್ಗಾಂಡಿವಂ ಧನುಃ||
ಹೀಗೆ ಸೇನೆಗಳನ್ನು ವ್ಯೂಹಕ್ರಮದಲ್ಲಿರಿಸಿ ಅರ್ಜುಜನು ರಣದಲ್ಲಿ ಸಂಶಪ್ತಕರನ್ನು ನೋಡಿ ಕ್ರುದ್ಧನಾಗಿ ಗಾಂಡೀವ ಧನುಸ್ಸನ್ನು ಟೇಂಕರಿಸುತ್ತಾ ಅವರನ್ನು ಆಕ್ರಮಣಿಸಿದನು.
08032008a ಅಥ ಸಂಶಪ್ತಕಾಃ ಪಾರ್ಥಮಭ್ಯಧಾವನ್ವಧೈಷಿಣಃ|
08032008c ವಿಜಯೇ ಕೃತಸಂಕಲ್ಪಾ ಮೃತ್ಯುಂ ಕೃತ್ವಾ ನಿವರ್ತನಂ||
ಆಗ ಪಾರ್ಥನನ್ನು ವಧಿಸಲು ಬಯಸಿದ್ದ ಸಂಶಪ್ತಕರು ವಿಜಯದ ಸಂಕಲ್ಪದಿಂದ ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿ ಮಾಡಿಕೊಂಡು ಅವನನ್ನು ಮುತ್ತಿದರು.
08032009a ತದಶ್ವಸಂಘಬಹುಲಂ ಮತ್ತನಾಗರಥಾಕುಲಂ|
08032009c ಪತ್ತಿಮಚ್ಚೂರವೀರೌಘೈರ್ದ್ರುತಮರ್ಜುನಮಾದ್ರವತ್||
ಅನೇಕ ಅಶ್ವಸಂಘಗಳನ್ನೂ, ಮದಿಸಿದ ಆನೆಗಳ ಸಂಕುಲಗಳನ್ನೂ, ಶೂರ ಪದಾತಿಸೈನಿಕರನ್ನೂ ಹೊಂದಿದ್ದ ಆ ಸೇನೆಯು ಅರ್ಜುನನನ್ನು ಆಕ್ರಮಣಿಸಿತು.
08032010a ಸ ಸಂಪ್ರಹಾರಸ್ತುಮುಲಸ್ತೇಷಾಮಾಸೀತ್ ಕಿರೀಟಿನಾ|
08032010c ತಸ್ಯೈವ ನಃ ಶ್ರುತೋ ಯಾದೃಂ ನಿವಾತಕವಚೈಃ ಸಹ||
ನಿವಾತಕವಚರೊಡನೆ ಕಿರೀಟಿಯ ಯುದ್ಧವಾಯಿತೆಂದು ನಾವು ಏನನ್ನು ಕೇಳಿದ್ದೆವೋ ಅದರಂತೆ ಈಗ ಅವನ ಮತ್ತು ಸಂಶಪ್ತಕಸೇನೆಗಳ ನಡುವೆ ತುಮುಲ ಪ್ರಹಾರಗಳು ನಡೆದವು.
08032011a ರಥಾನಶ್ವಾನ್ ಧ್ವಜಾನ್ನಾಗಾನ್ಪತ್ತೀನ್ರಥಪತೀನಪಿ|
08032011c ಇಷೂನ್ಧನೂಂಷಿ ಖಡ್ಗಾಂಶ್ಚ ಚಕ್ರಾಣಿ ಚ ಪರಶ್ವಧಾನ್||
08032012a ಸಾಯುಧಾನುದ್ಯತಾನ್ಬಾಹೂನುದ್ಯತಾನ್ಯಾಯುಧಾನಿ ಚ|
08032012c ಚಿಚ್ಚೇದ ದ್ವಿಷತಾಂ ಪಾರ್ಥಃ ಶಿರಾಂಸಿ ಚ ಸಹಸ್ರಶಃ||
ಆಗ ಅರ್ಜುನನು ಸಹಸ್ರಾರು ಸಂಖ್ಯೆಗಳಲ್ಲಿ ಶತ್ರುಗಳ ರಥಗಳನ್ನೂ, ಕುದುರೆಗಳನ್ನೂ, ಧ್ವಜಗಳನ್ನೂ, ಆನೆಗಳನ್ನೂ, ಪದಾತಿಗಳನ್ನೂ, ರಥಪತಿಗಳನ್ನೂ, ಬಾಣಗಳನ್ನೂ, ಧನುಸ್ಸುಗಳನ್ನೂ, ಖಡ್ಗಗಳನ್ನೂ, ಚಕ್ರಗಳನ್ನೂ, ಪರಶ್ವಾಯುಧಗಳನ್ನೂ, ಆಯುಧಗಳನ್ನು ಮೇಲಿತ್ತಿದ್ದ ಬಾಹುಗಳನ್ನೂ, ಮೇಲೆತ್ತಿದ್ದ ಆಯುಧಗಳನ್ನೂ, ಶಿರಗಳನ್ನೂ ತುಂಡರಿಸಿದನು.
08032013a ತಸ್ಮಿನ್ ಸೈನ್ಯೇ ಮಹಾವರ್ತೇ ಪಾತಾಲಾವರ್ತಸನ್ನಿಭೇ|
08032013c ನಿಮಗ್ನಂ ತಂ ರಥಂ ಮತ್ವಾ ನೇದುಃ ಸಂಶಪ್ತಕಾ ಮುದಾ||
ಪಾತಾಳದ ಸುಳಿಯಂತಿದ್ದ ಆ ಸೇನೆಯ ಸುಳಿಯೊಳಗೆ ಸಿಲುಕಿದ್ದ ಅವನ ರಥವು ಮುಳುಗಿಹೋಯಿತೆಂದು ತಿಳಿದು ಸಂಶಪ್ತಕರು ಸಂತೋಷದಿಂದ ಸಿಂಹನಾದಗೈದರು.
08032014a ಸ ಪುರಸ್ತಾದರೀನ್ ಹತ್ವಾ ಪಶ್ಚಾರ್ಧೇನೋತ್ತರೇಣ ಚ|
08032014c ದಕ್ಷಿಣೇನ ಚ ಬೀಭತ್ಸುಃ ಕ್ರುದ್ಧೋ ರುದ್ರಃ ಪಶೂನಿವ||
ಕ್ರುದ್ಧ ರುದ್ರನು ಪಶುಗಳನ್ನು ಹೇಗೋ ಹಾಗೆ ಬೀಭತ್ಸುವು ಪೂರ್ವದಿಕ್ಕಿನಲ್ಲಿದ್ದ ಶತ್ರುಗಳನ್ನು ಸಂಹರಿಸಿ, ಉತ್ತರ-ದಕ್ಷಿಣ-ಪಶ್ಚಿಮದಿಕ್ಕುಗಳಲ್ಲಿದ್ದವರನ್ನೂ ಸಂಹರಿಸಿದನು.
08032015a ಅಥ ಪಾಂಚಾಲಚೇದೀನಾಂ ಸೃಂಜಯಾನಾಂ ಚ ಮಾರಿಷ|
08032015c ತ್ವದೀಯೈಃ ಸಹ ಸಂಗ್ರಾಮ ಆಸೀತ್ಪರಮದಾರುಣಃ||
ಮಾರಿಷ! ಅದೇ ಸಮಯದಲ್ಲಿ ನಿನ್ನವರೊಡನೆ ಪಾಂಚಾಲ-ಚೇದಿ-ಸೃಂಜಯರ ಪರಮದಾರುಣ ಸಂಗ್ರಾಮವು ನಡೆಯಿತು.
08032016a ಕೃಪಶ್ಚ ಕೃತವರ್ಮಾ ಚ ಶಕುನಿಶ್ಚಾಪಿ ಸೌಬಲಃ|
08032016c ಹೃಷ್ಟಸೇನಾಃ ಸುಸಂರಬ್ಧಾ ರಥಾನೀಕೈಃ ಪ್ರಹಾರಿಣಃ||
08032017a ಕೋಸಲೈಃ ಕಾಶಿಮತ್ಸ್ಯೈಶ್ಚ ಕಾರೂಷೈಃ ಕೇಕಯೈರಪಿ|
08032017c ಶೂರಸೇನೈಃ ಶೂರವೀರೈರ್ಯುಯುಧುರ್ಯುದ್ಧದುರ್ಮದಾಃ||
ಯುದ್ಧದುರ್ಮದ ಕೃಪ-ಕೃತವರ್ಮ-ಸೌಬಲ ಶಕುನಿಯರು ಹೃಷ್ಟರೂ ಕುಪಿತರೂ ಆಗಿದ್ದ ರಥಸೇನೆಗಳನ್ನು ಧ್ವಂಸಗೊಳಿಸಬಲ್ಲ ವೀರ ಸೇನೆಗಳೊಂದಿಗೆ ಕೋಸಲ-ಕಾಶಿ-ಮತ್ಸ್ಯ-ಕರೂಷ-ಕೇಕಯ-ಶೂರಸೇನೆಗಳೊಡನೆ ಯುದ್ಧದಲ್ಲಿ ತೊಡಗಿದರು.
08032018a ತೇಷಾಮಂತಕರಂ ಯುದ್ಧಂ ದೇಹಪಾಪ್ಮಪ್ರಣಾಶನಂ|
08032018c ಶೂದ್ರವಿಟ್ಕ್ಷತ್ರವೀರಾಣಾಂ ಧರ್ಮ್ಯಂ ಸ್ವರ್ಗ್ಯಂ ಯಶಸ್ಕರಂ||
ಅವರ ಆ ಅಂತ್ಯಕರ ಯುದ್ಧವು ಶೂದ್ರ-ವೈಶ್ಯ-ಕ್ಷತ್ರಿಯ ವೀರರ ದೇಹ-ಪಾಪ-ಪ್ರಾಣಾಪಹಾರಕವೂ ಧರ್ಮಸಮ್ಮತವೂ ಸ್ವರ್ಗಪ್ರಾಪಕವೂ ಯಶಸ್ಕರವೂ ಆಗಿತ್ತು.
08032019a ದುರ್ಯೋಧನೋಽಪಿ ಸಹಿತೋ ಭ್ರಾತೃಭಿರ್ಭರತರ್ಷಭ|
08032019c ಗುಪ್ತಃ ಕುರುಪ್ರವೀರೈಶ್ಚ ಮದ್ರಾಣಾಂ ಚ ಮಹಾರಥೈಃ||
08032020a ಪಾಂಡವೈಃ ಸಹಪಾಂಚಾಲೈಶ್ಚೇದಿಭಿಃ ಸಾತ್ಯಕೇನ ಚ|
08032020c ಯುಧ್ಯಮಾನಂ ರಣೇ ಕರ್ಣಂ ಕುರುವೀರೋಽಭ್ಯಪಾಲಯತ್||
ಭರತರ್ಷಭ! ಸಹೋದರರಿಂದೊಡಗೂಡಿದ ಕುರುವೀರ ದುರ್ಯೋಧನನು ಕೂಡ ಕುರುಪ್ರವೀರರಿಂದ ಮತ್ತು ಮದ್ರ ಮಹಾರಥರಿಂದ ರಕ್ಷಿತನಾಗಿ, ಪಾಂಚಾಲ-ಚೇದಿಗಳೊಂದಿಗೆ ಮತ್ತು ಸಾತ್ಯಕಿ-ಪಾಂಡವರೊಂದಿಗೆ ರಣದಲ್ಲಿ ಯುದ್ಧಮಾಡುತ್ತಿದ್ದ ಕರ್ಣನನ್ನು ರಕ್ಷಿಸುತ್ತಿದ್ದನು.
08032021a ಕರ್ಣೋಽಪಿ ನಿಶಿತೈರ್ಬಾಣೈರ್ವಿನಿಹತ್ಯ ಮಹಾಚಮೂಂ|
08032021c ಪ್ರಮೃದ್ಯ ಚ ರಥಶ್ರೇಷ್ಠಾನ್ಯುಧಿಷ್ಠಿರಮಪೀಡಯತ್||
ಕರ್ಣನಾದರೋ ನಿಶಿತಬಾಣಗಳಿಂದ ಮಹಾಸೇನೆಯನ್ನು ಸಂಹರಿಸಿ ರಥಶ್ರೇಷ್ಠರನ್ನು ಸದೆಬಡಿದು ಯುಧಿಷ್ಠಿರನನ್ನು ಪೀಡಿಸಿದನು.
08032022a ವಿಪತ್ರಾಯುಧದೇಹಾಸೂನ್ ಕೃತ್ವಾ ಶತ್ರೂನ್ಸಹಸ್ರಶಃ|
08032022c ಯುಕ್ತ್ವಾ ಸ್ವರ್ಗಯಶೋಭ್ಯಾಂ ಚ ಸ್ವೇಭ್ಯೋ ಮುದಮುದಾವಹತ್||
ಕರ್ಣನು ಸಾವಿರಾರು ಶತ್ರುಗಳನ್ನು ಅಸ್ತ್ರ-ಆಯುಧ-ದೇಹ-ಪ್ರಾಣಗಳಿಂದ ವಿಹೀನರನ್ನಾಗಿಸಿ ಅವರಿಗೆ ಸ್ವರ್ಗ-ಯಶಸ್ಸುಗಳು ದೊರಕುವಂತೆ ಮಾಡಿ ತನ್ನವರಿಗೆ ಮಹಾನಂದವನ್ನುಂಟುಮಾಡಿದನು.
08032023 ಧೃತರಾಷ್ಟ್ರ ಉವಾಚ|
08032023a ಯತ್ತತ್ ಪ್ರವಿಶ್ಯ ಪಾರ್ಥಾನಾಂ ಸೇನಾಂ ಕುರ್ವಂ ಜನಕ್ಷಯಂ|
08032023c ಕರ್ಣೋ ರಾಜಾನಮಭ್ಯರ್ಚ್ಚತ್ತನ್ ಮಮಾಚಕ್ಷ್ವ ಸಂಜಯ||
ಧೃತರಾಷ್ಟ್ರನು ಹೇಳಿದನು: “ಸಂಜಯ! ಕರ್ಣನು ಪಾರ್ಥರ ಸೇನೆಯನ್ನು ಪ್ರವೇಶಿಸಿ ಜನಕ್ಷಯಗೈದು ಹೇಗೆ ರಾಜಾ ಯುಧಿಷ್ಠಿರನನ್ನು ಆಕ್ರಮಣಿಸಿದನು ಎನ್ನುವುದನ್ನು ನನಗೆ ಹೇಳು!
08032024a ಕೇ ಚ ಪ್ರವೀರಾಃ ಪಾರ್ಥಾನಾಂ ಯುಧಿ ಕರ್ಣಮವಾರಯನ್|
08032024c ಕಾಂಶ್ಚ ಪ್ರಮಥ್ಯಾಧಿರಥಿರ್ಯುಧಿಷ್ಠಿರಮಪೀಡಯತ್||
ಯುದ್ಧದಲ್ಲಿ ಪಾರ್ಥರ ಯಾರ್ಯಾರು ಪ್ರವೀರರು ಕರ್ಣನನ್ನು ತಡೆದರು? ಯಾರನ್ನು ಸದೆಬಡಿದು ಆಧಿರಥಿಯು ಯುಧಿಷ್ಠಿರನನ್ನು ಪೀಡಿಸಿದನು?”
08032025 ಸಂಜಯ ಉವಾಚ|
08032025a ಧೃಷ್ಟದ್ಯುಮ್ನಮುಖಾನ್ಪಾರ್ಥಾನ್ದೃಷ್ಟ್ವಾ ಕರ್ಣೋ ವ್ಯವಸ್ಥಿತಾನ್|
08032025c ಸಮಭ್ಯಧಾವತ್ತ್ವರಿತಃ ಪಾಂಚಾಲಾಂ ಶತ್ರುಕರ್ಶನಃ||
ಸಂಜಯನು ಹೇಳಿದನು: “ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ವ್ಯವಸ್ಥಿತರಾಗಿದ್ದ ಪಾರ್ಥರನ್ನು ನೋಡಿ ಶತ್ರುಕರ್ಶನ ಕರ್ಣನು ತ್ವರೆಮಾಡಿ ಪಾಂಚಾಲರನ್ನು ಆಕ್ರಮಣಿಸಿದನು.
08032026a ತಂ ತೂರ್ಣಮಭಿಧಾವಂತಂ ಪಾಂಚಾಲಾ ಜಿತಕಾಶಿನಃ|
08032026c ಪ್ರತ್ಯುದ್ಯಯುರ್ಮಹಾರಾಜ ಹಂಸಾ ಇವ ಮಹಾರ್ಣವಂ||
ಮಹಾರಾಜ! ವಿಜಯಾಕಾಂಕ್ಷಿ ಪಾಂಚಾಲರು ವೇಗದಲ್ಲಿ ಬರುತ್ತಿದ್ದ ಕರ್ಣನನ್ನು ಸಾಗರವನ್ನು ಸೇರುವ ಹಂಸಗಳಂತೆ ರಭಸದಿಂದ ಆಕ್ರಮಣಿಸಿದರು.
08032027a ತತಃ ಶಂಖಸಹಸ್ರಾಣಾಂ ನಿಸ್ವನೋ ಹೃದಯಂಗಮಃ|
08032027c ಪ್ರಾದುರಾಸೀದುಭಯತೋ ಭೇರೀಶಬ್ದಶ್ಚ ದಾರುಣಃ||
ಆಗ ಸಹಸ್ರಾರು ಶಂಖಗಳ ಹೃದಯಂಗಮ ಧ್ವನಿಯುಂಟಾಯಿತು. ಎರಡೂ ಕಡೆಗಳಿಂದ ಭೇರಿಗಳ ದಾರುಣ ಶಬ್ಧವು ಕೇಳಿಬಂದಿತು.
08032028a ನಾನಾವಾದಿತ್ರನಾದಶ್ಚ ದ್ವಿಪಾಶ್ವರಥನಿಸ್ವನಃ|
08032028c ಸಿಂಹನಾದಶ್ಚ ವೀರಾಣಾಮಭವದ್ದಾರುಣಸ್ತದಾ||
ಆಗ ನಾನಾ ವಾದ್ಯಗಳ ನಾದಗಳು, ಆನೆ-ಕುದುರೆ-ರಥಗಳ ನಿಸ್ವನಗಳು, ವೀರರ ಸಿಂಹನಾದಗಳು ದಾರುಣವಾಗಿದ್ದವು.
08032029a ಸಾದ್ರಿದ್ರುಮಾರ್ಣವಾ ಭೂಮಿಃ ಸವಾತಾಂಬುದಮಂಬರಂ|
08032029c ಸಾರ್ಕೇಂದುಗ್ರಹನಕ್ಷತ್ರಾ ದ್ಯೌಶ್ಚ ವ್ಯಕ್ತಂ ವ್ಯಘೂರ್ಣತ||
ಪರ್ವತ-ವೃಕ್ಷ-ಸಾಗರಗಳಿಂದ ಕೂಡಿದ ಭೂಮಿ, ಗಾಳಿ-ಮೇಘಗಳಿಂದ ಕೂಡಿದ ಆಕಾಶ ಮತ್ತು ಸೂರ್ಯ-ಚಂದ್ರ-ಗ್ರಹ-ನಕ್ಷತ್ರಗಳಿಂದ ಕೂಡಿದ ಆಕಾಶ ಎಲ್ಲವೂ ತಿರುಗುತ್ತಿರುವವೋ ಎನ್ನುವಂತೆ ಕಾಣುತ್ತಿತ್ತು.
08032030a ಅತಿ ಭೂತಾನಿ ತಂ ಶಬ್ದಂ ಮೇನಿರೇಽತಿ ಚ ವಿವ್ಯಥುಃ|
08032030c ಯಾನಿ ಚಾಪ್ಲವಸತ್ತ್ವಾನಿ ಪ್ರಾಯಸ್ತಾನಿ ಮೃತಾನಿ ಚ||
ಆ ಶಬ್ಧವನ್ನು ಕೇಳಿದ ಸರ್ವಭೂತಗಳೂ ವ್ಯಥೆಗೊಂಡವು. ಅಲ್ಪಸತ್ತ್ವವುಳ್ಳ ಪ್ರಾಣಿಗಳು ಅದನ್ನು ಕೇಳಿ ಪ್ರಾಯಶಃ ಸತ್ತೇ ಹೋದವು.
08032031a ಅಥ ಕರ್ಣೋ ಭೃಶಂ ಕ್ರುದ್ಧಃ ಶೀಘ್ರಮಸ್ತ್ರಮುದೀರಯನ್|
08032031c ಜಘಾನ ಪಾಂಡವೀಂ ಸೇನಾಮಾಸುರೀಂ ಮಘವಾನಿವ||
ಆಗ ಕರ್ಣನು ಅತಿಕುಪಿತನಾಗಿ ಶೀಘ್ರವಾಗಿ ಅಸ್ತ್ರಗಳನ್ನು ಪ್ರಯೋಗಿಸಿ ಪಾಂಡವ ಸೇನೆಯನ್ನು ಇಂದ್ರನು ಅಸುರೀ ಸೇನೆಯನ್ನು ಹೇಗೋ ಹಾಗೆ ಸಂಹರಿಸಿದನು.
08032032a ಸ ಪಾಂಡವರಥಾಂಸ್ತೂರ್ಣಂ ಪ್ರವಿಶ್ಯ ವಿಸೃಜಂ ಶರಾನ್|
08032032c ಪ್ರಭದ್ರಕಾಣಾಂ ಪ್ರವರಾನಹನತ್ ಸಪ್ತಸಪ್ತತಿಂ||
ಅವನ ವೇಗದಿಂದ ಪಾಂಡವ ರಥಸೇನೆಯನ್ನು ಪ್ರವೇಶಿಸಿ, ಶರಗಳನ್ನು ಪ್ರಯೋಗಿಸುತ್ತಾ ಎಪ್ಪತ್ತೇಳು ಪ್ರಭದ್ರಕ ವೀರರನ್ನು ಸಂಹರಿಸಿದನು.
08032033a ತತಃ ಸುಪುಂಖೈರ್ನಿಶಿತೈ ರಥಶ್ರೇಷ್ಠೋ ರಥೇಷುಭಿಃ|
08032033c ಅವಧೀತ್ ಪಂಚವಿಂಶತ್ಯಾ ಪಾಂಚಾಲಾನ್ ಪಂಚವಿಂಶತಿಂ||
ಅನಂತರ ಆ ರಥಶ್ರೇಷ್ಠನು ಸುಂದರ ಪುಂಖಗಳುಳ್ಳ ಇಪ್ಪತ್ತೈದು ನಿಶಿತ ಬಾಣಗಳಿಂದ ಇಪ್ಪತ್ತೈದು ಪಾಂಚಾಲರನ್ನು ವಧಿಸಿದನು.
08032034a ಸುವರ್ಣಪುಂಖೈರ್ನಾರಾಚೈಃ ಪರಕಾಯವಿದಾರಣೈಃ|
08032034c ಚೇದಿಕಾನವಧೀದ್ವೀರಃ ಶತಶೋಽಥ ಸಹಸ್ರಶಃ||
ಆ ವೀರನು ಸುವರ್ಣಪುಂಖಗಳುಳ್ಳ ಶತ್ರುಗಳ ದೇಹವನ್ನು ಸೀಳಬಲ್ಲ ನಾರಾಚಗಳಿಂದ ನೂರಾರು ಸಹಸ್ರಾರು ಚೇದಿವೀರರನ್ನು ಸಂಹರಿಸಿದನು.
08032035a ತಂ ತಥಾ ಸಮರೇ ಕರ್ಮ ಕುರ್ವಾಣಮತಿಮಾನುಷಂ|
08032035c ಪರಿವವ್ರುರ್ಮಹಾರಾಜ ಪಾಂಚಾಲಾನಾಂ ರಥವ್ರಜಾಃ||
ಮಹಾರಾಜ! ಆ ಸಮರದಲ್ಲಿ ಅತಿಮಾನುಷ ಕರ್ಮಗಳನ್ನೆಸಗುತ್ತಿದ್ದ ಕರ್ಣನನ್ನು ಪಾಂಚಾಲರ ರಥಗುಂಪುಗಳು ಸುತ್ತುವರೆದವು.
08032036a ತತಃ ಸಂಧಾಯ ವಿಶಿಖಾನ್ಪಂಚ ಭಾರತ ದುಃಸಹಾನ್|
08032036c ಪಾಂಚಾಲಾನವಧೀತ್ಪಂಚ ಕರ್ಣೋ ವೈಕರ್ತನೋ ವೃಷಃ||
ಭಾರತ! ಆಗ ವೈಕರ್ತನ ವೃಷ ಕರ್ಣನು ಐದು ಸಹಿಸಲಸಾಧ್ಯ ವಿಶಿಖಗಳನ್ನು ಹೂಡಿ ಐವರು ಪಾಂಚಾಲರನ್ನು ವಧಿಸಿದನು.
08032037a ಭಾನುದೇವಂ ಚಿತ್ರಸೇನಂ ಸೇನಾಬಿಂದುಂ ಚ ಭಾರತ|
08032037c ತಪನಂ ಶೂರಸೇನಂ ಚ ಪಾಂಚಾಲಾನವಧೀದ್ರಣೇ||
ಭಾರತ! ಭಾನುದೇವ, ಚಿತ್ರಸೇನ, ಸೇನಾಬಿಂದು, ತಪನ ಮತ್ತು ಶೂರಸೇನ – ಈ ಐವರು ಪಾಂಚಾಲರನ್ನು ಅವನು ರಣದಲ್ಲಿ ಸಂಹರಿಸಿದನು.
08032038a ಪಾಂಚಾಲೇಷು ಚ ಶೂರೇಷು ವಧ್ಯಮಾನೇಷು ಸಾಯಕೈಃ|
08032038c ಹಾಹಾಕಾರೋ ಮಹಾನಾಸೀತ್ಪಾಂಚಾಲಾನಾಂ ಮಹಾಹವೇ||
ಸಾಯಕಗಳಿಂದ ಪಾಂಚಾಲ ಶೂರರು ವಧಿಸಲ್ಪಡಲು ಮಹಾಹವದಲ್ಲಿ ಪಾಂಚಾಲರ ಮಹಾ ಹಾಹಾಕಾರವುಂಟಾಯಿತು.
08032039a ತೇಷಾಂ ಸಂಕೀರ್ಯಮಾಣಾನಾಂ ಹಾಹಾಕಾರಕೃತಾ ದಿಶಃ|
08032039c ಪುನರೇವ ಚ ತಾನ್ಕರ್ಣೋ ಜಘಾನಾಶು ಪತತ್ರಿಭಿಃ||
ಹಾಹಾಕಾರಮಾಡುತ್ತಾ ದಿಕ್ಕುಗಳಲ್ಲಿ ಸೇರುತ್ತಿದ್ದ ಅವರನ್ನು ಕರ್ಣನು ಪುನಃ ಪತತ್ರಿಭಿಗಳಿಂದ ಸಂಹರಿಸಿದನು.
08032040a ಚಕ್ರರಕ್ಷೌ ತು ಕರ್ಣಸ್ಯ ಪುತ್ರೌ ಮಾರಿಷ ದುರ್ಜಯೌ|
08032040c ಸುಷೇಣಃ ಸತ್ಯಸೇನಶ್ಚ ತ್ಯಕ್ತ್ವಾ ಪ್ರಾಣಾನಯುಧ್ಯತಾಂ||
ಮಾರಿಷ! ಕರ್ಣನ ಪುತ್ರರಾದ ಸುಷೇಣ-ಸತ್ಯಸೇನರು ಅವನ ಚಕ್ರರಕ್ಷಕರಾಗಿದ್ದು, ಪ್ರಾಣಗಳನ್ನೂ ಪಣವನ್ನಾಗಿಟ್ಟು ಹೋರಾಡುತ್ತಿದ್ದರು.
08032041a ಪೃಷ್ಠಗೋಪಸ್ತು ಕರ್ಣಸ್ಯ ಜ್ಯೇಷ್ಠಃ ಪುತ್ರೋ ಮಹಾರಥಃ|
08032041c ವೃಷಸೇನಃ ಸ್ವಯಂ ಕರ್ಣಂ ಪೃಷ್ಠತಃ ಪರ್ಯಪಾಲಯತ್||
ಕರ್ಣನ ಹಿಂಭಾಗದ ರಕ್ಷಕನಾಗಿದ್ದ ಅವನ ಜ್ಯೇಷ್ಠ ಪುತ್ರ ಮಹಾರಥ ವೃಷಸೇನನು ಸ್ವಯಂ ಕರ್ಣನನ್ನು ಹಿಂದಿನಿಂದ ರಕ್ಷಿಸುತ್ತಿದ್ದನು.
08032042a ಧೃಷ್ಟದ್ಯುಮ್ನಃ ಸಾತ್ಯಕಿಶ್ಚ ದ್ರೌಪದೇಯಾ ವೃಕೋದರಃ|
08032042c ಜನಮೇಜಯಃ ಶಿಖಂಡೀ ಚ ಪ್ರವೀರಾಶ್ಚ ಪ್ರಭದ್ರಕಾಃ||
08032043a ಚೇದಿಕೇಕಯಪಾಂಚಾಲಾ ಯಮೌ ಮತ್ಸ್ಯಾಶ್ಚ ದಂಶಿತಾಃ|
08032043c ಸಮಭ್ಯಧಾವನ್ರಾಧೇಯಂ ಜಿಘಾಂಸಂತಃ ಪ್ರಹಾರಿಣಃ||
ಆಗ ಪ್ರಹಾರಿಗಳೂ ಕವಚಧಾರಿಗಳೂ ಆದ ಧೃಷ್ಟದ್ಯುಮ್ನ, ಸಾತ್ಯಕಿ, ದ್ರೌಪದೇಯರು, ವೃಕೋದರ, ಜನಮೇಜಯ, ಶಿಖಂಡೀ ಮತ್ತು ಪ್ರಭದ್ರಕ ಪ್ರವೀರರು, ಚೇದಿ-ಕೇಕಯ-ಪಾಂಚಾಲರು, ನಕುಲ-ಸಹದೇವರು ಮತ್ತು ಮತ್ಸ್ಯರು ರಾಧೇಯನನ್ನು ಕೊಲ್ಲಲು ಬಯಸಿ ಅವನನ್ನು ಸುತ್ತುವರೆದರು.
08032044a ತ ಏನಂ ವಿವಿಧೈಃ ಶಸ್ತ್ರೈಃ ಶರಧಾರಾಭಿರೇವ ಚ|
08032044c ಅಭ್ಯವರ್ಷನ್ವಿಮೃದ್ನಂತಃ ಪ್ರಾವೃಷೀವಾಂಬುದಾ ಗಿರಿಂ||
ಮೋಡಗಳು ಗಿರಿಯನ್ನು ಮಳೆಯಿಂದ ಹೇಗೋ ಹಾಗೆ ಅವರು ಕರ್ಣನ ಮೇಲೆ ವಿವಿಧ ಶಸ್ತ್ರಗಳು ಮತ್ತು ಶರಧಾರೆಗಳನ್ನು ಸುರಿಸಿ ಅಭಿಷೇಚಿಸಿದರು.
08032045a ಪಿತರಂ ತು ಪರೀಪ್ಸಂತಃ ಕರ್ಣಪುತ್ರಾಃ ಪ್ರಹಾರಿಣಃ|
08032045c ತ್ವದೀಯಾಶ್ಚಾಪರೇ ರಾಜನ್ವೀರಾ ವೀರಾನವಾರಯನ್||
ರಾಜನ್! ತಂದೆಯನ್ನು ರಕ್ಷಿಸಲೋಸುಗ ಪ್ರಹಾರಿಗಳಾದ ವೀರ ಕರ್ಣಪುತ್ರರು ನಿನ್ನಕಡೆಯ ಇತರರೊಂದಿಗೆ ವೀರರನ್ನು ತಡೆದರು.
08032046a ಸುಷೇಣೋ ಭೀಮಸೇನಸ್ಯ ಚಿತ್ತ್ವಾ ಭಲ್ಲೇನ ಕಾರ್ಮುಕಂ|
08032046c ನಾರಾಚೈಃ ಸಪ್ತಭಿರ್ವಿದ್ಧ್ವಾ ಹೃದಿ ಭೀಮಂ ನನಾದ ಹ||
ಸುಷೇಣನು ಭಲ್ಲದಿಂದ ಭೀಮಸೇನನ ಧನುಸ್ಸನ್ನು ಕತ್ತರಿಸಿ, ಏಳು ನಾರಾಚಗಳಿಂದ ಭೀಮನ ಎದೆಗೆ ಹೊಡೆದು ಸಿಂಹನಾದಗೈದನು.
08032047a ಅಥಾನ್ಯದ್ಧನುರಾದಾಯ ಸುದೃಢಂ ಭೀಮವಿಕ್ರಮಃ|
08032047c ಸಜ್ಯಂ ವೃಕೋದರಃ ಕೃತ್ವಾ ಸುಷೇಣಸ್ಯಾಚ್ಚಿನದ್ಧನುಃ||
ಕೂಡಲೇ ಭೀಮವಿಕ್ರಮ ವೃಕೋದರನು ಇನ್ನೊಂದು ದೃಢ ಧನುಸ್ಸನ್ನು ಎತ್ತಿಕೊಂಡು ಸಜ್ಜುಗೊಳಿಸಿ ಸುಷೇಣನ ಧನುಸ್ಸನ್ನು ತುಂಡರಿಸಿದನು.
08032048a ವಿವ್ಯಾಧ ಚೈನಂ ನವಭಿಃ ಕ್ರುದ್ಧೋ ನೃತ್ಯನ್ನಿವೇಷುಭಿಃ|
08032048c ಕರ್ಣಂ ಚ ತೂರ್ಣಂ ವಿವ್ಯಾಧ ತ್ರಿಸಪ್ತತ್ಯಾ ಶಿತೈಃ ಶರೈಃ||
ಕೂಡಲೇ ಭೀಮನು ಕ್ರುದ್ಧನಾಗಿ ನರ್ತಿಸುತ್ತಿರುವನೋ ಎನ್ನುವಂತೆ ಕರ್ಣನನ್ನು ಎಪ್ಪತ್ಮೂರು ಬಾಣಗಳಿಂದ ಪ್ರಹರಿಸಿದನು.
08032049a ಸತ್ಯಸೇನಂ ಚ ದಶಭಿಃ ಸಾಶ್ವಸೂತಧ್ವಜಾಯುಧಂ|
08032049c ಪಶ್ಯತಾಂ ಸುಹೃದಾಂ ಮಧ್ಯೇ ಕರ್ಣಪುತ್ರಮಪಾತಯತ್||
ಸುಹೃದಯರ ಮಧ್ಯದಲ್ಲಿ ಅವರು ನೋಡುತ್ತಿರುವಂತೆಯೇ ಭೀಮನು ಹತ್ತು ಬಾಣಗಳಿಂದ ಕುದುರೆ-ಸಾರಥಿ-ಧ್ವಜ-ಆಯುಧಗಳೊಡನೆ ಕರ್ಣಪುತ್ರ ಸತ್ಯಸೇನನನ್ನು ಬೀಳಿಸಿದನು.
08032050a ಕ್ಷುರಪ್ರಣುನ್ನಂ ತತ್ತಸ್ಯ ಶಿರಶ್ಚಂದ್ರನಿಭಾನನಂ|
08032050c ಶುಭದರ್ಶನಮೇವಾಸೀನ್ನಾಲಭ್ರಷ್ಟಮಿವಾಂಬುಜಂ||
ಕ್ಷುರದಿಂದ ಕತ್ತರಿಸಲ್ಪಟ್ಟ ಅವನ ಚಂದ್ರನಿಭಾನನ ಶಿರವು ನಾಳದಿಂದ ಬೇರ್ಪಡಿಸಲ್ಪಟ್ಟ ಕಮಲದಂತೆ ಸುಂದರವಾಗಿ ಕಾಣುತ್ತಿತ್ತು.
08032051a ಹತ್ವಾ ಕರ್ಣಸುತಂ ಭೀಮಸ್ತಾವಕಾನ್ಪುನರಾರ್ದಯತ್|
08032051c ಕೃಪಹಾರ್ದಿಕ್ಯಯೋಶ್ಚಿತ್ತ್ವಾ ಚಾಪೇ ತಾವಪ್ಯಥಾರ್ದಯತ್||
ಕರ್ಣಸುತನನ್ನು ಸಂಹರಿಸಿ ಭೀಮನು ಪುನಃ ನಿನ್ನವರನ್ನು ಆಕ್ರಮಣಿಸಿದನು. ಕೃಪ ಮತ್ತು ಹಾರ್ದಿಕ್ಯರ ಬಿಲ್ಲುಗಳನ್ನು ತುಂಡರಿಸಿ ಅವರನ್ನು ಪುನಃ ಪ್ರಹರಿಸಿದನು.
08032052a ದುಃಶಾಸನಂ ತ್ರಿಭಿರ್ವಿದ್ಧ್ವಾ ಶಕುನಿಂ ಷಡ್ಭಿರಾಯಸೈಃ|
08032052c ಉಲೂಕಂ ಚ ಪತತ್ರಿಂ ಚ ಚಕಾರ ವಿರಥಾವುಭೌ||
ದುಃಶಾಸನನ್ನು ಮೂರು ಬಾಣಗಳಿಂದ ಮತ್ತು ಶಕುನಿಯನ್ನು ಆರು ಆಯಸಗಳಿಂದ ಹೊಡೆದು ಉಲೂಕ ಮತ್ತು ಪತತ್ರಿಯರನ್ನು ವಿರಥರನ್ನಾಗಿಸಿದನು.
08032053a ಹೇ ಸುಷೇಣ ಹತೋಽಸೀತಿ ಬ್ರುವನ್ನಾದತ್ತ ಸಾಯಕಂ|
08032053c ತಮಸ್ಯ ಕರ್ಣಶ್ಚಿಚ್ಚೇದ ತ್ರಿಭಿಶ್ಚೈನಮತಾಡಯತ್||
“ಹೇ ಸುಷೇಣ! ನೀನೀಗ ಹತನಾದೆ!” ಎಂದು ಹೇಳುತ್ತಾ ಭೀಮನು ಸಾಯಕವನ್ನು ಹಿಡಿದು ಪ್ರಯೋಗಿಸಲು ಕರ್ಣನು ಅದನ್ನು ತುಂಡರಿಸಿ ಮೂರು ಬಾಣಗಳಿಂದ ಭೀಮನನ್ನು ಹೊಡೆದನು.
08032054a ಅಥಾನ್ಯಮಪಿ ಜಗ್ರಾಹ ಸುಪರ್ವಾಣಂ ಸುತೇಜನಂ|
08032054c ಸುಷೇಣಾಯಾಸೃಜದ್ಭೀಮಸ್ತಮಪ್ಯಸ್ಯಾಚ್ಚಿನದ್ವೃಷಃ||
ಆಗ ಭೀಮನು ಇನ್ನೊಂದು ಸುಪರ್ವಣ ಸುತೇಜನ ಬಾಣವನ್ನು ತೆಗೆದು ಸುಷೇಣನ ಮೇಲೆ ಪ್ರಯೋಗಿಸಲು ವೃಷ ಕರ್ಣನು ಅದನ್ನೂ ತುಂಡರಿಸಿದನು.
08032055a ಪುನಃ ಕರ್ಣಸ್ತ್ರಿಸಪ್ತತ್ಯಾ ಭೀಮಸೇನಂ ರಥೇಷುಭಿಃ|
08032055c ಪುತ್ರಂ ಪರೀಪ್ಸನ್ವಿವ್ಯಾಧ ಕ್ರೂರಂ ಕ್ರೂರೈರ್ಜಿಘಾಂಸಯಾ||
ಪುತ್ರನನ್ನು ರಕ್ಷಿಸಲೋಸುಗ ಮತ್ತು ಕ್ರೂರ ಭೀಮಸೇನನನ್ನು ವಧಿಸಲು ಬಯಸಿದ ಕರ್ಣನು ಪುನಃ ಎಪ್ಪತ್ಮೂರು ಕ್ರೂರ ರಥೇಷುಗಳಿಂದ ಪ್ರಹರಿಸಿದನು.
08032056a ಸುಷೇಣಸ್ತು ಧನುರ್ಗೃಹ್ಯ ಭಾರಸಾಧನಮುತ್ತಮಂ|
08032056c ನಕುಲಂ ಪಂಚಭಿರ್ಬಾಣೈರ್ಬಾಹ್ವೋರುರಸಿ ಚಾರ್ದಯತ್||
ಸುಷೇಣನಾದರೋ ಭಾರವನ್ನು ಹೊರಬಲ್ಲ ಉತ್ತಮ ಧನುಸ್ಸನ್ನು ಹಿಡಿದು ನಕುಲನ ಎದೆಗೆ ಐದು ಬಾಣಗಳಿಂದ ಪ್ರಹರಿಸಿದನು.
08032057a ನಕುಲಸ್ತಂ ತು ವಿಂಶತ್ಯಾ ವಿದ್ಧ್ವಾ ಭಾರಸಹೈರ್ದೃಢೈಃ|
08032057c ನನಾದ ಬಲವನ್ನಾದಂ ಕರ್ಣಸ್ಯ ಭಯಮಾದಧತ್||
ನಕುಲನ ಅವನನ್ನು ಎಪ್ಪತ್ತು ಭಾರವನ್ನು ಸಹಿಸಬಲ್ಲ ದೃಢ ಬಾಣಗಳಿಂದ ಹೊಡೆದು ಜೋರಾಗಿ ಗರ್ಜಿಸಿದನು. ಅದು ಕರ್ಣನಿಗೂ ಭಯವನ್ನುಂಟುಮಾಡಿತು.
08032058a ತಂ ಸುಷೇಣೋ ಮಹಾರಾಜ ವಿದ್ಧ್ವಾ ದಶಭಿರಾಶುಗೈಃ|
08032058c ಚಿಚ್ಚೇದ ಚ ಧನುಃ ಶೀಘ್ರಂ ಕ್ಷುರಪ್ರೇಣ ಮಹಾರಥಃ||
ಮಹಾರಾಜ! ಮಹಾರಥ ಸುಷೇಣನು ಹತ್ತು ಆಶುಗಗಳಿಂದ ನಕುಲನನ್ನು ಹೊಡೆದು ಶೀಘ್ರವಾಗಿ ಕ್ಷುರಪ್ರದಿಂದ ಅವನ ಧನುಸ್ಸನ್ನು ತುಂಡರಿಸಿದನು.
08032059a ಅಥಾನ್ಯದ್ಧನುರಾದಾಯ ನಕುಲಃ ಕ್ರೋಧಮೂರ್ಚ್ಚಿತಃ|
08032059c ಸುಷೇಣಂ ಬಹುಭಿರ್ಬಾಣೈರ್ವಾರಯಾಮಾಸ ಸಂಯುಗೇ||
ಕೂಡಲೇ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ನಕುಲನು ಕ್ರೋಧಮೂರ್ಛಿತನಾಗಿ ಸುಷೇಣನನ್ನು ಅನೇಕ ಬಾಣಗಳಿಂದ ಸಂಯುಗದಲ್ಲಿ ತಡೆದನು.
08032060a ಸ ತು ಬಾಣೈರ್ದಿಶೋ ರಾಜನ್ನಾಚ್ಚಾದ್ಯ ಪರವೀರಹಾ|
08032060c ಆಜಘ್ನೇ ಸಾರಥಿಂ ಚಾಸ್ಯ ಸುಷೇಣಂ ಚ ತತಸ್ತ್ರಿಭಿಃ|
08032060e ಚಿಚ್ಚೇದ ಚಾಸ್ಯ ಸುದೃಢಂ ಧನುರ್ಭಲ್ಲೈಸ್ತ್ರಿಭಿಸ್ತ್ರಿಧಾ||
ರಾಜನ್! ಆ ಪರವೀರಹನು ಬಾಣಗಳಿಂದ ದಿಕ್ಕುಗಳನ್ನು ಆಚ್ಛಾದಿಸಿ, ಮೂರು ಬಾಣಗಳಿಂದ ಸುಷೇಣನನ್ನೂ ಅವನ ಸಾರಥಿಯನ್ನೂ ಪ್ರಹರಿಸಿ, ಸುದೃಢ ಭಲ್ಲದಿಂದ ಅವನ ಧನುಸ್ಸನ್ನು ಮೂರು ಭಾಗಗಳನ್ನಾಗಿ ತುಂಡರಿಸಿದನು.
08032061a ಅಥಾನ್ಯದ್ಧನುರಾದಾಯ ಸುಷೇಣಃ ಕ್ರೋಧಮೂರ್ಚಿತಃ|
08032061c ಅವಿಧ್ಯನ್ನಕುಲಂ ಷಷ್ಟ್ಯಾ ಸಹದೇವಂ ಚ ಸಪ್ತಭಿಃ||
ಆಗ ಕ್ರೋಧಮೂರ್ಛಿತ ಸುಷೇಣನು ಇನ್ನೊಂದು ಧನುಸ್ಸನ್ನೆತ್ತಿಕೊಂಡು ಆರು ಬಾಣಗಳಿಂದ ನಕುಲನನ್ನು ಮತ್ತು ಏಳರಿಂದ ಸಹದೇವನನ್ನು ಪ್ರಹರಿಸಿದನು.
08032062a ತದ್ಯುದ್ಧಂ ಸುಮಹದ್ಘೋರಮಾಸೀದ್ದೇವಾಸುರೋಪಮಂ|
08032062c ನಿಘ್ನತಾಂ ಸಾಯಕೈಸ್ತೂರ್ಣಮನ್ಯೋನ್ಯಸ್ಯ ವಧಂ ಪ್ರತಿ||
ದೇವಾಸುರರ ಯುದ್ಧದಂತಿದ್ದ ಆ ಯುದ್ಧವು ಮಹಾ ಘೋರವಾಗಿತ್ತು. ಅನ್ಯೋನ್ಯರನ್ನು ವಧಿಸಲೋಸುಗ ವೇಗವಾಗಿ ಸಾಯಕಗಳನ್ನು ಪ್ರಯೋಗಿಸಲಾಗುತ್ತಿತ್ತು.
08032063a ಸಾತ್ಯಕಿರ್ವೃಷಸೇನಸ್ಯ ಹತ್ವಾ ಸೂತಂ ತ್ರಿಭಿಃ ಶರೈಃ|
08032063c ಧನುಶ್ಚಿಚ್ಚೇದ ಭಲ್ಲೇನ ಜಘಾನಾಶ್ವಾಂಶ್ಚ ಸಪ್ತಭಿಃ|
08032063e ಧ್ವಜಮೇಕೇಷುಣೋನ್ಮಥ್ಯ ತ್ರಿಭಿಸ್ತಂ ಹೃದ್ಯತಾಡಯತ್||
ಸಾತ್ಯಕಿಯು ಮೂರು ಶರಗಳಿಂದ ವೃಷಸೇನನ ಸಾರಥಿಯನ್ನು ಸಂಹರಿಸಿ, ಭಲ್ಲದಿಂದ ಅವನ ಧನುಸ್ಸನ್ನು ತುಂಡರಿಸಿದನು ಮತ್ತು ಏಳು ಬಾಣಗಳಿಂದ ಅವನ ಕುದುರೆಗಳನ್ನು ಹೊಡೆದನು. ಒಂದು ಬಾಣದಿಂದ ಧ್ವಜವನ್ನು ಕಿತ್ತುಹಾರಿಸಿದನು ಮತ್ತು ಮೂರು ಬಾಣಗಳಿಂದ ಅವನ ಎದೆಗೆ ಹೊಡೆದನು.
08032064a ಅಥಾವಸನ್ನಃ ಸ್ವರಥೇ ಮುಹೂರ್ತಾತ್ಪುನರುತ್ಥಿತಃ|
08032064c ಅಥೋ ಜಿಘಾಂಸುಃ ಶೈನೇಯಂ ಖಡ್ಗಚರ್ಮಭೃದಭ್ಯಯಾತ್||
ಆಗ ವೃಷಸೇನನು ತನ್ನ ರಥದಲ್ಲಿಯೇ ಮುಹೂರ್ತಕಾಲ ಕುಸಿದುಬಿದ್ದನು. ಪುನಃ ಎಚ್ಚೆತ್ತು ಶೈನೇಯನನ್ನು ಕೊಲ್ಲಲು ಬಯಸಿ ಕತ್ತಿ-ಗುರಾಣಿಗಳನ್ನು ಹಿಡಿದು ಅವನ ಮೇಲೆ ಎರಗಿದನು.
08032065a ತಸ್ಯ ಚಾಪ್ಲವತಃ ಶೀಘ್ರಂ ವೃಷಸೇನಸ್ಯ ಸಾತ್ಯಕಿಃ|
08032065c ವರಾಹಕರ್ಣೈರ್ದಶಭಿರವಿಧ್ಯದಸಿಚರ್ಮಣೀ||
ವೃಷಸೇನನು ಮುಂದೆ ಹಾರಿಬರುತ್ತಿರಲು ಸಾತ್ಯಕಿಯು ಶೀಘ್ರವಾಗಿ ಹತ್ತು ವರಾಹಕರ್ಣ ಶರಗಳಿಂದ ಅವನ ಖಡ್ಗ-ಗುರಾಣಿಗಳನ್ನು ತುಂಡರಿಸಿದನು.
08032066a ದುಃಶಾಸನಸ್ತು ತಂ ದೃಷ್ಟ್ವಾ ವಿರಥಂ ವ್ಯಾಯುಧಂ ಕೃತಂ|
08032066c ಆರೋಪ್ಯ ಸ್ವರಥೇ ತೂರ್ಣಮಪೋವಾಹ ರಥಾಂತರಂ||
ವೃಷಸೇನನು ವಿರಥನೂ ನಿರಾಯುಧನೂ ಆದುದನ್ನು ನೋಡಿದ ದುಃಶಾಸನನು ಶೀಘ್ರವಾಗಿ ಅವನನ್ನು ತನ್ನ ರಥದಲ್ಲಿ ಏರಿಸಿಕೊಂಡು ಅಲ್ಲಿಂದ ಹೊರಟುಹೋದನು.
08032067a ಅಥಾನ್ಯಂ ರಥಮಾಸ್ಥಾಯ ವೃಷಸೇನೋ ಮಹಾರಥಃ|
08032067c ಕರ್ಣಸ್ಯ ಯುಧಿ ದುರ್ಧರ್ಷಃ ಪುನಃ ಪೃಷ್ಠಮಪಾಲಯತ್||
ಮಹಾರಥ ದುರ್ಧರ್ಷ ವೃಷಸೇನನು ಇನ್ನೊಂದು ರಥದಲ್ಲಿ ಕುಳಿತು ಪುನಃ ಯುದ್ಧದಲ್ಲಿ ಕರ್ಣನ ಹಿಂಭಾಗವನ್ನು ರಕ್ಷಿಸತೊಡಗಿದನು.
08032068a ದುಃಶಾಸನಂ ತು ಶೈನೇಯೋ ನವೈರ್ನವಭಿರಾಶುಗೈಃ|
08032068c ವಿಸೂತಾಶ್ವರಥಂ ಕೃತ್ವಾ ಲಲಾಟೇ ತ್ರಿಭಿರಾರ್ಪಯತ್||
ಶೈನೇಯನಾದರೋ ಒಂಭತ್ತು ಹೊಸ ಆಶುಗಗಳಿಂದ ದುಃಶಾಸನನನ್ನು ಸಾರಥಿಯಿಲ್ಲದಂತೆಯೂ ವಿರಥನನ್ನಾಗಿಯೂ ಮಾಡಿ ಅವನ ಹಣೆಗೆ ಮೂರು ಬಾಣಗಳನ್ನು ಪ್ರಯೋಗಿಸಿದನು.
08032069a ಸ ತ್ವನ್ಯಂ ರಥಮಾಸ್ಥಾಯ ವಿಧಿವತ್ಕಲ್ಪಿತಂ ಪುನಃ|
08032069c ಯುಯುಧೇ ಪಾಂಡುಭಿಃ ಸಾರ್ಧಂ ಕರ್ಣಸ್ಯಾಪ್ಯಾಯಯನ್ಬಲಂ||
ದುಃಶಾಸನನು ವಿಧಿವತ್ತಾಗಿ ಸಜ್ಜಾಗಿದ್ದ ಇನ್ನೊಂದು ರಥವನ್ನೇರಿ ಪುನಃ ಕರ್ಣನ ಬಲವನ್ನು ವೃದ್ಧಿಸುತ್ತಾ ಪಾಂಡವರೊಂದಿಗೆ ಹೋರಾಡಿದನು.
08032070a ಧೃಷ್ಟದ್ಯುಮ್ನಸ್ತತಃ ಕರ್ಣಮವಿಧ್ಯದ್ದಶಭಿಃ ಶರೈಃ|
08032070c ದ್ರೌಪದೇಯಾಸ್ತ್ರಿಸಪ್ತತ್ಯಾ ಯುಯುಧಾನಸ್ತು ಸಪ್ತಭಿಃ||
08032071a ಭೀಮಸೇನಶ್ಚತುಃಷಷ್ಟ್ಯಾ ಸಹದೇವಶ್ಚ ಪಂಚಭಿಃ|
08032071c ನಕುಲಸ್ತ್ರಿಂಶತಾ ಬಾಣೈಃ ಶತಾನೀಕಶ್ಚ ಸಪ್ತಭಿಃ|
08032071e ಶಿಖಂಡೀ ದಶಭಿರ್ವೀರೋ ಧರ್ಮರಾಜಃ ಶತೇನ ತು||
ಅನಂತರ ಧೃಷ್ಟದ್ಯುಮ್ನನು ಹತ್ತು, ದ್ರೌಪದೇಯರು ಎಪ್ಪತ್ಮೂರು, ಯುಯುಧಾನನು ಏಳು, ಭೀಮಸೇನನು ಅರವತ್ನಾಲ್ಕು, ಸಹದೇವನು ಏಳು, ನಕುಲನು ಮೂವತ್ತು, ಶತಾನೀಕನು ಏಳು, ವೀರ ಶಿಖಂಡಿಯು ಹತ್ತು ಮತ್ತು ಧರ್ಮರಾಜನು ನೂರು ಬಾಣಗಳಿಂದ ಕರ್ಣನನ್ನು ಪ್ರಹರಿಸಿದರು.
08032072a ಏತೇ ಚಾನ್ಯೇ ಚ ರಾಜೇಂದ್ರ ಪ್ರವೀರಾ ಜಯಗೃದ್ಧಿನಃ|
08032072c ಅಭ್ಯರ್ದಯನ್ಮಹೇಷ್ವಾಸಂ ಸೂತಪುತ್ರಂ ಮಹಾಮೃಧೇ||
ರಾಜೇಂದ್ರ! ಜಯಕ್ಕೆ ಆಸೆಪಡುತ್ತಿದ್ದ ಇವರು ಮತ್ತು ಅನ್ಯ ಪ್ರವೀರರು ಅ ಮಹಾಯುದ್ಧದಲ್ಲಿ ಮಹೇಷ್ವಾಸ ಸೂತಪುತ್ರನನ್ನು ಪ್ರಹರಿಸಿದರು.
08032073a ತಾನ್ಸೂತಪುತ್ರೋ ವಿಶಿಖೈರ್ದಶಭಿರ್ದಶಭಿಃ ಶಿತೈಃ|
08032073c ರಥೇ ಚಾರು ಚರನ್ವೀರಃ ಪ್ರತ್ಯವಿಧ್ಯದರಿಂದಮಃ||
ಅದಕ್ಕೆ ಪ್ರತಿಯಾಗಿ ಅರಿಂದಮ ವೀರ ಸೂತಪುತ್ರನು ಸುಂದರ ರಥದಲ್ಲಿ ಸಂಚರಿಸುತ್ತಾ ಹತ್ತು ಹತ್ತು ನಿಶಿತ ವಿಶಿಖಗಳಿಂದ ಅವರೆಲ್ಲರನ್ನೂ ಹೊಡೆದನು.
08032074a ತತ್ರಾಸ್ತ್ರವೀರ್ಯಂ ಕರ್ಣಸ್ಯ ಲಾಘವಂ ಚ ಮಹಾತ್ಮನಃ|
08032074c ಅಪಶ್ಯಾಮ ಮಹಾರಾಜ ತದದ್ಭುತಮಿವಾಭವತ್||
ಮಹಾರಾಜ! ಅಲ್ಲಿ ಮಹಾತ್ಮ ಕರ್ಣನ ಅಸ್ತ್ರವೀರ್ಯವನ್ನೂ ಹಸ್ತಲಾಘವವನ್ನೂ ನೋಡಿದೆವು. ಅದೊಂದು ಅದ್ಭುತವೇ ಆಗಿತ್ತು.
08032075a ನ ಹ್ಯಾದದಾನಂ ದದೃಶುಃ ಸಂದಧಾನಂ ಚ ಸಾಯಕಾನ್|
08032075c ವಿಮುಂಚಂತಂ ಚ ಸಂರಂಭಾದ್ದದೃಶುಸ್ತೇ ಮಹಾರಥಂ||
ಆ ಮಹಾರಥನು ಬಾಣಗಳನ್ನು ತೆಗೆದುಕೊಳ್ಳುವುದಾಗಲೀ, ಧನುಸ್ಸಿಗೆ ಹೂಡಿದುದಾಗಲೀ, ಮತ್ತು ಬಾಣಪ್ರಯೋಗಿಸಿದುದಾಗಲೀ ಯಾರಿಗೂ ಕಾಣಿಸುತ್ತಿರಲಿಲ್ಲ.
08032076a ದ್ಯೌರ್ವಿಯದ್ಭೂರ್ದಿಶಶ್ಚಾಶು ಪ್ರಣುನ್ನಾ ನಿಶಿತೈಃ ಶರೈಃ|
08032076c ಅರುಣಾಭ್ರಾವೃತಾಕಾರಂ ತಸ್ಮಿನ್ದೇಶೇ ಬಭೌ ವಿಯತ್||
ಆಕಾಶ-ಭೂಮಿ-ದಿಕ್ಕುಗಳೆಲ್ಲವೂ ಅವನ ನಿಶಿತ ಬಾಣಗಳಿಂದ ತುಂಬಿಹೋದವು. ಆ ಪ್ರದೇಶವು ಅರುಣೋದಯಕಾಲದಂತೆ ಕೆಂಪಾಗಿ ಕಾಣುತ್ತಿತ್ತು.
08032077a ನೃತ್ಯನ್ನಿವ ಹಿ ರಾಧೇಯಶ್ಚಾಪಹಸ್ತಃ ಪ್ರತಾಪವಾನ್|
08032077c ಯೈರ್ವಿದ್ಧಃ ಪ್ರತ್ಯವಿಧ್ಯತ್ತಾನೇಕೈಕಂ ತ್ರಿಗುಣೈಃ ಶರೈಃ||
ಪ್ರತಾಪವಾನ್ ರಾಧೇಯನು ಚಾಪವನ್ನು ಹಿಡಿದು ನರ್ತಿಸುತ್ತಿರುವನೋ ಎನ್ನುವಂತೆ ತೋರುತ್ತಿದ್ದನು. ಅವನನ್ನು ಪ್ರಹರಿಸಿದ ಪ್ರತಿಯೊಬ್ಬನನ್ನೂ ಕರ್ಣನು ಅವರು ಬಿಟ್ಟ ಶರಗಳಿಗಿಂತ ಮೂರುಪಟ್ಟು ಶರಗಳಿಂದ ಪ್ರಹರಿಸುತ್ತಿದ್ದನು.
08032078a ದಶಭಿರ್ದಶಭಿಶ್ಚೈನಾನ್ಪುನರ್ವಿದ್ಧ್ವಾ ನನಾದ ಹ|
08032078c ಸಾಶ್ವಸೂತಧ್ವಜಚ್ಚತ್ರಾಸ್ತತಸ್ತೇ ವಿವರಂ ದದುಃ||
ಪುನಃ ಕರ್ಣನು ಹತ್ತು ಹತ್ತು ಬಾಣಗಳಿಂದ ಅವರ ಕುದುರೆ-ಸಾರಥಿ-ಧ್ವಜ-ಚತ್ರಗಳನ್ನು ಪ್ರಹರಿಸಿ ಜೋರಾಗಿ ಸಿಂಹನಾದಗೈದನು. ಆಗ ಅವರು ಅವನಿಗೆ ಮುಂದೆ ಹೋಗಲು ದಾರಿಕೊಟ್ಟರು.
08032079a ತಾನ್ಪ್ರಮೃದ್ನನ್ಮಹೇಷ್ವಾಸಾನ್ರಾಧೇಯಃ ಶರವೃಷ್ಟಿಭಿಃ|
08032079c ರಾಜಾನೀಕಮಸಂಬಾಧಂ ಪ್ರಾವಿಶಚ್ಚತ್ರುಕರ್ಶನಃ||
ಶರವೃಷ್ಟಿಗಳಿಂದ ಆ ಮಹೇಷ್ವಾಸರನ್ನು ಸದೆಬಡಿದು ಶತ್ರುಕರ್ಶನ ರಾಧೇಯನು ರಾಜಾ ಯುಧಿಷ್ಠಿರನ ಸೇನೆಯನ್ನು ಪ್ರವೇಶಿಸಿದನು.
08032080a ಸ ರಥಾಂಸ್ತ್ರಿಶತಾನ್ ಹತ್ವಾ ಚೇದೀನಾಮನಿವರ್ತಿನಾಂ|
08032080c ರಾಧೇಯೋ ನಿಶಿತೈರ್ಬಾಣೈಸ್ತತೋಽಭ್ಯಾರ್ಚ್ಚದ್ಯುಧಿಷ್ಠಿರಂ||
ಆ ರಾಧೇಯನು ಹಿಂದಿರುಗದಿದ್ದ ಚೇದಿಗಳ ಮುನ್ನೂರು ರಥಗಳನ್ನು ನಾಶಗೊಳಿಸಿ ನಿಶಿತ ಬಾಣಗಳಿಂದ ಯುಧಿಷ್ಠಿರನನ್ನು ಪ್ರಹರಿಸಿದನು.
08032081a ತತಸ್ತೇ ಪಾಂಡವಾ ರಾಜಂ ಶಿಖಂಡೀ ಚ ಸಸಾತ್ಯಕಿಃ|
08032081c ರಾಧೇಯಾತ್ಪರಿರಕ್ಷಂತೋ ರಾಜಾನಂ ಪರ್ಯವಾರಯನ್||
ರಾಜನ್! ಆಗ ಪಾಂಡವನನ್ನು ರಾಧೇಯನಿಂದ ರಕ್ಷಿಸಲೋಸುಗ ಸಾತ್ಯಕಿಯೊಡನೆ ಶಿಖಂಡಿಯು ರಾಜನನ್ನು ಸುತ್ತುವರೆದರು.
08032082a ತಥೈವ ತಾವಕಾಃ ಸರ್ವೇ ಕರ್ಣಂ ದುರ್ವಾರಣಂ ರಣೇ|
08032082c ಯತ್ತಾಃ ಸೇನಾಮಹೇಷ್ವಾಸಾಃ ಪರ್ಯರಕ್ಷಂತ ಸರ್ವಶಃ||
ಹಾಗೆಯೇ ನಿನ್ನಕಡೆಯ ಮಹೇಷ್ವಾಸರ ಸೇನೆಗಳೂ ರಣದಲ್ಲಿ ತಡೆಯಲಸಾಧ್ಯ ಕರ್ಣನನ್ನು ಪ್ರಯತ್ನಮಾಡಿ ಎಲ್ಲಕಡೆಗಳಿಂದಲೂ ರಕ್ಷಿಸುತ್ತಿದ್ದವು.
08032083a ನಾನಾವಾದಿತ್ರಘೋಷಾಶ್ಚ ಪ್ರಾದುರಾಸನ್ವಿಶಾಂ ಪತೇ|
08032083c ಸಿಂಹನಾದಶ್ಚ ಸಂಜಜ್ಞೇ ಶೂರಾಣಾಮನಿವರ್ತಿನಾಂ||
ವಿಶಾಂಪತೇ! ನಾನಾ ವಾದ್ಯಗಳು ಮೊಳಗಿದವು. ಗರ್ಜನೆಗಳು ಕೇಳಿಬಂದವು. ಹಿಂದಿರುಗದಿದ್ದ ಶೂರರು ಸಿಂಹನಾದಗೈದರು.
08032084a ತತಃ ಪುನಃ ಸಮಾಜಗ್ಮುರಭೀತಾಃ ಕುರುಪಾಂಡವಾಃ|
08032084c ಯುಧಿಷ್ಠಿರಮುಖಾಃ ಪಾರ್ಥಾಃ ಸೂತಪುತ್ರಮುಖಾ ವಯಂ||
ನಂತರ ಪುನಃ ಅಭೀತ ಕುರು-ಪಾಂಡವರ ನಡುವೆ - ಯುಧಿಷ್ಠಿರನ ನಾಯಕತ್ವದಲ್ಲಿದ್ದ ಪಾರ್ಥರು ಮತ್ತು ಸೂತಪುತ್ರನ ನಾಯಕತ್ವದಲ್ಲಿದ್ದ ನಮ್ಮವರ ನಡುವೆ ಯುದ್ಧವು ನಡೆಯಿತು.”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ದ್ವಾತ್ರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಮೂವತ್ತೆರಡನೇ ಅಧ್ಯಾಯವು.
