Karna Parva: Chapter 19

ಕರ್ಣ ಪರ್ವ

೧೯

ಅರ್ಜುನನು ತ್ರಿಗರ್ತಸೇನೆಯನ್ನು ನಾಶಗೊಳಿಸಿದುದು (೧-೩೫). ಯುಧಿಷ್ಠಿರ-ದುರ್ಯೋಧನರ ಯುದ್ಧ; ದುರ್ಯೋಧನನ ಸೋಲು (೩೬-೪೨). ಕುರು-ಪಾಂಡವ ಸೇನೆಗಳ ನಾಶದ ವರ್ಣನೆ (೪೩-೭೫).

08019001 ಸಂಜಯ ಉವಾಚ|

08019001a ಶ್ವೇತಾಶ್ವೋಽಪಿ ಮಹಾರಾಜ ವ್ಯಧಮತ್ತಾವಕಂ ಬಲಂ|

08019001c ಯಥಾ ವಾಯುಃ ಸಮಾಸಾದ್ಯ ತೂಲರಾಶಿಂ ಸಮಂತತಃ||

ಸಂಜಯನು ಹೇಳಿದನು: “ಮಹಾರಾಜ! ಭಿರುಗಾಳಿಯು ಹತ್ತಿಯ ರಾಶಿಯನ್ನು ಎಲ್ಲಕಡೆ ಚದುರಿಸಿ ಹಾಳುಮಾಡುವಂತೆ ಶ್ವೇತಾಶ್ವನು ನಿನ್ನ ಸೇನೆಯನ್ನು ಧ್ವಂಸಗೊಳಿಸುತ್ತಿದ್ದನು.

08019002a ಪ್ರತ್ಯುದ್ಯಯುಸ್ತ್ರಿಗರ್ತಾಸ್ತಂ ಶಿಬಯಃ ಕೌರವೈಃ ಸಹ|

08019002c ಶಾಲ್ವಾಃ ಸಂಶಪ್ತಕಾಶ್ಚೈವ ನಾರಾಯಣಬಲಂ ಚ ಯತ್||

ತ್ರಿಗರ್ತರು, ಶಿಬಿಗಳು, ಕೌರವರು, ಶಾಲ್ವರು, ಸಂಶಪ್ತಕರು ಮತ್ತು ನಾರಾಯಣ ಸೇನೆಗಳು ಒಟ್ಟಿಗೇ ಅವನನ್ನು ಎದುರಿಸಿ ಯುದ್ಧಮಾಡಿದರು.

08019003a ಸತ್ಯಸೇನಃ ಸತ್ಯಕೀರ್ತಿರ್ಮಿತ್ರದೇವಃ ಶ್ರುತಂಜಯಃ|

08019003c ಸೌಶ್ರುತಿಶ್ಚಿತ್ರಸೇನಶ್ಚ ಮಿತ್ರವರ್ಮಾ ಚ ಭಾರತ||

08019004a ತ್ರಿಗರ್ತರಾಜಃ ಸಮರೇ ಭ್ರಾತೃಭಿಃ ಪರಿವಾರಿತಃ|

08019004c ಪುತ್ರೈಶ್ಚೈವ ಮಹೇಷ್ವಾಸೈರ್ನಾನಾಶಸ್ತ್ರಧರೈರ್ಯುಧಿ||

ಭಾರತ! ತ್ರಿಗರ್ತರಾಜನು ಸತ್ಯಸೇನ, ಸತ್ಯಕೀರ್ತಿ, ಮಿತ್ರದೇವ, ಶ್ರುತಂಜಯ, ಸೌಶ್ರುತಿ, ಚಿತ್ರಸೇನ ಮತ್ತು ಮಿತ್ರವರ್ಮರೆಂಬ ಸಹೋದರರೊಂದಿಗೆ ಮತ್ತು ಯುದ್ಧದಲ್ಲಿ ನಾನಾ ಶಸ್ತ್ರಗಳನ್ನು ಧರಿಸಿದ್ದ ಮಹೇಷ್ವಾಸ ಪುತ್ರರೊಂದಿಗೆ ಕದನವಾಡುತ್ತಿದ್ದನು.

08019005a ತೇ ಸೃಜಂತಃ ಶರವ್ರಾತಾನ್ಕಿರಂತೋಽರ್ಜುನಮಾಹವೇ|

08019005c ಅಭ್ಯದ್ರವಂತ ಸಮರೇ ವಾರ್ಯೋಘಾ ಇವ ಸಾಗರಂ||

ಅವರು ಸಮುದ್ರವನ್ನು ಮುತ್ತಿಡುವ ಚಂಡಮಾರುತದಂತೆ ಶರಗಳ ಭಿರುಗಾಳಿಯನ್ನೇ ಎರಚುತ್ತಾ ಯುದ್ಧದಲ್ಲಿ ಅರ್ಜುನನನ್ನು ಆಕ್ರಮಣಿಸಿದರು.

08019006a ತೇ ತ್ವರ್ಜುನಂ ಸಮಾಸಾದ್ಯ ಯೋಧಾಃ ಶತಸಹಸ್ರಶಃ|

08019006c ಅಗಚ್ಚನ್ವಿಲಯಂ ಸರ್ವೇ ತಾರ್ಕ್ಷ್ಯಂ ದೃಷ್ಟ್ವೇವ ಪನ್ನಗಾಃ||

ನೂರು ಸಾವಿರ ಸಂಖ್ಯೆಗಳಲ್ಲಿದ್ದ ಆ ಯೋಧರು ಎಲ್ಲರೂ ಅರ್ಜುನನನ್ನು ಎದುರಿಸಿ ಗರುಡನನ್ನು ನೋಡಿದ ಸರ್ಪಗಳು ಬಿಲವನ್ನು ಹೊಗುವಂತೆ ಯಮನ ಆಲಯಕ್ಕೆ ತೆರಳಿದರು.

08019007a ತೇ ವಧ್ಯಮಾನಾಃ ಸಮರೇ ನಾಜಹುಃ ಪಾಂಡವಂ ತದಾ|

08019007c ದಹ್ಯಮಾನಾ ಯಥಾ ರಾಜಂ ಶಲಭಾ ಇವ ಪಾವಕಂ||

ರಾಜನ್! ಅಗ್ನಿಯಿಂದ ಸುಡಲ್ಪಡುತ್ತಿದ್ದರೂ ಪತಂಗದ ಹುಳುಗಳು ಅಗ್ನಿಯನ್ನೇ ಹೊಗುವಂತೆ ಸಮರದಲ್ಲಿ ವಧಿಸಲ್ಪಡುತ್ತಿದ್ದ ಅವರು ಪಾಂಡವ ಅರ್ಜುನನನ್ನು ಬಿಟ್ಟು ಓಡಿ ಹೋಗಲಿಲ್ಲ.

08019008a ಸತ್ಯಸೇನಸ್ತ್ರಿಭಿರ್ಬಾಣೈರ್ವಿವ್ಯಾಧ ಯುಧಿ ಪಾಂಡವಂ|

08019008c ಮಿತ್ರದೇವಸ್ತ್ರಿಷಷ್ಟ್ಯಾ ಚ ಚಂದ್ರದೇವಶ್ಚ ಸಪ್ತಭಿಃ||

08019009a ಮಿತ್ರವರ್ಮಾ ತ್ರಿಸಪ್ತತ್ಯಾ ಸೌಶ್ರುತಿಶ್ಚಾಪಿ ಪಂಚಭಿಃ|

08019009c ಶತ್ರುಂಜಯಶ್ಚ ವಿಂಶತ್ಯಾ ಸುಶರ್ಮಾ ನವಭಿಃ ಶರೈಃ||

ಯುದ್ಧದಲ್ಲಿ ಪಾಂಡವ ಅರ್ಜುನನನ್ನು ಸತ್ಯಸೇನನು ಮೂರು ಬಾಣಗಳಿಂದ ಹೊಡೆದನು. ಮಿತ್ರದೇವನು ಅರವತ್ಮೂರು, ಚಂದ್ರದೇವನು ಏಳು, ಮಿತ್ರವರ್ಮನು ಎಪ್ಪತ್ಮೂರು, ಸೌಶ್ರುತಿಯು ಐದು, ಶತ್ರುಂಜಯನು ಇಪ್ಪತ್ತು ಮತ್ತು ಸುಶರ್ಮನು ಒಂಭತ್ತು ಶರಗಳಿಂದ ಅವನನ್ನು ಹೊಡೆದರು.

08019010a ಶತ್ರುಂಜಯಂ ಚ ರಾಜಾನಂ ಹತ್ವಾ ತತ್ರ ಶಿಲಾಶಿತೈಃ|

08019010c ಸೌಶ್ರುತೇಃ ಸಶಿರಸ್ತ್ರಾಣಂ ಶಿರಃ ಕಾಯಾದಪಾಹರತ್|

08019010e ತ್ವರಿತಶ್ಚಂದ್ರದೇವಂ ಚ ಶರೈರ್ನಿನ್ಯೇ ಯಮಕ್ಷಯಂ||

ಆಗ ಅರ್ಜುನನು ಶಿಲಾಶಿತ ಶರಗಳಿಂದ ರಾಜ ಶತ್ರುಂಜಯನನ್ನು ಸಂಹರಿಸಿ, ಕಿರೀಟದೊಂದಿಗೆ ಸುಶ್ರುತನ ಶಿರವನ್ನು ಕಾಯದಿಂದ ಅಪಹರಿಸಿದನು. ನಂತರ ತ್ವರೆಮಾಡಿ ಶರಗಳಿಂದ ಚಂದ್ರದೇವನನ್ನು ಯಮಕ್ಷಯಕ್ಕೆ ಕಳುಹಿಸಿದನು.

08019011a ಅಥೇತರಾನ್ಮಹಾರಾಜ ಯತಮಾನಾನ್ಮಹಾರಥಾನ್|

08019011c ಪಂಚಭಿಃ ಪಂಚಭಿರ್ಬಾಣೈರೇಕೈಕಂ ಪ್ರತ್ಯವಾರಯತ್||

ಮಹಾರಾಜ! ನಂತರ ಅವನು ಪ್ರಯತ್ನಪಡುತ್ತಿದ್ದ ಮಹಾರಥರು ಒಬ್ಬೊಬ್ಬರನ್ನೂ ಐದು ಐದು ಬಾಣಗಳಿಂದ ಹೊಡೆದು ತಡೆದನು.

08019012a ಸತ್ಯಸೇನಸ್ತು ಸಂಕ್ರುದ್ಧಸ್ತೋಮರಂ ವ್ಯಸೃಜನ್ಮಹತ್|

08019012c ಸಮುದ್ದಿಶ್ಯ ರಣೇ ಕೃಷ್ಣಂ ಸಿಂಹನಾದಂ ನನಾದ ಚ||

ಸತ್ಯಸೇನನನಾದರೋ ಸಂಕ್ರುದ್ದನಾಗಿ ಮಹಾ ತೋಮರವನ್ನು ರಣದಲ್ಲಿ ಕೃಷ್ಣನನ್ನೇ ಗುರಿಯಿಟ್ಟು ಪ್ರಯೋಗಿಸಿ ಸಿಂಹನಾದಗೈದನು.

08019013a ಸ ನಿರ್ಭಿದ್ಯ ಭುಜಂ ಸವ್ಯಂ ಮಾಧವಸ್ಯ ಮಹಾತ್ಮನಃ|

08019013c ಅಯಸ್ಮಯೋ ಮಹಾಚಂಡೋ ಜಗಾಮ ಧರಣೀಂ ತದಾ||

ಉಕ್ಕಿನಿಂದ ಮಾಡಲ್ಪಟ್ಟಿದ್ದ ಆ ಮಹಾಚಂಡ ತೋಮರವು ಮಹಾತ್ಮ ಮಾದವನ ಎಡಭುಜವನ್ನು ಗಾಯಗೊಳಿಸಿ ಭೂಮಿಯ ಮೇಲೆ ಬಿದ್ದಿತು.

08019014a ಮಾಧವಸ್ಯ ತು ವಿದ್ಧಸ್ಯ ತೋಮರೇಣ ಮಹಾರಣೇ|

08019014c ಪ್ರತೋದಃ ಪ್ರಾಪತದ್ಧಸ್ತಾದ್ರಶ್ಮಯಶ್ಚ ವಿಶಾಂ ಪತೇ||

ವಿಶಾಂಪತೇ! ಗಾಯಗೊಂಡ ಕೃಷ್ಣನ ಕೈಗಳಿಂದ ಮಹಾರಣದಲ್ಲಿ ಚಾವಟಿ ಮತ್ತು ಕಡಿವಾಣಗಳು ಜಾರಿ ಕೆಳಕ್ಕೆ ಬಿದ್ದವು.

08019015a ಸ ಪ್ರತೋದಂ ಪುನರ್ಗೃಹ್ಯ ರಶ್ಮೀಂಶ್ಚೈವ ಮಹಾಯಶಾಃ|

08019015c ವಾಹಯಾಮಾಸ ತಾನಶ್ವಾನ್ಸತ್ಯಸೇನರಥಂ ಪ್ರತಿ||

ಮಹಾಯಶಸ್ವಿ ಕೃಷ್ಣನು ಪುನಃ ಚಾವಟಿ ಮತ್ತು ಕಡಿವಾಣಗಳನ್ನು ಹಿಡಿದು ಆ ಅಶ್ವಗಳನ್ನು ಸತ್ಯಸೇನನ ರಥದ ಕಡೆ ಓಡಿಸಿದನು.

08019016a ವಿಷ್ವಕ್ಸೇನಂ ತು ನಿರ್ಭಿನ್ನಂ ಪ್ರೇಕ್ಷ್ಯ ಪಾರ್ಥೋ ಧನಂಜಯಃ|

08019016c ಸತ್ಯಸೇನಂ ಶರೈಸ್ತೀಕ್ಷ್ಣೈರ್ದಾರಯಿತ್ವಾ ಮಹಾಬಲಃ||

08019017a ತತಃ ಸುನಿಶಿತೈರ್ಬಾಣೈ ರಾಜ್ಞಸ್ತಸ್ಯ ಮಹಚ್ಚಿರಃ|

08019017c ಕುಂಡಲೋಪಚಿತಂ ಕಾಯಾಚ್ಚಕರ್ತ ಪೃತನಾಂತರೇ||

ಮಹಾಬಲ ಪಾರ್ಥ ಧನಂಜಯನು ಗಾಯಗೊಂಡಿದ್ದ ವಿಷ್ವಕ್ಸೇನನನ್ನು ನೋಡಿ ಸತ್ಯಸೇನನನ್ನು ತೀಕ್ಷ್ಣ ಶರಗಳಿಂದ ಗಾಯಗೊಳಿಸಿದನು. ನಂತರ ಅವನ ಸೇನೆಯ ಮಧ್ಯಭಾಗದಲ್ಲಿಯೇ ನಿಶಿತ ಬಾಣಗಳಿಂದ ಕುಂಡಲಗಳಿಂದ ಶೋಭಿಸುತ್ತಿದ್ದ ರಾಜನ ಮಹಾಶಿರವನ್ನು ದೇಹದಿಂದ ಕತ್ತರಿಸಿದನು.

08019018a ತಂ ನಿಹತ್ಯ ಶಿತೈರ್ಬಾಣೈರ್ಮಿತ್ರವರ್ಮಾಣಮಾಕ್ಷಿಪತ್|

08019018c ವತ್ಸದಂತೇನ ತೀಕ್ಷ್ಣೇನ ಸಾರಥಿಂ ಚಾಸ್ಯ ಮಾರಿಷ||

ಮಾರಿಷ! ಅವನನ್ನು ಸಂಹರಿಸಿ ಅರ್ಜುನನು ನಿಶಿತ ಬಾಣಗಳಿಂದ ಮಿತ್ರವರ್ಮನನ್ನು ಮುಚ್ಚಿ ತೀಕ್ಷ್ಣ ವತ್ಸದಂತದಿಂದ ಅವನ ಸಾರಥಿಯನ್ನು ಸಂಹರಿಸಿದನು.

08019019a ತತಃ ಶರಶತೈರ್ಭೂಯಃ ಸಂಶಪ್ತಕಗಣಾನ್ವಶೀ|

08019019c ಪಾತಯಾಮಾಸ ಸಂಕ್ರುದ್ಧಃ ಶತಶೋಽಥ ಸಹಸ್ರಶಃ||

ಪುನಃ ಸಂಕ್ರುದ್ಧನಾದ ಅವನು ನೂರಾರು ಶರಗಳಿಂದ ಸಂಶಪ್ತಕ ಗಣಗಳನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಉರುಳಿಸಿದನು.

08019020a ತತೋ ರಜತಪುಂಖೇನ ರಾಜ್ಞಃ ಶೀರ್ಷಂ ಮಹಾತ್ಮನಃ|

08019020c ಮಿತ್ರದೇವಸ್ಯ ಚಿಚ್ಚೇದ ಕ್ಷುರಪ್ರೇಣ ಮಹಾಯಶಾಃ|

08019020e ಸುಶರ್ಮಾಣಂ ಚ ಸಂಕ್ರುದ್ಧೋ ಜತ್ರುದೇಶೇ ಸಮಾರ್ದಯತ್||

ಆ ಮಹಾಯಶಸ್ವಿಯು ರಜತಪುಂಖದ ಕ್ಷುರಪ್ರದಿಂದ ಮಹಾತ್ಮ ಮಿತ್ರದೇವ ರಾಜನ ಶಿರವನ್ನು ತುಂಡರಿಸಿದನು. ಸಂಕ್ರುದ್ಧನಾಗಿ ಸುಶರ್ಮನನ್ನು ಕೂಡ ವಕ್ಷಸ್ಥಳದಲ್ಲಿ ಹೊಡೆದನು.

08019021a ತತಃ ಸಂಶಪ್ತಕಾಃ ಸರ್ವೇ ಪರಿವಾರ್ಯ ಧನಂಜಯಂ|

08019021c ಶಸ್ತ್ರೌಘೈರ್ಮಮೃದುಃ ಕ್ರುದ್ಧಾ ನಾದಯಂತೋ ದಿಶೋ ದಶ||

ಆಗ ಕ್ರುದ್ಧ ಸಂಶಪ್ತಕರೆಲ್ಲರೂ ಧನಂಜಯನನ್ನು ಸುತ್ತುವರೆದು ಹತ್ತು ದಿಕ್ಕುಗಳೂ ಮೊಳಗುವಂತೆ ಸಿಂಹನಾದಗೈಯುತ್ತಾ ಶಸ್ತ್ರಗಳ ಮಳೆಯನ್ನೇ ಸುರಿಸಿದರು.

08019022a ಅಭ್ಯರ್ದಿತಸ್ತು ತೈರ್ಜಿಷ್ಣುಃ ಶಕ್ರತುಲ್ಯಪರಾಕ್ರಮಃ|

08019022c ಐಂದ್ರಮಸ್ತ್ರಮಮೇಯಾತ್ಮಾ ಪ್ರಾದುಶ್ಚಕ್ರೇ ಮಹಾರಥಃ|

08019022e ತತಃ ಶರಸಹಸ್ರಾಣಿ ಪ್ರಾದುರಾಸನ್ವಿಶಾಂ ಪತೇ||

ಅವರಿಂದ ಹಾಗೆ ಪೀಡಿಸಲ್ಪಟ್ಟ ಶಕ್ರತುಲ್ಯ ಪರಾಕ್ರಮಿ ಮಹಾರಥ ಅಮೇಯಾತ್ಮ ಅರ್ಜುನನು ಐಂದ್ರಾಸ್ತ್ರವನ್ನು ಪ್ರಕಟಿಸಿದನು. ವಿಶಾಂಪತೇ! ಅದರಿಂದ ಸಹಸ್ರಾರು ಬಾಣಗಳು ಪ್ರಾದುರ್ಭವಿಸಿದವು.

08019023a ಧ್ವಜಾನಾಂ ಚಿದ್ಯಮಾನಾನಾಂ ಕಾರ್ಮುಕಾಣಾಂ ಚ ಸಂಯುಗೇ|

08019023c ರಥಾನಾಂ ಸಪತಾಕಾನಾಂ ತೂಣೀರಾಣಾಂ ಶರೈಃ ಸಹ||

08019024a ಅಕ್ಷಾಣಾಮಥ ಯೋಕ್ತ್ರಾಣಾಂ ಚಕ್ರಾಣಾಂ ರಶ್ಮಿಭಿಃ ಸಹ|

08019024c ಕೂಬರಾಣಾಂ ವರೂಥಾನಾಂ ಪೃಷತ್ಕಾನಾಂ ಚ ಸಂಯುಗೇ||

08019025a ಅಶ್ಮನಾಂ ಪತತಾಂ ಚೈವ ಪ್ರಾಸಾನಾಂ ಋಷ್ಟಿಭಿಃ ಸಹ|

08019025c ಗದಾನಾಂ ಪರಿಘಾಣಾಂ ಚ ಶಕ್ತೀನಾಂ ತೋಮರೈಃ ಸಹ||

08019026a ಶತಘ್ನೀನಾಂ ಸಚಕ್ರಾಣಾಂ ಭುಜಾನಾಮೂರುಭಿಃ ಸಹ|

08019026c ಕಂಟಸೂತ್ರಾಂಗದಾನಾಂ ಚ ಕೇಯೂರಾಣಾಂ ಚ ಮಾರಿಷ||

08019027a ಹಾರಾಣಾಂ ಅಥ ನಿಷ್ಕಾಣಾಂ ತನುತ್ರಾಣಾಂ ಚ ಭಾರತ|

08019027c ಚತ್ರಾಣಾಂ ವ್ಯಜನಾನಾಂ ಚ ಶಿರಸಾಂ ಮುಕುಟೈಃ ಸಹ|

08019027e ಅಶ್ರೂಯತ ಮಹಾಂ ಶಬ್ದಸ್ತತ್ರ ತತ್ರ ವಿಶಾಂ ಪತೇ||

ಮಾರಿಷ! ಭಾರತ! ವಿಶಾಂಪತೇ! ಕೂಡಲೇ ಯುದ್ಧದಲ್ಲಿ ಕತ್ತರಿಸಲ್ಪಡುತ್ತಿದ್ದ ಧ್ವಜಗಳ, ಧನುಸ್ಸುಗಳ, ಪತಾಕೆಗಳೊಂದಿಗೆ ರಥಗಳ, ಶರಗಳೊಂದಿಗೆ ತುಂಡಾಗುತ್ತಿದ್ದ ಬತ್ತಳಿಕೆಗಳ, ರಥದ ನೊಗಗಳ, ತೋಳುಮರಗಳ, ಚಕ್ರಗಳ ಶಬ್ಧಗಳು ಕೇಳಿಬಂದವು. ಕಲ್ಲುಗಳು ಬೀಳುವ, ಪ್ರಾಸ-ಋಷ್ಟಿಗಳು ಬೀಳುವ, ಗದ-ಪರಿಘ-ಶಕ್ತಿ-ತೋಮರಳು ಬೀಳುವ, ಶತಘ್ನಿ-ಚಕ್ರಗಳು ಬೀಳುವ, ತೋಳು-ತೊಡೆಗಳು ಬೀಳುವ, ಕಂಟಸೂತ್ರ-ಅಂಗದ-ಕೇಯೂರಗಳು ಬೀಳುವ, ಹಾರ-ಕಿರೀಟ-ಕವಚಗಳು ಬೀಳುವ, ಚತ್ರ-ಚಾಮರಗಳು ಬೀಳುವ, ಮುಕುಟಗಳೊಂದಿಗೆ ಶಿರಗಳು ಬೀಳುವ ಮಹಾ ಶಬ್ಧಗಳು ಅಲ್ಲಲ್ಲಿ ಕೇಳಿಬಂದವು.

08019028a ಸಕುಂಡಲಾನಿ ಸ್ವಕ್ಷೀಣಿ ಪೂರ್ಣಚಂದ್ರನಿಭಾನಿ ಚ|

08019028c ಶಿರಾಂಸ್ಯುರ್ವ್ಯಾನದೃಶ್ಯಂತ ತಾರಾಗಣ ಇವಾಂಬರೇ||

ಆಕಾಶದಲ್ಲಿ ಹಾರಿ ಬೀಳುತ್ತಿದ್ದ ಸುಂದರ ಕುಂಡಲಗಳು ಮತ್ತು ಕಣ್ಣುಗಳಿಂದ ಪೂರ್ಣಚಂದ್ರನಂತೆ ಹೊಳೆಯುತ್ತಿದ್ದ ಶಿರಸ್ಸುಗಳು ಆಕಾಶದಲ್ಲಿ ರಾರಾಜಿಸುವ ನಕ್ಷತ್ರಗಳಂತೆ ತೋರಿದವು.

08019029a ಸುಸ್ರಗ್ವೀಣಿ ಸುವಾಸಾಂಸಿ ಚಂದನೇನೋಕ್ಷಿತಾನಿ ಚ|

08019029c ಶರೀರಾಣಿ ವ್ಯದೃಶ್ಯಂತ ಹತಾನಾಂ ಚ ಮಹೀತಲೇ|

08019029e ಗಂದರ್ವನಗರಾಕಾರಂ ಘೋರಮಾಯೋಧನಂ ತದಾ||

ಹತರಾಗಿ ಬಿದ್ದಿದ್ದ ಚಂದನ ಲೇಪಿತ ಶರೀರಗಳಿಂದ, ಸುಂದರ ಹಾರಗಳಿಂದ, ಮತ್ತು ಸುಂದರ ವಸ್ತ್ರಗಳಿಂದ ರಣಭೂಮಿಯು ಗಂಧರ್ವನಗರಿಯಂತೆ ಘೋರವಾಗಿ ಕಾಣುತ್ತಿತ್ತು.

08019030a ನಿಹತೈ ರಾಜಪುತ್ರೈಶ್ಚ ಕ್ಷತ್ರಿಯೈಶ್ಚ ಮಹಾಬಲೈಃ|

08019030c ಹಸ್ತಿಭಿಃ ಪತಿತೈಶ್ಚೈವ ತುರಗೈಶ್ಚಾಭವನ್ಮಹೀ|

08019030e ಅಗಮ್ಯಮಾರ್ಗಾ ಸಮರೇ ವಿಶೀರ್ಣೈರಿವ ಪರ್ವತೈಃ||

ಚೂರಾದ ಪರ್ವತಗಳಂತೆ ಹತರಾಗಿ ಬಿದ್ದಿದ್ದ ಮಹಾಬಲ ಕ್ಷತ್ರಿಯ ರಾಜಪುತ್ರರು, ಆನೆಗಳು, ಮತ್ತು ಕುದುರೆಗಳಿಂದಾಗಿ ರಣಭೂಮಿಯು ಅಗಮ್ಯವಾಗಿ ಕಾಣುತ್ತಿತ್ತು.

08019031a ನಾಸೀಚ್ಚಕ್ರಪಥಶ್ಚೈವ ಪಾಂಡವಸ್ಯ ಮಹಾತ್ಮನಃ|

08019031c ನಿಘ್ನತಃ ಶಾತ್ರವಾನ್ಭಲ್ಲೈರ್ಹಸ್ತ್ಯಶ್ವಂ ಚಾಮಿತಂ ಮಹತ್||

ಅಮಿತ ಸಂಖ್ಯೆಗಳಲ್ಲಿ ಶತ್ರುಗಳನ್ನೂ ಆನೆಗಳನ್ನೂ ಭಲ್ಲಗಳಿಂದ ಸಂಹರಿಸುತ್ತಿದ್ದ ಮಹಾತ್ಮ ಪಾಂಡವನ ರಥಚಕ್ರವು ಹೋಗಲೂ ದಾರಿಯಿಲ್ಲದಂತಾಯಿತು.

08019032a ಆ ತುಂಬಾದವಸೀದಂತಿ ರಥಚಕ್ರಾಣಿ ಮಾರಿಷ|

08019032c ರಣೇ ವಿಚರತಸ್ತಸ್ಯ ತಸ್ಮಿಽಲ್ಲೋಹಿತಕರ್ದಮೇ||

ಮಾರಿಷ! ರಕ್ತದ ಕೆಸರಿನಿಂದ ಕೂಡಿದ್ದ ಆ ರಣಾಂಗಣದಲ್ಲಿ ಸಂಚರಿಸುತ್ತಿದ್ದ ಅರ್ಜುನನ ರಥಚಕ್ರಗಳು ಕೆಸರಿನಲ್ಲಿ ಹೂತುಕೊಂಡವು.

08019033a ಸೀದಮಾನಾನಿ ಚಕ್ರಾಣಿ ಸಮೂಹುಸ್ತುರಗಾ ಭೃಶಂ|

08019033c ಶ್ರಮೇಣ ಮಹತಾ ಯುಕ್ತಾ ಮನೋಮಾರುತರಂಹಸಃ||

ಹುಗಿದುಹೋಗಿದ್ದ ಚಕ್ರಗಳು ಕುದುರೆಗಳನ್ನು ಬಹಳ ಆಯಾಸಗೊಳಿಸುತ್ತಿದ್ದವು. ಮನಸ್ಸು ಮತ್ತು ವಾಯುಗಳ ವೇಗವುಳ್ಳ ಆ ಕುದುರೆಗಳು ಮಹಾ ಪ್ರಯತ್ನಪಟ್ಟು ಹೋಗುತ್ತಿದ್ದವು.

08019034a ವಧ್ಯಮಾನಂ ತು ತತ್ಸೈನ್ಯಂ ಪಾಂಡುಪುತ್ರೇಣ ಧನ್ವಿನಾ|

08019034c ಪ್ರಾಯಶೋ ವಿಮುಖಂ ಸರ್ವಂ ನಾವತಿಷ್ಠತ ಸಂಯುಗೇ||

ಧನ್ವಿ ಪಾಂಡುಪುತ್ರನಿಂದ ವಧಿಸಲ್ಪಟ್ಟ ಆ ಸೈನದಲ್ಲಿ ಅಳಿದುಳಿದ ಎಲ್ಲರೂ ಅಲ್ಲಿ ನಿಲ್ಲದೇ ಪ್ರಾಯಶಃ ವಿಮುಖರಾಗಿದ್ದರು.

08019035a ತಾಂ ಜಿತ್ವಾ ಸಮರೇ ಜಿಷ್ಣುಃ ಸಂಶಪ್ತಕಗಣಾನ್ಬಹೂನ್|

08019035c ರರಾಜ ಸ ಮಹಾರಾಜ ವಿಧೂಮೋಽಗ್ನಿರಿವ ಜ್ವಲನ್||

ಮಹಾರಾಜ! ಸಮರದಲ್ಲಿ ಆ ಅನೇಕ ಸಂಶಪ್ತಕ ಗಣಗಳನ್ನು ಗೆದ್ದು ಜಿಷ್ಣು ಅರ್ಜುನನು ಹೊಗೆಯಿಲ್ಲದ ಅಗ್ನಿಯಂತೆ ಪ್ರಜ್ವಲಿಸಿ ರಾರಾಜಿಸಿದನು.

08019036a ಯುಧಿಷ್ಠಿರಂ ಮಹಾರಾಜ ವಿಸೃಜಂತಂ ಶರಾನ್ಬಹೂನ್|

08019036c ಸ್ವಯಂ ದುರ್ಯೋಧನೋ ರಾಜಾ ಪ್ರತ್ಯಗೃಹ್ಣಾದಭೀತವತ್||

ಮಹಾರಾಜ! ಅನೇಕ ಶರಗಳನ್ನು ಪ್ರಯೋಗಿಸುತ್ತಿದ್ದ ಯುಧಿಷ್ಠಿರನನ್ನು ಸ್ವಯಂ ರಾಜಾ ದುರ್ಯೋಧನನು ನಿರ್ಭಯನಾಗಿ ಎದುರಿಸಿದನು.

08019037a ತಮಾಪತಂತಂ ಸಹಸಾ ತವ ಪುತ್ರಂ ಮಹಾಬಲಂ|

08019037c ಧರ್ಮರಾಜೋ ದ್ರುತಂ ವಿದ್ಧ್ವಾ ತಿಷ್ಠ ತಿಷ್ಠೇತಿ ಚಾಬ್ರವೀತ್||

ತನ್ನ ಮೇಲೆ ಒಮ್ಮಿಂದೊಮ್ಮೆಲೇ ಆಕ್ರಮಣಿಸಿದ ನಿನ್ನ ಮಹಾಬಲ ಪುತ್ರನನ್ನು ಬೇಗನೆ ಬಾಣಗಳಿಂದ ಹೊಡೆದು ಧರ್ಮರಾಜನು “ನಿಲ್ಲು! ನಿಲ್ಲು!” ಎಂದು ಹೇಳಿದನು.

08019038a ಸಾ ಚ ತಂ ಪ್ರತಿವಿವ್ಯಾಧ ನವಭಿರ್ನಿಶಿತೈಃ ಶರೈಃ|

08019038c ಸಾರಥಿಂ ಚಾಸ್ಯ ಭಲ್ಲೇನ ಭೃಶಂ ಕ್ರುದ್ಧೋಽಭ್ಯತಾಡಯತ್||

ದುರ್ಯೋಧನನು ತುಂಬಾ ಕ್ರೋಧಿತನಾಗಿ ಯುಧಿಷ್ಠಿರನನ್ನು ಒಂಭತ್ತು ನಿಶಿತ ಶರಗಳಿಂದ ಮತ್ತು ಅವನ ಸಾರಥಿಯನ್ನು ಭಲ್ಲದಿಂದ ಹೊಡೆದನು.

08019039a ತತೋ ಯುಧಿಷ್ಠಿರೋ ರಾಜಾ ಹೇಮಪುಂಖಾಂ ಶಿಲೀಮುಖಾನ್|

08019039c ದುರ್ಯೋಧನಾಯ ಚಿಕ್ಷೇಪ ತ್ರಯೋದಶ ಶಿಲಾಶಿತಾನ್||

ಆಗ ರಾಜಾ ಯುಧಿಷ್ಠಿರನು ದುರ್ಯೋಧನನ ಮೇಲೆ ಹದಿಮೂರು ಶಿಲಾಶಿತ ಶಿಲೀಮುಖ ಹೇಮಪುಂಖಗಳುಳ್ಳ ಬಾಣಗಳನ್ನು ಪ್ರಯೋಗಿಸಿದನು.

08019040a ಚತುರ್ಭಿಶ್ಚತುರೋ ವಾಹಾಂಸ್ತಸ್ಯ ಹತ್ವಾ ಮಹಾರಥಃ|

08019040c ಪಂಚಮೇನ ಶಿರಃ ಕಾಯಾತ್ಸಾರಥೇಸ್ತು ಸಮಾಕ್ಷಿಪತ್||

ಆ ಮಹಾರಥನು ನಾಲ್ಕು ಬಾಣಗಳಿಂದ ಅವನ ನಾಲ್ಕು ಕುದುರೆಗಳನ್ನು ಸಂಹರಿಸಿ ಐದನೆಯ ಬಾಣದಿಂದ ಸಾರಥಿಯ ಶಿರವನ್ನು ಕಾಯದಿಂದ ಬೇರ್ಪಡಿಸಿ ಕೆಡವಿದನು.

08019041a ಷಷ್ಠೇನ ಚ ಧ್ವಜಂ ರಾಜ್ಞಃ ಸಪ್ತಮೇನ ಚ ಕಾರ್ಮುಕಂ|

08019041c ಅಷ್ಟಮೇನ ತಥಾ ಖಡ್ಗಂ ಪಾತಯಾಮಾಸ ಭೂತಲೇ|

08019041e ಪಂಚಭಿರ್ನೃಪತಿಂ ಚಾಪಿ ಧರ್ಮರಾಜೋಽರ್ದಯದ್ಭೃಶಂ||

ಆರನೆಯದರಿಂದ ರಾಜ ಯುಧಿಷ್ಠಿರನು ದುರ್ಯೋಧನನ ಧ್ವಜವನ್ನು, ಏಳನೆಯದರಿಂದ ಧನುಸ್ಸನ್ನೂ, ಎಂಟನೆಯದರಿಂದ ಖಡ್ಗವನ್ನೂ ಭೂಮಿಯ ಮೇಲೆ ಕೆಡವಿಸಿದನು. ನಂತರ ಐದು ಬಾಣಗಳಿಂದ ಧರ್ಮರಾಜನು ನೃಪತಿ ದುರ್ಯೋಧನನನ್ನು ಜೋರಾಗಿ ಗಾಯಗೊಳಿಸಿದನು.

08019042a ಹತಾಶ್ವಾತ್ತು ರಥಾತ್ತಸ್ಮಾದವಪ್ಲುತ್ಯ ಸುತಸ್ತವ|

08019042c ಉತ್ತಮಂ ವ್ಯಸನಂ ಪ್ರಾಪ್ತೋ ಭೂಮಾವೇವ ವ್ಯತಿಷ್ಠತ||

ನಿನ್ನ ಮಗನು ಕುದುರೆಗಳು ಸತ್ತುಹೋಗಿದ್ದ ರಥದಿಂದ ಕೆಳಕ್ಕೆ ಹಾರಿ ಉತ್ತಮ ವ್ಯಸನವನ್ನು ಪಡೆದು ಭೂಮಿಯ ಮೇಲೆಯೇ ನಿಂತುಕೊಂಡನು.

08019043a ತಂ ತು ಕೃಚ್ಚ್ರಗತಂ ದೃಷ್ಟ್ವಾ ಕರ್ಣದ್ರೌಣಿಕೃಪಾದಯಃ|

08019043c ಅಭ್ಯವರ್ತಂತ ಸಹಿತಾಃ ಪರೀಪ್ಸಂತೋ ನರಾಧಿಪಂ||

ಹಾಗೆ ಅವನು ಕಷ್ಟಕ್ಕೀಡಾದುದನ್ನು ನೋಡಿ ಕರ್ಣ-ಅಶ್ವತ್ಥಾಮ-ಕೃಪಾದಿಗಳು ಒಂದಾಗಿ ನರಾಧಿಪನನ್ನು ರಕ್ಷಿಸಲು ಧಾವಿಸಿ ಬಂದರು.

08019044a ಅಥ ಪಾಂಡುಸುತಾಃ ಸರ್ವೇ ಪರಿವಾರ್ಯ ಯುಧಿಷ್ಠಿರಂ|

08019044c ಅಭ್ಯಯುಃ ಸಮರೇ ರಾಜಂಸ್ತತೋ ಯುದ್ಧಮವರ್ತತ||

ರಾಜನ್! ಕೂಡಲೇ ಪಾಂಡುಸುತರೆಲ್ಲರೂ ಯುಧಿಷ್ಠಿರನನ್ನು ಸುತ್ತುವರೆದು ಅವನನ್ನೇ ಅನುಸರಿಸಿ ಯುದ್ಧದಲ್ಲಿ ತೊಡಗಿದರು.

08019045a ಅಥ ತೂರ್ಯಸಹಸ್ರಾಣಿ ಪ್ರಾವಾದ್ಯಂತ ಮಹಾಮೃಧೇ|

08019045c ಕ್ಷ್ವೇಡಾಃ ಕಿಲಕಿಲಾಶಬ್ದಾಃ ಪ್ರಾದುರಾಸನ್ಮಹೀಪತೇ|

08019045e ಯದಭ್ಯಗಚ್ಚನ್ಸಮರೇ ಪಾಂಚಾಲಾಃ ಕೌರವೈಃ ಸಹ||

ಮಹೀಪತೇ! ಕೂಡಲೇ ಆ ಮಹಾಯುದ್ಧದಲ್ಲಿ ಸಹಸ್ರಾರು ರಣವಾದ್ಯಗಳು ಮೊಳಗಿದವು. ರಣಾಂಗಣದ ಸುತ್ತಲೂ ಕಿಲಾಕಿಲಾ ಶಬ್ಧವು ಕೇಳಿಬಂದಿತು. ಸಮರದಲ್ಲಿ ಪಾಂಚಾಲರು ಕೌರವರೊಂದಿಗೆ ಯುದ್ಧದಲ್ಲಿ ತೊಡಗಿದರು.

08019046a ನರಾ ನರೈಃ ಸಮಾಜಗ್ಮುರ್ವಾರಣಾ ವರವಾರಣೈಃ|

08019046c ರಥಾಶ್ಚ ರಥಿಭಿಃ ಸಾರ್ಧಂ ಹಯಾಶ್ಚ ಹಯಸಾದಿಭಿಃ||

ಪದಾತಿಗಳು ಪದಾತಿಗಳೊಡನೆಯೂ, ಆನೆಗಳು ಆನೆಗಳೊಡನೆಯೂ, ರಥಗಳು ರಥಗಳೊಡನೆಯೂ, ಕುದುರೆಗಳು ಇತರ ಕುರುರೆಸವಾರರೊಂದಿಗೂ ಹೋರಾಡಿದರು.

08019047a ದ್ವಂದ್ವಾನ್ಯಾಸನ್ಮಹಾರಾಜ ಪ್ರೇಕ್ಷಣೀಯಾನಿ ಸಂಯುಗೇ|

08019047c ವಿಸ್ಮಾಪನಾನ್ಯಚಿಂತ್ಯಾನಿ ಶಸ್ತ್ರವಂತ್ಯುತ್ತಮಾನಿ ಚ||

ಮಹಾರಾಜ! ಆ ಸಮರದಲ್ಲಿ ವಿಸ್ಮಯಕಾರಕ, ಯೋಚಿಸಲೂ ಅಸಾಧ್ಯವಾದ, ಉತ್ತಮ ಶಸ್ತ್ರಗಳನ್ನುಪಯೋಗಿಸಿದ ಪ್ರೇಕ್ಷಣೀಯ ದ್ವಂದ್ವಯುದ್ಧಗಳು ನಡೆದವು.

08019048a ಅಯುಧ್ಯಂತ ಮಹಾವೇಗಾಃ ಪರಸ್ಪರವಧೈಷಿಣಃ|

08019048c ಅನ್ಯೋನ್ಯಂ ಸಮರೇ ಜಘ್ನುರ್ಯೋಧವ್ರತಮನುಷ್ಠಿತಾಃ|

08019048e ನ ಹಿ ತೇ ಸಮರಂ ಚಕ್ರುಃ ಪೃಷ್ಠತೋ ವೈ ಕಥಂ ಚನ||

ಪರಸ್ಪರರನ್ನು ವಧಿಸಲು ಬಯಸಿ ಯೋಧವ್ರತವನ್ನು ಅನುಷ್ಠಾನಗೈಯುತ್ತಿರುವ ಅವರು ಸಮರದಲ್ಲಿ ಅತ್ಯಂತವೇಗವಾಗಿ ಅನ್ಯೋನ್ಯರನ್ನು ಸಂಹರಿಸುತ್ತಿದ್ದರು. ಯಾವುದೇ ಕಾರಣಕ್ಕೂ ಅವರು ಯುದ್ಧದಲ್ಲಿ ಬೆನ್ನುತೋರಿಸುತ್ತಿರಲಿಲ್ಲ.

08019049a ಮುಹೂರ್ತಮೇವ ತದ್ಯುದ್ಧಮಾಸೀನ್ಮಧುರದರ್ಶನಂ|

08019049c ತತ ಉನ್ಮತ್ತವದ್ರಾಜನ್ನಿರ್ಮರ್ಯಾದಮವರ್ತತ||

ರಾಜನ್! ಮುಹೂರ್ತಕಾಲ ಮಾತ್ರ ಆ ಯುದ್ಧವು ನೋಡಲು ಮಧುರವಾಗಿತ್ತು. ಆದರೆ ಕೂಡಲೇ ಅದು ಮರ್ಯಾದೆಗಳಿಲ್ಲದೇ ಉನ್ಮತ್ತರು ಯುದ್ಧಮಾಡುತ್ತಿರುವರೋ ಎನ್ನುವಂತೆ ಪರಿಣಮಿಸಿತು.

08019050a ರಥೀ ನಾಗಂ ಸಮಾಸಾದ್ಯ ವಿಚರನ್ರಣಮೂರ್ಧನಿ|

08019050c ಪ್ರೇಷಯಾಮಾಸ ಕಾಲಾಯ ಶರೈಃ ಸನ್ನತಪರ್ವಭಿಃ||

ರಣಮೂರ್ಧನಿಯಲ್ಲಿ ರಥಸೇನಾನಿಗಳು ಗಜಸೇನಾನಿಗಳನ್ನು ಎದುರಿಸಿ ಸನ್ನತಪರ್ವ ಶರಗಳಿಂದ ಕಾಲನಿಗೆ ಕಳುಹಿಸತೊಡಗಿದರು.

08019051a ನಾಗಾ ಹಯಾನ್ಸಮಾಸಾದ್ಯ ವಿಕ್ಷಿಪಂತೋ ಬಹೂನಥ|

08019051c ದ್ರಾವಯಾಮಾಸುರತ್ಯುಗ್ರಾಸ್ತತ್ರ ತತ್ರ ತದಾ ತದಾ||

ಅನೇಕ ಆನೆಗಳು ಕುದುರೆಗಳನ್ನು ಆಕ್ರಮಿಸಿ ನಾಶಗೊಳಿಸುತ್ತಿದ್ದವು. ಅಲ್ಲಲ್ಲಿ ಆಗಾಗ ಕುದುರೆಗಳು ಉಗ್ರವಾಗಿ ಓಡಿಹೋಗುತ್ತಿದ್ದವು.

08019052a ವಿದ್ರಾವ್ಯ ಚ ಬಹೂನಶ್ವಾನ್ನಾಗಾ ರಾಜನ್ಬಲೋತ್ಕಟಾಃ|

08019052c ವಿಷಾಣೈಶ್ಚಾಪರೇ ಜಘ್ನುರ್ಮಮೃದುಶ್ಚಾಪರೇ ಭೃಶಂ||

ರಾಜನ್! ಅನೇಕ ಬಲೋತ್ಕಟ ಆನೆಗಳು ಕುದುರೆಗಳನ್ನು ಆಕ್ರಮಿಸಿ ಅವುಗಳನ್ನು ದಂತಗಳಿಂದ ಸೀಳಿದವು ಮತ್ತು ಇತರ ಕುದುರೆಗಳನ್ನು ಕಾಲಿನಿಂದ ತುಳಿದು ಜಜ್ಜಿದವು.

08019053a ಸಾಶ್ವಾರೋಹಾಂಶ್ಚ ತುರಗಾನ್ವಿಷಾಣೈರ್ಬಿಭಿದೂ ರಣೇ|

08019053c ಅಪರಾಂಶ್ಚಿಕ್ಷಿಪುರ್ವೇಗಾತ್ಪ್ರಗೃಹ್ಯಾತಿಬಲಾಸ್ತಥಾ||

ಅವುಗಳು ಅಶ್ವಾರೋಹಿಗಳನ್ನು ಮತ್ತು ಅಶ್ವಗಳನ್ನು ರಣದಲ್ಲಿ ದಂತಗಳಿಂದ ಸೀಳುತ್ತಿದ್ದವು. ಇತರ ಆನೆಗಳು ಅವುಗಳನ್ನು ವೇಗದಿಂದ ಮೇಲೆತ್ತಿ ಅತಿ ದೂರದ ವರೆಗೆ ಎಸೆಯುತ್ತಿದ್ದವು.

08019054a ಪಾದಾತೈರಾಹತಾ ನಾಗಾ ವಿವರೇಷು ಸಮಂತತಃ|

08019054c ಚಕ್ರುರಾರ್ತಸ್ವರಂ ಘೋರಂ ವ್ಯದ್ರವಂತ ದಿಶೋ ದಶ||

ಪದಾತಿಗಳಿಂದ ಹೊಡೆಯಲ್ಪಟ್ಟ ಆನೆಗಳು ಘೀಳಿಡುತ್ತಾ ಸುತ್ತಲೂ ಓಡಿಹೋಗುತ್ತಿದ್ದವು. ಹತ್ತು ದಿಕ್ಕುಗಳಲ್ಲಿ ಓಡುತ್ತಿದ್ದ ಆನೆಗಳು ಘೋರವಾಗಿ ಆರ್ತಸ್ವರಗೈಯುತ್ತಿದ್ದವು.

08019055a ಪದಾತೀನಾಂ ತು ಸಹಸಾ ಪ್ರದ್ರುತಾನಾಂ ಮಹಾಮೃಧೇ|

08019055c ಉತ್ಸೃಜ್ಯಾಭರಣಂ ತೂರ್ಣಮವಪ್ಲುತ್ಯ ರಣಾಜಿರೇ||

ಮಹಾರಣದಲ್ಲಿ ಓಡಿಹೋಗುತ್ತಿದ್ದ ಆನೆಗಳಿಂದ ಕಾಲಿಗೆ ಸಿಲುಕಿದ ಪದಾತಿಗಳು ಆಭರಣಗಳನ್ನೂ ಕೂಡಲೇ ಕಳಚಿ ಎಸೆದು ಹಾರಿಕೊಂಡು ಓಡಿ ಹೋಗುತ್ತಿದ್ದರು.

08019056a ನಿಮಿತ್ತಂ ಮನ್ಯಮಾನಾಸ್ತು ಪರಿಣಮ್ಯ ಮಹಾಗಜಾಃ|

08019056c ಜಗೃಹುರ್ಬಿಭಿದುಶ್ಚೈವ ಚಿತ್ರಾಣ್ಯಾಭರಣಾನಿ ಚ||

ಆ ಆಭರಣಗಳನ್ನು ತಮ್ಮ ಮೇಲೆ ಪ್ರಯೋಗಿಸುತ್ತಿದ್ದಾರೆಂದು ಭಾವಿಸಿ ಮಹಾಗಜಗಳು ಆ ಚಿತ್ರ ಆಭರಣಗಳನ್ನು ತುಳಿದು ಪುಡಿ ಪುಡಿ ಮಾಡುತ್ತಿದ್ದವು.

08019057a ಪ್ರತಿಮಾನೇಷು ಕುಂಭೇಷು ದಂತವೇಷ್ಟೇಷು ಚಾಪರೇ|

08019057c ನಿಗೃಹೀತಾ ಭೃಶಂ ನಾಗಾಃ ಪ್ರಾಸತೋಮರಶಕ್ತಿಭಿಃ||

ಇತರ ಪದಾತಿಗಳು ಪ್ರಾಸ-ತೋಮರ-ಶಕ್ತಿಗಳಿಂದ ಆನೆಗಳ ಕುಂಭಸ್ಥಳಗಳನ್ನೂ, ದಂತಗಳನ್ನೂ ಹಿಡಿದು ತಿವಿಯುತ್ತಿದ್ದರು.

08019058a ನಿಗೃಹ್ಯ ಚ ಗದಾಃ ಕೇ ಚಿತ್ಪಾರ್ಶ್ವಸ್ಥೈರ್ಭೃಶದಾರುಣೈಃ|

08019058c ರಥಾಶ್ವಸಾದಿಭಿಸ್ತತ್ರ ಸಂಭಿನ್ನಾ ನ್ಯಪತನ್ಭುವಿ||

ಪಕ್ಕದಲ್ಲಿದ್ದ ರಥಿಗಳು ಮತ್ತು ಅಶ್ವಾರೂಢರು ಕೆಲವರು ಗದೆಗಳನ್ನು ಹಿಡಿದು ಆನೆಗಳ ಪಕ್ಕೆಗಳನ್ನು ತುಂಬಾ ದಾರುಣವಾಗಿ ಹೊಡೆಯಲು ಅವು ಒಡೆದು ಭೂಮಿಯ ಮೇಲೆ ಬೀಳುತ್ತಿದ್ದವು.

08019059a ಸರಥಂ ಸಾದಿನಂ ತತ್ರ ಅಪರೇ ತು ಮಹಾಗಜಾಃ|

08019059c ಭೂಮಾವಮೃದ್ನನ್ವೇಗೇನ ಸವರ್ಮಾಣಂ ಪತಾಕಿನಂ||

ಇತರ ಮಹಾಗಜಗಳು ಕವಚ ಮತ್ತು ಪತಾಕೆಗಳೊಂದಿಗೆ ರಥ ಮತ್ತು ಅಶ್ವಾರೋಹಿಗಳನ್ನು ಮೇಲೆತ್ತಿ ಭೂಮಿಯ ಮೇಲೆ ವೇಗದಿಂದ ಎಸೆಯುತ್ತಿದ್ದವು.

08019060a ರಥಂ ನಾಗಾಃ ಸಮಾಸಾದ್ಯ ಧುರಿ ಗೃಹ್ಯ ಚ ಮಾರಿಷ|

08019060c ವ್ಯಾಕ್ಷಿಪನ್ಸಹಸಾ ತತ್ರ ಘೋರರೂಪೇ ಮಹಾಮೃಧೇ||

ಮಾರಿಷ! ಆ ಘೋರರೂಪದ ಮಹಾಯುದ್ಧದಲ್ಲಿ ಆನೆಗಳು ರಥವನ್ನು ಆಕ್ರಮಣಿಸಿ ಸೊಂಡಿಲಿನಿಂದ ಮೇಲೆತ್ತಿ ಕೂಡಲೇ ಎಸೆಯುತ್ತಿದ್ದವು.

08019061a ನಾರಾಚೈರ್ನಿಹತಶ್ಚಾಪಿ ನಿಪಪಾತ ಮಹಾಗಜಃ|

08019061c ಪರ್ವತಸ್ಯೇವ ಶಿಖರಂ ವಜ್ರಭಗ್ನಂ ಮಹೀತಲೇ||

ಮಹಾಗಜಗಳೂ ಕೂಡ ನಾರಾಚಗಳಿಂದ ವಧಿಸಲ್ಪಟ್ಟು ವಜ್ರದಿಂದ ಭಗ್ನವಾದ ಪರ್ವತ ಶಿಖರಗಳಂತೆ ಮಹೀತಲದಲ್ಲಿ ಬೀಳುತ್ತಿದ್ದವು.

08019062a ಯೋಧಾ ಯೋಧಾನ್ಸಮಾಸಾದ್ಯ ಮುಷ್ಟಿಭಿರ್ವ್ಯಹನನ್ಯುಧಿ|

08019062c ಕೇಶೇಷ್ವನ್ಯೋನ್ಯಮಾಕ್ಷಿಪ್ಯ ಚಿಚ್ಚಿದುರ್ಬಿಭಿದುಃ ಸಹ||

ಯೋಧರು ಯೋಧರನ್ನು ಯುದ್ಧದಲ್ಲಿ ಎದುರಿಸಿ ಅನ್ಯೋನ್ಯರ ಕೂದಲುಗಳನ್ನು ಎಳೆದು ಮುಷ್ಟಿಗಳಿಂದ ಹೊಡೆದು ಕೆಳಗೆ ಬೀಳಿಸುತ್ತಿದ್ದರು.

08019063a ಉದ್ಯಮ್ಯ ಚ ಭುಜಾವನ್ಯೋ ನಿಕ್ಷಿಪ್ಯ ಚ ಮಹೀತಲೇ|

08019063c ಪದಾ ಚೋರಃ ಸಮಾಕ್ರಮ್ಯ ಸ್ಫುರತೋ ವ್ಯಹನಚ್ಚಿರಃ||

ಇತರರು ಎರಡು ಭುಜಗಳನ್ನೂ ಮೇಲೆತ್ತಿ ಭೂಮಿಯ ಮೇಲೆ ಬೀಳಿಸುತ್ತಿದ್ದರು. ಚಡಪಡಿಸುತ್ತಿದ್ದವರ ಎದೆಯಮೇಲೆ ಕಾಲಿಟ್ಟು ತಲೆಗಳನ್ನು ಕತ್ತರಿಸುತ್ತಿದ್ದರು.

08019064a ಮೃತಮನ್ಯೋ ಮಹಾರಾಜ ಪದ್ಭ್ಯಾಂ ತಾಡಿತವಾಂಸ್ತದಾ|

08019064c ಜೀವತಶ್ಚ ತಥೈವಾನ್ಯಃ ಶಸ್ತ್ರಂ ಕಾಯೇ ನ್ಯಮಜ್ಜಯತ್||

ಮಹಾರಾಜ! ಅನ್ಯರು ಮೃತರಾದವರನ್ನು ಕಾಲುಗಳಿಂದ ಒದೆದು ತುಳಿಯುತ್ತಿದ್ದರು. ಇನ್ನೂ ಕೆಲವರು ಜೀವವಿದ್ದವರ ಶರೀರಗಳಲ್ಲಿ ಆಯುಧಗಳನ್ನು ನಾಟಿಸಿ ಕೊಲ್ಲುತ್ತಿದ್ದರು.

08019065a ಮುಷ್ಟಿಯುದ್ಧಂ ಮಹಚ್ಚಾಸೀದ್ಯೋಧಾನಾಂ ತತ್ರ ಭಾರತ|

08019065c ತಥಾ ಕೇಶಗ್ರಹಶ್ಚೋಗ್ರೋ ಬಾಹುಯುದ್ಧಂ ಚ ಕೇವಲಂ||

ಭಾರತ! ಅಲ್ಲಿ ಯೋಧರ ಮಹಾ ಮುಷ್ಟಿಯುದ್ಧವೂ ನಡೆಯಿತು. ಹಾಗೆಯೇ ಕೇಶಗಳನ್ನು ಹಿಡಿದು ಕೇವಲ ಉಗ್ರ ಬಾಹುಯುದ್ಧಗಳೂ ನಡೆದವು.

08019066a ಸಮಾಸಕ್ತಸ್ಯ ಚಾನ್ಯೇನ ಅವಿಜ್ಞಾತಸ್ತಥಾಪರಃ|

08019066c ಜಹಾರ ಸಮರೇ ಪ್ರಾಣಾನ್ನಾನಾಶಸ್ತ್ರೈರನೇಕಧಾ||

ಇನ್ನೊಬ್ಬರೊಡನೆ ಯುದ್ಧದಲ್ಲಿ ಸಮಾಸಕ್ತರಾಗಿದ್ದಾಗ ಇತರರು ತಿಳಿಸದೆಯೇ ನಾನಾ ಶಸ್ತ್ರಗಳಿಂದ ಸಮರದಲ್ಲಿ ಬಹಳಷ್ಟು ಜನರನ್ನು ವಧಿಸಿದರು.

08019067a ಸಂಸಕ್ತೇಷು ಚ ಯೋಧೇಷು ವರ್ತಮಾನೇ ಚ ಸಂಕುಲೇ|

08019067c ಕಬಂದಾನ್ಯುತ್ಥಿತಾನಿ ಸ್ಮ ಶತಶೋಽಥ ಸಹಸ್ರಶಃ||

ಹೀಗೆ ಪರಸ್ಪರರನ್ನು ಹತ್ತಿಕೊಂಡು ಸಂಕುಲ ಯುದ್ಧವು ನಡೆಯುತ್ತಿರಲು ನೂರಾರು ಸಹಸ್ರಾರು ಕಬಂಧಗಳು ಮೇಲೆ ಎದ್ದು ನಿಂತವು.

08019068a ಲೋಹಿತೈಃ ಸಿಚ್ಯಮಾನಾನಿ ಶಸ್ತ್ರಾಣಿ ಕವಚಾನಿ ಚ|

08019068c ಮಹಾರಂಗಾನುರಕ್ತಾನಿ ವಸ್ತ್ರಾಣೀವ ಚಕಾಶಿರೇ||

ರಕ್ತದಿಂದ ತೋಯ್ದುಹೋಗಿದ್ದ ಶಸ್ತ್ರಗಳು ಮತ್ತು ಕವಚಗಳು ಕೂಡ ರಕ್ತದಿಂದ ಕೆಂಪುಬಣ್ಣವನ್ನು ತಳೆದಿದ್ದ ವಸ್ತ್ರಗಳಂತೆಯೇ ತೋರಿದವು.

08019069a ಏವಮೇತನ್ಮಹಾಯುದ್ಧಂ ದಾರುಣಂ ಭೃಶಸಂಕುಲಂ|

08019069c ಉನ್ಮತ್ತರಂಗಪ್ರತಿಮಂ ಶಬ್ದೇನಾಪೂರಯಜ್ಜಗತ್||

ಹೀಗೆ ಅತ್ಯಂತ ದಾರುಣ ಸಂಕುಲ ಮಹಾಯುದ್ಧವು ನಡೆಯುತ್ತಿರಲು ಹುಚ್ಚೆದ್ದ ರಂಗಮಂಚದಂತೆ ಶಬ್ಧಗಳಿಂದ ಜಗತ್ತೇ ತುಂಬಿಕೊಂಡಿತು.

08019070a ನೈವ ಸ್ವೇ ನ ಪರೇ ರಾಜನ್ವಿಜ್ಞಾಯಂತೇ ಶರಾತುರಾಃ|

08019070c ಯೋದ್ಧವ್ಯಮಿತಿ ಯುಧ್ಯಂತೇ ರಾಜಾನೋ ಜಯಗೃದ್ಧಿನಃ||

ರಾಜನ್! ಯುದ್ಧಮಾಡಬೇಕೆಂದು ಯುದ್ಧಮಾಡುತ್ತಿದ್ದ ಜಯಾಭಿಲಾಷೀ ರಾಜರು ಶರಾತುರರಾಗಿ ನಮ್ಮವರು ಯಾರು ಮತ್ತು ಶತ್ರುಗಳು ಯಾರು ಎನ್ನುವುದನ್ನು ತಿಳಿದುಕೊಳ್ಳದೇ ಯುದ್ಧಮಾಡುತ್ತಿದ್ದರು.

08019071a ಸ್ವಾನ್ಸ್ವೇ ಜಘ್ನುರ್ಮಹಾರಾಜ ಪರಾಂಶ್ಚೈವ ಸಮಾಗತಾನ್|

08019071c ಉಭಯೋಃ ಸೇನಯೋರ್ವೀರೈರ್ವ್ಯಾಕುಲಂ ಸಮಪದ್ಯತ||

ಮಹಾರಾಜ! ನಮ್ಮವರು ನಮ್ಮವರನ್ನೇ ಸಂಹರಿಸುತ್ತಿದ್ದರು. ಎದುರಾದ ಶತ್ರುಗಳನ್ನು ಕೂಡ ಸಂಹರಿಸುತ್ತಿದ್ದರು. ಎರಡೂ ಸೇನೆಗಳ ವೀರರಲ್ಲಿ ಒಂದು ತರಹದ ವ್ಯಾಕುಲತೆಯು ಹುಟ್ಟಿಕೊಂಡಿತು.

08019072a ರಥೈರ್ಭಗ್ನೈರ್ಮಹಾರಾಜ ವಾರಣೈಶ್ಚ ನಿಪಾತಿತೈಃ|

08019072c ಹಯೈಶ್ಚ ಪತಿತೈಸ್ತತ್ರ ನರೈಶ್ಚ ವಿನಿಪಾತಿತೈಃ||

08019073a ಅಗಮ್ಯರೂಪಾ ಪೃಥಿವೀ ಮಾಂಸಶೋಣಿತಕರ್ದಮಾ|

08019073c ಕ್ಷಣೇನಾಸೀನ್ಮಹಾರಾಜ ಕ್ಷತಜೌಘಪ್ರವರ್ತಿನೀ||

ಮಹಾರಾಜ! ಭಗ್ನರಥಗಳಿಂದ, ಕೆಳಗುರುಳಿದ ಆನೆಗಳಿಂದ, ಬಿದ್ದ ಕುದುರೆಗಳಿಂದ, ಉರುಳಿಸಲ್ಪಟ್ಟ ಪದಾತಿಗಳಿಂದ ಮತ್ತು ಮಾಂಸ-ರಕ್ತಗಳ ಕೆಸರಿನಿಂದ ರಣಭೂಮಿಯು ಅಗಮ್ಯವಾಗಿ ಪರಿಣಮಿಸಿತು. ಮಹಾರಾಜ! ಕ್ಷಣದಲ್ಲಿಯೇ ರಕ್ತದ ನದಿಯು ಹರಿಯತೊಡಗಿತು.

08019074a ಪಾಂಚಾಲಾನವಧೀತ್ಕರ್ಣಸ್ತ್ರಿಗರ್ತಾಂಶ್ಚ ಧನಂಜಯಃ|

08019074c ಭೀಮಸೇನಃ ಕುರೂನ್ರಾಜನ್ ಹಸ್ತ್ಯನೀಕಂ ಚ ಸರ್ವಶಃ||

ರಾಜನ್! ಪಾಂಚಾಲರನ್ನು ಕರ್ಣನೂ, ತ್ರಿಗರ್ತರನ್ನು ಧನಂಜಯನೂ ಮತ್ತು ಕುರುಗಳನ್ನೂ ಅವರ ಗಜಸೇನೆಗಳನ್ನೂ ಭೀಮಸೇನನು ಸರ್ವಶಃ ವಧಿಸಿದರು.

08019075a ಏವಮೇಷ ಕ್ಷಯೋ ವೃತ್ತಃ ಕುರುಪಾಂಡವಸೇನಯೋಃ|

08019075c ಅಪರಾಹ್ಣೇ ಮಹಾರಾಜ ಕಾಂಕ್ಷಂತ್ಯೋರ್ವಿಪುಲಂ ಜಯಂ||

ಮಹಾರಾಜ! ಈ ರೀತಿ ಅಪರಾಹ್ಣದಲ್ಲಿ ವಿಪುಲ ಜಯವನ್ನು ಬಯಸುತ್ತಿದ್ದ ಕುರು-ಪಾಂಡವಸೇನೆಗಳ ನಾಶವು ನಡೆಯಿತು.”

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಏಕೋನವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹತ್ತೊಂಭತ್ತನೇ ಅಧ್ಯಾಯವು.

Comments are closed.