Karna Parva: Chapter 20

ಕರ್ಣ ಪರ್ವ

೨೦

ಅಪರಾಹ್ಣದಲ್ಲಿ ನಡೆದ ಯುದ್ಧದ ಕುರಿತು ಧೃತರಾಷ್ಟ್ರನು ಸಂಜಯನನ್ನು ಪ್ರಶ್ನಿಸಿದುದು (೧-೫). ಯುಧಿಷ್ಠಿರ ದುರ್ಯೋಧನರ ಯುದ್ಧ; ಯುಧಿಷ್ಠಿರನು ದುರ್ಯೋಧನನನ್ನು ಮೂರ್ಛೆಗೊಳಿಸಿದುದು (೬-೩೨).

08020001 ಧೃತರಾಷ್ಟ್ರ ಉವಾಚ|

08020001a ಅತಿತೀವ್ರಾಣಿ ದುಃಖಾನಿ ದುಃಸಹಾನಿ ಬಹೂನಿ ಚ|

08020001c ತವಾಹಂ ಸಂಜಯಾಶ್ರೌಷಂ ಪುತ್ರಾಣಾಂ ಮಮ ಸಂಕ್ಷಯಂ||

ಧೃತರಾಷ್ಟ್ರನು ಹೇಳಿದನು: “ಸಂಜಯ! ನೀನು ಹೇಳುತ್ತಿರುವ ನನ್ನ ಮಕ್ಕಳ ನಾಶವನ್ನು ಕೇಳಿ ನನ್ನ ಅನೇಕ ದುಃಖಗಳು ಅತಿತೀವ್ರವೂ, ಸಹಿಸಲಸಾಧ್ಯವೂ ಆಗಿವೆ!

08020002a ತಥಾ ತು ಮೇ ಕಥಯಸೇ ಯಥಾ ಯುದ್ಧಂ ತು ವರ್ತತೇ|

08020002c ನ ಸಂತಿ ಸೂತ ಕೌರವ್ಯಾ ಇತಿ ಮೇ ನೈಷ್ಠಿಕೀ ಮತಿಃ||

ಯುದ್ಧವು ಹೇಗೆ ನಡೆಯುತ್ತಿತ್ತೆಂದು ನೀನು ಹೇಳಿದುದರಿಂದ ಸೂತ! ಕೌರವ್ಯರು ಉಳಿಯಲಿಕ್ಕಿಲ್ಲ ಎಂದು ನನಗನ್ನಿಸುತ್ತಿದೆ.

08020003a ದುರ್ಯೋಧನಸ್ತು ವಿರಥಃ ಕೃತಸ್ತತ್ರ ಮಹಾರಣೇ|

08020003c ಧರ್ಮಪುತ್ರಃ ಕಥಂ ಚಕ್ರೇ ತಸ್ಮಿನ್ವಾ ನೃಪತಿಃ ಕಥಂ||

ಮಹಾರಣದಲ್ಲಿ ದುರ್ಯೋಧನನನ್ನು ವಿರಥನನ್ನಾಗಿ ಮಾಡಿದ ಧರ್ಮಪುತ್ರನು ಹೇಗೆ ಯುದ್ಧಮಾಡಿದನು? ನೃಪತಿ ದುರ್ಯೋಧನನೂ ಹೇಗೆ ಯುದ್ಧಮಾಡಿದನು?

08020004a ಅಪರಾಹ್ಣೇ ಕಥಂ ಯುದ್ಧಂ ಅಭವಲ್ಲೋಮಹರ್ಷಣ|

08020004c ತನ್ಮಮಾಚಕ್ಷ್ವ ತತ್ತ್ವೇನ ಕುಶಲೋ ಹ್ಯಸಿ ಸಂಜಯ||

ಸಂಜಯ! ಆ ಲೋಮಹರ್ಷಣ ಯುದ್ಧವು ಅಪರಾಹ್ಣದಲ್ಲಿ ಹೇಗೆ ನಡೆಯಿತು? ಅದನ್ನು ನನಗೆ ನಡೆದ ಹಾಗೆ ಹೇಳು. ಯುದ್ಧವನ್ನು ವರದಿಮಾಡುವಲ್ಲಿ ನೀನು ಕುಶಲನಾಗಿದ್ದೀಯೆ!”

08020005 ಸಂಜಯ ಉವಾಚ|

08020005a ಸಂಸಕ್ತೇಷು ಚ ಸೈನ್ಯೇಷು ಯುಧ್ಯಮಾನೇಷು ಭಾಗಶಃ|

08020005c ರಥಮನ್ಯಂ ಸಮಾಸ್ಥಾಯ ಪುತ್ರಸ್ತವ ವಿಶಾಂ ಪತೇ||

ಸಂಜಯನು ಹೇಳಿದನು: “ವಿಶಾಂಪತೇ! ಭಾಗಶಃ ಸೇನೆಗಳು ಯುದ್ಧದಲ್ಲಿ ತೊಡಗಿರಲು ನಿನ್ನ ಮಗನು ಇನ್ನೊಂದು ರಥವನ್ನು ಏರಿದನು.

08020006a ಕ್ರೋಧೇನ ಮಹತಾವಿಷ್ಟಃ ಸವಿಷೋ ಭುಜಗೋ ಯಥಾ|

08020006c ದುರ್ಯೋಧನಸ್ತು ದೃಷ್ಟ್ವಾ ವೈ ಧರ್ಮರಾಜಂ ಯುಧಿಷ್ಠಿರಂ|

08020006e ಉವಾಚ ಸೂತ ತ್ವರಿತಂ ಯಾಹಿ ಯಾಹೀತಿ ಭಾರತ||

ಭಾರತ! ವಿಷಭರಿತ ಸರ್ಪದಂತೆ ಮಹಾ ಕ್ರೋಧದಿಂದ ಆವಿಷ್ಟನಾದ ದುರ್ಯೋಧನನು ಧರ್ಮರಾಜ ಯುಧಿಷ್ಠಿರನನ್ನು ನೋಡಿ ಸೂತನಿಗೆ ಹೇಳಿದನು: “ಬೇಗ ಹೋಗು! ಹೋಗು!

08020007a ಅತ್ರ ಮಾಂ ಪ್ರಾಪಯ ಕ್ಷಿಪ್ರಂ ಸಾರಥೇ ಯತ್ರ ಪಾಂಡವಃ|

08020007c ಧ್ರಿಯಮಾಣೇನ ಚತ್ರೇಣ ರಾಜಾ ರಾಜತಿ ದಂಶಿತಃ||

ಸಾರಥೇ! ಶ್ವೇತ ಚತ್ರದಡಿಯಲ್ಲಿ ಕವಚಧರಿಸಿ ನಿಂತಿರುವ ರಾಜ ಪಾಂಡವನಿರುವಲ್ಲಿಗೆ ಬೇಗನೆ ನನ್ನನ್ನು ಕೊಂಡೊಯ್ಯಿ!”

08020008a ಸ ಸೂತಶ್ಚೋದಿತೋ ರಾಜ್ಞಾ ರಾಜ್ಞಃ ಸ್ಯಂದನಮುತ್ತಮಂ|

08020008c ಯುಧಿಷ್ಠಿರಸ್ಯಾಭಿಮುಖಂ ಪ್ರೇಷಯಾಮಾಸ ಸಂಯುಗೇ||

ಸಂಯುಗದಲ್ಲಿ ರಾಜನಿಂದ ಹಾಗೆ ಪ್ರಚೋದಿಸಲ್ಪಟ್ಟ ಸೂತನು ರಾಜನ ಉತ್ತಮ ರಥವನ್ನು ಯುಧಿಷ್ಠಿರನ ಎದುರಾಗಿ ಕೊಂಡೊಯ್ದನು.

08020009a ತತೋ ಯುಧಿಷ್ಠಿರಃ ಕ್ರುದ್ಧಃ ಪ್ರಮತ್ತ ಇವ ಸದ್ಗವಃ|

08020009c ಸಾರಥಿಂ ಚೋದಯಾಮಾಸ ಯಾಹಿ ಯತ್ರ ಸುಯೋಧನಃ||

ಆಗ ಯುಧಿಷ್ಠಿರನು ಮದಿಸಿದ ಸಲಗದಂತೆ ಕ್ರುದ್ಧನಾಗಿ ಸುಯೋಧನನಿರುವಲ್ಲಿಗೆ ಹೋಗು ಎಂದು ಸಾರಥಿಯನ್ನು ಪ್ರಚೋದಿಸಿದನು.

08020010a ತೌ ಸಮಾಜಗ್ಮತುರ್ವೀರೌ ಭ್ರಾತರೌ ರಥಸತ್ತಮೌ|

08020010c ಸಮೇತ್ಯ ಚ ಮಹಾವೀರ್ಯೌ ಸನ್ನದ್ಧೌ ಯುದ್ಧದುರ್ಮದೌ|

08020010e ತತಕ್ಷತುರ್ಮಹೇಷ್ವಾಸೌ ಶರೈರನ್ಯೋನ್ಯಮಾಹವೇ||

ಅವರಿಬ್ಬರು ವೀರ ಮಹಾವೀರ್ಯ ಯುದ್ಧದುರ್ಮದ ರಥಸತ್ತಮ ಮಹೇಷ್ವಾಸ ಸಹೋದರರು ಯುದ್ಧದಲ್ಲಿ ಸಂಘರ್ಷಿಸಿ ಶರಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು.

08020011a ತತೋ ದುರ್ಯೋಧನೋ ರಾಜಾ ಧರ್ಮಶೀಲಸ್ಯ ಮಾರಿಷ|

08020011c ಶಿಲಾಶಿತೇನ ಭಲ್ಲೇನ ಧನುಶ್ಚಿಚ್ಚೇದ ಸಂಯುಗೇ|

08020011e ತಂ ನಾಮೃಷ್ಯತ ಸಂಕ್ರುದ್ಧೋ ವ್ಯವಸಾಯಂ ಯುಧಿಷ್ಠಿರಃ||

ಮಾರಿಷ! ಆಗ ರಾಜಾ ದುರ್ಯೋಧನನು ಸಂಯುಗದಲ್ಲಿ ಧರ್ಮಶೀಲನ ಧನುಸ್ಸನ್ನು ಶಿಲಾಶಿತ ಭಲ್ಲದಿಂದ ತುಂಡರಿಸಿದನು. ಆ ಕೃತ್ಯವನ್ನು ಸಂಕ್ರುದ್ಧನಾದ ಯುಧಿಷ್ಠಿರನು ಸಹಿಸಿಕೊಳ್ಳಲಿಲ್ಲ.

08020012a ಅಪವಿಧ್ಯ ಧನುಶ್ಚಿನ್ನಂ ಕ್ರೋಧಸಂರಕ್ತಲೋಚನಃ|

08020012c ಅನ್ಯತ್ ಕಾರ್ಮುಕಮಾದಾಯ ಧರ್ಮಪುತ್ರಶ್ಚಮೂಮುಖೇ||

ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಧರ್ಮಪುತ್ರನು ತುಂಡಾದ ಧನುಸ್ಸನ್ನು ಸೇನಾಮುಖದಲ್ಲಿ ಎಸೆದು ಇನ್ನೊಂದು ಧನುಸ್ಸನ್ನು ಎತ್ತಿಕೊಂಡನು.

08020013a ದುರ್ಯೋಧನಸ್ಯ ಚಿಚ್ಚೇದ ಧ್ವಜಂ ಕಾರ್ಮುಕಮೇವ ಚ|

08020013c ಅಥಾನ್ಯದ್ಧನುರಾದಾಯ ಪ್ರತ್ಯವಿಧ್ಯತ ಪಾಂಡವಂ||

ಅವನು ದುರ್ಯೋಧನನ ಧ್ವಜ ಮತ್ತು ಧನುಸ್ಸುಗಳನ್ನು ತುಂಡರಿಸಿದನು. ದುರ್ಯೋಧನನಾದರೋ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಪಾಂಡವನಿಗೆ ತಿರುಗಿ ಹೊಡೆದನು.

08020014a ತಾವನ್ಯೋನ್ಯಂ ಸುಸಂರಬ್ಧೌ ಶರವರ್ಷಾಣ್ಯಮುಂಚತಾಂ|

08020014c ಸಿಂಹಾವಿವ ಸುಸಂಕ್ರುದ್ಧೌ ಪರಸ್ಪರಜಿಗೀಷಯಾ||

ಪರಸ್ಪರರನ್ನು ಗೆಲ್ಲಲು ಬಯಸಿ ಕ್ರುದ್ಧ ಸಿಂಹಗಳಂತೆ ರೋಷಗೊಂಡ ಅವರಿಬ್ಬರು ಅನ್ಯೋನ್ಯರ ಮೇಲೆ ಶರವರ್ಷಗಳನ್ನು ಸುರಿಸಿದರು.

08020015a ಅನ್ಯೋನ್ಯಂ ಜಘ್ನತುಶ್ಚೈವ ನರ್ದಮಾನೌ ವೃಷಾವಿವ|

08020015c ಅನ್ಯೋನ್ಯಂ ಪ್ರೇಕ್ಷಮಾಣೌ ಚ ಚೇರತುಸ್ತೌ ಮಹಾರಥೌ||

ಗೂಳಿಗಳಂತೆ ಗರ್ಜಿಸುತ್ತಾ ಅನ್ಯೋನ್ಯರನ್ನು ಪ್ರಹರಿಸುತ್ತಿದ್ದ ಆ ಮಹಾರಥರಿಬ್ಬರೂ ಪರಸ್ಪರರನ್ನು ದುರುಗುಟ್ಟಿ ನೋಡುತ್ತಾ ಸುತ್ತುತ್ತಿದ್ದರು.

08020016a ತತಃ ಪೂರ್ಣಾಯತೋತ್ಸೃಷ್ಟೈರನ್ಯೋನ್ಯಂ ಸುಕೃತವ್ರಣೌ|

08020016c ವಿರೇಜತುರ್ಮಹಾರಾಜ ಪುಷ್ಪಿತಾವಿವ ಕಿಂಶುಕ||

ಮಹಾರಾಜ! ಕಿವಿಯ ತುದಿಯವರೆಗೂ ಸೆಳೆದು ಬಿಡುತ್ತಿದ್ದ ಬಾಣಗಳಿಂದ ಅನ್ಯೋನ್ಯರನ್ನು ಬಹಳವಾಗಿ ಗಾಯಗೊಳಿಸಿದ ಅವರಿಬ್ಬರೂ ಹೂಬಿಟ್ಟ ಮುತ್ತುಗದ ಮರಗಳಂತೆ ರಾರಾಜಿಸುತ್ತಿದ್ದರು.

08020017a ತತೋ ರಾಜನ್ಪ್ರತಿಭಯಾನ್ಸಿಂಹನಾದಾನ್ಮುಹುರ್ಮುಹುಃ|

08020017c ತಲಯೋಶ್ಚ ತಥಾ ಶಬ್ದಾನ್ಧನುಷೋಶ್ಚ ಮಹಾಹವೇ||

ರಾಜನ್! ಮಹಾಯುದ್ಧದಲ್ಲಿ ಅವರಿಬ್ಬರೂ ಮತ್ತೆ ಮತ್ತೆ ಸಿಂಹನಾದಗೈಯುತ್ತಾ ಅನ್ಯೋನ್ಯರನ್ನು ಬೆದರಿಸುತ್ತಿದ್ದರು. ಚಪ್ಪಾಳೆಗಳನ್ನು ತಟ್ಟುತ್ತಾ ಧನುಸ್ಸನ್ನು ಟೇಂಕರಿಸಿ ಶಬ್ಧಮಾಡುತ್ತಿದ್ದರು.

08020018a ಶಂಖಶಬ್ದರವಾಂಶ್ಚೈವ ಚಕ್ರತುಸ್ತೌ ರಥೋತ್ತಮೌ|

08020018c ಅನ್ಯೋನ್ಯಂ ಚ ಮಹಾರಾಜ ಪೀಡಯಾಂ ಚಕ್ರತುರ್ಭೃಶಂ||

ಆ ರಥಸತ್ತಮರಿಬ್ಬರೂ ಶಂಖಗಳನ್ನು ಊದಿ ಶಬ್ಧಮಾಡುತ್ತಿದ್ದರು. ಮಹಾರಾಜ! ಅನ್ಯೋನ್ಯರನ್ನು ಬಹಳವಾಗಿ ಪೀಡಿಸುತ್ತಿದ್ದರು.

08020019a ತತೋ ಯುಧಿಷ್ಠಿರೋ ರಾಜಾ ತವ ಪುತ್ರಂ ತ್ರಿಭಿಃ ಶರೈಃ|

08020019c ಆಜಘಾನೋರಸಿ ಕ್ರುದ್ಧೋ ವಜ್ರವೇಗೋ ದುರಾಸದಃ||

ಆಗ ರಾಜಾ ಯುಧಿಷ್ಠಿರನು ಕ್ರುದ್ಧನಾಗಿ ವಜ್ರವೇಗವುಳ್ಳ ಮೂರು ದುರಾಸದ ಶರಗಳಿಂದ ನಿನ್ನ ಮಗನ ಎದೆಗೆ ಹೊಡೆದನು.

08020020a ಪ್ರತಿವಿವ್ಯಾಧ ತಂ ತೂರ್ಣಂ ತವ ಪುತ್ರೋ ಮಹೀಪತಿಂ|

08020020c ಪಂಚಭಿರ್ನಿಶಿತೈರ್ಬಾಣೈರ್ಹೇಮಪುಂಖೈಃ ಶಿಲಾಶಿತೈಃ||

ಅದಕ್ಕೆ ಪ್ರತಿಯಾಗಿ ಕೂಡಲೇ ನಿನ್ನ ಮಗನು ಐದು ಶಿಲಾಶಿತ ಹೇಮಪುಂಖ ನಿಶಿತ ಬಾಣಗಳಿಂದ ಮಹೀಪತಿಯನ್ನು ಹೊಡೆದನು.

08020021a ತತೋ ದುರ್ಯೋಧನೋ ರಾಜಾ ಶಕ್ತಿಂ ಚಿಕ್ಷೇಪ ಭಾರತ|

08020021c ಸರ್ವಪಾರಶವೀಂ ತೀಕ್ಷ್ಣಾಂ ಮಹೋಲ್ಕಾಪ್ರತಿಮಾಂ ತದಾ||

ಭಾರತ! ಆಗ ರಾಜಾ ದುರ್ಯೋಧನನು ಮಹಾ ಉಲ್ಕೆಯಂತಿದ್ದ ತೀಕ್ಷ್ಣವಾದ ಸಂಪೂರ್ಣ ಉಕ್ಕಿನಿಂದ ಮಾಡಿದ್ದ ಶಕ್ತ್ಯಾಯುಧವನ್ನು ಪ್ರಯೋಗಿಸಿದನು.

08020022a ತಾಮಾಪತಂತೀಂ ಸಹಸಾ ಧರ್ಮರಾಜಃ ಶಿಲಾಶಿತೈಃ|

08020022c ತ್ರಿಭಿಶ್ಚಿಚ್ಚೇದ ಸಹಸಾ ತಂ ಚ ವಿವ್ಯಾಧ ಸಪ್ತಭಿಃ||

ಒಮ್ಮೆಲೇ ಬೀಳುತ್ತಿದ್ದ ಆ ಶಕ್ತಿಯನ್ನು ಧರ್ಮರಾಜನು ಒಮ್ಮೆಲೇ ಶಿಲಾಶಿತ ಬಾಣಗಳಿಂದ ತುಂಡರಿಸಿ, ದುರ್ಯೋಧನನನ್ನು ಏಳರಿಂದ ಹೊಡೆದನು.

08020023a ನಿಪಪಾತ ತತಃ ಸಾಥ ಹೇಮದಂಡಾ ಮಹಾಘನಾ|

08020023c ನಿಪತಂತೀ ಮಹೋಲ್ಕೇವ ವ್ಯರಾಜಚ್ಚಿಖಿಸಂನಿಭಾ||

ಹೇಮದಂಡದ ಆ ಮಹಾಘನ ಶಕ್ತ್ಯಾಯುಧವು ಕೆಳಗೆ ಬಿದ್ದಿತು. ಕೆಳಗೆ ಬೀಳುತ್ತಿದ್ದ ಅದು ಶಿಖಿಯಿಂದ ಉತ್ಪನ್ನವಾದ ಮಹಾ ಉಲ್ಕೆಯಂತೆ ವಿರಾಜಿಸಿತು.

08020024a ಶಕ್ತಿಂ ವಿನಿಹತಾಂ ದೃಷ್ಟ್ವಾ ಪುತ್ರಸ್ತವ ವಿಶಾಂ ಪತೇ|

08020024c ನವಭಿರ್ನಿಶಿತೈರ್ಭಲ್ಲೈರ್ನಿಜಘಾನ ಯುಧಿಷ್ಠಿರಂ||

ವಿಶಾಂಪತೇ! ಶಕ್ತಿಯು ನಾಶವಾದುದನ್ನು ನೋಡಿದ ನಿನ್ನ ಮಗನು ಒಂಭತ್ತು ನಿಶಿತ ಭಲ್ಲಗಳಿಂದ ಯುಧಿಷ್ಠಿರನನ್ನು ಹೊಡೆದನು.

08020025a ಸೋಽತಿವಿದ್ಧೋ ಬಲವತಾಮಗ್ರಣೀಃ ಶತ್ರುತಾಪನಃ|

08020025c ದುರ್ಯೋಧನಂ ಸಮುದ್ದಿಶ್ಯ ಬಾಣಂ ಜಗ್ರಾಹ ಸತ್ವರಃ||

ಶತ್ರುತಾಪನ ಅಗ್ರಣಿ ಯುಧಿಷ್ಠಿರನು ಆ ಬಲಶಾಲಿಯಿಂದ ಅತಿಯಾಗಿ ಗಾಯಗೊಂಡನು. ಅವನು ಬಾಣವೊಂದನ್ನು ಹಿಡಿದು ದುರ್ಯೋಧನನಿಗೆ ಗುರಿಯಿಟ್ಟನು.

08020026a ಸಮಾಧತ್ತ ಚ ತಂ ಬಾಣಂ ಧನುಷ್ಯುಗ್ರಂ ಮಹಾಬಲಃ|

08020026c ಚಿಕ್ಷೇಪ ಚ ತತೋ ರಾಜಾ ರಾಜ್ಞಃ ಕ್ರುದ್ಧಃ ಪರಾಕ್ರಮೀ||

ಆ ಉಗ್ರ ಬಾಣವನ್ನು ಧನುಸ್ಸಿಗೆ ಹೂಡಿ ಕ್ರುದ್ಧನಾದ ಪರಾಕ್ರಮೀ ಮಹಾಬಲ ರಾಜನು ರಾಜನ ಮೇಲೆ ಪ್ರಯೋಗಿಸಿದನು.

08020027a ಸ ತು ಬಾಣಃ ಸಮಾಸಾದ್ಯ ತವ ಪುತ್ರಂ ಮಹಾರಥಂ|

08020027c ವ್ಯಮೋಹಯತ ರಾಜಾನಂ ಧರಣೀಂ ಚ ಜಗಾಮ ಹ||

ಆ ಬಾಣವು ನಿನ್ನ ಮಹಾರಥ ಪುತ್ರನಿಗೆ ತಾಗಿ, ರಾಜನನ್ನು ಮೂರ್ಛೆಗೊಳಿಸಿ, ಭೂಮಿಯನ್ನು ಸೀಳಿ ಹೊಕ್ಕಿಕೊಂಡಿತು.

08020028a ತತೋ ದುರ್ಯೋಧನಃ ಕ್ರುದ್ಧೋ ಗದಾಮುದ್ಯಂಯ ವೇಗಿತಃ|

08020028c ವಿಧಿತ್ಸುಃ ಕಲಹಸ್ಯಾಂತಮಭಿದುದ್ರಾವ ಪಾಂಡವಂ||

ಆಗ ದುರ್ಯೋಧನನು ಕ್ರುದ್ಧನಾಗಿ ಕಲಹವನ್ನು ಕೊನೆಗೊಳಿಸಬೇಕೆಂದು ಬಯಸಿ ಗದೆಯನ್ನು ಮೇಲೆತ್ತಿಕೊಂಡು ವೇಗದಿಂದ ಪಾಂಡವನ ಕಡೆ ಧಾವಿಸಿ ಎರಗಿದನು.

08020029a ತಮಾಲಕ್ಷ್ಯೋದ್ಯತಗದಂ ದಂಡಹಸ್ತಮಿವಾಂತಕಂ|

08020029c ಧರ್ಮರಾಜೋ ಮಹಾಶಕ್ತಿಂ ಪ್ರಾಹಿಣೋತ್ತವ ಸೂನವೇ|

08020029e ದೀಪ್ಯಮಾನಾಂ ಮಹಾವೇಗಾಂ ಮಹೋಲ್ಕಾಂ ಜ್ವಲಿತಾಮಿವ||

ದಂಡವನ್ನು ಹಿಡಿದ ಅಂತಕನಂತೆ ಗದೆಯನ್ನು ಮೇಲೆತ್ತಿ ಬರುತ್ತಿದ್ದ ನಿನ್ನ ಮಗನನ್ನು ನೋಡಿ ಧರ್ಮರಾಜನು ಮಹಾವೇಗವುಳ್ಳ, ಮಹಾ ಉಲ್ಕೆಯಂತೆ ಉರಿದು ಬೆಳಗುತ್ತಿದ್ದ ಮಹಾಶಕ್ತಿಯನ್ನು ಪ್ರಯೋಗಿಸಿದನು.

08020030a ರಥಸ್ಥಃ ಸ ತಯಾ ವಿದ್ಧೋ ವರ್ಮ ಭಿತ್ತ್ವಾ ಮಹಾಹವೇ|

08020030c ಭೃಶಂ ಸಂವಿಗ್ನಹೃದಯಃ ಪಪಾತ ಚ ಮುಮೋಹ ಚ||

ಮಹಾಯುದ್ಧದಲ್ಲಿ ಅದು ರಥಸ್ಥ ದುರ್ಯೋಧನ ಕವಚವನ್ನು ಸೀಳಿ ಗಾಯಗೊಳಿಸಿತು. ಅದರಿಂದ ತುಂಬಾ ಸಂವಿಗ್ನ ಹೃದಯನಾದ ಅವನು ಕೆಳಗೆ ಬಿದ್ದು ಮೂರ್ಛಿತನಾದನು.

08020031a ತತಸ್ತ್ವರಿತಮಾಗತ್ಯ ಕೃತವರ್ಮಾ ತವಾತ್ಮಜಂ|

08020031c ಪ್ರತ್ಯಪದ್ಯತ ರಾಜಾನಂ ಮಗ್ನಂ ವೈ ವ್ಯಸನಾರ್ಣವೇ||

ಆಗ ವ್ಯಸನಸಮುದ್ರದಲ್ಲಿ ಮುಳುಗಿಹೋಗಿದ್ದ ನಿನ್ನ ಮಗ ರಾಜನ ಬಳಿಗೆ ತ್ವರೆಮಾಡಿ ಕೃತವರ್ಮನು ಸಮೀಪಿಸಿದನು.

08020032a ಭೀಮೋಽಪಿ ಮಹತೀಂ ಗೃಹ್ಯ ಗದಾಂ ಹೇಮಪರಿಷ್ಕೃತಾಂ|

08020032c ಅಭಿದುದ್ರಾವ ವೇಗೇನ ಕೃತವರ್ಮಾಣಮಾಹವೇ|

08020032e ಏವಂ ತದಭವದ್ಯುದ್ಧಂ ತ್ವದೀಯಾನಾಂ ಪರೈಃ ಸಹ||

ಭೀಮನೂ ಕೂಡ ಹೇಮಪರಿಷ್ಕೃತ ಮಹಾಗದೆಯನ್ನು ಹಿಡಿದು ವೇಗದಿಂದ ಯುದ್ಧದಲ್ಲಿ ಕೃತವರ್ಮನನ್ನು ಆಕ್ರಮಣಿಸಿದನು. ಹೀಗೆ ಶತ್ರುಗಳೊಡನೆ ನಿನ್ನವರ ಯುದ್ಧವು ನಡೆಯಿತು.”  

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಇಪ್ಪತ್ತನೇ ಅಧ್ಯಾಯವು.

Comments are closed.