ಮಹಾಭಾರತದ ರಚನೆ
[ಆದಿಪರ್ವದ ಅಧ್ಯಾಯ 1ರ ಶ್ಲೋಕ 62ರ ನಂತರ ಡಿ6,8 ಟಿ2 ಜಿ3-6 ಮತ್ತು ಎಂ ಗಳಲ್ಲಿರುವ ಅಧಿಕ ಶ್ಲೋಕಗಳು]
ತದಾಖ್ಯಾನವರಿಷ್ಟಸ್ಯ ಸ ಕೃತ್ವಾ ದ್ವೈಪಾಯನಃ ಪ್ರಭುಃ । ಕಥಮಧ್ಯಾಪಯಾನೀಹ ಶಿಷ್ಯಾನ್ನಿತ್ಯನ್ವಚಿಂತಯತ್ ।
ತಸ್ಯ ಚಿಂತಯತಶ್ಚಾಪಿ ಋಷೇರ್ದ್ವೈಪಾಯನಸ್ಯ ಚ ।
ಸ್ಮೃತ್ವಾಜಗಾಮ ಭಗವಾನ್ಬ್ರಹ್ಮಾ ಲೋಕಗುರುಃ ಸ್ವಯಮ್ ।
ಪ್ರಿಯಾರ್ಥಂ ಮಹರ್ಷೇಶ್ಚಾಪಿ ಲೋಕಾನಾಂ ಹಿತಕಾಮ್ಯಯಾ । [5]
ತಂ ದೃಷ್ಟ್ವಾ ವಿಸ್ಮಿತೋ ಭೂತ್ವಾ ಪ್ರಾಂಜಲಿಃ ಪ್ರಣತಃ ಸ್ಥಿತಃ ।
ಆಸನಂ ಕಲ್ಪಯಾಮಾಸ ಸರ್ವದೇವಗಣೈರ್ಯುತಮ್ ।
ಹಿರಣ್ಯಗರ್ಭಮಾಸೀನಂ ತಸ್ಮಿಂಸ್ತು ಪರಮಾಸನೇ ।
ಪರಿವೃತ್ಯಾಸನಾಭ್ಯಾಶೇ ಕೃಷ್ಣಸ್ತು ಬ್ರಹ್ಮಣಾ ಪರಮೇಷ್ಠಿನಾ । [10]
ನಿಷಸಾದಾಸನಾಭ್ಯಾಶೇ ಪ್ರೀಯಮಾಣಃ ಸುವಿಸ್ಮಿತಃ ।
ಉವಾಚ ಸ ಮಹಾತೇಜಾ ಬ್ರಹ್ಮಾಣಂ ಪರಮೇಷ್ಠಿನಮ್ ।
ಪರಾಶರಾತ್ಮಜ ದ್ವೈಪಾಯನ ಪ್ರಭುವು ಆ ಹಿರಿಯ ಆಖ್ಯಾನನ್ನು ರಚಿಸಿ, ಶಿಷ್ಯರಿಗೆ ಇದನ್ನು ಹೇಗೆ ಕಲಿಸಲಿ ಎಂದು ಚಿಂತಿಸಿದನು. ಋಷಿ ದ್ವೈಪಾಯನನು ಚಿಂತಿಸಿ ಸ್ಮರಿಸಿದಂತೆಯೇ ಲೋಕಗುರು ಭಗವಾನ್ ಬ್ರಹ್ಮನು ಮಹರ್ಷಿಗೆ ಪ್ರಿಯವನ್ನುಂಟುಮಾಡಲು ಮತ್ತು ಲೋಕದ ಹಿತವನ್ನು ಬಯಸಿ ಸ್ವಯಂ ಆಗಮಿಸಿದನು. ಸರ್ವದೇವಗಣಗಳಿಂದ ಕೂಡಿದ್ದ ಅವನನ್ನು ನೋಡಿ ವಿಸ್ಮಿತನಾಗಿ ಕೈಮುಗಿದು ನಮಸ್ಕರಿಸಿ ಆಸನವನ್ನಿತ್ತನು. ಆ ಪರಮ ಆಸನದಲ್ಲಿ ಹಿರಣ್ಯಗರ್ಭನು ಕುಳಿತುಕೊಳ್ಳಲು ಬ್ರಹ್ಮ ಪರಮೇಷ್ಠಿಯನ್ನು ಪ್ರದಕ್ಷಿಣೆಮಾಡಿ ಸಮೀಪ-ದಲ್ಲಿಯೇ ನಿಂತುಕೊಂಡನು. ಪ್ರೀತನಾದ ಆ ಮಹಾತೇಜಸ್ವಿಯು ಬಳಿಯಲ್ಲಿಯೇ ಕುಳಿತು ಮಂದಸ್ಮಿತನಾಗಿ ಪರಮೇಷ್ಠಿ ಬ್ರಹ್ಮನಿಗೆ ಹೇಳಿದನು:
ಕೃತಂ ಮಯೇದಂ ಭಗವನ್ಕಾವ್ಯಂ ಪರಮಪೂಜಿತಮ್ ।
ಬ್ರಹ್ಮನ್ವೇದರಹಸ್ಯಂ ಚ ಯಚ್ಚಾನ್ಯತ್ಖ್ಯಾಪಿತಂ ಮಯಾ ।
ಸಾಂಗೋಪನಿಷದಾನಾಂ ಚ ವೇದಾನಾಂ ವಿಸ್ತರಕ್ರಿಯಾ । [15]
ಇತಿಹಾಸಪುರಾಣಾನಾಮುನ್ಮೇಷಂ ನಿಮಿಷಂ ಚ ಯತ್ ।
ಭೂತಂ ಭವ್ಯಂ ಭವಿಷ್ಯಚ್ಚ ತ್ರಿವಿಧಂ ಕಾಲಸಂಜ್ಞಿತಮ್ ।
ಜರಾಮೃತ್ಯುಭಯವ್ಯಾಧಿಭಾವಾಭಾವವಿನಿಶ್ಚಯಮ್ ।
ವಿವಿಧಸ್ಯ ಚ ಧರ್ಮಸ್ಯ ಹ್ಯಾಶ್ರಮಾಣಾಂ ಚ ಲಕ್ಷಣಮ್ ।
ಚಾತುರ್ವರ್ಣ್ಯವಿಧಾನಂ ಚ ಪುರಾಣಾರ್ಥಂ ಚ ಕೃತ್ಸ್ನಶಃ । [20]
ತಪಸೋ ಬ್ರಹ್ಮಚರ್ಯಸ್ಯ ಪೃಥಿವ್ಯಾಶ್ಚಂದ್ರಸೂರ್ಯಯೋಃ ।
ಗ್ರಹನಕ್ಷತ್ರತಾರಾಣಾಂ ಪ್ರಮಾಣಂ ಚ ಯುಗೈಃ ಸಹ ।
ಋಚೋ ಯಜೂಂಷಿ ಸಾಮಾನಿ ವೇದಾಧ್ಯಾತ್ಮಂ ತಥೈವ ಚ ।
ನ್ಯಾಯಃ ಶಿಕ್ಷಾ ಚಿಕಿತ್ಸಾ ಚ ಜ್ಞಾನಂ ಪಾಶುಪತಂ ತಥಾ ।
ಇತಿ ನೈಕಾಶ್ರಯಂ ಜನ್ಮ ದಿವ್ಯಮಾನುಷಸಂಶ್ರಿತಮ್ । [25]
ತೀರ್ಥಾನಾಂ ಚೈವ ಪುಣ್ಯಾನಾಂ ದೇಶಾನಾಂ ಚೈವ ಕೀರ್ತನಮ್ ।
ನದೀನಾಂ ಪರ್ವತಾನಾಂ ಚ ವನಾನಾಂ ಸಾಗರಸ್ಯ ಚ ।
ಪುರಾಣಾಂ ಚೈವ ದಿವ್ಯಾನಾಂ ಕಲ್ಪಾನಾಂ ಯುದ್ಧಕೌಶಲಮ್ ।
ವಾಕ್ಯಜಾತಿವಿಶೇಷಾಂಶ್ಚ ಲೋಕಯಾತ್ರಾಕ್ರಮಶ್ಚ ಯಃ ।
ಯಾಚ್ಚಾಪಿ ಸರ್ವಗಂ ವಸ್ತು ತತ್ಪ್ರಭೋ ಕ್ಷಂತುಮರ್ಹಸಿ । [30][1]
“ಭಗವನ್! ನಾನು ಈ ಪರಮಪೂಜಿತ ಕಾವ್ಯವನ್ನು ರಚಿಸಿದ್ದೇನೆ. ಬ್ರಹ್ಮನ್! ಇದರಲ್ಲಿ ನಾನು ವೇದರಹಸ್ಯವನ್ನೂ ಅನ್ಯ ಶಾಸ್ತ್ರಗಳನ್ನೂ ಹೇಳಿದ್ದೇನೆ. ಅಂಗಗಳು ಮತ್ತು ಉಪನಿಷತ್ತುಗಳೊಂದಿಗೆ ವೇದಗಳನ್ನು ವಿಸ್ತರಿಸಿದ್ದೇನೆ. ಇತಿಹಾಸ-ಪುರಾಣಗಳನ್ನು ಇದರಲ್ಲಿ ತುಂಬಿಸಿದ್ದೇನೆ. ಇದರಲ್ಲಿ ಭೂತ, ಭವ್ಯ ಮತ್ತು ಭವಿಷ್ಯ ಈ ಮೂರೂ ಕಾಲಗಳ ಸಂಚಯವಿದೆ. ವೃದ್ಧಾಪ್ಯ, ಮೃತ್ಯು, ಭಯ, ವ್ಯಾಧಿಗಳ ಭಾವಾಭಾವ ನಿಶ್ಚಯವಿದೆ. ವಿವಿಧ ಧರ್ಮ ಮತ್ತು ಆಶ್ರಮಗಳ ಲಕ್ಷಣಗಳಿವೆ. ಚಾತುರ್ವರ್ಣ್ಯವಿಧಾನ ಮತ್ತು ಪುರಾಣಗಳ ಸಂಪೂರ್ಣ ಅರ್ಥವೂ ಇದೆ. ತಪಸ್ಸು, ಬ್ರಹ್ಮಚರ್ಯೇ, ಪೃಥ್ವಿ, ಚಂದ್ರ-ಸೂರ್ಯರು, ಗ್ರಹ-ನಕ್ಷತ್ರ-ತಾರೆಗಳ ಮತ್ತು ಜೊತೆಗೆ ಯುಗಗಳ ಪ್ರಮಾಣ, ಹಾಗೂ ಋಕ್-ಯಜು-ಸಾಮವೇದಗಳ ಆಧ್ಯಾತ್ಮ ತತ್ವಗಳೂ ಇವೆ. ಇದರಲ್ಲಿ ನ್ಯಾಯ, ಶಿಕ್ಷೆ, ಚಿಕಿತ್ಸೆ, ದಾನ, ಪಶುಪತಿಯ ಉಪದೇಶ ಇವುಗಳನ್ನೂ ಹಾಗೆಯೇ ದೇವತೆಗಳು-ಮನುಷ್ಯರ ಜನ್ಮಗಳನ್ನು ಸೇರಿಸಿದ್ದೇನೆ. ಪುಣ್ಯ ತೀರ್ಥಗಳ ಮತ್ತು ದೇಶಗಳ, ವನ-ಪರ್ವತಗಳು, ನದಿಗಳು, ಸಾಗ-ರ, ಪುರಾತನ ದಿವ್ಯ ಕಲ್ಪಗಳ ಯುದ್ಧಕೌಶಲ, ವಾಕ್ಯಜಾತಿ ವಿಶೇಷಗಳು, ಲೋಕಯಾತ್ರಾಕ್ರಮಗಳು, ಮತ್ತು ಯಾವ ಸರ್ವಗ ವಸ್ತುವಿದೆಯೋ ಆ ಬ್ರಹ್ಮವನ್ನೂ ವಿಸ್ತರಿಸಿದ್ದೇನೆ. ಪ್ರಭೋ! ನನ್ನನ್ನು ಕ್ಷಮಿಸಬೇಕು.”
ಬ್ರಹ್ಮೋವಾಚ ।
ತಪೋವಿಶಿಷ್ಟಾದಪಿ ವೈ ವಸಿಷ್ಠಾನ್ಮುನಿಪುಂಗವಾತ್ ।
ಮನ್ಯೇ ಶ್ರೇಷ್ಠತಮಂ ತ್ವಾದ್ಯ ರಹಸ್ಯಜ್ಞಾನವೇದನಾತ್ ।
ಜನ್ಮಪ್ರಭೃತಿ ಸತ್ಯಾಂ ತೇ ವಿದ್ಮ ಗಾಂ ಬ್ರಹ್ಮವಾದಿನೀಮ್ ।
ತ್ವಯಾ ಚ ಕಾವ್ಯಮಿತ್ಯುಕ್ತಂ ತಸ್ಮಾತ್ಕಾವ್ಯಂ ಭವಿಷ್ಯತಿ ।
ಅಸ್ಯ ಕಾವ್ಯಸ್ಯ ಕವಯೋ ನ ಸಮರ್ಥಾ ವಿಶೇಷಣೇ । [35]
ವಿಶೇಷಣೇ ಗೃಹಸ್ಥಸ್ಯ ಶೇಷಸ್ತ್ರಯ ಇವಾಶ್ರಮಾಃ ।[2]
ಜಡಾಂಧಬಧಿರೋನ್ಮತ್ತಂ ತಮೋ ಭೂತಂ ಜಗದ್ಭವೇತ್ ।
ಯದಿ ಜ್ಞಾನಹುತಾಶೇನ ತ್ವಯಾ ನೋಜ್ವಲಿತಂ ಭವೇತ್ ।
ತಮಸಾಂಧಸ್ಯ ಲೋಕಸ್ಯ ವೇಷ್ಟಿತಸ್ಯ ಸ್ವಕರ್ಮಭಿಃ ।
ಜ್ಞಾನಾಂಜನಶಲಾಕಾಭಿರ್ಬುದ್ಧಿನೇತ್ರೋತ್ಸವಃ ಕೃತಃ । [40]
ಬ್ರಹ್ಮನು ಹೇಳಿದನು: “ರಹಸ್ಯಜ್ಞಾನಗಳನ್ನು ತಿಳಿದಿರುವುವುದರಿಂದ ನೀನು ತಪೋವಿಶಿಷ್ಟರಾದ ವಸಿಷ್ಠಾದಿ ಮುನಿಪುಂಗವರಿಗಿಂತಲೂ ಶ್ರೇಷ್ಠತಮನೆಂದು ಇಂದು ಭಾವಿಸಿತ್ತೇನೆ. ಜನ್ಮದಿಂದ ಮೊದಲ್ಗೊಂಡು ನೀನು ಹೇಳುವುದೆಲ್ಲವೂ ಮತ್ತು ತಿಳಿದುದೆಲ್ಲವೂ ಬ್ರಹ್ಮವನ್ನು ತಿಳಿಸುತ್ತದೆ ಮತ್ತು ಸತ್ಯ. ನೀನು ಕಾವ್ಯ ಎಂದು ಹೇಳಿದುದರಿಂದ ಅದು ಕಾವ್ಯವೇ ಆಗುತ್ತದೆ. ಉಳಿದ ಮೂರು ಆಶ್ರಮಗಳು ಶ್ರೇಷ್ಠತೆಯಲ್ಲಿ ಹೇಗೆ ಗೃಹಸ್ಥಾಶ್ರಮಕ್ಕೆ ಸಮನಾಗಲಾರವೋ ಹಾಗೆ ಈ ಕಾವ್ಯವನ್ನು ಮೀರಲು ಬೇರೆ ಯಾವ ಕವಿಗಳಿಗೂ ಸಮರ್ಥರಾಗಲಾರರು. ನಿನ್ನ ಜ್ಞಾನಾಗ್ನಿಯಿಂದ ಪ್ರಕಾಶಿತಗೊಳ್ಳದಿದ್ದರೆ ಈ ಜಗತ್ತು ಜಡ-ಅಂಧ-ಕಿವುಡು-ಉನ್ಮತ್ತಗೊಂಡು ತಮೋಭೂತವಾಗುತ್ತದೆ. ಸ್ವಕರ್ಮಗಳ ಸುಳಿಗೆ ಸಿಲುಕಿದ ಈ ಲೋಕದ ತಮಸ್ಸಿನ ಕತ್ತಲೆಯನ್ನು ಜ್ಞಾನಾಂಜನ ಶಲಾಕೆಯಿಂದ ಬುದ್ಧಿನೇತ್ರೋತ್ಸವನ್ನು ಮಾಡಿದ್ದೀಯೆ.
ಧರ್ಮಾರ್ಥಕಾಮಮೋಕ್ಷಾರ್ಥೈಃ ಸಮಾಸವ್ಯಾಸಕೀರ್ತನೈಃ ।
ತ್ವಯಾ ಭಾರತಸೂರ್ಯೇಣ ನೃಣಾಂ ವಿನಿಹಿತಂ ತಮಃ ।
ಪುರಾಣಪೂರ್ಣಚಂದ್ರೇಣ ಶ್ರುತಿಜ್ಯೋತ್ಸ್ನಾಪ್ರಕಾಶಿನಾ ।
ನೃಣಾಂ ಕುಮುದಸೌಮ್ಯಾನಾಂ ಕೃತಂ ಬುದ್ಧಿಪ್ರಬೋಧನಮ್ ।
ಇತಿಹಾಸಪ್ರದೀಪೇನ ಮೋಹಾವರಣಘಾತಿನಾ । [45]
ಲೋಕಗರ್ಭಗೃಹಂ ಕೃತ್ಸಂ ಯಥಾವತ್ಸಂಗ್ರಕಾಶಿತಮ್ ।
ಧರ್ಮ-ಅರ್ಥ-ಕಾಮ-ಮೋಕ್ಷಗಳ ಅರ್ಥಗಳನ್ನು ಸಂಕ್ಷಿಪ್ತವಾಗಿ ಮತ್ತು ಪ್ರತ್ಯೇಕವಾಗಿ ವರ್ಣಿಸಿ ನೀನು ಭಾರತವೆಂಬ ಸೂರ್ಯದಿಂದ ಮನುಷ್ಯರ ಕತ್ತಲೆಯನ್ನು ಕಳೆದಿದ್ದೀಯೆ. ಪುರಾಣವೆಂಬ ಪೂರ್ಣಚಂದ್ರನಿಂದ, ಶ್ರುತಿಯೆಂಬ ದೀಪದ ಬೆಳಕಿನಿಂದ ಮನುಷ್ಯರ ಕುಮುದದಂತೆ ಕೋಮಲವಾಗಿರುವ ಬುದ್ಧಿಯನ್ನು ಎಚ್ಚರಿಸಿದ್ದೀಯೆ. ಇತಿಹಾಸವೆಂಬ ದೀಪವನ್ನು ಹೊತ್ತಿಸಿ ಮೋಹದ ಆವರಣವನ್ನು ನಾಶಗೊಳಿಸಿದ್ದೀಯೆ. ಇತಿಹಾಸವೆಂಬ ದೀಪವನ್ನು ಹೊತ್ತಿಸಿ ಮೋಹದ ಆವರಣವನ್ನು ನಾಶಗೊಳಿಸಿದ್ದೀಯೆ. ಲೋಕದ ಗರ್ಭಗೃಹದಲ್ಲಿರುವ ಎಲ್ಲವಕ್ಕೂ ಬೆಳಕನ್ನಿತ್ತು ಯಥಾವತ್ತಾಗಿ ತೋರಿಸಿಕೊಟ್ಟಿದ್ದೀಯೆ.
ಸಂಗ್ರಹಾಧ್ಯಾಯಬೀಜೋ ವೈ ಪೌಲೋಮಾಸ್ತೀಕಮೂಲವಾನ್ ।
ಸಂಭವಸ್ಕಂಧವಿಸ್ತಾರಃ ಸಭಾರಣ್ಯವಿಟಂಕವಾನ್ ।
ಅರಣೀಪರ್ವರೂಪಾಢ್ಯೋ ವಿರಾಟೋದ್ಯೋಗಸಾರವಾನ್ ।
ಭೀಷ್ಮಪರ್ವಮಹಾಶಾಖೋ ದ್ರೋಣಪರ್ವಪಲಾಶವಾನ್ । [50]
ಕರ್ಣಪರ್ವಚಿತೈಃ ಪುಷ್ಪೈಃ ಶಲ್ಯಪರ್ವಸುಂಧಿಭಿಃ ।[3]
ಸ್ತ್ರೀಪರ್ವೈಶೀಕವಿಶ್ರಾಮಃ ಶಾಂತಿಪರ್ವಬೃಹತ್ಫಲಃ ।[4]
ಅಶ್ವಮೇಧಾಮೃತರಸಸ್ತ್ವಾಶ್ರಾಮಮಸ್ಥಾನಸಂಶ್ರಯಃ ।
ಮೌಸಲಶ್ರುತಿಸಂಕ್ಷೇಪಃ ಶಿಷ್ಟದ್ವಿಜನಿಷೇವಿತಃ ।
ಸರ್ವೇಷಾಂ ಕವಿಮುಖ್ಯಾನಾಮುಪಜೀವ್ಯೋ ಭವಿಷ್ಯತಿ । [55]
ಪರ್ಜನ್ಯ ಇವ ಭೂತಾನಾಮಕ್ಷಯೋ ಭಾರತದ್ರುಮಃ ।
ಇದರ ಬೀಜವೇ ಸಂಗ್ರಹಾಧ್ಯಾಯ, ಪೌಲೋಮ ಮತ್ತು ಆಸ್ತೀಕಗಳು ಬೇರುಗಳು, ಸಂಭವವು ವಿಸ್ತಾರವಾದ ಸ್ಕಂಧವಾದರೆ, ಸಭಾ-ಅರಣ್ಯಗಳು ರೆಂಬೆಗಳು, ಅರಣೀಪರ್ವವು ಗ್ರಂಥಿಸ್ಥಲ, ವಿರಾಟ ಮತ್ತು ಉದ್ಯೋಗಗಳು ಸಾರ, ಭೀಷ್ಮ ಪರ್ವವು ಮಹಾಶಾಖೆಯಾದರೆ ದ್ರೋಣಪರ್ವವು ಇದರ ಎಲೆ, ಕರ್ಣಪರ್ವವು ಇದರಿಂದ ಉದುರಿದ ಪುಷ್ಪಗಳು, ಶಲ್ಯಪರ್ವವು ಸುಗಂಧ, ಸ್ತ್ರೀಪರ್ವ ಮತ್ತು ಔಷೀಕಗಳು ನೆರಳು ಮತ್ತು ಶಾಂತಿಪರ್ವವು ಮಹಾಫಲ. ಅಶ್ವಮೇಧವು ಅಮೃತರಸ, ಆಶ್ರಮವು ಕುಳಿತುಕೊಳ್ಳುವ ಜಾಗ, ಮೌಸಲವು ಶಿಷ್ಟದ್ವಿಜಸಂಸೇವಿತ ಶ್ರುತಿಸಂಕ್ಷೇಪ. ಇರುವವಕ್ಕೆಲ್ಲಾ ಪರ್ಜನ್ಯವು ಹೇಗೋ ಹಾಗೆ ಸರ್ವ ಕವಿಮುಖ್ಯರಿಗೂ ಈ ಭಾರತ ದ್ರುಮವು ಅಕ್ಷಯ ಉಪಜೀವವಾಗುತ್ತದೆ.”
ಸೂತ ಉವಾಚ ।
ಏವಮಾಭಾಷ್ಯ ತಂ ಬ್ರಹ್ಮಾ ಜಗಾಮ ಸ್ವಂ ನಿವೇಶನಮ್ ।
ಭಗವಾನ್ಸ ಜಗತ್ಸ್ರಷ್ಟಾ ಋಷಿದೇವಗಣೈಃ ಸಹ ।
ತಸ್ಯ ವೃಕ್ಷಸ್ಯ ವಕ್ಷ್ಯಾಮಿ ಶಶ್ವತ್ಪುಷ್ಪಫಲೋದಯಮ್ ।
ಸ್ವಾದುಮೇಧ್ಯರಸೋಪೇತಮಚ್ಛೇದ್ಯಮಮರೈರಪಿ । [60]
ಸೂತನು ಹೇಳಿದನು: “ಹೀಗೆ ಹೇಳಿ ಜಗತ್ಸೃಷ್ಟಾ ಭಗವಾನ್ ಬ್ರಹ್ಮನು ಋಷಿ-ದೇವಗಣಗಳೊಂದಿಗೆ ತನ್ನ ನಿಲಯಕ್ಕೆ ತೆರಳಿದನು. ರುಚಿಯಾದ ಪವಿತ್ರ ರಸಯುಕ್ತ ಅವಿನಾಶೀ ಶಾಶ್ವತ ಪುಷ್ಪ-ಫಲಗಳನ್ನು ನೀಡುವ, ದೇವತೆಗಳೂ ಛೇದನ ಮಾಡಲಾರದಂಥಹ ಈ ವೃಕ್ಷದ ಕುರಿತು ನಾನು ಹೇಳುತ್ತೇನೆ.”
[1] ಸರ್ವಂ ಚ ಮತ್ಕೃತಂ ಕರ್ಮಂ ತತ್ಪ್ರಭೋ ಕ್ಷಂತುಮರ್ಹಸಿ । ಪರಂ ನ ಲೇಖಕಃ ಕಶ್ಚಿದೇತಸ್ಯ ಭುವಿ ವಿದ್ಯತೇ । ಅರ್ಥಾತ್: ನಾನು ಎಲ್ಲ ಕರ್ಮಗಳನ್ನೂ ಮಾಡಿದ್ದೇನೆ. ಪ್ರಭೋ! ನನ್ನನ್ನು ಕ್ಷಮಿಸಬೇಕು. ಆದರೆ ಭುವಿಯಲ್ಲಿ ಇದರ ಪರಮ ಲೇಖಕನು ಯಾರೆಂದು ತಿಳಿಯದಾಗಿದೆ. (ಕೆ4)
[2] ಕಾವ್ಯಸ್ಯ ಲೇಖನಾರ್ಥಾಯ ಗಣೇಶಃ ಸ್ಮರ್ಯತಾಂ ಮುನೇ । ಸೌತಿರುವಾಚ । ಏವಮಾಭಷ್ಯ ತಂ ಬ್ರಹ್ಮಾ ಜಗಾಮ ಸ್ವಂ ನಿವೇಶನಮ್ । ತತಃ ಸಸ್ಮಾರ ಹೇರಂಭಂ ವ್ಯಾಸಃ ಸತ್ಯವತೀಸುತಃ । ಸ್ಮೃತಮಾತ್ರೋ ಗಣೇಶಾನೋ ಭಕ್ತಚಿಂತಿತಪೂರಕಃ । ತತ್ರಾಜಗಾಮ ವಿಘ್ನೇಶೋ ವೇದವ್ಯಾಸೋ ಯತಃ ಸ್ಥಿತಃ । 5 । ಪೂಜಿತಶ್ಚೋಪವಿಷ್ಟಶ್ಚ ವ್ಯಾಸೇನೋಕ್ತಸ್ತದಾನಘ । ಲೇಖಕೋ ಭಾರತಸ್ಯಾಸ್ಯ ಭವ ತ್ವಂ ಗಣನಾಯಕ । ಮಮೈವ ಪ್ರೋಚ್ಯಮಾನಸ್ಯ ಮನಸಾ ಕಲ್ಪಿತಸ್ಯ ಚ । ಶ್ರುತ್ವೈತತ್ಪ್ರಾಹ ವಿಘ್ನೇಶೋ ಯದಿ ಮೆ ಲೀಖನೀ ಕ್ಷಣಮ್ । ಲಿಖತೋ ನಾವತಿಷ್ಠೇತ ತದಾ ಸ್ಯಾಂ ಲೇಖಕೋ ಹ್ಯಹಮ್ । 10 । ವ್ಯಾಸೋಽಪ್ಯುವಾಚ ತಂದೇವಮಬುಧ್ವಾ ಮಾ ಲಿಖ ಕ್ವಚಿತ್ । ಓಮಿತ್ಯುಕ್ತ್ವಾ ಗಣೇಶೋಽಪಿ ಬಭೂವ ಕಿಲ ಲೇಖಕಃ । ಗ್ರಂಥಗ್ರಂಥಿಂ ತದಾ ಚಕ್ರೇ ಮುನಿರ್ಗೂಢಂ ಕುತೂಹಲಾತ್ । ಯಸ್ಮಿನ್ಪ್ರತಿಜ್ಞಯಾ ಪ್ರಾಹ ಮುನಿರ್ದ್ವೈಪಾಯನಸ್ತ್ಸ್ವಿದಮ್ । ಅಷ್ಟೌ ಶ್ಲೋಕಸಹಸ್ರಾಣಿ ಅಷ್ಟೌ ಶ್ಲೋಕಶತಾನಿ ಚ । 15 । ಅಹಂ ವೇದ್ಮಿ ಶುಕೋ ವೇತ್ತಿ ಸಂಜಯೋ ವೇತ್ತಿ ವಾ ನ ವಾ । ತತ್ ಶ್ಲೋಕಕೂಟಮಧ್ಯಾಪಿ ಗ್ರಥಿತಂ ಸುದೃಢಂ ಮುನೇ । ಭೇತ್ತುಂ ನ ಶಕ್ಯತೇಽರ್ಥಸ್ಯ ಗೂಢತ್ವಾತ್ಪ್ರಶ್ರಿತಸ್ಯ ಚ । ಸರ್ವಜ್ಞೋಽಪಿ ಗಣೇಶೋ ಯತ್ಕ್ಷಣಮಾಸ್ತೇ ವಿಚಾರಯನ್ । ತಾವಚ್ಚಕಾರ ವ್ಯಾಸೋಽಪಿ ಶ್ಲೋಕಾನನ್ಯಾನ್ಬಹೂನಪಿ । 20 । (ಡಿಎನ್ ಡಿ2-12) ಅರ್ಥಾತ್: “ಮುನೇ! ಕಾವ್ಯವನ್ನು ಬರೆಯುವುದಕ್ಕೋಸ್ಕರ ಗಣೇಶನನ್ನು ಸ್ಮರಿಸು.” ಸೂತನು ಹೇಳಿದನು: “ಹೀಗೆ ಹೇಳಿ ಬ್ರಹ್ಮನು ಸ್ವನಿವೇಶನಕ್ಕೆ ತೆರಳಿದನು. ನಂತರ ಸತ್ಯವತೀಸುತ ವ್ಯಾಸನು ಹೇರಂಭನನ್ನು ಸ್ಮರಿಸಿದನು. ಸ್ಮರಣಮಾತ್ರದಲ್ಲಿ ಭಕ್ತಚಿಂತಿತಪೂರಕ, ವಿಘ್ನೇಶ ಗಣೇಶನು ವೇದವ್ಯಾಸನಿದ್ದಲ್ಲಿಗೆ ಆಗಮಿಸಿದನು. ಪೂಜಿತನಾಗಿ ಕುಳಿತುಕೊಂಡ ನಂತರ ಅನಘ ವ್ಯಾಸನು ಹೇಳಿದನು: “ಗಣನಾಯಕ! ನೀನು ನನ್ನ ಮನಸ್ಸಿನಲ್ಲಿಯೇ ಕಲ್ಪಿತಗೊಂಡು ಹೇಳುವ ಈ ಭಾರತದ ಲೇಖಕನಾಗು.” ಆಗ ವಿಘ್ನೇಶನು ಹೇಳಿದನು: “ನಾನು ಬರೆಯುವಾಗ ಒಂದು ಕ್ಷಣ ವಿರಾಮವೂ ಇಲ್ಲದಂತಾದರೆ ಮಾತ್ರ ನಾನು ಇದರ ಲೇಖಕನಾಗಬಹುದು.” ವ್ಯಾಸನೂ “ಅರ್ಥಮಾಡಿಕೊಳ್ಳದೇ ಏನನ್ನೂ ಬರೆಯಬಾರದು!” ಎಂದು ಉತ್ತರಿಸಿದನು. ಗಣೇಶನು “ಓಂ” ಎಂದು ಹೇಳಿ ಲೇಖಕನಾದನು. ಆಗ ಮುನಿಯು ಕುತೂಹಲದಿಂದ ಗ್ರಂಥಗ್ರಂಥಗಳಲ್ಲಿ ನಿಗೂಢಗಳನ್ನು ರಚಿಸಿದನು. ಈ ಪ್ರತಿಜ್ಞೆಯ ಕುರಿತು ಮುನಿ ದ್ವೈಪಾಯನನು ಈ ಮಾತನ್ನಾಡಿದ್ದಾನೆ: “ಎಂಟುಸಾವಿರದ ಎಂಟುನೂರು ಶ್ಲೋಕಗಳನ್ನು ನಾನು ತಿಳಿದಿದ್ದೇನೆ ಮತ್ತು ಶುಕನೂ ತಿಳಿದಿದ್ದಾನೆ. ಸಂಜಯನು ತಿಳಿದಿದ್ದಾನೋ ಇಲ್ಲವೋ ನನಗೆ ಗೊತ್ತಿಲ್ಲ.” ಮುನಿಗಳೇ! ಆ ಶ್ಲೋಕಕೂಟಗಳ ಗುಟ್ಟು ಇದೂವರೆಗೂ ಸುದೃಢವಾಗಿಯೇ ಇದ್ದು ಅವುಗಳ ಗೂಢಾರ್ಥಗಳನ್ನು ಭೇಧಿಸಲು ಯಾರಿಗೂ ಸಾಧ್ಯವಿಲ್ಲವಾಗಿದೆ. ಸರ್ವಜ್ಞ ಗಣೇಶನೂ ಕೂಡ ಅವುಗಳ ಕುರಿತು ಕ್ಷಣಮಾತ್ರ ವಿಚಾರಮಾಡುತ್ತಿದ್ದ. ಈ ಸಮಯದಲ್ಲಿ ವ್ಯಾಸನು ಬಹಳಷ್ಟು ಅನ್ಯ ಶ್ಲೋಕಗಳನ್ನು ರಚಿಸುತ್ತಿದ್ದನು.
[3] ಗದಾಪರ್ವಾಪಕ್ವಫಲೈರೈಷೀಕೇಷತ್ಫಲೋದಯೈಃ । ಸೌಪ್ತಿಕೈಃ ಪರ್ವಸಹಿತೈಃ ಫಲಸಂಸ್ಕಾರಕಾರಣೈಃ । ಅರ್ಥಾತ್: ಗದಾಪರ್ವವು ಪಕ್ವಫಲ, ಐಷೀಕವು ಫಲೋದಯ. ಮತ್ತು ಸೌಪ್ತಿಕಪರ್ವಗಳೊಂದಿಗೆ ಫಲಸಂಸ್ಕಾರಕಾರಣಗಳು. (ಡಿ9-12)
[4] ಅನುಶಾಸನಿಕಂ ಪರ್ವ ರಸಮಿತ್ಯಭಿಧೀಯತೇ । ಅರ್ಥಾತ್: ಅನುಶಾಸನಿಕ ಪರ್ವವನ್ನು ರಸವೆಂದು ತಿಳಿಯುತ್ತಾರೆ. (ಕೆ4)