ಆದಿಪರ್ವ: ಪೀಠಿಕೆ

ವಿಮರ್ಶಾತ್ಮಕ ಆವೃತ್ತಿಯ ಆದಿಪರ್ವವು ಈ ಕೆಳಗಿನ ಕರಡುಪ್ರತಿ (manuscripts) ಗಳನ್ನು ಆಧರಿಸಿವೆ:

ಉತ್ತರಭಾರತೀಯ ಪಾಠಗಳು

ಉತ್ತರ-ಪಶ್ಚಿಮ ಗುಂಪು

ಶಾರದಾ ಅಥವಾ ಕಾಶ್ಮೀರೀ ಪಾಠ (ಎಸ್)

  1. ಎಸ್1: ಪೂನಾ, ಬೋಂಬೇ ಸರ್ಕಾರದ ಸಂಗ್ರಹ, ಸಂಖ್ಯೆ 159, 1875-76

ಶಾರದಾ/ಕಾಶ್ಮೀರೀ ಪಾಠಗಳ ದೇವನಾಗರೀ ಗುಂಪು (ಕೆ.)

  1. ಕೆ0: ಪೂನಾ, ಬೋಂಬೇ ಸರ್ಕಾರದ ಸಂಗ್ರಹ, ನಂ. 229, 1895-1902, ವಿಕ್ರಮ ಸಂವತ್ 1795 (ಕ್ರಿಸ್ತಶಕ 1739)
  2. ಕೆ1: ಲಂಡನ್, ಇಂಡಿಯಾ ಆಫೀಸ್ ಲೈಬ್ರರಿ, ನಂ. 3226 (2137)
  3. ಕೆ2: ಪೂನಾ, ಬೋಂಬೇ ಸರ್ಕಾರದ ಸಂಗ್ರಹ, ನಂ.182, 1891-95, ವಿಕ್ರಮ ಸಂವತ್ 1694 (ಕ್ರಿಸ್ತಶಕ 1638)
  4. ಕೆ3: ಬರೋಡಾ, ಓರಿಯೆಂಟಲ್ ಇನ್ಸ್ಟಿಟ್ಯೂಟ್ ಲೈಬ್ರರಿ, ನಂ. 632, ವಿಕ್ರಮ ಸಂವತ್ 1575 (ಕ್ರಿಸ್ತಶಕ 1519)
  5. ಕೆ4: ಪೂನಾ, ಬೋಂಬೇ ಸರ್ಕಾರದ ಸಂಗ್ರಹ ನಂ.165, 1882-83, ಶಕ 1616 (ಕ್ರಿಸ್ತಶಕ 1694)
  6. ಕೆ5: ಲಾಹೋರ್, ದಯಾನಂದ ಆಂಗ್ಲೋ-ವೇದಿಕ್ ಕಾಲೇಜ್, ನಂ. 1
  7. ಕೆ6: ಪೂನಾ, ಬೋಂಬೇ ಸರ್ಕಾರದ ಸಂಗ್ರಹ, ನಂ.209, 1887-91

ಮಧ್ಯಭಾರತದ ಗುಂಪು

ನೇಪಾಲೀ ಪಾಠ (ಎನ್)

  1. ಎನ್1: ನೇಪಾಲ, ವೈಯಕ್ತಿಕ ಸಂಗ್ರಹ
  2. ಎನ್2: ನೇಪಾಲ, ವೈಯಕ್ತಿಕ ಸಂಗ್ರಹ
  3. ಏನ್3: ನೇಪಾಲ, ವೈಯಕ್ತಿಕ ಸಂಗ್ರಹ, ನೇಪಾಲೀ ಸಂವತ್ 411 (ಕ್ರಿಸ್ತಶಕ 1511)

ಮೈಥಿಲೀ ಪಾಠ (ವಿ)

  1. ವಿ1: ನೇಪಾಲ, ದರ್ಬಾರ್ ಲೈಬ್ರರಿ, ನಂ. 1364, ಲಕ್ಷ್ಮಣ ಸಂವತ್ 411 (ಕ್ರಿಸ್ತಶಕ 1528)

ಬಂಗಾಲೀ ಪಾಠ (ಬಿ)

  1. ಬಿ1: ಶಾಂತಿನಿಕೇತನ, ವಿಶ್ವಭಾರತೀ ಲೈಬ್ರರಿ, ನಂ. 1, ಶಕ 1662 (ಕ್ರಿಸ್ತಶಕ 1740)
  2. ಬಿ2: ಶಾಂತಿನಿಕೇತನ, ವಿಶ್ವಭಾರತೀ ಲೈಬ್ರರಿ, ನಂ. 258
  3. ಬಿ3: ಶಾಂತಿನಿಕೇತನ, ವಿಶ್ವಭಾರತೀ ಲೈಬ್ರರಿ, ನಂ. 782, ಶಕ 1681 (ಕ್ರಿಸ್ತಶಕ 1759)
  4. ಬಿ4: ಶಾಂತಿನಿಕೇತನ, ವಿಶ್ವಭಾರತೀ ಲೈಬ್ರರಿ, ನಂ 413
  5. ಬಿ5: ಡಾಕ್ಕಾ, ಯೂನಿವರ್ಸಿಟಿ ಲೈಬ್ರರಿ, ನಂ. 485, ಶಕ 1708 (ಕ್ರಿಸ್ತಶಕ 1786)
  6. ಬಿ6: ಡಾಕ್ಕಾ, ಯೂನಿವರ್ಸಿಟಿ ಲೈಬ್ರರಿ, ನಂ. 735

ಕೆ ಗುಂಪಿನ ಹೊರತಾದ ಇತರ ದೇವನಾಗರೀ ಪಾಠ (ಡಿ) ಅರ್ಜುನಮಿಶ್ರನ ದೇವನಾಗರೀ ಪಾಠ (ಡಿಎ)

  1. ಡಿಎ1: ಪೂನಾ, ಬೋಂಬೇ ಸರ್ಕಾರದ ಸಂಗ್ರಹ, ನಂ. 30(ಎ), 1879-80
  2. ಡಿಎ2: ಪೂನಾ, ಬೋಂಬೇ ಸರ್ಕಾರದ ಸಂಗ್ರಹ, ವಿಶ್ರಾಂಬಾಗ್ 1, ನಂ. 468, ವಿಕ್ರಮ್ ಸಂವತ್ 1676 (ಕ್ರಿಸ್ತಶಕ 1620)

ನೀಲಕಂಠನ ದೇವನಾಗರೀ ಪಾಠ (ಡಿ-ಎನ್)

  1. ಡಿಎನ್1: ಇಂದೋರಿನ ಸರ್ದಾರ್ ಎಂ. ವಿ, ಕಿಬೆ ಸಂಗ್ರಹ
  2. ಡಿಎನ್2: ಮೈಸೂರು, ಓರಿಯೆಂಟಲ್ ಲೈಬ್ರರಿ, ನಂ. 1034, ವಿಕ್ರಮ್ ಸಂವತ್ 1864 (ಕ್ರಿಸ್ತಶಕ 1808)
  3. ಡಿಎನ್3: ಪೂನಾ, ಬೋಂಬೇ ಸರ್ಕಾರದ ಸಂಗ್ರಹ, ನಂ. 234, 1895-1902)

ರತ್ನಗರ್ಭನ ದೇವನಾಗರೀ ಪಾಠ (ಡಿಆರ್)

  1. ಡಿಆರ್1: ತಾಂಜಾವೂರ್, ಸರಸ್ವತಿ ಮಹಲ್ ಲೈಬ್ರರಿ, ನಂ. 1246
  2. ಡಿಆರ್2: ತಾಂಜಾವೂರ್, ಸರಸ್ವತಿ ಮಹಲ್ ಲೈಬ್ರರಿ, ನಂ. 1199
  3. ಡಿಆರ್3: ತಾಂಜಾವೂರ್, ಸರಸ್ವತಿ ಮಹಲ್ ಲೈಬ್ರರಿ, ನಂ. 1313, ಶಕ 1623 (ಕ್ರಿಸ್ತಶಕ 1701)
  4. ಡಿ-ಆರ್-4: ತಾಂಜಾವೂರ್, ಸರಸ್ವತಿ ಮಹಲ್ ಲೈಬ್ರರಿ, ನಂ. 1339

ದೇವನಾಗರೀ ಸಂಕಲಿತ ಪಾಠಗಳು

  1. ಡಿ1: ಪೂನಾ, ಬೋಂಬೇ ಸರ್ಕಾರದ ಸಂಗ್ರಹ, ನಂ. 29(ಎ), 1879-80)
  2. ಡಿ2: ತಾಂಜಾವೂರ್, ಸರಸ್ವತಿ ಮಹಲ್ ಲೈಬ್ರರಿ, ನಂ. 1152, ವಿಕ್ರಮ್ ಸಂವತ್ 1654 (ಕ್ರಿಸ್ತಶಕ 1598)
  3. ಡಿ3: ತಾಂಜಾವೂರ್, ಸರಸ್ವತಿ ಮಹಲ್ ಲೈಬ್ರರಿ, ನಂ.1360
  4. ಡಿ4: ತಾಂಜಾವೂರ್, ಸರಸ್ವತಿ ಮಹಲ್ ಲೈಬ್ರರಿ, ನಂ. 1126
  5. ಡಿ5: ಲಾಹೋರ್, ದಯಾನಂದ ಆಂಗ್ಲೋ-ವೇದಿಕ್ ಕಾಲೇಜ್, ನಂ. 4, ವಿಕ್ರಮ್ ಸಂವತ್ 1858 (ಕ್ರಿಸ್ತಶಕ 1802)
  6. ಡಿ6: ತಾಂಜಾವೂರ್, ಸರಸ್ವತಿ ಮಹಲ್ ಲೈಬ್ರರಿ, ನಂ. 1223
  7. ಡಿ7: ತಾಂಜಾವೂರ್, ಸರಸ್ವತಿ ಮಹಲ್ ಲೈಬ್ರರಿ, ನಂ. 1269
  8. ಡಿ8: ತಾಂಜಾವೂರ್, ಸರಸ್ವತಿ ಮಹಲ್ ಲೈಬ್ರರಿ, ನಂ. 1329
  9. ಡಿ9: ತಾಂಜಾವೂರ್, ಸರಸ್ವತಿ ಮಹಲ್ ಲೈಬ್ರರಿ, ನಂ. 1176
  10. ಡಿ10: ತಾಂಜಾವೂರ್, ಸರಸ್ವತಿ ಮಹಲ್ ಲೈಬ್ರರಿ, ನಂ. 1293
  11. ಡಿ11: ತಾಂಜಾವೂರ್, ಸರಸ್ವತಿ ಮಹಲ್ ಲೈಬ್ರರಿ, ನಂ. 1340
  12. ಡಿ12: ತಾಂಜಾವೂರ್, ಸರಸ್ವತಿ ಮಹಲ್ ಲೈಬ್ರರಿ, ನಂ. 1373
  13. ಡಿ13: ಪೂನಾ, ಬೋಂಬೇ ಸರ್ಕಾರದ ಸಂಗ್ರಹ, ವಿಶ್ರಾಂಬಾಗ್ 2, ನಂ. 191
  14. ಡಿ-14: ಪೂನಾ, ಬೋಂಬೇ ಸರ್ಕಾರದ ಸಂಗ್ರಹ, ವಿಶ್ರಾಂಬಾಗ್ 2, ನಂ. 266

ದಕ್ಷಿಣಭಾರತೀಯ ಪಾಠಗಳು

ತೆಲುಗು ಪಾಠ (ಟಿ)

  1. ಟಿ1: ಮೇಲುಕೋಟೆ, ಯದುಗಿರಿ ಯತಿರಾಜ ಮಠ ಲೈಬ್ರರಿ
  2. ಟಿ2: ತಾಂಜಾವೂರ್ ಸರಸ್ವತಿ ಮಹಲ್ ಲೈಬ್ರರಿ, ನಂ. 11865
  3. ಟಿ3: ತಾಂಜಾವೂರ್ ಸರಸ್ವತಿ ಮಹಲ್ ಲೈಬ್ರರಿ, ನಂ. 11809

ಗ್ರಂಥ ಪಾಠ (ಜಿ)

  1. ಜಿ1: ಮೇಲುಕೋಟೆ, ಯದುಗಿರಿ ಯತಿರಾಜ ಮಠ ಲೈಬ್ರರಿ
  2. ಜಿ2: ಮೇಲುಕೋಟೆ, ಯದುಗಿರಿ ಯತಿರಾಜ ಮಠ ಲೈಬ್ರರಿ
  3. ಜಿ3: ತಾಂಜಾವೂರ್ ಸರಸ್ವತಿ ಮಹಲ್ ಲೈಬ್ರರಿ, ನಂ. 11823
  4. ಜಿ4: ತಾಂಜಾವೂರ್ ಸರಸ್ವತಿ ಮಹಲ್ ಲೈಬ್ರರಿ, ನಂ. 11838
  5. ಜಿ5: ತಾಂಜಾವೂರ್ ಸರಸ್ವತಿ ಮಹಲ್ ಲೈಬ್ರರಿ, ನಂ. 11851
  6. ಜಿ6: ತಾಂಜಾವೂರ್ ಸರಸ್ವತಿ ಮಹಲ್ ಲೈಬ್ರರಿ, ನಂ. 11860
  7. ಜಿ7: ಮೇಲುಕೋಟೆ, ಯದುಗಿರಿ ಯತಿರಾಜ ಮಠ ಲೈಬ್ರರಿ

ಮಲಯಾಳಂ ಪಾಠ (ಎಂ)

  1. ಎಂ1: ಇದಪ್ಪಲ್ಲಿಯ ಮುಖ್ಯಸ್ಥ, ಕೊಚಿನ್
  2. ಎಂ2: ಕೊಚಿನ್, ರಾಜ್ಯ ಲೈಬ್ರರಿ, ನಂ. 5
  3. ಎಂ3: ಕೊಚಿನ್, ರಾಜ್ಯ ಲೈಬ್ರರಿ, ನಂ. 1, ಕೊಲ್ಲಂ 1013 (ಕ್ರಿಸ್ತಶಕ 1838)
  4. ಎಂ4: ಕೊಚಿನ್ನಿನ ಕಲ್ಲೆಂಕರ ಪಿಶಾರಾಂ
  5. ಎಂ5: ಕೊಚಿನ್ನಿ (ಜಯಂತಮಂಗಲಂ) ನ ಪಲಿಯಂ ಕುಟುಂಬ
  6. ಎಂ6: ಮಲಬಾರ್ (ನರೇರಿ ಮನ); ವೈಯಕ್ತಿಕ ಸಂಗ್ರಹ
  7. ಎಂ7: ಕೊಚಿನ್ (ಅವನಪ್ಪರಂಬು ಮನ); ವೈಯಕ್ತಿಕ ಸಂಗ್ರಹ
  8. ಎಂ8: ಮಲಬಾರ್ ಪೂಮುಲ್ಲಿ ಮನ ಲೈಬ್ರರಿ ನಂ. 297, ಕೊಲ್ಲಂ 1017 (ಕ್ರಿಸ್ತಶಕ 1842)

 

ಆದಿಪರ್ವದ ವಿಮರ್ಶಾತ್ಮಕ ಆವೃತ್ತಿಯಲ್ಲಿ ಸೇರಿಸದೇ ಇರುವ ಅಧಿಕ ಪಾಠಗಳನ್ನು ಅವು ಯಾವ ಕರಡುಪ್ರತಿ (manuscript) ಗಳಲ್ಲಿ ಕಂಡುಬರುತ್ತವೆ ಎನ್ನುವುದರೊಡನೆ ಸಂಪೂರ್ಣವಾಗಿ ವಿಮರ್ಶಾತ್ಮಕ ಆವೃತ್ತಿಯ ಸಂಪಾದನೆಯಲ್ಲಿ [The Mahabharta, Vishnu S Sukthankar, Volume 1, Bhandarkar Oriental Research Institute, Poona, 1933, Appendix I] ನೀಡಿದ್ದಾರೆ. ಈ ಅಧಿಕ ಪಾಠಗಳನ್ನು ನನ್ನ ಅನುವಾದದಲ್ಲಿಯೂ ಕರಡುಪ್ರತಿಗಳ ಉಲ್ಲೇಖಗಳೊಂದಿಗೆ ಅಡಿಟಿಪ್ಪಣಿಗಳ ರೂಪದಲ್ಲಿ ಕೊಟ್ಟಿದ್ದೇನೆ. ದೀರ್ಘವಾದ ಅಧಿಕ ಪಾಠಗಳನ್ನು ಅನುಬಂಧದಲ್ಲಿ ಕೊಟ್ಟಿದ್ದೇನೆ.

ವಿಮರ್ಶಾತ್ಮಕ ಆವೃತ್ತಿಯ ಪ್ರಕಾರ ಆದಿಪರ್ವದಲ್ಲಿ 7,190 ಶ್ಲೋಕಗಳ-ನ್ನೊಳಗೊಂಡಿರುವ 225 ಅಧ್ಯಾಯಗಳಿವೆ. ಶ್ಲೋಕಸಂಖ್ಯೆಗಳ ಅಧಿಕತ್ವದಲ್ಲಿ ಇದು ಮಹಾಭಾರತದ 18 ಪರ್ವಗಳಲ್ಲಿ ನಾಲ್ಕನೇ ಸ್ಥಾನವನ್ನು ಪಡೆಯುತ್ತದೆ. ನೀಲಕಂಠ ಪಾಠದ ಪ್ರಕಾರ ಈ ಪರ್ವದಲ್ಲಿ 234 ಅಧ್ಯಾಯಗಳೂ 8,466 ಶ್ಲೋಕಗಳೂ ಇವೆ. ಕುಂಭಕೋಣ ಪಾಠದಲ್ಲಿ ಇವಕ್ಕೂ ಹೆಚ್ಚು ಅಧ್ಯಾಯಗಳು (260) ಮತ್ತು ಶ್ಲೋಕಗಳಿವೆ (10,880).

ಔತ್ತರೀಯ ಮತ್ತು ದಕ್ಷಿಣಾತ್ಯಪಾಠಗಳಲ್ಲಿರುವ ಭೇದಗಳನ್ನು ಆದಿಪರ್ವದ ವಿಮರ್ಶಾತ್ಮಕ ಆವೃತ್ತಿಯ ಸಂಪಾದಕರು ಅದರ ಪೀಠಿಕೆಯಲ್ಲಿ ವಿವರ-ವಾಗಿ ಕೊಟ್ಟಿದ್ದಾರೆ.[1] ಅದನ್ನೇ ಇಲ್ಲಿ ಸ್ವಲ್ಪಮಟ್ಟಿಗೆ ಸಂಗ್ರಹಿಸಿ ಕೊಟ್ಟಿದ್ದೇನೆ. ಈ ಎರಡೂ ಪಾಠಗಳಲ್ಲಿ ಮೊಟ್ಟಮೊದಲನೆಯದಾಗಿ ಲಿಪಿಗಳ ಅಡಚಣೆ-ಯಿದೆ. ಉತ್ತರ ಭಾರತದವರಿಗೆ ದಕ್ಷಿಣಭಾರತದ ಭಾಷೆಗಳಲ್ಲಿನ ಕೃತಿಗಳು ಅಸಾಧ್ಯಗಳಾದರೆ ದಕ್ಷಿಣ ಭಾರತದ ಕೆಲವು ಪಂಡಿತರನ್ನು ಬಿಟ್ಟರೆ ಮತ್ತು ದೇವನಾಗರೀ ಲಿಪಿಯ ಕೃತಿಗಳನ್ನು ಬಿಟ್ಟರೆ ಹೆಚ್ಚಿನವರಿಗೆ ಉತ್ತರಭಾರ-ತದ ಕೃತಿಗಳು ಅಸಾಧ್ಯವಾದವುಗಳು. ಆದರೆ ಈ ಮೂಲಭೂತ ಅಡಚಣೆಯನ್ನು ಹೋಗಲಾಡಿಸಿಕೊಂಡರೆ ಎರಡೂ ಪಾಠಪದ್ಧತಿಗಳಲ್ಲಿ ಅಗಾಧವಾದ ಭೇದವಿರುವುದು ಕಂಡುಬರುತ್ತದೆ. ಈ ಭೇದವು ಮಹಾಭಾರತದಲ್ಲಿ ಎಷ್ಟು ಪರ್ವಗಳಿವೆ ಎನ್ನುವುದರಿಂದಲೇ ಪ್ರಾರಂಭವಾಗುತ್ತದೆ. ಮಹಾಭಾರತದಲ್ಲಿ 18 ಪರ್ವಗಳಿವೆಯೆನ್ನುವುದು ಸಾಮಾನ್ಯವಾಗಿ ಒಪ್ಪಿಕೊಂಡಿರುವ ವಿಷಯವಾದರೆ ದಕ್ಷಿಣಾತ್ಯ ಪಾಠಗಳಲ್ಲಿ ಪರ್ವಸಂಖ್ಯೆ 24 ಎಂದಿದೆ! ದಕ್ಷಿಣಾತ್ಯ ಕರಡುಪ್ರತಿಗಳಲ್ಲಿ ಆದಿಪರ್ವವನ್ನೇ ಮೂರು ಪರ್ವಗಳನ್ನಾಗಿ (ಆದಿ, ಆಸ್ತೀಕ ಮತ್ತು ಸಂಭವ) ಅಥವಾ ಎರಡು ಪರ್ವಗಳನ್ನಾಗಿ (ಆದಿ ಮತ್ತು ಸಂಭವ), ಉಪಪರ್ವಗಳನ್ನಾಗಿ ಅಲ್ಲ, ವಿಭಜಿಸಿರುವುದು ಕಂಡುಬರುತ್ತದೆ. ಔತ್ತರೀಯ ಪದ್ಧತಿಗಳನ್ನಾಧರಿಸಿದ ಕರಡುಪ್ರತಿಗಳಲ್ಲಿ ಪ್ರತಿಯೊಂದು ಅಧ್ಯಾಯದ ಕೊನೆಗೆ ಅದು ಯಾವ ಉಪಪರ್ವಕ್ಕೆ ಸೇರಿದ್ದುದು ಎಂದು ಕಂಡುಬರುತ್ತದೆ. ಆದರೆ ದಕ್ಷಿಣಾತ್ಯ ಪದ್ಧತಿಗಳನ್ನಾಧರಿಸಿದ ಕರಡುಪ್ರತಿಗಳಲ್ಲಿ ಈ ವಿವರಣೆಯು ದೊರಕುವುದಿಲ್ಲ. ಆದುದರಿಂದ ಕೇವಲ ದಕ್ಷಿಣಾತ್ಯಪಾಠವನ್ನು ಆಧರಿಸಿದ ಮಹಾಭಾರತದಲ್ಲಿ, ಪರ್ವಸಂಗ್ರಹದಲ್ಲಿರುವ ಮಾಹಿತಿಯನ್ನು ಬಿಟ್ಟರೆ, ಬೇರೆ ಯಾವ ವಿಧದಿಂದಲೂ ಎಷ್ಟು ಉಪಪರ್ವಗಳಿವೆ ಎನ್ನುವುದನ್ನು ತಿಳಿಯಲು ಸಾಧ್ಯವಾಗುವುದಿಲ್ಲ. ಪಿ.ಪಿ.ಎಸ್. ಶಾಸ್ತ್ರಿಯವರ ದಕ್ಷಿಣಾತ್ಯ ಪಾಠವೆಂದು ಮುದ್ರಿತವಾಗಿರುವ ಮಹಾಭಾರತದಲ್ಲಿ 18 ಪರ್ವಗಳನ್ನೇ ಕೊಟ್ಟಿದ್ದರೂ, ಅದು ಯಾವ ಕರಡುಪ್ರತಿಗಳನ್ನು ಆಧರಿಸಿವೆಯೋ ಅವುಗಳಲ್ಲಿ 24 ಪರ್ವಗಳ ಸೂಚನೆಯಿದೆ.

 ಎರಡೂ ಪಾಠಗಳಲ್ಲಿ ಸ್ವರಗಳ ವ್ಯತ್ಯಾಸಗಳೂ ಕಂಡುಬರುತ್ತವೆ: ಉದಾಹರಣೆಗೆ ಉತ್ತರೀಯ ಪಾಠಗಳಲ್ಲಿ ವ್ರೀಡಾ ಎಂದಿದ್ದರೆ ದಕ್ಷಿಣಾತ್ಯ ಪಾಠಗಳಲ್ಲಿ ವ್ರೀಲಾ ಅಥವಾ ವ್ರೀಳಾ ಎಂದಿದೆ. ನೈಮಿಷ ಎಂದು ಉತ್ತರೀಯ ಪಾಠಗಳಲ್ಲಿದ್ದರೆ ದಕ್ಷಿಣಾತ್ಯ ಪಾಠಗಳಲ್ಲಿ ನೈಮಿಶ ಎಂದಿದೆ. ಹಾಗೆಯೇ ರೋಮಹರ್ಷಣಕ್ಕೆ ಲೋಮಹರ್ಷಣ, ಇಲಿಲಕ್ಕೆ ಇಲಿನ, ಮೊದಲಾದವುಗಳು.

 ಇನ್ನೊಂದು ಗಮನಾರ್ಹ ವ್ಯತ್ಯಾಸವೆಂದರೆ ದಕ್ಷಿಣಾತ್ಯಪಾಠದ ಆದಿಪರ್ವವು ಉತ್ತರೀಯ ಪಾಠಕ್ಕಿಂತ ತುಂಬಾ ದೊಡ್ಡದು. ವಿಮರ್ಶಾತ್ಮಕ ಆವೃತ್ತಿಯ ಸಂಪಾದಕರ ಪ್ರಕಾರ ಸುಮಾರು 1300 ರಿಂದ 1500 ಅಧಿಕ ಶ್ಲೋಕಗಳು ದಕ್ಷಿಣಾತ್ಯಪಾಠಗಳಲ್ಲಿ ಸೇರಿರಬಹುದು. ದಕ್ಷಿಣಾತ್ಯಪಾಠಗಳಲ್ಲಿ ಕಂಡುಬಂದಿರುವ, ಮತ್ತು ವಿಮರ್ಶಾತ್ಮಕ ಆವೃತ್ತಿಯಲ್ಲಿ ಸೇರಿಸದೇ ಇರುವ ಅಧಿಕ ಶ್ಲೋಕಗಳು ಮುಖ್ಯವಾಗಿ ಈ ಕೆಳಗಿನ ವಿಷಯಗಳ ಕುರಿತಾಗಿವೆ:

  1. ಬ್ರಹ್ಮನ ಸೂಚನೆಯಂತೆ ವ್ಯಾಸನು ಗಣೇಶನನ್ನು ಸ್ಮರಿಸಿಕೊಂಡು ಅವನಿಂದ ಮಹಾಭಾರತವನ್ನು ಬರೆಯಿಸಿದುದು (39 ಶ್ಲೋಕಗಳು)
  2. ಸಮುದ್ರಮಥನದ ಸಂದರ್ಭದಲ್ಲಿ ಶಿವನು ಹಾಲಾಹಲ ವಿಷವನ್ನು ಕುಡಿದುದು (9 ಶ್ಲೋಕಗಳು)
  3. ಶಕುಂತಲೋಪಾಖ್ಯಾನದಲ್ಲಿ ಸೇರಿಸಿರುವ ವಿಷಯಗಳು (115 ಶ್ಲೋಕಗಳು)
  4. ಯಯಾತ್ಯುಪಾಖ್ಯಾನದಲ್ಲಿ ಉತ್ತರ ಯಯಾತಿಯಲ್ಲಿ ಮಾಧವಿಯು ಬರುವ ವಿಷಯ (21 ಶ್ಲೋಕಗಳು)
  5. ಕಾಶೀ ರಾಜಕುಮಾರೀ ಅಂಬೆಯ ಕಥೆ (62 ಶ್ಲೋಕಗಳು)
  6. ಸೂರ್ಯನು ಕುಂತಿಯನ್ನು ಕೂಡಲು ಕೇಳಿಕೊಂಡಿದುದು (10 ಶ್ಲೋಕಗಳು)
  7. ಹಿಮಾಲಯದಲ್ಲಿ ಪಾಂಡವರ ಬಾಲ್ಯದ ಕುರಿತಾದ ವಿಷಯಗಳು (23 ಶ್ಲೋಕಗಳು)
  8. ಪಾಂಡುವಿನ ಮರಣ ಮತ್ತು ಅಂತ್ಯಸಂಸ್ಕಾರ (61 ಶ್ಲೋಕಗಳು)
  9. ಕುರು-ಪಾಂಚಾಲರ ಯುದ್ಧ ಮತ್ತು ದ್ರುಪದನ ಸೆರೆಯ ವರ್ಣನೆ (59 ಶ್ಲೋಕಗಳು)
  10. ದ್ರೌಪದಿ-ಧೃಷ್ಟದ್ಯುಮ್ನರ ಜನ್ಮದ ಕಥೆಯಲ್ಲಿ ದ್ರುಪದನ ಜನ್ಮದ ವರ್ಣನೆ (97 ಶ್ಲೋಕಗಳು)
  11. ಹಿಡಿಂಬವಧೆಯ ವಿಷಯದಲ್ಲಿ ಅಧಿಕ ಶ್ಲೋಕಗಳು (34 ಶ್ಲೋಕಗಳು)
  12. ಬಕವಧೆಯ ವಿಷಯದಲ್ಲಿ ಅಧಿಕ ಶ್ಲೋಕಗಳು (53 ಶ್ಲೋಕಗಳು)
  13. ಅರಗಿನ ಮನೆಯಲ್ಲಿ ಪಾಂಡವರು ನಾಶರಾದರೆಂದು ತಿಳಿದು ದ್ರುಪದನು ಶೋಕಿಸುವುದು, ಅವನ ಪುರೋಹಿತನು ಸಲಹೆ ನೀಡಲು, ದ್ರೌಪದಿಯ ಸ್ವಯಂವರವನ್ನು ಏರ್ಪಡಿಸಿ ಅಲ್ಲಿಗೆ ಪಾಂಡವರು ಕಾಣಿಸಿಕೊಳ್ಳಬಹುದೆಂದು ಆಶಿಸುವುದು (37 ಶ್ಲೋಕಗಳು)
  14. ಒಂದೇ ಸ್ತ್ರೀಯು ಅನೇಕ ಪುರುಷರನ್ನು ವಿವಾಹವಾಗಬಹುದೆಂದು ಹೇಳುವಾಗ ವ್ಯಾಸನು ದ್ರುಪದನಿಗೆ ನಾಲಾಯನಿಯ ಕಥೆಯನ್ನು ಹೇಳಿದುದು (59 ಶ್ಲೋಕಗಳು)
  15. ಅದೇ ಸಂದರ್ಭದಲ್ಲಿ ಭೌಮಾಶ್ವೀಯ ಕಥೆಯನ್ನು ಹೇಳಿದುದು (11 ಶ್ಲೋಕಗಳು)
  16. ಪಾಂಚಾಲರ ಸಹಾಯದೊಂದಿಗೆ ಕೌರವ-ಪಾಂಡವರ ನಡುವೆ ಹುಸಿ ಯುದ್ಧ (109 ಶ್ಲೋಕಗಳು)
  17. ಪಾಂಡವರನ್ನು ಇಂದ್ರಪ್ರಸ್ಥಕ್ಕೆ ಕಳುಹಿಸುವ ಮೊದಲು ಧೃತರಾಷ್ಟ್ರನು ಯುಧಿಷ್ಠಿರನನ್ನು ರಾಜನನ್ನಾಗಿ ಅಭಿಷೇಕಿಸಿದ್ದುದು (29 ಶ್ಲೋಕಗಳು)
  18. ಯುಧಿಷ್ಠಿರನನ್ನು ಕಾಣಲು ಬಂದ ನಾರದನ ವರ್ಣನೆ (27 ಶ್ಲೋಕಗಳು)
  19. ಸುಭದ್ರಾಹರಣ ಪ್ರಸಂಗದ ವಿಸ್ತಾರ (281 ಶ್ಲೋಕಗಳು)
  20. ವನವಾಸದಿಂದ ಹಿಂದಿರುಗಿದ ಅರ್ಜುನನ ಸ್ವಾಗತ (29 ಶ್ಲೋಕಗಳು)
  21. ಖಾಂಡವದಾಹ ಪರ್ವದಲ್ಲಿ ಅಗ್ನಿಯ ಅಜೀರ್ಣದ ಕಾರಣವನ್ನು ತಿಳಿಸುವ ರಾಜಾ ಶ್ವೇತಕಿಯ ಕಥೆ

ಈ ಪ್ರಸಂಗಗಳೇ ಸುಮಾರು 1,125 ಶ್ಲೋಕಗಳನ್ನು ಒಳಗೊಂಡಿವೆ.

ಪುಣೆಯ ವಿಮರ್ಶಾತ್ಮಕ ಆವೃತ್ತಿಯ ಪ್ರಕಾರ ಮಹಾಭಾರತದ 100 ಉಪಪರ್ವಗಳಲ್ಲಿನ 19 ಉಪಪರ್ವಗಳು ಆದಿಪರ್ವದಲ್ಲಿವೆ. ಮಹಾಭಾರತದ ಕಥಾನುಬಂಧವು ಆರನೆಯದಾದ ಆದಿವಂಶಾವತರಣಪರ್ವದಲ್ಲಿ ಪ್ರಾರಂಭವಾಗುತ್ತದೆಯಾದರೂ ಮೊದಲ ಐದು ಉಪಪರ್ವಗಳಲ್ಲಿ ಕಥಾಪ್ರವೇಶಕ್ಕೆ ಅಣಿವುಮಾಡಿಕೊಡಲು ಜನಮೇಜಯನ ಸರ್ಪಸತ್ರದ ಸವಿಸ್ತಾರ ಹಿನ್ನಲೆಯು ನೈಮಿಷಾರಣ್ಯದಲ್ಲಿ ಸೂತ ಉಗ್ರಶ್ರವ ಮತ್ತು ಶೌನಕಾದಿ ಮುನಿಗಳ ಸಂವಾದರೂಪದಲ್ಲಿ ಬರುತ್ತದೆ.

ವಿಮರ್ಶಾತ್ಮಕ ಆವೃತ್ತಿಯ ಪ್ರಕಾರ ಆದಿಪರ್ವದಲ್ಲಿರುವ ಉಪಪರ್ವಗಳು ಮತ್ತು ಅವುಗಳ ಅಧ್ಯಾಯ-ಶ್ಲೋಕಸಂಖ್ಯೆಗಳು
ಉಪಪರ್ವ ಅಧ್ಯಾಯ ಕ್ರಮ-ಸಂಖ್ಯೆ ಒಟ್ಟು ಅಧ್ಯಾಯ-ಗಳು ಒಟ್ಟು ಶ್ಲೋಕ-ಗಳು
1.    ಅನುಕ್ರಮಣೀಪರ್ವ 1 1 210
2.    ಪರ್ವಸಂಗ್ರಹಪರ್ವ 2 1 243
3.    ಪೌಷ್ಯಪರ್ವ 3 1 195
4.    ಪೌಲೋಮಪರ್ವ 4-12 9 150
5.    ಆಸ್ತೀಕಪರ್ವ 13-53 41 1,025
6.    ಆದಿವಂಶಾವತರಣಪರ್ವ 54-61 8 482
7.    ಸಂಭವಪರ್ವ 62-123 62 2,169
8.    ಜತುಗೃಹದಾಹಪರ್ವ 124-138 15 373
9.    ಹಿಡಿಂಬವಧಪರ್ವ 139-144 6 169
10.  ಬಕವಧಪರ್ವ 145-152 8 206
11.   ಚೈತ್ರರಥಪರ್ವ 153-174 22 566
12.  ಸ್ವಯಂವರಪರ್ವ 175-184 10 223
13.   ವೈವಾಹಿಕಪರ್ವ 185-191 7 183
14.  ವಿದುರಾಗಮನಪರ್ವ 192-198 7 174
15.  ರಾಜ್ಯಲಂಭಪರ್ವ 199 1 50
16.  ಅರ್ಜುನವನವಾಸಪರ್ವ 200-210 11 295
17.  ಸುಭದ್ರಾಹರಣಪರ್ವ 211-212 2 57
18.   ಹರಣಹಾರಿಕಪರ್ವ 213 1 82
19.   ಖಾಂಡವದಾಹಪರ್ವ 214-225 12 338
ಒಟ್ಟು 225 225 7,190

 

ಹೆಸರೇ ಸೂಚಿಸುವಂತೆ ಆದಿಪರ್ವವು ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಮೊದಲನೆಯದು. “ಆದಿ” ಎಂದರೆ “ಪ್ರಾರಂಭ” ಅಥವಾ “ಮೊದಲನೆಯದು” ಎಂದರ್ಥ.

ಅನುಕ್ರಮಣೀಪರ್ವವು ನೈಮಿಷಾರಣ್ಯಕ್ಕೆ ಸೂತ ಪೌರಾಣಿಕ ಉಗ್ರಶ್ರವನ ಆಗಮನದಿಂದ ಪ್ರಾರಂಭವಾಗುತ್ತದೆ. ಅಲ್ಲಿಯ ಋಷಿಗಳು ಮಹಾಭಾರತ ಕಥೆಯನ್ನು ಕೇಳ ಬಯಸಲು ಉಗ್ರಶ್ರವನು ಮಂಗಲಾಚರಣೆಯನ್ನು ಮಾಡಿ ಮಹಾಭಾರತದ ಘನತೆಯ ಕಿರುಪರಿಚಯವನ್ನು ನೀಡುತ್ತಾನೆ. ಇಲ್ಲಿ ಉಗ್ರಶ್ರವನು ಸೃಷ್ಟಿ ವಿಚಾರ ಮತ್ತು ಕಾಲನ ಮಹತ್ವವನ್ನು ವರ್ಣಿಸಿ ಮಹಾಭಾರತದ ರಚನೆ ಮತ್ತು ಉಪದೇಶಗಳ ಕುರಿತು ಹೇಳಿ ಕಥೆಯ ಕಿರು ಸಾರಾಂಶವನ್ನು ನೀಡುತ್ತಾನೆ. ಯುದ್ಧಾನಂತರದಲ್ಲಿ ಧೃತರಾಷ್ಟ್ರನು ಸಂಜಯನಿಗೆ ತನ್ನ ದುಃಖವನ್ನು ಹೇಳಿಕೊಳ್ಳುವುದರ ಮತ್ತು ಸಂಜಯನು ಅವನನ್ನು ಸಂತೈಸುವುದರ ಮೂಲಕ ಮಹಾಭಾರತದ ಪ್ರಮುಖ ಪಾತ್ರಗಳು ಮತ್ತು ಘಟನೆಗಳ ಸಾರಾಂಶವು ನಮಗೆ ದೊರೆಯುತ್ತದೆ. ಸೂತ ಉಗ್ರಶ್ರವನಿಂದ ಮಹಾಭಾರತದ ಘನತೆಯ ವರ್ಣನೆಯೊಂದಿಗೆ ಈ ಉಪಪರ್ವವು ಮುಗಿಯುತ್ತದೆ.

ಈ ಅನುಕ್ರಮಣೀಪರ್ವವು ಅತ್ಯಂತ ಮುಖ್ಯವಾದ ಉಪಪರ್ವ. ಮಹಾಭಾರತದ ಮೊದಲನೆಯ ಅಧ್ಯಾಯವಾದ ಈ ಉಪಪರ್ವದಲ್ಲಿ ಮಹಾಭಾರತದ ಅಧ್ಯಯನಕ್ಕೆ ಬೇಕಾಗುವ ಅನೇಕ ಸಿದ್ಧಾಂತಗಳ, ಪಾತ್ರಗಳ, ಮತ್ತು ಘಟನೆಗಳ ಪರಿಚಯದಿಂದ ತುಂಬಿಕೊಂಡಿದೆ. ಒಂದು ಲೆಖ್ಕದಲ್ಲಿ ನೋಡಿದರೆ ಈ ಪರ್ವದಲ್ಲಿರುವ ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ ಮಹಾಭಾರತದ ಅರ್ಥವನ್ನೂ ಸಂಕ್ಷಿಪ್ತವಾಗಿ ಪಡೆದುಕೊಳ್ಳಬಹುದಲ್ಲದೇ ಇಲ್ಲಿ ಅರ್ಥಮಾಡಿಕೊಂಡ ಎಲ್ಲ ವಿಷಯಗಳೂ ಮಹಾಭಾರತದ ಮುಂದಿನ ಉಪಪರ್ವಗಳ ಮತ್ತು ಅಧ್ಯಾಯಗಳ ಅಧ್ಯಯನಕ್ಕೆ ಸಹಾಯಕವಾಗುತ್ತದೆ. ಸೂತನು ಹೇಳುವಂತೆ: “ನನ್ನ ಅಭಿಪ್ರಾಯದಲ್ಲಿ ಶುಚಿಯಾಗಿ ಪರ್ವ ಪರ್ವಗಳಲ್ಲಿ ಈ ಅಧ್ಯಾಯವನ್ನು ಓದಿದರೆ ಇಡೀ ಭಾರತವನ್ನೇ ಓದಿದಹಾಗೆ. ಈ ಅಧ್ಯಾಯವು ಸತ್ಯ-ಅಮೃತಗಳಿಂದ ತುಂಬಿದ ಭಾರತದ ದೇಹವು.”[2]

ಮಹಾಭಾರತ ಕಥೆಯನ್ನು ಯಾರು ಎಲ್ಲಿ ಯಾವಾಗ ಹೇಳಿದರು ಎನ್ನುವ ಸಂದರ್ಭಕ್ಕೆ ಸಂಬಂಧಿಸಿದ ವಿಷಯಗಳನ್ನಲ್ಲದೇ ಈ ಅಧ್ಯಾಯವು ಮುಂದೆ ಮಹಾಭಾರತದಲ್ಲಿ ತುಂಬಿಕೊಂಡಿರುವ, ಮತ್ತೆ ಮತ್ತೆ ಬರುವ ಅನೇಕ ವಿಚಾರಗಳು, ಸಿದ್ಧಾಂತಗಳು ಮತ್ತು ಮೌಲ್ಯಗಳನ್ನು ಹಾಗೂ ಪಾತ್ರಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತದೆ. ಕೆಲವೊಂದು ವಿಚಾರಗಳು ಮುಂದೆ ಮಹಾಭಾರತದಲ್ಲಿಯೇ ವಿಸ್ತೃತಗೊಳ್ಳುತ್ತವೆಯಾದರೂ ಕೆಲವು ವಿಚಾರಗಳು ಸನಾತನಧರ್ಮದ ಇತರ ಕೃತಿಗಳಾದ ವೇದ, ಉಪನಿಷತ್ತು ಮತ್ತು ಪುರಾಣಗಳ ಸಹಾಯವಿಲ್ಲದೇ ಸಂಪೂರ್ಣವಾಗಿ ತಿಳಿದುಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ. ಒಂದೊಂದಾಗಿ ಈ ಸಂದರ್ಭ, ವಿಷಯ ಮತ್ತು ಪಾತ್ರಗಳ ಕುರಿತು ತಿಳಿದುಕೊಳ್ಳಲು ಪ್ರಯತ್ನಿಸೋಣ.

ಮೊದಲನೆಯ ಶ್ಲೋಕದಲ್ಲಿಯೇ ಬರುವ ಮತ್ತು ನಮಗೆ ಮಹಾಭಾರತವನ್ನಿತ್ತ ಈ ಲೋಮಹರ್ಷಣ ಪುತ್ರ ಸೂತ ಪೌರಾಣಿಕ ಉಗ್ರಶ್ರವನು ಯಾರು? ಇವನ ಕುರಿತು ನಮಗೆ ಮಹಾಭಾರತದಲ್ಲಿ ಹೆಚ್ಚು ವಿವರಣೆಗಳು ದೊರೆಯುವುದಿಲ್ಲ. ಇವನ ಕುರಿತು ತಿಳಿಯಬೇಕಾದರೆ ನಮಗೆ ಪುರಾಣಗಳ ಸಹಾಯವು ಬೇಕಾಗುತ್ತದೆ. ಉಗ್ರಶ್ರವನ ತಂದೆ ಲೋಮಹರ್ಷಣನು ಮಹರ್ಷಿ ವ್ಯಾಸನ ಶಿಷ್ಯರಲ್ಲಿ ಒಬ್ಬನಾಗಿದ್ದನು ಮತ್ತು ವ್ಯಾಸನು ಇವನನ್ನು ಇತಿಹಾಸ-ಪುರಾಣಗಳಿಗೆ ಶಿಷ್ಯನನ್ನಾಗಿ ಸ್ವೀಕರಿಸಿದ್ದನು ಮತ್ತು ಪುರಾಣಸಂಹಿತೆಯನ್ನು ಅವನಿಗೆ ನೀಡಿದನು ಎಂದು ನಮಗೆ ವಿಷ್ಣುಪುರಾಣದಲ್ಲಿ ದೊರೆಯುತ್ತದೆ. ಲೋಮಹರ್ಷಣನು ಸುಮಾರು 12 ಪುರಾಣಗಳನ್ನು (ಅಗ್ನಿ, ಬ್ರಹ್ಮ, ಬ್ರಹ್ಮಾಂಡ, ಗರುಡ, ಕೂರ್ಮ, ಲಿಂಗ, ಮತ್ಸ್ಯ, ನಾರದೀಯ, ಪದ್ಮ, ಶಿವ, ವರಾಹ ಮತ್ತು ವಾಯು) ಹೇಳಿದನೆಂದು ತೋರುತ್ತದೆ. ಅವನು ಪುರಾಣಗಳನ್ನು ಹೇಳುತ್ತಿದ್ದಾಗ ಕೇಳುವವರ ಮೈನವಿರೇಳುತ್ತಿದ್ದುದರಿಂದ ಅವನಿಗೆ ಲೋಮಹರ್ಷಣನೆಂಬ ಹೆಸರು ಬಂದಿತು ಎಂದು ಕೂರ್ಮಪುರಾಣವು ಹೇಳುತ್ತದೆ. ಯಾಜ್ಞವಲ್ಕ್ಯನು ಲೋಮಹರ್ಷಣನಿಂದ ಪುರಾಣಗಳನ್ನು ಕಲಿತುಕೊಂಡನು ಎನ್ನುವುದು ಶಾಂತಿಪರ್ವದ 306ನೇ ಅಧ್ಯಾಯದ 21ನೇ ಶ್ಲೋಕದಿಂದ ನಮಗೆ ತಿಳಿಯುತ್ತದೆ. ಉಗ್ರಶ್ರವನು ಲೋಮಹರ್ಷಣನ ಮಗನು. ಪದ್ಮಪುರಾಣದ ಸೃಷ್ಟಿಖಂಡದಲ್ಲಿ ಲೋಮಹರ್ಷಣನು ಉಗ್ರಶ್ರವನಿಗೆ ಪುರಾಣಗಳೆಲ್ಲವನ್ನೂ ತಿಳಿಸಿಕೊಟ್ಟು ಕೇಳಿದವರಿಗೆ ವಿಸ್ತಾರವಾಗಿ ತಿಳಿಸು ಎಂದು ಹೇಳಿದುದರ ವರ್ಣನೆಯಿದೆ. ಮಹಾಭಾರತವನ್ನಲ್ಲದೇ ಉಗ್ರಶ್ರವನು ಭಾಗವತ ಮತ್ತು ಬ್ರಹ್ಮವೈವರ್ತಪುರಾಣಗಳನ್ನೂ ಹೇಳಿದ್ದಾನೆ ಎಂದಿದೆ.

 ಯಾರ ಆಶ್ರಮಕ್ಕೆ ಉಗ್ರಶ್ರವನು ಬಂದನೋ ಆ ಶೌನಕನು ಯಾರು? ಮಹಾಭಾರತವು ನಮಗೆ ಶೌನಕನ ಕುರಿತಾಗಿ ಹೆಚ್ಚಿನ ವಿಷಯವನ್ನು ತಿಳಿಸದಿದ್ದರೂ ಶೌನಕನು ಸಂಸ್ಕೃತ ವ್ಯಾಕರಣಕಾರನು ಮತ್ತು ಋಗ್ವೇದ-ಪ್ರಾತಿಶಾಖ್ಯ, ಬೃಹದ್ದೇವತಾ, ಚರಣ-ವ್ಯೂಹ ಮತ್ತು ಋಗ್ವೇದದ ಆರು ಅನುಕ್ರಮಣಿಗಳನ್ನು ರಚಿಸಿದವನು ಎಂದು ಪುರಾಣಗಳಲ್ಲಿದೆ. ಕಾತ್ಯಾಯನ ಮತ್ತು ಅಶ್ವಲಾಯನರ ಗುರುವೆಂದೂ ಋಗ್ವೇದದ ಬಾಷ್ಕಲ ಮತ್ತು ಶಕಲ  ಶಾಖೆಗಳನ್ನು ಒಂದುಗೂಡಿಸಿದವನೆಂದೂ ಇದೆ. ವಿಷ್ಣು ಪುರಾಣದ ಪ್ರಕಾರ ಶೌನಕನು ಗೃತ್ಸಮದನ ಮಗನು. ಉಗ್ರಶ್ರವನು ಶೌನಕಾದಿ ಮುನಿಗಳಿಗೆ ಭಾಗವತಪುರಾಣವನ್ನೂ ಹೇಳಿದನು ಎಂದಿದೆ. ಶೌನಕನು ಭಾರ್ಗವ ಗೋತ್ರದವನೆಂದೂ ಹೇಳುತ್ತಾರೆ.

ಸೂತ-ಶೌನಕರ ಸಂವಾದ ರೂಪದ ಮಹಾಭಾರತವನ್ನು ನೈಮಿಷಾರಣ್ಯದಲ್ಲಿ ಹೇಳಲಾಯಿತು. ನೈಮಿಷಾರಣ್ಯವು ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖವಾಗಿರುವ ಒಂದು ತೀರ್ಥಕ್ಷೇತ್ರವು. ವರಾಹ ಪುರಾಣದ ಪ್ರಕಾರ ಈ ಅರಣ್ಯದಲ್ಲಿ ಗೌರಮುಖ ಎಂಬ ಋಷಿಯು ವಾಸಿಸುತ್ತಿದ್ದನು. ಒಮ್ಮೆ ಅವನಲ್ಲಿಗೆ ದುರ್ಜಯ ಎಂಬ ದಾನವನು ತನ್ನ ಅಕ್ಷೋಹಿಣೀ ಸೇನೆಯೊಂದಿಗೆ ಆಗಮಿಸಿದನು. ವಿಷ್ಣುವಿನಿಂದ ಪಡೆದು ಕೊಂಡಿದ್ದ ಒಂದು ದಿವ್ಯ ಮಣಿಯ ಸಹಾಯದಿಂದ ಗೌರಮುಖನು ದಾನವನ ಸೇನೆಗೆ ಆತಿಥ್ಯವನ್ನು ನೀಡಿದನು. ದುರ್ಜಯನು ಆ ಮಣಿಯನ್ನು ಬಲತ್ಕಾರವಾಗಿ ಪಡೆದುಕೊಳ್ಳಲು ಮುಂದಾದಾಗ ವಿಷ್ಣುವು ಸುದರ್ಶನ ಚಕ್ರವನ್ನು ಪ್ರಯೋಗಿಸಿ ಒಂದೇ ಕ್ಷಣದಲ್ಲಿ ದುರ್ಜಯನ ಇಡೀ ಸೇನೆಯನ್ನು ನಾಶಗೊಳಿಸಿದನು. ಇದನ್ನು ಮಾಡಿದ ದೇವನು ಗೌರಮುಖ ಮುನಿಗೆ ಹೇಳಿದನು: “ನಿಮಿಷ ಮಾತ್ರದಲ್ಲಿ ದಾನವ ಬಲವನ್ನು ಇಲ್ಲಿ ಸಂಹರಿಸಿದುದರಿಂದ ಈ ಅರಣ್ಯವು ನೈಮಿಷಾರಣ್ಯವೆಂದು ಕರೆಯಲ್ಪಡಲಿ.”[3]

ಇದು ಉತ್ತರ ಪ್ರದೇಶದಲ್ಲಿ ಗೋಮತೀ ನದೀತೀರದಲ್ಲಿ ಲಖ್ನೌದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿ ಈಗಲೂ ಇದೆ ಹಾಗೂ ಅಲ್ಲಿ ಚಕ್ರತೀರ್ಥವೆಂಬ ಬಾವಿ ಮತ್ತು ವಿಷ್ಣುವಿನ ಮಂದಿರವಿದೆ. ಇದು ವಿಷ್ಣುವಿನ ಎಂಟು ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಒಂದು ಎಂದು ಹೇಳುತ್ತಾರೆ.

ಒಂದು ಕಾಲದಲ್ಲಿ ಇದೇ ನೈಮಿಷಾರಣ್ಯವು ಋಷಿ ದಧೀಚಿಯ ಆಶ್ರಮವಾಗಿತ್ತೆಂದೂ, ಅಲ್ಲಿ ಅವನು ಇಂದ್ರನ ವಜ್ರಾಯುಧಕ್ಕಾಗಿ ತನ್ನ ದೇಹವನ್ನು ತೊರೆದು ಎಲುಬುಗಳನ್ನಿತ್ತನು ಎಂಬ ಪ್ರತೀತಿಯಿದೆ.

ಇನ್ನೊಂದು ಪುರಾಣ ಕಥೆಯ ಪ್ರಕಾರ ಋಷಿಗಳು ತಪಸ್ಸಿಗಾಗಿ ಉತ್ತಮ ಸ್ಥಳವನ್ನು ಹುಡುಕುತ್ತಿರಲು ಬ್ರಹ್ಮನು ದರ್ಭೆಯ ಒಂದು ಉಂಗುರವನ್ನು ಭೂಮಿಯ ಮೇಲೆ ಬೀಳಿಸಲು ಅದು ನೈಮಿಷಾರಣ್ಯದಲ್ಲಿ ಬಿದ್ದು, ತಪಸ್ಸಿಗೆ ಪವಿತ್ರ ಸ್ಥಳವೆನಿಸಿಕೊಂಡಿತು. ಇದೇ ನೈಮಿಷಾರಣ್ಯದಲ್ಲಿ ಹಲವಾರು ಯಜ್ಞಕಾರ್ಯಗಳು ನಡೆದವು ಮತ್ತು ಇಲ್ಲಿಯೇ ಹಲವಾರು ಪುರಾಣಗಳನ್ನು ಋಷಿ-ಮುನಿಗಳು ಕೇಳಿದರು.

ಪದ್ಮಪುರಾಣದ ಸೃಷ್ಟಿಖಂಡದ ಪ್ರಕಾರ ಪ್ರಯಾಗದಲ್ಲಿ ಋಷಿಗಳು ಅತಿಪುಣ್ಯಪ್ರದೇಶದ ಕುರಿತು ಬೃಹಸ್ಪತಿಯನ್ನು ಕೇಳಲು ಅವರ ಹಿತೈಷಿಯಾದ ಬೃಹಸ್ಪತಿಯು ಗಟ್ಟಿಯಾದ ಅಚ್ಚುಳ್ಳ, ಸತ್ಯದಿಂದ ನಡೆಯುವ ಅತ್ಯುತ್ತಮ ಚಕ್ರವನ್ನು ಬಿಟ್ಟು “ಜಾಗರೂಕತೆಯಿಂದ ಇದನ್ನು ಅನುಸರಿಸುತ್ತಾ ಹೋದರೆ ನಿಮಗೆ ಬೇಕಾದುದು ದೊರೆಯುತ್ತದೆ. ಹೋಗುತ್ತಿರುವಾಗ ಈ ಧರ್ಮಚಕ್ರದ ಅಂಚು ಎಲ್ಲಿ ಹೂಳಿಕೊಳ್ಳುತ್ತದೆಯೋ ಅದೇ ಪುಣ್ಯದೇಶವೆಂದು ತಿಳಿಯಿರಿ” ಎಂದನು. ಗಂಗೆಯನ್ನೇ ಅನುಸರಿಸಿ ಬರುತ್ತಿದ್ದ ಆ ಚಕ್ರದ ಅಂಚು (ನೇಮಿಯು) ಒಂದೆಡೆ ಹೂತುಕೊಂಡಿತು. ಅದೇ ನೈಮಿಷಾರಣ್ಯವು.

ಪರ್ವಸಂಗ್ರಹಪರ್ವದಲ್ಲಿ ಉಗ್ರಶ್ರವನು ನೈಮಿಷಾರಣ್ಯವಾಸಿಗಳಿಗೆ ಮಹಾಭಾರತ ಯುದ್ಧವು ಯಾವ ಸ್ಥಳದಲ್ಲಿ ನಡೆಯಿತೋ ಆ ಸಮಂತಪಂಚಕದ ಮೂಲ ಮತ್ತು ಮಹಾತ್ಮೆ, ಅಕ್ಷೌಹಿಣೀ ಸೇನೆಯ ಪರಿಮಾಣ, ಮಹಾಭಾರತದ ಹದಿನೆಂಟು ದಿನದ ಯುದ್ಧದ ಪ್ರತಿಯೊಂದು ದಿನದ ಸಾರಾಂಶಗಳನ್ನು ವರ್ಣಿಸಿದ್ದಾನೆ. ಈ ಉಪಪರ್ವದಲ್ಲಿ ಉಗ್ರಶ್ರವನು ವ್ಯಾಸನು ರಚಿಸಿದ ನೂರು ಪರ್ವಗಳ ಹೆಸರುಗಳು, ಹಾಗೂ ತಾನು ನೈಮಿಷಾರಣ್ಯದಲ್ಲಿ ಹೇಳುವ ಹದಿನೆಂಟು ಪರ್ವಗಳ ಸಾರಾಂಶಗಳೊಂದಿಗೆ ಮಹಾಭಾರತ ಕೃತಿಯ ಮಹಾತ್ಮೆ, ಫಲಶ್ರುತಿಗಳನ್ನು ನೀಡಿದ್ದಾನೆ. ಅವನೇ ಹೇಳಿದಂತೆ “ಆಖ್ಯಾನಂ ತದಿದಮನುತ್ತಮಂ ಮಹಾರ್ಥಂ ವಿನ್ಯಸ್ತಂ ಮಹದಿಹ ಪರ್ವಸಂಗ್ರಹೇಣ ಶ್ರುತ್ವಾದೌ ಭವತಿ ನೃಣಾಂ ಸುಖಾವಗಾಹಂ ವಿಸ್ತೀರ್ಣಂ ಲವಣಜಲಂ ಯಥಾ ಪ್ಲವೇನ ।।” ಅರ್ಥಾತ್: ಹಡಗಿನಿಂದ ವಿಸ್ತೀರ್ಣ ಸಮುದ್ರವನ್ನು ಹೇಗೆ ತಿಳಿದುಕೊಳ್ಳಬಹುದೋ ಹಾಗೆ ಮಹಾರ್ಥಗಳುಳ್ಳ ಈ ಅನುತ್ತಮ ಆಖ್ಯಾನವನ್ನು ಪರ್ವಸಂಗ್ರಹದ ಸಹಾಯದಿಂದ ತಿಳಿದುಕೊಳ್ಳಬಹುದು.

ತ್ರೇತ-ದ್ವಾಪರ ಯುಗಗಳ ಸಂಧ್ಯಾಕಾಲದಲ್ಲಿ ಪರಶುರಾಮನು ಯಾವ ಸಮಂತಪಂಚಕ ಕ್ಷೇತ್ರದಲ್ಲಿ ಕ್ಷತ್ರಿಯರನ್ನು ನಿರ್ಮೂಲನಗೊಳಿಸಿದನೋ ಅದೇ ಸಮಂತಪಂಚಕ ಕ್ಷೇತ್ರದಲ್ಲಿ ದ್ವಾಪರ-ಕಲಿಯುಗಳ ಸಂಧಿಯಲ್ಲಿ ಕೌರವ-ಪಾಂಡವರ ಮಹಾಭಾರತ ಯುದ್ಧದಲ್ಲಿ ಬಹುತೇಕ ಕ್ಷತ್ರಿಯರ ನಾಶವಾಯಿತು ಎಂದು ಸೂತನು ಹೇಳಿ ಪ್ರತಿಯುಗಗಳ ಸಂಧ್ಯಾಕಾಲಗಳಲ್ಲಿ ಕ್ಷತ್ರಿಯರ ನಾಶವಾಗುತ್ತದೆ ಎನ್ನುವುದನ್ನು ಸೂಚಿಸಿದ್ದಾನೆ. ದ್ವಾಪರಾಯುಗದ ಸಂಧ್ಯೆಯಲ್ಲಿ ಕ್ಷತ್ರಿಯರ ವಿನಾಶವಾದ ಕುರುಕ್ಷೇತ್ರವೆಂದು ಕರೆಯಲ್ಪಡುತ್ತಿದ್ದ ಪ್ರದೇಶವೇ ತ್ರೇತಾಯುಗದಲ್ಲಿ ಪರಶುರಾಮನಿಂದಾದ ಕ್ಷತ್ರಿಯವಿನಾಶದ ಪ್ರದೇಶವಾಗಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಈಗಲೂ ಕುರುಕ್ಷೇತ್ರವೆಂದಿರುವ ತೀರ್ಥಕ್ಷೇತ್ರವು ತ್ರೇತಾಯುಗದಲ್ಲಿ ಪರಶುರಾಮನ ಕೃತ್ಯದಿಂದಾಗಿ ಸಮಂತಪಂಚಕವೆಂಬ ಹೆಸರನ್ನು ಪಡೆದುಕೊಂಡಿತು. ಮುಂದೆ ಸಂಭವಪರ್ವದಲ್ಲಿ ಬರುವಂತೆ ಕುರು-ಪಾಂಡವರ ವಂಶದಲ್ಲಿಯೇ ಹಿಂದೆ ಸಂವರಣ ಮತ್ತು ಸೂರ್ಯಪುತ್ರಿ ತಪತಿಯರ ಮಗನಾಗಿ ಹುಟ್ಟಿದ್ದ ಕುರುವಿನಿಂದಾಗಿಯೇ ಕುರುಕ್ಷೇತ್ರವೆನಿಸಿಕೊಂಡಿತು.

ಇಲ್ಲಿ ಸಮಂತಪಂಚಕವೇ ಕುರುಕ್ಷೇತ್ರ ಅಥವಾ ಸಮಂತಪಂಚಕದ ಹತ್ತಿರದ ಪ್ರದೇಶವು ಕುರುಕ್ಷೇತ್ರ ಎನ್ನುವುದರ ಸೂಚನೆಯಿದೆ. “ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ” ಎಂಬ ಶ್ಲೋಕದಿಂದ ಯುದ್ಧವು ಕುರುಕ್ಷೇತ್ರದಲ್ಲಿ ನಡೆಯಿತೆಂದು ತಿಳಿಯುತ್ತದೆ. ಮುಂದೆ ಶಲ್ಯಪರ್ವದಲ್ಲಿ ಬಲರಾಮನು ಭೀಮ-ದುರ್ಯೋಧನರ ಯುದ್ಧವು ಸಮಂತಪಂಚಕದಲ್ಲಿ ನಡೆಯಬೇಕೆಂದು ಸೂಚಿಸಲು, ದುರ್ಯೋಧನ ಮತ್ತು ಪಾಂಡವ-ಸೃಂಜಯರು ಕೃಷ್ಣ-ಬಲರಾಮರೊಂದಿಗೆ ಕಾಲ್ನಡುಗೆಯಿಂದಲೇ ಕುರುಕ್ಷೇತ್ರದ ವೈಶಂಪಾಯನ ಸರೋವರದಿಂದ ಸಮಂತಪಂಚಕಕ್ಕೆ ಹೋದರೆಂಬ ವರ್ಣನೆಯಿದೆ.

ಈಗ ಕಲಿಯುಗದಲ್ಲಿ ಕಾಣುವ ಕುರುಕ್ಷೇತ್ರವು ಹಿಂದಿನ ಯುಗಗಳಾದ ದ್ವಾಪರ-ತ್ರೇತಾಯುಗಗಳಲ್ಲಿಯೂ ಇದ್ದವೆಂದರೆ, ಪ್ರತಿಯುಗದ ಅಂತ್ಯದಲ್ಲಿ ಭೂಮಿಯು ಸಂಪೂರ್ಣವಾಗಿ ನಾಶಹೊಂದುವುದಿಲ್ಲ ಹಾಗೂ ಭೂಮಿಯ ಪ್ರದೇಶಗಳ ಮಹಿಮೆಗಳು ಅಳಿಸಿಹೋಗುವುದಿಲ್ಲ ಎನ್ನುವುದು ತಿಳಿಯುತ್ತದೆ. ಹಾಗೆಯೇ ಈಗಲೂ ಇರುವ ಅಯೋಧ್ಯೆಯು ವೈವಸ್ವತ ಮನುವೇ ನಿರ್ಮಿಸಿದ ನಗರವಾದ್ದರಿಂದ ಅದು ಈ ಮನ್ವಂತರದ ಆದಿಯಲ್ಲಿಯೇ ಇತ್ತೆಂದೂ ತಿಳಿಯಬೇಕು. ಅಂದರೆ, ಮನ್ವಂತರಗಳ ಅಂತ್ಯಗಳಲ್ಲಾಗುವ ಪ್ರಳಯಗಳೂ ಭೂಮಿಯನ್ನು ಮತ್ತು ಅದರ ಗುಣಮಹಾತ್ಮೆಗಳನ್ನು ನಾಶಪಡಿಸುವುದಿಲ್ಲ ಎಂದಾಯಿತು. ಅಂದರೆ ಪೃಥ್ವಿಯು ಯಾವಾಗಲೂ ಇತ್ತು. ಇಲ್ಲದಿರುವಂತೆ ಆಗುವುದೇ ಇಲ್ಲ. ಮತ್ತು ಪ್ರತಿಮನ್ವಂತರದಲ್ಲಿಯೂ ಮನುಷ್ಯನಿರುತ್ತಾನೆ. ಈಗಿರುವ ಮನುಷ್ಯರು ಮಂಗಗಳಿಂದ ಆದವರಲ್ಲ, ಸನಾತನರು ಎಂದು ತಿಳಿಯಬೇಕಾಗುತ್ತದೆ.

ಕುರುಕ್ಷೇತ್ರದಲ್ಲಿ 18 ಅಕ್ಷೌಹಿಣೀ ಸೇನೆಗಳು ಸೇರಿದ್ದವು ಮತ್ತು ಕೇವಲ ಹತ್ತುಮಂದಿಯನ್ನು ಬಿಟ್ಟು – ಐವರ ಪಾಂಡವರು, ಕೃಷ್ಣ, ಸಾತ್ಯಕಿ, ಮತ್ತು ಕೌರವರ ಕಡೆಯ ಮೂವರು – ಅಶ್ವತ್ಥಾಮ, ಕೃಪ ಮತ್ತು ಕೃತವರ್ಮ ಉಳಿದವರೆಲ್ಲರೂ ಯುದ್ಧದಲ್ಲಿ ಮೃತರಾದರು ಎಂದು ತಿಳಿಯುತ್ತದೆ. ಆ ಹದಿನೆಂಟು ಅಕ್ಷೌಹಿಣೀ ಸೇನೆಗಳಲ್ಲಿ ಒಟ್ಟು 19,38,300 ಪದಾತಿಗಳು, 11,80,980 ಕುದುರೆಗಳು, 3.93,678 ಆನೆಗಳು ಮತ್ತು ರಥಗಳು ನಾಶವಾದವು ಎಂದು ಅಕ್ಷೌಹಿಣಿಯ ಪರಿಮಾಣದ ಪ್ರಕಾರ ತಿಳಿಯುತ್ತದೆ. ಮುಂದೆ ಸ್ತ್ರೀಪರ್ವದ ಶ್ರಾದ್ಧಪರ್ವದಲ್ಲಿ ಯುಧಿಷ್ಠಿರನು ಧೃತರಾಷ್ಟ್ರನ ಪ್ರಶ್ನೆಗಿತ್ತ ಉತ್ತರದ ಪ್ರಕಾರ ಒಂದು ಅರಬ, ಅರವತ್ತಾರು ಕೋಟಿ, ಇಪ್ಪತ್ತುಸಾವಿರ (1,660,020,000 ಅರ್ಥಾತ್ 1 ಬಿಲಿಯನ್, 66 ಕೋಟಿ 20 ಸಾವಿರ) ಯೋಧರು ಈ ಯುದ್ಧದಲ್ಲಿ ಹತರಾದರು. ಭೀಷ್ಮಪರ್ವದ ಭಗವದ್ಗೀತಾಪರ್ವದ ಅಧ್ಯಾಯ 20ರ ಪ್ರಕಾರ ಪ್ರತಿ ಆನೆಗೆ ನೂರು ರಥಿಕರೂ, ಒಂದು ರಥಕ್ಕೆ ನೂರು ಅಶ್ವಯೋಧರೂ, ಪ್ರತಿ ಅಶ್ವಯೋಧನಿಗೆ ಹತ್ತು ಧನುರ್ಧಾರಿಗಳು ಮತ್ತು ಪ್ರತಿ ಧನುರ್ಧಾರಿಗೆ ಹತ್ತು ಗುರಾಣಿಗಳನ್ನು ಹಿಡಿದ ಯೋಧರಿದ್ದರು ಎಂದು ತಿಳಿಯುತ್ತದೆ.

ನೈಮಿಷಾರಣ್ಯವಾಸೀ ಋಷಿಗಳಿಗೆ ವರ್ಣಿಸುತ್ತಾ ಸೂತನು ಮೂರನೆಯ ಪೌಷ್ಯಪರ್ವದಲ್ಲಿ ಸರ್ಪಸತ್ರಕ್ಕೆ ಜನಮೇಜಯನಿಗೆ ಪ್ರಚೋದನೆಯನ್ನಿತ್ತ ಉತ್ತಂಕನ ಕಥೆಯನ್ನು ಹೇಳುತ್ತಾನೆ. ಅಧಿಕಾಂಶ ಗದ್ಯರೂಪದಲ್ಲಿಯೇ ಇರುವ ಈ ಉಪಪರ್ವದಲ್ಲಿ ಈ ಕೆಳಗಿನ ವಿಷಯಗಳು ನಿರೂಪಣೆಗೊಂಡಿವೆ: ಮಗನನ್ನು ಹೊಡೆದುದಕ್ಕಾಗಿ ದೇವತೆಗಳ ನಾಯಿ ಸುರಮೆಯು ಜನಮೇಜಯನಿಗೆ ಶಾಪವನ್ನಿತ್ತುದುದು, ಜನಮೇಜಯನು ಶಾಪದಿಂದ ಮುಕ್ತನಾಗಲು ಪುರೋಹಿತನನ್ನು ಪಡೆದುದು, ಧೌಮ್ಯನ ಶಿಷ್ಯ ಆರುಣಿಯ ಕಥೆ, ಧೌಮ್ಯನ ಶಿಷ್ಯ ಉಪಮನ್ಯುವಿನ ಕಥೆ ಮತ್ತು ಅಶ್ವಿನೀ ದೇವತೆಗಳ ಸ್ತುತಿ, ಧೌಮ್ಯನ ಶಿಷ್ಯ ವೇದನ ಕಥೆ, ವೇದನ ಶಿಷ್ಯ ಉತ್ತಂಕನು ಗುರುಪತ್ನಿಗೆ ಪೌಷ್ಯರಾಜಪತ್ನಿಯಲ್ಲಿರುವ ಕುಂಡಲಗಳನ್ನು ತರಲು ಹೋದುದು, ತಕ್ಷಕನು ಕುಂಡಲಗಳನ್ನು ಅಪಹರಿಸಿದುದು, ಅವುಗಳನ್ನು ಇಂದ್ರನ ಸಹಾಯದಿಂದ ಹಿಂದೆ ಪಡೆದು ಗುರುಪತ್ನಿಗೆ ನೀಡಿದುದು, ಮತ್ತು ಉತ್ತಂಕನು ಜನಮೇಜಯನಿಗೆ ಸರ್ಪಸತ್ರವನ್ನು ಕೈಗೊಳ್ಳಲು ಪ್ರಚೋದಿಸಿದುದು. ಪೌಷ್ಯರಾಜಪತ್ನಿಯ ಕುಂಡಲಗಳಿಂದಾಗಿಯೇ ಇದಕ್ಕೆ ಪೌಷ್ಯಪರ್ವವೆಂಬ ಹೆಸರು ಬಂದಿರಬಹುದು.

ಪೌಲೋಮಪರ್ವವು ಪುನಃ ಉಗ್ರಶ್ರವನು ನೈಮಿಷಾರಣ್ಯಕ್ಕೆ ಆಗಮಿಸುವುದರಿಂದ ಪ್ರಾರಂಭವಾಗುತ್ತದೆ. ಮಹಾಭಾರತದ ಮೊದಲನೇ ಅಧ್ಯಾಯದ ಮೊದಲನೇ ಶ್ಲೋಕ ಮತ್ತು ನಾಲ್ಕನೆಯ ಅಧ್ಯಾಯದ ಮೊದಲನೇ ಶ್ಲೋಕ ಇವೆರಡೂ ಒಂದೇ ಆಗಿವೆ ಮತ್ತು ಇವೆರಡೂ ಮಹಾಭಾರತ ಕಥೆಯ ಎರಡು ಪ್ರಾರಂಭಗಳನ್ನು ಸೂಚಿಸುತ್ತವೆ ಎನ್ನುವುದನ್ನು ಗಮನಿಸಬೇಕು. ಈ ರೀತಿಯ ಎರಡು ಪ್ರಾರಂಭಗಳು ಆಕಸ್ಮಿಕವಾಗಿಲ್ಲ ಮತ್ತು ಇದು ಮಹಾಭಾರತದ ಆಕಾರ, ವಸ್ತು ಮತ್ತು ಕಾರ್ಯದ ಒಂದು ಅವಿಭಾಜ್ಯ ಅಂಗ ಎಂದು ಮಹಾಭಾರತ ವಿದ್ವಾಂಸರಲ್ಲೊಬ್ಬರಾದ ವಿಶ್ವ ಪಿ. ಅಡ್ಲೂರಿ ಅವರು ವಾದಿಸಿದ್ದಾರೆ (Vishwa P. Adluri, Frame Narratives and Forked Beginnings: Or, How to Read the Adiparvan, Journal of Vaishnava Studies). ಉಗ್ರಶ್ರವನು ನೈಮಿಷಾರಣ್ಯದ ಋಷಿಗಳ ಮಧ್ಯದಲ್ಲಿ ಉಪಸ್ಥಿತನಾಗಿರಲು, ಋಷಿಗಳು ಕಥೆಗಳನ್ನು ಪ್ರಾರಂಭಿಸಲು ಶೌನಕನ ಬರವನ್ನು ಕಾಯಲು ಕೇಳಿಕೊಳ್ಳುತ್ತಾರೆ. ಆಹ್ನೀಕಗಳನ್ನು ಮುಗಿಸಿ ಶೌನಕನು ಸಭೆಗೆ ಬಂದು ಭೃಗುವಂಶದ ಮೂಲವನ್ನು ವಿವರಿಸಲು ಉಗ್ರಶ್ರವನನ್ನು ಕೇಳುತ್ತಾನೆ. ಉಗ್ರಶ್ರವನು ಆಗ ಸಂಕ್ಷಿಪ್ತ ಭೃಗುವಂಶಾವಳಿಯನ್ನು ಹೇಳಿ, ಚ್ಯವನನ ಜನ್ಮದ ಕುರಿತು ಹೇಳುತ್ತಾನೆ: ರಾಕ್ಷಸ ಪುಲೋಮನು ಭೃಗುಪತ್ನಿ ಪುಲೋಮೆಯನ್ನು ಕಾಣುವುದು, ಅಗ್ನಿಯಲ್ಲಿ ಅವನ ಪ್ರಶ್ನೆ, ಅಗ್ನಿಯ ಉತ್ತರ, ಪುಲೋಮನು ಪುಲೋಮೆಯನ್ನು ಎತ್ತಿಕೊಂಡು ಹೋಗುವುದು, ಭೃಗುವಿನ ಮಗ ಚ್ಯವನನು ಪುಲೋಮನನ್ನು ನಾಶಪಡಿಸುವುದು, ಪುಲೋಮೆಯ ಕಣ್ಣೀರು ನದಿಯಾಗಿ ಹರಿಯುವುದು, ಅಗ್ನಿಯು ಪುಲೋಮನಿಗಿತ್ತ ಉತ್ತರವನ್ನು ತಿಳಿದು ಭೃಗುವು ಕೋಪದಿಂದ ಅಗ್ನಿಯನ್ನು ಸರ್ವಭಕ್ಷಕನಾಗೆಂದು ಶಪಿಸುವುದು, ಕೋಪಗೊಂಡ ಅಗ್ನಿಯು ಎಲ್ಲ ಕರ್ಮಗಳಿಂದ ತನ್ನನ್ನು ಹಿಂತೆಗೆದುಕೊಂಡಿದುದು, ದೇವತೆಗಳ ಒತ್ತಾಯದ ಮೇರೆಗೆ ಬ್ರಹ್ಮನು ಅಗ್ನಿಗೆ ಶಾಪವನ್ನು ಸ್ವೀಕರಿಸಲು ಹೇಳುವುದು. ನಂತರ ಉಗ್ರಶ್ರವನು ಶೌನಕಾದಿ ಮುನಿಗಳಿಗೆ ರುರುವಿನ ಕಥೆ ಮತ್ತು ಅವನ ಪತ್ನಿ ಪ್ರಮದ್ವರೆಯ ಜನ್ಮವೃತ್ತಾಂತವನ್ನು ಹೇಳುತ್ತಾನೆ. ರುರುವು ಪ್ರಮದ್ವರೆಯನ್ನು ಪ್ರೀತಿಸಿ ವಿವಾಹಕ್ಕೆ ಸಿದ್ಧತೆಗ್ಳನ್ನು ಮಾಡುತ್ತಿರಲು ಪ್ರಮದ್ವರೆಯು ಹಾವುಕಚ್ಚುವುದರಿಂದ ಮರಣಹೊಂದುತ್ತಾಳೆ. ರುರುವಿನ ಅರ್ಧ ಆಯುಷ್ಯದಿಂದ ಪ್ರಮದ್ವರೆಯು ಪುನಃ ಬದುಕುತ್ತಾಳೆ. ತನ್ನ ಪತ್ನಿಯ ಮೃತ್ಯುವಿಗೆ ಕಾರಣವಾದ ಹಾವಿನ ಮೇಲಿನ ಕೋಪದಿಂದ ರುರುವು ಕಂಡಕಂಡಲ್ಲಿ ಹಾವುಗಳನ್ನು ಕೊಲ್ಲುವ ಪ್ರತಿಜ್ಞೆ ಕೈಗೊಳ್ಳುತ್ತಾನೆ. ಒಮ್ಮೆ ಹಾವೆಂದು ಹೊಡೆದಾಗ ಡುಂಡುಭವೊಂದು ವಿರೋಧಿಸಿ ತನ್ನ ಜನ್ಮವೃತ್ತಾಂತವನ್ನು ಹೇಳಿಕೊಳ್ಳಲು ರುರುವು ಅದನ್ನು ಕೊಲ್ಲದೇ ಉಳಿಸುತ್ತಾನೆ. ಡುಂಡುಭವು ಜನಮೇಜಯನ ಸರ್ಪಸತ್ರದಲ್ಲಿ ಆಸ್ತೀಕನು ಸರ್ಪಗಳನ್ನು ರಕ್ಷಿಸಿದನೆಂದು ಹೇಳಲು ರುರುವು ಆಸ್ತೀಕನ ಕುರಿತು ತನ್ನ ತಂದೆಯಲ್ಲಿ ಮಾಡಿದ ಸರ್ಪಸತ್ರದ ಪ್ರಸ್ತಾವನೆಯೊಂದಿಗೆ ಈ ಉಪಪರ್ವವು ಮುಕ್ತಾಯವಾಗುತ್ತದೆ.

ಶೌನಕನ ಕೇಳಿಕೆಯಂತೆ ಉಗ್ರಶ್ರವನು ಹೇಳುವ ಆಸ್ತೀಕನ ಕಥೆಯನ್ನೊಳಗೊಂಡಿರುವ ನಾಲ್ಕನೆಯ ಉಪಪರ್ವ ಆಸ್ತೀಕಪರ್ವವು ಆಸ್ತೀಕ ಮುನಿಯ ಹೆಸರನ್ನೇ ಪಡೆದಿದೆ. ಶ್ಲೋಕಸಂಖ್ಯೆಗಳ ಪ್ರಕಾರ ಇದು ಆದಿಪರ್ವದಲ್ಲಿ ಎರಡನೆಯ ಅತಿದೊಡ್ಡ ಉಪಪರ್ವವು. ಸತ್ಯಯುಗದಲ್ಲಿ ಸಮುದ್ರಮಥನ ಹಾಗೂ ಕದ್ರು-ವಿನತೆಯರ ಸಂತಾನೋತ್ಪತ್ತಿಯಿಂದ ಪ್ರಾರಂಭವಾಗುವ ಈ ಕಥೆಯು ದ್ವಾಪರ-ಕಲಿಯುಗಗಳ ಸಂಧಿಕಾಲದಲ್ಲಿ ಜನಮೇಜಯನ ಸರ್ಪಸತ್ರದಲ್ಲಿ ಕೊನೆಗೊಳ್ಳುತ್ತದೆ ಮತ್ತು ವ್ಯಾಸನಿರ್ಮಿತ ಮಹಾಭಾರತವನ್ನು ವೈಶಂಪಾಯನನು ಜನಮೇಜಯನಿಗೆ ಹೇಳುವ ಸಂದರ್ಭವನ್ನು ಒದಗಿಸಿಕೊಡುತ್ತದೆ. ಮೇರುಪರ್ವತದಲ್ಲಿ ದೇವತೆಗಳ ಸಮಾಲೋಚನೆಯಲ್ಲಿ ನಾರಾಯಣನು ಅಮೃತಕ್ಕಾಗಿ ಸಮುದ್ರವನ್ನು ಮಥಿಸಲು ಸೂಚಿಸುತ್ತಾನೆ. ಅನಂತನು ಮಂದರವನ್ನು ಕಿತ್ತು ಸಮುದ್ರಮಥನಕ್ಕೆ ಕಡೆಗೋಲನ್ನಾಗಿ ನೀಡುತ್ತಾನೆ. ಕೂರ್ಮವು ಮಂದರವನ್ನು ಬೆನ್ನಮೇಲೆ ಹೊತ್ತುಕೊಳ್ಳುತ್ತದೆ. ದೇವಾಸುರರು ನಡೆಸಿದ ಸಮುದ್ರಮಥನಲ್ಲಿ ಅಮೃತವು ಹುಟ್ಟಿಕೊಳ್ಳುತ್ತದೆ ಮತ್ತು ನಾರಾಯಣನು ಮೋಹಿನೀ ರೂಪವನ್ನು ಧರಿಸಿ ಅಮೃತವನ್ನು ಹಂಚುತ್ತಾನೆ. ಮೋಸದಿಂದ ಅಮೃತವನ್ನು ಕುಡಿಯುತ್ತಿದ್ದ ರಾಹುವಿನ ಶಿರವನ್ನು ಮೋಹಿನೀ ರೂಪದಲ್ಲಿದ್ದ ನಾರಾಯಣನು ಸೂರ್ಯ-ಚಂದ್ರರ ಸೂಚನೆಯಂತೆ ಕತ್ತರಿಸುತ್ತಾನೆ. ಅಮೃತಕ್ಕಾಗಿ ದೇವಾಸುರರ ನಡುವೆ ಸಂಗ್ರಾಮವಾಗುತ್ತದೆ. ನರ-ನಾರಾಯಣರು ದೇವತೆಗಳಿಗೆ ವಿಜವನ್ನೀಯಲು ದೇವತೆಗಳು ಅಮೃತಕ್ಕೆ ಕಡುಗಾವಲನ್ನಿರಿಸುತ್ತಾರೆ.

ಕಶ್ಯಪನ ಪತ್ನಿಯರಾದ ಕದ್ರು ಮತ್ತು ವಿನತೆಯರಿಗೆ ಸಂತಾನಪ್ರಾಪ್ತಿಯಾಗುತ್ತದೆ. ಕದ್ರುವಿನಲ್ಲಿ ಸಹಸ್ರ ನಾಗಗಳ ಜನ್ಮವಾಗುತ್ತದೆ. ವಿನತೆಯ ಅಂಡದಿಂದ ಹುಟ್ಟಿದ ಅರುಣನು ತನ್ನ ಸಂಪೂರ್ಣ ಬೆಳವಣಿಗೆಯಾಗುವ ಮೊದಲೇ ಅಂಡವನ್ನು ಒಡೆದ ತಾಯಿಗೆ ಶಾಪವನ್ನು ಕೊಡುತ್ತಾನೆ ಮತ್ತು ನಂತರ ಗರುಡನ ಜನನವಾಗುತ್ತದೆ. ಕದ್ರು ಮತ್ತು ವಿನತೆಯರ ನಡುವೆ ಸಮುದ್ರಮಂಥನದಲ್ಲಿ ಹುಟ್ಟಿದ ಕುದುರೆ ಉಚ್ಚೈಃಶ್ರವದ ಬಾಲದ ಬಣ್ಣದ ಕುರಿತು ಪಣವಾಗುತ್ತದೆ. ಕುದುರೆಯ ಬಾಲಕ್ಕೆ ಸುತ್ತಿಕೊಂಡು ಅದನ್ನು ಕಪ್ಪುಬಣ್ಣದ್ದನ್ನಾಗಿ ಮಾಡಿ ಎಂಬ ತನ್ನ ಮಾತನ್ನು ಕೇಳದ ಸರ್ಪಗಳಿಗೆ ಕದ್ರುವು ಜನಮೇಜಯನ ಸರ್ಪಸತ್ರದಲ್ಲಿ ಸುಟ್ಟುಹೋಗುತ್ತೀರಿ ಎಂದು ಶಪಿಸುತ್ತಾಳೆ. ವಿನತೆಯು ಪಣವನ್ನು ಸೋತು ಕದ್ರುವಿನ ದಾಸಿಯಾಗುತ್ತಾಳೆ. ಇಂದ್ರನಿಂದ ಅಪಮಾನಿತರಾದ ವಾಲಖಿಲ್ಯ ಋಷಿಗಳು ಗರುಡೋತ್ಪತ್ತಿಗೆ ಯಜ್ಞಮಾಡುತ್ತಾರೆ. ಯಜ್ಞದ ಫಲವಾಗಿ ವಿನತೆಯಲ್ಲಿ ಗರುಡನು ಹುಟ್ಟುತ್ತಾನೆ. ಗರುಡನು ತಮ್ಮ ದಾಸತ್ವದ ಕಾರಣವನ್ನು ತಾಯಿಯಿಂದ ತಿಳಿದುಕೊಂಡು ಸರ್ಪಗಳಲ್ಲಿ ಕೇಳಲು ಅವರು ದಾಸತ್ವದ ಮುಕ್ತಿಗೆ ಬದಲಾಗಿ ಅಮೃತವನ್ನು ಕೇಳುತ್ತಾರೆ. ಗರುಡನು ಅಮೃತವನ್ನು ತರಲು ಹೊರಟು ಮಾರ್ಗದಲ್ಲಿ ನಿಷಾದರನ್ನು ತಿಂದು ಹಾಗೂ ಆನೆ-ಕಚ್ಛಪಗಳನ್ನು ತಿಂದು ತನ್ನ ಹಸಿವೆಯನ್ನು ನಿವಾರಿಸಿಕೊಳ್ಳುತ್ತಾನೆ. ನಂತರ ಇಂದ್ರಾದಿ ದೇವತೆಗಳನ್ನು ಸೋಲಿಸಿ ಅಮೃತವನ್ನು ತರುವಾಗ ಇಂದ್ರನು ವಜ್ರಾಯುಧವನ್ನು ಅವನ ಮೇಲೆ ಪ್ರಯೋಗಿಸಲು ಗರುಡನು ತನ್ನ ರೆಕ್ಕೆಯ ಒಂದು ಪುಕ್ಕವನ್ನು ಬೀಳಿಸುತ್ತಾನೆ. ಆ ಪುಕ್ಕದ ಬಣ್ಣವನ್ನು ನೋಡಿ ಎಲ್ಲರೂ ಅವನನ್ನು “ಸುಪರ್ಣ” ಎಂದು ಕರೆಯುತ್ತಾರೆ. ಇಂದ್ರನು ಗರುಡನ ಮಿತ್ರತ್ವವನ್ನು ಕೇಳಿಕೊಳ್ಳುತ್ತಾನೆ. ಹಾಗೆಯೇ ವಿಷ್ಣುವು ಗರುಡನಿಗೆ ವರವನ್ನು ನೀಡುತ್ತಾನೆ. ಗರುಡನು ಅಮೃತವನ್ನು ಸರ್ಪಗಳಿಗೆ ಒಪ್ಪಿಸಲು, ಇಂದ್ರನು ಅದನ್ನು ಅಪಹರಿಸುತ್ತಾನೆ.

ಕದ್ರುವಿನ ಶಾಪದಿಂದ ತಪ್ಪಿಸಿಕೊಳ್ಳಲು ವಾಸುಕಿಯು ಇತರ ನಾಗಗಳೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದಾಗ ಏಲಾಪತ್ರನೆಂಬ ನಾಗನು ಶಾಪವಿಮೋಚನೆಯ ಉಪಾಯವನ್ನು ತಿಳಿಸುತ್ತಾನೆ. ಜರತ್ಕಾರುವೆಂಬ ಋಷಿಗೆ ತನ್ನ ಹೆಸರನ್ನೇ ಹೊಂದಿದ್ದ ಪತ್ನಿಯಲ್ಲಿ ಹುಟ್ಟುವ ಮಗನು ಸರ್ಪಗಳನ್ನು ಸರ್ಪಸತ್ರದಲ್ಲಿ ಸುಟ್ಟುಹೋಗದಂತೆ ಉಳಿಸುತ್ತಾನೆ ಎಂಬ ಬ್ರಹ್ಮನ ಮಾತನ್ನು ಏಲಾಪತ್ರನು ಕೇಳಿಕೊಂಡಿದ್ದನು. ವಾಸುಕಿಯು ಏಲಾಪತ್ರನು ಹೇಳಿದುದನ್ನು ಬ್ರಹ್ಮನಿಂದ ನಿರ್ದಿಷ್ಟಪಡಿಸಿಕೊಂಡು ತನ್ನ ತಂಗಿ ಜರತ್ಕಾರು ಎನ್ನುವವಳನ್ನು ಮುನಿ ಜರತ್ಕಾರುವಿಗೆ ವಿವಾಹಮಾಡಿ ಕೊಡುತ್ತಾನೆ. ಜರತ್ಕಾರು ದಂಪತಿಗಳಿಗೆ ಆಸ್ತೀಕನು ಹುಟ್ಟುತ್ತಾನೆ.

ನಂತರ ಕಥೆಯು ಕಲಿಯುಗದ ಪ್ರಾರಂಭಕ್ಕೆ ಹೋಗುತ್ತದೆ. ಅರ್ಜುನನ ಮೊಮ್ಮಗ, ಅಭಿಮನ್ಯುವಿನ ಮಗ ಪರಿಕ್ಷಿತನು ಬೇಟೆಗೆ ಹೋದಾಗ ಜಿಂಕೆಯನ್ನು ಹುಡುಕುತ್ತಾ ಋಷಿಯೋರ್ವನಿಗೆ ಅಪಮಾನಿಸುತ್ತಾನೆ. ಋಷಿಯ ಮಗನಿಗೆ ಈ ಅಪಮಾನದ ಕುರಿತು ತಿಳಿದು, ಕುಪಿತನಾಗಿ ಅವನು ಏಳು ದಿನಗಳಲ್ಲಿ ನಾಗ ತಕ್ಷಕನಿಂದ ಕಚ್ಚಲ್ಪಟ್ಟು ಮರಣವನ್ನು ಹೊಂದುತ್ತೀಯೆ ಎಂದು ಪರಿಕ್ಷಿತನಿಗೆ ಶಪಿಸುತ್ತಾನೆ. ಪರಿಕ್ಷಿತನನ್ನು ಉಳಿಸಲು ಬರುತ್ತಿದ್ದ ಕಾಶ್ಯಪ ಬ್ರಾಹ್ಮಣನನ್ನು ತಕ್ಷಕನು ಧನವನ್ನಿತ್ತು ಹಿಂದೆ ಕಳುಹಿಸುತ್ತಾನೆ. ಏಳನೇ ದಿನ ತಕ್ಷಕನು ಪರಿಕ್ಷಿತನನ್ನು ಕಚ್ಚಿ ಸಾಯಿಸಲು, ಪರಿಕ್ಷಿತನ ಮಗ ಜನಮೇಜಯನ ರಾಜ್ಯಾಭೀಷೇಕವಾಗುತ್ತದೆ. ನಂತರ ಪೌಷ್ಯಪರ್ವದ ಪ್ರಮುಖ ಪಾತ್ರನಾದ ಉತ್ತಂಕನು ಬಂದು ಜನಮೇಜಯನಿಗೆ ಪರಿಕ್ಷಿತನನ್ನು ಕೊಂದ ತಕ್ಷಕನ ಮೇಲೆ ಸೇಡು ತೀರಿಸಿಕೊಳ್ಳಲು ಸರ್ಪಯಾಗವನ್ನು ಮಾಡುವಂತೆ ಪ್ರಚೋದಿಸುತ್ತಾನೆ. ಜನಮೇಜಯನು ಸರ್ಪಯಾಗವನ್ನು ಕೈಗೊಂಡು ಯಾಗಕ್ಕೆ ವಿಘ್ನವಾಗಬಾರದೆಂದು ಯಾರನ್ನೂ ಒಳಬಿಡದಂತೆ ಆಜ್ಞೆನೀಡುತ್ತಾನೆ. ಯಾಗವು ಪ್ರಾರಂಭವಾಗಿ, ಸರ್ಪಗಳು ಯಜ್ಞಕುಂಡಕ್ಕೆ ಬಂದು ಬೀಳುತ್ತವೆ. ಆಗ ವಾಸುಕಿಯ ಮಾತಿನಂತೆ ಆಸ್ತೀಕನು ಜನಮೇಜಯನ ಯಾಗಶಾಲೆಗೆ ಆಗಮಿಸುತ್ತಾನೆ. ಪ್ರವೇಶವನ್ನು ಯಾಚಿಸಿ ಅವನು ಜನಮೇಜಯನ ಸರ್ಪಸತ್ರವನ್ನು ಸ್ತುತಿಸುತ್ತಾನೆ. ತಕ್ಷಕನು ಬರುವವರೆಗೆ ಆಸ್ತೀಕನಿಗೆ ವರವನ್ನು ನೀಡಬಾರದೆಂದು ಪುರೋಹಿತರು ಜನಮೇಜಯನಿಗೆ ಸೂಚನೆಯನ್ನು ನೀಡುತ್ತಾರೆ. ಇಂದ್ರನಿಂದ ಜಾರಿಬೀಳುತ್ತಿದ್ದ ತಕ್ಷಕನನ್ನು ವರಪ್ರಾಪ್ತಿಯಾದ ಆಸ್ತೀಕನು ತಡೆಯುತ್ತಾನೆ. ಸರ್ಪಯಾಗದ ಸಮಯದಲ್ಲಿ ಜನಮೇಜಯನಿಗೆ ವೈಶಂಪಾಯನನು ಹೇಳಿದ ವ್ಯಾಸರಚಿತ ಮಹಾಭಾರತ ಕಥೆಯನ್ನು ಹೇಳಬೇಕೆಂದು ಶೌನಕನು ಉಗ್ರಶ್ರವನಲ್ಲಿ ಕೇಳಿಕೊಳ್ಳುವುದರೊಂದಿಗೆ ಆಸ್ತೀಕಪರ್ವವು ಕೊನೆಗೊಳ್ಳುತ್ತದೆ. ಹೀಗೆ ಮಹಾಭಾರತದ ಮೊದಲ 1,823 ಶ್ಲೋಕಗಳ ನಂತರ ನಾವು ವೈಶಂಪಾಯನ-ಜನಮೇಜಯರ ಸಂವಾದಪೂರ್ವಕವಾದ ಮಹಾಭಾರತಕ್ಕೆ ಕಾಲಿಡುತ್ತೇವೆ.

ಆದಿವಂಶಾವತರಣಪರ್ವವು ಜನಮೇಜಯನ ಸರ್ಪಸತ್ರಕ್ಕೆ ವ್ಯಾಸನ ಆಗಮನದಿಂದ ಪ್ರಾರಂಭವಾಗುತ್ತದೆ. ಕುರು-ಪಾಂಡವರ ಕುರಿತು ಜನಮೇಜಯನು ಪ್ರಶ್ನಿಸಲು ವ್ಯಾಸನು ವೈಶಂಪಾಯನನಿಗೆ ಮಹಾಭಾರತ ಕಥೆಯನ್ನು ಹೇಳಲು ಅನುಮತಿಯನ್ನು ನೀಡುತ್ತಾನೆ. ವೈಶಂಪಾಯನನ ಕಥಾಸಾರಾಂಶದ ನಂತರ ಜನಮೇಜಯನು ಮಹಾಭಾರತ ಯುದ್ಧದ ಕಾರಣವನ್ನು ಪ್ರಶ್ನಿಸುತ್ತಾನೆ. ಆಗ ವೈಶಂಪಾಯನನು ಮಹಾಭಾರತಯುದ್ಧವು ಒಂದು ದೇವರಹಸ್ಯ ಎಂದು ಹೇಳಿ, ಕೃತಿಯನ್ನು ಪ್ರಶಂಸಿಸುತ್ತಾ ವಸು ಉಪರಿಚರನ ಕಥೆ, ಅವನಿಂದ ಮೀನೊಂದರಲ್ಲಿ ಸತ್ಯವತಿಯ ಜನನ, ಮತ್ತು ಸತ್ಯವತಿಯಲ್ಲಿ ವ್ಯಾಸನ ಜನನಗಳೊಂದಿಗೆ ಇತರ ಅದ್ಭುತ ಜನನಗಳ ಕುರಿತು ಹೇಳುತ್ತಾನೆ. ಹಾಗೆಯೇ ತ್ರೇತ-ದ್ವಾಪರಯುಗಗಳ ಸಂಧಿಯಲ್ಲಿ ಪರಶುರಾಮನು ಕ್ಷತ್ರಿಯರನ್ನು ನಾಶಗೊಳಿಸಿದ ನಂತರ ಬ್ರಾಹ್ಮಣರು ಕ್ಷತ್ರಾಣಿಯರಲ್ಲಿ ಕ್ಷತ್ರಿಯರನ್ನು ಹುಟ್ಟಿಸಿದುದನ್ನು, ಕ್ಷತ್ರಿಯರಾಗಿ ಹುಟ್ಟಿದ ಅಸುರರ ಭಾರವನ್ನು ತಾಳಲಾರದೇ ಮೊರೆಹೊಕ್ಕ ಭೂಮಿಗೆ ನಾರಾಯಣನು ಆಶ್ವಾಸನೆ ನೀಡಿದುದನ್ನು ಹೇಳಿ ವೈಶಂಪಾಯನನು ಮರೀಚಿ ಮೊದಲಾದ ಮಹರ್ಷಿಗಳು ಹಾಗು ಅದಿತಿ ಮೊದಲಾದ ದಕ್ಷಕನ್ಯೆಯರ ವಂಶಗಳನ್ನು ವರ್ಣಿಸುತ್ತಾನೆ. ಮಹರ್ಷಿಗಳ ಮತ್ತು ಕಶ್ಯಪ ಪತ್ನಿಯರ ಸಂತಾನಪರಂಪರೆಗಳನ್ನು ವರ್ಣಿಸಿ, ಮನುಷ್ಯರಲ್ಲಿ ಜನ್ಮತಾಳಿದ ದೇವತೆಗಳ ಮತ್ತು ದಾನವರ ಅಂಶಗಳ ಕುರಿತು ವಿಸ್ತಾರವಾಗಿ ಯಾವ ದೇವ-ದಾನವರ ಅಂಶಗಳು ಭುವಿಯಲ್ಲಿ ಯಾವ ಕ್ಷತ್ರಿಯರಾಜರಾಗಿ ಹುಟ್ಟಿದರು ಎನ್ನುವುದನ್ನು ವೈಶಂಪಾಯನನು ಜನಮೇಜಯನಿಗೆ ಹೇಳುತ್ತಾನೆ. ಮಹಾಭಾರತದಲ್ಲಿ ಬರುವ ಕೆಲವು ಮುಖ್ಯಪಾತ್ರಗಳು ಯಾರ ಅಂಶದಿಂದ ಹುಟ್ಟಿದರೆನ್ನುವುದನ್ನು ಈ ಕೆಳಗಿನ ಪಟ್ಟಿಯು ತಿಳಿಸುತ್ತದೆ:

  1. ಕೃಷ್ಣ – ನಾರಾಯಣ
  2. ಅಶ್ವತ್ಥಾಮ – ಮಹಾದೇವ ಮತ್ತು ಯಮರ ಏಕತ್ವ ಅಂಶ
  3. ದ್ರೋಣ – ಬೃಹಸ್ಪತಿ
  4. ಕೃಪ – ರುದ್ರ
  5. ಭೀಷ್ಮನೂ ಸೇರಿ ಶಂತನುವಿಗೆ ಗಂಗೆಯಲ್ಲಿ ಹುಟ್ಟಿದ ಎಂಟು ಮಕ್ಕಳು – ಅಷ್ಟವಸುಗಳು
  6. ವಿದುರ – ಅತ್ರಿಯ ಮಗ ಧರ್ಮ
  7. ದುರ್ಯೋಧನ – ಕಲಿ
  8. ದುಃಶಾಸನ, ದುರ್ಮುಖ, ದುಃಸಹ ಮೊದಲಾದ ದುರ್ಯೋಧನನ ತಮ್ಮಂದಿರು – ಪುಲಸ್ತ್ಯನ ಮಕ್ಕಳು
  9. ಶಕುನಿ – ದ್ವಾಪರ
  10. ಕರ್ಣ - ಸೂರ್ಯ
  11. ಯುಧಿಷ್ಠಿರ – ಧರ್ಮ
  12. ಭೀಮಸೇನ – ವಾಯು
  13. ಅರ್ಜುನ – ಇಂದ್ರ
  14. ನಕುಲ-ಸಹದೇವರು – ಅಶ್ವಿನೀ ದೇವತೆಗಳು
  15. ಅಭಿಮನ್ಯು – ಸೋಮನ ಮಗ ಸುವರ್ಚ
  16. ದ್ರೌಪದಿಯ ಐವರು ಮಕ್ಕಳು – ವಿಶ್ವೇದೇವ ಗಣಗಳು
  17. ಧೃಷ್ಟದ್ಯುಮ್ನ - ಅಗ್ನಿ
  18. ಸಾತ್ಯಕಿ, ದ್ರುಪದ, ಕೃತವರ್ಮ, ವಿರಾಟ – ಮರುತ್ತರ ಅಂಶಜರು
  19. ಬಲರಾಮ – ಶೇಷನಾಗ
  20. ಪ್ರದ್ಯುಮ್ನ – ಸನತ್ಕುಮಾರ
  21. ಕೃಷ್ಣನ 16,000 ಪತ್ನಿಯರು – ಅಪ್ಸರಗಣಗಳು
  22. ದ್ರೌಪದಿ – ಶ್ರೀ
  23. ಕುಂತಿ – ಸಿದ್ಧಿ
  24. ಮಾದ್ರಿ – ಧೃತಿ
  25. ಗಾಂಧಾರಿ - ಮತಿ
  26. ಧೃತರಾಷ್ಟ್ರ – ಹಂಸನೆಂಬ ಗಂಧರ್ವ
  27. ಜರಾಸಂಧ - ಅಸುರ ವಿಪ್ರಚಿತ್ತಿ
  28. ಶಿಶುಪಾಲ - ಹಿರಣ್ಯಕಶಿಪು
  29. ಶಲ್ಯ - ಪ್ರಹ್ಲಾದನ ತಮ್ಮ ಸಂಹ್ರಾದ
  30. ಧೃಷ್ಟಕೇತು - ಪ್ರಹ್ಲಾದನ ತಮ್ಮ ಅನುಹ್ರಾದ
  31. ಭಗದತ್ತ – ಅಸುರ ಬಾಷ್ಕಲ

 ದೇವ-ದಾನವರ ಅಂಶಾವತರಣದ ವರ್ಣನೆಯಿರುವುದರಿಂದ ಈ ಉಪಪರ್ವಕ್ಕೆ ಆದಿವಂಶಾವತರಣಪರ್ವವೆಂಬ ಹೆಸರು ಬಂದಿರಬಹುದು.

ಆದಿಪರ್ವದ ಏಳನೆಯ ಉಪಪರ್ವವಾದ ಸಂಭವಪರ್ವವು ಶ್ಲೋಕಸಂಖ್ಯೆಗಳ ಪ್ರಕಾರ ಅತಿದೊಡ್ಡ ಉಪಪರ್ವವು. ಇದು ಕೌರವ-ಪಾಂಡವರು ಹುಟ್ಟಿದ ಭರತವಂಶದ ಪ್ರಾರಂಭವನ್ನು ವರ್ಣಿಸುವ ಶಕುಂತಲೋಪಾಖ್ಯಾನ ಮತ್ತು ಅದೇ ಭರತವಂಶವು ಮುಂದೆ ಪುರುವಂಶವಾದುದನ್ನು ಸೂಚಿಸುವ ಯಯಾತ್ಯುಪಾಖ್ಯಾನಗಳಿಂದ ಪ್ರಾರಂಭವಾಗುತ್ತದೆ.

ಶಕುಂತಲೋಪಾಖ್ಯಾನದಲ್ಲಿ ಉತ್ತಮ ರಾಜ್ಯಭಾರಮಾಡುತ್ತಿದ್ದ ಪೌರವರ ವಂಶಕರನಾದ ದುಃಷಂತನು ಒಮ್ಮೆ ಬೇಟೆಗೆ ಹೋದಾಗ ಕಣ್ವಾಶ್ರಮವನ್ನು ಕಂಡು ಅದನ್ನು ಪ್ರವೇಶಿಸುತ್ತಾನೆ. ಆ ಸಮಯದಲ್ಲಿ ಕಣ್ವನು ಆಶ್ರಮದಲ್ಲಿ ಇಲ್ಲದಿರಲು ಶಕುಂತಲೆಯು ದುಃಷಂತನನ್ನು ಸ್ವಾಗತಿಸಿ ಸತ್ಕರಿಸಿ ತನ್ನ ಜನ್ಮವೃತ್ತಾಂತವನ್ನು ಹೇಳುತ್ತಾಳೆ. ವಿಶ್ವಾಮಿತ್ರನ ತಪಸ್ಸಿಗೆ ಹೆದರಿ ಇಂದ್ರನು ಮೇನಕೆಯ ಸಹಾಯವನ್ನು ಕೋರಲು ಮೇನಕೆಯು ವಿಶ್ವಾಮಿತ್ರನ ಎದಿರು ಬಂದಾಗ ವಿಶ್ವಾಮಿತ್ರನು ಅವಳನ್ನು ಬಯಸುತ್ತಾನೆ. ವಿಶ್ವಾಮಿತ್ರ-ಮೇನಕೆಯರಲ್ಲಿ ಹುಟ್ಟಿದ ಹೆಣ್ಣುಮಗುವನ್ನು ಅರಣ್ಯದಲ್ಲಿಯೇ ತೊರೆದು ಹೋಗಲು ಕಣ್ವನು ಮಗುವನ್ನು ಆಶ್ರಮಕ್ಕೆ ಕರೆತಂದು ಶಕುಂತಲೆಯೆಂದು ಸಾಕುತ್ತಾನೆ. ಅವಳ ಜನ್ಮಕಥೆಯನ್ನು ಕೇಳಿದ ದುಃಷಂತನು ಶಕುಂತಲೆಗೆ ವಿವಾಹವಾಗಲು ಕೇಳಿಕೊಳ್ಳುತ್ತಾನೆ. ಅವಳ ಮಗನೇ ತನ್ನ ವಾರಸುದಾರನಾಗುತ್ತಾನೆಂಬ ಭರವಸೆಯನ್ನಿತ್ತು ದುಃಷಂತನು ಶಕುಂತಲೆಯನ್ನು ಕೂಡಿ ಹೊರಟುಹೋಗುತ್ತಾನೆ. ಆಶ್ರಮಕ್ಕೆ ಹಿಂದಿರುಗಿದ ಕಣ್ವನು ಶಕುಂತಲೆಗೆ “ಪೌರವರು ಸದಾ ಧರ್ಮಿಷ್ಠರಾಗಿರಲಿ ಮತ್ತು ಅವರಿಗೆ ಎಂದೂ ರಾಜ್ಯಚ್ಯುತಿಯಾಗದಿರಲಿ” ಎಂಬ ವರವನ್ನು ನೀಡುತ್ತಾನೆ. ತನ್ನಲ್ಲಿ ಹುಟ್ಟಿದ ಸರ್ವದಮನನನ್ನು ಶಕುಂತಲೆಯು ಮೂರುವರ್ಷಗಳ ನಂತರ ದುಃಷಂತನಿಗೆ ಒಪ್ಪಿಸುತ್ತಾಳೆ. ಅಪ್ಸರೆಯ ಮೊಮ್ಮಗನಾಗಿದ್ದ ಸರ್ವದಮನನು ಮೂರುವರ್ಷದ ಮನುಷ್ಯ ಬಾಲಕನಿಗಿಂತಲೂ ಅಧಿಕವಾಗಿ ಬೆಳೆದಿದ್ದನು. ದುಃಷಂತನು ಮರೆಯದಿದ್ದರೂ, ಜನಾಪವಾದದ ಭಯದಿಂದ, ನೆನಪಿಲ್ಲವೆಂದು ಹೇಳಿ ತುಂಬಿದ ಸಭೆಯಲ್ಲಿ ಶಕುಂತಲೆಯನ್ನು ಅಪಮಾನಿಸುತ್ತಾನೆ. ಶಕುಂತಲೆಯು ತಿರುಗಿ ದುಃಷಂತನನ್ನು ನಿಂದಿಸಲು, ಆಕಾಶವಾಣಿಯ ಸಲಹೆಯಂತೆ ದುಃಷಂತನು ಶಕುಂತಲೆ-ಸರ್ವದಮನರನ್ನು ಸ್ವೀಕರಿಸಿ, ಮಗನಿಗೆ ಭರತನೆಂಬ ಹೆಸರನ್ನು ನೀಡುತ್ತಾನೆ. ಭರತನು ಚಕ್ರವರ್ತಿ ಸಾರ್ವಭೌಮನೆಂದೆನಿಸಿಕೊಳ್ಳುತ್ತಾನೆ. ಮಹಾಭಾರತದಲ್ಲಿ ಬರುವ ಶಕುಂತಲೋಪಾಖ್ಯಾನವು ಪದ್ಮಪುರಾಣದಲ್ಲಿ ಬರುವ ಆಖ್ಯಾನಕ್ಕಿಂತ ಭಿನ್ನವಾಗಿದೆ. ಕವಿ ಕಾಳಿದಾಸನ ಪ್ರಸಿದ್ಧ ನಾಟಕ ಅಭಿಜ್ಞಾನಶಾಕುಂತಲವು ಹೆಚ್ಚಾಗಿ ಪದ್ಮಪುರಾಣದಲ್ಲಿ ಬರುವ ಕಥೆಯನ್ನು ಆಧರಿಸಿಕೊಂಡಂತಿದೆ.

ಯಯಾತ್ಯುಪಾಖ್ಯಾನವು ಮೂರು ಭಾಗಗಳಲ್ಲಿದೆ: (1) ಕಚ ಮತ್ತು ದೇವಯಾನಿಯರ ಕಥೆ (2) ಯಯಾತಿ, ದೇವಯಾನಿ ಮತ್ತು ಶರ್ಮಿಷ್ಠೆಯರ ಕಥೆ ಮತ್ತು (3) ಯಯಾತಿಯ ಉತ್ತರ ಚರಿತೆ. ಕಚ-ದೇವಯಾನಿಯರ ಕಥೆಯಲ್ಲಿ ದೇವತೆಗಳು ಬೃಹಸ್ಪತಿಯ ಮಗ ಕಚನನ್ನು ಸಂಜೀವನೀ ವಿದ್ಯೆಯನ್ನು ಕಲಿಯಲು ಅಸುರರ ಆಚಾರ್ಯ ಶುಕ್ರನಲ್ಲಿಗೆ ಕಳುಹಿಸುತ್ತಾರೆ. ವಿಷಯವನ್ನು ತಿಳಿದ ಅಸುರರು ಕಚನನ್ನು ಕೊಲ್ಲಲು ಮಗಳು ದೇವಯಾನಿಯ ಮಾತಿನಂತೆ ಶುಕ್ರನು ಅವನನ್ನು ಬದುಕಿಸುತ್ತಾನೆ. ಅಸುರರು ಎರಡನೇ ಬಾರಿ ಕಚನನ್ನು ಕೊಂದು ಸುಟ್ಟು ಭಸ್ಮವನ್ನು ಮದ್ಯದಲ್ಲಿ ಸೇರಿಸಿ ಶುಕ್ರನಿಗೆ ಕುಡಿಯಲು ಕೊಡುತ್ತಾರೆ. ಕಚನನ್ನು ಕಾಣದ ದೇವಯಾನಿಯು ಪುನಃ ಕೇಳಿಕೊಳ್ಳನು ಶುಕ್ರನು ಕಚನನ್ನು ಬದುಕಿಸಲು ತನ್ನ ಹೊಟ್ಟೆಯೊಳಗಿದ್ದ ಕಚನಿಗೆ ಸಂಜೀವನೀ ಮಂತ್ರವನ್ನು ಹೇಳಿಕೊಡುತ್ತಾನೆ. ವಿದ್ಯಾಭ್ಯಾಸ ಮುಗಿಸಿ ಹೊರಟಿದ್ದ ಕಚನನ್ನು ದೇವಯಾನಿಯು ಮದುವೆಯಾಗಲು ಕೇಳಿಕೊಳ್ಳುತ್ತಾಳೆ. ಕಚನು ನಿರಾಕರಿಸಲು ದೇವಯಾನಿಯು ಕಚನಿಗೆ ವಿದ್ಯೆಯು ಸಫಲವಾಗಲಾರದೆಂದು ಶಾಪವನ್ನು ಕೊಡುತ್ತಾಳೆ ಮತ್ತು ಕಚನು ಬ್ರಾಹ್ಮಣರ್ಯಾರೂ ಅವಳನ್ನು ಮದುವೆಯಾಗಲಾರರು ಎಂದು ಮರುಶಾಪವನ್ನು ಕೊಡುತ್ತಾನೆ.

ಯಯಾತಿ-ದೇವಯಾನಿ-ಶರ್ಮಿಷ್ಠೆಯರ ಕಥೆಯಲ್ಲಿ ದೇವಯಾನಿ ಮತ್ತು ಅಸುರ ರಾಜ ವೃಷಪರ್ವನ ಮಗಳು ಶರ್ಮಿಷ್ಠೆಯರ ನಡುವೆ ಒಮ್ಮೆ ಜಗಳವಾಗಿ ಶರ್ಮಿಷ್ಠೆಯು ದೇವಯಾನಿಯನ್ನು ಬಾವಿಯೊಂದಕ್ಕೆ ದೂಡಿ ಬೀಳಿಸುತ್ತಾಳೆ. ಬೇಟೆಯಾಡುತ್ತಿದ್ದ ಯಯಾತಿಯು ಅಕಸ್ಮಾತ್ತಾಗಿ ಆ ಬಾವಿಯ ಬಳಿ ಬಂದಾಗ ಅವನು ದೇವಯಾನಿಯನ್ನು ಬಾವಿಯಿಂದ ಮೇಲೆತ್ತುತ್ತಾನೆ. ದೇವಯಾನಿಯು ತಂದೆಯಲ್ಲಿ ಶರ್ಮಿಷ್ಠೆಗೆ ಶಿಕ್ಷೆಯನ್ನು ವಿಧಿಸಬೇಕೆಂದು ಒತ್ತಾಯಿಸುತ್ತಾಳೆ. ಪರಿಣಾಮವಾಗಿ ದೇವಯಾನಿಯು ಶರ್ಮಿಷ್ಠೆಯನ್ನು ದಾಸಿಯನ್ನಾಗಿಸಿಕೊಳ್ಳುತ್ತಾಳೆ. ದೇವಯಾನಿಯು ಮದುವೆಯಾಗಿ ಎಲ್ಲಿ ಹೋಗುತ್ತಾಳೋ ಅಲ್ಲಿಗೂ ಬರುತ್ತೇನೆಂದು ಶರ್ಮಿಷ್ಠೆಯು ಒಪ್ಪಿಕೊಳ್ಳುತ್ತಾಳೆ. ದೇವಯಾನಿಯು ಯಯಾತಿಯಲ್ಲಿ ಮದುವೆಯಾಗಲು ಕೇಳಿಕೊಂಡಾಗ ಅವನು ತಾನು ಬ್ರಾಹ್ಮಣನಲ್ಲವೆಂದು ಮದುವೆಗೆ ಒಪ್ಪಿಕೊಳ್ಳುವುದಿಲ್ಲ. ಆದರೆ ದೇವಯಾನಿಯು ಹಠ ಹಿಡಿದು ತಂದೆಯು ತನ್ನನ್ನು ಯಯಾತಿಗೆ ಮದುವೆಮಾಡಿಸುವಂತೆ ಮಾಡುತ್ತಾಳೆ. ಶರ್ಮಿಷ್ಠೆಯು ದೇವಯಾನಿಯನ್ನು ಹಿಂಬಾಲಿಸಿ ಹೋಗುತ್ತಾಳೆ. “ಶರ್ಮಿಷ್ಠೆಯನ್ನು ಎಂದೂ ನಿನ್ನ ಹಾಸಿಗೆಯ ಮೇಲೆ ಕರೆದುಕೊಳ್ಳಬೇಡ” ಎಂದು ಶುಕ್ರನು ಯಯಾತಿಗೆ ಎಚ್ಚರಿಸಿ ಕಳುಹಿಸುತ್ತಾನೆ. ದೇವಯಾನಿಗೆ ಮೊದಲ ಪುತ್ರನು ಜನಿಸಿದ ನಂತರ ಶರ್ಮಿಷ್ಠೆಯು ಯಯಾತಿಯಿಂದ ಸಂತಾನವನ್ನು ಪಡೆಯಲು ನಿರ್ಧರಿಸಿ ಅವನಿಂದ ಮಗನನ್ನು ಪಡೆಯುತ್ತಾಳೆ. ದೇವಯಾನಿಯು ಅವಳ ಮಗನ ತಂದೆಯ ಕುರಿತು ಪ್ರಶ್ನಿಸಲು ಶರ್ಮಿಷ್ಠೆಯು ಸುಳ್ಳುಹೇಳುತ್ತಾಳೆ. ಸತ್ಯವನ್ನು ತಿಳಿದ ದೇವಯಾನಿಯು ಶರ್ಮಿಷ್ಠೆಯನ್ನು ನಿಂದಿಸುತ್ತಾಳೆ ಮತ್ತು ಶುಕ್ರನು ಯಯಾತಿಗೆ ವೃದ್ಧಾಪ್ಯದ ಶಾಪವನ್ನಿತ್ತು ಅದಕ್ಕೆ ಪರಿಹಾರವನ್ನೂ ಸೂಚಿಸುತ್ತಾನೆ. ಯಯಾತಿಯು ತನ್ನ ಮುಪ್ಪನ್ನು ಕೊಟ್ಟು ಮಕ್ಕಳ ಯೌವನವನ್ನು ಪಡೆಯಲು ಪ್ರಯತ್ನಿಸಲು ಶರ್ಮಿಷ್ಠೆಯ ಕೊನೆಯ ಮಗನಾದ ಪೂರುವು ಮಾತ್ರ ಅದಕ್ಕೆ ಒಪ್ಪಿಕೊಳ್ಳುತ್ತಾನೆ. ಸಾವಿರ ವರ್ಷಗಳ ನಂತರ ಯಯಾತಿಯು ಯೌವನವನ್ನು ಮಗ ಪೂರುವಿಗೆ ಹಿಂದಿರುಗಿಸಿ, ಅವನಿಗೆ ಪಟ್ಟಾಭಿಷೇಕವನ್ನು ಮಾಡಿ ವನಕ್ಕೆ ತೆರಳುತ್ತಾನೆ. ಪೂರುವಿನ ವಂಶದಲ್ಲಿ ಹುಟ್ಟಿದ ಪೌರವರು ಸಹಸ್ರಾರು ವರ್ಷಗಳು ಆ ರಾಜ್ಯವನ್ನಾಳಿದರು.

ಉತ್ತರ ಯಾಯತಿ ಚರಿತೆಯಲ್ಲಿ ಯಯಾತಿಯು ವಾನಪ್ರಸ್ಥದಲ್ಲಿ ಹಲವಾರು ಕಠಿಣ ವ್ರತ-ತಪಸ್ಸುಗಳನ್ನು ಕೈಗೊಂಡು ತನ್ನ ಪುಣ್ಯದಿಂದ ಸ್ವರ್ಗವನ್ನೇರುತ್ತಾನೆ. ಸ್ವರ್ಗದಲ್ಲಿ ಯಯಾತಿಯು ವಾಸಿಸುತ್ತಿದ್ದಾಗ ಇಂದ್ರನ ಪ್ರಶ್ನೆಗೆ ಯಯಾತಿಯು ಉತ್ತರಿಸುವಾಗ ತಪಸ್ಸಿನಲ್ಲಿ ತನ್ನ ಸರಿಸಮಾನರು ಯಾರು ಇಲ್ಲವೆಂದು ಹೇಳುತ್ತಾನೆ. ದೇವ-ಗಂಧರ್ವ-ಋಷಿಗಳನ್ನು ಹೀಗೆ ಅಪಮಾನಿಸಿ ಯಯಾತಿಯು ಕ್ಷೀಣಪುಣ್ಯನಾದನೆಂದು ಇಂದ್ರನು ಅವನನ್ನು ಸ್ವರ್ಗದಿಂದ ಬೀಳಿಸುವಾಗ ಸತ್ಯವಂತರ ಮಧ್ಯೆ ಬೀಳಿಸಬೇಕೆಂದು ಯಯಾತಿಯು ಕೇಳಿಕೊಳ್ಳುತ್ತಾನೆ. ಯಯಾತಿಯು ತನ್ನ ಮಗಳ ಮಕ್ಕಳಾದ ಅಷ್ಟಕ, ಪ್ರತರ್ದನ, ವಸುಮನ ಮತ್ತು ಶಿಬಿಯರು ಮಾಡುತ್ತಿದ್ದ ಯಜ್ಞದ ಪ್ರದೇಶದಲ್ಲಿ ಬೀಳುತ್ತಾನೆ. ಅಲ್ಲಿ ಯಯಾತಿಯು ಅನುಭವಿಸಿದ ಅನೇಕ ಲೋಕಗಳ ಕುರಿತು, ಮರಣಾನಂತರ ಜೀವವು ಎಲ್ಲಿರುತ್ತಾನೆ ಎನ್ನುವುದರ ಕುರಿತು, ಹಾಗೂ ಆಶ್ರಮ ಧರ್ಮಗಳ ಕುರಿತು ಯಯಾತಿ ಮತ್ತು ಅಷ್ಟಕರ ನಡುವಿನ ಸಂವಾದವಿದೆ. ತನ್ನ ಮೊಮ್ಮಕ್ಕಳು ನೀಡಿದ ಪುಣ್ಯಲೋಕಗಳನ್ನು ನಿರಾಕರಿಸಿ ಯಯಾತಿಯು ಅಷ್ಟಕಾದಿ ನಾಲ್ಕೂ ರಾಜರೊಂದಿಗೆ ಪುನಃ ಸ್ವರ್ಗಕ್ಕೆ ಹೋಗುತ್ತಾನೆ.

ಶಕುಂತಲೋಪಾಖ್ಯಾನ ಮತ್ತು ಯಯಾತ್ಯುಪಾಖ್ಯಾನಗಳ ನಂತರ ಸಂಭವಪರ್ವದಲ್ಲಿ ವೈಶಂಪಾಯನನು ತಾನು ವ್ಯಾಸನಿಂದ ಕೇಳಿದಂತೆ ಜನಮೇಜಯನ ಸಂಪೂರ್ಣ ವಂಶಾವಳಿಯನ್ನು ದಕ್ಷನಿಂದ ಪ್ರಾರಂಭಿಸಿ ಜನಮೇಜಯನ ಅಶ್ವಮೇಧದತ್ತನ ವರೆಗೆ ಹೇಳುತ್ತಾನೆ. ಇದನ್ನು ಐದು ಭಾಗಗಳನ್ನಾಗಿ ವಿಂಗಡಿಸಬಹುದು:

  • ದಕ್ಷನಿಂದ ಪೂರುವಿನವರೆಗಿನ ವಂಶಾವಳಿ: ದಕ್ಷ-ಅದಿತಿ-ವಿವಸ್ವಾನ್-ಮನು-ಇಲಾ-ಪುರೂರವ-ಆಯು-ನಹುಷ-ಯಯಾತಿ-ಪೂರು.
  • ಪೂರುವಿನಿಂದ ಭರತನವರೆಗಿನ ವಂಶಾವಳಿ: ಪೂರು-ಜನಮೇಜಯ-ಪ್ರಾಚಿನ್ವತ-ಸಂಯಾತಿ-ಅಹಂಪಾತಿ-ಸಾರ್ವಭೌಮ-ಜಯತ್ಸೇನ-ಅರಾಚೀನ-ಮಹಾಭೌಮ-ಅಯುತನಾಯಿ-ಅಕ್ರೋಧನ-ದೇವಾತಿಥಿ-ಋಚ-ಋಕ್ಷ-ಮತಿನಾರ-ತಂಸು-ಇಲಿನ-ದುಃಷಂತ-ಭರತ.
  • ಭರತನಿಂದ ಕುರುವಿನವರೆಗಿನ ವಂಶಾವಳಿ: ಭರತ-ಭುಮನ್ಯು-ಸುಹೋತ್ರ-ಹಸ್ತಿ-ವಿಕುಂತ-ಅಜಮೀಢ-ಸಂವರಣ-ಕುರು.
  • ಕುರುವಿನಿಂದ ಶಂತನುವಿನವರೆಗಿನ ವಂಶಾವಳಿ: ಕುರು-ವಿಡೂರಥ-ಅರುಗ್ವತ-ಪರಿಕ್ಷಿತ-ಭೀಮಸೇನ-ಪ್ರತೀಪ-ಶಂತನು.
  • ಶಂತನುವಿನಿಂದ ಅಶ್ವಮೇಧದತ್ತನವರೆಗಿನ ವಂಶಾವಳಿ: ಶಂತನು-ವಿಚಿತ್ರವೀರ್ಯ-ಪಾಂಡು-ಅರ್ಜುನ-ಅಭಿಮನ್ಯು-ಪರಿಕ್ಷಿತ-ಜನಮೇಜಯ-ಶತಾನೀಕ-ಅಶ್ವಮೇಧದತ್ತ.

ವಂಶಾನುಕೀರ್ತನೆಯ ನಂತರ ಸಂಭವಪರ್ವದಲ್ಲಿ ಮಹಾಭಿಷೋಪಾಖ್ಯಾ, ಶಂತನೂಪಾಖ್ಯನ ಮತ್ತು ಆಪವೋಪಾಖ್ಯಾನಗಳು ಬರುತ್ತವೆ. ಸ್ವರ್ಗವನ್ನು ಸೇರಿದ್ದ ಇಕ್ಷ್ವಾಕುವಂಶದ ಮಹಾಭಿಷನು ಗಂಗೆಯನ್ನು ಮೋಹಿಸಿದುದಕ್ಕಾಗಿ ಬ್ರಹ್ಮನಿಂದ ಶಪಿಸಲ್ಪಟ್ಟು ಕುರುವಂಶದಲ್ಲಿ ಪ್ರತೀಪನ ಮಗ ಶಂತನುವಾಗಿ ಜನಿಸುತ್ತಾನೆ. ವಸಿಷ್ಠನಿಂದ ಭೂಮಿಯಲ್ಲಿ ಜನ್ಮತಾಳಿ ಎಂದು ಶಾಪಗ್ರಸ್ಥರಾದ ಅಷ್ಟವಸುಗಳು ಮನುಷ್ಯಯೋನಿಯನ್ನು ತಿರಸ್ಕರಿಸಿ ತಮ್ಮ ತಾಯಿಯಾಗಬೇಕೆಂದು ಗಂಗೆಯಲ್ಲಿ ಕೇಳಿಕೊಳ್ಳುತ್ತಾರೆ, ಮತ್ತು ಗಂಗೆಯು ಶಂತನುವನ್ನು ಕರ್ತನನ್ನಾಗಿ ಆರಿಸಿಕೊಳ್ಳುತ್ತಾಳೆ. ಹುಟ್ಟಿದ ಕೂಡಲೇ ಅವರಿಗೆ ಮನುಷ್ಯಜೀವದಿಂದ ಮುಕ್ತಗೊಳಿಸಬೇಕೆಂದು ವಸುಗಳು ಕೇಳಲು, ಶಂತನುವಿಗೋಸ್ಕರ ಎಂಟರಲ್ಲಿ ಒಬ್ಬನನ್ನು ಉಳಿಸುತ್ತೇನೆಂದು ಗಂಗೆಯು ಒಪ್ಪಿಕೊಳ್ಳುತ್ತಾಳೆ.

ತನ್ನನ್ನು ಸೊಸೆಯಾಗಿ ಸ್ವೀಕರಿಸಬೇಕೆಂದು ಗಂಗೆಯು ಪ್ರತೀಪನಲ್ಲಿ ಕೇಳಿಕೊಳ್ಳುತ್ತಾಳೆ. ಗಂಗೆಗೆ ಮಾತುಕೊಟ್ಟಂತೆ ಪುತ್ರಕಾಮಿಯಾಗಿ ಸ್ತ್ರೀಯು ಬಂದರೆ ಅವಳು ಯಾರೆಂದು ಕೇಳದೇ ವಿವಾಹವಾಗೆಂದು ಪ್ರತೀಪನು ಮಗ ಶಂತನುವಿಗೆ ಹೇಳುತ್ತಾನೆ. ಶಂತನವು ಪ್ರಶ್ನಿಸಬಾರದೆಂದು ಅವಳು ಹಾಕಿದ ನಿಬಂಧನೆಯ ಮೇರೆಗೆ ಗಂಗೆಯನ್ನು ವಿವಾಹವಾಗುತ್ತಾನೆ. ಗಂಗೆಯು ಹುಟ್ಟಿದ ಏಳು ಮಕ್ಕಳನ್ನು ಹುಟ್ಟಿದಾಗಲೇ ನೀರಿಗೆ ಹಾಕುತ್ತಾಳೆ. ಎಂಟನೆಯವನನ್ನು ನೀರಿಗೆ ಹಾಕಲು ಹೋಗುವಾಗ ಶಂತನುವು ತಡೆಯಲು ಗಂಗೆಯು ತನ್ನ ಮತ್ತು ಹುಟ್ಟಿದ ಮಕ್ಕಳ ಪರಿಚಯವನ್ನು ಹೇಳಿ ಕೊನೆಯವನನ್ನು ಉಳಿಸುತ್ತೇನೆಂದೂ ಆದರೆ ಹೊರಟುಹೋಗುವೆನೆಂದೂ ನುಡಿಯುತ್ತಾಳೆ. ಅದೇ ಸಂದರ್ಭದಲ್ಲಿ ಗಂಗೆಯು ಶಂತನುವಿಗೆ ವಸಿಷ್ಠನಿಂದ ವಸುಗಳಿಗೆ ದೊರೆತ ಶಾಪ ಮತ್ತು ತಾನು ಅವರಿಗೆ ನೀಡಿದ ವರಗಳ ಕುರಿತು ಹೇಳಿ, ಕೊನೆಯ ಮಗ ದೇವವ್ರತನನ್ನು ತನ್ನ ಜೊತೆ ಕರೆದುಕೊಂಡು ಹೊರಟುಹೋಗುತ್ತಾಳೆ.

ಹಲವು ಕಾಲದ ನಂತರ ಗಂಗೆಯು ಸಕಲ ವಿದ್ಯಾಪಾರಂಗತನನ್ನಾಗಿಸಿದ ದೇವವ್ರತನನ್ನು ಶಂತನುವಿಗೆ ಒಪ್ಪಿಸುತ್ತಾಳೆ. ವನವಿಹಾರಕ್ಕೆ ಹೋಗಿದ್ದಾಗ ಒಮ್ಮೆ ಶಂತನುವು ಸತ್ಯವತಿಯನ್ನು ಕಂಡು ವಿವಾಹಕ್ಕೆ ಕೇಳಲು, ಅವಳ ತಂದೆ ದಾಶನು ಹಾಕಿದ ನಿಬಂಧನೆಗಳನ್ನು ನಿರಾಕರಿಸಿ ದುಃಖದಲ್ಲಿ ಮುಳುಗುತ್ತಾನೆ. ದೇವವ್ರತನು ತಂದೆಯ ದುಃಖಕ್ಕೆ ಕಾರಣವನ್ನು ಕೇಳಿ ತಿಳಿದುಕೊಂಡು ದಾಶನ ಬಳಿಬಂದು ಘೋರಪ್ರತಿಜ್ಞೆಗಳನ್ನು ಮಾಡಿ ಭೀಷ್ಮನೆನಿಸಿಕೊಳ್ಳುತ್ತಾನೆ. ಶಾಂತನು-ಸತ್ಯವತಿಯರ ವಿವಾಹವಾಗುತ್ತದೆ. ಶಂತನುವು ಭೀಷ್ಮನಿಗೆ ಸ್ವಚ್ಛಂದ ಮರಣದ ವರವನ್ನು ನೀಡುತ್ತಾನೆ.

ಶಂತನು-ಸತ್ಯವತಿಯರಲ್ಲಿ ಚಿತ್ರಾಂಗದ-ವಿಚಿತ್ರವೀರ್ಯರೆನ್ನುವ ಇಬ್ಬರು ರಾಜಕುಮಾರರ ಜನ್ಮವಾಗುತ್ತದೆ. ಶಂತನುವು ತೀರಿಕೊಂಡ ನಂತರ ಚಿತ್ರಾಂಗದನಿಗೆ ಪಟ್ಟಾಭಿಷೇಕವಾಗುತ್ತದೆ. ತನ್ನದೇ ಹೆಸರಿನ ಗಂಧರ್ವನೊಡನೆ ಹೋರಾಡಿ ಚಿತ್ರಾಂಗದನ ಅಕಾಲ ಮರಣವಾಗುತ್ತದೆ. ಬಾಲಕ ವಿಚಿತ್ರವೀರ್ಯನಿಗೆ ಪಟ್ಟವಾಗುತ್ತದೆ. ಬಾಲಕ ತಮ್ಮನಿಗೆಂದು ಭೀಷ್ಮನು ಕಾಶೀರಾಜಪುತ್ರಿಯರಾದ ಅಂಬೆ, ಅಂಬಿಕೆ, ಅಂಬಾಲಿಕೆಯರನ್ನು ಸ್ವಯಂವರಕ್ಕೆ ಹೋಗಿ ಬಲವಂತವಾಗಿ ಎತ್ತಿ ರಥದಲ್ಲಿ ಕುಳ್ಳಿರಿಸಿಕೊಂಡು ಸ್ವಯುಂವರಕ್ಕೆ ಬಂದಿದ್ದ ರಾಜರನ್ನು ಯುದ್ಧದಲ್ಲಿ ಪರಾಭವಗೊಳಿಸುತ್ತಾನೆ. ಅಂಬೆಯು ಶಾಲ್ವನನ್ನು ಪ್ರೀತಿಸಿರುವುದಾಗಿ ಹೇಳಲು ಅವಳಿಗೆ ಹೋಗಲು ಭೀಷ್ಮನು ಅನುಮತಿಯನ್ನು ನೀಡುತ್ತಾನೆ. ಮಕ್ಕಳಿಲ್ಲದೇ ವಿಚಿತ್ರವೀರ್ಯನ ಅಕಾಲ ಮರಣವಾಗುತ್ತದೆ.

ಕುಲಸಂತಾನಕ್ಕಾಗಿ ಸಂತಾಪದಿಂದ ಸತ್ಯವತಿಯು ವಿಚಿತ್ರವೀರ್ಯನ ವಿಧವೆಯರನ್ನು ಕೂಡುವಂತೆ ಭೀಷ್ಮನಲ್ಲಿ ಕೇಳಿಕೊಳಲು ಭೀಷ್ಮನು ತನ್ನ ಪ್ರತಿಜ್ಞೆಯನ್ನು ಮುರಿಯುವುದಿಲ್ಲವೆಂದೂ, ಕುಲಸಂತಾನಕ್ಕೆ ಬೇರೆ ಮಾರ್ಗಗಳಿವೆಯೆಂದೂ ಹೇಳುತ್ತಾನೆ. ಬ್ರಾಹ್ಮಣ ದೀರ್ಘತಮಸ್ಸು ಕ್ಷತ್ರಾಣಿಯಲ್ಲಿ ಅಂಗರಾಜನನ್ನು ಹುಟ್ಟಿಸಿದ ಚರಿತ್ರೆಯನ್ನು ಹೇಳಿ ಭೀಷ್ಮನು ಹಿಂದೆ ಬ್ರಾಹ್ಮಣರಿಂದ ಕ್ಷತ್ರಿಯರು ರಾಜರನ್ನು ಪಡೆದುದನ್ನು ಸೂಚಿಸುತ್ತಾನೆ. ಸತ್ಯವತಿಯು ಮದುವೆಗೆ ಮೊದಲು ತನಗೆ ಮುನಿ ಪರಾಶರನಿಂದ ಹುಟ್ಟಿದ ಮಗನೊಬ್ಬನಿದ್ದಾನೆ ಎಂದು ಭೀಷ್ಮನಿಗೆ ತಿಳಿಸಿ, ಭೀಷ್ಮನ ಒಪ್ಪಿಗೆಯನ್ನು ಪಡೆದು ಮಗ ವ್ಯಾಸನನ್ನು ಕರೆಯಿಸಿಕೊಳ್ಳುತ್ತಾಳೆ. ತಮ್ಮನ ವಿಧವೆಯರಲ್ಲಿ ಕುಲಸಂತಾನವನ್ನು ಪಡೆಯುವಂತೆ ವ್ಯಾಸನಲ್ಲಿ ಕೇಳಿಕೊಳ್ಳುತ್ತಾಳೆ. ಒಂದುವರ್ಷ ತಡೆಯಲು ಹೇಳಿದರೂ ಸತ್ಯವತಿಯು ವ್ಯಾಸನನ್ನು ಒತ್ತಾಯಿಸಿ ನಿಯೋಗಕ್ಕೆ ಒಪ್ಪಿಸುತ್ತಾಳೆ. ವ್ಯಾಸನಿಂದ ಅಂಬಿಕೆಯಲ್ಲಿ ಕುರುಡ ಧೃತರಾಷ್ಟ್ರನ, ಅಂಬಾಲಿಕೆಯಲ್ಲಿ ಪಾಂಡುವಿನ, ಮತ್ತು ಅಂಬಿಕೆಯ ದಾಸಿಯಲ್ಲಿ ವ್ಯಾಸಪುತ್ರ ವಿದುರನ ಜನನವಾಗುತ್ತದೆ. ಇಲ್ಲಿ ಜನಮೇಜಯನು ಕೇಳಲು ವೈಶಂಪಾಯನನು ಅಣೀಮಾಂಡವ್ಯನು ಧರ್ಮನನ್ನು ಶೂದ್ರಯೋನಿಯಲ್ಲಿ ಜನಿಸುವಂತೆ ಶಪಿಸಿದ ಅಣೀಮಾಂಡವ್ಯೋಪಾಖ್ಯಾನವನ್ನು ಹೇಳಿದ್ದಿದೆ.

ಪಾಂಡುವಿಗೆ ರಾಜ್ಯಪ್ರಾಪ್ತಿಯಾಗುತ್ತದೆ. ನೂರು ಮಕ್ಕಳ ತಾಯಿಯಾಗುವ ವರವನ್ನು ಪಡೆದಿದ್ದ ಸೌಬಲನ ಮಗಳು ಗಾಂಧಾರಿಯೊಡನೆ ಧೃತರಾಷ್ಟ್ರನ ವಿವಹವಾಗುತ್ತದೆ. ಗಾಂಧಾರಿಯು ಕಣ್ಣಿಗೆ ಪಟ್ಟಿಯನ್ನು ಕಟ್ಟಿಕೊಂಡು ಪಾತಿವ್ರತ್ಯವನ್ನು ಪಾಲಿಸುತ್ತಾಳೆ. ಇಲ್ಲಿ ವೈಶಂಪಾಯನನು ಜನಮೇಜಯನಿಗೆ ವಿವಾಹಪೂರ್ವದಲ್ಲಿಯೇ ಕುಂತಿಯಲ್ಲಿ ಕರ್ಣನು ಹುಟ್ಟಿದ ವಿಷಯವನ್ನು ಹೇಳುತ್ತಾನೆ.

ಯಾದವರ ಅರಸ ಶೂರನು ತನ್ನ ಮಗಳು, ವಸುದೇವನ ಸಹೋದರಿ, ಪೃಥೆಯನ್ನು ಸೋದರತ್ತೆಯ ಮಗ ಕುಂತೀಭೋಜನಿಗೆ ಕೊಡುತ್ತಾನೆ. ಕುಂತೀಭೋಜನ ಮನೆಯಲ್ಲಿ ದುರ್ವಾಸನ ಆತಿಥ್ಯವನ್ನು ಮಾಡಿ, ಅವನಿಂದ ಮಂತ್ರವನ್ನು ಕುಂತಿಯು ಪಡೆದು ಕುತೂಹಲದಿಂದ ಸೂರ್ಯನನ್ನು ಆಹ್ವಾನಿಸಲು ಅವನಿಂದ ಮಗ ಕರ್ಣನನ್ನು ಪಡೆಯುತ್ತಾಳೆ. ನೀರಿನಲ್ಲಿ ತೇಲಿಸಿಬಿಡಲ್ಪಟ್ಟ ಕರ್ಣನು ಸೂತನಂದನನೆಂದೂ, ವಸುಷೇಣನೆಂದೂ, ವೈಕರ್ತನನೆಂದೂ ಕರೆಯಿಸಿಕೊಳ್ಳುತ್ತಾನೆ. ಅದೇ ಕುಂತಿಯು ಸ್ವಯಂವರದಲ್ಲಿ ಪಾಡುವನ್ನು ವರಿಸುತ್ತಾಳೆ.  ಭೀಷ್ಮನು ಮದ್ರದೇಶದ ರಾಜಕುಮಾರಿ ಮಾದ್ರಿಯನ್ನು ಕೊಂಡುತಂದು ಪಾಂಡುವಿಗೆ ವಿವಾಹಮಾಡಿಸುತ್ತಾನೆ. ದಿಗ್ವಿಜಯದ ನಂತರ ಬೇಟೆಯಲ್ಲಿ ಆಸಕ್ತಿ ಹೊಂದಿದ್ದ ಪಾಂಡುವು ಪತ್ನಿಯರೊಂದಿಗೆ ಅರಣ್ಯದಲ್ಲಿ ವಾಸಿಸುತ್ತಾನೆ.

ವ್ಯಾಸನಿಂದ ಗಾಂಧಾರಿಗೆ ನೂರು ಪುತ್ರರ ವರದಾನ ಮತ್ತು ಧೃತರಾಷ್ಟ್ರನಿಂದ ಗರ್ಭವತಿಯಾದ ಅವಳು ಎರಡು ವರ್ಷಗಳ ಪರ್ಯಂತ ಗರ್ಭವತಿಯೇ ಆಗಿರುತ್ತಾಳೆ. ಕುಂತಿಗೆ ಮಕ್ಕಳಾದವೆಂದು ಕೇಳಿ ತನ್ನ ಹೊಟ್ಟೆಯು ಇನ್ನೂ ಗಟ್ಟಿಯಾಗಿರುವುದನ್ನು ನೋಡಿ ಚಿಂತಿತಳಾಗಿ ಗಾಂಧಾರಿಯು ಗರ್ಭಪಾತ ಮಾಡಿಕೊಂಡು, ಹೊರಬಂದ ಮಾಂಸದ ಮುದ್ದೆಯನ್ನು ಬಿಸಾಡಲು ಹೊರಟಾಗ ವ್ಯಾಸನು ಬಂದು ತಡೆಯುತ್ತಾನೆ. ವ್ಯಾಸನ ಸಲಹೆಯಂತೆ ಪಿಂಡವನ್ನು ನೂರಾ‌ಒಂದು ಭಾಗಗಳನ್ನಾಗಿ ಮಾಡಿ ತುಪ್ಪದ ಕೊಡಗಳಲ್ಲಿ ಕಾದಿರಿಸಿದ ನಂತರ ದುರ್ಯೋಧನನ ಜನನವಾಗುತ್ತದೆ. ಧೃತರಾಷ್ಟ್ರನು ಯುಧಿಷ್ಠಿರನ ನಂತರ ಇವನೇ ರಾಜನಾಗುವನಲ್ಲವೇ ಎಂದು ಕೇಳಲು ಘೋರ ಅಪಶಕುನಗಳು, ಕುಲದ ಅಂತ್ಯಕ್ಕೆ ಕಾರಣನಾಗುವ ಆ ಮಗುವನ್ನು ತ್ಯಜಿಸಲು ವಿದುರನ ಸಲಹೆಯನ್ನು ನೀಡುತ್ತಾನೆ. ಆದರೆ ಧೃತರಾಷ್ಟ್ರನು ಪುತ್ರವಾತ್ಸಲ್ಯದಿಂದ ಮಗನನ್ನು ಇಟ್ಟುಕೊಳ್ಳುತ್ತಾನೆ. ಗಾಂಧಾರಿಯು ಗರ್ಭಿಣಿಯಾಗಿದ್ದಾಗ ವೈಶ್ಯ ಸೇವಕಿಯಲ್ಲಿ ಧೃತರಾಷ್ಟ್ರನ ಮಗ ಯುಯುತ್ಸುವಿನ ಜನನವಾಗುತ್ತದೆ. ಇಲ್ಲಿ ದುರ್ಯೋಧನಾದಿ ಧೃತರಾಷ್ಟ್ರನ ನೂರು ಮಕ್ಕಳ ಮತ್ತು ಓರ್ವ ಮಗಳು ದುಃಶಲೆಯ ಹೆಸರುಗಳು ದೊರೆಯುತ್ತವೆ. ಧೃತರಾಷ್ಟ್ರನು ಮಕ್ಕಳ ವಿವಾಹಮಾಡಿಸಿದುದು ಮತ್ತು ಮಗಳು ದುಃಶಲೆಯನ್ನು ಜಯದ್ರಥನಿಗೆ ವಿವಾಹದಲ್ಲಿ ಕೊಟ್ಟ ವಿಷಯಗಳು ಸಂಕ್ಷಿಪ್ತವಾಗಿ ಬರುತ್ತವೆ.

ಅರಣ್ಯದಲ್ಲಿ ವಾಸಿಸುತ್ತಿದ್ದಾಗ ಪಾಂಡುವು ಜಿಂಕೆಯ ರೂಪದಲ್ಲಿ ರತಿಸುಖವನ್ನು ಪಡೆಯುತ್ತಿದ್ದ ಮುನಿ ಕಿಂದಮ ದಂಪತಿಗಳನ್ನು ಹೊಡೆದುದಕ್ಕೆ ಅವನಿಗೆ ಸಂಭೋಗದ ಸಮಯದಲ್ಲಿ ಮೃತ್ಯುವೆಂದು ಶಾಪವು ದೊರೆಯುತ್ತದೆ. ಪಶ್ಚಾತ್ತಾಪಗೊಂಡ ಪಾಂಡುವು ಪರಿವ್ರಾಜಕನ ಜೀವನವನ್ನು ತನ್ನದಾಗಿಸಿಕೊಂಡು ತಾನು ವನವನ್ನು ಸೇರಿದೆನೆಂಬ ಸಂದೇಶವನ್ನು ಚೂಡಾಮಣಿ-ಅಂಗದಗಳೇ ಮೊದಲಾದ ರಾಜವಸ್ತುಗಳೊಡನೆ ಹಸ್ತಿನಾಪುರಿಗೆ ಕಳುಹಿಸುತ್ತಾನೆ. ಪತ್ನಿಯರೊಂದಿಗೆ ಪಾಂಡುವು ಶತಶೃಂಗವನ್ನು ಸೇರಿ ತಪಸ್ಸನ್ನಾಚರಿಸುತ್ತಾನೆ. ಮಕ್ಕಳಿಲ್ಲದೇ ಪರಿತಪಿಸುತ್ತಿದ್ದ ಪಾಂಡುವಿಗೆ ಋಷಿಗಳು ಅವನು ದೇವೋಪಮ ಮಕ್ಕಳನ್ನು ಪಡೆಯುತ್ತಾನೆ ಎಂದು ತಮ್ಮ ದಿವ್ಯದೃಷ್ಟಿಯಿಂದ ಕಂಡು ಹೇಳಿದಾಗ ಪಾಂಡುವು ಅತ್ಯುತ್ತಮ ಬ್ರಾಹ್ಮಣನಿಂದ ಮಕ್ಕಳನ್ನು ಪಡೆಯುವಂತೆ ಕುಂತಿಗೆ ಹೇಳುತ್ತಾನೆ. ಪಾಂಡುವೇ ತನ್ನಲ್ಲಿ ಮಕ್ಕಳನ್ನು ಹುಟ್ಟಿಸಬೇಕೆಂದು ಕುಂತಿಯು ಕೇಳಿಕೊಂಡು ರಾಜಾ ವ್ಯುಷಿತಾಶ್ವನ ಚರಿತೆಯನ್ನು ಹೇಳಿ ಕುಂತಿಯು ಪಾಂಡುವೂ ಕೂಡ ತನ್ನ ಯೋಗಬಲದಿಂದ ಮಕ್ಕಳ ತಂದೆಯಾಗಬಹುದೆಂದು ಹೇಳುತ್ತಾಳೆ. ಶ್ವೇತಕೇತುವಿನ ಚರಿತ್ರೆಯನ್ನು ಉದಾಹರಿಸಿ ಪಾಂಡುವು ಕುಂತಿಯಲ್ಲಿ ಬೇರೆಯವರಿಂದ ತನಗೆ ಮಕ್ಕಳನ್ನು ಪಡೆಯುವಂತೆ ಕೇಳಿಕೊಂಡಾಗ ಕುಂತಿಯು ತನ್ನ ತಂದೆಯ ಮನೆಯಲ್ಲಿ ಮುನಿಯೋರ್ವನಿಂದ ದೊರಕಿದ್ದ ಮಂತ್ರಗುಚ್ಛಗಳ ಕುರಿತು ಹೇಳುತ್ತಾಳೆ. ಯಾವ ದೇವತೆಯನ್ನು ಆಹ್ವಾನಿಸಬೇಕೆಂದು ಕೇಳಲು ಪಾಂಡುವು ಕುಂತಿಗೆ ಧರ್ಮನನ್ನು ಕರೆಯುವಂತೆ ಸೂಚಿಸುತ್ತಾನೆ. ಗಾಂಧಾರಿಯು ಒಂದುವರ್ಷ ಗರ್ಭಿಣಿಯಾಗಿದ್ದಾಗ ಕುಂತಿಯು ಧರ್ಮನಿಂದ ಯುಧಿಷ್ಠಿರನನ್ನು ಪಡೆಯುತ್ತಾಳೆ. ದುರ್ಯೋಧನನು ಹುಟ್ಟಿದ ದಿನದಂದೇ ಕುಂತಿಯಲ್ಲಿ ವಾಯುವಿನಿಂದ ಭೀಮಸೇನನ ಜನನವಾಗುತ್ತದೆ. ಪಾಂಡುವು ಇಂದ್ರನ ಕುರಿತು ತಪಸ್ಸನ್ನಾಚರಿಸಿ ಅವನಿಂದ ಶ್ರೇಷ್ಠ ಮಗನನ್ನು ಕೊಡುತ್ತೇನೆ ಎಂಬ ವರವನ್ನು ಪಡೆಯಲು ಇಂದ್ರನಿಂದ ಕುಂತಿಯಲ್ಲಿ ಅರ್ಜುನನ ಜನನವಾಗುತ್ತದೆ. ಇನ್ನೂ ಅಧಿಕ ಮಕ್ಕಳನ್ನು ಬಯಸಿದ ಪಾಂಡುವಿಗೆ ಕುಂತಿಯು ನಿರಾಕರಿಸುತ್ತಾಳೆ.

ತನಗೆ ಮಕ್ಕಳಿಲ್ಲವೆಂದು ಮಾದ್ರಿಯು ದುಃಖಿಸಿ, ಈ ವಿಷಯದಲ್ಲಿ ಸಹಾಯಮಾಡಲು ಕುಂತಿಗೆ ಹೇಳಿ ಒಪ್ಪಿಸಬೇಕೆಂದು ಪಾಂಡುವಿನಲ್ಲಿ ಕೇಳಿಕೊಂಡಾಗ ಒಪ್ಪಿ ಪಾಂಡುವು ಮಾದ್ರಿಗೂ ಮಕ್ಕಳನ್ನು ನೀಡಬೇಕೆಂದು ಕುಂತಿಯಲ್ಲಿ ಕೇಳಿಕೊಳ್ಳುತ್ತಾನೆ. ಕುಂತಿಯು ಯಾವುದಾದರೂ ದೇವತೆಯನ್ನು ಒಮ್ಮೆ ಮಾತ್ರ ಯೋಚಿಸೆಂದು ಹೇಳಿ ಮಂತ್ರವನ್ನು ನೀಡಲು ವಿಚಾರಮಾಡಿ ಮಾದ್ರಿಯು ಅಶ್ವಿನೀ ದೇವತೆಗಳಿಂದ ಅವಳಿ ಮಕ್ಕಳು ನಕುಲ-ಸಹದೇವರನ್ನು ಪಡೆಯುತ್ತಾಳೆ. ಪಾಂಡುವು ಮಾದ್ರಿಯ ಪರವಾಗಿ ಪುನಃ ಕುಂತಿಯಲ್ಲಿ ಕೇಳಲು ಮಾದ್ರಿಯು ವಂಚಿಸಿ ತನ್ನನ್ನು ಹಿಂದೆಹಾಕಬಹುದೆಂಬ ಭಯದಿಂದ ಮಂತ್ರವನ್ನು ನಿರಾಕರಿಸುತ್ತಾಳೆ. ನಂತರ ಮಾದ್ರಿಯನ್ನು ಕೂಡಲು ಹೋದ ಪಾಂಡುವಿನ ಮರಣವಾಗುತ್ತದೆ. ಕುಂತಿಯು ಮಾದ್ರಿಯನ್ನು ನಿಂದಿಸಿ ತಾನು ಪಾಂಡುವನ್ನು ಹಿಂಬಾಲಿಸಿ ಹೋಗುವುದಾಗಿ ಹೇಳಲು ಮಾದ್ರಿಯು ತಾನೇ ಹೋಗುವೆನೆಂದು ಹಠಹಿಡಿದು ಪಾಂಡುವಿನ ಚಿತೆಯನ್ನೇರುತ್ತಾಳೆ.

ತಾಪಸರು ಪಾಂಡವರನ್ನೂ ಕುಂತಿಯನ್ನೂ ಕರೆದುಕೊಂಡು ಹಸ್ತಿನಾಪುರವನ್ನು ತಲುಪಿ, ಪಾಂಡವರ ಜನನ ಮತ್ತು ಪಾಂಡು-ಮಾದ್ರಿಯರ ಮರಣದ ಕುರಿತು ಹೇಳಿ, ಕುಂತಿ ಮತ್ತು ಪಾಂಡವರನ್ನು ಅಲ್ಲಿಯೇ ಬಿಟ್ಟು ಅಂತರ್ಧಾನರಾಗುತ್ತಾರೆ. ವ್ಯಾಸನ ಸಲಹೆಯಂತೆ ಸತ್ಯವತಿಯು ಸೊಸೆಯರೊಂದಿಗೆ ವನವನ್ನು ಸೇರುತ್ತಾಳೆ. ಕೌರವ-ಪಾಂಡವರ ಮಧ್ಯೆ ಸ್ಪರ್ಧಾ ಮತ್ತು ದ್ರೋಹಭಾವಗಳು ಬೆಳೆಯುತ್ತದೆ. ಪ್ರಮಾಣಕೋಟಿಯಲ್ಲಿ ದುರ್ಯೋಧನಾದಿಗಳು ಭೀಮನಿಗೆ ವಿಷವನ್ನು ಉಣಿಸುತ್ತಾರೆ.

ಗೌತಮಿ ಶರದ್ವತನನ್ನು ಇಂದ್ರನ ಆದೇಶದಂತೆ ದೇವಕನ್ಯೆ ಜಾಲಪದಿಯು ಮೋಹಿಸುತ್ತಾಳೆ. ಸ್ಖಲಿತ ರೇತವನ್ನು ದರ್ಬೆಗಳ ಮೇಲೆ ಇಡಲು ಅದರಿಂದ ಅವಳಿ ಮಕ್ಕಳ ಜನನವಾಗುತ್ತದೆ. ಬೇಟೆಯಾಡಲು ಬಂದಿದ್ದ ಶಂತನುವು ಅವರಿಗೆ ಕೃಪ-ಕೃಪಿಯರೆಂಬ ಹೆಸರಿತ್ತು ಸಾಕುತ್ತಾನೆ. ಶರದ್ವತನು ಬಂದು ಕೃಪನಿಗೆ ಧನುರ್ವಿದ್ಯೆಯನ್ನು ಕಲಿಸಲು ಕೃಪನು ಕೌರವ-ಪಾಂಡವರ ಗುರುವಾಗುತ್ತಾನೆ.

ಅಪ್ಸರೆ ಘೃತಾಚಿಯನ್ನು ನೋಡಿ ಋಷಿ ಭರದ್ವಾಜನ ರೇತಸ್ಖಲನವಾಗಲು, ಸ್ಖಲಿತ ರೇತವನ್ನು ದ್ರೋಣದಲ್ಲಿರಿಸಲು ಅದರಿಂದ ದ್ರೋಣನ ಜನನವಾಗುತ್ತದೆ. ಭರದ್ವಾಜನ ಸಖ ಪೃಷತನ ಮಗ ದ್ರುಪದನು ದ್ರೋಣನೊಡನೆ ಆಟ-ಪಾಠಗಳನ್ನಾಡಿ ನಂತರ ದ್ರುಪದನು ರಾಜನಾಗುತ್ತಾನೆ. ದ್ರೋಣನು ಕೃಪಿಯನ್ನು ವಿವಾಹವಾಗುತ್ತಾನೆ. ದ್ರೋಣ-ಕೃಪಿಯರಲ್ಲಿ ಅಶ್ವತ್ಥಾಮನ ಜನನವಾಗುತ್ತದೆ. ಭಾರ್ಗವ ಪರಶುರಾಮನಿಂದ ದ್ರೋಣನು ದಿವ್ಯಾಸ್ತ್ರಗಳನ್ನು ಪಡೆಯುತ್ತಾನೆ. ದ್ರೋಣನು ಸಖ ದ್ರುಪದನಲ್ಲಿಗೆ ಹೋದಾಗ ಅಪಮಾನಿತನಾಗಲು ಪಾಂಚಾಲರ ವಿರುದ್ಧ ನಿಶ್ಚಯಿಸಿ ಅವನು ಹಸ್ತಿನಾಪುರಕ್ಕೆ ಹೋಗಿ ರಾಜಕುಮಾರರಿಗೆ ಕುಶಲತೆಯನ್ನು ತೋರಿಸಿ, ತನ್ನ ಕುರಿತು ಭೀಷ್ಮನಿಗೆ ವರದಿಮಾಡಲು ಹೇಳಿ ಕಳುಹಿಸುತ್ತಾನೆ. ಭೀಷ್ಮನು ದ್ರೋಣನನ್ನು ಕರೆಯಿಸಿ ಕೇಳಲು ಅವನು ದ್ರುಪದನಿಂದಾದ ಅಪಮಾನದ ಕುರಿತು ಹೇಳಿಕೊಳ್ಳುತ್ತಾನೆ. ಭೀಷ್ಮ ಮತ್ತು ಪಾಂಡುಪುತ್ರರೂ ಸೇರಿ ಅವನನ್ನು ಗುರುವೆಂದು ಸ್ವೀಕರಿಸುತ್ತಾರೆ. ದ್ರೋಣನು ಗುರುದಕ್ಷಿಣೆಯ ಕುರಿತು ಹೇಳಿ, ಕೊಡುತ್ತೇವೆಂದು ಭರವಸೆಯನ್ನು ಶಿಷ್ಯರಿಂದ ಪಡೆಯಲು ದ್ರೋಣನು ಕೌರವ-ಪಾಂಡವರಿಗಲ್ಲದೇ ಇತರ ರಾಜಪುತ್ರರಿಗೂ ಗುರುವಾಗುತ್ತಾನೆ.

ಅರ್ಜುನನ ಅಭ್ಯಾಸವನ್ನು ನೋಡಿ ಸಂತೋಷಗೊಂಡ ದ್ರೋಣನು “ನಿನ್ನ ಸರಿಸಮ ಧನುರ್ಧರ ಅನ್ಯ ಯಾರೂ ಈ ಲೋಕದಲ್ಲಿ ಇಲ್ಲದಿರುವಂತೆ ಮಾಡುತ್ತೇನೆ” ಎಂದು ವಚನವನ್ನು ನೀಡುತ್ತಾನೆ. ಕಲಿಯಲು ಬಂದ ಏಕಲವ್ಯನನ್ನು ನೈಷಾದನೆಂದು ದ್ರೋಣನು ಶಿಷ್ಯನನ್ನಾಗಿ ಸ್ವೀಕರಿಸದೇ ಇರಲು ಏಕಲವ್ಯನು ಅರಣ್ಯವನ್ನು ಸೇರಿ ದ್ರೋಣನ ವಿಗ್ರಹವನ್ನು ಮಾಡಿ, ಗುರುವೆಂದು ಪರಿಗಣಿಸಿ, ಅಸ್ತ್ರಾಭ್ಯಾಸ ಮಾಡುತ್ತಿರುತ್ತಾನೆ. ಬೇಟೆಯಾಡಲು ಹೋಗಿದ್ದಾಗ ಅರ್ಜುನನು ಏಕಲವ್ಯನು ಶಬ್ದವೇದಿಯನ್ನು ಬಳಸಿದುದನ್ನು ಕಂಡು, ಗುರು ಯಾರೆಂಬ ಪ್ರಶ್ನೆಗೆ ದ್ರೋಣನೆಂದು ಹೇಳಲು ದುಃಖಿತನಾಗಿ ದ್ರೋಣನಲ್ಲಿ ಹೇಳಿಕೊಳ್ಳುತ್ತಾನೆ. ದ್ರೋಣನು ಏಕಲವ್ಯನಲ್ಲಿಗೆ ಹೋಗಿ ಅವನ ಬಲಗೈಯ ಹೆಬ್ಬೆರಳನ್ನು ಗುರುದಕ್ಷಿಣೆಯನ್ನಾಗಿ ಪಡೆದು ಅರ್ಜುನನನ್ನು ಸಂತೋಷಗೊಳಿಸುತ್ತಾನೆ. ದ್ರೋಣನು ಕೃತ್ರಿಮ ಪಕ್ಷಿಯೊಂದನ್ನು ಮರದ ಮೇಲಿರಿಸಿ, ಅದಕ್ಕೆ ಗುರಿಯಿಡಲು ಹೇಳಿ, ತನ್ನ ಶಿಷ್ಯರನ್ನು ಪರೀಕ್ಷಿಸಲು ಕೇವಲ ಅರ್ಜುನನು ಉತ್ತೀರ್ಣನಾಗುತ್ತಾನೆ. ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ದ್ರೋಣನನ್ನು ಮೊಸಳೆಯು ಹಿಡಿದುಕೊಳ್ಳಲು ಅರ್ಜುನನು ಬಾಣಪ್ರಯೋಗಿಸಿ ಬಿಡಿಸಲು, ಬದಲಾಗಿ ಅರ್ಜುನನಿಗೆ ಬ್ರಹ್ಮಶಿರ ಅಸ್ತ್ರವನ್ನು ನೀಡುತ್ತಾನೆ. ಹೀಗೆ ಅನೇಕ ಪಾತ್ರಗಳ ಜನ್ಮ ಅಂದರೆ ಸಂಭವಗಳನ್ನು ವರ್ಣಿಸುವ ಈ ದೀರ್ಘ ಸಂಭವಪರ್ವವು ಪೂರ್ಣಗೊಳ್ಳುತ್ತದೆ.

ಎಂಟನೆಯ ಉಪಪರ್ವವು ಜತುಗೃಹದಾಹಪರ್ವವು. ಹೆಸರೇ ಸೂಚಿಸುವಂತೆ ಇದರಲ್ಲಿ ಅರಗಿನ ಮನೆಯನ್ನು ಸುಟ್ಟುಹಾಕಿದ ಪ್ರಸಂಗವು ಬರುತ್ತದೆ.  ವಿದ್ಯಾಭ್ಯಾಸವನ್ನು ಪೂರೈಸಿದ ಧೃತರಾಷ್ಟ್ರ-ಪಾಂಡು ರಾಜಪುತ್ರರ ಪ್ರತಿಭಾ ಪ್ರದರ್ಶನವು ಏರ್ಪಡುತ್ತದೆ. ಅರ್ಜುನನು ತನ್ನ ಅಪ್ರತಿಮ ಅಸ್ತ್ರವಿದ್ಯೆಯನ್ನು ಪ್ರದರ್ಶಿಸುತ್ತಾನೆ. ಆಗ ರಂಗಮಂಡಲಕ್ಕೆ ಕರ್ಣನು ಪ್ರವೇಶಿಸಿ, ಅರ್ಜುನನು ಮಾಡಿದುದೆಲ್ಲವನ್ನೂ ಮಾಡಿ ತೋರಿಸುತ್ತಾನೆ. ದುರ್ಯೋಧನನು ತನ್ನ ಸಖ್ಯವನ್ನು ಕರ್ಣನಿಗೆ ನೀಡುತ್ತಾನೆ. ಅರ್ಜುನ-ಕರ್ಣರ ನಡುವೆ ದ್ವಂದ್ವಯುದ್ಧವು ನಡೆಯುತ್ತದೆ ಎನ್ನುವಾಗ ಪ್ರೇಕ್ಷಕವೃಂದದಲ್ಲಿದ್ದ ಕುಂತಿಯು ಮಗನನ್ನು ಗುರುತಿಸಿ ಮೂರ್ಛಿತಳಾಗುತ್ತಾಳೆ. ಅರ್ಜುನನ ಪರಿಚಯ ಮಾಡಿ ಕರ್ಣನ ಕುಲ ಮತ್ತು ತಂದೆ-ತಾಯಿಯರ ಕುರಿತು ಕೃಪನು ಕೇಳಲು ಕರ್ಣನ ಮುಖಬಾಡುತ್ತದೆ ಮತ್ತು ದುರ್ಯೋಧನನು ಅಲ್ಲಿಯೇ ಅವಸರದಲ್ಲಿ ಕರ್ಣನನ್ನು ಅಂಗರಾಜನನ್ನಾಗಿ ಅಭಿಷೇಕಿಸುತ್ತಾನೆ. ಕರ್ಣನ ತಂದೆ ವೃದ್ಧ ಸೂತ ಅಧಿರಥನು ರಂಗವನ್ನು ಪ್ರವೇಶಿಸಲು ಭೀಮನು ಸೂತಪುತ್ರನೆಂದು ಕರ್ಣನನ್ನು ಅವಹೇಳನ ಮಾಡುತ್ತಾನೆ. ಅದಕ್ಕೆ ದುರ್ಯೋಧನನು ಕರ್ಣನ ಪರವಾಗಿ ಮಾತನಾಡಿ ಭೀಮನನ್ನು ನಿಂದಿಸುತ್ತಾನೆ. ಸೂರ್ಯನು ಮುಳುಗಲು, ಪ್ರದರ್ಶನವು ಮುಕ್ತಾಯಗೊಳ್ಳುತ್ತದೆ.

ಪಾಂಚಾಲ ರಾಜ ದ್ರುಪದನನ್ನು ಹಿಡಿದು ತರುವುದೇ ಗುರುದಕ್ಷಿಣೆಯೆಂದು ದ್ರೋಣನು ಹೇಳಲು, ರಾಜಪುತ್ರರು ಪಾಂಚಾಲನಗರಿಯನ್ನು ಆಕ್ರಮಣಿಸಿ ರಾಜನನ್ನು ಸೆರೆಹಿಡಿದು ಗುರುವಿಗೆ ಒಪ್ಪಿಸುತ್ತಾರೆ. ದ್ರೋಣನು ದ್ರುಪದನಿಗೆ ಚುಚ್ಚು ಮಾತುಗಳನ್ನಾಗಿ, ಅವನ ಅರ್ಧರಾಜ್ಯವನ್ನಿಟ್ಟುಕೊಂಡು ಉಳಿದ ಅರ್ಧವನ್ನು ಹಿಂದಿರುಗಿಸುತ್ತಾನೆ.

ಪಾಂಡವರನ್ನು ಕೊಲ್ಲಲು ಕೌರವರ ಹಲವು ಉಪಾಯಗಳನ್ನು ಮಾಡುತ್ತಾರೆ. ಪಾಂಡುಸುತರ ಜನಪ್ರಿಯತೆಯನ್ನು ನೋಡಿ ದುರ್ಯೋಧನನು ಪರಿತಪಿಸಿ ತಾವು ಪರಪಿಂಡದ ಜೀವನಕ್ಕೆ ಹೋಗುವ ಮುನ್ನ ಏನನ್ನಾದರೂ ಮಾಡಬೇಕೆಂದು ಏಕಾಂತದಲ್ಲಿ ಧೃತರಾಷ್ಟ್ರನಿಗೆ ಹೇಳುತ್ತಾನೆ. ಪಾಂಡುವು ತನ್ನ ಮೇಲೆ ತೋರಿಸಿದ್ದ ಪ್ರೀತಿಯನ್ನು ನೆನೆದುಕೊಂಡು ಧೃತರಾಷ್ಟ್ರನು ಯುಧಿಷ್ಠಿರನ ಸಲುವಾಗಿ ಪೌರರು ಸಬಾಂಧವರಾಗಿ ತಮ್ಮನ್ನು ಕೊಲ್ಲಬಹುದೆಂದು ಅಳುಕುತ್ತಾನೆ. ಅದರ ಕುರಿತು ಯೋಜನೆಗಳನ್ನು ಈಗಾಗಲೇ ಮಾಡಿದ್ದಾಗಿಯೂ, ರಾಜನು ಹೇಗಾದರೂ ಮಾಡಿ ಪಾಂಡವರನ್ನು ವಾರಣಾವತಕ್ಕೆ ಕಳುಹಿಸಬೇಕೆಂದೂ, ರಾಜ್ಯವು ತನ್ನಲ್ಲಿ ಪ್ರತಿಷ್ಠಿತವಾದಾಗ ಅವರು ಮರಳಿ ಬರಬಹುದೆಂದೂ ದುರ್ಯೋಧನನು ಹೇಳುತ್ತಾನೆ. ಧೃತರಾಷ್ಟ್ರನು ಹಿಂಜರಿಯಲು ದುರ್ಯೋಧನನು ತನ್ನ ಹೃದಯವನ್ನು ಚುಚ್ಚಿ ಶೋಕದ ಪಾವಕನನ್ನು ಹುಟ್ಟಿಸಿರುವ ಈ ಅತಿ ಘೋರ ಮುಳ್ಳನ್ನು ನಾಶಪಡಿಸಲು ಕೇಳಿಕೊಳ್ಳುತ್ತಾನೆ.

ದುರ್ಯೋಧನನ ಪ್ರೇರಣೆಯಂತೆ ಪುರಜನರು ವಾರಣಾವತದ ಕುರಿತು ಪಾಂಡವರಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತಾರೆ. ಧೃತರಾಷ್ಟ್ರನು ಪಾಂಡವರಿಗೆ ತಾಯಿಯೊಂದಿಗೆ ವಾರಣಾವತಕ್ಕೆ ಹೋಗಲು ಸೂಚಿಸಲು ಪಾಂಡವರು ವಾರಣಾವತಕ್ಕೆ ಹೊರಡುತ್ತಾರೆ. ದುರ್ಯೋಧನನು ಪುರೋಚನನನ್ನು ಕರೆಯಿಸಿ ಗೌಪ್ಯವಾಗಿ ಅರಗಿನ ಮನೆಯನ್ನು ನಿರ್ಮಿಸಿ ಅದರೊಡನೆ ಪಾಂಡವರನ್ನು ಸುಡಲು ಆದೇಶಿಸುತ್ತಾನೆ. ಅರಗಿನ ಮನೆಯ ನಿರ್ಮಾಣವಾಗುತ್ತದೆ. ಪಾಂಡವರು ಹೊರಡುವಾಗ ವಿದುರನು ಮ್ಲೇಚ್ಛ ಭಾಷೆಯಲ್ಲಿ ಯುಧಿಷ್ಠಿರನಿಗೆ ಒಗಟಿನ ರೂಪದಲ್ಲಿ ದುರ್ಯೋಧನನ ಶಲ್ಯಂತ್ರದ ಕುರಿತು ಎಚ್ಚರಿಸುತ್ತಾನೆ. ವಾರಣಾವತದಲ್ಲಿ ಪಾಂಡವರ ಸ್ವಾಗತ, ಸತ್ಕಾರಗಳಾಗಿ ಪುರೋಚನನಿಂದ ಉಡುಗೊರೆಯಾಗಿ ಪಡೆದ ಅರಗಿನ ಮನೆಯನ್ನು ಪಾಂಡವರು ಪ್ರವೇಶಿಸುತ್ತಾರೆ. ಸಂಶಯಪಟ್ಟ ಯುಧಿಷ್ಠಿರ-ಭೀಮರು ತಮ್ಮೊಳಗೇ ಮಾತನಾಡಿಕೊಳ್ಳುತ್ತಾರೆ. ವಿದುರನ ಸ್ನೇಹಿತ ಖನಕನು ಬಂದು ಅರಗಿನ ಮನೆಯಿಂದ ಕಾಡಿಗೆ ತಪ್ಪಿಸಿಕೊಂಡು ಹೋಗಲು ಸುರಂಗವನ್ನು ತೋಡುತ್ತಾನೆ. ಅರಗಿನ ಮನೆಯಲ್ಲಿ ಪುರೋಚನ ಮತ್ತು ರಾತ್ರಿ ಭೋಜನಕ್ಕಾಗಿ ತನ್ನ ಐವರು ಮಕ್ಕಳೊಂದಿಗೆ ಬಂದಿದ್ದ ನಿಷಾದಿಯು ಮಲಗಿದ್ದಾಗ ಭೀಮನು ಮನೆಗೆ ಬೆಂಕಿ ಹಚ್ಚಿಸಿ ಸುರಂಗದಿಂದ ತಪ್ಪಿಸಿಕೊಂಡು ಕುಂತಿ ಮತ್ತು ಸಹೋದರರೊಂದಿಗೆ ಪಲಾಯನಗೈಯುತ್ತಾನೆ. ಪಾಂಡವರು ಸುಟ್ಟುಹೋದರೆಂದು ಪುರಜನರು ಹಾಹಾಕಾರಮಾಡುತ್ತಾರೆ. ಮರುದಿನ ಪೌರಜನರು ಪಾಂಡವರನ್ನು ಹುಡುಕಲು, ಸುಟ್ಟುಹೋಗಿದ್ದ ನೈಷಾದಿ ಮತ್ತು ಅವಳ ಮಕ್ಕಳೇ ಕುಂತಿ-ಪಾಂಡವರೆಂದು ತಿಳಿದು ಶೋಕಿಸುತ್ತಾರೆ ಮತ್ತು ಖನಿಕನು ಬಂದು ಬಿಲವನ್ನು ಮುಚ್ಚಿ ಕುರುಹುಗಳಿಲ್ಲದಂತೆ ಮಾಡುತ್ತಾನೆ. ಪಾಂಡುಪುತ್ರರ ವಿನಾಶವನ್ನು ಕೇಳಿ ಧೃತರಾಷ್ಟ್ರನು ಶೋಕಿಸಿ, ಅವರಿಗೆ ತರ್ಪಣಗಳನ್ನು ಕೊಡುತ್ತಾನೆ.

ಭೀಮನು ತಾಯಿ ಮತ್ತು ಸಹೋದರರನ್ನು ಎತ್ತಿಕೊಂಡು ಪಲಾಯನಗೈದು ವೇಗವಾಗಿ ಕಾಡನ್ನು ಸೇರಿ ಅಲ್ಲಿ ಒಂದು ಮರದಡಿಯಲ್ಲಿ ಬಾಯಾರಿ ಬಳಲಿದ ತಾಯಿ ಸಹೋದರರನ್ನು ಇಳಿಸಿ ನೀರನ್ನು ತರಲು ಹೋಗುತ್ತಾನೆ. ಮರಳಿ ಬಂದಾಗ ಅಲ್ಲಿ ನೆಲದ ಮೇಲೆ ಮಲಗಿ ನಿದ್ರಿಸುತ್ತಿದ್ದ ತನ್ನವರನ್ನು ನೋಡಿ ಭೀಮನು ವಿಲಪಿಸುತ್ತಾ ಕಾವಲು ನಿಲ್ಲುತ್ತಾನೆ.

ಮುಂದಿನ ಹಿಡಿಂಬವಧಪರ್ವದಲ್ಲಿ ಪಾಂಡವರ ಸುಳಿವನ್ನು ತಿಳಿದ ರಾಕ್ಷಸ ಹಿಡಿಂಬನು ಆ ಮನುಷ್ಯರನ್ನು ಕೊಂದು ತರಲು ತಂಗಿ ಹಿಡಿಂಬೆಗೆ ಹೇಳಿ ಕಳುಹಿಸುತ್ತಾನೆ. ಅಲ್ಲಿ ಭೀಮಸೇನನನ್ನು ನೋಡಿ ಕಾಮವಶಳಾದ ಹಿಡಿಂಬೆಯು ತನ್ನ ಪತಿಯಾಗೆಂದು ಅವನನ್ನು ಕೇಳುತ್ತಾಳೆ. ಭೀಮನು ನಿರಾಕರಿಸಲು, ಹಿಡಿಂಬೆಯು ಅವನಿಗೆ ತನ್ನ ಅಣ್ಣನ ಕುರಿತು ಹೇಳುತ್ತಾಳೆ. ತಂಗಿಯು ಹೋಗಿ ತುಂಬಾ ಹೊತ್ತಾಯಿತೆಂದು ಹಿಡಿಂಬನು ಪಾಂಡವರಿದ್ದಲ್ಲಿಗೆ ಬರಲು, ಹಿಡಿಂಬೆಯು ಭೀಮನನ್ನು ಎಚ್ಚರಿಸುತ್ತಾಳೆ. ಕೋಪದಿಂದ ಮುನ್ನುಗ್ಗಿ ಬಂದ ಹಿಡಿಂಬನೊಡನೆ ಭೀಮನ ಭಯಂಕರ ಯುದ್ಧವು ನಡೆಯುತ್ತಿದ್ದಾಗ ಎಚ್ಚೆತ್ತ ಪಾಂಡವರು ಅಲ್ಲಿ ನಿಂತಿದ್ದ ಹಿಡಿಂಬೆಯನ್ನು ನೋಡಿ, ಕುಂತಿಯು ಕೇಳಲು ಹಿಡಿಂಬೆಯು ತನ್ನ ಪರಿಚಯವನ್ನು ಹೇಳಿಕೊಂಡು, ತಾನು ಭೀಮನನ್ನು ಬಯಸಿದುದನ್ನೂ, ಅಣ್ಣ ಹಿಡಿಂಬನೊಡನೆ ಭೀಮನು ಹೋರಾಡುತ್ತಿರುವುದನ್ನೂ ಹೇಳುತ್ತಾಳೆ. ಹಿಡಿಂಬನೊಡನೆ ಹೋರಾಡುತ್ತಿದ್ದ ಭೀಮನಿಗೆ ಅರ್ಜುನನು ಬೇಗ ಮುಗಿಸೆಂದು ಸೂಚಿಸಲು ಭೀಮನು ಹಿಂಡಿಂಬನನ್ನು ಕೊಲ್ಲುತ್ತಾನೆ. ಕಾಡನ್ನು ಬಿಟ್ಟು ಹೋಗುತ್ತಿದ್ದ ಪಾಂಡವರನ್ನು ಹಿಡಿಂಬೆಯು ಹಿಂಬಾಲಿಸಿ ಹೋಗುತ್ತಾಳೆ. ಹಿಡಿಂಬೆಗೆ ಭೀಮನನ್ನು ವರಿಸಲು ಯುಧಿಷ್ಠಿರನು ಅನುಮತಿಯನ್ನು ನೀಡುತ್ತಾನೆ. ಭೀಮ-ಹಿಡಿಂಬೆಯರಿಗೆ ಘತೋತ್ಕಚನು ಹುಟ್ಟುತ್ತಾನೆ. ತಾಪಸಿ ವೇಷಗಳನ್ನು ಧರಿಸಿ ಅಲೆದಾಡುತ್ತಿದ್ದಾಗ ಪಾಂಡವರು ಮತ್ತು ವ್ಯಾಸನ ಭೇಟಿಯಾಗುತ್ತದೆ. ಅವರನ್ನು ಏಕಚಕ್ರನಗರದಲ್ಲಿ ಬ್ರಾಹ್ಮಣನೋರ್ವನ ಮನೆಯಲ್ಲಿರಿಸಿ ವ್ಯಾಸನು ಮರಳುವುದರೊಂದಿಗೆ ಈ ಉಪಪರ್ವವು ಮುಕ್ತಾಯವಾಗುತ್ತದೆ.

ಮುಂದಿನದು ಬಕವಧಪರ್ವ. ಏಕಚಕ್ರನಗರದಲ್ಲಿ ಭಿಕ್ಷೆಬೇಡಿಕೊಂಡು ಪಾಂಡವರು ತಾಪಸರಂತೆ ಬ್ರಾಹ್ಮಣನ ಮನೆಯಲ್ಲಿ ವಾಸಿಸುತ್ತಿದ್ದಾಗ ಒಂದು ದಿನ ಬ್ರಾಹ್ಮಣನ ಮನೆಯಲ್ಲಿ ರೋದನವನ್ನು ಕೇಳಿ ಕುಂತಿಯು ಹೋಗಿ ವಿಚಾರಿಸುತ್ತಾಳೆ. ಬ್ರಾಹ್ಮಣನು ತನಗೆ ಒದಗಿಬಂದಿದ್ದ ಗಂಡಾಂತರವನ್ನು ವರ್ಣಿಸುತ್ತಾನೆ. ಈ ನಗರದ ಸಮೀಪದಲ್ಲಿ ವಾಸಿಸುತ್ತಿದ್ದ ಬಕ ಎಂಬ ರಾಕ್ಷಸನು ಆ ಜನಪದವನ್ನು ನಿತ್ಯವೂ ರಕ್ಷಿಸುತ್ತಿದ್ದನು. ಒಂದು ಬಂಡಿ ಭೋಜನ, ಎರಡು ಎಮ್ಮೆಗಳು, ಮತ್ತು ಅವುಗಳನ್ನು ಅವನಲ್ಲಿಗೆ ತೆಗೆದುಕೊಂಡು ಹೋಗುವ ಓರ್ವ ಪುರುಷ – ಇವು ಅವನ ವೇತನವೆಂದು ವಿಹಿತವಾಗಿತ್ತು. ಒಬ್ಬೊಬ್ಬರಾಗಿ ಎಲ್ಲರೂ ಅವನಿಗೆ ಭೋಜನವನ್ನು ಕಳುಹಿಸುತ್ತಾರೆ. ಆದರೆ ಬಹಳ ವರ್ಷಗಳಿಗೊಮ್ಮೆ ಬರುವ ಬಾರಿಯು ಬಂದಾಗ ಮನುಷ್ಯನಿಗೆ ಅದರಿಂದ ತಪ್ಪಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಸದ್ಯ ಬ್ರಾಹ್ಮಣನ ಬಾರಿಬಂದಿತ್ತು. ಇದನ್ನು ಕೇಳಿ ಕುಂತಿಯು ತನ್ನ ಮಗನು ರಾಕ್ಷಸನಿಗೆ ಭೋಜನವನ್ನು ತೆಗೆದುಕೊಂಡು ಹೋಗುತ್ತಾನೆ ಎಂದು ಹೇಳಲು, ಬ್ರಾಹ್ಮಣನು ನಿರಾಕರಿಸುತ್ತಾನೆ. ತನ್ನ ಮಗನು ರಾಕ್ಷಸನಿಂದ ಸುರಕ್ಷಿತವಾಗಿ ಹಿಂದಿರುಗಿ ಬರುತ್ತಾನೆ ಎಂದು ವಿಶ್ವಾಸದಿಂದ ಕುಂತಿಯು ಹೇಳಲು ಬ್ರಾಹ್ಮಣನು ಒಪ್ಪಿಕೊಳ್ಳುತ್ತಾನೆ. ಕುಂತಿಯ ಯೋಜನೆಯನ್ನು ಕೇಳಿ ಯುಧಿಷ್ಠಿರನು ತನ್ನ ಅಸಂತೋಷವನ್ನು ವ್ಯಕ್ತಪಡಿಸಲು ಕುಂತಿಯು ತಾನು ಮಾಡಲಿಚ್ಛಿಸಿರುವುದರ ಕಾರಣವನ್ನು ತಿಳಿಸಿದಾಗ ಯುಧಿಷ್ಠಿರನು ಒಪ್ಪಿಕೊಳ್ಳುತ್ತಾನೆ. ಆಹಾರವನ್ನು ತೆಗೆದುಕೊಂಡು ಭೀಮನು ರಾಕ್ಷಸ ಬಕನಲ್ಲಿಗೆ ಹೋಗಿ ಆಹಾರವನ್ನು ತಿಂದು ಮುಗಿಸುತ್ತಾನೆ. ಕೋಪಗೊಂಡ ಬಕನು ಭೀಮನೊಂದಿಗೆ ಯುದ್ಧಕ್ಕೆ ಬರಲು ಭೀಮನು ಬಕನನ್ನು ಸಾಯಿಸುತ್ತಾನೆ. ಭೀಮನು ಬಕನ ಶವವನ್ನು ನಗರದ ಬಾಗಿಲಿಗೆ ಕಟ್ಟಿ ಯಾರಿಗೂ ತಿಳಿಯದಂತೆ ಹೊರಟು ಹೋಗುತ್ತಾನೆ ಮತ್ತು ಕಂಟಕವು ಕಳೆಯಿತೆಂದು ಪುರಜನರು ಹರ್ಷಿಸುತ್ತಾರೆ.

ಮುಂದಿನ ಚೈತ್ರರಥಪರ್ವದಲ್ಲಿ ಏಕಚಕ್ರನಗರಕ್ಕೆ ಬಂದಿದ್ದ ಬ್ರಾಹ್ಮಣನೋರ್ವನು ಹೇಳಿದ ದ್ರೌಪದಿ-ಧೃಷ್ಟದ್ಯುಮ್ನರ ಹುಟ್ಟಿನ ಕಥೆಯನ್ನು ಪಾಂಡವರು ಕೇಳುತ್ತಾರೆ. ದ್ರೋಣನು ಅರ್ಧರಾಜ್ಯವನ್ನು ತೆಗೆದುಕೊಂಡು ಉಳಿದರ್ಧ ರಾಜ್ಯವನ್ನು ತನಗಿತ್ತ ನಂತರ ಅಪಮಾನಿತ ದ್ರುಪದನು ದ್ರೋಣನನ್ನು ಕೊಲ್ಲಬಲ್ಲ ಮಗನನ್ನು ಪಡೆಯಲು ಸಹಾಯ ಮಾಡುವ ಬ್ರಾಹ್ಮಣರನ್ನು ಹುಡುಕಿ, ಯಾಜ-ಉಪಯಾಜರನ್ನು ಒಪ್ಪಿಸುತ್ತಾನೆ. ಯಜ್ಞಕುಂಡದಿಂದ ಧೃಷ್ಟದ್ಯುಮ್ನ – ದ್ರೌಪದಿಯರು ಮೇಲೆದ್ದು ಬರುತ್ತಾರೆ. ಈ ಕಥೆಯನ್ನು ಕೇಳಿದ ಕುಂತಿ ಮತ್ತು ಪಾಂಡವರು ಪಾಂಚಾಲನಗರಿಗೆ ಪ್ರಯಾಣಿಸುತ್ತಾರೆ. ಮಾರ್ಗದಲ್ಲಿ ವ್ಯಾಸನು ಪಾಂಡವರಿಗೆ ದ್ರೌಪದಿಯ ಪೂರ್ವ ಜನ್ಮದ ವೃತ್ತಾಂತವನ್ನು ಹೇಳಿ ಅವಳು ಪಾಂಡವರ ಪತ್ನಿಯಾಗುತ್ತಾಳೆಂದು ಹೇಳುತ್ತಾನೆ. ಸಾಯಂಕಾಲದ ಸಮಯದಲ್ಲಿ ಗಂಗೆಯನ್ನು ದಾಟುತ್ತಿದ್ದಾಗ ಮಾರ್ಗದಲ್ಲಿ ಪಾಂಡವರನ್ನು ಗಂಧರ್ವ ಚಿತ್ರರಥನು ತಡೆಯುತ್ತಾನೆ. ಅರ್ಜುನನು ಪ್ರತಿಭಟಿಸಿ ಆಗ್ನೇಯಾಸ್ತ್ರದಿಂದ ಚಿತ್ರರಥನನ್ನು ದಗ್ಧ ರಥನನ್ನಾಗಿ ಮಾಡುತ್ತಾನೆ. ಗಂಧರ್ವ ಪತ್ನಿಯು ಶರಣು ಬರಲು ಯುಧಿಷ್ಠಿರನು ಜೀವದಾನಮಾಡುತ್ತಾನೆ. ಸಂತೋಷಗೊಂಡ ಚಿತ್ರರಥನು ಮೈತ್ರಿಯಿಂದ ಚಕ್ಷುಷೀ ವಿದ್ಯೆಯನ್ನು ಅರ್ಜುನನನಿಗೂ ಅಮೂಲ್ಯ ಕುದುರೆಗಳನ್ನು ಪಾಂಡವರಿಗೂ ನೀಡುತ್ತಾನೆ. ಬದಲಾಗಿ ಅರ್ಜುನನು ಚಿತ್ರರಥನಿಗೆ ಆಗ್ನೇಯಾಸ್ತ್ರವನ್ನು ನೀಡುತ್ತಾನೆ. ರಾತ್ರಿ ಪ್ರಯಾಣಮಾಡುತ್ತಿದ್ದಾಗ ಧಾಳಿ ಮಾಡಿದುದಕ್ಕೆ ಕಾರಣವನ್ನು ಕೇಳಲು ಗಂಧರ್ವನು ಅರ್ಜುನನಿಗೆ ಕ್ಷತ್ರಿಯರು ಪುರೋಹಿತರನ್ನು ಇರಿಸಿಕೊಳ್ಳುವುದರ ಮಹತ್ವವನ್ನು ವಿವರಿಸುತ್ತಾನೆ. ತನ್ನನ್ನು ತಾಪತ್ಯ ಎಂದು ಕರೆದುದರ ಕಾರಣವನ್ನು ಅರ್ಜುನನು ಕೇಳಲು ಗಂಧರ್ವನು ಪುರುವಂಶಜ ಸಂವರಣನು ಸೂರ್ಯಪುತ್ರಿ ತಪತಿಯನ್ನು ಮೋಹಿಸಿದುದರ ತಪತ್ಯುಪಾಖ್ಯಾನವನ್ನು ಹೇಳುತ್ತಾನೆ. ಋಷಿ ವಸಿಷ್ಠನ ಕುರಿತು ಕೇಳಲು, ಗಂಧರ್ವನು ಅರ್ಜುನನಿಗೆ ಅವನ ಸಾಧನೆಗಳನ್ನು ವರ್ಣಿಸಿ, ವಿಶ್ವಾಮಿತ್ರ-ವಸಿಷ್ಠರ ಕಲಹದ ಕುರಿತು ವಸಿಷ್ಠನ ಆಖ್ಯಾನವನ್ನು ಹೇಳುತ್ತಾನೆ.

ನಂತರದ ಸ್ವಯಂವರಪರ್ವವು ಪಾಂಡವರು ಧೌಮ್ಯನನ್ನು ಪುರೋಹಿತನನ್ನಾಗಿ ಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ಬ್ರಾಹ್ಮಣರೊಂದಿಗೆ ದ್ರೌಪದೀ ಸ್ವಯಂವರದ ಕುರಿತು ಮಾತನಾಡಿಕೊಳ್ಳುತ್ತಾ ಬ್ರಾಹ್ಮಣ ವೇಶದಲ್ಲಿದ್ದ ಪಾಂಡವರು ಪಾಂಚಾಲ ನಗರಿಗೆ ಪ್ರಯಾಣಿಸುತ್ತಾರೆ. ಪಾಂಚಾಲನಗರಿಯಲ್ಲಿ ಕುಂಬಾರನೋರ್ವನ ಮನೆಯಲ್ಲಿ ವಾಸಿಸಿ, ಯಾರಿಗೂ ಗುರುತು ಸಿಗದಂತೆ ಪಾಂಡವರು ಬ್ರಾಹ್ಮಣ ವೃತ್ತಿಗೆ ಸಮಾನ ಭಿಕ್ಷೆಬೇಡಲು ಪ್ರಾರಂಭಿಸುತ್ತಾರೆ. ದ್ರೌಪದಿಯನ್ನು ಅರ್ಜುನನಿಗೇ ಕೊಡಬೇಕೆಂದು ಸದಾ ಬಯಸಿದ್ದ ದ್ರುಪದನು ಅದನ್ನು ಯಾರಿಗೂ ಬಹಿರಂಗಪಡಿಸದೇ, ಪಾಂಡವರನ್ನು ಅನ್ವೇಷಿಸುವ ಉದ್ದೇಶದಿಂದ ಅಸಾಧ್ಯ ಬಿಲ್ಲನ್ನು ಮಾಡಿಸಿ, ಅಸಾಧ್ಯ ಸ್ಪರ್ಧೆಯನ್ನಿರಿಸುತ್ತಾನೆ. ಸ್ವಯಂವರದಲ್ಲಿ ಭಾಗವಹಿಸಲು ಮತ್ತು ಅದನ್ನು ವೀಕ್ಷಿಸಲು ಎಲ್ಲರ ಆಗಮನ, ಸಿದ್ಧತೆಗಳಾಗುತ್ತವೆ. ಧೃಷ್ಟದ್ಯುಮ್ನನು ಸ್ವಯಂವರದ ನಿಯಮದ ಕುರಿತು ವಿವರಿಸಿ ಸ್ವಯಂವರಕ್ಕೆ ಆಗಮಿಸಿದ್ದ ರಾಜರನ್ನು ಪರಿಚಯಿಸುತ್ತಾನೆ. ಸ್ಪರ್ಧಿಸಲು ರಾಜರು ಒಂದಾಗಲು ಕೃಷ್ಣನು ಪಾಂಡವರನ್ನು ಸಭೆಯಲ್ಲಿ ದೂರದಿಂದಲೇ ನೋಡಿ ಗುರುತಿಸಿ ಬಲರಾಮನಿಗೆ ತೋರಿಸುತ್ತಾನೆ. ಎಲ್ಲ ರಾಜರೂ ಸ್ಪರ್ದೆಯಲ್ಲಿ ಸೋಲಲು ಬ್ರಾಹ್ಮಣರ ಸಭೆಯಿಂದ ಅರ್ಜುನನು ಮೇಲೆದ್ದು ಬರುತ್ತಾನೆ. ಅರ್ಜುನನು ಮತ್ಸ್ಯವನ್ನು ಭೇದಿಸಲು ಹರ್ಷೋದ್ಗಾರವಾಗಲು, ಯುಧಿಷ್ಠಿರನು ನಕುಲ-ಸಹದೇವರೊಂದಿಗೆ ಅವಾಸದೆಡೆಗೆ ಹೊರಟು ಹೋಗುತ್ತಾನೆ. ದ್ರೌಪದಿಯು ವರಮಾಲೆಯನ್ನು ಹಾಕಿ ಅರ್ಜುನನನ್ನು ಹಿಂಬಾಲಿಸುತ್ತಾಳೆ. ದ್ರೌಪದಿಯನ್ನು ಬ್ರಾಹ್ಮಣನಿಗೆ ಕೊಡುವುದನ್ನು ನೆರೆದ ಕ್ಷತ್ರಿಯರು ಪ್ರತಿಭಟಿಸಿ ದ್ರುಪದನನ್ನು ಆಕ್ರಮಣ ಮಾಡಲು ಮುನ್ನುಗ್ಗಲು ರಾಜರನ್ನು ಭೀಮಾರ್ಜುನರು ಎದುರಿಸಿ ತಡೆಯುತ್ತಾರೆ. ಅರ್ಜುನನು ಕರ್ಣನನ್ನೂ ಭೀಮಸೇನನು ಶಲ್ಯನನ್ನೂ ಎದುರಿಸಿ ಹೋರಾಡುತ್ತಾರೆ. ಕರ್ಣ-ಶಲ್ಯರು ಹಿಂಜರಿದಾಗ, ಕೃಷ್ಣನು ಕ್ಷತ್ರಿಯರನ್ನು ತಡೆಹಿಡಿಯುತ್ತಾನೆ. ಭೀಮಾರ್ಜುನರು ದ್ರೌಪದಿಯೊಡನೆ ಮನೆಗೆ ತೆರಳುತ್ತಾರೆ. “ಇದೋ ಭಿಕ್ಷೆ!” ಎಂದು ಹೇಳಿದ ಭೀಮಾರ್ಜುನರಿಗೆ ಕುಂತಿಯು “ನೀವೆಲ್ಲರೂ ಒಟ್ಟಿಗೇ ಸೇರಿ ಭುಂಜಿಸಿ” ಎನ್ನುತ್ತಾಳೆ. ಎಲ್ಲರೂ ಚರ್ಚೆಮಾಡಿದ ನಂತರ ಯುಧಿಷ್ಠಿರನು ದ್ರೌಪದಿಯು ನಮ್ಮೆಲ್ಲರ ಭಾರ್ಯೆಯಾಗುತ್ತಾಳೆ ಎಂದು ನಿರ್ಧರಿಸುತ್ತಾನೆ. ಕೃಷ್ಣ-ಬಲರಾಮರು ಪಾಂಡವರಿದ್ದ ಕುಂಬಾರನ ಮನೆಗೆ ಬಂದು ತಮ್ಮ ಪರಿಚಯವನ್ನು ಮಾಡಿಕೊಂಡು ಅವರು ಬೆಂಕಿಯಿಂದ ತಪ್ಪಿಸಿಕೊಂಡಿರುವುದು ಒಳ್ಳೆಯದಾಯಿತೆಂದು ಹೇಳಿ, ಇತರರು ಪಾಂಡವರನ್ನು ಗುರುತಿಸಬಾರದೆಂದು ಕೃಷ್ಣ-ಬಲರಾಮರು ಬೇಗನೇ ಅಲ್ಲಿಂದ ಹೊರಟುಹೋಗುತ್ತಾರೆ. ಆದರೆ ಧೃಷ್ಟದ್ಯುಮ್ನನು ಹಿಂಬಾಲಿಸಿ ಕುಂಬಾರನ ಮನೆಗೆ ಬಂದು ಅಡಗಿ ಕುಳಿತು ನಡೆದುದೆಲ್ಲವನ್ನೂ ನೋಡುತ್ತಾನೆ. ಪಾಂಡವರು ಊಟಮಾಡಿದುದನ್ನು, ಮಲಗಿಕೊಂಡಿದುದನ್ನು ನೋಡಿದ ಧೃಷ್ಟದ್ಯುಮ್ನನು ತಂದೆಗೆ ವರದಿಮಾಡಲು ಹೋದಾಗ “ದ್ರೌಪದಿಯನ್ನು ಗೆದ್ದವನು ಅರ್ಜುನನೇ?” ಎಂದು ದ್ರುಪದನು ಮಗನನ್ನು ಪ್ರಶ್ನಿಸುತ್ತಾನೆ. ದೃಷ್ಟದ್ಯುಮ್ನನು ತಂದೆಗೆ ಕೃಷ್ಣೆಯನ್ನು ಯಾರು ಪಡೆದರು ಮತ್ತು ಏನಾಯಿತು ಎನ್ನುವುದನ್ನು ವರದಿಮಾಡಲು ಪ್ರಹೃಷ್ಟ ದ್ರುಪದನು ಕಳುಹಿಸಿದ ಪುರೋಹಿತನು ಪಾಂಡವರಲ್ಲಿಗೆ ಬಂದು ಔತಣಕ್ಕೆ ಆಹ್ವಾನಸಂದೇಶವನ್ನು ನೀಡುತ್ತಾನೆ.

ವೈವಾಹಿಕಪರ್ವದಲ್ಲಿ ಐವರು ಪಾಂಡವರೊಂದಿಗೆ ದ್ರೌಪದಿಯ ವಿವಾಹದ ವರ್ಣನೆಯಿದೆ. ಪಾಂಡವರು ಔತಣಕ್ಕೆ ಬಂದಾಗ ದ್ರುಪದನು ಯುಧಿಷ್ಠಿರನನ್ನುದ್ದೇಶಿಸಿ ಅವರನ್ನು ಯಾರೆಂದು ಸಂಬೋಧಿಸಬೇಕೆಂದು ಕೇಳಲು ಯುಧಿಷ್ಠಿರನು ತಮ್ಮ ಪರಿಚಯವನ್ನು ಹೇಳಿಕೊಳ್ಳುತ್ತಾನೆ. ಹರ್ಷಿತನಾದ ದ್ರುಪದನು, ವಿಷಯವನ್ನು ತಿಳಿದು, ಧೃತರಾಷ್ಟ್ರನನ್ನು ನಿಂದಿಸಿ ಅವರಿಗೆ ರಾಜ್ಯವನ್ನು ದೊರಕಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಅರ್ಜುನನು ದ್ರೌಪದಿಯ ಪಾಣಿಗ್ರಹಣ ಮಾಡಲು ಮುಹೂರ್ತವನ್ನು ನಿಶ್ಚಯಿಸಬೇಕೆಂದು ಕೇಳಲು ಯುಧಿಷ್ಠಿರನು ಅವಳು ಐವರ ಬಾರ್ಯೆಯಾಗುತ್ತಾಳೆಂದು ಹೇಳಲು ಅದರ ಕುರಿತು ದೃಪದ-ಯುಧಿಷ್ಠಿರರ ನಡುವೆ ಚರ್ಚೆಯಾಗುವಾಗ ವ್ಯಾಸನ ಆಗಮನವಾಗುತ್ತದೆ. ಒಬ್ಬ ಸ್ತ್ರೀಯು ಹಲವಾರು ಪುರುಷರ ಪತ್ನಿಯಾದರೆ ಧರ್ಮಸಂಕರವಾಗುವುದಿಲ್ಲವೇ ಎಂದು ಕೇಳಲು ವ್ಯಾಸನು ದ್ರುಪದನನ್ನು ಅಂತಃಪುರದ ಏಕಾಂತಕ್ಕೆ ಕರೆದುಕೊಂಡು ಹೋಗಿ ಹಿಂದೆ ದೇವಲೋಕದಲ್ಲಿ ನಡೆದ ಘಟನೆಗಳನ್ನೂ, ಪಾಂಡವರು ಐವರು ಇಂದ್ರರೆನ್ನುವುದನ್ನೂ ಹೇಳಿ ದ್ರುಪದನಿಗೆ ಅವರನ್ನು ತೋರಿಸುತ್ತಾನೆ. ದ್ರೌಪದಿಯ ಪೂರ್ವಜನ್ಮವೃತ್ತಾಂತವನ್ನೂ ಹೇಳುತ್ತಾನೆ.  ವ್ಯಾಸನಿತ್ತ ವಿವರಗಳನ್ನು ಕೇಳಿ ವಿಧಿವಿಹಿತವಾಗಿರುವುದನ್ನು ತಪ್ಪಿಸಲು ಸಾಧ್ಯವಿಲ್ಲವೆಂದು ಐವರೂ ಪಾಂಡವರೊಂದಿಗೆ ದ್ರೌಪದಿಯ ವಿವಾಹಕ್ಕೆ ದ್ರುಪದನು ಒಪ್ಪಿಕೊಳ್ಳುತ್ತಾನೆ. ಒಂದೊಂದು ದಿನದ ಅಂತರದಲ್ಲಿ ಒಬ್ಬೊಬ್ಬರಾಗಿ ಐವರು ಪಾಂಡವರೊಂದಿಗೆ ದ್ರೌಪದಿಯ ವಿವಾಹವಾಗುತ್ತದೆ. ಪ್ರತಿ ಹಗಲು ಅವಳು ಪುನಃ ಕನ್ಯೆಯಾಗಿಯೇ ಉಳಿಯುತ್ತಾಳೆ. ಅಳಿಯಂದಿರಿಗೆ ದ್ರುಪದನು ಉಡುಗೊರೆಗಳನ್ನು ನೀಡುತ್ತಾನೆ. ಕುಂತಿಯು ದ್ರೌಪದಿಗೆ ಆಶೀರ್ವದಿಸುತ್ತಾಳೆ ಮತ್ತು ಕೃಷ್ಣನು ಪಾಂಡವರಿಗೆ ಉಡುಗೊರೆಗಳನ್ನು ನೀಡುತ್ತಾನೆ.

ಮುಂದಿನ ವಿದುರಾಗಮನಪರ್ವದಲ್ಲಿ ದ್ರೌಪದಿಯೊಡನೆ ಪಾಂಡವರನ್ನು ಹಸ್ತಿನಾಪುರಕ್ಕೆ ಕರೆತರಲು ಧೃತರಾಷ್ಟ್ರನು ವಿದುರನನ್ನು ಕಳುಹಿಸುವ ವಿಷಯವಿದೆ. ಪಾಂಡವರು ಜೀವಿತರಾಗಿದ್ದಾರೆ ಮತ್ತು ದ್ರೌಪದಿಯನ್ನು ಗೆದ್ದಿದ್ದಾರೆ ಎಂದು ತಿಳಿದು ದುಃಖಿತರಾಗಿ “ದೈವವೇ ಪರಮವಾದದ್ದು. ಪೌರುಷವು ನಿರರ್ಥಕ.” ಎಂದು ಯೋಚಿಸುತ್ತಾ ದುರ್ಯೋಧನಾದಿಗಳು ಹಸ್ತಿನಾಪುರಕ್ಕೆ ಹಿಂದಿರುಗುತ್ತಾರೆ. ಪಾಂಡವರ ಯಶಸ್ಸನ್ನು ವಿದುರನಿಂದ ತಿಳಿದ ಧೃತರಾಷ್ಟ್ರನು ಸಂತೋಷವನ್ನು ವ್ಯಕ್ತಪಡಿಸುತ್ತಾನೆ. ಸಂತೋಷಪಟ್ಟ ತಂದೆಯನ್ನು ಮೂದಲಿಸಿ ಅವನು ಏನು ಮಾಡಲಿದ್ದಾನೆಂದು ದುರ್ಯೋಧನನು ಪ್ರಶ್ನಿಸುತ್ತಾನೆ. ಅಭಿಪ್ರಾಯಗಳೇನೆಂದು ಧೃತರಾಷ್ಟ್ರನು ಕೇಳಲು ಪಾಂಡವರನ್ನು ನಾಶಪಡಿಸಲು ದುರ್ಯೋಧನನು ಹಲವಾರು ಉಪಾಯಗಳನ್ನು ಹಂಚಿಕೊಳ್ಳುತ್ತಾನೆ. ಕರ್ಣನು ತನಗೆ ತೋಚಿದ ಉಪಾಯಗಳನ್ನು ಹೇಳುತ್ತಾನೆ. ಧೃತರಾಷ್ಟ್ರನು ಇತರರೊಡನೆ ಸಮಾಲೋಚನೆ ಮಾಡುತ್ತೇನೆ ಎಂದು ಹೇಳಿ ದುರ್ಯೋಧನ-ಕರ್ಣರನ್ನು ಕಳುಹಿಸುತ್ತಾನೆ. ಮರುದಿನ ರಾಜಸಭೆಯಲ್ಲಿ ಭೀಷ್ಮನು ಪಾಂಡವರಿಗೆ ಅವರ ಪಿತ್ರಾರ್ಜಿತ ಭೂಮಿಯನ್ನು ಕೊಡಬೇಕೆಂದು ಹೇಳುತ್ತಾನೆ. ಪಾಂಡವರನ್ನು ಕರೆತರಿಸಿಕೊಂಡು ಅವರು ತಮ್ಮ ತಂದೆಯ ಸ್ಥಾನವನ್ನು ಸ್ವೀಕರಿಸುವಂತೆ ಮಾಡಬೇಕೆಂದು ದ್ರೋಣನು ಹೇಳುತ್ತಾನೆ. ಕರ್ಣನು ಭೀಷ್ಮ ಮತ್ತು ದ್ರೋಣರ ಸಲಹೆಯನ್ನು ಟೀಕಿಸಿ ನಿಂದಿಸುತ್ತಾನೆ. ಭೀಷ್ಮ-ದ್ರೋಣರ ಸಲಹೆಯನ್ನು ಸ್ವೀಕರಿಸಬೇಕೆಂದು ವಿದುರನು ಧೃತರಾಷ್ಟ್ರನಿಗೆ ಹೇಳುತ್ತಾನೆ. ಆಗ ಧೃತರಾಷ್ಟ್ರನು ತನ್ನ ಸಂದೇಶವನ್ನಿತ್ತು, ಪಾಂಡವರನ್ನು ಕರೆದುಕೊಂಡು ಬರಲು ವಿದುರನನ್ನು ಪಾಂಚಾಲನಗರಿಗೆ ಕಳುಹಿಸುತ್ತಾನೆ.  ವಿದುರನು ಧೃತರಾಷ್ಟ್ರನ ಸಂದೇಶವನ್ನು ದ್ರುಪದನಿಗೆ ನೀಡುತ್ತಾನೆ.

ಹದಿನೈದನೆಯ ಉಪಪರ್ವವಾದ ರಾಜ್ಯಲಂಭಪರ್ವದಲ್ಲಿ ದ್ರುಪದ-ವಾಸುದೇವರ ಸಲಹೆಯ ಮೇರೆಗೆ ಪಾಂಡವರು ದ್ರೌಪದಿಯೊಂದಿಗೆ ಹಸ್ತಿನಾಪುರಕ್ಕೆ ಮರಳಿದುದರ ಮತ್ತು “ಪುನಃ ಮನಸ್ತಾಪವಾಗದಿರಲೆಂದು ಅರ್ಧರಾಜ್ಯವನ್ನು ಪಡೆದು ಖಾಂಡವಪ್ರಸ್ಥಕ್ಕೆ ಹೋಗಿ” ಎಂದು ಧೃತರಾಷ್ಟ್ರನು ಹೇಳಲು ಪಾಂಡವರು ಅಲ್ಲಿ ಇಂದ್ರಪ್ರಸ್ಥ ನಗರಿಯನ್ನು ನಿರ್ಮಿಸಿ ವಾಸಿಸಿದುದರ ವರ್ಣನೆಯಿದೆ.

ನಂತರದ ಅರ್ಜುನವನವಾಸಪರ್ವದಲ್ಲಿ ಹೆಸರೇ ಸೂಚಿಸುವಂತೆ ಅರ್ಜುನನ ಹನ್ನೆರಡು ವರ್ಷಗಳ ವನವಾಸದ ವರ್ಣನೆಯಿದೆ. ಇಂದ್ರಪ್ರಸ್ಥಕ್ಕೆ ನಾರದನ ಆಗಮನವಾಗುತ್ತದೆ. “ಪಾಂಚಾಲಿಯಿಂದಾಗಿ ನಿಮ್ಮಲ್ಲಿ ಭೇದವುಂಟಾಗಬಾರದೆಂದು ನಿಯಮವನ್ನು ಮಾಡಿಕೊಳ್ಳಬೇಕು” ಎಂದು ಹೇಳಿ ನಾರದನು ಸುಂದೋಪಸುಂದರ ಚರಿತ್ರೆಯನ್ನು ಹೇಳುತ್ತಾನೆ. ಪಾಂಡವರು ಅನ್ಯೋನ್ಯರಲ್ಲಿ ದ್ರೌಪದಿಯ ಕುರಿತಾಗಿ “ದ್ರೌಪದಿಯೊಡನಿರುವವನನ್ನು ಅನ್ಯ ಯಾರೂ ನೋಡಿದರೆ ಅವನು ಬ್ರಹ್ಮಚಾರಿಯಾಗಿ ಹನ್ನೆರಡು ವರ್ಷಗಳು ವನದಲ್ಲಿ ವಾಸಿಸಬೇಕು” ಎಂಬ ಒಪ್ಪಂದವನ್ನು ಮಾಡಿಕೊಳ್ಳುತಾರೆ. ಒಮ್ಮೆ ಕಳ್ಳರಿಂದಾಗಿ ಗೋವುಗಳನ್ನು ಕಳೆದುಕೊಂಡ ಬ್ರಾಹ್ಮಣನೊಬ್ಬನು ಇಂದ್ರಪ್ರಸ್ಥಕ್ಕೆ ಬಂದು ಪಾಂಡವರನ್ನು ನಿಂದಿಸಲು ಅರ್ಜುನನು ಆಯುಧಗಳನ್ನು ತರಲು ಹೋದಾಗ ನಿಯಮವನ್ನು ಉಲ್ಲಂಘಿಸುತ್ತಾನೆ. ಬ್ರಾಹ್ಮಣನಿಗೆ ಅವನ ಗೋವುಗಳನ್ನು ದೊರಕಿಸಿಕೊಟ್ಟು ಅರ್ಜುನನು ವನವಾಸವನ್ನು ಕೈಗೊಳ್ಳುತ್ತಾನೆ.

ವನವಾಸದ ಸಮಯದಲ್ಲಿ ನಾಗಕನ್ಯೆ ಉಲೂಪಿಯು ಅರ್ಜುನನನ್ನು ಮೋಹಿಸಿ ತನ್ನ ಲೋಕಕ್ಕೆ ಎಳೆದುಕೊಂಡು ಹೋಗುತ್ತಾಳೆ ಮತ್ತು ಅರ್ಜುನನು ಉಲೂಪಿಯೊಂದಿಗೆ ರಾತ್ರಿಯನ್ನು ಕಳೆಯುತ್ತಾನೆ. ನಂತರ ಮಣಲೂರಿನಲ್ಲಿ ಚಿತ್ರಾಂಗದೆಯನ್ನು ಕಂಡು ಅರ್ಜುನನು ಕಾಮಮೋಹಿತನಾಗುತ್ತಾನೆ. ಅವಳಲ್ಲಿ ಹುಟ್ಟಿದವನು ಕುಲದ ವಾರಸನಾಗಬೇಕೆಂಬ ಮಣಲೂರೇಶ್ವರನ ನಿಬಂಧನೆಗೆ ಒಪ್ಪಿ ಅರ್ಜುನನು ಚಿತ್ರಾಂಗದೆಯೊಂದಿಗೆ ಮೂರು ವರ್ಷ ಕಳೆಯುತ್ತಾನೆ. ಮೊಸಳೆಯಿದೆಯೆಂದು ವರ್ಜಿತವಾದ ಸೌಭದ್ರ ಸರೋವರದಲ್ಲಿ ಸ್ನಾನಕ್ಕೆಂದು ಅರ್ಜುನನು ಇಳಿದಾಗ ಆಕ್ರಮಣ ಮಾಡಿದ ಮೊಸಳೆಗಳನ್ನು ಹಿಡಿದು ಮೇಲೆ ತರಲು ಅದು ದಿವ್ಯರೂಪೀ ಅಪ್ಸರೆಯ ರೂಪವನ್ನು ತಳೆಯುತ್ತದೆ. ಅವಳು ಶಾಪಕ್ಕೆ ಕಾರಣವನ್ನು ತಿಳಿಸುತ್ತಾಳೆ. ಹೀಗೆ ಅರ್ಜುನನು ಐವರು ಅಪ್ಸರೆಯರಿಗೂ ಶಾಪವಿಮೋಚನೆ ಮಾಡುತ್ತಾನೆ. ನಂತರ ಮಣಲೂರಪುರಕ್ಕೆ ಹೋಗಿ ಅಲ್ಲಿ ಪತ್ನಿ ಚಿತ್ರಾಂಗದೆ ಮತ್ತು ಮಗ ಬಭ್ರುವಾಹನರನ್ನು ಕಂಡು ತೀರ್ಥಯಾತ್ರೆಯನ್ನು ಮುಂದುವರೆಸುತ್ತಾನೆ. ಪ್ರಭಾಸದಲ್ಲಿ ಕೃಷ್ಣನನ್ನು ಭೇಟಿಯಾಗಿ ಒಟ್ಟಿಗೇ ವನವಿಹಾರ, ಭೋಜನ, ಮನೋರಂಜನೆಗಳನ್ನು ಮಾಡುತ್ತಾನೆ. ಕೃಷ್ಣನು ಅರ್ಜುನನನ್ನು ದ್ವಾರಕೆಗೆ ಕರೆದುಕೊಂಡು ಹೋಗಲು ಕೃಷ್ಣನ ಭವನದಲ್ಲಿ ಅರ್ಜುನನು ವಾಸಮಾಡುತ್ತಾನೆ. ಅರ್ಜುನನು ಐವರು ಅಪ್ಸರೆಯರ ಶಾಪವಿಮೋಚನೆ ಮಾಡಿ ಐದು ತೀರ್ಥಗಳನ್ನು ಉದ್ಧರಿಸಿದುದರ ಕಥೆಯು ಸ್ಕಾಂದಮಹಾಪುರಾಣದ ಮಾಹೇಶ್ವರಖಂಡದ ಕೌಮಾರಿಕಾ ಖಂಡದ ಮೊದಲನೇ ಅಧ್ಯಾಯದಲ್ಲಿಯೂ ಬರುತ್ತದೆ.

ಅರ್ಜುನನು ಕೃಷ್ಣನ ತಂಗಿ ಸುಭದ್ರೆಯನ್ನು ಅಪಹರಿಸಿದ ಪ್ರಸಂಗವು ಸುಭದ್ರಾಹರಣಪರ್ವದಲ್ಲಿ ಬರುತ್ತದೆ. ರೈವತಕಗಿರಿಯ ಉತ್ಸವದಲ್ಲಿ ಸುಭದ್ರೆಯನ್ನು ನೋಡಿ ಅರ್ಜುನನು ಮೋಹಿಸಿ, ಅವಳನ್ನು ಪಡೆಯುವ ಉಪಾಯವನ್ನು ಕೃಷ್ಣನಲ್ಲಿ ಕೇಳುತ್ತಾನೆ. ಅವಳನ್ನು ಕದ್ದುಕೊಂಡು ಹೋಗೆಂದು ಕೃಷ್ಣನು ಸಲಹೆನೀಡಲು, ಅರ್ಜುನನು ಅದಕ್ಕೆ ಯುಧಿಷ್ಠಿರನ ಅನುಮತಿಯನ್ನು ಪಡೆಯುತ್ತಾನೆ. ರೈವತಗಿರಿಯನ್ನು ಪೂಜಿಸಿ ಮರಳುತ್ತಿದ್ದಾಗ ಸುಭದ್ರೆಯನ್ನು ಅರ್ಜುನನು ಬಲವಂತವಾಗಿ ಎತ್ತಿ ರಥದ ಮೇಲಿರಿಸಿ ಹಸ್ತಿನಾಪುರದತ್ತ ಹೋಗುತ್ತಾನೆ. ದೂತರಿಂದ ವಿಷಯವನ್ನು ತಿಳಿದ ಬಲರಾಮನು ಕೋಪಗೊಂಡು ಅರ್ಜುನನನ್ನು ಎದುರಿಸಲು ಸೇನೆಯನ್ನು ಸಿದ್ಧಗೊಳಿಸುತ್ತಾನೆ. ಶ್ರೀಮದ್ಭಾಗವತದ ದಶಮ ಸ್ಕಂದದ 86ನೆಯ ಅಧ್ಯಾಯದಲ್ಲಿ ಬರುವ ಸುಭದ್ರಾ ವಿವಾಹ ಪ್ರಸಂಗವು ಮಹಾಭಾರತದ ಈ ಪರ್ವದಲ್ಲಿ ಇರುವುದಕ್ಕಿಂತ ಸ್ವಲ್ಪ ಬೇರೆಯಾಗಿದೆ.

ಮುಂದಿನ ಹರಣಹಾರಿಕಪರ್ವದಲ್ಲಿ ಹೋರಾಡಿ ಸೋತರೆ ಅಪಕೀರ್ತಿ ಬರುತ್ತದೆ, ಸಾಂತ್ವನದಲ್ಲಿ ಪರಾಭವವೆಂಬುವುದೇ ಇಲ್ಲ ಎಂದು ಹೇಳಿ ಕೃಷ್ಣನು ಬಲರಾಮನನ್ನು ತಡೆಯುತ್ತಾನೆ ಮತ್ತು ಅರ್ಜುನನನ್ನು ಕರೆಯಿಸಿ ವಿವಾಹವನ್ನು ನೆರವೇರಿಸುತ್ತಾನೆ. ವೃಷ್ಣಿ-ಅಂಧಕ ಪ್ರಮುಖರ ಸಮೇತ ಕೃಷ್ಣ-ಬಲರಾಮರು ಉಡುಗೊರೆಗಳೊಂದಿಗೆ ಇಂದ್ರಪ್ರಸ್ಥಕ್ಕೆ ಬಂದು ಪಾಂಡವರೊಡನೆ ರಮಿಸುತ್ತಾನೆ. ಸುಭದ್ರೆಯಲ್ಲಿ ಅಭಿಮನ್ಯುವಿನ ಮತ್ತು ಪಾಂಚಾಲಿಯಲ್ಲಿ ಪಾಂಡವ ಪುತ್ರರೈವರ ಜನನವಾಗುತ್ತದೆ.

ಆದಿಪರ್ವದ ಕೊನೆಯ ಉಪಪರ್ವ ಖಾಂಡವದಾಹಪರ್ವವು ಪಾಂಡವರ ಸಂತೋಷದ ದಿನಗಳಿಂದ ಪ್ರಾರಂಭವಾಗುತ್ತದೆ. ಕೃಷ್ಣ-ಧನಂಜಯರು ಗೆಳೆಯರೊಂದಿಗೆ ಜಲವಿಹಾರಕ್ಕೆ ಯಮುನೆಗೆ ಹೋದಾಗ ಕೃಷ್ಣಾರ್ಜುನರು ಕುಳಿತಿದ್ದಲ್ಲಿ ವಿಪ್ರರೂಪದಲ್ಲಿ ಅಗ್ನಿಯು ಕಾಣಿಸಿಕೊಳ್ಳುತ್ತಾನೆ. ಇಂದ್ರನಿಂದ ಸದಾ ರಕ್ಷಿಸಲ್ಪಟ್ಟಿರುವ ಖಾಂಡವ ವನವನ್ನು ಸುಡಲು ತನಗೆ ಸಹಾಯಮಾಡಬೇಕೆಂದು ಅಗ್ನಿಯು ಕೃಷ್ಣಾರ್ಜುನರಲ್ಲಿ ಕೇಳಿಕೊಳ್ಳಲು ತಮಗೆ ಸಮರ್ಥವಾದ ಆಯುಧ-ರಥಗಳು ಬೇಕು ಎಂದು ಅರ್ಜುನನು ಕೇಳಿಕೊಳ್ಳುತ್ತಾನೆ. ಅಗ್ನಿಯು ವರುಣನಿಂದ ಉತ್ತಮ ರಥವನ್ನೂ, ಅರ್ಜುನನಿಗೆ ಗಾಂಡೀವ ಧನುಸ್ಸು ಮತ್ತು ಎರಡು ಅಕ್ಷಯ ಬತ್ತಳಿಕೆಗಳನ್ನೂ, ಕೃಷ್ಣನಿಗೆ ಸುದರ್ಶನ ಚಕ್ರವನ್ನೂ, ಕೌಮೋದಕೀ ಎನ್ನುವ ಗದೆಯನ್ನೂ ಕೊಡಿಸುತ್ತಾನೆ. ಕೃಷ್ಣಾರ್ಜುನರು ಸಿದ್ಧರಾಗಲು ಅಗ್ನಿಯು ಖಾಂಡವವನ್ನು ಸುಡಲು ಪ್ರಾರಂಭಿಸುತ್ತಾನೆ. ಇಂದ್ರನು ಅಗ್ನಿಯನ್ನು ಆರಿಸಲು ವನದ ಮೇಲೆ ಜೋರಾಗಿ ಮಳೆಸುರಿಸುತ್ತಾನೆ. ತಕ್ಷಕನ ಮಗ ಅಶ್ವಸೇನನನ್ನು ಉಳಿಸಲು ಇಂದ್ರನು ಅರ್ಜುನನ ಮೇಲೆ ಮಾಯೆಯ ಮಳೆಯನ್ನು ಸುರಿಸಲು ಇಂದ್ರಾರ್ಜುನರ ಘೋರ ಯುದ್ಧವು ನಡೆಯುತ್ತದೆ. ತಕ್ಷಕನು ಸುರಕ್ಷಿತನಾಗಿದ್ದಾನೆ ಮತ್ತು ಕೃಷ್ಣಾರ್ಜುನರು ಅಜೇಯರು ಎಂಬ ಅಶರೀರವಾಣಿಯನ್ನು ಕೇಳಿ ಇಂದ್ರನು ಯುದ್ಧದಿಂದ ಹಿಂದೆ ಸರಿಯುತ್ತಾನೆ. ದಾನವ ಮಯನು ಆರ್ತನಾಗಿ ಸಹಾಯವನ್ನು ಕೇಳಲು ಅರ್ಜುನನು ಅಭಯವನ್ನು ನೀಡುತ್ತಾನೆ. ಇಂದ್ರನು ಕೃಷ್ಣಾರ್ಜುನರಿಗೆ ವರವನ್ನೀಯಲು ಪಾವಕನು ಕೃಷ್ಣಾರ್ಜುನರಿಂದ ಬೀಳ್ಕೊಳ್ಳುತ್ತಾನೆ. ಖಾಂಡವದಹನದಲ್ಲಿ ಸಾರಂಗಗಳು ಏಕೆ ಸುಟ್ಟುಹೋಗಲಿಲ್ಲ ಎನ್ನುವುದನ್ನು ವಿವರಿಸುವ ಶಾಂರ್ಙ್ಗ್ರಕೋಪಾಖ್ಯಾನದೊಂದಿಗೆ ಆದಿಪರ್ವವು ಸಮಾಪ್ತವಾಗುತ್ತದೆ.

 

 

 

[1] The Mahabharata, for the first time critically edited by Vishnu S. Sukthankar, Volume 1, Poona Bhandarkar Oriental Research Institute, 1933

[2] ಯ ಇಮಂ ಶುಚಿರಧ್ಯಾಯಂ ಪಠೇತ್ಪರ್ವಣಿ ಪರ್ವಣಿ  । ಅಧೀತಂ ಭಾರತಂ ತೇನ ಕೃತ್ಸ್ನಂ ಸ್ಯಾದಿತಿ ಮೇ ಮತಿಃ ।।  ಭಾರತಸ್ಯ ವಪುರ್ಹ್ಯೇತತ್ಸತ್ಯಂ ಚಾಮೃತಮೇವ ಚ  ।

[3] ಏವಂ ಕೃತ್ವಾ ತತೋ ದೇವೋ ಮುನಿಂ ಗೌರಮುಖಂ ತದಾ ಉವಾಚ ನಿಮಿ-ಷೇಣೇದಂ ನಿಹತಂ ದಾನವಂ ಬಲಂ ।। ಅರಣ್ಯೇಽಸ್ಮಿಂಸ್ತತಸ್ತ್ವೇತನ್ನೈಮಿಷಾರಣ್ಯ ಸಂಜ್ಞಿತಂ

Leave a Reply

Your email address will not be published. Required fields are marked *