ವೇದ - ಉಪನಿಷತ್ತುಗಳು

ಯೋ ವೇದಾದೌ ಸ್ವರಃ ಪ್ರೋಕ್ತೋ ವೇದಾಂತೇ ಚ ಪ್ರತಿಷ್ಠಿತಃ । ತಸ್ಯ ಪ್ರಕೃತಿಲೀನಸ್ಯ ಯಃ ಪರಃ ಸ ಮಹೇಶ್ವರಃ ।। ವೇದಃ ಶಿವಃ ಶಿವೋ ವೇದೋ ವೇದಾಧ್ಯಾಯೀ ಸದಾಶಿವಃ । ತಸ್ಮಾತ್ಸರ್ವಪ್ರಯತ್ನೇನ ವೇದಮೇವ ಸದಾ ಜಪೇತ್ ।।

ವೇದಗಳ ಆರಂಭದಲ್ಲಿ ಸ್ವರರೂಪವಾಗಿ ನಿರ್ದಿಷ್ಟವಾಗಿರುವವರು ಮತ್ತು ವೇದಾಂತದ ಕೊನೆಯಲ್ಲಿ ಪ್ರತಿಷ್ಠಿತರಾಗಿರುವವರು. ಪ್ರಕೃತಿಯಲ್ಲಿ ಲೀನವಾಗಿರುವವರಿಗಿಂತಲೂ ಅತಿ ಪರಾತ್ಮನಾದ ಮಹೇಶ್ವರನು (ಶಿವನು) ಅಂತ್ಯ ಸತ್ಯ. ವೇದವೇ ಶಿವನಾಗಿದ್ದು, ಶಿವನೇ ವೇದವಾಗಿದ್ದಾನೆ; ವೇದವನ್ನು ಪಠಿಸುವವನು ಸದಾ ಶಿವನಾಗಿರುತ್ತಾನೆ. ಆದ್ದರಿಂದ, ಎಲ್ಲ ಪ್ರಯತ್ನಗಳಿಂದಲೂ ವೇದವನ್ನು ಸದಾಕಾಲವೂ ಪಠಿಸಬೇಕು.

ವೇದವು ಅನಾದಿ ಮತ್ತು ಅಪೌರುಷೇಯ – ಯಾವಾಗಲೂ ಇದ್ದದ್ದು ಮತ್ತು ಮನುಷ್ಯನು ರಚಿಸಿದುದಲ್ಲ. ಇದು ಯಾವಾಗಿನಿಂದ ಇದೆ ಎನ್ನುವುದು ತಿಳಿದಿಲ್ಲ. ವೇದಗಳನ್ನು ಯಾರೂ ಬರೆದುದಲ್ಲ. ಕಾಳಿದಾಸಾದಿಗಳು ಗ್ರಂಥಗಳನ್ನು ಬರೆದಂತೆ ಈ ಮಂತ್ರಬ್ರಾಹ್ಮಣಾತ್ಮಕವಾದ ವೇದವನ್ನು ಯಾರೂ ಬರೆಯಲಿಲ್ಲ. ಈ ವೇದಗಳಿಗೆ ಆದಿಯಿಲ್ಲ. ವಿಶ್ವಾಮಿತ್ರ, ವಸಿಷ್ಠ, ವಾಮದೇವ ಮೊದಲಾದ ಋಷಿಗಳ ಹೆಸರುಗಳು ವೇದದಲ್ಲಿ ಬರುತ್ತವೆ. ಆದರೆ ಈ ಋಷಿಗಳಿಗೆ ಈ ಮಂತ್ರಗಳು ಗೋಚರವಾದವು ಅಂದರೆ ಋಷಿಗಳು ಮಂತ್ರದ್ರಷ್ಟೃಗಳು. ಅವರು ತಮ್ಮ ಶಿಷ್ಯರಿಗೆ ಆ ಮಂತ್ರಗಳನ್ನು ಉಪದೇಶಿಸಿದರು. ಅವರಿಂದ ಮುಂದೆ ಪ್ರಚಾರವಾಯಿತು. ಆದ್ದರಿಂದ ವೇದವನ್ನು ಅಪೌರುಷೇಯ ಎಂದು ಕರೆಯುತ್ತಾರೆ. ವೇದಗಳನ್ನು ಶ್ರುತಿ (ಕೇಳಿದುದು) ಎಂದೂ ಕರೆಯುತ್ತಾರೆ. ಭಾಷೆಗೆ ಲಿಪಿಯ ಸಹಾಯವು ಇಲ್ಲದ ಪುರಾತನ ಕಾಲದಿಂದ ಈ ವೇದವು ತಂದೆಯಿಂದ ಮಗನಿಗೂ, ಗುರುವಿನಿಂದ ಶಿಷ್ಯನಿಗೂ ಬಾಯಿಪಾಠವಾಗಿ ಉಪದೇಶಿಸಲ್ಪಟ್ಟು ಪರಂಪರೆಯಾಗಿ ನಡೆದುಕೊಂಡು ಬಂದಿದೆ. ಒಬ್ಬರಿಂದೊಬ್ಬರಿಗೆ ಹೇಳಿಕೊಡುವಾಗಲೂ ಅಭ್ಯಾಸಮಾಡುವಾಗಲೂ ಈ ವೇದಪಾಠವು ವ್ಯತ್ಯಾಸವಾಗದಂತೆ ಬಹು ಜಾಗರೂಕತೆಯಿಂದ ವಿಶೇಷ ಶ್ರಮದಿಂದ ಉಚ್ಚಾರಣೆ ಮೊದಲಾದವುಗಳನ್ನು ಸ್ವರಸಹಿತ ತಪ್ಪಿಲ್ಲದಂತೆ ಪಠಣಮಾಡುವುದು ಈಗಲೂ ಕಟ್ಟುನಿಟ್ಟಾದ ರೂಢಿಯಲ್ಲಿದೆ. ಇದರಿಂದಾಗಿ ಹಿಂದೆ ಋಷಿಗಳು ವೇದಮಂತ್ರಗಳನ್ನು ರಚಿಸಿದಾಗ ಹೇಗಿದ್ದವೋ ಹಾಗೆ ಈಗಲೂ ಬದಲಾವಣೆಹೊಂದದೇ ಹಾಗೆಯೇ ಇವೆ. ವೇದಕ್ಕೆ ಒಂದು ಅಕ್ಷರವನ್ನಾಗಲೀ ಒಂದು ಒತ್ತು ಅಥವಾ ಸ್ವರವನ್ನಾಗಲೀ ಸೇರಿಸಲು ಅಥವಾ ತೆಗೆದುಹಾಕಲು, ಬದಲಾಯಿಸಲು ಸಾಧ್ಯವಿಲ್ಲ. ಸಂದರ್ಭಾನುಸಾರ ಅಥವಾ ಅರ್ಥಾನುಸಾರ ಶಬ್ದಗಳ ಪರಿಚ್ಛೇದ ಮಾಡಿ ನಾನಾ ಅರ್ಥಗಳನ್ನು ಕಲ್ಪಿಸಿ ನಿಜ ಅಭಿಪ್ರಾಯಗಳಿಗೆ ಭಂಗವುಂಟಾಗಬಹುದೆಂದು ಪುರಾತನ ಋಷಿಗಳು ವೇದದ ಪದಪಾಠವನ್ನೂ ಸ್ವರವನ್ನೂ ಸಹ ನಿಷ್ಕರ್ಶೆಮಾಡಿದ್ದಾರೆ. ಮನಸ್ಸುಬಂದಂತೆ ಅಥವಾ ತಮಗೆ ಬೇಕಾದ ಅರ್ಥ ಸರಿಹೋಗುವಂತೆ ಪದಚ್ಛೇದ ಮಾಡುವ ಹಾಗಿಲ್ಲ.

ವೇದವೆಂಬ ಶಬ್ದವು ವಿದ್=ತಿಳಿ ಎಂಬ ಧಾತುವಿನಿಂದ ಹುಟ್ಟಿದೆ. ಆದ್ದರಿಂದ ವೇದ ಶಬ್ದಕ್ಕೆ ತಿಳುವಳಿಕೆ, ಜ್ಞಾನ ಎಂದರ್ಥ. ಪಾರಮಾರ್ಥಿಕವಾದ ಅಂದರೆ ವೇದಾಂತವಿಷಯವನ್ನು ತಿಳಿಸುವ ಜ್ಞಾನಕ್ಕೆ ಮಾತ್ರವೇ ಜ್ಞಾನವೆಂದು ಸಂಸ್ಕೃತಭಾಷೆಯಲ್ಲಿ ವ್ಯವಹಾರವಿರುವುದು. ಲೋಕವ್ಯವಹಾರಕ್ಕೆ ಉಪಯುಕ್ತವಾದ ತರ್ಕ, ಮೀಮಾಂಸಾ, ಸಾಹಿತ್ಯ, ಶಿಲ್ಪ ಮೊದಲಾದ ಅನೇಕ ಶಾಸ್ತ್ರಗಳಿಗೂ ವೇದಕ್ಕೂ ಇದೇ ಪ್ರಮುಖ ವ್ಯತ್ಯಾಸ. ವೇದಾಂತ ಜ್ಞಾನವೇ ವೇದದ ಮೂಲವು. ಕಾಠಕ, ಮೈತ್ರಾಯಣೀಯ ಮತ್ತು ತೈತ್ತರೀಯ ಸಂಹಿತೆಗಳಲ್ಲಿ  “ವೇದೇನ ವೈ ದೇವಾ ಅಸುರಾಣಾಂ ವಿತ್ತಂ ವೇದ್ಯಮವಿಂದಂತ ತದ್ವೇದಸ್ಯ ವೇದತ್ವಂ” ಅರ್ಥಾತ್ “ದೇವತೆಗಳು ಅಸುರರ ಸ್ಥಿತಿಗಳನ್ನು ವೇದದಿಂದ ತಿಳಿದುಕೊಂಡರು. ಆದ್ದರಿಂದ ಇದು ವೇದ” ಎನ್ನುವುದರ ಮೂಲಕ ವೇದ ಶಬ್ದವು ಬಂದ ಕ್ರಮವನ್ನು ವಿವರಿಸಿದೆ.

ವೇದಗಳು ನಾಲ್ಕು: ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳಿಗೆ “ತ್ರಯೀ” ಎಂಬ ಶಬ್ದದ ಬಳಕೆಯಿದೆ. ಅಥರ್ವವೇದದಲ್ಲಿ ಹೆಚ್ಚಾಗಿ ಐಹಿಕ ಫಲಗಳನ್ನು ಪಡೆಯುವ ವಿಧಾನಗಳನ್ನು ಹೇಳಿದೆ. ಮಂತ್ರಬ್ರಾಹ್ಮಣಾತ್ಮಕವಾದ ವೇದಕ್ಕೆ ಶ್ರುತಿಯೆಂದೂ, ವೇದವನ್ನಾಶ್ರಯಿಸಿಕೊಂಡು ವೇದಕ್ಕೆ ಉಪಪೋಷಕಗಳಾದ ಗ್ರಂಥಗಳಿಗೆ ಸ್ಮೃತಿಯೆಂದೂ ಹೆಸರು. ಸ್ಮೃತಿಗಳಲ್ಲಿ ಎರಡು ವಿಧ: ಸೂತ್ರಗಳು ಮತ್ತು ಶ್ಲೋಕರೂಪವಾದ ಗ್ರಂಥಗಳು. ಇವುಗಳಲ್ಲಿ ಸೂತ್ರರೂಪವಾದ ಗ್ರಂಥಗಳು ಮಾತ್ರ ವೇದಕ್ಕೆ ನೇರವಾಗಿ ಸಂಬಂಧಿಸಿರುವವು. ವೇದಾಂಗಗಳೆಂದೂ ಕರೆಯಲ್ಪಡುವ ಈ ಸೂತ್ರಗ್ರಂಥಗಳು ಆರು: ಶಿಕ್ಷ, ವ್ಯಾಕರಣ, ಛಂದಸ್ಸು, ನಿರುಕ್ತಿ, ಜ್ಯೋತಿಷ ಮತ್ತು ಕಲ್ಪ.

ವೇದವು ಯಜ್ಞಯಾಗಾದಿ ಕರ್ಮಗಳಲ್ಲಿ ಮುಖ್ಯವಾಗಿ ಬಳಸಲಾಗುತ್ತದೆ. ಯಜ್ಞಗಳಲ್ಲಿ ಸಾಧಾರಣವಾಗಿ ಹೋತೃ, ಅಧ್ವರ್ಯು, ಉದ್ಗಾತೃ ಮತ್ತು ಬ್ರಹ್ಮ ಎಂಬ ನಾಲ್ಕು ಋತ್ವಿಜರು ಇರುತ್ತಾರೆ. ಈ ನಾಲ್ವರ ಉಪಯೋಗಕ್ಕೆ ಅನುಕೂಲವಾಗುವಂತೆ ವೇದವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ್ದಾರೆ ಎಂದು ಕೆಲವರ ಅಭಿಪ್ರಾಯವಾದರೆ ನಾಲ್ಕೂ ವೇದಗಳೂ ಸೇರಿ ಒಟ್ಟು ಒಂದು ಸಂಪೂರ್ಣ ಗ್ರಂಥರಾಶಿಯೆಂದೂ ಋಗ್ವೇದ ಮೊದಲಾದವುಗಳು ಪ್ರತ್ಯೇಕ ವಿಷಯವನ್ನು ಪ್ರತಿಪಾದಿಸುವ ಬೇರೆ ಬೇರೆ ಭಾಗಗಳು ಮಾತ್ರ ಎಂದೂ ಕೆಲವರ ಅಭಿಪ್ರಾಯವಿದೆ. ಒಂದೇ ವೇದಮಂತ್ರಗಳಿಂದ ಯಜ್ಞವನ್ನು ಮಾಡಲು ಸಾಧ್ಯವಿಲ್ಲ.

ಹೋಮದಲ್ಲಿ ಹೋತೃವೆಂಬ ಋತ್ವಿಜನು ಆಯಾ ದೇವತೆಗೆ ಸಂಬಂಧಿಸಿದ ಎರಡು ಋಕ್ಕುಗಳನ್ನು ಪಠಿಸುತ್ತಾನೆ: ಒಂದು ಪುರೋನುವಾಕ್ಯಾ ಎಂಬ ಋಗ್ವೇದಮಂತ್ರದಿಂದ ಆಹ್ವಾನಿಸಿ ಇನ್ನೊಂದು ಯಾಜ್ಯಾ ಎಂಬ ಮಂತ್ರದಿಂದ ಆ ದೇವತೆಗೆ ಹವಿರ್ಭಾಗವನ್ನು ಅಗ್ನಿಯಲ್ಲಿ ಹೋಮ ಮಾಡಿಸುತ್ತಾನೆ. ಹೋತೃವು ಮಂತ್ರಪಠನವನ್ನು ಮಾತ್ರ ಮಾಡುತ್ತಾನೆಯೇ ಹೊರತು ತಾನೇ ಅಗ್ನಿಯ ಬಳಿ ಹೋಗಿ ಹೋಮಮಾಡುವುದಿಲ್ಲ. ಹೋಮಮಾಡುವುದು ಅಧ್ವರ್ಯುವೆಂಬ ಋತ್ವಿಜನ ಕೆಲಸ. ಅಧ್ವರ್ಯುವಿಗೆ ಯಜ್ಞದಲ್ಲಿ ಮಾಡಬೇಕಾದ ಕ್ರಿಯಾದಿಗಳನ್ನು ತಿಳಿಸುವ ಯಜುರ್ವೇದವು ಚೆನ್ನಾಗಿ ತಿಳಿದಿರಬೇಕು. ಉದ್ಗಾತೃವೆಂಬ ಋತ್ವಿಜನು ಯಜ್ಞದಲ್ಲಿ ಸಾಮಗಾನ ಮಾಡುತ್ತಾನೆ. ಸಾಮಗಾನವಿಲ್ಲದೇ ಯಜ್ಞವು ಯಜ್ಞವೆನಿಸುವುದಿಲ್ಲ (ಅಯಜ್ಞೋ ವಾ ಏಷ ಯೋಽಸಾಮ) ಎಂದಿದೆ. ಬ್ರಹ್ಮನೆಂಬ ಋತ್ವಿಜನು ಯಜ್ಞದಲ್ಲಿ ನಡೆಯಬೇಕಾದ ಸಮಸ್ತ ಕಾರ್ಯಕಲಾಪಗಳು ವಿಧಿವತ್ತಾಗಿ ನಡೆಯುತ್ತವೆಯೇ ಎನ್ನುವುದನ್ನು ನೋಡಿಕೊಳ್ಳುತ್ತಾನೆ. ಆದ್ದರಿಂದ ಬ್ರಹ್ಮನಿಗೆ ನಾಲ್ಕು ವೇದಗಳ ಪರಿಚಯವೂ ಚೆನ್ನಾಗಿರಬೇಕು. ಈ ಕಾರಣದಿಂದ ಹೋತೃವು ಸಾಧಾರಣವಾಗಿ ಋಗ್ವೇದವನ್ನು ಅಧ್ಯಯನ ಮಾಡಿದವನೂ, ಅಧ್ವರ್ಯುವು ಯಜುರ್ವೇದವನ್ನು ಅದ್ಯಯನ ಮಾಡಿದವನೂ, ಉದ್ಗಾತೃವು ಸಾಮವೇದವನ್ನು ಅಧ್ಯಯನ ಮಾಡಿದವನೂ, ಬ್ರಹ್ಮನು ನಾಲ್ಕೂ ವೇದಗಳನ್ನು ತಿಳಿದವನೂ ಆಗಿರಬೇಕು. ಕೆಲವರು ನಾಲ್ಕನೆಯದಾದ ಅಥರ್ವವೇದವೇ ಬ್ರಹ್ಮನಿಗೆ ಸಂಬಂಧಿಸಿದ ವೇದವೆಂದು ಹೇಳುತ್ತಾರೆ.

ಪ್ರತಿಯೊಂದು ವೇದದಲ್ಲಿಯೂ ಸಂಹಿತಾಭಾಗ, ಬ್ರಾಹ್ಮಣಭಾಗ, ಆರಣ್ಯಕ, ಮತ್ತು ಉಪನಿಷತ್ತು (ಅಥವಾ ವೇದಾಂತ) ಗಳೆಂಬ ಭಾಗಗಳಿವೆ. ಮಂತ್ರ ಅಥವಾ ಸಂಹಿತಾ ಮತ್ತು ಬ್ರಾಹ್ಮಣಗಳಿಗೆ ಶೈಲಿ, ಛಂದಸ್ಸು, ಮತ್ತು ವಿಷಯಗಳಲ್ಲಿ ಅನೇಕ ವ್ಯತ್ಯಾಸಗಳಿದ್ದರೂ, ಇವೆರಡಕ್ಕೂ ಒಟ್ಟು ಸೇರಿ ವೇದವೆಂದು ಹೇಳುತ್ತಾರೆ.

ಸಂಹಿತೆಗಳು

ಸಂಹಿತೆ ಎಂದರೆ ಬೇರೆ ಬೇರೆ ಋಷಿಗಳು ರಚಿಸಿದ ಮಂತ್ರಗಳನ್ನು ಅಂದರೆ ಸೂಕ್ತಗಳನ್ನು ಒಂದು ಕ್ರಮದಲ್ಲಿ ಸೇರಿಸಿ ಒಂದೇ ಕಡೆ ಒಟ್ಟು ಗೂಡಿಸಿರುವ ಭಾಗವೆಂದರ್ಥ. ಅಥವಾ ವಿಧಿಪ್ರಕಾರವಾಗಿ ಸ್ವರ-ಸಂಧಿನಿಯಮಗಳನ್ನನುಸರಿಸಿ ಪದಪಾಠವನ್ನು ಒಟ್ಟುಗೂಡಿಸಿ ದಂಡಾಕಾರವಾಗಿ ಪಠನಮಾಡುವಂತೆ ಕ್ರಮಪಡಿಸಿರುವ ವೇದಮಂತ್ರಗಳಿಗೆ ಸಂಹಿತೆ ಎಂದು ಹೆಸರು.

ಋಗ್ವೇದಸಂಹಿತೆ

ಋಗ್ವೇದ ಸಂಹಿತೆಯಲ್ಲಿ ಮಂಡಲಗಳೆನ್ನುವ ಹತ್ತು ವಿಭಾಗಗಳಿವೆ. ಮುಖ್ಯವಾಗಿ ಒಬ್ಬೊಬ್ಬ ಋಷಿ ಮತ್ತು ಅವನ ವಂಶದವರು (ಅಥವಾ ಗುಂಪಿನವರು) ರಚಿಸಿದ ಅಥವಾ ದ್ರಷ್ಟೃವಾದ ಮಂತ್ರಗಳೆಲ್ಲವನ್ನೂ ಒಟ್ಟುಗೂಡಿಸಿ ಒಂದೊಂದು ಮಂಡಲವೆಂದು ನಿಷ್ಕರಿಸಲ್ಪಟ್ಟಿದೆ. ಆದರೆ 1, 9 ಮತ್ತು 10ನೇ ಮಂಡಲಗಳಲ್ಲಿ ಬೇರೆ ಬೇರೆ ಗುಂಪಿನ ಅನೇಕ ಋಷಿಗಳಿ-ದ್ದಾರೆ. 9ನೇ ಮಂಡಲದಲ್ಲಿ ಬೇರೆ ಬೇರೆ ಋಷಿಗಳಿದ್ದರೂ ಮಂತ್ರಗಳಿಗೆಲ್ಲ ಪವಮಾನ ಸೋಮನೇ ದೇವತೆ. ಅಂದರೆ ಇತರ ಮಂಡಲಗಳಿಲ್ಲದ್ದಂತೆ ಋಷಿಗಳಿಗನುಸಾರವಾಗಿ ಮಂತ್ರಗಳನ್ನು ಒಟ್ಟುಗೂಡಿಸದೇ ಸೋಮದೇ-ವತಾತ್ಮಕವಾದ ಎಲ್ಲ ಋಷಿಗಳ ಮಂತ್ರವನ್ನೂ ಒಟ್ಟುಗೂಡಿಸಿ ಒಂದು ಮಂಡಲವನ್ನಾಗಿ ಮಾಡಿದ್ದಾರೆ. ಇನ್ನು 2, 3, 4, 5, 6, 7 ಮತ್ತು 8ನೇ ಮಂಡಲಗಳಿಗೆ ಕ್ರಮವಾಗಿ ಗೃತ್ಸಮದ, ವಿಶ್ವಾಮಿತ್ರ, ವಾಮದೇವ, ಅತ್ರಿ, ಭರದ್ವಾಜ, ವಸಿಷ್ಠ ಮತ್ತು ಕಣ್ವ ಋಷಿಗಳು ದ್ರಷ್ಟೃಗಳೆಂದು ಹೇಳಿದೆ. ಪ್ರತಿ ಮಂಡಲವೂ ಅನುವಾಕ ಮತ್ತು ಸೂಕ್ತಗಳೆಂದು ಮತ್ತೆ ವಿಭಾಗಿಸಲ್ಪಟ್ಟಿದೆ. ಪ್ರತಿಮಂಡಲದಲ್ಲಿಯೂ ಇರುವ ಅನುವಾಕ, ಸೂಕ್ತ ಮತ್ತು ಮಂತ್ರಗಳ ಸಂಖ್ಯೆಯು ಈ ಕೆಳಗಿನಂತಿವೆ:

ಮಂಡಲ ಅನುವಾಕ ಸೂಕ್ತ ಮಂತ್ರಸಂಖ್ಯೆ ಋಷಿಗಳು
1 24 191 2006 ಶತರ್ಚಿನರು (ನಾನಾ ಋಷಿಗಳು)
2 4 43 429 ಗೃತ್ಸಮದ
3 5 62 617 ವಿಶ್ವಾಮಿತ್ರ
4 5 58 589 ವಾಮದೇವ ಮತ್ತು ಗೋತಮ
5 6 87 727 ಅತ್ರಿ
6 6 75 765 ಭರದ್ವಾಜ
7 6 104 841 ವಸಿಷ್ಠ
8 10 103 1716 ಕಣ್ವ
9 7 114 1108 ನಾನಾ ಋಷಿಗಳು
10 12 191 1754 ನಾನಾ ಋಷಿಗಳು
ಒಟ್ಟು 85 1028 10552  

ಮಂಡಲಗಳು ಸಮನಾಗಿಲ್ಲದೇ ಒಂದರಲ್ಲಿ ಹೆಚ್ಚಾಗಿಯೂ ಮತ್ತೊಂದರಲ್ಲಿ ಕಡಿಮೆಯಾಗಿಯೂ ಇರುವ ಮಂಡಲಗಳ ಈ ವಿಭಾಗವು ಅತಿ ಪ್ರಾಚೀನವಾದುದು. ವೇದಾಧ್ಯಯನಕ್ಕೆ ಅನುಕೂಲವಾಗುವಂತೆ ಹತ್ತು ಮಂಡಲಗಳಿರುವ ಈ ಸಂಹಿತೆಯನ್ನು ಪುನಃ ಎಂಟು ಅಷ್ಟಕಗಳನ್ನಾಗಿಯೂ ಪ್ರತಿಯೊಂದು ಅಷ್ಟಕವನ್ನೂ ಎಂಟು ಅಧ್ಯಾಯಗಳನ್ನಾಗಿಯೂ, ಅಧ್ಯಾಯಗಳನ್ನು ವರ್ಗಗಳನ್ನಾಗಿಯೂ ವಿಭಾಗಿಸಿದ್ದಾರೆ. ಅಂದರೆ 64 ಅಧ್ಯಾಯಗಳಾದವು. ಪ್ರತಿಯೊಂದು ಅಧ್ಯಾಯವು ಹೆಚ್ಚು ಕಡಿಮೆ ಸಮನಾಗಿರುವಂತೆ ಮಾಡಲಾಯಿತು. ಈ ಕ್ರಮವು ಕೆಳಗಿನಂತಿದೆ:

ಅಷ್ಟಕ ಅಧ್ಯಾಯ ಸೂಕ್ತ ವರ್ಗ ಮಂತ್ರಸಂಖ್ಯಾ ಅಕ್ಷರಸಂಖ್ಯಾ
1 8 121 265 1370 48931
2 8 119 221 1147 51718
3 8 122 225 1209 47636
4 8 140 250 1289 49762
5 8 129 238 1263 48022
6 8 135 331 1730 51456
7 8 116 248 1263 47562
8 8 146 246 1281 52178
ಒಟ್ಟು 64 1028 2024 10552 397265

ಯಜುರ್ವೇದಸಂಹಿತೆ

ಯಜ್ಞದ ಮುಖ್ಯ ಕಾರ್ಯಕರ್ತನಾದ ಅಧ್ವರ್ಯು ಎಂಬ ಋತ್ವಿಜನಿಗೆ ಉಪಯುಕ್ತವಾದ ವಿಷಯಗಳೆಲ್ಲ ಇರುವ ಯಜುರ್ವೇದಸಂಹಿತೆಯಲ್ಲಿ ಋಗ್ವೇದ ಸಾಮವೇದಗಳಂತೆ ಅಕ್ಷರಗಳ ನಿಯಮವು ಅಷ್ಟು ಕಟ್ಟುನಿಟ್ಟಾಗಿಲ್ಲ. ಯಜುರ್ವೇದವು ಶುಕ್ಲಯಜುರ್ವೇದ (ಅಥವಾ ವಾಜಸನೇಯ ಸಂಹಿತೆ) ವೆಂದೂ ಕೃಷ್ಣಯಜುರ್ವೇದ (ಅಥವಾ ತೈತ್ತರೀಯ ಸಂಹಿತೆ) ವೆಂದೂ ಎರಡು ಭಾಗದಲ್ಲಿದೆ. ಇದಕ್ಕೆ ಸಂಬಂಧಿಸಿದ ಒಂದು ಪುರಾಣ ಕಥೆಯಿದೆ: ಕೃಷ್ಣದ್ವೈಪಾಯನನು ಮೊದಲು ಒಂದೇ ಆಗಿದ್ದ ವೇದವನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳನ್ನಾಗಿ ನಾಲ್ಕು ವಿಭಾಗ ಮಾಡಿ ತನ್ನ ಶಿಷ್ಯರಾದ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತು – ಇವರಿಗೆ ಕ್ರಮವಾಗಿ ಉಪದೇಶಿಸಿದನು. ವೈಶಂಪಾಯನನು ಯಜುರ್ವೇದವನ್ನು ತನ್ನ ಶಿಷ್ಯರಾದ ಯಾಜ್ಞವಲ್ಕ್ಯಾದಿಗಳಿಗೆ ಹೇಳಿಕೊಟ್ಟನು. ಒಮ್ಮೆ ವೈಶಂಪಾಯನನು ಯಾಜ್ಞವಲ್ಕ್ಯನ ಮೇಲೆ ಸಿಟ್ಟಾಗಿ ಕಲಿತಿರುವ ವೇದವನ್ನೆಲ್ಲ ಹಿಂದೆ ಕೊಟ್ಟುಬಿಡು ಎಂದು ಆಜ್ಞಾಪಿಸಿದನು. ಯಾಜ್ಞವಲ್ಕ್ಯನು ಯೋಗಸಾಮರ್ಥ್ಯದಿಂದ ವೇದವನ್ನು ವಮನಮಾಡಿದನು. ಗುರುವಿನ ಅಪ್ಪಣೆಯ ಮೇರೆಗೆ ಇತರ ಶಿಷ್ಯರು ತಿತ್ತಿರಿ ಪಕ್ಷಿಗಳ ರೂಪವನ್ನು ತಾಳಿ ವಮನಮಾಡಿದ ಆ ವೇದವನ್ನು ತಿಂದರು. ಅದರಿಂದ ಕೃಷ್ಣಯಜುರ್ವೇದಕ್ಕೆ ತೈತ್ತಿರೀಯ ಸಂಹಿತೆಯೆಂದಾಯಿತು. ಬಳಿಕ ಯಾಜ್ಞವಲ್ಕ್ಯನು ಶೋಕಗ್ರಸ್ತರಾಗಿ ಸೂರ್ಯನನ್ನು ಆರಾಧಿಸಲು ಸೂರ್ಯನು ಅಶ್ವರೂಪಿಯಾಗಿ (ವಾಜಿ=ಅಶ್ವ) ಬಂದು ಯಜುರ್ವೇದವನ್ನು ಉಪದೇಶಿಸಿದನು. ಪ್ರಕಾಶಮಾನನಾದ ಸೂರ್ಯನಿಂದ ಉಪದೇಶಿತವಾದುದರಿಂದ ಶುಕ್ಲಯಜುರ್ವೇದವೆಂದೂ ವಾಜಿಯಿಂದ ಉಪದೇಶಿಸಲ್ಪಟ್ಟಿದುದರಿಂದ ವಾಜಸನೇಯಿಸಂಹಿತೆ ಎಂದೂ ಹೆಸರಾಯಿತು. ಆದರೆ ಶುಕ್ಲಯಜುರ್ವೇದದ ವಿಷಯಗಳೆಲ್ಲವೂ ಹೆಚ್ಚು ಕಡಿಮೆ ಕೃಷ್ಣಯಜುರ್ವೇದ ಸಂಹಿತೆಯಲ್ಲಿ ಇರುವಂತೆಯೇ ಇವೆ.

ಯಜುರ್ವೇದಕ್ಕೆ ಒಟ್ಟು 101 ಶಾಖೆಗಳಿವೆಯೆಂದು ಹೇಳುತ್ತಾರೆ. ಆದರೆ ಈಗ ಇರುವುದು ಐದು ಸಂಹಿತೆಗಳು (ಮೊದಲನೆಯದು ಶುಕ್ಲಯಜುರ್ವೇದಕ್ಕೆ ಮತ್ತು ಉಳಿದ ನಾಲ್ಕು ಕೃಷ್ಣಯಜುರ್ವೇದಕ್ಕೆ ಸಂಬಂಧಿಸಿದವು) ಮಾತ್ರ: (1) ವಾಜಸನೇಯಿ ಸಂಹಿತಾ –ಇದರಲ್ಲಿ ಕಾಣ್ವ ಮತ್ತು ಮಾಧ್ಯಂದಿನ ಎಂಬ ಎರಡು ಶಾಖೆಗಳಿವೆ; (2) ಕಾಠಕ ಸಂಹಿತಾ; (3) ಕಪಿಸ್ಥಲಕಾಠಕ ಸಂಹಿತಾ; (4) ತೈತ್ತಿರೀಯ ಸಂಹಿತಾ ಮತ್ತು (5) ಮೈತ್ರಾಯಣೀ ಸಂಹಿತಾ. ಶುಕ್ಲಯಜುರ್ವೇದಸಂಹಿತೆಗೆ 15 ಶಾಖೆಗಳಿವೆ: (1) ಜಾಬಾಲಾಃ (2) ಬೌಧೇಯಾಃ (3) ಕಾಣ್ವಾಃ (4) ಮಾಧ್ಯಂದಿನಾಃ (5) ಶಾಪೇಯಾಃ (6) ತಾಪಾಯನೀಯಾಃ (7) ಕಾಪೋಲಾಃ (8) ಪೌಂಡ್ರವತ್ಸಾಃ (9) ಆವಟಿಕಾಃ (10) ಪರಮಾವಟಿಕಾಃ (11) ಪಾರಾಶರಾಃ (12) ವೈನತೇಯಾಃ (13) ವೈಧೇಯಾಃ (14) ಕೌಂತೇಯಾಃ (15) ಬೈಜವಾಪಾಃ. ಇವುಗಳಲ್ಲಿ ಅನೇಕ ಶಾಖೆಗಳು ಈಗ ಲುಪ್ತವಾಗಿವೆ. ಶುಕ್ಲಯಜುರ್ವೇದ ಸಂಹಿತೆಯಲ್ಲಿ 40 ಅಧ್ಯಾಯಗಳೂ 1971 ಕಂಡಿಕೆಗಳೂ (ಸಣ್ಣ ಭಾಗಗಳು) ಇವೆ. ಮೊದಲ 25 ಅಧ್ಯಾಯಗಳಲ್ಲಿ ದರ್ಶಪೂರ್ಣಮಾಸ, ಸೋಮ, ವಾಜಪೇಯ, ಅಶ್ವಮೇಧ, ರಾಜಸೂಯ ಮೊದಲಾದ ಯಜ್ಞಗಳೂ, ಯಜ್ಞಶಾಲೆಯಲ್ಲಿ ರಚಿಸಬೇಕಾದ ಯಜ್ಞಕುಂಡ ಮೊದಲಾದವುಗಳ ರಚನಾಕ್ರಮಗಳೂ ಹೇಳಲ್ಪಟ್ಟಿವೆ. ಮುಂದಿನ 15 ಅಧ್ಯಾಯ ಅಥವಾ “ಖಿಲ”ಗಳಲ್ಲಿ ಶ್ರೌತ-ಕರ್ಮಗಳಿಗೆ ಸಂಬಂಧಿಸಿದ ಇನ್ನೂ ಕೆಲವು ಕರ್ಮಗಳು ಮತ್ತು ಪುರುಷಮೇಧ, ಪ್ರವರ್ಗ್ಯ ಮೊದಲಾದ ಯಾಗಗಳ ಕುರಿತು ಇವೆ. ಯಜ್ಞಕ್ಕೆ ಸಂಬಂಧಿಸಿರದ ಕೊನೆಯ ಅಧ್ಯಾಯವೇ ಈಶಾವಾಸ್ಯೋಪನಿಷತ್ತು.

ಕೃಷ್ಣಯಜುರ್ವೇದಸಂಹಿತೆಯಲ್ಲಿ 7 ಅಷ್ಟಕ ಅಥವಾ ಕಾಂಡಗಳೂ 44 ಪ್ರಪಾಠಕಗಳು ಅಥವಾ ಅಧ್ಯಾಯಗಳೂ ಇವೆ. ಪ್ರತಿ ಅಧ್ಯಾಯದಲ್ಲಿಯೂ ಅನುವಾಕಗಳೆಂಬ ಭಾಗಗಳಿವೆ. ಕೃಷ್ಣಯಜುರ್ವೇದಕ್ಕೆ 86 ಶಾಖೆಗಳಿವೆಯೆಂದು ವಾಯು ಮತ್ತು ಬ್ರಹ್ಮಾಂಡ ಪುರಾಣಗಳಲ್ಲಿದೆ. ಆದರೆ ಈಗ ದೊರಕಿರುವ ಶಾಖೆಗಳು ಕೇವಲ 41.

ಸಾಮವೇದಸಂಹಿತೆ

ಸಾಮವೇದಸಂಹಿತೆಯು ಉದ್ಗಾತೃವೆಂಬ ಋತ್ವಿಜನಿಗೆ ಸಾಮಗಾನದಲ್ಲಿ ಹಾಡಬಲ್ಲ ಮಂತ್ರಗಳನ್ನೊಳಗೊಂಡಿರುವ ಸಂಹಿತೆಯು. ಸಾಮವೇದವು ಸಾವಿರ ಶಾಖೆಗಳುಳ್ಳದ್ದೆಂದು ಇದ್ದರೂ ಈಗ ಮುಖ್ಯವಾಗಿ ಕೌಥುಮ, ಜೈಮಿನೀಯಾ ಮತ್ತು ರಾಣಾಯನೀಯ ಎಂಬ ಮೂರು ಸಂಹಿತೆಗಳು ಇವೆ. ಸಾಮವೇದದಲ್ಲಿ ಅರ್ಚಿಕ ಮತ್ತು ಉತ್ತರಾರ್ಚಿಕವೆಂಬ ಎರಡು ಭಾಗಗಳಿವೆ. ಇದರಲ್ಲಿ ಒಟ್ಟು 1549 (ಮೊದಲನೇ ಅರ್ಚಿಕದಲ್ಲಿ 585 ಮತ್ತು ಉತ್ತರಾರ್ಚಿಕದಲ್ಲಿ 964) ಮಂತ್ರಗಳಿವೆ. ಇವುಗಳಲ್ಲಿ 75ನ್ನು ಬಿಟ್ಟರೆ ಉಳಿದೆಲ್ಲವೂ ಋಗ್ವೇದಸಂಹಿತೆಯಲ್ಲಿಯೇ ಇರುವ ಮಂತ್ರಗಳು. ಹೆಚ್ಚಾಗಿ ಈ ಮಂತ್ರಗಳು ಗಾಯನಕ್ಕೆ ಅನುಕೂಲವಾಗುವ ಗಾಯತ್ರೀ ಮತ್ತು ಪ್ರಗಾಥ ಛಂದಸ್ಸಿನಲ್ಲಿವೆ. ಸಾಮಗಾನದಲ್ಲಿ ಸಂಗೀತದ ಪಂಚಮ, ಮಧ್ಯಮ, ಗಾಂಧಾರ, ಋಷಭ, ಷಡ್ಜ, ಧೈವತ ಮತ್ತು ನಿಷಾದಗಳಿಗೆ ಅನುಸಾರವಾಗಿ ಕ್ರುಷ್ಟ, ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಪಂಚಮ ಮತ್ತು ಷಷ್ಠ ಎಂಬ ಸಪ್ತಸ್ವರಗಳಿವೆ. ಸಾಮಗಾನವೇ ಸಂಗೀತಶಾಸ್ತ್ರಗಳ ಮೂಲ ಎಂದು ಹೇಳುತ್ತಾರೆ.

ಅಥರ್ವವೇದಸಂಹಿತೆ

ಅಥರ್ವವೇದಕ್ಕೆ ಅಥರ್ವಾಂಗಿರಸ, ಭೃಗ್ವಂಗಿರಸ, ಬ್ರಹ್ಮವೇದ, ಅಥರ್ವವೇದ ಎಂಬ ಅನೇಕ ಹೆಸರುಗಳಿವೆ. ಇದಕ್ಕೆ 9 ಶಾಖೆಗಳಿವೆ: (1) ಪೈಪ್ಪಲಾದಾಃ (2) ಸ್ತೌದಾಃ (3) ಮೌದಾಃ (4) ಶೌನಕೀಯಾಃ (5) ಜಾಜಲಾಃ (6) ಜಲದಾಃ (7) ಬ್ರಹ್ಮವದಾಃ (8) ದೇವದರ್ಶಾಃ ಮತ್ತು (9) ಚಾರಣವೈದ್ಯಾಃ. ಅಥರ್ವವೇದಸಂಹಿತೆಯಲ್ಲಿ 731 ಸೂಕ್ತಗಳನ್ನೂ ಸುಮಾರು 12,000 ಮಂತ್ರಗಳನ್ನೂ ಒಳಗೊಂಡಿರುವ 20 ಭಾಗಗಳಿವೆ. ಈ ವೇದದ ಮಂತ್ರಗಳೂ, ಭಾಷಾಶೈಲಿಯೂ, ಛಂದಸ್ಸೂ ಸಹ ಋಗ್ವೇದ ಮಂತ್ರಗಳನ್ನು ಹೆಚ್ಚಾಗಿ ಹೋಲುತ್ತವೆ.

ಬ್ರಾಹ್ಮಣಗಳು

ಸಂಹಿತೆಯ ಮಂತ್ರಗಳನ್ನು ಯಜ್ಞಯಾಗಾದಿಗಳಲ್ಲಿ ಹೇಗೆ ಬಳಸಬೇಕು, ಮತ್ತು ಯಾವಾಗ ಏನು ಮಾಡಬೇಕು ಎನ್ನುವ ವಿವರಗಳನ್ನು ತಿಳಿಸುವವೇ ಬ್ರಾಹ್ಮಣಗಳು. ಬ್ರಾಹ್ಮಣಗಳು ಸಂಪೂರ್ಣವಾಗಿ ಯಜ್ಞವಿಧಾನಗಳನ್ನು ವರ್ಣಿಸುತ್ತವೆ. ಯಜ್ಞಾಂಗ ಕರ್ಮಗಳ ಸೂಕ್ಷ್ಮ ಚರ್ಚೆ, ಪದಗಳ ರೂಪನಿಷ್ಪತ್ತಿ ಮೊದಲಾದ ವಿಷಯಗಳುಳ್ಳ ಇವುಗಳ ಮಂತ್ರಗಳು ಛಂದೋಬದ್ಧವಾಗಿದ್ದರೂ ಸಾಧಾರಣವಾಗಿ ಗದ್ಯರೂಪವಾಗಿವೆ. ಸಂಸ್ಕೃತ ಭಾಷೆಯ ಗದ್ಯದ ಪ್ರಾರಂಭವು ಬ್ರಾಹ್ಮಣಗಳಿಂದಲೇ ಆಯಿತೆಂದು ಹೇಳುತ್ತಾರೆ. ಸಂಹಿತೆಗಳಿಗೆ ವ್ಯಾಖ್ಯಾನರೂಪವಾಗಿರುವ ಬ್ರಾಹ್ಮಣಗಳು ಪ್ರತಿ ವೇದಕ್ಕೂ ಬೇರೆಬೇರೆಯಾಗಿವೆ.

ಋಗ್ವೇದ ಬ್ರಾಹ್ಮಣಗಳು

ಶಾಕಲಶಾಖೆಯ ಐತರೇಯ ಮತ್ತು ಬಾಷ್ಕಲಶಾಖೆಯ ಕೌಶೀತಕೀ ಬ್ರಾಹ್ಮಣಗಳು ಋಗ್ವೇದಕ್ಕೆ ಸಂಬಂಧಿಸಿದವು. ಮಹೀದಾಸನು ಕ್ರಮಪಡಿಸಿದ ಪ್ರಾಚೀನವೂ ಮುಖ್ಯವೂ ಆದ ಐತರೇಯ ಬ್ರಾಹ್ಮಣದಲ್ಲಿ 40 ಅಧ್ಯಾಯಗಳಿವೆ. ಇತರೆ ಎನ್ನುವವಳ ಮಗ ಮಹೀದಾಸನು ತನ್ನ ತಂದೆಯು ಮಾಡಿದ ಒಂದು ಯಜ್ಞದಲ್ಲಿ ತನ್ನ ಅಣ್ಣತಮ್ಮಂದಿರನ್ನೆಲ್ಲ ತನ್ನ ತೊಡೆಯ ಮೇಲೆ ಕುಳಿಸಿಕೊಂಡರೂ ತನ್ನನ್ನು ಕೂರಿಸಿಕೊಳ್ಳಲಿಲ್ಲವೆಂಬ ದುಃಖದಿಂದ ಭೂದೇವಿಯ ಕುರಿತು ತಪಸ್ಸುಮಾಡಿ ಅದರ ಫಲವಾಗಿ ಈ ಬ್ರಾಹ್ಮಣ ಮತ್ತು ಆರಣ್ಯಕಗಳನ್ನು ಪಡೆದುಕೊಂಡನು ಎಂಬ ಪ್ರತೀತಿಯಿದೆ. ಆದ್ದರಿಂದಲೇ ಈ ಬ್ರಾಹ್ಮಣ-ಆರಣ್ಯಕಗಳು ಐತರೇಯ ಎಂಬ ಹೆಸರನ್ನು ಪಡೆದುಕೊಂಡವು. ಐತರೇಯ ಬ್ರಾಹ್ಮಣದಲ್ಲಿ ಬರುವ ಮುಖ್ಯವಿಷಗಳು: ಅಗ್ನಿಷ್ಟೋಮಯಾಗ, ಉಕ್ಥ್ಯ, ಷೋಡಶ, ಅತಿರಾತ್ರ ಮೊದಲಾದ ಯಾಗಗಳು, ಹೋತೃ-ಯಜಮಾನ-ಗ್ರಾವಸ್ತುತ್-ಸುಬ್ರಹ್ಮಣ್ಯ ಮತ್ತು 6 ಋತ್ವಿಕ್ಕುಗಳ ಕರ್ತವ್ಯಗಳು, ಕ್ಷತ್ರಿಯನು ಮಾಡಬಹುದಾದ ಯಾಗಗಳು, ಬ್ರಾಹ್ಮಣ-ಕ್ಷತ್ರಿಯರಿಗಿರುವ ಪರಸ್ಪರ ಬಾಂಧವ್ಯ. ಸಾಂಖ್ಯಾಯನ ಬ್ರಾಹ್ಮಣವೆಂಬ ಹೆಸರೂ ಇರುವ ಕೌಶೀತಕೀ ಬ್ರಾಹ್ಮಣದಲ್ಲಿ 30 ಅಧ್ಯಾಯಗಳಿವೆ. ಇದರಲ್ಲಿ ದರ್ಶಪೂರ್ಣಾಮಾಸಾದಿ ಯಾಗವಿಧಾನವೂ ಸೋಮಯಾಗವಿಧಾನವೂ ವರ್ಣಿತವಾಗಿದೆ.

ಯಜುರ್ವೇದ ಬ್ರಾಹ್ಮಣಗಳು

ಕೃಷ್ಣಯಜುರ್ವೇದಕ್ಕಿರುವ ಶತಪಥ ಬ್ರಾಹ್ಮಣವೂ ಕೃಷ್ಣಯಜುರ್ವೇದಕ್ಕಿರುವ ತೈತ್ತಿರೀಯ ಬ್ರಾಹ್ಮಣವೂ ಯಜುರ್ವೇದಕ್ಕೆ ಸಂಬಂಧಿಸಿದವು. ಕೃಷ್ಣಯಜುರ್ವೇದ ಸಂಹಿತೆಯಲ್ಲಿರುವಂತೆ ಶತಪಥ ಬ್ರಾಹ್ಮಣದಲ್ಲಿ ಕಾಣ್ವ ಮತ್ತು ಮಾದ್ಯಂದಿನಗಳೆಂಬ ಎರಡು ಶಾಖೆಗಳಿವೆ. ಈ ಬ್ರಾಹ್ಮಣದಲ್ಲಿ 14 ಕಾಂಡಗಳೂ 100 ಅಧ್ಯಾಯಗಳೂ ಇವೆ. 100 ಅಧ್ಯಾಯಗಳಿರುವುದರಿಂದಲೇ ಇದು ಶತಪಥಬ್ರಾಹ್ಮಣ ಎನಿಸಿಕೊಂಡಿದೆ. ಬೃಹದಾರಣ್ಯಕೋಪನಿಷತ್ತು ಇದರ ಅಂತಿಮ ಭಾಗವು. 3 ಕಾಂಡಗಳು ಮತ್ತು 28 ಅಧ್ಯಾಯಗಳನ್ನೊಳಗೊಂಡಿರುವ ಕೃಷ್ಣಯಜುರ್ವೇದದ ತೈತ್ತಿರೀಯ ಬ್ರಾಹ್ಮಣವು ಸಂಹಿತೆಯಲ್ಲಿರದ ಅನೇಕ ವಿಷಯಗಳನ್ನು ವರ್ಣಿಸಿರುವುದರಿಂದ ಇದನ್ನು ಸಂಹಿತೆಯ ಉತ್ತರಭಾಗವೆಂದು ಪರಿಗಣಿಸಬಹುದು. ಯಜುರ್ವೇದಕ್ಕೆ ಈ ಎರಡು ಬ್ರಾಹ್ಮಣಗಳಲ್ಲದೇ – ಚರಕಬ್ರಾಹ್ಮಣ, ಕಾಠಕಬ್ರಾಹ್ಮಣ, ಶ್ವೇತಾಶ್ವತರಬ್ರಾಹ್ಮಣ, ಮೈತಾಯಣೀ ಬ್ರಾಹ್ಮಣ, ಜಾಬಾಲಬ್ರಾಹ್ಮಣ, ಖಾಂಡಿಕೇಯಬ್ರಾಹ್ಮಣ, ಔಖೇಯಬ್ರಾಹ್ಮಣ, ಹಾರಿದ್ರವಿಕಬ್ರಾಹ್ಮಣ, ಆಹ್ವರಕಬ್ರಾಹ್ಮಣ, ಕಂಕತೀಬ್ರಾಹ್ಮಣ, ಮತ್ತು ಗಾಲವಬ್ರಾಹ್ಮಣ – ಇವೇ ಮೊದಲಾದ ಇನ್ನೂ ಅನೇಕ ಬ್ರಾಹ್ಮಣಗಳಿದ್ದವೆಂದೂ ಅವು ಈಗ ಲುಪ್ತವಾಗಿವೆಯೆಂದೂ ಇದೆ.

ಸಾಮವೇದ ಬ್ರಾಹ್ಮಣಗಳು

ಸಾಮವೇದಕ್ಕೆ ಮುಖ್ಯವಾಗಿ 3 ಬ್ರಾಹ್ಮಣಗಳಿವೆ: ತಾಂಡ್ಯಬ್ರಾಹ್ಮಣ, ಷಡ್ವಿಂಶತಿಬ್ರಾಹ್ಮಣ, ಮತ್ತು ಜೈಮಿನೀಯ (ಅಥವಾ ತಲವಕಾರ) ಬ್ರಾಹ್ಮಣ. ತಾಂಡ್ಯಬ್ರಾಹ್ಮಣದಲ್ಲಿ 25 ಭಾಗಗಳಿರುವುದರಿಂದ ಇದಕ್ಕೆ ಪಂಚವಿಂಶಬ್ರಾಹ್ಮಣವೆಂಬ ಹೆಸರೂ ಇದೆ. ಷಡ್ವಿಂಶತಿಬ್ರಾಹ್ಮಣವು ಈ ಬ್ರಾಹ್ಮಣದ ಉತ್ತರಭಾಗವು. ತಾಂಡ್ಯಬ್ರಾಹ್ಮಣಕ್ಕಿಂತಲೂ ಜೈಮಿನೀಯ ಬ್ರಾಹ್ಮಣವು ಪ್ರಾಚೀನವು. ಸಾಮವೇದಕ್ಕೆ ಈ 3 ಬ್ರಾಹ್ಮಣಗಳಲ್ಲದೇ ಕನಿಷ್ಠ 20 ಅನ್ಯ ಅನೇಕ ಬ್ರಾಹ್ಮಣಗಳಿವೆಯೆಂದು ಹೇಳುತ್ತಾರೆ. ಮಂತ್ರಬ್ರಾಹ್ಮಣ, ದೈವತಬ್ರಾಹ್ಮಣ, ಸಾಮವಿಧಾನಬ್ರಾಹ್ಮಣ, ಸಂಹಿತೋಷನಿಷದ್ಬ್ರಾಹ್ಮಣ, ವಂಶಬ್ರಾಹ್ಮಣ, ಜೈಮಿನೇಯ ಆರ್ಷೇಯಬ್ರಾಹ್ಮಣ, ಗೋಪಥಬ್ರಾಹ್ಮಣ, ಭಾಲ್ಲವಿಬ್ರಾಹ್ಮಣ, ಶಾಟ್ಯಾಯನಬ್ರಾಹ್ಮಣ, ಕಾಲಬವಿಬ್ರಾಹ್ಮಣ, ರೌರುಕೀಬ್ರಾಹ್ಮಣ, ತುಂಬುರುಬ್ರಾಹ್ಮಣ, ಆರುಣೇಯಬ್ರಾಹ್ಮಣ, ಪೈಂಗಿಬ್ರಾಹ್ಮಣ, ಸೌಲಭಬ್ರಾಹ್ಮಣ, ಶೈಲಾಲೀಬ್ರಾಹ್ಮಣ, ಪರಾಶರಬ್ರಾಹ್ಮಣ, ಮಾಷಶರಾವಬ್ರಾಹ್ಮಣ, ಕಾಪೇಯಬ್ರಾಹ್ಮಣ, ಅನ್ವಾಖ್ಯಾನಬ್ರಾಹ್ಮಣ – ಇವೇ ಮೊದಲಾದ ಅನೇಕ ಬ್ರಾಹ್ಮಣಗಳು ಲುಪ್ತವಾಗಿವೆ.

ಅಥರ್ವವೇದ ಬ್ರಾಹ್ಮಣಗಳು

ಅಥರ್ವವೇದಕ್ಕೆ ಗೋಪಥವೆಂಬ ಒಂದೇ ಬ್ರಾಹ್ಮಣವಿದೆ.

ಆರಣ್ಯಕಗಳು

ಆರಣ್ಯಕಗಳು ಹೆಚ್ಚಾಗಿ ಬ್ರಾಹ್ಮಣಗಳನ್ನೇ ಹೋಲುತ್ತವೆ. ಅರಣ್ಯಾಧ್ಯಯನಾದೇತದಾರಣ್ಯಕಮಿತೀರ್ಯತೇ । ಅರಣ್ಯೇ ತದಧೀಯೇತ್ಯೇವಂ ವಾಕ್ಯಂ ಪ್ರಚಕ್ಷತೇ ।। ಈ ಭಾಗಗಳನ್ನು ಅರಣ್ಯದಲ್ಲಿಯೇ ಓದಬೇಕಾಗಿರುವುದರಿಂದ, ಇವುಗಳಲ್ಲಿರುವ ಬಹುರಹಸ್ಯ ವೇದಾಂತ ವಿಷಯಗಳು ಅಧಿಕಾರಿಗಳಲ್ಲದವರಿಗೆ ತಿಳಿಯಬಾರದೆಂಬ ಕಾರಣದಿಂದಲೂ ಇವುಗಳನ್ನು ಅರಣ್ಯದಲ್ಲಿ ಶಿಷ್ಯರಿಗೆ ಉಪದೇಶಿಸುತ್ತಿರುವುದರಿಂದ ಇವುಗಳಿಗೆ ಆರಣ್ಯಕಗಳೆಂಬ ಹೆಸರು. ಇವು ಶುದ್ಧಕರ್ಮವನ್ನು ವರ್ಣಿಸುವ ಬ್ರಾಹ್ಮಣಗಳಿಗೂ ಶುದ್ಧಜ್ಞಾನದ್ಯೋತಕಗಳಾದ ಉಪನಿಷತ್ತುಗಳಿಗೂ ಕೊಂಡಿಯಂತಿವೆ. ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತುಗಳು ದ್ವಿಜರ ಜೀವನದ ಮೂರು ಅವಸ್ಥೆಗಳಿಗೆ ಅನುಕೂಲಿಸುವಂತಿವೆ. ಗೃಹಸ್ಥನ ಶ್ರೇಯಸ್ಸಿಗೆ ಸಾಧನವಾದ ಕರ್ಮಮಾರ್ಗವನ್ನು ಬ್ರಾಹ್ಮಣಗಳು ವಿವರಿಸುತ್ತವೆ. ಆರಣ್ಯಕಗಳು ವಾನಪ್ರಸ್ಥನು ಅನುಸರಿಸಬೇಕಾದ ಮಾರ್ಗ, ಅಂದರೆ ಕರ್ಮಗಳನ್ನು ಮಾಡಲು ಸಾಧ್ಯವಾಗದೇ ಆ ಕರ್ಮಗಳಿಂದ ಸೂಚಿಸಲ್ಪಡುವ ಗೂಡಾರ್ಥಚಿಂತನ ಮಾಡುವ ಉಪಾಸನಾಮಾರ್ಗವೇ ಆರಣ್ಯಕದ ವಸ್ತು ವಿಷಯ. ಕೊನೆಯದಾಗಿ ಯಾವ ಕರ್ಮಸಂಬಂಧವೂ ಇಲ್ಲದೇ ಶುದ್ಧಜ್ಞಾನಮಾರ್ಗವನ್ನೇ ಅನುಸರಿಸುವ ಸಂನ್ಯಾಸಿಯ ಮಾರ್ಗವನ್ನು ಉಪನಿಷತ್ತುಗಳು ತಿಳಿಸುತ್ತವೆ. ಹೀಗೆ ಬ್ರಾಹ್ಮಣದ ಈ ಮೂರು ಭಾಗಗಳು ಕರ್ಮ, ಉಪಾಸನೆ ಮತ್ತು ಜ್ಞಾನವೆಂಬ ಮೂರು ಪರಲೋಕಸಾಧನೆಯ ಮಾರ್ಗಗಳನ್ನು ಉಪದೇಶಿಸುತ್ತವೆ. ಈಗ ದೊರಕಿರುವ ಆರಣ್ಯಕಗಳು ಈ ಕೆಳಗಿನಂತಿವೆ:

  1. ಋಗ್ವೇದಕ್ಕೆ ಸಂಬಂಧಿಸಿದ ಆರಣ್ಯಕಗಳು: ಐತರೇಯಾಣ್ಯಕ, ಶಾಂಖಾಯನಾರಣ್ಯಕ, ಕೌಶೀತಕೀ ಆರಣ್ಯಕ
  2. ಶುಕ್ಲಯಜುರ್ವೇದಕ್ಕೆ ಸಂಬಂಧಿಸಿದ ಆರಣ್ಯಕಗಳು: ಶತಪಥಬ್ರಾಹ್ಮಣದ 14ನೇ ಕಾಂಡದ ಪೂರ್ವಭಾಗ
  3. ಕೃಷ್ಣಯಜುರ್ವೇದಕ್ಕೆ ಸಂಬಂಧಿಸಿದ ಆರಣ್ಯಕಗಳು: ತೈತ್ತಿರೀಯಾರಣ್ಯಕ, ಮೈತ್ರಾಯಣೀಯಾರಣ್ಯಕ
  4. ಸಾಮವೇದಕ್ಕೆ ಸಂಭಂಧಿಸಿದ ಆರಣ್ಯಕಗಳು: ತಾಂಡ್ಯಮಹಾಬ್ರಾಹ್ಮಣದ ಕೊನೆಯ ಭಾಗ, ತಲವಕಾರ ಆರಣ್ಯಕ

ಅಥರ್ವವೇದಕ್ಕೆ ಸಂಬಂಧಿಸಿದ ಯಾವ ಆರಣ್ಯಕಗಳೂ ಈಗ ಉಪಲಬ್ಧಿಯಲ್ಲಿಲ್ಲ.

ಉಪನಿಷತ್ತುಗಳು

ಶ್ರುತಿಯ ಕೊನೆಯ ಭಾಗಗಳಾದ ಜ್ಞಾನವನ್ನು ಉಪದೇಶಿಸುವ ಉಪನಿಷತ್ತುಗಳು ಅಥವಾ ವೇದಾಂತವು ವೇದದ ಮುಖ್ಯ ಗುರಿಯಾದ ಮೋಕ್ಷ ಅಥವಾ ದುಃಖಮಿಶ್ರವಲ್ಲದ ಸುಖದ ವಿಷಯವನ್ನು ಚರ್ಚಿಸುತ್ತವೆ. ಇವು ಸಾರುವ ಮುಖ್ಯ ಅಂಶವೆಂದರೆ – ಅರ್ಥಜ್ಞಾನವಿಲ್ಲದೇ ಕರ್ಮಮಾಡಿದರೆ ಶಾಶ್ವತ ಸುಖವು ದೊರೆಯುವುದಿಲ್ಲ.

ಉಪನಿಷತ್ ಎಂದರೆ (ಉಪ=ಸಮೀಪದಲ್ಲಿ, ನಿಷದ್=ಕುಳಿತಿರುವುದು) ಗುರುವಿನ ಬಳಿ ಕುಳಿತು ಕಲಿತುಕೊಳ್ಳುವ ವಿಷಯ. ಇದಂ ವಾವ ತಜ್ಜ್ಯೇಷ್ಠಾಯ ಪುತ್ರಾಯ ಪಿತಾ ಬ್ರಹ್ಮ ಪ್ರಬ್ರೂಯಾತ್ ಪ್ರಣಾಯ್ಯಾಯ ವಾಽಂತೇವಾಸಿನೇ (ಛಾಂದೋಗ್ಯೋಪನಿಷತ್, 3-11-5) ಅರ್ಥಾತ್: ನಮ್ರನೂ, ಉಪದೇಶಕ್ಕೆ ಅರ್ಹನೂ ಆದ ಜ್ಯೇಷ್ಠ ಪುತ್ರನಿಗೆ ಅಥವಾ ಶಿಷ್ಯನಿಗೆ ಬ್ರಹ್ಮಜ್ಞಾನವನ್ನು ಉಪದೇಶಿಸಬೇಕು. ಕಠೋಪನಿಷತ್ತಿನಲ್ಲಿ ನಚಿಕೇತ-ಯಮರ ಸಂವಾದದಲ್ಲಿ ಮತ್ತು ಕೌಷೀತಕೀಬ್ರಾಹ್ಮಣೋಪನಿಷತ್ತಿನಲ್ಲಿ ಪ್ರತರ್ದನ-ಇಂದ್ರರ ಸಂವಾದದಲ್ಲಿ ಬ್ರಹ್ಮವಿಷಯಕ್ಕೆ ಶಿಷ್ಯರು ಎಂಥವರಾಗಿರಬೇಕು ಎನ್ನುವುದು ಬರುತ್ತದೆ.

ವೇದಾನಾಂ ಅಂತಃ ವೇದಾಂತಃ. ಅಂತಃ ಎಂದರೆ ಕೊನೆಯದು ಅನ್ನಬಹುದು ಅಥವಾ ಅಂತಿಮ ನಿರ್ಣಯ ಎಂದೂ ಅರ್ಥಮಾಡಿಕೊಳ್ಳಬಹುದು. ಎಲ್ಲ ಉಪನಿಷತ್ತುಗಳೂ ವೇದಗಳ ಅಂತಿಮ ಭಾಗದಲ್ಲಿರದೇ ಕೆಲವು ಉಪನಿಷತ್ತುಗಳು ಸಂಹಿತಾ ಭಾಗದಲ್ಲಿಯೂ ಬರುವುದರಿಂದ ವೇದಾಂತ ಶಬ್ದಕ್ಕೆ ವೇದಗಳ ಅಂತಿಮ ನಿರ್ಣಯ ಎಂದು ಅರ್ಥೈಸಬೇಕು ಎಂದು ಹೇಳುತ್ತಾರೆ. 

ಆತ್ಮಜ್ಞಾನವನ್ನು ಪ್ರಕಾಶಪಡಿಸುವ ವಿದ್ಯೆಯೇ ಉಪನಿಷತ್ತು ಎಂದಿದೆ. ಉಪ ನಿ ಷತ್ ಉಪ ಎಂದರೆ ಸಾಮೀಪ್ಯದಿಂದ ನಿ ಎಂದರೆ ನಿಶ್ಚಯವಾಗಿ ಶತ್ ಕರ್ಮವಾಸಾದಿಗಳೆಲ್ಲವನ್ನೂ ಸಡಿಲಿಸುತ್ತದೆ ಬ್ರಹ್ಮವನ್ನು ತಿಳಿಸಿಕೊಡುತ್ತದೆ ಮತ್ತು ಜನ್ಮಮರಣಗಳನ್ನು ತಪ್ಪಿಸುತ್ತದೆ. 

ಮುಕ್ತಿಕ ಉಪನಿಷತ್ತಿನ ಪ್ರಕಾರ ಒಟ್ಟು 108 ಉಪನಿಷತ್ತುಗಳಿವೆ: ಋಗ್ವೇದದಲ್ಲಿ 10, ಕೃಷ್ಣ ಯಜುರ್ವೇದದಲ್ಲಿ 32, ಶುಕ್ಲ ಯಜುರ್ವೇದದಲ್ಲಿ 19, ಸಾಮವೇದದಲ್ಲಿ 16, ಮತ್ತು 31 ಅಥರ್ವವೇದದಲ್ಲಿ. ಮುಕ್ತಿಕ ಉಪನಿಷತ್ತು ಈ 108 ಉಪನಿಷತ್ತುಗಳನ್ನು ಮುಖ್ಯ, ಸಾಮಾನ್ಯ, ಸಂನ್ಯಾಸ, ವೈಷ್ಣವ, ಶೈವ, ಶಾಕ್ತ, ಮತ್ತು ಯೋಗ ಎಂಬ 7 ಗುಂಪುಗಳಲ್ಲಿ ವಿಂಗಡಿಸುತ್ತದೆ. ಈ 108 ಉಪನಿಷತ್ತುಗಳ ಹೆಸರುಗಳು ಅವುಗಳಿಗೆ ಸಂಬಂಧಿಸಿದ ವೇದಗಳು ಮತ್ತು ಅವು ಯಾವ ಗುಂಪಿಗೆ ಸೇರಿವೆ ಎನ್ನುವುದನ್ನು ಕೆಳಗಿನ ಪಟ್ಟಿಯು ಸೂಚಿಸುತ್ತದೆ.

ಗುಂಪು ವೇದ ಉಪನಿಷತ್ತು
ಮುಖ್ಯ (13) ಋಗ್ವೇದ (2) ಐತರೇಯ, ಕೌಷೀತಕೀ
ಕೃಷ್ಣ ಯಜುರ್ವೇದ (4) ತೈತ್ತಿರೀಯ, ಕಠ, ಶ್ವೇತಾಶ್ವತರ, ಮೈತ್ರಾಯಣೀ
ಶುಕ್ಲ ಯಜುರ್ವೇದ (2) ಬೃಹದಾರಣ್ಯಕ, ಈಶ
ಸಾಮವೇದ (2) ಛಾಂದೋಗ್ಯ, ಕೇನ
ಅಥರ್ವವೇದ (3) ಮುಂಡಕ, ಮಾಂಡೂಕ್ಯ, ಪ್ರಶ್ನ
ಸಾಮಾನ್ಯ (21) ಋಗ್ವೇದ (2) ಆತ್ಮಬೋಧ, ಮುದ್ಗಲ
ಕೃಷ್ಣ ಯಜುರ್ವೇದ (7) ಸರ್ವಸಾರ, ಶುಕರಹಸ್ಯ, ಸ್ಕಂದ, ಗರ್ಭ, ಶಾರೀರಕ, ಏಕಾಕ್ಷರ. ಅಕ್ಸಿ
ಶುಕ್ಲ ಯಜುರ್ವೇದ (6) ಸುಬಲ, ಮಂತ್ರಿಕ, ನಿರಾಲಂಬ, ಪೈಂಗಲ, ಅಧ್ಯಾತ್ಮ, ಮುಕ್ತಿಕ
ಸಾಮವೇದ (3) ವಜ್ರಸೂಚಿ, ಮಹಾ, ಸಾವಿತ್ರಿ
ಅಥರ್ವವೇದ (3) ಆತ್ಮ, ಸೂರ್ಯ, ಪ್ರಾಣಾಗ್ನಿಹೋತ್ರ
ಸಂನ್ಯಾಸ (18) ಋಗ್ವೇದ (1) ನಿರ್ವಾಣ
ಕೃಷ್ಣ ಯಜುರ್ವೇದ (3) ಬ್ರಹ್ಮ, ಅವಧೂತ, ಕಠಶ್ರುತಿ
ಶುಕ್ಲ ಯಜುರ್ವೇದ (5) ಜಾಬಾಲ, ಭಿಕ್ಷು, ತುರೀಯಾತೀತಾವಧೂತ, ಯಾಜ್ಞವಲ್ಕ್ಯ, ಶತ್ಯಾಯನೀಯ
ಸಾಮವೇದ (4) ಆರುಣಿ, ಮೈತ್ರೇಯ, ಬೃಹತ್ ಸಂನ್ಯಾಸ, ಕುಂಡಿಕ (ಲಘು ಸಂನ್ಯಾಸ)
ಅಥರ್ವವೇದ (5)  
ವೈಷ್ಣವ (14) ಋಗ್ವೇದ (0)  
ಕೃಷ್ಣ ಯಜುರ್ವೇದ (3) ನಾರಾಯಣ, ಕಲಿಸಂತಾರಣ, ಮಹಾನಾರಾಯಣ
ಶುಕ್ಲ ಯಜುರ್ವೇದ (1) ತಾರಸಾರ
ಸಾಮವೇದ (2) ವಾಸುದೇವ, ಅವ್ಯಕ್ತ
ಅಥರ್ವವೇದ (8) ನೃಸಿಂಹತಾಪನಿ, ರಾಮರಹಸ್ಯ, ರಾಮತಾಪನಿ, ಗೋಪಾಲತಾಪನಿ, ಕೃಷ್ಣ, ಹಯಗ್ರೀವ, ದತ್ತಾತ್ರೇಯ, ಗಾರುಡ
ಶೈವ (14) ಋಗ್ವೇದ (1) ಅಕ್ಷಮಾಲಿಕ
ಕೃಷ್ಣ ಯಜುರ್ವೇದ (5) ಕೈವಲ್ಯ, ಕಾಲಾಗ್ನಿರುದ್ರ, ದಕ್ಷಿಣಾಮೂರ್ತಿ, ರುದ್ರಹೃದಯ, ಪಂಚಬ್ರಹ್ಮ
ಶುಕ್ಲ ಯಜುರ್ವೇದ (0)  
ಸಾಮವೇದ (2) ರುದ್ರಾಕ್ಷ, ಜಾಬಾಲಿ
ಅಥರ್ವವೇದ (8) ಅಥರ್ವಶೀರ್ಷ, ಅಥರ್ವಶಿಖ, ಬೃಹಜ್ಜಾಬಾಲ, ಶರಭ, ಭಸ್ಮ, ಗಣಪತಿ
ಶಾಕ್ತ (8) ಋಗ್ವೇದ (3) ತ್ರಿಪುರ, ಸೌಭಾಗ್ಯಲಕ್ಷ್ಮಿ, ಬಹ್ವೃಚ
ಕೃಷ್ಣ ಯಜುರ್ವೇದ (1) ಸರಸ್ವತೀರಹಸ್ಯ
ಶುಕ್ಲ ಯಜುರ್ವೇದ (0)  
ಸಾಮವೇದ (0)  
ಅಥರ್ವವೇದ (4) ಸೀತಾ, ದೇವೀ, ತ್ರಿಪುರತಾಪಿನೀ, ಭಾವನ
ಯೋಗ (20) ಋಗ್ವೇದ (1) ನಾದಬಿಂದು
ಕೃಷ್ಣ ಯಜುರ್ವೇದ (10) ಅಮೃತಬಿಂದು, ತೇಜೋಬಿಂದು, ಅಮೃತನಾದ, ಕ್ಷುರಿಕ, ಧ್ಯಾನಬಿಂದು, ಬ್ರಹ್ಮವಿದ್ಯಾ, ಯೋಗತತ್ತ್ವ, ಯೋಗಶಿಖಾ, ಯೋಗಕುಂಡಲಿನಿ, ವರಾಹ
ಶುಕ್ಲ ಯಜುರ್ವೇದ (4) ಅದ್ವಯತಾರಕ, ಹಂಸ, ತ್ರಿಶಿಖೀ, ಮಂಡಲಬ್ರಾಹ್ಮಣ
ಸಾಮವೇದ (2) ಯೋಗಚೂಡಾಮಣಿ, ದರ್ಶನ
ಅಥರ್ವವೇದ (3) ಶಾಂಡಿಲ್ಯ, ಪಾಶುಪತ, ಮಹಾವಾಕ್ಯ

ಶ್ರೀಶಂಕರಾಚಾರ್ಯರು ಭಾಷ್ಯರಚಿಸಿರುವ ಹತ್ತು (ದಶ) ಉಪನಿಷತ್ತುಗಳು ಪ್ರಸಿದ್ಧವಾಗಿವೆ: ಬೃಹದಾರಣ್ಯಕ, ಐತರೇಯ, ಛಾಂದೋಗ್ಯ, ತೈತ್ತಿರೀಯ, ಈಶ (ಅಥವಾ ಈಶಾವಾಸ್ಯೋಪನಿಷತ್ತು), ಕೇನ, ಕಠ, ಪ್ರಶ್ನ, ಮುಂಡ ಮತ್ತು ಮಾಂಡೂಕ್ಯ (ಈಶಕೇನಕಠಪ್ರಶ್ನಮುಂಡಮಾಂಡೂಕ್ಯತಿತ್ತಿರಿ । ಐತರೇಯಂ ಚ ಛಾಂದೋಗ್ಯಂ ಬೃಹದಾರಣ್ಯಕಂ ತಥಾ ।।). ಶ್ರೀರಾಮಾನುಜಾಚಾರ್ಯರು ದಶೋಪನಿಷತ್ತುಗಳ ಮೇಲೆ ವ್ಯಾಖ್ಯಾನ ಮಾಡದಿದ್ದರೂ ತಮ್ಮ ವೇದಾರ್ಥಸಂಗ್ರಹದಲ್ಲಿ ಇವುಗಳ ಕುರಿತು ಚರ್ಚೆಮಾಡಿದ್ದಾರೆ. ಶ್ರೀಮಧ್ವಾಚಾರ್ಯರು ದಶೋಪನಿಷತ್ತುಗಳ ಮೇಲೆ ವ್ಯಾಖ್ಯಾನವನ್ನು ಬರೆದಿದ್ದಾರೆ.

ಉಪನಿಷತ್ತುಗಳಲ್ಲಿ ಒಂದು ದೊಡ್ಡ ಚರ್ಚೆ ನಡೆಯುತ್ತಿದ್ದಂತೆ ತೋರುತ್ತದೆ: ಪುರುಷಾರ್ಥಪ್ರಾಪ್ತಿಗೆ ಯಾವುದು ಶ್ರೇಷ್ಠ ಸಾಧನ – ಕರ್ಮವೋ, ಜ್ಞಾನವೋ, ಅಥವಾ ಇವೆರಡರ ಸಮುಚ್ಛಯವೋ? ಸ್ವರ್ಗಪ್ರಾಪ್ತಿರೂಪವಾದ ಕರ್ಮಫಲವು ಅನಿತ್ಯವಾದುದರಿಂದ ಶುದ್ಧಜ್ಞಾನವೇ ಶಾಶ್ವತ ಮೋಕ್ಷಕ್ಕೆ ಸಾಧನವೆಂದು ಉಪನಿಷತ್ತುಗಳು ಸ್ವಯಂ ಒಪ್ಪಿಕೊಂಡಿರುವಂತೆ ಕಾಣುತ್ತದೆ. “ಕರ್ಮವು ಶ್ರೇಯಸ್ಸೆಂದು ಯಾವ ಮೂಢರು ಹಿಗ್ಗುವರೋ ಅವರು ಜರಾಮೃತ್ಯುಗಳನ್ನು ಪುನಃ ಹೊಂದುತ್ತಾರೆ.”[1] “ಕರ್ಮದಿಂದ ಆಗಿರುವ ಲೋಕಗಳನ್ನು ಪರಿಶೀಲಿಸಿ ’ಅಕೃತವಾದದ್ದು ಕೃತದಿಂದ ಆಗುವುದಿಲ್ಲ’ ಎಂದು ವೈರಾಗ್ಯವನ್ನು ಹೊಂದಬೇಕು.”[2] ಇಲ್ಲಿ ಕರ್ಮ ಎಂದರೆ ದೇವತೆಗಳನ್ನು ಉದ್ದೇಶಿಸಿ ಮಾಡಿದ ಯಜ್ಞಕರ್ಮಗಳು ಎನ್ನುವುದರಲ್ಲಿ ಸಂದೇಹವಿಲ್ಲ. ಲೋಕವ್ಯವಹಾರಗಳಿಗೆ ಕರ್ಮವೆಂದು ಹೇಳಿಲ್ಲ. ಮುಮುಕ್ಷುವು ಅರ್ಥಾತ್ ಮೋಕ್ಷವನ್ನು ಬಯಸುವವನು “ಅದೃಢವೂ ದೋಣಿಯ ರೂಪವೂ ಆಗಿರುವ ಹದಿನೆಂಟು ಕರ್ಮಗಳನ್ನು”[3] ಬಿಟ್ಟು ಎಂದರೆ ಗೃಹಸ್ಥಾಶ್ರಮವನ್ನು ತ್ಯಜಿಸಿ ಬ್ರಹ್ಮವಿದ್ಯೆಗಾಗಿ ಸಂನ್ಯಾಸ ಸ್ವೀಕರಿಸಬೇಕು ಎನ್ನುವುದು ಕೆಲವು ಉಪನಿಷತ್ತುಗಳ ತಾತ್ಪರ್ಯ.

ಇದಲ್ಲದೇ ಇನ್ನೊಂದು ಅಭಿಪ್ರಾಯವು ಕೆಲವು ಉಪನಿಷತ್ತುಗಳಲ್ಲಿ ಇರುವಂತೆ ಕಾಣುತ್ತದೆ. ಜ್ಞಾನರಹಿತವಾದ ಬರಿಯ ಕರ್ಮದಿಂದ ಏನೂ ಪ್ರಯೋಜನವಿಲ್ಲ. ಕರ್ಮವು ಜ್ಞಾನಕ್ಕೆ ಅಂಗವಾಗಿದ್ದರೆ ಅಥವಾ ಸಹಕಾರಿಯಾಗಿದ್ದರೆ ಜ್ಞಾನೋತ್ಪತ್ತಿಗೆ ಕಾರಣವಾಗುತ್ತದೆ. ಈ ದೃಷ್ಟಿಯಿಂದ ಸಾಧಕನು ಫಲಾಸಕ್ತಿಯನ್ನು ಬಿಟ್ಟು ಕರ್ಮವನ್ನು ಅನುಷ್ಠಾನಮಾಡಿದರೆ ಕರ್ಮದ ಮೂಲಕ ಚಿತ್ತಶುದ್ಧಿಯನ್ನು ಹೊಂದಿ ನಂತರ ಜ್ಞಾನದ ಮೂಲಕ ನಿಃಶ್ರೇಯಸ್ಸನ್ನು ಪಡೆಯುತ್ತಾನೆ. ಕರ್ಮಜ್ಞಾನಗಳಿಗೆ ಇಲ್ಲಿ ಯಾವುದೇ ರೀತಿಯ ವಿರೋಧವಿಲ್ಲ. ಈ ಸಮುಚ್ಚಯಕ್ಕೆ ವಿಷಮಸಮುಚ್ಛಯವೆಂದು ಹೆಸರು.

ಮಹಾವಾಕ್ಯಗಳು

ಉಪನಿಷತ್ತುಗಳಲ್ಲಿರುವ ಮಹಾವಾಕ್ಯಗಳು ನಾಲ್ಕು ಎಂದಿವೆ: (1) ತತ್ತ್ವಮಸಿ – ತತ್ ತ್ವಂ ಅಸಿ –ಛಾಂದೋಗ್ಯೋಪನಿಷತ್ತು; (2) ಅಹಂ ಬ್ರಹ್ಮಾಸ್ಮಿ – ಬೃಹದಾರಣ್ಯಕೋಪನಿಷತ್ತು; (3) ಪ್ರಜ್ಞಾನಂ ಬ್ರಹ್ಮ –ಐತರೇತೋಪನಿಷತ್ತು; ಮತ್ತು (4) ಅಯಮಾತ್ಮಾ ಬ್ರಹ್ಮ –ಮಾಂಡೂಕ್ಯೋಪನಿಷತ್ತು. ಇನ್ನೂ ಇತರ ಮಹಾವಾಕ್ಯಗಳು ಉಪನಿಷತ್ತುಗಳಲ್ಲಿವೆಯೆಂದು ಗುರುತಿಸಿದ್ದಾರೆ: (5) ಏಕಮೇವಾದ್ವಿತೀಯಂ ಬ್ರಹ್ಮ - ಛಾಂದೋಗ್ಯೋಪನಿಷತ್ತು (6) ಸೋಽಹಮ್ – ಈಶೋಪನಿಷತ್ತು (7) ಸರ್ವಂ ಖಲ್ವಿದಂ ಬ್ರಹ್ಮ - ಛಾಂದೋಗ್ಯೋಪನಿಷತ್ತು (8) ಏತದ್ವೈತತ್ –ಕಠೋಪನಿಷತ್ತು.

ಶ್ರೀ ಶಂಕರಾಚಾರ್ಯರು ಭಾಷ್ಯಗಳನ್ನು ನೀಡಿರುವ ಹತ್ತು ಮುಖ್ಯ ಉಪನಿಷತ್ತುಗಳ ಪರಿಚಯವು ಈ ಕೆಳಗಿನಂತಿವೆ:

  1. ಬೃಹದಾರಣ್ಯಕೋಪನಿಷತ್ತು
  2. ಐತರೇಯೋಪನಿಷತ್ತು
  3. ಛಾಂದೋಗ್ಯೋಪನಿಷತ್ತು
  4. ತೈತ್ತಿರೀಯೋಪನಿಷತ್ತು
  5. ಈಶಾವಾಸ್ಯೋಪನಿಷತ್ತು
  6. ಕೇನೋಪನಿಷತ್ತು
  7. ಕಠೋಪನಿಷತ್ತು
  8. ಪ್ರಶ್ನೋಪನಿಷತ್ತು
  9. ಮುಂಡಕೋಪನಿಷತ್ತು
  10. ಮಾಂಡುಕ್ಯೋಪನಿಷತ್ತು

_____________________________

[1] ಏತಚ್ಛ್ರೇಯೋ ಯೇಽಭಿನಂದಂತಿ ಮೂಢಾ ಜರಾಮೃತ್ಯುಂ ತೇ ಪುನರೇವಾಪಿಯಂತಿ । (ಮುಂಡಕೋಪನಿಷತ್ 1-2-7)

[2] ಪರೀಕ್ಷ್ಯ ಲೋಕಾನ್ ಕರ್ಮಚಿತಾನ್ ಬ್ರಾಹ್ಮಣೋ ನಿರ್ವೇದಮಾಯನ್ನಾಸ್ತ್ಯಕೃತಃ ಕೃತೇನ । (ಮುಂಡಕೋಪನಿಷತ್ 1-2-2)

[3] ಪ್ಲವಾ ಹ್ಯೇತೇ ಅದೃಢಾ ಯಜ್ಞರೂಪಾ ಅಷ್ಟಾದಶೋಕ್ತಮವರಂ ಯೇಷು ಕರ್ಮ (ಮುಂಡಕೋಪನಿಷತ್ 1-2-2)

Leave a Reply

Your email address will not be published. Required fields are marked *