ಮಹಾಭಾರತದ ೧೮ ಪರ್ವಗಳ ಸಾರಾಂಶ ಮತ್ತು ಪ್ರತಿ ಪರ್ವಗಳಲ್ಲಿರುವ ಅಧ್ಯಾಯ ಮತ್ತು ಶ್ಲೋಕಗಳ ಸಂಖ್ಯೆ
Contents
Toggleನೈಮಿಷಾರಣ್ಯವಾಸೀ ಋಷಿಗಳಿಗೆ ಸೂತ ಉಗ್ರಶ್ರವನು ತನ್ನ ತಂದೆ ಲೋಮಹರ್ಷಣನು ಹಿಂದೆ ಹೇಳಿದ್ದ ಮಹಾಭಾರತದ ೧೮ ಪರ್ವಗಳ ಸಾರಾಂಶವನ್ನು ಅವುಗಳಲ್ಲಿರುವ ಅಧ್ಯಾಯ ಮತ್ತು ಶ್ಲೋಕಸಂಖ್ಯೆಗಳೊಂದಿಗೆ ಹೇಳಿದನು [ಆದಿಪರ್ವ, ಪರ್ವಸಂಗ್ರಹ ಪರ್ವ, ಅಧ್ಯಾಯ ೨, ಶ್ಲೋಕ ೭೦-೨೩೪].
01002070a ಏತತ್ಪರ್ವಶತಂ ಪೂರ್ಣಂ ವ್ಯಾಸೇನೋಕ್ತಂ ಮಹಾತ್ಮನಾ|
01002070c ಯಥಾವತ್ಸೂತಪುತ್ರೇಣ ಲೋಮಹರ್ಷಣಿನಾ ಪುನಃ||
01002071a ಕಥಿತಂ ನೈಮಿಷಾರಣ್ಯೇ ಪರ್ವಾಣ್ಯಷ್ಟಾದಶೈವ ತು|
01002071c ಸಮಾಸೋ ಭಾರತಸ್ಯಾಯಂ ತತ್ರೋಕ್ತಃ ಪರ್ವಸಂಗ್ರಹಃ||
ಹೀಗೆ ಮಹಾತ್ಮ ವ್ಯಾಸನು ಸಂಪೂರ್ಣವಾಗಿ ಒಂದು ನೂರು ಪರ್ವಗಳನ್ನು ರಚಿಸಿದ್ದಾನೆ. ನಂತರ ನೈಮಿಷಾರಣ್ಯದಲ್ಲಿ ಸೂತಪುತ್ರ ಲೋಮಹರ್ಷಣನು ಇದನ್ನೇ ೧೮ ಪರ್ವಗಳಲ್ಲಿ ಹೇಳಿದನು. ಅವನು ಹೇಳಿದ ಪರ್ವಗಳ ವಿಷಯ ಸಾರಾಂಶವು ಈ ರೀತಿ ಇದೆ.
[1]01002072a ಪೌಷ್ಯೇ ಪರ್ವಣಿ ಮಾಹಾತ್ಮ್ಯಮುತ್ತಂಕಸ್ಯೋಪವರ್ಣಿತಂ|
01002072c ಪೌಲೋಮೇ ಭೃಗುವಂಶಸ್ಯ ವಿಸ್ತಾರಃ ಪರಿಕೀರ್ತಿತಃ||
ಪೌಷ್ಯ ಪರ್ವದಲ್ಲಿ ಮಹಾತ್ಮ ಉತ್ತಂಕನ ವರ್ಣನೆಯಿದೆ. ಪೌಲೋಮದಲ್ಲಿ ಭೃಗುವಂಶದ ವಿಸ್ತಾರ ಕೀರ್ತನೆಯಿದೆ.
01002073a ಆಸ್ತೀಕೇ ಸರ್ವನಾಗಾನಾಂ ಗರುಡಸ್ಯ ಚ ಸಂಭವಃ|
01002073c ಕ್ಷೀರೋದಮಥನಂ ಚೈವ ಜನ್ಮೋಚ್ಛೈಃಶ್ರವಸಸ್ತಥಾ||
01002074a ಯಜತಃ ಸರ್ಪಸತ್ರೇಣ ರಾಜ್ಞಃ ಪಾರಿಕ್ಷಿತಸ್ಯ ಚ|
01002074c ಕಥೇಯಮಭಿನಿರ್ವೃತ್ತಾ ಭಾರತಾನಾಂ ಮಹಾತ್ಮನಾಂ||
01002075a ವಿವಿಧಾಃ ಸಂಭವಾ ರಾಜ್ಞಾಮುಕ್ತಾಃ ಸಂಭವಪರ್ವಣಿ|
01002075c ಅನ್ಯೇಷಾಂ ಚೈವ ವಿಪ್ರಾಣಾಮೃಷೇರ್ದ್ವೈಪಾಯನಸ್ಯ ಚ||
ಆಸ್ತೀಕದಲ್ಲಿ ಸರ್ವ ನಾಗಗಳ ಮತ್ತು ಗರುಡನ ಹುಟ್ಟು, ಕ್ಷೀರಸಾಗರ ಮಥನ, ಉಚ್ಛೈಶ್ರವ ಜನನ, ಮತ್ತು ರಾಜ ಪಾರಿಕ್ಷಿತನಿಂದ ಯಜಿಸಲ್ಪಟ್ಟ ಸರ್ಪಸತ್ರದ ಕಥೆಗಳಿವೆ. ಮಹಾತ್ಮ ಭಾರತರ, ವಿವಿಧ ರಾಜರುಗಳ, ಋಷಿ ದ್ವೈಪಾಯನ ಮತ್ತು ಅನ್ಯ ವಿಪ್ರರ ಸಂಭವಗಳನ್ನು ಸಂಭವಪರ್ವದಲ್ಲಿ ಹೇಳಲಾಗಿದೆ.
01002076a ಅಂಶಾವತರಣಂ ಚಾತ್ರ ದೇವಾನಾಂ ಪರಿಕೀರ್ತಿತಂ|
01002076c ದೈತ್ಯಾನಾಂ ದಾನವಾನಾಂ ಚ ಯಕ್ಷಾಣಾಂ ಚ ಮಹೌಜಸಾಂ||
01002077a ನಾಗಾನಾಮಥ ಸರ್ಪಾಣಾಂ ಗಂಧರ್ವಾಣಾಂ ಪತತ್ರಿಣಾಂ|
01002077c ಅನ್ಯೇಷಾಂ ಚೈವ ಭೂತಾನಾಂ ವಿವಿಧಾನಾಂ ಸಮುದ್ಭವಃ||
ದೇವ, ದೈತ್ಯ, ದಾನವ, ಯಕ್ಷ, ಮಹೌಜಸ ನಾಗ, ಸರ್ಪ, ಗಂಧರ್ವ, ಪಕ್ಷಿ ಮತ್ತು ಇತರ ವಿವಿಧ ಭೂತಗಳ ಸಮುದ್ಭವವನ್ನು ಅಂಶಾವತರಣದಲ್ಲಿ ವರ್ಣಿಸಲಾಗಿದೆ.
[2]01002078a ವಸೂನಾಂ ಪುನರುತ್ಪತ್ತಿರ್ಭಾಗೀರಥ್ಯಾಂ ಮಹಾತ್ಮನಾಂ|
01002078c ಶಂತನೋರ್ವೇಶ್ಮನಿ ಪುನಸ್ತೇಷಾಂ ಚಾರೋಹಣಂ ದಿವಿ||
01002079a ತೇಜೋಂಶಾನಾಂ ಚ ಸಂಘಾತಾದ್ ಭೀಷ್ಮಸ್ಯಾಪ್ಯತ್ರ ಸಂಭವಃ|
01002079c ರಾಜ್ಯಾನ್ನಿವರ್ತನಂ ಚೈವ ಬ್ರಹ್ಮಚರ್ಯವ್ರತೇ ಸ್ಥಿತಿಃ||
01002080a ಪ್ರತಿಜ್ಞಾಪಾಲನಂ ಚೈವ ರಕ್ಷಾ ಚಿತ್ರಾಂಗದಸ್ಯ ಚ|
01002080c ಹತೇ ಚಿತ್ರಾಂಗದೇ ಚೈವ ರಕ್ಷಾ ಭ್ರಾತುರ್ಯವೀಯಸಃ||
01002081a ವಿಚಿತ್ರವೀರ್ಯಸ್ಯ ತಥಾ ರಾಜ್ಯೇ ಸಂಪ್ರತಿಪಾದನಂ|
01002081c ಧರ್ಮಸ್ಯ ನೃಷು ಸಂಭೂತಿರಣೀಮಾಂಡವ್ಯಶಾಪಜಾ||
01002082a ಕೃಷ್ಣದ್ವೈಪಾಯನಾಚ್ಚೈವ ಪ್ರಸೂತಿರ್ವರದಾನಜಾ|
01002082c ಧೃತರಾಷ್ಟ್ರಸ್ಯ ಪಾಂಡೋಶ್ಚ ಪಾಂಡವಾನಾಂ ಚ ಸಂಭವಃ||
01002083a ವಾರಣಾವತಯಾತ್ರಾ ಚ ಮಂತ್ರೋ ದುರ್ಯೋಧನಸ್ಯ ಚ|
[3]01002083c ವಿದುರಸ್ಯ ಚ ವಾಕ್ಯೇನ ಸುರುಂಗೋಪಕ್ರಮಕ್ರಿಯಾ||
[4]01002084a ಪಾಂಡವಾನಾಂ ವನೇ ಘೋರೇ ಹಿಡಿಂಬಾಯಾಶ್ಚ ದರ್ಶನಂ|
[5]01002084c ಘಟೋತ್ಕಚಸ್ಯ ಚೋತ್ಪತ್ತಿರತ್ರೈವ ಪರಿಕೀರ್ತಿತಾ||
ಮಹಾತ್ಮ ಭಾಗೀರಥಿ ಮತ್ತು ಶಂತನುವಿನಲ್ಲಿ ವಸುಗಳ ಪುನರುತ್ಪತ್ತಿ, ಅವರು ಪುನಃ ದೇವಲೋಕಕ್ಕೆ ತೆರಳುವುದು, ತೇಜೋವಂತ ವೀರ ಭೀಷ್ಮನ ಜನನ, ಅವನು ರಾಜ್ಯವನ್ನು ತೊರೆದು ಬ್ರಹ್ಮಚರ್ಯ ಜೀವನವನ್ನು ಸ್ವೀಕರಿಸುವುದು, ಪ್ರತಿಜ್ಞಾ ಪಾಲನೆ, ಚಿತ್ರಾಂಗದನನ್ನು ರಕ್ಷಿಸಿದುದು, ಚಿತ್ರಾಂಗದನ ಮರಣದ ನಂತರ ರಾಜ್ಯದ ರಕ್ಷಣೆಯನ್ನು ತಮ್ಮ ವಿಚಿತ್ರವೀರ್ಯನಿಗೆ ಸಮರ್ಪಿಸುವುದು, ಅಣಿಮಾಂಡವ್ಯನ ಶಾಪದಿಂದ ಧರ್ಮನು ಮನುಷ್ಯನಾಗಿ ಹುಟ್ಟಿದುದು, ಕೃಷ್ಣದ್ವೈಪಾಯನನ ವರದಾನದಿಂದ ಧೃತರಾಷ್ಟ್ರ ಮತ್ತು ಪಾಂಡುವಿನ ಜನನ, ಪಾಂಡವರ ಹುಟ್ಟು, ವಾರಣಾವತ ಯಾತ್ರೆ, ದುರ್ಯೋಧನನ ಕುತಂತ್ರ, ವಿದುರನ ಮಾತಿನಂತೆ ಸುರಂಗವನ್ನು ತೆಗೆದದ್ದು, ಘೋರ ವನದಲ್ಲಿ ಪಾಂಡವರಿಗೆ ಹಿಡಿಂಬಿಯ ದರ್ಶನ ಮತ್ತು ಘಟೋತ್ಕಚನ ಜನನ ಇವೆಲ್ಲವನ್ನೂ ಆದಿಪರ್ವದಲ್ಲಿ ವಿವರಿಸಲಾಗಿದೆ.
[6]01002085a ಅಜ್ಞಾತಚರ್ಯಾ ಪಾಂಡೂನಾಂ ವಾಸೋ ಬ್ರಾಹ್ಮಣವೇಶ್ಮನಿ|
01002085c ಬಕಸ್ಯ ನಿಧನಂ ಚೈವ ನಾಗರಾಣಾಂ ಚ ವಿಸ್ಮಯಃ||
[7]01002086a ಅಂಗಾರಪರ್ಣಂ ನಿರ್ಜಿತ್ಯ ಗಂಗಾಕೂಲೇಽರ್ಜುನಸ್ತದಾ|
[8]01002086c ಭ್ರಾತೃಭಿಃ ಸಹಿತಃ ಸರ್ವೈಃ ಪಾಂಚಾಲಾನಭಿತೋ ಯಯೌ||
01002087a ತಾಪತ್ಯಮಥ ವಾಸಿಷ್ಠಮೌರ್ವಂ ಚಾಖ್ಯಾನಮುತ್ತಮಂ|
01002087c ಪಂಚೇಂದ್ರಾಣಾಮುಪಾಖ್ಯಾನಮತ್ರೈವಾದ್ಭುತಮುಚ್ಯತೇ||
ಬ್ರಾಹ್ಮಣ ವೇಶದಲ್ಲಿ ಪಾಂಡವರ ಅಜ್ಞಾತವಾಸ, ಬಕನ ಸಾವು ಮತ್ತು ನಾಗರೀಕರ ವಿಸ್ಮಯ, ಗಂಗೆಯ ತಟದಲ್ಲಿ ಅರ್ಜುನನನು ಅಂಗಾರಪರ್ಣನನ್ನು ಸೋಲಿಸಿದುದು, ಮತ್ತು ಸರ್ವ ಭ್ರಾತೃಗಳ ಸಹಿತ ಪಾಂಚಾಲಕ್ಕೆ ಆಗಮಿಸಿದುದು, ತಪತಿ, ವಸಿಷ್ಠ ಮತ್ತು ಔರ್ವರ ಉತ್ತಮ ಆಖ್ಯಾನ ಮತ್ತು ಐವರು ಇಂದ್ರರ ಉಪಾಖ್ಯಾನಗಳನ್ನು ಇದರಲ್ಲಿ ಹೇಳಲಾಗಿದೆ.
[9]01002088a ಪಂಚಾನಾಮೇಕಪತ್ನೀತ್ವೇ ವಿಮರ್ಶೋ ದ್ರುಪದಸ್ಯ ಚ|
01002088c ದ್ರೌಪದ್ಯಾ ದೇವವಿಹಿತೋ ವಿವಾಹಶ್ಚಾಪ್ಯಮಾನುಷಃ||
01002089a ವಿದುರಸ್ಯ ಚ ಸಂಪ್ರಾಪ್ತಿರ್ದರ್ಶನಂ ಕೇಶವಸ್ಯ ಚ|
01002089c ಖಾಂಡವಪ್ರಸ್ಥವಾಸಶ್ಚ ತಥಾ ರಾಜ್ಯಾರ್ಧಶಾಸನಂ||
01002090a ನಾರದಸ್ಯಾಜ್ಞಯಾ ಚೈವ ದ್ರೌಪದ್ಯಾಃ ಸಮಯಕ್ರಿಯಾ|
01002090c ಸುಂದೋಪಸುಂದಯೋಸ್ತತ್ರ ಉಪಾಖ್ಯಾನಂ ಪ್ರಕೀರ್ತಿತಂ||
ಐವರಿಗೆ ಒಂದೇ ಪತ್ನಿಯಕುರಿತು ದೃಪದನ ವಿಮರ್ಶೆ, ದ್ರೌಪದಿಯ ದೇವವಿಹಿತ ಅಮಾನುಷ ವಿವಾಹ, ವಿದುರನ ಆಗಮನ, ಕೇಶವನ ದರ್ಶನ, ಖಾಂಡವಪ್ರಸ್ಥದಲ್ಲಿ ವಾಸಿಸಿ ಅರ್ಧ ರಾಜ್ಯದ ಆಡಳಿತ, ನಾರದನ ಆಜ್ಞೆಯಂತೆ ದ್ರೌಪದಿಯೊಡನೆ ಸಮಯಕ್ರಿಯೆ, ಮತ್ತು ಸುಂದೋಪ-ಸುಂದರ ಉಪಾಖ್ಯಾನವನ್ನು ಇದರಲ್ಲಿ ಹೇಳಲಾಗಿದೆ.
01002091a ಪಾರ್ಥಸ್ಯ ವನವಾಸಶ್ಚ ಉಲೂಪ್ಯಾ ಪಥಿ ಸಂಗಮಃ|
01002091c ಪುಣ್ಯತೀರ್ಥಾನುಸಂಯಾನಂ ಬಭ್ರುವಾಹನಜನ್ಮ ಚ||
01002092a ದ್ವಾರಕಾಯಾಂ ಸುಭದ್ರಾ ಚ ಕಾಮಯಾನೇನ ಕಾಮಿನೀ|
01002092c ವಾಸುದೇವಸ್ಯಾನುಮತೇ ಪ್ರಾಪ್ತಾ ಚೈವ ಕಿರೀಟಿನಾ||
01002093a ಹರಣಂ ಗೃಹ್ಯ ಸಂಪ್ರಾಪ್ತೇ ಕೃಷ್ಣೇ ದೇವಕಿನಂದನೇ|
01002093c ಸಂಪ್ರಾಪ್ತಿಶ್ಚಕ್ರಧನುಷೋಃ ಖಾಂಡವಸ್ಯ ಚ ದಾಹನಂ||
01002094a ಅಭಿಮನ್ಯೋಃ ಸುಭದ್ರಾಯಾಂ ಜನ್ಮ ಚೋತ್ತಮತೇಜಸಃ|
01002094c ಮಯಸ್ಯ ಮೋಕ್ಷೋ ಜ್ವಲನಾದ್ ಭುಜಂಗಸ್ಯ ಚ ಮೋಕ್ಷಣಂ|
01002094e ಮಹರ್ಷೇರ್ಮಂದಪಾಲಸ್ಯ ಶಾಂಙ್ರ್ಯಂ ತನಯಸಂಭವಃ||
01002095a ಇತ್ಯೇತದಾಧಿಪರ್ವೋಕ್ತಂ ಪ್ರಥಮಂ ಬಹುವಿಸ್ತರಂ|
01002095c ಅಧ್ಯಾಯಾನಾಂ ಶತೇ ದ್ವೇ ತು ಸಂಖ್ಯಾತೇ ಪರಮರ್ಷಿಣಾ|
01002095e ಅಷ್ಟಾದಶೈವ ಚಾಧ್ಯಾಯಾ ವ್ಯಾಸೇನೋತ್ತಮತೇಜಸಾ||
01002096a ಸಪ್ತ ಶ್ಲೋಕಸಹಸ್ರಾಣಿ ತಥಾ ನವ ಶತಾನಿ ಚ|
01002096c ಶ್ಲೋಕಾಶ್ಚ ಚತುರಾಶೀತಿರ್ದೃಷ್ಟೋ ಗ್ರಂಥೋ ಮಹಾತ್ಮನಾ||
ಪಾರ್ಥನ ವನವಾಸ, ಮಾರ್ಗದಲ್ಲಿ ಉಲೂಪಿಯೊಡನೆ ಸಂಗಮ, ಪುಣ್ಯತೀರ್ಥಯಾತ್ರೆಯಲ್ಲಿ ಬಭೃವಾಹನನ ಜನನ, ಕಾಮ ಪೀಡಿತ ಕಿರೀಟಿಯು ವಾಸುದೇವನ ಅನುಮತಿಯಂತೆ ಕಾಮಿನಿ ಸುಭದ್ರೆಯನ್ನು ದ್ವಾರಕೆಯಿಂದ ಕರೆದೊಯ್ದುದು, ದೇವಕಿನಂದನ ಕೃಷ್ಣನು ವಧುದಕ್ಷಿಣೆಯನ್ನು ತೆಗೆದುಕೊಂಡು ಹೋದದ್ದು, ಖಾಂಡವ ದಹನ ಮತ್ತು ಚಕ್ರ ಧನುಸ್ಸುಗಳ ಸಂಪ್ರಾಪ್ತಿ, ಸುಭದ್ರೆಯಲ್ಲಿ ಉತ್ತಮತೇಜಸ ಅಭಿಮನ್ಯುವಿನ ಜನನ, ಅಗ್ನಿಯಿಂದ ಮಯ ಮತ್ತು ಸರ್ಪಗಳ ಮೋಕ್ಷ, ಮಹರ್ಷಿ ಮಂದಪಾಲನಿಗೆ ಶಾಂಗ್ರ ಎನ್ನುವ ಮಗನ ಜನನ, ಇವೆಲ್ಲವನ್ನೂ ಬಹಳ ವಿಸ್ತಾರವಾಗಿ ಮೊದಲನೆಯ ಆದಿಪರ್ವದಲ್ಲಿ ೨೧೮ ಅಧ್ಯಾಯಗಳಲ್ಲಿ ಪರಮ ಋಷಿ ಉತ್ತಮತೇಜಸ ವ್ಯಾಸನು ರಚಿಸಿದ್ದಾನೆ. ಈ ಪರ್ವದಲ್ಲಿರುವ ಒಟ್ಟು ಶ್ಲೋಕಗಳ ಸಂಖ್ಯೆ ೭೯೪೦.
01002097a ದ್ವಿತೀಯಂ ತು ಸಭಾಪರ್ವ ಬಹುವೃತ್ತಾಂತಮುಚ್ಯತೇ|
01002097c ಸಭಾಕ್ರಿಯಾ ಪಾಂಡವಾನಾಂ ಕಿಂಕರಾಣಾಂ ಚ ದರ್ಶನಂ||
01002098a ಲೋಕಪಾಲಸಭಾಖ್ಯಾನಂ ನಾರದಾದ್ದೇವದರ್ಶನಾತ್|
01002098c ರಾಜಸೂಯಸ್ಯ ಚಾರಂಭೋ ಜರಾಸಂದವಧಸ್ತಥಾ||
01002099a ಗಿರಿವ್ರಜೇ ನಿರುದ್ಧಾನಾಂ ರಾಜ್ಞಾಂ ಕೃಷ್ಣೇನ ಮೋಕ್ಷಣಂ|
01002099c ರಾಜಸೂಯೇಽರ್ಘಸಂವಾದೇ ಶಿಶುಪಾಲವಧಸ್ತಥಾ||
01002100a ಯಜ್ಞೇ ವಿಭೂತಿಂ ತಾಂ ದೃಷ್ಟ್ವಾ ದುಃಖಾಮರ್ಷಾನ್ವಿತಸ್ಯ ಚ|
01002100c ದುರ್ಯೋಧನಸ್ಯಾವಹಾಸೋ ಭೀಮೇನ ಚ ಸಭಾತಲೇ||
01002101a ಯತ್ರಾಸ್ಯ ಮನ್ಯುರುದ್ಭೂತೋ ಯೇನ ದ್ಯೂತಮಕಾರಯತ್|
01002101c ಯತ್ರ ಧರ್ಮಸುತಂ ದ್ಯೂತೇ ಶಕುನಿಃ ಕಿತವೋಽಜಯತ್||
01002102a ಯತ್ರ ದ್ಯೂತಾರ್ಣವೇ ಮಗ್ನಾನ್ ದ್ರೌಪದೀ ನೌರಿವಾರ್ಣವಾತ್|
01002102c ತಾರಯಾಮಾಸ ತಾಂಸ್ತೀರ್ಣಾನ್ ಜ್ಞಾತ್ವಾ ದುರ್ಯೋಧನೋ ನೃಪಃ|
01002102e ಪುನರೇವ ತತೋ ದ್ಯೂತೇ ಸಮಾಹ್ವಯತ ಪಾಂಡವಾನ್||
01002103a ಏತತ್ ಸರ್ವಂ ಸಭಾಪರ್ವ ಸಮಾಖ್ಯಾತಂ ಮಹಾತ್ಮನಾ|
01002103c ಅಧ್ಯಾಯಾಃ ಸಪ್ತತಿರ್ಜ್ಞೇಯಾಸ್ತಥಾ ದ್ವೌ ಚಾತ್ರ ಸಂಖ್ಯಯಾ||
01002104a ಶ್ಲೋಕಾನಾಂ ದ್ವೇ ಸಹಸ್ರೇ ತು ಪಂಚ ಶ್ಲೋಕಶತಾನಿ ಚ|
01002104c ಶ್ಲೋಕಾಶ್ಚೈಕಾದಶ ಜ್ಞೇಯಾಃ ಪರ್ವಣ್ಯಸ್ಮಿನ್ ಪ್ರಕೀರ್ತಿತಾಃ||
ಎರಡನೆಯ ಸಭಾಪರ್ವದಲ್ಲಿ ಬಹಳಷ್ಟು ವೃತ್ತಾಂತಗಳನ್ನು ಹೇಳಲಾಗಿದೆ. ಸಭಾಕ್ರಿಯೆ, ಪಾಂಡವರ ಕಿಂಕರರ ವಿವರಣೆ, ನಾರದ ದೇವದರ್ಶನದ ವೇಳೆಯಲ್ಲಿ ಲೋಕಪಾಲಕರ ಸಭಾಖ್ಯಾನ, ರಾಜಸೂಯದ ತಯಾರಿ ಮತ್ತು ಜರಾಸಂಧನ ವಧೆ, ಗಿರಿವ್ರಜದಲ್ಲಿ ಬಂಧಿಗಳಾಗಿದ್ದ ರಾಜರಿಗೆ ಕೃಷ್ಣನಿಂದ ಬಿಡುಗಡೆ, ರಾಜಸೂಯದಲ್ಲಿ ಅರ್ಘ್ಯದ ಕುರಿತ ವಿವಾದದಲ್ಲಿ ಶಿಶುಪಾಲನ ವಧೆ, ವೈಭವೋಪೇತ ಯಜ್ಞವನ್ನು ನೋಡಿ ದುರ್ಯೋಧನನು ದುಃಖ-ಅಸೂಯೆಗೊಳಗಾಗಿದ್ದುದು, ಸಭಾತಲದಲ್ಲಿ ಅವನು ಭೀಮನಿಂದ ಅಪಹಾಸ್ಯಕ್ಕೊಳಗಾಗಿದ್ದುದು, ಅಸೂಯೆಯಿಂದ ಹುಟ್ಟಿದ ದ್ಯೂತದ ಆಯೋಜನೆ, ಆ ದ್ಯೂತದಲ್ಲಿ ಕಪಟಿ ಶಕುನಿಯಿಂದ ಧರ್ಮಸುತನ ಸೋಲು, ದ್ಯೂತದಿಂದಾದ ಶೋಕಸಾಗರದಲ್ಲಿ ಮುಳುಗಿದ್ದ ದ್ರಾಪದಿಯನ್ನು ಪಾರುಮಾಡಿದ್ದುದು, ಮತ್ತು ಸೋಲಿನ ಪರಿಣಾಮಗಳಿಂದ ಪಾಂಡವರಿಗೆ ಬಿಡುಗಡೆಯಾದುದನ್ನು ತಿಳಿದು ರಾಜ ದುರ್ಯೋಧನನು ಪಾಂಡವರನ್ನು ಪುನಃ ದ್ಯೂತಕ್ಕೆ ಆಹ್ವಾನಿಸಿದುದು, ಇವೆಲ್ಲವನ್ನೂ ಸಭಾಪರ್ವದ ೭೮ ಅಧ್ಯಾಯಗಳಲ್ಲಿ ಮಹಾತ್ಮನು ಹೇಳಿದ್ದಾನೆ. ತಿಳಿದವರು ಈ ಪರ್ವದಲ್ಲಿ ಒಟ್ಟು ೨೫೧೧ ಶ್ಲೋಕಗಳಿವೆ ಎಂದು ಹೇಳುತ್ತಾರೆ.
01002105a ಅತಃ ಪರಂ ತೃತೀಯಂ ತು ಜ್ಞೇಯಮಾರಣ್ಯಕಂ ಮಹತ್|
01002105c ಪೌರಾನುಗಮನಂ ಚೈವ ಧರ್ಮಪುತ್ರಸ್ಯ ಧೀಮತಃ||
01002106a ವೃಷ್ಣೀನಾಮಾಗಮೋ ಯತ್ರ ಪಾಂಚಾಲಾನಾಂ ಚ ಸರ್ವಶಃ|
01002106c ಯತ್ರ ಸೌಭವಧಾಖ್ಯಾನಂ ಕಿರ್ಮೀರವಧ ಏವ ಚ|
01002106e ಅಸ್ತ್ರಹೇತೋರ್ವಿವಾಸಶ್ಚ ಪಾರ್ಥಸ್ಯಾಮಿತತೇಜಸಃ||
01002107a ಮಹಾದೇವೇನ ಯುದ್ಧಂ ಚ ಕಿರಾತವಪುಷಾ ಸಹ|
01002107c ದರ್ಶನಂ ಲೋಕಪಾಲಾನಾಂ ಸ್ವರ್ಗಾರೋಹಣಮೇವ ಚ||
01002108a ದರ್ಶನಂ ಬೃಹದಶ್ವಸ್ಯ ಮಹರ್ಷೇರ್ಭಾವಿತಾತ್ಮನಃ|
01002108c ಯುಧಿಷ್ಠಿರಸ್ಯ ಚಾರ್ತಸ್ಯ ವ್ಯಸನೇ ಪರಿದೇವನಂ||
01002109a ನಲೋಪಾಖ್ಯಾನಮತ್ರೈವ ಧರ್ಮಿಷ್ಟಂ ಕರುಣೋದಯಂ|
01002109c ದಮಯಂತ್ಯಾಃ ಸ್ಥಿತಿರ್ಯತ್ರ ನಲಸ್ಯ ವ್ಯಸನಾಗಮೇ||
01002110a ವನವಾಸಗತಾನಾಂ ಚ ಪಾಂಡವಾನಾಂ ಮಹಾತ್ಮನಾಂ|
01002110c ಸ್ವರ್ಗೇ ಪ್ರವೃತ್ತಿರಾಖ್ಯಾತಾ ಲೋಮಶೇನಾರ್ಜುನಸ್ಯ ವೈ||
01002111a ತೀರ್ಥಯಾತ್ರಾ ತಥೈವಾತ್ರ ಪಾಂಡವಾನಾಂ ಮಹಾತ್ಮನಾಂ|
01002111c ಜಟಾಸುರಸ್ಯ ತತ್ರೈವ ವಧಃ ಸಮುಪವರ್ಣ್ಯತೇ||
01002112a ನಿಯುಕ್ತೋ ಭೀಮಸೇನಶ್ಚ ದ್ರೌಪದ್ಯಾ ಗಂಧಮಾದನೇ|
01002112c ಯತ್ರ ಮಂದಾರಪುಷ್ಪಾರ್ಥಂ ನಲಿನೀಂ ತಾಮಧರ್ಷಯತ್||
01002113a ಯತ್ರಾಸ್ಯ ಸುಮಹದ್ ಯುದ್ಧಮಭವತ್ಸಹ ರಾಕ್ಷಸೈಃ|
01002113c ಯಕ್ಷೈಶ್ಚಾಪಿ ಮಹಾವೀರ್ಯೈರ್ಮಣಿಮತ್ಪ್ರಮುಖೈಸ್ತಥಾ||
01002114a ಆಗಸ್ತ್ಯಮಪಿ ಚಾಖ್ಯಾನಂ ಯತ್ರ ವಾತಾಪಿಭಕ್ಷಣಂ|
01002114c ಲೋಪಾಮುದ್ರಾಭಿಗಮನಮಪತ್ಯಾರ್ಥಂ ಋಷೇರಪಿ||
01002115a ತತಃ ಶ್ಯೇನಕಪೋತೀಯಮುಪಾಖ್ಯಾನಮನಂತರಂ|
01002115c ಇಂದ್ರೋಽಗ್ನಿರ್ಯತ್ರ ಧರ್ಮಶ್ಚ ಅಜಿಜ್ಞಾಸನ್ ಶಿಬಿಂ ನೃಪಂ||
01002116a ಋಶ್ಯಶೃಂಗಸ್ಯ ಚರಿತಂ ಕೌಮಾರಬ್ರಹ್ಮಚಾರಿಣಃ|
01002116c ಜಾಮದಗ್ನ್ಯಸ್ಯ ರಾಮಸ್ಯ ಚರಿತಂ ಭೂರಿತೇಜಸಃ||
01002117a ಕಾರ್ತವೀರ್ಯವಧೋ ಯತ್ರ ಹೈಹಯಾನಾಂ ಚ ವರ್ಣ್ಯತೇ|
01002117c ಸೌಕನ್ಯಮಪಿ ಚಾಖ್ಯಾನಂ ಚ್ಯವನೋ ಯತ್ರ ಭಾರ್ಗವಃ||
01002118a ಶರ್ಯಾತಿಯಜ್ಞೇ ನಾಸತ್ಯೌ ಕೃತವಾನ್ ಸೋಮಪೀಥಿನೌ|
01002118c ತಾಭ್ಯಾಂ ಚ ಯತ್ರ ಸ ಮುನಿರ್ಯೌವನಂ ಪ್ರತಿಪಾದಿತಃ||
01002119a ಜಂತೂಪಾಖ್ಯಾನಮತ್ರೈವ ಯತ್ರ ಪುತ್ರೇಣ ಸೋಮಕಃ|
01002119c ಪುತ್ರಾರ್ಥಮಯಜದ್ರಾಜಾ ಲೇಭೇ ಪುತ್ರಶತಂ ಚ ಸಃ||
01002120a ಅಷ್ಟಾವಕ್ರೀಯಮತ್ರೈವ ವಿವಾದೇ ಯತ್ರ ಬಂದಿನಂ|
01002120c ವಿಜಿತ್ಯ ಸಾಗರಂ ಪ್ರಾಪ್ತಂ ಪಿತರಂ ಲಬ್ಧವಾನೃಷಿಃ||
01002121a ಅವಾಪ್ಯ ದಿವ್ಯಾನ್ಯಸ್ತ್ರಾಣಿ ಗುರ್ವರ್ಥೇ ಸವ್ಯಸಾಚಿನಾ|
01002121c ನಿವಾತಕವಚೈರ್ಯುದ್ಧಂ ಹಿರಣ್ಯಪುರವಾಸಿಭಿಃ||
01002122a ಸಮಾಗಮಶ್ಚ ಪಾರ್ಥಸ್ಯ ಭ್ರಾತೃಭಿರ್ಗಂಧಮಾದನೇ|
01002122c ಘೋಷಯಾತ್ರಾ ಚ ಗಂಧರ್ವೈರ್ಯತ್ರ ಯುದ್ಧಂ ಕಿರೀಟಿನಃ||
01002123a ಪುನರಾಗಮನಂ ಚೈವ ತೇಷಾಂ ದ್ವೈತವನಂ ಸರಃ|
01002123c ಜಯದ್ರಥೇನಾಪಹಾರೋ ದ್ರೌಪದ್ಯಾಶ್ಚಾಶ್ರಮಾಂತರಾತ್||
01002124a ಯತ್ರೈನಮನ್ವಯಾದ್ಭೀಮೋ ವಾಯುವೇಗಸಮೋ ಜವೇ|
01002124c ಮಾರ್ಕಂಡೇಯಸಮಸ್ಯಾಯಾಮುಪಾಖ್ಯಾನಾನಿ ಭಾಗಶಃ||
01002125a ಸಂದರ್ಶನಂ ಚ ಕೃಷ್ಣಸ್ಯ ಸಂವಾದಶ್ಚೈವ ಸತ್ಯಯಾ|
01002125c ವ್ರೀಹಿದ್ರೌಣಿಕಮಾಖ್ಯಾನಂ ಐಂದ್ರದ್ಯುಮ್ನಂ ತಥೈವ ಚ||
01002126a ಸಾವಿತ್ರ್ಯೌದ್ದಾಲಕೀಯಂ ಚ ವೈನ್ಯೋಪಾಖ್ಯಾನಮೇವ ಚ|
01002126c ರಾಮಾಯಣಮುಪಾಖ್ಯಾನಮತ್ರೈವ ಬಹುವಿಸ್ತರಂ||
01002127a ಕರ್ಣಸ್ಯ ಪರಿಮೋಷೋಽತ್ರ ಕುಂಡಲಾಭ್ಯಾಂ ಪುರಂದರಾತ್|
01002127c ಆರಣೇಯಮುಪಾಖ್ಯಾನಂ ಯತ್ರ ಧರ್ಮೋಽನ್ವಶಾತ್ಸುತಂ|
01002127e ಜಗ್ಮುರ್ಲಬ್ಧವರಾ ಯತ್ರ ಪಾಂಡವಾಃ ಪಶ್ಚಿಮಾಂ ದಿಶಂ||
01002128a ಏತದಾರಣ್ಯಕಂ ಪರ್ವ ತೃತೀಯಂ ಪರಿಕೀರ್ತಿತಂ|
01002128c ಅತ್ರಾಧ್ಯಾಯಶತೇ ದ್ವೇ ತು ಸಂಖ್ಯಾತೇ ಪರಮರ್ಷಿಣಾ|
01002128e ಏಕೋನಸಪ್ತತಿಶ್ಚೈವ ತಥಾಧ್ಯಾಯಾಃ ಪ್ರಕೀರ್ತಿತಾಃ||
01002129a ಏಕಾದಶ ಸಹಸ್ರಾಣಿ ಶ್ಲೋಕಾನಾಂ ಷಟ್ ಶತಾನಿ ಚ|
01002129c ಚತುಃಷಷ್ಠಿಸ್ತಥಾ ಶ್ಲೋಕಾಃ ಪರ್ವೈತತ್ ಪರಿಕೀರ್ತಿತಂ||
ನಂತರದ ಮೂರನೆಯ ಪರ್ವ ದೊಡ್ಡದಾದ ಅರಣ್ಯಕ ಪರ್ವವೆಂದು ತಿಳಿಯಿರಿ. ಧೀಮಂತ ಧರ್ಮಪುತ್ರನನನ್ನು ಪೌರಜನರು ಹಿಂಬಾಲಿಸಿದ್ದುದು, ಅಲ್ಲಿಗೆ ವೃಷ್ಣಿ ಮತ್ತು ಪಾಂಚಾಲರೆಲ್ಲರ ಆಗಮನ, ಸೌಭವಧೆ ಮತ್ತು ಕಿರ್ಮೀರ ವಧೆಯ ಅಖ್ಯಾನಗಳು, ಅಸ್ತ್ರಗಳಿಗೋಸ್ಕರ ಅಮಿತ ತೇಜಸ ಪಾರ್ಥನ ನಿರ್ಗಮನ, ಕಿರಾತ ರೂಪದಲ್ಲಿದ್ದ ಮಹಾದೇವನೊಂದಿಗೆ ಯುದ್ಧ, ಲೋಕಪಾಲಕರ ದರ್ಶನ ಮತ್ತು ಸ್ವರ್ಗಾರೋಹಣ, ಭಾವಿತಾತ್ಮ ಮಹರ್ಷಿ ಬೃಹದಶ್ವನನ್ನು ಕಂಡು ಅವನಲ್ಲಿ ಯುಧಿಷ್ಠಿರನ ವ್ಯಸನ ಪರಿವೇದನೆ, ಧರ್ಮಿಷ್ಠ ನಳನನ್ನು ಕಳೆದುಕೊಂಡ ದಮಯಂತಿಯ ಕರುಣೋದಯ ಪರಿಸ್ಥಿತಿಯನ್ನು ಹೇಳುವ ನಲೋಪಾಖ್ಯಾನ, ಲೋಮಶನಿಂದ ವನವಾಸದಲ್ಲಿದ್ದ ಮಹಾತ್ಮ ಪಾಂಡವರಿಗೆ ಸ್ವರ್ಗದಲ್ಲಿ ಅರ್ಜುನನ ಜೀವನದ ವರದಿ, ಮಹಾತ್ಮ ಪಾಂಡವರ ತೀರ್ಥಯಾತ್ರೆ, ಜಟಾಸುರ ವಧೆ, ಮಂದಾರಪುಷ್ಪಾರ್ಥವಾಗಿ ದ್ರೌಪದಿಯಿಂದ ಕಳುಹಿಸಲ್ಪಟ್ಟ ಭೀಮಸೇನನು ಗಂಧಮಾದನ ಪರ್ವತದಲ್ಲಿ ಸರೋವರದಿಂದ ಅದನ್ನು ಕೀಳುವುದು, ಅಲ್ಲಿ ರಾಕ್ಷಸರು ಮತ್ತು ಯಕ್ಷರ ಪ್ರಮುಖ ಮಹಾವೀರ ಮಣಿಮತನೊಂದಿಗೆ ಅವನ ಭೀಕರ ಯುದ್ಧ, ವಾತಾಪಿ ಭಕ್ಷಣ, ಪುತ್ರಾರ್ಥ ಋಷಿ ಮತ್ತು ಲೋಪಾಮುದ್ರೆಯ ಸಮಾಗಮಗಳನ್ನೊಳಗೊಂಡ ಅಗಸ್ತ್ಯನ ಕಥೆ, ಗಿಡುಗ ಮತ್ತು ಪಾರಿವಾಳಗಳ ಕಥೆ, ಇಂದ್ರ, ಅಗ್ನಿ ಮತ್ತು ಧರ್ಮರು ನೃಪ ಶಿಬಿಯನ್ನು ಪರೀಕ್ಷಿಸಿದ್ದುದು, ಕೌಮಾರ ಬ್ರಹ್ಮಚಾರಿ ಋಶ್ಯಶೃಂಗನ ಚರಿತ್ರೆ, ಭೂರಿತೇಜಸ ಜಾಮದಗ್ನಿ ರಾಮನ ಚರಿತ್ರೆ, ಹೈಹಯ ಕಾರ್ತಿವೀರ್ಯನ ವಧೆ, ಭಾರ್ಗವ ಚ್ಯವನನು ಶರ್ಯಾತಿಯ ಯಜ್ಞದಲ್ಲಿ ನಾಸತ್ಯರೀರ್ವರೂ ಸೋಮವನ್ನು ಕುಡಿಯುವ ಹಾಗೆ ಮಾಡಿ ಅವರೀರ್ವರಿಗೂ ಯೌವನವನ್ನು ಪ್ರತಿಪಾದಿಸಿದ್ದುದನ್ನು ಒಳಗೂಡಿದ ಸುಕನ್ಯೋಪಖ್ಯಾನ, ಒಬ್ಬ ಪುತ್ರನನ್ನು ಯಜಿಸಿ ನೂರು ಪುತ್ರರನ್ನು ಪಡೆದ ರಾಜ ಸೋಮಕ ಜಂತುವಿನ ಕಥೆ, ವಿವಾದದಲ್ಲಿ ಬಂದಿಯನ್ನು ಸೋಲಿಸಿ ಸಾಗರದಲ್ಲಿ ಮುಳುಗಿದ್ದ ತಂದೆಯನ್ನು ಪಡೆದ ಋಷಿ ಅಷ್ಠಾವಕ್ರನ ಕಥೆ, ಹಿರಿಯವನಿಗಾಗಿ ದಿವ್ಯಶಸ್ತ್ರಗಳನ್ನು ಪಡೆದ ಸವ್ಯಸಾಚಿಯು ಹಿರಣ್ಯಪುರವಾಸಿ ನಿವಾತಕವಚರೊಂದಿಗೆ ಯುದ್ಧ ಮಾಡಿದ್ದುದು, ಗಂಧಮಾದನದಲ್ಲಿ ಭ್ರಾತೃಗಳೊಂದಿಗೆ ಪಾರ್ಥನ ಸಮಾಗಮ, ಘೋಷಯಾತ್ರೆ ಮತ್ತು ಗಂಧರ್ವರೊಂದಿಗೆ ಕಿರೀಟಿಯ ಯುದ್ಧ, ಅವರು ಪುನಃ ದ್ವೈತವನಕ್ಕೆ ಆಗಮಿಸಿದ್ದುದು, ಅಲ್ಲಿ ಜಯದ್ರಥನಿಂದ ಆಶ್ರಮದಲ್ಲಿದ್ದ ದ್ರೌಪದಿಯ ಅಪಹರಣ ಮತ್ತು ಭೀಮನು ಅವನನ್ನು ವಾಯುವೇಗದಲ್ಲಿ ಬೆನ್ನಟ್ಟಿದ್ದು, ಮಾರ್ಕಂಡೇಯನಿಂದ ವಿವರಿಸಲ್ಪಟ್ಟ ಉಪಾಖ್ಯಾನಗಳು, ಕೃಷ್ಣನ ಸಂದರ್ಶನ ಮತ್ತು ಸತ್ಯಭಾಮೆಯೊಂದಿಗೆ ಸಂವಾದ, ವ್ರೀಹಿದ್ರೌಣಿ ಮತ್ತು ಇಂದ್ರದ್ಯುಮ್ನನ ಕಥೆಗಳು, ಸಾವಿತ್ರಿ, ಉದ್ದಾಲಕ ಮತ್ತು ಇತರ ಉಪಾಖ್ಯಾನಗಳು, ಬಹುವಿಸ್ತಾರ ರಾಮಾಯಣೋಪಖ್ಯಾನ, ಪುರಂದರನು ಕರ್ಣನ ಕುಂಡಲಗಳನ್ನು ದಾನವನ್ನಾಗಿ ಪಡೆಯುವುದು, ಧರ್ಮನು ತನ್ನ ಮಗನಿಗೆ ವರವನ್ನಿತ್ತ ಅರಣ್ಯೋಪಾಖ್ಯಾನ, ಮತ್ತು ಅಲ್ಲಿಂದ ಪಾಂಡವರು ಪಶ್ಚಿಮ ದಿಶೆಯಲ್ಲಿ ಹೊರಟಿದ್ದುದು, ಇವೆಲ್ಲವನ್ನೂ ಮೂರನೆಯ ಆರಣ್ಯಕ ಪರ್ವದಲ್ಲಿ ವಿವರಿಸಲಾಗಿದೆ. ಇದರಲ್ಲಿ ಒಟ್ಟು ೨೬೯ ಅಧ್ಯಾಯಗಳು ಮತ್ತು ೧೧,೬೬೪ ಶ್ಲೋಕಗಳಿವೆಯೆಂದು ತಿಳಿದವರು ಹೇಳುತ್ತಾರೆ.
01002130a ಅತಃ ಪರಂ ನಿಬೋಧೇದಂ ವೈರಾಟಂ ಪರ್ವವಿಸ್ತರಂ|
01002130c ವಿರಾಟನಗರಂ ಗತ್ವಾ ಶ್ಮಶಾನೇ ವಿಪುಲಾಂ ಶಮೀಂ|
01002130e ದೃಷ್ಟ್ವಾ ಸನ್ನಿದಧುಸ್ತತ್ರ ಪಾಂಡವಾ ಆಯುಧಾನ್ಯುತ||
01002131a ಯತ್ರ ಪ್ರವಿಶ್ಯ ನಗರಂ ಚದ್ಮಭಿರ್ನ್ಯವಸಂತ ತೇ|
01002131c ದುರಾತ್ಮನೋ ವಧೋ ಯತ್ರ ಕೀಚಕಸ್ಯ ವೃಕೋದರಾತ್||
01002132a ಗೋಗ್ರಹೇ ಯತ್ರ ಪಾರ್ಥೇನ ನಿರ್ಜಿತಾಃ ಕುರವೋ ಯುಧಿ|
01002132c ಗೋಧನಂ ಚ ವಿರಾಟಸ್ಯ ಮೋಕ್ಷಿತಂ ಯತ್ರ ಪಾಂಡವೈಃ||
01002133a ವಿರಾಟೇನೋತ್ತರಾ ದತ್ತಾ ಸ್ನುಷಾ ಯತ್ರ ಕಿರೀಟಿನಃ|
01002133c ಅಭಿಮನ್ಯುಂ ಸಮುದ್ದಿಶ್ಯ ಸೌಭದ್ರಮರಿಘಾತಿನಂ||
01002134a ಚತುರ್ಥಮೇತದ್ ವಿಪುಲಂ ವೈರಾಟಂ ಪರ್ವ ವರ್ಣಿತಂ|
01002134c ಅತ್ರಾಪಿ ಪರಿಸಂಖ್ಯಾತಮಧ್ಯಾಯಾನಾಂ ಮಹಾತ್ಮನಾ||
01002135a ಸಪ್ತಷಷ್ಠಿರಥೋ ಪೂರ್ಣಾ ಶ್ಲೋಕಾಗ್ರಮಪಿ ಮೇ ಶೃಣು|
01002135c ಶ್ಲೋಕಾನಾಂ ದ್ವೇ ಸಹಸ್ರೇ ತು ಶ್ಲೋಕಾಃ ಪಂಚಾಶದೇವ ತು|
01002135e ಪರ್ವಣ್ಯಸ್ಮಿನ್ ಸಮಾಖ್ಯಾತಾಃ ಸಂಖ್ಯಯಾ ಪರಮರ್ಷಿಣಾ||
ನಂತರದ್ದು ವಿಸ್ತಾರ ವಿರಾಟ ಪರ್ವ. ವಿರಾಟನಗರಕ್ಕೆ ಹೋಗಿ ಶ್ಮಶಾನದಲ್ಲಿ ದಟ್ಟ ಶಮೀ ವೃಕ್ಷವನ್ನು ನೋಡಿ ಅಲ್ಲಿ ಪಾಂಡವರು ಆಯುಧಗಳನ್ನು ಅಡಗಿಸಿಟ್ಟುದುದು, ನಗರವನ್ನು ಪ್ರವೇಶಿಸಿ ಅಲ್ಲಿ ಅಜ್ಞಾತವಾಸ, ವೃಕೋದರನಿಂದ ದುರಾತ್ಮ ಕೀಚಕನ ವಧೆ, ಗೋವುಗಳನ್ನು ಕೊಂಡೊಯ್ಯುತ್ತಿದ್ದ ಕೌರವರನ್ನು ಯುದ್ಧದಲ್ಲಿ ಪಾಂಡವ ಪಾರ್ಥನು ಸೋಲಿಸಿ ವಿರಾಟನ ಗೋಧನವನ್ನು ರಕ್ಷಿಸಿದ್ದುದು, ಮಗಳು ಉತ್ತರೆಯನ್ನು ವಿರಾಟನು ಕಿರೀಟಿಗೆ ಕೊಟ್ಟಿದ್ದುದು ಮತ್ತು ಅವನು ಅರಿಘಾತಿ, ಸೌಭದ್ರಿ ಅಭಿಮನ್ಯುವಿಗೆ ಅವಳನ್ನು ಸ್ವೀಕರಿಸಿದ್ದುದು, ಇವೆಲ್ಲವನ್ನೂ ನಾಲ್ಕನೆಯ ವಿರಾಟ ಪರ್ವದಲ್ಲಿ ಸವಿಸ್ತಾರವಾಗಿ ವರ್ಣಿಸಲಾಗಿದೆ. ಮಹಾತ್ಮನು ಇದರಲ್ಲಿಯ ೨,೦೫೦ ಶ್ಲೋಕಗಳನ್ನು ಸಂಪೂರ್ಣ ೬೭ ಅಧ್ಯಾಯಗಳಲ್ಲಿ ರಚಿಸಿದ್ದಾನೆ.
01002136a ಉದ್ಯೋಗಪರ್ವ ವಿಜ್ಞೇಯಂ ಪಂಚಮಂ ಶೃಣ್ವತಃ ಪರಂ|
01002136c ಉಪಪ್ಲವ್ಯೇ ನಿವಿಷ್ಠೇಷು ಪಾಂಡವೇಷು ಜಿಗೀಷಯಾ|
01002136e ದುರ್ಯೋಧನೋಽರ್ಜುನಶ್ಚೈವ ವಾಸುದೇವಮುಪಸ್ಥಿತೌ||
01002137a ಸಾಹಾಯ್ಯಮಸ್ಮಿನ್ ಸಮರೇ ಭವಾನ್ನೌ ಕರ್ತುಮರ್ಹತಿ|
01002137c ಇತ್ಯುಕ್ತೇ ವಚನೇ ಕೃಷ್ಣೋ ಯತ್ರೋವಾಚ ಮಹಾಮತಿಃ||
01002138a ಅಯುಧ್ಯಮಾನಮಾತ್ಮಾನಂ ಮಂತ್ರಿಣಂ ಪುರುಷರ್ಷಭೌ|
01002138c ಅಕ್ಷೌಹಿಣೀಂ ವಾ ಸೈನ್ಯಸ್ಯ ಕಸ್ಯ ವಾ ಕಿಂ ದದಾಮ್ಯಹಂ||
01002139a ವವ್ರೇ ದುರ್ಯೋಧನಃ ಸೈನ್ಯಂ ಮಂದಾತ್ಮಾ ಯತ್ರ ದುರ್ಮತಿಃ|
01002139c ಅಯುಧ್ಯಮಾನಂ ಸಚಿವಂ ವವ್ರೇ ಕೃಷ್ಣಂ ಧನಂಜಯಃ||
01002140a ಸಂಜಯಂ ಪ್ರೇಷಯಾಮಾಸ ಶಮಾರ್ಥಂ ಪಾಂಡವಾನ್ ಪ್ರತಿ|
01002140c ಯತ್ರ ದೂತಂ ಮಹಾರಾಜೋ ಧೃತರಾಷ್ಟ್ರಃ ಪ್ರತಾಪವಾನ್||
01002141a ಶ್ರುತ್ವಾ ಚ ಪಾಂಡವಾನ್ಯತ್ರ ವಾಸುದೇವಪುರೋಗಮಾನ್|
01002141c ಪ್ರಜಾಗರಃ ಸಂಪ್ರಜಜ್ಞೇ ಧೃತರಾಷ್ಟ್ರಸ್ಯ ಚಿಂತಯಾ||
01002142a ವಿದುರೋ ಯತ್ರ ವಾಕ್ಯಾನಿ ವಿಚಿತ್ರಾಣಿ ಹಿತಾನಿ ಚ|
01002142c ಶ್ರಾವಯಾಮಾಸ ರಾಜಾನಂ ಧೃತರಾಷ್ಟ್ರಂ ಮನೀಷಿಣಂ||
01002143a ತಥಾ ಸನತ್ಸುಜಾತೇನ ಯತ್ರಾಧ್ಯಾತ್ಮಮನುತ್ತಮಂ|
01002143c ಮನಸ್ತಾಪಾನ್ವಿತೋ ರಾಜಾ ಶ್ರಾವಿತಃ ಶೋಕಲಾಲಸಃ||
01002144a ಪ್ರಭಾತೇ ರಾಜಸಮಿತೌ ಸಂಜಯೋ ಯತ್ರ ಚಾಭಿಭೋಃ|
01002144c ಐಕಾತ್ಮ್ಯಂ ವಾಸುದೇವಸ್ಯ ಪ್ರೋಕ್ತವಾನರ್ಜುನಸ್ಯ ಚ||
01002145a ಯತ್ರ ಕೃಷ್ಣೋ ದಯಾಪನ್ನಃ ಸಂದಿಮಿಚ್ಛನ್ಮಹಾಯಶಾಃ|
01002145c ಸ್ವಯಮಾಗಾಚ್ಚಮಂ ಕರ್ತುಂ ನಗರಂ ನಾಗಸಾಹ್ವಯಂ||
01002146a ಪ್ರತ್ಯಾಖ್ಯಾನಂ ಚ ಕೃಷ್ಣಸ್ಯ ರಾಜ್ಞಾ ದುರ್ಯೋಧನೇನ ವೈ|
01002146c ಶಮಾರ್ಥಂ ಯಾಚಮಾನಸ್ಯ ಪಕ್ಷಯೋರುಭಯೋರ್ಹಿತಂ||
01002147a ಕರ್ಣದುರ್ಯೋಧನಾದೀನಾಂ ದುಷ್ಟಂ ವಿಜ್ಞಾಯ ಮಂತ್ರಿತಂ|
01002147c ಯೋಗೇಶ್ವರತ್ವಂ ಕೃಷ್ಣೇನ ಯತ್ರ ರಾಜಸು ದರ್ಶಿತಂ||
01002148a ರಥಮಾರೋಪ್ಯ ಕೃಷ್ಣೇನ ಯತ್ರ ಕರ್ಣೋಽನುಮಂತ್ರಿತಃ|
01002148c ಉಪಾಯಪೂರ್ವಂ ಶೌಂಡೀರ್ಯಾತ್ ಪ್ರತ್ಯಾಖ್ಯಾತಶ್ಚ ತೇನ ಸಃ||
01002149a ತತಶ್ಚಾಪ್ಯಭಿನಿರ್ಯಾತ್ರಾ ರಥಾಶ್ವನರದಂತಿನಾಂ|
01002149c ನಗರಾದ್ಧಾಸ್ತಿನಪುರಾದ್ ಬಲಸಂಖ್ಯಾನಮೇವ ಚ||
01002150a ಯತ್ರ ರಾಜ್ಞಾ ಉಲೂಕಸ್ಯ ಪ್ರೇಷಣಂ ಪಾಂಡವಾನ್ ಪ್ರತಿ|
01002150c ಶ್ವೋಭಾವಿನಿ ಮಹಾಯುದ್ಧೇ ದೂತ್ಯೇನ ಕ್ರೂರವಾದಿನಾ|
01002150e ರಥಾತಿರಥಸಂಖ್ಯಾನಮಂಬೋಪಾಖ್ಯಾನಮೇವ ಚ||
01002151a ಏತತ್ಸುಬಹುವೃತ್ತಾಂತಂ ಪಂಚಮಂ ಪರ್ವ ಭಾರತೇ|
01002151c ಉದ್ಯೋಗಪರ್ವ ನಿರ್ದಿಷ್ಟಂ ಸಂದಿವಿಗ್ರಹಸಂಶ್ರಿತಂ||
01002152a ಅಧ್ಯಾಯಾಃ ಸಂಖ್ಯಯಾ ತ್ವತ್ರ ಷಢಶೀತಿಶತಂ ಸ್ಮೃತಂ|
01002152c ಶ್ಲೋಕಾನಾಂ ಷಟ್ಸಹಸ್ರಾಣಿ ತಾವಂತ್ಯೇವ ಶತಾನಿ ಚ||
01002153a ಶ್ಲೋಕಾಶ್ಚ ನವತಿಃ ಪ್ರೋಕ್ತಾಸ್ತಥೈವಾಷ್ಟೌ ಮಹಾತ್ಮನಾ|
01002153c ವ್ಯಾಸೇನೋದಾರಮತಿನಾ ಪರ್ವಣ್ಯಸ್ಮಿಂಸ್ತಪೋಧನಾಃ||
ಈಗ ಶ್ರೇಷ್ಠವಾದ ಐದನೆಯ ಉದ್ಯೋಗಪರ್ವದ ಕುರಿತು ತಿಳಿಯಿರಿ. ಪಾಂಡವರು ಉಪಪ್ಲವದಲ್ಲಿ ಇರುವಾಗ ದುರ್ಯೋಧನ ಮತ್ತು ಅರ್ಜುನ ಇಬ್ಬರೂ ವಾಸುದೇವನ ಬಳಿಗೆ ಹೋಗಿದ್ದುದು, ಈ ಸಮರದಲ್ಲಿ ನೀನು ನಮಗೆ ಸಹಾಯ ಮಾಡಬೇಕು ಎಂದು ಕೇಳಿಕೊಂಡಾಗ ಮಹಾಮತಿ ಕೃಷ್ಣನು ಪುರುಷರ್ಷಭರೇ! ಯುದ್ಧವನ್ನು ಮಾಡದೇ ಇರುವ ನನ್ನ ಸಲಹೆ ಅಥವಾ ಒಂದು ಅಕ್ಷೌಹಿಣೀ ಸೈನ್ಯ ಇವೆರಡರಲ್ಲಿ ಯಾವುದು ಯಾರಿಗೆ ಬೇಕು? ಎಂದು ಕೇಳಿದಾಗ ಮಂದಾತ್ಮ ದುರ್ಮತಿ ದುರ್ಯೋಧನನು ಸೈನ್ಯವನ್ನು ಮತ್ತು ಧನಂಜಯನು ಯುದ್ಧಮಾಡದೇ ಇರುವ ಸಚಿವನನ್ನಾಗಿ ಕೃಷ್ಣನನ್ನು ಆರಿಸಿಕೊಂಡಿದ್ದುದು, ಪ್ರತಾಪಿ ಮಹಾರಾಜ ಧೃತರಾಷ್ಟ್ರನು ಶಾಂತಿಗೋಸ್ಕರ ಸಂಜಯನನ್ನು ಪಾಂಡವರ ಬಳಿ ದೂತನನ್ನಾಗಿ ಕಳುಹಿಸಿದ್ದುದು, ಪಾಂಡವರು, ವಾಸುದೇವ ಮತ್ತು ಅವರ ಬೆಂಬಲಿಗರ ಕುರಿತು ಕೇಳಿದ ಧೃತರಾಷ್ಟ್ರನು ಚಿಂತೆಯಿಂದ ನಿದ್ರಾಹೀನನಾಗಿದ್ದುದು, ಮನುಷ್ಯರ ರಾಜ ಧೃತರಾಷ್ಟ್ರನಿಗೆ ವಿದುರನು ವಿಚಿತ್ರ ವಾಖ್ಯಗಳಿಂದ ಹಿತವನ್ನು ಹೇಳಿದ್ದುದು, ಶೋಕಲಾಲಸ ಮತ್ತು ಮನಸ್ತಾಪದಿಂದ ಬಳಲಿದ ರಾಜನಿಗೆ ಸನತ್ಸುಜಾತನ ಕಥೆಯ ಮೂಲಕ ಉತ್ತಮ ಆಧ್ಯಾತ್ಮ ವಿಷಯಗಳನ್ನು ತಿಳಿಸಿದ್ದುದು, ಪ್ರಭಾತದಲ್ಲಿ ರಾಜದರ್ಬಾರಿನಲ್ಲಿ ಸಂಜಯನು ವಾಸುದೇವ ಮತ್ತು ಅರ್ಜುನರ ಏಕಾತ್ಮತೆಯನ್ನು ವರ್ಣಿಸಿದ್ದುದು, ಶಾಂತಿಯನ್ನು ತರಲು ಸಂಧಿಯನ್ನಿಚ್ಛಿಸಿ ಮಹಾಯಶ ದಯಾಪನ್ನ ಕೃಷ್ಣನು ನಾಗಸಾಹ್ವಯ ನಗರಕ್ಕೆ ಸ್ವಯಂ ಆಗಮಿಸಿದ್ದುದು, ಕೃಷ್ನನು ಯಾಚಿಸಿದ ಉಭಯ ಪಕ್ಷಗಳ ಹಿತಕಾರಣಿ ಶಾಂತಿಯನ್ನು ರಾಜ ದುರ್ಯೋಧನನು ತಿರಸ್ಕರಿದ್ದುದು, ಕರ್ಣ-ದುರ್ಯೋಧನರ ದುಷ್ಟ ಉಪಾಯವನ್ನು ತಿಳಿದ ಕೃಷ್ಣನು ರಾಜರ ಸಮಕ್ಷಮದಲ್ಲಿ ತನ್ನ ಯೋಗೇಶ್ವರತ್ವವನ್ನು ಪ್ರದರ್ಶಿಸಿದ್ದುದು, ಕರ್ಣನನ್ನು ರಥದಮೇಲೆ ಕೂರಿಸಿಕೊಂಡು ಕೃಷ್ಣನು ಸಲಹೆಗಳನ್ನು ನೀಡಿದ್ದುದು, ಅವುಗಳನ್ನು ಕರ್ಣನು ಅಭಿಮಾನದಿಂದ ತಿರಸ್ಕರಿಸಿದ್ದುದು, ಹಸ್ತಿನಾಪುರ ನಗರದಿಂದ ಬಹುಸಂಖ್ಯೆಯಲ್ಲಿ ರಥ, ಕುದುರೆ, ಕಾದಾಳುಗಳು ಮತ್ತು ಆನೆಗಳು ಹೊರಟಿದ್ದುದು, ಕ್ರೂರವಾದಿ ರಾಜನು ಮಹಾಯುದ್ಧದ ಒಂದು ದಿನದ ಮೊದಲು ಪಾಂಡವರ ಕಡೆ ಉಲೂಕನನ್ನು ದೂತನನ್ನಾಗಿ ಕಳುಹಿಸಿದ್ದುದು, ರಥ ಮತ್ತು ಅತಿರಥರನ್ನು ಎಣಿಸುವುದು ಮತ್ತು ಅಂಬೋಪಾಖ್ಯಾನ, ಈ ಎಲ್ಲ ಮತ್ತು ಇತರ ಬಹಳ ವೃತ್ತಾಂತಗಳನ್ನು ಭಾರತದ ಐದನೆಯ ಪರ್ವ ಉದ್ಯೋಗಪರ್ವದಲ್ಲಿ ವರ್ಣಿಸಲಾಗಿದೆ. ಇದರಲ್ಲಿ ೧೬೮ ಅಧ್ಯಾಯಗಳು ಮತ್ತು ೬೬೯೮ ಶ್ಲೋಕಗಳಿವೆ.
01002154a ಅತ ಊರ್ಧ್ವಂ ವಿಚಿತ್ರಾರ್ಥಂ ಭೀಷ್ಮಪರ್ವ ಪ್ರಚಕ್ಷತೇ|
01002154c ಜಂಬೂಖಂಡವಿನಿರ್ಮಾಣಂ ಯತ್ರೋಕ್ತಂ ಸಂಜಯೇನ ಹ||
01002155a ಯತ್ರ ಯುದ್ಧಮಭೂದ್ಘೋರಂ ದಶಾಹಾನ್ಯತಿದಾರುಣಂ|
01002155c ಯತ್ರ ಯೌಧಿಷ್ಠಿರಂ ಸೈನ್ಯಂ ವಿಷಾದಮಗಮತ್ ಪರಂ||
01002156a ಕಶ್ಮಲಂ ಯತ್ರ ಪಾರ್ಥಸ್ಯ ವಾಸುದೇವೋ ಮಹಾಮತಿಃ|
01002156c ಮೋಹಜಂ ನಾಶಯಾಮಾಸ ಹೇತುಭಿರ್ಮೋಕ್ಷದರ್ಶನೈಃ||
01002157a ಶಿಖಂಡಿನಂ ಪುರಸ್ಕೃತ್ಯ ಯತ್ರ ಪಾರ್ಥೋ ಮಹಾಧನುಃ|
01002157c ವಿನಿಘ್ನನ್ನಿಶಿತೈರ್ಬಾಣೈ ರಥಾದ್ ಭೀಷ್ಮಮಪಾತಯತ್||
01002158a ಷಷ್ಟಮೇತನ್ ಮಹಾಪರ್ವ ಭಾರತೇ ಪರಿಕೀರ್ತಿತಂ|
01002158c ಅಧ್ಯಾಯಾನಾಂ ಶತಂ ಪ್ರೋಕ್ತಂ ಸಪ್ತದಶ ತಥಾಪರೇ||
01002159a ಪಂಚ ಶ್ಲೋಕಸಹಸ್ರಾಣಿ ಸಂಖ್ಯಯಾಷ್ಠೌ ಶತಾನಿ ಚ|
01002159c ಶ್ಲೋಕಾಶ್ಚ ಚತುರಾಶೀತಿಃ ಪರ್ವಣ್ಯಸ್ಮಿನ್ ಪ್ರಕೀರ್ತಿತಾಃ|
01002159e ವ್ಯಾಸೇನ ವೇದವಿದುಷಾ ಸಂಖ್ಯಾತಾ ಭೀಷ್ಮಪರ್ವಣಿ||
ಮುಂದಿನದು ವಿಚಿತ್ರಾರ್ಥಗಳುಳ್ಳ ಭೀಷ್ಮಪರ್ವ. ಸಂಜಯನು ವರ್ಣಿಸಿದ ಜಂಬೂಖಂಡ ನಿರ್ಮಾಣ, ಘೋರ ದಾರುಣ ಯುದ್ಧದ ಹತ್ತು ದಿನಗಳಲ್ಲಿ ಯುಧಿಷ್ಠಿರನ ಸೈನ್ಯವು ಮಹತ್ತರ ವಿಷಾದವನ್ನು ಹೊಂದಿದ್ದುದು, ಮಹಾಮತಿ ವಾಸುದೇವನು ಮೋಹದಿಂದ ಹುಟ್ಟಿದ ಪಾರ್ಥನ ಕಶ್ಮಲವನ್ನು ಮೋಕ್ಷ ದರ್ಶನಗಳಿಂದ ನಾಶಮಾಡಿದ್ದುದು, ಮಹಾಧನು ಪಾರ್ಥನು ಶಿಖಂಡಿಯನ್ನು ಮುಂದೆ ನಿಲ್ಲಿಸಿಕೊಂಡು ತೀಕ್ಷ್ಣ ಬಾಣಗಳಿಂದ ಹೊಡೆದು ಭೀಷ್ಮನನ್ನು ರಥದಿಂದ ಉರುಳಿಸಿದ್ದುದು ಇವೆಲ್ಲವನ್ನೂ ವೇದವಿದುಷ ವ್ಯಾಸ ರಚಿತ ಭಾರತದ ಈ ಆರನೆಯ ಮಹಾಪರ್ವದಲ್ಲಿ ೧೧೭ ಅಧ್ಯಾಯಗಳಲ್ಲಿ ಒಟ್ಟು ೫,೮೮೪ ಶ್ಲೋಕಗಳಲ್ಲಿ ಹೇಳಲಾಗಿವೆ.
01002160a ದ್ರೋಣಪರ್ವ ತತಶ್ಚಿತ್ರಂ ಬಹುವೃತ್ತಾಂತಮುಚ್ಯತೇ|
01002160c ಯತ್ರ ಸಂಶಪ್ತಕಾಃ ಪಾರ್ಥಮಪನಿನ್ಯೂ ರಣಾಜಿರಾತ್||
01002161a ಭಗದತ್ತೋ ಮಹಾರಾಜೋ ಯತ್ರ ಶಕ್ರಸಮೋ ಯುಧಿ|
01002161c ಸುಪ್ರತೀಕೇನ ನಾಗೇನ ಸಹ ಶಸ್ತಃ ಕಿರೀಟಿನಾ||
01002162a ಯತ್ರಾಭಿಮನ್ಯುಂ ಬಹವೋ ಜಘ್ನುರ್ಲೋಕಮಹಾರಥಾಃ|
01002162c ಜಯದ್ರಥಮುಖಾ ಬಾಲಂ ಶೂರಮಪ್ರಾಪ್ತಯೌವನಂ||
01002163a ಹತೇಽಭಿಮನ್ಯೌ ಕ್ರುದ್ಧೇನ ಯತ್ರ ಪಾರ್ಥೇನ ಸಮ್ಯುಗೇ|
01002163c ಅಕ್ಷೌಹಿಣೀಃ ಸಪ್ತ ಹತ್ವಾ ಹತೋ ರಾಜಾ ಜಯದ್ರಥಃ|
01002163e ಸಂಶಪ್ತಕಾವಶೇಷಂ ಚ ಕೃತಂ ನಿಃಶೇಷಮಾಹವೇ||
01002164a ಅಲಂಬುಸಃ ಶ್ರುತಾಯುಶ್ಚ ಜಲಸಂದಶ್ಚ ವೀರ್ಯವಾನ್|
01002164c ಸೌಮದತ್ತಿರ್ವಿರಾಟಶ್ಚ ದ್ರುಪದಶ್ಚ ಮಹಾರಥಃ|
01002164e ಘಟೋತ್ಕಚಾದಯಶ್ಚಾನ್ಯೇ ನಿಹತಾ ದ್ರೋಣಪರ್ವಣಿ||
01002165a ಅಶ್ವತ್ಥಾಮಾಪಿ ಚಾತ್ರೈವ ದ್ರೋಣೇ ಯುಧಿ ನಿಪಾತಿತೇ|
01002165c ಅಸ್ತ್ರಂ ಪ್ರಾದುಶ್ಚಕಾರೋಗ್ರಂ ನಾರಾಯಣಮಮರ್ಷಿತಃ||
01002166a ಸಪ್ತಮಂ ಭಾರತೇ ಪರ್ವ ಮಹದೇತದುದಾಹೃತಂ|
01002166c ಅತ್ರ ತೇ ಪೃಥಿವೀಪಾಲಾಃ ಪ್ರಾಯಶೋ ನಿಧನಂ ಗತಾಃ|
01002166e ದ್ರೋಣಪರ್ವಣಿ ಯೇ ಶೂರಾ ನಿರ್ದಿಷ್ಟಾಃ ಪುರುಷರ್ಷಭಾಃ||
01002167a ಅಧ್ಯಾಯಾನಾಂ ಶತಂ ಪ್ರೋಕ್ತಮಧ್ಯಾಯಾಃ ಸಪ್ತತಿಸ್ತಥಾ|
01002167c ಅಷ್ಟೌ ಶ್ಲೋಕಸಹಸ್ರಾಣಿ ತಥಾ ನವ ಶತಾನಿ ಚ||
01002168a ಶ್ಲೋಕಾ ನವ ತಥೈವಾತ್ರ ಸಂಖ್ಯಾತಾಸ್ತತ್ತ್ವದರ್ಶಿನಾ|
01002168c ಪಾರಾಶರ್ಯೇಣ ಮುನಿನಾ ಸಂಚಿಂತ್ಯ ದ್ರೋಣಪರ್ವಣಿ||
ನಂತರ ವಿಚಿತ್ರ ಬಹು ವೃತ್ತಾಂತಗಳನ್ನು ಹೇಳಿರುವ ದ್ರೋಣಪರ್ವ. ಇದರಲ್ಲಿ ಸಂಶಪ್ತಕರು ಪಾರ್ಥನನ್ನು ರಣಭೂಮಿಯಿಂದ ಕರೆದೊಯ್ಯುವುದು, ಕಿರೀಟಿಯು ಯುದ್ಧದಲ್ಲಿ ಶಕ್ರಸಮ ಮಹಾರಾಜ ಭಗದತ್ತನನ್ನು ಅವನ ಆನೆ ಸುಪ್ರತೀಕನ ಸಹಿತ ಸಂಹರಿಸಿದ್ದುದು, ಇನ್ನೂ ಯೌವನವನ್ನು ಹೊಂದದೇ ಇದ್ದ ಶೂರ ಬಾಲಕ ಅಭಿಮನ್ಯುವನ್ನು ಜಯದ್ರಥನೂ ಸೇರಿ ಹಲವಾರು ಲೋಕಮಹಾರಥಿಗಳು ಸಂಹರಿಸಿದ್ದುದು, ಅಭಿಮನ್ಯುವಿನ ಮೃತ್ಯುವಿನಿಂದ ಕೃದ್ಧನಾದ ಪಾರ್ಥನು ಒಟ್ಟು ಏಳು ಅಕ್ಷೌಹಿಣೀ ಸೇನೆಗಳನ್ನು ಸಂಹರಿಸಿದ್ದುದು, ವೀರ ಅಲಂಬುಸ, ಶೃತಾಯು, ಜಲಸಂಘ, ಸೋಮದತ್ತ, ವಿರಾಟ, ಮಹಾರಥಿ ದೃಪದ, ಘಟೋತ್ಕಚ, ದ್ರೋಣ ಮೊದಲಾದವರ ಮರಣ, ಮತ್ತು ಯುದ್ಧದಲ್ಲಿ ದ್ರೋಣನು ಸಾವನ್ನಪ್ಪಿದ ನಂತರ ಅಶ್ವತ್ಥಾಮನು ಉಗ್ರ ನಾರಾಯಣಾಸ್ತ್ರವನ್ನು ಪ್ರಯೋಗಿಸಿದ್ದುದು ಇವೆಲ್ಲವುಗಳನ್ನೂ ವರ್ಣಿಸಲಾಗಿದೆ. ಭಾರತದ ಸಪ್ತಮ ಪರ್ವ ದ್ರೋಣ ಪರ್ವದಲ್ಲಿ ಶೂರ ಪುರುಷರ್ಷಭ ಮಹಾ ಮಹೀಪಾಲರ ಸಾವನ್ನು ವರ್ಣಿಸಲಾಗಿದೆ. ಮುನಿ ಪಾರಾಶರಿಯಿಂದ ಈ ದ್ರೋಣಪರ್ವವು ಒಟ್ಟು ೮,೯೦೦ ಶ್ಲೋಕಗಳೊನ್ನೊಳಗೊಂಡ ೧೭೦ ಅಧ್ಯಾಯಗಳಲ್ಲಿ ರಚಿತವಾಗಿದೆ.
01002169a ಅತಃ ಪರಂ ಕರ್ಣಪರ್ವ ಪ್ರೋಚ್ಯತೇ ಪರಮಾದ್ಭುತಂ|
01002169c ಸಾರಥ್ಯೇ ವಿನಿಯೋಗಶ್ಚ ಮದ್ರರಾಜಸ್ಯ ಧೀಮತಃ|
01002169e ಆಖ್ಯಾತಂ ಯತ್ರ ಪೌರಾಣಂ ತ್ರಿಪುರಸ್ಯ ನಿಪಾತನಂ||
01002170a ಪ್ರಯಾಣೇ ಪರುಷಶ್ಚಾತ್ರ ಸಂವಾದಃ ಕರ್ಣಶಲ್ಯಯೋಃ|
01002170c ಹಂಸಕಾಕೀಯಮಾಖ್ಯಾನಮತ್ರೈವಾಕ್ಷೇಪಸಂಹಿತಂ||
01002171a ಅನ್ಯೋನ್ಯಂ ಪ್ರತಿ ಚ ಕ್ರೋಧೋ ಯುಧಿಷ್ಠಿರಕಿರೀಟಿನೋಃ|
01002171c ದ್ವೈರಥೇ ಯತ್ರ ಪಾರ್ಥೇನ ಹತಃ ಕರ್ಣೋ ಮಹಾರಥಃ||
01002172a ಅಷ್ಟಮಂ ಪರ್ವ ನಿರ್ದಿಷ್ಟಮೇತದ್ಭಾರತಚಿಂತಕೈಃ|
01002172c ಏಕೋನಸಪ್ತತಿಃ ಪ್ರೋಕ್ತಾ ಅಧ್ಯಾಯಾಃ ಕರ್ಣಪರ್ವಣಿ|
01002172e ಚತ್ವಾರ್ಯೇವ ಸಹಸ್ರಾಣಿ ನವ ಶ್ಲೋಕಶತಾನಿ ಚ||
ಇದರ ನಂತರದ್ದು ಪರಮಾದ್ಭುತ ಕರ್ಣಪರ್ವ. ಇದರಲ್ಲಿ ದೀಮತ ಮದ್ರರಾಜನನ್ನು ಸಾರಥಿಯನ್ನಾಗಿ ನಿಯೋಜಿಸಿದ್ದುದು, ತ್ರಿಪುರವನ್ನು ಕೆಳಗುರುಳಿಸಿದುದರ ಪೌರಾಣಿಕ ಕಥೆ, ದಾರಿಯಲ್ಲಿ ಕ್ಷಾತ್ರಪೌರುಷ ಕರ್ಣ ಮತ್ತು ಶಲ್ಯರ ಸಂವಾದ, ಕರ್ಣನನ್ನು ಅವಮಾನಗೊಳಿಸುವ ಹಂಸ-ಕಾಗೆಗಳ ಕಥೆ, ಯುಧಿಷ್ಠಿರ ಮತ್ತು ಕಿರೀಟಿಗಳ ಪರಸ್ಪರರಲ್ಲಿ ಕ್ರೋಧ ಮತ್ತು ದ್ವಂದ್ವಯುದ್ಧದಲ್ಲಿ ಪಾರ್ಥನಿಂದ ಮಹಾರಥಿ ಕರ್ಣನ ನಿಧನ ಇವೆಲ್ಲವುಗಳ ವರ್ಣನೆಯಿದೆ. ಭಾರತದ ಎಂಟನೆಯ ಪರ್ವ ಕರ್ಣಪರ್ವದಲ್ಲಿ ಒಟ್ಟು ೪,೯೬೪ ಶ್ಲೋಕಗಳು ಮತ್ತು ೬೯ ಅಧ್ಯಾಯಗಳಿವೆ.
01002173a ಅತಃ ಪರಂ ವಿಚಿತ್ರಾರ್ಥಂ ಶಲ್ಯಪರ್ವ ಪ್ರಕೀರ್ತಿತಂ|
01002173c ಹತಪ್ರವೀರೇ ಸೈನ್ಯೇ ತು ನೇತಾ ಮದ್ರೇಶ್ವರೋಽಭವತ್||
01002174a ವೃತ್ತಾನಿ ರಥಯುದ್ಧಾನಿ ಕೀರ್ತ್ಯಂತೇ ಯತ್ರ ಭಾಗಶಃ|
01002174c ವಿನಾಶಃ ಕುರುಮುಖ್ಯಾನಾಂ ಶಲ್ಯಪರ್ವಣಿ ಕೀರ್ತ್ಯತೇ||
01002175a ಶಲ್ಯಸ್ಯ ನಿಧನಂ ಚಾತ್ರ ಧರ್ಮರಾಜಾನ್ ಮಹಾರಥಾತ್|
01002175c ಗದಾಯುದ್ಧಂ ತು ತುಮುಲಮತ್ರೈವ ಪರಿಕೀರ್ತಿತಂ|
01002175e ಸರಸ್ವತ್ಯಾಶ್ಚ ತೀರ್ಥಾನಾಂ ಪುಣ್ಯತಾ ಪರಿಕೀರ್ತಿತಾ||
01002176a ನವಮಂ ಪರ್ವ ನಿರ್ದಿಷ್ಟಮೇತದದ್ಭುತಮರ್ಥವತ್|
01002176c ಏಕೋನಷಷ್ಠಿರಧ್ಯಾಯಾಸ್ತತ್ರ ಸಂಖ್ಯಾವಿಶಾರದೈಃ||
01002177a ಸಂಖ್ಯಾತಾ ಬಹುವೃತ್ತಾಂತಾಃ ಶ್ಲೋಕಾಗ್ರಂ ಚಾತ್ರ ಶಸ್ಯತೇ|
01002177c ತ್ರೀಣಿ ಶ್ಲೋಕಸಹಸ್ರಾಣಿ ದ್ವೇ ಶತೇ ವಿಂಶತಿಸ್ತಥಾ|
01002177e ಮುನಿನಾ ಸಂಪ್ರಣೀತಾನಿ ಕೌರವಾಣಾಂ ಯಶೋಭೃತಾಂ||
ಇದರ ನಂತರದ್ದು ವಿಚಿತ್ರಾರ್ಥಗಳನ್ನುಳ್ಳ ಶಲ್ಯಪರ್ವ. ಇದರಲ್ಲಿ ಹಲವಾರು ಪ್ರವೀಣರು ಸತ್ತನಂತರ ಮದ್ರೇಶ್ವರನು ಸೈನ್ಯದ ನಾಯಕನಾಗಿದ್ದುದು, ರಥಯುದ್ಧಗಳ ವೃತ್ತಾಂತಗಳು, ಕುರುಮುಖ್ಯರ ವಿನಾಶ, ಮಹಾರಥಿ ಧರ್ಮರಾಜನಿಂದ ಶಲ್ಯನ ವಧೆ, ಗದಾಯುದ್ಧದ ತುಮುಲ, ಮತ್ತು ಸರಸ್ವತೀ ತೀರ್ಥದ ಪುಣ್ಯತೆಯನ್ನು ವರ್ಣಿಸಲಾಗಿದೆ. ಕೌರವರ ಯಶಸ್ಸನ್ನು ಪ್ರಸರಿಸಿದ ಮುನಿಯು ೩,೨೨೦ ಶ್ಲೋಕಗಳನ್ನು ೫೯ ಅಧ್ಯಾಯಗಳಲ್ಲಿ ಈ ಒಂಭತ್ತನೆಯ ಪರ್ವವನ್ನು ರಚಿಸಿದನು.
01002178a ಅತಃ ಪರಂ ಪ್ರವಕ್ಷ್ಯಾಮಿ ಸೌಪ್ತಿಕಂ ಪರ್ವ ದಾರುಣಂ|
01002178c ಭಗ್ನೋರುಂ ಯತ್ರ ರಾಜಾನಂ ದುರ್ಯೋಧನಮಮರ್ಷಣಂ||
01002179a ವ್ಯಪಯಾತೇಷು ಪಾರ್ಥೇಷು ತ್ರಯಸ್ತೇಽಭ್ಯಾಯಯೂ ರಥಾಃ|
01002179c ಕೃತವರ್ಮಾ ಕೃಪೋ ದ್ರೌಣಿಃ ಸಾಯಾಹ್ನೇ ರುಧಿರೋಕ್ಷಿತಾಃ||
01002180a ಪ್ರತಿಜಜ್ಞೇ ದೃಧಕ್ರೋಧೋ ದ್ರೌಣಿರ್ಯತ್ರ ಮಹಾರಥಃ|
01002180c ಅಹತ್ವಾ ಸರ್ವಪಾಂಚಾಲಾನ್ ಧೃಷ್ಟದ್ಯುಮ್ನಪುರೋಗಮಾನ್|
01002180e ಪಾಂಡವಾಂಶ್ಚ ಸಹಾಮಾತ್ಯಾನ್ನ ವಿಮೋಕ್ಷ್ಯಾಮಿ ದಂಶನಂ||
01002181a ಪ್ರಸುಪ್ತಾನ್ನಿಶಿ ವಿಶ್ವಸ್ತಾನ್ ಯತ್ರ ತೇ ಪುರುಷರ್ಷಭಾಃ|
01002181c ಪಾಂಚಾಲಾನ್ ಸಪರೀವಾರಾನ್ ಜಘ್ನುರ್ದ್ರೌಣಿಪುರೋಗಮಾಃ||
01002182a ಯತ್ರಾಮುಚ್ಯಂತ ಪಾರ್ಥಾಸ್ತೇ ಪಂಚ ಕೃಷ್ಣಬಲಾಶ್ರಯಾತ್|
01002182c ಸಾತ್ಯಕಿಶ್ಚ ಮಹೇಷ್ವಾಸಃ ಶೇಷಾಶ್ಚ ನಿಧನಂ ಗತಾಃ||
01002183a ದ್ರೌಪದೀ ಪುತ್ರಶೋಕಾರ್ತಾ ಪಿತೃಭ್ರಾತೃವಧಾರ್ದಿತಾ|
01002183c ಕೃತಾನಶನಸಂಕಲ್ಪಾ ಯತ್ರ ಭರ್ತೄನುಪಾವಿಶತ್||
01002184a ದ್ರೌಪದೀವಚನಾದ್ಯತ್ರ ಭೀಮೋ ಭೀಮಪರಾಕ್ರಮಃ|
01002184c ಅನ್ವಧಾವತ ಸಂಕ್ರುದ್ಧೋ ಭಾರದ್ವಾಜಂ ಗುರೋಃ ಸುತಂ||
01002185a ಭೀಮಸೇನಭಯಾದ್ ಯತ್ರ ದೈವೇನಾಭಿಪ್ರಚೋದಿತಃ|
01002185c ಅಪಾಂಡವಾಯೇತಿ ರುಷಾ ದ್ರೌಣಿರಸ್ತ್ರಮವಾಸೃಜತ್||
01002186a ಮೈವಮಿತ್ಯಬ್ರವೀತ್ ಕೃಷ್ಣಃ ಶಮಯಂಸ್ತಸ್ಯ ತದ್ವಚಃ|
01002186c ಯತ್ರಾಸ್ತ್ರಮಸ್ತ್ರೇಣ ಚ ತಚ್ಚಮಯಾಮಾಸ ಫಾಲ್ಗುನಃ||
01002187a ದ್ರೌಣಿದ್ವೈಪಾಯನಾದೀನಾಂ ಶಾಪಾಶ್ಚಾನ್ಯೋನ್ಯಕಾರಿತಾಃ|
01002187c ತೋಯಕರ್ಮಣಿ ಸರ್ವೇಷಾಂ ರಾಜ್ಞಾಮುದಕದಾನಿಕೇ||
01002188a ಗೂಢೋತ್ಪನ್ನಸ್ಯ ಚಾಖ್ಯಾನಂ ಕರ್ಣಸ್ಯ ಪೃಥಯಾತ್ಮನಃ|
01002188c ಸುತಸ್ಯೈತದಿಹ ಪ್ರೋಕ್ತಂ ದಶಮಂ ಪರ್ವ ಸೌಪ್ತಿಕಂ||
01002189a ಅಷ್ಟಾದಶಾಸ್ಮಿನ್ನಧ್ಯಾಯಾಃ ಪರ್ವಣ್ಯುಕ್ತಾ ಮಹಾತ್ಮನಾ|
01002189c ಶ್ಲೋಕಾಗ್ರಮತ್ರ ಕಥಿತಂ ಶತಾನ್ಯಷ್ಟೌ ತಥೈವ ಚ||
01002190a ಶ್ಲೋಕಾಶ್ಚ ಸಪ್ತತಿಃ ಪ್ರೋಕ್ತಾ ಯಥಾವದಭಿಸಂಖ್ಯಯಾ|
01002190c ಸೌಪ್ತಿಕೈಷೀಕಸಂಬಂಧೇ ಪರ್ವಣ್ಯಮಿತಬುದ್ಧಿನಾ||
ನಂತರ ದಾರುಣ ಸೌಪ್ತಿಕ ಪರ್ವದ ಕುರಿತು ಹೇಳುತ್ತೇನೆ. ಪಾರ್ಥರು ತೆರಳಿದನಂತರ ಸಾಯಂಕಾಲ ರಥವೇರಿ ಬರುತ್ತಿದ್ದ ಕೃತವರ್ಮ, ಕೃಪ ಮತ್ತು ದ್ರೌಣಿ ಈ ಮೂವರೂ ತೊಡೆಮುರಿದು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಜ ದುರ್ಯೋಧನನನ್ನು ಕಂಡಿದ್ದುದು, ಮಹಾರಥಿ ದ್ರೌಣಿಯು ಕ್ರೋಧದಿಂದ ಧೃಷ್ಠದ್ಯುಮ್ನನನ್ನೊಡಗೂಡಿ ಸರ್ವ ಪಾಂಚಾಲರನ್ನೂ ಮತ್ತು ಅಮಾತ್ಯರ ಸಹಿತ ಪಾಂಡವರನ್ನೂ ಕೊಲ್ಲದೇ ಈ ಕವಚವನ್ನು ಬಿಚ್ಚುವುದಿಲ್ಲ! ಎನ್ನುವ ದೃಢ ಪ್ರತಿಜ್ಞೆಯನ್ನು ಮಾಡಿದ್ದುದು, ರಾತ್ರಿಯಲ್ಲಿ ಸಪರಿವಾರರಾಗಿ ಮಲಗಿದ್ದ ಎಲ್ಲ ಪಾಂಚಾಲರನ್ನು ದ್ರೌಣಿಯು ಕೊಲೆಗೈದಿದ್ದುದು, ಮಹೇಷ್ವಾಸ ಕೃಷ್ಣನ ಆಶ್ರಯಬಲದಿಂದ ಉಳಿದುಕೊಂಡ ಪಂಚ ಪಾರ್ಥರು ಮತ್ತು ಸಾತ್ಯಕಿಯನ್ನು ಬಿಟ್ಟು ಎಲ್ಲರೂ ಸಾವನ್ನಪ್ಪಿದ್ದುದು, ಪಿತೃ-ಭ್ರಾತೃಗಳ ವಧೆಯಿಂದ ಆರ್ತ ಪುತ್ರಶೋಕಾರ್ತಳಾದ ದ್ರೌಪದಿಯು ತನ್ನ ಗಂಡಂದಿರ ಎದುರು ಅಶನಸಂಕಲ್ಪ ಮಾಡಿ ಕುಳಿತುಕೊಂಡಿದ್ದುದು, ದ್ರೌಪದಿಯ ವಚನದಂತೆ ಸಂಕೃದ್ಧ ಭೀಮಪರಾಕ್ರಮಿ ಭೀಮನು ಗುರುಸುತ ಭಾರದ್ವಾಜನನ್ನು ಬೆನ್ನಟ್ಟಿ ಹೋಗಿದ್ದುದು, ಭೀಮಸೇನನ ಭಯದಿಂದ ದೇವತೆಗಳನ್ನು ಅಭಿಪ್ರಚೋದಿಸಿ ಅಪಾಂಡವ! ಎಂದು ರೋಷದಿಂದ ದ್ರೌಣಿಯು ಅಸ್ತ್ರವನ್ನು ಬಿಟ್ಟಿದ್ದುದು, “ಇದು ಸುಳ್ಳಾಗಲಿ!” ಎಂದು ಕೃಷ್ಣನು ಹೇಳಿದ ನಂತರ ಫಾಲ್ಗುಣನು ತನ್ನದೇ ಆದ ಇನ್ನೊಂದು ಅಸ್ತ್ರದಿಂದ ಅದನ್ನು ಶಾಂತಗೊಳಿಸಿದ್ದುದು, ದ್ರೌಣಿ ಮತ್ತು ದ್ವೈಪಾಯನರು ಅನ್ಯೋನ್ಯರನ್ನು ಶಪಿಸಿದ್ದುದು, ಸರ್ವ ರಾಜರುಗಳಿಗೆ ನೀರಿನಲ್ಲಿ ತರ್ಪಣವನ್ನಿತ್ತಿದ್ದುದು, ಪೃಥೆಯು ತನ್ನಿಂದ ಕರ್ಣನ ಜನನ ಮತ್ತು ಅವನೂ ತನ್ನ ಮಗನೇ ಎನ್ನುವ ಗೂಢ ವೃತಾಂತವನ್ನು ಹೇಳಿದ್ದುದು, ಇವೆಲ್ಲವನ್ನೂ ಈ ಹತ್ತನೆಯ ಸೌಪ್ತಿಕ ಪರ್ವದಲ್ಲಿ ಹೇಳಲಾಗಿದೆ. ಇದರಲ್ಲಿ ಹದಿನೆಂಟು ಅಧ್ಯಾಯಗಳಿವೆ ಮತ್ತು ೮೭೦ ಶ್ಲೋಕಗಳಿವೆ.
01002191a ಅತ ಊರ್ಧ್ವಮಿದಂ ಪ್ರಾಹುಃ ಸ್ತ್ರೀಪರ್ವ ಕರುಣೋದಯಂ|
01002191c ವಿಲಾಪೋ ವೀರಪತ್ನೀನಾಂ ಯತ್ರಾತಿಕರುಣಃ ಸ್ಮೃತಃ|
01002191e ಕ್ರೋಧಾವೇಶಃ ಪ್ರಸಾದಶ್ಚ ಗಾಂಧಾರೀಧೃತರಾಷ್ಟ್ರಯೋಃ||
01002192a ಯತ್ರ ತಾನ್ ಕ್ಷತ್ರಿಯಾನ್ ಶೂರಾನ್ ದಿಷ್ಟಾಂತಾನನಿವರ್ತಿನಃ|
01002192c ಪುತ್ರಾನ್ ಭ್ರಾತೄನ್ ಪಿತೄಂಶ್ಚೈವ ದದೃಶುರ್ನಿಹತಾನ್ರಣೇ||
01002193a ಯತ್ರ ರಾಜಾ ಮಹಾಪ್ರಾಜ್ಞಃ ಸರ್ವಧರ್ಮಭೃತಾಂ ವರಃ|
01002193c ರಾಜ್ಞಾಂ ತಾನಿ ಶರೀರಾಣಿ ದಾಹಯಾಮಾಸ ಶಾಸ್ತ್ರತಃ||
01002194a ಏತದೇಕಾದಶಂ ಪ್ರೋಕ್ತಂ ಪರ್ವಾತಿಕರುಣಂ ಮಹತ್|
01002194c ಸಪ್ತವಿಂಶತಿರಧ್ಯಾಯಾಃ ಪರ್ವಣ್ಯಸ್ಮಿನ್ನುದಾಹೃತಾಃ||
01002195a ಶ್ಲೋಕಾಃ ಸಪ್ತಶತಂ ಚಾತ್ರ ಪಂಚಸಪ್ತತಿರುಚ್ಯತೇ|
01002195c ಸಂಖ್ಯಯಾ ಭಾರತಾಖ್ಯಾನಂ ಕರ್ತ್ರಾ ಹ್ಯತ್ರ ಮಹಾತ್ಮನಾ|
01002195e ಪ್ರಣೀತಂ ಸಜ್ಞನಮನೋವೈಕ್ಲವ್ಯಾಶ್ರುಪ್ರವರ್ತಕಂ||
ಮುಂದಿನದು ಕರುಣೋದಯ ಸ್ತ್ರೀಪರ್ವ. ಇದರಲ್ಲಿ ವೀರಪತ್ನಿಯರ ಅತಿಕರುಣ ವಿಲಾಪ, ಗಾಂಧಾರಿ-ಧೃತರಾಷ್ಟ್ರರ ಕ್ರೋಧಾವೇಶ, ಅವರೆಲ್ಲರೂ ರಣದಲ್ಲಿ ಹತರಾಗಿ ಬಿದ್ದಿದ್ದ ಶೂರ ಕ್ಷತ್ರಿಯ ಪುತ್ರ, ಭ್ರಾತೃ ಪಿತೃಗಳನ್ನು ಕಂಡಿದ್ದುದು, ಸರ್ವ ಧರ್ಮಭೃತರಲ್ಲಿ ಶ್ರೇಷ್ಠ ಮಹಾಪ್ರಜ್ಞ ರಾಜನಿಂದ ಶಾಸ್ತ್ರೋಕ್ತವಾಗಿ ರಾಜರುಗಳ ಶರೀರ ದಹನ ಇವೆಲ್ಲವುಗಳ ವರ್ಣನೆಯಿದೆ. ಹನ್ನೊಂದನೆಯ ಈ ಪರ್ವವು ಅತ್ಯಂತ ಕರುಣಾಜನಕವೆಂದು ಪರಿಗಣಿಸಲ್ಪಟ್ಟಿದೆ. ಒಟ್ಟು ೭೭೫ ಶ್ಲೋಕಗಳನ್ನುಳ್ಳ ೧೭ ಅಧ್ಯಾಯಗಳು ಇದರಲ್ಲಿವೆ ಎಂದು ಹೇಳುತ್ತಾರೆ.
01002196a ಅತಃ ಪರಂ ಶಾಂತಿಪರ್ವ ದ್ವಾದಶಂ ಬುದ್ಧಿವರ್ಧನಂ|
01002196c ಯತ್ರ ನಿರ್ವೇದಮಾಪನ್ನೋ ಧರ್ಮರಾಜೋ ಯುಧಿಷ್ಠಿರಃ|
01002196e ಘಾತಯಿತ್ವಾ ಪಿತೄನ್ ಭ್ರಾತೄನ್ ಪುತ್ರಾನ್ ಸಂಬಂಧಿಬಾಂಧವಾನ್||
01002197a ಶಾಂತಿಪರ್ವಣಿ ಧರ್ಮಾಶ್ಚ ವ್ಯಾಖ್ಯಾತಾಃ ಶರತಲ್ಪಿಕಾಃ|
01002197c ರಾಜಭಿರ್ವೇದಿತವ್ಯಾ ಯೇ ಸಮ್ಯಙ್ನಯಬುಭುತ್ಸುಭಿಃ||
01002198a ಆಪದ್ಧರ್ಮಾಶ್ಚ ತತ್ರೈವ ಕಾಲಹೇತುಪ್ರದರ್ಶಕಾಃ|
01002198c ಯಾನ್ಬುದ್ಧ್ವಾ ಪುರುಷಃ ಸಮ್ಯಕ್ಸರ್ವಜ್ಞತ್ವಮವಾಪ್ನುಯಾತ್|
01002198e ಮೋಕ್ಷಧರ್ಮಾಶ್ಚ ಕಥಿತಾ ವಿಚಿತ್ರಾ ಬಹುವಿಸ್ತರಾಃ||
01002199a ದ್ವಾದಶಂ ಪರ್ವ ನಿರ್ದಿಷ್ಟಮೇತತ್ ಪ್ರಾಜ್ಞಜನಪ್ರಿಯಂ|
01002199c ಪರ್ವಣ್ಯತ್ರ ಪರಿಜ್ಞೇಯಮಧ್ಯಾಯಾನಾಂ ಶತತ್ರಯಂ|
01002199e ತ್ರಿಂಶಚ್ಚೈವ ತಥಾಧ್ಯಾಯಾ ನವ ಚೈವ ತಪೋಧನಾಃ||
01002200a ಶ್ಲೋಕಾನಾಂ ತು ಸಹಸ್ರಾಣಿ ಕೀರ್ತಿತಾನಿ ಚತುರ್ದಶ|
01002200c ಪಂಚ ಚೈವ ಶತಾನ್ಯಾಹುಃ ಪಂಚವಿಂಶತಿಸಂಖ್ಯಯಾ||
ನಂತರ ಬುದ್ಧಿವರ್ಧಕ ಶ್ರೇಷ್ಠ ಹನ್ನೆರಡನೆಯ ಶಾಂತಿಪರ್ವ. ಇದರಲ್ಲಿ ಪಿತೃ, ಭ್ರಾತೃ, ಪುತ್ರ ಮತ್ತು ಸಂಬಂಧಿ ಬಾಂಧವರನ್ನು ಕೊಂದ ಧರ್ಮರಾಜ ಯುಧಿಷ್ಠಿರನು ಪಶ್ಚಾತ್ತಾಪ ಪಟ್ಟಿದ್ದುದರ ವೃತ್ತಾಂತವಿದೆ. ಶರತಲ್ಪದಮೇಲೆ ಮಲಗಿದ್ದ ಭೀಷ್ಮನು ಹೇಳಿದ, ರಾಜರು ಕೇಳಿ ತಿಳಿದುಕೊಳ್ಳಬೇಕಾದಂಥಹ, ಧಾರ್ಮಿಕ ವಿಷಯಗಳನ್ನು ಒಳಗೊಂಡಿದೆ. ಕಾಲಪ್ರದೇಶಕ್ಕನುಗುಣವಾದ ನಡತೆಗಳನ್ನೊಳಗೊಂಡ ಆಪದ್ಧರ್ಮ ಮತ್ತು ಸರ್ವಜ್ಞಾನವನ್ನು ನೀಡುವ ಮೋಕ್ಷಧರ್ಮಗಳನ್ನು ವಿಚಿತ್ರ ಕಥೆಗಳ ಮೂಲಕ ಬಹಳ ವಿಸ್ತಾರವಾಗಿ ಹೇಳಲಾಗಿದೆ. ಪ್ರಾಜ್ಞಜನರಿಗೆ ಪ್ರಿಯವಾದ ಈ ಹನ್ನೆರಡನೆಯ ಪರ್ವದಲ್ಲಿ ೧೪,೭೩೨ ಶ್ಲೋಕಗಳು ಮತ್ತು ೩೩೯ ಅಧ್ಯಾಯಗಳಿವೆ.
01002201a ಅತ ಊರ್ಧ್ವಂ ತು ವಿಜ್ಞೇಯಮಾನುಶಾಸನಮುತ್ತಮಂ|
01002201c ಯತ್ರ ಪ್ರಕೃತಿಮಾಪನ್ನಃ ಶ್ರುತ್ವಾ ಧರ್ಮವಿನಿಶ್ಚಯಂ|
01002201e ಭೀಷ್ಮಾದ್ಭಾಗೀರಥೀಪುತ್ರಾತ್ಕುರುರಾಜೋ ಯುಧಿಷ್ಠಿರಃ||
01002202a ವ್ಯವಹಾರೋಽತ್ರ ಕಾರ್ತ್ಸ್ನ್ಯೆನ ಧರ್ಮಾರ್ಥೀಯೋ ನಿದರ್ಶಿತಃ|
01002202c ವಿವಿಧಾನಾಂ ಚ ದಾನಾನಾಂ ಫಲಯೋಗಾಃ ಪೃಥಗ್ವಿಧಾಃ||
01002203a ತಥಾ ಪಾತ್ರವಿಶೇಷಾಶ್ಚ ದಾನಾನಾಂ ಚ ಪರೋ ವಿಧಿಃ|
01002203c ಆಚಾರವಿಧಿಯೋಗಶ್ಚ ಸತ್ಯಸ್ಯ ಚ ಪರಾ ಗತಿಃ||
01002204a ಏತತ್ ಸುಬಹುವೃತ್ತಾಂತಮುತ್ತಮಂ ಚಾನುಶಾಸನಂ|
01002204c ಭೀಷ್ಮಸ್ಯಾತ್ರೈವ ಸಂಪ್ರಾಪ್ತಿಃ ಸ್ವರ್ಗಸ್ಯ ಪರಿಕೀರ್ತಿತಾ||
01002205a ಏತತ್ತ್ರಯೋದಶಂ ಪರ್ವ ಧರ್ಮನಿಶ್ಚಯಕಾರಕಂ|
01002205c ಅಧ್ಯಾಯಾನಾಂ ಶತಂ ಚಾತ್ರ ಷಟ್ಚತ್ವಾರಿಂಶದೇವ ಚ|
01002205e ಶ್ಲೋಕಾನಾಂ ತು ಸಹಸ್ರಾಣಿ ಷಟ್ಸಪ್ತೈವ ಶತಾನಿ ಚ||
ನಂತರದ್ದು ಉತ್ತಮ ಅನುಶಾಸನ ಪರ್ವ. ಇದರಲ್ಲಿ ಭಾಗಿರಥೀಪುತ್ರ ಭೀಷ್ಮನು ಕುರುರಾಜ ಯುಧಿಷ್ಠಿರನಿಗೆ ಧರ್ಮವಿನಿಶ್ಚಯವನ್ನು ಹೇಳಿ ಸಾಂತ್ವನಗೊಳಿಸಿದ್ದುದು, ಧರ್ಮಾರ್ಥಗಳನ್ನು ನೀಡುವ ವ್ಯವಹಾರ ಮತ್ತು ನಡವಳಿಕೆಗಳ ನಿದರ್ಶನ, ಮತ್ತು ವಿವಿಧ ದಾನ ಫಲ-ಯೋಗಗಳನ್ನು ವರ್ಣಿಸಲಾಗಿದೆ. ದಾನಗಳ ಪಾತ್ರವಿಶೇಷ, ಆಚಾರವಿಧಿಗಳ ಪ್ರಾಮುಖ್ಯತೆ ಮತ್ತು ಸತ್ಯದ ಪರಾಕಾಷ್ಠತೆ ಈ ಎಲ್ಲ ವೃತ್ತಾಂತಗಳನ್ನು ಮತ್ತು ಭೀಷ್ಮನು ಸ್ವರ್ಗವನ್ನು ಸೇರಿದ್ದುದನ್ನು ಈ ಉತ್ತಮ ಅನುಶಾಸನದಲ್ಲಿ ವರ್ಣಿಸಲಾಗಿದೆ. ಈ ಹದಿಮೂರನೆಯ ಪರ್ವವು ಧರ್ಮನಿಶ್ಚಯ-ಕಾರಕವಾಗಿದ್ದು ೮೦೦೦ ಶ್ಲೋಕಗಳನ್ನೂ ೧೪೬ ಅಧ್ಯಾಯಗಳನ್ನೂ ಹೊಂದಿದೆ.
01002206a ತತೋಽಶ್ವಮೇಧಿಕಂ ನಾಮ ಪರ್ವ ಪ್ರೋಕ್ತಂ ಚತುರ್ದಶಂ|
01002206c ತತ್ಸಂವರ್ತಮರುತ್ತೀಯಂ ಯತ್ರಾಖ್ಯಾನಮನುತ್ತಮಂ||
01002207a ಸುವರ್ಣಕೋಶಸಂಪ್ರಾಪ್ತಿರ್ಜನ್ಮ ಚೋಕ್ತಂ ಪರಿಕ್ಷಿತಃ|
01002207c ದಗ್ಧಸ್ಯಾಸ್ತ್ರಾಗ್ನಿನಾ ಪೂರ್ವಂ ಕೃಷ್ಣಾತ್ ಸಂಜೀವನಂ ಪುನಃ||
01002208a ಚರ್ಯಾಯಾಂ ಹಯಮುತ್ಸೃಷ್ಟಂ ಪಾಂಡವಸ್ಯಾನುಗಚ್ಛತಃ|
01002208c ತತ್ರ ತತ್ರ ಚ ಯುದ್ಧಾನಿ ರಾಜಪುತ್ರೈರಮರ್ಷಣೈಃ||
01002209a ಚಿತ್ರಾಂಗದಾಯಾಃ ಪುತ್ರೇಣ ಪುತ್ರಿಕಾಯಾ ಧನಂಜಯಃ|
01002209c ಸಂಗ್ರಾಮೇ ಬಭ್ರುವಾಹೇನ ಸಂಶಯಂ ಚಾತ್ರ ದರ್ಶಿತಃ|
01002209e ಅಶ್ವಮೇಧೇ ಮಹಾಯಜ್ಞೇ ನಕುಲಾಖ್ಯಾನಮೇವ ಚ||
01002210a ಇತ್ಯಾಶ್ವಮೇಧಿಕಂ ಪರ್ವ ಪ್ರೋಕ್ತಮೇತನ್ ಮಹಾದ್ಭುತಂ|
01002210c ಅತ್ರಾಧ್ಯಾಯಶತಂ ತ್ರಿಂಶತ್ತ್ರಯೋಽಧ್ಯಾಯಾಶ್ಚ ಶಬ್ದಿತಾಃ||
01002211a ತ್ರೀಣಿ ಶ್ಲೋಕಸಹಸ್ರಾಣಿ ತಾವಂತ್ಯೇವ ಶತಾನಿ ಚ|
01002211c ವಿಂಶತಿಶ್ಚ ತಥಾ ಶ್ಲೋಕಾಃ ಸಂಖ್ಯಾತಾಸ್ತತ್ತ್ವದರ್ಶಿನಾ||
ಹದಿನಾಲ್ಕನೆಯ ಪರ್ವವನ್ನು ಅಶ್ವಮೇಧಿಕ ಪರ್ವವೆಂದು ಕರೆಯುತ್ತಾರೆ. ಇದರಲ್ಲಿ ಸರಿಸಾಟಿಯಿಲ್ಲದ ಸಂವರ್ತ-ಮರುತ್ತರ ಕಥೆಯನ್ನು ಹೇಳಲಾಗಿದೆ. ಸುವರ್ಣಕೋಶ ಸಂಪ್ರಾಪ್ತಿ, ಪೂರ್ವದಲ್ಲಿ ಅಸ್ತ್ರಾಗ್ನಿಯಿಂದ ಸುಟ್ಟುಹೋಗಿ ಕೃಷ್ಣನಿಂದ ಪುನಃ ಸಂಜೀವನಗೊಂಡ ಪರೀಕ್ಷಿತನ ಜನನ, ಹೊರಬಿಟ್ಟ ಹಯವನ್ನು ಅನುಸರಿಸಿ ಪಾಂಡವನು ಹೋಗಿದ್ದುದು ಮತ್ತು ಅಲ್ಲಲ್ಲಿ ಕುಪಿತ ರಾಜಪುತ್ರರೊಂದಿಗೆ ಯುದ್ಧ, ಚಿತ್ರಾಂಗದೆಯ ಪುತ್ರ ಬಭ್ರುವಾಹನನೊಂದಿಗೆ ಸಂಗ್ರಾಮದಲ್ಲಿ ಧನಂಜಯನು ಸಂಶಯವಾಗಿ ತೋರಿದ್ದುದು, ಅಶ್ವಮೇಧ ಮಹಾಯಜ್ಞದಲ್ಲಿ ನಕುಲಾಖ್ಯಾನ, ಈ ಎಲ್ಲಾ ಮಹಾದ್ಭುತಗಳನ್ನೂ ಈ ಅಶ್ವಮೇಧಿಕ ಪರ್ವದಲ್ಲಿ ಹೇಳಲಾಗಿದೆ. ಇದರಲ್ಲಿ ೧೦೩ ಅಧ್ಯಾಯಗಳೂ ೩೩೨೦ ಶ್ಲೋಕಗಳೂ ಇವೆ.
01002212a ತತ ಆಶ್ರಮವಾಸಾಕ್ಯಂ ಪರ್ವ ಪಂಚದಶಂ ಸ್ಮೃತಂ|
01002212c ಯತ್ರ ರಾಜ್ಯಂ ಪರಿತ್ಯಜ್ಯ ಗಾಂಧಾರೀಸಹಿತೋ ನೃಪಃ|
01002212e ಧೃತರಾಷ್ಟ್ರಾಶ್ರಮಪದಂ ವಿದುರಶ್ಚ ಜಗಾಮ ಹ||
01002213a ಯಂ ದೃಷ್ಟ್ವಾ ಪ್ರಸ್ಥಿತಂ ಸಾಧ್ವೀ ಪೃಥಾಪ್ಯನುಯಯೌ ತದಾ|
01002213c ಪುತ್ರರಾಜ್ಯಂ ಪರಿತ್ಯಜ್ಯ ಗುರುಶುಶ್ರೂಷಣೇ ರತಾ||
01002214a ಯತ್ರ ರಾಜಾ ಹತಾನ್ ಪುತ್ರಾನ್ ಪೌತ್ರಾನನ್ಯಾಂಶ್ಚ ಪಾರ್ಥಿವಾನ್|
01002214c ಲೋಕಾಂತರಗತಾನ್ ವೀರಾನಪಶ್ಯತ್ ಪುನರಾಗತಾನ್||
01002215a ಋಷೇಃ ಪ್ರಸಾದಾತ್ ಕೃಷ್ಣಸ್ಯ ದೃಷ್ಟ್ವಾಶ್ಚರ್ಯಮನುತ್ತಮಂ|
01002215c ತ್ಯಕ್ತ್ವಾ ಶೋಕಂ ಸದಾರಶ್ಚ ಸಿದ್ಧಿಂ ಪರಮಿಕಾಂ ಗತಃ||
01002216a ಯತ್ರ ಧರ್ಮಂ ಸಮಾಶ್ರಿತ್ಯ ವಿದುರಃ ಸುಗತಿಂ ಗತಃ|
01002216c ಸಂಜಯಶ್ಚ ಮಹಾಮಾತ್ರೋ ವಿದ್ವಾನ್ ಗಾವಲ್ಗಣಿರ್ವಶೀ||
01002217a ದದರ್ಶ ನಾರದಂ ಯತ್ರ ಧರ್ಮರಾಜೋ ಯುಧಿಷ್ಠಿರಃ|
01002217c ನಾರದಾಚ್ಚೈವ ಶುಶ್ರಾವ ವೃಷ್ಣೀನಾಂ ಕದನಂ ಮಹತ್||
01002218a ಏತದಾಶ್ರಮವಾಸಾಖ್ಯಂ ಪೂರ್ವೋಕ್ತಂ ಸುಮಹಾದ್ಭುತಂ|
01002218c ದ್ವಿಚತ್ವಾರಿಂಶದಧ್ಯಾಯಾಃ ಪರ್ವೈತದಭಿಸಂಖ್ಯಯಾ||
01002219a ಸಹಸ್ರಮೇಕಂ ಶ್ಲೋಕಾನಾಂ ಪಂಚ ಶ್ಲೋಕಶತಾನಿ ಚ|
01002219c ಷಢೇವ ಚ ತಥಾ ಶ್ಲೋಕಾಃ ಸಂಖ್ಯಾತಾಸ್ತತ್ತ್ವದರ್ಶಿನಾ||
ಹದಿನೈದನೆಯ ಪರ್ವ ಆಶ್ರಮವಾಸಿಕ ಪರ್ವ. ಇದರಲ್ಲಿ ನೃಪ ಧೃತರಾಷ್ಟ್ರನು ರಾಜ್ಯವನ್ನು ಪರಿತ್ಯಜಿಸಿ ಗಾಂಧಾರಿ ಮತ್ತು ವಿದುರರೊಡಗೂಡಿ ಆಶ್ರಮದೆಡೆಗೆ ತೆರಳಿದ್ದುದು, ಅದನ್ನು ನೋಡಿ ಗುರುಶುಶ್ರೂಷಣನಿರತೆ ಸಾಧ್ವಿ ಪೃಥಳೂ ಪುತ್ರರಾಜ್ಯವನ್ನು ಪರಿತ್ಯಜಿಸಿ ಅವರನ್ನು ಹಿಂಬಾಲಿಸಿದ್ದುದು, ಹತರಾಗಿ ಲೋಕಾಂತರಕ್ಕೆ ತೆರಳಿದ್ದ ವೀರ ಪುತ್ರ-ಪೌತ್ರರು ಮತ್ತು ಇತರ ಪಾರ್ಥಿವರು ತೆರಳಿ ಬಂದಿರುವ ಆಶ್ಚರ್ಯಕರ ಅನುತ್ತಮ ದೃಶ್ಯವನ್ನು ಋಷಿ ಕೃಷ್ಣನ ಪ್ರಸಾದದಿಂದ ನೋಡಿದ ರಾಜನು ಶೋಕವನ್ನು ತ್ಯಜಿಸಿ ಶ್ರೇಷ್ಠ ಸಿದ್ಧಿಯನ್ನು ಹೊಂದಿದ್ದುದು, ಧರ್ಮಸಮಾಶ್ರಿತ ವಿದುರ ಮತ್ತು ಮಹಾಮಾತ್ರ ವಿದ್ವಾನ್ ಗಾವಲ್ಗಣಿ ಸಂಜಯರು ಸುಗತಿಯನ್ನು ಹೊಂದಿದ್ದುದು, ನಾರದನನ್ನು ಧರ್ಮರಾಜ ಯುಧಿಷ್ಠಿರನು ಕಂಡಿದ್ದುದು ಮತ್ತು ನಾರದನು ವೃಷ್ಣಿಯರ ಮಹತ್ತರ ಕದನದ ಕುರಿತು ಹೇಳಿದ್ದುದು, ಇವೆಲ್ಲವನ್ನೂ ಸುಮಹಾದ್ಭುತ ಆಶ್ರಮವಾಸಾಖ್ಯದಲ್ಲಿ ಹೇಳಲಾಗಿದೆ. ಇದರಲ್ಲಿ ೧,೫೦೬ ಶ್ಲೋಕಗಳನ್ನು ೪೨ ಅಧ್ಯಾಯಗಳಲ್ಲಿ ರಚಿಸಲಾಗಿದೆ.
01002220a ಅತಃ ಪರಂ ನಿಬೋಧೇದಂ ಮೌಸಲಂ ಪರ್ವ ದಾರುಣಂ|
01002220c ಯತ್ರ ತೇ ಪುರುಷವ್ಯಾಘ್ರಾಃ ಶಸ್ತ್ರಸ್ಪರ್ಶಸಹಾ ಯುಧಿ|
01002220e ಬ್ರಹ್ಮದಂಡವಿನಿಷ್ಪಿಷ್ಟಾಃ ಸಮೀಪೇ ಲವಣಾಂಭಸಃ||
01002221a ಆಪಾನೇ ಪಾನಗಲಿತಾ ದೈವೇನಾಭಿಪ್ರಚೋದಿತಾಃ|
01002221c ಏರಕಾರೂಪಿಭಿರ್ವಜ್ರೈರ್ನಿಜಘ್ನುರಿತರೇತರಂ||
01002222a ಯತ್ರ ಸರ್ವಕ್ಷಯಂ ಕೃತ್ವಾ ತಾವುಭೌ ರಾಮಕೇಶವೌ|
01002222c ನಾತಿಚಕ್ರಮತುಃ ಕಾಲಂ ಪ್ರಾಪ್ತಂ ಸರ್ವಹರಂ ಸಮಂ||
01002223a ಯತ್ರಾರ್ಜುನೋ ದ್ವಾರವತೀಮೇತ್ಯ ವೃಷ್ಣಿವಿನಾಕೃತಾಂ|
01002223c ದೃಷ್ಟ್ವಾ ವಿಷಾದಮಗಮತ್ ಪರಾಂ ಚಾರ್ತಿಂ ನರರ್ಷಭಃ||
01002224a ಸ ಸತ್ಕೃತ್ಯ ಯದುಶ್ರೇಷ್ಠಂ ಮಾತುಲಂ ಶೌರಿಮಾತ್ಮನಃ|
01002224c ದದರ್ಶ ಯದುವೀರಾಣಾಮಾಪಾನೇ ವೈಶಸಂ ಮಹತ್||
01002225a ಶರೀರಂ ವಾಸುದೇವಸ್ಯ ರಾಮಸ್ಯ ಚ ಮಹಾತ್ಮನಃ|
01002225c ಸಂಸ್ಕಾರಂ ಲಂಭಯಾಮಾಸ ವೃಷ್ಣೀನಾಂ ಚ ಪ್ರಧಾನತಃ||
01002226a ಸ ವೃದ್ಧಬಾಲಮಾದಾಯ ದ್ವಾರವತ್ಯಾಸ್ತತೋ ಜನಂ|
01002226c ದದರ್ಶಾಪದಿ ಕಷ್ಟಾಯಾಂ ಗಾಂಡೀವಸ್ಯ ಪರಾಭವಂ||
01002227a ಸರ್ವೇಷಾಂ ಚೈವ ದಿವ್ಯಾನಾಮಸ್ತ್ರಾಣಾಮಪ್ರಸನ್ನತಾಂ|
01002227c ನಾಶಂ ವೃಷ್ಣಿಕಲತ್ರಾಣಾಂ ಪ್ರಭಾವಾನಾಮನಿತ್ಯತಾಂ||
01002228a ದೃಷ್ಟ್ವಾ ನಿರ್ವೇದಮಾಪನ್ನೋ ವ್ಯಾಸವಾಕ್ಯಪ್ರಚೋದಿತಃ|
01002228c ಧರ್ಮರಾಜಂ ಸಮಾಸಾದ್ಯ ಸನ್ಯಾಸಂ ಸಮರೋಚಯೇತ್||
01002229a ಇತ್ಯೇತನ್ ಮೌಸಲಂ ಪರ್ವ ಷೋಢಶಂ ಪರಿಕೀರ್ತಿತಂ|
01002229c ಅಧ್ಯಾಯಾಷ್ಟೌ ಸಮಾಖ್ಯಾತಾಃ ಶ್ಲೋಕಾನಾಂ ಚ ಶತತ್ರಯಂ||
ಮುಂದಿನದು ದಾರುಣ ಮೌಸಲ ಪರ್ವ. ಇದರಲ್ಲಿ ದೇವಪ್ರಚೋದಿತ ಬ್ರಾಹ್ಮಣರ ಶಿಕ್ಷೆಗೊಳಗಾದ ಪುರುಷವ್ಯಾಘ್ರರು ಸಮುದ್ರತೀರದಲ್ಲಿ ಕುಡಿದು ಮದೋನ್ಮತ್ತರಾಗಿ ವಜ್ರರೂಪವನ್ನು ತಾಳಿದ ಎರಕದ ಹುಲ್ಲಿನಿಂದ ಪರಸ್ಪರರನ್ನು ಹೊಡೆದು ಕೊಂದಿದ್ದುದು, ಎಲ್ಲವೂ ನಶಿಸಿದರೂ ರಾಮ ಕೇಶವರು ಏನನ್ನೂ ಪ್ರತಿಭಟಿಸದೇ ಇರುವುದು, ಅದೇ ಸಮಯದಲ್ಲಿ ಸರ್ವಹರ ಕಾಲನು ಬಂದಿದ್ದುದು, ದ್ವಾರವತಿಗೆ ಬಂದು ವೃಷ್ಣಿಯರ ವಿನಾಶವನ್ನು ನೋಡಿದ ನರರ್ಷಭ ಅರ್ಜುನನು ಅತೀವ ವಿಷಾದವನ್ನು ಹೊಂದಿದ್ದುದು, ಅವನು ತನ್ನ ಸೋದರಮಾವ ಯದುಶ್ರೇಷ್ಠ ಶೌರಿಯನ್ನು ಸತ್ಕರಿಸಿ, ಯದುವೀರರು ಸತ್ತು ಬಿದ್ದುದನ್ನು ನೋಡಿ, ಮಹಾತ್ಮರಾದ ವಾಸುದೇವ ಮತ್ತು ರಾಮರ ಶರೀರವನ್ನು ನೋಡಿ, ಆ ಎಲ್ಲ ವೃಷ್ಣಿ ಪ್ರಧಾನರ ಶರೀರ ಸಂಸ್ಕಾರವನ್ನು ಮಾಡಿದ್ದುದು, ಹೆಂಗಸರು ವೃದ್ಧರು ಮತ್ತು ಬಾಲಕರನ್ನು ದ್ವಾರವತಿಯಿಂದ ಕರೆದುಕೊಂಡು ಹೋಗುತ್ತಿದ್ದಾಗ ಗಾಂಡೀವದ ಪರಾಭವ, ಸರ್ವ ದಿವ್ಯಾಸ್ತ್ರಗಳ ಅಪ್ರಸನ್ನತೆ, ವೃಷ್ಣಿಸ್ತ್ರೀಯರ ಶೀಲವನ್ನು ಕಾಪಾಡುವುದರಲ್ಲಿ ಅಸಮರ್ಥತೆ ಮುಂತಾದ ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದುದು, ಇವೆಲ್ಲವನ್ನೂ ನೋಡಿ ವ್ಯಾಸನ ಮಾತಿನಂತೆ ಧರ್ಮರಾಜನ ಬಳಿ ಹೋಗಿ ಸನ್ಯಾಸವನ್ನು ಸ್ವೀಕರಿಸಿದ್ದುದು ಇವೆಲ್ಲವನ್ನೂ ಹದಿನಾರನೆಯ ಈ ಮೌಸಲ ಪರ್ವದಲ್ಲಿ ವರ್ಣಿಸಲಾಗಿದೆ. ಇದರಲ್ಲಿ ೮ ಅಧ್ಯಾಯಗಳು ಮತ್ತು ೩೨೦ ಶ್ಲೋಕಗಳು ಇವೆ.
01002230a ಮಹಾಪ್ರಸ್ಥಾನಿಕಂ ತಸ್ಮಾದೂರ್ಧ್ವಂ ಸಪ್ತದಶಂ ಸ್ಮೃತಂ|
01002230c ಯತ್ರ ರಾಜ್ಯಂ ಪರಿತ್ಯಜ್ಯ ಪಾಂಡವಾಃ ಪುರುಷರ್ಷಭಾಃ|
01002230e ದ್ರೌಪದ್ಯಾ ಸಹಿತಾ ದೇವ್ಯಾ ಸಿದ್ಧಿಂ ಪರಮಿಕಾಂ ಗತಾಃ||
01002231a ಅತ್ರಾಧ್ಯಾಯಾಸ್ತ್ರಯಃ ಪ್ರೋಕ್ತಾಃ ಶ್ಲೋಕಾನಾಂ ಚ ಶತಂ ತಥಾ|
01002231c ವಿಂಶತಿಶ್ಚ ತಥಾ ಶ್ಲೋಕಾಃ ಸಂಖ್ಯಾತಾಸ್ತತ್ತ್ವದರ್ಶಿನಾ||
ಹದಿನೇಳನೆಯ ಪರ್ವವು ಮಹಾಪ್ರಸ್ತಾನಿಕ ಪರ್ವವೆಂದು ಕರೆಯಲ್ಪಟ್ಟಿದೆ. ಇದರಲ್ಲಿ ರಾಜ್ಯವನ್ನು ಪರಿತ್ಯಜಿಸಿ ಪುರುಷರ್ಷಭ ಪಾಂಡವರು ದೇವಿ ದ್ರೌಪದಿಯ ಸಹಿತ ಉನ್ನತ ಸಿದ್ಧಿಯನ್ನು ಪಡೆಯಲು ಹೋಗಿದ್ದುದನ್ನು ವರ್ಣಿಸಲಾಗಿದೆ. ತತ್ವದರ್ಶಿಗಳ ಪ್ರಕಾರ ಇದರಲ್ಲಿ ಮೂರು ಅಧ್ಯಾಯಗಳು ಮತ್ತು ೩೨೦ ಶ್ಲೋಕಗಳಿವೆ
01002232a ಸ್ವರ್ಗಪರ್ವ ತತೋ ಜ್ಞೇಯಂ ದಿವ್ಯಂ ಯತ್ತದಮಾನುಷಂ|
01002232c ಅಧ್ಯಾಯಾಃ ಪಂಚ ಸಂಖ್ಯಾತಾಃ ಪರ್ವೈತದಭಿಸಂಖ್ಯಯಾ|
01002232e ಶ್ಲೋಕಾನಾಂ ದ್ವೇ ಶತೇ ಚೈವ ಪ್ರಸಂಖ್ಯಾತೇ ತಪೋಧನಾಃ||
ನಂತರ ದಿವ್ಯ ಅಮಾನುಷ ಸ್ವರ್ಗಪರ್ವ; ೨೦೯ ಶ್ಲೋಕಗಳನ್ನು ಐದು ಅಧ್ಯಾಯಗಳಲ್ಲಿ ರಚಿಸಲಾಗಿದೆ[10].
01002233a ಅಷ್ಟಾದಶೈವಮೇತಾನಿ ಪರ್ವಾಣ್ಯುಕ್ತಾನ್ಯಶೇಷತಃ|
01002233c ಖಿಲೇಷು ಹರಿವಂಶಶ್ಚ ಭವಿಷ್ಯಚ್ಚ ಪ್ರಕೀರ್ತಿತಂ||
[11]01002234a ಏತದಖಿಲಮಾಖ್ಯಾತಂ ಭಾರತಂ ಪರ್ವಸಂಗ್ರಹಾತ್|
ಇವು ಸಂಪೂರ್ಣ ಹದಿನೆಂಟು ಪರ್ವಗಳು. ಹರಿವಂಶ ಮತ್ತು ಭವಿಷ್ಯಗಳು ಇವುಗಳ ಅನುಬಂಧಗಳೆಂದು ಪರಿಗಣಿಸಲ್ಪಟ್ಟಿವೆ. ಭಾರತದ ಪರ್ವಸಂಗ್ರಹದಲ್ಲಿ ಇವೆಲ್ಲವನ್ನೂ ಹೇಳಲಾಗಿದೆ.
01002234c ಅಷ್ಟಾದಶ ಸಮಾಜಗ್ಮುರಕ್ಷೌಹಿಣ್ಯೋ ಯುಯುತ್ಸಯಾ|
01002234e ತನ್ಮಹದ್ದಾರುಣಂ ಯುದ್ಧಮಹಾನ್ಯಷ್ಟಾದಶಾಭವತ್||
ಈ ರೀತಿಯಲ್ಲಿ ಹದಿನೆಂಟು ದಿನಗಳು ನಡೆದ ದಾರುಣ ಯುದ್ಧದಲ್ಲಿ ಹದಿನೆಂಟು ಅಕ್ಷೌಹಿಣೀ ಸೇನೆಗಳು ಪಾಲ್ಗೊಂಡವು.
***
[1] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ಸಮಾಸೋ ಭಾರತಸ್ಯಾಯಮತ್ರೋಕ್ತಃ ಪರ್ವಸಂಗ್ರಹಃ| ಪೌಷ್ಯಂ ಪೌಲೋಮಮಾಸ್ತೀಕಮಾದಿರಂಶಾವತಾರಣಂ|| ಸಂಭವೋ ಚತುವೇಶ್ಮಾಖ್ಯಂ ಹಿಡಿಂಬಬಕಯೋರ್ವಧಃ| ತಥಾ ಚೈತ್ರರಥಂ ದೇವ್ಯಾಃ ಪಾಂಚಾಲ್ಯಾಶ್ಚ ಸ್ವಯವರಂ|| ಕ್ಷಾತ್ರಧರ್ಮೇಣ ನಿರ್ಜಿತ್ಯ ತತೋ ವೈವಾಹಿಕಂ ಸ್ಮೃತಂ| ವಿದುರಾಗಮನಂ ಚೈವ ರಾಜ್ಯಲಂಭಸ್ತಥೈವ ಚ|| ವನವಾಸೋಽರ್ಜುನಸ್ಯಾಪಿ ಸುಭದ್ರಾಹರಣಂ ತತಃ| ಹರಣಾಹರಣಂ ಚೈವ ದಹನಂ ಖಾಂಡವಸ್ಯ ಚ| ಮಯಸ್ಯ ದರ್ಶನಂ ಚೈವ ಆದಿಪರ್ವಣಿ ಕಥ್ಯತೇ|| ಅರ್ಥಾತ್: ಪೌಷ್ಯ, ಪೌಲೋಮ, ಆಸ್ತಿಕ, ಆದಿವಂಶಾವತರಣ, ಸಂಭವ, ಲಾಕ್ಷಾಗೃಹ, ಹಿಡಿಂಬವಧ, ಬಕವಧ, ಚೈತ್ರರಥ, ದೌಪದೀ ಸ್ವಯಂವರ, ಕ್ಷಾತ್ರಧರ್ಮಾನುಸಾರವಾಗಿ ಕ್ಷತ್ರಿಯರೆಲ್ಲರನ್ನೂ ಜಯಿಸಿ ಪಾಂಡವರು ದ್ರೌಪದಿಯನ್ನು ವಿವಾಹಮಾಡಿಕೊಂಡಿದುದು, ವಿದುರಾಗಮನ, ರಾಜ್ಯಲಂಭ, ಅರ್ಜುನನ ವನವಾಸ, ಸುಭದ್ರಾಹರಣ, ಹರಣಾಹರಣ, ಖಾಂಡವದಾಹ, ಮಯದರ್ಶನ – ಇವುಗಳು ಆದಿಪರ್ವದಲ್ಲಿ ಉಕ್ತವಾಗಿರುವ ಕಥಾಪ್ರಸಂಗಗಳು.
[2] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ಮಹರ್ಷೇರಾಶ್ರಮಪದಂ ಕಣ್ವಸ್ಯ ಚ ತಪಸ್ವಿನಃ| ಶಕುಂತಲಾಯಾಂ ದುಷ್ಯಂತಾದ್ ಭರತಶ್ಚಾಪಿ ಜಜ್ಞಿವಾನ್| ಯಸ್ಯ ಲೋಕೇಷು ನಾಮ್ನೇದಂ ಪ್ರಥಿತಂ ಭಾರತಂ ಕುಲಂ|| ಅರ್ಥಾತ್: ಕಣ್ವರ ಆಶ್ರಮದಲ್ಲಿ ಶಕುಂತಲೆಯು ಬೆಳೆದುದು, ಶಕುಂತಲಾ-ದುಷ್ಯಂತರ ಸಮಾಗಮ, ಭರತನ ಜನ್ಮ – ಇವುಗಳನ್ನೂ ಸಂಭವಪರ್ವದಲ್ಲಿ ಹೇಳಲಾಗಿದೆ.
[3] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ಕೂಟಸ್ಯ ಧಾರ್ತರಾಷ್ಟ್ರೇಣ ಪ್ರೇಷಣಂ ಪಾಂಡವಾನ್ ಪ್ರತಿ| ಹಿತೋಪದೇಶಶ್ಚ ಪಥಿ ಧರ್ಮರಾಜಸ್ಯ ಧೀಮತಃ| ವಿದುರೇಣ ಕೃತೋ ಯತ್ರ ಹಿತಾರ್ಥಂ ಮ್ಲೇಚ್ಛಭಾಷಯಾ|| ಅರ್ಥಾತ್: ಪಾಂಡವರ ವಾರಣಾವತ ಯಾತ್ರಾ ವಿಷಯದಲ್ಲಿ ದುರ್ಯೋಧನನು ಧೃತರಾಷ್ಟ್ರನೊಡನೆ ಮಾಡಿದ ಕುಟಿಲೋಪಾಯ, ದಾರಿಯಲ್ಲಿ ವಿದುರನು ಧರ್ಮರಾಜನ ಹಿತಾರ್ಥಕ್ಕಾಗಿ ಮ್ಲೇಚ್ಛಭಾಷೆಯಲ್ಲಿ ನೀಡಿದ ಹಿತೋಪದೇಶ...
[4] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ನಿಷಾಧ್ಯಾಃ ಪಂಚಪುತ್ರಾಯಾಃ ಸುಪ್ತಾಯಾ ಜತುವೇಶ್ಮನಿ| ಪುರೋಚನಸ್ಯ ಚಾತ್ರೈವ ದಹನಂ ಸಂಪ್ರಕೀರ್ತಿತಂ|| ಅರ್ಥಾತ್: ಜತುಗೃಹದಲ್ಲಿ ಮಲಗಿದ್ದ ನಿಷಾದಿ, ಅವಳ ಐವರು ಪುತ್ರರು ಮತ್ತು ಅಲ್ಲಿಯೇ ಪುರೋಚನನ ದಹನ ಇವುಗಳನ್ನು ವರ್ಣಿಸಲಾಗಿದೆ.
[5] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಾರ್ಧವಿದೆ: ತತ್ರೈವ ಚ ಹಿಡಿಂಬಶ್ಚ ವಧೋ ಭೀಮಾನ್ಮಹಾಬಲಾತ್| ಅರ್ಥಾತ್: ಅಲ್ಲಿಯೇ ಮಹಾಬಲಿ ಭೀಮನಿಂದ ಹಿಡಿಂಬನ ವಧೆ...
[6] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಾರ್ಧವಿದೆ: ಮಹರ್ಷೇರ್ದರ್ಶನಂ ಚೈವ ವ್ಯಾಸಸ್ಯಾಮಿತತೇಜಸಃ| ಅರ್ಥಾತ್: ಅಮಿತ ತೇಜಸ ಮಹರ್ಷಿ ವ್ಯಾಸನ ದರ್ಶನ...
[7] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ಸಂಭವಶ್ಚೈವ ಕೃಷ್ಣಾಯಾಂ ಧೃಷ್ಟದ್ಯುಮ್ನಸ್ಯ ಚೈವ ಹ| ಬ್ರಾಹ್ಮಣಾತ್ ಸಮುಪಶೃತ್ಯ ವ್ಯಾಸವಾಕ್ಯಪ್ರಚೋದಿತಾಃ|| ದೌಪದೀಂ ಪ್ರಾರ್ಯಯಂತಸ್ತೇ ಸ್ವಯಂವರದಿಧೃಕ್ಷಯಾ| ಪಾಂಚಾನಾನಭಿತೋ ಜಗ್ಮುರ್ಯತ್ರ ಕೌತೂಹಲಾನ್ವಿತಾಃ|| ಅರ್ಥಾತ್: ಬ್ರಾಹ್ಮಣನೋರ್ವನಿಂದ ಕೃಷ್ಣೆ ಮತ್ತು ಧೃಷ್ಟದ್ಯುಮ್ನರ ಜನ್ಮವೃತ್ತಾಂತ, ವ್ಯಾಸನ ಮಾತಿನಿಂದ ಪ್ರಚೋದಿತರಾಗಿ ಕುತೂಹಲದಿಂದ ಪಾಂಡವರು ದ್ರೌಪದೀ ಸ್ವಯಂವಕ್ಕೆ ಹೊರಟಿದುದು...
[8] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಾರ್ಧವಿದೆ: ಸಂಖ್ಯಂ ಕೃತ್ವಾ ತತಸ್ತೇನ ತಸ್ಮಾದೇವ ಚ ಶುಶೃವೇ| ಅರ್ಥಾತ್: ಅಂಗಾರಪರ್ಣನೊಂದಿಗೆ ಸಖ್ಯಮಾಡಿಕೊಂಡಿದುದು...
[9] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ಪಾಂಚಾಲನಗರೇ ಚಾಪಿ ಲಕ್ಷ್ಯಂ ಭಿತ್ವಾ ಧನಂಜಯಃ| ದ್ರೌಪದೀಂ ಲಬ್ಧವಾನತ್ರ ಮಧ್ಯೇ ಸರ್ವಮಹೀಕ್ಷಿತಾಂ|| ಭೀಮಸೇನಾರ್ಜುನೌ ಯತ್ರ ಸಂರಬ್ಧಾನ್ ಪೃಥಿವೀಪತೀನ್| ಶಲ್ಯಕರ್ಣೌ ಚ ತರಸಾ ಜಿತವಂತೌ ಮಹಾಮೃಧೇ|| ಧೃಷ್ಟ್ವಾ ತಯೋಶ್ಚ ತದ್ವೀರ್ಯಮಪ್ರಮೇಯಮಮಾನುಷಮ್| ಶಂಕಮಾನೌ ಪಾಂಡವಾಂಸ್ತಾನ್ ರಾಮಕೃಷ್ಣೌ ಮಹಾಮತೀ|| ಜಗ್ಮತುಸ್ತೈಃ ಸಮಾಗಂತುಂ ಶಾಲಾಂ ಭಾರ್ಗವವೇಶ್ಮನಿ| ಅರ್ಥಾತ್: ಪಾಂಚಾಲನಗರದಲ್ಲಿ ಅರ್ಜುನನು ಸರ್ವಮಹೀಕ್ಷಿತರ ಮಧ್ಯದಲ್ಲಿ ಲಕ್ಷ್ಯವನ್ನು ಭೇದಿಸಿ ದ್ರೌಪದಿಯನ್ನು ಪಡೆದುದು, ಭೀಮಾರ್ಜುನರು ಶಲ್ಯ-ಕರ್ಣರನ್ನೂ ಇತರ ರಾಜರನ್ನೂ ಯುದ್ಧದಲ್ಲಿ ಪರಾಜಯಗೊಳಿಸಿದುದು, ಅವರಿಬ್ಬರ ಅಪ್ರಮೇಯ ಅಮಾನುಷ ವೀರ್ಯವನ್ನು ಕಂಡು ಮಹಾಮತಿ ರಾಮ-ಕೃಷ್ಣರು ಅವರು ಪಾಂಡವರಿರಬಹುದೆಂದು ಸಂಕಿಸಿ ಕುಂಬಾರನ ಮನೆಗೆ ಹೋಗಿ ಪಾಂಡವರನ್ನು ಗುರುತಿಸಿದುದು...
[10] ಇಲ್ಲಿ ಕೊಟ್ಟಿರುವ ಪ್ರತಿ ಮಹಾಪರ್ವದಲ್ಲಿರುವ ಶ್ಲೋಕ ಮತ್ತು ಅಧ್ಯಾಯಗಳ ಸಂಖ್ಯೆಯ ಪ್ರಕಾರ ಮಹಾಭಾರತದಲ್ಲಿ ಒಟ್ಟು ೮೪,೮೮೩ ಶ್ಲೋಕಗಳೂ ೧,೮೯೬ ಅಧ್ಯಾಗಳೂ ಇವೆಯೆಂದು ತಿಳಿಯುತ್ತದೆ. ಆದರೆ ಈ ನಿರ್ದಿಷ್ಟ ಶ್ಲೋಕಸಂಖ್ಯೆಗಳು ಈಗಿರುವ ಮಹಾಭಾರತದ ಯಾವ ಸಂಪುಟಗಳಲ್ಲಿಯೂ ಇಲ್ಲವೆಂಬುದು ಗಮನಾರ್ಹ. ಉದಾಹರಣೆಗೆ, ಈ ಕನ್ನಡ ಅನುವಾದಕ್ಕೆ ತೆಗೆದುಕೊಂಡಿರುವ ಪುಣೆಯ ವಿಶೇಷ ಸಂಪುಟದಲ್ಲಿರುವ ೧೮ ಮಹಾಪರ್ವಗಳಲ್ಲಿರುವ ಒಟ್ಟು ಶ್ಲೋಕಗಳ ಸಂಖ್ಯೆ ೭೩,೭೮೪ ಮತ್ತು ಅಧ್ಯಾಯಗಳ ಸಂಖ್ಯೆ ೧,೯೯೫. ಗೋರಖಪುರದ ಮಹಾಭಾರತ ಸಂಪುಟದ ೧೮ ಅಧ್ಯಾಯಗಳಲ್ಲಿ ದೊರಕುವ ಶ್ಲೋಕ ಸಂಖ್ಯೆ ೯೦,೧೧೩ ಮತ್ತು ಅಧ್ಯಾಯಗಳ ಸಂಖ್ಯೆ ೨,೧೦೭. ಗೋರಖಪುರ ಸಂಪುಟವು ಹೆಚ್ಚಾಗಿ ನೀಲಕಂಠೀಯ ಪಾಠವನ್ನು ಆಧಾರವಾಗಿಟ್ಟುಕೊಂಡಿದೆ.
[11] ನೀಲಕಂಠೀಯದಲ್ಲಿ ಇದರ ಮೊದಲು ಈ ಶ್ಲೋಕವಿದೆ: ದಶಶ್ಲೋಕಸಹಸ್ರಾಣಿ ವಿಂಶಶ್ಲೋಕಶತಾನಿ ಚ| ಖಿಲೇಷು ಹರಿವಂಶೇ ಚ ಸಂಖ್ಯಾತಾನಿ ಮಹರ್ಷಿಣಾ|| ಅರ್ಥಾತ್: ಅನುಬಂಧವಾಗಿರುವ ಹರಿವಂಶದಲ್ಲಿ ೧೨,೦೦೦ ಶ್ಲೋಕಗಳಿವೆ ಎಂದು ಮಹರ್ಷಿಗಳು ಹೇಳಿದ್ದಾರೆ.