ಕೃಷ್ಣನು ಯುಧಿಷ್ಠಿರನನ್ನು ಭೀಷ್ಮನ ಬಳಿ ಕರೆದುಕೊಂಡು ಹೋದುದು

ಹಾಗೆ ನಗರದಲ್ಲಿ ಸರ್ವರನ್ನೂ ಪ್ರಸನ್ನಗೊಳಿಸಿ ಮಹಾತ್ಮ ಯುಧಿಷ್ಠಿರನು ವಾಸುದೇವನ ಬಳಿಸಾರಿ, ಕೈಮುಗಿದು ನಮಸ್ಕರಿಸಿದನು. ಆಗ ಮಣಿಕಾಂಚನಭೂಷಿತ ಮಹಾ ಪರ್ಯಂಕದ ಮೇಲೆ ಮೋಡಗಳಿಂದ ಕೂಡಿದ ಮೇರು ಪರ್ವತದಂತೆ ನೀಲವರ್ಣದ ಕೃಷ್ಣನು ಕುಳಿತಿರುವುದನ್ನು ಅವನು ನೋಡಿದನು. ದಿವ್ಯಾಭರಣಗಳನ್ನು ಧರಿಸಿದ್ದ, ಹೊಂಬಣ್ಣದ ರೇಷ್ಮೆಯ ವಸ್ತ್ರವನ್ನುಟ್ಟಿದ್ದ, ಸುವರ್ಣದಿಂದ ಸಮಲಂಕೃತವಾದ ನೀಲಮಣಿಯಂತಿದ್ದ ಅವನ ದೇಹವು ಜಾಜ್ವಲ್ಯಮಾನವಾಗಿತ್ತು. ಉದಯಿಸುತ್ತಿರುವ ಸೂರ್ಯನು ಉದಯಾಚಲವನ್ನು ಪ್ರಕಾಶಗೊಳಿಸುವಂತೆ ಅವನ ವಕ್ಷಸ್ಥಳದಲ್ಲಿದ್ದ ಕೌಸ್ತುಭಮಣಿಯು ಕೃಷ್ಣನನ್ನು ಪ್ರಕಾಶಗೊಳಿಸುತ್ತಿತ್ತು. ಕಿರೀಟವನ್ನು ಧರಿಸಿದ್ದ ಅವನ ಸರಿಸಾಟಿಯಾದವರು ಮೂರು ಲೋಕಗಳಲ್ಲಿ ಯಾರೂ ಇರಲಿಲ್ಲ! ಮಾನವ ಶರೀರಿಯಾಗಿದ್ದ ಮಹಾತ್ಮ ವಿಷ್ಣುವಿನ ಬಳಿಸಾರಿ ಯುಧಿಷ್ಠಿರನು ನಸುನಗುತ್ತಾ ಮಧುರಭಾಷೆಯಲ್ಲಿ ಇಂತೆಂದನು: “ಅಚ್ಯುತ! ರಾತ್ರಿಯನ್ನು ಸುಖವಾಗಿ ಕಳೆದೆಯೇ? ನಿನ್ನ ಎಲ್ಲ ಜ್ಞಾನೇಂದ್ರಿಯಗಳೂ ಪ್ರಸನ್ನವಾಗಿವೆಯಲ್ಲವೇ? ನಿನ್ನಲ್ಲಿರುವ ದೇವಿ ಬುದ್ಧಿಯನ್ನೇ ಆಶ್ರಯಿಸಿ ನಾವು ರಾಜ್ಯವನ್ನು ಪಡೆದೆವು ಮತ್ತು ಭೂಮಿಯು ನಮ್ಮ ವಶದಲ್ಲಿ ಬಂದಿದೆ.  ಭಗವನ್! ನಿನ್ನ ಪ್ರಸಾದದಿಂದ ಜಯವನ್ನೂ ಯಶಸ್ಸನ್ನೂ ಪಡೆದುಕೊಂಡೆವು. ನಾವು ಧರ್ಮದಿಂದಲೂ ಚ್ಯುತರಾಗಲಿಲ್ಲ.”

ಹಾಗೆ ಮಾತನಾಡುತ್ತಿದ್ದ ಧರ್ಮರಾಜ ಯುಧಿಷ್ಠಿರನಿಗೆ ಏನನ್ನೂ ಹೇಳದೇ ಭಗವಾನನು ಯಾವುದೋ ಧ್ಯಾನದಲ್ಲಿ ಮಗ್ನನಾಗಿದ್ದನು. ಯುಧಿಷ್ಠಿರನು ಹೇಳಿದನು: “ಅಮಿತವಿಕ್ರಮ! ಪರಮಾಶ್ಚರ್ಯ! ನೀನು ಯಾರಕುರಿತು ಧ್ಯಾನಮಗ್ನನಾಗಿರುವೆ? ಮೂರು ಲೋಕಗಳೂ ಕುಶಲವಾಗಿವೆ ತಾನೆ? ನಾಲ್ಕನೆಯ ಧ್ಯಾನಮಾರ್ಗವನ್ನು ಆಶ್ರಯಿಸಿ ಅಪಕ್ರಾಂತನಾಗಿರುವ ನೀನು ನನ್ನ ಮನಸ್ಸನು ವಿಸ್ಮಯಗೊಳಿಸಿರುವೆ! ಶರೀರದಲ್ಲಿ ಪಂಚಕರ್ಮಗಳನ್ನು ಮಾಡುವ ವಾಯುವನ್ನು ನೀನು ನಿಗ್ರಹಿಸಿರುವೆ. ನಿನ್ನ ಇಂದ್ರಿಯಗಳೆಲ್ಲವನ್ನೂ ಮನಸ್ಸಿನಲ್ಲಿ ಸ್ಥಾಪಿಸಿಕೊಂಡಿರುವೆ. ಇಂದ್ರಿಯಗಳು ಮತ್ತು ಮನಸ್ಸನ್ನು ಬುದ್ಧಿಯಲ್ಲಿ ಲೀನಗೊಳಿಸಿರುವೆ. ಸರ್ವಗಣಗಳೂ ನಿನ್ನ ಆತ್ಮನಲ್ಲಿ ಲೀನವಾಗಿವೆ. ನಿನ್ನ ರೋಮಗಳು ನಿಮಿರಿನಿಂತಿವೆ. ನಿನ್ನ ಮನಸ್ಸು-ಬುದ್ಧಿಗಳು ಸ್ಥಿರವಾಗಿವೆ. ಕಟ್ಟಿಗೆ, ಗೋಡೆ ಮತ್ತು ಶಿಲೆಗಳಂತೆ ನಿಶ್ಚೇಷ್ಟನಾಗಿರುವೆ! ಗಾಳಿಯಿಲ್ಲದ ಸ್ಥಳದಲ್ಲಿ ದೀಪವು ಆತ್ತಿತ್ತ ಅಗಲದೇ ಹೇಗೆ ಒಂದೇ ಸಮನೆ ಉರಿಯುತ್ತಿರುತ್ತದೆಯೋ ಹಾಗೆ ನೀನು ದೃಢನಿಶ್ಚಯನಾಗಿ ಶಿಲಾಮೂರ್ತಿಯಂತೆ ಕುಳಿತಿರುವೆ! ಈ ರಹಸ್ಯವನ್ನು ಕೇಳಲು ನಾನು ಅರ್ಹನಾಗಿದ್ದರೆ ನಮಸ್ಕರಿಸಿ ಕೇಳಿಕೊಳ್ಳುತ್ತಿರುವ ನನ್ನ ಈ ಸಂಶಯವನ್ನು ದೂರಮಾಡು! ನೀನೇ ಕರ್ತ, ನೀನೇ ವಿಕರ್ತ. ನಾಶಹೊಂದುವವನೂ ನೀನೇ. ಅವಿನಾಶಿಯಾಗಿರುವವನೂ ನೀನೇ. ಆದಿ-ಅಂತ್ಯಗಳಿಲ್ಲದವನೂ ನೀನೇ! ಭಕ್ತಿಯಿಂದ ನಿನಗೆ ಶರಣುಬಂದಿರುವ ಮತ್ತು ಶಿರಸಾ ನಮಸ್ಕರಿಸುತ್ತಿರುವ ನನಗೆ ಈ ಧ್ಯಾನದ ತತ್ತ್ವವನ್ನು ಯಥಾವತ್ತಾಗಿ ಹೇಳು!”

ಆಗ ಭಗವಾನ್ ವಾಸವಾನುಜನು ಮನಸ್ಸು-ಬುದ್ಧಿ-ಇಂದ್ರಿಯಗಳನ್ನು ತಮ್ಮ ತಮ್ಮ ಸ್ಥಾನಗಳಲ್ಲಿ ಇರಿಸಿ ಮಂದಹಾಸಬೀರುತ್ತಾ ಈ ಮಾತನ್ನಾಡಿದನು: “ಆರಿಹೋಗುತ್ತಿರುವ ಅಗ್ನಿಯಂತಿರುವ, ಶರತಲ್ಪದಲ್ಲಿ ಮಲಗಿರುವ ಪುರುಷವ್ಯಾಘ್ರ ಭೀಷ್ಮನು ನನ್ನನ್ನು ಧ್ಯಾನಿಸುತ್ತಿದ್ದಾನೆ. ಅವನಲ್ಲಿಯೇ ನನ್ನ ಮನಸ್ಸು ಹೋಗಿತ್ತು. ಮಿಂಚಿನಂತೆ ಹೊರಹೊಮ್ಮುತ್ತಿದ್ದ ಯಾರ ಧನುಸ್ಸಿನ ಟೇಂಕಾರವನ್ನು ದೇವರಾಜನೂ ಕೂಡ ಸಹಿಸಲಸಾಧ್ಯವಾಗಿತ್ತೋ ಆ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು. ಹಿಂದೆ ಸಮಸ್ತ ರಾಜಮಂಡಲವನ್ನು ಪರಾಜಯಗೊಳಿಸಿ ಮೂವರು ಕನ್ಯೆಯರನ್ನು ಯಾರು ಕರೆದುಕೊಂಡು ಹೋಗಿದ್ದನೋ ಆ ಬೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು. ಇಪ್ಪತ್ತು ಮೂರು ರಾತ್ರಿ ಭಾರ್ಗವನೊಂದಿಗೆ ಯಾರು ಯುದ್ಧಮಾಡಿದನೋ ಮತ್ತು ರಾಮನಿಂದ ಪರಾಜಯಗೊಳ್ಳಲಿಲ್ಲವೋ ಅವನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು. ನೃಪ! ಗಂಗೆಯು ಯಾರನ್ನು ಗರ್ಭವಿಧಾನದಲ್ಲಿ ಧರಿಸಿದ್ದಳೋ ಆ ವಸಿಷ್ಠಶಿಷ್ಯ ಪಾರ್ಥಿವ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು. ಮಹಾತೇಜಸ್ಸುಳ್ಳ ದಿವ್ಯಾಸ್ತ್ರಗಳನ್ನೂ ಅಂಗಗಳ ಸಹಿತ ನಾಲ್ಕು ವೇದಗಳನ್ನೂ ಧಾರಣೆಮಾಡಿಕೊಂಡಿರುವ ಆ ಬುದ್ಧಿಮಾನ್ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು. ಜಾಮದಗ್ನ್ಯ ರಾಮನ ಪ್ರಿಯ ಶಿಷ್ಯ ಮತ್ತು ಸರ್ವ ವಿದ್ಯೆಗಳ ಆಧಾರ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು. ಇಂದ್ರಿಯಸಮೂಹಗಳನ್ನು ಮನಸ್ಸಿನಲ್ಲಿ ಏಕೀಕರಿಸಿ, ಮನಸ್ಸನ್ನು ಬುದ್ಧಿಯಲ್ಲಿ ಲೀನಗೊಳಿಸಿ ನನ್ನಲ್ಲಿ ಶರಣುಬಂದಿರುವ ಬೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು. ಭೂತ-ಭವ್ಯ-ಭವಿಷ್ಯತ್ತುಗಳನ್ನು ತಿಳಿದಿರುವ ಆ ಧರ್ಮಭೃತರಲ್ಲಿ ಶ್ರೇಷ್ಠ ಭೀಷ್ಮನ ಕಡೆ ನನ್ನ ಮನಸ್ಸು ಹರಿದು ಹೋಗಿತ್ತು. ಆ ಪುರುಷವ್ಯಾಘ್ರನು ತನ್ನ ಸತ್ಕರ್ಮಗಳ ಫಲವಾಗಿ ಸ್ವರ್ಗಕ್ಕೆ ಹೋಗಿಬಿಟ್ಟರೆ ಈ ಭೂಮಿಯು ಚಂದ್ರನಿಲ್ಲದ ರಾತ್ರಿಯಂತಾಗುತ್ತದೆ. ಆ ಭೀಮಪರಾಕ್ರಮಿ ಭೀಷ್ಮ ಗಾಂಗೇಯನ ಬಳಿಹೋಗಿ, ಅವನ ಪಾದಗಳನ್ನು ಹಿಡಿದು, ನಿನ್ನ ಮನಸ್ಸಿನಲ್ಲಿರುವ ಸಂದೇಹಗಳನ್ನು ಕೇಳು. ಅವನನ್ನು ಕೇಳಿ ಚತುರ್ವೇದಗಳನ್ನೂ, ಚತುರ್ಹೋತ್ರಗಳನ್ನೂ[1], ಚತುರಾಶ್ರಮಗಳನ್ನೂ[2], ಚಾತುರ್ವರ್ಣ್ಯಗಳ ಧರ್ಮಗಳನ್ನೂ ಕೇಳಿ ತಿಳಿದುಕೋ! ಕೌರವರ ದುರಂಧರ ಆ ಭೀಷ್ಮನು ಅಸ್ತಂಗತನಾಗಲು ಸಕಲ ಜ್ಞಾನಗಳೂ ಅವನೊಡನೆ ಅಸ್ತಮಿಸಿಬಿಡುತ್ತವೆ. ಆದುದರಿಂದ ನಿನ್ನನ್ನು ನಾನು ಈ ರೀತಿ ಪ್ರಚೋದಿಸುತ್ತಿದ್ದೇನೆ.”

ವಾಸುದೇವನ ಆ ಅರ್ಥವತ್ತಾದ ಉತ್ತಮ ಮಾತನ್ನು ಕೇಳಿ, ಕಣ್ಣೀರಿನಿಂದ ಗಂಟಲು ಕಟ್ಟಿದ ಧರ್ಮಜ್ಞ ಯುಧಿಷ್ಠಿರನು ಜನಾರ್ದನನಿಗೆ ಹೇಳಿದನು: “ಮಾಧವ! ಭೀಷ್ಮನ ಪ್ರಭಾವದ ಕುರಿತು ನೀನು ಏನು ಹೇಳಿದೆಯೋ ಅದರಲ್ಲಿ ನನಗೆ ಸ್ವಲ್ಪವೂ ಸಂದೇಹವಿಲ್ಲ. ಮಹಾಭಾಗ್ಯ ಮಹಾತ್ಮ ಭೀಷ್ಮನ ಪ್ರಭಾವದ ಕುರಿತು ಮಹಾತ್ಮ ಬ್ರಾಹ್ಮಣರು ಹೇಳುತ್ತಿದ್ದುದನ್ನು ನಾನು ಕೇಳಿದ್ದೇನೆ. ಲೋಕಗಳ ಕರ್ತೃವಾದ ನೀನೂ ಕೂಡ ಇದನ್ನೇ ಹೇಳುತ್ತಿರುವೆಯಾದರೆ ಅದರ ಕುರಿತು ಪುನಃ ಯೋಚಿಸಬೇಕಾದುದೇ ಇಲ್ಲ! ನಿನ್ನಲ್ಲಿ ನನಗೆ ಅನುಗ್ರಹಿಸುವ ಮನಸ್ಸಿದ್ದರೆ ನಿನ್ನನ್ನು ಮುಂದೆಮಾಡಿಕೊಂಡು ಭೀಷ್ಮನನ್ನು ನೋಡಬೇಕೆಂದು ಮನಸ್ಸಾಗುತ್ತಿದೆ. ಭಗವಾನ್ ಸೂರ್ಯನು ಉತ್ತರಾಯಣಕ್ಕೆ ತಿರುಗಿದೊಡನೆಯೇ ಅವನು ಲೋಕಗಳಿಗೆ ಹೊರಟುಹೋಗುತ್ತಾನೆ. ಆದುದರಿಂದ ಆ ಕೌರವನು ನಿನ್ನ ದರ್ಶನಕ್ಕೆ ಅರ್ಹನಾಗಿದ್ದಾನೆ. ಇಂದು ಅವನಿಗೆ ಕ್ಷರಾಕ್ಷರ ದೇವ ನಿನ್ನ ದರ್ಶನದ ಲಾಭವಾಗಲಿ. ಏಕೆಂದರೆ ನೀನು ಬ್ರಹ್ಮಮಯನೂ ಜ್ಞಾನನಿಧಿಯೂ ಆಗಿರುವೆ!”

ಧರ್ಮರಾಜನ ಮಾತನ್ನು ಕೇಳಿದ ಮಧುಸೂದನನು ಪಕ್ಕದಲ್ಲಿಯೇ ನಿಂತಿದ್ದ ಸಾತ್ಯಕಿಗೆ ರಥವನ್ನು ಹೂಡಲು ಹೇಳಲು. ಸಾತ್ಯಕಿಯು ಕೇಶವನ ಸಮೀಪದಿಂದ ಹೋಗಿ ದಾರುಕನಿಗೆ ಕೃಷ್ಣನ ರಥವನ್ನು ಸಿದ್ಧಗೊಳಿಸುವಂತೆ ಹೇಳಿದನು. ಸಾತ್ಯಕಿಯ ಮಾತನ್ನು ಕೇಳಿದ ದಾರುಕನು ಕಾಂಚನಗಳಿಂದ ಭೂಷಿತವಾದ, ಮರಕತ-ಸೂರ್ಯಕಾಂತ-ಚಂದ್ರಕಾಂತ ಮಣಿಗಳ ಕಾಂತಿಯಿಂದ ಕೂಡಿದ್ದ, ಸುವರ್ಣದ ಪಟ್ಟಿಗಳನ್ನು ಸುತ್ತಿದ್ದ ಚಕ್ರಗಳಿದ್ದ, ಸೂರ್ಯಕಿರಣಗಳಂತೆ ಹೊಳೆಯುತ್ತಿದ್ದ, ವಿಚಿತ್ರವಾದ ನಾನಾ ಮಣಿರತ್ನಗಳಿಂದ ವಿಭೂಷಿತವಾಗಿದ್ದ, ಉದಯಿಸುತ್ತಿರುವ ಸೂರ್ಯನಂತೆ ಬೆಳಗುತ್ತಿದ್ದ, ವಿಚಿತ್ರ ಗರುಡಧ್ವಜ-ಪತಾಕೆಗಳುಳ್ಳ, ಅಂಗಾಂಗಳಲ್ಲಿ ಸುವರ್ಣಗಳಿಂದ ಅಲಂಕರಿಸಲ್ಪಟ್ಟ ಮನೋವೇಗದ ಸುಗ್ರೀವ-ಸೈನ್ಯಪ್ರಮುಖ ಶ್ರೇಷ್ಠ ಅಶ್ವಗಳನ್ನು ಕಟ್ಟಿದ್ದ ರಥವನ್ನು ಸಿದ್ಧಪಡಿಸಿ ಬಂದು ಕೈಮುಗಿದು ಅಚ್ಯುತನಿಗೆ ನಿವೇದಿಸಿದನು.

ಭೀಷ್ಮಸ್ತವರಾಜಃ

ದಿವಾಕರನು ಉತ್ತರಾಯಣಕ್ಕೆ ತಿರುಗಿದೊಡನೆಯೇ ಭೀಷ್ಮನು ಏಕಾಗ್ರಚಿತ್ತನಾಗಿ ತನ್ನ ಮನಸ್ಸನ್ನು ಬುದ್ಧಿಯೊಡನೆ ಮತ್ತು ಬುದ್ಧಿಯನ್ನು ಆತ್ಮನಲ್ಲಿ ಲೀನಗೊಳಿಸಿದನು. ನೂರಾರು ಬಾಣಗಳಿಂದ ಚುಚ್ಚಲ್ಪಟ್ಟ ಭೀಷ್ಮನು ಕಿರಣಗಳನ್ನು ಪಸರಿಸುವ ಸೂರ್ಯನಂತೆ; ವೇದಗಳನ್ನು ತಿಳಿದಿದ್ದ ವ್ಯಾಸ, ಸುರರ್ಷಿ ನಾರದ, ದೇವಸ್ಥಾನ, ವಾತ್ಸ್ಯ, ಅಶ್ಮಕ, ಸುಮಂತು ಮತ್ತು ಇನ್ನೂ ಅನೇಕ ಮಹಾತ್ಮ ಮಹಾಭಾಗ ಮುನಿಗಣಗಳು, ಶ್ರದ್ಧೆ-ಶಮೋಪೇತರಾದ ಬ್ರಾಹ್ಮಣಸತ್ತಮರಿಂದ ಸುತ್ತುವರೆಯಲ್ಪಟ್ಟು, ಗ್ರಹಗಳಿಂದ ಸುತ್ತುವರೆಯಲ್ಪಟ್ಟ ಚಂದ್ರನಂತೆ ಅಪಾರ ಕಾಂತಿಯಿಂದ ಪ್ರಕಾಶಿಸುತ್ತಿದ್ದನು. ಶರತಲ್ಪದಲ್ಲಿ ಮಲಗಿದ್ದ ಪುರುಷವ್ಯಾಘ್ರ ಭೀಷ್ಮನಾದರೋ ಕೈಮುಗಿದು ಕರ್ಮ-ಮನಸ್ಸು-ವಾಣಿಗಳ ಮೂಲಕ ಕೃಷ್ಣನನ್ನು ಧ್ಯಾನಿಸತೊಡಗಿದನು. ಅವನು ಪುಷ್ಟನಾದದ ಸ್ವರದಲ್ಲಿ ಮಧುಸೂದನ, ಯೋಗೇಶ್ವರ, ಪದ್ಮನಾಭ, ಜಿಷ್ಣು, ಜಗತ್ಪತಿ ವಿಷ್ಣುವನ್ನು ಸ್ತುತಿಸತೊಡಗಿದನು. ಶುಚಿಯಾಗಿ ವಾಗ್ವಿದರಲ್ಲಿ ಶ್ರೇಷ್ಠ ಪರಮಧರ್ಮಾತ್ಮ ಭೀಷ್ಮನು ಪ್ರಭು ವಾಸುದೇವನನ್ನು ರೀತಿ ಸ್ತುತಿಸಿದನು:

ವಿವರವಾದ ಮತ್ತು ಸಂಕ್ಷೇಪವಾದ ಯಾವ ವಾಣಿಯಿಂದ ಕೃಷ್ಣನನ್ನು ಆರಾಧಿಸುವೆನೋ ಅದರಿಂದಲೇ ಪುರುಷೋತ್ತಮನು ಸುಪ್ರೀತನಾಗಲಿ! ಶುಚಿಯಾಗಿ ತತ್ಪರನಾಗಿ ನನ್ನ ಸರ್ವವನ್ನೂ ಆತ್ಮನಲ್ಲಿ ಯೋಜಿಸಿ ಆ ಶುಚಿಷದ, ಹಂಸ, ಪರಮೇಷ್ಟಿ, ಪ್ರಜಾಪತಿಯನ್ನು ಶರಣುಹೋಗುತ್ತೇನೆ. ದಾರದಲ್ಲಿ ಪೋಣಿಸಲ್ಪಟ್ಟ ಮಣಿಗಳಂತೆ ವಿಶ್ವ-ಭೂತಗಳು ಯಾರಲ್ಲಿ ನೆಲೆಸಿ ಸೇರಿಕೊಂಡಿವೆಯೋ ಅವನನ್ನು; ಗಟ್ಟಿಯಾದ ದಾರದಿಂದ ಕಟ್ಟಲ್ಪಟ್ಟ ಹೂವಿನ ಮಾಲೆಯಂತೆ ಯಾರಲ್ಲಿ ಈ ವಿಶ್ವವೇ ದೃಢವಾಗಿ ನಿಂತಿರುವುದೋ ಆ ವಿಶ್ವಾಂಗ ವಿಶ್ವಕರ್ಮಿಯನ್ನು; ವಿಶ್ವಪರಾಯಣನೂ, ಸಹಸ್ರಶಿರಸ್ಸುಗಳುಳ್ಳವನೂ, ಸಹಸ್ರಚರಣಗಳುಳ್ಳವನೂ, ಸಹಸ್ರಾಕ್ಷನೂ, ಮತ್ತು ನಾರಾಯಣನೆಂದು ಕರೆಯಲ್ಪಡುವ ದೇವನನ್ನೂ; ಸೂಕ್ಷ್ಮಗಳಲ್ಲಿ ಸೂಕ್ಷ್ಮನೂ, ಸ್ಥೂಲಗಳಲ್ಲಿ ಸ್ಥೂಲನೂ, ಭಾರವಾದವುಗಳಿಗಿಂತ ಭಾರವಾದವನೂ, ಶ್ರೇಷ್ಠವಾದವುಗಳಲ್ಲಿ ಶ್ರೇಷ್ಠನೂ ಆಗಿರುವವನನ್ನು; ವಾಕ್[3], ಅನುವಾಕ್[4], ನಿಷತ್[5], ಉಪನಿಷತ್ತು ಮತ್ತು ಸತ್ಯ ಸಾಮ[6]ಗಳಲ್ಲಿ ಯಾರನ್ನು ಸತ್ಯಕರ್ಮನೆಂದು ವರ್ಣಿಸುತ್ತಾರೋ ಅವನನ್ನು; ನಾಲ್ಕರಿಂದಾದ ಚತುರಾತ್ಮನನ್ನು[7], ಸತ್ಯದಲ್ಲಿ ನೆಲೆಸಿರುವ ಸಾತ್ವತರ ಒಡೆಯನನ್ನೂ, ದಿವ್ಯವೂ ಗುಹ್ಯವೂ ಆದ ಪರಮ ನಾಮಗಳಿಂದ ಯಾರನ್ನು ಅರ್ಚಿಸುತ್ತಾರೋ ಆ ದೇವನನ್ನು; ಭೂಮಿಯಲ್ಲಿ ಬ್ರಹ್ಮಜ್ಞಾನವನ್ನು ರಕ್ಷಿಸಲು ಅರಣಿಯ ಮಂಥನದಿಂದ ಪ್ರಜ್ವಲಿಸುವ ಅಗ್ನಿಯನ್ನು ಹುಟ್ಟಿಸುವಂತೆ ದೇವಕೀ ದೇವೀ ಮತ್ತು ವಸುದೇವರು ಹುಟ್ಟಿಸಿದರೋ ಆ ದೇವನನ್ನು; ಅನಂತವಾದ ಮೋಕ್ಷವನ್ನು ಬಯಸಿ, ಕಾಮನೆಗಳನ್ನು ತ್ಯಜಿಸಿ, ಅನನ್ಯಭಾವದಿಂದ ಆತ್ಮನಲ್ಲಿ ವ್ಯವಸ್ಥಿತನಾಗಿರವ ಯಾರನ್ನು ಕಾಣುತ್ತಾರೋ ಆ ಕಲ್ಮಷರಹಿತ ಗೋವಿಂದನನ್ನು; ಪುರಾಣಗಳಲ್ಲಿ ಪುರುಷನೆಂದು ಕರೆಯಲ್ಪಡುವವನ್ನೂ, ಯುಗಾದಿಗಳಲ್ಲಿ ಬ್ರಹ್ಮನೆಂದು ಕರೆಯಲ್ಪಡುವವನನ್ನೂ, ಲಯಕಾಲಗಳಲ್ಲಿ ಸಂಕರ್ಷಣನೆಂದು ಕರೆಯಲ್ಪಡುವವನ್ನೂ ಆದ ಆ ಉಪಾಸ್ಯ ಕೃಷ್ಣನ ಉಪಾಸನೆಮಾಡುತ್ತೇನೆ. ಯಾರು ಇಂದ್ರ-ವಾಯುಗಳನ್ನೂ ಮೀರಿಸಿದ ಕಾರ್ಯಗಳನ್ನು ಮಾಡುವನೋ, ಯಾರ ತೇಜಸ್ಸು ಸೂರ್ಯನ ತೇಜಸ್ಸಿಗಿಂತಲೂ ಅಧಿಕವಾಗಿರುವುದೋ, ಇಂದ್ರಿಯ-ಮನಸ್ಸು-ಬುದ್ಧಿಗಳಿಗೂ ಯಾರು ಅತೀತನಾಗಿರುವನೋ ಆ ಪ್ರಜಾಪತಿಗೆ ಶರಣು ಹೋಗುತ್ತೇನೆ.

“ಯಾರನ್ನು ವಿಶ್ವಕರ್ತಾರನೆಂದೂ, ಜಗತ್ತಿನಲ್ಲಿರುವುಗಳಿಗೆ ಒಡೆಯನೆಂದೂ, ಜಗತ್ತಿನ ಅಧ್ಯಕ್ಷನೆಂದೂ ಕರೆಯುತ್ತಾರೋ ಆ ಅಕ್ಷರ ಪರಮಪದನಿಗೆ ನಮಸ್ಕಾರಗಳು. ಅದಿತಿಯ ಗರ್ಭದಲ್ಲಿ ಉದಯಿಸಿ ದೈತ್ಯರನ್ನು ನಾಶಪಡಿಸಿದ, ಒಬ್ಬನಾಗಿದ್ದರೂ ಹನ್ನೆರಡಾಗಿ ಜನಿಸಿದ, ಚಿನ್ನದ ಕಾಂತಿಯನ್ನು ಹೊಂದಿರುವ ಸೂರ್ಯಾತ್ಮನಿಗೆ ನಮಸ್ಕರಿಸುತ್ತೇನೆ.

ಶುಕ್ಲಪಕ್ಷಗಳಲ್ಲಿ ದೇವತೆಗಳನ್ನೂ ಕೃಷ್ಣಪಕ್ಷಗಳಲ್ಲಿ ಪಿತೃಗಳನ್ನೂ ಅಮೃತದಿಂದ ತೃಪ್ತಿಪಡಿಸುವ, ದ್ವಿಜಾತಿಯವರ ರಾಜ ಸೋಮಾತ್ಮನಿಗೆ ನಮಸ್ಕರಿಸುತ್ತೇನೆ.

“ಮಹಾ ತಪಸ್ಸಿನ ಆಚೆ ಬೆಳಕಿನಿಂದ ಪ್ರಜ್ಚಲಿಸುತ್ತಿರುವ ಯಾವ ಪುರುಷನನ್ನು ತಿಳಿದು ಮೃತ್ಯುವನ್ನು ಅತಿಕ್ರಮಿಸಬಹುದೋ ಆ ಜ್ಞೇಯಾತ್ಮನಿಗೆ ನಮಸ್ಕರಿಸುತ್ತೇನೆ.

“ಮಹಾ ಉಕ್ಥಯಜ್ಞದಲ್ಲಿ ಬೃಹಂತನೆಂದೂ, ಮಹಾಧ್ವರದಲ್ಲಿ ಅಗ್ನಿಯೆಂದೂ ಯಾರನ್ನು ವಿಪ್ರಸಂಘಗಳು ಹಾಡುತ್ತಾರೆಯೋ ಆ ವೇದಾತ್ಮನಿಗೆ ನಮಸ್ಕರಿಸುತ್ತೇನೆ.

“ಋಗ್ಯಜುಃಸಾಮಗಳನ್ನೇ ಆಶ್ರಯಿಸಿ, ಐದು ವಿಧದ ಹವಿಸ್ಸು[8]ಗಳನ್ನು ಹೊಂದಿರುವ, ಗಾಯತ್ರಿಯೇ ಮೊದಲಾದ ಐದು ಛಂದಸ್ಸುಗಳೇ ತಂತುಗಳಾಗಿರುವ ಯಜ್ಞವನ್ನು ಯಾರಕುರಿತು ಮಾಡುತ್ತಾರೋ ಆ ಯಜ್ಞಾತ್ಮನಿಗೆ ನಮಸ್ಕರಿಸುತ್ತೇನೆ.

“ಯಜುಸ್ಸೆಂಬ ಹೆಸರನ್ನೂ, ಛಂಧಸ್ಸುಗಳೆಂಬ ಅಂಗಾಂಗಗಳನ್ನೂ, ಋಗ್ಯಜುಸ್ಸಾಮಾತ್ಮಿಕ ಯಜ್ಞವೆಂಬ ಶಿರಸ್ಸನ್ನೂ, ರಥಂತರ ಮತ್ತು ಬೃಹತ್ ಗಳೆಂಬ ಪ್ರೀತಿವಾಕ್ಯಗಳನ್ನೂ ಹೊಂದಿರುವ ಸುಪರ್ಣ ಎನ್ನುವ ಸ್ತೋತ್ರಾತ್ಮನಿಗೆ ನಮಸ್ಕರಿಸುತ್ತೇನೆ.

“ಪ್ರಜಾಪತಿಗಳ ಸಹಸ್ರವರ್ಷಪರ್ಯಂತದ ಯಜ್ಞದಲ್ಲಿ ಸುವರ್ಣಮಯ ರೆಕ್ಕೆಗಳ ಪಕ್ಷಿಯರೂಪವನ್ನು ಧರಿಸಿ ಪ್ರಕಟನಾದ ಆ ಋಷಿ ಹಂಸಾತ್ಮನಿಗೆ ನಮಸ್ಕರಿಸುತ್ತೇನೆ.

“ಶ್ಲೋಕಪಾದಗಳ ಸಮೂಹಗಳೇ ಅವಯವಗಳಾಗಿರುವ, ಪದಗಳ ಸಂಧಿಗಳೇ ಗಿಣ್ಣುಗಳಾಗಿರುವ, ಸ್ವರಾಕ್ಷರ-ವ್ಯಂಜನಗಳೇ ಅಲಂಕಾರಪ್ರಾಯವಾಗಿರುವ ದಿವ್ಯಾಕ್ಷರ ಎಂಬ ಹೆಸರಿನಿಂದ ಕರೆಯಲ್ಪಡುವ ವಾಗಾತ್ಮನಿಗೆ ನಮಸ್ಕರಿಸುತ್ತೇನೆ.

“ಧರ್ಮಾರ್ಥವ್ಯವಹಾರಗಳೆಂಬ ಅಂಗಗಳಿಂದಲೂ, ಅಮೃತಯೋನಿ ಸತ್ಯದಿಂದಲೂ ಸತ್ಪುರುಷರು ಅಮರತ್ವವನ್ನು ಹೊಂದಲು ಸೇತುವೆಯನ್ನು ಕಲ್ಪಿಸಿಕೊಡುವ ಸತ್ಯಾತ್ಮನಿಗೆ ನಮಸ್ಕರಿಸುತ್ತೇನೆ.

“ಪ್ರತ್ಯೇಕ ಧರ್ಮಾಚರಣೆಗಳುಳ್ಳವರು ಪ್ರತ್ಯೇಕ ಧರ್ಮಗಳ ಫಲವನ್ನು ಅಪೇಕ್ಷಿಸುವವರು ಯಾರನ್ನು ಪ್ರತ್ಯೇಕ ಧರ್ಮಗಳಿಂದ ಅರ್ಚಿಸುತ್ತಾರೋ ಆ ಧರ್ಮಾತ್ಮನಿಗೆ ನಮಸ್ಕರಿಸುತ್ತೇನೆ.

“ವ್ಯಕ್ತವಾದವುಗಳಲ್ಲಿ ಅವ್ಯಕ್ತನಾಗಿರುವ ಅಥವಾ ಬುದ್ಧಿಯಲ್ಲಿರುವ ಯಾವ ಕ್ಷೇತ್ರಜ್ಞನನ್ನು ಮಹರ್ಷಿಗಳು ಹುಡುಕುತ್ತಾರೆಯೋ ಆ ಕ್ಷೇತ್ರಾತ್ಮನಿಗೆ ನಮಸ್ಕರಿಸುತ್ತೇನೆ.

“ಹದಿನಾರು ಗುಣ[9]ಗಳಿಂದ ಆವೃತನಾಗಿರುವ ಹದಿನೇಳನೆಯದಾಗಿ ಆತ್ಮ ಎಂದು ಸಾಂಖ್ಯರು ಕರೆಯುವ ಆ ಆತ್ಮಸ್ಥ ಸಾಂಖ್ಯಾತ್ಮನಿಗೆ ನಮಸ್ಕರಿಸುತ್ತೇನೆ.

“ನಿದ್ರೆಯಿಲ್ಲದೇ ಶ್ವಾಸಗಳನ್ನು ನಿಯಂತ್ರಿಸಿ ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡು ಸತ್ತ್ವದಲ್ಲಿಯೇ ನೆಲೆಸಿಕೊಂಡು ಮನಸ್ಸನ್ನು ಬುದ್ಧಿಯಲ್ಲಿ ಲೀನಗೊಳಿಸಿದ ಯೋಗಿಗಳು ಯಾವ ಜ್ಯೋತಿಯನ್ನು ಕಾಣುತ್ತಾರೋ ಆ ಯೋಗಾತ್ಮನಿಗೆ ನಮಸ್ಕರಿಸುತ್ತೇನೆ.

“ಪುಣ್ಯ-ಪಾಪಗಳು ಕ್ಷಯಹೊಂದಿದ ನಂತರ ಪುನಃ ಹುಟ್ಟು-ಸಾವುಗಳ ಭಯವಿಲ್ಲದ ಶಾಂತ ಸಂನ್ಯಾಸಿಗಳು ಯಾರನ್ನು ಸೇರುತ್ತಾರೆಯೋ ಆ ಮೋಕ್ಷಾತ್ಮನಿಗೆ ನಮಸ್ಕರಿಸುತ್ತೇನೆ.

“ಸಹಸ್ರಯುಗಗಳ ಅಂತ್ಯದಲ್ಲಿ ಧಗಧಗಿಸುವ ಜ್ವಾಲೆಗಳೊಂದಿಗೆ ಪ್ರಳಯಾಗ್ನಿಯ ರೂಪವನ್ನು ಹೊಂದಿ ಎಲ್ಲವನ್ನೂ ಭಕ್ಷಿಸುವ ಘೋರಾತ್ಮನಿಗೆ ನಮಸ್ಕರಿಸುತ್ತೇನೆ.

“ಇರುವ ಎಲ್ಲವನ್ನೂ ಭಕ್ಷಿಸಿ ಜಗತ್ತನ್ನು ಜಲಮಯವನ್ನಾಗಿಸಿ ಅದರ ಮೇಲೆ ಬಾಲಕನಾಗಿ ಮಲಗುವ ಆ ಮಾಯಾತ್ಮನಿಗೆ ನಮಸ್ಕರಿಸುತ್ತೇನೆ.

“ನಾಲ್ಕು ಸಮುದ್ರಗಳನ್ನೂ ಒಂದುಗೂಡಿಸಿ ಹಾಸಿಗೆಯನ್ನಾಗಿಸಿಕೊಂಡು ಅದರ ಮೇಲೆ ಮಲಗುವ ಆ ಸಹಸ್ರಶಿರಸ, ಪುರುಷ, ಅಮಿತಾತ್ಮ, ಯೋಗನಿದ್ರಾತ್ಮನಿಗೆ ನಮಸ್ಕರಿಸುತ್ತೇನೆ.

“ಹುಟ್ಟೇ ಇಲ್ಲದ ಮತ್ತು ಇಲ್ಲದಿರುವಂತೆ ಆಗದ ಯಾರ ಮೇಲೆ ಈ ವಿಶ್ವವು ಪ್ರತಿಷ್ಠಿತವಾಗಿದೆಯೋ ಆ ಪುಷ್ಕರ ಪುಷ್ಕರಾಕ್ಷ ಪದ್ಮಾತ್ಮನಿಗೆ ನಮಸ್ಕರಿಸುತ್ತೇನೆ.

“ಯಾರ ಕೇಶರಾಶಿಗಳಲ್ಲಿ ಮೇಘಗಳಿವೆಯೋ, ಯಾರ ಸರ್ವಾಂಗಸಂಧಿಗಳಲ್ಲಿ ನದಿಗಳಿವೆಯೋ, ಮತ್ತು ಯಾರ ಹೊಟ್ಟೆಯಲ್ಲಿ ನಾಲ್ಕೂ ಸಮುದ್ರಗಳಿವೆಯೋ ಆ ತೋಯಾತ್ಮನಿಗೆ ನಮಸ್ಕರಿಸುತ್ತೇನೆ.

“ಯಾರು ಯುಗಯುಗದಲ್ಲಿಯೂ ಯೋಗಮಾಯೆಯಿಂದ ಅವತರಿಸುವನೋ, ಮಾಸ-ಋತು-ಆಯನ-ಸಂವತ್ಸರಗಳು ಉರುಳಿದಂತೆ ಸೃಷ್ಟಿ-ಲಯಗಳನ್ನು ನಡೆಸುತ್ತಾನೋ ಆ ಕಾಲಾತ್ಮನಿಗೆ ನಮಸ್ಕರಿಸುತ್ತೇನೆ.

“ಯಾರಿಗೆ ಬ್ರಾಹ್ಮಣನೇ ಮುಖನಾಗಿರುವನೋ, ಸಮಸ್ತ ಕ್ಷತ್ರಿಯರೂ ಭುಜಗಳಾಗಿವೆಯೋ, ವೈಶ್ಯರು ಹೊಟ್ಟೆ-ತೊಡೆಗಳಾಗಿರುವರೋ ಮತ್ತು ಯಾರ ಪಾದಗಳಲ್ಲಿ ಶೂದ್ರರು ಆಶ್ರಿತರಾಗಿರುವರೋ ಆ ವರ್ಣಾತ್ಮನಿಗೆ ನಮಸ್ಕರಿಸುತ್ತೇನೆ.

“ಯಾರಿಗೆ ಅಗ್ನಿಯು ಮುಖನಾಗಿರುವನೋ, ಸ್ವರ್ಗವು ತಲೆಯಾಗಿರುವುದೋ, ಆಕಾಶವು ನಾಭಿಯಾಗಿರುವುದೋ, ಭೂಮಿಯು ಪಾದಗಳಾಗಿರುವುದೋ, ಸೂರ್ಯನೇ ಕಣ್ಣಾಗಿರುವನೋ, ಮತ್ತು ದಿಕ್ಕುಗಳೇ ಕಿವಿಗಳಾಗಿರುವವೋ ಆ ಲೋಕಾತ್ಮನಿಗೆ ನಮಸ್ಕರಿಸುತ್ತೇನೆ.

“ವೈಶೇಷಿಕ ಗುಣಗಳಿಂದ ಆಕರ್ಷಿತರಾಗಿ ವಿಷಯಸುಖಗಳಲ್ಲಿಯೇ ಇರುವವರನ್ನು ವಿಷಯಗಳಿಂದ ರಕ್ಷಿಸುವವನೆಂದು ಯಾರನ್ನು ಕರೆಯುತ್ತಾರೋ ಆ ಗೋಪ್ತ್ರಾತ್ಮನಿಗೆ ನಮಸ್ಕರಿಸುತ್ತೇನೆ.

“ಅನ್ನ-ಪಾನಗಳೆಂಬ ಇಂಧನರೂಪನಾಗಿ ರಸ-ಪ್ರಾಣಗಳನ್ನು ವೃದ್ಧಿಪಡಿಸುತ್ತಾ ಯಾರು ಪ್ರಾಣಿಗಳನ್ನು ಧರಿಸಿರುವನೋ ಆ ಪ್ರಾಣಾತ್ಮನಿಗೆ ನಮಸ್ಕರಿಸುತ್ತೇನೆ.

“ಯಾರು ಕಾಲಾತೀತನಾಗಿ, ಯಜ್ಞಾತೀತನಾಗಿ, ಪರಕ್ಕಿಂತಲೂ ಅತ್ಯಂತ ಶ್ರೇಷ್ಠನಾಗಿ, ಆದ್ಯಂತರಹಿತನಾಗಿ, ವಿಶ್ವಕ್ಕೇ ಆದಿಭೂತನಾಗಿರುವನೋ ಆ ವಿಶ್ವಾತ್ಮನಿಗೆ ನಮಸ್ಕರಿಸುತ್ತೇನೆ.

“ಯಾರು ಸೃಷ್ಟಿಪರಂಪರೆಯ ರಕ್ಷಣಾರ್ಥವಾಗಿ ಎಲ್ಲ ಪ್ರಾಣಿಗಳನ್ನೂ ಸ್ನೇಹಪಾಶಗಳ ಬಂಧನಗಳಿಂದ ವಿಮೋಹಗೊಳಿಸುತ್ತಾನೋ ಆ ಮೋಹಾತ್ಮನಿಗೆ ನಮಸ್ಕರಿಸುತ್ತೇನೆ.

“ಈ ಆತ್ಮಜ್ಞಾನವು ಅನ್ನಮಯ-ಪ್ರಾಣಮಯ-ಮನೋಮಯ-ವಿಜ್ಞಾನಮಯ-ಆನಂದಮಯಗಳೆಂಬ ಐದು ಕೋಶಗಳಲ್ಲಿರುವುದೆನ್ನುವುದನ್ನು ತಿಳಿದು ಜ್ಞಾನಯೋಗದ ಮೂಲಕ ಯೋಗಿಗಳು ಯಾರನ್ನು ಸಾಕ್ಷಾತ್ಕರಿಸಿಕೊಳ್ಳುವರೋ ಆ ಜ್ಞಾನಾತ್ಮನಿಗೆ ನಮಸ್ಕರಿಸುತ್ತೇನೆ.

“ಯಾರು ಅಳತೆಗೆ ವಿಷಯವಾಗದೇ ಇರುವ ಶರೀರವನ್ನು ಹೊಂದಿರುವನೋ, ಯಾರ ಬುದ್ಧಿರೂಪೀ ಕಣ್ಣುಗಳು ಸರ್ವತ್ರ ವ್ಯಾಪಿಸಿರುವವೋ, ಯಾರಲ್ಲಿ ಅನಂತ ವಿಷಯಗಳ ಸಮಾವೇಶವಿರುವುದೋ, ಯಾರ ತುದಿಯನ್ನು ಕಾಣಲು ಸಾಧ್ಯವಿಲ್ಲವೋ ಆ ಚಿಂತ್ಯಾತ್ಮನಿಗೆ ನಮಸ್ಕರಿಸುತ್ತೇನೆ.

“ಜಟೆಯನ್ನೂ-ದಂಡವನ್ನೂ ಧರಿಸಿರುವ, ಲಂಬೋದರ ಶರೀರೀ, ಯಾವಾಗಲೂ ಕಮಂಡಲುವನ್ನು ಹಿಡಿದಿರುವ ಬ್ರಹ್ಮಾತ್ಮನಿಗೆ ನಮಸ್ಕರಿಸುತ್ತೇನೆ.

“ಶೂಲಿಯೂ, ತ್ರಿದಶೇಶನೂ, ತ್ರ್ಯಂಬಕನೂ, ಮಹಾತ್ಮನೂ, ಭಸ್ಮದಿಗ್ಧನೂ, ಊರ್ಧ್ವಲಿಂಗನೂ ಆದ ರುದ್ರಾತ್ಮನಿಗೆ ನಮಸ್ಕರಿಸುತ್ತೇನೆ.

“ಪ್ರಾಣಿಗಳಲ್ಲಿ ಪಂಚಭೂತಾತ್ಮನಾಗಿರುವ, ಪ್ರಾಣಿಗಳ ಹುಟ್ಟು-ಸಾವುಗಳಿಗೆ ಕಾರಣನಾಗಿರುವ, ಯಾರಲ್ಲಿ ಕ್ರೋಧ-ದ್ರೋಹ-ಮೋಹಗಳಿಲ್ಲವೋ ಆ ಶಾಂತಾತ್ಮನಿಗೆ ನಮಸ್ಕರಿಸುತ್ತೇನೆ.

“ಯಾರಲ್ಲಿ ಸರ್ವವೂ ಇರುವವೋ, ಯಾರಿಂದ ಈ ಎಲ್ಲವೂ ಸೃಷ್ಟಿಸಲ್ಪಟ್ಟಿರುವವೋ, ಯಾರು ಎಲ್ಲದರಲ್ಲಿಯೂ ಇರುವನೋ, ಯಾರು ಎಲ್ಲ ಕಡೆಗಳಲ್ಲಿಯೂ ಇರುವನೋ ಆ ಸರ್ವಮಯನಾದ ಸರ್ವಾತ್ಮನಿಗೆ ನಮಸ್ಕರಿಸುತ್ತೇನೆ.

“ವಿಶ್ವವನ್ನು ರಚಿಸಿರುವವನೇ! ವಿಶ್ವಾತ್ಮನೇ! ವಿಶ್ವಸಂಭವನೇ! ನಿನಗೆ ನಮಸ್ಕಾರ! ಪಂಚಭೂತಗಳಿಗೂ ಅತೀತನಾದ ನೀನು ಪ್ರಾಣಿಗಳಿಗೆ ಮೋಕ್ಷದಾಯಕನಾಗಿರುವೆ! ಮೂರುಲೋಕಗಳಲ್ಲಿಯೂ ವ್ಯಾಪಿಸಿರುವ ನಿನಗೆ ನಮಸ್ಕಾರ! ಈ ಮೂರು ಲೋಕಗಳ ಆಚೆಯೂ ಇರುವ ನಿನಗೆ ನಮಸ್ಕಾರ! ಎಲ್ಲದಿಕ್ಕುಗಳಲ್ಲಿಯೂ ವ್ಯಾಪಿಸಿರುವ ನಿನಗೆ ನಮಸ್ಕಾರ! ಸರ್ವರ ಪರಾಯಣನಾಗಿರುವ ನಿನಗೆ ನಮಸ್ಕಾರ! ಭಗವನ್ ವಿಷ್ಣೋ! ಲೋಕಗಳ ಉತ್ಪತ್ತಿ-ವಿನಾಶಗಳ ಕರ್ತನೇ! ನಿನಗೆ ನಮಸ್ಕಾರ! ಹೃಷೀಕೇಶ! ನೀನೇ ಸೃಷ್ಟಿಕರ್ತನೂ ಸಂಹಾರಕರ್ತನೂ ಆಗಿರುವೆ. ಯಾರಿಂದಲೂ ನಿನಗೆ ಪರಾಜಯವಿಲ್ಲ! ಮೂರು ಲೋಕಗಳಲ್ಲಿಯೂ ವ್ಯಾಪ್ತವಾಗಿರುವ ನಿನ್ನ ದಿವ್ಯ ಭಾವಗಳನ್ನು ನಾನು ಕಾಣಲಾರೆನು. ಆದರೆ ತತ್ತ್ವದೃಷ್ಟಿಯಿಂದ ನಿನ್ನ ಸನಾತನ ರೂಪವನ್ನು ಕಾಣುತ್ತಿದ್ದೇನೆ. ಆಕಾಶವು ನಿನ್ನ ಶಿರಸ್ಸಿನಿಂದ ವ್ಯಾಪ್ತವಾಗಿದೆ. ದೇವೀ ವಸುಂಧರೆಯು ನಿನ್ನ ಪಾದಗಳಿಂದ ವ್ಯಾಪ್ತಳಾಗಿದ್ದಾಳೆ. ಮೂರು ಲೋಕಗಳೂ ನಿನ್ನ ವಿಕ್ರಮದಿಂದ ವ್ಯಾಪ್ತವಾಗಿದೆ. ನೀನು ಸನಾತನ ಪುರುಷ! ಅಗಸೇ ಹೂವಿನ ಕಾಂತಿಯನ್ನು ಹೊಂದಿರುವ, ಪೀತವಾಸಸ, ಅಚ್ಯುತ ಗೋವಿಂದನನ್ನು ಯಾರು ನಮಸ್ಕರಿಸುತ್ತಾರೋ ಅವರಿಗೆ ಭಯವೆನ್ನುವುದೇ ತಿಳಿಯದು. ಸತ್ಯವು ಹೇಗೆ ವಿಷ್ಣುಮಯವಾಗಿರುವುದೋ, ಜಗತ್ತು ಹೇಗೆ ವಿಷ್ಣುಮಯವಾಗಿರುವುದೋ, ಸರ್ವವೂ ಹೇಗೆ ವಿಷ್ಣುಮಯವೇ ಆಗಿರುವುದೋ ಹಾಗೆ ಈ ಸತ್ಯದ ಪ್ರಭಾವದಿಂದ ನನ್ನ ಸಕಲ ಪಾಪಗಳೂ ನಾಶಹೊಂದಲಿ. ಸುರೋತ್ತಮ! ಪುಂಡರೀಕಾಕ್ಷ! ನಿನ್ನನ್ನೇ ಅನನ್ಯಶರಣನಾಗಿ ಶರಣುಹೊಂದಿರುವ ಭಕ್ತನಾದ ಅಭೀಷ್ಟ ಗತಿಯನ್ನು ಇಚ್ಛಿಸುತ್ತಿರುವ ನನಗೆ ಯಾವುದು ಶ್ರೇಯಸ್ಕರವೆನ್ನುವುದನ್ನು ನೀನೇ ಯೋಚಿಸಿ ನಿರ್ಧರಿಸು! ಈ ರೀತಿ ವಿದ್ಯೆ-ತಪಸ್ಸುಗಳಿಗೆ ಜನ್ಮಸ್ಥಾನನಾದ ಅಯೋನಿಜ ಭಗವಂತ ದೇವ ಜನಾರ್ದನ ವಿಷ್ಣುವು ನನ್ನಿಂದ ಹೀಗೆ ಸ್ತುತಿಸಲ್ಪಟ್ಟು ನನ್ನಮೇಲೆ ಪ್ರಸನ್ನನಾಗಲಿ!”

ಈ ಮಾತನ್ನು ಹೇಳಿ ಕೃಷ್ಣನಲ್ಲಿಯೇ ಮನಸ್ಸಿಟ್ಟು ಭೀಷ್ಮನು “ನಮಃ ಕೃಷ್ಣಾಯ!” ಎಂದು ಹೇಳಿ ಪ್ರಣಾಮ ಮಾಡಿದನು. ತನ್ನ ಯೋಗಬಲದಿಂದ ಭೀಷ್ಮನ ಭಕ್ತಿಯನ್ನು ತಿಳಿದುಕೊಂಡ ಮಾಧವ ಹರಿಯು ಅವನಿಗೆ ತ್ರಿಕಾಲದೃಷ್ಟಿಯ ದಿವ್ಯ ಜ್ಞಾನವನ್ನು ನೀಡಲು ಹೊರಟನು. ಭೀಷ್ಮನ ಸ್ತೋತ್ರವು ನಿಲ್ಲಲು ಸುತ್ತಲೂ ನೆರೆದಿದ್ದ ಬ್ರಹ್ಮವಾದಿಗಳು ಆನಂದಭಾಷ್ಪದಿಂದ ಕೂಡಿದವರಾಗಿ ಗದ್ಗದಧ್ವನಿಯಲ್ಲಿ ಭೀಷ್ಮನನ್ನು ಪ್ರಶಂಸಿಸಿದರು. ಕೇಶವ ಪುರುಷೋತ್ತಮನನ್ನು ಸ್ತುತಿಸುತ್ತಿದ್ದ ಆ ವಿಪ್ರಾಗ್ರ್ಯರು ಎಲ್ಲರೂ ಮೆಲ್ಲನೆ ಪುನಃ ಪುನಃ ಭೀಷ್ಮನನ್ನು ಪ್ರಶಂಸಿಸಿದರು.

ಭೀಷ್ಮನ ಭಕ್ತಿಯೋಗವನ್ನು ಅರಿತ ಪುರುಷೋತ್ತಮನು ಸಂಹೃಷ್ಟನಾಗಿ ತಕ್ಷಣವೇ ಮೇಲೆದ್ದು ರಥವನ್ನೇರಿ ಕುಳಿತುಕೊಂಡನು. ಕೇಶವ-ಸಾತ್ಯಕಿಯರು ಒಂದು ರಥದಲ್ಲಿ ಮತ್ತು ಇನ್ನೊಂದು ರಥದಲ್ಲಿ ಮಹಾತ್ಮ ಯುಧಿಷ್ಠಿರ-ಧನಂಜಯರು ಹೊರಟರು. ಭೀಮಸೇನ ಮತ್ತು ನಕುಲ-ಸಹದೇವರು ಒಂದೇ ರಥದಲ್ಲಿ ಕುಳಿತಿದ್ದರು. ಕೃಪ, ಯುಯುತ್ಸು, ಮತ್ತು ಸೂತ ಸಂಜಯರು ಇನ್ನೊಂದು ರಥದಲ್ಲಿದ್ದರು. ಆ ಪುರುಷರ್ಷಭರು ನಗರಾಕಾರದ ರಥಗಳಲ್ಲಿ ಕುಳಿತು ರಥಚಕ್ರಗಳ ಘೋಷದಿಂದ ಭೂಮಿಯನ್ನೇ ನಡುಗಿಸುತ್ತಾ ಪ್ರಯಾಣಮಾಡಿದರು. ಆಗ ಪುರುಷೋತ್ತಮನು ಮಾರ್ಗದಲ್ಲಿ ಅನೇಕ ಬ್ರಾಹ್ಮಣರು ಸುಮನಸ್ಕರಾಗಿ ಸ್ತುತಿಸುತ್ತಿದ್ದುದನ್ನು ಕೇಳಿದನು. ಕೇಶಿಹಂತಕ ಕೃಷ್ಣನು ಆನಂದತುಂದಿಲನಾಗಿ ಕೈಮುಗಿದು ಪ್ರಣಾಮಮಾಡುತ್ತಿದ್ದ ಇತರ ಜನರನ್ನು ಅಭಿನಂದಿಸಿದನು.

ಅನಂತರ ಹೃಷೀಕೇಶ, ರಾಜಾ ಯುಧಿಷ್ಠಿರ, ನಾಲ್ವರು ಪಾಂಡವರು, ಮತ್ತು ಕೃಪನೇ ಮೊದಲಾದವರೆಲ್ಲರೂ ಶೀಘ್ರ ಕುದುರೆಗಳನ್ನು ಕಟ್ಟಿದ, ಪತಾಕೆ-ಧ್ವಜಗಳಿಂದ ಶೋಭಿಸುತ್ತಿರುವ, ನಗರಗಳ ಆಕಾರದ ರಥಗಳಲ್ಲಿ ಕುಳಿತು ಕುರುಕ್ಷೇತ್ರಕ್ಕೆ ಪ್ರಯಾಣಿಸಿದರು. ತಲೆಗೂದಲುಗಳಿಂದಲೂ ಮಜ್ಜೆಗಳಿಂದಲೂ ಮೂಳೆಗಳಿಂದಲೂ ಸಮಾಕುಲವಾಗಿದ್ದ ಮಹಾತ್ಮ ಕ್ಷತ್ರಿಯರು ಎಲ್ಲಿ ದೇಹಗಳನ್ನು ತೊರೆದಿದ್ದರೋ ಆ ಕುರುಕ್ಷೇತ್ರದಲ್ಲಿ ಅವರು ಇಳಿದರು. ಅಲ್ಲಿ ಆನೆ-ಕುದುರೆಗಳ ದೇಹಗಳೂ ಮೂಳೆಗಳೂ ಪರ್ವತಗಳೋಪಾದಿಯಲ್ಲಿ ಬಿದ್ದಿದ್ದವು. ಅಲ್ಲಿ ಬಿದ್ದಿದ್ದ ಮನುಷ್ಯರ ತಲೆಬುರುಡೆಗಳು ಶಂಖಗಳಂತೆ ತೋರುತ್ತಿದ್ದವು.  ಸಹಸ್ರಾರು ಚಿತೆಗಳು ಉರಿಯುತ್ತಿದ್ದವು. ಕವಚ-ಆಯುಧಗಳು ರಾಶಿ-ರಾಶಿಯಾಗಿ ಬಿದ್ದಿದ್ದವು. ಆಗ ಕುರುಕ್ಷೇತ್ರವು ಕಾಲನ ಪಾನಭೂಮಿಯಂತೆ ತೋರುತ್ತಿತ್ತು. ಅಲ್ಲಲ್ಲಿ ಬಿದ್ದಿದ್ದ ಮಜ್ಜೆ-ಅಸ್ತಿಗಳು ಕಾಲನು ತಿಂದು ಉಳಿಸಿದ ಉಚ್ಛಿಷ್ಟದಂತೆಯೇ ತೋರುತ್ತಿದ್ದವು. ಭೂತಗಣಗಳು ಸಂಚರಿಸುತ್ತಿದ್ದ ಮತ್ತು ರಾಕ್ಷಸಗಣಗಳಿಂದ ಸಂಸೇವಿಸಲ್ಪಟ್ಟ ಕುರುಕ್ಷೇತ್ರವನ್ನು ನೋಡುತ್ತಾ ಆ ಮಹಾರಥರು ಸಾಗಿದರು. ಹಾಗೆ ಸಾಗುತ್ತಿರುವಾಗ ಸರ್ವಯಾದವರ ನಂದನ, ಮಹಾಬಾಹು ಕೃಷ್ಣನು ಯುಧಿಷ್ಠಿರನಿಗೆ ಜಾಮದಗ್ನಿ ಪರಶುರಾಮನ ವಿಕ್ರಮದ ಕುರಿತು ಹೇಳಿದನು: “ಪಾರ್ಥ! ಇಗೋ ದೂರದಲ್ಲಿ ಕಾಣುತ್ತಿರುವ ಈ ಐದು ಸರೋವರಗಳಲ್ಲಿ ಹಿಂದೆ ರಾಮನು ಕ್ಷತ್ರಿಯರ ರಕ್ತದಿಂದ ತರ್ಪಣಗಳನ್ನಿತ್ತಿದ್ದನು. ಪ್ರಭು ರಾಮನು ಇಪ್ಪತ್ತೊಂದು ಬಾರಿ ಭೂಮಿಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿ ಇಲ್ಲಿಯೇ ಆ ಕರ್ಮದಿಂದ ವಿರತನಾದನು.”

ಯುಧಿಷ್ಠಿರನು ಹೇಳಿದನು: “ರಾಮನು ಇಪ್ಪತ್ತೊಂದು ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯರನ್ನಾಗಿಸಿದನೆಂದು ಹೇಳಿದೆಯಲ್ಲಾ! ಅದರ ಕುರಿತು ಒಂದು ಮಹಾ ಸಂಶಯವು ನನ್ನಲ್ಲಿದೆ. ಯದುಪುಂಗವ! ರಾಮನಿಂದ ಕ್ಷತ್ರಬೀಜವು ಭಸ್ಮವಾದ ನಂತರ ಪುನಃ ಹೇಗೆ ಕ್ಷತ್ರಿಯರ ಉತ್ಪತ್ತಿಯಾಯಿತು? ಮಹಾತ್ಮಾ ಭಗವನ್ ರಾಮನು ಯಾವ ಕಾರಣದಿಂದ ಕ್ಷತ್ರಿಯರನ್ನು ವಿನಾಶಗೊಳಿಸಿದನು? ಪುನಃ ಕ್ಷತ್ರಿಯರ ವೃದ್ಧಿಯು ಹೇಗಾಯಿತು? ಮಹಾಭಾರತ ಯುದ್ಧದಲ್ಲಿ ಹೇಗೆ ಕೋಟಿಗಟ್ಟಲೆ ಕ್ಷತ್ರಿಯರು ಹತರಾದರೋ ಹಾಗೆ ಆಗಲೂ ಕೂಡ ಈ ಭೂಮಿಯು ಕ್ಷತ್ರಿಯರ ಮೃತದೇಹಗಳಿಂದ ತುಂಬಿಹೋಗಿದ್ದಿರಬಹುದು! ನನ್ನ ಈ ಸಂಶಯವನ್ನು ಹೋಗಲಾಡಿಸು! ನೀನೇ ಸರ್ವ ಆಗಮಗಳ ನಿಗಮ. ನಿನ್ನ ಹೊರತಾದ ಶಾಸ್ತ್ರಗಳಾವುವೂ ಇಲ್ಲ!”

ಅನಂತರ ಗದಾಗ್ರಜ ಪ್ರಭು ಕೃಷ್ಣನು ಅಪ್ರತಿಮ ತೇಜಸ್ವೀ ಯುಧಿಷ್ಠಿರನಿಗೆ ಭೂಮಿಯಲ್ಲಿ ಕ್ಷತ್ರಿಯಸಂಕುಲಗಳ ವಿನಾಶವು ಹೇಗಾಯಿತೆನ್ನುವ ಜಾಮದಗ್ನೇಯೋಽಪಖ್ಯಾನವನ್ನು ಸಂಪೂರ್ಣವಾಗಿ ಅರ್ಥವತ್ತಾಗಿ ಹೇಳಿದನು. ಧರ್ಮಭೃತರಲ್ಲಿ ಶ್ರೇಷ್ಠನಾದ ಯುಧಿಷ್ಠಿರನಿಗೆ ಇದನ್ನು ಹೇಳುತ್ತಾ ಯದುಪ್ರವೀರ ಕೃಷ್ಣನು ರಥದಲ್ಲಿ ಕುಳಿತು ಸೂರ್ಯನು ಹೇಗೆ ತನ್ನ ಕಿರಣಗಳಿಂದ ವಿಶ್ವವನ್ನೇ ಬೆಳಗುವನೋ ಹಾಗೆ ಬೇಗ ಬೇಗ ಮುಂದೆಸಾರಿದನು. ಹೀಗೆ ಅಚ್ಯುತ-ಯುಧಿಷ್ಠಿರರು ಪರಸ್ಪರರಲ್ಲಿ ಮಾತನಾಡಿಕೊಳ್ಳುತ್ತಾ ಪ್ರಭು ಗಾಂಗೇಯನು ಶರತಲ್ಪತನಗಾಗಿದ್ದಲ್ಲಿಗೆ ಬಂದರು.

ಅಲ್ಲಿ ಅವರು ಶರಶಯನದಲ್ಲಿ ಮಲಗಿದ್ದ ತನ್ನದೇ ರಶ್ಮಿಗಳ ಜಾಲದಿಂದ ಪ್ರಕಾಶಿಸುತ್ತಿದ್ದ ಸಾಯಂಕಾಲದ ಸೂರ್ಯನ ತೇಜಸ್ಸಿನಿಂದ ಬೆಳಗುತ್ತಿದ್ದ ಭೀಷ್ಮನನ್ನು ನೋಡಿದರು. ಓಘವತೀ ನದಿಯ ತೀರದಲ್ಲಿ, ದೇವತೆಗಳಿಂದ ಶತಕ್ರತುವು ಹೇಗೋ ಹಾಗೆ ಮುನಿಗಳಿಂದ ಉಪಾಸನೆಗೊಳ್ಳುತ್ತಿರುವ ಆ ಪರಮಧರ್ಮಿಷ್ಟನನ್ನು ನೋಡಿದರು. ದೂರದಿಂದಲೇ ಅವನನ್ನು ನೋಡಿದ ಕೃಷ್ಣ, ರಾಜಾ ಧರ್ಮರಾಜ, ನಾಲ್ವರು ಪಾಂಡವರು, ಮತ್ತು ಶಾರದ್ವತರೇ ಮೊದಲಾದವರು, ಅವರವರ ವಾಹನಗಳಿಂದ ಕೆಳಕ್ಕಿಳಿದು, ಚಂಚಲ ಮನಸ್ಸನ್ನು ನಿಯಂತ್ರಿಸಿಕೊಂಡು, ಇಂದ್ರಿಯಗ್ರಾಮಗಳನ್ನು ಏಕೀಕರಿಸಿಕೊಂಡು ಆ ಮಹಾಮುನಿಗಳ ಬಳಿಬಂದರು. ವಾಸನೇ ಮೊದಲಾದ ಋಷಿಗಳನ್ನು ಅಭಿವಾದಿಸಿದ ನಂತರ ಗೋವಿಂದ, ಸಾತ್ಯಕಿ ಮತ್ತು ಕೌರವರು ಗಾಂಗೇಯನ ಬಳಿಸಾರಿದರು. ಗಾಂಗೇಯನ ತಪೋವೃದ್ಧಿಯ ಕುರಿತು ಕೇಳಿ ಪುರುಷರ್ಷಭ ಯದು-ಕೌರವರು ಎಲ್ಲರೂ ಅವನನ್ನು ಸುತ್ತುವರೆದು ಕುಳಿತುಕೊಂಡರು. ಆಗ ಆರಿಹೋಗುತ್ತಿರುವ ಯಜ್ಞೇಶ್ವರನಂತಿದ್ದ ಗಾಂಗೇಯನನ್ನು ನೋಡಿ ಕೇಶವನು ಸ್ವಲ್ಪ ದೀನಮನಸ್ಕನಾಗಿ “ಭೀಷ್ಮ!” ಎಂದು ಹೇಳಿದನು. “ರಾಜನ್! ನಿನ್ನ ಜ್ಞಾನಗಳೆಲ್ಲವೂ ಹಿಂದಿನಂತೆಯೇ ಪ್ರಸನ್ನವಾಗಿವೆಯಲ್ಲವೇ? ನಿನ್ನ ಬುದ್ಧಿಗೆ ಯಾವುದೇ ವ್ಯಾಕುಲಗಳೂ ಇಲ್ಲ ತಾನೇ? ಶರಗಳ ಅಭಿಘಾತದಿಂದ ನಿನ್ನ ಶರೀರವು ನೊಂದು ದುಃಖವಾಗುತ್ತಿಲ್ಲ ತಾನೇ? ಏಕೆಂದರೆ ಮಾನಸಿಕ ದುಃಖಕ್ಕಿಂತಲೂ ಶಾರೀರಿಕ ದುಃಖವೇ ಅಧಿಕವಾಗಿರುತ್ತದೆ. ಧರ್ಮಶೀಲನಾದ ನಿನ್ನ ತಂದೆಯ ವರದಾನದಿಂದ ನೀನು ಇಚ್ಛಾಮರಣಿಯಾಗಿರುವೆ! ಆದರೆ ಅದು ನಿನ್ನ ಶಾಂತಿಗೆ ಕಾರಣವಾಗಲಾರದು! ಮುಳ್ಳು ಅತ್ಯಂತ ಸೂಕ್ಷ್ಮವಾಗಿದ್ದರೂ ಶರೀರವನ್ನು ಸೇರಿಕೊಂಡು ಹೆಚ್ಚು ನೋವನ್ನುಂಟುಮಾಡುತ್ತದೆ. ಹೀಗಿರುವಾಗ ಬಾಣಗಳ ಸಮೂಹಗಳಿಂದಲೇ ಚುಚ್ಚಲ್ಪಟ್ಟಿರುವ ನಿನ್ನ ವಿಷಯದಲ್ಲಿ ಹೇಳತಕ್ಕದ್ದೇನಿದೆ? ಹುಟ್ಟು-ಸಾವುಗಳು ಪ್ರಾಣಿಗಳಿಗೆ ಇರತಕ್ಕವೇ ಎನ್ನುವ ಉಪದೇಶವನ್ನು ನಿನಗೆ ನೀಡಲು ನಾನು ಬಯಸುತ್ತಿಲ್ಲ. ಏಕೆಂದರೆ ನೀನು ದೇವತೆಗಳಿಗೂ ಉಪದೇಶನೀಡಲು ಸಮರ್ಥನಾಗಿರುವೆ! ಜ್ಞಾನವೃದ್ಧನಾದ ನಿನ್ನಲ್ಲಿ ಭೂತ-ಭವಿಷ್ಯ-ವರ್ತಮಾನಗಳೆಲ್ಲವೂ, ಶಾಸ್ತ್ರ-ವೇದ-ಪುರಾಣ-ಇತಿಹಾಸಗಳೆಲ್ಲವೂ ಪ್ರತಿಷ್ಠಿತವಾಗಿವೆ. ಪ್ರಾಣಿಗಳ ಸಂಸಾರ ಮತ್ತು ಧರ್ಮದ ಫಲಾನುಭವಗಳನ್ನು ನೀನು ಅರಿತುಕೊಂಡಿದ್ದೀಯೆ. ನೀನು ಬ್ರಹ್ಮಮಯ ನಿಧಿಯಾಗಿರುವೆ! ನೀನು ಸಮೃದ್ಧ ರಾಜ್ಯದಲ್ಲಿ ನಿನ್ನ ಎಲ್ಲ ಅಂಗಾಂಗಳೂ ಸದೃಢವಾಗಿದ್ದು, ಅರೋಗಿಯಾಗಿದ್ದು, ಸಹಸ್ರಾರು ಸ್ತ್ರೀಯರಿಂದ ಪರಿವೃತನಾಗಿದ್ದರೂ, ಊರ್ಧ್ವರೇತಸ್ಕನಾಗಿ ಬ್ರಹ್ಮಚರ್ಯೆಯನ್ನು ಪಾಲಿಸಿದುದನ್ನು ನಾನು ಕಂಡಿದ್ದೇನೆ. ಈ ಶರಶಯನದಲ್ಲಿ ಮಲಗಿರುವ ಸತ್ಯಸಂಧ, ಮಹಾವೀರ್ಯ, ಶೂರ. ಧರ್ಮದಲ್ಲಿಯೇ ತತ್ಪರನಾಗಿರುವ ಶಾಂತನವ ಭೀಷ್ಮನೊಬ್ಬನನ್ನು ಬಿಟ್ಟು ಮೃತ್ಯುವನ್ನೂ ತಡೆದು ನಿಲ್ಲಿಸಬಲ್ಲ ಮತ್ತೊಬ್ಬನನ್ನು ಈ ಮೂರುಲೋಕಗಳಲ್ಲಿಯೂ ಎಲ್ಲಿಯಾದರೂ ಹುಟ್ಟಿರುವನೆಂಬುದನ್ನು ನಾನು ಇದೂವರೆಗೂ ಕೇಳಿರುವುದಿಲ್ಲ! ಸತ್ಯ, ತಪಸ್ಸು, ದಾನ, ಯಜ್ಞಾನುಷ್ಠಾನ, ಧನುರ್ವೇದ, ವೇದ, ನಿತ್ಯವೂ ಪ್ರಜೆಗಳ ಪರಿಪಾಲನೆ ಇವುಗಳಲ್ಲಿ ನಿನಗೆ ಸಮನಾದ ದಯಾವಂತ, ಶುಚಿ, ಜಿತೇಂದ್ರಿಯ, ಸರ್ವಭೂತಹಿತರತ, ಮಹಾರಥನ ಕುರಿತು ಇದೂವರೆಗೆ ನಾನು ಕೇಳಿಲ್ಲ! ನೀನು ಒಂದೇ ರಥದಲ್ಲಿ ಗಂಧರ್ವ-ಸುರ-ಅಸುರ-ರಾಕ್ಷಸರೊಂದಿಗೆ ದೇವತೆಗಳನ್ನು ಜಯಿಸಲು ಶಕ್ತನೆನ್ನುವುದರಲ್ಲಿ ಸಂಶಯವೇ ಇಲ್ಲ. ಭೀಷ್ಮ! ವಸುಗಳಲ್ಲಿ ನೀನು ಇಂದ್ರಸಮಾನನು. ವಿಪ್ರರು ನಿತ್ಯವೂ ನಿನ್ನನ್ನು ಅಷ್ಟವಸುಗಳ ಅಂಶದಿಂದ ಹುಟ್ಟಿದ ಒಂಭತ್ತನೆಯವನೆಂದೂ, ಗುಣಗಳಲ್ಲಿ ನಿನ್ನ ಸಮನಾಗಿರುವವರು ಯಾರೂ ಇಲ್ಲವೆಂದೂ ವರ್ಣಿಸುತ್ತಾರೆ. ನೀನು ಯಾರೆಂದು ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ನಿನ್ನ ಶಕ್ತಿ ಮತ್ತು ಮಹಾಬಲಗಳಿಂದ ನೀನು ದೇವತೆಗಳಲ್ಲಿಯೂ ವಿಖ್ಯಾತನಾಗಿರುವೆ! ಈ ಭೂಮಿಯ ಮನುಷ್ಯರಲ್ಲಿ ನಿನ್ನ ಸಮಾನ ಗುಣಗಳುಳ್ಳ ಬೇರೆ ಯಾವ ಪುರುಷನನ್ನೂ ನಾನು ನೋಡಲೂ ಇಲ್ಲ ಮತ್ತು ಕೇಳಲೂ ಇಲ್ಲ. ನೀನು ಸರ್ವಗುಣಗಳಿಂದಲೂ ದೇವತೆಗಳನ್ನೂ ಅತಿಶಯಿಸಿರುವೆ. ನಿನ್ನ ತಪಸ್ಸಿನಿಂದ ನೀನು ಲೋಕಗಳನ್ನೂ ಚರಾಚರಗಳನ್ನೂ ಸೃಷ್ಟಿಸಲು ಶಕ್ತನಾಗಿರುವೆ. ಭೀಷ್ಮ! ಜ್ಞಾತಿಬಾಂಧವರ ಸಂಕ್ಷಯದಿಂದ ತಪಿಸುತ್ತಿರುವ ಈ ಜ್ಯೇಷ್ಠ ಪಾಂಡುಪುತ್ರನ ಶೋಕವನ್ನು ನೀನು ನಿವಾರಿಸು! ನಾಲ್ಕು ಆಶ್ರಮಧರ್ಮಗಳಿಂದ ಕೂಡಿರುವ ಚಾತುರ್ವಣ್ಯದವರ ಧರ್ಮಗಳೆಲ್ಲವೂ ನಿನಗೆ ಸಂಪೂರ್ಣವಾಗಿ ತಿಳಿದಿವೆ. ನಾಲ್ಕು ವೇದಗಳಲ್ಲಿ ಹೇಳಿರುವ ನಾಲ್ಕು ಹೋತೃಗಳ ಕರ್ತವ್ಯಗಳನ್ನೂ, ಸಾಂಖ್ಯಯೋಗವನ್ನೂ, ನಾಲ್ಕೂ ವರ್ಣಗಳವರಿಗೆ ನಿಯಮಿಸಲ್ಪಟ್ಟಿರುವ ಸನಾತನ ಧರ್ಮಗಳನ್ನೂ, ಆದರೆ ಯಾವುದಕ್ಕೂ ವಿರುದ್ಧವಾಗಿರದ ಹಾಗೆ ನಡೆದುಕೊಳ್ಳುವ ಏಕೈಕ ಧರ್ಮವೇನಿದೆಯೋ ಅದನ್ನೂ ನೀನು ತಿಳಿದಿರುವೆ. ಇತಿಹಾಸ-ಪುರಾಣಗಳು ಸಂಪೂರ್ಣವಾಗಿ ನಿನಗೆ ತಿಳಿದಿವೆ. ಸಕಲ ಧರ್ಮಶಾಸ್ತ್ರಗಳೂ ನಿನ್ನ ಮನಸ್ಸಿನಲ್ಲಿ ನೆಲೆಸಿಬಿಟ್ಟಿವೆ. ಸಂಶಯಾಸ್ಪದವಾದ ಯಾವುದಾದರೂ ಕೆಲವು ವಿಷಯಗಳು ಲೋಕದಲ್ಲಿದ್ದರೆ ಅವುಗಳನ್ನೂ ನಿವಾರಿಸಲು ಈ ಲೋಕದಲ್ಲಿ ನಿನ್ನನ್ನು ಬಿಟ್ಟು ಬೇರೆ ಯಾರೂ ಇಲ್ಲ. ಈ ಪಾಂಡವೇಯನ ಮನಸ್ಸಿನಲ್ಲಿ ಹುಟ್ಟಿಕೊಂಡಿರುವ ಈ ಶೋಕವನ್ನು ನಿನ್ನ ಬುದ್ಧಿಶಕ್ತಿಯಿಂದ ದೂರಮಾಡು! ಮೋಹಗೊಂಡಿರುವ ಜನರನ್ನು ಶಾಂತಗೊಳಿಸಲು ನಿನ್ನಂಥಹ ಉತ್ತಮ ವಿಶಾಲ ಬುದ್ಧಿಯುಳ್ಳವನಿಗೆ ಮಾತ್ರ ಸಾಧ್ಯ!”

ವಾಸುದೇವನ ಆ ಮಾತನ್ನು ಕೇಳಿದ ಧೀಮಂತ ಭೀಷ್ಮನು ತನ್ನ ಮುಖವನ್ನು ಸ್ವಲ್ಪವೇ ಮೇಲಕ್ಕೆತ್ತಿ ಕೈಜೋಡಿಸಿ ಹೇಳಿದನು: “ಭಗವನ್! ವಿಷ್ಣುವೇ! ಲೋಕಗಳ ಉದ್ಭವ ಮತ್ತು ನಿಧನ! ನಿನಗೆ ನಮಸ್ಕಾರವು! ಹೃಷೀಕೇಶ! ನೀನೇ ಕರ್ತ, ಸಂಹರ್ತ ಮತ್ತು ಅಪರಾಜಿತ! ವಿಶ್ವಕರ್ಮನೇ! ವಿಶ್ವಾತ್ಮನೇ! ವಿಶ್ವಸಂಭವನೇ! ನಿನಗೆ ನಮಸ್ಕಾರಗಳು! ನೀನು ಪಂಚಭೂತಗಳಿಗೂ ಅತೀತನಾಗಿದ್ದು ಪ್ರಾಣಿಗಳ ಮೋಕ್ಷಸ್ವರೂಪನಾಗಿರುವೆ! ಮೂರು ಲೋಕಗಳಲ್ಲಿಯೂ ವ್ಯಾಪಕನಾಗಿರುವ ನಿನಗೆ ನಮಸ್ಕರಿಸುತ್ತೇನೆ. ಮೂರು ಗುಣಗಳಿಗೂ ಅತೀತನಾಗಿರುವ ನಿನಗೆ ನಮಸ್ಕರಿಸುತ್ತೇನೆ. ಯೋಗೇಶ್ವರ! ಸರ್ವಕ್ಕೂ ಪರಾಯಣನಾಗಿರುವ ನಿನಗೆ ನಮಸ್ಕರಿಸುತ್ತೇನೆ. ಪುರುಷಸತ್ತಮ! ನೀನು ನನಗೆ ಸಂಬಂಧಿಸಿದಂತೆ ಕೆಲವು ಮಾತುಗಳನ್ನಾಡಿರುವೆ! ಇದರಿಂದಾಗಿ ಮೂರು ಲೋಕಗಳಲ್ಲಿಯೂ ವ್ಯಾಪ್ತನಾಗಿರುವ ನಿನ್ನ ದಿವ್ಯತೆಯನ್ನು ಕಾಣುತ್ತಿದ್ದೇನೆ. ವಾಯುವಿನ ಏಳು ಮಾರ್ಗಗಳನ್ನೂ ತಡೆದಿರುವ ಅಮಿತತೇಜಸ್ವೀ ನಿನ್ನ ಸನಾತನ ರೂಪವನ್ನು ತತ್ತ್ವತಃ ನಾನು ಕಾಣುತ್ತಿದ್ದೇನೆ. ನಿನ್ನ ಶಿರಸ್ಸು ಸ್ವರ್ಗದಿಂದ ವ್ಯಾಪ್ತವಾಗಿದೆ. ಪಾದಗಳು ದೇವೀ ವಸುಂಧರೆಯಿಂದ ವ್ಯಾಪ್ತವಾಗಿವೆ. ನಿನ್ನ ಭುಜಗಳಲ್ಲಿ ದಿಕ್ಕುಗಳೂ, ಕಣ್ಣುಗಳಲ್ಲಿ ರವಿಯೂ ಮತ್ತು ವೀರ್ಯದಲ್ಲಿ ಶಕ್ರನೂ ಪ್ರತಿಷ್ಠಿತಗೊಂಡಿವೆ. ಅಗಸೇ ಹೂವಿನಂತೆ ಶ್ಯಾಮಲವರ್ಣದವನೂ, ಪೀತಾಂಬರವನ್ನು ಧರಿಸಿರುವವನೂ, ಧರ್ಮದಿಂದ ಚ್ಯುತನಾಗದೇ ಇರುವವನೇ ಆದ ನೀನು ನನಗೆ ಮಿಂಚುಗಳಿಂದ ಕೂಡಿರುವ ಕಾಲಮೇಘದಂತೆ ತೋರುತ್ತಿರುವೆ! ಪುಂಡರೀಕಾಕ್ಷ! ಸುರೋತ್ತಮ! ಸದ್ಗತಿಯನ್ನು ಬಯಸಿ ನಿನ್ನನ್ನೇ ಶರಣುಹೊಂದಿರುವ ಈ ಭಕ್ತನಿಗೆ ಯಾವುದು ಶ್ರೇಯಸ್ಸೆಂದು ನೀನೇ ಹೇಳು!”

ವಾಸುದೇವನು ಹೇಳಿದನು: “ಪುರುಷರ್ಷಭ! ನಿನಗೆ ನನ್ನಲ್ಲಿ ಪರಮ ಭಕ್ತಿಯಿರುವುದರಿಂದಲೇ ನಾನು ನಿನಗೆ ನನ್ನ ದಿವ್ಯ ರೂಪವನ್ನು ತೋರಿಸಿರುವೆನು! ನನ್ನ ಭಕ್ತನಲ್ಲದವನಿಗೆ, ಭಕ್ತನಾಗಿದ್ದರೂ ಕುಟಿಲಸ್ವಭಾವವಿದ್ದವನಿಗೆ ಮತ್ತು ಮನಃಶಾಂತಿಯಿಲ್ಲದವನಿಗೆ ನನ್ನ ಈ ದಿವ್ಯರೂಪವನ್ನು ತೋರಿಸುವುದಿಲ್ಲ. ನೀನಾದರೋ ನನ್ನ ಭಕ್ತನಾಗಿರುವೆ. ನಿತ್ಯವೂ ಸರಳಸ್ವಭಾವದಿಂದಿರುವೆ. ನಿತ್ಯವೂ ನೀನು ಜಿತೇಂದ್ರಿಯ ಮತ್ತು ಶುಚಿಯಾಗಿದ್ದುಕೊಂಡು ಸತ್ಯ-ದಾನಗಳಲ್ಲಿ ನಿರತನಾಗಿರುವೆ! ನಿನ್ನ ತಪಸ್ಸಿನಿಂದಲೇ ನೀನು ನನ್ನನ್ನು ನೋಡಲು ಅರ್ಹನಾಗಿರುವೆ. ಯಾವಲೋಕಗಳಿಂದ ನೀನು ಪುನಃ ಹಿಂದಿರುಗುವುದಿಲ್ಲವೋ ಅಂಥಹ ಉತ್ತಮ ಲೋಕಕ್ಕೇ ನೀನು ತೆರಳುತ್ತೀಯೆ. ನಿನ್ನ ಜೀವಿತದಲ್ಲಿ ಇನ್ನು ಐವತ್ತಾರು ದಿನಗಳು ಮಾತ್ರವೇ ಉಳಿದಿವೆ. ಅದರ ನಂತರ ನಿನ್ನ ಶುಭಕರ್ಮಗಳ ಪದವಾಗಿ ಈ ದೇಹವನ್ನು ವಿಸರ್ಜಿಸಿ ಉತ್ತಮ ಲೋಕವನ್ನು ಪಡೆಯುವೆ! ಪ್ರಜ್ವಲಿಸುತ್ತಿರುವ ಅಗ್ನಿಗಳಂತಿರುವ ಈ ದೇವತೆಗಳು ವಸುಗಳೂ ವಿಮಾನಸ್ಥರಾಗಿ, ಯಾರಿಗೂ ಕಾಣದಂತೆ, ಸೂರ್ಯನು ಉತ್ತರಕ್ಕೆ ತೆರಳುವುದನ್ನೇ ಕಾಯುತ್ತಿದ್ದಾರೆ ಮತ್ತು ನಿನ್ನ ಪ್ರತ್ಯಾಗಮನವನ್ನು ಎದುರುನೋಡುತ್ತಿದ್ದಾರೆ! ಭಗವಾನ್ ಸೂರ್ಯನು ಕಾಲವಶದಿಂದ ದಕ್ಷಿಣಾಯನದಿಂದ ಹಿಂದಿರುಗಿದ ಕೂಡಲೇ ಉತ್ತರಾಯಣಕ್ಕೆ ಕಾಲಿಟ್ಟೊಡನೆಯೇ ನೀನು ಲೋಕಗಳಿಗೆ ತೆರಳುತ್ತೀಯೆ ಮತ್ತು ವಿದ್ವಾನರಂತೆ ಆ ಲೋಕಗಳನ್ನು ಪಡಿದು ಮರಳಿ ಬರುವುದಿಲ್ಲ. ಈ ಲೋಕದಿಂದ ನೀನು ಹೊರಟು ಹೋಗಲು ನಿನ್ನಲ್ಲಿರುವ ಅಖಿಲ ಜ್ಞಾನಗಳು ನಷ್ಟವಾಗಿ ಹೋಗುತ್ತವೆ. ಆದುದರಿಂದಲೇ ಇವರೆಲ್ಲರೂ ಧರ್ಮದ ಕುರುತಾದ ಚರ್ಚೆಗಾಗಲೇ ನಿನ್ನ ಬಳಿ ಬಂದು ಸೇರಿದ್ದಾರೆ. ಜ್ಞಾತಿವಧೆಯ ಶೋಕದಿಂದಾಗಿ ಶಾಸ್ತ್ರಜ್ಞಾನವನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಸತ್ಯಸಂಧ ಯುಧಿಷ್ಠಿರನಿಗೆ ಧರ್ಮಾರ್ಥಸಮಾಧಿಯುಕ್ತವಾದ ಅರ್ಥಬದ್ಧವಾದ ಮಾತುಗಳನ್ನಾಡಿ ಅವನ ಶೋಕವನ್ನು ಹೋಗಲಾಡಿಸು!”

ಅನಂತರ ಕೃಷ್ಣನ ಆ ಧರ್ಮಾರ್ಥಸಂಹಿತವಾದ ಹಿತಕರ ಮಾತನ್ನು ಕೇಳಿ ಶಾಂತನವ ಭೀಷ್ಮನು ಕೈಮುಗಿದು ಉತ್ತರಿಸಿದನು: “ಲೋಕನಾಥ! ಮಹಾಬಾಹೋ! ಶಿವ! ನಾರಾಯಣ! ಅಚ್ಯುತ! ನಿನ್ನ ಮಾತನ್ನು ಕೇಳಿ ನಾನು ಹರ್ಷದಲ್ಲಿ ಮುಳುಗಿಹೋಗಿದ್ದೇನೆ! ನಿನ್ನ ಸನ್ನಿಧಿಯಲ್ಲಿ ನಾನು ಏನನ್ನು ತಾನೇ ಹೇಳಬಲ್ಲೆ? ಮಾತಿನಿಂದ ತಿಳಿಸಬಹುದಾದ ಎಲ್ಲವೂ ನಿನ್ನ ಮಾತಿನಲ್ಲಿಯೇ ಅಡಗಿವೆ! ದೇವ! ಈ ಲೋಕದಲ್ಲಿ ಯತ್ಕಿಂಚಿತ ಏನಾದರೂ ನಡೆದರೆ ಮತ್ತು ಯಾರಾದರೂ ಕರ್ತವ್ಯಗಳನ್ನು ಮಾಡಿದರೆ ಅದು ನಿನ್ನಿಂದಲೇ ಮಾಡಿಸಲ್ಪಟ್ಟಿರುತ್ತವೆ. ಏಕೆಂದರೆ ನೀನು ಬುದ್ಧಿಮಯನಾಗಿರುವೆ. ನಿನ್ನ ಎದಿರು ಧರ್ಮ-ಕಾಮ-ಅರ್ಥಶಾಸ್ತ್ರಗಳ ಅರ್ಥಗಳನ್ನು ತಿಳಿಸುವವನು ದೇವರಾಜನ ಬಳಿಹೋಗಿ ದೇವಲೋಕದ ವರ್ಣನೆಯನ್ನು ಮಾಡುವವನಂತೆ! ಮಧುಸೂದನ! ಶರಸಮೂಹಗಳ ಘಾತದಿಂದ ನನ್ನ ಮನಸ್ಸು ವ್ಯಥಿತಗೊಂಡಿದೆ. ಅಂಗಾಂಗಗಳು ಶಿಥಿಲಗೊಂಡಿವೆ. ನನ್ನ ಬುದ್ಧಿಯೂ ಕುಸಿಯುತ್ತಿದೆ! ಗೋವಿಂದ! ವಿಷ-ಅಗ್ನಿಗಳ ಸಮಾನ ಶರಗಳಿಂದ ಪೀಡಿತನಾದ ನನಗೆ ಏನನ್ನು ಮಾತನಾಡಲೂ ತೋಚುತ್ತಿಲ್ಲ! ಬಲವು ಕುಂದುತ್ತಿದೆ. ಪ್ರಾಣಗಳು ಹೊರಟುಹೋಗಲು ತ್ವರೆಮಾಡುತ್ತಿವೆ. ಮರ್ಮಸ್ಥಳಗಳು ಪರಿತಪಿಸುತ್ತಿವೆ. ಜೇತನವು ಭ್ರಾಂತವಾಗಿದೆ! ದಾಶಾರ್ಹಕುಲನಂದನ! ದೌರ್ಬಲ್ಯದಿಂದಾಗಿ ನನ್ನ ಮಾತು ತೊದಲುತ್ತಿದೆ. ಹೇಗೆ ತಾನೇ ನಾನು ಮಾತನಾಡಲಿ? ನನಗೆ ಒಳ್ಳೆಯದಾಗಲು ಅನುಗ್ರಹಿಸು! ಮಹಾಬಾಹೋ! ನನ್ನನ್ನು ಕ್ಷಮಿಸು! ಅಚ್ಯುತ! ನಿನ್ನ ಸನ್ನಿಧಿಯಲ್ಲಿ ಮಾತನಾಡಲು ಬೃಹಸ್ಪತಿಯೂ ಕೂಡ ಹಿಂಜರಿಯುತ್ತಾನೆ. ಇನ್ನು ನನ್ನ ಗತಿಯೇನು?  ಮಧುಸೂದನ! ದಿಕ್ಕುಗಳು ತೋಚುತ್ತಿಲ್ಲ. ಆಕಾಶ-ಮೇದಿನಗಳೂ ತೋಚುತ್ತಿಲ್ಲ. ಕೇವಲ ನಿನ್ನ ವೀರ್ಯವನ್ನು ಅವಲಂಬಿಸಿ ಇದ್ದೇನೆ ಅಷ್ಟೇ! ಪ್ರಭೋ! ಆದುದರಿಂದ ಧರ್ಮರಾಜನಿಗೆ ಹಿತವಾದುದನ್ನು ಸ್ವಯಂ ನೀನೇ ಹೇಳು! ನೀನು ಯಾವ ಸರ್ವ ಆಗಮಗಳ ಸ್ಥಾನವಾಗಿರುವೆಯೋ ಅದನ್ನೇ ಹೇಳು! ಲೋಕದಲ್ಲಿ ಶಾಶ್ವತನಾಗಿರುವ, ಲೋಕಗಳನ್ನು ನಿರ್ಮಿಸಿರುವ ನೀನೇ ಇಲ್ಲಿರುವಾಗ ಗುರುವಿನ ಎದಿರು ಶಿಷ್ಯನಂತಿರುವ ನನ್ನಂಥವನು ಹೇಗೆ ತಾನೇ ಬೋಧಿಸಬಲ್ಲನು?”

ವಾಸುದೇವನು ಹೇಳಿದನು: “ಕೌರವರ ಧುರಂಧರನೇ! ಮಹಾವೀರ್ಯದಲ್ಲಿ ಮತ್ತು ಮಹಾಸತ್ತ್ವದಲ್ಲಿ ನೆಲೆಸಿರುವ ಸರ್ವಾರ್ಥದರ್ಶಿನಿಯಾದ ನೀನು ಹೇಳಿದುದು ಯೋಗ್ಯವಾಗಿಯೇ ಇದೆ. ಬಾಣಾಘಾತದಿಂದ ಯಾತನೆಯನ್ನು ಅನುಭವಿಸುತ್ತಿರುವೆಯೆಂದು ನನಗೆ ಹೇಳಿದೆಯಲ್ಲವೇ? ಅದರ ಉಪಶಮನಕ್ಕಾಗಿ ಪ್ರಸನ್ನಚಿತ್ತನಾಗಿ ನಾನು ನೀಡುವ ಈ ವರವನ್ನು ಸ್ವೀಕರಿಸು! ನಿನಗೆ ದಣಿವಾಗಲೀ, ಮೂರ್ಛೆಯಾಗಲೀ, ಉರಿಯಾಗಲೀ, ರೋಗ-ರುಜಿನಗಳಾಗಲೀ, ಹಸಿವು ಬಾಯಾರಿಕೆಗಳಾಗಲೀ ಆಗುವುದಿಲ್ಲ! ಸಮಗ್ರ ಜ್ಞಾನಗಳೂ ನಿನ್ನಲ್ಲಿ ಪ್ರಕಾಶಗೊಳ್ಳುತ್ತವೆ. ನಿನ್ನ ಬುದ್ಧಿಯು ಯಾವುದರಲ್ಲಿಯೂ ಆಸಕ್ತಿಯನ್ನು ಇಟ್ಟುಕೊಳ್ಳುವುದಿಲ್ಲ. ನಿನ್ನ ಮನಸ್ಸು ನಿತ್ಯವೂ, ಮೋಡಗಳಿಂದ ಮುಕ್ತನಾದ ಚಂದ್ರನಂತೆ, ರಜಸ್ಸು-ತಮೋ ಗುಣಗಳಿಂದ ರಹಿತವಾಗಿ, ಸತ್ತ್ವದಲ್ಲಿಯೇ ನೆಲೆಸಿರುತ್ತದೆ. ನೀನು ಯಾವ ಧರ್ಮಸಂಯುಕ್ತವಾದ ಅಥವಾ ಅರ್ಥಯುಕ್ತವಾದ ವಿಷಯಗಳ ಕುರಿತು ಯೋಚಿಸುತ್ತೀಯೋ ಅವುಗಳು ನಿನ್ನ ಬುದ್ಧಿಯ ಮುಂದೆ ಸ್ಫುರಿಸುತ್ತಿರುತ್ತವೆ. ಈ ದಿವ್ಯದೃಷ್ಟಿಯನ್ನು ಪಡೆದು ಅದರಿಂದ ನೀನು ನಾಲ್ಕೂ[10] ವಿಧದ ಪ್ರಾಣಿಗಳ ನೈಜಸ್ವರೂಪಗಳನ್ನು ಕಾಣಲು ಶಕ್ತನಾಗುವೆ. ಜ್ಞಾನದೃಷ್ಟಿಯಿಂದ ಸಂಪನ್ನನಾದ ನಿನಗೆ ಸಂಸಾರಬಂಧನದಲ್ಲಿ ಸಿಕ್ಕಿಹಾಕಿಕೊಂಡಿರುವ ಸಂಪೂರ್ಣ ಜೀವಸಮುದಾಯಗಳೂ ತಿಳಿನೀರಿನಲ್ಲಿರುವ ಮೀನುಗಳಂತೆ ಸ್ವಚ್ಛವಾಗಿ ಕಾಣುತ್ತವೆ!”

ಆಗ ವ್ಯಾಸಸಹಿತರಾದ ಸರ್ವ ಮಹರ್ಷಿಗಳೂ ಋಗ್ಯಜುಃಸಾಮಸಂಯುಕ್ತ ಸ್ತೋತ್ರಗಳಿಂದ ಕೃಷ್ಣನನ್ನು ಅರ್ಚಿಸಿದರು. ವಾರ್ಷ್ಣೇಯ, ಗಾಂಗೇಯ ಮತ್ತು ಪಾಂಡವರು ಇರುವ ಸ್ಥಳದಲ್ಲಿ ನಭಸ್ತಲದಿಂದ ಸರ್ವಋತುಗಳ ದಿವ್ಯ ಪುಷ್ಪವೃಷ್ಟಿಯಾಯಿತು. ದಿವ್ಯವಾದ್ಯಗಳು ಮೊಳಗಿದವು. ಅಪ್ಸರಗಣಗಳು ಹಾಡಿದರು. ಅಲ್ಲಿ ಯಾವುದೇ ರೀತಿಯ ಅನಿಷ್ಟ ದೃಶ್ಯಗಳೂ ಕಾಣಿಸಲಿಲ್ಲ. ಶೀತಲವಾದ, ಮಂಗಳಕರ, ಸುಖಕರ, ಪವಿತ್ರವಾದ ಮತ್ತು ಸುಗಂಧಯುಕ್ತ ಗಾಳಿಯು ಬೀಸತೊಡಗಿತು. ದಿಕ್ಕುಗಳು ಪ್ರಶಾಂತವಾದವು. ಉತ್ತರದಿಕ್ಕಿನಲ್ಲಿ ಶಂತ ಮೃಗಪಕ್ಷಿಗಳು ಧ್ವನಿಗೈಯುತ್ತಿದ್ದವು. ಸ್ವಲ್ಪವೇ ಸಮಯದಲ್ಲಿ ಪಶ್ಚಿಮದಲ್ಲಿ ಸಹಸ್ರಾಂಶು ಭಗವಾನ್ ದಿವಾಕರನು ಏಕಾಂತದಲ್ಲಿ ವನವನ್ನು ದಹಿಸುತ್ತಿರುವನೋ ಎನ್ನುವಂತೆ ತೋರಿದನು. ಆಗ ಎಲ್ಲ ಮಹರ್ಷಿಗಳೂ ಎದ್ದು ಜನಾರ್ದನ, ಭೀಷ್ಮ ಮತ್ತು ರಾಜಾ ಯುಧಿಷ್ಠಿರನ ಅನುಮತಿಯನ್ನು ಕೇಳಿದರು. ಅನಂತರ ಕೇಶವ, ಪಾಂಡವ, ಸಾತ್ಯಕಿ, ಸಂಜಯ ಮತ್ತು ಶಾರದ್ವತ ಕೃಪರು ಅವರಿಗೆ ಪ್ರಣಾಮಗೈದರು. ಆಗ ಅವರಿಂದ ಅಭಿಪೂಜಿತರಾದ ಆ ಧರ್ಮನಿರತರು “ನಾಳೆ ಸೇರೋಣ!” ಎಂದು ಹೇಳಿ ಇಷ್ಟವಾದಲ್ಲಿಗೆ ತೆರಳಿದರು. ಹಾಗೆಯೇ ಕೇಶವ ಮತ್ತು ಪಾಂಡವರು ಗಾಂಗೇಯನಿಂದ ಬೀಳ್ಕೊಂಡು ಅವನಿಗೆ ಪ್ರದಕ್ಷಿಣೆ ಮಾಡಿ ಶುಭ ರಥಗಳನ್ನು ಏರಿದರು. ಪರ್ವತಗಳಂತಿದ್ದ ಮದಿಸಿದ ಆನೆಗಳಿಂದಲೂ, ಪಕ್ಷಿಗಳಂತೆ ಶೀಘ್ರಗಾಮಿಗಳಾಗಿದ್ದ ಕುದುರೆಗಳಿಂದಲೂ, ಧನುಸ್ಸು ಮೊದಲಾದ ಆಯುಧಗಳನ್ನು ಹಿಡಿದಿದ್ದ ಪದಾತಿಗಳಿಂದಲೂ ಕೂಡಿದ್ದ ಸೇನೆಯು ಕಾಂಚನ-ದಂತಗಳ ನೂಕಿಗಳಿದ್ದ ರಥಗಳ ಮುಂದೆ ಮತ್ತು ಹಿಂದೆ ಬಹಳ ದೂರದವರೆಗೆ – ಮಹಾನದೀ ನರ್ಮದೆಯು ಋಕ್ಷಪರ್ವತದ ಸಮೀಪಕ್ಕೆ ಹೋಗಿ ಪೂರ್ವ-ಪಶ್ಚಿಮದಿಕ್ಕುಗಳಲ್ಲಿ ಹರಿದು ಹೋಗುವಂತೆ – ಸಾಗುತ್ತಿದ್ದಿತು. ಆಗ ಪೂರ್ವ ದಿಕ್ಕಿನಲ್ಲಿ ಭಗವಾನ್ ನಿಶಾಕರ ಚಂದ್ರನು ಉದಯಿಸಿ ಆ ಸೇನೆಯಗಳಿಗೆ ಹರ್ಷವನ್ನಿತ್ತನು. ದಿವಾಕರನಿಂದ ಬಾಡಿಹೋಗಿದ್ದ ಔಷಧೀ ಲತೆಗಳನ್ನು ಚಂದ್ರನು ಪುನಃ ತನ್ನ ಕಿರಣಗಳಿಂದ ಗುಣಯುಕ್ತವನ್ನಾಗಿ ಮಾಡುತ್ತಿದ್ದನು. ಆಗ ಯದುವೃಷಭ-ಪಾಂಡವರು ಸುರಪುರದಂತೆ ಬೆಳಗುತ್ತಿದ್ದ ಪುರವನ್ನು ಪ್ರವೇಶಿಸಿ, ಬಳಲಿದ ಸಿಂಹಗಳು ಗುಹೆಯನ್ನು ಪ್ರವೇಶಿಸುವಂತೆ, ಯಥೋಚಿತ ಶ್ರೇಷ್ಠ ಭವನಗಳನ್ನು ಪ್ರವೇಶಿಸಿದರು. ಅನಂತರ ಮಧುಸೂದನನು ಭವನವನ್ನು ಪ್ರವೇಶಿಸಿ ಮಲಗಿದನು.

[1] ಹೋತಾ-ಉದ್ಗಾತಾ-ಬ್ರಹ್ಮಾ-ಅಧ್ವರ್ಯು

[2] ಬ್ರಹ್ಮಚರ್ಯ-ಗೃಹಸ್ಥ-ವಾನಪ್ರಸ್ಥ-ಸಂನ್ಯಾಸ

[3] ಕರ್ಮಾಂಗಗಳಿಗೆ ಸಂಬಂಧಿಸಿದ ವೇದ ಮಂತ್ರಗಳು

[4] ಮಂತ್ರಾರ್ಥಗಳನ್ನು ವಿವರಿಸುವ ಬ್ರಾಹ್ಮಣವೇ ಇತ್ಯಾದಿಗಳು

[5] ದೇವತಾದಿಗಳನ್ನು ಸ್ತುತಿಸುವ ಮಂತ್ರಗಳು

[6] ಜ್ಯೇಷ್ಠ ಸಾಮ

[7] ಪರಮಾತ್ಮ-ಜೀವ-ಮನಸ್ಸು-ಅಹಂಕಾರಗಳೆಂಬ ನಾಲ್ಕು ತತ್ತ್ವಗಳಿಂದ ವಾಸುದೇವ-ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧರೆಂಬ ನಾಲ್ಕು ರೂಪಗಳನ್ನು ತಾಳಿರುವವನು

[8] ಧಾನಾಕರಂಭ-ಪರಿವಾಪ-ಪುರೋಡಾಶ-ಪಯಸ್ಯ ಇವು ಐದು ವಿಧದ ಹವಿಸ್ಸುಗಳು.

[9] ಹನ್ನೊಂದು ಇಂದ್ರಿಯಗಳು (ಐದು ಜ್ಞಾನೇಂದ್ರಿಯಗಳು (ಶ್ರೋತ್ರ, ತ್ವಕ್ಕು, ಜಕ್ಷುಸು, ಜಿಹ್ವಾ, ಮತ್ತು ನಾಸಿಕ); ಐದು ಕರ್ಮೇಂದ್ರಿಯಗಳು (ವಾಕ್ಕು, ಪಾಣಿ, ಪಾದ, ಪಾಯು ಮತ್ತು ಉಪಸ್ಥ); ಮತ್ತು ಮನಸ್ಸು) ಮತ್ತು ಪಂಚಭೂತಗಳು (ಪೃಥ್ವೀ, ಆಪ್, ತೇಜಸ್ಸು, ವಾಯು, ಆಕಾಶ) – ಒಟ್ಟು ಹದಿನಾರು.

[10] ಸ್ವೇದಜ, ಅಂಡಜ, ಉದ್ಭಿಜ್ಜ ಮತ್ತು ಜರಾಯುಜ

Leave a Reply

Your email address will not be published. Required fields are marked *