ದ್ರೌಪದೀ ಸ್ವಯಂವರ-ವಿವಾಹ
ದ್ರುಷ್ಟದ್ಯುಮ್ನ-ದ್ರೌಪದಿಯರ ಜನನ ವೃತ್ತಾಂತ
ಬಕರಾಕ್ಷಸನನ್ನು ಕೊಂದ ಬಳಿಕ ಪಾಂಡವರು ಏಕಚಕ್ರನಗರದ ಆ ಬ್ರಾಹ್ಮಣನ ಮನೆಯಲ್ಲಿಯೇ ಶ್ರೇಷ್ಠ ಬ್ರಹ್ಮಾಧ್ಯಯನ ನಿರತರಾಗಿ ವಾಸಿಸುತ್ತಿದ್ದರು. ಕೆಲವು ದಿನಗಳ ನಂತರ ಸಂಶಿತವ್ರತ ಬ್ರಾಹ್ಮಣನೋರ್ವನು ಆಶ್ರಯ ಹುಡುಕಿಕೊಂಡು ಆ ಬ್ರಾಹ್ಮಣನ ಮನೆಗೆ ಬಂದನು. ಸದಾ ಸರ್ವ ಅತಿಥಿವ್ರತ ಆ ವಿದ್ವಾನ್ ವಿಪ್ರರ್ಷಭನು ಅವನನ್ನು ಆಹ್ವಾನಿಸಿ ಚೆನ್ನಾಗಿ ಸತ್ಕರಿಸಿ ಆಶ್ರಯವನ್ನಿತ್ತನು. ಆಗ ಕುಂತಿಯ ಸಹಿತ ನರರ್ಷಭ ಸರ್ವ ಪಾಂಡವರೂ ಕಥೆಗಳನ್ನು ಹೇಳುವುದರಲ್ಲಿ ಕುಶಲನಾಗಿದ್ದ ಆ ವಿಪ್ರನನ್ನು ಸುತ್ತುವರೆದರು. ಅವನು ಅವರಿಗೆ ವಿವಿಧ ದೇಶ-ತೀರ್ಥ, ವಿವಿಧ ರಾಜರ, ಮತ್ತು ವಿವಿಧ ಪುರಗಳ ಆಶ್ಚರ್ಯಕರ ಕಥೆಗಳನ್ನು ಹೇಳಿದನು. ಆ ವಿಪ್ರನು ಕಥೆಗಳ ಅಂತ್ಯದಲ್ಲಿ ಪಾಂಚಾಲದೇಶದಲ್ಲಿ ನಡೆಯುವ ಯಾಜ್ಞಸೇನಿಯ ಅದ್ಭುತ ಸ್ವಯಂವರ, ಧೃಷ್ಟಧ್ಯುಮ್ನನ ಉತ್ಪತ್ತಿ, ಶಿಖಂಡಿಯ ಉತ್ಪತ್ತಿ, ದೃಪದನ ಮಹಾಮಖದಲ್ಲಿ ಅಯೋನಿಜೆ ಕೃಷ್ಣೆಯ ಜನನ - ಇವುಗಳ ಕುರಿತು ಹೇಳಿದನು. ಲೋಕದಲ್ಲಿ ನಡೆದಿದ್ದ ಆ ಅದ್ಭುತ ಘಟನೆಗಳನ್ನು ಕೇಳಿದ ಆ ಪುರುಷರ್ಷಭರು ಕಥೆಯನ್ನು ವಿಸ್ತಾರವಾಗಿ ಹೇಳಬೇಕೆಂದು ಮಹಾತ್ಮನಿಗೆ ಕೇಳಿಕೊಂಡರು:
“ವೇದಿಮಧ್ಯದ ಪಾವಕನಿಂದ ದ್ರುಪದಪುತ್ರ ಧೃಷ್ಟಧ್ಯುಮ್ನನ ಮತ್ತು ಕೃಷ್ಣೆಯ ಅದ್ಭುತ ಜನ್ಮವು ಹೇಗೆ ಆಯಿತು? ಹೇಗೆ ಆ ಮಹೇಷ್ವಾಸನು ದ್ರೋಣನಿಂದ ಸರ್ವ ಅಣ್ಯಸ್ತ್ರಗಳನ್ನು ಕಲಿತುಕೊಂಡನು? ಮತ್ತು ಪ್ರಿಯಸಖರಾಗಿದ್ದ ಅವರೀರ್ವರಲ್ಲಿ ಭಿನ್ನತ್ವವು ಹೇಗೆ ಉಂಟಾಯಿತು?”
ಈ ರೀತಿ ಪುರುಷರ್ಷಭರು ಒತ್ತಾಯಿಸಲಾಗಿ ಆ ವಿಪ್ರನು ದ್ರೌಪದಿಯ ಹುಟ್ಟಿನ ಕಥೆಯನ್ನು ಸಂಪೂರ್ಣವಾಗಿ ಹೇಳಿದನು.
***
ಗಂಗಾದ್ವಾರದ ಬಳಿಯಲ್ಲಿ ಮಹಾತಪಸ್ವಿ, ಮಹಾನೃಷಿ, ಮಹಾಪ್ರಾಜ್ಞ, ಸತತ ಸಂಶಿತವ್ರತ ಭರದ್ವಾಜನಿದ್ದನು. ಒಮ್ಮೆ ಅವನು ಗಂಗೆಯಲ್ಲಿ ಸ್ನಾನಕ್ಕೆಂದು ಹೋದಾಗ ಅಲ್ಲಿಗೆ ಮೊದಲೇ ಬಂದು ಅಷ್ಟೇ ಸ್ನಾನವನ್ನು ಮುಗಿಸಿದ್ದ ಸತಿ ಅಪ್ಸರೆ ಘೃತಾಚಿಯನ್ನು ನೋಡಿದನು. ನದೀತೀರದಲ್ಲಿ ನಿಂತಿರುವಾಗ ವಾಯುವು ಅವಳ ವಸ್ತ್ರವನ್ನು ಹಾರಿಸಿದನು ಮತ್ತು ನಗ್ನಳಾದವಳನ್ನು ನೋಡಿ ಋಷಿಯು ಅವಳನ್ನು ಕಾಮಿಸಿದನು. ಮನಸ್ಸನ್ನು ಅವಳಲ್ಲೇ ಅನುರಕ್ತಗೊಳಿಸಿದ ಆ ಕೌಮಾರ ಬ್ರಹ್ಮಚಾರಿಯು ಹೃಷ್ಟನಾಗಿ ರೇತಸ್ಖಲನವಾಯಿತು. ಅದನ್ನು ಋಷಿಯು ಒಂದು ದೊನ್ನೆಯಲ್ಲಿ ಇರಿಸಿದನು. ಅಲ್ಲಿಂದಲೇ ಅವನಿಗೆ ಧೀಮಂತ ಕುಮಾರ ದ್ರೋಣನು ಹುಟ್ಟಿದನು. ಅವನು ವೇದ ಮತ್ತು ವೇದಾಂಗಗಳೆಲ್ಲವನ್ನೂ ಅಧ್ಯಯನ ಮಾಡಿದನು. ಪೃಷತ ಎಂಬ ಹೆಸರಿನ ಪಾರ್ಥಿವನು ಭರದ್ವಾಜನ ಸಖನಾಗಿದ್ದನು. ಅವನಿಗೂ ದ್ರುಪದ ಎಂಬ ಹೆಸರಿನ ಸುತನಿದ್ದನು. ಆ ಕ್ಷತ್ರಿಯರ್ಷಭ ಪಾರ್ಷತನು ನಿತ್ಯವೂ ಆಶ್ರಮಕ್ಕೆ ಹೋಗಿ ದ್ರೋಣನ ಸಹಿತ ಅಧ್ಯಯನ ಮಾಡುತ್ತಿದ್ದನು ಮತ್ತು ಆಟವಾಡುತ್ತಿದ್ದನು. ಪೃಷತನ ಅತೀತದ ನಂತರ ದ್ರುಪದನು ರಾಜನಾದನು.
ರಾಮನು ತನ್ನ ಸರ್ವ ಸಂಪತ್ತನ್ನೂ ಕೊಡುತ್ತಿದ್ದಾನೆ ಎಂದು ಕೇಳಿದ ಭರದ್ವಾಜಸುತ ದ್ರೋಣನು ವನಕ್ಕೆ ತೆರಳುತ್ತಿದ್ದ ರಾಮನಿಗೆ ಹೇಳಿದನು:
“ದ್ವಿಜರ್ಷಭ! ವಿತ್ತವನ್ನು ಅಪೇಕ್ಷಿಸಿ ಬಂದಿರುವ ನನ್ನನ್ನು ದ್ರೋಣನೆಂದು ತಿಳಿ.” ರಾಮನು ಹೇಳಿದನು: “ನನ್ನ ಈ ದೇಹವೊಂದೇ ಇಂದು ಉಳಿದಿದೆ. ಬ್ರಾಹ್ಮಣ! ನನ್ನ ಅಸ್ತ್ರಗಳನ್ನು ಅಥವಾ ನನ್ನ ಈ ಶರೀರವನ್ನು ವರವನ್ನಾಗಿ ಕೇಳಿಕೋ.”
ದ್ರೋಣನು ಹೇಳಿದನು:
“ನಿನ್ನ ಸರ್ವ ಅಸ್ತ್ರಗಳನ್ನೂ ನೀಡು. ಅವುಗಳ ಪ್ರಯೋಗ ಮತ್ತು ಸಂಹಾರಗಳ ಕುರಿತು ಸರ್ವವನ್ನೂ ನನಗೆ ನೀಡಬೇಕು.”
ಹಾಗೆಯೇ ಆಗಲಿ ಎಂದು ಆ ಭೃಗುನಂದನನು ಅವುಗಳನ್ನು ನೀಡಲು ಒಪ್ಪಿದನು. ದ್ರೋಣನು ಅವುಗಳನ್ನು ಪಡೆದು ಕೃತಕೃತ್ಯನಾದನು. ರಾಮನಿಂದ ಅವನು ನರರಲ್ಲಿರುವುದೆಲ್ಲಕ್ಕಿಂತಲೂ ಅಧಿಕ ಪರಮ ಸಮ್ಮತ ಬ್ರಹ್ಮಾಸ್ತ್ರವನ್ನು ಸಂಪ್ರಹೃಷ್ಟಮನಸ್ಕನಾಗಿ ಸ್ವೀಕರಿಸಿದನು. ನಂತರ ಪ್ರತಾಪಿ ಭಾರದ್ವಾಜನು ದ್ರುಪದನ ಬಳಿ ಹೋಗಿ “ಪುರುಷವ್ಯಾಘ್ರ! ನನ್ನನ್ನು ನಿನ್ನ ಸಖನೆಂದು ತಿಳಿ” ಎಂದನು. ದ್ರುಪದನು ಹೇಳಿದನು:
“ಅಶ್ರೋತ್ರಿಯು ಶ್ರೋತ್ರಿಯ, ಅರಥಿಯು ರಥಿಯ, ಮತ್ತು ಪಾರ್ಥಿವನೋರ್ವನು ರಾಜನಲ್ಲದವನ ಸಖನಾಗಲು ಸಾದ್ಯವಿಲ್ಲ. ಹಳೆಯ ಸಖನು ಯಾರಿಗೆ ತಾನೇ ಬೇಕು?”
ಆ ಬುದ್ಧಿವಂತನು ಮನಸ್ಸಿನಲ್ಲಿಯೇ ಪಾಂಚಲ್ಯನ ವಿರುದ್ಧ ನಿಶ್ವಯಿಸಿ ಕುರುಮುಖ್ಯರ ನಗರ ನಾಗಸಾಹ್ವಯಕ್ಕೆ ಹೋದನು. ಆಗಮಿಸಿದ ಧೀಮಂತ ದ್ರೋಣನಿಗೆ ಭೀಷ್ಮನು ವಿವಿಧ ಸಂಪತ್ತುಗಳನ್ನು ಕೊಟ್ಟು ತನ್ನ ಮೊಮ್ಮಕ್ಕಳನ್ನು ಶಿಷ್ಯರನ್ನಾಗಿ ಒಪ್ಪಿಸಿದನು. ದ್ರುಪದನಿಗೆ ಕೇಡನ್ನು ಬಯಸಿದ ವಿದ್ವಾನ್ ದ್ರೋಣನು ಎಲ್ಲ ಶಿಷ್ಯರನ್ನೂ ಕರೆದು ಈ ಮಾತುಗಳನ್ನಾಡಿದನು:
“ಗುರುದಕ್ಷಿಣೆಯಾಗಿ ಪಡೆಯಬೇಕೆಂದು ನನ್ನ ಮನಸ್ಸಿನಲ್ಲಿ ಒಂದು ವಿಚಾರವಿದೆ. ಅನಘರೇ! ಕೃತಾಸ್ತ್ರರಾದನಂತರ ನೀವು ನನಗೆ ಅದನ್ನು ನಿಜವಾಗಿಯೂ ಕೊಡುತ್ತೀರಿ ಎಂದು ಭರವಸೆಯನ್ನು ನೀಡಿ.”
ಪಾಂಡವರೆಲ್ಲರೂ ಕೃತಾಸ್ತ್ರರೂ ಕೃತನಿಶ್ರಮರೂ ಆದ ನಂತರ ದ್ರೋಣನು ಪುನಃ ವೇತನದ ಕುರಿತು ಕೇಳಿದನು:
“ಚತ್ರವತಿಯಲ್ಲಿ ಪಾರ್ಷತ ದ್ರುಪದನೆಂಬ ಹೆಸರಿನ ನರೇಶ್ವರನಿದ್ದಾನೆ. ಶೀಘ್ರದಲ್ಲಿಯೇ ಅವನ ರಾಜ್ಯವನ್ನು ಅವನಿಂದ ಗೆದ್ದು ನನಗೆ ನೀಡಿ!”
ಆಗ ಪಂಚ ಪಾಂಡುಸುತರು ದ್ರುಪದನನ್ನು ಯುದ್ಧದಲ್ಲಿ ನಿರ್ಜಯಿಸಿ ಸಚಿವ ಸಹಿತ ಅವನನ್ನು ಬಂಧಿಸಿ ದ್ರೋಣನಲ್ಲಿಗೆ ಕರೆತಂದರು. ದ್ರೋಣನು ದ್ರುಪದನಿಗೆ ಹೇಳಿದನು:
“ನರಾಧಿಪ! ನಿನ್ನಿಂದ ಸಖ್ಯವನ್ನು ಪುನಃ ಪ್ರಾರ್ಥಿಸುತ್ತಿದ್ದೇನೆ. ಯಾವ ರಾಜನೂ ರಾಜನಲ್ಲದವನ ಸಖ್ಯನಾಗಲಾರ ಎಂದು ನಿನಗೆ ತಿಳಿದೇ ಇದೆ. ಆದುದರಿಂದ ಯಜ್ಞಸೇನ! ನಾನು ನಿನ್ನ ರಾಜ್ಯಕ್ಕಾಗಿ ಪ್ರಯತ್ನಿಸಿದೆ. ನೀನು ಭಾಗೀರಥಿಯ ದಕ್ಷಿಣದಲ್ಲಿ ರಾಜನಾಗಿರು ಮತ್ತು ನಾನು ಉತ್ತರದಲ್ಲಿ ರಾಜನಾಗಿರುತ್ತೇನೆ.”
ಅಷ್ಟು ದೊಡ್ಡ ಅಪಮಾನವು ಅವನ ಹೃದಯವನ್ನು ಒಂದು ಕ್ಷಣವೂ ಬಿಡಲಿಲ್ಲ ಮತ್ತು ರಾಜನು ದುರ್ಮನಸ್ಕನೂ ಕೃಶನೂ ಆದನು. ಸೇಡಿನ ಮನಸ್ಸುಳ್ಳ ರಾಜ ದ್ರುಪದನು ಕರ್ಮಸಿದ್ಧ ದ್ವಿಜರ್ಷಭರನ್ನು ಹುಡುಕುತ್ತಾ ಹಲವಾರು ಬ್ರಾಹ್ಮಣ ವಾಸಸ್ಥಳಗಳಿಗೆ ಅಲೆದಾಡಿದನು. ಶೋಕದಿಂದ ಚೇತನವನ್ನೇ ಕಳೆದುಕೊಂಡು ಪುತ್ರಜನ್ಮವನ್ನು ಬಯಸಿ, “ನನಗೆ ಶ್ರೇಷ್ಠ ಮಕ್ಕಳಿಲ್ಲ!” ಎಂದು ನಿತ್ಯವೂ ಚಿಂತಿಸುತ್ತಿದ್ದನು. ಹುಟ್ಟಿದ್ದ ಪುತ್ರರನ್ನು ವೇದನೆಯಿಂದ “ಈ ಬಂಧುಗಳಿಗೆ ಧಿಕ್ಕಾರ!” ಎಂದು ಹೇಳಿದನು. ದ್ರೋಣನ ವಿರುದ್ಧ ಪ್ರತೀಕಾರವನ್ನು ಬಯಸುತ್ತಿದ್ದ ಅವನು ಯಾವಾಗಲೂ ನಿಟ್ಟುಸಿರು ಬಿಡುತ್ತಿದ್ದನು. ಅ ನೃಪಶ್ರೇಷ್ಠನು ಎಷ್ಟೇ ಪ್ರಯತ್ನಪಟ್ಟರೂ ದ್ರೋಣನ ವಿನಯ, ಶಿಕ್ಷಣ ಮತ್ತು ಚಾರಿತ್ರಗಳ ಪ್ರಭಾವವನ್ನು ತನ್ನ ಕ್ಷತ್ರಿಯ ಬಲದಿಂದ ಹೇಗೆ ಹಿಂದಾಗಿಸಬೇಕು ಎನ್ನುವುದನ್ನು ಕಾಣಲಾರದೇ ಹೋದನು. ಹೀಗೆ ಗಂಗಾತೀರದಲ್ಲಿ ಅಲೆದಾಡುತ್ತಾ ಮಹೀಪತಿಯು ಕಲ್ಮಾಶೀಯ ಬಳಿಯಲ್ಲಿ ಬ್ರಾಹ್ಮಣರು ವಾಸಿಸುತ್ತಿದ್ದ ಪುಣ್ಯಸ್ಥಳವೊಂದಕ್ಕೆ ಬಂದನು. ಅಲ್ಲಿ ಸ್ನಾತಕರಲ್ಲದ, ವ್ರತನಿರತರಲ್ಲದ ದ್ವಿಜರು ಯಾರೂ ಇರಲಿಲ್ಲ. ಅಲ್ಲಿ ಆ ಮಹಾಭಾಗನು ಇಬ್ಬರು ಸಂಶಿತವ್ರತ ಬ್ರಾಹ್ಮಣರನ್ನು ಕಂಡನು. ಪೃಷತಾತ್ಮಜನು ಅಲ್ಲಿ ಯಾಜ ಮತ್ತು ಉಪಯಾಜರೆಂಬ ಇಬ್ಬರು ಸಂಹಿತಾಧ್ಯಯನ ಯುಕ್ತ ಕಾಶ್ಯಪ ಗೋತ್ರೋತ್ಪನ್ನ ಬ್ರಹ್ಮರ್ಷಿಗಳನ್ನು ಕಂಡನು. ಪಾರುಮಾಡಲು ಯುಕ್ತರೂಪ ಆ ಬ್ರಾಹ್ಮಣಋಷಿಸತ್ತಮರನ್ನು ಅವನು ಎಲ್ಲಾ ರೀತಿಯ ಆಸೆಗಳನ್ನು ತೋರಿಸಿ, ಎಡೆಬಿಡದೇ ಆಮಂತ್ರಿಸಿದನು. ತನ್ನ ಬಲ ಮತ್ತು ಬುದ್ಧಿಯನ್ನು ಅವರಮೇಲೆ ಹಾಕಿ ತಾನು ದುರ್ಬಲನಾಗುತ್ತಿದ್ದೇನೆಂದು ತಿಳಿದ ಅವನು ಧೃತವ್ರತ ಉಪಯಾಜನನ್ನು ಸುತ್ತು ಬಳೆಸಿ ಆಸೆತೋರಿಸಿ ಗೆಲ್ಲಲು ಪ್ರಯತ್ನಿಸಿದನು. ಅವನ ಪಾದಶುಶ್ರೂಷಣೆಯಲ್ಲಿ ನಿರತನಾಗಿ, ಪ್ರಿಯಮಾತುಗಳನ್ನಾಡುತ್ತಾ, ಬೇಕಾದುದೆಲ್ಲವನ್ನೂ ಕೊಡುತ್ತಾ, ನ್ಯಾಯದಂತೆ ನಡೆದುಕೊಳ್ಳುತ್ತಾ ಉಪಯಾಜನಿಗೆ ಹೇಳಿದನು:
“ಬ್ರಾಹ್ಮಣ! ದ್ರೋಣನ ಮೃತ್ಯುವಾಗಬಲ್ಲ ಪುತ್ರನನ್ನು ಪಡೆಯುವುದಕ್ಕೆ ಏನಾದರೂ ಕರ್ಮವಿದೆಯೇ? ಹಾಗೇನಾದರೂ ಇದ್ದರೆ ಅದನ್ನು ನಡೆಸುವುದಕ್ಕೆ ನಾನು ನಿನಗೆ ಎಷ್ಟು ಬೇಕಾದರೂ ಗೋವುಗಳನ್ನು ನೀಡುತ್ತೇನೆ ಅಥವಾ ನಿನ್ನ ಮನಸ್ಸಿಗೆ ಪ್ರಿಯವಾದ ಏನನ್ನೂ ಎಲ್ಲವನ್ನೂ ಕೊಡುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.”
“ನಾನು ಮಾಡುವುದಿಲ್ಲ!” ಎಂದು ಆ ಋಷಿಯು ಉತ್ತರಿಸಿದನು. ದ್ರುಪದನು ಅವನನ್ನು ಗೆಲ್ಲಲೋಸುಗ ಪುನಃ ಆರಾಧಿಸುವುದನ್ನು ಮುಂದುವರೆಸಿದನು. ಒಂದು ವರ್ಷವು ಕಳೆದನಂತರ ಆ ದ್ವಿಜೋತ್ತಮ ಉಪಯಜನು ಒಳ್ಳೆಯ ಸಮಯವನ್ನು ನೋಡಿ ಮಧುರವಾಣಿಯಿಂದ ಹೇಳಿದನು:
“ನನ್ನ ಜ್ಯೇಷ್ಠ ಭ್ರಾತನು ಒಮ್ಮೆ ವನದಲ್ಲಿ ಸಂಚರಿಸುತ್ತಿರುವಾಗ ಭೂಮಿಯ ಮೇಲೆ ಬಿದ್ದಿರುವ ಫಲವೊಂದನ್ನು ಅಶೌಚವೆಂದು ತಿಳಿಯದೇ ಎತ್ತಿಕೊಂಡಿದ್ದನು. ಅವನನ್ನು ಹಿಂಬಾಲಿಸುತ್ತಿದ್ದ ನಾನು ಅಣ್ಣನ ಈ ಅಸಾಂಪ್ರತ ಕ್ರಿಯೆಯನ್ನು ನೋಡಿದೆನು. ಅವನು ಅದನ್ನು ತೆಗೆದುಕೊಳ್ಳುವಾಗ ಯಾವುದೇ ರೀತಿಯ ವಿಮರ್ಷೆಯನ್ನೂ ಮಾಡಲಿಲ್ಲ. ಫಲವನ್ನು ನೋಡಿದರೂ ಅದಕ್ಕೆ ಹತ್ತಿಕೊಂಡಿದ್ದ ದೋಷಗಳನ್ನು ನೋಡಲಿಲ್ಲ. ಒಂದು ವಿಷಯದಲ್ಲಿ ಶೌಚ ಅಶೌಚಗಳ ಬಗ್ಗೆ ಯೋಚಿಸದಿದ್ದವನು ಇನ್ನೊಂದು ವಿಷಯದ ಕುರಿತು ಏಕೆ ಯೋಚಿಸಿಯಾನು? ಸಂಹಿತಾಧ್ಯಯನವನ್ನು ಮಾಡುತ್ತಾ ಗುರುಕುಲದಲ್ಲಿ ವಾಸಿಸುತ್ತಿರುವಾಗಲೂ ಅವನು ಬೇರೆಯವರಿಂದ ಎಂಜಲಾಗಿ ಬಿಟ್ಟಿದ್ದ ಭಿಕ್ಷವನ್ನು ಸದಾ ತಿನ್ನುತ್ತಿದ್ದನು ಮತ್ತು ಪುನಃ ಪುನಃ ಅಂಥ ಆಹಾರದ ಗುಣಗಾನಮಾಡುತ್ತಿದ್ದನು. ಅದರಿಂದ ನನ್ನ ಅಣ್ಣನು ಫಲಾರ್ಥಿ ಎಂದು ನನಗನ್ನಿಸುತ್ತದೆ. ನೃಪತೇ! ಅವನಲ್ಲಿಯೇ ಹೋಗು. ಅವನು ನಿನ್ನ ಸಂಯಾಜಿಯಾಗುತ್ತಾನೆ.”
ಜುಗುಪ್ಸಮನಸ್ಕ ನೃಪತಿಯು ಉಪಯಾಜನ ಮತುಗಳನ್ನು ಕೇಳಿ ಮನಸ್ಸಿನಲ್ಲಿಯೇ ಚಿಂತಿಸಿದನು. ಸರ್ವಧರ್ಮವಿದ ನೃಪತಿಯು ಪೂಜಾರ್ಹ ಋಷಿ ಯಾಜನನ್ನು ಪೂಜಿಸಿ ಹೇಳಿದನು:
“ನಾನು ನಿನಗೆ ಎಂಭತ್ತು ಸಾವಿರ ಗೋವುಗಳನ್ನು ಕೊಡುತ್ತೇನೆ. ನನಗಾಗಿ ಯಜ್ಞವನ್ನು ಮಾಡು ವಿಭೋ! ದ್ರೋಣವೈರದಿಂದ ಅಭಿಸಂತಪ್ತ ನನ್ನನ್ನು ನೀನು ಬಿಡುಗಡೆಮಾಡಬೇಕು. ಬ್ರಹ್ಮವಿದರಲ್ಲಿ ಶ್ರೇಷ್ಠನಾದ ಅವನು ಬ್ರಹ್ಮಾಸ್ತ್ರದಲ್ಲಿ ಅನುತ್ತಮನಾಗಿದ್ದಾನೆ. ಹಾಗಾಗಿ ದ್ರೋಣನು ಸ್ನೇಹಿತರ ಮಧ್ಯದ ಜಗಳದಲ್ಲಿ ನನ್ನನ್ನು ಪರಾಜಯಗೊಳಿಸಿದನು. ಎಷ್ಟೇ ಅಗ್ರಣಿಯಾದರೂ ಕೌರವರ ಪ್ರಮುಖ ಆಚಾರ್ಯ ಧೀಮಂತ ಭಾರದ್ವಾಜನ ಸರಿಸಮ ಕ್ಷತ್ರಿಯನು ಪೃಥ್ವಿಯಲ್ಲಿಯೇ ಇಲ್ಲ. ದ್ರೋಣನ ಶರಜಾಲಗಳು ಪ್ರಾಣಿಗಳ ದೇಹಹರಣ ಮಾಡುತ್ತವೆ, ಮತ್ತು ಅವನ ಆರು ಅಡಿ ಎತ್ತರದ ಮಹಾ ಧನುಸ್ಸಿನ ಸರಿಸಾಟಿಯಾದುದು ಇನ್ನೊಂದಿಲ್ಲ. ಮಹೇಷ್ವಾಸ ಮಹಾತ್ಮ ಭಾರದ್ವಾಜನ ಬ್ರಾಹ್ಮಣವೇಗವು ಕ್ಷಾತ್ರವೇಗವನ್ನು ನಿಸ್ಸಂಶಯವಾಗಿಯೂ ಸೋಲಿಸುತ್ತದೆ. ಕ್ಷತ್ರಿಯರ ಛೇದನೆಗೆ ವಿಹಿತನಾಗಿ ಜಾಮದಗ್ನಿಯಂತೆ ಬಂದಿರುವ ಅವನ ಘೋರ ಅಸ್ತ್ರಬಲವು ಭೂಮಿಯ ನರರಿಂದ ಸಹಿಸಲಸಾಧ್ಯವಾದುದು. ತನ್ನ ಬ್ರಾಹ್ಮಣ ತೇಜಸ್ಸಿನಿಂದ ಅಗ್ನಿಯಂತೆ ಪ್ರಜ್ವಲಿಸುತ್ತಿರುವ ಅವನು ರಣರಂಗದಲ್ಲಿ ತುಪ್ಪದಿಂದ ಇನ್ನೂ ಉರಿಯುವ ಬೆಂಕಿಯಂತೆ ಕ್ಷತ್ರಿಯರನ್ನು ಸುಟ್ಟುಹಾಕುತ್ತಾನೆ. ಬ್ರಾಹ್ಮಣ ಮತ್ತು ಕ್ಷತ್ರಿಯರು ಎದುರಾದಾಗ ಬ್ರಹ್ಮತೇಜಸ್ಸೇ ಮೇಲಾಗುತ್ತದೆ. ಕೇವಲ ನನ್ನ ಕ್ಷತ್ರಿಯ ಬಲದಿಂದ ನಾನು ಸೋಲುತ್ತೇನೆ. ಆದರೆ ಈಗ ನಾನು ಬ್ರಹ್ಮವಿತ್ತಮ ನಿನ್ನನ್ನು ಸೇವಿಸಿ ದ್ರೋಣನಿಗಿಂಥಲೂ ವಿಶಿಷ್ಟ ಬ್ರಹ್ಮತೇಜಸ್ಸನ್ನು ಪಡೆದಿದ್ದೇನೆ. ಯುದ್ಧದಲ್ಲಿ ದುರ್ಜಯ ದ್ರೋಣಾಂತಕ ಪುತ್ರನನ್ನು ಕೊಡುವಂಥ ಕರ್ಮವನ್ನು ಯಾಜಿಸು. ನಿನಗೆ ಬೇಕಾದಷ್ಟು ಗೋವುಗಳನ್ನು ಕೊಡುತ್ತೇನೆ.”
“ಹಾಗೆಯೇ ಆಗಲಿ!” ಎಂದು ಹೇಳಿದ ಯಾಜನು ಯಜ್ಞಕ್ಕೆ ತಯಾರಿ ನಡೆಸಿದನು. ಅವನು ಉಪಯಾಜನಿಗೆ ಮನಸ್ಸಿಲ್ಲದಿದ್ದರೂ “ಅಣ್ಣನಿಗೆ ಸಹಾಯ ಮಾಡು!” ಎಂದು ಒತ್ತಾಯಿಸಿದನು. ನಂತರ ಯಾಜನೂ ಕೂಡ ದ್ರೋಣವಿನಾಶಕ್ಕೆ ಭರವಸೆಯನ್ನಿತ್ತನು. ನಂತರ ಮಹಾತಪಸ್ವಿ ಉಪಯಾಜನು ನರೇಂದ್ರನಿಗೆ ಪುತ್ರಫಲವನ್ನು ನೀಡುವಂಥ ಕರ್ಮವನ್ನು ನಡೆಸಲು ಸೂಚನೆಯನ್ನಿತ್ತನು:
“ರಾಜನ್! ನಿನಗೆ ಮಹಾವೀರ, ಮಹಾತೇಜಸ್ವಿ, ಮಹಾಬಲಿ ಪುತ್ರನಾಗುವ ಹಾಗೆ ಮಾಡುವ ವಿಧಾನವಿದು.”
ಭಾರದ್ವಾಜನ ಹಂತಾರನನ್ನು ಅಭಿಸಂಧಾನ ಮಾಡಿದ ಭೂಮಿಪ ದ್ರುಪದನು ಕರ್ಮಸಿದ್ಧಿಗಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಿದನು. ಹವನದ ಅಂತ್ಯದಲ್ಲಿ ಯಾಜನು ದೇವಿ ರಾಣಿಯನ್ನು ಕರೆದನು:
“ಪೃಷತಿ ರಾಣಿ! ನನ್ನೊಂದಿಗೆ ಮಿಥುನದ ಕಾಲವೊದಗಿದೆ. ನನ್ನ ಬಳಿ ಬಾ.”
ಆಗ ದೇವಿಯು ಹೇಳಿದಳು:
“ಬ್ರಾಹ್ಮಣ! ನನ್ನ ಮುಖವು ಅವಲಿಪ್ತವಾಗಿದೆ. ನಾನು ಪುಣ್ಯಗಂಧಗಳನ್ನು ಧರಿಸಿದ್ದೇನೆ. ನನ್ನ ಪ್ರಿಯ ಸುತನಿಗಾಗಿ ಉಪರುದ್ಧಳಾಗಿದ್ದೇನೆ. ನಿಲ್ಲು!”
ಅದಕ್ಕೆ ಯಾಜನು ಹೇಳಿದನು:
“ನೀನು ಇಲ್ಲಿಗೆ ಬಾ ಅಥವಾ ಅಲ್ಲಿಯೇ ನಿಲ್ಲು. ಯಾಜನಿಂದ ಶ್ರಪಿತ ಮತ್ತು ಉಪಯಾಜನಿಂದ ಮಂತ್ರಿತ ಈ ಹವಿಸ್ಸು ಹೇಗೆ ತಾನೇ ನಿನ್ನ ಆಸೆಯನ್ನು ನೆರವೇರಿಸಲಾರದು?”
ಹೀಗೆ ಹೇಳಿದ ಯಾಜನು ಸಂಸ್ಕೃತಗೊಂಡ ಹವಿಸ್ಸನ್ನು ಆಹುತಿಯನ್ನಾಗಿತ್ತನು. ಆ ಪಾವಕನಿಂದ ದೇವಸನ್ನಿಭ ಜ್ವಾಲವರ್ಣಿ, ಘೋರರೂಪಿ, ಕಿರೀಟಿ, ಉತ್ತಮ ಕವಚಧಾರಿ ಕುಮಾರನೋರ್ವನು ಹೊಳೆಯುತ್ತಿರುವ ಖಡ್ಗ ಮತ್ತು ಶರಗಳೊಂದಿಗೆ ಧನುಸ್ಸನ್ನೂ ಹಿಡಿದು ಹೂಂಕಾರಗೈಯುತ್ತಾ ಎದ್ದು ಬಂದನು. ಅವನು ಶ್ರೇಷ್ಠ ರಥವನ್ನೇರಿ ಮುಂದೆ ಬರುತ್ತಿದ್ದಂತೆಯೇ ಪಾಂಚಾಲರು ಪ್ರಹೃಷ್ಠರಾಗಿ ‘ಸಾಧು! ಸಾಧು!’ ಎಂದು ಉದ್ಗಾರಗೈದರು. ಆಗ
“ಈ ಪಾಂಚಾಲರ ಯಶಸ್ಕರ, ರಾಜನ ಶೋಕಾಪಹ ಭಯಾಪಹ ರಾಜಪುತ್ರನು ದ್ರೋಣವಧೆಗಾಗಿಯೇ ಹುಟ್ಟಿದ್ದಾನೆ!”
ಎಂದು ಅದೃಶ್ಯ ಖೇಚರ ಮಹಾಭೂತವೊಂದು ಹೇಳಿತು.
ನಂತರ ವೇದಿಮಧ್ಯದಿಂದ ಸುಭಗೆ, ದರ್ಶನೀಯಾಂಗಿ, ವೇದಿಮಧ್ಯಾ, ಮನೋರಮೆ ಕುಮಾರಿ ಪಾಂಚಾಲಿಯೂ ಎದ್ದು ಬಂದಳು. ಶ್ಯಾಮಳಾದ ಅವಳು ಪದ್ಮಪಲಾಶಾಕ್ಷಿಯೂ, ನೀಲಕುಂಜಿತ ಮೂರ್ಧಜೆಯೂ ಆಗಿದ್ದು ಸಾಕ್ಷಾದ್ ಅಮರವರ್ಣಿನಿಯು ಮಾನುಷ ದೇಹವನ್ನು ಧರಿಸಿದ್ದಾಳೆಯೋ ಎಂದು ತೋರುತ್ತಿದ್ದಳು. ಅವಳಿಂದ ಹೊರಸೂಸುತ್ತಿದ್ದ ನೀಲೋತ್ಪಲ ಸಮಾನ ಸುಗಂಧವು ಒಂದು ಕ್ರೋಶದವರೆಗೂ ಪ್ರವಾಹಿಸುತ್ತಿತ್ತು. ಅವಳ ಪರಮ ರೂಪವು ಅತಿ ಸುಂದರವಾಗಿದ್ದು ಭೂವಿಯಲ್ಲಿಯೇ ಅವಳ ಸರಿಸಾಟಿಯಾದವಳು ಯಾರೂ ಇರಲಿಲ್ಲ. ಆ ಸುಶ್ರೋಣಿಯು ಹುಟ್ಟುತ್ತಿದ್ದ ಹಾಗೆಯೇ ಅಶರೀರವಾಣಿಯು ನುಡಿಯಿತು:
“ಸರ್ವ ಸ್ತ್ರೀಯರಲ್ಲಿ ಶ್ರೇಷ್ಠೆ ಈ ಕೃಷ್ಣೆಯು ಕ್ಷತ್ರಿಯರ ಕ್ಷಯವನ್ನು ನಡೆಸಿಕೊಡುತ್ತಾಳೆ. ಈ ಸುಮಧ್ಯಮೆಯು ಕಾಲಬಂದಾಗ ಸುರಕಾರ್ಯವನ್ನು ನಡೆಸಿಕೊಡುತ್ತಾಳೆ ಮತ್ತು ಅವಳ ಕಾರಣದಿಂದಾಗಿ ಕ್ಷತ್ರಿಯರಿಗೆ ಮಹಾ ಭಯವೊಂದು ಉಂಟಾಗುತ್ತದೆ!”
ಇದನ್ನು ಕೇಳಿದ ಪಾಂಚಾಲರೆಲ್ಲರೂ ಸಿಂಹಸಂಘದಂತೆ ಗರ್ಜಿಸಿದರು ಮತ್ತು ಹರ್ಷಸಂಪೂರ್ಣರಾದ ಅವರನ್ನು ವಸುಂಧರೆಯು ಸಹಿಸಲು ಅಸಮರ್ಥಳಾದಳು.
ಅವರೀರ್ವರನ್ನೂ ನೋಡಿದ ಸುತಾರ್ಥಿನೀ ಪೃಷತಿಯು ಯಾಜನಲ್ಲಿ ಕೇಳಿಕೊಂಡಳು:
“ಇವರೀರ್ವರು ನನ್ನನ್ನು ಬಿಟ್ಟು ಬೇರೆ ಯಾರನ್ನೂ ತಾಯಿಯನ್ನಾಗಿ ತಿಳಿಯದಿರಲಿ!”
ರಾಜನಿಗೆ ಪ್ರಿಯವಾದುದನ್ನು ಮಾಡಲು ಬಯಸಿದ ಯಾಜನು “ಹಾಗೆಯೇ ಆಗಲಿ!” ಎಂದನು. ಆ ಸಂಪೂರ್ಣ ಮಾನಸ ದ್ವಿಜರು ಅವರೀರ್ವರಿಗೆ ಹೆಸರುಗಳನ್ನಿಟ್ಟರು:
“ಧೃಷ್ಟ, ಅತಿಘೃಷ್ಣು ಮತ್ತು ಧ್ಯುತಸಂಭವನಾದ ದ್ರುಪದನ ಈ ಕುಮಾರನು ಧೃಷ್ಟಧ್ಯುಮ್ನನಾಗುತ್ತಾನೆ. ಬಣ್ಣದಲ್ಲಿ ಕೃಷ್ಣೆಯಾಗಿರುವ ಇವಳು ಕೃಷ್ಣೆ!”
ಎಂದು ಕರೆದರು. ಹೀಗೆ ದ್ರುಪದನಿಗೆ ಈ ಅವಳಿ ಮಕ್ಕಳು ಮಹಾಮಖದಲ್ಲಿ ಹುಟ್ಟಿದರು. ಪ್ರತಾಪಿ ಭಾರದ್ವಾಜನು ಪಾಂಚಾಲ್ಯ ಧೃಷ್ಟಧ್ಯುಮ್ನನನ್ನು ತನ್ನ ಮನೆಗೇ ಕರೆಸಿಕೊಂಡು ಅವನಿಗೆ ಅಸ್ತ್ರಗಳ ಶಿಕ್ಷಣವನ್ನಿತ್ತನು. ದೈವವು ಅಮೋಕ್ಷಣೀಯವಾದದ್ದು ಎಂದು ತಿಳಿದ ಮಹಾಮತಿ ದ್ರೋಣನು ತನ್ನ ಕೀರ್ತಿಯನ್ನು ರಕ್ಷಿಸುವುದಕ್ಕೋಸ್ಕರ ಈ ರೀತಿ ಮಾಡಿದನು.
***
ಇದನ್ನು ಕೇಳಿದ ಮಹಾರಥಿ ಕೌಂತೇಯರು ಎಲ್ಲರೂ ಈಟಿ ಚುಚ್ಚಿದಂತವರಾಗಿ ಅಸ್ವಸ್ಥಮನಸ್ಕರಾದರು. ವಿಭ್ರಾಂತರಾಗಿ ಗತಚೇತಸರಾದ ಮಕ್ಕಳನ್ನು ನೋಡಿ ಸತ್ಯವಾದಿನೀ ಕುಂತಿಯು ಯುಧಿಷ್ಠಿರನಿಗೆ ಹೇಳಿದಳು:
“ಯುಧಿಷ್ಠಿರ! ಈ ಬ್ರಾಹ್ಮಣನ ಮನೆಯಲ್ಲಿದ್ದುಕೊಂಡು ಈ ರಮ್ಯ ಪುರದಲ್ಲಿ ಭಿಕ್ಷೆಬೇಡಿಕೊಂಡು ನಾವು ಬಹಳ ದಿನಗಳನ್ನು ಸುಖವಾಗಿ ಕಳೆದಿದ್ದೇವೆ. ಇಲ್ಲಿರುವ ರಮಣೀಯ ವನ ಉಪವನಗಳೆಲ್ಲವನ್ನೂ ಪುನಃ ಪುನಃ ನೋಡಿಯಾಗಿದೆ. ಅವುಗಳನ್ನೇ ಪುನಃ ನೋಡಲು ಮನಸ್ಸಾಗಲಿಕ್ಕಿಲ್ಲ. ನಮಗೆ ಇಲ್ಲಿ ಇನ್ನು ಭಿಕ್ಷವೂ ಅಷ್ಟೊಂದು ದೊರೆಯಲಿಕ್ಕಿಲ್ಲ. ನೀನು ಒಪ್ಪಿಕೊಂಡರೆ ನಾವು ಅಪೂರ್ವದರ್ಶನವೂ ರಮಣೀಯವೂ ಆದ ಪಾಂಚಾಲರಲ್ಲಿಗೆ ಹೋಗುವುದು ಒಳ್ಳೆಯದೆನಿಸುತ್ತದೆ. ಪಾಂಚಾಲರಲ್ಲಿ ಸುಭಿಕ್ಷವಾಗಿದೆ ಎಂದು ಕೇಳಿದ್ದೇನೆ. ರಾಜ ಯಜ್ಞಸೇನನು ಬ್ರಹ್ಮಣ್ಯ ಎಂದೂ ಕೇಳಿದ್ದೇನೆ. ಒಂದೇ ಸ್ಥಳದಲ್ಲಿ ಬಹಳ ಕಾಲ ವಾಸಮಾಡುವುದು ಸರಿಯಲ್ಲವೆಂದು ನನ್ನ ಅಭಿಪ್ರಾಯ. ನೀನು ಒಪ್ಪಿಕೊಳ್ಳುವೆಯಾದರೆ ನಾವು ಅಲ್ಲಿಗೆ ಹೋಗುವುದು ನಮಗೆ ಒಳ್ಳೆಯದಾಗುತ್ತದೆ.”
ಯುಧಿಷ್ಠಿರನು ಹೇಳಿದನು:
“ನೀನು ಬಯಸಿದ ಕಾರ್ಯವು ನಮಗೆ ಪರಮಹಿತವಾಗುತ್ತದೆ. ಆದರೆ ನನ್ನ ಅನುಜರು ಹೋಗಲು ಬಯಸುತ್ತಾರೋ ಇಲ್ಲವೋ ಗೊತ್ತಿಲ್ಲ.”
ಆಗ ಕುಂತಿಯು ಹೊರಡುವುದರ ಕುರಿತು ಭೀಮಸೇನ, ಅರ್ಜುನ ಮತ್ತು ಯಮಳರಿಗೆ ಹೇಳಿದಾಗ, ಅವರೆಲ್ಲರೂ ಹಾಗೆಯೇ ಆಗಲಿ ಎಂದರು. ಆ ವಿಪ್ರನನ್ನು ಬೀಳ್ಕೊಂಡು ಪುತ್ರರ ಸಹಿತ ಕುಂತಿಯು ಮಹಾತ್ಮ ದ್ರುಪದನ ರಮ್ಯ ನಗರಿಗೆ ಹೊರಟಳು.
ದ್ರೌಪದಿಯ ಜನನದ ಪೂರ್ವ ವೃತ್ತಾಂತ
ಮಹಾತ್ಮ ಪಾಂಡವರು ಏಕಚಕ್ರನಗರಿಯಲ್ಲಿ ಪ್ರಚ್ಛನ್ನರಾಗಿ ವಾಸಿಸುತ್ತಿದ್ದಾಗ ಅವರನ್ನು ನೋಡಲು ಸತ್ಯವತೀಸುತ ವ್ಯಾಸನು ಬಂದಿದ್ದನು. ಅವನು ಆಗಮಿಸುತ್ತಿರುವುದನ್ನು ನೋಡಿದ ಪರಂತಪರು ಅವನನ್ನು ಭೆಟ್ಟಿಯಾಗಲು ಮೇಲೆದ್ದು ಕೈಗಳನ್ನು ಜೋಡಿಸಿ ಅಭಿವಂದಿಸಿ ಅವನ ಎದುರು ನಿಂತುಕೊಂಡರು. ಪಾರ್ಥರಿಂದ ಪೂಜಿತನಾಗಿ ಪ್ರಸನ್ನನಾದ ಮುನಿಯು ಅವರೆಲ್ಲರಿಗೂ ಸುಖಾಸೀನರಾಗಲು ಅನುಜ್ಞೆಯನ್ನಿತ್ತು ಈ ಪ್ರೀತಿಪೂರ್ವಕ ಮಾತುಗಳನ್ನಾಡಿದನು:
“ಪರಂತಪರೇ! ನೀವು ಧರ್ಮ ಮತ್ತು ಶಾಸ್ತ್ರಗಳ ಪ್ರಕಾರವೇ ನಡೆದುಕೊಂಡು ಬಂದಿದ್ದೀರಾ? ಪೂಜಾರ್ಹ ವಿಪ್ರರಿಗೆ ಬೇಕಾದಷ್ಟು ಗೌರವ ನೀಡುತ್ತಿದ್ದೀರಾ?”
ಈ ಧರ್ಮಾರ್ಥ ಮಾತುಗಳನ್ನಾಡಿದ ಭಗವಾನ್ ಋಷಿಯು ವಿಚಿತ್ರ ಕಥೆಗಳನ್ನು ಹೇಳುತ್ತಾ ಪುನಃ ಈ ಮಾತುಗಳನ್ನಾಡಿದನು:
“ಹಿಂದೆ ಒಮ್ಮೆ ತಪೋವನದಲ್ಲಿ ತೆಳು ಸೊಂಟದ, ಸುಶ್ರೋಣಿ, ಸುಂದರ ಹುಬ್ಬಿನ, ಸರ್ವಗುಣಾನ್ವಿತೆ ಮಹಾತ್ಮ ಋಷಿಯ ಮಗಳೋರ್ವಳು ವಾಸಿಸುತ್ತಿದ್ದಳು. ಅವಳು ಮಾಡಿದ ಕರ್ಮಗಳಿಂದಾಗಿ ಅವಳು ದುರ್ಭಗಳಾಗಿದ್ದಳು. ರೂಪವತಿಯಾಗಿದ್ದರೂ ಆ ಸತಿ ಕನ್ಯೆಯು ಪತಿಯನ್ನು ಪಡೆಯಲಿಲ್ಲ. ಅಸುಖಿಯಾದ ಅವಳು ಪತಿಯನ್ನು ಪಡೆಯಲೋಸುಗ ತಪಸ್ಸನ್ನು ಪ್ರಾರಂಭಿಸಿದಳು. ಅವಳ ಉಗ್ರ ತಪಸ್ಸಿನಿಂದ ಶಂಕರನನ್ನು ತೃಪ್ತಿಪಡಿಸಿದಳು. ಸಂತುಷ್ಟ ಭಗವಾನನು ಆ ತಪಸ್ವಿನಿಗೆ ಹೇಳಿದನು:
“ಭದ್ರೇ! ಭಾಮಿನೀ! ವರವನ್ನು ನೀಡುತ್ತೇನೆ. ಬೇಕಾದ ವರವನ್ನು ಕೇಳಿಕೋ.”
ಆಗ ಅವಳು
“ಸರ್ವಗುಣೋಪೇತ ಪತಿಯನ್ನು ಬಯಸುತ್ತೇನೆ!”
ಎಂಬ ಅತ್ಮಹಿತ ಮಾತುಗಳನ್ನು ಪುನಃ ಪುನಃ ಈಶ್ವರನಲ್ಲಿ ಹೇಳಿಕೊಂಡಳು. ಮಾತನಾಡುವವರಲ್ಲಿ ಶ್ರೇಷ್ಠ ಈಶಾನ ಶಂಕರನು
“ಭದ್ರೇ! ನಿನಗೆ ಐವರು ಪತಿಗಳಾಗುತ್ತಾರೆ!”
ಎಂದು ಉತ್ತರಿಸಿದನು.
“ನನಗೆ ಒಬ್ಬನೇ ಪತಿಯನ್ನು ಕೊಡು!”
ಎಂದು ಪುನಃ ಕೇಳಿಕೊಂಡಾಗ ದೇವ ಶಂಕರನು ಈ ಮಾತುಗಳನ್ನಾಡಿದನು:
“ನೀನು ಪುನಃ ಪುನಃ ಐದು ಬಾರಿ ಪತಿಯನ್ನು ಕೊಡು ಎಂದು ಕೇಳಿಕೊಂಡಿದ್ದೀಯೆ. ನೀನು ಅನ್ಯ ದೇಹವನ್ನು ಹೊಂದಿದಾಗ ನೀನು ಕೇಳಿಕೊಂಡಂತಯೇ ಆಗುತ್ತದೆ.”
ಅದೇ ಕನ್ಯೆಯು ದ್ರುಪದ ಕುಲದಲ್ಲಿ ದೇವರೂಪಿಣಿಯಾಗಿ ಹುಟ್ಟಿದ್ದಾಳೆ. ಆ ಅನಿಂದಿತೆ ಪಾರ್ಷತಿ ಕೃಷ್ಣೆಯು ನಿರ್ದಿಷ್ಠವಾಗಿಯೂ ನಿಮ್ಮ ಪತ್ನಿಯಾಗುತ್ತಾಳೆ. ಮಹಾಬಲರೇ! ಆದುದರಿಂದ ಪಾಂಚಾಲನಗರವನ್ನು ಪ್ರವೇಶಿಸಿ. ಅವಳನ್ನು ಪಡೆದ ಭವಿಷ್ಯದಲ್ಲಿ ನೀವು ಸುಖಿಗಳಾಗುತ್ತೀರಿ ಎನ್ನುವುದರಲ್ಲಿ ಸಂಶಯವಿಲ್ಲ.”
ಪಾಂಡವ ಪಿತಾಮಹ ಮಹಾಭಾಗ ಪ್ರತಿಷ್ಠಿತ ಮಹಾತಪಸ್ವಿಯು ಹೀಗೆ ಹೇಳಿ ಕುಂತಿ ಮತ್ತು ಪಾರ್ಥರಿಂದ ಬೀಳ್ಕೊಂಡನು.
ಗಂಧರ್ವ ಅಂಗಾರಪರ್ಣ
ತಾಯಿಯನ್ನು ಮುಂದಿರಿಸಿಕೊಂಡು ಆ ಪರಂತಪ ಪುರುಷರ್ಷಭರು ಸೂಚಿಸಿದ್ದ ಸಮತರ ಮಾರ್ಗದಲ್ಲಿ ಉತ್ತರಾಭಿಮುಖವಾಗಿ ಹೊರಟರು. ಆ ಪುರುಷವ್ಯಾಘ್ರ ಪಾಂಡುನಂದನರು ಅಹೋರಾತ್ರಿ ನಡೆದು ಗಂಗಾ ತೀರದಲ್ಲಿರುವ ಸೋಮಶ್ರವಾಯಣ ತೀರ್ಥವನ್ನು ತಲುಪಿದರು. ಅವರೆಲ್ಲರ ಮುಂದೆ ದೀವಟಿಗೆಯೊಂದನ್ನು ಹಿಡಿದು ಮಹಾಯಶಸ್ವಿ ಧನಂಜಯನು ಬೆಳಕು-ರಕ್ಷಣೆಗಳನ್ನು ನೀಡುತ್ತಾ ನಡೆಯುತ್ತಿದ್ದನು. ಏಕಾಂತ ಆ ರಮ್ಯ ಗಂಗಾಜಲದಲ್ಲಿ ಸ್ತ್ರೀಯರೊಡನೆ ಕ್ರೀಡೆಗೆಂದು ಬಂದ ಗಂಧರ್ವರಾಜನು ಜಲಕ್ರೀಡೆಯಾಡುತ್ತಿದ್ದನು. ನದಿಯನ್ನು ಸಮೀಪಿಸುತ್ತಿರುವ ಅವರ ಶಬ್ಧವನ್ನು ಅವನು ಕೇಳಿದನು. ಬಲವಂತರಲ್ಲಿಯೇ ಬಲಶಾಲಿ ಅವನು ಶಬ್ಧದಿಂದ ಕ್ರೋಧಾವಿಷ್ಠನಾದನು. ತಾಯಿಯೊಂದಿಗಿದ್ದ ಆ ಪರಂತಪ ಪಾಂಡವರನ್ನು ನೋಡಿ ಧನುಸ್ಸನ್ನು ಠೇಂಕರಿಸಿ ಈ ಮಾತುಗಳನ್ನಾಡಿದನು:
“ಕೆಂಪಾದ ಘೋರ ಸಂಧ್ಯೆಯು ಮೂಲಕ ರಾತ್ರಿ ಬೀಳುವ ಗಳಿಗೆಯನ್ನು, ಮೊದಲು ಎಂಟು ಮುಹೂರ್ತಗಳನ್ನು ಬಿಟ್ಟು, ಕಾಮಚಾರಿಗಳಾದ ಯಕ್ಷ, ಗಂಧರ್ವ ಮತ್ತು ರಾಕ್ಷಸರಿಗೆ ಮೀಸಲಾಗಿ ಇಡಲಾಗಿದೆ ಮತ್ತು ಉಳಿದ ಸಮಯದಲ್ಲಿ ಮನುಷ್ಯರು ಇಷ್ಟಬಂದಹಾಗೆ ವಿಹರಿಸಬಹುದು ಎಂದು ಕೇಳಿದ್ದೇವೆ. ಈ ವೇಳೆಯಲ್ಲಿ ಲೋಭ ಮತ್ತು ದಡ್ಡತನದಿಂದ ಸಂಚರಿಸುತ್ತಿರುವ ನರರನ್ನು ನಾವು ಮತ್ತು ರಾಕ್ಷಸರು ಎದುರಿಸಿ ಶಿಕ್ಷಿಸುತ್ತೇವೆ. ರಾತ್ರಿವೇಳೆ ನೀರಿರುವಲ್ಲಿಗೆ ನರರು - ಬಲವಂತರಾದ ರಾಜರೂ ಕೂಡ - ಹೋಗುವುದು ತಪ್ಪೆಂದು ಬ್ರಹ್ಮವಿದ ಜನರು ಪರಿಗಣಿಸುತ್ತಾರೆ. ನನ್ನ ಸಮೀಪ ಬರದೇ ಅಲ್ಲಿಯೇ ದೂರದಲ್ಲಿ ನಿಲ್ಲಿ! ಭಾಗೀರಥೀ ನೀರಿಗೆ ಬಂದಿರುವ ನನ್ನನ್ನು ನೀವು ಹೇಗೆತಾನೇ ಗುರುತಿಸಲಿಲ್ಲ! ನನ್ನನ್ನು ಸ್ವಬಲಾಶ್ರಯ ಗಂಧರ್ವ ಅಂಗಾರಪರ್ಣನೆಂದು ತಿಳಿಯಿರಿ. ನಾನು ಒಬ್ಬ ಗರ್ವಿ ಮತ್ತು ಈರ್ಷೆಯ ಸ್ವಭಾವದವನು. ನಾನು ಕುಬೇರನ ಪ್ರಿಯ ಸಖನೂ ಹೌದು. ಅಂಗಾರಪರ್ಣವೆಂದು ಖ್ಯಾತ ಗಂಗಾತೀರದಲ್ಲಿರುವ ಈ ಸುಂದರ ವನ ಮತ್ತು ನಾನು ವಾಸಿಸುತ್ತಿರುವ ಈ ವಾಕೆಯು ನನ್ನದು. ಶವಗಳಾಗಲೀ, ಕೊಂಬಿರುವ ಪ್ರಾಣಿಗಳಾಗಲೀ, ದೇವತೆಗಳಾಗಲೀ ಅಥವಾ ಮನುಷ್ಯರಾಗಲೀ ಇದರ ಸಮೀಪ ಬರುವುದಿಲ್ಲ. ನೀವು ಹೇಗೆ ಇಲ್ಲಿಗೆ ಬಂದಿರಿ?”
ಅರ್ಜುನನು ಹೇಳಿದನು:
“ದುರ್ಮತೇ! ಸಮುದ್ರ, ಹಿಮವತ್ಪರ್ವತ ಮತ್ತು ನದೀ ಮಾರ್ಗಗಳನ್ನು ರಾತ್ರಿಯಾಗಲೀ, ಹಗಲಾಗಲೀ ಅಥವಾ ಸಾಯಂಕಾಲವಾಗಲೀ ಯಾರು ತಾನೆ ತಡೆಹಿಡಿಯುತ್ತಾನೆ? ನಾವು ಶಕ್ತಿ ಸಂಪನ್ನರಾಗಿದ್ದೇವೆ ಮತ್ತು ಇದು ಅಕಾಲವಾದರೂ ನಾವು ನಿನ್ನನ್ನು ಎದುರಿಸುತ್ತೇವೆ. ಕೇವಲ ಅಶಕ್ತ ಮಾನವರು ನಿನ್ನ ಈ ಕ್ರೂರ ಕ್ಷಣದಲ್ಲಿ ನಿನ್ನನ್ನು ಪೂಜಿಸುತ್ತಾರೆ. ಹಿಂದೆ ಹಿಮವಂತದ ಹೇಮಶೃಂಗಗಳಿಂದ ಹೊರಬಂದ ಗಂಗೆಯು ಎಂಟು ಧಾರೆಗಳಾಗಿ ಸಮುದ್ರದ ನೀರನ್ನು ಸೇರುತ್ತಾಳೆ. ದ್ವೈಪಾಯನನು ಹೇಳಿರುವಂತೆ ಈ ಶುಚಿಯು ಏಕವಪ್ರಳಾಗಿ ದೇವತೆಗಳ ಆಕಾಶದಲ್ಲಿ ಹರಿಯುತ್ತಾಳೆ ಮತ್ತು ಮುಂದೆ ಅವಳೇ ಅಲಕನಂದಾ ಎಂದಾಗಿ ಮುಂದೆ ಪಿತೃಗಳ ಮಧ್ಯದಲ್ಲಿ ವೈತರಣಿ ಎಂದು, ನಂತರ ಪಾಪಕರ್ಮಿಗಳಿಗೆ ದುಸ್ತರಳಾದ ಗಂಗಾ ಎಂದೂ ಕರೆಯಿಸಿಕೊಳ್ಳುತ್ತಾಳೆ. ಈ ಶುಭ ದೇವನದಿಯು ಸ್ವರ್ಗವನ್ನು ಸೇರುತ್ತದೆ. ಇಂಥಹುದನ್ನು ನೀನು ಬೇರೆಯವರಿಗೆ ದೊರೆಯದಂತೆ ಹೇಗೆತಾನೇ ತಡೆಹಿಡಿಯಬಲ್ಲೆ? ಅದು ಸನಾತನ ಧರ್ಮವಲ್ಲ. ಅನಿವಾರ್ಯವೂ ಅಸಂಬಾಧವೂ ಆದ ನಿನ್ನ ಈ ಮಾತಿನಂತೆ ನಾವು ಏಕೆ ನಮಗಿಷ್ಟ ಬಂದಂತೆ ಈ ಪುಣ್ಯ ಭಾಗೀರಥೀಜಲವನ್ನು ಮುಟ್ಟಬಾರದು?”
ಇದನ್ನು ಕೇಳಿ ಅಂಗಾರಪರ್ಣನು ಕೃದ್ಧನಾಗಿ ತನ್ನ ಧನುಸ್ಸನ್ನು ಎಳೆದು ಬಲಶಾಲಿ ಸರ್ಪ ವಿಷದಂತೆ ಉರಿಯುತ್ತಿರುವ ಬಾಣಗಳನ್ನು ಬಿಟ್ಟನು. ಆದರೆ ಪಾಂಡವ ಧನಂಜಯನು ತನ್ನ ಧನುಸ್ಸು ಮತ್ತು ಉತ್ತಮ ಕವಚಗಳಿಂದ ಆ ಎಲ್ಲ ಶರಗಳನ್ನೂ ತಡೆಹಿಡಿದನು. ಅರ್ಜುನನು ಹೇಳಿದನು:
“ಗಂಧರ್ವ! ಈ ರೀತಿಯ ದಬ್ಬಾಳಿಕೆಯು ಅಸ್ತ್ರಗಳನ್ನು ತಿಳಿದವರಲ್ಲಿ ಪ್ರಯೋಜನಕ್ಕೆ ಬಾರದು. ಇದನ್ನು ಅಸ್ತ್ರಜ್ಞರಲ್ಲಿ ಬಳಸಿದರೆ ಅದು ಹಾಲಿನ ಕೆನೆಯಂತೆ ಮಾಯವಾಗುತ್ತದೆ. ಸರ್ವ ಗಂಧರ್ವರೂ ಮನುಷ್ಯರನ್ನು ಮೀರಿಸುತ್ತಾರೆ ಎಂದು ತಿಳಿದಿದ್ದೇನೆ. ಆದುದರಿಂದ ನಾನು ನಿನ್ನಲ್ಲಿ ದಿವ್ಯಾಸ್ತ್ರಗಳಿಂದ ಹೋರಾಡುತ್ತೇನೆ. ಮಾಯೆಯಿಂದಲ್ಲ. ಇದು ಆಗ್ನೇಯಾಸ್ತ್ರ. ಹಿಂದೆ ಇದನ್ನು ಶತಕ್ರತುವಿನ ಗುರುಪುತ್ರ ಬೃಹಸ್ಪತಿಯು ಭರದ್ವಾಜನಿಗೆ ನೀಡಿದನು. ಭರದ್ವಾಜನಿಂದ ಇದು ಅಗ್ನಿವೇಶನಿಗೆ ಮತ್ತು ನಂತರ ನನ್ನ ಗುರುವಿಗೆ ಬಂದಿತು. ನಂತರ ಇದನ್ನು ಬ್ರಾಹ್ಮಣಸತ್ತಮ ದ್ರೋಣನು ನನಗೆ ಕೊಟ್ಟನು.”
ಕೃದ್ಧ ಪಾಂಡವನು ಹೀಗೆ ಹೇಳಿ ಉರಿಯುತ್ತಿರುವ ಆಗ್ನೇಯಾಸ್ತ್ರವನ್ನು ಗಂಧರ್ವನ ಮೇಲೆ ಬಿಡಲಾಗಿ, ಅದು ಅವನ ರಥವನ್ನು ಸುಟ್ಟುಹಾಕಿತು. ರಥವನ್ನು ಕಳೆದುಕೊಂಡ ಆ ಮಹಾಬಲಿ ಗಂಧರ್ವನು ಅಸ್ತ್ರ ತೇಜಸ್ಸಿನಿಂದ ಮೂರ್ಛೆಹೊಂದಿ ಕೆಳಮುಖನಾಗಿ ಬೂಮಿಯ ಮೇಲೆ ಬಿದ್ದನು. ಧನಂಜಯನು ಅಸ್ತ್ರದ ಹೊಡೆತದಿಂದ ಮೂರ್ಛಿತನಾಗಿದ್ದ ಅವನ ಕೂದಲ ಜಡೆಯನ್ನು ಹಿಡಿದು ತನ್ನ ಸಹೋದರರ ಬಳಿ ಎಳೆತಂದನು. ಆಗ ಕುಂಭೀನಸಿ ಎಂಬ ಹೆಸರಿನ ಅವನ ಪತ್ನಿಯು ಪತಿಯ ಜೀವವನ್ನು ಉಳಿಸಬೇಕೆಂದು ಶರಣಾರ್ಥಿಯಾಗಿ ಯುಧಿಷ್ಠಿರನನ್ನು ಕೇಳಿಕೊಂಡಳು:
“ಮಹಾರಾಜ! ನನ್ನನ್ನು ಉಳಿಸು ಮತ್ತು ನನ್ನ ಪತಿಯನ್ನು ಬಿಡುಗಡೆಮಾಡು. ಕುಂಭೀನಸಿ ಎಂಬ ಹೆಸರಿನ ಗಂಧರ್ವಿಯು ನಿನ್ನ ಶರಣು ಬಂದಿದ್ದಾಳೆ.”
ಯುಧಿಷ್ಠಿರನು ಹೇಳಿದನು:
“ಯುದ್ಧದಲ್ಲಿ ಸೋತು ಯಶೋಹೀನನಾಗಿ ಸ್ತ್ರೀಯಿಂದ ರಕ್ಷಿಸಲ್ಪಟ್ಟ ಅಪರಾಕ್ರಮಿಯನ್ನು ನಿನ್ನಂಥಹ ವೀರನು ಕೊಲ್ಲಬಾರದು. ರಿಪುಸೂದನ! ಅವನನ್ನು ಬಿಟ್ಟುಬಿಡು!”
ಅರ್ಜುನನು ಹೇಳಿದನು:
“ಹಾಗೆಯೇ ಆಗಲಿ. ಅವನಿಗೆ ಜೀವವನ್ನು ನೀಡೋಣ. ಹೋಗು ಗಂಧರ್ವ! ಇನ್ನು ಕಷ್ಟಕ್ಕೊಳಗಾಗಬೇಡ! ಕುರುರಾಜ ಯುಧಿಷ್ಠಿರನು ಇಂದು ನಿನಗೆ ಅಭಯವನ್ನು ನೀಡುತ್ತಿದ್ದಾನೆ.”
ಗಂಧರ್ವನು ಹೇಳಿದನು:
“ಸೋತುಹೋದ ನಾನು ನನ್ನ ಹಿಂದಿನ ಅಂಗಾರಪರ್ಣ ಎನ್ನುವ ಹೆಸರನ್ನು ತೊರೆಯುತ್ತೇನೆ. ಇನ್ನು ಮುಂದೆ ಜನಸಂಸದಿಯಲ್ಲಿ ನನ್ನ ಹೆಸರು ಅಥವಾ ಬಲದಿಂದ ಜಂಬಕೊಚ್ಚಿಕೊಳ್ಳಲು ಸಾಧ್ಯವಿಲ್ಲ. ಯುವಕನೊಂದಿಗೆ ನನ್ನ ಗಾಂಧರ್ವ ಮಾಯೆಯಿಂದ ಯುದ್ಧಮಾಡಲು ಬಯಸಿದ ನನಗೆ ದಿವ್ಯಾಸ್ತ್ರಧಾರಿಣಿಯು ದೊರಕಿದ್ದುದು ನನ್ನ ಅದೃಷ್ಠವೇ ಸರಿ. ನನ್ನ ವಿಚಿತ್ರ ಉತ್ತಮ ರಥವು ಅಸ್ತ್ರಾಗ್ನಿಯಿಂದ ಸುಟ್ಟುಹೋಯಿತು. ಚಿತ್ರರಥನೆಂಬ ಹೆಸರನ್ನು ಹೊಂದಿದ್ದ ನಾನು ದಗ್ಧರಥನಾದೆನು! ಹಿಂದೆ ತಪಸ್ಸಿನಿಂದ ಪಡೆದಿದ್ದ ಈ ಸಂಭೃತ ವಿಧ್ಯೆಯನ್ನು ಇಂದು ನನ್ನ ಪ್ರಾಣವನ್ನು ನೀಡಿದ ಮಹಾತ್ಮನಿಗೆ ಕೊಡುತ್ತೇನೆ. ಶತ್ರುವನ್ನು ತನ್ನ ಬಲದಿಂದ ಮೂರ್ಛೆಗೊಳಿಸಿ, ನಂತರ ಅವನು ಶರಣಾಗತನಾದಾಗ ಪ್ರಾಣವನ್ನಿತ್ತವನಿಗೆ ಇದಕ್ಕಿಂತಲೂ ಕಲ್ಯಾಣಕರ ಉಡುಗೊರೆಯು ಬೇರೆ ಏನಿದೆ? ಚಕ್ಷುಷೀ ಎಂಬ ಹೆಸರಿನ ಈ ವಿದ್ಯೆಯನ್ನು ಮನುವು ಸೋಮನಿಗೆ ಕೊಟ್ಟನು ಮತ್ತು ಅವನು ವಿಶ್ವಾವಸುವಿಗೆ ಕೊಟ್ಟನು. ವಿಶ್ವಾವಸುವು ನನಗೆ ಕೊಟ್ಟನು. ಗುರುದತ್ತವಾದ ಇದನ್ನು ಕಾಪುರುಷನಿಗೆ ಕೊಟ್ಟರೆ ಅದು ನಾಶವಾಗುತ್ತದೆ. ಇದರ ಆಗಮವನ್ನು ನಾನು ಹೇಳಿದ್ದೇನೆ. ವೀರ! ಇದನ್ನು ನನ್ನಿಂದ ಪಡೆದುಕೋ. ಮೂರೂ ಲೋಕಗಳಲ್ಲಿ ಯಾವುದನ್ನು ನೋಡಲು ಬಯಸುತ್ತೇವೋ ಅದನ್ನು ಈ ಚಕ್ಷುಷಿಯಿಂದ ನೋಡಬಹುದು ಮತ್ತು ಅದನ್ನು ಯಾವರೀತಿಯಲ್ಲಿ ನೋಡಲು ಬಯಸುತ್ತೇವೋ ಆ ರೀತಿಯಲ್ಲಿ ನೋಡಬಹುದು. ಈ ವಿಧ್ಯೆಯನ್ನು ಆರು ತಿಂಗಳುಗಳು ಒಂದೇ ಕಾಲಿನ ಮೇಲೆ ನಿಂತು ಪಡೆಯಬಹುದು. ಆದರೆ ಸ್ವಯಂ ನಾನು ಇದನ್ನು ಮಾತು ಕೊಟ್ಟಹಾಗೆ ನಿನಗೆ ನೀಡುತ್ತೇನೆ. ಈ ವಿದ್ಯೆಯಿಂದಲೇ ನಾವು ನರರಿಗಿಂಥ ಶ್ರೇಷ್ಠರಾಗಿದ್ದೇವೆ ಮತ್ತು ಇದರ ವಿಶೇಷತೆಯಿಂದಲೇ ನಾವು ದೇವತೆಗಳಿಗಿಂತ ಭಿನ್ನರಾಗಿಲ್ಲ. ನೀವು ಐವರು ಭ್ರಾತೃಗಳಿಗೂ ತಲಾ ನೂರು ನೂರು ಗಂಧರ್ವರಿಂದ ಬೆಳೆಸಿದ ಅಶ್ವಗಳನ್ನು ಕೊಡುತ್ತೇನೆ. ದಿವ್ಯಗಂಧವನ್ನು ಹೊಂದಿದ ಈ ಮನೋಗಾಮಿಗಳು ದೇವತೆಗಳು ಮತ್ತು ಗಂಧರ್ವರ ವಾಹನಗಳು. ಇವು ಎಷ್ಟೇ ಕ್ಷೀಣರಾದರೂ ಅವರ ವೇಗವು ಕಡಿಮೆಯಾಗುವುದಿಲ್ಲ. ಹಿಂದೆ ವೃತ್ರನನ್ನು ಕೊಲ್ಲಲು ಮಹೇಂದ್ರನ ವಜ್ರವನ್ನು ಮಾಡಲಾಗಿತ್ತು. ಆದರೆ ಅದು ವೃತ್ರನ ತಲೆಯ ಮೇಲೆ ಹೊಡೆದಾಗ ಹತ್ತು ಮತ್ತು ನೂರು ಚೂರುಗಳಾಗಿ ಒಡೆದವು. ಅಂದಿನಿಂದ ದೇವತೆಗಳು ವಜ್ರಭಾಗಗಳನ್ನು ಹಂಚಿಕೊಂಡು ಅವುಗಳನ್ನು ಪೂಜಿಸುತ್ತಾ ಬಂದಿದ್ದಾರೆ. ಲೋಕದಲ್ಲಿ ಯಶಸ್ವಿಯಾಗಿರುವುದೆಲ್ಲವೂ ವಜ್ರತನುವೆಂದು ಹೇಳುತ್ತಾರೆ. ಬ್ರಾಹ್ಮಣನು ವಜ್ರಪಾಣಿಯೆಂದೂ, ಕ್ಷತ್ರಿಯನು ವಜ್ರರಥಿಯೆಂದೂ ವೈಶ್ಯನು ವಜ್ರದಾನಿಯೆಂದೂ ಮತ್ತು ಇನ್ನೂ ಕೆಳಗಿನವರು ವಜ್ರಕರ್ಮಿಗಳೆಂದೂ ಕರೆಯಲ್ಪಟ್ಟಿದ್ದಾರೆ. ಕುದುರೆಗಳೇ ಕ್ಷತ್ರಿಯನ ವಜ್ರ ಮತ್ತು ಕುದುರೆಗಳು ಅವಧ್ಯ ಎಂದು ಹೇಳುತ್ತಾರೆ. ವಡವನು ರಥಾಂಗ ಕುದುರೆಗಳಿಗೆ ಜನ್ಮವಿತ್ತನು. ಆದುದರಿಂದ ಕುದುರೆಗಳನ್ನು ಓಡಿಸುವವರಿಗೆ ಸೂತ ಎನ್ನುವ ಹೆಸರು ಬಂದಿತು. ಗಂಧರ್ವರಲ್ಲಿ ಹುಟ್ಟಿ ಬೆಳೆದ ಈ ಕುದುರೆಗಳು ಬೇಕಾದ ಬಣ್ಣವನ್ನು ಪಡೆಯಬಹುದು, ಬೇಕಾದಷ್ಟು ವೇಗದಲ್ಲಿ ಹೋಗಬಹುದು, ಯಾವುದೇ ಆಸೆಗಳನ್ನಿಟ್ಟುಕೊಂಡೂ ಅವುಗಳ ಬಳಿ ಹೋಗಬಹುದು ಮತ್ತು ಯಾವುದೇ ಬಯಕೆಯಗಳನ್ನೂ ಪೂರೈಸಬಲ್ಲವು.”
ಅರ್ಜುನನು ಹೇಳಿದನು:
“ಗಂಧರ್ವ! ನಿನ್ನ ಜೀವವನ್ನು ಪುನಃ ಪಡೆದೆಯೆನ್ನುವ ಪ್ರೀತಿಯಿಂದ ಅಥವಾ ಸಂಶಯದಿಂದ ನಿನ್ನ ಈ ವಿಧ್ಯೆಯನ್ನು ಅಥವಾ ಸಂಪತ್ತನ್ನು ನಮಗೆ ಕೊಡುವುದಾದರೆ ಅವು ನಮಗೆ ಬೇಡ!”
ಗಂಧರ್ವನು ಹೇಳಿದನು:
“ಹೋರಾಟದಲ್ಲಿ ಮಾಡಿದ ಸ್ನೇಹವು ಸಂತೋಷವನ್ನು ನೀಡುತ್ತದೆ. ನನ್ನ ಜೀವ ಪ್ರದಾನದಿಂದ ಸಂತುಷ್ಟನಾಗಿ ನಾನು ನಿನಗೆ ಈ ವಿದ್ಯೆಯನ್ನು ಕೊಡುತ್ತಿದ್ದೇನೆ. ನಿನ್ನಿಂದ ನಾನು ಉತ್ತಮ ಆಗ್ನೇಯಾಸ್ತ್ರವನ್ನು ಸ್ವೀಕರಿಸುತ್ತೇನೆ. ಹೀಗೆ ನಮ್ಮ ಸಖ್ಯವು ಚಿರವಾಗಿರಲಿ.”
ಅರ್ಜುನನು ಹೇಳಿದನು:
“ಅಸ್ತ್ರಕ್ಕೆ ಬದಲಾಗಿ ನಿನ್ನಿಂದ ಅಶ್ವಗಳನ್ನು ಸ್ವೀಕರಿಸುತ್ತೇನೆ ಮತ್ತು ನಮ್ಮ ಈ ಸಂಯೋಗವು ಶಾಶ್ವತವಾಗಿರಲಿ. ಸಖ! ಗಂಧರ್ವ! ನಿಮ್ಮಂಥವರ ಭಯವನ್ನು ಹೇಗೆ ಹೋಗಲಾಡಿಸಬಹುದು ಎನ್ನುವುದನ್ನು ಹೇಳು. ಬ್ರಹ್ಮವಿದ ನಾವೆಲ್ಲರೂ ರಾತ್ರಿಯಲ್ಲಿ ಪ್ರಯಾಣಮಾಡುತ್ತಿರುವಾಗ ನಮ್ಮ ಮೇಲೆ ನೀನು ಧಾಳಿಮಾಡಿದುದರ ಕಾರಣವನ್ನು ಹೇಳು.”
ಗಂಧರ್ವನು ಹೇಳಿದನು:
“ಪಾಂಡವನಂದನ! ಅನಗ್ನ, ಅನಾಹುತ ಮತ್ತು ವಿಪ್ರನನ್ನು ಮುಂದುಮಾಡಿಕೊಂಡಿರದೇ ಹೋಗುತ್ತಿದ್ದ ನಿಮ್ಮನ್ನು ನಾನು ತಡೆದು ಧಾಳಿಮಾಡಿದೆನು. ಯಕ್ಷ, ರಾಕ್ಷಸ, ಗಂಧರ್ವ, ಪಿಶಾಚ, ಉರಗ ಮತ್ತು ಮಾನವರು ವಿಸ್ತಾರ ಶ್ರೀಮಂತ ಕುರುವಂಶದ ಚರಿತ್ರೆಯನ್ನು ಹೇಳುತ್ತಿರುತ್ತಾರೆ. ನಾರದರೇ ಮೊದಲಾದ ದೇವರ್ಷಿಗಳಿಂದ ನಿನ್ನ ಧೀಮಂತ ಪೂರ್ವಜರ ಗುಣಗಳನ್ನು ನಾನು ಕೇಳಿದ್ದೇನೆ. ಸಾಗರಾಂಬರಿ ಈ ವಸುಮತಿಯಲ್ಲಿ ಸಂಚರಿಸುತ್ತಿರುವಾಗ ಸ್ವಯಂ ನಾನೇ ನಿನ್ನ ಕುಲದ ಶ್ರೇಷ್ಠ ಪ್ರಭಾವವನ್ನು ಕಂಡಿದ್ದೇನೆ. ಧನುರ್ವಿದ್ಯೆಯಲ್ಲಿ ನಿನ್ನ ಆಚಾರ್ಯ ಮೂರೂ ಲೋಕಗಳಲ್ಲಿ ವಿಶೃತ ಯಶಸ್ವಿ ಭಾರದ್ವಾಜನೂ ನನಗೆ ಗೊತ್ತು. ಧರ್ಮ, ವಾಯು, ಶಕ್ರ, ಅಶ್ವಿನಿಯರು ಮತ್ತು ದೇವಮಾನುಷಸತ್ತಮ ನಿನ್ನ ತಂದೆ ಕುರುಶಾರ್ದೂಲ ಪಾಂಡು ಈ ಆರು ಕುಲವರ್ಧನರೂ ನನಗೆ ಗೊತ್ತು. ನಿನ್ನ ಭ್ರಾತೃಗಳೆಲ್ಲರೂ ದಿವ್ಯಾತ್ಮರೂ, ಮಹಾತ್ಮರೂ, ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠರೂ, ಸುಚರಿತವ್ರತರೂ ಆಗಿದ್ದಾರೆ. ನಿಮ್ಮೆಲ್ಲರ ಉತ್ತಮ ಮನೋಬುದ್ಧಿಯನ್ನು ಮತ್ತು ಭಾವಿತ ಆತ್ಮಗಳನ್ನು ತಿಳಿದಿದ್ದರೂ ನಾನು ನಿಮ್ಮ ಮೇಲೆ ಇಲ್ಲಿ ಧಾಳಿಮಾಡಿದೆ. ಸ್ತ್ರೀಯರ ಎದಿರು ಉಲ್ಲಂಘನೆ ಮಾಡುವವರನ್ನು ನೋಡಿದ ಬಾಹುದ್ರವೀಣ ಆಶ್ರಿತ ಯಾರೂ ಕ್ಷಮಿಸುವುದಿಲ್ಲ. ರಾತ್ರಿವೇಳೆಯಲ್ಲಿ ನಮ್ಮ ಬಲವು ವೃದ್ಧಿಯಾಗುತ್ತದೆ. ಆದುದರಿಂದ ಪತ್ನಿಯೊಡನಿದ್ದ ನಾನು ಕೋಪಾವಿಷ್ಠನಾಗಿಬಿಟ್ಟೆ. ತಾಪತ್ಯವರ್ಧನ! ಈಗ ನಾನು ನಿನ್ನಿಂದ ಯುದ್ಧದಲ್ಲಿ ಸೋಲಲ್ಪಟ್ಟು ಸಖನಾಗಿ ನಿಂತಿದ್ದೇನೆ. ಯಾವ ರೀತಿಯಲ್ಲಿ ಇದನ್ನು ಆಚರಿಸಬೇಕು ಎನ್ನುವುದನ್ನು ಹೇಳು. ಬ್ರಹ್ಮಚರ್ಯವು ಪರಮ ಧರ್ಮ ಮತ್ತು ಇದು ನಿನ್ನಲ್ಲಿ ಗಟ್ಟಿಯಾಗಿ ನಿಂತುಕೊಂಡಿದೆ. ಇದರಿಂದಲೇ ನೀನು ಇಂದು ರಣದಲ್ಲಿ ನನ್ನನ್ನು ಗೆದ್ದೆ. ಆದರೆ ಕಾಮವೃತ ಕ್ಷತ್ರಿಯರು ಎಂದೂ ಯಾವರೀತಿಯಲ್ಲಿಯೂ ರಾತ್ರಿ ವೇಳೆ ನಮ್ಮಲ್ಲಿ ಯುದ್ಧಮಾಡಿ ಜೀವಿತವಾಗಿರಲು ಸಾಧ್ಯವಿಲ್ಲ. ತಾಪತ್ಯ! ಕಾಮವೃತ ರಾಜನೂ ಕೂಡ ಪುರೋಹಿತನನ್ನು ಮುಂದಿಟ್ಟುಕೊಂಡು ಬಂದರೆ ರಾತ್ರಿವೇಳೆ ಸಂಗರದಲ್ಲಿ ಎಲ್ಲ ನಿಶಾಚರರ ಮೇಲೆ ಜಯವನ್ನು ಪಡೆಯಬಹುದು. ಆದುದರಿಂದಲೇ ಮನುಷ್ಯನು ಇಲ್ಲಿ ಏನೇ ಶ್ರೇಯಸ್ಸನ್ನು ಬಯಸಿದರೂ ಆ ಕರ್ಮದಲ್ಲಿ ದಾಂತಾತ್ಮ ಪುರೋಹಿತನನ್ನು ಬಳಸಿಕೊಳ್ಳಬೇಕು. ಎಲ್ಲ ನೃಪರೂ ಷಡಂಗಸಹಿತ ವೇದಗಳಲ್ಲಿ ನಿರತ, ಶುಚ, ಸತ್ಯವಾದಿ, ಧರ್ಮಾತ್ಮ, ಮತ್ತು ಕೃತಾತ್ಮ ಪುರೋಹಿತರನ್ನು ಪಡೆದಿರಬೇಕು. ಶೀಲವಂತ, ಶುಚಿ, ವಾಗ್ಮಿ ಮತ್ತು ಧರ್ಮವಿದ ಪುರೋಹಿತನನ್ನು ಪಡೆದಿದ್ದ ರಾಜನಿಗೆ ಇಲ್ಲಿ ಜಯ ಮತ್ತು ನಂತರ ಸ್ವರ್ಗವು ನಿಶ್ಚಯವಾದದ್ದು. ಅಲಬ್ಧವನ್ನು ಪಡೆಯಲು ಮತ್ತು ಪಡೆದುದನ್ನು ಪರಿರಕ್ಷಿಸಲು ರಾಜನು ಗುಣಸಮನ್ವಿತ ಪುರೋಹಿತನನ್ನು ಇಟ್ಟುಕೊಳ್ಳಬೇಕು. ಪುರೋಹಿತನ ಸಲಹೆಯಂತೆಯೇ ನಡೆದುಕೊಂಡರೆ ನೃಪನು ಮೇರುವರೋತಂಸೆ ಸಾಗರಾಂಬರೆ ಸರ್ವ ಪೃಥ್ವಿಯನ್ನೂ ಹೊಂದಲು ಇಚ್ಛಿಸಬಹುದು. ಅಬ್ರಾಹ್ಮಣ ಭೂಮಿಪತಿಯು ಕೇವಲ ಶೌರ್ಯದಿಂದ ಅಥವಾ ಉತ್ತಮ ಜನ್ಮದಿಂದ ಎಂದೂ ಯಾವುದೇ ರೀತಿಯಲ್ಲಿಯೂ ಭೂಮಿಯನ್ನು ಜಯಿಸಲು ಶಕ್ಯನಾಗಲಾರ. ಆದುದರಿಂದ ಬ್ರಾಹ್ಮಣಪ್ರಮುಖ ರಾಜ್ಯವನ್ನು ಚಿರವಾಗಿ ಪಾಲಿಸಲು ಸಾಧ್ಯ ಎನ್ನುವುದನ್ನು ತಿಳಿದುಕೋ.”
ಅರ್ಜುನನು ಹೇಳಿದನು:
“ನೀನು ನನಗೆ ತಾಪತ್ಯ ಎನ್ನುವ ಮಾತಿನಿಂದ ಸಂಬೋಧಿಸಿದ್ದೀಯಲ್ಲ. ಆ ತಾಪತ್ಯದ ಅರ್ಥವನ್ನು ತಿಳಿಯಲು ಬಯಸುತ್ತೇನೆ. ನಾವು ಹೇಗೆ ಕೌಂತೇಯರೆಂದು ಕರೆದುಕೊಳ್ಳಲ್ಪಟ್ಟಿದ್ದೇವೋ ಹಾಗೆ ತಾಪತ್ಯ ಎಂದು ಕರೆದೆಯಲ್ಲ ಆ ತಪತಿಯು ಯಾರು ಮತ್ತು ಅವರ ಮಕ್ಕಳು ಯಾರು ಎಂದು ತಿಳಿಯಲು ಬಯಸುತ್ತೇನೆ.”
ಕುಂತೀಪುತ್ರ ಧನಂಜಯನ ಈ ಮಾತುಗಳನ್ನು ಕೇಳಿದ ಗಂಧರ್ವನು ತ್ರಿಲೋಕವಿಶ್ರುತ ಕಥೆಯನ್ನು ಹೇಳಲು ತೊಡಗಿದನು. ಗಂಧರ್ವನು ಹೇಳಿದನು:
“ಧರ್ಮಭೃತರಲ್ಲಿ ಶ್ರೇಷ್ಠ ಪಾರ್ಥ! ಅಖಿಲ ಧರ್ಮಗಳಿಂದೊಡಗೂಡಿದ ಆ ಮನೋರಮ ಕಥೆಯನ್ನು ನಡೆದಂತೆ ಹೇಳುತ್ತೇನೆ. ನಿನ್ನನ್ನು ಏಕೆ ತಾಪತ್ಯ ಎಂದು ಕರೆದೆ ಎನ್ನುವುದನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ನನ್ನನ್ನು ಕೇಳು.”
ಸಂವರಣ-ತಪತಿಯರ ಆಖ್ಯಾನವನ್ನು ಅರ್ಜುನನಿಗೆ ಹೇಳಿ ಗಂಧರ್ವನು
“ಈ ರೀತಿ ತಪತಿ ಎಂಬ ಹೆಸರಿನ ಮಹಾಭಾಗೆಯು ನಿನ್ನ ಪೂರ್ವಜಳಾಗಿದ್ದಳು. ಆ ವೈವಸ್ವತಿಯಿಂದಾಗಿ ನೀನು ತಾಪತ್ಯ ಎಂದು ಕರೆಯಲ್ಪಡುತ್ತೀಯೆ. ನೃಪ ಸಂವರಣನು ಅವಳಲ್ಲಿ ಕುರುವನ್ನು ಪಡೆದನು. ತಪತಿಯಿಂದಾಗಿ ತಾಪಸಿಗಳಲ್ಲಿ ಶ್ರೇಷ್ಠನಾದ ನೀನು ತಾಪತ್ಯನಾದೆ”
ಎಂದನು. ಗಂಧರ್ವನ ಈ ಮಾತುಗಳನ್ನು ಕೇಳಿದ ಭರತರ್ಷಭ ಅರ್ಜುನನು ಪರಮ ಸಂತುಷ್ಠನಾಗಿ ಪೂರ್ಣ ಚಂದ್ರನಂತೆ ಕಾಂತಿಯುಕ್ತನಾದನು. ವಸಿಷ್ಠನ ಅತೀವ ತಪೋಬಲದ ಕುರಿತು ಕುತೂಹಲ ಹುಟ್ಟಿದ ಕುರುಸತ್ತಮನು ಮಹೇಷ್ವಾಸ ಗಂಧರ್ವನಲ್ಲಿ ಕೇಳಿಕೊಂಡನು:
“ವಸಿಷ್ಠ ಎಂಬ ಹೆಸರಿನ ಋಷಿಯ ಕುರಿತು ಹೇಳಿದೆಯಲ್ಲ ಅವನ ಕುರಿತು ಕೇಳಲು ಬಯಸುತ್ತೇನೆ. ಯಥಾವತ್ತಾಗಿ ನನಗೆ ಹೇಳು. ಗಂಧರ್ವಪತೇ! ನನ್ನ ಪೂರ್ವಜರ ಪುರೋಹಿತನಾಗಿದ್ದ ಭಗವಾನೃಷಿಯ ಕುರಿತು ನನಗೆ ಹೇಳು.”
ಗಂಧರ್ವನು ಹೇಳಿದನು:
“ಅಮರರಿಂದಲೂ ಜಯಿಸಲಾಧ್ಯ ಕಾಮ ಕ್ರೋಧಗಳನ್ನು ತಪಸ್ಸಿನಿಂದ ಜಯಿಸಿ ಅವು ತನ್ನ ಚರಣಗಳನ್ನು ಒತ್ತುವಂತೆ ಮಾಡಿದವನೇ ಅವನು. ವಿಶ್ವಾಮಿತ್ರನ ಅಪರಾಧದಿಂದ ಉಂಟಾದ ಅತ್ಯಂತ ಕೋಪವನ್ನು ಸಹಿಸಿಕೊಂಡು ಕುಶಿಕರನನ್ನು ನಾಶಪಡಿಸದೇ ಇದ್ದವನು ಅವನು. ಪುತ್ರವ್ಯಸನ ಸಂತಪ್ತನಾದಾಗ ಶಕ್ತಿವಂತನಾಗಿದ್ದರೂ ವಿಶ್ವಾಮಿತ್ರನ ವಿನಾಶಕ್ಕಾಗಿ ಯಾವುದೇ ದಾರುಣ ಕೃತ್ಯವನ್ನೂ ಮಾಡದ ಪ್ರಭುವು ಅವನು. ಸಾಗರವು ಹೇಗೆ ಒಂದು ಗಡಿಯನ್ನು ದಾಟಿ ಮುಂದೆ ಬರುವುದಿಲ್ಲವೋ ಹಾಗೆ ಅವನು ಯಮಕ್ಷಯದಿಂದ ಮೃತರಾದ ತನ್ನ ಪುತ್ರರನ್ನು ಪುನಃ ಕರೆಯಿಸಿಕೊಳ್ಳಲಿಲ್ಲ. ಈ ವಿಜಿತಾತ್ಮ ಮಹಾತ್ಮನನ್ನು ಪಡೆದ ಇಕ್ಷ್ವಾಕು ವಂಶದ ನರಾಧಿಪರು ಇಡೀ ಪೃಥ್ವಿಯನ್ನೇ ಪಡೆದು ಮಹೀಪಾಲರಾದರು. ಋಷಿಸತ್ತಮ ವಸಿಷ್ಠನನ್ನು ಶ್ರೇಷ್ಠ ಪುರೋಹಿತನನ್ನಾಗಿ ಪಡೆದ ಆ ನೃಪರು ಹಲವಾರು ಕ್ರತುಗಳನ್ನು ಯಾಜಿಸಿದರು. ಅಮರರಿಗೆ ಬೃಹಸ್ಪತಿಯು ಹೇಗೋ ಹಾಗೆ ಆ ಎಲ್ಲ ನೃಪಸತ್ತಮರಿಗೆ ಈ ಬ್ರಹ್ಮರ್ಷಿಯು ಯಜ್ಞಯಾಗಾದಿಗಳನ್ನು ಮಾಡಿಸಿಕೊಟ್ಟನು. ಆದುದರಿಂದ ಧರ್ಮಪ್ರಧಾನಾತ್ಮ ವೇದಧರ್ಮವಿದೀಪ್ಸಿತ ಗುಣವಂತ ಬ್ರಾಹ್ಮಣ ಯಾರನ್ನಾದರೂ ನಿನ್ನ ಪುರೋಹಿತನನ್ನಾಗಿ ಮಾಡಿಕೊಳ್ಳಲು ಹುಡುಕು. ಕ್ಷತಿಯನಾಗಿ ಹುಟ್ಟಿದವನು, ಪೃಥ್ವಿಯನ್ನು ಜಯಿಸುವ ಇಚ್ಛೆಯುಳ್ಳವನು ರಾಜ್ಯಾಭಿವೃದ್ಧಿಗಾಗಿ ಮೊದಲು ಪುರೋಹಿತನನ್ನು ಪಡೆಯುವ ಕಾರ್ಯವನ್ನು ಮಾಡಬೇಕು. ಮಹಿಯನ್ನು ಜಯಿಸಲಿಚ್ಛಿಸುವ ರಾಜನು ತನ್ನ ಪುರಸ್ಸರದಲ್ಲಿ ಬ್ರಹ್ಮಕಾರ್ಯವನ್ನು ಮಾಡಬೇಕು. ಆದುದರಿಂದ ಗುಣವಂತ ದ್ವಿಜ ಯಾರಾದರೂ ನಿಮ್ಮ ಪುರೋಹಿತನಾಗಲಿ.”
ಅರ್ಜುನನು ಹೇಳಿದನು:
“ಪುಣ್ಯಾಶ್ರಮಗಳಲ್ಲಿ ವಾಸಿಸುವ ವಸಿಷ್ಠ ಮತ್ತು ವಿಶ್ವಾಮಿತ್ರರಲ್ಲಿ ಯಾವ ಕಾರಣಕ್ಕಾಗಿ ವಿರಸವುಂಟಾಯಿತು? ಸರ್ವವನ್ನೂ ಹೇಳು!”
ಆಗ ಗಂಧರ್ವನು
“ಪಾರ್ಥ! ಈ ವಸಿಷ್ಠನ ಆಖ್ಯಾನವನ್ನು ಮೂರೂ ಲೋಕಗಳ ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಅದನ್ನು ಯಥಾವತ್ತಾಗಿ ನಾನು ಹೇಳುತ್ತೇನೆ. ಕೇಳು.”
ಎಂದು ವಸಿಷ್ಠೋಪಾಽಖ್ಯಾನವನ್ನು ಅರ್ಜುನನಿಗೆ ಹೇಳಿದನು. ಅರ್ಜುನನು ಹೇಳಿದನು:
“ಗಂಧರ್ವ! ನಮ್ಮ ಅನುರೂಪ ಪುರೋಹಿತನಾಗಬಲ್ಲ ವೇದವಿದರು ಯಾರಾದರೂ ಇದ್ದಾರೆಯೇ? ನಿನಗೆ ಎಲ್ಲವೂ ತಿಳಿದಿದೆ.”
ಗಂಧರ್ವನು ಹೇಳಿದನು:
“ದೇವಲನ ಕಿರಿಯ ತಮ್ಮನು ಉತ್ಕೋಚಕ ತೀರ್ಥದ ವನದಲ್ಲಿ ತಪಸ್ಸನ್ನಾಚರಿಸುತ್ತಿದ್ದಾನೆ. ನಿಮಗಿಷ್ಟವಾದರೆ ಅವನನ್ನು ಆರಿಸಿಕೊಳ್ಳಿ.”
ನಂತರ ಅರ್ಜುನನು ಗಂಧರ್ವನಿಗೆ ಯಥಾವಿಧಿ ಆಗ್ನೇಯಾಸ್ತ್ರವನ್ನು ನೀಡಿ, ಪ್ರೀತಿಯಿಂದ ಹೇಳಿದನು:
“ಗಂಧರ್ವಸತ್ತಮ! ಕುದುರೆಗಳನ್ನು ಸದ್ಯ ನಿನ್ನಲ್ಲಿಯೇ ಇಟ್ಟುಕೋ. ನಮಗೆ ಬೇಕಾದಾಗ ಅವುಗಳನ್ನು ತೆಗೆದುಕೊಳ್ಳುತ್ತೇವೆ. ನಿನಗೆ ಮಂಗಳವಾಗಲಿ!”
ಧೌಮ್ಯನು ಪಾಂಡವರ ಪುರೋಹಿತನಾದುದು
ಗಂಧರ್ವ ಮತ್ತು ಪಾಂಡವರು ಅನ್ಯೋನ್ಯರಿಂದ ಬೀಳ್ಕೊಂಡು ರಮ್ಯ ಭಾಗೀರಥಿಯನ್ನು ದಾಟಿ ಮುಂದೆ ಹೊರಟರು. ನಂತರ ಅವರು ಉತ್ಕೋಚಕ ತೀರ್ಥದಲ್ಲಿ ಧೌಮ್ಯಾಶ್ರಮಕ್ಕೆ ಹೋಗಿ ಧೌಮ್ಯನನ್ನು ತಮ್ಮ ಪುರೋಹಿತನನ್ನಾಗಿ ಆರಿಸಿಕೊಂಡರು. ಸರ್ವವೇದವಿದರಲ್ಲಿ ಶ್ರೇಷ್ಠ ಧೌಮ್ಯನು ಅವರನ್ನು ಪಾದ್ಯ, ಫಲಮೂಲ ಮತ್ತು ಪೌರೋಹಿತ್ಯದಿಂದ ಸ್ವೀಕರಿಸಿದನು. ಬ್ರಾಹ್ಮಣನನ್ನು ಮುಂದಿಟ್ಟುಕೊಂಡ ಪಾಂಡವರಿಗೆ ಈಗ ಸಂಪತ್ತು, ರಾಜ್ಯ ಮತ್ತು ಸ್ವಯಂವರವನ್ನು ಗೆಲ್ಲುವ ಭರವಸೆ ಉಂಟಾಯಿತು. ಆರನೆಯವಳಾಗಿ ತಾಯಿಯನ್ನು ಹೊಂದಿದ್ದ ಆ ಭರತರ್ಷಭರು ಸಂಗಡ ಗುರುವಿರುವುದರಿಂದ ತಮ್ಮನ್ನು ತಾವೇ ನಾಥವಂತರೆಂದು ಭಾವಿಸಿದರು. ಉದಾರಮನಸ್ಕ ಗುರುವು ವೇದಾರ್ಥತತ್ವಜ್ಞಾನಿಯಾಗಿದ್ದನು. ಅವನಿಂದಾಗಿಯೇ ಧರ್ಮವಿದ ಸರ್ವವಿದ ಪಾರ್ಥರು ಯಾಗಗಳನ್ನು ಮಾಡಿದರು. ಅವನು ಬುದ್ಧಿವೀರ್ಯಬಲೋತ್ಸಾಹಗಳಿಂದ ಕೂಡಿದ್ದ ದೇವತೆಗಳಂತೆ ಆ ವೀರರು ಸ್ವಧರ್ಮದಿಂದಲೇ ರಾಜ್ಯವನ್ನು ಹೊಂದುತ್ತಾರೆ ಎಂದು ತಿಳಿದನು. ಅವರ ಮಾರ್ಗವು ಮಂಗಳಕರವಾಗಲಿ ಎಂದು ಹರಸಿದನು. ನಂತರ ಆ ಮನುಜಾಧಿಪರು ಒಟ್ಟಿಗೇ ಪಾಂಚಾಲಿಯ ಸ್ವಯಂವರಕ್ಕೆ ಹೋಗಲು ನಿರ್ಧರಿಸಿದರು.
ಪಾಂಚಾಲನಗರಿಗೆ ಪಾಂಡವರ ಪ್ರಯಾಣ
ಆ ನರ ಶಾರ್ದೂಲ ಐವರು ಪಾಂಡವ ಸೋದರರೂ ದ್ರೌಪದಿಯನ್ನು ಮತ್ತು ಆ ದೇವಮಹೋತ್ಸವವನ್ನು ನೋಡಲು ಪ್ರಯಾಣಿಸಿದರು. ಪರಂತಪ ನರವ್ಯಾಘ್ರರು ತಮ್ಮ ತಾಯಿಯ ಜೊತೆಗೂಡಿ ಹೋಗುತ್ತಿರುವಾಗ ಅದೇ ದಾರಿಯಲ್ಲಿ ಗುಂಪು-ಗುಂಪಾಗಿ ಪ್ರಯಾಣಿಸುತ್ತಿರುವ ಹಲವಾರು ಬ್ರಾಹ್ಮಣರನ್ನು ಕಂಡರು. ಬ್ರಹ್ಮಚಾರಿ ರೂಪದಲ್ಲಿ ಪ್ರಯಾಣಿಸುತ್ತಿರುವ ಪಾಂಡವರಿಗೆ ಆ ಬ್ರಾಹ್ಮಣರು ಕೇಳಿದರು:
“ನೀವು ಎಲ್ಲಿಗೆ ಪ್ರಯಾಣ ಮಾಡುತ್ತಿರುವಿರಿ ಮತ್ತು ಎಲ್ಲಿಂದ ಬಂದಿರಿ?”
ಯುಧಿಷ್ಠಿರನು ಹೇಳಿದನು:
“ದೇವದರ್ಶಿಗಳೇ! ನಾವು ಸಹೋದರರೆಂದು ತಿಳಿಯಿರಿ. ನಾವು ಏಕಚಕ್ರದಿಂದ ಬರುತ್ತಿದ್ದೇವೆ ಮತ್ತು ನಮ್ಮ ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದೇವೆ.”
ಬ್ರಾಹ್ಮಣರು ಹೇಳಿದರು:
“ಹಾಗಿದ್ದರೆ ನೀವು ಪಾಂಚಾಲ ದ್ರುಪದನ ನಗರಿಗೆ ಹೋಗಬೇಕು. ಅಲ್ಲಿ ಒಂದು ತುಂಬಾ ಧನಯುಕ್ತ ದೊಡ್ಡ ಸ್ವಯಂವರವು ಜರುಗಲಿದೆ. ನಾವೆಲ್ಲರೂ ಒಟ್ಟಿಗೆ ಒಂದೇ ದೊಡ್ಡ ಗುಂಪಿನಲ್ಲಿ ಅಲ್ಲಿಗೇ ಹೋಗುತ್ತಿರುವೆವು. ಅಲ್ಲಿ ಅದ್ಭುತ ಮತ್ತು ಸುಮನೋಹರ ಉತ್ಸವವು ನಡೆಯಲಿದೆ. ಮಹಾತ್ಮ ಯಜ್ಞಸೇನ ದ್ರುಪದನ ಮಗಳು ಪದ್ಮಪತ್ರಲೋಚನೆಯು ಯಜ್ಞಕುಂಡದ ಮಧ್ಯದಿಂದ ಜನಿಸಿದವಳು. ಅನವದ್ಯಾಂಗಿಯೂ, ದರ್ಶನೀಯಳೂ, ಸುಕುಮಾರಿಯೂ, ಮನಸ್ವಿನಿಯೂ ಆದ ಅವಳು ಖಡ್ಗ ಮತ್ತು ಧನುರ್ಬಾಣಗಳ ಸಹಿತ, ಕವಚಧರಿಸಿ ದ್ರೋಣಶತ್ರುವಾಗಿ ಅಗ್ನಿಯಲ್ಲಿ ಜನಿಸಿದ ಅಗ್ನಿಪ್ರಕಾಶಮಾನ, ಮಹಾಬಾಹು ಪ್ರತಾಪಿ ಧೃಷ್ಟದ್ಯುಮ್ನನ ತಂಗಿ. ಅವನ ತಂಗಿ ಅನವದ್ಯಾಂಗಿ, ಕೃಶಮದ್ಯಮೆ, ನೀಲಕಮಲದಂತೆ ತನ್ನ ಸುಗಂಧವನ್ನು ಕೋಶ ದೂರದವರೆಗೂ ಪ್ರಸರಿಸುವ, ಯಜ್ಞಸೇನನ ಮಗಳು ದ್ರೌಪದಿಯು ತನ್ನ ಸ್ವಯಂವರವನ್ನು ಇಟ್ಟುಕೊಂಡಿದ್ದಾಳೆ. ಅವಳನ್ನು ಮತ್ತು ಆ ದೇವಮಹೋತ್ಸವವನ್ನು ನೋಡಲು ನಾವೆಲ್ಲರೂ ಹೋಗುತ್ತಿದ್ದೇವೆ. ತಮ್ಮ ಪುರೋಹಿತರಿಗೆ ಶ್ರೀಮಂತ ದಕ್ಷಿಣೆಗಳನ್ನು ಕೊಡುವ ಯಜ್ವಾನ, ಸ್ವಾಧ್ಯಾಯವಂತ, ಶುಚಿರ್ಭೂತ, ಮಹಾತ್ಮ, ವ್ರತನಿರತ, ತರುಣ ದರ್ಶನೀಯ, ನಾನಾ ದೇಶಗಳಿಂದ ಆಗಮಿಸುವ, ಅಸ್ತ್ರಕೋವಿದ, ಮಹಾರಥಿ ಭೂಮಿಪ ರಾಜರು ಮತ್ತು ರಾಜಪುತ್ರರೆಲ್ಲರೂ ಅಲ್ಲಿಗೆ ಆಗಮಿಸಲಿದ್ದಾರೆ. ಅಲ್ಲಿರುವ ಎಲ್ಲ ನರೇಶ್ವರರೂ ವಿಜಯಪಾಲನೆಗಾಗಿ ವಿವಿಧರೀತಿಯ ದಾನಗಳನ್ನು-ಧನ, ಗೋವು, ಭಕ್ಷ್ಯ ಭೋಜ್ಯ –ಮುಂತಾದವುಗಳನ್ನು ನೀಡಲಿದ್ದಾರೆ. ಅವೆಲ್ಲವನ್ನೂ ಸ್ವೀಕರಿಸಿ, ಸ್ವಯಂವರವನ್ನು ನೋಡಿ, ಉತ್ಸವವನ್ನು ಆನಂದಿಸಿ, ಮುಂದೆ ನಾವು ನಮಗೆ ಇಷ್ಟವಿದ್ದಲ್ಲಿಗೆ ಪ್ರಯಾಣ ಮಾಡುವೆವು. ಬೇರೆ ಬೇರೆ ದೇಶಗಳಿಂದ ನಟರು, ವೈತಾಲಿಕರು (ವಾದ್ಯಗಾರರು), ನರ್ತಕರು, ಸೂತ-ಮಾಗಧರು, ಮಹಾಬಲ ಮಲ್ಲಯುದ್ಧ ಜಟ್ಟಿಗಳೂ ಬರಲಿದ್ದಾರೆ. ಇಂತಹ ಕೌತೂಹಲವನ್ನು ನೋಡಿ, ಪ್ರತಿಗ್ರಹಣ ಮಾಡಿ, ಪುನಹ ನಮ್ಮ ಜೊತೆಗೇ ಮಹಾತ್ಮರಾದ ನೀವು ಹಿಂದಿರುಗಬಹುದು. ದೇವರೂಪಿ ನಿಮ್ಮ ನಿಲುವನ್ನು ನೋಡಿ ಕೃಷ್ಣೆಯು ನಿಮ್ಮಲ್ಲೇ ಒಬ್ಬನನ್ನು ವರನನ್ನಾಗಿ ಆರಿಸಲೂ ಬಹುದು! ದರ್ಶನೀಯ ಮಹಾಭುಜ ಈ ನಿನ್ನ ಶ್ರೀಮಾನ್ ತಮ್ಮನು ಮಲ್ಲಯುದ್ಧದ ಆಟದಲ್ಲಿ ಗೆದ್ದು ಬಹಳಷ್ಟು ಹಣವನ್ನೂ ಗಳಿಸಬಹುದು!”
ಯುಧಿಷ್ಠಿರನು ಹೇಳಿದನು:
“ಅತ್ಯುತ್ತಮ ದೇವಮಹೋತ್ಸವದಂತಿರುವ ಆ ಕನ್ಯೆಯ ಸ್ವಯಂವರವನ್ನು ನೋಡಲು ನಾವೆಲ್ಲರೂ ನಿಮ್ಮೊಡನೆ ಪ್ರಯಾಣಿಸುತ್ತೇವೆ.”
ಬ್ರಾಹ್ಮಣರ ಈ ಮಾತಿನಂತೆ ಪಾಂಡವರು ರಾಜ ದ್ರುಪದನಿಂದ ಆಳಲ್ಪಟ್ಟ ದಕ್ಷಿಣ ಪಾಂಚಾಲಕ್ಕೆ ಪ್ರಯಾಣ ಮಾಡಿದರು. ಅನಂತರ ಪಾಂಡವರು ದಾರಿಯಲ್ಲಿ ಮಹಾತ್ಮ, ಶುದ್ಧಾತ್ಮ, ಅಕಲ್ಮಶ ದ್ವೈಪಾಯನನನ್ನು ಕಂಡರು. ಅವನನ್ನು ಯಥಾವತ್ ಸತ್ಕರಿಸಿ, ಅವನಿಂದ ಸಾಂತ್ವನ ಮತ್ತು ತದನಂತರ ಅಪ್ಪಣೆಯನ್ನು ಪಡೆದು ಅವರು ದ್ರುಪದ ನಗರಿಗೆ ಮುಂದುವರೆದರು. ಆ ಮಹಾರಥಿಗಳು ಅಲ್ಲಲ್ಲಿ ರಮಣೀಯ ವನ-ಸರೋವರಗಳ ಬಳಿ ತಂಗುತ್ತಾ, ನಿಧಾನವಾಗಿ ತಮ್ಮ ಪ್ರಯಾಣವನ್ನು ಮುಂದುವರೆಸಿದರು. ನಂತರ ಪ್ರಯಾಣದ ಅಂತ್ಯದಲ್ಲಿ ಸ್ವಾಧ್ಯಾಯವಂತ, ಶುಚಿರ್ಭೂತ, ಮಧುರ ಪ್ರಿಯವಾದಿ ಕುರುನಂದನರು ಪಾಂಚಾಲನಗರಿಯನ್ನು ತಲುಪಿದರು. ಪುರವನ್ನು ಮತ್ತು ಅದರ ಕೋಟೆಗಳನ್ನು ನೋಡಿದ ನಂತರ ಪಾಂಡವರು ಒಬ್ಬ ಕುಂಬಾರನ ಮನೆಯಲ್ಲಿ ವಸತಿ ಮಾಡಿದರು. ಬ್ರಾಹ್ಮಣವೃತ್ತಿಗೆ ಸಮಾನ ಭಿಕ್ಷೆಬೇಡಲು ಪ್ರಾರಂಭಿಸಿದರು; ಮತ್ತು ಈ ವೀರರ ಆಗಮನವನ್ನು ಯಾರಿಗೂ ಎಲ್ಲಿಯೂ ಗುರುತಿಸಲು ಆಗಲಿಲ್ಲ.
ಸ್ವಯಂವರ
ಕೃಷ್ಣೆಯನ್ನು ಪಾಂಡವ ಕಿರೀಟಿಗೇ ಕೊಡಬೇಕೆಂದು ಯಜ್ಞಸೇನನು ಸದಾ ಬಯಸಿದ್ದರೂ, ಅದನ್ನು ಯಾರಿಗೂ ಬಹಿರಂಗಪಡಿಸಿರಲಿಲ್ಲ. ಕೌಂತೇಯರ ಅನ್ವೇಷಣೆಯ ಸಲುವಾಗಿ ಪಾಂಚಲ್ಯನು ಬಗ್ಗಿಸಲು ಅಸಾಧ್ಯವಾದ ಒಂದು ದೃಢ ಬಿಲ್ಲನ್ನು ಮಾಡಿಸಿದ್ದನು. ಅಂತರಿಕ್ಷದಲ್ಲಿ ಒಂದು ಕೃತ್ರಿಮ ಯಂತ್ರವನ್ನು ರಚಿಸಿ, ಆ ಯಂತ್ರಕ್ಕೆ ಚಿನ್ನದ ಒಂದು ಲಕ್ಷ್ಯವನ್ನು ಇಡಿಸಿದ್ದನು. ದ್ರುಪದನು ಹೇಳಿದನು:
“ಈ ಧನುಸ್ಸನ್ನು ಕಟ್ಟಿ, ಕಟ್ಟಿಯಾದ ನಂತರ ಈ ಯಂತ್ರದ ಮೂಲಕ ಆ ಲಕ್ಷ್ಯಕ್ಕೆ ಯಾರು ಬಾಣವನ್ನು ಹೊಡೆಯುವವನೋ ಅವನಿಗೇ ನನ್ನ ಮಗಳು ದೊರೆಯುವಳು!”
ಈ ರೀತಿ ರಾಜ ದ್ರುಪದನು ಎಲ್ಲ ಕಡೆಯಲ್ಲಿ ಘೋಷಣೆ ಮಾಡಿಸಿದನು. ಅದನ್ನು ಕೇಳಿ ಎಲ್ಲಾ ರಾಜರು ಅಲ್ಲಿ ಒಂದುಗೂಡಿದರು. ಸ್ವಯಂವರವನ್ನು ವೀಕ್ಷಿಸಲು ಮಹಾತ್ಮ ಋಷಿಗಳು ಹಾಗೂ ಕರ್ಣನನ್ನೊಡಗೂಡಿ ದುರ್ಯೋಧನನ ಮುಂದಾಳತ್ವದಲ್ಲಿ ಕೌರವರೂ ಆಗಮಿಸಿದರು. ಸುತ್ತ ದೇಶಗಳಿಂದ ಮಹಾಭಾಗ ಬ್ರಾಹ್ಮಣರು ಆಗಮಿಸಿದರು ಮತ್ತು ರಾಜಗಣಗಳೆಲ್ಲವೂ ಮಹಾತ್ಮ ದ್ರುಪದನಿಂದ ಸ್ವಾಗತಿಸಲ್ಪಟ್ಟವು. ಭಿರುಗಾಳಿಗೆ ಸಿಲುಕಿದ ಸಮುದ್ರದಂತೆ ಭೋರ್ಗರೆಯುತ್ತಿರುವ ಪುರಜನ ಸಮೂಹವು ಆ ಶಿಶುಮಾರಪುರದಲ್ಲಿ ಒಂದುಗೂಡಿತು, ಪಾರ್ಥಿವರೆಲ್ಲರೂ ಅಲ್ಲಿ ತಂಗಿದರು. ನಗರದ ಪೂರ್ವೋತ್ತರ ದಿಶೆಯಲ್ಲಿ ಸಮ ಭೂಮಿಪ್ರದೇಶದಲ್ಲಿ ಸುತ್ತಲೂ ಸುಂದರ ಭವನಗಳಿಂದ ಆವೃತ ಶೋಭಾಯಮಾನ ಸಮಾಜವಾಟಿಕೆಯನ್ನು ನಿರ್ಮಿಸಲಾಗಿತ್ತು. ಅದು ಸುತ್ತಲೂ ಪ್ರಾಕಾರ, ತೋರಣಗಳಿಂದ ಅಲಂಕೃತ ದ್ವಾರಗಳು ಮತ್ತು ಬಣ್ಣ ಬಣ್ಣದ ಬಾವುಟಗಳಿಂದ ಆವೃತವಾಗಿತ್ತು. ನೂರಾರು ವಾದ್ಯಗಳ ಧ್ವನಿಯಿಂದ ಅದು ತುಂಬಿಕೊಂಡಿತ್ತು. ಅತ್ತ್ಯುತ್ತಮ ಧೂಪದಿಂದ ಸುಗಂಧಿತಗೊಂಡು, ಚಂದನೋದಕದಿಂದ ಸಿಂಚಿತಗೊಂಡು, ಹೂಮಾಲೆಗಳಿಂದ ಅಲಂಕೃತಗೊಂಡಿತ್ತು. ಅದು ಆಕಾಶವನ್ನೇ ಸೀಳಿಬಿಡುವಂತಿರುವ ಕೈಲಾಸಶಿಖರದಷ್ಟು ಎತ್ತರವಾಗಿ, ಬಹಳ ನೈಪುಣ್ಯತೆಯಿಂದ ಕಟ್ಟಲ್ಪಟ್ಟ, ಬಂಗಾರದ ಜಾಲಿಗಳು ಮತ್ತು ಮಣಿ ಕುಟ್ಠಿಮಗಳಿಂದ ಭೂಷಿತ, ಸುಖಾರೋಹಣಕ್ಕೆ ಅನುಕೂಲಕರ ಮೆಟ್ಟಿಲುಗಳು ಮತ್ತು ನೆರಳಿಗಾಗಿ ಕೊಡೆಗಳನ್ನು ಹೊತ್ತ ಮಹಾಸನಗಳನ್ನೊಳಗೊಂಡ, ಪ್ರಾಕಾರದಿಂದ ಸುತ್ತಲೂ ಆವೃತಗೊಂಡಿತ್ತು. ಆ ಪ್ರಾಕಾರದಲ್ಲಿ ಅಸಾಮಾನ್ಯ ಅತಿ ಶ್ರೇಷ್ಠ ರತ್ನಗಂಬಳಿಯನ್ನು ಹಾಸಲಾಗಿತ್ತು, ಮತ್ತು ಅಲ್ಲಿಯ ಧೂಪದ ಸುಗಂಧವು ಶ್ವೇತಹಂಸದಂತೆ ಒಂದು ಯೋಜನ ದೂರದವರೆಗೂ ಪಸರಿಸಿತ್ತು. ಹಿಮವಾಚ್ಛಾದಿತ ಶಿಖರದಂತೆ ವಿವಿಧ ಲೋಹಗಳಿಂದ ತಯಾರಿಸಿದ ಶಯನಾಸನಗಳಿಂದ ಶೋಭಾಯಮಾನವಾಗಿದ್ದ ಆ ಸ್ಥಳಕ್ಕೆ ಒಂದು ನೂರು ದ್ವಾರಗಳಿದ್ದವು. ಒಬ್ಬರಿಗೊಬ್ಬರು ಸ್ಪರ್ಧಿಸುತ್ತಿರುವಂತೆ ನಾನಾ ರೀತಿಯಲ್ಲಿ ಅಲಂಕೃತರಾದ ಎಲ್ಲ ಪಾರ್ಥಿವರೂ ಅಲ್ಲಿ ವಿವಿಧ ಅಂತಸ್ತುಗಳಲ್ಲಿ ಆಸೀನರಾಗಿದ್ದರು. ಕೃಷ್ಣೆಯ ಸೌಂದರ್ಯವನ್ನು ಮಾತ್ರ ನೋಡಿ ಸಂತುಷ್ಟಗೊಳ್ಳಲು ನೆರೆದಿದ್ದ ಪುರಜನ ಮತ್ತು ಗ್ರಾಮಪ್ರದೇಶದವರು ಅವರಿಗಷ್ಟೇ ಸೀಮಿತ ಮಂಚಗಳಲ್ಲಿ ಕುಳಿತು ಅಲ್ಲಿ ಕುಳಿತಿರುವ ಮಹಾಸತ್ವಪರಾಕ್ರಮಿಗಳೂ, ಮಹಾಭಾಗರೂ, ಕಪ್ಪು ಕಸ್ತೂರಿಗಳಿಂದ ವಿಭೂಷಿತರೂ, ಮಹಾಪ್ರಸಾದರೂ, ಬ್ರಾಹ್ಮಣರೂಪಿಗಳೂ, ಸ್ವರಾಷ್ಟ್ರಪರಿರಕ್ಷಕರೂ, ಸುಕೃತಕರ್ಮಗಳಿಗಾಗಿ ಸರ್ವಲೋಕಪ್ರಿಯರೂ, ಶೋಭಾಯಮಾನರೂ ಆದ ಸಿಂಹಗಳಂತಿರುವ ರಾಜರುಗಳನ್ನು ನೋಡುತ್ತಿದ್ದರು.
ಬ್ರಾಹ್ಮಣರ ಮಧ್ಯದಲ್ಲಿ ಕುಳಿತಿದ್ದ ಪಾಂಡವರು, ಪಾಂಚಾಲ ರಾಜನ ಸರಿಸಾಟಿಯಿಲ್ಲದಂಥ ಸಂಪತ್ತನ್ನೇ ನೋಡುತ್ತಿದ್ದರು. ಬಹುದಿನಗಳವರೆಗೆ ನೆರೆದಿದ್ದ ಗುಂಪು ಹೆಚ್ಚಾಗುತ್ತಲೇ ಇತ್ತು. ರತ್ನಗಳ ರಾಶಿಗಳಿಂದ ತುಂಬಿಕೊಂಡಿತ್ತು ಮತ್ತು ನಟನರ್ತಕರಿಂದ ಶೋಭಾಯಮಾನವಾಗಿತ್ತು. ರಮಣೀಯ ಹದಿನಾರನೆಯ ದಿನ, ವರ್ತಮಾನ ಸಮಾಜದ ಮಧ್ಯೆ, ಮಿಂದು, ಹೊಸವಸ್ತ್ರ ಮತ್ತು ಸರ್ವಾಭರಣಭೂಷಿತಳಾಗಿ ದ್ರೌಪದಿಯು ಕಾಣಿಸಿಕೊಂಡಳು. ಕಾಂಚನದಿಂದ ಅಲಂಕೃತಗೊಂಡ ವೀರಮಾಲೆಯನ್ನು ಹಿಡಿದು, ದ್ರೌಪದಿಯು ರಂಗದ ಮಧ್ಯೆ ಇಳಿದಳು. ಮಂತ್ರವಿದ್ವಾನ, ಶುಚಿರ್ಭೂತ ಸೋಮಕರ ಪುರೋಹಿತ ಬ್ರಾಹ್ಮಣನು ಸುತ್ತಲೂ ದರ್ಭೆಯನ್ನು ಹರಡಿ, ಅಗ್ನಿಯಲ್ಲಿ ವಿಧಿವತ್ತಾಗಿ ಆಜ್ಯದ ಆಹುತಿಯನ್ನು ನೀಡಿದನು. ಅಗ್ನಿಯನ್ನೂ ಮತ್ತು ಬ್ರಾಹ್ಮಣರನ್ನೂ ತೃಪ್ತಿಪಡಿಸಿದ ನಂತರ, ಸ್ವಸ್ತಿ ವಾಚನ ಮಾಡಿ, ಎಲ್ಲಾ ಕಡೆಯಲ್ಲಿಯೂ ವಾದ್ಯಸಂಗೀತಗಳನ್ನು ನಿಲ್ಲಿಸಲು ಸೂಚಿಸಿದನು. ನಿಃಶಬ್ದವಾದ ಕೂಡಲೇ ಧೃಷ್ಟದ್ಯುಮ್ನನು ರಂಗಮಧ್ಯಕ್ಕೆ ಹೋಗಿ, ಮೇಘಗಂಭೀರ ಧ್ವನಿಯಲ್ಲಿ ಈ ಸುಲಕ್ಷಣ ಅರ್ಥಗರ್ಭಿತ ಮಾತುಗಳನ್ನು ಆಡಿದನು:
“ಇಲ್ಲಿ ನೆರೆದಿರುವ ರಾಜರುಗಳೆಲ್ಲ ಕೇಳಿರಿ! ಈ ಬಿಲ್ಲು, ಲಕ್ಷ್ಯ ಮತ್ತು ಬಾಣಗಳನ್ನು ಸರಿಯಾಗಿ ನೋಡಿಕೊಳ್ಳಿ. ನೀವು ಚಕ್ರದಲ್ಲಿರುವ ಛಿದ್ರದ ಮೂಲಕ ಈ ಐದು ಬಾಣಗಳನ್ನು ಬಿಟ್ಟು ಈ ಲಕ್ಷ್ಯವನ್ನು ಹೊಡೆಯಬೇಕು. ಕುಲ, ರೂಪ ಮತ್ತು ಬಲವಂತ ಯಾರು ಈ ದುಷ್ಕರ ಕಾರ್ಯವನ್ನು ಮಾಡುತ್ತಾನೆಯೋ ಅವನಿಗೇ ನನ್ನ ತಂಗಿ ಕೃಷ್ಣೆಯು ಪತ್ನಿಯಾಗಿ ಹೋಗುತ್ತಾಳೆ ಎಂಬ ಭವಿಷ್ಯವಾಣಿಯನ್ನು ನುಡಿಯುತ್ತೇನೆ.”
ಈ ರೀತಿ ಹೇಳಿದ ನಂತರ ದ್ರುಪದ ಪುತ್ರನು, ದ್ರೌಪದಿಗೆ ಅಲ್ಲಿ ನೆರೆದಿರುವ ಎಲ್ಲಾ ನೃಪತಿಗಳ ಹೆಸರು, ಗೋತ್ರ, ಮತ್ತು ಕಾರ್ಯಗಳನ್ನು ಹೊಗಳ ತೊಡಗಿದನು:
“ದುರ್ಯೋಧನ, ದುರ್ವಿಷಹ, ದುರ್ಮುಖ, ದುಷ್ಟದರ್ಶನ, ವಿವಿಂಶತಿ, ವಿಕರ್ಣ, ಸಹ, ದುಃಶಾಸನ, ಸಮ, ಯುಯುತ್ಸು, ವಾತವೇಗ, ಭೀಮವೇಗಧರ, ಉಗ್ರಾಯುಧ, ಬಲಾಕೀ, ಕನಕಾಯು, ವಿರೋಚನ, ಸುಕುಂಡಲ, ಚಿತ್ರಸೇನ, ಸುವರ್ಚ, ಕನಕಧ್ವಜ, ನಂದಕ, ಬಾಹುಶಾಲಿ, ಕುಂಡಜ, ವಿಕಟ – ಇವರು ಮತ್ತು ಧೃತರಾಷ್ಟ್ರನ ಇನ್ನೂ ಅನೇಕ ಮಹಾಬಲ ವೀರ ಮಕ್ಕಳು ಕರ್ಣನ ಜೊತೆಗೂಡಿ ನಿನಗೋಸ್ಕರ ಆಗಮಿಸಿದ್ದಾರೆ! ಇಂಥಹ ನೂರಾರು ಮಹಾತ್ಮ ಪ್ರಸಿದ್ಧ ಕ್ಷತ್ರಿಯರ್ಷಭರು ಆಗಮಿಸಿದ್ದಾರೆ. ಶಕುನಿ, ಬಲ, ವೃಷಕ, ಬೃಹದ್ಬಲ ಗಾಂಧಾರರಾಜನ ಎಲ್ಲ ಸುತರೂ ಇಲ್ಲಿ ಸಮಾವೇಷಗೊಂಡಿದ್ದಾರೆ. ಸರ್ವ ಶಸ್ತ್ರಭೃತರಲ್ಲಿ ಶ್ರೇಷ್ಠ, ಮಹಾತ್ಮ ಅಶ್ವತ್ಥಾಮ ಮತ್ತು ಭೋಜ ಇಬ್ಬರೂ ನಿನಗಾಗಿ ಸಮಲಂಕೃತರಾಗಿ ಬಂದಿದ್ದಾರೆ. ಬೃಹಂತ, ಮಣಿಮಾ, ವೀರ್ಯವಂತ ದಂಡಧಾರ, ಸಹದೇವ, ಮಾಗಧ ಮೇಘಸಂಧಿ, ತನ್ನ ಇಬ್ಬರು-ಶಂಖ ಮತ್ತು ಉತ್ತರ-ಪುತ್ರರನ್ನೊಡಗೂಡಿದ ವಿರಾಟ, ವಾರ್ಧಕ್ಷೇಮಿ (ವೃದ್ಧಕ್ಷೇಮನ ಮಗ ಜಯದ್ರಥ), ಸುವರ್ಚಾ, ರಾಜ ಸೇನಾಬಿಂದು, ತನ್ನ ಸುವರ್ಚಸ ಪುತ್ರನನ್ನೊಡಗೂಡಿದ ಅಭಿಭೂ, ಸುಮಿತ್ರ, ಸುಕುಮಾರ, ವೃಕ, ಸತ್ಯಧೃತಿ, ಸೂರ್ಯಧ್ವಜ, ರೋಚಮಾನ, ನೀಲ, ಚಿತ್ರಾಯುಧ, ಅಂಶುಮಾನ್, ಚೇಕಿತಾನ, ಮಹಾಬಲ ಶ್ರೇಣಿಮಾನ್, ಸಮುದ್ರಸೇನನ ಪ್ರತಾಪಿ ಪುತ್ರ ಚಂದ್ರಸೇನ, ಜಲಸಂಧ, ಪಿತಾಪುತ್ರ ಸುದಂಡ ಮತ್ತು ದಂಡ, ಪೌಂಡ್ರಕ, ವಾಸುದೇವ, ವೀರ್ಯವಾನ್ ಭಗದತ್ತ, ಕಲಿಂಗ, ತಾಮ್ರಲಿಪ್ತ, ಪತ್ತನದ ಅಧಿಪತಿ, ಪುತ್ರರಿಂದೊಡಗೂಡಿ ಮಹಾರಥಿ ಮದ್ರರಾಜ, ಹಾಗೂ ವೀರ ರುಕ್ಮಾಂಗದ-ರುಕ್ಮರಥ ಇವರೆಲ್ಲರೂ ಇಲ್ಲಿ ಸೇರಿದ್ದಾರೆ. ಅಲ್ಲಿ ಕೌರವ್ಯ ಸೋಮದತ್ತ ಮತ್ತು ಅವನ ಮಹಾರಥಿ ಪುತ್ರರು, ಶೂರತ್ರಯ ಭೂರಿ, ಭೂರಿಶ್ರವ ಮತ್ತು ಶಲ, ಸುದಕ್ಷಿಣ, ಕಾಂಬೋಜ, ಕೌರವ ದೃಢಧನ್ವ, ಬೃಹದ್ಬಲ, ಸುಷೇಣ, ಮತ್ತು ಶಿಬಿ ಔಶೀನರ ಮುಂತಾದವರು ಆಸೀನರಾಗಿದ್ದಾರೆ. ಸಂಕರ್ಷಣ, ವಾಸುದೇವ, ವೀರ್ಯವಾನ್ ರೌಕ್ಮಿಣೇಯ, ಸಾಂಬ, ಚಾರುದೇಷ್ಣ, ಸಾರಣ, ಗದ, ಅಕ್ರೂರ, ಸಾತ್ಯಕಿ, ಮಹಾಬಲ ಉದ್ಧವ, ಕೃತವರ್ಮ ಹಾರ್ದಿಕ್ಯ, ಪೃಥು ಮತ್ತು ವಿಪೃಥು, ವಿಢೂರಥ, ಕಂಕ, ಸಮೀಕ, ಸಾರಮೇಜಯ, ವೀರ ವಾತಪತಿ, ಝಿಲ್ಲಿ, ಪಿಂಡಾರಕ, ವಿಕ್ರಾಂತ, ಉಶೀನರ, ಈ ಎಲ್ಲ ಪ್ರಖ್ಯಾತ ವೃಷ್ಣಿಗಳೂ ಆಗಮಿಸಿದ್ದಾರೆ. ಭಗೀರಥ, ಬೃಹತ್ಕ್ಷತ್ರ, ಸೈಂಧವ ಜಯದ್ರಥ, ಬೃಹದ್ರಥ, ಬಾಹ್ಲೀಕ, ಮಹಾರಥಿ ಶೃತಾಯು, ಉಲೂಕ, ರಾಜ ಕೈತವ, ಚಿತ್ರಾಂಗದ, ಶುಭಾಂಗದ, ಧೃತಿವಂತ ವತ್ಸ ರಾಜ, ಮತ್ತು ಕೋಸಲಾಧಿಪತಿ ಇವರೆಲ್ಲರೂ ಇಲ್ಲಿ ನೆರೆದಿದ್ದಾರೆ. ಇವರೆಲ್ಲರೂ ಮತ್ತು ಇನ್ನೂ ಅನೇಕ ನಾನಾ ಜನಪದೇಶ್ವರರು - ಭೂಮಿಯಲ್ಲಿ ಪ್ರಖ್ಯಾತ ಎಲ್ಲ ಕ್ಷತ್ರಿಯರೂ ನಿನ್ನನ್ನು ಗೆಲ್ಲಲು ಆಗಮಿಸಿದ್ದಾರೆ. ಶುಭೇ! ನಿನ್ನನ್ನು ಗೆಲ್ಲುವ ಉದ್ದೇಶದಿಂದ ಈ ವೀರರು ಆ ಉತ್ತಮ ಲಕ್ಷ್ಯಕ್ಕೆ ಗುರಿಯಿಟ್ಟು ಬಾಣಬಿಡುವರು. ಮತ್ತು ನೀನು ಆ ಲಕ್ಷ್ಯಕ್ಕೆ ಹೊಡೆಯುವನನ್ನು ವರನನ್ನಾಗಿ ಆರಿಸುವೆ.”
ತಾವೇ ಅಸ್ತ್ರಬಲರೆಂಬ ಜಂಬದಿಂದ ಕುಂಡಲ ಮತ್ತಿತರ ಆಭರಣಗಳಿಂದ ಅಲಂಕೃತರಾದ ಯುವಕರು ಪರಸ್ಪರ ಸ್ಪರ್ಧಿಸಲು ಒಂದಾದರು. ರೂಪ, ವೀರ್ಯ, ಕುಲ, ಧರ್ಮ ಮತ್ತು ಯೌವನ ದರ್ಪದಿಂದ ತುಂಬಿದ ಅವರೆಲ್ಲರೂ ಹಿಮಾಲಯದ ಮದೋನ್ಮತ್ತ ಗಜೇಂದ್ರಗಳಂತೆ ಮುನ್ನುಗ್ಗುತ್ತಿದ್ದರು. ಪರಸ್ಪರರನ್ನು ಸ್ಪರ್ಧಾಭಾವದಿಂದ ನೋಡುತ್ತಾ, ಕಾಮದಲ್ಲಿ ಮುಳುಗೆದ್ದವರಂತೆ, “ಕೃಷ್ಣೆಯು ನನ್ನವಳಾಗುತ್ತಾಳೆ!” ಎಂದು ಘೋಷಿಸುತ್ತಾ ತಮ್ಮ ತಮ್ಮ ರಾಜ ಆಸನಗಳಿಂದ ಎದ್ದರು. ದೃಪದಾತ್ಮಜೆಯನ್ನು ಗೆಲ್ಲಲು ರಂಗದಲ್ಲಿ ಸೇರಿದ್ದ ಕ್ಷತ್ರಿಯರು, ಪರ್ವತರಾಜಕನ್ಯೆ ಉಮೆಗಾಗಿ ನೆರೆದಿದ್ದ ದೇವಗಣದಂತೆ ಕಂಗೊಳಿಸಿದರು. ಕಂದರ್ಪನ ಬಾಣಗಳಿಂದ ಪೀಡಿತಾಂಗರಾಗಿ, ಕೃಷ್ಣೆಗಾಗಿ ಹೃದಯಗಳನ್ನು ಕಳೆದುಕೊಂಡ ನರೇಂದ್ರರು ದೃಪದಾತ್ಮಜೆಗಾಗಿ ರಂಗಕ್ಕಿಳಿದು, ಅಲ್ಲಿ ಮಿತ್ರರನ್ನೂ ಸಹ ಶತ್ರುಗಳೆಂದು ಪರಿಗಣಿಸಿ ನೋಡತೊಡಗಿದರು. ಯಮ ಮತ್ತು ಧನೇಶ್ವರನನ್ನು ಮುಂದಿಟ್ಟುಕೊಂಡು, ರುದ್ರ, ಆದಿತ್ಯ, ವಸು, ಅಶ್ವಿನಿ, ಸಾದ್ಯ, ಮರುತ್, ಆದಿ ಎಲ್ಲ ದೇವಗಣಗಳೂ ದೈತ್ಯರು, ಸುಪರ್ಣರು, ಮಹಾಉರಗಗಳು, ದೇವರ್ಷಿಗಳು, ಗುಹ್ಯಕರು, ಚರಣರು, ವಿಶ್ವಾವಸು, ನಾರದ, ಪರ್ವತ, ಗಂಧರ್ವ ಪ್ರಮುಖರು, ಮತ್ತು ಅಪ್ಸರೆಯರು ವಿಮಾನಗಳಲ್ಲಿ ಬಂದು ನೆರೆದರು.
ಕೃಷ್ಣನ ಹೇಳಿಕೆಯಂತೆ ಯದುಪುಂಗವರೆಲ್ಲ ಒಂದೇ ಕಡೆ ಕುಳಿತಿದ್ದರು. ಅಲ್ಲಿಂದ ವೃಷ್ಣಿ ಮತ್ತು ಅಂಧಕರಲ್ಲಿ ಪ್ರಧಾನ ಹಲಾಯುಧ-ಕೇಶವರು ಸುತ್ತಲೂ ನೋಡಿದರು. ಮತ್ತಗಜೇಂದ್ರರೂಪಿ, ಭಸ್ಮಾವೃತಶರೀರಿ ಹವ್ಯವಾಹನಗಳಂತಿರುವ, ಸರೋವರದ ಪಂಚಪದ್ಮಗಳಂತಿರುವ ಪಾರ್ಥರನ್ನು ಯದುಪ್ರವೀರನು ಕಂಡನು. ರಾಮನಿಗೆ ಯುಧಿಷ್ಠಿರ, ಭೀಮ, ಜಿಷ್ಣು, ಮತ್ತು ವೀರ ಅವಳಿಗಳನ್ನು ಸೂಚಿಸಿದನು; ನಿಧಾನವಾಗಿ ಅವರೆಡೆಗೆ ನೋಡಿದ ರಾಮನು ಸಂತೋಷದಿಂದ ಜನಾರ್ದನನ ಕಡೆ ನೋಡಿದನು.
ತಮ್ಮ ನೇತ್ರ, ಮನಸ್ಸು ಮತ್ತು ಸ್ವಭಾವಗಳನ್ನು ಕೃಷ್ಣೆಗಾಗಿ ಕಳೆದುಕೊಂಡ ನಾನಾ ನೃಪಪುತ್ರರೂ ಪೌತ್ರರೂ ತಾಮ್ರದಂತೆ ಕೆಂಪಾದ ಮುಖವುಳ್ಳವರಾಗಿ, ತುಟಿಯನ್ನು ಕಚ್ಚುತ್ತಾ, ತಮ್ಮ ತೋಳಬಲವನ್ನು ತೋರಿಸುತ್ತಾ, ಮುಂದೆ ಸಾಗುತ್ತಿರುವ ದ್ರೌಪದಿಯನ್ನು ದುರುಗುಟ್ಟಿ ನೋಡುತ್ತಿದ್ದರು. ಮಹಾಬಾಹು, ಮಹಾನುಭಾವ ಪಾರ್ಥರು ಮತ್ತು ಇಬ್ಬರು ಅವಳಿಗಳು ದ್ರೌಪದಿಯನ್ನು ನೋಡುತ್ತಲೇ ಇದ್ದರು ಮತ್ತು ಅವರೆಲ್ಲರೂ ಕಂದರ್ಪಬಾಣಗಳಿಂದ ಗಾಯಗೊಂಡಿದ್ದರು. ಆಕಾಶವು ದೇವ, ಋಷಿ, ಗಂಧರ್ವ, ಸುಪರ್ಣ, ನಾಗ, ಅಸುರ ಮತ್ತು ಸಿದ್ಧರಿಂದ ತುಂಬಿಕೊಂಡಿತ್ತು ಮತ್ತು ಅಲ್ಲಲ್ಲಿ ಬಿಸುಟ ದಿವ್ಯಮಾಲೆಗಳಿಂದ ಹೊಮ್ಮುತ್ತಿರುವ ದಿವ್ಯ ಸುಗಂಧದಿಂದ ತುಂಬಿಕೊಂಡಿತ್ತು. ದುಂಧುಭಿಗಳ ಮಹಾನಾದ ಗರ್ಜನೆಯಿಂದ ಅಂತರಿಕ್ಷವು ಇನ್ನೂ ಇಕ್ಕಟ್ಟೆನಿಸುತ್ತಿತ್ತು ಮತ್ತು ಹಲವಾರು ವಿಮಾನಗಳಿಂದ ಅದರ ಮಾರ್ಗಗಳು ಕಟ್ಟಿಹೋಗಿದ್ದವು ಹಾಗೂ ವೇಣು ಮತ್ತು ವೀಣಾವಾದನಗಳಿಂದ ಪ್ರತಿಧ್ವನಿಸುತ್ತಿತ್ತು.
ನಂತರ ಕ್ರಮೇಣವಾಗಿ ಕೃಷ್ಣೆಯ ಸಲುವಾಗಿ ರಾಜಗಣದಲ್ಲಿದ್ದ ಎಲ್ಲ ನೃಪರು ಹೊರಬಂದರು. ಆದರೆ ಆ ಬಿಲ್ಲು ಎಷ್ಟು ಗಡುಸಾಗಿತ್ತೆಂದರೆ ತಮ್ಮ ಎಲ್ಲ ಶಕ್ತಿಯನ್ನು ಬಳಸಿಯೂ ಅವರು ಆ ಬಿಲ್ಲಿಗೆ ದಾರವನ್ನು ಕಟ್ಟಲು ಅಸಮರ್ಥರಾದರು. ಆ ಗಡುಸಾದ ಬಿಲ್ಲನ್ನು ಬಗ್ಗಿಸುವಾಗಲೇ, ಅದು ಜೋರಾಗಿ ಬಳುಕಿ ನರೇಂದ್ರರನ್ನೆಲ್ಲಾ ಕೆಳಗುರುಳಿಸುತ್ತಿತ್ತು, ಮತ್ತು ಧರಣೀತಲದಲ್ಲಿ ಪೇಚಲಾಡುತ್ತಿದ್ದ ಅವರು ದೀನರೂ ವಿಭಗ್ನಚಿತ್ತರಾಗಿಯೂ ಕಾಣುತ್ತಿದ್ದರು. ದೃಢವಾದ ಆ ಬಿಲ್ಲು ಜೋರಾಗಿ ಶಬ್ಧಮಾಡುತ್ತಾ, ಅವರ ಅಂಗ ಮತ್ತು ಕುಂಡಲಗಳನ್ನು ಕಿತ್ತು ಚೆಲ್ಲಿತು; ಕೃಷ್ಣೆಗಾಗಿ ಇದ್ದ ಭಾವಗಳೆಲ್ಲವೂ ಇಲ್ಲದಂತಾಗಿ, ರಾಜರ ಆ ಮಂಡಲವು ಆರ್ತವಾಗಿ ಕಂಡಿತು. ಅಲ್ಲಿ ನೆರೆದಿರುವ ಭ್ರಾಂತಿಗೊಂಡ ಜನಸಮೂಹವು ನರಾಧಿಪರ ಕುರಿತು ನಿಕ್ಷಿಪ್ತ ಮಾತುಗಳನ್ನಾಡ ತೊಡಗಿರಲು, ಕುಂತೀಸುತ ವೀರ ಜಿಷ್ಣುವು ಧನುಸ್ಸನ್ನು ಸಜ್ಜಿಸಲು ಮತ್ತು ಅದಕ್ಕೆ ಶರವನ್ನೇರಿಸಲು ಎದ್ದನು.
ರಾಜರೆಲ್ಲರೂ ಧನುಸ್ಸನ್ನು ಸಜ್ಜಿಸುವ ಕಾರ್ಯದಿಂದ ಹಿಂದೆ ಸರಿದುಕೊಂಡ ನಂತರ ಬ್ರಾಹ್ಮಣರ ಮಧ್ಯದಿಂದ ಉದಾರಮನಸ್ಸಿನ ಜಿಷ್ಣುವು ಎದ್ದು ನಿಂತನು. ಇಂದ್ರಧನುಸ್ಸಿನ ಕಾಂತಿಯುಕ್ತ ಪಾರ್ಥನು ಎದ್ದುದನ್ನು ನೋಡಿ ವಿಪ್ರಪ್ರಮುಖರೆಲ್ಲರೂ ತಮ್ಮ ಜಿನವಸ್ತ್ರಗಳನ್ನು ಹಾರಿಸಿ ಉದ್ಗರಿಸಿದರು. ಕೆಲವರು ವಿಮನಸಗೊಂಡರೆ ಮತ್ತೆ ಕೆಲವರು ಮುದಿತರಾದರು; ಮತ್ತೆ ಕೆಲವು ನಿಪುಣ ಬುದ್ಧಿಜೀವಿಗಳು ಪರಸ್ಪರರಲ್ಲಿ ಮಾತನಾಡಿಕೊಂಡರು:
“ಕರ್ಣ ಮತ್ತು ಶಲ್ಯರಂತಹ ಲೋಕವಿಶೃತ, ಬಲಶಾಲಿ, ಧನುರ್ವೇದಪರಾಯಣ ಪಾರ್ಥಿವರಿಂದಲೇ ಈ ಧನಸ್ಸನ್ನು ಬಗ್ಗಿಸಲು ಅಸಾಧ್ಯವಾದಾಗ, ಅಸ್ತ್ರ-ಶಸ್ತ್ರಗಳಲ್ಲಿ ಪರಿಣತಿಯಿಲ್ಲದ, ದುರ್ಬಲನಾಗಿ ಕಾಣುತ್ತಿರುವ ಈ ವಟುಮಾತ್ರನಿಂದ ಧನಸ್ಸನ್ನು ಸಜ್ಜಿಸಲು ಹೇಗೆ ಶಕ್ಯ, ಬ್ರಾಹ್ಮಣರೇ! ಚಪಲತೆಯಿಂದ, ಸರಿಯಾಗಿ ಆಲೋಚನೆ ಮಾಡದೇ ತೆಗೆದುಕೊಂಡ ಈ ಕಾರ್ಯದಲ್ಲಿ ಅವನು ಯಸಸ್ವಿಯಾಗದಿದ್ದರೆ, ಈ ಎಲ್ಲ ರಾಜರ ಮುಂದೆ ನಾವು ಬ್ರಾಹ್ಮಣರು ಅವಹಾಸ್ಯಗೊಳಗಾಗಲಿದ್ದೇವೆ. ಒಂದುವೇಳೆ ಅವನು ದರ್ಪ ಅಥವಾ ಉತ್ಸಾಹ ಅಥವಾ ಬ್ರಾಹ್ಮಣರ ಮೇಲಿರುವ ಕೀಳರಿಮೆಯಿಂದ ಆ ಧನುಸ್ಸನ್ನು ಕಟ್ಟಲು ಹೋಗುತ್ತಿದ್ದಾನೆಂದಾದರೆ, ನಾವು ಅಪಹಾಸ್ಯಕ್ಕೆ ಒಳಗಾಗದಿರಲು, ಹಗುರವೆನಿಸಿಕೊಳ್ಳದಿರಲು ಮತ್ತು ಲೋಕದ ಎಲ್ಲ ಮಹೀಪತಿಗಳ ದ್ವೇಷಕ್ಕೊಳಗಾಗದೇ ಇರಲು ಅವನನ್ನು ತಡೆಹಿಡಿಯುವುದು ಒಳ್ಳೆಯದು.”
ಇತರರು ಹೇಳಿದರು:
“ಯುವಕನು ಉತ್ತಮನಾಗಿದ್ದಾನೆ. ಗಜರಾಜನ ಸೊಂಡಿಲಿನಂತೆ ತೋರುತ್ತಿದ್ದಾನೆ. ಅವನ ಬಾಹು, ತೊಡೆ ಮತ್ತು ತೋಳುಗಳು ಮಾಂಸಖಂಡಗಳಿಂದ ತುಂಬಿಕೊಂಡು ಗಟ್ಟಿಯಾಗಿ ಕಾಣಿಸುತ್ತಿವೆ ಮತ್ತು ಹಿಮಾಲಯದಂತೆ ಅವನ ನಿಲುವಿನಲ್ಲಿ ಧೈರ್ಯವಿದೆ. ಅವನು ಕಾರ್ಯದಲ್ಲಿ ಗೆಲ್ಲುತ್ತಾನೆ ಎನ್ನುವುದನ್ನು ಅವನಲ್ಲಿರುವ ಉತ್ಸಾಹವೇ ತೋರಿಸುತ್ತಿದೆ. ಅವನ ಶಕ್ತಿಯಲ್ಲಿ ಉತ್ಸಾಹವಿದೆ. ಇಂತಹ ಸಮರ್ಥ ವ್ಯಕ್ತಿಯು ತಾನಾಗಿಯೇ ಬಿಟ್ಟುಹೋಗುವುದಿಲ್ಲ. ಇದಲ್ಲದೇ, ಮೂರು ಸಂಸ್ಥಾನಚಾರಿಗಳಲ್ಲಿ ಬ್ರಾಹ್ಮಣರಿಗೆ ಅಸಾಧ್ಯವಾದ ಯಾವ ಕಾರ್ಯವೂ ಯಾವುದೇ ಲೋಕದಲ್ಲಿಯೂ ಕಂಡುಬರುವುದಿಲ್ಲ. ಕೇವಲ ನೀರು, ವಾಯು ಅಥವಾ ಫಲಾಹಾರ ಸೇವನೆಯಿಂದ ದೃಢವ್ರತ ವಿಪ್ರರು ದುರ್ಬಲರೆನಿಸಿದರೂ, ಅವರ ಬ್ರಹ್ಮತೇಜಸ್ಸಿನಿಂದ ಬಹಳ ಬಲಶಾಲಿಗಳಾಗಿರುತ್ತಾರೆ. ಅವನು ಒಳ್ಳೆಯದನ್ನು ಅಥವಾ ಕೆಟ್ಟದ್ದನ್ನು ಮಾಡಲಿ, ಅವನು ತೊಡಗಿರುವ ಕಾರ್ಯವು ಸುಖಕರವಾಗಿರಲಿ ದುಃಖಕರವಾಗಿರಲಿ ಅಥವಾ ದೊಡ್ಡಕಾರ್ಯವೇ ಆಗಿರಲಿ ಅಥವಾ ಸಣ್ಣಕಾರ್ಯವೇ ಆಗಿರಲಿ, ಬ್ರಾಹ್ಮಣನನ್ನು ಅವಹೇಳನೆ ಮಾಡಬಾರದು.”
ಈ ರೀತಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಿರುವಾಗ, ಅರ್ಜುನನು ಧನುಸ್ಸಿನ ಬಳಿ ಹೋಗಿ ಅಚಲ ಪರ್ವತದಂತೆ ನಿಂತನು. ಆ ಪರಂತಪನು ಧನುಸ್ಸನ್ನು ಸುತ್ತುವರಿದು ಪ್ರದಕ್ಷಿಣೆ ಮಾಡಿ, ತಲೆ ಬಗ್ಗಿಸಿ ಪ್ರಣಾಮಮಾಡಿದನು ಮತ್ತು ಸಂತೋಷದಿಂದ ಅದನ್ನು ಕೈಯಲ್ಲಿ ತೆಗೆದುಕೊಂಡನು. ಕಣ್ಣು ಮುಚ್ಚಿ ಬಿಡುವುದರಲ್ಲಿ ಅವನು ಧನುಸ್ಸನ್ನು ಕಟ್ಟಿ, ಐದು ಬಾಣಗಳನ್ನು ತೆಗೆದುಕೊಂಡು, ರಂಧ್ರದ ಮೂಲಕ ಲಕ್ಷ್ಯವನ್ನು ಭೇದಿಸಿ ಕೆಳಗೆ ಭೂಮಿಯಮೇಲೆ ರಭಸದಿಂದ ಬೀಳಿಸಿದನು. ಅಂತರಿಕ್ಷದಲ್ಲಿ ಹರ್ಷೋದ್ಗಾರವಾಯಿತು, ಜನರ ಗುಂಪಿನಲ್ಲಿ ಮಹಾನಿನಾದ ಕೇಳಿಬಂದಿತು. ಶತ್ರುನಾಶಿನಿ ಪಾರ್ಥನ ನೆತ್ತಿಯಮೇಲೆ ದೇವತೆಗಳು ದಿವ್ಯ ಪುಷ್ಪಗಳ ಮಳೆ ಸುರಿಸಿದರು. ಉತ್ತರೀಯಗಳನ್ನು ಪಟದಂತೆ ಹಾರಿಸುತ್ತಾ ನೆರೆದಿದ್ದ ಎಲ್ಲ ಪ್ರೇಕ್ಷಕರೂ ಹಾಹಾಕಾರಗೈದರು ಮತ್ತು ನಭದಿಂದ ಪುಷ್ಪವೃಷ್ಟಿಯಾಯಿತು. ವಾದ್ಯಗಾರರು ನೂರಾರು ವಾದ್ಯ ತೂರೆಗಳನ್ನು ಮೊಳಗಿಸಿದರು ಮತ್ತು ಸೂತ ಮಾಗಧರು ಎತ್ತರ ಸ್ವರಗಳಲ್ಲಿ ಪ್ರಶಂಸನೆಗಳನ್ನು ಹಾಡಿದರು. ಅರಿನಿಷೂದನ ದ್ರುಪದನು ಅವನನ್ನು ನೋಡಿ ಸಂತೋಷಗೊಂಡು, ಪಾರ್ಥನ ರಕ್ಷಣಿಗೆಂದು ಸೈನ್ಯಸಮೇತ ನಿಂತನು. ಈ ಗಲಾಟೆಯು ಹೆಚ್ಚಾಗುತ್ತಿದ್ದಂತೆ, ಧರ್ಮಭೃತರಲ್ಲಿ ವರಿಷ್ಠ ಯುಧಿಷ್ಠಿರನು, ಪುರುಷೋತ್ತಮ ಅವಳಿಗಳ ಜೊತೆಗೂಡಿ ಶೀಘ್ರವಾಗಿ ಅವಾಸದೆಡೆಗೆ ಹೊರಟುಹೋದನು.
ಲಕ್ಷ್ಯವನ್ನು ಹೊಡೆದಿದ್ದನ್ನು ನೋಡಿ, ಶಕ್ರಪ್ರತಿಮ ಪಾರ್ಥನನ್ನು ನೋಡಿ, ಕೃಷ್ಣೆಯು ಬಿಳಿ ವರಮಾಲೆಯನ್ನು ಹಿಡಿದು, ಮುಗುಳ್ನಗುತ್ತಾ ಕುಂತೀಸುತನೆಡೆಗೆ ಬಂದಳು. ಸ್ಪರ್ಧೆಯಲ್ಲಿ ಜಯವನ್ನು ಗಳಿಸಿ ಬ್ರಾಹ್ಮಣರಿಂದ ಅಭಿಪೂಜ್ಯಮಾನ, ಅಚಿಂತ್ಯಕರ್ಮನು ತನ್ನ ಪತ್ನಿಯು ಅನುಸರಿಸುತ್ತಿದ್ದ ಹಾಗೆ ರಂಗದಿಂದ ಹೊರಬಂದನು.
ರಾಜನು ಕನ್ಯೆಯನ್ನು ಆ ಮಹಾತ್ಮ ಬ್ರಾಹ್ಮಣನಿಗೆ ಕೊಡಬೇಕೆಂದಿರುವಾಗ, ನೆರೆದಿದ್ದ ಮಹೀಪತಿಗಳೆಲ್ಲಾ ಕೋಪಗೊಂಡು ಪರಸ್ಪರರನ್ನು ನೋಡತೊಡಗಿದರು:
“ಇಲ್ಲಿ ನೆರೆದಿರುವ ನಮ್ಮೆಲ್ಲರನ್ನೂ ತೃಣೀಕರಿಸಿ ಅತಿಕ್ರಮಿಸಿ, ಸ್ತ್ರೀಯರಲ್ಲೇ ಶ್ರೇಷ್ಠ ದ್ರೌಪದಿಯನ್ನು ಒಬ್ಬ ಬ್ರಾಹ್ಮಣನಿಗೆ ಕೊಡಲು ತೊಡಗಿದ್ದಾನೆ. ನಮಗೆ ಅಗೌರವವನ್ನು ತೋರಿಸುವ ಈ ದುರಾತ್ಮನನ್ನು ಕೊಲ್ಲೋಣ. ವೃದ್ಧರಿಗೆ ಅಥವಾ ಗುಣವಂತರಿಗೆ ತಗಲುವ ಸತ್ಕಾರಕ್ಕೆ ಇವನು ಅರ್ಹನಲ್ಲ. ಈ ನೃಪದ್ವೇಷಿ, ದುರಾಚಾರಿಯನ್ನು ಪುತ್ರರ ಸಮೇತ ಕೊಲ್ಲೋಣ. ಮೊದಲು ಎಲ್ಲ ನರಾಧಿಪರನ್ನೂ ಅಹ್ವಾನಿಸಿ, ಸತ್ಕರಿಸಿ, ಸರಿಯಾಗಿ ಭೋಜನಗಳನ್ನೆಲ್ಲ ಇತ್ತು ನಂತರ ಅವರನ್ನೇ ನಿಂದನೆಮಾಡುತ್ತಿದ್ದಾನೆ. ದೇವಗಣಕ್ಕೆ ಸಮಾನ ಈ ರಾಜಸಮಾವೇಷದಲ್ಲಿ, ತನಗೆ ಸರಿಸಾಟಿಯಾದ ಯಾರೊಬ್ಬ ನೃಪನೂ ಕಾಣದೇ ಇರಲು ಹೇಗೆ ಸಾದ್ಯ? ಬ್ರಾಹ್ಮಣರಿಗೆ ಸ್ವಯಂವರದಲ್ಲಿ ಭಾಗವಹಿಸುವ ಅಧಿಕಾರವಿಲ್ಲ. ಶೃತಿಗಳ ಪ್ರಕಾರ ಸ್ವಯಂವರವು ಕ್ಷತ್ರಿಯರಿಗೆ ಮಾತ್ರ. ಅಥವಾ ಒಂದುವೇಳೆ ಈ ಕನ್ಯೆಗೆ ನಮ್ಮಲ್ಲಿ ಯಾರೂ ಬೇಡವಂತಿದ್ದರೆ, ಇವಳನ್ನು ಅಗ್ನಿಯಲ್ಲಿ ಹಾಕಿ ನಾವೆಲ್ಲರೂ ನಮ್ಮ ನಮ್ಮ ರಾಷ್ಟ್ರಗಳಿಗೆ ಮರಳೋಣ. ತಿಳುವಳಿಕೆ ಇಲ್ಲದೆಯೊ ಅಥವಾ ಲೋಭದಿಂದಲೋ ಪಾರ್ಥಿವೇಂದ್ರರೆಲ್ಲರಿಗೂ ಅಪ್ರಿಯವಾದದ್ದನ್ನು ಮಾಡಿದ್ದರೂ ಈ ಬ್ರಾಹ್ಮಣನನ್ನು ಕೊಲ್ಲುವುದಾದರೂ ಹೇಗೆ? ನಮ್ಮ ರಾಜ್ಯ, ಜೀವನ, ಸಂಪತ್ತು, ಪುತ್ರರು, ಪೌತ್ರರು, ಮತ್ತು ಸಮ್ಮಲ್ಲಿರುವ ಸರ್ವಸ್ವ ಧನವೂ ಬ್ರಾಹ್ಮಣಾರ್ಥವೇ ಅಲ್ಲವೆ? ಆದರೂ ನಮ್ಮ ಧರ್ಮವನ್ನು ಅಪಮಾನದಿಂದ ರಕ್ಷಿಸಬೇಕು ಮತ್ತು ಇತರ ಸ್ವಯಂವರಗಳು ಇದರಂತೆ ನಡೆಯದೇ ಇರುವಹಾಗೆ ನೋಡಿಕೊಳ್ಳಬೇಕು.”
ಕರ್ಣ-ಶಲ್ಯರೊಡನೆ ಅರ್ಜುನ-ಭೀಮಸೇನರ ಯುದ್ಧ
ಈ ಪ್ರಕಾರ ಮಾತನಾಡಿಕೊಳ್ಳುತ್ತಾ ರಾಜಶಾರ್ದೂಲರೆಲ್ಲರೂ ಉದ್ವೇಗಗೊಂಡು ಆಯುಧಗಳೆನ್ನಿತ್ತಿಕೊಂಡು ದೃಪದನನ್ನು ಮುಗಿಸಿ ಬಿಡುವ ಉದ್ದೇಶದಿಂದ ಆಯುಧಗಳನ್ನು ಬೀಸುತ್ತಾ ಮುನ್ನುಗ್ಗಿದರು. ತಮ್ಮ ತಮ್ಮ ಬಿಲ್ಲು ಬಾಣಗಳನ್ನು ಹಿಡಿದು ಕೋಪದಿಂದ ಮೇಲೆ ಬೀಳುತ್ತಿರುವ ನೃಪರನ್ನು ಕಂಡ ದ್ರುಪದನು ಭಯಗೊಂಡು ಬ್ರಾಹ್ಮಣರ ಶರಣುಹೊಕ್ಕನು. ಆಗ ಆ ಅರಿಂದಮ ವೀರ ಪಾಂಡುಪುತ್ರರು ಮದಿಸಿದ ಆನೆಗಳಂತೆ ಶೀಘ್ರವಾಗಿ ರಾಜರನ್ನು ಎದುರಿಸಿ ಮುಂದೆಬಂದರು. ತಮ್ಮ ಆಯುಧಗಳನ್ನು ಮೇಲೆತ್ತಿ ಅಂಗುಲೀ ಬದ್ಧರಾದ ಮಹೀಕ್ಷಿತರು ಕುರುರಾಜಪುತ್ರರನ್ನು ಕೊಲ್ಲಲು ಅರ್ಜುನ ಭೀಮಸೇನರ ಮೇಲೆ ಎರಗಿದರು. ಅದ್ಭುತ ವೀರ್ಯಕರ್ಮಿ, ಮಹಾಬಲಿ, ವಜ್ರಸಮಾನ ವೀರ್ಯವಂತ ಭೀಮನು ಏಕವೀರನಾಗಿ ಒಂದು ವೃಕ್ಷವನ್ನು ಕಿತ್ತು ಕೈಯಲ್ಲಿ ಹಿಡಿದು ಗಜೇಂದ್ರನಂತೆ ಅದರಲ್ಲಿರುವ ಎಲೆಗಳನ್ನೆಲ್ಲ ಉದುರಿಸಿದನು. ರಿಪುಪ್ರಮಥಿ ದೀರ್ಘಬಾಹು ಪಾರ್ಥನು ಪಿತೃರಾಜನು ತನ್ನ ಉಗ್ರ ದಂಡವನ್ನು ಹಿಡಿಯುವಂತೆ ಆ ಮರವನ್ನು ಹಿಡಿದು ಪುರುಷರ್ಷಭ ಪಾರ್ಥ ಅರ್ಜುನನ ಪಕ್ಕದಲ್ಲಿ ನಿಂತನು. ಅಚಿಂತ್ಯಕರ್ಮಿ ಜಿಷ್ಣು ಮತ್ತು ಅವನ ಸಹೋದರರ ಮನುಷ್ಯರಿಗೆ ಮೀರಿದ ಕೃತ್ಯವನ್ನು ಕಂಡ ದಾಮೋದರನು ತನ್ನ ಅಣ್ಣ ಉಗ್ರವೀರ್ಯ ಹಲಾಯುಧನಿಗೆ ಹೇಳಿದನು:
“ಸಂಕರ್ಷಣ, ನಾನು ವಾಸುದೇವನೆನ್ನುವುದರಲ್ಲಿ ಹೇಗೆ ಸಂದೇಹವೇ ಇಲ್ಲವೋ ಹಾಗೆ ಮದಿಸಿದ ವೃಷಭನಂತಿರುವ ಮಹಾಧನಸ್ಸನ್ನು ಬಗ್ಗಿಸಿದ ಅವನು ಅರ್ಜುನನೆನ್ನುವುದರಲ್ಲಿ ಸಂದೇಹವೇ ಇಲ್ಲ. ತನ್ನ ಬಲದಿಂದ ವೃಕ್ಷವನ್ನು ಕಿತ್ತು ಈಗ ರಾಜರುಗಳನ್ನು ಎದುರಿಸುತ್ತಿರುವವನು ವೃಕೋದರ. ಯಾಕೆಂದರೆ ಇಂಥಹ ಕೃತ್ಯವನ್ನು ಮಾಡುವ ಬೇರೆ ಯಾವ ಮರ್ತ್ಯನೂ ಈ ಭೂಮಿಯಲ್ಲಿಲ್ಲ. ಈಗಾಗಲೇ ಹೊರಟುಹೋದ ಕಮಲಪತ್ರಾಕ್ಷ, ತೆಳುದೇಹಿ, ಸಿಂಹನಡುಗೆಯ, ವಿನೀತ, ಗೌರವರ್ಣದ ಹೊಳೆಯುತ್ತಿರುವ ಉದ್ದನೆಯ ಸುಂದರ ಮೂಗಿನ ಮಹಾತ್ಮನು ಧರ್ಮರಾಜನೇ ಇದ್ದಿರಬೇಕು. ಕಾರ್ತಿಕೇಯರಂತೆ ತೋರುತ್ತಿದ್ದ ಆ ಇಬ್ಬರು ಕುಮಾರರು ಅಶ್ವಿನಿ ದೇವತೆಗಳ ಪುತ್ರರಿರಬೆಕೆಂದೇ ನನ್ನ ಅಭಿಪ್ರಾಯ. ಯಾಕೆಂದರೆ ಪಾಂಡುಪುತ್ರರು ಮತ್ತು ಕುಂತಿಯು ಜತುಗೃಹದ ಬೆಂಕಿಯಿಂದ ತಪ್ಪಿಸಿಕೊಂಡರು ಎಂದು ಕೇಳಿದ್ದೇನೆ.”
ನಿರ್ಮಲ ಹಲಾಯುಧನು
“ನಮ್ಮ ತಂದೆಯ ಸಹೋದರಿ ಪೃಥಾಳಿಗೆ ಕೌರವಾಗ್ರರ ಸಹಿತ ಬಿಡುಗಡೆ ದೊರಕಿದುದನ್ನು ಕೇಳಿ ನನಗೆ ಬಹಳ ಸಂತೋಷವಾಗಿದೆ”
ಎಂದು ತನ್ನ ಸಹೋದರನಿಗೆ ಹೇಳಿದನು. ಆ ಈರ್ವರು ದ್ವಿಜರ್ಷಭರು ತಮ್ಮ ಜಿನ-ಕರಕಗಳನ್ನು ಬಿಸುಟು
“ಭಯಪಡುವುದು ಬೇಡ! ನಾವು ಈ ಶತ್ರುಗಳನ್ನು ಎದುರಿಸುತ್ತೇವೆ!”
ಎಂದು ದ್ರುಪದನಿಗೆ ಹೇಳಿದರು. ಅರ್ಜುನನು ನಸುನಗುತ್ತಾ
“ನೀವು ಪಕ್ಕದಲ್ಲಿ ನಿಂತು ನೋಡಿ!”
ಎಂದು ಬ್ರಾಹ್ಮಣರಿಗೆ ಹೇಳಿದನು:
“ಮಂತ್ರೋಚ್ಛಾರಣೆಯಿಂದ ವಿಷಸರ್ಪಗಳನ್ನು ತಡೆಗಟ್ಟುವಂತೆ ನಾನು ಈ ನೂರಾರು ನೇರ ಮೊನಚು ಬಾಣಗಳನ್ನು ಸುರಿಸಿ ಈ ಕುಪಿತ ಕ್ಷತ್ರಿಯರನ್ನು ತಡೆಯುತ್ತೇನೆ.”
ಹೀಗೆನ್ನುತ್ತಾ ಆ ಮಹಾರಥಿಯು ಅಲ್ಲೇ ಬಿದ್ದಿದ್ದ ಧನುಸ್ಸನ್ನು ಎತ್ತಿ ಹಿಡಿದು ಅಚಲ ಪರ್ವತದಂತೆ ಭ್ರಾತಾ ಭೀಮನ ಹತ್ತಿರ ಭಿರುಸಾಗಿ ನಿಂತುಕೊಂಡನು. ನಂತರ ಇಬ್ಬರೂ ಕುಪಿತರಾಗಿ ಕರ್ಣನ ನಾಯಕತ್ವದಲ್ಲಿ ದಂಗೆಯೆದ್ದ ಕ್ಷತ್ರಿಯರ ಮೇಲೆ ತಮ್ಮ ಪ್ರತಿಕಾಮಿಗಳ ಮೇಲೆ ಎರಗುವ ಎರಡು ಆನೆಗಳಂತೆ ಎರಗಿದರು. ಕಟುಕರಂತಿದ್ದ ರಾಜರು ರೋಷದಿಂದ
“ಯುದ್ಧದಲ್ಲಿ ಹೋರಾಡಲು ಬಯಸುತ್ತಿದ್ದ ಬ್ರಾಹ್ಮಣನನ್ನೂ ಕೊಲ್ಲಬಹುದು”
ಎಂದು ಅಂದುಕೊಂಡರು. ಒಂದು ಆನೆಯು ಇನ್ನೊಂದು ಪ್ರತಿಸ್ಪರ್ದಿ ಆನೆಯ ಮೇಲೆರಗುವಂತೆ ವೈಕರ್ತನ ಕರ್ಣನು ಯುದ್ಧದ ಉತ್ಸುಕತೆಯಿಂದ ಅರ್ಜುನನ ಮೇಲೆ ಧಾಳಿ ಮಾಡಿದನು. ಮದ್ರಾಧೀಶ್ವರ ಮಹಾಬಲಿ ಶಲ್ಯನು ಭೀಮಸೇನನನ್ನು ಎದುರಿಸಿದನು. ದುರ್ಯೋಧನ ಮತ್ತಿತರರು ಬ್ರಾಹ್ಮಣರ ಮೇಲೆ ಮೃದುವಾಗಿ ಹೆಚ್ಚು ಕಷ್ಟಗಳನ್ನು ತೆಗೆದುಕೊಳ್ಳದೆ ಧಾಳಿ ಮಾಡಿದರು. ವೈಕರ್ತನ ಕರ್ಣನು ತನ್ನ ಮೇಲೆ ಬೀಸಿ ಬರುತ್ತಿದ್ದಂತೆ ಧೀಮಂತ ಅರ್ಜುನನು ತನ್ನ ಬಲವಾದ ಧನಸ್ಸನ್ನು ಎಳೆದು ಅವನ ಮೇಲೆ ಮೂರು ಬಾಣಗಳನ್ನು ಬಿಟ್ಟನು. ವೇಗವಾಗಿ ಬಂದ ಮೊನಚಾದ ಆ ಬಾಣಗಳು ರಾಧೇಯನನ್ನು ತತ್ತರಿಸಿದವು. ಅವನು ಜಾಗ್ರತೆಯಿಂದ ಮುಂದುವರೆದನು. ಇಬ್ಬರ ಚಲನೆಯ ವೇಗದಿಂದಾಗಿ ಒಬ್ಬರಿಗೊಬ್ಬರು ಸರಿಯಾಗಿ ಕಾಣುತ್ತಿರಲಿಲ್ಲ ಮತ್ತು ಶ್ರೇಷ್ಠರಾದ ಆ ಇಬ್ಬರೂ ವಿಜಯೋದ್ಧರು ಪರಸ್ಪರರನ್ನು ಸೋಲಿಸಲು ಭೀಷಣ ಯುದ್ಧದಲ್ಲಿ ತೊಡಗಿದರು.
“ನಾನು ಅದನ್ನು ಹೇಗೆ ತಡೆಹಿಡಿದೆ ನೋಡು! ಈಗ ನನ್ನ ಬಾಹುಬಲವನ್ನು ನೋಡು!”
ಹೀಗೆ ವೀರರ ಭಾಷೆಯಲ್ಲಿ ಪರಸ್ಪರ ಛೇಡಿಸಿದರು. ಭುವಿಯಲ್ಲಿಯೇ ಅಪ್ರತಿಮ ಅರ್ಜುನನ ಭುಜಬಲವನ್ನು ಕಂಡ ವೈಕರ್ತನ ಕರ್ಣನು ಇನ್ನೂ ರೋಷದಿಂದ ಹೋರಾಡಿದನು. ಅರ್ಜುನನಿಂದ ವೇಗವಾಗಿ ಬರುತ್ತಿದ್ದ ಬಾಣಗಳನ್ನು ತಡೆಹಿಡಿದು ಜೋರಾಗಿ ನಿನಾದಿಸುತ್ತಿರುವ ಅವನನ್ನು ಅಲ್ಲಿರುವ ಸೈನಿಕರೆಲ್ಲ ಮೆಚ್ಚಿಕೊಂಡರು. ಕರ್ಣನು ಹೇಳಿದನು:
“ವಿಪ್ರಮುಖ್ಯ! ನಿನ್ನ ಭುಜವೀರ್ಯ, ಎಡೆಬಿಡದ ಯುದ್ಧ ಮತ್ತು ಶಸ್ತ್ರಾಸ್ತ್ರ ವಿನಯವು ನನ್ನನ್ನು ಸಂತುಷ್ಟಗೊಳಿಸಿದವು. ಆತ್ಮರಕ್ಷಣೆಗೆಂದು ವಿಪ್ರರೂಪವನ್ನು ತಳೆದು ಬಾಹುವೀರ್ಯದಿಂದ ನನ್ನೊಡನೆ ಘೋರವಾಗಿ ಹೋರಾಡುತ್ತಿರುವ ವಿಪ್ರಸತ್ತಮ! ನೀನು ಸಾಕ್ಷಾತ್ ದೇವದೇವನೋ ಅಥವಾ ರಾಮನೋ ಅಥವಾ ಸಾಕ್ಷಾತ್ ಹರಿಹಯನೋ ಅಥವಾ ಸಾಕ್ಷಾತ್ ಅಚ್ಯುತ ವಿಷ್ಣುವೋ? ಯಾಕೆಂದರೆ ಸಾಕ್ಷಾತ್ ಶಚೀಪತಿ ಮತ್ತು ಪಾಂಡವ ಕಿರೀಟಿಯ ಹೊರತು ಇನ್ನ್ಯಾರೂ ಕೃದ್ಧನಾದ ನನ್ನೊಡನೆ ಯುದ್ಧಮಾಡಲು ಶಕ್ತರಲ್ಲ.”
ಅವನ ಈ ಮಾತುಗಳಿಗೆ ಫಲ್ಗುಣನು ಉತ್ತರಿಸಿದನು:
“ಇಲ್ಲ ಕರ್ಣ! ಧನುರ್ದೇವನಲ್ಲ, ಪ್ರತಾಪಿ ರಾಮನೂ ಅಲ್ಲ. ಸರ್ವ ಶಸ್ತ್ರಗಳನ್ನು ಹಿಡಿಯುವವರಲ್ಲಿ ಶ್ರೇಷ್ಠನಾದ ನಾನು ಓರ್ವ ಬ್ರಾಹ್ಮಣ. ಗುರುಶಾಸನದಂತೆ ನಾನು ಬ್ರಹ್ಮ ಮತ್ತು ಪೌರಂದರ ಅಸ್ತ್ರಗಳಲ್ಲಿ ನಿಪುಣನಾಗಿದ್ದೇನೆ. ಇಂದು ರಣದಲ್ಲಿ ನಿನನ್ನು ಗೆಲ್ಲಲು ಸಿದ್ಧನಾಗಿದ್ದೇನೆ. ವಿಚಲನಾಗು!”
ಈ ಮಾತುಗಳನ್ನು ಕೇಳಿದ ರಾಧೇಯ ಕರ್ಣನು ಯುದ್ಧದಿಂದ ಹಿಂದೆ ಸರಿದನು. ಆ ಮಹಾರಥಿಯು ಬ್ರಹ್ಮ ತೇಜಸ್ಸು ಅಜೇಯವಾದದ್ದು ಎಂದು ತಿಳಿದಿದ್ದನು.
ಅದೇ ಸ್ಥಳದಲ್ಲಿ ಶಲ್ಯ ಮತ್ತು ವೃಕೋದರರ ನಡುವೆ ಯುದ್ಧವು ನಡೆಯಿತು, ಇಬ್ಬರೂ ಬಲಶಾಲಿಗಳಾಗಿದ್ದು ಒಂದೇ ರೀತಿಯ ಮದ, ಸ್ಪರ್ಧಾಭಾವ ಮತ್ತು ಬಲಗಳನ್ನು ಹೊಂದಿದ್ದರು. ಮದಿಸಿದ ಮಹಾಗಜಗಳಂತೆ ಅನ್ಯೋನ್ಯರನ್ನು ಕೂಗಿ ಕರೆಯುತ್ತಿದ್ದರು, ಮತ್ತು ಪರಸ್ಪರರನ್ನು ಮುಷ್ಠಿ ಮತ್ತು ತೊಡೆಗಳಿಂದ ಹೊಡೆಯುತ್ತಿದ್ದರು. ಸ್ವಲ್ಪ ಸಮಯ ಅವರೀರ್ವರೂ ಪರಸ್ಪರರನ್ನು ಹಿಡಿದು ರಣರಂಗದ ಸುತ್ತ ಹಿಡಿದು ಎಳೆದಾಡಿದರು. ಆಗ ಬಲಶಾಲಿಗಳಲ್ಲಿ ಶ್ರೇಷ್ಠ ಭೀಮನು ತನ್ನ ಬಾಹುಗಳಿಂದ ಶಲ್ಯನನ್ನು ಮೇಲಕ್ಕೆ ಎತ್ತಿ ನೆಲದ ಮೇಲೆ ಹೊತ್ತು ಹಾಕಿದನು. ಬ್ರಾಹ್ಮಣರು ನಕ್ಕರು. ಆಗ ಪುರುಷರ್ಷಭ ಬಲಶಾಲಿಗಳಲ್ಲಿಯೇ ಬಲಶಾಲಿ ಭೀಮಸೇನನು ನೆಲದ ಮೇಲೆ ಬಿದ್ದಿದ್ದ ಶಲ್ಯನನ್ನು ಕೊಲ್ಲದೇ ಒಂದು ಪವಾಡವನ್ನೇ ಮಾಡಿದನು. ಭೀಮಸೇನನು ಶಲ್ಯನನ್ನು ಕೆಳಗುರುಳಿಸಿದಾಗ ಮತ್ತು ಕರ್ಣನು ಹಿಂಜರಿದಾಗ, ಅಲ್ಲಿದ್ದ ಎಲ್ಲ ರಾಜರುಗಳೂ ಹಿಂಜರಿಯುತ್ತಾ ವೃಕೋದರನ ಸುತ್ತುವರೆದರು.
“ಸಾಧು ಬ್ರಾಹ್ಮಣರ್ಷಭರೇ! ಅವರು ಎಲ್ಲಿ ಹುಟ್ಟಿದ್ದರು ಮತ್ತು ಎಲ್ಲಿ ವಾಸಿಸುತ್ತಿದ್ದಾರೆ ಎನ್ನುವುದನ್ನು ಕೇಳಿ ತಿಳಿಯೋಣ!”
ಎಂದು ಅವರೆಲ್ಲರೂ ಹೇಳುತ್ತಿದ್ದರು.
“ರಾಮ ಅಥವಾ ದ್ರೊಣ ಅಥವಾ ಶಾರದ್ವತ ಕೃಪ ಅಥವಾ ದೇವಕೀಪುತ್ರ ಕೃಷ್ಣ ಅಥವಾ ಪರಂತಪ ಫಲ್ಗುಣನನ್ನು ಬಿಟ್ಟು ಬೇರೆ ಯಾರುತಾನೆ ರಣರಂಗದಲ್ಲಿ ರಾಧಾಸುತ ಕರ್ಣನೊಂದಿಗೆ ಯುದ್ಧಮಾಡಲು ಶಕ್ತರು? ಅದೇರೀತಿ ದುರ್ಯೋಧನ ಅಥವಾ ವೀರ ಬಲದೇವ ಅಥವಾ ಪಾಂಡವ ವೃಕೋದರನ ಹೊರತಾಗಿ ಬೇರೆ ಯಾರು ರಣರಂದದಲ್ಲಿ ಬಲವಂತರಲ್ಲಿಯೇ ಶ್ರೇಷ್ಠ ಮದ್ರರಾಜ ಶಲ್ಯನನ್ನು ಎದುರಿಸಲು ಶಕ್ತರು? ಬ್ರಾಹ್ಮಣರೂ ಸೇರಿರುವ ಈ ಯುದ್ಧವನ್ನು ನಾವು ನಿಲ್ಲಿಸೋಣ ಮತ್ತು ಅವರು ಯಾರೆಂದು ತಿಳಿದು ಕೊಂಡ ನಂತರ ಪುನಃ ಯುದ್ಧ ಮಾಡೋಣ.”
ಭೀಮನ ಆ ಕೃತ್ಯವನ್ನು ನೋಡಿದ ಕೃಷ್ಣನು ಅವರು ಕುಂತೀಪುತ್ರರೇ ಇರಬೇಕೆಂದು ಶಂಕಿಸಿ ದ್ರೌಪದಿಯನ್ನು ಧರ್ಮಪೂರ್ವಕ ಪಡೆದಿದ್ದಾರೆ ಎಂದು ಸೂಕ್ಷ್ಮವಾಗಿ ಎಲ್ಲ ಮಹೀಪತಿಗಳನ್ನು ತಡೆಹಿಡಿದನು. ಆಗ ಯುದ್ಧವಿಶಾರದ ರಾಜಸತ್ತಮರು ಯುದ್ಧದಿಂದ ಹಿಂಜರಿದು ಎಲ್ಲರೂ ವಿಸ್ಮಿತರಾಗಿ ತಮ್ಮ ತಮ್ಮ ಪ್ರದೇಶಗಳಿಗೆ ಹಿಂದಿರುಗಿದರು. ಈ ರಂಗವು ಬ್ರಾಹ್ಮಣರಿಂದ ಸುತ್ತುವರೆಯಲ್ಪಟ್ಟಿದೆ, ಪಾಂಚಾಲಿಯು ಬ್ರಾಹ್ಮಣರಿಂದ ಆವೃತಳಾಗಿದ್ದಾಳೆ ಎಂದು ಹೇಳುತ್ತಾ ಅಲ್ಲಿ ಸೇರಿದವರೆಲ್ಲರೂ ಹಿಂದಿರುಗಿದರು. ರುರು ಮತ್ತು ಜಿನವಸ್ತ್ರಗಳನ್ನು ಧರಿಸಿದ್ದ ಬ್ರಾಹ್ಮಣರಿಂದ ಸುತ್ತುವರೆಯಲ್ಪಟ್ಟ ಭೀಮಸೇನ-ಧನಂಜಯರಿಗೆ ಅಲ್ಲಿಂದ ಹೊರಬರುವುದು ಕಷ್ಟವೇ ಆಯಿತು. ಜನರ ಮತ್ತು ಶತ್ರುಗಳ ಭೀಡಿನಿಂದ ತಪ್ಪಿಸಿಕೊಂಡ ಆ ವೀರರು ಹಿಂಬಾಲಿಸುತ್ತಿರುವ ಕೃಷ್ಣೆಯೊಡಗೂಡಿ ವಿರಾಜಿಸಿದರು.
ಕುಂತಿಯು ದ್ರೌಪದಿಯನ್ನು ಸಮನಾಗಿ ಹಂಚಿಕೊಳ್ಳಿ ಎಂದು ಮಕ್ಕಳಿಗೆ ಹೇಳಿದುದು
ಭಿಕ್ಷಾಸಮಯವು ಮುಗಿದು ಹೋಗಿ ತುಂಬಾ ಹೊತ್ತಾಗಿದ್ದರೂ ತನ್ನ ಪುತ್ರರು ಬಾರದೇ ಇದ್ದುದನ್ನು ನೋಡಿ ಅವರ ತಾಯಿಯು ಬಹುವಿಧ ಆಪತ್ತುಗಳ ಕುರಿತು ಚಿಂತಿಸುತ್ತಿದ್ದಳು. ಆ ಕುರುಪುಂಗವರನ್ನು ಗುರಿತಿಸಿದ ಧಾರ್ತರಾಷ್ಟ್ರರು ಅವರನ್ನು ಸಂಹರಿಸಿರಬಹುದೇ? ಅಥವಾ ದೃಢವೈರಿ ಘೋರ ಮಾಯಾವಿ ರಾಕ್ಷಸರಿಂದ ಕೊಲ್ಲಲ್ಪಟ್ಟರೇ? ಆದರೂ ಮಹಾತ್ಮ ವ್ಯಾಸನ ಅಭಿಪ್ರಾಯಕ್ಕಿಂತ ವಿಪರೀತವಾಗಲು ಸಾಧ್ಯವಿದೆಯೇ? ಈ ರೀತಿಯಾಗಿ ಪುತ್ರರ ಮೇಲಿನ ಪ್ರೀತಿಯಿಂದ ಪೃಥೆಯು ಚಿಂತಿಸತೊಡಗಿದಳು. ಆಗ ಅಪರಾಹ್ನಕ್ಕಿಂತ ತುಂಬಾ ಸಮಯದ ನಂತರ ಮೋಡಗಳಿಂದ ಆವೃತ ಸೂರ್ಯನು ಹೇಗೋ ಹಾಗೆ ಬ್ರಾಹ್ಮಣರಿಂದ ಸುತ್ತುವರೆಯಲ್ಪಟ್ಟ ಜಿಷ್ಣುವು ಬ್ರಹ್ಮಪುರಸ್ಕೃತನಾಗಿ ಹೊರಬಂದನು.
ಮಹಾನುಭಾವ ನರವ್ಯಾಘ್ರ ಪಾರ್ಥರೀರ್ವರು ಕುಂಬಾರನ ಮನೆಯನ್ನು ತಲುಪಿ ಅಲ್ಲಿ ಪೃಥೆಯನ್ನು ಕಂಡು ಪರಮಪ್ರತೀತರಾಗಿ ಯಾಜ್ಞಸೇನಿಯ ಕುರಿತು ನಾವು ತಂದಿರುವ ಭಿಕ್ಷೆಯನ್ನು ನೋಡು ಎಂದು ಹೇಳಿದರು. ಮನೆಯೊಳಗಿದ್ದ ಅವಳು ತನ್ನ ಪುತ್ರರನ್ನು ನೋಡದೇ ಹೇಳಿದಳು:
“ನೀವೆಲ್ಲರೂ ಅದನ್ನು ಸಮವಾಗಿ ಹಂಚಿಕೊಳ್ಳಿ!”
ಎಂದಳು. ನಂತರ ಕುಂತಿಯು ಆ ಕನ್ಯೆಯನ್ನು ನೋಡಿ
“ನಾನು ಎಂಥಹ ಕಷ್ಟಕರ ಮಾತುಗಳನ್ನಾಡಿದೆ!”
ಎಂದಳು. ಅಧರ್ಮಭೀತಳಾಗಿ ವಿಲಜ್ಜಮಾನಳಾದ ಆ ಕುಂತಿಯು ಪರಮಪ್ರತೀತೆ ಯಾಜ್ಞಸೇನಿಯ ಕೈಗಳನ್ನು ಹಿಡಿದು ಒಳ ಹೋಗಿ ಯುಧಿಷ್ಠಿರನಲ್ಲಿ ಈ ಮಾತುಗಳನ್ನಾಡಿದಳು:
“ನಿನ್ನ ತಮ್ಮಂದಿರಿಬ್ಬರು ರಾಜ ದ್ರುಪದನ ಈ ಮಗಳನ್ನು ನನಗೊಪ್ಪಿಸಿದರು. ಪುತ್ರ! ಯಾವಾಗಲೂ ನಾನು ಹೇಳುವಂತೆ ಈ ಬಾರಿಯೂ ಪ್ರಮಾದದಿಂದ ಅದನ್ನು ನೀವೆಲ್ಲರೂ ಸಮನಾಗಿ ಹಂಚಿಕೊಳ್ಳಿ ಎಂದುಬಿಟ್ಟೆ! ನಾನು ಹೇಳಿದ್ದುದು ಸುಳ್ಳಾಗದ ಹಾಗೆ ಮತ್ತು ಪಾಂಚಾಲರಾಜನ ಸುತೆಯೂ ಕೂಡ ಈ ಹಿಂದೆ ಯಾರೂ ಮಾಡಿರದ ಅಧರ್ಮವನ್ನು ಮಾಡದಹಾಗೆ ಹೇಗೆ ಮಾಡಬಹುದು ಹೇಳು ಕುರುಶ್ರೇಷ್ಠ!”
ಮುಹೂರ್ತಮಾತ್ರ ಯೋಚನೆಮಾಡಿ ಉತ್ತಮೌಜಸ ರಾಜ ಯುಧಿಷ್ಠಿರನು ತಾಯಿ ಕುಂತಿಗೆ ಸಮಾಧಾನ ಮಾಡುತ್ತಾ ಕುರುಪ್ರವೀರ ಧನಂಜಯನನ್ನುದ್ದೇಶಿಸಿ ಈ ಮಾತುಗಳನ್ನು ಹೇಳಿದನು:
“ಪಾಂಡವ! ಯಾಜ್ಞಸೇನಿಯು ನಿನ್ನಿಂದ ಗೆದ್ದವಳು ಮತ್ತು ರಾಜಪುತ್ರಿಯನ್ನು ನೀನೇ ತೃಪ್ತಿಗೊಳಿಸಬೇಕು. ಅಗ್ನಿಯನ್ನು ಪ್ರಜ್ವಲಿಸಿ ಹವಿಸ್ಸನ್ನು ನೀಡಿ ವಿಧಿವತ್ತಾಗಿ ಅವಳ ಪಾಣಿಗ್ರಹಣ ಮಾಡಿಕೋ!”
ಅರ್ಜುನನು ಹೇಳಿದನು:
“ನರೇಂದ್ರ! ನಾನು ಅಧರ್ಮದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಡ! ಬೇರೆಯವರು ಸ್ವೀಕರಿಸುವ ಧರ್ಮವಿದಲ್ಲ. ನೀನೇ ಮೊದಲು ಮದುವೆಯಾಗಬೇಕು. ನಂತರ ಅಚಿಂತ್ಯಕರ್ಮಿ ಮಹಾಬಾಹು ಬೀಮ. ನಂತರ ನಾನು, ನನ್ನ ನಂತರ ನಕುಲ ಮತ್ತು ನಮ್ಮೆಲ್ಲರ ನಂತರ ಮಾದ್ರೀಸುತ ಸಹದೇವ. ವೃಕೋದರ, ನಾನು ಮತ್ತು ಅವಳಿಗಳು ಎಲ್ಲರೂ ಈ ಕನ್ಯೆಯು ನಿನಗೇ ಸೇರಬೇಕು ಎಂದು ಅಂದುಕೊಂಡಿದ್ದೇವೆ. ಈ ಪರಿಸ್ಥಿತಿಯಲ್ಲಿ ಏನನ್ನು ಮಾಡಿದರೆ ಒಳ್ಳೆಯದಾಗುವುದು, ಯಾವುದು ನಮಗೆ ಧರ್ಮ ಮತ್ತು ಯಶಸ್ಸನ್ನು ತರುವುದು ಮತ್ತು ಪಾಂಚಾಲರಾಜನಿಗೆ ಯಾವುದು ಪ್ರಿಯವಾದುದು ಎನ್ನುವುದರ ಬಗ್ಗೆ ಯೋಚಿಸು. ನಮಗೆ ಹೇಳು, ನಾವೆಲ್ಲ ನಿನ್ನ ವಶದಲ್ಲಿದ್ದೇವೆ.”
ಎಲ್ಲರೂ ಅಲ್ಲಿ ನಿಂತಿದ್ದ ಯಶಸ್ವಿನೀ ಕೃಷ್ಣೆಯನ್ನು ನೋಡುತ್ತಾ ತಮ್ಮ ತಮ್ಮ ಹೃದಯದಲ್ಲಿ ಅವಳನ್ನು ಆರಾಧಿಸುತ್ತಾ ಅನ್ಯೋನ್ಯರನ್ನು ನೋಡಿದರು. ಅಮಿತ ತೇಜಸ್ವಿಗಳಾದ ಎಲ್ಲರೂ ಆ ದ್ರೌಪದಿಯನ್ನು ನೋಡುತ್ತಿರಲು ಅವರ ಮನದಲ್ಲಿ ಅವಳ ಮೇಲಿರುವ ಪ್ರೀತಿಯು ಅವರ ಇಂದ್ರಿಯಗಳನ್ನು ಕಡೆಯುತ್ತಿರಲು ಅವರ ಮನೋಭಾವಗಳು ಗೋಚರವಾದವು. ಸ್ವಯಂ ವಿಧಾತನಿಂದ ವಿಹಿತೆ ಆ ಪಾಂಚಾಲೆಯ ಕಾಮ್ಯಕ ರೂಪವು ಅನ್ಯರ ರೂಪಕ್ಕಿಂತ ಅಧಿಕವಾಗಿತ್ತು ಮತ್ತು ಸರ್ವಭೂತ ಮನೋಹರವಾಗಿದ್ದಿತು. ಅವರೆಲ್ಲರ ಭಾವನೆಗಳನ್ನು ತಿಳಿದ, ದ್ವೈಪಾಯನನ ಅದ್ಭುತವಚನಗಳನ್ನು ಸ್ಮರಿಸಿದ ನರರ್ಷಭ ಕುಂತೀಪುತ್ರ ಯುಧಿಷ್ಠಿರ ರಾಜನು ತಮ್ಮಲ್ಲಿಯೇ ಭಿರುಕುಂಟಾಗಬಹುದೆಂಬ ಭಯದಿಂದ ಅವರೆಲ್ಲರಿಗೂ:
“ಶುಭೆ ದ್ರೌಪದಿಯು ನಮ್ಮೆಲ್ಲರ ಭಾರ್ಯೆಯಾಗುತ್ತಾಳೆ!”
ಎಂದನು. ಜ್ಯೇಷ್ಠ ಪಾಂಡು ಅಣ್ಣನ ಈ ಮಾತುಗಳನ್ನು ಕೇಳಿ ಎಲ್ಲರೂ ಯೋಚಿಸತೊಡಗಿದರು. ಅದರ ಅರ್ಥವೇನೆಂದು ಮನಸ್ಸಿನಲ್ಲಿಯೇ ಚಿಂತಿಸುತ್ತಾ ಆ ಅಮಿತ ತೇಜಸರು ಅಲ್ಲಿಯೇ ಕುಳಿತುಕೊಂಡರು.
ಕೃಷ್ಣ-ಬಲರಾಮರ ಮತ್ತು ಪಾಂಡವರ ಮೊದಲ ಭೇಟಿ
ಅಷ್ಟರಲ್ಲಿಯೇ ಅವರು ಕುರುಪ್ರವೀಣರೇ ಇರಬೇಕೆಂದು ಶಂಕಿಸಿದ ವೃಷ್ಣಿಪ್ರವೀರನು ರೌಹಿಣೇಯನ ಜೊತೆಗೊಂಡು ಪುರುಷಪ್ರವೀರರು ವಸತಿಮಾಡಿಕೊಂಡಿದ್ದ ಆ ಕುಂಬಾರನ ಮನೆಗೆ ಬಂದನು. ಅಲ್ಲಿ ಕುಳಿತಿದ್ದ ದೀರ್ಘಬಾಹು ಪೃಥು ಮತ್ತು ಆ ಅಜಾತಶತ್ರುವನ್ನು ಸುತ್ತುವರೆದು ಕುಳಿತುಕೊಂಡು ಅಗ್ನಿಯಂತೆ ಬೆಳಗುತ್ತಿದ್ದವರನ್ನು ರೌಹಿಣೇಯನನ್ನೂ ಕೂಡಿ ಕೃಷ್ಣನು ನೋಡಿದನು. ಅಲ್ಲಿಗೆ ಆಗಮಿಸಿದ ವಾಸುದೇವನು ಧರ್ಮಭೃತರಲ್ಲಿ ವರಿಷ್ಠ ಕುಂತೀಸುತನಿಗೆ
“ನಾನು ಕೃಷ್ಣ!”
ಎಂದು ಹೇಳಿ ಆ ಅಜಮೀಡ ರಾಜ ಯುಧಿಷ್ಠಿರನ ಪಾದಗಳನ್ನು ಮುಟ್ಟಿದನು. ಕೃಷ್ಣನಂತೆ ರೌಹಿಣೀಯನೂ ಮಾಡಿದನು ಮತ್ತು ಕುರುಗಳು ಅವರನ್ನು ಸಂತೋಷದಿಂದ ಸ್ವಾಗತಿಸಿದರು. ಅನಂತರ ಆ ಯದುಪ್ರವೀರರು ತಮ್ಮ ತಂದೆಯ ತಂಗಿಯ ಪಾದಗಳಿಗೆ ನಮಸ್ಕರಿಸಿದರು. ಕುಶಲ ಪ್ರಶ್ನೆಯನ್ನು ಕೇಳಿಯಾದ ನಂತರ ಕುರುಪ್ರವೀರ ಅಜಾತಶತ್ರುವು ಕೃಷ್ಣನಿಗೆ ಕೇಳಿದನು:
“ವಾಸುದೇವ! ಗೌಪ್ಯವಾಗಿ ವಾಸಿಸುತ್ತಿರುವ ನಮ್ಮೆಲ್ಲರನ್ನೂ ನೀನು ಹೇಗೆ ಹುಡುಕಿ ಗುರುತಿಸಿದೆ?”
ಆಗ ವಾಸುದೇವನು ನಗುತ್ತಾ ಉತ್ತರಿಸಿದನು:
“ರಾಜನ್! ಗೂಢವಾಗಿದ್ದರೂ ಅಗ್ನಿಯು ಹೊರಗೆ ಕಂಡೇ ಕಾಣಿಸಿಕೊಳ್ಳುತ್ತದೆ. ಪಾಂಡವನನ್ನು ಬಿಟ್ಟು ಮನುಷ್ಯರಲ್ಲೇ ಬೇರೆ ಯಾರು ತಾನೆ ಅಂತಹ ವಿಕ್ರಮವನ್ನು ಮಾಡಿ ತೋರಿಸಿಯಾರು? ಶತ್ರುಸಾಹರಾದ ನೀವೆಲ್ಲ ಪಾಂಡವರೂ ಆ ಬೆಂಕಿಯಿಂದ ತಪ್ಪಿಸಿಕೊಂಡಿರೆಂಬುದು ಒಂದು ಒಳ್ಳೆಯ ವಿಷಯವೇ ಆಗಿದೆ. ಪಾಪಿ ಧೃತರಾಷ್ಟ್ರನ ಮಗನ ಮತ್ತು ಅವನ ಅಮಾತ್ಯನ ಸಂಚು ಯಶಸ್ವಿಯಾಗಲಿಲ್ಲ ಎನ್ನುವುದೂ ಒಳ್ಳೆಯದಾಯಿತು. ನಿಮಗೆಲ್ಲ ಮಂಗಳವಾಗಲಿ! ಗುಹೆಯಲ್ಲಿ ಅಡಗಿದ್ದು ಕಿಚ್ಚೆತ್ತ ಬೆಂಕಿಯಂತೆ ವೃದ್ಧಿಯಾಗಿದ್ದೀರಿ. ಪಾರ್ಥಿವರಲ್ಲಿ ಯಾರಾದರೂ ನಿಮ್ಮನ್ನು ನೋಡಿ ಗುರುತಿಸಿಯಾರು. ಆದುದರಿಂದ ನಾವು ಇಲ್ಲಿಂದ ತೆರಳುತ್ತೇವೆ.”
ಪಾಂಡವರಿಂದ ಬೀಳ್ಕೊಂಡ ಆ ಅವ್ಯಯಶ್ರೀಯು ಬಲದೇವನ ಸಹಿತ ಶೀಘ್ರವಾಗಿ ಅಲ್ಲಿಂದ ಹೊರಟನು.
ಧೃಷ್ಟದ್ಯುಮ್ನನು ಕುಂಬಾರನ ಮನೆಯಲ್ಲಿ ಅಡಗಿ ಅಲ್ಲಿ ನಡೆದುದನ್ನು ನೋಡಿ ದ್ರುಪದನಿಗೆ ನಿವೇದಿಸಿದುದು
ಕುಂಬಾರನ ಮನೆಗೆ ಹೋಗುವಾಗ ಕುರುನಂದನರನ್ನು ಪಾಂಚಾಲ್ಯ ಧೃಷ್ಟದ್ಯುಮ್ನನು ಹಿಂಬಾಲಿಸಿದ್ದನು. ಅವನು ತನ್ನ ಜನರನ್ನು ಅಡಗಿ ಕುಳಿತುಕೊಳ್ಳುವಂತೆ ಮಾಡಿ ಸ್ವಯಂ ಆ ಕುಂಬಾರನ ಮನೆಯ ಹತ್ತಿರದಲ್ಲಿ ಯಾರಿಗೂ ಕಾಣದಂತೆ ಅಡಗಿ ಕುಳಿತನು. ಸಾಯಂಕಾಲ ರಿಪುಪ್ರಮಥಿ ಭೀಮ, ಜಿಷ್ಣು ಮತ್ತು ಮಹಾನುಭಾವ ಅವಳಿಗಳು ಅವರ ಭಿಕ್ಷವನ್ನು ಮುಗಿಸಿ ಸಂತೋಷದಿಂದ ತಮಗೆ ದೊರೆತಿದ್ದುದೆಲ್ಲವನ್ನೂ ಯುಧಿಷ್ಠಿರನಿಗೆ ಕೊಟ್ಟರು. ಆಗ ಸಿಹಿಮಾತುಗಳನ್ನಾಡುವ ಕುಂತಿಯು ದೃಪದಾತ್ಮಜೆಯನ್ನು ಉದ್ದೇಶಿಸಿ ಹೇಳಿದಳು:
“ಭದ್ರೇ! ಇದನ್ನು ಮೊದಲು ನೀನು ತೆಗೆದುಕೋ; ದೇವರಿಗೆ, ಮತ್ತು ವಿಪ್ರರಿಗೆ ಭಿಕ್ಷವನ್ನು ಕೊಡು. ಇಲ್ಲಿ ಸುತ್ತಮುತ್ತು ಇರುವ ಮನುಷ್ಯರಲ್ಲಿ ಅನ್ನ ಬೇಕೆನ್ನುವವರಿಗೆ ಸ್ವಲ್ಪ ಕೊಡು; ಅದರಲ್ಲಿ ಉಳಿದಿರುವುದನ್ನು ಎರಡು ಭಾಗಗಳಾಗಿ ಮಾಡು - ಅರ್ಧ ಭಾಗ ಆ ನಾಲ್ವರಿಗೆ, ನನಗೆ ಮತ್ತು ನಿನಗೆ. ಭದ್ರೇ! ಇನ್ನೊಂದು ಅರ್ಧವನ್ನು ಮತ್ತರ್ಷಭತುಲ್ಯರೂಪಿ, ಶ್ಯಾಮ, ಯುವಕ, ಲೋಹದಂತ ದೇಹವನ್ನು ಹೊಂದಿರುವ ಭೀಮನಿಗೆ ಕೊಡು. ಯಾಕೆಂದರೆ ಈ ವೀರನು ಯಾವಾಗಲೂ ಹೆಚ್ಚು ತಿನ್ನುತ್ತಾನೆ.”
ರಾಜಪುತ್ರಿಯು ಸಂತೋಷದಿಂದಲೇ ಸಾಧ್ವಿಯ ಆ ಮಾತುಗಳನ್ನು ಸ್ವಲ್ಪವೂ ಶಂಕಿಸದೇ ಹೇಳಿದ ಹಾಗೆಯೇ ಮಾಡಿದಳು. ಮತ್ತು ಸರ್ವರೂ ಅನ್ನವನ್ನು ಊಟಮಾಡಿದರು. ಅನಂತರ ಮಾದ್ರೀಸುತ ಸಹದೇವನು ಭೂಮಿಯಮೇಲೆ ಕುಶದ ಹಾಸಿಗೆಯನ್ನು ಹಾಸಿದನು. ಪ್ರತಿಯೊಬ್ಬರೂ ತಮ್ಮ ತಮ್ಮ ಜಿನವನ್ನು ಹಾಸಿಕೊಂಡು, ಎಲ್ಲ ವೀರರೂ ನೆಲದ ಮೇಲೆ ಮಲಗಿದರು. ಅಗಸ್ತ್ಯಮುನಿಯು ಹರಸಿದ ದಿಕ್ಕಿನಲ್ಲಿ ಆ ಕುರುಸತ್ತಮರು ತಮ್ಮ ಶಿರವನ್ನು ಇಟ್ಟಿದ್ದರು. ಅವರ ತಲೆಗಳ ಪಕ್ಕದಲ್ಲಿ ಕುಂತಿಯು ಮಲಗಿದ್ದಳು. ಮತ್ತು ಕೃಷ್ಣೆಯು ಅವರ ಕಾಲುಗಳ ಪಕ್ಕದಲ್ಲಿ ಮಲಗಿದಳು. ಈ ರೀತಿ ಕುಶವನ್ನೇ ಕಾಲುದಿಂಬನ್ನಾಗಿ ಮಾಡಿ ಅವಳು ಪಾಂಡುಪುತ್ರರ ಸಹ ಭೂಮಿಯಮೇಲೆ ಮಲಗಿದಳು; ಅವಳಲ್ಲಿ ಸ್ವಲ್ಪವೂ ದುಃಖವಿರಲಿಲ್ಲ ಮತ್ತು ಕುರುಪುಂಗವರ ಕುರಿತು ಯಾವರೀತಿಯ ಅಸಹ್ಯವೂ ಅನ್ನಿಸಲಿಲ್ಲ. ಆ ಶೂರರು ಯುದ್ದ, ದಿವ್ಯಾಸ್ತ್ರಗಳು, ರಥಗಳು, ಆನೆಗಳು, ಖಡ್ಗಗಳು, ಗದೆಗಳು ಮತ್ತು ಪರಶುಗಳ ಸಂಬಂದಿಸಿದ ವಿಚಿತ್ರ ಕಥೆಗಳನ್ನು ಕಟ್ಟಲು ಪ್ರಾರಂಭಿಸಿದರು. ಪಾಂಚಾಲರಾಜ ಸುತನು ಅವರು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿರುವ ಕಥೆಗಳನ್ನು ಕೇಳಿದನು; ಮತ್ತು ಅವನ ಜನರೆಲ್ಲರೂ ಕೃಷ್ಣೆಯು ನಿಷಣ್ಣಳಾಗಿ ಅಲ್ಲಿ ಹೇಗೆ ಮಲಗಿಕೊಂದಿದ್ದಾಳೆ ಎನ್ನುವುದನ್ನು ನೋಡಿದರು.
ರಾಜಪುತ್ರ ಧೃಷ್ಟದ್ಯುಮ್ನನು ರಾತ್ರಿಯಲ್ಲಿ ನಡೆದುದೆಲ್ಲವನ್ನೂ ರಾಜ ದ್ರುಪದನಿಗೆ ಹೇಳಬೇಕೆಂದು ಅಲ್ಲಿಂದ ತ್ವರಿತವಾಗಿ ಹೊರಟನು. ಮಹಾತ್ಮ ಪಾಂಚಾಲರಾಜನು ಪಾಂಡವರನ್ನು ಕಾಣದೇ ವಿಷಣ್ಣನಾಗಿ ಧೃಷ್ಟದ್ಯುಮ್ನನನ್ನು ಕೇಳಿದನು:
“ಅವಳು ಎಲ್ಲಿಗೆ ಹೋದಳು? ಕೃಷ್ಣೆಯನ್ನು ಯಾರು ತೆಗೆದುಕೊಂಡು ಹೋದರು? ಹೀನ ಜನ ಶೂದ್ರರವಳಾಗಿದ್ದಾಳಾ? ಅಥವಾ ನನಗೆ ತೆರಿಗೆಯನ್ನು ಕೊಡುವ ವೈಶ್ಯರವಳಾಗಿದ್ದಾಳಾ? ನನ್ನ ತಲೆಯ ಮೇಲೆ ಯಾರಾದರೂ ಕಾಲಿಟ್ಟಹಾಗಾಯಿತೇ? ಅಥವಾ ಸ್ಮಶಾನದಲ್ಲಿ ಮಾಲೆ ಬಿದ್ದಹಾಗೆ ಆಯಿತೇ? ಅಥವಾ ಸವರ್ಣ ಪ್ರವರ ಮನುಷ್ಯನೋ? ಅಥವಾ ಅಕಸ್ಮಾತ್ ಉದ್ರಿಕ್ತವರ್ಣದವರು ಯಾರಾದರೋ? ಅಥವಾ ಯಾರಾದರೂ ಕೃಷ್ಣೆಯನ್ನು ಕೆಡಿಸಿ ನನ್ನ ತಲೆಯ ಮೇಲೆ ತಮ್ಮ ಎಡ ಕಾಲನ್ನು ಇತ್ತಿದ್ದಾರೆಯೋ? ಅಥವಾ ನರರ್ಷಭ ಪಾರ್ಥನ ಜೊತೆಗೂಡಿದಳು ಎಂದು ನಿಶ್ಚಿಂತೆಯಿಂದ ಇರಬಹುದೇ? ಯಾವ ಮಹಾನುಭಾವನಿಂದ ನನ್ನ ಮಗಳು ಇಂದು ಗೆಲ್ಲಲ್ಪಟ್ಟಿದ್ದಾಳೆ ಎಂಬ ನಿಜವನ್ನು ಹೇಳು. ವಿಚಿತ್ರವೀರ್ಯ ಕುರುಪ್ರವೀರನ ಪುತ್ರರು ಜೀವಂತವಿದ್ದಾರೆ ಮತ್ತು ಕಿರಿಯ ಪಾರ್ಥನು ಇಂದು ಧನುವನ್ನು ಹಿಡಿದು ಲಕ್ಷ್ಯವನ್ನು ಹೊಡೆಯಲು ಸಾದ್ಯವಿದೆಯೇ?”
ಈ ಮಾತುಗಳನ್ನು ಕೇಳಿ ಸಂತೋಷಗೊಂಡ ಸೋಮಕರ ಪ್ರಭೆ ರಾಜಪುತ್ರ ಧೃಷ್ಟದ್ಯುಮ್ನನು ತನ್ನ ತಂದೆಗೆ ಕೃಷ್ಣೆಯನ್ನು ಯಾರು ಪಡೆದರು ಮತ್ತು ಏನಾಯಿತು ಎನ್ನುವುದನ್ನು ವರದಿಮಾಡಿದನು:
“ಕೆಂಪು ಮತ್ತು ಅಗಲ ಸುಂದರ ಕಣ್ಣುಗಳ, ಕೃಷ್ಣಾಜಿನದಲ್ಲಿದ್ದೂ ದೇವಸಮಾನರೂಪಿ, ಉಗ್ರ ಧನುಸ್ಸಿಗೆ ದಾರವನ್ನು ಕಟ್ಟಿ ಗುರಿಯನ್ನು ಕೆಳಕ್ಕುರುಳಿಸಿದ ಆ ಯುವಕನು ವಜ್ರಿಯು ಸರ್ವ ದೇವರ್ಷಿ ಋಷಿಗಳಿಂದ ಸುತ್ತುವರೆಯಲ್ಪಟ್ಟು ದಿತಿಯ ಮಕ್ಕಳನ್ನು ಗಮನಿಸದೇ ಹೇಗೆ ಹೋಗುತ್ತಾನೋ ಹಾಗೆ ಅಲ್ಲಿ ನೆರೆದಿದ್ದ ಯಾರನ್ನೂ ಗಮನಿಸದೇ ಬ್ರಾಹ್ಮಣ ಹಿರಿಯರಿಂದ ಸುತ್ತುವರೆಯಲ್ಪಟ್ಟು ಪ್ರಶಂಸನೆಗೊಳ್ಳುತ್ತಾ ಅವಸರದಲ್ಲಿ ಅಲ್ಲಿಂದ ಹೊರಟುಹೋದನು. ಅದನ್ನು ಸಹಿಸಲಾಗದ ನರಾಧಿಪರು ಕ್ರುದ್ಧರಾಗಿ ಅವನ ಮೇಲೆ ಬೀಳುತ್ತಿರಲು ಕೃಷ್ಣೆಯು ಕೆಳಗಿಳಿದಿದ್ದ ಅವನ ಜಿನದ ತುದಿಯನ್ನು ಹಿಡಿದು ನಾಗವಧುವು ನಾಗವನ್ನು ಹೇಗೋ ಹಾಗೆ ಸಂತೋಷದಿಂದ ಹಿಂಬಾಲಿಸಿದಳು. ಆಗ ಪಾರ್ಥಿವರಾಜಮಧ್ಯದಲ್ಲಿದ್ದ ಓರ್ವನು ದೊಡ್ಡದಾಗಿ ಬೆಳೆದಿದ್ದ ವೃಕ್ಷವೊಂದನ್ನು ಭೂಮಿಯಿಂದ ಕಿತ್ತು ಕೃದ್ಧ ಅಂತಕನು ಪ್ರಾಣಭೃತರ ಮೇಲೆ ಹೇಗೋ ಹಾಗೆ ಆ ಪಾರ್ಥಿವಗಣದ ಮೇಲೆ ಎರಗಿ ಪಲಾಯನಹೋಗುವಂತೆ ಮಾಡಿದನು. ಪಾರ್ಥಿವರು ನೋಡುತ್ತಿದ್ದಂತೆಯೇ ಚಂದ್ರಸೂರ್ಯರಂತೆ ಹೊಳೆಯುತ್ತಿದ್ದ ಆ ಇಬ್ಬರು ನರವ್ಯಾಘ್ರರು ಕೃಷ್ಣೆಯನ್ನು ಕರೆದುಕೊಂಡು ಪುರದ ಹೊರಗಿರುವ ಭಾರ್ಗವಕರ್ಮಶಾಲೆಗೆ ಹೊರಟುಹೋದರು. ಅಲ್ಲಿ ಅಗ್ನಿಯ ಜ್ವಾಲೆಯಂತೆ ಬೆಳಗುತ್ತಿದ್ದ, ನನ್ನ ಮತದಂತೆ ಅವರ ತಾಯಿ, ಕುಳಿತುಕೊಂಡಿದ್ದಳು. ಅವಳ ಸುತ್ತಲೂ ಕುಳಿತುಕೊಂಡ ಅಗ್ನಿಸಮಾನ ಮೂವರು ನರಪ್ರವೀರರು ಅಗ್ನಿಗಳಂತೆ ತೋರುತ್ತಿದ್ದರು. ಅವರಿಬ್ಬರೂ ಅವಳ ಪಾದಕ್ಕೆ ಅಭಿವಂದಿಸಿದರು ಮತ್ತು ಅವಳನ್ನು ಅಭಿವಂದಿಸಲು ಕೃಷ್ಣೆಗೂ ಹೇಳಿದರು. ಅಲ್ಲಿಯೇ ನಿಂತು ಕೃಷ್ಣೆಯನ್ನು ಒಪ್ಪಿಸಿ ಆ ನರವ್ಯಾಘ್ರರು ಭಿಕ್ಷೆಗೆಂದು ಹೊರಟುಹೋದರು. ಕೃಷ್ಣೆಯು ಅವರಿಂದ ಭಿಕ್ಷವನ್ನು ತೆಗೆದುಕೊಂಡು ಬಲಿಯನ್ನು ಮಾಡಿ ಬ್ರಾಹ್ಮಣನಿಗೆ ನೀಡಿದಳು. ನಂತರ ಅದನ್ನು ಆ ವೃದ್ಧೆಗೆ ಮತ್ತು ನರಪ್ರವೀರರಿಗೆ ನೀಡಿ, ತಾನೂ ಊಟಮಾಡಿದಳು. ಅವರೆಲ್ಲರೂ ಅವರ ದರ್ಭೆ ಮತ್ತು ಜಿನಗಳನ್ನು ನೆಲದ ಮೇಲೆ ಹಾಸಿ ಅಲ್ಲಿಯೇ ಮಲಗಿಕೊಂಡರು. ಕೃಷ್ಣೆಯು ಅವರ ಚರಣಗಳ ಕಡೆಯಲ್ಲಿ ಕಾಲುದಿಂಬಾಗಿ ಮಲಗಿಕೊಂಡಳು. ನಂತರ ಅವರು ಕಾಲಮೇಘವು ಗರ್ಜಿಸುವಂತೆ ವಿಚಿತ್ರ ಮಾತುಕಥೆಗಳನ್ನಾಡಿದರು. ಆ ಮಾತುಗಳು ವೈಶ್ಯರು ಆಡುವ ಮಾತುಗಳಂತಿರಲಿಲ್ಲ. ಆ ವೀರರು ಬ್ರಾಹ್ಮಣರಂತೆಯೂ ಮಾತನಾಡಿಕೊಳ್ಳುತ್ತಿರಲಿಲ್ಲ. ಅವರು ನಿಸ್ಸಂಶಯವಾಗಿಯೂ ಕ್ಷತ್ರಿಯ ಪುಂಗವರೇ. ಯಾಕೆಂದರೆ ಅವರು ಯುದ್ಧದ ಕುರಿತು ಮಾತನಾಡುತ್ತಿದ್ದರು. ನಮ್ಮ ಆಸೆಯು ನಿಶ್ಚಯವಾಗಿಯೂ ಪೂರೈಸಿದೆ ಎನ್ನುವುದು ವ್ಯಕ್ತವಾಗಿದೆ. ಪಾರ್ಥರು ಆ ಬೆಂಕಿಯಿಂದ ತಪ್ಪಿಸಿಕೊಂಡಿದ್ದರೆಂದು ಕೇಳುತ್ತೇವೆ. ಧನುಸ್ಸನ್ನು ಬಿಗಿದು ಹೇಗೆ ಲಕ್ಷ್ಯವನ್ನು ಹೊಡೆಯಲಾಯಿತೋ, ಯೋದ್ಧನ ಶಕ್ತಿಯಿಂದ ಹೇಗೆ ಆ ಯಂತ್ರವನ್ನು ಕೆಳಗುರಿಳಿಸಲಾಯಿತೋ, ಮತ್ತು ಪರಸ್ಪರರಲ್ಲಿ ಅವರು ಹೇಗೆ ಮಾತನಾಡಿಕೊಳ್ಳುತ್ತಿದ್ದರೋ ಇವೆಲ್ಲವುಗಳೂ ಅವರು ನಿಜವಾಗಿಯೂ ಅಡಗಿರುವ ಪಾರ್ಥರೆಂದು ಸೂಚಿಸುತ್ತವೆ.”
ಆಗ ರಾಜ ದ್ರುಪದನು ಪ್ರಹೃಷ್ಟನಾಗಿ ತಕ್ಷಣವೇ ತನ್ನ ಪುರೋಹಿತನನ್ನು ಅಲ್ಲಿಗೆ ಕಳುಹಿಸಿದನು:
“ನೀವು ಯಾರೆಂದು ನಾವು ತಿಳಿದಿದ್ದೇವೆ. ಎಲ್ಲಿಯಾದರೂ ನೀವು ಮಹಾತ್ಮ ಪಾಂಡುವಿನ ಮಕ್ಕಳಿರಬಹುದೇ? ಎಂದು ಹೋಗಿ ಕೇಳು.”
ಪುರೋಹಿತನು ನೃಪತಿಯ ವಾಕ್ಯಗಳನ್ನು ತೆಗೆದುಕೊಂಡು ಹೋಗಿ ಅವರನ್ನು ಪ್ರಶಂಸಿಸಿದನು. ನೃಪತಿಯು ಹೇಗೆ ಹೇಳಿ ಕಳುಹಿಸಿದ್ದನೋ ಸಮಗ್ರ ಎಲ್ಲವನ್ನೂ ಕ್ರಮವತ್ತಾಗಿ ಹೇಳಿದನು:
“ಅವನೀಶ್ವರ ಪಾಂಚಾಲರಾಜ ದ್ರುಪದನು ವರಾರ್ಹ ನಿಮ್ಮನ್ನು ತಿಳಿಯಲು ಬಯಸುತ್ತಾನೆ. ಲಕ್ಷ್ಯವನ್ನು ಹೊಡೆದು ಕೆಳಗುರಿಳಿಸಿದವನನ್ನು ನೋಡಿದ ಅವನ ಹರ್ಷಕ್ಕೆ ಅಂತ್ಯವೇ ಕಾಣುತ್ತಿಲ್ಲ. ನಿಮ್ಮ ಹಿನ್ನೆಲೆ ಜ್ಞಾತಿಕುಲವನ್ನು ಹೇಳಿಕೊಂಡು ನಿಮ್ಮ ದ್ವೇಷಿಗಳ ತಲೆಯಮೇಲೆ ಕಾಲನ್ನಿಡಿ ಮತ್ತು ಸಹಾನುಗ ಪಾಂಚಾಲರಾಜನ ಈ ಹೃದಯವನ್ನು ಸಂತೋಷದಿಂದ ತುಂಬಿಸಿರಿ. ರಾಜ ಪಾಂಡುವು ರಾಜ ದ್ರುಪದನಿಗೆ ಪ್ರಿಯಸಖನಾಗಿದ್ದು ಅತ್ಮಸಮನಾಗಿದ್ದನು. ತನ್ನ ಈ ಮಗಳು ಆ ಕೌರವನ ಸೊಸೆಯಾಗಬೇಕೆಂಬುದೇ ದ್ರುಪದನ ಆಸೆಯಾಗಿತ್ತು. ಅನಿಂದಿತಾಂಗರೇ! ಪೃಥುದೀರ್ಘಬಾಹು ಅರ್ಜುನನೇ ಅವನ ಸುತೆಯನ್ನು ಧರ್ಮಪೂರ್ವಕ ವಿವಾಹವಾಗಲಿ ಎಂಬ ಈ ಆಸೆಯು ರಾಜ ದ್ರುಪದನ ಹೃದಯದಲ್ಲಿ ಯಾವಾಗಲೂ ನೆಲೆಸಿತ್ತು.”
ಈ ರೀತಿ ತನ್ನ ಮಾತುಗಳನ್ನು ಹೇಳಿ ವಿನೀತನಾಗಿ ನಿಂತಿದ್ದ ಪುರೋಹಿತನನ್ನು ನೋಡಿದ ರಾಜನು
“ಇವನಿಗೆ ಪಾದ್ಯ ಮತ್ತು ಅರ್ಘ್ಯಗಳನ್ನು ನೀಡು!”
ಎಂದು ಹತ್ತಿರದಲ್ಲಿದ್ದ ಭೀಮನಿಗೆ ಆಜ್ಞೆಯನ್ನಿತ್ತನು.
“ರಾಜ ದ್ರುಪದನ ಪುರೋಹಿತನು ಮಾನ್ಯನು. ಅವನಿಗೆ ಅಧಿಕ ಪೂಜೆಯನ್ನೇ ನೀಡೋಣ!”
ಭೀಮನು ಹಾಗೆಯೇ ಮಾಡಲು ಅವನೂ ಕೂಡ ಆ ಪೂಜೆಯನ್ನು ಪ್ರತಿಸಂಗ್ರಹಿಸಿದನು. ಪುರೋಹಿತನು ಸುಖೋಪವಿಷ್ಟನಾಗಲು, ಯುಧಿಷ್ಠಿರನು ಬ್ರಾಹ್ಮಣನಿಗೆ ಹೇಳಿದನು:
“ಪಾಂಚಾಲರಾಜನು ತನ್ನ ಮಗಳನ್ನು ತನ್ನ ಧರ್ಮದಂತೆ, ಇಷ್ಟವಿದ್ದು ಸಂತೋಷದಿಂದ ಕೊಟ್ಟಿದ್ದಾನೆ. ರಾಜ ದ್ರುಪದನು ಅವಳಿಗೆ ಒಂದು ಶುಲ್ಕವನ್ನು ಇಟ್ಟಿದ್ದನು ಮತ್ತು ಅದರ ಪ್ರಕಾರವೇ ಈ ವೀರನು ಅವಳನ್ನು ಗೆದ್ದಿದ್ದಾನೆ. ಅವನ ಜಾತಿ, ಜೀವನಶಿಲ್ಪ, ಕುಲ ಅಥವಾ ಗೋತ್ರದ ಕುರಿತು ಯಾವುದೇ ರೀತಿಯ ಮನಸ್ಥಾಪವೂ ಉಂಟಾಗಬಾರದು. ಕಾರ್ಮುಕವನ್ನು ಬಿಗಿದು ಲಕ್ಷ್ಯವನ್ನು ಗುರಿಯಿಟ್ಟು ಹೊಡೆದು ಈ ಮಹಾತ್ಮನು ಪಾರ್ಥಿವಸಂಘಮಧ್ಯದಲ್ಲಿ ಕೃಷ್ಣೆಯನ್ನು ಗೆದ್ದಿದ್ದಾನೆ. ಹೀಗಿರುವಾಗ ರಾಜ ಸೌಮಿಕನು ಇಂದು ಸಂತಾಪವನ್ನೂ ಅಥವಾ ಅಸುಖವನ್ನೂ ಪಡೆಯುವುದು ಸರಿಯಲ್ಲ. ಆದರೂ ರಾಜ ದ್ರುಪದನ ಬಯಕೆಯು ಪಾರ್ಥಿವನಿಗೆ ನಿಜವಾಗಿದೆ. ಬ್ರಾಹ್ಮಣ! ನನ್ನ ಅಭಿಪ್ರಾಯದಂತೆ ರೂಪವತಿ ಈ ನರೇಂದ್ರಕನ್ಯೆಯು ಅಪ್ರಾಪ್ಯಳು. ಯಾಕೆಂದರೆ ಯಾವ ಮಂದಬಲಶಾಲಿಯೂ ಆ ಧನುವನ್ನು ಆ ರೀತಿಯಲ್ಲಿ ಬಿಗಿದು ಕಟ್ಟಲು ಶಕ್ಯವಿರಲಿಲ್ಲ. ಅಥವಾ ಅಸ್ತ್ರಗಳನ್ನು ಅರಿಯದೇ ಇದ್ದವನಿಂದ ಅಥವಾ ಹೀನಜನಿಂದ ಆ ರೀತಿ ಲಕ್ಷ್ಯವನ್ನು ಬೀಳಿಸುವುದು ಶಕ್ಯವಿರಲಿಲ್ಲ. ಆದುದರಿಂದ ಇಂದು ಪಾಂಚಾಲರಾಜನಿಗೆ ತನ್ನ ಮಗಳ ಕಾರಣದಿಂದ ಯಾವುದೇ ರೀತಿಯ ದುಃಖವೂ ಆಗಬಾರದು. ಮತ್ತು ಇವನು ಆ ಚಿಹ್ನೆಯನ್ನು ಹೊಡೆದು ಕೆಳಗುರುಳಿಸಿದ ಎನ್ನುವುದನ್ನು ಭುವಿಯಲ್ಲಿರುವ ಯಾವ ಮಾನವನೂ ಬದಲಾಯಿಸಲಾರ.”
ಮಗಳನ್ನು ಗೆದ್ದವರು ಪಾಂಡವರೇ ಎಂದು ತಿಳಿದ ದ್ರುಪದನ ಸಂತೋಷ
ಯುಧಿಷ್ಠಿರನು ಹೀಗೆ ಹೇಳಲು ಪಾಂಚಾಲರಾಜನ ಕಡೆಯಿಂದ ಎರಡನೆಯ ಇನ್ನೊಬ್ಬನು ಆತುರದಿಂದ ಬಂದು “ಭೋಜನವು ಸಿದ್ಧವಾಗಿದೆ!” ಎಂದು ನಿವೇದಿಸಿದನು. ದೂತನು ಹೇಳಿದನು:
“ವರನ ಕಡೆಯವರಿಗಾಗಿ ರಾಜ ದ್ರುಪದನು ಔತಣವನ್ನು ಏರ್ಪಡಿಸಿದ್ದಾನೆ. ಸರ್ವಕಾರ್ಯಗಳನ್ನೂ ಪೂರೈಸಿ ನೀವು ಕೃಷ್ಣೆಯೊಡನೆ ದ್ರುಪದನ ಅರಮನೆಗೆ ಬರಬೇಕು. ತಡಮಾಡಬಾರದು. ಕಾಂಚನಪದ್ಮಚಿತ್ರಗಳಿಂದ ಅಲಂಕೃತ ಅಶ್ವಗಳು ಎಳೆಯುವ, ವಸುಧಾಧಿಪರಿಗೆ ಅರ್ಹ ರಥಗಳು ಇಲ್ಲಿವೆ. ನೀವೆಲ್ಲರೂ ಅವುಗಳನ್ನು ಏರಿ ಪಾಂಚಾಲರಾಜನ ನಿವೇಶನಕ್ಕೆ ಬನ್ನಿ.”
ನಂತರ ಕುರುಪುಂಗವರು ಆ ವಿಶಾಲ ರಥದಲ್ಲಿ ಮುಂದೆ ಪುರೋಹಿತನನ್ನು ಕೂರಿಸಿ ತಾವೂ ಕುಳಿತುಕೊಂಡು ಹೊರಟರು. ಕುಂತಿ ಮತ್ತು ಕೃಷ್ಣೆ ಇಬ್ಬರೂ ಇನ್ನೊಂದು ರಥದಲ್ಲಿ ಒಟ್ಟಿಗೆ ಕುಳಿತರು. ಧರ್ಮರಾಜನು ಹೇಳಿದ್ದುದನ್ನು ಪುರೋಹಿತನಿಂದ ಕೇಳಿದ ನಂತರ ದ್ರುಪದನು ಕುರುಗಳನ್ನು ಗುರುತಿಸುವುದಕ್ಕಾಗಿ ಅನೇಕ ದ್ರವ್ಯಗಳನ್ನು ಒಟ್ಟುಹಾಕಿಸಿದನು. ಫಲಗಳು, ಸುಂದರವಾಗಿ ಹೆಣೆದ ಮಾಲೆಗಳು, ಚರ್ಮ, ವರ್ಮ, ಆಸನಗಳು, ಹಸುಗಳು, ಹಗ್ಗಗಳು, ಮತ್ತು ಕೃಷಿಗೆ ಸಂಬಂಧಿಸಿದ ಇತರ ದ್ರವ್ಯಗಳನ್ನು ತರಿಸಿದ್ದನು. ಶಿಲ್ಪ ಮತ್ತು ವ್ಯಾಪಾರಗಳಲ್ಲಿ ಬಳಸುವ ಅನ್ಯ ಸರ್ವ ವಸ್ತುಗಳನ್ನೂ, ಕ್ರೀಡೆಗಳಲ್ಲಿ ಬಳಸುವ ಸರ್ವವಸ್ತುಗಳನ್ನೂ ರಾಜನು ತರಿಸಿದ್ದನು. ಹೊಳೆಯುತ್ತಿರುವ ರಥ, ಅಶ್ವ, ಕವಚಗಳು, ಮಹಾ ಖಡ್ಗಗಳು, ಚಿತ್ರಣಗಳಿಂದ ಕೂಡಿದ ರಥಾಶ್ವಗಳು, ಆರಿಸಿದ್ದ ಬಿಲ್ಲುಗಳು, ಮುಖ್ಯ ಬಾಣಗಳು, ಭಲ್ಲಗಳು, ಮತ್ತು ಕಾಂಚನಭೂಷಿತ ಶಕ್ತಿ ಮುಂತಾದವುಗಳನ್ನೂ ತರಿಸಿದ್ದನು. ಪ್ರಾಸಗಳು, ಭುಷುಂಡಗಳು, ಪರಿಘಗಳು, ಮತ್ತು ಎಲ್ಲ ತರಹದ ಸಂಗ್ರಾಮ ಸಾಮಗ್ರಿಗಳನ್ನೂ, ಹಾಗೆಯೇ ಉತ್ತಮವಾಗಿ ತಯಾರಿಸಲ್ಪಟ್ಟ ವಿವಿಧ ಶಯ್ಯಾಸನಗಳನ್ನೂ ತರಿಸಿದ್ದನು.
ಕುಂತಿಯು ಸಾಧ್ವಿ ಕೃಷ್ಣೆಯನ್ನು ಕರೆದುಕೊಂಡು ದ್ರುಪದನ ಅಂತಃಪುರವನ್ನು ಪ್ರವೇಶಿಸಿದಳು. ಅಲ್ಲಿ ಉತ್ಸುಕ ಸ್ತ್ರೀಯರು ಕೌರವರಾಜಪತ್ನಿಯ ಉಪಚಾರದಲ್ಲಿ ತೊಡಗಿದರು. ಭುಜಗೇಂದ್ರನಂತೆ ಕೆತ್ತಿದ್ದ ನೀಳ ಬಾಹುಗಳ ಎಡಭುಜಗಳನ್ನು ಜಿನದ ಉತ್ತರೀಯದಿಂದ ಮುಚ್ಚಿ ಸಿಂಹವಿಕ್ರಾಂತರಂತೆ ನಡೆದು ಬರುತ್ತಿದ್ದ ಆ ಮಹರ್ಷಭ ಪುರುಷವೀರರನ್ನು ತಾವು ಇದ್ದಲ್ಲಿಂದಲೇ ನೋಡಿದ ರಾಜ ಮತ್ತು ರಾಜನ ಸರ್ವ ಸಚಿವರೂ, ರಾಜಪುತ್ರರೂ, ಸುಹೃದಯರೂ, ಸರ್ವ ನಿಖಿಲ ಪರಿಚಾರಕರೂ ಅತೀವ ಹರ್ಶಿತರಾದರು. ಆ ನರಾಗ್ರ ವೀರರು ಅಲ್ಲಿಯ ಮಹಾ ವೈಭವವನ್ನು ನೋಡಿ ಸ್ವಲ್ಪವೂ ವಿಸ್ಮಿತರಾಗದೇ ವಿಶಂಕರಾಗಿ ಪಾದಪೀಠಗಳನ್ನು ಹೊಂದಿದ್ದ ಉತ್ತಮ ಆಸನಗಳಲ್ಲಿ ವಯಸ್ಸಿಗನುಗುಣವಾಗಿ ಕುಳಿತುಕೊಂಡರು. ಸುಂದರ ಶುಭ್ರವಸ್ತ್ರಗಳನ್ನು ಧರಿಸಿದ ಅಡುಗೆಯವರು ತಯಾರಿಸಿದ ಪಾರ್ಥಿವರ ಭೋಜನಕ್ಕೆ ಯೋಗ್ಯ ಎಲ್ಲಾ ತರಹದ ಆಹಾರವನ್ನು ಚಿನ್ನ ಮತ್ತು ಬಂಗಾರದ ಪಾತ್ರೆಗಳಲ್ಲಿ ಸುಂದರ ಉಡುಪುಗಳನ್ನು ಧರಿಸಿದ್ದ ದಾಸ ದಾಸಿಯರು ನೀಡಿದರು. ಆ ಪುರುಷಪ್ರವೀರರು ಭೋಜನವನ್ನು ಮುಗಿಸಿ, ಮನೋಕಾಮದಂತೆ ವಿಶ್ರಾಂತಿಪಡೆದು ಅಲ್ಲಿರಿಸಿದ್ದ ಸರ್ವ ವಸ್ತುಗಳನ್ನೂ ನೋಡುತ್ತಾ ಸಾಂಗ್ರಾಮಿಕ ವಸ್ತುಗಳ ಕಡೆಗೆ ಆ ವೀರರು ನಡೆದರು. ಅದನ್ನು ನೋಡಿದ ದ್ರುಪದನ ಪುತ್ರರು, ರಾಜ ಮತ್ತು ಜೊತೆಗಿದ್ದ ಸರ್ವ ಮಂತ್ರಿಪ್ರಮುಖರೂ ಹೃಷ್ಟರಾಗಿ ಪಾರ್ಥಿವ ಪುತ್ರಪೌತ್ರ ಕುಂತೀಸುತರನ್ನು ಉಪಚರಿಸಿದರು.
ಆಗ ಆ ಮಹಾದ್ಯುತಿ ಪಾಂಚಾಲ್ಯನು ರಾಜಪುತ್ರ ಯುಧಿಷ್ಠಿರನನ್ನು ಕರೆದು ಬ್ರಾಹ್ಮಣರನ್ನು ಸಂಬೋಧಿಸುವಂತೆ ಮಾತನಾಡಿದನು. ಆ ದೀನಾತ್ಮನು ಸುವರ್ಚಸ ಕುಂತೀಪುತ್ರನಲ್ಲಿ ಕೇಳಿದನು:
“ನಾವು ನಿಮ್ಮನ್ನು ಯಾರೆಂದು ತಿಳಿಯಬೇಕು? ಕ್ಷತ್ರಿಯರೆಂದೋ ಅಥವಾ ಬ್ರಾಹ್ಮಣರೆಂದೋ? ಅಥವಾ ಗುಣಸಂಪನ್ನಾನುತ ವೈಶ್ಯರೆಂದೋ ಅಥವಾ ಶೂದ್ರಯೋನಿಯಲ್ಲಿ ಜನಿಸಿದವರೆಂದೋ? ಅಥವಾ ಕೃಷ್ಣೆಯ ಸಂದರ್ಶನಾರ್ಥಿಗಳಾಗಿ ಸ್ವರ್ಗದಿಂದ ತಮ್ಮ ಮಾಯೆಯಿಂದ ಬಂದಿಳಿದ ಸರ್ವತೋದಿಶ ಸಂಚರಿಸುವ ಸಿದ್ಧರೆಂದೋ? ಇದರ ಕುರಿತು ಮಹಾ ಸಂದೇಹವನ್ನು ಹೊಂದಿದ ನಮಗೆ ಸತ್ಯವನ್ನು ತಿಳಿಸು. ನಮ್ಮ ಈ ಸಂಶಯವು ದೂರವಾದ ಕೂಡಲೇ ನಮ್ಮ ಮನಸ್ಸಿಗೆ ಸಂತಸವಾಗುತ್ತದೆ. ಪರಂತಪ! ನಮ್ಮ ಭಾಗಧೇಯವು ಶುಭವೆಂದು ತೋರುವುದಿಲ್ಲವೇ? ನೀನು ನಿನ್ನ ಬಯಕೆಯಂತೆ ಸತ್ಯವನ್ನೇ ಹೇಳು. ರಾಜರಲ್ಲಿ ಯಜ್ಞ ದಾನಗಳಿಗಿಂತಲೂ ಸತ್ಯವೇ ಶೋಭಿಸುತ್ತದೆ. ಆದುದರಿಂದ ಅನೃತವನ್ನು ಹೇಳಬೇಡ. ನಿನ್ನ ಮಾತುಗಳನ್ನು ಕೇಳಿದ ನಂತರವೇ ವಿವಾಹಕರ್ಮ ವಿಧಾನಗಳನ್ನು ನಿಶ್ಚಯಿಸುತ್ತೇನೆ.”
ಯುಧಿಷ್ಠಿರನು ಹೇಳಿದನು:
“ರಾಜನ್! ವಿಮನಸ್ಕನಾಗಬೇಡ. ಸಂತೋಷಗೊಳ್ಳು ಪಾಂಚಾಲ್ಯ! ನಿನ್ನ ಆಸೆಯು ನಿಸ್ಸಂಶಯವಾಗಿಯೂ ನಿಶ್ಚಿತವಾಗಿಯೂ ಸಿದ್ಧಿಯಾಗಿದೆ. ನಾವು ಕ್ಷತ್ರಿಯರೇ! ಮಹಾತ್ಮ ಪಾಂಡುವಿನ ಪುತ್ರರು. ನಾನು ಜ್ಯೇಷ್ಠ ಕೌಂತೇಯನೆಂದು ತಿಳಿ. ಇವರೀರ್ವರು ರಾಜಸನ್ನಿಧಿಯಲ್ಲಿ ನಿನ್ನ ಸುತೆಯನ್ನು ಗೆದ್ದ ಅರ್ಜುನ-ಭೀಮಸೇನರು. ಅವಳಿಗಳು ಕೃಷ್ಣೆಯು ನಿಂತಿರುವಲ್ಲಿ ಇದ್ದಾರೆ. ನಾವು ಕ್ಷತ್ರಿಯರು. ಆದುದರಿಂದ ನಿನ್ನ ಮನಸ್ಸಿನ ದುಃಖವನ್ನು ದೂರಮಾಡು. ನಿನ್ನ ಈ ಸುತೆಯು ಪದ್ಮದಂತೆ ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ಹೋಗಿದ್ದಾಳೆ. ನಾನು ಹೇಳಿದ ಇವೆಲ್ಲವೂ ಸತ್ಯ. ನೀನೇ ನಮ್ಮ ಪರಮ ಪರಾಯಣ ಗುರು.”
ಆಗ ರಾಜ ದ್ರುಪದನು ಹರ್ಷವ್ಯಾಕುಲಲೋಚನನಾಗಿ ಮೊದಲಿಗೆ ಯುಧಿಷ್ಠಿರನಿಗೆ ಏನು ಹೇಳಲೂ ಶಕ್ಯನಾಗಲಿಲ್ಲ. ರಾಜ ಪರಂತಪನು ತನ್ನ ಆ ಸಂತಸವನ್ನು ನಿಗ್ರಹಿಸಲು ಪ್ರಯತ್ನಿಸುತ್ತಾ ಯುಧಿಷ್ಠಿರನಿಗೆ ಅನುರೂಪ ಪ್ರತ್ಯುತ್ತರವನ್ನಿತ್ತನು. ಅವರು ಹಿಂದಿನ ಘಟನೆಯಿಂದ ಹೇಗೆ ತಪ್ಪಿಸಿಕೊಂಡರೆಂದು ಧರ್ಮಾತ್ಮನು ಕೇಳಲು, ಪಾಂಡವನು ಅವನಿಗೆ ಮೊದಲಿನಿಂದ ಎಲ್ಲವನ್ನೂ ಹೇಳಿದನು. ಕುಂತೀಪುತ್ರನ ಮಾತುಗಳನ್ನು ಕೇಳಿದ ರಾಜ ದ್ರುಪದನು ಜನೇಶ್ವರ ಧೃತರಾಷ್ಟ್ರನನ್ನು ನಿಂದಿಸಿದನು. ಶ್ರೇಷ್ಠ ಮಾತುಗಾರ ದ್ರುಪದನು ರಾಜ್ಯವನ್ನು ದೊರಕಿಸುತ್ತೇನೆಂದು ಪ್ರತಿಜ್ಞೆಯನ್ನು ಮಾಡಿ ಕುಂತೀಪುತ್ರ ಯುಧಿಷ್ಠಿರನಿಗೆ ಆಶ್ವಾಸನೆಯನ್ನಿತ್ತನು.
ದ್ರೌಪದಿಯು ಐವರನ್ನು ವಿವಾಹವಾಗುವುದು ಧರ್ಮವೇ ಎಂಬ ಜಿಜ್ಞಾಸೆ
ನಂತರ ರಾಜನು ಕುಂತಿ, ಕೃಷ್ಣೆ, ಭೀಮಸೇನ, ಅರ್ಜುನ ಮತ್ತು ಯಮಳರನ್ನು ಮಹಾ ಭುವನಕ್ಕೆ ಕರೆಸಿಕೊಂಡನು. ಯಜ್ಞಸೇನನ ಸತ್ಕಾರದಲ್ಲಿ ಅವರು ಅಲ್ಲಿಯೇ ಉಳಿದುಕೊಂಡರು. ವಿಶ್ವಾಸವನ್ನು ಪಡೆದುಕೊಂಡ ಅವರಲ್ಲಿ ರಾಜನು ತನ್ನ ಪುತ್ರಸಮೇತನಾಗಿ ಹೇಳಿದನು:
“ಇಂದಿನ ಈ ಪುಣ್ಯದಿನದಲ್ಲಿ ಕುರುನಂದನ ಮಹಾಬಾಹು ಅರ್ಜುನನು ವಿಧಿವತ್ತಾಗಿ ಪಾಣಿಗ್ರಹಣಗೊಂಡು ಮುಹೂರ್ತವನ್ನು ಮಾಡಬೇಕು."
ಆದಕ್ಕೆ ರಾಜ ಧರ್ಮಪುತ್ರ ಯುಧಿಷ್ಠಿರನು ಹೇಳಿದನು:
“ವಿಶಾಂಪತೇ! ಹಾಗಿದ್ದರೆ ನಾನೂ ಕೂಡ ದಾರಸಂಬಂಧಕಾರ್ಯವನ್ನು ನೆರವೇರಿಸಿಕೊಳ್ಳಬೇಕು.”
ದ್ರುಪದನು ಹೇಳಿದನು:
“ಅಥವಾ ವಿಧಿವತ್ತಾಗಿ ನೀನು ನನ್ನ ಮಗಳ ಪಾಣಿಗ್ರಹಣ ಮಾಡಿಕೋ. ಅಥವಾ ವೀರ! ನಿನಗಿಷ್ಟವಿದ್ದವನಿಗೆ ಕೃಷ್ಣೆಯನ್ನು ನೀಡು.”
ಯುಧಿಷ್ಠಿರನು ಹೇಳಿದನು:
“ರಾಜನ್! ದ್ರೌಪದಿಯು ನಮ್ಮೆಲ್ಲರ ರಾಣಿಯಾಗುತ್ತಾಳೆ. ಹಿಂದೆ ನನ್ನ ತಾಯಿಯು ಹೀಗೆಯೇ ಅಪ್ಪಣೆಯಿತ್ತಿದ್ದಳು. ನಾನಿನ್ನೂ ಮದುವೆಯಾಗಿಲ್ಲ. ಹಾಗೆಯೇ ಪಾಂಡವ ಭೀಮಸೇನನೂ ವಿವಾಹವಾಗಿಲ್ಲ. ಪಾರ್ಥನಿಂದ ಜಯಿಸಲ್ಪಟ್ಟ ನಿನ್ನ ಈ ಮಗಳು ನಿಧಿಸಮಾನಳು. ಯಾವುದೇ ನಿಧಿಯನ್ನು ನಾವೆಲ್ಲರೂ ಜೊತೆಯಲ್ಲಿಯೇ ಅನುಭವಿಸುತ್ತೇವೆ ಎಂದು ನಮ್ಮ ಮಧ್ಯೆ ಒಪ್ಪಂದವಾಗಿದೆ. ನಾವು ಈ ಒಪ್ಪಂದವನ್ನು ಮುರಿಯಲು ಬಯಸುವುದಿಲ್ಲ. ಕೃಷ್ಣೆಯು ಧರ್ಮವತ್ತಾಗಿ ನಮ್ಮೆಲ್ಲರ ರಾಣಿಯಾಗುತ್ತಾಳೆ. ಅವಳು ಅಗ್ನಿ ಸಮ್ಮುಖದಲ್ಲಿ ಒಬ್ಬೊಬ್ಬರಾಗಿ ನಮ್ಮೆಲ್ಲರ ಕೈ ಹಿಡಿಯುತ್ತಾಳೆ.”
ದ್ರುಪದನು ಹೇಳಿದನು:
“ಕುರುನಂದನ! ಒಬ್ಬನಿಗೆ ಹಲವಾರು ರಾಣಿಯರಿರಬಹುದು ಎಂದು ಹೇಳಿದ್ದಾರೆ. ಆದರೆ ಒಬ್ಬಳಿಗೆ ಹಲವಾರು ಪತಿಯರಿರುವರೆಂದು ಎಂದೂ ಎಲ್ಲಿಯೂ ಹೇಳಿಲ್ಲ. ಧಾರ್ಮಿಕನೂ ಶುಚಿಯೂ ಆದ ನೀನು ಲೋಕವೇದವಿರುದ್ಧ ಅಧರ್ಮವನ್ನು ಎಸೆಗಬಾರದು. ಈ ರೀತಿಯ ಯೋಚನೆಯಾದರೂ ನಿನಗೆ ಎಲ್ಲಿಂದ ಬಂದಿತು?”
ಯುಧಿಷ್ಠಿರನು ಹೇಳಿದನು:
“ಮಹಾರಾಜ! ಧರ್ಮವು ಸೂಕ್ಷ್ಮ ಮತ್ತು ಅದರ ಗತಿಯು ನಮಗೆ ತಿಳಿದಿದ್ದುದಲ್ಲ. ಹಿಂದಿನವರು ನಡೆದುಕೊಂಡು ಬಂದ ದಾರಿಯನ್ನೇ ನಾವು ಹಿಂಬಾಲಿಸಿಕೊಂಡು ಹೋಗುತ್ತೇವೆ. ನನ್ನ ನಾಲಿಗೆಯು ಸುಳ್ಳನ್ನಾಡುವುದಿಲ್ಲ ಮತ್ತು ನನ್ನ ಬುದ್ಧಿಯು ಅಧರ್ಮವನ್ನು ಯೋಚಿಸುವುದಿಲ್ಲ. ನನ್ನ ತಾಯಿಯು ಇದನ್ನೇ ಹೇಳಿದ್ದಳು ಮತ್ತು ಅದರಂತೆ ನಡೆಯುವುದೇ ನನ್ನ ಮನೋಗತ. ನಿಶ್ಚಯವಾಗಿಯೂ ಇದು ದರ್ಮ. ಏನನ್ನೂ ಯೋಚಿಸಿದೇ ಪರಿಪಾಲಿಸು. ಇದರಲ್ಲಿ ಯಾವುದೇ ರೀತಿಯ ಶಂಕೆಯು ಇಲ್ಲದಿರಲಿ.”
ದ್ರುಪದನು ಹೇಳಿದನು:
“ಕೌಂತೇಯ! ನೀನು, ಕುಂತಿ ಮತ್ತು ನನ್ನ ಸುತ ಧೃಷ್ಟದ್ಯುಮ್ನ ಎಲ್ಲರೂ ಏನು ಮಾಡಬೇಕೆಂದು ಸಮಾಲೋಚನೆ ಮಾಡಿ. ನಾಳೆ ನಾವು ಅದನ್ನೇ ಕಾರ್ಯಗತಗೊಳಿಸೋಣ.”
ಈ ರೀತಿ ಅವರೆಲ್ಲರೂ ಅಲ್ಲಿ ಸೇರಿ ಚರ್ಚೆಮಾಡುತ್ತಿರಲು ಅದೇ ಸಮಯದಲ್ಲಿ ಅಲ್ಲಿಗೆ ದ್ವೈಪಾಯನನು ಬಂದನು. ಮಾಹಾತ್ಮ ಕೃಷ್ಣನನ್ನು ನೋಡಿದಾಕ್ಷಣವೇ ಮಹಾಯಶ ಪಾಂಡವ ಮತ್ತು ಪಾಂಚಾಲ ಸರ್ವರೂ ಮೇಲೆದ್ದು ಪೂಜಿಸಿದರು. ಅವರೆಲ್ಲರಿಗೂ ಪ್ರತಿವಂದಿಸಿ ಕುಶಲವನ್ನು ವಿಚಾರಿಸಿದ ಮಹಾಮನನು ಶುಭ್ರ ಕಾಂಚನದ ಆಸನದಲ್ಲಿ ಕುಳಿತುಕೊಂಡನು. ಅಮಿತತೇಜಸ್ವಿ ಮಹರ್ಷಿ ದ್ವಿಪದರಲ್ಲಿ ಶ್ರೇಷ್ಠ ಕೃಷ್ಣನಿಂದ ಅನುಜ್ಞೆಯನ್ನು ಪಡೆದ ಎಲ್ಲರೂ ತಮ್ಮ ತಮ್ಮ ಆಸನಗಳಲ್ಲಿ ಕುಳಿತುಕೊಂಡರು. ಸ್ವಲ್ಪಸಮಯದ ನಂತರ ವಿಶಾಂಪತಿ ಪಾರ್ಷತನು ಮಧುರ ವಾಣಿಯಲ್ಲಿ ದ್ರೌಪದಿಯ ಕುರಿತು ಮಹಾತ್ಮನನ್ನು ಕೇಳಿದನು:
“ಒಬ್ಬ ಸ್ತ್ರೀಯು ಹಲವಾರು ಪುರುಷರ ಪತ್ನಿಯಾದರೂ ಧರ್ಮಸಂಕರವಾಗದೇ ಇರುವುದು ಹೇಗೆ ಸಾಧ್ಯ? ಭಗವನ್! ಇವೆಲ್ಲವನ್ನೂ ಯಥಾವತ್ತಾಗಿ ನಮಗೆ ಹೇಳು.”
ವ್ಯಾಸನು ಹೇಳಿದನು:
“ಧರ್ಮಕ್ಕೆ ವಿಪ್ರಲಂಭವೆನಿಸಿಕೊಂಡ, ಲೋಕವೇದಗಳಿಗೆ ವಿರೋಧವೆನಿಸುವ ಇದರ ಕುರಿತು ನೀವು ಪ್ರತಿಯೊಬ್ಬರ ಸ್ವಂತ ಅಭಿಪ್ರಾಯಗಳನ್ನು ತಿಳಿಯ ಬಯಸುತ್ತೇನೆ.”
ದ್ರುಪದನು ಹೇಳಿದನು:
“ಲೋಕವೇದ ವಿರುದ್ಧವಾದ ಇದು ಅಧರ್ಮವೆಂದು ನನ್ನ ಮತ. ದ್ವಿಜಸತ್ತಮ! ಬಹುಮಂದಿಗಳಿಗೆ ಪತ್ನಿಯು ಒಬ್ಬಳೇ ಇರುವುದಿಲ್ಲ. ಹಿಂದೆಂದೂ ಮಹಾತ್ಮರು ಯಾರೂ ಈ ಧರ್ಮವನ್ನು ಆಚರಿಸಲಿಲ್ಲ. ಒಬ್ಬನಿಗಿಂಥ ಹೆಚ್ಚು ಪತಿಯನ್ನು ಹೊಂದುವುದು ಸನಾತನ ಧರ್ಮವಲ್ಲ ಮತ್ತು ಆಚರಿಸುವಂತಿಲ್ಲ. ಆದುದರಿಂದ ನಾನು ಇದನ್ನು ನಡೆಸಿಕೊಡಬೇಕೋ ಬೇಡವೋ ಎಂದು ನಿರ್ಧರಿಸಲಾರೆ. ನನಗೆ ಇದೊಂದು ಧರ್ಮಸಂದೇಹ ಸಂದಿಗ್ಧವೆಂದು ತೋರುತ್ತದೆ.”
ಧೃಷ್ಟಧ್ಯುಮ್ನನು ಹೇಳಿದನು:
“ದ್ವಿಜರ್ಷಭ! ಜ್ಯೇಷ್ಠ ಭ್ರಾತನು ತನ್ನ ತಮ್ಮನ ಭಾರ್ಯೆಯೊಂದಿಗೆ ಕೂಡಿಕೊಂಡೂ ಧರ್ಮವಂತನಾಗಿರಲು ಹೇಗೆ ಸಾಧ್ಯ? ಸೂಕ್ಷ್ಮ ಧರ್ಮದ ಗತಿಯನ್ನು ಅರ್ಥಮಾಡಿಕೊಳ್ಳಲು ಎಂದೂ ಸಾಧ್ಯವಾಗಲಾರದು. ಇದು ಧರ್ಮವೋ ಅಧರ್ಮವೋ ಎಂದು ನಿರ್ಧರಿಸುವುದು ನಮ್ಮಂಥವರಿಗೆ ಶಕ್ಯವಿಲ್ಲ. ಆದುದರಿಂದ ಕೃಷ್ಣೆಯು ಐವರ ರಾಣಿಯಾಗಬಹುದೋ ಅಥವಾ ಇಲ್ಲವೋ ಎಂದು ನಿರ್ಧರಿಸಲು ನಮಗೆ ಸಾಧ್ಯವಾಗುತ್ತಿಲ್ಲ.”
ಯುಧಿಷ್ಠಿರನು ಹೇಳಿದನು:
“ನನ್ನ ಮಾತು ಸುಳ್ಳನ್ನಾಡುವುದಿಲ್ಲ ಮತ್ತು ನನ್ನ ಮತಿಯು ಅಧರ್ಮವನ್ನು ಯೋಚಿಸುವುದಿಲ್ಲ. ನನ್ನ ಮನಸ್ಸು ಇದನ್ನು ಪ್ರೋತ್ಸಾಹಿಸುತ್ತಿದೆ ಎಂದರೆ ಇದು ಎಂದೂ ಅಧರ್ಮವಾಗಿರಲು ಸಾಧ್ಯವಿಲ್ಲ. ಪುರಾಣಗಳಲ್ಲಿಯೂ ಕೂಡ ಜಟಿಲಾ ಎಂಬ ಹೆಸರಿನ ಗೌತಮಿಯೋರ್ವಳು ಏಳು ಋಷಿಗಳೊಡನೆ ಕೂಡಿದ್ದಳು ಎಂದು ನಾವು ಕೇಳಿದ್ದೇವೆ. ಗುರುವಿನ ವಚನವೇ ಧರ್ಮವೆಂದು ಹೇಳುತ್ತಾರೆ. ಗುರುಗಳಲ್ಲೆಲ್ಲಾ ಜನನಿಯೇ ಪರಮ ಗುರುವು. ಅವಳೇ ನಮಗೆ ಭಿಕ್ಷೆಯಂತೆ ಹಂಚಿಕೊಳ್ಳಿ ಎಂದು ಹೇಳಿದ್ದಾಳೆ. ಆದುದರಿಂದ ನಾನು ಇದನ್ನೇ ಧರ್ಮವೆಂದು ತಿಳಿಯುತ್ತೇನೆ.”
ಕುಂತಿಯು ಹೇಳಿದಳು:
“ಧರ್ಮಚಾರಿ ಯುಧಿಷ್ಠಿರನು ಹೇಳಿದ ಹಾಗೆಯೇ ನಡೆಯಿತು. ಸುಳ್ಳಿನ ಕುರಿತು ನನಗೆ ತೀವ್ರ ಭಯವಿದೆ. ಈ ಸುಳ್ಳಿನಿಂದ ನಾನು ಹೇಗೆ ಹೊರಬರಲಿ?”
ವ್ಯಾಸನು ಹೇಳಿದನು:
“ಭದ್ರೇ! ಸುಳ್ಳಿನಿಂದ ಬಿಡುಗಡೆಯಾಗುತ್ತದೆ. ಇದೇ ಸನಾತನ ಧರ್ಮ. ಆದರೆ ನಾನು ಇದನ್ನು ನಿಮಗೆಲ್ಲರಿಗೂ ಹೇಳುವುದಿಲ್ಲ. ಈ ಸನಾತನ ಧರ್ಮವು ಏನು ಮತ್ತು ಅದು ಹೇಗೆ ಬಂದಿತು ಎನ್ನುವುದನ್ನು ಸ್ವಯಂ ಪಾಂಚಾಲನು ಮಾತ್ರ ನನ್ನಿಂದ ಕೇಳುತ್ತಾನೆ. ಕೌಂತೇಯನು ಹೇಳಿದ್ದುದೇ ಧರ್ಮ ಎನ್ನುವುದರಲ್ಲಿ ಸಂಶಯವೇ ಇಲ್ಲ.”
ಭಗವಾನ್ ಪ್ರಭು ದ್ವೈಪಾಯನ ವ್ಯಾಸನು ರಾಜನ ಕೈಗಳನ್ನು ಹಿಡಿದು ರಾಜನ ಅಂತಃಪುರವನ್ನು ಪ್ರವೇಶಿಸಿದನು. ಪಾಂಡವರು, ಕುಂತಿ, ಮತ್ತು ಪಾರ್ಷತ ಧೃಷ್ಟಧ್ಯುಮ್ನನು ವಿಚೇತಸರಾಗಿ ಅವರಿಬ್ಬರ ಪ್ರತೀಕ್ಷೆಯಲ್ಲಿ ಅಲ್ಲಿಯೇ ನಿಂತುಕೊಂಡರು.
ಉಪೇಂದ್ರರೇ ಪಾಂಡವರಾಗಿ ಜನಿಸಿದುದರ ಕಥೆ ಮತ್ತು ದ್ರೌಪದಿಯ ಪೂರ್ವಜನ್ಮ ವೃತ್ತಾಂತ
ದ್ವೈಪಾಯನನು ಮಹಾತ್ಮ ನರೇಂದ್ರನಿಗೆ ಒಬ್ಬಳಿಗೇ ಬಹುಮಂದಿ ಪತಿಗಳಾಗುವ ಧರ್ಮವು ಹೇಗೆ ಬಂದಿತೆಂದು ಹೇಳಿದನು:
“ರಾಜನ್! ಬಹಳ ಹಿಂದೆ ದೇವತೆಗಳು ನೈಮಿಷಾರಣ್ಯದ ಸತ್ರವೊಂದರಲ್ಲಿ ಉಪಸ್ಥಿತರಿದ್ದರು. ವೈವಸ್ವತನು ಅದರಲ್ಲಿ ಋತ್ವಿಕನಾಗಿದ್ದನು. ದೀಕ್ಷೆಗೊಂಡಿದ್ದ ಆ ಸಮಯದಲ್ಲಿ ಯಮನು ಪ್ರಜೆಗಳ್ಯಾರನ್ನೂ ಕೊಲ್ಲಲಿಲ್ಲ. ಹಾಗಾಗಿ ಕಾಲದ ಹೊಡೆತ ಮತ್ತು ಮರಣದಿಂದ ತಪ್ಪಿಸಿಕೊಂಡ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ವರ್ಧಿಸಿದರು. ಆಗ ಶಕ್ರ, ವರುಣ, ಕುಬೇರ, ಸಾಧ್ಯರು, ರುದ್ರರು, ವಸುಗಳು, ಅಶ್ವಿನಿಯರು ಮತ್ತು ಅನ್ಯ ದೇವತೆಗಳು ಭುವನ ಪ್ರಜಾಪತಿಯ ಬಳಿ ಹೋಗಿ ಸೇರಿದರು. ಅಲ್ಲಿ ಸಮೇತರಾದ ಅವರು ಲೋಕಗುರುವಿಗೆ ಹೇಳಿದರು:
“ಮನುಷ್ಯರು ವೃದ್ಧಿಯಾಗುತ್ತಿರುವುದರನ್ನು ನೋಡಿದರೆ ನಮಗೆ ತೀವ್ರ ಭಯವುಂಟಾಗಿದೆ. ಆ ಭಯದಿಂದ ನಡುಗುತ್ತಾ, ಸುಖವನ್ನರಸುತ್ತಾ ನಿನ್ನ ಶರಣರಾಗಿ ನಾವೆಲ್ಲರೂ ಬಂದಿದ್ದೇವೆ.”
ಆಗ ಬ್ರಹ್ಮನು ಅವರಿಗೆ ಹೇಳಿದನು:
“ಅಮರರಾಗಿರುವ ನೀವೆಲ್ಲರೂ ಮನುಷ್ಯರಿಂದ ಏಕೆ ಭಯಪಡಬೇಕು? ಮರ್ತ್ಯರಿಂದ ನಿಮಗೆ ಎಂದೂ ಭಯವಾಗದಿರಲಿ.”
ದೇವತೆಗಳು ಹೇಳಿದರು:
“ಮರ್ತ್ಯರು ಅಮರ್ತ್ಯರಾಗಿದ್ದುದರಿಂದ ನಮ್ಮೀರ್ವರಲ್ಲಿ ವ್ಯತ್ಯಾಸವೇ ಇಲ್ಲದಂತಾಗಿದೆ. ನಮ್ಮೀರ್ವರಲ್ಲಿ ವ್ಯತ್ಯಾಸವಿರಬೇಕೆಂದು ಕೇಳಿಕೊಂಡೇ ನಾವು ನಿನ್ನಲ್ಲಿಗೆ ಬಂದಿದ್ದೇವೆ.”
ಬ್ರಹ್ಮನು ಹೇಳಿದನು:
“ವೈವಸ್ವತನು ಸತ್ರದಲ್ಲಿ ಮಗ್ನನಾಗಿದ್ದಾನೆ. ಆದುದರಿಂದಲೇ ಮನುಷ್ಯರು ಸಾಯುತ್ತಿಲ್ಲ. ಏಕಾಗ್ರಚಿತ್ತದಿಂದ ಆ ಕಾರ್ಯಗಳೆಲ್ಲವನ್ನೂ ಮುಗಿಸಿದ ನಂತರ ಆ ಅಂತಕಾಲನು ಅವರಿದ್ದಲ್ಲಿಗೆ ಹಿಂದಿರುಗುತ್ತಾನೆ. ನಿಮ್ಮ ವೀರ್ಯಗಳಿಂದ ಪ್ರಚೋದನೆಗೊಂಡ ವೈವಸ್ವತನ ದೇಹವು ಪುಷ್ಠಿಯಾಗುತ್ತದೆ. ಆಗ ಅವನು ನರರಲ್ಲಿ ಹಿಂದಿರುಗಿ ಕಾಲವು ಅಂತ್ಯವಾಗುತ್ತದೆಯೋ ಎನ್ನುವಂತೆ ಬಹುಜನರ ನಾಶಮಾಡುತ್ತಾನೆ.”
ಪೂರ್ವಜನ ದೇವವಾಕ್ಯವನ್ನು ಕೇಳಿದ ಮಹಾಬಲಿ ದೇವತೆಗಳು, ದೇವತೆಗಳು ಯಜ್ಞಮಾಡುತ್ತಿರುವ ಸ್ಥಳಕ್ಕೆ ಹೋಗಿ ಒಟ್ಟಿಗೇ ಕುಳಿತುಕೊಂಡರು. ಆಗ ಅವರು ಭಾಗೀರಥಿಯಲ್ಲಿ ತೇಲುತ್ತಿದ್ದ ಒಂದು ಪುಂಡರೀಕವನ್ನು ಕಂಡರು. ಅದನ್ನು ನೋಡಿದ ಅವರು ವಿಸ್ಮಿತರಾದರು. ಅವರಲ್ಲಿ ಶೂರ ಇಂದ್ರನು ಅಲ್ಲಿಗೆ ಹೋದನು. ಸತತ ಹರಿಯುವ ಗಂಗೆಯಲ್ಲಿ ಅವನು ಅಗ್ನಿಸಮಾನ ಓರ್ವ ಸ್ತ್ರೀಯನ್ನು ಕಂಡನು. ಜಲಾರ್ಥಿನಿಯಾದ ಅವಳು ದೇವಿ ಗಂಗೆಯಲ್ಲಿ ಇಳಿದು ನಿಂತು ಅಳುತ್ತಿದ್ದಾಗ ಅವಳ ಕಣ್ಣೀರು ನೀರಿನಲ್ಲಿ ಬಿದ್ದು ಕಾಂಚನದ ಕಮಲಗಳಾಗಿ ತೇಲುತ್ತಿದ್ದವು. ಆ ಅದ್ಭುತವನ್ನು ನೋಡಿದ ವಜ್ರಿಯು ಅವಳ ಬಳಿಬಂದು ಪ್ರಶ್ನಿಸಿದನು:
“ನೀನು ಯಾರು ಮತ್ತು ಯಾವ ಕಾರಣಕ್ಕಾಗಿ ನೀನು ಅಳುತ್ತಿರುವೆ? ನಿನಗೆ ಇಷ್ಟವಾದರೆ ಸತ್ಯವೇನೆಂದು ಹೇಳು.”
ಅದಕ್ಕೆ ಸ್ತ್ರೀಯು ಹೇಳಿದಳು:
“ಶಕ್ರ! ನಾನು ಯಾರು ಮತ್ತು ಯಾವ ಕಾರಣಕ್ಕಾಗಿ ಮಂದಭಾಗ್ಯೆಯಾದ ನಾನು ರೋದಿಸುತ್ತಿದ್ದೇನೆ ಎಂದು ನಿನಗೆ ತಿಳಿದಿರಲೇ ಬೇಕು. ನಾನು ಮುಂದೆ ಹೋಗುತ್ತೇನೆ. ನೀನು ನನ್ನನ್ನು ಹಿಂಬಾಲಿಸಿ ಬಾ. ನಾನು ಏಕೆ ಅಳುತ್ತಿದ್ದೇನೆ ಎನ್ನುವುದನ್ನು ನೀನೇ ನೋಡುವೆಯಂತೆ.”
ಅವಳು ಮುಂದೆ ಹೋಗುತ್ತಿರಲು ಅವನು ಅವಳನ್ನು ಹಿಂಬಾಲಿಸಿದನು. ಅಲ್ಲಿಯೇ ಹತ್ತಿರದ ಪರ್ವತ ಶಿಖರದಲ್ಲಿ ಸಿಂಹಾಸನದಲ್ಲಿ ಕುಳಿತು ಯುವತಿಯರ ಜೊತೆ ಪಗಡೆಯಾಡುತ್ತಿದ್ದ ಓರ್ವ ಸುಂದರ ತರುಣನನ್ನು ಅವನು ನೋಡಿದನು. ಅವನು ಪಗಡೆಯಾಟದಲ್ಲಿ ಮಗ್ನನಾಗಿದ್ದುದನ್ನು ಕಂಡು ಸಿಟ್ಟಿಗೆದ್ದು ಹೇಳಿದನು:
“ನಾನು ದೇವರಾಜನೆಂದು ತಿಳಿ. ವಿಶ್ವ ಭುವನವೆಲ್ಲ ನನ್ನ ವಶದಲ್ಲಿದೆ. ನಾನೇ ಒಡೆಯ.”
ಆ ದೇವನು ಕ್ರುದ್ಧ ಶಕ್ರನನ್ನು ನೋಡಿ ನಿಧಾನವಾಗಿ ಮುಗುಳ್ನಕ್ಕು ದಿಟ್ಟಿಸಿ ನೋಡಿದನು. ಅವನ ನೋಟದಡಿಯಲ್ಲಿ ದೇವರಾಜನು ಸಂಸ್ತಂಭಿತನಾಗಿ ಸ್ಥಾಣುವಿನಂತೆ ಅಲ್ಲಿಯೇ ನಿಂತು ಬಿಟ್ಟನು. ಕ್ರೀಡೆಯಲ್ಲಿ ಉತ್ಸಾಹವನ್ನು ಕಳೆದುಕೊಂಡ ಅವನು ರೋದಿಸುತ್ತಿರುವ ದೇವಿಯಲ್ಲಿ ಹೇಳಿದನು:
“ಅವನನ್ನು ನನ್ನ ಹತ್ತಿರ ಕರೆದುಕೊಂಡು ಬಾ. ಅವನು ತನ್ನ ದರ್ಪದಿಂದ ಇನ್ನೂ ಹೆಚ್ಚು ಆವೇಶಗೊಳ್ಳದ ಹಾಗೆ ನೋಡಿಕೊಳ್ಳುತ್ತೇನೆ.”
ಅವಳ ಸ್ಪರ್ಷಮಾತ್ರದಿಂದಲೇ ಶಕ್ರನು ತನ್ನ ಅಂಗಾಂಗಗಳು ಶಕ್ತಿಯನ್ನೇ ಕಳೆದುಕೊಂಡಂತಾಗಿ ಧರಣಿಯಮೇಲೆ ಕುಸಿದು ಬಿದ್ದನು. ಉಗ್ರತೇಜಸ್ವಿ ಆ ಭಗವಾನನು ಅವನಿಗೆ ಹೇಳಿದನು:
“ಶಕ್ರ! ಇನ್ನು ಎಂದೂ ಪುನಃ ಹೀಗೆ ಮಾಡಬೇಡ! ಬಲ ಮತ್ತು ವೀರ್ಯದಲ್ಲಿ ಅಪ್ರಮೇಯ ನೀನು ಈ ಮಹಾದ್ರಿರಾಜನನ್ನು ತಳ್ಳಿ ಉರುಳಿಸು. ಉರುಳಿಸಿದ ನಂತರ ಅದರ ಮಧ್ಯವನ್ನು ಪ್ರವೇಶಿಸು. ಅಲ್ಲಿ ನಿನ್ನಂತೆ ಸೂರ್ಯಭಾಸ ಇತರರನ್ನು ಕಾಣುತ್ತೀಯೆ.”
ಮಹಾಗಿರಿಯ ಶಿಖರವನ್ನು ಉರುಳಿಸಿ, ಅಲ್ಲಿ ತನ್ನ ಕಾಂತಿಯನ್ನು ಹೋಲುವ ಇತರರನ್ನು ನೋಡಿದನು. ಅದನ್ನು ನೋಡಿ ಅವನು ನಾನೂ ಇವರ ಹಾಗೆ ಆಗಿಬಿಡುತ್ತೇನೆಯೇ? ಎಂದು ದುಃಖಿತನಾದನು. ಆಗ ಕುಪಿತ ದೇವ ಗಿರೀಶನು ಕಣ್ಣುಗಳನ್ನು ತಿರುಗಿಸುತ್ತಾ ವಜ್ರಪಾಣಿಗೆ ಹೇಳಿದನು:
“ಶತಕ್ರತೋ! ನಿನ್ನ ಹುಡುಗಾಟಿಕೆಯಲ್ಲಿ ನನ್ನನ್ನು ಅವಮಾನಿಸಿದ್ದುದರಿಂದ ನೀನೂ ಈ ಬಿಲವನ್ನು ಪ್ರವೇಶಿಸು!”
ವಿಭುವು ಈ ರೀತಿ ಹೇಳಿದ ನಂತರ ದೇವರಾಜನು ಆ ಶಾಪದಿಂದ ನಡುಗಿದನು. ಅವನ ಅಂಗಾಂಗಗಳು ಪರ್ವತ ಶಿಖರದ ಮೇಲಿದ್ದ ಅಶ್ವತ್ಥ ವೃಕ್ಷದ ಎಲೆಗಳು ಭಿರುಗಾಳಿಗೆ ಸಿಲುಕಿದರೆ ಹೇಗೋ ಹಾಗೆ ತತ್ತರಿಸಿದವು. ಆಗ ಅವನು ಕೈಜೋಡಿಸಿ, ಮುಖವನ್ನು ಕೆಳಮಾಡಿ, ಒಮ್ಮಿಂದೊಮ್ಮಿಗೇ ಬಂದ ಮಾತುಗಳನ್ನು ಕೇಳಿ ಕಂಪಿಸುತ್ತಾ ಆ ಬಹುರೂಪಿ ಉಗ್ರನಿಗೆ ಹೇಳಿದನು:
“ಭಗವನ್! ಇಂದು ಇದರಿಂದ ಬಿಡುಗಡೆಯನ್ನು ತೋರಿಸು!”
ಆಗ ಆ ಉಗ್ರಧನ್ವಿಯು ನಗುತ್ತಾ ಹೇಳಿದನು:
“ಹೀಗೆ ನಡೆದುಕೊಳ್ಳುವವರಿಗೆ ಇಲ್ಲಿಂದ ಬಿಡುಗಡೆಯೇ ಇಲ್ಲ. ಮುಂದೆ ಇವರೂ ಕೂಡ ನಿನ್ನಂತೆ ಆಗುತ್ತಾರೆ. ಆದುದರಿಂದ ಈ ಗುಹೆಯನ್ನು ಪ್ರವೇಶಿಸಿ ಅಲ್ಲಿಯೇ ಇರು. ನಿಮಗೆಲ್ಲ ಇದರಿಂದ ಬಿಡುಗಡೆ ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ನೀವೆಲ್ಲರೂ ಮನುಷ್ಯ ಯೋನಿಯನ್ನು ಪ್ರವೇಶಿಸಿ, ಅಲ್ಲಿ ಬಹಳಷ್ಟು ಕಷ್ಟಕರ್ಮಗಳನ್ನು ಅನುಭವಿಸಿ, ಬೇರೆ ಹಲವಾರು ಜನರನ್ನು ಸಂಹರಿಸಿ, ಪುನಃ ಇಂದ್ರಲೋಕವನ್ನು ತೆರಳುತ್ತೀರಿ. ನಿಮ್ಮದೇ ಕರ್ಮಗಳಿಂದ ಈ ಮಹಾಲೋಕವನ್ನು ಪಡೆದಿದ್ದೀರಿ. ನಾನು ಹೇಳಿದ ಇವೆಲ್ಲವನ್ನೂ ಮಾಡಬೇಕಾಗುತ್ತದೆ. ಇದಲ್ಲದೇ ಬೇರೇನೂ ಆಗುವುದಿಲ್ಲ!”
ಆಗ ಪೂರ್ವೇಂದ್ರರು ಹೇಳಿದರು:
“ದೇವಲೋಕದಿಂದ ಮೋಕ್ಷವು ದುರಾಧರವೆಂದು ವಿಹಿತವಾಗಿರುವ ಮಾನುಷ ಲೋಕಕ್ಕೆ ನಾವು ಹೋಗುತ್ತೇವೆ. ಆದರೆ ಧರ್ಮ, ವಾಯು, ಮಘವತ್ ಮತ್ತು ಅಶ್ವಿನಿ ದೇವತೆಗಳು ನಮ್ಮನ್ನು ನಮ್ಮ ತಾಯಿಯಿಂದ ಪಡೆಯಬೇಕು.”
ಈ ಮಾತುಗಳನ್ನು ಕೇಳಿದ ವಜ್ರಪಾಣಿಯು ದೇವಶ್ರೇಷ್ಠನಲ್ಲಿ ಪುನಃ ಹೇಳಿದನು:
“ಈ ಕಾರ್ಯಗಳನ್ನು ನೆರವೇರಿಸುವ ಅವರಲ್ಲಿಯ ಐದನೆಯ ಪುರುಷನನ್ನು ನನ್ನ ವೀರ್ಯದಿಂದ ಮಗನನ್ನಾಗಿ ಪಡೆಯುತ್ತೇನೆ.”
ಉಗ್ರಧನ್ವಿ ಭಗವಂತನು ಅವರ ಇಷ್ಟವನ್ನು ಅವರು ಕೇಳಿದಹಾಗೆಯೇ ಅನುಗ್ರಹಿಸಿದನು. ಲೋಕಕಾಂತೆ ಶ್ರೀಯೇ ಮನುಷ್ಯಲೋಕದಲ್ಲಿ ಅವರ ಭಾರ್ಯೆಯಾಗಲೆಂದು ಅಪ್ಪಣೆ ಮಾಡಿದನು. ಅವರ ಜೊತೆಗೇ ಆ ದೇವನು ಅಪ್ರಮೇಯ ನಾರಾಯಣನಲ್ಲಿ ಸೇರಿಕೊಂಡನು. ಅವನೂ ಕೂಡ ಎಲ್ಲವೂ ಹಾಗೆಯೇ ಆಗಲೆಂದು ಅನುಮೋದಿಸಿದನು. ನಂತರ ಎಲ್ಲರೂ ಧರಣಿಯಲ್ಲಿ ಜನಿಸಿದರು. ಆಗ ಹರಿಯು ತನ್ನ ಶಿರದಿಂದ ಎರಡು ಕೂದಲುಗಳನ್ನು ಕಿತ್ತನು. ಅದರಲ್ಲಿ ಒಂದು ಬಿಳಿಯಾಗಿತ್ತು. ಇನ್ನೊಂದು ಕಪ್ಪಾಗಿತ್ತು. ಈ ಕೂದಲುಗಳು ಯದು ಕುಲದ ಸ್ತ್ರೀಯರಾದ ರೋಹಿಣಿ ಮತ್ತು ದೇವಕಿಯರನ್ನು ಪ್ರವೇಶಿಸಿದವು. ಅವುಗಳಲ್ಲಿ ಒಂದು ಬಲದೇವನಾಯಿತು. ಎರಡನೇ ಕಪ್ಪು ಬಣ್ಣದ್ದು ಕೇಶವನಾಗಿ ಜನಿಸಿತು. ಆ ಪರ್ವತ ಕಣಿವೆಯ ಗುಹೆಯಲ್ಲಿ ಬಂಧಿಗಳಾಗಿದ್ದ ಪೂರ್ವ ಶಕ್ರರೇ ಇಲ್ಲಿ ವೀರ್ಯವಂತ ಪಾಂಡವರಾಗಿ ಜನಿಸಿದ್ದಾರೆ. ಪಾಂಡವ ಸವ್ಯಸಾಚಿಯು ಶಕ್ರನ ಅಂಶದವನು. ಪೂರ್ವದಲ್ಲಿ ಇಂದ್ರರಾಗಿದ್ದವರೇ ಪಾಂಡವರಾಗಿ ಹುಟ್ಟಿದ್ದಾರೆ. ಪೂರ್ವದಲ್ಲಿಯೇ ಇವರ ಪತ್ನಿಯಾಗಲೆಂದು ನಿರ್ಧರಿಸಲ್ಪಟ್ಟ ಲಕ್ಷ್ಮಿಯು ದಿವ್ಯರೂಪಿ ದ್ರೌಪದಿಯಾಗಿ ಜನಿಸಿದ್ದಾಳೆ. ದೈವಯೋಗದ ಹೊರತು ಬೇರೆ ಹೇಗೆ ಕರ್ಮಾಂತರದಲ್ಲಿ ಮಹೀತಲದಿಂದ ಸೋಮಸೂರ್ಯಪ್ರಕಾಶದ ರೂಪ ಮತ್ತು ಕೋಶಮಾತ್ರದವರೆಗೆ ಪಸರಿಸುವ ಸುಗಂಧವನ್ನು ಹೊಂದಿದ ಸ್ತ್ರೀಯು ಉದ್ಭವಿಸಬಲ್ಲಳು? ನರೇಂದ್ರ! ಪ್ರೀತಿಪೂರ್ವಕವಾಗಿ ನಿನಗೆ ಅದ್ಭುತ ವರವನ್ನು ನೀಡುತ್ತೇನೆ. ದಿವ್ಯ ಚಕ್ಷುಗಳಿಂದ ಕುಂತೀಪುತ್ರರನ್ನು ಅವರ ಪುಣ್ಯ ದಿವ್ಯ ಪೂರ್ವ ದೇಹರೂಪಗಳಲ್ಲಿ ನೋಡು!”
ಪರಮ ಉದಾರಕರ್ಮಿ ಶುಚಿ ವಿಪ್ರ ವ್ಯಾಸನು ತನ್ನ ತಪಸ್ಸಿನಿಂದ ರಾಜನಿಗೆ ದಿವ್ಯ ದೃಷ್ಠಿಯನ್ನು ನೀಡಿದನು. ರಾಜನು ಅವರೆಲ್ಲರನ್ನೂ ಅವರ ಪೂರ್ವದೇಹದಲ್ಲಿ ಹೇಗಿದ್ದರೋ ಹಾಗೆ ನೋಡಿದನು. ದಿವ್ಯ ಹೇಮಕಿರೀಟಮಾಲೆಗಳನ್ನು ಧರಿಸಿ, ಪಾವಕಾದಿತ್ಯ ವರ್ಣಿಗಳಾದ, ಆಭರಣಗಳನ್ನು ಧರಿಸಿದ್ದ, ವಿಶಾಲ ಎದೆಗಳ, ಎತ್ತರವಾಗಿ, ಇಂದ್ರರಂತಿದ್ದ ಪ್ರತಿಯೊಬ್ಬ ಯುವಕನನ್ನೂ ನೋಡಿದನು. ಮಲಿನವಾಗಲಾರದ ದಿವ್ಯ ಸುವರ್ಣ ವಸ್ತ್ರಗಳನ್ನು ಧರಿಸಿದ್ದ, ಆರಿಸಿದ್ದ ಮಾಲೆಗಳಿಂದ ಅತೀವ ಶೋಭಾಯಮಾನರಾದ, ಸಾಕ್ಷಾತ್ ಮುಕ್ಕಣ್ಣನೋ ಅಥವಾ ದಿವ್ಯ ವಸುಗಳೋ ಎಂದು ತೋರುತ್ತಿದ್ದ, ಆದಿತ್ಯರಂತೆ ಸರ್ವಗುಣೋಪಪನ್ನರಾದ, ಅಭಿರೂಪಿ ಆ ಪೂರ್ವೇಂದ್ರರನ್ನು ನೋಡಿದ ರಾಜ ದ್ರುಪದನು ವಿಸ್ಮಿತನೂ ಸಂಪ್ರೀತನೂ ಆದನು. ಪಾರ್ಥಿವೇಂದ್ರನು ಅಪ್ಯಾಪ್ರಮೇಯ ದಿವ್ಯ ಮಾಯೆಯಿಂದ ಅವರ ರೂಪತೇಜಸ್ಸು ಮತ್ತು ಯಶಸ್ಸನ್ನು ಹೋಲುವ ಆ ರೂಪಿಣಿ ಶ್ರೀಯನ್ನೂ ನೋಡಿದನು. ಆ ಮಹಾದಾಶ್ಚರ್ಯ ರೂಪವನ್ನು ನೋಡಿ ಪ್ರಸನ್ನನಾದ ಅವನು ಸತ್ಯವತೀಸುತನ ಪಾದಗಳನ್ನು ಹಿಡಿದು
“ಪರಮರ್ಷಿ! ನಿನಗೆ ಇದು ಅದ್ಭುತವೇನಲ್ಲ!”
ಎಂದನು. ವ್ಯಾಸನು ಹೇಳಿದನು:
“ಒಮ್ಮೆ ಯಾವುದೋ ತಪೋವನದಲ್ಲಿ ಮಹಾತ್ಮನೋರ್ವನ ಮಗಳಿದ್ದಳು. ಸತೀ ರೂಪವತಿಯಾಗಿದ್ದರೂ ಆ ಕನ್ಯೆಗೆ ಪತಿಯು ದೊರೆಯಲಿಲ್ಲ. ಬೇರೆಯವರು ಹೇಳುವಂತೆ ಅವಳು ಉಗ್ರ ತಪಸ್ಸಿನಿಂದ ಶಂಕರನನ್ನು ತೃಪ್ತಿಪಡೆಸಿದಳು. ಪ್ರೀತ ಈಶ್ವರನು ತಾನಾಗಿಯೇ “ನಿನಗಿಷ್ಟ ವರವನ್ನು ಕೇಳು!” ಎಂದನು. ವರದ ಈಶ್ವರ ದೇವನಲ್ಲಿ ಆ ಕನ್ಯೆಯು
“ಸರ್ವಗುಣೋಪೇತ ಪತಿಯನ್ನು ಬಯಸುತ್ತೇನೆ!”
ಎಂದು ಪುನಃ ಪುನಃ ಕೇಳಿಕೊಂಡಳು. ಪ್ರೀತಿಮಾನ್ ದೇವ ಶಂಕರನು ಅವಳಿಗೆ
“ನಿನಗೆ ಐವರು ಶ್ರೇಷ್ಠ ಪತಿಗಳಾಗುತ್ತಾರೆ!”
ಎಂದು ವರವನ್ನಿತ್ತನು. ಪುನಃ ಪೂಜಿಸುತ್ತಾ ಅವಳು ದೇವನಿಗೆ ಹೇಳಿದಳು:
“ನಿನ್ನಿಂದ ನಾನು ಒಬ್ಬನೇ ಗುಣೋಪೇತ ಪತಿಯನ್ನು ಕೇಳುತ್ತಿದ್ದೇನೆ.”
ಆಗ ಆ ಪ್ರೀತಾತ್ಮ ದೇವದೇವನು ಪುನಃ ಈ ಶುಭವಚನಗಳನ್ನಾಡಿದನು:
“ನೀನು ನನ್ನಲ್ಲಿ ಪತಿಯನ್ನು ಕೊಡು ಎಂದು ಐದು ಬಾರಿ ಪುನಃ ಪುನಃ ಕೇಳಿಕೊಂಡೆ. ಭದ್ರೇ! ಅದು ಹಾಗೆಯೇ ಆಗುತ್ತದೆ. ನಿನಗೆ ಮಂಗಳವಾಗಲಿ. ಅನ್ಯ ದೇಹವನ್ನು ಸೇರಿದಾಗ ನೀನು ಕೇಳಿದಂತೆಯೇ ಆಗುತ್ತದೆ.”
ದ್ರುಪದ! ಅವಳೇ ನಿನ್ನ ಈ ದೇವರೂಪಿಣಿ ಮಗಳಾಗಿ ಜನಿಸಿದ್ದಾಳೆ. ಕೃಷ್ಣೆ ಪಾಂಚಾಲಿಯು ಐವರ ಪತ್ನಿಯಾಗಿಯೂ ಅನಿಂದಿತೆಯಾಗಿರುತ್ತಾಳೆಂದು ವಿಹಿತವಾಗಿದೆ. ಘೋರ ತಪಸ್ಸನ್ನು ತಪಿಸಿ, ಪಾಂಡವರಿಗಾಗಿ ಸ್ವರ್ಗಶ್ರೀಯು ಮಹಾಮಖದಲ್ಲಿ ನಿನ್ನ ಮಗಳಾಗಿ ಹುಟ್ಟಿದಳು. ಸ್ವಯಂ ಸ್ವಯಂಭುವನಿಂದ ಸೃಷ್ಟಳಾದ ದೇವತೆಗಳೂ ಬಯಸುವ ಈ ದೇವಪತ್ನಿ ದೇವಿಯು ತಾನೇ ಮಾಡಿದ ಕರ್ಮಗಳಿಂದ ಈ ಐವರಿಗೆ ಒಬ್ಬಳೇ ಪತ್ನಿಯಾಗುವಳು. ದ್ರುಪದ! ಇದನ್ನು ಕೇಳಿದ ನೀನು ನಿನಗಿಷ್ಟವಾದುದನ್ನು ಮಾಡು.”
ದ್ರುಪದನು ಹೇಳಿದನು:
“ಮಹರ್ಷಿ! ಇದಕ್ಕೆ ಮೊದಲು ನಿನ್ನ ವಚನಗಳನ್ನು ಕೇಳದೇ ಇದ್ದುದರಿಂದ ನಾನು ಆ ರೀತಿ ವರ್ತಿಸಿದೆ. ವಿಹಿತವಾಗಿರುವುದನ್ನು ತಡೆಹಿಡಿಯಲು ಶಕ್ಯವಿಲ್ಲ. ಇದೇ ವಿಧಿಯು ನಿರೂಪಿಸಿದ್ದುದು. ವಿಧಿಯು ಕಟ್ಟಿದ ಗಂಟನ್ನು ಬಿಚ್ಚಲು ಅಸಾಧ್ಯ. ತನ್ನದೇ ಕರ್ಮಗಳಿಂದ ವಿಹಿತವಾಗಿದ್ದುದು ಯಾವುದೂ ಇಲ್ಲ. ಒಬ್ಬನೇ ವರನಿಗೋಸ್ಕರ ಏರ್ಪಡಿಸಿದ್ದ ಕಾರ್ಯವನ್ನು ವಿಧಿಯು ಬಹುಮಂದಿಗೆ ವಿಹಿತಗೊಳಿಸಿದಂತಿದೆ. ಹಿಂದೆ ಕೃಷ್ಣೆಯು ನನಗೆ ಅನೇಕ ಪತಿಗಳನ್ನು ಕೊಡು ಎಂದು ಕೇಳಿಕೊಂಡವಳಾದ್ದುದರಿಂದ ಎಲ್ಲವನ್ನು ತಿಳಿದ ದೇವನು ಅವಳು ಕೇಳಿದಂತೆಯೇ ವರವನ್ನು ನೀಡಿದನು. ಇದನ್ನು ಶಂಕರನೇ ವಿಧಿಸಿದನೆಂದಾದರೆ, ಧಾರ್ಮಿಕವಾಗಿರಲಿ ಅಥವಾ ಅಧಾರ್ಮಿಕವಾಗಿರಲಿ, ಅದರಲ್ಲಿ ನನ್ನ ಅಪರಾಧವೇನೂ ಇಲ್ಲ. ಕೃಷ್ಣೆಯು ಅವರಿಗೇ ವಿಹಿತಳಾಗಿರುವುದರಿಂದ ಅವರೆಲ್ಲರೂ ಬಯಸಿದಂತೆ ವಿಧಿವತ್ತಾಗಿ ಅವಳ ಕೈ ಹಿಡಿಯಲಿ.”
ಆಗ ಆ ಭಗವಾನನು ದರ್ಮರಾಜನಿಗೆ ಹೇಳಿದನು:
“ಪಾಂಡವ! ಇದು ಪುಣ್ಯ ದಿನ. ಇಂದು ಚಂದ್ರಮನು ಪೌಷ್ಯದಲ್ಲಿದ್ದಾನೆ. ಇಂದು ಮೊದಲನೆಯದಾಗಿ ನೀನು ಕೃಷ್ಣೆಯ ಪಾಣಿಗ್ರಹಣ ಮಾಡು.”
ವಿವಾಹ
ನಂತರ ರಾಜ ಯಜ್ಞಸೇನನು ಪುತ್ರನಿಂದೊಡಗೂಡಿ ಗಂಡಿನ ಕಡೆಯವರಿಗೆ ಬಹಳ ಉಡುಗೊರೆಗಳನ್ನಿತ್ತು, ಬಹಳ ರತ್ನ ವಿಭೂಷಣಗಳಿಂದ ಅಲಂಕೃತಳಾದ ಸುತೆ ಕೃಷ್ಣೆಯನ್ನು ಯುಧಿಷ್ಠಿರನಿಗೆ ಒಪ್ಪಿಸಿದನು. ಅಲ್ಲಿ ಅವನ ಸುಹೃದರಯರೆಲ್ಲರೂ, ಸಚಿವ ಮಂತ್ರಿಗಣಗಳೂ, ದ್ವಿಜರೂ, ಪ್ರಮುಖ ಪೌರರೂ ಆ ಪರಮಪ್ರತೀತ ವಿವಾಹವನ್ನು ನೋಡಲು ಸೇರಿದ್ದರು. ವೇಷ್ಮಾರ್ಥಿಜನಗಳಿಂದ ಪರಿಶೋಭಿತ, ಅಲ್ಲಲ್ಲಿ ನಿರ್ಮಿಸಿದ್ದ ಪದ್ಮೋತ್ಪಲಗಳಿಂದ ಭೂಷಿತ, ಬೆಲೆಬಾಳುವ ರತ್ಮ ರಾಶಿಗಳಿಂದ ಹೊಳೆಯುತ್ತಿರುವ ಅವನ ಅರಮನೆಯು ನಕ್ಷತ್ರಮಂಡಲುಗಳನ್ನುಳ್ಳ ದೇವಲೋಕವು ಬೆಳಗುವಂತೆ ಬೆಳಗುತ್ತಿತ್ತು. ಯುವ ಕೌರವರಾಜಪುತ್ರರು ಅಭ್ಯಂಜನವನ್ನು ಪಡೆದು, ಶ್ರೇಷ್ಠ ಚಂದನದಿಂದ ಲೇಪಿತರಾಗಿ, ಕುಂಡಲಗಳಿಂದ, ಅಧಿಕ ಬೆಲೆಯ ವಸ್ತ್ರಗಳಿಂದ ವಿಭೂಷಿತರಾಗಿ, ಮಂಗಲಕ್ರಿಯೆಗಳನ್ನು ಕೈಗೊಂಡರು. ಅಗ್ನಿವರ್ಚಸ ಪುರೋಹಿತ ಧೌಮ್ಯನಿಂದೊಡಗೂಡಿ ಯಥಾವಿಧಿಯಲ್ಲಿ ಎಲ್ಲರೂ ಕ್ರಮೇಣವಾಗಿ ಮಹರ್ಷಭಗಳು ಗೋವು ಇದ್ದ ಕಡೆ ಪ್ರವೇಶಿಸುವಂತೆ ಆ ಸದಸ್ಸನು ಪ್ರವೇಶಿಸಿದರು. ಆ ವೇದಪಾರಂಗತನು ಮಂತ್ರಗಳಿಂದ ಪ್ರಜ್ವಲಿಸುತ್ತಿರುವ ಹುತಾಶನನನ್ನು ರಚಿಸಿದನು ಮತ್ತು ಹಾಗೆಯೇ ಮಂತ್ರಪೂರ್ವಕ ಯುಧಿಷ್ಠಿರನನ್ನು ಕೃಷ್ಣೆಯ ಸಹಿತ ಉಪನೀಯವನ್ನು ನಿಯೋಜಿಸಿದನು. ಆ ವೇದಪಾರಂಗತನು ಅವರಿಬ್ಬರೂ ಕೈಗಳನ್ನು ಹಿಡಿದು ಯಜ್ಞಕುಂಡದ ಪ್ರದಕ್ಷಿಣೆ ಮಾಡಿಸಿದನು. ನಂತರ ಪುರೋಹಿತನು ಆ ಅಜಿಶೋಭಿಯ ಅನುಜ್ಞೆಯಂತೆ ರಾಜಗೃಹದಿಂದ ಹಿಂದಿರುಗಿದನು.
ಕ್ರಮಬದ್ಧವಾಗಿ, ಒಂದೊಂದು ದಿನಗಳ ಅಂತರದಲ್ಲಿ, ಆ ಕೌರವವಂಶವರ್ಧನ ಮಹಾರಥಿ ನೃಪತಾತ್ಮಜರು ಉತ್ತಮರೂಪಧಾರಿಣಿಯನ್ನು ವರಿಸಿದರು. ಅಲ್ಲಿ ಉತ್ತಮ ಅಮಾನುಷ ಅದ್ಭುತವೊಂದು ನಡೆಯಿತೆಂದು ಹೇಳುತ್ತಾರೆ: ಆ ಮಹಾನುಭಾವೆ, ಸುಮಧ್ಯಮೆಯು ಪ್ರತಿ ಹಗಲೂ ಪುನಃ ಕನ್ಯೆಯಾಗಿಯೇ ಉಳಿಯುತ್ತಿದ್ದಳು.
ವಿವಾಹವನ್ನು ಮಾಡಿಕೊಟ್ಟ ನಂತರ ದ್ರುಪದನು ಆ ಮಹಾರಥಿಗಳಿಗೆ ಉತ್ತಮ ಚಿನ್ನದಿಂದ ಮಾಡಲ್ಪಟ್ಟ ಬಹಳಷ್ಟು ನೂರು ಸುಂದರ ರಥಗಳನ್ನು, ಪ್ರತಿಯೊಂದು ರಥಕ್ಕೂ ಚಿನ್ನದ ಮೋಜುಗಳನ್ನು ಹೊಂದಿದ್ದ ನಾಲ್ಕು ನಾಲ್ಕು ಕುದುರೆಗಳನ್ನು ಉಡುಗೊರೆಯಾಗಿತ್ತನು. ಪದ್ಮದ ಚಿಹ್ನೆಗಳನ್ನು ಹೊಂದಿ ಹೇಮಶೃಂಗಿ ಗಿರಿಗಳಂತಿದ್ದ ನೂರು ಗಜಗಳು, ಬೆಲೆಬಾಳುವ ವೇಷಾಭರಣಗಳಿಂದ ಸಿಂಗರಿಸಿದ್ದ ನೂರು ಯುವ ದಾಸಿಯರನ್ನೂ ನೀಡಿದನು. ಸೌಮಿಕನು ಅಗ್ನಿಸಾಕ್ಷಮ ಪ್ರತಿಯೊಬ್ಬರಿಗೂ ಅಬ್ಜಗಳಲ್ಲಿ ಧನ, ವಸ್ತ್ರಗಳು, ಪ್ರಭಾವಯುಕ್ತ ಬೆಲೆಬಾಳುವ ಭೂಷಣಗಳನ್ನು ನೀಡಿದನು. ವಿವಾಹಿತರಾದ ಮಹಾಬಲಿ ಪಾಂಡವರು ರತ್ನಗಳೊಡನೆ ಆ ಶ್ರೀಯನ್ನು ಪಡೆದು ಪಾಂಚಾಲನೃಪನ ಪುರದಲ್ಲಿ ಇಂದ್ರಪ್ರತಿಮರಾಗಿ ಉಳಿದುಕೊಂಡರು. ಪಾಂಡವರ ಜೊತೆ ಸೇರಿಕೊಂಡ ದ್ರುಪದನಿಗೆ ಯಾರ ಭಯವೂ, ದೇವತೆಗಳ ಭಯವೂ ಉಳಿಯಲಿಲ್ಲ.
ಮಹಾತ್ಮ ದ್ರುಪದನ ನಾರಿಯರು ಕುಂತಿಯ ಬಳಿಬಂದು ತಮ್ಮ ತಮ್ಮ ಹೆಸರುಗಳನ್ನು ಹೇಳಿಕೊಂಡು ತಮ್ಮ ನೆತ್ತಿಯನ್ನು ಅವಳ ಪಾದಗಳಿಗೆ ಮುಟ್ಟಿಸಿದರು. ರೇಷ್ಮೆಯ ವಸ್ತ್ರಗಳನ್ನು ಧರಿಸಿದ, ಮಾಂಗಲ್ಯವನ್ನು ಧರಿಸಿದ ಕೃಷ್ಣೆಯೂ ಕೂಡ ತನ್ನ ಅತ್ತೆಗೆ ನಮಸ್ಕರಿಸಿ ಕೈ ಮುಗಿದು ನಿಂತುಕೊಂಡಳು. ಪೃಥಳು ತನ್ನ ರೂಪಲಕ್ಷಣಸಂಪನ್ನೆ, ಶೀಲಾಚಾರಸಮನ್ವಿತೆ ಸೊಸೆ ದ್ರೌಪದಿಗೆ ಪ್ರೀತಿಯಿಂದ ಆಶೀರ್ವಚನಗಳನ್ನಿತ್ತಳು:
“ಇಂದ್ರಾಣಿಯು ಹರಿಹಯನಿಗೆ ಹೇಗೋ ಹಾಗೆ, ಸ್ವಾಹಾಳು ವಿಭಾವಸುವಿಗೆ ಹೇಗೋ ಹಾಗೆ, ರೋಹಿಣಿಯು ಚಂದ್ರನಿಗೆ ಹೇಗೋ ಹಾಗೆ, ದಮಯಂತಿಯು ನಳನಿಗೆ ಹೇಗೋ ಹಾಗೆ, ಭದ್ರಳು ವೈಶ್ರವಣನಿಗೆ ಹೇಗೋ ಹಾಗೆ, ಅರುಂಧತಿಯು ವಸಿಷ್ಠನಿಗೆ ಹೇಗೋ ಹಾಗೆ, ಮತ್ತು ಲಕ್ಷ್ಮಿಯು ನಾರಾಯಣನಿಗೆ ಹೇಗೋ ಹಾಗೆ ನೀನು ನಿನ್ನ ಪತಿಯಂದಿರಿಗೆ ಆಗು. ಜೀವಂತ ಮಕ್ಕಳಿಗೆ ಮತ್ತು ವೀರ ಪುತ್ರರಿಗೆ ಜನ್ಮ ನೀಡು, ಸುಭದ್ರೇ! ಬಹುಸೌಖ್ಯಸಮನ್ವಿತಳಾಗಿರು. ಬೋಗ ಸಂಪನ್ನಳಾಗು. ಯಜ್ಞಪತ್ನಿಯಾಗು. ಒಳ್ಳೆಯ ಅನುವ್ರತಳಾಗು. ಆಗಮಿಸುವ ಅತಿಥಿಗಳ, ಸಾಧುಗಳ, ಬಾಲಕ ವೃದ್ಧರ, ಮತ್ತು ಗುರುವರ್ಯರ ಯಥಾವತ್ತಾದ ಪೂಜೆಗಳಲ್ಲಿಯೇ ನಿನ್ನ ವರ್ಷಗಳು ಕಳೆಯಲಿ. ಕುರುಜಂಗಲದ ಮುಖ್ಯ ರಾಷ್ಟ್ರಗಳಲ್ಲಿ ಮತ್ತು ನಗರಗಳಲ್ಲಿ ಧರ್ಮವತ್ಸಲ ನೃಪತಿಯೊಡನೆ ಅಭಿಷಿಕ್ತಳಾಗು. ಮಹಾಬಲಶಾಲಿಗಳಾದ ನಿನ್ನ ಪತಿಗಳು ತಮ್ಮ ವಿಕ್ರಮದಿಂದ ಈ ಭೂಮಿಯನ್ನು ಜಯಿಸಿದಾಗ ಮಹಾಕ್ರತು ಅಶ್ವಮೇಧದ ಸಮಯದಲ್ಲಿ ಎಲ್ಲ ಬ್ರಾಹ್ಮಣರಿಗೂ ಕಾಣಿಕೆಗಳನ್ನು ನೀಡುವಂಥವಳಾಗು. ಪೃಥ್ವಿಯಲ್ಲಿ ಎಷ್ಟು ಬೆಲೆಬಾಳುವ ರತ್ನಗಳು ಇವೆಯೋ ಅವೆಲ್ಲವನ್ನೂ ಪಡೆದು ನುರಾರು ವರ್ಷಗಳು ಸುಖದಿಂದ ಬಾಳು. ಮದುವೆಯ ಪತ್ತಲವನ್ನುಟ್ಟಿರುವ ನಿನಗೆ ಈಗ ನಾನು ಹೇಗೆ ಆಶೀರ್ವದಿಸುತ್ತಿದ್ದೇನೆಯೋ ಹಾಗೆ ಇನ್ನೊಮ್ಮೆ ಗುಣಾನ್ವಿತ ಪುತ್ರರನ್ನು ಪಡೆದಾಗಲೂ ನಿನಗೆ ಆಶೀರ್ವದಿಸುತ್ತೇನೆ.”
ಪಾಂಡವರು ಪತ್ನಿಯನ್ನು ಪಡೆದ ನಂತರ ಹರಿಯು ಮುಕ್ತವೈಡೂರ್ಯ ಚಿತ್ರಗಳನ್ನೊಡಗೂಡಿದ ಹೇಮ ಆಭರಣಾದಿಗಳನ್ನು ಅವರಿಗೆ ಕಳುಹಿಸಿದನು. ಮಾಧವನು ಅವರಿಗೆ ಬೇರೆ ಬೇರೆ ದೇಶಗಳ ಅತ್ಯಂತ ಬೆಲೆಬಾಳುವ ವಸ್ತ್ರಗಳನ್ನೂ, ಮುಟ್ಟಲು ಚೆನ್ನಾಗಿರುವ ಸುಂದರ ಕಂಬಳಿ, ಜಿನ ಮತ್ತು ರತ್ನಗಳನ್ನೂ, ಬೇರೆ ಬೇರೆ ತರಹದ ಹಾಸಿಗೆ, ಆಸನ ಮತ್ತು ಪಲ್ಲಕ್ಕಿಗಳನ್ನು ಬಹಳ ಸಂಖ್ಯೆಯಲ್ಲಿ, ವೈಡೂರ್ಯ ವಜ್ರ ಚಿತ್ರಗಳಿಂದೊಡಗೂಡಿದ ನೂರಾರು ಪಾತ್ರೆಗಳನ್ನು ಕಳುಹಿಸಿದನು. ಕೃಷ್ಣನು ನಾನಾ ದೇಶಗಳಿಂದ ಪಡೆದ ರೂಪ-ಯೌವನ-ದಾಕ್ಷಿಣ್ಯಗಳಿಂದೊಡಗೂಡಿದ ಸ್ವಲಂಕೃತ ಸಹಸ್ರಾರು ದಾಸಿಯರನ್ನೂ, ಸುರಕ್ಷಿತ ಪಳಗಿದ ಆನೆಗಳನ್ನೂ, ಪಳಗಿದ ಸ್ವಲಂಕೃತ ಒಳ್ಳೆಯ ಅಶ್ವಗಳನ್ನೂ, ಮತ್ತು ಸುಂದರ ಚಿನ್ನದ ಬಾವುಟಗಳಿಂದ ಅಲಂಕೃತ ರಥಗಳನ್ನೂ ಕಳುಹಿಸಿದನು. ಅಮೇಯಾತ್ಮ ಮಧುಸೂದನನು ಕೋಟಿ ಸಂಖ್ಯೆಗಳಲ್ಲಿ ಅವರಿಗೆ ಚಿನ್ನದ ಗಟ್ಟಿಗಳನ್ನು ಕಳುಹಿಸಿದನು. ಗೋವಿಂದನಿಗೆ ಪ್ರಿಯವನ್ನೇ ಬಯಸಿದ ಧರ್ಮರಾಜ ಯುಧಿಷ್ಠಿರನು ಅತ್ಯಂತ ಸಂತೋಷಗೊಂಡು ಅವುಗಳೆಲ್ಲವನ್ನೂ ಸ್ವೀಕರಿಸಿದನು.