ಹನ್ನೆರಡನೇ ದಿನದ ಯುದ್ಧ: ಸಂಶಪ್ತಕವಧೆ
ಸಂಶಪ್ತಕರ ಶಪಥ; ಯುದ್ಧಾರಂಭ
ಕೌರವ-ಪಾಂಡವ ಸೇನೆಗಳು ಶಿಬಿರಕ್ಕೆ ಹೋಗಿ ಎಲ್ಲಾ ಕಡೆ ಯಥಾಭಾಗವಾಗಿ, ಯಥಾನ್ಯಾಯವಾಗಿ ಮತ್ತು ಯಥಾಗುಲ್ಮವಾಗಿ ವಿಶ್ರಾಂತಿಪಡೆದರು. ಸೇನೆಗಳನ್ನು ಹಿಂದೆ ತೆಗೆದುಕೊಂಡ ದ್ರೋಣನು ಪರಮ ದುಃಖಿತನಾಗಿ ನಾಚಿಕೆಗೊಂಡು ದುರ್ಯೋಧನನನ್ನು ನೋಡಿ ಹೇಳಿದನು: “ನಾನು ಮೊದಲೇ ನಿನಗೆ ಹೇಳಿದ್ದೆ. ಧನಂಜಯನು ಸಂಗ್ರಾಮದಲ್ಲಿ ನಿಂತಿರಲು ದೇವತೆಗಳೂ ಕೂಡ ಯುಧಿಷ್ಠಿರನನ್ನು ಸೆರೆಹಿಡಿಯಲು ಶಕ್ಯರಾಗಲಾರರು. ನೀವೆಲ್ಲರೂ ಪ್ರಯತ್ನಿಸಿದರೂ ಸಂಯುಗದಲ್ಲಿ ಪಾರ್ಥನದೇ ಮೇಲುಗೈಯಾಗಿತ್ತು. ನನ್ನ ಮಾತನ್ನು ಶಂಕಿಸಬೇಡ. ಕೃಷ್ಣ-ಪಾಂಡವರಿಬ್ಬರೂ ಅಜೇಯರು. ರಾಜನ್! ಇಂದು ಏನಾದರೂ ಉಪಾಯದಿಂದ ಶ್ವೇತವಾಹನನ್ನು ಕರೆದೊಯ್ಯಿ. ಹಾಗಾದರೆ ಇಂದಿನ ದಿನ ಯುಧಿಷ್ಠಿರನ ಸೆರೆಯಾಗಬಲ್ಲದು. ಯಾರಾದರೂ ಅವನನ್ನು ಆಹ್ವಾನಿಸಿ ರಣರಂಗದ ಬೇರೆಕಡೆ ಸೆಳೆದುಕೊಂಡು ಹೋಗಲಿ. ಅವನನ್ನು ಗೆಲ್ಲದೇ ಎಂದೂ ಕೌಂತೇಯನು ಹಿಂದಿರುಗುವುದಿಲ್ಲ. ಅವನಿಲ್ಲದಿರುವ ಈ ಸಮಯದಲ್ಲಿ ನಾನು ಸೇನೆಯನ್ನು ಭೇದಿಸಿ ಧೃಷ್ಟದ್ಯುಮ್ನನು ನೋಡುತ್ತಿರುವಾಗಲೇ ಧರ್ಮರಾಜನನ್ನು ಹಿಡಿಯುತ್ತೇನೆ. ಅರ್ಜುನನಿಲ್ಲದೇ ಅವನು ರಣದಲ್ಲಿ ನನ್ನನ್ನು ಎದುರಿಸಿದನೆಂದರೆ ನಾನು ಅವನನ್ನು ಸೆರೆಹಿಡಿಯುತ್ತೇನೆ ಎಂದು ತಿಳಿದುಕೋ. ಹೀಗೆ ನಾನು ಯುಧಿಷ್ಠಿರನನ್ನು ಅವನ ಗಣಗಳೊಂದಿಗೆ ಇಂದು ವಶಮಾಡಿಕೊಂಡು ನಿನ್ನೆದುರಿಗೆ ಕರೆದುಕೊಂಡು ಬರುತ್ತೇನೆ. ಅದರಲ್ಲಿ ಸಂಶಯ ಬೇಡ. ಆ ಪಾಂಡವನು ಸಂಗ್ರಾಮದಲ್ಲಿ ಒಂದು ಕ್ಷಣವಾದರೂ ನನ್ನ ಎದಿರು ಬಂದರೆ ನಾನು ಅವನನ್ನು ಸೆರೆಹಿಡಿದು ಕರೆತರುತ್ತೇನೆ. ಅದು ಯುದ್ಧದ್ದಲ್ಲಿ ವಿಜಯಕ್ಕಿಂತ ವಿಶೇಷವಾಗಿರುತ್ತದೆ.”
ದ್ರೋಣನ ವಚನವನ್ನು ಕೇಳಿ ತ್ರಿಗರ್ತಾಧಿಪತಿಯು ಸಹೋದರರೊಡಗೂಡಿ ಇದನ್ನು ಹೇಳಿದನು: “ರಾಜನ್! ಗಂಡೀವಧನ್ವಿಯು ಸದಾ ನಮಗೆ ಕೆಟ್ಟದ್ದನ್ನೇ ಮಾಡಿದ್ದಾನೆ. ನಮ್ಮಲ್ಲಿ ತಪ್ಪಿಲ್ಲದಿದ್ದರೂ ಅವನು ನಮ್ಮ ಮೇಲೆ ಕೆಡುಕನ್ನೆಸಗಿದ್ದಾನೆ. ಅವನು ನಮಗೆ ಮಾಡಿದ ಪ್ರತ್ಯೇಕ ವಿಧವಿಧದ ಕೆಡುಕುಗಳನ್ನು ನೆನಪಿಸಿಕೊಂಡು ಕ್ರೋಧಾಗ್ನಿಯಿಂದ ಸುಡುತ್ತಿರುವ ನಾವು ಸದಾ ರಾತ್ರಿಯಲ್ಲಿ ನಿದ್ದೆಮಾಡುತ್ತಿಲ್ಲ. ಅವನು ದಿವ್ಯಾಸ್ತ್ರಸಂಪನ್ನನಾಗಿ ನಮ್ಮ ಕಣ್ಣಮುಂದೆ ಬರುತ್ತಿದ್ದಾನೆಂದರೆ ನಮ್ಮ ಹೃದಯದಲ್ಲಿರುವಂತೆ ಎಲ್ಲವನ್ನೂ ಮಾಡುತ್ತೇವೆ. ಅವನನ್ನು ಯುದ್ಧಕ್ಕೆ ಬೇರೆಕಡೆ ಕರೆದುಕೊಂಡು ಹೋಗಿ ನಮಗೆ ಯಶಸ್ಕರವಾಗುವಂತೆ ನಾವು ಅವನನ್ನು ಸಂಹರಿಸುತ್ತೇವೆ ಮತ್ತು ಇದರಿಂದ ನಿನಗೆ ಪ್ರಿಯವಾದುದನ್ನೂ ಮಾಡಿದಂತಾಗುತ್ತದೆ. ಇಂದು ಭೂಮಿಯು ಅರ್ಜುನ ರಹಿತವಾಗಲಿ ಅಥವಾ ತ್ರಿಗರ್ತರು ಇಲ್ಲದಂತಾಗಲಿ. ಈ ಸತ್ಯ ಪ್ರತಿಜ್ಞೆಯನ್ನು ಮಾಡುತ್ತಿದ್ದೇವೆ. ಇದು ಸುಳ್ಳಾಗುವುದಿಲ್ಲ!”
ಹೀಗೆ ಹೇಳಿ ಸತ್ಯರಥ, ಸತ್ಯಧರ್ಮ, ಸತ್ಯವರ್ಮ, ಸತ್ಯ ಮತ್ತು ಸತ್ಯಕರ್ಮರು ಶಪಥಮಾಡಿ, ಸಹೋದರರೊಂದಿಗೆ ಐವತ್ತು ಸಾವಿರ ರಥಸೇನೆಗಳೊಂದಿಗೆ ರಣರಂಗಕ್ಕೆ ಮರಳಿದರು. ಮಾಲವ, ತುಂಡಿಕೇರರು ಮತ್ತು ಪ್ರಸ್ಥಲಲಾಧಿಪ ಸುಶರ್ಮರು ಮೂವತ್ತು ಸಾವಿರ ರಥಗಳೊಡನೆ, ಮಾಚೇಲ್ಲಕರು ಮತ್ತು ಲಲಿತರೊಡನೆ ಮದ್ರಕನು ತನ್ನ ತಮ್ಮಂದಿರು ಮತ್ತು ಹತ್ತು ಸಾವಿರ ರಥಗಳೊಂದಿಗೆ, ಪುನಃ ಹತ್ತು ಸಾವಿರ ರಥಗಳೊಂದಿಗೆ ನಾನಾ ಜನಪದೇಶ್ವರರು ಶಪಥವನ್ನು ತೆಗೆದುಕೊಳ್ಳಲು ಮುಂದೆ ಬಂದರು. ಆಗ ಅವರೆಲ್ಲರೂ ಪ್ರತ್ಯೇಕ ಪ್ರತ್ಯೇಕವಾಗಿ ಅಗ್ನಿಯನ್ನು ತೆಗೆದುಕೊಂಡು ಅದರಲ್ಲಿ ಆಹುತಿಯನ್ನಿತ್ತು ಕುಶವಸ್ತ್ರಗಳನ್ನೂ ಬಣ್ಣಬಣ್ಣದ ಕವಚಗಳನ್ನೂ ಧರಿಸಿದರು. ದಕ್ಷಿಣೆಗಳನ್ನಿತ್ತು ನೂರಾರು ಸಾವಿರಾರು ಯಜ್ಞಗಳನ್ನು ನಡೆಸಿದ್ದ, ಪುತ್ರರನ್ನು ಪಡೆದಿದ್ದ, ಲೋಕದಲ್ಲಿ ಕೃತಕೃತ್ಯರಾದ, ದೇಹವನ್ನು ತ್ಯಜಿಸಿದ್ದ, ತಮಗೆ ಯಶಸ್ಸು ಮತ್ತು ವಿಜಯಗಳನ್ನು ಬಯಸಿದ್ದ, ಬ್ರಹ್ಮಚರ್ಯ ಮತ್ತು ಶ್ರುತಿಮುಖೇನ ಆಪ್ತದಕ್ಷಿಣೆಗಳೊಂದಿಗೆ ಕ್ರತುಗಳನ್ನು ನಡೆಸಿದ್ದ, ಉತ್ತಮವಾಗಿ ಯುದ್ಧಮಾಡಿ ಬೇಗನೇ ಲೋಕಗಳನ್ನು ಪಡೆಯಲು ಬಯಸಿದ್ದ ಆ ವೀರರು ದೇಹಕ್ಕೆ ಕವಚಗಳನ್ನು ಕಟ್ಟಿಕೊಂಡು ತುಪ್ಪದಲ್ಲಿ ಸ್ನಾನಮಾಡಿ, ನಾರುಡೆಗಳನ್ನುಟ್ಟುಕೊಂಡು, ಧನುಸ್ಸಿನ ಶಿಂಜನಿಯನ್ನು ತಿವಿದು, ಬ್ರಾಹ್ಮಣರನ್ನು ತೃಪ್ತಿಗೊಳಿಸಿ ಪ್ರತ್ಯೇಕಪ್ರತ್ಯೇಕವಾಗಿ ದಕ್ಷಿಣೆಗಳನ್ನಿತ್ತು, ಗೋವು-ವಸ್ತ್ರಗಳನ್ನಿತ್ತು, ಪುನಃ ಪರಸ್ಪರರಲ್ಲಿ ಪ್ರೀತಿಯ ಮಾತುಗಳನ್ನಾಡಿಕೊಂಡು, ರಣದಲ್ಲಿ ವ್ರತರಾಗಿ ಹೋಗಿ ಅಗ್ನಿಯನ್ನು ಪ್ರಜ್ವಲಿಸಿ ಆ ಅಗ್ನಿಯಲ್ಲಿ ದೃಢನಿಶ್ಚಯರಾಗಿ ಪ್ರತಿಜ್ಞೆಗಳನ್ನು ಕೈಗೊಂಡರು. ಸರ್ವಭೂತಗಳಿಗೂ ಕೇಳಿಸುವಂತೆ ಉಚ್ಛ ಸ್ವರದಲ್ಲಿ ಧನಂಜಯವಧೆಯ ಪ್ರತಿಜ್ಞೆಯನ್ನು ಮಾಡಿದರು:
“ಇಂದು ನಾವು ಯುದ್ಧದಲ್ಲಿ ಧನಂಜಯನನ್ನು ಕೊಲ್ಲದೇ ಹಿಂದಿರುಗಿದರೆ ಅಥವಾ ಅವನ ಅಸ್ತ್ರಗಳಿಂದ ಆರ್ದಿತರಾಗಿ ಭಯಪಟ್ಟುಕೊಂಡು ಪಲಯಾನಗೈದು ಬಂದರೆ ನಮಗೆ ಯಾವ ಲೋಕಗಳು ಸುಳ್ಳುಬುರುಕರಿಗೂ, ಬ್ರಹ್ಮಘಾತಿಗಳಿಗೂ ದೊರೆಯುತ್ತವೆಯೋ, ಮತ್ತು ಕುಡುಕರಿಗೂ, ಗುರುಪತ್ನಿಯೊಂದಿಗೆ ಭೋಗಿಸುವವರಿಗೂ ದೊರಕುವ ಲೋಕಗಳು, ಬ್ರಾಹ್ಮಣರ ಸಂಪತ್ತನ್ನು ಅಪಹರಿಸಿದವನಿಗೆ ಅಥವಾ ರಾಜನ ಪಿಂಡವನ್ನು ಅಪಹರಿಸಿದವನಿಗೆ ದೊರೆಯುವ ಲೋಕಗಳು, ಶರಣಾಗತನಾಗಿರುವವನನ್ನು ತ್ಯಜಿಸುವವನಿಗೆ ಮತ್ತು ಬೇಡಿಕೊಳ್ಳುತ್ತಿರುವನನ್ನು ಕೊಂದವನಿಗೆ ದೊರೆಯುವ ಲೋಕಗಳು, ಮನೆಗಳಿಗೆ ಬೆಂಕಿಯಿಟ್ಟವನಿಗೆ ಮತ್ತು ಗೋವುಗಳನ್ನು ಕೊಲ್ಲುವವನಿಗೆ ದೊರೆಯುವ ಲೋಕಗಳು, ಅಪಚಾರಿಗಳಿಗೆ ಮತ್ತು ಬ್ರಾಹ್ಮಣದ್ವೇಶಿಗಳಿಗೆ ದೊರೆಯುವ ಲೋಕಗಳು, ಋತುಕಾಲದಲ್ಲಿರುವಾಗ ಮತ್ತು ಶ್ರಾದ್ಧದ ದಿನಗಳಲ್ಲಿ ಮೋಹದಿಂದ ಸಂಭೋಗವನ್ನು ಬಯಸುವವರಿಗೆ ದೊರೆಯುವ ಲೋಕಗಳು, ಆತ್ಮಹತ್ಯೆಮಾಡಿಕೊಳ್ಳುವವರಿಗೆ ಮತ್ತು ಇನ್ನೊಬ್ಬರು ನಂಬಿಕೆಯಿಂದ ಇಟ್ಟಿದ್ದ ಸಂಪತ್ತನ್ನು ಕದಿಯುವವರಿಗೆ ದೊರೆಯುವ ಲೋಕಗಳು, ವಿದ್ಯೆಯನ್ನು ನಾಶಮಾಡುವವರಿಗೆ, ನಪುಂಸಕರೊಂದಿಗೆ ಯುದ್ಧಮಾಡುವವರಿಗೆ ಮತ್ತು ನೀಚರನ್ನು ಅನುಸರಿಸುವವರಿಗೆ ದೊರೆಯುವ ಲೋಕಗಳು, ಮತ್ತು ಇನ್ನೂ ಇತರ ಪಾಪಕರ್ಮಿಗಳಿಗೆ ದೊರೆಯುವ ಲೋಕಗಳು ದೊರೆಯಲಿ. ಒಂದುವೇಳೆ ಕಷ್ಟಕರವಾದ ಈ ಕರ್ಮಗಳನ್ನು ನಾವು ಸಂಯುಗದಲ್ಲಿ ಮಾಡಿದರೆ ಪುಣ್ಯಕೃತರಿಗೆ ಇಷ್ಟವಾದ ಲೋಕಗಳು ನಮಗೆ ದೊರೆಯುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.”
ಹೀಗೆ ಹೇಳಿ ಆ ವೀರರು ಅರ್ಜುನನನ್ನು ಆಹ್ವಾನಿಸುತ್ತಾ ರಣರಂಗದ ದಕ್ಷಿಣಭಾಗದಲ್ಲಿ ಹೋಗಿ ಸೇರಿದರು. ಆ ನರವ್ಯಾಘ್ರರಿಂದ ಕೂಗಿ ಕರೆಯಲ್ಪಟ್ಟ ಪಾರ್ಥನು ಧರ್ಮರಾಜನಿಗೆ ತಡಮಾಡದೇ ಈ ಮಾತುಗಳನ್ನಾಡಿದನು: “ಕರೆಯಲ್ಪಟ್ಟಾಗ ಹಿಂದೆಸರಿಯದೇ ಇರುವುದು ನಾನು ನಡೆಸಿಕೊಂಡು ಬಂದಿರುವ ವ್ರತ. ರಾಜನ್! ಸಂಶಪ್ತಕರು ನನ್ನನ್ನು ಪುನಃ ಪುನಃ ಕೂಗಿ ಕರೆಯುತ್ತಿದ್ದಾರೆ. ಸಹೋದರರೊಡನೆ ಸುಶರ್ಮನೂ ಕೂಡ ರಣಕ್ಕೆ ನನ್ನನ್ನು ಕರೆಯುತ್ತಿದ್ದಾನೆ. ಗಣಗಳೊಂದಿಗೆ ಅವನನ್ನು ವಧಿಸಲು ಅಲ್ಲಿ ನನಗೆ ಹೋಗಬೇಕಾಗಿದೆ. ಆಹ್ವಾನಿಸುವವರನ್ನು ಬಿಟ್ಟುಬಿಡಲು ಶಕ್ಯನಾಗುತ್ತಿಲ್ಲ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಈ ಶತ್ರುಗಳು ಯುದ್ಧದಲ್ಲಿ ಹತರಾದರೆಂದೇ ತಿಳಿ.”
ಯುಧಿಷ್ಠಿರನು ಹೇಳಿದನು: “ಅಯ್ಯಾ! ದ್ರೋಣನು ಏನು ಮಾಡಲು ಬಯಸಿರುವನೆಂಬುದನ್ನು ನೀನು ಕೇಳಿದ್ದೇಯೆ. ಅವನ ಪ್ರಯತ್ನವು ಸುಳ್ಳಾಗುವ ರೀತಿಯಲ್ಲಿ ನಡೆದುಕೋ. ದ್ರೋಣನು ಬಲಶಾಲಿ, ಶೂರ, ಅಸ್ತ್ರಗಳಲ್ಲಿ ಪಳಗಿದವನು ಮತ್ತು ಆಯಾಸವನ್ನು ಗೆದ್ದವನು. ಅವನೂ ಕೂಡ ನನ್ನ ಸೆರೆಯ ಪ್ರತಿಜ್ಞೆಯನ್ನು ಮಾಡಿದ್ದಾನೆ.”
ಅರ್ಜುನನು ಹೇಳಿದನು: “ರಾಜನ್! ಇಂದು ಸತ್ಯಜಿತುವು ಯುದ್ಧದಲ್ಲಿ ನಿನ್ನನ್ನು ರಕ್ಷಿಸುತ್ತಾನೆ. ಈ ಪಾಂಚಾಲ್ಯನು ಇರುವವರೆಗೆ ಆಚಾರ್ಯನು ತನ್ನ ಇಚ್ಛೆಯನ್ನು ಪೂರೈಸಿಕೊಳ್ಳಲಾರನು. ಆದರೆ ಈ ಪುರುಷವ್ಯಾಘ್ರ ಸತ್ಯಜಿತುವು ಹತನಾದರೆ ನಮ್ಮೆಲ್ಲರ ಸೇನೆಗಳೊಂದಿಗಿದ್ದರೂ ನೀನು ಎಂದೂ ರಣದಲ್ಲಿ ನಿಲ್ಲ ಬಾರದು!”
ರಾಜನು ಅಪ್ಪಣೆಯನ್ನು ನೀಡಿ ಫಲ್ಗುನನನ್ನು ಬಿಗಿದಪ್ಪಿ ಪ್ರೇಮದಿಂದ ನೋಡಿ, ಅನೇಕ ಆಶೀರ್ವಾದಗಳನ್ನಿತ್ತು ಕಳುಹಿಸಿದನು. ಆಗ ಪಾರ್ಥನು ಹಸಿದ ಸಿಂಹವು ತನ್ನ ಹಸಿವೆಯನ್ನು ನೀಗಿಸಿಕೊಳ್ಳಲು ಜಿಂಕೆಗಳ ಹಿಂಡಿನ ಕಡೆ ಹೋಗುವಂತೆ ತ್ರಿಗರ್ತರ ಕಡೆ ಹೊರಟನು. ಅರ್ಜುನನು ಹೊರಟುಹೋಗಲು ದುರ್ಯೋಧನನ ಸೇನೆಯು ಧರ್ಮರಾಜನನ್ನು ಸೆರೆಹಿಡಿಯಲು ತುಂಬಾ ಕಾತರಗೊಂಡಿತು. ಆಗ ಎರಡೂ ಸೇನೆಗಳು ಮಳೆಗಾಲದ ಪ್ರವಾಹದಲ್ಲಿ ಗಂಗೆ ಮತ್ತು ಸರಯೂ ನದಿಗಳು ವೇಗದಿಂದ ಅನ್ಯೋನ್ಯರನ್ನು ಸೇರುವಂತೆ ಓಜಸ್ಸಿನಿಂದ ಕೂಡಿ ಹೋರಾಡಿದರು.
ಅರ್ಜುನ-ಸಂಶಪ್ತಕರ ಯುದ್ಧ
ಸಂಶಪ್ತಕರು ಸಮಪ್ರದೇಶದಲ್ಲಿ ರಥಸೇನೆಗಳಿಂದಲೇ ಅರ್ಧಚಂದ್ರದ ವ್ಯೂಹವನ್ನು ರಚಿಸಿಕೊಂಡು ಮುದಾನ್ವಿತರಾಗಿ ಸಜ್ಜಾಗಿ ನಿಂತಿದ್ದರು. ಕಿರೀಟಿಯು ಬರುತ್ತಿರುವುದನ್ನು ನೋಡಿ ಆ ನರವ್ಯಾಘ್ರರು ಹರ್ಷದಿಂದ ಜೋರಾಗಿ ಕೂಗಿದರು. ಆ ಶಬ್ಧವು ಸರ್ವ ದಿಕ್ಕು-ಉಪದಿಕ್ಕುಗಳನ್ನೂ ಆಕಾಶವನ್ನೂ ಹರಡಿಕೊಂಡಿತು. ಲೋಕದ ಎಲ್ಲೆಡೆಯೂ ಪ್ರವೇಶಿಸಿದುದರಿಂದ ಆ ಶಬ್ಧವು ಪ್ರತಿಧ್ವನಿಸಲಿಲ್ಲ. ಅತೀವ ಹರ್ಷಿತರಾಗಿದ್ದ ಅವರನ್ನು ಸಮೀಪಿಸಿ ಧನಂಜಯನು ನಸುನಕ್ಕು ಕೃಷ್ಣನಿಗೆ ಈ ಮಾತನ್ನಾಡಿದನು: “ದೇವಕೀಮಾತ! ಮುಹೂರ್ತದಲ್ಲಿಯೇ ಇಂದು ಸಾಯಲಿರುವ ಇವರನ್ನು ನೋಡು! ಅಳಬೇಕಾಗಿರುವ ಈ ಸಮಯದಲ್ಲಿ ಇವರು ಹರ್ಷಿತರಾಗಿ ನಗುತ್ತಿದ್ದಾರೆ. ಅಥವಾ ಕುತ್ಸ್ಥಿತರು ಪಡೆಯಲು ಕಷ್ಟಕರವಾದ ಅನುತ್ತಮ ಲೋಕಗಳನ್ನು ಈ ಸಮಯದಲ್ಲಿ ಸುಲಭವಾಗಿ ಪಡೆಯಲಿದ್ದಾರೆಂದು ಈ ತ್ರೈಗರ್ತರು ಹರ್ಷಪಡುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.”
ಹೀಗೆ ಹೃಷೀಕೇಶನಿಗೆ ಹೇಳಿ ಮಹಾಬಾಹು ಅರ್ಜುನನು ರಣದಲ್ಲಿ ತ್ರೈಗರ್ತರ ಸೇನೆಯ ವ್ಯೂಹವನ್ನು ಸಮೀಪಿಸಿದನು. ಫಲ್ಗುನನು ಹೇಮಪರಿಷ್ಕೃತ ದೇವದತ್ತ ಶಂಖವನ್ನು ವೇಗವಾಗಿ ಮತ್ತು ಜೋರಾಗಿ ಊದಿ ದಿಕ್ಕುಗಳನ್ನು ಮೊಳಗಿಸಿದನು. ಆ ಶಬ್ಧದಿಂದ ನಡುಗಿದ ಸಂಶಪ್ತಕರ ಸೇನೆಯು ಲೋಹದಿಂದ ಮಾಡಿದ ಪ್ರತಿಮೆಯಂತೆ ರಣರಂಗದಲ್ಲಿ ಹಾಗೆಯೇ ನಿಂತುಬಿಟ್ಟಿತು. ಅವರ ಕುದುರೆಗಳು ಕಣ್ಣುತೆರೆದು, ಕಿವಿಗಳನ್ನೂ ತಲೆಗಳನ್ನೂ ಸ್ತಬ್ಧವಾಗಿಸಿಕೊಂಡು, ಕಾಲುಗಳು ಸೆಟೆದು ನಿಂತು ಮೂತ್ರ ಮತ್ತು ರಕ್ತವನ್ನು ಸುರಿಸಿದವು. ಅವರು ಎಚ್ಚೆತ್ತು, ಸೇನೆಗಳನ್ನು ಪುನಃ ಸಜ್ಜುಗೊಳಿಸಿ, ಒಟ್ಟಾಗಿ, ಪಾಂಡುಪುತ್ರನ ಮೇಲೆ ಕಂಕಪತ್ರಿಗಳನ್ನು ಎಸೆದರು. ಪರಾಕ್ರಮಿ ಅರ್ಜುನನು ಹದಿನೈದು ಬಾಣಗಳಿಂದಲೇ ಅವರು ಪ್ರಯೋಗಿಸಿದ ಸಹಸ್ರಾರು ಬಾಣಗಳು ಬಂದು ತಲುಪುವುದರೊಳಗೇ ಅವುಗಳನ್ನು ಕತ್ತರಿಸಿದನು. ಆಗ ಅವರು ಅರ್ಜುನನ್ನು ಪುನಃ ಪ್ರತಿಯೊಬ್ಬರೂ ಹತ್ತು ಹತ್ತು ನಿಶಿತ ಬಾಣಗಳಿಂದ ಹೊಡೆಯಲು ಪಾರ್ಥನು ಅವಕ್ಕೆ ಪ್ರತಿಯಾಗಿ ಪ್ರತಿಯೊಬ್ಬರನ್ನೂ ಮೂರು ಮೂರು ಬಾಣಗಳಿಂದ ಹೊಡೆದನು. ಆಗ ಅವರು ಒಬ್ಬೊಬ್ಬರೂ ಐದೈದು ಬಾಣಗಳಿಂದ ಪಾರ್ಥನನ್ನು ಹೊಡೆಯಲು ಆ ಪರಾಕ್ರಮಿಯು ಅವರಲ್ಲಿ ಪ್ರತಿಯೊಬ್ಬರನ್ನೂ ಎರೆಡೆರಡರಿಂದ ಹೊಡೆದನು. ಮೋಡಗಳು ಮಳೆಯಿಂದ ತಟಾಕವನ್ನು ತುಂಬಿಸುವಂತೆ ಸಂರಬ್ಧರಾದ ಅವರು ಕೇಶವನೊಂದಿಗೆ ಅರ್ಜುನನ್ನು ತೀಕ್ಷ್ಣ ಶರಗಳಿಂದ ತುಂಬಿದರು. ವನದಲ್ಲಿ ದುಂಬಿಗಳ ಸಮೂಹಗಳು ಸುಪುಷ್ಪಿತ ವೃಕ್ಷಸಮೂಹಗಳನ್ನು ಮುತ್ತುವಂತೆ ಅವರು ಬಿಟ್ಟ ಸಹಸ್ರಾರು ಬಾಣಗಳು ಅರ್ಜುನನ ಮೇಲೆ ಬಿದ್ದವು. ಆಗ ಸುಬಾಹುವು ಲೋಹಮಹವಾದ ಮೂವತ್ತು ಬಾಣಗಳಿಂದ ಸವ್ಯಸಾಚಿಯ ಕಿರೀಟಕ್ಕೆ ಬಹಳ ಆಳವಾಗಿ ಪ್ರಹರಿಸಿದನು.
ಕಿರೀಟವನ್ನು ಹೊಕ್ಕಿದ್ದ ಚಿನ್ನದ ರೆಕ್ಕೆಗಳ ಆ ಜಿಹ್ಮಗಗಳಿಂದ ಕಿರೀಟಿಯು ನೂರುಕುಂಭಗಳಿಂದ ಅಲಂಕೃತ ಯಜ್ಞವೇದಿಕೆಯಂತೆ ಶೋಭಿಸಿದನು. ಪಾಂಡವನು ಭಲ್ಲದಿಂದ ಸುಬಾಹುವಿನ ಹಸ್ತಾವಾಪವನ್ನು ಕತ್ತರಿಸಿದನು ಮತ್ತು ಪುನಃ ಶರವರ್ಷದಿಂದ ಅವನನ್ನು ಮುಚ್ಚಿದನು. ಆಗ ಸುಶರ್ಮ, ಸುರಥ, ಸುಧರ್ಮ, ಸುಧನ್ವ ಮತ್ತು ಸುಬಾಹು – ಇವರು ಕಿರೀಟಿಯನ್ನು ಹತ್ತತ್ತು ಶರಗಳಿಂದ ಹೊಡೆದರು. ವಾನರಪ್ರವರಧ್ವಜನು ಬೇರೆ ಬೇರೆ ಬಾಣಗಳಿಂದ ಅವರನ್ನು ತಿರುಗಿ ಹೊಡೆದು ಭಲ್ಲದಿಂದ ಅವರ ಧ್ವಜಗಳನ್ನು ತುಂಡರಿಸಿದನು. ಸುಧನ್ವನ ಧನುಸ್ಸನ್ನು ಕತ್ತರಿಸಿ, ಕುದುರೆಗಳನ್ನು ಬಾಣಗಳಿಂದ ಸಂಹರಿಸಿದನು. ಅನಂತರ ಅವನ ಶಿರವನ್ನು, ಶಿರಸ್ತ್ರಾಣದೊಂದಿಗೆ, ದೇಹದಿಂದ ಅಪಹರಿಸಿದನು. ಆ ವೀರನು ಕೆಳಗುರುಳಲು ಅವನ ಅನುಯಾಯಿಗಳು ಭಯ-ಭೀತರಾಗಿ ದುರ್ಯೋಧನನ ಸೇನೆಯ ಕಡೆ ಓಡಿಹೋದರು.
ಆಗ ವಾಸವಿಯು ಸಂಕ್ರುದ್ಧನಾಗಿ ಸೂರ್ಯನು ತನ್ನ ಕಿರಣಗಳಿಂದ ಕತ್ತಲೆಯನ್ನು ಕತ್ತರಿಸುವಂತೆ ಆ ಮಹಾಸೇನೆಯನ್ನು ಶರಜಾಲಗಳಿಂದ ಚಿಂದಿಮಾಡಿದನು. ಆಗ ಸವ್ಯಸಾಚಿಯ ಕೋಪಕ್ಕೆ ಸಿಲುಕಿ ಸೇನೆಯು ಭಗ್ನವಾಗಿ ಎಲ್ಲಕಡೆ ಓಡಿಹೋಗುತ್ತಿರಲು ತ್ರಿಗರ್ತರಿಗೆ ಭಯವು ಆವೇಶಗೊಂಡಿತು. ಪಾರ್ಥನ ಸನ್ನತಪರ್ವ ಶರಗಳಿಂದ ವಧಿಸಲ್ಪಡುತ್ತಿದ್ದ ಅವರು ಭಯಗೊಂಡ ಮೃಗಗಣಗಳಂತೆ ಅಲ್ಲಲ್ಲಿಯೇ ಮೂರ್ಛಿತರಗಿ ಬೀಳುತ್ತಿದ್ದರು. ಆಗ ತ್ರಿಗರ್ತರಾಜನು ಕ್ರುದ್ಧನಾಗಿ ಆ ಮಹಾರಥರಿಗೆ ಹೇಳಿದನು: “ಓಡಬೇಡಿ! ಶೂರರಾದ ನಾವು ಭಯಪಡುವುದು ಸರಿಯಲ್ಲ. ಸರ್ವಸೈನ್ಯಗಳೂ ನೋಡುತ್ತಿದ್ದಂತೆ ಘೋರವಾದ ಶಪಥಗಳನ್ನು ಕೈಗೊಂಡು ಈಗ ದುರ್ಯೋಧನನ ಸೈನ್ಯದ ಬಳಿ ಓಡಿ ಹೋಗಿ ಯಾವ ಉತ್ತರವನ್ನು ನೀಡುವಿರಿ? ಹೇಗೆ ಲೋಕದಲ್ಲಿ ನಾವು ಅಪಹಾಸ್ಯಕ್ಕೆ ಒಳಗಾಗುವುದಿಲ್ಲವೋ ಅಂಥಹುದನ್ನು ರಣದಲ್ಲಿ ನಮಗೆ ಮಾಡಬೇಕಾಗಿದೆ. ಹಿಂದಿರುಗಿ! ನಾವೆಲ್ಲ ಒಟ್ಟಿಗೇ ಬಲವಿದ್ಧಷ್ಟು ಹೋರಾಡೋಣ!”
ಅವನು ಹೀಗೆ ಹೇಳಲು ಅವರು ಪುನಃ ಪುನಃ ಗರ್ಜನೆ ಮಾಡುತ್ತಾ ಹಿಂದಿರುಗಿದರು. ಪರಸ್ಪರರನ್ನು ಹರ್ಷಗೊಳಿಸುತ್ತಾ ಆ ವೀರರು ಶಂಖಗಳನ್ನು ಊದಿದರು. ನಾರಾಯಣ-ಗೋಪಾಲ ಮೊದಲಾದ ಸಂಶಪ್ತಕ ಗಣಗಳು ಮೃತ್ಯುವನ್ನೇ ದಾರಿಯನ್ನಾಗಿಸಿಕೊಂಡು ಹಿಂದಿರುಗಿದರು.
ಆ ಸಂಶಪ್ತಕಗಣಗಳು ಪುನಃ ಹಿಂದಿರುಗಿದುದನ್ನು ನೋಡಿ ಅರ್ಜುನನು ಮಹಾತ್ಮ ವಾಸುದೇವನಿಗೆ ಹೇಳಿದನು: “ಹೃಷೀಕೇಶ! ಸಂಶಪ್ತಕಗಣಗಳ ಕಡೆ ಕುದುರೆಗಳನ್ನು ಓಡಿಸು. ಜೀವಂತವಿರುವವರೆಗೂ ಇವರು ಯುದ್ಧಮಾಡುವುದನ್ನು ಬಿಡುವುದಿಲ್ಲವೆಂದು ನನಗನ್ನಿಸುತ್ತಿದೆ. ನನ್ನ ಘೋರ ಅಸ್ತ್ರಬಲವನ್ನು ಮತ್ತು ಬಾಹು-ಧನುಸ್ಸುಗಳ ಬಲವನ್ನು ನೋಡು! ಕ್ರುದ್ಧನಾದ ರುದ್ರನು ಪಶುಗಳನ್ನು ಹೇಗೋ ಹಾಗೆ ಇಂದು ಇವರನ್ನು ಉರುಳಿಸುತ್ತೇನೆ.” ಆಗ ಕೃಷ್ಣನು ನಸುನಕ್ಕು ಶುಭಾಶಂಸನೆಗಳಿಂದ ಅವನನ್ನು ಅಭಿನಂದಿಸಿ ಅರ್ಜುನನು ಎಲ್ಲಿಗೆ ಹೋಗಬಯಸಿದನೋ ಅಲ್ಲಿಗೆ ಪ್ರವೇಶಿಸಿದನು. ರಣರಂಗದಲ್ಲಿ ಬಿಳಿಯ ಕುದುರೆಗಳು ಎಳೆದುಕೊಂಡು ಹೋಗುತ್ತಿದ್ದ ಆ ಬಿಳೀ ರಥವು ಆಕಾಶದಲ್ಲಿ ಹಾರಿಕೊಂಡು ಹೋಗುತ್ತಿರುವ ವಿಮಾನದಂತೆ ವಿಜೃಂಭಿಸಿತು. ಹಿಂದೆ ದೇವಾಸುರರ ಯುದ್ಧದಲ್ಲಿ ಶಕ್ರನ ರಥವು ಹೇಗೋ ಹಾಗೆ ಇವರ ರಥವೂ ಕೂಡ ಮಂಡಲಾಕಾರದಲ್ಲಿ, ಮುಂದೆ ಮತ್ತು ಹಿಂದೆ ಚಲಿಸುತ್ತಿತ್ತು.
ಆಗ ನಾರಾಯಣರು ಕ್ರುದ್ಧರಾಗಿ ವಿವಿಧ ಆಯುಧಗಳನ್ನು ಹಿಡಿದು ಧನಂಜಯನನ್ನು ಬಾಣಗಳ ಮಳೆಯಿಂದ ಮುಚ್ಚಿ, ಸುತ್ತುವರೆದರು. ಅವರು ಕೃಷ್ಣನ ಸಹಿತ ಕುಂತೀಪುತ್ರ ಧನಂಜಯನನ್ನು ಮುಹೂರ್ತಕಾಲ ಅದೃಶ್ಯನನ್ನಾಗಿ ಮಾಡಿಬಿಟ್ಟರು. ಕ್ರುದ್ಧನಾದ ಫಲ್ಗುನನ ವಿಕ್ರಮವು ಇಮ್ಮಡಿಯಾಯಿತು. ತಕ್ಷಣವೇ ಗಾಂಡೀವವನ್ನು ಹಿಡಿದು ಶಿಂಜಿನಿಯನ್ನು ಮೀಟಿದನು. ಕ್ರೋಧದ ಪ್ರತಿಲಕ್ಷಣವಾದ ಹುಬ್ಬು-ಮುಖವನ್ನು ಗಂಟಿಕ್ಕಿ ಪಾಂಡವನು ಮಹಾಶಂಖ ದೇವದತ್ತವನ್ನು ಜೋರಾಗಿ ಊದಿದನು. ಅರ್ಜುನನು ಅರಿಸಂಹಾರಕ ತ್ವಾಷ್ಟ್ರವೆಂಬ ಮಹಾಅಸ್ತ್ರವನ್ನು ಪ್ರಯೋಗಿಸಲು ಅದರಿಂದ ಪ್ರತ್ಯೇಕ ಪ್ರತ್ಯೇಕವಾಗಿ ಸಹಸ್ರಾರು ರೂಪಗಳು ಹೊರಹೊಮ್ಮಿದವು. ಅರ್ಜುನನ ರೂಪದಂತೆಯೇ ಇದ್ದ ಸಾವಿರಾರು ಆಕೃತಿಗಳು ಆ ಸೈನಿಕರನ್ನು ಸೇರಿಕೊಳ್ಳಲು ಅವರು ಮೋಹಿತರಾಗಿ ಅನ್ಯೋನ್ಯರನ್ನೇ ಅರ್ಜುನನೆಂದು ತಿಳಿದುಕೊಂಡು ತಾವೇ ತಮ್ಮವರನ್ನು ಸಂಹರಿಸಿದರು. “ಇವನು ಅರ್ಜುನ! ಇವನು ಗೋವಿಂದ! ಇವರಿಬ್ಬರು ಯಾದವ-ಪಾಂಡವರು!” ಎಂದು ಹೇಳುತ್ತಾ, ಸಮ್ಮೂಢರಾಗಿ, ಅವರು ಅನ್ಯೋನ್ಯರನ್ನು ಸಂಹರಿಸಿದರು. ಪರಮಾಸ್ತ್ರದ ಪ್ರಭಾವದಿಂದ ಮೋಹಿತರಾದ ಅವರು ಪರಸ್ಪರರೊಂದಿಗೆ ಹೊಡೆದಾಡಿ ಕ್ಷಯವನ್ನು ಹೊಂದಿದರು. ರಣದಲ್ಲಿ ಆ ಯೋಧರು ಪುಷ್ಪಭರಿತ ಕಿಂಶುಕಗಳಂತೆ ಶೋಭಿಸಿದರು. ಆ ಅಸ್ತ್ರವು ಅವರು ಬಿಟ್ಟ ಸಹಸ್ರಾರು ಬಾಣಗಳನ್ನು ಭಸ್ಮೀಭೂತವಾಗಿ ಮಾಡಿ ಆ ವೀರರನ್ನು ಯಮಸದನಕ್ಕೆ ಕಳುಹಿಸಿತು. ಆಗ ಬೀಭತ್ಸುವು ಜೋರಾಗಿ ನಕ್ಕು ಲಲಿತ್ಥ-ಮಾಲವ-ಮಾಚೇಲ್ಲ ಮತ್ತು ತ್ರಿಗರ್ತಯೋಧರನ್ನು ಶರಗಳಿಂದ ಹೊಡೆದು ಚದುರಿಸಿ ಬೇರೆ ಬೇರೆ ಮಾಡಿದನು. ಆ ವೀರನಿಂದ ವಧಿಸಲ್ಪಡುತ್ತಿದ್ದ ಕಾಲಚೋದಿತ ಆ ಕ್ಷತ್ರಿಯರು ಪಾರ್ಥನ ಮೇಲೆ ನಾನಾವಿಧದ ಬಾಣಗಳ ಮಳೆಯನ್ನು ಸುರಿಸಿದರು. ಘೋರ ಶರವರ್ಷದಿಂದ ತುಂಬಿಹೋಗಿರಲು ಅಲ್ಲಿ ಅರ್ಜುನನಾಗಲೀ, ರಥವಾಗಲೀ, ಕೇಶವನಾಗಲೀ ಕಾಣಿಸಲಿಲ್ಲ. ಆಗ ಅವರು ಅನ್ಯೋನ್ಯರಲ್ಲಿ “ಗುರಿಗೆ ಸಿಲುಕಿ ಇಬ್ಬರೂ ಕೃಷ್ಣರೂ ಹತರಾದರು!” ಎಂದು ಹೇಳಿಕೊಳ್ಳುತ್ತಾ ಸಂತೋಷದಿಂದ ಅಂಗವಸ್ತ್ರಗಳನ್ನು ಮೇಲಕ್ಕೆತ್ತಿ ಕೂಗಿದರು.
ಅಲ್ಲಿ ಸಹಸ್ರಾರು ವೀರರು ಭೇರಿ-ಮೃದಂಗ-ಶಂಖಗಳನ್ನು ಮೊಳಗಿಸಿದರು ಮತ್ತು ಉಗ್ರ ಸಿಂಹನಾದಗೈದರು. ಬೆವತುಹೋದ ಕೃಷ್ಣನು ಖಿನ್ನನಾಗಿ ಅರ್ಜುನನಿಗೆ ಹೇಳಿದನು: “ಪಾರ್ಥ! ಎಲ್ಲಿರುವೆ? ನಿನ್ನನ್ನು ಕಾಣುತ್ತಿಲ್ಲವಲ್ಲ! ಜೀವಂತವಿದ್ದೀಯೆ ತಾನೇ?” ಅವನ ಆ ಮಾನುಷ ಭಾವವನ್ನು ಅರಿತ ಪಾಂಡವನು ಕೂಡಲೇ ವಾಯುವ್ಯಾಸ್ತ್ರದಿಂದ ಆ ಶರವೃಷ್ಠಿಯನ್ನು ಹೋಗಲಾಡಿಸಿದನು. ಆಗ ವಾಯುವು ಒಣಗಿದ ತರಗೆಲೆಗಳನ್ನು ಹಾರಿಸಿಕೊಂಡು ಹೋಗುವಂತೆ ಆ ಸಂಶಪ್ತಕ ಸಮೂಹವನ್ನು ಕುದುರೆ-ಆನೆ-ರಥ-ಆಯುಧಗಳೊಂದಿಗೆ ಹಾರಿಸಿಕೊಂಡು ಹೋದನು. ವಾಯುವಿನಿಂದ ಹಾರಿಸಿಕೊಂಡು ಹೋಗುತ್ತಿದ್ದ ಆ ಸೇನೆಯು ಮರದಲ್ಲಿರುವ ಪಕ್ಷಿಗಳು ಸಮಯಬಂದಾಗ ಒಟ್ಟಿಗೇ ಹಾರಿಹೋಗುತ್ತಿರುವಂತೆ ಕಂಡಿತು. ಅವರನ್ನು ಹೀಗೆ ವ್ಯಾಕುಲರನಾಗಿಸಿ ಧನಂಜಯನು ತ್ವರೆಮಾಡಿ ನಿಶಿತಬಾಣಗಳಿಂದ ನೂರಾರು ಸಹಸ್ರಾರು ಯೋಧರನ್ನು ಸಂಹರಿಸಿದನು. ನಿಶಿತ ಭಲ್ಲಗಳೆಂಬ ಶರಗಳಿಂದ ಶಿರಗಳನ್ನೂ, ಆಯುಧಗಳೊಂದಿಗೆ ಬಾಹುಗಳನ್ನೂ, ಆನೆಗಳ ಸೊಂಡಿಲುಗಳಂತಿದ್ದ ಯೋಧರ ತೊಡೆಗಳನ್ನೂ ಉರುಳಿಸಿದನು. ಕೆಲವರ ಪೃಷ್ಟಭಾಗವು ಕತ್ತರಿಸಿ ಹೋಗಿತ್ತು, ಕಾಲುಗಳನ್ನು ಕಳೆದುಕೊಂಡಿದ್ದರು, ತೋಳುಗಳನ್ನು ಕಳೆದುಕೊಂಡಿದ್ದರು, ಕೆಲವರ ದೇಹದ ಅರ್ಧಭಾಗವೇ ಕತ್ತರಿಸಿ ಹೋಗಿತ್ತು. ಹೀಗೆ ಧನಂಜಯನು ಅವರನ್ನು ನಾನಾ ಅಂಗಾಂಗಗಳಿಂದ ವಿಹೀನರನ್ನಾಗಿ ಮಾಡಿದನು. ಅವನು ಗಂಧರ್ವನಗರಗಳ ಆಕಾರದಲ್ಲಿ ವಿಧಿವತ್ತಾಗಿ ಕಲ್ಪಿಸಿದ್ದ ರಥಗಳನ್ನು ಶರಗಳಿಂದ ಛಿನ್ನ-ಭಿನ್ನಗಳನ್ನಾಗಿ ಮಾಡಿ ಅವರನ್ನು ಅಶ್ವ-ರಥ-ಗಜಗಳಿಂದ ವಿಹೀನರನ್ನಾಗಿ ಮಾಡಿದನು.
ಅಲ್ಲಲ್ಲಿ ಧ್ವಜಗಳು ತುಂಡಾಗಿದ್ದ ರಥಗಳ ಗುಂಪುಗಳು ತಲೆಯನ್ನು ಕತ್ತರಿಸಿದ ತಾಳೆಯ ಮರಗಳಂತೆ ಕಾಣುತ್ತಿದ್ದವು. ಪತಾಕ-ಅಂಕುಶ-ಆಯುಧಗಳನ್ನು ಕಳೆದುಕೊಂಡ ಮಾವುತರನ್ನು ಕಳೆದುಕೊಂಡ ಆನೆಗಳು ಇಂದ್ರನ ವಜ್ರಾಯುಧದಿಂದ ಹೊಡೆಯಲ್ಪಟ್ಟ ಪರ್ವತಗಳು ವೃಕ್ಷಸಹಿತ ಕೆಳಗುರುಳಿರುವಂತೆ ಬಿದ್ದಿದ್ದವು. ಚಾಮರಗಳಿಂದಲೂ ಮಾಲೆಗಳಿಂದಲೂ, ಕವಚಗಳಿಂದಲೂ ಸವಾರರಿಂದಲೂ ಕೂಡಿದ್ದ ಅನೇಕ ಕುದುರೆಗಳು ಪಾರ್ಥನ ಬಾಣಗಳಿಂದ ಹತವಾಗಿ ಭೂಮಿಯ ಮೇಲೆ ಬಿದ್ದವು. ತುಂಡಾದ ಖಡ್ಗಗಳು ಮತ್ತು ನಖರುಗಳು, ತುಂಡಾಗಿದ್ದ ಕವಚಗಳು, ಋಷ್ಟಿಗಳು ಮತ್ತು ಶಕ್ತಿಗಳೊಂದಿಗೆ ಪದಾತಿಗಳು ಕವಚಗಳು ಹರಿದುಹೋಗಿ ಬಡಪಾಯಿಗಳಂತೆ ಸತ್ತು ಮಲಗಿದರು. ಅವರಲ್ಲಿ ಸತ್ತುಹೋಗಿದ್ದ, ಸಾಯುತ್ತಿದ್ದ, ಬಿದ್ದಿದ್ದ, ಬೀಳುತ್ತಿದ್ದ, ಭ್ರಮೆಯಿಂದ ತಿರುಗುತ್ತಿದ್ದ, ಕೂಗಿಕೊಳ್ಳುತ್ತಿದ್ದವರಿಂದ ತುಂಬಿಹೋಗಿ ರಣಾಂಗಣವು ಬಹಳ ಭಯಂಕರವಾಗಿ ಕಾಣುತ್ತಿತ್ತು. ಮೇಲೆದ್ದಿದ್ದ ಅತಿದೊಡ್ಡ ಧೂಳು ರಕ್ತದ ಮಳೆಸುರಿದು ಶಾಂತವಾದವು. ನೂರಾರು ಮುಂಡಗಳ ರಾಶಿಯಿಂದ ತುಂಬಿಹೋಗಿದ್ದ ರಣಾಂಗಣವು ಪ್ರವೇಶಕ್ಕೂ ಬಹಳ ದುರ್ಗಮವಾಗಿತ್ತು. ಆಗ ಬೀಭತ್ಸುವಿನ ರಥವು ರೌದ್ರವೂ ಬೀಭತ್ಸವೂ ಆಗಿತ್ತು. ಕಾಲಾಂತ್ಯದಲ್ಲಿ ಪ್ರಾಣಿಗಳನ್ನು ಕೊಲ್ಲುವ ರುದ್ರನ ಕ್ರೀಡಾಂಗಣದಂತೆ ತೋರಿತು. ಪಾರ್ಥನಿಂದ ವಧಿಸಲ್ಪಟ್ಟು ವ್ಯಾಕುಲಗೊಂಡ ಅಶ್ವ-ರಥ-ಗಜಗಳು ಅವನ ಎದುರಾಗಿಯೇ ಯುದ್ಧಮಾಡಿ ಶಕ್ರನ ಅತಿಥಿಗಳಾಗಿ ಹೋಗಿ ಕ್ಷೀಣವಾಗುತ್ತಿದ್ದವು. ಆ ಮಹಾರಥರು ಹತರಾಗಿ ಬಿದ್ದಿದ್ದ ಭೂಮಿಯು ಎಲ್ಲ ಕಡೆ ಪ್ರೇತಗಳಿಂದ ತುಂಬಿಕೊಂಡಿದೆಯೋ ಎನ್ನುವಂತೆ ತೋರಿತು.
ಈ ರೀತಿ ಸವ್ಯಸಾಚಿಯು ಯುದ್ಧದಲ್ಲಿ ತಲ್ಲೀನನಾಗಿರಲು ದ್ರೋಣನು ವ್ಯೂಹದೊಂದಿಗೆ ಯುಧಿಷ್ಠಿರನನ್ನು ಆಕ್ರಮಣಿಸಿದನು. ಯುಧಿಷ್ಠಿರನನ್ನು ಬಂಧಿಸಲು ವ್ಯೂಹವನ್ನು ರಚಿಸಿಕೊಂಡು ಪ್ರಹಾರ ಮಾಡಲು ಆಗ ಮಹಾ ತುಮುಲಯುದ್ಧವು ನಡೆಯಿತು.
ಕುರು-ಪಾಂಡವರ ಯುದ್ಧ
ಮಹಾರಥ ಭಾರದ್ವಾಜನು ಸುಯೋಧನನೊಡನೆ ಅನೇಕ ಮಾತುಗಳನ್ನಾಡಿ ರಾತ್ರಿಯನ್ನು ಕಳೆದನು. ಸಂಶಪ್ತಕಗಣಗಳೊಂದಿಗೆ ಪಾರ್ಥನು ಯುದ್ಧಮಾಡಬೇಕೆಂದು ತಂತ್ರಹೂಡಿ, ಪಾರ್ಥನನ್ನು ರಣದಿಂದ ಸಂಶಪ್ತಕರ ವಧೆಗೆ ಕಳುಹಿಸಲಾಯಿತು. ಆಗ ದ್ರೋಣನು ಧರ್ಮರಾಜನನ್ನು ಸೆರೆಹಿಡಿಯುವ ಆಸೆಯಿಂದ ವ್ಯೂಹವನ್ನು ರಚಿಸಿಕೊಂಡು ಪಾಂಡವರ ಮಹಾಸೇನೆಯ ಮೇಲೆ ಆಕ್ರಮಣ ಮಾಡಿದನು. ಭಾರದ್ವಾಜನು ರಚಿಸಿದ ಗರುಡವ್ಯೂಹವನ್ನು ನೋಡಿ ಯುಧಿಷ್ಠಿರನು ಅದಕ್ಕೆ ಪ್ರತಿಯಾಗಿ ಮಂಡಲಾರ್ಧವ್ಯೂಹವನ್ನು ರಚಿಸಿದನು. ಗರುಡ ವ್ಯೂಹದ ಮುಖದಲ್ಲಿ ಮಹಾರಥ ಭಾರದ್ವಾಜನಿದ್ದನು. ಶಿರೋಭಾಗದಲ್ಲಿ ಸೋದರರು ಮತ್ತು ಅನುಯಾಯಿಗಳೊಂದಿಗೆ ರಾಜಾ ದುರ್ಯೋಧನನಿದ್ದನು. ಕೃತವರ್ಮಮತ್ತು ಗೌತಮರು ಕಣ್ಣುಗಳಾಗಿದ್ದರು. ಭೂತವರ್ಮ, ಕ್ಷೇಮಶರ್ಮ, ಕರಕರ್ಷ, ಕಲಿಂಗರು, ಸಿಂಹಲರು, ಪೂರ್ವದೇಶದವರು, ಅಭೀರರು, ದಶೇರಕರು, ಶಕ, ಯವನ, ಕಾಂಬೋಜರು, ಹಂಸಪದದವರು, ಶೂರಸೇನರು, ದರದರು, ಮದ್ರರು ಮತ್ತು ಕೇಕಯರು ನೂರಾರು ಸಹಸ್ರಾರು ಆನೆ-ಕುದುರೆ-ರಥ-ಪದಾತಿ ಸಂಕುಲಗಳೊಡನೆ ಕುತ್ತಿಗೆಯ ಭಾಗದಲ್ಲಿದ್ದರು. ಭೂರಿಶ್ರವ, ಶಲ, ಶಲ್ಯ, ಸೋಮದತ್ತ ಮತ್ತು ಬಾಹ್ಲಿಕರು ವೀರ ಅಕ್ಷೌಹಿಣಿಗಳಿಂದ ಆವೃತರಾಗಿ ಬಲಭಾಗವನ್ನು ಆಶ್ರಯಿಸಿದ್ದರು. ಅವಂತಿಯ ವಿಂದಾನುವಿಂದರು ಮತ್ತು ಕಾಂಬೋಜದ ಸುದಕ್ಷಿಣರು ದ್ರೋಣಪುತ್ರನ ನೇತೃತ್ವದಲ್ಲಿ ಎಡಭಾಗವನ್ನು ಆಶ್ರಯಿಸಿ ನಿಂತಿದ್ದರು. ಹಿಂಬಾಗದಲ್ಲಿ ಕಲಿಂಗರು, ಅಂಬಷ್ಠರು, ಮಾಗಧರು, ಪೌಂಡ್ರರು, ಮದ್ರಕರು, ಶಕುನಿಯೊಡನೆ ಗಾಂಧಾರರು, ಪೂರ್ವದೇಶದವರು, ಮತ್ತು ಪರ್ವತದವರು ನೆಲೆಸಿದ್ದರು. ಪುಚ್ಛದ ಭಾಗದಲ್ಲಿ ವೈಕರ್ತನ ಕರ್ಣನು ನಾನಾ ಧ್ವಜಸಮೂಹಗಳಿಂದ ಕೂಡಿದ ಮಹಾಸೇನೆಯೊಂದಿಗೆ ಮಕ್ಕಳು ಮತ್ತು ಜ್ಞಾತಿಬಾಂಧವರೊಂದಿಗೆ ನಿಂತಿದ್ದನು. ಜಯದ್ರಥ, ಭೀಮರಥ, ಸಂಯಾತಿ, ಋಷಭ, ಜಯ, ಭೂಮಿಂಜಯ, ವೃಷಕ್ರಾಥ, ನೈಷಧರು ಮಹಾ ಬಲದಿಂದೊಡಗೂಡಿ ವ್ಯೂಹದ ವಕ್ಷಸ್ಥಳದ ಪ್ರದೇಶದಲ್ಲಿದ್ದರು. ರಥಾಶ್ವರಥಪದಾತಿಗಳಿಂದ ದ್ರೋಣನಿಂದ ರಚಿತವಾಗಿದ್ದ ಆ ವ್ಯೂಹವು ಭಿರುಗಾಳಿಗೆ ಸಿಲುಕಿ ಅಲ್ಲೋಲಕಲ್ಲೋಲವಾಗುತ್ತಿರುವ ಸಮುದ್ರದಂತೆ ಕಾಣುತ್ತಿತ್ತು. ವರ್ಷಾಕಾಲದಲ್ಲಿ ಮಿಂಚಿನಿಂದ ಕೂಡಿ ಗರ್ಜಿಸುವ ಮೋಡಗಳು ಎಲ್ಲ ದಿಕ್ಕುಗಳಿಂದಲೂ ಬಂದು ಸೇರುವಂತೆ ಆ ವ್ಯೂಹದ ಪಕ್ಷಪಕ್ಷಗಳಿಂದ ಯುದ್ಧೋತ್ಸಾಹೀ ಯೋಧರು ರಣರಂಗಕ್ಕೆ ಧುಮುಕುತಿದ್ದರು.
ಅದರ ಮಧ್ಯದಲ್ಲಿ ವಿಧಿವತ್ತಾಗಿ ಸಜ್ಜುಗೊಳಿಸಿದ ಆನೆಯ ಮೇಲೆ ಪ್ರಗ್ಜ್ಯೋತಿಷಾಧಿಪತಿ ಭಗದತ್ತನು ಉದಯಿಸುತ್ತಿರುವ ಸೂರ್ಯನಂತೆ ಶೋಭಿಸಿದನು. ರಾಜಾ ಭಗದತ್ತನ ತಲೆಯ ಮೇಲೆ ಸುವರ್ಣದ ದಾರದಿಂದ ಕಟ್ಟಲ್ಪಟ್ಟ ಮಾಲೆಗಳಿಂದ ಸಮಲಂಕೃತವಾಗಿದ್ದ ಶ್ವೇತಛತ್ರವಿದ್ದಿತು. ಅದರಿಂದ ಕೃತ್ತಿಕಾನಕ್ಷತ್ರಯುಕ್ತವಾದ ಹುಣ್ಣಿಮೆಯ ಚಂದ್ರನಂತೆ ಅವನು ಪ್ರಕಾಶಿಸುತ್ತಿದ್ದನು. ಮದದಿಂದ ಕೊಬ್ಬಿಹೋಗಿದ್ದ ಕಾಡಿಗೆಯ ರಾಶಿಯಂತೆ ಕಾಣುತ್ತಿದ್ದ ಅವನ ಆನೆಯು ಮಹಾಮೇಘಗಳು ಸುರಿಸಿದ ಮಳೆಯಿಂದ ತೋಯ್ದ ಮಹಾ ಪರ್ವತದಂತೆ ಹೊಳೆಯುತ್ತಿತ್ತು. ದೇವಗಣಗಳಿಂದ ಶಕ್ರನು ಹೇಗೋ ಹಾಗೆ ನಾನಾ ನೃಪತಿ ವೀರರಿಂದ, ವಿವಿಧ ಆಯುಧ ಭೂಷಣಗಳಿಂದ ಕೂಡಿದ ಪರ್ವತೇಯರೊಂದಿಗೆ ಆವೃತನಾಗಿದ್ದನು.
ಶತ್ರುಗಳಿಗೆ ಅಜೇಯವಾದ ಆ ಅತಿಮಾನುಷವಾದ ವ್ಯೂಹವನ್ನು ನೋಡಿ ಯುಧಿಷ್ಠಿರನು ಪಾರ್ಷತನಿಗೆ ಹೇಳಿದನು: “ಇಂದು ನಾನು ಬ್ರಾಹ್ಮಣನ ವಶದಲ್ಲಿ ಬಾರದಹಾಗೆ ಯುದ್ಧನೀತಿಯನ್ನು ರೂಪಿಸು!”
ಧೃಷ್ಟದ್ಯುಮ್ನನು ಹೇಳಿದನು: “ಸುವ್ರತ! ದ್ರೋಣನು ಪ್ರಯತ್ನಿಸಿದರೂ ನೀನು ಅವನ ವಶನಾಗುವುದಿಲ್ಲ. ಇಂದು ನಾನು ದ್ರೋಣನನ್ನು, ಅವನ ಅನುಯಾಯಿಗಳೊಂದಿಗೆ ತಡೆಯುತ್ತೇನೆ. ನಾನು ಜೀವಿಸಿರುವಾಗ ನೀನು ಉದ್ವೇಗಗೊಳ್ಳಬಾರದು. ರಣದಲ್ಲಿ ಎಂದೂ ದ್ರೋಣನು ನನ್ನನ್ನು ಜಯಿಸಲು ಶಕ್ಯನಾಗುವುದಿಲ್ಲ.”
ಹೀಗೆ ಹೇಳಿ ದ್ರುಪದನ ಮಗನು ಸ್ವಯಂ ತಾನೇ ಬಾಣಗಳನ್ನು ಎರಚಿ ದ್ರೋಣನನ್ನು ಆಕ್ರಮಣಿಸಿದನು. ಅನಿಷ್ಟದರ್ಶನ ಧೃಷ್ಟದ್ಯುಮ್ನನು ಎದುರಾದುದನ್ನು ನೋಡಿ ಒಂದು ಕ್ಷಣ ದ್ರೋಣನು ಅಸಂತುಷ್ಟನಾದನು. ಅದನ್ನು ನೋಡಿ ಧೃತರಾಷ್ಟ್ರನ ಮಗ ದುರ್ಮುಖನು ದ್ರೋಣನಿಗೆ ಪ್ರಿಯವಾದುದನ್ನು ಮಾಡಬಯಸಿ ಧೃಷ್ಟದ್ಯುಮ್ನನನ್ನು ತಡೆದನು. ಅವನು ಪ್ರಹರಿಸಲು ಪಾರ್ಷತ ಮತ್ತು ದುರ್ಮುಖರ ನಡುವೆ ತುಮುಲ ಯುದ್ಧವು ನಡೆಯಿತು. ಪಾರ್ಷತನು ಕ್ಷಿಪ್ರವಾಗಿ ಶರಜಾಲದಿಂದ ದುರ್ಮುಖನನ್ನು ಮುಚ್ಚಿ ಭಾರದ್ವಾಜನನ್ನು ಮಹಾ ಶರಗಳ ಮಹಾಜಾಲದಿಂದ ತಡೆದನು. ದ್ರೋಣನನ್ನು ಪ್ರಹರಿಸಿದುದನ್ನು ನೋಡಿ ದುರ್ಮುಖನು ನಾನಾ ತರಹದ ಶರಸಮೂಹಗಳಿಂದ ಪಾರ್ಷತನನ್ನು ಸಂಮೋಹಗೊಳಿಸಿದನು.
ಆ ಪಾಂಚಾಲ್ಯ-ಕುರುಮುಖ್ಯರಿಬ್ಬರೂ ಪರಸ್ಪರರಲ್ಲಿ ಯುದ್ಧಮಾಡುತ್ತಿರಲು ದ್ರೋಣನು ಯುಧಿಷ್ಠಿರನ ಸೇನೆಯನ್ನು ಅನೇಕ ಶರಗಳಿಂದ ಮರ್ದಿಸಿದನು. ಗಾಳಿಯಿಂದ ಹೇಗೆ ಮೋಡಗಳು ಎಲ್ಲಕಡೆ ಚದುರಿ ಹೋಗುವವೋ ಹಾಗೆ ಪಾರ್ಥನ ಸೇನೆಗಳು ಛಿನ್ನ-ಭಿನ್ನವಾಗಿ ಎಲ್ಲೆಲ್ಲಿಯೋ ಓಡಿಹೋಯಿತು. ಮುಹೂರ್ತಕಾಲ ಆ ಯುದ್ಧವು ನೋಡಲು ಮಧುರವಾಗಿತ್ತು. ಅನಂತರ ಉನ್ಮತ್ತರಾದವರಂತೆ ನಿರ್ಮರ್ಯಾದೆಯಿಂದ ವರ್ತಿಸಲು ಪ್ರಾರಂಭಿಸಿದರು. ತಮ್ಮವರನ್ನು ಮತ್ತು ಶತ್ರುಗಳನ್ನು ಪರಸ್ಪರ ಗುರಿತಿಸಲಾರದಾದರು. ಅನುಮಾನದಿಂದ ಸಂಜ್ಞೆಗಳನ್ನು ನೋಡಿ ಯುದ್ಧ ಮಾಡುತ್ತಿದ್ದರು. ಅವರ ಚೂಡಾಮಣಿಗಳ ಮೇಲೆ, ಸರಗಳ ಮೇಲೆ ಇತರ ಭೂಷಣಗಳ ಮೇಲೆ ಮತ್ತು ಕವಚಗಳ ಮೇಲೆ ಸೂರ್ಯನ ಕಿರಣಗಳು ಬಿದ್ದು ಪ್ರಕಾಶಿಸುತ್ತಿದ್ದವು. ಹಾರಾಡುತ್ತಿದ್ದ ಪತಾಕೆಗಳು, ರಥ, ಆನೆ, ಕುದುರೆಗಳು ಆಕಾಶದಲ್ಲಿ ತೇಲುವ ಮೋಡಗಳಂತೆ ಮತ್ತು ಬೆಳ್ಳಕ್ಕಿಗಳಂತೆ ಕಂಡವು. ನರರನ್ನು ನರರು ಸಂಹರಿಸಿದರು. ಕುದುರೆಗಳು ಕುದುರೆಗಳನ್ನು ಕೊಂದವು. ರಥಿಗಳನ್ನು ರಥಿಗಳು ಮತ್ತು ಆನೆಗಳನ್ನು ಆನೆಗಳು ಕೊಂದವು. ಕ್ಷಣದಲ್ಲಿಯೇ ಹಾರಾಡುತ್ತಿರುವ ಪತಾಕೆಗಳ, ಆನೆಗಳೊಂದಿಗೆ ಆನೆಗಳ ಘೋರ ತುಮುಲ ಸಂಗ್ರಾಮವು ನಡೆಯಿತು. ಆನೆಗಳ ಗಾಯಗೊಂಡ ದೇಹಗಳ, ಒಬ್ಬರು ಇನ್ನೊಬ್ಬರನ್ನು ಕೂಗಿ ಕರೆಯುವ ಯುದ್ಧದಲ್ಲಿ ದಂತ ಸಂಘಾತ ಸಂಘರ್ಷಗಳಿಂದ ಹೊಗೆಯೊಂದಿಗೆ ಅಗ್ನಿಯು ಹುಟ್ಟಿಕೊಂಡಿತು. ತುಂಡಾದ ಪತಾಕೆಗಳಿಂದ ಕೂಡಿದ, ದಂತಗಳಲ್ಲಿ ಅಗ್ನಿಯು ಉರಿಯುತ್ತಿರಲು ಆ ಆನೆಗಳು ಆಕಾಶದಲ್ಲಿ ಮಿಂಚಿನಿಂದ ಕೂಡಿದ ಮೋಡಗಳಂತೆ ಕಂಡವು. ಹರಡಿಕೊಂಡು ಬಿದ್ದಿದ್ದ ಮತ್ತು ಕೂಗುತ್ತಿದ್ದ ಆನೆಗಳಿಂದ ರಣಭೂಮಿಯು ಶರದೃತುವಿನಲ್ಲಿ ಚದುರಿದ ಮೋಡಗಳಿಂದ ಕೂಡಿದ ಆಕಾಶದಂತೆ ತೋರಿತು ಬಾಣ-ತೋಮರ-ಋಷ್ಟಿಗಳಿಂದ ವಧಿಸಲ್ಪಡುತ್ತಿದ್ದ ಆ ಆನೆಗಳ ಕೂಗು ಮಳೆಗಾಲದಲ್ಲಿ ಮೋಡಗಳ ಗುಡುಗಿನಂತೆ ಕೇಳುತ್ತಿದ್ದವು.
ಕೆಲವು ಆನೆಗಳು ತೋಮರಗಳಿಂದ ಇನ್ನು ಕೆಲವು ಬಾಣಗಳಿಂದ ಪೆಟ್ಟು ತಿಂದು ಸರ್ವಭೂತಗಳಿಗೂ ಭಯವನ್ನುಂಟುಮಾಡುವಂತೆ ಕೂಗುತ್ತಾ ರಣದಿಂದ ಬೇರೆಕಡೆ ಓಡಿಹೋಗುತ್ತಿದ್ದವು. ಕೆಲವು ಆನೆಗಳು ಅಲ್ಲಿ ಇತರ ಆನೆಗಳ ದಂತಗಳಿಂದ ಪೆಟ್ಟುತಿಂದು ಆರ್ತಸ್ವರದಲ್ಲಿ ಪ್ರಳಯಕಾಲದ ಘೋರವಾಗಿ ಉರುಳುತ್ತಿರುವ ಮೋಡಗಳಂತೆ ಕೂಗಿಕೊಳ್ಳುತ್ತಿದ್ದವು. ಅಂಕುಶಗಳಿಂದ ತಿವಿಯಲ್ಪಟ್ಟು ಪ್ರೇರಿತರಾಗಿ ಉನ್ಮತ್ಥರಾಗಿ ಪುನಃ ಓಡಿ ಬರುತ್ತಿದ್ದವು. ಮಹಾಕಾಯದ ಆನೆಗಳು ಮಹಾಕಾಯಗಳಿಂದ ಮತ್ತು ಬಾಣ-ತೋಮರಗಳಿಂದ ಹೊಡೆಯಲ್ಪಟ್ಟು ಅಂಕುಶಗಳ ಪ್ರಹರಣದಿಂದ ಮುಕ್ತರಾಗಿ ಭೂಮಿಯ ಮೇಲೆ ಬಿದ್ದವು. ಮಾವುತರನ್ನು ಕಳೆದುಕೊಂಡ ಆನೆಗಳು ಕಿರಚುತ್ತಾ ಅಲ್ಲಲ್ಲಿ ಚದುರಿದ ಮೋಡಗಳಂತೆ ಓಡುತ್ತಿರಲು ಪರಸ್ಪರರನ್ನು ಡಿಕ್ಕಿ ಹೊಡೆದು ಉರುಳಿಬಿದ್ದವು. ಕೆಲವು ಆನೆಗಳು ಸತ್ತವರನ್ನು ಹೊತ್ತು, ಪರಮಾಯುಧಗಳನ್ನು ಎಳೆಯುತ್ತಾ ಒಂಟಿಯಾಗಿ ದಿಕ್ಕಾಪಾಲಾಗಿ ಓಡಾಡುತ್ತಿದ್ದವು. ಕೆಲವು ಆನೆಗಳು ತೋಮರ-ಋಷ್ಟಿ-ಪರಶಾಯುಧಗಳಿಂದ ಹೊಡೆಯುತ್ತಾ ಅಥವಾ ಹೊಡೆಯಲ್ಪಟ್ಟು ಆರ್ತಸ್ವರದಲ್ಲಿ ಕೂಗುತ್ತಾ ನೆಲಕ್ಕುರುಳಿದವು. ಆ ಪರ್ವತಗಳಂತಹ ದೇಹಗಳನ್ನುಳ್ಳ ಆನೆಗಳು ಎಲ್ಲ ಕಡೆ ಹೊಡೆದು ದೊಪ್ಪೆಂದು ಬೀಳುತ್ತಿರಲು ಭೂಮಿಯು ಕಂಪಿಸಿ ಕೂಗಿತು.
ಎಲ್ಲೆಡೆಯೂ ಸಜ್ಜಾಗಿದ್ದ, ಮಾವುತರಿಂದ ಕೂಡಿದ್ದ, ಪತಾಕೆಗಳನ್ನುಳ್ಳ ಆನೆಗಳಿಂದ ಕೂಡಿದ ಭೂಮಿಯು ಚೆಲ್ಲಿಹೋದ ಪರ್ವತಗಳಂತೆ ಶೋಭಿಸಿತು. ಮಹಾಕಾಯದ ಆನೆಗಳ ಆರೋಹಿಗಳು ರಣದಲ್ಲಿ ರಥಿಗಳ ಭಲ್ಲ-ಅಂಕುಶ-ತೋಮರಗಳಿಂದ ಗಾಯಗೊಂಡು ಮತ್ತು ಹೃದಯಗಳು ಒಡೆದು ಬಿದ್ದಿದ್ದರು. ಅನ್ಯ ಗಜಗಳು ನಾರಾಚಗಳಿಂದ ಹೊಡೆಯಲ್ಪಟ್ಟು ಕ್ರೌಂಚಗಳಂತೆ ಕಿರಚುತ್ತಾ ಶತ್ರುಗಳನ್ನೂ ತಮ್ಮವರನ್ನೂ ತುಳಿಯುತ್ತಾ ದಿಕ್ಕುದಿಕ್ಕುಗಳಲ್ಲಿ ಓಡಿ ಹೋಗುತ್ತಿದ್ದವು. ಗಜ-ಅಶ್ವ-ರಥಗಳ ಗುಂಪುಗಳಿಂದ ಮತ್ತು ಶರೀರಗಳ ರಾಶಿಗಳಿಂದ ಹಾಗೂ ಮಾಂಸ-ರಕ್ತ-ಕರ್ದಮಗಳಿಂದ ರಣಭೂಮಿಯು ತುಂಬಿಹೋಯಿತು. ಆನೆಗಳ ದಂತಗಳ ಅಗ್ರಭಾಗದಿಂದ ಸೀಳಿಹೋದ, ಎತ್ತಿ ಹಾಕಲ್ಪಟ್ಟ ಚಕ್ರವಿದ್ದ ಮತ್ತು ಚಕ್ರವಿಲ್ಲದ ರಥಗಳಲ್ಲಿಯೇ ಇದ್ದ ಮಹಾರಥರು, ರಥಿಗಳಿಲ್ಲದ ರಥಗಳೂ, ಮನುಷ್ಯರು ಏರಿರದ ಕುದುರೆಗಳು, ಆರೋಹಿಗಳನ್ನು ಕಳೆದುಕೊಂಡ ಆನೆಗಳು ಶರಗಳಿಂದ ಪೀಡಿತವಾಗಿ ದಿಕ್ಕಾಪಾಲಾಗಿ ಹೋದವು. ಅಲ್ಲಿ ಮಕ್ಕಳು ತಂದೆಯನ್ನೂ, ತಂದೆಯು ಮಗನನ್ನೂ ಕೊಂದರು. ಹೀಗೆ ಆ ತುಮುಲ ಯುದ್ಧದಲ್ಲಿ ಏನೂ ತಿಳಿಯುತ್ತಿರಲಿಲ್ಲ. ರಕ್ತಮಾಂಸಗಳ ಕೆಸರಿನಲ್ಲಿ ಹುಗಿದು ಹೋಗಿದ್ದ ನರರು ಕಾಡ್ಗಿಚ್ಚಿಗೆ ಸಿಲುಕಿ ಉರಿಯುತ್ತಿದ್ದ ಮಹಾವೃಕ್ಷಗಳಂತೆ ತೋರುತ್ತಿದ್ದರು. ವಸ್ತ್ರಗಳು, ಕವಚಗಳು, ಚತ್ರ-ಪತಾಕಗಳು ರಕ್ತದಿಂದ ತೋಯ್ದುಹೋಗಿರಲು ಎಲ್ಲವೂ ಕೆಂಪಾಗಿ ಕಾಣುತ್ತಿತ್ತು. ಎಲ್ಲಕಡೆ ಬಿದ್ದಿರುವ ಕುದುರೆಗಳ ರಾಶಿ, ರಥಗಳ ರಾಶಿ, ಮತ್ತು ಪದಾತಿಗಳ ರಾಶಿಗಳು ಓಡುತ್ತಿರುವ ರಥಚಕ್ರಗಳಿಂದ ಪುನಃ ಪುನಃ ತುಂಡಾಗುತ್ತಿದ್ದವು.
ಆನೆಗಳೇ ಪ್ರವಾಹವಾಗಿದ್ದ, ಪದಾತಿಗಳ ಶರೀರಗಳೇ ತೇಲಿಹೋಗುತ್ತಿರುವ ಹುಲ್ಲುಕಡ್ಡಿಗಳಂತಿರುವ, ಮತ್ತು ರಥಗಳ ರಾಶಿಗಳೇ ಮಡುವನ್ನಾಗುಳ್ಳ ಆ ಸೈನ್ಯಸಾಗರವು ಘೋರರೂಪವನ್ನು ತಾಳಿತು. ವಾಹನಗಳೆಂಬ ಮಹಾನೌಕೆಗಳನ್ನು ಹೊಂದಿದ್ದ ಜಯಧನವನ್ನು ಬಯಸಿದ್ದ ಯೋಧರು ಮುಳುಗಿಹೋಗದೇ ದಾಟಿ ಶತ್ರುಗಳನ್ನು ಮೋಡಿಮಾಡುತ್ತಿದ್ದರು. ಶರವರ್ಷಗಳಿಂದ ತಮ್ಮ ಗೆಲುವಿನ ಲಕ್ಷಣಗಳು ಮುಚ್ಚಿಹೋಗಲು ಯೋಧರು ತಮ್ಮ ಲಾಂಛನಗಳನ್ನು ಕಳೆದುಕೊಂಡರೂ ದುಃಖಿತರಾಗಲಿಲ್ಲ. ಹಾಗೆ ಭಯಂಕರವೂ ಘೋರರೂಪವೂ ಆದ ಯುದ್ಧವು ನಡೆಯುತ್ತಿರಲು ದ್ರೋಣನು ಶತ್ರುಗಳನ್ನು ಮೋಡಿಗೊಳಿಸಿ ಯುಧಿಷ್ಠಿರನನ್ನು ಎದುರಿಸಿದನು.
ದ್ರೋಣನ ಯುದ್ಧ
ಆಗ ಯುಧಿಷ್ಠಿರನು ಹತ್ತಿರ ಬರುತ್ತಿರುವ ದ್ರೋಣನನ್ನು ನೋಡಿ ಭಯಪಡದೇ ಮಹಾ ಶರವರ್ಷದಿಂದ ಬರಮಾಡಿಕೊಂಡನು. ಮಹಾಸಿಂಹವನ್ನು ಕೊಲ್ಲಲು ಬಯಸಿದ ಆನೆಗಳ ಹಿಂಡಿನಲ್ಲಿ ಹೇಗೋ ಹಾಗೆ ಯುಧಿಷ್ಠಿರನ ಸೇನೆಯಲ್ಲಿ ಹಾಲಾಹಲ ಶಬ್ಧವುಂಟಾಯಿತು. ದ್ರೋಣನನ್ನು ನೋಡಿ ಸತ್ಯಜಿತುವು ಯುಧಿಷ್ಠಿರನನ್ನು ರಕ್ಷಿಸಲು ಆಚಾರ್ಯನ ಮೇಲೆ ಎರಗಿದನು. ಆಗ ಆಚಾರ್ಯ-ಪಾಂಚಾಲ್ಯರಿಬ್ಬರೂ ಪರಸ್ಪರರೊಡನೆ ಇಂದ್ರ-ವೈರೋಚನರಂತೆ ಸೈನ್ಯವನ್ನು ಕ್ಷೋಭೆಗೊಳಿಸುತ್ತಾ ಯುದ್ಧ ಮಾಡಿದರು. ಆಚಾರ್ಯನು ಶೀಘ್ರವಾಗಿ ಹತ್ತು ತೀಕ್ಷ್ಣ ಮರ್ಮಭೇದಿಗಳಿಂದ ಸತ್ಯಜಿತುವಿನ ಬಾಣವನ್ನು ಹೂಡಿದ್ದ ಧನುಸ್ಸನ್ನು ತುಂಡರಿಸಿದನು. ಆ ಪ್ರತಾಪವಾನನು ಅತಿಶೀಘ್ರದಲ್ಲಿ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಇಪ್ಪತ್ತು ಕಂಕಪತ್ರಗಳಿಂದ ದ್ರೋಣನನ್ನು ಹೊಡೆದನು. ಸತ್ಯಜಿತನು ದ್ರೋಣನೊಡನೆ ಯುದ್ಧದಲ್ಲಿ ತೊಡಗಿರುವುದನ್ನು ತಿಳಿದು ಪಾಂಚಾಲ್ಯ ವೃಕನು ನೂರು ತೀಕ್ಷ್ಣ ಶರಗಳಿಂದ ದ್ರೋಣನನ್ನು ಹೊಡೆದನು. ಮಹಾರಥ ದ್ರೋಣನನ್ನು ಹಾಗೆ ಎದುರಿಸಿದುದನ್ನು ನೋಡಿ ಪಾಂಡವರು ಹರ್ಷದಿಂದ ಉತ್ತರೀಯಗಳನ್ನು ಮೇಲೆ ಹಾರಿಸಿ ಕೂಗಿದರು. ಬಲವಾನ್ ವೃಕನಾದರೋ ಪರಮಕ್ರುದ್ಧನಾಗಿ ದ್ರೋಣನ ಎದೆಗೆ ಅರವತ್ತು ಬಾಣಗಳಿಂದ ಹೊಡೆದನು. ಅದು ಅದ್ಭುತವಾಗಿತ್ತು.
ಆಗ ಶರವರ್ಷಗಳಿಂದ ಮುಚ್ಚಿಹೋಗಿದ್ದ ದ್ರೋಣನು ಕ್ರೋಧದಿಂದ ಎಚ್ಚೆತ್ತು ಕಣ್ಣುಗಳನ್ನು ತೆರೆದನು. ಆಗ ದ್ರೋಣನು ಸತ್ಯಜಿತು ಮತ್ತು ವೃಕರ ಧನುಸ್ಸುಗಳನ್ನು ತುಂಡರಿಸಿ ಆರು ಬಾಣಗಳಿಂದ ಸೂತ, ಕುದುರೆಗಳೊಂದಿಗೆ ವೃಕನನ್ನು ವಧಿಸಿದನು. ಆಗ ಸತ್ಯಜಿತುವು ಅತಿವೇಗದಲ್ಲಿ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ವಿಶಿಖಗಳಿಂದ ಕುದುರೆ, ಸೂತ, ಧ್ವಜಗಳೊಂದಿಗೆ ದ್ರೋಣನನ್ನು ಹೊಡೆದನು. ಪಾಂಚಾಲ್ಯನ ಆ ಪೆಟ್ಟನ್ನು ದ್ರೋಣನು ಸಹಿಸಿಕೊಳ್ಳದಾದನು. ಅವನ ವಿನಾಶಕ್ಕಾಗಿ ಒಂದೇಸಮನೆ ಬಾಣಗಳನ್ನು ಪ್ರಯೋಗಿಸತೊಡಗಿದನು. ದ್ರೋಣನು ಸಹಸ್ರಾರು ಶರಗಳನ್ನು ಸುರಿಸಿ ಅವನ ಕುದುರೆಗಳನ್ನೂ, ಧ್ವಜವನ್ನೂ, ಎರಡೂ ಧನುರ್ಮುಷ್ಟಿಗಳನ್ನೂ, ಪಾರ್ಷ್ಣಿಸಾರಥಿಗಳನ್ನೂ ಮುಚ್ಚಿದನು. ಹೀಗೆ ಪುನಃ ಪುನಃ ತನ್ನ ಬಿಲ್ಲುಗಳನ್ನು ಕತ್ತರಿಸುತ್ತಿದ್ದರೂ ಪರಮಾಸ್ತ್ರಜ್ಞನಾಗಿದ್ದ ಪಾಂಚಾಲ್ಯನು ಶೋಣಾಶ್ವನನ್ನು ಎದುರಿಸಿ ಯುದ್ಧಮಾಡಿದನು. ಆ ಮಹಾಹವದಲ್ಲಿ ಉತ್ತೇಜಿತನಾಗಿ ಹೋರಾಡುತ್ತಿರುವ ಸತ್ಯಜಿತುವನ್ನು ನೋಡಿದ ದ್ರೋಣನು ಅರ್ಧಚಂದ್ರದಿಂದ ಅವನ ಶಿರವನ್ನು ತುಂಡರಿಸಿದನು. ಆ ಇಬ್ಬರು ಪಾಂಚಾಲ ಮಹಾಕಾಯರು ರಥರ್ಷಭನಿಂದ ಹತರಾಗಲು ಭೀತನಾದ ಯುಧಿಷ್ಠಿರನು ವೇಗವುಳ್ಳ ಕುದುರೆಗಳನ್ನೇರಿ ಪಲಾಯನಗೈದನು.
ಆಗ ಪಾಂಚಾಲರು, ಕೇಕಯರು, ಮತ್ಸ್ಯರು, ಚೇದಿ-ಕರೂಷರು, ಕೋಸಲರು ಯುಧಿಷ್ಠಿರನನ್ನು ರಕ್ಷಿಸಲು ಬಯಸಿ ಸಂತೋಷದಿಂದ ದ್ರೋಣನ ಮೇಲೆ ಎರಗಿದರು. ಆಗ ಶತ್ರುಸೇನೆಗಳನ್ನು ಮರ್ದಿಸುವ ಆಚಾರ್ಯನು ಯುಧಿಷ್ಠಿರನನ್ನು ಹಿಡಿಯಲು ಬಯಸಿ ಆ ಸೇನೆಗಳನ್ನು ಬೆಂಕಿಯು ಹತ್ತಿಯ ರಾಶಿಯನ್ನು ಹೇಗೋ ಹಾಗೆ ಸುಟ್ಟುಬಿಟ್ಟನು. ಅನೇಕ ಬಾರಿ ಆ ಸೇನೆಗಳನ್ನು ದಹಿಸುತ್ತಿದ್ದ ದ್ರೋಣನನ್ನು ಮತ್ಸ್ಯರಾಜನ ತಮ್ಮ ಶತಾನೀಕನು ಎದುರಿಸಿದನು. ಸೂರ್ಯನ ರಶ್ಮಿಗಳಂತಿರುವ ಕಮ್ಮಾರನಿಂದ ಪರಿಷ್ಕೃತಗೊಂಡ ಅರು ಬಾಣಗಳಿಂದ ದ್ರೋಣನನ್ನು, ಅವನ ಸಾರಥಿ ಮತ್ತು ಕುದುರೆಗಳೊಂದಿಗೆ ಚೆನ್ನಾಗಿ ಹೊಡೆದನು. ದ್ರೋಣನು ಕ್ಷುರದಿಂದ ಬೇಗನೇ ಅವನ ಶಿರವನ್ನು ಕುಂಡಲಗಳೊಂದಿಗೆ ಕಾಯದಿಂದ ಬೇರ್ಪಡಿಸಿ ಜೋರಾಗಿ ಗರ್ಜಿಸಲು ಮತ್ಸ್ಯರು ಪಲಾಯನಗೈದರು.
ಭಾರದ್ವಾಜನು ಪುನಃ ಪುನಃ ಮತ್ಸ್ಯರನ್ನು ಚೇದಿಗಳನ್ನು, ಕಾರೂಷರನ್ನು, ಕೇಕಯರನ್ನೂ, ಸೃಂಜಯರನ್ನೂ ಮತ್ತು ಪಾಂಡವರನ್ನೂ ಸೋಲಿಸಿದನು. ಕ್ರೋಧಿತಗೊಂಡ ಅಗ್ನಿಯು ವನವನ್ನು ಹೇಗೋ ಹಾಗೆ ಸೇನೆಗಳನ್ನು ಸುಡುತ್ತಿದ್ದ ಆ ಕ್ರುದ್ಧ ರುಕ್ಮರಥನನ್ನು ನೋಡಿ ಸೃಂಜಯರು ನಡುಗಿದರು. ಧನುಸ್ಸನ್ನು ಎಳೆದು ಶತ್ರುಗಳನ್ನು ಸಂಹರಿಸುತ್ತಿದ್ದ ಮತ್ತು ಉತ್ತಮವಾಗಿ ಹೋರಾಡುತ್ತಿದ್ದ ಅವನ ಟೇಂಕಾರವು ಎಲ್ಲ ದಿಕ್ಕುಗಳಲ್ಲಿಯೂ ಕೇಳಿಬರುತ್ತಿತ್ತು. ಕೈಚಳಕವಿದ್ದ ಅವನು ಪ್ರಯೋಗಿಸಿದ ರೌದ್ರ ಸಾಯಕಗಳು ಆನೆಗಳನ್ನೂ, ಕುದುರೆಗಳನ್ನೂ, ಪದಾತಿಗಳನ್ನೂ, ರಥಿಗಳನ್ನೂ, ಗಜಸಾದಿನರನ್ನೂ ಸಂಹರಿಸಿದವು. ಬೇಸಗೆಯಲ್ಲಿ ಗಾಳಿ-ಗುಡುಗಿನೊಂದಿಗೆ ಮೋಡಗಳು ಆನೆಗಲ್ಲಿನ ಮಳೆಗರೆಯುವಂತೆ ಬಾಣಗಳ ಮಳೆಸುರಿಸಿ ಶತ್ರುಗಳಲ್ಲಿ ಭಯವನ್ನುಂಟುಮಾಡಿದನು. ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಾ ಸೇನೆಗಳನ್ನು ಕ್ಷೋಭೆಗೊಳಿಸುತ್ತಾ ಆ ಬಲಶಾಲೀ ಶೂರ ಮಹೇಷ್ವಾಸನು ಶತ್ರುಗಳಲ್ಲಿ ಭಯವನ್ನುಂಟುಮಾಡಿದನು. ಆ ಅಮಿತತೇಜಸ್ವಿ ದ್ರೋಣನ ಬಂಗಾರ ಪರಿಷ್ಕೃತ ಚಾಪದಿಂದ ಮೋಡಗಳಿಂದ ಮಿಂಚು ಮೂಡುವಂತೆ ಎಲ್ಲ ದಿಕ್ಕುಗಳಲ್ಲಿಯೂ ಮಿಂಚುಗಳು ಹೊರಬರುತ್ತಿರುವುದು ಕಾಣಿಸುತ್ತಿತ್ತು. ಸುರಾಸುರನಮಸ್ಕೃತ ವಿಷ್ಣುವು ದೈತ್ಯಗಣದೊಂದಿಗೆ ಹೇಗೋ ಹಾಗೆ ದ್ರೋಣನು ಪಾಂಡವರ ಸೇನೆಯೊಂದಿಗೆ ಮಹಾ ಕದನವನ್ನಾಡಿದನು.
ಆ ಶೂರ, ಸತ್ಯವಾದಿ, ಪ್ರಾಜ್ಞ, ಬಲವಾನ್, ಸತ್ಯವಿಕ್ರಮ, ಮಹಾನುಭಾವ ದ್ರೋಣನು ಕಾಲಾಂತದಂತೆ ರೌದ್ರವಾದ, ಹೇಡಿಗಳಿಗೆ ಭಯವನ್ನುಂಟುಮಾಡುವ, ಕವಚಗಳೇ ಅಲೆಗಳಾಗಿರುವ, ಧ್ವಜಗಳೇ ಮಡುವುಗಳಾಗಿರುವ, ಮನುಷ್ಯರ ಶರೀರಗಳ ರಾಶಿಗಳನ್ನೇ ಕೊಂಡೊಯ್ಯುತ್ತಿದ್ದ, ಆನೆ-ಕುದುರೆಗಳೇ ಮೊಸಳೆಗಳಾಗಿದ್ದ, ಖಡ್ಗಗಳೇ ಮೀನುಗಳಂತಿರುವ, ದುರಾಸದ, ವೀರಯೋಧರ ಎಲುಬುಗಳೇ ಕಲ್ಲಿನ ಹರಳುಗಳಂತಿರುವ, ರೌದ್ರವಾದ, ಭೇರೀ-ಮೃದಂಗಗಳೇ ಆಮೆಗಳಾಗಿರುವ, ಕವಚಗಳೇ ಮಹಾಪ್ರವಾಹದಂತಿರುವ, ಘೋರ ತಲೆಕೂದಲುಗಳೇ ಪಾಚಿಹುಲ್ಲುಗಳಾಗಿರುವ, ಬಾಣಗಳೇ ಅಲೆಗಳಾಗಿರುವ, ಬಿಲ್ಲುಗಳೇ ಪ್ರವಾಹವಾಗಿರುವ, ಬಾಹುಗಳೇ ಸರ್ಪಸಂಕುಲಗಳಂತಿರುವ, ರಣಭೂಮಿಯಲ್ಲಿ ಹರಿಯುವ ಕುರು-ಸೃಂಜಯರ ವಾಹಿನಿಯನ್ನು, ಮನುಷ್ಯರ ತಲೆಬುರುಡೆಗಳೇ ಕಲ್ಲುಬಂಡೆಗಳಾಗಿದ್ದ, ಶಕ್ತಿಗಳೇ ಮೀನಾಗಿದ್ದ, ಗದೆಗಳೇ ತೆಪ್ಪಗಳಾಗಿದ್ದ, ತಲೆಯ ಮುಂಡಾಸುಗಳು ಮತ್ತು ಉಟ್ಟ ವಸ್ತ್ರಗಳೇ ನೊರೆಗಳಾಗಿರುವ, ಹೊರಬಿದ್ದ ಕರುಳುಗಳೇ ಸರೀಸೃಪಗಳಾಗಿದ್ದ, ವೀರರನ್ನು ಅಪಹರಿಸಿಕೊಂಡು ಹೋಗುತ್ತಿರುವ, ಉಗ್ರ ಮಾಂಸ-ರಕ್ತಗಳೇ ಕೆಸರಾಗಿದ್ದ, ಆನೆಗಳೇ ಮೊಸಳೆಗಳಾಗಿದ್ದ, ಧ್ವಜಗಳೇ ವೃಕ್ಷಗಳಾಗಿದ್ದ, ಕ್ಷತ್ರಿಯರನ್ನು ಮುಳುಗಿಸುತ್ತಿದ್ದ, ಕ್ರೂರ ಶರೀರಗಳೇ ಒಡ್ಡಾಗಿದ್ದ, ಅಶ್ವಾರೋಹಿ ಮತ್ತು ಮಾವುತರೇ ತಿಮಿಂಗಿಲಗಳಾಗಿದ್ದ, ಮಾಂಸಾಹಾರೀ ಪ್ರಾಣಿಗಳ ಗುಂಪುಗಳಿಂದ ಕೂಡಿದ್ದ, ಮಹಾರೌದ್ರರಾದ ರಾಕ್ಷಸರು ಮತ್ತು ಪಿಶಾಚಿಗಳನ್ನು ಎಲ್ಲಕಡೆ ಹೊಂದಿದ್ದ, ಯಮನಲ್ಲಿಗೆ ಹರಿಯುತ್ತಿದ್ದ ನದಿಯನ್ನು ಅಲ್ಲಿ ಹರಿಸಿದನು.
ಯಮನಂತೆ ಸೇನೆಗಳನ್ನು ದಹಿಸುತ್ತಿರುವ ಆ ರಥೋದಾರ ದ್ರೋಣನನ್ನು ಕುಂತೀಪುತ್ರನ ನಾಯಕತ್ವದಲ್ಲಿ ಎಲ್ಲಕಡೆಗಳಿಂದ ಆಕ್ರಮಣಿಸಿದರು. ಆ ಶೂರ ಮಹೇಷ್ವಾಸರನ್ನು ಕೌರವರ ಕಡೆಯ ರಾಜರು ರಾಜಪುತ್ರರು ಆಯುಧಗಳನ್ನು ಎತ್ತಿ ಹಿಡಿದು ಎಲ್ಲ ಕಡೆಗಳಿಂದ ಸುತ್ತುವರೆದರು. ಆಗ ದ್ರೋಣನು ಕುಂಭಸ್ಥಳವು ಒಡೆದುಹೋಗಿರುವ ಆನೆಯಂತೆ ರಥಸೇನೆಯನ್ನು ದಾಟಿ ದೃಢಸೇನನನ್ನು ಕೆಡವಿದನು. ಭಯವಿಲ್ಲದವನಂತೆ ಪ್ರಹರಿಸುತ್ತಿದ್ದ ಕ್ಷೇಮನನ್ನು ತಲುಪಿ, ಅವನನ್ನು ಒಂಭತ್ತು ಬಾಣಗಳಿಂದ ಹೊಡೆದು ರಥದಿಂದ ಕೆಡವಿದನು. ಅವನು ಸೈನ್ಯಗಳ ಮಧ್ಯವನ್ನು ಸೇರಿ, ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಾ ಇತರ ಎಲ್ಲರನ್ನೂ ರಕ್ಷಿಸುತ್ತಿದ್ದನು. ಅವನಿಗೆ ಯಾರೂ ರಕ್ಷಣೆಯಿರಲಿಲ್ಲ. ಶಿಖಂಡಿಯನ್ನು ಹನ್ನೆರಡು ಬಾಣಗಳಿಂದ, ಉತ್ತಮೌಜಸನನ್ನು ಇಪ್ಪತ್ತರಿಂದ ಹೊಡೆದು, ಭಲ್ಲದಿಂದ ವಸುಧಾನನನ್ನು ಯಮಸಾದನಕ್ಕೆ ಕಳುಹಿಸಿದನು. ಎಂಭತ್ತರಿಂದ ಕ್ಷತ್ರವರ್ಮನನ್ನು ಮತ್ತು ಅರವತ್ತು-ಇಪ್ಪತ್ತರಿಂದ ಸುದಕ್ಷಿಣನನ್ನು ಹೊಡೆದು ಭಲ್ಲದಿಂದ ಕ್ಷತ್ರದೇವನನ್ನು ರಥನೀಡದಿಂದ ಉರುಳಿಸಿದನು. ಯುಧಾಮನ್ಯುವನ್ನು ಅರವತ್ನಾಲ್ಕು ಮತ್ತು ಸಾತ್ಯಕಿಯನ್ನು ಮೂವತ್ತು ಬಾಣಗಳಿಂದ ಹೊಡೆದು ರುಕ್ಮರಥನು ಕೂಡಲೇ ಯುಧಿಷ್ಠಿರನ ಮೇಲೆ ಎರಗಿದನು. ಆಗ ಯುಧಿಷ್ಠಿರನು ಕ್ಷಿಪ್ರವಾಗಿ ವೇಗವುಳ್ಳ ಕುದುರೆಗಳ ಮೇಲೆ ಹೊರಟುಹೋದನು.
ಆಗ ಪಾಂಚಾಲ್ಯನು ದ್ರೋಣನನ್ನು ಆಕ್ರಮಣಿಸಿದನು. ದ್ರೋಣನು ಧನುಸ್ಸು-ಕುದುರೆಗಳೊಂದಿಗೆ ಅವನನ್ನು ಸಂಹರಿಸಿದನು. ಹತನಾಗಿ ಅವನು ಆಕಾಶದಿಂದ ಭೂಮಿಯ ಮೇಲೆ ಜ್ಯೋತಿಯೊಂದು ಬೀಳುವಂತೆ ರಥದಿಂದ ಕೆಳಗೆ ಬಿದ್ದನು. ಪಾಂಚಾಲರ ಯಶಸ್ಕರ ಆ ರಾಜಪುತ್ರನು ಹತನಾಗಲು “ದ್ರೋಣನನ್ನು ಕೊಲ್ಲಿ! ದ್ರೋಣನನ್ನು ಕೊಲ್ಲಿ!” ಎಂದು ಮಹಾ ತುಮುಲ ಶಬ್ಧವುಂಟಾಯಿತು. ಆಗ ಬಲಶಾಲೀ ದ್ರೋಣನು ತುಂಬಾ ಸಂಕ್ರುದ್ಧರಾದ ಪಾಂಚಾಲರನ್ನು, ಮತ್ಸ್ಯರನ್ನು, ಕೇಕಯರನ್ನು, ಸೃಂಜಯರನ್ನು ಮತ್ತು ಪಾಂಡವರನ್ನು ಸದೆಬಡಿದನು. ಕುರುಗಳಿಂದ ಪರಿವಾರಿತನಾಗಿದ್ದ ದ್ರೋಣನು ಸಾತ್ಯಕಿ, ಚೇಕಿತಾನ, ಧೃಷ್ಟದ್ಯುಮ್ನ, ವಾರ್ಧಕ್ಷೇಮಿ, ಚಿತ್ರಸೇನ, ಸೇನಾಬಿಂದು, ಸುವರ್ಚಸ ಇವರುಗಳನ್ನು ಮತ್ತು ಇನ್ನೂ ಇತರ ಅನೇಕ ನಾನಾ ಜನಪದೇಶ್ವರರೆಲ್ಲರನ್ನೂ ಯುದ್ಧದಲ್ಲಿ ಸೋಲಿಸಿದನು. ಆ ಮುಹಾಯುದ್ಧದಲ್ಲಿ ಜಯವನ್ನು ಪಡೆದ ಕೌರವರು ಎಲ್ಲಕಡೆ ಓಡಿ ಹೋಗುತ್ತಿರುವ ಪಾಂಡವೇಯರನ್ನು ರಣದಲ್ಲಿ ಸಂಹರಿಸಿದರು. ಇಂದ್ರನಿಂದ ದಾನವರಂತೆ ವಧಿಸಲ್ಪಡಿತ್ತಿರುವ ಮಹಾತ್ಮ ಪಾಂಚಲರು, ಕೇಕಯರು ಮತ್ತು ಮತ್ಸ್ಯರು ನಡುಗಿದರು.
ಕರ್ಣ-ದುರ್ಯೋಧನರ ಸಂವಾದ
ದ್ರೋಣನ ಸಾಯಕಗಳಿಂದ ಪೀಡಿತರಾಗಿ ರಣರಂಗದಿಂದ ಚದುರಿ ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದ ಪಾಂಚಾಲ-ಪಾಂಡವ-ಮತ್ಸ್ಯ-ಸೃಂಜಯ-ಚೇದಿ-ಕೇಕಯರನ್ನು ನೋಡಿ, ನದಿಯ ಪ್ರವಾಹದಿಂದ ದೋಣಿಗಳು ಸೆಳೆಯಲ್ಪಡುವಂತೆ ದ್ರೋಣನ ಬಿಲ್ಲಿನಿಂದ ಬಿಡಲ್ಪಟ್ಟ ಬಾಣಗಳ ಮಳೆಯಿಂದ ಕೊಚ್ಚಿಕೊಂಡು ಹೋಗುತ್ತಿರುವ ಅವರನ್ನು ನೋಡಿ ಕೌರವರು ಸಿಂದನಾದಗೈದು, ನಾನಾವಾದ್ಯಗಳನ್ನು ನುಡಿಸಿ, ರಥ-ಗಜ-ನರ-ಅಶ್ವಗಳನ್ನು ಎಲ್ಲ ಕಡೆಯಿಂದ ಸುತ್ತುವರೆದರು. ಅವರನ್ನು ನೋಡಿ ಸ್ವಜನರಿಂದ ಸಂವೃತನಾಗಿ ಸೇನೆಯ ಮಧ್ಯದಲ್ಲಿದ್ದ ರಾಜಾ ದುರ್ಯೋಧನನು ಸಂತೋಷದಿಂದ ನಗುತ್ತಾ ಕರ್ಣನಿಗೆ ಹೇಳಿದನು: “ರಾಧೇಯ! ಸಿಂಹವು ವನ್ಯಪ್ರಾಣಿಗಳನ್ನು ಹೇಗೋ ಹಾಗೆ ಸಾಯಕಗಳಿಂದ ಪಾಂಚಾಲರನ್ನು ಪೀಡಿಸುತ್ತಿರುವ ದೃಢಧನ್ವಿ ದ್ರೋಣನನ್ನು ನೋಡು! ಭಿರುಗಾಳಿಗೆ ಸಿಲುಕಿ ಮುರಿದು ಬಿದ್ದ ಮಹಾಮರಗಳಂತೆ ದ್ರೋಣನಿಂದ ಭಗ್ನರಾದ ಇವರು ಪುನಃ ಯುದ್ಧಕ್ಕೆ ಬರುತ್ತಾರೆಂದು ನನಗನ್ನಿಸುವುದಿಲ್ಲ. ಆ ಮಹಾತ್ಮನ ರುಕ್ಮಪುಂಖ ಶರಗಳಿಂದ ಪೆಟ್ಟುತಿಂದ ಅವರು ಅಲ್ಲಲ್ಲಿಯೇ ಸುತ್ತುತ್ತಾ ಒಂದೇ ಮಾರ್ಗದಲ್ಲಿ ಹೋಗುತ್ತಿಲ್ಲ. ಬೆಂಕಿಯನ್ನು ಹಾಕಿ ಆನೆಗಳ ಹಿಂಡನ್ನು ಒಂದೇಕಡೆ ಗೋಲಾಕಾರವಾಗಿ ತಿರುಗಿಸುವಂತೆ ಮಹಾತ್ಮ ದ್ರೋಣ ಮತ್ತು ಕುರುಗಳು ಇವರನ್ನು ಮಾಡಿದ್ದಾರೆ. ದುಂಬಿಗಳಂತಿರುವ ದ್ರೋಣನ ನಿಶಿತ ಶರಗಳಿಂದ ಮುಸುಕಲ್ಪಟ್ಟು ಇವರು ಪಲಾಯನವೊಂದೇ ಮಾರ್ಗವೆಂದು ತಿಳಿದು ಅನ್ಯೋನ್ಯರ ಹಿಂದೆ ಅಡಗಿಕೊಳ್ಳುತ್ತಿದ್ದಾರೆ. ಈ ಕೋಪಿಷ್ಟ ಭೀಮನು ಪಾಂಡವ-ಸೃಂಜಯರಿಂದ ವಿಹೀನನಾಗಿ ನಮ್ಮವರ ಯೋಧರಿಂದ ಸುತ್ತುವರೆಯಲ್ಪಟ್ಟಿದ್ದಾನೆ. ಕರ್ಣ! ಇದು ನನಗೆ ಅತೀವ ತೃಪ್ತಿಯುನ್ನು ನೀಡುತ್ತಿದೆ. ಆ ದುರ್ಮತಿಗೆ ಇಂದು ಲೋಕವೆಲ್ಲವೂ ದ್ರೋಣಮಯವಾಗಿಯೇ ಕಾಣುತ್ತಿದೆ. ಇಂದು ಆ ಪಾಂಡವನಿಗೆ ಜೀವಿತದಲ್ಲಿಯೂ ರಾಜ್ಯದಲ್ಲಿಯೂ ನಿರಾಶೆಯುಂಟಾಗಿದೆ ಎನ್ನುವುದು ತೋರುತ್ತಿದೆ.”
ಕರ್ಣನು ಹೇಳಿದನು: “ಈ ಮಹಾಬಾಹುವು ಜೀವವಿರುವವರೆಗೆ ಯುದ್ಧವನ್ನು ಬಿಟ್ಟು ಹೋಗುವುಲ್ಲ ಎಂದು ತಿಳಿ. ಪುರುಷವ್ಯಾಘ್ರ! ಇವನು ನಮ್ಮವರ ಈ ಸಿಂಹನಾದವನ್ನೂ ಸಹಿಸಿಕೊಳ್ಳುವವನಲ್ಲ. ಶೂರರಾದ, ಬಲವಂತರಾದ, ಕೃತಾಸ್ತ್ರರಾದ, ಯುದ್ಧದುರ್ಮದರಾದ ಪಾಂಡವರು ಯುದ್ಧವನ್ನು ಮುಂದುವರಿಸುತ್ತಾರೆ ಎಂದು ನನ್ನ ಅಭಿಪ್ರಾಯ. ವಿಷ-ಬೆಂಕಿ-ದ್ಯೂತ ಮತ್ತು ವನವಾಸಗಳ ಕಷ್ಟಗಳನ್ನು ನೆನಪಿನಲ್ಲಿಟ್ಟುಕೊಂಡಿರುವ ಪಾಂಡವರು ಸಂಗ್ರಾಮದಿಂದ ಓಡಿಹೋಗುವುದಿಲ್ಲವೆಂದು ನನಗನ್ನಿಸುತ್ತದೆ. ಏಕೆಂದರೆ ಮಹಾಬಾಹು ಅಮಿತ ಓಜಸ್ವಿ ವೃಕೋದರ ಕೌಂತೇಯನು ಮರಳಿ ನಮ್ಮವರ ಶ್ರೇಷ್ಠ ಶ್ರೇಷ್ಠ ರಥೋದಾರರನ್ನು ಕೊಲ್ಲುತ್ತಾನೆ. ಖಡ್ಗದಿಂದ, ಧನುಸ್ಸಿನಿಂದ, ಶಕ್ತಿಯಿಂದ, ಕುದುರೆಗಳಿಂದ, ಆನೆಗಳಿಂದ, ಮುನುಷ್ಯರಿಂದ, ರಥಗಳಿಂದ, ಹಾರೆಕೋಲಿನಿಂದ ಮತ್ತು ದಂಡದಿಂದ ಗುಂಪು ಗುಂಪಾಗಿ ಸಂಹರಿಸುತ್ತಾನೆ. ಅವನನ್ನು ಹಿಂಬಾಲಿಸಿ ಸಾತ್ಯಕಿಪ್ರಮುಖರಾದ ರಥರು, ವಿಶೇಷವಾಗಿ ಪಾಂಚಾಲರು, ಕೇಕಯರು, ಮತ್ಸ್ಯರು ಮತ್ತು ಪಾಂಡವರು ಬರುತ್ತಿದ್ದಾರೆ. ಆ ಶೂರರು, ಬಲವಂತರು, ವಿಕ್ರಾಂತ ಮಹಾರಥರು ಭೀಮನ ರಣೋತ್ಸಾಹದಿಂದ ವಿಶೇಷವಾಗಿ ಪ್ರಚೋದಿತಗೊಂಡಿದ್ದಾರೆ. ವೃಕೋದರನನ್ನು ರಕ್ಷಿಸಲೋಸುಗ ಈ ಕುರುಪಾಂಡವರು ಸೂರ್ಯನನ್ನು ಮುತ್ತುವ ಮೋಡಗಳಂತೆ ದ್ರೋಣನ ಮೇಲೆ ಮುತ್ತಿಗೆ ಹಾಕಿದ್ದಾರೆ. ರಕ್ಷಣೆಯಿಲ್ಲದ ಯತವ್ರತನನ್ನು ಪೀಡಿಸುವ ಒಂದೇ ಒಂದು ಉದ್ದೇಶವನ್ನಿಟ್ಟುಕೊಂಡಿರುವ ಇವರು ದೀಪದ ಹುಳುಗಳು ದೀಪವನ್ನು ಮುತ್ತಿಕೊಂಡು ತಾವು ಸಾಯುವುದನ್ನೂ ಗಮನಿಸದೇ ದೀಪವನ್ನು ಆರಿಸಲು ಪ್ರಯತ್ನಿಸುತ್ತಿರುವಂತೆ ಇರುವ ಈ ಕೃತಾಸ್ತ್ರರು ಅವನನ್ನು ತಡೆಯಲು ಸಮರ್ಥರು ಎನ್ನುವುದರಲ್ಲಿ ಸಂಶಯವಿಲ್ಲ. ಆದುದರಿಂದ ಇದು ಭಾರದ್ವಾಜನ ಮೇಲಿರುವ ಅತಿಭಾರವೆಂದು ನನಗನ್ನಿಸುತ್ತದೆ. ದ್ರೋಣನಿರುವಲ್ಲಿಗೆ ಶೀಘ್ರವಾಗಿ ಹೋಗೋಣ. ಕಾಗೆಗಳು ಮಹಾಸರ್ಪವನ್ನು ಹೇಗೋ ಹಾಗೆ ಅವರು ಆ ಯತವ್ರತನನ್ನು ಸಂಹರಿಸಬಾರದು!”
ರಾಧೇಯನ ಮಾತನ್ನು ಕೇಳಿ ರಾಜಾ ದುರ್ಯೋಧನನು ಸಹೋದರರೊಂದಿಗೆ ದ್ರೋಣನ ಕಡೆ ಹೋದನು. ಅಲ್ಲಿ ದ್ರೋಣನನ್ನು ಸಂಹರಿಸುವ ಒಂದೇ ಉದ್ದೇಶವನ್ನಿಟ್ಟುಕೊಂಡು ನಾನಾ ಬಣ್ಣದ ಉತ್ತಮ ಕುದುರೆಗಳನ್ನೇರಿ ಹಿಂದಿರುಗಿ ಬರುತ್ತಿರುವ ಪಾಂಡವರ ಮಹಾ ಶಬ್ಧವು ಕೇಳಿಬರುತ್ತಿತ್ತು.
ರಥಚಿಹ್ನೆಗಳು
ಕರಡಿಯ ಬಣ್ಣದ ಕುದುರೆಗಳಿಂದ ಎಳೆಯಲ್ಪಟ್ಟ ರಥದಲ್ಲಿ ಕುಳಿತು ಬರುತ್ತಿದ್ದ ವೃಕೋದರನನ್ನು ನೋಡಿ ಶೂರ ಶೈನೇಯನು ಬೆಳ್ಳೆಯ ಬಣ್ಣದ ಕುದುರೆಗಳನ್ನೊಡಗೂಡಿ ಅವನೊಂದಿಗೆ ಹಿಂದಿರುಗಿದನು. ಸುಂದರವಾದ ಗಿಣಿಯರೆಕ್ಕೆಗಳ ಬಣ್ಣದ ಕಾಂಬೋಜ ಕುದುರೆಗಳು ಶೀಘ್ರವಾಗಿ ನಕುಲನನ್ನು ಹೊತ್ತು ಕೌರವ ಸೈನಿಕರಿದ್ದೆಡೆಗೆ ಓಡಿಬಂದವು. ಆಯುಧವನ್ನು ಎತ್ತಿಹಿಡಿದಿದ್ದ ಸಹದೇವನನ್ನು ಭೀಮವೇಗದ, ಗಾಳಿಯ ವೇಗವುಳ್ಳ, ಮೋಡಗಳಂತೆ ಕಪ್ಪಾಗಿದ್ದ ಕುದುರೆಗಳು ಒಯ್ದುತಂದವು. ಸುವರ್ಣಮಯ ವಸ್ತ್ರಗಳಿಂದ ಆಚ್ಛಾದಿತವಾದ, ವೇಗದಲ್ಲಿ ವಾಯುವಿಗೆ ಸಮನಾಗಿದ್ದ ಕುದುರೆಗಳ ರಥದಲ್ಲಿದ್ದ ಯುಧಿಷ್ಠಿರನನ್ನು ಎಲ್ಲ ಸೇನೆಗಳೂ ಅನುಸರಿಸಿದವು. ರಾಜನ ಅನಂತರ ಪಾಂಚಾಲ್ಯ ದೃಪದನು ಬಂಗಾರದ ರೂಪಮಯ ಛತ್ರದಡಿಯಲ್ಲಿ ತನ್ನವರೆಲ್ಲರಿಂದ ರಕ್ಷಿಸಲ್ಪಟ್ಟಿದ್ದನು. ಲಲಾಮ ಎಂಬ ಚಿಹ್ನೆಯನ್ನು ಹೊಂದಿದ್ದ ಎಂತಹ ಮುಹಾಶಬ್ಧವನ್ನೂ ಸಹಿಸಿಕೊಳ್ಳಬಲ್ಲ ಕುದುರೆಗಳಿಂದ ಕೂಡಿದವನಾಗಿ ಯುದ್ಧದಲ್ಲಿ ರಾಜರ ಮಧ್ಯೆ ಆ ಮಹೇಷ್ವಾಸನು ಶಾಂತನಾಗಿ, ಭಯವಿಲ್ಲದೇ ಹೋಗುತ್ತಿದ್ದನು. ಅವನನ್ನು ವಿರಾಟನು ಮಹಾರಥ ಶೂರರಿಂದೊಡಗೂಡಿ ಅನುಸರಿಸಿದನು. ಕೇಕಯರು, ಶಿಖಂಡಿ ಮತ್ತು ಧೃಷ್ಟಕೇತು ಇವರು ಅವರವರ ಸೈನ್ಯಗಳೊಂದಿಗೆ ಪರಿವೃತರಾಗಿ ಮತ್ಸ್ಯರಾಜನನ್ನು ಹಿಂಬಾಲಿಸಿದರು. ಮತ್ಸ್ಯರಾಜನು ಪಾಟಲ ಪುಷ್ಪಗಳ ಸಮವರ್ಣದ ಉತ್ತಮ ಕುದುರೆಗಳು ಕೊಂಡೊಯ್ಯುತ್ತಿದ್ದ ರಥದಲ್ಲಿ ವಿರಾಜಿಸಿದನು. ಚಿನ್ನದ ಸರದಿಂದ ಅಲಂಕೃತವಾಗಿದ್ದ, ಹಳದೀ ಬಣ್ಣದ ವೇಗದ ಕುದುರೆಗಳು ವಿರಾಟರಾಜನ ಮಗನನ್ನು ತ್ವರೆಮಾಡಿ ಕೊಂಡೊಯ್ಯುತ್ತಿದ್ದವು. ಇಂದ್ರಗೋಪಗಳ ಬಣ್ಣದ ಕುದುರೆಗಳಿಂದ ಎಳೆಯಲ್ಪಟ್ಟ ರಥದಲ್ಲಿ ಕುಳಿತಿದ್ದ ಐವರು ಕೇಕಯ ಸಹೋದರರು ಬಂಗಾರದ ಬಣ್ಣದಂತೆ ಪ್ರಕಾಶಿಸುತ್ತಿದ್ದರು. ಎಲ್ಲರೂ ಕೆಂಪು ಧ್ವಜಗಳನ್ನು ಹೊಂದಿದ್ದರು. ಚಿನ್ನದ ಮಾಲೆಗಳನ್ನು ಧರಿಸಿದ್ದ ಆ ಎಲ್ಲ ಶೂರ ಯುದ್ಧವಿಶಾರದರೂ ಕವಚಗಳನ್ನು ಧರಿಸಿ ಮಳೆಸುರಿಸುವ ಮೋಡಗಳಂತೆ ಕಂಡರು. ಪಾಂಚಲ್ಯ ಶಿಖಂಡಿಯನ್ನು ಆಮಪಾತ್ರದ ಆಕಾರದ ಅರುಣೋದಯದ ಕೆಂಪುಬಣ್ಣದ ನಿಯಮವುಳ್ಳ ಕುದುರೆಗಳನ್ನು ಕಟ್ಟಿದ ಕುದುರೆಗಳು ಒಯ್ದವು. ಹನ್ನೆರಡು ಸಾವಿರ ಪಾಂಚಾಲರ ಮಹಾರಥರಲ್ಲಿ ಆರು ಸಾವಿರ ಮಂದಿ ಶಿಖಂಡಿಯನ್ನು ಅನುಸರಿಸಿದರು. ಶಿಶುಪಾಲನ ಮಗ ನರಸಿಂಹನನ್ನು ಸಾರಂಗದಂತೆ ಚುಕ್ಕೆಗಳನ್ನು ಹೊಂದಿದ ಕುದುರೆಗಳು ಕುಣಿಯುತ್ತಾ ಕೊಂಡೊಯ್ಯುತ್ತಿದ್ದವು. ಚೇದಿಗಳ ಋಷಭ ಧೃಷ್ಟಕೇತುವನ್ನು ಚುಕ್ಕೆಗಳನ್ನು ಹೊಂದಿದ್ದ ಕಾಂಬೋಜದ ಕುದುರೆಗಳು ಕೊಂಡೊಯ್ಯುತ್ತಿದ್ದವು. ಕೈಕೇಯರ ಸುಕುಮಾರ ಬೃಹತ್ಕ್ಷತ್ರನನ್ನು ಬೆಂಕಿಬಿದ್ದ ಹುಲ್ಲುಮೆದೆಯಿಂದ ಹೊರಡುವ ಹೊಗೆಯ ಬಣ್ಣದ ಸಿಂಧುದೇಶದ ಉತ್ತಮ ಕುದುರೆಗಳು ಶೀಘ್ರವಾಗಿ ಕೊಂಡೊಯ್ಯುತ್ತಿದ್ದವು.
ಶಿಖಂಡಿಯ ಶೂರಪುತ್ರ ಕ್ಷತ್ರದೇವನನ್ನು ಸ್ವಲಂಕೃತವಾದ ಮಲ್ಲಿಕಾಕ್ಷ, ಪದ್ಮವರ್ಣದ, ಬಾಹ್ಲಿಜಾತ ಕುದುರೆಗಳು ಕೊಂಡೊಯ್ಯುತ್ತಿದ್ದವು. ಕಾಶೀರಾಜ ಅಭಿಭುವನ ಮಗ ಯುವಕ ಸುಕುಮಾರ ಮಹಾರಥನನ್ನು ಕ್ರೌಂಚವರ್ಣದ ಉತ್ತಮ ಕುದುರೆಗಳು ಯುದ್ಧಕ್ಕೆ ಕೊಂಡೊಯ್ಯುತ್ತಿದ್ದವು. ಮನೋವೇಗದ ಕಪ್ಪು ಕುತ್ತಿಗೆಯ ಬಿಳೀ ಕುದುರೆಗಳು ರಾಜಪುತ್ರ ಪ್ರತಿವಿಂಧ್ಯನನ್ನು ಒಯ್ಯುತ್ತಿದ್ದವು. ಪಾರ್ಥನ ಮಗ ಸುತಸೋಮನನ್ನು ಉದ್ದಿನ ಹೂವಿನ ಬಣ್ಣದ ಕುದುರೆಗಳು ರಣರಂಗಕ್ಕೆ ಕೊಂಡೊಯ್ಯುತ್ತಿದ್ದವು. ಕುರುಗಳ ಪುರವಾದ ಉದಯೇಂದುವಿನಲ್ಲಿ ಜನಿಸಿದುದರಿಂದ , ಯಜ್ಞದಲ್ಲಿ ಸೋಮರಸವನ್ನು ಹಿಂಡುವ ಸಮಯದಲ್ಲಿ ಜನಿಸಿದುದರಿಂದ ಮತ್ತು ಸಹಸ್ರಸೋಮರ ಸಮಾನ ಕಾಂತಿಯನ್ನು ಹೊಂದಿದ್ದ ಅವನ ಹೆಸರು ಸುತಸೋಮನೆಂದಾಯಿತು. ನಕುಲನ ಮಗ ಶತಾನೀಕನನ್ನು ಶಾಲಪುಷ್ಪ ಬಣ್ಣದ, ಬಾಲಸೂರ್ಯನ ಕಾಂತಿಯ, ಶ್ಲಾಘನೀಯ ಕುದುರೆಗಳು ಕೊಂಡೊಯ್ದವು. ಕಾಂಚನದ ಹಗ್ಗಗಳಿಂದ ಬಿಗಿಯಲ್ಪಟ್ಟ, ನವಿಲಿನ ಕುತ್ತಿಗೆಯ ಬಣ್ಣದಂತಿದ್ದ ಕುದುರೆಗಳು ದ್ರೌಪದೇಯ, ನರವ್ಯಾಘ್ರ, ಶ್ರುತಕರ್ಮನನ್ನು ಒಯ್ದವು. ಯುದ್ಧದಲ್ಲಿ ಪಾರ್ಥನ ಸಮನೆಂದು ಹೇಳುವ, ವಿದ್ಯೆಯ ನಿಧಿಯೆನಿಸಿದ್ದ, ದ್ರೌಪದೇಯ ಶ್ರುತಕೀರ್ತಿಯನ್ನು ಕಳಿಂಗಪಕ್ಷಿಯ ರೆಕ್ಕೆಗಳ ಬಣ್ಣದ ಉತ್ತಮ ಕುದುರೆಗಳು ಒಯ್ದವು.
ಯುದ್ಧದಲ್ಲಿ ಕೃಷ್ಣ ಮತ್ತು ಪಾರ್ಥರಿಗಿಂತಲೂ ಅರ್ಧಗುಣ ಹೆಚ್ಚಿನವನೆಂದು ಯಾರಿಗೆ ಹೇಳುತ್ತಾರೋ ಆ ಕುಮಾರ ಅಭಿಮನ್ಯುವನ್ನು ರಣಕ್ಕೆ ಕಪಿಲವರ್ಣದ ಕುದುರೆಗಳು ಕೊಂಡೊಯ್ಯುತ್ತಿದ್ದವು. ಧಾರ್ತರಾಷ್ಟ್ರರಲ್ಲಿ ಪಾಂಡವರನ್ನು ಆಶ್ರಯಿಸಿದ ಒಬ್ಬನೇ ಒಬ್ಬ ಯುಯುತ್ಸುವನ್ನು ವಿಶಾಲವಾದ ಮಹಾಕಾಯ ಕುದುರೆಗಳು ರಣಕ್ಕೆ ಕೊಂಡೊಯ್ದವು. ತರಸ್ವಿ ವಾರ್ಧಕ್ಷೇಮಿಯನ್ನು ಜೋಳದ ಕಡ್ಡಿಯ ಬಣ್ಣದ ಸ್ವಲಂಕೃತವಾದ ಹೃಷ್ಟ ಕುದುರೆಗಳು ಆ ತುಮುಲ ಯುದ್ಧಕ್ಕೆ ಕರೆದೊಯ್ದವು. ಕುಮಾರ ಸೌಚಿತ್ತಿಯನ್ನು ರುಕ್ಮಪತ್ರಗಳನ್ನು ಹೊದ್ದಿದ್ದ, ಕಪ್ಪು ಕಾಲುಗಳುಳ್ಳ, ಸಾರಥಿಯ ಆಜ್ಞಾನುಸಾರವಾಗಿ ಹೆಜ್ಜೆಗಳನ್ನಿಡುತ್ತಿದ್ದ ಕುದುರೆಗಳು ಯುದ್ಧಕ್ಕೆ ಕೊಂಡೊಯ್ಯುತ್ತಿದ್ದವು. ಸುವರ್ಣಪೀಠವನ್ನು ಹೊತ್ತಿದ್ದ, ರೇಷ್ಮೆಯಂತಹ ನವಿರಾದ ಕೂದಲುಗಳುಳ್ಳ, ಸುವರ್ಣದ ಮಾಲೆಗಳನ್ನು ಧರಿಸಿದ, ಸಹಸಶಕ್ತಿಯುಳ್ಳ ಕುದುರೆಗಳು ಶ್ರೇಣಿಮಂತನನ್ನು ಕೊಂಡೊಯ್ಯುತ್ತಿದ್ದವು. ಚಿನ್ನದ ಮಾಲೆಯನ್ನು ಧರಿಸಿದ್ದ, ಶೂರ, ಹೇಮವರ್ಣದ, ಸ್ವಲಂಕೃತವಾಗಿದ್ದ, ಶ್ಲಾಘನೀಯವಾದ ಶ್ರೇಷ್ಠ ಹಯಗಳು ಕಾಶಿರಾಜನನ್ನು ಕೊಂಡೊಯ್ಯುತ್ತಿದ್ದವು. ಅಸ್ತ್ರಗಳಲ್ಲಿ, ಧನುರ್ವೇದದಲ್ಲಿ ಮತ್ತು ಬ್ರಾಹ್ಮೀ ವೇದದಲ್ಲಿ ಪಾರಂಗತನಾದ ಆ ಸತ್ಯಧೃತಿಯನ್ನು ಅರುಣವರ್ಣದ (ಎಣ್ಣೆಗಂಪಿನ) ಕುದುರೆಗಳು ಕೊಂಡೊಯ್ಯುತ್ತಿದ್ದವು. ಯಾವ ಪಾಂಚಾಲಸೇನಾನಿಯು ದ್ರೋಣನನ್ನು ತನ್ನ ಪಾಲಿಗೆ ಕಲ್ಪಿಸಿಕೊಂಡಿದ್ದನೋ ಆ ಧೃಷ್ಟದ್ಯುಮ್ನನನ್ನು ಪಾರಿವಾಳದ ಬಣ್ಣದ ಕುದುರೆಗಳು ಒಯ್ದವು. ಅವನನ್ನು ಸೌಚಿತ್ತಿ ಸತ್ಯಧೃತಿ, ವಸುದಾನನ ಪುತ್ರ ಶ್ರೇಣಿಮಾನ್ ಮತ್ತು ಕಾಶೀರಾಜನ ಮಗ ಅಭಿಭೋ ಇವರು ಅನುಸರಿಸಿದರು. ವೇಗಯುಕ್ತವಾದ ಹೇಮಮಾಲೆಗಳನ್ನು ಧರಿಸಿದ್ದ, ಶತ್ರುಗಳ ಸೇನೆಯನ್ನು ಭಯಪಡಿಸುತ್ತಿದ್ದ, ವೈಶ್ರವಣ ಯಮರಂತಿದ್ದ, ಆಯುಧಗಳನ್ನು ಎತ್ತಿ ಹಿಡಿದಿದ್ದ ಆರು ಸಾವಿರ ಪಾಂಚಾಲದ ಪ್ರಭದ್ರಕರು ನಾನಾ ವರ್ಣದ ಶ್ರೇಷ್ಠ ಪರಮ ಕಾಂಬೋಜ ಕುದುರೆಗಳೊಂದಿಗೆ ಹೇಮಚಿತ್ರರಥಧ್ವಜಗಳೊಂದಿಗೆ, ಕಾರ್ಮುಕಗಳನ್ನು ಹಿಡಿದು ಶತ್ರುಗಳನ್ನು ಶರಗಳ ಮಳೆಯಿಂದ ಭಯಗೊಳಿಸುತ್ತ ಮೃತ್ಯುವಿನ ಸಮನಾಗಿದ್ದುಕೊಂಡು ಧೃಷ್ಟದ್ಯುಮ್ನನನ್ನು ಅನುಸರಿಸಿದರು.
ಕೌಶೇಯವರ್ಣದ, ಸುವರ್ಣವರಮಾಲೆಗಳನ್ನು ಧರಿಸಿದ್ದ ಉತ್ತಮ ಹಯಗಳು ಚೇಕಿತಾನನನ್ನು ಕೊಂಡೊಯ್ದವು. ಸವ್ಯಸಾಚಿಯ ಸೋದರಮಾವ ಪುರುಜಿತ್ ಕುಂತೀಭೋಜನನ್ನು ಕಾಮನಬಿಲ್ಲಿನ ಬಣ್ಣದ ಉತ್ತಮ ಕುದುರೆಗಳು ಸುಂದರ ರಥದಲ್ಲಿ ಕೊಂಡೊಯ್ದವು. ನಕ್ಷತ್ರಗಳಿಂದ ಚಿತ್ರಿತವಾದ ಅಂತರಿಕ್ಷದ ಬಣ್ಣವುಳ್ಳ ಕುದುರೆಗಳು ರಾಜಾ ರೋಚಮಾನನನ್ನು ಯುದ್ಧಕ್ಕೆ ಕೊಂಡೊಯ್ದವು. ಜರಾಸಂಧನ ಮಗ ಸಹದೇವನನ್ನು ಬಂಗಾರದ ಜಾಲಗಳಿಂದ ಅಲಂಕೃತವಾಗಿದ್ದ, ಚಿತ್ರವರ್ಣದ, ಕಪ್ಪು ಕಾಲುಗಳ ಶ್ರೇಷ್ಠ ಹಯಗಳು ಕೊಂಡೊಯ್ದವು. ಕಮಲದ ದಂಟಿನ ಬಣ್ಣದ, ವೇಗದಲ್ಲಿ ಗಿಡುಗಕ್ಕೆ ಸಮನಾದ ವಿಚಿತ್ರವಾಗಿದ್ದ ಉತ್ತಮ ಕುದುರೆಗಳು ಸುದಾಮಾನನನ್ನು ಕೊಂಡೊಯ್ದವು. ಮೊಲದ ಬಣ್ಣದ ಮತ್ತು ಕೆಂಪು ಬಣ್ಣದ, ಬಿಳೀ ಕೂದಲಿನಿಂದ ಹೊಳೆಯುತ್ತಿದ್ದ ಕುದುರೆಗಳು ಪಾಂಚಾಲ್ಯ ಗೋಪತಿಯ ಮಗ ಸಿಂಹಸೇನನನ್ನು ಕೊಂಡೊಯ್ಯುತ್ತಿದ್ದವು.
ಜನಮೇಜಯನೆಂದು ಖ್ಯಾತನಾಗಿದ್ದ ಪಾಂಚಾಲರ ನರವ್ಯಾಘ್ರನನ್ನು ಸಾಸಿವೆ ಹೂವಿನ ಬಣ್ಣದ ಉತ್ತಮ ಹಯಗಳು ಕೊಂಡೊಯ್ಯುತ್ತಿದ್ದವು. ಉದ್ದಿನ ಬಣ್ಣದ, ವೇಗಶಾಲೀ, ಬಂಗಾರದ ಮಾಲೆಗಳನ್ನು ಧರಿಸಿದ್ದ, ಮೊಸರಿನಂತೆ ಬಿಳುಪಾದ ಪೃಷ್ಠಭಾಗವನ್ನು ಹೊಂದಿದ್ದ, ಮುಖದಲ್ಲಿ ಚುಕ್ಕೆಗಳನ್ನು ಹೊಂದಿದ್ದ ಎತ್ತರ ಕುದುರೆಗಳು ಪಾಂಚಾಲ್ಯ ದ್ರುತನನ್ನು ಕೊಂಡೊಯ್ಯುತ್ತಿದ್ದವು. ಬಿದಿರಿನ ಗಿಣ್ಣಿನ ಬಣ್ಣದ ಕಮಲಬಣ್ಣದಂತೆ ಕಾಂತಿಯುಕ್ತವಾಗಿದ್ದ ಶೂರ ಭದ್ರಕ ಕುದುರೆಗಳು ದಂಡಧಾರನನ್ನು ಒಯ್ದವು. ಕೋಸಲಾಧಿಪತಿಯ ಮಗ ಸುಕ್ಷತ್ರನನ್ನು ಹೇಮಮಾಲೆಗಳಿಂದ ಬೆಳಗುತ್ತಿದ್ದ ಚಕ್ರವಾಕದ ಬಣ್ಣದ ಕುದುರೆಗಳು ರಥದಲ್ಲಿ ಕೊಂಡೊಯ್ದವು. ಅನೇಕ ಚುಕ್ಕೆಗಳಿಂದ ಕೂಡಿದ್ದ, ಎತ್ತರವಾಗಿದ್ದ, ವಶವರ್ತಿಗಳಾಗಿದ್ದ, ಬಂಗಾರದ ಮಾಲೆಗಳನ್ನು ಧರಿಸಿದ್ದ, ಶುಭಕರವಾಗಿದ್ದ ಕುದುರೆಗಳು ಕ್ಷೇಮಿಯ ಮಗ ಸತ್ಯಧೃತಿಯನ್ನು ಯುದ್ಧಕ್ಕೆ ಕೊಂಡೊಯ್ದವು. ಯಾರ ಧ್ವಜ, ಕವಚ, ಧನುಸ್ಸು ಎಲ್ಲವೂ ಒಂದೇ ಬಣ್ಣದವುಗಳೋ ಆ ಶುಕ್ಲನು ಬಿಳೀ ಬಣ್ಣದ ಕುದುರೆಗಳೊಂದಿಗೆ ಹಿಂದಿರುಗಿದನು.
ಸಮುದ್ರಸೇನನ ಮಗ, ರುದ್ರತೇಜಸ್ವಿ, ಚಂದ್ರದೇವನನ್ನು ಸಮುದ್ರದಲ್ಲಿ ಜನಿಸಿದ ಚಂದ್ರನ ಸದೃಶ ಕುದುರೆಗಳು ಕೊಂಡೊಯ್ದವು. ಬಂಗಾರದ ಆಭರಣಗಳಿಂದ ವಿಭೂಷಿತವಾದ, ಚಿತ್ರಮಾಲೆಗಳನ್ನು ಧರಿಸಿದ್ದ ಕನ್ನೈದಿಲೆಯ ಬಣ್ಣದ ಹಯಗಳು ಶೈಬ್ಯ ಚಿತ್ರರಥನನ್ನು ಯುದ್ಧಕ್ಕೆ ಕೊಂಡೊಯ್ದವು. ನೆಲಗಡಲೆ ಹೂವಿನ ಬಣ್ಣದ, ಕೆಂಪು ಮತ್ತು ಬಿಳಿಪು ಕೂದಲಿನಿಂದ ರಾರಾಜಿಸುತ್ತಿದ್ದ ಶ್ರೇಷ್ಠ ಹಯಗಳು ರಥಸೇನನನ್ನು ಕೊಂಡೊಯ್ಯುತ್ತಿದ್ದವು. ಯಾರನ್ನು ಸರ್ವಮನುಷ್ಯರಿಗಿಂತಲೂ ಶೂರನೆಂದು ಹೇಳುತ್ತಾರೋ ಆ ಪಟಚ್ಚರ ಹಂತಾರ ನೃಪನನ್ನು ಗಿಳಿಯ ಬಣ್ಣದ ಕುದುರೆಗಳು ಕೊಂಡೊಯ್ದವು. ಚಿತ್ರಮಾಲ್ಯ, ಚಿತ್ರವಾದ ಕವಚ-ಆಯುಧ-ಧ್ವಜವನ್ನು ಹೊಂದಿದ್ದ ಚಿತ್ರಾಯುಧನನ್ನು ಮುತ್ತುಗದ ಹೂವಿನ ಬಣ್ಣದ ಉತ್ತಮ ಹಯಗಳು ಕೊಂಡೊಯ್ದವು. ಧ್ವಜ-ಕವಚ-ಧನುಸ್ಸು-ರಥ-ಕುದುರೆಗಳು ಎಲ್ಲವೂ ಒಂದೇ ನೀಲಿ ಬಣ್ಣದಲ್ಲಿರುವ ನೀಲನು ಹಿಂದಿರುಗಿದನು. ಯಾರ ಕಟಾಂಜನ, ರಥ ಮತ್ತು ಧನುಸ್ಸುಗಳು ನಾನಾರೂಪದ ರತ್ನಗಳಿಂದ ಮೆತ್ತಲ್ಪಟ್ಟಿದ್ದವೋ ಆ ಚಿತ್ರರಾಜನು ಚಿತ್ರಿತವಾಗಿ ಕಾಣುತ್ತಿದ್ದ ಚಿತ್ರವರ್ಣದ ಕುದುರೆ, ಧ್ವಜ ಮತ್ತು ಪತಾಕೆಗಳೊಂದಿಗೆ ಯುದ್ಧಕ್ಕೆ ಹೋದನು. ಕಮಲಪತ್ರದ ಸಮಾನ ಬಣ್ಣದ ಉತ್ತಮ ಹಯಗಳು ರೋಚಮಾನನ ಮಗ ಹೇಮವರ್ಣನನ್ನು ಕೊಂಡೊಯ್ದವು. ಯುದ್ಧಪ್ರಯೋಜಕಗಳಾದ, ಮಂಗಳದಾಯಕಗಳಾದ, ಲಾಳದ ಕಡ್ಡಿಯ ಬಣ್ಣದ, ಬಿಳಿಯ ಅಂಡಗಳನ್ನು ಹೊಂದಿದ್ದ, ಕೋಳಿಯ ಮೊಟ್ಟೆಯಂತೆ ಬಿಳುಪಾಗಿದ್ದ ಕುದುರುಗಳು ದಂಡಕೇತುವನ್ನು ಕೊಂಡೊಯ್ದವು.
ಅಡುಸೋಗೇಗಿಡದ ಬಣ್ಣದಂತೆ ಪ್ರಕಾಶಮಾನವಾಗಿದ್ದ ಕುದುರೆಗಳು ಪಾಂಡ್ಯನನ್ನು ಅನುಸರಿಸಿ ಹೋಗುತ್ತಿದ್ದ ಒಂದು ಲಕ್ಷ ನಲವತ್ತು ಸಾವಿರ ರಥಮುಖ್ಯರನ್ನು ಕೊಂಡೊಯ್ಯುತ್ತಿದ್ದವು. ನಾನವಿಧವಾದ ರೂಪಗಳುಳ್ಳ, ಬಣ್ಣಗಳ, ನಾನಾ ಆಕೃತಿಯ ಮುಖಗಳುಳ್ಳ ಕುದುರೆಗಳು ರಥಚಕ್ರದ ಚಿಹ್ನೆಯ ಧ್ವಜವುಳ್ಳ ವೀರ ಘಟೋತ್ಕಚನನ್ನು ಕೊಂಡೊಯ್ದವು. ಸುವರ್ಣವರ್ಣದ ಶ್ರೇಷ್ಠ ಕುದುರೆಗಳು ಸೇನೆಗಳ ಮಧ್ಯವಿದ್ದ ಯುಧಿಷ್ಠಿರನನ್ನು ಎಲ್ಲ ಕಡೆಯಿಂದ ಸುತ್ತುವರೆದು ಹಿಂದೆ ಹಿಂದೆ ಹೋಗುತ್ತಿದ್ದವು. ನಾನಾವಿಧದ ಬಣ್ಣಗಳ ಸುಂದರ ಕುದುರೆಗಳಿಂದ ಯುಕ್ತವಾದ ರಥಗಳಲ್ಲಿ ದೇವರೂಪೀ ಅನೇಕ ಪ್ರಭದ್ರಕರು ಕಾಂಚನಧ್ವಜರಾಗಿ ಭೀಮಸೇನನೊಂದಿಗೆ ಇಂದ್ರನೊಡನಿರುವ ದಿವೌಕಸರಂತೆ ಕಾಣುತ್ತಿದ್ದರು. ಅಲ್ಲಿ ಸೇರಿದ್ದ ಅವರೆಲ್ಲರನ್ನೂ ಮೀರಿಸಿ ಧೃಷ್ಟದ್ಯುಮ್ನನು ರಾಜಿಸಿದನು. ಆದರೆ ಸರ್ವ ಸೇನೆಗಳಲ್ಲಿಯೂ ಕೂಡ ಭಾರದ್ವಾಜನು ಅತಿಯಾಗಿ ರಾರಾಜಿಸಿದನು.
ದ್ವಂದ್ವಯುದ್ಧ
ಪಾಂಡವರು ಹಿಂದಿರುಗಿದ ನಂತರ ಮೋಡಗಳಿಂದ ಸೂರ್ಯನು ಹೇಗೋ ಹಾಗೆ ದ್ರೋಣನು ಬಾಣಗಳಿಂದ ಮುಚ್ಚಲ್ಪಡಲು ಕೌರವರಿಗೆ ಮಹಾ ಭಯವುಂಟಾಯಿತು. ಅವರ ತೀವ್ರ ನಡೆದಾಟದಿಂದ ಎದ್ದ ಧೂಳು ಕೌರವ ಸೈನ್ಯವನ್ನು ಸಂಪೂರ್ಣವಾಗಿ ಮುಚ್ಚಿತು. ಅದರಿಂದ ಅವರಿಗೆ ಕಾಣದಂತಾಗಿ, ದ್ರೋಣನು ಹತನಾದನೆಂದೇ ಅವರು ಭಾವಿಸಿದರು. ಕ್ರೂರ ಕರ್ಮವನ್ನು ಮಾಡಲು ಬಯಸಿದ್ದ ಆ ಶೂರ ಮಹೇಷ್ವಾಸರನ್ನು ಕಂಡು ತಕ್ಷಣವೇ ದುರ್ಯೋಧನನು ತನ್ನ ಸೈನ್ಯವನ್ನು ಪ್ರಚೋದಿಸಿದನು: “ನರಾಧಿಪರೇ! ಯಥಾಶಕ್ತಿಯಾಗಿ, ಯಥೋತ್ಸಾಹದಿಂದ, ಯಥಾಸತ್ವವನ್ನು ಬಳಸಿ ಯಥಾಯೋಗವಾಗಿ ಪಾಂಡವರ ಸೇನೆಯನ್ನು ತಡೆಯಿರಿ!” ಆಗ ಧೃತರಾಷ್ಟ್ರನ ಮಗ ದುರ್ಮರ್ಷಣನು ಬಾಣಗಳನ್ನು ಎರಚುತ್ತಾ ದ್ರೋಣನ ಜೀವವನ್ನು ಕಳೆಯಲಿಚ್ಛಿಸಿದ ಭೀಮನನ್ನು ಎದುರಿಸಿದನು. ಕ್ರುದ್ಧನಾಗಿ ಯುದ್ಧದಲ್ಲಿ ಮೃತ್ಯುಸಮಾನ ಬಾಣಗಳಿಂದ ಅವನನ್ನು ಹೊಡೆಯಲು, ಭೀಮಸೇನನೂ ಕೂಡ ಬಾಣಗಳಿಂದ ಅವನನ್ನು ಗಾಯಗೊಳಿಸಿದನು. ಮಹಾತುಮುಲ ಯುದ್ಧವು ನಡೆಯಿತು.
ತಮ್ಮ ಯಜಮಾನದಿಂದ ಆಜ್ಞಾಪಿತರಾದ ಆ ಪ್ರಾಜ್ಞರು, ಶೂರರು, ಪ್ರಹಾರಿಗಳು ಮೃತ್ಯುಭಯ-ಅಧಿಕಾರಭಯಗಳನ್ನು ತೊರೆದು ಶತ್ರುಗಳೊಂದಿಗೆ ಯುದ್ಧಮಾಡಿದರು. ಕೃತವರ್ಮನು ದ್ರೋಣನ ಬಳಿಬರುತ್ತಿದ್ದ ದಾಯಾದಿ ಸಾತ್ಯಕಿಯನ್ನು ಸುತ್ತುವರೆದನು. ಅವನನ್ನು ಶೈನೇಯನೂ ಶೈನೇಯನನ್ನು ಕೃತವರ್ಮನೂ ಮದಿಸಿದ ಆನೆಗಳಂತೆ ಕ್ರುದ್ಧರಾಗಿ ಕ್ರುದ್ಧರನ್ನು ತಡೆದರು. ಉಗ್ರಧನ್ವಿ ಸೈಂಧವನು ದ್ರೋಣನ ಕಡೆ ಬರುತ್ತಿದ್ದ ಶರಗಳ ಮಳೆಯನ್ನು ಸುರಿಸುತ್ತಿದ್ದ ಮಹೇಷ್ವಾಸ ಕ್ಷತ್ರಧರ್ಮನನ್ನು ತಡೆದನು. ಕ್ರುದ್ಧನಾದ ಕ್ಷತ್ರಧರ್ಮನು ಸಿಂಧುಪತಿಯ ಕೇತನ-ಕಾರ್ಮುಕಗಳನ್ನು ತುಂಡುಮಾಡಿ ಅನೇಕ ನಾರಾಚಗಳಿಂದ ಅವನ ಸರ್ವ ಮರ್ಮಗಳಿಗೆ ಹೊಡೆದನು. ಕೃತಹಸ್ತನಾದ ಸೈಂಧವನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಎಲ್ಲವೂ ಲೋಹಮಯವಾದ ಶರಗಳಿಂದ ರಣದಲ್ಲಿ ಕ್ಷತ್ರಧರ್ಮನನ್ನು ಹೊಡೆದನು. ಪಾಂಡವರಿಗೋಸ್ಕರವಾಗಿ ಯುದ್ಧಮಾಡುತ್ತಾ ದ್ರೋಣನ ಕಡೆ ಬರುತ್ತಿದ್ದ ಅಣ್ಣ ಶೂರ ಮಹಾರಥ ಯುಯುತ್ಸುವನ್ನು ಸುಬಾಹುವು ಪ್ರಯತ್ನಿಸಿ ತಡೆದನು. ಅದರಿಂದ ಕ್ರುದ್ಧನಾದ ಯುಯುತ್ಸುವು ನಿಶಿತವಾದ ಪೀತವರ್ಣದ ಎರಡು ಕ್ಷುರಗಳಿಂದ ಧನುರ್ಬಾಣಯುಕ್ತವಾಗಿದ್ದ ಪರಿಘಗಳಂತಿದ್ದ ಅವರ ಎರಡು ಭುಜಗಳನ್ನೂ ಕತ್ತರಿಸಿದನು. ಪ್ರಕ್ಷುಬ್ದವಾದ ಸಾಗರವನ್ನು ದಡವು ತಡೆಯುವಂತೆ ರಾಜಾ ಯುಧಿಷ್ಠಿರನನ್ನು ಮದ್ರರಾಜನು ತಡೆಹಿಡಿದನು. ಅವನ ಮೇಲೆ ಧರ್ಮರಾಜನು ಅನೇಕ ಮರ್ಮಭೇದಿ ಬಾಣಗಳನ್ನು ಎರಚಲು ಮದ್ರೇಶಸ್ತನು ಅರವತ್ನಾಲ್ಕು ಬಾಣಗಳಿಂದ ಅವನನ್ನು ಹೊಡೆದು ಜೋರಾಗಿ ಗರ್ಜಿಸಿದನು. ಗರ್ಜಿಸುತ್ತಿದ್ದ ಅವನ ಕೇತು ಮತ್ತು ಕಾರ್ಮುಕಗಳನ್ನು ಪಾಂಡವಶ್ರೇಷ್ಠನು ಎರಡು ಕ್ಷುರಗಳಿಂದ ಕತ್ತರಿಸಲು ಜನರು ಜೋರಾಗಿ ಜಯಕಾರ ಮಾಡಿದರು. ಹಾಗೆಯೇ ರಾಜಾ ಬಾಹ್ಲೀಕನು ತನ್ನ ಸೇನೆಯೊಂದಿಗೆ ಬರುತ್ತಿದ್ದ ರಾಜ ದ್ರುಪದನನ್ನು ಸೇನೆಯನ್ನೊಡಗೂಡಿ ಶರಗಳಿಂದ ತಡೆದನು. ಆಗ ಸೇನೆಗಳೊಡನಿದ್ದ ಆ ಇಬ್ಬರು ವೃದ್ಧರ ನಡುವೆ ಮದೋದಕವನ್ನು ಸುರಿಸುತ್ತಿದ್ದ ಎರಡು ಮಹಾಗಜಗಳ ನಡುವಿನಂತೆ ಘೋರವಾದ ಯುದ್ಧವು ನಡೆಯಿತು. ಅವಂತಿಯ ವಿಂದಾನುವಿಂದರು ಸೇನೆಗಳೊಡನೆ ಸೇನಾಸಮೇತನಾಗಿದ್ದ ಮತ್ಸ್ಯ ವಿರಾಟನನ್ನು ಹಿಂದೆ ಇಂದ್ರಾಗ್ನಿಗಳಿಬ್ಬರೂ ಬಲಿಯನ್ನು ಆಕ್ರಮಣಿಸಿದಂತೆ ಆಕ್ರಮಣಿಸಿದರು.
ಆಗ ದೇವಾಸುರರ ಯುದ್ದದಂತೆ ಮತ್ಸ್ಯ ಮತ್ತು ಕೇಕಯರ ನಡುವೆ ಭಯವಿಲ್ಲದೇ ಅಶ್ವ-ರಥ-ಗಜಗಳ ಭಯಂಕರ ಯುದ್ಧವು ನಡೆಯಿತು. ನಕುಲನ ಮಗ ಶತಾನೀಕನನ್ನು ಸಭಾಪತಿ ಭೂತಕರ್ಮನು ಬಾಣಗಳ ಜಾಲವನ್ನೇ ಬೀಸುತ್ತಾ ದ್ರೋಣನ ಬಳಿ ಬಾರದಂತೆ ತಡೆದನು. ಆಗ ನಕುಲನ ಮಗನು ತೀಕ್ಷ್ಣವಾದ ಮೂರು ಭಲ್ಲಗಳಿಂದ ಭೂತಕರ್ಮನ ಬಾಹುಗಳನ್ನೂ ಕತ್ತನ್ನೂ ದೇಹದಿಂದ ಬೇರ್ಪಡಿಸಿದನು. ಶರಗಳ ಮಳೆಯನ್ನೇ ಪ್ರಯೋಗಿಸುತ್ತಾ ದ್ರೋಣಾಭಿಮುಖನಾಗಿ ಬರುತ್ತಿದ್ದ ವೀರ ವಿಕ್ರಾಂತ ಸುತಸೋಮನನ್ನು ವಿವಿಂಶತಿಯು ತಡೆದನು. ಸಂಕ್ರುದ್ಧನಾದ ಕವಚವನ್ನು ಧರಿಸಿದ್ದ ಸುತಸೋಮನು ಚಿಕ್ಕಪ್ಪ ವಿವಿಂಶತಿಯನ್ನು ಜಿಹ್ಮಗ ಶರಗಳಿಂದ ಹೊಡೆದು ಹಿಮ್ಮೆಟ್ಟಲಿಲ್ಲ. ಅನಂತರ ಭೀಮರಥನು ನಿಶಿತವಾದ ಆರು ಆಯಸಗಳಿಂದ ಶಾಲ್ವನನ್ನು ಕುದುರೆಗಳೊಂದಿಗೆ ಯಮಸಾದನಕ್ಕೆ ಕಳುಹಿಸಿದನು. ನವಿಲಿನ ಬಣ್ಣದ ಕುದುರೆಗಳೊಡನೆ ಬರುತ್ತಿದ್ದ ಶ್ರುತಕರ್ಮನನ್ನು ಧೃತರಾಷ್ಟ್ರನ ಮೊಮ್ಮಗ, ಚಿತ್ರಸೇನಿಯ ಮಗನು ತಡೆದನು. ಪರಸ್ಪರರ ವಧೆಮಾಡಲು ಬಯಸಿದ್ದ ಆ ಇಬ್ಬರು ಧೃತರಾಷ್ಟ್ರನ ದುರ್ಧರ್ಷ ಮೊಮ್ಮೊಕ್ಕಳು ತಂದೆಯರಿಗೆ ಅರ್ಥಸಿದ್ಧಿಯಾಗಲೆಂದು ಉತ್ತಮ ಯುದ್ಧದಲ್ಲಿ ತೊಡಗಿದರು. ರಣರಂಗದಲ್ಲಿ ಮುಂದೆ ನಿಂತಿರುವ ಪ್ರತಿವಿಂಧ್ಯನನ್ನು ನೋಡಿ ದ್ರೌಣಿಯು, ತಂದೆಗೆ ಮಾನವನ್ನುಂಟು ಮಾಡುತ್ತಾ ಮಾರ್ಗಣಗಳಿಂದ ಅವನನ್ನು ಮುಚ್ಚಿದನು. ತಂದೆಗೋಸ್ಕರವಾಗಿ ನಿಂತಿದ್ದ ಆ ಸಿಂಹದಬಾಲದ ಚಿಹ್ನೆಯ ಧ್ವಜವುಳ್ಳವನನ್ನು ಕ್ರುದ್ಧನಾದ ಪ್ರತಿವಿಂಧ್ಯನು ನಿಶಿತ ಶರಗಳಿಂದ ಪ್ರತಿಯಾಗಿ ಹೊಡೆದನು. ಬೀಜಬಿತ್ತುವ ಕಾಲದಲ್ಲಿ ಬೀಜಗಳನ್ನು ಸುರಿಸುವಂತೆ ದ್ರೌಣಿಯು ದ್ರೌಪದೇಯನನ್ನು ಶರವರ್ಷಗಳಿಂದ ಮುಚ್ಚಿದನು. ಯಾರನ್ನು ಎರಡೂ ಸೇನೆಗಳಲ್ಲಿ ಅತ್ಯಂತ ಶೂರನೆಂದು ಅಭಿಪ್ರಾಯಪಡುತ್ತಾರೋ ಆ ಪಟಚ್ಚರಹಂತಾರನನ್ನು ಲಕ್ಷ್ಮಣನು ಎದುರಿಸಿದನು. ಅವನು ಲಕ್ಷ್ಮಣನ ಧನುಸ್ಸು ಮತ್ತು ಧ್ವಜಗಳನ್ನು ತುಂಡರಿಸಿ ಲಕ್ಷ್ಮಣನ ಮೇಲೆ ಶರಜಾಲಗಳನ್ನು ಪ್ರಯೋಗಿಸಿ ಬಹುವಾಗಿ ಶೋಭಿಸಿದನು. ಸಮರದಲ್ಲಿ ಮಹಾಪ್ರಾಜ್ಞ ಯುವಕ ವಿಕರ್ಣನು ಮುಂದುವರೆಯುತ್ತಿದ್ದ ಯುವಕ ಯಾಜ್ಞಸೇನಿ ಶಿಖಂಡಿಯನ್ನು ಸುತ್ತುವರೆದು ತಡೆದನು. ಆಗ ಯಾಜ್ಞಸೇನಿಯು ಅವನನ್ನು ಶರಜಾಲಗಳಿಂದ ಮುಚ್ಚಿದನು. ವಿಕರ್ಣನು ಆ ಬಾಣಜಾಲವನ್ನು ತೆಗೆದುಹಾಕಿದನು. ದ್ರೋಣಾಭಿಮುಖವಾಗಿ ಬರುತ್ತಿದ್ದ ಉತ್ತಮೌಜಸನನ್ನು ಅಂಗದನು ಎದುರಿಸಿ ವತ್ಸದಂತಗಳಿಂದ ತಡೆದನು. ಆ ಇಬ್ಬರು ಪುರುಷಸಿಂಹರು ಪ್ರಹಾರಿಸುತ್ತಾ ತುಮುಲ ಯುದ್ಧವನ್ನು ನಡೆಸಿರಲು ಅವರ ಮೆಲೆ ಎಲ್ಲ ಸೈನಿಕರಿಗೂ ಪ್ರೀತಿಯು ಹೆಚ್ಚಾಯಿತು. ಮಹೇಷ್ವಾಸ ದುರ್ಮುಖನಾದರೋ ದ್ರೋಣನ ಕಡೆ ಬರುತ್ತಿದ್ದ ವೀರ ಪುರಜಿತ ಬಲಶಾಲೀ ಕುಂತಿಭೋಜನನ್ನು ತಡೆದನು. ಅವನು ನಾರಾಚಗಳಿಂದ ದುರ್ಮುಖನ ಹುಬ್ಬುಗಳ ಮಧ್ಯೆ ಹೊಡೆದನು. ಆಗ ಅವನ ಮುಖವು ನಾಳಯುಕ್ತ ಕಮಲದಂತೆ ಕಂಡಿತು. ಕರ್ಣನಾದರೋ ದ್ರೋಣನ ಅಭಿಮುಖವಾಗಿ ಬರುತ್ತಿದ್ದ ಕೆಂಪು ಧ್ವಜಗಳನ್ನುಳ್ಳ ಕೇಕಯ ಸಹೋದರರನ್ನು ಶರವರ್ಷಗಳಿಂದ ತಡೆದನು. ತುಂಬಾ ಸಿಟ್ಟಿಗೆದ್ದ ಅವರು ಅವನನ್ನೂ ಬಾಣಗಳ ಮಳೆಯಿಂದ ಮುಚ್ಚಿದರು. ಅವನೂ ಕೂಡ ಅವರನ್ನು ಪುನಃ ಪುನಃ ಶರಜಾಲಗಳಿಂದ ಮುಚ್ಚಿದನು. ಪರಸ್ಪರ ಬಾಣಪ್ರಯೋಗಳಿಂದ ಮುಚ್ಚಲ್ಪಟ್ಟ ಕರ್ಣನಾಗಲೀ, ಆ ಐವರಾಗಲೀ ಅವರ ಕುದುರೆ-ಸೂತ-ರಥಗಳ ಸಹಿತ ಕಾಣಲಿಲ್ಲ.
ಧೃತರಾಷ್ಟ್ರನ ಮಕ್ಕಳಾದ ದುರ್ಜಯ, ಜಯ ಮತ್ತು ವಿಜಯರು ನೀಲ, ಕಾಶ್ಯ ಮತ್ತು ಜಯ ಈ ಮೂರು ಶೂರರನ್ನು ತಡೆದರು. ಆಗ ಕಾಡು ಕೋಣಗಳೊಂದಿಗೆ ಸಿಂಹ-ವ್ಯಾಘ್ರ-ತೋಳಗಳ ಹೊಡೆದಾಟದಂತೆ ನೋಡುವವರಿಗೆ ಸಂತೋಷವನ್ನು ಕೊಡುವ ಘೋರ ಯುದ್ಧವು ಅವರ ನಡುವೆ ನಡೆಯಿತು. ಕ್ಷೇಮಧೂರ್ತಿ ಮತ್ತು ಬೃಹಂತ ಈ ಇಬ್ಬರು ಸಹೋದರರೂ ಯುದ್ಧದಲ್ಲಿ ದ್ರೋಣನ ಕಡೆ ಬರುತ್ತಿದ್ದ ಸಾತ್ವತ ಸಾತ್ಯಕಿಯನ್ನು ತೀಕ್ಷ್ಣ ಶರಗಳಿಂದ ಗಾಯಗೊಳಿಸಿದರು. ಅವರ ನಡುವೆ ವನದಲ್ಲಿ ಮದೋದಕವನ್ನು ಸುರಿಸುವ ಎರಡು ಆನೆಗಳೊಡನೆ ಸಿಂಹದ ಹೋರಾಟದಂತೆ ಅದ್ಭುತವಾದ ಯುದ್ಧವು ನಡೆಯಿತು. ಚೇದಿರಾಜನು ಕ್ರುದ್ಧನಾಗಿ ಬಾಣಗಳನ್ನು ಪ್ರಯೋಗಿಸಿ ಯುದ್ಧಾಭಿನಂದನ ರಾಜಾ ಅಂಬಷ್ಠನನ್ನು ದ್ರೋಣನ ಬಳಿ ಹೋಗದಂತೆ ತಡೆದನು. ಅಂಬಷ್ಟನು ಅವನನ್ನು ಶಲಾಕಗಳಿಂದ ಹೊಡೆಯಲು, ಅವನು ಬಾಣದೊಂದಿಗೆ ಬಿಲ್ಲನ್ನು ಬಿಟ್ಟು, ರಥದಿಂದ ನೆಲದ ಮೇಲೆ ಬಿದ್ದನು. ಕ್ರೋಧರೂಪಿ ವಾರ್ಷ್ಣೇಯ ವಾರ್ಧಕ್ಷೇಮಿಯನ್ನು ಶಾರದ್ವತ ಕೃಪನು ಸಣ್ಣ ಸಣ್ಣ ಶರಗಳಿಂದ ದ್ರೋಣನ ಬಳಿ ಹೋಗದಂತೆ ತಡೆದನು. ಆ ಇಬ್ಬರು ಚಿತ್ರಯೋಧಿಗಳು - ಕೃಪ ವಾರ್ಷ್ಣೇಯರು - ಯುದ್ಧಮಾಡುತ್ತಿರುವುದನ್ನು ನೋಡುತ್ತಿದ್ದವರು ಆ ಯುದ್ಧದಲ್ಲಿ ಆಸಕ್ತಿ ತೋರಿಸುವುದನ್ನು ಬಿಟ್ಟು ಬೇರೆ ಏನನ್ನು ಮಾಡಲೂ ಮನಸ್ಸುಮಾಡಲಿಲ್ಲ. ಸೋಮದತ್ತನ ಮಗನಾದರೋ ಬರುತ್ತಿದ್ದ ರಾಜರ ಅತಂದ್ರಿತ ಮಣಿಮಂತನನ್ನು ತಡೆದು ದ್ರೋಣನ ಯಶಸ್ಸನ್ನು ಹೆಚ್ಚಿಸಿದನು. ಅವನು ಸೌಮದತ್ತಿಯ ಧನುಸ್ಸಿನ ಶಿಂಜಿನಿಯನ್ನೂ, ಕೇತನವನ್ನೂ ಮತ್ತೆ ಪುನಃ ಪತಾಕೆ, ಸೂತ ಮತ್ತು ಚತ್ರಗಳನ್ನು ರಥದಿಂದ ಬೀಳಿಸಿದನು. ಆಗ ಯೂಪಕೇತು ಅಮಿತ್ರಹ ಸೌಮದತ್ತಿಯು ತಕ್ಷಣವೇ ರಥದಿಂದ ಹಾರಿ ಶ್ರೇಷ್ಠ ಖಡ್ಗದಿಂದ ಅವನನ್ನು ಕುದುರೆಗಳು, ಸೂತ, ಧ್ವಜ ಮತ್ತು ರಥಗೊಳಿಂದಿಗೆ ತುಂಡರಿಸಿದನು.
ತನ್ನ ರಥವನ್ನು ಏರಿ, ಇನ್ನೊಂದು ಧನ್ನುಸ್ಸನ್ನು ತೆಗೆದುಕೊಂಡು, ಸ್ವಯಂ ತಾನೇ ಕುದುರೆಗಳನ್ನು ನಡೆಸುತ್ತಾ ಪಾಂಡವ ಸೇನೆಯನ್ನು ಸಂಹರಿಸುತ್ತಿದ್ದನು. ಮುಸಲ, ಮುದ್ಗರ, ಚಕ್ರ, ಭಿಂಡಿಪಾಲ, ಪರಶು, ನೀರು, ಗಾಳಿ, ಅಗ್ನಿ, ಕಲ್ಲು, ಭಸ್ಮ, ಹುಲ್ಲು, ಮರಗಳೊಂದಿಗೆ ಏರುತ್ತಾ, ಇಳಿಯುತ್ತಾ, ಒಡೆಯುತ್ತಾ, ಕೊಲ್ಲುತ್ತಾ, ಓಡಿಸುತ್ತಾ, ಎಸೆಯುತ್ತಾ ಸೇನೆಗಳನ್ನು ಬೆದರಿಸುತ್ತಾ ದ್ರೋಣನನ್ನು ತಲುಪಲು ಘಟೋತ್ಕಚನು ಧಾವಿಸಿ ಬಂದನು. ನಾನಾಪ್ರಹರಣಗಳಿಂದ, ನಾನಾ ಯುದ್ಧ ವಿಶೇಷಗಳಿಂದ ರಾಕ್ಷಸನನ್ನು ರಾಕ್ಷಸ ಅಲಂಬುಸನು ಕ್ರುದ್ಧನಾಗಿ ಎದುರಿಸಿದನು. ಹಿಂದೆ ಶಂಬರ ಮತ್ತು ಅಮರರಾಜನೊಡನೆ ನಡೆದ ಯುದ್ಧದಂತೆ ಆ ಇಬ್ಬರು ರಾಕ್ಷಸ ಮುಖ್ಯರ ನಡುವೆ ಯುದ್ಧವು ನಡೆಯಿತು. ಹೀಗೆ ಕೌರವರ ಮತ್ತು ಪಾಂಡವರ ರಥ-ಆನೆ-ಕುದುರೆ ಸವಾರರ ಮತ್ತು ಪದಾತಿಗಳ ನಡುವೆ ದ್ವಂದ್ವಯುದ್ಧವು ನಡೆಯಿತು.
ದ್ರೋಣನ ನಾಶಕ್ಕೆ ಮತ್ತು ರಕ್ಷಣೆಗೆ ತೊಡಗಿದ್ದ ಅವರ ನಡುವೆ ನಡೆದ ಯುದ್ಧದಂತಹ ಯುದ್ಧವನ್ನು ಈ ಮೊದಲು ಯಾರೂ ನೋಡಲೂ ಇರಲಿಲ್ಲ ಮುತ್ತು ಕೇಳಲೂ ಇರಲಿಲ್ಲ. ಅಲ್ಲಿ ಕಾಣುತ್ತಿದ್ದ ಅನೇಕ ಯುದ್ಧಗಳಲ್ಲಿ ಇದು ಘೋರವಾಗಿತ್ತು, ಅವರು ಹಾಗೆ ಹಿಂದಿರುಗಿ ತಮ ತಮಗೆ ಬೇಕಾದವರೊಂದಿಗೆ ಹೋರಾಡುತ್ತಿರಲು ಸ್ವಯಂ ದುರ್ಯೋಧನನು ಗಜಸೇನೆಯೊಂದಿಗೆ ಭೀಮನ ಮೇಲೆ ಎರಗಿದನು. ಸಲಗನಿಂದ ಕಾಳಗಕ್ಕೆ ಸೆಳೆಯಲ್ಪಟ್ಟ ಸಲಗದಂತೆ ಮತ್ತು ಗೂಳಿಯಿಂದ ಕರೆಯಲ್ಪಟ್ಟ ಗೂಳಿಯಂತೆ ಸ್ವಯಂ ರಾಜನಿಂದಲೇ ನಡೆಸಲ್ಪಡುತ್ತಿದ್ದ ಗಜಸೇನೆಯನ್ನು ಭೀಮನು ಆಕ್ರಮಣಿಸಿದನು. ಯುದ್ಧಕುಶಲನಾದ ಮತ್ತು ಬಾಹುವೀರ್ಯದಿಂದ ಸಮನ್ವಿತನಾದ ಆ ಪಾರ್ಥನು ಆನೆಗಳ ಸೇನೆಯನ್ನು ಕ್ಷಣದಲ್ಲಿಯೇ ಧ್ವಂಸಮಾಡಿದನು. ಮದಿಸಿ ಎಲ್ಲಕಡೆ ಓಡುತ್ತಿರುವ, ಪರ್ವತಗಳಂತಿದ್ದ ಆ ಆನೆಗಳು ಭೀಮಸೇನನ ನಾರಾಚಗಳಿಗೆ ಸಿಲುಕಿ ಮತ್ತನ್ನು ಕಳೆದುಕೊಂಡು ಹಿಮ್ಮೆಟ್ಟಿದವು. ವಾಯುವು ಹೇಗೆ ಮೋಡಗಳ ಜಾಲಗಳನ್ನು ಎಲ್ಲಕಡೆ ಚದುರಿಸುತ್ತಾನೋ ಹಾಗೆಯೇ ಪವನಾತ್ಮಜನೂ ಕೂಡ ಗಜಸೇನೆಗಳನ್ನು ಚಲ್ಲಾಪಿಲ್ಲಿ ಮಾಡಿದನು. ಕಿರಣಗಳಿಂದ ಜಗತ್ತೆಲ್ಲವನ್ನೂ ಬೆಳಗಿಸುವ ಉದಿಸುತ್ತಿರುವ ರವಿಯಂತೆ ಭೀಮನು ಆನೆಗಳ ಮೇಲೆ ಬಾಣಗಳನ್ನು ಪ್ರಯೋಗಿಸಿ ಶೋಭಿಸಿದನು. ಆಕಾಶದಲ್ಲಿ ನಾನಾ ಮೋಡಗಳು ಸೂರ್ಯನ ಕಿರಣಗಳಿಂದ ಬೆಳಗುತ್ತಿರುವಂತೆ ಆನೆಗಳು ಶರೀರದ ತುಂಬ ಭೀಮನ ನೂರಾರು ಬಾಣಗಳಿಂದ ಹೊಡೆಯಲ್ಪಟ್ಟು ಪ್ರಕಾಶಿಸಿದವು. ಈ ರೀತಿ ಆನೆಗಳೊಡನೆ ಕದನ ಮಾಡುತ್ತಿದ್ದ ಅನಿಲಾತ್ಮಜನ ಬಳಿ ಕ್ರುದ್ಧನಾದ ದುರ್ಯೋಧನನು ಬಂದು ನಿಶಿತ ಶರಗಳಿಂದ ಹೊಡೆದನು.
ಒಡನೆಯೇ ಗಾಯದಿಂದ ಹೊರಡುವ ರಕ್ತದಂತೆ ಕಣ್ಣುಗಳನ್ನು ಕೆಂಪು ಮಾಡಿಕೊಂಡು ಭೀಮನು ಅವನನ್ನು ಕೊನೆಗೊಳಿಸಲು ಬಯಸಿ ನಿಶಿತ ಪತ್ರಿಗಳಿಂದ ಹೊಡೆದನು. ಶರೀರವೆಲ್ಲ ಬಾಣಗಳಿಂದ ಚುಚ್ಚಲ್ಪಡಲು ಕ್ರುದ್ಧನಾದ ದುರ್ಯೋಧನನು ನಸುನಗುತ್ತಾ ಪಾಂಡವ ಭೀಮಸೇನನನ್ನು ಸೂರ್ಯನ ರಶ್ಮಿಗಳಂತಿದ್ದ ನಾರಾಚಗಳಿಂದ ಹೊಡೆದನು. ತಕ್ಷಣವೇ ಪಾಂಡವನು ಎರಡು ಭಲ್ಲಗಳಿಂದ ಅವನ ಧ್ವಜದಲ್ಲಿದ್ದ ಮಣಿಮಯವಾದ ರತ್ನಚಿತ್ರಿತವಾಗಿದ್ದ ಆನೆಯನ್ನೂ ಮತ್ತು ಬಿಲ್ಲನ್ನೂ ಕತ್ತರಿಸಿದನು. ಈ ರೀತಿ ದುರ್ಯೋಧನನನ್ನು ಪೀಡಿಸುತ್ತಿದ್ದ ಭೀಮನನ್ನು ಕಂಡು ಅವನನ್ನು ಅಲ್ಲಿಂದ ಕದಲಿಸಲು ಆನೆಯನ್ನೇರಿದ್ದ ಅಂಗರಾಜನು ಧಾವಿಸಿ ಬಂದನು. ಮೋಡಗಳಂತೆ ಗುಡುಗುತ್ತ ತನ್ನ ಮೇಲೆ ಎರಗುತ್ತಿದ್ದ ಆ ಆನೆಯನ್ನು ನೋಡಿ ಭೀಮಸೇನನು ನಾರಾಚಗಳಿಂದ ಅದರ ಕುಂಭಸ್ಥಳಕ್ಕೆ ಹೊಡೆದನು. ಅವು ಅದರ ದೇಹವನ್ನು ಸೀಳಿ ಭೂಮಿಯಲ್ಲಿ ಹುಗಿದುಕೊಂಡವು. ಅನಂತರ ಆ ಅನೆಯು ವಜ್ರವು ತಾಗಿದ ಪರ್ವತದಂತೆ ಕೆಳಗುರುಳಿತು. ಆ ಆನೆಯಿಂದ ಕೆಳಗೆ ಹಾರಲು ಪ್ರಯತ್ನಿಸುತ್ತಿದ್ದ ಮ್ಲೇಚ್ಛರ ರಾಜನ ಶಿರವನ್ನು ಕ್ಷಿಪ್ರಕಾರೀ ವೃಕೋದರನು ಭಲ್ಲದಿಂದ ಕತ್ತರಿಸಿದನು.
ಭಗದತ್ತನ ಯುದ್ಧ
ಅಂಗರಾಜನು ಕೆಳಗೆ ಬೀಳಲು ಅವನ ಸೇನೆಯು ಪಲಾಯನ ಮಾಡಿತು. ಸಂಭ್ರಾಂತರಾಗಿ ಓಡಿ ಹೋಗುತ್ತಿದ್ದ ಕುದುರೆ-ಆನೆ-ರಥಗಳು ಪದಾತಿಗಳನ್ನೇ ತುಳಿದವು. ಆ ಸೇನೆಗಳು ಎಲ್ಲ ಕಡೆ ಓಡಿ ಹೋಗುತ್ತಿರಲು ಪ್ರಾಗ್ಜ್ಯೋತಿಷನು ಆನೆಯೊಂದಿಗೆ ಆಕ್ರಮಣಿಸಿದನು. ಯಾವ ಆನೆಯ ಮೇಲೆ ಕುಳಿತು ಮಘವಾನನು ದೈತ್ಯ-ದಾನವರನ್ನು ಜಯಿಸಿದನೋ ಅದೇ ಶ್ರೇಷ್ಠ ಆನೆಗಳ ಕುಲದಲ್ಲಿ ಹುಟ್ಟಿದ ಆನೆಯ ಮೇಲೆ ಕುಳಿತು ಒಮ್ಮಿಂದೊಮ್ಮೆಲೇ ಆಕ್ರಮಣಿಸಿದನು. ಕ್ರುದ್ದವಾದ ಆ ಶ್ರೇಷ್ಠ ಆನೆಯು ಕಣ್ಣುಗಳನ್ನು ಅಗಲ ಮಾಡಿಕೊಂಡು ತನ್ನ ಎರಡೂ ಮುಂಗಾಲುಗಳಿಂದ ಮತ್ತು ಸುತ್ತಿಕೊಂಡಿರುವ ಸೊಂಡಿಲಿನಿಂದ ಮಥಿಸಿಬಿಡುವಂತೆ ಪಾಂಡವನ ಮೇಲೆ ಎರಗಿತು. ಮಾರಿಷ! ಆಗ “ಹಾಹಾ! ಆನೆಯಿಂದ ಭೀಮನು ಹತನಾದನು!” ಎಂದು ಸೈನ್ಯದ ಎಲ್ಲ ಕಡೆಗಳಲ್ಲಿ ಮಹಾನಾದವುಂಟಾಯಿತು. ಆ ಕೂಗಿನಿಂದ ತತ್ತರಿಸಿದ ಪಾಂಡವರ ಸೇನೆಯು ತಕ್ಷಣವೇ ವೃಕೋದರನು ಎಲ್ಲಿ ನಿಂತಿದ್ದನೋ ಅಲ್ಲಿಗೆ ಧಾವಿಸಿತು. ರಾಜಾ ಯುಧಿಷ್ಠಿರನು ವೃಕೋದರನು ಹತನಾದನೆಂದು ತಿಳಿದು ಪಾಂಚಾಲರೊಂದಿಗೆ ಭಗದತ್ತನನ್ನು ಎಲ್ಲ ಕಡೆಗಳಿಂದ ಸುತ್ತುವರೆದನು. ರಥಿಗಳಲ್ಲಿ ಶ್ರೇಷ್ಠರು ರಥಗಳಿಂದ ಅವನನ್ನು ಎಲ್ಲಕಡೆಗಳಿಂದ ಸುತ್ತುವರೆದು ನೂರಾರು ಸಹಸ್ರಾರು ತೀಕ್ಷ್ಣ ಶರಗಳಿಂದ ಮುಚ್ಚಿದರು. ಆ ಪರ್ವತೇಶ್ವರನು ಅಂಕುಶದಿಂದಲೇ ತನ್ನ ಮೇಲೆ ಬೀಳುತ್ತಿದ್ದ ಶರಗಳನ್ನು ತಡೆದು ಆನೆಯೊಂದಿಗೆ ಪಾಂಡವ-ಪಾಂಚಾಲರನ್ನು ಜಜ್ಜಿದನು. ಆ ವೃದ್ಧ ಭಗದತ್ತನ ಆನೆಯು ಅದ್ಭುತವನ್ನೇ ಮಾಡಿ ತೋರಿಸಿತು.
ಆಗ ದಶಾರ್ಣರ ರಾಜನು ಮದೋದಕವನ್ನು ಸುರಿಸುತ್ತಿದ್ದ, ಶೀಘ್ರವಾಗಿ ಸಾಗುತ್ತಿದ್ದ, ಮತ್ತು ವಕ್ರಗತಿಯಲ್ಲಿ ಹೋಗುತ್ತಿದ್ದ ಆನೆಯ ಮೇಲೇರಿ ಪ್ರಾಗ್ಜ್ಯೋತಿಷನನ್ನು ಆಕ್ರಮಣಿಸಿದನು. ಭೀಮರೂಪದ ಆ ಎರಡು ಆನೆಗಳ ನಡುವೆ ಹಿಂದೆ ರೆಕ್ಕೆಗಳನ್ನು ಹೊಂದಿದ್ದ ಪರ್ವತಗಳು ವೃಕ್ಷಗಳೊಂದಿಗೆ ಹೊಡೆದಾಡುತ್ತಿದ್ದಂತೆ ಭಯಂಕರ ಯುದ್ಧವು ನಡೆಯಿತು. ಪ್ರಾಗ್ಜ್ಯೋತಿಷಪತಿಯ ಆನೆಯು ಹಿಂದೆ ಸರಿದು ಪುನಃ ರಭಸದಿಂದ ಮುಂದೆ ಬಂದು ದಶಾರ್ಣಾಧಿಪತಿಯ ಆನೆಯ ಪಾರ್ಶ್ವಭಾಗವನ್ನು ಪ್ರಹರಿಸಿ ಸೀಳಿ ಕೆಳಗುರುಳಿಸಿತು. ಆಗ ಸೂರ್ಯನ ರಶ್ಮಿಗಳಂತೆ ಹೊಳೆಯುತ್ತಿದ್ದ ಏಳು ತೋಮರಗಳಿಂದ ಆನೆಯ ಮೇಲೆ ಕುಳಿತಿದ್ದ ಶತ್ರುವನ್ನು ಕೆಳಗೆ ಬೀಳುವಾಗ ಸಂಹರಿಸಿದನು.
ಯುಧಿಷ್ಠಿರನಾದರೋ ರಾಜಾ ಭಗದತ್ತನ ಮೇಲೆ ಪ್ರಹರಿಸುತ್ತಾ ಮಹಾ ರಥಸೇನೆಯೊಂದಿಗೆ ಅವನನ್ನು ಎಲ್ಲ ಕಡೆಗಳಿಂದ ಸುತ್ತುವರೆದನು. ಪರ್ವತದ ಮೇಲಿನ ವನ ಮಧ್ಯದಲ್ಲಿ ಪ್ರಜ್ವಲಿಸುತ್ತಿರುವ ಹುತಾಶನನಂತೆ ರಥಗಳಿಂದ ಎಲ್ಲಕಡೆಗಳಲ್ಲಿ ಸುತ್ತುವರೆಯಲ್ಪಟ್ಟಿದ್ದ ಆನೆಯ ಮೇಲೆ ಕುಳಿತಿದ್ದ ಅವನು ಶೋಭಿಸಿದನು. ಬಾಣಗಳ ಮಳೆಗರೆಯುತ್ತಿದ್ದ ಉಗ್ರಧನ್ವಿ ರಥಿಗಳ ಮಂಡಲವು ಎಲ್ಲ ಕಡೆಗಳಿಂದಲೂ ಆನೆಯ ಮೇಲೆ ಆಕ್ರಮಣ ನಡೆಸುತ್ತಿತ್ತು. ಆಗ ಪ್ರಾಗ್ಜ್ಯೋತಿಷದ ರಾಜನು ಆ ಮಹಾಗಜವನ್ನು ಹತೋಟಿಗೆ ತೆಗೆದುಕೊಂಡು ಯುಯುಧಾನನ ರಥದ ಕಡೆ ರಭಸದಿಂದ ನುಗ್ಗಿಸಿದನು. ಆ ಮಹಾಗಜವು ಶಿನಿಯ ಮೊಮ್ಮಗನ ರಥವನ್ನು ಸೊಂಡಿಲಿನಿಂದ ಹಿಡಿದು ವೇಗದಿಂದ ದೂರಕ್ಕೆಸೆಯಿತು. ಅಷ್ಟರೊಳಗೆ ಯುಯುಧಾನನು ರಥದಿಂದ ಕೆಳಕ್ಕೆ ಹಾರಿದ್ದನು. ಸಾರಥಿಯಾದರೋ ದೊಡ್ಡದಾಗಿದ್ದ ಸೈಂಧವ ಕುದುರೆಗಳನ್ನು ಮೇಲೆಬ್ಬಿಸಿ ರಥದ ಮೇಲೆ ಹಾರಿ ಕುಳಿತು ರಥವನ್ನು ಪುನಃ ಸಾತ್ಯಕಿಯ ಬಳಿ ತಂದು ನಿಲ್ಲಿಸಿದನು. ಅಷ್ಟರಲ್ಲಿಯೇ ತ್ವರೆಮಾಡಿ ಆ ಆನೆಯು ರಥಮಂಡಲದಿಂದ ಹೊರಬಂದು ಎಲ್ಲ ರಾಜರನ್ನೂ ಎಳೆದೆಳೆದು ಎಸೆಯತೊಡಗಿತ್ತು. ಅತಿ ವೇಗದ ಆ ಆನೆಯಿಂದ ಪೀಡಿತರಾದ ನರರ್ಷಭರು ಒಂದೇ ಆನೆಯೊಂದಿಗೆ ಹೋರಾಡುತ್ತಿದ್ದರೂ ನೂರಾರರೊಂದಿಗೆ ಹೋರಾಡುತ್ತಿದ್ದೇವೋ ಎಂದು ಭಾವಿಸಿದರು. ಆ ಆನೆಯ ಮೇಲೆ ಕುಳಿತಿದ್ದ ಭಗದತ್ತನು ಐರಾವತದ ಮೇಲೆ ಕುಳಿತಿದ್ದ ದೇವರಾಜನು ದಾನವರನ್ನು ಹೇಗೋ ಹಾಗೆ ಪಾಂಡವರನ್ನು ನಾಶಗೊಳಿಸುತ್ತಿದ್ದನು. ಅಲ್ಲಿಂದ ಓಡಿಹೋಗುತ್ತಿದ್ದ ಪಾಂಚಾಲರ ಆನೆ-ಕುದುರೆಗಳು ಮಾಡುತ್ತಿದ್ದ ಭಯಂಕರ ಚೀತ್ಕಾರಗಳ ಶಬ್ಧವು ಜೋರಾಗಿ ಕೇಳಿಬರುತ್ತಿತ್ತು.
ಪ್ರಾಗ್ಜ್ಯೋತಿಷದ ಭಗದತ್ತನು ಪಾಂಡವರ ಸೇನೆಯನ್ನು ನಾಶಗೊಳಿಸುತ್ತಿರಲು ಪರಮ ಕ್ರುದ್ಧನಾದ ಭೀಮನು ಪುನಃ ಅವನನ್ನು ಆಕ್ರಮಣಿಸಿದನು. ರಭಸದಿಂದ ತನ್ನ ಕಡೆಗೆ ಬರುತ್ತಿದ್ದ ಅವನ ಕುದುರೆಗಳ ಮೇಲೆ ಆ ಆನೆಯು ಸೊಂಡಿಲಿನಿಂದ ನೀರನ್ನು ಸುರಿಸಿ ತೋಯಿಸಿತು. ಅನಂತರ ಅವು ಪಾರ್ಥನನ್ನು ದೂರಕ್ಕೆ ಕೊಂಡೊಯ್ದವು. ಆಗ ತಕ್ಷಣವೇ ರಥದ ಮೇಲೆ ಕುಳಿತು ಅಂತಕನಂತೆ ತೋರುತ್ತಿದ್ದ ಅಕೃತಿಯ ಮಗ ರುಚಿಪರ್ವನು ಭಗದತ್ತನ ಮೇಲೆ ಬಾಣಗಳ ಮಳೆಯನ್ನು ಸುರಿಸಿ ಆಕ್ರಮಣಿಸಿದನು. ಆಗ ಪರ್ವತಪತಿಯು ಸುಂದರ ನತಪರ್ವ ಶರದಿಂದ ಅವನನ್ನು ವೈವಸ್ವತನ ಸದನಕ್ಕೆ ಕಳುಹಿಸಿದನು. ಆ ವೀರನು ಕೆಳಗುರುಳಲು ಸೌಭದ್ರ ಮತ್ತು ದ್ರೌಪದೀಸುತರು, ಚೇಕಿತಾನ, ಧೃಷ್ಟಕೇತು ಮತ್ತು ಯುಯುತ್ಸುವು ಆನೆಯನ್ನು ಪೀಡಿಸತೊಡಗಿದರು.
ಅದನ್ನು ಕೊಲ್ಲಲು ಬಯಸಿ ಭೈರವ ಗರ್ಜನೆಯನ್ನು ಗರ್ಜಿಸುತ್ತಾ ಮೋಡಗಳಂತೆ ಬಾಣದ ಮಳೆಯನ್ನು ಸುರಿಸಿ ತೋಯಿಸಿದರು. ಆಗ ಹಿಮ್ಮಡಿ, ಅಂಕುಶ ಮತ್ತು ಅಂಗುಷ್ಠಗಳಿಂದ ಪ್ರಚೋದಿತಗೊಂಡ ಆನೆಯು ಸೊಂಡಿಲನ್ನು ಮೇಲೆತ್ತಿ ಕಿವಿಯನ್ನು ನಿಮಿರಿಸಿ ಒಂದೇ ಕಡೆ ನೋಡುತ್ತಾ ಶೀಘ್ರವಾಗಿ ಓಡತೊಡಗಿತು. ಅದು ಕಾಲಿನಿಂದ ಯುಯುತ್ಸುವಿನ ಕುದುರೆಗಳನ್ನು ಒದೆದು ಸೂತನನ್ನು ಕೊಂದಿತು. ಆಗ ಸಂಭ್ರಾಂತನಾದ ಯುಯುತ್ಸುವು ಹಾರಿ ಸೌಭದ್ರನ ರಥವನ್ನು ಏರಿದನು. ಆ ಆನೆಯ ಮೇಲೆ ಕುಳಿತಿದ್ದ ಪಾರ್ಥಿವನು ಭುವನಗಳನ್ನು ತನ್ನ ರಶ್ಮಿಗಳಿಂದ ಬೆಳಗಿಸುವ ಆದಿತ್ಯನಂತೆ ತನ್ನ ಶತ್ರುಗಳ ಮೇಲೆ ಬಾಣಗಳನ್ನು ಪ್ರಹರಿಸುತ್ತಾ ಶೋಭಿಸಿದನು. ಅವನನ್ನು ಆರ್ಜುನಿಯು ಹನ್ನೆರಡು, ಯುಯುತ್ಸುವು ಹತ್ತು, ದ್ರೌಪದೇಯರು ಮತ್ತು ಧೃಷ್ಟಕೇತುವು ಮೂರು ಮೂರು ಬಾಣಗಳಿಂದ ಹೊಡೆದರು. ಆ ಶತ್ರುಗಳಿಂದ ಪ್ರಹರಿಸಲ್ಪಟ್ಟ ಬಾಣಗಳಿಂದ ಮುಚ್ಚಿ ಹೋದ ಆನೆಯು ಸೂರ್ಯನ ಕಿರಣಗಳಿಂದ ಸಂಸ್ಯೂತವಾದ ಮಹಾ ಮೇಘದಂತೆ ಕಾಣತ್ತಿತ್ತು. ನಿಯಂತ್ರಿಸಲು ಪ್ರಯತ್ನಪಡುತ್ತಿದ್ದ ಶತ್ರುಗಳು ಪ್ರಯೋಗಿಸಿದ ಶರಗಳಿಂದ ಆರ್ದಿತಗೊಂಡ ಆ ಆನೆಯು ತನ್ನ ಸೊಂಡಿಲಿನಿಂದ ರಿಪುಗಳನ್ನು ಹಿಡಿದು ಎಡ-ಬಲಗಳಲ್ಲಿ ಎಸೆಯತೊಡಗಿತು. ವನದಲ್ಲಿ ಗೋಪಾಲಕನು ಕೋಲಿನಿಂದ ದನಗಳನ್ನು ತರುಬುವಂತೆ ಭಗದತ್ತನು ಬಾರಿ ಬಾರಿಗೂ ಅವರ ಸೇನೆಯನ್ನು ತರುಬುತ್ತಿದ್ದನು. ವೇಗವಾಗಿ ಬಂದ ಗಿಡುಗದ ಹಿಡಿತಕ್ಕೆ ಸಿಲುಕಿದ ಕಾಗೆಗಳು ಕೂಗಿಕೊಳ್ಳುವಂತೆ ಅವನಿಂದ ಪೀಡಿತರಾಗಿ ಪಾಂಡವರ ಸೇನೆಯು ಜೋರಾಗಿ ಕೂಗುತ್ತಾ ಓಡಿ ಹೋಗುತ್ತಿತ್ತು.
ಅಂಕುಶದಿಂದ ತಿವಿಯಲ್ಪಟ್ಟ ಆ ಗಜರಾಜನು ಹಿಂದೆ ರೆಕ್ಕೆಗಳನ್ನು ಹೊಂದಿದ್ದ ಶ್ರೇಷ್ಠ ಗಿರಿಗಳು ಹೇಗೋ ಹಾಗೆ ರಿಪುಸೇನೆಗಳಲ್ಲಿ ಭಯವನ್ನು ತರುತ್ತಿತ್ತು. ಸಾಗರವನ್ನು ಕ್ಷೋಭೆಗೊಳಿಸಿ ವರ್ತಕರನ್ನು ಅಲ್ಲೋಲಕಲ್ಲೋಲಗೊಳಿಸುವಂತೆ ತೋರುತ್ತಿತ್ತು. ಆ ಆನೆಯಿಂದ ಭಯಾರ್ದಿತರಾಗಿ ಅತಿ ಭೈರವ ಸ್ವರದಲ್ಲಿ ಕೂಗಿಕೊಂಡು ಓಡಿ ಹೋಗುತ್ತಿರುವ ರಥ-ಅಶ್ವ-ಪಾರ್ಥಿವರ ಧ್ವನಿಯು ಭೂಮಿಯನ್ನೂ, ಆಕಾಶವನ್ನೂ, ದಿಕ್ಕುಗಳನ್ನೂ, ಉಪದಿಕ್ಕುಗಳನ್ನೂ ತುಂಬಿತು. ಹಿಂದೆ ವಿಬುಧರಿಂದ ರಕ್ಷಿಸಲ್ಪಟ್ಟ ದೇವಸೇನೆಯನ್ನು ವಿರೋಚನನು ಬೇಧಿಸಿ ಒಳಹೊಕ್ಕಿದಂತೆ ಆ ಗಜಶ್ರೇಷ್ಠನ ಮೇಲೇರಿ ಪಾರ್ಥಿವನು ಶತ್ರುಸೇನೆಯನ್ನು ಚೆನ್ನಾಗಿ ಮರ್ದಿಸಿದನು. ಆಗ ಅಗ್ನಿ ಸಖ ವಾಯುವೂ ಜೋರಾಗಿ ಬೀಸಿ ಎಬ್ಬಿಸಿದ ಧೂಳು ಸೈನಿಕರೆಲ್ಲರನ್ನೂ ವ್ಯಾಪಿಸಿತು. ಒಂದೇ ಒಂದು ಆನೆಯು ನಾಲ್ಕೂ ದಿಕ್ಕುಗಳಲ್ಲಿ ಸಂಚರಿಸುತ್ತಿದ್ದರೂ ಹಲವಾರು ಆನೆಗಳು ಗುಂಪಾಗಿ ರಣಾಂಗಣದಲ್ಲಿ ಓಡಾಡುತ್ತಿರುವಂತೆ ತೋರುತ್ತಿದ್ದವು.
ಸಂಶಪ್ತಕ ವಧೆ
ಮೇಲೆದ್ದ ಧೂಳನ್ನು ನೋಡಿ ಮತ್ತು ಭಗದತ್ತನಿಂದ ನಿಯಂತ್ರಿಸಲ್ಪಟ್ಟ ಆನೆಯು ಘೀಳಿಡುವುದನ್ನು ಕೇಳಿದ ಕೌಂತೇಯನು ಕೃಷ್ಣನಿಗೆ ಹೇಳಿದನು. “ಮಧುಸೂದನ! ಪ್ರಾಗ್ಜ್ಯೋತಿಷದ ರಾಜನು ಆನೆಯೊಂದಿಗೆ ತ್ವರೆಮಾಡಿ ಆಕ್ರಮಣಿಸುತ್ತಿದ್ದಾನೆ. ನಿಶ್ಚಯವಾಗಿಯೂ ಇದು ಅವನದೇ ಕೂಗು! ಗಜಯಾನದಲ್ಲಿ ವಿಶಾರದನಾಗಿರುವ ಇವನು ಯುದ್ಧದಲ್ಲಿ ಇಂದ್ರನಿಗೂ ಕಡಿಮೆಯಲ್ಲ. ಇವನು ಪೃಥ್ವಿಯಲ್ಲಿಯೇ ಮೊದಲನೆಯವನು ಅಥವಾ ಎರಡನೆಯವನು ಎಂದು ನನ್ನ ಅಭಿಪ್ರಾಯ. ಆ ಆನೆಯೂ ಕೂಡ ಶ್ರೇಷ್ಠವಾದುದು. ಯುದ್ಧದಲ್ಲಿ ಸರಿಸಾಟಿಯಾದ ಆನೆಯು ಇಲ್ಲ. ಎಲ್ಲ ಶಬ್ಧಗಳನ್ನೂ ಮೀರಿಸುವಂತವನು. ಯುದ್ಧದಲ್ಲಿ ಯಶಸ್ವಿಯು. ಆಯಾಸವೇ ಇಲ್ಲದವನು. ಮೇಲೆ ಬೀಳುತ್ತಿರುವ ಶಸ್ತ್ರಗಳನ್ನೂ, ಅಗ್ನಿಯನ್ನೂ ಸಹಿಸಿಕೊಳ್ಳಬಹುದಾದ ಇದು ಒಂದೇ ಪಾಂಡವ ಬಲವನ್ನು ನಾಶಪಡಿಸುತ್ತದೆ ಎನ್ನುವುದು ವ್ಯಕ್ತವಾಗುತ್ತಿದೆ. ಅವರ ಈ ಉಪಟಳವನ್ನು ಸಹಿಸುವವರು ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರಿಗೂ ಶಕ್ಯವಿಲ್ಲ. ತ್ವರೆಮಾಡಿ ಪ್ರಾಗ್ಜ್ಯೋತಿಷಾಧಿಪನು ಎಲ್ಲಿದ್ದಾನೋ ಅಲ್ಲಿಗೆ ಕರೆದೊಯ್ಯಿ. ಶಕ್ರನೊಂದಿಗಿನ ಸಖ್ಯದಿಂದ, ಆನೆಯ ಬಲದಿಂದ ಮತ್ತು ವಯಸ್ಸಿನಲ್ಲಿ ವಿಸ್ಮಿತನಾಗಿರುವ ಅವನನ್ನು ಇಂದು ನಾನು ಬಲಹಂತುವಿನ ಪ್ರಿಯ ಅತಿಥಿಯಾಗಿ ಕಳುಹಿಸುತ್ತೇನೆ.”
ಸವ್ಯಸಾಚಿಯ ಮಾತಿನಂತೆ ಕೃಷ್ಣನು ಎಲ್ಲಿ ಪಾಂಡವವಾಹಿನಿಯನ್ನು ಸೀಳುತ್ತಿದ್ದನೋ ಅಲ್ಲಿಗೆ ಕರೆದೊಯ್ದನು. ಅವನು ಬೇರೆಕಡೆ ಯುದ್ಧ ಮಾಡಲು ಹೋಗುವಾಗ ಅವನ ಹಿಂದಿನಿಂದ ಹದಿನಾಲ್ಕು ಸಾವಿರ ಸಂಶಪ್ತಕರು ಎರಗಿದರು. ಅದರಲ್ಲಿ ಹತ್ತು ಸಾವಿರ ತ್ರಿಗರ್ತರಿದ್ದರು. ಮತ್ತು ನಾಲ್ಕು ಸಾವಿರ ವಾಸುದೇವನ ಅನುಯಾಯಿಗಳಿದ್ದರು. ಭಗದತ್ತನಿಂದ ನಾಶವಾಗುತ್ತಿರುವ ಸೇನೆಯನ್ನು ನೋಡಿ ಮತ್ತು ಆಹ್ವಾನಿಸುತ್ತಿದ್ದ ಅವರ ನಡುವೆ ಅವನ ಹೃದಯವು ಎರಡಾಯಿತು. “ಏನನ್ನು ಮಾಡಿದರೆ ಶ್ರೇಯಸ್ಕರವಾದುದು? ಇವರ ಬಳಿ ಹಿಂದಿರುಗಲೇ ಅಥವಾ ಯುಧಿಷ್ಠಿರನ ಬಳಿ ಹೋಗಲೇ?” ಎಂದು ಚಿಂತಿಸಿದನು. ಸಂಶಪ್ತಕರನ್ನು ವಧಿಸುವುದೇ ಯಶಸ್ಕರವಾದುದು ಎಂದು ಅರ್ಜುನನ ಬುದ್ಧಿಯು ವಿಚಾರಿಸಲು ಅವನು ಅಲ್ಲಿಯೇ ನಿಂತನು. ತಕ್ಷಣವೇ ಆ ಕಪಿಪ್ರವರಕೇತನ ವಾಸವಿಯು ಒಬ್ಬನೇ ಸಹಸ್ರಾರು ರಥರನ್ನು ಸಂಹರಿಸಲು ಹಿಂದಿರುಗಿದನು. ಇದು ಅರ್ಜುನನ ವಧೆಗೆಂದು ದುರ್ಯೋಧನ-ಕರ್ಣರಿಬ್ಬರ ಉಪಾಯವಾಗಿದ್ದಿತು. ಅವರಿಂದಾಗಿ ರಣರಂಗವು ಎರಡು ಭಾಗವಾಗಿತ್ತು. ಡೋಲಾಯಮಾನನಾದ ಪಾಂಡವನು ರಥದಿಂದ ರಥಾಗ್ರಣ್ಯನನ್ನು ಸಂಹರಿಸಲು ಹಿಂದಿರುಗಿ ಬಂದನು. ಆಗ ಸಂಶಪ್ತಕ ಮಹಾರಥರು ಒಂದು ಲಕ್ಷ ನತಪರ್ವಣ ಶರಗಳನ್ನು ಅರ್ಜುನನ ಮೇಲೆ ಪ್ರಯೋಗಿಸಿದರು. ಆ ಶರಗಳಿಂದ ಮುಚ್ಚಿಹೋಗಲು ಕುಂತೀಸುತ ಪಾರ್ಥನಾಗಲೀ ಕೃಷ್ಣ ಜನಾರ್ದನನಾಗಲೀ, ರಥವಾಗಲೀ ಕುದುರೆಗಳಾಗಲೀ ಕಾಣಲಿಲ್ಲ.
ಆಗ ಮೋಹಿತನಾಗಿ ಜನಾರ್ದನನು ಬೆವೆತುಹೋಗಲು ಪಾರ್ಥನು ವಜ್ರಾಸ್ತ್ರದಿಂದ ಹೆಚ್ಚುಭಾಗ ಅವರನ್ನು ಸಂಹರಿಸಿದನು. ಬಾಣ-ಶಿಂಜಿನಿ-ಧನುಸ್ಸುಗಳನ್ನು ಹಿಡಿದಿದ್ದ ನೂರಾರು ಕೈಗಳು ತುಂಡಾಗಿ, ಧ್ವಜಗಳು, ಕುದುರೆಗಳು, ಸೂತರು ಮತ್ತು ರಥಿಗಳು ಭೂಮಿಯ ಮೇಲೆ ಬಿದ್ದವು. ವೃಕ್ಷ, ಪರ್ವತ ಮತ್ತು ಮೋಡಗಳಂತಿದ್ದ, ಸುಕಲ್ಪಿತಗೊಂಡಿದ್ದ ಆನೆಗಳು ಪಾರ್ಥನ ಶರಗಳಿಂದ ಹತರಾಗಿ, ಮಾವುತರನ್ನೂ ಕಳೆದುಕೊಂಡು ಭೂಮಿಯ ಮೇಲೆ ಬಿದ್ದವು. ಅವುಗಳ ಬೆನ್ನಮೇಲಿದ್ದ ಚಿತ್ರಗಂಬಳಿಗಳೂ ಆಭರಣಗಳೂ ಚೆಲ್ಲಪಿಲ್ಲಿಯಾಗಿ ಬಿದ್ದವು. ಪಾರ್ಥನ ಮಾರ್ಗಣಗಳಿಂದ ಮಥಿತವಾದ ಕುದುರೆಗಳು ಆರೋಹಿಗಳೊಂದಿಗೆ ಉರುಳಿ ಬಿದ್ದವು. ಕಿರೀಟಿಯ ಭಲ್ಲಗಳಿಂದ ಋಷ್ಟಿ, ಪ್ರಾಸ, ಖಡ್ಗ, ನಖರ, ಮುದ್ಗರ ಮತ್ತು ಪರಶುಗಳನ್ನು ಹಿಡಿದ ಮನುಷ್ಯರ ಬಾಹುಗಳು ಕತ್ತರಿಸಿ ಬಿದ್ದವು. ಬಾಲಾದಿತ್ಯ, ಕಮಲ ಮತ್ತು ಚಂದ್ರರ ರೂಪದಂತಿರುವ ಶಿರಗಳು ಅರ್ಜುನನ ಶರಗಳಿಂದ ಕತ್ತರಿಸಲ್ಪಟ್ಟು ಭೂಮಿಯ ಮೇಲೆ ಬಿದ್ದವು. ನಾನಾ ವಿಧದ ಪ್ರಾಣವನ್ನೇ ಭೋಜನವಾಗುಳ್ಳ ಪತ್ರಿಗಳಿಂದ ಕ್ರುದ್ಧನಾದ ಫಲ್ಗುನನು ಅಲಂಕೃತ ಸೇನೆಯನ್ನು ಸುಟ್ಟು ಸಂಹರಿಸಿದನು. ಆನೆಯು ಸರೋವರವನ್ನು ಕ್ಷೋಭೆಗೊಳಿಸುವಂತೆ ಸೇನೆಯನ್ನು ಕ್ಷೋಭೆಗೊಳಿಸಿದ ಧನಂಜಯನನ್ನು ಭೂತಗಣಗಳು “ಸಾಧು! ಸಾಧು!” ಎಂದು ಗೌರವಿಸಿತು. ವಾಸವನ ಪರಾಕ್ರಮದ ಪಾರ್ಥನ ಆ ಕರ್ಮವನ್ನು ನೋಡಿ ಮಾಧವನು ಪರಮ ವಿಸ್ಮಯಗೊಂಡು ಕೈಜೋಡಿಸಿ ಗೌರವಿಸಿದನು. ಆಗ ಸಂಶಪ್ತಕರನ್ನು ಸಂಹರಿಸಿ ಪುನಃ ವ್ಯವಸ್ಥಿತನಾಗಿ ಪಾರ್ಥನು “ಭಗದತ್ತನ ಬಳಿ ಹೋಗು!” ಎಂದು ಕೃಷ್ಣನನ್ನು ಪ್ರಚೋದಿಸಿದನು.
ಅನಂತರ ಕೃಷ್ಣನು ಪಾರ್ಥನ ಸುವರ್ಣಭೂಷಿತವಾಗಿದ್ದ ಮನೋವೇಗದ ಬಿಳೀ ಕುದುರೆಗಳನ್ನು ದ್ರೋಣನ ಸೇನೆಯಕಡೆ ಕೊಂಡೊಯ್ದನು. ದ್ರೋಣನಿಂದ ಪೀಡಿತರಾಗಿದ್ದ ತನ್ನವರನ್ನು ಬಿಡುಗಡೆಗೊಳಿಸಲು ಹೋಗುತ್ತಿದ್ದ ಆ ಕುರುಶ್ರೇಷ್ಠನನ್ನು ಯುದ್ಧಾರ್ಥಿಯಾದ ಸುಶರ್ಮನು ಸಹೋದರರೊಂದಿಗೆ ಅವನ ಹಿಂದೆಯೇ ಅನುಸರಿಸಿ ಹೋದನು. ಆಗ ಶ್ವೇತಹಯ ಜಯ ಅರ್ಜುನನು ಅಪರಾಜಿತ ಕೃಷ್ಣನಿಗೆ ಹೇಳಿದನು: “ಅಚ್ಯುತ! ಈ ಸುಶರ್ಮನು ತನ್ನ ತಮ್ಮಂದಿರೊಡಗೂಡಿ ನನ್ನನ್ನು ಕರೆಯುತ್ತಿದ್ದಾನೆ. ಆದರೆ ಉತ್ತರ ಭಾಗದಲ್ಲಿ ನಮ್ಮ ಸೈನ್ಯವು ವಿನಾಶಹೊಂದುತ್ತಿದೆ. ಈ ಸಂಶಪ್ತಕರು ಇಂದು ನನ್ನ ಮನಸ್ಸನ್ನು ಎರಡನ್ನಾಗಿ ಒಡೆದಿದ್ದಾರೆ. ಈಗ ನಾನು ಅಳಿದುಳಿದ ಸಂಶಪ್ತಕರನ್ನು ಕೊಲ್ಲಬೇಕೇ? ಅಥವಾ ಬಾಧಿತರಾದ ನಮ್ಮವರನ್ನು ರಕ್ಷಿಸಲೇ? ನನ್ನ ಈ ದ್ವಂದ್ವಭಾವವು ನಿನಗೆ ತಿಳಿದಿದೆ. ಏನು ಮಾಡಿದರೆ ಒಳ್ಳೆಯದಾಗುವುದು?”
ಹೀಗೆ ಹೇಳಲು ದಾಶಾರ್ಹನು ರಥವನ್ನು ಹಿಂದಿರುಗಿಸಿ ಎಲ್ಲಿ ತ್ರಿಗರ್ತಾಧಿಪತಿಯು ಪಾಂಡವನನ್ನು ಕರೆಯುತ್ತಿದ್ದನೋ ಅಲ್ಲಿಗೆ ಕೊಂಡೊಯ್ದನು. ಆಗ ಅರ್ಜುನನು ಸುಶರ್ಮನನ್ನು ಏಳು ಆಶುಗಗಳಿಂದ ಹೊಡೆದು ಹಾಗೆಯೇ ಕ್ಷುರಗಳೆರಡರಿಂದ ಅವನ ಧ್ವಜವನ್ನೂ ಧನುಸ್ಸನ್ನೂ ತುಂಡರಿಸಿದನು. ಪಾರ್ಥನು ತ್ವರೆಮಾಡಿ ತ್ರಿಗರ್ತಾಧಿಪತಿಯ ತಮ್ಮನನ್ನೂ ಆರು ಆಯಸಗಳಿಂದ, ಅಶ್ವ-ಸೂತರೊಂದಿಗೆ ಯಮಾಲಯಕ್ಕೆ ಕಳುಹಿಸಿದನು. ಆಗ ಸುಶರ್ಮನು ಸರ್ಪದಂತಿದ್ದ ಉಕ್ಕಿನ ಶಕ್ತಿಯನ್ನು ಅರ್ಜುನನ ಮೇಲೆ ಮತ್ತು ತೋಮರವನ್ನು ವಾಸುದೇವನ ಮೇಲೆ ಗುರಿಯಿಟ್ಟು ಪ್ರಯೋಗಿಸಿದನು. ಅರ್ಜುನನು ಶಕ್ತಿಯನ್ನು ಮೂರು ಮತ್ತು ತೋಮರವನ್ನು ಮೂರು ಶರಗಳಿಂದ ಕತ್ತರಿಸಿ ಸುಶರ್ಮನನ್ನು ಶರವೃಷ್ಟಿಯಿಂದ ಭ್ರಾಂತಗೊಳಿಸಿ ಹಿಮ್ಮೆಟ್ಟಿಸಿದನು. ಬಾಣಗಳ ಭಾರೀ ಮಳೆಗರೆಯುತ್ತಾ ಹಿಂದಿರುಗಿ ಬರುತ್ತಿದ್ದ ಉಗ್ರ ವಾಸವಿಯನ್ನು ನಿನ್ನ ಸೇನೆಯಲ್ಲಿ ಯಾರೂ ತಡೆಯಲಿಲ್ಲ. ಧನಂಜಯನು ಬಾಣಗಳಿಂದ ಮಹಾರಥಿ ಕೌರವ್ಯರನ್ನು ಬೆಂಕಿಯು ಹುಲ್ಲಿನ ಗೊಣಬೆಯನ್ನು ಸುಡುವಂತೆ ಸುಟ್ಟು ನಾಶಗೊಳಿಸಿದನು. ಜನರು ಅಗ್ನಿಯ ಸ್ಪರ್ಶವನ್ನು ಸಹಿಸಿಕೊಳ್ಳಲಾಗದಂತೆ ಆ ಧೀಮತ ಕುಂತೀಪುತ್ರನ ವೇಗವನ್ನು ಸಹಿಸಿಕೊಳ್ಳಲಾಗಲಿಲ್ಲ. ಶರವರ್ಷಗಳಿಂದ ಸೇನೆಗಳನ್ನು ನಾಶಗೊಳಿಸುತ್ತಾ ಪಾಂಡವನು ಪ್ರಾಗ್ಜ್ಯೋತಿಷನ ಕಡೆ ಗರುಡನು ಬಂದೆರಗುವಂತೆ ಬಂದು ಆಕ್ರಮಣಿಸಿದನು. ಯಾವುದರಿಂದ ಅಪಾಯದಲ್ಲಿರುವ ಭರತರಿಗೆ ಕ್ಷೇಮವನ್ನುಂಟು ಮಾಡುವನೋ ಯಾವುದರಿಂದ ಯುದ್ಧದಲ್ಲಿ ಶತ್ರುಗಳ ಕಣ್ಣೀರನ್ನು ಹೆಚ್ಚಿಸುವನೋ ಆ ಧನುಸ್ಸನ್ನು ಜಿಷ್ಣುವು ಹಿಡಿದುಕೊಂಡನು.
ಭಗದತ್ತವಧೆ
ಧೃತರಾಷ್ಟ್ರನ ಕೆಟ್ಟ ದ್ಯೂತವನ್ನಾಡಿ ಗೆದ್ದಿದ್ದ ಅದೇ ಧನುಸ್ಸನ್ನು ಅರ್ಜುನನು ಈಗ ಕ್ಷತ್ರಿಯರ ವಿನಾಶಕ್ಕೆ ಎತ್ತಿ ಹಿಡಿದನು. ಪರ್ವತಕ್ಕೆ ಬಡಿದ ನೌಕೆಯಂತೆ ಕೌರವ ಸೇನೆಯನ್ನು ಪಾರ್ಥನು ಕ್ಷೋಭೆಗೊಳಿಸಿ ನುಚ್ಚು ನೂರು ಮಾಡಿದನು. ಆಗ ಹತ್ತು ಸಾವಿರ ವೀರ ಧನುಷ್ಮತರು ಕ್ರುದ್ಧರಾಗಿ ಜಯವಾಗಲೀ ಪರಾಜಯವಾಗಲೀ ಯುದ್ಧಮಾಡಬೇಕೆಂದು ನಿಶ್ಚಯಿಸಿ ಹಿಂದಿರುಗಿದರು. ಆಪದ್ಧರ್ಮವನ್ನು ಅನುಸರಿಸಿದ ಆ ರಥರು ಹೃದಯದ ಭಯವನ್ನು ತೊರೆದು ಪಾರ್ಥನ ಮೇಲೆ ಆಕ್ರಮಣಿಸಲು ಯುದ್ಧದಲ್ಲಿ ಅವರೆಲ್ಲರ ದೊಡ್ಡ ಭಾರವನ್ನೂ ಪಾರ್ಥನು ಸಹಿಸಿಕೊಂಡನು. ಮದೋದಕವನ್ನು ಸುರಿಸುವ ಸಿಟ್ಟಿಗೆದ್ದ ಅರವತ್ತು ವರ್ಷದ ಸಲಗವು ಹೇಗೆ ಬೆಂಡಿನ ವನವನ್ನು ಧ್ವಂಸಮಾಡುತ್ತದೆಯೋ ಹಾಗೆ ಪಾರ್ಥನು ಕೌರವ ಸೇನೆಯನ್ನು ಮರ್ದಿಸಿದನು. ಅವನು ಹಾಗೆ ಸೇನೆಯನ್ನು ನಾಶಗೊಳಿಸುತ್ತಿರಲು ನರಾಧಿಪ ಭಗದತ್ತನು ತನ್ನ ಆನೆಯೊಂದಿಗೆ ರಭಸದಿಂದ ಬಂದು ಧನಂಜಯನ ಮೇಲೆ ಎರಗಿದನು. ಆ ನರವ್ಯಾಘ್ರನು ರಥದಲ್ಲಿಯೇ ಕುಳಿತು ಭಯಪಡದೇ ಅವನನ್ನು ಎದುರಿಸಿದನು. ಆಗ ಅವನ ರಥ ಮತ್ತು ಆ ಆನೆಗಳ ನಡುವೆ ತುಮುಲ ಯುದ್ಧವು ನಡೆಯಿತು.
ಯಥಾಶಾಸ್ತ್ರವಾಗಿ ಪರಿಣಿತರಾದ ಆ ವೀರ ಭಗದತ್ತ-ಧನಂಜಯರ ನಡುವೆ ರಥ ಮತ್ತು ಆನೆಗಳ ಸಂಗ್ರಾಮವು ನಡೆಯಿತು. ಮೋಡದಂತಿದ್ದ ಆನೆಯಮೇಲೆ ಇಂದ್ರನಂತಿದ್ದ ಭಗದತ್ತನು ಶರವರ್ಷದಿಂದ ಧನಂಜಯನನ್ನು ಮಚ್ಚಿದನು. ವಾಸವಿಯೂ ಕೂಡ ಆ ಶರವರ್ಷವು ತನ್ನನ್ನು ತಲುಪುವುದರೊಳಗೆ ಇನ್ನೊಂದು ಶರವರ್ಷದಿಂದ ಅದನ್ನು ಕತ್ತರಿಸಿದನು. ಪ್ರಾಗ್ಜ್ಯೋತಿಷನು ಆ ಶರವರ್ಷವನ್ನು ನಿವಾರಿಸಿ, ಪಾರ್ಥ ಮತ್ತು ಕೃಷ್ಣರನ್ನು ಶರಗಳಿಂದ ಹೊಡೆದನು. ಆ ಮಹಾಶರಜಾಲದಿಂದ ಅವರಿಬ್ಬರನ್ನೂ ಮುಚ್ಚಿ ಅಚ್ಯುತ-ಪಾರ್ಥರನ್ನು ಕೊಲ್ಲಲು ಆನೆಯನ್ನು ಪ್ರಚೋದಿಸಿದನು. ಕ್ರುದ್ಧನಾದ ಅಂತಕನಂತೆ ಮೇಲೆ ಬೀಳುತ್ತಿದ್ದ ಆನೆಯನ್ನು ನೋಡಿ ಕೂಡಲೇ ಜನಾರ್ದನನು ರಥವನ್ನು ಬಲಕ್ಕೆ ತಿರುಗಿಸಿದನು. ಆ ಮಹಾಗಜವು ತನ್ನ ಸಮೀಪ ಬಂದಿದ್ದರೂ ರಥವನ್ನು ತಿರುಗಿಸಿದುದರಿಂದ ಅದು ಹಿಂದೆ ಸರಿದುದಕ್ಕಾಗಿ ಯುದ್ಧ ಧರ್ಮವನ್ನು ಸ್ಮರಿಸಿ ಧನಂಜಯನು ಅದನ್ನು ಸಂಹರಿಸಲು ಇಚ್ಛಿಸಲಿಲ್ಲ. ಆದರೆ ಆ ಆನೆಯು ಮುಂದೆ ಹಾಯ್ದು ರಥಗಳನ್ನೂ ಕುದುರೆಗಳನ್ನೂ ತುಳಿದು ಮೃತ್ಯುಲೋಕಕ್ಕೆ ಕಳುಹಿಸಿತು. ಆಗ ಧನಂಜಯನು ಕ್ರುದ್ಧನಾದನು.
ಪ್ರಾಗ್ಜ್ಯೋತಿಷನೊಡನೆ ಯುದ್ಧಮಾಡುತ್ತಿದ್ದ ದಾಶಾರ್ಹ-ಪಾಂಡವರಿಬ್ಬರೂ ಮೃತ್ಯುವಿನ ಬಳಿ ಹೋಗುತ್ತಿದ್ದಾರೆಂದು ಸರ್ವ ಭೂತಗಳೂ ಅಂದುಕೊಂಡವು. ಹಾಗೆಯೇ ಭಗದತ್ತನು ಆನೆಯ ಭುಜದ ಮೇಲಿಂದ ರಥದಲ್ಲಿ ಕುಳಿತಿದ್ದ ಇಬ್ಬರು ಕೃಷ್ಣರ ಮೇಲೂ ತಡೆಯಿಲ್ಲದೇ ಶರವರ್ಷವನ್ನು ಸುರಿಸಿದನು. ಕಪ್ಪು ಉಕ್ಕಿನ ಹೇಮಪುಂಖದ ಶಿಲಾಶಿತ ಬಾಣವನ್ನು ಹೂಡಿ ಬಿಲ್ಲನ್ನು ಅಕರ್ಣಾಂತವಾಗಿ ಎಳೆದು ದೇವಕೀಪುತ್ರನನ್ನು ಹೊಡೆದನು. ಭಗದತ್ತನು ಪ್ರಯೋಗಿಸಿದ, ಮುಟ್ಟಲು ಅಗ್ನಿಯಂತೆ ತೀಕ್ಷ್ಣವಾಗಿದ್ದ ಆ ಬಾಣವು ದೇವಕೀಪುತ್ರನನ್ನು ಬೇಧಿಸಿ ಭೂಮಿಯನ್ನು ಪ್ರವೇಶಿಸಿತು. ಆಗ ಪಾರ್ಥನು ಅವನ ಧನುಸ್ಸನ್ನು ಕತ್ತರಿಸಿ, ಅಂಗರಕ್ಷಕರನ್ನೂ ಸಂಹರಿಸಿ, ಭಗದತ್ತನನ್ನು ಅಣಗಿಸುವ ರೀತಿಯಲ್ಲಿ ಹೊಡೆದನು. ಅನಂತರ ಅವನು ಸೂರ್ಯನ ರಶ್ಮಿಗಳಂತೆ ತೀಕ್ಷ್ಣವಾದ ಹದಿನಾಲ್ಕು ತೋಮರಗಳನ್ನು ಪ್ರಯೋಗಿಸಲು, ಸವ್ಯಸಾಚಿಯು ಆ ಒಂದೊಂದನ್ನೂ ಎರೆಡೆರೆಡನ್ನಾಗಿ ಮಾಡಿ ಕತ್ತರಿಸಿದನು. ಆಗ ಪಾಕಶಾಸನಿಯು ಶರಜಾಲದಿಂದ ಆನೆಯ ಕವಚವನ್ನು ಬೇಧಿಸಿದನು. ಅದು ಮೋಡಗಳಿಲ್ಲದ ಪರ್ವತದಂತೆ ಕಂಡಿತು. ಪ್ರಾಗ್ಜ್ಯೋತಿಷನು ಉಕ್ಕಿನಿಂದ ರಚಿತವಾದ ಹೇಮದಂಡದ ಶಕ್ತಿಯನ್ನು ವಾಸುದೇವನ ಮೇಲೆ ಎಸೆಯಲು ಅರ್ಜುನನು ಅದನ್ನು ಎರಡಾಗಿ ತುಂಡರಿಸಿದನು. ಅರ್ಜುನನು ಶರಗಳಿಂದ ರಾಜನ ಚತ್ರ-ಧ್ವಜಗಳನ್ನು ಕತ್ತರಿಸಿ, ತಕ್ಷಣವೇ ನಸುನಗುತ್ತಾ ಹತ್ತು ಬಾಣಗಳಿಂದ ಪರ್ವತಾಧಿಪನನ್ನು ಗಾಯಗೊಳಿಸಿದನು. ಅರ್ಜುನನ ಆ ಸುಂದರ ಪುಂಖಗಳ ಕಂಕಪತ್ರಿಗಳಿಂದ ಗಾಯಗೊಂಡು ಕ್ರುದ್ಧನಾದ ಭಗದತ್ತನು ಅರ್ಜುನನ ತಲೆಗೆ ಗುರಿಯಿಟ್ಟು ತೋಮರಗಳನ್ನು ಎಸೆದು ಜೋರಾಗಿ ಗರ್ಜಿಸಿದನು. ಅವು ಅರ್ಜುನನ ಕಿರೀಟವನ್ನು ತಲೆಕೆಳಗೆ ಮಾಡಿದವು. ಕಿರೀಟವನ್ನು ಸರಿಮಾಡಿಕೊಳ್ಳುತ್ತಾ ಫಲ್ಗುನನು ರಾಜನಿಗೆ “ಲೋಕವೆಲ್ಲವನ್ನೂ ಒಮ್ಮೆ ನೋಡಿಕೊಂಡುಬಿಡು!” ಎಂದು ಹೇಳಿದನು.
ಹೀಗೆ ಹೇಳಲು ಭಗದತ್ತನು ಸಂಕ್ರುದ್ಧನಾಗಿ ಪ್ರಕಾಶಮಾನವಾದ ಧನುಸ್ಸನ್ನು ಎತ್ತಿಕೊಂಡು ಗೋವಿಂದನೊಂದಿಗೆ ಪಾಂಡವನ ಮೇಲೆ ಶರವರ್ಷವನ್ನು ಸುರಿಸಿದನು. ಪಾರ್ಥನು ಅವನ ಧನುಸ್ಸನ್ನು ಕತ್ತರಿಸಿ ಭತ್ತಳಿಕೆಯನ್ನು ಪುಡಿಮಾಡಿದನು. ತ್ವರೆಮಾಡಿ ಇಪ್ಪತ್ತೆರಡು ಬಾಣಗಳಿಂದ ಅವನ ಸರ್ವ ಮರ್ಮಗಳಿಗೂ ಹೊಡೆದನು. ಅದರಿಂದ ಗಾಯಗೊಂಡು ವ್ಯಥಿತನಾದ ಅವನು ಕ್ರುದ್ಧನಾಗಿ ವೈಷ್ಣವಾಸ್ತ್ರವನ್ನು ಸ್ಮರಿಸಿಕೊಂಡು ಅಂಕುಶವನ್ನು ಅಭಿಮಂತ್ರಿಸಿ ಪಾಂಡವನ ಎದೆಗೆ ಗುರಿಯಿಟ್ಟು ಎಸೆದನು. ಭಗದತ್ತನಿಂದ ಪ್ರಯೋಗಿಸಲ್ಪಟ್ಟ ಆ ಸರ್ವಘಾತಕ ಅಸ್ತ್ರವನ್ನು ಕೇಶವನು ಪಾರ್ಥನಿಗೆ ಆವರಣವಾಗಿ ನಿಂತು ತನ್ನ ವಕ್ಷಃಸ್ಥಳದಲ್ಲಿ ಧರಿಸಿದನು. ಆ ಅಸ್ತ್ರವು ಕೇಶವನ ಎದೆಯಮೇಲೆ ವೈಜಯಂತಿ ಮಾಲೆಯಾಯಿತು. ಆಗ ಅರ್ಜುನನು ಆಯಾಸಗೊಂಡ ಮನಸ್ಸಿನಿಂದ ಕೇಶವನಿಗೆ ಹೇಳಿದನು: “ಪುಂಡರೀಕಾಕ್ಷ! ಜನಾರ್ದನ! ಯುದ್ಧವನ್ನು ಮಾಡದೇ ಕುದುರೆಗಳನ್ನೂ ಮಾತ್ರ ನಡೆಸುತ್ತೇನೆ ಎಂದು ಮಾಡಿದ್ದ ಪ್ರತಿಜ್ಞೆಯನ್ನು ನೀನು ರಕ್ಷಿಸುತ್ತಿಲ್ಲ. ಒಂದುವೇಳೆ ನಾನು ವ್ಯಸನದಿಂದಿದ್ದರೆ ಅಥವಾ ಇದನ್ನು ನಿವಾರಿಸಲು ಅಶಕ್ತನಾಗಿದ್ದರೆ ನೀನು ಇದನ್ನು ಮಾಡಬಹುದಾಗಿತ್ತು. ಆದರೆ ನಾನು ಇಲ್ಲಿ ಶಕ್ಯನಾಗಿರುವಾಗ ನೀನು ಹೀಗೆ ಮಾಡಬಾರದಾಗಿತ್ತು. ಧನುರ್ಬಾಣಸಹಿತನಾದ ನಾನು ಸುರಾಸುರ ಮಾನವರೊಂದಿಗೆ ಈ ಲೋಕವನ್ನು ಗೆಲ್ಲಲು ಶಕ್ಯ ಎನ್ನುವುದೂ ಕೂಡ ನಿನಗೆ ತಿಳಿದೇ ಇದೆ.”
ಆಗ ವಾಸುದೇವನು ಅರ್ಜುನನಿಗೆ ಅರ್ಥವತ್ತಾದ ಮಾತುಗಳಿಂದ ಉತ್ತರಿಸಿದನು: “ಪಾರ್ಥ! ಹಿಂದೆ ನಡೆದ ಈ ಗುಹ್ಯ ವೃತ್ತಾಂತವನ್ನು ಕೇಳು. ಚತುರ್ಮೂರ್ತಿಯಾದ ನಾನು ಶಾಶ್ವತವಾಗಿ ಲೋಕೋದ್ಧಾರದಲ್ಲಿ ತೊಡಗಿದ್ದೇನೆ. ಲೋಕಗಳ ಹಿತಕ್ಕಾಗಿ ನನ್ನನ್ನು ನಾನೇ ವಿಭಜನ ಮಾಡಿಕೊಂಡಿದ್ದೇನೆ. ನನ್ನ ಒಂದು ಮೂರ್ತಿಯು ಭೂಮಿಯ ಮೇಲಿದ್ದುಕೊಂಡು ತಪಶ್ಚರ್ಯವನ್ನು ಮಾಡುತ್ತಿದೆ. ಇನ್ನೊಂದು ಜಗತ್ತಿನಲ್ಲಿ ನಡೆಯುವ ಒಳ್ಳೆಯದು-ಕೆಟ್ಟವುಗಳನ್ನು ನೋಡುತ್ತಿರುತ್ತದೆ. ಇನ್ನೊಂದು ಮನುಷ್ಯ ಲೋಕವನ್ನಾಶ್ರಯಿಸಿ ಕರ್ಮಗಳನ್ನು ಮಾಡುತ್ತಿರುತ್ತದೆ. ನಾಲ್ಕನೆಯ ಇನ್ನೊಂದು ಸಹಸ್ರವರ್ಷಗಳ ಪರ್ಯಂತ ನಿದ್ರಾವಸ್ಥೆಯಲ್ಲಿ ಮಲಗಿರುತ್ತದೆ. ನನ್ನ ಈ ಮೂರ್ತಿಯು ಸಹಸ್ರ ವರ್ಷಗಳ ಅಂತ್ಯದಲ್ಲಿ ಏಳುತ್ತದೆ. ಆ ಕಾಲದಲ್ಲಿ ವರಗಳಿಗೆ ಅರ್ಹರಾದವರು ಕೇಳಿದ ಶ್ರೇಷ್ಠ ವರಗಳನ್ನು ಅದು ಕರುಣಿಸುತ್ತದೆ. ಅಂತಹ ಒಂದು ಕಾಲವು ಬಂದೊದಗಿದಾಗ ಪೃಥ್ವಿಯು ನರಕನಿಗಾಗಿ ನನ್ನಿಂದ ಒಂದು ವರವನ್ನು ಕೇಳಿದ್ದಳು. ಅದನ್ನು ಕೇಳು. “ನನ್ನ ಮಗನು ದೇವ ಮತ್ತು ಅಸುರರಿಂದ ಅವಧ್ಯನಾಗಲಿ. ಅವನು ವೈಷ್ಣವಾಸ್ತ್ರವನ್ನು ಹೊಂದಿರಬೇಕು. ನನಗೆ ಇದನ್ನು ದಯಪಾಲಿಸಬೇಕು.” ಈ ರೀತಿಯ ವರವನ್ನು ಕೇಳಿ ನಾನು ಭೂಮಿಯ ತನಯನಿಗೆ ಅಮೋಘವಾದ ಈ ವೈಷ್ಣವಾಸ್ತ್ರವನ್ನು ಹಿಂದೆ ನೀಡಿದ್ದೆ. ಅವಳಿಗೆ ಹೇಳಿದ್ದೆ: “ಈ ಅಮೋಘ ಅಸ್ತ್ರವು ನರಕನನ್ನು ರಕ್ಷಿಸುತ್ತದೆ. ಇದು ಅವನಲ್ಲಿ ಇರುವಾಗ ಯಾರೂ ಅವನನ್ನು ವಧಿಸಲಾರರು. ಈ ಅಸ್ತ್ರದಿಂದ ನಿನ್ನ ಮಗ ಪರಬಲಾರ್ದನನು ಸರ್ವಲೋಕಗಳಲ್ಲಿ ಸರ್ವದ ಜಯಿಸಲಸಾಧ್ಯನಾಗಿರುತ್ತಾನೆ.” ಹಾಗೆಯೇ ಆಗಲೆಂದು ಹೇಳಿ ಬಯಸಿದುದನ್ನು ಪಡೆದು ಆ ಮನಸ್ವಿನೀ ದೇವಿಯು ಹೋದಳು. ಶತ್ರುತಾಪನ ನರಕನಾದರೋ ಅದರಿಂದಾಗಿ ದುರಾಧರ್ಷನಾಗಿದ್ದನು. ಪಾರ್ಥ! ಅವನಿಂದ ನನ್ನ ಆ ಅಸ್ತ್ರವನ್ನು ಪ್ರಾಗ್ಜ್ಯೋತಿಷನು ಪಡೆದನು. ಅದರಿಂದ ಲೋಕದಲ್ಲಿ ಇಂದ್ರ ರುದ್ರರೂ ಅವಧ್ಯರಲ್ಲ. ನಿನಗಾಗಿಯೇ ಹೊರತು ಬೇರೆ ಯಾವ ಕಾರಣದಿಂದಲೂ ನಾನು ಅದನ್ನು ನಾಶಗೊಳಿಸಲಿಲ್ಲ. ಹಿಂದೆ ನಾನು ಲೋಕ ಹಿತಾರ್ಥಕ್ಕಾಗಿ ಹೇಗೆ ನರಕನನ್ನು ಸಂಹರಿಸಿದೆನೋ ಹಾಗಿ ಪರಮಾಸ್ತ್ರವನ್ನು ಪ್ರಯೋಗಿಸಿ ಯುದ್ಧದಲ್ಲಿ ವೈರಿ ದುರ್ಧರ್ಷ ಸುರದ್ವೇಷೀ ಭಗದತ್ತನನ್ನು ಸಂಹರಿಸು.”
ಮಹಾತ್ಮ ಕೇಶವನು ಹೀಗೆ ಹೇಳಲು ಪಾರ್ಥನು ತಕ್ಷಣವೇ ಭಗದತ್ತನನ್ನು ನಿಶಿತ ಬಾಣಗಳಿಂದ ಮುಚ್ಚಿದನು. ಆಗ ಪಾರ್ಥನು ಅಸಂಭ್ರಾಂತನಾಗಿ ನಾರಾಚದಿಂದ ಆನೆಯ ಕುಂಭಸ್ಥಳದ ಮಧ್ಯದಲ್ಲಿ ಹೊಡೆದನು. ಆ ಬಾಣವು ವಜ್ರವು ಪರ್ವತವನ್ನು ಹೊಗುವಂತೆ ಮತ್ತು ಸರ್ಪವು ಬಿಲವನ್ನು ಹೊಗುವಂತೆ ಪುಂಖಗಳೊಂದಿಗೆ ಆನೆಯ ಒಳ ಹೊಕ್ಕಿತು. ಆ ಮಹಾಗಜವು ತನ್ನ ಅಂಗಾಂಗಗಳನ್ನು ನಿಷ್ಕ್ರಿಯಗೊಳಿಸಿ ಎರಡೂ ದಂತಗಳನ್ನು ಭೂಮಿಗೆ ಊರಿಕೊಂಡು, ಆರ್ತಸ್ವರದಲ್ಲಿ ಕೂಗಿ ಪ್ರಾಣಗಳನ್ನು ತೊರೆಯಿತು. ಆಗ ಪಾಂಡವನು ಅರ್ಧಚಂದ್ರದ ಬಿಂಬವುಳ್ಳ ನತಪರ್ವ ಶರದಿಂದ ರಾಜಾ ಭಗದತ್ತನ ಹೃಧಯವನ್ನು ಬೇಧಿಸಿದನು. ಕಿರೀಟಿಯಿಂದ ಭಿನ್ನಹೃದಯನಾದ ಭಗದತ್ತನು ಒಡನೆಯೇ ಅಸು ನೀಗಿದನು. ಅವನ ಕೈಯಲ್ಲಿದ್ದ ಬಾಣ ಭತ್ತಳಿಕೆಗಳು ಕೆಳಗೆ ಬಿದ್ದವು. ಕಮಲದ ನಾಳವನ್ನು ಹೊಡೆದರೆ ಕಮಲವು ಬೀಳುವಂತೆ ಅವನ ಶಿರಸ್ತ್ರಾಣ ಮತ್ತು ಶ್ರೇಷ್ಠ ಅಂಕುಶಗಳು ಕೆಳಗೆ ಉರುಳಿದವು. ಹೂಗಳಿಂದ ಸಮೃದ್ಧವಾದ ಬೆಟ್ಟದ ಕಣಗಿಲೆ ಮರವು ಭಿರುಗಾಳಿಯ ಬಡಿತಕ್ಕೆ ಸಿಲುಕಿ ಬುಡಮೇಲಾಗಿ ಬೆಟ್ಟದ ತುದಿಯಿಂದ ಕೆಳಕ್ಕೆ ಬೀಳುವಂತೆ ಸುವರ್ಣಮಾಲೆಯಿಂದ ಅಲಂಕೃತನಾಗಿದ್ದ ಭಗದತ್ತನು ಸುವರ್ಣಾಭರಣಗಳಿಂದ ವಿಭೂಷಿತವಾಗಿದ್ದ ಪರ್ವತೋಪಮ ಆನೆಯ ಮೇಲಿಂದ ಕೆಳಗೆ ಬಿದ್ದನು.
ಈ ರೀತಿ ನರಪತಿ ಇಂದ್ರವಿಕ್ರಮಿ ಇಂದ್ರನ ಸಖನನ್ನು ಆಹವದಲ್ಲಿ ಸಂಹರಿಸಿ ಐಂದ್ರಿಯು ವಿಜಯದ ಆಕಾಂಕ್ಷೆಯಿಂದಿದ್ದ ಕೌರವರ ಕಡೆಯ ಯೋಧರನ್ನು ಚಂಡಮಾರುತವು ವೃಕ್ಷಗಳನ್ನು ಧ್ವಂಸಮಾಡುವಂತೆ ಧ್ವಂಸಮಾಡಿದನು.
ಶಕುನಿಯ ಪಲಾಯನ
ಸತತವೂ ಇಂದ್ರನ ಪ್ರಿಯನಾಗಿದ್ದ ಸಖ ಅಮಿತೌಜಸ ಪ್ರಾಗ್ಜ್ಯೋತಿಷನನ್ನು ಸಂಹರಿಸಿ ಪಾರ್ಥನು ಪ್ರದಕ್ಷಿಣಾಕಾರವಾಗಿ ಹಿಂದಿರುಗಿದನು. ಆಗ ಗಾಂಧಾರರಾಜನ ಮಕ್ಕಳು, ಪರಪುರಂಜಯ ಸಹೋದರರಾದ ವೃಷಕ ಮತ್ತು ಅಚಲರಿಬ್ಬರೂ ರಣದಲ್ಲಿ ಅರ್ಜುನನ ಮೇಲೆ ಬಾಣಗಳನ್ನು ಪ್ರಯೋಗಿಸಿದರು. ಆ ಇಬ್ಬರು ವೀರ ಧನ್ವಿಗಳೂ ಅರ್ಜುನನ ಮುಂದೆ ಮತ್ತು ಹಿಂದಿನಿಂದ ಮಹಾವೇಗದಿಂದ ನಿಶಿತ ಆಶುಗಗಳಿಂದ ತುಂಬಾ ಹೊಡೆದು ಗಾಯಗೊಳಿಸಿದರು. ಪಾರ್ಥನು ಹರಿತ ಬಾಣಗಳಿಂದ ಸೌಬಲನ ಮಗ ವೃಷಕನ ಕುದುರೆಗಳನ್ನೂ, ಸೂತನನ್ನೂ ಕೊಂದು ಧನುಸ್ಸನ್ನೂ, ಚತ್ರವನ್ನೂ, ರಥವನ್ನೂ, ಧ್ವಜವನ್ನೂ ಕತ್ತರಿಸಿದನು. ಆಗ ಅರ್ಜುನನು ಬಾಣಗಳ ಮಳೆಯಿಂದಲೂ ನಾನಾ ವಿಧದ ಶಸ್ತ್ರಪ್ರಹಾರಗಳಿಂದ ಪುನಃ ಪುನಃ ಸೌಬಲಪ್ರಮುಖ ಗಾಂಧಾರರನ್ನು ವ್ಯಾಕುಲಗೊಳಿಸಿದನು. ಆಗ ಆಯುಧಗಳನ್ನು ಹಿಡಿದು ಆಕ್ರಮಣ ಮಾಡುತ್ತಿದ್ದ ಐನೂರು ಗಾಂಧಾರವೀರರನ್ನು ಧನಂಜಯನು ಕ್ರುದ್ಧನಾಗಿ ಮೃತ್ಯುಲೋಕಕ್ಕೆ ಕಳುಹಿಸಿದನು. ಕುದುರೆಗಳು ಹತವಾಗಲು ತಕ್ಷಣವೇ ಆ ಮಹಾಭುಜ ವೃಷಕನು ರಥದಿಂದ ಇಳಿದು ಸಹೋದರ ಅಚಲನ ರಥವನ್ನೇರಿ ಇನ್ನೊಂದು ಧನುಸ್ಸನ್ನು ಎತ್ತಿಕೊಂಡನು. ಅವರಿಬ್ಬರು ಸಹೋದರ ವೃಷಕ-ಅಚಲರು ಶರವರ್ಷಗಳಿಂದ ಪುನಃ ಪುನಃ ಬೀಭತ್ಸ್ಸುವನ್ನು ಆಕ್ರಮಣಿಸಿದರು. ಧೃತರಾಷ್ಟ್ರನ ಬಾವನ ಮಕ್ಕಳಾದ ರಾಜಕುಮಾರ ವೃಷಕ-ಅಚಲರಿಬ್ಬರೂ ವೃತ್ರ-ಬಲರು ಇಂದ್ರನನ್ನು ಹೇಗೋ ಹಾಗೆ ಪಾರ್ಥನನ್ನು ಚೆನ್ನಾಗಿ ಗಾಯಗೊಳಿಸಿದರು. ಆಷಾಢ-ಶ್ರಾವಣ ಮಾಸಗಳು ಹೇಗೆ ಉರಿಯುವ ಕಿರಣಗಳಿಂದ ಲೋಕವನ್ನು ತಾಪಗೊಳಿಸುತ್ತವೆಯೋ ಹಾಗೆ ಲಕ್ಷ್ಯಭೇದದಲ್ಲಿ ಸಿದ್ಧಹಸ್ತರಾದ ಆ ಗಾಂಧಾರರು ಪಾಂಡವನನ್ನು ಪುನಃ ಪುನಃ ಬಾಣಗಳಿಂದ ಪ್ರಹರಿಸಿದರು.
ರಥದಲ್ಲಿ ಒಬ್ಬರಿಗೊಬ್ಬರು ತಾಗಿಕೊಂಡೇ ನಿಂತಿದ್ದ ಆ ಇಬ್ಬರು ನರವ್ಯಾಘ್ರ ರಾಜಕುಮಾರ ವೃಷಕ-ಅಚಲರಿಬ್ಬರನ್ನೂ ಅರ್ಜುನನು ಒಂದೇ ಒಂದು ಬಾಣದಿಂದ ಪ್ರಹರಿಸಿದನು. ಸಿಂಹಗಳಂತಿದ್ದ, ಕೆಂಪುಗಣ್ಣುಳ್ಳವರಾಗಿದ್ದ, ಒಂದೇ ದೇಹಲಕ್ಷಣಗಳನ್ನು ಹೊಂದಿದ್ದ ಆ ಇಬ್ಬರು ವೀರ ಮಹಾಭುಜ ಸೋದರರಿಬ್ಬರೂ ಅಸುನೀಗಿ ರಥದಿಂದ ಕೆಳಗೆ ಬಿದ್ದರು. ಬಂಧುಜನರಿಗೆ ಪ್ರಿಯರಾದ ಅವರ ದೇಹಗಳು ತಮ್ಮ ಪುಣ್ಯ ಯಶಸ್ಸನ್ನು ಹತ್ತು ದಿಕ್ಕ್ಕುಗಳಲ್ಲಿಯೂ ಪಸರಿಸಿ ರಥದಿಂದ ಭೂಮಿಯ ಮೇಲೆ ಬಿದ್ದು ಮಲಗಿದವು. ಪಲಾಯನಗೈಯದೇ ರಣದಲ್ಲಿ ಹತರಾದ ಸೋದರ ಮಾವಂದಿರನ್ನು ನೋಡಿ ಧೃತರಾಷ್ಟ್ರನ ಮಕ್ಕಳು ಬಹಳವಾಗಿ ಕಣ್ಣೀರು ಸುರಿಸಿದರು. ತನ್ನ ಸಹೋದರರು ಹತರಾದುದನ್ನು ನೋಡಿ ನೂರಾರು ಮಾಯೆಗಳ ವಿಶಾರದ ಶಕುನಿಯು ಮಾಯೆಗಳನ್ನು ಬಳಸಿ ಕೃಷ್ಣರಿಬ್ಬರನ್ನೂ ಸಮ್ಮೋಹಗೊಳಿಸತೊಡಗಿದನು.
ದೊಣ್ಣೆಗಳು, ಕಬ್ಬಿಣದ ಸಲಾಕೆಗಳು, ಕಲ್ಲುಗಳು, ಶತಘ್ನಿಗಳು, ಶಕ್ತಿಗಳು, ಗದೆಗಳು, ಪರಿಘಗಳು, ಖಡ್ಗಗಳು, ಶೂಲಗಳು, ಮುದ್ಗರ-ಪಟ್ಟಿಷಗಳು, ಕಂಪನಗಳು, ಋಷ್ಟಿಗಳು, ನಖರಗಳು, ಮುಸಲಗಳು, ಪರಶುಗಳು, ಕ್ಷುರಗಳು, ಕ್ಷುರಪ್ರನಾಲೀಕಗಳು, ವತ್ಸದಂತಿಗಳು, ಅಸ್ಥಿಸಂಧಿಗಳು, ಚಕ್ರಗಳು, ಬಾಣಗಳು, ಪ್ರಾಸಗಳು, ಮತ್ತು ವಿವಿಧ ಆಯುಧಗಳು ಎಲ್ಲ ದಿಕ್ಕು-ಉಪ ದಿಕ್ಕ್ಕುಗಳಿಂದ ಅರ್ಜುನನ ಮೇಲೆ ಬಂದು ಬೀಳತೊಡಗಿದವು. ಕತ್ತೆಗಳು, ಒಂಟೆಗಳು, ಕೋಣಗಳು, ಸಿಂಹಗಳು, ಹುಲಿಗಳು, ಬೆಟ್ಟದ ಹಸುಗಳು, ಚಿರತೆಗಳು, ಕರಡಿಗಳು, ಹದ್ದುಗಳು, ಕಪಿಗಳು, ಹಾವುಗಳು, ಮತ್ತು ವಿವಿಧ ಪಕ್ಷಿಗಳು ಹಸಿವಿನಿಂದ ಬಳಲಿ ಸಂಕ್ರುದ್ಧರಾಗಿ ಅರ್ಜುನನ ಕಡೆ ಧಾವಿಸಿ ಬಂದವು. ಆಗ ದಿವ್ಯಾಸ್ತ್ರಗಳನ್ನು ತಿಳಿದಿದ್ದ ಶೂರ ಕುಂತೀಪುತ್ರ ಧನಂಜಯನು ತಕ್ಷಣವೇ ಬಾಣಗಳ ಜಾಲಗಳನ್ನು ಪ್ರಯೋಗಿಸಿ ಅವುಗಳನ್ನು ನಾಶಗೊಳಿಸಿದನು.
ಆ ಶೂರನ ಪ್ರವರ ದೃಢ ಸಾಯಕಗಳಿಂದ ಗಾಯಗೊಂಡ ಅವುಗಳೆಲ್ಲವೂ ಮಹಾರವದಲ್ಲಿ ಕೂಗುತ್ತಾ ಹತರಾಗಿ ಬಿದ್ದು ನಾಶಗೊಂಡವು. ಆಗ ಅರ್ಜುನನ ರಥದ ಸುತ್ತಲೂ ಕತ್ತಲೆಯುಂಟಾಯಿತು. ಆ ಕತ್ತಲೆಯಲ್ಲಿ ಕ್ರೂರ ಮಾತುಗಳು ಪಾರ್ಥನನ್ನು ಬೆದರಿಸಿದವು. ಅರ್ಜುನನು ಆ ಮಹಾ ಕತ್ತಲೆಯನ್ನು ಜ್ಯೋತಿಷಾಸ್ತ್ರದಿಂದ ನಿರಸನಗೊಳಿಸಿದನು. ಅದು ನಾಶಗೊಳ್ಳಲು ಭಯಾನಕವಾದ ಜಲರಾಶಿಯು ಅವನನ್ನು ಆವರಿಸಿತು. ಆ ನೀರಿನ ವಿನಾಶಕ್ಕಾಗಿ ಅರ್ಜುನನು ಆದಿತ್ಯಾಸ್ತ್ರವನ್ನು ಪ್ರಯೋಗಿಸಿದನು. ಆ ಅಸ್ತ್ರದಿಂದ ಜಲರಾಶಿಯೆಲ್ಲವೂ ಶೋಷಿತವಾಯಿತು. ಹೀಗೆ ಸೌಬಲನು ಮಾಡಿದ ಬಹುವಿಧದ ಮಾಯೆಗಳನ್ನು ಅರ್ಜುನನು ನಗುತ್ತಾ ಅಸ್ತ್ರಬಲದಿಂದ ನಾಶಪಡಿಸಿದನು. ಹಾಗೆ ಮಾಯೆಗಳು ನಾಶಗೊಳ್ಳಲು, ಅರ್ಜುನನ ಶರಗಳ ಪೆಟ್ಟಿನಿಂದ ತ್ರಸ್ತನಾದ ಶಕುನಿಯು ಪ್ರಾಕೃತನಂತೆ ವೇಗ ಕುದುರೆಗಳೊಂದಿಗೆ ಪಲಾಯನಗೈದನು.
ಆಗ ಅರ್ಜುನನು ಅರಿಗಳ ಮಧ್ಯೆ ತನ್ನಲ್ಲಿದ್ದ ಅಸ್ತ್ರಗಳ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತಾ ಕೌರವರ ಸೇನೆಗಳನ್ನು ಶರೌಘಗಳಿಂದ ಮುಚ್ಚಿದನು. ಪಾರ್ಥನಿಂದ ನಾಶಗೊಳ್ಳುತ್ತಿದ್ದ ದುರ್ಯೋಧನನ ಸೇನೆಯು ಗಂಗಾನದಿಯು ಪರ್ವತವನ್ನು ಸಮೀಪಿಸಿದಾಗ ಎರಡಾಗಿ ಕವಲೊಡೆಯುವಂತೆ ಇಬ್ಬಾಗಗೊಂಡಿತು. ಕಿರೀಟಿಯಿಂದ ಪೀಡಿತರಾದ ಕೆಲವರು ದ್ರೋಣನನ್ನು ಮೊರೆಹೊಕ್ಕರು. ಇನ್ನು ಕೆಲವರು ದುರ್ಯೋಧನನನ್ನು ಮೊರೆಹೊಕ್ಕರು.
ಅಲ್ಲಿಂದಿಲ್ಲಿಗೆ ಓಡುವುದರಿಂದುಂಟಾದ ಧೂಳಿನಿಂದ ಸೈನ್ಯದಲ್ಲಿ ಕತ್ತಲೆಯು ಕವಿದು ಅರ್ಜುನನೇ ಕಾಣದಂತಾದನು. ಆದರೆ ಗಾಂಡೀವದ ನಿರ್ಘೋಷವನ್ನು ಪದೇ ಪದೇ ಕೇಳಿಬರುತ್ತಿತ್ತು. ಶಂಖದುಂದುಭಿಗಳ ನಿರ್ಘೋಷ ಮತ್ತು ವಾದ್ಯಗಳ ಸ್ವರಗಳನ್ನೂ ಮೀರಿಸಿ ಗಾಂಡೀವದ ನಿರ್ಘೋಷವು ದಿವಿಯನ್ನು ತಲುಪಿತು. ಪುನಃ ದಕ್ಷಿಣಭಾಗದಲ್ಲಿ ದ್ರೋಣನನ್ನು ಅನುಸರಿಸುತ್ತಿದ್ದ ಚಿತ್ರ ಯೋಧಿಗಳೊಂದಿಗೆ ಅರ್ಜುನನ ಉತ್ತಮ ಸಂಗ್ರಾಮವು ನಡೆಯಿತು. ಧೃತರಾಷ್ಟ್ರ ಪುತ್ರರ ನಾನಾ ವಿಧದ ಸೇನೆಗಳನ್ನು ಭಿರುಗಾಳಿಯು ಆಕಾಶದಲ್ಲಿ ಮೋಡಗಳನ್ನು ಚದುರಿಸುವಂತೆ ಅರ್ಜುನನು ನಾಶಗೊಳಿಸಿದನು. ಅಂತಕನಂತೆ ಜೋರಾಗಿ ಬಾಣಗಳ ಮಳೆಯನ್ನು ಸುರಿಸುತ್ತಿದ್ದ ಆ ವಾಸವ ಉಗ್ರನನ್ನು ಯಾರೂ ತಡೆಯಲಿಲ್ಲ. ಪಾರ್ಥರಿಂದ ಹತರಾದ ಕೌರವರು ತುಂಬಾ ವ್ಯಥಿತರಾದರು. ಪಲಾಯನ ಮಾಡುತ್ತಿದ್ದವರು ಬಹಳಷ್ಟು ತಮ್ಮವರನ್ನೇ ನಾಶಗೊಳಿಸಿದರು. ಅರ್ಜುನನಿಂದ ಬಿಡಲ್ಪಟ್ಟು ದೇಹಗಳನ್ನು ತುಂಡರಿಸುತ್ತಿದ್ದ ಕಂಕಪತ್ರಗಳು ಮಿಡತೆಗಳೋಪಾದಿಯಲ್ಲಿ ಎಲ್ಲ ದಿಕ್ಕುಗಳನ್ನೂ ವ್ಯಾಪಿಸಿ ಬೀಳುತ್ತಿದ್ದವು. ಅವುಗಳು ಆನೆ-ಕುದುರೆ-ಪದಾತಿ-ರಥಿಗಳನ್ನು ಭೇದಿಸಿ ಹಾವುಗಳು ಹುತ್ತವನ್ನು ಪ್ರವೇಶಿಸುವಂತೆ ನೆಲವನ್ನು ಹೊಗುತ್ತಿದ್ದವು.
ಅವನು ಆನೆ-ಕುದುರೆ-ಮನುಷ್ಯರ ಮೇಲೆ ಎರಡನೆಯ ಬಾಣವನ್ನು ಬಿಡುತ್ತಿರಲಿಲ್ಲ. ಅವನ ಒಂದೊಂದು ಬಾಣದಿಂದಲೂ ಗಾಯಗೊಂಡು ಅಸುನೀಗಿ ಬೀಳುತ್ತಿದ್ದರು. ಶರವೃಷ್ಟಿಯಿಂದ ಹತರಾದ ಮನುಷ್ಯ-ಕುದುರೆ-ಆನೆಗಳು ಬಿದ್ದು ರಣರಂಗವು ತುಂಬಿಹೋಯಿತು. ಹೆಣಗಳನ್ನು ತಿನ್ನಲು ಬಂದ ನಾಯಿ ಗುಳ್ಳೇನರಿಗಳ ಕೂಗಿನಿಂದ ರಣರಂಗದ ಮಧ್ಯಭಾಗವು ವಿಚಿತ್ರವಾಗಿ ತೋರಿತು. ಶರಾತುರರಾಗಿ ತಂದೆಯು ಮಗನನ್ನು ತೊರೆಯುತ್ತಿದ್ದನು. ಸ್ನೇಹಿತರು ಸ್ನೇಹಿತರನ್ನು ತೊರೆಯುತ್ತಿದ್ದರು. ಹಾಗೆಯೇ ಪುತ್ರರು ಪಿತ್ರುಗಳನ್ನು ತೊರೆಯುತ್ತಿದ್ದರು. ಪಾರ್ಥನಿಂದ ಪೀಡಿತರಾದ ಕೃತಮತರು ತಮ್ಮ ತಮ್ಮ ರಕ್ಷಣೆಯಲ್ಲಿ ವಾಹನಗಳನ್ನೂ ಬಿಟ್ಟು ಓಡುತ್ತಿದ್ದರು.
ಹಾಗಿದ್ದರೂ ದುರ್ಯೋಧನನಿಗೆ ಪ್ರಿಯವಾದುದನ್ನು ಮಾಡಲು ಬಯಸಿ ಕೌರವ ಪ್ರಮುಖರು ಲೋಕದಲ್ಲಿ ತಮ್ಮ ಯಶಸ್ಸನ್ನು ರಕ್ಷಿಸಿಕೊಳ್ಳುತ್ತಾ ದ್ರೋಣನನ್ನು ಅನುಸರಿಸಿದರು. ಅವರು ಯುಧಿಷ್ಠಿರನನ್ನು ತಲುಪಿ ಶಸ್ತ್ರಗಳನ್ನು ಎತ್ತಿ ಹಿಡಿದು ಭಯಪಡದೇ ಸತ್ಯವಾದ ಭೈರವ ಆರ್ಯಕರ್ಮಗಳನ್ನು ಎಸಗಿದರು. ಬಳಿಯಲ್ಲಿ ಭೀಮಸೇನನೂ, ಸಾತ್ಯಕಿಯೂ, ಧೃಷ್ಟದ್ಯುಮ್ನನೂ ಇಲ್ಲದಿರುವ ಅವಕಾಶದಲ್ಲಿ ಅವನ ಮೇಲೆ ಎರಗಿದರು. “ದ್ರೋಣ! ದ್ರೋಣ!” ಎಂದು ಕ್ರೂರರಾದ ಪಾಂಚಾಲರು ಹುರಿದುಂಬಿಸುತ್ತಿದ್ದರು. “ದ್ರೋಣನನ್ನು ಬಿಟ್ಟುಕೊಡಬೇಡಿ!” ಎಂದು ಕೌರವರು ಕುರುಗಳನ್ನು ಹುರಿದುಂಬಿಸುತ್ತಿದ್ದರು. “ದ್ರೋಣ! ದ್ರೋಣ!” ಎಂದು ಒಂದುಕಡೆ ಪಾಂಡವರು ಮತ್ತು “ದ್ರೋಣನನ್ನು ಬಿಟ್ಟುಕೊಡಬೇಡಿ!” ಎಂದು ಇನ್ನೊಂದು ಕಡೆಯಲ್ಲಿ ಕುರುಗಳು ಕೂಗುತ್ತಾ ದ್ರೋಣನನ್ನು ದ್ಯೂತದ ಪಣವಾನ್ನಾಗಿಸಿದ್ದರು. ದ್ರೋಣನು ಪಾಂಚಾಲರ ಯಾವ ಯಾವ ರಥಸಮೂಹಗಳನ್ನು ಆಕ್ರಮಣಿಸುತ್ತಿದ್ದನೋ ಅಲ್ಲಲ್ಲಿ ಧೃಷ್ಟದ್ಯುಮ್ನನು ಅವನನ್ನು ಎದುರಿಸುತ್ತಿದ್ದನು. ಹೀಗೆ ಭಾಗವಿಪರ್ಯಾಸದಿಂದ ನಡೆಯುತ್ತಿದ್ದ ಸಂಗ್ರಾಮವು ಭೈರವ ರೂಪವನ್ನು ತಾಳಿ, ವೀರರು ಶತ್ರು ವೀರರನ್ನು ಜೋರಾಗಿ ಗರ್ಜಿಸುತ್ತಾ ಎದುರಿಸಿದರು. ಪಾಂಡವರು ಶತ್ರುಗಳಿಂದ ಸ್ವಲ್ಪವೂ ತತ್ತರಿಸಲಿಲ್ಲ. ಆದರೆ ಅವರ ಕಷ್ಟಗಳನ್ನು ಸ್ಮರಿಸಿಕೊಂಡು ಅವರು ಕೌರವ ಸೇನೆಯು ತತ್ತರಿಸುವಂತೆ ಮಾಡಿದರು. ಲಜ್ಜಾಶೀಲರಾದ ಸತ್ತ್ವಗುಣಸಂಪನ್ನರಾದ ಪಾಂಡವರೂ ಕೂಡ ಕೋಪಾವಿಷ್ಟರಾಗಿ ಪ್ರಾಣಗಳನ್ನೂ ತೊರೆದು ಮಹಾರಣದಲ್ಲಿ ದ್ರೋಣನನ್ನು ಸಂಹರಿಸಲು ಮುನ್ನುಗ್ಗಿ ಹೋಗುತ್ತಿದ್ದರು. ಪ್ರಾಣಗಳನ್ನೇ ಪಣವಾಗಿಟ್ಟ ಅಮಿತತೇಜಸರ ಆ ತುಮುಲ ಯುದ್ಧವು ಕಬ್ಬಿಣದ ಒನಕೆಗಳ ಘರ್ಷಣೆಗೆ ಅಥವಾ ಕಲ್ಲುಗಳ ಘರ್ಷಣೆಗೆ ಸಮಾನವಾಗಿತ್ತು. ವೃದ್ಧರು ಕೂಡ ಆ ರೀತಿಯ ಸಂಗ್ರಾಮವನ್ನು ನೆನಪಿಸಿಕೊಳ್ಳಲಾಗುತ್ತಿರಲಿಲ್ಲ. ಏಕೆಂದರೆ ಆ ರೀತಿಯ ಯುದ್ಧವನ್ನು ಅವರು ಕಂಡೂ ಇರಲಿಲ್ಲ. ಕೇಳಿಯೂ ಇರಲಿಲ್ಲ. ವೀರರ ವಿನಾಶಕಾರಕ ಆ ಮಹಾಯುದ್ಧದಲ್ಲಿ ರಣಾಂಗಣಕ್ಕೆ ಹಿಂದಿರುಗುತ್ತಿದ್ದ ಮಹಾ ಸೇನಾ ಸಮೂಹದ ಭಾರದಿಂದ ಪೀಡಿತಳಾಗಿ ಭೂಮಿಯು ಕಂಪಿಸಿದಳು. ಅಜಾತಶತ್ರುವಿನ ಮತ್ತು ಕ್ರುದ್ಧನಾದ ದುರ್ಯೋಧನನ ಸೈನ್ಯಸಮೂಹಗಳ ಆ ಭಯಂಕರ ಸಂಚಲನದಿಂದಾದ ಶಬ್ಧವು ನಾಕವನ್ನೂ ಸ್ತಬ್ಧಗೊಳಿಸಿತು. ಪಾಂಡವರ ಸೇನೆಗಳನ್ನು ಹೊಕ್ಕು ಸಂಚರಿಸುತ್ತಿದ್ದ ದ್ರೋಣನು ನಿಶಿತ ಶರಗಳಿಂದ ಸಹಸ್ರಾರು ಸಂಖ್ಯೆಗಳಲ್ಲಿ ಸಂಹರಿಸಿದನು. ಅದ್ಭುತಕರ್ಮಿ ದ್ರೋಣನಿಂದ ಪ್ರಮಥಗೊಳ್ಳುತ್ತಿರಲು ಸ್ವಯಂ ಸೇನಾಪತಿ ಧೃಷ್ಟದ್ಯುಮ್ನನು ಎದುರಿಸಿ ತಡೆದನು. ಆಗ ದ್ರೋಣ-ಪಾಂಚಾಲ್ಯರ ನಡುವೆ ಅದ್ಭುತ ಯುದ್ಧವು ನಡೆಯಿತು. ಅದರಂತಹ ಯುದ್ಧವು ಹಿಂದೆ ಎಂದೂ ನಡೆದಿರಲಿಲ್ಲ.
ನೀಲವಧೆ
ಆಗ ಅನಲನೆಂದೇ ಪ್ರಖ್ಯಾತನಾಗಿದ್ದ ನೀಲನು ಬಾಣಗಳನ್ನೇ ಕಿಡಿಯನ್ನಾಗಿ ಬಿಲ್ಲನ್ನೇ ಜ್ವಾಲೆಯನ್ನಾಗಿಸಿಕೊಂಡು ಬೆಂಕಿಯು ಹುಲ್ಲಿನ ಮೆದೆಯನ್ನು ಸುಡುವಂತೆ ಕುರುಸೇನೆಯನ್ನು ದಹಿಸತೊಡಗಿದನು. ಅವನು ಸೇನೆಗಳನ್ನು ಸುಡುತ್ತಿರುವಾಗ ಪೂರ್ವಭಾಷೀ, ಪ್ರತಾಪವಾನ್ ದ್ರೋಣಪುತ್ರನು ನಸುನಗುತ್ತಾ ಸುಮಧುರವಾಗಿ ಹೇಳಿದನು: “ನೀಲ! ಬಾಣಗಳೆಂಬ ಜ್ವಾಲೆಯಿಂದ ಅನೇಕ ಯೋಧರನ್ನು ಸುಡುತ್ತೀಯೆ ಏಕೆ? ನನ್ನೊಬ್ಬನೊಡನೆಯೇ ಯುದ್ಧ ಮಾಡು. ಕೋಪಗೊಂಡು ಆಶುಗಗಳಿಂದ ನನ್ನನ್ನು ಪ್ರಹರಿಸು!”
ಆಗ ನೀಲನು ಅರಳುತ್ತಿರುವ ಪದ್ಮದಂತಿದ್ದ, ಪದ್ಮಪತ್ರನಿಭೇಕ್ಷಣ, ಕಮಲಗಳ ಸಮೂಹದಂತೆ ಸುಂದರಾಂಗನಾಗಿದ್ದ ಅಶ್ವತ್ಥಾಮನನ್ನು ಸಾಯಕಗಳಿಂದ ಹೊಡೆದನು. ಅವನಿಂದ ಪೆಟ್ಟುತಿಂದ ದ್ರೌಣಿಯು ತಕ್ಷಣವೇ ಮೂರು ನಿಶಿತ ಭಲ್ಲಗಳಿಂದ ಶತ್ರುವಿನ ಧನುಸ್ಸನ್ನೂ, ಧ್ವಜವನ್ನೂ, ಚತ್ರವನ್ನೂ ತುಂಡರಿಸಿದನು. ಆಗ ದ್ರೌಣಿಯ ಶಿರವನ್ನು ದೇಹದಿಂದ ಕತ್ತರಿಸಲು ಬಯಸಿ ನೀಲನು ಕತ್ತಿ ಗುರಾಣಿಯನ್ನು ಹಿಡಿದು ಪಕ್ಷಿಯಂತೆ ರಥದಿಂದ ಧುಮುಕಿದನು. ಅಷ್ಟರಲ್ಲಿಯೇ ದ್ರೌಣಿಯು ನಗುತ್ತಲೇ ಭಲ್ಲದಿಂದ ಉನ್ನತ ಹೆಗಲಿನಿಂದಲೂ, ಶೋಭಾಯಮಾನವಾದ ಮೂಗಿನಿಂದಲೂ ಮತ್ತು ಕರ್ಣಕುಂಡಲಗಳಿಂದಲೂ ಯುಕ್ತವಾಗಿದ್ದ ಅವನ ಶಿರವನ್ನು ಶರೀರರಿಂದ ಅಪಹರಿಸಿಬಿಟ್ಟನು. ಪೂರ್ಣಚಂದ್ರನಿಗೆ ಸಮಾನ ಮುಖಕಾಂತಿಯನ್ನು ಹೊಂದಿದ್ದ, ಕವಲದಳಸದೃಶವಾದ ಕಣ್ಣುಗಳಿಂದ ವಿರಾಜಿಸುತ್ತಿದ್ದ, ಉನ್ನತಾಕಾರವಾಗಿದ್ದ, ಕನ್ನೈದಿಲಿಗೆ ಸಮಾನ ಕಾಂತಿಯುಕ್ತನಾಗಿದ್ದ ನೀಲನು ಹತನಾಗಿ ಭೂಮಿಯ ಮೇಲೆ ಬಿದ್ದನು. ಆಚಾರ್ಯಪುತ್ರನಿಂದ ಜ್ವಲಿತತೇಜಸ್ವಿ ನೀಲನು ಹತನಾಗಲು ಬಹಳವಾಗಿ ವ್ಯಾಕುಲಗೊಂಡ ಪಾಂಡವ ಸೇನೆಯು ದುಃಖಿಸಿತು. “ವಾಸವಿಯು ಹೇಗೆ ನಮ್ಮನ್ನು ಶತ್ರುಗಳಿಂದ ರಕ್ಷಸಿಸುತ್ತಾನೆ?” ಎಂದು ಪಾಂಡವರ ಮಹಾರಥರೆಲ್ಲರೂ ಚಿಂತಿಸತೊಡಗಿದರು. ಆದರೆ ಆ ಬಲಶಾಲಿಯು ದಕ್ಷಿಣ ಭಾಗದಲ್ಲಿ ಅಳಿದುಳಿದ ಸಂಶಪ್ತಕ ಮತ್ತು ನಾರಾಯಣ ಸೇನೆಗಳೊಂದಿಗೆ ಕದನವಾಡುತ್ತಿದ್ದನು.
ಹನ್ನೆರಡನೆಯ ದಿನದ ಯುದ್ಧ ಸಮಾಪ್ತಿ
ವೃಕೋದರನು ತನ್ನ ಸೈನ್ಯಕ್ಕಾದ ಪ್ರತಿಘಾತವನ್ನು ಸಹಿಸಿಕೊಳ್ಳದೇ ಬಾಹ್ಲಿಕನನ್ನು ಅರವತ್ತು ಮತ್ತು ಕರ್ಣನನ್ನು ಹತ್ತು ಶರಗಳಿಂದ ಹೊಡೆದನು. ಆಗ ದ್ರೋಣನು ಅವನನ್ನು ಜೀವಿತವಾಗಿ ಉಳಿಸಬಾರದೆಂದು ಬಯಸಿ ನಿಶಿತವಾದ ತೀಕ್ಷ್ಣ ಉಕ್ಕಿನ ಬಾಣಗಳಿಂದ ಅವನ ಮರ್ಮಗಳಿಗೆ ಹೊಡೆದನು. ಆಗ ಅವನನ್ನು ಕರ್ಣನು ಹನ್ನೆರಡು ಬಾಣಗಳಿಂದಲೂ, ಅಶ್ವತ್ಥಾಮನು ಏಳರಿಂದಲೂ, ರಾಜಾ ದುರ್ಯೋಧನನು ಆರರಿಂದಲೂ ಹೊಡೆದು ಮುಚ್ಚಿದರು. ಭೀಮಸೇನನು ಅವರೆಲ್ಲರನ್ನೂ ಪ್ರತಿಯಾಗಿ ದ್ರೋಣನನ್ನು ಐವತ್ತು ಬಾಣಗಳಿಂದಲೂ, ಕರ್ಣನನ್ನು ಹತ್ತು ಬಾಣಗಳಿಂದಲೂ, ದುರ್ಯೋಧನನನ್ನು ಹನ್ನೆರಡು ಮತ್ತು ದ್ರೌಣಿಯನ್ನು ಎಂಟು ಆಶುಗಗಳಿಂದ ಹೊಡೆದನು. ಭಯಂಕರವಾಗಿ ಗರ್ಜಿಸುತ್ತಾ ಅವನು ರಣದಲ್ಲಿ ತುಮುಲ ಯುದ್ಧಮಾಡಿದನು. ಮೃತ್ಯುವು ಸರ್ವಸಾಧಾರಣವೆಂದು ಬಗೆದು ಪ್ರಾಣವನ್ನೂ ತೊರೆದು ಯುದ್ಧ ಮಾಡುತ್ತಿರಲು “ಭೀಮನನ್ನು ರಕ್ಷಿಸಿ!” ಎಂದು ಅಜಾತಶತ್ರುವು ತನ್ನ ಯೋಧರನ್ನು ಪ್ರಚೋದಿಸಿದನು. ಭೀಮಸೇನನ ಬಳಿಗೆ ಯುಯುಧಾನನ ನೇತ್ತ್ವದಲ್ಲಿ ಪಾಂಡವ ಮಾದ್ರೀಪುತ್ರರಿಬ್ಬರೂ ಬಂದರು. ಅವರೆಲ್ಲ ಮಹೇಷ್ವಾಸ ಶ್ರೇಷ್ಠರೂ ಒಟ್ಟಾಗಿ ಸೇರಿ ದ್ರೋಣನಿಂದ ರಕ್ಷಿತವಾಗಿದ್ದ ಸೇನೆಯನ್ನು ಆಕ್ರಮಣಿಸಿದರು. ಆಗ ದ್ರೋಣನಾದರೋ ಗಾಭರಿಗೊಳ್ಳದೇ ಆಕ್ರಮಣ ಮಾಡುತ್ತಿದ್ದ ಭೀಮನೇ ಮೊದಲಾದ ರಥರನ್ನು ಎದುರಿಸಿದನು. ಪ್ರಾಣಭಯವನ್ನು ಹೊರಗಟ್ಟಿ ಕೌರವರು ಆ ವೀರ ಪಾಂಡವರೊಂದಿಗೆ ಹೋರಾಡಿದರು. ಅಶ್ವಾರೋಹಿಗಳು ಅಶ್ವಾರೋಹಿಗಳನ್ನು ಮತ್ತು ಹಾಗೆಯೇ ರಥಿಗಳು ರಥರನ್ನು ಕೊಂದರು. ಶಕ್ತಿ ಮತ್ತು ಕಬ್ಬಿಣದ ಸಲಾಕೆಗಳು ಬೇಳತೊಡಗಿದವು. ಪರಶಾಯುಧಗಳ ಯುದ್ಧವು ನಡೆಯಿತು. ಕಟುಕವಾದ ಖಡ್ಗಗಳ ಯುದ್ಧವು ನಡೆಯಿತು. ಆನೆಗಳ ಸಂಘಾತದಿಂದಾಗಿ ದಾರುಣ ಯುದ್ಧವು ನಡೆಯಿತು.
ಆನೆಗಳ ಮೇಲಿಂದ ಬಿದ್ದರು. ಇನ್ನು ಕೆಲವರು ಕುದುರೆಗಳ ಮೇಲಿಂದ ತಲೆಕೆಳಗಾಗಿ ಬಿದ್ದರು. ಅನ್ಯ ಮನುಷ್ಯರು ಬಾಣಗಳಿಂದ ಭೇದಿಸಲ್ಪಟ್ಟು ರಥಗಳ ಮೇಲಿಂದ ಬಿದ್ದರು. ಇನ್ನು ಕೆಲವರು ಕವಚಗಳಿಲ್ಲದೇ ಬಾಣಗಳಿಂದ ಹೊಡೆಯಲ್ಪಟ್ಟು ಕೆಳಗೆ ಬೀಳಲು ಅಷ್ಟರಲ್ಲಿಯೇ ಆನೆಯು ಬಂದು ಅವರ ಎದೆ-ತಲೆಗಳನ್ನು ತುಳಿದು ದ್ವಂಸಮಾಡುತ್ತಿತ್ತು. ಇನ್ನು ಕೆಲವು ಆನೆಗಳು ಕೆಳಗೆ ಬಿದ್ದಿದ್ದ ನರರನ್ನು ತುಳಿದು ಜಜ್ಜಿಹಾಕುತ್ತಿದ್ದವು. ಕೆಲವು ಹೋಗಿ ತಮ್ಮ ದಂತಗಳಿಂದ ಹಲವಾರು ರಥಗಳನ್ನು ತಿವಿದು ಬೀಳಿಸುತ್ತಿದ್ದವು. ಹಾಗೆಯೇ ನೋಡಲು ಭಯಂಕರರಾಗಿದ್ದವರು ಶತ್ರುಗಳ ಅನೇಕ ವಿಧದ ಉಪಕರಣ-ಆಯುಧಗಳಿಂದ ಹೊಡೆಯಲ್ಪಟ್ಟು ಹತರಾಗಿ ನೆಲವನ್ನು ಸೇರಿದ್ದರು. ಕೆಲವರು ಕುದುರೆ-ಆನೆಗಳ ಕಾಲಿನ ತುಳಿತಕ್ಕೆ ಸಿಲುಕಿ ಅಥವಾ ರಥದ ಗಾಲಿಗಳಿಗೆ ಸಿಲುಕಿ ಜಜ್ಜಿ ಹೋಗಿದ್ದರು. ತಮ್ಮ ತೇಜಸ್ಸುಗಳನ್ನು ಬಳಸಿ ಪರಸ್ಪರರಲ್ಲಿ ಕುಪಿತರಾಗಿ ಆ ಮಹಾಬಲರು ಸಂಹರಿಸುತ್ತಿರಲು ಅಲ್ಲಿ ನಡೆಯುತ್ತಿದ್ದ ಜನಕ್ಷಯದಿಂದ ನಾಯಿ-ನರಿಗಳು ಮತ್ತು ಮಾಂಸವನ್ನು ಭಕ್ಷಿಸುವ ಪಕ್ಷಿಗಳು ತುಂಬಾ ಸಂತೋಷಗೊಂಡಿದ್ದವು. ಆಗ ಎರಡೂ ಸೇನೆಗಳೂ ಪರಸ್ಪರರಿಂದ ತುಂಬಾ ನುಗ್ಗಾಗಿ, ರಕ್ತದಲ್ಲಿ ತೋಯ್ದು ಪರಸ್ಪರರನ್ನು ನಿರೀಕ್ಷಿಸುತ್ತಿರಲು, ದಿವಾಕರನು ನಿಧಾನವಾಗಿ ಅಸ್ತಂಗಿರಿಯನ್ನೇರಿದನು. ಆಗ ಎರಡೂ ಪಕ್ಷಗಳೂ ಶಿಬಿರಗಳಿಗೆ ತೆರಳಿದರು.
