ಹದಿನಾಲ್ಕನೇ ದಿನದ ಯುದ್ಧ – ೧

ಹದಿನಾಲ್ಕನೆಯ ದಿನ ಕೌರವ ವ್ಯೂಹ ರಚನೆ

ಯುದ್ಧದ ಹದಿಮೂರನೆಯ ರಾತ್ರಿಯು ಕಳೆಯಲು ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣನು ತನ್ನ ಸೇನೆಗಳೆಲ್ಲವನ್ನೂ ವ್ಯೂಹದಲ್ಲಿರಿಸಲು ಪ್ರಾರಂಭಿಸಿದನು. ಅಲ್ಲಿ ಪರಸ್ಪರರನ್ನು ವಧಿಸಲು ಬಯಸಿದ್ದ ಸಂಕ್ರುದ್ಧರಾಗಿದ್ದ ಅಸಹನಶೀರ ಶೂರರು ವಿಚಿತ್ರ ಧ್ವನಿಯಲ್ಲಿ ಗರ್ಜಿಸುತ್ತಿರುವುದು ಕೇಳಿ ಬರುತ್ತಿತ್ತು. ಕೆಲವರು ಧನುಸ್ಸನ್ನು ಟೇಂಕರಿಸುತ್ತಿದ್ದರು. ಕೆಲವರು ಶಿಂಜನಿಯನ್ನು ಕೈಗಳಿಂದ ತೀಡುತ್ತಿದ್ದರು. ಕೆಲವರು ನಿಟ್ಟುಸಿರುಬಿಡುತ್ತಾ “ಈಗ ಆ ಧನಂಜಯನೆಲ್ಲಿ?” ಎಂದು ಗಟ್ಟಿಯಾಗಿ ಕೂಗುತ್ತಿದ್ದರು. ಕೆಲವರು ಆಕಾಶದಂತೆ ನಿರ್ಮಲವಾಗಿದ್ದ, ಹೊಂಬಣ್ಣದ, ಹರಿತ, ಸುಂದರ ಹಿಡಿಯ ಖಡ್ಗಗಳನ್ನು ಒರೆಯಿಂದ ತೆಗೆದು ತಿರುಗಿಸತೊಡಗಿದರು. ಸಹಸ್ರಾರು ಸಂಗ್ರಾಮ ಮನಸ್ಕ ಶೂರರು ತಮ್ಮ ಶಿಕ್ಷಣಕ್ಕೆ ಅನುಗುಣವಾಗಿ ಖಡ್ಗ ವರಸೆಗಳನ್ನೂ ಧನುಷ್ಠೇಂಕಾರವನ್ನೂ ಮಾಡುತ್ತಿದ್ದರು. ಕೆಲವು ಯೋಧರು ಘಂಟೆ-ಚಂದನಗಳನ್ನುಳ್ಳ, ಚಿನ್ನ-ವಜ್ರಗಳಿಂದ ವಿಭೂಷಿತವಾದ ಗದೆಗಳನ್ನು ಮೇಲಕ್ಕೆತ್ತಿ ಪಾಂಡವನೆಲ್ಲಿ? ಎಂದು ಕೇಳುತ್ತಿದ್ದರು. ಇನ್ನು ಕೆಲವು ಬಲಮದದಿಂದ ಹುಚ್ಚಾದವರು, ಇಂದ್ರಧ್ವಜಗಳಂತಿರುವ ಪರಿಘಗಳನ್ನು ಕೈಗಳಲ್ಲಿ ಹಿಡಿದು ಆಕಾಶವನ್ನೇ ಸಂಪೂರ್ಣವಾಗಿ ಮುಚ್ಚಿ ಬಿಟ್ಟಿದ್ದರು. ಇತರ ಸಂಗ್ರಾಮಮನಸ್ಕ ಶೂರರು ನಾನಾ ಪ್ರಹರಣಗಳನ್ನು ಹಿಡಿದು, ವಿಚಿತ್ರ ಮಾಲೆಗಳಿಂದ ಅಲಂಕೃತರಾಗಿ ಅಲ್ಲಿ ನಿಂತಿದ್ದರು.ಅರ್ಜುನನೆಲ್ಲಿ? ಗೋವಿಂದನೆಲ್ಲಿ? ಸೊಕ್ಕಿನ ವೃಕೋದರನೆಲ್ಲಿ? ಅವರ ಸುಹೃದರೆಲ್ಲೆ?” ಎಂದು ರಣದಲ್ಲಿ ಅವರನ್ನು ಕೂಗಿ ಕರೆಯುತ್ತಿದ್ದರು. ಆಗ ಶಂಖವನ್ನೂದಿ ದ್ರೋಣನು ಸ್ವಯಂ ತಾನೇ ಕುದುರೆಗಳನ್ನು ನಿಯಂತ್ರಿಸುತ್ತಾ ವ್ಯೂಹದಲ್ಲಿ ರಚಿಸುತ್ತಾ ವೇಗದಿಂದ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದನು. ಯುದ್ಧದಲ್ಲಿ ಆನಂದವನ್ನಿಟ್ಟಿದ್ದ ಆ ಸೇನೆಗಳೆಲ್ಲವನ್ನೂ ನಿಲ್ಲಿಸಿ ಭಾರದ್ವಾಜನು ಜಯದ್ರಥನಿಗೆ ಹೇಳಿದನು: “ಸೌಮದತ್ತಿ ಭೂರಿಶ್ರವ, ಕರ್ಣ, ಅಶ್ವತ್ಥಾಮ, ಶಲ್ಯ, ವೃಷಸೇನ, ಕೃಪ, ಮತ್ತು ನೂರು ಸಾವಿರ ಕುದುರೆಸವಾರರೂ, ಅರವತ್ತು ಸಾವಿರ ರಥಗಳೂ, ಹದಿನಾಲ್ಕು ಸಾವಿರ ಮದೋದಕವನ್ನು ಸುರಿಸುತ್ತಿರುವ ಆನೆಗಳೂ, ಇಪ್ಪತ್ತೊಂದು ಸಾವಿರ ಕವಚಧಾರೀ ಪದಾತಿಗಳನ್ನೂ ಕರೆದುಕೊಂಡು ನೀನು ನನ್ನಿಂದ ಮೂರು ಗವ್ಯೂತಿಗಳ ದೂರಹೋಗಿ ನಿಲ್ಲು! ಸೈಂಧವ! ಅಲ್ಲಿ ನೀನಿರುವಾಗ ವಾಸವನೊಂದಿಗೆ ದೇವತೆಗಳೂ ಕೂಡ ನಿನ್ನನ್ನು ಎದುರಿಸಿ ಯುದ್ಧಮಾಡಲಾರರು. ಇನ್ನು ಪಾಂಡವರೆಲ್ಲರೂ ಸೇರಿ ಬಂದರೂ ಏನು? ನೀನು ಸಮಾಧಾನದಿಂದಿರು!”

ಹೀಗೆ ಹೇಳಲು ಸಿಂಧುರಾಜ ಜಯದ್ರಥನು ಸಮಾಧಾನಗೊಂಡು ಅವನು ಹೇಳಿದಲ್ಲಿಗೆ ಕವಚಧಾರಿ, ಪ್ರಾಸಗಳನ್ನು ಹಿಡಿದು ನಿಂತಿರುವ ಅಶ್ವಾರೋಹೀ ಮಹಾರಥ ಗಾಂಧಾರರಿಂದ ಸುತ್ತುವರೆಯಲ್ಪಟ್ಟು ಹೋಗಿ ನಿಂತನು. ಜಯದ್ರಥನ ಅಶ್ವಗಳೆಲ್ಲವೂ ಚಾಮರಗಳಿಂದ ಮತ್ತು ಬಂಗಾರದಿಂದ ವಿಭೂಷಿತವಾಗಿದ್ದು ಭಾರವನ್ನು ಹೊರಬಲ್ಲವುಗಳಾಗಿದ್ದವು. ಅಂತಹ ಒಂಭತ್ತು ಸಾವಿರ ಕುದುರೆಗಳು ಸೈಂಧವನದಾಗಿದ್ದವು. ಕವಚಗಳನ್ನು ಧರಿಸಿದ್ದ, ಭೀಮರೂಪದ, ರೌದ್ರಕರ್ಮಿ ಐನೂರು ಮದಿಸಿದ ಆನೆಗಳನ್ನು ಏರಿದ್ದ ವಿಶಾರದ ಗಜಾರೋಹಿಗಳಿಂದ ಕೂಡಿ ಸರ್ವಸೇನೆಗಳ ಮುಂದೆ ಧೃತರಾಷ್ಟ್ರನ ಮಗ ದುರ್ಮರ್ಷಣನು ಯುದ್ಧಮಾಡಲು ನಿಂತಿದ್ದನು. ದುಃಶಾಸನ-ವಿಕರ್ಣರೂ ಕೂಡ ಸಿಂಧುರಾಜನ ಸಿದ್ಧಿಗೋಸ್ಕರ ಸೇನೆಯ ಮುಂದೆ ನಿಂತಿದ್ದರು. ಭಾರದ್ವಾಜನು ನಿರ್ಮಿಸಿದ ಚಕ್ರಶಕಟವ್ಯೂಹವು ಹನ್ನೆರಡು ಗವ್ಯೂತಿ ಉದ್ದವಾಗಿತ್ತು ಮತ್ತು ಐದೂವರೆ ಗವ್ಯೂತಿ ಅಗಲವಾಗಿತ್ತು. ನಾನಾ ನೃಪತಿ ವೀರರನ್ನು ಮತ್ತು ರಥ-ಅಶ್ವ-ಗಜ-ಪದಾತಿಗಣಗಳನ್ನು ಸ್ವಯಂ ದ್ರೋಣನು ಅಲ್ಲಲ್ಲಿ ನಿಲ್ಲಿಸಿದನು. ಅದರ ಹಿಂಭಾಗದಲ್ಲಿ ಭೇದಿಸಲಸಾದ್ಯವಾದ ಪದ್ಮಗರ್ಭ ವ್ಯೂಹವಿತ್ತು. ಆ ಪದ್ಮದ ಮಧ್ಯದಲ್ಲಿ ಸೂಜಿಯಂತೆ ಇನ್ನೊಂದು ಗೂಢ ವ್ಯೂಹವನ್ನು ರಚಿಸಲಾಗಿತ್ತು. ಈ ರೀತಿಯ ಮಹಾವ್ಯೂಹವನ್ನು ರಚಿಸಿ ದ್ರೋಣನು ನಿಂತುಕೊಂಡನು. ಆ ಸೂಜಿಯ ಮುಖದಲ್ಲಿ ಕೃತವರ್ಮನು ನಿಂತಿದ್ದನು. ಅನಂತರ ಕಾಂಬೋಜದ ಜಲಸಂಧನೂ, ಅವನ ಅನಂತರ ಅಮಾತ್ಯರೊಂದಿಗೆ ದುರ್ಯೋಧನನೂ ಇದ್ದರು. ಅನಂತರ ಒಂದು ಲಕ್ಷ ಯೋಧರು ಎಲ್ಲರೂ ಸೂಜಿಯನ್ನು ರಕ್ಷಿಸುತ್ತಾ ಶಕಟವ್ಯೂಹದಲ್ಲಿ ನಿಂತಿದ್ದರು. ಎದಿರು ನಿಂತಿರುವ ಆ ಮಹಾ ಬಲದಿಂದ ಆವೃತನಾಗಿ ಸೂಜಿಯ ಬುಡದಲ್ಲಿ ರಾಜಾ ಜಯದ್ರಥನು ವ್ಯವಸ್ಥಿತನಾಗಿದ್ದನು. ಶಕಟದ ಮುಂದೆ ಭಾರದ್ವಾಜನು ನಿಂತಿದ್ದನು. ಅವನ ಹಿಂದೆ ಅವನನ್ನು ರಕ್ಷಿಸುತ್ತಾ ಸ್ವಯಂ ಭೋಜನಿದ್ದನು. ಬಿಳಿಯ ವಸ್ತ್ರ ಮತ್ತು ಮುಂಡಾಸನ್ನು ಧರಿಸಿ ಆ ವಿಶಾಲಎದೆಯ ಮಹಾಭುಜ ದ್ರೋಣನು ಧನುಸ್ಸನ್ನು ಟೇಂಕರಿಸಿ ಅಂತಕನಂತೆ ಕ್ರುದ್ಧನಾಗಿ ನಿಂತಿದ್ದನು. ವೇದಿಯ ಆ ಪತಾಕೆಯನ್ನು, ಕೃಷ್ಣಾಜಿನದ ಧ್ವಜವನ್ನು ಮತ್ತು ಕೆಂಪು ಕುದುರೆಗಳ ದ್ರೋಣನ ಆ ರಥವನ್ನು ನೋಡಿ ಕುರುಗಳು ಪ್ರಹೃಷ್ಟರಾದರು. ಅಲ್ಲೋಲಕಲ್ಲೋಲಗೊಂಡಿರುವ ಸಮುದ್ರದಂತಿರುವ ದ್ರೋಣರಚಿತ ವ್ಯೂಹವನ್ನು ಕಂಡು ಸಿದ್ಧಚಾರಣಗಣಗಳು ತುಂಬಾ ವಿಸ್ಮಿತರಾದರು. ಆ ವ್ಯೂಹವು ಶೈಲ-ಸಾಗರ-ವನಗಳು ಮತ್ತು ನಾನಾ ಜನಪದಕುಲಗಳೊಂದಿಗೆ ಇಡೀ ಭೂಮಿಯನ್ನೇ ನುಂಗಿಬಿಡುವುದೋ ಏನೋ ಎಂದು ಎಲ್ಲ ಭೂತಗಳೂ ಅಂದುಕೊಂಡವು. ಭಯವನ್ನುಂಟುಮಾಡುವ ಶಬ್ಧಗಳೊಂದಿಗೆ ಅದ್ಭುತವಾಗಿ ಕಾಣುತ್ತಿದ್ದ, ಹೃದಯವನ್ನು ಅಹಿತವಾಗಿ ಭೇದಿಸುತ್ತಿದ್ದ ಆ ಶಕಟರೂಪದಲ್ಲಿರುವ ಬಹಳಷ್ಟು ರಥ-ಮನುಷ್ಯ-ಕುದುರೆ-ಆನೆಗಳನ್ನು ನೋಡಿ ದುರ್ಯೋಧನನು ಆನಂದಿಸಿದನು.

ಅರ್ಜುನನು ದುರ್ಮರ್ಷಣನ ಸೇನೆಯನ್ನು ಪರಾಜಿತಗೊಳಿಸಿದುದು

ಹೀಗೆ ಸೇನೆಗಳ ವ್ಯೂಹವು ರಚಿತಗೊಳ್ಳಲು ಅವರು ಉತ್ಸಾಹದಿಂದ ಕೂಗಿ ಭೇರಿ-ಮೃದಂಗಗಳನ್ನು ಬಾರಿಸಿದರು. ಸೇನೆಗಳ ಸಿಂಹಗರ್ಜನೆಗಳೊಡನೆ ವಾದ್ಯಗಳು ಮೊಳಗಿದವು. ಶಂಖಗಳನ್ನು ಊದಲು ಲೋಮಹರ್ಷಣ ನಾದವು ಕೇಳಿಬಂದಿತು. ಯುದ್ಧೇಚ್ಛಿಗಳಾದ ಭರತರು ಕವಚಗಳನ್ನು ಧರಿಸಿ ಯುದ್ಧಮಾಡುತ್ತಿರಲು, ರೌದ್ರ ಮುಹೂರ್ತವು ಪ್ರಾಪ್ತವಾಗಲು ಸವ್ಯಸಾಚಿಯು ಕಾಣಿಸಿಕೊಂಡನು. ಸವ್ಯಸಾಚಿಯ ಮುಂಬಾಗದಲ್ಲಿ ಅನೇಕ ಸಾವಿರ ಹೆಣ್ಣು ಮತ್ತು ಗಂಡು ಕಾಗೆಗಳು ಆಟವಾಡುತ್ತಾ ಹಾರಿ ಹೋಗುತ್ತಿದ್ದವು. ಘೋರವಾಗಿ ಕೂಗುವ ಮೃಗಗಳು, ದರ್ಶನದಿಂದಲೇ ಅಶುಭವನ್ನು ಸೂಚಿಸುವ ನರಿಗಳು ಕೌರವ ಸೇನೆಯ ಬಲಭಾಗದಲ್ಲಿ ಹೋಗುತ್ತಾ ಕೂಗುತ್ತಿದ್ದವು. ಘೋರವಾದ ಭಯವನ್ನು ಸೂಚಿಸುತ್ತಾ ಭಯಂಕರ ಶಬ್ಧಗಳೊಂದಿಗೆ ಉರಿಯುತ್ತಿರುವ ಉಲ್ಕೆಗಳು ಬಿದ್ದವು. ಎಲ್ಲ ಕಡೆ ಭೂಮಿಯು ಕಂಪಿಸಿತು. ಕೌಂತೇಯನು ಸಂಗ್ರಾಮಕ್ಕೆ ಆಗಮಿಸಲು ಮರಳನ್ನು ಹೊತ್ತು ಸರ್ವತ್ರ ಸುರಿಸುವ ಚಂಡಮಾರುತವು ಬೀಸಿತು. ಪ್ರಾಜ್ಞರಾದ ನಕುಲನ ಮಗ ಶತಾನೀಕ ಮತ್ತು ಪಾರ್ಷತ ಧೃಷ್ಟದ್ಯುಮ್ನರು ಪಾಂಡವರ ಸೇನೆಗಳನ್ನು ವ್ಯೂಹದಲ್ಲಿ ರಚಿಸಿದರು.

ಆಗ ಧೃತರಾಷ್ಟ್ರನ ಮಗ ದುರ್ಮರ್ಷಣನು ಒಂದು ಸಾವಿರ ರಥಿಗಳೊಡನೆ, ನೂರು ಆನೆಗಳೊಂದಿಗೆ, ಮೂರು ಸಾವಿರ ಕುದುರೆಗಳೊಂದಿಗೆ, ಹತ್ತು ಸಾವಿರ ಪದಾತಿಗಳೊಡನೆ ಅರ್ಜುನನಿಂದ ಒಂದು ಸಾವಿರದ ಐದುನೂರು ಧನುಸ್ಸುಗಳ ಪ್ರಮಾಣದಲ್ಲಿ ಸರ್ವ ಸೈನ್ಯಗಳ ಅಗ್ರಭಾಗದಲ್ಲಿ ನಿಂತು ಹೇಳಿದನು: “ಯುದ್ಧದುರ್ಮದ, ತಾಪಕ ಗಾಂಡೀವಧನ್ವಿಯನ್ನು ಇಂದು ತೀರವು ಸಮುದ್ರವನ್ನು ತಡೆಯುವಂತೆ ನಾನು ತಡೆಯುತ್ತೇನೆ. ಕಲ್ಲುಗಳ ರಾಶಿಯೊಂದಿಗೆ ಇನ್ನೊಂದು ಕಲ್ಲುರಾಶಿಯ ಘರ್ಷಣೆಯಾಗುವಂತೆ ಇಂದು ರಣದಲ್ಲಿ ಅಸಹನಶೀಲನಾದ ದುರ್ಧರ್ಷ ಅರ್ಜುನನಿಗೂ ನನಗೂ ನಡೆಯುವ ಸಂಘರ್ಷವನ್ನು ನೋಡಿರಿ!

ಹೀಗೆ ಹೇಳಿ ಆ ಮಹೇಷ್ವಾಸನು ಮಹೇಷ್ವಾಸರಿಂದ ಆವೃತನಾಗಿ ಸಿದ್ಧನಾಗಿ ನಿಂತನು. ಅಂತಕನಂತೆ ಕ್ರುದ್ಧನಾಗಿಯೂ, ವಜ್ರಧಾರಿಯಾದ ವಾಸವನಂತೆಯೂ, ಸಹಿಸಲಸಾದ್ಯನಾದ ಕಾಲದಿಂದ ಚೋದಿತನಾದ ದಂಡಪಾಣಿ ಮೃತ್ಯುವಿನಂತೆಯೂ, ಕ್ಷೋಭೆಗೊಳಿಸಲು ಅಶಕ್ಯನಾದ ಶೂಲಪಾಣಿಯಂತಲೂ, ಪಾಶಹಸ್ತನಾದ ವರುಣನಂತೆಯೂ, ಪ್ರಜೆಗಳನ್ನು ಭಸ್ಮಮಾಡಲು ಹೊರಟಿರುವ ಜ್ವಾಲಾಯುಕ್ತ ಯುಗಾಂತದ ಅಗ್ನಿಯಂತೆಯೂ, ಕ್ರೋಧ-ಅಸಹನೆ-ಬಲಗಳಿಂದ ಚೋದಿತನಾಗಿ ಆ ನಿವಾತಕವಚಾಂತಕ ಜಯ ಮಹಾವ್ರತನು ಪ್ರತಿಜ್ಞೆಯನ್ನು ಸತ್ಯವನಾಗಿಸಲು ಎಲ್ಲರನ್ನೂ ಪಾರುಮಾಡಿ ಮುನ್ನುಗ್ಗಿದನು. ಕವಚವನ್ನು ಧರಿಸಿದ್ದ, ಖಡ್ಗಧಾರಿಯಾಗಿದ್ದ, ಬಂಗಾರದ ಕಿರೀಟವನ್ನು ಧರಿಸಿದ್ದ, ಶುಭ್ರವಾದ ಮಾಲೆ-ವಸ್ತ್ರಗಳನ್ನು ಧರಿಸಿದ್ದ, ಸುಮನೋಹರ ಕುಂಡಲಗಳನ್ನು ಧರಿಸಿದ್ದ ನಾರಾಯಣಾನುಗ ನರನು ರಣದಲ್ಲಿ ಗಾಂಡೀವವನ್ನು ಟೇಂಕರಿಸುತ್ತಾ ಉದಯಿಸುತ್ತಿರುವ ಸೂರ್ಯನಂತಿದ್ದನು. ಆ ಮಹಾಸೇನೆಯ ಎದಿರು ಬಾಣಗಳು ಬೀಳುವಷ್ಟು ದೂರದಲ್ಲಿ ರಥವನ್ನು ವ್ಯವಸ್ಥಾಪಿಸಿ ಪ್ರತಾಪವಾನ ಧನಂಜಯನು ಶಂಖವನ್ನೂದಿದನು. ಆಗ ಪಾರ್ಥನೊಂದಿಗೆ ಕೃಷ್ಣನೂ ಕೂಡ ಸಂಭ್ರಾತನಾಗದೇ ಜೋರಾಗಿ ಶಂಖಪ್ರವರ ಪಾಂಚಜನ್ಯವನ್ನು ಊದಿದನು. ಅವರ ಶಂಖಧ್ವನಿಯಿಂದ ಕೌರವ ಸೇನೆಗಳು ರೋಮಾಂಚನಗೊಂಡು ನಡುಗಿ ಗತಚೇತಸರಾದರು. ಎಲ್ಲ ಪ್ರಾಣಿಗಳೂ ಸಿಡಿಲಿನ ಧ್ವನಿಯಿಂದ ಹೇಗೆ ತತ್ತರಿಸುವರೋ ಹಾಗೆ ಕೌರವ ಸೈನಿಕರು ಆ ಶಂಖಧ್ವನಿಯಿಂದ ತತ್ತರಿಸಿದರು. ಆನೆ-ಕುದುರೆಗಳು ಎಲ್ಲೆಡೆಯಲ್ಲಿ ಮಲ-ಮೂತ್ರ ವಿಸರ್ಜನೆಮಾಡಿದವು. ಹೀಗೆ ವಾಹನಗಳೊಂದಿಗೆ ಕೌವವ ಸೇನೆಯೆಲ್ಲವೂ ಆವಿಗ್ನಕ್ಕೊಳಗಾಯಿತು. ಶಂಖದ ಶಬ್ಧದಿಂದ ನರರು ಹೆದರಿದರು. ಕೆಲವರು ಮೂರ್ಛೆಹೋದರು. ಇನ್ನು ಕೆಲವರು ನಡುಗಿದರು.

ಆಗ ಭೂತಗಳೊಂದಿಗೆ ಧ್ವಜದಲ್ಲಿ ನೆಲೆಸಿದ್ದ ಕಪಿಯೂ ಕೂಡ ಬಾಯಿಯನ್ನು ಅಗಲವಾಗಿ ತೆರೆದು ಜೋರಾಗಿ ಕೂಗಿ ಕೌರವ ಸೈನಿಕರು ಇನ್ನೂ ಭೀತಿಗೊಳ್ಳುವಂತೆ ಮಾಡಿದನು. ಆಗ ಕೌರವ ಸೇನೆಗಳನ್ನು ಹರ್ಷಗೊಳಿಸಲು ಪುನಃ ಶಂಖ-ಭೇರಿ-ಮೃದಂಗ-ಅನಕಗಳನ್ನು ಒಟ್ಟಿಗೇ ಊದಿ-ಬಾರಿಸಲಾಯಿತು. ಸೇರಿದ್ದ ಮಹಾರಥರು ನಾನಾ ವಾದ್ಯಗಳ ಧ್ವನಿಯಿಂದ, ಗರ್ಜನ-ತರ್ಜನಗಳಿಂದ, ಚಪ್ಪಾಳೆಗಳಿಂದ, ಸಿಂಹನಾದಗಳಿಂದ ಹೇಡಿಗಳ ಭಯವನ್ನು ಹೆಚ್ಚಿಸುವ ಆ ತುಮುಲ ಶಬ್ಧವನ್ನು ಮಾಡುತ್ತಿರಲು, ಅತೀವ ಹೃಷ್ಟನಾದ ಪಾಕಶಾಸನಿಯು ದಾಶಾರ್ಹನಿಗೆ ಹೇಳಿದನು: “ಹೃಷೀಕೇಶ! ಎಲ್ಲಿ ದುರ್ಮರ್ಷಣನಿರುವನೋ ಅಲ್ಲಿಗೇ ಕುದುರೆಗಳನ್ನು ಓಡಿಸು. ಮೊದಲು ಅವನ ಗಜಸೇನೆಯನ್ನು ಭೇದಿಸಿ ಅರಿಸೇನೆಯನ್ನು ಪ್ರವೇಶಿಸುತ್ತೇನೆ!”

ಸವ್ಯಸಾಚಿಯು ಹೀಗೆ ಹೇಳಲು ಮಹಾಬಾಹು ಕೇಶವನು ದುರ್ಮರ್ಷಣನಿರುವಲ್ಲಿಗೆ ಕುದುರೆಗಳನ್ನು ಓಡಿಸಿದನು. ಆಗ ಅನೇಕರೊಂದಿಗೆ ಒಬ್ಬನ ತುಮುಲಪ್ರಹಾರಗಳನ್ನುಳ್ಳ, ದಾರುಣವಾದ, ರಥ-ಗಜ-ನರರ ಕ್ಷಯಕಾರಕ ತುಮುಲ ಯುದ್ಧವು ನಡೆಯಿತು. ಮಳೆಸುರಿಸುವ ಮೋಡದಂತೆ ಸಾಯಕಗಳ ಮಳೆಸುರಿಸಿ, ಮೋಡಗಳು ಪರ್ವತವನ್ನು ಹೇಗೋ ಹಾಗೆ ಪಾರ್ಥನು ಶತ್ರುಗಳನ್ನು ಮುಸುಕಿದನು. ಆ ರಥಿಗಳೆಲ್ಲರೂ ಕೂಡ ತ್ವರೆಮಾಡಿ ಹಸ್ತಚಾಕಚಕ್ಯತೆಯಿಂದ ಕೃಷ್ಣ-ಧನಂಜಯರನ್ನು ಬಾಣಜಾಲಗಳಿಂದ ಮುಚ್ಚಿದರು. ಶತ್ರುಗಳಿಂದ ಯುದ್ಧದಲ್ಲಿ ತಡೆಯಲ್ಪಟ್ಟ ಪಾರ್ಥನು ಕ್ರುದ್ಧನಾಗಿ ಶರಗಳಿಂದ ರಥಿಗಳ ಶಿರಗಳನ್ನು ಕಾಯಗಳಿಂದ ಅಪಹರಿಸಿದನು. ಉದ್ವೇಗದ ಕಣ್ಣುಗಳಿಂದ, ಅವುಡುಕಚ್ಚಿದ ತುಟಿಗಳಿಂದ, ಸುಂದರ ಕುಂಡಲ-ಶಿರಸ್ತ್ರಾಣಗಳಿಂದ ಕೂಡಿದ ಶಿರಗಳಿಂದ ಅವನಿಯು ವ್ಯಾಪ್ತವಾಯಿತು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಯೋಧರ ಮುಖಗಳು ವಿಧ್ವಂಸಗೊಂಡ ಕಮಲ ಪುಷ್ಪಗಳಂತೆ ಎಲ್ಲಾ ಕಡೆ ಚದುರಿ ಬಿದ್ದಿದ್ದವು. ಸುವರ್ಣಮಯ ವಿಚಿತ್ರ ಕವಚಗಳನ್ನು ಧರಿಸಿದ್ದ, ರಕ್ತದಲ್ಲಿ ತೋಯ್ದು ಹೋಗಿದ್ದ ಅವರ ದೇಹಗಳು ಮಿಂಚಿನಿಂದ ಕೂಡಿದ ಮೇಘರಾಶಿಯಂತೆ ತೋರುತ್ತಿದ್ದವು. ಸಮಯಬಂದು ಪರಿಪಕ್ವವಾದ ತಾಳೆಯ ಹಣ್ಣುಗಳು ಬೀಳುವಂತೆ ಭೂಮಿಯ ಮೇಲೆ ಬೀಳುತ್ತಿದ್ದ ಶಿರಸ್ಸುಗಳ ಶಬ್ಧವು ಕೇಳಿಬರುತ್ತಿತ್ತು. ಆಗ ಕೆಲವು ಕಬಂಧಗಳು ಧನುಸ್ಸನ್ನೇ ಊರಿ ನಿಂತಿದ್ದವು. ಕೆಲವು ಖಡ್ಗವನ್ನು ಒರಸೆಯಿಂದ ಎಳೆದು ತೆಗೆದು ಭುಜದ ಮೇಲೆ ಹೊತ್ತು ನಿಂತಿದ್ದವು. ಸಂಗ್ರಾಮದಲ್ಲಿ ಜಯವನ್ನು ಬಯಸಿದ ಆ ನರರ್ಷಭರು ಬಾಣಗಳಿಂದ ತಮ್ಮ ಶಿರಸ್ಸುಗಳು ಬಿದ್ದಿದುದನ್ನು ತಿಳಿಯದೇ ಅಸಹನೆಯಿಂದ ಕೌಂತೇಯನ ಕಡೆ ನುಗ್ಗುತ್ತಿದ್ದರು. ಕುದುರೆಗಳ ರುಂಡಗಳು, ಆನೆಗಳ ಸೊಂಡಿಲುಗಳು, ವೀರರ ಬಾಹುಗಳು ಮತ್ತು ಶಿರಗಳು ಮೇದಿನಿಯ ಮೇಲೆ ಹರಡಿ ಬಿದ್ದಿದ್ದವು. “ಇಲ್ಲಿಯೇ ಪಾರ್ಥನಿದ್ದಾನೆ! ಪಾರ್ಥನೆಲ್ಲಿ? ಇವನೇ ಪಾರ್ಥ!” ಎಂದು ಮುಂತಾಗಿ ಕೂಗುತ್ತಿದ್ದ ಕೌರವ ಸೇನೆಯ ಯೋಧರಿಗೆ ಎಲ್ಲವೂ ಪಾರ್ಥಮಯವಾಗಿ ತೋರಿತು.

ಕಾಲದಿಂದ ಮೋಹಿತರಾದ ಅವರು ಅನ್ಯೋನ್ಯರನ್ನೂ ಕೊಲ್ಲುತ್ತಿದ್ದರು. ತಮ್ಮವರನ್ನೇ ಶತ್ರುವೆಂದು ತಿಳಿದು ಇಡೀ ಜಗತ್ತೇ ಪಾರ್ಥನಿಂದ ತುಂಬಿಕೊಂಡಿರುವಂತೆ ಭ್ರಾಂತರಾದರು. ರಕ್ತದಿಂದ ತೋಯ್ದುಹೋಗಿ, ಗಾಢವೇದನೆಯಿಂದ ಮೂರ್ಛಿತರಾಗಿ ಮಲಗಿದ್ದ ಅನೇಕ ವೀರರು ಸ್ನೇಹಿತರನ್ನು ಕೂಗಿ ಕರೆಯುತ್ತಿದ್ದರು. ಪರಮ ಬಾಣಗಳಿಂದ ಕತ್ತರಿಸಲ್ಪಟ್ಟ ಮಹಾಸರ್ಪಗಳಂತಿದ್ದ, ಪರಿಘಗಳಂತಿದ್ದ ಬಾಹುಗಳು ರಣದಲ್ಲಿ ಎಲ್ಲ ಕಡೆ ಭಿಂಡಿಪಾಲ-ಪ್ರಾಸ-ಶಕ್ತಿ-ಪರಶಾಯುಧ-ಋಷ್ಠಿ-ತ್ರಿಶೂಲ-ಖಡ್ಗ-ಧನುಸ್ಸು-ತೋಮರ-ಕವಚ-ಆಭರಣ-ಗದೆ- ಅಂಗದಗಳೊಂದಿಗೆ ಸಂರಬ್ಧರಾಗಿ ಮೇಲೆ ಏಳುತ್ತಿದ್ದವು, ಚಡಪಡಿಸುತ್ತಿದ್ದವು, ಆವೇಶಯುಕ್ತವಾಗಿ ಮೇಲೆ ಮೇಲೆ ಹಾರುತ್ತಿದ್ದವು. ಸಮರದಲ್ಲಿ ಯಾವ ಮನುಷ್ಯನು ಪಾರ್ಥನನ್ನು ಎದುರಿಸಲು ಅಸಹನೆಯಿಂದ ಮುನ್ನುಗ್ಗುತ್ತಿದ್ದನೋ ಅವನ ಶರೀರವನ್ನು ಪ್ರಾಣಾಂತಕ ಬಾಣವು ಹೊಗುತ್ತಿತ್ತು. ಹೀಗೆ ರಥಮಾರ್ಗಗಳಲ್ಲಿ ಧನುಸ್ಸನ್ನು ಎಡ ಮತ್ತು ಬಲಗೈಗಳಲ್ಲಿ ಹಿಡಿದು ನರ್ತಿಸುತ್ತಿದ್ದ ಪಾರ್ಥನನ್ನು ಹೊಡೆಯಲು ಒಂದು ಸ್ವಲ್ವ ಅವಕಾಶವನ್ನೂ ಅವರು ಕಾಣುತ್ತಿರಲಿಲ್ಲ. ಬೇಗಬೇಗನೇ ಶರಗಳನ್ನು ಪ್ರಯೋಗಿಸುತ್ತಿದ್ದ ಪಾಂಡುಪುತ್ರನ ಕೈಚಳಕವನ್ನು ನೋಡಿ ಜನರು ವಿಸ್ಮಿತರಾದರು. ಫಲ್ಗುನನು ಬಾಣಗಳಿಂದ ಆನೆಗಳನ್ನೂ, ಮಾವಟಿಗರನ್ನೂ, ಕುದುರೆಗಳನ್ನೂ, ಕುದುರೆಸವಾರರನ್ನೂ, ಸಾರಥಿಗಳೊಂದಿಗೆ ರಥಾರೂಢರನ್ನೂ ಸಂಹರಿಸುತ್ತಿದ್ದನು. ಪಾಂಡವನು ಓಡಿ ಹೋಗಿ ಪುನಃ ಹಿಂದಿರುಗುತ್ತಿದ್ದವರನ್ನೂ, ಮುಂದೆ ನಿಂತು ಯುದ್ಧಮಾಡುತ್ತಿರುವವರನ್ನೂ ಯಾರನ್ನೂ ಕೊಲ್ಲದೇ ಬಿಡುತ್ತಿರಲಿಲ್ಲ. ಗಗನದಲ್ಲಿ ಸೂರ್ಯನು ಉದಯಿಸಿ ಮಹಾ ಕತ್ತಲೆಯನ್ನು ಸಂಹರಿಸುವಂತೆ ಅರ್ಜುನನು ಕಂಕಪತ್ರಿಗಳಿಂದ ಆ ಗಜಾನೀಕವನ್ನು ವಧಿಸಿದನು. ಅಂತಕಾಲದಲ್ಲಿ ಭೂಮಿಯ ಮೇಲೆ ಪರ್ವತಗಳು ಹರಡಿ ಬಿದ್ದಿರುವಂತೆ ಒಡೆದ ಆನೆಗಳು ರಣಭೂಮಿಯಲ್ಲಿ ಬಿದ್ದಿರುವುದನ್ನು ಕೌರವ ಸೈನ್ಯವು ನೋಡಿತು. ಹೇಗೆ ಮಧ್ಯಾಹ್ನದ ಸೂರ್ಯನನ್ನು ನೋಡಲು ಪ್ರಾಣಿಗಳಿಗೆ ಕಷ್ಟವಾಗುತ್ತದೆಯೋ ಹಾಗೆ ಯುದ್ಧದಲ್ಲಿ ಕ್ರುದ್ಧನಾದ ಧನಂಜಯನನ್ನು ನೋಡಲು ಶತ್ರುಗಳಿಗೆ ಕಷ್ಟವಾಗುತ್ತಿತ್ತು.

ಆಗ ದುರ್ಮರ್ಷಣನ ಸೈನ್ಯವು ಭಗ್ನವಾಗಿ, ಶರಗಳಿಂದ ಅತ್ಯಂತ ಪೀಡಿತಗೊಂಡು, ಉದ್ವಿಗ್ನತೆಯಿಂದ ಪಲಾಯನಗೈಯಿತು. ದೊಡ್ಡ ಚಂಡಮಾರುತವು ಮೇಘಗಳ ಸಮೂಹವನ್ನು ಹಾರಿಸಿಕೊಂಡು ಹೋಗುವಂತೆ ಓಡಿಹೋಗುತ್ತಿದ್ದ ಆ ಸೈನ್ಯಕ್ಕೆ ಹಿಂದಿರುಗಿ ನೋಡಲೂ ಕೂಡ ಸಾಧ್ಯವಾಗುತ್ತಿರಲಿಲ್ಲ. ಅರ್ಜುನನಿಂದ ಆರ್ದಿತರಾದ ಕೌರವರ ಕಡೆಯ ಅಶ್ವಾರೋಹಿಗಳು ಮತ್ತು ರಥಾರೂಢರು ಚಾವಟಿಗಳಿಂದಲೂ, ಧನುಸ್ಸುಗಳ ತುದಿಯಿಂದಲೂ, ಹುಂಕಾರಶಬ್ಧಗಳಿಂದಲೂ, ಚಪ್ಪರಿಸುವುದರಿಂದಲೂ, ಬಾರುಕೋಲು ಮತ್ತು ಹಿಮ್ಮಡಿಯ ಪ್ರಹಾರಗಳಿಂದಲೂ ಗಟ್ಟಿಯಾಗಿ ಅಬ್ಬರಿಸುವುದರಿಂದಲೂ ಬೇಗ ಬೇಗ ಕುದುರೆಗಳನ್ನು ಓಡಿಸಿಕೊಂಡು ಪಲಾಯನ ಮಾಡುತ್ತಿದ್ದರು. ಕೆಲವರು ಪಾರ್ಷ್ಣಿ-ಅಂಗುಷಾಂಕುಶಗಳಿಂದ ಆನೆಗಳನ್ನು ಓಡಿಸಿಕೊಂಡು ಹೋಗುತ್ತಿದ್ದರು. ಕೆಲವರು ಶರಗಳಿಂದ ಸಮ್ಮೋಹಿತರಾಗಿ, ಎಲ್ಲಿ ಓಡಬೇಕೆಂದು ತಿಳಿಯದೇ ಅರ್ಜುನನ ಅಭಿಮುಖವಾಗಿಯೇ ಹೋಗುತ್ತಿದ್ದರು. ಹೀಗೆ ಕೌರವ ಯೋಧರು ಉತ್ಸಾಹವನ್ನು ಕಳೆದುಕೊಂಡವರೂ, ಭ್ರಾಂತಿಗೊಂಡವರೂ ಆಗಿದ್ದರು.

ಹಾಗೆ ಅರ್ಜುನನಿಂದ ಕೌರವ ಸೇನೆಯು ನುಚ್ಚುನೂರಾಗಿ ವೀರರು ಹತರಾಗಲು, ಉತ್ಸಾಹವನ್ನು ಕಳೆದುಕೊಂಡ ಅವರು ಪಲಾಯನಕ್ಕೆ ಸಮಯ ಕಾಯುತ್ತಿದ್ದರು. ಪಾಕಶಾಸನಿಯು ಎದಿರು ಬಂದವರೆಲ್ಲರನ್ನೂ ಉತ್ತಮ ಶರಗಳಿಂದ ವಧಿಸುತ್ತಿದ್ದನು. ಆಗ ಸಂಗ್ರಾಮದಲ್ಲಿ ಅರ್ಜುನನನ್ನು ನೋಡಲು ಯಾರಿಗೂ ಶಕ್ಯವಾಗುತ್ತಿರಲಿಲ್ಲ.

ದುಃಶಾಸನ-ಅರ್ಜುನರ ಯುದ್ಧ; ದುಃಶಾಸನನ ಪರಾಭವ

ಆಗ ದುಃಶಾಸನನು ಸೈನ್ಯವು ಹಾಗಾದುದನ್ನು ನೋಡಿ ತುಂಬಾ ಕ್ರುದ್ಧನಾಗಿ ಯುದ್ಧದಲ್ಲಿ ಅರ್ಜುನನನ್ನು ಎದುರಿಸಿದನು. ಅವನು ಕಾಂಚನದ ವಿಚಿತ್ರ ಕವಚದಿಂದ ಆವೃತನಾಗಿದ್ದನು. ಆ ತೀವ್ರಪರಾಕ್ರಮಿಯು ಬಂಗಾರದ ಶಿರಸ್ತ್ರಾಣವನ್ನು ಧರಿಸಿದ್ದನು. ಇಡೀ ಭೂಮಿಯನ್ನೇ ನುಂಗಿಬಿಡುವಂತಿದ್ದ ಮಹಾ ಗಜಸೇನೆಯೊಂದಿಗೆ ದುಃಶಾಸನನು ಸವ್ಯಸಾಚಿಯನ್ನು ಆಕ್ರಮಣಿಸಿದನು. ಆನೆಗಳ ಘಂಟೆ-ಶಂಖಗಳ ನಿನಾದದಿಂದ, ಟೇಂಕಾರ ಧ್ವನಿಯಿಂದ ಮತ್ತು ಆನೆಗಳ ಘೀಂಕಾರಗಳಿಂದ ಭೂಮಿ-ದಿಕ್ಕು-ಅಂತರಿಕ್ಷಗಳು ಶಬ್ಧದಿಂದ ತುಂಬಿಕೊಂಡವು. ಆ ಮುಹೂರ್ತವು ಭಯವನ್ನುಂಟು ಮಾಡುವ ದಾರುಣ ಸಮಯವಾಗಿತ್ತು. ಅಂಕುಶಗಳಿಂದ ಚೋದಿತರಾಗಿ ತನ್ನ ಮೇಲೆ ಬೇಗನೆ ಬಂದು ಬೀಳುತ್ತಿದ್ದ ಕೋಪದಿಂದ ಆವೇಶಗೊಂಡಿರುವ, ರೆಕ್ಕೆಗಳುಳ್ಳ ಪರ್ವತಗಳಂತಿದ್ದ ಆ ಆನೆಗಳನ್ನು ನೋಡಿ ಧನಂಜಯನು ಜೋರಾಗಿ ಸಿಂಹನಾದಗೈದು, ಅಮಿತ್ರರ ಆ ಗಜಸೇನೆಯನ್ನು ಶರಗಳಿಂದ ವಧಿಸಲು ಉಪಕ್ರಮಿಸಿದನು. ಭಿರುಗಾಳಿಗೆ ಸಿಲುಕಿದ ಸಮುದ್ರವು ದೊಡ್ಡ ದೊಡ್ಡ ಅಲೆಗಳೊಂದಿಗೆ ಮೇಲುಕ್ಕಿ ಬರುವಂತಿದ್ದ ಆ ಗಜಸೇನೆಯನ್ನು ಕಿರೀಟಿಯು ಮೊಸಳೆಯೋಪಾದಿಯಲ್ಲಿ ಪ್ರವೇಶಿಸಿದನು. ಯುಗಸಂಕ್ಷಯದಲ್ಲಿ ಆದಿತ್ಯನು ಎಲ್ಲೆಮೀರಿ ಸುಡುವಂತೆ ಪಾರ್ಥನು ಎಲ್ಲ ದಿಕ್ಕುಗಳನ್ನೂ ಸುಡುವಂತೆ ಕಂಡುಬಂದನು. ಅಶ್ವಗಳ ಗೊರಸಿನ ಶಬ್ಧಗಳಿಂದ, ರಥಚಕ್ರದ ಘೋಷಗಳಿಂದ, ಟೇಂಕಾರದ ಉತ್ಕೃಷ್ಟ ನಿನಾದದಿಂದ, ದೇವದತ್ತ ಶಂಖದ ಘೋಷದಿಂದ, ಗಾಂಡೀವದ ನಿನಾದದಿಂದ ಆನೆಗಳ ವೇಗವು ಕುಂಠಿತವಾಯಿತು. ವಿಷಸರ್ಪಗಳಂತಿದ್ದ ಸವ್ಯಸಾಚಿಯ ಶರಗಳು ತಾಗಿ ಅವು ನಿರ್ಭಿನ್ನವಾಗಿ ಮೂರ್ಛೆಹೋದವು. ಯುದ್ಧದಲ್ಲಿ ಗಾಂಡೀವದಿಂದ ಬಿಡಲ್ಪಟ್ಟ ತೀಕ್ಷ್ಣ ವಿಶಿಖಗಳಿಂದ ಸರ್ವಾಂಗಗಳಲ್ಲಿ ಗಾಯಗೊಂಡು ಅನೇಕ ನೂರು ಸಾವಿರ ಆನೆಗಳು ಜೋರಾಗಿ ಕೂಗಿಕೊಳ್ಳುತ್ತಾ ರೆಕ್ಕೆಗಳನ್ನು ಕತ್ತರಿಸಲ್ಪಟ್ಟ ಗಿರಿಪರ್ವತಗಳಂತೆ ಕಿರೀಟಿಯಿಂದ ವಧಿಸಲ್ಪಟ್ಟು ಭೂಮಿಯ ಮೇಲೆ ಬಿದ್ದವು. ಕೆಲವು ಆನೆಗಳು ದಂತಗಳ ಕೆಳಭಗದಲ್ಲಿಯೂ, ಕುಂಭಸ್ಥಳದಲ್ಲಿ, ಮತ್ತು ಕಪೋಲಗಳಲ್ಲಿ ಬಾಣಗಳಿಂದ ಚುಚ್ಚಲ್ಪಟ್ಟು ಕ್ರೌಂಚಪಕ್ಷಿಗಳಂತೆ ಮತ್ತೆ ಮತ್ತೆ ಕಿರುಚುತ್ತಿದ್ದವು. ಕಿರೀಟಿಯು ಆನೆಗಳ ಹೆಗಲ ಮೇಲಿದ್ದ ಪುರುಷರ ಶಿರಗಳನ್ನು ಸನ್ನತಪರ್ವ ಭಲ್ಲಗಳಿಂದ ಕತ್ತರಿಸುತ್ತಿದ್ದನು. ಧರಣೀತಲದಲ್ಲಿ ಕುಂಡಲಗಳೊಂದಿಗೆ ಬೀಳುತ್ತಿದ್ದ ಶಿರಸ್ಸುಗಳು ಪಾರ್ಥನು ಪದ್ಮಗಳ ರಾಶಿಗಳಿಂದ ಭೂಮಿಯನ್ನು ಪೂಜಿಸುತ್ತಿರುವನೋ ಎಂಬಂತೆ ತೋರುತ್ತಿದ್ದವು. ರಣದಲ್ಲಿ ತಿರುಗುತ್ತಿದ್ದ ಆನೆಗಳ ಮೇಲೆ ಯಂತ್ರಗಳಿಗೆ ಕಟ್ಟಲ್ಪಟ್ಟಿರುವರೋ ಎಂಬಂತೆ ಕವಚಗಳನ್ನು ಕಳೆದುಕೊಂಡು, ಗಾಯಗಳಿಂದ ಆರ್ತರಾಗಿ, ರಕ್ತದಿಂದ ತೋಯ್ದು ಮನುಷ್ಯರು ನೇತಾಡುತ್ತಿದ್ದರು. ಒಂದೇ ಪತತ್ರಿಯಿಂದ ಕೆಲವೊಮ್ಮೆ ಒಬ್ಬರೇ ತುಂಡಾಗಿ ಮತ್ತು ಇನ್ನು ಕೆಲವೊಮ್ಮೆ ಇಬ್ಬರು ಮೂರುಮಂದಿ ಒಟ್ಟಿಗೇ ಕತ್ತರಿಸಲ್ಪಟ್ಟು ಬೀಳುತ್ತಿದ್ದರು. ಅವನು ಸನ್ನತಪರ್ವ ಭಲ್ಲಗಳಿಂದ ರಥಿಗಳ ಶಿಂಜಿನಿಯನ್ನೂ, ಧನುಸ್ಸು-ಧ್ವಜಗಳನ್ನೂ, ನೊಗ-ಈಷಾದಂಡಗಳನ್ನೂ ತುಂಡರಿಸಿದನು. ಧನುಸ್ಸನ್ನು ಮಂಡಲಾಕಾರವಾಗಿರಿಸಿಕೊಂಡ ಪಾರ್ಥನು ನರ್ತಿಸುತ್ತಿರುವವನಂತೆ ತೋರುತ್ತಿದ್ದನು. ಅವನು ಚಾಪಕ್ಕೆ ಬಾಣಗಳನ್ನು ಹೂಡುವುದೂ, ಪ್ರಯೋಗಿಸುವುದೂ ಕಾಣುತ್ತಲೇ ಇರಲಿಲ್ಲ.

ನಾರಾಚಗಳಿಂದ ಅತಿಯಾಗಿ ಗಾಯಗೊಂಡು ಬಾಯಿಯಿಂದ ರಕ್ತವನ್ನು ಕಾರುತ್ತಾ ಅನ್ಯ ಆನೆಗಳು ವಸುಧಾತಲದಲ್ಲಿ ಬೀಳುತ್ತಿದ್ದವು. ಆ ಪರಮ ಸಂಕುಲಯುದ್ಧದಲ್ಲಿ ಅಗಣಿತ ಕಬಂಧಗಳು ಮೇಲೆದ್ದು ಕುಣಿಯುತ್ತಿರುವುದು ಎಲ್ಲ ಕಡೆ ಕಂಡುಬಂದಿತು. ಚಾಪಗಳೊಂದಿಗೆ, ಅಂಗುಲಿತ್ರಾಣಗಳೊಂದಿಗೆ, ಖಡ್ಗಗಳೊಂದಿಗೆ, ಅಂಗದಗಳೊಂದಿಗೆ ಹೇಮಾಭರಣ ಭೂಷಿತ ಭುಜಗಳು ತುಂಡಾಗಿ ಬೀಳುತ್ತಿರುವುದು ಕಂಡುಬಂದಿತು. ಛಿನ್ನ ಛಿನ್ನ ರಥೋಪಕರಣಗಳಿಂದಲೂ, ಆಸನಗಳಿಂದಲೂ, ಈಷಾದಂಡಗಳಿಂದಲೂ, ನೊಗಗಳಿಂದಲೂ, ಅಲ್ಲಲ್ಲಿ ಹರಡಿ ಬಿದ್ದಿರುವ ಕವಚ-ಚಾಪ-ಶರಗಳಿಂದಲೂ, ಕೆಳಗೆ ಬಿದ್ದಿದ್ದ ಹಾರ-ಆಭರಣ-ವಸ್ತ್ರಗಳಿಂದಲೂ, ಧ್ವಜಗಳಿಂದಲೂ, ಹತರಾಗಿ ಬಿದ್ದಿದ್ದ ಆನೆ-ಕುದುರೆ-ಕ್ಷತ್ರಿಯರಿಂದಲೂ ಆ ರಣಭೂಮಿಯು ನೋಡಲು ದಾರುಣವಾಗಿ ತೋರುತ್ತಿತ್ತು. ಹೀಗೆ ಕಿರೀಟಿಯಿಂದ ವಧಿಸಲ್ಪಟ್ಟ ಆ ದುಃಶಾಸನನ ಸೇನೆಯು ವ್ಯಥಿತಗೊಂಡು ನಾಯಕನೊಂದಿಗೆ ಓಡಿಹೋಯಿತು. ಆಗ ಶರಾರ್ದಿತ ದುಃಶಾಸನನು ಸೇನೆಯೊಂದಿಗೆ ದ್ರೋಣನನ್ನು ರಕ್ಷಕನಾಗಿ ಬಯಸುತ್ತಾ ಶಕಟವ್ಯೂಹವನ್ನು ಪ್ರವೇಶಿಸಿದನು.

ಅರ್ಜುನನು ದ್ರೋಣನನ್ನು ದಾಟಿ ಮುಂದುವರೆದುದು

ದುಃಶಾಸನನ ಸೇನೆಯನ್ನು ನಾಶಗೊಳಿಸಿ ಧನಂಜಯನು ಸಿಂಧುರಾಜನನ್ನು ತಲುಪಲು ಬಯಸಿ ದ್ರೋಣನ ಸೇನೆಯನ್ನು ಆಕ್ರಮಣಿಸಿದನು. ಅವನು ವ್ಯೂಹದ ಪ್ರಮುಖ ಸ್ಥಾನದಲ್ಲಿ ನಿಂತಿದ್ದ ದ್ರೋಣನನ್ನು ತಲುಪಿ, ಕೃಷ್ಣನ ಅನುಮತಿಯಂತೆ, ಕೈಮುಗಿದು ಈ ಮಾತನ್ನಾಡಿದನು: “ಬ್ರಹ್ಮನ್! ನನಗೆ ಒಳ್ಳೆಯದಾಗಲೆಂದು ಯೋಚಿಸು. ಸ್ವಸ್ತಿ ಎಂದೂ ನನಗೆ ಹೇಳು. ನಿನ್ನ ಪ್ರಸಾದದಿಂದ ಭೇದಿಸಲಸಾಧ್ಯವಾದ ಈ ಸೇನೆಯನ್ನು ಪ್ರವೇಶಿಸಲು ಬಯಸುತ್ತೇನೆ. ನಿನಗೆ ನಾನು ಸತ್ಯವನ್ನು ಹೇಳುತ್ತಿದ್ದೇನೆ. ನೀನು ನನ್ನ ತಂದೆಗೆ ಸಮ. ಧರ್ಮರಾಜನ ಸಮನೂ ಕೂಡ. ಹಾಗೆಯೇ ಕೃಷ್ಣನಂತೆಯೂ ಕೂಡ. ತಂದೇ! ಅಶ್ವತ್ಥಾಮನು ಹೇಗೆ ನಿನ್ನಿಂದ ರಕ್ಷಣೀಯನೋ ಹಾಗೆ ನನ್ನನ್ನೂ ಕೂಡ ನೀನು ರಕ್ಷಿಸಬೇಕು. ನಿನ್ನ ಪ್ರಸಾದದಿಂದ ಆಹವದಲ್ಲಿ ಸಿಂಧುರಾಜನನ್ನು ಸಂಹರಿಸಲು ಬಯಸುತ್ತೇನೆ. ನನ್ನ ಪ್ರತಿಜ್ಞೆಯನ್ನು ರಕ್ಷಿಸು!”

ಇದನ್ನು ಕೇಳಿದ ಆಚಾರ್ಯನು ನಸುನಕ್ಕು ಉತ್ತರಿಸಿದನು: “ಬೀಭತ್ಸೋ! ನನ್ನನ್ನು ಗೆಲ್ಲದೇ ಜಯದ್ರಥನನ್ನು ಗೆಲ್ಲಲು ಶಕ್ಯನಾಗುವುದಿಲ್ಲ!” ಹೀಗೆ ಅವನಿಗೆ ಹೇಳಿ ದ್ರೋಣನು ಜೋರಾಗಿ ನಕ್ಕು ತೀಕ್ಷ್ಣ ಶರವ್ರಾತಗಳಿಂದ ಅವನ ರಥ-ಕುದುರೆ-ಧ್ವಜ ಮತ್ತು ಸಾರಥಿಯೊಂದಿಗೆ ಅವನನ್ನು ಮುಚ್ಚಿದನು. ಆಗ ಅರ್ಜುನನು ಸಾಯಕಗಳಿಂದ ದ್ರೋಣನ ಶರವ್ರಾತಗಳನ್ನು ತಡೆದು ಘೋರರೂಪದ ಮಹತ್ತರ ಬಾಣಗಳಿಂದ ದ್ರೋಣನನ್ನು ಆಕ್ರಮಣಿಸಿದನು. ಅನುಮಾನಿಸಿ ನಂತರ ರಣದಲ್ಲಿ ಕ್ಷತ್ರಧರ್ಮವನ್ನು ಪಾಲಿಸುತ್ತಾ ದ್ರೋಣನನ್ನು ಒಂಭತ್ತು ಸಾಯಕಗಳಿಂದ ಪುನಃ ಹೊಡೆದನು. ಆ ಬಾಣಗಳನ್ನು ತುಂಡರಿಸಿ ದ್ರೋಣನು ವಿಷಾಗ್ನಿಜ್ವಲನದ ಪ್ರಖರತೆಯುಳ್ಳ ಬಾಣಗಳಿಂದ ಕೃಷ್ಣ-ಪಾಂಡವರಿಬ್ಬರನ್ನೂ ಹೊಡೆದನು. ಪಾಂಡವನು ಅವನ ಬಿಲ್ಲನ್ನು ಬಾಣಗಳಿಂದ ತುಂಡರಿಸಲು ಯೋಚಿಸುತ್ತಿರಲು ಸಂಭ್ರಾಂತನಾದ ವೀರ್ಯವಾನ್ ದ್ರೋಣನು ಶರಗಳಿಂದ ಫಲ್ಗುನನ ಶಿಂಜನಿಯನ್ನು ಕತ್ತರಿಸಿದನು. ನಸುನಗುತ್ತಾ ಅವನ ಕುದುರೆಗಳನ್ನೂ, ದ್ವಜವನ್ನೂ, ಸಾರಥಿಯನ್ನೂ, ಅರ್ಜುನನ್ನೂ ಶರಗಳಿಂದ ಹೊಡೆದು ಮುಚ್ಚಿದನು. ಇದರ ಮಧ್ಯೆ ಪಾರ್ಥನು ಆ ಮಹಾ ಧನುಸ್ಸನ್ನು ಸಜ್ಜುಗೊಳಿಸಿ ಆಚಾರ್ಯನನ್ನೂ ಮೀರಿಸಿ, ಒಂದೇ ಬಾಣವನ್ನು ತೆಗೆದುಕೊಂಡು ಬಿಟ್ಟ ಹಾಗೆ ಕಂಡರೂ, ಅವನ ಮೇಲೆ ಆರುನೂರು ಬಾಣಗಳನ್ನು ಪ್ರಯೋಗಿಸಿದನು. ಪುನಃ ಇತರ ಏಳು ನೂರು ಬಾಣಗಳನ್ನೂ, ನಂತರ ಸಹಸ್ರ ಬಾಣಗಳನ್ನೂ, ನಂತರ ಹತ್ತು ಸಾವಿರ ಬಾಣಗಳನ್ನೂ ಪ್ರಯೋಗಿಸಿ ದ್ರೋಣನನ್ನು ಅನುಸರಿಸಿ ಬಂದಿದ್ದ ಆ ಸೇನೆಯನ್ನು ಸಂಹರಿಸಿದನು. ಆ ಚಿತ್ರಯೋಧಿ ಯಶಸ್ವಿಯ ಬಾಣಗಳು ತಗುಲಿ ಗಾಯಗೊಂದ ಅನೇಕ ಮನುಷ್ಯ-ಕುದುರೆ-ಆನೆಗಳು ಅಸುನೀಗಿ ಬಿದ್ದರು. ಅವನ ಶರಗಳಿಂದ ಪೀಡಿತರಾಗಿ ರಥಿಗಳು ಮತ್ತು ರಥಪ್ರಮುಖರು ಆಯುಧ-ಜೀವಿತಗಳನ್ನು ಕಳೆದುಕೊಂಡು ಬಿದ್ದರು. ಆನೆಗಳು ವಜ್ರ, ಭಿರುಗಾಳಿ ಅಥವಾ ಹುತಾಶನರಿಂದ ಪುಡಿಯಾದ, ಚದುರಿದ ಅಥವಾ ಭಸ್ಮವಾದ ಪರ್ವತಗಳೋ ಅಥವಾ ಮೋಡಗಳೋ ಅಥವಾ ಮನೆಗಳ ಗುಂಪೋ ಎನ್ನುವಂತೆ ಕೆಳಗೆ ಉರುಳಿದವು. ಅರ್ಜುನನ ಬಾಣಗಳ ಹೊಡೆತಕ್ಕೆ ಸಿಕ್ಕ ಸಹಸ್ರಾರು ಕುದುರೆಗಳು ಹಿಮವತ್ ಪರ್ವತದ ಇಳಿಜಾರುಗಳಲ್ಲಿ ನೀರಿನ ಪ್ರವಾಹಕ್ಕೆ ಸಿಕ್ಕಿ ಉರುಳಿದ ಹಂಸಗಳಂತೆ ಉರುಳಿ ಬಿದ್ದವು. ಯುಗಾಂತದಲ್ಲಿ ಅದ್ಭುತ ಪ್ರಳಯದಲ್ಲಿ ಮುಳುಗಿಹೋಗುವಂತೆ ಮತ್ತು ಸೂರ್ಯನ ರಶ್ಮಿಗಳಿಂದ ಸುಟ್ಟುಹೋಗುವಂತೆ ಪಾಂಡವನ ಶರಗಳಿಂದ ರಥ-ಕುದುರೆ-ಆನೆ-ಪದಾತಿಗಳು ಹತವಾದವು.

ಬಾಣಗಳ ಜಾಲದಿಂದ ಯುದ್ಧದಲ್ಲಿ ಕುರುಪ್ರವೀರರನ್ನು ಸುಡುತ್ತಿದ್ದ ಪಾಂಡವನೆಂಬ ಆ ಆದಿತ್ಯನನ್ನು ದ್ರೋಣವೆಂಬ ಮೋಡವು ವೇಗವಾದ ಶರವರ್ಷಗಳಿಂದ ಮೇಘವು ಸೂರ್ಯನ ಕಿರಣಗಳನ್ನು ಹೇಗೋ ಹಾಗೆ ಮುಚ್ಚಿಬಿಟ್ಟಿತು. ಆಗ ದ್ರೋಣನು ಬಲವಾಗಿ ಪ್ರಯೋಗಿಸಿದ ಶತ್ರುಗಳ ಪ್ರಾಣವನ್ನೇ ಉಣ್ಣುವ ನಾರಾಚದಿಂದ ಧನಂಜಯನ ಎದೆಗೆ ಹೊಡೆದನು. ಬೀಭತ್ಸುವು ಸರ್ವಾಂಗಗಳಲ್ಲಿ ವಿಹ್ವಲಗೊಂಡು ಭೂಕಂಪದಲ್ಲಿ ಪರ್ವತವು ನಡುಗುವಂತೆ ನಡುಗಿದನು. ಅನಂತರ ಧೈರ್ಯವನ್ನು ಪಡೆದುಕೊಂಡು ದ್ರೋಣನನ್ನು ಪತ್ರಿಗಳಿಂದ ಹೊಡೆದನು. ದ್ರೋಣನಾದರೋ ಐದು ಬಾಣಗಳಿಂದ ವಾಸುದೇವನನ್ನು ಹೊಡೆದನು ಮತ್ತು ಅರ್ಜುನನನ್ನು ಮೂರು ಮತ್ತು ಎಪ್ಪತ್ತು ಹಾಗೂ ಧ್ವಜವನ್ನು ಮೂರು ಶರಗಳಿಂದ ಹೊಡೆದನು. ಶಿಷ್ಯನನ್ನೂ ಮೀರಿಸಿ ಪರಾಕ್ರಮಿ ದ್ರೋಣನು ಕಣ್ಣು ಮುಚ್ಚಿ ಬಿಡುವುದರಲ್ಲಿ ಶರ ವೃಷ್ಟಿಗಳಿಂದ ಅರ್ಜುನನನ್ನು ಅದೃಶ್ಯನನ್ನಾಗಿ ಮಾಡಿಬಿಟ್ಟನು.

ಭಾರದ್ವಾಜನ ಸಾಯಕಗಳು ಒಂದೇ ಸಮನೆ ಬೀಳುತ್ತಿರುವುದನ್ನೂ, ಮತ್ತು ಅವನು ಧನುಸ್ಸನ್ನು ಮಂಡಲಾಕಾರವಾಗಿ ಬಗ್ಗಿಸಿ ಹಿಡಿದಿದ್ದ ಆ ಅದ್ಭುತವೂ ಅಲ್ಲಿ ಕಾಣದೊರಕಿತು. ದ್ರೋಣನು ಬಿಟ್ಟ ಆ ಅನೇಕ ಕಂಕಪತ್ರಗಳಿಂದ ಮುಚ್ಚಲ್ಪಟ್ಟ ಬಾಣಗಳು ಸಮರದಲ್ಲಿ ಎಡೆಬಿಡದೇ ವಾಸುದೇವ-ಧನಂಜಯರ ಮೇಲೆ ಬೀಳುತ್ತಿದ್ದವು. ಆ ರೀತಿಯ ದ್ರೋಣ-ಪಾಂಡವರ ಯುದ್ಧವನ್ನು ನೋಡಿದ ವಾಸುದೇವನು ಮಾಡಬೇಕಾದ ಕಾರ್ಯದ ಕುರಿತು ಯೋಚಿಸಿ ಧನಂಜಯನಿಗೆ ಈ ಮಾತನ್ನಾಡಿದನು: “ಪಾರ್ಥ! ನಾವು ಸಮಯವನ್ನು ಕಳೆಯಬಾರದು. ದ್ರೋಣನನ್ನು ಬಿಟ್ಟು ಹೋಗೋಣ. ಇದೇ ಮಾಡಬೇಕಾದ ಮಹತ್ತರಕಾರ್ಯವಾಗಿದೆ!” ಅದಕ್ಕೆ ಪಾರ್ಥನು ಕೃಷ್ಣನಿಗೆ “ಕೇಶವ! ನಿನ್ನ ಇಚ್ಛೆಯಂತೆಯೇ ಆಗಲಿ!” ಎಂದನು.

ಆಗ ಆ ಮಹಾಭುಜ ಬೀಭತ್ಸುವು ದ್ರೋಣನಿಗೆ ಪ್ರದಕ್ಷಿಣೆಯನ್ನು ಹಾಕಿ, ಸುತ್ತಲೂ ಬಾಣಗಳ ಮಳೆಗರೆಯುತ್ತಾ ಮುಂದೆ ಹೊರಟನು. ಆಗ ದ್ರೋಣನು ನಸುನಗುತ್ತಾ ಕೇಳಿದನು: “ಪಾಂಡವ! ಎಲ್ಲಿಗೆ ಹೋಗುತ್ತಿರುವೆ? ನೀನು ರಣದಲ್ಲಿ ಶತ್ರುವನ್ನು ಗೆಲ್ಲದೆಯೇ ಹಿಂದೆಸರಿಯುವವನಲ್ಲವಲ್ಲ!”

ಅರ್ಜುನನು ಹೇಳಿದನು: “ನೀನು ನನ್ನ ಗುರು! ಶತ್ರುವಲ್ಲವಲ್ಲ! ಶಿಷ್ಯನಾದ ನಾನು ನಿನಗೆ ಮಗನ ಸಮನಾಗಿದ್ದೇನೆ. ಯುದ್ಧದಲ್ಲಿ ನಿನ್ನನ್ನು ಪರಾಜಯಗೊಳಿಸುವ ಪುರುಷನು ಲೋಕಗಳಲ್ಲಿಯೇ ಇಲ್ಲ!”

ಹೀಗೆ ಹೇಳುತ್ತಾ ಜಯದ್ರಥನ ವಧೆಗೆ ಉತ್ಸುಕನಾಗಿದ್ದ ಮಹಾಬಾಹು ಬೀಭತ್ಸುವು ಅವಸರದೊಂದಿಗೆ ಆ ಸೇನೆಯನ್ನು ಆಕ್ರಮಣಿಸಿದನು. ಅವನನ್ನು ಅನುಸರಿಸಿ ಬಂದ ಚಕ್ರರಕ್ಷಕ ಪಾಂಚಾಲ್ಯ ಯುಧಾಮನ್ಯು-ಉತ್ತಮೌಜಸರಿಬ್ಬರೂ ಕೌರವ ಸೇನೆಯನ್ನು ಪ್ರವೇಶಿಸಿದರು. ಆಗ ಜಯ-ಕೃತವರ್ಮ-ಕಾಂಬೋಜ-ಶ್ರುತಾಯು ಇವರು ಧನಂಜಯನನ್ನು ತಡೆದರು. ಅವರನ್ನು ಅನುಸರಿಸಿ ಬಂದ ಹತ್ತು ಸಾವಿರ ರಥಿಗಳೂ, ಹಿಂದೆ ಸಂಗ್ರಾಮದಲ್ಲಿ ಕರ್ಣನಿಂದ ಗೆದ್ದಲ್ಪಟ್ಟ, ಶೋರಸಮ್ಮತ ಅಭೀಷಾಹರು, ಶೂರಸೇನರು, ಶಿಬರೂ, ವಸಾತಯರು, ಮಾಚೇಲ್ಲಕರು, ಲಲಿತ್ಥರು, ಕೇಕಯರೂ, ಮದ್ರಕರೂ, ನಾರಾಯಣರೂ, ಗೋಪಾಲರೂ, ಕಂಬೋಜರ ಗಣಗಳೂ ಭಾರದ್ವಾಜನನ್ನು ಮುಂದಿರಿಸಿಕೊಂಡು ಜೀವವನ್ನೂ ತೊರೆದು ಅರ್ಜುನನೊಡನೆ ಯುದ್ಧಮಾಡತೊಡಗಿದರು. ಪುತ್ರಶೋಕಾಭಿಸಂತಪ್ತನಾಗಿದ್ದ ಆ ಮಹೇಷ್ವಾಸ ಪರಾಕ್ರಾಂತ ನರವ್ಯಾಘ್ರನನ್ನು ಅವರು ತಡೆದರು. ಆಗ ಅನ್ಯೋನ್ಯರನ್ನು ಕರೆಯುತ್ತಿದ್ದ ಯೋಧರು ಮತ್ತು ಅರ್ಜುನನ ನಡುವೆ ಲೋಮಹರ್ಷಣ ತುಮುಲ ಯುದ್ಧವು ಪ್ರಾರಂಭವಾಯಿತು. ಜಯದ್ರಥನ ವಧೆಯನ್ನು ಇಚ್ಛಿಸಿ ಮುಂದೆ ಬರುತ್ತಿದ್ದ ಆ ಪುರುಷರ್ಷಭನನ್ನು ಉಲ್ಬಣಗೊಳ್ಳುತ್ತಿರುವ ವ್ಯಾಧಿಯನ್ನು ಔಷಧಿಯು ಹೇಗೋ ಹಾಗೆ ಒಟ್ಟಿಗೇ ತಡೆಯತೊಡಗಿದರು.

ಮಹಾಬಲಪರಾಕ್ರಮಿಯಾದ ಪಾರ್ಥನನ್ನು ಕೌರವರ ಕಡೆಯವರು ತಡೆದು ನಿಲ್ಲಿಸಿದರು. ಅವನನ್ನು ದ್ರೋಣನೂ ಅನುಸರಿಸಿ ಬಂದನು. ವ್ಯಾಧಿಗಣಗಳು ದೇಹವನ್ನು ಹೇಗೋ ಹಾಗೆ ತನ್ನದೇ ರಶ್ಮಿಗಳಿರುವ ಭಾಸ್ಕರನಂತೆ ಅವನು ತೀಕ್ಷ್ಣವಾದ ಶರಗಣಗಳನ್ನು ಚೆಲ್ಲಿ ಆ ಸೈನ್ಯವನ್ನು ಪರಿತಾಪಗೊಳಿಸಿದನು. ಅಶ್ವಗಳು ಗಾಯಗೊಂಡವು. ಧ್ವಜಗಳು ತುಂಡಾದವು. ಆರೋಹಿಗಳೊಡನೆ ಆನೆಗಳು ಉರುಳಿದವು. ಚತ್ರಗಳು ಚಾಪಗಳು ತುಂಡಾದವು. ರಥಗಳು ಚಕ್ರಗಳಿಲ್ಲದಂತಾದವು. ಶರಗಳಿಂದ ಆರ್ತವಾದ ಸೇನೆಗಳು ಎಲ್ಲಕಡೆ ಓಡುತ್ತಿದ್ದವು. ಆಗ ಎಂತಹ ತುಮುಲ ಯುದ್ಧನಡೆಯಿತೆಂದರೆ ಏನೊಂದೂ ತಿಳಿಯುತ್ತಿರಲಿಲ್ಲ. ಅವರು ಪರಸ್ಪರರನ್ನು ಕರೆಯುತ್ತಾ ರಣದಲ್ಲಿ ಅರ್ಜುನನನ್ನು ಜಿಹ್ಮಗಗಳಿಂದ ಒಂದೇ ಸಮನೆ ಹೊಡೆಯುತ್ತಿರಲು ಅವನೂ ಕೂಡ ಅವರನ್ನು ನಡುಗುವಂತೆ ಮಾಡಿದನು. ಆಗ ಪ್ರತಿಜ್ಞೆಯನ್ನು ಸತ್ಯವಾಗಿಸಲು ಬಯಸಿದ ಸತ್ಯಸಂಗರ ಶ್ವೇತಾಶ್ವನು ರಥಶ್ರೇಷ್ಠ ಶೋಣಾಶ್ವ ದ್ರೋಣನನ್ನು ಆಕ್ರಮಣಿಸಿದನು. ಆಚಾರ್ಯ ದ್ರೋಣನು ಶಿಷ್ಯನಾಗಿದ್ದ ಆ ಮಹೇಷ್ವಾಸನ ಮರ್ಮಗಳನ್ನು ಇಪ್ಪತ್ತೈದು ಜಿಹ್ಮಗಗಳಿಂದ ಹೊಡೆದನು. ಬೀಭತ್ಸುವು ಬೇಗನೆ ಅವನ ಬಾಣಗಳ ವೇಗವನ್ನು ನಿರಸನಗೊಳಿಸಲು ಒಂದೇ ಸಮನೆ ಬಾಣಗಳನ್ನು ಪ್ರಯೋಗಿಸಿದನು. ಅವನು ಎಸೆಯುತ್ತಿದ್ದ ಭಲ್ಲಗಳನ್ನು ಸನ್ನತಪರ್ವ ಭಲ್ಲಗಳಿಂದ ಪ್ರತಿಯಾಗಿ ಹೊಡೆದು ಆ ಅಮೇಯಾತ್ಮನು ಬ್ರಹ್ಮಾಸ್ತ್ರವನ್ನು ಪ್ರಕಟಿಸಿದನು. ಯುದ್ಧದಲ್ಲಿ ಅದು ಆಚಾರ್ಯ ದ್ರೋಣನ ಅದ್ಭುತವಾಗಿತ್ತು. ಎಷ್ಟೇ ಪ್ರಯತ್ನಿಸಿದರು ಅರ್ಜುನನಿಗೆ ಅವನನ್ನು ಗಾಯಗೊಳಿಸಲು ಆಗಲಿಲ್ಲ. ಮಹಾಮೇಘವು ಸಹಸ್ರಾರು ನೀರ ಧಾರೆಗಳನ್ನು ಸುರಿಸುವಂತೆ ದ್ರೋಣವೆಂಬ ಮೇಘವು ಪಾರ್ಥವೆಂಬ ಪರ್ವತದ ಮೇಲೆ ಶರವೃಷ್ಟಿಗಳನ್ನು ಸುರಿಸಿತು. ತೇಜಸ್ವೀ ಅರ್ಜುನನು ಆ ಶರವರ್ಷವನ್ನು ಬ್ರಹ್ಮಾಸ್ತ್ರದಿಂದಲೇ ಎದುರಿಸಿ ಬಾಣಗಳನ್ನು ಬಾಣಗಳಿಂದ ನಿರಸನಗೊಳಿಸಿದನು. ದ್ರೋಣನಾದರೋ ಇಪ್ಪತ್ತೈದರಿಂದ ಶ್ವೇತವಾಹನನನ್ನು ಹೊಡೆದನು. ಮತ್ತು ವಾಸುದೇವನನ್ನು ಬಾಹುಗಳು ಮತ್ತು ಎದೆಯಲ್ಲಿ ಏಳು ಆಶುಗಗಳಿಂದ ಹೊಡೆದನು.

ಧೀಮಂತ ಪಾರ್ಥನಾದರೋ ಜೋರಾಗಿ ನಕ್ಕು ಅ ಶರೌಘಗಳನ್ನು ಪ್ರಯೋಗಿಸುತ್ತಿದ್ದ ಆಚಾರ್ಯನ ನಿಶಿತ ಬಾಣಗಳನ್ನು ಯುದ್ಧದಲ್ಲಿ ತಡೆದನು. ಆಗ ದ್ರೋಣನಿಂದ ಪ್ರಹರಿಸಲ್ಪಡುತ್ತಿದ್ದ ರಥಸತ್ತಮರಿಬ್ಬರೂ ಯುಗಾಂತದ ಅಗ್ನಿಯಂತೆ ಉರಿಯುತ್ತಿದ್ದ ದುರ್ಧರ್ಷ ದ್ರೋಣನನ್ನು ಅವಲೋಕಿಸಲಿಲ್ಲ.

ಅರ್ಜುನನು ಕೃತವರ್ಮನನ್ನು ದಾಟಿ ಮುಂದುವರೆದುದು

ದ್ರೋಣನ ಚಾಪದಿಂದ ಬರುತ್ತಿದ್ದ ನಿಶಿತ ಬಾಣಗಳನ್ನು ಅವಲೋಕಿಸದೇ ಕಿರೀಟಮಾಲೀ ಕೌಂತೇಯನು ಭೋಜನ ಸೇನೆಯ ಮೇಲೆ ಆಕ್ರಮಣ ಮಾಡಿದನು. ಮೈನಾಕ ಪರ್ವತದಂತಿದ್ದ ದ್ರೋಣನನ್ನು ದೂರವಿಟ್ಟು ಅವನು ಕೃತವರ್ಮ ಮತ್ತು ಕಾಂಬೋಜದ ಸುದಕ್ಷಿಣರ ಮಧ್ಯೆ ನಿಂತು ಯುದ್ಧಮಾಡತೊಡಗಿದನು. ಆಗ ಭೋಜನು ಬೇಗನೇ ನರವ್ಯಾಘ್ರನನ್ನು ಹತ್ತು ಕಂಕಪತ್ರಿಗಳಿಂದ ಹೊಡೆದನು. ಅವನನ್ನು ಅರ್ಜುನನು ನೂರು ಪತ್ರಿಗಳಿಂದ ಹೊಡೆದನು. ಪುನಃ ಅವನು ಅನ್ಯ ಮೂರುಗಳಿಂದ ಸಾತ್ವತನನ್ನು ಮೂರ್ಛೆಗೊಳಿಸುವಂತೆ ಹೊಡೆದನು. ಭೋಜನಾದರೋ ಜೋರಾಗಿ ನಕ್ಕು ಪಾರ್ಥ ಮತ್ತು ವಾಸುದೇವ ಮಾಧವ ಒಬ್ಬೊಬ್ಬರನ್ನೂ ಇಪ್ಪತ್ತೈದು ಸಾಯಕಗಳಿಂದ ಹೊಡೆದನು. ಅರ್ಜುನನು ಅವನ ಧನುಸ್ಸನ್ನು ಕತ್ತರಿಸಿ ಇಪ್ಪತ್ತೊಂದು ಕ್ರುದ್ಧ ಸರ್ಪದ ವಿಷದಂತಿರುವ ಅಗ್ನಿ ಶಿಖೆಯ ಆಕಾರದ ಶರಗಳಿಂದ ಹೊಡೆದನು. ಆಗ ಮಹಾರಥ ಕೃತವರ್ಮನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಬೇಗನೇ ಐದು ಸಾಯಕಗಳಿಂದ ಅವನ ಎದೆಗೆ ಹೊಡೆದನು. ಅವನು ಪುನಃ ಐದು ನಿಶಿತ ಬಾಣಗಳಿಂದ ಪಾರ್ಥನನ್ನು ಹೊಡೆದನು. ಅವನನ್ನು ಪಾರ್ಥನು ಎದೆಗೆ ಗುರಿಯಿಟ್ಟು ಒಂಭತ್ತು ಬಾಣಗಳಿಂದ ಹೊಡೆದನು. ಕೌಂತೇಯನು ಕೃತವರ್ಮನ ರಥದ ಬಳಿಯಲ್ಲಿಯೇ ತಡೆಯಲ್ಪಟ್ಟಿದ್ದುದನ್ನು ನೋಡಿ ವಾರ್ಷ್ಣೇಯನು ನಾವು ಕಾಲದ ವ್ಯಯಮಾಡಬಾರದಲ್ಲ ಎಂದು ಚಿಂತಿಸಿದನು. ಆಗ ಕೃಷ್ಣನು ಪಾರ್ಥನಿಗೆ ಹೇಳಿದನು: “ಕೃತವರ್ಮನ ಮೇಲೆ ದಯೆ ಬೇಡ! ಕುರುಗಳ ಸಂಬಂಧಿಯನ್ನಾಗಿ ಮಾಡಿಕೊಂಡು ಅವನನ್ನು ಸದೆಬಡಿ!” ಆಗ ಅರ್ಜುನನು ಶರಗಳಿಂದ ಕೃತವರ್ಮನನ್ನು ಮೂರ್ಛೆಗೊಳಿಸಿ, ವೇಗಶಾಲೀ ಕುದುರೆಗಳಿಂದ ಕಾಂಬೋಜರ ಸೇನೆಯನ್ನು ಆಕ್ರಮಣಿಸಿದನು. ಶ್ವೇತವಾಹನನು ಸೇನೆಯನ್ನು ಪ್ರವೇಶಿಸಿದುದನ್ನು ನೋಡಿ ಹಾರ್ದಿಕ್ಯನು ಅತ್ಯಂತ ಕುಪಿತನಾದನು. ಶರಗಳೊಂದಿಗೆ ಚಾಪವನ್ನು ಟೇಂಕರಿಸುತ್ತಾ ಅವನು ಇಬ್ಬರು ಪಾಂಚಾಲ್ಯರನ್ನು ಎದುರಿಸಿದನು.

ಕೃತವರ್ಮನು ತನ್ನ ರಥ ಮತ್ತು ಶರಗಳಿಂದ ಅರ್ಜುನನ ಹಿಂದೆಯೇ ಹೋಗುತ್ತಿದ್ದ ಚಕ್ರರಕ್ಷಕರಾಗಿದ ಪಾಂಚಾಲರನ್ನು ತಡೆದನು. ಭೋಜನು ಯುಧಾಮನ್ಯುವನ್ನು ಮೂರು ನಿಶಿತ ಶರಗಳಿಂದಲೂ ಉತ್ತಮೌಜಸನನ್ನು ನಾಲ್ಕರಿಂದಲೂ ಹೊಡೆದನು. ಅವರೂ ಕೂಡ ಅವನನ್ನು ಹತ್ತು ಹತ್ತು ಶರಗಳಿಂದ ಹೊಡೆದರು ಮತ್ತು ಅವನ ಧ್ವಜ-ಧನುಸ್ಸುಗಳನ್ನು ಕತ್ತರಿಸಿದರು. ಆಗ ಕ್ರೋಧಮೂರ್ಛಿತನಾದ ಹಾರ್ದಿಕ್ಯನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಆ ವೀರರಿಬ್ಬರನ್ನೂ ಧನುಸ್ಸು ಇಲ್ಲದವರಂತೆ ಮಾಡಿ ಶರವರ್ಷಗಳಿಂದ ಮುಚ್ಚಿದನು. ಅವರು ಅನ್ಯ ಧನುಸ್ಸುಗಳನ್ನು ತೆಗೆದುಕೊಂಡು ಭೋಜನನ್ನು ತುಂಬಾ ಹೊಡೆದು ಗಾಯಗೊಳಿಸಿದರು. ಆ ಮಧ್ಯದಲ್ಲಿ ಬೀಭತ್ಸುವು ಶತ್ರುಸೇನೆಯನ್ನು ಪ್ರವೇಶಿಸಿದನು. ದ್ವಾರದಲ್ಲಿಯೇ ಕೃತವರ್ಮನಿಂದ ತಡೆಯಲ್ಪಟ್ಟ ಅವರಿಬ್ಬರು ನರರ್ಷಭರಿಗೆ ಎಷ್ಟೇ ಪ್ರಯತ್ನಪಟ್ಟರೂ ಧಾರ್ತರಾಷ್ಟ್ರರ ಸೇನೆಗಳನ್ನು ಪ್ರವೇಶಿಸಲು ಆಗಲಿಲ್ಲ. ಶ್ವೇತವಾಹನನು ಯುದ್ಧದಲ್ಲಿ ತ್ವರೆಮಾಡಿ ಸೇನೆಗಳನ್ನು ನಾಶಪಡಿಸುತ್ತಿದ್ದರೂ, ಆ ಅರಿಸೂದನನು ಸಿಕ್ಕಿದ್ದ ಕೃತವರ್ಮನನ್ನು ವಧಿಸಲಿಲ್ಲ.

ಶ್ರುತಾಯುಧ ವಧೆ

ಹಾಗೆ ಮುಂದುವರೆದು ಬರುತ್ತಿದ್ದ ಅವನನ್ನು ನೋಡಿ ಶೂರ, ರಾಜಾ ಶ್ರುತಾಯುಧನು ಸಂಕ್ರುದ್ಧನಾಗಿ ಮಹಾಧನುಸ್ಸನ್ನು ಮಿಡಿಯುತ್ತಾ ಆಕ್ರಮಣಿಸಿದನು. ಅವನು ಪಾರ್ಥನನ್ನು ಮೂರರಿಂದ ಮತ್ತು ಜನಾರ್ದನನನ್ನು ಎಪ್ಪತ್ತರಿಂದ ಹೊಡೆದು, ತೀಕ್ಷ್ಣ ಕ್ಷುರಪ್ರದಿಂದ ಪಾರ್ಥನ ಕೇತುವನ್ನು ಹಾರಿಸಿದನು. ಆಗ ಅರ್ಜುನನು ಕ್ರುದ್ಧನಾಗಿ ಮಾವಟಿಗನು ಮಹಾ ಆನೆಯನ್ನು ಚುಚ್ಚುವಂತೆ ಅವನನ್ನು ತೊಂಭತ್ತು ನತಪರ್ವ ಶರಗಳಿಂದ ಜೋರಾಗಿ ಹೊಡೆದನು. ಪಾಂಡವೇಯನ ವಿಕ್ರಮವನ್ನು ಅವನಿಗೆ ಸಹಿಸಲಾಗಲಿಲ್ಲ. ಅವನನ್ನು ಎಪ್ಪತ್ತೇಳು ಬಾಣಗಳಿಂದ ಹೊಡೆದನು. ಕ್ರುದ್ಧನಾದ ಅರ್ಜುನನು ಅವನ ಧನುಸ್ಸನ್ನು ಕತ್ತರಿಸಿ, ಬತ್ತಳಿಕೆಯನ್ನೂ ತುಂಡುಮಾಡಿ ಎದೆಗೆ ಗುರಿಯಿಟ್ಟು ಏಳು ನತಪರ್ವಗಳನ್ನು ಪ್ರಯೋಗಿಸಿದನು. ಆಗ ರಾಜನು ಕ್ರೋಧಮೂರ್ಛಿತನಾಗಿ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ವಾಸವಿನ ಬಾಹು-ಎದೆಗಳಿಗೆ ಗುರಿಯಿಟ್ಟು ಒಂಭತ್ತು ಬಾಣಗಳನ್ನು ಬಿಟ್ಟನು. ಆಗ ಅರ್ಜುನನು ನಸುನಗುತ್ತಲೇ ಶ್ರುತಾಯುಧನನ್ನು ಅನೇಕ ಸಹಸ್ರ ಶರಗಳಿಂದ ಪೀಡಿಸತೊಡಗಿದನು. ಆ ಮಹಾರಥ ಮಹಾಬಲನು ಅವನ ಕುದುರೆಗಳನ್ನೂ ಸಾರಥಿಯನ್ನೋ ಕೊಂದು ಅವನನ್ನು ಎಪ್ಪತ್ತು ನಾರಾಚಗಳಿಂದ ಹೊಡೆದನು. ಶ್ರುತಾಯುಧನು ಕುದುರೆಗಳನ್ನು ಕಳೆದುಕೊಂಡು ರಥದಿಂದ ಹಾರಿ ಗದೆಯನ್ನು ಮೇಲೆತ್ತಿ ಹಿಡಿದು ರಣದಲ್ಲಿ ಪಾರ್ಥನ ಮೇಲೆ ನುಗ್ಗಿದನು. ಆ ಶ್ರುತಾಯುಧನಾದರೋ ವರುಣನ ಮಗನಾಗಿದ್ದನು. ಅವನ ಜನನಿಯು ಶೀತಲ ನೀರಿನ ಮಹಾನದೀ ಪರ್ಣಾಶಾ. ಪುತ್ರನಿಗೋಸ್ಕರವಾಗಿ ಅವನ ತಾಯಿಯು ವರುಣನಿಗೆ ಈ ಮಾತನ್ನು ಕೇಳಿಕೊಂಡಿದ್ದಳು: “ನನ್ನ ಮಗನು ಲೋಕದಲ್ಲಿ ಶತ್ರುಗಳಿಗೆ ಅವಧ್ಯನಾಗಲಿ!” ಆಗ ವರುಣನು ಪ್ರೀತನಾಗಿ ಹೇಳಿದ್ದನು: “ನಿನಗೆ ಹಿತವಾದ ಈ ವರವನ್ನು ಕೊಡುತ್ತೇನೆ. ಈ ದಿವ್ಯ ಅಸ್ತ್ರದಿಂದ ನಿನ್ನ ಈ ಮಗನು ಅವಧ್ಯನಾಗುತ್ತಾನೆ. ಮನುಷ್ಯರಿಗೆ ಎಂದೂ ಅಮರತ್ವವೆನ್ನುವುದು ಇಲ್ಲ. ಹುಟ್ಟಿದ ಎಲ್ಲರೂ ಅವಶ್ಯವಾಗಿ ಸಾಯುತ್ತಾರೆ. ಈ ಅಸ್ತ್ರದ ಪ್ರಭಾವದಿಂದ ಇವನು ಸದಾ ರಣದಲ್ಲಿ ಶತ್ರುಗಳಿಗೆ ದುರ್ಧರ್ಷನಾಗಿರುತ್ತಾನೆ. ನಿನ್ನ ಮನಸ್ಸಿನ ಜ್ವರವನ್ನು ಕಳೆದುಕೋ!” ಹೀಗೆ ಹೇಳಿ ವರುಣನು ಮಂತ್ರಪುರಸ್ಕೃತವಾದ ಗದೆಯನ್ನು ಕೊಟ್ಟಿದ್ದನು. ಅದನ್ನು ಪಡೆದು ಶ್ರುತಾಯುಧನು ಸರ್ವಲೋಕಗಳಲ್ಲಿ ದುರಾಧರ್ಷನಾಗಿದ್ದನು. ಭಗವಾನ್ ಜಲೇಶ್ವರನು ಪುನಃ ಇನ್ನೂ ಹೇಳಿದ್ದನು: “ಯುದ್ಧಮಾಡದೇ ಇರುವವನ ಮೇಲೆ ಇದನ್ನು ಪ್ರಯೋಗಿಸಬಾರದು. ಆಗ ಅದು ನಿನ್ನಮೇಲೆಯೇ ಬೀಳುತ್ತದೆ!” ಎಂದು.

ಅವನು ವೀರರನ್ನು ಘಾತಿಗೊಳಿಸಬಲ್ಲ ಆ ಗದೆಯಿಂದ ಜನಾರ್ದನನನ್ನು ಹೊಡೆದನು. ವೀರ್ಯವಾನ್ ಕೃಷ್ಣನು ಅದನ್ನು ತನ್ನ ದಪ್ಪ ಭುಜದ ಮೇಲೆ ಸ್ವೀಕರಿಸಿದನು. ಗಾಳಿಯು ವಿಂಧ್ಯ ಗಿರಿಯನ್ನು ಹೇಗೆ ನಡುಗಿಸಲಾರದೋ ಹಾಗೆ ಅದು ಶೌರಿಯನ್ನು ನಡುಗಿಸಲೂ ಇಲ್ಲ. ಆದರೆ ಹಿಂದೆ ಹೇಳಿದ್ದಂತೆಯೇ ಅದು ಮಾಡಿತು. ಹಿಂದಿರುಗಿ ಕಟ್ಟುಪಾಡನ್ನು ಆಚರಿಸದೇ ಇರುವವನ ಮೇಲೆ ಎರಗಿತು. ಅಲ್ಲಿ ನಿಂತಿದ್ದ ವೀರ ಶ್ರುತಾಯುಧನನ್ನು ಹೊಡೆಯಿತು. ಶ್ರುತಾಯುಧನನ್ನು ಸಂಹರಿಸಿ ಜಗತ್ತಿನಿಂದ ಕಣ್ಮರೆಯಾಯಿತು. ತನ್ನದೇ ಅಸ್ತ್ರದಿಂದ ಶ್ರುತಾಯುಧನು ಹತನಾದುದನ್ನು ನೋಡಿ ಅಲ್ಲಿ ಸೇನೆಗಳಲ್ಲಿ ಮಹಾ ಹಾಹಾಕಾರವುಂಟಾಯಿತು. ಯುದ್ಧ ಮಾಡದೇ ಇದ್ದ ಕೇಶವನ ಮೇಲೆ ಆ ಗದೆಯನ್ನು ಪ್ರಯೋಗಿಸಿದುದರಿಂದ ಅದೇ ಗದೆಯಿಂದ ಶ್ರುತಾಯುಧನು ಹತನಾದನು. ವರುಣನು ಹೇಗೆ ಹೇಳಿದ್ದನೋ ಹಾಗೆಯೇ ಅವನು ನಿಧನವನ್ನು ಹೊಂದಿದನು. ಎಲ್ಲ ಧನ್ವಿಗಳು ನೋಡುತ್ತಿದ್ದಂತೆಯೇ ಅವನು ಅಸುನೀಗಿ ಭೂಮಿಯ ಮೇಲೆ ಬಿದ್ದನು. ಪರ್ಣಾಷಳ ಪ್ರಿಯಸುತನಾದ ಅವನು ಬೀಳುವಾಗ ಭಿರುಗಾಳಿಯಿಂದ ಮುರಿದು ಬಿದ್ದ ಬಹು ಶಾಖೆಗಳನ್ನುಳ್ಳ ವೃಕ್ಷದಂತೆ ತೋರಿದನು. ಆಗ ಶ್ರುತಾಯುಧನು ಹತನಾದುದನ್ನು ನೋಡಿ ಎಲ್ಲ ಸೇನೆಗಳೂ, ಸೇನಾಪ್ರಮುಖರೂ ಓಡತೊಡಗಿದರು.

ಸುದಕ್ಷಿಣ ವಧೆ

ಆಗ ಕಾಂಬೋಜರಾಜನ ಶೂರ ಪುತ್ರ ಸುದಕ್ಷಿಣನು ವೇಗ ಕುದುರೆಗಳೊಂದಿಗೆ ಬಂದು ಫಲ್ಗುನನನ್ನು ಆಕ್ರಮಣಿಸಿದನು. ಪಾರ್ಥನು ಅವನ ಮೇಲೆ ಏಳು ಶರಗಳನ್ನು ಪ್ರಯೋಗಿಸಿದನು. ಅವು ಆ ಶೂರನನ್ನು ಭೇದಿಸಿ ಧರಣೀತಲವನ್ನು ಪ್ರವೇಶಿಸಿದವು. ರಣದಲ್ಲಿ ಗಾಂಡೀವದಿಂದ ಬಿಡಲ್ಪಟ್ಟ ತೀಕ್ಷ್ಣ ಶರಗಳಿಂದ ಅತಿಯಾಗಿ ಗಾಯಗೊಂಡ ಅವನು ಹತ್ತು ಕಂಕಪತ್ರಿಗಳಿಂದ ಅರ್ಜುನನನ್ನು ತಿರುಗಿ ಹೊಡೆದನು. ಅವನು ವಾಸುದೇವನನ್ನು ಮೂರರಿಂದ ಹೊಡೆದು ಪುನಃ ಪಾರ್ಥನನ್ನು ಐದರಿಂದ ಹೊಡೆದನು. ಪಾರ್ಥನು ಅವನ ಧನುಸ್ಸನ್ನು ಕತ್ತರಿಸಿ ಕೇತುವನ್ನು ತುಂಡರಿಸಿದನು. ಪಾಂಡವನು ಅವನನ್ನು ತುಂಬಾ ತೀಕ್ಷ್ಣವಾದ ಎರಡು ಭಲ್ಲಗಳಿಂದ ಹೊಡೆದನು. ಅವನಾದರೋ ಪಾರ್ಥನನ್ನು ಮೂರರಿಂದ ಹೊಡೆದು ಜೋರಾಗಿ ಸಿಂಹನಾದಗೈದನು. ಆಗ ಕ್ರುದ್ಧನಾದ ಶೂರ ಸುದಕ್ಷಿಣನು ಘಂಟೆಗಳಿಂದ ಕೂಡಿದ ಲೋಹಮಯವಾದ ಘೋರ ಶಕ್ತಿಯನ್ನು ಗಾಂಡೀವಧನ್ವಿಯ ಮೇಲೆ ಪ್ರಯೋಗಿಸಿದನು. ಅದು ಮಹಾ ಉಲ್ಕೆಯಂತೆ ಉರಿಯುತ್ತಾ ಬೆಂಕಿಯ ಕಿಡಿಗಳನ್ನು ಕಾರುತ್ತಾ ಆ ಮಹಾರಥನನ್ನು ತಲುಪಿ ಭೇದಿಸಿ ನೆಲದ ಮೇಲೆ ಬಿದ್ದಿತು.

ಆಗ ಅಚಿಂತ್ಯವಿಕ್ರಮಿ ಪಾರ್ಥನು ಹದಿನಾಲ್ಕು ಕಂಕಪತ್ರಿ ನಾರಾಚಗಳಿಂದ ಅವನನ್ನು ಕುದುರೆ-ಧ್ವಜ-ಧನುಸ್ಸುಗಳನ್ನೂ ಸೇರಿಸಿ ಹೊಡೆದನು. ಇತರ ಅನೇಕ ಶರಗಳಿಂದ ಅವನ ರಥವನ್ನೂ ನುಚ್ಚುನೂರು ಮಾಡಿದನು. ವಿಕ್ರಮದಿಂದ ಮಾಡಿದ ಸಂಕಲ್ಪದಲ್ಲಿ ಯಶಸ್ವಿಯಾಗದೇ ಇದ್ದ ಕಾಂಬೋಜ ಸುದಕ್ಷಿಣನ ಹೃದಯವನ್ನು ಪಾಂಡವನು ಬಹಳ ಘೋರವಾದ ಬಾಣದಿಂದ ಭೇದಿಸಿದನು. ಆ ಶೂರನು ಕವಚವು ತುಂಡಾಗಿ, ರಕ್ತದಿಂದ ಅಂಗಾಂಗಗಳು ತೋಯ್ದು, ಮುಕುಟ-ಅಂಗದಗಳನ್ನು ಕಳೆದುಕೊಂಡು ಯಂತ್ರದಿಂದ ಬೀಳಿಸಲ್ಪಟ್ಟ ಧ್ವಜದಂತೆ ಅಭಿಮುಖನಾಗಿ ಭೂಮಿಯ ಮೇಲೆ ಬಿದ್ದನು. ಪರ್ವತ ಶಿಖದಲ್ಲಿ ಹುಟ್ಟಿದ್ದ ಚೆನ್ನಾಗಿ ಊರಿಕೊಂಡಿದ್ದ ಬಹುರೆಂಬೆಗಳಿಂದ ಸಮೃದ್ಧವಾಗಿದ ಕರ್ಣಿಕಾರ ವೃಕ್ಷವು ಛಳಿಗಾಲದ ಕೊನೆಯಲ್ಲಿ ಭಿರುಗಾಳಿಯಿಂದ ತುಂಡಾಗಿ ಬೀಳುವ ಹಾಗೆ ಹಂಸತೂಲಿಕಾತಲ್ಪದಲ್ಲಿ ಮಲಗಬೇಕಾಗಿದ್ದ ಕಾಂಬೋಜನು ನಿಹತನಾಗಿ ನೆಲದ ಮೇಲೆ ಮಲಗಿದನು. ನೋಡಲು ಸುಂದರನಾಗಿದ್ದ ಕೆಂಪು ಕಣ್ಣುಗಳ ಕಾಂಬೋಜರಾಜನ ಮಗ ಸುದಕ್ಷಿಣನು ಪಾರ್ಥನಿಂದ ಬೀಳಿಸಲ್ಪಟ್ಟನು. ಹತರಾದ ಕಾಂಬೋಜ ಶ್ರುತಾಯುಧ ಮತ್ತು ಸುದಕ್ಷಿಣರನ್ನು ನೋಡಿ ದುರ್ಯೋಧನನ ಸೇನೆಗಳೆಲ್ಲವೂ ಓಡತೊಡಗಿದವು.

ಶ್ರುತಾಯು-ಅಚ್ಯುತಾಯು-ಆಯುತಾಯು-ದೀರ್ಘಾಯುಗಳ ವಧೆ

ವೀರರಾದ ಸುದಕ್ಷಿಣ ಮತ್ತು ಶ್ರುತಾಯುಧರು ಹತರಾಗಲು ಕುಪಿತರಾದ ಕೌರವ ಸೈನಿಕರು ವೇಗದಿಂದ ಪಾರ್ಥನನ್ನು ಆಕ್ರಮಣಿಸಿದರು. ಅಭೀಷಾಹರು, ಶೂರಸೇನರು, ಶಿಬಯರು ಮತ್ತು ವಸಾತಯರು ಧನಂಜಯನ ಮೇಲೆ ಶರವರ್ಷಗಳನ್ನು ಸುರಿಸಿದರು. ಆ ಆರುಸಾವಿರ ಆರ್ಯರನ್ನು ಪಾಂಡವನು ಶರಗಳಿಂದ ನಾಶಪಡಿಸಿದನು. ಅವರಾದರೋ ವ್ಯಾಘ್ರದಿಂದ ಭೀತಿಗೊಂಡ ಕ್ಷುದ್ರಮೃಗಗಳಂತೆ ಪಲಾಯನಗೈದರು. ಹಿಂದಿರುಗಿ ಬಂದು ಪುನಃ ರಣಯುದ್ಧದಲ್ಲಿ ದಾಯಾದಿ ಶತ್ರುಗಳನ್ನು ಕೊಲ್ಲಲು ಬಯಸಿದ್ದ ಪಾರ್ಥನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು. ಧನಂಜಯನು ಬೇಗನೇ ಗಾಂಡೀವದಿಂದ ಬಿಡಲ್ಪಟ್ಟ ಶರಗಳಿಂದ ಅವರ ಬಾಹುಗಳನ್ನೂ ಶಿರಗಳನ್ನೂ ಬೀಳಿಸಿದನು. ಅಲ್ಲಿ ನಿರಂತರವಾಗಿ ಬೀಳುತ್ತಿದ್ದ ಶರಗಳಿಂದ ಭೂಮಿಯು ತುಂಬಿಹೋಗಿತ್ತು. ಹದ್ದು-ಕಾಗೆ-ಗಿಡುಗಗಳು ಮೇಲೆ ಹಾರಾಡಿಕೊಂಡಿತ್ತು ಚಪ್ಪರಗಳಂತೆ ನೆರಳನ್ನು ನೀಡುತ್ತಿದ್ದವು. ಅವರ ಜನರು ಹಾಗೆ ನಾಶವಾಗುತ್ತಿರಲು ಕ್ರೋಧ-ಅಸಹನೆಯಿಂದ ಕೂಡಿದ ಶ್ರುತಾಯು ಮತ್ತು ಅಚ್ಯುತಾಯು ಇಬ್ಬರೂ ಧನಂಜಯನನ್ನು ಎದುರಿಸಿ ಯುದ್ಧ ಮಾಡಿದರು. ಬಲಿಗಳಾದ, ಸ್ಪರ್ಧಿಗಳಾದ, ಕುಲಜರಾದ, ಬಾಹುಶಾಲಿಗಳಾದ ಆ ವೀರರಿಬ್ಬರೂ ಅವನ ಎಡ-ಬಲಗಳಲ್ಲಿ ಶರವರ್ಷಗಳನ್ನು ಸುರಿಸಿದರು. ಅವಸರದಲ್ಲಿದ್ದ, ಮಹಾ ಯಶಸ್ಸನ್ನು ಬಯಸಿದ್ದ, ದುರ್ಯೋಧನನಿಗಾಗಿ ಅರ್ಜುನನ ವಧೆಯನ್ನು ಬಯಸಿದ್ದ ಆ ಇಬ್ಬರು ಧನ್ವಿಗಳೂ ಕ್ರುದ್ಧರಾಗಿ ಎರಡು ದೊಡ್ಡ ದೊಡ್ಡ ಮೋಡಗಳು ಸರೋವರವೊಂದರ ಮೇಲೆ ಬಿದ್ದು ತುಂಬಿಬಿಡುವಂತೆ ಸಹಸ್ರಾರು ಪತ್ರಿ ನತಪರ್ವಗಳನ್ನು ಅರ್ಜುನನ ಮೇಲೆ ಸುರಿಸಿದರು. ಆಗ ಕ್ರುದ್ಧನಾದ ರಥಶ್ರೇಷ್ಠ ಶ್ರುತಾಯುವು ಹರಿತವಾದ ಹಿತ್ತಾಳೆಯ ತೋಮರದಿಂದ ಧನಂಜಯನನ್ನು ಹೊಡೆದನು. ಬಲಶಾಲಿ ಶತ್ರುವಿನಿಂದ ಅತಿಯಾಗಿ ನೋವುಗೊಂಡ ಅರ್ಜುನನು ರಣದಲ್ಲಿ ಕೇಶವನನ್ನೂ ದುಗುಡಗೊಳಿಸುತ್ತಾ ಮೂರ್ಛಿತನಾದನು.

ಇದೇ ಸಮಯದಲ್ಲಿ ಮಹಾರಥ ಅಚ್ಯುತಾಯುವು ತುಂಬಾ ತೀಕ್ಷ್ಣವಾಗಿದ್ದ ಶೂಲದಿಂದ ಅರ್ಜುನನನ್ನು ಹೊಡೆಯತೊಡಗಿದನು. ಹೀಗೆ ಪಾಂಡವನ ಗಾಯದ ಮೇಲೆ ಉಪ್ಪನ್ನು ಎರಚಿದನು. ಪಾರ್ಥನಾದರೋ ತುಂಬಾ ಗಾಯಗೊಂಡು ಧ್ವಜಸ್ತಂಭಕ್ಕೆ ಒರಗಿದನು. ಆಗ ಕೌರವ ಸೇನೆಗಳಲ್ಲೆಲ್ಲ ಧನಂಜಯನು ಹತನಾದನೆಂದು ತಿಳಿದು ಮಹಾ ಸಿಂಹನಾದವುಂಟಾಯಿತು. ಕೃಷ್ಣನೂ ಕೂಡ ಪಾರ್ಥನು ಮೂರ್ಛಿತನಾದುದನ್ನು ನೋಡಿ ತುಂಬಾ ಸಂತಪ್ತನಾಗಿ ಸ್ನೇಹಿತ ಧನಂಜಯನನ್ನು ನೀರಿನಿಂದ ಆರೈಸಿದನು.

ಆಗ ಅವರಿಬ್ಬರೂ ಧನಂಜಯ ಮತ್ತು ವಾರ್ಷ್ಣೇಯ ವಾಸುದೇವರನ್ನು ಗುರಿಯಾಗಿಟ್ಟುಕೊಂಡು ಎಲ್ಲ ಕಡೆಗಳಿಂದ ಶರವರ್ಷಗಳನ್ನು ಸುರಿಸಿದರು. ಚಕ್ರ-ಕೂಬರ-ರಥದೊಂದಿಗೆ ಮತ್ತು ಅಶ್ವ-ಧ್ವಜ-ಪತಾಕೆಗಳೊಂದಿಗೆ ಅವರು ಯುದ್ಧದಲ್ಲಿ ಅದೃಶ್ಯರಾಗಿಬಿಟ್ಟರು! ಅದೊಂದು ಅದ್ಭುತವಾಗಿತ್ತು. ಮೆಲ್ಲನೇ ಬೀಭತ್ಸುವು ಪ್ರೇತರಾಜನ ಪುರಕ್ಕೆ ಹೋಗಿ ಪುನಃ ಹಿಂದಿರುಗಿ ಬಂದನೋ ಎನ್ನುವಂತೆ ಎಚ್ಚೆತ್ತನು. ಕೇಶವನೊಂದಿಗೆ ರಥವು ಶರಜಾಲಗಳಿಂದ ಮುಚ್ಚಿಹೋಗಿರುವುದನ್ನು ಮತ್ತು ಎದಿರು ಅಗ್ನಿ-ವಾಯುಗಳಂತೆ ದೀಪ್ಯಮಾನರಾಗಿ ನಿಂತಿರುವ ಶತ್ರುಗಳನ್ನೂ ಕಂಡು ಮಹಾರಥ ಪಾರ್ಥನು ಶಕ್ರಾಸ್ತ್ರವನ್ನು ಪ್ರಯೋಗಿಸತೊಡಗಿದನು. ಅದರಿಂದ ಸಹಸ್ರಾರು ನತಪರ್ವಣ ಶರಗಳು ಉದ್ಭವಿಸಿದವು. ಅವು ಆ ಇಬ್ಬರು ಮಹೇಷ್ವಾಸರನ್ನೂ ಹೊಡೆದವು. ಅವರು ಬಿಟ್ಟ ಬಾಣಗಳು ಪಾರ್ಥನ ಬಾಣಗಳಿಂದ ತುಂಡಾಗಿ ಆಕಾಶಕ್ಕೆ ಹಾರಿದವು. ಅವರ ಶರಗಳನ್ನು ವೇಗದ ಶರಗಳಿಂದ ತುಂಡರಿಸಿ ಪಾಂಡವನು ಅಲ್ಲಲ್ಲಿಯೇ ಆ ಮಹಾರಥರೊಂದಿಗೆ ಹೋರಾಡಿದನು. ಫಲ್ಗುನನ ಬಾಣಗಳಿಂದ ಬಾಹು-ಶಿರಸ್ಸುಗಳನ್ನು ಕತ್ತರಿಸಲ್ಪಟ್ಟು ಅವರಿಬ್ಬರೂ ಭಿರುಗಾಳಿಗೆ ಸಿಕ್ಕ ಮರಗಳಂತೆ ನೆಲದ ಮೇಲೆ ಬಿದ್ದರು. ನೋಡುವವರಿಗೆ ಶ್ರುತಾಯು ಮತ್ತು ಅಚ್ಯುತಾಯುಗಳ ನಿಧನವು ಸಮುದ್ರವನ್ನು ಒಣಗಿಸಿದಷ್ಟೇ ವಿಸ್ಮಯದಾಯಕವಾಗಿತ್ತು. ಅವರ ಪದಾನುಗರಾದ ಐದುನೂರು ರಥರನ್ನು ಸಂಹರಿಸಿ ಪಾರ್ಥನು ಭಾರತೀ ಸೇನೆಯನ್ನು ಹೊಕ್ಕು ಶ್ರೇಷ್ಠರಲ್ಲಿ ಶ್ರೇಷ್ಠರನ್ನೂ ಸಂಹರಿಸಿದನು.

ಶ್ರುತಾಯು ಮತ್ತು ಅಚ್ಯುತಾಯು ಇವರು ಹತರಾದುದನ್ನು ನೋಡಿ ಆಯುತಾಯು ಮತ್ತು ದೀರ್ಘಾಯುಗಳು ಕೂಡ ಸಂಕ್ರುದ್ಧರಾದರು. ಅವರಿಬ್ಬರ ಮಕ್ಕಳಾದ ಆ ನರಶ್ರೇಷ್ಠರು ಪಿತೃಗಳ ನಿಯೋಗದಿಂದ ಚಿಂತಿತರಾಗಿ ವಿವಿಧ ಬಾಣಗಳನ್ನು ಚೆಲ್ಲುತ್ತಾ ಕೌಂತೇಯನನ್ನು ತಿರುಗಿ ಆಕ್ರಮಣಿಸಿದರು. ಅರ್ಜುನನು ಪರಮಕ್ರುದ್ಧನಾಗಿ ಅವರನ್ನು ಕ್ಷಣದಲ್ಲಿಯೇ ಸನ್ನತಪರ್ವ ಶರಗಳಿಂದ ಯಮನ ಸದನಕ್ಕೆ ಕಳುಹಿಸಿದನು. ಸಲಗವು ಪದ್ಮಸರೋವರನ್ನು ಹೇಗೋ ಹಾಗೆ ಸೇನೆಗಳನ್ನು ಕದಡುತ್ತಿದ್ದ ಪಾರ್ಥನನ್ನು ತಡೆಯಲು ಕ್ಷತ್ರಿಯಪುಂಗವರಿಗೆ ಅಸಾಧ್ಯವಯಿತು. ಆಗ ಅಂಗದೇಶಕ್ಕೆ ಸೇರಿದ್ದ ಕ್ರುದ್ಧರಾದ ಸಹಸ್ರಾರು ಪ್ರಶಿಕ್ಷಿತ ಗಜಾರೋಹೀ ಯೋಧರು ತಮ್ಮ ಗಜಸೇನೆಯೊಂದಿಗೆ ಮತ್ತು ದುರ್ಯೋಧನನು ಕಳುಹಿಸಿದ್ದ ಪರ್ವತೋಪಮ ಆನೆಗಳೊಂದಿಗೆ ಪೂರ್ವದವರು ಮತ್ತು ದಕ್ಷಿಣದವರು ಹಾಗೂ ಕಲಿಂಗ ಪ್ರಮುಖ ನೃಪರು ಪಾಂಡವನನ್ನು ಸುತ್ತುವರೆದರು. ಗಾಂಡೀವದಿಂದ ಹೊರಟ ಉಗ್ರ ಶರಗಳು ಅವರ ಶಿರಗಳನ್ನೂ ಮತ್ತು ಅಲಂಕೃತ ಬಾಹುಗಳನ್ನೂ ಶೀಘ್ರವಾಗಿ ಕತ್ತರಿಸಿದವು. ರಣಭೂಮಿಯಲ್ಲಿ ಹರಡಿಹೋಗಿದ್ದ ಅವರ ಶಿರಗಳೂ ಅಂಗದಗಳೊಂದಿಗಿನ ಬಾಹುಗಳೂ ಸರ್ಪಗಳಿಂದ ಆವೃತವಾದ ಬಂಗಾರದ ಕಲ್ಲುಗಳಂತೆ ಕಾಣುತ್ತಿದ್ದವು. ವೃಕ್ಷಗಳಿಂದ ಪಕ್ಷಿಗಳು ಕೆಳಕ್ಕೆ ಬೀಳುವಂತೆ ವಿಶಿಖಗಳಿಂದ ಕತ್ತರಿಸಲ್ಪಟ್ಟ ಬಾಹುಗಳು ಮತ್ತು ಶಿರಸ್ಸುಗಳು ಆನೆಗಳ ಮೇಲಿಂದ ತೊಪತೊಪನೆ ಬೀಳುತ್ತಿರುವುದು ಕಂಡುಬಂದಿತು. ಮಳೆಗಾಲದಲ್ಲಿ ಪರ್ವತಗಳಿಂದ ಗೈರಿಕಾದಿ ಧಾತು ಮಿಶ್ರಿತ ಕೆಂಪು ಬಣ್ಣದ ನೀರು ಹರಿದು ಬರುವಂತೆ ಸಾವಿರಾರು ಶರಗಳಿಂದ ಹೊಡೆಯಲ್ಪಟ್ಟ ಆನೆಗಳ ಶರೀರಗಳಿಂದ ರಕ್ತವು ಹರಿದು ಬರುತ್ತಿರುವುದು ಕಾಣುತ್ತಿತ್ತು. ನಾನಾರೀತಿಯಲ್ಲಿ ವಿಕೃತರಾಗಿ ಕಾಣುತ್ತಿದ್ದ ಮ್ಲೇಚ್ಛರು ಬೀಭತ್ಸುವಿನ ನಿಶಿತ ಶರಗಳಿಂದ ಹತರಾಗಿ ಆನೆಗಳ ಮೇಲೆಯೇ ಮಲಗಿದ್ದರು. ನಾನಾ ವಿಧದ ವೇಷಗಳನ್ನು ಧರಿಸಿದ್ದ, ನಾನ್ನ ಶಸ್ತ್ರ ಸಮೂಹಗಳಿಂದ ಕೂಡಿದ್ದ ಅವರು ವಿಚಿತ್ರ ಶರಗಳಿಂದ ಹತರಾಗಿ ರಕ್ತದಿಂದ ತೋಯ್ದ ಅಂಗಗಳಿಂದ ಹೊಳೆಯುತ್ತಿದ್ದರು.

ಸವಾರರು ಮತ್ತು ಅನುಚರರೊಂದಿಗೆ ಸಹಸ್ರಾರು ಆನೆಗಳು ಪಾರ್ಥನ ಶರಗಳಿಂದ ಹತರಾಗಿ, ಶರೀರಗಳು ಚೂರು ಚೂರಾಗಿ ರಕ್ತವನ್ನು ಕಾರುತ್ತಿದ್ದವು. ಕೆಲವು ಕೂಗಿಕೊಳ್ಳುತ್ತಿದ್ದವು, ಕೆಲವು ಬಿದ್ದಿದ್ದವು, ಇನ್ನು ಕೆಲವು ದಿಕ್ಕು ದಿಕ್ಕುಗಳಲ್ಲಿ ಓಡುತ್ತಿದ್ದವು. ಅನೇಕ ಆನೆಗಳು ತುಂಬಾ ನೋವನ್ನು ಅನುಭವಿಸಿ ಭಯದಿಂದ ತಮ್ಮವರನ್ನೇ ತುಳಿದು ಧ್ವಂಸಮಾಡಿದವು. ಕೆಲವು ತೀಕ್ಷ್ಣ ವಿಷವನ್ನು ಅಡಗಿಸಿಟ್ಟುಕೊಂಡಿರುವ ಸರ್ಪಗಳಂತೆ ಆಯುಧಪಾಣಿಗಳನ್ನು ಹೊಟ್ಟೆಯ ಕೆಳಗೆ ಅಡಗಿಸಿಕೊಂಡಿಕೊಂಡಿದ್ದವು. ಘೋರರಾದ, ಘೋರದೃಷ್ಠಿಯುಳ್ಳ ಯವನರು, ಪಾರದರು, ಶಕರು, ಸುನಿಕರೊಂದಿಗೆ ಗೋಯೋನಿಯಲ್ಲಿ ಜನಿಸಿದ ಮ್ಲೇಚ್ಛರು, ಪ್ರಹಾರಿಗಳಾದ ಕಾಲಕಲ್ಪರು, ದಾರ್ವಾಭಿಸಾರರು, ದರದರು, ಬಾಹ್ಲಿಕರೊಂದಿಗೆ ಪೌಂಡ್ರರು ಅಸುರಮಾಯೆಯನ್ನು ಬಳಸಿ ಯುದ್ಧ ಮಾಡುತ್ತಿದ್ದರು. ಲೆಖ್ಕಮಾಡಲೂ ಸಾಧ್ಯವಾಗದ ನೂರಾರು ಸಹಸ್ರಾರು ವ್ರಾತರು ಮಿಡಿತೆಗಳ ಹಿಂಡಿನಂತೆ ತೋರುತ್ತಿದ್ದರು. ಬಾಣಗಳಿಂದ ಸೇನೆಯ ಮೇಲೆ ಚಪ್ಪರವನ್ನೇ ನಿರ್ಮಿಸಿ ಧನಂಜಯನು ಅಸ್ತ್ರಮಾಯೆಯಿಂದ ಅರ್ಧಮುಂಡನ ಮಾಡಿಕೊಂಡಿದ್ದ, ಜಟಾಧಾರಿಗಳಾಗಿದ್ದ, ಅಶುಚರಾಗಿದ್ದ, ಗಡ್ಡಬಿಟ್ಟುಕೊಂಡಿದ್ದ ಮ್ಲೇಚ್ಛರೆಲ್ಲರನ್ನೂ ಒಟ್ಟಿಗೇ ನಾಶಪಡಿಸಿದನು. ನೂರಾರು ಶರಗಳಿಂದ ಗಾಯಗೊಂಡ ಆ ಗಿರಿಗಹ್ವರ ವಾಸಿಗಳು ಭೀತರಾಗಿ ರಣದಿಂದ ಗುಂಪು ಗುಂಪಾಗಿ ಓಡತೊಡಗಿದರು.

ನೂರಾರು ಶರಗಳಿಂದ ಬೀಳಿಸಲ್ಪಟ್ಟಿದ್ದ ಆನೆ-ಕುದುರೆಗಳ ಸವಾರಿ ಮ್ಲೇಚ್ಛರ ರಕ್ತವನ್ನು ಬಕಪಕ್ಷಿಗಳು, ಕಾಗೆಗಳು ಮತ್ತು ತೋಳಗಳು ಸಂತೋಷದಿಂದ ಕುಡಿಯುತ್ತಿದ್ದವು. ಪದಾತಿ-ಅಶ್ವ-ಗಜ-ರಥಗಳ ಸಮೂಹಗಳಿಂದ ಮುಚ್ಚಿಹೋಗಿದ್ದ, ಒಂದೇ ಸಮನೆ ಸುರಿಯುತ್ತಿದ್ದ ಶರವರ್ಷಗಳೇ ದೋಣಿಯಾಗುಳ್ಳ, ಕೇಶಗಳೇ ಪಾಚಿಹುಲ್ಲಾಗಿರುವ, ರಕ್ತವೇ ಸುರುಳಿಗಳೊಂದಿಗೆ ಅಲೆಅಲೆಯಾಗಿ ಹರಿಯುತ್ತಿರುವ ಘೋರವಾದ ಉಗ್ರವಾದ ನದಿಯು ಹುಟ್ಟಿಕೊಂಡಿದು. ಶಿರಸ್ತ್ರಾಣಗಳೇ ಸಣ್ಣ ಸಣ್ಣ ಮೀನುಗಳಾಗಿದ್ದವು. ಯುಗಾಂತದಲ್ಲಿ ಹುಟ್ಟುವ ಕಾಲನಂತೆ ಇತ್ತು. ಆನೆಗಳ ಶರೀರಗಳಿಂದ ತುಂಬಿಕೊಂಡಿದ್ದ ಆ ರಕ್ತದ ನದಿಯು ರಾಜಪುತ್ರರ, ಆನೆ-ಕುದುರೆಗಳ ಆರೋಹಿ ಯೋಧರ ದೇಹಗಳಿಂದ ಸುರಿಯುತ್ತಿದ್ದ ರಕ್ತದಿಂದ ಮಾಡಲ್ಪಟ್ಟಿತ್ತು. ಇಂದ್ರನು ಮಳೆಗಳೆಯುವಾಗ ಭೂಮಿಯ ಹಳ್ಳ-ತಿಟ್ಟುಗಳು ಒಂದೇ ಸಮನಾಗಿ ಕಾಣುವಂತೆ ರಕ್ತದಿಂದ ತುಂಬಿಹೋಗಿದ್ದ ರಣಭೂಮಿಯೆಲ್ಲವೂ ಒಂದೇ ಸಮನಾಗಿ ತೋರುತ್ತಿತ್ತು. ಆ ಕ್ಷತ್ರಿಯರ್ಷಭನು ಆರು ಸಾವಿರ ವೀರಶ್ರೇಷ್ಠರನ್ನೂ, ಪುನಃ ಒಂದು ಸಾವಿರ ಶ್ರೇಷ್ಠ ಕ್ಷತ್ರಿಯರನ್ನು ಮೃತ್ಯುಲೋಕಕ್ಕೆ ಕಳುಹಿಸಿದನು. ವಜ್ರದಿಂದ ಹತವಾದ ಪರ್ವತಗಳಂತೆ ಶರಗಳಿಂದ ಹೊಡೆಯಲ್ಪಟ್ಟ ಸಹಸ್ರಾರು ಆನೆಗಳು ನೆಲಕ್ಕುರುಳಿ ವಿಧಿವತ್ತಾಗಿ ಮಲಗಿಕೊಂಡಿವೆಯೋ ಎಂದು ತೋರುತ್ತಿದ್ದವು. ಮದಿಸಿದ ಸಲಗವು ಬೆಂಡಿನ ವನವನ್ನು ನಾಶಪಡಿಸುವಂತೆ ಆ ಆನೆ-ಕುದುರೆ-ರಥಗಳನ್ನು ನಾಶಗೊಳಿಸುತ್ತಾ ಅರ್ಜುನನು ತಿರುಗುತ್ತಿದ್ದನು. ಹೇರಳವಾದ ಮರ-ಬಳ್ಳಿ-ಪೊದರುಗಳಿರುವ ಮತ್ತು ಒಣಗಿದ ಕಟ್ಟಿಗೆ-ಹುಲ್ಲುಗಳಿರುವ ಅರಣ್ಯವನ್ನು ವಾಯುವಿನ ಸಹಾಯದಿಂದ ಅಗ್ನಿಯು ಹೇಗೆ ಸುಡುವನೋ ಹಾಗೆ ಕೌರವ ಸೇನೆಯೆಂಬ ಅರಣ್ಯವನ್ನು ಕೃಷ್ಣನೆಂಬ ಅನಿಲನ ಸಹಾಯದಿಂದ ಕ್ರುದ್ಧ ಧನಂಜಯನ ರೂಪದ ಅಗ್ನಿಯು ಬಾಣಗಳೆಂಬ ಜ್ವಾಲೆಗಳಿಂದ ದಹಿಸಿದನು. ರಥಗಳ ಆಸನಗಳನ್ನು ಬರಿದು ಮಾಡುತ್ತಾ ಅಸುನೀಗಿದ ನರರಿಂದ ಭೂಮಿಯನ್ನು ತುಂಬುತ್ತಾ ಚಾಪವನ್ನು ಹಿಡಿದ ಧನಂಜಯನು ರಣರಂಗದಲ್ಲಿ ನರ್ತಿಸುತ್ತಿರುವನೋ ಎಂದು ಕಾಣುತ್ತಿದ್ದನು. ವಜ್ರದಂತಿದ್ದ ಬಾಣಗಳಿಂದ ರಣಾಂಗಣವನ್ನು ರಕ್ತದಲ್ಲಿ ಮುಳುಗಿಸಿ ಸಂಕ್ರುದ್ಧನಾದ ಧನಂಜಯನು ಭಾರತೀ ಸೇನೆಯನ್ನು ಪ್ರವೇಶಿಸಿದನು.

ಅಂಬಷ್ಠ ಶ್ರುತಾಯುವಿನ ವಧೆ

ಮುಂದುವರಿಯುತ್ತಿದ್ದ ಅವನನ್ನು ಅಂಬಷ್ಠ ಶ್ರುತಾಯುವು ತಡೆದನು. ಪ್ರಯತ್ನಿಸುತ್ತಿದ್ದ ಅವನ ಕುದುರೆಗಳನ್ನು ಅರ್ಜುನನು ಶೀಘ್ರವಾಗಿ ತೀಕ್ಷ್ಣ ಬಾಣಗಳಿಂದ ಬೀಳಿಸಿದನು. ಅನ್ಯ ಬಾಣಗಳಿಂದ ಅವನ ಧನುಸ್ಸನ್ನೂ ಕತ್ತರಿಸಿ ಅರ್ಜುನನು ತನ್ನ ವಿಕ್ರಮವನ್ನು ಪ್ರದರ್ಶಿಸಿದನು. ಆಗ ಅಂಬಷ್ಠನು ಗದೆಯನ್ನು ಹಿಡಿದು ಕ್ರೋಧದಿಂದ ಕಣ್ಣುಗಳನ್ನು ತಿರುಗಿಸುತ್ತಾ ರಣದಲ್ಲಿ ಪಾರ್ಥ-ಕೇಶವರನ್ನು ಸಮೀಪಿಸಿದನು. ಆಗ ಆ ವೀರನು ಜೋರಾಗಿ ನಗುತ್ತ ಗದೆಯನ್ನು ಎತ್ತಿ ರಥವನ್ನು ತಡೆದು ಗದೆಯಿಂದ ಕೇಶವನನ್ನು ಹೊಡೆದನು. ಗದೆಯಿಂದ ಕೇಶವನನ್ನು ಹೊಡೆದುದನ್ನು ನೋಡಿ ಅರ್ಜುಜನು ಅಂಬಷ್ಠನ ಮೇಲೆ ತುಂಬಾ ಕ್ರುದ್ಧನಾದನು.

ಆಗ ಸಮರದಲ್ಲಿ ಹೇಮಪುಂಖದ ಶರಗಳಿಂದ ಗದೆಯೊಂದಿಗೆ ಆ ರಥಿಗಳಲ್ಲಿ ಶ್ರೇಷ್ಠನನ್ನು ಮೇಘವು ಉದಿಸುವ ಸೂರ್ಯನನ್ನು ಹೇಗೋ ಹಾಗೆ ಮುಚ್ಚಿಬಿಟ್ಟನು. ಇತರ ಶರಗಳಿಂದ ಅರ್ಜುನನು ಅವನ ಗದೆಯನ್ನೂ ಚೂರು ಚೂರು ಮಾಡಿದನು. ಅದು ಅದ್ಭುತವಾಗಿತ್ತು. ಅದು ಕೆಳಗೆ ಬಿದ್ದುದನ್ನು ನೋಡಿ ಅವನು ಇನ್ನೊಂದು ದೊಡ್ಡ ಗದೆಯನ್ನು ಎತ್ತಿಕೊಂಡು ಅರ್ಜುನ ಮತ್ತು ವಾಸುದೇವರನ್ನು ಪುನಃ ಪುನಃ ಹೊಡೆದನು. ಅರ್ಜುನನು ಎರಡು ಕ್ಷುರಪ್ರಗಳಿಂದ ಎತ್ತಿದ ಇಂದ್ರಧ್ವಜದ ಆಕಾರದ ಅವನ ಭುಜಗಳೆರಡನ್ನೂ ಗದೆಯೊಂದಿಗೆ ಕತ್ತರಿಸಿದನು. ಇನ್ನೊಂದು ಪತ್ರಿಯಿಂದ ಅವನ ಶಿರವನ್ನು ತುಂಡರಿಸಿದನು. ಯಂತ್ರದ ಬಂಧನದಿಂದ ಕಳಚಿದ ಇಂದ್ರಧ್ವಜದಂತೆ ಅವನು ಜೋರಾಗಿ ಕೂಗುತ್ತಾ ಹತನಾಗಿ ನೆಲದ ಮೇಲೆ ಬಿದ್ದನು. ಗಾಢವಾದ ರಥಗಳ ಸೇನೆ, ಆನೆ-ಕುದುರೆಗಳಿಂದ ಆವೃತನಾಗಿದ್ದ ಪಾರ್ಥನು ಆಗ ಘನ ಮೋಡಗಳಿಂದ ಆವೃತನಾದ ಸೂರ್ಯನಂತೆ ಕಂಡನು.

ದುರ್ಯೋಧನ ಕವಚಬಂಧನ

ಕೌಂತೇಯನು ಸಿಂಧುರಾಜನನ್ನು ಕೊಲ್ಲಲು ಬಯಸಿ ದ್ರೋಣನ ಸೇನೆಯನ್ನು ಮತ್ತು ದುಸ್ತರವಾದ ಭೋಜನ ಸೇನೆಯನ್ನೂ ಭೇದಿಸಿ ಪ್ರವೇಶಿಸಲು, ಕಾಂಬೋಜ ಮತ್ತು ಅವನ ಮಗ ಸುದಕ್ಷಿಣರು ಹತರಾಗಲು, ಸವ್ಯಸಾಚಿಯಿಂದ ವಿಕ್ರಾಂತ ಶ್ರುತಾಯುಧನೂ ಹತನಾಗಲು, ಸದೆಬಡಿಯಲ್ಪಟ್ಟ ಕೌರವ ಸೇನೆಗಳು ಎಲ್ಲ ಕಡೆ ಓಡಿ ಹೋಗುತ್ತಿರಲು, ತನ್ನ ಸೇನೆಯು ಭಗ್ನವಾದುದನ್ನು ನೋಡಿ ದುರ್ಯೋಧನನು ದ್ರೋಣನ ಬಳಿ ಬಂದನು. ತ್ವರೆಮಾಡಿ ರಥದಲ್ಲಿ ಒಬ್ಬನೇ ದ್ರೋಣನ ಬಳಿಬಂದು ಹೇಳಿದನು: “ಪುರುಷವ್ಯಾಘ್ರ! ಈ ಮಹಾಸೇನೆಯು ನುಚ್ಚುನೂರಾಗುತ್ತಿದೆ. ಈ ದಾರುಣ ಜನಕ್ಷಯವು ನಡೆಯುತ್ತಿರುವಾಗ ಅರ್ಜುನನ್ನು ಕೊಲ್ಲಲು ನಾವು ಏನು ಮಾಡಬೇಕೆಂಬುದನ್ನು ಬುದ್ಧಿಯಿಂದ ಕೂಲಂಕುಶವಾಗಿ ವಿಮರ್ಶಿಸಿ. ಆ ಪುರುಷವ್ಯಾಘ್ರನು ಜಯದ್ರಥನನ್ನು ಕೊಲ್ಲಲಾರದ ಹಾಗೆ ಉಪಾಯವನ್ನು ಮಾಡಿ. ನಿಮಗೆ ಮಂಗಳವಾಗಲಿ! ನೀವೇ ನಮಗೆ ಪರಮ ಗತಿ. ಕೋಪವೆಂಬ ಭಿರುಗಾಳಿಯಿಂದ ಪ್ರಚೋದಿತನಾಗಿ ಧನಂಜಯನೆಂಬ ಅಗ್ನಿಯು, ಒಣಪೊದೆಯನ್ನು ಸುಡುವಂತೆ ನನ್ನ ಸೇನೆಯೆಂಬ ಪೊದೆಯನ್ನು ಸುಡುತ್ತಿದೆ. ಸೇನೆಯನ್ನು ಭೇದಿಸಿ ದಾಟಿ ಹೋಗುತ್ತಿರುವ ಕೌಂತೇಯನಿಂದ ಜಯದ್ರಥನನ್ನು ರಕ್ಷಿಸುವುದು ಪರಮ ಸಂಶಯವಾಗಿ ಕಾಣುತ್ತಿದೆ. ದ್ರೋಣರನ್ನು ಅತಿಕ್ರಮಿಸಿ ಧನಂಜಯನು ಜೀವವನ್ನಿಟ್ಟುಕೊಂಡು ಹೋಗುವುದಿಲ್ಲವೆಂದು ನರೇಂದ್ರರ ನಿಶ್ಚಲ ಯೋಚನೆಯಾಗಿತ್ತು. ಆದರೆ ನಿಮ್ಮ ಕಣ್ಣೆದುರಿಗೇ ಪಾರ್ಥನು ನಿಮ್ಮನ್ನೂ ಅತಿಕ್ರಮಿಸಿ ಹೋಗಿದ್ದಾನೆ. ನನ್ನ ಸೇನೆಯು ಉಳಿಯಲಾರದೆಂದು ಅಭಿಪ್ರಾಯಪಟ್ಟು ಎಲ್ಲರೂ ಪೀಡಿತರಾಗಿದ್ದಾರೆ. ನೀವು ಪಾಂಡವರ ಹಿತದಲ್ಲಿಯೇ ಆಸಕ್ತಿಯನ್ನಿಟ್ಟಿರುವಿರೆಂದು ನನಗೆ ತಿಳಿದಿದೆ. ಆದುದರಿಂದಲೇ ನೀವು ಎಷ್ಟು ಕಾರ್ಯಮಗ್ನರಾಗಿರುವರೆಂದು ಚಿಂತಿಸಿ ಭ್ರಾಂತನಾಗಿದ್ದೇನೆ. ನಿಮ್ಮ ಉತ್ತಮ ವೃತ್ತಿಗೆ ಯಥಾಶಕ್ತಿಯಾಗಿ ಏರ್ಪಡಿಸಿದ್ದೇನೆ. ನಿಮ್ಮ ಸಂತೋಷಕ್ಕೂ ಯಥಾಶಕ್ತಿ ಮಾಡುತ್ತಿದ್ದೇನೆ. ಆದರೂ ನೀವು ಅದರ ಕುರಿತು ಯೋಚಿಸುತ್ತಿಲ್ಲ. ನಾವು ಸದಾ ನಿಮ್ಮ ಭಕ್ತರಾಗಿದ್ದರೂ ನೀವು ನಮ್ಮ ಒಳ್ಳೆಯದನ್ನು ಬಯಸುತ್ತಿಲ್ಲ. ಪಾಂಡವರನ್ನು ಸತತವೂ ಪ್ರೀತಿಸುತ್ತಿರುವಿರಿ ಮತ್ತು ನಮಗೆ ವಿಪ್ರಯವನ್ನು ಮಾಡುವುದರಲ್ಲಿ ನಿರತರಾಗಿರುವಿರಿ. ನಮ್ಮಿಂದ ನಿಮ್ಮ ಉಪಜೀವವನ್ನು ಪಡೆಯುತ್ತಿದ್ದರೂ ನಮಗೆ ವಿಪ್ರಿಯವಾದುದನ್ನು ಮಾಡುವುದರಲ್ಲಿ ನಿರತರಾಗಿರುವಿರಿ. ನೀವು ಜೇನುತುಪ್ಪದಲ್ಲಿ ಅದ್ದಿಸಿದ ಖಡ್ಗವೆಂದು ನನಗೆ ತಿಳಿದಿರಲಿಲ್ಲ. ನೀವು ನನಗೆ ಪಾಂಡವನನ್ನು ನಿಗ್ರಹಿಸುತ್ತೇನೆ ಎನ್ನುವ ವರವನ್ನು ಕೊಟ್ಟಿರದೇ ಇದ್ದರೆ ನಾನು ಮನೆಗೆ ಹೋಗುತ್ತಿದ್ದ ಸಿಂಧುಪತಿಯನ್ನು ತಡೆಯುತ್ತಿರಲಿಲ್ಲ. ನನ್ನ ದಡ್ಡತನದಿಂದಾಗಿ ನಿಮ್ಮಿಂದ ರಕ್ಷಣೆಯನ್ನು ನಿರೀಕ್ಷಿಸಿ, ತಿಳಿಯದೇ ಸಿಂಧುಪತಿಗೆ ಆಶ್ವಾಸನೆಯನ್ನಿತ್ತು ಅವನನ್ನು ಮೃತ್ಯುವಿನ ದವಡೆಗೆ ದೂಡಿದಂತಾಯಿತಲ್ಲ! ಯಮನ ದವಡೆಯಲ್ಲಿ ಸಿಲುಕಿದ ಮನುಷ್ಯನಾದರೂ ಬಿಡುಗಡೆ ಹೊಂದಬಲ್ಲನು. ಆದರೆ ಆರ್ಜುನನ ವಶಕ್ಕೆ ಬಂದ ಜಯದ್ರಥನು ಬಿಡುಗಡೆ ಹೊಂದಲಾರ. ಸೈಂಧವನನ್ನು ರಕ್ಷಿಸುವಂತೆ ಏನಾದರೂ ಮಾಡಿ. ನನ್ನ ಈ ಆರ್ತ ಪ್ರಲಾಪಗಳಿಂದ ಕ್ರೋಧಿತರಾಗಬೇಡಿ. ಸೈಂಧವನನ್ನು ರಕ್ಷಿಸಿರಿ!”

ದ್ರೋಣನು ಹೇಳಿದನು: “ವಿಶಾಂಪತೇ! ನಿನ್ನ ಮಾತಿನಲ್ಲಿ ನಾನು ತಪ್ಪನ್ನು ಕಾಣುತ್ತಿಲ್ಲ. ನೀನು ನನಗೆ ಅಶ್ವತ್ಥಾಮನ ಸಮನಾಗಿದ್ದೀಯೆ. ಆದರೆ ನಿನಗೆ ನಾನು ಸತ್ಯವನ್ನು ಹೇಳುತ್ತಿದ್ದೇನೆ. ಅದರಂತೆಯೇ ನಡೆದುಕೋ. ಕೃಷ್ಣನು ಎಲ್ಲ ಸಾರಥಿಗಳಲ್ಲಿ ಶ್ರೇಷ್ಠನಾದವನು. ಅವನ ಉತ್ತಮ ಕುದುರೆಗಳು ಶೀಘ್ರವಾಗಿ ಓಡಬಲ್ಲವು. ಸ್ವಲ್ಪವೇ ಜಾಗವನ್ನೂ ಮಾಡಿಕೊಂಡರೂ ಧನಂಜಯನು ವೇಗವಾಗಿ ಹೋಗಬಲ್ಲನು. ಮುಂದುವರೆಯುತ್ತಿರುವ ಅವನ ಮೇಲೆ ನಾವು ಪ್ರಯೋಗಿಸುವ ಬಾಣಗಳ ಸಮೂಹಗಳು ಅವನಿಗಿಂತ ಎರಡು ಕ್ರೋಶ ಹಿಂದೆಯೇ ಬೀಳುತ್ತಿರುವುದನ್ನು ನೀನು ನೋಡುತ್ತಿಲ್ಲವೇ? ವಯಸ್ಸಾದ ನಾನು ಇಂದು ಅಷ್ಟೊಂದು ಶೀಘ್ರವಾಗಿ ಹೋಗಲು ಅಸಮರ್ಥನಾಗಿದ್ದೇನೆ. ಪಾರ್ಥರ ಸೇನೆಗಳ ಮುಂಬಾಗವೂ ಈಗ ನಮ್ಮ ಸೇನೆಯ ಹತ್ತಿರ ಬಂದುಬಿಟ್ಟಿದೆ! ಎಲ್ಲ ಧನ್ವಿಗಳೂ ನೋಡುತ್ತಿರುವಂತೆ ಯುಧಿಷ್ಠಿರನನ್ನು ನಾನು ಸೆರೆಹಿಡಿಯುತ್ತೇನೆ ಎನ್ನುವುದು ಕ್ಷತ್ರಿಯರ ಮಧ್ಯದಲ್ಲಿ ನಾನು ಮಾಡಿದ ಪ್ರತಿಜ್ಞೆಯಾಗಿದೆ. ಅವನು ಧನಂಜಯನಿಂದ ದೂರನಾಗಿ ಈಗ ನನ್ನ ಎದುರೇ ಬರುತ್ತಿದ್ದಾನೆ. ಆದುದರಿಂದ ನಾನು ವ್ಯೂಹದ ಮುಂಭಾಗವನ್ನು ಬಿಟ್ಟು ಫಲ್ಗುನನ ಹಿಂದೆ ಹೋಗುವುದಿಲ್ಲ. ಹುಟ್ಟು ಮತ್ತು ಕರ್ಮಗಳಲ್ಲಿ ನಿನಗೆ ಸಮನಾಗಿರುವ, ಒಬ್ಬಂಟಿಯಾಗಿರುವ ಆ ಶತ್ರುವನ್ನು ನೀನೇ ಸಾಹಾಯವನ್ನು ಪಡೆದು ಹೋರಾಡಬೇಕು. ಹೋಗಿ ಹೋರಾಡು! ಹೆದರ ಬೇಡ! ನೀನು ಈಗ ಜಗತ್ತಿಗೇ ಒಡೆಯನಾಗಿದ್ದೀಯೆ! ನೀನು ರಾಜ. ಶೂರ. ಕೃತ್ಯಗಳಲ್ಲಿ ಯಶಸ್ವಿಯಾದವನು. ದಕ್ಷ. ಪಾಂಡವರೊಂದಿಗೆ ವೈರವನ್ನು ಬೆಳೆಸಿಕೊಂಡು ಬಂದವನು. ವೀರ! ಧನಂಜಯನು ಎಲ್ಲಿ ಹೋಗುತ್ತಿದ್ದಾನೋ ಅಲ್ಲಿಗೆ ಸ್ವಯಂ ನೀನೇ ಹೋಗಿ ಯುದ್ಧಮಾಡು!”

ದುರ್ಯೋಧನನು ಹೇಳಿದನು: “ಆಚಾರ್ಯ! ನಿಮ್ಮನ್ನೇ ಅತಿಕ್ರಮಿಸಿ ಹೋದ ಆ ಧನಂಜಯನನ್ನು ಹೇಗೆ ತಾನೇ ನಾನು ಹಿಂದಿರುಗಿ ಹೋಗಿ ಬಾಧಿಸಬಲ್ಲೆ? ರಣದಲ್ಲಿ ವಜ್ರಹಸ್ತ ಪುರಂದರನನ್ನಾದರೂ ಗೆಲ್ಲಲು ಶಕ್ಯನಾಗಿರಬಹುದು. ಆದರೆ ಸಮರದಲ್ಲಿ ಪರಪುರಂಜಯ ಅರ್ಜುನನನ್ನು ಗೆಲ್ಲುವುದು ಶಕ್ಯವಿಲ್ಲ. ಯಾರ ಅಸ್ತ್ರಪ್ರತಾಪದಿಂದ ಹಾರ್ದಿಕ್ಯ ಮತ್ತು ತ್ರಿದಶರಿಗೆ ಸಮರಾದ ನಿಮ್ಮನ್ನೂ ಸೋಲಿಸಿ, ಶ್ರುತಾಯುವನ್ನು ಸಂಹರಿಸಿ, ಸುದಕ್ಷಿಣನನ್ನೂ ಶ್ರುತಾಯುಧನನ್ನೂ ಸಂಹರಿಸಿ, ಶ್ರುತಾಯು-ಅಚ್ಯುತಾಯು ಇವರನ್ನೂ, ನೂರಾರು ಮ್ಲೇಚ್ಛರನ್ನೂ ಸಂಹರಿಸಿದ, ಅನೇಕರನ್ನು ಅಹಿತವಾಗಿ ಸುಡುತ್ತಿರುವ ದುರ್ಧರ್ಷ ಪಾಂಡವನನ್ನು ಯುದ್ಧದಲ್ಲಿ ನಾನು ಹೇಗೆ ಎದುರಿಸಬಲ್ಲೆ? ಇಂದು ನಾನು ಅವನೊಂದಿಗೆ ಯುದ್ಧಮಾಡಲು ಸಮರ್ಥನೆಂದು ನೀವು ಹೇಗೆ ಹೇಳುತ್ತಿರುವಿರಿ? ನಾನು ನಿಮ್ಮ ಗುಲಾಮನಾಗಿದ್ದೇನೆ. ನನ್ನ ಯಶಸ್ಸನ್ನು ರಕ್ಷಿಸಿರಿ!”

ದ್ರೋಣನು ಹೇಳಿದನು: “ಕೌರವ್ಯ! ಸತ್ಯವನ್ನೇ ಹೇಳುತ್ತಿರುವೆ. ಧನಂಜಯನು ದುರಾಧರ್ಷ. ಆದರೆ ಅವನನ್ನು ನೀನು ಸಹಿಸಿಕೊಳ್ಳುವಂತೆ ನಾನು ಮಾಡುತ್ತೇನೆ. ಲೋಕದಲ್ಲಿ ಸರ್ವಧನುರ್ಧರರೂ ಇಂದು ಒಂದು ಅದ್ಭುತವನ್ನು ನೋಡಲಿ! ಕೌಂತೇಯನನ್ನು ನೀನು ತಡೆಯುವುದನ್ನು ವಾಸುದೇವನೂ ನೋಡಲಿ! ರಣದಲ್ಲಿ ನಿನ್ನನ್ನು ಅಸ್ತ್ರಗಳು ಮತ್ತು ಬಾಣಗಳು ತಾಗದ ಹಾಗೆ ಇದೋ ಈ ಕಾಂಚನ ಕವಚವನ್ನು ಕಟ್ಟುತ್ತೇನೆ. ಒಂದುವೇಳೆ ನೀನು ಸುರಾಸುರ, ಯಕ್ಷೋರಗರಾಕ್ಷಸರು ಮತ್ತು ನರರೊಂದಿಗೆ ಈ ಮೂರೂ ಲೋಕಗಳ ವಿರುದ್ಧ ಯುದ್ಧಮಾಡಿದರೂ ನಿನಗೆ ಭಯವಿರುವುದಿಲ್ಲ. ಕೃಷ್ಣನಾಗಲೀ, ಕೌಂತೇಯನಾಗಲೀ, ಅನ್ಯ ಶಸ್ತ್ರಧಾರಿಯಾಗಲೀ ರಣದಲ್ಲಿ ಯಾರೂ ನಿನ್ನ ಈ ಕವಚವನ್ನು ಶರಗಳಿಂದ ಬೇಧಿಸಲಾರರು. ನೀನು ಕವಚವನ್ನು ತೊಟ್ಟು ತ್ವರೆಮಾಡಿ ಸ್ವಯಂ ನೀನೇ ಇಂದು ರಣದಲ್ಲಿ ಕ್ರುದ್ಧನಾದ ಅರ್ಜುನನನ್ನು ಎದುರಿಸು. ಅವನು ನಿನ್ನನ್ನು ಸಹಿಸಿಕೊಳ್ಳಲಾರ!”

ಹೀಗೆ ಹೇಳಿ ದ್ರೋಣನು ತ್ವರೆಯಲ್ಲಿ ಆಚಮನ ಮಾಡಿ ಯಥಾವಿಧಿಯಾಗಿ ಮಂತ್ರವನ್ನು ಜಪಿಸಿ ಅತ್ಯದ್ಭುತವಾಗಿ ಹೊಳೆಯುತ್ತಿರುವ ಕವಚವನ್ನು ದುರ್ಯೋಧನನಿಗೆ ತೊಡಿಸಿದನು. ಆ ಮಹಾರಣದಲ್ಲಿ ಅವನ ವಿಜಯಕ್ಕಾಗಿ ಬ್ರಹ್ಮವಿತ್ತಮನು ತನ್ನ ವಿದ್ಯೆಯಿಂದ ಲೋಕವನ್ನು ವಿಸ್ಮಯಗೊಳಿಸಿದನು.

ದ್ರೋಣನು ಹೇಳಿದನು: “ಭಾರತ! ಬ್ರಹ್ಮನು ನಿನಗೆ ಮಂಗಳವನ್ನುಂಟುಮಾಡಲಿ. ದ್ವಿಜರು ನಿನಗೆ ಮಂಗಳವನ್ನುಂಟು ಮಾಡಲಿ. ಶ್ರೇಷ್ಠ ನಾಗಗಳೂ ಕೂಡ ನಿನಗೆ ಮಂಗಳವನ್ನುಂಟುಮಾಡಲಿ. ಯಯಾತಿ, ನಹುಷ, ದುಂಧುಮಾರ, ಭಗೀರಥ, ಮತ್ತು ಎಲ್ಲ ರಾಜರ್ಷಿಗಳೂ ನಿನ್ನನ್ನು ಎಲ್ಲದರಲ್ಲಿಯೂ ಮಂಗಳವನ್ನುಂಟುಮಾಡಲಿ. ಮಹಾರಣ್ಯದಲ್ಲಿ ನಿತ್ಯವೂ ನಿನಗೆ ಒಂದುಕಾಲಿನ, ಅನೇಕ ಕಾಲಿನ ಮತ್ತು ಕಾಲೇ ಇಲ್ಲದಿರುವವು ಮಂಗಳವನ್ನುಂಟುಮಾಡಲಿ. ಸ್ವಾಹಾ, ಸ್ವಧಾ, ಮತ್ತು ಶಚೀ ಇವರೂ ಸದಾ ನಿನಗೆ ಮಂಗಳವನ್ನುಂಟುಮಾಡಲಿ. ಲಕ್ಷ್ಮೀ ಮತ್ತು ಅರುಂಧತಿಯರೂ ಕೂಡ ನಿನಗೆ ಮಂಗಳವನ್ನುಂಟುಮಾಡಲಿ. ಅಸಿತ-ದೇವಲರೂ, ವಿಶ್ವಾಮಿತ್ರ-ಅಂಗಿರಸರೂ, ವಸಿಷ್ಠ-ಕಶ್ಯಪರೂ ನಿನಗೆ ಮಂಗಳವನ್ನುಂಟುಮಾಡಲಿ. ಲೋಕೇಶ್ವರರಾದ ಧಾತಾ-ವಿಧಾತರೂ, ದಿಕ್ಕು-ಉಪದಿಕ್ಕುಗಳ ಈಶ್ವರರೂ, ಕಾರ್ತಿಕೇಯ ಷಣ್ಮುಖನೂ ಇಂದು ನಿನಗೆ ಮಂಗಳವನ್ನು ನೀಡಲಿ. ಭಗವಾನ್ ವಿವಸ್ವಂತ, ನಾಲ್ಕು ದಿಗ್ಗಜಗಳೂ, ಭೂಮಿ, ಆಕಾಶ, ಗಗನ ಮತ್ತು ಗ್ರಹಗಳೂ ಸರ್ವಶಃ ನಿನಗೆ ಮಂಗಳವನ್ನುಂಟುಮಾಡಲಿ. ಧರಣಿಯನ್ನು ಕೆಳಗಿನಿಂದ ಸದಾ ಹೊರುತ್ತಿರುವ ಆ ಪನ್ನಗಶ್ರೇಷ್ಠ ಶೇಷನು ನಿನಗೆ ಮಂಗಳವನ್ನು ನೀಡಲಿ.

“ಗಾಂಧಾರೇ! ಹಿಂದೆ ಸುರಸತ್ತಮರು ಯುದ್ಧದಲ್ಲಿ ದೈತ್ಯ ವೃತ್ರನ ವಿಕ್ರಮದಿಂದ ಗೆಲಲ್ಪಟ್ಟು ಸಹಸ್ರಾರು ಭಿನ್ನದೇಹರಾದರು. ಆಗ ತೇಜೋಬಲಗಳನ್ನು ಕಳೆದುಕೊಂಡು ಮಹಾಸುರ ವೃತ್ರನಿಂದ ಭೀತರಾಗಿ ಎಲ್ಲ ದಿವೌಕಸರೂ ಇಂದ್ರನೊಂದಿಗೆ ಬ್ರಹ್ಮನ ಶರಣು ಹೊಕ್ಕು ಹೇಳಿದರು: “ದೇವಸತ್ತಮ! ವೃತ್ರನಿಂದ ಸದೆಬಡಿಯಲ್ಪಟ್ಟ ದೇವತೆಗಳಿಗೆ ನೀನೇ ಗತಿ! ನಮ್ಮನ್ನು ಈ ಮಹಾಭಯದಿಂದ ಪಾರುಮಾಡು!” ಆಗ ಅವನು ಪಕ್ಕದಲ್ಲಿಯೇ ನಿಂತಿದ್ದ ವಿಷ್ಣುವಿಗೂ, ವಿಷಣ್ಣರಾಗಿದ್ದ ಶುಕ್ರರೇ ಮೊದಲಾದ ಸುರಸತ್ತಮರಿಗೆ ಇದನ್ನು ಹೇಳಿದನು:  “ಇಂದ್ರನೊಂದಿಗೆ ದೇವತೆಗಳನ್ನೂ, ಉತ್ತಮ ದ್ವಿಜಾತಿಯವರನ್ನೂ ನಾನು ಸತತವಾಗಿ ರಕ್ಷಿಸಬೇಕು. ಆದರೆ ಯಾವುದರಿಂದ ವೃತ್ರನು ನಿರ್ಮಿತನಾಗಿರುವನೋ ಆ ತ್ವಷ್ಟನ ತೇಜಸ್ಸು ಸಹಿಸಲು ತುಂಬಾ ಅಸಾಧ್ಯವಾದುದು. ಹಿಂದೆ ತ್ವಷ್ಟನು ಹತ್ತು ಲಕ್ಷ ವರ್ಷಗಳ ತಪಸ್ಸನ್ನು ತಪಿಸಿ ಮಹೇಶ್ವರನ ಅನುಜ್ಞೆಯನ್ನು ಪಡೆದು ವೃತ್ರನನ್ನು ನಿರ್ಮಿಸಿದನು. ಅವನದೇ ಪ್ರಸಾದದಿಂದ ಈ ಬಲಶಾಲೀ ರಿಪುವು ಸಂಹರಿಸುತ್ತಿದ್ದಾನೆ. ಶಂಕರನ ಸ್ಥಾನಕ್ಕೆ ಹೋಗದೇ ಭಗವಾನ್ ಹರನನ್ನು ಕಾಣಲಾರಿರಿ. ಅವನನ್ನು ನೋಡಿ ನೀವು ಆ ಶತ್ರುವನ್ನು ಸಂಹರಿಸಬಲ್ಲಿರಿ. ಆದುದರಿಂದ ಕ್ಷಿಪ್ರವಾಗಿ ಮಂದರಕ್ಕೆ ಹೋಗಿ. ಅಲ್ಲಿ ಆ ತಪಸ್ಸಿನ ಯೋನಿ, ದಕ್ಷಯಜ್ಞ ವಿನಾಶಕ, ಪಿನಾಕೀ, ಸರ್ವ ಭೂತೇಶ, ಭಗನೇತ್ರನನ್ನು ಸಂಹರಿಸಿದವನಿದ್ದಾನೆ.”

“ಆ ದೇವತೆಗಳು ಬ್ರಹ್ಮನೊಂದಿಗೆ ಮಂದರಕ್ಕೆ ಹೋಗಿ ಸೂರ್ಯಕೋಟಿಸಮಪ್ರಭನಾದ ತೇಜಸ್ಸಿನ ರಾಶಿಯನ್ನು ಕಂಡರು. ಅವನು ಹೇಳಿದನು: “ದೇವತೆಗಳೇ! ಸ್ವಾಗತ! ಹೇಳಿ! ನಾನೇನು ಮಾಡಬೇಕು? ನನ್ನ ಈ ಅಮೋಘ ದರ್ಶನವು ನೀವು ಬಯಸಿದುದನ್ನು ಪಡೆಯುವಂತವರಾಗಿ!” ಹೀಗೆ ಹೇಳಲು ದಿವೌಕಸರೆಲ್ಲರೂ ಅವನಿಗೆ ಉತ್ತರಿಸಿದರು: “ವೃತ್ರನ ತೇಜಸ್ಸನ್ನು ಅಪಹರಿಸಿ ದಿವೌಕಸರ ಗತಿಯಾಗು! ಮಹೇಶ್ವರ! ದೇವ! ಅವನ ಪ್ರಹಾರಗಳಿಂದ ಜರ್ಜರಿತವಾಗಿ ಮಾಡಲ್ಪಟ್ಟ ಈ ಶರೀರಗಳನ್ನು ನೋಡು! ನಾವು ನಿನಗೇ ಶರಣು ಬಂದಿದ್ದೇವೆ. ನಮ್ಮ ಗತಿಯಾಗು!” ಆಗ ಮಹೇಶ್ವರನು ಹೇಳಿದನು: “ದೇವತೆಗಳೇ! ತ್ವಷ್ಟನ ತೇಜಸ್ಸಿನಿಂದ ಈ ಸುಮಹಾಬಲ ಘೋರ ಕೃತಾತ್ಮರಿಂದಲೂ ತಡೆಯಲು ಅಸಾಧ್ಯನಾದವನು ಮಾಡಲ್ಪಟ್ಟನು ಎನ್ನುವುದು ತಿಳಿದಿದೆ. ಆದರೆ ಸರ್ವ ದಿವೌಕಸರಿಗೆ ಸಹಾಯವನ್ನು ಮಾಡುವುದು ನನ್ನ ಅವಶ್ಯ ಕಾರ್ಯವಾಗಿದೆ. ನನ್ನ ದೇಹದಿಂದ ಹುಟ್ಟಿದ ಹೊಳೆಯುತ್ತಿರುವ ಕವಚವನ್ನು ತೆಗೆದುಕೋ! ಮನಸ್ಸಿನಲ್ಲಿಯೇ ಈ ಮಂತ್ರಗಳನ್ನು ಹೇಳಿ ಧರಿಸು!”

ಹೀಗೆ ಹೇಳಿ ಆ ವರದನು ಆ ಕವಚವನ್ನೂ ಆ ಮಂತ್ರವನ್ನೂ ನೀಡಿದನು. ಅವನು ಆ ಕವಚದಿಂದ ರಕ್ಷಿತನಾಗಿ ವೃತ್ರನ ಸೇನೆಯ ಕಡೆ ಹೋದನು. ಮಹಾರಣದಲ್ಲಿ ಬೀಳುವ ನಾನಾವಿಧದ ಶಸ್ತ್ರೌಘಗಳು ತಾಗಿದರೂ ಈ ಕವಚವನ್ನು ಧರಿಸಿದವನನ್ನು ಭೇದಿಸಲು ಸಾಧ್ಯವಿಲ್ಲ. ಆಗ ಸ್ವಯಂ ದೇವಪತಿಯು ವೃತ್ರನನ್ನು ಸಮರದಲ್ಲಿ ಸಂಹರಿಸಿದನು. ಅನಂತರ ಆ ಮಂತ್ರಮಯವಾಗಿ ಕಟ್ಟುವ ಕವಚವನ್ನು ಆಂಗಿರಸನಿಗೆ ನೀಡಿದನು. ಆಂಗಿರಸನು ಅದನ್ನು ಬೃಹಸ್ಪತಿಗೆ ಹೇಳಿದನು. ಬೃಹಸ್ಪತಿಯು ಧೀಮತ ಅಗ್ನಿವೇಶನಿಗೆ ಹೇಳಿದನು. ಅಗ್ನಿವೇಶ್ಯನು ನನಗೆ ನೀಡಿದ ಕವಚವನ್ನು ನಾನು ನಿನಗೆ ಇಂದು ನಿನ್ನ ದೇಹರಕ್ಷಣಾರ್ಥವಾಗಿ ಮಂತ್ರಗಳಿಂದ ಕಟ್ಟಿದ್ದೇನೆ.”

ಹೀಗೆ ದುರ್ಯೋಧನನಿಗೆ ಹೇಳಿ ಆಚಾರ್ಯಪುಂಗವ ದ್ರೋಣನು ಪುನಃ ಮೆಲ್ಲನೇ ಈ ಮಾತನ್ನಾಡಿದನು: “ಪಾರ್ಥಿವ! ಹಿಂದೆ ರಣದಲ್ಲಿ ಹಿರಣ್ಯಗರ್ಭನು ವಿಷ್ಣುವಿಗೆ ಹೇಗೆ ಇದನ್ನು ಕಟ್ಟಿದ್ದನೋ ಹಾಗೆ ನಿನಗೆ ನಾನು ಈ ಕವಚವನ್ನು ಬ್ರಹ್ಮಸೂತ್ರದಿಂದ ಕಟ್ಟುತ್ತಿದ್ದೇನೆ. ಹೇಗೆ ತಾರಕಸುರನ ಸಂಗ್ರಾಮದಲ್ಲಿ ಬ್ರಹ್ಮನು ಹೇಗೆ ಶಕ್ರನಿಗೆ ಕಟ್ಟಿದ್ದನೋ ಹಾಗೆ ಕವಚವನ್ನು ನಿನಗೆ ನಾನು ಕಟ್ಟುತ್ತಿದ್ದೇನೆ.”

ಮಂತ್ರದಿಂದ ವಿಧಿಪೂರ್ವಕವಾಗಿ ಅವನಿಗೆ ಕವಚವನ್ನು ಕಟ್ಟಿ ದ್ವಿಜನು ರಾಜನನ್ನು ಮಹಾ ಯುದ್ಧಕ್ಕೆ ಕಳುಹಿಸಿದನು. ಆಚಾರ್ಯ ಮಹಾತ್ಮನಿಂದ ಸನ್ನದ್ಧಗೊಂಡು ಆ ಮಹಾಬಾಹುವು ಪ್ರಹಾರಿಗಳಾದ ಸಹಸ್ರ ತ್ರಿಗರ್ತರ ರಥರೊಂದಿಗೆ, ಹಾಗೆಯೇ ವೀರ್ಯಶಾಲಿಗಳಾದ ಮದಿಸಿದ ಸಹಸ್ರ ಆನೆಗಳಿಂದ, ಹತ್ತು ಸಾವಿರ ಅಶ್ವಗಳಿಂದ ಮತ್ತು ಅಷ್ಟೇ ಮಹಾರಥಿಗಳಿಂದ ಸುತ್ತುವರೆಯಲ್ಪಟ್ಟು, ನಾನಾ ವಾದ್ಯಗಳ ಘೋಷಗಳೊಂದಿಗೆ, ವೈರೋಚನಿಯು ಹೇಗೋ ಹಾಗೆ, ಮಹಾಬಾಹು ಅರ್ಜುನನ ರಥದ ಕಡೆ ಹೊರಟನು. ಅಗಾಧ ಸಮುದ್ರದಂತೆ ಹೊರಟ ಕೌರವನನ್ನು ನೋಡಿ ಕೌರವ ಸೇನೆಯಲ್ಲಿ ಮಹಾ ಶಬ್ಧವುಂಟಾಯಿತು.

Leave a Reply

Your email address will not be published. Required fields are marked *